ಸುಖವಾಗಿದ್ದೀಯಾ..

ಸೀತಮ್ಮ ಅಮೆರಿಕಾದಲ್ಲಿ ಮಗನ ಮನೆಗೆ ಬಂದು ಒಂದು ತಿಂಗಳಾಗಿತ್ತಷ್ಟೆ. ಮನಸ್ಸಿಗೆ ಒಗ್ಗಿದ ಪರಿಸರ, ಹೃದಯಕ್ಕೆ ಒಗ್ಗಿದ ಸಂಸ್ಕೃತಿಯಿಂದ ದೂರಾಗಿ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದ ಅವರ ಜೀವಕ್ಕೆ ತಂಪೆರೆಯುವಂತೆ ಬಂದಿತ್ತು ಅವರ ಸ್ನೇಹಿತೆ ಶಾರದೆಯ ಕಾಗದ. ಊರಿನ ಸುದ್ದಿಯನ್ನೆಲ್ಲ ಹೊತ್ತು ತಂದ ಕಾಗದ! ರಾಮ ಭಟ್ಟರ ಮಗನಿಗೆ ಮದುವೆ, ಹುಡುಗಿ ಕಪ್ಪಾದರೂ ಲಕ್ಷಣವಾಗಿದ್ದಾಳೆ, ಮೂಲೆ ಮನೆ ವತ್ಸಲನಿಗೆ ಮಗುವಾಯಿತು, ತುಂಬ ದಿನದಿಂದ ನರಳುತ್ತಿದ್ದ ಶಾಮಾಚಾರ್ರು ಕಡೆಗೂ ಹೋಗಿಬಿಟ್ಟರು, ಹೀಗೇ ಏನೇನೋ ಸುದ್ದಿ. ಕೊನೆಯಲ್ಲಿ ಬರೆದಿದ್ದ ಆ ಸಾಲು ಸೀತಮ್ಮನನ್ನು ಚುಚ್ಚಿದಂತಾಯಿತು. “ನೀನು ಅಮೆರಿಕಾದಲ್ಲಿ ಸುಖವಾಗಿದ್ದೀಯಾ?” ಎಂದು ಬರೆದಿದ್ದಳು ಶಾರದೆ.

“ಸುಖವಾಗಿಲ್ಲದೆ ಏನು? ಮಗ, ಸೊಸೆ, ಮೊಮ್ಮಕ್ಕಳ ಮಧ್ಯೆ ಆರಾಮವಾಗಿ ಜೀವನ ನಡೀತಾ ಇದೆ.” ಎಂದು ಗಟ್ಟಿಯಾಗೇ ಹೇಳಿಕೊಂಡರು ಸೀತಮ್ಮ ತಮಗೆ ತಾವೇ ಆಶ್ವಾಸನೆ ಕೊಡುವವರಂತೆ. ಆದರೂ ಯಾಕೋ ಆ ಮಾತು ಪೂರ್ತಿಯಾಗಿ ’ಸತ್ಯ’ ಎನ್ನಿಸಲಿಲ್ಲ. ಕೊನೆಗೆ “ಸುಖ ಅಂದರೆ ಏನು?” ಎಂಬ ಪ್ರಶ್ನೆಗೆ ಉತ್ತರವೇ ಸಿಕ್ಕದೆ ಆ ಯೋಚನೆಯನ್ನು ಬಿಟ್ಟುಕೊಟ್ಟರು.

ಅವರ ಗಂಡ ಸ್ವರ್ಗಸ್ಥರಾಗಿ ಹಲವು ವರ್ಷಗಳಾಗಿದ್ದವು. ಇದ್ದ ಮನೆಯನ್ನು ಮಾರಿ ಒಬ್ಬನೇ ಮಗ ವಾಸುವಿನ ಮನೆಗೆ ಅಮೆರಿಕಾದಲ್ಲಿ ಬಂದು ನೆಲೆಸಿದ್ದರು ಅವರು. ಈಗ ಇದೇ ನನ್ನ ಮನೆ. ಸುಖ, ದುಃಖ ಎಲ್ಲ ಇಲ್ಲೇ ಎಂದುಕೊಂಡರು.

“ಅಜ್ಜಿ, ಡಿನ್ನರ್ ರೆಡಿ” ಎಂದು ಕರೆದ ಮೊಮ್ಮಗ ಹತ್ತು ವರ್ಷದ ರವಿ. ತಡವರಿಸಿಕೊಂಡು ಹರಕು ಮುರುಕು ಕನ್ನಡದಲ್ಲಿ ಅವನು ಅಜ್ಜಿಯ ಹತ್ತಿರ ಅಪರೂಪಕ್ಕೆ ಮಾತಾಡಿದರೆ ಅದು ಇಂಗ್ಲಿಷ್ ಹಾಗೇ ಕೇಳಿಸುತ್ತಿತ್ತು. ಹತ್ತಿರ ಬಂದು ಅಜ್ಜಿಯ ಹತ್ತಿರ ಕುಳಿತುಕೊಳ್ಳುವುದಾಗಲಿ, ಮಾತಾಡುವುದಾಗಲಿ ಮಾಡುತ್ತಿರಲಿಲ್ಲ. ಅವನಿಗೆ ಇಷ್ಟವಾಗಬಹುದು ಎಂದು ಸೀತಮ್ಮ ಏನಾದರೂ ತಿಂಡಿ ಮಾಡಿದರೆ ಸ್ವಲ್ಪ ತಿಂದು ’ಖಾರ’ ಅಂತ ಬಿಟ್ಟು ಹೋಗಿಬಿಡುತ್ತಿದ್ದ. ಅವನಿಗೆ ಗೊತ್ತಿರುವ ಕನ್ನಡ ಅಷ್ಟಕ್ಕಷ್ಟೆ ಆದ್ದರಿಂದ ಸೀತಮ್ಮನಿಗೆ ಮೊಮ್ಮಗನ ಜೊತೆ ಮಾತಾಡಿ ಸಂತೋಷ ಪಡುವ ಭಾಗ್ಯ ಲಭಿಸಿರಲಿಲ್ಲ. ಊರಿನಲ್ಲಿ ಶಾರದೆ ತನ್ನ ಮೊಮ್ಮಕ್ಕಳನ್ನು ಮನದಣಿಯೆ ಮುದ್ದಾಡಿ ಆಮೇಲೆ “ಏನು ಪೀಡಿಸ್ತಾರಪ್ಪ!” ಎಂದು ಹುಸಿ ಮುನಿಸು ತೋರಿಸುತ್ತಿದ್ದದ್ದು ನೆನಪಾಗಿ ಏನೋ ಸಂಕಟವಾಯಿತು ಸೀತಮ್ಮನಿಗೆ.

ಊಟವಾದ ಮೇಲೆ ರವಿ ಅದೇನೋ ವೀಡಿಯೊ ಗೇಮ್ ಅಂತೆ ಅದನ್ನು ಆಡ್ತೀನಿ ಅಂತ ಹೊರಟು ಹೋದ. ಮೊಮ್ಮಗಳು ಹದಿಮೂರು ವರ್ಷದ ಆರತಿ ತನ್ನ ಕೋಣೆಯಲ್ಲಿ ಕಂಪ್ಯೂಟರ್ ಹಾಕಿಕೊಂಡು ಕುಳಿತಳು. ಅವಳ ಹತ್ತಿರ ಮಾತಾಡಬೇಕೆಂಬ ಬಯಕೆಯಾಗಿ ಹತ್ತಿರ ಬಂದು ಕುಳಿತರು ಸೀತಮ್ಮ. “ಆರತಿ ನಿನಗೆ ಈಗ ಹದಿಮೂರು ವರ್ಷ ಅಲ್ಲವೆ? ನಾನು ನಿನ್ನಷ್ಟು ವಯಸ್ಸಾಗಿದ್ದಾಗ ಮದುವೆಯಾಗಿ ಗಂಡನ ಮನೆ ಸೇರಿದ್ದೆ. ಅಲ್ಲಿ ಬೆಳಿಗ್ಗೆ ಎಲ್ಲರಿಗಿಂತ ಮುಂಚೆ ನಾನು, ನಮ್ಮತ್ತೆ ಎದ್ದು ಬಚ್ಚಲ ಒಲೆಗೆ ಬೆಂಕಿ ಹಾಕಿ ಕಾಫಿ, ತಿಂಡಿ ಮಾಡಬೇಕಾಗಿತ್ತು.” ಎಂದರು. “ಹೌದಾ ಅಜ್ಜಿ?” ಎಂದಳು ಆರತಿ ಕಂಪ್ಯೂಟರ್‌ನಿಂದ ಕಣ್ಣು ಕೀಳದೆ.

“ಆಗ ಶುರುವಾಗಿದ್ದು ಈವತ್ತಿನವರೆಗೂ ನಾನು ದಿನಾ ಬೆಳಿಗ್ಗೆ ಐದು ಗಂಟೆಗೇ ಏಳೋದು. ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿದ ಹೊರತು ಒಂದು ತೊಟ್ಟು ನೀರು ಸಹ ಬಾಯಿಗೆ ಹಾಕಲ್ಲ.” ಎಂದರು. ಮತ್ತೆ “ಹೌದಾ ಅಜ್ಜಿ” ಎಂದಳು ಆರತಿ. ಕಣ್ಣು ಮಾತ್ರ ಕಂಪ್ಯೂಟರ್ ಮೇಲೇ ಇತ್ತು. ಆರತಿಯ ಮುಖವನ್ನು ದಿಟ್ಟಿಸಿದರು ಸೀತಮ್ಮ. ಯೌವನದ ಹೊಸಿಲಲ್ಲಿ ನಿಂತಿದ್ದ ಅವಳ ಮುಖದಲ್ಲಿ ಅರೆ ಬಿರಿದ ಹೂವಿನ ಚೆಲುವು ತುಂಬಿತ್ತು. ಭುಜದ ಮೇಲೆ ಇಳಿ ಬಿದ್ದಿದ್ದ ಅವಳ ರಾಶಿ ಕೂದಲನ್ನು ನೋಡಿ ಸೀತಮ್ಮ ಹೇಳಿದರು “ಆರತಿ, ನೀನು ತಲೆಗೆ ಎಣ್ಣೆ ಹಾಕ್ಕೋಬೇಕು. ಕಣ್ಣಿಗೂ ತಂಪು, ಮೈಗೂ ಒಳ್ಳೇದು. ನಾಳೆ ನಾನು ಎಣ್ಣೆ ಹಾಕಿ ಎರೀತೀನಿ.”

ಬೆಚ್ಚಿಬಿದ್ದವಳಂತೆ ಕಂಪ್ಯೂಟರ್‌ನಿಂದ ಕಣ್ಣು ಕಿತ್ತು ಅಜ್ಜಿಯ ಕಡೆಗೆ ನೋಡುತ್ತಾ ಹೇಳಿದಳು ಆರತಿ “ಐ ಡೋಂಟ್ ವಾಂಟ್ ಆಯಿಲ್ ಆನ್ ಮೈ ಹೇರ್!” ಕಣ್ಣು ಮೂಗನ್ನು ಸುರುಟಿಸಿದ್ದ ಅವಳ ಮುಖ ಭಾವ ನೋಡಿದ ಸೀತಮ್ಮನಿಗೆ ಅದು ಗಾಭರಿಯೆ? ಹೇಸಿಗೆಯೆ? ತಿರಸ್ಕಾರವೆ? ತಿಳಿಯದಾಯಿತು.

ಅಷ್ಟರಲ್ಲಿ ಮಗ “ಅಮ್ಮಾ” ಎಂದು ಕರೆದಿದ್ದು ಕೇಳಿ ಬಂತು. ಅವನು ಹಾಗೆ ಕರೆದಾಗ ಸೀತಮ್ಮನಿಗೆ ಹೇಗೆಹೇಗೋ ಆಗುತ್ತಿತ್ತು. ಕರುಳು ತುಡಿಯುತ್ತಿತ್ತು. ಈಗಲೇ ಹೋಗಿ ಅವನ ಬಯಕೆ ಏನಿದ್ದರೂ ಪೂರೈಸಬೇಕು ಎನ್ನಿಸುತ್ತಿತ್ತು. ಅವರು ಎದ್ದು ಹೋದರು. ವಾಸು ಸೀತಮ್ಮನ ಕೋಣೆಯಲ್ಲೇ ಬೆಡ್ ಮೇಲೆ ಕುಳಿತಿದ್ದ.

“ಬಾ ಅಮ್ಮ, ಇಲ್ಲೇ ಕೂತ್ಕೊ.” ಎಂದು ಪಕ್ಕ ತೋರಿಸಿದ. ಅವರು ಕುಳಿತ ಮೇಲೆ ಅವನು ಏನೋ ಹೇಳಲು ಬಯಸುತ್ತಿದ್ದರೂ ತಡವರಿಸುತ್ತಾ ಕುಳಿತಿದ್ದಾನೆ ಎನ್ನಿಸಿತು ಅವರಿಗೆ. ಕಡೆಗೆ ವಾಸು ಹೇಳಿದ. “ಅಮ್ಮ ಏನಿಲ್ಲ ನೀನು ನಾಳೆಯಿಂದ ಬೆಳಿಗ್ಗೆ ಸ್ವಲ್ಪ ತಡವಾಗಿ ಏಳೋಕೆ ಆಗುತ್ತಾ? ನೀನು ಬೇಗ ಎದ್ದು ಬಾತ್‌ರೂಮಿನಲ್ಲಿ ಸದ್ದು ಮಾಡುತ್ತಿದ್ದರೆ ಗೀತಾಗೆ ಡಿಸ್ಟರ್ಬ್ ಆಗುತ್ತೆ. ಅವಳೂ ಪಾಪ ಇಡೀ ದಿನ ಹೊರಗೆ ದುಡಿಯಬೇಕಲ್ಲ. ರೆಸ್ಟ್ ಬೇಕು ಅವಳಿಗೆ.” ಎಂದ.

ಇದೇನಿದು ವಿಚಿತ್ರ! ನಮ್ಮ ಕಾಲದಲ್ಲಿ ಸೊಸೆಯರು ಅತ್ತೆಯನ್ನು ಹೊಂದಿಕೊಂಡು ಹೋಗುತ್ತಿದ್ದರು. ಈಗ ಅತ್ತೆಯೇ ಸೊಸೆಗೆ ಅಡ್ಜಸ್ಟ್ ಆಗಬೇಕಾಗಿ ಬಂತೆ! ಎನ್ನಿಸಿತು ಅವರಿಗೆ. ಮಗನ ಕೈಲಿ ಹೀಗೆ ಹೇಳಿಸಿಕೊಳ್ಳಬೇಕಾಯಿತಲ್ಲ! ಎನ್ನಿಸಿ ಅವರ ಕಣ್ಣುಗಳು ತುಂಬಿ ಬಂದವು. ಅದನ್ನು ಮಗನಿಗೆ ತೋರಗೊಡದೆ ಬೆಡ್ ಸರಿ ಮಾಡುವ ನೆಪದಲ್ಲಿ ಮುಖವನ್ನು ಆಚೆ ತಿರುಗಿಸಿ “ಆಗಲಿ ಬಿಡು ನಾಳೆಯಿಂದ ತಡವಾಗೇ ಏಳ್ತೀನಿ.” ಎಂದರು.

ಈ ಅಮೆರಿಕಾದಲ್ಲಿ ಎಲ್ಲವೂ ತಲೆ ಕೆಳಗೆ! ಹೆಂಗಸರು ಪ್ಯಾಂಟ್ ಹಾಕ್ತಾರೆ. ಹಣೆಯಲ್ಲಿ ಕುಂಕುಮ ಇಲ್ಲ. ಕೊರಳಲ್ಲಿ ಕರಿಮಣಿ ಇಲ್ಲ. ಮಕ್ಕಳು ಎದುರುತ್ತರ ಕೊಡುತ್ತಾರೆ. ಅವರಿಗೆ ಬೈದಿದ್ದಾಗಲಿ ಹೊಡೆದಿದ್ದಾಗಲಿ ಕಾಣೆ. ಹೆಂಗಸರು ಅಂಗಡಿಗೆ ಹೋಗಿ ಸಾಮಾನು ತರ್ತಾರೆ. ಗಂಡಸರು ಮನೆಯಲ್ಲಿ ಅಡಿಗೆ ಮಾಡ್ತಾರೆ, ಪಾತ್ರೆ ತೊಳೀತಾರೆ!

ಒಂದು ದಿನ ಗೀತಾ ಮತ್ತು ಸೀತಮ್ಮ ಶಾಪಿಂಗ್ ಹೋಗಿ ಬರುವಾಗ ವಾಸು ಅಡಿಗೆ ಮಾಡಿ ಇಟ್ಟಿದ್ದ. ಮನೆಯಲ್ಲಿ ಹೆಂಡತಿ, ತಾಯಿ ಇರುತ್ತಾ ಇವನಿಗೆ ಅಡಿಗೆ ಮಾಡುವ ಪ್ರಮೇಯ ಏನಿತ್ತು? ಎನ್ನಿಸಿತು ಸೀತಮ್ಮನಿಗೆ. ತಾನು ಚಿಕ್ಕಂದಿನಲ್ಲಿ ರುಬ್ಬುವುದು, ಕುಟ್ಟುವುದು ಮಾಡಿ, ಹಳೆಯ ಕಾಲದ ಒಲೆಯಲ್ಲಿ ಅಡಿಗೆ ಮಾಡಿ, ಬಟ್ಟೆ ಒಗೆದು, ಕಸ ಗುಡಿಸಿ, ನೆಲ ಸಾರಿಸಿ ಮನೆ ಸಂಭಾಳಿಸಲಿಲ್ಲವೆ? ಗಂಡನಿಗೆ ಮನೆ ಕೆಲಸ ಮಾಡಿ ಎಂದು ಎಂದಾದರೂ ಹೇಳಿದ್ದುಂಟೆ? ಯಾಕೋ ಮಗನನ್ನು ನೆನೆದು ಅನುತಾಪವಾಯಿತು ಅವರಿಗೆ.

ಆ ದಿನಗಳ ನೆನಪಾದಂತೆ ಅವರ ಹೃದಯ ತುಂಬಿ ಬಂದಿತು. ಮನೆಯಲ್ಲಿ ಗಂಡ ಮತ್ತು ಮಗ ಎಲ್ಲದಕ್ಕೂ ಸೀತಮ್ಮನ ಮುಖ ನೋಡುತ್ತಿದ್ದರು. “ಸೀತಾ ನನ್ನ ಅಂಗಿ ಎಲ್ಲಿ?”, “ಅಮ್ಮಾ ಮಳೆ ಬರ್ತಾ ಇದೆ. ಸ್ಕೂಲಿಗೆ ಹೋಗೋಕೆ ಕೊಡೆ ಎಲ್ಲಿ?”, “ಸೀತಾ ಇವತ್ತು ಆಲೂಗಡ್ಡೆ ಈರುಳ್ಳಿ ಹುಳಿ ಮಾಡು.”, “ಅಮ್ಮಾ ಈವತ್ತು ಕೋಡುಬಳೆ ಮಾಡು.” ಒಂದೇ, ಎರಡೇ ಅವರ ಬೇಡಿಕೆಗಳು! ಎಲ್ಲಾದರೂ ಅಪರೂಪಕ್ಕೆ ಸೀತಮ್ಮನಿಗೆ ಹುಶಾರಿಲ್ಲದಿದ್ದರೆ ಅವರಿಬ್ಬರಿಗೂ ದಿಕ್ಕೇ ತೋಚದ ಹಾಗೆ ಆಗುತ್ತಿತ್ತು. ಪೂರ್ತಿ ಖಾಯಿಲೆ ಗುಣವಾಗುವ ಮೊದಲೇ ಎದ್ದು ಮತ್ತೆ ಮನೆಗೆಲಸ ಶುರು ಮಾಡುತ್ತಿದ್ದರು ಸೀತಮ್ಮ. ಆದರೂ ಆ ದಿನಗಳು ಮತ್ತೆ ಬರಬಾರದೆ! ಎಂದು ಹಂಬಲಿಸಿತು ಅವರ ಹೃದಯ. ಇಂದು ತನ್ನ ಅಗತ್ಯ ಯಾರಿಗೂ ಇಲ್ಲವೆ? ಎಂದು ಯೋಚಿಸುವಾಗ ಮನಸ್ಸು ಬಿಕೋ ಎನ್ನುತ್ತಿತ್ತು.

ಒಮ್ಮೊಮ್ಮೆ ಮತ್ತೆ ಭಾರತಕ್ಕೆ ವಾಪಸ್ಸು ಹೋಗಿಬಿಡಲೆ? ಎಂದು ಯೋಚಿಸುತ್ತಿದ್ದರು ಸೀತಮ್ಮ- ಈ ಅಮೆರಿಕಾದ ಜೀವನ ತಮಗೆ ಒಗ್ಗದು ಎನ್ನಿಸಿದಾಗ. ಅಲ್ಲಿ ಅವರ ದಿನ ದಿನದ ಬದುಕಿನಲ್ಲಿ ಒಂದಾದ ತರಕಾರಿ ಮಾರುವವನ ಜೊತೆ ಚೌಕಾಶಿ, ಕೆಲಸದಾಕೆಯೊಡನೆ ಊರ ಪುರಾಣ, ನೆರೆ ಮನೆಯವರ ಜೊತೆ ಹರಟೆ…ಯಾವುದೂ ಇಲ್ಲದೆ ಜೀವನ ನೀರಸ ಎನ್ನಿಸುತ್ತಿತ್ತು. ಆದರೆ ಹಾಗೆ ಹೋದರೆ ಜನ ಏನು ಮತಾಡಿಕೊಳ್ಳಬಹುದು? ಎಂದು ಯೋಚಿಸಿ ಹಿಂಜರಿಯುತ್ತಿದ್ದರು. “ನೀವು ಪುಣ್ಯಾತ್ಗಿತ್ತಿ ಸೀತಮ್ಮ. ಮಗ ಅಮೆರಿಕಾದಲ್ಲಿದ್ದರೂ ನಿಮ್ಮನ್ನು ನೆನಪಿನಲ್ಲಿ ಕರೆಸಿಕೊಳ್ತಾ‌ಇದ್ದಾನೆ. ಅಂಥಾ ಮಗ ಇದ್ದ ಮೇಲೆ ನಿಮಗೆ ಇಲ್ಲೇನಿದೆ?” ಎಂದೆಲ್ಲ ಹೇಳಿದ್ದರು ಅಕ್ಕ ಪಕ್ಕದ ಮನೆಯವರು ತಾನು ಹೊರಟು ನಿಂತಾಗ. ಈಗ ಹಿಂದೆ ಹೋದರೆ? ” ಅಯ್ಯೋ ಈ ಮುದುಕಿಯ ಜೊತೆ ಏಗೋಕೆ ಯಾರ ಕೈಲಿ ಸಾಧ್ಯ!” ಎನ್ನಬಹುದು. “ಅವಳೆಂಥಾ ಘಟವಾಣಿ ಸೊಸೆ! ಅತ್ತೆಯನ್ನು ಮನೆಯಲ್ಲಿ ಚೆನ್ನಾಗಿ ನೋಡಿಕೊಳ್ಳೋದು ಬಿಟ್ಟು ಹೀಗೆ ಕಳಿಸಿಬಿಡೋದಾ!” ಎನ್ನುತ್ತಾರೋ ಏನೋ. ಎಲ್ಲಕ್ಕಿಂತ ಕರ್ಣ ಕಠೋರವಾದದ್ದು “ಇಂಥಾ ಮಗ ಇದ್ದರೆಷ್ಟು, ಬಿಟ್ಟರೆಷ್ಟು. ಸ್ವಂತ ತಾಯಿಯನ್ನು ಮುದಿತನದಲ್ಲಿ ಸಾಕಲಾರದೋನು!” ಎಂದುಬಿಟ್ಟರೆ! ತನ್ನ ದೆಸೆಯಿಂದ ತನ್ನ ಮಗನಿಗೆ ಅಪನಿಂದೆ ಬರುವುದು ಅವರಿಗೆ ಬೇಕಾಗಿರಲಿಲ್ಲ.
*
*
*
ಹಗಲು ಹೊತ್ತು ಮನೆಯಲ್ಲಿ ಯಾರೂ ಇಲ್ಲ. ಹೊತ್ತು ಹೋಗುವುದಿಲ್ಲವೆಂದು ಸಂಡಿಗೆ ಮಾಡಲು ನಿರ್ಧರಿಸಿದರು ಸೀತಮ್ಮ. ಹೊರಗೆ ಸುಡು ಬಿಸಿಲು. ಹಿತ್ತಿಲ ಅಂಗಳವೂ ಚೆನ್ನಾಗಿದೆ. ಬಿಸಿಲನ್ನು ಯಾಕೆ ದಂಡ ಮಾಡಬೇಕು? ಸೀತಮ್ಮ ಸಬ್ಬಕ್ಕಿ ಸಂಡಿಗೆಯ ಹಿಟ್ಟು ಮಾಡಿ ಹೊರಗೆ ಅಂಗಳದಲ್ಲಿ ಒಣ ಹಾಕಲು ಕುಳಿತರು. ಪಕ್ಕದ ಮನೆಯ ಹೆಂಗಸು ಕಿಟಕಿಯಿಂದ ತನ್ನನ್ನೇ ನೋಡುತ್ತಿದ್ದದ್ದು ಕಾಣಿಸಿತು. ಸೀತಮ್ಮ ಅವಳ ಕಡೆಗೆ ಮುಗುಳು ನಗೆ ಬೀರಿದರು. ಅವಳು ನಗಲಿಲ್ಲ.

ಮಧ್ಯಾಹ್ನ ಮೂರು ಗಂಟೆಗೆ ರವಿ, ಮತ್ತು ಆರತಿ ಸ್ಕೂಲಿಂದ ಬಂದರು. ತಮ್ಮ ಪಾಡಿಗೆ ಕುಕೀಸ್ ತಿಂದುಕೊಂಡು ಟಿ ವಿ ನೋಡುತ್ತಾ ಕುಳಿತರು. ಅವರು ತಮ್ಮೊಡನೆ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಈ ವೇಳೆಗಾಗಲೇ ತಿಳಿದುಕೊಂಡಿದ್ದ ಸೀತಮ್ಮ ಅವರನ್ನು ತಾವಾಗಿ ಮೇಲೆ ಬಿದ್ದು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಮೂರೂವರೆಗೆ ವಾಸು ಬಂದ. ಈ ದಿನ ಸ್ವಲ್ಪ ಬೇಗ ಬಂದಿದ್ದ! ದಣಿದು ಬಂದ ಮಗನನು ನೋಡಿ ’ಅಯ್ಯೋ’ ಎನ್ನಿಸಿತು ಸೀತಮ್ಮನಿಗೆ. ಅವನಿಗೆ ಕಾಫಿ ಮಾಡಿಕೊಟ್ಟು ಒಗ್ಗರಿಸಿದ ಅವಲಕ್ಕಿ ಕೊಟ್ಟರು. ” ಅಮ್ಮಾ ಈ ಒಗ್ಗರಿಸಿದ ಅವಲಕ್ಕಿ ನಿನ್ನ ಕೈಯ ರುಚಿ ಇನ್ಯಾರ ಕೈಲೂ ಬರೋದಿಲ್ಲ ನೋಡು.” ಎಂದು ಆಸೆಯಿಂದ ತಿನ್ನುತ್ತಿದ್ದ ಮಗನನ್ನು ಕಣ್ತುಂಬ ನೋಡಿದರು. ಚಿಕ್ಕಂದಿನಲ್ಲಿ ಅವನು ಶಾಲೆಯಿಂದ ಬಂದಾಗಲೂ ಹೀಗೇ ಅವಲಕ್ಕಿ ಕೊಟ್ಟಿದ್ದ ನೆನಪು ಉಕ್ಕಿ ಬಂತು. ಒಂದು ಕ್ಷಣ ಅಂದು ಮಾಡಿದಂತೆ ಈಗಲೂ ಅವನ ಬಾಯಿಗೆ ಅಂಟಿಕೊಂಡಿದ್ದ ಅವಲಕ್ಕಿಯನ್ನು ಸೆರಗಿನಲ್ಲಿ ಒರೆಸಲೆ? ಎಂಬ ಬಯಕೆಯಾಯಿತು. ಮಗ ಒಬ್ಬನೇ ಸಿಕ್ಕುವುದೇ ಅಪರೂಪ. ಇವತ್ತೇನೋ ನನ್ನ ಪುಣ್ಯ ಚೆನ್ನಾಗಿತ್ತು! ಎಂದುಕೊಂಡರು.

ಈಗಲೀಗ ಗೀತಾ ಬಂದ ಸದ್ದಾಯಿತು. ಅವಳ ಕೆನ್ನೆ ಕೆಂಪಾಗಿತ್ತು. ಮುಖ ಬಿಗಿದುಕೊಂಡಿತ್ತು. ಅದನ್ನು ಗಮನಿಸಿದ ವಾಸು “ಏನಾಯಿತು ಗೀತಾ?” ಎಂದು ಹತ್ತಿರ ಬಂದ. “ಏನೂ ಇಲ್ಲ.” ಎಂದು ಗೀತಾ ಮುಖವನ್ನು ಆಚೆ ತಿರುಗಿಸಿ ಅವನಿಂದ ದೂರ ಹೋದಳು. ವಾಸು ಏನು ಮಾಡಬೇಕೋ ತಿಳಿಯದೆ ಜೇಬಿನಲ್ಲಿ ಕೈ ಇಳಿ ಬಿಟ್ಟು ಅಸಹಾಯಕನಾಗಿ ನಿಂತ. ತಕ್ಷಣ ಮಗನ ಸಲುವಾಗಿ ಸೊಸೆಯ ಮೇಲೆ ಸಿಟ್ಟು ಬಂದಿತು ಸೀತಮ್ಮನಿಗೆ. ಆದರೂ ಏನೂ ಹೇಳದೆ ತಟ್ಟೆಯಲ್ಲಿ ಅವಲಕ್ಕಿ ಹಾಕಿ ಅವಳಿಗೆ ಕೊಟ್ಟರು. ಗೀತಾ “ನಂಗೆ ಬೇಡ” ಎಂದು ಬಿರುಸಾಗಿ ಹೇಳಿದಳು. ಅವಮಾನವಾದಂತಾಗಿ ಸೀತಮ್ಮ ನಿಧಾನವಾಗಿ ಎದ್ದು ಹೋಗಿ ಮಹಡಿಯಲ್ಲಿ ತಮ್ಮ ಕೋಣೆಯನ್ನು ಸೇರಿದರು.

“ನೀನು ಅಮೆರಿಕಾದಲ್ಲಿ ಸುಖವಾಗಿದ್ದೀಯಾ?” ತೆರೆದಿಟ್ಟಿದ್ದ ಗೆಳತಿಯ ಪತ್ರ ಪ್ರಶ್ನೆ ಹಾಕುತ್ತಾ ಕುಳಿತಿತ್ತು. ಆ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ ಅವರಿಗೆ. ತಲೆ ಸುತ್ತುತ್ತಿತ್ತು. ಸ್ವಲ್ಪ ಹೊತ್ತು ಹಾಗೇ ಕುಳಿತು ಯಾವುದೋ ಪುಸ್ತಕದ ಮೇಲೆ ಕಣ್ಣಾಡಿಸಿದರು. ಓದಿದ್ದು ಯಾವುದೂ ತಲೆಯೊಳಗೆ ಇಳಿಯಲಿಲ್ಲ. ಆಗ ನೆನಪಾಯಿತು. ಹೊರಗೆ ಒಣ ಹಾಕಿದ ಸಂಡಿಗೆ ಹಾಗೇ ಇತ್ತು. ಒಳಗೆ ತರುತ್ತೇನೆ ಎಂದು ಮಹಡಿಯಿಂದ ಇಳಿದು ಬಂದರು. ಗೀತಾ ಜೋರಾಗಿ ಸಿಟ್ಟಿನಲ್ಲಿ ಮಾತಾಡುತ್ತಿದ್ದ ಶಬ್ದ ಕೇಳಿ ಸ್ತಬ್ಧರಾಗಿ ಹಾಗೇ ನಿಂತರು.

“ಇವರಿಗೆ ನನ್ನನ್ನು ಒಂದು ಮಾತು ಕೇಳದೆ ಸಂಡಿಗೆ ಮಾಡಬೇಕಾದ ಅಗತ್ಯ ಏನಿತ್ತು? ಮನೆಗೆ ಬಂದು ನಾನು ಹಿಂದುಗಡೆ ರವಿ ಆಡುತ್ತಿರಬಹುದು ಅಂತ ನೋಡೋಕೆ ಹೋದಾಗ ಪಕ್ಕದ ಮನೆ ಮೇರಿ ಸಿಕ್ಕಿದಳು. ಸಂಡಿಗೆ ತೋರಿಸಿ ’ವಾಟ್ ಈಸ್ ದಟ್! ಸಮ್‌ಥಿಂಗ್ ಯು ಈಟ್?’ ಎಂದು ಒಂದು ಥರಾ ಕೇಳಿದಳು. ನಂಗೆ ಎಷ್ಟು ಅವಮಾನವಾದ ಹಾಗೆ ಆಯ್ತು ಗೊತ್ತಾ? ಈ ಜನರ ಜೊತೆ ನಾವು ಸರಿಸಮಾನರ ಹಾಗೆ ಇರಬೇಕು ಅಂತ ನಾನು ಎಷ್ಟು ನಿಗಾ ಇಡ್ತೀನಿ ಬಟ್ಟೆ ಬರೆ ಮನೆ ಡೆಕೊರೇಶನ್ ಎಲ್ಲಾದರಲ್ಲೂ. ಅಂಥಾದ್ದರಲ್ಲಿ ಇವರು ಹೋಗಿ ಹೀಗೆಲ್ಲಾ ಮಾಡಬೇಕಾ?” ಅಡಿಗೆ ಮನೆಯ ಕುರ್ಚಿಯಲ್ಲಿ ಕುಳಿತಿದ್ದಳು ಗೀತಾ.

“ಪಾಪ, ಅಮ್ಮಂಗೆ ಗೊತ್ತಾಗಲ್ಲ. ನಾನು ಹೇಳ್ತೀನಿ ಗೀತಾ” ಎಂದ ವಾಸು.
“ಹೌದು ನೀವು ಯಾವಾಗಲೂ ಹಾಗೇ, ಅಮ್ಮನ್ನ ವಹಿಸಿಕೊಂಡು ಮಾತಾಡ್ತೀರಾ. ಇಲ್ಲಿ ನನ್ನ ಪಾಡು ಏನಾಗಿದೆ ಅಂತ ನಿಮಗೆ ಹೇಗೆ ಗೊತ್ತಾಗ್ಬೇಕು! ಸರಿಯಾಗಿ ಶವರ್ ಕರ್ಟನ್ ಹಾಕ್ಕೊಳ್ಳಲ್ಲ. ದಿನಾ ಬಾತ್‌ರೂಮ್ ನೆಲ ಸಾರಿಸಬೇಕು ಇವರು ಸ್ನಾನ ಮಾಡಿದ ಮೇಲೆ. ಆರತಿಗೆ ಕಂಪ್ಯೂಟರ್‌ನಲ್ಲಿ ಹೋಮ್‌ವರ್ಕ್ ಮಾಡೋಕೆ ಬಿಡಲ್ಲ. ಹತ್ತಿರ ಕುಳಿತು ಏನೇನೋ ಮಾತಾಡಿ ಡಿಸ್ಟರ್ಬ್ ಮಾಡ್ತಾರೆ. ರವಿ ಅವರು ಮಾಡಿಕೊಟ್ಟ ತಿಂಡಿ ತಿನ್ನದೆ ಹೋದರೆ ಮುಖ ಒಂಥರಾ ಮಾಡ್ತಾರೆ.”ಎನ್ನುತ್ತಾ ತಲೆಯ ಮೇಲೆ ಕೈ ಹೊತ್ತು ಸುಸ್ತಾದವರಂತೆ ಕುಳಿತಳು ಗೀತಾ. ಮಕ್ಕಳು ಇದನ್ನೆಲ್ಲ ನೋಡುತ್ತಾ ನಿಂತಿದ್ದರು. ಅವರಿಗೆ ಏನೆನ್ನಿಸಿತೋ! ರವಿ ಅವಳನ್ನು ಸಮಾಧಾನ ಪಡಿಸಲೆಂಬಂತೆ ಹತ್ತಿರ ಮಂಡಿಯೂರಿ ಕುಳಿತು ಅವಳ ತೊಡೆಯ ಮೇಲೆ ತಲೆ ಇರಿಸಿದ. ಆರತಿ “ಡೋಂಟ್ ವರಿ ಮಾಮ್” ಎನ್ನುತ್ತಾ ಹಿಂದಿನಿಂದ ಬಂದು ಅವಳ ಕೊರಳ ಸುತ್ತ ತನ್ನ ತೋಳುಗಳನ್ನು ಸುತ್ತಿದಳು. ಪಕ್ಕದಲ್ಲಿ ಕುಳಿತಿದ್ದ ವಾಸು ಅವಳ ಕೈಗಳನ್ನು ಮೃದುವಾಗಿ ಅದುಮಿದ. ಗೋಡೆಯಿಂದಾಚೆ ತುಸು ದೂರದಲ್ಲಿ ನಿಂತಿದ್ದ ಸೀತಮ್ಮ ಯಾರ ದೃಷ್ಟಿಗೂ ಬೀಳಲಿಲ್ಲ.
ಹೌದು ಗಂಡ, ಹೆಂಡತಿ, ಮಕ್ಕಳು…..ಒಂದು ಸಂಸಾರ….ಒಂದು ಗುಂಪು. ಇಲ್ಲಿ ತಾನು ಪರಕೀಯಳು. ಅನಗತ್ಯವಾದ ನಿರುಪಯೋಗಿ ವಸ್ತು ಎನ್ನಿಸಿತು. ಸೀತಮ್ಮ ಹನಿಗೂಡಿದ ಕಣ್ಣುಗಳಿಂದ ಮಂಜಾದ ದೃಷ್ಟಿಯಲ್ಲಿ ತಡವರಿಸುತ್ತಾ ತಮ್ಮ ಕೋಣೆಯ ಕಡೆಗೆ ಹೆಜ್ಜೆ ಹಾಕಿದರು.

ಈಗ ಎರಡು ವಾರಗಳ ಕೆಳಗೆ ಗೀತಾಗೆ ಹುಶಾರಿರಲಿಲ್ಲ. ಜ್ವರ, ವಾಂತಿಯಿಂದ ಸೋತು ಹೋಗಿದ್ದಳು. ಆಗ ಸೀತಮ್ಮನವರೇ ಅಡಿಗೆಯ ಜವಾಬ್ದಾರಿ ವಹಿಸಿಕೊಂಡು ನಿಭಾಯಿಸಿದ್ದರು. ಹಾಸಿಗೆಯಲ್ಲಿ ಮಲಗಿದ್ದ ಗೀತಾ “ಅತ್ತೆ, ನೀವಿರೋ ಹೊತ್ತಿಗೆ ನಾನು ಈಗ ಮಲಗಿ ರೆಸ್ಟ್ ತಗೋಭೊದು. ಇಲ್ಲದಿದ್ದರೆ ಹುಶಾರಿಲ್ಲದಿದ್ದರೂ ನಾನೇ ಎದ್ದು ಎಲ್ಲ ಸಂಭಾಳಿಸಬೇಕಾಗುತ್ತಿತ್ತು.” ಎಂದಿದ್ದು ನೆನಪಾಯಿತು. ಗೀತಾಳ ಕಣ್ಣುಗಳಲ್ಲಿ ಕೃತಜ್ಞತೆ ತುಂಬಿದ್ದನ್ನು ಅವರೂ ಗಮನಿಸಿದ್ದರು. ತಾವೂ ಮುಂಚೆ ಖಾಯಿಲೆ ಗುಣವಾಗುವ ಮೊದಲೇ ಎದ್ದು ಮನೆಗೆಲಸ ಶುರು ಮಾಡುತ್ತಿದ್ದರಲ್ಲವೆ! ತಮಗಿಲ್ಲದ ಮಗಳ ಛಾಯೆಯನ್ನು ಗೀತಾಳ ಮುಖದಲ್ಲಿ ಕಂಡಿದ್ದರು ಆಗ! ಮೊಮ್ಮಕ್ಕಳೂ ಆಗ ತಮ್ಮೊಡನೆ ನಗುತ್ತಾ ಹರಕು ಮುರುಕು ಕನ್ನಡದಲ್ಲಿ ಮಾತಾಡಿದ್ದರು! ತನ್ನ ಅಗತ್ಯ ಇವರಿಗೆ ಇದೆ! ಎಂಬ ಭಾವದಲ್ಲಿ ಸೀತಮ್ಮನ ಮನಸ್ಸು ತೃಪ್ತಿಯನ್ನು ತಾಳಿತ್ತು. ಈಗ ಹೀಗೇಕೆ?

ತಮ್ಮ ದೀರ್ಘ ಜೀವನದಲ್ಲಿ ಮನುಷ್ಯನ ಸ್ವಭಾವ ಚಂಚಲ ಎಂಬ ಸತ್ಯವನ್ನಂತೂ ಮನಗಂಡಿದ್ದರು ಅವರು. ಕೋಣೆಯಲ್ಲಿ ಕುಳಿತು ತಮಗರಿವಿಲ್ಲದೆ ಸಾವಿತ್ರಿಯ ಕೈಯಲ್ಲಿ ಮನಸ್ಸಿನಲ್ಲೇ ಸಂಭಾಷಣೆ ನಡೆಸಿದರು ಸೀತಮ್ಮ. ಸುಖ ಅಂದರೆ ಏನು ಹೇಳು ಸಾವಿತ್ರಿ? ಈ ದೊಡ್ಡ ಬಂಗಲೆಯೆ? ಕಾರೇ? ಮೊಮ್ಮಕ್ಕಳೇ? ಸೊಸೆಯೆ? ಮಗನೇ? ಬಹುಶಃ ನಾನು ಮುಂದಿನ ಸಾರಿ ಭಾರತಕ್ಕೆ ಬಂದಾಗ ನೀನೂ ನಾನೂ ಕೂಡಿ ಕುಳಿತುಕೊಂಡು ಈ ವಿಷಯ ಚರ್ಚಿಸಬೇಕು. ನನಗನ್ನಿಸುತ್ತೆ – ಸುಖ ಅಂದರೆ ಪ್ರೀತಿ. ಆದರೂ ನಾವು ಯಾರನ್ನಾದರೂ ಉತ್ಕಟವಾಗಿ ಪ್ರೀತಿಸಿದಾಗ ಆ ಪ್ರೀತಿಯೂ ನಮ್ಮನ್ನು ನೋವಿಗೀಡು ಮಾಡುತ್ತದೆ ಅಲ್ಲವೆ? ಹಾಗಾದರೆ ಸುಖ ಅಂದರೆ ಏನು?…….

ಇತ್ತ ತನ್ನ ಆಯಾಸ, ಆಕ್ರೋಶವನ್ನೆಲ್ಲ ಕೂಗಾಡಿ ಚೆಲ್ಲಿದಮೇಲೆ ಗೀತಾ ತಣ್ಣಗಾಗಿದ್ದಳು. ಮಕ್ಕಳು ಮತ್ತೆ ಟಿವಿ ನೋಡಲು ಹೋಗಿದ್ದರು. ವಾಸು ಬೇರೇನೋ ಕೆಲಸದಲ್ಲಿದ್ದ. ಕೈಯಲ್ಲಿ ಒಂದು ಕಪ್ ಟೀ ಹಿಡಿದು ಕುಳಿತ ಅವಳ ಮನಸ್ಸು ಯೋಚಿಸುತ್ತಿತ್ತು. ತನಗೆ ಹುಶಾರಿಲ್ಲದಾಗ ಅತ್ತೆ ದೇವರಿಗೆ ಐದು ಡಾಲರುಗಳನ್ನು ಮುಡಿಪಾಗಿಟ್ಟು “ನನ್ನ ಸೊಸೆಯನ್ನು ಗುಣ ಮಾಡು, ದೇವರೆ” ಎಂದು ಬೇಡಿಕೊಂಡಿದ್ದನ್ನು ಅವಳು ಕಂಡಿದ್ದಳು. ತಿಳಿ ಸಾರು, ಗಂಜಿ ಎಲ್ಲವನ್ನೂ ತಾನಿದ್ದಲ್ಲಿಗೇ ತಂದು ಕೊಟ್ಟಿದ್ದರು. ಈ ಊರಿನಲ್ಲಿ ಒಂದು ಎಳನೀರು ಕೂಡಾ ಸಿಕ್ಕಲ್ವೇನೋ? ಈ ಖಾಯಿಲೆಗೆ ಎಳನೀರಿಗಿಂತ ಒಳ್ಳೆಯ ಪಥ್ಯ ಇನ್ನಿಲ್ಲ. ಎಂದು ಅಲವತ್ತುಕೊಂಡಿದ್ದರು. ಈಗ ಯೋಚಿಸಿದಾಗ ಅವರು ಮಾಡಿದ ಪ್ರತಿಯೊಂದು ಕೆಲಸವೂ ಅವರು ಬೆಳೆದು, ಬಾಳಿದ ಸಂಸ್ಕೃತಿಯ ಸಂಕೇತವಾಗಿತ್ತು! ಈ ಹೊಸ ದೇಶದಲ್ಲಿ ಇದ್ದಕ್ಕಿದ್ದಂತೆ ಬದಲಾಯಿಸಲು ಸಾಧ್ಯವೆ? ಸಾಧುವೆ? ಹೊಸ ದೇಶಕ್ಕೆ ಹೊಂದಿಕೊಳ್ಳುವ ತವಕದಲ್ಲಿ ನಮ್ಮ ಭಾರತೀಯತೆಯನ್ನು ಕೈ ಬಿಡುತ್ತಿರುವ ನಾವು ಇವರಿಂದ ಕಲಿಯಬೇಕಾದ್ದು ಬಹಳವಿದೆ. ಈಗಲಾದರೂ ಈ ಹಿರಿಯ ಜೀವ ನಮ್ಮ ಮಕ್ಕಳಿಗೆ ತಮ್ಮ ಅಮೆರಿಕನ್ನತೆಗೂ ತಮ್ಮ ಪೂರ್ವಿಕರ ಭಾರತೀಯತೆಗೂ ನಡುವಣ ಕೊಂಡಿಯಾಗಿ ನಿಲ್ಲುವವರಲ್ಲವೆ?

ಬಾಗಿಲ ಬಳಿ ಏನೋ ಸದ್ದಾದಂತಾಗಿ ಸೀತಮ್ಮ ತಿರುಗಿ ನೋಡಿದರು. “ಅತ್ತೆ, ಊಟಕ್ಕೆ ಬರ್ತೀರಾ?” ಎಂದಳು ಗೀತಾ. ಅವಳ ದನಿ ಈಗ ಮೃದುವಾಗಿತ್ತು. ಮುಖದಲ್ಲಿ ನಗುವಿತ್ತು. “ಓಹೋ ಅಮ್ಮನವರ ಕೋಪ ಇಳಿದಿದೆ!” ಎಂದು ಮನಸ್ಸಿನಲ್ಲೇ ಅಂದುಕೊಂಡರು ಸೀತಮ್ಮ. ತಾವೂ ಮುಗುಳ್ನಗುತ್ತಾ ಮಹಡಿಯಿಂದ ಇಳಿದು ಬಂದರು.

ರಾತ್ರಿ ಮಲಗಿದಾಗ ಸೀತಮ್ಮನ ಮನಃ ಪಟಲದಲ್ಲಿ ಮತ್ತೆ ಮತ್ತೆ ಆ ದೃಶ್ಯ ಮರುಕಳಿಸುತ್ತಿತ್ತು….ಗಂಡ, ಹೆಂಡತಿ, ಮಕ್ಕಳು…ಒಂದು ಸಂಸಾರ, ಒಟ್ಟುಗೂಡಿದ ಗುಂಪು. ಇಲ್ಲಿ ತಾನು ಪರಕೀಯಳು. ತನ್ನ ಅಗತ್ಯ ಯಾರಿಗೂ ಇಲ್ಲ! ಸುಖ ಅಂದರೆ ತನ್ನ ಅಗತ್ಯ ಇನ್ನೊಬ್ಬರಿಗಿದ್ದು ಆ ಸೇವೆಯಲ್ಲಿ ತೃಪ್ತಿಯನ್ನು ಕಾಣುವುದಿರಬಹುದೆ? ಎಂದುಕೊಳ್ಳುತ್ತಾ ಸೀತಮ್ಮ ನಿದ್ದೆ ಹೋದರು.
*****
ಆಧಾರ: Citra Divakaruni avara `Mrs. Dutta writes a letter’ ಇಂಗ್ಲಿಷ್ ಕಥೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.