ಇ- ನರಕ, ಇ- ಪುಲಕ

‘ನನ್ನ ಸುತ್ತಾ’ ಎಂಬ ಹೆಸರಿನ ಒಂದು ವಿಚಿತ್ರ ಪದ್ಯವನ್ನು ಪಿ.ಲಂಕೇಶ್ ಅವರು ಕನ್ನಡದ ನವ್ಯಕಾವ್ಯದ ಉಬ್ಬರದ ದಿನಗಳಲ್ಲಿ ಬರೆದಿದ್ದರು. ವಿಶೇಷವೆಂದರೆ, ಈ ಇಡಿಯ ಪದ್ಯದಲ್ಲೆಲ್ಲೂ ಕ್ರಿಯಾಪದವಿಲ್ಲ-‘ಈ ರಸ್ತೆಗಳು ಈ ಮನೆಗಳು ಈ ಮರಗಳು ಈ ಮನುಷ್ಯರು’ ಎಂದು ಆರಂಭವಾಗಿ ಅದು ಮುಂದಿನ ಸಾಲುಗಳಲ್ಲಿ ‘ಈ ಸಂಭ್ರಮ, ಈ ಕೃಷ್ಣನ ಕಾಟ, ಈ ಮಂತ್ರದ ಪಾಠ….’ಎಂದೆಲ್ಲ ಮುಂದುವರೆದು ಮತ್ತೂ ಮುಂದಿನ ಪ್ಯಾರಾದಲ್ಲಿ ‘ಭಾಷೆ ಈ ಭಾವನೆ ಈ ಕಾಮನೆ ಈ ಭೋಳೆ’ ಎಂಬಿತ್ಯಾದಿಯಾಗಿ ಬೆಳೆಯುತ್ತ, ತನ್ನ ಕಡೆಯ ಸಾಲಿನಲ್ಲಿ ‘ಈ ಮನೆಗಳು ಈ ಜನಗಳು ಈ ನರಕ ಈ ಪುಲಕ’-ಎಂದು ಮುಕ್ತಾಯವಾಗುತ್ತದೆ. ಇವತ್ತು, ‘ಇ- ಮೈಲು, ಇ- ಕಾಮರ್ಸು, ಇ- ಪುಸ್ತಕ, ಇ- ಆಡಳಿತ” ಮೊದಲಾದ ಪದಪುಂಜಗಳು ತುಂಬ ಬಳಕೆಗೆ ಬರುತ್ತಿರುವ ಕಾಲದಲ್ಲಿ, ಲಂಕೇಶರ ಈ ಪದ್ಯವನ್ನು ತುಂಬ ಹೊಸದಾದ ಒಂದು ‘ಇ- ಅರ್ಥ’ದಲ್ಲೇ ಓದಲಿಕ್ಕೆ ಸಾಧ್ಯವಿದೆ ಎಂದು ನನಗನ್ನಿಸಿತು. ‘ಈ-ಶಾವಾಸ್ಯಮಿದಂ ಸರ್ವಂ’ ಆಗಲಿಕ್ಕೆ ಇನ್ನು ಬಹಳ ದೂರವೇನೂ ಇಲ್ಲವೆನಿಸುವ ಇವತ್ತಿನ ಸಂದರ್ಭದಲ್ಲಿ, ಲಂಕೇಶರ ಪದ್ಯವು ಕೊಡುವ ಹೊಸ ಧ್ವನ್ಯರ್ಥಗಳೇನಿವೆ, ಅವುಗಳಿಂದ ಪ್ರೇರಿತವಾಗಿ ನಾನು ಈ ಬಾರಿಯ ಸ್ವಗತಕ್ಕೆ ತೊಡಗುತ್ತೇನೆ.

ನಾನು ಪ್ರಸ್ತಾಪಿಸುವ ಈ ‘ಇ- ಜಗತ್ತು’-ಅಂದರೆ ‘ಎಲೆಕ್ಟ್ರಾನಿಕ್ ಜಗತ್ತು’-ಎಷ್ಟು ವಿಚಿತ್ರವಾದದ್ದು ಎನ್ನುವುದಕ್ಕೆ ಒಂದು ಉದಾಹರಣೆಯಿಂದ ಪ್ರಾರಂಭಿಸುತ್ತೇನೆ. ಕಳೆದ ವರ್ಷ ಮೇ ೧೪ರಂದು ಕೇಸೀ ಸ್ವೆನ್‌ಸನ್ ಎಂಬ ೧೯ ವರ್ಷದ ಹುಡುಗಿಯು ಅಮೇರಿಕಾದ ಕೆನ್ಸಾಸ್ ಪ್ರಾಂತ್ಯದ ತನ್ನ ಮನೆಯಲ್ಲಿ ಪ್ರಾಣಬಿಟ್ಟಳು. ಈ ಸುದ್ದಿ ಅಲ್ಲಿ ಯಾಕೆ ಮುಖ್ಯವಾಯಿತೆಂದರೆ, ಆಕೆ ಹಲವು ವರ್ಷಗಳಿಂದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ತನ್ನ ದಿನಚರಿಯನ್ನು ಪ್ರತಿದಿನ ಅಂತರ್ಜಾಲದಲ್ಲಿ ಬರೆಯುತ್ತಿದ್ದಳು. ತನ್ನ ಆ ‘ಆನ್-ಲೈನ್ ಡೈರಿ’ಯಲ್ಲಿ ಆಕೆ ತನ್ನ ಕಷ್ಟಸುಖಗಳ ಬಗ್ಗೆ ಬರೆಯುತ್ತಿದ್ದುದನ್ನು ಬಹುಸಂಖ್ಯೆಯ ಜನ ಪ್ರತಿನಿತ್ಯ ಓದುತ್ತಿದ್ದರು; ಅವಳೊಂದಿಗೆ ಅಂತರ್ಜಾಲದಲ್ಲೇ ಸಂವಾದವನ್ನೂ ಮಾಡುತ್ತಿದ್ದರು. ನಿಶ್ಚಿತವಾದ ಸಾವನ್ನು ಎದುರಿಟ್ಟುಕೊಂಡೂ ಆಕೆ ಹೇಗೆ ಬ್ಯಾಸ್ಕೆಟ್‌ಬಾಲ್ ಆಟದಲ್ಲಿ ತನ್ನ ತೊಡಗಿಸಿಕೊಳ್ಳುತ್ತಿದ್ದಳು, ಹೇಗೆ ಕ್ಯಾನ್ಸರ್‌ನ ನೋವುಗಳನ್ನು ಆಕೆ ಲವಲವಿಕೆಯಿಂದಲೇ ಎದುರಿಸುತ್ತಿದ್ದಳು-ಎಂಬಿತ್ಯಾದಿಗಳೆಲ್ಲ ಹಲವರಿಗೆ ಅಚ್ಚರಿಯ ವಿಷಯವೂ ಮಾನವೀಯ ಛಲದ ಪ್ರತೀಕವೂ ಆಗಿ ಕಾಣುತ್ತಿತ್ತು. ಹಲವರು ಆಕೆಗೆ ಅಷ್ಟಿಷ್ಟು ಸಹಾಯವನ್ನೂ ಮಾಡಿದ್ದರು; ಅವಳಂತೆಯೇ ಕ್ಯಾನ್ಸರಿಗೆ ತುತ್ತಾದ ಕೆಲವರು ಅವಳ ದಿನಚರಿಯನ್ನು ಓದಿ ಸಾಂತ್ವನವನ್ನೂ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಅವಳ ಬದುಕು ಸಾವುಗಳೆರಡೂ ಈ-ಜಗತ್ತಿನ ಒಂದು ಪ್ರಮುಖ ವಿದ್ಯಮಾನವಾಗಿದ್ದವು.

ಕಥೆ ಇಲ್ಲಿಗೇ ನಿಂತಿದ್ದರೆ ಸಮಸ್ಯೆಯಿರಲಿಲ್ಲ. ಆದರೆ ಅದೇ ಮೇ ೩೧ರಂದು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬಂದ ಒಂದು ವರದಿಯು ಈ ವಿದ್ಯಮಾನಕ್ಕೆ ವಿಚಿತ್ರ ತಿರುವನ್ನೇ ಕೊಟ್ಟಿತು. ಆ ವರದಿಯ ಪ್ರಕಾರ, ಆ ಇಡಿಯ ಕಥೆಯನ್ನು ಕಟ್ಟಿ, ಅದನ್ನು ಅಂತರ್ಜಾಲದಲ್ಲಿ ಎಲ್ಲರಿಗೂ ನಂಬಿಕೆ ಬರುವಂತೆ ಸ್ಥಾಪಿಸಿ-ಮುಂದುವರೆಸಿ, ಕಡೆಗೆ ಆ ಕಲ್ಪಿತ ಹುಡುಗಿಯ ಸಾವನ್ನೂ ಸೃಷ್ಟಿಸಿ ಅಲ್ಲಿಗೆ ಕಥನವನ್ನು ಪರಿಸಮಾಪ್ತಿಗೊಳಿಸಿದ್ದಳು! ಈ ವರದಿಯು ಅಮೇರಿಕಾದ ‘ಈ-ನಾಗರೀಕ’ರ ನಡುವೆ ಹೊಸದೊಂದು ಚರ್ಚೆಗೆ ಕಾರಣವಾಯಿತು. ಇದನ್ನು ವಿರೋಧಿಸಿದವರು ಸಾಂಪ್ರದಾಯಿಕ ಮಾಧ್ಯಮಗಳಿಗೆ ಒಂದು ನೈತಿಕತೆ ಇರಬೇಕಾದಂತೆ ಅಂತರ್ಜಾಲಕ್ಕೂ ಒಂದು ಈ-ನೈತಿಕತೆ ಇರಬೇಕೆಂದು ಪ್ರತಿಪಾದಿಸಿದರು. ಆದರೆ ಇದರ ಪರವಾಗಿಯೂ ಕೆಲವರು ವಾದಿಸಿ, ಇದರಿಂದ ಯಾರಿಗೂ‌ಅನ್ಯಾಯವಾಗಿಲ್ಲದಿರುವುದರಿಂದ ಇದರಲ್ಲಿ ಅನೈತಿಕವೇನೂ ಇಲ್ಲವೆಂದು ಸೂಚಿಸಿದರು. ಸ್ವತಃ ಈ ವಿದ್ಯಮಾನದ ಸೃಷ್ಟಿಕಾರ್ತಿ ಡೆಬಿಯ ಪ್ರಕಾರ, ಹಲವರು ಕ್ಯಾನ್ಸರ್ ರೋಗಿಗಳು ಇದರಿಂದ ಸಾಂತ್ವನವನ್ನೇ ಪಡೆದಿರುವುದರಿಂದ ಇದು ಸಮಾಜಕ್ಕೆ ಒಳಿತನ್ನೇ ಮಾಡಿತೆಂದೂ ಆಕೆ ಸಮರ್ಥಿಸಿಕೊಂಡಳು. ಇದನ್ನೆಲ್ಲ ನೋಡಿದ ಒಬ್ಬ ಅಂತರ್ಜಾಲಪ್ರಿಯ ಉದ್ಗರಿಸಿದನಂತೆ-‘ಆವ್ಯಕ್ತಿ ಸುಳ್ಳಿರಬಹುದು, ಆದರೆ ಆ ಬಗ್ಗೆ ಸೃಷ್ಟಿಯಾದ ನಮ್ಮೆಲ್ಲರ ಭಾವನೆಯೇನೂ ಸುಳ್ಳಲ್ಲವಲ್ಲ?!’

ನಿಜ. ಇದರಿಂದ ಅಂಥ ಅನ್ಯಾಯವೇನೂ ಆಗಿರಲಿಕ್ಕಿಲ್ಲ. ಆದರೆ ಈ ದೃಷ್ಟಾಂತವು ಇವತ್ತಿನ ವಿದ್ಯುನ್ಮಾನ ಜಗತ್ತಿನ ಒಂದು ಪ್ರಮುಖ ಸಮಸ್ಯೆಯನ್ನು ನಮ್ಮೆದುರಿಗೆ ಬಿಚ್ಚುತ್ತದೆಯೆಂಬುದನ್ನೂ ನಾವಿಲ್ಲಿ ಮರೆಯಬಾರದು. ಯಾಕೆಂದರೆ, ಈ ಕೇಸಿಯ ಸಾವಿನ ಕಥಾನಕವು ಕೇವಲ ಒಂದು ಅಪ್ರಸ್ತುತ ಪ್ರಸಂಗವಲ್ಲ; ಅದು ಇವತ್ತಿನ ಮಾಹಿತಿ ತಂತ್ರಜ್ಞಾನವೂ ಮನರಂಜನೆಯ ಮಾಧ್ಯಮಗಳೂ ಬಳಸುವ ತಂತ್ರಗಾರಿಕೆಗೇ ಒಂದು ರೂಪಕವೂ ಹೌದು. ಉದಾಹರಣೆಗೆ, ಭಾರತದಲ್ಲಿ ನಡೆಯುವ ಕೋಮುಗಲಭೆಗಳನ್ನು ‘ವರದಿಮಾಡುವ’ ಮಾಧ್ಯಮಗಳನ್ನೇ ನೆನಪಿಸಿಕೊಳ್ಳಿ. ನಮ್ಮ ಅನುಭವಕ್ಕೇ ಕಂಡಿರುವಂತೆ, ಅವು ಕೇವಲ ಅಲ್ಲಿ ನಡೆದ ‘ಸತ್ಯ’ವನ್ನು ನಮಗೆ ತೋರಿಸುತ್ತಿರುವುದಿಲ್ಲ; ಅಲ್ಲಿ ಸಂಭವಿಸಿದ ಘಟನೆಗಳಲ್ಲಿ ‘ಆಯ್ದ ಕೆಲವನ್ನು’ ಚಿತ್ರೀಕರಿಸಿ ಅದನ್ನು ನಿರ್ದಿಷ್ಟ ಕ್ರಮದಲ್ಲಿ ‘ಸಂಕಲಿಸಿ’ ನಮ್ಮೆದುರಿಗೆ ಪ್ರಸ್ತುತಪಡಿಸುತ್ತಿರುತ್ತವೆ. ಹಾಗಾಗಿ, ಇಂಥ ವರದಿಗಳು ನಿಜವಾಗಿ ‘ವಾಸ್ತವ’ವಲ್ಲ; ಅವು ನಿರ್ದಿಷ್ಟ ಧೋರಣೆಯನ್ನಿಟ್ಟುಕೊಂಡು ಮಾಡಿರುವ ‘ಸೃಷ್ಟಿಗಳು. ಅಂದರೆ, ಕೇಸಿಯ ಕಥೆಯಂತೆ ಇಲ್ಲೂ ಒಂದು ‘ಭ್ರಮಾನಿರ್ಮಾಣ’ ಇದ್ದೇ ಇದೆ. ಮತ್ತು ಅಂಥ ಭ್ರಮಾನಿರ್ಮಾಣವನ್ನು ತಮ್ಮ ತಂತ್ರಗಾರಿಕೆಯಲ್ಲಿ ಸೇರಿಸಿಕೊಂಡಿರುವುದರಿಂದಲೇ ಇವತ್ತು ಮಾಧ್ಯಮವೆಂಬುದು ಉದ್ಯಮವೂ ಆಗಿದೆ.

ಮಾಧ್ಯಮಗಳ ಸರ್ವವ್ಯಾಪ್ತಿಯಿಂದಾಗಿ ಇವತ್ತಿನ ಜಗತ್ತಿನಲ್ಲಿ ಸೃಷ್ಟಿಯಾಗುವ ಇಂಥ ವಾಸ್ತವ-ಭ್ರಮೆಗಳ ನಡುವಿನ ಒಂದು ವಿಚಿತ್ರ ಸ್ಥಿತಿಯೇನಿದೆ, ಅದನ್ನೇ ಪಶ್ಚಿಮದ ಪೋಸ್ಟ್‌ಮಾಡರ್ನ್ ಪರಿಭಾಷೆಯಲ್ಲಿ ವಾಸ್ತವಾಭಾಸ-ಸಿಮ್ಯುಲೇಕ್ರಮ್-ಎಂದು ಗುರುತಿಸಲಾಗುತ್ತದೆ. ಮತ್ತು ಇಂಥ ವಾಸ್ತವಾಭಾಸವು ಇವತ್ತಿನ ಸಂದರ್ಭದ ಅನಿವಾರ್ಯ ವಿಧಿ ಎಂಬಂಥ ನಿರಾಶಾವಾದಿ ನಿಲುವನ್ನೂ ಈ ನವ್ಯೋತ್ತರ ಪಂಥದ ಕೆಲವರು ಸ್ವೀಕರಿಸುತ್ತಾರೆ. ಅವರ ಸಂದರ್ಭ ಹಾಗಿದ್ದೀತು. ಆದರೆ, ಪಶ್ಚಿಮದ ಈ-ಜಗತ್ತಿನ ಹೊರಗಿರುವ ನಮ್ಮಂಥವರಿಗೆ ಈ ಮಾಧ್ಯಮವ್ಯಾಪ್ತಿ ಜಗತ್ತು ಏಕಕಾಲದಲ್ಲಿ ಆಕರ್ಷಕವೂ ಆಕ್ರಮಣಕಾರಿಯೂ ಆಗಿರುವುದನ್ನು ಹೇಗೆ ಮರೆಯೋಣ? ಉದಾಹರಣೆಗೆ, ಈಚೆಗೆ ತಾಲಿಬಾನ್‌ನ್ನು ಅಮೇರಿಕಾವು ಸೋಲಿಸಿದಾಗ, ಟಿವಿಯಲ್ಲಿ ‘ಮುಸುಕು ತೆಗೆದು ನಗುತ್ತ ರಸ್ತೆಗಳಲ್ಲಿ ಓಡಾಡುವ’ ಹೆಂಗಸರ ಬಿಂಬಗಳನ್ನು ಕಂಡದ್ದೇ, ಇದು ನಾಗರಿಕತೆಯ ಮರುಸ್ಥಾಪನೆ’-ಎಂಬ ತೀರ್ಮಾನಕ್ಕೆ ನಾವು ಬಂದುಬಿಟ್ಟೆವಲ್ಲ, ಇದು ‘ವಾಸ್ತವ’ ‘ಭ್ರಮೆ’ಯೋ? ಇದು ಆಫ್ಘಾನಿಸ್ಥಾನದ ‘ನುಜಸ್ಥಿತಿ’ಯೋ ಅಥವಾ ಅಮೇರಿಕಾವು ಜಗತ್ತಿಗೆ ಕಾಣಿಸಲುಬಯಸುತ್ತಿರುವ ‘ಕಥಾನಕ’ವೋ? ಇವತ್ತಿನ ವಿದ್ಯುನ್ಮಾನ ಮಾಧ್ಯಮಗಳು ನಮಗೆ ಹಲವಾರು ಆಕರ್ಷಕ ಅನುಕೂಲಗಳನ್ನು ಮಾಡಿಕೊಡುತ್ತಲೇ ಇಂಥ ವಿಕೃತ ವ್ಯಾಖ್ಯಾನಗಳಿಗೂ ಕಾರಣವಾಗಿವೆಯಲ್ಲವೆ?

ಮತ್ತೆ ಲಂಕೇಶರ ಪದ್ಯಕ್ಕೆ ಮರಳಿ ಮುಗಿಸುತ್ತೇನೆ. ಈಗ ಸುಮಾರು ಐವತ್ತು ವರ್ಷಗಳ ಹಿಂದೆ, ಪುಟ್ಟ ಹಳ್ಳಿಯೊಂದರಿಂದ ಪೇಟೆಯ ಲೋಕಕ್ಕೆ ಪ್ರವೇಶಿಸಿದ್ದ ಲಂಕೇಶರಿಗೆ ಆ ಜಗತ್ತು ಒಂದು ಕಡೆ ‘ಈ ನರಕ’ವೂ ಇನ್ನೊಂದು ಕಡೆ ‘ಈ ಪುಲಕ ‘ವೂ’ ಆಗಿ ಕಂಡಿತ್ತು. ಅಂತೆಯೇ ಈಗ, ಹೊಸ ಈ-ಜಗತ್ತಿಗೆ ಪ್ರವೇಶಿಸುತ್ತಿರುವ ನನ್ನ ತಲೆಮಾರಿನವರಿಗೆ, ಇದು ಏಕಕಾಲಕ್ಕೆ ‘ಇ- ನರಕ’ವೂ ಹೌದು; ‘ಇ- ಪುಲಕ’ವೂ ಹೌದು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.