ಗೋವಿಂದ ವಿಠಲ… ಹರಿಹರಿ ವಿಠಲ..!

ಪರಮನಾಸ್ತಿಕರಾದ ಜೋಶಿಯವರನ್ನೇ ದಾಸರಪದಗಳ ಸಮಗ್ರ ಸಂಕಲನಕ್ಕೆ ಸಂಪಾದಕರನ್ನಾಗಿ ಮಾಡಿ-ದ್ದರಲ್ಲಿ ಪ್ರಸಾರಾಂಗದ ನಿರ್ದೇಶಕ ಶರಣಬಸಪ್ಪನವರ ಕೈವಾಡವಾಗಲೀ ಕುಚೋದ್ಯವಾಗಲೀ ಕಿಂಚಿತ್ತೂ ಇರಲಿಲ್ಲ. ತಾಳೆಗರಿಗಳನ್ನೂ ಹಳೆಯ ಹಸ್ತಪ್ರತಿಗಳನ್ನು ಓದುವುದರಲ್ಲಿ ನಿಷ್ಣಾತರಾದ ಜೋಶಿಯವರೇ ಕೀರ್ತನೆಗಳನ್ನು ಸಂಪಾದಿಸಲು ಸಮರ್ಥರು ಎನ್ನುವುದು ಶರಣಬಸಪ್ಪನವರಿಗೆ ಗೊತ್ತಿತ್ತು. ಈ ಹಿಂದೆಯೂ ಅನೇಕ ಹಳೆಯ ಹಸ್ತಪ್ರತಿಗಳನ್ನು ಜೋಶಿಯವರು ಹುಡುಕಿ, ಸರಿಯಾದ ಪಾಠ Iಟಟusಣಡಿಚಿಣioಟಿ bಥಿ Pಡಿಚಿmoಜ P ಖಿಯಾವುದೆಂದು ನಿಗದಿಮಾಡಿ ಚಿದಾನಂದಮೂರ್ತಿಯವರಂಥ ಸಂಶೋಧಕರೂ ಚಕಾರ ಎತ್ತದಷ್ಟು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದರು. ಹೀಗಾಗಿ ಕೀರ್ತನೆಗಳ ಸಮಗ್ರ ಸಂಪುಟಕ್ಕೆ ಜೋಶಿಯವರೇ ಸಂಪಾದ-ಕರಾಗಬೇಕು ಅಂತ ಶರಣಬಸಪ್ಪ ಎರಡು ಮಾತಿಲ್ಲದೆ ನಿರ್ಧರಿಸಿಬಿಟ್ಟರು.

ಜೋಶಿಯವರಿಗೂ ಆ ಕ್ಪಣಕ್ಕೆ ಅದೇನು ಅವಮಾನ ಅನ್ನಿಸಲಿಲ್ಲ. ಅವರು ಅದೊಂದು ಗುರುತರವಾದ ಜವಾಬ್ದಾರಿ ಮತ್ತು ಮುಂದಿನ ಮೂರು ವರುಷಗಳನ್ನು ಅರ್ಥಪೂರ್ಣವಾಗಿ ಕಳೆಯುವುದಕ್ಕೊಂದು ದಾರಿ ಎಂದುಕೊಂಡೇ ಶರಣಬಸಪ್ಪ ಹೇಳಿದ್ದಕ್ಕೆ ಒಪ್ಪಿಕೊಂಡುಬಿಟ್ಟರು.
*
*
*
ಜೋಶಿ ಪರಮನಾಸ್ತಿಕರು. ಅವರ ಮನೆಯಲ್ಲಾಗಲೀ ಮನದಲ್ಲಾಗಲೀ ದೇವರ ಫೋಟೊ ಇರಲಿಲ್ಲ. ದೇವರನ್ನು ಅವರು ನಂಬದೇ ಇದ್ದದ್ದು ತಾತ್ವಿಕ ಕಾರಣಗಳಿಗೇನಲ್ಲ. ಅವರಿಗ್ಯಾಕೋ ಮೊದಲಿನಿಂದಲೇ ದೇವರ ಮೇಲೆ ನಂಬಿಕೆ ಬರಲೊಲ್ಲದು. ದೇವರಿದ್ದಾನೆ ಅಂತ ಯಾರಾದರೂ ಹೇಳುವುದನ್ನು ಕೇಳಿದರೆ ಅವರಿಗೆ ನಗು ಬರುತ್ತಿತ್ತು. ನಿರಾಕಾರನೂ ಅದೃಶ್ಯನೂ ಆದ, ಇದ್ದಾನೋ ಇಲ್ಲವೋ ಅನ್ನುವುದಿನ್ನೂ ಸಾಬೀತಾಗದ ದೇವರನ್ನು ಈ ಮನುಷ್ಯರು ಅಷ್ಟೊಂದು ಗಾಢವಾಗಿ ನಂಬುವುದಕ್ಕೆ ಹೇಗೆ ಸಾಧ್ಯ ಅನ್ನುವ ಪ್ರಶ್ನೆ ಅವರನ್ನು ಮತ್ತೆ ಮತ್ತೆ ಕಾಡುತ್ತಿತ್ತು.

ಜೋಶಿಯವರು ಮದುವೆ ಆಗಿರಲಿಲ್ಲ. ಯಾರನ್ನೂ ಪ್ರೀತಿಸಿರಲೂ ಇಲ್ಲ. ಪ್ರೀತಿಸದ ಹೊರತು ದೇವ-ರನ್ನು ಕಾಣುವುದು ಅಸಾಧ್ಯ ಅಂತ ಜೋಶಿಯವರ ಜೊತೆಗೇ ಓದಿದ ಸರಸ್ವತಿ ಒಮ್ಮೆ ಜೋಶಿಯವರಿಗೆ ಹೇಳಿದ್ದಳು. ಅದರ ಆಧಾರದ ಮೇಲೆ ಅವರು ದೇವರು ಮತ್ತು ಪ್ರೀತಿ ಎರಡೂ ಒಂದೇ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಹೀಗಾಗಿ ಎರಡೂ ಅವರ ಪಾಲಿಗೆ ದೂರವೇ ಉಳಿದಿದ್ದವು.
*
*
*
ಪ್ರಸಾರಾಂಗದ ಕೆಲಸಕ್ಕೆಂದು ನರಹರಿತೀರ್ಥರಿಂದ ಗುರುಗೋವಿಂದ ವಿಠಲದಾಸರವರೆಗಿನ ಮೂವತ್ತ-ಮೂರು ದಾಸರ ಒಂದು ಸಾವಿರ ಕೀರ್ತನೆಗಳನ್ನಾದರೂ ಸಂಪಾದಿಸಬೇಕು ಅನ್ನುವ ನಿರ್ಧಾರಕ್ಕೆ ಬಂದಿ-ದ್ದರು. ಆ ಕೀರ್ತನೆಗಳ ಹುಡುಕಾಟಕ್ಕೆಂದು ಜೋಶಿ ಪ್ರಯಾಣ ಆರಂಭಿಸಿದರು. ಮೊಟ್ಟ ಮೊದಲನೆಯ-ದಾಗಿ ಗದಗ, ಉಡುಪಿ, ಹೊಸಪೇಟೆ, ಹುಬ್ಬಳ್ಳಿ, ಬೆಂಗಳೂರು ಮುಂತಾದ ಊರುಗಳಲ್ಲಿರುವ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿದ ಭಜನೆ ಪುಸ್ತಕಗಳನ್ನು ಕೊಂಡು ತಂದರು. ಹಳ್ಳಿಹಳ್ಳಿಗಳ ಭಜನಾಮಂಡಳಿಗಳಿಗೆ ಹೋಗಿ ಅಲ್ಲಿ ಕೃಷ್ಣನ ಮೂರ್ತಿಯ ಕೆಳಗೆ ಬಚ್ಚಿಟ್ಟ ಭಜನಾ ಪುಸ್ತಕಗಳ ಹಸ್ತಪ್ರತಿಗಳನ್ನೆಲ್ಲ ಪ್ರತಿ ಮಾಡಿಸಿಕೊಂಡರು. ಮನೆಮನೆಗಳಲ್ಲಿ ಹಾಡುವ ಭಜನೆಗಳನ್ನು ಬರೆದುಕಳುಹಿಸಬೇಕೆಂದು ಪತ್ರಿಕೆಗಳಲ್ಲಿ ಮನವಿ ಮಾಡಿಕೊಂಡರು. ಉಡುಪಿಯ ಮಠಗಳಲ್ಲಿ ಹಾಡುತ್ತಿದ್ದಂಥ ಕೀರ್ತನೆಗಳನ್ನು ಹುಡುಕಿಸಿ ತರಿಸಿ-ದರು. ಜೋಶಿಯವರ ಮನೆಯ ತುಂಬ ಹಳೆಯ ಹಸ್ತಪ್ರತಿಗಳೂ, ಅವುಗಳ ಝೆರಾಕ್ಸುಗಳೂ ತುಂಬಿಕೊಂ-ಡವು. ಒಂದಷ್ಟು ಹಾಡುಗಳನ್ನು ಮಾನ್ವಿಯಿಂದ, ಗಂಗಾವತಿಯಿಂದ ಅವರ ಶಿಷ್ಯರು ರೆಕಾರ್ ಮಾಡಿಸಿ ಕಳುಹಿಸಿಕೊಟ್ಟಿದ್ದರು.
*
*
*
ಪರಮನಾಸ್ತಿಕ ಜೋಶಿಯವರು ಹಗಲೆನ್ನದೆ ಇರುಳೆನ್ನದೆ ಕೀರ್ತನೆಗಳನ್ನು ಓದಿದರು. ಓದಿದಾಗ ಒಂದು ಅರ್ಥ ಬಂದರೆ ಕೇಳಿದಾಗ ಮತ್ತೊಂದು ಅರ್ಥ ಬರುವಂಥ ಕೀರ್ತನೆಗಳು ಸಾಕಷ್ಟಿದ್ದವು. ಕೆಲವು ಕೀರ್ತನೆಗ-ಳಂತೂ ಏನು ಮಾಡಿದರೂ ಅರ್ಥವಾಗುತ್ತಿರಲಿಲ್ಲ. ಕೆಲವೊಂದು ಉಗಾ?ಗಗಳನ್ನು , ಸುಳಾದಿಗ-ಳನ್ನು ಓದುತ್ತಿದ್ದ ಹಾಗೇ ಅವು ಪರಿಪೂರ್ಣವಾಗಿಲ್ಲ ಅನ್ನಿಸತೊಡಗಿತು.

‘ಮುಳ್ಳುಕೊನೆಯ ಮೇಲೆ ಮೂರು ಗೊನೆಯ ಕಟ್ಟಿ ಎರಡು ತುಂಬದು ಒಂದು ತುಂಬಲೆ ಇಲ್ಲ’ ಹಾಡಂತೂ ಎಷ್ಟು ಬಾರಿ ಓದಿದರೂ ಅರ್ಥಬಿಟ್ಟುಕೊಡಲೇ ಇಲ್ಲ.
*
*
*
ಮೂರು ವರುಷಗಳ ಕಾಲ ಹಗಲು ಇರುಳೆನ್ನದೆ ಜೋಶಿಯವರು ಕೀರ್ತನೆಗಳನ್ನು ಓದಿದರು. ಓದುತ್ತಾ ಓದುತ್ತಾ ಅದರಲ್ಲೇ ತಲ್ಲೀನರಾದರು. ಈ ಮಧ್ಯೆ ಶರಣಬಸಪ್ಪನವರು ತೀರಿಕೊಂಡು ಆ ಜಾಗಕ್ಕೆ ಪಂಪಾಪತಿ ನೇಮಕಗೊಂಡರು. ಪಂಪಾಪತಿಗೂ ಶರಣಬಸಪ್ಪನವರಿಗೂ ತಾತ್ವಿಕವಾದ ಭಿನ್ನಾಭಿಪ್ರಾಯ-ವಿತ್ತು. ಶರಣಬಸಪ್ಪನವರದು ದೇಸಿಯೊ? ಪುಗುವುದು ಧೋರಣೆಯಾದರೆ, ಪಂಪಾಪತಿಯದು ಆಧುನಿಕ ಮನಸ್ಸು. ಅವರು ಈ ಹಸ್ತಪ್ರತಿಗಳನ್ನೆಲ್ಲ ಪ್ರಿಂಟು ಮಾಡಿ ಲೈಬ್ರರಿಯಲ್ಲಿ ತುಂಬುವುದು ಅನಗತ್ಯ ಅನ್ನಿಸಿ, ಅವನ್ನೆಲ್ಲ ಸೀಡಿಗಳಲ್ಲೋ ಮೈಕ್ರೋಫಿಲ್ಮುಗಳಲ್ಲೋ ಸಂಗ್ರಹಿಸಿಟ್ಟರೆ ಸಾಕು ಅಂತ ಅಪ್ಪಣೆ ಕೊಡಿಸಿದರು. ಅಲ್ಲಿಗೆ ಜೋಶಿಯವರ ಸಂಪಾದನೆಯೂ ಅಧಿಕೃತವಾಗಿ ನಿಂತುಹೋಯಿತು.
*
*
*
ಜೋಶಿಯವರು ಕೀರ್ತನೆಗಳ ಸಹವಾಸ ಬಿಡಲಿಲ್ಲ. ಕ್ರಮೇಣ ಅವರು ಕೀರ್ತನೆಗಳಲ್ಲಿ ಏನೋ ಒಂದು ಥರದ ಸುಖ ಪಡೆಯುತ್ತಿರುವಂತೆ ಕಂಡುಬಂದರು. ಒಬ್ಬರೇ ಕೂತು ಕೀರ್ತನೆಗಳನ್ನು ಓದುತ್ತಿದ್ದಾಗ, ವಿದ್ಯಾಭೂಷಣರೋ ಭೀಮಸೇನ ಜೋಶಿಯವರೋ ಹಾಡಿದ ಕೀರ್ತನೆಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರೆಲ್ಲ ತನ್ನ ಕುರಿತೇ ಹಾಡುತ್ತಿದ್ದಾರೆ ಅಂತ ಜೋಶಿಯವರಿಗೆ ಅನ್ನಿಸತೊಡಗಿತು.
ಯಾರೇ ರಂಗನ ಯಾರೇ ಕೃಷ್ಣನ
ಯಾರೇ ರಂಗನ ಕರೆಯ ಬಂದವರು
ಗೋಪಾಲಕೃಷ್ಣನ ಪಾಪವಿನಾಶನ
ಈ ಪರಿಯಿಂದಲಿ ಕರೆಯಬಂದವರು..
ಎಂಬ ಕೀರ್ತನೆ ಓದುತ್ತಿದ್ದಂತೆ ಅಲ್ಲಿ ಬರುವ ರಂಗನೂ ನಾನೇ ಗೋಪಾಲಕೃಷ್ಣನೂ ನಾನೇ ಅನ್ನಿಸಿ ಜೋಶಿಯವರಿಗೆ ರೋಮಾಂಚವಾಗುತ್ತಿತ್ತು. ಬೆಳಗಾಗಿ ಏಳುತ್ತಲೇ ರಂಗನಾಯಕ ರಾಜೀವಲೋಚನ
ರಮಣನೆ ಬೆಳಗಾಯಿತೇಳೆನ್ನುತ
ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತ..
– ಈ ಹಾಡು ಅವರ ಕಿವಿಗೆ ಬೀಳಬೇಕು, ಅಂಥದ್ದೊಂದು ವ್ಯವಸ್ಥೆ ಮಾಡಿಕೊಂಡರು. ಸ್ನಾನ ಮಾಡು-ವಾಗ ‘ಮೊಸರು ಮಾರಲು ಪೋದರೆ ನಿನ್ನ ಕಂದ ಹೆಸರೇನೆಂದೆಲೆ ಕೇಳಿದ. ಹಸನಾದ ಹೆಣ್ಣ ಮೇಲೆ ಕುಸು-ಮವ ತಂದಿಕ್ಕಿ ಶಶಿಮುಖಿಯರಿಗೆಲ್ಲ ಬಸಿರು ಮಾಡಿದನೀತ ಮೆಲ್ಲ ಮೆಲ್ಲನೆ ಬಂದನೆ’ ಕೇಳುತ್ತಿದ್ದರು. ಜೋಶಿಯವರಿಗೆ ತಮ್ಮ ಬಾಲ್ಯ ನೆನಪಾಗುತ್ತಿತ್ತು.
*
*
*
ಕ್ರಮೇಣ ಜೋಶಿಯವರಿಗೆ ಆ ಹಾಡುಗಳೆಲ್ಲ ತನ್ನ ಕುರಿತೇ ಬರೆದಿದ್ದಾರೆ ಅನ್ನಿಸತೊಡಗಿತು. ತಾನು ಅಧ್ಯಯನ ಮಾಡುತ್ತಿರುವುದು ತನ್ನ ಚರಿತ್ರೆಯನ್ನೇ ಅನ್ನುವ ಗಾಢನಂಬಿಕೆ ಮೊಳೆಯಿತು. ಅವೆಲ್ಲವೂ ಧೂಳು ಹಿಡಿದು ನಾಶವಾಗಿ ಹೋಗುವುದನ್ನು ಸಹಿಸುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ತನ್ನ ಚರಿತ್ರೆ ಮತ್ತು ಕೀರ್ತನೆಗಳು ಎಲ್ಲರನ್ನೂ ತಲುಪಬೇಕು ಅನ್ನುವ ತೀವ್ರ ಆಶೆ ಕಾಡತೊಡಗಿತು.

ಹಾಗನ್ನಿಸಿದ್ದೇ ಅವರು ಪಂಪಾಪತಿಯವರನ್ನು ಕಾಡತೊಡಗಿದರು. ಬೆಳಗ್ಗೆ ಪಂಪಾಪತಿಯವರ ಮನೆಗೆ ಹೋಗಿ ಅವರಿಗೊಂದು ಕೀರ್ತನೆ ಕೇಳಿಸುತ್ತಿದ್ದರು. ಪಂಪಾಪತಿ ಮತ್ತು ಅವರ ಹೆಂಡತಿ ಅಸಹಾಯಕರಾಗಿ ಕೂತು ಕೇಳುತ್ತಿದ್ದರು.
ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಲಿ ನೋಡೆ ದಿವಿಜರೊಡೆಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವ ಧೈರ್ಯದಿ ನೋಡೆ ಅಸುರಾಂತಕ
ಈ ಪರಿಯ ಸೊಬಗಾವ ದೇವರೊಳು ನಾ ಕಾಣೆ…
ಪಂಪಾಪತಿ ಚೆನ್ನಾಗಿದೆ ಅಂದಾಗ ಜೋಶಿಯವರಿಗೆ ಅವರು ತನ್ನನ್ನೇ ಮೆಚ್ಚಿಕೊಂಡಿದ್ದಾರೆ ಅನ್ನಿಸು-ತ್ತಿತ್ತು. ಇದು ಕ್ರಮೇಣ ಪಂಪಾಪತಿಯವರಿಗೆ ಎಷ್ಟು ಹಿಂಸೆಯಾಯಿತು ಅಂದರೆ ಅವರು ಜೋಶಿಯವ-ರನ್ನು ಮನೆಗೆ ಬರಕೊಡದು ಎಂದು ಕಟ್ಟಪ್ಪಣೆ ಮಾಡಿದರು. ಯಾವ ಕಾರಣಕ್ಕೂ ಕೀರ್ತನೆಗಳ ಪುಸ್ತಕ ಹೊರತರುವುದಿಲ್ಲ ಎಂದು ನಿರ್ಧಾರ ಮಾಡಿ ಅದನ್ನು ಜೋಶಿಯವರಿಗೆ ತಿಳಿಸಿಯೂ ಬಿಟ್ಟರು. ಆದರೆ ಅದನ್ನೆಲ್ಲ ಜೋಶಿ ಮೀರಿದ್ದರು.
*
*
*
ಜೋಶಿಯವರಿಗೆ ಆ ಕೀರ್ತನೆಗಳು ತಮ್ಮ ಕುರಿತಾದವು ಅನ್ನುವ ಬಗ್ಗೆ ಅನುಮಾನವೇ ಉಳಿಯಲಿಲ್ಲ. ಪ್ರತಿಯೊಂದು ಹಾಡೂ ತನ್ನನ್ನೇ ಹಾಡಿ ಹೊಗಳುತ್ತಿದೆ ಅನ್ನಿಸುತ್ತಿತ್ತು. ಹಾಡು ಕೇಳಿಸಿಕೊಳ್ಳುತ್ತಾ ಆ ಹಾಡಿನ ಭಾವಕ್ಕೆ ತಕ್ಕ ಭಂಗಿಯನ್ನು ಪ್ರದರ್ಶಿಸುತ್ತಾ ಜೋಶಿಯವರು ಕೂರುತ್ತಿದ್ದುದನ್ನು ಅನೇಕರು ನೋಡಿದ್ದರು. ಜೋಶಿಯವರಿಗೆ ಹುಚ್ಚು ಹಿಡಿದಿದೆ ಅನ್ನುವ ತೀರ್ಮಾನಕ್ಕೂ ಕೆಲವರು ಬಂದರು. ಜೋಶಿಯವರಿಗೆ ಅತ್ತ ಗಮನ ಇರಲೇ ಇಲ್ಲ.
*
*
*
ಪಂಪಾಪತಿಗೂ ಜೋಶಿಯವರ ವಿಪರೀತ ವರ್ತನೆಯ ಬಗ್ಗೆ ವರದಿಗಳು ಬಂದಿದ್ದವು. ಅವರನ್ನು ಕೆಲಸ-ದಿಂದ ಕಿತ್ತು ಹಾಕಬೇಕು ಅನ್ನುವಷ್ಟರ ಮಟ್ಟಿಗೆ ಅವರ ವಿರುದ್ಧ ಪ್ರಚಾರ ನಡೆದಿತ್ತು.ಕೊನೆಯ ಯತ್ನ-ವಾಗಿ ಜೋಶಿಯವರನ್ನೇ ಕಂಡು ಅವರ ಹತ್ತಿರ ಇನ್ನಾದರೂ ಸರಿಯಾಗಿ ವರ್ತಿಸುವಂತೆ ಹೇಳಬೇಕೆಂದು-ಕೊಂಡು ಒಂದು ಬೆಳಗ್ಗೆ ಪಂಪಾಪತಿಯವರು ಜೋಶಿಯವರ ಮನೆಗೆ ಬಂದರು.

ಮನೆಯ ಬಾಗಿಲು ಹಾಕಿರಲಿಲ್ಲ. ಪಂಪಾಪತಿ ಬಾಗಿಲು ತಳ್ಳಿಕೊಂಡು ಒಳಗೆ ಬಂದರು. ಒಳಗಿನ ದೃಶ್ಯ ಕಂಡು ಬೆರಗಾದರು.

ದೇವರ ಮೂರ್ತಿಯೆದುರು ಅದೇ ಭಂಗಿಯಲ್ಲಿ ಜೋಶಿ ಕೂತಿದ್ದರು. ಅದನ್ನು ನೋಡುತ್ತಿದ್ದ ಹಾಗೇ ಪಂಪಾಪತಿಯವರಿಗೆ ಇಬ್ಬರಲ್ಲಿ ದೇವರು ಯಾರು ಅನ್ನುವುದು ತಟ್ಟನೆ ಹೊಳೆಯಲಿಲ್ಲ. ಮತ್ತಷ್ಟು ಕೂಲಂಕಶವಾಗಿ ನೋಡಿದಾಗ ಜೋಶಿ ಮತ್ತು ದೇವರ ನಡುವಿನ ವ್ಯತ್ಯಾಸ ಮರೆಯಾಗಿ ಒಮ್ಮೆ ಜೋಶಿ ದೇವರಂತೆಯೂ ಮತ್ತೊಮ್ಮೆ ದೇವರು ಜೋಶಿಯಂತೆಯೂ ಕಾಣಿಸತೊಡಗಿ ಪಂಪಾಪತಿ ಅಲ್ಲೇ ಕುಸಿದು ಕೂತು ಕೈಮುಗಿದರು.
ಮತ್ತು…..

ಜೋಶಿಯವರ ದೇಹದಲ್ಲಿದ್ದ ಆತ್ಮ ಪರಮಾತ್ಮನ ದೇಹವನ್ನೋ ಪರಮಾತ್ಮನ ದೇಹದಿಂದ ಒಂದು ಬೆಳಕು ಜೋಶಿಯವರೋ ದೇಹವನ್ನೋ ಖಂಡಿತಾ ಸೇರುತ್ತದೆ ಎಂಬ ಭರವಸೆಯಲ್ಲಿ ಕಾದರು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.