ಗ್ಲೂರ ತ್ರಾಕ (ಜಗತ್‌ಸಮರ)

“ಕಸ ಕ್ರೀಪ ಮೇಹೆ ಚರಲ ಸರಟ್ ಸೇ ಕಸ ಸಬೀರ ಗ್ರಿಮ ಪ್ರೆಸ್ತ ಗ್ರಮೇಕ!” – ಪುರಾತನ ಭೃಗೂಚಿ ಭಾಷೆಯ ನಾಣ್ಣುಡಿ
(ಎಚ್ಚರ ಮನಸ್ಸು ಸುಪ್ತ ನೀಚತೆಯನ್ನು ಮುಚ್ಚಲು ಹವಣಿಸುತ್ತದೆ, ನುಸುಕಿನ ಮಂದ ಕಿರಣಗಳು ಕತ್ತಲೆಯ ವೈಭವವನ್ನು ಮುಚ್ಚಲು ಪ್ರಯತ್ನಿಸಿದಂತೆ!)

ಜಾರ್ಡೈನ್ ವಸತಿಗಳು ಮ್ಯಾನ್ಹಾಟನ ನಲ್ಲಿ ಕೆ.ಎಸ್. ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಅಗ್ಗದ ನಿವಾಸಸ್ಥಳ. ನವದಂಪತಿಗಳಿಗೆ, ಪಿ‌ಎಚ್‌ಡೀ ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದಂತಹಾ ಜಾಗ. ವಿಶಾಲ, ನಿರ್ಜನ, ಶಾಂತಿಯುತ ಸಮುದಾಯ. ಇದೇ ನನ್ನ ಸಧ್ಯದ ವಾಸಸ್ಥಳ. ಆದರೆ ನಾನು ವಿವಾಹಿತನೂ ಅಲ್ಲ, ಡಾಕ್ಟರೇಟ್ ಪದವಿಗಾಗಿ ಓದುತ್ತಲೂ ಇಲ್ಲ. ಕೆಲವು ದಿವಸ ತುಂಬಿದ ವಿದ್ಯಾರ್ಥಿಗೃಹಗಳಿಂದ ದೂರವಿರಲು ಇಲ್ಲಿಗೆ ಬಂದ ಬಡ ಬ್ರಾಹ್ಮಣ ಬ್ರಹ್ಮಾಚಾರಿ. ಜಾರ್ಡೈನ್ ಗೆ ಬಂದ ಕೆಲವೇ ತಿಂಗಳಲ್ಲಿ ನನಗೆ ಕಾಲವೇ ನಿಂತ ಅನುಭವವಾಯಿತು. ಬೆಳಗ್ಗಿನ ತರಗತಿಗಳಿಗೆ ಹೋಗಲಿಲ್ಲವೆಂದರೆ ದಿನಗಟ್ಟಲೇ ಜೀವಂತ ಪ್ರಾಣಿಗಳ ನೋಟವೇ ಸಿಗುತ್ತಿರಲಿಲ್ಲ. ಎರಡು ಕಾಲಿನ ಮೇಲೆ ನಿಂತ ಮನುಷ್ಯರನ್ನು ನೋಡಲೆಂದೇ ವಾಕಿಂಗಿಗೆ ತೆರಳುತ್ತಿದ್ದೆ. ಆದರೆ ಮನೆಯಿಂದ ಹೊರಬಿದ್ದನೆಂದರೆ ಕಾಣುತ್ತಿದ್ದದ್ದು ಮನಸ್ಸಿಗಿನ್ನು ಕಸಿವಿಸಿಯುಂಟು ಮಾಡುವಂತಾದ್ದು. ವಿವಾಹಿತ ಜೋಡಿಗಳು ಕೈಯಲ್ಲಿ ಕೈಹಿಡಿದು ಸದ್ದಿಲ್ಲದೇ ಡ್ಯುಯೆಟ್ ಹಾಡುತ್ತಾ ಆನಂದದಿಂದ ಜಾರ್ಡೈನ್ ನ ಈ ತುದಿಯಿಂದ ಆ ತುದಿಯ ತನಕ ವಾಕ್ ಮಾಡುತ್ತಿದ್ದುದು ಸಾಮಾನ್ಯ. ನನ್ನ ಒಂಟಿತನಕ್ಕೆ ಸವಾಲಿಟ್ಟಂತಾಗುತ್ತಿತ್ತು ಈ ನೋಟಗಳು. ಸೆಪ್ಟೆಂಬರ್‍ನ ತಣ್ಣನೆಯೆ ರಾತ್ರಿಗಳಲ್ಲಿ ಒಂಟಿಯಾಗಿ ವಾಕ್ ಮಾಡುವಾಗ ಕೆಲವೊಮ್ಮೆ ಯೋಚಿಸುತ್ತಿದ್ದೆ. ನನ್ನೊಡನೆ ಸಂಗಾತಿಯಾಗಿ ಒಂದು ಭೂತವಿದ್ದರೂ ಸಾಕಿತ್ತು, ನಾನು ಮಾಡುತ್ತಿದ್ದ ಅಡುಗೆಯನ್ನು ಕದ್ದುಮುಚ್ಚಿಯಾದರೂ ತಿನ್ನುತ್ತಿತ್ತು. ಮನೆಯಲ್ಲಿ ನಾನು ಮಾಡಿದ ಕೊಳಕ್ಕನ್ನು ಬಿಟ್ಟು ಬೇರೆಯೊಬ್ಬರು ಮಾಡಿದ ರಾದ್ಧಾಂತವಾದರೂ ನೋಡುವುದಕ್ಕೆ ಸಿಗುತ್ತಿತ್ತು. ಅದಕ್ಕೆ ಅಂತಹಾ ಕೆಟ್ಟ ಪೈಶಾಚಿಕ ಪ್ರವೃತ್ತಿಯಿರದಿದ್ದರೆ, ಸಣ್ಣದಾಗಿ ಜಗಳವಾದರೂ ಆಡಬಹುದೆಂದು ಯೋಚಿಸಿ ಮನಸ್ಸಿನಲ್ಲಿಯೇ ಒಮ್ಮೆ ಹಾಗೆ ನಟಿಸಿದ್ದೆ.

ಡಿಸೆಂಬರ್ ಬರುತ್ತಿದ್ದಂತೆಯೇ ಈ ತರಹದ ಯೋಚನೆಗಳು ಹೆಚ್ಚಾದವು. ಇನ್ನು ಒಂಟಿಯಾಗಿರುವುದು ಕ್ಷೇಮವಲ್ಲವೆಂದು ಅರಿತು ಪುನಃ ದೇಸಿ ವಿದ್ಯಾರ್ಥಿಗಳ ಮನೆಯೊಂದನ್ನು ಹುಡುಕಿ ಜಾರ್ಡೈನ್‌ನಿಂದ ಜಾಗ ಖಾಲಿಮಾಡಲು ತಯಾರಿ ನಡೆಸಿದೆ. ಆದರೆ ನನ್ನ ಕರ್ಮಕ್ಕೆ ನನ್ನ ಒಂಟಿತನ ನನ್ನ ಜೊತೆಗೇ ಈ ಹೊಸ ಮನೆಗೂ ಕಾಲಿಟ್ಟಿತು. ಡಿಸೆಂಬರ್‍ನ ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ ಇಡೀ ಮ್ಯಾನ್ಹಾಟನ್ನೇ ಖಾಲಿಯಾಗುತ್ತದೆ. ಭಾರತೀಯ ವಿದ್ಯಾರ್ಥಿಗಳು ತಿಂಗಳ ರಜೆಗೆ ಭಾರತಕ್ಕೋ ಅಥವ ಅಮೇರಿಕ ಟೂರ್‍ಗೋ ತೆರಳುತ್ತಾರೆ. ಆರು ಜನರಿರುವ ಮನೆಯಲ್ಲಿ ಈಗ ಎರಡೇ ಜೀವಗಳು. ಒಬ್ಬನ ಮುಖ ಇನ್ನೊಬ್ಬ ನೋಡುವುದಕ್ಕೆ ೨-೩ ದಿನದ ಮುಂಚೆಯೇ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವ ಸಂದರ್ಭ.. ಆದರೆ ನಾನು ದೃತಿಗೆಡಲಿಲ್ಲ. ೧ ವರ್ಷ ಏಕಾಂಗಿಯಾಗಿದ್ದವ ಇನ್ನೊಂದು ತಿಂಗಳು ಇರಬಲ್ಲೆನೇ ಎಂದು ಸುಮ್ಮನಿದ್ದೆ. ಕ್ರಿಸ್‌ಮಸ್ ತನಕ ಏನೂ ತೊಂದರೆಯಿಲ್ಲದೇ ಒಂಟಿತನ ಮುಂದುವರೆಸಿದೆ.

ಭೃಗೂಚಿ ಪುರಾತನ ಭಾಷೆ. ಇಂದಿನ ಕಾಲದವರಿಗೆ ಅರ್ಥವಾಗುವಂತೆ ಹೇಳಬೇಕೆಂದರೆ ಇಗೋ ಒಂದು ಸಣ್ಣ ಕತೆ. ಕಂಪ್ಯೂಟರ್‍ಗಳು ಬಂದಮೇಲೆ ಭಾಷೆಗಳು ವಿಕಾಸವಾದವಲ್ಲ, ಹಾಗೆಯೇ ಮನುಷ್ಯನ ಭಾಷೆಗಳು. ಮೊದಲು ಮಷೀನ್ ಲೆವಲ್ ಭಾಷೆ. ನಂತರ ಹೆಚ್ಚಿನ ನೈಪುಣ್ಯತೆ ಹಾಗು ಸುಧಾರಿತ ಹಾರ್ಡ್ ವೇರ್‍ಗಳು ಸೇರುತ್ತಾ ಹೋದಂತೆ ಹಲವು ಭಾಷೆಗಳು ಬೆಳೆದವಲ್ಲವೇ.. ಹಾಗೆಯೇ ಮನುಷ್ಯನ ಭಾಷೆಗಳೂ ಕೂಡ. ಭೃಗೂಚಿ ಜೀವಕುಲದ ಮೊತ್ತಮೊದಲ ಬುದ್ಧಿವಂತ ಭಾಷೆ. ಆಗಿನ ಕಾಲಕ್ಕೆ ಅದೊಂದು ಅವಿಷ್ಕಾರವೇ ಸರಿ. ಜಗತ್ತಿನಲ್ಲಿ ಯಾರುಬೇಕಾದರೂ ಮಾತಾಡಬಲ್ಲ ಭಾಷೆ ಅದು. ಪ್ರಾಣಿ ಪಕ್ಶಿ ಪಿಶಾಚಿಗಳಿಂದ ಹಿಡಿದು ಮನುಷ್ಯ, ದೇವ ಭೂತಗಳೆಲ್ಲರೂ ಮಾತಾಡಬಲ್ಲ ಸಾಮಾನ್ಯ ಭಾಷೆಯದು. ತದನಂತರವೇ ಬಂದಿದ್ದು ಪ್ರತ್ಯೇಕ ಪಂಗಡಗಳಿಗೆ ಪ್ರತ್ಯೇಕ ಭಾಷೆ. ಮೊದಲಿಗೆ ದೇವತೆಗಳು ತಮ್ಮದೇ ಆದ ಗುಪ್ತ ಭಾಷೆ ಬೆಳೆಸಿಕೊಂಡರು. ಅದನ್ನದುಮಿಕ್ಕಲು ಭೂತ ಪ್ರೇತಗಳು ತಮ್ಮದೇ ಆದ ಭಾಷೆ ಉಪಯೋಗಿಸಿದರು.. ಹೀಗೆ. ಒಟ್ಟಿನಲ್ಲಿ ಆಗಿನ ಕಾಲಕ್ಕೇ ಮಷೀನ್ ಇಂಡಿಪೆಂಡೆಂಟ್ ಭಾಷೆಯೊಂದಿತ್ತು; ಭೃಗೂಚಿ. ಅಲ್ಲಿಂದ ಮುಂದೆ, ಭಾಷಾವಿಕಸನ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದೂ, ಪಾಣಿನಿಯ ಸಂಸ್ಕೃತವು ಅಂದಿನ ಕಾಲದ ಸಿ ಆದದ್ದೂ ಇನ್ನೊಂದು ಕಥೆಯೇ. ಇದರ ಕಥೆ ಹೇಳಲು ಮತ್ತೊಂದು ಪುಸ್ತಕವೇ ಬೇಕೇನೊ!

ಭೃಗೂಚಿ ಭಾಷೆ ಆ ಕಾಲದ ಜೀವಿಗಳ ಮಿಡಿತವನ್ನು ಸೆರೆಹಿಡಿದಿದೆ. ಜೀವಿಗಳ ಭಾವನೆಗಳು ಇಂದಿನಂತೆ ಸುಧಾರಿತವಾಗಿರಲಿಲ್ಲ ಆ ಪುರಾತನ ಕಾಲದಲ್ಲಿ, ಕೆಟ್ಟದ್ದು ಒಳ್ಳೆಯದು ಇವುಗಳ ನಡುವೆ ವ್ಯತ್ಯಾಸವೇ ಇರದಿದ್ದ ಕಾಲ ಅದು. (ಇವತ್ತು ಅದೇ ತರಹದ ಯೋಚನಾ ಲಹರಿಗಳು ಬರುತ್ತಿರುವುದರಿಂದಲೇ ಈ ಕಥೆಗೆ ಮಹತ್ವ ಇದೆ ಅನ್ನಿ) ದೇವತೆಗಳು, ಭೂತ ಪಿಶಾಚಿ ಮನುಷ್ಯ ಹಾಗು ಇತರೆ ಜೀವಸಂಕುಲಗಳೆಲ್ಲವಕ್ಕೂ ಭೂಮಿಯೇ ಅಂದು ವಾಸಸ್ಥಾನ. ಅಂದೂ ಇವತ್ತಿನಂತೆ ದೇಶ ರಾಷ್ತ್ರಗಳೆಂಬ ಗಡಿಗಳು ಒಂದು ಜಾಗದ ಜೀವಿಗಳನ್ನು ಇನ್ನೊಂದು ಜಾಗದ ಜೀವಿಗಳಿಂದ ಬೇರ್ಪಡಿಸಿದ್ದವಂತೆ. ಅದರ ಪಳೆಯುಳಿಕೆಗಳೇ ಇಂದು ನಾವು ಕಂಡುಹಿಡಿದಿರುವ ಪುರಾತನ ನಾಗರೀಕತೆಗಳು. ಇವೆಲ್ಲವೂ ಇರುವಿಗೆ ಬಂದಿದ್ದು ಒಂದೇ ಕಾಲದಲ್ಲಿಯೇ.. ನಮ್ಮ ವಿಙ್ನಾನಿಗಳಿನ್ನೂ ಇವೆಲ್ಲವನ್ನು ಕಂಡುಹಿಡಿದಿಲ್ಲ ಬಿಡಿ. ಆ ಕಾಲಕ್ಕೆ, ನಮ್ಮ ಭಾರತೀಯ ದೈವಗಳೂ, ಅವರ ದೇವಗಣಗಳೂ, ನಮ್ಮ ರಾಕ್ಷಸರೂ ಬಹಳ ಪ್ರಬಲವಂತೆ. ನಮ್ಮ ಪುರಾಣಗಳೇನು ಸುಳ್ಳಲ್ಲ.. ಆದರೆ ಕೆಲವೊಮ್ಮೆ ಕಾಲಗತಿಯಲ್ಲಿ ಸ್ವಲ್ಪ ಎಡವಟ್ಟಾಗಿದೆಯಷ್ಟೆ. ಹಾಗೆಯೇ ಈಜಿಪ್ಟಿನಲ್ಲೂ ಕೂಡ ಅಲ್ಲಿನ ರಾಜರು ಅಲ್ಲಿನ ದೇವ ಭೂತಗಳೊಡನೆ ನೇರವಾಗಿ ವ್ಯವಹರಿಸುತ್ತಿದ್ದರಂತೆ. ದೇಶಗಳ ಮಧ್ಯೆ ಕಾಳಗವೆಸಗಿದಾಗ ಮಾನವ, ದಾನವ ಎಂಬ ವ್ಯತ್ಯಾಸವಿಲ್ಲದೇ ತಮ್ಮ ತಮ್ಮ ದೇಶಗಳಿಗಾಗಿ ಎಲ್ಲರೂ ಸೇರಿ ಹೊಡೆದಾಡುತ್ತಿದ್ದದು ಸಾಮಾನ್ಯ. ಆದರೆ ಭಾರತ ಮತ್ತು ಈಜಿಪ್ಟಿನ ನಾಗರೀಕತೆಗಳು ಸಮಬಲವಾದ್ದರಿಂದ ಒಂದುತರಹ ಶೀತಲಸಮರ ಬಿಟ್ಟರೆ ಮಿಕ್ಕಂತೆ ಇವೆರೆಡರ ಮಧ್ಯೆ ಹೆಚ್ಚುಕಮ್ಮಿ ಶಾಂತಿಯೇ ಇತ್ತು ಬಿಡಿ. ಒಟ್ಟಿನಲ್ಲಿ ಬಹಳವಾಗಿ ಇಂದಿನ ಪರಿಸ್ಥಿತಿಯೇ.. ಆದರೆ ಈಗಿನಷ್ಟು ಹೋಮೋಜೆನಿಟಿ ಇರಲಿಲ್ಲ.

ಇವನಿಗೆ ಇದೆಲ್ಲಾ ಹೇಗೆ ತಿಳಿಯಿತು ಎಂದು ನೀವು ಯೋಚಿಸುತ್ತಿರಬಹುದು. ಬಂದೆ, ಅಲ್ಲಿಗೇ ಬಂದೆ. ಸುಪ್ತಮನಸ್ಸಿನಲ್ಲಿ ಯಾವ ಬಗೆಯ ಯೋಚನೆಗಳು ಬರುವವೋ ಅದು ಭಗವಂತನಿಗೂ ಗೊತ್ತಿರದ ವಿಷಯವಿರಬಹುದು (ಅವನ ಸುಪ್ತ ಮನಸ್ಸಿನ ಯೋಚನೆಗಳನ್ನು ಅರಿತವರ್ಯಾರು!). ಜಾರ್ಡೈನ್ ನಿಂದ ಮನೆ ಖಾಲಿ ಮಾಡಿದ ಮೇಲೆ ನನಗೆ ಒಂದು ಅನಿರೀಕ್ಷಿತ ಮಾಹಿತಿ ದೊರೆಯಲಾರಂಭಿಸಿತು. ಜಾರ್ಡೈನ್ ಆನ್-ಕ್ಯಾಂಪಸ್ ವಸತಿವೃಂದ. ಅಲ್ಲಿ ಇಂಟರ್ನೆಟ್ ಕನೆಕ್ಷನ್ ವಿಶ್ವವಿದ್ಯಾಲಯದ್ದು. ಅದರಿಂದಾಗಿ ನನಗೆ ಬೇಕಾದ ಸಂಗೀತವನ್ನು ಅಂತರ್ಜಾಲದಿಂದ ಇಳಿಸಲಾಗುತ್ತಿರಲಿಲ್ಲ. ನಾನು ಹೊಸದಾಗಿ ಬಂದ ಜಾಗ ಕಾಲೇಜ್ ಹೈಟ್ಸ್ ಅಂತ. ಇದು ಖಾಸಗೀ ಜಾಗವಾದ್ದರಿಂದ ಅಂತರ್ಜಾಲದಲ್ಲಿ ಏನು ಬೇಕಾದರು ಮಾಡಬಹುದು. ತಕ್ಶಣವೇ ಶುರುಮಾಡಿದೆ ನೋಡಿ, ಮೊದಲೇ ಒಂಟಿ ಜೀವ, ಸೊರಗಿದ್ದ ನನ್ನ ಡೆತ್ ಮತ್ತು ಬ್ಲ್ಯಾಕ್ ಮೆಟಲ್ ಸಂಗ್ರಹವನ್ನು ಇನ್ನಿಲ್ಲದಂತೆ ವೃದ್ಧಿಸಿದೆ. ಗೋಥೆನ್‌ಬರ್ಗ್ ಶೈಲಿಯ ಹಾಡುಗಳಿಂದ ಹಿಡಿದು ಓWಔಂಆ‌ಒ (ಟಿeತಿ ತಿಚಿve oಜಿ ಚಿmeಡಿiಛಿಚಿಟಿ ಜeಚಿಣh meಣಚಿಟ), goಡಿe gಡಿiಟಿಜ, veಜiಛಿ meಣಚಿಟ, ಹೀಗೆ ಜಗತ್ತಿನ ನಾನಾ ಮೂಲೆಗಳಿಂದ ತಯಾರಿಸಲ್ಪಟ್ಟ ಮೆಟಲ್ ಸಂಗೀತ ತಾನಾಗಿಯೇ ನನ್ನ ಬಾಗಿಲನ್ನು ಬಡಿಯಲು ಪ್ರಾರಂಭಿಸಿತು.

ಮೆಟಲ್ ಸಂಗೀತದಲ್ಲಿ ಒಂದು ವಿಶೇಷವಿದೆ. ದೂರಕ್ಕೆ ನೋಡಿದರೆ ಇದು ಸಂಗೀತವೇ ಅಲ್ಲ. ಸ್ವಲ್ಪ ಹತ್ತಿರದಿಂದ ಬಲ್ಲವರಿಗೆ ತಿಳಿಯುತ್ತದೆ ಇದು, ಮನುಷ್ಯನ ವಿಕಾರಗಳನ್ನು ಸಂಗೀತದ ಮೂಲಕ ತೆರೆದಿಡುವ ಪ್ರಯತ್ನ ಅಂತ. ನನ್ನ ಬ್ಲಾಗನ್ನು ನೋಡಿದರೆ ಕೆಲವೊಮ್ಮೆ ಈತರಹದ ಬರಹಗಳನ್ನು ನೀವು ಗುರುತಿಸಬಹುದು. ಆದರೆ, ತೀರ ಸನಿಹದಿಂದ ನೋಡಿ. ವಿಚಿತ್ರ ಸಂಗತಿಯೊಂದು ಬಯಲಾಗುತ್ತದೆ. ಇಂದು ಅತ್ಯಂತ ಸುಪ್ರಸಿದ್ಧ ಮೆಟಲ್ ಬ್ಯಾಂಡುಗಳು ತಯಾರಿಸುವ ಸಂಗೀತ ಪುರಾತನ ನಾಗರೀಕತೆಗಳಿಗೆ ಸಂಬಂಧಿಸಿದ್ದು. ಉದಾಹರಣೆಗೆ, ರುದ್ರ: ಸಿಂಗಾಪುರದ ತಂಡ. ಇವರ ವಿಷಯ ಪುರಾತನ ವೈದಿಕ ನಾಗರೀಕತೆ, ನೈಲ್, ಬೆಹಿಮೋತ್, ಮಾರ್ಬಿಡ್ ಏಂಜಲ್: ಇವುಗಳ ವಿಷಯ ಈಜಿಪ್ಟ್/ಸುಮೇರಿಯನ್ ನಾಗರೀಕತೆ. ಯೂರೋಪಿನ ಅನಂತ ಬ್ಲಾಕ್ ಮೆಟಲ್ ತಂಡಗಳ ವಿಷಯ: ನಾರ್ಡಿಕ್, ವೈಕಿಂಗ್ ಪುರಾಣಗಳು. ಆದರೆ ಕೆಲವು ಅರೆಬೆಂದ ಮೆಟಲ್ ಬ್ಯಾಂಡ್‌ಗಳೂ ಇವೆಯನ್ನಿ. ಇವುಗಳ ಸಂಗೀತ ಭೂತ ಪಿಶಾಚಿಗಳದ್ದು, ಮನುಷ್ಯನ ಮಾನಸಿಕ ವಿಕಾರಗಳನ್ನು ತೆರೆದಿಡುವ ಸ್ಪರ್ಧೆ ಇವುಗಳ ನಡುವೆ. ಈ ತರಹದ ಬ್ಯಾಂಡ್‌ಗಳ ವಿಷಯವನ್ನೂ ಪ್ರಸ್ತಾಪಿಸಿದ್ದೇನೆ ನನ್ನ ಬ್ಲಾಗಿನಲ್ಲಿ.. ಹೋಗಲಿ ಬಿಡಿ.. ಇಂತಹ ಸಂಗೀತದ ರುಚಿಯುಳ್ಳವರೇ ತೀರ ಕಮ್ಮಿ ಈ ಜಗತ್ತಿನಲ್ಲಿ. ಅಲ್ಲ್ದೇ, ಇವೆಲ್ಲವನ್ನು ಅರ್ಥೈಸಿಕೊಂಡೂ, ಎಲ್ಲಾ ನಾಗರೀಕತೆಗಳ ಬಗ್ಗೆ ಬರೆದಿರುವಂತಹ ಸಂಗೀತವನ್ನು ಒಟ್ಟಿಗೇ ಕೇಳುತ್ತಿರುವಂತಹ ಶ್ರೋತೃಗಳು ಇನ್ನೂ ವಿರಳ. ನನ್ನಂತಹ ಬ್ರಾಹ್ಮಣ ಬ್ರಹ್ಮಾಚಾರಿಗೆ ಈ ಚಟ ತಗುಲಿದ್ದು ನನ್ನ ಪೂರ್ವಜನ್ಮಗಳ ಕರ್ಮವೆಂದೇ ನನ್ನ ಪ್ರಬಲವಾದ ನಂಬಿಕೆ.

ಒಟ್ಟಿನಲ್ಲಿ ಹೇಳುವುದಾದರೆ, ಇಂದು, ಭೃಗೂಚಿ ಭಾಷೆಯ ಕಾಲದ ನಾಗರೀಕತೆಗಳ ಬಗ್ಗೆ ಡೆತ್ ಮತ್ತು ಬ್ಲ್ಯಾಕ್ ಮೆಟಲ್ ಸಂಗೀತದಲ್ಲಿ ಉಲ್ಲೇಖವಿದೆ. ಆದರೆ, ಭೃಗೂಚಿ ಭಾಷೆಯಾಗಲಿ ಅಥವ ಅಂದಿನ ಕಾಲದ ಅಂತರ್-ನಾಗರೀಕತೆಯ ಯುದ್ಧಗಳ ಬಗ್ಗೆಯಾಗಲಿ ಎಲ್ಲಿಯೂ ಪ್ರಸ್ತಾಪವಿಲ್ಲ. ನನ್ನ ಮೆಟಲ್ ಸಂಗೀತದ ಸಂಗ್ರಹವನ್ನು ವಿಸ್ತರಿಸುವ ಗಡಿಬಿಡಿಯಲ್ಲಿ ಅಕಸ್ಮಾತ್ತಾಗಿ ಈ ಎಲ್ಲಾ ಸಂಗತಿಗಳು ತುಂಡು ತುಂಡಾಗಿ ನನ್ನ ಕಿವಿಗೆ ಬೀಳಲು ಪ್ರಾರಂಭವಾದದ್ದು ಇತ್ತೀಚೆಗಷ್ಟೆ.

ಮ್ಯಾನ್ಹಾಟನ್ ವಿಚಿತ್ರವಾದ ಜಾಗ. ಇಲ್ಲಿ ಒಂದೇ ದಿನದಲ್ಲಾಗುವ ಹವಾಮಾನದ ಏರುಪೇರುಗಳು ಹಲವು ಸ್ಥಳಗಳಲ್ಲಿ ಒಂದು ವರ್ಷದಲ್ಲಿಯೂ ಆಗುವುದು ವಿರಳವೇ. ಉತ್ತರ ಅಮೇರಿಕಾದ ಭೌಗೋಳಿಕ ಕೇಂದ್ರಬಿಂದುವಿಗೆ ಬಹಳ ಸಮೀಪ ಮ್ಯಾನ್ಹಾಟನ್. ನಾನೀಗಿರುವ ಜಾಗ, ಕಾಲೇಜ್ ಹೈಟ್ಸ್, ಕೆ. ಎಸ್. ಯೂ ವಿಶ್ವವಿದ್ಯಾನಿಲಯದ ನ್ಯೂಕ್ಲಿಯರ್ ರಿಯಾಕ್ಟರ್ ನ ತೀರ ಸಮೀಪದಲ್ಲಿದೆ. ನಮ್ಮ ಮನೆಯೋ ಮೂರು ಮಹಡಿಯ ಕಟ್ಟಡ. ನನ್ನ ರೂಮಿರುವುದು ಬೇಸ್‌ಮೆಂಟಿನಲ್ಲಿ. ಕಿಟಕಿಯಿ ನೋಟದಲ್ಲಿ ವಿಶೇಷವೇನು ಇಲ್ಲ ಬಿಡಿ (ಯಾವ ಹುಡುಗಿಯರೂ ಕಾಣುವುದಿಲ್ಲ ಇಲ್ಲಿ!) ಆದರೆ, ಭೂಮಿಯ ಒಳಗಿಂದ ಆಕಾಶದೆಡೆಗೆ ನೋಡಿದಂತಾಗುವ ಅನುಭವ ಮಾತ್ರ ರೋಮಾಂಚಕ. ನಾನಿಲ್ಲಿ ಸಧ್ಯಕ್ಕೆ ಏಕಾಂಗಿಯಾಗಿ ಇರಲು ಪ್ರಾರಂಭಿಸಿದ್ದೂ, ಮೆಟಲ್ ಸಂಗೀತವನ್ನು ೨೪/೭ ಕೇಳಲು ಶುರುಮಾಡಿದ್ದು ನಿಮಗೆ ತಿಳಿದ ವಿಚಾರವೆ.

ತೋಚಿದ ಕಾಲಕ್ಕೆ ನಿದ್ದೆ, ತೋಚಿದ ಕಾಲಕ್ಕೆ ಊಟ. ಒಂದು ದಿನ ರಾತ್ರಿ ನಾಲ್ಕು ಗಂಟೆಗೆ ನೈಲ್‌ನ “ಣhe bಟesseಜ ಜeಚಿಜ” ಹಾಡು ಕೇಳಿ ಮಲಗಿದೆ. ನಿದ್ದೆ ಬರದೇ ಬೆಳಗಿನಜಾವದ ತನಕ ಹಾಸಿಗೆಯಲ್ಲಿ ಹೊರಳಾಡುತ್ತಿದ್ದೆ. ಸುಮಾರು ೬:೩೦ಯ ಹೊತ್ತಿಗೆ ನಿದ್ದೆ ಬಂದ ಹಾಗಾಯಿತು. ನುಸುಕಿನ ಬೆಳಕು ಕಿಟಕಿಯ ವಿಂಡೋ ಪೇನ್ ಮೂಲಕ ಒಳಗೆ ಸೇರಲು ಹಣಾಹಣಿ ನಡಿಸಿತ್ತು. ಕತ್ತೆತ್ತಿ ನೋಡಿದರೆ ಕಿಟಕಿಯ ಹಿಂಭಾಗದಲ್ಲಿರುವ ಬೋಳುಮರದ ಕೊಂಬೆಯ ತುದಿಯಲ್ಲಿ ಎನೋ ವಿಚಿತ್ರವಾದ ಪ್ರಾಣಿ ಕಾಣಿಸಿತು. ಹೀಟರ್ ಬಂದ್ ಮಾಡಿದ್ದ ನನ್ನ ರೂಮ್-ಮೇಟ್ ಧಡಕ್ಕನೆ ಕದ ತೆಗೆದು ಒಳಗೆ ಬಂದ. ಬೆಚ್ಚಿ ಬಿದ್ದೆ. ಹೆದರಿದ್ದರೂ ಬೆವರಲೂ ಆಗದಿರದಂತಹ ಶೀತಲ ಗಾಳಿ ಬೀಸುತ್ತಿತ್ತು. ಮರುಕ್ಷಣದಲ್ಲಿ ಕೊಂಬೆಯ ಮೇಲೆ ಕೂತಿದ್ದ ಪ್ರಾಣಿ ಮಾಯವಾಗಿತ್ತು. ಇತ್ತ ತಿರುಗಿದರೆ ನನ್ನ ರೂಮ್-ಮೇಟ್ ಕೂಡ ಮಾಯ. ನಡುಕ ಬರಲಾರಂಭಿಸಿತು. ಇದಾದ ನಂತರ ವಿಚಿತ್ತ ಸ್ವಪ್ನಗಳು ಸಾಮಾನ್ಯವಾದವು. ನಿದ್ದೆ ಮಾಡುವುದಕ್ಕೇ ಹೆದರಿದ್ದೆ. ರಾತ್ರಿಯೆಲ್ಲಾ ಎದ್ದಿರಲು ಪ್ರಯತ್ನಿಸಿ ಬೆಳಗಿನ ಜಾವ, ಅಪರಾಹ್ನ ಹೀಗೆ ಕಂಡ ಕಂಡ ಕಾಲಕ್ಕೆ ನಿದ್ರೆಯ ಆಕ್ರಮಣ ಶುರುವಾಯುತು. ಯಾವಾಗಲೂ ಅರೆನಿದ್ದ್ರೆ. ದುಃಸ್ವಪ್ನಗಳು ಮನಸ್ಸನ್ನು ಹಿಂಡಿದವು. ಎದ್ದಾಗಲೋ ಪೈಶಾಚಿಕ ಸಂಗೀತದ ಗೀಳಿನಿಂದ ಅದೇ ಯೋಚನೆ ಮುಂದುವರೆಯುತ್ತಿತ್ತು. ಒಂದು ದಿನ ಏನಾದರೂ ಮಾಡಿ ಇವೆಲ್ಲವನ್ನು ತೊಲಗಿಸುತ್ತೇನೆಂದು ಹೇಳಿ ರಾತ್ರಿ ಒಂಭತ್ತಕ್ಕೇ ಮಲಗಿದೆ. ಅಂದು ನಾನು ಒಟ್ಟು ಮಲಗಿದ್ದು ಹದಿನೆಂಟು ಗಂಟೆಗಳು. ಕಂಡ ಸ್ವಪ್ನಗಳನ್ನು ನೆನೆದರೆ ಈಗಲು ಮೈ ನಡುಗುತ್ತದೆ. ಅಂದೇ ತಿಳಿದೆ..ಇನ್ನು ಹೋರಾಡಿ ಫಲವಿಲ್ಲ. ನನ್ನ ಜೀವನ ಇದರ ಶೋಧನೆಗೇ ಮುಡುಪಾಗಿಡಬೇಕೆಂಬುದು ಖಾತ್ರಿಯಾಯಿತು.

ಕನಸುಗಳು ಬಹಳ ವಿಚಿತ ಬಿಡ್ರಿ. ಸಾಮಾನ್ಯವಾಗಿ ನನ್ನ ಕನಸುಗಳು ನನ್ನ ಜೀವನದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಒಂದು ವಿಚಿತ್ರ ಕಾಂಟೆಕ್ಶ್ತ್ ತರುತ್ತದೆ. ಉದಾಹರಣೆಗೆ ಪರೀಕ್ಷೆಯ ಸಮಯದಲ್ಲಿ ಹೀಗೊಂದು ಕನಸು ಬಿದ್ದಿತ್ತು. ದಿನಾ ಸ್ಚಿಮ್ಮಿಂಗ್ ಪೂಲಿನಲ್ಲಿ ಈಜಿದರೂ ನಮ್ಮಜ್ಜಿಯ ಜೊತೆ ತೋಟಕ್ಕೆ ಹೋದಾಗ ಕಲ್ಯಾಣಿಯಲ್ಲಿ ಈಜಲಾಗದೇ ಮುಳುಗಿದ್ದು ಹೀಗೆ.. ಆದರೆ ಈ ಬಾರಿ ನನ್ನ ಕನಸುಗಳು ವೈಚಿತ್ಯ್ರದ ಎಲ್ಲಾ ಮಟ್ಟಗಳನ್ನು ದಾಟುತ್ತದೆಯೆಂದು ನಾನು ಊಹಿಸರಲಿಲ್ಲ. ಈಗ ಕೆಲವು ದಿನಗಳಿಂದ ಮಲಗಿದಾಗಲೆಲ್ಲ, ಪುರಾತನ ನಾಗರೀಕತೆಯ ಕಥೆಗಳು ಕಂತು ಕಂತಾಗಿ ನನ್ನ ಸ್ವಪ್ನಗಳಲ್ಲಿ ಪ್ರಸಾರವಾಗತೊಡಗಿತು, ಜಾಹಿರಾತುಗಳ ಸಹಿತ!. ಆದರೆ ಬರುತ್ತಿದ್ದ ಜಾಹೀರಾತೂ ಒಂದೇ ಎನ್ನಿ (ರಾಪಿಡೆಕ್ಸ್ ಭೃಗೂಚಿ ಕೋರ್ಸ್)

ನಾನು ಮೇಲೆ ಹೇಳಿದ ಪ್ರಾಣಿ ನನಗೆ ಸುಮಾರು ಕಥೆಗಳನ್ನು ಹೇಳಿದೆ. ಒಂದೊಂದೂ ವಿಚಿತ್ರವಾದದ್ದು, ಒಂದಕ್ಕೊಂದಕ್ಕೆ ಸಂಬಂಧವಿರದದ್ದು. ಆದರೂ ಎಲ್ಲವೂ ಯಾವುದೋ ಧಾರವಾಹಿಯೋ ಅಥವ ಡಾಕ್ಯುಮೆಂಟರಿಯ ಕಂತುಗಳು ಅಂತ ನನಗೆ ಹೇಗನ್ನಿಸಿತೋ ಇಂದಿಗೂ ನನಗೆ ಅರಿವಾಗಿಲ್ಲ. ಒಟ್ಟಿನಲ್ಲಿ ಈ ಕಥೆಗಳ ಸಾರಾಂಶವನ್ನು ನಿಮಗಾಗಲೇ ಹೇಳಿದ್ದೇನೆ. ನನಗೆ ಕುತೂಹಲ ಮೂಡಿಸಿದ್ದು ಇವೆಲ್ಲ ನನಗೇ ಏಕೆ ಬರುತ್ತಿದೆ ಅಂತ.. ಕರ್ಕಶ ಸಂಗೀತ ಕೇಳಿದರೆ ಇಷ್ಟೆಲ್ಲ ತಲೆಕೆಡತ್ತ ಅಂತ ಅನುಮಾನವಾಗ ತೊಡಗಿತು. ಕನಸುಗಳಲ್ಲಿ ಆ ಪುರಾತನ ಪ್ರಾಣಿ ಬಂದದ್ದು ಹೌದು.. ಆದರೆ ಇದುವರೆಗೆ ಕನ್ಸಸುಗಳನ್ನು ಚಲನಚಿತ್ರಗಳಂತೆ ಮಾತ್ರ ನಾನು ನೋಡಿದ್ದು. ಇರಲಿ, ಕನಸಿನಲ್ಲಿ ಯಾಕೆ ಟಿವಿ ಒಂದು ಬಗೆಯ ಇಂಟರಾಕ್ಷನ್ ಡಿವೈಸ್ ಆಗಬಾರದು? ಕನಸುಗಳು ರಿಯಲ್ ಟೈಮಿನಲ್ಲಿಯೇ ತಾನೆ ಬಿತ್ತರವಾಗುವುದು.. ನಾವು ತರ್ಡ್ ಪರ್ಸನ್ ಅಂತ ಯಾಕೆ ಸುಮ್ಮನಿರಬೇಕು, ಈ ಬಾರಿ ಏನಾದರೂ ಮಾಡಿ ಚೂರು ಪಾರು ಕಲಿತ ಭೃಗೂಚಿಯಲ್ಲಿಯೇ ಆ ಪ್ರಾಣಿಯನ್ನು ಪ್ರಶ್ನಿಸಿ ಬಿಡೋಣ ಅಂತ ನಿರ್ಧರಿಸಿದೆ.
ಅಂದು ಸ್ವಪ್ನದಲ್ಲಿ ಪ್ರಾಣಿ ಬಂದಾಗ,ಭೃಗೂಚಿಯಲ್ಲಿ ಕೇಳಿಯೇ ಬಿಟ್ಟೆ,

ಪೋ ರಾಂಜೇ ಲಾ ಬ್ರೀತ್ ಕೋ
“ನನ್ನ ಕನಸಿನ್ನಲ್ಲೇಕೆ ಬರುತ್ತಿರುವೆ ನೀನು?”

ಶ್‌ಶ್‌ಶ್‌ಹಾ.. ಟೇಂತ್, ರಬಕ ಸ್ತ್ರಾಚೀ?
“ಅರೆ, ಹೀನಜೀವಿ, ಈಗ ಕಲಿತೆಯಾ ಮಾತಾಡಲು?”

ಪೋ ಲಾತಾ ಬ್ರೂಂಚ್ ಸರಟ್ ಗ್ರಮೇಕ
“ದುಷ್ಟತನದಿಂದ ಪ್ರಯತ್ನಿಸಿ ನನ್ನ ಪ್ರಶ್ನೆಗೆ ಉತ್ತರ ಕೊಡು”

ಸೋ ರಬಕೇತ್ ತಶ್ರೂತ್! ತರಬಕ್ ಅರಿಗ್ರಿಮ ಟೇಂತ್”
“ನಿನ್ನ ಭಾಷೆ ಅನರ್ಹ ಕೇಳಲು! ಮಾತಾಡಬೇಡ, ಕೊಲ್ಲುತ್ತೇನೆ ಹೀನಜೀವಿಯೆ”

ಇನ್ನು ನನ್ನ ಭಾಷಾಪಾಂಡಿತ್ಯ ಪ್ರದರ್ಶಿಸುವುದು ಒಳಿತಲ್ಲವೆಂದು ಸುಮ್ಮನಿದ್ದೆ. ಪ್ರಾಣಿ ಈಗ ಕನ್ನಡದಲ್ಲಿ ಮುಂದುವರಿಸಿತು.
“ನನ್ನ ಅಸ್ಥಿತ್ವವಿರುವುದೇ ಶಕ್ತಿಯಲ್ಲಿ. ನನ್ನ ಶಕ್ತಿಯ ಆವಾಹನೆಯಾಯಿತು ನಿನ್ನ ಮನ:ಪರಧೆಯಲ್ಲಿ . ಇಲ್ಲಿದ್ದೇನೆ ಅದಕ್ಕೆ.

“ಅಂದರೆ?”

“ಕರೆದದ್ದು ನೀನು. ನನ್ನದು ಉತ್ತರ ಮಾತ್ರ”

ನಾನು ನಿನ್ನನ್ನು ಕರೆದದ್ದು ಹೇಗೆ?

“ಶಕ್ತಿಯೆಂದರೇನು? ವಾತಾವರಣದಲ್ಲಿರುವ ಅಲೆಗಳು. ಈ ಜಾಗದಲ್ಲಿ ಅಂತಹ ಅಲೆಗಳಿಗೇನು ಕಮ್ಮಿಯೇ? ಸಣ್ಣ ಪ್ರಮಾಣದಲ್ಲಿ ರೇಡಿಯೋ ಆಕ್ಟಿವ್ ಕಿರಣಗಳಿವೆ. ನನ್ನ ಅಲೆಗಾತ್ರಗಳಿಗೆ ಇವುಗಳಿಂದ ಅಗಾಧ ಪರಿಣಾಮವಾಗುತ್ತದೆ. ಉಷ್ಣಾಂಶ ತೀರ ಕಮ್ಮಿಯಿರುವುದರಿಂದ ಸರಿಯಾದ ವಾತವರಣ ನಿರ್ಮಿತಗೊಂಡರೆ ಗಾಳಿಯೇ ಸೂಪರ್‍ಕಂಡಕ್ಟರ್ ಆಗುತ್ತದೆ. ನಿನ್ನ ಮೆದುಳಿನಲ್ಲಿ ನೀನು ಕೇಳುವ ಸಂಗೀತದಿಂದ ಯೋಚನಾ ಲಹರಿಗಳಲ್ಲಿ ಸೂಕ್ಷ್ಮ ಬದಲಾವಣೆಗಳಾಗುತ್ತವೆ. ಯಾವಾಗ ಅವುಗಳ ಅಳತೆ ನನ್ನ ಶಕ್ತಿಯ ಅಲೆಗಳಿಗೆ ಸಮನಾಗುತ್ತದೆಯೋ ಆಗ ನಿನ್ನ ಮೆದುಳಿನಲ್ಲಿ ನನ್ನ ಆವಾಹನೆಯಾಗುತ್ತದೆ. ನೀವಿನ್ನೂ ನಂಬದ ಟೆಲಿಪತಿ ಆಗುವುದೇ ಹೀಗೆ. ಆದರೆ ನನ್ನಂತಹ ಪೈಶಾಚಿಕ ಶಕ್ತಿಯನ್ನು ಆವಾಹನಿಸಲು ಈ ಜಾಗದ ವೈಶಿಷ್ಟ್ಯತೆ ಹಾಗು ನಿನ್ನ ಮೆದುಳಿನ ತರಂಗಗಳೇ ಕಾರಣ. ನನ್ನ ಭೌತಿಕ ದೇಹ, ನಿನ್ನ ಮೆದುಳಿನ ಪರಧೆಯ ಮೇಲೆ ನಿನಗೆ ನನ್ನ ದೇಹದ ಮೇಲಿರುವ ಊಹೆ.”

ನನಗೆ ಹೆದರಿಕೆ, ನಗು ಒಮ್ಮೆಲೇ ಬಂತು.. ಇದ್ಯಾವ ಲೆಕ್ಚರ್ ಕೊಡುವ ಭೂತ ಅಂತ ಅನ್ನಿಸಿತು. ಗ್ವೆನಿತ್ ಪಾಲ್ಟ್ರೋವ್‌ನ ಹಾಲಿವುಡ್ ಕಾಮಿಡಿಯೂ ನೆನಪಾಯಿತು!

ಗರ್ಜಿಸಿತು ಭೂತ.
“ನನ್ನ ತರಂಗಗಳಿಲ್ಲುರುವ ತನಕ ನಿನ್ನ ಮೆದುಳಿನಲ್ಲಿ ಮೂಡುವ ಎಲ್ಲಾ ಯೋಚನೆಗಳು ನನಗೆ ತಿಳಿಯುತ್ತದೆ ಹೀನಜೀವಿ! ”
ತಕ್ಷಣ ಏಕಚಿತ್ತನಾಗಿ ಕ್ಷಮೆ ಕೋರಿದೆ. ಇದಾದ ನಂತರ ನಾವು ಸುಮಾರು ಚರ್ಚೆ ನಡೆಸಿದೆವು. ಭೃಗೂಚಿ ಭಾಷೆಯ ಬಗ್ಗೆ, ಪುರಾತನ ನಾಗರೀಕತೆಗಳ ಬಗ್ಗೆ, ಆ ಪ್ರಾಣಿಯ ಜೊತೆ ಒಂದು ಬಗೆಯ ಸ್ನೇಹ ಬೆಳದಿತ್ತು! ತನ್ನ ಬಾಲ್ಯದ ಬಗ್ಗೆ ಮಾತಾಡಿತ್ಯ್ ಆ ಪ್ರಾಣಿ. ಅದರ ಹೆಸರು ಪ್ರೆಸ್ತಕಾಯ ಅಂತೆ. ಕ್ರಾಸ್‌ಬ್ರೀಡಿಂಗ್ ಕೇಸ್ ಇದು. ಫಿನ್ನಿಶ್ ಭೂತಕ್ಕೂ ಭಾರತೀಯ ರಾಕ್ಶಸಿಯೊಬ್ಬಳಿಗೆ ಹುಟ್ಟಿದ ಪುತ್ರನಂತೆ ಪ್ರೆಸ್ತಕಾಯ. ಭೃಗೂಚಿಯಲ್ಲಿ ಪ್ರೆಸ್ತ ಅಂದರೆ ವೈಭವ ಅಂತ ಅರ್ಥ. ಆದರೆ ನನಗೆ ಮಾತ್ರ ಪ್ರೆಸ್ತಕಾಯ ಡೈನಾಸರಸ್ ಮತ್ತು ಬಾವಲಿಯ ಕ್ರಾಸ್ ಕಂಡಂತೆ ಕಾಣುತ್ತಿದ್ದ. ನನ್ನ ಜಾರ್ಡೈನಿನ ಊಹಿತ ಮಿತ್ರ ಇದೇನೆ ಅನ್ನುವ ಯೋಚನೆಯೂ ಈಗೀಗ ಬರುತ್ತಿದೆ.

ಮರುದಿನ ರಾತ್ರಿ ಮತ್ತೆ ಬಂದ ಪ್ರೆಸ್ತಕಾಯ. ಈ ಬಾರಿ ಯಾಕೋ ಸ್ವಲ್ಪ ಬೇಜಾರಿನ ಮೂಡಿನಲ್ಲಿದ್ದ.
ನಾನಾಗಿಯೇ ಕೇಳಲಿಲ್ಲ. ಇವನ ತಲೆಯಲ್ಲೇನಿರಬಹುದೆಂದು ಯೋಚಿಸುತ್ತಾ ಆಕಾಶವನ್ನು ದಿಟ್ಟಿಸುತ್ತಿದ್ದೆ. ಇದ್ದಕ್ಕಿದ್ದಂತೆಯೇ ಬಡಬಡಿಸತೊಡಗಿದ.

“ನೀನು ಗ್ಲೂರತ್ರಾಕದ ಬಗ್ಗೆ ಕೇಳಿದ್ದೀಯಾ?”

“ಹಾ.. ನಾವುಗಳು ಹೀಗೆ ಒಬ್ಬರಮೇಲೊಬ್ಬರು ಹೊಡೆದಾಡುವುದನ್ನು ಮುಂದುವರೆಸಿದರೆ ಮುಂದೊಂದು ದಿನ ಇಡೀ ಜಗತ್ತೇ ಸಮರಕ್ಕಿಳಿದು ವಿನಾಶವಾಗಿಹೋಗುತ್ತದೆಯೆಂದು ಕೇಳಿದ್ದೇನೆ. ಹಾಗೆಯೇ ಹಲವು ಗ್ರಂಥಗಳಲ್ಲಿಯೂ, ಮತಗಳಲ್ಲಿಯೂ ಕೂಡ ಹೇಳಿದ್ದಾರಂತೆ”

“ಅವರು ಹೇಳುವುದು ಸುಳ್ಳೇನಲ್ಲ, ಕಾಲಾಂತರದಿಂದ ಕೇಳಿ ಬರುತ್ತಿರುವ ವಿಷಯಗಳನ್ನು ಊಹಿಸಲು ಅತಿಯಾದ ಬುದ್ಧಿಶಕ್ತಿಯೇನು ಬೇಕಾಗಿಲ್ಲ.. ಬುದ್ಧಿಬೇಕಾಗಿರುವುದು ಅದನ್ನು ತಡೆಯುವುದಕ್ಕೆ. ಅದಕ್ಕೆ ಮಾತ್ರ ಯಾರೂ ತಯಾರಿಲ್ಲ. ಹೆಸರಿಗೆ ದೇವರು ದಿಂಡರು.. ನಾನು ನೋಡಿಲ್ಲವೇ ದೇವತೆಗಳು ಕೂಡ ಜೀವಿಗಳೇ ತಾನೆ. ನಿಮ್ಮ ಹೀನಕುಲದವರ ರಗಳೆಗಳನ್ನು ನೋಡಿ ನೋಡಿ ಅಂತರ್ಧಾನರಾಗಿದ್ದಾರೆ”

“ನಿಧಾನಕ್ಕೆ ಬಿಡಿಸಿ ಹೇಳು ದೊರೆ, ನನಗೊಂದೂ ತಿಳೀವೊಲ್ದು. ಹಾಗೆಯೆ, ಮನುಷ್ಯರ ಬಗ್ಗೆಯ ನಿನ್ನ ಮೂದಲಿಕೆ ನನಗೆ ಹಿಡಿಸುವುದಿಲ್ಲ”

“ನೀವೀಗ ಜಾಗತೀಕರಣ ಅಂತ ಏನಂತೀರೋ ಅದರ ತಳಪಾಯ ನಮ್ಮಜ್ಜನ ಕಾಲದಲ್ಲಿಯೇ ಹಾಕಿಯಾಗಿತ್ತು ಅನ್ನೋದು ಈಗ ನಿನಗೆ ತಿಳಿದಿರಬೇಕು. ನಾವು ಭೃಗೂಚಿಯಂತಹ ಭಾಷೆಯನ್ನು ಬೆಳೆಸಿಕೊಂಡಿದ್ದೇ ಅದಕ್ಕಲ್ಲವೇ. ಆದರೆ ನಾವು ಎಡವಿದ್ದು ನಮ್ಮನ್ನು ಅರ್ಥಮಾಡಿಕೊಳ್ಳುವಲ್ಲೇ.. ಜೀವವಿಕಸನದ ಆರಂಭದದ ದಿನಗಳು ಅವು. ಅಂದರೆ, ಇನ್ನೂ ಎಲ್ಲರೂ ಅಮೀಬಾಗಳೆಂದಲ್ಲ, ನಮ್ಮ ಮೆದುಳಿನ್ನೂ ಅಷ್ಟು ಸೂಕ್ಷ್ಮವಾಗಿ ವಿಕಸಿಸಿದ್ದಿಲ್ಲ. ವ್ಯಾಪಾರ, ಕೃಷಿ, ಮನೋರಂಜನೆ ಹೀಗೆ ಇತ್ಯಾದಿಗಳ ಬೇಡಿಕೆ ಬೆಳೆದಾಗ ಒಂದೇ ರಾಷ್ಟ್ರ ಎಲ್ಲವನ್ನೂ ಪೂರೈಸಲು ಸಾಧ್ಯವಾಗದೇ ಜಾಗತೀಕರಣದಂತಹ ಅಂತರ್ರಾಷ್ಟ್ರೀಯ ವ್ಯವಹಾರಗಳು ರೂಪಗೊಂಡದ್ದು ಸಹಜವೇ. ಆಷ್ಟು ಬುದ್ಧಿ ಬೆಳೆದಿತ್ತು.”

“ಆದರೆ ಗೊತ್ತಿರದೇ ಇದ್ದ ಹಲವು ವಿಷಯಗಳಿದ್ದವು. ನಾವು ಕಾಣದ, ಕೇಳದ ಹೊಸ ವಿಷಯಗಳು ನಮಗೆ ತಿಳಿಯ ಬಂದಾಗ ನಮ್ಮ ಮಾನಸಿಕ ಚಟುವಟಿಕೆಗಳು ಇದ್ದಕ್ಕಿದ್ದಂತೆಯೇ ಹೆಚ್ಚಾಗುತ್ತದೆ. ಹಲವು ಶತಮಾನಗಳ ಜೀವವಿಕಸನ ಒಂದೇ ಜೀವಿತದಲ್ಲಿ ಹೊಂದಾಣಿಕೆಯ (ಚಿಜಚಿಠಿಣಚಿಣioಟಿ) ಮೂಲಕ ಸಾಗಿಬರುತ್ತದೆ. ಇದಾದರೂ ಪ್ರಕೃತಿಗೆ ವಿರುದ್ಧವಾದದ್ದು. ವಿಕಸನ ಹಾಗು ಹೊಂದಾಣಿಕೆ, ಇವುಗಳ ಮಧ್ಯೆ ತಿಕ್ಕಾಟ ಶುರು: ಜೀವಿಯ ಸುಪ್ತ ಮನಸ್ಸು ಎರಡರಲ್ಲಿ ಒಂದನ್ನು ಆರಿಸಬೇಕು. ತನಗೆ ಅನುವಂಶೀಯವಾಗಿ ಬಂದ ಯೋಚನೆಗಳು, ಭಾವನೆಗಳನ್ನು ಮುಂದುವರೆಸಬೇಕೆ ಅಥವ ಈ ಹೊಸ ಬದಲಾವಣೆಗಳನ್ನು ಒಪ್ಪಿ ಅಳವಡಿಸಿಕೊಳ್ಳಬೇಕೆ? ಇದರ ಪರಿಣಾಮದಿಂದ ಬರುವುದೇ ಬುದ್ದಿಯ ವಿಕಾರತೆ. ಜೀವಿಯ ಪಾತ್ರ ಜೀವಿಸುವುದು ತಾನೆ, ಅದು ಬದಲಾಗಿ ಜೀವಿ ತೀರ್ಪುಗಾರನಾಗುತ್ತದೆ. ಸ್ವಲ್ಪ ಬಲವಿರುವ ಜೀವಿ ಇತರರ ವಿಷಯಕ್ಕೂ ನ್ಯಾಯಾಧೀಶನಾಗುತ್ತದೆ. ಬದಲಾಗದ ಜೀವಿ ಬದಲಾವಣೆಯನ್ನು ಅಲ್ಲಗಳೆಯುವುದರಲ್ಲಿ ಜೀವಿಸಬೇಕು. ಬದಲಾದದ್ದು ಬದಲಾವಣೆ ಸರಿಯೆಂದು ಸ್ಥಾಪಿಸುವುದರಲ್ಲಿ ಜೀವ ಕಳೆಯಬೇಕು. ಮಧ್ಯದಲ್ಲಿರುವ ಜೀವಿ ತ್ರಿಶಂಕುವಿನಂತೆ.”

“ಇದನ್ನೂ ಈಗಿನವರು, ಭಾರತೀಯರ ಮೂಲಕ ತಿಳಿದಿದ್ದಾರೆ ತಾನೆ, ವೈದಿಕ ಧರ್ಮಜೀವನದಲ್ಲಿ ಇದರ ಪ್ರಸ್ತಾಪವಿದೆ. ನನ್ನ ತಂದೆಯ ಕಾಲದಲ್ಲಿ ಅದರ ಚರ್ಚೆ ಬಹಳ ನಡೆದಿತ್ತು. ಭಾರತೀಯ ವಿದ್ವಾಂಸರು ಹೇಳಿದ್ದು ಇಷ್ಟು. ಮನಸ್ಸಿಗೆ ಇಷ್ಟೋಂದು ಪ್ರಚೋದನೆ ಸರಿಯಲ್ಲ. ಮನೋವಿಕಾರದ ತೊಂದರೆಗಳು ಊಹಿಸುವುದಕ್ಕೂ ಕಷ್ಟ ಅಂತ. ಆದರೆ ಅಷ್ಟರಲ್ಲೇ ಅದರ ಪರಿಣಾಮಗಳು ಕೈಮೀರಿ ಹೋಗಿದ್ದವು. ಈ ವಿಷಯದ ಬಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಇದನ್ನೊಪ್ಪದ ಕೆಲವರು ಅವೈಜ್ಞಾನಿಕ ಎಂಬ ಬಿರುದು ಕಟ್ಟಿ ಭಾರತೀಯ ವಿದ್ವಾಂಸನೊಬ್ಬನ ಕೊಲೆಗೈದರು. ಇದೇ ಶುರು. ಜನ ಇತರರ ವಿಷಯಗಳ ಬಗ್ಗೆ ಎಲ್ಲಾ ತಿಳಿದಂತೆ ತಮ್ಮದೇ ಆದ ತೀರ್ಪನ್ನಿಟ್ಟರು. ಇವ ಕರಿಯ, ಇವ ದಡ್ಡ, ಇವರ ಕುಲ ಕೀಳು, ಇವ ದೇವ, ಇವ ಭೂತ ಹೀಗೆ. ಅತೀ ಹತ್ತಿರದಿಂದ ಒಬ್ಬರನೊಬ್ಬರನ್ನು ಅರಿತಿದ್ದ ರಾಷ್ಟ್ರಗಳು ಏಕ್‌ಧಮ್ ವೈರಿಗಳಾದರು. ಮೃತರಾದರೂ ಆ ವಿದ್ವಾಂಸರ ಶೋಧನೆಗಳು ಚರಿತ್ರೆಯಲ್ಲಿ ಧೃಡವಾಗಿದೆ. ಮೊದಲಿಗೆ ದೇವ ದಾನವ ಮನುಷ್ಯರು ಬೇರೆಬೇರೆಯಾದರು. ಒಂದರ್ಥದಲ್ಲಿ ಮನೋವಿಕಾರದ ಮೊದಲನೆಯ ಹಂತ ಇದು. ನಂತರ ಮತ, ಕುಲ, ಸಂಸ್ಕೃತಿ, ರಾಜಕೀಯ ಹೀಗೆ ಒಂದರ ಮೇಲೊಂದು ಸೂಕ್ಶ್ಮತೆಯನ್ನಿಟ್ಟು ವಿಕಾರ ಬೆಳೆಯುತ್ತಲೇ ಹೋಗಿದೆ. ಆಗಿನಿಂದಲೇ ಪ್ರತಿದಿನವೂ ಜಗತ್ತಿಗೆ ಜಗತ್‌ಸಮರದ ಅಂಚೇ ಆಗಿದೆ”

ಇವನ ಮಾತುಗಳನ್ನು ಕೇಳಿ ನಡುಕ ಬಂದದ್ದೇನೋ ಸರಿ. ವೈಯುಕ್ತಿಕವಾಗಿ ಭೂತಪ್ರೇತಗಳ ವಿಷಯದಿಂದ ಭಯಗೊಂಡಿದ್ದ ನಾನು ಭಯದ ಮೂಲ ಹುಡುಕಲು ಹೋಗಿ ಕಂಡುಕೊಂಡದ್ದು ಅದಕ್ಕಿಂತಾ ಕಳವಳಕಾರಿ. ಜೀವಸಂಕುಲನದ ಸಂಕ್ಷಿಪ್ತವಾದ ನೋಟವನ್ನೇ ಕಂಡ ಅನುಭವ. ಕೃಷ್ಣ ಅರ್ಜುನನಿಗೆ ತೋರಿಸಿದಂತ ವಿಶ್ವನೋಟದಷ್ಟು ವೈಭವವಿರಲಿಲ್ಲ. ಆದರೂ ಛಿomಠಿಚಿಡಿಚಿbಟe ಅನ್ನಿ. ಆದರೆ ಇಂತಹ ಘೋರ (goಡಿe?) ನೋಟಕ್ಕೆ ನಾನು ತಯಾರಿರಲಿಲ್ಲ. ನನ್ನ ಪ್ರಶ್ನೆ ಮುಂದುವರೆಸಿದೆ.

“ಹಾಗಾದರೆ ನಿನ್ನ ಅಭಿಪ್ರಾಯದಲ್ಲಿ ವಿವಿಧ ನಾಗರೀಕತೆ, ಸಂಸ್ಕೃತಿಗಳು ಇವೆಲ್ಲ ಕೇವಲ ಮನೋವಿಕಾರದ ಫಲವೇ? ಅವುಗಳಿಂದ ಮನುಷ್ಯನಿಗೆ ಜೀವನದ ಆನಂದವನ್ನು ಅನುಭವಿಸುವುದಕ್ಕಾಗಿಲ್ಲವೇ?”

“ನೀನು ಹೀನಜೀವಿಯೆಂದು ಹೇಗೆ ತೋರಿಸಿಕೊಡುತ್ತೀಯ! ನಾನು ಮಾತಾಡುತ್ತಿರುವುದು ಇಡೀ ಜೀವಸಂಕುಲನದ ವಿಷಯ. ನಿನ್ನ ಯೋಚನೆಗಳು ಮನುಷ್ಯನ ಪರಿಮಿತಿಯನ್ನು ಬಿಟ್ಟು ಮುಂದೆ ಹೋಗಿಯೇ ಇಲ್ಲ ನೋಡು. ಇರಲಿ. ಸಧ್ಯಕ್ಕೆ ಮನುಷ್ಯನ ವಿಷಯಕ್ಕೇ ಸೀಮಿತಗೊಳಿಸುವೆ. ಮ್ಯಾನ್ಹಾಟನ್ ಪ್ರಾಜೆಕ್ಟಿನಲ್ಲಿ ಭಾಗವಹಿಸಿದ ವಿಜ್ಞಾನಿಗಳ ಶೋಧನೆ ಇಂದು ವಿಶ್ವವನ್ನೇ ಅದರ ತುದಿಗೆ ತಂದು ನಿಲ್ಲಿಸಿದ್ದು ಸುಳ್ಳೇ?”

“ವಿವಿಧತೆ ಬೇಕೋ ಬೇಡವೊ, ಪ್ರತೀ ಮನುಷ್ಯನೂ ಮತ್ತೊಂದು ಮನುಷ್ಯನಿಗೆ ವಿಚಿತ್ರನೇ. ಆದರೆ ಮನುಷ್ಯನ ಆಕಾಂಕ್ಷೆಗಳು ಹಿರಿದೇ.. ಪ್ರತೀಸಲ ನೀನು ನಿನ್ನ ವೇಳಾಪಟ್ಟಿ ಸಿದ್ಧಪಡಿಸುವಾಗ ಮಾಡುವ ತಪ್ಪು ಎಂತದು? ಸಿಕ್ಕಾಪಟ್ಟೆ ಆದರ್ಶವಾಗಿ ಯೋಚಿಸಿ ಯೋಜನೆ ತಯಾರಿಸುವುದು. ಯೋಜನೆ ವಾಸ್ತವ್ಯದಲ್ಲಿ ಅಸಂಭವವಾಗಿರುತ್ತದೆ. ಮುಂದೆ ಒಂದು ದಿನವೂ ಯೋಜನೆಗಳನ್ನು ಕಾರ್ಯಗತವಾಗಿಸದೆಯೇ ಮರೆಯುವೆ, ತಾನೆ. ಹಾಗೆಯೇ ಯೋಚಿಸುವಾಗ ಮನುಷ್ಯನ ಆದರ್ಶಗಳಿಗೆ ಮಿತಿಯೇ ಇರುವುದಿಲ್ಲ. ವೈರಾಗ್ಯ ಅದ್ವೈತ, gಟobಚಿಟ viಟಟಚಿge, ಜಿಡಿee mಚಿಡಿಞeಣs, ಛಿಟಚಿssಟess soಛಿieಣಥಿ, ಠಿeಡಿಜಿeಛಿಣ ಛಿomಠಿeಣiಣioಟಿ.. ಹೀಗೆ ಒಂದಕ್ಕಿಂತ ಒಂದು ಉನ್ನತ ಯೋಚನೆಗಳು. ಜೀವಮಾನವಿಡೀ ಅಂತಹ ನಿಖರತೆಯ ಶೋಧನೆಯಲ್ಲಿ ಮುಳುಗಿರುತ್ತಾನೆ ಮನುಷ್ಯ. ವಾಸ್ತವಕ್ಕೆ ಮಿತಿಯಿರುತ್ತದೆಯೆಂದು ಅರಿಯುವುದೇ ಇಲ್ಲ ನೀವು. ಅದರೆ ಸಂಪೂರ್ಣತೆಯ ಶೋಧನೆಯ ಆನಂದ ಬಹಳವೇ.. ಆದರೆ ಒಬ್ಬನ ಕ್ರಿಯೆ ಮತ್ತೊಬ್ಬನ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದರ ಎಣಿಕೆ ಯಾರಿಗಿದೆ? ಮನುಷ್ಯನ ಯೋಚನೆಗಳೇ ಇಷ್ಟು ಸಂಕೀರ್ಣವಾದರೆ ದೇವ ದಾನವರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಶೋಧನೆಗಳ ಪರಿಣಾಮ, ಇವುಗಳನ್ನು ತಿಳಿಯಲು ಸಾಧ್ಯವೇ?”

ಇಷ್ಟಕ್ಕೆ ಪ್ರೆಸ್ತಕಾಯ ನಿಲ್ಲಿಸಿದ. ಸ್ವಲ್ಪ ಶಾಂತನಾಗಿದ್ದ.

“ವಿವಿಧತೆ ಮತ್ತು ಐಕ್ಯತೆಯ ನಿಖರ ಪ್ರಮಾಣಗಳನ್ನು ಕಂಡುಹಿಡಿಯಲು ನಿನ್ನ ಜೀವನವನ್ನು ಮುಡುಪಾಗಿಡುವೆಯಾ? ನಾನು ಸಹಾಯಮಾಡಬಲ್ಲೆ”

ಅಚಾನಕ್ಕಾಗಿ ಬಂದ ಈ ಪ್ರಶ್ನೆಯಿಂದ ಚಕಿತನಾದೆ. ಅವನ ಕಣ್ಣುಗಳಲ್ಲಿ ಹೊಸ ಹೊಳಪಿತ್ತು. ಒಂದು ಕ್ಷಣಕ್ಕೆ “ವಿಶ್ವಶಾಂತಿಯ ಹರಿಕಾರ” ಎಂಬ ಬಿರುದು ನನಗಿದ್ದರೆ ಹೇಗಿರುತ್ತದೆ ಅಂತ ಊಹಿಸಿನೋಡಿದೆ. ನಾನು ಪ್ರಶಸ್ತಿ ಸ್ವೀಕರಿಸುವಾಗ ಪ್ರೆಸ್ತಕಾಯ ಕೂಡ ನನ್ನ ಜೊತೆಯಲ್ಲಿದ್ದ. ವಾಸ್ತವಕ್ಕೆ ಬಂದಾಗ ನುಸುನಕ್ಕೆ.

“ಬೇಡ ಗುರು, ಬಹಳ ಕೆಲಸವಿದೆ!”

ಮತ್ತೆ ಸಪ್ಪಗಾದ ಪ್ರೆಸ್ತಕಾಯ.

“ನಾಳೆ ಜಗತ್ತು ಕೊನೆಗೊಳ್ಳಲಿದೆ. ಇದಕ್ಕೆ ನಿನ್ನ ಇಂದಿನ ನಿರ್ಧಾರವೇ ಕಾರಣ!” ಎಂದು ಹೇಳಿ ಅಂತರ್ಧಾನನಾದ. ಆಷ್ಟರಲ್ಲಿ ನಿದ್ದೆಯಿಂದ ಎದ್ದೆ ಅಂತ ಹೇಳಕ್ಕಾಗಲ್ಲ. ಇದು ಕನಸೋ ನಿಜವಾಗಿ ನಡೆದದ್ದೋ ತಿಳಿಯದಾಗಿದೆ. ನನ್ನ ಕನಸುಗಳಲ್ಲಿ ಯಾವತ್ತೂ ಕೊನೆಯಿರುತ್ತಿತ್ತು. ಇದಿನ್ನೂ ಮುಂದೆ ಕಾದುನೋಡಬೇಕಾದ ಪರಿಸ್ಥಿತಿ. ಆದ್ದರಿಂದ ಈ ಪ್ರಸಂಗ ಮುಗಿಯಿತೋ ಇಲ್ಲವೋ ತಿಳಿದಿಲ್ಲ. ಕಥೆಯಂತೂ ಮುಗಿಯಿತು ಅಷ್ಟೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.