ಸೂರ್ಯನ ಕುದುರೆ

ಹದಿನಾಲ್ಕು ವರ್ಷಗಳ ನಂತರ ಪೇಟೆಯಲ್ಲಿ ನನಗೆ ಪ್ರತ್ಯಕ್ಷನಾದ ಹಡೆ ವೆಂಕಟ- ಅವನ ನಿಜವಾದ ಹೆಸರು ವೆಂಕಟಕೃಷ್ಣ ಜೋಯಿಸ-ನನ್ನು ಕುರಿತು ಇದನ್ನು ಬರೆಯುತ್ತಿರುವೆ. ಊರು ಬಿಟ್ಟು ಹೋಗಿದ್ದ ನನ್ನ ಗುರುತು ಅವನಿಗೆ ಹತ್ತದಿದ್ದರೂ ಅವನ್ನನು ನಾನು ಮರೆಯುವುದು ಸಾದ್ಯವೆ? ಭ್ರೂಮಧ್ಯ ಕುಂಕುಮವಿಟ್ಟು, ಕಮಾನು ಕ್ರಾಪು ಬಿಟ್ಟು, ಅಲ್ಲಿ ಇಲ್ಲಿ ಉದುರಿದ ಹಲ್ಲುಗಳಿಂದಾಗಿ ಆರತಿಯಂತಿದ್ದ ದವಡೆಗಳನ್ನು ತೆರೆದು ತೋರಿಸುತ್ತ ನಗುವ ಬಾಯಿಯ ನನ್ನ ಅಬಾಲ್ಯದ ಸಖ-ಇಂಥ ವೆಂಕಟನನ್ನು? ಖಾದಿ ಚೀಲ ಕಂಕುಳಲ್ಲಿತ್ತು. ತರಕಾರಿಯಂಗಡಿಯನ್ನು ಅದೊಂದು ಬೊಂಬೆಯಂಗಡಿ ಎಂಬಂತೆ ಬಾಯಿಬಿಟ್ಟು ನೊಡುತ್ತ ನಿಂತಿದ್ದ. ಬೇಯುತ್ತಿದ್ದ ಸೆಖೆಯಲ್ಲಿ ನದಿಯನ್ನು ಕಂಡವನಂತೆ ಅವನೆದುರು ನಿಂತೆ. ತೊಂಡೆಕಾಯಿರಾಶಿಯಿಂದ ಬಾಳೆಗೊನೆಗಳಿಗೆ , ಬಾಳೆಗೊನೆಗಳಿಂದ ಅಲಸಂಡೆಗೆ. ಅಲ್ಲಿಂದ ಹಳೆಯ ವರ್ಷದ ಬಣ್ಣದ ಸೌತೆಕಾಯಿಗೆ. ಮತ್ತೆ ತನ್ನನ್ನು ಯಾವ ಅಪೇಕ್ಷೆಯೂ ಇಲ್ಲದಂತೆ ಎದುರಿನ ಉಡಾಳ ದನಗಳನ್ನು ನೋಡುವಂತೆಯೇ ನೋಡುತ್ತಿದ್ದ ಒಂಟಿ ಕಣ್ಣಿನ ಅಂಗಡಿ ಕೊಂಕಣಿಗೆ ದೃಷ್ಟಿಯನ್ನು ವರ್ಗಾಯಿಸುತ್ತ ನಿಂತಿದ್ದ ವೆಂಕಟ ನನ್ನನ್ನು ನೋಡಿದ. ಆದರೆ- ಸುಮ್ಮನೇ ನೋಡಿದ. ಆಸುಪಾಸಿನಲ್ಲಿ ಕಂಕುಳಲ್ಲಿ ಕೊಡೆಯಿಲ್ಲದವರು ಅವನು ಮತ್ತು ನಾನು ಇಬ್ಬರೇ. ತಿಂಗಳು ಜುಲೈ ಆದರೂ ಮಳೆ ಬರುವುದಿಲ್ಲವೆಂದು ತನಗೆ ಗೊತ್ತೆಂದು ಜೋಯಿಸನಾಗಿ ಅವನು ಇದರಿಂದ ಉಲಿಯುವಂತಿತ್ತು. ಆಕಾಶದಲ್ಲಿ ಮೋಡವಿಲ್ಲದಿದ್ದರೂ ಎಲ್ಲರ ಬಗಲುಗಳಲ್ಲೂ ಇದ್ದ ಕೊಡೆಗಳು ಅವರ ಆತಂಕ ಮತ್ತು ಭರವಸೆಗಳನ್ನು ಸಾರುತಿದ್ದವು. ಹಳ್ಳಿಯನ್ನು ಎಂದೋ ಬಿಟ್ಟು ಪರದೇಶಗಳಲ್ಲಿದ್ದು ಈಗ ಮೈಸೂರಿನ ಪೇಟೆಮಂಗನಾದ ನಾನು ಕೊಡೆಯಿಲ್ಲದೇ ಊರಿಗೆ ಬಂದಿರುವುದು ನನ್ನ ಗರಿಯಾದ ಪ್ಯಾಂಟಿನಿಂದ ಯಾರಿಗೂ ಆಶ್ಚರ್ಯದ ವಿಷಯವಾಗಬೇಕಿರಲಿಲ್ಲ. ಆದರೆ ಪಂಚೆಯನ್ನು ಮೇಲೆತ್ತಿ ಕಟ್ಟಿಕೊಳ್ಳದೆ, ಕೊಡೆಯೂ ಇಲ್ಲದೆ ಬಗಲಲ್ಲಿ ಬ್ಯಾಗನ್ನು ಅವುಚಿ ಕನ್ನಡ ಜಿಲ್ಲೆಯಿಂದಲೋ, ಶಿವಮೊಗ್ಗದಿಂದಲೋ ಪೇಟೆಗೆ ಸರಬರಾಜಾದ ತರಕಾರಿಯನ್ನು ಅದೆನೂ ತಿನ್ನಲಿರುವ ಪದಾರ್ಥವಲ್ಲವೆಂಬಂತೆ ನೋಡುತ್ತ ನಿಂತ ವೆಂಕಟ ತನ್ನಷ್ಟಕ್ಕೆ ತಾನು ಮುಗುಳ್ನಕ್ಕದ್ದನ್ನು ಕಂಡಾಗ ಆಕಾಶದ ವಿದ್ಯಮಾನಗಳ ಜ್ಞಾನ ತನಗೊಬ್ಬನಿಗೇ ಮಾತ್ರ ತಿಳಿದಿದೆಯೆಂದು ಸೂಚಿಸುವಂತೆ ತೋರಿದ. ಹಡೆ ವೆಂಕಟನನ್ನು ಹಠಾತ್ತನೆ ಕಂಡ ಪುಳಕ ಅವನು ಗುರುತಿಸಿಲಿಲ್ಲವೆಂಬ ಬೇಸರದಲ್ಲಿ ಇಂಗಿತೆ? ಮಳೆಯಿಲ್ಲದಲ್ಲಿ ನೆನಪುಗಳು ಹೇಗೆ ಉಳಿದಾವು?

ನನಗಿಂತ ಐದಾರು ವರ್ಷಗಳಾದರೂ ಹಿರಿಯ ಈ ವೆಂಕಟ, ಆದರೂ ಬಾಲ್ಯದಲ್ಲು ನನ್ನ ಸಕತ್ ಸ್ನೇಹಿತ. ಮೈ ಮನಸ್ಸುಗಳನ್ನು ಎಷ್ಟೋ ಬರಿ ಸಡಲಿಸಿದವ. ಥಟ್ಟನೇ ಜ್ಞಾಪಕಕ್ಕೆ ಬರುವುದು ಇದು: ಹೊಳೆಯೆಂದರೆ ನನಗೆ ಭಯ. ನಾನು ಎಂಟೋ ಒಂಬತ್ತೋ ವರ್ಷದವನಿರಬೇಕು. ಆಮ್ಮನಿಗೆ ಗೊತ್ತಿಲ್ಲದಂತೆ ಪುಸಲಾಯಿಸಿ ಹೊಳೆಗೆ ಕರೆದುಕೊಂಡು ಹೋದ. ಒದರುತ್ತಿದ್ದ ಕಿರುಚುತ್ತಿದ್ದ ನನ್ನನ್ನು ಅವುಚಿಕೊಂಡು ಬಂಡೆಯಿಂದ ಮಡುವಿಗೆ ಧುಮಿಕಿದ. ಕೆಮ್ಮಿ, ನೀರು ಕುಡಿದು, ಕಂಗಾಲಾಗಿ ಮತ್ತೆ ಅವನ ಭದ್ರಹಿಡಿತದಲ್ಲಿ ನೀರಲ್ಲಿ ಹಗುರಾಗಿ ಮೆಲಿಂದ ಒಳಕ್ಕೆ, ಒಳಗಿನಿಂದ ಮೇಲಕ್ಕೆ ಚಲಿಸುತ್ತ ನೀರಲ್ಲಿ ಕಣ್ಣು ಬಿಡುವುದನ್ನು ಕಲಿತು ಕಣ್ಣು ಬಿಟ್ಟು ನನ್ನ ಅಂಗೈ ಇಷ್ಟಗಲವಾದದ್ದನ್ನು ಕಂಡು ಸುಖಿಸಿ ಪುಟ್ಟ ಪುಟ್ಟ ಮೀನುಗಳಿಂದ ತೊಡೆ ಸಂದಿಯಲ್ಲಿ ಕಚಗುಳಿ ಇಡಿಸಿಕೊಂಡು ನಾನು ನೀರಿನ ಸಖನಾದೆ. ಕತ್ತು, ಬಾಯಿ, ಮೂಗು, ಕಣ್ಣು, ನೆತ್ತಿ ಹೀಗೆ ಹಂತ ಹಂತವಾಗಿ ಆಳಗಳಲ್ಲಿ ಇಳಿದೆ. ಬೆರಳೊತ್ತಿದರ್ರೆ ಸಾಕು ನನ್ನನು ಚಂಡಿನಂತೆ ಪುಟಿಸುವ ನೀರು, ತಂಪಿನ ಮಡುವಿನಿಂದ ಮೇಲೆದ್ದು ಬಂದು ಬಿಸಿ ಮರಳಲ್ಲಿ ಮಲಗಿದ್ದವನನ್ನು ಮೈಮೇಲೆ ಬಿದ್ದು ಒಣಗಿಸುವ ಸೂರ್ಯ.. ಈಗ ಊರಿನ ಹೊಳೆ ಬತ್ತಿರಬೇಕು. ಹೀಗೆಲ್ಲ ತಿಳಿಯುತ್ತ ನಿಂತ ನನ್ನ ಗುರುತು ವೆಂಕಟನಿಗೆ ಹತ್ತದಿದ್ದರೂ ನೀರಿಗೆ ಹಾರುವ ಮುನ್ನ ತುದಿಗಾಲಲ್ಲಿ ನಿಂತು ಕೈ‌ಒಡ್ಡುವನಂತೆ ಏನೋ ಎಂದೆ.
“ಬಣ್ಣದ ಸೌತೆ ಅದೆಷ್ಟು ದುಬಾರಿಯಾಯ್ತು ಮಾರಾಯರೆ”
ನಾನು ಹಿಂದೆಗೆಯಲಿಲ್ಲ. ಅವನ ಕಣ್ಣುಗಳಲ್ಲಿ ನೆಡುತ್ತ ನುಗ್ಗುವುದಕ್ಕೆ ಪ್ರಯತ್ನಿಸಿದೆ. “ನನ್ನ ಕಂಕುಳಲ್ಲಿರೋದು ನಿಮಗೆ ಹುಂಜದಂತೆ ಕಂಡಿತೆ?” ಎಂದು ಉದುರಿದ ಹಲ್ಲುಗಳ ಬಾಯಿ ತೆರೆದ.
” ಹೌದೊ ಬುಡಾನ್ಸಾಬಿ. ನಿನ್ನ ಹುಂಜದ ಮಂಡೆ ಅದ್ಯಾಕೆ ಜೊತು ಬಿದ್ದಿದೆಯೋ ಬ್ರಾಂಬ್ರ ಖಾಲಿ ಜೋಳಿಗೆ ಹಾಗೆ?”
“ನನ್ನ ಹುಂಜ ಕಾಳಗದಲ್ಲಿ ಮೆಟ್ಟಿ ಇದನ್ನು ಸಾಯಿಸಿತಯ್ಯ” ಕಾಲುಗಳಿಂದ ಕೋಳಿಯನ್ನೆತ್ತಿ ಹಿಡಿಯುವಂತೆ ವೆಂಕಟ ಬ್ಯಾಗನ್ನು ನನಗೊಡ್ಡಿದ.
“ಎಷ್ಟೊಂದು ಹಲ್ಲುಗಳನ್ನು ಕಳಕೊಂಡು, ಬಿಳಿದಾದ ಕುರುಚಲು ಗಡ್ಡವನ್ನು ಕೆತ್ತಿಸಿಕೊಳದೆ ಈ ಹುಣ್ಣಿಮೆಯ, ಈ ಹಗಲು, ಆ ಕಂಕುಳಲ್ಲಿ, ಈ ಕೋಳಿಯನ್ನವಚಿ, ಈ ಪರಸ್ಥಳದಲ್ಲಿ ಇಂತು ಓಡಾಡುವ ಈ ದುರವಸ್ಥೆ ನಿನಗೆ ಹೇಗೆ ಒದಗಿತು ರಾಜಪುತ್ರ.?
ನಾವಿಬ್ಬರೂ ಕೂಡಿ ನೋಡುತ್ತಿದ್ದ ಯಕ್ಷಗಾನದ ಧಾಟಿಯ ನನ್ನ ಮಾತಿಗೆ ವೆಂಕಟ ಪಂಚೆಯನ್ನು ಮೇಲೆತ್ತಿ ಕಟ್ಟಿ ಚಂಗನೆ ಹಿಂದೆ ನೆಗೆದ. ಬಾಳೆಹಣ್ಣಿನ ಸಿಪ್ಪೆ ತಿನ್ನುತ್ತಿದ್ದ ಮುದಿ ದನದ ಕೊಂಬಿಗೆ ಅವನ ಕುಂಡೆ ತಾಕಿತು. ಅಂಡುಜ್ಜಿಕೊಳ್ಳುತ್ತ “ಅನಂತು ಅಲ್ಲವೇನೋ?” ಎಂದ. ಹಿಂದಕ್ಕೆ ತಿರುಗಿ ಬಾಳೆಹಣ್ಣಿನ ಸಿಪ್ಪೆಗಾಗಿ ಚರಂಡಿಯಲ್ಲಿ ಮೂತಿ ಹಾಕಿದ ದನಕ್ಕೆ ಹೇಳಿದ:
“ತಾಯಿ ಮಹಾಲಕ್ಶ್ಮಿ. ಈ ಅನಂತು ನನಗೆ ಅಮಲ್ದಾರನಿರಬಹುದೆಂಬ ಸಂಶಯ ಮೂಡುವಂತೆ ಯಾಕೆ ಮಾಡಿದಿ? ಅಥವಾ ನೀನು ಯಾವಾಗಲೂ ಕಂಗೆಡಿಸುತ್ತಿರುವ ಮಾಯಾವಿಯೋ ?”
ಚರಂಡಿಯಿಂದ ದನ ಬಾಳೆಹಣ್ಣಿನ ಸಿಪ್ಪೆಯನ್ನು ಎತ್ತಿಕೊಂಡಿತು: ಕಣ್ಣುಗಳನ್ನು ಅರ್ಧ ಮುಚ್ಚಿ ಬಾಯನ್ನು ಓರೆ ಮಾಡುತ್ತ ಭಕ್ಷಿಸಿತು. ಒಂಟಿ ಕಣ್ಣಿನ ಅಂಗಡಿ ಕೊಂಕಣಿ ನನಗೆ “ಎಷ್ಟು ತೊಂಡೆಕಾಯಿ ಕೊಡಲಿ?” ಎಂದ. ವೆಂಕಟನ ಬ್ಯಾಗನ್ನು ಇಸಕೊಂಡು ಅದರಲ್ಲಿ ತೊಂಡೆ, ಸೌತೆ, ಅಳಸಂಡೆ, ಆಲೂಗಡ್ಡೆ, ನೀರುಳ್ಳಿಗಳನ್ನು ಕಂಠ ಪೂರ್ತಿ ತುಂಬಿಸಿದೆ. ವೆಂಕಟನಿಗೆ “ನಿಮ್ಮನೇಗೆ ನಡಿ ಹೋಗೋಣ” ಎಂದೆ.
“ಬೆಳದಿಂಗಳು ಕಾಣಿಸ್ತೀನಿ. ಮನೆಗೆ ಬಾ. ಬಿಸಿ ಬಿಸಿ ನೀರು ಹೇಗೂ ಇರುತ್ತೆ.”
ಪೇಟೆಯಿಂದ ಹಬ್ಬಕ್ಕೆ ಸಾಮಾನು ಕೊಂಡು ಕಾರ್ಯೋನ್ಮುಖನೊಬ್ಬ ಅವಸರದಿಂದ ನಡೆಯುವಂತೆ ವೆಂಕಟ ಜನರನ್ನು ಕೈಯಿಂದ ಮೃದುವಾಗಿ ತಳ್ಳುತ್ತ ನಡೆದ
“ಹಾಗಾದರೆ ಭೃಂಗಾಮಲಕ ತಗೋತೀನಿ”
ಹೊಗೆಸೊಪ್ಪಿನ ಘಾಟು ಹೊಡೆಯುವ ಪ್ರಭುಗಳ ಅಂಗಡಿಯ ಕಲ್ಲಿನ ಮೆಟ್ಟಿಲುಗಳನ್ನು ಹತ್ತಿದೆ.
“ಏನು ಇಷ್ಟು ಅಪರೂಪವಾಗಿ ಊರಿಗೆ ಬಂದ್ದದ್ದು ಮೂರ್ತಿಯವರೇ? ನಿಮ್ಮ ತಂದೆಯವರ ಕಾಲದಿಂದ ನಡೆದು ಬಂದಂತೆ ನಿಮ್ಮ ತಮ್ಮಂದಿರೂ ಇಲ್ಲೇ ಲೆಕ್ಕ ಇಟ್ಟಿರೋದು. ಬನ್ನಿ ಬನ್ನಿ ಬಾಯಾರಿಕೆಗೆ ತರಸಲ?”
ಕಿವಿಯಲ್ಲಿ ಪೆನ್ಸಿಲ್ ಸಿಕ್ಕಿಸಿ ಕೂತ ಪ್ರಭು ಡಬ್ಬಿಗಳ ನಡುವೆ ನನಗೊಂದು ಸ್ಟೂಲು ತೋರಿಸಿದರು.
“ಊರಿಗೆ ಬರ್ತಿರ್ತ್ತೀನಿ. ಆದರೆ ಪೇಟೆಗೆ ಬಂದದ್ದು ಇಲ್ಲ ಅಷ್ಟೆ , ಎಲ್ಲ ಸೌಖ್ಯವೆ?” ಎಂದೆ. ಹೊಗೆಸೊಪ್ಪಿನ ಘಾಟಿನ ಜೊತೆ ತಕ್ಕಡಿಯಲ್ಲಿ ತೂಗುತಿದ್ದ ಬೆಲ್ಲದವಾಸನೆ ಬೆರೆತುಕೊಂಡಿತು.
“ಏನು ಸೌಖ್ಯ? ಮಳೆ ಇಲ್ಲ, ಬಾಕಿ ವಸೂಲಾಗುವಂತಿಲ್ಲ. ದೊಡ್ಡ ಮಗ ಹೋದ ವರ್ಷ ಮೂರು ದಿನಗಳ ಜ್ವರಕ್ಕೆ ತೀರಿಕೊಂಡ. ವ್ಯಾಪಾರದಲ್ಲಿ ಪೈಸೆ ನಫೆ ಇಲ್ಲ. ಅಪ್ಪ ಕಲಿಸಿಕೊಟ್ಟ ಕಸುಬಲ್ಲ ಎಂದು ಕೂತಿರೋದು ಅಷ್ಟೆ. ನನ್ನ ಮಕ್ಕಳು ನಿಮ್ಮಂತೆ ಇಂಗ್ಲೆಂಡಿಗೆ ಹೋಗಿ ಓದುವಷ್ಟು ಪುಣ್ಯ ಮಾಡಿರಲಿಲ್ಲ. ಹೊಗೆಸೊಪ್ಪು ಹುರುಳಿ ವ್ಯಾಪಾರಾನೇ ಸಾಕೂಂತ ಕೂತರು. ನೋಡಿ ಅವ ಎರಡೇನೇಯವ, ಅವ ಮೂರನೆಯವ, ಅವ ನಾಲ್ಕನೇಯವ, ಇನ್ನಿಬ್ಬರು ಜವಳಿ ಅಂಗಡಿ ತೆರೆದಿದ್ದಾರೆ. ಮೂರು ಹೆಣ್ಣು ಮಕ್ಕಳನ್ನೂ ಲಾಯರ್‌ಗಳಿಗೆ ಕೊಟ್ಟು ಮದುವೆ ಮಾಡಿದೆ. ನನ್ನ ದೊಡ್ಡ ಮಗನ ಮಕ್ಕಳು ಹೈಸ್ಕೂಲಿಗೆ ಹೋಗ್ತಾವೆ ನಿಮಗೆಷ್ಟು ಮಕ್ಕಳು – ಈಗ ಎಲ್ಲಿರೋದು…” ನೊಣಗಳನ್ನು ಓಡಿಸುತ್ತ ಬೆಲ್ಲದ ಅಚ್ಚನ್ನು ಕತ್ತರಿಸಿ ತೆಗೆದು ತೂಕ ಸರಿದೂಗಿಸುತ್ತ ಮಾತಾಡಿದರು. ಹೀಗೇ, ಎಂದೊ ನಡೆದಿತ್ತು, ಇಲ್ಲೆ ಎಂದು ನನಗನ್ನಿಸಿತು.
“ಮೈಸೂರಿನಲ್ಲಿ. ಎರಡು ಮಕ್ಕಳು, ಒಂದು ಗಂಡು ಒಂದು ಹೆಣ್ಣು. ಭೃಂಗಾಮಲಕ ತೈಲ ಇದೆಯೇ?”
“ಏನು ವೆಂಕಟ ಜೋಯಿಸರ ಅಭ್ಯಂಜನವೋ? ಅವರು ಜೈಲಲ್ಲಿದ್ದಾಗ ಕೆ.ಟಿ. ಭಾಷ್ಯಂಗೆ ಎಣ್ಣೆ ಹಚ್ಚಿ ಎರೆದವರಲ್ಲವೇ? ಎಷ್ಟೊಂದು ಮಂತ್ರಿಗಳು ಗೊತ್ತು ಅವರಿಗೆ. ಎಲ್ಲ ಹಿಂದಿನ ಕಾಲದವರೇ. ಅವರಿಂದ ತಲೆ ತಿಕ್ಕಿಸಿಕೊಳ್ಳದವರೇ ಈ ಕರ್ನಾಟಕದಲ್ಲಿ ಇಲ್ಲ. ಆದರೂನೂ ಎರಡು ವರ್ಷದಿಂದ ಅವರಿಗೆ ಯಾಕೆ ಪಿಂಚಣಿ ಸಿಕ್ಕಿಲ್ಲವೋ. ಹೌದ ಜೋಯಿಸ್ರೆ-ಮೂರ್ತಿಗಳ ಹತ್ತಿರ ಹೇಳ್ಸಿ ನೋಡೋಣ. ನಿಮಗೆ ಪಿಂಚಣಿ ಸಿಕ್ಕರೆ ನಮ್ಮ ಹಳೇ ಬಾಕಿಯಾದರೋ ಅಷ್ಟು ಬಂದೀತೆಂದು ನನಗೆ ಆಸೆ. ಒಟ್ಟಿನಲ್ಲಿ ಜೋಯಿಸ್ರು ನನ್ನ ಹಾಗೇ ನತದೃಷ್ಟ ಮನುಷ್ಯ. ಮಗ ಇದಾನೆ ಹೆಸರಿಗೆ. ಶುದ್ದ ಪುಂಡ. ಓದಲಿಲ್ಲ ಪಾಸಾಗಲಿಲ್ಲ. ಹೋಟ್ಲು ಚಟ ಬೇರೆ. ಏನೋ ನಾವಿದ್ದ ಕಾಲ ಒಳ್ಳೇದು. ಈಗ ಎಲ್ಲ ಯತ್ವಾಸಿಯಾಗ್ಬಿಡ್ತು.
ವೆಂಕಟ ಬಾಯನ್ನು ಅಗಲವಾಗಿ ತೆರೆದು ಮುಗುಳ್ನಗುತ್ತ ಚೀಲವನ್ನು ತನ್ನ ಡೊಂಕು ಕಾಲಿಗೆ ಒರಗಿಸಿ ಕೆಳಗಿಟ್ಟ. ಜೇಬಿನಿಂದ ನಸ್ಯ ತೆಗೆದು ಏರಿಸಿದ. ಧೂಳು ತುಂಬಿದ ಬಾಟ್ಲಿಯನ್ನು ತಂದ ಹುಡುಗನ ಕೈಯಿಂದ ಅದನ್ನು ಇಸಕೊಂಡು “ಬಿ.ವಿ. ಪಂಡಿತರದ್ದು ತಾನೆ? ಅದೆ ಬಲು ತಂಪು” ಎಂದ.
“ಹೌದು ಜೋಯಿಸರೇ, ಹೊಸಾ ಮಾಲು. ಇಲ್ಲಿ ಹಳಬನೆಂದರೆ ನಾನು ಮಾತ್ರ” ಎಂದು ಪ್ರಭು ನನ್ನಿಂದ ದುಡ್ಡು ಪಡೆದು “ಇದು ಇವತ್ತಿನ ಮೊದಲನೇ ನಗದು ವ್ಯಾಪಾರ ಹೇಗಿದೆ ನೋಡಿ ನಮ್ಮ ಸ್ಥಿತಿ” ಎಂದರು.
ವೆಂಕಟ ಡಬ್ಬಿಗಳ ಮೇಲಿಂದ ಕೈ‌ಒಡ್ಡಿ ತಕ್ಕಡಿ ಮೆಲಿದ್ದ ಪ್ರಭುಗಳ ಕೈಯನ್ನು ಹಿಡಿದ, ಧ್ಯಾನಿಸಿದ.
‘ಪ್ರಭುಗಳೆ, ನೋಡಿದ ಕೂಡಲೆ ಅಂದುಕೊಂಡೆ. ನಿಮಗೆ ಉಷ್ಣವಾಗಿದೆ. ಅಭ್ಯಂಜನವಾಗಬೇಕು. ನಾಳೆ ಬಂದು ತಲೆಗಷ್ಟು ಎಣ್ಣೆ ಹಾಕುವೆ ಆಯಿತ?
ತನ್ನ ಕೈಯನ್ನು ಸೊಪ್ಪಿನ ಕಟ್ಟಿನಂತೆ ವೆಂಕಟನ ಕೈಯಲ್ಲಿಟ್ಟ ಪ್ರಭು ಆಯಾಸದಿಂದ ನಿಟ್ಟುಸಿರಿಟ್ಟು ಹೇಳಿದರು.
“ಈ ಜೋಯಿಸರು ತಿಕ್ಕದೇ ಉಳಿದ ತಲೆ ಈ ಊರಲ್ಲಿ ಉಂಟೆಂದು ತಿಳಿದಿರಾ ಮೂರ್ತಿಗಳೆ? ಇಂಥ ಮನುಷ್ಯನಿಗೆ ಅದೆಂತ ಮಗ ಹೇಗೆ ಹುಟ್ಟಿದನೋ ಪರಮಾತ್ಮನಿಗೇ ಗೊತ್ತು. ಮೊನ್ನೆ ಕಾಲೆಜು ಪ್ರಿನ್ಸಿಪಾಲರನ್ನೆ ರಾತ್ರೆ ಅಡ್ಡಕಟ್ಟಿ ಹೊಡೆದು ಹಣ ಕಿತ್ತುಕೊಂಡನಂತಲ್ಲ ಮಾರಾಯರೇ”
ವೆಂಕಟ ತನ್ನ ಹಣೆಯ ಮೇಲೊಂದು ಗೀಟನ್ನು ಎಳೆದುಕೊಂಡು ನಕ್ಕ. ಗೀಟನ್ನು ಪ್ರತ್ಯಕ್ಷಗೊಲಿಸಲೆಂಬಂತೆ ಹುಬ್ಬನ್ನೆತ್ತಿದ. ಪ್ರಭುಗಳು ಹುಬ್ಬೆತ್ತಿ ಗೀಟು ಬರಿಸಿಕೊಂಡು ಕೈಗೆ ಹತ್ತಿದ ಬೆಲ್ಲ ಒರೆಸಿಕೊಂಡು ಹೇಳಿದರು;
“ಜೈಲಾಗುತ್ತ ಜೊಯಿಸರೆ?”
ಹುಬ್ಬನ್ನು ಕೆಳಗಿಳಿಸಿ ಚೀಲವನ್ನೆತ್ತಿ ಹೊರಡಲು ಉದ್ಯುಕ್ತನಾಗಿ ವೆಂಕಟ ಹೇಳಿದ:
“ಅವನ ಹಣೇಲಿ ಬರದದ್ದು ಆಗಲೇಬೇಕಲ್ಲ. ಜಾಮೀನಿನ ಬಿಡಿಸಿಕೊಂಡು ಬಂದಿದೀನಿ. ಇನ್‌ಸ್ಪೆಕ್ಟರಿಗೊಂದು ಒಳ್ಳೆ ಅಭ್ಯಂಜನ ಮಾಡಿಸಿದೆ. ಪ್ರಿನ್ಸಿಪಾಲರಿಗೊಂದು ಮಾಡಿಸಿದೆ. ಇನ್ನು ಜಡ್ಜಿಗೊಂದು ಮಾಡಿಸೊದು..”
ವೆಂಕಟಕನ ನಗುವಿನಿಂದ ನನಗೆ ಮುಜುಗರವಾಯ್ತು. ಆದರೆ ಪ್ರಭುವಿಗೆ ಮುಜುಗರವಾಗಿರಲಿಲ್ಲ. ಹಿಂದಿನಂತೆಯೇ ಈ ವೆಂಕಟ ಇಡೀ ಊರಿನ ಬಾಯಿಗೆ ಬಿದ್ದವನು. ನಾಚಿಕೆಯಿಲ್ಲದವನು.
ಕೆರೆಕೊಪ್ಪದ ಹಾಡಿಯಲ್ಲಿ ನಡೆದೆವು. ಕಾಲುಹಾದಿ ಮಾತ್ರ ಹದಿನಾಲ್ಕು ವರ್ಷಗಳಾದರು ಬದಲಾದಂತೆ ಕಾಣಲಿಲ್ಲ. ವೆಂಕಟನನ್ನು ಮನಸಾರೆ ಬಯ್ಯತೊಡಗಿದೆ. ಮೊದಲಿಂದ ಹೀಗೆ ಹಡೆ. ಕ್ವಿಟ್ ಇಂಡಿಯ ಚಳುವಳೀಲಿ ನಮ್ಮನ್ನೆಲ್ಲ ಈ ಭೃಗು ಹೇಗೆ ಸಿಕ್ಕಿಸಿದ್ದ. “ಪೋಸ್ಟ್‌ಬಾಕ್ಸನ್ನ ಲಪಟಾಯಿಸೊಣ ಬರ್ರೋ” ಎಂದು ಅರ್ಧ ರಾತ್ರೆ ಹೈಸ್ಕೂಲ್ ಹುಡುಗರಾಗಿದ್ದ ನಮ್ಮನ್ನು ಎಬ್ಬಿಸಿಕೊಂಡು ಹೋದ. ಪೊಸ್ಟ್ ಡಬ್ಬಿಯನ್ನು ಅಮಾಸೆ ಕತ್ತಲಲ್ಲಿ ಕದ್ದುಕೊಂಡು ಹೊಗಿ ಹೊಳೆಯ ಮರಳಲ್ಲಿ ಒಂದಾಳ ಹುಗಿದು ಬಂದೆವು. ಮಾರನೇ ದಿನ ಊರಲ್ಲೆಲ್ಲ ಗುಲ್ಲೊ ಗುಲ್ಲು. ನಾವು ಮಾತ್ರ ಇದು ನಮ್ಮ ಕೆಲಸವಲ್ಲ ಎನ್ನುವಂತೆ ನಿತ್ಯದಂತೆ ಪ್ರಭಾತ ಫೇರಿ ಹೋದೆವು. ಹಾಡಿದೆವು: ಕಮಲಾದೇವಿಯವರೇ/ ಕಸ್ತೋರಿಬಾಯಿಯವರೇ/ ನಾವ್ ಚಳುವಳಿ ಮಡುವವರೆ-’ ಇತ್ಯಾದಿ. ಹೆಂಡದಂಗಡಿ ಎದುರು ಮಲಗಿದೆವು. ಸ್ಕೂಲ್‌ಗೆ ಹೋಗಿ ಅಡ್ಡಕಟ್ಟಿ ಮಲಗಿದೆವು. ವೆಂಕಟ ನಮ್ಮ ಲೀಡರ್. ಅವನ ಬಾಯಿ ಸುಮ್ಮನಿರಬೇಕಲ್ಲ? ಯಾರೋ ದಾರೀಲಿ ನಿಲಿಸಿದನಂತೆ. ‘ಏನು ಎತ್ತ, ನಾನು ಪರಸ್ಥಳದವ. ಒಳ್ಳೆ ಕಾಫಿ ಎಲ್ಲಿ ಸಿಗುತ್ತೆ ಅಂತ ಕೇಳಿದನಂತೆ. ಶೀನಪ್ಪಯ್ಯನ ಹೋಟೆಲಿಗೆ ಅವನ ಕರಕೊಂಡು ಹೋದ- ಈ ಪರೋಪಕಾರಿ ವೆಂಕಟ. ಅವ ಸಿ. ಐ.ಯಂತ ಈ ಷುನಶ್ಯೇಫನಿಗೆ ತಿಳಿಯದು. “ಏನ್ರೋ ನೀವೆಂತ ಹುಡುಗರೊ, ಶಿಮೊಗ್ಗದಲ್ಲಿ ಗೊತ್ತ ಸ್ಟೂಡೆಂಟ್ಸ್ ಏನ್ಮಾಡ್ತಿದಾರೆ ಅಂತ”. ಇತ್ಯಾದಿ ಆ ಹಲಾಲುಖೋರ ಸಿ.ಐ.ಡಿ. ಬಿಸಿ ಬಿಸಿ ಕಾಫಿ ಹೀರ್ತಾ ಕಿಚಾಯಿಸಿದ. ವೆಂಕಟ ನಾಲಿಗೆ ಸಡಿಲಬಿಟ್ಟ. ‘ಬಿಡ್ರಿ, ಬಿಡ್ರಿ, ಶೀಮೊಗ್ಗದ ಸ್ಟೂಡೆಂಟ್ಸ್‌ಗಿಂತ ನಾವೇನು ಕಮ್ಮಿಯಿಲ್ಲ’ ಎಂದ. ‘ ಸರ್ಕಾರಾನ್ನ ಸೀದ ಮುಟ್ಟೋ ದೈರ್ಯ ನಿಮಗೆಲ್ಲಿ ಬಂತಪ್ಪ’ ಎಂದು ಸಿ.ಐ.ಡಿ. ಹಂಗಿಸಿದ. ಆಗ ವೆಂಕಟ ನಮ್ಮ ರಾತ್ರೆಯ ಸಾಹಸವನ್ನ ಕೊಚ್ಚಿ ಕೊಚ್ಚಿ ಇಳಿಸಿದ . ಪರಿಣಾಮ; ಪೊಲೀಸರು ನಮ್ಮನ್ನು ವೆಂಕಟನನ್ನು ಹೊಳೆ ಡಂಡೆಗೆ ಮೆರವಣಿಗೇಲಿ ಕರೆದುಕೊಂಡು ಹೊದರು.
ಆಮೇಲೆ ಊರಿಗೆ ಊರೆ ದಂಡೆ ಮೆಲೆ ಸೇರ್ತ? ಸರಿ- ನಮ್ಮ ಕೈಲಿ ಗುದ್ದಲಿ ಕೊಟ್ಟು ಪೋಲೀಸರು ‘ಮುಂಡೆ ಮಕ್ಕಳ್ರ ನೀವೇ ಅಗೀರಿ’ ಎಂದರು. ನಾವು ಬಿಸಿಲಿನಲ್ಲಿ ಮರಳನ್ನು ಅಗೆದೂ, ಅಗೆದೂ ಬಚ್ಚಿಟ್ಟಿದ್ದ ಪೋಸ್ಟ್ ಡಬ್ಬನ ಹೊರಕ್ಕೆ ತೆಗೆದೆವು; ಎಲ್ಲ ಜನರ ಕಣ್ಣೆದುರು ಅದನ್ನ ಮೆರವಣಿಗೇಲಿ ಹೊತ್ಕೊಂಡು ಹೋಗಿ ಪೊಸ್ಟ್ ಆಫೀಸಿನಲ್ಲಿ ಇಟ್ಟೆವು. ಅಷ್ಟಕ್ಕೇ ಮುಗೀತ? ಪೊಲೀಸರು ನಮ್ಮನು ಲಾರೀಲಿ ಕೋರಿಸು ಸಕ್ರೇಬೈಲಿನ ಕಾಡಿನಲ್ಲಿ ಬಿಟ್ಟುಬಂದ್ರು. ನಾವು ಹರಿ ಹರೀಂತ ನಡೆದೂ ನಡೆದೂ ದಾರೀ ಮೇಲೆ ಸಿಕ್ಕ ಅಮಟೆ ಗಿಮಟೆ ತಿಂದುಕೊಂಡು ಮಾರನೆ ದಿನ ಊರು ಸೇರಿದ್ವಿ.

ನಾನಿವನ್ನೆಲ್ಲ ಕೋಪದಿಂದ ನೆನಪಿಸಲು ಪ್ರಯತ್ನಿಸಿದರೋ ನಗು ಬರಲು ತೊಡಗಿಡ್ದರಿಂದ ವೆಂಕಟ ಚೀಲವನ್ನು ಕೆಳಗಿಟ್ಟು ಕೈ ತಟ್ಟಿ ಕುಣಿದು ನಕ್ಕ. ‘ನೀನೊಬ್ಬ ಹಲ್ಕ ಚಿರಂಜೀವಿ ಕಣಯ್ಯ’ ಎಂದೆ. ಫೇಲ್ ಆಗಿ ನನ್ನ ಕ್ಲಾಸ್ಮೇಟೂ ಅದವ. ಆಗಲೇ ಅವನಿಗೊಂದು ಜಗಳಗಂಟಿ ಹೆಂಡತಿಯು ಇತ್ತು. ಹಳ್ಳಿಯಿಂದ ಸ್ಕೂಲಿಗೆ ಬರುವಾಗ ಆರತಿಗೋ ಅಕ್ಷತೆಗೋ ಅವಳನ್ನೂ ಕರೆದುಕೊಂಡು ಬರಬೇಕಾದ ಪ್ರಮೇಯ ಒದಗಿದರೆ ಪೇಟೆ ಬೀದೀಲಿ ಇವನು ಜೋರಾಗಿ ಮುಂದೆಮುಂದೆ ಅವಳು ಇನ್ಯಾರೋ ಎನ್ನೋ ಥರ; ಅವಳು ಮಾತ್ರ ಗುಡುಗುಡು ಓಡ್ತ ರೀ ರೀ ಎನ್ನುತ್ತ ಇವನ ಹಿಂದೆ. ಎಲ್ಲೆಸ್ ಓದ್ತಿರೋ ನಮಗೆಲ್ಲರಿಗೂ ಹೀಗಾಗಿ ಗೊತ್ತು. ಇವನಿಗೊಂದು ಹೆಂಡತೀನೂ ಇದೆ ಅಂತ. ‘ಏ ಕುಂಟೆಕೋಣ’ ಅಂತ ನಮ್ಮ ಲೆಕ್ಕದ ಮೇಷ್ಟ್ರು ಬೆತ್ತದಲ್ಲಿ ಅವನಿಗೆ ಒಂದು ಸಾರಿ ಹೊಡೆಯೋಕ್ಕೆ ಷುರು ಮಾಡಿದಾಗ ;‘ಸಾರ್ ಸಾರ್ ನನಗೆ ಮದುವೆ ಆಗಿದೆ, ಹೊಡೀಬೇಡ್ರಿ’ ಎಂದು ಮುಖ ಬುಕ್ಕು ಮಾಡಿಹೇಳಿ ಮೇಷ್ಟ್ರನ್ನೂ ಎಷ್ಟು ನಗಿಸಿದ್ದ ಎಂದರೆ, ಅವರು ಸುತ್ತಿದ್ದ ಪೇಟವನ್ನ ಹುಷಾರಾಗಿ ಮೇಜಿನ ಮೇಲಿಟ್ಟು ನಗುತ್ತಾ ಮುಖ ಒರೆಸಿಕೊಂಡು ಮುಖದ ಮೇಲೆಲ್ಲ ಸೀಮೆಸುಣ್ಣ ಬಳಿದುಕೊಂಡಿದ್ದರು. ಕಪ್ಪುಮೂತಿಯ ಮೇಷ್ಟ್ರು ಹೀಗೆ ಅಕರಾಳ ವಿಕರಾಳವಾದದ್ದು ಕಂಡು ನಾವು ನಗುತ್ತಿರಲು ವೆಂಕಟ ಡಸ್ಟರ್‌ನಿಂದ ಅವರ ಮುಖ ಒರೆಸಿಹೋಗಿ ನಮ್ಮನ್ನೆಲ್ಲ ಮತ್ತಷ್ಟು ನಗಿಸಿ ತಿರುಗಿ ಮೇಷ್ಟ್ರು ಹೊಡೆಯಲು ಬಂಡಾಗ ಮೇಜಿನಡಿ ನುಸುಳಿದ್ದ. “ಬಾಸುಂಡೆ ಬಂದ್ರೆ ಹೆಂಡತಿಗೆ ಗೊತ್ತಾಗತ್ತೆ-ಬೇಡ್ರೀ” ಎಂದು ಕೈಮುಗಿದ. ಸದಾಸೊಂಟದ ನೋವಿನ ಮೇಷ್ಟ್ರು ಬಗ್ಗಲಾರದೆ ಅವನ ಅಂಡಿಗೆ ಒದ್ದು. ‘ಏಳೋ ಹಡಬೇ ಮುಂಡೇ ಗಂಡ’ ಎಂದಿದ್ದರು. ಇಂಥ ವೆಂಕಟ ನನ್ನನ್ನು ಸಿಟ್ಟಾಗುವುದು ದುಸ್ಸಾಧ್ಯವೆಂಬಂತೆ ನಗಿಸುತ್ತಿದ್ದರೂ ತನ್ನ ಸ್ವಂತ ಮಗನನ್ನು ಜವಾಬ್ದಾರಿಯ ಅರಿವಿಲ್ಲದಂತೆ ಬೆಳೆಸಿದೆನೆಂದು ನಾನವನನ್ನು ಸೀರಿಯಸ್ಸಾಗಿ ‘ನೀನೊಬ್ಬ ಪಲಾಯನವಾದಿ. ಭೋಳ್ಳೇಶಂಕರ, ಬೆನ್ನೆಲುಬಿಲ್ಲದ ನಾಮರ್ಧ ಇತ್ಯಾದಿ ಬಯ್ಯಲು ಪ್ರಯತ್ನಿಸಿದೆ.
“ಯಾರು ಹಠದಲ್ಲಿ ಸಾದಿಸಿದ್ದಾದರೂ ಏನಪ್ಪ? ಬಾ ಅಭ್ಯಂಜನ ಮಾಡಿಸಿ ನಿನ್ನ ಸೊಕ್ಕನ್ನೆಲ್ಲ ಇಳಿಸ್ತಿನಿ.’
ವೆಂಕಟ ದಾಪುಗಾಲಲ್ಲಿ ನಡೆಯಲು ಶುರುಮಾಡಿದ-ಬಾ ಮಾಡಿಸ್ತೀನಿ ಎನ್ನುವ ಹುಡುಗನ ಥರ .
*
*
*
‘ನಿಲ್ಲೋ’ ಎಂದೆ. ನಿಜವಾಗಿಯೂ ಅವನಿಗೆ ನಾನು ಹೇಳುವುದಿತ್ತು; ನಿನ್ನನ್ನು ನಾನು ಅಲಕ್ಷಿಸಿದೆ ಮಾರಾಯ. ಅಗೀಗ ಊರಿಗೆ ಬಂದಾಗಲೂ ನಿನ್ನನ್ನು ನಾನು ನೊಡಲಿಲ್ಲ. ಇವತ್ತು ಅಕಸ್ಮಾತ್ ಸಿಕ್ಕಿದ್ದರಿಂದ ನನ್ನನ್ನು ಹೀಗೆ ಬಿಚ್ಚುತ್ತಿರಿವಿ. ಆದರೂ ಈ ಆಟ ಕ್ಷಣಿಕವೆಂದು ನಾನು ಬಲ್ಲೆ. ನಾನು ಒಣಗುತ್ತಿರುವೆ. ನಿನ್ನ ಈ ಹಡೆಯೂ ಅಭ್ಯಾಸಗತವಿರಬಹುದು. ನನ್ನಲ್ಲಿ ಅರ್ಥವಾಗದೊಂದು ಕಳವಳ ಹುಟ್ಟಿಕೊಂಡಿದೆ. ಏನೂ ಬೇಕೆನಿಸುವುದಿಲ್ಲ. ಈಚೆಗೆ ಬರೆಯುವುದಕ್ಕೂ ಏನೂ ಹೊಳೆಯುವುದಿಲ್ಲ, ಬಾಯಿ ಬಿಟ್ಟರೆ ದೊಡ್ಡ ದೊಡ್ಡ ಮಾತುಗಳು ಉರುಳುತ್ತವೆ. ಎದುರಿನ ತಲೆಗಳು ತೂಗುತ್ತವೆ. ಈ ನಾಟಕ ಮುಗಿದದ್ದೇ ಭಣ ಭಣ ಎನ್ನಿಸುತಿದೆ. ನಾನು ಏನ್ನೂ ಯಾಕೆ ಕಾಣುತ್ತಿಲ್ಲ? ನಿನಗೆ ಕಾಣುತ್ತದೋ, ಅಥವಾ ಕಂಡವನಂತೆ ನಟಿಸುತ್ತಿದೆಯೋ, ನಿನ್ನ ಈ ನಿರಹಂಕಾರ ಪೋಜಿನದು ಅಲ್ಲವೆ. ಅಥವಾ ನಾನು ಬಾಲ್ಯದಲ್ಲಿ ಕಂಡುಂಡ ನಿನ್ನನು ಬರೆಯದೇ ಏನೇನೋ ದೊಡ್ಡದನ್ನೆಲ್ಲ ಬರೆಯಹೋಗಿ ನಾನಿಂತ ಖಾಲಿ ಡಬ್ಬಿಯಾಗಿರುವುದೆ?
ಕೇದಿಗೆಯ ವಾಸನೆ ಎಂದು ವೆಂಕಟ ಸುತ್ತ ಮುತ್ತ ಮೂಗರಳಿಸಿ ಗಾಳಿಯನ್ನು ಮೂಸಿದ- ಕತೆಯಲ್ಲಿ ರಾಕ್ಷಸರು ‘ನರಮನುಷ್ಯರ ವಾಸನೆ’ ಎನ್ನುವಂತೆ. ನಾನಿನ್ನೂ ಬಾಯಿಬಿಡದೆ ಅವನನ್ನು ನಿಲ್ಲಿಸಿಕೊಂಡಿದ್ದೆ. ಚೀಲವನ್ನೆಲ್ಲ ಇಟ್ಟು “ನನ್ನ ಮಗಳು ಗಂಗಾಗೆ ಕೇದಿಗೆಯ ಜಡೆಯೆಂದರೆ ಇಷ್ಟ ಕಣೋ” ಎಂದು ಪೊದೆಗಳ ನಡುವೆ ಕಣ್ಮರೆಯಾದ. ಇದು ಕೇದಿಗೆಯ ಕಾಲವೇ ನನಗೆ ತಿಳಿಯದು. ಸ್ವಲ್ಪ ಹೊತ್ತಾದ ಮೇಲೆ ಬರಿಗೈಯಲ್ಲಿ ಅವನು ಕಾಣಿಸಿಕೊಂಡ. ‘ಎಲ್ಲಿ ಮುಚ್ಚಿಟ್ಟುಕೊಂಡಿದ್ದೆಯೊ ದರಿದ್ರದ್ದು’ ಎಂದು ಶಪಿಸಿದ. ‘ನಡಿ’ ಎಂದ.
ಎದುರಿಗೊಬ್ಬರು ಸಿಕ್ಕಿ ನಿಲ್ಲಿಸಿದರು. ಕಿವಿಯಲ್ಲಿ ಹರಳಿನ ಒಂಟಿ ಹಾಕಿಕೊಂಡು ತಲೆಯ ಮೇಲೊಂದು ವಸ್ತದ ಗಂಟು ಹೊತ್ತವರು. ಕವಳ ಉಗಿಯುತ್ತ ಹೇಳಿದರು:
“ ಏನೋ ಜೊಯಿಸ, ನಿನ್ನ ಮನೆ ಮೇಲಾಗೆ ಬಂದೆ ಮಾರಾಯ. ನಿನ್ನ ಹೆಂಡತಿ ನನ್ನ ನಿಲ್ಲಿಸಿ ನಿನಗೆ ಮಹಾಮಸ್ತಕಾಭಿಷೇಕ ಮಾಡಿದಳೊ. ಬೆಳಿಗ್ಗೆಯಿಂದ ನೀನು ನಾಪತ್ತೆಯಂತೆ. ಪೇಟೆಗೆಂದು ಹೊದವರು ಬಂದೇ ಇಲ್ಲ ಎಂದು ಶುರುವಾಯ್ತು ಸಹಸ್ರನಾಮ ಮಾರಾಯ…”
ತಲೆಯ ಮೇಲಿಂದ ಅವರ ಹೊರೆಯನ್ನು ಇಳಿಸಿಕೊಂಡು ವೆಂಕಟ ಹೇಳಿದ:
“ ಹಿತ್ತಲಲಿ ಸಿಕ್ಕಳೋ? ಮುಂಬಾಗಿಲಲ್ಲೋ ನನ್ನ ಮಡದಿ ನಿಮ್ಮನ್ನು ಎದುರ್‌ಗೊಂಡ ಕ್ಷೇತ್ರಜ್ಞಾನ ಮಾಡಿಸುವಿರಾ ನಾರದ ಮುನಿಗಳೇ?”
“ ಯಾಕೆ. ಹಿತ್ತಲಲ್ಲಿ” ಅವರು ಕವಳವನ್ನು ಬಾಯಿಯಿಂದ ಪೂರ್ಣ ಉಗಿದು ಪಾಣಿಪಂಚೆಯಿಂದ ಬಾಯೊರೆಸಿಕೊಂಡು ನಗಲು ಪ್ರಾರಂಭಿಸಿದರು- ಅಲ್ಲಿ ಇಲ್ಲಿ ಉದುರಿದ ಕೆಂಪು ಹಲ್ಲುಗಳನ್ನು ತೊರಿಸುತ್ತ.
“ಹಾಗಾದರೆ ಹಿತ್ತಲಲಿ ಬೆಳೆದ ಅಗತೆ ಸೊಪ್ಪಿನ ಪಲ್ಯ ಮಾಡಿರುತ್ತಾಳೆ. ನನ್ನ ಹೆಂಡತಿ ದನದ ಮುರವನ್ನೂ ರುಚಿಯನ್ನಿಸುವಂತೆ ಬೇಯಿಸಬಲ್ಲ ಪುಣ್ಯಾತ್ಮೆ. ಈ ಶುಭದ ನುಡಿಗಾಗಿ ನಾವು ಕೃತಜ್ಞರು ಮುನಿವರ್ಯ.”
“ ಆದರೆ ಅವಳ ಬಾಯಿ ಮಾತ್ರ ಮಾರಾಯ.” ಎನ್ನುತ್ತ ಮುಂದೆ ಹೊದವರು ತಿರುಗಿ ನಿಂತು ಗಟ್ಟಿಯಾಗಿ ಹೇಳಿದರು.
“ ಅಲ್ಲೋ ಜೊಯಿಸ. ನಿನ್ನ ಮಗ ಸುಬ್ಬ ಅದ್ಯಾಕೆ ಹಾಗೆ ಬುಸಬುಸ ಅಂತ ಇರ್ತಾನೊ. ಮಾತಾಡ್ಸಿದ್ರೆ‘ನಿಮ್ಮ ಕೆಲಸ ನೀವು ಮಾಡಿಕೊಳ್ಳಿ ಹೊಗ್ರಿ ಹೊಗ್ರಿ’ ಎಂದ. ‘ಆಗ್ಲಯ್ಯ ಉರಿಮೂತಿ ಸುಬ್ಬ’ ಎಂದು ನಾಲಿಗೆ ತುದೀಲಿ ಬಂದಿದ್ದನ್ನು ನುಂಗಿಕೊಂಡು ನನಗ್ಯಾಕೆ ಬೇರವರ ಉಸಾಬರಿ ಅಂತ ನಡೆದೆ. ಊರು ಮನೆ ಅಂತ ನಾವು ಅನ್ಕೊಂಡರೆ ನಿನ್ನ ಮಗ ಮಾತ್ರವಲ್ಲ ಕಾಲೇಜಿಗೆ ಹೋದವುಗಳ ಹಣೇಬರಾನೆ ಇಷ್ಟು ಕಣಯ್ಯ.”
ತಲೆ ಹೊರೆಯನ್ನು ಬ್ಯಾಲನ್ಸ್ ಮಾಡಿಕೊಂಡು ಕೈ ಬೀಸಿ ನಾರದರು ನಡೆದುಬಿಟ್ಟರು. ವೆಂಕಟ ‘ಹಾ ಸರಿ’ ಎಂದು ನನ್ನನ್ನು ಬಂದು ಸೇರಿಕೊಂಡ. ಏನೂ ಆಗದವರ ಥರ ನಡೆಯತೊಡಗಿದ. ಅವನದು, ಹಂಸಪಾದ. ಅರೇ ಆಸಾಮಿ ಎಂದು ಕೊಂಡೆ. ಅವನ ವೈವಾಟೆಲ್ಲ ಕಲಸುಮೇಲೊಗರವೆಂದು ನನಗೆ ಖಾತ್ರಿಯಾಗಿತ್ತು. ಆದರೂ ಎಗ್ಗಿಲ್ಲದಂತೆ ಇರುತ್ತಾನಲ್ಲ- ಇವನೇನು ಪಿರ್ಕಿಯೊ ಅಥವಾ ಆಷಾಢಭೂತಿಯೋ ಅಥವಾ ಕುರುಚಲು ಗಡ್ಡದ ಅವಧೂತನೊ?
“ಎಷ್ಟು ಮಕ್ಕಳಯ್ಯ?” ಎಂದೆ.
“ ನಾಲ್ಕು. ಮೂರನೆಯವನೇ ಮಗರಾಯ. ಕೇಳಬೇಡ- ಹೆಣ್ಣು ಮಕ್ಕಳಿಗಿನ್ನೂ ಮದುವೆಯಾಗಿಲ್ಲ. ಹಾಗಾಗಿ ಮೊದಲೇ ಚಾಮುಂಡಿಯಾಗಿದ್ದ ಹೆಂಡತಿ ಈಗ ಕಾಳಿಯಾಗಿದ್ದಾಳೆ. ನಾನು ಹೇಗೂ ಅಮ್ಮನವರ ಭಕ್ತನಲ್ಲವೆ? ಮಹಾಕಾಳಿಯ ಬೈಗುಳವೂ ಪ್ರಸಾದವೆಂದು ತಿಳಿದು ಇಹಲೊಕದ ವಾಸನೆಯಿಂದ ಇನ್ನೂ ಪುಳಕಿತನಾಗಿರುವೆ.”
ಯಕ್ಷಗಾನದ ಧಾಟಿಯಲ್ಲಿ ವೆಂಕಟ ಕೊಟ್ಟ ಉತ್ತರದಿಂದ ನನಗೆ ಕಿರಿಕಿರಿಯೇ ಆಯಿತು. ಯಾಕೆ ಇಂಥವನು ಮಕ್ಕಳನ್ನು ಹುಟ್ಟಿಸೊದು? ದಾರಿಹೊಕರೆಲ್ಲರ ಬಾಯಿಗೆ ಬೀಳುವಂತೆ ಬದುಕೊದು? ಮಾರ್ಕ್ಸ್ ಹೇಳುವ ವಿಲೇಜ್ ಈಡಿಯಸಿಯ ಇಂಥವರಿಂದಾಗಿಯೇ ಈ ದೇಶ ಏನೂ ಬದಲಾಗದೆ, ಇತ್ಯಾದಿ ಇತ್ಯಾದಿ ಅಂದಿಕೊಂಡೆ. ಜಡತ್ವದ ಪರಮ ಸ್ಥಿತಿಯಲ್ಲಿ ಬದುಕುತ್ತಿರುವವರನ್ನೆಲ್ಲ ಸಂಕೇತಿಸುವಂತೆ ವೆಂಕಟ ನನಗೆ ಕಂಡ. ಈ ದೇಶ ಎಂದೂ ಬದಲಾಗುವುದೇ ಇಲ್ಲವೇನೊ ಎಂದು ಈಚೀಚೆಗೆ ಗೆಳೆಯರ ಜೊತೆ ಮಾತಾಡುವಾಗ ಕಳವಳ ಪಡುವ ನಾನು ನನ್ನ ಧೊರಣೆಯನ್ನು ಆದಷ್ಟು ಸೀರಿಯಸ್ಸಾಗಿ ವೆಂಕಟನಲ್ಲಿ ನಿವೇದಿಸಿಕೊಳ್ಳಲು ಪ್ರಯತ್ನಿಸಿದೆ. ಅವನೇನು ಕಿವಿಗೊಡುವ ಆಸಾಮಿಯೆ?
“ಮಳೆಯೇ ಬಂದಿಲ್ಲೊ, ಮುಂದಿನ ಡಿಸೆಂಬರಿನಲ್ಲಿ ಮಾವಿಗೆ ಹೂವು ಕಚ್ಚಿ ಕೊಳ್ಳುವುದೋ ನೋಡಬೇಕೋ, ಹೊದವರ್ಷ ಒಂದು ಮಿಡಿಯೂ ಹತ್ತಲಿಲ್ಲೋ.”
“ನೊಡು, ಆ ಮರದ ತುಂಬ ಗಿಣಿಗಳು ಹಿಂಡುಕಟ್ಟಿ ಬರುವುದುಂಟೊ.”
“ಅದು ನವಿಲಿನ ಗುಡ್ಡವೊ, ಅಲ್ಲೊಂದು ಗುಹೆಯುಂಟೊ. ಮಕ್ಕಳಿಗೆ ಮದುವೆಯಾದದ್ದೇ ನಾನಲ್ಲಿ ಹೊಗಿ ಇದ್ದು ಬಿಡುವೆನೊ.”
“ಎಷ್ಟು ಚೆಂದ ಅಲ್ಲಿಂದ ಸುತ್ತ ನೊಡಲಿಕ್ಕೆ ಅಂತೀಯ? ಪೆನ್‌ಶನ್‌ನನ್ನು ಹೆಂಡತಿಗೆ ಕೊಟ್ಟು ಬಿಡುವೆ- ಆಮೇಲೆ ಅಲ್ಲಿದ್ದು ಬಿಡುವೆನೊ.”
ಇತ್ಯಾದಿ ವಟಗುಟ್ಟುತ್ತಲೇ ನನ್ನನ್ನು ಕೇಳಿಸಿಕೊಂಡ. ಈ ಬಗೆಯ ವೆಂಕಟನ ಪ್ರತಿಕ್ರಿಯೆಗಳ ನಡುವೆ ನಾನು:
“ ರಾಜಕೀಯವೆಂದರೆ ಏನು.
ಜೀವಂತಿಕೆಯ ಲಕ್ಷಣ ಬದಲಾವಣೆ.
ಯಾವ ದಿಕ್ಕಿನಲ್ಲಿ ಬದಲಾವಣೆ? ಉಳ್ಳವರ ದಿಕ್ಕಲ್ಲೋ? ಇರದವರ ದಿಕ್ಕಲ್ಲೋ? ಇದನ್ನು ಮಾಡಲು ಯಾಕೆ ಹಠದ ಅಗತ್ಯವುಂಟು?
ನಮ್ಮ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ಪ್ರಕೃತಿಯನ್ನೂ, ಉಳಿದ ಜನರನ್ನೂ ಬದಲಾಯಿಸಬೇಕೆಂಬ ಹಠವೇ ಎಲ್ಲ ರಾಜಕೀಯದ ಮೂಲದಲ್ಲಿರುವುದು. ವಿಜ್ಞಾನದ ಮೂಲದಲ್ಲಿರುವುದು.
ಧಾರ್ಮಿಕ ಕ್ರಿಯೆಗಳ ಮೂಲದಲ್ಲೂ ಇರುವುದು. ಅದೂ ಕೂಡ ರಾಜಕಾರಣವೇ- ಶಾಶ್ವತದಲ್ಲಿ ನಡೆಯುವ ರಾಜಕಾರಣ…
ನಿನ್ನ ಹೆಂಡತಿ ನಿನ್ನ ಮಕ್ಕಳು ನೀನು ಯಾವುದನ್ನು ಸರಿಯೆಂದು ತಿಳಿದಿದ್ದೆಯೋ ಆ ದಿಕ್ಕಲ್ಲಿ ನಡೆಯಬೇಕೆಂದು ನೀನು ಇಷ್ಟಪಡುವುದಿಲ್ಲವೆ? ಇರುವುದು ಇದ್ದಂತೆಯೇ ಇರಲಿ ಎಂಬುದೂ ಕೂಡ ರಾಜಕೀಯವೇ.
ಯಾಕೆ ಗೊತ್ತ? ಬದಲಾಗೋದು ಪ್ರಕೃತಿಯ ಲಕ್ಷಣ. ಅದನ್ನ ಕೆಲವರು ತಮ್ಮ ಹಿತಕ್ಕಾಗಿ ತಡೆಯೋಕೆ ಪ್ರಯತ್ನಿಸುತ್ತಾರೆ. ಅದು ಹೆಚ್ಚು ಕಾಲ ನಡೆಯಲ್ಲ.
ಎಲ್ಲ ಬಿರಿಯುತ್ತೆ. ಸಿಡಿಯುತ್ತೆ. ಯಾವುದೂ ಇರುವಂತೇನೂ ಇರಲ್ಲ. ಆದ್ದರಿಂದಲೇನೇ ಒಂದು ನಮಗೆ ಸರೀಂತ ಕಂಡ ಸುವ್ಯವಸ್ಥೆಗಾಗಿ ಪ್ರಯತ್ನಿಸ್ತಾನೆ ಇರಬೇಕು.”
ಹೀಗೆಲ್ಲ ಹೇಳುತ್ತ ನಡೆದೆ.
“ ಎಲ್ಲ ಅವರವರ ಜಾಯಮಾನ.”
ಹೀಗೆಂದು ವೆಂಕಟ ಚೀಲವನ್ನು ಕೆಳಗಿಟ್ಟು ಕೈಮುಗಿದು ಆಕಾಶ ನೋಡ್ತ.
“ನಿಮ್ಮಂಥ ಧೀರರಿಗೆ ನಮೋನ್ನಮಃ. ಈ ಹಡೆ ವೆಂಕಟನನ್ನ ನಿಮ್ಮ ಪೈಕಿಯವರು ಕ್ಷಮಿಸಿಬಿಡಲಿ. ಧೀರರಿಗೆ ತಲೆ ಬಿಸಿಯಾದಾಗ ನನ್ನಂತವನ ಅಭ್ಯಂಜನದ ಸೇವೆ ಬೇಕೆ ಬೇಕಲ್ಲ.” ಎಂದು ಬಾಗಿ ತನ್ನೆದುರು ತೆಲೆಯಿದೆಯೆಂದು ನಟಿಸುತ್ತ ಅದನ್ನು ರಪರಪನೆ ತಿಕ್ಕಿದ.
“ಥತ್ ನಿನ್ನ” ಎಂದೆ. ನನ್ನ ಕೋಪ ನಿಜವೆಂದಿಕೊಂಡು ವೆಂಕಟ,
‘ಅಲ್ಲೋ ಅನಂತು. ಕೈ ಹಿಡಿದ ಹೆಂಡತೀನ್ನೇ ಬದಲಾಯಿಸಕ್ಕಾಗಲ್ಲ. ಇನ್ನು ಪ್ರಪಂಚಾನ್ನ ಬದಲಾಯಿಸೋದು ಸಾಧ್ಯವೇನೋ? ನಾನು ಈಗ ಇದೀನಿ. ಮುಂದಿನ ಕ್ಷಣ ಇರ್ತೀನೀಂತ ಏನು ಗ್ಯಾರಂಟಿ?” ಎಂದು ಚೀಲವನ್ನು ಎತ್ತಿಕೊಂಡು ಹೊರಟ. ಮೂರು ಅಡಿಕೆ ಮರಗಳನ್ನು ಇಟ್ಟು ಮಾಡಿದ ಸಾರವನ್ನು ನಾವು ದಾಟುವುದಿತ್ತು. “ಜೋಕೆ, ನೀನು ಮುಂದೆ ಹೋಗು” ಎಂದು ವೆಂಕಟ ನಿಂತ ನಾನು ಅಂಜುತ್ತಂಜುತ್ತ ಸಾರದ ಮೇಲೆ ನಡೆದು ಬೇಲಿ ಹಾಯ್ದು ವೆಂಕಟನಿಗೆ ಕಾದೆ. ಮಾ‌ಅತಿನಲ್ಲಿ ವೆಂಕಟ ಅಂತೂ ನನ್ನ ಕೈಗೆ ಸಿಕ್ಕನಲ್ಲ ಎಂದು ಹೇಳಿದೆ:
“ವೆಂಕಟ ನಾವು ಮುಂದಿನ ಕ್ಷಣ ಸಾಯಬಹುದು, ಹಾಗೇನೆ ಸಾಯ್ದೇನೆ ಇರಬಹುದು. ನಾವು ಸತ್ತರೂ ಬೇರೆಯವರು ಇರ್ತಾರಲ್ಲ.”
ಒತ್ತಾಯ ಮಾಡಿ ವೆಂಕಟನ ಕೈಯಿಂದ ಚೀಲ ಇಸಕೊಂಡೆ. ಗದ್ದೆಯಂಚಲ್ಲಿ ನಡೆಯುತ್ತ ವೆಂಕಟ ಹೇಳಿದ:
“ ಸಾರ ದಾಟೋಕೆ ಮುಂಚೆ ನಾವಿದ್ದದ್ದು ಒಂದು ಪಂಜುರ್ಲಿ ವನವೋ ಅನಂತು. ಆ ಪಂಜುರ್ಲಿಗೆ ಮೂಗಿನ ಮೇಲೆ ಕೋಪವಂತೆ! ಬಹಳ ಹಿಂದೆ ಒಂದು ಸಾರಿ ನಾನು ನನ್ನಷ್ಟಕ್ಕೇ ಹಾಡಿಕೋತ ಆ ವನದಲ್ಲಿ ಬರ್ತಿದ್ದೆ. ಸಾಯಂಕಾಲದ ಹೊತ್ತು. ಅದೇನೋ ಪರಪರಾಂತ ದರಗು ಮೆಟ್ಟಿದ ಶಬ್ಧವಾಯ್ತು. ಬೆನ್ನ ಹಿಂದೆ. ಏನೂಂತ ತಿರುಗಿ ನೋಡಿದೆ. ಮಾರಾಯ, ಒಂದು ಹುಲಿ. ಕಣ್ಣುಕತ್ತಲೆ ಕಟ್ಟಿ ಕುಸಿದೇ ಬಿಟ್ಟೆ. ಎಚ್ಚರವಾದಾಗ ನೋಡ್ತೀನಿ; ಪಂಚೇಲಿ ನಾನು ಒಂದ ಮಾಡಿಕೊಂಡುಬಿಟ್ಟಿದೀನಿ.”
“ಯಾಕಿದನ್ನ ನನಗೀಗ ಹೇಳ್ತಿರೋದು?”
“ಛೆ. ಛೆ, ಯಾಕಿಲ್ಲ. ನಾನೊಬ್ಬ ದೊಡ್ಡ ಪುಸಕಾನು ಪುಕ್ಕ ಕಣೋ ಅನಂತು. ಪಂಜುರ್ಲಿ ಮೈಮೇಲೆ ಬಂದಂಗೆ ನೀನು ಮಾತಾಡ್ದಾಗ ನನಗೇನು ಹೇಳಬೇಕು ಗೊತ್ತಾಗಲ್ಲ. ನನ್ನ ಹೆಂಡತೀಗೆ ಹೇಳ್ತೀನಿ; ‘ನೋಡೇ ನಾನು ಇರೋದೆ ಹೀಗೆ. ಏನು ಮಾಡ್ಲಿ ಹೇಳು.’ ಅವಳ ಬಾಯಿ ಕೆಟ್ಟದು ಅಷ್ಟೆ. ನನಗೆ ಹೊಟ್ಟೆ ನೋವು ಬಂದ್ರೆ ಅವಳು ಮೈಲಿಯಾದರೂ ನಡೆದು ಆ ಸೊಪ್ಪು ಈ ಸೊಪ್ಪು ತಂದು ತಂಬಳಿ ಮಾಡಿ ಕೊಡ್ತಾಳೆ… ಹುಲೀನ್ನ ಕಂಡು ಹೆದರಿದೆ ಯಾಕೆ ಗೊತ್ತ? ಅದನ್ನು ಹಿಡಿದು ಕೂರಿಸಿ ಅಭ್ಯಂಜನ ಮಾಡಿಸೋದು ಹೇಗೆ ನನಗೆ ಗೊತ್ತಿಲ್ಲ. ಗೊತ್ತಿದ್ದಿದ್ರೆ ಅದರ ಮೀಸೆ ಹಿಡಿದು ಕೂರಿಸಿ, ಅದರ ಹಣೆಯನ್ನು ಮೃದುವಾಗಿ ಸವರಿ…”
ವೆಂಕಟ ಹೊಟ್ಟೆ ಹಿಡಿದುಕೊಂಡು ನಗಲು ಪ್ರಾರಂಭಿಸಿದ. ನಾವು ಹುಡುಗರಾಗಿದ್ದಾಗ ಅವನು ಒದೆಸಿಕೊಂಡದ್ದೆಲ್ಲ ನೆನಪಾಗಿ ನನಗೂ ನಗು ಬಂತು. ಆದರೆ ಅವನು ಹೇಳದಿದ್ದ ಮಾತುಗಳೆಲ್ಲ ಅವನ ನಗುವಿನಲ್ಲಿ ಇವೆಯೆಂದು ನನಗನ್ನಿಸಿ ನಾನು ಸೋರಿ ಬಿಡಬಹುದೆಂದು ದಿಗಿಲು ಹುಟ್ಟಿತು. ‘ ಏ ಮುಟ್ಠಾಳ, ಅಹಂಕಾರವಿಲ್ಲದೆ ಬದುಕುವುದು ಸಾಧ್ಯವೆ. ಎಂಥ ಸಾತ್ವಿಕನಿಗೂ ಅಹಂಕಾರದ ಅಗತ್ಯವಿದೆ’- ಹೀಗೆಂದುಕೊಳ್ಳುತ್ತ ವೆಂಕಟನಂಥವನನ್ನು ನಾಶ ಮಾಡದೆ ವಿದ್ಯುಚ್ಛಕ್ತಿಯಿಲ್ಲ, ಅಣೆಕಟ್ಟುಗಳಿಲ್ಲ, ಪೆನ್ಸಿಲಿನ್ ಇಲ್ಲ, ಮಾನವಿಲ್ಲ, ಮರ್ಯಾದೆಯಿಲ್ಲ, ಕಾಂದ ಉಲ್ಲಾಸವಿಲ್ಲ, ಹೆಣ್ನನ್ನು ಗೆಲ್ಲುವುದಿಲ್ಲ, ಶಿಖರವಿಲ್ಲ, ವಿಮಾನವಿಲ್ಲ, ಜೀವವಿಕಾಸವಿಲ್ಲ, ಸ್ಮೃತಿಯಿಲ್ಲ, ಉತ್ಕಟತೆಯಿಲ್ಲ, ಖುಷಿಯಿಲ್ಲ ಎಂದೆಲ್ಲ ಯೋಚಿಸಲು ತೊಡಗಿದ ನನಗೆ ಖುಷಿಯ ಬುಗ್ಗೆಯಾಗಿ ಗದ್ದೆಯಂಚಿನಲ್ಲಿ ಬರಿಗಾಲಲ್ಲಿ ನಿಂತ ವೆಂಕಟನ್ನ ಕಂಡು ತಬ್ಬಿಬ್ಬಾಯಿತು. ಅವನು ಕರುಣೆಯಿಂದ ನಗುತ್ತಿದ್ದನೆ?
“ಬೆಳೆದು ನಿಂತ ಹೆಣ್ನು ಮಕ್ಕಳಿಗೆ ಮದುವೆ ಮಾಡಿಲ್ಲ ಅಂತೀಯ. ಅವರು ಕೆಟ್ಟರೆ?”
ನನ್ನನ್ನು ಕರುಣೆಯಿಂದ ಕಾಣಬಲ್ಲ ವೆಂಕಟನನ್ನು ನೋಯಿಸಬೇಕನ್ನಿಸಿತು.
“ ನೀನೆ ಎಲ್ಲಾದರೂ ಗಂಡು ನೊಡಿಕೊಡೋ ಮಾರಾಯ. ನಾನೆಲ್ಲಿಂದ ವರದಕ್ಷಿಣೆ ತರಲೊ? ಮುತ್ತಿನಂತ ಹುಡುಗೀರು ಅವರು. ಅವರು ಯಾಕೆ ಕೆಟ್ಟಾರು? ಕೆಡೊದಾದ್ರೆ ಅದು ಅವರ ಜಾಯಮಾನ. ತಪ್ಪಿಸೋದಕ್ಕೆ ನನ್ನಿಂದ ಸಾಧ್ಯವೆ?”
ವೆಂಕಟನ ನಿಷ್ಕಪಟ ಧಾಟಿಯಿಂದಾಗಿ ನನ್ನ ಬಾಯಿ ಕಟ್ಟಿತ್ತು. ಹೇಗಾದರೂ ದುಡ್ಡು ಮಾಡು ಎನ್ನಲೆ? ಸಮಾಜ ಪರಿವರ್ತನೆಗಾಗಿ ಕ್ರಾಂತಿ ಮಾಡು ಎನ್ನಲೆ? ವೆಂಕಟ ಮುಗುಳ್ನಗುತ್ತ ಹೇಳಿದ, ಅವನ ಆಟಗಾರಿಕೆಯ ಬಿಂಕವಿಲ್ಲದಂತೆ:
“ ನಾನೊಬ್ಬ ಪೂಜಾರಿ ಕಣೊ. ಪೂಜಿಸೋದು ನನ್ನ ಜಾಯಾಮಾನ. ಕಂಡದ್ದನ್ನು ಪೂಜಿಸೋದು. ಸಿಕ್ಕ ತಲೆಯನ್ನೆಲ್ಲ ಪೂಜಿಸೋದು. ಪಂಜುರ್ಲಿ, ಬೊಬ್ಬರ್ಯ, ಜಟ್ಟಿಗ, ಸ್ಕೂಲ್ ಇನ್ಸ್‌ಪೆಕ್ಟರ್, ದಫೇದಾರ, ಅಮಲ್ದಾರ, ಈಗ ನೀನು. ಹಿಂದೆ ಭಾಷ್ಯಂ- ಈ ಪರಿಯಾಗಿ ನಾನು ಅಮ್ಮನೋರ ಪೂಜೆ ಮಾಡೋದು. ಹಾಯೋಕ್ಕೆ ಬಂದದ್ದಕ್ಕೆ ವಿರುದ್ಧವಾಗಿ ನೀನೂ ಹಾಯಲಿಕ್ಕೆ ಹೋದರೆ ಹಣಾಹಣಿಯಾಗಿ ಏನಾಗುತ್ತೆ ಹೇಳು? ಹಣೆ ಊದಿಕೊಳ್ಳುತ್ತೆ.ಅಮ್ಮ ನನ್ನ ಹೊಟ್ಟೆ ಹೊರ್ದಿದಾಳೆ- ನನ್ನ ಹೆಂಡ್ತಿ ರುಕ್ಕು ಬಾಳೆಲೆ ದೊನ್ನೆ ಮಾಡಿಕೊಡ್ತಾಳೆ. ನಾನವನ್ನ ತಲೆ ಮೇಲೆ ಹೊತ್ತುಕೊಂಡು ಹೋಗಿ ಪೇಟೇಲಿ ಮಾರಿ ಬರ್ತೀನಿ. ಇನ್ನೇನು ಸದ್ಯ ಪೆನ್‌ಶನ್ನೂ ಸಿಗುತ್ತೆ. ನಮ್ಮ ಎಂ.ಎಲ್.ಎ.ಗೆ ಮೊನ್ನೆ ಗಡದ್ದಾದ ಒಂದು ಅಭ್ಯಂಜನ ಮಾಡಿಸಿದೆ. ಕೆ.ಟಿ.ಭಾಷ್ಯಂಗೆ ಜೈಲಲ್ಲಿ ಬೆಳದಿಂಗಳು ಹೇಗೆ ಕಾಣಿಸ್ದೆ ಅಂತ ಅವರಿಗೆ ಹೇಳಿದೆ. .. ಈ ಮರ ಗಿಡಗಳು ಹೇಗೆ ದೇವರನ್ನ ಒಳಗೆ ಬಿಟ್ಟುಕೋತಾವೆ ನೋಡು. ಹಾಗೆ ಬಿಟ್ಟುಕೋಬೇಕು ನಾವೂನು. ಆದರೆ ನನ್ನಲ್ಲಿ ಇನ್ನೂ ಒಂದಷ್ಟು ಹುಳಿ ಉಳಿದಿರ್ಬೇಕು. ಇಲ್ದಿದ್ರೆ ನನ್ನ ಮಗ ಸುಬ್ಬ ಹೀಗೆ ಉರೀತಾ ಇರ್ಲಿಲ್ಲ.”
ವೆಂಕಟ ಚೀಲವನ್ನು ನನ್ನ ಕೈಯಿಂದ ಕಸಕೊಂಡ. ಆರಾಮಾಗಿ ನಡಿ ಎಂದು ನನಗೆ ಇಷ್ಟವಾದ ಹಕ್ಕಿಗಳನ್ನೆಲ್ಲ ತೊರಿಸಿದ.
“ ನಮ್ಮ ಕಣ್ಣಿಗೂ ಬೀಳೋಕೂ ಅವಕ್ಕೆ ಇಷ್ಟವಿಲ್ಲ ನೋಡು. ನಿನ್ನ ಬದಲಾವಣೇನೂ ಅವಕ್ಕೆ ಬೇಡ. ನನ್ನ ಅಭ್ಯಂಜನವೂ ಬೇಡ. ಬಾರೀ ಸೊಕ್ಕಿನ ಕೊಳ್ಳಿದೆವ್ವಗಳ ತಲೆ ಮೇಲೂ ಅವು ಪಿಚಕ್ಕಂತ ಹಿಕ್ಕೆ ಹಾಕಿ ಪುರ್ರಂತ ಹಾರಿಬಿದ್ತಾವೆ. ಅವು ಬದುಕಲಿಕ್ಕಾಗಿ ಹಡೇನೂ ಆಗಬೇಕಾಗಿಲ್ಲ. ರಣವೀರರೂ ಆಗಬೇಕಿಲ್ಲ. ಅಲ್ಲವಾ ಅನಂತು?”
ನನಗೆ ಹಸಿವಾಗುತ್ತಿತ್ತು. ಬೇಗ ಬೇಗ ಹೆಜ್ಜೆ ಹಾಕಿದೆ. ವೆಂಕಟ ಹಿಂದಿನಿಂದ ನನ್ನ ನಡಿಗೆಯನ್ನು ಅಣಕಿಸುತ್ತ ನಡೆದ- ಸ್ಕೂಲಿನ ದಿನಗಳಲ್ಲಿ ಅಣಕಿಸದಂತೆಯೇ, ಇನ್ನೂ ನಾನು ಆ ಹಿಂದಿನ ಹಸಿ ಬಾಲಕನಂತೆಯೇ ನಡೆಯುತ್ತೇನೆಯೆ? ಮುಜುಗರವಾಯ್ತು.
ಅಲ್ಲಿ ಇಲ್ಲಿ ಸುಮ್ಮನೆ ಕೂತಿರುತ್ತಿದ್ದ ಹಳ್ಳಿಯ ಜನ ಮಳೆಯಿಲ್ಲದೆ ಆತಂಕಗೊಂಡಿಡಿದ್ದರು. ‘ಜೊಯಿಸ್ರೆ ಯಾವಾಗ ಬರತ್ತೆ ಮಳೆ?” ಎಂಬ ಆಲಸ್ಯದ ಪ್ರಶ್ನೆಗೆ “ ಇನ್ನೊಂದು ವಾರ ತಡೀರಿ” ಎಂದು ಹುಸಿ ಗಾಂಭೀರ್ಯದಲ್ಲಿ ವೆಂಕಟ ಹೇಳುತ್ತಿದ್ದ. “ನಿಮ್ಮ ದೊನ್ನೆ ಕಟ್ಟೋಕ್ಕು ಬಾಳೆಲೇನೆ ಇಲ್ಲವಲ್ಲಾರಿ. ನಿಮ್ಮ ಮಂತ್ರತಂತ್ರವೆಲ್ಲ ಹಾಗಾರೆ ಬುರ್ನಾಸ?” ಎಂದು ಪ್ಯಾಂಟು ಹಾಕಿದ ಹಳ್ಳಿಯ ಯುವಕನೊಬ್ಬ ವೆಂಕಟನನ್ನು ಕೆಣಕಲು ನೋಡಿದ. “ಈಚೆಗೆ ಕಾಡಿಂದ ಮುತ್ತುಗದ ಎಲೆ ತಂದು ಹೆಣೀತಿದೀವೆ. ಹೇಗೋ ಅಂತೂ ಸಂಸಾರ ಸಾಗಬೇಕಲ್ಲ.” ಎಂದು ವೆಂಕಟ ಅವನಿಗೆ ಕೈಮುಗಿದು ಮುಂದೆ ನಡೆದ. ದನಕಾಯುವ ಹುಡುಗನೊಬ್ಬನಿಗೆ “ ಏನೋ ಚಿಕ್ಕ, ನಿಮ್ಮ ಒಡೇರ ದನ ತಪ್ಪಿಸಿಕೊಂಡಿತ್ತಂತೆ. ನಿಮಿತ್ಯಕ್ಕೆ ಬಂದಿದ್ದರು. ಮಣಿಮಂತ್ರಿಸಿ ಕೊಟ್ಟಿದ್ದೆ. ಬಂತಾ ದನ?” ಎಂದು ಕೇಳಿದ. ‘ ಬಂತು ಜೋಯಿಸ್ರೆ.’ ಎಂದು ಚಿಕ್ಕ ತನ್ನ ಪಾಡಿಗೆ ತಾನು ಕಲ್ಲಲ್ಲಿ ಆಡುತ್ತ ಕೂತ. ಇದೇ ವೆಂಕಟನ ನಿತ್ಯ ವಿಧಿಯಿರಬೇಕೆಂದುಕೊಂಡೆ. ಹಡೆಯೊಬ್ಬನ ಬಿಚ್ಚಿದ ಬದುಕು. ಮೊಳೆಯುವುದೂ ಇಲ್ಲ. ಕೊಳೆಯುವುದೂ ಇಲ್ಲ. ನಗುತ್ತಾನೆ. ನಗಿಸುತ್ತಾನೆ. ನವಿಲು ಗುಡ್ಡದ ಗುಹೆಯಲ್ಲಿ ಒಬ್ಬನೇ ಹೋಗಿ ಇರಬೇಕೆಂದು ಕನಸು ಕಾಣುತ್ತಾನೆ. ಹಾಯಲು ಬಂದದ್ದಕ್ಕೆ ಎದುರಾಗದಂತೆ ಸರಿದು ನಿಲ್ಲುತ್ತಾನೆ. ಹೆಂಡತಿಯಿಂದ ಬೈಸಿಕೊಳ್ಳುತ್ತಾನೆ. ಮುಚ್ಚಿಲ್ಲ. ಮರೆಯಿಲ್ಲ. ಹೊಟ್ಟೆಯಲ್ಲಿ ವಿಷವಿದ್ದರೆ ತಾನೆ ಹಡೆಯಲ್ಲಿ ರತ್ನವಿರುವುದು? ಸಿಟ್ಟು ಸಿಡುಕು ಅಸೂಯೆಗಳಿಲ್ಲದ ಹ್ಯಾಪ ಇವನು. ಎತ್ತಿ ಹಿಡಿದಿದ್ದ ಮುಷ್ಟಿ ಬತ್ತಿದೆಯೆಂದು ಇವನನ್ನು ನಾನು ಒಪ್ಪಬಾರದು.
ವೆಂಕಟ ಒಂದು ಮರ ತೋರಿಸಿದ. ಎಷ್ಟೊಂದು ದಪ್ಪನೆಯ ದಢೂತಿ ಮರ. “ಇದರಲ್ಲೊಂದು ವಿಶೇಷವಿದೆ. ಅದಕ್ಕೊಂದು ಕೈ ಇದೆ ನೋಡಿದೆಯ? ಅದರ ಕೈ ನೆಲ ತೋರಿಸುತ್ತಿದೆ. ಅದರರ್ಥ ನೆಲದಲ್ಲಿ ನಿಧಿಯಿದೆಯಂತೆ” ಎಂದ. ನಾನು ನಕ್ಕೆ. “ ಆಸೆ ಬುರುಕರು. ಅಗೆದು ನೋಡಿದ್ದುಂಟು. ಆದರೆ ಆ ನಿಧಿ ಈ ಪ್ರದೇಶದ ಜಟ್ಟಿಗ ಎನ್ನೋ ಭೂತಕ್ಕೆ ಸೇರಿದ್ದು. ಅಂದ ಮೇಲೆ ಅದು ಹಾಗೆ ದಕ್ಕುವುದುಂಟೆ?” ಎಂದ ವೆಂಕಟನ ಈ ಬಗೆಯ ‘ಕ್ಷೇತ್ರಜ್ಞತೆ’ ನನಗೆ ಮೋಜೆನಿಸಿತು. ತನ್ನ ಈ ಗಡಿಯ ಅಡಿ ಅಡಿಯನ್ನೂ ವ್ಯಾಖ್ಯಾನಿಸ ಬಲ್ಲವನಾಗಿದ್ದ ಈ ನನ್ನ ಬಾಲ್ಯ ಸಖ. ಅಷ್ಟಲ್ಲದೆ, ಅವನದೇ ಅದೊಂದು ತತ್ವಜ್ಞಾನ ಈ ಕ್ಷೇತ್ರದ ಹಲವು ಭೂತಗಳ ಸನ್ನಿಧಿಯಲ್ಲಿ ರೂಪುಗೊಂಡಿತ್ತು.
*
*
*
ನನಗೆ ಅದರ ಪರಿಚಯವಾದದ್ದು ಹೀಗೆ: ಒಳದಾರಿಗಳಿಗೇ ಒಳದಾರಿಗಳನ್ನು ಬಲ್ಲವನಾಗಿದ್ದ ವೆಂಕಟ ನನ್ನನ್ನು ಎತ್ತೆತ್ತಲೋ ಸುತ್ತಿಸುತ್ತ. ನಾವು ತುಳಿಯುತ್ತಿದ್ದ ಕೆರೆಕೊಪ್ಪದ ಗುಪ್ತ ಸಂಚಾರಿ ವ್ಯವಸ್ಥೆಗೂ ಶ್ರೀರಾಮಚಂದ್ರನ ವನವಾಸದ ಐತಿಹ್ಯಕ್ಕೂ ನಂಟುಗಳನ್ನು ಬೆಸೆಯುತ್ತ ನಡೆದಿದ್ದ. “ ಒಂದು ಸಾರಿ ಸೀತಮ್ಮನೋರು…” ಎಂದು ಪ್ರಾರಂಭವಾಗುತ್ತಿದ್ದ ಕಷ್ಟಕಾರ್ಪಣ್ಯಗಳ ವನವಾಸದ ಕಥೆಯಲ್ಲಿ ಅವನು ತೋರಿಸಿದ ಒಂದು ದಪ್ಪನೆಯ ಎಲೆ ಸೀತೆ ಉರಿಸಿದ ಹಣತೆಗೆ ಬತ್ತಿಯಾಗಿತ್ತು. ಎದುರಿಗಿದ್ದ ಮರದ ಮೇಲೆ ಬಿಟ್ಟಿದ್ದ ಸೀತಾಳ ದಂಡೆಯನ್ನು ರಾಮ ಕೊಯ್ದು ತಂದು ತನ್ನ ಹೆಂಡತಿಗೆ ಮುಡಿಸಿದ್ದ. “ ಅಗೋ ಅಲ್ಲಿ, ಲಕ್ಷ್ಮಣ ಬಂಡೆಯ ಮೇಲೊಂದು ಬಾಣ ಬಿಟ್ಟು ಅಂತರ್ಜಲವನ್ನು ಹೊರತಂದಿದ್ದ.” ಬಂಡೆಯಲ್ಲೊಂದು ಎರಡೂ ಕೈಗಳನ್ನು ಬೊಗಸೆಯಾಗಿ ಅದ್ದಬಲ್ಲಷ್ಟು ಕುಣಿಯನ್ನು ತೋರಿಸಿ ವೆಂಕಟ “ ಅದರ ನೀರನ್ನು ಮೊಗಿ ನೋಡೋಣ” ಎಂದ. ನಾನು ಮೊಗೆದಷ್ಟೂ ಅದ್ ತುಂಬುತ್ತಿತ್ತು. ಕುಡಿ ಎಂದ. ನೀರು ತಂಪಾಗಿ ಸಿಹಿಯಾಗಿತ್ತು. “ ಈ ನೀರಿನಿಂದ ಶ್ರೀ ರಾಮಚಂದ್ರ ಅಬಿಷೇಕ ಮಾಡಿದ ಉದ್ಬವಲಿಂಗ ಇದು.” ಎಂದು ಬಂಡೆಯ ಮೇಲೆ ಊದಿಕೊಂಡಿದ್ದ ಇನ್ನೊಂದು ಕಲ್ಲನ್ನ ತೋರಿಸಿ, ಅದರ ಮೇಲೆ ಬೊಗಸೆ ನೀರನ್ನೆತ್ತಿ ಹೊಯ್ದು ಆಮೇಲೆ ಶಿವನ ನಂದಿಯಂತೆ ಡೊಂಕು ಕಾಲಲ್ಲಿ ಕಣ್ಣುಮುಚ್ಚಿ ನಿಂತು ವೆಂಕಟ ಆಡಿದ ಮಾತುಗಳ ಸಾರಾಂಶ ಹೀಗಿದೆ:
“ ಪರಮಾತ್ಮ ಕೆಲವರಿಗೆ ಅಮ್ಮ, ಕೆಲವರಿಗೆ ಅಪ್ಪ. ಅಮ್ಮಾಂತ ತಿಳಿದೊರ ಕಣ್ಣು ಸದಾ ಅಮ್ಮನವರ ಮೊಲೆ ಮೇಲೆ. ಅದು ಹಾಲು ಹರಿಯುವ ಪೂರ್ಣಕುಂಭದಂಥ ಮೊಲೆ. ಅದನ್ನು ಕುಡಿಯೋರು ಮೊಲೆಯಿಂದ ಬಾಯಿ ಕೀಳಲೊಲ್ಲರು. ಬೇರೆ ಮೊಲೆ ಬೇಡಲೊಲ್ಲರು. ಅಪ್ಪಾಂತ ತಿಳಿದೋರು ಕತ್ತೆತ್ತಿ ದೊರೆಯ ಕಣ್ಣು ನೋಡುತ್ತಾರೆ. ಉನ್ಮತ್ತರಾಗುತ್ತಾರೆ. ನೋಡಬೇಕು ನೋಡಬೇಕು ಅಂತ ಅವರಿಗೆ ಇಡೀ ಪ್ರಪಂಚಾನ್ನ ನುಂಗೋ ರಾವು. ಕಣ್ಣಿನ ಹಸಿವು ಎಂದಾದರೂ ತೀರುತ್ತ? ಮೊಲೆಗೆ ಬಾಯಿಟ್ಟ ಕೂಸು ನಿದ್ದೆ ಹೋಗತ್ತೆ. ಮತ್ತೆ ಎದ್ದು ಹಾಲು ಕುಡಿಯುತ್ತೆ. ಕುಡಿಯೋ ಪೈಕಿ ನಾನು. ನೋಡೋ ಪೈಕಿ ನೀನು…”
“ನೋಡಿ ಗೆಲ್ಲಬೇಕೆಂಬ ಹಂಬಲದ ಆದಿಶಂಕರರಿಗೆ ಮೊಲೆ ಕುಡಿಯುವ ಷಣ್ಮುಖನಾಗಬೇಕೆಂಬ ಆಸೆ ಯಾಕೆ ಹುಟ್ಟಿತೊ. ಅರಿಯದಿದ್ದರೂ ಸೈ. ಕುಡಿಯುವುದಕ್ಕೇನು ಕಷ್ಟ. ನೋಡು ಎರೆಹುಳ ಹೇಗೆ ಕುಡಿಯುತ್ತಿರುತ್ತೆ. ಮರ ಹೇಗೆ ಕುಡಿದು ಅರಳುತ್ತೆ.”
“ಎಷ್ಟು ಕುಡಿಯೋದು. ಇನ್ನು ಸಾಕು ಅಂತ ಅಮ್ಮನೇ ಎತ್ತಿ ಕೆಳಗಿಟ್ಟರೆ ಕಣ್ಣುಬಿಟ್ಟು ಅರಿಯಲೂಬಹುದು. ಅದು ಅಮ್ಮನ ಮರ್ಜಿಗೆ ಬಿಟ್ಟದ್ದು. ಅಮ್ಮ ಒಂದು ಮೊಲೆಯಿಂದ ಕಿತ್ತು ಇನ್ನೊಂದಕ್ಕೆ ಎತ್ತಿ ಇಟ್ಟುಕೊಳ್ಳೋದೂ ಉಂಟು. ಆಗ ಭಯವಾಗುತ್ತೆ. ಈ ಮೊಲೆ ಜೀವನವಾದರೆ, ಆ ಮೊಲೆ ಸಾವು. ಎರಡರ ನಡುವೆ ಅವಳ ಕಣ್ಣುಗಳನ್ನು ಕೆಲ ಪುಣ್ಯಾತ್ಮರು ಕಾಣುವುದುಂಟು. ಕಿರುಚಿಕೊಂಡು ಅಳದೇ ಇದ್ದರೆ.”
“ಹುರಿಮೀಸೆಯ ಜಬರುದಸ್ತಿನ ಪೌರುಷ ನನ್ನಂಥವರಿಗೆ ಸಲ್ಲದು. ಈ ಲೋಕಕ್ಕೆ ನನ್ನದು ಹಡೆ ಸೇವೆ ಎಂದೇ ಇಟ್ಟುಕೊ. ನಿನಗೀಗ ಉಂಡು ಮಲಗೋ ಆಸೆ. ಮಕ್ಕಳು ಕುಡಿಯೋವಾಗ ತಾಯೀನ ಒದೀತಾವೆ. ನಿನ್ನ ಆಸೆಗೆ ತಕ್ಕಂತೆ ಲೋಕಾನ್ನ ಜಗ್ಗಬೇಕೆಂಬ ನಿನ್ನ ಪೌರುಷದ ಹಠಕ್ಕೆ ಮುಂಚೆ ಹೊಟ್ಟೆ ಒಂದಿಷ್ಟು ತಂಪಾಗಬೇಕೊ ಬೇಡವೊ. ಆ ತಂಪು ನಿನಗೆಲ್ಲಿಂದ ಸಿಕ್ಕೋದು? ಅಮ್ಮನ ಹಾಲಿನಿಂದ. ನನ್ನ ಅಭ್ಯಂಜನದಿಂದ.”
ಭಾಗವತರ ಆಟದ ಋಷಿಯಂತೆ ವೆಂಕಟ ಮಾತಾಡಿ, ತನ್ನ ಮಾತಿನ ಗುಂಗಿನಿಂದ ತಾನೇ ತತ್ಪರನಾಗಿ ನಿಂತು ನಸ್ಯವೇರಿಸಿದ. “ಇದು ಬೀಡಿ ಬಿಟ್ಟ ಮೇಲೆ ಹಚ್ಚಿಕೊಂಡ ಚಟ” ಎಂದ. “ನಿನ್ನ ಕಂಡದ್ದೇ ನನ್ನ ಹೆಂಡತಿಯ ಬಯ್ಯೋ ಬಾಯಿಗೆ ಬೀಗ ಬಿದ್ದಂಗೆ ಆಗತ್ತೋ” ಎಂದು ನಗುತ್ತ ಸುಖಿಸಿದ. ತನ್ನ ಮಾತಿಗೆ ತಾನೆ ತಲೆದೂಗುತ್ತ. ಡೊಂಕು ಕಾಲುಗಳನ್ನು ಅತ್ತ ಇತ್ತ ಇಡುತ್ತ ನಡೆದ. ಅವನದು ಮಂಡಿಯನ್ನುಜ್ಜುವ ಕಾಲುಗಳು.- ಎಂದೇ ಅವರು ದೂರ ದೂರ ಕಾಲುಹಾಕಿ ನಡೆಯುವುದು.
*
*
*
*
ಎದುರೊಂದು ಮನೆಯಿತ್ತು. ನಾಡಹೆಂಚಿನ ಹಾಳುಸುರಿಯುತ್ತಿದ್ದ ಮನೆ. ಸುಣ್ಣ ಹೊಡೆಯದೆ, ಸಾರಿಸದೆ, ರಂಗವಲ್ಲಿಯಿಕ್ಕದೆ ಬಿಕೊ ಎನ್ನುತ್ತಿದ್ದ ಮನೆ. “ಶೇಷಣ್ಣಂದು. ಅವನಿಗೆ ಸಖತ್ ಖಾಯಿಲೆ. ನೋಡಿ ಬರೋಣ- ಬಾ” ಎಂದು ವೆಂಕಟ ಬಾಗಿಲಲ್ಲೆ ಚೀಲವಿಟ್ಟು, ಕತ್ತಲಿನ ನಡುಮನೆಗೆ ನನ್ನ ಕೈಹಿಡಿದು ಕರಕೊಂಡು ಹೋದ. “ ಅನಂತು ಬಂದಾನೆ- ಆಚಾರ್ರ ಮಗ ಅನಂತು- ಪ್ರೊಫೆಸರ್. ಮೈಸೂರಲ್ಲಿ. ಗೊತ್ತಿರಬೇಕು ಅಲ್ವ?” ಎಂದ. ಕತ್ತಲಿಗೆ ಕಣ್ಣನ್ನು ಒಗ್ಗಿಸಿಕೊಳ್ಳುತ್ತ ಅಂದುಕೊಂಡೆ: ಅರೆ ವೆಂಕಟ. ಈತ ತತ್ವಜ್ಞಾನಿ ಬೇರೆ. ನನ್ನ ಉತ್ತರ ಹೇಗೆ ಹೇಳಲಿ? ಅದಕ್ಕೆ ಇಂಗ್ಲಿಷ್ ಪದಗಳು ಬೇಕು. ಅಥವಾ ವೆಂಕಟನಿಗೆ ಪರಿಚಯವಿರದ ತರ್ಜುಮೆಗಳು.
ಇಂಥವು:
ಸಫರಿಂಗ್‌ಗೆ ಇನ್‌ಸೆನ್ಸಿಟಿವ್ ಆಗುವ ಉಡಾಫೆ…ಹೆಂಬೇಡಿಯ ಫಿಲಾಸಫಿಕಲ್ ರೆಸಿಗ್ನೇಶನ್…ಅನ್‌ಅಥೆಂಟಿಕ್ ಆದ ವ್ಯಕ್ತಿತ್ವ…ಪಲಾಯನವಾದ…ಮೂಢನಂಬಿಕೆಯಿಂದ ಹುಟ್ಟಿದ ಸಾಂತ್ವನ.ವಿಲೇಜ್ ಈಡಿಯಸಿಯ ಮುಗ್ಧತೆ…ಹೀಗೆ.
ಅವನು ನಾನು ಬರೆದದ್ದನ್ನು ಓದಿದರೆ ತನ್ನನ್ನು ಮಾತ್ರ ಓದಿಕೊಳ್ಳುತ್ತಾನೆ. ಮೊದಲೆ ಹಡೆಯಾದ್ದರಿಂದ ನನ್ನ ಐರನಿ ಅವನನ್ನು ಮುಟ್ಟಲ್ಲ. ಆದರೆ ವಸ್ತುವಾಗಿ ಶುರುವಾದದ್ದು ಹೇಗೆ ಪ್ರಜ್ಞೆಯಾಗಿ ನನ್ನನ್ನು ಅಡ್ಡಹಾಕ್ತಿದೆ. ಯಾವ ಹವಣಿಕೆಯೂ ಇಲ್ಲದವನಿಗೆ ಪ್ರಪಂಚದ ನಿರಂತರ ಚಲನೆ. ಫ್ಲಕ್ಸ್. ಬದಲಾವಣೆಗಳಲ್ಲಿ ಆಸಕ್ತಿ ಇರೋದಿಲ್ಲ. ಇಂಥ ಒಬ್ಬ ನಾನ್ ಪೊಲಿಟಿಕಲ್ ಬೀಯಿಂಗ್ ಎದುರಿನಲ್ಲಿ ನನ್ನ ಎಲ್ಲ ಜ್ಞಾನವೂ ವ್ಯರ್ಥ. ಕಿಸಿಂಜರ್‌ಗೆ ಇವ ಡೈರೆಕ್ಟ್ ಆಪೋಸಿಟ್. ಗಾಂಧಿಯಲ್ಲಿ ಹವಣಿಕೆಯಷ್ಟೇ ತನ್ಮಯತೆಯೂ… ಅರೆ ವೆಂಕಟ, ಕಥೆಯಾಗಿ ಬಂದವನು ಎಸ್ಸೆಯಾಗಿ ಬೆಳೆಯುತ್ತಿದ್ದಾನಲ್ಲ!
“ಇವನು ಶೇಷಣ್ಣಾಂತ. ಮಗ ಬೊಂಬಾಯಿಯಲ್ಲಿದ್ದಾನೆ. ಆಟಂಬಾಬ್ ಮಾಡ್ತಾರಂತಲ್ಲ- ಅಲ್ಲಿ. ನಿನ್ನ ಹಾಗೆ ಕೆಂಗಣ್ಣ: ನನ್ನ ಸುಪುತ್ರನಿಗೂ ಅವನಂತಾಗೋ ಆಸೆ. ಅವನಿಗೊಬ್ಬಳು ಬಿಳಿ ಹೆಂಡ್ತಿ ಇದ್ದಾಳೆ. ಸೀರೆ ಉಟ್ಟು ಕುಂಕುಮ ಇಟ್ಟರೆ ಥೇಟು ಅಮ್ಮನವರ ಥರ ಕಣೋ… ಬಂದಿದ್ದಳು. ಮಾವನ್ನ ಅಲ್ಲೇ ಬಂದಿರಿ ಅಂತ ಕರೆದ್ಲು. ಇವ ಎಲ್ಲಿ ಹೋಗ್ತಾನೆ? ಈರುಳ್ಳಿ ಆಲೂಗಡ್ಡೆ ಹುಳಿ ಚಪಲ ಇವನಿಗೆ. ಜೊತೆಗೆ ಯಜಮಾನಿಕೆ ಹುಚ್ಚು. ತಾನು ಹೇಳ್ದಂಗೆ ಆಗಬೇಕು. ಓದಿದ ಮಗ ಕೇಳ್ತಾನ?
ವೆಂಕಟ ಕತ್ತರಿಯಲ್ಲಿ ಅಡಿಕೆಯನ್ನು ನಾಜೂಕಾಗಿ ಹೆಚ್ಚುತ್ತ ಹರಟಿದ. ಶೇಷಣ್ಣ ಕೆಮ್ಮಲು ಪ್ರಾರಂಭಿಸಿದ. ಉಸಿರೇನು ನಿಂತೇ ಹೋಗಿಬಿಡ್ತೋ ಎನ್ನುವಂಥ ಕೆಮ್ಮು. ವೆಂಕಟ ಅವನನ್ನು ಎತ್ತಿ ತನಗಾನಿಸಿ ಕೂರಿಸಿಕೊಂಡ. ಬೆನ್ನುಜ್ಜುತ್ತ ತಟ್ಟೆಯೊಂದನ್ನು ಅವನೆದುರು ಹಿಡಿದ. ಶೇಷಣ್ಣ ಪಡ್ಚ ಎಂದು ನನಗನ್ನಿಸಿತು.-ಕೆಮ್ಮಿ ಕೆಮ್ಮಿ ಕೆಮ್ಮಿ ಕತ್ತನ್ನು ಹಿಂದೆ ಹಾಕಿ ಗೊರಗೊರ ಎಂದು ಉಸಿರೆಳದೊಕೊಳ್ಳಲು ಒದ್ದಾಡಿದ. ‘ಉಗಿ ಉಗಿ’ ಎಂದು ವೆಂಕಟ ಅವನ ಕತ್ತನ್ನು ಬಗ್ಗಿಸಿದ. ಶೇಷಣ್ಣ ರಕ್ತ ಕಾರಿಕೊಂಡಿರಬೇಕು. ವೆಂಕಟ ಅವನನ್ನು ಮಲಗಿಸಿ ಹಿತ್ತಲಿಗೆ ಹೋಗಿ ತಟ್ಟೆ ತೊಳೆದು ಬಂದ. ‘ಸ್ಟವ್‌ನಲ್ಲಿ ಕಾಫಿ ಬಿಸಿ ಮಾಡಿಕೊಡ್ತೀನಿ’ ಎಂದು ಮತ್ತೆ ಒಳಗೆ ಹೋದ. ಶೇಷಣ್ಣ ಬಾಯಿಕಳೆದು ಜೋರಾಗಿ ಏದುಸಿರು ಬಿಡುತ್ತಿದ್ದ. ಹಾ ಹೋ ಎನ್ನುವ ರಾದ್ಧಾಂತದ ಉಸಿರು. ಯಾಂತ್ರಿಕವಾಗಿ ತೆರೆದು ಮುಚ್ಚುವ ಕಣ್ಣುಗಳು. ಮಾಡಿಗೆ ಹಾಕಿದ್ದ ಗಾಜಿನ ಹೆಂಚೊಂದರಿಂದಲೂ, ಎತ್ತರದಲ್ಲಿದ್ದ ಕಿಟಕಿಯೊಂದರಿಂದಲೂ ಬೆಳಕು ಕ್ಷೀಣವಾಗಿ ನಡುಮನೆಗೆ ತೆವಳಿತ್ತು. ಮರದ ಜಂತಿಗೆ ತೂಗು ಹಾಕಿದ್ದ ಬಣ್ಣದ ಸೌತೆಕಾಯಿಗಳನ್ನು ಎಣಿಸಿದೆ.. ಕ್ಷಣಕ್ಷಣವೂ ಕುಗ್ಗುತ್ತ ಕೂತೆ. ಮೂಲೆಯೊಂದರಲ್ಲಿ ಒರಟೊರಟಾಗಿ ಕೆತ್ತಿದ ಮಚದ ಮೇಲೆ ಪ್ರೇತದಂತೆ ತೆಳ್ಳಗೆ ಕಂಬಳಿ ಹೊದ್ದು ಮಲಗಿದ್ದ ಶೇಷಣ್ಣ. ಅವನಿಗೆ ಕ್ಷಯವಿರಬೇಕು. ವೆಂಕಟನದೇ ಶುಶ್ರೂಷೆ ಇರಬೇಕು. ಹಿಂದಿನಿಂದಲೂ ಹೀಗೇ ವೆಂಕಟ ಪರೋಪಕಾರಿ. ಸ್ಕೂಲಿನ ಚೀಲದಲ್ಲಿ ಯಾರ್ಯಾರಿಗೋ ಪೇಟೆಯಿಂದ ಔಷಧಿ ತರಲೆಂದು ಬೆಂಡಿನ ಗಿದ್ನಗಳಿದ್ದ ತರಹೇವಾರಿ ಸೀಸೆಗಳು. ಗುಟ್ಟಾಗಿ ಚಟ ಬೆಳೆಸಿಕೊಂಡ ಹೆಂಗಸರು ನಸ್ಯ ತರಲು ಕಳುಹಿಸುತ್ತಿದ್ದ ಬಿಲ್ವಪ್ತೆಯ ಬಿರಡೆಗಳು. ಹೆಣ್ಣು ಮಕ್ಕಳಿಗೆ ಟೇಪು. ಹೇನು ತೆಗೆಯುವ ಎರಡೂ ಕಡೆ ಹಲ್ಲುಗಳಿದ್ದ ಬಾಚಣಿಗೆ. ಅನಂತನ ವ್ರತಕ್ಕೆ ರೇಷ್ಮೆ ದಾರ. ಗೌರಿ ಪೂಜೆಗೆ ಬಿಚ್ಚೋಲೆ, ಹತ್ತಿ, ಬೇಗಡೆ. ಯಾರ್ಯಾರ ಮಕ್ಕಳಿಗೊ ಸಾಬರ ಅಂಗಡಿ ಬತ್ತಾಸು. ಅವನ ಚೀಲದಲ್ಲಿ ಇರಬೇಕಾದ ಪುಸ್ತಕದ ಹೊರತಾಗಿ ಇಂಥವೇ ಇನ್ನೆಲ್ಲ. ತನ್ನ ಕೊಡೆಯ ರಿಪೇರಿಗೆಂದು ತರುತ್ತಿದ್ದ ಇನ್ನೆರಡು ಮಾಸಿದ ಬಟ್ಟೆಯ ಕೊಡೆಗಳು. ತೇಪೆಗಳನ್ನು ಹಾಕಿದ ಅಂಗಿ ತೊಟ್ಟು, ಜುಟ್ಟಿನಲ್ಲಿ ತಳಸಿ ಮುಡಿದು, ಪೇಟೆ ಬದಿ ತನಗೇ ಸೇರಿದ್ದೆಂಬಂತೆ ದಾಪುಗಾಲು ನಡೆಯುತ್ತಿದ್ದ ವೆಂಕಟ. ನಮಗೆಲ್ಲ ತಿನ್ನಲು ಅಮಟೆ ಮಿಡಿ ತರುತ್ತಿದ್ದ.
ವೆಂಕಟ ಕಾಫಿಯನ್ನು ಬಿಸಿ ಮಾಡಿ ತಂದು ಶೇಷಣ್ಣನಿಗೆ ಕುಡಿಸಿದ. “ ನಾನು ಯಾವಾಗ ಕಣ್ಣು ಮುಚ್ಚೋದೋ ಮಾರಾಯ” ಎನ್ನುತ್ತ ಸಣ್ಣ ಸಣ್ಣ ಗುಟುಕಲ್ಲಿ ಶೇಷಣ್ಣ ಶಬ್ದ ಮಾಡುತ್ತ ಕುಡಿದ. ವೆಂಕಟ ಲೋಟವನ್ನು ಊದಿ, ಊದಿ ಕಾಫಿಯನ್ನು ಆರಿಸಿ ಅವನ ಬಾಯಿಗಿಡುತ್ತಿದ್ದ.
“ಅದ್ಯಾಕೆ ಅಷ್ಟು ಬೇಗ ಕಣ್ಣು ಮುಚ್ಚೀಯ ನೀನು? ಯಮ ಏನಾರು ಕೋಣ ಹತ್ತಿ ನಿನ್ನ ಮನೆ ಬಾಗಿಲಿಗೆ ಬಂದ್ರೆ ‘ಸ್ವಲ್ಪ ಇರೋ ಮಾರಾಯ. ಈರುಳ್ಳೀ ಆಲೂಗಡ್ಡೆ ಹುಳಿ ಮಾಡಿಟ್ಟಿದ್ದೀನಿ. ಅದನ್ನ ತಿಂದು ಬರ್ತೀನಿ’ ಅನ್ನೊ ಪೈಕಿ ನೀನು. ಆ ಯಮ ಏನಾದರೂ ಅದೆಂಥ ಹುಳಿಯಪ್ಪಾಂಥ ರುಚಿ ನೋಡಿಬಿಟ್ರೆ ನಿನ್ನನ್ನು ಭೂಲೋಕದಲ್ಲೇ ಬಿಟ್ಟು ಹೋಗ್ತಾನೆ- ಇವನನ್ನ ಇಲ್ಲಿಂದ ವರ್ಗ ಮಾಡಿಸೋದು ಬೇಡ. ದಾರೀಲಿ ಹಸಿವಾದ್ರೆ ಇಷ್ಟೊಳ್ಳೆ ಹುಳಿ ಸಿಗೋ ಜಾಗ ಒಂದಿರ್ಲಿ ಅಂತ. ಆದ್ರೆ ಹೇಳು- ಬಂದಿರೋ ಯಮ ಅದು ಹ್ಯಾಗೆ ಬರಿಗೈಲಿ ಹೋದಾನು? ಟಿ.ಎ. ಡಿ.ಎ ದಂಡವಾಗಬಾರ್ದೂಂತ ನಿನ್ನೇ ಕೇಳ್ತಾನೆ, ಬೇರೆ ಗಿರಾಕಿ ತೋರಿಸೂ ಅಂತ. ಆಗ ನೀನು ಏನು ಅಂತಿ. ಈ ಊರಲ್ಲೊಬ್ಬ ಹಡೆ ವೆಂಕಟಾಂತ ಇದಾನೆ. ನನಗಿಂತ ಕಿರಿಯ. ಈಗ ಅವನ ಹಡೆ ಆಟ ಎಲ್ಲ ಹಾಳಾಗಿಬಿಟ್ಟಿದೆ. ಅವನ್ನ ತಗೊಂಡು ಹೋಗು ಅಂತ. ನನ್ನ ಹೆಂಡ್ತಿ ನಾಲಿಗೇಗೆ ಏನಾರು ಯಮರಾಯ ಹೆದರಿದ್ನೋ, ನಾನು ಬಚಾವ್. ಇಲ್ಲವಾದರೆ ಪಡ್ಚ.”
ಶೇಷಣ್ಣನ ಮುಖ ಕೊಂಚ ಪಲ್ಲವಿಸಿದಂತೆ ತೋರಿತು. ಅವನ ತಲೆಯನ್ನು ದಿಂಬಿನ ಮೇಲಿಟ್ಟು ವೆಂಕಟ ಎದ್ದ. ನನಗೆ ಹೊರಡುವಂತೆ ಸನ್ನೆ ಮಾಡುತ್ತ “ಶೇಷಣ್ಣ, ಪುನರ್ಪಾಕದ ಅನ್ನಾನ ಸಾರಲ್ಲಿ ಕಿವಚಿ ಕಳಿಸ್ತೇನೆ- ನನ್ನ ಮಗಳು ತಂದುಕೊಡ್ತಾಳೆ.” ಎಂದು ಹೊರಟ.
“ನಿನ್ನ ಸ್ನೇಹಿತರಿಗೆ ನನ್ನ ಮಗ ಗೊತ್ತಿರಬಹುದು. ಡಾಕ್ಟರ್ ಸುಬ್ರಹ್ಮಣ್ಯಶಾಸ್ತಿ. ಲಂಡನ್ನಿನಲ್ಲಿ ಓದಿದ್ದು. ಬೊಂಬಾಯಿಯಲ್ಲಿ ಇಂಜಿನಿಯರ್, ಆಟಂಬಾಂಬ್ ಮಾಡ್ತಾರಂತಲ್ಲ- ಅಲ್ಲಿ. ಅದೇನೋ ಮೂರು ಸಾವಿರ ಸಂಬಳವಂತಪ್ಪ. ಒಳ್ಳೇ ಬಂಗ್ಲೇ..” ಎನ್ನುತ್ತ ಶೇಷಣ್ಣ ಎದ್ದು ಕೂರಲು ಯತ್ನಿಸಿದ. ವೆಂಕಟ “ ಮಲಕ್ಕೊ ಮಲಕ್ಕೊ” ಎಂದ. ನಾನು ನಮಸ್ಕಾರ ಹೇಳಿ ಹೊರಬಿದ್ದೆ.
*
*
*
ನನ್ನನ್ನು ಮುಂದೆ ಬಿಟ್ಟುಕೊಂಡು ವೆಂಕಟ ಉಣಗೋಲು ತೆಗೆದ. “ ಲೇ ಬಾರೇ ಇಲ್ಲಿ ಯಾರು ಬಂದಿರೋದು ನೋಡೇ” ಎಂದ ತನ್ನ ಆತ್ಮರಕ್ಷಣೆಯ ಅಸ್ತವನ್ನು ಉಲ್ಲಾಸದಿಂದ ಅರ್ಭಟಿಸಿದ. ಉರಿಯುತ್ತ ಹೊರಬಂದ ರುಕ್ಕು ನೀರು ಬಿದ್ದ ಕೊಳ್ಳಿ ಚೊಂಯ್ ಎನ್ನುವಂತೆ ತನ್ನ ಒದ್ದೆ ಕೈಗಳನ್ನು ಸೊಂಟಕ್ಕೆ ಒರೆಸಿಕೊಳ್ಳುತ್ತ ನನ್ನ ನೋಡಿ ಹಿಗ್ಗಿದಳು. “ ಬೇಡಾಂದ್ರೂ ಅನಂತು ಕೊಂಡದ್ದು” ಎಂದು ತರಕಾರಿ ಚೀಲವನ್ನು ಅವಳ ಕೈಯಲ್ಲಿಟ್ಟ. ಸಾವಿರ ತಾಪತ್ರಯಗಳು ಕೊರೆದಿದ್ದ ಅವಳ ಮುಖದ ನಿರಿಗೆಗಳು ಕೃತಜ್ಞತೆಯ ಮಂದಹಾಸದಲ್ಲಿ ಕಣ್ಣಿನ ಸುತ್ತ ಸುಕ್ಕಿದವು. ಕೆನ್ನೆಯಲ್ಲಿ ಅರಿಸಿನ.. ಹಣೆ ಮೇಲೆ ದೊಡ್ಡದಾದ ಕುಂಕುಮ. ಬಿಳಿಗೂದಲಿನ ಮೋಟು ಜಡೆಯಲ್ಲಿ ಸಂಪಗೆ ಹೂವು. ರುಕ್ಕು ಸೊರಗಿದ ದೇಹದ ಕುಳ್ಳಿ. ಒಲೆಯನ್ನು ಊದಿ ಊದಿ ಬತ್ತಿದ ಕಣ್ಣುಗಳು. ಶಕುಂತಳ. ಗೌರಿ, ಗಂಗ ಪ್ರತ್ಯಕ್ಷರಾದರು. ಹಿರಿಯರಾದ ಇಬ್ಬರು ತುಂಡುಟ್ಟಿದ್ದ ಹುಡುಗಿಯರು. ಮೈನೆರೆದವರು. ಬಿಗಿದು ಕಟ್ಟಿದ ಕಪ್ಪು ಜಡೆಯವರು. ಗಾಜಿನ ಬಳೆ, ಕಿವಿಯಲ್ಲಿ ಓಲೆ, ತಲೆಯಲ್ಲಿ ಘಮಘಮಿಸುವ ಸಂಪಗೆ- ಇಷ್ಟೇ ಅವರ ಶೃಂಗಾರ. ನನ್ನನ್ನು ನೋಡಿ ನಾಚುತ್ತ ಹಿಗ್ಗಿದರು. ಒಬ್ಬಳು ಕಾಲು ತೊಳೆಯಲು ಬಿಸಿನೀರು ತಂದಳು. ಇನ್ನೊಬ್ಬಳು ಪಾಣಿಪಂಚೆ ತಂದಳು. ಕಿರಿಯವಳು ತೇಪೆಗಳನ್ನು ಹಾಕಿದ ಲಂಗದಲ್ಲಿ ಅಮ್ಮನ ಬೆನ್ನ ಹಿಂದೆ ಇಣುಕುತ್ತ ನಿಂತಳು. ಕಿರಿಯವಳ ಕೈಯಲ್ಲಿ ಬಾಳೆಯ ನಾರಲ್ಲಿ ಅವಳು ಹೆಣೆಯುತ್ತಿದ್ದ ಮಲ್ಲಿಗೆ ಸರ ಕಂಡೆ. ಕಾಲು ತೊಳೆದುಕೊಳ್ಳುತ್ತ ಓಡಿದೆ: ಮನೆಯ ಎದುರಿನ ಹೂವಿನ ತೋಟ ತುಂಬಾ ಚೆನ್ನಾಗಿತ್ತು. ಎಷ್ಟೋ ವರಷಗಳಿಂದ ನಾನು ನೋಡದಿದ್ದ ಹೂವಿನ ಗಿಡಗಳೆಲ್ಲ ಅಲ್ಲಿದ್ದವು. ದುಂಡುಮಲ್ಲಿಗೆ, ಸೂಜಿಮಲ್ಲಿಗೆ, ಗುಲಾಬಿ, ನಂದಿಬಟ್ಟಲು, ಸೇವಂತಿಗೆ, ಕುಂಕುಮರಾಜಿ, ರತ್ನಗಂಧಿ, ಸಂಜೆಮಲ್ಲಿಗೆ, ಸಂಪಗೆ, ದಾಸವಾಳ, ಹಲವು ಬಗೆಯ ತುಂಬೆ, ಹಲವು ಬಣ್ಣಾದ ಶಂಖಪುಷ್ಪ, ಚೆಂಡು ಹೂ, ಪಾರಿಜಾತ- ನೀರು ಕುಡಿದು ಹಸಿರಾಗಿದ್ದ ತೋಟ. ಮಳೆಯಿಲ್ಲದಿದ್ದರೂ ವೆಂಕಟನ ಬಾವಿ ಬತ್ತಿರಲಿಕ್ಕಿಲ್ಲ.
ಮನೆಯೂ ಅಷ್ಟೆ ಓರಣ. ತಿಕ್ಕಿ ತಿಕ್ಕಿ ಹೊಳೆಯುತ್ತಿದ್ದ ಕಡುಕಪ್ಪಾದ ಮಣ್ಣುನೆಲ. ಅದರ ಮೇಲೆ ಹಿಟ್ಟಿನ ಬಿಳಿ ರಂಗೋಲೆ, ಸುಣ್ಣ ಬಳಿದ ಗೋಡೆ, ಜಂತಿಗಳಲ್ಲಿ ತೂಗುಬಿದ್ದ ಬಣ್ಣಾದ ಸೌತೆಕಾಯಿಗಳು, ಗೋಡೆಯಲ್ಲಿ ಒಂದು ಮೊಳೆಯ ಮೇಲೆ ಪಂಚಾಂಗ, ಇನ್ನೊಂದರಲ್ಲಿ ವೆಂಕಟ ತನ್ನ ಅಂಗಿಯನ್ನು ಬಿಚ್ಚಿ ಸಿಕ್ಕಿಸಿದ. ಒಂದು ಮೂಲೆಯಲ್ಲಿ ನೀಟಾಗಿ ಸುತ್ತಿಟ್ಟ ಹಾಸಿಗೆಗಳು. ಒಡೆದ ತೋರಣ ಬಾಗಿಲಿನ ಮೇಲೆ, ಮತ್ತೆ ಹತ್ತಿಯ ತೋರಣ- ಹೋದ ಗೌರಿಹಬ್ಬದ್ದಿರಬೇಕು. ನಾನು ಕಾಲು ತೊಳೆಯಲು ಬಳಸಿದ ತಾಮ್ರದ ಚೆಂಬು ಝಳಝಳಿಸುತ್ತಿತ್ತು. ಅಕ್ಕಿ ತೊಳೆದ ನೀರಿಗೆ ಹಾಲು, ಬೆಲ್ಲ, ಏಲಕ್ಕಿ ಹಾಕಿದ ತಂಪಾದ ಪಾನಕವನ್ನು ಕಂಚಿನ ಲೋಟದಲ್ಲಿ ಶಕುಂತಳ ನನ್ನೆದುರು ತಂದಿಟ್ಟಳು. ನನಗೂ ಇಬ್ಬರು ಮಕ್ಕಳು ಎಂದೆ. ಒಂದು ಗಂಡು, ಒಂದು ಹೆಣ್ಣು, ಇನ್ನೂ ಸಣ್ಣವರು ಎಂದೆ. ‘ಮನೆಯಲ್ಲೆಲ್ಲ ಸೌಖ್ಯವ?’ ಎಂದಳು ರುಕ್ಕು. ಗಡಿಬಿಡಿಯಲ್ಲಿ ನಡುಮನೆಯಿಂದ ವಿವಾದ ಹುಟ್ಟಿಕೊಂಡಿತು. ‘ ಈಗಲೇ ಅಭ್ಯಂಜನ’ ಎಂದು ಅವನು. ‘ಈಗ ಸ್ನಾನ ಮಾಡಿ ಊಟ ಮಾಡಲಿ, ರಾತ್ರೆ ಅಭ್ಯಂಜನವಾಗಲಿ’ ಎಂದು ರುಕ್ಕು. ರುಕ್ಕುವೇ ಗೆದ್ದಳು . ಸ್ನಾನದ ಮನೆಗೆ ಹೊದ ನನ್ನ ಬೆನ್ನ ಹಿಂದೆ ಬಂದ ವೆಂಕಟ.
‘ನೀನು ಬಂದೀಂತ ನನಗೆ ಷೋಡಶೋಪಾಚಾರ ಪೂಜೆ ನಡೀಲಿಲ್ಲ ಮಾರಾಯ’ ಎಂದ.
ನಾನು ನಗುತ್ತ ಬಿಸಿಬಿಸಿಯಾದ ನೀರನ್ನು ಮೈಮೇಲೆ ಹೊಯ್ದುಕೊಂಡೆ. ಬಚ್ಚಲಲ್ಲಿ ಅಭ್ಯಂಜನಕ್ಕೆಂದು ಬಾನಿ ಬೇರೆ ಇತ್ತು. ಕಪ್ಪು ಕಲ್ಲಿನ ಬಾನಿ. ಅಕ್ಕಪಕ್ಕದಲ್ಲಿ ದೊಡ್ಡ ಕಡಾಯಿಗಳು. ದೊಡ್ಡದೊಂದು ಪಾತ್ರೆಯಲ್ಲಿ ತಂಪಾದ ಮತ್ತಿ. ಡಬ್ಬಿಗಳಲ್ಲಿ ಸೀಗೇಪುಡಿ. ವೆಂಕಟನ ಈ ಎಲ್ಲ ಅಸ್ತಗಳನ್ನು ನೋಡುತ್ತ ನಾನು ಸಂಜೆಗೆ ಹೆದರಿದೆ.
“ಯಾಕೆ ಸಿಟ್ಟು ಬರಿಸ್ತೀಯ ಹೆಂಡತಿಗೆ?” ಎಂದೆ.
“ಸಿಟ್ಟು ಯಾಕೆ ಬರಿಸಬೇಕು. ಅದು ಸುಮ್ಮನೆ ಬರುತ್ತೆ. ನನ್ನನ್ನ ಅಮ್ಮನವರು ರಕ್ಷಿಸಲಿಕ್ಕೇಂತ ಅವಳಿಗೆ ದಯಪಾಲಿಸಿದ ಅಸ್ತ ಅದು. ಈ ಹಡೇನ ಒಂದು ಹದ್ದಲ್ಲಿ ಇಡಬೇಕಲ್ಲ. ಮನೇಲೊಂದು ಒಪ್ಪ ಓರಣ ಬೇಕಲ್ಲ. ಸಿಕ್ಕಿದವರ ಜೊತೆ ನಾನು ಹರಟ್ತ ಕೂತಿರಬಾರದಲ್ಲ. ಈ ಹಡೆಯ ಬೆನ್ನ ಮೇಲೆ ಸವಾರಿಗೆ ಕೂತವರನ್ನ ಹೆದರಿಸಿ ಇಳಿಸಬೇಕಲ್ಲ…”
ವೆಂಕಟ ಉರಿಯುತ್ತಿದ್ದ ಕುಂಟೆಯನ್ನು ಒಲೆಯೊಳಗೆ ತಳ್ಳುತ್ತ ಹೇಳಿದ.
“ ನಿನ್ನ ಮಗ ಎಲ್ಲೋ?” ಎಂದೆ.
“ಅವನಿಗೆ ಇಸ್ಪೀಟಿನ ಚಟ ಅಂಟಿಕೊಂಡಿದೆಯೊ. ಅವನ ಮೇಲೊಂದು ಈ ಯಾವ ಅಸ್ತಾನೂ ನಡೆಯೋಲ್ಲ ಮಾರಾಯ. ನನ್ನನ್ನು ಕಂಡರೆ ಕೆಂಡ ಆಗ್ತಾನೆ.”
ನಿನ್ನ ಫಿಲಾಸಫಿಯ ಸೋಲು ನಿನ್ನ ಮಗನಲ್ಲಿ ನಿನಗೆ ಎದುರಾಗಿದೆ ಎಂದು ನಾನವನಿಗೆ ಹೇಳಲಿಲ್ಲ. ಮೈಗೆ ನೀರು ಹೊಯ್ದುಕೊಳ್ಳುತ್ತ ಆ ಬಗೆಯಲ್ಲಿ ಟೀಕಿಸುವಂತೆ ನಾನವನನ್ನು ನೋಡಿದೆ. ವೆಂಕಟ ತನಗೇನೂ ಅರ್ಥವಾಗದು ಎನ್ನುವಂತೆ ಹೇಳಿದ.
“ತನ್ನ ಅಪ್ಪನಿಗೆ ಕಿಮ್ಮತ್ತಿಲ್ಲಾಂತ ಸುಬ್ಬ ಹಲ್ಲು ಹಲ್ಲು ಕಡೀತಾನೆ. ಆದರೆ ನನ್ನ ಜಾಯಮಾನ ಬದಲಾಗತ್ತ? ಅವನ ಪ್ರಿಸ್ನಿಸ್ಪಾಲರು ಹಾಜರಿ ಸಾಲದೂಂತ ಪರೀಕ್ಷೆಗೆ ಕೂರಿಸಲಿಲ್ಲಂತೆ. ಅದಕ್ಕೆ ಇವ ರಾತ್ರೆ ಅಡ್ಡಕಟ್ಟಿ ಹೊಡೀಬೇಕ? ಅವರ ಜೇಬಲ್ಲಿದ್ದ ದಡ್ಡನ್ನೂ ಕಿತ್ಕೊಂಡ ಅಂತಾರೆ . ಪೇಟೇಲಿ ಒಂದು ಹಿಟ್ಟಿನ ಗಿರಣಿ ತೇಗೀಬೇಕು. ದುಡ್ಡು ಕೊಡು ಅಂತ ಪೀಡಿಸ್ತಾನೆ. ನನ್ನದೋ ಅನನ್ಯಹನಿ. ಎಲ್ಲಿಂದ ದುಡ್ಡು ತರಲಿ?”
‘ನಿನಗೇ ಈ ವಿಲ್ಲೇ ಅರ್ಥವಾಗಲ್ಲೋ ಹ್ಯಾಪ. ಮಡುಗಟ್ಟಿದಲ್ಲಿ ಮಾತ್ರ ಕೆಸರಲ್ಲಿ ಅರಳೋ ಕಮಲ ಪುಷ್ಪದಂತೆ ನೀನು. ಎರಡು ದಿನ ನಿನ್ನ ಜೊತೆ ನಾನು ಇರಲಾರೆ. ನಿನಗೆ ಕಾಲ ಚಲಿಸೊದೇ ಇಲ್ಲವೋ, ರೈಕ್ವಮುನಿ. ಹಾಯಾಗಿ ಕಜ್ಜಿ ತುರಿಸ್ಕೋತ, ಬಿಸಿಲು ಕಾಯಿಸ್ಕೋತ ಇದ್ದೇ ಬಿಡ್ತಿ- ಅದೇ ಹಡೆ ಆಟನ್ನ ಮತ್ತೆ ಮತ್ತೆ ಅಡ್ತ’- ಇಂಥ ಭಾವನೆಗಳನ್ನು ನುಂಗಿಕೊಂಡು ಅಕ್ಕರೆ, ಅಸಹ್ಯಗಳೆರಡನ್ನೂ ಪಡುತ್ತ ನಾನು ಸ್ನಾನ ಮುಗಿಸಿದೆ. ಆಮೇಲೆ ವೆಂಕಟ ‘ಗಂಗೇಚ ಯಮುನೇಚೈವ ಗೋದವರಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದು ಗಟ್ಟಿಯಾಗಿ ಜಪಿಸುತ್ತ ತಾನು ಶಾಸ್ತೋಕ್ತವಾಗಿ ಹೊಯ್ದುಕೊಂಡ ನೀರನ್ನು ಕೆಸರಲ್ಲಿ ಬೆಳೆದ ಕಸುವಿಗೆ ಉಣ್ಣಿಸಿದ. ನಾನು ಕಸುವನ್ನು ನೋಡುವುದು ಕಂಡು ‘ರಾತ್ರೆಗೆ ಪತ್ರಡೆ ಮಾಡಸ್ತೀನೋ’ ಎಂದ.
ಶಕುಂತಳ ನನಗೆಂದು ಕುಡಿ ಎಲೆಯೊಂದನ್ನು ಬೆಂಕಿಯಲ್ಲಿ ಬಾಡಿಸಿ ಅದರ ಸುತ್ತ ರಂಗೋಲಿ ಬಿಡಿಸಿದ್ದಳು. ಕೂರಲು ಮಣೆಯಿಟ್ಟಿದ್ದಳು. ತೊಟ್ಟು ಮುರಿದರೆ ಇನ್ನೂ ಸೊನೆಯಿದ್ದ ಮಾವಿನಮಿಡಿ ಉಪ್ಪಿನಕಾಯಿ. ಹಲಸಿನ ಹಪ್ಪಳ, ಬಾಳ ಮೆಣಸು, ಅರಮರಳುಕಾಯಿಗಳಿದ್ದ ಲಿಂಬೆಹಣ್ಣಿನ ಉಪ್ಪಿನಕಾಯಿ. ಅದೆಷ್ಟೋ ವರ್ಷಗಳ ಹಿಂದಿನ ಒಣಗಿದ ಕಂಚೀಕಾಯಿ ಉಪ್ಪಿನಕಾಯಿ. ಅರಳು ಸಂಡಿಗೆ. ಇನ್ನೊಂದು ಬಗೆಯ ಚಪ್ಪಟೆಯಾದ ಖಾರವಾದ ಸಂಡಿಗೆ-ಹೆಸರು ಕೇಳಲು ನಾಚಿಕೆಯಾಯ್ತು. ಎಲೆಯ ತುದಿಯಲ್ಲಿ ಅಕ್ಕಿಯ ಪಾಯಸ.
“ಎನೂ ಮಾಡಿಲ್ಲ. ಎಲ್ಲ ಅವಸರದಲ್ಲಿ ಮಾಡಿದ್ದು.” ಎಂದು ರುಕ್ಕು ಉಪಚರಿಸುತ್ತ ಬಿಸಿಬಿಸಿ ಅನ್ನಕ್ಕೆ ಸಾರು ಹೊಯ್ದಳು. ಮತ್ತೆ ಎರಡು ಬಗೆಯ ತಂಬಳಿ. ವೆಂಕಟ ಊಹಿಸಿದ್ದಂತೆ ಚಗತೆ ಸೊಪ್ಪಿನ ಪಲ್ಯ. ಕೊತ್ತಂಬರಿ ಸೊಪ್ಪು, ಹಸಿಶುಂಠಿ ಹಾಕಿದ ನೀರು ಮಜ್ಜಿಗೆ ಕೈಯೂರಿ ಕೂತು ವೆಂಕಟ ಕಣ್ಣು ಮುಚ್ಚಿ ಸುಖಿಸುತ್ತ ಊಟ ಮಾಡಿದ. ಅನ್ನವನ್ನು ಬಾಲ್ಯದಲ್ಲೇ ಆದರೂ ಹೆಸರೂ ಮರೆತಿತ್ತೂ, ಹೊಟ್ಟೆಯ ಡೊಳ್ಳನ್ನೆಲ್ಲ ತುಂಬುವ ಹಗುರಾದ ರುಚಿಯಾದ ಊಟ.
ಶಕುಂತಳ ಗೌರಿಯ ಪೈಪೋಟಿಯಲ್ಲಿ ಹಾಸಿಕೊಟ್ಟ ಹಾಸಿಗೆಯಲ್ಲಿ ನಾನು ಮಲಗುವ ಮುಂಚೆ ರುಕ್ಕು ಹೊರಬಾಗಿಲಲ್ಲಿ ನಿಂತು.
“ಏ ಸುಬ್ಬಾ ಸುಬ್ಬಾ, ಊಟ ಮಾಡು ಬಾರೋ” ಎಂದು ಕೂಗುವುದು ಕೇಳಿಸಿತು. ಅರ್ಧ ಆರ್ತವಾಗಿ ಅರ್ಧ ಸಿಟ್ಟಿನಲ್ಲಿ ಚಡಪಡಿಸುತ್ತ ಕೂಗುವ ತಾಯಿಯ ಧ್ವನಿ. “ರೀ ರೀ ಕರೀರ್ರಿ ಸುಬ್ಬನ್ನ.”
ವೆಂಕಟನ ಜೊತೆ ನಾನೂ ಹೊರಬಂದು ನೋಡಿದೆ. ಶರ್ಟು ಪ್ಯಾಂಟು ತೊಟ್ಟ ಬೆನ್ನೊಂದು ಮಾತ್ರ ನನಗೆ ಕಂಡಿತು. ಕತ್ತಿನ ಮೇಲೆ ಹಿಪ್ಪಿ ಕೂದಲು. ಬಿರಬಿರನೆ ಹಿಂದಕ್ಕೆ ತಿರುಗಿ ನೋಡದೆ ಅವನು ನಡೆಯುತ್ತಿದ್ದ. ನಡಿಗೆಯ ಕ್ರಮದಲ್ಲಿ ಮಾತ್ರ ಥೇಟು ಅಪ್ಪನೆ. ಆದರೆ ಅಪ್ಪನಿಗಿಂತ ಉದ್ದ. ಸಪೂರ. ವೆಂಕಟ ಅಂಗಿಯಿಲ್ಲದೆ ಬರೀ ಪಂಚೆಯಲ್ಲಿ ಅವನ ಹಿಂದೆ ಓಡಿಹೋದ. ಸುಬ್ಬ ನಿಂತು, ಹಿಂದಕ್ಕೆ ತಿರುಗಿ, ಕೈಗಳನ್ನು ಕ್ರೂರವಾಗಿ ಬೀಸುತ್ತಾ ಏನೋ ವದರುತ್ತಿರುವವನಂತೆ ಕಂಡ. ವೆಂಕಟ ಅಷ್ಟಾವಕ್ರನಂತೆ ಕೈಕಟ್ಟಿ ನಿಂತು ಏನೇನೋ ಬೇಡಿಕೊಳ್ಳುತ್ತಿದ್ದ. ಸುಬ್ಬ ಚಕ್ಕನೆ ಬಾಗಿ, ಹುಡುಕಿದ. ಕಲ್ಲೆತ್ತಿಕೊಂಡ. ವೆಂಕಟ ಕೈಗಳನ್ನು ಮುಖಕ್ಕೆ ಅಡ್ಡ ಮಾಡಿ ಹಿಂದೆ ಹಿಂದೆ ಸರಿಯುತ್ತ ಇನ್ನೂ ಏನೋ ಹೇಳಿಕೊಳ್ಳುತ್ತಿದ್ದ. ಸುಬ್ಬ ಬಿರಬಿರನೆ ನಡೆದುಬಿಟ್ಟ. ತುದಿಗಾಲಲ್ಲಿ ರುಕ್ಕು ನಿಂತು ಮಗನಿಗಾಗಿ ಸಂಕಟ ಪಡುತ್ತಿರುವುದನ್ನು ನೋಡಲು ನನಗೆ ಕಷ್ಟವಯಿತು. ಹ್ಯಾಪ ಮೋರೆಯಲ್ಲಿ ಹಿಂದಕ್ಕೆ ಬಂದ ವೆಂಕಟ ನನ್ನನ್ನು ಕಂಡು-
“ಸುಬ್ಬನಿಗೆ ತಲೆ ಬಿಸಿಯಾಗಿಬಿಟ್ಟಿದೆ ಮಾರಾಯ. ಹುಲಿಯಂತೆ ಇನ್ನೇನು ನನ್ನ ಮೇಲೆ ಎರಗಲಿದ್ದ” ಎಂದು ಹುಸಿದಿಗಿಲಿನಲ್ಲಿ ಕಂಪಿಸುತ್ತಿರುವವನಂತೆ ನಟಿಸಿದ.
“ನಿಮ್ಮ ಹಡೇನ ಈಗ್ಲಾದ್ರೂ ನಿಲ್ಲಿಸಬಾರ್ದ? ಮಾಣಿ ಕೆನ್ನೆಗೆ ನಾಕು ಬಿಟ್ಟು ಎಳಕೊಂಡು ಬರೋಕೆ ಆಗದ ನೀವು ಅದೆಂಥ ತಂದೆಯೋ ನಾಕಾಣೆ.” ಎಂದು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತ ರುಕ್ಕು ಒಳಗೆ ಹೋದಳು.
“ನೀವೇನೊ ಈ ಊರಲಿ ಕೊಳೆತಿರಿ ಎಂದರೆ ಈಗಿನ ಕಾಲದ ನಿಮ್ಮ ಮಗ ಕೊಳೀತಾನ? ಅಪ್ಪ ಎಂದರೆ ಊರಿಗೆಲ್ಲ ಸಸಾರ, ದುಗ್ಗಾಣಿ ಬೆಲೆ ನಮಗಿಲ್ಲ. ಮಗನಿಗೆ ಹೇಗೆ ಗೌರವ ಬರತ್ತೆ ಹೇಳಿ. ನೀವೂ ಹೋದರೆ ಹೋದಲ್ಲಿ ಬಂದರೆ ಬಂದಲ್ಲಿ ಹಿಹಿಹಿ ಅಂತ ಇದ್ದುಬಿಡ್ತೀರಿ.ನಿಮ್ಮಂಥವರಿಂದ ಮಕ್ಕಳು ಏನು ಕಲಿತಾವು. ನಿಮ್ಮಂಥವರಿಗೇಕೆ ಸಂಸಾರ ಹೇಳಿ. ಎಷ್ಟು ವರ್ಷದಿಂದ ನಿಮಗೆ ಪೆನ್‌ಶನ್ ಬಂದಿಲ್ಲ. ನಾನೇ ಮಾಡಿ ಸಾಯಬೇಕು. ದೊನ್ನೆ ಕಟ್ಟಬೇಕು. ಎಲೆ ಮಾಡಬೇಕು. ಮನೆ ಒಪ್ಪ ಓರಣ ನೋಡಿಕೋಬೇಕು. ಮಕ್ಕಳನ್ನ ಹದ್‌ಬಸ್ತಲ್ಲಿಡಬೇಕು. ಒಂದು ಕಾಸು ಬಿಚ್ಚದ ಆ ಜುಗ್ಗ ಶೇಷಣ್ಣನಿಗೆ ಮೂರು ಮೂರು ಸಾರಿ ಬೇಯಿಸಿ ತಿನ್ನಿಸಬೇಕು. ಪುನರ್ಪಾಕದ ಅನ್ನ ಸಾರು ಕಳಿಸಿದ್ರೆ ‘ಒಂದು ಚೂರು ಮಾವಿನ ಮಿಡಿ ಕಳಿಸ್ಬಾರ್ದ? ನಿಮ್ಮ ತಾಯಿ ಕೈ ಯಾಕೆ ಹೀಗೆ ಗಿಡ್ಡ’ ಅಂದ್ನಂತೆ. ಬಿಟ್ಟಿ ಗೇಯೋದಲ್ದೆ ಅವನಿಂದ ನಾನು ಹೀಗೆ ಅನ್ನಿಸ್ಕೋಬೇಕ? ಈ ಹಾಳು ಊರು ಬಿಟ್ಟು ನಾನಾಗಲೀ ಮಕ್ಕಳಾಗಲೀ ಬೇರೇನೂ ಕಂಡಿಲ್ಲ. ಒಂದು ಜಾತ್ರೆಯೊ, ಒಂದು ಸಿನಿಮಾನೊ, ಒಂದು ಪಟ್ಟಣವೊ- ನಾವೇನು ಕಂಡಿದೀವಿ ಹೇಳಿ. ಪಾಪ ಸುಬ್ಬ. ಅಕ್ಕಿ ಕಡಲೇಬೇಳೆ ಪಾಯಸ ಅಂದರೆ ಅದಕ್ಕಿಷ್ಟ. ಏನೂ ತಿನ್ನದೆ ಬಿಸಿಲಲ್ಲಿ ಅಲೀತಿದೆ. ಅಪ್ಪನ ಮ‌ಏಲೆ ಕೈಮಾಡುವಷ್ಟು ಕೆಟ್ಟಿದೆ. ಯಾರೋ ಆಗದವರು ಮಾಟ ಮಾಡಿಸಿದ್ದಾರೆ. ಕೆಟ್ಟದ್ದು ಏನೂ ನಿಮಗೆ ತಿಳಿಯಲ್ಲ. ಶುದ್ಢ ಭೋಳೆ ನೀವು…”
ಮಳೆಯಂತೆ ಜಿಟಿಜಿಟಿ ಬೀಳುತ್ತಿದ್ದ ಬೈಗುಳದಲ್ಲಿ ನನಗೆ ಜೊಂಪು ಹತ್ತುತ್ತಿದ್ದ,ತೆ ಎಷ್ಟು ಹೊತ್ತಾಯ್ತೊ ತಿಳಿಯದು. ವೆಂಕಟ ನನ್ನ ಸುತ್ತ ಭೃಂಗಾಮಲಕದ ಸೀಸೆ ಹಿಡಿದುಕೊಂಡು ಚಡಪಡಿಸುತ್ತಿದ್ದ ಎಂಬುದು ಕಣ್ಣು ಬಿಟ್ಟೊಡನೆ ತಿಳಿಯಿತು. ‘ಇದೇನೊ ಮಾರಾಯ’ ಎನ್ನುತ್ತ ಎದ್ದು ಕೂತೆ. ಬಾಯಲ್ಲಿ ಕವಳ ತುಂಬಿಸಿಕೊಂಡು ಮುಗುಳ್ನಗುತ್ತ ‘ಣಡಿ ಣಡಿ’ ಎಂದ. ನಾನು ಎದ್ದು ಬಚ್ಚಲಿಗೆ ಅವನನ್ನು ಹಿಂಬಾಲಿಸಿದೆ. ಸಂಜೆಯಾಗಿತ್ತು. ಸೊಂಟಕ್ಕೆ ಉಡಿದಾರ ಕಟ್ಟಿಸಿ ಕೌಪೀನ ಹಾಕಿಸಿ ನನ್ನ ಬೆತ್ತಲು ಮಾಡಿದ. ಒಲೆಯಲ್ಲಿ ಭೋರ್ಗರೆಯುವ ಬೆಂಕಿ. ಕಡಾಯಿಗಳಲ್ಲೆಲ್ಲ ತಣ್ಣೀರು ತುಂಬಿಸಿಟ್ಟಿದ್ದ. ಬಚ್ಚಲಿನ ಬಾಗಿಲು ಹಾಕಿಬಂದು ಮಣೆಯ ಮೇಲೆ ಕೂರಿಸಿದ ದೂರ್ವೆಯನ್ನು ಎಣ್ಣೆಯಲ್ಲದ್ದಿ ನನ್ನ ಹಣೆಗೂ ನೆತ್ತಿಗೂ ಮುಟ್ಟಿಸಿ ಕವಳ ತುಂಬಿ ಬಾಯೆತ್ತಿ ಮಣಮಣಾಂತ ಏನೋ ಮಂತ್ರ ಹೇಳಿ ಎಣ್ಣೆ ಶಾಸ್ತ ಮಾಡಿದ. ಕೈಗೆ ಎಣ್ಣೆಯನ್ನು ಹಚ್ಚಿ ಮೂಸಿ ನೋಡಿದ. ಕೆರೆ ಕಟ್ಟೆ ತೋಡಲು ಹೊರಟವನಂತೆ ಅವನು ಪಾಣಿಪಂಚೆ ಸುತ್ತಿದ್ದ. ಬಾಯಲ್ಲಿನ ಕವಳ ಉಗಿದು ಬಂದು ಪಾದಗಳಿಂದ ಶುರುಮಾಡಿದ. ಮೈಪೂರ್ತ ಎಣ್ಣೆ ಹಚ್ಚಿದ ಮೇಲೆ ತಟ್ಟೆಯಲ್ಲಿ ಹರಳೆಣ್ಣೆ ಹಾಕಿ, ಒಂದು ಸ್ಟೂಲಿನ ಮೇಲೆ ನನ್ನ ಕೂರಿಸಿ ತಟ್ಟೆಯಲ್ಲಿ ನನ್ನ ಪಾದಗಳನ್ನಿರಿಸಿದ. ‘ಅದರ ತಂಪು ಕ್ರಮೇಣ ನೆತ್ತಿಗೆ ಏರತ್ತೆ’ ಎಂದು ವ್ಯಾಖ್ಯಾನಿಸಿದ. ಕೈಗಳನ್ನು ಮೇಲಕ್ಕೆ ಕೆಳಕ್ಕೆ ಝಾಡಿಸಿ ಅಂಗೈಯನ್ನು ಸವುಟಿನಂತೆ ಹಳ್ಳಮಾಡಿ, ಭೃಂಗಾಮಲಕವನ್ನು ಅದರಲ್ಲಿ ಹೊಯ್ದುಕೊಂಡು ನೆತ್ತಿಗದನ್ನು ಸುರಿದು ‘ಅಮ್ಮ ಮಹಾತಾಯಿ’ ಎಂದು ದಡಬಡನೆ ಎರಡು ಕೈಗಳಿಂದಲೂ ತಲೆಯನ್ನು ಮದ್ದಲೆಯಂತೆ ಬಡಿದ. ಬಡಿಯುವ ಲಯ, ಘಾತಗಳನ್ನು ಬದಲಿಸುತ್ತ “ನಿನ್ನ ನೆತ್ತಿ ಜೊತೆ ಮಾತಾಡ್ತಿದೀನಿ. ಹೇಗಿದೆ ಸದ್ದು? ಈಗ ಮೃದಂಗದಂತೆ ಕೇಳಿಸುತ್ತಲ್ವ?” ಎಂದ. ನಾನು ದಾಕ್ಷಿಣ್ಯದಿಂದ ‘ಹೂಂ’ ಎಂದೆ. ಈ ಪೂಜೆಯಿಂದ ನನಗೆ ಮುಜುಗರವಾಗತೊಡಗಿತ್ತು. ಅವನು ಬಡಿದ ಕ್ರಮದಿಂದ ನನ್ನ ಹಿಂದೆ ಆವ ಕುಣಿಯುತ್ತಿರಬದುದೆಂಬ ಅನುಮಾನವಾಯಿತು. ಆದರೆ ಕತ್ತು ತಿರುಗಿಸುವಂತಿಲ್ಲ. “ನೆತ್ತಿಯ ಮೂಲಕ ಈ ನಾದ ನಿನ್ನ ನಾಭಿಯವರೆಗೂ ಹರಿಯುತ್ತದೊ” ಎಂದ. “ಈ ನಾದ ಷಟ್ಚಕ್ರಗಳನ್ನು ಪುಸಲಾಯಿಸುತ್ತೆ ಅಂತಾರಪ್ಪ. ನನಗದರ ವಿಶೇಷ ಜ್ಞಾನವೇನೂ ಇಲ್ಲ, ಅನ್ನು. ಆದರೆ ಕೆಲಸ ಮಾತ್ರ ಬರತ್ತೆ” ಎಂದು ಏದುತ್ತ ಹೇಳಿದ. ಖಂಡಿತ ಅವನು ಕುಣಿಯುತ್ತಿರಬೇಕು. ಸಂಗೀತದ ನಡುವೆ ತನಿ ಬಿಟ್ಟಾಗ ಘಟ ಬಾರಿಸುತ್ತಿರುವವನಂತೆ ಅವನು ನನಗೆ ಭಾಸವಾದ.
ಈ ತಾಡನ ಕ್ರಿಯೆಯ ನಂತರದ ವಿಧಿಗಳು ನಾನಾ ಬಗೆಯ ಕಂಪನಗಳನ್ನು ಉಂಟುಮಾಡುವ ಉದ್ದೇಶ ಹೊಂದಿದ್ದವು. ವೆಂಕಟನ ಏದುಸಿರಿನ ಮೃದುವಾಗಿ ಕಂಪಿಸುವ ಮಾತುಗಳ ರನ್ನಿಂಗ್ ಕಾಮೆಂಟರಿ ಸಹಿತ ಈ ಕಂಪನಕ್ರಿಯೆ ನಡೆದಿತ್ತು. ದೂರದಲ್ಲಿ ನನ್ನ ಬೆನ್ನಿಗಿದ್ದ ಬೆಂಕಿಯಿಂದ ನನ್ನ ಹಿಂಭಾಗ ಕಾದಿತ್ತು. ಈಗ ವೆಂಕಟ ಪ್ರದಕ್ಷಿಣೆ ಸುತ್ತುತ್ತ ನನ್ನ ತಲೆಯ ಮೇಲೆ ಬೇರೆಬೇರೆ ಭಾಗಗಳನ್ನು ಬೆರಳುಗಳ ವೈವಿಧ್ಯಮಯ ಸಂಯೋಜನೆಗಳಿಂದ ಕಚಗುಳಿಯಿಡುತ್ತ, ಚಿವುಟುತ್ತ, ಹಿಂಜುತ್ತ ಮಿಡಿಯುತ್ತ, ಸವರುತ್ತ, ಕೆರೆಯುತ್ತ, ನೂಕುತ್ತ, ಎಳೆಯುತ್ತ ಎಣ್ಣೆಯಿಂದ ಪೂಜಿಸಿದ.. “ಈಗ ನಿನ್ನ ತಲೆಯೇ ನನ್ನ ಜೊತೆ ಮಾತಾಡ್ತಿದೆ”- ಎಂದು ತನ್ನ ತಲೆಗೆ ಸುತ್ತಿದ್ದ ಪಾಣಿಪಂಚೆಯಿಂದ ಬೆವರೊರೆಸಿಕೊಂಡು ಷಟ್ಚಕ್ರಗಳನ್ನು ಎಬ್ಬಿಸುವ ತೈಲಮರ್ದನದ ಪೂಜೆಯ ಎರಡನೇ ಹಂತಕ್ಕೆ ಉದ್ಯುಕ್ತನಾದ. ಅವನಿಗಿದ್ದದ್ದು ಇಪ್ಪತ್ತು ಬೆರಳೊ, ನೂರಾರೊ ಎಂದು ನನಗಚ್ಚರಿಯಾಗುತ್ತಿದ್ದಂತೆ ಅವನ ರನ್ನಿಂಗ್ ಕಾಮೆಂಟರಿ ಮಂತ್ರದ ಉದ್ದೀಪನವನ್ನು ತನ್ನ ಲಯಬದ್ಧ ರಾಗದಲ್ಲಿ ಅಗತ್ಯಕ್ಕನುಗುಣವಾಗಿ ಬದಲಾಗುತ್ತ ಪಡೆದುಕೊಂಡಿತು- ಈ ಪರಿಯಲ್ಲಿ:
“ಅನಂತು ಅನಂತು ಇದೀಗ ಕಾಡುಹೊಕ್ಕಿ ಕಾಡುಹೊಕ್ಕಿ… ಕಾಡಲ್ಲಿ ಮರ, ಮರ, ಮರ… ಮರದ ಮೇಲೆ ಗಿಣಿ, ಗಿಣಿ, ಹಸಿರು ಗಿಣಿ… ಎಲೆಗಳ ನಡುವೆ ಹಸಿರು ಹಸಿರು ಗಿಣಿ… ಹಸಿರು ಗಿಣಿಗೆ ಬಾಗಿದ ಕೊಕ್ಕು, ಬಾಗಿದ ಕೊಕ್ಕಲ್ಲಿ ಕೆಂಪು ಹಣ್ಣು, ಕೆಂಪು, ಕೆಂಪು ಹಣ್ಣು…
ಕೆಳಗೆ ತಂಪು, ತಂಪು. ತಂಪಿನಲ್ಲೊಂದು ಮೊಟ್ಟು, ಮೊಟ್ಟಿನಿಂದ ಘಮಘಮ… ಅದು ಹಳದಿ ಬಣ್ಣದ ಕೇದಿಗೆ, ನೋಡು…ನೋಡು… ಸಂದಿಂದ ನೋಡು. ಹೇಗೆ ಬಿರೀತಿದೆ ನೋಡು… ಒರಟಾದ ಉದ್ದನೆಯ ಮುಳ್ಳಂಚಿನ ಹಸಿರೆಲೆ. ಹಸಿರಿನ ಒಳಗೆ ಮೃದುವಾದ ಹಳದಿ…ನುಣುಪಾದ ಹಳದಿ… ಪುಡಿಪುಡಿ ಹಳದಿ… ಜಾರೋ ಹಳದಿ… ಗುಟ್ಟಾದ ಹಳದಿ…
ಮುಂದೆ ನಡಿ ಮೆತ್ತಗೆ ನಡಿ… ಮೆಲ್ಲ ಮೆಲ್ಲ ನಡೀತ ನೋಡು…
ಇದು ಬಸರಿ. ಇದು ಹಲಸು. ಇದು ನಂದಿ. ಇದು ಮುತ್ತುಗ. ಇದು ಮಾವು. ಇದು ಆಲ. ಇದು ರಂಜ. ಆಲದ ಬೀಳು ನೋಡು. ಬೀಳಿನ ತುದಿ ನೋಡು… ತುದೀಲಿ ಅದಕ್ಕೆ ಉಗುರಿದೆ… ಇದು ಋಷಿಯೋ- ಜಡೆ ಋಷಿ…
ಇಲ್ಲೆಲ್ಲ ಆಕಾಶ ಚೂರು ಚೂರಾದ ನೀಲಿ. ಹಣುಕೋ ನೀಲಿ. ಕೆಣಕೋ ನೀಲಿ, ಕಿರಿ ಕಿರಿ ನೀಲಿ. ಪಿರಿಪಿರಿ ನೀಲಿ. ಮುಂದೆ ನಡಿ. ಮೆತ್ತಗೆ ನಡಿ. ಮುಂದೆ ನಡಿ… ನಿಲ್ಲು… ಈಗ ಬಯಲು. ಬಯಲೋ ಬಯಲು. ಬಟ್ಟ ಬಯಲು ನೋಡು…
ಎದುರೊಂದು ಪುಟ್ಟ ಗಿಡ. ಗಿಡದ ಮೇಲೊಂದು ಎಲೆ.. ಎಲೆ ಮೇಲೊಂದು ಚಂಗನೆ ನೆಗೀತಿದೆ. ಚಂಗನೆ ನೆಗೀತಿದೆ… ಪುಟೀತಿದೆ…ಹೀಗೆ…ಹೀಗೆ ಯಾವತ್ತೋ ಒಂದು ದಿನ ನೀನು ಸ್ಕೂಲಿಗೆ ಬರ್ತಿದ್ದಾಗ ಅದು ನೆಗೆದಿತ್ತು… ಅಲ್ವ? ನೀನು ಚೀಲಾನ್ನ ಬಿಸಾಕಿ ನೋಡ್ತಾ ನಿಂತಿ ನೋಡ್ತಾ ನಿಂತಿ ನೋಡ್ತಾನೆ…
ಸೂರ್ಯನ ಕುದುರೇನ ನೋಡ್ತಾ ನಿಂತಿ. ಅದರ ಡೊಂಕು ಕಾಲನ್ನು ನೋಡ್ತಾ ನಿಂತಿ. ಅದರ ಡುಬ್ಬು ಬೆನ್ನನ್ನು ನೋಡ್ತಾ ನಿಂತಿ. ಅದರ ಅಲ್ಲಾಡೋ ಮೀಸೇನ್ನ ನೋಡ್ತಾ ನಿಂತಿ. ಅತ್ತ, ಮತ್ತಿತ್ತ. ಅತ್ತ… ಮತ್ತಿತ್ತ ಅತ್ತ, ಅತ್ತ.. ಅರರೆ ಮತ್ತಿತ್ತ…
ಪುಟ್ಟ ಕುದುರೆ, ಪುಟಾಣಿ ಕುದುರೆ… ಹೇಗೆ ಸೂರ್ಯ ಅದರ ಬೆನ್ನ ಮೇಲೆ ಸವಾರಿ, ಮಾಡ್ತಾನಲ್ಲಾಂತಾ ನೋಡ್ತಾ ನಿಂತಿ…
ಹಸಿರಿನ ಮೇಲೆ ಸೂರ್ಯ ಸವಾರಿ ಮಾಡ್ತಾನೋ ಸರದಾರ ಅವ…ಇದು ಪುಟ್ಟ ಕುದುರೆ. ಹಸಿರು ಬಣ್ಣದ ಪುಟಾಣಿ ಕುದುರೆ. ಚಂಗನೆ ಹಗುರಾಗಿ ಹಾರೋ ಕುದುರೆ. ಅದರ ಡುಬ್ಬು ಬೆನ್ನಿನ ಮೇಲೆ ದೊಡ್ಡ ಸೂರ್ಯ ಈಟೀಟು ಕೂತ. ಈಟೀಟು ಕೂತ. ಹಗುರಾಗಿ ಕುತ. ಕಾಣದಂತೆ ಕೂತ. ಸಂದೀಲಿ ಮಿಂಚುತ ಕೂತ…
ಎಲ್ಲಿ ಎಲ್ಲಿ ಮಿಂಚುತಾನೆ ನೋಡು. ಚಂಚದಲ್ಲಿ ಮಿಂಚುತಾನೆ. ಹಸಿರಿನ ಮೇಲೆ ಮಿಂಚುತಾನೆ. ಕಣ್ಣು ಪಾಪೇಲಿ ಮಿಂಚುತಾನೆ. ಮೊಡದ ಅಂಚಿಂದ ಮಿಂಚುತಾನೆ. ಬುಡು ಬುಡೂ ಉರುಳುತಾನೆ. ಹರಿಯೋ ನೀರಲ್ಲಿ ಜಾರುತಾನೆ. ಜಾರಿಬಿದ್ದು ಓಡುತಾನೆ. ಇಡೀ ಇದ್ದವನು ಬಿಡಿಬಿಡಿಯಾಗುತ್ತಾನೆ. ನೆರಳಾಗ್ತಾನೆ. ಬಣ್ಣವಾಗ್ತಾನೆ. ಕತ್ತಲಾಗ್ತಾನೆ. ಉಷೆಯಾಗ್ತಾನೆ. ಸುರೀತಾನೆ…
ನೋಡು ಈಗ ಬರೀ ಬಯಲು. ಬಟ್ಟ ಬಯಲು. ಮೆಲೆ ಸುರೀತಿರೋ ಸೂರ್ಯ. ಅವನ್ನ ಹಗುರಾಗಿ ಹೊತ್ಕೊಂಡು ನೆಗೀತ, ನೆಗೀತ ಇರೋದು ಬಯಲು. ಇದೊಂದು ಸೂರ್ಯನಕುದುರೆ ಮಾತ್ರ. ಜೀನಿಲ್ಲದ ಅದರ ಜರ್ಬು ನೋಡು. ಅಂಕೂ ಡೊಂಕೂ ಕಾಲು ನೋಡು…ಸಟಗೊಂಡು ಇರೋ ಬಾ ನೋಡು… ದೇಶ ಹುಡುಕೋ ಮೀಸೆ ನೋಡು.
ಎಲೇಂದ ಎಲೆಗೆ ನೆಗೀತ ಇದೆ. ಇಡೀ ನೋಡು. ಬಿಡಿಬಿಡಿಯಾಗಿ ನೋಡು. ಹಸಿರಿನ ರಾಶೀಲಿ ಕೆನೆಯಾದ ಹಸಿರು. ಕಣ್ಣೂ ಹಸಿರು. ಹೇಳ್ತಿದೆ ಕೇಳು. ಸೂರ್ಯನ ಕುದುರೆ ಹೇಳ್ತಿದೆ ಕೇಳು:
ನಾನೇನು ಕುದುರೆ ನೀನ್ಯಾವ ಮನುಷ್ಯ. ನಾನೂ ನೀನೂ ಅದಲೂ ಬದಲೂ.
ಅನಂತಣ್ಣ, ಅನಂತಣ್ಣ, ಚಂಗನೆ ಹಾರೋ ಅನಂತಣ್ಣ, ಸೂರ್ಯನ್ನ ಹೊರೊ ಅನಂತಣ್ಣ.
ಈಗ ಬಿಡ್ತು, ಈಗ ಬಿಡ್ತು. ಸಿಟ್ಟು ಬಿಡ್ತು. ಸಿಡುಕು ಬಿಡ್ತು. ಗರ್ವ ಬಿಡ್ತು. ರಾವು ಬಿಡ್ತು. ದುಡ್ಡಿನ ಮೇಲಿನ ಮೋಹ ಬಿಡ್ತು. ಹೆಸರಿನ ಮೇಲಿನ ಜರ್ಬು ಬಿಡ್ತು. ಎಲ್ಲಾ ಬಿಡ್ತು. ಎಲ್ಲಾ ಬಿಡ್ತು…
ಅಪ್ಪನ ದೃಷ್ಟಿ ಅಮ್ಮನ ದೃಷ್ಟಿ ಮಂತ್ರಿ ದೃಷ್ಟಿ ತಂತ್ರಿ ದೃಷ್ಟಿ ಸೂಳೇ ದೃಷ್ಟಿ ರಂಡೇ ದೃಷ್ಟಿ ಮುಂಡೇ ದೃಷ್ಟಿ ಸುಡುಗಾಡು ದೃಷ್ಟಿ ಯೋನಿ ದೃಷ್ಟಿ ಓಣಿ ದೃಷ್ಟಿ ಹರಕಲು ದೃಷ್ಟಿ ಮುರುಕಲು ದೃಷ್ಟಿ ಓದೊ ಎಲ್ಲಾ ಪುಸ್ತಕದ ದೃಷ್ಟಿ ಬಿಡ್ತು ಬಿಡ್ತು ದೃಷ್ಟಿ ಬಿಡ್ತು.
ಉಳಿದದ್ದೊಂದೇ ಸೂರ್ಯನ ಕುದುರೆ. ನೀನೇ ಕುದುರೆ ನೀನೇ ಕುದುರೆ…”
ಇವನ ಮಾತಿನ ಓಘ ಬದಲಾದಂತೆ ಮರ್ದನ ಕ್ರಿಯೆಯು ಕಂಪನಕ್ರಮಗಳೂ ಬದಲಾಗುತ್ತ, ಸಾವಿರಾರುಬೆರಳುಗಳು ತಲೆಯ ಮೇಲೆ ನರ್ತಿಸುತ್ತಿದ್ದವು. ಕಣ್ಣಿಗೆ ಎಣ್ಣೆ ಇಳಿದು ಉರಿಯತೊಡಗಿತು. ಅದನ್ನು ಗಮನಿಸಿದ ವೆಂಕಟ ಉಸ್ಸೆಂದು ತನ್ನ ತಲೆಗೆ ಸುತ್ತಿದ್ದ ಪಾಣಿಪಂಚೆಯಿಂದ ನನ್ನ ಕಣ್ಣನ್ನು ಒರೆಸಿದ. ಆರ್ತನಾದ ಧ್ವನಿಯಲ್ಲಿ ಕೇಳಿದ:
“ಅನಂತು ಬೆಳದಿಂಗಳು ಕಾಣಿಸಲಿಕ್ಕೆ ಶುರುವಾಗಿತ್ತೇನೋ?”
ನನಗೆ ಇಲ್ಲವೆನ್ನಲು ಮನಸಾಗಲಿಲ್ಲ. ಹೂ ಎಂದೆ. ವೆಂಕಟ ಮೈಗೆ ನೀರು ಹೊಯ್ದುಕೊಂಡವನಂತೆ ಬೆವರಿದ್ದ. ನುಣ್ಣಗೆ ಅವನೆದುರು ಕೂತ ನನ್ನ ನಗ್ನತೆಯಿಂದ ನಾಚಿಕೆಯಾಯ್ತು.
“ಇಲ್ಲ- ನಿನಗೆ ಬೆಳದಿಂಗಳ ತರ ಕಂಡಿದೆಯಷ್ಟೆ. ಇನ್ನೊಂದು ಅಭ್ಯಂಜನಕ್ಕೆ ಬೆಳದಿಂಗಳೇ ಕಾಣಿಸ್ತದೆ” ವೆಂಕಟ ನಸ್ಯವೇರಿಸಿದ.
ನಾನು ತಿಳಿದದ್ದು ಸುಳ್ಳು. ಈ ಹಡೆ ವೆಂಕಟನೂ ಒಬ್ಬ ಹವಣಿಕೆಯ ರಾಜಕಾರಣಿಯೇ. ಎಂಥ ಮ್ಯನಿಪುಲೇಟರ್. ನನ್ನ ಸ್ಥಿತಿಯನ್ನೇ ಬದಲಾಯಿಸಲು ಹವಣಿಸಿದ್ದ.
ಬಿಸಿ ನೀರು ತುಂಬಿದ ಬಾನಿಯಲ್ಲಿ ಕೂರಿಸಿದ. ಕಂಕುಳ ಸಂದಿಯನ್ನೆಲ್ಲ ಉಜ್ಜಿಕೋ ಎಂದ. ತಣ್ಣನೆಯ ಮತ್ತಿಯ ಲೋಳೆಯನ್ನು ತಲೆಗೆ ಸುರಿದು ಸೀಗೆಯಲ್ಲಿ ಗಸಗಸ ಉಜ್ಜಿದ. ಬೋಸಿಯಲ್ಲಿ ನೀರು ತುಂಬಿ ಎತ್ತರದಿಂದ ಪಟಾಪಟಾ ಎಂದು ಚೆಲ್ಲಿದ. ಕಾದು ಬೆಂದು ನಾನು ರಸಪುರಿಯಂತೆ ಕೆಂಪಾಗಿದ್ದೆ. ನನ್ನ ಕೈಗಳಲ್ಲಿ ಬಲ ಉಳಿದಿರಲಿಲ್ಲ. ಅವನೇ ಮೈ ಒರೆಸಿದ. ಬೆಲ್ಲದ ಪಾನಕ ಕುಡಿಸಿ, ಹಂಡೆಯ ಕರಿಯನ್ನು ಹಣೆಗೆ ಹಚ್ಚಿ ಹಾಸಿಗೆಯಲ್ಲಿ ಮಲಗಿಸಿ ಮನೆಯಲ್ಲಿದ್ದ ಎಲ್ಲ ಕಂಬಳಿಗಳನ್ನೂ ಹೊದೆಸಿ ‘ಚೆನ್ನಾಗಿ ಬೆವರ ಬೇಕು’ ಎಂದ. ಸ್ವಲ್ಪ ಹೊತ್ತಿನಲ್ಲೇ ನಾನು ಇನ್ನೊಂದು ಸ್ನಾನ ಮಾಡಿದವನಂತೆ ಬೆವತಿದ್ದೆ. ಮತ್ತೆ ನನ್ನನ್ನು ಒರೆಸಿ ಚಾಪೆಯ ಮೇಲೆ ಮಲಗಿಸಿದ. ಬಿಸಿ ಬಿಸಿಯಾದ ಕಾಫಿಯನ್ನು ತಂದುಕೊಟ್ಟ. ಕಾಫಿ ಕುಡಿದ ನನಗೆ ಜೊಂಪು ಹತ್ತಿತ್ತು. ರುಕ್ಕು ಕಣ್ಣಿರು ಹಾಕುತ್ತ ಪತ್ರಡೆಯ ಏರ್ಪಾಡಿನಲ್ಲಿ ತೊಡಗಿದ್ದಳು.
ನನಗೆ ನಿದ್ದೆ ತಿಳಿದು ಎಚ್ಚರಾದಾಗ ವೆಂಕಟ ಹೆಂಡತಿಯನ್ನು ಬೇಡುತ್ತಿದ್ದ.“ಶೇಷಣ್ಣನಿಗೆ ಗಂಜಿ ಮಾಡಿಕೊಡೇ. ನಾನೇ ಬಿರ್ರನೆ ಹೋಗಿ ಕುಡಿಸಿ ಬರ್ತೀನಿ” ಅಂತ. “ಮಗ ತಿಂಗಳಿಗೆ ಐನೂರು ಕಳಿಸ್ತಾನಂತೆ. ನಿಮಗೊಂದು ದುಗ್ಗಾಣಿ ಅವ ಬಿಚ್ಚಲ್ಲ. ನಿಮಗೋ ಹೊಟ್ಟೇಲಿ ಹುಟ್ಟಿದ ಮಗನ ಚಿಂತೆ ಇಲ್ಲ. ನಾನ್ಯಾಕೆ ಆ ಜುಗ್ಗನ ಶುಶ್ರೂಷೆ ಮಾಡಲಿ? ಆ ಮುದುಕ ಸತ್ತರೇನು ಇದ್ದರೇನು ನಮಗೆ” ಎಂದು ರುಕ್ಕು ಒದರುತ್ತಿದ್ದಳು. ಆದರೂ ವೆಂಕಟ ಶಕುಂತಳನಿಂದ ಗಂಜಿ ಮಾಡಿಸಿಕೊಂಡು ಹೊರಬಿದ್ದ. ಎದ್ದು ಕೂತ ನನ್ನೆದುರು ರುಕ್ಕು ಬಂದು ನಿಂತು ಅಳಲು ಶುರು ಮಾಡಿದಳು. ಅವಳ ಪ್ರಕಾರ ಸುಬ್ಬನ ಗ್ರಹಚಾರ ಸರಿಯಿರಲಿಲ್ಲ. ಅವನಿಗೆ ಬೆಂಗಳೂರಿಗೋ ಮೈಸೂರಿಗೋ ಹೊಗಿ ಎಂಜಿನ್ ಕೆಲಸ ಕಲಿಯೋ ಆಸೆ. ಯಾಕವನು ಶೇಷಣ್ಣನ ಮಗನಂತೆಯೇ ಮುಂದಕ್ಕೆ ಬರಬಾರದು? ಅವನಿಗೇನು ಕಮ್ಮಿ? ನನ್ನ ಸ್ನೇಹಿತನ ಮುಖ ನೋಡಿಯಾದರೂ ನಾನವನನ್ನು ಮೈಸೂರಿಗೆ ಕರಕೊಂಡು ಹೋಗಿ ಎಲ್ಲದರೂ ಕೆಲಸ ಕೊಡಿಸಬೇಕು.
ನನಗೆ ಭಯ. ಅವನನ್ನು ಮೈಸೂರಿಗೆ ಕರಕೊಂಡು ಹೋಗಿ ಮನೆಯಲ್ಲಿಟ್ಟುಕೊಂಡರೆ ಅವನ ಉಪದ್ವ್ಯಾಪಗಳನ್ನು ನನ್ನ ಹೆಂಡತಿ ಸಹಿಸುವವಳಲ್ಲ. ಆದರೂ ವಚನ ಕೊಟ್ಟೆ. ಎಲ್ಲಾದ್ರೂ ರೂಂ ಮಾಡಿ ಇಡ್ಸಿದರೂ ಆಯಿತು ಎಂದು ಕೊಂಡೆ. ಇದರಿಂದ ರುಕ್ಕುಗೆ ಎಷ್ಟು ಖುಷಿಯಾಯಿತೆಂದರೆ ಇಡೀ ಮನೆ ಅವಳ ಗೆಲುವಿನಿಂದ ಉಕ್ಕಿತು. ಶಕುಂತಳ, ಗೌರಿ ಮತ್ತು ಚಿಕ್ಕ ಹುಡುಗಿ ಗಂಗ ಕೂಡ ಸಡಗರದಿಂದ ಓಡಾಡಿದರು. ಹೀಗೆ ಬದಲಾದ ವಾತಾವರಣ ಕಂಡು ಹಿಂದಕ್ಕೆ ಬಂದು ವೆಂಕಟನೂ ಹಿಗ್ಗಿ ಹೀರೆಕಾಯಿಯಾದ. ನಾನು ಕೊಟ್ಟ ವಚನ ಗೊತ್ತಿರಲಿಲ್ಲ. ಶೇಷಣ್ಣನ ಜುಗ್ಗುತನವನ್ನು ಒಂದಿಷ್ಟೂ ಕೊಂಕಿಲ್ಲದಂತೆ ಅದೊಂದು ರಮಣೀಯ ನಾಟಕದಲ್ಲಿನ ದೃಶ್ಯವೆಂಬಂತೆ ನಟಿಸಿ ತೋರಿಸಿದ. ಹಿಂದೆ ನಡೆದೊಂದು ಘಟನೆ: ವೆಂಕಟ ಔಷಧ ತಂದುಕೊಟ್ಟಿದ್ದ. ದುಡ್ಡನ್ನು ಮುರಿಸಿ ತಂದಿದ್ದ ಬಾಕಿ ಚಿಲ್ಲರೆಯನ್ನು ಶೇಷಣ್ಣ ಎಣಿಸಿದ. ಮತ್ತೆ ಎಣಿಸಿದ. (ವೆಂಕಟ ಕೆಮ್ಮುತ್ತ ಒಂದೊಂದೇ ನಾಣ್ಯವನ್ನು ನಡುಗುವ ಕೈಯಲ್ಲಿ ನೋಡಿ ನೋಡಿ ಎಣಿಸುವುದನ್ನು ಕಂಡು ರುಕ್ಕು ಕೂಡ ನಕ್ಕಳು.) ಮತ್ತೆ ಎಣಿಸುವಾಗ ‘ಏನಾಗಿದೆ ಶೇಷಣ್ಣ?’ ಎಂದು ವೆಂಕಟ ಕೇಳಿದ. ‘ಪಾವಲಿಯೊಂದು ಸವೆದು ಬಿಟ್ಟಿದೆಯಲ್ಲ ಮಾರಾಯ’ ಎಂದ ಶೇಷಣ್ಣ. ‘ನಡೀತದೆ ಬಿಡಿ’ ಎಂದ ವೆಂಕಟ. ‘ಇದೊಂದು ದಾಟಿಸಿ ಬೇರೊಂದು ಪಾವಲಿ ತಂದುಬಿಡಯ್ಯ’ ( ಶೇಷಣ್ಣನಂತೆಯೇ ಬಾಯಿ ಬಿಟ್ಟು ಗೊರಗೊರ ಅಂತ ವೆಂಕಟ ಯಾಚಿಸಿದ) ‘ಈಗಲೇ ತರಬೇಕ ಶೇಷಣ್ಣ ಪೇಟೇಂದ?’ ಮೂರು ಮೈಲಿ ನಡೆದುಬಂದಿದ್ದ ವೆಂಕಟ ಕೇಳಿದ. ‘ಮತ್ತೇನಾದ್ರೂ ಇವತ್ತೇ ಪೇಟೆಗೆ ಹೋಗೋದು ಇದ್ರೆ…’ (ಈಗ ಶೇಷಣ್ಣನ ಮುಖದಲ್ಲಿ ಮರಣ ಸುಖ ಹೊಂಚಿತ್ತು)“ಮಾರಾಯ ನಿದ್ದೆ ಮಾಡಲ್ವಲ್ಲ ಅಂತ ಹತ್ತಿರವಿದ್ದ ಇನ್ನೊಂದು ಪಾವಲೀನ ಕೊಟ್ಟು ಬಂದೆ ಅನ್ನು” ವೆಂಕಟ ಎಷ್ಟು ದಿನವಾದರೂ ತಾನು ದಾಟಿಸಲು ಅಸ್ಮರ್ಥನಾದ ಸವಕಲು ಪಾವಲಿಯೊಂದನ್ನು ಕಿಸೆಯಿಂದ ತೆರೆದು ತೋರಿಸಿದ. ರುಕ್ಕುಗೆ ಸಿಟ್ಟು ಬಂದು “ಸತ್ತ ಮೇಲೆ ಅದನ್ನ ಅವನ ಹೆಣದ ಮೇಲೆ ಹಾಕಿ” ಎಂದು ಎಲೆ ಬಡಿಸಲು ಎದ್ದು ಹೋದಳು.
*
*
*
ನನಗೆ ಬಾಲ್ಯದಲ್ಲಿ ಪ್ರಿಯವಾಗಿದ್ದ ಪತ್ರಡೆಯನ್ನು ತಿನ್ನಲಾರದಂಥ ಒಂದು ಅನ್ನಕಂಟಕ ಘಟನೆ ನಡೆಯಿತು. ವೆಂಕಟ ಮತ್ತು ಶಕುಂತಳ ಎಷ್ಟು ಉಪಚರಿಸಿದರೂ ರುಕ್ಕು ಬಿಕ್ಕಿ ಬಿಕ್ಕಿ ಅಳುವುದನ್ನು ನಾನು ಹೇಗೆ ಗಮನಿಸದೇ ಇರಲಿ? ಆದದ್ದು ಇಷ್ಟು: ನನಗೆ ಬೆಳ್ಳಿ ಲೋಟದಲ್ಲೆ ಹಾಲಿನ ಖೀರನ್ನು ಬಡಿಸಬೇಕೆಂಬ ಆಸೆಯಿಂದ ರುಕ್ಕು ತನ್ನ ಮದುವೆಗೆ ಬಳುವಳಿಯಾಗಿ ಬಂದಿದ್ದ ವಸ್ತುಗಳನ್ನೆಲ್ಲಜೋಪಾನವಾಗಿಟ್ಟಿದ್ದ ದೊಡ್ಡ ಹಿತ್ತಾಳೆ ಟ್ರಂಕಿನ ಮುಚ್ಚಳವನ್ನು ತೆಗೆದು ನೋಡಿದರೆ ಅಲ್ಲೇನಿದೆ? ಮೊಮ್ಮಕ್ಕಳಿಗೆಂದು ಗೋರೋಜನ, ಜಾಯಿಕಾಯಿ, ಒಣಶುಂಠಿ, ಕಸ್ತೂರಿ ಮಾತ್ರೆ, ಅಳಲೇಕಾಯಿ, ರುದ್ರಾಕ್ಷಿ, ಒಣಗಿಸಿದ ದಾಳಿಂಬೆಯೋಡು, ಒಂದು ಶ್ರೀಗಂಧದ ಕೊರಡು, ಆಭರಣ ತೊಳೆಯಲೆಂದು ಇದ್ದ ಅಂಟ್ವಾಳ- ಇಷ್ಟನ್ನು ಬಿಟ್ಟು ಉಳಿದಿದ್ದೆಲ್ಲ ಬರಿದಾಗಿದೆ. ಹೆಣ್ಣುಮಕ್ಕಳ ಮದುವೆಗೆಂದು ರುಕ್ಕು ಜೋಪಾನ ಮಾಡುತ್ತ ಬಂದಿದ್ದ ಎಂಥ ಬಡತನದಲ್ಲೂ ಅಡವು ಇಡದಂತೆ ರಕ್ಷಿಸಿದ್ದ ಬುಗುಡಿ, ಕೆನ್ನೆ ಸರಪಳಿ, ನಾಲ್ಕೆಳೆಯ ಅವಲಕ್ಕಿ ಸರ, ನಾಲ್ಕು ಬಳೆ, ಸೊಂಟದ ಪಟ್ಟಿ, ತಿರುಪಿನ ಹೂವು, ಮೂಗುಬಟ್ಟು, ಕಾಲಿನ ಚೈನು, ಹವಳದ ಒಂದು ಸರ, ಎರಡು ಬೆಳ್ಳಿಯ ಬಟ್ಟಲು, ಮೂರು ಬೆಳ್ಳಿಯ ಪಂಚಪಾತ್ರೆ, ಸಂಧ್ಯಾವಂದನೆಯ ಬೆಳ್ಳಿ ತಟ್ಟೆ, ಬೆಳ್ಳಿಯ ಚೊಂಬು, ಬೆಳ್ಳಿಯ ಉದ್ಧರಣೆ, ಬೆಳ್ಳಿಯ ಅರಸಿನ-ಕುಂಕುಮದ ಬಟ್ಟಲುಗಳು ಎಲ್ಲವೂ ನಾಪತ್ತೆಯಾಗಿದ್ದವು. ಏನೂ ಆಗಿಲ್ಲವೆಂಬಂತೆ ವೆಂಕಟ ನಟಿಸುತ್ತ ನನ್ನನ್ನು ಪತ್ರಡೆ ತು‌ಇನ್ನುವಂತೆ ಒತ್ತಾಯಿಸುತ್ತಿದ್ದರೂ ಚಿಕ್ಕ ಮಗು ಗಂಗ ಓಡಿಬಂದು ಅವಸರ ಅವಸರವಾಗಿ ಹೇಳಿದಳು:
“ಅಮ್ಮ ಅಳ್ತಿದ್ದಾಳೆ. ಸುಬ್ಬ ಎಲ್ಲಾ ನಗಾನೂ ಕದ್ದುಕೊಂಡು ಹೋಗಿದಾನೆ. ಶುಕ್ರವಾರ ಅಮ್ಮ ಟ್ರಂಕನ್ನು ತೆಗೆದಾಗ ಎಲ್ಲಾ ಇತ್ತು. ನಿಮ್ಮ ಹೊಟ್ಟೆ ನೋವಿಗೆ ದಾಳಿಂಬೆ ಓಡು ತೇಯಕ್ಕೇಂತ ತೆಗೆದಿದ್ಲು. ಮೊನ್ನೆ ಅಮ್ಮ ಬಟ್ಟೆಯೊಗೆಯೋಕ್ಕೆಂತ ಕೆರೆಗೆ ಹೋಗಿದ್ಲಲ್ಲ. ಶಕ್ಕು ಗೌರಿನೂ ಅಮ್ಮನ ಜೊತೆ ಹೋಗಿದ್ರಲ್ಲ, ಅವತ್ತೇ ಸುಬ್ಬ ಬಾಳೆನಾರನ್ನ ಒದ್ದೆ ಮಾಡಿಕೊಟ್ಟು ‘ಮಲ್ಲಿಗೆ ಸರ ಮಾಡೆ. ಪೇಟೇಲಿ ಮಾರಿ ನಿನಗೆ ದುಡ್ಡು ತಂದುಕೊಡ್ತೀನಿ’ ಅಂದ. ಇದ್ಯಾಕೆ ಇಶ್ಟು ಒಳ್ಲೆಯವನಾದ ಅಂತ ನಾನು ಬಚ್ಚಲಿಗೆ ಹೋದೆ. ಸುಬ್ಬ ಕೋಣೇಲೇನೊ ಮಾಡ್ತ ಇದ್ದ. ಬೀಡಿ ಸೇದಕ್ಕೇಂತ ಬಾಗಿಲು ಹಾಕ್ಕೊಂಡಿದ್ದಾನೆ ಅಂತ ನಾನು ಅನ್ಕೊಂಡ್ರೆ…”
ವೆಂಕಟನಾಗಲೀ ಶಕ್ಕುವಾಗಲೀ ಗೌರಿಯಾಗಲೀ ಮಾತಾಡಲಿಲ್ಲ: ಅಮ್ಮನನ್ನು ಸಮಾಧಾನ ಮಾಡಲು ರುಕ್ಕು ಹೋದಳು. “ಸಿಗತ್ತೆ. ಎಲ್ಲಿ ಹೋಗತ್ತೆ? ಅಡ ಇಟ್ಟಿರಬೇಕು ಮಾರಾಯ. ನೀನು ಊಟ ಮಾಡು” ಎಂದು ಉಪಚರಿಸುತ್ತ ವೆಂಕಟ ಬೇಗ ಬೇಗನೆ ಊಟ ಮುಗಿಸಿದ. ನಾನೂ ಊಟದ ಶಾಸ್ತ ಮಾಡಿ ಎದ್ದೆ. ಮನೆಯೆದುರಿದ್ದ ಓರಣವಾದ ಚಿಟ್ಟೆಯ ಮೇಲೆ ಹೋಗಿ ಕೂತೆ. ಈ ನಿರುಪದ್ರವಿಗೆ ಇದೆಂಥ ಪಾಡೆಂದು ಚಿಂತಿಸುತ್ತ. ಸುಬ್ಬನ ಸುಳಿಹಿಗಾಗಿ ಕೂತಲ್ಲಿಂದಲೇ ಹುಡುಕಿದೆ. ದೂರದಲ್ಲಿ‌ಒಂದೆರಡು ಮನೆ, ದೇವಸ್ಥಾನ. ಕಾಲನಡಿಗೆಯಿಂದ ಸವೆದ ಬೀದಿ. ಇನ್ನೂ ದೂರದಲ್ಲಿ ಗುಡ್ಡದ ಹಸಿರು. ಹೀಗೇ ಸಾಗುತ್ತದೆ ಪೇಟೆಗೆ ಹೋಗುವ ಕಾಲುದಾರಿ. ನಾನು ಕೂತಲ್ಲಿ ಮೃದುವಾದ ವಾಸನೆಯನ್ನು ಚೆಲ್ಲುತ್ತಿದ್ದ ಕೇಸರದ ತೊಟ್ಟಿನ ಪಾರಿಜಾತ. ಅಂಗಳದ ತುಂಬ ಊವಿನ ಗಿಡಗಳು. ವೆಂಕಟನ ಮರ್ದನ ಕಲೆಯಲ್ಲಿ ನಾನು ಕಾಣದಿದ್ದ ಬೆಳದಿಂಗಳು ಈಗ ಜಳಜಳನೆ ತೋಟವನ್ನು ತುಂಬಿತ್ತು. ರುಕ್ಕು ಅಳುತ್ತ ನರಳುವುದು ಕೇಳಿಸುತ್ತಿತ್ತು: “ನನ್ನ ಮಕ್ಕಳ ಮದುವೆನ್ನ ಇನ್ನು ಹೇಗೆ ಮಾಡಲೋ, ಯಾಕೆ ಹೀಗೆ ತಾಯಿ ಹೊಟ್ಟೆ ಉರಿಸ್ತೀಯೋ.”
“ಆಹಾ ಬೆಳದಿಂಗಳು” ಎಂದು ವೆಂಕಟ ನಾನಿದ್ದಲ್ಲಿಗೆ ಬಂದ. ನನ್ನ ಸನಿಹದಿಂದ ಹೆಂಡತಿಯ ಮಾತಿನ ಉರಿ ಇಂಗಲಿ ಎಂದು ಅವನು ಬಂದಿರಬೇಕು. ನಾನು ಕಷ್ಟಪಡುತ್ತಿರಬಹುದೆಂದೂ ಅವನಿಗೆ ಮುಜುಗರವಾಗಿರಬೇಕು. ನನ್ನ ಗೆಳೆಯ ಹೀಗೆ ತಣ್ಣಗಾದದ್ದು ಕಂಡು ನನಗೆ ಸಂಕಟವಾಯಿತು. “ಬಾ ಕೂತುಕೊ” ಎಂದೆ. “ ಪಾರಿಜಾತದ ವಾಸನೆ ಚೆನ್ನಾಗಿದೆ ಅಲ್ವಾ?” ಎಂದ ನಾನು ನಕ್ಕು ಬಾಯಿ ಮುಚ್ಚುವಂತೆ ಸನ್ನೆ ಮಾಡಿದೆ. ಸಂತೈಕೆಯ ಮಾತುಗಳು ನನಗೆ ತಿಳಿಯವು. ಆದರೂ ಒಳಗೆ ಹೊಗಿ “ರುಕ್ಕಮ್ಮ ಊಟ ಮಾಡಿ” ಎಂದೆ. ಅವಳು ನನ್ನ ಎದುರು ಗಳಗಳನೆ ಅತ್ತಳು. ಹೊರಬಂದರೆ ಬೆಳದಿಂಗಳಲ್ಲಿ ತೋಟ ಸುತ್ತುತ್ತಿದ್ದ ವೆಂಕಟ. “ನಮ್ಮ ಗಂಗೆಗೆ ತೋಟ ಅಂದ್ರೆ ಪ್ರಾಣ ಕಣಯ್ಯ” ಎಂದ.
ರಾತ್ರೆ ಬಹಳ ಹೊತ್ತು ಯಾರಿಗೂ ನಿದ್ರೆ ಹತ್ತಿದಂತೆ ಕಾಣಲಿಲ್ಲ. ವೆಂಕಟನಂಥ ನಿರಾಮಯರನ್ನು ಬಿಟ್ಟು ಸುಬ್ಬನದು ಉಳಿದ ಯಾರಿಗಾದರೂ ಸಾಧ್ಯವಿರಬಹುದಾದ ಸ್ಥಿತಿಯೆಂದು ನನಗೆ ಅನ್ನಿಸಿತ್ತು. ಈ ಹಳ್ಳಿಯಲ್ಲಿ ಕೊಳೆಯಲೇಬೇಕಾಗಿ ಬಂದಿದ್ದರೆ ನಾನಾದರೂ ಏನಾಗಿರುತ್ತಿದ್ದೆನೋ? ನನ್ನ ಮನೆತನದ ನಡಾವಳಿಗಳನ್ನು ಅಪ್ಪನಿಗೆ ಎದುರಾಗಿ ಧಿಕ್ಕರಿಸಿದ್ದರಿಂದಲೇ ತಾನೆ ನಾನು ಬೆಳೆದು ಹೀಗಾಗಲು ಸಾಧ್ಯವಾಯಿತು. ಆದರೆ ಅದು ಈ ಮನೆಯಲ್ಲೂ ಯಾಕೆ ಉತ್ಪನ್ನವಾಯ್ತು? ವೆಂಕಟ ಮಗನಿಂದ ಅವಾಕ್ಕಾದವನಂತೆ ನನಗೆ ಕಂಡಿದ್ದ. ಅವನ ಹಡೆ, ಅವನ ಅಭ್ಯಂಜನ, ಅವನ ಲೋಳೆ ಸೇವೆ ಯಾವುದೂ ಇಲ್ಲಿ ಉಪಯೋಗಕ್ಕೆ ಬರುವಂತೆ ನನಗೆ ಕಾಣಲಿಲ್ಲ. ಈ ಚಂದ್ರ, ಈ ಗಿಡ, ಈ ಮರ, ಈ ಹಕ್ಕಿಗಳ ಸನ್ನಿಧಿಯಲ್ಲಿ ವೆಂಕಟನಂಥದು ಹೇಗೆ ಇದೆಯೋ ಹಾಗೆ ಸುಬ್ಬನಂಥವರ ನಿರ್ನಿಮಿತ್ತವಾದ ಕ್ರೌರ್ಯವೂ ಇಲ್ಲಿದೆ. ವೆಂಕಟನ ಮನಸ್ಥಿತಿ ಇದನ್ನು ಉಂಡೀತೆ. ಉಂಡು ಅರಗಿಸಿಕೊಂಡೀತೆ ಅಥವಾ ಉಗುಳಿಬಿಡುವುದೆ? ಹಾಗಿದ್ದರೆ ಪಲಾಯನವಾದಿಯೊಬ್ಬನ ಹಡೆತನ ಕರುಣಾಜನಕವಾದ್ದು. ಮುಜುಗರ ಪಡಿಸುವಂಥದ್ದು. ಆದರೆ ಈಚೆಗೆ ನಾನು ಕಳೆದುಕೊಳ್ಳುತ್ತಿರುವ ಮಾನವ ಪ್ರೀತಿಯನ್ನು ಮತ್ತೆ ನನ್ನಲ್ಲಿ ಚಿಗುರಿಸಲು ತೊಡಗಿದ್ದ ನನ್ನ ಬಾಲ್ಯದ ಸಖನನ್ನು ಹೀಗೆ ದೂಡಿ ಬಿಡುವುದಕ್ಕೂ ನನ್ನ ಮನಸ್ಸು ಇಷ್ಟಪಡಲಿಲ್ಲ. ಹೊಡೆಯಲು ಬಂದ ಮಗನ ಎದುರು ಅಷ್ಟಾವಕ್ರನಂತೆ ಕೈಕಟ್ಟಿ ಅವಾಕ್ಕಾಗಿ ನಿಂತ ವೆಂಕಟನ ಚಿತ್ರ ನನ್ನನ್ನು ಬಾಧಿಸಿತ್ತು. ಕಲ್ಲನ್ನು ಎತ್ತಿ ಹಿಡಿದಿದ್ದ ಸುಬ್ಬ ಅದಮ್ಯ ಶಕ್ತಿಯನ್ನು ಅದುಮಿಟ್ಟುಕೊಡು ಬರ್ಬರನಂತೆ ಕಂಡಿದ್ದ. ಅವನ ಈ ಬರ್ಬರ ತಿರಸ್ಕಾರ ನಿರಾಕರಣೆಗಳಲ್ಲೆ ಅಣ್ವಸ್ತ ವಿಷವಾಯುಗಳನ್ನು ಸೃಷ್ಟಿಸಬಲ್ಲ ಪ್ರೇರಣೆ ಪಡೆದ ಜೀವಶಕ್ತಿಯಿದೆಯೆನ್ನಿಸಿತು. ವೆಂಕಟನ ಲಾಸ್ಯದ ಈ ಪರಿಮಿತ ಕ್ಷೇತ್ರವನ್ನು ಧಿಕ್ಕರಿಸಿ (ಇಲ್ಲವಾದರೆ ಸಾಧ್ಯವೆ) ಅದು ಹುಟ್ಟಿಕೊಂಡಿತ್ತು. ನಾನು ಕೂಡ ಹೆತ್ತವರನ್ನು ಒದ್ದು ಬಂದವನೇ. ವೆಂಕಟನ ಸ್ಥಿತಿಯಲ್ಲಿ ಪಾರಿಜಾತದಂತೆ ಅರಳುವುದು ಬಾಡುವುದು ಹೊರತು ಚಲನೆಯಿಲ್ಲ. ಚಲನೆಗೆ ಇರುವ ಸುಬ್ಬನ ರೂಪವನ್ನು ನಾನು ಮಲಗಿದ್ದಾಗ ಮಾಡಿಕೊಂಡ ಕಲ್ಪನೆಯಲ್ಲಿ ಉತ್ಪ್ರೇಕ್ಷೆ ಇರಬಹುದು. ಕದ್ದದ್ದರಲ್ಲಿ ಅಂಥ ಏನು ವಿಶೇಷವಿದೆ? ಎಂದು ಆಮೇಲಿಂದ ನಾನೇ ಸಮಾಧಾನಪಟ್ಟುಕೊಳ್ಳುತ್ತಿದ್ದೆ. ಆದರೆ ಎಲ್ಲರೂ ನಿದ್ದೆ ಹೋಗಿದ್ದ ಹೊತ್ತಿನಲ್ಲಿ ಸೂರ್ಯೋದಯಕ್ಕಿಂತ ತುಸು ಮುಂಚಿನ, ಇಬ್ಬನಿಯಿಂದ ನೆಲ ಗಿಡಗಳೆಲ್ಲವೂ ಒದ್ದೆಯಾಗುವ ಸ್ಫಟಿಕದಂತೆ ಶುಕ್ರ ಕಾಣುವ ಹೊತ್ತಿನಲ್ಲಿ ನಾನು ಕಂಡದ್ದು ಈಗಲೂ ನನಗೆ ಭಾರವಾಗಿ ಉಳಿದಿದೆ.
ತೋಟದಲ್ಲಿ ಏನೊ ಸದ್ದಾಗುತ್ತಿದೆಯೆಂದು ನಾನು ಹೊರಗೆದ್ದು ಹೋದರೆ, ಅದು ಮರವನ್ನು ಕಡಿಯುವ ಶಬ್ದ. “ಯಾರು” ಎನ್ನುತ್ತ ಇನ್ನೇನು ನಾನು ಮೆಟ್ಟಿಲಿಳಿಯಬೇಕು ಆಗ ಸುಬ್ಬ ಕತ್ತಿಯನ್ನೆತ್ತಿ “ಹತ್ರ ಬಂದ್ರೆ ಕಡಿದುಬಿಡ್ತೀನಿ” ಎಂದು ಮಸಕು ಮಸಕು ಬೆಳಕಲ್ಲಿ ಕೂಗಿದ. ನಾನು ಕದಲದೆ ನಿಂತೆ. ಉಷಸ್ಸಿನ ಮಂದ ಬೆಳಕಲ್ಲಿ ಪಾರಿಜಾತ ಮರವನ್ನು ಹಲ್ಲು ಕಚ್ಚಿ ಕಡಿಯುತ್ತಿದ್ದ ಅವ ಕೆದರಿದ ಕೂದಲಲ್ಲಿ ರಕ್ಕಸನಂತೆಯೇ ಕಂಡ. ಮೃದುವಾದ ಕಾಂಡದ ಹೂವಿನ ಗಿಡಗಳನ್ನೆಲ್ಲ ಅವನು ಈಗಾಗಲೆ ನೆಲಸಮ ಮಾಡಿದ್ದ. ಒರಟಾದ, ವಕ್ರವಾದ, ಪಾರಿಜಾತದ ಮರ ಮಾತ್ರ ಸುಬ್ಬನ ಕತ್ತಿಯ ಏಟಿನ ಗುರಿ ತಪ್ಪಿಸುತ್ತ ಇನ್ನೂ ನಿಂತಿತ್ತು. ನನ್ನ ಹಿಂದೆ ಬಂದ ವೆಂಕಟ ಸುಬ್ಬನಿದ್ದಲ್ಲಿಗೆ ಓಡಿಹೊದ. ಸುಬ್ಬ ಅಪ್ಪನನ್ನು ಕಡಿಯಲೆಂದು ಹೇಗೆ ಕತ್ತಿ ಎತ್ತಿದನೆಂದರೆ, ‘ಅಮ್ಮ ತಾಯಿ’ ಎನ್ನುತ್ತ ವೆಂಕಟ ಚಂಗನೆ ಪಕ್ಕಕ್ಕೆ ಹಾರಿ, ಹಿಂದೆಯೋಡಿ ಬಂದ. ನಾನು ತಡೆದರೂ ರುಕ್ಕು ಕೇಳದೆ ನನ್ನ ತೆಕ್ಕೆಯಲ್ಲಿ ಒದರಾಡಿದಳು. “ಕಡಿದು ಬಿಡೋ ಕಡಿದುಹಾಕಿಬಿಡು. ನನ್ನ ಹೊಟ್ಟೇಲಿ ಹುಟ್ಟಿದ ವಿಷಾನ್ನ ನಾನೇ ಕುಡಿದು ಸತ್ತು ಬಿಡ್ತೇನೆ” ತಾಯಿ ಕೊಸರಿಕೊಂಡು ಮಕ್ಕಳು ತಡೆದರೂ ಕೇಳದೆ ಸುಬ್ಬನ ಎದುರು ಓಡಿಹೋಗಿ ನಿಂತಳು. “ಬೇಡ, ಬೇಡ, ನನ್ನ ಕೆಣಕಬೇಡ. ನಿನ್ನ ತಲೆ ಕಡಿದು ಬಿಡ್ತೀನಿ” ಎಂದು ಸುಬ್ಬ ಕತ್ತಿಯನ್ನೆತ್ತಿದ. ನಾವೆಲ್ಲರೂ ಕಣ್ಣುಮುಚ್ಚಿ ನಿಂತು ಬಿಟ್ಟೆವು. ನಾವು ಭಯದಿಂದ ಕಣ್ಣು ತೆರೆದಾಗ ಸುಬ್ಬ ಶಪಿಸುತ್ತ ಕತ್ತಿ ಹಿಡಿದು ಕೈ ಬೀಸಿಕೊಂಡು ಉಣುಗೋಲು ದಾಟಿ ಹೊರಗೆ ಹೋಗುತ್ತಿದ್ದ. ಬಿರಬಿರನೆ ನಡೆಯುತ್ತ ಎದುರಿನ ಪೇಟೆಗೆ ಹೋಗುವ ದಾರಿಯಲ್ಲಿ ಕಣ್ಮರೆಯಾದ. ಕಣ್ಣು ಮುಚ್ಚಿ ನಿಂತಿದ್ದ ರುಕ್ಕು ಕತ್ತಿ ಬೀಳುವುದಕ್ಕೆ ಕಾದು ಹಾಗೇ ನಿಂತಿದ್ದಳು. ವೆಂಕಟ ಅವಳ ಕೈ ಹಿಡಿದು ತಳ್ಳುತ್ತ ಒಳಗೆ ಕರಕೊಂಡು ಹೋದ. ಗಂಗೆ ನಿರ್ನಾಮವಾದ ತನ್ನ ತೋಟ ನೋಡುತ್ತ ಅಳುವುದನ್ನು ಕಂಡು ಇಬ್ಬರೂ ಅಕ್ಕಂದಿರೂ ಅತ್ತರು. ನಾನು ಮಣ್ಣಿನ ಚಿಟ್ಟೆ ಮೇಲೆ ಕಂಗಾಲಾಗಿ ಕೂತಿದ್ದೆ. ನನ್ನಲ್ಲಿ ಯಾವ ಸಾಂತ್ವನದ ಮಾತುಗಳೂ ಉಳಿದಿರಲಿಲ್ಲ. ಆದರೆ ವೆಂಕಟ ಇದರಿಂದೆಲ್ಲ ಜರ್ಜರಿತನಾಗಿ ಬಿಡಬಹುದೆಂದು ತಿಳಿದ ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಬೆಳಗಾದ ಮೇಲೆ.
ಎಷ್ಟು ಹತ್ತಿರದ ಯಾರೇ ಸಾಯಲಿ, ನಿತ್ಯದ ವಿಧಿಗಳೆಲ್ಲ ಹೇಗೋ ನಡೆದುಕೊಂಡು ಹೋಗುತ್ತದೆ ಅಲ್ಲವೆ? ಯಾರೋ ಸತ್ತಂತೆ ಅನ್ನಿಸುತ್ತಿದ್ದ ವೆಂಕಟನ ಮನೆಯಲ್ಲೂ ಬೆಳಿಗ್ಗೆ ಶಕುಂತಳ ಕಾಫಿ ಮಾಡಿದಳು. ನಾನು ಉಮಿಕರಿಯಲ್ಲಿ ಹಲ್ಲುಜ್ಜಿದೆ. ವೆಂಕಟ ಬೇಗ ಸ್ನಾನ ಮಾಡಿ ಮುಗಿಸಿ ಹೊಳೆ ಬದಿಯ ದೇವಸ್ಥಾನದ ಪೂಜೆಗೆಂದು ಗಂಧ ತೇಯುತ್ತ ಕೂತ. ರುಕ್ಕು ಹಾಸಿಗೆ ಹಿಡಿದಿದ್ದಳು. ದನಕಾಯುವವನು ಬಂದಾಗ ಗೌರಿ ಬೇಗೆಬೇಗನೆ ದನಗಳ ಹಾಲು ಕರೆದು ಕೊಟ್ಟಿಗೆಯಿಂದ ಅವುಗಳನ್ನು ಅಟ್ಟಿದಳು. ವೆಂಕಟನ ಒಳಗೆ ಏನೋ ಸತ್ತಿದೆಯೆಂದು ನನಗೆ ಅನ್ನಿಸಿದ್ದರಿಂದ ಅವನಿಗೆ ಕಣ್ಣು ಕೊಡದಂತೆ ನಾನು ಹೊರ ಚಿಟ್ಟೆಯ ಮೇಲೆ ಕೂತೆ. ಆದರೆ ಹಾಳು ಬಿದ್ದ ತೋಟ ನೋಡಲಾರದೆ ಮನೆಯನ್ನು ಬಳಸಿ ಹೋಗಿ ಹಿತ್ತಲಿನಲ್ಲಿದ್ದ ದಾಳಿಂಬೆ ಗಿಡದಡಿ ನಿಂತೆ. ಬೇಲಿಯ ಬಳಿ ವೆಂಕಟ ಕೌಪೀನವುಟ್ಟು ಡೊಂಕು ಕಾಲಲ್ಲಿ ಸೊಟ್ಟಗೆ ನಿಂತಿದ್ದ. ‘ಅರೆ – ವೆಂಕಟ ಹಿತ್ತಲಿನ ಬೇಲಿ ಹತ್ತಿರ ಅಷ್ಟು ತತ್ಪರನಾಗಿ ನಿಂತು ಏನು ಮಾಡ್ತಿದ್ದಾನೆ ಇವ? ಎಂದು ನನಗೆ ಆಶ್ಚರ್ಯವಾಯಿತು. ಸ್ನಾನ ಸಂಧ್ಯಾವಂದನೆಗಳಾದ ಮೇಲೆ ಚೊಂಬು ತೊಗೊಂಡು ಬಹಿರ್ದೆಸೆಗೆ ಹೋಗಿರುವುದು ಸಾದ್ಯವಿಲ್ಲ. ಕಿವಿಯ ಮೇಲೆ ಜನಿವಾರ ಹಾಕಿಕೊಂಡಿಲ್ಲ. ತಾನು ಇಲ್ಲ ಎನ್ನಿಸುವಂತೆ- ಚೂರೂ ಹಂದದೆ ನಿಂತಿದ್ದ. ನಾನು ಅವನನ್ನು ನೋಡುತ್ತ ನಿಂತಲ್ಲೇ ನಿಂತೆ. ರತ್ನಗಂದಿಯ ಬೇಲಿ, ಅದರ ಎದುರು ನಿಶ್ಚಲನಾದ, ತನ್ಮಯನಾದ, ಬರಿ ಮೈಯಲ್ಲಿ ವಕ್ರವಾಗಿ ನಿಂತ ವೆಂಕಟ. ಎದುರಿನ ಹಸಿರು ಬೇಲಿ ಬಿಟ್ಟರೆ ಮತ್ತೇನೂ ಕಾಣದು. ನಾನು ಮೆತ್ತಗೆ ಸದ್ದು ಮಾಡದಂತೆ ಅವನತ್ತ ಚಲಿಸಿದೆ. ಅವನ ಬೆನ್ನ ಹಿಂದೆ ನಿಂತೆ. ಆದರೂ ವೆಂಕಟನಿಗೆ ನನ್ನ ಧ್ಯಾನವಿಲ್ಲ. ಅರೆ, ಎಂದು ಕುತೂಹಲದಿಂದ ನಾನೂ ರತ್ನಗಂದಿಯ ಬೇಲಿಯನ್ನು ದಿಟ್ಟಿಸಿದೆ. ಅಲ್ಲಲ್ಲಿ ಹಳದಿಯ ಗೊಂಚಲು ಗೊಂಚಲು ಹೂವುಗಳು. ಹಸಿರೆಲೆಗಳು. ಎಲೆ ಎಲೆಯನ್ನು ನೋಡಿದೆ. ಅವನ ಕಣ್ಣುಗಳ ಗುರಿ ಯಾವುದಿರಬಹುದೆಂದು, ಕುತೂಹಲದಿಂದ ನನ್ನ ದೃಷ್ಟಿಯ ಅವಧಿಯಲ್ಲಿದ್ದುದನ್ನೆಲ್ಲ ಸೂಕ್ಷ್ಮವಾಗಿ ನೋಡುತ್ತ ಹೋದೆ. ಕಾಣಿಸಿದ್ದು: ಒಂದು ಸೂರ್ಯನ ಕುದುರೆ. ನನ್ನ ಈ ನಿರುಪದ್ರವಿ ಗೆಳೆಯ ಆ ಉಬ್ಬಿದ ಡೊಂಕುಕಾಲಿನ, ಹಗುರಾದ ದೇಹದ ದಟ್ಟ ಹಸಿರಿನ ಜಾಮಿತಿಯ ಕೋನಗಳಂತೆ, ಅಷ್ಟಾವಕ್ರ ರೂಪದ ಕೀಟವನ್ನು ಬೆರಗಾಗಿ ನೋಡುವುದು ಕಂಡು ನನಗೆ ಕ್ಷಣ ಮೋಜೆನಿಸಿತು. ಕ್ಷಣ ಮಾತ್ರ, ಸೂರ್ಯನ ಕುದುರೆ ಡೊಂಕು ಕಾಲನ್ನೊತ್ತಿ ಚಿಮ್ಮಿದ್ದು, ಅದು ಚಿಮ್ಮುತ್ತಿದ್ದಂತೆಯೇ ತದೇಕಮಗ್ನನಾದ ವೆಂಕಟನೂ ತಿರುಗಿ, ನನ್ನ ಣೋಡಿ ಅದೆಷ್ಟು ಮುಗ್ಧ ಮಂದಹಾಸದಲ್ಲಿ “ಸೂರ್ಯನ ಕುದುರೆ” ಎಂದ. ಸೂರ್ಯನಕುದುರೆಯನ್ನು ಕಂಡ ಅವನ ಬೆರಗಿನ ಕಣ್ಣುಗಳಲ್ಲಿ ನನ್ನ ಕಣ್ಣೂ ನೆಟ್ಟು ಬಾಯಿ ತೆರೆಯಿತು:
“ಸೂರ್ಯನ ಕುದುರೆ”- ಎಂದೆ.


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.