ಪುಟ್ಟಮ್ಮತ್ತೆ ಮತ್ತು ಮೊಮ್ಮಕ್ಕಳು

ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ ಎದ್ದಿದ್ದರೆ ನಾಲ್ಕಕ್ಕೇ ಎದ್ದೆ ಎನ್ನುವವರು.

ಅವರ ಮುಖ್ಯ ಠಿಕಾಣಿ ರಂಗಪ್ಪಯ್ಯನ ಮನೆಯಾದರೂ ತನಗೆ ಆಯಿತೆನಿಸಿದವರ ಮನೆಗೆಲಸಕ್ಕೆ ಕೂಡ ಅವರು ಕರೆದರೆಂದರೆ ಹೋಗದಿರುವವರಲ್ಲ. ಹೊಕ್ಕ ಯಾರ ಮನೆಯೂ ಅವರಿಗೆ ಯಾರದೋ ಮನೆಯಲ್ಲ, “ನಮ್ಮ ಶಾರದೆಯ ಮನೆ” “ನಮ್ಮ ಕಲ್ಯಾಣಿ ಮನೆ” ಹೀಗೆ ಎಲ್ಲವೂ ಅವರದೇ. ಆದರೆ ಎಲ್ಲಿಗೇ ಹೋಗಲಿ, ರಾತ್ರಿ ಮಾತ್ರ ತನ್ನ ಮನೆಗೇ ವಾಪಾಸು! ಒಂದು ತೆಂಗಿನಕಾಯಿ ಬಿಟ್ಟು ಎರಡು ಕಾಯಿ ಒಡೆಯಿತೇ, ಪುಟ್ಟಮ್ಮತ್ತೆಗೆ ಕರೆ ಹೋಯಿತಂದೇ ಲೆಕ್ಕ. “ಯೇನಾಯ್ಕ್ ಹೇಳ್!” ಎನ್ನುತ್ತ ಸೀರೆಯನ್ನು ಅವರ ಕಾಲದ ರೀತಿಯಂತೆ ಹೊರನಿರಿಗೆ ಹಾಕಿಯುಡುವ ಪುಟ್ಟಮ್ಮತ್ತೆ, ನಿರಿಗೆಗೆ ಬಿಗಿದ ಗಂಟನ್ನೊಮ್ಮೆ ಕತ್ತಲೆಯ ಮೂಲೆಯಲ್ಲಿ ಬಿಚ್ಚಿ ಪುನಃ ಬಿಗಿದು ಗಟ್ಟಿಯಾಗಿ ಕಟ್ಟಿ ಅವಸರವಸರದಿಂದ ರವಕೆ ಕೊಳಿಸಿಕೊಳ್ಳಲು ತೊಡಗುವಾಗ ಇತ್ತೀಚೆಗೆ ರವಕೆಯ ‘ಗುಬ್ಬಿ’ ಹಾಕಿಕೊಳ್ಳಲೂ ಅಧ್ವಾನವಾಗುತ್ತಿದೆ. “ಕುಡ್ತ ಹೊಲ್ದದ್ದು ಆ ಮೀನಾಶ್ಚಿ ಹೆಣ್ಣ್. ಒಂದೋ ಲಾಡಿ ಇಡ್. ಇಲ್ಲ, ಶರ್ಟಿನ್ ಗುಬ್ಬಿ ಇಡ್ ಅಂದ್ರೆ ಹುಕ್ಸ್ ಇಡತ್ತಪ್ಪ!” ಎಂದು ಊರಿನಲ್ಲಿರುವ ಏಕಮಾತ್ರ ಹೊಲಿಗೆಯಾಕೆ ಮೀನಾಕ್ಷಿಗೆ ಬೈಯ್ದು “ಮಗ, ಒಂಚೂರು ಗುಬ್ಬಿ ಹಾಕು ಕಾಂಬ. ನಂಗ್ ಇನ್ನಿನ್ ಇದೆಲ್ಲ ಆತ್ತನಾ?” ಎಂದು ಒಳಕೋಣೆಯಲ್ಲಿ ಎದೆ ತೆರೆದು ನಿಲ್ಲುತ್ತಾರೆ. ಆಗ ಎಲ್ಲಾದರೂ ರಂಗಪ್ಪಯ್ಯನ ಮೊಮ್ಮಗ ಗುಂಡ್ಮಣಿ ಬಂದನೇ, ಎಂಜಿಲು ಸೀರಿಸುತ್ತ ನಕ್ಕಾನು, “ಪುತ್ತಮ್ಮತ್ತೆ, ನಿನ್ನ ಅಮ್ಮಣಿಯೆಲ್ಲಾ ನಂಗೆ ಕಾಂತೊ” ಎಂದು ಕೈಯನ್ನು ಕಣ್ಣಿಗಡ್ಡ ಇಟ್ಟುಕೊಂಡೇ ಚಡಿಯಲ್ಲಿ ಕಂಡಾನು. “ಮಾ ಸಾಭ್ಯಸ್ಥ ಮಣಿ ನೀನ್! ಹೆಚ್ಚಿಗೆ ಹೈಲ ಮಾಡ್ಬೇಡ. ನಿನ್ ತುಮಣಿಕಾಯಿ ತೊಳೆದು ಮೀಸಿದ್ ಯಾರಂತೆಳಿ ಮಾಡ್ದೆ?” ಎಂದರೆ ಸಾಕು. ಗುಂಡ್ಮಣಿ ಜಾರುತ್ತಿದ್ದ ಚಡ್ಡಿಯನ್ನು ಎಳೆದುಕೊಳ್ಳುತ್ತಾ ಹೊಸಲು ಹಾರಿ ಅಲ್ಲಿಂದ ಕುಟ್ಟಿಕೀಸಿಯಾನು.

ಈಗ ರಂಗಪ್ಪಯ್ಯನ ಮನೆಯಲ್ಲಿ ರಂಗಪ್ಪಯ್ಯನೂ ಇಲ್ಲ, ಅವರ ಹೆಂಡತಿಯೂ ಇಲ್ಲ. ಆದರೆ ರಂಗಪ್ಪಯ್ಯನ ಮಗನ ದರ್ಬಾರಿನಲ್ಲಿಯೂ ಪುಟ್ಟಮ್ಮತ್ತೆ ಮುಂಚಿನಂತೆಯೇ ಹೊಕ್ಕು ಹೊರಡುತ್ತಿದ್ದಾರೆ. ಮುಂಚಿನ ತ್ರಾಣವಿಲ್ಲ. “ಯಡ್ಡಷ್ಟ್ ದಿವ್ಸ ಬತ್ತೆ” ಎನ್ನುತ್ತಾರೆ. “ಯಡ್ಡಷ್ಟ್ ದಿವ್ಸ ಬಾರ್‍ದೆ ಇರ್‍ಬೇಡಿ” ಎಂದು ರಂಗಪ್ಪಯ್ಯನ ಸೊಸೆಯೂ ಹೇಳುತ್ತಾಳೆ.

ಪುಟ್ಟಮ್ಮತ್ತೆ ಯಾವ ಅತ್ತೆ? ಹೇಗೆ ಅತ್ತೆ? ಇರುವುದು ಸಂಬಂಧವಲ್ಲ ಬರೀ ಸಂಬಂಧದ ಮರೆ ಅಷ್ಟೇ. ಬಹುಶಃ ಯಾರೂ ತಲೆಕೆಡಿಸಿಕೊಳ್ಳದ ವಿಚಾರವದು. ಊರಿಗೊಬ್ಬ ಅತ್ತೆ ಪುಟ್ಟಮ್ಮತ್ತೆ ಅಂದರೆ ಸಾಕೇನೋ.

ಹೆಸರಿಗೆ ತಕ್ಕಂತೆ ಪುಟ್ಟಮ್ಮತ್ತೆ ಪುಟ್ಟದಾಗೇನೂ ಇಲ್ಲ. ದೊಡ್ಡ ಜೀವವೂ ಅಲ್ಲ. ಅವರ ಸಾಕಬ್ಬೆ ಅವರನ್ನು “ಹದವಾದ ಕಡಸು” ಎಂದು ಹೇಳಿದ್ದೂ ಇದೆ. ಕುಂಕುಮವಿಡುವಲ್ಲಿ ಒಂದು ಹಚ್ಚೆ. ಮುಂಗೈಯಲ್ಲಿ ತುಲಸೀಕಟ್ಟೆಯ ಹಚ್ಚೆ. ಬೆಳಗ್ಗೆ ಬಾವಿಯಿಂದ ಒಂದು ಚೊಂಬು ನೀರು ಎಳೆದು ತುಲಸೀಕಟ್ಟೆಗೆ ಸುತ್ತು ಬಂದು ಗಿಡಕ್ಕೆ ನೀರು ಸುರಿದು ಬೆರಳು ಜೋಡಿಸಿ – ಸೂರ್ಯ ಮೂಡಿರಲಿ ಇಲ್ಲದಿರಲಿ “ಸೂರ್ಯದರ್ಶನ” ಮಾಡಿದವರಿಗಿಂತಲೂ ಒಂದು ತೂಕ ಮೇಲಾಗಿಯೇ ಕೈ ಮುಗಿದರೆ, ಬೈಗಿನಲ್ಲಿ ದೇವಸ್ಥಾನಕ್ಕೆ ಹೋಗಿ ಮೂರು ಸುತ್ತು ಬಂದು ತುಲಸೀ ದಳವನ್ನು ಕಿವಿಗೆ ಸಿಕ್ಕಿಸಿಕೊಂಡು ಮನೆಗೆ ಬಂದವರೇ, ದೇವರ ಮುಂದೆ ಹಾಗೂ ತುಳಸೀಕಟ್ಟೆಗೆ ಎಷ್ಟು ಸಾಧ್ಯವೋ ಅಷ್ಟು ಒಟ್ಟು ಮಿಗಿಲೆ ಸಂಖ್ಯೆಯ ಸುತ್ತು ಹಾಕಿದರೆ, ಅವರ ದೇವತಾರ್ಚನೆ ಮುಗಿದಂತೆ.

ಬೇಸಿಗೆ ಬಂತೆಂದರೆ ಪುಟ್ಟಮ್ಮತ್ತೆ ಯಾರಿಗೆ ಬೇಡ? “ಪುಟ್ಟಮ್ಮತ್ತೆ ಇದ್ರಾ?” ಎಂದು ಕೇಳಿಕೊಂಡು ರಂಗಪ್ಪಯ್ಯನ ಮನೆಗೆ ಬರವವರಿಗೇನು ಕಡಿಮೆ ಇಲ್ಲ.

ಹೀಗೇ ಒಂದು ದಿನ ‘ದೋಣಿಮಂಡೆ’ ಆನಂದರಾಯರ ಹೆಂಡತಿ ಕಳಿಸಿದ ಜನ ಇವರನ್ನು ಕೇಳಿಕೊಂಡು ಬಂದಿತ್ತು. ಆ ಜನದ ನೆತ್ತಿಯನ್ನು ಓ ಅಷ್ಟು ದೂರದಿಂದ ಕಂಡದ್ದೇ ಜಗಲಿಯಲ್ಲಿ ಗುಂಡ್ಮಣಿಯೊಂದಿಗೆ ಅಬಲಕ ತಬಲಕ ಆಡುತ್ತಿದ್ದ ಪುಟ್ಟಮ್ಮತ್ತೆ ಚಟಕ್ಕನೆ ಒಳಗೋಡುತ್ತ “ಮಣಿ, ಯಾರೋ ಬತ್ತೊ ಈಗ. ನನ್ನನ್ನು ಕೇಣ್ಕಂಡ್. ಅವ್ರಿಲ್ಲೆ ಅಂತೆಳಿ ಹೇಳ್” – ಎಂದು ಅಲ್ಲೇ ಆಚೆಗಿದ್ದ ಅಕ್ಕಿ ಕೋಣೆ ಹೊಕ್ಕು ಬಾಗಿಲು ಹಾಕಿಕೊಂಡರು. ಬಾಗಿಲು ಮಾತ್ರ ಅಂಗಳಕ್ಕೆ ಕಾಣುವಂತೆಯೇ ಇತ್ತು.

ಬಂದ ಜನ “ಪುಟ್ಟಮ್ಮತ್ತಿ ಇದ್ರಾ?” – ಎನ್ನಲು “ಇಲ್ಲಪ್ಪ” – ಎಂದಿತು ಗುಂಡ್ಮಣಿ, ಹಿಡಿದು ಬಿಟ್ಟವರಂತೆ. “ಎಲ್ಲೀಗ್ ಹೋಯಿದ್ರ್?” ಎಂದರೆ ಉತ್ತರ ತಿಳಿಯದೆ ತನ್ನ ಕೈಗೆ ತಾನೇ ಅಬಲಕ ತಬಲಕ ಮಾಡಿಕೊಂಡಿತು. ಬೆಪ್ಪಣ್ಣನಂತೆ ಅಂಗಳ ನೋಡಿತು. ಅಕ್ಕಿಕೋಣೆ ಬಾಗಿಲು ನೋಡಿತು. ಮತ್ತೆ ಅಂಗಳ, ಮತ್ತೆ ಬಾಗಿಲು! ಬಂದವರು ತುಸು ವಾಸನೆ ಹಿಡಿದು “ಹ್ಹೇ! ಅಮ್ಮನ್ ಕರಿಯ” ಎಂದರು. ಅಮ್ಮನ್ನ ಕರೆದ ಗುಂಡ್ಮಣಿ ಅವಳ ಹಿಂದೆಯೇ ಬಂತು. “ಈ ಮಗುಯಂತ ಹೇಳತ್ತೇ? ಪುಟ್ಟಮ್ಮತ್ತಿ ಇಲ್ಲ ಅನ್ನತ್ತ್, ಕ್ವಾಣಿ ಬಾಗ್ಲ್ ಕಾಣತ್ತ್!”-

ಆಗ ರಂಗಪ್ಪಯ್ಯನ ಸೊಸೆ ಶೇಷಮ್ಮ ಅಕ್ಕಿ ಕೋಣೆಯ ಬಾಗಿಲು ನೋಡಿದಳು. ಅವಳಿಗೆ ಎಲ್ಲವೂ ಅಂದಾಜಾಯಿತು. ಪುಟ್ಟಮ್ಮತ್ತೆಯ ಈ ಶೀಲ ಎದೇ ಹೊಸದೇ? “ಯಂತ ಮಣ್ಯಾ, ಆ ಕ್ವಾಣಿಯೊಳ್ಗ್ ಹಂಯಿಂಸರ ಇಲ್ಲೆ ಅಂತೆಳಿ ಆಗ್ಳೆ ಹೇಳಿದ್ದಲ್ದ ನಾನ್? ಅದ್ಯಂತಾ ಹೆದ್ರಿಕಿ ಹಾಂಗಾರೆ? ಹೋಗ್ ಮೀಯುಕೆ. ನೀರ್ ತೋಡಿಟ್ ಯಾವ್ ಕಾಲ ಆಯ್ತ್!” – ಎಂದು ಬಾಯಿ ತೆರೆಯಲು ಹವಣಿಸುತ್ತುದ್ದ ಗುಂಡ್ಮಣಿಯನ್ನು ಅಲ್ಲೇ ಗಪ್ಪ ಮುಚ್ಚಿಸಿ ಅಕ್ಷರಶಃ ದೊಡಿ ಆಚೆ ಕಳಿಸಿದಳು. “ಹೌದ್ ಮಾರಾಯ್ರೆ, ಪುಟ್ಟಮ್ಮತ್ತಿ ಇಲ್ಲಪ್ಪ, ಬೆಳ್ಗಾಪುದ್ರೊಳ್ಗ್. ಎಲ್ಲೀಗ್ ಸವಾರಿ ಹೊರ್‌ಟ್ತೋ”

ಬಂದ ಜನ ಬೆಲ್ಲ ನೀರು ಕುಡಿದು ಆನಂದರಾಯರ ಹೆಂಡತಿ ಮುಟ್ಟು. ಮೂರು ದಿನ ಅಡಿಗೆ ಮಾಡಿ ಹಾಕುವವರಿಲ್ಲ. ಹಾಗಾಗಿ ಪುಟ್ಟಮ್ಮತ್ತೆಗೆ ಹೇಳಿ ಬಾ ಅಂತ ಕಳಿಸಿದರು – ಅಂತೆಲ್ಲ ವಿವರ ಹೇಳಿ ಬೆನ್ನು ತಿರುಗಿಸಿದ್ದೇ. ಶೇಷಮ್ಮ ಅಕ್ಕಿ ಕೋಣೆಯ ಹೊರಗೆ ನಿಂತು “ಹ್ವಾಯ್, ಜನ ಹೋಯ್ತೇ ಬನ್ನಿ ಹೊರ್‍ಗೆ” ಎನ್ನುತ್ತಾ ತಡೆಯದ ನಗುವಿನಲ್ಲಿ “ಅಲ್ಲ! ಹೊಕ್ಕಂಬುಕೆ ಬೇರೆ ತಾವ್ ಸಿಕ್ಕದ್ ಸಾಕ್ ನಿಮ್ಗೆ” ಎನ್ನಲು ಮೀಯಲು ಹೋದಂತೆ ಮಾಡಿ ಕದಲದಿದ್ದ ಗುಂಡ್ಮಣಿ ಬಾಯಿ ಕಳೆದು ನಿಂತೇ ಬಿಟ್ಟಿತು. “ಈ ಮಾಣಿನ್ ಕಟ್ಕಂಡ್ರ್ ಹೌದಾ?” ಎಂದು ನಕ್ಕರು ಪುಟ್ಟಮ್ಮತ್ತೆ. ಮೈ ಕೈ ಸೀರೆಗೆ ಹತ್ತಿಕೊಂಡಿದ್ದ ಉಮಿಯನ್ನು ಕೊಡಕಿ ಕೊಳ್ಳುತ್ತ ಸೆಟೆದ ಬೆನ್ನಿಗೆ ಕೈ ಆನಿಸಿ ನಿಂತರು.

“ಅಲ್ದನ ಮತ್ತೆ. ಬೇಕೆಂದ್ ಕೂಡ್ಲೆ ನನ್ ನೆನ್ಪ್. ಮಳಿಗಾಲಕ್ ಹೋಯಿಕಾಂತ್ಯಾ? ‘ಪುಟ್ಟಮ್ಮತ್ಯಾ, ಅನ್ನ ಸಾಕಾತ್ತೋ ಇಲ್ಯೋ. ನೀ ಕಡೀಗ್ ಉಣ್, ಅಕ್ಕಾ?’ – ಅಂಬುದು ಎಲ್ಲರ ಊಟ ಆದ್ಮೇಲೆ ಬಡ್ಸುದು! ‘ಇಷ್ಟೇ ಉಳೀತಪ್ಪ. ಇವತ್ ಎಲ್ಲ ಸಮಾ ಉಂಡೋ!’ ಅಂತೆಳಿ ರಾಗ ತೆಗಿಯೂದ್. ಒಂದಿವ್ಸ ಹೌದೆಂಬೆ, ಯರ್‍ಡ್‌ದಿವ್ಸ ಹೌದೆಂಬೆ. ವಾರಂತೆ ಹಾಂಗೇ ಅಂದ್ರೆ? ಬೇಕಂತ ಮಾಡುದಲ್ದಾ? ಅವ್ಳ್ ಡೌಲೋ, ಲೋಲಾವತಿಯೋ; ಮುಟ್ಟಾರೆ, ಎದೆಯೆತ್ರ ಬೆಳ್ಕಂಡ್ ಹೆಣ್ಮಕ್ಳ್ ಇಲ್ಯಾ? ಅಡುಗೆ ಮಾಡುಕೆ ಹೇಳುಕಾಗ್ದ ಅಯ್ಯ, ಗಂಡ್ ಮಕ್ಳನ್ನಾರೂ ನುರ್‍ಸಿಯಾಳ್. ಹೆಣ್‌ಮಕ್ಳಿಗೆ ಹನಿಹಂದುಕೆ ಬಿಟ್ರ್ ಹೇಳ್!”

ಸೂರ್ಯ ಮಾತು ಕೇಳುತ್ತ ಮೇಲೆ ಮೇಲೆ ಬಂದ. ಅಂದು ಮಾಡಲಿದ್ದ ಹಪ್ಪಳದುಂಡೆಯನ್ನು ತಂದು ಒರಳಿಗೆ ಹಾಕಿ ಕುಟ್ಟಿದರು ಪುಟ್ಟಮ್ಮತ್ತೆ. ಶೇಷಮ್ಮನ ಮಕ್ಕಳು ಮಾಲಿನಿ, ಭಾಮಿನಿ ಆಗಲೇ ಹಪ್ಪಳ ಮಾಡಲು ಕೆಂಪು ಜಗಲಿ ಗುಡಿಸಿ ಒರೆಸಿ ಮಣೆಕೊಳವೆ ಇಟ್ಟು ಅಣಿ ಮಾಡಿದ್ದರು. ಗಂಡನ ಮನೆಯಿಂದ ಬಂದ ಮಗಳು ಸೌದಾಮಿನಿಯೂ ಹಪ್ಪಳಕ್ಕೆ ಕೈ ಸೇರಿಸಿದಳು.

ಹಪ್ಪಳ ಸುರುವಾಯಿತೆಂದರೆ ಪುಟ್ಟಮ್ಮತ್ತೆಯ ಯಾವುದಾದರೂ ಕತೆ ಸುರುವಾಯಿತೆಂದೇ.

ಇಂದಂತೂ ಪುಟ್ಟಮ್ಮತ್ತೆಗೆ ಮನಸ್ಸು ಸಮನಿಲ್ಲ. ಹಾಗಾದರೆ ಕಷ್ಟ ಪಡುವವರು ಕಷ್ಟ ಪಡುತ್ತಲೇ ಇರಬೇಕೇ ಇತ್ಯಾದಿ ಪ್ರಶ್ನೆ ಕಾಡುತ್ತಿದೆ. ಸರಿಯಾಗಿ ಸೌದಾಮಿನಿ ಕೇಳಿಯೂ ಬಿಟ್ಟಳು. “ಪುಟ್ಟಮ್ಮತ್ತೆ, ಕಮಲಾವತಿ ಇನ್ನೂ ರೆಡಿಮೇಡು ಬಟ್ಟೆ ಹೊಲಿಯೂಕೆ ಹೋತ್ಲಾ?”
*
*
*
ಪುಟ್ಟಮತ್ತೆಯ ಅಪ್ಪಯ್ಯನಂತಹ ವಿದ್ಯಾವಂತ ಅಷ್ಟು ರಾಷ್ಟ್ರದಲ್ಲಿ ಯಾರೂ ಇರಲಿಲ್ಲ. ಆದರೆ ಆತ ದಿನಗಳಿದ್ದದ್ದೆಲ್ಲ ಕಂಡವರ ಮನೆಗೆ ಹೇಳದೆ ಪರ್ಸಿ ಹೋಗಿ ಉಂಡು. ಮನುಷ್ಯ ಮಾತ್ರರಿಗೆ ಒಂದಕ್ಷರ ಹೇಳಿ ಕೊಟ್ಟ ಪ್ರಾಣಿಯಲ್ಲವಾದ್ದರಿಂದ ಜೀವ ಇದ್ದಂತೆಯೇ ಅವನನ್ನು ಬ್ರಹ್ಮರಾಕ್ಷಸ ಎನ್ನುತ್ತಿದ್ದರು. ಪಿತ್ರಾರ್ಜಿತ ಮನೆ ಮತ್ತು ಮನೆಯಡಿ ಸ್ಥಳವೊಂದಿತ್ತು. ಊಟದ ದಕ್ಷಿಣೆಯಲ್ಲಿ ಖರ್ಚು ಕಳೆಯುತ್ತಿತ್ತು.

ಪುಟ್ಟಮ್ಮತ್ತೆಯ ಅಬ್ಬೆಯೇ? ಮೂರು ಮಾವಿನ ಮಿಡಿಯಷ್ಟಿದ್ದಳಂತೆ. ಮನೆ ಹಿತ್ತಲಲ್ಲಿ ಬೆಂಡೆ, ಬದನೆ, ಹೀರೆ ಬೆಳೆಸಿ, ತೊಂಡೆ ಚಪ್ಪರ ಸ್ವತಃ ಹಾಕಿ ಅವರಿವರ ಗದ್ದೆಯಲ್ಲಿ ಬೆನ್ನು ಬಗ್ಗಿಸಿ ದುಡಿದು ದಿನ ತೆಗೆದಳಂತೆ. ಕೇರಿ ಮನೆಗಳ್ಲಿ ಅರೆದು ಕೊಟ್ಟು, ಅವರಿವರು ಉಟ್ಟು ಬಿಟ್ಟ ಸೀರೆಯನ್ನೇ ಉಟ್ಟು, ರವಿಕೆ ಇದ್ದರೆ ಹಾಕಿ, ಇಲ್ಲವೆ ಸೆರಗನ್ನೇ ಮೈ ತುಂಬ ಹೊದ್ದು ದಿನ ಕಳೆದವಳು. ಇಂದಿನ ದಿನ ಮರ್ಯಾದೆಯಲ್ಲಿ ಕಳೆಯಿತೇ, ಬಚಾವಾದೆ ಎಂದ ಹೆಂಗಸು. ಅಪ್ಪಂಥ ಗಂಡನೆಂಬವ ಒಬ್ಬ ಇಲ್ಲದ ಮೇಲೆ, ಸ್ವಂತವಾಗಿ ಬೇಕಷ್ಟು ದುಡಿಯುವ ಸಾಮರ್ಥ್ಯವೂ ಇಲ್ಲದ ಮೇಲೆ ವಿದ್ಯೆ ನೈವೇದ್ಯವೆಂದ ಮೇಲೆ, ಪ್ರಪಂಚದಲ್ಲಿ ಹೆಣ್ಣು ಹೆಂಗಸಿನ ಅವಸ್ಥೆ ಅಂದಿನಿಂದ ಇಂದಿಗೂ ಇಷ್ಟೇ. ಇದಕ್ಕಿಂತ ಊಂಚಿರಲು ಸಾಧ್ಯವೇ? ಗಂಡನೆದುರು ನಿಲ್ಲಲೂ ಹೆದರಿದವಳು. ಹಾಡಿನ ಮರವಾದರೂ ಸೋಬಾನೆಗೆ ದನಿಗೂಡಿಸಲು ನಾಲ್ಕು ಹೆಂಗಳೆಯರ ಹಿಂದೆ ಅಡಗುವವಳು. ಹಾಗೆಂತ ಕೆಲಸದಲ್ಲಿಯೇ? ಕಟ್ಟಾಣಿ. ತಲೆ ಅಡಿ ಹಾಕಿಕೊಂಡು ಅರೆಯಲು ಕುಳಿತಳೆಂದರೆ ತಲೆ ನೆಗ್ಗುವುದು ಎಲ್ಲ ಮುಗಿದ ಮೇಲೆಯೇ.

ಒಂದು ದಿನ ಆಕೆ ಹಾಡಿಯಿಂದ ಆಗಷ್ಟೇ ಒಣಚಪ್ಪು ಹೆಕ್ಕಿಕೊಂಡು ಅಂಗಳದಲ್ಲಿ ಹೊರೆ ಹೊತ್ತು ಹಾಕಿ ಬೆನ್ನು ಲಟಲಟನೆಂದು ನೆಟ್ಟಗೆ ಮಾಡುವ ಹವಣಿಕೆಯಲ್ಲಿದ್ದಾಳಷ್ಟೆ. ಗಂಡ ಸ್ನಾನಕ್ಕೆ ನೀರು ಕಾದಿಲ್ಲವೆಂದು ಜಗಳ ಕೆರೆದ. ಆಕೆ ಕಣ್ಣಿಗೆ ರೆಪ್ಪೆಗಳನ್ನು ಗಟ್ಟಿಯಾಗೊಮ್ಮೆ ಒತ್ತಿ ತೆರೆದಳು. ಭಾರಕ್ಕೆ ಜಗ್ಗಿದ ಗೋಣನ್ನು ಒಮ್ಮೆ ಉದ್ದಕ್ಕೆ ನೇರ್ವಿಸಿಕೊಂಡು ಒಳಗೆ ಹೋದಳು. ಹೆಂಡತಿಯಾದವಳು ಮಾತಾಡದೆ ಆಲಕ್ಷ್ಯದಿಂದೆಂಬಂತೆ ಒಳಹೋದದ್ದು ಡಬ್ಬಿ ಬಡಿದಂತೆ ವರಲುತ್ತಿದ್ದ ಗಂಡನೆಂಬವನಿಗೆ ಕೆಪ್ಪೆಯ ಮೇಲೆ ಬಾರಿಸಿದಂತಾಯಿತು. ಚೋಟುದ್ದದ ಹೆಣ್ಣಿಗೆ ಈ ಪಾಟಿ ಸೊಕ್ಕೇ? ಇದು ಉಂಡದ್ದು ಹೆಚ್ಚಾದದ್ದಲ್ಲವೇ ಎಂದಾತ ಎನ್ನಲು ಹೆಂಡತಿಗೆ ಈ ಬಾರಿ ತಡೆಯಲಿಲ್ಲ. ಉರಿಬಿಸಿಲೋ, ಒಣಗಿದ ಗಂಟಲೋ ಉತ್ತರ ಕಕ್ಕಿಸಿತು. “ನಾ ರಟ್ಟೆ ಜಪ್ಪಿಯೆ, ನಾ ಉಂಡೆ. ನೀವೊಂದು ವಡೇನಾರೂ ನನ್ ಕೈಮೇಲ್ ಹಾಕಿದ್ದಂತೆಳಿ ಇತ್ತಾ?” ಅಷ್ಟು ಹೇಳಿದವಳು ಒಂದು ಮುದ್ದೆ ಬೆಲ್ಲ ಬಾಯಿಗೆಸೆದುಕೊಂಡು ಗಂಟಲಿಗೆ ನೀರನ್ನು ಸುರಿದುಕೊಳ್ಳುತ್ತಿದ್ದಂತೆ ಗಂಡ ದರ್ಶನ ಬಂದವರಂತೆ ನಡುಗುತ್ತ ಒಳಗೆ ಬಂದ. ಆಕೆಯನ್ನು ಮುದ್ದೆ ಮಾಡಿ ಎತ್ತಿದ. ನೀರು ಗಂಟಲೊಳಗೆ ಪೂರ್ತಿ ಇಳಿದಿರಲಿಕ್ಕಿಲ್ಲ, ಮನೆಯೆದುರಿನ ಬಗ್ಗು ಬಾವಿಗೆ ಹೊತ್ತು ಹಾಕಿದ.

ಇದನ್ನೆಲ್ಲ ಆಚೆಮನೆ ಅಜ್ಜಿ ನೋಡುತ್ತಲೇ ಇತ್ತು. “ಅಯ್ಯಯ್ಯ ಈ ನಸ್ರಾಣಿಗೆ ಆತ್ತೆಂತದ! ಹೆಂಡ್ತಿನ್ನ ಬಾವಿಗೆ ಹೊತ್ತಾಕಿತೋ” ಎಂದು ಬೊಬ್ಬೆ ಎಬ್ಬಿಸಿತು. ಸುತ್ತು ಮುತ್ತಿನವರು ಬರುವಾಗ ಗಂಡನೆಲ್ಲಿ? ಕಣ್ಣು ಕಾಣದ ಊರಿಗೆ ಹಾರು! ಪುಟ್ಟಮ್ಮತ್ತೆಯ ಅಬ್ಬೆ ಒಂದೇ ಮುಳಿಕಿಗೆ ಮಣ್ಣು ಕಚ್ಚಿತು.

ಆಗ ಪುಟ್ಟಮ್ಮನಿಗೆ ಆರು ತಿಂಗಳು. ಮಗು ಕವುಚಿದಲ್ಲೇ ಉಚ್ಚೆಹೊಯ್ದು ತಚಪಚ ತಟ್ಟುತ್ತಾ ಸುತ್ತಿರುಗುತ್ತಿತ್ತು. ಕಾಕು ಹಾಕುತ್ತಿತ್ತು. ಆಚೆಮನೆ ಅಜ್ಜಿ ಸೀದಾ ಒಳಗೆ ಬಂತು. ಮಗುವನ್ನೆತ್ತಿಕೊಂಡಿತು. ಅನುತನು ನೋಡಿಕೊಂಡಿತು. “ನಾ ತೊಡುವಾಗಿ ಮರಕಿರೆ ಅಜ್ಜಿಯ ಮೊಲೆಯಲ್ಲಿ ಹಾಲು ಒಸರುತ್ತಿತ್ತಂತೆ” ಎಂದು ಪುಟ್ಟಮ್ಮತ್ತೆ ಹೇಳದೆ ಬಿಡರು. ಆಗ ಹಪ್ಪಳ ಮರೆತು ಎಲ್ಲರೂ ಹೋ ಎಂದು ನಕ್ಕರು. “ಪ್ರೀತಿಯೆಂದ್ರೆ ಮಕ್ಕಳೇ, ಕರುಳಿನಲ್ಲಿ ಇಪ್ಪುದಲ್ಲ. ಇಲ್ಲಿ, ಇಲ್ಲಿ ಇಪ್ಪುದು” ಎಂದು ಆಕೆ ಎದೆತಟ್ಟಿ ತೋರಿಸಿಯಾರು. ಅವರ ಅಬ್ಬೆ ದನದಂತಹ ಹೆಂಗಸು, ಒಂದಿನವೂ ಭೂತವಾಗಿ ಕಾಡಿದ್ದಿಲ್ಲ ಎಂಬ ಮಾತನ್ನೂ ಸೇರಿಸಿಯಾರು.

ಅಜ್ಜಿಯ ಮನೆಯಲ್ಲಿಯೇ ಬೆಳೆದರು ಪುಟ್ಟಮ್ಮತ್ತೆ. ಹದಿಮೂರು ವರ್ಷ ಕಳೆದಿರಬಹುದು. ಮೈ ನೆರೆದಿದ್ದರಷ್ಟೆ. ಒಳಗೆ ಅನ್ನ ಕುದಿ ಬಂದಿತ್ತು. ಕಡಿಗೆ ಹುಳಿಗೆ ಮೆಣಸು ಹುರಿಯುತ್ತಿದ್ದರು ಪುಟ್ಟಮ್ಮತ್ತೆ. ಹೊರಗಿನಿಂದ ಅಜ್ಜಿ “ನಾಲ್ಕೇ ನಾಲ್ಕು ಅಕ್ಕಿಕಾಳು ಹಾಕು ರಸ ಕೂಡಿ ಬತ್ತ್.” ಎಂತೆಲ್ಲ ಹದ ಹೇಳುತ್ತಿತ್ತು. ಇದ್ದಕ್ಕಿದ್ದಂತೆ ಅಜ್ಜಿ “ಹೋ! ಬಂದ್ಯ? ಭಾಳ ಸಾಪಾಯ್ತ್. ಬಂದ್ ದಾರಿಗೆ ಸುಂಕ ಇಲ್ಲೆ, ನಡೆ ವಾಪಾಸು” ಎಂದದ್ದು ಕೇಳಿಸಿ ಪುಟ್ಟಮ್ಮ ‘ಅಜ್ಜಿಗೇನಾದರೂ ಸೋಂಕಾ?’ ಎಂದುಕೊಂಡು ಹೊರಬಂದಳು. ಬೇಲಿ ಕಡುವಿನಲ್ಲಿ ಅಡ್ಡ ಹಾಕಿದ ಅಗುಳಿ ಜಲ್ಲನ್ನು ಸರಿಸುತ್ತ ಪಾಣಿಪಂಚೆಯುಟ್ಟ ಪ್ರಾಣಿಯೊಂದು ನಿಂತಿತ್ತು.

“ಯಾರಜ್ಜಿ?”

“ಯಾರೆಂತ ಹೇಳಲಿ ಮಗ? ಅಪ್ಪಯ್ಯ, ಇದು ತಪ್ಪಯ್ಯಾ….” ಎಂದು ಕುಟ್ಟಾಣಿಯನ್ನು ಕೈಬಿಟ್ಟು ಸದಾ ಜಗಿತದ ತನ್ನ ಕಾಲನ್ನು ತಿಕ್ಕಿಕೊಳ್ಳುತ್ತ ಆನೆಯಾಡಿ ನಕ್ಕಿತು. “ಯೇ ಶೀನ, ಇನ್ನು ನೀನು ಇಲ್ಲಿಗೆ ಬಪ್ಪುಕಾಗ, ನಿನ್ನ ಮಗಳನ್ನ ನಾನು ಕೊಡುದೂ ಇಲ್ಲೆ, ಅದ್ಕೆ ಮದ್ವೆ ಗಿದ್ವೆ ಆಯ್ಕಾ ಬೇಡ್ದ?” – ಎಂದಿತು. ತಂದೆಯೆಂದು ಒಂದು ಸೊಲಿಗೆ ವಾಂಛೆಯೂ ಪುಟ್ಟಮ್ಮನಲ್ಲಿ ಹುಟ್ಟಲಿಲ್ಲ. ಸೀದ ಒಳಗೆ ಬಂದುಬಿಟ್ಟಳು.

ಅರ್ಧ ಸರಿಸಿದ ಜಲ್ಲಿನ ಮೇಲಿಂದ ಕೈ ತೆಗೆಯದೆ ಪುಟ್ಟಮ್ಮತ್ತೆಯ ಅಪ್ಪ ಒಂದುಕ್ಷಣ ಆಕಾಶ ನೋಡಿದ, ನೆಲ ನೋಡಿದ. ಸುಮ್ಮನೆ ನಿಂತ. ಜಲ್ಲು ಬಿಟ್ಟ, ನಡೆದ. “ಥತ್, ಪುರುಷ ಮೃಗ” ಎಂದಿತು – ಅಜ್ಜಿ, ಜೋರಾಗಿ. ಮುಂದೊಂದು ದಿನ ಯಾರದೋ ಮನೆಯಲ್ಲಿ ಸತ್ಯನಾರಾಯಣ ಪೂಜೆಯೂಟ ಉಂಡು ಉರಿ ಬಿಸಿಲಿನಲ್ಲಿ ತಲೆಯ ಮೇಲೊಂದು ಬೈರಾಸು ಹಾಕಿಕೊಂಡು ಬೇಣದಲ್ಲಿ ನಡೆದು ಬರುತ್ತಿದ್ದಂತೆ ಬಾಯಲ್ಲಿ ನೊರೆ ಬಂದು ಅಪ್ಪನು ಸತ್ತ ಎಂಬ ಸುದ್ದಿ ಬಂತು. ‘ನಬಿದು ಸಾಯುತ್ತಾನೆ ಎಂದು ಊರೆಲ್ಲ ಅಂದುಕೊಂಡಿದ್ದರೆ ದೇವರ ಪ್ರಸಾದ ತಿಂದು ಯಾರ ಕೈಯಡಿ ಆಗದೆ ತೀರಿಕೊಂಡನಲ್ಲ, ಅಜಾಮಿಳನಂತೆ! ಏನನ್ನೋಣ’ ಎಂದು ಸ್ಮಶಾನದಲ್ಲಿ ಹೆಣದ ತಲೆಬುರುಡೆ ಹೊಟ್ಟುವವರೆಗೂ ಆಶ್ಚರ್ಯ ತತ್ವ ವೇದಾಂತ ಕೊಯ್ದರು ಕೇರಿ ಜನ. ಹಾಗೆ ಸತ್ತ ಅಪ್ಪ ಮುಂದೆ ಬ್ರಹ್ಮರಾಕ್ಷಸನೇ ಆದದ್ದೂ, ಆಲದ ಮರದಲ್ಲಿ ವಾಸಿಸಿ ಊಟದ ಮನೆಗಳಿಗೆ ಹೋಗುವವರ ಮೇಲೆ ಹೊಯ್ಗೆ ಬಿಸಾಡುತ್ತಿದ್ದುದೂ, ಮಗಳೆಂಬ ಕಕ್ಕುಲತೆಯೇ ಇಲ್ಲದೆ ತನ್ನ ಮೇಲೆಯೂ ಬಿಸಾಡಿದ್ದೂ, ಅಜ್ಜಿ ಹೇಳಿದಂತೆ ತಾನು ನರಸಿಂಹ ದೇವರನ್ನು ನೆನೆದ ಮೇಲೆ ಈ ಉಪಟಳ ತಪ್ಪಿದ್ದು-ಇದೆಲ್ಲ ಬೇರೆಯೇ ಒಂದು ದೊಡ್ಡ ಕತೆ. ಈಗಲ್ಲ, ಮುಸ್ಸಂಜೆಗೋ ರಾತ್ರಿಗೋ ಮಕ್ಕಳೆದುರು ಪುಟ್ಟಮ್ಮತ್ತೆ ಬಿಡಿಸುವ ಹಸೆ.

ಅಜ್ಜಿ, ಪುಟ್ಟಮ್ಮ ನಿನ್ನನ್ನು ಯಾರ ಕೈ ಮೇಲಾದರೂ ಹಾಕಿ ನಾನು ಸತ್ತೆನೇ ನನಗೆ ಶಾಂತಿ ಸಿಕ್ಕೀತು ಎನ್ನುತ್ತ ಇದ್ದಂತೆ ಒಂದು ದಿನ ಚಟ್ಟವೇರಿತು. ಅಶನಾರ್ಥ ವ್ಯಾಜ್ಯ ಹೂಡಿ ಗುತ್ತುಗುಳಿಯಂತೆ ವಕೀಲರ ಮನೆ ಬೆಂಚು ಕಾದು ಹೇಳಿಕೊಟ್ಟ ಉತ್ತರ ಕಲಿತು ನಂಬ್ರ ಗೆದ್ದು ಒಂಟಿಯಾಗಿ ಬದುಕಿ ಪುಟ್ಟಮ್ಮೆತ್ತೆಯ ವ್ಯಾಮೋಹಕ್ಕೆ ಕಟ್ಟು ಹಾಕಿಕೊಂಡು ಕಡೆಗೂ ನಡೆದೇಬಿಟ್ಟಿತ್ತು.

ಅಜ್ಜಿಯ ಕಡೆಯವರೆಲ್ಲ ದೊಡ್ಡ ದೊಡ್ಡ ಕುಳವಾರಿಗಳೇ. ಹೆಚ್ಚಿನವರು ಬರಿಗಾಲಲ್ಲಿ ಘಟ್ಟ ಹತ್ತಿ ಮೇಲೆ ಹೋಗಿ ಕೆಳಗೆ ಬರುವಾಗ ಕಾರಿನಲ್ಲೇ ಬಂದವರು. ಹೆಣ್ಣು ಮಕ್ಕಳು ನೂಲಿನಲ್ಲಿ ಸುರಿದ ಕರಿಮಣಿ ಕಟ್ಟಿಸಿಕೊಂಡು ಗಂಡನ ಹಿಂದೆಯೇ ತಲೆಬಾಗಿ ಹೆಜ್ಜೆಯಿಡುತ್ತ ಹೋದವರು ನಾಲ್ಕು ವರ್ಷಕಳೆದು ಊರಿಗೆ ಬರುವಾಗ ಮಡ್ಡಮ್ಮಗಳಾಗಿ ತಲೆ ಕಿವಿ ಕುತ್ತಿಗೆ ಕೈ ತೋಳು ಎಲ್ಲೆಂದರಲ್ಲಿ ಚಿನ್ನದ ತಗಡು ಹೊಡೆಸಿಕೊಂಡು ಏರುಸ್ವರದಿಂದ ಮಾತನಾಡಲು ಕಲಿತವರು. ಬರೀ ಆಡು ಪಳೆಯಂತಿದ್ದವರೂ, ದುಡ್ಡು ಸೇರಿತೆಂದರೆ ಭರಮು ಬೇರೆಯೇ.

ವೈಕುಂಠದ ರಾತ್ರಿ, ಸಾವಿರಿದ್ದವನಿಗೆ ಚಾರೆ ಬಯಕೆ ಎಂಬ ಗಾದೆ ಇದೆಯಲ್ಲ ಹಾಗೆ – ಅಜ್ಜಿಯ ಚೂರು ಗದ್ದೆಗಾಗಿ ಮಾತು ಮಾತು ಏರಿ ಬಿಸಿಯಾಗಿ ಕತ್ತಿ ಚೂರಿಯವರೆಗೂ ಮುಂದುವರಿದು ತಣ್ಣಗಾಗಿ ಎಲ್ಲ ಹೊದಿಕೆಯೊಳಗೆ ನಿಶ್ಶಬ್ದವಾಗಿದ್ದಾರಷ್ಟೆ. ಪುಟ್ಟಮ್ಮತ್ತೆ ಏನು ಎತ್ತ ತೋರದೆ ತಬ್ಬಿಬ್ಬಾಗಿದ್ದಳು. ಅಜ್ಜಿಯನ್ನು ನೆನೆಯುತ್ತ, ಅವಳದೇ ಪರಿಮಳವಿರುವ ಅವಳ ಸೀರೆಯನ್ನು ಹೊದ್ದುಕೊಂಡು, ಏಣಿ ಮೆಟ್ಟಲಿನ ಬುಡದ ಅಂಗೈಯಗಲದ ಜಾಗೆಯಲ್ಲಿ ಜಾಲಿ ಚಾಪೆ ಹಾಸಿಕೊಂಡು ಮಲಗಿದಳು. ಸ್ವಲ್ಪ ಹೊತ್ತಿನಲ್ಲಿ ಯಾರೋ ಹೊದೆ ವಸ್ತ್ರ ಎಳೆದಂತಾಯ್ತು. ಹೊದಿಕೆಯೊಳಗೆ ಯಾರೋ ಹೊಕ್ಕಿಕೊಂಡಂತಾಯಿತು.

“ನನ್ನ ಎದೆ ಬಾಯಲ್ಲಿ ನೀರಿತ್ತಾ? ರಾಮರಾಮಾ! ಯಾರೋ ಏನು ಕತಿಯೋ! ಮಾಡ್ತೆ ಬಗೆ ಅಂದೇ, ಬಳೆಯಿಂದ ದೊಡ್ಡ ಸಪ್ಟಿಪಿನ್ನು ಬಿಚ್ಚಂಡೇ, ಆ ಬೇವರ್ಸಿ ತೊಡೆಗೆ ಚಂಯ್ಯ ಚುಚ್ಚಿಯೆ. ಅಂವ ನಡ್ಗಿ ಬಾಯಿ ಮೇಲಿಂದ್ ಕೈ ತೆಗ್ದದ್ದೇ ‘ಅಯ್ಯಯ್ಯೋ’ ಅಂತೆಳಿ ಬೊಬ್ಬೆ ಹೊಡ್ಡೆ.”

ಏನು ಎಂದು ಎಲ್ಲ ಓಡಿ ಬರುವುದರೊಳಗೆ ಅಜ್ಜಿಯ ಸೀರೆ ಅಪ್ಪಿಕೊಂಡು ಪುಟ್ಟಮ್ಮತ್ತೆ ನಡುಗುತ್ತಿದ್ದಳು. ಒತ್ತಿ ಹಿಡಿದವನು ಮಹಾ ಫಟಿಂಗ. ಹೋದಲ್ಲಿವರೆಗೂ ಅವಂಗೆ ಇದೇ ಕೆಲಸ ಅಂತೆಲ್ಲ ಮಾತಾಡಿಕೊಂಡವರು ಒಬ್ಬರೂ ಅವನನ್ನು ಹಿಡಿಯಲು ಹೋಗಲಿಲ್ಲ. ನಿದ್ದೆಗೆಟ್ಟಿತಲ್ಲ, ಈಗ ರೆಪ್ಪೆಗೆ ರೆಪ್ಪೆ ಕೂಡಿತ್ತಷ್ಟೆ ಎಂದು ಗೊಣಗಿಕೊಂಡರು. “ಇಲ್ಬಾ ಹೆಣೆ. ನನ್ಹತ್ರ ಮನಕೋ” – ಎಂದಿತು ಅಡ್ಡ ಕುಂಕುಮದ ಹೆಣ್ಣು ದನಿಯೊಂದು.

ಬೆಳಗಾಗಿ ಎದ್ದಾಗ ಈ ಹೆಣ್ಣನ್ನು ಇನ್ನು ಹೀಗೇ ಬಿಡುವುದು ಸಮನಲ್ಲ ಎಂಬ ವಿಚಾರ ಎಲ್ಲರಲ್ಲೂ. ಅವರೇ ಎಲ್ಲ ಸೇರಿ ಮದುವೆ ಮಾಡುವುದೆಂದಾಯಿತು. ‘ಗಂಡಿಗೆಲ್ಲಿ ಹೋಪ?’ ‘ಹ್ವಾಯ್, ನಿಮ್ ಹೋಟ್ಲೊಳ್ಗೆ ದೋಸೆ ಹೊಯ್ಯು ವಾಸು ಭಟ್ಟ ಹೇಂಗೆ?’-ಅಂದರು ಯಾರೋ, ಅಜ್ಜಿ ಕಡೆಯ ಹೊಟೇಲು ಮಾಲಿಕರೊಂದಿಗೆ. ಚಿನ್ನದಸರ ಥಳಗುಟ್ಟುತ್ತಿದ್ದಂತೆ ಅವ ಗಂಟಲಿನೊಳಗಿಂದ ಬಲವಾಗಿಯೇ ಹೂಂಗುಟ್ಟಿದ. ಅಂತರಪಟದ ಈಚೆ ಬಗ್ಗಿನಿಂತ ಪುಟ್ಟಮ್ಮತ್ತೆಗೆ ಕಂಡದ್ದು ವರನ ಕೆಂಪೊಡೆಯುವ ಬೆರಳಿನ ತುದಿ ಮಾತ್ರ. ಅಂತರಪಟ ತೆಗೆದ ಮೇಲೆ ಏನು ನೋಡುವುದು! ಎಷ್ಟುದ್ದ, ಹನೆಮರ! ಪುಟ್ಟಮ್ಮನನ್ನೆತ್ತಿ ಮಾಲೆ ಹಾಕಿಸಿದರು. ‘ಮಾಲೆ ಹಾಕಿದಳು ಭಾಮೆ ದ್ವಾರಕಾಪತಿಗೆ’, ‘ಸತ್ಯಭಾಮೆಯೆ ನೀ ಬೇಗ ಬಾ ಹಸೆಗೆ’ ಇತ್ಯಾದಿ ಹಾಡುಗಳ ನಡುವೆ.

ಹೋಗಿ ಬಿಡಾರ ಮಾಡಲು ದುಡ್ಡು ಸಾಲದು. ನೀನಿಲ್ಲೇ ಇರು. ದುಡ್ಡು ಕೂಡಿದ ಹಾಗೆ ಹೋಟೆಲಿಡುತ್ತೇನೆ. ಅರೆದು ಕೊಡಲು ನೀನಿದ್ದಿ. ತಿಂಡಿ ಮಾಡಲು ನಾನಿದ್ದೇನೆ…. ಮದುವೆಯಾದ ನಾಲ್ಕು ದಿನ ಜೊತೆಗಿದ್ದ ವಾಸುದೇವ ಹೇಳಿದ್ದಕ್ಕೆಲ್ಲ ಹೂಂಗುಟ್ಟಿದಳು ಪುಟ್ಟಮ್ಮೆ. ಪುಟ್ಟಮ್ಮನ ಅಪ್ಪನ ಮನೆಯಡಿ ಜಾಗವನ್ನು ಮಾರಿದರೆ ಹೇಗೆ? ಹೋಟೆಲು ಈಗಲೇ ಇಟ್ಟರೆ ಹೇಗೆ? ನೀವು ಮಾಡಿದ್ದೆಲ್ಲ ಸಮವೆನ್ನಲು ಪುಟ್ಟಮ್ಮ ತಯಾರಿದ್ದಳು. ಆತನಿಗೆ ಮತ್ತೆ ಏನನ್ನಿಸಿತೋ, ಎರಡು ವರ್ಷ ಕಳೆಯಲಿ ಎಂದ. ಬೆಂಗಳೂರಿನಲ್ಲಿ ತನ್ನ ಕಣ್ಣ ಮುಂದೆಯೇ ಎಷ್ಟು ಜನ ಬರಿಗೈಯಲ್ಲಿ ಬಂದವರು ಬಂಗಲೆ ಕಟ್ಟಿದರು, ಕಾರು ಇಟ್ಟರು, ಮಕ್ಕಳನ್ನು ಫಾರಿನ್ನಿಗೆ ಕಳಿಸಿದರು. ತಾನಿನ್ನೂ ದೋಸೆ ಹೊಯ್ಯುವುದರಲ್ಲಿಯೇ ಇದ್ದೇನೆ. ಮೆನೆ ಮಠ ಮಾಡಿಕೊಳ್ಳಬೇಕೆಂದು ತಲೆಗೇ ಬರಲಿಲ್ಲವಲ್ಲ ಎನ್ನುತ್ತ ಬೆನ್ನ ಹಿಂಗಡೆ ಕೈಕಟ್ಟಿಕೊಂಡು ಹೆಂಡತಿಯ ಹಿಂದೂ ಮುಂದೂ ಓಡಾಡಿದ. ಮೆನಯ ಗೋಡೆಯನ್ನು ತೋರುಬೆರಳ ಬೆನ್ನಿನಿಂದ ಬಡಿದು ನೋಡಿದ. ಮಾಡು ಇಳಿದ ಹಾಗೆ ಕಾಣಿಸುತ್ತದೆಯೇ? ಪಕಾಸಿ ಹೊಸತು ಹಾಕಬೇಕು. ಕೈಯಲ್ಲಿ ದುಡ್ಡಾಗಲಿ ನೋಡುತ್ತಿರು, ಬೆಂಗಳೂರು ಮನೆಗಳಂತೆ ಮಾಡಿಬಿಡುತ್ತೇನೆ’-ಎಂದ ಕನಸುಗಾರ. ಹೊರಟುಹೋದ. ದೇವರ ತಲೆಯ ಮೇಲೆ ಹೂವು ತಪ್ಪಿದರೂ ತಿಂಗಳು ತಿಂಗಳು ಆತ ಹಣ ಕಳಿಸುವುದನ್ನು ತಪ್ಪಿಸಲಿಲ್ಲ. ಬಂದಷ್ಟು ಅಕ್ಷರಗಳನ್ನೇ ಮಗುಚಾಡಿ ‘ದುಡ್ಡು ಉಳಿಸಿದ್ದೇನೆ. ಎರಡೇ ವರ್ಷ, ನಿನ್ನನ್ನು ಕರೆಸಿಕೊಳ್ಳುತ್ತೇನೆ. ದೇವರು ಬಿಟ್ಟು ಹಾಕ, ಹೋಟೆಲು ಇಟ್ಟೆನೆಂದರೆ, ಅದು ಮೇಲೆ ಬಂತೆಂದರೆ, ಇಬ್ಬರೂ ಒಂದು ಸಲ ಮಂತ್ರಾಲಯಕ್ಕೆ ಹೋಗಿ ಬರುವ’-ಅಂತೆಲ್ಲ ಬರೆಯುತ್ತಿದ್ದ. ಓದಿಸಿ ಕೇಳಿ ಗಂಡನನ್ನು ನೋಡ ಬೇಕೆನ್ನಿಸಿದಾಗೆಲ್ಲ ಅವನ ಕಾಗದವನ್ನು ನೊಡುವಳು ಪುಟ್ಟಮ್ಮತ್ತೆ.

ಬಿಡಾರ ಮಾಡದಿದ್ದರೇನಂತೆ? ಬಸುರು ಬಂತೇ. ಬಸುರು ಮಾಗಿತು. ಮಗು ಭೂಮಿಗೆ ಬಿತ್ತು. ಇನ್ನೂ ಹೊಕ್ಕಳು ಚೊಟ್ಟೂ ಕೊಯ್ದಿರಲಿಲ್ಲ. ಪುಟ್ಟಮ್ಮ ಎಂತ ಮಗು? ಎಂದು ಕೇಳಿದ್ದೊಂದೇ, ಉತ್ತರ ಸಿಕ್ಕಿದ್ದು ಬಾಗಿಲ ಹೊರಗಿನಿಂದ. “ಹ್ವಾಯ್, ವಾಸುಭಟ್ಟರು ಪಡ್ಚ ಅಂಬ್ರಲೆ!”

ಬಾವಿ ಗುಂವಿ ನೋಡಬೇಕೆ? ಹೂವಿನ ಮಿಟ್ಟೆಯಂತಿದ್ದ ಮಗುವನ್ನು ನೋಡಬೇಕೆ? ಹೆಣ್ಣು ಮಗು. ಎಲ್ಲ ಅಪ್ಪನದೇ ರೂಪು. ಮಗುವಿನ ಪಾಶ ಪುಟ್ಟಮ್ಮತ್ತೆಯನ್ನು ಭೂಮಿಗೆ ಕಟ್ಟಿ ಹಾಕಿತು. ಯಮ ಬಂದರೂ ತಾರಮ್ಮಯ್ಯ ಹೇಳಿ ವಾಪಾಸು ಕಳಿಸಿಬಿಡುವಂತಹ ಪಾಶವಲ್ಲವೆ ಅದು?

“ಮಗುವನ್ನು ಸೊಂಟದಾಗೆ ಚಚ್ಚಿಕೊಂಡೇ ಮೆಟ್ಟಿಲಿಳಿದೆ. ಅಬ್ಬೆ ಬಿಟ್ಟ ಪಟ್ಟ ಖಾಲಿಯಿತ್ತು. ಅಕ್ಕಿ ಎಷ್ಟು ನೆನ್ಸಿದ್ರಿ? ಎಂದು ಕೇಂಬ ಜಾಯಮಾನವೇ ನಂದು? ಐತಾಳರ ಮನೆಯಲ್ಲಿ ಪ್ರತಿವರ್ಷ ಒಂದು ಮುಡಿ ಅಕ್ಕಿ ಹಪ್ಪಳ ಮಾಡ್ತ್ರಲೆ! ಅರೆಯೂದು ಯಾರು? ರಾತ್ರಿಯಿಡೀ ಕೂತು ಹೊಯ್ಯೂದು ಯಾರು? ಇದೇ ಕೈಯಿಂದ ಎಷ್ಟು ಮುಡಿ ಉದ್ದಿಗೆ ಎಣ್ಣೆ ಹಚ್ಚಿ ಬಿಸಿಲಿಗೆ ಹರಡಿಪ್ಪೆ! ನಾನುಂಡದ್ದೆಲ್ಲ ಕಡಿಯಕ್ಕಿ. ನೆನೆಸಿದ್ದು ಕಡಿ‌ಉದ್ದು. ಪ್ರಪಂಚ ನೀನೆಂತ ಉಂಡೆ ಅಂತೇಳಿ ಹೊಟ್ಟೆಗೆ ಕೈ ಹಾಕಿ ಕಾಣುತ್ತಾ? ಇಷ್ಟು ರಾಷ್ಟ್ರದಾಗೆ ನನ್ನಷ್ಟ್ ಉರುಟಾಗಿ ವಡೆ ಬಡಿದವರು ಯಾರಿದ್ರ್?”-

ಹೀಗೇ ಇದ್ದಂತೆ ಒಂದಿನ ತಿಳಿಯಿತು. ವಾಸುಭಟ್ಟ ಸತ್ತದ್ದು ಸುದ್ದಿ ಬಂದ ಹಾಗೆ ಜ್ವರ ತಲೆಗೇರಿ ಅಲ್ಲ. ಕೆಲಸ ಸರಿಯಾಗಲಿಲ್ಲವೆಂದು ಹೋಟೆಲಿನ ಉಸ್ತುವಾರಿಯವರು ಸೌದೆಯಿಂದ ಜಪ್ಪಿದರಂತೆ. ಎಲ್ಲಿ ಪೆಟ್ಟಾಯಿತೋ, ಜೀವವೇ ಹೋಯಿತು. ಹೋಟೆಲು ಕೆಸದವರ ಬಾಯಿ ಬಂದು ಮಾಡಿಸಿ ದೋಸೆ ಒಲೆಯೊಳಗೆ ಹೆಣ ತುಂಬಿ ರಾತ್ರಿ ಬೆಳಗಾಗುವುದರೊಳಗೆ ಮುಗಿಸಿದರಂತೆ. ಸುತ್ತಿನಲ್ಲಿರುವವರು ವಾಸನೆ, ಏನೋ ವಾಸನೆ ಎನ್ನುತ್ತಿದ್ದಂತೆ, ದಿನಕಳೆದು ವಾಸನೆ ಕರಗಿತು. ಕತೆ ಘಟ್ಟದ ಮೇಲಿಂದ ಇಳಿದು ಪುಟ್ಟಮ್ಮನ ಕಿವಿಯವರೆಗೆ ಬಂದು ಮುಟ್ಟವಾಗ ಅವಳ ಮನಸ್ಸು ಥಂಡಿಯೇರಿತ್ತು. ಕೆಲವರೆಂದರು “ಬಿಡ್ಬೇಡ ನಂಬ್ರಮಾಡ್, ನಿಂಗೇ ಗುಣ ಆತ್ತ್ ಕಾಣ್”-ಆದರೆ ಪುಟ್ಟಮ್ಮತ್ತೆ ತಾನು ಕೋರ್ಟು ಮೆಟ್ಟಲು ಹತ್ತಲಿಲ್ಲ ಎನ್ನುವಾಗ ತುಸು ಬೀಗಿಯೇ ಬೀಗುತ್ತಾಳೆ. ದುಡ್ಡಿದ್ದವರೆದುರು ತನ್ನಂಥ ಬಡವಿ ವ್ಯಾಜ್ಯ ಮಾಡುವುದು ಹೌದೆ? ತನ್ನ ಸಾಕಜ್ಜಿಯ ಧೈರ್ಯ ತನ್ನದಲ್ಲ.

ಮಗುವನ್ನೆತ್ತಿಕೊಂಡು ಮೆಟ್ಟಿಲಿಳಿದ ಪುಟ್ಟಮ್ಮತ್ತೆ ರಂಗಪ್ಪಯ್ಯನ ಮನೆಗೆ ಖಾಯಂ ಆದಳು. ಎಲ್ಲಿಯವರೆಗೆಂದರೆ ಅವಳು ವಿಶೇಷಗಟ್ಟಲೆಯ ಅಡುಗೆಗೋ ಊಟಕ್ಕೋ ಇನ್ನೊಬ್ಬರ ಮನೆಗೆ ಹೋದಳೆಂದರೆ ರಂಗಪ್ಪಯ್ಯನ ಹೆಂಡತಿ ಈದಪ್ಪ ಮುಖ ಮಾಡಿಕೊಂಡಳೆಂದೇ. ಪುಟ್ಟಮ್ಮನಿಲ್ಲವೇ ಎಂದು ಕೇಳಿಕೊಂಡು ಬಂದವರಿಗೆ “ಇಲ್ಲದೆ ಸತ್ತಿತೇ? ಯಾರ ಮನೆ ಕೂಳು ಹೆಕ್ಕುಕೆ ಹೋಯಿತ್ತೋ” ಎಂದು ಆಕೆ ಸೊಡ್ಡು ಮುರಿಯುವ ಸುದ್ದಿ ಪುಟ್ಟಮ್ಮನ ಕಿವಿಯ ಮೇಲೆಯೂ ಬಿದ್ದಿಲ್ಲವೆಂದಲ್ಲ. ಆದರೆ ಗಂಡು ದಿಕ್ಕು ಇಲ್ಲದಿದ್ದ ಮೇಲೆ ಅಂಥ ಮಾತು ಕೇಳಬಾರದು. ಇಂಥ ಮಾತು ಬೀಳಬಾರದು ಅಂದುಕೊಳ್ಳುತ್ತ ಹೋದರೆ ‘ಹಸೆಗೆ ಹಿಡಿದ ಹೇಲಿನ ಹಾಂಗೆ ಅಲ್ಲೇ ಇದ್ದರೆ ಸೈ ಚಂಯ್ಯ ಮರ್‍ಕುತ್ತ’ ಸೊಡ್ಡು ಮುರಿದರೆ ಅವಳ ಕುತ್ತಿಗೆಯೇ ವಾರೆಯಾದೀತು ಎಂದ ಪುಟ್ಟಮ್ಮ ಊಟಕ್ಕೆ ಹೋಗುವುದನ್ನು ಬಿಡಲಿಲ್ಲ. ಬಿಟ್ಟರೆ ದಕ್ಷಿಣೆ ದುಡ್ಡನ್ನೂ ಬಿಟ್ಟಂತಲ್ಲವೇ?

ಮನುಷ್ಯ ಜೀವಿ ಎಂದಮೇಲೆ ಯಾವುದು ಬೇಕು. ಯಾವುದು ಬೇಡ? ಪುಟ್ಟಮ್ಮತ್ತೆಯ ಮಾತಿನಲ್ಲಿ ಹೇಳುವುದಾದರೆ “ಕಡೆಗೆ ಉಡುದಾರವೂ ಬೇಕಾದ್ದೇ.” ಊಟ ತಿಂಡಿ ಕೆಲಸ ಮಾಡಿದವರ ಮನೆಯಲ್ಲಿ ಕಳೆಯುತ್ತದೆ ಸೈ. ಆದರೆ ಕಾಸು? “ಅಳ್ಳೆ ಅಳ್ಳೆ ಭರ್ತಿ ಆಪ ಹಾಂಗೆ ಉಂಡು ತೇಗಿದ್ ಮೇಲೆ ದುಡ್ಡ ಮತ್ತೇನ? ಮುಂಡೇರಿಗೆಲ್ಲ ಎಂತ ಖರ್ಚ್? ತಿಂಗ್ಳಿಗೊಂದ್ಸಲ ತಲೆಬೋಳ್ಸಿಕೊಂಬುದು ಬಿಟ್ರೆ!” ಅಂತ ಒಮ್ಮೆ ದೋಣಿಮಂಡೆ ಆನಂದರಾಯರ ಮನೆಯಲ್ಲಿ ಕೇಳಿದ ಮಾತನ್ನು ಕೇಳಿಯೇ ಇಲ್ಲವೆಂಬಂತೆ ಜೋರಾಗಿ ಮಜ್ಜಿಗೆ ಕಡೆದಿದ್ದಳು ಪುಟ್ಟಮ್ಮತ್ತೆ. ಜಗಳ ಮಾಡಿದರೆ ಏನು ಬಂತು? ತನ್ನ ಯೋಗ್ಯತೆಯೇ ಅಷ್ಟು ಅಂತ ಅಂದುಕೊಂಡು ಬಿಟ್ಟರೆ ಮರುದಿನ ಬೆಳಿಗ್ಗೆ ಏಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಮೂಡುವ ಸೂರ್ಯನನ್ನು ಕಲ್ಲುಹೊಡೆದು ಉರುಳಿಸುವ ಅಂತಲೇ ಕಾಣುತ್ತದೆ.

ಅಂದಮೇಲೆ ಏನಾದರೂ ಕಾರುಬಾರು ಮಾಡುವುದೆಂದರೆ ದಕ್ಷಿಣೆ ದುಡ್ಡೇ ಬೇಕು ಅಂತಾಯಿತಲ್ಲ. ಸಾಲಿಗ್ರಾಮ ತೇರಿಗೆ ಮೇಲಿನೂರಿಂದ ಊರವರು ಬರುತ್ತಾರೆ. ಗುರುತಿನವರು, ಅಂದಿಗರು ಸಿಕ್ಕರೆ ಚಿನ್ನ ಕಂಡಷ್ಟು ಹಿಗ್ಗಿ ಮಾತನಾಡಿಸುತ್ತಾರೆ. ಕೈ ಮೇಲೆ ಹಬ್ಬದ ಖರ್ಚಿಗೆ ಯಥಾನುಶಕ್ತಿ ದುಡ್ಡನ್ನು ಇಡುತ್ತಾರೆ. ಹಾಗೆ ಪುಟ್ಟಮ್ಮತ್ತೆಯನ್ನು ಮಾತಾಡಿಸುವವರಿದ್ದಾರೆ. ಅವಳಿಗೂ ಅವಳ ಕೈ ಹಿಡಿದುಕೊಂಡು ತೇರಿನ ಸಂಭ್ರಮದಲ್ಲಿರುವ ಮಗಳಿಗೂ ದುಡ್ಡು ಕೊಡುತ್ತಾರೆ. ಒಟ್ಟಾದ ದುಡ್ಡಿನಿಂದ ಆಕೆ ತನಗೆ ಬೇಕೆಂಬಷ್ಟು ಅಲದಿದ್ದರೂ ಮಳೆಗಾಲ ಕಳೆಯುವ ಮಟ್ಟಿಗಾದರೂ ಹಬ್ಬಕ್ಕೆ ಘಟ್ಟದ ಮೇಲಿಂದ ಬರುವ ಮೆಣಸು, ಪುಟಾಣಿ ಇತ್ಯಾದಿ ಕೊಂಡಾಳು. ಓಲೆ ಚಾಪೆಗೋ, ಪಟ್ಟೆ ನೂಲಿಗೋ, ಹೆಣ್ಣಿನ ರಿಬ್ಬನು ಬಳೆಗೋ ಸಾಲಿಗ್ರಾಮ ತೇರಿನ ಹಸರ ಒಂದೇ. ದುಡ್ಡು ಉಳಿಯಿತೆಂದರೆ ಮಳೆಗಾಲದಲ್ಲಿ ಓಲಿ ಕೊಡಿಗೂ ಸಾಕಾಗುತ್ತದೆ. ಡಾಂಬರು ಬಳಿಸಿದರೆ ಆ ಕೊಡೆ ಮೂರು ನಾಲ್ಕು ವರ್ಷಕ್ಕೂ ಹೆಚ್ಚು ಬಾಳೀತು.

ಹಬ್ಬಕ್ಕೆ ಬಂದವರಲ್ಲಿ ಕೆಲವರು ಪುಟ್ಟಮ್ಮನಿಗೆ ಘಟ್ಟದ ಆಸೆ ತೋರಿಸಿದ್ದುಂಟು. ಆದರೆ ಹಾಗೆ ಹೋಗಿ ಒಂದು ಹೋಗಿ ಒಂದಾದರೆ ಎಂಬ ಹೆದರಿಕೆ ಪುಟ್ಟಮ್ಮತ್ತೆಯನ್ನು ಕಾಡಿತ್ತು. ಅದಕ್ಕೆ ಸರಿಯಾಗಿ ರಂಗಪ್ಪಯ್ಯನ ಹೆಂಡತಿ, ಬಾರಾಬಾಯಿ ಹೆಂಗಸು, “ಮೇಲಿನೂರಿಗೆ ಹೋಗಿ ಹೊಟ್ಟೆ ಬರಿಸಿಕೊಂಡು ಕಡೆಗೆ ಯಾರ ಮನೆ ಗಂಡಸ್ರ ಮೈಗೆ ಹೆಸರು ಒರೆಸಲಿಕ್ಕೆ?” ಎಂದು ಕೊಂಕಿದಾಗ ಪುಟ್ಟಮ್ಮನ ಆಸೆ ಅಲ್ಲಿಗೆ ಕಂತಿಯೇ ಹೊಗಿತ್ತು. ಹಾಗೆ ಒಮ್ಮೆ ರಂಗಪ್ಪಯ್ಯನ ತಂಗಿ ಜಯಲಕ್ಷ್ಮಿ ಎಂಬಾಕೆ ಮುಟ್ಟಾದಾಗ ಹಿಂಬದಿ ಜಗಲಿಯ ಮೂಲೆಯಲ್ಲಿ ಹಿಡಿಕಟ್ಟೆಗೆಂದು ತೆಂಗಿನಗರಿ ಕೀಸುತ್ತಾ ಕೇಳಿದ್ದಳು. “ಪುಟ್ಟಮ್ಮಾ, ನನ್ನದೇ ಸರಿಯಾಣಿ ನೀನು. ನಿಂಗೂ ಹಸಿವು ಬಾಯಾರಿಕೆ ಆಗದಿದ್ದೀತೇ?”

ಜಯಲಕ್ಷ್ಮೀ, ಹಸಿವು ಬಾಯಾರಿಕೆ ಆಗದವರು ಯಾರಿಲ್ಲ. ಆದರೆ ಅದೆಲ್ಲ ಇರುವುದು ಇಗಾ ಇಲ್ಲಿ. ಈ ಎದೆಯಲ್ಲಿ, ಇದನ್ನೊಂದು ಕಲ್ಲುಮಾಡಿ ಕೊಂಡರೆ ಎಲ್ಲ ಪಸೆ ಒಣಗಿ ಬೇಗ ಚಿರುಟಿ ಹೋದೀತು – ಆಕೆ ಹಾಗೆಂದ ರೀತಿಗೆ ಜಯಲಕ್ಷ್ಮಿ ನಕ್ಕಾಗ ಪುಟ್ಟಮ್ಮನಿಗೂ ನಗೆಯೇ. ನಗೆಯೂ ಹಲವೊಮ್ಮೆ ಖಾಲಿ ಇರುತ್ತದೆಯಲ್ಲ!

ಮನೆಯಲ್ಲೆ ಉಣ್ಣುವ ಪ್ರಸಂಗ ಬಂದರೆ ನಾಲ್ಕು ಕೆಸುವಿನ ದಡಿಕಿತ್ತಳು. ಒಂದು ಹುಳಿ ಮಾಡಿದಳು. ಎರಡು ಬೆಳ್ಳುಳ್ಳಿ ಬೇಳೆ ಒಗ್ಗರಣೆ ಹಾಕಿ ಒಂದು ಬಟ್ಟಲು ಅನ್ನ ಉಂಡಳು. ತೊಂಡೆಸೊಪ್ಪು ಕೊಯ್ದು ಹುರಿದು ಕಾಯಿ ಸುಳಿಯೊಂದಿಗೆ ಒಂದು ಸೊಲಿಗೆ ಮಜ್ಜಿಗೆ ಬಿಟ್ಟುಕೊಂಡು ಅರೆದು ಮಾಡಿದ ತಂಬುಳಿಯಲ್ಲಿಯೇ ಅವಳೂ ಮಗಳೂ ಉಂಡ ದಿನ ಎಷ್ಟು! ಏನೂ ಇಲ್ಲದ ದಿನ ಇದ್ದ ಒಂದೇ ಕದಿರಿಗೆ ಒಂಚೂರು ಬಡಿಸಿದಳು. ತಾನು ಅನ್ನಕ್ಕೆ ನೀರು ಎಣ್ಣೆ ತಟಕು ಬಿಟ್ಟುಕೊಂಡು ಉಪ್ಪಿನಕಾಯಿ ರಸ ಮುಟ್ಟಿಕೊಂಡು ಉಂಡಳು. ಎದ್ದಳು. ಮಗಳಂತೂ ಒಂದಿನ ಇಂಥ ವಸ್ತು ತನಗೆ ಬೇಕು ಎಂದು ಹಟ ಮಾಡಿದ್ದಿಲ್ಲ.

ಅದರ ಅದೃಷ್ಟಕ್ಕೆ ರಂಗಪ್ಪಯ್ಯನೇ ನೆಂಟಸ್ತಿಕೆ ಹುಡುಕಿಕೊಟ್ಟರು. ಮದುವೆ ಖರ್ಚನ್ನೂ ವಹಿಸಿಕೊಂಡರು. ಹೆಣ್ಣು ಇದ್ದದ್ದೇ ಗೊತ್ತಾಗಲಿಲ್ಲ. ಅವಳನ್ನು ಸಾಕಿದ್ದೇ ಗೊತ್ತಾಗಲಿಲ್ಲವೆಂದು ಅದು ಗಂಡನ ಮನೆಗೆ ಹೋಗುವಾಗ ತಂಪಿನ ದುಃಖ ಮೇಲೆ ಮೇಲೆ ಬಂತು. ಆದರೆ ವರ್ಷದೊಳಗೆ ದುಃಖ ವಿಕರಾಳವಾಗಿ ಎರಗಿತು. ಮಗಳು ಬಸುರಾಗಿಯಾಯಿತು, ಹೆತ್ತಾಯಿತು. ಪುಟ್ಟಮ್ಮತ್ತೆಯ ಕರುಳಿಗೆ ಬೆಂಕಿಕೊಟ್ಟು ನಡೆದಾಯಿತು. ಅಳಿಯನಾದವ ಬಂದ. ಹೆಣ ನೋಡಿದ. ಮಗು ಹೇಗಿದೆ ಎಂದು ಇಣುಕಿದ. ಹೊರಟುಹೋದ. ಕ್ರಿಯೆಯನ್ನು ಗೋಕರ್ಣದಲ್ಲಿ ಮಾಡಿದೆ ಎಂದು ಸುದ್ದಿ ಕಳಿಸಿದ. ಮಗು, ಹೆಣ್ಣು ಮಗು, ಪುಟ್ಟಮ್ಮತ್ತೆಯ ಹತ್ತಿರ ಉಳಿಯಿತು. “ನಾನದನ್ನು ಅಂದೇ ಅಪ್ಪನೊಟ್ಟಿಗೆ ಕಳಿಸಿಪ್ಪೆನಲೆ, ಗೆದ್ದು ಹೊಡೀತಿದ್ದೆ. ಹೊಸ್ತಾಗಿ ಬಪ್ಪವಳು ತಾಟಕಿಯೋ ಲಂಕಿಣಿಯೋ ಆಯಿದ್ರೆ! ಮಗುವಿನ ಕೈಯಲ್ಲಿ ಹೆಡಿಗೆಯಲ್ಲಿ ನೀರು ಹೊರಿಸಿರೆ! ಹೆತ್ತ ಕರುಳೆಂಬುದು ಇತ್ತಲೆ, ತಾವರೆದಂಟಿಗಿಂತ ಮೃದು, ಕದಿರು ಉದುರಿತೆಂದು ಕದಿರಿನ ಕುಡಿಯನ್ನು ಒಣಗಿ ಸುಕಾತ್ತಾ? ಚೋಟುದ್ದದ ಮಗುವನ್ನು ಇಷ್ಟುದ್ದ ಬೆಳೆಸಬೇಕಾರೆ ಈ ಪುಟ್ಟಮ್ಮತ್ತೆಯೆಂಬವಳ ಬೆನ್ನು ಬಗ್ಗಿಯೇ ಹೋಯ್ತ್….”

ಪುಟ್ಟಮ್ಮತ್ತೆಯ ತುಟಿಗಳು ಅಲುಗತೊಡಗಿದವು. ದುಃಖ ಕಟ್ಟಿಕೊಳ್ಳುವ ಹವಣಿಕೆಯಲ್ಲಿ ಅವಳ ಮುಖದ ಸ್ನಾಯುಗಳು ಬಿಗಿದುಕೊಂಡವು. “ಈಗ, ಇಷ್ಟು ತಡವಾಗಿ ಆ ಹೆಣ್ಣನ್ನು ಕೂಡಿಸಿಕಂಡ್ ‘ಮಗ, ವಿಷಯ ಹೀಂಗೆ ಹೀಂಗೆ. ಬದುಕೆಂಬುದು ನಾನು, ನೀನು ತಿಳ್ಕಂಡ ಹಾಗೆ ಇಲ್ಲೆ. ಮೇಲೊಬ್ಬ ಇದ್ದ. ಕಾಂತ. ಮರ್ಯಾದೆ ಇಟ್ಕಂಬುದು ನಮ್ ಕೆಲ್ಸ. ನಂಗೂ ಸಣ್ಣದಿನಲ್ಲಿಯೇ ಅಬ್ಬೆ ಸತ್ತಳು. ಕಮಲಾವತೀ, ನಾನೇನು ಸತ್ತೆನ? ಬೆಳೆದೆ. ಮದುವೆ, ಮಗು ಎಲ್ಲ ಆಯ್ಲಿಲ್ಯ? ಆಮೇಲೆಯೂ ನೀತಿ ನಿಯತ್ತು ಹದ್ದುಬಸ್ತಿನಲ್ಲಿದ್ದೆ. ಅಡುಗೆ ಬಟ್ಟರ ಹಿಂಡಿನ ಮಧ್ಯೆ ಇದ್ದೂ, ‘ಏನು ಪುಟ್ಟಮ್ಮತ್ತೆಯ ಅರೆಯುವ ಗುಂಡು ಜೋರು ಅಲ್ಲಾಡತ್ತಲೆ!’ ಎಂಬ ಹಡೆ ಮಾತಿನ ಮಧ್ಯೆಯೂ ಸೆರಗುಬಿಗಿದು ಕಟ್ಕಂಡೆ, ಮುಖ ಅಡಿ ಹಾಕ್ಕಂಡೆ, ಅರೆದೆ….” ಅಂತೆಲ್ಲ ಬೋಧೆ ಕೊಡುವ ದಿನ ಬಂತು. ಅದಕ್ಕೆ ಕಮಲಾವತಿ ಏನಂತು ಗೊತ್ತೇ ಸೌದಾಮಿನೀ? ‘ಅಜ್ಜೀ, ನೀ ಯಾಕೆ ಅಷ್ಟೆಲ್ಲ ಕಷ್ಟ ಬಂದದ್ದ್? ಏನು ಉಪಯೋಗ ಆಯ್ತ್ ಅಂತಳಿ ಬೇಕಲೆ. ನಿನ್ ಜಾಗದಗೆ ನಾನಿದ್ದಿದ್ರೆ ಕೋರ್ಟ್ ಹತ್ತುತ್ತಿದ್ದೆ. ಸಿಕ್ಕಿದಷ್ಟನ್ನ ಹಿಡಿದು ಒಂದು ದಾರಿ ಕಾಂತಿದ್ದೆ. ಬದಲು ‘ನನ್ನ ಅಮ್ಮ ಅರೆದಳು, ನಾನೂ ಅದೇ ಪಟ್ಟ ಏರ್‍ಕಂಡೆ. ಅಂತೆಳಿ ಅರೆಪಚ್ಚೆ ಹಾಂಗೆ ಹೇಳ್ತ ಸಾಯುವರೆಗೂ ರಂಗಪ್ಪಯ್ಯನ ಮನೆ ಅರೆಯುವ ಕಲ್ಲಿನ ಪೀಠ ಆತಿರ್‍ಲಿಲ್ಲೆ. ನೆನಪಿಟ್ಕೋ’ ಅಂತ ಬಾಯಿ ವಾರೆಮಾಡಿ ಚಾಳಿಸಿತು! ಈ ಮಾತಿನರ್ಥ ನೀನೇ ಹೇಳು ಹೆಂಗ್ಸೆ….”

ಪುಟ್ಟಮ್ಮತ್ತೆ ಕೊಳವೆ ಅತ್ತ ದೂಡಿದಳು. ಕಂಬಕ್ಕೆ ಒರಗಿದಳು. ಸೆರಗನ್ನು ಕಣ್ಣಿಗೊತ್ತಿಕೊಂಡಳು. ಮೂಗು ಹಿಂಡಿ ಬೆನ್ನ ಹಿಂದಿನ ಗೋಡೆಗೊರಗಿ ಬಿಕ್ಕಿದಳು. ಮತ್ತೆ ಮಾತಾಡದಾದಳು.

ಅರ್ಥವಾದರೂ ಆಗದಿದ್ದರೂ ಕೇಳುತ್ತ ಇದ್ದ ಮಕ್ಕಳು ಬೆಪ್ಪುಗಟ್ಟಿದುವು. ಸೌದಾಮಿನಿ “ಹೋಯ್ಲಿ ಬಿಡಿ ಪುಟ್ಟಮ್ಮತ್ತೆ” ಎಂದು ಮುಂತಾಗಿ ಸಮಾಧಾನ ಹೇಳಿದಳು. ಗುಂಡ್ಮಣಿ ಹಪ್ಪಳದ ಚಾಪೆಯ ಮೇಲೆ ಕಾಲು ಹಿಸಿದುಕೊಂಡು ಪುಟ್ಟಮ್ಮತ್ತೆಯನ್ನೇ ನೋಡುತ್ತಿತ್ತು. ಹೊರಗಿನಿಂದ ಮಣೆಕೊಳವೆಗಳ ದನಿ ಕೇಳದೆ ಅಚ್ಚರಿಯಿಂದ ಶೇಷಮ್ಮ ಹೊರಬಂದು ಇಣುಕಿ “ಆಹ! ಇದೀಗ ಸಮನೇ. ಸೂರ್ಯ ಸೋರಲಿಗೆ ಬಂದರೂ ಹಪ್ಪಳ ನೆರಿಲಿಲ್ಲೆ ಅಂದ್ರೆ! ಏಳಿ ಎಲ್ಲ. ಊಟವಾರೂ ಮುಗ್ಸಿ. ಹೆಣೆ ಮಂದಾಕಿನೀ, ಬಟ್ಟಲಿಡು”. ಎನ್ನಲು ಗುಂಡ್ಮಣಿ ಮೆಲ್ಲ ಎದ್ದು ಬಂದು ಪುಟ್ಟಮ್ಮತ್ತೆಯ ಕಣ್ಣುನೀರನ್ನೇ ಅಚ್ಚರಿಯಿಂದ ನೋಡುತ್ತ ಅವರನ್ನಲ್ಲಾಡಿಸಿ “ಪುಟ್ಟಮ್ಮತ್ತೇ, ಹಸಿವು ಬಾಯಾರಿಕೆ ಅಂದ್ರ್ಯಲೆ, ಏಳಿ, ಉಂಬುಕೆ ಹೋಗಿ” – ಎಂದ.

* * * *

ಹಿಂದೆ ಪುಟ್ಟಮ್ಮತ್ತೆ ಎಲ್ಲಿಗೆ ಹೋಗುವುದಾದರೂ ಮೊಮ್ಮಗಳನ್ನು ಬಿಟ್ಟು ಹೋಗಲಾರಳು. ಹೊರ ಜಗಲಿಯಲ್ಲಿ ತನ್ನ ಪ್ರಾಯದ ಮಕ್ಕಳೊಂದಿಗೆ ಆಕೆ ಆಟವಾಡುತ್ತ ಅಜ್ಜಿಯ ಕೆಲಸ ಮುಗಿಯುವವರೆಗೂ ಕುಳಿತ್ತಿರುತ್ತಿದ್ದಳು. ಕರವೀರ ಬೀಜ ಬೇಕೇ, ಚನ್ನೆಕಾಳು ಬೇಕೇ, ಕಿಸ್ಕಾರ ಹಣ್ಣು? ಎಲ್ಲದಕ್ಕೆ ಪುಟ್ಟಮ್ಮತ್ತೆ ಮೊಮ್ಮಗಳ ಹತ್ತರ ಕೇಳಿದರೆ ಸಿಕ್ಕಿತೆಂದೇ ಲೆಕ್ಕ. ಅವಳಿಗೆ ಪುಟ್ಟಮ್ಮತ್ತೆ ‘ಕಮಲಾವತೀ’ ಎಂದೇ ಹೆಸರಿಟ್ಟಳು. ದೀರ್ಘವನ್ನೂ ಕೂಡಿಸಿ ಇಡೀ ಹೆಸರನ್ನೇ ಕರೆದಾಳು ಹೊರತು ಎಂದಿಗೂ ಅರ್ಧ ಮಾಡಳು. ಹೆಣ್ಣಿನ ಮೂಗಲ್ಲಿ ಒಂದು ದಿನ ಸಿಂಬಳಸುರಿದದ್ದಿಲ್ಲ. ಕಣ್ಣಿಗೆ ಕಾಡಿಗೆ ತಪ್ಪಿದ್ದಿಲ್ಲ. ಅವಳ ಕಿವಿಗೊಂದು ಸಣ್ಣ ಲೋಲಾಕನ್ನು ಮಡಿಸಿ ಹಾಕಿದ್ದಳು ಪುಟ್ಟಮ್ಮತ್ತೆ. ಅಬ್ಬೆ ಸತ್ತ ಮಗು ಎನ್ನುವಾಗ ಮಾತ್ರ ಯಾವತ್ತೂ ಅವಳ ಗಂಟಲು ಕಟ್ಟಿಬರುತ್ತದೆ. ಏನು ಕೊಟ್ಟರೂ ಮಡಿಲೊಳಗೆ ತುಂಬಿಕೊಂಡಾಳು. ಮೊಮ್ಮಗಳಿಗೆ ಕೊಟ್ಟಾಳು.

“ಇದು ಮಹಾ ಗರಾಸಿಯಾದೀತು. ನನ್ನ ಮಗಳಂತಲ್ಲ” ಎಂದು ಕೊಂಗಾಟದಿಂದ ಬೈಯುತ್ತ “ಶೇಷಮ್ಮ, ಒಂಚೂರು ಎಣ್ಣೆ ಕೊಡು ಕಾಂಬ.” ಎಂದು ಕೇಳಿ ಅದರ ತಲೆಗೆ ಪೂಸಿ ಬಿಗಿಯಾಗಿ ಜಡೆ ಕಟ್ಟಿ ಬಾಳೆನಾರು ಸುತ್ತಿದರ ನಾಳೆ ಬಿಚ್ಚುವವರೆಗೂ ಆ ಜಡೆ ಅತ್ತಿತ್ತ ಆಗಲಿಕ್ಕಿಲ್ಲ.

“ಪುಟ್ಟಮ್ಮತ್ತೆ, ಅತೀ ಹಚ್ಕಂಬೇಡ. ನಾಳೆ ತಲಿ ಮೇಲೆ ಹೇಲೀತು” ಎಂದು ಎಚ್ಚರಿಸಿದವರಿಗೇನೂ ಕಡಿಮೆಯಿಲ್ಲ.

ದಿನ ಕಳೆಯಿತು. ಪುಟ್ಟಮ್ಮತ್ತೆಯ ತಲೆಗೂದಲು ಸೆರಗು ಮುಚ್ಚಿಟ್ಟಲ್ಲೇ ಬೆಳ್ಳಗಾಯಿತು. ಕಾಲ ಯಾರಪ್ಪನ ಗಂಟು? ಅದು ಕರಗುವುದೋ, ಹೆಚ್ಚಾಗುವುದೋ ಎಂಬುದು ಯಾವತ್ತೂ ಬಗೆಹರಿಯದ್ದು. ಸುಲಭವಾಗಿ ಹೇಳಬೇಕೆಂದರೆ ಪುಟ್ಟಮ್ಮತ್ತೆಯ ಮಟ್ಟಿಗೆ ಕಾಲ ಕರಗುತ್ತದೆಯಾದರೆ ಕಮಲಾವತಿಯ ಪಾಲಿಗೆ ತುಂಬುತ್ತ ಬಂತು ಎನ್ನುವುದೇ ಸಮನಷ್ಟೆ!

ಕಮಲಾವತಿಯ ಪ್ರಾಯ ತನ್ನ ಪ್ರಾಯದಂತಲ್ಲ. ದಕ್ಷಿಣೆ ದುಡ್ಡಿನಲ್ಲಿ ತಾನು ದಿನ ದೂಡಿದೆನೆಂದರೆ ಕಮಲಾವತಿಗೆ ಅದು ಸಾಧ್ಯವಿಲ್ಲವೆಂದು ಪುಟ್ಟಮ್ಮತ್ತೆಗೂ ಗೊತ್ತಾಗಿದೆ. “ದುಡ್ಡು ಕೇಂಡ್ರೆ ಏನಾತ್?” ಎಂದು ಕೆಲಸ ಮುಗಿಸಿ ಮರಳುವ ಅಜ್ಜಿಯನ್ನು ಕಮಲಾವತಿ ಕೇಳುತ್ತಾಳೆ. ಅವತ್ತೊಂದು ದಿನ ಬೇಣದ ಮನೆ ಶಾಮರಾಯರ ಮನೆಯಲ್ಲಿ ಪುಟ್ಟಮ್ಮತ್ತೆ ಬಡಿಸಲು ಹೋದಾಗ ತಾನೂ ಸೇರಿಕೊಂಡಳು. ಆಗ ಊಟಕ್ಕೆ ಕುಳಿತ್ತಿದ್ದ ಕೆಳಕೇರಿ ಬಾಬು ಎಂಬವ ಕಣ್ಣು ಹೊಡೆದನಂತೆ. ಒಂದು ಸೌಟು ಬಿಸೀ ಸಾರನ್ನೇ ಅವನ ತಲೆಯ ಮೇಲೆ ಹೊಯ್ದೇಬಿಟ್ಟಳು. ಮನೆಗೆ ಮರಳುವಾಗ ಅಜ್ಜಿಯ ಪರವಾಗಿ ಶಾಮರಾಯರ ಹೆಂಡತಿಯ ಬಳಿ ತಾನೇ ಐದು ರೂಪಾಯಿ ಕೇಳಿ ಗೆದ್ದುಕೊಂಡೇ ಬಂದಳು. ಎದುರುಮನೆ ಅಚ್ಚುಮಾಣಿಯನ್ನು ಕರೆದುಕೊಂಡು ಸಿನಿಮಾಕ್ಕೆ ಎದ್ದಳು. ಸಿನೆಮಾ ಎಂದರೆ ಅನ್ನ ನೀರು ಬಿಟ್ಟು ನೋಡಿಯಾಳು ಕಮಲಾವತಿ. ಆಕೆ ‘ಎಲ್ಲಿರಬೇಕೋ ಅಲ್ಲಿಲ್ಲ’ ಎಂಬ ಮಾತುಗಳು ಇನ್ನಷ್ಟು ಪುಕ್ಕ ಕುತ್ತಿಕೊಂಡು ಮದುವೆಗೆ ಕಷ್ಟವಾಗುತ್ತಿರುವ ಸಂಕಟವನ್ನು ಪುಟ್ಟಮ್ಮತ್ತೆ ಅವಳೊಡನೆ ಹೇಳಲೂ ಆರಳು.

“ಬೀಜ ಅಂಥದ್ದು ಏನು ಮಾಡೂದು? ಇಲ್ದಿದ್ರೆ ಜಗಲಿ ಮೇಲೆ ತಲೆ ಬಾಚೂಕೆ ಕೂತ್ರೆ ಎದುರುಮನೆ ಮೀನಾಶ್ಚಿ ‘ಆಯ್ಲಿಲ್ಯನಾ ಇನ್ನೂ? ಎಷ್ಟುದ್ದ ಕೂದ್ಲೂ, ಏನು ಕತೀ’ ಎಂದು ಇವಳ ಚೋಂಟು ಕೂದಲಿಗೆ ಹೇಳಿರೂ ಗೆರೆ ಮುಟ್ಟುವುದಿಲ್ಲೆ. ಮೀನಾಶ್ಚಿ ತನ್ನ ಗಂಡ ಒಳ ಹೊರ ಓಡಿಯಾಡುವ ಕೋಣಿ ಕಂಡಿಯನ್ನ ಭಡಾರಂತೆಳಿ ಮುಚ್ಚಿರೂ ಹೆಣ್ನು ಅಜುಕತ್ತಿಲ್ಲೆ. ಬದಲು ‘ಅವಳ ಗಂಡನ್ನೇ ಹಿಡೀಕಾ ನಾನ್? ಬೇರೆ ಗಂಡಸ್ರಿಲ್ಯ ಊರಗೆ?’ ಎಂದು ಮಾನ ಇಲ್ದಿದ್ದವ್ರ ಹಾಂಗೆ ಗೊಣಗತ್” ಎಂದು ಗುಟ್ಟಲ್ಲಿ ಶೇಷಮ್ಮನೊಡನೆ ಹೇಳಿಯೂ ತಣಿಯಲಾರಳು ಪುಟ್ಟಮ್ಮತ್ತೆ.

ಶೇಷಮ್ಮನ ಮಗಳು ಸೌದಾಮಿನಿಯನ್ನು ನೋಡಲಿಕ್ಕೆ ಬಂದ ದಿನದ ಕತೆಯಂತೂ ಈಗ ನೆನೆದರೂ ಪುಟ್ಟಮ್ಮತ್ತೆಗೆ ಹೇಲು ಮೆಟ್ಟಿದಂತಾಗುತ್ತದೆ. ಪುಟ್ಟಮ್ಮತ್ತೆಯ ಮನೆ ಬಾವಿಕಟ್ಟೆಯನ್ನು ದಾಟಿಕೊಂಡೇ ಹುಡುಗನ ಕಡೆಯವರು ಆ ಮನೆಗೆ ಹೋದರು. ಕಮಲಾವತಿ ಕಂಡಿಯಿಂದಲೇ ಇಣುಕಿದಳು. ‘ಆಗ! ಬಹುಶಃ ಅವನೇ, ಫುಲ್‌ಕೈ ಶರ್ಟ್ ಹಾಕ್ಕಂಡಿದ್ನಲೆ, ಅವ’ ಎಂದಳು. ಪುಟ್ಟಮ್ಮತ್ತೆಯೂ ಇಣುಕಿದಳು. ಆಯಿತು, ಒಳಬಂದು ಹುಳಿ ಮಡಲಿಕ್ಕೆ ಹಿಂದಿನ ದಿನ ಶೇಷಮ್ಮ ಕೊಟ್ಟ ಒಂದಷ್ಟು ಸಾಂಬ್ರಾಣಿಯನ್ನು ಗೋಣಿಯೊಳಗೆ ತುಂಬಿ ಬಡಿದು ಸಿಪ್ಪೆ ತೆಗೆಯುತ್ತ ಕುಳಿತಳು. ಎಸರು ಕುದಿಯುತ್ತಿತ್ತು. ‘ಹೆಣೆ, ಅನ್ನಕ್ಕೆ ಅಕ್ಕಿ ಹಾಕು’ – ಎಂದರೆ ಹ್ಞೂಂ ಇಲ್ಲ ಹ್ಞಾಂ ಇಲ್ಲ.

ಈ ಹೆಣ್ಣು ಎಲ್ಲಿಗೆ ಹಾರಿತಪ್ಪ ಎಂದುಕೊಳ್ಳುವುದರೊಳಗೆ ರಂಗಪ್ಪಯ್ಯನ ಮನೆಯಿಂದ ಅರ್ಜೆಂಟ್ ಬರಲು ಕರೆಬಂತು. ಹಿಂಬಾಗಿಲಿನಿಂದ ಮೆಲ್ಲ ಒಳಗೆ ಹೋದರೆ “ಯಂತ ಪುಟ್ಟಮ್ಮತ್ತೆ, ನಿಂಗಾರೂ ಬುದ್ಧಿ ಬೇಡ್ದ? ಹೆಣ್ಣು ಕಾಂಬುಕೆ ಬಂದಿದ್ರ್. ನಿನ್ನ ಮೊಮ್ಮಗಳು ಅವರೆದುರೆ ಮೈ ಕುಣ್ಸಿಕಂಡು ಈಗ ಬಂದದ್ ಯಾಕೆ? ಬಂದವ ಕಮಲಾವತಿಯನ್ನೇ ಆಯ್ತು ಎಂದ್ರೂ ಎಂದ್ನೇ. ಈಗಿನವಕ್ಕೆ ಬೇಕಾದ್ದು ಬಿಳಿಚರ್ಮ ಮಾತ್ರ ಅಲ್ದ?” ಎಂದು ಸಿಡುಕಿದಳು ಶೇಷಮ್ಮ. ಪುಟ್ಟಮ್ಮತ್ತೆ ‘ಆ ದಿಗಡದಿಮ್ಮಿ ಎಲ್ಲಿದೆ?’ ಎಂದು ಕೇಳಿದರೆ ಚಾವಡಿಗೆ ಕಾಣುವಂತೆ ಪಡಸಾಲೆಯ ಕಂಬದ ಸುತ್ತಲೂ ಕೈಹೊಸೆದುಕೊಂಡು ಓಲಾಡುತ್ತಾ ಸೌದಾಮಿನಿಯೊಂದಿಗೆ ಪಟ್ಟಾಂಗದ ಪೆಟ್ಟಿಗೆ ಬಿಚ್ಚಿಕೊಂಡಿತ್ತು. ಎರಡು ಬಡಿದು ಕರೆದುಕೊಂಡು ಹೋಗುವಂತಿದೆಯೇ? ನಿಂತಲ್ಲಿಂದಲೇ ಕಣ್ಣು ಕೆಂಚರಿಸಿದಳು ಪುಟ್ಟಮ್ಮತ್ತೆ. ಏನು ಕಂಡಿತೋ, ಸೀದ ಬಂದಳು. ಮನೆ ಮುಟ್ಟುವವರೆಗೂ ಉಪ್ಪು ಉಪ್ಪಿನ ಕಲ್ಲೆನ್ನಲಿಲ್ಲ. ಬಾವಿಕಟ್ಟೆ ತಲುಪಿದ ಮೇಲೆ ಅಲ್ಲಿಂದ ಒಳಗೆ ಬರಲಿಲ್ಲ. ‘ಆಟ ಪೂರ್ತಿ ಕಾಂಬೆ’ – ಎಂದಳು ಪುಟ್ಟಮ್ಮತ್ತೆ ದೊರಸಾಗಿ.

ಮೈಮೇಲೆ ದೈವ ಆಳಿದಂತೆ ಹುಡುಗಿ ನೀರು ಎತ್ತಿ ಎತ್ತಿ ಕೈತೊಳೆಯುವ ಬಾನಿ ತುಂಬಿತು. ಮಲ್ಲಿಗೆ, ಜಾಜಿ, ಪಾರಿಜಾತ, ಇರುವಂತಿಗೆ, ಕಾಶಿತುಂಬೆ – ಎಲ್ಲ ಗುತ್ತಿಗಳಿಗೂ ನೀರಿನ ಸಮಾರಾಧನೆಯಾಯಿತು. “ಏನೇ ಆಗಲಿ, ಗಿಡದ ಒಡಲು ತಂಪಾಯಿತಾ ಇಲ್ಲ್ಯ?” – ಎಂದು ಕಸಕ್ಕನೆ ನಕ್ಕಳು ಪುಟ್ಟಮ್ಮತ್ತೆ. ಸಾಂಬ್ರಾಣಿ ತುಂಬಿದ ಪಾತ್ರೆ ಒಳಗೊಯ್ದು ಅಡುಗೆ ಮುಂದರಿಸಿದಳು. ಸ್ವಲ್ಪ ಹೊತ್ತಿನಲ್ಲಿಯೇ ಬಂದವರು ರಂಗಪ್ಪಯ್ಯನ ಮನೆ ಮೆಟ್ಟಲು ಇಳಿಯುವುದು ಕಿಂಡಿಯಿಂದ ಕಾಣಿಸಿತು. ಹೊರಗೆ ಬಂದು ಕಂಡರೆ ಕಮಲಾವತಿ ಮೇಲಿಂದ ಉಂಗುಷ್ಠದವರೆಗೂ ಒದ್ದೆಯಾಗಿ ಬಾವಿಗೆ ಕೊಡಪಾನ ಇಳಿಸಿ ನಿಂತಿದ್ದಳು. “ಅಬ್ಬೆ ಹ್ಯಾಂಗೂ ಹೋಯಾಯಿತು. ಅಪ್ಪನೂ ಸತ್ತನಾ ಎಂತ?” – ಮಾತಿಲ್ಲ. “ಮದ ಏರಿತ್ತನಾ ನಿಂಗೆ? ಒಳಗೆ ಬಂದು ಏನಾರೂ ಕೆಲಸ ಕಾಂಬುಕಾತ್ತಿಲ್ಯ?” – ಮಾತಿಲ್ಲ. “ಬಾ ಮಾರಾಯ್ತೀ ಕಮಲಾವತೀ, ಅವ್ರೆಲ್ಲ ಬಪ್ಪಹೊತ್ತಿಗೆ ಈ ವೇಷ ಬೇಡ.”

“ಅಜ್ಜೀ. ಇದು ನಮ್ಮನೆ ಬಾಮಿಕಟ್ಟೆ. ರಂಗಪ್ಪಯ್ಯನ ಮನೆ ಪಡಸಾಲೆಯಲ್ಲ” ಕಮಲಾವತಿಯ ಸ್ವರ ಹೊತ್ತಿ ಉರಿಯುತ್ತಿತ್ತು. ಅಷ್ಟರೊಳಗೆ ಗಂಡಿನ ದಂಡು ಬಂತು. ಬಾಗಿಲೊಳಗಿಂದಲೇ ಇಣುಕಿದಳು ಪುಟ್ಟಮ್ಮತ್ತೆ. ಕಮಲಾವತಿಯೂ ಹುಡುಗನೂ ಒಬ್ಬರನ್ನೊಬ್ಬರು ಕಂಡು ಮುಗುಳಾದದ್ದು ಕಣ್ಣಿಗೆ ಬಿತ್ತು. ಒಂದು ಕ್ಷಣ ಇಡೀ ದಂಡೇ ಈಚೆ ತಿರುಗಿತು. ಹೊರಟುಹೋಯಿತು. ದರಗುಟ್ಟಿ ನೀರು ಸುರಿಯುತ್ತಿದ್ದ ಸೀರೆಯನ್ನು ಮೊಣಕಾಲಿನವರೆಗೂ ಎತ್ತಿಕೊಂಡು ಹಿಂಡುತ್ತಾ ಕಮಲಾವತಿ ಮನೆಯೊಳಗೆ ಬಂದಳು. ’ಒಳಗೆಲ್ಲ ನೀರು ಮಾಡ್ಬೇಡ’ ಎಂದರೆ ಬೇಕೆಂದೇ ಓಡಿಯಾಡಿ ‘ನಾ ಒರೆಸಿರೆ ಸೈಯಲ್ಲ’ ಎಂದಳು. ಸ್ವರದಲ್ಲಿ ಗೆಲವೆಂದರೆ! ಈ ರಂಡೆ ಮನಸ್ಸಿನಗೆ ಅವ ತನ್ನನ್ನೇ ಮದುವೆಯಾತ ಅಂತವೋ ಏನೋ, ಅತೀ ಸಿನೆಮಾ ಕಂಡ್ರೆ ಯಾಕಾತ್ತ್? ‘ಮಗೂ ಕಮಲಾವತೀ, ಗುಂವಿಯೊಳಗೆ ತಾವರೆ ಅರಳಿರೂ ಅದನ್ನ ಕೋಳೆ ಹೂವು ಅಂಬರೇ ಹೊರ್‍ತು ತಾವರೆಯೆನ್ನರು’- ಪುಟ್ಟಮ್ಮತ್ತೆ ಗೊಣಗಿಕೊಂಡಳು. ಶೇಷಮ್ಮನ ಮಾತು ಬದ್ಧವೇ. ಕಮಲಾವತಿಯನ್ನು ಆ ದಸಾಲು ಬುಡ್ಕಿ ಸೌದಾಮಿನಿಯೆದುರು ಸುಳಿದಿಡಬೇಕು. ಆದರೂ ಸೌದಾಮಿನಿಯ ಗಂಡ ಎಂದಿಗೂ ಕಮಲಾವತಿಯವನು ಆಗಲಾರ. ಹಾಗೆಂತ ತನಗೆ ಗೊತ್ತು. ಕಮಲಾವತಿಗೆ ಗೊತ್ತೇ? ಯಾಕಾಗಬಾರದು ಎಂದಾಳು. ಎರಡು ನೋವು ತಿನ್ನಲಿ ಎಂದುಕೊಂಡಳು ಪುಟ್ಟಮ್ಮತ್ತೆ.

ಕೆಲವೇ ದಿನಗಳಲ್ಲಿ ರಂಗಪ್ಪಯ್ಯನ ಮನೆ ಮುಂದೆ ಚಪ್ಪರವೆದ್ದಿತು. ಸ್ವತಃ ಶೇಷಮ್ಮನೇ-ಕಮಲಾವತಿ ಮದುವೆಗೆ ಬಂದಾಗ ನಾಲ್ಕು ಜನ ಕಂಡಾರು. ಮೇಲಿಂದ ಪರಮೇಶ್ವರ, ತನ್ನ ಹಿರಿಯಮಗ ಬರುತ್ತಾನೆ. ಅವನೇನಾದರೂ ದಿಕ್ಕುದೆಸೆ ತೋರಿಸಿಯಾನು ಎಂದು ಹೇಳಿದಳು. ಮದುವೆಯ ದಿನ ಸವುಳು ಸವುಳಾಗಿ ಎತ್ತರವಿದ್ದ ಹುಡುಗನೆದುರು ಬುಡ್ಕ-ಬುಡ್ಕಾದ ಸೌದಾಮಿನಿಯನ್ನು ತಂದು ನಿಲ್ಲಿಸಿದಾಗ ಒಂದೇ ಪೆಟ್ಟಿಗೆ ಹುಡುಗ ಚಂಯ್ಕ ಆಗದಿದ್ದರೆ ಸಾಕು ಎಂದು ಅವರಿವರು ಮಾತಾಡಿಕೊಂಡು ನಕ್ಕಾಗ ಸಂತೋಷಪಟ್ಟವಳೆಂದರೆ ಕಮಲಾವತಿಯೇ. ದುಃಖಪಟ್ಟವಳೂ ಅವಳೇ. ಮತ್ತೆ ಪುಟ್ಟಮ್ಮತ್ತೆಯೂ. ಕಮಲಾವತಿಗಾದರೆ ಎಷ್ಟು ಚಂದದ ಜೋಡಿ ಆತ್ತಿತ್ತಲೆ! ಎಂದು ಕೆನ್ನೆಗೆ ಕೈಕೊಟ್ಟು ಯೋಚಿಸಿದಳು. ಹಾಗಾದರೆ ಅವಳ ಗಂಡ ಎಲ್ಲಿ ಕೂತಿದಾನು ಎಂದೂ ಅವರಿವರೊಡನೆ ಹೇಳಿಕೊಂಡು ವಿಲಿಗುಟ್ಟಿದಳು.

ಮದುವೆ ಮನೆಯ ತುಂಬ ಕಮಲಾವತಿಯ ಓಡಾಟವೆಂದರೆ! ಆದರೆ ‘ಯಾರು ಆ ಹೆಣ್ಣು?’ ಎಂದು ಕೇಳಿದವರು ಮುಂದಿನ ಆಸ್ಥೆ ತೋರಿಸಲಾರರು. ಖಾಲಿ ಹೆಣ್ಣು ಮಾತ್ರವೆಂದ ಮೇಲೆ, ಹಿಂದೆಮುಂದೆ ಆಧಾರವೋ ಚಿನ್ನವೋ ಅಂತಸ್ತೋ ಇಲ್ಲದ ಮೇಲೆ ಖಾಲಿ ಸಂಬಂಧವನ್ನೇ ಇಷ್ಟಪಟ್ಟಾರು ಹೊರತು ಮದುವೆಯ ಬಂಧನವನ್ನು ಕೇಳುವವರು ಆ ಫಾಸಲೆಯಲ್ಲಿ ಎಲ್ಲಿದ್ದಾರೆ? “ಅದು ಯಾರಾ ಪುಟ್ಟಮ್ಮ, ನಿನ್ನ ಮೊಮ್ಮಗಳಂಬ್ರಲೆ! ಯಾ ಪಾಟಿ ಮಿಡ್ಕತ್” ಎಂಬಂತಹ ಬಾಣಗಳಿಗೊಂದು ಕೊರತೆಯಾಗಲಿಲ್ಲ. ಕಮಲಾವತಿಗೆ ಯಾಕೋ ತಾನು ಒಳಗೆ ಕುಳಿತರೆ ಯಾರ ಕಣ್ಣಿಗೂ ಬೀಳಲಾರೆನು ಎನಿಸಿತೇ? ಅಂತೂ ಆಕೆ ಶೇಷಮ್ಮನ ಹಳೆಯ ರೇಷ್ಮೆ ಸೀರೆಯುಟ್ಟು, ಅವರದೇ ಒಂದು ಸರ ತೊಟ್ಟು ಶರಬತ್ತು ಲೋಟ ಹೆಕ್ಕಿದಳು; ಎಂಜಲೆಲೆ ಎಳೆದಳು, ಎಂಜಲು ಬಳಿದಳೂ. ತಾ, ಬಾ ಕೆಲಸಕ್ಕೆ ಕೈಯಾದಳು. ಘನ ಕೆಲಸಗಳಿಗೆಲ್ಲ ಅಂದಿಗರಿದ್ದಾರೆ. ಕಮಲಾವತಿಗೆ ಆ ಪಟ್ಟ ಬಿಟ್ಟುಕೊಡರು.

ಅಂತೂ ಯಾವ ಹುಳಿ ತೋರದೆ ಮೊಮ್ಮಗಳು ಓಡಾಡಿದ್ದು ಬಾಣಗಳ ನಡುವೆಯೂ ಪುಟ್ಟಮ್ಮತ್ತೆಗೆ ಖುಷಿಯಾಯಿತು. ಕಮಲಾವತಿ ಹೀಗೆ ಇದ್ದದ್ದು ನೋಡಿ ಶೇಷಮ್ಮನಿಗೂ ಹರ್ಷವೇ. ಕರೆದು ಒಂದು ಹೊಸ ಸೀರೆ ಕೊಟ್ಟರು. ಸಂಜೆ ಎಲ್ಲರೆದುರು ಅದನ್ನುಟ್ಟು ಅತ್ತಿತ್ತ ಓಡಿಯಾಡಿದಳು ಕಮಲಾವತಿ, “ಓಹೋ, ಮದುಮಗಳೆಂದರೆ ನೀನೇ ಅಂಬಂಗೆ ಕಾಣುತ್ತೀ!” ಎಂಬ ಮಾತುಗಳನ್ನೆಲ್ಲ ತಲೆಯಲ್ಲಿನ ಮಲ್ಲಿಗೆ ಹೂವಿನ ಎಸಳೂ ಉದುರುವಂತೆ ಸಂಭ್ರಮದ ಮುಖವಲ್ಲಾಡಿಸಿ ಬಗಲಿಗೆ ಹಾಕಿಕೊಂಡಳು. “ನನ್ನ ಕಮಲಾವತೀ, ನಂಗೂ ಒಂದಿಷ್ಟು ಹುಟ್ಟುವಳಿ ಇದ್ದಿದ್ರೆ ನಿಂಗೆ ಬೇಕಾದ ಹಾಂಗೆ ಮಾಡ್ತಿದ್ದೆನಲೆ!” ಎಂದು ಕೊರಗಿದಳು ಪುಟ್ಟಮ್ಮತ್ತೆ. ಅವಳ ಹರವಾದ ಬೋಳು ಕುತ್ತಿಗೆಗೊಂದು ಸರ ಮಾಡಿಸಿ ಹಾಕುವ ಯೋಗ್ಯತೆಯೂ ತನಗಿಲ್ಲದೆ ಹೋಯಿತೇ?

ಕೆಲಸವೆಲ್ಲ ಮುಗಿಸಿ ರಾತ್ರಿ ಪುಟ್ಟಮ್ಮತ್ತೆಯೂ ಮೊಮ್ಮಗಳೂ ಹೊರಟು ನಿಂತಾಗ “ಪುಟ್ಟಮ್ಮತ್ತೇ, ಹೆಣ್ಣು ಪಾಪದ್ದೇ. ನಿಂಗೆ ಬೇಡದ ಚಿಂತೆ” – ಎಂದು ಶೇಷಮ್ಮ ಹೇಳುವ ಹೊತ್ತಿಗೆ ಸರಿಯಾಗಿ ಘಟ್ಟದ ಮೇಲಿರುವ ಅವರ ಹಿರಿಯ ಮಗ ಪರಮೇಶ್ವರ ಏನು ಪಾಪ, ಯಾರು ಪಾಪ? ಎಂದು ಕೇಳುತ್ತಾ ಒಳಗೆ ಬಂದ. ಪುಟ್ಟಮ್ಮತ್ತೆ ಎಂದಳು – “ಅದಿರ್‍ಲಿ ಮಾರಾಯ, ಇಗ, ಇವಳು ನನ್ನ ಮೊಮ್ಮಗಳು, ಒಂದು ಗಂಡು ಗೊತ್ತು ಮಡಿಕೊಡು ಕಾಂಬ.”

“ಓಹೋ, ಅದಕ್ಕೇನಾಯ್ಕ್?” ಎಂದವ ತುಸು ತಡೆದು, “ಪುಟ್ಟಮ್ಮತ್ತೆ, ನಮ್ಮಲ್ಲಿರುವ ಮರಿಯಣ್ಣ ಹೆಂಗೆ? ಇಲ್ಲಿಗ್ ಬಂದಿದ್ನಲೆ, ನೀವೂ ಕಂಡಿಪ್ರಿ. ನಿಮ್ಮ ಮೊಮ್ಮಗಳೂ. ಎಂಥಾ ಚುರುಕಂತೀ ನೀರಿಲ್ಲದಲ್ಲಿ ನೀರು ಹುಟ್ಟಿಸಿಕಂಡ್‌ಬಪ್ಪ. ನನ್ನ ವ್ಯವಹಾರ ಎಲ್ಲ ಕಂಡ್ಕಂಬುದು ಯಾರೆಂತ ಮಾಡ್ದೆ. ಕಂಬೂಕೂ ಮನ್ಮಥ. ಹಣ್ಣುಗೆಂಪು, ಹಣ್ಣುಗೆಂಪು ಒಡೀತಾ”-

ಅವ ಹೇಳಿದ್ದು ಪುಟ್ಟಮ್ಮತ್ತೆಯ ತಲೆಯೊಳಗೆ ಪೂರ್ತಿ ಇಳಿಯುವುದರೊಳಗೆ “ಪರಮೇಶ್ರರಾಯರೆ, ನಿಮ್ ಮರಿಯಣ್ಣ ಅಷ್ಟು ಹಣ್ಣುಗೆಂಪಾಗಿ ಸಾಪಿದ್ರೆ ನಂಗೇನು? ಕಚ್ಚಿ ತಿಂಬುಕಾತ್ತಾ? ಬೇಕಾದ್ರೆ ನಿಮ್ಮ ಮಗ್ಳನ್ನೇ ಕೊಟ್ಟಿಡಿ”-

ಅರರೆ ಕಮಲಾವತೀ ಎಂದು ಪುಟ್ಟಮ್ಮತ್ತೆ ನರಳುವುದರೊಳಗೆ ಹಾಗೆಂದ ಕಮಲಾವತಿ ಎಲ್ಲಿದ್ದಳು? ಆ ಅಪರಾತ್ರಿಯಲ್ಲಿ ಹೊಸ ಸೀರೆಯ ಪೊಟ್ಟಣವನ್ನು ಅವಚಿಕೊಂಡು ಹೊರಟುಹೋಗಿದ್ದಳು.

ಕಂಡ್ಯ, ಕಂಡ್ಯಾ ಆ ದಗಡಿಯನ್ನು!” ಎಂದರೆ ಪರಮೇಶ್ವರನ ಹೆಂಡತಿ “ಪುಟ್ಟಮ್ಮತ್ತೇ, ಸಮಾ ನಾಕು ದಿವ್ಸ ಉಪಾಸ ಹಾಕ್. ಉಡಾಪೆಲ್ಲ ಇಳೀದೆ ಎಲ್ಲಿಗ್ ಹೋತ್!” ಎಂದು ಅಷ್ಟು ಮಾತಾಡಿದ್ದೇ ಸುಸ್ತಾಯಿತೆಂಬಂತೆ ಸೂಗರೆದಳು. ಹಾಗೆಂತ ಪರಮೇಶ್ವರನ ಮುಖದಲ್ಲಿ ಮಾತ್ರ ಒಂಚೂರೂ ಬೇಸರವಿಲ್ಲ. “ಪುಟ್ಟಮ್ಮತ್ತೇ, ಆ ಪ್ರಾಯವೇ ಹಾಂಗೆ. ಮರಿಯಣ್ಣನ ಮದುವೆಯಾದ್ರೆ ಗಂಡ ಹೆಂಡ್ತಿಗೆ ನನ್ನ ಮನೆ ಔಟ್‌ಹೌಸನ್ನೇ ಬಿಟ್ಟು ಕೊಡ್ತೆ ಬೇಕಾರೆ. ಆಯ್ತು, ಮರಿಯಣ್ಣ ತನಗೆ ಬೇಡ ಅಂದ್ರೆ ಅವಳನ್ನ ನಮ್ಮನೆಗೆ ಕಳಿಸು. ಇವ್ಳಿಗೂ ಹುಶಾರಿಲ್ಲೇ. ಸಹಾಯಕ್ಕಾಯ್ತು. ನಾಲ್ಕು ಜನ ಬಂದು ಹೋಪ ಮನೆ. ಯಾರಾದ್ರೂ ಒಪ್ಪಿಯಾರು. ನಮ್ಮನೆಯಲ್ಲಿದ್ದ ಹೆಣ್ಣು ಎಂದ್ಮೇಲೆ ಮದುವೆಗೂ ನಾವು ಸಹಾಯ ಮಾಡುದೇ ಆಯ್ತಲೆ!”

ಪುಟ್ಟಮ್ಮತ್ತೆಗೆ ಮೂರು ಮೂರು ಬಾರಿ ಯೋಚಿಸಿದರೂ ಹೀಂಗೆ ಮಾಡುವುದೇ ಸಮವೆಂತ ಕಂಡಿತು.
*
*
*
ಮನೆಗೆ ಬಂದ ಕಮಲಾವತಿಗೆ ಮೈ ಮೇಲೆ ಎಚ್ಚರವೇ ಇದ್ದಂತಿರಲಿಲ್ಲ. ಈ ಸೌದಾಮಿನಿ, ಕಲಿಯುವುದರಲ್ಲಿಯೂ ಹೆಡ್ಡೆ. ಅವಳಿಗೆ ಯಾವುದರಲ್ಲಿಯೂ ಕಡಿಮೆಯಿಲ್ಲದ ಗಂಡ! ತನಗೇಕೆ ಯಾವುದೂ ಇಲ್ಲ? ಕಡೆಗೆ ಏಳರ ಮುಂದೆ ವಿದ್ಯೆಯೂ ಇಲ್ಲ. ಮಾಸ್ಟರು ಹೇಳಿದ್ದರು. ‘ನೀನು ಜಾಣೆ, ಸ್ಕಾಲರ್‌ಶಿಪ್ ಸಿಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಕಲಿ’ ಎಂದು. ಅಜ್ಜಿ ಬಿಡಲಿಲ್ಲ. ಮದುವೆಗೆ ಕಷ್ಟ ಎಂದಳು. ಅಯ್ಯೋ, ಅಜ್ಜಿಯೇಕೆ ಸಾಯಬಾರದು? ತನ್ನನ್ನು ಹುಟ್ಟಿಸಿದ ಅಪ್ಪ ಯಾಕೆ ಸಾಯಬಾರದು? ತಾನಂತೂ ಖಂಡಿತ ಸಾಯಲಾರೆ. ಅಜ್ಜಿ ಹೇಳಿದಂತೆ ಈಗ ಮದುವೆಯಾದರೂ ಆಯಿತೇ? ಎಲ್ಲ ಪರಿಚಾಕರಿ ವರರು.

ಒಂದು ಸಣ್ಣ ಗೂಡಿನಲ್ಲಿ ಹೊಗೆ ಹಿಡಿದ ಅಡುಗೆಮನೆಯಲ್ಲಿ ತನ್ನನ್ನು ಕಂಡರೆ ಬಹುಶಃ ತಾನದಕ್ಕೆ ಲಾಗ್ತು ಎನಿಸೀತು ಇವರಿಗೆಲ್ಲ. ಸುತ್ತ ಏಕೆ ಪರಮೇಶ್ವರರಂತವರೇ ತುಂಬಿಕೊಂಡಿದ್ದಾರೆ? ಸೌದಾಮಿನಿಯನ್ನು ಮದುವೆಯಾದವ ಬಾವಿಕಟ್ಟೆಯ ಹತ್ತಿರ ನಿಂತಿದ್ದ ತನ್ನನ್ನು ನೋಡಿ ನಕ್ಕ, ಅಷ್ಟೇ, ಮುಂದುವರಿಯಲಿಲ್ಲ. ಆಕೆಯನ್ನೇ ಮದುವೆಯಾದ! ಮದುವೆ ಮನೆಯಿಂದ ಬರುವಾಗ ಬೇಕೆಂದೇ ಸೌದಾಮಿನಿಯ ಕೋಣೆ ದಾಟಿ ಬಂದೆ. ಅಲ್ಲಿ ಸಂಬಂಧಿಕರು ತುಂಬಿಕೊಂಡಿದ್ದರು. ‘ಹೆಣ್ಣು ಕೊಡುತ್ತೀಯಾ ಹೊನ್ನು ಕೊಡುತ್ತೀಯಾ’ ಎಂದು ಗಂಡಿನೊಂದಿಗೆ ಕೇಳುತ್ತಿದ್ದರು. ಆತ ಕಚ್ಚೆ ಪಂಚೆಯಲ್ಲಿ ನಗುತ್ತಾ ನಿಂತಿದ್ದ. ದಾಟುತ್ತಿದ್ದ ತನ್ನನ್ನು ನೋಡಿದ. ನಕ್ಕ. ಅಷ್ಟೇ – ಖಾಲಿ ನಗೆ. ಖಾಲಿ ನಗೆಯೇ?

ಈಗ ಅವ ಬೆಚ್ಚಗೆ, ಸಾದಾಮಿನಿಯೊಂದಿಗೆ. ಎರಡೂ ಮೊಣಕಾಲುಗಳನ್ನು ಇನ್ನಷ್ಟು ಬಿಗಿಯಾಗಿ ಸರಿಸಿ ತಲೆಯಾನಿಸಿ ಬಿಕ್ಕಿದಳು ಕಮಲಾವತಿ. ಅಲ್ಲಿದ್ದ ಹುಡುಗಿಯರಿಗೂ ತನಗೂ ಯಾವ ಸಂಬಂಧವಿಲ್ಲ. ತನಗವರು ಅರ್ಥವೇ ಆಗದ ಬೆರಗು. ಅವರೆದುರು ತಾನು ದೊಣ್ಣಗೆ ನಿಂತಂತಾಗುತ್ತಿದೆ…. ಅವರಿಗೂ ಬಹುಶಃ ತಾನು ಅರ್ಥವಾಗುವುದಿಲ್ಲ. ಆದರೆ ಅವರ ಕಣ್ಣಲ್ಲಿ ಬೆರಗಿಲ್ಲ. ಹಸಿವಿನ ಬಿಸಿ ಅವರಿಗೆ ಬೇಡ. ಅವರಿಗೂ ಕಷ್ಟಗಳಿರಬಹುದು. ಆದರೆ ಅವರ ಕಷ್ಟಗಳ ಎತ್ತರ ಬೇರೆಯೇ. ತನಗಿರುವಂಥ ಹೊಗೆಗೂಡಿನ ಉಸಿರುಗಟ್ಟಿಸುವ ಕಷ್ಟ ಅವರಿಗಿಲ್ಲ. ಅಲ್ಲಿಂದೆದ್ದಳು. ಗೋಡೆಗೆ ತೂಗು ಹಾಕಿದ್ದ ಒಂದಡಿ ಉದ್ದದ ಕನ್ನಡಿಯೆದುರು ನಿಂತಳು. ಅತ್ತಳು. ಅಳುವ ತಾನು ಇನ್ನೂ ಚಂದ ಕಾಣಿಸಿ ಮತ್ತಷ್ಟು ಅತ್ತಳು. ಯಾವುದೋ ಸಿನಿಮಾದಲ್ಲಿಯೂ ಹೀಗೇ ಕಂಡ ನೆನಪಾಯಿತು. ಬಿಕ್ಕಿ ಬಿಕ್ಕಿ ಅತ್ತಳು.

ಹೀಗೆ ಆ ದಿನ ಮಗ್ಗುಲು ಹೊರಳಿ ರಾತ್ರಿಯಾಗಿ ನರಳಿತು.

ಬೆಳಗಾಗುತ್ತಲೆ ಎದುರುಮನೆ ಅಚ್ಚು ಮಾಣಿಯನ್ನು ಕರೆದು ‘ಮ್ಯಾಟಿನಿ ಸಿನೆಮಕ್ಕೆ ಹೋಪ ಬತ್ಯಾ?’ ಎಂದು ಕೇಳಿದಳು. ಅಚ್ಚುಮಾಣಿ ತಯಾರು. ಪುಟ್ಟಮ್ಮತ್ತೆಗೂ ಅವಳಿಗೂ ಅವತ್ತಿಡೀ ಮಾತಿಲ್ಲ. ಮಧ್ಯಾಹ್ನ ಹಟ್ಟಿಯಲ್ಲಿ ದನಕ್ಕೆ ಬಾಯಾರು ಹಾಕುತ್ತ ಅದರೊಂದಿಗೆ ಮಾತಾಡುತ್ತ ನಿಂತಿದ್ದ ಪುಟ್ಟಮ್ಮತ್ತೆಯ ಹತ್ತಿರ ಹೋಗಿ “ಸಿನಿಮಕ್ಕೆ ಹೋಯಿ ಬತ್ತೆ” – ಎಂದು ಹೇಳಿ ನಡೆದಳು. ಅಚ್ಚುಮಾಣಿ ಬಂತು. ಪಾಪದ್ದು. ಕರೆದಕೂಡಲೆ ಬರುತ್ತದೆ. ಮನೆಯಲ್ಲಿ ಹೇಳಬೇಡ ಎಂದರೆ ಬಾಯಿಗೆ ಬೀಗವನ್ನೇ ಹಾಕಿಕೊಳ್ಳುತ್ತದೆ.

ಸಿನೆಮಾ ಮುಗಿದು ಬರುವಾಗ ಗಂಟೆ ಆರಾಗಿತ್ತು. ಬರೀ ದುಃಖದ ಸಿನೆಮಾ. ಅತ್ತು ಅತ್ತು ಕಣ್ಣು ಮೂಗೆಲ್ಲ ಉರಿಯುತ್ತಿತು. ಪುಟ್ಟಮ್ಮತ್ತೆ ಯಾರೋ ಬೇಳೆ ಬೀಸಿಡಲು ತಂದಿಟ್ಟು ಹೋದ ಉದ್ದಿಗೆ ಎಣ್ಣೆ ತಿಕ್ಕುತ್ತ ಇದ್ದರು. ಕೈ ಕಾಲು ತೊಳೆದು ಒಲೆದಂಡೆಯ ಮೇಲೆ ಮುಚ್ಚಿಟ್ಟಿದ್ದ ಕಾಫಿ ಅಕ್ಕಿ ಹಪ್ಪಳ ಮುಗಿಸಿ ಕೈಗಂಟಿದ ಹಪ್ಪಳದ ಎಣ್ಣೆಯನ್ನು ಕಾಲಿಗೆ ಮುಂಗೈಗೆ ಒರೆಸಿಕೊಳ್ಳುತ್ತ “ಅಜ್ಜೀ ನಾನೂ ಮಾಡುತ್ತೇನೆ” ಎಂದು ಬಂದಳು. ಅಜ್ಜಿ ಮಾತಾಡಲಿಲ್ಲ. ಸಿನೆಮಾಕ್ಕೆ ಹೋದಾಗ ಈ ಅವತಾರ ಹೊಸದಲ್ಲ ಎಂದುಕೊಂಡ ಕಮಲಾವತಿ ಎಣ್ಣೆಮಿಳ್ಳೆಯಿಂದ ಎಣ್ಣೆ ಸುರಿದುಕೊಂಡು ಉದ್ದಿನ ಕಾಳಿಗೆ ತಿಕ್ಕಲು ತೊಡಗಿದಳು. ಯಾರೋ ಸೋಮಾರಿಗಳ ಮನೆ ಉದ್ದು, ಎಣ್ಣೆಹಚ್ಚಿ ಬಿಸಿಲಿಗಿಡಲು ಏನಾಗಬೇಕು? ಇವರೆಲ್ಲ ಸೇರಿ ಅಜ್ಜಿಯ ಬೆನ್ನು ಮುರಿಸುತ್ತಾರೆ. ಅಗ್ಗದಲ್ಲಿ ದುಡಿಸಿಕೊಳ್ಳುತ್ತಾರೆ. ಒಂದು ಕೆಲಸ ತನಗಿದ್ದಿದ್ದರೆ, ಅಜ್ಜಿಯನ್ನು ಸಾಕಿಕೊಳ್ಳುತ್ತಿದ್ದೆ…. ಅಜ್ಜಿಯ ಮೇಲೆ ತನಗೂ ಪ್ರೀತಿಯಿದೆ ಎಂದು ತೋರಿಸುತ್ತಿದ್ದೆ….

“ಅಜ್ಜೀ, ಸಿನೆಮಾ ಎಷ್ಟು ಲಾಯ್ಕಿತ್ತು! ಊರ ಮೇಲಿನ ಕತೆಯೇ, ನೀನೂ ಬರಲಕ್ಕಿತ್ತು….” ಉತ್ತರವಾಗಿ ಪುಟ್ಟಮ್ಮತ್ತೆ ಹೇಳಿದಳು. “ಇಗಾ ಕಮಲಾವತೀ, ನನ್ನ ಮಾತು ಕೇಣು, ಮರಿಯಣ್ಣನ್ನ ಮದುವೆಯಾದ್ರೆ ಪರಮೇಸ್ರ ಔಟ್ ಹೌಸನ್ನೇ ಬಿಟ್ಟು ಕೊಡ್ತ ಅಂಬ್ರ್. ನೀನು ಅವನ ಹೆಂಡತಿಗೂ ಅದೂ ಇದೂ ಮಾಡಿಕೊಡ್ತಿದ್ರೆ ದಿನ ಹೋಯ್ತಲೆ! ಪರಮೇಸ್ರನ ಹೆಂಡ್ತಿ ಬಾಯಿ ಕೆಟ್ಟದು ಇಪ್ಪುಕೂ ಸಾಕು. ಆದ್ರೆ ಮನಸು ಮಾ ಒಳ್ಳೇದು. ಉಟ್ಟ ಸೀರೆ ಕೇಂಡ್ರೂ ಬಿಚ್ಚಿ ಕೊಡುವಂಥ ರಾಜಗುಣ.”

“ಅಜ್ಜೀ, ಆ ಅಪ್ಪಚ್ಚಿ ಕಿಟ್ಟನ್ನ ನಾನು ಮದುವೆಯಾತ್ತಿಲ್ಲೆ. ನಂಗೆ ಬೇಡ ಅಂದ್ರೆ ಬೇಡ್ದೇ”.

“ನಿಂದೇ ಹಠಸಾಧನೆ ಆಯ್ತಲೆ! ಪರಮೇಸ್ರನ ಮನೆಗಾರೂ ಹೋಗಿ ನಾಕು ತಿಂಗಳು ಇರು. ತಿಳುವಳಿಕೆ ಬಂದೀತು.”

“ಯಂತ ಅಜ್ಜಿ ನೀ ಹೇಳುದು! ನಾ ಹುಟ್ಟಿದ್ದು ಆ ಪರಮೇಸನ ಹೆಂಡ್ತಿ ಕಚ್ಚೆ ತಿಕ್ಕುಕಾ?”

“ಹಾಂಗೆಲ್ಲ ಕೇಂತ ಹೋದ್ರೆ ಹ್ಯಾಂಗೆ ಮಗ?”

ಕಮಲಾವತಿ ಮಾತಾಡಲಿಲ್ಲ. ತನ್ನೊಳಗೆ ಇಂಥದ್ದಾಗುತ್ತದೆ ಎಂದಬುದೇ ತಿಳಿಯಲಿಕ್ಕಾಗದೆ ಉದ್ದನ್ನು ಕುಕ್ಕಿ ಬಿಸಾಕಿ ಅಲ್ಲಿಂದೆದ್ದಳೂ. ತನಗೆ ಗೊತ್ತಿಲ್ಲವೆ ಪರಮೇಶ್ವರನ ಹೆಂಡತಿಯ ಗುಣ? ಹಂದುವ ಜಾತಿಯಲ್ಲ. ಎಲ್ಲವನ್ನೂ ಅವಳು ಕುಳಿತಲ್ಲಿಗೇ ಸರಬರಾಜು ಮಾಡಬೇಕು. ಎಷ್ಟು ಮಾಡಿದರೂ ಯಾವಾಗ ಕಂಡರೂ ಸೊಂಟದ ಕೆಳಗಿನ ಬೈಯ್ಗಳೇ… ಇತ್ಯಾದಿ ಹೇಳಿದ್ದಳು ಅವರ ಮನೆಗೆ ಅಡುಗೆಗೆಂದು ಹೋಗಿದ್ದ ವನಮಾಲಾ ಎಂಬ ಹುಡುಗಿ. ಮದುವೆ ಮನೆಯಲ್ಲಿ ಸಕ್ಕಿ, ರಾತ್ರಿಯೊಮ್ಮೆ ಪರಮೇಶ್ವರ ತನ್ನನ್ನು ಎಳೆಯಲಿಕ್ಕೆ ಬಂದದ್ದನ್ನೂ ಆಕೆ ಒಂದು ರೀತಿ ಖುಷಿ ಮಿಶ್ರಿತದಿಂದಲೇ ಹೇಳಿದ್ದಳು. ಬಲಿಯಾಗಲಿಲ್ಲವೆಂಬ ಮಾತು ಬೇರೆ ಧೀರಭಾವದಿಂದ ಸೇರಿಸಿ. ಎಲೇ ಪರಮೇಶ್ವರಾ, ಈ ಕಮಲಾವತಿ ಅಷ್ಟು ಸುಲಭದವಳಲ್ಲ ತಿಳಕೋ.

ಪರಮೇಶ್ವರನ ಹಸಿದ ಒಡ್ಡುಗಣ್ಣುಗಳು ನೆನಪಾಗಿ ನಡುಗಿದಳು ಕಮಲಾವತಿ. ಸೀದಾಹೋಗಿ ಚಾವಡಿಕಂಬಕ್ಕೆ ಒರಗಿ ಕುಳಿತಳು. ಈ ಕಂಬಕ್ಕಾದರೂ ಒರಗಿಯೇನು ಆ ಕಿಸಬಾಯಿದಾದನಿಗೆ ಅಲ್ಲ ಎಂದು ಗಟ್ಟಿಯಾಗಿ ಹೇಳುತ್ತ. ಪುಟ್ಟಮ್ಮತ್ತೆ ತಲೆ ಕುಟ್ಟಿಕೊಂಡಳು.

ಪುಟ್ಟಮ್ಮತ್ತೆಯ ಮನೆಯ ಹತ್ತಿರವೇ ಕಡಲು ಹಾಸಿದೆ. ಅಬ್ಬರ ಕೇಳುತ್ತದೆ. ಆಲಿಸುವಳು ಕಮಲಾವತಿ. ಮುತ್ತುವ ಕನಸುಗಳನ್ನು ಸೊಳ್ಳೆ ಓಡಿಸುವಂತೆ ಓಡಿಸಲು ಯತ್ನಿಸುವಳು. ಹಿಂದೆಲ್ಲ ಕಾಲಾಡಿಕೊಂಡು ಒಬ್ಬಳೇ ಸಮುದ್ರದ ಬದಿಗೆ ಹೋಗಬಹುದಿತ್ತು. ಈಗೀಗ ಹಾಗೆ ಹೋಗುವಂತೆಯೂ ಇಲ್ಲ. ಈಗ ತನಗಿರುವುದೆಲ್ಲ ಒಂದೇ, ಸಿನೆಮಾ. ಆ ಮೂರು ಗಂಟೆಯ ಕಾಲ ಮಾತ್ರ! ಅದೂ ಮಳೆಗಾಲದ ನಾಲ್ಕು ತಿಂಗಳು ಇಲ್ಲ.

ಕಮಲಾವತಿಯ ಕಣ್ಮುಂದೆ ಚಂದದ ರೀಲೇ ಹಾದುಹೋಗುತ್ತದೆ. ಯಾ ಯಾವುದೋ ನೋಟಗಳು. ಮಿಂಚು ಸೆಳೆತವನ್ನು ಕೊಟ್ಟಂಥದು. ಬಲುಗುಟ್ಟಿನಲ್ಲಿ, ಸಂದಿ ಗೊಂದಿಗಳಲ್ಲಿ. ಆದರೆ ಬರೀ ನೋಟಗಳೂ, ಅಲೆಯ ನೊರೆಯಂತೆ, ಮಾಯ. ಪ್ರಪಂಚವೆಂದರೆ ಒಂದು ನಗೆ, ಒಂದು ಆಳು, ಒಂದು ಕಣ್ಣರಳು.

ಅಲ್ಲಿಗೆ ಮುಗಿಯುತ್ತಯೇ? ಕಣ್ಣಿನಲ್ಲಿ ಮಾತನಾಡುತ್ತಾರೆ. ಹೃದಯದಿಂದ ಒಬ್ಬರೂ ಮಾತನಾಡಲಾರರು. ತನಗೆ ಮರಿಯಣ್ಣನಂಥವರೇ ಗಂಟೆಂದು ತೀರ್ಮಾನಿಸಿಬಿಟ್ಟಿದ್ದಾರೆ. ಅಚ್ಚುಮಾಣಿಯ ಹತ್ತಿರ ಹೇಳಬೇಕು. ಈ ಸಿನೆಮಾ ಎಲ್ಲ ಸುಳ್ಳು ಎಂದು.

ತಾನು ಏನಾದರೂ ಮಾಡಬೇಕು? ಏನು?

ಮಿಮಲಾಕ್ಷಿ ಮೆಶಿನು ಮೆಟ್ಟಲು ಹೇಳಿಕೊಡಲು ಒಪ್ಪಿದಳು. ಮೆಶಿನು ಮೆಟ್ಟಲು ಕಲಿತ ಮೇಲೆ ಎರಡು ಅಂಗಿ ಕತ್ತರಿಸಿ ಹೊಲಿಯುವುದನ್ನೂ ಕಲಿತಳು. ತನು ದುಡಿಯಬೇಕೆಂಬ ಆಸೆಯನ್ನು ವಿಮಲಾಕ್ಷಿಯ ಹತ್ತಿರ ಹೇಳಿಕೊಂಡಳು. ಊರಲ್ಲಿರುವ ಏಕಮಾತ್ರ ಹೊಲಿಗೆಗಾತಿ ಮಿಮಲಾಕ್ಷಿ ಕೊಟ್ಟ ಸಲಹ ಸರಿಕಂಡಿತು. ಮಿಮಲಾಕ್ಷಿಯೊಂದಿಗೇ ಬಸ್ಸಿನಲ್ಲಿ ಹೊರಟು ಐದು ಮೈಲು ದೂರದಲ್ಲಿರುವ ರೆಡಿಮೇಡು ಬಟ್ಟೆ ಹೊಲಿಯುವಲ್ಲಿಗೆ ಹೋದಳು. ಮಿಮಲಾಕ್ಷಿಯ ನೆರವಿನಿಂದ ಅವಳಿಗೊಂದು ಕೆಲಸವೂ ಸಿಕ್ಕಿತು. ತಿಂಗಳಿಗೆ ನೂರೈವತ್ತು ಕೊಡುತ್ತೇವೆಂದೂ, ಮುಂದೆ ಜಾಸ್ತಿ ಮಾಡುವ ಎಂದೂ ಮಾತುಕತೆಯಾಯಿತು. ಹಿಂದಿರುಗುವಾಗ ಕಮಲಾವತಿಗಿಂತಲೂ ಊರಿನ ಏಕಮಾತ್ರ ಹೊಲಿಗೆಗಾತಿಯಾಗಿಯೇ ಉಳಿದ ವಿಮಲಾಕ್ಷಿ ಹೆಚ್ಚು ಸಂತೋಷದಿಂದಿದ್ದಳು.

“ನಾಳೆಯಿಂದ ನಾನು ರೆಡಿಮೇಡ್ ಅಂಗಿ ಹೊಲಿಯುಕೆ ಹೋತೆ” ಎಂದಳು ಕಮಲಾವತಿ. “ತುದಿ ಕಡೆಕಾಲಕ್ಕೆ ಇದೊಂದು ಹಗಲು ವೇಷ ಬೇಡ ಮಾರಾಯ್ತಿ. ಇಷ್ಟರವರೆಗೆ ಮರ್ಯಾದೆ ಒಂದಾದರೂ ಇತ್ತು. ಇನ್ನು ಅದೂ ಇಲ್ಲ ಅಂತಾಪುದು ಬೇಡ” ಎಂದದ್ದಕ್ಕೆ “ಅಯ್ಯೋ ನನ್ನ ಮರ್ಯಾದೆಯನ್ನಾರೂ ಯಾರಾದರೂ ಅಪ್ಪಂಥವ್ರು ತೆಗೆಯುಕಾಗದಾ?” ಎಂದಳು. ಪುಟ್ಟಮ್ಮತ್ತೆ ಬಾಯಿ ಕಳೆದು ನಿಂತದ್ದೊಂದೇ.

ಕಮಲಾವತಿಗೆ ಕಾಲರು ಹೊಲಿಯುವ ಕೆಲಸ. ಆ ಕಾಲರು ಮುಂದೆ ಹೋಗಿ ಎಲ್ಲಿ ಜೋಡುತ್ತದೆ, ಯಾರನ್ನು ಹೋಗಿ ತಲುಪುತ್ತದೆ…. ಇತ್ಯಾದಿ ಮೊದಮೊದಲು ಯೋಚಿಸಿದ್ದುಂಟು. ಮುಂದೆ ಅದೂ ಇಲ್ಲ. ತಂಗಳುಂಡು, ಮಧ್ಯಾಹ್ನದೂಟ ಕಟ್ಟಿಕೊಂಡು ವಾಪಾಸು ಬರುವವರೆಗೆ ಎಷ್ಟು ಕಾಲರು ಹೊಲಿದು ಹಾಕಿದೆ ಎಂಬುದೇ ಲೆಕ್ಕ. ಕಡೆಗೆ ಆ ಲೆಕ್ಕವೂ ಮುಳುಗಿ ಶೂನ್ಯದಲ್ಲಿ ಟಕಟಕ ಸದ್ದೊಂದೇ. “ಸ್ವಲ್ಪ ಬೇಗ ಬಪ್ಪುಕಾಗ್ದ? ಕತ್ತಲೆ ಕಟ್ಟುವ ಮುಂಚೆಯೇ? ಮಧ್ಯ ಓಣಿಯಲ್ಲಿ ಯಾರು ಒತ್ತಿ ಹಿಡಿದರೂ ಕೇಂಬವರಿಲ್ಲೆ” ಎಂದರೆ “ಹಾಂಗೆ ಒತ್ತಿ ಹಿಡಿಯೂಕೆ ಯಂತ ಅಂತ ಮಾಡಿದೆ?” ಎಂದಳು.

ಒಂದುದಿನ ಯಾರೋ ಸೆರಗು ಹಿಡಿದನೆಂದು ಅವನ ಕಣ್ಣಿಗಷ್ಟು ಹೊಯಿಗೆ ಚೊಗೆದು ಮುಂಡುಗನ ಓಲಿಯ ಬೇಲಿಯ ಮೇಲೆ ದೂಡಿಹಾಕಿ ಬಂದಳು. “ಯಾಕೆ, ಮರ್ಯಾದೆ ಹೋಪುಕೆ ಬಿಡ್ಲಕ್ಕಿತ್ತಲೆ”-ಎಂದು ಪುಟ್ಟಮ್ಮತ್ತೆ ಹೇಳಿದರೆ “ಎಂಥವರಿಂದ ಅದು ಹೋಯ್ಕ್ ಅಂತೆಳಿ ನಂಗೊತ್ತಿತ್” ಎಂದಳು. ಆವತ್ತು ರಾತ್ರಿಯಿಡೀ ಮಲಗಿದಲ್ಲೇ ಉರುಳಿದಳು, ನರಳಿದಳು. ಒಂದು ಗಳಿಗೆ ಕಣ್ಣು ಮುಚ್ಚಲಿಲ್ಲ. ನಿದ್ದೆ ಬಂದಂತೆ ಮಲಗಿದ್ದ ಪುಟ್ಟಮ್ಮತ್ತೆ ಇದೆಲ್ಲವನ್ನೂ ನೋಡುತ್ತ “ಉಡಾಪು ಕಡಿಮೆ ಆಯ್ಕಾದರೆ ದೇವರು ಮದ್ದು ಅರೀದೆ ಇರ್‍ತನಾ? ಎಂದಳು. ಮನ ಒಪ್ಪುವವನಿಗಾಗಿ ಕಾದು ಕುಳಿತಿದ್ದ ಕಮಲಾವತಿಗೆ ಕೊನೆಗೂ ಒಬ್ಬ ‘ಅಕ್ಕೆನಿಸುವಂಥವ’ ಬಂದ. ಮೊಮ್ಮಗಳು ಕಂಬಕ್ಕೊರಗಿ ಸಣ್ಣಗೆ ನಗುತ್ತ ಕೂತದ್ದು ಕಂಡು ಪುಟ್ಟಮ್ಮತ್ತೆಯ ಹೊಟ್ಟೆಯೊಳಗೆ ತಂಪು ಹುಟ್ಟಿತು. ಆದರೆ ಹಾಗೆ ಒಪ್ಪಿದವ ಊರ ಗಾಳಿಯಲ್ಲಿ ಹಾರುತ್ತಿದ್ದ ರೆಕ್ಕೆಪುಕ್ಕಗಳಿಗೆ ಹೆದರಿ ಮತ್ತೆ ಬೇಡವೆಂದ. ಮಿಂಚು ಹೊಡೆದಂತೆ ಸುರುಟಿಕೊಂಡು ಕಮಲಾವತಿ ನಾಲ್ಕು ದಿನವಿಡೀ ತಟ್ಟಡಿಯಾಗಿ ಮಲಗಿದಳು. ಐದನೆಯ ದಿನ ಆ ಕೆಲಸಕ್ಕೆ ಕಿಚ್ಚು ಹಾಕೆಂದರೂ ಕೇಳದೆ ಯಥಾಪ್ರಕಾರ ಹೊರಟಳು. ತನಗೆ ಕೆಲಸ ಕೊಡಿಸಿದ ಮಿಮಲಾಕ್ಷಿಯ ಕುರಿತು ಇದ್ದ ಕೃತಜ್ಞತೆಯನ್ನು ನಿಧಾನವಾಗಿ ಒರೆಸಿಕೊಂಡುಬಿಟ್ಟಳು.

ವರ್ಷವಲ್ಲ. ನಾಲ್ಕು ವರ್ಷ ಕಳೆದರೂ ಕಮಲಾವತಿಯ ಸಂಬಳದಲ್ಲಿ ಜಾಸ್ತಿ ಕೊಡಲಿಲ್ಲ. ಕಮಲಾವತಿಗೆ ಕೆಲಸ ಬಿಟ್ಟು ಕೂಡಲಿಕ್ಕೂ ಸಾಧ್ಯವಾಗಲಿಲ್ಲ. ಅಜ್ಜಿಯನ್ನು ಕರೆದುಕೊಂಡು ತಾನು ಸ್ವಂತ ಬದುಕನ್ನು ಮಾಡುವ ಕನಸನ್ನು ಕಡಲಿಗೆ ಒಗೆದ ಕಮಲಾವತಿಗೆ ಈಗೀಗ ಪುಟ್ಟಮ್ಮನೂ ಏನೂ ಹೇಳುವುದಿಲ್ಲ.

ಇತ್ತಲಾಗೆ ರೆಡಿಮೇಡ್ ಕಾರ್ಯಾಲಯದ ಧನಿಗಳು ಹೊಸಮನೆ ಕಟ್ಟಿಸಿದರು. ಆ ಊರಿಗೆ ಅದು ಅರಮನೆಯೇ, ಗೃಹಪ್ರವೇಶದ ದಿನ ಅಂಗಡಿ ಹುಡುಗಿಯರು ಸಮಾರಂಭಕ್ಕೆ ಹೊರಟರೂ ಕಮಲಾವತಿ ಹೊರಡರಲಿಲ್ಲ. ತಡೆಯದೆ ಪುಟ್ಟಮ್ಮತ್ತೆಯೇ ಹೇಳಿದರು “ಸುಮ್ಮನೆ ಯಾಕೆ ಕೂತ್ಕಂಡಿದ್ದೆ? ನೀನು ಹೋಗ್ ಬೇಕಾರೆ”.

ಈ ಮಾತು ಕಿವಿಗೆ ಬಿದ್ದದ್ದೇ ಕಮಲಾವತಿ ದಢಕ್ಕನೆ ಎದ್ದಳು. ಒಳಗಿದ್ದ ಸಮಸ್ತ ಬಟ್ಟೆ ಬರೆಗಳನ್ನು ಗಂಟುಗಟ್ಟಿ ಬಾವಿಕಟ್ಟೆಗೆ ಕೊಂಡೊಯ್ದು ನೆನೆಸಿದಳು. ಒಳಗೆ ಬಂದು ಒಂದು ಹರಕು ವಚ್ಚಡಿಕೆ ತುಂಡನ್ನು ಜ್ವಾಲಾಮಾಲೆಯಾಗಿ ಉಟ್ಟು ಕೊಡಪಾನದಿಂದ ನೀರು ಎತ್ತಿ ಎತ್ತಿ ಬಾನಿ ತುಂಬಿದಳು. ಬಟ್ಟೆಗಳಿಗೆ ಸಾಬೂನು ತೇಪಿ ತೇಪಿ ಬಡಿದು ಒಗೆದಳು. ಒಗೆಯುವಾಗ ನೂರು ಬಾರಿ ಉಮಿದು ಉಮಿದು ಬಾಯಿ ಒರೆಸಿಕೊಂಡಳು. ಪುಟ್ಟಮ್ಮತ್ತೆ ನಿಂತವರು ನಿಂತಲ್ಲೇ ಇದ್ದರು.

ಎಲ್ಲ ಬಟ್ಟೆ ಒಣಗಿಸಿ ಬಂದು ಚಾವಡಿಯ ಮೊಳೆಗೆ ಸಿಕ್ಕಿಸಿದ್ದ ಓಲಿ ಬೀಸಣಿಗೆಯನ್ನು ಹರಿಯುವಷ್ಟು ರಭಸದಿಂದ ಎಳೆದು ನೆಲದ ಮೇಲೆ ಅಂಗಾತ ಮಲಗಿ ಕಣ್ಮುಚ್ಚಿ ಗಾಳಿ ಬೀಸಿಕೊಂಡಳು. ಉಣಲಿಲ್ಲ ತಿನಲಿಲ್ಲ ಕಮಲಾವತಿ ಸೂರ್ಯ ಕಂತುವ ಹೊತ್ತಾದರೂ ಏಳಲಿಲ್ಲ.
*****

ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.