ರುದ್ರಪ್ಪ

ಶನಿವಾರ ಸಂಜೆ, ಭಾನುವಾರ ಬೆಳಿಗ್ಗೆ ಆರ್ಕಾಟು ಶ್ರೀನಿವಾಸಾಚಾರ್ಯರ ಬೀದಿಯಲ್ಲಿ ಹೋಗುವುದೆಂದರೆ ನನಗೊಂದು ಸಂತೋಷ. ಇತರರ ಕಣ್ಣಿಗೆ ಬೀಳದ ಸೊಗಸೂ, ಮನಸ್ಸಿಗೆ ವೇದ್ಯವಾಗದ ಸುಖವೂ ನನ್ನದಾಗುವುದಕ್ಕೆ ನಮ್ಮ ಊರಿನ ಪ್ರತಿಯೊಂದು ಭಾಗವನ್ನೂ ಪ್ರತಿಯೊಂದು ಬೀದಿಯನ್ನೂ ನಾನು ಪ್ರೀತಿಸುತ್ತಿದ್ದುದೇ ಕಾರಣವಾಗಿರಬಹುದು. ಎಷ್ಟೋ ಸಲ ಜತೆಯಲ್ಲಿ ಬರುತ್ತಿದ್ದ ಗೆಳೆಯರು “ಆ ಬೀದಿ ಬೇಡಯ್ಯಾ, ಅಲ್ಲಿ ಅಸಾಧ್ಯ ಗಲಭೆ. ಜನಸಂದಣಿಗೆ ದೂರವಾದ ಬೇರೊಂದು ರಸ್ತೆಯನ್ನು ಹಿಡಿಯೋಣ” ಎಂದು ಹೇಳುತ್ತಿದ್ದರೂ ಅ ಎರಡು ದಿವಸಗಳು ಅವರ ಮಾತುಗಳು ನನ್ನ ಕಿವಿಯ ಮೇಲೆ ಬೀಳುತ್ತಿರಲಿಲ್ಲ.
uಟಿಜeಜಿiಟಿeಜ
ಇದಕ್ಕೆ ರುದ್ರಪ್ಪನೂ ಕಾರಣವಿರಬಹುದು. ರುದ್ರಪ್ಪನನ್ನು ಕಾಣದಿದ್ದವರು ವಿರಳ. ಆದರೆ ನನ್ನ ಹಾಗೆ ಯಾರೂ ಕಂಡಿರಲಿಲ್ಲವೆಂದು ಸಹಜ ಹೆಮ್ಮೆಯಿಂದಲೇ ಹೇಳಿಕೊಳ್ಳಬಹುದು. ಅವನ ಅಂಗಡಿಯಲ್ಲಿ ಎಷ್ಟೋ ಜನ ವ್ಯಾಪಾರ ಮಾಡಿದ್ದರು, ಚೌಕಾಸಿ ಮಾಡಿ ಬಯ್ಯಿಸಿಕೊಂಡಿದ್ದರು, ಅಗ್ಗವಾಗಿ ಉತ್ತಮ ಪದಾರ್ಥ ದೊರೆಯಿತೆಂದು ಹಿಗ್ಗಿಯೂ ಇದ್ದರು. ಅವನೊಂದಿಗೆ ಬಗೆಬಗೆಯಾಗಿ ವ್ಯವಹರಿಸಿದ್ದರು. ಆದರೂ ರುದ್ರಪ್ಪನನ್ನು ಯಾರೂ ಕಂಡಿರಲಿಲ್ಲವೆಂದು ಧೈರ್ಯವಾಗಿ ಹೇಳಬಲ್ಲೆ.

ವಾರದ ಐದು ದಿವಸ ಕುಟುಕು ಜೀವ ಧರಿಸುತ್ತಿದ್ದ ರುದ್ರಪ್ಪನ ‘ಏಲಂ ಅಂಗಡಿ’ಗೆ (ಆಕ್ಷನ್ ಷಾಪ್) ಶನಿವಾರ ಸಂಜೆ, ಭಾನುವಾರ ಬೆಳಿಗ್ಗೆ ಈ ಎರಡು ಹೊತ್ತು ಪೂರ್ಣಪ್ರಾಣ ಬಂದುಬಿಡುತ್ತಿತ್ತು. ಆದರೆ ಇದು ರುದ್ರಪ್ಪನಲ್ಲಿ ಯಾವ ವ್ಯತ್ಯಾಸವನ್ನೂ ಉಂಟುಮಾಡುತ್ತಿರಲಿಲ್ಲ. ಸಿರಿಬಂದಾಗ ಹಿಗ್ಗಿ ಬರಬಂದಾಗ ಕುಗ್ಗುವ ಸ್ವಭಾವ ತನ್ನದಲ್ಲವೆನ್ನುವ ಹಾಗೆ ರುದ್ರಪ್ಪನ ಏಲಂ ದಿವಸಗಳಲ್ಲಿ ಕೂಡ ತನ್ನ ಆರಾಮಾಸನ ಬಿಟ್ಟೇಳುತ್ತಿರಲಿಲ್ಲ. ಯಾವನೋ ಒಬ್ಬ ಮುಸಲ್ಮಾನ ಆ ದಿವಸಗಳು ಬಂದು ಸಾಮಾನುಗಳ ಹರಾಜು ಕೂಗಿ, ಮಾರಿ, ತನ್ನ ದಳ್ಳಾಳಿಯನ್ನು ಮುರಿದುಕೊಂಡು ಉಳಿದ ಹಣವನ್ನು ರುದ್ರಪ್ಪನಿಗೆ ಕೊಟ್ಟು ಹೋಗುತ್ತಿದ್ದ.

ರುದ್ರಪ್ಪನ ಅಂಗಡಿಯಲ್ಲಿ ಸಿಕ್ಕದಿದ್ದ ಸಾಮಾನೇ ಇರಲಿಲ್ಲವೆಂದರೂ ತಪ್ಪಲ್ಲ. ‘ಸೂಜಿಯಿಂದ ಮೋಟಾರು ಕಾರಿನವರೆಗೆ’ ಎಂದು ಸಾಮತಿ ಹೇಳಿದ ಹಾಗೆ ಕುರ್ಚಿ ಬೆಂಚು ಮೇಜು ಅಲ್ಮೀರಾಗಳು, ಕನ್ನಡಿಗಳು, ಬಗೆಬಗೆಯ ಮಂಚಗಳು, ಕಟ್ಟುಹಾಕಿದ ಪಟಮಠಗಳು, ಹಿತ್ತಾಳೆ ಕಂಚಿನ ಪಾತ್ರೆಗಳು, ವಿಗ್ರಹಗಳು, ದೀಪದ ಕಂಬಗಳು, ಆಟದ ಸಾಮಾನುಗಳು, ಮರಗೆಲಸಕ್ಕೆ ಬೇಕಾಗುವ ಕಬ್ಬಿಣದ ಸಾಮಾನುಗಳು, ಗಾಜಿನ ಸಾಮಾನುಗಳು ಮತ್ತು ಪುಸ್ತಕಗಳು ಎಲ್ಲಕ್ಕೂ ಅಲ್ಲಿ ಸ್ಥಾನವಿದ್ದೇ ಇತ್ತು. ಒಂದೊಂದುವಾರ ಒಂದೊಂದು ಹರಾಜಾಗುತ್ತಿರುವುದು ನನ್ನ ಕಣ್ಣಿಗೆ ಬೀಳುತ್ತಿದ್ದಿತಲ್ಲದೆ ಹರಾಜು ಕೂಗುವ ಮುಸಲ್ಮಾನ ಬದಲಾಗುತ್ತಿರಲಿಲ್ಲ; ರುದ್ರಪ್ಪ ತನ್ನ ಆರಾಮ ಕುರ್ಚಿಯಿಂದಿಳಿದು ಬರುತ್ತಿರಲಿಲ್ಲ. ಆದರೆ ಅವನು ಎಲ್ಲಿ ಕೂತಿರಲಿ ಎಲ್ಲಿ ನಿಂತಿರಲಿ ಒಮ್ಮೆ ನೋಡಿದವರು ಯಾರೂ ಮರೆಯುವ ಹಾಗಿರಲಿಲ್ಲ. ಕಾವ್ಯಗಳಲ್ಲಿ ವಿದೂಷಕನನ್ನು ಸೃಷ್ಟಿಮಾಡಿ ‘ಹಾಸ್ಯರಸ’ ಪ್ರತಿಪಾದನೆ ಮಾಡಿದೆವೆಂದು ಭುಜ ಚಪ್ಪರಿಸಿಕೊಳ್ಳುತ್ತಿದ್ದ ಕಾಳಿದಾಸ, ಭವಭೂತಿ, ಶ್ರೀಹರ್ಷಾದಿ ಕವಿಗಳು ರುದ್ರಪ್ಪನನ್ನು ನೋಡಿದ್ದರೆ ಖಂಡಿತವಾಗಿಯೂ ಕಾವ್ಯಗಳನ್ನು ತಿದ್ದುವ ಯೋಚನೆಯನ್ನು ಮಾಡದಿರುತ್ತಿರಲಿಲ್ಲ. ವಯಸ್ಸಿಗೆ ಮೀರಿ ಬೆಳೆದ ಹೊಟ್ಟೆ, ಅದನ್ನು ಹೊರಲಾರದೆ ಕುಂಬಳ ಬಳ್ಳಿಯಂತೆ ಜಗ್ಗುತ್ತಿದ್ದ ದೇಹ, ಇದಕ್ಕೆ ಒಪ್ಪವಿಟ್ಟಂತೆ ತ್ರಿವರ್ಣರಂಜಿತ ಗಡ್ಡ. ತನ್ನ ಕಾಲವನ್ನು ನಿರ್ಣಯಿಸಿಕೊಳ್ಳುತ್ತಿದ್ದಂತೆ ಸದಾ ಷರಾಯಿ ಕೋಟು ಬೂಟ್‌ಗಳನ್ನು ರುದ್ರಪ್ಪ ಧರಿಸಿರುತ್ತಿದ್ದ. ಮಣಕುಗಟ್ಟಿದ್ದ ಓಪನ್ ಕಾಲರ್ ಕೋಟಿನ ಒಳಗೆ ಬಿಳಿಯಿಂದ ಕೆಂಪಿಗೆ ತಿರುಗಿದ್ದ ಷರಟು – ಅದರ ಕುತ್ತಿಗೆಗೆ ಹರಕು ಸೀರೆಯ ತುಂಡಿನ ಹಾಗೆ ಕಾಣುತ್ತಿದ್ದ ನಕ್ಷತ್ರ ಕೆತ್ತಿದ ಕರಿಯ ಟೈ. ಕೋಟಿಗೆ ಷರಾಯಿ ಯಾವ ರೀತಿಯಲ್ಲಿ ಅಗೌರವವನ್ನುಂಟುಮಾಡುತ್ತಿರಲಿಲ್ಲ. ಮೊಣಕಾಲಿನ ಹತ್ತಿರವೂ ಅಕ್ಕಪಕ್ಕದಲ್ಲಿಯೂ ಬೇರೆ ಬೇರೆ ಬಣ್ಣಗಳ ತುಂಡು ಬಟ್ಟೆಗಳು ಷರಾಯಿಯನ್ನಲಂಕರಿಸಿದ್ದವು. ನೀರಿನ ಕೊಳವೆಗಳನ್ನು ಉದ್ದುದ್ದವಾಗಿ ನಿಲ್ಲಿಸಿ ರುದ್ರಪ್ಪ ಅವುಗಳೊಳಗೆ ಕಾಲುಗಳನ್ನು ಹಾಕಿದಂತಿದ್ದವು. ಇವೆಲ್ಲವನ್ನೂ ರುದ್ರಪ್ಪನ ಪಾದಭೂಷಣ ಮೀರಿಸಿಬಿಟ್ಟಿತ್ತು. ಒಂದು ಕಾಲಿಗೆ ಕರಿಯ ಕಾಲು ಚೀಲ, ಇನ್ನೊಂದು ಕಾಲಿಗೆ ಕೆಂಪು ಕಾಲುಚೀಲ ಎರಡು ಕಾಲಮೇಲೆ ನಿಲ್ಲಲಾರದೆ ಕುಸಿದು ಕಾಲಗೆಣ್ಣಿನ ತಲೆಯ ಮೇಲೆ ಬಂದು ಕುಳಿತಿರುತ್ತಿದ್ದವು. ಕೊಂಡಾಗ ಬಿಳಿಯ ಬಣ್ಣ ಧರಿಸಿದ್ದ ಮೋಜುಗಳು ತಮ್ಮ ಸ್ವರೂಪವನ್ನು ಮರೆತು ರುದ್ರಪ್ಪನ ಪಾದಗಳನ್ನು ಆಶ್ರಯಿಸಿದ್ದವು. ಬಲ ಮೋಜಿನಲ್ಲಿ ಹೆಬ್ಬೆರಳು ಇಣುಕಿ ನೋಡುತ್ತಿತ್ತು, ಎಡ ಮೋಜಿನಲ್ಲಿ ಕಿರಿಬೆರಳು ಇಣಿಕಿ ನೋಡುತ್ತಿತ್ತು. ತಲೆಯ ಮೇಲೆ ‘ಹಳೆಯ ಬಾಗಿನ ಕಂಬಿ’ಯನ್ನೇ ಎದುರು ನೋಡುತ್ತಿದ್ದ ಗುಲಾಬಿ ಬಣ್ಣದ ರುಮಾಲು. ಅದರ ಜರಿ ಕಪ್ಪು ಹಿಡಿದು ಎಳೆ‌ಎಳೆಯಾಗಿ ಕಿತ್ತು ಬರುತ್ತಿತ್ತು. ರುದ್ರಪ್ಪ ಧರಿಸುವಾಗ ಮುಖದ ಮೇಲೆ ನೇರವಾಗಿ ಕೂರುತ್ತಿದ್ದ ರುಮಾಲು ಕ್ರಮ ಕ್ರಮೇಣ ಕಿವಿಯ ಮೇಲೆ ಬಂದು ಬಿಡುತ್ತಿತ್ತು. ಹಾಗೆಯೇ ಇರಲೆಂದು ರುದ್ರಪ್ಪ ನಿರಾತಂಕವಾಗಿರುತ್ತಿದ್ದ. ಆದರೆ ಒಟ್ಟಿನಲ್ಲಿ ರುದ್ರಪ್ಪನ ವೇಷ ಭೂಷಣ ಎಲ್ಲಿಯೂ ರಸಾಭಾಸವನ್ನು ಸೂಚಿಸದೆ ತನ್ನದೇ ಆದ ಮೈತ್ರಿ ಸಮರಸಗಳಿಂದ ಅವನನ್ನು ಕೂಡಿಕೊಂಡಿತ್ತು. ಈ ರುದ್ರಪ್ಪ ಯಾರು? ಈ ಸ್ವಾರಸ್ಯವಾದ ವ್ಯಾಪಾರವನ್ನು ಹೇಗೆ ಆರಂಭಿಸಿದ? ಇವನಿಗೆ ಮನೆ ಮಠ, ಹೆಂಡತಿ ಮಕ್ಕಳು ಇದ್ದಾರೆಯೇ? ಇದ್ದರೆ ಇದೇನು ಇವನ ಅವತಾರ? ಏನು ಈ ಸ್ನಾನ ಕ್ಷೌರ ಕಾಣದ ರೂಪ! ಎಂಬಿವೇ ಪ್ರಶ್ನೆಗಳು ಲೋಕಾಭಿರಾಮವಾಗಿ ನನ್ನಲ್ಲಿ ಜನಿಸುತ್ತಿದ್ದರೂ ರುದ್ರಪ್ಪನನ್ನು ಕೇಳಿ ಆ ಪ್ರಶ್ನೆಗಳಿಗೆ ಸಮಾಧಾನ ಹೊಂದುವುದು ಸಾಧ್ಯವಾಗುತ್ತಿರಲಿಲ್ಲ. ರುದ್ರಪ್ಪನ ಮುಖದ ಗಂಭೀರ ಭಾವನೆ ಕುತೂಹಲವನ್ನು ಎದುರಿಸಿ ಮುರಿದು ಬಿಡುತ್ತಿತ್ತು.
ನನಗೂ ರುದ್ರಪ್ಪನಿಗೂ ಸ್ವಲ್ಪ ಪರಿಚಯವಾಗಿತ್ತು. ಒಂದೆರಡು ಸಲ ಅವನ ಅಂಗಡಿಯಲ್ಲಿ ಅತ್ಯಲ್ಪ ಬೆಲೆಗೆ ನನಗೆ ಕೆಲವು ಉತ್ತಮ ಗ್ರಂಥಗಳು ದೊರೆತಿದ್ದವು. ಹೆಂಡದ ಅಮಲಿನ ರುಚಿಗಂಡ ಕುಡುಕ ಮತ್ತೆ ಮತ್ತೆ ಪಡಖಾನೆ ಹುಡುಕಿಕೊಂಡು ಹೋಗುವಂತೆ ನಾನು ಮತ್ತೆ ಮತ್ತೆ ಹೋಗಿ ರುದ್ರಪ್ಪನ ಅಂಗಡಿಯ ಸಂಬಂಧವನ್ನು ನಿಕಟವಾಗಿ ಬೆಳೆಸಿದ್ದೆ. ಪುಸ್ತಕಗಳು ದೊರೆಯದಿದ್ದ ದಿವಸ ಕೂಡಾ ನನಗೆ ಆಶಾಭಂಗವಾಗುತ್ತಿರಲಿಲ್ಲ. ರುದ್ರಪ್ಪನ ಮುಖದಲ್ಲಿ ತೇಲುತ್ತಿದ್ದ ಕನಿಕರ ನನ್ನ ನಿರಾಶೆಯನ್ನು ಮರೆಸುತ್ತಿತ್ತು.
ಒಂದು ದಿವಸ ನನ್ನಷ್ಟಕ್ಕೆ ನಾನು ಬೀದಿಯಲ್ಲಿ ಹೋಗುತ್ತಿರಲು ರುದ್ರಪ್ಪನ ಅಂಗಡಿಯ ಕಡೆಯಿಂದ ಕೂಗು ಕೇಳಿಬಂತು. ರುದ್ರಪ್ಪನ ವೇಷಭೂಷಣ, ಅವನು ನನ್ನನ್ನು ಕರೆಯುತ್ತಿದ್ದ ಉದ್ವೇಗ ತುಂಬಾ ನಗೆ ಬರೆಸಿದವು. ಒಳಗೆ ಹೋಗುತ್ತಲೆ ರುದ್ರಪ್ಪ ನನ್ನ ಕೈಗೆ ಕಣ್ಣು ಕೋರಯಿಸುವಂತಹ ಒಂದು ಗ್ರಂಥವನ್ನಿತ್ತ ‘ಷೆಲ್ಲಿ ಮಹಾಕವಿಯ ಪೂರ್ಣ ಕಾವ್ಯ ಸಂಗ್ರಹ’ ಉದ್ಗ್ರಂಥ; ಅದಕ್ಕೊಪ್ಪುವ ಸುರಮ್ಯ ಬಾಹ್ಯರೂಪ. ಗ್ರಂಥವನ್ನು ನಾನು ನುಂಗುವಂತೆ ನೋಡುತ್ತಿರಲು ರುದ್ರಪ್ಪ,
“ನಿಮಗೆಂದೇ ಈ ಪುಸ್ತಕ ತೆಗೆದಿಟ್ಟಿದ್ದೇ. ಯಾರು ಯಾರೋ ಕೇಳಿದರು ಆದರೆ ಕೊಡಲಿಲ್ಲ.”
ಆ ಮಾತಿನಲ್ಲಿ ಕೃತ್ರಿಮತೆಯಿರಲಿಲ್ಲ. ವ್ಯಾಪಾರಗಾರ ತನ್ನ ಮಾಲನ್ನು ಹಾಡಿ ಹೊಗಳಿಕೊಳ್ಳಲು ಬಂದವನಿಂದ ಹೆಚ್ಚು ಹಣ ಕಸಿಯುವ ವ್ಯಾಪಾರ ಸೂಕ್ಷ್ಮ ಅಡಕವಾಗಿರಲಿಲ್ಲ. ನನ್ನ ವಿಚಾರದಲ್ಲಿ ಒಂದು ಬಗೆಯ ಪ್ರೀತಿಯನ್ನೂ ಗೌರವವನ್ನೂ ವ್ಯಕ್ತಪಡಿಸಿದಂತಿತ್ತು.
“ಇದಕ್ಕೆ ಎಷ್ಟು ಕೊಡಬೇಕು ರುದ್ರಪ್ಪನವರೇ.”
“ನಿಮ್ಮ ಸಂತೋಷ ಸ್ವಾಮಿ. ಅವಕ್ಕೆಲ್ಲಾ ಬೆಲೆಯಿಲ್ಲ. ತಿಳಿದವರಿಗೆ ಗೊತ್ತು ಬೆಲೆ.”
ಬೆಲೆಯ ಮೇಲೆ ಅವನು ಒತ್ತಿ ಆಡಿದ ಮಾತು ನನ್ನ ಮೊದಲಿನ ನಂಬಿಕೆಯನ್ನು ಸ್ವಲ್ಪ ಅಳ್ಳಾಡಿಸಿತು. “ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ; ಹೆಚ್ಚು ದುಡ್ಡು ಕೊಟ್ಟರೇ ಇದೇ ಅವನಿಗೆ ಉತ್ತಮ ಪದಾರ್ಥ” ಎಂದುಕೊಂಡೆ. ಆದರೆ ಗ್ರಂಥವನ್ನು ಬಿಡುವುದಕ್ಕೆ ಮನಸ್ಸಿಲ್ಲ.
“ಹೇಳಿ ರುದ್ರಪ್ಪನವರೇ. ಬೆಲೆ ಹೇಳದಿದ್ದರೆ ನಾನು ಗ್ರಂಥವನ್ನು ಕೊಳ್ಳುವುದು ಹೇಗೆ?”
“ನಿಮ್ಮ ಸಂತೋಷ ಎಂದು ಹೇಳಿದೆನಲ್ಲಾ ಸ್ವಾಮಿ ನಿಮಗೇನು ತೋರುತ್ತೋ ಅದನ್ನು ಕೊಡಿ.”
ಅವನ ಕೈಗೆ ಒಂದು ರೂಪಾಯಿಯನ್ನಿತ್ತೆ. ಅದನ್ನೇ ಸಂತೋಷವಾಗಿ ಕಿಸೆ ಸೇರಿಸಿದ.
“ಕಡಿಮೆಯಾಯಿತೇ ರುದ್ರಪ್ಪನವರೇ.”
“ಏನೂ ಇಲ್ಲ ಸ್ವಾಮಿ.”
“ಸಂಕೋಚಪಟ್ಟುಕೊಳ್ಳದೇ ಹೇಳಿ. ಈಗ ನನ್ನ ಹತ್ತಿರ ಇರುವುದಿಷ್ಟೇ. ನಾಳೆ ಈ ಕಡೆ ಹೋಗುವಾಗ ಮಿಕ್ಕದ್ದನ್ನು ತಂದುಕೊಡುತ್ತೇನೆ.”
“ಸರಿ ಸರಿ ಬಿಡಿ ಸ್ವಾಮಿ. ಇದಕ್ಕೆಲ್ಲಾ ಏನು? ನಾಳೆ ಭಾನುವಾರ ಕೆಲವು ಹಳೆಗನ್ನಡ ಪುಸ್ತಕಗಳೂ, ಇನ್ನೂ ಕೆಲವು ಕಾವ್ಯ ಸಂಗ್ರಹಗಳೂ ಬರುತ್ತವೆ… ನಿಮಗೆ ಬೇಕೇನು?”
“ಅಯ್ಯೋ! ಏನು ಹೀಗೆ ಹೇಳುತ್ತೀರಲ್ಲಾ. ಅವಶ್ಯಕವಾಗಿ ಬೇಕಪ್ಪಾ.”
“ಹಾಗಾದರೆ ಹರಾಜು ಮುಗಿಯುವ ಹೊತ್ತಿಗೆ.. ಸುಮಾರು ೧೨ ಘಂಟೆಗೆ ಬನ್ನಿ. ನಾನು ತೆಗೆದಿಟ್ಟಿರುತ್ತೇನೆ. ನೀವು ಬೇಕಾದ್ದು ತೆಗೆದುಕೊಂಡು ಹೋಗಬಹುದು.”
“ಹಾಗೇ ಆಗಲಿ, ಬಹಳ ಉಪಕಾರವಾಯಿತು ರುದ್ರಪ್ಪನವರೇ – ನಮಸ್ಕಾರ.”
ನನ್ನ ‘ನಮಸ್ಕಾರ’ಕ್ಕೆ ರುದ್ರಪ್ಪನ ‘ಗುಡ್‌ಮಾರ್ನಿಂಗ್’ ದೊರೆತದ್ದು ಸ್ವಲ್ಪ ನಗೆಯನ್ನುಂಟುಮಾಡಿತು. ರುದ್ರಪ್ಪನಿಗೆ ಸ್ವಲ್ಪ ಇಂಗ್ಲೀಷೂ ಬರುತ್ತೆ ಎಂದು ನಿರ್ಧಾರವಾದಹಾಗಾಯಿತು.
uಟಿಜeಜಿiಟಿeಜ

ಭಾನುವಾರ ೧೨ ಘಂಟೆಯಾದರೂ ‘ಹರಾಜು’ ಮುಗಿದಿರಲಿಲ್ಲ. ಒಂದಾಗುತ್ತಲೊಂದು ಸಾಮಾನುಗಳು “ಒಂದನೆಯ ಸಾರಿ – ಎರಡನೆಯ ಸಾರಿ – ಮೂರನೆಯ ಸಾರಿ” ಹೇಳಿಸಿಕೊಂಡು ಮಾಯವಾಗುತ್ತಿದ್ದುವಲ್ಲದೆ ಹರಾಜು ಮುಗಿಯುವ ಸಂಭವವೇ ಕಾಣಲಿಲ್ಲ. ಸಾಮಾನುಗಳನ್ನು ಕೂಗಿ ಕೂಗಿ ಮುಸಲ್ಮಾನ ಸಾಹೇಬನಿಗೆ ಬಾಯಿ ಒಣಗುತ್ತ ಬಂದಿತ್ತು. ಅವನೂ ಅವಸರದಲ್ಲಿ ಕೈಗೆ ಸಿಕ್ಕಿದ ಸಾಮಾನುಗಳನ್ನು ಹರಾಜು ಹಾಕುತ್ತಿದ್ದಂತಿತ್ತು. ಈ ಅವಸರದಲ್ಲಿ ಕೈಗೆ ಸಿಕ್ಕಿದ ಸಾಮಾನುಗಳನ್ನು ಹರಾಜು ಹಾಕುತ್ತಿದ್ದಂತಿತ್ತು. ಈ ಅವಸರದಲ್ಲಿ ನಕ್ಕಿ ಕೆಲಸ ಮಾಡಿದ ಮುಖದಲ್ಲಿನ ಹಂಸದ ಚಿತ್ರಪಠವೊಂದು ಸಾಹೇಬನ ಕೈ ಬಾಯಿಗೆ ಬಿದ್ದಿತ್ತು. ಅದಕ್ಕೂ “ಮೊದಲನೆಯ ಸಾರಿ – ಎರಡನೆಯ ಸಾರಿ” ಕೂಗುತ್ತಿದ್ದಂತೆ ರುದ್ರಪ್ಪ ಮಿಂಚಿನ ಹಾಗೆ ಎದ್ದುಬಂದು ಪಠವನ್ನು ಕಿತ್ತುಕೊಂಡ. ಬೆಕ್ಕಸಬೆರಗಾಗಿ ನೋಡುತ್ತಿದ್ದ ಸಾಹೇಬನನ್ನು ಗದ್ದರಿಸಿ “ಕ್ಯಾಜಿ, ತುಮ್ಕು ಅಖ್ಖಲ್ ನೈ” ಎಂದು ಬಯ್ದು ಹರಾಜನ್ನು ಸಾಕು ಮಾಡಿಬಿಟ್ಟ.
ನನಗೆ ರುದ್ರಪ್ಪನ ನಡತೆ ಪರಮಾಶ್ಚರ್ಯವನ್ನುಂಟುಮಾಡಿತು. ಎಂದೂ ಯಾವ ಸಾಮಾನನ್ನು ಮೋಹಿಸದಿದ್ದ ರುದ್ರಪ್ಪ ಈ ಹಳೆಯ ಪಠವನ್ನು ಇಷ್ಟು ಜೋಪಾನದಿಂದ ಸಂಗ್ರಹಿಸಲು ಕಾರಣವೇನು? ಈ ಚಿತ್ರಕ್ಕೂ ರುದ್ರಪ್ಪನ ಜೀವನಕ್ಕೂ ಏನಾದರೂ ಸಂಬಂಧವಿರಬಹುದೇ? ಎಂದೆನಿಸಿತು. ಆ ಹೊತ್ತಿಗೆ ರುದ್ರಪ್ಪ ಒಳಕ್ಕೆ ಕರೆಯಲು ದಿದ್ರಿಕ್ಷೆಯನ್ನು ಸಾಕುಮಾಡಿ ಒಳಗೆ ಹೋಗಿ ಕುಳಿತೆ. ರುದ್ರಪ್ಪ ನನ್ನ ಮುಂದೆ ಪುಸ್ತಕದ ಒಂದು ಕಟ್ಟನ್ನು ಹಾಕಿ ಸಾಹೇಬನೊಂದಿಗೆ ಲೆಕ್ಕಾಚಾರಕ್ಕೆ ಕುಳಿತ.

ಕಟ್ಟು ಬಿಚ್ಚಿ ನೋಡಿದೆ. ನನಗೆ ಬ್ರಹ್ಮಾನಂದವಾಗಿ ಹೋಯಿತು. “ರನ್ನನ ಗದಾಯುದ್ಧ – ಜನ್ನನ ಯಶೋಧರ ಚರಿತ್ರೆ – ಮುದ್ದಣ್ಣನ ರಾಮಾಶ್ವಮೇಧ – ಅಜ್ಞಾತಕವಿಯ ಕನ್ನಡ ಉತ್ತರ ರಾಮ ಚರಿತ್ರೆ – ಹರಿಹರನ ಗಿರಿಜಾಕಲ್ಯಾಣ – ಬಸವಣ್ಣನವರ ವಚನಗಳು – ಸರ್ವಜ್ಞನ ತ್ರಿಪದಿಗಳು – ದುರ್ಗಸಿಂಹನ ಪಂಚತಂತ್ರ – ಹೊನ್ನಮ್ಮನ ಹದಿಬದೆಯ ಧರ್ಮ – ನಾಗರಸನ ಭಗವದ್ಗೀತೆ – ಕೆಲವು ಆಧುನಿಕ ಕಥಾ ಕವಿತಾ ಗ್ರಂಥಗಳು” ಒಟ್ಟು ೨೦-೨೪ ಪುಸ್ತಕಗಳ ಮೇಲಿದ್ದವು. ರುದ್ರಪ್ಪನ ಕಡೆ ತಿರುಗಿ ನೋಡಿದೆ. ಸಾಹೇಬನ ಲೆಕ್ಕ ಮುಗಿದಿತ್ತು, ಅವನು ಹೊರಟಿದ್ದ.
“ಇವುಗಳಿಗೆಲ್ಲಾ ಎಷ್ಟು ಕೊಡಲಿ ರುದ್ರಪ್ಪನವರೇ.”
“ನಾನು ಐದು ರೂಪಾಯ ಕೊಟ್ಟೆ ಸ್ವಾಮಿ. ಅದರ ಮೇಲೆ ತಾವು ಎಷ್ಟು ಕೊಟ್ಟರೂ ಸಂತೋಷ.”
ರುದ್ರಪ್ಪನ ಕೈಗೆ ಆರು ರೂಪಾಯಿಗಳನ್ನಿತ್ತೆ. ಅವನ ಮುಖ ಪ್ರಫುಲ್ಲವಾಯಿತು. ನನ್ನ ವ್ಯಾಪಾರ ಯಾವ ಬಗೆಯ ಅಸಂತುಷ್ಟಿಯನ್ನೂ ಉಂಟುಮಾಡಿಲ್ಲವೆಂದು ತಿಳಿದೂ ನನಗೂ ಸಂತೋಷವಾಯಿತು. ರುದ್ರಪ್ಪನನ್ನು ಕೆಣಕಲು ಇದೇ ಉತ್ತಮ ಸಮಯವೆಂದು ನೆನೆದೆ.
“ಈ ಸಂಪಾದನೆಯನ್ನೆಲ್ಲಾ ಏನು ಮಾಡುತ್ತೀರಿ ರುದ್ರಪ್ಪನವರೇ.”
“ಏನು ಸಂಪಾದನೆ ಸ್ವಾಮಿ. ಅಲ್ಲಿಗಲ್ಲಿಗೆ ಸರಿಹೋಗುತ್ತೆ.”
“ಸಂಸಾರಕ್ಕೆ!”
“ಸಂಸಾರ ಎಲ್ಲಿಂದ ಬಂತು ಸ್ವಾಮಿ. ನಾನೇ ನನ್ನ ಸಂಸಾರ. ಈ ಹಳೆಯ ಸಾಮಾನುಗಳೇ ನನ್ನ ಹೆಂಡತಿ ಮಕ್ಕಳು, ಬಂಧು ಮಿತ್ರರು, ಬಳಗ – ಬಂಡವಾಲ.”
“ನಿಮ್ಮ ಹೆಂಡತಿ ಮಕ್ಕಳು….”
“ನನಗೆ ಮದುವೆಯೇ ಆಗಿರಲಿಲ್ಲ ಸ್ವಾಮಿ.”
“ಹಾಗಾದರೆ… ಹೀಗೆಲ್ಲಾ ಕೇಳುತ್ತಿದ್ದೀನೆಂದು ಮನಸ್ಸಿಗೆ ಏನೂ ತಿಳಿದುಕೊಳ್ಳಬೇಡಿ ರುದ್ರಪ್ಪನವರೇ. ಯಾವ ದುರುದ್ದೇಶವೂ ಇಲ್ಲ. ನೀವು ನನ್ನ ವಿಚಾರದಲ್ಲಿ ತೋರಿಸಿದ ವಿಶ್ವಾಸದಿಂದ ನನಗೂ ಒಂದು ಬಗೆಯ ವಿಶ್ವಾಸ ಹುಟ್ಟಿತು… ಆದ್ದರಿಂದ…”
“ನನ್ನದೇನು ವಿಶ್ವಾಸ ಬಿಡಿ ಸ್ವಾಮಿ. ನಿಮ್ಮ ದುಡ್ಡಿಗೆ ಪುಸ್ತಕ ಕೊಟ್ಟೆ. ಸುಮ್ಮನೆ ಕೊಟ್ಟೆನೆ?”
“ಹಾಗಲ್ಲ ಆದರೂ… ಮದುವೆ ಮಾಡಿಕೊಳ್ಳದೆಯೇ ಜೀವನವನ್ನೆಲ್ಲ ಸವೆಯಿಸಿರುವಿರಾ?”
“ಹೂ! ಹಾಗೆಂದೇ ಹೇಳಬೇಕು.”
“ಆ ಕಸೂತಿಪಠ ಯಾರದು?”
ನಾನು ಈ ಪ್ರಶ್ನೆಯನ್ನು ಹೆದರಿ ಹೆದರಿಯೇ ಕೇಳಿದೆ. ಕೇಳಬಾರದಾಗಿತ್ತೇನೋ ಎಂದೆನಿಸಿತು. ರುದ್ರಪ್ಪನ ಕಣ್ಣುಗಳಲ್ಲಿ ತೊಟತೊಟನೆ ಹನಿಗಳುದುರಿದವು. ಕೆಂಪುಗೊಂಡ ಮುಖ, ಅದುರಲಾರಂಭಿಸಿದ ತುಟಿಗಳು ಅವನ ಮನಸ್ಸಿನ ಉಮ್ಮಳವನ್ನು ಎತ್ತಿ ತೋರಿಸುತ್ತಿದ್ದವು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು.
“ಅದು ದೊಡ್ಡ ಕಥೆ ಸ್ವಾಮಿ ಕೇಳುತ್ತೀರೇನು?”
“ಆಗಲಿ”
ಈಗಲೇ ಹೊತ್ತು ಬಹಳವಾಗಿ ಆಗಿದೆಯಲ್ಲಾ. ಒಂದು ಘಂಟೆ ಸಮಯ. ನಿಮಗೆ ಊಟಕ್ಕೆ ಹೊತ್ತಾಗುವುದಿಲ್ಲವೇ?
“ಚಿಂತೆಯಿಲ್ಲ ಹೇಳಿ ರುದ್ರಪ್ಪನವರೇ. ಈ ಹಬ್ಬದೂಟದಿಂದ(ಗ್ರಂಥಗಳ) ನನಗೆ ನಿಬ್ಬರಬರಿಸಿರುವಿರಿ. ಹಸಿವಿನ ಕಾಟ ಹರಿಸಿರುವಿರಿ.”
“ಬಹಳ ಹಿಂದಿನ ಮಾತು. ಇಪ್ಪತ್ತು ವರ್ಷದ ಹಿಂದಿನ ಮಾತು. ನಮ್ಮ ತಂದೆಗೆ ನಾನು ಒಬ್ಬನೇ ಮಗ. ತಕ್ಕಮಟ್ಟಿಗೆ ಅನುಕೂಲವಾಗಿಯೇ ಇದ್ದರು. ನನ್ನನ್ನು ಬಹಳ ಮುದ್ದಿನಿಂದ ಬೆಳೆಸಿದರು. ತಾಯಿಯಿಲ್ಲದ ಮಗುವೆಂದು ನನ್ನನ್ನು ಯಾವುದಕ್ಕೂ ಆಕ್ಷೇಪಿಸುತ್ತಿರಲಿಲ್ಲ, ಯಾವುದಕ್ಕೂ ಕೊರತೆಯನ್ನುಂಟುಮಾಡುತ್ತಿರಲಿಲ್ಲ. ನಾನಾಗ ಓದುತ್ತಿದ್ದೆ. ನಾಲ್ಕನೆಯ ಫಾರಂ. ನಮ್ಮ ಮನೆಯಲ್ಲಿ ಅಷ್ಟು ಓದಿದವರು ಯಾರೂ ಇರಲಿಲ್ಲ. ಅದೇ ನಮ್ಮ ತಂದೆಗೆ ದೊಡ್ಡ ಹೆಮ್ಮೆಯಾಗಿತ್ತು.”
“ನ್ಯಾಯವೇ ಆಮೇಲೆ…”
“ನಮ್ಮ ಮನೆಯ ಪಕ್ಕದಲ್ಲಿ ತಾಯಿಮಕ್ಕಳಿಬ್ಬರಿದ್ದರು. ನಮ್ಮ ಜಾತಿ. ಅವರಿಗೆ ಸ್ವಲ್ಪ ಭತ್ತ, ರಾಗಿ ಬರುತ್ತಿತ್ತು. ಅದರಲ್ಲಿಯೇ ಜೀವನ ಮಾಡಿಕೊಂಡು ಮರ್ಯಾದೆಯಾಗಿದ್ದರು. ನಮ್ಮ ಮನೆಗೆ ಬಂದು ಹೋಗುವುದೂ ರೂಢಿಯಲ್ಲಿತ್ತು. ನನಗೆ ೨೦-೨೨ ವಯಸ್ಸು. ಆ ಹುಡುಗೀಗೆ ಸುಮಾರು ೧೫-೧೬. ಮೊದಲಿನಿಂದಲೂ ನಮ್ಮನಮ್ಮಲ್ಲಿ ವಿಶ್ವಾಸವಿದ್ದೇ ಇತ್ತು. ನಾನು ನಾಲ್ಕನೆಯ ಫಾರಂ ಪರೀಕ್ಷೆ ಪಾಸಾದ ವರ್ಷ ಅದು ಉಲ್ಬಣಾವಸ್ಥೆಗೆ ಬಂತು. ಚೆನ್ನನಿಗೆ ಮದುವೆ ಏರ್ಪಾಟು ಆರಂಭವಾಯಿತು. ಅವಳ ಸೋದರ ಮಾವನ ಮಗ ವೀರಪ್ಪನಿಗೆ ನಿಶ್ಚಯವಾಯಿತು.
ಒಂದು ದಿನ ಸಾಯಂಕಾಲ ನಾನು ಆಟ ಮುಗಿಸಿಕೊಂಡು ಮನೆಗೆ ಬರುತ್ತಿದ್ದೆ. ದಾರಿಯಲ್ಲಿ ಒಂದು ಮರದ ಹಿಂದೆ ನಿಂತು ಚೆನ್ನ ಕರೆದಳು ‘ಮಾತನಾಡಬೇಕಾಗಿದೆ ಅಪ್ಪಾಜಿ, ಕೆರೆಯ ದಂಡೆಗೆ ಬಾ’ ಎಂದು ಹೇಳಿ ಮಾಯವಾದಳು. ನಾನು ನೇರವಾಗಿ ಕೆರೆಯ ದಂಡೆಗೆ ಹೋದರೆ ಅಲ್ಲಿ ಚೆನ್ನ ಮದುವೆ ಏರ್ಪಾಟಿನ ಕಥೆಯನ್ನೆಲ್ಲಾ ಹೇಳಿ ವೀರಪ್ಪನನ್ನು ಕೂಡಿ ಬಾಳಲು ತನಗೆ ಸ್ವಲ್ಪವೂ ಇಷ್ಟವಿಲ್ಲವೆಂದು ತಿಳಿಸಿದಳು.
ಅದು ಹೇಳುತ್ತ ಅವಳ ಕಣ್ಣಲ್ಲಿ ಗಂಗಾಪ್ರವಾಹವೇ ಹೊರಟಿತು. ನನ್ನ ಕುತ್ತಿಗೆ ತಬ್ಬಿಕೊಂಡು ‘ನಿನ್ನೇ ನಾನು ಪ್ರೀತಿಸಿದ್ದು ಅಪ್ಪಾಜಿ. ನನಗೆ ಯಾವಾಗಲೂ ನೀನೇ ಗಂಡ… ಬಲವಂತ ಮಾಡಿ ಜನಾ ವೀರಪ್ಪನಿಗೆ ನನ್ನನ್ನು ಕಟ್ಟಿದರೆ ಇದೇ ಕೆರೆಯಲ್ಲಿಯೇ ಬಿದ್ದು ಪ್ರಾಣ ಬಿಡುತ್ತೇನೆ’ ಎಂದು ಶಪಥ ಮಾಡಿದಳು.
ನಾನು ಸಮಾಧಾನ ಮಾಡುತ್ತಾ “ಹಾಗಲ್ಲಾ ಚೆನ್ನಾ. ತಾಯಿ ಮಾತು ಮೀರಬಾರದು. ನನಗೇನು ನಿನ್ನ ಮೇಲೆ ಪ್ರೀತಿಯಿಲ್ಲ ಎಂದು ತಿಳಿದಿದ್ದೀಯಾ. ನಿಮ್ಮಪ್ಪ ನಮ್ಮಪ್ಪ ವ್ಯಾಜ್ಯ ಕಾಯದಿದ್ದರೆ ಈ ಕಷ್ಟ ಇಬ್ಬರಿಗೂ ಏತಕ್ಕೆ ಬರುತ್ತಿತ್ತು?”
“ನೀನು ನನ್ನ ಪ್ರೀತಿಸುವುದು ನಿಜವೇ ಅಪ್ಪಾಜಿ”
“ಗಂಗಾತಾಯಿ ಆಣೆಗೂ ನಿಜ ಚೆನ್ನಾ.”
“ಹಾಗಾದರೆ ನಡಿ ಇಬ್ಬರೂ ಹೊರಟು ಹೋಗೋಣ. ಎಲ್ಲಿಯಾದರೂ ಜೀವನ ಮಾಡಿಕೊಂಡು ಸುಖವಾಗಿರೋಣ. ನನ್ನ ಮೇಲೆ ಸ್ವಲ್ಪ ಒಡವೆ ಇದೆ. ಅದು ಮುಗಿಯುವ ಹೊತ್ತಿಗೆ ನೀನು ಏನಾದರೂ ಕೆಲಸ ಸಂಪಾದಿಸು.”
“ಇಷ್ಟು ಅವಸರ ಏಕೆ. ನನಗೆ ಸ್ವಲ್ಪ ಯೋಚನೆಗೆ ಅವಕಾಶಕೊಡು. ನಾಳೆ ಜವಾಬು ಹೇಳುತ್ತೇನೆ.”
ಮಾರನೆಯ ದಿವಸ ಅವಳಿಗೆ ನಾನು ಹೇಳಿದ ಜವಾಬೆಂದರೆ ಬುಧವಾರ ಮದರಾಸಿಗೆ ಹೋಗುವುದೆಂದು! ಇಬ್ಬರೂ ಕೆಲವು ತಿಂಗಳು ಸುಖವಾಗಿದ್ದೆವು. ಸ್ವರ್ಗಸುಖವನ್ನೇ ಅನುಭವಿಸಿದೆವು. ಅಷ್ಟು ಹೊತ್ತಿಗೆ ಇದ್ದದ್ದು ಕರಗುತ್ತಾ ಬಂದಿತ್ತು. ನಾನು ಕಷ್ಟಪಟ್ಟು ಒಂದು ಕೆಲಸವನ್ನು ಸಂಪಾದಿಸಿಕೊಂಡು ತಿಂಗಳಿಗೆ ೩೦ ರೂಪಾಯಿಯಸ್ಟು ಗಳಿಸುತ್ತಿದ್ದೆ. ಅದರಲ್ಲಿಯೇ ಮಿತವಾಗಿ ಸುಖವಾಗಿ ಜೀವನ ಮಾಡಿಕೊಂಡಿದ್ದೆವು.

ಆದರೆ ನನ್ನ ಚಪಲಬುದ್ಧಿ ಕಪಿಯಂತೆ ಆಡತೊಡಗಿತು. ಸ್ವಲ್ಪ ಕಷ್ಟವಾದರೂ ಚೆನ್ನನ ಮೇಲೆ ಹಾಕಲಾರಂಭಿಸಿದೆ. ಹಿಂಸೆಗೆ ಮೊದಲು ಮಾಡಿದೆ. ಅಹನ್ಯಹನಿ ಜಿವನದ ಕಷ್ಟಕಾರ್ಪಣ್ಯ ಮರೆಯಲು ದುಷ್ಟ ಚಟಗಳಿಗೆ ಬೀಳತೊಡಗಿದೆ. ಆದರೆ ಚೆನ್ನಾ… ಎಲ್ಲವನ್ನೂ ಸಹಿಸಿದಳು; ಎಲ್ಲವನ್ನೂ ಉಪಭೋಗಿಸಿದಳು. ಊಟವಿಲ್ಲದೆ ಮಲಗುವ ದಿನಗಳಲ್ಲಿ “ಏನಂತೆ, ಇದ್ದಾಗ ಮೂರು ಹೊತ್ತು ಉಣಲಿಲ್ಲವೇ. ಒಪ್ಪತ್ತು ಅನ್ನವಿಲ್ಲವೆಂದು ಈಗೇಕೆ ಅಳಬೇಕು” ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದಳು. ಒಂದೊಂದು ಸಲ ನನ್ನ ನಡತೆಯನ್ನು ಕಂಡು ಮುನಿಯುವಳು. ರೋಷದಲ್ಲಿ ಒಂದೊಂದು ಮಾತು ಬಾಯಿಮೀಟಿ ಬಂದುಬಿಡುತ್ತಿತ್ತು. ಆ ಮರುಕ್ಷಣವೇ ನನ್ನ ಕಾಲು ಹಿಡಿದು “ಕ್ಷಮಿಸು ಅಪ್ಪಾಜಿ. ನಾನು ಹುಚ್ಚಿ; ಬುದ್ಧಿಯಿಲ್ಲದ ಹಳ್ಳಿ ಮುಕ್ಕ” ಎಂದು ನೋಯುತ್ತಿದ್ದಳು.

ಕೊನೆಕೊನೆಗೆ ದಾರಿದ್ರ್ಯದ ಹಾವಳಿ ಹೆಚ್ಚಾಯಿತು. ನಮ್ಮ ತಂದೆಯವರು ತೀರಿಹೋದ ಸುದ್ದಿ ಗೊತ್ತಾಯಿತು. ಅವರು ಕೋಪದಲ್ಲಿ ಇದ್ದ ಆಸ್ತಿಯನ್ನೆಲ್ಲಾ ದೇವಸ್ಥಾನಕ್ಕೆ ಬರೆದುಬಿಟ್ಟಿದ್ದರು. ಆ ದುಃಖವೂ ನನ್ನ ಮನಸ್ಸಿನಲ್ಲಿ ಮನೆಮಾಡಿತು. ಈಯೆಲ್ಲ ಅನರ್ಥಗಳಿಗೂ ‘ಇವಳೇ’ ಕಾರಣ ಎಂಬ ಭಾವನೆ ದೃಢವಾಗಿ ಮನಸ್ಸಿನಲ್ಲಿ ನೆಡುತ್ತಾ ಬಂದಿತು.
ಒಂದು ದಿನ… ಗೌರಿಹಬ್ಬವೆಂದು ತಿರಿದು ತಂದು ಪಾಯಿಸದ ಅಡಿಗೆ ಮಾಡಿದ್ದಳು. ಊಟಮಾಡಿ “ಎರಡು ಮೂರು ದಿವಸಗಳಲ್ಲಿ ಬರುವೆ. ಆಫೀಸಿನ ಕೆಲಸದ ಮೇಲೆ ಕಾಟಪಾಡಿ ತನಕ ಹೋಗಿಬರಬೇಕಾಗಿದೆ ಎಂದು ನಂಬಿಸಿ ಹೊರಟೆ. ಅವಳಿಗೊಂದು ಕಾಗದ, ಅವಳ ತಾಯಿಗೊಂದು ಟೆಲಿಗ್ರಾಂ ದಾರಿಯಲ್ಲಿ ಸಿಕ್ಕಿದ ಪೋಸ್ಟ್ ಆಫೀಸಿನಲ್ಲಿ ಕೊಟ್ಟು ನಾನು ಅಲ್ಲಿಂದ ಮುಂಬಯಿಗೆ ಹೊರಟುಬಿಟ್ಟೆ.”
ರುದ್ರಪ್ಪನ ಗಂಟಲು ಬಿಗಿಯುತ್ತ ಬಂತು. ತಲೆಯಮೇಲೆ ಕೈಹೊತ್ತು ಸ್ವಲ್ಪ ಕಾಲ ಹಾಗೆಯೇ ಕುಳಿತುಬಿಟ್ಟ. ನಾನು ಧೈರ್ಯಮಾಡಿಕೊಂಡು,
“ಚೆನ್ನನ ಗತಿ?”
ಅವರ ತಾಯಿ ಬಂದು ಕರೆದುಕೊಂಡು ಹೋದರು. ಆದರೆ ಮತ್ತೆ ನನಗೆ ಅವಳ ದರ್ಶನ ಸಿಗಲಿಲ್ಲ. ಆರು ತಿಂಗಳ ಕಾಲ ತಲೆಹುಳುಕ ನಾಯಿಯ ಹಾಗೆ ಅಲೆದು ಚೆನ್ನನಿಗೆ ನಾನು ಮಾಡಿದ್ದ ದ್ರೋಹವನ್ನು ನೆನೆದು ಊರಿಗೆ ಹೋದೆ. ನಮ್ಮ ಮನೆಯಿದ್ದ ಜಾಗದಲ್ಲಿ ಹುಡುಗರ ಶಾಲೆ ಬಂದುಬಿಟ್ಟಿತ್ತು. ಚೆನ್ನನ ಮನೆಗೆ ಹೋದೆ. ಅವಳ ತಾಯಿಯೇ ಬಂದರು. ನನ್ನನ್ನು ಒಳಕ್ಕೆ ಕರೆದುಕೊಂಡು ಹೋಗಿ ಉಪಚರಿಸಿದರು. ನಾನು ತಬ್ಬಲಿಯಂತೆ ಅವರ ಕಡೆ ನೋಡಿ,
“ಚೆನ್ನಾ ಎಲ್ಲಿ?”
ಎಂದೆ. ನನ್ನನ್ನು ನೋಡಿ ಗೊಳೋ ಎಂದು ಅತ್ತರು. ಅಂದಿಗೆ ಚೆನ್ನಾ ಮಣ್ಣಿನೊಂದಿಗೆ ಒಂದಾಗಿ ನಾಲ್ಕು ತಿಂಗಳಾಗಿತ್ತು. ತೌರುಮನೆಗೆ ಬಂದ ಮೇಲೆ ಹಾಗೂ ಹೀಗೂ ಒಂದೆರಡು ತಿಂಗಳು ಬದುಕಿ ಶಿವಾಧೀನವಾದಳಂತೆ. ಕೊನೆಯಲ್ಲಿ… ನನ್ನ ಹೆಸರು ಹೇಳಿ… ಈ ಪಟವನ್ನು ನಾನು ಸಿಕ್ಕಿದರೆ ಕೊಡಹೇಳಿ… ಮಾತು ನಿಲ್ಲಿಸಿದಳಂತೆ….”
ರುದ್ರಪ್ಪನವರ ಮಾತೂ ನಿಂತುಹೋಯಿತು. ಕತ್ತು ತಗ್ಗಿಸಿ ನೋಡಿದೆ. ನನ್ನ ರನ್ನ ಮುದ್ದಣ್ಣರಿಗೆ ಕಣ್ಣೀರಿನ ಅಭಿಷೇಕವಾಗುತ್ತಿದ್ದುದನ್ನು ಕಂಡೆ. ರುದ್ರಪ್ಪನವರೊಂದಿಗೆ ಆಡಲು ಮಾತುಗಳನ್ನು ಹುಡುಕುವಂತಾಗಿತ್ತು. ಮೆಲ್ಲನೆ ರುದ್ರಪ್ಪನವರ ಬಳಿ ಸಾರಿ ಅವರ ಕೈಗಳನ್ನು ಹಿಡಿದು, ಮನಸ್ಸು ಹೇಳಬೇಕೆಂದಿದ್ದುದನ್ನು ಸೂಚಿಸಿದೆ.
ಆ ವೇಳೆಗೆ ‘ಟಿಫನ್ ಕ್ಯಾರಿಯರ್’ನಲ್ಲಿ ಒಬ್ಬ ಹುಡುಗ ರುದ್ರಪ್ಪನವರ ಊಟವನ್ನು ತಂದು ಒಂದು ಮೂಲೆಯಲ್ಲಿಟ್ಟ. ರುದ್ರಪ್ಪನವರು ನನ್ನನ್ನು ನೋಡಿ ತಮ್ಮ ದುಃಖ ಅಣಗಿಸಿಕೊಂಡು,
“ನನ್ನ ಶಿವಪೂಜೆ ಬಂತು ನಿಮ್ಮ ಶಿವಪೂಜೆ….”
“ಈಗ ಹೊರಡುತ್ತೇನೆ ರುದ್ರಪ್ಪನವರೇ.”
ಎಂದು ಪುಸ್ತಕದ ಗಂಟನ್ನೆತ್ತಿಕೊಂಡು ಹೊರಟೆ. ಯಾವುದೋ ಶಕ್ತಿ ಒಳಕ್ಕೇ ಎಳೆಯುವಂತಿತ್ತು. ರುದ್ರಪ್ಪ ನನ್ನನ್ನು ನೋಡಿ ನಗು ನಗುತ್ತಲೇ,
“ಮತ್ತೆ ಬರಬೇಕು ಸ್ವಾಮಿ. ಹೊತ್ತು ಬಹಳವಾಯಿತು. ಕ್ಷಮಿಸಬೇಕು… ಗುಡ್ ಮಾರ್ನಿಂಗ್.”
“ಗುಡ್ ಮಾರ್ನಿಂಗ್”
ಎಂದು ನಾನೂ ಹೇಳಿ ಹೊರಟೆ. ಆದರೆ ಈ ಸಲ ರುದ್ರಪ್ಪನ ‘ಗುಡ್ ಮಾರ್ನಿಂಗ್’ ನನಗೆ ನಗೆಯನ್ನುಂಟುಮಾಡಲಿಲ್ಲ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.