… ಬರಿದೇ ಬಾರಿಸದಿರೋ ತಂಬೂರಿ

ಅಂಬಾ ಭವನದಲ್ಲಿ ಬೇಗ ದೋಸೆ ತಿಂದು ಕಾಫಿ ಕುಡಿದು ಓಡಿ ಬಂದು ಬಸ್ಸು ಹತ್ತಿದ್ದ, ಚಕ್ರಪಾಣಿ. ಕೈ ತೋರಿಸಿ, ಅಡ್ಡನಿಂತ ಮೇಲೆ ಕೆಟ್ಟಮುಖ ಮಾಡಿ ಬಸ್ಸು ನಿಲ್ಲಿಸಿದ್ದ ಡ್ರೈವರ್ ಬಾಳಯ್ಯ. ಧಡಧಡ ಓಡಿ ಹಿಂದಿನ ಬಾಗಿಲಿನಿಂದ ಹತ್ತಿ, ಸುರಿಯುತ್ತಿದ್ದ ಬೆವರನ್ನು ಒರೆಸುತ್ತಾ ಮುಂದೆ ಹೋಗಿ ಖಾಲಿಯಿದ್ದ ಸೀಟಿನಲ್ಲಿ ಕೂತ. “ಮುಂದೆ ಬನ್ರಿ, ಮುಂದೆ ಬನ್ರಿ” ಕೂಗುತ್ತಿದ್ದ ಗೋವಿಂದು. ಒಳ್ಳೇ ಕಸಬುದಾರನ ರೀತಿಯೇ ಆಡುತ್ತಾನಲ್ಲ ಈ ಗೋವಿಂದು ಅನ್ನಿಸಿತ್ತು. ಹೇಳಿ ಕೇಳಿ ಇದು ಕಾಲೇಜಿನ ಬಸ್ಸು. ಉಸಿರುಕಟ್ಟುವಷ್ಟು ಜನ ಯಾವತ್ತೂ ಆ ಬಸ್ಸಿನಲ್ಲಿರುತ್ತಿರಲಿಲ್ಲ. ಆದರೂ ಡ್ರೈವರ್ ಬಾಳಣ್ಣ ಮತ್ತು ಕ್ಲೀನರ್ ಗೋವಿಂದು ತಮ್ಮ ವೃತ್ತಿಪರತೆಯನ್ನು ಬಿಟ್ಟು ಕೊಡಲು ತಯಾರಿರಲಿಲ್ಲ. ಸೀಟುಗಳು ಖಾಲಿಯಿದ್ದರೂ ಫುಟ್ ಬೋರ್ಡಿನಿಂದ ಮೇಲೆ ಬರುತ್ತಿರಲಿಲ್ಲ ಗೋವಿಂದು. ಬಾಳಣ್ಣ ತನ್ನ ಹದಿನೈದು ವರ್ಷದ ಸರ್ವೀಸಿಗೆ ತಕ್ಕ ಮಾತುಗಳನ್ನೇ ಆಡುತ್ತಿದ್ದ ಯಾವಾಗಲೂ. ಮೆಡಿಕಲ್ ಕಾಲೇಜಿಗೆ ಈ ಬಸ್ಸಿನಲ್ಲಿ ಬರುವ ಡಾಕ್ಟರು ನರ್ಸುಗಳೆಂದರೆ ಯಾವ ಲೆಕ್ಕವೂ ಇಲ್ಲ ಬಾಳಣ್ಣನಿಗೆ. ಅವನ ಪ್ರಕಾರ ಎರಡೇ ರೀತಿಯ ಡಾಕ್ಟರುಗಳು ಈ ಬಸ್ಸಿನಲ್ಲಿ ಬರುವುದು. ಒಂದು, ಈಗತಾನೆ ಎಂಬಿಬಿ‌ಎಸ್ ಅಥವಾ ಎಂಡಿ ಮುಗಿಸಿ ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಲವಲೇಶವೂ ಜ್ಞಾನವಿಲ್ಲದೆ, ಸ್ವಂತ ಕ್ಲಿನ್ನಿಕ್ಕು ತೆಗೆಯಬೇಕೋ, ದೇಶ ಬಿಡಬೇಕೋ ಎನ್ನುವ ಕನ್‌ಫ್ಯೂಶನ್ನಿನಲ್ಲಿ ಟ್ಯೂಟರ್, ಲೆಕ್ಚರರ್ ಗಳಾಗಿ ಸೇರಿರುವ ಎಳಸುಗಳು. ಇನ್ನೊಂದು, ಇರುವ ನಾಲ್ಕು ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕಷ್ಟಪಟ್ಟು ಪ್ರಾಧ್ಯಾಪಕರಾಗಿ ಜೀವನವಿಡೀ ಬಳ್ಳಾರಿಯಿಂದ ಹುಬ್ಬಳಿಗೆ, ಹುಬ್ಬಳಿಯಿಂದ ಬಳ್ಳಾರಿಗೆ ಪ್ರೊಮೋಷನ್ ನೆಪದಲ್ಲಿನ ಟ್ರಾನ್ಸ್‌ಫರ್ ಗಳನ್ನು ಅನುಭವಿಸಿ ಈಗ ರಿಟೈರಾಗಿ ಪ್ರಾಕ್ಟೀಸ್ ಮಾಡಲಾಗದೇ, ಬರುವ ಪಿಂಚಣಿಯಿಂದ ತಮ್ಮ “ಲೆವೆಲ್ಲಿ”ಗೆ ಬದುಕಲಾಗದೆ, ಈ ಪ್ರೈವೇಟ್ ಮೆಡಿಕಲ್ ಕಾಲೇಜಿನ ” ಅಸೋಸಿಯೇಟ್” ಅಥವಾ “ಎಮೆರಿಟಸ್” ಪ್ರಾಧ್ಯಾಪಕರೆಂದೆಸಿಕೊಂಡಿರುವ ಬದುಕುವ ದಾರಿ ತಿಳಿಯದಿರುವ ಬಕರಾಗಳು. ಮೇಲಿನ ಮೊದಲನೇ ಕೆಟಗರಿಯ ಎರಡನೇ ಗುಂಪಿಗೆ ಸೇರುತ್ತಾನೆ ಡಾ: ಚಕ್ರಪಾಣಿ ಅರ್ಥಾತ್ ಚಕ್ರಿ. ಈಗತಾನೆ ಎಂಡಿ ಜನರಲ್ ಮೆಡಿಸಿನ್ ಮುಗಿಸಿ ಮುಂದೆ ಏನು ಮಾಡಬೇಕೆಂದು ತಿಳಿಯದ ಬಾಳಣ್ಣನ ಎಳಸು ಈತ. ಈ ಜಗತ್ತನ್ನೇ ಗೆಲ್ಲುತ್ತೇನೆಂಬ ವಿಶ್ವಾಸದಿಂದ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಿಂದ ಹೊರಬಿದ್ದಿದ್ದ. ಮೂರು ವರ್ಷ ಕತ್ತೆ ಚಾಕರಿ ಮಾಡಿದುದರ ಫಲವಾಗಿ ಅವನ ಪ್ರೊಫೆಸರರು ವಿಶ್ವವಿದ್ಯಾನಿಲಯದ ಚಿನ್ನದ ಪದಕವನ್ನು ಇವನಿಗೇ ಕೊಡಿಸಿದಾಗ ಹೃದಯತುಂಬಿ ಬಂದಿತ್ತು ಚಕ್ರಪಾಣಿಗೆ. ತಾನೆಷ್ಟೇ ಕಷ್ಟ ಪಟ್ಟಿದ್ದರೂ ಪ್ರೊಫೆಸರರ ಕೃಪೆಯಿಲ್ಲದೇ ಚಿನ್ನದ ಪದಕವಿರಲಿ ಎಂಡಿಯಲ್ಲಿ ಪಾಸಾಗುವುದೂ ಅಸಾಧ್ಯ ವೆಂಬುದನ್ನು ಚೆನ್ನಾಗಿ ತಿಳಿದಿದ್ದ, ಚಕ್ರಪಾಣಿ. ಕ್ಲಿನಿಕಲ್ಸಿನ ಲಾಂಗ್ ಕೇಸಿನಲ್ಲಿ ಸ್ವಲ್ಪ ತಡವರಿಸಿದನೆಂದು ಹೈದರಾಬಾದಿನ ಪರೀಕ್ಷಕ ಇವನಿಗೆ ಚಿನ್ನದ ಪದಕ ಕೊಡಬಾರದೆಂದು ಸ್ವಲ್ಪ ತಕರಾರು ಮಾಡಿದ್ದ.. ಆದರೆ ಪ್ರೊಫೆಸರರು ತುಂಬಾಹಿರಿಯರಾದ್ದರಿಂದ ಅವರ ಮಾತಿಗೆ ಎದುರಾಡುವಂತಿರಲಿಲ್ಲ. ಫಲಿತಾಂಶ ತಿಳಿದ ಕೂಡಲೇ ಹೋಗಿ ಪ್ರೊಫೆಸರರ ಕಾಲಿಗೆ ಬಿದ್ದಿದ್ದ. “ಜನರಲ್ ಮೆಡಿಸಿನ್ ಈಸ್ ಲೈಕ್ ಗ್ಲೋರಿಫೈಡ್ ಜನರಲ್ ಪ್ರಾಕ್ಟೀಸ್. ಯೂ ಕಾಂಟ್ ಸರ್ವೈವ್ ಇನ್ ದಿಸ್ ರುದ್ಲೆಸ್ ವರ್ಲ್ಡ್. ಇಲ್ಲಿ ಎಲ್ಲಾ ತರದ ಜನರನ್ನೂ ನೋಡಬೇಕು. ಎಂಬಿಬಿ‌ಎಸ್ ಆದಮೇಲೆ ಮೂರು ವರ್ಷ ಮಣ್ಣು ಹೊತ್ತಿದ್ದು ಸಾರ್ಥಕವಾಗಬೇಕು ಎಂದಿದ್ದರೆ ನಿನ್ನಂಥೋರು ಯಾವುದಾದರೂ ಸೂಪರ್ ಸ್ಪೆಷಾಲಿಟಿ ಮಾಡಬೇಕು. ಅದು ಮಾಡಿದರೂ ನೀನು ಇಲ್ಲಿ ಉಳ್ಕೊತೀಯಾ ಅನ್ನೋ ನಂಬಿಕೆ ನನಗಿಲ್ಲ. ಸುಮ್ಮನೇ ಇಲ್ಲಿ ಸಮಯ ಹಾಳುಮಾಡುವುದರ ಬದಲು ಎಂ ಎಲ್ ಈ ನೋ ಪ್ಲಾಬೋ ತೊಗೊಂಡು ಎಲ್ಲಾದರೂ ಹೊರಗೆ ಹಾರುವುದನ್ನು ಕಲಿತುಕೋ” ಬುದ್ಧಿಹೇಳಿದ್ದರು. ಎಂಡಿ ಪಾಸಾಗುವ ತನಕ ಪಾಸಾಗುವುದೇ ದೊಡ್ಡ ವಿಷಯವಾಗಿದ್ದರಿಂದ, ಪಾಸಾದಮೇಲೆ ಏನು ಮಾಡುವುದೆಂದು ಯೋಚಿಸುವುದೂ ಮಹಾಪಾಪವೆನ್ನುವ ಸಿದ್ಧಾಂತಕ್ಕೆ ಹೊರತಾಗೇನೂ ಉಳಿದಿರಲಿಲ್ಲ, ಚಕ್ರಪಾಣಿ.ಊರಿನ ಬಸ್ಸು ಹತ್ತುವತನಕ ಇದ್ದ ನಶೆ ಈಗ ಮರೆಯಾಗಿತ್ತು. ಮುಂದೆ ಏನು ಮಾಡಬೇಕೆನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಹುಡುಕಲು ಸ್ವಲ್ಪ ಸಮಯ ಬೇಕೆನ್ನುವ ನೆವದಿಂದ ಈ ಮೆಡಿಕಲ್ ಕಾಲೇಜು ಸೇರಿದ್ದ, ಲೆಕ್ಚರರಾಗಿ. ಮೆಡಿಕಲ್ ಕಾಲೇಜು ಆರಂಭವಾಗಿ ಎರಡು ವರ್ಷವಾಗಿತ್ತಷ್ಟೆ. ಹೆಸರಿಗೊಂದು ಟ್ರಸ್ಟ್. ಆದರೆ ಆ ಟ್ರಸ್ಟಿನ ಚೇರ್ಮನ್ನೇ ಕಾಲೆಜಿನ ಡೀನೂ ಕೂಡ. ಏಕಮೇವಾದ್ವಿತೀಯ. ಯಾವುದೇ ರೀತಿಯ ಆಡಳಿತದ ಅನುಭವವಿಲ್ಲದಿದ್ದರೂ ಕಾಲೇಜಿನ ಡೀನಿನ ಪಟ್ಟ ತಾನಾಗೇ ಬಂದಾಗ ಬೇಡವೆಂದು ನಿರಾಕರಿಸುವಷ್ಟು ಉದಾರಿಯಾಗಿರಲಿಲ್ಲ ಚೇರ್ಮನ್ ಗವಿಸಿದ್ದಪ್ಪ. ಮೇಲಾಗಿ ಈತನೂ ವೈದ್ಯನೇ. ಆ ಟ್ರಸ್ಟಿನಲ್ಲಿ ಬೇರೆ ಯಾರೂ ಡಾಕ್ಟರು ಅಥವಾ ಅದಕ್ಕೆ ಸಂಬಂಧಪಟ್ಟವರು ಇಲ್ಲದಿರುವ ಕಾರಣ ಗವಿಸಿದ್ದಪ್ಪನೇ ಇರಲಿ ಎಂದು ಅಪ್ಪ ತಿಪ್ಪಣ್ಣ ಹೇಳಿದ್ದಕ್ಕೆ ಯಾರೂ ಎದುರಾಡಿರಲಿಲ್ಲ. ಇಪ್ಪತ್ತು ವರ್ಷದ ಹಿಂದೆ ಬಳ್ಳಾರಿಯಲ್ಲಿ ಡಿವಿಡಿ ಮಾಡಿ ಇದೇ ಊರಿನ ಸರಕಾರೀ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಸರ್ಜನಾಗಿ ಹದಿನೈದು ವರ್ಷದಿಂದ ಬೇರೆ ಎಲ್ಲೂ ಟ್ರಾನ್ಸ್‌ಫರಾಗದೇ ಉಳಿದಿದ್ದ. ಊರಿನ ಸರಕಾರೀ ಆಸ್ಪತ್ರೆ ಅಷ್ಟೇನೂ ದೊಡ್ಡದಾಗಿರದ ಕಾರಣ ಚರ್ಮರೋಗದ ಬೇರೆ ವಿಭಾಗವೇನೂ ಇರಲಿಲ್ಲ. ತನ್ನ “ಕ್ಲಿನಿಕಲ್ ಅಕ್ಯುಮೆನ್” ಹಾಳಾಗುತ್ತದೆಂದು ಬಸ್ ಸ್ಟ್ಯಾಂಡಿನ ಹಿಂದೆ ಒಂದು ಕ್ಲಿನಿಕ್ ತೆಗೆದಿದ್ದ. ತೊಡೆಯ ಸಂದಿಯಲ್ಲಿ ಗಡ್ಡೆಯೆಂದು ಬರುವ ಊರಿನ ಹಾಗೂ ಹೆಚ್ಚಾಗಿ ಪರಸ್ಥಳದ ಕಾಲೇಜು ಹುಡುಗರನ್ನು ಬಿಟ್ಟರೆ ಗವಿಸಿದ್ದಪ್ಪನಿಗೆ ಬರುತ್ತಿದುದು ಬೆವರು ಸಾಲೆ ಅಥವಾ ಅವನಿಗೆ ಪ್ರಿಯವಾದ ಸರ್ವೇಸಾಮಾನ್ಯ ಕಾಯಿಲೆ ” ಅಲರ್ಜಿ”. ಜೀವನ ನಡೆಸುವುದಕ್ಕೆ ಮನೆಯಕಡೆ ಏನೂ ತೊಂದರೆಯಿರಲಿಲ್ಲ. ಅಪ್ಪ ತಿಪ್ಪಣ್ಣ ಆ ಜಿಲ್ಲೆಯಲ್ಲೇ ಹೆಸರಾದ ಫುಡಾರಿ ಮತ್ತು ಬೇಕಾದಷ್ಟು ವಿದ್ಯಾಸಂಸ್ಥೆಗಳು “ಟ್ರಸ್ಟಿನ” ಹೆಸರಲ್ಲಿರುವುದರಿಂದ ಗವಿಸಿದ್ದಪ್ಪನಿಗೆ ಸರಕಾರೀ ಕೆಲಸವಾಗಲೀ ಕ್ಲಿನ್ನಿಕ್ಕಿನ ಕೆಲಸವಾಗಲೀ ಅನಿವಾರ್ಯವಾಗಿರಲಿಲ್ಲ. ಆದರೆ ಮಗನ ಹೆಸರಿನ ಮುಂದೆ ಡಾ: ಎಂಬ ಅಕ್ಷರ ಉಳಿಯಬೇಕಾದರೆ, ಈ ಕೆಲಸವನ್ನು ಇಷ್ಟವಿರಲಿ ಬಿಡಲಿ ಮಾಡುತ್ತಿರಬೇಕೆಂದು ತಿಪ್ಪಣ್ಣನವರ ಅಭಿಪ್ರಾಯವಾಗಿತ್ತು. ಈಗ ಸುಮಾರು ಎರಡು ವರ್ಷದ ಹಿಂದೆ ಟ್ರಸ್ಟಿಗೆ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಅನುಮತಿ ಸಿಕ್ಕಾಗ ಅನಾಯಾಸವಾಗಿ ಗವಿಸಿದ್ದಪ್ಪನಿಗೆ ಡೀನಿನ ಪಟ್ಟ ಸಿಕ್ಕಿದಾಗ ಮೆಡಿಕಲ್ ಕಾಲೇಜಿಗೆ ಡೀನ್ ಎಂಬುವವರು ಒಬ್ಬರಿರುತ್ತಾರೆ ಅನ್ನುವುದೂ ಮರೆತು ಹೊದಂತಾಗಿತ್ತು ಗವಿಸಿದ್ದಪ್ಪನಿಗೆ. ಆದರೆ ಸುತ್ತಮುತ್ತಲೂ ಜನ ಇದ್ದೇ ಇರುತ್ತಾರೆ, ಮತ್ತೆ ಅಪ್ಪನ ಪ್ರಭಾವದಿಂದ ಬೇರೆ ಕಾಲೇಜುಗಳ ಮುಖ್ಯಸ್ಥರುಗಳು ಸಹಾಯ ಮಾಡೇ ಮಾಡುತ್ತಾರೆ ಎಂಬ ಭಂಡ ದೈರ್ಯದಿಂದ ಒಪ್ಪಿದ್ದ. ಡೀನ್ ಅನ್ನುವ ಕೆಲಸಕ್ಕೆ ಹೊಸದೊಂದು ಅರ್ಥವನ್ನೇ ಕೊಟ್ಟಿದ್ದ ಗವಿಸಿದ್ದಪ್ಪ. ಹೊಸ ವೈದ್ಯರುಗಳ ನೇಮಕಾತಿ, ನರ್ಸಿಂಗ್ ಸ್ಕೂಲ್, ಆಸ್ಪತ್ರೆಯ ಪೇಷೆಂಟುಗಳ ಸೆನ್ಸಸ್, ಕಾಲೇಜ್ ಹಾಸ್ಟೆಲ್ ನಿರ್ವಹಣೆ ಎಲ್ಲವನ್ನೂ ತಾನೇ ನಿರ್ವಹಿಸಬೇಕೆನ್ನುವ ಹಠ ಗವಿಸಿದ್ದಪ್ಪನಿಗೆ. ಅನಾಟಮಿ ವಿಭಾಗಕ್ಕೆ ಹೆಣ ತರಿಸುವುದಿರಲಿ, ಎನ್ ಆರ್ ಐ ಸೀಟಿನ ವಸೂಲಿಯಾಗಲೀ ಅಥವಾ ಆಪರೇಷನ್ ಥಿಯೇಟರ್‌ನ ವಾರ್ಡ್ ಬಾಯ್‌ನನ್ನು ಹುಡುಕುವುದಿರಲಿ ತನಗೆ ಗೊತ್ತಿಲ್ಲದೇ ಆಗಬಾರದೆಂದು ಅವನ ನಿಯಮ. ಅಪ್ಪ ಹೇಳಿಕೊಟ್ಟ ಆಡಳಿತದ ಮಂತ್ರವನ್ನು ಚಾಚೂತಪ್ಪದೇ ಪಾಲಿಸುತ್ತಿದ್ದ. ಯಾರನ್ನೂ ನಂಬಕೂಡದು. ಎಲ್ಲರಿಂದಲೂ ಸಲಹೆ ತೆಗೆದುಕೊಳ್ಳುವಂತೆ ಮಾಡಬೇಕು. ಆದರೆ ಅಂತಿಮ ನಿರ್ಣಯ ನಮ್ಮದಾಗಿರಬೇಕು. ಎಲ್ಲರೂ ಕಳ್ಳರು. ಡಾಕ್ಟರುಗಳನ್ನು ಆದಷ್ಟು ರಿಸೈಕಲ್ ಮಾಡುತ್ತಿರಬೇಕು. ಕರ್ನಾಟಕದಲ್ಲಿ ಡಾಕ್ಟರುಗಳಿಗೇನೂ ಬರವಿಲ್ಲ. ಪ್ರತಿಯೊಂದು ವಿಭಾಗದಲ್ಲಿ ಇಬ್ಬರೋ ಮೂರೋ ಜನ ನಂಬಿಗಸ್ತರನ್ನು ಖಾಯಂ ಆಗಿ ಇರಿಸಿಕೊಂಡು ಉಳಿದವರನ್ನು ಆರುತಿಂಗಳ ಮೇಲೆ ಇರದ ಹಾಗೆ ನೋಡಿಕೊಳ್ಳಬೇಕು. ಸ್ವಲ್ಪ ದುಡ್ಡು ಹೋದರೆ ಹೋಗಲಿ ಕೆಲಸದ ಕಾಂಟ್ರಾಕ್ಟನ್ನು ಒಳ್ಳೆ ಲಾಯರ್ರಿಂದ ಚೆನ್ನಾಗಿ ಬರೆಸಬೇಕು. ಈಗಿನ್ನೂ ಎಂಬಿಬಿ‌ಎಸ್ ಎಂಡಿ ಮಾಡಿರೋವರಿಗೆ ಲೇಬರ್ ಲಾ ಎಲ್ಲ ಗೊತ್ತಿರುವುದರಿಲ್ಲ. ಅವರನ್ನು ಹೇಗೆ ಆಟ ಆಡಿಸಿದರೂ ನಡೆಯುತ್ತದೆ. ನಿನಗೆ ಆಪ್ತರು ಅನ್ನಿಸಿದವರನ್ನು ಸ್ವಲ್ಪ ಚೆನ್ನಾಗಿ ನೋಡಿಕೊಳ್ಳುವುದು. ಆದರೆ ಜ್ಞಾಪಕವಿರಲಿ ಇಲ್ಲಿ ಯಾರೂ ಆಪ್ತರಲ್ಲ.- ಇತ್ಯಾದಿ ಇತ್ಯಾದಿ ಕೌಟಿಲ್ಯನ ಷಡ್ಯಂತ್ರ. “ರೀ, ಏಳ್ರೀ ಮೇಲೆ, ಬಂದು ಕುಂತ್ಬುಟ್ರು ಲೇಡೀಸ್ ಸೀಟಲ್ಲಿ, ಹಿಂದೆ ಹೋಗ್ರೀ, ಎಜುಕೇಟೆಡ್ ಆಗಿ ನೀವೇ ಹೀಗ್ಮಾಡಿದ್ರೆ ಹೇಗ್ರೀ” ಗೋವಿಂದು ಗದರಿದಾಗ ಕಣ್ಣುಬಿಟ್ಟ ಚಕ್ರಪಾಣಿ. “ಬನ್ನಿ ಮೇಡಂ ನೀವೀಕಡೆ ಬನ್ನಿ ಕುಂತ್ಕಳಿ” ಹೀಚು ಹಲ್ಲು ಬಿಟ್ಟು ಹೇಳಿದ್ದ ಬಾಳಣ್ಣ. ಚಕ್ರಪಾಣಿ ಎದ್ದು ಹಿಂದೆ ಹೋದ. ಬಸ್ಸು ಪೂರ್ತಿಯಾಗಿದ್ದರೂ ನಿಂತವನು ಇವನೊಬ್ಬನೇ. ತೀರ ಅವಮಾನವಾದಂತೆನ್ನಿಸಿತು. ಎಲ್ಲರೂ ತನ್ನನ್ನೇ ನೋಡುತ್ತಿದ್ದಾನೋ ಅನ್ನಿಸಿತು. ಒಮ್ಮೆ ದುರುಗುಟ್ಟಿ ನೋಡಿದ ಬಾಳಣ್ಣನನ್ನು. ” ಏನ್ರೀ ಹಂಗ್ನೋಡ್ತೀರಾ, ಗೋವಿಂದು, ಯಾರಪ್ಪಾ ಇವ್ನು ಒಸಬಾನ ಡಾಕುಟ್ರು. ಏನ್ ನಾವ್ನೋಡ್ದೇದ್ದಾ. ಸೊಲ್ಪ ನಂವಿಸಯ ಹೇಳಪಾ. ಇವತ್ರಾತ್ರಿ ಸಾಯೇಬ್ರ ಮನೆತಕ್ಕೆ ಹೋದಾಗ ಸರಿಮಾಡ್ಕಂಬರ್ಬೇಕಾ ಎಂಗೆ” ಕೆಕ್ಕರಿಸಿ ನೋಡಿ ಹೇಳಿ ಒಮ್ಮೆ ನಕ್ಕು ಬಸ್ಸಿನ ಕಿಟಕಿ ಸರಿಸಿ ತಲೆ ಪೂರ್ತಿ ಹೊರಗೆ ಹಾಕಿ ಬಗ್ಗಿ ಕ್ಯಾಕರಿಸಿ ಥೂ ಎಂದು ರಸ್ತೆಗೆ ಉಗಿದ ಬಾಳಣ್ಣ. ಅವುಡುಗಚ್ಚಿ ಕೆಂಪಾಗಿದ್ದ ಚಕ್ರಪಾಣಿಯನ್ನು ಕೆಳಗೆ ಎಳೆದು ಕೂಡಿಸಿದ್ದ ಸತೀಶ.” ಚಕ್ರಿ, ಹೋಗಲಿ ಬಿಡು, ಕೊಚ್ಚೆಗೆ ಕಲ್ಲು ಹಾಕೋ ಕೆಲಸ ಮಾಡಬೇಡ. ಅದರಿಂದ ಮರ್ಯಾದೆ ಹೋಗೋದು ನಿನ್ನದೇ. ಅದೂ ಅಲ್ಲದೆ ಗವಿಸಿದ್ದಪ್ಪನೂ ಬಾಳಣ್ಣನೂ ಪೂರ್ವಾಶ್ರಮದ ದೋಸ್ತುಗಳು. ಈಗ ಈ ಕೆಲಸದ ದರ್ದಿರೋದು ನಿನಗೆ. ನಿನ್ನ ಮಾತಿಗಿಂತ ಬಾಳಣ್ಣನ ಮಾತೇ ನಡೆಯೋದು ತಿಳ್ಕೋ” ” ಏ ಸತೀ,ಇವನ್ನೆಲ್ಲಾ ಸಹಿಸಿಕೊಂಡು ಎಷ್ಟು ದಿನದಿಂದ ಇದ್ಯಲ್ಲೋ, ನಿನಗೇನು ಮರ್ಯಾದೆ ಇಲ್ಲವೇನೋ. ಅಷ್ಟಕ್ಕೂ ಅವನೊಬ್ಬ ಡ್ರೈವರ್”- ಚಕ್ರಪಾಣಿ ಕೋಪದಿಂದ ಹೇಳಿದ. ” ನೋಡು, ಚಕ್ರಿ ಮರ್ಯಾದೆ ಎಲ್ಲಾ ಬಹಳ ದೊಡ್ಡ ಪದಗಳು ನಮ್ಮ ಕಾಲೇಜಲ್ಲಿ ಉಪಯೋಗಿಸಕ್ಕೆ. ಹೊರಗೆ ಹೋಗಿ ಕ್ಲಿನಿಕ್ ತೆಗೆದು ಸ್ವಲ್ಪ ದುಡ್ಡು ಮಾಡಿದ ಮೇಲೆ ಇವಕ್ಕೆಲ್ಲಾ ಅರ್ಥ ಹುಡುಕೋಣ ಅಂತಿದೀನಿ. ಈ ಕಾಲೇಜಲ್ಲಿ ಇರೋ ತನಕ ಹೊರಗೆ ಪ್ರಾಕ್ಟೀಸ್ ಮಾಡುವ ಕನಸು ಕಾಣಬೇಡ. ತಾಕತ್ತಿದ್ದರೆ ಕೆಲಸ ಬಿಟ್ಟು ಕ್ಲಿನಿಕ್ ಹಾಕು. ಪ್ರಾಕ್ಟೀಸ್ ಆಗೋಲ್ಲ ಅಂತ ನಾನೇನು ಹೇಳ್ತಾ ಇಲ್ಲ. ಆದ್ರೆ ಸ್ವಲ್ಪ ಟೈಂ ಬೇಕಪ್ಪ. ಒಂದು ಒಂದೂವರೆ ವರ್ಷ ನಿನ್ನನ್ನು ನೀನು ನೋಡ್ಕೊಳ್ಳೊ ಶಕ್ತಿ ಇದ್ರೆ ಇಲ್ಯಾಕೆ ಕೆಲಸ ಮಾಡ್ಬೇಕು. ನನಗೆ ಊರಿಗೆ ಮುಂಚೆ ಮದುವೆ ಮಾಡಿದ ನಮ್ಮಪ್ಪ. ಹೇಳದೇ ಕೇಳದೇ ಹುಟ್ಟಿಕೊಂಡಿದಾವೆ ಎರಡು. ಮುಂದಿನ ವರ್ಷ ಮೊದಲನೇದನ್ನು ಸ್ಕೂಲಿಗೆ ಕಳಿಸಬೇಕು. ” ಸತೀಶ ಹೇಳಿದ. ” ಅದು ನಿನ್ನ ಹಣೆಬರಹ. ನನಗೆ ಹಿಂದೆ ಮುಂದೆ ಯಾರೂ ಇಲ್ಲವಮ್ಮ. ಇದನ್ನೇ ಕಟ್ಟಿಕೊಂಡು ಕೂತಿಲ್ಲ ನಾನು. ನಿಮ್ಮ ಡೀನ್ ಗಾಂಚಲಿ ಮಾಡಿದ್ರೆ ಮುಖದ ಮೇಲೆ ಹೊಡೆದು ಆಚೆಗೆ ಹೋಗ್ತೀನಿ ನಾನು.” ಆವೇಶದಿಂದ ಹೇಳಿದ ಚಕ್ರಪಾಣಿ. ” ಶ್, ಚಕ್ರಿ, ಇದು ಬಸ್ಸು. ಸ್ವಲ್ಪ ನಿಧಾನ ಮಾಡು. ನಿನಗೆ ಈ ಕೆಲಸ ಮುಖ್ಯವಿಲ್ಲದಿರಬಹುದು.ನನಗೆ ತುಂಬಾ ಮುಖ್ಯ. ನಿನ್ನ ಜತೆಗೆ ನನ್ನನ್ನೂ ಓಡಿಸಿಬಿಡ್ತಾನೆ ಆ ಗವಿಸಿದ್ದಪ್ಪ. ” ಮೆಲ್ಲಗೆ ಹೇಳಿದ ಸತೀಶ. ” ಸತೀಶ, . ಏನಾಗಿದೆ ನಿನಗೆ. ಇಲ್ಲಿ ಬರೋ ಆರು ಸಾವಿರ ಸಂಬಳ ನೆಚ್ಚಿಕೊಂಡು ನಿನ್ನ ಹೆಂಡತಿ ಮಕ್ಕಳನ್ನು ಸಾಕ್ತೀನಿ ಅಂದರೆ ಸಾಧ್ಯಾನೇನೋ. ಇದು ನೀನೇ ನಿನಗೆ ಹಾಕಿಕೊಳ್ಳುತ್ತಿರೋ ಪರಿಧಿ. ನನ್ನ ಮಾತು ಕೇಳು. ಏನೂ ಆಗೊಲ್ಲವೋ. ಮೊದಲು ಈ ಕೆಲಸ ಬಿಡು. ಯಾವುದಾದರೂ ಬ್ಯಾಂಕಿನಲ್ಲಿ ಸಾಲಾನಾದ್ರೂ ತೆಗೆದುಕೊಂಡು ಒಂದು ಸಣ್ಣ ಕ್ಲಿನಿಕ್ ಹಾಕು. ನಿನಗೇನೋ ಕಡಿಮೆ. ಸರ್ಜನ್. ತಿಂಗಳಿಗೆ ಮೂರು ಕೇಸ್ ಆದರೂ ಪರವಾಗಿಲ್ಲ ಮೊದಲು. ನಮ್ಮ ರಾಜ್ಯದಲ್ಲಿ ಬೇಕಾದಷ್ಟು ಡಾಕ್ಟರಿರಬಹುದು. ಆದರೆ ಯಾರೂ ಉಪವಾಸ ಸಾಯುತ್ತಿಲ್ಲ.” ಬೆವರೊರೆಸುತ್ತಾ ಹೇಳಿದ್ದ ಚಕ್ರಪಾಣಿ. ” ಅದು ಎಲ್ಲರೂ ಹೇಳುವ ಮಾತೇ. ಹೀಗೆ ಹೇಳ್ತಾ ಹೇಳ್ತಾನೇ ನಮ್ಮ ಸರ್ಕಾರ ಇನ್ನೊಂದು ನಾಲ್ಕು ಕಾಲೇಜ್ ಸ್ಯಾಂಕ್ಷನ್ ಮಾಡಲಿ, ಆಮೇಲೆ ಆ ಪರಿಸ್ಥಿತಿಯೂ ಏನು ದೂರ ಇರೊಲ್ಲ” ” ಓ, ಕಂ ಆನ್, ಸಿಸ್ಟಂನ ಬೈಬೇಡ. ಅದರ ಇನ್ನೊಂದು ಮುಖ ನೋಡೋ. ಈಗ ಇಷ್ಟು ಕಾಲೇಜುಗಳು ಇರೋದರಿಂದಾನೇ ತಾನೇ ನೀನು, ನಾನು ಕೆಲಸ ಮಾಡ್ತಾ ಇರೋದು. ನೀನು ಪೂರಾ ಜೀವನ ಇಲ್ಲೇ ಸುಖವಾಗಿರ್ತೀನಿ ಅಂಥ ಕನಸು ಕಾಣುತ್ತಾ ಇರೋದು. ಸತೀ, ನಿಜ ಹೇಳು ಜೀವಮಾನ ಇಡೀ ಇಲ್ಲೇ ಇರ್ತೀನಿ ಅಂತ ನಿರ್ಧಾರ ಮಾಡಿದೀಯೋ ಅಥವಾ ಏನಾದರೂ ಪ್ಲಾನ್ ಬಿ ಇದೆಯೋ” ” ಸಾಯೋ ತನಕ ಗವಿಸಿದ್ದಪ್ಪನ ಪಾದ ಬಿಡಬಾರದು ಅಂತ ನಿರ್ಧಾರ ಮಾಡಿದ್ದೀನಿ ” ಕಣ್ಣು ಹೊಡೆದ ಸತೀಶ.” ಪ್ಲಾನ್ ಬಿ ಪ್ರಕಾರ ಎಲ್ಲಾ ಸರಿ ಹೋದರೆ ಮುಂದಿನ ವರ್ಷ ಇಷ್ಟು ಹೊತ್ತಿಗೆ ಮಸ್ಕಟ್ ನಲ್ಲಿರ್ತೀನಿ” ” ಅಯ್ಯೋ ಕಳ್ಳ ನನ್ನಮಗನೇ, ಎಲ್ಲಾ ರೆಡಿ ಮಾಡಿಕೊಂಡು ಇಷ್ಟು ಯಾಕೆ ಹೆದರ್ತೀಯೋ, ನನ್ನ ನೋಡು. ಬ್ಯಾಂಕಿನಲ್ಲಿ ಇರೋ ಎರಡೂವರೆ ಸಾವಿರ ರೂಪಾಯಿ ಬಿಟ್ರೆ ಏನೂ ಇಲ್ಲ. ನಾಳೆ ಕೆಲಸದಿಂದ ಹೊರಗೆ ಹಾಕಿದರೆ ಒಂದು ತಿಂಗಳು ಬದುಕಿರಬಹುದು ಅಷ್ಟೆ” “ಪ್ಲಾನ್ ಬಿ ಇನ್ನೂ ಪ್ಲಾನ್ ಎ ಆಗುವ ತನಕ ಸ್ವಲ್ಪ ಬಾಯಿ ಮುಚ್ಚಿಕೊಂಡಿರಪ್ಪ, ಮಾರಾಯ,ನಂದು ಬಿಡು.ಬರೀ ನಂದೇ ಕೇಳ್ತೀಯ, ಕಣ್ಣು ಮುಚ್ಕೊಂಡಿರೋ ಬೆಕ್ಕೇ, ನಿಂದೇನು ಸಮಾಚಾರ ಚಕ್ರೀ, ಏನೋ ಗಾಳೀಲಿದೆ ಸುದ್ದಿ, ಯಾರಪ್ಪ ಅದು ಮಿಸ್ಸ್ ವರ್ಜೀನಿಯ.” ” ಇನ್ನೂ ಏನೂ ಇಲ್ಲ ಕಣೋ, ಯಾರೋ ದೂರದ ರಿಲೇಟೀವ್, ಈಗ ಎಂಟು ವರ್ಷದ ಕೆಳಗೆ ಮನೆಯವರೆಲ್ಲರಿಗೂ ಗ್ರೀನ್ ಕಾರ್ಡ್ ಬಂತು ಎಂದು ಅಮೆರಿಕಕ್ಕೆ ಹೋದರಂತೆ. ಈಗ ಮೂರು ವಾರದ ರಜಾ ಅಂತೆ. ಅಪ್ಪ, ಮಗಳು ಇಬ್ಬರೇ ಬರುತ್ತಿದ್ದಾರೆ. ಅವರಪ್ಪನಿಗೆ ಕರ್ನಾಟಕದಿಂದ್ಲೇ ಹುಡುಗನ್ನ ತರಬೇಕು ಅಂತ. ಐ ಯಾಂ ನಾಟ್ ವೆರಿ ಪರ್ಟಿಕ್ಯುಲರ್ ಅಬೌಟ್ ಲೀವಿಂಗ್ ದ ಕಂಟ್ರಿ. ಹುಡ್ಗೀನ ನೋಡ್ಬೇಕೋ ಇಲ್ಲವೋ ಅಂತ ಯೋಚನೆ ಮಾಡ್ತಾ ಇದ್ದೀನಿ.” ” ಹುಡ್ಗೀನ ನೀನು ನೋಡ್ತಾ ಇದೀಯೋ ಅಥವಾ ಅವಳು ನಿನ್ನ ನೋಡ್ತಾ ಇದ್ದಾಳೋ. ನೋ ಅಫೆನ್ಸ್ ಚಕ್ರಿ. ಈ ನಿನ್ನ ಸ್ವಾಭಿಮಾನ ಎಲ್ಲಬರೀ ಬಾಳಣ್ಣ ಗೋವಿಂದು ಹತ್ರ ಮಾತ್ರಾನೋ ಅಥವಾ ಈ ವಿಷಯದಲ್ಲೂ ಇದೆಯೋ. ಬರೀ ನಿನ್ನನ್ನು ನೋಡೋಕೆ ಬರುತ್ತಿದ್ದಾಳೋ ಅಥವಾ ದೊಡ್ಡ ಲೈನೇ ಇದೆಯೋ” ಛೇಡಿಸಿದ ಸತೀಶ. ” ಇಲ್ವೋ ಮಗನೇ, ನಾನೊಬ್ಬನೇ ಈ ಇಂಡಿಯಾಕೆಲ್ಲಾ ಇರೋ ಗಂಡು. ನಿನಗೆ ಮದುವೆಯಾಗದಿದ್ರೆ ನಿನ್ನೂ ನೋಡೋಳೇನೋ. ಈಗ ಇಳಿ ಕೆಳಗೆ, ಅಟೆಂಡೆನ್ಸ್ ರಿಜಿಸ್ಟರ್ ಒಳಗೆ ಇಡ್ತಾ ಇದ್ದಾನೆ ಆ ಪಾಪಿ” ” ಸರಿ, ಹತ್ತೂವರೆಗೆ ಡೀನ್ ಸಾಹೇಬ್ರ ರೌಂಡ್ಸ್ ಆದ್ಮೇಲೆ ಬರ್ತೀನಿ ಡಿಪಾರ್ಟ್ಮೆಂಟಿನ ಹತ್ತಿರ. ಕಾಫಿಗೆ ಹೋಗೋಣ”- ಇಬ್ಬರೂ ತಮ್ಮ ತಮ್ಮ ಡಿಪಾರ್ಟ್ಮೆಂಟಿನ ಕಡೆಗೆ ಹೋದರು.
*
*
*
ಇದ್ದ ನಾಲ್ಕು ಜನ ಒಳರೋಗಿಗಳನ್ನು ನೋಡಿದ ಶಾಸ್ತ್ರ ಮಾಡಿ ಓಪಿಡಿಗೆ ಬಂದು ಕುಳಿತ ಚಕ್ರಪಾಣಿ. ಯಾರನ್ನೂ ಡಿಸ್ಚಾರ್ಜ್ ಮಾಡಬಾರದೆಂದು ಹೈಕಮಾಂಡಿನ ಅಪ್ಪಣೆಯಾಗಿತ್ತು. ಇರುವ ರೋಗಿಗಳ ಇಲ್ಲದಿರುವ ಕಾಯಿಲೆಯನ್ನು ಚಿಕಿತ್ಸೆ ಮಾಡುವ ನಾಟಕದ ಜೊತೆ ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಬೇರೆ ಹೇಳಿಕೊಡಬೇಕಾಗಿತ್ತು. ಆಸ್ಪತ್ರೆ ಶುರುವಾಗಿ ಎರಡೇ ವರ್ಷಗಳಾಗಿದ್ದರಿಂದ ಹೊರ ಹಾಗೂ ಒಳರೋಗಿಗಳ ಸಂಖ್ಯೆ ಇನ್ನೂ ನಿಯಮಿತ ಗಡಿಯನ್ನು ಮುಟ್ಟಿರಲಿಲ್ಲ. ೬೭೫ ಬೆಡ್ಡಿನ ಆಸ್ಪತ್ರೆಯಲ್ಲಿ ಎಂಬತ್ತರಿಂದ ನೂರ ಒಳರೋಗಿಗಳಿದ್ದರೆ ಹೆಚ್ಚು. ಆದರೆ, ಶೇಕಡಾ ಎಪ್ಪತ್ತರಷ್ಟು ವಿದ್ಯಾರ್ಥಿಗಳು ಕ್ಯಾಪಿಟೇಶನ್ ಕೊಡುವವರಾದ್ದರಿಂದ ಆಸ್ಪತ್ರೆ ನಡೆಸಲು ಯಥೇಚ್ಚವಾಗಿ ದುಡ್ಡೇನೋ ಬರುತ್ತಿತ್ತು. ಆದರೆ, ಆಸ್ಪತ್ರೆ, ಕಾಲೇಜು, ಹಾಸ್ಟೆಲ್ಲುಗಳ ಕಟ್ಟಡಕ್ಕೆ ಸುಮಾರು ಸಾಲ ಮಾಡಿದ್ದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಗವಿಸಿದ್ದಪ್ಪನಿಗೆ ತುಂಬಾ ಮುಖ್ಯವಾಗಿತ್ತು. ಊರಲ್ಲಿರುವ ಡಾಕ್ಟರುಗಳನ್ನೆಲ್ಲಾ ಕರೆದು ತಂದು ಅಸಿಸ್ಟೆಂಟ್ ಪ್ರೊಫೆಸರಾಗಿಯೋ, ಪ್ರೊಫೆಸರಾಗಿಯೋ ಮಾಡಿದ್ದರೂ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಿರಲಿಲ್ಲ. ಡಾಕ್ಟರುಗಳು ಆಸ್ಪತ್ರೆಗೆ ಬಂದರೂ ತಮ್ಮ ರೋಗಿಗಳನ್ನು ಸಾರಾಸಗಟಾಗಿ ಆಸ್ಪತ್ರೆಗೆ ತಮ್ಮ ಜತೆಗೇ ಕರೆತರಲು ತಯಾರಿರಲಿಲ್ಲ. ಪ್ರತಿ ತಿಂಗಳ ಮೀಟಿಂಗಿನಲ್ಲಿ ಊರಿನ ಹಾಗೂ ಸುತ್ತಮುತ್ತಲಿನ ಊರಿನಿಂದ ಹೇಗೆ ರೋಗಿಗಳನ್ನು ಆಸ್ಪತ್ರೆಗೆ ಬರಲು ಒಲಿಸಬೇಕೆನ್ನುವುದರ ಬಗ್ಗೆ ಬಿಸಿಬಿಸಿ ಚರ್ಚೆಯಾದರೂ ಉಪಯೋಗವಾಗಿರಲಿಲ್ಲ. ಅದಲ್ಲದೆ, ಈಗ ಇನ್ನು ಮೂರು ತಿಂಗಳಿಗೆ ಮೆಡಿಕಲ್ ಕೌನ್ಸಿಲ್ಲಿನವರು ಹಂಗಾಮಿಯಾಗಿ ಅಂಗೀಕರಿಸಲು ತಪಾಸಣೆಗೆ ಬರುತ್ತಿದ್ದಾರೆಂಬ ಸುದ್ದಿ ಕೇಳಿದ ಮೇಲಂತೂ ಗವಿಸಿದ್ದಪ್ಪನಿಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಕೌನ್ಸಿಲ್ಲಿನವರಿಗೆ ಕೊಡುವುದು ಬಿಡುವುದು ಎಷ್ಟೇ ಇದ್ದರೂ ಕನಿಷ್ಠಮಿತಿಯನ್ನಾದರೂ ಕಾಗದದ ಮೇಲೆ ತೋರಿಸಲೇಬೇಕಿತ್ತು. ಡಾಕ್ಟರುಗಳ ಮೆಲೆ ಒತ್ತಡ ತೀರ ಜಾಸ್ತಿಯಾಗಿತ್ತು. ಹೆಚ್ಚು ರೋಗಿಗಳನ್ನು ಅಡ್ಮಿಟ್ ಮಾಡಿ, ಅಥವಾ ಅಡ್ಮಿಟ್ ಆದ ರೋಗಿಗಳನ್ನು ಡಿಸ್ಚಾರ್ಜ್ ಮಾಡದೆ ಆಸ್ಪತ್ರೆಯಲ್ಲಿರಿಸಿಕೊಂಡು “ಒಳರೋಗಿದಿನ”ಗಳನ್ನು ಹೆಚ್ಚು ಮಾಡುವುದು ಪ್ರತಿಯೊಬ್ಬ ಡಾಕ್ಟರನ ಆದ್ಯ ಕರ್ತವ್ಯವಾಗಿತ್ತು. ಓಪಿಡಿಗೆ ಹೋಗಿ ಕೂತ ಚಕ್ರಪಾಣಿ. ಕೂತು ಆಕಳಿಸಿ ಆಕಳಿಸಿ ಸಾಕಾಗಿತ್ತು. ಪಕ್ಕದ ರೂಮಿನಲ್ಲಿ ಡಾ:ನಾಯಕ್ ಕೂತಿದ್ದರು. ವಾರಕ್ಕೆ ಮೂರುದಿನ ಬಂದು ಹುಡುಗರಿಗೆ ಪಾಠ ಹೇಳಿ ಹೋಗುತ್ತಿದ್ದರು. ಮೈಸೂರು ಮೆಡಿಕಲ್ ಕಾಲೇಜಿನ ಮೆಡಿಸಿನ್ ಪ್ರೊಫೆಸರರಾಗಿ ರಿಟೈರಾಗಿ ಎರಡು ವರ್ಷವಾಗಿತ್ತು. ಮೈಸೂರಿನಲ್ಲಿ ಪ್ರಾಕ್ಟೀಸಾಗದೇ ಇದ್ದಾಗ ಮನೆಯಲ್ಲಿ ಕೂರಲು ಬೇಜಾರೆಂಬ ನೆವದಿಂದ ಈ ಕಾಲೇಜು ಸೇರಿದ್ದರು. ಒಂದು ದಿನವೂ ಯಾವ ರೋಗಿಯ ಮೇಲೆ ಕೈಯಿಟ್ಟು ನೋಡುವ ಗೋಜಿಗೇ ಹೋಗುತ್ತಿರಲಿಲ್ಲ. ಬಂದವರೇ ” ರೀ ಚಕ್ರಪಾಣಿ, ಯಾವುದಾದರೂ ಇಂಟರೆಸ್ಟಿಂಗ್ ಕೇಸಿದೆಯೇನ್ರೀ, ಹುಡುಗರಿಗೆ ತೋರಿಸಕ್ಕೆ” ಎಂದವರೇ ಮೂರುಗಂಟೆ ಕೊರೆದು ಬಸ್ಸು ಹತ್ತಿ ವಾಪಸ್ ಹೋಗುತ್ತಿದ್ದರು. ಅರ್ಥವಾಗುತ್ತದೋ ಇಲ್ಲವೋ, ಒಟ್ಟು ಮೂರು ಗಂಟೆ ಅವರೆದುರು ಕುರಿಯರೀತಿ ನಿಂತಿರುವುದು ಹುಡುಗರಿಗೆ ಅಭ್ಯಾಸವಾಗಿಹೋಗಿತ್ತು. ಇವರ ಯುನಿಟ್ಟಿನಲ್ಲಿ ಇದ್ದವರು ಇಬ್ಬರೇ. ಆ ಮೆಡಿಕಲ್ ಕಾಲೇಜು ಇನ್ನೂ ಹೌಸ್ ಸರ್ಜನುಗಳನ್ನು ತಯಾರು ಮಾಡಿಲ್ಲದೇ ಇರುವುದರಿಂದ ಚಕ್ರಪಾಣಿಯೇ ಮೇಲಿನ ಕೆಳಗಿನ ಎಲ್ಲಾ ಕೆಲಸಗಳನ್ನು ಮಾಡಬೇಕಿತ್ತು. ಎಲ್ಲದಕ್ಕೂ ತನ್ನ ಹಣೆಬರಹವನ್ನು ಶಪಿಸುವುದನ್ನು ಬಿಟ್ಟು ಚಕ್ರಪಾಣಿಗೆ ಬೇರೆ ದಾರಿಯಿರಲಿಲ್ಲ. ಇವೆಲ್ಲವೂ ಸ್ವಲ್ಪ ಸಮಯ ಮಾತ್ರ ಅಂದುಕೊಂಡು ಎಲ್ಲವನ್ನು ಸಹಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದ. ಸುಷ್ಮಾಳ ಬಗ್ಗೆ ಏನು ಮಾಡಬೇಕೆಂದು ಇನ್ನೂ ತಿಳಿದಿರಲಿಲ್ಲ ಚಕ್ರಪಾಣಿಗೆ. ದೇಶ ಬಿಡಬೇಕೆಂದು ಆತ ಎಂದೂ ಯೋಚಿಸಿರಲಿಲ್ಲ. ಮೇಲಾಗಿ ಅವನಿಗೆ ಇಪ್ಪತ್ತೇಳು ವರ್ಷಗಳಾಗಿತ್ತು. ಈಗ ಅಮೆರಿಕಕ್ಕೆ ಹೋಗಿ ಎಂ ಎಲ್ ಇ ಮುಗಿಸಿ ರೆಸಿಡೆನ್ಸಿ ಮುಗಿಸುವುದರ ಹೊತ್ತಿಗೆ ಮೂವತ್ತೋ, ಮೂವತ್ತೊಂದೋ ಆಗಿರುತ್ತದೆ. ಆಮೇಲೆ ಮೂರುವರ್ಷ ಫೆಲೋಶಿಪ್ಪು. ಪ್ರಾಕ್ಟೀಸ್ ಶುರುಮಾಡುವಹೊತ್ತಿಗೆ ಮೂವತ್ತೈದಾಗಿರುತ್ತದೆ. ಅದೂ ಸುಷ್ಮಾ ಎಲ್ಲದಕ್ಕೂ ಹೊಂದಿಕೊಂಡು ಹೋದರೆ ಮಾತ್ರ. ಕಾಲೇಜು ಮುಗಿಸಿ ಯಾವುದೋ ಆಸ್ಪತ್ರೆಯಲ್ಲಿ ಸೋಷಿಯಲ್ ವರ್ಕರಾಗಿ ಕೆಲಸ ಮಾಡುತ್ತಿದ್ದಾಳಂತೆ. ಇದುವರೆಗೂ ಚಕ್ರಪಾಣಿ ಕೆಲಸ ಮಾಡಿದ ಆಸ್ಪತ್ರೆಗಳಲ್ಲಿ ಸೋಷಿಯಲ್ ವರ್ಕರ್ ಅನ್ನುವರೊಬ್ಬರೇ ಇರಲಿಲ್ಲ. ಅಮೆರಿಕಾದ ವೈದ್ಯ ಪದ್ಧತಿಯ ಬಗ್ಗೆ ಪೂರಾ ಜ್ಞಾನವಿಲ್ಲದ ಅವನಿಗೆ ಸುಷ್ಮಾಳೊಂದಿಗೆ ಫೋನಿನಲ್ಲಿ ಮಾತನಾಡಿದ ಮೇಲೆ ಈ ಸೋಷಿಯಲ್ ವರ್ಕರೆಂದರೆ ಕೆಲಸಕ್ಕೆ ಬಾರದ ಕೆಲಸವೆಂದೆನಿಸಿತ್ತು. ” ವಿ ವರ್ಕ್ ಆಸ್ ಲೈಯಾಸನ್ ಬಿಟ್ವೀನ್ ಪೇಷೆಂಟ್ಸ್ ಅಂಡ್ ದ ಸಿಸ್ಟೆಂ ಯು ನೋ. ಇಲ್ಲಿನ ಪರಿಸರ ಅಲ್ಲಿಗಿಂತಾ ತುಂಬಾ ಬೆರೆಯಾಗಿರುವುದರಿಂದ ನನ್ನ ಕೆಲಸ ನಿಮಗೆ ಅರ್ಥ ಆಗುವುದು ಸ್ವಲ್ಪ ಕಷ್ಟ. ರೋಗಿಗಳ ಮನೆಯ ಸ್ಥಿತಿಗತಿಗಳನ್ನು ಕೂಲಂಕಶವಾಗಿ ಅಧ್ಯಯನ ಮಾಡುವುದು, ಡಿಸ್ಚಾರ್ಜ್ ಪ್ಲಾನಿಂಗ್, ಮ್ಯಾರೇಜ್ ಕೌನ್ಸೆಲಿಂಗ್, ಇತ್ಯಾದಿ, ಇತ್ಯಾದಿ” ಒಂದೇ ಸಮನೇ ಬಡಬಡಿಸಿದ್ದಳು. ತನಗಿಂತ, ತನ್ನ ಮನೆಯವರಿಗಿಂತ ತನ್ನ ಕೆಲಸದ ಬಗ್ಗೆಯೇ ಹೆಚ್ಚು ಹೇಳಿದ್ದಳು. ಚಕ್ರಪಾಣಿಗೆ ಅನ್ನಿಸಿತ್ತು ನಮ್ಮ ಆಸ್ಪತ್ರೆಯಲ್ಲಿ ನಾನೇ ಡಾಕ್ಟರು, ಸೋಷಿಯಲ್ ವರ್ಕರು, ಡಿಸ್ಚಾರ್ಜ್ ಪ್ಲಾನರು, ಡಯಟಿಶಿಯನ್ನು ಎಲ್ಲ ಎಂದು. ಅಮ್ಮ ಸುಷ್ಮಾಳ ಬಗ್ಗೆ ಹೇಳಿದಾಗ ಬೇಡವೆಂದು ತಳ್ಳಿ ಹಾಕಲು ಮನಸ್ಸು ಬಂದಿರಲಿಲ್ಲ.” ಸುಮ್ಮನೇ ಮಾತಾಡೋ, ಅವಳು ಒಪ್ಪಿಕೊಂಡಮೇಲೆ ತಾನೇ ಮುಂದಿನದು” ಅಂದಿದ್ದಳು ಅಮ್ಮ. ಮಾತು ಮುಖಕ್ಕೆ ಹೊಡೆದಂತೆ ಇದ್ದರೂ ತನ್ನ ಸದ್ಯದ ಪರಿಸ್ಥಿತಿಯಲ್ಲಿ ಅದು ತಪ್ಪೇನೂ ಅನ್ನಿಸಲಿಲ್ಲ. ” ಬೇಜಾರು ಮಾಡ್ಕೋಬೇಡ ಕಣೊ ಚಕ್ರಿ, ಎಷ್ಟಾದರೂ ಹೊರಗಿನವಳು ಹುಡುಗಿ. ಅವಳನ್ನು ಮದುವೆ ಮಾಡ್ಕೋಳ್ಳೊದರಿಂದ ನಿನಗೂ ಲಾಭ ಇದೆ. ಸುಮ್ಮನೆ ಒಣ ಜಂಭ ಮಾಡಬೇಡ” ಬದುಕುವ ದಾರಿ ಹೇಳಿದ್ದಳು ಅಮ್ಮ. ತನ್ನ ಆದರ್ಶ,ವಿಶ್ವಾಸಗಳೆಲ್ಲ ಕುಸಿಯುತ್ತಿದೆ ಅನ್ನಿಸಿತ್ತು. ಸ್ವಂತ ಕ್ಲಿನ್ನಿಕ್ಕು ಹಾಕಲು ಯಾಕೋ ಮನಸ್ಸು ಬರುತ್ತಿರಲಿಲ್ಲ. ಗವಿಸಿದ್ದಪ್ಪನ ಕಾಲೇಜಿನಲ್ಲಿ ಇನ್ನೊಂದೆರಡು ವರ್ಷವೇನಾದರೂ ಇದ್ದರೆ ಬೇರೆ ಏನನ್ನೂ ಮಾಡಲು ಸಾದ್ಯವಾಗುವುದು ಕನಸಿನ ಮಾತೇ ಎಂಬುದು ಅವನಿಗೆ ಈಗಾಗಲೇ ಗ್ಯಾರಂಟಿಯಾಗಿತ್ತು. ಇದಕ್ಕಿಂತಾ ಹೆಚ್ಚಿನದನ್ನೇನಾದರೂ ಮಾಡಬೇಕು, ತನ್ನಲ್ಲಿ ಅಶಕ್ತಿಯಿದೆ ಅನ್ನಿಸಿದ್ದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಗದೆ ಒದ್ದಾಡುತ್ತಿದ್ದ. ಇರುವ ಎರಡೋ ಮೂರೋ ಕಾರ್ಡಿಯಾಲಜಿ ಸೀಟಿಗೆ ಎರಡು ವರ್ಷ ಕೂತು ಓದಲು ಅವನಿಗೆ ಸಾಧ್ಯವಿರಲಿಲ್ಲ.ಇಷ್ಟರ ಮೆಲೆ ಒಂದಾದಮೇಲೆ ಒಂದರಂತೆ ಬರುತ್ತಿರುವ ಸಂಬಂಧಗಳು. ಏನೋ ಕಾರಣ ಹೇಳಿಮುಂದೆ ತಳ್ಳುತ್ತಾ ಬಂದಿದ್ದ. ಆದರೆ ಯಾಕೋ ಏನೋ ಈ ನಡುವೆ ಅವನ ಬಗ್ಗೆ ಅವನಿಗೇ ಅನುಮಾನವಾಗತೊಡಗಿತ್ತು. ತನ್ನ ಇನ್ಸೆಕ್ಯುರಿಟಿ ಯಾವ ಸಂದರ್ಭದಲ್ಲಿ ದೊಡ್ಡವರ ಒತ್ತಾಯಕ್ಕೆ ತನ್ನನ್ನು ಮಣಿಸಿ ಯಾರನ್ನೋ ಕಟ್ಟಿಕೊಳ್ಳುವ ಹಾಗೆ ಮಾಡುತ್ತದೇನೋ ಎಂದು ಹೆದರಿಕೆಯಾಗುತ್ತಿತ್ತು. ಮದುವೆಯ ಬಗ್ಗೆ ತಾನು ಮದುವೆ ಆಗುವ ಹುಡುಗಿಯ ಬಗ್ಗೆ ಅವನಿಗಿದ್ದಿದ್ದ ಆಸೆಗಳೆಲ್ಲಾ ತಣ್ಣಗಾಗತೊಡಗಿದ್ದವು. ಇದಲ್ಲದೆ ಒಂದಿಬ್ಬರು ಹುಡುಗಿಯರು ಇವನನ್ನು ಇನ್ನೂ ” ಸೆಟಲ್” ಆಗಿಲ್ಲವೆಂದು ನಿರಾಕರಿಸಿದಮೇಲೆ ಇವನ ವಿಶ್ವಾಸ ಕುಗ್ಗುತ್ತಾ ಬಂದಿತ್ತು. ತನ್ನ ಭವಿಷ್ಯ ಭದ್ರವಾಗುವತನಕ ಮದುವೆಯ ಸುದ್ದಿ ಎತ್ತಬಾರದೆಂದುಕೊಂಡಿದ್ದ. ಆದರೆ ತನ್ನ ಕೆಲವು ಸಹೋದ್ಯೋಗಿಗಳನ್ನು ನೋಡಿ ಸ್ವಲ್ಪ ಹೆದರಿಕೆಯೇ ಆಗಿತ್ತು. ಇವನಿಗಿಂತ ವಯಸ್ಸಿನಲ್ಲಿ ಹದಿನೈದು ಇಪ್ಪತ್ತು ವರ್ಷ ದೊಡ್ಡವರೂ ಕೂಡ ಆ ಗವಿಸಿದ್ದಪ್ಪನ ಕಾಲೇಜಿನಲ್ಲಿ ಹೆಣಗಾಡುವುದು ಕಂಡು ತಾನೂ ಹಾಗೇ ಎಲ್ಲಿ ಆಗಿಬಿಡುತ್ತೇನೋ ಎಂದು ಒಮ್ಮೊಮ್ಮೆ ಭಯವಾಗುತ್ತಿತ್ತು. ಬಹಳ ಇಷ್ಟಪಟ್ಟು ಸೇರಿದ ಈ ಡಾಕ್ಟರುಗಿರಿ ಯಾಕೋ ಮೈಚಳಿಯನ್ನುಂಟುಮಾಡುತ್ತಿತ್ತು. ಈ ಅಲೆಯಲ್ಲೇ ಬಂದಿತ್ತು ಸುಷ್ಮಾಳ ಹೆಸರು. ಹುಟ್ಟಿ ಬೆಳೆದಿದ್ದೆಲ್ಲಾ ಮೈಸೂರಿನಲ್ಲಿಯೇ, ಹದಿನೇಳನೆಯ ವಯಸ್ಸಿಗೆ ಅಮೆರಿಕಕ್ಕೆ ಹೋಗಿದ್ದಾಳೆ. ಆದ್ದರಿಂದ ಪೂರ ಅಲ್ಲಿನಂತಿರಲಾರಳು. ಅಪ್ಪ ಅಮ್ಮನೂ ತುಂಬಾ ಸಂಪ್ರದಾಯಸ್ಥರೇ. ಅಪ್ಪ ಅಲ್ಲಿಯ ಕನ್ನಡಕೂಟದ ಅಧ್ಯಕ್ಷ ಬೇರೆ ಅಂತೆ. ನಮ್ಮ ದೇಶ ನಮ್ಮ ಭಾಷೆಯ ಮೇಲೆ ಅಭಿಮಾನವಿರೋ ಜನ. ಒಮ್ಮೆ ನೋಡುವುದರಲ್ಲಿ ತಪ್ಪೇನಿಲ್ಲವೆಂದು ಅಮ್ಮ ಹೇಳಿದಾಗ ಇವನೂ ಇರಲಿ ಎಂದು ಒಪ್ಪಿದ್ದ. ಒಮ್ಮೆ ಫೋನಿನಲ್ಲಿ ಮಾತೋ ಆಡಿಯಾಗಿತ್ತು. ಸ್ವಲ್ಪ ಅಮೆರಿಕೀಕರಣವಿದ್ದರೂ ಕನ್ನಡ ಚೆನ್ನಾಗಿಯೇ ಮಾತನಾಡುತ್ತಾಳೆ ಅನ್ನಿಸಿತ್ತು. ಆದರೆ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ತನ್ನ ಮೇಲೆ ತನಗೇ ಹೇಸಿಗೆಯದಂತನಿಸುತ್ತಿತ್ತು. ಯಾವುದನ್ನು ತಾನು ಮಾಡಬಾರದು ಎಂದು ಜೀವನವಿಡೀ ಅಂದುಕೊಂಡಿದ್ದನೋ ಆ ಬಲೆಯಲ್ಲಿ ತನಗರಿವಿಲ್ಲದೇ ಹಂತಹಂತವಾಗಿ ಸಿಗುತ್ತಿದ್ದೇನೆ ಅನ್ನಿಸಿತು. ಮೇಲಾಗಿ ಸುಷ್ಮಾ ತನ್ನನ್ನೊಪ್ಪುವುದು ತಾನು ಅವಳನ್ನೊಪ್ಪುವುದಕ್ಕಿಂತ ತೀರ ಮುಖ್ಯವಾದ್ದರಿಂದ ಇದೊಂದು ನಾಟಕವೆನ್ನಿಸಿತ್ತು. ಗಂಟೆ ಹತ್ತಾಗತೊಡಗಿತ್ತು. ಓಪಿಡಿಯಲ್ಲಿ ನಾಲ್ಕು ಜನರನ್ನು ನೋಡಿದ್ದ. ಹೊರಗೆ ಯಾರೂ ಕಾಣಿಸಲಿಲ್ಲ. ಸರಿ, ಸತೀಶನ ಡಿಪಾರ್ಟ್ ಮೆಂಟಿನ ಕಡೆಗೆ ಹೋಗೋಣವೆಂದು ಕೋಟು ತೆಗೆದು ಖುರ್ಚಿಗೆ ಹಾಕಿ, ಖುರ್ಚಿ ಹಿಂದೆ ಸರಿಸಿ ಎದ್ದ. “ನಮಸ್ಕಾರಾ, ಸಾ” ಬಗಿಲಲ್ಲಿ ನಿಂತಿದ್ದ, ನರಸಿಂಹ. ನರಸಿಂಹ, ಪುಟ್ಟರಾಜು ಗವಿಸಿದ್ದಪ್ಪನ ಕರಟಕ, ದಮನಕರು. ಏನು ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದ ಚಕ್ರಪಾಣಿ.. “ಸಾಯೇಬ್ರು ಈ ಐದು ಕೇಸ್ ಶೀಟು ಬರಿಸ್ಕೊಂಬಾ ಅಂತ ಹೇಳಿದ್ರು ಸಾ. ಇನ್ಮೇಲೆ ಕೌನ್ಸಿಲ್ಲಿನವರು ಇನ್ಸ್ ಪೆಕ್ಸನ್ ಮಾಡೋಗಂಟ ದಿನ ಐದು ಕೇಸ್ ಶೀಟ್ ತರ್ತೀನಿ, ಸಾ. ಈ ರಿಜಿಸ್ಟರ್ ಗೆ ಒಂದ್ ಸೈನ್ ಮಾಡಿ. ಪೂರಾ ಮಾಡಿ ಆದ ಮ್ಯಾಕೆ ಸಾಯೇಬ್ರ ಆಪೀಸಿನ ತಾಗೆ ತಂದು ಮಡಗ್ಬಿಡಿ ಸಾ” ಅರ್ಥವಾಗಲಿಲ್ಲ, ಚಕ್ರಪಾಣಿಗೆ. ರಿಜಿಸ್ಟರ್ ಗೆ ಸೈನ್ ಹಾಕಿ ಕೇಸ್ ಶೀಟುಗಳನ್ನು ತೆಗೆದುಕೊಂಡ. ತಾನು ಇದುವರೆವಿಗೂ ನೋಡಿಲ್ಲದೇ ಇರುವ ರೋಗಿಗಳ ಹೆಸರಿನಲ್ಲಿರುವ ಕೇಸ್ ಶೀಟುಗಳು. ಪ್ರತಿಯೊಂದೂ ಮೂರು ತಿಂಗಳ ಹಿಂದಿನ ತಾರೀಖಿನಲ್ಲಿದೆ. ಆಸ್ಪತ್ರೆಗೆ ಅಡ್ಮಿಟ್ ಆದ ದಿನ, ಡಿಸ್ಚಾರ್ಜ್ ಆದ ದಿನ, ಕಾಯಿಲೆಯ ಹೆಸರು ಎಲ್ಲ ಮುಂಚೆಯೇ ಭರ್ತಿಯಾಗಿದೆ. ಕಾಯಿಲೆಯ ಡಯಾಗ್ನಸಿಸ್ ಗೆ ತಕ್ಕ ಹಾಗೆ ಒಳಗೆ ಖಾಲಿ ಇರುವ ಜಾಗದಲ್ಲಿ ತಾನು ಕಥೆ ಬರೆಯಬೇಕು. ಇರದೇ ಇರುವ ರೋಗಿಯನ್ನು ಸೃಷ್ಟಿಸಿ ಕಳೆದ ಮೂರು ತಿಂಗಳ ಆಸ್ಪತ್ರೆಯ ಸೆನ್ಸಸನ್ನು ಏರಿಸಬೇಕು. ಅದೂ ಒಂದು ದಿನ ಅಲ್ಲ. ಈ ತಿಂಗಳು ಪೂರ್ತಿ, ಮುಂದಿನ ತಿಂಗಳು ಮೆಡಿಕಲ್ ಕೌನ್ಸಿಲ್ಲಿನವರು ಬರುವ ತನಕ ಈ ಕೆಲಸ ಮಾಡಬೇಕು. ಇರೊ ಐವತ್ತು ಜನ ಡಾಕ್ಟರುಗಳು ದಿನಾ ಐದು ಕೇಸ್ ಶೀಟು ಬರೆದರೆ ಆಸ್ಪತ್ರೆಗೆ ಪ್ರತಿದಿನ ಇನ್ನೂರೈವತ್ತು ರೊಗಿಗಳು ಅಡ್ಮಿಟ್ ಆದಂತಾಗುತ್ತದೆ. ಚಕ್ರಪಾಣಿಗೆ ಮೈ ಉರಿದುಹೋಯಿತು. ” ಏ, ನರಸಿಂಹಾ,” ಕೂಗಿದ. ಹೊರಗೆ ಕಾರಿಡಾರಿನಿಂದ ತಿರುಗಿ ನೋಡಿದ ನರಸಿಂಹ. ” ನಿಮ್ಮ ಸಾಹೇಬ್ರಿಗೆ ಹೇಳು. ನನ್ಕೈಲಿ ಈ ಕೆಲಸ ಮಾಡೋಕ್ಕಾಗೋಲ್ಲ ಅಂತ”. ” ಯಾಕ್ರಿ ಆಗೋಲ್ಲ, ಆಸ್ಪತ್ರೆಯಲ್ಲಿರೋ ಡಾಕುಟ್ರುಗಳಲ್ಲ ಬಾಯ್ಮುಚೊಂಡು ಬರೀತಿಲ್ವಾ ಈಗ, ನೀವು ಯಾಕೆ ಬರೀಬಾರದು” ನರಸಿಂಹ ನಿಂತಲ್ಲಿಂದಲೇ ಹೇಳಿದ. ” ಹೇಳಿದಷ್ಟು ಕೇಳೋ ಅಂದರೆ, ನಾನು ಏನ್ಮಾಡಬೇಕು, ಮಾಡಬಾರದು ಅಂತ ನನಗೆ ಚೆನ್ನಾಗಿ ಗೊತ್ತಿದೆ. ಸುಮ್ಮನೆ ತೊಗೊಂಡು ಹೋಗು” ಸಿಟ್ಟನ್ನು ತಡೆಯುತ್ತಾ ಹೇಳಿದ. ” ಅದೆಲ್ಲಾ ಅಗೊಲ್ಲ, ಬೇಕಾರೆ ನೀವೇ ಹೋಗಿ ಸಾಯೇಬ್ರತ್ರ ಮಾತಾಡಿ, ” ಮುಖ ತಿರುಗಿಸಿ ಹೊರಡಲು ಸಿದ್ಧನಾದ ನರಸಿಂಹ. ” ತೊಗೊಳ್ಳೋ ಅಂದ್ರೆ ಎಷ್ಟೋ ಮಾತಾಡೋದು” ಎಂದು ಕೇಸ್ ಶೀಟುಗಳನ್ನು ತೆಗೆದು ಕಾರಿಡಾರಿಗೆ ಎಸೆದ. ಕೋಪದಿಂದ ಭುಸುಗುಟ್ಟುತ್ತಿದ್ದ, ಚಕ್ರಪಾಣಿ. “ಈಸ್ ದೇರ್ ಅ ಪ್ರಾಬ್ಲಂ” ತಮ್ಮ ರೂಮಿನಿಂದ ಹೊರಗೆ ಮದರು ಡಾ: ನಾಯಕ್. ಹೊರಗೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕೇಸ್ ಶೀಟುಗಳು ಹಿಂದಿನ ದಿನ ನಡೆದ ಡಿಪಾರ್ಟ್ಮೆಂಟ್ ಹೆಡ್ಡುಗಳ ಮೀಟಿಂಗಿನ ಹಿನ್ನೆಲೆಯಲ್ಲಿ ಆಗಿದ್ದು ಏನು ಎಂದು ಅರ್ಥವಾಗುವುದರಲ್ಲಿ ಕಷ್ಟವಾಗಲಿಲ್ಲ, ನಾಯಕರಿಗೆ. ” ವಾಟ್ ಈಸ್ ದಿಸ್ ಚಕ್ರಪಾಣಿ, ನರಸಿಂಹೂ, ನೀನು ಹೋಗಪ್ಪ. ನಾನೆಲ್ಲಾ ಸರಿಮಾಡ್ತೀನಿ. ಒಂದ್ನಿಮಿಷ ನರಸಿಂಹೂ, ಬಾ‌ಇಲ್ಲಿ” ಎಂದು ಹತ್ತಿರ ಕರೆದು ಕಿವಿಯಲ್ಲಿ”ಈಗ ನೀನು ಸುಮ್ಮನಿರು. ಸಾಹೇಬ್ರ ಹತ್ರ ಏನೂ ಹೇಳ್ಬೇಡ. ಸಮಯ ಸಿಕ್ಕಾಗ ನಾನೇ ಹೇಳ್ತೀನಿ. ಕೇಸ್ ಶೀಟ್ ಬರೆಸೋ ಜವಾಬ್ದಾರಿ ನನ್ನದು” ಎಂದು ಪುಸಲಾಯಿಸಿ ನೆಲದ ಮೇಲೆ ಬಿದ್ದಿದ್ದ ಕೇಸ್ ಶೀಟುಗಳನ್ನು ಹೆಕ್ಕತೊಡಗಿದರು. ನೋಡಲಾರದೇ ತಾನೂ ಆರಿಸತೊಡಗಿದ, ಚಕ್ರಪಾಣಿ. “ಹೇಳಿ ಸಾ, ಈ ಯಪ್ಪಂಗೆ, ಒಳ್ಳೆ ದೊಣ್ಣೆನಾಯ್ಕ ಆಡ್ದಂಗೆ ಆಡ್ತಾವ್ನೆ” ಕೆಟ್ಟಮುಖದಿಂದ ಚಕ್ರಪಾಣಿಯನ್ನೊಮ್ಮೆ ನಿವಾಳಿಸಿ ನೋಡಿ ಅಲ್ಲಿಂದ ಮರೆಯಾದ ನರಸಿಂಹ. ಅವರ ರೂಮಿನಲ್ಲಿದ್ದ ಕಾಲೇಜಿನ ಹುಡುಗ ಹುಡುಗಿಯರನ್ನು ಹೊರಗೆ ಹಾಕಿ ಚಕ್ರಪಾಣಿಯ ರೂಮಿಗೆ ಬಂದರು ನಾಯಕರು. “ಚಕ್ರಪಾಣಿ, ಒಂದ್ನಿಮಿಷ ಇಲ್ಲಿ ಬರ್ತೀರಾ” ಕರೆದರು. ಮಾತಾಡದೇ ಎದ್ದು ಹೋದ.” ಲುಕ್, ಚಕ್ರಪಾಣಿ, ಒಂದು ವ್ಯವಸ್ಥೇಲಿ ಕೆಲಸ ಮಾಡಬೇಕಾದರೆ, ಆ ವ್ಯವಸ್ಥೆಯನ್ನು ಬೆಳೆಸಬೇಕಾದರೆ, ನಮಗಿಷ್ಟವಿಲ್ಲದ ಅನೇಕ ಕೆಲಸವನ್ನು ನಾವು ಮಾಡಲೇಬೇಕಾಗುತ್ತದೆ. ನೀವಿನ್ನೂ ಈಗ ಕೆರೀರ್ ಶುರು ಮಾಡ್ತಾ ಇದ್ದೀರ. ನಿಮಗಿವೆಲ್ಲಾ ಅರ್ಥ ಆಗೋಲ್ಲ. ಕೋಟ್ಯಾಂತರ ರೂಪಾಯಿ ಸುರಿದು ಕಾಲೇಜು ಕಟ್ಟಿಸಿದ್ದಾರೆ. ಎರಡು ವರ್ಷಗಳಲ್ಲಿ ಇಷ್ಟು ದೊಡ್ಡ ಆಸ್ಪತ್ರೆಗೆ ಸರಿಹೋಗುವಷ್ಟು ಇನ್ ಪುಟ್ ತರಬೇಕು ಅಂತ ಕೌನ್ಸಿಲ್ ಕೇಳಿದ್ರೆ, ಪಾಪ ಗವಿಸಿದ್ದಪ್ಪನಾದ್ರೂ ಏನ್ಮಾಡ್ತಾನೆ. ಕೌನ್ಸಿಲ್ಲಿನವರಿಗೆ ದುಡ್ಡು ಕೊಟ್ಟೇ ಕೊಡುತ್ತಾನೆ. ಅಷ್ಟು ಕೊಟ್ಮೇಲೆ ಮತ್ತೇನೂ ಹೆಚ್ಚು ಕಮ್ಮಿ ಆಗಬಾರದು ಅಂತ ಎಲ್ಲಾಕಡೆಯಿಂದ ಭದ್ರ ಮಾಡ್ತಾ ಇದ್ದೀವಷ್ಟೆ. ನೀವು ಬರಿಯೋ ಕೇಸ್ ಶೀಟುಗಳಿಂದಲೇ ರೆಕಗ್ನಿಷನ್ ಸಿಗುತ್ತೆ ಅನ್ನುವ ಹಾಗಿದ್ರೆ ಆ ಕೆಲಸ ಮಾಡಿಸೋದು ಕಷ್ಟವೇನಲ್ಲ. ಮೇಲಾಗಿ ನೀವೊಬ್ಬರು ಬರೀದಿದ್ರೆ ನಷ್ಟ ಆಗೋದು ನಿಮಗೋ ಅವನಿಗೋ ಅನ್ನೋದನ್ನು ಯೋಚಿಸಿ ಚೆನ್ನಾಗಿ” ಅಬ್ಬಾ ಎಂಥ ನಯವಂಚಕತನ ಅನ್ನಿಸಿತು ಚಕ್ರಪಾಣಿಗೆ. ನಾಯಕರಂಥವರ ಸಾಧುಪ್ರಾಣಿಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾನೆ ಅಂದರೆ ಈ ಗವಿಸಿದ್ದಪ್ಪ ಎಂಥ ಚಾಲಾಕಿ ಮನುಷ್ಯ ಇರಬಹುದು. ಅದರೂ ತಡೆಯಲಿಲ್ಲ, ಚಕ್ರಪಾಣಿಗೆ” ಸರ್, ನೀವೂ ಎಲ್ಲ ಮಾತಾಡೋ ಹಾಗೇ ಮಾತಾಡ್ತೀರಲ್ಲ. ಅಸ್ಪತ್ರೆಗೆ ಪೇಷಂಟುಗಳು ಬರದೇ ಇದ್ದರೆ ಇನ್ನೊಂದೆರಡು ವರ್ಷ ಕಾಯಲಿ. ಅಥವಾ ಮೊದಲು ಆಸ್ಪತ್ರೆ ಕಟ್ಟಿಸಿ ಅದನ್ನು ಬೆಳೆಸಿ ಆಮೇಲೆ ಕಾಲೇಜು ಶುರುಮಾಡಬೇಕಿತ್ತು. ಈಗ ಎಲ್ಲವನ್ನೂ ದಿಢೀರ್ ಅಂತ ಮಾಡಿ ಈಗ ರೆಕಗ್ನಿಷನ್ ಇಲ್ಲ ಅಂತ ಅಳ್ತಾ ಕೂತ್ರೆ ಹೇಗೆ” ಕೇಳಿದ ಚಕ್ರಪಾಣಿ. ” ಯಾವಾಗ ಮೆಡಿಕಲ್ ಕಾಲೇಜ್ ಸ್ಯಾಂಕ್ಷನ್ ಆಗುತ್ತೋ ಆಗ ಶುರುಮಾಡದೇ ನಿಮ್ಮ ಮಾತಿನ ತರ ಇನ್ನು ಹತ್ತು ವರ್ಷ ಕಾದರೆ ಅದು ಇನ್ಯಾರಾರದೋ ಪಾಲಾಗುತ್ತೆ. ಮೇಲಾಗಿ ರೆಕಗ್ನಿಷನ್ ಸಿಗುವತನಕ ಇವೆಲ್ಲ. ಆಮೇಲೆ ನಿಮ್ಮನ್ನು ಯಾರೂ ಏನೂ ಕೇಳೊದಿಲ್ಲ” “ಇಲ್ಲ ಸಾರ್, ಇದೊಂದು ವಿಷ ಕೂಪ. ಈಗ ಕಾಲೇಜಿಗೆ, ಆಸ್ಪತ್ರೆಗೆ ಯಾಗೆ ರೆಕಗ್ನಿಷನ್ ಸಿಗಬೇಕು ಹೇಳಿ. ಕೌನ್ಸಿಲ್ಲು ರೆಕಗ್ನೈಸ್ ಮಾಡಿದ್ರೆ ಇನ್ನು ಮೂರು ವರ್ಷಕ್ಕೆ ಪೋಸ್ಟ್ ಗ್ರಾಜುಯೇಷನ್ ಶುರು ಮಾಡಬಹುದು. ಎಂಡಿ ಎಮ್ಮೆಸ್ಸ್ ಗೆ ಎನ್ನಾರೈ ಗಳು ಹದಿನೈದರಿಂದ ಇಪ್ಪತ್ತು ಲಕ್ಷ ಸಿಗುತ್ತೆ. ವರ್ಷಕ್ಕೆ ಇಪ್ಪತ್ತು ಸೀಟು ಕೊಟ್ರೆ ಇಪ್ಪತ್ತು ವರ್ಷ ನನಗೆ ನಿಮಗೆ ಸಂಬಳ ಕೊಟ್ಕೊಂಡು ಇಟ್ಕೊಂಡಿರಬಹುದು. ಆಸ್ಪತ್ರೆಗೆ ಒಬ್ಬ ಪೇಷೆಂಟು ಬರದಿದ್ರೂ ನಡೆಯುತ್ತದೆ, ಇದು ನಿಮಗೆ ಗೊತ್ತಿರದ ವಿಷಯವೇನಲ್ಲ” ” ಚಕ್ರಪಾಣಿ, ಒಂದಿಷಯ ಕೇಳ್ತೀನಿ. ಪ್ರಾಮಾಣಿಕವಾಗಿ ಉತ್ತರ ಕೊಡಿ. ಈ ಆಸ್ಪತ್ರೆಯಲ್ಲೇ ಇರೋ ಯೋಚನೆ ಇದ್ಯಾ ಅಥವಾ ಬೇರೆ ಏನಾದರೂ ಪ್ಲಾನ್ ಇದೆಯ” ” ಇಲ್ಯಾವನಿರ್ತಾನೆ ಸಾರ್, ಎಂ ಎಲ್ ಇ ತೊಗೊಳಣ ಅಂತಿದೀನಿ”- ತನಗರಿವಿಲ್ಲದೆಯೇ ಬಂದಿತ್ತು ಉತ್ತರ. ಅವನಿಗೇ ಆಶ್ಚರ್ಯವಾಗಿತ್ತು. ಈ ಉತ್ತರ ಸಾಂದರ್ಭಿಕವಾದರೂ ಈಗ ಹತ್ತು ನಿಮಿಷದ ಹಿಂದೆ ತಲೆಯಲ್ಲಿ ಕೊರೆಯುತ್ತಿದ್ದ ಸಮಸ್ಯೆಗೆ ಉತ್ತರ ಸಿಕ್ಕಿತೇನೋ ಅನ್ನಿಸಿತು. “ಗುಡ್, ಆದರೆ ನಾನು ಇಲ್ಲೇ ಇರಬೇಕು ತಿಳಿಯಿತಾ. ನಿಮ್ಮೊಬ್ಬರಿಂದ ಡಿಪಾರ್ಟ್ ಮೆಂಟಿಗೆ ಕೆಟ್ಟ ಹೆಸರು ಬರುವುದು ಬೇಡ. ನಾನು ಬರೀತೀನಿ ಕೇಸ್ ಶೀಟು ನನಗೇನು ನಾಚಿಕೆಯಿಲ್ಲ. ಮತ್ತೆ ಮೋಸ ಮಾಡ್ತಾ ಇದ್ದೀನಿ ಅನ್ನೋ ಭಾವನೆ ನನಗೆ ಕಿಂಚಿತ್ತೂ ಬರೋಲ್ಲ. ಮೈ ಡೇಸ್ ಅರ್ ಓವರ್. ಮತ್ತೆ ನಾನಿಲ್ಲೇ ಇರಬೇಕು. ಮತ್ತೆ ಇನ್ನೊಂದು ವಿಷಯ ನಾನು ಗವಿಸಿದ್ದಪ್ಪಂಗೆ ಹೇಳಲಿ ಬಿಡಲಿ, ಇವತ್ತು ಇಲ್ಲಿ ಆದ ವಿಷಯ ಅವನಿಗೆ ತಿಳಿದೇ ತಿಳಿಯುತ್ತೆ. ಐ ಹ್ಯಾವ್ ಹರ್ಡ್, ಅಮೆರಿಕಾದಲ್ಲಿ ಮುಂಚೆ ಕೆಲಸ ಮಾಡಿರುವ ಜಾಗಗಳ ರೆಕಮಂಡೇಷನ್ ತುಂಬಾ ಮುಖ್ಯ ಎಂದು. ಎ ಡೀನ್ಸ್ ಲೆಟರ್ ಕೆನ್ ಗೋ ಲಾಂಗ್ ವೇಸ್. ಹುಬ್ಬಳ್ಳಿಯ ಡೀನ್ ನಿಮಗೆ ಲೆಟರ್ ಕೊಡ್ತಾರ ಅಂತ ಯೋಚನೆ ಮಾಡಿ. ಯಾವ ಕಾಲೇಜು ಅಂಥ ಯಾರೂ ಬಾದರ್ ಮಾಡಲ್ಲ. ಒಟ್ಟು ಡೀನಿನ ಲೆಟರ್ ಹೆಡ್ಡಿನಲ್ಲಿದ್ದರೆ ಆಯಿತು. ಐ ಥಿಂಕ್ ಐ ಕೆನ್ ಪುಲ್ ಸಂ ಸ್ಟ್ರಿಂಗ್ಸ್ ಹಿಯರ್” ಹೇಳುತ್ತಿದ್ದರು. ಇದು ಬೆದರಿಕೆಯೋ ಪುಸಲಾಯಿಸುವಿಕೆಯೋ ತಿಳಿಯದೆ ಕೇಸ್ ಶೀಟುಗಳನ್ನು ಕೈಯಲ್ಲಿ ತೆಗೆದುಕೊಂಡ ಚಕ್ರಪಾಣಿ.
*
*
*
ಭಾನುವಾರ ಬೆಳಿಗ್ಗೆಯೇ ಬೆಂಗಳೂರಿಗೆ ಹೋಗಿದ್ದ ಚಕ್ರಪಾಣಿ. ಸಾಂಪ್ರದಾಯಿಕವಾಗಿ ನೋಡುವ ಶಾಸ್ತ್ರ ಬೇಡವೆಂದು ಇಬ್ಬರೂ ಮೊದಲೇ ತೀರ್ಮಾಸಿದ್ದಾಗಿತ್ತು. ಅಮ್ಮ ಇದಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಳು. ಮೊದಲು ಚಕ್ರಪಾಣಿ ಸುಷ್ಮಾ ಒಬ್ಬರನ್ನೊಬ್ಬರು ನೋಡಿ ಮಾತನಾಡಿ ಹಸಿರು ನಿಶಾನೆ ತೋರಿಸಿದರೆ ಮುಂದುವರಿಯುವುದು ಎಂದು ನಿರ್ಧಾರವಾಗಿತ್ತು. ಅಮೆರಿಕಾದ ಹುಡುಗಿಯರನ್ನು ನೋಡುವುದರಲ್ಲಿ ಈ ಅನುಕೂಲವಿದೆ ಅನ್ನಿಸಿತ್ತು, ಚಕ್ರಪಾಣಿಗೆ. ಈ ರೀತಿಯ ವ್ಯವಸ್ಥೆಗೆ ಅಮ್ಮ ಖಂಡಿತಾ ಒಪ್ಪುವುದು ಸಾಧ್ಯವೇ ಇರಲಿಲ್ಲ. ಅಮೆರಿಕಾಕ್ಕೆ ಕಳಿಸಬೇಕು ಎಂದು ಹುಡುಗಿಯರ ಅಮ್ಮ, ಅಪ್ಪಂದಿರಿಗೆ ಮಾತ್ರ ಚಪಲವಿರುತ್ತದೆ ಎಂದುಕೊಂಡಿದ್ದ. ಆದರೆ ಇಲ್ಲಿ ತನ್ನನ್ನು ಅಟ್ಟಿ ಹಾಕಬೇಕು ಎನ್ನುವುದು ತನಗಿಂತಾ ಜಾಸ್ತಿ ಅಮ್ಮನಿಗೇ ಇದೆ ಅನ್ನಿಸಿತ್ತು. ಯಾವುದೋ ಕಾಶೀನಾಥನ ಹಾಡು ನೆನಪಿಗೆ ಬಂದಿತ್ತು. ’ಅಮ್ಮಾ, ನಾ ಸೇಲಾದೆ’. ಥತ್ತೇರಿ, ಎಂದುಕೊಂಡ. ಎಲ್ಲಿಯ ಸುಷ್ಮಾ, ಎಲ್ಲಿಯ ಅಮೆರಿಕ, ಎಲ್ಲಿಯ ಕಾಶೀನಾಥ. ಸುಷ್ಮಾ ತನಗೆ ಸಿಗುವುದು ಕನಸು ಅನ್ನಿಸಿತು. ಇರಲಿ, ನೋಡೋಣ ಎಂದುಕೊಂಡು ಬಸ್ ಸ್ಟ್ಯಾಂಡಿನಿಂದ ರೆಸಿಡೆನ್ಸಿ ರೋಡಿಗೆ ಆಟೋ ಹತ್ತಿದ್ದ. ನಾಗಾರ್ಜುನದ ಮುಂದೆ ಆಟೋ ನಿಲ್ಲಿಸಿ ಫುಟ್ ಪಾತಿನ ಮೇಲೆ ಕಾಯುತ್ತಾ ನಿಂತಿದ್ದ. ಅಕಸ್ಮಾತ್ ಸುಷ್ಮಾ ಒಪ್ಪಿದರೆ ಏನು ಮಾಡುವುದು ಎಂದು ಯೋಚಿಸಹತ್ತಿದ್ದ. ಎಲ್ಲ ಬಿಟ್ಟು ಅವಳ ಹಿಂದೆ ಹೋಗುವುದೇ ನಿಜವಾಗುತ್ತದೆ. ನಾನು ಈಗ ಏನೇ ಅಂದುಕೊಂಡರೂ ಸತ್ಯ ಅದೇ. ಈಗ ಮದುವೆಗೆ ಮುಂಚೆ ಎಲ್ಲರೂ ಸಾವಿರ ಹೇಳಬಹುದು. ಸುಷ್ಮಾ ಇಂಡಿಯಾಕ್ಕೆ ಬಂದು ಇಲ್ಲಿ ಸಂಸಾರ ಮಾಡುತ್ತಾಳೆಂದು ತಾನು ತಿಳಿದರೆ ತನ್ನಷ್ಟು ಮೂರ್ಖ ಯಾರೂ ಇರುವುದಿಲ್ಲ. ಅಷ್ಟು ಯಾಕೆ ಒಂದು ಪಕ್ಷ ಅವಳಿಗೆ ಇಷ್ಟವಿದ್ದರೂ ಅಮ್ಮ ಅದಕ್ಕೆ ಸಿದ್ಧವಿದ್ದಾಳೆಯೇ? ಸುಷ್ಮಾ ಅಮ್ಮನ ಜತೆ ಏಗಿಕೊಂಡು ಹೋಗುವುದು ಸಾಧ್ಯವೇ? ಬೇರು ಇಲ್ಲಿನದಾದರು ಬೆಳೆದಿರುವುದು ಹೊರಗೆ. ಪ್ರಾಕ್ಟಿಕಲ್ ಪ್ರಪಂಚಕ್ಕೆ ಸ್ಪಂದಿಸುವುದು ಹೊರಗಡೆಯಿಂದ ಮಾತ್ರ. ಒಳಗಿರುವ ಭಾರತದ ಅನುಭವವಾಗುವುದು ತನಗೆ ಮಾತ್ರ. ಅವಳು ಬೇಡ ಬೇಡ ಅಂದರೂ ಅಮೆರಿಕದವಳು ಎಂಬ ಪಟ್ಟ ಕಟ್ಟಿರುವ ಈ ಜನ ಅವಳು ಇಲ್ಲಿಗೆ ಬಂದರೂ ಅಮೆರಿಕದವಳಾಗಿಯೇ ಇರಲಿ ಎಂದು ಇಷ್ಟ ಪಡುವುದಿಲ್ಲವೇ. ಇಷ್ಟು ಯಾಕೆ, ಅಮ್ಮನಿಗಾದರೂ ಸುಷ್ಮಾ ಇಲ್ಲಿಗೆ ಬರಲು ನಿಜವಾಗಿಯೂ ಇಷ್ಟವಿದೆಯೇ. ಅವಳು ಇಲ್ಲಿ ಬಂದರೂ ಏನು ಮಾಡುತ್ತಾಳೆ. ಸೋಶಿಯಲ್ ವರ್ಕರ್ ಅನ್ನುವ ಕಾನ್ಸೆಪ್ಟೂ ಇಲ್ಲದ ಈ ಆಸ್ಪತ್ರೆಗಳಲ್ಲಿ ಈ ಹುಡುಗಿ ಏನು ಮಾಡಬಲ್ಲಳು. ಗವಿಸಿದ್ದಪ್ಪನಿಂದ ತನಗೆ ಮುಕ್ತಿ ದೊರಕಬೇಕಾದರೆ ಆರ್ಥಿಕವಾಗಿ ಮೊದಲೊಂದೆರಡು ವರ್ಷ ಸುಷ್ಮಾಳ ಅಪ್ಪನ ಮೇಲೆ ಅವಲಂಬಿಸಲೇ ಬೇಕಾಗುತ್ತದೆ. ಅದೇನು ಅವರಿಗೆ ಹೊರೆಯಾಗಲಾರದು. ಆದರೆ ಇದಕ್ಕಿಂತಾ ಅಮೆರಿಕಾಕ್ಕೆ ಹೋಗಿ ಅವಳ ಖರ್ಚಿನಲ್ಲಿ ಪರೀಕ್ಷೆ ಮುಗಿಸಿ ರೆಸಿಡೆನ್ಸಿ ಮಾಡುವುದರಿಂದ ತನ್ನ ಸ್ವಾಭಿಮಾನಕ್ಕೆ ಜಾಸ್ತಿ ಹೊಡೆತ ಬೀಳುವುದಿಲ್ಲವೇನೋ ಅನ್ನಿಸಿತ್ತು. ಇವನ ಮುಂದೆ ಒಂದು ಆಟೋ ಬಂದು ನಿಂತಿತು. ಒಳಗಿನಿಂದ ಇಳಿದಳು ಸುಷ್ಮಾ. ಫೋಟೋದಲ್ಲಿ ನೋಡಿದ್ದಕ್ಕಿಂತಾ ಸ್ವಲ್ಪ ಕಪ್ಪು ಅನ್ನಿಸಿತ್ತು. ಕಂದು ಬಣ್ಣದ ಚೂಡಿದಾರ ಹಾಕಿ ಒಂದು ಸಣ್ಣ ಪರ್ಸ್ ಹಿಡಿದಿದ್ದಳು. ಕತ್ತರಿಸಿದ ಕೂದಲನ್ನು ಹಿಂದೆ ಬಾಚಿ ಒಂದು ಕ್ಲಿಪ್ಪು ಹಾಕಿದ್ದಳು. ಸಣ್ಣ ಬಿಂದಿ, ಸಾಧಾರಣ ಮೇಕಪ್ಪಿನಲ್ಲಿ ಚೆನ್ನಾಗಿಯೇ ಕಾಣುತ್ತಿದ್ದಾಳೆ ಅನ್ನಿಸಿತು. ತನಗಿಂತ ಕೊಂಚ ಕುಳ್ಳು ಅನ್ನಿಸಿದರೂ ಹೀಲ್ಸಿನಲ್ಲಿ ಸರಿಹೋಗಬಹುದು ಅಂದುಕೊಂಡ. ಆಟೋದಿಂದ ಇಳಿದು ” ಹಾಯ್” ಎಂದಳು.”ಹಲೋ” ಮುಗುಳ್ನಗುತ್ತಾ ಪ್ರತಿಕ್ರಿಯಿಸಿದ ಚಕ್ರಪಾಣಿ. ಇದು ಅವನಿಗೆ ಹೊಸದು. ಹಿಂದೆ ಸುಮಾರು ಹುಡುಗಿಯರನ್ನು ನೋಡಿದ್ದರೂ ಅವೆಲ್ಲಾ ತುಂಬಾ ಸಾಂಪ್ರದಾಯಿಕವಾಗಿದ್ದವು. ಏನು ಮಾತನಾಡಬೇಕೆಂದು ತಿಳಿಯಲಿಲ್ಲ.” ವೇರ್ ಡು ಯು ವಾಂ ಟು ಗೋ” ಇಂಗ್ಲೀಷಿನಲ್ಲಿಯೇ ಪ್ರಾರಂಭಿಸಿದ ಸಂಭಾಷಣೆಯನ್ನು. ” ಐ ಡೋಂಟ್ ಮೈಂಡ್. ಕನ್ನಡದಲ್ಲೇ ಮಾತನಡಬಹುದು. ನಾನು ಯೋಚನೆ ಮಾಡೋಕ್ಕೆ ಶುರುಮಾಡಿದ್ದು ಕನ್ನಡದಲ್ಲಿಯೇ. ಅವುಗಳು ಗಟ್ಟಿಯಾಗೋ ಹೊತ್ತಿಗೆ ದೇಶ ಬಿಟ್ಟಿದ್ವಿ. ಉಷ ನವರತ್ನರಾಂ ಬೆಳೆಸಿದ ಭಾವನೆಗಳಿಗೆ ಚಿಕನ್ ಸೂಪ್ ಸೀರೀಸ್ ಶೇಪ್ ಕೊಟ್ಟಿವೆ. ಆದ್ದರಿಂದ ಯು ಕೆನ್ ಸೆನ್ಸ್ ಅ ಸಾರ್ಟ್ ಆಫ್ ಕನ್ಫ್ಯೂಶನ್. ಒಟ್ಟು ಯಾವುದಾದರೂ ಗಲಾಟೆಯಿಲ್ಲದ ಜಾಗ ಆದರೆ ಸಾಕು” ಪಟ ಪಟ ಯಾವುದೇ ಆತಂಕವಿಲ್ಲದೇ ಮಾತು ಶುರುಮಾಡಿದ್ದಳು. ಇದು ಯಾಕೋ ಟೇಕ್ ಆಫ್ ಆದ ಉತ್ಕರ್ಷ ಸರಿಯಿಲ್ಲ ಅನ್ನಿಸಿತು ಚಕ್ರಪಾಣಿಗೆ. ಆದರೆ ಕನ್ನಡದಲ್ಲಿ ಮಾತಾಡಲು ಪ್ರಯತ್ನಿಸುತ್ತಿದ್ದಾಳೆ ಎಂದು ಖುಷಿಯಾಯಿತು. ” ಇಲ್ಲೇ ಹತ್ರ ಸ್ವಲ್ಪ ಒಳಗೆ ಹೋದರೆ ಒಂದು ಒಳ್ಳೆ ರೆಸ್ಟೋರೆಂಟ್ ಇದೆ. ಜಾಸ್ತಿ ಜನ ಇರೋಲ್ಲ” ಮುಂದೆ ನಡೆಯುತ್ತಾ ಹೇಳಿದ ಚಕ್ರಪಾಣಿ. ” ಏನೋ ಒಂದು, ಒಟ್ಟು ಈ ಗಲಾಟೆಯಿಂದ ಸ್ವಲ್ಪ ದೂರ ಇದ್ದರೆ ಸಾಕು. ಅಬ್ಬಬ್ಬ, ನನಗೆ ನಾನು ಇಲ್ಲಿದ್ದೆ, ಇಲ್ಲಿನ ಒಂದು ಭಾಗವಾಗಿದ್ದೆ ಎಂದರೆ ನಂಬೋಕೇ ಸಾಧ್ಯವಿಲ್ಲ. ಎನಿವೇ, ಹೋಂ ಈಸ್ ಹೋಂ” ” ಅಮೆರಿಕದಲ್ಲೂ ಈ ನಡುವೆ ದೊಡ್ಡ ಸಿಟಿಗಳಲ್ಲಿ ಕ್ರೌಡ್ ಜಾಸ್ತಿ ಆಗ್ತಾ ಇದೆ ಅಂತ ಕೇಳಿದ್ದೀನಿ. ನೀವಿರೋ ಊರಲ್ಲಿ ಜಾಸ್ತಿ ಜನ ಇಲ್ವಾ” ಸಂಭಾಷಣೆ ಮುಂದುವರಿಸಲು ಕೇಳಿದ. ” ನೋ, ನೋ, ಅದೆನಿದ್ರೂ ಕೋಸ್ಟ್ ಗಳಲ್ಲಿ ಮಾತ್ರ. ಈಸ್ಟ್ ಕೋಸ್ಟೆಲ್ಲಾ ಗುಜ್ಜುಗಳು ಸೇರಿದ್ದಾರೆ. ವೆಸ್ಟ್ ಕೋಸ್ಟ್ ಪೂರಾ ನಮ್ಮ ಇಂಜಿನಿಯರ್ ಗಳು. ದೇಸೀ ಜನ ತುಂಬಾ ಇರುವ ಕಡೆ ಬೇಡವೇ ಬೇಡ ಅಂತಲೇ ವಿ ಲಿವ್ ಇನ್ ಅ ಕನ್ಸರ್ವೇಟಿವ್ ಪ್ಲೇಸ್. ಇಂಡಿಯನ್ಸ್ ಬೇಕು ಅಂದ್ರೆ ಸಿಗ್ತಾರೆ. ಬೇಡ ಅಂದ್ರೆ ಬೇಡ. ಅದು ಒಳ್ಳೆಯದು. ಅದು ಬಿಟ್ಟು ನೀವು ನ್ಯೂ ಜರ್ಸಿಗೆ ಹೋಗಿ ಇಂಡಿಯನ್ಸ್ ಬೇಡ ಅನ್ನೋ ಹಾಗೇ ಇಲ್ಲ. ಸಿಗ್ತಾನೇ ಇರ್ತಾರೆ.” ಪಟ್ಟೆಂದು ಬಂತು ಉತ್ತರ. ” ನಿಮ್ಮ ಮಾತಿನ ಅರ್ಥ ಇಂಡಿಯನ್ಸ್ ಇರಬೇಕೋ, ಬೇಡವೋ” ತಡವರಿಸುತ್ತಾ ಕೇಳಿದ. ” ಇರಬೇಕು, ಆದರೆ ಒಂದು ಮಿತಿಯಲ್ಲಿ. ಯದ್ವಾ ತದ್ವಾ ಆದರೆ ನ್ಯೂಯಾರ್ಕೂ ಬಾಂಬೇ ಥರಾ ಆಗಿಬಿಡುತ್ತೆ, ಅಷ್ಟೆ” ” ಹಾಗಾದ್ರೆ ಒಳ್ಳೇದೇ ಆಯ್ತು. ವೀಸ ಇಲ್ದೆ ಹೋಗ್ಬಿಡಬಹುದು” ತನ್ನ ಜೋಕಿಗೆ ತಾನೇ ನಕ್ಕ. ಒಂದು ರೀತಿ ನೋಡಿದಳು. ಯಾಕೋ ಮಾತು ತುಂಬಾ ಅಪ್ರಾಸಂಗಿಕ ಅನ್ನಿಸಿತು. ಅವಳು ಇವನ ಮನಸ್ಸನ್ನು ಅರ್ಥ ಮಾಡಿಕೊಂಡಂತೆ” ಸರಿ, ಈಗ ಬೇರೆ ಯಾವುದಾದ್ರೂ ಟಾಪಿಕ್ ಚೇಂಜ್ ಮಾಡೋಣ್ವಾ” ಅಂದಳು. ” ಮಾಡೋಣ್ವಂತೆ, ಮೊದಲು ಒಳಗೆ ಹೋಗಿ ಆರ್ಡರ್ ಮಾಡಿದ ಮೇಲೆ” ಎನ್ನುತ್ತಾ ರೆಸ್ಟೋರೆಂಟಿನ ಒಳಗೆ ನಡೆದ. ಮಬ್ಬು ಬೆಳಕಿನ ರೆಸ್ಟೋರೆಂಟಿನ ಮೂಲೆಯ ಟೇಬಲ್ಲೊಂದನ್ನು ಹಿಡಿದು ಆರ್ಡರ್ ಮಾಡಿದರು. ಸುತ್ತಲೂ ನೋಡುತ್ತಾ ಹೇಳಿದಳು ಸುಷ್ಮಾ ” ನಾಟ್ ಅ ಬ್ಯಾಡ್ ಚಾಯ್ಸ್” ಸುಮ್ಮನೆ ನಕ್ಕ ಚಕ್ರಪಾಣಿ. ಮೌನವನ್ನು ಮುರಿಯಲು ” ಒಳಗೆ ಮಾತಾಡೋಣ ಅಂದಿದ್ರಿ. ಸರಿ, ನಾನೇ ಶುರು ಮಾಡ್ತೀನಿ. ಹೇಗಿದೆ, ನಿಮ್ಮ ಲೈಫ್ ಸೇವಿಂಗ್ ಬಿಸಿನೆಸ್”. ತಾನು ನಿಜವಾಗಿ ಜೀವ ಉಳಿಸಿ ತುಂಬಾ ದಿನಗಳಾಗಿದೆ ಅನ್ನಿಸಿತು ಚಕ್ರಪಾಣಿಗೆ. ಗವಿಸಿದ್ದಪ್ಪನ ಆಸ್ಪತ್ರೆ ಸೇರಿದಾಗಿನಿಂದ ಬರೀ ಶೀತ, ನೆಗಡಿ ಕೆಮ್ಮುಗಳಿಗೆ ಕೊರೈಜಾ ಇತರ ಬಣ್ಣದ ಹೆಸರುಗಳ್ಳನ್ನು ಇಟ್ಟು ಪ್ಯಾರಸಿಟಮಾಲ್ ಕೊಟ್ಟದ್ದೇ ಬಂದದ್ದು. ಆದರೆ ಹಾಗೆ ಹೇಳುವುದರಿಂದ ತನ್ನ ಮರ್ಯಾದೆಯೇ ಹೋಗುತ್ತದೆಂದು ತಿಳಿದಿದ್ದು ” ತುಂಬಾ ಚೆನ್ನಾಗಿದೆ. ಐ ಲೈಕ್ ವಾಟ್ ಐ ಆಂ ಡೂಯಿಂಗ್” ಅಂದ ಉಗುಳು ನುಂಗಿ. ” ಅದು ಒಳ್ಳೆಯದು. ನಿವು ಕೆಲಸ ಮಾಡುತ್ತಾ ಇರೋದು ಪ್ರೈವೇಟ್ ಕಾಲೇಜಂತೆ. ಈಗ ನಮ್ಮ ಸ್ಟೇಟಲ್ಲಿ ಬೇಕಾದಷ್ಟು ಕಾಲೇಜುಗಳಾಗಿವೆಯಂತೆ. ನನಗೂ ಡ್ಯಾಡಿ ಯಾವುದೋ ಕಾಲೇಜಿಗೆ ಸೇರಿಸ್ತೀನಿ ಅಂತ ಹೊರಟಿದ್ದರು. ಆದರೆ, ಆ ಟೈಮಲ್ಲಿ ಅಮೆರಿಕಾ ಬಿಡಲು ಇಷ್ಟವಾಗಲಿಲ್ಲ” ” ಹಾಗಾದರೆ ಈಗ ಇಷ್ಟ ಆಗುತ್ತಿದೆ ಅಂತ ತಿಳೀಬಹುದಾ” ಕೇಳಿದ ಚಕ್ರಪಾಣಿ. ” ಡಿಡ್ ಐ ಸೇ ದಟ್” ತುಂಟತನದಿಂದ ನಕ್ಕಳು. ” ತಮಾಷೆಗೆ ಹೇಳಿದೆ. ಐ ಲವ್ ಮೈ ಇಂಡಿಯಾ” ತನ್ನ ಪ್ರಶ್ನೆಗೆ ಇದು ಸರಿಯ ಹೌದೇ ಅಲ್ಲವೇ ಗೊತ್ತಾಗಲಿಲ್ಲ. ಆದರೆ ಸಂಭಾಷಣೆಯಲ್ಲಿ ಇಷ್ಟು ಮುಂಚೆ ತಾನು ಆ ಪ್ರಶ್ನೆ ಕೇಳಿದ್ದು ಸರಿಯೇ ಅನ್ನಿಸಿತ್ತು.” ನಿಮ್ಮ ಕೆಲಸ ಹೇಗಿದೆ. ಇಂಡಿಯಾದಲ್ಲಿ ಸೋಷಿಯಲ್ ವರ್ಕರ್ ಅನ್ನುವ ಕಾನ್ಸೆಪ್ಟು ಹೊಸದು” ” ಹಾಗೇನಿಲ್ಲ. ಈಗ ಬಾಂಬೆ, ಡೆಲ್ಲೀಲಿರೋ ದೊಡ್ಡ ಕಾರ್ಪೊರೆಟ್ ಹಾಸ್ಪಿಟಲ್ಗಳೆಲ್ಲಾ ಸೋಷಿಯಲ್ ವರ್ಕರುಗಳಿದ್ದಾರೆ. ಡಾಕ್ಟರುಗಳಿಗೆ ಪೇಶೆಂಟಿನ ಮನೆಯ ಮತ್ತು ಅವನ ಸುತ್ತಿನ ಸೊಸೈಟಿಯ ಪರಿಚಯವಾಗದೆ ಯಾವ ಕಾಯಿಲೆಯನ್ನೂ ಪೂರಾ ಗುಣಪಡಿಸಲು ಸಾಧ್ಯವಿಲ್ಲ. ಈಗ ಉದಾಹರಣೆಗೆ ಇವತ್ತು ನೀವೊಂದು ಪೇಷಂಟನ್ನು ಡಿಸ್ಚಾರ್ಜ್ ಮಾಡಿರುತ್ತೀರ. ಇನ್ನು ನಾಲ್ಕು ದಿನಕ್ಕೆ ಆತ ಮತ್ತೆ ಬಂದು ನಿಮ್ಮ ಹತ್ತಿರ ಬಂದು ಅಡ್ಮಿಟ್ ಆದರೆ ಅದು ಕಾಯಿಲೆ ಹದಗೆಟ್ಟಿದ್ದಕ್ಕೋ ಅಥವಾ ನಿಮ್ಮ ಸಲಹೆ ಪ್ರಕಾರ ಎಲ್ಲಾ ಔಷಧಿಗಳನ್ನು ತೆಗೆದುಕೊಳ್ಳದೇ ಇರುವುದರಿಂದಲೋ ಎಂದು ಅರ್ಥ ಮಾಡಿಕೊಳ್ಳುವಷ್ಟು ತಾಳ್ಮೆ, ಸಮಯ ನಿಮಗಿರುವುದಿಲ್ಲ. ನಮ್ಮಗಳ ಕೆಲಸವೇ ಅದಾಗಿರುವುದರಿಂದ ವಿ ಕೆನ್ ಮೇಕ್ ಅ ಡಿಫೆರೆನ್ಸ್ ದೇರ್” ” ಪೇಷೆಂಟು ಬಂದು ಮತ್ತೆ ಅಡ್ಮಿಟ್ ಆದರೆ ನಮ್ಮ ಬಾಸಿಗಾಗುವಷ್ಟು ಸಂತೋಷ ಯಾರಿಗೂ ಆಗುವುದಿಲ್ಲ” ನಕ್ಕ ” ಆದರೂ ಗಂಡ ಹೆಂಡತಿಗೆ ಹೊಡೆದ ಅಂತಲೋ, ಅಪ್ಪ ಮಗನಿಗೆ ಹೊಡೆದ ಅಂತಲೋ ನಿಮ್ಮಗಳನ್ನು ಸಲಹೆ ಕೇಳೋ ಪರಿಸ್ಥಿತಿ ಇನ್ನೂ ಇಂಡಿಯಾದಲ್ಲಿ ಬಂದಿಲ್ಲ. ಮುಂದೆ ಬರೋದು ನನಗೆ ಡೌಟು” ” ಅಂದರೆ ನಿಮ್ಮ ಮಾತಿನ ಅರ್ಥ, ಅಬ್ಯೂಸ್ ಇಂಡಿಯಾದಲ್ಲಿಲ್ಲ ಎಂತಲೇ” ಕುತೂಹಲದಿಂದ ಕೇಳಿದಲೂ ಸುಷ್ಮಾ. ” ನೋ, ಅಬ್ಯೂಸ್ ಇದೆ. ಆದರೆ ಅದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅದನ್ನು ತಪ್ಪು ಎಂದು ನಮ್ಮ ಹೆಂಗಸರಾಗಲೀ ಮಕ್ಕಳಾಗಲೀ ಅಂದುಕೊಳ್ಳೋದಿಲ್ಲ. ನಿಮ್ಮಲ್ಲಿ ಪಿಸ್ತೂಲು, ಡೈವೋರ್ಸ್, ಟೀನ್ ಸೆಕ್ಸ್ ಇದ್ದ ಹಾಗೆ. ಸಾರಿ, ಸರಿಯಾದ ಅನಾಲಜಿ ಕೊಡೋಕ್ಕಾಗುತ್ತಾ ಇಲ್ಲ. ನಮ್ಮ ಮನೆಯ ಸಮಸ್ಯೆಗಳಿಗೆ ಗೊತ್ತಿಲ್ಲದವರನ್ನು ಇನ್ವಾಲ್ವ್ ಮಾಡಿಕೊಳ್ಳೊದು ನಮ್ಮ ಸಂಸ್ಕೃತಿಯ ಭಾಗ ಇನ್ನೂ ಆಗಿಲ್ಲ.” ಊಟ ಬಂದಿತು. ಬಟರ್ ನಾನ್, ಪನೀರ್ ಕೊಫ್ತಾ, ವೆಜಿಟೆಬಲ್ ಬಿರಿಯಾನಿ, ಸಲಾಡ್, ” ಮ್, ರಿಚ್ ಫುಡ್” ಎಂದಳು ಸುಷ್ಮಾ ಪ್ಲೇಟುಗಳನ್ನು ನೋಡುತ್ತಾ. ” ಹೋಗ್ಲಿ ಬಿಡಿ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು. ಈಗ ನಿಮ್ಮ ಪ್ಲಾನು ಏನಿದೆ, ಮುಂದೆ. ನಂದಂತೂ ತುಂಬಾ ಸಿಂಪಲ್. ಈಗ ಮಾಡ್ತಾ ಇರೋ ಕೆಲಸಾನ ಮುಂದುವರಿಸಿಕೊಂಡು ಹೋಗುವುದು. ನಾನು ನಿಮ್ಮನ್ನು ಮದುವೆಯಾದ್ರೆ ನೀವು ನನಗೆ ನನ್ನ ಕೆಲಸದಲ್ಲಿ ಸಪೋರ್ಟ್ ಮಾಡಬೇಕು. ನನಗೆ ನನ್ನ ಸಂಸಾರದಷ್ಟೇ ನನ್ನ ಕೆಲಸವೂ ಮುಖ್ಯ. ” ನಾನ್ ಮುರಿಯುತ್ತಾ ಹೇಳಿದಳು. ” ಹಾಗಾದ್ರೇ, ಅಮ್ಮ ಹೇಳಿದ್ಳು ನೀವು ಇಂಡಿಯಾಕ್ಕೆ ಬಂದರೂ ಬರಬಹುದು ಒನ್ಸ್ ಅಂಡ್ ಫಾರ್ ಆಲ್ ಅಂತ” ಅನುಮಾನಿಸುತ್ತಾ ಕೆಳಿದ. ” ಡ್ಯಾಡಿ ಯೋಚನೆ ಮಾಡ್ತಾ ಇದ್ದಾರೆ. ಅಮ್ಮನಿಗೆ ಇಷ್ಟ ಇಲ್ಲ. ಆದ್ದರಿಂದ ನನ್ನನ್ನು ಇಲ್ಲಿಗೆ ಕೊಟ್ಟರೆ ಒಂದಾದರೂ ಟೈ ಉಳಿಯುತ್ತೇ ಅಂತ ಡ್ಯಾಡಿ ಯೋಚನೆ. ನಾನು ಯಾವಕಡೆ ಬೇಕಾದರೂ ವಾಲಬಹುದು. ಆದರೆ, ಈಗ ಸದ್ಯಕ್ಕೆ ಅಂದರೆ, ಇನ್ನೊಂದೈದು ವರ್ಷ ಈ ಕಡೆ ಬರೋ ಯೋಚನೆ ಯಾರಿಗೂ ಇಲ್ಲ” ” ನನ್ನ ಪ್ರಿಯಾರಿಟೀಸ್ ನಲ್ಲಿ ಅಮೆರಿಕಾ ಯಾವತ್ತೂ ಮೊದಲಿರಲಿಲ್ಲ. ಹಾಗಂತ ಅಮೆರಿಕಾದ ಮೆಲೆ ನನಗೆ ಯಾವ ದ್ವೇಷವೂ ಇಲ್ಲ. ಮನಸ್ಸಿಗೆ ಗೊತ್ತಿಲ್ಲದಿರುವುದು ಕಣ್ಣಿಗೆ ಕಾಣುವುದಿಲ್ಲವಂತೆ. ಚಿಕ್ಕಹುಡುಗನಿಂದ ಈಗ ಮೊನ್ನೆಮೊನ್ನೆಯವರೆಗೆ ಅಮೆರಿಕಾ ಅಂದರೆ ತುಂಬಾ ದೂರದ ಕನಸಿನ ಲೋಕವಾಗೇ ಇತ್ತು. ನಮ್ಮ ಮನೆಯಲ್ಲಿ ಇದುವರೆಗೂ ಯಾರೂ ಅಮೆರಿಕಕ್ಕೆ ಹೋಗಿಲ್ಲ. ಈಗಲೂ ನಿಜ ಹೇಳಬೇಕೆಂದರೆ ವರ್ಜೀನಿಯಾ ಸ್ಟೇಟೋ, ಊರೋ ಅಂತ ನಮ್ಮ ಮನೇಲಿ ಯಾರಿಗೂ ಗೊತ್ತಿಲ್ಲ. ಅಮೆರಿಕ ನನಗೆ ರೆಲವೆಂಟ್ ಅಲ್ಲ ಅಂದು ಮೊದಲಿನಿಂದಲೂ ನನ್ನ ಅನ್ನಿಸಿತ್ತೋ ಏನೋ, ನನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಲ್ಲಿನದೆಲ್ಲವನ್ನೂ ದ್ವೇಷಿಸುತ್ತಲೇ ಬಂದೆ. ನನ್ನ ಜತೆಯ ಹುಡುಗರೆಲ್ಲಾ ಎಂಟೀವಿ ನೋಡುತ್ತಿದ್ದಾಗ ಕನ್ನಡ ಕಾದಂಬರೀನೋ ಕನ್ನಡ ಸಿನೆಮಾನೋ ನೋಡ್ತಾ ಇದ್ದೆ. ಕನ್ನಡ ಸಿನೆಮಾ ಚೆನ್ನಗಿರುತ್ತೆ ಅಂತಲ್ಲ. ಅದೊಂದು ರೀತಿಯ ಪ್ಯಾಸಿವ್ ಅಗ್ರೆಷನ್. ಅಮೆರಿಕಾ ಬೇಡ ಅಂತ ಹೇಳೋ ನನ್ನದೇ ಆದ ರೀತಿ. ದ್ರಾಕ್ಷಿ ಹುಳಿ ಅನ್ನುವ ನರಿಯ ರೀತಿ ಅಲ್ಲ ಅಂದರೆ ಪೂರ ಪ್ರಾಮಾಣಿಕವಾಗಿರೊಲ್ಲ. ಬಟ್ ಐ ಹ್ಯಾವ್ ಗ್ರೋನ್ ಅಪ್ಟು ಬಿ ಟೂ ಮಚ್ ಇಂಡಿಯನ್. ಈಗ ಅಮೆರಿಕಾಕ್ಕೆ ಬಂದರೆ ಅಲ್ಲಿಗೆ ನಾನು ಹೊಂದುಕೊಳ್ಳುತೀನಾ ಅಂತ ನನಗೇ ನಂಬಿಕೆಯಿಲ್ಲ.” ಕೆಳಗೆ ನೋಡುತ್ತಾ ಹೇಳಿದ ಚಕ್ರಪಾಣಿ. ” ನಿಮ್ಮ ಪ್ರಾಮಾಣಿಕತೆ ನನಗೆ ತುಂಬಾ ಇಷ್ಟವಾಯಿತು. ಇನ್ ಕೇಸ್ ಇದು ಸರಿಹೋದರೆ, ನೀವು ಅವಿಷಯವಾಗಿ ತುಂಬಾ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಡ್ಯಾಡಿ ತುಂಬಾ ಕನ್ನಡದ ಭಕ್ತ. ಮನೆ ತುಂಬಾ ಕನ್ನಡ ಪುಸ್ತಕಗಳಿದ್ದಾವೆ. ನನಗೂ ಮೊದಲಿನಿಂದ ಓದೋ ಹುಚ್ಚು ಬಹಳ. ಹೇಳಿದ್ನಲ್ಲ ಇಲ್ಲಿದ್ದಾಗ ತುಂಬಾ ಓದ್ತಾ ಇದ್ದೆ. ಅಲ್ಲಿಗೆ ಹೋದಮೇಲೂ ಟೈಂ ಸಿಕ್ಕಿದಾಗ ಕನ್ನಡ ಪುಸ್ತಕ ಓದ್ತಾ ಇರ್ತೀನಿ. ಭೈರಪ್ಪಾ ಈಸ್ ಮೈ ಫೇವರೀಟ್. ಇನ್ ಫ್ಯಾಕ್ಟ್ ಅವ್ರು ಅಮೆರಿಕಾಕ್ಕೆ ಬಂದಿದ್ದಾಗ ಮೀಟ್ ಕೂಡ ಮಾಡಿದ್ದೆ. ಯು ವಿಲ್ ಫೀಲ್ ಮೋರ್ ಅಟ್ ಹೋಂ ದೇರ್ ದೆನ್ ಹಿಯರ್” ” ಅದು ಇಂಟರೆಸ್ಟಿಂಗ್. ವಾಟ್ ಡು ಯು ಥಿಂಕ್ ಆಫ್ ಭೈರಪ್ಪ” “ಪಾಪ್ಯುಲರ್ ರೈಟರ್. ಕಷ್ಟವಾದ ಸೋಷಿಯಲ್ ಇಶ್ಯೂಸನ್ನು ಸಾಮಾನ್ಯ ಜನರಿಗೆ ಅರ್ಥ ಮಾಡಿಸುವ ಬರಹಗಾರ. ಮಹಾಭಾರತದ ಕಾಂಟೆಂಪರರಿ ಅರ್ಥ ಗೊತ್ತಾಗಿದ್ದು ನನಗೆ ಪರ್ವ ಓದಿದ ಮೇಲೆಯೇ. ಜಾತಿಸಮಸ್ಯೆ, ಮಹಾಭಾರತ, ಸೌಂದರ್ಯ ಮೀಮಾಂಸೆ ಇಂತ ಸಬ್ಜೆಕ್ಟುಗಳನ್ನು ನನಗೆ ನಿಮಗೆ ಅರ್ಥ ಆಗೋ ಹಾಗೇ ಬರೆಯೋದರಲ್ಲಿ ನಿಸ್ಸೀಮ. ಐ ವುಡ್ ನಾಟ್ ಸೇ ಹೀ ಇಸ್ ದ ಗ್ರೇಟೆಸ್ಟ್. ಹೀ ಇಸ್ ಮೋರ್ ಮೈಕೆಲ್ ಕ್ರೀಟನ್ ದೆನ್ ದಾಸ್ತೊವ್ಸ್ಕಿ” ” ನೀವು ’ಸತ್ಯ ಮತ್ತು ಸೌಂದರ್ಯ ’ ಓದಿದ್ದೀರ” ಕೊಂಚ ಅಸಹನೆಯಿಂದ ಕೇಳಿದ. “ಅದರ ಬಗ್ಗೆ ವಿಮರ್ಶೆ ಓದಿದ್ದೀನಿ.” ನಕ್ಕಳು. ” ವಿಮರ್ಶೆ ಓದಿ ಕಾವ್ಯ ಹೇಗಿದೆ ಅಂತ ಹೇಳೋದು ತಪ್ಪು. ಮತ್ತೊಂದು ಮಾತು,ಭೈರಪ್ಪನವರ ವರ್ಕ್ಸನ್ನು ವಿಮರ್ಶಿಸುವುದಕ್ಕೆ ನಿಮ್ಮ ಕೈಯಲ್ಲಿ ಸಾಧ್ಯ ಇಲ್ಲ ಅಂತ ಅನ್ನಿಸುತ್ತೆ, ನೋ ಅಫೆನ್ಸ್” ” ಓ ಕಂ ಆನ್. ದಟ್ ವಾಸ್ ಜಸ್ಟ್ ಎನ್ ಒಪೀನಿಯನ್. ಐ ಯಾಂ ನೋ ಗಿರೆಡ್ಡಿ” ಎಡಗಣ್ಣು ಕಿರಿದು ಮಾಡಿ ತುಟಿ ಸೊಟ್ಟ ಮಾಡಿ ಕಣ್ಣುಹೊಡೆದಳು. ಬಾಯಲ್ಲಿ ಸೌತೇಕಾಯಿಯ ಚೂರಿತ್ತು. ಒಂದು ಕ್ಷಣ ದೃಷ್ಟಿಸಿ ನೋಡಿದ. ತಕ್ಷಣ ತಪ್ಪು ಮಾಡಿದವನಂತೆ ತಲೆ ತಗ್ಗಿಸಿದ. ” ಆದರೂ ಭೈರಪ್ಪನ್ನ ಕ್ರೀಟನ್ಗೆ ಹೋಲಿಸುವುದು ಅಬ್ಸರ್ಡ್ ಅಂತ ನನ್ನ ಭಾವನೆ. ಕ್ರೀಟನ್ ಒಬ್ಬ ವ್ಯಾಪಾರಿ ಬರಹಗಾರ. ಭೈರಪ್ಪನವರದ್ದು ವಾಸ್ತವ. ಅಲ್ಲಿ ಫ್ಯಾಂಟಸಿಯಿರುವುದಿಲ್ಲ. ’ನಿಲ್ಲಿಸದೇ ಹೇಳುತ್ತಿದ್ದ. ” ಓ ಓ ಫ್ , ಚಕ್ರಪಾಣಿ, ಇದನ್ನು ಪರ್ಸನಲ್ ಆಗಿ ಯಾಕೆ ತೊಗೊತಾ‌ಇದೀರ. ನನ್ನ ಅಭಿಪ್ರಾಯಕ್ಕೆ ನೀವು ಬೆಲೆ ಕೊಡಬೇಕು ಅಂಥ ನಾನು ಹೇಳ್ತಾ ಇಲ್ಲ. ಆದರೆ ಅವುಗಳನ್ನು ಹೇಳೊದು ತಪ್ಪಲ್ವಲ್ಲ. ಕನ್ನಡ ಕಾದಂಬರಿಗಳ ಬಗ್ಗೆ ವಿಮರ್ಶೆ ಮಾಡುವಷ್ಟು ನಿಮಗೆ ಗೊತ್ತಿರುವುದು ನಿಮ್ಮ ಪರಿಸರದಿಂದ. ಜ್ಯುರಾಸಿಕ್ ಪಾರ್ಕ್ ಬಗ್ಗೆ, ಏಡ್ಸ್ ಬಗ್ಗೆ, ಕ್ಲೋನಿಂಗ್ ಬಗ್ಗೆ ನಿಮಗಿಂತ ಜಾಸ್ತಿ ನನಗೆ ಗೊತ್ತಿದ್ದರೆ ಅದು ನಾನು ಬೆಳೆದು ಬಂದ ರೀತಿಯ ರಿಫ್ಲೆಕ್ಷನ್ನು ಅಷ್ಟೆ. ಎರಡೂ ನಿಜವಾದರೂ ಯಾರೂ ದೊಡ್ಡವರಾಗೋಲ್ಲ. ಅದು ಸ್ವಾಭಾವಿಕ. ನಿಮ್ಮನ್ನ ಅಥವಾ ನಿಮಗೆ ಅಭಿಮಾನ ಇರುವವರನ್ನು ಟೀಕಿಸಿದರೆ ಅದನ್ನು ಸಹಿಸಿಕೊಂಡು ಹೋಗುವುದು ಇಲ್ಲಿ ಬರಲೇ ಇಲ್ಲ. ನಮ್ಮನ್ನು ನೋಡಿ ನಾವು ನಗುವುದು ತಪ್ಪಲ್ಲ” ಎಂದಳು ದಿಟ್ಟಿಸಿ ನೋಡುತ್ತಾ. ” ಸಾರಿ” ಎಂದ ಚಕ್ರಪಾಣಿ. ಆದರೆ ಅದು ಬಾಯಿಂದ ಮಾತ್ರ ಬಂದದ್ದು ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಕಷ್ಟವೇನೂ ಆಗಲಿಲ್ಲ ಸುಷ್ಮಾಳಿಗೆ. ” ಎನಿವೇ, ನಮಗ್ಯಾಕೆ ಬಿಡಿ. ಹೋಗಲಿ ನೀವು ಅಲ್ಲಿಗೆ ಬಂದರೆ ರೆಸಿಡೆನ್ಸಿ ಶುರುಮಾಡಕ್ಕೆ ಎಷ್ಟು ದಿನ ಬೇಕಾಗುತ್ತೆ” ವಿಷಯ ಮತ್ತೊಮ್ಮೆ ಬದಲಿಸುತ್ತಾ ಕೇಳಿದಳು. ” ನಾನಿನ್ನೂ ಅದರ ಬಗ್ಗೆ ಯೋಚನೆ ಮಾಡಬೇಕು. ಐ ಥಿಂಕ್ ನೀವು ಇದರ ಬಗ್ಗೆ ಯಾವ ನಿರ್ಧಾರವನ್ನೂ ಅಷ್ಟು ಬೇಗ ಊಹಿಸಿಕೊಳ್ಳಬೇಡಿ. ನಾನು ಇಂಥಾ ವಿಚಾರಗಳಲ್ಲಿ ಸ್ವಲ್ಪ ನಿಧಾನ. ಮೊದಲು, ಅಮೆರಿಕಾಕ್ಕೆ ಹೋಗಬೇಕೋ ಬೇಡವೋ ಅನ್ನೋದನ್ನು ಖಾತ್ರಿ ಮಾಡಿಕೊಂಡು ಆಮೇಲೆ ಮುಂದಿನ ವಿಷಯ ಯೋಚನೆ ಮಾಡಬೇಕು” ಕೈ ಒರೆಸುತ್ತಾ ಹೇಳಿದ ಚಕ್ರಪಾಣಿ. ” ಚಕ್ರಪಾಣಿ, ನೀವು ಇದುವರೆಗೂ ಅಮೆರಿಕಾ ಬಗ್ಗೆ ಯೋಚನೆ ಮಾಡಿರೋದು ಪೂರ್ವಾಗ್ರಹ ತುಂಬಿರೋ ನಿಮ್ಮ ಮನಸ್ಸಿನಿಂದ. ಅದನ್ನು ಒಪ್ಪಲು ನೀವು ತಯಾರಿಲ್ಲ. ಸರಿಯಾಗಿ ಯೋಚನೆ ಮಾಡಿ. ಇಲ್ಲಿ ಎಲ್ಲರೂ ಬೇಡ ಅಂದಿರೋರನ್ನೂ ಕೂಡ ತನ್ನ ಹತ್ತಿರ ಕರೆದುಕೊಂಡಿದೆ ಆ ದೇಶ. ಈಗ ನಿಮ್ಮ ಪ್ರೊಫೆಶನ್ನನ್ನೇ ತೆಗೆದುಕೊಳ್ಳಿ. ನೀತಿ, ನಿಯಮ ಅಂತ ನಿಮ್ಮ ಎತಿಕ್ ಪ್ರಕಾರ ಪ್ರಾಕ್ಟೀಸ್ ಮಾಡುವುದಕ್ಕೆ ಹೋದರೆ, ಬದುಕುವ ದಾರಿ ಗೊತ್ತಿಲ್ಲದವನು ಅಂತ ನಿಮ್ಮ ಜನಾನೆ ಮೂಗು ಮುರೀತಾರೆ. ನಾನು ಅಲ್ಲಿ ಬೇಕಾದಷ್ಟು ಡಾಕ್ಟರರ ಹತ್ತಿರ ಮಾತನಾಡಿದ್ದೇನೆ. ಯಾರೂ ಅಮೆರಿಕಕ್ಕೆ ಬಂದಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಂಡಿಲ್ಲ. ಮೊದಮೊದಲು ದೇಶ ಬಿಟ್ಟು ಬಂದಿದೀನಿ ಅಂತ ಪೇಚಾಡಿಕೊಂಡವರು ಕೂಡ ಅವರಲ್ಲೊಬ್ಬರಾಗಿಹೋಗಿದ್ದಾರೆ. ಬರೀ ದುಡ್ಡು ಅಥವಾ ಮೆಟೀರಿಯಲ್ ಬೆನಿಫಿಟ್ ಬಗ್ಗೆ ನಾನು ಹೇಳ್ತಾ ಇಲ್ಲ. ನಿಮ್ಮ ಕೆಲಸದಲ್ಲಿ ನೀವು ಕಲಿತಿರುವುದನ್ನು ನಿಮ್ಮ ಮನಸ್ಸಿಗೆ ಇಷ್ಟವಾಗುವ ಹಾಗೆ ಪ್ರಾಕ್ಟೀಸ್ ಮಾಡುವುದು ಇಲ್ಲಿ ಸಾಧ್ಯವೇ? ಅಲ್ಲಿ ಬುಕ್ಕಲ್ಲಿರೋ ರೀತೀನೇ ಪ್ರಾಕ್ಟೀಸ್ ಮಾಡಬಹುದಂತೆ.” ” ಆ ಪುಸ್ತಕಗಳನ್ನು ಬರೆದಿರೋರ್ಯಾರು. ಅವರೇ ತಾನೇ. ಸುಷ್ಮಾ ಏನೇ ತೊಗೊಳ್ಳಿ. ಅಲ್ಲಿಯದನ್ನು ಕುರುಡಾಗಿ ಕಾಪಿ ಮಾಡೋದಷ್ಟೇ ತಾನೇ ನಮಗೆ ಬಂದಿರೋದು. ಮೊದಲಿಂದ ತನ್ನದೇ ಸರಿ ಅಂತಲೇ ಹೇಳುತ್ತಾ ಬಂದರು ಅವರು. ನಮ್ಮದು ಸರಿ ಅಂತ ತೋರಿಸೋ ತಾಕತ್ತಿಲ್ಲದೆ ಸುಮ್ಮನೆ ಒಪ್ಕೊಂಡ್ವಿ ನಾವು. ನೀವು ಹೇಳ್ತಾ ಇರೋ ಮೆಡಿಸಿನ್ ನನಗೂ ಗೊತ್ತು. ತಾವುಗಳೇ ಕಂಡುಹಿಡಿದು, ತಮ್ಮ ಜನದ ಮೇಲೆಯೇ ಪ್ರಯೋಗ ಮಾಡಿರೊ ಔಷಧಿಗಳನ್ನು ಇಡೀ ಜಗತ್ತು ಉಪಯೋಗಿಸಬಹುದು ಅಂತ ಅವರು ಹೇಳ್ತಾರೆ. ನಮ್ಮ ಜನಕ್ಕೆ, ನಮ್ಮ ವಾತಾವರಣಕ್ಕೆ ಆ ಔಷಧಿಗಳಾಗಲೀ, ಅಲ್ಲಿನ ಟೆಕ್ನಿಕ್ ಗಳಾಗಲಿ ಸಂಗತವೋ ಅಸಂಗತವೋ ಯೋಚನೇನು ಮಾಡಕ್ಕೆ ತಯಾರಿಲ್ಲ ನಮ್ಮ ಡಾಕ್ಟರುಗಳು. ನಮ್ಮದನ್ನು ಮುಂದೆ ತರೋಕೆ ನಾವು ಕಲೀದೆ ಇರೋದ್ರಿಂದಲೇ ಇವತ್ತು ಆಯುರ್ವೇದ ಹಂತ ಹಂತವಾಗಿ ಸಾಯುತ್ತಿರೋದು.” ” ಚಕ್ರಪಾಣೀ, ಯಾವನೇ ಒಬ್ಬ ಮನುಷ್ಯ ಲೀಡರ್ ಅಂತ ಅನ್ನಿಸಿಕೊಳ್ಳುವುದಕ್ಕೆ ಕೆಲವೊಂದು ಗುಣಗಳು ಮುಖ್ಯವಾಗಿರುತ್ತದೆ. ಆ ಎಲ್ಲ ಗುಣಗಳು ಒಳ್ಳೆಯದೇ ಆಗಿರಬೇಕೆಂದೆನಿಲ್ಲ. ಒಟ್ಟು ತನ್ನ ಹಿಂದಿರುವವರನ್ನು ಮೆಚ್ಚಿಸುವಂತಿದ್ದರೆ ಸಾಕು. ಈ ಎಲ್ಲರನ್ನೂ ಮೆಚ್ಚಿಸೋ ಕೆಲಸಾನ ಅವರು ಮಾಡ್ತಾ ಇದ್ದಾರೆ. ಅದರ ಬಗ್ಗೆ ಎರಡು ಮಾತಿಲ್ಲ. ಯಾವುದಾದರೋ ಜನಕ್ಕೆ ಉಪಯೋಗ ಆಗೋ ಅಂಥ ಕೆಲಸವನ್ನು ಅವರು ಮಾಡಿದರು, ನಾವು ಮಾಡಲಿಲ್ಲ ಎಂದು ಅದು ಅಸಂಗತ, ನಾಟ್ ರೆಲವಂಟ್ ಅನ್ನೋ ನೆಪದಿಂದ ತಿರಸ್ಕರಿಸಿದರೆ, ಅದು ನೀವು ನಿಮ್ಮ ದೇಶದ ಮೇಲೆ ಇಟ್ಟಿರೋ ಅಭಿಮಾನ ಅಲ್ಲ, ಮೂರ್ಖತನವಾಗುತ್ತದೆ. ಗುಣಕ್ಕೆ ಮತ್ಸರವಿರಬಾರದು ಅಂತಾರೆ. ಐವತ್ತು ವರ್ಷದ ಹಿಂದೆ ಪೆನಿಸಿಲಿನ್ ಕಂಡುಹಿಡಿದಾಗ ಅದು ನಮ್ಮ ಸೊಸೈಟಿಗಲ್ಲ ಎಂದು ನಾವು ಬಿಟ್ಟಿದ್ದರೆ ಈಗ ಪರಿಸ್ಥಿತಿ ಹೇಗೆ ಇರುತ್ತಿತ್ತು ಅಂತ ಊಹಿಸ್ಕೊಳ್ಳಿ ನೋಡೋಣ. ಒಳ್ಳೆಯದನ್ನು ಒಪ್ಪಿಕೊಳ್ಳಬೇಕಪ್ಪ” ನಿಧಾನವಾಗಿ ಹೇಳಿದಳು. ” ನೀವು ಜನರಲೈಸ್ ಮಾಡ್ತಾ ಇದ್ದೀರ. ನಾನು ಒಪ್ಕೊಳಲ್ಲಾ ಅಂತ ಹೇಳ್ತಾ ಇಲ. ಆದರೆ ಎಲ್ಲವನ್ನೂ ಒಪ್ಪಿಕೊಳ್ಳೋದು ತಪ್ಪು. ಅಲ್ಲಿ ದುಡ್ಡಿದೆ ಎಂದು ತೊಂಬತ್ತು ವರ್ಷದ ಮುದುಕನಿಗೂ ಬೈಪಾಸ್ ಸರ್ಜರಿ ಮಾಡ್ತಾರೆ. ಅದು ತಪ್ಪು ಎಂದು ಇಂಗ್ಲೆಂಡಲ್ಲಿ ಎಪ್ಪತ್ತೈದು ವರ್ಷದ ಮೆಲೆ ಮಾಡಬಾರದು ಅಂತ ನಿಯಮ ಹಾಕಿಕೊಂಡರು. ಇದು ಹೊರನೋಟಕ್ಕೆ ಇನ್ ಹ್ಯೂಮನ್ ಅನ್ನಿಸಬಹುದು. ಆದರೆ ಅದೇ ಸತ್ಯ. ಆದರೆ ನಾವಿಲ್ಲಿ ಏನು ಮಾಡುತ್ತಾ ಇದೀವಿ. ನಿನಗೆ ವಯಸ್ಸೆಷ್ಟು ಅಂತ ಕೇಳೋಕ್ಮುಂಚೆ ನಿನ್ಹತ್ರ ಎರಡು ಲಕ್ಷ ರೂಪಾಯಿ ಇದ್ಯಾ ಅಂತ ಕೇಳ್ತೀವಿ. ದುಡ್ಡಿದ್ದೋನು ಬದುಕುತ್ತಾನೆ. ಇಲ್ಲದೋನು ಇಲ್ಲ. ಬರೀ ಕುರುಡಾಗಿ ಇನ್ನೊಬ್ಬರನ್ನು ಫಾಲೋ ಮಾಡೋ ಬದಲು ನಮ್ಮ ವ್ಯವಸ್ಥೆಗೆ ಯಾವುದು ಸರಿಯೋ ಅದನ್ನು ಮಾತ್ರ ಮಾಡಿದರೆ, ಸಾಯೋ ಮನುಷ್ಯ ನೆಮ್ಮದಿಯಿಂದಲಾದರೂ ಸಾಯಬಹುದು” ಕೆಂಪಾಗಿದ್ದ ಚಕ್ರಪಾಣಿ. ” ನೋಡಿ ಒಂದು ವಿಷಯ ಹೇಳ್ತೀನಿ. ನಿಮಗೆ ಅಮೆರಿಕಾಕ್ಕೆ ಬರಬಾರದು ಅಂತಿದ್ದರೆ ಅದು ತಪ್ಪೇನೂ ಅಲ್ಲ. ನನಗೆ ಇಲ್ಲಿಯದರ ಬಗ್ಗೆ ಖಂಡಿತಾ ದ್ವೇಷವಿಲ್ಲ. ಹಾಗೆ ಇದ್ದಿದ್ದರೆ, ಮದುವೆಗೆ ಇಲ್ಲಿನವರು ಬೇಕು ಅಂತ ಕೇಳ್ತಾನೂ ಇರಲಿಲ್ಲ. ನನ್ನ ಅದೃಷ್ಟ, ಎರಡೂ ಸಂಸ್ಕೃತೀನ ಮುಕ್ತ ಮನಸ್ಸಿನಿಂದ ಹೋಲಿಸೋಕೆ ನನಗೆ ಅವಕಾಶ ಸಿಕ್ಕಿತು. ಎರಡರಲ್ಲೂ ಹುಳುಕಿದೆ. ಅದ್ರೆ, ಬರೀ ಹುಳುಕನ್ನು ನೋಡ್ತಾ ಕೂತರೆ, ಯೂ ವಿಲ್ ಮಿಸ್ ದ ಫನ್. ಐ ವಾಂಟ್ ಯು ಗಿವ್ ಇಟ್ ಎ ಫೇರ್ ಟ್ರೈ. ನಾವು ಮದುವೆಯಾದರೂ ನೀವು ಅಲ್ಲಿಗೆ ಬಂದು ಒಂದೆರಡು ವರ್ಷ ನೋಡಿ ನಿಮಗೆ ಸರಿ ಬರಲಿಲ್ಲ ಅಂದರೆ ಇಬ್ಬರೂ ಯೋಚನೆ ಮಾಡೋಣ. ನಿಮ್ಮ ಯೋಚನೆ ರೀಸನಬಲ್ ಆಗಿದ್ದರೆ ನಾನು ಇಲ್ಲಿಗೆ ಬರೋಕೂ ರೆಡಿ. ಆದರೆ ನಿಮಗೆ ಯಾವುದೇ ಒಂದು ನಿರ್ದಿಷ್ಟ ಕಾರಣ ಇಲ್ಲದೆ ಅಮೆರಿಕನ್ ಆದದ್ದೆಲ್ಲಾ ಹೇಟ್ ಮಾಡ್ತೀನಿ ಅನ್ನೋ ಮನೋಭಾವನೆ ಇದ್ದರೆ , ಸ್ವಲ್ಪ ಕಷ್ಟ ಆಗುತ್ತೆ,” ತಡವರಿಸಿದಳು. ” ಅಲ್ಲಿ ಇರಬೇಕೋ ಬೇಡವೋ ಅನ್ನುವುದನ್ನು ಅಲ್ಲಿಗೆ ಬಂದೇ ನಿರ್ಧಾರ ಮಾಡಬೇಕೇ” ” ಬರಬಾರದು ಅಂತಾನೇ ನೀವು ನಿರ್ಧಾರ ಮಾಡಿದೀರಿ ಅಂದರೆ ನಾನು ಒಪ್ಪಲ್ಲ. ಅಮೆರಿಕಾ ಬಗ್ಗೆ ಕುತೂಹಲ ಇರೋದ್ರಿಂದಾನೇ ನೀವು ಈ ಪ್ರಪೋಸಲ್ ಗೆ ಒಪ್ಪಿರೋದು. ಅಷ್ಟು ಬದ್ಧ ದ್ವೇಷಿಯಾಗಿದ್ರೆ ಇಲ್ಲೇ ಯಾರನ್ನಾದ್ರೂ ಮದುವೆ ಮಾಡ್ಕೊಂಡು ಲಾಲ್ ಬಾಗಿಗೆ ಮರ ಸುತ್ತೋಕೆ ಹೋಗುತ್ತಿದ್ದಿರಿ. ಕನ್ನಡ ಸಿನೆಮಾದಲ್ಲಿ ಈಗಲೂ ಮರ ಸುತ್ತಿಸ್ತಾರಾ” ಇಬ್ಬರೂ ನಕ್ಕು ಎದ್ದರು. ಬಿಲ್ ಕೊಟ್ಟು ಹೊರಗೆ ಬಂದರು. ಮಧ್ಯಾಹ್ನ ಮೂರೂವರೆಯಾಗಿತ್ತು. ರಸ್ತೆ ಗಿಜಿಗಿಜಿಯನ್ನುತ್ತಿತ್ತು. “ಪಾನ್ ಹಾಕುತ್ತೀರಾ” ಕೇಳಿದ ಚಕ್ರಪಾಣಿ. ” ಸಾರಿ, ಆದರೆ ಥ್ಯಾಂಕ್ಸ್. ಬಟ್ ಐ ಡೋಂಟ್ ಮೈಂಡ್ ಇಫ್ ಯೂ ವಾಂಟ್ ಇಟ್” ಎಂದಳು. ” ಇಲ್ಲ, ಪರವಾಗಿಲ್ಲ” ನಕ್ಕ ಚಕ್ರಪಾಣಿ. ಆಟೋ ನಿಲ್ಲಿಸಿ ಒಳಗೆ ಹತ್ತುತ್ತಾ ಕೇಳಿದಳು ಸುಷ್ಮಾ” ನಿಮ್ಮ ಪಾಸ್ ಪೋರ್ಟ್ ರೆಡಿ ಇದೆಯಾ” ಚಕ್ರಪಾಣಿ ತಬ್ಬಿಬ್ಬಾಗಿ ” ಇ..ಇಲ್ಲ” ಎಂದ. ” ಭಗವದ್ಗೀತೆ ಕೇಳಿದ ಮೇಲೆ ಅರ್ಜುನ ಸನ್ಯಾಸ ತೆಗೆದುಕೊಳ್ಳಲಿಲ್ಲ, ಯುದ್ದ ಮಾಡಿದ” ಕಣ್ಣು ಮಿಟುಕಿಸಿ ಹೇಳಿದಳು, ಸುಷ್ಮಾ. ಆಟೋ ಹೊರಟಿತು.

*
*
*
ಭಾನುವಾರ ಬೆಳಿಗ್ಗೆ ಇರೋ ಮೂರುಜನ ಪೇಷೆಂಟುಗಳನ್ನು ಬೇಗ ನೋಡಿ ಬರೋಣವೆಂದು ಆಸ್ಪತ್ರೆಗೆ ಬಂದಿದ್ದ ಚಕ್ರಪಾಣಿ. ಓಪಿಡಿಗೆ ಬಂದು ಕೋಟು ಹಾಕುತ್ತಾ ಇದ್ದ. ಡಿಪಾರ್ಟ್ಮೆಂಟ್ ನಲ್ಲಿ ಯಾರೂ ಇರಲಿಲ್ಲ. ಇನ್ನೇನು ಹೊರಡೋಣವೆಂದು ತಿರುಗಿದಾಗ ಏದುಸಿರು ಬಿಡುತ್ತಾ ಓಡಿಬಂದಿದ್ದ ನರಸಿಂಹ. ” ಸಾ, ಯಾರೂ ಇಲ್ವಾ ಸಾ, ನಿಮ್ಮನ್ಬಿಟ್ಟು” ಗಾಬರಿಯಲ್ಲಿದ್ದ. ” ಇಲ್ಲ ಯಾಕೆ” ಆಶ್ಚರ್ಯದಿಂದ ಕೇಳಿದ ಚಕ್ರಪಾಣಿ. ” ಸಾಯೇಬ್ರ ಅಪ್ಪಾವ್ರಿಗೆ ಏನೋ ಉಸಾರಿಲ್ಲಾ, ಸಾ, ಆಫಿಸಲ್ಲೇ ಮಲ್ಕೊಂಡವ್ರೆ. ಬೇಗ ಓಗಿ ಯಾರ್ನಾದರೂ ಕರ್ಕೊಂಬಾ ಅಂದ್ರು. ಸರಿ ಓಗ್ಲೀ ನೀವೇ ಬನ್ನಿ” . ಚಕ್ರಪಾಣಿಗೆ ಸ್ವಲ್ಪ ಸಿಟ್ಟು ಬಂದರೂ ತಡೆದು ” ನಡಿ ಹೋಗೋಣ” ಎಂದು ನರಸಿಂಹನ ಹಿಂದೆ ಹೊರಟ. ಆಸ್ಪತ್ರೆಯ ಬಿಲ್ಡಿಂಗ್ ದಾಟಿ ಗವಿಸಿದ್ದಪ್ಪನ ಆಫೀಸಿನೊಳಗೆ ಹೋದ ಚಕ್ರಪಾಣಿ. ” ಅಮ್ಮಾ ಸತ್ನಪ್ಪೋ” ತಿಪ್ಪಣ್ಣನವರ ಆಕ್ರಂದನ ಕೇಳಿಸುತ್ತಿತ್ತು, ಒಳಗಿನಿಂದ. ಅಲ್ಲೇ ನಿಂತಿದ್ದ ಗವಿಸಿದ್ದಪ್ಪನಿಗೊಂದು ನಮಸ್ಕಾರ ಮಾಡಿದ. ” ನೀವ್ಯಾರ್ರೀ” ದುರುಗುಟ್ಟಿ ನೋಡಿ ಕೇಳಿದ. ತಾನು ಯಾಕೋ ಬರಬಾರದ ಜಾಗಕ್ಕೆ ಬಂದಿದ್ದೇನೆ ಅನ್ನಿಸಿತು ಚಕ್ರಪಾಣಿಗೆ. ಸುತ್ತಲೂ ನೋಡಿದ. ಏಳೆಂಟು ಜನ ಖಾದಿದಾರಿಗಳು. ಗವಿಸಿದ್ದಪ್ಪನೂ ಪಂಚೆಯಲ್ಲೇ ಇದ್ದ. ರಾತ್ರಿಯ ಪ್ರಭಾವವಿರಬೇಕು, ಎಲ್ಲರ ಕಣ್ಣೂ ಕೆಂಪಗಿತ್ತು. ” ಡಾ: ಚಕ್ರಪಾಣಿ, ಮೆಡಿಸಿನ್ ಲೆಕ್ಚರರ್” ಎಂದಷ್ಟೇ ಹೇಳಿ ತಿಪ್ಪಣ್ಣನನ್ನು ನೋಡಲು ಮುಂದಾದ. “ಏ ನರಸಿಂಹ ಬೇರೆ ಯಾರೂ ಇರಲಿಲ್ವೇನೋ, ಎಲ್ರೀ ನಿಮ್ಮ ಯುನಿಟ್ ಹೆಡ್ಡು” ಅಸಮಾಧಾನದಿಂದ ಕೇಳಿದ ಗವಿಸಿದ್ದಪ್ಪ. ” ಇವತ್ತು ಭಾನುವಾರ, ನಾಯಕ್ ಬರೋದಿಲ್ಲ. ಬೇರೆ ಯುನಿಟ್ಟಿನಲ್ಲಿ ಯಾರಿದಾರೆ ಎಂದು ನನಗೆ ಗೊತ್ತಿಲ್ಲ.” ಎಂದು ಹೇಳಿ ತಿಪ್ಪಣ್ಣನನ್ನು ಪರೀಕ್ಷಿಸಲು ಗವಿಸಿದ್ದಪ್ಪನ ಅಪ್ಪಣೆಗೆ ಕಾಯುತ್ತಾ ನಿಂತ ಚಕ್ರಪಾಣಿ. ” ಅಯ್ಯೋ, ಯಾರಾರ ಕಾಪಾಡ್ರಪ್ಪಾ, ಯಾರೋ ಒಬ್ರು ನೋಡ್ಲೀ ಬಿಡಪ್ಪ, ಸಿದ್ದಣ್ಣಾ” ಕೂಗುತ್ತಿದ್ದರು, ತಿಪ್ಪಣ್ಣನವರು. “ಹೋಗಲಿ ನೋಡ್ರೀ” ಬೇರೆ ದಾರಿಯಿಲ್ಲದೇ ಹೇಳಿದ ಗವಿಸಿದ್ದಪ್ಪ. ಹೋಗಿ ತಿಪ್ಪಣ್ಣನವರ ಬಳಿ ನಿಂತು ಕೇಳಿದ ಚಕ್ರಪಾಣಿ” ಏನಾಗ್ತಿದೆ, ತಿಪ್ಪಣ್ಣನವರೆ” ” ನಿನ್ನೆ ರಾತ್ರಿ ಪಾರ್ಟಿ ಮೀಟಿಂಗಿತ್ತು. ಮುಗಿಸ್ಕೊಂಡು ಎಲ್ಲಾ ನಮ್ಮನೇಲೆ ಸೇರಿದ್ವು. ಅಪ್ಪಯ್ಯ ಕುಡಿಗಿಡಿಯೋದಿಲ್ಲ.ಸ್ವಲ್ಪ ಮಟನ್ ಜಾಸ್ತಿ ಆಯ್ತು ಅನ್ನಿಸುತ್ತೆ. ಇವತ್ತು ಬೆಳಿಗ್ಗೆ ಎದ್ದವರೇ ಏಕ್ದಂ ಹೊಟ್ಟೇನೋವು ಅಂತ ಒದ್ದಾಡೋಕೆ ಶುರುಮಾಡಿದ್ರು. ನಾನು ಜೆಲ್ಯುಸಿಲ್ ಕೊಟ್ಟೆ. ಏನೂ ಕಮ್ಮಿ ಆಗ್ಲಿಲ್ಲ. ಅದಕ್ಕೆ ಆಸ್ಪತ್ರೆಗೆ ಕರ್ಕೊಂಬಂದೆ” ಗವಿಸಿದ್ದಪ್ಪ ಹೇಳಿದ ಗೋಡೆ ನೋಡುತ್ತಾ. ಚಕ್ರಪಾಣಿ ತಿಪ್ಪಣ್ಣನವರನ್ನು ಪರೀಕ್ಷಿಸುತ್ತಿದ್ದ. ನೋಡುತ್ತಲೇ ಅನ್ನಿಸಿತು ಚಕ್ರಪಾಣಿಗೆ ಏನೋ ತೊಂದರೆ ಇದೆ ಎಂದು. ತಿಪ್ಪಣ್ಣನವರು ಬಿಳಿಚಿಕೊಂಡಿದ್ದರು. ಕೈಕಾಲು ತಣ್ಣಗಾಗಿತ್ತು.”ತಿಪ್ಪಣ್ಣನವರೇ, ಎಲ್ಲಿ ನೋಯುತ್ತಾ‌ಇದೆ ಎಂದು ಸ್ವಲ್ಪ ತೋರಿಸ್ತೀರಾ” ಚಕ್ರಪಾಣಿ ಕೇಳಿದ ಹೊಟ್ಟೆಯನ್ನು ಅದುಮುತ್ತಾ. “ಇಲ್ಲೇ ಸಿವಾ, ಇಲ್ಲಿಂದ ಸುರು ಆಗಿ ಬೆನ್ನೆಲ್ಲಾ ನೋಯ್ತಾ ಐತೆ. ಒಟ್ಟೆ ಒಡೆದು ಓದ ಅಂಗೆ ಅನ್ನಿಸ್ತು. ಅಮ್ಮೋ ಸಿವಾ, ಕಾಪಾಡಪ್ಪಾ” ಹೊಟ್ಟೆಯ ಮೇಲ್ಭಾಗದಲ್ಲಿ ತೋರಿಸಿದರು ತಿಪ್ಪಣ್ಣ. “ಸ್ವಲ್ಪ ಬೀಪಿ ಅಪರೇಟಸ್ ತರಿಸ್ತೀರಾ ಸರ್” ಕೇಳಲೋ ಬೇಡವೋ ಎಂದು ಕೇಳಿದ. ನರಸಿಂಹ ತರಲು ಓಡಿದ. ” ಅವರ ಬೀಪಿ ಸರಿಯಾಗೇ ಇದೇರಿ. ಅಸಿಡಿಟೀಗೆ ಏನಾದ್ರೂ ಕೊಡಬೇಕಾ ನೋಡಿ. ಪೂರಾ ಪರೀಕ್ಷೆ ಬೇಕಾದರೆ ಆಮೇಲೆ ಮಾಡೋರಂತೆ” ಗವಿಸಿದ್ದಪ್ಪ ಸಿಡುಕಿದ. ಈತ ಮೆಡಿಸಿನ್ ಪೂರಾ ಮರೆತಿದ್ದಾನೆ ಅನ್ನಿಸಿತು ಚಕ್ರಪಾಣಿಗೆ. ಏನೂ ಗೊತ್ತಿಲ್ಲದೆ ಸುತ್ತಲೂ ನಿಂತಿರುವ ತನ್ನ ಚೇಲಾಗಳ ಮುಂದೆ ತನ್ನ ದೊಡ್ಡಸ್ತಿಕೆ ತೋರಿಸುತ್ತಿದ್ದಾನೆ. ತಾನು ಮಾಡುತ್ತಿರುವುದು ಸರಿ ಎಂದು ಗೊತ್ತಿದ್ದರೂ ಏನೂ ಹೇಳದೇ ಏಕೆ ಸುಮ್ಮನೆ ನಿಂತಿದ್ದೇನೆ ಎಂಬ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ, ಚಕ್ರಪಾಣಿಗೆ. ನರಸಿಂಹ ಬೀಪಿ ಅಪರೆಟಸ್ ತಂದಿದ್ದ.. ಬೀಪಿ ನೋಡುತ್ತಿರಬೇಕಾದರೆ ಹೊಟ್ಟೆಯ ಮೇಲ್ಭಾಗವನ್ನೊಮ್ಮೆ ದಿಟ್ಟಿಸಿದ. ಪಟ್ ಪಟ್ ಎಂದು ನಾಡಿಮಿಡಿತಕ್ಕೆ ಸರಿಯಾಗಿ ಇಡೀ ಹೊಟ್ಟೆಯ ಭಾಗ ಮೇಲೆ ಕೆಳಗೆ ಹೋಗುತ್ತಿತ್ತು. ಬೀಪಿ ತೀರ ಕಮ್ಮಿಯಿತ್ತು. ತೊಡೆಯ ಸಂದಿಯಲ್ಲಿ ಕೈಯಿಟ್ಟು ನೋಡಿದ. ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು ಅನ್ನಿಸಿತು. ಗವಿಸಿದ್ದಪ್ಪನ ಕಡೆ ನೋಡುತ್ತಾ ಕೆಳಿದ “ಸರ್, ತಿಪ್ಪಣ್ಣನವರಿಗೆ ಯಾವಾಗಲೂ ಬೀಪಿ ಜಾಸ್ತಿ ಇರುತ್ತೆ ಅಲ್ಲವಾ’ ” ಹೌದು ಅದಕ್ಕೇನೀಗ” ಗಡುಸಾಗಿಯೇ ಕೇಳಿದ ಗವಿಸಿದ್ದಪ್ಪ. ” ಈಗ ಅದು ತೀರ ಕಮ್ಮಿಯಿದೆ. ಹೀ ಇಸ್ ಇನ್ ಶಾಕ್. ಸಿವಿಯರ್ ಅಬ್ಡಾಮಿನಲ್ ಪೇನ್. ಎಪಿಗ್ಯಾಸ್ಟ್ರಿಕ್ ಪಲ್ಸೇಶನ್ಸ್, ಮತ್ತೆ ಶಾಕ್. ನನಗೆ ಅನ್ನಿಸುತ್ತೆ ಅನ್ಯೂರಿಸಂ ಲೀಕ್ ಅಗ್ತಾ ಇದೆ ಅಂತ. ಆದಷ್ಟು ಬೇಗ ಬೆಂಗಳೂರಿಗೆ ಕರೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಮಾಡಬೇಕು. ನಮ್ಮಲ್ಲಿ ಇದಕ್ಕೆ ಸರಿಯಾದ ಅನುಕೂಲಗಳು ಇಲ್ಲ.’ ” ಹ…..ಯ್ಯೋ,” ತಿರಸ್ಕಾರದಿಂದ ಒಮ್ಮೆ ನಿಟ್ಟುಸಿರು ಬಿಟ್ಟು ಕೆಟ್ಟದಾಗಿ ಮುಖ ನೋಡಿದ ಗವಿಸಿದ್ದಪ್ಪ. ” ಎಲ್ಲಿಂದ ಬರ್ತೀರಿ ನೀವೆಲ್ಲ. ಯಾವೋನ್ರೀ ನಿಮಗೆ ಡಿಗ್ರಿ ಕೊಟ್ಟಿದ್ದು. ಅನ್ಯುರಿಸಂ ಅಂತೆ. ಇದ್ರೆ ತಾನೇ ಲೀಕ್ ಅಗೋದು. ಸುಮ್ಮ ಸುಮ್ಮನೆ ಪುಸ್ತಕ ಓದಿಕೊಂಡು ಬಂದು ಮನಸ್ಸಿಗೆ ಬಂದಿದ್ದೆಲ್ಲಾ ಹೇಳಬೇಡಿ. ನಿಮ್ಮ ಹುಡುಗ್ರ ಮುಂದೆ ಹೇಳಿ ಬೇಕಾದರೆ ನಿಮ್ಮ ಇಪ್ಪತ್ತೆರಡು ಡಿಫೆರೆಂಶಿಯಲ್ ಡಯಾಗ್ನಸಿಸ್ ನ. ಅಪ್ಪಯ್ಯಂಗೆ ಈ ನಡುವೆ ಬೀಪಿ ಯಾವಾಗಲೂ ಕಮ್ಮೀನೇ ಇರ್ತಿತ್ತು. ಎಲ್ಲಾ ಬಿಟ್ಟು ನಿಮ್ಮನ್ನ ಕರ್ಕೊಂಡು ಬಂದ್ನಲ್ಲ ಆ ನರಸಿಂಹ. ನೀವು ಹೋಗ್ರೀ. ನಿಮ್ಮ ಕೆಲಸ ನೋಡ್ಕೋ ಹೋಗ್ರೀ. ಇನ್ನೊಂದು ಸ್ವಲ್ಪ ಜೆಲ್ಯುಸಿಲ್ ಕುಡಿಸ್ರಿ. ಏ, ನರಸಿಂಹ, ಏನೋ ಮಾಡ್ತಾ ಇದ್ಯಾ, ಹೋಗಿ ಯಾರಾದ್ರೂ ನರ್ಸನ್ನು ಕರ್ಕೊಂಬಾ. ಹಾಗೇ ಒಂದಿಷ್ಟು ಪೆಪ್ಸಿಡ್ಡೋ ರ್ಯಾಂಟಾಕೋ ತೊಗೊಂಬಾ. ಬುದ್ಧಿ ಒಂದಿದ್ರೆ ಸಾಲದು. ಅದನ್ನು ಉಪಯೋಗಿಸುವುದಕ್ಕೂ ಬರಬೇಕು ” ಕೂಗಾಡುತ್ತಿದ್ದ. ಅಷ್ಟರಲ್ಲಿ ನರಸಿಂಹ ಹೋಗಿ ಡಾ:ರಾಮಸ್ವಾಮಿಯವರನ್ನು ಕರೆದುಕೊಂಡು ಬಂದಿದ್ದ. ರಾಮಸ್ವಾಮಿ ಎರಡನೇ ಯುನಿಟ್ಟಿನ ಹೆಡ್. ಒಳಗೆ ಬಂದವರೇ ಗವಿಸಿದ್ದಪ್ಪನ ನೋಡಿ ” ನಮಸ್ಕಾರಾ ಸಾರ್’ ಅಂದರು. ” ಏನ್ರೀ, ಎಲ್ಹೋಗಿರ್ತೀರಿ. ಹೀಗೇ ಏನ್ರೀ ನಡೆಸೋದು ಡಿಪಾರ್ಟ್ಮೆಂಟನ್ನು. ಇಷ್ಟು ದೊಡ್ಡ ಆಸ್ಪತ್ರೆ ಕಟ್ಟಿಸಿ ನಮ್ಮನೇಯವರನ್ನ ನೋಡೋಕೆ ಯಾವೋನನ್ನೋ ಕರೆಸಬೇಕೇನ್ರಿ, ನಾವು. ಈ ಡಾಕ್ಟ್ರು ಅನ್ನಿಸ್ಕೊಂಡವನು ಮನಸ್ಸಿಗೆ ಬಂದಹಾಗೆಲ್ಲಾ ಮಾತಾಡ್ತಾ ಇದ್ದಾನೆ. ಅದನ್ನೆಲ್ಲಾ ಆಮೇಲೆ ವಿಚಾರಿಸ್ತೀನಿ. ಈಗ ಮೊದಲು ಏನಾಗಿದೆ ನೋಡಿ.” ಮುಖನೋಡದೆ ಗದರಿದ ಗವಿಸಿದ್ದಪ್ಪ. ಚಕ್ರಪಾಣಿಗೆ ಮೊದಲ ಬಾರಿಗೆ ಗವಿಸಿದ್ದಪ್ಪನ ಪ್ರತ್ಯಕ್ಷ ಪರಿಚಯವಾಗುತ್ತಿತ್ತು. ಅವನ ಬಗ್ಗೆ ಕೇಳಿದ್ದನೇ ಹೊರತು ನೋಡುವ ಅವಕಾಶ ಸಿಕ್ಕಿರಲಿಲ್ಲ. ಎಂಥ ಹೇಯ ಮನುಷ್ಯ ಈತ ಎಂದುಕೊಂಡ. ಮೆಡಿಸಿನ್ ಬಗ್ಗೆ ಕಿಂಚಿತ್ತೂ ಜ್ಞಾನ ಇಲ್ಲ. ಜೊತೆಗೆ ನಾನು ಹೇಳುವುದನ್ನು ಕೇಳುವ ಸೌಜನ್ಯ ಕೂಡ ಇಲ್ಲ. ನನ್ನ ಡಯಾಗ್ನಸಿಸ್ ತಪ್ಪಿರಬಹುದು ಆದರೆ ಸಂಶಯ ಖಂಡಿತಾ ತಪ್ಪಲ್ಲ. ತನ್ನ ಅಪ್ಪ ಸಾಯುತ್ತಿದ್ದಾನೆ ಅನ್ನುವ ಲವಲೇಶ ಪ್ರಜ್ಞೆಯೂ ಇಲ್ಲವಲ್ಲ ಈತನಿಗೆ. ಈತನ ಕೆಳಗೆ ಕೆಲಸ ಮಾಡುತ್ತಿರುವುದಕ್ಕೆ ತನ್ನ ಮೇಲೆ ತನಗೇ ಹೇಸಿಗೆ ಯೆನಿಸಿತು. ತಾನೇನೋ ಈಗ ಈ ಕೆಲಸಕ್ಕೆ ಸೇರಿದ್ದೇನೆ, ಈ ಸೀನಿಯರ್ ಪ್ರೊಫೆಸರರಿಗೇನು ಗ್ರಹಚಾರ ಅಂದುಕೊಡ, ಇವನ ಹತ್ತಿರ ಏಗುತ್ತಿದ್ದಾರೆ. ರಾಮಸ್ವಾಮಿಯವರನ್ನು ನೋಡಿ ಅಸಹ್ಯವಾಯಿತು. ಇಷ್ಟು ಜನರ ಮುಂದೆ, ತಮಗಿಂತ ಚಿಕ್ಕವನಾದ ನನ್ನ ಮುಂದೆ ಬಾಯಿಗೆ ಬಂದ ಹಾಗೆ ಅನ್ನಿಸಿಕೊಂಡು ಏನೂ ಆಗಿಲ್ಲದಂತೆ ನಿಂತಿದ್ದಾರೆ. ಇಷ್ಟೆಲ್ಲಾ ಆದರೂ ತನಗೇಕೆ ಮೈಯುರಿಯುತ್ತಿಲ್ಲ. ಇವನಿಗೆ ಒಂದು ಕಪಾಳಕ್ಕೆ ಹೊಡೆದು ಹೊರಗೆ ಹೋದರೆ ಏನಾಗಬಹುದು ಅನ್ನಿಸಿತು. ಎಲ್ಲೋ ಒಂದು ಕಡೆ ಕೆಲಸ ಸಿಕ್ಕೇ ಸಿಗುತ್ತದೆ. ಮರ್ಯಾದೆ ಬಿಟ್ಟು ಇಲ್ಲಿ ಬದುಕುವ ಬದಲು ಅದೇ ವಾಸಿ, ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ಚಕ್ರಪಾಣಿ. ” ಏನ್ರೀ ಯೋಚನೆ ಮಾಡ್ತಾ ಇದೀರ. ನಿಮ್ಮ ಫೈಂಡಿಂಗ್ಸ್ ಏನು ಅಂತ ಹೇಳ್ರೀ ರಾಮಸ್ವಾಮಿಗೆ” ಗುಡುಗಿದ ಗವಿಸಿದ್ದಪ್ಪ. ಈಗ ತಾನು ತಾಳ್ಮೆ ಕಳೆದುಕೊಂಡರೆ ತಿಪ್ಪಣ್ಣನವರು ಸತ್ತುಹೋಗುತ್ತಾರೆ ಅನ್ನಿಸಿತು. ಮೊದಲಿನಿಂದ ಎಲ್ಲವನ್ನೂ ನಿಧಾನವಾಗಿ ವರದಿಯೊಪ್ಪಿಸಿದ ರಾಮಸ್ವಾಮಿಯವರಿಗೆ. ರಾಮಸ್ವಾಮಿಯವರಿಗೆ ಚಕ್ರಪಾಣಿಯ ನಿರ್ಲಿಪ್ತತೆ, ಅಸಹನೆ ಅರ್ಥವಾಯಿತು. ಎರಡು ನಿಮಿಷ ಪರೀಕ್ಷೆ ಮಾಡಿ ” ಯೂ ಆರ್ ರೈಟ್ ಚಕ್ರಾಪಾಣಿ. ಇನ್ನೊಂದು ಪಾಸಿಬಲಿಟಿ ಅಂದರೆ ಸಿವಿಯರ್ ಪ್ಯಾಂಕ್ರಿಯಾಟೈಟಿಸ್. ಬಟ್ ಐ ಡೌಟ್ ಇಟ್. ಗುಡ್ ಪಿಕಪ್. ಸರ್, ಮೊದಲು ಬೆಂಗಳೂರಿಗೆ ಕಳಿಸೋ ಅರೇಂಜ್ ಮೆಂಟ್ ಮಾಡಿಸಿ. ಏನಮ್ಮಾ ಎರಡು ಡ್ರಿಪ್ ಶುರೂಮಾಡಿ. ಸಲೈನ್ ಹೋಗಲಿ. ನರಸಿಂಹೂ ನೀನು ಹೋಗಿ ವ್ಯಾನ್ ರೆಡಿ ಮಾಡಿಸು. ಚಕ್ರಪಾಣಿ ನೀವು ವ್ಯಾನಲ್ಲೇ ಬನ್ನಿ. ನಾನೂ ಬರ್ತೀನಿ. ಮೊದಲು ಮಲ್ಯಾಕ್ಕೆ ಫೋನ್ ಮಾಡ್ಬೇಕು. ನನಗೆ ಅಲ್ಲಿನ ಸರ್ಜನ್ ಗೊತ್ತಿದ್ದಾರೆ. ಆದರೆ ಅವರು ಇಂತದ್ದನ್ನೆಲ್ಲಾ ಹ್ಯಾಂಡಲ್ ಮಾಡ್ತಾರೋ ಇಲ್ವೋ ಅಂತ ಗೊತ್ತಿಲ್ಲ. ಆದರೂ ಪರವಾಗಿಲ್ಲ, ಇನ್ಯಾರಾರೋ ಸಿಕ್ಕೇ ಸಿಗ್ತಾರೆ. ಸರ್, ನೀವು ಸಿ‌ಎಂ ಕೈಯಲ್ಲಿ ಒಂದು ಮಾತು ಹೇಳಿಸೋಕ್ಕಾಗುತ್ತಾ ನೋಡಿ. ನಮ್ಮ ಬ್ಲಡ್ ಬ್ಯಾಂಕಿನಲ್ಲಿ ತಿಪ್ಪಣ್ಣನವರ ಗ್ರೂಪಿನದು ಎಷ್ಟು ಯುನಿಟ್ ರಕ್ತ ಇದೆ ನೋಡಿ. ಕಮ್ಮಿ ಆದ್ರೆ ಹಾಸ್ಟೆಲ್ಲಿಗೆ ಹೋಗಿ ಹುಡುಗರನ್ನು ಕರೆದುಕೊಂಡು ಬರೋಣ. ಬೇಗ, ಬೇಗ. ಸರ್, ನೀವು ಬರೋದು ಒಳ್ಳೇದು ಅಂತ ಅನ್ನಿಸುತ್ತೆ. ನೀವು ಮನೇಗೆ ಹೋಗಿ ರೆಡಿ ಆಗಿ ಬರ್ತೀರೋ ಅಥವಾ ಇಲ್ಲೇ ಬಟ್ಟೆ ತರಿಸೋಣವಾ. ಚಕ್ರಪಾಣಿನ ಅಪ್ಪಾವರ ಜತೆ ಕಳಿಸ್ತೀನಿ. ನಾನು ಮುಂಚೇನೆ ಹೊರಟುಬಿಡುತ್ತೇನೆ. ನೀವು ಬರುವಹಾಗಿದ್ರೆ ಒಟ್ಟಿಗೇ ಹೋಗೋಣವಂತೆ. ಚಕ್ರಪಾಣಿ, ಹುಷಾರಪ್ಪ. ಫ್ಲುಯಿಡ್ಸ್ ಸ್ವಲ್ಪ ನೋಡ್ಕೊಂಡು ಕೊಡಿ. ನಿಮ್ಮ ಜತೆ ಯಾರಾದರೂ ಬೇಕಾ ಹೇಳಿ. ಒಟ್ಟು ಅವರನ್ನು ಸೇಫಾಗಿ ಅಲ್ಲಿಗೆ ಕರೆದುಕೊಂಡು ಬನ್ನಿ. ನೋವಿಗೆ ಏನಾದರೂ ಕೊಡುವ ಹಾಗಿದ್ದರೆ ಕೊಡಿ.” ಒಂದೇ ಉಸಿರಲ್ಲಿ ಬಡಬಡಿಸಿ ಹೇಳಿ ಚಕ್ರಪಾಣಿಯ ಕಿವಿಯಲ್ಲಿ ” ದೊಡ್ಡೋರ ಸಹವಾಸ ನಮಗ್ಯಾಕೆ. ನಿಮ್ಮ ಅನುಮಾನಾನೇ ನಿಜವಾಗಿದ್ರೆ ತನ್ನಂತಾನೇ ಸೀಲ್ ಆಗಿರಬೇಕು. ಇಲ್ಲದೇ ಹೋಗಿದ್ರೆ ಇಷ್ಟು ಹೊತ್ತಿಗೆ ಮುದುಕ ಗೋತ” ಪಿಸುಗುಟ್ಟಿದರು. ಬೆಪ್ಪಾದರೂ ತೋರಿಸಿಕೊಳ್ಳಲಿಲ್ಲ ಗವಿಸಿದ್ದಪ್ಪ.” ಅವರಿಗೆ ಅನ್ಯೂರಿಸಂ ಇರಲೇ ಇಲ್ಲ” ಎಂದು ಗೊಣಗಿದರೂ ತಾನು ಎಲ್ಲೋ ತಪ್ಪಿದ್ದೇನೆಂದು ಅನ್ನಿಸಿ ” ಸರಿ, ಏನ್ಮಾಡ್ತೀರೋ ಮಾಡಿ” ಎಂದು ಫೋನ್ ಮಾಡಲು ಒಳಗೆ ಹೋದ. ರಾಮಸ್ವಾಮಿ ಜಾಣ ಅನ್ನಿಸಿತು. ರೋಗ ಏನೆಂದು ಪತ್ತೆ ಹಚ್ಚಿದ್ದು ನಾನು. ಆದರೆ ಗವಿಸಿದ್ದಪ್ಪ ಅದನ್ನು ನಂಬಿದ್ದು ಪ್ರೊಫೆಸರರ ಬಾಯಿಂದ ಬಂದಾಗ ಮಾತ್ರ. ಮನಸ್ಸಿಗೆ ಅನ್ನಿಸುವುದನ್ನು ಇನ್ನೊಬ್ಬರಿಗೆ ಹೇಳುವುದಕ್ಕೆ ತನಗೆ ಬರುವುದಿಲ್ಲವೇ. ಇಂಥ ಸೀರಿಯಸ್ ಕಾಯಿಲೆಯನ್ನು ಮಕ್ಕಳು ಮಗ್ಗಿ ಒಪ್ಪಿಸಿದ್ದಂತೆ ನಿರ್ಲಿಪ್ತನಾಗಿ ಹೇಳಿದ್ದು ತಪ್ಪು ಅನ್ನಿಸಿತು. ತಾನೂ ರಾಮಸ್ವಾಮಿಯಂತೆ ಬಂದಾಕ್ಷಣ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾ ಥಳುಕು ಮಾಡಿದ್ದರೆ ಗವಿಸಿದ್ದಪ್ಪ ನಂಬುತ್ತಿದ್ದನೋ ಏನೋ. ಬರೀ ಕಾಯಿಲೆ ಕಂಡುಹಿಡಿದು ಟ್ರೀಟ್ ಮಾಡುವುದಕ್ಕಿಂತಾ ಹೆಚ್ಚಿನ ಡಾಕ್ಟರಿಕೆ ಒಂದಿದೆ. ಅದರಲ್ಲಿ ತಾನು ಪಳಗಬೇಕಾದರೆ ಈ ಜನ್ಮವಿಡೀ ಹೆಣಗಾಡಬೇಕು. ಈ ರಾಮಸ್ವಾಮಿಯಾದರೂ ಏನು ಮಾಡುತ್ತಿದ್ದಾನೆ. ತಿಪ್ಪಣ್ಣನವರನ್ನು ಆದಷ್ಟು ಬೇಗ ಬೆಂಗಳೂರಿಗೆ ಸಾಗಹಾಕುವ ಯೋಚನೆ. ಆದರೂ ಆ ಪರಿಸ್ಥಿತಿಯಲ್ಲಿ ಅದೇ ಸರಿ ಅನ್ನಿಸಿತು. ಇಲ್ಲಿದ್ದರೆ ಖಂಡಿತಾ ತಿಪ್ಪಣ್ಣನವರು ಉಳಿಯುವುದಿಲ್ಲ. ಅಂತದ್ದರಲ್ಲಿ ತಮಗೆ ಯಾಕೆ ಕೆಟ್ಟ ಹೆಸರು‌ಎಂಬ ಯೋಚನೆ ರಾಮಸ್ವಾಮಿಗೆ. ಆದರೆ ತನ್ನನ್ನು ಆಂಬುಲೆನ್ಸ್ ಗೆ ಹಚ್ಚಿ ಒಳ್ಳೆ ಫಜೀತಿಗೆ ಸಿಕ್ಕಿಸಿದನೆನ್ನಿಸಿತು. ಅಕಸ್ಮಾತ್ ದಾರಿಯ ಮಧ್ಯದಲ್ಲಿ ಸತ್ತರೆ ಯಾರಿಗೆ ಕೆಟ್ಟ ಹೆಸರು. ಹೇಗಾದರೂ ಮಾಡಿ ಇದರಿಂದ ನುಣುಚಿಕೊಳ್ಳಬೇಕೆನಿಸಿತು. ಆದರೆ, ಇನ್ನೊಂದು ಕಡೆ ಅನ್ನಿಸಿತು- ತಾನೇನು ಕೊನೆಯತನಕ ಗವಿಸಿದ್ದಪ್ಪನ ಆಸ್ಪತ್ರೆಯಲ್ಲಿ ಇರುತ್ತೇನೋ ಇಲ್ಲವೋ ಆದರೆ ಇದರಿಂದ ಅವನ ಕೃಪೆ ಸ್ವಲ್ಪ ತನ್ನ ಮೇಲೆ ಬಿದ್ದರೆ ಕೆಡುಕೇನೂ ಇಲ್ಲವೆನ್ನಿಸಿತು. ಒಬ್ಬ ಡ್ರೈವರ್, ಇಬ್ಬರು ನರ್ಸ್ ಗಳು, ಚಕ್ರಪಾಣಿ ಮತ್ತು ಮೂರು ಜನ ತಿಪ್ಪಣ್ಣನವರದೇ ರಕ್ತದ ಗುಂಪಿನ ಹಾಸ್ಟೆಲ್ ಹುಡುಗರು ಅಂಬುಲೆನ್ಸಿನಲ್ಲಿ ಹೊರಟರು. ರಾಮಸ್ವಾಮಿ, ಗವಿಸಿದ್ದಪ್ಪ ಕಾರಿನಲ್ಲಿ ಮುಂದೆ ಹೊರಟರು. ಇನ್ನುಳಿದ ಫುಡಾರಿಗಳು ಬೇರೆ ಕಾರಿನಲ್ಲಿ ಹೊರಟಿದ್ದರು. ಮೊದಲ ಬಾರಿಗೆ ಬೇರೆಯೊಬ್ಬರಿಗೆ ಗವಿಸಿದ್ದಪ್ಪನ ಕಾರು ನೋಡುವ ಅವಕಾಶ ಸಿಕ್ಕಿತ್ತು. ಒಂದು ಯುನಿಟ್ ರಕ್ತ, ಎರಡು ಸಲೈನ್ ದೇಹದೊಳಗೆ ಸೇರಿದ ಮೇಲೆ ತಿಪ್ಪಣ್ಣನವರು ಸ್ವಲ್ಪ ಚೇತರಿಸಿಕೊಂಡಂತೆ ಕಾಣಿಸಿತು. ನೋವಿಗೆ ಇಂಜಕ್ಷನ್ ಕೊಟ್ಟಿದ್ದರಿಂದ ನಿದ್ದೆ ಮಾಡುತ್ತಿದ್ದರು. ಬೀಪಿ ಕೂಡ ಸ್ವಲ್ಪ ಸುಧಾರಿಸಿತ್ತು. ಮಲ್ಯ ಆಸ್ಪತ್ರೆಯ ಮುಂದೆ ಇವರ ಅಂಬ್ಯುಲೆನ್ಸ್ ನಿಲ್ಲುವ ಹೊತ್ತಿಗೆ ಗವಿಸಿದ್ದಪ್ಪ ಆಗಲೇ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿ ಸ್ಟ್ರೆಚರ್ ಸಮೇತ ಕಾಯುತ್ತಿದ್ದ. ತಿಪ್ಪಣ್ಣನವರನ್ನು ಇಂಟೆಂಸಿವ್ ಕೇರ್ ಯುನಿಟ್ಟಿಗೆ ಸೇರಿಸಿ ಅಲ್ಲಿನ ಡ್ಯೂಟಿ ಡಾಕ್ಟರಿಗೆ ವರದಿ ಒಪ್ಪಿಸಿ ತನ್ನ ಕೆಲಸ ಮುಗಿಯಿತೆಂದು ಹೊರಗೆ ಬಂದು ಕಾರಿಡಾರಿನಲ್ಲಿ ಕುಳಿತ ಚಕ್ರಪಾಣಿ. ” ಬರಬೇಕಾದರೆ ಹೇಗಿದ್ದರು ಅಪ್ಪಯ್ಯ” ಆತಂಕದಿಂದ ಕೇಳಿದ ಗವಿಸಿದ್ದಪ್ಪ. ” ಎಲ್ಲ ಸ್ಟೇಬಲ್ ಆಗಿತ್ತು ಸರ್, ಏನೂ ತೊಂದರೆಯಾಗಲಿಲ್ಲ” ನಿಲ್ಲುತ್ತಾ ಹೇಳಿದ ಚಕ್ರಪಾಣಿ. ಗವಿಸಿದ್ದಪ್ಪ ಒಬ್ಬನೇ ಇದ್ದ. ಅವನ ಫುಡಾರಿಗಳು ಕೆಳಗೆ ಕಾಫಿ ಕುಡಿಯಲು ಹೋಗಿದ್ದರು. ರಾಮಸ್ವಾಮಿ ಒಳಗೆ ಯಾರದೋ ಜತೆ ಮಾತನಾಡುತ್ತಿದ್ದರು. ಅತ್ತಿತ್ತ ನೋಡಿದ ಗವಿಸಿದ್ದಪ್ಪ ಯಾರೂ ಇಲ್ಲವೆಂದು ಖಾತ್ರಿ ಮಾಡಿಕೊಂಡು ” ನಾನು ನಿಮ್ಮನ್ನು ಯಾರೋ ಟ್ಯೂಟರ್ ಅಂದುಕೊಂಡಿದ್ದೆ. ಐ ಡಿಡ್ ನಾಟ್ ರಿಯಲೈಜ್ ದಟ್ ಯು ಆರ್ ಎನ್ ಎಂಡೀ. ಮತ್ತೆ ಎಷ್ಟಾದರೂ ಅವರು ನಮ್ಮ ತಂದೆ ನೋಡಿ. ಸ್ವಲ್ಪ ಎಮೋಷನಲ್ ಕೂಡ ಆಗಿದ್ದೆ. ಗಂಟಲು ಸರಿಪಡಿಸುತ್ತಾ ಸಮಜಾಯಿಷಿ ನೀಡಲು ಪ್ರಯತ್ನಿಸಿದ. ಚಕ್ರಪಾಣಿಗೆ ಇದಕ್ಕಿಂತಾ ಹೆಚ್ಚಿನ ಕ್ಷಮಾಪಣೆ ತಾನು ಗವಿಸಿದ್ದಪ್ಪನಿಂದ ಅಪೇಕ್ಷಿಸುವುದು ತಪ್ಪು ಅನ್ನಿಸಿತ್ತು. ” ಇರಲಿ ಸರ್, ನನಗೆ ಅರ್ಥ ಆಗುತ್ತದೆ. ಒಟ್ಟು ತಿಪ್ಪಣ್ಣನವರು ಹುಷಾರಾದರೆ ಸಾಕು” ಅಂದ. ರಾಮಸ್ವಾಮಿ ಹೊರಗೆ ಬಂದು ” ಈಗ ಸೀಟಿ ಸ್ಕಾನ್ ಮಾಡಿದಾರೆ. ಒಳಗೆ ಹೋಗಿ ನೋಡಿಕೊಂಡು ಬಂದೆ. ಚಕ್ರಪಾಣಿ ಈಸ್ ರೈಟ್. ಅಯೊರ್ಟಿಕ್ ಅನ್ಯೂರಿಸಂ. ಈಗ ಬ್ಲೀಡಿಂಗ್ ಆಗ್ತಾ ಇದೆಯೋ ಇಲ್ಲವೋ ಅಂತ ಹೇಳೋದು ಕಷ್ಟ. ತಕ್ಷಣ ಸರ್ಜರಿಗೆ ತೆಗೆದುಕೊಳ್ಳುತ್ತಾ ಇದ್ದಾರೆ. ಒಂದು ಮೂರು ನಾಲ್ಕು ಗಂಟೆಯಾದರೂ ಆಗಬಹುದು. ” ಗವಿಸಿದ್ದಪ್ಪನನ್ನು ನೋಡುತ್ತಾ ಹೇಳಿದರು. ” ಸರಿ ಸರಿ, ಯಾರು ಸರ್ಜನ್. ಸೀ‌ಎಂ ಮನೇಲಿ ಕಾಯ್ತಾ ಇದಾರೆ. ಯಾರು ಡಾಕ್ಟರು ಅನ್ನೋದನ್ನ ತಿಳ್ಕೊಂಡು ತಕ್ಷಣ ಫೋನ್ ಮಾಡು ಅಂತ ಹೇಳಿದ್ರು. ನಾನು ಮಾಡ್ತೀನಿ. ಚಕ್ರಪಾಣಿ, ನೀವೆಲ್ಲಿಗೂ ಹೋಗ್ಬೇಡಿ. ಸಾಯಂಕಾಲದ ತನಕ ಇದ್ದು ಕಂಡೀಷನ್ ನೋಡಿಕೊಂಡು ಊರಿಗೆ ಹೋಗೋಣ. ಬೇಕಾದರೆ ನಾನೇ ಡ್ರಾಪ್ ಮಾಡ್ತೇನೆ. ಅವನ ಉತ್ತರಕ್ಕೂ ಕಾಯದೇ ಧಡಧಡ ಒಳಗೆ ಓಡಿದ ಗವಿಸಿದ್ದಪ್ಪ. ಒಳಗೇ ನಕ್ಕು ಚಕ್ರಪಾಣಿ ಕೆಳಗಿನ ಹೋಟೆಲ್ ಕಡೆ ನಡೆದ.
*
*
*
ಕಳೆದ ಒಂದುವಾರದಿಂದ ಗವಿಸಿದ್ದಪ್ಪ ತುಂಬಾ‌ಓಡಾಡುತ್ತಿದ್ದ. ಮುಂದಿನವಾರ ಭಾರತೀಯ ವೈದ್ಯಕೀಯ ಮಂಡಲಿಯವರು ಕಾಲೇಜಿಗೆ ಬರುತ್ತಿದ್ದರು. ಮೂರುದಿನದ ಭೇಟಿ. ಪ್ರತಿಯೊಂದು ಡಿಪಾರ್ಟ್ ಮೆಂಟಿನ ಅಂಕಿ‌ಅಂಶಗಳನ್ನು ತಿದ್ದಿ ಸರಿಮಾಡಲಾಗಿತ್ತು. ಪ್ರತಿ ವಿಭಾಗವೂ ಲೆಕ್ಕದ ಪ್ರಕಾರ ಕಾಗದದ ಮೇಲೆ ಕೌನ್ಸಿಲ್ ಅಂಗೀಕರಿಸಲು ಕೇಳುವ ಕನಿಷ್ಟ ಅರ್ಹತೆಗಳೆಲ್ಲವನ್ನೂ ಪಡೆದಿದ್ದವು. ಮೆಡಿಸಿನ್ ಹೊರರೋಗಿ ವಿಭಾಗದ ಮುಂದಿರುವ ಗೋಡೆಯ ಮೇಲಿನ ದೊಡ್ಡ ಬೋರ್ಡಿನ ಮೇಲೆ ಇರುವ ನಾಲ್ಕು ಜನ ಡಾಕ್ಟರುಗಳ ಹೆಸರಿನ ಜೊತೆಗೆ ಇನ್ನಾರು ಜನದ ಹೆಸರನ್ನು ಸೇರಿಸಿ ಒಟ್ಟು ಹತ್ತು ಮಾಡಲಾಗಿತ್ತು. ಈ ಉಳಿದ ಆರು ಜನ ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ಇಷ್ಟರ ಮಧ್ಯೆ ತಿಪ್ಪಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುವುದು ಗವಿಸಿದ್ದಪ್ಪನಿಗೆ ಸ್ವಲ್ಪ ಸಮಾಧಾನವಾಗಿತ್ತು. ಕಳೆದ ಮೂರು ತಿಂಗಳಿನಿಂದ ಬರೆಸಿರುವ ಕೇಸ್ ಶೀಟುಗಳು ಆಸ್ಪತ್ರೆಯ ಒಳರೋಗಿಗಳ ಸಂಖ್ಯೆಯನ್ನು ತಾನಾಗೇ ಹೆಚ್ಚಿಸಿತ್ತು. ಹೊರರೋಗಿಗಳ ಸಂಖ್ಯೆ ಸಾಕೆನಿಸಿತ್ತು. ಆಪರೇಶನ್ ಥಿಯೇಟರ್, ರೇಡಿಯಾಲಜಿ ವಿಭಾಗಗಳ ಸಂಖ್ಯೆಯನ್ನು ತಲೆಕೆಳಗಾದರೂ ಬದಲಾಯಿಸಲಾಗುತ್ತಿರಲಿಲ್ಲ. ಬರುತ್ತಿರುವ ಕೌನ್ಸಿಲ್ ಮೆಂಬರುಗಳನ್ನು ಭೆಟಿ ಮಾಡಲು ಎರಡು ಬಾರಿ ಡೆಲ್ಲಿಗೆ ಹೋಗಿ ಬಂದಿದ್ದ ಗವಿಸಿದ್ದಪ್ಪ. ಕೇಂದ್ರ ಸರಕಾರದ ಕೆಲಸವಾದ್ದರಿಂದ ತನಗೇನೂ ಮಾಡಲಾಗುವುದಿಲ್ಲವೆಂದು ಮುಖ್ಯಮಂತ್ರಿಗಳು ಹೇಳಿಬಿಟ್ಟಿದ್ದರು. ಆದರೆ ತನಗೆ ಗೊತ್ತಿರುವವರಿಂದ ಹೇಳಿಸುತ್ತೇನೆಂದು ಭರವಸೆ ಕೊಟ್ಟಿದ್ದರು. ಮೂರುಜನ ಮೆಂಬರುಗಳಲ್ಲಿ ಒಬ್ಬ ಸ್ವಲ್ಪ ಕಷ್ಟ. ಉಳಿದಿಬ್ಬರನ್ನು ಸರಿಯಾಗಿ ನೊಡಿಕೊಂಡರೆ ಕೆಲಸ ಏನೂ ಕಷ್ಟವಾಗುವುದಿಲ್ಲವೆಂದು ನುರಿತವರು ಹೇಳಿದ್ದರು. ಬೇರೆ ಎಲ್ಲ ಮೆಡಿಕಲ್ ಕಾಲೇಜುಗಳಿಗೆ ಫೋನ್ ಮಾಡಿ, ಮುಖತಃ ಭೇಟಿಯಾಗಿ ಈ ವ್ಯವಹಾರದ ಒಳಗುಹೊರಗುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದ್ದ. ಮೊದಲ ಭೇಟಿಯಲ್ಲಿಯೇ ರೆಕಗ್ನಿಷನ್ ತೆಗೆದುಕೊಳ್ಳುವುದು ಗವಿಸಿದ್ದಪ್ಪನಿಗೆ ತುಂಬಾ ಮುಖ್ಯವಾಗಿತ್ತು. ಏನೇ ಅಂಕಿ ಅಂಶಗಳನ್ನು ತಿದ್ದಿದರೂ ಆ ಮೂರು ದಿನ ಆಸ್ಪತ್ರೆಯಲ್ಲಿ ಈ ಕಾಗದದ ಮೇಲಿರುವವರನ್ನು ಜೀವಂತ ಹೇಗೆ ತರುತ್ತಾನೆ ಈ ಗವಿಸಿದ್ದಪ್ಪ ಎಂದು ಕುತೂಹಲವಾಗಿತ್ತು, ಚಕ್ರಪಾಣಿಗೆ. ಎಲ್ಲ ಡಾಕ್ಟರರ ಹೆಸರಲ್ಲಿ ಫೈಲು ರೆಡಿಯಾಗಿತ್ತು ಆಫೀಸಿನಲ್ಲಿ. ಮುಕ್ಕಾಲು ಜನ ಆ ಆಸ್ಪತ್ರೆಯಲ್ಲಿ ಕೆಲಸದಲ್ಲಿರದೇ ಇರುವವರು. ಬರೀ ಕಾಗದದ ಮೇಲೆ ಇದ್ದರೆ ಸಾಕೇ. ಒಂದಿಷ್ಟು ಜನ ರಜದಲ್ಲಿದ್ದಾರೆ ಎಂದು ಹೇಳಬಹುದು. ಆದರೆ ಬರುವವರು ಒಪ್ಪಬೇಕಲ್ಲ. ಬರೀ ಕಾಗದದ ಅಂಕಿ‌ಅಂಶಗಳನ್ನು ದಕ್ಷಿಣೆ ಸಮೇತ ಕೊಟ್ಟರೆ ಒಪ್ಪಿಕೊಂಡುಬಿಡುತ್ತಾರೆಯೇ ಈ ಕೌನ್ಸಿಲ್ಲಿನವರು. ತಲೆ ಎಣಿಸುವುದಿಲ್ಲವೇ. ಈ ಪೇಷೆಂಟುಗಳ ಸೆನ್ಸಸ್ಸೂ ಅಷ್ಟೆ. ತಿದ್ದಿದ ಲೆಕ್ಕದ ಪ್ರಕಾರ, ಇನ್ನೂರೈವತ್ತರಿಂದ ಮುನ್ನೂರರ ಸಮೀಪ ಇರುವ ಒಳರೋಗಿಗಳ ಸಂಖ್ಯೆ ಇದ್ದಕ್ಕಿದ್ದಹಾಗೆ ಆ ಮೂರುದಿನ ಐವತ್ತರಿಂದ ಎಪ್ಪತ್ತಕ್ಕೆ ಇಳಿದರೆ ಅದಕ್ಕೆ ಯಾವರೀತಿ ಸಮಜಾಯಿಷಿ ಕೊಡುತ್ತಾನೆ ಈ ಗವಿಸಿದ್ದಪ್ಪ. ತಲೆ ಕೆಡಿಸಿಕೊಳ್ಳುತ್ತಿದ್ದ, ಚಕ್ರಪಾಣಿ. ತನ್ನ ಮೇಲೆ ತನಗೇ ನಗು ಬಂತು. ಇದೇನು ನನ್ನ ಮೆಡಿಕಲ್ ಕಾಲೇಜೇ, ನಾನು ಯೋಚನೆ ಮಾಡಲು. ಇಷ್ಟು ದುಡ್ಡುಸುರಿದು ಕಟ್ಟಿಸಿಲ್ಲವೇ, ಗವಿಸಿದ್ದಪ್ಪ. ಅವನಿಗೆ ಏನಾದರೂ ಹೊಳೆದೇ ಇರುತ್ತದೆ. ಆದರೂ ಹೇಗೆ ಎಂದು ಕುತೂಹಲವಾಗಿತ್ತು. ” ಏನಮ್ಮಾ, ಇನ್ನರ್ ಸರ್ಕಲ್ಲಾ ಆಗಲೇ, ವಿಷಯ ಕೇಳಿದೆ, ಗ್ರೇಟ್ ಸೇವಂತೆ ತಿಪ್ಪಣ್ಣಾವ್ರದ್ದು. ನಿನ್ನ ಪುಣ್ಯ ನೀನು ಹೇಳಿದ್ದು ಸರಿಹೋಯಿತು. ಇಲ್ಲದೇ ಇದ್ದರೆ ನಿನ್ನ ಗ್ರಹಚಾರ ಬಿಡಿಸಿಬಿಡುತ್ತಿದ್ದ, ಆ ಗವಿಸಿದ್ದಪ್ಪ. ಕಾರಲ್ಲಿ ಬೇರೆ ಕರೆದುಕೊಂಡು ಬಂದನಂತೆ. ಅವನ ಹೆಂಡತಿಯೂ ಕೂತಿಲ್ಲ ಆ ಕಾರಲ್ಲಿ. ನಿನ್ನ ಅದೃಷ್ಟ. ಬಿಡ್ಬೇಡಮ್ಮಾ ಈ ಚಾನ್ಸು. ಸ್ವಲ್ಪಾ ಮಸ್ಕಾ ಹೊಡಿ. ಮುಂದಿನ ವರ್ಷ ಪ್ರಮೋಷನ್ ಸಿಕ್ರೂ ಸಿಗಬಹುದು” ಒಳಗೆ ಬರುತ್ತಾ ಹೇಳಿದ ಸತೀಶ. ” ಹಯ್ಯೋ, ನಿಮ್ಮ ಬಾಸನ್ನು ಕಟ್ಕೋ, ಕೊಂದ್ಬಿಡ್ತಿದ್ದ ಕಣೊ ಅವ್ರಪ್ಪನ್ನ. ಜೆಲ್ಯುಸಿಲ್ ಕೊಟ್ನಂತೆ. ಅವನ ಪುಣ್ಯ ಮನೇಲೇ ಸಾಯಲಿಲ್ಲ. ಏನೋ ನನ್ನ ಅದೃಷ್ಟ ಚೆನ್ನಾಗಿತ್ತು. ರಾಮಸ್ವಾಮಿ ಸಹಾಯದಿಂದ ಗವಿಸಿದ್ದಪ್ಪನನ್ನು ಕನ್ವಿನ್ಸ್ ಮಾಡಿದ್ದಾಯಿತು. ಮುದುಕನ ಆಯಸ್ಸು ಗಟ್ಟಿ ಇತ್ತು. ಇಲ್ಲ ಅಂದ್ರೆ ಇಷ್ಟುಹೊತ್ತಿಗೆ ದೇವರೇ ಗತಿ” ಏಳುತ್ತಾ ಹೇಳಿದ ಚಕ್ರಪಾಣಿ. ಇಬ್ಬರೂ ಕ್ಯಾಂಟೀನ್ ಕಡೆ ಹೊರಟರು. ” ಇಂತಾ ಇಂಟ್ಯೂಶನ್ಗಳನ್ನ ನಿನ್ನ ಹತ್ರಾನೇ ಇಟ್ಕೊಪ್ಪಾ. ಸುಮ್ಮಸುಮ್ಮನೆ ಏನಾರ ಹೇಳಿ ತೊಂದರೇಲಿ ಸಿಕ್ಕಿಹಾಕ್ಕೋಬೇಡ. ಗ್ಯಾರಂಟಿ ಇದ್ರೆ ಹೇಳು ಇಲ್ಲದೇ ಇದ್ದಲ್ಲಿ ನಿನ್ನ ಗೋರಿ ನೀನೆ ತೋಡಿಕೊಂಡಹಾಗೆ. ಯೋಚನೆ ಮಾಡು. ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಏನೂ ಇಲ್ಲ ಅಂತ ಏನಾದರೂ ಆಗಿದ್ದರೆ ನಿನ್ನನ್ನು ಹುರಿದು ಮುಕ್ಕಿಬಿಡುತ್ತಿದ್ದ. ಅದೃಷ್ಟ ಚೆನ್ನಾಗಿದ್ದುದ್ದು ಆ ಮುದುಕನದಲ್ಲ, ನಿನ್ನದು.” ” ಅಲ್ವೋ ನಿನಗೆ ಸರಿ ಅನ್ನಿಸಿದ್ದನ್ನು ಹೇಳಬಾರದೇನೋ. ನಿಜ ಹೇಳ್ತೀನಿ,ಆ ರಾಮಸ್ವಾಮೀನೂ ಸಸ್ಪೆಕ್ಟ್ ಮಾಡ್ತಾ‌ಇದ್ದ ಅನ್ನೋದು ನನಗೆ ಅನುಮಾನ. ನಾನು ಹೇಳಿದ್ದನ್ನೇ ಬಣ್ಣಬಣ್ಣವಾಗಿ ಹೇಳಿದ ಅಷ್ಟೆ.” ಅಸಮಾಧಾನದಿಂದ ಹೇಳಿದ ಚಕ್ರಪಾಣಿ. “ಅಲ್ಲೇ ಇರೋದು ನಿನ್ನ ಪ್ರಾಬ್ಲಂ. ನಿನಗೆ ಅನ್ನಿಸಿದ್ದನ್ನು ಹೇಳೊದಕ್ಕೆ ನಿನಗೆ ಇನ್ನೊಬ್ಬರ ಸಹಾಯ ಬೇಕಾಯಿತು. ಮನಸಲ್ಲಿರೋದನ್ನು ಬೇರೆಯವರಿಗೆ ಕನ್ವಿನ್ಸ್ ಆಗೋ ಹಾಗೇ ಹೇಳೊದು ಒಂದು ಕಲೆ ಚಕ್ರಿ. ಇಂಥಾವರ ಜತೆ ಡೀಲ್ ಮಾಡೋದಕ್ಕೆ ಕಲ್ತುಕೋ. ತಪ್ಪು ತಿಳಿಬೇಡ , ಯೂ ಲ್ಯಾಕ್ ಅಸರ್ಷನ್ ಇನ್ ಯುವರ್ ಟಾಕ್. ಅವೊತ್ತು ರಾಮಸ್ವಾಮಿ ನಿನ್ನ ಸಹಾಯಕ್ಕೆ ಬಂದಿರದೇ ಇದ್ದರೆ ನೀನು ತಿಪ್ಪಣ್ಣನವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗ್ತಾ ಇದ್ದೆಯಾ. ಇಲ್ಲ. ನೀನು ಮಾಡ್ತಾ‌ಇರೋದು ಸರಿ ಅಂತ ನಿನಗೆ ಅನ್ನಿಸಿದರೆ ಸಾಲದು. ಅದು ಬೇರೆಯವರಿಗೂ ಗೊತ್ತಾಗಬೇಕು. ನಿನ್ನ ಕೆಲಸದ ಸ್ವರೂಪವೇ ಹಾಗಿದೆ. ನೀನೇನು ಮಾಡಿದರೂ ಅದರಿಂದ ಇನ್ನೊಬ್ಬರಿಗೆ ಒಳ್ಳೆದೋ ಕೆಟ್ಟದೋ ಆಗೇ ಆಗುತ್ತದೆ. ನೀನು ಮಾಡೋದು ಒಳ್ಳೇದೇ ಅನ್ನೋದು ಪೇಷೆಂಟಿಗೆ ಮುಂಚೆ ಅರ್ಥ ಮಾಡಿಸೋದು ಕಲ್ತುಕೋ. ಇಲ್ಲದೇ ಹೋದರೆ, ನಾನೇನೋ ಮಾಡಬೇಕು ಅಂತಿದ್ದೆ, ಆದರೆ ಪೇಶೆಂಟು ಸಹಕರಿಸಲಿಲ್ಲ ಅನ್ನುವ ನೆಪಗಳನ್ನು ಕೊಡೋಕೆ ಶುರೂ ಮಾಡ್ತೀಯ ಅಷ್ಟೆ.” ” ಓ, ಓ, ಓ, …. ಉಪದೇಶ ಸಾಕು ಮಾಡು. ನನಗ್ಗೊತ್ತು, ಅದು ನನ್ನ ವೀಕ್ನೆಸ್. ನನ್ನಷ್ಟೆ ಜವಾಬ್ದಾರಿ ಅವನಿಗೂ ಇರಬೇಕಲ್ವೇ. ನಾನು ಏನೂ ಹೇಳಕ್ಕೆ ಬಿಡದೇ ಹೋ … ಎಂದರೆ.” ” ಗವಿಸಿದ್ದಪ್ಪನಿಗೆ ಅವೆಲ್ಲಾ ತಿಳಿಯೋದಿಲ್ಲ. ಐದು ನಿಮಿಷದಲ್ಲಿ, ನೀನು ಏನು ಹೇಳ್ಬೇಕು ಅಂತಿದೀಯೋ ಅದನ್ನು ಫಟ್ ಅಂತ ಹೇಳಿದ್ರೆ ನೀನು ಗೆದ್ದಿ ಅಂತ ತಿಳ್ಕೊ. ಇಲ್ಲದಿದ್ರೆ ನಿನ್ನ ಹಾಗೆ ಎಲ್ರೂ ಜೊತೆಗೆ ಒಬ್ಬೊಬ್ಬ ರಾಮಸ್ವಾಮಿಯವರನ್ನು ಕರೆದುಕೊಂಡು ಹೋಗಬೇಕಾಗುತ್ತದೆ. ಹೋಗಲಿ, ಮತ್ತೆ ಹೋಗಿ ಮೀಟ್ ಮಾಡಿದ್ಯಾ” ” ಇಲ್ಲ, ಯಾಕೆ” ಆಶ್ಚರ್ಯದಿಂದ ಕೇಳಿದ ಚಕ್ರಪಾಣಿ. ” ಹಯ್ಯೋ, ಮಂಕೇ, ನೀನುಳಿಸಿದ ಜೀವ ಕಣಯ್ಯ ಅದು, ಅಟ್ ಲೀಸ್ಟ್ ಟೇಕ್ ಕ್ರೆಡಿಟ್. ಹೋಗಿ ಹೇಗಿದ್ದಾರೆ ಅಂತ ಕೇಳು ಗವಿಸಿದ್ದಪ್ಪನವರನ್ನು. ಹೋಗಿ ತಿಪ್ಪಣ್ಣನವರನ್ನು ಮತಾಡಿಸ್ಕೊಂಡು ಬಾ. ಇಂಥ ಅವಕಾಶ ಬಹಳ ಜನಕ್ಕೆ ಸಿಗೋದಿಲ್ಲ. ಮನೇ ಅಡ್ರೆಸ್ ಗೊತ್ತಾ” ಕೇಳಿದ ಸತೀಶ. ” ಸತೀಶ, ನನಗೆ ಇವೆಲ್ಲ ಸರಿ ಹೋಗೊಲ್ವೋ. ಮೊನ್ನೆಯಿಂದ ಎರಡು ಬಾರಿ ಸಿಕ್ಕಿದ್ದ, ಗವಿಸಿದ್ದಪ್ಪ. ಕಾರಿಡಾರಲ್ಲಿ ನಮಸ್ಕಾರ ಹೊಡೆದರೆ, ಗುರುತಿಲ್ಲದೆ ಇದ್ದ ಹಾಗೆ ಕೈ ಎತ್ತಿದನೇ ಹೊರತು, ತಿಪ್ಪಣ್ಣನವರ ಬಗ್ಗೆ ಒಂದೂ ಮಾತಡಲಿಲ್ಲ. ಅವನೇ ಹೇಳ್ಬಹುದಿತ್ತಲ್ಲವೇ, ಆ ಗ್ರಾಟಿಟ್ಯೂಡ್ ಇದ್ದರೆ.” ” ಗ್ರಾಟಿಟ್ಯೂಡ್ ಮತ್ತೆ ಗವಿಸಿದ್ದಪ್ಪ, ನೀನೆಲ್ಲೋ ಕನಸು ಕಾಣ್ತಾ ಇದ್ದಿಯಾ. ಮೇಲಾಗಿ ಹೀ ಹ್ಯಾಸ್ ಟು ಲೀವ್ ಅಪ್ಟು ಹಿಸ್ ರೆಪ್ಯುಟೇಷನ್. ಹಿಂದೆ ಬೋ ಪರಾಕ್, ಬೋ ಪರಾಕ್, ಹೇಳುತ್ತಾ ನಡೆಯುತ್ತಿರುವ ಚೇಲಗಳ ಮುಂದೆ ನಿಂತು ನಿನಗೆ ತನ್ನ ಅಪ್ಪಾಜಿ ಚೆನ್ನಾಗಿದ್ದಾರೆ, ತುಂಬಾ ಥ್ಯಾಂಕ್ಸ್ ಅಂತ ಹೇಳ್ತಾನೆ ಅಂತ ನೀನು ಅಂದುಕೊಂಡರೆ ನಿನ್ನಂಥಾ ಮೂರ್ಖ ಇನ್ನೊಬ್ಬ ಇಲ್ಲ. ಹೋಗಲಿ, ನಿನಗೆ ಒಬ್ಬನೇ ಹೋಗೋಕೆ ಒಂಥರಾ ಆದರೆ ಇವೊತ್ತು ಸಂಜೆ ನನ್ನ ಜೊತೆ ಬಾ. ನಾನು ಹೇಗೂ ಮೀಟಿಂಗಿಗೆ ಹೋಗ್ತಾ ಇದೀನಿ.” “ಯಾವ ಮೀಟಿಂಗು” ಸ್ವಲ್ಪ ಅಚ್ಚರಿಯಿಂದ ಕೆಳಿದ. ಮೀಟಿಂಗುಗಳು ಆ ಕಾಲೇಜಿನಲ್ಲಿ ತುಂಬಾ ಮುಖ್ಯವಾಗಿದ್ದವು. ಮೀಟಿಂಗಿಗೆ ಹೋಗದೇ ಇದ್ದರೆ ಅವತ್ತಿನ ಸಂಬಳ ಹಿಡಿಯುತ್ತಿದ್ದ, ಗವಿಸಿದ್ದಪ್ಪ. ” ಇದು ಒಂಥರಾ ತುಂಬಾ ಗುಟ್ಟಿನ ಮೀಟಿಂಗು. ನಿನಗೆ ಕರೆ ಬರದೇ ಇರುವುದರಲ್ಲಿ ಆಶ್ಚರ್ಯ ವೇನಿಲ್ಲ ಬಿಡು. ನನಗೂ ಬರುತ್ತಿರಲಿಲ್ಲ. ನಂಬಾಸು ಹೋಗಿಬಾ ಅಂದಿದ್ದಕ್ಕೆ ಹೋಗ್ತಾ ಇದೀನಿ ಅಷ್ಟೆ. ಮಾಮೂಲಿ ಅಜೆಂಡಾ. ರೆಕಗ್ನಿಷನ್ ಗೆ ಬಂದಾಗ ಯಾರ್ಯಾರೇನು ಮಾಡ್ಬೇಕು ಅನ್ನೋದಿರಬೇಕು. ಈ ಹೊಸಾ ಡಾಕ್ಟರುಗಳು ಬರ್ತಾರಲ್ಲ, ಅವರೆಲ್ಲಾ ಸರಿಯಾಗಿ ಮಾತಾಡೋ ಹಾಗೆ ತಯಾರು ಮಾಡಬೇಕಲ್ಲಪ್ಪ. ಮತ್ತೆ ಏನಾದರೂ ಹೆಚ್ಚು ಕಮ್ಮಿ ಆದ್ರೆ ನಮ್ಮ ಜೀವಕ್ಕೇ ಬರುತ್ತೆ.” “ಯಾವ ಹೊಸಾ ಡಾಕ್ಟರುಗಳು. ” ಮತ್ತೊಮ್ಮೆ ಆಶ್ಚರ್ಯ ಚಕ್ರಪಾಣಿಗೆ. ” ನಿನಗೇನೂ ಗೊತ್ತಿಲ್ಲಾವೇನೋ, ಚಕ್ರಿ. ಎಲ್ಲಾ ಕಡೆಯಿಂದ ಹಿಡ್ಕೊಂಡು ಬಂದಿದೀವಪ್ಪ. ನಮ್ಮ ದೋಸ್ತುಗಳಿಲ್ಲವಾ, ಹುಬ್ಬಳ್ಳಿಯಲ್ಲಿ. ಹೇಗೂ ಕೆಲಸ ಇಲ್ಲದೆ ಕೂತಿದ್ದಾರೆ. ಮುಂದಿನ ಪರೀಕ್ಷೆ ತನಕ ಕೂರಬೇಕಲ್ಲ. ಒಂದು ಮೂರುದಿನ ಇಲ್ಲಿ ಬನ್ನಿ ಅಂತ ಹೇಳಿದೀನಿ. ಎಲ್ಲರಿಗೂ ಕೋಟ್ ಹಾಕಿ ನಿಲ್ಲಿಸಿದರೆ ಆಯಿತು. ಕೌನ್ಸಿಲ್ಲಿನವರು ತಲೇ ತಾನೇ ಎಣಿಸೋದು. ಪಾಠ ಮಾಡು ಅಂತ ಏನು ಕೇಳೊಲ್ವಲ್ಲ. ಮತ್ತೆ ಪ್ರತಿಯೊಬ್ಬ ಡಾಕ್ಟರಿಗೂ ಅವರುಗಳು ಯಾರು ಅಂತ ಹೇಳುವ ಫೈಲುಗಳ ಕಾಪಿ ಹಿಂದಿನ ದಿನ ಕೊಟ್ಟರೆ ಆಯಿತು. ಮಾರನೇದಿನ ನಾಟಕಕ್ಕೆ ರೆಡಿ ಮಾಡೋ ಜವಾಬ್ದಾರಿ ನನ್ನದು. ಪ್ರತಿಯೊಬ್ಬರಿಗೂ ದಿನಕ್ಕೆ ಒಂದು ಸಾವಿರ ರೂಪಾಯಿಗೆ ಮಾತಾಡಿದ್ದೀನಮ್ಮ. ಎಲ್ಲಾಕಡೆ ಹೀಗೇ ಅಂತೆ ಮಾಡೋದು. ನನಗೂ ಗೊತ್ತಿರಲಿಲ್ಲ. ಒಳ್ಳೆ ಐಡಿಯಾ ಅನ್ನಿಸುತ್ತೆ. ತಲೇಗಿಂತಾ ದುಡ್ಡನ್ನ ಸರಿಯಾಗಿ ಎಣಿಸೊ ಕೌನ್ಸಿಲ್ಲಿನ್ನವರು ಇರೋತನಕ ಗವಿಸಿದ್ದಪ್ಪನಂಥವರಿಗೇನೂ ತೊಂದರೆಯಿಲ್ಲಪ್ಪ. ಬೇಕಾದರೆ ಒಬ್ಬರನ್ನೇ ಎರಡು ಡಿಪಾರ್ಟ್ಮೆಂಟಿನಲ್ಲಿ ನಿಲ್ಲಿಸಿ ಡಬಲ್ ಆಕ್ಟಿಂಗೂ ಮಾಡಿಸಬಹುದು.” ಹೇಳುತ್ತಲೇ ಇದ್ದ. ಹೇಸಿಗೆಯಾಯಿತು ಚಕ್ರಪಾಣಿಗೆ. ಸತೀಶನನ್ನು ನೋಡಿ ಏನು ಹೇಳಲೂ ತಿಳಿಯಲಿಲ್ಲ. ತಾನು ಮಾಡುತ್ತಿರುವುದು ತಪ್ಪೆಂದೂ ತಿಳಿಯದಷ್ಟು ಬದಲಾಗಿದ್ದಾನೆ ಅನ್ನಿಸಿತು. ತನ್ನ ಜೊತೆ ಕೂತು ಹೀಗಿರಬೇಕು, ಹಾಗಿರಬೇಕು ಎಂದು ಕನಸುಕಟ್ಟಿದವ ಈತನೇ ಅನ್ನಿಸಿತು. ಯಾವ ಸಂಕೋಚವೂ ಇಲ್ಲದೇ ತಾನು ಮಾಡಲು ಹೋಗುತ್ತಿರುವ ಘನಕಾರ್ಯವನ್ನು ಹೇಳಿಕೊಳ್ಳುತ್ತಿದ್ದಾನೆ. ತಾನು ಮಾಡುತ್ತಿರುವ ಕೆಲಸದ ಬಗ್ಗೆ ಇಲ್ಲಿ ಯಾರಿಗೂ ತಪ್ಪೇ ಅನಿಸುವುದಿಲ್ಲವೇ. ಅಥವಾ ಇದೇ ಲೋಕಾರೂಢಿಯೇ. ತಾನೇ ಎಲ್ಲಿಯೂ ಸಲ್ಲದವನೇ. ಬದುಕುವ ದಾರಿಯೆಂದರೆ ಇದೇನೇ. ಯಾವ ಪ್ರಶ್ನೆಗೂ ಉತ್ತರ ಹೊಳೆಯಲಿಲ್ಲ. ಸುಮ್ಮನೆ ಎದ್ದು ಡಿಪಾರ್ಟ್ ಮೆಂಟಿಗೆ ಬಂದು ಕೂತ. ಕಟ ಕಟ ಎಂದು ಕಲ್ಲು ಕುಟ್ಟುತ್ತಿರುವ ಶಬ್ದ ಕೇಳಿಸಿತು. ಹಿಂದೆ ನಡೆಯುತ್ತಿರುವ ಆಸ್ಪತ್ರೆಯ ಕಟ್ಟಡದ ಕೆಲಸ. ನೂರಾರು ಜನ ಕೆಲಸಗಾರರು. ಯಾವಪರಿವೆಯೂ ಇಲ್ಲದೆ ದುಡಿಯುತ್ತಿದ್ದಾರೆ. ತಾವು ಏನು ಮಾಡುತ್ತಿದ್ದೇವೆ ಅನ್ನುವುದು ಯಾರಿಗೂ ಗೊತ್ತಿಲ್ಲ. ಕಟ್ಟುತ್ತಿರುವ ಈ ಕಟ್ಟಡದಲ್ಲಿ ಮುಂದೆ ಏನು ನಡೆಯುತ್ತದೆ, ಎಂಬುದು ಯಾರಿಗೂ ತಿಳಿದಿಲ್ಲ. ಸುಮ್ಮನೇ ಕೆಲಸ ಮಾಡುವುದು ಮಾತ್ರ ಗೊತ್ತು. ಇದೇನೇ ಕರ್ಮಣ್ಯೇವಾಧಿಕಾರಸ್ತೇ ಎಂದರೆ. ನಾನೂ ಸುಮ್ಮನೆ ಎಲ್ಲರೂ ಮಾಡುವಂತೆ ಮಾಡಿಕೊಂಡು ಹೋದರೆ ಈ ಕೆಲಸಗಾರರಂತೆ ಆರಾಮಾಗಿರುತ್ತೇನೆಯೇ. ನನಗ್ಯಾಕೆ ಈ ಇಲ್ಲದ ಉಸಾಬರಿ. ನಾನೊಬ್ಬ ಬಡಿದಾಡಿದರೆ ಏನು ಬಂತು. ಕಾಲೇಜಿಗೆ ರೆಕಗ್ನಿಶನ್ ಸಿಕ್ಕೇಸಿಗುತ್ತದೆ. ಡಾಕ್ಟರುಗಳು ಬಂದೇಬರುತ್ತಾರೆ, ಯೋಚಿಸುತ್ತಲೇ ಇದ್ದ. ಇವನ ಟೇಬಲ್ಲಿನ ಮೇಲೆ ಇವನಿಗಾಗಿ ಒಂದು ಪತ್ರ ಕಾಯುತ್ತ ಇತ್ತು. ನೋಡಿದ. ಅದೊಂದು ಸುತ್ತೋಲೆ. ಎಲ್ಲರಿಗೂ ಇವತ್ತಿನ ಸಾಯಂಕಾಲದ ಮೀಟಿಂಗಿಗೆ ಕಡ್ಡಾಯವಾಗಿ ಬರಬೇಕು ಎಂದು ಸ್ಟೆನ್ಸಿಲ್ ಮಾಡಿರುವ ಪತ್ರ. ಮೀಟಿಂಗಿನಲ್ಲಿ ಏನಿರುತ್ತದೆ ಎಂದು ಸುಮಾರಾಗಿ ಗೊತ್ತಿದ್ದರೂ ತನ್ನನ್ನು ಉಪೇಕ್ಷಿಸಿಲ್ಲವೆಂದು ಒಂದುರೀತಿಯ ಸಮಾಧಾನವಾಯಿತು. ಒಳಗೆ ಹೋಗಿ ವಾಷ್ ಬೇಸಿನ್ನಿನಲ್ಲಿ ಒಮ್ಮೆ ಮುಖ ತೊಳೆದು ಒಮ್ಮೆ ಸೀಟಿಹಾಕಿದ. ಕನ್ನಡಿಯಲ್ಲಿ ತನ್ನನ್ನು ನೋಡಿ ಒಮ್ಮೆ ಮುಗುಳ್ನಕ್ಕ. ಯಾವುದೋ ಸೈಕಿಯಾಟ್ರಿ ಪುಸ್ತಕದಲ್ಲಿ ಓದಿದ್ದ ಏನೋ ನೆನಪಾಗುತ್ತಾ ಇದೆ ಅನ್ನಿಸಿತು. ಆದರೆ ಏನೆಂಬುದು ಸರಿಯಾಗಿ ತಿಳಿಯಲಿಲ್ಲ. ತಿಳಿದುಕೊಳ್ಳಲು ಪ್ರಯತ್ನವನ್ನೂ ಮಾಡಬಾರದೆನ್ನಿಸಿತು.
*
*
*
ಅವತ್ತಿನ ಮಧ್ಯಾಹ್ನವೆಲ್ಲ ಅನ್ಯಮನಸ್ಕನಾಗೇ ಕಲೆದ ಚಕ್ರಪಾಣಿ. ಸುಷ್ಮಾ ನೆನಪಿಗೆ ಬಂದಳು. ಅವಳಿಗೆ ಏನಾದರೂ ಒಂದು ಉತ್ತರ ಹೇಳಬೇಕಾಗಿತ್ತು. ಅವಳು ಒಪ್ಪಿದ್ದಾಳೋ ಇಲ್ಲವೋ ಅನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿರಲಿಲ್ಲ. ತಿಳಿಯುವ ಪ್ರಯತ್ನವನ್ನೂ ಮಾಡಿರಲಿಲ್ಲ. ಫೋನು ಮಾಡಲು ಮನಸ್ಸು ಬಂದಿರಲಿಲ್ಲ. ಈ ಒಣ ಪ್ರಿನ್ಸಿಪಲ್ಲುಗಳನ್ನೆಲ್ಲಾ ಬಿಟ್ಟು ಹೊರಟುಬಿಡಲೇ ಎಂದು ಬಹಳ ಸಾರಿ ಅನ್ನಿಸಿತ್ತು. ಆದರೆ ಅಷ್ಟು ಸುಲಭವಾಗಿ ಸೋಲೊಪ್ಪಲು ಅವನಿಗೆ ಮನಸ್ಸಾಗಿರಲಿಲ್ಲ. ಇದು ಸೋಲೇ ಎಂದು ಬಹಳ ಸಾರಿ ಅವನೇ ಚರ್ಚಿಸಿದ್ದ. ಇಲ್ಲಿದ್ದು ಆತ್ಮಸಾಕ್ಷಿಯನ್ನು ಮಾರಿಕೊಳ್ಳುವ ಬದಲು ಸುಷ್ಮಾಳ ಹಿಂದೆ ಹೋಗಿ ಸ್ವಾಭಿಮಾನವನ್ನು ಮಾರಿಕೊಳ್ಳುವುದೇ ವಾಸಿಯೇ ಎಂದು ತಿಳಿಯಲಿಲ್ಲ. ಇಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಡಾಕ್ಟರುಗಳಿಲ್ಲವೇ. ಪ್ರತ್ಯೊಂದಕ್ಕೂ ಇನ್ನೊಬ್ಬರನ್ನು ನೋಡಿ, ಹೋಲಿಸಿ ನಿರ್ಧರಿಸಬೇಕೆ. ನನ್ನದೇ ಆದ ಪಕ್ಕಾ ಸಿದ್ದಾಂತವೇನಾದರೂ ಇದೆಯೇ. ಪ್ರತಿಯೊಂದು ರಿಲೇಟಿವಿಸಂ. ಯಾವುದೂ ಪೂರ ಸರಿಯಲ್ಲ, ಅಥವಾ ಪೂರಾ ತಪ್ಪಲ್ಲ. ಅಲ್ಲಿಗೆ ಹೋದ ತಕ್ಷಣ ಎಲ್ಲ ಮುಗಿಯಿತೇ. ಪ್ರತಿಯೊಂದೂ ಪ್ರಶ್ನೆಯಾಗೇ ಉಳಿದಿತ್ತು. ಯೋಚಿಸಿದಷ್ಟೂ ಇನ್ನೂ ಗೋಜಲುಗೋಜಲಾಗೇ ಹೋಗುತ್ತಿತ್ತು. ಎದ್ದು ವಾರ್ಡಿನ ಕಡೆಗೆ ಹೊರಟ. ಆಸ್ಪತ್ರೆಯ ಮುಂದೆ ಎರಡು ಲಾರಿ ನಿಂತಿದ್ದವು. ಯಾಕೆ ನಿಂತಿದೆ ಎಂದು ತಿಳಿಯಲಿಲ್ಲ. ಏನೋ ಡೆಲಿವರಿ ಇರಬೇಕೂ ಅಂದುಕೊಂಡ. ಬಾಳಣ್ಣ ಕೂಗುತ್ತಿದ್ದ. ” ಎಲ್ರನ್ನು ಸರಿಯಾಗಿ ಅವ್ರವ್ರ ವಾರ್ಡಿಗೆ ಬಿಟ್ಟುಬಿಟ್ಯೇನೋ” , ಚಕ್ರಪಾಣಿಗೆ ಅರ್ಥವಾಗಲಿಲ್ಲ. ಸುಮ್ಮನೇ ಒಳಗೆ ಹೋದ. ವಾರ್ಡಿಗೆ ಹೋದ. ಏನೋ ಹೊಸತನವಿದೆ ಅನ್ನಿಸಿತು. ಒಂದು ಜನರಲ್ ವಾರ್ಡನ್ನು ಎರಡು ಯುನಿಟ್ಟಿನವರೂ ಉಪಯೋಗಿಸುತ್ತಿದ್ದರು. ಅದು ಯಾವತ್ತೂ ಪೂರ್ತಿಯಾಗಿರಲಿಲ್ಲ. ಇವತ್ತು ಈ ವಾರ್ಡು ತುಂಬಿ ಪಕ್ಕದ ವಾರ್ಡು ತೆಗೆದಿದ್ದರು. ಪ್ರಶ್ನಾರ್ಥಕವಾಗಿ ನರ್ಸ್ ಸರೋಜಳ ಕಡೆ ನೋಡಿದ. ” ಎಲ್ಲಾ ನಿಂದೇಯ ಸರ್, ಪೂರಾ ವಾರ್ಡು ರೌಂಡ್ಸ್ ಮಾಡೋರಂತೆ ಬನ್ನೀ, ಬನ್ನಿ.” ಅಲ್ಲಿ ಕಾಣುತ್ತಿರುವವರ್ಯಾರನ್ನೂ ಅಡ್ಮಿಟ್ ಮಾಡಿದ ನೆನಪಾಗಲಿಲ್ಲ. ನಾಯಕ್ ಮಾಡಿದರೇನೋ ಅಂದುಕೊಂಡ. ನೋಡೋಣವೆಂದು ಕೇಸ್ ಶೀಟುಗಳನ್ನು ತೆಗೆದುಕೊಂಡ. ಪ್ರತಿ ಬೆಡ್ಡಿನಲ್ಲಿಯೂ ಒಂದೊಂದು ಕೇಸ್ ಶೀಟು. ಯಾವುದೋ ಒಂದು ಬೆಡ್ಡಿನ ಮುಂದೆ ನಿಂತು ಅಲ್ಲಿ ಮಲಗಿದ್ದವನನ್ನು ಕೇಳಿದ.’ ಏನ್ರೀ, ಯಾರು ಅಡ್ಮಿಟ್ ಮಾಡಿದ್ರು, ನಿಮ್ಮನ್ನ. ಏನು ತೊಂದರೆ ಅಂತ ಕೇಳಬಹುದಾ” ಆದಷ್ಟು ವಿನಯವಾಗಿ ಕೇಳಿದ. ” ಅಡ್ಮಿಟ್ ಗಿಡ್ಮಿಟ್ ಆಗಿಲ್ಲ ಸಾ ನಾವು.” ” ಮತ್ತೆ ಆಸ್ಪತ್ರೆಯಲ್ಲಿ” ” ನಮಗೇನು ಗೊತ್ತು ಸಾ, ಇವತ್ತು ಬೆಳಿಗ್ಗೆ ಲಾರಿ ಕಳಿಸಿದ್ರು, ಫ್ಯಾಕ್ಟರೀಗೆ. ನಂ ಸಾವ್ಕಾರ್ರು ಹೇಳಿದ್ರು. ಇನ್ನು ಮೂರು ದಿನ ಕೆಲಸ ಇಲ್ಲ. ಆಸ್ಪತ್ರೆಗೆ ಕಳಿಸ್ತೀವಿ ಅಂತ. ನನಗೆ ಟೈಫಾಯ್ಡಂತೆ ಸಾ. ಮೂರು ವಾರದಿಂದ ಜ್ವರಾನಂತೆ. ನೀವು ಇಲ್ಲೀ ಡಾಕ್ಟರೋ, ಡೆಲ್ಲಿಯವರೋ, ಡೆಲ್ಲಿಯವರಂಗೆ ಕಾಣೊಲ್ಲ ಬುಡಿ, ಕನ್ನಡ ಮಾತಾಡ್ತಿದೀರ.” ” ಅಲ್ಲಾರೀ, ನಿಮಗೆ ಜ್ವರಾ ಇದೆಯೋ ಇಲ್ಲವೋ, ಇದೆಯಂತೆ ಅಂದರೆ” ಅರ್ಥವಾಗದಂತೆ ಕೇಳಿದ ಚಕ್ರಪಾಣಿ. ” ಜ್ವರಾನೂ ಇಲ್ಲ, ಏನೂ ಇಲ್ಲ, ಸಾ. ಅಂಗಂಥ ಯೇಳು ಅಂಥ ಯೇಳಿದ್ರು ಅಷ್ಟೆ. ಮೂರುದಿನಕ್ಕೆ ಮುನ್ನೂರು ರೂಪಾಯಿ ಕೊಡ್ತಾರಂತೆ ಸಾ. ಯಾಕ್ಬಿಡಬೇಕು ಯೇಳಿ. ನಮ್ಮೆಂಗಸರೂ ಬಂದವ್ರೆ ಸಾ, ಯೆಣ್ಮಕ್ಕಳ ವಾರ್ಡಲ್ಲವ್ರೆ. ಒಂದು ಮಗೀನೇನಾದ್ರೂ ಇದ್ದಿದ್ರೆ ಇನ್ನೊಂಡಿಸ್ಟು ಆಗ್ತಿತ್ತು.” ಹೇಳುತ್ತಲೇ ಇದ್ದ. ಅಲ್ಲಿ ನಿಲ್ಲಲಾಗಲಿಲ್ಲ, ಚಕ್ರಪಾಣಿಗೆ. ಸುಮ್ಮನೇ ಹೊರಗೆ ಬಂದ. ಸರೋಜ ಕೂಗುತ್ತಾ ಇದ್ದಳು” ಸಾರ್, ಇಲ್ಲಿಗೊಂದು ಸೈನ್ ಹಾಕ್ತೀರಾ” ಯಾವುದೂ ಕೇಳಿಸಲಿಲ್ಲ. ಓಪಿಡಿಗೆ ಬಂದು ಕನ್ನಡಿಯಮುಂದೆ ಮತ್ತೊಮ್ಮೆ ನಿಂತ. ಕಣ್ಣು ಕೆಂಪಾಗಿದೆ ಅನ್ನಿಸಿತು. ತಾನು ಅಳುತ್ತಿದ್ದೀನೆಯೇ ಅನ್ನಿಸಿತು. ಕಣ್ಣೊರೆಸಿ ನೋಡಿದ. ಕೈ ತೇವವಾಗಲಿಲ್ಲ. ಮತ್ತೊಮ್ಮೆ ಕನ್ನಡಿ ನೋಡಿದ. ಈ ಬಾರಿ ಕಣ್ಣುಗಳೆರಡೂ ರಕ್ತವರ್ಣಕ್ಕೆ ತಿರುಗಿದ್ದವು. ಬರೀ ಕಣ್ಣುಗಳಷ್ಟೇ ಅಲ್ಲ. ಕೆನ್ನೆ, ಕಿವಿ ತುಟಿಗಳೆಲ್ಲವೂ ಕೆಂಪಾಗುತ್ತಿದ್ದವು. ತನ್ನ ಮುಖವೇಕೋ ತನ್ನದಂತೆ ಕಾಣಲಿಲ್ಲ. ಯಾವುದೋ ಯಕ್ಷಗಾನದ ಕಲಾವಿದನ ರೀತಿ ಕಾಣಿಸಿತು. ನಂಬಲಾಗಲಿಲ್ಲ. ಕನ್ನಡಿ ಸರಿಯಿಲ್ಲವೆನ್ನಿಸಿತು. ಕನ್ನಡಿಯನ್ನೊಮ್ಮೆ ಒರೆಸಿದ. ಏನೂ ಪ್ರಯೋಜನವಾಗಲಿಲ್ಲ. ಮುಖ ಇನ್ನೂ ಬದಲಾಗುತ್ತಿತ್ತು. ತಾನು ತಾನಲ್ಲವೆನಿಸಿತು. ನಾಯಕರ ರೂಮಿನ ಕನ್ನಡಿಯಲ್ಲಿ ನೋಡಿದ. ಏನೂ ಬದಲಾವಣೆಯಿರಲಿಲ್ಲ. ” ಆರ್ ಯೂ ಆಲ್ ರೈಟ್, ಚಕ್ರಪಾಣಿ” ನಾಯಕರು ಕೇಳಿದರು. ನಕ್ಕ, ಚಕ್ರಪಾಣಿ. ” ಬರ್ತೀರಾ ಮೀಟಿಂಗಿಗೆ” ಕೇಳಿದರು. ಮತ್ತೊಮ್ಮೆ ನಕ್ಕ. ವಿಚಿತ್ರವಾಗಿ ನೋಡಿದರು ನಾಯಕರು. ಅಂದು ರಾತ್ರಿ ಮನೆಗೆ ಹೋಗಲಿಲ್ಲ, ಚಕ್ರಪಾಣಿ. ಬಹಳ ಹೊತ್ತು ಡ್ಯೂಟಿ ರೂಮಿನಲ್ಲಿಯೇ ಕೂತಿದ್ದ. ರಾತ್ರಿ ಹನ್ನೆರಡಕ್ಕೆ ಆಸ್ಪತ್ರೆಯ ಟೆಲಿಫೋನ್ ಬೂತಿನ ಹತ್ತಿರ ಹೋಗಿ ” ಅಮೆರಿಕಕ್ಕೆ ಒಂದು ಕಾಲ್ ಮಾಡಬೇಕಲ್ಲ” ಅಂದ. ” ಸಾರ್, ಈಗ ಅಲ್ಲಿ ಬೆಳಿಗ್ಗೆ. ಎಲ್ಲರೂ ಕೆಲಸಕ್ಕೆ ಹೋಗಿರುತ್ತಾರೋ ಏನೋ. ಇರಲಿ ಮಾಡೋಣ, ನಂಬರ್ ಕೊಡಿ” ಎಂದ ಟೆಲಿಫೋನ್ ಬೂತಿನವ. ಇಲ್ಲಿ ರಾತ್ರಿಯಾದಾಗ ಅಲ್ಲಿ ಬೆಳಕಾಗಿರುತ್ತದೆ ಆದರೆ ಅಲ್ಲಿ ರಾತ್ರಿಯಾದಾಗ ಇಲ್ಲಿ ಬೆಳಕಿರಬೇಕಲ್ಲವೇ, ಯೋಚಿಸಿದ ಚಕ್ರಪಾಣಿ. ಅರೆ ತನಗೇನಾಗಿದೆ, ಹಾಗೆಯೇ ಅಲ್ಲವೇ ಇರುವುದು ಅನ್ನಿಸಿತು. ಇಲ್ಲಿ ಮೊದಲು ರಾತ್ರಿಯಾಗುತ್ತದೆ ಅನ್ನಿಸಿತು. ಹಗಲೂ ಇಲ್ಲೇ ಮೊದಲಲ್ಲವೇ , ಯೋಚಿಸಿದ. ಆದರೆ ಪೂರಾ ಅರ್ಥವಾಗಲಿಲ್ಲ. ” ಯೂ ಹ್ಯಾವ್ ರೀಚ್ಡ್ ಸುಶ್ಮಾ…….” ಮಿಷೀನ್ ಉಲಿಯುತ್ತಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.