ಬೆಸಿಲ್ ಒಪ್ಪಂದ

ಗಾಜಿನ ಗೋಡೆಯಂತೆ ಹರಡಿಕೊಂಡ ಕಿಟಕಿಯ ಕರ್ಟನುಗಳು ಅವಳ ಹಿಂದೆ ನಾಲಿಗೆ ಚಾಚುತ್ತ ಹೊರಳುತ್ತಿದ್ದವು. ಛಾವಣಿಗೆ ನೇತು ಹಾಕಿದಂತಿದ್ದ ಆ ಟಿವಿಯಲ್ಲಿ ಅನಗತ್ಯವಾಗಿ ಕೊಲೆಗಳಾಗುತ್ತಿದ್ದವು, ರಾಜಕಾರಣಿಗಳು ಬೈದುಕೊಳ್ಳುತ್ತಿದ್ದರು. ಹುಡುಗಿಯರು ಬಟ್ಟೆ ತೊಡದಂತೆ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ರಾತ್ರಿಯಿಡೀ ನಮ್ಮಿಬ್ಬರನ್ನೂ ಹೊತ್ತುಕೊಂಡ ಮಂಚ ಮಾತ್ರ ಸುಮ್ಮನೆ ಅಂಗಾತ ಮಲಗಿತ್ತು.
ಈ ರಾತ್ರಿ ಒಂದು ಕನಸಿನ ಥರ ಕಳೆದು ಹೋಯಿತು ಎಂದು ಅವಳು ರಾತ್ರಿ ಕಳೆವ ಮುನ್ನವೇ ಹೇಳಿದ್ದಳು. ಅದು ನಿಜವೇ. ಕಳೆದಿದ್ದಲ್ಲವೆ ಮಾರಾಯ್ತಿ, ಕನಸಿನ ಥರ ಕೂಡಿದ್ದಲ್ಲವೇನೇ ಎಂದು ನಾನು ಅವಳನ್ನು ಮತ್ತೆ ಸೆಳೆದು ಅಪ್ಪಿಕೊಂಡಿದ್ದೆ. ಅದಾಗಿ ಕೆಲವೇ ಗಂಟೆಗಳು ಕಳೆದಿವೆ.

ಅವಳ ಜೊತೆಗೆ ಸೆಕ್ಸ್ ಎನ್ನುವುದು ಒಂದು ಕನಸಿನ ಹಾಗೆ ಇತ್ತು ಎಂದು ಮಾತ್ರ ಅವಳಿಗೆ ಹೇಳಲಿಲ್ಲ. ಯಾಕೆಂದರೆ ಅವಳು ಅಷ್ಟೆಲ್ಲ ನಾಚುತ್ತ ನನ್ನ ಎಳೆತಕ್ಕೆ ಬಗ್ಗಿದ್ದಳು; ನನ್ನ ಜೊತೆ ಕೊಸರಾಡದೆ ಸ್ಪರ್ಶಿಸಿದ್ದಳು. ಅವಳ ಅಂಗಾಲುಗಳನ್ನು ನಾನು ಅನಾಮತ್ತಾಗಿ ಮೇಲೆತ್ತಿ ಮುತ್ತು ಕೊಟ್ಟಾಗ ಛೀ ನೀನು ಹೀಗೆ ಮಾಡಬೇಡ ಮಾರಾಯ, ನಿನಗೆ ನಮಸ್ಕಾರ ಮಾಡೋವಷ್ಟು ಪರಂಪರೆ ನನ್ನದಲ್ಲ ಎಂದು ನಕ್ಕಿದ್ದಳು.

ಅವಳಿಗೆ ಆ ರಾತ್ರಿ ನಾನು ಏನು ಕೊಟ್ಟೆ, ಕೊಡಲಿಲ್ಲ ಎಂಬುದು ನನಗೆ ಈಗಲೂ ಗೊತ್ತಿರಲಿಲ್ಲ. ನಾನು ಸುಮ್ಮನೆ ಅಂಗಾತ ಮಲಗಿ ಅವಳನ್ನೇ ನೋಡುತ್ತಿದ್ದೆ. ಹಬೆಯಾಡೋ ನೀರಿನಲ್ಲಿ ಸ್ನಾನ ಮಾಡಿಬಂದ ಅವಳ ಮುಖದಲ್ಲಿ ಸ್ನಿಗ್ಧ ನಗುವಿತ್ತು. ಅವಳ ಚೂಡಿದಾರದಲ್ಲಿ ಸಡಗರದ ನೆರಿಗೆಗಳಿದ್ದವು. ಅವಳ ಕೂದಲುಗಳು ಲಘುವಾಗಿ ಹಾರುತ್ತಿದ್ದವು. ಫ್ಯಾನಿನ ಗಾಳಿಯೂ ಕರ್ಟನುಗಳನ್ನು ನಡುಗಿಸುತ್ತಿತ್ತೇನೋ.
ನಿನ್ನೆ ಸಂಜೆ ನಾವು ರಿಸೆಪ್ಶನ್‌ನಲ್ಲಿ ರೂಮು ಬುಕ್ ಮಾಡುವಾಗ ನಾನು ವೆಂಕಟೇಶ, ಅವಳು ಗೀತಾ ಎಂದು ಯಾರಾದರೂ ನಂಬಬಹುದಿತ್ತು. ಇವತ್ತು ಹಾಗಿರಲಿಲ್ಲ. ನಾನು ನಾನಾಗಿದ್ದೆ. ಅವಳು ಕ್ರಮೇಣವಾಗಿ ಅವಳಾಗುತ್ತ, ರೂಮಿನ ಹೊರಗಿನ ವಾಸ್ತವಕ್ಕೆ ಮರಳಲು ತಯಾರಾಗುತ್ತಿದ್ದಳು.

ನಾವು ಆರು ತಿಂಗಳುಗಳ ಹಿಂದೆ ವೆಂಕಟೇಶ – ಗೀತಾ ಆಗಿ ಹೀಗೆ ಬರಬಹುದೆಂದು ನಂಬಿರಲಿಲ್ಲ. ನಾವು ಯಾರು ಎನ್ನುವುದು ನಮಗಾಗಲೀ, ಉಳಿದವರಿಗಾಗಲೀ ಗೊತ್ತಿರಲಿಲ್ಲ. ನಮ್ಮ ಸ್ನೇಹ ಹೀಗೆ ಲಾಡ್ಜಿನಲ್ಲಿ ದೇಹಕೂಟವಾಗಿ ಕರಗಿ ರೂಪಾಂತರಗೊಳ್ಳುತ್ತದೆ ಎಂದು ನಮಗೆ ಗೊತ್ತಿರಲಿಲ್ಲ.

ಅವಳು ತಲೆಗೂದಲನ್ನು ಎಡಗೈಯಲ್ಲಿ ಹಿಡಿದು ಬಲ ಅಂಗೈಯಿಂದ ಫಟ್ ಎಂದು ಲಘುವಾಗಿ ಝಾಡಿಸಿದಳು. ಅವಳು ವೇಲ್ ಸರಿ ಮಾಡಿಕೊಂಡಳು. ಅವಳು ಮತ್ತೆ ನನ್ನನ್ನು ಹಿಡಿದು ಏಳು ಮಾರಾಯಾ ತಡ ಆಯ್ತು, ನಾನು ಚಿಕ್ಕಮ್ಮನ ಮನೆಗೆ ಹೋಗಬೇಕು ಎಂದು ಕರೆದಳು. ನಾನು ಅವಳನ್ನು ಹಾಗೇ ಎಳೆದುಕೊಂಡೆ. ನನ್ನೊಳಗೆ ಕಾಮಸೂರ್ಯ ಹೊತ್ತಿ ಉರಿಯುತ್ತಿದ್ದ ಎಂಬುದು ಅವಳಿಗೂ ಗೊತ್ತಿತ್ತು. ನಾವು ಮತ್ತೆ ಹಗಲನ್ನು ರಾತ್ರಿಯಾಗಿಸಿದೆವು. ಕರ್ಟನುಗಳಿಗೆ ಕತ್ತಲೆಯ ಪರದೆ ಹಾಕಲು ಹೇಳಿ ಮತ್ತೆ ಕೂಡಿದೆವು.

ಬರೀ ಸೆಕ್ಸ್ ಬಗ್ಗೆ ಈತ ಓಬ್ಸೆಸ್ ಆಗಿದ್ದಾನೆ ಎಂದು ನೀವು ದಯಮಾಡಿ ಭಾವಿಸಬೇಡಿ. ಅವಳನ್ನು ನಾನು ಮನಸಾರೆ ಪ್ರೀತಿಸಿದ್ದೇನೆ. ಅವಳಿಗೆ ಡಜನ್ನುಗಟ್ಟಳೆ ಪತ್ರ ಬರೆದು ಸತಾಯಿಸಿದ್ದೇನೆ. ಅವಳೇ ನನ್ನ ಬದುಕಿನ ಹುಡುಗಿ ಎಂದು ಗಟ್ಟಿಯಾಗಿ ಕರೆದಿದ್ದೇನೆ. ಅವಳಿಗೆಂದೂ ದ್ರೋಹ ಬಗೆಯಲಾರೆ ಎಂದು ಮಾತು ಕೊಟ್ಟಿದ್ದೇನೆ. ನನ್ನ ಹೆಂಡತಿಯೂ ಅವಳಿಗಿಂತ ಹೆಚ್ಚೇನಲ್ಲ ಎಂದು ಹೇಳಿದ್ದೇನೆ…..
ಎಂಬಲ್ಲಿಗೆ ನಾನೆಂಥ ಲಂಪಟ ಎಂದು ನೀವು ನಿರ್ಧರಿಸಿದ್ದರೆ ಅದಕ್ಕೆ ನಾನೇ ಕಾರಣ.
ಅವಳು ನನಗಾಗಿ ದಾವಣಗೆರೆ ಬಸ್ ನಿಲ್ದಾಣದಲ್ಲಿ ಒಂದು ಗಂಟೆ ಕಾದಿದ್ದಾಳೆ; ಬೆಂಗಳೂರಿನ ಚಹರೆ ಗೊತ್ತಿಲ್ಲದೆ ಬಂದವಳು ನನಗಾಗಿ ಮೆಜೆಸ್ಟಿಕ್‌ನಲ್ಲಿ ಕಾದು ತಾಸಿಗಿಷ್ಟೆಂದು ಮೈ ಖರೀದಿಸುವವರ ಕಣ್ಣಿಗೆ ಗುರಿಯಾಗಿದ್ದಾಳೆ. ಮಲ್ಲೇಶ್ವರದ ದೋಸೆ ಹೋಟೆಲಿನಲ್ಲಿ ಗಂಟೆಗಟ್ಟಳೆ ನಿಂತಿದ್ದಾಳೆ. ಗಾಂಧಿ ಬಜಾರಿನಲ್ಲಿ,ಡಿವಿಜಿ ರಸ್ತೆಯಲ್ಲಿ ನನ್ನ ಕೈ ಹಿಡಿದು ನಡೆದಿದ್ದಾಳೆ. ಇಷ್ಟಾಗಿಯೂ ನಾನು ಅವಳನ್ನು ಕೂಡುವುದಕ್ಕೇ ಪ್ರೀತಿಸಿದೆನಾ ಎಂದು ನನಗೆ ಈ ಕ್ಷಣ ಅನ್ನಿಸುತ್ತಿದೆ.
ಈ ಎಕ್ಟ್ರಾ ಮೆರೈಟಲ್ ಸಂಬಂಧಗಳೆಲ್ಲ ಕೇವಲ ಕಾಮಕ್ಕಾಗಿ. ಚಟ ತೀರಿದ ಮೇಲೆ ಎಲ್ಲ ಸಂಬಂಧ, ಸ್ನೇಹ ಕರಗುತ್ತೆ; ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ.
ಗೆಳೆಯ ಹೇಳಿದ್ದ ಮಾತುಗಳು ಈಗ ಅವಳನ್ನು ಕೂಡುವಾಗ ನೆನಪಾಗುತ್ತಿವೆ. ಅವಳೀಗ ಸುಖಶಿಖರದ ಉತ್ತುಂಗದಲ್ಲಿದ್ದಾಳೆ. ಅವಳೀಗ ನನ್ನ ಎದೆಯ ಮೇಲೆ ಮಲಗಿದ್ದಾಳೆ. ಅವಳೀಗ ನನ್ನ ಹೃದಯದ ಮೇಲೆ ಅವಳ ನೆನಪಿನ ಗೆರೆ ಎಳೆದಿದ್ದಾಳೆ. ಅವಳ ಕೂದಲುಗಳು ಚದುರಿವೆ. ನಾನು ಅವಳ ತಲೆಯೊಳಗೆ ಅಂಗೈ ಹರಡಿದ್ದೇನೆ.
‘ನಾನು ನೀನು ಎಂದಿಗೂ ಬೇರೆಯಾಗಬಾರದು ನೋಡು. ನಾನೇನಾದ್ರೂ ಸತ್ರೆ ನೀನೇ ಮಣ್ಣು ಮಾಡಬೇಕು. ಅವನಿಂದ ಮುಟ್ಟಿಸಿಕೊಳ್ಳಲೂ ನನಗೆ ಹೇಸಿಗೆಯಾಗುತ್ತೆ’
‘ನಾನು ರಕ್ತದಲ್ಲಿ ಕಾಗದ ಬರೆಯೋದನ್ನು ನಿಲ್ಲಿಸ್ತೇನೆ. ನಾನು ಇನ್ನುಮುಂದೆ ಹೀಗೆ ಬೆರಳುಗಳನ್ನು ಚುಚ್ಚಿಕೊಳ್ಳಲ್ಲ. ನಾನು ಇನ್ನುಮುಂದೆ ಆತ್ಮಹತ್ಯೆಯ ಯೋಚನೆ ಮಾಡಲ್ಲ.’
‘ನಾನು ಎಂದೂ ನಿನ್ನ ಕೈ ಬಿಡಲ್ಲ. ನಾನು ಎಂದಿಗೂ ನಿನ್ನ ಜೊತೆಯಾಗಿ ಇರ್‍ತೇನೆ. ನಾನು ನಿನ್ನವನು’
‘ನಾನು ಬೆಂಗಳೂರಿಗೆ ಬಂದು ಬಿಡ್ತೇನೆ. ಆ ದರಿದ್ರ ಊರಿನಲ್ಲೇ ನನ್ನ ನೆನಪು, ನನ್ನ ಹಳೆ ಬದುಕು ಎಲ್ಲವೂ ಸಾಯಲಿ.’
‘ನಾನು ನಿನ್ನ ಮಗಳನ್ನೂ ನನ್ನ ಮಗನಂತೆ ನೋಡಿಕೊಳ್ತೇನೆ.’
ನಾವು ಮುಖವನ್ನೆಲ್ಲ ಬೊಗಸೆಯಿಂದ ಹಿಡಿದು ಹೀಗೆಲ್ಲ ಮಾತಾಡಿದ್ದೇವೆ. ನಾವು ನಗ್ನವಾದ ಹಾಗೇ ಮಾತಿನ ಉಡುಗೆಯನ್ನೂ ಕಳಚುತ್ತ, ಎಸೆಯುತ್ತ ದೇಹವನ್ನೆಲ್ಲ ಬತ್ತಲು ಮಾಡಿಕೊಳ್ಳುತ್ತಿದ್ದೇವೆ. ನಾವು ರೂಮಿನ ಬೋಲ್ಟು ಹಾಕಿದ್ದೇವೆ. ನಾವು ಎದೆಯ ಕದ ತೆರೆದಿದ್ದೇವೆ.
ಒಂದೇ ದಿನ. ಖಚಿತವಾಗಿ ಹೇಳಬೇಕೆಂದರೆ ಒಂದೇ ರಾತ್ರಿ; ಅರ್ಧ ಹಗಲು. ಊಟಕ್ಕೆ ಹೆಚ್ಚು ಹೊತ್ತು ವೇಸ್ಟ್ ಮಾಡುವುದು ಬೇಡ ಎಂದು ನಕ್ಕಿದ್ದೇವೆ. ಲಿಫ್ಟ್‌ನಲ್ಲಿ ಅಪ್ಪಿಕೊಂಡು ಮುತ್ತಿಕ್ಕಿದ್ದೇವೆ.
ಮೊದಲ ದಿನ ಅವಳು ಆಫೀಸಿಗೆ ಬಂದಾಗ ಅವಳ ಮಗಳೂ ಇದ್ದಳು. ಇಬ್ಬರನ್ನೂ ನೋಡಿದಾಗ ನನಗೆ ಅವಳೇ ನನ್ನ ಬದುಕಿನಲ್ಲಿ ಎಂದೋ ಬರಬೇಕಿದ್ದ ಹುಡುಗಿ, ಪೋರಿ, ಈಗ ಬಂದಿದ್ದಾಳೆ, ಮಗಳ ಜೊತೆಗೆ ಎಂದು ಸಿಟ್ಟು ಬಂದಿತ್ತು. ನನ್ನ ಕ್ಯಾಮೆರಾದಲ್ಲಿ ಒಂದೆರಡು ಚಿತ್ರ ತೆಗೆದಿದ್ದೆ. ಹಾಗೇ ಪ್ರಿಂಟ್ ಹಾಕಿಸಿ ಅಳಿಸಿದ್ದೆ.
ಅವಳು ಆ ಚಿತ್ರದಲ್ಲಿ ನನ್ನನ್ನೇ ನೋಡುತ್ತಿದ್ದಾಳೆ. ಈಗಲೂ ಅವಳೊಂದು ಚಿತ್ರವಾಗಿದ್ದಾಳೆ.
ಅವಳು ಎದ್ದು ನೀರಿನ ಹೂಜಿಯತ್ತ ನಡೆದಳು. ನಾನು ಹಾಗೇ ಬತ್ತಲಾಗಿ ಮಲಗಿದೆ. ಛಾವಣಿಯೇ ಆಕಾಶದ ಹಾಗೆ ಕಾಣುತ್ತಿತ್ತು. ಈ ಆಕಾಶ ಎಷ್ಟು ಹತ್ತಿರದಲ್ಲಿದೆ ಎಂದು ಅಚ್ಚರಿಗೊಂಡೆ. ಅವಳು ನನ್ನ ಬದಿಗೇ ಆತುಕೊಂಡು, ನನ್ನ ಬೆನ್ನು ಹಿಡಿದು ಎಳೆದಳು.
‘ಮತ್ತೆ ಒಂದು ತಿಂಗಳು ನೀನು ಸಿಗಲ್ಲ. ನನ್ನ ನೆನಪಾಗಲ್ವ?‘
‘ಆಗದೆ ? ನೀನು ಕಚ್ಚಿದ್ದೆಲ್ಲ ನೆನಪಿರುತ್ತೆ. ಅದರಲ್ಲೂ…..’
‘ಥೂ ತುಂಟ. ತುಂಬಾ ಸೆಕ್ಸಿಯಾಗಿ ಮಾತಾಡ್ತೀಯ…. ಲೇಖಕನಿಗೆ ಇರಬೇಕಾದ ಗಾಂಭೀರ್ಯವೇ ಇಲ್ಲ’
ನನಗೆ ಅವಳ ಎದುರಿಗೆ ಸೀರಿಯಸ್ ಆಗಿರಬೇಕಿರಲಿಲ್ಲ. ನನಗೆ ಅವಳ ಜೊತೆಗೆ ಮಾತು ಬೇಕಿತ್ತು. ನನಗೆ ಸೆಕ್ಸ್ ಬಗ್ಗೆ ಹರಟೆ ಹೊಡೆಯಬೇಕಿತ್ತು. ನನಗೆ ದೇಹಗಳ ಮಿಲನದ ಬಗ್ಗೆ ಕಿವಿಯಲ್ಲಿ ದನಿ ಉಸುರಿ ಮಾತುಗಳನ್ನು ಹಂಚಿಕೊಳ್ಳಬೇಕಿತ್ತು. ನನಗೆ ಸ್ಪರ್ಶದ ಪ್ರತೀ ಕ್ಷಣವನ್ನೂ ಅನುಭವಿಸುತ್ತಿರೋ ಭಾವವನ್ನು ಹೇಳಬೇಕಿತ್ತು. ನನಗೆ ಅಂಗಾಂಗಗಳ ಬಗ್ಗೆ ಮಾತಾಡಬೇಕಿತ್ತು.
ಅವಳು ಅದಕ್ಕೆಲ್ಲ ಆಕ್ಷೇಪಿಸಲಿಲ್ಲ. ಎರಡು ತಾಸು ಹಾಗೆ ಮಾತಾಡುತ್ತ ಮಲಗಿದ್ದೆವು. ಮಧ್ಯೆ ಬಟ್ಟೆ ಲೇಪಿಸಿಕೊಂಡು ಚಹಾ ತರಿಸಿದೆವು. ದ್ರಾಕ್ಷಿಯನ್ನು ಹಂಚಿಕೊಂಡೆವು. ಸೇಬು ಕತ್ತರಿಸಿದೆವು.
ಜಗತ್ತನ್ನು ಉಡಾಯಿಸಿದೆವು. ದೇಹವನ್ನು ಚುಡಾಯಿಸಿದೆವು.
ರಗ್ಗುಗಳು, ಬೆಡ್‌ಶೀಟುಗಳು ಮುದುಡಿಕೊಂಡವು. ಹಾಸಿಗೆ ಮೆದುವಾಯಿತು. ಮ್ಯಾಗಜಿನ್ ಹಾಳೆಗಳು ಹಾರುವುದನ್ನು ನಿಲ್ಲಿಸಿದವು. ಹೊರಗೆ ರೂಮ್‌ಬಾಯ್‌ಗಳ ಜಗಳ ಕೇಳಿಸುತ್ತಿತ್ತು. ಮತ್ತೆ ಟಿವಿಯಲ್ಲಿ ಯಾರೋ ಅಳುತ್ತಿದ್ದರು. ಇಂಗ್ಲಿಶ್ ಸಿನಿಮಾದಲ್ಲಿ ಕಾರುಗಳು ಸ್ಫೋಟಗೊಂಡವು. ರೇಡಿಯೋ ಸಿಟಿಯಲ್ಲಿ ಮತ್ತೆ ಭೀಗಿ ಭೀಗಿ ರಾತ್ ಮೇ ಎಂದು ಅದ್ನಾನ್ ಸಾಮಿ ಹಾಡುತ್ತಿದ್ದ.
ಅವಳು ಬಟ್ಟೆ ಹಾಕಿಕೊಳ್ಳುತ್ತ ಅಳುತ್ತಿದ್ದಳು. ನಾನು ಅವಳ ಭುಜ ತಟ್ಟಿದೆ. ಕುತ್ತಿಗೆಯ ಮೇಲೆ ಮೆತ್ತಗೆ ಕಚ್ಚಿದೆ.
ಅವಳು ನನ್ನ ಕಾಲಿನ ಮೇಲೆ ನಿಂತು ತಲೆಯನ್ನು ಹಿಡಿದೆಳೆದು ಕಣ್ಣುಗಳಿಗೆ ಎಂಜಲು ಹಚ್ಚಿದಳು. ನನ್ನ ಕಣ್ಣುಗಳು ತೇವಗೊಂಡವು.
ನಮ್ಮನ್ನು ನೀವು ಹೀಗೆ ನೋಡಬಾರದ ಹಾಗೆ ಬಾಗಿಲು ಮುಚ್ಚಿಕೊಂಡಿತ್ತು.
ನಾವು ಅದನ್ನು ಬೆಸಿಲ್ ಒಪ್ಪಂದ ಎಂದು ಕರೆದೆವು. ನಾವು ಅದನ್ನೇ ನಮ್ಮ ಬದುಕಿನ ಕರಾರುಗಳು ಎಂದು ತೀರ್ಮಾನಿಸಿದೆವು.
ಈ ರಾತ್ರಿ ನನಗೆ ಅನ್ನಿಸಿದೆ: ಯಾಣಕ್ಕೆ ಹೋಗುವ ಟ್ರೆಕಿಂಗ್ ಮಾರ್ಗದಲ್ಲಿ ಬತ್ತಲಾಗಿಬಿಡಬೇಕು. ಆಕಾಶವನ್ನೇ ದಿಟ್ಟಿಸಿ ನೋಡುತ್ತ ಅಲ್ಲಿ ಮಲಗಿದರೆ ಎಷ್ಟು ಚೆನ್ನಾಗಿರುತ್ತೆ. ಭೂಮಿಯೆ ಹಾಸಿಗೆ, ಆಕಾಶವೇ ಹೊದಿಕೆಯಾದರೆ ನಾನು ಹೇಗೆ ಬೆಚ್ಚಗಿರುತ್ತೇನೆ. ಅವಳೂ ಬೇಡ. ಇವಳೂಬೇಡ. ಯಾರೂ ಬೇಡ.
ನಾನು ಜೇನುಕಲ್ಲುಗುಡ್ಡದ ಸನ್‌ಸೆಟ್ ಪಾಯಿಂಟ್‌ನಲ್ಲಿ ಹಾಗೇ ಗಾಳಿಯಲ್ಲಿ ಗಾಳಿಯಾಗಿ ತೇಲಬೇಕು. ಎಲ್ಲರೂ ನೋಡುತ್ತಿದ್ದಂತೆ ತೇಲುತ್ತ ತೇಲುತ್ತ ಮೇಲೆ ಹಾರಬೇಕು. ಆಮೇಲೆ ಒಮ್ಮೆಲೆ, ಎಲ್ಲಕ್ಕೂ ಪೂರ್ಣ ವಿರಾಮ ಇರುವ ಹಾಗೆ ಸುಯ್ಯೆಂದು ಜಾರುತ್ತ ಕೆಳಗೆ ಬೀಳಬೇಕು.
ಅವಳಿಗೆ ಹಾಗೆಲ್ಲ ಪತ್ರ ಬರೆದುಬಿಡಬೇಕು. ನಿನ್ನ – ನನ್ನ ಒಪ್ಪಂದಗಳು ಇನ್ನುಮುಂದೆ ಅಸಿಂಧು ಎಂದು ಹೇಳಬೇಕು.
ಅವಳು,ಇವಳು, ಯಾರೋ. ಎಲ್ಲರೂ ನನ್ನನ್ನು ಮುತ್ತಿದ್ದಾರೆ. ಯಾರೋ ನನ್ನ ಭುಜ ಹಿಡಿದು ಕೇಳಿದ್ದಾರೆ: ಮಾರಾಯ, ಯಾಕೆ ನಿನ್ನ ಕೈ ಅಷ್ಟು ಬೆಚ್ಚಗಿದೆ….
ನಾನು ಮತ್ತೆ ಬೆಸಿಲ್‌ನ್ನೇ ನೋಡುತ್ತ ಕಾರನ್ನು ತಿರುಗಿಸಿದೆ. ಅಲ್ಲಿ ಬೇರೆ ಯಾರೋ ಇದ್ದರು. ಅವರೂ ನಮ್ಮ ಹಾಗೆಯೇ ಗೀತಾ – ವೆಂಕಟೇಶ್ ಆಗಿರಬಹುದೇ ಅನ್ನಿಸಿತು. ಪೊಲೀಸ್ ಪೇದೆ ಸಿಗ್ನಲ್ ಕೊಟ್ಟಕೂಡಲೇ ನಾನು ಬೆಸಿಲ್ ದಾಟಿದೆ. ಎಲ್ಲರೂ ಹಾರ್ನ್ ಮಾಡುತ್ತಿದ್ದಾರೆ. ನೀನು ವೆಂಕಟೇಶ ಅಲ್ಲವಾ? ಅವಳೆಲ್ಲಿ ಎಂದು ಕೇಳುತ್ತಿದ್ದಾರೆ.
ನಾನು ಮತ್ತೆ ಜಯನಗರ ಕಾಂಪ್ಲೆಕ್ಸಿನ ಆ ಬಟ್ಟೆ ಅಂಗಡಿಯ ಮುಂದೆ ನಿಂತಿದ್ದೇನೆ. ಅವರು ಕೇಳಿದ್ದಾರೆ: ಮೇಡಂ ಎಲ್ಲ ಸರ್,ಇವತ್ತು ಬಂದಿಲ್ಲ….
ನಾನು ಸೌತೆಂಡ್‌ನ ಆ ಹೋಟೆಲ್‌ನ ಆ ಮೂಲೆಯಲ್ಲಿ ಕುಳಿತು ಅದೇ ಬಟರ್‌ಸ್ಕಾಚ್ ಕೇಳಿದ್ದೇನೆ. ಅದೇ ಟೇಬಲ್ ಮೇಲೆ ಅವಳು ತೋಳು ಚೆಲ್ಲಿ ಕುಳಿತಿದ್ದಳು. ಈಗ ಇಲ್ಲಿ ಯಾವುದೋ ಹಾಡು ಕೇಳುತ್ತಿದೆ. ನನಗೆ ಈ ದೃಶ್ಯಗಳೆಲ್ಲ ಯಾಕೆ ನೆನಪಾಗುತ್ತಿವೆ ಎಂದೇ ತಿಳಿಯುತ್ತಿಲ್ಲ.
ನಾನು ನಂದಿಬೆಟ್ಟದ ಆ ತುದಿಯಲ್ಲಿ ಕೂತಾಗೆಲ್ಲ ಕೆಳಗಿರುವ ತಿರುವುಗಳು ಕಾಣಿಸುತ್ತವೆ. ಅಲ್ಲ ಅವಳನ್ನೂ ಹಿಡಿದು ತಿರುಗಿದ್ದೆನಲ್ಲ ಎಂಬ ನೆನಪು ರಾಚುತ್ತದೆ. ನಾನು ಈಗ ಇಲ್ಲಿ ಒಬ್ಬನೇ ಕೂತು ಯಾಕೆ ಹೀಗೆ ಅಳುತ್ತಿದ್ದೇನೆ ಎಂದು ಗೊತ್ತಾಗುತ್ತಿಲ್ಲ.
ಈಗ ಅವಳಿಲ್ಲ. ಅವಳ ನೆನಪೂ ನನಗಷ್ಟಿಲ್ಲ.
ಅವಳು ಬಂದರೆ ನಗು ಬೀರುವಷ್ಟೂ ಸೌಜನ್ಯ ನನ್ನದಾಗಿಲ್ಲ. ನಾನು ಹೊಸ ಮನುಷ್ಯನ ಹಾಗೆ ಬದಲಾಗಿದ್ದೇನೆ.
ಇಲ್ಲಿ ಇವಳು; ಇವಳ ಸಮಸ್ಯೆಗಳು; ಬೇಗುದಿಗಳು. ಇವಳೇ ಈಗ ನನ್ನ ಹುಡುಗಿ. ಅವಳ ಜೊತೆ ಯಾವ ಒಪ್ಪಂದಗಳೂ ಇಲ್ಲ. ಎಲ್ಲವೂ ಛಂದ; ಸ್ವಚ್ಛಂದ. ಅವಳ ಸ್ಪರ್ಶವೂ ಅಷ್ಟೆ.
ನಾವು ಒಪ್ಪಂದಗಳನ್ನು ಮಾಡಿಕೊಳ್ಳಬಾರದು. ಕೊನೆಗೆ ಕೇವಲ ಒಪ್ಪಂದಗಳು ಮಾತ್ರವೇ ಇರುತ್ತವೆ. ನಾವು ಕೇವಲ ಪ್ರೀತಿಸಲಾಗದಿದ್ದರೆ, ಲಾಡ್ಜಿನಲ್ಲಿ ಹಾಗೆ ಕೂಡಬಾರದು. ಸ್ಪರ್ಶದ ಜೊತೆಗೆ ಬಾಳಬಾರದು.
ನಿನ್ನೆ ಅವಳಿಗೆ ಮೈಲ್ ಕಳಿಸಿದ್ದೆ. ಉತ್ತರವೂ ಬಂದಿದೆ. ಅವಳನ್ನು ನೆಗ್ಲೆಕ್ಟ್ ಮಾಡಿದ್ದಕ್ಕೆ ವಾಚಾಮಗೋಚರ ಬೈದಿದ್ದಾಳೆ. ‘ನೀನೊಬ್ಬ ವಿಟ’ ಎಂದು ಬರೆದಿಲ್ಲ ಅಷ್ಟೆ;
ನನಗೆ ಬೆಸಿಲ್ ಒಪ್ಪಂದ ಮರೆಯಬೇಕು. ನನಗೆ ಒಪ್ಪಂದಗಳು ಬೇಡ.
ನಾನು ವೆಂಕಟೇಶ್ ಅಲ್ಲ.
ಅವಳು ಗೀತಾ ಇರಬಹುದೆ? ಗೊತ್ತಿಲ್ಲ.
*****
(೨೯.೧.೨೦೦೬ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ ಕಥೆ ಲೇಖಕರ ಅನುಮತಿಯಿಂದ ಪ್ರಕಟಿಸಲಾಗಿದೆ. ಇದೇ ಕತೆಯನ್ನು ಲೇಖಕರು ಸಂಪದ.ನೆಟ್‌ನಲ್ಲೂ ಪೋಸ್ಟ್ ಮಾಡಿದ್ದಾರೆ. ಕನ್ನಡಸಾಹಿತ್ಯ.ಕಾಂ ಓದುಗರಿಗೂ/ಆರ್ಕೈವ್‌ನಲ್ಲೂ‌ಇರಲೆಂದು ಪ್ರಕಟಿಸಲಾಗಿದೆ -ಸಂ)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.