ಪಡೆದ ಮಗ

ಮಲ್ಲವ್ವ ಮುಂಜಾಲೆದ್ದು ಮಕ ತೊಳಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು, ಒಲೆ ಸಾರಿಸಿ ಅದಕ್ಕೂ ವಿಭೂತಿ ಹಚ್ಚಿ, ಹತ್ತಿಕಟಿಗಿ ಪುಳ್ಳೀ ಒಲೆಯೊಳಗಿಟ್ಟು ಕಡ್ಡಿ ಗೀರಿ ಒಲಿಹಚ್ಚಿ ಆಲೀಮನಿ ಡಬರ್ಯಾಗ ಚಾ ಕಾಸಾಕ ಹತ್ತಿದಳು. ಬೆಲ್ಲ ಚಾಪುಡಿ ಹಾಕಿ ನೆಲುವಿನ ಮ್ಯಾಲಿಟ್ಟಿದ್ದ ಹಾಲು ತರಾಕ ಮೇಲೆದ್ದಳು. ಅಷ್ಟೊತ್ತಿಗೆ ಆಕೆಯ ಅತ್ತಿ ಬಸವ್ವ ಒಳಗೆ ಬಂದು
‘ಮಲ್ಲವ್ವಾ, ಬೆಲ್ಲಾನೂ ಹಾಲ್ನೂ ಬಾಳಟು ಹಾಕಿ ಚಾ ಕಾಸವಾ. ಕುಡಿಯಾದೊಂದು ಒಪ್ಪತ್ತು. ರುಚಿಯಾಗೇ ಕುಡಿಯಾನ’ ಅಂದಳು.
‘ಹ೦ಗ ಮಾಡ್ತನಿಬೇ ಯತ್ತಿ.’
ಅಷ್ಟೊತ್ತಿಗೆ ಮಲ್ಲವ್ವನ ಮಕ್ಕಳೆರಡೂ ಗಂಗಾಳ ಹಿಡಿದುಕೊಂಡು ಅಡಿಗಿ ಮನೀಗೆ ಬಂದು ‘ಚಾ ನನಗ ಮದ್ಲು, ನನಗ ಮದ್ಲು’ ಅಂತ ಜಗಳಾಡಾಕ ಹತ್ತಿದವು. ಅದೇ ಹೊತ್ತಿಗೆ ಒಳಗೆ ಬಂದ ಮಲ್ಲವ್ವನ ಗಂಡ ಈಶಪ್ಪ
‘ಮುಂಜಾಲೆದ್ದ ಗಳಿಗ್ಗೆ ಏನ್ರಲೇ ಜಗಳ? ಸೊಳೇಮಕ್ಕಳಾ. ಹೊರಗ ಹೋಕ್ಕೀರೊ ಏನು ತೊಗೋಳ್ಯೋ ಬಾರಕೋಲಾ?’ ಅಂತ ಜಬರಿಸಿದ. ಮಕ್ಕಳೆರಡೂ ಹೆದರಿಕೊಂಡು, ಗಂಗಾಳ ಅಲ್ಲೇ ಒಕ್ಕೊಟ್ಟು, ಹೊರಗೆ ಓಡಿ ಹೋದವು.
‘ಸೊಳೇಮಕ್ಕಳಾ’ ಅಂತ ಬೈದದ್ದು ಕೇಳಿ ಬಸವ್ವನ ಎದ್ಯಾಗ ಬರ್ಚೀಲೆ ತಿವಿದಂಗಾತು. ಆದರೂ ಸಹಿಸಿಕೊ೦ಡು
‘ಅಯ್ಯ, ಬಿಡ ನಮ್ಮಪ್ಪ. ಅವರ್ನ್ಯಾಕ ಬೆಯ್ತೀದಿ? ಸಣ್ಣ ಮಕ್ಕಳು. ತೀಳೀದ ಜಗಳ ಮಾಡ್ಯಾವು. ಆಟಕ್ಕ ನೀ ಇಂತಾ ಕೆಟ್ಟ ಬೈಗಳಾ ಬೈಯೋದಾ?’ ಅನ್ನುತ್ತ ಬಸವ್ವ ಒಂದು ಚರಿಗ್ಯಾಗ ಚಾ ತೊಗೊಂಡು ಎರಡೂ ಗಂಗಾಳಾ ಹಿಡಕೊಂಡು ಹೊರಗ ಬಂದಳು. ಎರಡೂ ಮಕ್ಕಳು ಹೆದರಿಕೊಂಡು ಬೆದರಿ ಬಂದ ಚಿಗರೀ ಮರಿ ಹಾಂಗ ಕುಳಿತಿದ್ದವು.
ಬಸವ್ವ ಅವರಿಬ್ಬರಿಗೂ ಚಾ ಕುಡಿಸಿ, ತಾನೂ ಕುಡಿದು ‘ಇಲ್ಲೇ ಆಡಿಕೆಳ್ರಿ. ಇಲ್ಲಾ, ಪಾಟೀ ಪುಸ್ತಾಕ ತೊಗೊಂಡು ಓದಿಕೆಳ್ರಿ.’ ಅಂತ ಅಡಿಗಿ ಮನಿಗೆ ಬಂದ ಬಸವ್ವ ಏನೋ ನೋಡಿ ಥಟ್ಟನ ನಿಂತಳು.
‘ಅಯ್ಯ ನನ್ ಶಿವನ. ಇದರ ಸಲ್ವಾಗಿ ಮಕ್ಕಳ್ನ ಬೇದು ಹೊರಗ ಕಳಿಸಿದನ? ಹೇಣ್ತಿನ್ನ ಮುದ್ದಾಡೋದೂ ಒಲೀ ಮುಂದ ಆಗಬೇಕಾ? ರಾತ್ರಿ ಸಾಲದಾ?’ ಅಂತ ಸೆರಗಿನಿಂದ ಮುಖ ಮರೆ ಮಾಡಿಕೊಂಡು ಮೆಲ್ಲನೆ ‘ಮಲ್ಲವ್ವ’ ಅಂದಳು.
ಇಬ್ಬರೂ ದಡಬಡಿಸಿಕೊಂಡು ಎದ್ದರು.
‘ಯವ್ವಾ, ಮಲ್ಲಿ ಕಣ್ಣಾಗ ಏನೋ ಕಸ ಬಿದ್ದಿತ್ತಂತ. ನೋಡ್ತಿದ್ದೆ. ಅಟ.’
‘ಮತ್ತ ನೀ ಹೊಲಕ್ಕ ಹೋಗೋ ಹೊತ್ತಿಗೆ ಅಡಿಗಿ ಆಗಬೇಕಲ್ಲಪ್ಪ. ಅದಕ್ಕ ಕರದೆ.’
‘ಶೆಗಣಿ ಕಸ ಬಳದು ನಾಕು ಕೊಡ ನೀರು ಶೇದಿ ಹಾಕೋ ಹೊತ್ತಿಗೆ ಅಡಿಗಿ ಆಕ್ಕೈತಿ ಬಿಡಬೇ.’ ಎಂದು ಈಶಪ್ಪ ದಂದಕ್ಕಿ ಕಡೆಗೆ ಹೋದ.
‘ಮಲ್ಲವ್ವಾ, ನಾ ಮಜ್ಜಿಗೀ ಕಡದು ಬೆಣ್ಣಿ ತಗದು, ಆಕಳ ಹಿಂಡಿಕೊಂಡು ಬರ್ತೀನಿ. ನೀ ಆಟೊತ್ತಿಗೆ ರೊಟ್ಟಿಗೆ ಹಂಚು ಇಟ್ಟುಬಿಡು. ಈಶಪ್ಪಗ ಮುಂಜಾಲಿ ಹೊತ್ತಿನ್ಯಾಗ ಪಲ್ಯೇವು ಏನೂ ಬ್ಯಾಡ. ಕಡ್ಲೀ ಹಿಂಡಿ ಬೆಣ್ಣಿ ಹಾಕ್ಕೊಂಡು ರೊಟ್ಟೀ ತಿಂತಾನ. ಇಲ್ಲಾಂದ್ರ ಕರಿಹಿಂಡಿ ಮೊಸರು ತಿಂತಾನ. ಮದ್ಯಾನದ ಹೊತ್ತಿಗೆ ಬಿಸಿ ಅನ್ನ ಹುಳಪಲ್ಲೇವು ಮಾಡಿದರಾತು.’ ಅಂತ ಹೇಳಿ ಮೊಮ್ಮಕ್ಕಳನ್ನು ಹುಡುಕಿಕೊಂಡು ಹೊರಗೆ ಬಂದಳು.
ಏನೋ ಕೆಟ್ಟ ಕೆಲಸ ಮಾಡಿ ಅವು ಅವರಪ್ಪನ ಕೈಲೆ ಮತ್ತೆ ಬೈಸಿಕೊಳ್ಳುತ್ತಿದ್ದವು.
‘ಈ ಮಾರಾಯ ಮಕ್ಕಳ್ನ ಬೈಯೋದರಾಗ ಇರ್ತಾನ… ಈಶಪ್ಪ. ನೀ ಉಣ್ಹೋಗು. ನಾ ಅವರ್ನೆಲ್ಲ ನೋಡಿಕೆಂತೀನಿ. ಬರ್ರೆಪಾ’ ಅಂತ ಪಡಸಾಲೆಯ ಕಟ್ಟೆಯ ಮೇಲೆ ಬಸವ್ವ ಅವರಿಬ್ಬರನ್ನೂ ಕರೆದುಕೊಂಡು ಕುಳಿತಳು.
‘ಹಾ೦ಗೆಲ್ಲ ಕೆಟ್ಟ ಕೆಲಸಾ ಮಾಡಬಾರದು. ಬೆಳಿಗ್ಗೆದ್ದು ಓದಿಕೇಬೇಕು, ಇಲ್ಲ ಜಳಕಾ ಮಾಡಿ ದೇವರ ದ್ಯಾನ ಮಾಡಬೇಕು.’
‘ಏನಂತ ದ್ಯಾನಾ ಮಾಡಬೇಕಬೇ ಯಮ್ಮ? ಅಪ್ಪ ಅಂತಾನಲ್ಲ ಹಾಂಗ ‘ಸೊಳೇಮಕ್ಕಳಾ, ಬೋಳೀಮಕ್ಕಳಾ’ ಅನಬೇಕನಬೇ?’
ಮಮ್ಮಕ್ಕಳ ಮಾತು ಕೇಳಿ ಬಸವ್ವನ ಕಿವಿಯಲ್ಲಿ ಕಾದ ಸೀಸ ಹೊಯ್ದಂತಾಯಿತು, ಕಣ್ಣಲ್ಲಿ ನೀರು ಬಂತು.
‘ಅಯ್ಯೋ ಶಿವನೇ. ಯಾ ಮಾತ್ನಿಂದಾ ನನ್ನ ಗಂಡನ್ನ ಕಳಕೊಂಡೆನೋ ಆ ಮಾತ್ನ ಇವತ್ತು ಮಗ ಮಮ್ಮಕ್ಕಳು ಎಲ್ಲಾರ ಬಾಯಾಗ ಕೇಳ೦ಗಾತಲ್ಲಾ!’ ಅಂತ ಕಣ್ಣೊರಸಿಕೊಂಡಳು.
‘ಯಾಕಬೇ ಯಮ್ಮ, ಅಳಾಕ ಹತ್ತೀಯೇನು?’
‘ಇಲ್ಲಪ್ಪ. ಕಣ್ಣು ಯಾಕೋ ಒತ್ತಿತ್ತು.’ ಅಂತ ಮಾತು ಮರೆಸಿದಳು.
ಆದರೂ ಮಮ್ಮಕ್ಕಳಾಡಿದ ಮಾತು ಕೇಳಿ ಬಸವ್ವ ತಲಿ ತಲಿ ಜಜ್ಜಿಕೊಂಡು ‘ಹಾ೦ಗೆಲ್ಲ ಮಾತಾಡಬಾರದು.’
‘ಮತ್ತ ಅಪ್ಪ ಯಾಕ ಮಾತಾಡತಾನ?’
‘ಅಂವಗೂ ಹೇಳ್ತೀನಿ. ಇನ್ನ್ ಮ್ಯಾಲೆ ಯಾರೂ ಹಾ೦ಗ ಮಾತಾಡಬ್ಯಾಡ್ರಿ.’
‘ಯಮ್ಮ, ಹೊಟ್ಟಿ ಹಶೀತೈತಿಬೇ’
‘ತಡೀರೆಪ್ಪ. ನಿಮ್ಮಪ್ಪಂದು ಉಣ್ಣೋದು ಮುಗದು, ಆತ ಗಳೇವು ಅಟ್ಟಿಕೊಂಡು ಹೊಲಕ್ಕ ಹ್ವಾದ ಅಂದ್ರ ನಾವು ಉಣ್ಣಾಕ ಹೋಗೋಣ೦ತ.’ ಬಸವ್ವ ಮಮ್ಮಕ್ಕಳನ್ನು ರಮಿಸಿದಳು.
ಆಟೊತ್ತಿಗೆ ಈಶಪ್ಪ ಉಂಡು ಕುಡ, ಮಿಣಿ ಹೆಗಲ ಮೇಲೆ ಇಟ್ಟುಕೊಂಡು ಹೊರಗೆ ಬಂದ. ದಂದಕ್ಕಿಯೊಳಗಿನ ಎತ್ತು ಬಿಟ್ಟುಕೊಂಡು ಬಂದು, ನಗ ಹಾಕಿ, ಕಳೇಬಾರು ಕಟ್ಟಿ, ನಗದ ಮೇಲೆ ಕುಂಟಿ ಇಟ್ಟ. ಮಲ್ಲವ್ವ ತತ್ರಾಣಿಯೊಳಗೆ ನೀರು ತುಂಬಿಕೊಂಡು ಬಂದು ಗಂಡನಿಗೆ ಕೊಟ್ಟು, ಒಂದು ಸಣ್ಣ ನಗೆ ನಕ್ಕಳು. ಅದನ್ನು ನೋಡಿ ಈಶಪ್ಪ ತಾನೂ ನಕ್ಕು ಖುಶಿಯಿಂದ ಹೊಲಕ್ಕೆ ಹೊರಟ.
ಮಲ್ಲವ್ವ ಒಳಗೆ ಬಂದು ‘ಯತ್ತೀ, ಮಕ್ಕಳ್ನ ಕರಕೊಂಡು ಬಾರಬೇ. ಬಿಸೀ ರೊಟ್ಟೀ ಮಾಡೀನಿ. ಉಣ್ಣಬರ್ರಿ’ ಅಂದಳು. ಸೊಸೆಯ ಮಾತು ಕೇಳಿ ಬಸವ್ವ
‘ಬ೦ದೆನವ್ವ.’ ಅಂತ ಕೈಕಾಲು ಮಕ ತೊಳಕೊಂಡು ಒಳಗೆ ಬಂದಳು.
‘ಬಿಸೀ ರೊಟ್ಟೀ ಮಾಡಿಕೊಡೋ ಸೊಸೀ ಸಿಕ್ಕಳಲ್ಲ’ ಅಂತ ಸಂತೋಷಪಟ್ಟಳು.
ಹಾಗೆಯೇ ಆಕೆಯ ನೆನಪು ಹಿಂದಕ್ಕೆ ಹೋಯಿತು.
ಮದುವೆಯಾಗಿ ಹತ್ತು ವರ್ಷ ಆದರೂ ಬಸವ್ವನಿಗೆ ಮಕ್ಕಳಾಗಲಿಲ್ಲ. ಅತ್ತೆ ಗದಿಗೆವ್ವ ಮತ್ತು ಮಾವ ರುದ್ರಪ್ಪ ಅವರಿಗೆ ಚಿಂತೆ ಹತ್ತಿತು.
‘ಬಸವ್ವ, ಮನೆತನಕ್ಕ ಒಂದು ಕೂಸು ಬೇಕಲ್ಲ. ನಿನ್ ಗಂಡಗ ಇನ್ನೊ೦ದು ಮದಿವೀ ಮಾಡಾಣೇನು?’ ಎಂದ ಗದಿಗೆವ್ವನ ಮಾತು ಕೇಳಿ ಬಸವ್ವನಿಗೆ ಕೊರಗು ಶುರುವಾಯಿತು.
ಆದರೆ ಬಸವ್ವನ ಗ೦ಡ ಕಪ್ಪತ್ತಪ್ಪ ಅದರ ಬಗ್ಗೆ ಚಿಂತಿ ಮಾಡ್ತಿದ್ದಿಲ್ಲ.
‘ನಮಗ ಮಕ್ಕಳಾಗಲಿಲ್ಲ’ ಅಂತ ಬಸವ್ವ ಕೇಳಿದರ
‘ನನಗ ನೀನು, ನಿನಗ ನಾನು. ಮಕ್ಕಳ್ಯಾಕ ಬೇಕು.’ ಅಂತ ನಗಿಚ್ಯಾಟಿಗಿ ಮಾಡ್ತಿದ್ದ.
ಬಸವ್ವ ಮಾತ್ರ ಅಮಾವಾಸ್ಯೆಗೊಮ್ಮೆ ಕಪ್ಪತ್ತ ಗುಡ್ಡಕ್ಕೆ ಹೋಗಿ ಕಪ್ಪತ್ತ ಮಲ್ಲಣ್ಣಗ ಕೈ ಮುಗದು ‘ನನಗ ಒಂದಾರ ಮಗನ್ನ ಕೊಡು.’ ಅಂತ ಬೇಡಿಕೊಳ್ಳುತ್ತಿದ್ದಳು. ಜೋಳ ಬೀಸುವಾಗ ಕೂಡ ಮನೆ ದೇವರಾದ ಕಪ್ಪತ್ತ ಮಲ್ಲಣ್ಣನನ್ನು ನೆನೆಯುತ್ತಿದ್ದಳು.
ಕಪ್ಪತ್ತಕ್ಕ ಹೋಗವರ| ಮಕ್ಕಳ ಬೇಡುವರ|
ಕಪ್ಪತ್ತ ಮಲ್ಲಣ್ಣ| ಕಾರಿಯ ಸಿದ್ದಣ್ಣ |
ಇಪ್ಪತ್ತ ಮಕ್ಕಳ ಕರುಣೀಸ| ನಿನ್ನ ಹೆಸರ |
ಇಪ್ಪತ್ತ ಸಾರೀ | ನೆನದೇನ|
ಎಂದು ಹಾಡುತ್ತಿದ್ದಳು.
‘ನನ್ನ ಗಂಡ ಇನ್ನೊಂದು ಮದಿವಿ ಮಾಡಿಕೊಂಡ್ರ ಆಕಿ ನನ್ನ ಗಂಡನ ಹಂತ್ಯಾಕ ಹೋಗಾದಿರ್ಲಿ ಅವನ್ ಕೂಡ ಮಾತಾಡಾಕರ ಬಿಡತಾಳೋ ಇಲ್ಲೋ’ ಅಂತ ಚಿಂತೆ ಮಾಡುತ್ತಿದ್ದಳು.
ಕಪ್ಪತ್ತಪ್ಪ ಬಾರೀ ಚೆಲುವ. ಎತ್ತರನ್ನ ಆಳು; ನವಣೀ ಒಣಗಹಾಕಬಹುದು ಅಂತಾ ಬೆನ್ನು, ಕೂದಲು ತುಂಬಿದ ಹರವಾದ ಎದೀ, ದುಂಡನ್ನ ಮುಖದಾಗ ಕಲ್ಲಿಮೀಸೆ; ಸಾಲಾಗಿ ಹೊಂದಿಸಿದ ಹಲ್ಲು; ಬಾಯಿ ತುಂಬಾ ಕುಲುಕುಲು ನಗಿ. ತಲೀ ಮ್ಯಾಲೆ ಗತ್ತೀಲೆ ಸುತ್ತಿದ ದೊಡ್ಡ ರುಮಾಲು. ನೀಲೀ ಬಣ್ಣದ ತುಂಬು ತೋಳಿನ ಅಂಗಿ, ಅದಕ್ಕ ಕಳಾವಾರ, ಕುಂಬಳದ ಗುಂಡಿ. ಅದಕ್ಕೊಂದು ಬೆಳ್ಳೀ ಚೇನು. ಬಲಗೈ ಬೆರಳಿನಾಗ ಬಿಳೆ ಹರಳಿನ ಉಂಗುರ. ಬೆಳ್ಳನ್ನ ವಲ್ಲಿ ಉಟ್ಟುಕೊಂಡು ಅದರ ಚುಂಗು ಕೈಯಾಗ ಹಿಡಕೊಂಡು ಕಿನ್ನಾಳದ ಜೋಡು ಮೆಟ್ಟಿಕೊಂಡು ಒಳ್ಳೇ ಠೀವೀಲೆ ಕಪ್ಪತ್ತಪ್ಪ ಓಣ್ಯಾಗ ಹೊಂಟರ ಎಲ್ಲಾರೂ ಬಾಯಿ ತಕ್ಕೊಂಡು ನೋಡ್ತಿದ್ದರು. ಹೆಣ್ಣುಮಕ್ಕಳ ಮೈ ಬಿಸಿಯಾಗಿ ಬಿಗಿದಂಗ ಆಗೋದು. ಹಿಂತಾ ಚೆಲುವ ಚೆನ್ನಿಗರಾಯನ್ನ ಬ್ಯಾರೇದಕೀಗೆ ಬಿಟ್ಟುಕೊಡಾಕ ಬಸವ್ವನ ಮನಸ್ಸು ಹ್ಯಾಂಗ ಒಪ್ಪೀತು!
ಕಪ್ಪತ್ತಪ್ಪ ಕಷ್ಟ ಪಟ್ಟು ದುಡಿಯಾಂವ ಅಲ್ಲ. ತನ್ನ ಕುದರಿ ಹತ್ತಿಕೊಂಡು ಡಂಬಳದ ಸುತ್ತಲ ಊರಿಗೆ ಹೋಗಿ ಗಾ೦ವಠಿ ಔಷದ ಕೊಡ್ತಿದ್ದ. ಕಪ್ಪತ್ತ ಗುಡ್ಡದಾಗಿರೋ ಗಿಡಮೂಲಿಕೀ ಔಸದೀಯೆಲ್ಲ ತಿಳಕೊಂಡಿದ್ದ. ‘ಅವನ ಕೈಗುಣ ಒಳ್ಳೇದೈತಿ’ ಅಂತ ಎಲ್ಲಾರೂ ಅವನ್ನ ನಂಬತಿದ್ರು. ಮಾತು ಮಾತಿಗೆ ನಕ್ಕು ನಗಿಸಿ ಎಲ್ಲಾರ್ನೂ ಅರಾಂ ಮಾಡ್ತಿದ್ದ.
ಒಂದಿನ ವಡ್ಡಟ್ಟಿಗೆ ಹೋದಾಗ ಸಾವಂತ್ರೆವ್ವ ಬಂದು ‘ಯಣ್ಣ, ನನ್ ಗಂಡಗ ಇಲಿ ಕಡದೈತಿ. ಔಸದೀ ಕೊಡು’ ಅಂದಳು.
‘ಇಲಿ ಕಡದೈತೋ ಏನ್ ನೀನ ಕಡದೀಬೇ?’ ಅಂದದಕ ನಾಚಿಕೊಂತ
‘ಹೊಗ ಯಣ್ಣ, ನೀನೂ ಬಾರೀ ಆಡಿಸ್ಯಾಡಾಂವ. ಏನಾರ ಔಸದಿ ಕೊಡು ಅಂದ್ರ…’ ಅಂದಳು.
‘ಹಾ೦ಗಾರ ಈ ನಂಜಿನ್ ಬೇರು, ಇಸರೀ ಬೇರು ತೊಗೋ. ಎಲ್ಡನ್ನೂ ತೇದು ಹಚ್ಚು. ಹೊಟ್ಟ್ಯಾಗೂ ಕೊಡು. ಹಾಲು ಮಸರು ಕೊಡಬ್ಯಾಡ. ಗೋದೀರೊಟ್ಟೀ ಸುಟ್ಟುಕೊಡು.’
ಆಮೇಲೆ ಸಂಕವ್ವನೂ ಬಂದು ‘ಯಣ್ಣ, ನನಗ ಮೂರು ದಿವ್ಸದಿಂದ ಜರ ಬರ್ತಾವು’ ಅಂದಳು.
‘ಹೌದಾ, ಎಲಬಸ೦ದಕದ ಬೇರ್ ಕೊಡ್ತೀನಿ. ತೇದು ಹೊಟ್ಟ್ಯಾಗ ತೊಗೋ. ಗೋಯಿನ್ ಸೊಪ್ನ ಬಿಸಿಮಾಡಿ ತೆಲೀಗೆ ಹಾಕಿ ಕಟ್ಟಿಕೋ. ಬೆವರ್ ಬ೦ದು ಜರಾ ಇಳೀತಾವು’ ಅಂದ.
ಹೀ೦ಗ ಎಲ್ಲಾರಿಗೂ ಕಪ್ಪತ್ತಪ್ಪ ಬೇಕಾದವನಾಗಿದ್ದ.
ಅವನ ಅಪ್ಪ ರುದ್ರಪ್ಪ ಮತ್ತು ಅವ್ವ ಗದಿಗೆವ್ವಗ ಕಪ್ಪತ್ತಪ್ಪನ ಮ್ಯಾಲೆ ಅದೆಷ್ಟು ಪ್ರೀತಿನೋ! ಅವ೦ಗ ಒಂದು ಕೆಲಸ ಹೇಳ್ತಿದ್ದಿಲ್ಲ. ‘ಯಪ್ಪ ಉಣ್‌ಬಾರೋ’ ಅಂತ ಪ್ರೀತೀಲೆ ಕರದು ಮಗನ ಕೂಡ ಉಣ್ಣುತ್ತಿದ್ದರು.
ಕಪ್ಪತ್ತಪ್ಪ ನಿರಾಳ ಸ್ವಬಾವದವ. ಮನೀ ಕಡೆ ಆಗಲಿ, ತನಗ ಮಕ್ಕಳಿಲ್ಲ ಅಂತ ಆಗಲಿ ಒಂದಿನ ಚಿಂತಿ ಮಾಡ್ತಿದ್ದಿಲ್ಲ.
‘ಮತ್ತ ನಮಗ ಮಕ್ಕಳಾಗಲಿಲ್ಲ ಅಂತ ಅತ್ತಿ ಮಾಂವ ನಿನಗ ಇನ್ನೊಂದು ಮದಿವೀ ಮಾಡಿ ನನಗ ಸವತೀ ತರತೀನಿ ಅಂತಾರ! ನೀಯೇನಂತೀದಿ’ ಅಂತ ಬಸವ್ವ ಕೇಳಿದ್ದಕ್ಕ
‘ಅಯ್ಯ, ಬಿಡ ನಿನ. ಅವರು ಹಾ೦ಗಂದ್ರ ನೀ ಪದ ಹೇಳಿಬಿಡು’
‘ಏನಂತ ಪದ ಹೇಳಬೇಕು?’
‘ನನ ಮ್ಯಾಲೆ ಸವತೀ ತರತೀನಂದ | ಮನ್ಯಾಗಿಡತೀನ೦ದ.
ತಂದಾರ ತರಲೆವ್ವ | ತಂಗ್ಯಾಗಿರಲೆವ್ವ|
ನಾ ಬಿಟ್ಟ ಸೀರಿ ಉಡಲೆವ್ವ |
ಮನ್ಯಾಗಿರಲೆವ್ವ |
ಅಂತ ಪದ ಹೇಳಿಬಿಡು’ ಅಂದ.
‘ನಿನಗ ಎಲ್ಲಾನೂ ಬರೇ ನಗಿಚಾಟಿಗೀನ. ನನಗ ಪ್ರಾಣ ಸಂಕಟ. ನಾಳೆ ಸವತೀ ತಂದರ, ನೀಯೇನು ಹೊಸ ಹೇಣ್ತೀ ಕೂಡ ಸುಕವಾಗೇ ಇರ್ತೀದಿ.’ ಅಂತ ಬಸವ್ವ ಅಂದದ್ದಕ್ಕ
‘ನಾಯೇನ್ ಮಾಡ್ಲಿ ಹೇಳು. ನನ್ ಕೈಯಾಗೇನೈತಿ? ಕಪ್ಪತ್ತ ಮಲ್ಲಣ್ಣ ಕಣ್ ಬಿಟ್ಟಾಗ ತಾನ ಆಕ್ಕಾವಳು. ನೀಯೇನ್ ಚಿಂತೀ ಮಾಡಬ್ಯಾಡ. ಮದಿವಿ ಆಗಾ೦ವ ನಾನು. ನನ್ ಕೇಳ್ದ ಬ್ಯಾರೆ ಮದಿವಿ ಮಾಡಾಂಗಿಲ್ಲ!’ ಅಂತ ಕಪ್ಪತ್ತಪ್ಪ ಬಸವ್ವನ್ನ ಸಮಾಧಾನ ಮಾಡಿದ.
ಒಂದು ದಿನ ಅಪ್ಪ ಅವ್ವ ಈ ಮಾತು ಕೇಳಿಯೇ ಬಿಟ್ಟರು. ಅದಕ್ಕ ಕಪ್ಪತ್ತಪ್ಪ
‘ನಮಗ ಮಕ್ಕಳಿಲ್ದಿದ್ರೂ ಆಟ ಹೋತು. ನನಗ ಇನ್ನೊಂದ್ ಮದಿವಿ ಬ್ಯಾಡ. ನಾವಿಬ್ರೂ ಸುಕವಾಗೇ ಅದೀವಿ’ ಅಂದ.
ಅವನು ಹಾಗಂದರೂ ರುದ್ರಪ್ಪ ಗದಿಗೆವ್ವರು ಮಾತ್ರ ದಿನಾ ಬಸವ್ವನ್ನ ಕೊರೆಯುತ್ತಿದ್ದರು.
ಈ ಮಾತು ಕೇಳಿ ಬ್ಯಾಸರಾದಾಗೆಲ್ಲ ಬಸವ್ವ ಗಂಡನ ಎದೀಮ್ಯಾಲೆ ತಲೆಯಿಟ್ಟು ಕೂದಲೊಳಗ ಕೈಯಾಡಿಸಿಕೊಂತ ತನ್ನೆಲ್ಲ ನೋವು ಕಷ್ಟ ಮರೆಯುತ್ತಿದ್ದಳು. ಇಂಥ ಸುಖವನ್ನು ಇನ್ನೊಬ್ಬಾಕಿಗೆ ಬಿಟ್ಟು ಕೊಡಲು ಆಕೆಗೆ ಮನಸ್ಸಿರಲಿಲ್ಲ.
ಕಪ್ಪತ್ತಪ್ಪ ಒಂದಿನ ಮಧ್ಯಾಹ್ನವೇ ಮನೆಗೆ ಬಂದ. ಅವನ ಅವ್ವ ಗದಿಗೆವ್ವ ಜೋಳ ಹಸಮಾಡಿಕೊಂತ ಕುಳಿತಿದ್ದಳು. ಬಸವ್ವ ನವಣಿ ಕುಟ್ಟುತ್ತಿದ್ದಳು. ಅಂವ ಬಂದದ್ದು ನೋಡಿ ಕೈಯಾಗಿನ ಕೆಲಸ ಅಲ್ಲೇ ಬಿಟ್ಟು ಅವ್ವ
‘ಯಾಕಪ್ಪ, ಈಟೊತ್ತಿಗೇ ಬಂದು ಬಿಟ್ಟೀ?’ ಅಂದಳು. ಹೆಂಡತಿ ಬಸವ್ವ ಅವನ ಬಾಡಿದ ಮುಖ ನೋಡಿ ನವಣಿ ಕುಟ್ಟೋದನ್ನ ಬಿಟ್ಟು
‘ದಿನಾ ಚಂಜೀಗಂಟಾ ಹೊರಗ ಇರಾಂವ. ಒಂದಿನಾ ಮಕ ಬಾಡ್ತಿದ್ದಿಲ್ಲ. ನಕ್ಕೊಂತ ಮನೀಗೆ ಬರಾ೦ವ! ಇವತ್ ಏನಾಗೇತಿ? ಸಪ್ಪಗ ಅದೀಯಲ್ಲ!’ ಅಂತ ಕೇಳಿದಳು. ಕಪ್ಪತ್ತಪ್ಪ
‘ಯಾಕೋ ತೆಲೀ ನೋಯಾಕ ಹತ್ತಿತ್ತು. ಮನೀಗ್ ಬಂದ್ ಬಿಟ್ಟೆ.’ ತನ್ನ ಮನಸ್ಸಿನಲ್ಲಿ ಎದ್ದ ಕೋಲಾಹಲವನ್ನು ಮುಚ್ಚಿಟ್ಟು ಹೇಳಿದ.
‘ತೆಲಿನೋವಂತೀದಿ. ಓಟು ಕಸಾಯಾನರ ಕಾಸಿ ಕೊಡ್ತೀನಿ’ ಅಂತ ಬಸವ್ವ ಸುಂಟಿ, ಬೆಲ್ಲ, ಹವೀಜ ಹಾಕಿ ಕಷಾಯ ಮಾಡಿ ಕೊಟ್ಟಳು.
ಕಪ್ಪತ್ತಪ್ಪಗ ಕುಂತರೂ ನಿಂತರೂ ಅದೇ ಚಿಂತಿ ಹತ್ತಿ ಮನಸ್ಸಿನ್ಯಾಗ ಸಮಾಧಾನ ಇಲ್ಲದ೦ಗ ಆಗಿತ್ತು. ‘ಎಂತಾ ಹ್ವಾರೇವು ಮಾಡಿಬಿಟ್ಟೆ ನಾನು! ಒಂದು ಕ್ಷಣ ಮೈಮರತದ್ದಕ್ಕ ಒಂದು ಹುಡಿಗೀ ಬಾಳೇವು ಹಾಳಾತಲ್ಲ!’ ಅಂತ ಹಳಹಳಿಸುತ್ತಿದ್ದ.
‘ಯಕಪ್ಪ, ಎಲ್ಡು ದಿನದಿಂದ ಹೊಟ್ಟಿತುಂಬ ಉಣವಲ್ಲಿ, ಹೊರಗೂ ಹೋಗವಲ್ಲಿ. ಎನಾರೆ ಆಗೇತಿ ಹೇಳು’ ಅಂತ ಪೀಡಿಸಿ ಗದಿಗೆವ್ವ ಕೇಳಿದಳು.
‘ಏನ್ ಹೇಳ್ಲಿ? ನಾ ಯಾವತ್ತೂ ತೆಲಿ ತಗ್ಗಸೋವಂತ ಹ್ವಾರೇವು ಮಾಡಿದಾಂವಲ್ಲ. ಈಗ ನನ್ ಕಡಿಂದ ಅಗಬಾರದ್ದೊಂದು ತೆಪ್ಪು ಆಗಿಹೋಗೇತಿ. ಅದನ್ನ ಕೇಳಿ ನೀವೇನಂತೀರೋ ಅಂತ ಹೆದರಿಕಿ ಆಕ್ಕೈತಿ.’
‘ಹೀಗ ಮೋಗಂ ಮಾತಾಡಬ್ಯಾಡ. ಏನಾತಂತ ಬಿಡಿಸಿ ಹೇಳು.’ ಅಂತ ಅವ್ವ ಮತ್ತ ಪೀಡಿಸಿ ಕೇಳಿದಳು. ಕಪ್ಪತ್ತಪ್ಪ ನಡೆದದ್ದನ್ನೆಲ್ಲ ಹೇಳಲೇಬೇಕಾಯಿತು.
‘ಡೋಣ್ಯಾಗ ಪರಸಪ್ಪ ಅವನ್ ಮಗಳು ಪಾರಿ ಅದಾರ ಅಂತ ಹೇಳ್ತಿದ್ನೆಲ್ಲ. ಅವ೦ಗ ದಮ್ಮಿತ್ತು. ಔಸದಿ ಕೊಡ್ತಿದ್ದೆ. ಓಟು ಕಮ್ಮಿನೂ ಆಗಿತ್ತು. ಒಂದಿನ ಚಂಜೀ ಹೊತ್ತಿಗೆ ಹೆಚ್ಚಾಗಿ ಬಿಟ್ಟಿತು. ಕೆಮ್ಮಿದಾಗೆಲ್ಲ ರಕ್ತಾನ ಬೀಳ್ತಿತ್ತು. ಪಾರಿ ಬೋರಾಡಿ ಅಳಾಕ ಹತ್ತಿದ್ಲು. ಔಸದಿ ಕೊಡಾಕ೦ತ ನಾ ಅಲ್ಲೇ ಉಳಕೊಂಡೆ. ಏನ್ ಮಾಡೋದು ನಡರಾತ್ರೀ ಪರಸಪ್ಪ ಸತ್ತ ಹ್ವಾದ. ‘ನಾ ಪರದೇಶಿ ಆದೆ’ ಅಂತ ಗೋಳಾಡೋ ಪಾರಿನ್ನ ನೋಡಿ ನನ್ ಕಳ್ಳು ಕಿತ್ತುಬ೦ದಾಂಗಾತು. ಪಾಪ ಅನಿಸಿ ಸಮಾದಾನ ಮಾಡಾಕ ಮತ್ತ ಮತ್ತ ನಾ ಅಕೀ ಮನೀಗೆ ಹೋಕ್ಕಿದ್ದೆ.
‘ಒಮ್ಮೆ ಹೋದಾಗ ಮೂರೂಚಂಜಿ ಆಗಿತ್ತು. ಗುಡುಗು, ಸಿಡ್ಲು, ಕೋಲ್ಮಿಂಚು ಸುರುವಾಗಿ ಮಳೀನೂ ವಿಪರೀತ ಹೊಡಿಯಾಕ ಹತ್ತಿತ್ತು. ಏಟೊತ್ತಾದ್ರೂ ಮಳೀ ನಿಲ್ಲಿಲ್ಲ. ಹೊಲದಿಂದ ತೊಯ್ಸಿಕೊಂಡು ಬಂದ ಪಾರಿ ತಂಡಿ ಹತ್ತಿ ನಡಗತಿದ್ಲು. ನಾ ಔಸದಿಯೇನೋ ಕೊಟ್ಟೆ. ನಡಕ ನಿಲ್ಲಲಿಲ್ಲ. ಎಲ್ಡು ಗೊಂಗಡಿ ಹೊಚ್ಚಿ ಗಟ್ಟ್ಯಾಗಿ ಹಿಡಕೊಂಡು ಕುಂತೆ. ಹೀಗಾಗಿ ನಾ ಅಲ್ಲೇ ಉಳಕೊ೦ಡೆ. ಅವತ್ತ ನಡೀಬಾರದ್ದು ನಡದು ಹೋತು. ಈಗ ಪಾರಿಗೆ ಮೂರು ತಿಂಗಳಾಗೇತಿ.’ ಅಂತ ಕಪ್ಪತ್ತಪ್ಪ ಅಳುಕಿನಿಂದಲೇ ಹೇಳಿದ.
‘ನನಗಿನ್ನೂ ಮದಿವಿ ಆಗಿಲ್ಲ, ಈ ಗತಿ ಬಂತು. ಎಲ್ಲಾರೂ ನನಗ ಸೂಳಿ ಅ೦ದರ ಏನ್ ಮಾಡ್ಲಿ? ಅಂತಾ ಮಾತು ಕೇಳಾಕ ನಾ ಒಲ್ಲೆ. ಬಾವೀ ಬೀಳ್ತೀನಿ, ಜೀವ ಕಳಕೊಂತೀನಿ. ಇಲ್ಲಾಂದ್ರ ನನಗ ಕೆಟ್ಟ ಹೆಸರು ಬರದಾಂಗ ನೀವು ನೋಡಿಕೊಳ್ರಿ. ನನ್ನಿಂದಾಗಿ ನಿಮಗೂ ಕೆಟ್ಟ ಹೆಸರು ಬರಬಾರದು’ ಅಂತಾ ಗೋಳ್ಯಾಡಿ ಅಳತಾಳ. ಏನ್ ಮಾಡಬೇಕಂತ ತಿಳೀದಂಗ ಆಗೇತಿ. ಊರಾಗ ನಾಕ್ ಮ೦ದಿಗೆ ಗೊತ್ತಾದ್ರ ಮಕ ಎತ್ತಿಕೊಂಡ್ ಅಡ್ಡಾಡದಂಗ ಆಕ್ಕೈತಿ.’ ಅಂತ ಕಪ್ಪತ್ತಪ್ಪ ಗೋಳಾಡಿದ.
ಈ ಮಾತು ಕೇಳಿ ಮನ್ಯಾಗ ಎಲ್ಲರೂ ಚಿಂತಿ ಮಾಡಾಕ ಹತ್ತಿದರು.
‘ಅದಕ್ಕ್ಯಾಕೀಟು ಗೋಳ್ಯಾಡ್ತೀ? ನನ್ನ ಹ್ಯಾ೦ಗ ನೋಡಿಕೊಂತೀಯೋ ಹಾ೦ಗ ಆಕಿನ್ನೂ ನೊಡಿಕೋ. ಶಿವ ನನಗ ಮಕ್ಕಳ್ನ ಕೊಡ್ಲಿಲ್ಲ. ಆಕೀಗರ ಕೊಟ್ಟಾನಲ್ಲ. ಅದ ಸಂತೋಸ. ಆ ಕೂಸಿನ್ನ ತಂದು ನಾವ ಸಾಕಿಕೊಂಡರಾತು. ಆಕೀಗೆ ಜೀವಾ ಕಳಕೋಬ್ಯಾಡ ಅಂತ ಹೇಳು. ನೀನೂ ದೈರ್ಯವಾಗಿರು.’ ಅಂದ ಬಸವ್ವನ ಮಾತು ಕೇಳಿ ಕಪ್ಪತ್ತಪ್ಪಗ ಆಶ್ಚರ್ಯವಾಯಿತು.
‘ಅಲ್ಲಾ, ನನಗ ಇನ್ನೊಂದು ಮದಿವಿ ಮಾಡ್ತಾರ ಅಂದದಕ ಅತಗೊಂತ ಕುಂತಾಕಿ ನೀನು! ಈಗ ಹೀಂಗತೀಯಲ್ಲ!’
‘ಮದಿವಿ ಮಾಡಿಕೊಂಡ್ರ ಸವತೀ ಮತ್ಸರ ಹುಟ್ಟತೈತಿ. ಈಗ ಒಂದ್ ಹೆಣ್ಣಿನ್ ಜೀವದ ಮಾತೈತಿ.’ ಅಂದ ಬಸವ್ವನ ಮಾತು ಕೇಳಿ ಗದಿಗೆವ್ವ
‘ಎಂತಾ ಹೆಣಮಗಳವಾ ನೀನು! ಏಟೊಂದು ದೊಡ್ ಮನಸು ನಿ೦ದು’ ಅಂದಳು.
‘ನಂದೇನು ದೊಡ್ ಮನಸ್ ಬಂತ್‌ಬೇ ಯತ್ತಿ. ಪಾರವ್ವ೦ದ ದೊಡ್ ಮನಸ್ಸು. ತನಗ ಹೀ೦ಗಾತು ಅಂತ ತಾಳೀ ಕಟ್ಟಿ ಮನೀಗೆ ಕರಕೊಂಡು ಹೋಗು ಅ೦ದಿಲ್ಲಲ್ಲ. ಕೆಟ್ಟ ಹೆಸರು ಬರದ್ಹಾಂಗ ನೋಡಿಕೊಳ್ರಿ ಅಂತ ಕೇಳಿಕೊಂಡಾಳ ಆಟ.’ ಅಂದ ಬಸವ್ವನ ಮಾತು ಕೇಳಿ ಕಪ್ಪತ್ತಪ್ಪನಿಗೆ ಧೈರ್ಯ ಬಂತು.
‘ಹಂಗಾರ ಪಾರಿನ್ನ ಮಾತಾಡಿಸಿ ಓಟು ದೈರ್ಯ ಹೇಳಿ ಬರ್ತೀನಿ’ ಅಂತ ಡೋಣಿಗೆ ಬಂದ.
ಬಂದು ನೋಡಿದರ ಪಾರವ್ವನ ಮನೀಗೆ ಕೀಲಿ ಹಾಕಿತ್ತು. ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸಿದ. ಆಕೆ ಎಲ್ಲಿ ಹೋದಳೆಂದು ಯಾರಿಗೂ ಗೊತ್ತಿರಲಿಲ್ಲ. ಮುಂದೇನು ಮಾಡಬೇಕೆಂಬುದು ತಿಳಿಯದೇ ಕಪ್ಪತ್ತಪ್ಪ ಮನೆಗೆ ಬಂದು ‘ಪಾರಿ ಮನೀ ಕೀಲಿ ಹಾಕಿ ಹೇಳದ ಕೇಳದ ಊರು ಬಿಟ್ಟ ಹೋಗ್ಯಾಳಂತ’ ಹೇಳಿದ.
ಇದನ್ನು ಕೇಳಿ ಬಸವ್ವನಿಗೂ ಗದಿಗೆವ್ವನಿಗೂ ದುಃಖವಾಯಿತು.
‘ಅಯ್ಯೋ ಶಿವನೇ, ಪಾರವ್ವ ಜೀವಾನ ಕಳಕೊಂಡಾಳೋ? ಏನು ಸಮ್ಮ೦ದಿಕರ ಮನೀಗ್ ಹೋಗ್ಯಾಳೋ? ಎಲ್ಲಿ ಇದ್ದಿದ್ದಿದ್ದಾಳು’ ಅಂತ ಚಿಂತೆ ಮಾಡುತ್ತಿದ್ದರು.
ಕಪ್ಪತ್ತಪ್ಪ ತಾನು ಹೋಗುತ್ತಿದ್ದ ಊರಿನಲ್ಲೆಲ್ಲ ಹುಡುಕಿದ. ಪಾರವ್ವನ ಸುಳಿವು ಎಲ್ಲೂ ಸಿಗಲಿಲ್ಲ.
ಪಾರವ್ವ ಬೂದ್ಯಾಳದಾಗಿರೋ ತನ್ನ ಚಿಗವ್ವನ ಮನೆಗೆ ಹೋಗಿ ಆಕೆಯ ಮುಂದೆ ತನ್ನ ಕಷ್ಟಾನೆಲ್ಲ ಹೇಳಿಕೊಂಡಳು.
‘ನಮ್ಮಪ್ಪಗ ಔಸದಿ ಕೊಡಾಕಂತ ನಮ್ಮನೀಗ್ ಒಬ್ರು ಬರ್ತಿದ್ರು. ಅವರು ಬಾಳ ಒಳ್ಳೆಯವ್ರು. ಅಪ್ಪ ಸತ್ತ ಮ್ಯಾಕ ಒಂದಿನ ನನ್ ಮಾತಾಡಸಾಕಂತ ಬಂದ್ರು. ಹತ್ತಿದ ಮಳೀ ರಾತ್ರಿಯಾದರೂ ಬಿಡಲೇ ಇಲ್ಲ. ಅವತ್ತ ನಡೀಬಾರದ್ದು ನಡದು ಹೋತು. ನಾ ಅಲ್ಲೇ ಇದ್ದರ ನನ್ ಮಾನ ಹೋಕ್ಕೈತಿ ಅಲ್ದ ಅವರ್ ಮಾನಾನೂ ಹೋಕ್ಕೈತಿ ಅಂತ ನಾ ಇಲ್ಲಿಗೆ ಬಂದೆ. ಮುಂದೇನು ಮಾಡ್ಬೇಕಂತ ತಿಳೀದಂಗಾಗೇತಿ’ ಅಂತ ಗೋಳಾಡಿ ಅತ್ತಳು. ಅದನ್ನು ನೋಡಲಾರದೆ ಆಕೆಯ ಚಿಗವ್ವನ ಕಣ್ಣಲ್ಲೂ ನೀರು ಬಂತು.
‘ಆದದ್ದಾಗಿ ಹೋಗೇತಿ. ನೀ ಚಿಂತೀ ಮಾಡಬ್ಯಾಡ. ಇಲ್ಲಿಗಂತೂ ಬಂದ್ಯಲ್ಲ. ಶಿವ ಕೊಟ್ಟದ್ದನ್ನ ಹಡದು ಹೊರೀ ಇಳಿಸಿಕೋ. ನಾಯೆಲ್ಲ ನೋಡಿಕೊಂತೀನಿ. ನನಗರ ಯಾರದಾರ? ನೀನ ನನ್ ಮಗಳು ಅಂತ ತಿಳಕೊಂತೀನಿ. ನೀ ಅಳಬ್ಯಾಡ.’ ಅಂದ ಚಿಗವ್ವನ ಮಾತು ಕೇಳಿ ಪಾರವ್ವಗ ಸಮಾದಾನಾತು.
ಮುಂದೆ ಕೆಲವು ದಿನಗಳ ನಂತರ ಪಾರವ್ವಗ ಗಂಡು ಕೂಸು ಹುಟ್ಟಿತು. ಆದರೆ ಬಾಣಂತಿ ರೋಗ ಸೇರಿಕೊಂಡು ಮ್ಯಾಲೆ ಏಳರಾರದಷ್ಟು ನಿಶ್ಶಕ್ತಿ ಆಯಿತು.
‘ಚಿಗವ್ವ, ನಾಯೇನ್ ಬಾಳ ದಿನ ಬದಕಾಕಿಲ್ಲ ಅನಸ್ತೈತಿ. ಯಾರ್ನಾರ ಡಂಬಳಕ್ಕ ಕಳಿಸಿ ಅವರಿಗೆ ಸುದ್ದಿ ಕಳಿಸಿಬಿಡು’ ಅಂದಳು.
ಒಂದಿನ ಇದ್ದಕ್ಕಿದ್ದ೦ತೆ ಒಬ್ಬಾತ ಕಪ್ಪತ್ತಪ್ಪನ ಮನೀಗೆ ಬಂದ.
‘ಯಾರಪ್ಪ ನೀನು?’ ಎಂದು ಕೇಳಿದ್ದಕ್ಕೆ ಅವನು
‘ನಾ ಬೂದ್ಯಾಳದಿಂದ ಬಂದೀನಿ. ಪಾರವ್ವ ತನ್ ಚಿಗವ್ವನ ಮನ್ಯಾಗದಾಳ. ‘ಗಂಡು ಕೂಸು ಹುಟ್ಟೇತಿ. ಆದ್ರ ಜಡ್ಡು ಒಲವಾಗೇತಿ. ನೀವು ನೋಡಾಕ ಬರಬೇಕು ಅಂತ ಹೇಳಿ ಕಳಿಸ್ಯಾಳ’ ಅಂದ.
ಈ ಸುದ್ದಿ ಕೇಳಿ ಕಪ್ಪತ್ತಪ್ಪ ಮತ್ತು ಬಸವ್ವ ತರಾತುರಿಯಿಂದ ಬೂದ್ಯಾಳಕ್ಕೆ ಹೋದರು. ಅಲ್ಲಿ ಪಾರವ್ವನ ಸ್ಥಿತಿ ನೋಡಿ ಇಬ್ಬರ ಕಣ್ಣಾಗೂ ನೀರು ಬಂತು.
‘ನಿನ್ ನೋಡಬೇಕಂತ ಡೋಣಿಗೆ ಹೋಗಿದ್ದೆ. ನೀ ಹೇಳ್ದ ಕೇಳ್ದ ಊರು ಬಿಟ್ಟು ಹೋಗಿದ್ದಿ.’ ಅಂದ ಕಪ್ಪತ್ತಪ್ಪನ ಮಾತು ಕೇಳಿ ಪಾರವ್ವ
‘ನಾ ಅಲ್ಲೇ ಇದ್ದಿದ್ರ ನನ್ ಮಾನ ಹೋಕ್ಕಿತ್ತು. ನಿಮ್ಮ ಮಾನಾನೂ ಕಳದಾ೦ಗ ಆಕ್ಕಿತ್ತು ಅಂತ ಆ ಊರು ಬಿಟ್ಟೆ.’
‘ಈಗ ನಿನ್ ನೋಡಾಕಂತ ನನ್ ಹೇಣ್ತೀನೂ ಬಂದಾಳ’
ಪಾರವ್ವ ಬಸವ್ವನನ್ನು ನೋಡಿ ಆಕೆಯ ಕೈ ಹಿಡಕೊಂಡು ದೈನಾಸ ಪಟ್ಟು
‘ನಾಯೇನ್ ಇನ್ನ ಬದಕಾಂಗಿಲ್ಲ. ಈ ಕೂಸು ಇನ್‌ಮ್ಯಾಲೆ ನಿಂದ. ಇದನ್ನ ಜ್ವಾಕಿಲೆ ನೋಡಿಕೋ. ಅವರು ನನ್ ಪಾಲಿನ್ ದೇವರು. ನಾ ಸೂಳಿ ಅಲ್ಲ. ನನ್ ಮಗ ಸೂಳೀಮಗ ಅಲ್ಲ. ಹಂಗ್ಯಾರೂ ಅನದಂಗ ನೋಡಿಕೋ. ಇದೊಂದ್ ಮಾತ್ನ ನಡೆಸಿ ಕೊಡು’ ಅಂತ ಕೈಮುಗಿದು ಕೇಳಿಕೊಂಡು ಪಾರವ್ವ ಕೂಸನ್ನು ಬಸವ್ವನ ಉಡಿಯಾಗ ಹಾಕಿದಳು.
‘ನನಗ ಮಗನ್ನ ಕೊಟ್ಟು ಈ ಜನ್ಮದಾಗ ತೀರಸಾಕ ಆಗದಂತಾ ಉಪಕಾರಾ ಮಾಡೀದಿ. ಆಗಲೆವಾ, ನಿನ್ ಮಾತು ನಡಿಸಿ ಕೊಡ್ತೀನಿ’ ಅಂತ ಬಸವ್ವ ಮಾತು ಕೊಟ್ಟ ಕೂಡಲೇ ಪಾರವ್ವನ ಕಣ್ಣು ತೇಲಿ ಬಂದು ಕೊನೆಯುಸಿರೆಳೆದಳು.
ಬಸವ್ವ ಕೂಸನ್ನು ಕರಕೊಂಡು ಡಂಬಳಕ್ಕೆ ಬಂದಳು. ಅದಕ್ಕೆ ಹೊಯ್ ಹಾಲು ಹಾಕಿ ಜೋಪಾನ ಮಾಡಿದಳು. ಈಶಪ್ಪ ಅಂತ ಹೆಸರಿಟ್ಟು ಮುದ್ದಿನಿಂದ ಬೆಳೆಸಿದಳು.
ಮಗನ ನೆನಪಾದ ಕೂಡಲೇ ಕಪ್ಪತ್ತಪ್ಪ ಎಲ್ಲಿದ್ದರೂ ಓಡಿ ಬಂದುಬಿಡ್ತಿದ್ದ. ಅಜ್ಜ ಅಜ್ಜಿಯಂತೂ ಕೂಸಿನ್ನ ಕೆಳಗ ಬಿಡ್ತಿದ್ದಿಲ್ಲ. ಕೂಸು ಬಂದಾಗಿನಿಂದ ಮನ್ಯಾಗ ಸಂತೋಷ ತುಂಬಿ ತುಳುಕುತ್ತಿತ್ತು.
‘ಬಸವ್ವ ನೀನ ಹ್ವಾರೇವು ಎಲ್ಲ ನೋಡಿಕೋ. ನಾ ಮಮ್ಮಗನ್ನ ಎತ್ತಿಕೊಂಡು ಕುಂತುಬಿಡ್ತೀನಿ’ ಅಂತ ಅಜ್ಜಿ ಅನ್ನುತ್ತಿದ್ದಳು.
ಹೀಗೆ ಹಿಂದಿನ ಕಥೆಯನ್ನು ನೆನಪು ಮಾಡಿಕೊಳ್ಳುತ್ತ ಬಸವ್ವ ಅದೆಷ್ಟು ಹೊತ್ತು ಕುಳಿತಿದ್ದಳೋ? ಸೊಸೆ ಬಂದು ‘ಬಾರಬೇ ಯತ್ತಿ ಉಣ್ಣಾಕ’ ಎಂದು ಕರೆದಾಗಲೇ ಎಚ್ಚರ!
‘ಯಾಕಬೇ ಯತ್ತಿ ಕಣ್ಣಾಗ ನೀರು ಬಂದಾವು?’
‘ಏನಿಲ್ಲವ್ವಾ ನಡಿ. ಹಿಂದಲದೆಲ್ಲ ನೆಪ್ಪಾಗಿತ್ತು……ಮದ್ಯಾನಕ್ಕ ಓಟು ಅನ್ನ ಬಸ್ತು ಹುಳಪಲ್ಯೇವು ಮಾಡು.’
‘ಯತ್ತಿ, ಗಡಾನ ಹಳ್ಳಕ್ಕ ಹೋಗಿ ಎಳ್ಡು ಅರಿಬಿ ಸೆಳಕೊಂಡು ಬಂದು ಅಡಿಗೀ ಮಾಡ್ತೀನಿ.’
‘ಹೂಂನವಾ’ ಅಂತ ಬಸವ್ವ ಮಮ್ಮಕ್ಕಳನ್ನು ಕರೆದುಕೊಂಡು ಅಂಗಳದಾಗ ಮೆಂತೆ ಪಲ್ಲೇವು ಬಿಡಿಸಿಕೊಂತ ಕು೦ತಳು.
ಆಟೊತ್ತಿಗೆ ಎದುರು ಮನೀ ಬರಮವ್ವ ಬ೦ದು ಅದು ಇದು ಮಾತಾಡ್ತಾ
‘ನೀನು ಪುಣ್ಯ ಮಾಡೀದಿ ಬಸಕ್ಕ. ಎಂಥಾ ಬಂಗಾರದಂಥಾ ಸೊಸಿ ಸಿಕ್ಕಾಳ! ನನ್ನ ಸೊಸೀನೂ ಅದಾಳ. ಒಂದಿನಾನರ ಕರದು ಉಣ್ಣಾಕ್ ನೀಡಿಲ್ಲ’ ಅಂದಳು.
‘ಹೌದವ್ವ. ದೇವರು ಅದೊಂದರಾಗರ ಆಸೇವು ಇಟ್ಟಾನ. ಇಲ್ಲಾ೦ದರ ಈಟೊತ್ತಿಗೆ ನಾನೂ ನನ್ನ ಗಂಡನ ಹಿಂದನ ಹೋಗಬೇಕಾಗಿತ್ತು.’
‘ಇರಲಿ ಬಿಡವ್ವ. ನಮ್ ಕೈಯಾಗರ ಏನೈತಿ? ಶಿವ ಕೊಟ್ಟದ್ದನ್ನ ಬೋಗಸಾಕ ಬೇಕು.’ ಎಂದು ಬರಮವ್ವ ಮಾತಾಡುತ್ತ ಕುಳಿತಿದ್ದಾಗ ಮಲ್ಲವ್ವ ಹಳ್ಳದಿಂದ ಬಂದು ಅರಿಬೀನೆಲ್ಲ ಹಗ್ಗದ ಮ್ಯಾಲೆ ಹರವಿ
‘ಹೊತ್ತು ನೆತ್ತೀಮ್ಯಾಗ ಬಂತು. ಗಡಾನ ಅಡಿಗಿ ಮಾಡತೀನಿ.’ ಅಂತ ಒಳಗೆ ಹೋದಳು.
ಬರಮವ್ವ ಎದ್ದು ಮನೆಗೆ ಹೋದ ಮ್ಯಾಲೆ ಬಸವ್ವ ಒಳಗೆ ಬಂದು
‘ಮಲ್ಲವ್ವ, ಅಡಿಗಿ ಮಾಡೋದು ಮುಗದಿದ್ರ ಅನ್ನದ್ ತಪ್ಪಲಿಗೂ ಹುಳಪಲ್ಯದ ಗಡಿಗ್ಗೂ ಓಟು ವಿಬೂತಿ ಹಚ್ಚಿ ಶಿವನೇ ಅಂತ ಓಟು ಕುಂತಕೋ ಬಾ. ಮುಂಜೇಲಿಂದ ಒಂದಸವನ ಹ್ವಾರೇವು. ಪಾಪ. ಈಗ್ ಅಂವ ಹೊಲದಿಂದ ಬಂದ ಅಂದರ ಅಂವನ್ ಕಾಟ ಸುರುವ, ನಿನ್ ಸುತ್ತ.’ ಅಂದದ್ದಕ್ಕೆ ಮಲ್ಲವ್ವನ ಮುಖ ನಾಚಿಕೆಯಿಂದ ಕೆಂಪೇರಿತು.
‘ನಾಳೆ ಹ್ಯಾಗೂ ಸಣ್ಣ ಸ್ವಾಮಾರ. ಗಳೇವು ಹೂಡಾಂಗಿಲ್ಲ. ಓಟು ಹೊತ್ತಾಗಿ ಎದ್ದರೂ ನಡೀತೈತಿ. ಮುಂಜಾಲೆದ್ದು ರೊಟ್ಟೀ ಮಾಡೋದೂ ಇಲ್ಲ. ಮಂಡಾಳ ಒಗ್ಗಣಿ ಮಾಡಿ ಮದ್ಯಾನಕ ಗೋದೀಹುಗ್ಗೀ ಮಾಡಿದ್ರಾತು.’ ಅಂತ ಬಸವ್ವ ಮರುದಿನದ ಕೆಲಸವನ್ನೂ ಹೇಳಿದಳು.
ಈಶಪ್ಪ ಹೊಲದಿಂದ ಬಂದು ಜಳಕ ಮಾಡಿ ಅಡಿಗಿ ಮನೀಗೆ ಬಂದ.
ಮಲ್ಲವ್ವ ಮಣಿ ಹಾಕಿ ಅಡ್ಡಣಿಗಿ ಇಟ್ಟು, ಕಂಚಿನ ಗಂಗಾಳದಾಗ ಉಣ್ಣಾಕ ನೀಡಿದಳು.
ಉಂಡು ಪಡಸಾಲೀ ಕಟ್ಟೆಯ ಮೇಲೆ ಬಂದು ಕು೦ತು ಎರಡು ಹೋಳು ಅಡಕೀ ಬಾಯೊಳಗ ಒಕ್ಕೊಂಡು ಯಲೀ ತುಂಬು ತಗದು ಅದಕ ಸುಣ್ಣಾ ಸವರಿ ದವಡಿಯೊಳಗೆ ಇಡುತ್ತ ಈಶಪ್ಪ
‘ಯಾಕಬೇ ಯವ್ವ, ನಿನ್ನೀಯಿಂದ ಒಂತರಾ ಸುಂದ್ ಅದೀಯಲ್ಲ. ಮೈಯಾಗ ಅರಾಮೈತೋ ಇಲ್ಲೋ?’ ಅಂತ ಕೇಳಿದ.
‘ಏನ್ ಹೇಳ್ಲೆಪ್ಪ. ನೀ ಮಕ್ಕಳಿಗೆ ಬೈಯಾದ್ ಕೇಳಿ ನನಗ ತ್ರಾಸಾಗೇತಿ. ಅದೂ ಸೊಳೇಮಕ್ಕಳಾ ಅಂತ ಬೈಬ್ಯಾಡಪಾ. ಅದ ಮಾತಿಗೆ ಜಗಳ ಆಗಿ ನಿಮ್ಮಪ್ಪನ್ನ ಕಳಕೊಂಡೆ.’
‘ಹೌದಾ, ಅದೇನ್ ಸುದ್ದಿ, ಹೇಳಬೇ.’
‘ಏನ್ ಹೇಳ್ಲೆಪ್ಪ. ಈಟು ದಿವ್ಸ ಮನಸ್ಸಿನ್ಯಾಗಿದ್ದ ಮಾತ್ನ ಇವತ್ತು ಹೇಳಬೇಕಾಗೇತಿ. ನೀ ಏನೂ ಬ್ಯಾಸರಾ ಮಾಡಿಕೋಬಾರದು. ಮನಸ್ಸು ಬದಲಾಯಿಸಬಾರದು. ಮೊದಲಿನಂಗ ನಡಕೋಬೇಕು. ಅಂದ್ರ ಹೇಳ್ತಿನಿ.’
‘ಇಲ್ಲವ್ವ, ಹೇಳು. ದೇವರಂತಾಕಿ ನಿನ್ ಮನಸ್ ನೋಯ್ಸಿ ನಾ ಯಾವ್ ನರಕಕ್ಕ ಹೋಗಲಿ? ಅಪ್ಪನ್ ನೆಪ್ಪು ಸೈತ ನನಗಿಲ್ಲ. ನೀನ ಎಲ್ಲಾ ಆಗಿ ನನ್ನ ಈಟು ದೊಡ್ಡಾ೦ವನ್ ಮಾಡೀದಿ. ಅಪ್ಪ ಹ್ಯಾ೦ಗಿದ್ನಬೇ?’
‘ಏನ್ ಹೇಳ್ಲೆಪ್ಪ, ಅಂತಾತನ್ನ ಕಳಕೊಂಡು ನಾಯಿನ್ನೂ ಬದಕೀನಲ್ಲ ಅನಸ್ತೈತಿ. ಎಂದಾರ ಒಂದಿನ ಈ ಮಾತು ನಿನಗ ತಿಳಿಯಾಕ ಬೇಕು. ಇವತ್ತ ಹೇಳ್ತಿನಿ. ನನಗ ಮದಿವ್ಯಾಗಿ ಹತ್ತು ವರ್ಸಾದ್ರೂ ಮಕ್ಕಳಾಗಲಿಲ್ಲ. ನಿಮ್ಮ ಅಪ್ಪನಿಂದ ಪಾರವ್ವ ಅನ್ನಾಕೀ ಹೊಟ್ಟ್ಯಾಗ ನೀ ಹುಟ್ಟಿದಿ. ಹುಟ್ಟಿದ ಎಲ್ಡು ತಿಂಗ್ಳಿಗೇ ನನ್ ಉಡಿಯಾಗ ಹಾಕಿ ನಿಮ್ಮ ಅವ್ವ ಕಣ್ಣುಮುಚ್ಚಿದ್ಲು. ಅವತ್ನಿಂದ ನನ್ ಕಣ್ ರೆಪ್ಪೀಹಾಂಗ ನಿನ್ನ ಸಾಕಿದೆ. ಆಕೀ ಉಪಕಾರಾನ ಎ೦ದಿಗೂ ಮರಿಯಾಂಗಿಲ್ಲ.’ ಬಸವ್ವ ಹೇಳಿದಳು.
‘ಹಂಗಾರ ನಾ ನಿನ್ ಹೊಟ್ಟ್ಯಾಗ ಹುಟ್ಟಿಲ್ಲನ್ನು.’
‘ಇಲ್ಲಪಾ. ನೀನು ನಾ ಹಡದ ಮಗ ಅಲ್ಲ, ಪಡದ ಮಗ.’
‘ಹೊಟ್ಟ್ಯಾಗ ಹುಟ್ಟಿದ ಮಕ್ಕಳ್ನರ ಈಟೊಂದು ಪ್ರೀತೀಲೆ ನೋಡಿಕೆಂತಿದ್ದರೋ ಇಲ್ಲೋ. ನೀ ಹಂಗ ನೋಡಿಕೆಂಡೀದಿ. ಅದಕ ನನಗ ಅದರ ಅರುವ ಆಗಿಲ್ಲ, ನೋಡು.’ ಈಶಪ್ಪನಿಗೆ ಅವ್ವನ ಬಗ್ಗೆ ಪ್ರೀತಿ ಇನ್ನೂ ಹೆಚ್ಚಾಯಿತು.
‘ಹೂನಪ್ಪ, ಅದಕ್ಕ ನಾ ಹೇಳಾದು. ನೀ ಮಕ್ಕಳಿಗೆ ಬೈಬ್ಯಾಡ. ಇವತ್ ಮುಂಜಾಲೆ ಸೊಳೇಮಕ್ಕಳಾ ಅಂತ ನೀ ಬೈದದ್ದಕ್ಕ ನನ್ ಹೊಟ್ಟ್ಯಾಗ ಕಶಿವಿಶಿ ಆಗಿ ಹಿಂದಲದೆಲ್ಲ ನೆಪ್ಪಾತು. ಈ ಮಾತಿಗೇ ನಾ ಗಂಡನ್ನ ಕಳಕೊಂಡೆ. ಇವತ್ತಿಗೆ ಇಪ್ಪತ್ತೈದು ವರ್ಸದ ಹಿಂದಿನ ಮಾತು.
‘ನೀನು ಆಗ ಮೂರು ತಿಂಗಳ ಕೂಸು. ಮನೀ ದೇವರಿಗೆ ಹಣ್ಣು ಕಾಯಿ ಮಾಡಿಸಿಕೊಂಡು ಬರಾಕ೦ತ ನಿನ್ ಕರಕೊಂಡು ಮನೀ ಮ೦ದೆಲ್ಲ ಕಪ್ಪತ್ತ ಗುಡ್ಡಕ್ಕ ಹೋಗಿ ಪೂಜೀ ಮಾಡಿಸಿಕೊಂಡ್ ಬಂದ್ವಿ.
‘ಬಂದ್ ಗಳಿಗ್ಗೆ ನಿನ್ ದೊಡ್ಡಪ್ಪ ವಿರುಪಾಕ್ಷಪ್ಪ ಮನೀಗೆ ಬಂದು ‘ನನಗ ಇಬ್ರು ಗಣಮಕ್ಕಳದಾರ. ಅದರಾಗ ಒಬ್ಬನ್ನ ದತ್ತಕ ಮಾಡಿಕೊಂಡಿದ್ರ ಅಗ್ತಿದ್ದಿಲ್ಲ? ಏನಪಾ ಯಪ್ಪ. ಈಟು ವಯಸ್ಸಾಗೇತಿ. ನಿನಗರ ತಿಳೀಬಾರದ? ನಮ್ ಆಸ್ತಿ ನಮ್ ಮಮ್ಮಕ್ಕಳಿಗೇ ಆಗಬೇಕು ಅಂತ. ಯಾವದೋ ಸೂಳೀಮಗನ್ನ ತಂದು ಆಸ್ತೀನ ಅಂವಗ ಮಾಡಕ ಹತ್ತೀರೇನು?’ ಅಂತ ಕೇಳಿದ.
ಅದಕ್ಕ ನಿಮ್ಮಜ್ಜ ‘ನೀ ಹೊಲಸು ಮಾತು ಆಡಬ್ಯಾಡ. ಕಪ್ಪತ್ತಪ್ಪ ಯಾರದರ ಮಗನ್ನ ತಂದಿಲ್ಲ. ತನಗ ಹುಟ್ಟಿದ ಮಗನ್ನ ತಂದು ಸಾಕ್ಯಾನ. ಅದನ್ನ ಕೇಳಾಕ ನೀ ಯಾರು? ನಿನ್ ಮಕ್ಕಳು ಬರೇ ಕುಡುಕರು. ಅವ್ರು ನಿನ್ ನೋಡಿಕೊಂಡರ ಸಾಕು. ಸೊಸಿ ಅಂತ ಬಂದಾಕಿ ಮೂರು ದಿನಾನರೆ ನಮ್ಮನ್ನ ಚೆಂದಾಗಿ ನೋಡಿಕೊಳ್ಳಲಿಲ್ಲ. ಈಗ ನಾವು ಇವನ ಹಂತ್ಯಾಕ ಸುಕವಾಗದೀವಿ. ಸುಮ್ಕ ಮನೀಗೆ ಹೋಗು. ಕಾಲ್ಕೆದರಿ ಜಗಳ ತಗೀಬ್ಯಾಡ. ಕಪ್ಪತ್ತಪ್ಪ ದೇವರಂತಾ ಮನಶ್ಯಾ.’ ಅಂತ ನಿಮ್ಮಜ್ಜ ಅಂದದಕ ನಿನ್ ದೊಡ್ಡಪ್ಪ
‘ಒಂದೂ ಮಾತಾಡದ ಹ್ಯಾಂಗ್ ಕುಂತಾನ್ ನೋಡು. ಹೆಣಗ ಸೊಳೇಮಗ. ಇಂವನ್ನ ನೋಡಿಕೊಂತೀನಿ ಒಂದು ಕೈನ.’ ಅಂದ.
‘ಅಲ್ಲೀ ಮಟಾ ಸುಮ್ಕ ಕುಂತಿದ್ದ ನಿಮ್ಮಪ್ಪ ಈ ಮಾತು ಕೇಳಿ ಅದೆಲ್ಲಿತ್ತೊ ರೋಸ, ಕೆರಳಿ ಕೆಂಡಾಗಿ ಈರಬದ್ರನ ಅವತಾರಾನ ತಾಳಿದ. ನಿಮ್ಮಪ್ಪನ ಸಿಟ್ನ ನಾ ಅವತ್ತ ನೋಡಿದೆ. ಎದ್ದು ಹೋದವನ
‘ಏನೋ, ಇದೊಂದು ಬೈಗಳಾನ ಯಾರರೇ ಬೈದರೂ ನಾ ತಡಕಳ್ಳಾಕಿಲ್ಲ. ಅಂತಾದ್ದು ನನಗ ಈ ಬೈಗಳಾ ಬೈತೀಯಲ್ಲ’ ಅಂತ ಅಣ್ಣನ ಕುತಿಗ್ಗೆ ಕೈಹಾಕಿ ನಾಕು ಏಟು ಕೊಟ್ಟ ಬಿಟ್ಟ. ಇಬ್ರೂ ಗುದ್ದ್ಯಾಡಾಕ ಹತ್ತಿದ್ರು. ಮ೦ದಿ ಬಂದು ಜಗಳ ಹರದ್ರು. ‘ಹ್ಯಾ೦ಗ್ ಬಾಳ್ತೀಯೋ ನಾನೂ ನೋಡ್ತೀನಿ.’ ಅಂತ ನಿಮ್ ದೊಡ್ಡಪ್ಪ ಬುಸಗುಟ್ತಾನ ಹ್ವಾದ.

‘ಎಲ್ಡು ವರ್ಸ ಕಳೀತು. ಇನ್ನೇನು ಮರತರು ಬಿಡು ಅಂತ ಸುಮ್ಕಾದ್ವಿ.

‘ನಿನಗ ಆಗ ಎರಡು ವರ್ಸ. ನಿಮ್ಮಪ್ಪ ಒಂದಿನ ಮೂರೂಚಂಜೀ ಹೊತ್ತಿನ್ಯಾಗ ಕುದರೀ ಮ್ಯಾಗ ಬರಾಕ ಹತ್ತಿದ್ದನಂತ. ನಿಮ್ಮ ದೊಡ್ಡಪ್ಪ ಮೂರು ನಾಕು ಮ೦ದಿನ್ನ ಕರಕೊಂಡು ಊರ ಹೊರಗ ಕೌನೆಳ್ಳಿನ್ಯಾಗ ಕಂಟೀ ಮರೀಗೆ ಕುಂತ್‌ಗೊಂಡಿದ್ದನಂತ. ನಿಮ್ಮಪ್ಪ ಅಲ್ಲಿಗೆ ಬಂದೇಟಿಗೇ ಅವನ್ನ ಅಡ್ಡ ಹಾಕಿ ಹೊಡದು ಕೊಂದ ಹಾಕಿ ಬಿಟ್ನಪ್ಪಾ. ಆಮ್ಯಾಕ ನಮಗ ಸುದ್ದಿ ತೀಳಿತು. ನಾವು ಅಲ್ಲಿಗೆ ಹೋಗೋ ಹೊತ್ತಿಗೆ ಎಲ್ಲಾ ಮುಗದ ಹೋಗಿತ್ತು. ನಿಮ್ಮಪ್ಪನ್ನ ಕೊಂದರೂ ಅವರಿಗೆ ಆಸ್ತಿಯೆನೂ ಸಿಗಲಿಲ್ಲ. ಬರೀ ಸೇಡು ತೀರಿಸಿಕೊಡ್ರು ಅಟ.
ನಿಮ್ಮಜ್ಜ ‘ನನ್ನ ಮಗ ಅಂತೂ ಸತ್ತು ಹ್ವಾದ. ನನ್ ಸೊಸೀಗೂ ಮಮ್ಮಗ್ಗೂ ಇವನ ಕಾಟ ತಪ್ಪಿದ್ದಲ್ಲ’ ಅಂತ ಆಸ್ತಿಯೆಲ್ಲ ನಿನ್ನ ಹೆಸರಿಗೆ ಬರದು ನಿನ್ನ ಇಪ್ಪತ್ತನೇ ವಯಸ್ಸಿಗೆ ಬರೋ ಹಾಂಗ ಮಾಡಿ ಇಟ್ಟ. ಮಗನ ಕೊರಗಿನ್ಯಾಗ ನಿಮ್ಮಜ್ಜ ಅಮ್ಮ ತೀರಿಕೊ೦ಡ್ರು. ನಾ ದೇವರ್ನ ಕಂಡಿಲ್ಲ. ಆದರ ಆ ಮೂರು ಮಂದ್ಯಾಗ ದೇವರ್ನ ಕಂಡೆ. ಅವರಂತವರು ಏಸು ಜನ್ಮಾ ಎತ್ತಿ ಬಂದರೂ ಸಿಗಾಣಿಲ್ಲ.’ ಎಂದು ಹೇಳುತ್ತಿರುವಾಗ ಬಸವ್ವನ ಕಣ್ಣೀರು ಕೋಡಿಯಾಗಿ ಹರಿಯಿತು.

‘ಹೋಗಲಿ ಬಿಡವ್ವ. ನೀ ಅಳಬ್ಯಾಡ. ಯಾರ್ಯಾರ ಹಣ್ಯಾಗ ಏಟೇಟು ಬರದಿರ್ತೈತೋ ಅಟ ಸಿಗತೈತಿ.’ ಅಂತ ಈಶಪ್ಪ ಸಮಾಧಾನ ಹೇಳಿದ.

‘ಅದಕಪಾ. ನಾ ಹೇಳೋದೀಟ. ಎಲ್ಲಾರಿಗೂ ಮಕ್ಕಳ ಬಾಗ್ಯೇವು ಸಿಗೋದು ಕಷ್ಟ. ದೇವರು ನಿನಗ ಬಂಗರದಂತಾ ಎಲ್ಡು ಗಣಮಕ್ಕಳ್ನ ಕೊಟ್ಟಾನ. ಆ ಬೈಗಳಾ ಮಾತ್ರ ಬೈಯದ ಚೆಂದಾಗಿ ನೋಡಿಕೋ. ನಿಮ್ಮಪ್ಪನ ಹಾಂಗ ಬಾಳಿ ನಾಕು ಮಂದೀ ಕೈಲೆ ಸೈ ಅನಿಸಿಕೋ. ಬರೋ ಸ್ವಾಮಾರ ಕಡೀ ಸ್ವಾಮಾರ. ಕಪ್ಪತ್ತ ಮಲ್ಲಣ್ಣಗ ಹಣ್ಣು ಕಾಯಿ ಮಾಡಿಸಿಕೊಂಡ್ ಬರೋಣ’ ಅಂದಳು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.