ಸೃಷ್ಟಿಗೀಶನೆ ಶ್ರೀರಂಗಶಾಯಿ

ರಾಗ — ನೀಲಾಂಬರಿ
ತಾಳ — ಅಟ್ಟ

ಇಷ್ಟು ದಿನ ಈ ವೈಕುಂಠ |
ಎಷ್ಟು ದೂರವೊ ಎನ್ನುತಲಿದ್ದೆ ||
ದೃಷ್ಟಿಯಿಂದಲಿ ನಾನು ಕಂಡೆ |
ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪ||

ಎಂಟು – ಏಳನು ಕಳಿದುದರಿಂದೆ |
ಬಂಟರೈವರ ತುಳಿದುದರಿಂದೆ ||
ತುಂಟಿಕನೊಬ್ಬನ ತರೆದುದರಿಂದೆ |
ಬಂಟನಾಗಿ ಬಂದೆನೊ ರಂಗಶಾಯಿ ||೧||

ವನ – ಉಪವನಗಳಿಂದ |
ಘನ ಸರೋವರಗಳಿಂದ ||
ಕನಕ ಗೋಪುರಗಳಿಂದ |
ಘನಶೋಭಿತನೆ ರಂಗಶಾಯಿ ||೨||

ವಜ್ರ – ವೈಢೂರ್ಯದ ತೊಲೆಗಳ ಕಂಡೆ |
ಪ್ರಜ್ವಲಿಪ ಮಹಾದ್ವಾರವ ಕಂಡೆ ||
ನಿರ್ಜರಾದಿ ಮುನಿಗಳ ಕಂಡೆ |
ದುರ್ಜನಾಂತಕನೆ ಶ್ರೀರಂಗಶಾಯಿ ||೩||

ರಂಭೆ – ಊರ್ವಶಿಯರ ಮೇಳವ ಕಂಡೆ |
ತುಂಬುರುಮುನಿ ನಾರದರನು ಕಂಡೆ ||
ಅಂಬುಜೋದ್ಭವ ರುದ್ರರ ಕಂಡೆ |
ಶಂಬರಾರಿ ಪಿತನೆ ರಂಗಶಾಯಿ ||೪||

ನಾಗಶಯನನ ಮೂರುತಿ ಕಂಡೆ |
ಭೋಗಿಭೂಷಣ ಶಿವನನು ಕಂಡೆ ||
ಭಾಗವತರ ಸಮ್ಮೇಳವ ಕಂಡೆ |
ಕಾಗಿನೆಲೆಯಾದಿಕೇಶವ ರಂಗಶಾಯಿ ||೫||
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.