ಶಿಶಿರದಲ್ಲಿ ಬಂದ ಸ್ನೇಹಿತ

ಚಳಿಗಾಲದಲ್ಲಿ ಒಬ್ಬನೇ ಬೆಚ್ಚಗೆ ಹೊದ್ದು ಕುಳಿತಾಗ
ಮುಪ್ಪು ಮಾತಾಡಿಸಿತು,ತೀರ ಹತ್ತಿರಕೆ ಬಂದು :
“ಏನಪಾ, ಎಲ್ಲ ಸೌಖ್ಯವೆ? ಇತ್ತೀಚೆ ಮತ್ತೆ ಬರವಣಿಗೆ?
ಷಷ್ಟ್ಯಬ್ದಿಗೂ ನಾನು ಬಂದಿದ್ದೆನಲ್ಲ, ನೆನಪಿರಬಹುದು.

ವಿಶ್ರಾಂತ ಜೀವನದಲ್ಲು ಬಿಡುವಿಲ್ಲವೆಂದರೆ ಹೇಗೆ?
ಮಾತಾಡು, ಭಾಷಣ ಬಿಟ್ಟು ಬೇರೆ ವಿಷಯ:
ಮಕ್ಕಳೆಲ್ಲರು ದೂರ, ಮನೆಯಲ್ಲಿ ಇಬ್ಬರೇ ರಾಜಕಾರಣಿಯರು-
ತಮಾಷೆಗೆಂದೆ ಮಾರಾಯ, ಕುಡಿದಿಲ್ಲವೆ ನಾನೂ ಕಷಾಯ?

ವಸಂತದ ಚಿಗುರು, ಮೊಗ್ಗುಗಳ ಹಿಗ್ಗು ಯಾರಿಗೆ ಬೇಡ?
ಅಂಬೆಗಾಲು, ಅಚ್ಚರಿಗಣ್ಣು, ತೊದಲು ಮಾತು;
ನೋಡು ನೋಡುವಷ್ಟರಲ್ಲಿ ಕರಗಿ ಹೋಗಿತ್ತು ಪೆಪ್ಪರಮಿಂಟು-
ಬಿದ್ದ ಹಲ್ಲಿನ ಜಾಗದಲ್ಲಿ ನಾಲಗೆಯ ನಂಟು.

ವೈಶಾಖಕ್ಕೆ ಯೌವನದ ಸೊಕ್ಕು, ಬಿಸಿಲೂ ಪ್ರಖರ-
ಮುಂಗಾರಿನೊಡಲ ಮಿಂಚು, ಮಳೆಯ ರಭಸ;
ಬೇಗೆಯಿಲ್ಲದ ಬಿಸಿಲ ಹದ ಈಗ, ಉದ್ವೇಗವಿಲ್ಲದ ನಡಿಗೆ
ಮುಗಿದ ಸುಗ್ಗಿಯ ಕೊಡುಗೆ: ನಕ್ಷತ್ರಗಳ ಮಂದಹಾಸ.

ಹಂಪುಗಾಲಕ್ಕೆ ಹಣ್ಣಿಗೆ ಬೇರೆ ಬಣ್ಣ, ರುಚಿಯೂ ಅಷ್ಟೆ
ಮಾಗಿದನುಭವದ ಕಳೆ ಮುಖದ ಮೇಲೆ:
ಬದುಕಿನಿತಿಮಿತಿಯನರಿತ ಸಂತೃಪ್ತಿ, ನಿಶ್ಚಿಂತ ನಿಲುವು
ಹೊಸ ಚೆಲುವಿನಾವಿಷ್ಕಾರ, ಸುಕುಮಾರಲೀಲೆ.

ಹಿರಿಯನೆಂದೆನಿಸಿಕೊಳ್ಳುವದು ನಿನ್ನಂಥವಗೆ ಸ್ವಲ್ಪ ಕಿರಿಕಿರಿಯೆ
ಅದಕಾಗಿ ಸಲಿಗೆ ಮೊಮ್ಮಗಳಿಗೆ ಅಜ್ಜನೊಡನೆ:
ಶಿಶಿರದ ಬಸಿರಿನಲ್ಲೆ ಚೈತ್ರ ಕಣ್‌ತೆರೆವ ಜೀವದ ಕುಸುರು
ಒಣಗಿರಿವ ಕೊಂಬೆದುದುಯಲ್ಲಿ ಹಕ್ಕಿಯಾಲಾಪನೆ.

ಸಂಜೆಗೆಂಪಿನ ಮುಂದೆ ಬದುಕಿನ ಗುಟ್ಟು ಬಿಚ್ಚಿಡುವಂತೆ
ಬೆಟ್ಟ, ಸ್ತಬ್ಧ ಗಿಡಮರ, ನಿಶ್ಯಬ್ದ ಹಕ್ಕಿ-ಸಾಲು:
ಕಾಡಿನಂಚಿಗೆ ಕಣ್ಣು ಮುಚ್ಚಾಲೆ ಮಿಂಚು-ಹುಳು
ಹುಬ್ಬುಗೈಹಚ್ಚಿ ನೋಡುವ ಚಂದ್ರ, ಹಿಡಿದು ಲಾಂದ್ರ.

ಬೆಳಗಿನ ವಿಹಾರದಲಿ ಮೈಕೊರೆವ ಚಳಿ, ಮೂಡ ಗಾಳಿಯ ಮೊರೆತ-
ನಗುನಗುತ ಹಣ್ಣೆಲೆಗಳುದುರಿ ಚದುರುವಾಟ:
ಜೀವನಲಯದ ಸ್ವೀಕಾರದಲ್ಲಿದೆ ಸೊಗಸು; ಇದೆಲ್ಲಿಯ ತರಲೆ
ಎನಬೇಡ, ನಾನಿನ್ನು ಬರಲೆ? ಗೊತ್ತಲ್ಲ ನಾ ಸ್ವಲ್ಪ ಒರಟ”.

ಚಹವ ಗುಟಕರಿಸುತ್ತ ಮೇಲೆದ್ದ ಬಾಲ್ಯದ ಗೆಳೆಯ
ನಕ್ಕು, ಕೈಕುಲುಕಿ ದಟ್ಟಮಂಜಿನಲಿ ಕರಗಿಹೋದ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.