ಎದೆಯಲೊಂದು ಬಳೆಚೂರು

ಶಿವಾಜಿ ವೃತ್ತದಿಂದ ನೇರಕ್ಕೆ ಗಾಂಧೀ ಚೌಕ್‌ನತ್ತ ಹೋಗುವ ರಸ್ತೆಯಲ್ಲಿ ದಿವಾಕರನ ಪುಟ್ಟ ಪಾನ್ ಶಾಪ್ ಇದ್ದಿದ್ದು. ಎಷ್ಟೋ ವರ್ಷಗಳಿಂದ ಅಲ್ಲಿಯ ಪ್ರತಿದಿನದ ಆಗುಹೋಗುಗಳಿಗೆ ಮೂಕಸಾಕ್ಷಿಯಾಗಿ ನಿಂತು, ಹಾಗೆ ನಿಂತು ನೋಡಿ ನೋಡಿ, ಇದೀಗ ತುಸು ದಣಿದಂತೆ ಒಮ್ಮೊಮ್ಮೆ ಗಾಳಿಯಲ್ಲಿ ಸುಂಯ್ ಎಂದು ನಿಟ್ಟುಸಿರು ಬಿಡುವ ಅರಳೀಮರ ಮೊದಲು ಸಿಗುತ್ತದೆ. ಮರದ ಕೆಳಗೆ ಎಲ್ಲ ಕಾಲದಲ್ಲಿಯೂ ಏನಾದರೊಂದು ಹಣ್ಣಿನ ಬುಟ್ಟಿ ಇಟ್ಟುಕೊಂಡು ಕುಳಿತುಕೊಳ್ಳುವ ಬೂಬಮ್ಮನ ಹಿಂದಿನಿಂದ ಅಂಗಡಿಗಳ ಸಾಲು ಶುರುವಾಗುತ್ತದೆ. ಮೊದಲಿಗೆ ಒಂದು ಬಳೆ ಅಂಗಡಿ.. ಅದಕ್ಕಂಟಿ ಚಿಕ್ಕ ಚಪ್ಪಲಿ ಅಂಗಡಿ.. ಅದರ ಬೆನ್ನಿಗೆ ಒಂದು ಚಾದಂಗಡಿ.. ನಂತರ ಒಂದು ಸಲೂನು, ಒಂದು ಟೈಲರ್ ಅಂಗಡಿ, ಮೆಡಿಕಲ್ ಶಾಪ್.. ಹೀಗೆ ಎಲ್ಲ ಅಂಗಡಿಗಳೂ ಒಂದಕ್ಕೊಂದು ಎಂತಹದೋ ಆಸರೆಗೆಂಬಂತೆ ಅಂಟಿಕೊಂಡು ನಿಂತಿವೆ.

ನಂತರ ಯಾರೂ ಬಾಡಿಗೆಗೆ ಇರದೆ ಬಾಗಿಲು ಮುಚ್ಚಿ ಜೇಡರಬಲೆ, ಧೂಳು ಅಂಟಿಸಿಕೊಂಡು ಹಳೆಯ ಸ್ಮಾರಕದ ಫೋಸಿನಲ್ಲಿ ನಿಂತ ದೊಡ್ಡ ಹಳೆಯ ಮನೆ.. ಒಳ್ಳೆಯ ರೇಟು ಗಿರಾಕಿ ಬಂದರೆ ಮಾರಿ ಬಿಡುವ ವಿಚಾರವಿದೆ ಎಂದು ಎಲ್ಲರ ಬಳಿ ಟಾಂಟಾಂ ಹೊಡೆಯುತ್ತ ಎಂದಾದರೊಮ್ಮೆ ಅದೃಷ್ಟ ಖುಲಾಯಿಸುತ್ತದೆ ಎಂಬ ಆಸೆಯಲ್ಲಿ ಹಳೆಯ ಲಾಟರಿ ಟಿಕೆಟ್‌ನಂತಿದ್ದ ಅದನ್ನು ಇಟ್ಟುಕೊಂಡು ಡ್ರಾ ಡೇಟ್‌ಗೆ ಕಾಯುತ್ತಿರುವ ಅದರ ಹರಳೆಣ್ಣೆ ಮುಖದ ಮಾಲೀಕ ಬೇರೆ ಊರಿನಲ್ಲಿ ಕೆಲಸದಲ್ಲಿದ್ದ. ಸದಾ ಚಟುವಟಿಕೆಯಿಂದಿರುವ ಆ ಅಂಗಡಿಗಳ ಸಾಲು ಮತ್ತು ತನ್ನೊಳಗೆ ಜಡವಾಗಿರುವ ಕಾಲವನ್ನು ಸ್ತಬ್ಧವಾಗಿ ಹಿಡಿದಿಟ್ಟುಕೊಂಡಂತೆ ನಿಶ್ಚಲವಾಗಿ ನಿಂತಿರುವ ಆ ಹಳೆಯ ಮನೆ.. ನಡುವೆ ಆ ಅಂತರವನ್ನು ತೋರಿಸುವ ಖಾಲಿಜಾಗದಲ್ಲಿ ಎರಡರ ನಡುವೆ ಕೊಂಡಿಯಂತಿದ್ದೂ ಎರಡಕ್ಕೂ ಅಂಟಿಕೊಂಡಿಲ್ಲದ ರೀತಿಯಲ್ಲಿ ದಿವಾಕರನ ಪುಟ್ಟ ಪಾನ್‌ಶಾಪ್ ಉಂಟು. ಕಳೆದ ಐದಾರು ವರ್ಷಗಳಿಂದ ಬೆಂಕಿಪೊಟ್ಟಣದಂತಹ ಆ ಅಂಗಡಿಯಲ್ಲಿ ಇಷ್ಟೇ ಜಾಗದಲ್ಲಿ ನೇರ ನಿಂತು ದಿವಾಕರ ಎಷ್ಟು ಜನರಿಗೆ ಎಷ್ಟು ಪಾನ್ ಕಟ್ಟಿಸಿಕೊಟ್ಟು ಅವರ ಬಾಯ್ದುಟಿಗಳನ್ನು, ಹಲ್ಲುಗಳನ್ನು, ತನ್ಮೂಲಕ ಆ ಕ್ಷಣಕ್ಕೆ ಹೊರಬೀಳುವ ಮಾತುಗಳನ್ನು ಎಷ್ಟರಮಟ್ಟಿಗೆ ಕೆಂಪಾಗಿಸಿದ ಎನ್ನುವುದು ಸರಳವಾಗಿ ಲೆಕ್ಕಕ್ಕೆ ಸಿಗುವಂತಹುದು ಅಲ್ಲ.

ಇಲ್ಲಿ ಪಾನ್‌ಶಾಪ್ ತೆರೆಯುವದಕ್ಕಿಂತ ಮುಂಚೆ ದಿವಾಕರ ಬಸ್‌ಸ್ಯಾಂಡ್ ಹ್ತತಿರ ಅಂಗಡಿಯಿಟ್ಟಿದ್ದ. ಅಲ್ಲಿ ಜನರ ಗಲಾಟೆ, ಗಜಿಬಿಜಿಗಿಂತ ಹೆಚ್ಚಾಗಿ ಸ್ವಲ್ಪ ಮಳೆ ಬಂದರೂ ಜಗತ್ತಿನ ಕೆಸರು ಕೊಳಕು ಇಲ್ಲಿಯೇ ತೇಲಿ ಬಂದಿದೆ ಎನ್ನಿಸುವ ಅಲ್ಲಿಯ ಗಲೀಜು ಹೊಲಸು ವಾಸನೆ ಮಾತ್ರ ಅವನಿಗೆ ಸಹಿಸಲಾಸಾಧ್ಯವಾಗಿತ್ತು. ಅದಕ್ಕೆಂದೆ ಎರಡು ಮೂರು ವರ್ಷಗಳಿಂದ ಆಯಕಟ್ಟಿನ ಜಾಗಕ್ಕಾಗಿ ಹುಡುಕಿ, ಹಂಬಲಿಸಿ ಕಡೆಗೆ ಈ ಜಾಗವನ್ನು ಆರಿಸಿಕೊಂಡಿದ್ದ. ಆ ಹಳೆಮನೆಯಿಂದ ಬಲಕ್ಕಿದ್ದ ಚಿಕ್ಕ ರಸ್ತೆಯಲ್ಲಿ ಸ್ವಲ್ಪ ದೂರ ಹೋದರೆ ಎರಡು ಕೋಣೆಯ ದಿವಾಕರನ ಪುಟ್ಟ ಬಾಡಿಗೆ ಮನೆ ಸಿಗುತ್ತದೆ. ಮನೆಯ ಮುಖ್ಯ ಭಾಗದಲ್ಲಿ ಮೊದಲು ಮನೆಯ ಮಾಲೀಕನೇ ಇದ್ದ. ಅವನಿಗೆ ಬೇರೆಡೆಗೆ ವರ್ಗವಾದ ನಂತರ ಔಟ್‌ಹೌಸ್‌ನಲ್ಲಿದ್ದ ದಿವಾಕರನಿಗೆ ಪ್ರತಿ ತಿಂಗಳ ಬಾಡಿಗೆ ಹಣವನ್ನು ತನ್ನ ಅಕೌಂಟ್‌ಗೆ ಜಮಾ ಮಾಡುವುದರಿಂದ ಹಿಡಿದು ಅಲ್ಲಿದ್ದ ತುಸುವೇ ಜಾಗದಲ್ಲಿ ಹಸಿರಾಗಿದ್ದ ಒಂದಿಷ್ಟು ಗಿಡಗಳ ಆರೈಕೆಯನ್ನೂ ಒಪ್ಪಿಸಿ ನಿರಾಳವಾಗಿಬಿಟ್ಟಿದ್ದ. ಮಾಲೀಕ ಎರಡು ಮೂರು ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದುದು ದಿವಾಕರನಿಗೆ ಏನಂತಹ ವ್ಯತ್ಯಾಸವನ್ನು ಉಂಟು ಮಾಡಿರದಿದ್ರೂ ಬಾಡಿಗೆಯವನಿಗೆ ಮಾತ್ರ ಮನೆಯ ಗೋಡೆಗೆ ಮೊಳೆ ಹೊಡೆಯುವಾಗ ಬಾಗಿಲುಗಳನ್ನು ಧಡ್ ಧಡಲ್ ಎಂದು ಮುಚ್ಚುವಾಗ, ಖಡಲ್ ಎಂದು ಗೇಟು ಹಾಕುವಾಗ ಯಾರದೂ ದರಕಾರ ಇಲ್ಲದೆ ಒಟ್ಟಾರೆ ಮನೆ ಮಾಲೀಕನ ಕಿರಿಕಿರಿ ಇಲ್ಲ ಎಂಬುದೇ ಖುಷಿಯ, ಮಹತ್ವದ ಸಂಗತಿಯಾಗಿತ್ತು.

ಈಗಿದ್ದ ಮನೆ ಮತ್ತು ಈ ಅಂಗಡಿ ಮಾತ್ರ ದಿವಾಕರನಲ್ಲಿ ವಿಚಿತ್ರ ಪರಿಚಿತ ಭಾವ.. ತನ್ನದಲ್ಲದೆ ಇದು ಬೇರೆ ಯಾರದ್ದಾದ್ರೂ ಆಗಿರುತ್ತೆ ಎಂದು ಕಲ್ಪಿಸಿಕೊಳ್ಳಲೇ ಅಸಾಧ್ಯವಾದಂತಹ ಭಾವವನ್ನು ಹುಟ್ಟಿಸಿಬಿಟ್ಟಿತ್ತು. ಈ ಮೊದಲು ಇದ್ದ ಶಾಪೇಟಿ ಗಲ್ಲಿಯ ಒಂದೇ ಕೋಣೆಯ ಮನೆ ಅಥವ ಬಸ್‌ಸ್ಯಾಂಡ್‌ನ ಅಂಗಡಿ ಇಂತಹ ಭಾವ ಹುಟ್ಟಿಸ್ತಾ ಇರಲಿಲ್ಲ. ಕೊಳಕು, ಕಸಕಡ್ಡಿ ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದ ರಸ್ತೆಗಳು, ಸದಾ ಕೀಸರಿಡುವ ಹಂದಿಗಳು, ಹನಿ ನೀರಿಗೆ ಬೋರ್‌ವೆಲ್ ಬಳಿ ಜಗಳ ಕಾಯುವ ಹೆಂಗಸರು… ಕುಡಿದು ಬಂದು ಒದರಾಡುವುದೇ ತಮ್ಮ ಪೌರುಷ ಎಂದು ತಿಳಿದಿರುವ ಗಂಡಸರು… ಸದಾ ಗಲಾಟೆಯಲ್ಲಿ ಇನ್ನಿಲ್ಲದ ಗಡಿಬಿಡಿಯಲ್ಲಿದ್ದಂತೆ ತೋರುವ ಶಾಪೇಟಿಗಲ್ಲಿಯ ಕಿಷ್ಕಿಂದೆಯಂತಹ ರೂಮಿನಲ್ಲಿ ದಿವಾಕರ ರಾತ್ರಿ ಮತ್ತು ಬೆಳಗುಗಳಲ್ಲಿ ಅಶಾಂತನಂತೆ ಇರುತ್ತಿದ್ದ. ಮೊದಲು ಐದಾರು ವರ್ಷ ಬಸ್‌ಸ್ಯಾಂಡ್ ಅಂಗಡಿಯಲ್ಲಿ ಎಲೆಗೆ ಸುಣ್ಣ ಹಚ್ಚುವಾಗ ಮನದಲ್ಲಿ ಮಿಂಚಿ ಮರೆಯಾಗುವ ಬೆಳ್ಳಿಗೆರೆ… ಸಾದಾ ಪಾನ್ ಮೆಲ್ಲುವವನ ಬಾಯಿಯಲ್ಲಿ ಆಗೀಗ ನೀರೂರಿಸುವ ಕಲ್ಕತ್ತಾ ಪಾನ್‌ನಂತೆ ಒಂದು ಒಳ್ಳೆ ಮನೆ, ಅಂಗಡಿಯನ್ನು ಹಿಡಿಯಲು ಬೇಕಾಗುವ ಡಿಪಾಸಿಟ್ ದುಡ್ಡನ್ನು ಹೇಗಾದರೂ ಮಾಡಿ ಉಳಿಸಬೇಕು ಎನ್ನುವುದು. ಹಾಗಂತ ದಿವಾಕರನಿಗೆ ಜನ ಪರಿಚಯದವರಿಲ್ಲ, ಸಾಲ ಕೊಡುವುದಿಲ್ಲ ಎಂದಲ್ಲ.. ಯಾರಿಂದಲಾದ್ರೂ ಸಾಲ ಪಡೆಯುವುದೆಂದರೆ ಅವನಿಗಾಗದು. ನಾಳೆ ಆ ಸಾಲ ಸರಿಯಾದ ಸಮಯಕ್ಕೆ ತೀರಿಸಲಾಗದಿದ್ರೆ ಮುಂದೆ ಅಂತ ನೆನೆದೇ ಮೈ ಜುಮ್ ಎನ್ನುತ್ತವನಿಗೆ.

ದಿವಾಕರನಿಗೆ ಈಗ ಇರುವ ಮನೆಯ ಮಾಲೀಕ ಪರಿಚಯವಾದದ್ದೂ ಪಾನ್‌ಶಾಪ್‌ನಲ್ಲಿಯೇ. ಸ್ವಲ್ಪ ಪರಿಚಯವಾಗುತ್ತಿದ್ದಂತೆ ತನ್ನ ಮನೆ ಸುದ್ದಿಯಿಂದ ಹಿಡಿದು ಆಫೀಸಿನ ಸುದ್ದಿಯವರೆಗೆ ಏನೆಲ್ಲ ಹರಟುವ ಆತನಿಗೆ ಹೆಚ್ಚು ಮಾತಾಡದ, ವೈಯಕ್ತಿಕ ಬದುಕಿನ ಒಂದೇ ಒಂದು ಎಳೆಯನ್ನು ಎಲ್ಲಿಯೂ ಜೋತಾಡಲು ಬಿಟ್ಟುಕೊಡದ ದಿವಾಕರ ಒಗಟಿನಂತೆ ಕಂಡಿದ್ದ. ವಯಸ್ಸಿನಲ್ಲಿ ದೊಡ್ಡವನಾಗಿದ್ದ ಸಲಿಗೆಯಿಂದ ಅವನು ಕೇಳಿದ್ದ ನಾಲ್ಕಾರು ಪ್ರಶ್ನೆಗಳಿಗೆ ದಿವಾಕರ ಹೂಂ, ಊಹೂಂ, ಮತ್ತೆ ಕೆಲವಕ್ಕೆ ಏನೂ ಉತ್ತರಿಸದೇ ನಕ್ಕಂತೆ ಮಾಡಿ ಸುಮ್ಮನಾಗಿದ್ದು ನೋಡಿ ಸುಮಾರಾಗಿ ಹೀಗೆ ಕಲ್ಪಿಸಿಕೊಂಡಿದ್ದ.. ದಿವಾಕರನಿಗೆ ಹತ್ತಿರದವಾರ್‍ಯಾರು ಇಲ್ಲ, ಉತ್ತರಕನ್ನಡ ಜಿಲ್ಲೆಯ ಕಡೆಯ ಯಾವುದೋ ಹಳ್ಳಿಯಿರಬೇಕು, ಮನೆಬಿಟ್ಟು ಇತ್ತ ಕಡೆ ಹೇಗೋ ಸೇರಿಕೊಂಡಿದ್ದಾನೆ, ನೋಡಲು ಅಷ್ಟೇನೂ ಆಕರ್ಷಕವಾಗಿಲ್ಲದ ಕುಳ್ಳ ದಿವಾಕರನಿಗೆ ಮದುವೆ ಗಿದುವೆಯಾಗುವ ಮನಸ್ಸಿದ್ದಂತಿಲ್ಲ.. ಹೀಗೇ .

ಹಾಗಂತ ಶಾಪೇಟಿ ಗಲ್ಲಿಯ ಜನರಿಗಾಗಲೀ ಬಸ್‌ಸ್ಟ್ಯಾಂಡ್‌ನ ಅತ್ತ ಇತ್ತ ಇರುವ ಅಂಗಡಿಯವರಿಗಾಗಲೀ ಅಥವ ಈಗಿದ್ದ ಮನೆಯ ಅಂಗಡಿಯ ಸುತ್ತುಮುತ್ತುಲಿನವರಿಗಾಗಲೀ ಬೇರೆಯವರ ಖಾಸಗಿ ಬದುಕಿನ ಕುರಿತು ಕುತೂಹಲವಿಲ್ಲವೆಂದಲ್ಲ. ಬೇರೆಯವರ ವೈಯಕ್ತಿಕ ವಿಷಯಗಳನ್ನು ಕೆದಕಿ, ಎಲ್ಲ ವಿವರಗಳನ್ನು ತಿಳಿದುಕೊಂಡು, ಅವರ ಖಾಸಗಿ ಬದುಕಿನ ಕುರಿತು ಹಾಗಂತೆ ಹೀಗಂತೆ ಎಂದು ತಿರ್ಮಾನ ಕೊಟ್ಟುಬಿಡುವುದರಲ್ಲಿ ಆ ಊರಿನ ಜನರಿಗಿದ್ದ ಕುತೂಹಲ ತಾಳ್ಮೆ ತನ್ನನ್ನು ತಾನು ತಿಳಿಯುವುದರಲ್ಲಿ ಇರಲಿಲ್ಲ. ಆದರೆ ಶಾಪೇಟಿ ಗಲ್ಲಿಯ ಜನರು ಮಾತ್ರ ಒಂಟಿ ರೂಮಿನಲ್ಲಿರುತ್ತಿದ್ದ ಇವನ ಬಗ್ಗೆ ತಲೆಕೆಡಿಸಿಕೊಳ್ಳಲು ಪುರಸೊತ್ತು ಇಲ್ಲದವರಂತೆ, ಇವನೊಂದು ಹುಳ ಎಂಬಂತೆ ಇವನತ್ತ ನಿರ್ಲಕ್ಷ್ಯದ ನೋಟ ಎಸೆದು ಸುಮ್ಮನಾಗಿಬಿಟ್ಟಿದ್ದರು. ಈಗಿದ್ದ ಮನೆಯ ಸುತ್ತುಮುತ್ತಲಿನವರಿಗೆ ಮನೆಯ ಮಾಲೀಕ ದಿವಾಕರನ ಕುರಿತು ಕಲ್ಪಸಿಕೊಂಡು ಹೇಳಿದ್ದ ವಿವರಗಳು ಅವನ ಬಗ್ಗೆ ತಿಳಿದುಕೊಳ್ಳಲು ಸಾಕೆನ್ನಿಸಿಬಿಟ್ಟಿತ್ತು. ಎಷ್ಟೋ ಸಲ ದಿವಾಕರನಿಗೂ ಅನ್ನಿಸಿದ್ದಿದೆ.. ಬೆಳಿಗ್ಗೆಯಿಂದ ರಾತ್ರಿಯವರೆಗೆ ಯಾರ್‍ಯಾರದೋ ಬದುಕಿನ ಏನೇನೋ ವೈಯಕ್ತಿಕ ಸಂಗತಿಗಳನ್ನು ಗಾಳಿಯಲ್ಲಿ ಕೇಳುತ್ತ ತನ್ನೊಳಗೆ ಅಡಗಿಸಿಕೊಳ್ಳುವ, ಎಲ್ಲರನ್ನೂ ವಿಚಾರಿಸಿಕೊಳ್ಳುವ ಹಕ್ಕು ತನಗಿದೆ ಎಂದು ವರ್ತಿಸುವ ಈ ಊರು ತನ್ನ ಬಗ್ಗೆ ಯಾಕೋ ಜಡವಾಗಿದೆಯಲ್ಲ ಎಂದು. ಇದೇನು ಅಸಡ್ಡೆಯೋ… ನಿಸ್ಸೀಮ ನಿರ್ಲಕ್ಷ್ಯವೋ… ಅಥವ ನಿನ್ನೊಳಗಿನದು ನನಗೆಲ್ಲ ಅರಿವಿದೆ, ನೀನು ನನ್ನವನೇ ಎಂಬ ಭಾವವೋ ತಿಳಿಯದೇ ಗೊಂದಲಗೊಳ್ಳುತ್ತಿದ್ದ. ಮೊದಲು ಇಲ್ಲಿಗೆ ಬಂದಾಗ ಇಲ್ಲಿಯ ಸ್ಮಾರಕಗಳ ಕುರಿತು ಇದ್ದ ವ್ಯಾಮೋಹ ಕಡಿಮೆಯಾಗುತ್ತ ಸುತ್ತಲಿನ ಗಲೀಜು, ಎಲ್ಲವನ್ನೂ ಹಾಳುಗೆಡುವುದೇ ತಮ್ಮ ಪರಮ ಕರ್ತವ್ಯ ಎಂಬಂತಿದ್ದ ಜನರು, ಭ್ರಷ್ಟ ಸರ್ಕಾರಿ ಅಧಿಕಾರಿಗಳು, ಪಡ್ಡೆ ಹುಡುಗರು ಹೀಗೆ ಎಲ್ಲದರ ಕುರಿತು ಅವನಲ್ಲಿ ಅಸಹನೆ ಬೆಳೆದಿತ್ತು. ಎರಡು ಮೂರು ವರ್ಷ ಎಲ್ಲದರ ಮೇಲೆ ಒಳಗೊಳಗೇ ಸಿಟ್ಟಾಗ್ತಿದ್ದ. ಆದ್ರೆ ಬರಬರುತ್ತ ಯಾಕೆಂದೇ ತಿಳಿಯದೇ ಅವನು ತನ್ನೊಳಗೇ ಮೆತ್ತಗಾಗಿದ್ದ. ಏನನ್ನೇ ನೋಡಿದರೂ ತಾನಿಲ್ಲಿಯೇ ಇರೋದ್ರಿಂದ ಇದು ತನಗೆ ಸಂಬಂಧಿಸಿದ್ದು ಎಂಬಂತಹದೊಂದು ಭಾವನೆ ಹುಟ್ಟಿ ಕ್ರಮೇಣ ಅಲ್ಲಿಯ ಧೂಳು, ಗಲೀಜು ಎಲ್ಲದರ ಮಧ್ಯೆಯೇ ಆ ಹಳೆಯ ಸ್ಮಾರಕಗಳು, ಊರನ್ನು ಸುತ್ತುವರೆದಿದ್ದ ಶಿಥಿಲಗೊಂಡ ಕೋಟೆ ಗೋಡೆಗಳು ಹಳೆಯ ಬಾವಿಗಳು ಎಲ್ಲ ಆಪ್ತ ಎನ್ನಿಸತೊಡಗಿತ್ತು. ವಿಚಿತ್ರ ಆತ್ಮೀಯತೆಯ ಬಳ್ಳಿಯೊಂದು ತನ್ನೊಳಗೆ ಹುಟ್ಟಿ ಗಾಳಿಗೆ ಅಲ್ಲಾಡಿದಂತೆ ಅನ್ನಿಸಿ ಕೆಲವೊಮ್ಮೆ ಪುಳಕಗೊಳ್ಳುತ್ತಿದ್ದ.

ಬೆಳಿಗ್ಗೆ ಏನಾದರೂ ತಾನೇ ತಯಾರಿಸಿದ ತಿಂಡಿ ತಿಂದು ಮನೆಯ ಕಿಟಕಿ ಬಾಗಿಲು ಮುಚ್ಚಿ ಬೀಗ ಹಾಕಿ ಬಂದ ನಂತರ ಮನೆಯೊಳಗುಳಿಯುವ ಕತ್ತಲು ಮತ್ತು ಅಂಗಡಿ ಮುಚ್ಚಿದ ನಂತರ ಒಳಗುಳಿಯುವ ಕತ್ತಲು ಎರಡೂ ತಾನು ಬಾಗಿಲು ತೆರೆದ ನಂತರ ಒಳ ತೂರಲಿರುವ ಬೆಳಕಿನ ಮೊದಲ ಕಿರಣಕ್ಕಾಗಿಯೇ ಕಾಯ್ದು ಕೂತಂತೆ ಅನ್ನಿಸಿ ಬಾಗಿಲು ತೆರೆದ ನಂತರ ಅರೆಕ್ಷಣ ಸ್ತಬ್ಧನಾಗಿ ನಿಲ್ಲುತ್ತಿದ್ದ. ಇಲ್ಲಿಯವರೆಗೆ ಒಳಗಿದ್ದ ಕತ್ತಲು ’ನಿನ್ನ ವಸ್ತುಗಳೆಲ್ಲ ಜೋಪಾನವಾಗಿವೆ… ಅವ್ಯಾವುದೂ ಒಂಟಿಯಾಗಿರಲಿಲ್ಲ.. ಇಷ್ಟೂ ಹೊತ್ತೂ ನಾವಿದ್ದೆವು ಜತೆಯಾಗಿ’ ಎಂದೆಲ್ಲ ಪಿಸುಗುಟ್ಟಿ ತನ್ನನ್ನು ಸ್ಪರ್ಶಿಸಿದಂತೆ, ಇದೀಗ ಒಳತೂರಿ ಬಂದ ಬೆಳಕಿನ ಕಿರಣ ಎಲ್ಲ ವಸ್ತುಗಳನ್ನು ತಡಕಿ ತಡಕಿ ’ಎಲ್ಲ.. ಎಲ್ಲವೂ ಇದೆ ಹಾಗೆಯೇ ಮೊದಲಿನಂತೆಯೇ… ನಿನ್ನೊಂದಿಗೆ ಇನ್ನು ನಾನಿದ್ದೇನೆ ಎಂದಂತೆ ಭಾಸವಾಗಿ ಒಂದು ಪರಿಚಿತತೆಯ ಜತೆಗಿರುವ ಭಾವವನ್ನು ಹುಟ್ಟಿಸಿದ್ದು ಕತ್ತಲೆಯೋ ಅಥವ ಬೆಳಕಿನ ಕಿರಣವೋ ತಿಳಿಯದೇ ಬಹುಶಃ ಎರಡೂ ಇರಬೇಕು ಎಂಬ ತೀರ್ಮಾನಕ್ಕೆ ಬರುತ್ತಿದ್ದ.

ಕೌಳಿಗೇಟಿನ ಬಳಿಯಲ್ಲಿ ಅಂಗಡಿ, ಹತ್ತಿರದಲ್ಲಿ ಮನೆ ಹಿಡಿದ ಮೇಲೆ ದಿವಾಕರ ತುಸು ನಿರಾಳವಾಗಿದ್ದ ಎಂದೇ ಹೇಳಬೇಕು. ಸಾಧ್ಯವಾದರೆ ತಾನು ಇದ್ದ ಬಾಡಿಗೆ ಮನೆಯನ್ನೇ ಅಥವ ಇಂತಹದೇ ಚಿಕ್ಕ ಮನೆಯೊಂದನ್ನು ಕೊಳ್ಳಬೇಕು ಎಂಬ ಕನಸಿನ ಗೆರೆಯೊಂದು ಆಗೀಗ ಕಣ್ಣಿವೆಗಳ ಮಧ್ಯೆ ಕಾಮನಬಿಲ್ಲಿನಂತೆ ಮೂಡಿ ಅಷ್ಟೇ ವೇಗವಾಗಿ ಮರೆಯಾಗುತ್ತಿತ್ತು. ತನಗೊಂದು ಸ್ವಂತದ ಮನೆಯಾದ್ರೂ ಯಾಕೆ ಬೇಕು.. ಉಸಿರಿರುವರೆಗೆ ತಾನೆ ಇರಲಿಕ್ಕೊಂದು ಗೂಡು ಬೇಕಾಗಿರುವುದು ತನಗೆ ಬಾಡಿಗೆ ಮನೆಯೇ ಸರಿ ಎಂಬ ವಾಸ್ತವಿಕ ಸತ್ಯವನ್ನು ಮನಸ್ಸು ಎಂದೋ ಒಪ್ಪಿಕೊಂಡಿದ್ದರಿಂದ ಕನಸು ಅರೆಕ್ಷಣ ಮಿಂಚಿ ಮತ್ತೆ ನೀಲಾಕಾಶದಂತೆ ನಿರಭ್ರವಾಗಿರುತ್ತಿತ್ತು ದಿವಾಕರನ ಮನಸ್ಸು.

ಅವನ ವಯಸ್ಸಿನ ಎಲ್ಲರಿಗಿರುವಂತೆ ದಿವಾಕರನಿಗೂ ಕೆಲವೊಂದು ಅಭ್ಯಾಸಗಳಿದ್ದವು. ಮನಸ್ಸು ತೀರಾ ಪ್ರಕ್ಷುಬ್ದವಾಗಿದ್ದ ಗಳಿಗೆಯಲ್ಲಿ ಆ ನೆವದಲ್ಲಿ ಆಗೊಂದು ಈಗೊಂದು ಸಿಗರೇಟು ಎಳೆಯುವುದು ಬೇಸರವಾದಾಗ ರಾತ್ರಿ ಬಿಯರ್ ಕುಡಿಯುವುದು ಹೀಗೆ. ಕೆಲವು ಸಲ ಒಬ್ಬನೇ ಹೋಗುವುದಿತ್ತು, ಒಮ್ಮೊಮ್ಮೆ ಮೆಡಿಕಲ್ ಶಾಪ್‌ನ ರಾಜಾನೊಂದಿಗೆ. ಆದರೆ ಬಿಯರ್ ಗಂಟಲಲ್ಲಿ ಇಳಿದು ನಂತರ ತುಸು ತಲೆಗೇರಿದಾಗಲೂ ರಾಜಾನೊಂದಿಗೆ ವರ್ತಮಾನದ ವಿಚಾರಗಳಲ್ಲದೆ ಭೂತದ ವಿವರಗಳನ್ನು ನುಸುಳದ ಹಾಗೆ ನೋಡಿಕೊಳ್ಳುವಷ್ಟು ಎಚ್ಚರ ದಿವಾಕರನಲ್ಲಿರುತ್ತಿತ್ತು. ಕುಡಿದಾಗ ಏನಾದ್ರೂ ಬಾಯಿ ಬಿಡುತ್ತಾನೆ ಎಂದು ನಿರೀಕ್ಷಿಸಿರುತ್ತಿದ್ದ ರಾಜಾನಿಗೆ ನಿರಾಸೆಯಾಗುತ್ತಿತ್ತು. ಬಿಲ್ ಶೇರ್ ಮಾಡುವುದು ಎಂದು ನಿರ್ಧರಿಸಿಯೇ ಹೋಗಿರುತ್ತಿದ್ದರೂ ದಿವಾಕರ ಕೆಲವೊಮ್ಮೆ ತಾನೇ ಬಿಲ್ ಕೊಡುತ್ತಿದ್ದರಿಂದ ರಾಜಾ ಅವನು ಕರೆದಾಗ ಮಾತ್ರ ತಪ್ಪಿಸಿಕೊಳ್ಳುತ್ತಿರಲಿಲ್ಲ. ದಿವಾಕರನಿಗಿದ್ದ ಇನ್ನೊಂದು ಹವ್ಯಾಸವೆಂದರೆ ಆಗೀಗ ಪೆನ್ಸಿಲ್‌ನಿಂದ ರೇಖಾಚಿತ್ರಗಳನ್ನು ಬಿಡಿಸುವುದು. ರಾತ್ರಿ ಬಾಗಿಲು ಮುಚ್ಚಿ ದೀಪ ಆರಿಸಿ ಮಲಗಲು ಸಿದ್ಧನಾದಗ ತಟ್ಟನೆ ತನ್ನ ಮೇಲೆ ಮೌನ ಬೋರಲು ಬಿದ್ದಂತೆ ನಡುರಾತ್ರಿ ಎಲ್ಲಾದ್ರೂ ಎಚ್ಚರವಾದ್ರೆ ಬೇರೆ ಯಾರ ಉಸಿರಾಟವೂ ಕೇಳದೆ ಇಡೀ ಕೋಣೆಯಲ್ಲಿ ತನ್ನೊಬ್ಬನದೇ ಉಸಿರಾಟ ತುಂಬಿಕೊಂಡಂತೆ… ಹುಷಾರಿಲ್ಲದೆ ಮಲಗಿದಾಗ ಹಣೆ ಮೇಲೆ ಯಾರೂ ಬೆರಳಾಡಿಸದೇ, ಯಾರ ಗಂಧಗಾಳೀ ಸ್ಪರ್ಶವೂ ತನ್ನನ್ನ ಆವರಿಸಿಕೊಳ್ಳದೇ, ನೆತ್ತಿಸುಡುವ ಸೂರ್ಯ, ಅಂಗಾಲ ಸುಡುವ ಮರಳಿನ ಮರಳುಗಾಡಿನಲ್ಲಿ ತಾನೊಬ್ಬನೇ ಹನಿನೀರನ್ನು ಅರಸುತ್ತ ನಡೆಯುತ್ತಿರುವಂತೆ… ನಿಂತ ಹಾಗೇ ಭೂಮಿ ಕುಸಿದು ಕಾಲು ಕೆಳ ಹೋಗುತ್ತಿರುವಂತೆ ಏನೋ ಒಂದು ಅಸ್ಪಷ್ಟ ಹೆದರಿಕೆಯೊಂದು ಮೈಯಿಡೀ ಹರಿದಾಡಿದಂತೆ ಹೀಗೆ ಏನೇನೋ ಭ್ರಮೆಗಳು ಕನವರಿಕೆಗಳು ಮೈಮನಸ್ಸನ್ನು ಆವರಿಸಿಕೊಂಡು ಅಲ್ಲಾಡಿಸಿದಾಗ ಏನೋ ಹುಡುಕುವಂತೆ ಅವನ ಪೆನ್ಸಿಲ್‌ನ ಗೆರೆಗಳು ಹಾಳೆಯನ್ನು ತಡಕಾಡುವುದಿತ್ತು.

ಮಧ್ಯಾಹ್ನ ಅಂಗಡಿಯಿಂದ ಬಂದು ಕುಕ್ಕರ್ ಇಟ್ಟುಕೊಂಡು ಒಂದು ಅನ್ನ ಎಂಥದೋ ಸಾರು ಒಟ್ಟಾರೆಯಾಗಿ ರುಚಿಯಾಗಿ ಅಡಿಗೆ ಮಾಡಿಕೊಳ್ಳುವುದರಲ್ಲಿ ದಿವಾಕರ ಪಳಗಿದ್ದ. ಅವನಿಗೆ ಈ ಮನೆ ಹಿಡಿಸಲು ಇನ್ನೊಂದು ಕಾರಣ ಎಂದರೆ ಎರಡೇ ಚಿಕ್ಕ ಕೋಣೆಗಳಿದ್ದರೂ ಅಚ್ಚುಕಟ್ಟಾಗಿ ನೀಟಾಗಿದ್ದದ್ದು. ಬೋರ್‌ವೆಲ್ ಕೂಡ ಇದ್ದಿದ್ದರಿಂದ ನೀರಿನ ಕೊರತೆ ಇರಲಿಲ್ಲ. ಅಡಿಗೆ ಮನೆಯಲ್ಲಿದ್ದ ದೊಡ್ಡ ವಾಷ್ ಬೇಸಿನ್ ಅಂತೂ ದಿನಕ್ಕೊಂದು ಬಾರಿ ಪಾತ್ರೆ ತಿಕ್ಕುವ ಅವನ ಕೆಲಸವನ್ನು ಆರಾಮದಾಯಕ ಮಾಡಿತ್ತು. ಒಂದೇ ಕಿರಿಕಿರಿ ಎಂದರೆ ಬಚ್ಚಲು ಮನೆ ಹಿತ್ತಲಿನಲ್ಲಿದ್ದದ್ದು ಹಾಗೂ ಆ ಹಿತ್ತಲನ್ನು ಮುಂದಿದ್ದ ಬಾಡಿಗೆಯವರೂ ಉಪಯೋಗಿಸುತ್ತಿದ್ದು. ಹಾಗಾಗಿ ಹಿಂದಿನ ಬಾಗಿಲು ಮುಚ್ಚಿ ಕುಳಿತಾಗ ಮಾತ್ರ ಅವನಿಗೆ ಆ ಎರಡು ಕೋಣೆ ಅತ್ಯಂತ ಖಾಸಗಿಯಾಗೂ ಆಪ್ತವಾಗಿಯೂ ತೋರುತ್ತಿತ್ತು. ಇವನು ಅಡಿಗೆ ಮಾಡಿಕೊಳ್ಳುವ ಸಮಯಕ್ಕೆ ಸರಿಯಾಗಿ ಜುಲೇಖಾ ಬಾಡಿಗೆಯವರ ಪಾತ್ರೆ ತಿಕ್ಕಲು ಬರುತ್ತಿದ್ದಳು. ಜುಲೇಖಾ ಅಂತ ಪೂರ್ತಿ ಕರೆದರೆ ಕೆಸದವಳನ್ನು ಕರೆದ ಹಾಗೆ ಆಗುವುದಿಲ್ಲ ಎಂಬುದಕ್ಕೋ ಏನೋ ಎಲ್ಲರೂ ಅವಳಿಗೆ ಜಿಲ್ಲಿ ಎಂದೇ ಕರೆಯುತ್ತಿದ್ದರು. ಅವಳೂ ಈ ಹೆಸರಿಗೆ ಎಷ್ಟು ಒಗ್ಗಿಹೋಗಿದ್ದಳೆಂದರೆ ಯಾರಾದ್ರೂ ತಪ್ಪಿ ಬಾಯ್ತುಂಬ ಜುಲೇಖಾ ಎಂದರೆ ಫಕ್ಕನೆ ಓಗುಡುತ್ತಲೇ ಇರಲಿಲ್ಲ.

ಬಾಡಿಗೆಮನೆಯ ಹೆಂಗಸು ಪಾತ್ರೆ ಹೊರಗಿಟ್ಟು ಹಿತ್ತಲು ಬಾಗಿಲು ಜಡಿದು ಟಿವಿಯಲ್ಲಿನ ಮಧ್ಯಾಹ್ನದ ಧಾರಾವಾಹಿಗಳನ್ನು ನೋಡುತ್ತ ಆಕಳಿಸುತ್ತ ಕುಳಿತಳೆಂದ್ರೆ ಜಿಲ್ಲಿ ಕುಡಿಯಲು ನೀರು ಬೇಕೆಂದೋ ಇನ್ನೇನೋ ಬೇಕೆಂದೋ ಒದರಿದರೂ ಅವಳಿಗೆ ಕೇಳಿಸುತ್ತಲೇ ಇರಲಿಲ್ಲ. ಆಗೆಲ್ಲ ಜಿಲ್ಲಿ ದಿವಾಕರನನ್ನೆ ಕೇಳುತ್ತಿದ್ದಳು. ಎಷ್ಟೋ ಬಾರಿ ಮುಚ್ಚಿದ ಬಾಗಿಲಿಗೆ ಒರಗಿ ಕುಳಿತು ಜಿಲ್ಲಿ ದಿವಾಕರನೊಟ್ಟಿಗೆ ಅದೂ ಇದೂ ಮಾತಾಡುವುದಿತ್ತು.

ಅವನಿಗೆ ಪಾತ್ರೆ ಬಟ್ಟೆ ತೊಳೆಯುವ ಕೆಲಸ ಮಾಡಿಕೊಟ್ಟರೆ ಒಂದೇ ಕಡೆ ಎರಡು ಮನೆ ಕೆಲಸವಾದಂತೆ ಆಗಿ ತನ್ನ ಗಳಿಕೆಯೂ ಹೆಚ್ಚುತ್ತದೆ ಎಂದು ಜಿಲ್ಲಿಗನ್ನಿಸಿದ್ರೂ ದಿವಕರನೊಂದಿಗೆ ಕೇಳುವ ಧೈರ್ಯವಾಗಿರಲಿಲ್ಲ. ತನ್ನ ಯಾವುದೇ ಕೆಲಸಕ್ಕೂ ಯಾರದ್ದೂ ಅವಶ್ಯಕತೆಯಿಲ್ಲ, ಎಲ್ಲ ಒಬ್ಬನೇ ನಿಭಾಯಿಸಿಕೊಳ್ಳಬಲ್ಲೆ ಎಂಬಂತಿದ್ದ ದಿವಾಕರ ರೊಕ್ಕ ಬಿಚ್ಚಂಗಿಲ್ಲ ಎನ್ನಿಸಿ ಸುಮ್ಮನಾಗಿದ್ದಳು.

ಆ ದಿನ ಮಾತ್ರ ದಿವಾಕರನಿಗೆ ಕೆಂಡಂದಂತಹ ಜ್ವರ. ಹಿಂದಿನ ರಾತ್ರಿ ಅಂಗಡಿ ಮುಚ್ಚಿ ಎರಡೆರಡು ಬಾರಿ ಕೀಲಿ ಜಗ್ಗಿ ಬೀಗ ಸರಿಯಾಗಿ ಕೂತಿದೆಯೇ, ಇಲ್ಲವೇ ಎಂದು ಪರೀಕ್ಷಿಸಿ ಮನೆಯತ್ತ ಹೊರಟಾಗ ಯಾಕೋ ಮೈಕೈ ಎಲ್ಲ ಭಾರವಾದಂತೆ.. ಮಧ್ಯಾಹ್ನ ಬೆಡ್‌ಶೀಟ್ ಚಾದರ ಎಲ್ಲ ಒಮ್ಮೆಗೇ ತೆಗೆದುಕೊಂಡು ಒಗೆದಿದ್ದಕ್ಕಿರಬೇಕು ಎಂದುಕೊಂಡ. ಇವನು ಒಗೆಯುವಾಗಲೇ ಬಂದಿದ್ದ ಜಿಲ್ಲಿ ಹತ್ತು ರೂಪಾಯಿ ಕೊಟ್ಟಿದ್ರೆ ನಾನೇ ಒಗೆದುಕೊಡ್ತಿದ್ದನಲ್ಲ ಎಂಬ ಭಾವದಲ್ಲಿ “ನೀವೇ ಒಗಿಲಾಕಹತ್ತೀರಲ್ಲ” ಎಂದಿದ್ದಳು. ಅವಳಿಗೆ ಮರುಪ್ರಶ್ನೆ ಹಾಕದೆ ’ಒಂದ್ಹತ್ತು ರೂಪಾಯಿ ಕೊಡ್ತೀನಿ ಒಗೀತೀಯ’ ಎಂದು ಕೇಳಿದ್ರೆ ಈಗ ಮೈಕೈ ನೋವು ಬರ್‍ತಿರಲಿಲ್ಲವೇನೋ ಎಂದು ತನ್ನೊಳಗೇ ನಸುನಗುತ್ತ ಊಟ ಮುಗಿಸಿದವನೇ ಫೋರ್ಟ್‌ಬಲ್ ಟಿವಿಯಲ್ಲಿ ಬರುತ್ತಿದ್ದ ಮುಗಿಯದ ಗೋಳಿನಂತಿದ್ದ ಧಾರಾವಾಹಿ ಹಾಕಿದವನು, ಅದನ್ನೂ ನೋಡಲು ಬೇಸರವಾಗಿ, ಕ್ರೋಸಿನ್ ಇದೆಯೇ ಎಂದು ಹುಡುಕಿ, ತಾನು ತಂದಿಡದೆ ಹೇಗೆ ಸಿಗುತ್ತದೆ ಎಂದುಕೊಂಡು ಕಡೆಗೆ ತುಂಬ ಹೊಚ್ಚಿಕೊಂಡು ಮಲಗಿಬಿಟ್ಟಿದ್ದ. ಮರುದಿನ ಬೆಳಿಗ್ಗೆ ದಿನದಂತೆ ಆರುಘಂಟೆಗೆ ಎಚ್ಚರವಾದ್ರೂ ಯಾಕೋ ಏಳಲಿಕ್ಕೆ ಆಗ್ತಿಲ್ಲ ಎನ್ನಿಸಿ ಕಣ್ಣುಮುಚ್ಚಿ ಮಲಗಿದವನಿಗೆ ಅರೆ ಎಚ್ಚರ ಅರೆ ನಿದ್ದೆಯಲ್ಲಿ ಏನೇನೋ ಕನವರಿಕೆ.. ಕನಸುಗಳು. ಮತ್ತೆ ಯಾವಾಗಲೋ ಪೂರ್ಣ ಎಚ್ಚರವಾದಾಗ ಎದ್ದು ಹೋಗಿ ಹಾಲು ತರಲೂ ಬೇಸರವಾಗಿ ಇದ್ದ ಸ್ವಲ್ಪ ಹಾಲಿನಲ್ಲಿಯೇ ಟೀ ಮಾಡಿಕೊಂಡು ಕುಡಿದು ಮತ್ತೆ ಮಲಗಿಬಿಟ್ಟಿದ್ದ. ಬಿಸಿಲೇರಿದಂತೆ ಜ್ವರ ಏರುತ್ತಲೇ ಹೋಗಿತ್ತು. ಮತ್ತೊಮ್ಮೆ ಎದ್ದು ಟಾಯ್ಲೆಟ್‌ಗೆ ಹೋಗಬೇಕೆಂದುಕೊಂಡವನಿಗೆ ಮೈಯೆಲ್ಲ ನಡುಗುತ್ತಿದೆಯೆನ್ನಿಸಿ ಶಾಲು ಹೊದ್ದುಕೊಂಡೇ ಹೋಗಿದ್ದ. ಅದೇ ಬಂದು ಪಾತ್ರೆ ತಿಕ್ಕುತ್ತಿದ್ದ ಜಿಲ್ಲಿ ಇವನನ್ನು ಇದೇ ಮೊದಲ ಬಾರಿ ಈ ಅವತಾರದಲ್ಲಿ ಕಂಡಿದ್ದೇ “ಹುಷಾರಿಲ್ಲೇನ್ರೀ ಅಣ್ಣಾರೆ” ಅಂತ ತುಸು ಗಾಭರಿಯಿಂದ ಕೇಳಿದ್ದಕ್ಕೂ ಉತ್ತರಿಸುವ ತ್ರಾಣವಿಲ್ಲದಂತೆ ಬರಿದೇ ತಲೆಯಲ್ಲಾಡಿಸಿ ಒಳಹೊಕ್ಕು ಬಾಗಿಲು ಮುಂದೆ ಮಾಡಿ ಮತ್ತೆ ಹೋಗಿ ಮಲಗಿದ್ದ.
ಕೆಲಸ ಮಾಡಿ ಹೊರಟಿದ್ದ ಜಿಲ್ಲಿಗೆ ಏನೆನ್ನಿಸಿತೋ ಏನೋ.. ಮುಚ್ಚಿದ ಬಾಗಿಲು ಸರಿಸಿ ದಿವಾಕರ ರಾತ್ರಿ ತಿಕ್ಕಲಿಕ್ಕಾಗದೆ ವಾಷ್‌ಬೇಸಿನ್‌ನಲ್ಲಿ ಒಟ್ಟಿದ್ದ ಪಾತ್ರೆಗಳೆನ್ನೆಲ್ಲ ಹೊರತಂದು ಇಟ್ಟುಕೊಳ್ಳತೊಡಗಿದಳು. ಆ ಸದ್ದಿಗೆ ಯಾರು ಎಂದು ಕ್ಷೀಣವಾಗಿ ಮಲಗಿದಲ್ಲಿಂದಲೇ ಕೇಳಿದ ದಿವಾಕರನಿಗೆ ’ಜಿಲ್ಲಿ’ ಎಂದಷ್ಟೇ ಉತ್ತರಿಸಿದವಳು ಪಾತ್ರೆಗಳನ್ನೆಲ್ಲ ಲಕಲಕನೆ ತಿಕ್ಕಿ ತೊಳೆದು ಅಡಿಗೆ ಮನೆ ಕಟ್ಟೆ ಒರೆಸಿ ವಾಷ್‌ಬೇಸಿನ್ ತೊಳೆದು ಪಾತ್ರೆಗಳೆನ್ನೆಲ್ಲ ತನಗೆ ತಿಳಿದಂತೆ ಜೋಡಿಸಿಟ್ಟಾಗಿತ್ತು. ಅವನೇನೂ ಅಡಿಗೆ ಮಾಡಿಕೊಂಡಂತಿಲ್ಲ ಎಂದು ಜಿಲ್ಲಿಗೆ ಸುಲಭವಾಗಿ ಹೊಳೆದಿತ್ತು.

ಜ್ವರದ ಮಂಪರಿನಲ್ಲಿದ್ದ ದಿವಾಕರನಿಗೆ ಕಿಟಕಿ ಬಳಿ ಏನೋ ಸದ್ದಾದಂತೆ ಎನ್ನಿಸಿ ಕಣ್ಣು ತೆರೆದು ನೋಡಿದರೆ ಉದ್ದ ಗಾಜಿನ ಲೋಟದಲ್ಲಿ ಟೀ ಜೊತೆ ಬ್ರೆಡ್ ಪುಡಿಕೆ ಇಡುತ್ತಿದ್ದ ಜಿಲ್ಲಿ ಕಾಣಿಸಿದ್ದಳು. ’ಬ್ರೆಡ್ ತಿಂದು ಈ ಚಾ ಕುಡೀರಿ. ಆಮ್ಯಾಲೆ ಈ ಗುಳಿಗಿ ತಗೋರಿ’ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಸೆರಗಿನ ಗಂಟಿನಲ್ಲಿದ್ದ ನಾಲ್ಕು ಮಾತ್ರೆ ಕಿಟಕಿ ಮೇಲಿಟ್ಟು ಅರೆ ಎಚ್ಚರದಲ್ಲಿಯೇ ದಿವಾಕರ ಸಂಕೋಚದಿಂದ ಮತ್ತಷ್ಟು ಮುದುಡಿ ಮಲಗಿದಾಗ ಜಿಲ್ಲಿಗೆ ಮತ್ತೇನು ಮಾಡಲು ತಿಳಿಯದೇ ಹೊರಹೋಗಿಯಾಗಿತ್ತು. ಹಿಂದಿನ ಬಾಗಿಲು ಮುಚ್ಚಿದ ಸದ್ದು ಕೇಳಿದ ನಂತರವೇ ಪೂರ್ಣ ಎಚ್ಚರವಾಗಿ ದಿವಾಕರ ಎದ್ದು ಕುಳಿತಿದ್ದ. ಎದ್ದು ವಾಷ್ ಬೇಸಿನನಲ್ಲಿಯೇ ಬಾಯಿ ಮುಕ್ಕಳಿಸಿ, ಬಿಸಿ ಬಿಸಿ ಚಾದಲ್ಲಿ ಬ್ರೆಡ್ ಅದ್ದಿ ಹೊಟ್ಟೆ ತುಂಬ ತಿಂದು ಯಾವ ಮಾತ್ರೆ ಅಂತಲೂ ನೊಡದೆ ಒಂದೇ ಬಾರಿ ಎರಡು ಮಾತ್ರೆ ನುಂಗಿ ಮತ್ತೆ ಮಲಗಿದ ದಿವಾಕರನಿಗೆ ಸಂಜೆಯವರೆಗೆ ಜೋರು ನಿದ್ದೆ. ಸಂಜೆ ನಿದ್ದೆ ತಿಳಿದೆದ್ದಾಗ ಮೈಯೆಲ್ಲ ಹಗುರವಾದಂತೆ, ಬೆವರು ಬಿಟ್ಟು ಜ್ವರ ಕಡಿಮೆಯಾದಂತೆ ಅನ್ನಿಸಿದರೂ ಅಂಗಡಿಗೆ ಹೋಗಲಿಕ್ಕೆ ಮನಸ್ಸಾಗದೆ ಅನ್ನ ಮಾಡಿಕೊಂಡು ಉಂಡು ಮತ್ತೆ ಜಿಲ್ಲಿಯಿಟ್ಟಿದ್ದ ಮಾತ್ರೆ ನುಂಗಿ ಮಲಗಿದ್ದ.

ಮರುದಿನ ಜಿಲ್ಲಿ ಹನ್ನೆರಡಕ್ಕೆ ಬಂದಾಗ ಜ್ವರ ಕಡಿಮೆಯಾಗಿದ್ದರಿಂದ ದಿವಾಕರನೂ ಅಂಗಡಿಗೆ ಹೋಗಿ ಬಂದು ಕುಕ್ಕರ್ ಇಡತೊಡಗಿದ್ದ. ಜಿಲ್ಲಿ ಈಗ ಮಾತ್ರ ಅವನನ್ನು ಈ ಕುರಿತು ವಿಚಾರಿಸುವ ಅವಶ್ಯಕತೆಯೇ ಇರದಂತೆ “ದಿನಾ ಪಾತ್ರೆ ಬಟ್ಟೆ ತೊಳೀತೀನ್ರೀ..
ಎಷ್ಟ ಕೊಡ್ತೀರ ಕೊಡ್ರೀ” ಎಂದವಳೇ ಚೌಕಾಶಿಗೆ ಅವಕಾಶವೇ ಇರದಂತೆ ಬೇಸಿನ್‌ನಲ್ಲಿದ್ದ ನಾಲ್ಕಾರು ಪಾತ್ರೆ ಎತ್ತಿಕೊಂಡು ಹೋಗಿ ತಿಕ್ಕತೊಡಗಿದ್ದಳು. ಅನ್ನಕ್ಕಿಟ್ಟ ಕುಕ್ಕರ್ ಕೂಗುವುದರಲ್ಲಿ ಅಡಿಗೆ ಮನೆಯನ್ನು ಒರೆಸಿ ಹಿತ್ತಲಿನಲ್ಲಿದ್ದ ಬಟ್ಟೆ ಕಲ್ಲಿನ ಮೇಲೆ ಕುಳಿತು ಇದೀಗ ಕೊಟ್ಟ ಟೀ ಹೀರುತ್ತ ಕುಳಿತವಳನ್ನು ಸೂಕ್ಷ್ಮವಾಗಿ ದಿವಾಕರ ಗಮನಿಸತೊಡಗಿದ.

ಕಂದು ಮಿಶ್ರಿತ ಬಿಳಿಬಣ್ಣದ ಒಣಹುಲ್ಲಿನ ಕಂತೆಯೊಂದನ್ನು ತಲೆಯ ಮೇಲೆ ತಟ್ಟಿದಂತೆ ಕಾಣುತ್ತಿದ್ದ, ಎಣ್ಣೆ ಕಾಣದೆ, ಸರಿಯಾಗಿ ಬಾಚಿಕೊಳ್ಳದೆ ಎಷ್ಟೋ ದಿನಗಳಾದಂತಿದ್ದ ಗಾಳಿಗೆ ಸಿಕ್ಕು ಒರಟಾಗಿದ್ದ ಅವಳ ಕೂದಲು ನೋಡಿದ್ದೇ ಯಾವುದೋ ನೆನಪಿನಿಂದ ಫಕ್ಕನೆ ಕಸಿವಿಸಿಗೊಂಡ. ತಟ್ಟನೆ ಒಳಹೋದ ದಿವಾಕರ ಕೊಬ್ಬರಿ ಎಣ್ಣೆಯ ಬಾಟಲಿಯೊಂದಿಗೆ ಹೊರಬಂದಿದ್ದ. “ಹಿಡಿ” ಎಂದವನ ಮುಂದೆ ಅಂಗೈ ಚಾಚಿದ ಜಿಲ್ಲಿಗೆ ಮಾತ್ರ ಅತೀವ ಅಚ್ಚರಿಯಾಗಿತ್ತು. ಬಗ್ಗಿ ನೆಲ ಒರೆಸುವಾಗ ಕಾಣುವ ಬತ್ತಿದ ಮೊಲೆಗಳನ್ನೇ ಆಸೆಗಣ್ಣಿಂದ ದಿಟ್ಟಿಸುವ, ಸೀರೆ ಮೇಲೆತ್ತಿ ಸಿಕ್ಕಿಸಿ ಬಟ್ಟೆ ಒಗೆಯುವಾಗ ಕನ್ನಡಕದ ಸಂಧಿಯಿಂದ ನೋಡುವವರಿಂದ ಹಿಡಿದು ಸಂತೆಯ ದಿನ ಜನಸಂದಣಿಯಲ್ಲಿ ತುಸು ಮೈಮುಟ್ಟಲು ಕೈತಟ್ಟಲು ಕಾತರಿಸುವ ಗಂಡಸರವರೆಗೆ ಎಂತೆಂತೆಹ ಗಂಡಸರನ್ನು ನೋಡಿದ್ದಳಾಕೆ? ಆದರೆ ಹೀಗೆ ಒಣ ಕೂದಲಿಗೆ ತೊಟ್ಟು ಎಣ್ಣೆ ಕೊಡಲು ಬಂದ ದಿವಾಕರ… ಆ ಎಣ್ಣೆ ಬಾಟಲಿಯಿಂದ ಚೊರ್‌ಚೊರ್ ಎಂದು ಅಂಗೈ ತುಂಬ ಎಣ್ಣೆ ಬಿಡುತ್ತ ನಿಂತ ದಿವಾಕರ ಮಾತ್ರ ಎಲ್ಲರಿಗಿಂತ ಬೇರೆಯೇ ಅನ್ನಿಸಿಬಿಟ್ಟಿದ್ದ. ಅದೇ ಅಚ್ಚರಿಯಲ್ಲಿ ಅವನನ್ನೇ ದಿಟ್ಟಿಸುತ್ತ ಕುಳಿತವಳನ್ನು ದಿವಾಕರನೇ ಎಣ್ಣೆ ಕೆಳಗೆ ಸೋರ್‍ತಿದೆ ಎಂದು ಎಚ್ಚರಿಸಿದ್ದ. ಅಯ್ಯಾ ಎಂದು ಉದ್ಗರಿಸಿದವಳೇ ಅಂಗೈಯನ್ನು ನೆತ್ತಿಗೆ ತಪ್ ಅಂತ ಬಡಿದು ಕೈಯಲ್ಲೇ ಜೊಂಪೆ ಕೂದಲನ್ನು ಒಟ್ಡುಗೂಡಿಸಿ ಗಂಟು ಹಾಕಿಕೊಂಡು ಅಂಗೈಗೆ ಹತ್ತಿದ್ದ ಎಣ್ಣೆಯನ್ನು ಕೈಗೆ ಮುಖಕ್ಕೆ ಸವರಿಕೊಂಡು ಎದ್ದು ಹೊರಟ ಜಿಲ್ಲಿ ಮತ್ತು ಏಕಾ‌ಏಕಿ ಹೀಗೆ ಎಣ್ಣೆ ಬಾಟಲಿ ಹಿಡಿದು ನಿಲ್ಲುವ ಹುಕಿ ತನಗೆ ಯಾಕೆ ಬಂದಿತು ಎಂದುಕೊಳ್ಳುತ್ತ ಬಾಟಲಿ ಒಳಗಿಡಲು ಹೊರಟ ದಿವಾಕರ ಎರಡು ಬಿಂದುಗಳಂತೆ ಇದ್ದರು.

ಅಂದೇ ಪೆನ್ಸಿಲ್ ತಗೊಂಡ ಮಗು ಎರಡು ಸಣ್ಣ ಸಣ್ಣ ಚುಕ್ಕಿ ಇಟ್ಟು ನಂತರ ಆ ಚುಕ್ಕಿ ಕೂಡಿಸಿ ತೆಳ್ಳನೆಯ ರೇಖೆಯೊಂದನ್ನು ಎಳೆದು ಅರೆ ಇದು ತಾನು ಎಳೆದಿದ್ದೇ ಎಂಬ ಅಚ್ಚರಿಯಲ್ಲಿ ಅದನ್ನೇ ದಿಟ್ಟಿಸುತ್ತಿರುವಂತೆ ಅವರ ನಡುವೆ ಗೆರೆಯೊಂದು ಮೂಡಿತ್ತು ಮತ್ತು ಇಬ್ಬರಲ್ಲೂ ಇದು ಸಾಧ್ಯವಾಗಿಬಿಟ್ಟಿತಲ್ಲ ಎಂಬ ಒಂದು ನೆಮ್ಮದಿಯಿಂದೊಡಗೂಡಿದ ಅಚ್ಚರಿಯಿತ್ತು.

ನಂತರದ ದಿನಗಳಲ್ಲಿ ಜಿಲ್ಲಿ ಸರಿಯಾಗಿ ಹನ್ನೆರಡಕ್ಕೆ ಪಾತ್ರೆ ತಿಕ್ಕಲು ಬರುವುದು, ಅಡಿಗೆ ಮಾಡಿಕೊಳ್ಳುತ್ತಲೇ ಜಿಲ್ಲಿಯ ವಟವಟಕ್ಕೆ ದಿವಾಕರ ಹೂಂಗುಡುವುದು ಸಾಮಾನ್ಯವಾಗಿತ್ತು. ಮೊದಮೊದಲು ಅವರ ಮನೆಯಲ್ಲಿ ಸೊಸೆಗೆ ಹೆರಿಗೆ ಆಯ್ತು, ಇವರ ಮನೆಯಲ್ಲಿ ಹುಡುಗಂಗೆ ಹುಷಾರಿಲ್ಲ, ಇಂತಹ ಏನಾದ್ರೂ ಸುದ್ದಿಯ ತುಣುಕನ್ನು ನ್ಯೂಸ್ ಹೆಡ್‌ಲೈನ್ ಹೇಳುವವರ ತರಹ ನಗುಮೊಗದಿಂದ ನಿರ್ವಿಕಾರ ಭಾವದಿಂದ ಹೇಳುತ್ತಿದ್ದ ಜಿಲ್ಲಿ ಸಲಿಗೆ ಹೆಚ್ಚಾದಂತೆ ತಮ್ಮ ಓಣಿಯ ಸುದ್ದಿಗಳನ್ನು ಹೇಳಲು ಶುರು ಮಾಡಿದ್ದಳು. ದಿವಾಕರನಿಗೆ ಅವಳೊಂದು ಆಕಾಶಕ್ಕೆ ತೆರೆದುನಿಂತ ಗವಾಕ್ಷಿಯಂತೆ ಅನ್ನಿಸಿ ಆ ಗವಾಕ್ಷಿಯಾಚೆ ಕಾಣುವ ಕ್ಷಿತಿಜ ಮಾತ್ರ ಹೊಸದೇ ಅನ್ನಿಸಿ ಬೆರಗುಗೊಳ್ಳುತ್ತಿದ್ದ. ಯಾರೋ ಕಸದ ತೊಟ್ಟಿ ಹತ್ತಿರ ಬಿಟ್ಟು ಹೋಗಿದ್ದ ಹಸುಗೂಸನ್ನು ಮಕ್ಕಳಿಲ್ಲದ ಜುಬೇದಾ ತಂದು ಸಾಕಿಕೊಂಡದ್ದನ್ನು, ಗಂಡ ಬಿಟ್ಟು ಓಡಿಹೋದ ಬಸುರಿ ಹೆಂಗಸನ್ನು ಹೆರಿಗೆ ಸಮಯದಲ್ಲಿ ತಮ್ಮ ಓಣಿಯವರೇ ಕೂಡಿ ಸರಕಾರಿ ದವಾಖಾನೆಗೆ ಸೇರಿಸಿದ್ದನ್ನು ಜಾತ್ರೆ ಸಮಯದಲ್ಲಿ ಅಪ್ಪ ಅಮ್ಮನಿಂದ ತಪ್ಪಿಸಿಕೊಂಡು ಅಳುತ್ತಿದ್ದ ಚಿಕ್ಕ ಹುಡುಗನನ್ನು ತಮ್ಮ ಓಣಿ ಮಂದಿ ತಂದು ಸಾಕಿಕೊಂಡಿದ್ದನ್ನು ಎರಡು ತಿಂಗಳ ನಂತರ ಪತ್ತೆ ಹಚ್ಚಿ ಬಂದ ಆ ಹುಡುಗನ ಅಪ್ಪ ಅಮ್ಮ ಅವನನ್ನು ಕರೆದೊಯ್ಯುವಾಗ ತಮಗೆಲ್ಲ ತೆಕ್ಕೆ ಬಡಿದು ಮಗು ಅತ್ತಿದ್ದನ್ನು ಹೀಗೆ ಜಿಲ್ಲಿ ವರ್ಣನೆ ಮಾಡಿ ಹೇಳುತ್ತಿದ್ದರೆ ದಿವಾಕರ ಮುಂದೆ ಆಮೇಲೆ ಎನ್ನುತ್ತ ಅಡಿಗೆಯನ್ನು ಅಲ್ಲಿಗೇ ಬಿಟ್ಟು ನಿಲ್ಲುತ್ತಿದ್ದ.
ಜಿಲ್ಲಿ ಆಗೀಗ ಹೇಳದೆ ಕೇಳದೆ ಒಂದು ದಿನ ಎರಡು ದಿನ ಕೈಕೊಡುವುದಿತ್ತು. ಕುದುರೆ ನೋಡ್ತಿದ್ದ ಹಾಗೆ ನಡೆಯಲಿಕ್ಕೆ ಕಾಲು ನೋವು ಬರುವಂತೆ ದಿವಾಕರನಿಗೆ ಅವಳು ಬರದಿದ್ದಾಗ ರಾಶಿ ಬಿದ್ದಿರುವ ಪಾತ್ರೆಗಳನ್ನು ನೋಡಿ ತೊಳೆದುಕೋಳ್ಳಲು ಸೋಮಾರಿತನವಾಗುತ್ತಿತ್ತು. ’ಹೇಳದೆ ಕೇಳದೆ ಕೈಕೊಡುವುದ್ಯಾಕೆ, ಹೇಳಿ ಹೋಗಲಿಕ್ಕೇನು ಧಾಡಿ’ ಎಂದು ಸ್ವಲ್ಪ ಬೈಯಬೇಕು, ತಾನು ಅವಳಿಗೆ ಸಲಿಗೆ ಕೊಟ್ಟಿದ್ದು ಜಾಸ್ತಿಯಾಯಿತು ಎಂದುಕೊಳ್ಳುತ್ತಿದ್ದ ದಿವಾಕರ ಮರುದಿನ ಕೇಳುವ ಮೊದಲೇ ಜಿಲ್ಲಿ ಬರದೇ ಇದ್ದುದಕ್ಕೆ ಇಷ್ಟುದ್ದದ ಸಕಾರಣಗಳ ಪಟ್ಟಿ ಮುಂದಿಡುತ್ತಿದ್ದಳು. ಯಾರೋ ಸತ್ತರೆಂದು ಮಣ್ಣಿಗೆ ಹೋದೆ, ದವಾಖಾನಿಗೆ ಒಬ್ಬರ ಜತೆಗೆ ಯಾರೂ ಇರಲಿಲ್ಲ ಅವರನ್ನ ಕರ್‍ಕೊಂಡು ತಪಾಸು ಮಾಡಿಸಲಿಕ್ಕೆ ಹೋದೆ ಯಾರದೋ ಮದುವೆಗೆ ಸಂತೆ ತರುವುದಿತ್ತು ಮತ್ಯಾರ ಮನೆಯಲ್ಲೋ ಸುಣ್ಣ ಹಚ್ಚುವುದಿತ್ತು.. ಇಷ್ಟೇ ಅಲ್ಲ ಹತ್ತಿರದಲ್ಲಿ ಎಲ್ಲಾದ್ರೂ ಭಾರೀ ಆಕ್ಸಿಡೆಂಟಾಗಿದ್ರೆ ಗಾಯಾಳುಗಳನ್ನು ಸೇರಿಸಿದ್ದ ಸರಕಾರಿ ದವಾಖಾನೆಗೂ ಅವಳು ಭೇಟಿ ನೀಡುವವಳೇ.. ಯಾರ ಕಾಲು ಮುರಿದಿತ್ತು, ಕೈ ಮುರಿದಿತ್ತು, ತಲೆಗೆ ಪೆಟ್ಟಾಗಿತ್ತು ಹೀಗೆ ಎಲ್ಲದರ ವರ್ಣನೆ ಎಷ್ಟು ಚೆನ್ನಾಗಿ ಮಾಡ್ತಿದ್ದಳೆಂದ್ರೆ ಬೈಯಬೇಕೆಂದು ರಿಹರ್ಸಲ್ ಮಾಡಿಕೊಂಡ ದಿವಾಕರನೂ ಕಡೆಗೆ ’ಹೌದಾ.. ನಂಗೆಂಥ ಗೊತ್ತಿತ್ತು’ ಎಂದು ಲೊಚ್‌ಗುಟ್ಟಿ ಸುಮ್ಮನಾಗುತ್ತಿದ್ದ.
ಎಲ್ಲೆಲ್ಲಿಯದೋ ಏನೆಲ್ಲ ರಂಗಿನ ಸುದ್ದಿಗಳನ್ನು ಸೊಂಟಕ್ಕೆ ಸಿಕ್ಕಿಸಿದ್ದ ಸೆರಗಿನಲ್ಲಿಟ್ಟುಕೊಂಡವಳಂತೆ ಓಡಾಡುವ ವೃತ್ತ ಪತ್ರಿಕೆಯಂತೆ ತೋರುವ ಅವಳು ಎಂದಾದರೊಮ್ಮೆ ಸುಮ್ಮನಿದ್ರೆ ದಿವಾಕರ “ರೇಡಿಯೋ ಬಂದ್ ಆಗಿದೆಯಲ್ಲ ಇವತ್ತು” ಎಂದು ಚೇಷ್ಟೆ ಮಾಡುತ್ತಿದ್ದ. “ಜೀಂವಾ ಬ್ಯಾಸರ ಬಂದದರೀ” ಎಂದು ಆಗೆಲ್ಲ ಜಿಲ್ಲಿ ಗೋಡೆಗೊರಗಿ ನಿಟ್ಟುಸಿರು ಬಿಡುತ್ತಿದ್ದಳು. ಅವಳು ಹೀಗೆನ್ನುವುದೂ ಯಾವಾಗಲಾದರೊಮ್ಮೆ ಮಾತ್ರ. ದಿವಾಕರ “ಯಾಕೆ ಜಿಲ್ಲಿ ಆರಾಮಿಲ್ವಾ” ಎಂದು ಕಾಳಜಿ ಮಾಡಿದರೆ “ನಾ ಆರಾಮ ಅದೀನ್ರೀ… ಅಂವಂಗ ಮುದುಕಂಗ ಮತ್ತ ಜಡ್ಡು ಬಂದದ. ದವಾಖಾನಿಗಿ ಸೇರಿಸೀನ್ರೀ” ಎಂದು ಜಿಲ್ಲಿ ಇನ್ನಿಲ್ಲದ ಬೇಸರದಲ್ಲಿ ಉತ್ತರಿಸುತ್ತಿದ್ದಳು. ಮೊದಮೊದಲು ಅವಳು ಮುದುಕ ಎಂದಾಗ ದಿವಾಕರ ಅವಳಪ್ಪ ಅಥವ ಮಾವ ಎಂದುಕೊಂಡಿದ್ದ. ವಯಸ್ಸಾದ ಗಂಡನಿಗೆ ಅವಳು ಮುದುಕ ಎನ್ನುವುದು ಎಂದು ಗೊತ್ತಾದಾಗ ನಗು ಬಂದರೂ ಒಂದು ರೀತಿ ವಿಷಾದವೂ ಸುಮ್ಮನಾಗಿದ್ದ.

ಜಿಲ್ಲಿ ಅವನಿಗೆ ಎರಡನೆಯ ಹೆಂಡತಿ. ಮೊದಲನೆಯ ಹೆಂಡತಿ ಅವನ ಕುಡಿತ ನಂತರದ ಹೊಡೆತ ತಾಳಲಾರದೆ ಓಡಿಹೋಗಿ ಬೇರೆ ಮದುವೆಯಾಗಿ ಅವಳಿಗೆ ಮಕ್ಕಳಾಗಿ ಈಗ ಸೊಸೆಯಂದಿರು ಮೊಮ್ಮಕ್ಕಳೂ ಇದ್ದಾರೆಂದು ನಿರ್ವಿಕಾರವಾಗಿ ಹೇಳುವ ಜಿಲ್ಲಿ “ಅಂದ್ರ ಅಂವಂಗ ಏಸ ವರ್ಷ ಆಗೈತಿ ನೀವೇ ಹೇಳ್ರೀ.. ಮುದುಕ ಆಗ್ಯಾನ್ರೀ.. ಏನೂ ಉಳಿದಿಲ್ಲ” ಎಂದು ಜೋಡಿಸುತ್ತಿದ್ದಳು. ವರ್ಷದಲ್ಲೊಂದೆರಡು ಮೂರು ಸಲ ಆತ ಜಡ್ಡಿಗೆ ಬೀಳುತ್ತಿದ್ದ. ಸರಕಾರಿ ದವಾಖಾನೆಗೆ ಅವನನ್ನು ಸೇರಿಸಿ ದವಾಖಾನೆಗೆ, ಮನೆಗೆ ಜತೆಗೆ ತಾನು ಕೆಲಸ ಮಾಡುವ ಮನೆಗಳಿಗೆ ಓಡಾಡುವುದರಲ್ಲಿ ಸುಸ್ತಾಗಿಬಿಡುತ್ತಿದ್ದಳು. ತನ್ನ ದುಡಿಮೆಯಿಂದಲೇ ತಾನೇ ಬಸಿರು ಬಾಣಂತನಗಳನ್ನು ನಿಭಾಯಿಸಿಕೊಂಡೆನೆಂದೂ ಕಡೆಗೆ ಸಾಕಾಗಿ ಮೂರನೇ ಹುಡುಗಿ ಹುಟ್ಟುತ್ತಿದ್ದಂತೆ ಆಪರೇಶನ್ ಮಾಡಿಸಿಕೊಂಡೆನೆಂದೂ ಹೇಳುತ್ತಿದ್ದಳು. ಇಲ್ಲಿಯವರೆಗೆ ಒಂದೇ ಒಂದು ಬಳೆಯನ್ನೂ ತನಗೆ ತಂದುಕೊಡದವನಿಗೆ ತಾನು ಇಷ್ಟೆಲ್ಲ ಸೇವೆ ಮಾಡಬೇಕಾಗಿ ಬಂದಿರುವುದು ತನ್ನ ಕರ್ಮವೆಂದು ಹಣೆಗಂಟಿಕ್ಕಿ ಹೇಳುತ್ತಿದ್ದ ಜಿಲ್ಲಿ ಕಡೆಗೆ ಹಣೆ ಮೇಲೆ ಬೆರಳಿಟ್ಟು ಎಲ್ಲ ನಾವು ಪಡಕಂಡು ಬಂದಂಗ ಇರ್‍ತದ ಎಂದು ಮಾತು ಮುಗಿಸುತ್ತಿದ್ದಳು. ಅವನಿಗೆ ಶಕ್ತಿಯಿದ್ದಾಗಿನ ದಿನಗಳಲ್ಲಿ ಕುಡಿದು ಬಮದು ಗಲಾಟೆ ಮಾಡುತ್ತಿದ್ದನ್ನು, ಹೊಡೆಯುತ್ತಿದ್ದದ್ದನ್ನು ಒಂದೆರಡು ಬಾರಿ ತಾನು ಮನೆ ಬಿಟ್ಟು ತವರಿಗೆ ಹೋಗಿ, ಮತ್ತೆ ತವರು ಮನೆಯವರು ಇಲ್ಲಿಗೇ ಕರೆತಂದು ಬಿಟ್ಟಿದ್ದನ್ನು ಜಿಲ್ಲಿ ಎಷ್ಟು ನಿರ್ಲಿಪ್ತಳಾಗಿ ವರ್ಣಿಸುತ್ತಿದ್ದಳೆಂದರೆ ಭಜಿಗೆ ಸುತ್ತಿದ್ದ ಎಣ್ಣೆಯಂಟಿದ್ದ ಪೇಪರ್ ಚೂರಿನಲ್ಲಿ ಸಿಕ್ಕ ಯಾರದೋ ಸುದ್ದಿಯನ್ನು ವರದಿ ಮಾಡುವಂತಿರುತ್ತಿತ್ತು. ಬದುಕು ಅರ್ಥಪೂರ್ಣವೋ ಅರ್ಥಹೀನವೋ ಯಾಕೆ ಏನು ಎಂಬ ಪ್ರಶ್ನೆಗಳಿಲ್ಲದೇ ಮಾಗಿಯ ಹಿತವಾದ ಗಾಳಿಯೋ ಬೇಸಿಗೆಯ ಬಿಸಿಗಾಳಿಯೋ ಆಷಾಡದ ಧೂಳು ತುಂಬಿದ ಗಾಳಿಯೋ ಒಟ್ಟು ಮುಖವೊಡ್ಡಿ ನಿಂತಂತೆ, ಇದ್ದದ್ದನ್ನು ಇದ್ದ ಹಾಗೆ ಅನುಭವಿಸುವವಳಂತೆ ಇರುವ ಜಿಲ್ಲಿ ದಿವಾಕರನಲ್ಲಿ ಒಂದು ಬಗೆಯ ಅಚ್ಚರಿ ಹುಟ್ಟಿಸಿಬಿಟ್ಟಿದ್ದಳು.

ಜಿಲ್ಲಿ ದಿವಾಕರನ ಮನೆಕೆಲಸ ಮಾಡಿಕೊಡುತ್ತ ವರ್ಷವಾಗ್ತ ಬಂದಿತ್ತು. ಒಂದಿನ ಕೆಲಸ ಮುಗಿಸಿ ಇನ್ನೂ ಹೋಗದೆ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕುಳಿತ ಜಿಲ್ಲಿಯನ್ನು ಮತ್ತೇನು ಎಂಬಂತೆ ನೋಡಿದ. ಜಿಲ್ಲಿ ಹಾಗೆ ಕುಳಿತಳೆಂದ್ರೆ ಏನೋ ಕೇಳಲಿಕ್ಕಿದೆ ಎಂದೇ ಅರ್ಥ.
“ಪಂಚಮಿಗಿ ಬಳಿ ಇಟ್ಟುಕೊಳ್ಳಾಕ ರೊಕ್ಕ ಕೊಡಂಗಿಲ್ಲೇನ್ರೀ..?” ಜಿಲ್ಲಿ ಜಾತ್ರೆಗೆ ಹೊರಟ ಚಿಕ್ಕ ಹುಡುಗಿಯ ಹಠದಲ್ಲಿದ್ದಂತಿತ್ತು. ಪಂಚಮಿ ಹಬ್ಬ ತಾನೂ ಆಚರಿಸುವುದಿಲ್ಲ, ಅವಳೂ ಆಚರಿಸುವುದಿಲ್ಲ, ಆದರೆ ಪಂಚಮಿ ಬಳೆಗೆ ತಾನು ಜಿಲ್ಲಿಗೆ ರೊಕ್ಕ ಕೊಡಬೇಕು.. ಯಾಕೋ ಅವಳು ಕುಳಿತು ಕೇಳಿದ ರೀತಿ ಒಟ್ಟಾರೆ ಸನ್ನಿವೇಶ ತಮಾಶೆಯಾಗಿದೆ ಎನ್ನಿಸಿ ಜೊರಾಗಿ ನಕ್ಕನಾತ. ಜಿಲ್ಲಿಗೆ ತುಸು ಅವಮಾನವೆನ್ನಿಸಿತೋ ಏನೋ “ಬ್ಯಾಡ ಬಿಡ್ರೀ” ಎಂದು ಹೊರಟಳು.

ನಗು ನಿಲ್ಲಿಸಿ “ಇರವ್ವಾ” ಎಂದು ಒಳಹೋದವನಿಗೆ ಎಷ್ಟು ದುಡ್ಡು ಕೊಡಬೇಕೆನ್ನುವುದು ಬೇಗ ಹೊಳೆಯಲಿಲ್ಲ. ಅಸಲು ಬಳೆ ಈಗ ಯಾವ ರೇಟಿನಲ್ಲಿ ಸಿಗುತ್ತದೆ ಎಂಬುದೇ ಅವನಿಗೆ ಗೊತ್ತಿರಲಿಲ್ಲ. ಫಕ್ಕನೆ ಮನಸ್ಸಿನಲ್ಲೊಂದು ಬಳೆಚೂರು ಕೊರೆದ ಹಾಗೆ…. ಶಿರಸಿಯ ಮಾರಿಜಾತ್ರೆಯಲ್ಲಿ ಆಗೆಲ್ಲ ನಾಲ್ಕೈದು ರೂಪಾಯಿಗೆ ಡಝನ್ ಬಳೆ ಸಿಗ್ತಿತ್ತು. ಅಮ್ಮ ಒಮ್ಮೆ ಆಸೆಪಟ್ಟು ಒಂದೂವರೆ ಡಝನ್ ಇಟ್ಟುಕೊಂಡಿದ್ದಳಲ್ಲ… ಸಂಕ ದಾಟುವಾಗ ಕಾಲು ಜಾರಿಬಿದ್ದಿದ್ದೇ… ಬಳೆ ಫಳ್ ಫಳ್ ಗುಟ್ಟಿ ಚೂರು ಚೂರಾಗಿ… ಅದೇ ನೆವವಾಗಿ ಮಲಗಿದವಳು… ಮತ್ತೆ ಬಳೆಯವನ ಮುಂದೆ ಕುಳಿತುಕೊಳ್ಳಲೇ ಇಲ್ಲ. ಆಗ ಕೆಳೆಗೆ ಬಿದ್ದ ಬಳೆಯ ಚೂರುಗಳು ಈಗಲೂ ತನ್ನದೆಯಲ್ಲಿ ನೆಟ್ಟಿರುವಂತೆ ಅನ್ನಿಸಿದ್ದೇ ದಿವಾಕರ ಮೆಲ್ಲನೆ ’ಅಮ್ಮಾ’ ಅಂತ ಉಸುರಿದ.
“ಅಣ್ಣಾರೆ ತಡ ಆಕ್ಕ್ಯೆತ್ರೀ” ಹೊರಗೆ ಜಿಲ್ಲಯ ಧ್ವನಿ.

ಹೂಂ ಎಂದು ಗಡಬಡಿಸಿ ಹೊರ ಬಂದವನ ಕೈಯಲ್ಲಿ ಐವತ್ತು ರೂಪಾಯಿಯ ನೋಟಿತ್ತು. ಹೆಚ್ಚೆಂದರೆ ಹತ್ತೋ ಇಪ್ಪತ್ತೋ ಕೊಡಬಹುದು ಎಂದೆಣಿಸಿದ ಜಿಲ್ಲಿ
“ಚಿಲ್ರೆ ಇಲ್ರೀ. ನೀವೇ ಚಿಲ್ರೆ ಮಾಡ್ಸಿ ಕೊಡ್ರೀ” ಕೈ ಒಡ್ಡದೇ ಹೇಳಿದಳು.
“ಇರಲಿ.. ತಗೋ ಜೆಲ್ಲಿ” ಎಂದಷ್ಟೇ ಹೇಳಿ ಒಳ ಹೋದ ದಿವಾಕರನ ಕಣ್ಣುಗಳಲ್ಲಿ ಮಾತ್ರ ಬಳೆ ಚೂರಿನದೇ ಚಿತ್ರವಿತ್ತು.

ದಿವಾಕರನಿಗೆ ಮಧ್ಯಾಹ್ನ ಊಟವೂ ರುಚಿಸದೆ ಮೂರು ಘಂಟೆಯ ಸುಮಾರಿಗೇ ಮತ್ತೆ ಪಾನ್‌ಶಾಪ್‌ನತ್ತ ಹೋಗಿಯಾಗಿತ್ತು. ಶನಿವಾರವಾಗಿದ್ದರಿಂದಲೋ ಏನೋ ಹೆಚ್ಚು ಗಿರಾಕಿಗಳೂ ಇರಲಿಲ್ಲ. ದಿವಾಕರನಿಗೆ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಚೂಪಗೆ ಕುಳಿತು ಒಳಗೆ ದುಡ್ಡು ಕೇಳಿದ ಜಿಲ್ಲಿಯ ಮುಖವೇ ಕಣ್ಣಿಗೆ ಕಟ್ಟಿದಂತಾಗಿತ್ತು. ಮನೆಯಿಂದ ಬರುವಾಗ ಚಡಪಡಿಸುತ್ತಿದ್ದ ಮನಸ್ಸು ಹಳೆಯ ಡ್ರಾಯಿಂಗ್ ಪ್ರಸ್ತಕವನ್ನು ಕೈಗೆತ್ತಿ ಕೊಂಡುಬರುವಂತೆ ಪ್ರೇರೇಪಿಸಿತ್ತು. ತುಂಬ ದಿನಗಳ ನಂತರ ಪೆನ್ಸಿಲ್ ತಗೊಂಡು ಗೀಚಲಾರಂಭಿಸಿದ್ದ. ಎಂದಿನಷ್ಟೂ ಮಾತನಾಡದೆ ತಲೆಬಗ್ಗಿಸಿ ಏನು ಮಾಡ್ತಿದಾನಿವ ಅಂತ ಕುತೂಹಲದಿಂದ ಮೆಡಿಕಲ್ ಶಾಪ್‌ನ ರಾಜಾ ಸುಪಾರಿ ತಿನ್ನುವ ನೆವ ಮಾಡಿ ಇವನ ಅಂಗಡಿಯತ್ತ ಬಂದವನು ದಿವಾಕರ ಪೆನ್ಸಿಲ್‌ನಲ್ಲಿ ಸ್ಕೆಚ್ ಹಾಕ್ತಿರೋದನ್ನು ನೋಡಿ ’ಅರೆ’ ಎಂದು ನೋಡುತ್ತ ನಿಂತ.
“ಎಷ್ಜ್ ಛಲೋ ಬಿಡಿಸೀಯಲ್ಲಪ್ಪಾ” ಎಂದು ಶಾಭಾಷ್‌ಗಿರಿ ನೀಡಿದವನು ಅದನ್ನು ಮತ್ತೆ ಹತ್ತಿರದಿಂದ ನೋಡಿದವನು “ಈಕಿ ಜಿಲ್ಲಿ ಹೌದಿಲ್ಲೋ” ಎಂದು ಕೇಳಿದಾಗ ದಿವಾಕರನಿಗೆ ತುಸು ಸಂಕೋಚವಾಗ ತೊಡಗಿತ್ತು. ಮುಚ್ಚಿ ಕೆಳಗಿಟ್ಟು ಬಿಡಬೇಕು ಎನ್ನುವಷ್ಟರಲ್ಲಿ ರಾಜ ಆ ಹಳೆಯ ಡ್ರಾಯಿಂಗ್ ಪುಸ್ತಕವನ್ನು ಕ್ಯೆಗೆತ್ತಿಕೊಂಡವನೇ ಟೈಲರ್ ಅಂಗಡಿ, ಕಾಕಾನ ಚಾದ ಅಂಗಡಿ ಎಲ್ಲೆಡೆ ತೋರಿಸಲಾರಂಭಿಸಿದ್ದ ಸ್ವಲ್ಪ ಜಿಪುಣ, ಸ್ವಲ್ಪ ಸೊಕ್ಕು, ಮಂದ್ಯಾಗ ಇದ್ದವನಲ್ಲ ಈತ, ನಾಕು ಮಂದ್ಯಾಗ ಮಾತನಾಡಕ್ಕೂ ಬರಂಗಿಲ್ಲ ಎಂದೆಲ್ಲ ಇವನ ಬಗ್ಗೆ ತಮ್ಮ ತಮ್ಮ ಪಾಲಿನ ನಿರ್ಣಯ ಕೊಟ್ಟುಕೊಂಡಿದ್ದ ಅವರು ಆ ಗೆರೆಗಳು ದಿವಾಕರನ ಕುರಿತು ಬೇರೆಯೇ ಹೇಳ್ತಿದ್ದಂತೆ ಅನ್ನಿಸಿ ಬೆರಗಾಗಿದ್ದರು. ಕೋಟೆ ಗೋಡೆಗಳು, ಸ್ಮಾರಕಗಳು, ಚಿಕ್ಕ ಹುಡುಗರು, ಸೈಕಲ್‌ಗೆ ಸ್ಕೂಲಿನ ಬ್ಯಾಗು ತೂಗಿಸಿಕೊಂಡ ಹುಡುಗರು, ಸೈಕಲ್ ಮೇಲೇ ನಿಂತು ಪೇಪರ್ ಎಸೆಯುತ್ತಿರುವ ಹುಡುಗ, ಅಮ್ಮನ ಬಗಲಲ್ಲಿ ಬೆಚ್ಚಾಗಿ ನಿದ್ರಿಸಿದ ಮಗು… ಹೀಗೆ ಏನೆಲ್ಲದರ ಚಿತ್ರಗಳು ಇದ್ದ ಆ ಪುಸ್ತಕದಲ್ಲಿ ಎಲ್ಲಾದ್ರೂ ತಮ್ಮ ಚಿತ್ರ ಇದೆಯೇ ಎಂದು ಒಬ್ಬರು ಮತ್ತೊಬ್ರಿಗೆ ತಿಳಿಯದಂತೆ ಹುಡುಕಲಾರಂಭಿಸಿದ್ದರು. ಅವರೆಲ್ಲರಿಗೂ ನಿರಾಸೆಯೇ ಕಾದಿತ್ತು. ದಿವಾಕರ ಗೆರೆಗಳಲ್ಲಿ ಅವರ್‍ಯಾರನ್ನು ಮೂಡಿಸಿರೆಲೇ ಇಲ್ಲ.

ತಮ್ಮ ಮುಖ ಚಹರೆಯ ಚಿತ್ರವನ್ನು ಬಿಡಿಸಿಕೊಡು ಎಂದು ದಿವಾಕರನಿಗೆ ಕೇಳಬೇಕೆಂದುಕೊಂಡರೂ ಸಂಕೋಚ ಮತ್ತು ತಮ್ಮನ್ನು ತಾವು ಹೀಗಿದ್ದೀವಿ ಅಂತ ಆ ಗೆರೆಯಲ್ಲಿ ಕಂಡುಕೊಳ್ಲುವುದರ ಜೊತೆಗೆ ದಿವಾಕರ ಕೂಡ ಕಂಡುಕೊಂಡು ಅದನ್ನಾತ ಎಲ್ಲರಿಗೂ ತೋರಿಸಿಬಿಡುತ್ತಾನಲ್ಲ ಎಂಬ ಭಾವನೆ… ಎರಡೂ ಕೂಡಿ ಯಾರೂ ಬಾಯಿಬಿಟ್ಟು ಕೇಳಲೇ ಇಲ್ಲ. ಆದರೆ ಜಿಲ್ಲಿಯ ಚಿತ್ರ ನೋಡಿದಾಗಿನಿಂದ ಅವರು ದಿವಾಕರನೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ ಮಾತ್ರ ಸ್ವಲ್ಪ ಬದಲಾಗಿ ಅದರಲ್ಲೊಂದು ಎಚ್ಚರ ತುಂಬಿದಂತಿತ್ತು. ಅಷ್ಟೇ ಅಲ್ಲ… ಎಲ್ಲರೂ ತಮ್ಮ ತಮ್ಮ ಗಿರಾಕಿಗಳೊಂದಿಗೆ ವ್ಯವಹರಿಸುತ್ತಿದ್ದ ನಡವಳಿಕೆಯಲ್ಲೂ ಸ್ವಲ್ಪ ಸುಧಾರಣೆಯಾಗಿತ್ತು. ಬೇಸರ, ಆಲಸಿತನ ಮಿಂಚುತ್ತಿದ್ದ ಮುಖದಲ್ಲಿ ಸದಾ ತೋರಿ ಬರುತ್ತಿದ್ದ ಒರಟುತನವನ್ನು ಸುಧಾರಿಸಿಕೊಳ್ಳುತ್ತ, ಗಿರಾಕಿಗಳೊಂದಿಗೆ ನಗುಮೊಗದಿಂದ ಮಾತನಾಡುತ್ತ ಒಟ್ಟಾರೆ ಒಳ್ಳೆಯತನದ ಛಾಪೊತ್ತಲು ಹಾತೊರೆಯುತ್ತಿದ್ದಂತಿತ್ತು. ಸ್ಟೇಫ್ರೀ, ಕೇರ್‌ಫ್ರೀ ಕೇಳಲು ಬರುವ ಹುಡುಗಿಯರತ್ತ ಒಂದು ಪೋಲಿನಗು ಎಸೆದು, ತುಂಬ ಮುತುವರ್ಜಿಯಿಂದೆಂಬಂತೆ ಅದನ್ನು ಪೇಪರ್‌ನಲ್ಲಿ ಸುತ್ತಿಕೊಡುವ ನೆವದಲ್ಲಿ ಸ್ವಲ್ಪ ಹೊತ್ತು ಅವರನ್ನು ನಿಲ್ಲಿಸಿಕೊಂಡು, ಚಿಲ್ಲರೆ ಕೊಡುವಾಗ ಸಹಜವಾಗಿ ಎಂಬಂತೆ ಕ್ಯೆಮುಟ್ಟಸಿ ಸುಖಿಸುತ್ತಿದ್ದ ರಾಜಾನಿಗೆ ಅದೆಲ್ಲಾದರೂ ದಿವಾಕರನ ಗಮನಕ್ಕೆ ಬಂದು ತನ್ನ ಮುಖದಲ್ಲಿ ಪೋಲಿನಗು ಮಿಂಚುತ್ತಿದ್ದ ಹಾಗೆ ಗೆರೆಯೆಳೆದು ಬಿಟ್ಟರೆ ಏನ್ನಿಸಿದ್ದೇ ತನ್ನ ಉಢಾಳತನದ ಫೋಸನ್ನು ಸ್ವಲ್ಪ ಮರೆಮಾಚಿ ಸಭ್ಯನಂತೆ ಕಾಣಿಸಲು ಪ್ರಯತ್ನಿಸ ತೊಡಗಿದ. ’ಲೇಡಿಜ ಸ್ಪೆಶಾಲಿಸ್ಟ್’ ಎಂಬ ಬೋರ್ಡ್ ಇಟ್ಟುಕೊಂಡ ಟೈಲರ್ ಕೃಷ್ಣಪ್ಪ. ಹುಡುಗಿಯರು, ಅದೇ ಮದುವೆಯಾದ ಹೆಂಗಸರು ಬಟ್ಟೆ ಕೊಡಲು ಬಂದಾಗ ’ಮೈಯಳತೆ ತಗೋರಿ’ ಎಂದು ಬಿಟ್ರೆ ಸಾಕು.. ಅಂಕಿ ಕಾಣದಂತಿದ್ದ ಹಳೆಯ ಟೇಪನ್ನು ಎದೆ ಸುತ್ತ, ಸೊಂಟದ ಸುತ್ತ, ತೋಳಿನ ಸುತ್ತ ಹಿಡಿಯತ್ತ ನಿಧಾನವಾಗಿ ಅಳತೆ ತಗೋತ ಸ್ವರ್ಗ ಸುಖ ಅನುಭವಿಸುತ್ತಿದ್ದವನು… ಈಗ ದಿವಾಕರನ ಪೆನ್ಸಿಲ್ ತನ್ನ ಮುಖದನ್ನು ಹೇಗೆ ಅಳೆಯುತ್ತೋ ಎಂಬ ದಿಗಿಲಿನಲ್ಲಿ ಅಳತೆ ತಗೊಳ್ಳುವ ಕೆಲಸವನ್ನು ಬೇಗ ಬೇಗ ಮುಗಿಸಿ ಬೆವರೊರಿಸಿಕೊಳ್ತಿದ್ದ. ಚಾದಂಗಡಿಯ ಕಾಕಾ ತನ್ನಲ್ಲಿ ಕೆಲಸಕ್ಕಿದ್ದ ಇಬ್ಬರು ಹುಡುಗರಿಗೆ ಬೈಯುವುದನ್ನು ಸ್ವಲ್ಪ ಕಡಿಮೆ ಮಾಡಿಬಿಟ್ಟಿದ್ದ. ಹೀಗೆ ಅವರೆಲ್ಲ ತಾವು ಒಳ್ಳೆಯವರಂತೆ ಕಾಣಿಸಿಕೊಳ್ಳುತ್ತ ದಿವಾಕರನ ಪೆನ್ಸಿಲ್‌ನಲ್ಲಿ ಯಾವ ಕ್ಷಣಕ್ಕೆ ಹೇಗೆ ಮಾಡಿ ಬಿಡುತ್ತೇವೆಯೋ ಎಂಬ ಆತಂಕದಿಂದ ಆಗಾಗ ಅವನತ್ತ ಕಳ್ಳ ನೋಟ ಬೀರುವುದಿತ್ತು. ಜತೆಗೇ ಎಂದಾದರೂ ಒಂದು ದಿನ ಜಿಲ್ಲಿಯ ಚಿತ್ರ ತೆಗೆದಂತೆ ತಮ್ಮದನ್ನೂ ತೆಗೆದು ನೋಡಿ ಎಂಬಂತೆ ಹಿಡಿದು ಬಿಡುತ್ತಾನೇನೋ ಎಂಬ ಕಾತರದ ಎಳೆಯೂ ಅವರಲ್ಲಿ ಆಗೀಗ ಅಲುಗಾಡುತ್ತಿತ್ತು. ದಿವಾಕರನಿಗೆ ಅವರ ನಡವಳಿಕೆ ಬದಲಾದ ಸುಳಿವು ಹತ್ತಿದರೂ ಯಾಕೆ ಅಂತ ಮಾತ್ರ ಅರ್ಥವಾಗಿರಲಿಲ್ಲ.

ದಿವಾಕರ ತನ್ನದೇ ಕಿರಿಕಿರಿಯಲ್ಲಿದ್ದ. ಜಿಲ್ಲಿಗೆ ದುಡ್ಡು ಕೊಟ್ಟು ಮೂರು ನಾಲ್ಕುದಿನಗಳ ನಂತರ ಪಾತ್ರೆ ತಿಕ್ಕುತ್ತಿದ್ದ ಅವಳ ಕೈಯತ್ತ ಅಚಾನಕ್ ಗಮನ ಹೋಗಿ. ಎರಡು ಮೂರು ಹಳೆಯ ಬಳೆಗಳನ್ನಷ್ಟೇ ನೋಡಿ “ಅರೆ.. ಬಳೆ ತಗೊಂಡಿಲ್ಲೇನವ್ವಾ” ಅಂತ ಸಲಿಗೆಯಿಂದ ಕೇಳಿದ್ದ. “ಇಲ್ರೀ ಅಣ್ಣಾರೆ… ಮನಿಗಿ ಹೋಗೂದ್ರಾಗ ಮುದುಕಂಗ ಜ್ವರ ಜಾಸ್ತಿಯಾಗಿತ್ರೀ… ದವಾಖಾನಿಗಿ ಖರ್ಚ ಆದುವ್ರೀ” ಎಂದಿದ್ದಳು. ’ದುಡ್ಡನ್ನು ಬೇರೆಯದಕ್ಕೆ ಬಳಸಿಕೊಂಡ ಮಜುಗರದಿಂದ ಸಣ್ಣದಾಗಿ ಉತ್ತರಿಸಿದ್ದಳಾಕೆ. ದಿವಾಕರನಿಗೆ ಮತ್ತೆ ಎದೆಯಲ್ಲಿ ಗೀರಿದ ಬಳೆಯ ಚೂರು… ಒಳಹೋಗಿ ಇಪ್ಪತ್ತು ರೂಪಾಯಿ ತಂದು ಅವಳ ಕೈಗಿಡಲು ಹೋದರೆ ” ಐ.. ಬ್ಯಾಡ್ರೀ.. ಬ್ಯಾಡ್ರೀ” ಎನ್ನುತ್ತ ಜಿಲ್ಲಿ ಹೋಗಿಯೇ ಬಿಟ್ಟಿದ್ದಳು. ಮತ್ತೆ ಎರಡು ಮೂರು ದಿನ ಇವನೊಂದಿಗೆ ಹೆಚ್ಚು ಮಾತೇ ಆಡಿರಲಿಲ್ಲ. ಅವಳ ಅಭಿಮಾನಕ್ಕೆ ಭಂಗ ಬರುವ ಹಾಗೆ ತಾನು ನಡೆದುಕೊಂಡುಬಿಟ್ಟೆನೇನೋ… ಅವಳಿಗಾದ್ರೂ ಅದೆಂತಹ ಹಠ.. ಯಾಕೆ ದುಡ್ಡು ಬೇಡವೆನ್ನಬೇಕಿತ್ತು… ಇದೇ ಕೊರೆಯುತ್ತಿತ್ತು ಅವನೊಳಗೆ.

ಒಬ್ಬ ಬಿಕ್ಷುಕ ವಾರದಲ್ಲಿ ಒಂದೆರಡು ಬಾರಿಯಾದರೂ ಆ ರಸ್ತೆಯಲ್ಲಿ ಇವರ ಅಂಗಡಿಗಳ ಮುಂದೆ ಹಾಯುತ್ತಿದ್ದ. ಆ ದಿನ ರಾಜಾನ ಕೌಂಟರ್ ಮುಂದೆ ನಿಂತು ಕೈ ಮಾಡಿದ ಅವನಿಗೆ ಎಂದಿನಂತೆ ಎಂಟಾಣೆ ನಾಣ್ಯ ಕೊಡಬೇಕು ಎಂದು ರಾಜಾ ಗಲ್ಲೇ ಒಳಗೆ ಕೈ ಹಾಕುತ್ತಿದ್ದಂತೆ “ರೊಕ್ಕ ಬ್ಯಾಡ್ರಿಯಪ್ಪಾ ……. ಯಾಡ್ ಜ್ವರದ ಗುಳಿಗಿ ಇದ್ರ ಕೊಡ್ರಿ” ಎಂದು ದೀನನಾಗಿ ಬೇಡಿಕೊಂಡಿದ್ದ. ಅಲ್ಲಲ್ಲಿ ಹರಿದು ತೇಪಹಚ್ಚಿದ್ದ ಬಟ್ಟೆಯಲ್ಲಿದ್ದ ಆ ಅಜ್ಜ ನಖಶಿಖಾಂತ ಜ್ವರದ ತಾಪದಿಂದ ನಡುಗುತ್ತಿದ್ದ. “ಜ್ವರ ಜೋರ ಅದಾವೇನಜ್ಜ” ಅಂತ ರಾಜಾ ಕೇಳುವುದಕ್ಕೂ ಟೈಲರ್ ಕೃಷ್ಣಪ್ಪ ಅಲ್ಲಿಗೆ ಬಂದಿದ್ದ. “ಭಾಳ ನಡಗಾಕ ಹತ್ಯಾನಲ್ಲೋ. ಛಲೋ ಅರಿಬೀನೂ ತೊಟ್ಟಿಲ್ಲ” ಎಂದವನಿಗೆ ಏನನ್ನಿಸಿತೋ ಏನೋ… ತನ್ನ ಇಸ್ತ್ರಿ ಮಾಡುವ ಟೇಬಲ್ ಮೇಲೆ ಹಾಸಿದ್ದ ಎರಡು ಬೆಡ್‌ಶೀಟ್‌ಗಳಲ್ಲಿ ಒಂದು ತಂದು “ಇದ ಹೊಚ್ಕೋ ಯಜ್ಜಾ” ಎಂದು ಕೊಟ್ಟ. “ಈ ಗುಳಿಗಿ ಹಿಡಿ… ಕೂಡಿಲ್ಲೇ” ಎನ್ನುತ್ತ ಕೌಂಟರ್‌ನಿಂದ ಬಗ್ಗಿ ಈಚೆ ಬಂದ ರಾಜಾ “ನೀರ ತರ್‍ತೀನಿ ಕುಂದ್ರು” ಎಂದವನೇ ಕಾಕಾನ ಚಾದಂಗಡಿಗೆ ಹೋಗಿ ನೀರಿನೊಂದಿಗೆ ಚಾದ ಗ್ಲಾಸ್‌ನ್ನು ಹಿಡಿದು ಬಂದಿದ್ದ. ಚಾದಂಗಡಿಯ ಕಾಕಾ ಕೂಡ ಬಂದು ನಿಂತಿದ್ದ. ಅವರ್‍ಯಾರಿಗೂ ದಿವಾಕರನ ಪೆನ್ಸಿಲ್ ಆಗಲೀ ಗೆರೆಗಳಾಗಲೀ ಏನೂ ನೆನಪಿರಲಿಲ್ಲ. ಹತ್ತು ನಿಮಿಷ ಅಜ್ಜನ ಬಗ್ಗೆ, ಜ್ವರದ ಬಗ್ಗೆ, ಒಮ್ಮೆಲೆ ಥಂಡಿಗಾಳಿ ಬಿಟ್ಟು ಎಲ್ಲರ ಆರೋಗ್ಯ ಕೆಡುತ್ತಿರುವುದರ ಬಗ್ಗೆ ಮಾತನಾಡಿ, ಕಡೆಗೆ ಅಲ್ಲಿಂದೆದ್ದು ಹೊರಟ ಅಜ್ಜನಿಗೆ ರಾಜಾ ಇನ್ನೊಂದೆರಡು ಗುಳಿಗೆಯನ್ನೂ. ಚಾದಂಗಡಿಯ ಕಾಕಾ ಖರ್ಚಾಗದೇ ಉಳಿದಿದ್ದ ಬ್ರೆಡ್‌ನ ಪುಡಿಕೆಯನ್ನೂ ಕೈಗಿಟ್ಟು ಕಳಿಸಿಯಾಗಿತ್ತು. ನಂತರ ತಮ್ಮ ತಮ್ಮ ಅಂಗಡಿಯ ಒಳಹೊಕ್ಕ ಅವರು ಇದೀಗ ನಡೆದಿದ್ದನ್ನು ಮರೆತೇ ಬಿಟ್ಟಿದ್ದರು.

ಮೂರು ನಾಲ್ಕು ದಿನಗಳ ನಂತರ ರಾಜಾನಿಗೆ ದಿವಾಕರ ಕೊಟ್ಟ ಅಗಲ ಹಾಳೆಯನ್ನು ತೆರೆದು ನೋಡಿದರೆ ಅವರ್‍ಯಾರು ಊಹಿಸದ ರೀತಿಯಲ್ಲಿ ಅವನು ತೆಗೆದ ಚಿತ್ರವಿತ್ತು. ಅದೇ… ಕಟ್ಟೆಯ ಮೇಲೆ ಕುಳಿತ ಅಜ್ಜ, ಬಲಪಕ್ಕದಲ್ಲಿ ರಾಜಾನ ಮುಖ, ಈಚೆ ಟೈಲರ್ ಕೃಷ್ಣಪ್ಪ, ಚಾದಂಗಡಿಯ ಕಾಕಾ… ಬರೀ ಪೆನ್ಸಿಲ್‌ನ ತೆಳುವಾದ ರೇಖೆಗಳಿದ್ದ ಚಿತ್ರ ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ ರಾಜಾ ದಂಗು ಬಡಿದು ನಿಂತವ ಆಮೇಲೆ ಉಳಿದವರಿಗೂ ತೋರಿಸಿ, ಯಾರು ಇಟ್ಟುಕೊಳ್ಳಬೇಕೆಂಬ ಚರ್ಚೆಯಾಗಿ, ಕಡೆಗೆ ತಾವೆಲ್ಲ ಜೆರಾಕ್ಸ್ ಮಾಡಿಸಿಕೊಂಡು ಒರಿಜಿನಲ್ ದಿವಾಕರನ ಬಳಿಯೇ ಇರಲಿ ಎಂದು ತೀರ್ಮಾನಿಸಿಕೊಂಡರು. ಅವರಿಗೆ ತಾವು ಇರುವುದಕ್ಕಿಂತಲೂ ದಿವಾಕರನ ಚಿತ್ರದಲ್ಲಿ ಏನೋ ಬೇರೆ ಬಗೆಯಾಗಿ, ವಿಶಿಷ್ಠವಾಗಿ ಕಾಣ್ತಿದೇವೆ ಎಂಬ ಸಂಗತಿ ತುಸು ರೋಮಾಂಚನವನ್ನು ತುಸು ಅಚ್ಚರಿಯನ್ನು ಮಾಡಿಸಿತ್ತು. ಇವರೆಲ್ಲರಿಗಿಂತ ಚಿಕ್ಕವನಾದ ರಾಜಾನಿಗೆ ಎಲ್ಲರೊಡನೆ ಹುಡುಗತನದ ಸಲಿಗೆಯಿದ್ದದ್ದರಿಂದ, ಅದೇ ಸಲಿಗೆ ದಿವಾಕರನಲ್ಲೂ ತುಸು ಹೆಚ್ಚಿದ್ದರಿಂದ ಕೇಳಿಯೇ ಬಿಟ್ಟ. ದಿವಾಕರನಿಗೂ ಹಾಗನ್ನಿಸಿತ್ತು. ಇದಷ್ಟೇ ಅಲ್ಲ… ಪ್ರತಿಯೊಂದು ಚಹರೆಯೂ ಅವನ ಗೆರೆಗಳಲ್ಲಿ ಮೂಡಿದಾಗ ಅದರಷ್ಟಕ್ಕೆ ಅದೇ ಅಸಾಮಾನ್ಯವಾಗುದ್ದಂತೆ ಇರುತ್ತಿತ್ತು. ತನ್ನ ಕಣ್ಸೆರೆಗೆ ಸಿಕ್ಕ ಆ ಕ್ಷಣವೇ ಅಸಾಮಾನ್ಯವಾಗಿರುತ್ತಿತ್ತೋ… ಅಥವಾ ಆ ಯಾವುದೋ ಕ್ಷಣದಲ್ಲಿ ಅಸಾಮಾನ್ಯವಾದುದೇನೋ ತನ್ನ ಕಣ್ಸೆರೆಗೆ ಸಿಗುತ್ತಿತ್ತೋ ತಿಳಿಯದೇ ಗೊಂದಲಗೊಳ್ಳುತ್ತಿದ್ದ. ತನಗೆ ಅರ್ಥವಾಗದ್ದನ್ನು ರಾಜಾನಿಗೆ ಹೇಗೆ ವಿವರಿಸಲಿ ಅಂತ ತಿಳಿಯದೆ “ಆ ದಿನ ನೀವು ಆ ಅಜ್ಜಂಗೆ ಅಷ್ಟೆಲ್ಲ ಮಾಡಿದ್ರಲ್ಲ… ಅದೆಲ್ಲ ಯಾರನ್ನೋ ಮೆಚ್ಚಿಸಲಿಕ್ಕೆ ಮಾಡಿದ್ದಲ್ಲ… ಏನೋ ಉದ್ದೇಶ ಇಟ್ಟುಕೊಂಡು ಅಥವ ಯಾರೋ ಹೇಳಿ ಮಾಡಿದ್ದಲ್ಲ. ನೀವು ನೀವಾಗೆ ಮಾಡಿದ್ದು… ಅದ್ರಲ್ಲಿ ಬರೀ ಮಾನವೀಯತೆ ಮಾತ್ರ ಇತ್ತು. ಒಂದು ನಿರುದ್ದಿಶ್ಯ ಸಹಜ ನಡವಳಿಕೆಯಾಗಿತ್ತು ಅಲ್ಲವಾ” ಎಂದಷ್ಟೇ ಹೇಳಿದ. ಅವನೆಷ್ಟು ಗಂಭೀರವಾಗಿ ಹೇಳಿದ ಅಂದ್ರೆ ರಾಜಾನಿಗೆ ಅವನ ಗೆರೆಗಳಲ್ಲಿ ತಮ್ಮ ಚಹರೆ ಬೇರೆಯಾಗಿ ಕಂಡಂತೆ ಅವನ ಭಾಷೆ ಕೂಡ ಬೇರೆಯಾಗಿ ಕಂಡು ಸುಮ್ಮನಾದ. ಆದರೆ ತದ ನಂತರ ತಾವಿನ್ನು ಒಳ್ಳೆಯದರಂತೆ ಫೋಸು ಕೊಡಬೇಕಾದ ಅವಶ್ಯಕತೆ ಇಲ್ಲ ಎಂಬುದರ ಸುಳಿವು ಹತ್ತಿದಂತೆ ಅವರೆಲ್ಲ ಸಹಜವಾಗಿದ್ದರು. ಈ ಘಟನೆಯ ನಂತರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥೈಸಿಕೊಂಡ ಭಾವನೆ – ಅದೊಂದು ವ್ಯಾವಹಾರಿಕ ಸಂಬಂಧವೇ ಆಗಿದ್ರೂ – ಅವರನ್ನು ಆವರಿಸಿಕೊಂಡಿತ್ತು.
*
*
*
ದಿವಾಕರನ ಒಳಗೊಳಗಿನ ಚಡಪಡಿಕೆಗಳು ಮಾತ್ರ ಹೆಚ್ಚುತ್ತಲೇ ಇತ್ತು. ಹೆಚ್ಚೇನೂ ವ್ಯತ್ಯಾಸವಿಲ್ಲದೆ ಸಾಗುತ್ತಿರುವ ದಿನಚರಿ ಇದ್ದಕ್ಕಿದ್ದ ಹಾಗೆ ಅರ್ಥಹೀನವಾಗ್ತಿದೆ ಎಂಬ ಅನ್ನಿಸಿಕೆ. ಒಮ್ಮೊಮ್ಮೆ ಆಳದಿಂದ ಒದ್ದುಕೊಂಡು ಬರುವ ನಿರಾಸೆ, ಬೇಸರ, ಎಲ್ಲ ನೀರಸವಾದಂತೆ, ನಿಶ್ಯಬ್ಧ ಮೌನವೊಂದು ಬದುಕಲ್ಲಿ ತುಂಬಿಕೊಂಡಂತೆ… ಎಲ್ಲಕ್ಕಿಂತ ಹೆಚ್ಚು ನೀರವ ಕತ್ತಲಲ್ಲಿ ಕತ್ತಲೂ ಕೂಡ ಸ್ವರ್ಶಿಸದಂತೆ ಒಬ್ಬನೇ ನಿಂತುಬಿಟ್ಟಿರುವ ಭಾವನೆ ಆಗೀಗ ತೀವ್ರವಾಗಿ ಕಾಡುವುದಿತ್ತು. ಅದು ಆಳದ ಒಂಟಿತನದ ಭಯವೋ ಅಥವಾ ಅಭದ್ರತೆಯ ಭಯವೋ ಅವನಿಗೆ ಅರ್ಥವಾಗಿರಲಿಲ್ಲ.

ದಿವಾಕರ ವಾರದಲ್ಲಿ ಒಂದು ದಿನ ಬೆಳಿಗ್ಗೆ ಮಾತ್ರ ಅಂಗಡಿಗೆ ರಜೆ ಮಾಡುತ್ತಿದ್ದ. ಅಂಗಡಿಗೆ ಮನೆಗೆ ಬೇಕಾದ ಸಾಮಾನು ತಂದು ಕೊಳ್ಳುವುದು, ಅಂಗಡಿಯನ್ನು ಸ್ವಚ್ಛಗೊಳಿಸುವುದು, ಇಸ್ತ್ರಿಯಂಗಡಿಗೆ ಬಟ್ಟೆ ಕೊಡುವುದು ಇಂತಹ ಎಲ್ಲ ಕೆಲಸಗಳನ್ನು ಆ ದಿನ ಮುಗಿಸುತ್ತಿದ್ದ. ರಜೆಯ ದಿನ ಬುಧವಾರ ಬೇಗ ಎದ್ದವನೇ ಅಂಗಡಿಯ ಮುಂದೆ ಹಾದುಕೊಂಡು ಮುಲ್ಕ್ ನೈದಾನ ತೋಪಿನ ಪಕ್ಕದ ರಸ್ತೆಯಲ್ಲಿ ನಿಧಾನವಾಗಿ ನಡೆಯುತ್ತ ಉಪ್ಪಲಿ ಬುರುಜಿನ ಹತ್ತಿರ ಬರುತ್ತಿದ್ದ. ಮೂರು ನಾಲ್ಕು ಶತಮಾನಗಳಿಂದ ಏನೆಲ್ಲ ಇತಿಹಾಸವನ್ನು ತನ್ನೊಳಗೆ ಇಟ್ಟುಕೊಂಡು, ಏನೆಲ್ಲ ನೋಡಿಯೂ ಧೃತಿಗೆಡದೆ ತನ್ನ ನಿರ್ಲಿಪ್ತತೆ, ನಿಶ್ಚಲತೆಯಲ್ಲಿಯೇ ಏನೋ ಒಂದು ಚೈತನ್ಯವನ್ನಿಟ್ಟುಕೊಂಡಂತೆ ತೋರುವ ಉಪ್ಪಲಿಬುರುಜಿನ ದೊಡ್ಡ ದೊಡ್ಡ ಕಲ್ಲಿನ ಮೆಟ್ಟಿಲನ್ನು ಮೆಲ್ಲನೇರಿ ಹೋಗುತ್ತಿದ್ದ. ಚುಮುಚುಮು ಬೆಳಗಿನಲ್ಲಿ ಮೇಲೆ ಕುಳಿತಾಗ ಪ್ರತಿಬಾರಿ “ಅರೆ… ಮೆಟ್ಟಿಲೆಣಿಸುವುದೇ ಮರೆತೆನಲ್ಲ… ಮುಂದಿನ ವಾರ ಬಂದಾಗ ಖಂಡಿತಾ ಎಣಿಸಬೇಕು” ಎಂದು ಚಿಕ್ಕ ಹುಡುಗನ ಮುಗ್ಧತೆಯಲ್ಲಿ ಹೇಳಿಕೊಳ್ಳುತ್ತಿದ್ದ. ಬುರುಜಿನ ಕೆಳಗೆ ಚಕ್ಕ ಕಂದರ… ಕಂದರದಾಚೆ ಸ್ಲಂ ಎಂದು ಕರೆಯಬಹುದಾದ ಚಿಕ್ಕ ಚಿಕ್ಕ ಗುಡಿಸಲುಗಳು ಗುಂಪು…ಜಿಲ್ಲಿಯ ಮನೆಯೂ ಅಲ್ಲಿಯೇ ಅಲ್ಲೋ ಇತ್ತು. ಜೆಲ್ಲಿ ಹೇಳುತ್ತಿದ್ದ ಕತೆ ಯಾವುದಾದ್ರೂ ನೆನಪಾಗಿ ಕೆಳಗೆ ಕಾಣಿಸುವ ಮನೆಗಳಲ್ಲಿ ಯಾವುದೋ ಹಸುಳೆಗೆ ಆಶ್ರಯ ಕೊಟ್ಟ ಮನೆ, ಯಾವುದೋ ಬಸುರಿಯನ್ನು ದವಾಖಾನೆಗೆ ಸೇರಿಸಿದವರ ಮನೆ, ಹೆತ್ತವರಿಂದ ತಪ್ಪಿಸಿಕೊಂಡು ಅಳುತ್ತಿದ್ದ ಯಾವುದೋ ಹುಡುಗನ ಕಂಬನಿ ಒರೆಸಿದವರ ಮನೆ ಯಾವುದಿರಬಹುದು ಎಂದು ಹುಡುಕುತ್ತ ಕುಳಿತುಕೊಳ್ಳುತ್ತಿದ್ದ. ಆಗಲೋ ಈಗಲೋ ಬೀಳುವಂತಿದ್ದ ಗೋಡೆಗಳ, ಜೋರಾಗಿ ಗಾಳಿ ಬೀಸಿದರೆ ಮೇಲಿನ ಪತ್ರಾಸು ಹಾರಿಕೊಂಡು ಹೋಗುವಂತಿದ್ದ ಹಳೇ ಬೆಂಕಿಪೊಟ್ಟಣದಂತಹ ಆ ಮನೆಗಳಲ್ಲಿ ಸದಾ ತುಡಿಯುವ ಹೃದಯವಿದ್ದ ಹಾಗೆ, ಅದಮ್ಯ ಚೈತನ್ಯದ ಅಲೆಯಿದ್ದ ಹಾಗೆ ಅವನಿಗೆ ಅನ್ನಿಸುತ್ತಿತ್ತು.

ದಿವಾಕರನಿಗೆ ಜಿಲ್ಲಿ ಹೇಳಿದ ಎಲ್ಲ ಸುದ್ದಿಗಳಲ್ಲಿ ತೀವ್ರವಾಗಿ ತಟ್ಟಿದ್ದು ಆರೇಳು ತಿಂಗಳ ಹಿಂದೆ ಅಚಾನಕ್ ಜಿಲ್ಲಿಯ ಕೈಗೆ ಸಿಕ್ಕುಬಿದ್ದ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಹೆಂಗಸಿನದು. ಜಿಲ್ಲಿ ಆಗೀಗ ಸಂಜೆಗಳಲ್ಲಿ ಜಾಲಿಕಟ್ಟಿಗೆಯನ್ನು, ಪುರುಳೆಗಳನ್ನು ಆಯ್ದುಕೊಂಡು ಬರಲು ಊರ ಹೊರಗಿನ ತೊರವಿಯಾಚೆಗಿನ ಖಿಲ್ಲೆಯ ಕಡೆ ಹೋಗುವುದಿತ್ತು. ಅಲ್ಲೊಂದು ಆದಿಲ್‌ಶಾಹಿ ಕಾಲದ್ದೆಂದು ಹೇಳಲಾಗುವ ಹಳೆಯ ಬಾವಿಯೂ ಇತ್ತು. ಆ ದಿನ ಜಿಲ್ಲಿ ಕಟ್ಟಿಗೆ ಹೊತ್ತುಕೊಂಡು ಬಾವಿ ಈಚೆಯಿಂದ ಹಾದುಕೊಂಡು ಬರುವಾಗ ನಸುಗತ್ತಲಲ್ಲಿ ಬಾವಿ ಹತ್ತಿರ ಹೆಂಗಸೊಬ್ಬಳು ಬಗ್ಗಿ ನಿಂತಂತೆ ಅನ್ನಿಸಿದ್ದೆ ಸದ್ದಿಲ್ಲದೆ ಕಟ್ಟಿಗೆ ಹೊರೆ ಇಳಿಸಿ ಹಿಂದಿನಿಂದ ಹೋಗಿ ಆ ಹೆಂಗಸನ್ನು ಹಿಡಿದು “ಬಿಡು.. ಬಿಡು” ಎಂದು ಕೊಸರಿಕೊಳ್ಳುತ್ತಿದ್ದವಳನ್ನು ಬಾವಿಯ ಅಂಚಿನಿಂದ ಎಳೆದು ತಂದವಳೇ ಕೆನ್ನೆಗೊಂದು ರಪ್ ಎಂದು ಬಾರಿಸಿದ್ದಳು. ಬಿಕ್ಕಿ ಬಿಕ್ಕಿ ಅಳ ತೊಡಗಿದವಳನ್ನು ತಬ್ಬಿಕೊಂಡು “ಯಾಕವ್ವಾ… ಜೀಂವಾ ಒಜ್ಜೆಯಾಗೂ ಹಂಗ ನಿಂಗೇನಾತವ್ವಾ” ಅಂತ ಸಂತೈಸುತ್ತ ತಾನೂ ಗಳಗಳನೆ ಅತ್ತಿದ್ದಳು. ಏನೂ ಹೇಳದೆ ಬಾಯಿ ಹೊಲೆದುಕೊಂಡಂತಿದ್ದವಳನ್ನು ಯಾರು, ಎತ್ತ ಏನೂ ವಿಚಾರಿಸದೆ ತನ್ನ ಮನೆಗೆ ಕರೆ ತಂದುಬಿಟ್ಟಿದ್ದಳು.

ದಿವಾಕರನಿಗೆ ಇದನ್ನು ಹೇಳಿದಾಗ “ನಿಂದೇ ನಿಂಗೆ ನೆಲಿಯಿಲ್ಲ. ಬೇರೆಯವ್ರ ಉಸಾಬರಿ ನಿಂಗ್ಯಾಕೆ ಬೇಕಿತ್ತು. ನಿನ್ನ ಮಕ್ಳಿಗೇ ಅರೆ ಹೊಟ್ಟೆ ಮಾಡ್ತೀಯ.. ಇನ್ನು ಅವಳಿಗೆಲ್ಲಿಂದ ತಂದು ಹಾಕ್ತೀಯ” ಅಂತ ಬ್ಯೆಯ್ದಿದ್ದ. “ಆಕಿಗೂ ಎಲ್ಲಾರ ನಾಕ ಛಲೋ ಮನಿ ಕೆಲಸ ಹಚ್ಚಿಕೊಡ್ತೀನಿ ಬಿಡ್ರೀ. ನೀವೆಲ್ಲ ಇರೂ ತನಾ ನನಗ ಮತ್ತ ಯಾವ ನೆಲಿ ಬೇಕ್ರೀ” ಅದು ಯಾವುದೂ ಸಮಸ್ಯೆಯೇ ಅಲ್ಲವೆಂಬಂತೆ ಜಿಲ್ಲಿಯ ಸರಳ ಉತ್ತರ ಸಿದ್ದವಾಗಿತ್ತು. ಮತ್ತೊಂದು ಹದಿನೈದು ದಿನದ ನಂತರ ಆ ಹೆಂಗಸು ಎರಡು ತಿಂಗಳ ಬಸುರಿ ಅಂತ ಗೊತ್ತಾದ ಮೇಲೆಯೂ ಜಿಲ್ಲಿ ಅವಳ ಪೂರ್ವಾಪರ ಏನೂ ವಿಚಾರಿಸದೇ “ಮದುವೆಯಾಗ್ತೀನಿ ಅಂತ್ಹೇಳಿ ಕೈಕೊಟ್ಟು ಹೋಗಿರಬೇಕು” ಎಂದುಕೊಂಡು ಸುಮ್ಮನಾಗಿಬಿಟ್ಟಿದ್ದಳು. ದಿವಾಕರನ ಮುಂದೆ ಮಾತ್ರ ಒಂದೆರಡು ಸಲ “ಯಾವನೋ ಬಾಂಚೋದ್… ಕೈಕೊಟ್ಟು ಓಡಿ ಹೋಗ್ಯಾನ. ಸುಖ ಪಡಿಯೂ ಮುಂದ ಖಬರಿರಲಿಲ್ಲೇನ ಕೈಲಾಗದ ಹೇಡಿ” ಅಂತ ಬೈದಿದ್ದಳು. ಜಿಲ್ಲಿ ಯಾರಿಗಾದರೂ ಕೆಟ್ಟದಾಗಿ ಬೈಯ್ದಿದ್ದನ್ನು ಅವತ್ತಿನವರಿಗೆ ನೋಡಿರದ ದಿವಾಕರ ಬಹುಶಃ ಜಿಲ್ಲಿಗೆ ಸಿಟ್ಟು ಬಂದಿದೆ ಎಂದುಕೊಂಡಿದ್ದ. ಜಿಲ್ಲಿ ಆಗೀಗ ಅವಳ ಕುರಿತು ಹೇಳುವುದಿತ್ತು. ಅವು ಬರಿಯ ಸುದ್ದಿಯಾಗಿರದೆ, ಜೀವಂತ ವಿವರಗಳಿಂದ ಕೂಡಿದಂತೆ ಅನ್ನಿಸಿದ್ದಕ್ಕೊ ಏನೋ ದಿವಾಕರನ ಮನಸ್ಸಿನಲ್ಲಿ ಒಂದು ಪುಟ್ಟ ಅನಾಥ ಬಸುರಿಯ ಚಿತ್ರ ಮೂಡಿಬಿಟ್ಟಿತ್ತು. ಈ ಊರು ಹೀಗೆ ಎಷ್ಟು ಅನಾಥರಿಗೆ ನೆಲೆ ನೀಡಿದೆಯೋ ಎಂದುಕೊಳ್ಳುವಾಗ ತಟ್ಟನೆ ಮನದಲ್ಲಿ ಬಸ್‌ಸ್ಟ್ಯಾಂಡಿನಲ್ಲಿ ನಾಲ್ಕುದಿನ ಅರೆಹೊಟ್ಟೆ ಕುಳಿತ ಹದಿನೆಂಟರ ಹುಡುಗನ ಚಿತ್ರ ಮೂಡುತ್ತಿತ್ತು.

ಆ ಬಸುರಿ ಯಾಕೆ ಓಡಿ ಬಂದಿರಬಹುದು ಎಂದು ಕಾರಣಗಳ, ಆ ಪರಿಸ್ಥಿತಿಯ ಊಹೆಯ ಬೆನ್ನಟ್ಟಿ ಹೋದವನು ಬಂದು ನಿಲ್ಲುತ್ತಿದ್ದುದು ಮಾತ್ರ ಹದಿನೆಂಟರ ಹುಡುಗ ಮನೆಬಿಟ್ಟು ಓಡಿಹೋದ ಪ್ರಸಂಗಕ್ಕೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಿಂಗಳಿರುವಾಗ ಅಮ್ಮ.. ಅವನ ಪ್ರೀತಿಯ ಅಮ್ಮ ಒಂದು ಬೆಳಿಗ್ಗೆ ಇವನು ಕರೆದಾಗ ಓಗುಡದೇ ಮೌನದಲ್ಲಿ ಮೌನವಾಗಿ, ಅನಂತ ಶೂನ್ಯದಲ್ಲೊಂದು ನಿಶ್ಯಬ್ಧದ ಹನಿಯಾಗಿ ಕರಗಿ ಹೋಗಿದ್ದಳು. ವರ್ಷವಾಗುವಷ್ಟರಲ್ಲಿ ಅಪ್ಪ ಮತ್ತೆ ಮದುವೆಯಾಗಿದ್ದ. ಅಪ್ಪನ ಮುಂದೆ, ಅಪ್ಪನಿಗೆ ಮದುವೆ ಮಾಡಿಸಿದರವರ ಮುಂದೆ ಮಕ್ಕಳನ್ನು ನೋಡಿಕೊಳ್ಳಲಿಕ್ಕೆ ಮನೆ ಸಂಭಾಳಿಸಲಿಕ್ಕೆ ಹೆಣ್ಣೊಂದು ಬೇಕೆಂಬ ನೆವವಿತ್ತು. ಚಿಕ್ಕಮ್ಮನನ್ನು ಧಾರೆಯೆರೆದು ಕೊಡಲಿಕ್ಕೆ ಅವಳ ಬಡ ಅಪ್ಪನಿಗೆ ಕನ್ಯಾಸೆರೆ ಬಿಡಿಸಿಕೊಳ್ಳುವ ನೆವವಿತ್ತು. “ಇನ್ನು ಮದುವೆಯಾಗಿಲ್ಲ, ಪಾಪ” ಎಂಬ ವಾಕ್ಯವನ್ನು ನಾಲ್ಕಾರು ವರ್ಷಗಳಿಂದ ಕೇಳಿಕೇಳಿ ಒಣಗಿದ್ದ ಆ ಇಪ್ಪತ್ತಾರ ಹುಡುಗಿಗೆ ಇಷ್ಟು ದೊಡ್ಡ ಮಕ್ಕಳಿಗೆ ತಾಯಿಯಾಗುವ ಮಜಬೂರಿ ಇತ್ತು. ಆದರೆ ಅಮ್ಮನನ್ನು ಅತಿಯಾಗಿ ಹಚ್ಚಿಕೊಂಡಿದ್ದ ದಿವಾಕರ ಮಾತ್ರ ಯಾವುದನ್ನೂ ಒಪ್ಪಿಕೊಳ್ಳಲಾಗದೆ, ಅಡಿಗೆಮನೆಯಲ್ಲಿ ಅಮ್ಮನ ಹೊರತಾಗಿ ಬೇರೆ ಹೆಂಗಸನ್ನೇ ಕಲ್ಪಿಸಿಕೊಳ್ಳಲಾರದಂತಹ ಮನಸ್ಥಿತಿಯಲ್ಲಿದ್ದ. ನಲವತ್ತು ದಾಟಿದ್ದ ಅಪ್ಪ ಹರೆಯದವನಂತೆ ವರ್ತಿಸುವುದನ್ನು ನೋಡಿದಾಗೆಲ್ಲ ಮೈಯುರಿಯುತ್ತಿತ್ತು.

ನಾಲ್ಕು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಂಡಯಾತ್ರೆ ಮಾಡಿ “ತಲೇಲಿ ಮಣ್ಣು ತುಂಬಿದೆ ನಿಂಗೆ” ಎಂಬ ಮೂದಲಿಕೆ ಕೇಳಿ ಕೇಳಿ ತೋಟದ ದಾರಿ ಹಿಡಿದಿದ್ದವನಿಗೆ ಬಾಂಬೆಯಲ್ಲಿ ಛಲೋ ಬಿಸಿನೆಸ್ ಮಾಡ್ಕೊಂಡಿದೀನಿ ಎಂದು ಬಂದಾಗೆಲ್ಲ ಕೊಚ್ಚಿಕೊಳ್ಳುವ ಸುಬ್ಬಣ್ಣ ದಿವಾಕರನ ಕಣ್ಣಂಚಿನಲ್ಲಿ ಮಾಯಾಮೃಗದ ಛಾಯೆಯನ್ನು ಮಿಂಚಿಸಿಬಿಟ್ಟಿದ್ದ. ಅವನ ಮಾತು ಕೇಳಿ ಮನೆಯಿಂದ ಮೂರು ಸಾವಿರ ಕದ್ದು ಓಡಿಬಂದಿದ್ದ. ಆಗ ಮೂರು ಸಾವಿರವೆಂದರೆ ಕಡಿಮೆಯೇನಲ್ಲ. “ನಾನು ಇವತ್ತು ಹೋಗಿರ್‍ತೆ. ಹುಬ್ಬಳಿಯಲ್ಲಿ ಚೂರು ಕೆಲಸ ಇದೆ. ನಾಡಿದ್ದು ಸಂಜೆಗೆ ನಾಲ್ಕಕ್ಕೆ ಬಿಡುತ್ತಲ್ಲ… ಆ ಬಸ್ಸಿಗೆ ಬಾ ತಿಳೀತಾ. ಯಾರಿಗೂ ಸುಳಿವು ಕೊಡಬೇಡ. ಇನ್ನೆರೆಡೇ ವರ್ಷ ನೋಡು… ಆಮೇಲೆ ನೀ ಹ್ಯಾಗೆ ತಯಾರಾಗ್ತೆ ಅಂತ. ನಿನ್ನ ಅಪ್ಪಂಗೆ ಸಡ್ಡು ಹೊಡೆದು ನಿಲ್ಲಬಹುದು” ದಿವಾಕರನ ಒಳಗೊಳಗಿನ ಬೆಂಕಿಗೆ ತುಪ್ಪಹಾಕಿದ್ದ.

ಎರಡುದಿನ ಬಿಟ್ಟು ಸುಬ್ಬಣ್ಣನ ಮಾತು ನಂಬಿ ಅವ ಹೇಳಿದಂತೆ ಸಂಜೆ ಹುಬ್ಬಳ್ಳಿಯ ಬಸ್‌ಸ್ಯಾಂಡ್‌ನಲ್ಲಿ ನಿಂತಾಗಿತ್ತು. ಹಾಗೆ ನಿಂತಾಗಲೂ ಇಬ್ಬರು ತಮ್ಮಂದಿರ, ತಂಗಿಯ ನೆನಪಾಗಿದ್ದೇ ವಾಪಾಸು ಮನೆಗೆ ಹೋಗಿಬಿಡಲೇ ಎಂಬ ಸೆಳೆತವು ಇತ್ತು. ಸುಬ್ಬಣ್ಣ ಹತ್ತುನಿಮಿಷ ತಡವಾಗಿ ಸಿಕ್ಕದ್ದರೆ ಹೋಗಿ ಶಿರಸಿಯ ಬಸ್ಸು ಹತ್ತಿ ಕುಳಿತಿರುತ್ತಿದ್ದನೋ ಏನೋ…ಆದರೆ ಸುಬ್ಬಣ್ಣ ಹಿಡಿದೇ ಬಿಟ್ಟಿದ್ದ. ಇವನಿಗೇ ತಿಳಿಯದ ದೌರ್ಬಲ್ಯದ ಎಳೆಯೊಂದನ್ನು ತನ್ನ ಚಾಲಾಕುತನಕ್ಕೆ ಗಂಟು ಹಾಕಿಕೊಂಡು ಬಿಟ್ಟಿದ್ದ ಅವನು. ರಾತ್ರಿ ಬಾಂಬೆ ಬಸ್ ಅಂತ ಹತ್ತಿಸಿ, ಇವನಿಗೆ ನಿದ್ದೆ ಹತ್ತಿದಾಗ ನಡುವೆ ಎಲ್ಲೋ ಇಳಿದೇ ಹೋಗಿದ್ದ. ಬೆಳೆಗ್ಗೆ ಇವನು ಕಣ್ಣು ಬಿಟ್ಟಾಗ ಪಕ್ಕದಲ್ಲಿ ಸುಬ್ಬಣ್ಣ ಇರಲಿಲ್ಲ… ಅದು ಬಾಂಬೆ ಬಸ್ಸಾಗಿರಲಿಲ್ಲ. ಇವನಿಳಿದಿದ್ದು ಬಿಜಾಪುರದಲ್ಲಾಗಿತ್ತು. ಮೂರುಸಾವಿರದ ಕಳ್ಳಗಂಟನ್ನು ಜೋಪಾನವಾಗಿ ಇಟ್ಟುಗೊಳ್ತೆ ತಾ ಎಂದು ಜೋಪಾನವಾಗಿ ಇಟ್ಟುಕೊಂಡವನು ಹೊರಟೇ ಹೋಗಿದ್ದ.

ದಿವಾಕರನಿಗೆ ತಾನಿದ್ದ ಪರಿಸ್ಥಿತಿಯ ಅರಿವಾಗಲು ಸುಮಾರು ಹೊತ್ತು ಹಿಡಿದಿತ್ತು. ಇದ್ದ ಪುಡಿಗಾಸಿನಲ್ಲಿ ನಾಲ್ಕು ದಿನ ಅರೆಹೊಟ್ಟೆ ತಿಂದು; ಅಲ್ಲಯೇ ಮಲಗಿ… ನರಕ ಯಾತನೆಯ ಹಿಂಸೆ ಅನುಭವಿಸಿದವನು ಏನಾದ್ರೂ ದಾರಿ ಹುಡುಕಲೇ ಬೇಕು ಎಂದು ಹಲ್ಲು ಕಚ್ಚಿ ಎದ್ದವನು ಎರಡು ದಿನ ಅಲೆದು ಕಡೆಗೆ ಉಡುಪಿ ಹೋಟಲೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಪ್ಲೇಟೆತ್ತುವ, ತೊಳೆಯುವ ಕೆಲಸದಿಂದ ಹಿಡಿದು ಸಪ್ಲ್ಯೆಯರ್ ಹಂತಕ್ಕೆ ಏರುವವರೆಗೆ ದಿವಾಕರನ ಕಣ್ಣು ಹೊರಗಿನ ಪಾನ್‌ಶಾಪ್ ಮೇಲೆ ನೆಟ್ಟಿರುತ್ತಿತ್ತು. ವಿಚಿತ್ರ ಆಕರ್ಷಣೆ… ಕಣ್ಣಂಚಿನ ಆಗಿನ ಗುರಿ… ಸ್ವಲ್ಪ ಸ್ವಲ್ಪ ದುಡ್ಡು ಉಳಿಸಿ ಆರೇಳು ವರ್ಷದ ನಂತರ ತಾನೇ ಒಂದು ಪಾನ್ ಶಾಪ್‌ನಿಟ್ಟಿದ್ದ . ಏನೆಲ್ಲ ತಲ್ಲಣ, ತಳಮಳವನ್ನು ಒಂಟಿಯಾಗಿ ಎದುರಿಸಿ, ಯಾರೂ ಹತ್ತಿರಕ್ಕೆ ಹಾಯದಂತೆ ಸುತ್ತ ಗೂಡು ಕಟ್ಟಿಕೊಂಡು ಈಗ ಗೂಡೊಳಗಿನ ಒಂಟಿ ಹಕ್ಕಿಯಂತಾಗಿಬಿಟ್ಟಿದ್ದ.

ಉಪ್ಪಲಿ ಬುರುಜಿನ ಮೇಲೆ ಹತ್ತಿ ಕುಳಿತ ಬೆಳಗುಗಳಲ್ಲಿ ಆಗೀಗ ಇದೆಲ್ಲ ನೆನಪಾಗುವುದಿತ್ತು. ತಾನು ಹಾಗೆ ಓಡಿಬರಲು ಕಾರಣವಾದರೂ ಏನಿತ್ತು ಎಂದು ಹುಡುಕ ಹೊರಟವನಿಗೆ ಯಾವುದೂ ಅಷ್ಟು ದೊಡ್ಡದಲ್ಲ, ಮಹತ್ವದಲ್ಲ ಎನ್ನಿಸಿಬಿಡುತ್ತಿತ್ತು. ಯಾವ ಕಾರಣವಾಗಿದ್ದರೆ ಈಗಲೂ ಸಮರ್ಥನೀಯವೆನ್ನಿಸುತ್ತಿತ್ತು ಹಾಗಿದ್ರೆ ಎಂದು ಗೊಂದಲಗೊಳ್ಳುತ್ತಿದ್ದ. ಹೀಗೆಲ್ಲ ಯೋಚಿಸುತ್ತ ಕುಳಿತಾಗ ಕೆಲವು ಬಾರಿ ಹೊತ್ತೇರಿ, ಅಲ್ಲಿಂದ ಕಾಣುವ ಮುಲ್ಕ್ ಮೈದಾನದಲ್ಲಿರುವ ಎರಡು ನುಣ್ಣನೆಯ ಕರೀ ತೋಪುಗಳ ಮೇಲೆ ಬಿಸಿಲು ಬಿದ್ದು ಅದು ಫಳ ಫಳನೆ ಹೊಳೆಯುವಾಗ ದಿವಾಕರ ಥಟ್ಟನೆ ಅಲ್ಲಂದೆದ್ದು ಕೆಳಗಿಳಿದು ಬರುತ್ತಿದ್ದ.

ಅಂಗಡಿಗೆ ರಜೆಯಿದ್ದ ಒಂದು ದಿನ ಜಿಲ್ಲಿಯ ಬದಲು ಅವಳ ಚಿಕ್ಕ ಮಗಳು ಬಂದಿದ್ದಳು. ಊರಲ್ಲಿ ಯಾರೋ ತೀರಿಕೊಂಡಿದ್ದಾರೆಂದು ಓಣಿಯ ಏಳೆಂಟು ಹೆಣ್ಣು ಮಕ್ಕಳೊಡನೆ ತನ್ನವ್ವನೂ ಹೋಗಿದ್ದಾಳೆಂದೂ. ಎರಡು ದಿನ ಬಿಟ್ಟು ಬರುತ್ತಾಳೆಂದೂ ತಿಳಿಸಿ ಪಾತ್ರೆ ತಿಕ್ಕಿಟ್ಟು ಹೋದಳು. ಅದೇ ದಿನ ಸಂಜೆ ಆರರ ಸುಮಾರಿಗೆ ದಿವಾಕರ ಅಂಗಡಿಯಲ್ಲಿದ್ದಾಗಲೇ ಆ ಹುಡುಗಿ ಮತ್ತೆ ಬಂದಳು. ಆ ಬಸುರಿ ಹೆಂಗಸಿಗೆ ಹುಷಾರಿಲ್ಲವೆಂದೂ, ಸರಕಾರಿ ದವಾಖಾನೆಗೆ ಹೋಗಿದ್ದಾಳೆಂದೂ, ಸ್ವಲ್ಪ ದುಡ್ಡು ಬೇಕಾಗಿದೆಯೆಂದೂ ಕೇಳತೊಡಗಿದಳು. ಹುಡುಗಿ ಗಾಭರಿಯಲ್ಲಿದ್ದಂತಿತ್ತು. ಒಂದಿಬ್ಬರು ಗಿರಾಕಿಗಳಿದ್ದದ್ದರಿಂದ ದಿವಾಕರನೂ ಹೆಚ್ಚೇನೂ ವಿಚಾರಿಸದೇ ಇನ್ನೂರು ರೂಪಾಯಿ ಕೊಟ್ಟು ಕಳಿಸಿದ. ಗಿರಾಕಿಗಳು ಕಡಿಮೆಯಾಗಿ ಒಬ್ಬನೇ ಉಳಿದ ನಂತರವೇ ದಿವಾಕರನಿಗೆ ಯೋಚನೆಗಿಟ್ಟುಕೊಂಡಿದ್ದು. ಹುಷಾರಿಲ್ಲ ಎಂದರೇನರ್ಥ.. ಅವಳಿಗೆ ಎರಡು ತಿಂಗಳಾಗಿದೆ ಅಂತ ಜಿಲ್ಲಿ ಹೇಳಿದ್ದು ಆರೇಳು ತಿಂಗಳ ಹಿಂದೆ… ಅಂದರೆ ಈಗ ಹೆಚ್ಚು ಕಡಿಮೆ ಒಂಬತ್ತು ತಿಂಗಳೇ… ದಿವಾಕರನ ಕಣ್ಣಲ್ಲಿ ಮತ್ತೆ ತೂಗಿದ ಪುಟ್ಟ ಬಸುರಿಯ ಚಿತ್ರ. ಧಡಕ್ಕೆನೆದ್ದು ಪ್ಯಾಂಟು ಜೋಬಿನಲ್ಲಷ್ಟು ದುಡ್ಡು ಇಟ್ಟುಕೊಂಡು ಸಿಟಿಬಸ್‌ಗೆ ಕಾಯುವ ವ್ಯವಧಾನವೂ ಇಲ್ಲದೆ ಆಟೋ ಹಿಡಿದು ಸರಕಾರಿ ದವಾಖಾನೆಗೆ ಬಂದು ಡೆಲಿವರಿ ವಾರ್ಡ್ ಎಲ್ಲಿ ಅಂತ ಕೇಳಿ ಅತ್ತ ಧಾವಿಸಿದವನಿಗೆ ಜಿಲ್ಲಿಯ ಮಗಳು ಕಾಣಿಸಿದಳು. ಅವಳ ಜೊತೆ ಜನರಲ್ ವಾರ್ಡಿನತ್ತ ಹೊರಟ ದಿವಾಕರನಿಗೆ ಸುತ್ತ ನೋಡಿಯೇ ಬೆವರು ಕಿತ್ತು ಬರಲಾರಂಭಿಸಿತ್ತು. ಬರೀ ಬಸುರಿಯರು, ಬಾಣಂತಿಯರು… ಕೆಲವರ ಪಕ್ಕದಲ್ಲಿ ಮಗು.. ಒಂದಿಬ್ಬರ ಪಕ್ಕದಲ್ಲಿ ಖಾಲಿ ತೊಟ್ಟಿಲು… ಆಪರೇಶನ್ ಮಾಡಿಸಿಕೊಂಡ ಹೆಂಗಸರು…ನೋವು ತಿನ್ನುತ್ತ ಚೀರುತ್ತಿದ್ದ ಬಸುರಿಯರು. ದಿವಾಕರನ ಎದೆಯಲ್ಲಿ ಒಂದೇ ಸದ್ದು ಚಳಚಳಕ್… ಸಂಕದಿಂದ ಕಾಲು ಜಾರಿದ ಸದ್ದು… ನಂತರ ಫಳ್ ಫಳಾರ್… ಬಳೆ ಚೂರಾದ ಸದ್ದು.

ಜಿಲ್ಲಿಯ ಮಗಳು ಇವನ ಕೈಹಿಡಿದು ಆ ಹೆಂಗಸಿನ ಪಕ್ಕ ನಿಲ್ಲಿಸಿದಳು. ನೋವಿನಿಂದ ಮುಲುಗುಟ್ಟುತ್ತಿದ್ದ ಹಿಂಡಿದಂತಿದ್ದ ಮುಖ ದಿವಾಕರ ಕಲ್ಪಿಸಿಕೊಂಡಿದ್ದಕ್ಕಿಂತ ಬೇರೆಯಾಗಿಯೇನೂ ಇರಲಿಲ್ಲ. ದಿವಾಕರ ಒಂದು ರೀತಿ ದಿಗ್ಭ್ರಮೆಗೆ ಒಳಗಾದಂತೆ ನಿಂತಿದ್ದ. ಎಲ್ಲ ಮಂಚದ ಹತ್ತಿರ ಬಸುರಿಯರ, ಬಾಣಂತಿಯರ, ಅಮ್ಮಂದಿರು, ಅಕ್ಕಂದಿರು, ಅಣ್ಣಂದಿರು, ಗಂಡಂದಿರು, ಅಪ್ಪಂದಿರು… ಹೀಗೆ ಒಬ್ಬರಲ್ಲ ಒಬ್ಬರಿದ್ದರು. ಈ ಅನಾಥ ಪುಟ್ಟ ಬಸುರಿಯ ಪಕ್ಕದಲ್ಲಿ ಇಷ್ಟೂ ಹೊತ್ತು ಜಿಲ್ಲಿಯ ಮಗಳು ಮಾತ್ರವಿದ್ದಳು. ಅಲ್ಲಿಯ ಚೀರಾಟ, ನರಳಾಟ, ಕೂಸುಗಳು ಅಳುವುದು ನೋಡಿ ಜಿಲ್ಲಿಯ ಮಗಳು ಗಾಭರಿಯಾದಂತಿತ್ತು. “ನಾ ಮನಿಗಿ ಹೋಕ್ಕೀನಿ” ಎಂದವಳೇ ಕೈ ಕೊಸರಿಕೊಂಡು ಬಾಗಿಲವರೆಗೆ ಹೋದವಳು ಮತ್ತೆ ಕೈಯಲ್ಲಿದ್ದ ಹಣ ನೆನಪಾಗಿ ಓಡುನಡಿಗೆಯಲ್ಲಿ ವಾಪಾಸು ಬಂದವಳೇ ದಿವಾಕರ ಕೊಟ್ಟ ಇನ್ನೂರು ರೂಪಾಯಿಯನ್ನು ಅವನ ಕೈಯಲ್ಲಿಟ್ಟಳು. ಜೊತೆಗೆ ಇನ್ನೊಂದು ಕೈಯಲ್ಲಿ ಮಡಚಿ ಹಿಡಿದಿದ್ದ ಬೆವರಿನಿಂದ ಹಸಿಯಾಗಿದ್ದ ಹತ್ತು ರೂಪಾಯಿಯ ನಾಲ್ಕಾರು ಹಳೆಯ ನೋಟುಗಳನ್ನು ಕೊಟ್ಟು “ನಮ್ಮವ್ವ ಕೊಟ್ಟಿದ್ಲು” ಎಂದವಳೇ ದಿವಾಕರ “ಬೇಡ, ನೀನಿಟ್ಟುಕೋ” ಎಂದು ಹೇಳಲೂ ಹೊಳೆಯದೇ ನಿಂತಿರುವಾಗ ಹೊರಟೇ ಹೋಗಿದ್ದಳು. ಕತ್ತಲಾಗಿದೆ, ಹ್ಯಾಗೆ ಹೋಗ್ತಾಳೋ ಎಂದು ಅವಳು ಅಲ್ಲಿಂದ ಹೋದ ಐದು ನಿಮಿಷದ ಮೇಲೆಯೇ ದಿವಾಕರನಿಗನ್ನಿಸಿದ್ದು.

ದಿವಾಕರನಿಗೆ ಆ ಹೆಂಗಸಿನೊಂದಿಗೆ ಏನೂ ಮಾತನಡಲು ತೋಚದೆ ಹಾಗೇ ನಿಂತಿದ್ದ . ಜಿಲ್ಲಿಯ ಹೊರತಾಗಿ ಮತ್ಯಾವ ಹೆಣ್ಣು ಮಕ್ಕಳೊಂದಿಗೂ ಹೆಚ್ಚು ಮಾತನಾಡದವನು, ಮೊದಲ ಬಾರಿ ಜನರಲ್ ಡೆಲಿವರಿ ವಾರ್ಡಿನಲ್ಲಿ ನಿಂತವನು, ಸಂಕೋಚದಿಂದ, ತುಸು ಗಾಭರಿಯಿಂದ ದೇಹ ಹಿಡಿಯಾಗಿಸಿಕೊಂಡು ನಿಂತಿದ್ದ. ಅವಳು ಆಗೀಗ ಎರಡೂ ಕೈಗಳಿಂದ ಹಾಸಿಗೆ ಒತ್ತಿ ಹಿಡಿದು ಕಾಲು ಬಿಗಿಹಿಡಿದು ತುಟಿಕಚ್ಚಿ ಆ ಆ ಅಂತ ಸಣ್ಣದಾಗಿ ಚೀರುತ್ತಿದ್ದಳು. ನೋವು ತೀವ್ರವಾದ ಒಂದೆರಡು ನಿಮಿಷ ಹಾಗೇ… ಮತ್ತೆ ಮೈ ಸಡಿಲಿಸಿ, ಕೈ ಚಾಚುತ್ತಿದ್ದಳು. ಮುಖದ ತುಂಬ ಬೆವರು ಬಿಟ್ಟಿರುತ್ತಿತ್ತು. ದಿವಾಕರನಿಗೆ ಅವಳ ಹಣೆಗಂಟದ ಕೂದಲನ್ನು ಹಿಂದೆ ಸರಿಸಿ ಬೆವರು ಒರೆಸಿ “ತುಂಬ ತ್ರಾಸಾಗ್ತಿದೆಯೇ” ಅಂತ ಕೇಳಿಬಿಡಲೇ ಅಂತ ತೀವ್ರವಾಗಿ ಅನ್ನಿಸಿತೊಮ್ಮೆ. ಇವನು ಕೇಳ ಬೇಕೆಂದುಕೊಳ್ಳುವಷ್ಟರಲ್ಲಿ ನರ್ಸ್ ಒಬ್ಬಳು ಬಂದಿದ್ದಳು. ಹೊಟ್ಟೆಯ ಮೇಲೊಮ್ಮೆ ಕೈಯಾಡಿಸಿ, ಮತ್ತೆ ಮತ್ತೆ ಮುಟ್ಟಿ “ಬೆಳಗಿನ ತನಕ ಜಗ್ಗೂ ಹಂಗ ಕಾಣ್ತದ” ಎಂದು ಗೊಣಗುಟ್ಟಿದಳು.

ದಿವಾಕರನನ್ನು ಒಮ್ಮೆ ಅಡಿಯಿಂದ ಮುಡಿಯವರೆಗೆ ದಿಟ್ಟಿಸಿದ ಆ ನರ್ಸ್ “ಮನಿಗೆ ಹೋಗ್ತಿದ್ರೆ ಹೋಗಿ ಬರ್ರಿ. ಬೆಳಗಿನ ತನಕ ಆಗಂಗ ಕಾಣಂಗಿಲ್ಲ” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದವಳೇ ಯಾರಿಗೋ ಔಷದಿಯೋ, ಇಂಜೆಕ್ಷನ್ನೋ ಕೊಡುವುದು ನೆನಪಾದವಳಂತೆ ವೇಗವಾಗಿ ಸರಿದು ಹೋದಳು. ದಿವಾಕರ ಅಲ್ಲಿಂದ ಮೆಲ್ಲನೆ ಹೊರಟ. ಹಸಿವೆಯಾಗತೊಡಗಿತ್ತು. ದವಾಖಾನೆಯ ಹೊರಬಂದವನು ಅಲ್ಲೇ ಹೊರಗೆ ಕೈಗಾಡಿಯಲ್ಲಿ ಸಿಗುತ್ತಿದ್ದ ಆಮ್ಲೆಟ್, ಬ್ರೆಡ್ ತಿಂದು ಚಾ ಕುಡಿದ. ಅವಳಿಗೇನಾದ್ರೂ ತಿನ್ನಲು ಕುಡಿಯಲು ಬೇಕಿತ್ತೇನೋ… ಏನೂ ಕೇಳಲೇ ಇಲ್ಲವಲ್ಲ ಛೇ.. ಎನ್ನಿಸಿದ್ದೇ ಕಸಿವಿಸಿಗೊಂಡ. ಏನಾದರಾಗಲಿ ಎಂದುಕೊಂಡು ಉದ್ದ ಗಾಜಿನ ಲೋಟದಲ್ಲಿ ಚಾ ತೆಗೆದುಕೊಂಡು ಮತ್ತೆ ಅವಳ ಬಳಿ ಬಂದ. ಇವನು ಹೋಗುವಾಗ ಬಾಗಿಲ ಕಡೆ ನೋಡುತ್ತ ಮಲಗಿದ್ದಂತೆಯೇ ಮಲಗಿದ್ದಳು. ತಾನು ವಾಪಾಸು ಬರಲಿಕ್ಕಿಲ್ಲ ಎಂದು ಅವಳಿಗನ್ನಿಸಿರಬಹುದೇನೋ ತಾನು ಬಂದಿದ್ದೇ ಒಳ್ಳೆಯದಾಯ್ತು ಎಂದುಕೊಂಡ ದಿವಾಕರ ಅವಳನ್ನು ಎಬ್ಬಿಸಿ ಕೂಡಿಸಬೇಕೆ ಅಥವಾ ಅವಳೇ ಎದ್ದು ಕುಳಿತುಕೊಳ್ಳಬಹುದೇ ಎಂಬ ಅನುಮಾನದಲ್ಲಿರುವಾಗ ಅವಳು ನೀರು ಬೇಕೆಂದು ಉಸುರಿ ಮಂಚದ ಕೆಳಗಿನ ಬಾಸ್ಕೆಟ್‌ನ್ನು ತೋರಿಸಿದಳು. ಒಂದಿಷ್ಟು ಹಳೆ ಬಟ್ಟೆಗಳೊಂದಿಗಿದ್ದ ನೀರಿನ ಬಾಟಲಿಯನ್ನು ದಿವಾಕರ ತಡಕಾಡಿ ತೆರೆಯುವಷ್ಟರಲ್ಲಿ ಅವಳು ಮೆಲ್ಲನೆದ್ದು ಕುಳಿತಿದ್ದಳು. ನೀರು ಕುಡಿದು, ಟೀ ಗುಟುಕರಿಸಿ ಗ್ಲಾಸ್ ಇವನ ಕೈಗಿತ್ತವಳೇ ಮತ್ತೆ ಮುಲುಗುಡುತ್ತ ಹೊಟ್ಟೆ ಹಿಡಿದು ಮಲಗಿದ್ದಳು. ಆಚೆ ಈಚೆಗಿನ ಮಂಚದ ಬಳಿ ಈಗ ಗಂಡಸರ್‍ಯಾರು ಇರಲಿಲ್ಲ.

ಬಸುರಿ, ಬಾಣಂತಿಯರ ಜತೆಗಿದ್ದ ಹೆಂಗಸರು ಈಗ ಕೆಳಗೆ ಹಾಸಿಕೊಂಡು ಮಲಗುವ ಗಡಿಬಿಡಿಯಲ್ಲಿದ್ದರು. ರಕ್ತ, ಫಿನಾಯಿಲ್, ಔಷದಿಗಳು ಎಲ್ಲದರ ಸಂಮಿಶ್ರಣದ ವಾಸನೆ, ಅಲ್ಲೊಂದು ಇಲ್ಲೊಂದು ಮಗುವಿನ ಅಳು, ಬಸುರಿಯರ ಚೀರಾಟ, ಅಂತಹುದುರಲ್ಲಿಯೇ ಮನೆವಾರ್ತೆ ಹರಟುವ ಹೆಂಗಸರ ಕಲಕಲ ಮಾತುಗಳು… ಇಲ್ಲಿಯವರೆಗೆ ಕಂಡೇ ಇರದಿದ್ದ ಅದ್ಭುತ, ಅಪರಿಚಿತ ಲೋಕವೊಂದರಲ್ಲಿ ನಿಂತಂತೆ ದಿವಾಕರ ಬೆರಗಿನಿಂದ ನೋಡುತ್ತಲೇ ಇದ್ದ. ನಿಂತು ನಿಂತು ಕಾಲು ನೋಯಲಾರಂಭಿಸಿತ್ತು.

ರಾತ್ರಿ ಹನ್ನೊಂದಾಗ ತೊಡಗಿತ್ತು. ರೌಂಡ್ಸ್‌ಗೆ ಬಂದ ರಾತ್ರಿ ಪಾಳಿಯ ನಗುಮೊಗದ ಡಾಕ್ಟರ್ ಇವಳ ಹತ್ತಿರವೂ ಬಂದು ಹೊಟ್ಟೆ ಮುಟ್ಟಿ ಒತ್ತಿ ನೋಡಿದರು. “ಯಾರೂ ಇಲ್ಲೇನವ್ವಾ ಜತಿಗಿ” ಎಂದವರಿಗೆ ದಿವಾಕರ ನಿಂತಿದ್ದು ಗಮನಕ್ಕೆ ಬಂದೊಡನೆ “ಗಂಡಸರು ಹೊರಗೇ ಕೂಡ್ರಬೇಕ್ರೀ. ನಸುಕಿನಾಗ ಹಡೀಬಹುದು” ಎಂದರು. ದಿವಾಕರ ತಲೆಯಲ್ಲಾಡಿಸಿದ. ಮತ್ತೆ ಆ ಪುಟ್ಟ ಬಸುರಿಗೆ ಅಭಯ ತುಂಬುವಂತೆ “ಬ್ಯಾನಿ ತಿನ್ನೂ ಮುಂದ ತಡ್ಕೋಬೇಕವ್ವಾ.. ಜೋರಾಗಿ ಒಮ್ಮಿ ಬ್ಯಾನಿ ಕೊಡು.. ಕೂಸು ಕಡೀಕ್ಕಾಗ್ತೈತಿ.. ಇನ್ನೊಂದು ಮೂರು ನಾಕು ತಾಸು ಅಷ್ಟೇ ತ್ರಾಸು ಆಮೇಲೆ ಎಲ್ಲ ಸರಳ ಆಕೈತಿ.. ಧೈರ್ಯ ತಗೋಬೇಕವ್ವಾ..” ಎನ್ನುತ್ತ ಮತ್ತೊಮ್ಮೆ ಹೊಟ್ಟೆ ಮುಟ್ಟಿ ನೋಡಿ ನರ್ಸ್‌ಗೆ ಏನೋ ತಗ್ಗಿದ ಧ್ವನಿಯಲ್ಲಿ ಹೇಳಿ ಹೋದರು. ಪ್ರತಿದಿನ ಎಷ್ಟೋ ಬಸುರಿಯರಿಗೆ ಧೈರ್ಯ ತುಂಬುವ, ಹೆರಿಗೆ ಮಾಡಿಸುವ ಚೈತನ್ಯ ತನಗುಂಟು ಎಂಬಂತೆ ಆ ವಯಸ್ಸಾದ ಡಾಕ್ಟರ್ ಕಣ್ಣುಗಳಲ್ಲಿ ನಗು, ಎಲ್ಲರೆಡೆಗೆ ಒಂದು ವಾತ್ಸಲ್ಯದ ನಗು ತಾನೇ ತಾನಾಗಿ ಮಿಂಚುತ್ತಿತ್ತು.

ಅವರತ್ತ ಹೋದ ಐದು ನಿಮಿಷದ ನಂತರ ದಿವಾಕರ ಹೊರಗೆ ಕುಳಿತುಕೊಳ್ಳುವ ಎಂದುಕೊಂಡು ಅತ್ತ ಹೊರಳುವುದರಲ್ಲಿದ್ದ. ಅಷ್ಟರಲ್ಲಿಯೇ “ಆ.. ಅಮ್ಮಾ” ಸಣ್ಣನೆಯ ಚೀತ್ಕಾರ… ನೋವು ತಡೆಯಲಾರದೆ ಮಂಚಕ್ಕೆ ಕೈ ಊರಿದಳೇನೋ… ಮುಂಗೈವರೆಗೆ ಬಂದಿದ್ದ ಬಳೆಯೊಂದು ಒಡೆಯಿತು. ಮತ್ತೆ ಫಳ್‌ಫಳಾರ್ ಸದ್ದು.. ಪಟ್ಟನೆ ಹಿಂತಿರುಗಿದ ದಿವಾಕರ ಅವಳ ಕೈಗಂಟಿದ್ದ ಬಳೆಚೂರನ್ನು ತೆಗೆದು ಮಂಚದ ಕೆಳಗೆ ಹಾಕಿದ. ನಂತರ ಮೃದುವಾಗಿ ಅವಳ ಕೈ ಮುಟ್ಟಿದ. ಸಣ್ಣಗೆ ಕಂಪಿಸುತ್ತಿದ್ದ ಬೆರಳುಗಳು.. ತಟ್ಟನೆ ಕೈ ಒತ್ತಿದ. ಒಂದು ಬಾರಿ ಅವಳ ಹೊಟ್ಟೆಯ ಮೇಲೆ ಕೈಯಾಡಿಸಲೇ ಅನ್ನಿಸಿದ್ದೇ ಮೆಲ್ಲನೆ ಹೊಟ್ಟೆಯ ಮೇಲೆ ಅಂಗೈ ಇಟ್ಟ. ಹಳೆಯ ಹತ್ತಿ ಸೀರೆಯ ನೆರಿಗೆಗಳ ಕೆಳಗೆ ಏನೋ ಅಲುಗಿದಂತೆ.. ಒಳಗೊಂದು ಪುಟ್ಟ ಜೀವ ಮಿಸುಗಾಡುತ್ತಿರುವಂತೆ… ಆ ಅಲುಗಾಟ ಮಿಸುಗಾಟ ಬೆರಳಿಗನುಭವವಾಗಿದ್ದೇ ಎಂಥದೋ ಪುಳಕವೊಂದು ಇಡೀ ಮೈಯನ್ನು ಹಬ್ಬಿದಂತೆ ಅನ್ನಿಸಿ ದಿವಾಕರ ಖುಷಿಯಾದ. “ನಾನಿದ್ದೇನೆ ಜತೆಗೆ… ಹೆದರಬೇಡ..” ಎಂಬಂತೆ ಮತ್ತೆ ಮೆಲ್ಲನೆ ಹೊಟ್ಟೆಯ ಮೇಲೆ ಬೆರಳಾಡಿಸಿದ. ಇವನನ್ನೇ ಸುಸ್ತಾದ ಕಣ್ಣುಗಳಿಂದ ದಿಟ್ಟಿಸುತ್ತಿದ್ದಳಾಕೆ. ಹೊಟ್ಟೆಯ ಮೇಲಿಂದ ಕೈ ತೆಗೆದು ಅವಳ ಭುಜವನ್ನೊಮ್ಮೆ ಒತ್ತಿ “ನಾನಿಲ್ಲೇ ಹೊರಗಿರ್‍ತೀನಿ.. ಏನಾದ್ರೂ ಬೇಕಾದ್ರೆ ಹೇಳಿ ಕಳ್ಸು ಆಯ್ತಾ..” ಎಂದು ಅಲ್ಲಿಂದ ಹೊರಟ. ಬರಿದೇ ತಲೆಯಲ್ಲಾಡಿಸಿದ. ಅವಳು ಆ ನೋವಿನಲ್ಲೂ ನಸು ನಕ್ಕಳು.

ಹೊರಬಂದ ದಿವಾಕರ ಅಲ್ಲಿದ್ದ ಮುರುಕು ಬೆಂಚಿನ ಮೇಲೆ ಕುಳಿತ. ಒಂದು ಘಂಟೆ.. ಎರಡು ಘಂಟೆ.. ದಿವಾಕರನಿಗೆ ಈ ರಾತ್ರಿ ಎಂದೆಂದೂ ಮುಗಿಯದ ಅನಂತ ನರಳಿಕೆಯ ರಾತ್ರಿಯಂತೆ ಅನ್ನಿಸಿ ಕೂತಲ್ಲೇ ಬೇಸರದಿಂದ ಚಡಪಡಿಸತೊಡಗಿದ್ದ. ಚಾ ಆದ್ರೂ ಕುಡಿದು ಬರುವ ಅಂದುಕೊಂಡು ಹೊರಹೋದರೆ ಕೈ ಗಾಡಿಯವನು ಪಾತ್ರೆ ಎಲ್ಲ ಬೋರಲು ಹಾಕಿ ಗ್ಲಾಸುಗಳನ್ನೆಲ್ಲ ಬಕೆಟ್ ನೀರಿನಲ್ಲಿದ್ದಿಟ್ಟು ಕೆಳಗೆ ಹಾಸಿಕೊಂಡು ಮಲಗಿಬಿಟ್ಟಿದ್ದ. ಬೆಳಗಿನ ಜಾವದಿಂದ ’ಭರ್‌ಭರ್’ ಎಂದು ಒರಗುಡುತ್ತಿದ್ದ ಸ್ಟೌವ್ ಕೂಡ ಅವನಂತಹದೇ ಸುಖ ನಿದ್ದೆಯಲ್ಲಿದ್ದಂತಿತ್ತು. ಮತ್ತೆ ಒಳ ಬಂದು ಕುಳಿತ. ಕಾರಿಡಾರಿನಲ್ಲಿಯ ಮಬ್ಬು ಬೆಳಕಿನಲ್ಲಿ ನೀರವ, ನಿಶ್ಯಬ್ದ ರಾತ್ರಿಯಲ್ಲಿ ಆಗೀಗ ಕೇಳುವ ಎದೆಝಲ್ಲೆನ್ನೆಸುವ ಚೀತ್ಕಾರ… ’ಅಯ್ಯೋ ಅಮ್ಮಾ” ’ಸಾಕಪ್ಪಾ ಸಾಕು’, ’ದೇವ್ರೇ ನನ್ನ ಕೈಲಿ ಆಗಲ್ಲಪ್ಪಾ’ ನರಳಿಕೆಗಳು.. ಅದರಲ್ಲಿ ಅವಳ ಧ್ವನಿಯೂ ಬೆರೆತಿತ್ತು. ’ದೇವ್ರೇ.. ಎಲ್ಲ ಸರಳವಾಗಿ ಸಸೂತ್ರವಾಗಿ ಮುಗಿಯಲಿ.. ಈ ನರಳಿಕೆಗಳ ಕೊನೆಯಲ್ಲೊಂದು ಮಗುವಿನ ಅಳುವಿರಲಿ’ ದಿವಾಕರ ತನ್ನೊಳಗೇ ಹೇಳಿಕೊಳ್ಳುತ್ತಿದ್ದ. ಎಷ್ಟೋ ಹೊತ್ತಿನ ನಂತರ ದಿವಾಕರನಿಗೆ ಕುಳಿತಲ್ಲೇ ಜೊಂಪು ಹತ್ತಿಬಿಟ್ಟಿತ್ತು. ಯಾರೋ ಕರೆದ ಹಾಗನ್ನಿಸಿ ಧಡಬಡಿಸಿ ಕಣ್ಣು ತೆರೆದರೆ ಎದುರಿಗೆ ಅದೇ ನರ್ಸ್ “ಮಗಳು ಹುಟ್ಯಾಳ್ರೀ” ಯಾರನ್ನು ಕುರಿತು ಹೇಳ್ತಿದ್ದಾಳೆಂದು ಗಾಭರಿಗೊಂಡ ದಿವಕರನಿಗೆ ಅವಳು ತನಗೇ ಹೇಳ್ತಿರೋದು ಎಂದು ಅರ್ಥವಾಗುವಷ್ಟರಲ್ಲಿ “ಇನ್ನೊಂದು ಅರ್ಧ ತಾಸು.. ಹೊರಗೆ ತರ್‍ತಾರೆ.. ಈ ಗುಳಿಗಿ, ಇಂಜೆಕ್ಷನ್ ತರ್ರಿ” ಎಂದವಳೇ ಚೀಟಿ ಕೈಯಲ್ಲಿಟ್ಟು ಒಳ ನಡೆದಿದ್ದಳು.

ಹುಷ್ ಎಂದು ಉಸಿರು ಬಿಟ್ಟ ದಿವಾಕರ ನಿರಾಳವಾದ. ಕೈಯಲ್ಲಿ ಚೀಟಿ ಹಿಡಿದು ಹೊರ ಬಂದರೆ ಆಗಲೇ ಚುಮುಚುಮು ಬೆಳಗಾಗತೊಡಗಿತ್ತು. “ಅರೆ.. ತನಗಿದೆಂಥ ನಿದ್ದೆ ತಗೊಂಡಿತ್ತು… ಅವಳ ನರಳಾಟ ಕೇಳಿಸದಂತೆ.. ನೋವು ತಟ್ಟದಂತೆ… ಹೀಗೆ ಕೂಸು ಹುಟ್ಟುವ ಗಳಿಗೆಯಲ್ಲಿಯೇ.. ಛೇ” ಎಂದುಕೊಳ್ತ ಅದೇ ತೆರೆದಿದ್ದ ಮೆಡಿಕಲ್ ಶಾಪ್‌ನಲ್ಲಿ ಇದೀಗ ನರ್ಸ್ ಕೊಟ್ಟ ಚೀಟಿ ಕೊಟ್ಟು ಔಷದಿ ಕೊಂಡ. ಕೈ ಗಾಡಿಯತ್ತ ಬಂದಾಗ ಸ್ಟೌವ್‌ನ ಭರ್‌ಭರ್ ಸದ್ದನ್ನೂ ಮೀರಿಸುವಂತೆ ಹಾಡೊಂದನ್ನು ಗುನುಗಿಕೊಳ್ಳುತ್ತಿದ್ದ ಅಂಗಡಿಯವನು ತನಗೆ ಬೆಳಗಾಗಿ ತುಂಬ ಹೊತ್ತಾಯಿತು ಎನ್ನುವಂತೆ ಮಸಿ ಹಿಡಿದಿದ್ದ, ದೇವರ ಚಿಕ್ಕ ಕ್ಯಾಲೆಂಡರ್ ಮುಂದೆ ಊದಿನಕಡ್ಡಿಯನ್ನೂ ಹಚ್ಚಿಟ್ಟಾಗಿತ್ತು. ಟೀ ಕುಡಿಯುತ್ತ ನಿಂತ ದಿವಾಕರನಿಗೆ ನರ್ಸ್ ಹೇಳಿದ್ದು ನೆನಪಿಗೆ ಬಂದಿದ್ದೇ ಗಲಿಬಿಲಿಗೊಂಡ. ’ಮಗಳು ಹುಟ್ಟಿದಳು.. ಅಂದ್ರೆ ತನಗೇ…’

ನಿನ್ನೆಯವರೆಗೆ ಬರಿಯ ಜಿಲ್ಲಿಯ ಮಾತುಕತೆಗಳಿಂದ ಅವಳು ಹೇಳುವ ವಿವರಗಳ ಮೇಲಿನಿಂದ ಕಣ್ಣಲ್ಲಿ ಅನಾಥ ಬಸುರಿಯ ಚಿತ್ರ ತುಂಬಿಕೊಂಡು, ಒಂದು ಆಪ್ತ ಪರಿಚಿತ ಭಾವನೆ ಮಾತ್ರ ಇಟ್ಟುಕೊಂಡಿದ್ದ ದಿವಾಕರನನ್ನು ನರ್ಸ್ ಯಾವುದರ ಅಗತ್ಯವೇ ಇರದಂತೆ ಬರೀ ರಾತ್ರಿಯಿಂದ ನೋಡಿದ್ದೇ ಸಾಕೆಂಬಂತೆ ತನ್ನ ಕಣ್ಣಿನಲ್ಲಿ ಅಪ್ಪನ ಚಿತ್ರ ಬರೆದು ’ಇದು ನೀನೇ’ ಎಂಬಂತೆ ಇವನೆದುರಿಗೆ ಹಿಡಿದು ಬಿಟ್ಟಿದಳು. ದಿವಾಕರನೊಳಗೆ ರೋಮಾಂಚನ ಹುಟ್ಟಿಸಿದ್ದು ಇದೇ ಸಂಗತಿ. ನರ್ಸ್ ಹೇಳುವವರೆಗೂ ಅಂಥದೊಂದು ಸಾಧ್ಯತೆಯ ಕುರಿತು ಊಹೆ, ಕಲ್ಪನೆ ಕೂಡ ಮಾಡಿರದ ದಿವಾಕರನಿಗೆ ಆ ಸಾಧ್ಯತೆಯನ್ನು ಎಷ್ಟು ಸರಳವಾಗಿ ನರ್ಸ್ ಹೇಳಿಬಿಟ್ಟಳಲ್ಲ ಎಂಬುದು ಮಾತ್ರ ಗಂಟಲಲ್ಲಿ ಅಡ್ಡ ಸಿಕ್ಕಿಕೊಂಡ ಮಾತ್ರೆಯಂತಾಗಿತ್ತು. ಅರ್ಧಗಂಟೆಯ ನಂತರ ಚಾ ಕಪ್ ಹಿಡಿದು ಕೈಯಲ್ಲೊಂದು ಬಿಸ್ಕೆಟ್ ಪುಡಿಕೆ ಮತ್ತು ಔಷದಗಳನ್ನು ಹಿಡಿದು ಡೆಲಿವರಿ ವಾರ್ಡ್‌ನತ್ತ ಹೊರಟ ದಿವಾಕರನಿಗೂ ಅತ್ತ ಕಡೆಯೇ ಅವಸರದಲ್ಲಿ ಸಾಗುತ್ತಿರುವ ಇನ್ನಿತರ ಗಂಡಸರಿಗೂ ಅಂತಹ ವ್ಯತ್ಯಾಸವೇನೂ ಇರಲಿಲ್ಲ.

ದಿವಾಕರ ಒಳ ಹೋಗುವಷ್ಟರಲ್ಲಿ ಅವಳನ್ನು ಮತ್ತೆ ಅದೇ ಮಂಚದ ಮೇಲೆ ತಂದು ಮಲಗಿಸಿದ್ದರು. ಗಾಳಿ ಹೋದ ಬಲೂನಿಂತೆ ತೆಳ್ಳಗಾದ ಹೊಟ್ಟೆ… ಬಾಗಿಲೆಡೆಗೇ ನೆಟ್ಟ ದಣಿದ ಕಣ್ಣುಗಳು.. ಖಾಲಿ ತೊಟ್ಟಿಲನ್ನು ನೋಡಿದ ದಿವಾಕರ ತಟ್ಟನೆ “ಮಗು” ಎಂದು ಇನ್ನಿಲ್ಲದ ಆತಂಕದಲ್ಲಿ ಕೇಳಿದ. “ಸ್ನಾನ ಮಾಡಿಸಲಿಕ್ಕ ಹತ್ಯಾರ” ಅನುಭವಿ ನರ್ಸ್ ನಕ್ಕಳು. ಅಲ್ಲಿದ್ದ ತುಸು ತುಕ್ಕು ಹಿಡಿದಿದ್ದ ಸ್ಟೂಲಿನ ಮೇಲೆ ಟೀ ಕಪ್, ಬಿಸ್ಕೆಟ್ ಪುಡಿಕೆ ಎಲ್ಲ ಇಟ್ಟು ಕೆಳಗಿನಿಂದ ಬಾಸ್ಕೆಟ್ ಈಚೆ ಎಳೆದು ನೀರು ತೆಗೆದಿರಿಸಿದ. ಬಿಸ್ಕೆಟ್ ಪುಡಿಕೆ ತೆರೆಯತೊಡಗಿದ ದಿವಾಕರ ಆಗಿನಂತೆ ತಾನೆ ಎದ್ದು ಕುಳಿತುಕೊಳ್ಳುತ್ತಾಳೆ ಎಂದುಕೊಂಡ. ಅವಳು ಇವನನ್ನೇ ನೆಟ್ಟನೋಟದಿಂದ ನೋಡುತ್ತಿದ್ದಳು. ’ಇದೀಗ ಹೆರಿಗೆಯಾಗಿದೆ.. ಬಹುಶಃ ತಾನೇ ಏಳಲಿಕ್ಕೆ ಆಗಲಿಕ್ಕಿಲ್ಲ’ ಎಂಬುದು ದಿವಾಕರನಿಗೆ ನಿಧಾನವಾಗಿ ಹೊಳೆದೊಡನೆ “ಛೆ.. ತಾನೆಂಥ ಹೆಡ್ಡ” ಅಂದುಕೊಂಡು ಮೆಲ್ಲನೆ ಅವಳ ಭುಜ ಬಳಸಿ ಹಿಡಿದು ಎತ್ತಿ ಕುಳ್ಳಿರಿಸಿದ. ಒಂದು ಕೈಯಲ್ಲಿ ಅವಳನ್ನು ಬಳಸಿ ಹಿಡಿದೇ ಟೀ ಕಪ್ ಬೀಳದಂತೆ ಜಾಗರೂಕತೆಯಿಂದ ಸ್ಟೂಲನ್ನು ಹತ್ತಿರಕ್ಕೆ ಎಳೆದ, ಅವಳಿಗೆ ಅದೆಲ್ಲ ಕೊಟ್ಟು, ಇದೀಗ ನರ್ಸ್ ಹೇಳಿದ್ದ ಮಾತ್ರೆಯೊಂದನ್ನು ಕೊಟ್ಟ. ವಿಪರೀತ ಸುಸ್ತಾದವಳಂತೆ ಇದ್ದಳಾದರೂ ಹೆರಿಗೆ ಸುರಳೀತ ಆಯಿತೆಂಬ ನೆಮ್ಮದಿಯಲ್ಲವಳು ದಿವಾಕರನಿಗೆ ಒರಗಿಕೊಂಡಂತಿತ್ತು. ದಿವಾಕರ ಅವಳನ್ನು ಮಲಗಿಸಿ ಕಮಟು ಹಿಡಿದ ಆಸ್ಪತ್ರೆಯ ಚಾದರವನ್ನು ಹೊದಿಸಲನುವಾದ. ಮುಂಗಾಲುಗಳ ಮೇಲೆ, ಹೊಟ್ಟೆಯ ಪಕ್ಕ ರಕ್ತದ ತೆಳ್ಳನೆಯ ಕಲೆಗಳು… ಕೈಕಾಲು ಅಲ್ಲಾಡಿಸಲೂ ಶಕ್ತಿ ಇಲ್ಲದವಂತೆ ಬಿಳುಚಿಕೊಂಡು ನಿಸ್ತೇಜವಾಗಿದ್ದ ಅವಳು… ಪಟ್ಟನೆ ಅವಳ ಸೆರಗು ಸರಿಪಡಿಸಿದವನೇ ಚಾದರವನ್ನು ಎದೆಯವರೆಗೆ ಹೊಚ್ಚಿದ.

ಒಬ್ಬರಿಗೊಬ್ಬರು ಹೆಚ್ಚು ಮಾತಾಡುವುದರ ಅಗತ್ಯವೇ ಇರದಂತೆ… ಐದಾರು ತಿಮಗಳಿಂದ ಜಿಲ್ಲಿಯ ಮಾತುಕತೆಗಳಲ್ಲಿಯೇ ಪರಿಚಿತರಾದಂತೆ ಮೌನದಲ್ಲಿಯೇ ಒಂದು ಅರ್ಥಪೂರ್ಣ ಸಂಬಂಧ ತಾನೇ ತಾನಾಗಿ ಇದ್ದುಬಿಟ್ಟಿರುವಂತೆ ಅವನಿಗನ್ನಿಸಿತು. ಅಷ್ಟರಲ್ಲಿಯೇ ನರ್ಸ್ ಹಳೇ ಸೀರೆಯ ತುಂಡಿನಲ್ಲಿ ಸುತ್ತಿದ್ದ ಕುಸುಕುಸು ಅಳುತ್ತಿದ್ದ ಮಗುವನ್ನು ಎತ್ತಿಕೊಂಡು ಬಂದಿದ್ದಳು. ನರ್ಸ್ ಮಗುವನ್ನು ತೋರಿಸಿದ್ದೇ ಅವಳು ಅವಳು ಪುಟ್ಟ ನಸು ನಗು ಮಿಂಚಿಸಿದವಳು.. ನಿಸ್ತೇಜವಾದ ತನ್ನ ಕೈಯನ್ನೊಮ್ಮೆ ಚಾದರದಿಂದ ಹೊರತೆಗೆದು ಮಗುವನ್ನು ಮೆಲ್ಲನೆ ಸವರಿದಳು. ಮಗು ಅರೆಗಣ್ಣು ಮಾಡಿ ಇನ್ನೂ ಅಳುತ್ತಿತ್ತು. ಬಟ್ಟೆಯ ಹೊರಗಿಣುಕುತ್ತಿದ್ದ ಅದರ ಗುಲಾಬಿ ಪಾದಗಳನ್ನೇ ದಿವಾಕರ ಕಣ್ಣೆವೆ ಪಿಳುಕಿಸದೇ ನೋಡುತ್ತಿದ್ದ. ಪಾದಗಳನ್ನು ತಡಕುತ್ತ ಪುಳಕಗೊಂಡ ದಿವಾಕರ ಆಯಾಚಿತವಾಗಿ ಕೈ ಚಾಚಿದ. “ಇನ್ನ ಮಗಳನ್ನ ಸಂಭಾಳಿಸ್ರೀ” ಎಂದು ಚೇಷ್ಟೆಯಿಂದ ಹೇಳಿ, ಮಗುವನ್ನು ಸಾವಕಾಶ ಇವನಿಗೆ ಕೊಟ್ಟ ನರ್ಸ್ “ಗುಳಿಗಿ ತಗೊಂಡೀರಲ್ಲ.. ಇನ್ನ ಆರಾಮ ನಿದ್ದಿ ಮಾಡವ್ವ” ಎಂದು ಅವಳಿಗೆ ಹೇಳಿ ಹೋದಳು. ಕೈಕಾಲು ಬಡಿಯುತ್ತ ಕುಸುಕುಸು ಮಾಡುತ್ತಿದ್ದ ಮಗುವನ್ನು ಎದೆಗೆ, ಕೆನ್ನೆಗೆ ಒತ್ತಿಕೊಳ್ಳುತ್ತ, ಮುದ್ದು ಮಾಡುತ್ತ ಅದರ ಎಳೆಯ ರೇಶ್ಮೆ ಚರ್ಮದ ಸ್ಪರ್ಶದ ಸುಖವನ್ನು ಉತ್ಕಟವಾಗಿ ಅನುಭವಿಸುತ್ತಿರುವಂತೆ ಇವನ ಕೈಗಳಲ್ಲೇ ಮಗು ನಿದ್ರಿಸಿಬಿಟ್ಟಿತ್ತು.

ಇದೀಗ ಕಣ್ಣುಬಿಟ್ಟ ಬೆಳಗಿನ ಅಲೌಕಿಕ ಸೌಂದರ್ಯವೆಲ್ಲ ಇಲ್ಲೇ ಘನೀಭವಿಸಿದೆಯೇನೋ ಅನ್ನಿಸುವಂತಿದ್ದ, ನಿದ್ರಿಸುತ್ತಿದ್ದ ಮಗಳನ್ನು ಅವಳಿಗೆ ತೋರಿಸಬೇಕೆಂದು ಅತ್ತ ತಿರುಗಿದರೆ ರಾತ್ರಿಯಿಡೀ ನಿದ್ದೆಗೆಟ್ಟು ನೋವು ತಿಂದು ವಿಪರೀತ ದಣಿವಾದ, ಮೈ ಕೈ ಎಲ್ಲ ಜಜ್ಜಿದಂತಾಗಿದ್ದ ಅವಳು ನಿಶ್ಚಿಂತೆಯಾಗಿ ಮಲಗಿಬಿಟ್ಟಿದ್ದಳು. ನೀನಿದ್ದೀಯಲ್ಲ ಜತೆಗೆ ಎಂಬಂಥ ಭಾವದಲ್ಲಿ, ಎಂಥದೋ ಅಭಯದಲ್ಲಿ ಅನುಮಾನಗಳಿಲ್ಲದ ನಿಶ್ಚಿಂತ ನೆಮ್ಮದಿಯಲ್ಲಿ ಬಾಣಂತಿ ಮಗು ನಿದ್ರಿಸಿದ್ದರು. ಒಂದು ಬಗೆಯ ಸುರಕ್ಷಿತ ಬಾವನೆ, ತನ್ನಲ್ಲಿಯೂ ಈ ಮಗುವನ್ನು ಅವುಚಿ ಹಿಡಿದ ಕ್ಷಣದಲ್ಲಿ ಹುಟ್ಟಿಕೊಂಡಿದೆ ಎನ್ನುವುದು ದಿವಾಕರನಿಗೆ ಮೆಲ್ಲನೆ ಹೊಳೆಯತೊಡಗಿತು. ವರ್ಷಗಳ ಹಿಂದಿನ ಬಳೆಚೂರಿನ ಸದ್ದನ್ನು ತನ್ನ ಅವಳ ನಡುವಿನ ಮೌನವು ಮೆಲ್ಲನಡಗಿಸಿದಂತೆ.. ಪೆನ್ಸಿಲ್‌ನ ಗೆರೆಗಳಲ್ಲಿ ಇಷ್ಟು ದಿನ ಹುಡುಕಾಡುತ್ತಿದ್ದುದ್ದಕ್ಕೆ ಉತ್ತರವೆಂಬಂತೆ ಕೈಯೊಳಗೆ ನಿದ್ರಿಸಿದ ಮಗುವಿತ್ತು.

’ಎಲ್ಲ… ಎಲ್ಲವೂ ಇರಲಿ ಹೀಗೇ.. ಒಂದು ನೆಮ್ಮದಿಯಲ್ಲಿ.. ಒಂದು ನಿಶ್ಚಿಂತೆಯಲ್ಲಿ.. ಒಬ್ಬರಿಗೊಬ್ಬರು ಜತೆಯಾಗಿ ಸಾಗುವ ಅಭಯದಡಿಯಲ್ಲಿ. ಈ ಮಗುವಿನ ಎದೆಯಲ್ಲಿ ಎಂದೂ ನೆಡದಿರಲಿ ಬಳೆಚೂರು.. ರಾತ್ರಿ ಬಾಗಿಲು ಮುಚ್ಚಿದ ನಂತರ ಒಳಗುಳಿಯುವ ಕತ್ತಲ ಮೌನವನ್ನು ತುಂಬಿಕೊಳ್ಳಲಿ ಈ ಮಗುವಿನ ಅಳುವಿನ ಸದ್ದು. ಬೆಳಗು ಗಿಡಗಂಟೆಗಳಲಿ ರೆಕ್ಕೆ ಬಡಿದಂತೆ ಕೈಕಾಲು ಬಡಿದು ಕೇಕೆ ಹಾಕಿ ನಗಲಿ ಈ ಮಗಳು. ತನ್ನಂತವನಿಗೆ, ಇವಳಂತವರಿಗೆ ತಬ್ಬಿಕೊಂಡು ಒಡಲಲ್ಲಿ ನೆಲೆಕೊಟ್ಟು ಬದುಕಿ ಬಾಳಿಸುತ್ತಿರುವ ಈ ಊರು.. ಆ ಜಿಲ್ಲಿಯಂತಹವರು ಇರಲಿ ಇಂದಿನಂತೆಯೇ ಮುಂದೂ ಕೂಡ’

ಆತ್ಮದ ಆಳದಿಂದ ಎದ್ದ ಪುಟ್ಟ ಆರ್ತ ಪ್ರಾರ್ಥನೆಯು ಅವನ ಒಳಹೊರಗನ್ನು ಹಬ್ಬಿದಂತೆ.. ನಿದ್ರಿಸಿದ್ದ ಮಗುವನ್ನು ಕೈಗಳಲ್ಲಿ ಅವುಚಿ ಹಿಡಿದು ದಿವಾಕರ ನಿಂತೇ ಇದ್ದ. ರಾತ್ರಿಯಿಡೀ ಅರೆ ಎಚ್ಚರ, ಅರೆ ನಿದ್ದೆಯಲ್ಲಿ ಕಳೆದು, ಇದೀಗ ಮೈಮುರಿಯುತ್ತ, ಆಕಳಿಸುತ್ತ ಎದ್ದಂತಿದ್ದ ದವಾಖಾನೆ ತನ್ನ ಎಂದಿನ ಚಟುವಟಿಕೆಗಳಿಗೆ ಯಾವುದೋ ಚೈತನ್ಯದಿಂದೆಂಬಂತೆ ಲವಲವಿಕೆಯಿಂದ ಸಜ್ಜಾಗುತ್ತಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.