ಸಶೇಷ

ಆರ್ಥಿಕ ಉದಾರೀಕರಣದ ಬಗ್ಗೆ ಮಾತು ಬಂದು, ಎಷ್ಟೊಂದು ವಿದೇಶಿ ಕಂಪನಿಗಳು ಇಲ್ಲಿ ವಹಿವಾಟು ಆರಂಭಿಸುತ್ತಿದೆಯೆಂದು ಎಣಿಸುತ್ತ, ಅವರು ಕೊಡುವ ಸಂಬಳ ಸವಲತ್ತುಗಳನ್ನು ಲೆಕ್ಕ ಹಾಕುತ್ತ, ಒಮ್ಮೆಲೆ ತೆರೆದುಕೊಂಡ ಈ ಹೊಸ ಜಗತ್ತಲ್ಲಿ ತಾವೆಲ್ಲಿ ಸಲ್ಲುತ್ತೇವೆ ಎಂಬುದನ್ನು ಆತಂಕ ಅನುಮಾನಗಳಿಂದ ಚರ್ಚಿಸುತ್ತಿದ್ದಾಗ ಸತೀಶ ಥಟ್ಟನೆ “ನಂಬಿ ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದಾನೆ ಗೊತ್ತ? ಇನ್ನೇನು ಆರು ತಿಂಗಳಲ್ಲಿ ಸಂಸಾರ ಸಮೇತ ಬಂದುಬಿಡುತ್ತಾನೆ…“ಅಂದ. ಸಂಜೆ ಕ್ಲಬ್ಬಿನಲ್ಲಿ ಕುಡಿಯುತ್ತ ಕೂತಾಗ ಹೀಗೆ ನಂಬಿಯ ಪ್ರಸ್ತಾಪವಾಗಿದ್ದು ರಂಗೇರತೊಡಗಿದ್ದ ಸಂಜೆಗೆ ಇನ್ನಷ್ಟು ಕಳೆಕೊಟ್ಟಿತ್ತು. ಅಲ್ಲಿದ್ದ ಮೂವರೂ -ಸತೀಶ, ಪ್ರವೀಣ್ ಮತ್ತು ಜನಾರ್ಧನರಾವ್ – ಮಲ್ಟಿ ನ್ಯಾಶನಲ್ ಕಂಪನಿಯೊಂದರಲ್ಲಿ ಹಿರಿಯ ಹುದ್ದೆಯಲ್ಲಿದ್ದವರು. ಒಂದು ಕಾಲಕ್ಕೆ ಅವರಿಂದಲೇ ತರಬೇತಿ ಪಡೆದು, ಅವರ ಜೊತೆಗೆ ಕೆಲಸ ಮಾಡುತ್ತಿದ್ದ ನಂಬಿ, ದುಬೈಗೆ ಹೋಗಿ ಒಳ್ಳೆಯ ಕೆಲಸ ಹಿಡಿದು ಮೇಲಕ್ಕೇರಿದ ರೀತಿಯನ್ನು ಕೇಳಿದಾಗಲೆಲ್ಲ ಅವರಿಗೆ ಆಸೂಯೆ ಆಸೆ ಅಭಿಮಾನ, ಇದು ತಮಗೂ ಇದ್ದ ಸಾಧ್ಯತೆ ಎಂಬ ಭಾವನೆಯಿಂದ ಒಂದು ರೀತಿಯ ಸಮಾಧಾನ ಉಂಟಾಗುತ್ತಿತ್ತು. ಅವನು ದೇಶ ಬಿಟ್ಟು ಹೋಗದೆ ಇದ್ದಿದ್ದರೆ ಇಷ್ಟು ಎತ್ತರಕ್ಕೆ ಏರುವುದು ಸಾಧ್ಯವಾಗುತ್ತಿರಲಿಲ್ಲ ಎಂದೆಲ್ಲ ಅವನ ಏಳಿಗೆಗೆ ಕಾರಣ ಹುಡುಕುತ್ತಿದ್ದರು. ಈಗ ಸತೀಶ ಹೇಳಿದ ಸುದ್ದಿಯನ್ನು ಉಳಿದಿಬ್ಬರಿಗೂ ಹೇಗೆ ಸ್ವೀಕರಿಸಬೇಕೊ ತಿಳಿಯದೆ, ಯಾಕೆ ವಾಪಸ್ಸು ಬರುತ್ತಿದ್ದಾನೆ? ಅವನಿದ್ದ ಕಂಪನಿ ನಷ್ಟದಲ್ಲಿ ಮುಳುಗಿತೋ ಹೇಗೆ? ಅವನನ್ನು ಕೆಲಸದಿಂದ ತೆಗೆದುಹಾಕಿದರೋ ಹೇಗೆ? ಅಂತೆಲ್ಲ ದುರ್ವಾತೆಯನ್ನು ಅಪೇಕ್ಷಿಸುವವರಂತೆ ಸತೀಶನನ್ನು ಪ್ರಶ್ನೆಗಳಿಂದ ಪೀಡಿಸಿದರು. ಇನ್ನೊಂದು ಗುಟುಕು ಕುಡಿಯುತ್ತ ಸತೀಶ ಸುದ್ದಿಯ ವಿವರಗಳನ್ನು ಹೇಳಿದ: “ಮಿಸ್ಟರ್ ನಂಬಿಯಾರ್ ಇನ್ನಷ್ಟು ಮೇಲೇರಿದ್ದಾನೆ..ಅಲ್ಲಿ ಆಕಾಶದಲ್ಲಿದ್ದಾನವನು- ದೇವತೆಗಳ ನಡುವೆ..“ಎಂದು ನಾಟಕೀಯವಾಗಿ ಆಕಾಶದತ್ತ ಕೈ ತೋರಿಸಿ ಮುಂದುವರಿಸಿದ: ಅವನು ಕೆಲಸ ಮಾಡುತ್ತಿದ್ದ ಕಂಪನಿ ನಮ್ಮ ದೇಶದಲ್ಲೂ ವಹಿವಾಟು ಆರಂಭಿಸಲಿದೆಯಂತೆ..ಅದರ ಮುಖ್ಯಸ್ಥನಾಗಿ ನಂಬಿ ಬರುತ್ತಿದ್ದಾನೆ…ಅವನ ಸಂಬಳ ಡಾಲರ್‌ಗಳಲ್ಲೆಂದು ಸುದ್ದಿ….”“ನಿನಗೆ ಈ ಸುದ್ದಿ ಹೇಗೆ ಗೊತ್ತಾಯಿತು?“ಎಂದು ಪ್ರವೀಣ್ ಕೇಳಿದ್ದಕ್ಕೆ ಸತೀಶ್ “ನನ್ನ ಸ್ನೇಹಿತನೊಬ್ಬ ದುಬೈಗೆ ಹೋಗಿದ್ದಾಗ ನಂಬಿ ಸಿಕ್ಕಿದ್ದನಂತೆ…ಅವನೆ ಸ್ವತಃ ಇದನ್ನೆಲ್ಲ ಹೇಳಿದನಂತೆ….“ಅಂದ. ನಂಬಿಯ ಯಶಸ್ಸಿಗೆ ಅವನಿಗೆ ತಾನಿತ್ತ ತರಬೇತಿಯೇ ಕಾರಣವೆಂದು ಎಲ್ಲರನ್ನು ನಂಬಿಸಲು ಪ್ರಯತ್ನಿಸುವ ಪ್ರವೀಣ್ “ಈ ನಂಬಿ ಎಷ್ಟು ಬದಲಾಗಿದ್ದಾನೆ…ಅವನು ಆಗಿನ ನಂಬಿಯೇ ಆಗಿದ್ದಲ್ಲಿ ಇಂಥ ಸಂಗತಿಗಳನ್ನೆಲ್ಲ, ಅದೂ ಇಲ್ಲಿ ಬರಲು ಇನ್ನೂ ಆರು ತಿಂಗಳಿರುವಾಗ ಯಾರಿಗಾದರೂ ಹೇಳುತ್ತಾನೆಂದರೆ ನಂಬುವುದೇ ನನಗೆ ಸಾಧ್ಯವಾಗುತ್ತಿಲ್ಲ. ಅವನು ಎಂಥ ಗಟ್ಟಿ ಮನುಷ್ಯನಾಗಿದ್ದನೆಂದರೆ ಯಾರಿಗೂ ಏನನ್ನೂ ಹೇಳುವವನಲ್ಲ…“ಅಂದ. ತನ್ನ ಸ್ನೇಹಿತ ದುಬೈನಲ್ಲಿ ನಂಬಿಯ ಮನೆಗೆ ಹೋಗಿದ್ದನ್ನೂ, ಅವನ ಮನೆಯ ವೈಭವವನ್ನೂ, ಆ ದಿನವೆ ನಂಬಿ ಚೈನಾದಿಂದ ಎರಡು ಹಕ್ಕಿಯ ಪ್ರತಿಮೆಗೆಳನ್ನು ತರಿಸಿದ್ದನ್ನೂ, ಆ ಪ್ರತಿಮೆಗಳ ಬೆಲೆ ಒಂದೊಂದಕ್ಕೆ ಲಕ್ಷ ರುಪಾಯಿಗಳೆಂಬುದನ್ನು ಸತೀಶ ರಂಗಾಗಿ ವರ್ಣಿಸಿದ. ಈ ಸುದ್ದಿ ಕೇಳುತ್ತಿದ್ದಂತೆ ಮಾತಿನ ನಡುವೆಯೆ ಪ್ರವೀಣ್ “ನೀನು ಹೇಳುತ್ತಿರುವುದು ನಮ್ಮ ನಂಬಿಯಾರ್ ಬಗ್ಗೆ ತಾನೆ?“ಎಂದು ಖಚಿತ ಪಡಿಸಿಕೊಂಡ . ಮುಂದೆ ಎಷ್ಟೋ ಹೊತ್ತು ಮೂವರೂ, ಹೇಗಿದ್ದ ನಂಬಿ ಹೇಗಾದ ಎಂದು ಮಾತಾಡಿಕೊಳ್ಳುತ್ತ, ಅವನ ಯಶಸ್ಸಿಗೆ ಅವನಲ್ಲಿಯ ಯಾವ ಶಕ್ತಿ ಕಾರಣವೆಂಬುದನ್ನು ತಮಾಷೆಯಾಗಿ ಚರ್ಚಿಸುತ್ತ ಕೂತರು.

-೨-

ನಂಬಿ ತಿರುವನಂತಪುರದ ಹತ್ತಿರ ಇರುವ ಒಂದು ಸಣ್ಣ ಊರಿನವನು. ಮಧ್ಯಮ ವರ್ಗದ ಕುಟುಂಬದ ಒಬ್ಬನೇ ಮಗ. ಊರಲ್ಲೇ ಹೈಸ್ಕೂಲು ಮುಗಿಸಿ ತಿರುವನಂತಪುರದ ಕಾಲೇಜು ಸೇರಿ, ನಂತರ ಮುಂಬೈಗೆ ಹೋಗಿ ಸ್ನಾತಕೋತ್ತರ ಪದವಿ ಪಡೆದು ಅಲ್ಲೇ ಒಂದು ಸಣ್ಣ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಎರಡು ವರ್ಷಗಳನಂತರ ತನ್ನ ಅನುಭವದ ಆಧಾರದ ಮೇಲೆ ಮಲ್ಟಿನ್ಯಾಶನಲ್ ಕಂಪನಿಯೊಂದರಲ್ಲಿ ಕೆಲಸ ಹಿಡಿದು ಬೆಂಗಳೂರಿಗೆ ಬಂದ. ಎರಡು ಕೆಲಸಗಳ ನಡುವಿನ ಅವಧಿಯಲ್ಲಿ ಮದುವೆಯಾದ. ಹೊಸ ಕೆಲಸಕ್ಕೆ ಸೇರಿಕೊಂಡ ಸ್ವಲ್ಪ ಸಮಯದಲ್ಲೇ ಅತ್ಯಂತ ದಕ್ಷನೆಂದೂ ಅವನು ಕೆಲಸ ಮಾಡುತ್ತಿದ್ದ ವಿಭಾಗಕ್ಕೆ ಅಗತ್ಯವಾದ ಗುಟ್ಟುಗಳನ್ನು ಕಾಪಾಡುವ ಕಲೆಯನ್ನು ಅರಿತವನೆಂದು ಪ್ರಸಿದ್ಧನಾದ. ಅವನ ಮೇಲಧಿಕಾರಿಯಾಗಿದ್ದ ಪ್ರವೀಣ್‌ಶುಕ್ಲಾನಿಗಂತೂ ನಂಬಿ ಅಂದರೆ ಬಹಳ ಮೆಚ್ಚಿಗೆ. ಪ್ರವೀಣ್ ಉಳಿದ ಯಾರ ಬಗ್ಗೆಯೂ ತೋರಿಸದ ಸಲುಗೆಯನ್ನು ನಂಬಿಯ ಬಗ್ಗೆ ತೋರಿಸುತ್ತಿದ್ದ. ನಂಬಿ ಬಂದದ್ದೆ ಪ್ರವೀಣ್ ಕೆಲಸ ಹಗುರವಾಯಿತು. ನಂಬಿಯ ಗಾಡಿ ಬಡ್ತಿಯ ಹಳಿಯ ಮೇಲೆ ಓಡ ತೊಡಗಿತು. ಎಷ್ಟೊಂದು ಕೆಲಸ ಮಾಡುತ್ತಿದ್ದ ಅಂದರೆ ಮಲಗಲು ಮಾತ್ರ ಮನೆಗೆ ಬರುವಂತಾಗುತ್ತಿತ್ತು. ಅವನ ಹೆಂಡತಿ ವಾರಣಿ ಇದನ್ನೆಲ್ಲ ಸಹಿಸಿಕೊಂಡು, ಇಂಥ ವಿಷಯಗಳನ್ನೆಲ್ಲ ಗಂಡನ ಸಹೋದ್ಯೋಗಿಗಳ ಹೆಂಡತಿಯರು ಸಿಕ್ಕಿದಾಗ ಅವರ ಜೊತೆ ಚರ್ಚಿಸದೆ, ಎಲ್ಲರಿಗೂ ಇವರ ಸುಖಿ ದಾಂಪತ್ಯದ ಬಗ್ಗೆ ಹೊಟ್ಟೆಕಿಚ್ಚಾಗುವಂತೆ ಮಾಡುತ್ತಿದ್ದಳು. ಹೀಗಿರುತ್ತ ಒಮ್ಮೆ, ನಂಬಿ ಏನೋ ಗಾಢವಾದ ಚಿಂತೆಯಲ್ಲಿರುವ ಹಾಗೆ ಪ್ರವೀಣ್‌ಗೆ ಭಾಸವಾಗತೊಡಗಿತು. ಎರಡು ತಿಂಗಳೀಚೆಗೆ ಅವನಲ್ಲಿ ಏನೋ ಅನ್ಯಮನಸ್ಕತೆ ಹೊಕ್ಕಂತೆ ಅನಿಸತೊಡಗಿತು. ಅವನ ಕೆಲಸದಲ್ಲಿ ಯಾವುದೇ ಊನ ಕಂಡುಹಿಡಿಯಲಾಗದಿದ್ದರೂ, ನಂಬಿಯ ಮನಸ್ಸನ್ನು ಏನೋ ಕೊರೆಯುತ್ತಿದೆಯೆಂಬುದು ದಿನದಿಂದ ದಿನಕ್ಕೆ ಪ್ರವೀಣ್‌ಗೆ ಅನಿಸತೊಡಗಿತು. ಒಂದು ಶನಿವಾರ ಮಧ್ಯಾಹ್ನ ನಂಬಿಯನ್ನು ತನ್ನ ಜೊತೆ ಆಚೆ ಊಟಕ್ಕೆ ಕರೆದುಕೊಂಡು ಹೋಗಿ, ಊಟಕ್ಕೆ ಮುಂಚೆ ಇಬ್ಬರೂ ಬಿಯರ್ ಕುಡಿಯುತ್ತ ಕೂತಾಗ, “ನಂಬಿ ನಿನಗೇನೋ ಚಿಂತೆ ಹತ್ತಿಕೊಂಡಿದೆ ಎಂದು ನನಗನ್ನಿಸುತ್ತಿದೆ… “ಅಂದ. ಆಫೀಸಿನಲ್ಲಿ ನಂಬಿ ಯಾರ ಬಳಿಯಲ್ಲೂ ತನ್ನ ಸ್ವಂತ ವಿಷಯಗಳನ್ನು ಹೇಳಿಕೊಂಡವನಲ್ಲ. ಅವನಿಗೆ ಬೆಂಗಳೂರಿನಲ್ಲಿ ಆಪ್ತ ಸ್ನೇಹಿತರೆನ್ನುವವರು ಒಬ್ಬರೂ ಇರಲಿಲ್ಲ. ಈಗ ತನ್ನ ದುಗುಡವನ್ನು ಪ್ರವೀಣ್ ಗಮನಿಸಿದ್ದಾನೆ ಎಂಬ ಅರಿವಾಗುತ್ತಲೇ ಯಾಕೋ ಅತೀವ ದುಖಃವಾದಂತಾಗಿ “ಸಮಸ್ಯೆ ದುಡ್ಡಿನದು ಪ್ರವೀಣ್..“ಅಂದುಬಿಟ್ಟ. “ಸಾಲದ ಸಮಸ್ಯೆಯಾ? ನನಗೆ ಗೊತ್ತಿರುವಂತೆ ನೀನು ಅಂಥ ದೊಡ್ಡ ಸಾಲವನ್ನು ಮಾಡುವವನಲ್ಲ….ಮತ್ತೆ ನಿನ್ನ ತಂದೆ ತಾಯಿಯರಿಗಂತೂ ನಿನ್ನಿಂದ ಕೇಳುವ ಅಗತ್ಯವಿಲ್ಲ…ಅವರದೆಲ್ಲ ನಿನಗೆ ಹೊರತು ಅವರಿಂದಾಗಿ ನೀನು ದುಡ್ಡಿನ ಸಮಸ್ಯೆಯಲ್ಲಿ ಬೀಳುವುದು ಶಕ್ಯವಿಲ್ಲ ಅನಿಸುತ್ತದೆ..ಏನಂತ ಸರಿಯಾಗಿ ಹೇಳು…“ಎಂದು ಕೆದಕಿದ. “ಅದೆಲ್ಲ ಅಲ್ಲ..ದುಡ್ಡಿನ ಕೊರತೆ ಸಮಸ್ಯೆಯಲ್ಲ…ಆಯವ್ಯಯದಲ್ಲಿ ವ್ಯತ್ಯಯ ಬಂದು ತಲೆ ಕೆಟ್ಟು ಹೋಗಿದೆ…ಅದೆಲ್ಲ ಹೇಳ ಹೊರಟರೆ ಬಹಳ ಹೊತ್ತು ಬೇಕು…ಬೇರೆ ಯಾರಿಂದಲೂ ಈ ಸಮಸ್ಯೆ ಬಗೆಹರಿಯಲಾರದು…“ಅಂದ ನಂಬಿ ತಪ್ತನಾಗಿ. “ಎಷ್ಟು ದೊಡ್ಡ ಮೊತ್ತ?” ಎಂದು ಕೇಳಿದ್ದಕ್ಕೆ ನಂಬಿ “ಹನ್ನೆರಡು ರೂಪಾಯಿ “ಅಂದದ್ದೇ ಪ್ರವೀಣ್‌ಗೆ ಆಶ್ಚರ್ಯದಿಂದ ಮಾತೆ ಹೊರಡದೆ ಏನು ಹೇಳಬೇಕೊ ತೋಚದೆ ಸುಮ್ಮನೆ ಬಿಯರ್ ಗುಟುಕರಿಸಿದ. ಸಾವಿರಾರು ರೂಪಾಯಿ ಸಂಬಳ ಬರುವ ಈ ಮನುಷ್ಯ ಹನ್ನೆರಡು ರೂಪಾಯಿಗಳಿಗಾಗಿ ಎರಡು ತಿಂಗಳಿನಿಂದ ತಲೆ ಕೆಡಿಸಿಕೊಡಿದ್ದಾನೆಂದರೆ ನಂಬಲಿಕ್ಕಾಗಲಿಲ್ಲ. ಈತ ಈ ರೀತಿಯ ಪಿಸುಣಾರಿಯೆಂದು ಗೊತ್ತಿರಲಿಲ್ಲವಲ್ಲ ಅಂದುಕೊಂಡ. ಈಗ ತಾವು ಕೂತು ಕುಡಿಯುತ್ತಿರುವ ಬಿಯರಿನ ಪ್ರತಿ ಗುಟುಕನ್ನೂ ಈತ ಲೆಕ್ಕ ಹಾಕುತ್ತಿರಬಹುದೆ ಎಂದನ್ನಿಸಿತು. ಆದರೂ, ನಂಬಿ ಹಿಂದೆಂದೂ ಇಂಥ ಜಿಪುಣತನ ತೋರಿಸಿದ ನೆನಪಾಗದೆ, ಇದರ ಹಿಂದೆ ಬೇರೇನೋ ಇರಬಹುದೆಂದನ್ನಿಸಿ ಪ್ರವೀಣ್ “ನೋಡು ಆಸೆಗೂ ಒಂದು ಮಿತಿಯಿರಬೇಕು….ಹನ್ನೆರಡು ರೂಪಾಯಿಗೆ ತಲೆ ಕೆಡಿಸಿಕೊಳ್ಳುವ ಪರಿಸ್ಥಿತಿ ನಿನಗೆ ಯಾಕೆ ಬಂತು? ನಿನಗೆ ತಲೆ ಸರಿಯಿಲ್ಲ ಅಂದರೆ ನಿನ್ನ ಹೆಂಡತಿಯಾದರು ಬುದ್ದಿ ಹೇಳಬಹುದಿತ್ತಲ್ಲ…“ಎಂದು ಹೇಳಿದ. ಪ್ರಶ್ನೆ ಬರಿ ಹನ್ನೆರಡು ರೂಪಾಯಿಗಳದ್ದಲ್ಲವೆಂದು ಪ್ರವೀಣ್‌ಗೆ ವಿವರಿಸಲು ನಂಬಿಗೆ ಅರ್ಧ ಗಂಟೆ ಬೇಕಾಯಿತು. ನಂಬಿಯ ಕುಟುಂಬದಲ್ಲಿ ಲೆಕ್ಕ ಬರೆದಿಡುವ ಒಂದು ಅಭ್ಯಾಸವಿತ್ತು. ಅದು ಅವನ ಅಜ್ಜ- ತಂದೆಯ ತಂದೆ ಆರಂಭಿಸಿದ್ದು. ಕುಟುಂಬದ ಜಮಾ ಖರ್ಚಿನ ಲೆಕ್ಕವನ್ನೆಲ್ಲ ಪ್ರತಿ ಪೈಸೆಯೂ ವ್ಯತ್ಯಾಸವೂ ಆಗದ ಹಾಗೆ ಪ್ರತಿ ದಿನದ ಕೊನೆಗೆ ಲೆಕ್ಕ ಬರೆದು, ಶಿಲ್ಕು ಹಣವನ್ನು ತಾಳೆ ಹಚ್ಚುತ್ತಿದ್ದರು. ಇದರಲ್ಲಿ ವ್ಯತ್ಯಾಸವಾಗುವ ಹಾಗಿಲ್ಲ. ಮೂರು ತಲೆಮಾರುಗಳಿಂದ ಹೀಗೆ ಲೆಕ್ಕ ಬರೆಯುವ ಪರಿಪಾಠವನ್ನು, ಪೈಸೆ ಪೈಸೆಯನ್ನು ಬಿಡದೆ ತಾಳೆ ಹಚ್ಚಿಡುವುದನ್ನು ಪಾಲಿಸಿಕೊಂಡು ಬಂದಿದ್ದರು. ಅವನ ಅಜ್ಜ ಉತ್ತರ ಭಾರತದಲ್ಲಿ ಯಾವುದೋ ಇಂಗ್ಲಿಷ್ ಅಧಿಕಾರಿಯ ಬಳಿ ಕೆಲಸ ಮಾಡುತ್ತಿದ್ದಾಗ ಈ ಅಭ್ಯಾಸ ಬೆಳೆಸಿಕೊಂಡರಂತೆ. ನಂಬಿಗೆ ಮೊಟ್ಟ ಮೊದಲಬಾರಿಗೆ ಖರ್ಚಿಗೆಂದು ಹಣ ಕೊಟ್ಟಾಗ ಅದರ ಜೊತೆಯೇ ಒಂದು ಲೆಕ್ಕದ ಪುಸ್ತಕವನ್ನು ಅವನ ಅಪ್ಪ ಕೊಟ್ಟಿದ್ದರು. ಅಂದು ಅವನು ಕಾಲೇಜು ಸೇರಲು ಹೊರಟ ದಿವಸ. ಆ ಪುಸ್ತಕ ನಂಬಿ ಕಾಲೇಜು ಮುಗಿಸುವವರೆಗೂ ಸಾಕಾಯಿತು. ನಂಬಿಗೆ ಬುದ್ಧಿ ತಿಳಿದಾಗಿನಿಂದ ಅವನ ಅಪ್ಪ ಪ್ರತಿ ರಾತ್ರಿ ಕೂತು ಕುಟುಂಬದ ಜಮಾ ಖರ್ಚಿನ ವಿವರಗಳನ್ನು ಬರೆದಿಡುವುದು ನೆನಪಿದೆ. ಲೆಕ್ಕದ ಪುಸ್ತಕವನ್ನು ಬಿಚ್ಚಿಟ್ಟು, ಪಕ್ಕದಲ್ಲಿ ನಗದು ಹಣವನ್ನು ನಾಣ್ಯ ಮತ್ತು ನೋಟುಗಳನ್ನಾಗಿ ವಿಂಗಡಿಸಿ ನಾಣ್ಯಗಳನ್ನೆಲ್ಲ ಎಣಿಸಲು ಅನುಕೂಲವಾಗುವಂತೆ ಒಂದರ ಮೇಲೊಂದು ಪೇರಿಸಿ ಇಟ್ಟುಕೊಳ್ಳುತ್ತಿದ್ದದ್ದು ನೆನಪಿದೆ. ಉದ್ದ ಹಾಳೆಗಳನ್ನು ತಂದು ರೂಲು ದೊಣ್ಣೆಯಿಂದ ಅದರಲ್ಲಿ ಗೀಟುಗಳನ್ನೆಳೆದು ಮಧ್ಯದಲ್ಲಿ ಮಡಚಿ ದಪ್ಪನೆಯ ದಾರದಿಂದ ಹೊಲೆಯುತ್ತಿದ್ದರು. ರಟ್ಟನ್ನು ಪುಸ್ತಕದ ಅಳತೆಗೆ ಸರಿಯಾಗಿ ಕತ್ತರಿಸಿ ಬೈಂಡು ಹಾಕುತ್ತಿದ್ದರು. ಒಂದು ಪುಸ್ತಕ ಸುಮಾರು ಆರು ತಿಂಗಳ ಲೆಕ್ಕಕ್ಕೆ ಸಾಕಾಗುತ್ತಿತ್ತು. ನಂಬಿ ಈಗಲೂ ಉಪಯೋಗಿಸಿವುದು ಅವನ ಅಪ್ಪ ಮಾಡಿಕೊಟ್ಟ ಲೆಕ್ಕದ ಪುಸ್ತಕಗಳನ್ನೇ. ನಂಬಿಯ ಊರಿನಲ್ಲಿ, ಮನೆಯ ಅಟ್ಟದ ಮೇಲೆ ಪೆಠಾರಿಗಳಲ್ಲಿ ಅವನ ಅಜ್ಜ ಮತ್ತು ಅವನ ಅಪ್ಪನ ಲೆಕ್ಕದ ಪುಸ್ತಕಗಳು ಅವನ ಕುಟುಂಬದ ವರ್ಷಗಟ್ಟಲೆಯ ಲೆಕ್ಕವನ್ನು ತುಂಬಿಕೊಂಡು ಕೂತಿದ್ದವು. ಪ್ರತಿನಿತ್ಯ ಲೆಕ್ಕ ಬರೆದಿಡುತ್ತಿದ್ದರೂ ನಂಬಿಯ ಅಪ್ಪನಾಗಲಿ, ಅಜ್ಜನಾಗಲಿ ಯಾವಾಗಲೂ ಅನಗತ್ಯ ಜಿಪುಣತನವನ್ನು ತೋರಿಸಲಿಲ್ಲ. “ಎಷ್ಟೇ ಖರ್ಚು ಮಾಡಿದರೂ ಪರವಾಗಿಲ್ಲ…ಆದರೆ ಆ ಗಳಿಗೆ ದಾಟಿ ಹೋದ ಮೇಲೆ ಕೂತು ಅದನ್ನು ಬರೆಯುವುದಿದೆಯಲ್ಲ, ಅದು ನಾವು ನಮ್ಮ ಗಳಿಕೆಯ ಮಿತಿಯಲ್ಲಿದ್ದೇವೆಂಬುದನ್ನೂ ಮತ್ತು ನಾವು ವ್ಯಯಿಸಿದ್ದು ಸರಿಯಾದ ಕಾರಣಕ್ಕೆಂಬುದನ್ನೂ ಖಾತರಿ ಮಾಡಿಕೊಳ್ಳಲಿಕ್ಕೆ…“ಎಂದು ನಂಬಿಯ ಅಜ್ಜ ನಂಬಿಯ ತಂದೆಗೆ ಹೇಳಿದ್ದನ್ನು, ನಂಬಿಯ ತಂದೆ ನಂಬಿಗೆ ಹೇಳಿದ್ದರು. ಅವನ ಅಜ್ಜ ಬದುಕಿರುವಾಗ ಇದನ್ನು ತಮ್ಮ ಸ್ನೇಹಿತರಲ್ಲಿ ಸಂಬಂಧೀಕರಲ್ಲಿ ಪ್ರಚಾರ ಮಾಡುತ್ತಿದ್ದರು ; ಅವರೂ ಲೆಕ್ಕ ಬರೆಯುವಂತೆ ಪ್ರಚೋದಿಸುತ್ತಿದ್ದರು. ಕೆಲವರು ಇದನ್ನು ಅನುಸರಿಸಿದರಾದರೂ ನಿಭಾಯಿಸಲಾರದೆ ನಿಲ್ಲಿಸಿದರು. ವ್ರತದ ಹಾಗೆ ಇದನ್ನು ಪ್ರತಿನಿತ್ಯ ಬರೆಯದೇ ಇದ್ದರೆ ನಂತರ ಚಿಕ್ಕ ಪುಟ್ಟ ಖರ್ಚುಗಳೆಲ್ಲ ಮರೆತು ಹೋಗಿ ಲೆಕ್ಕ ತಾಳೆಯಾಗುತ್ತಿರಲಿಲ್ಲ. ಈ ಕಾರಣಕ್ಕೆ ಹಲವರು ತಮಗೆ ಅನುಕೂಲಕರವಾದ ಕೆಲವು ಬದಲಾವಣೆ ಮಾಡಿಕೊಂಡು, ಲೆಕ್ಕ ತಾಳೆ ಹಾಕದೆ ಬರೀ ಖರ್ಚಿನ ವಿವರ ಬರೆಯುವುದು, ಎರಡು ರೂಪಾಯಿಗೂ ಹೆಚ್ಚಾದ ಖರ್ಚುಗಳನ್ನು ಮಾತ್ರ ಬರೆಯುವುದು ಹೀಗೆಲ್ಲ ಶುರು ಮಾಡಿದರು. ಎಷ್ಟೋ ಜನ ನಂಬಿಯಾರ್ ಮನೆತನದ ಈ ಪದ್ಧತಿಯನ್ನು ಹಾಸ್ಯ ಮಾಡುತ್ತಿದ್ದರು. ಚಿತ್ರಗುಪ್ತನ ಮನೆತನವೆಂದು ತಮಾಷೆ ಮಾಡುತ್ತಿದ್ದರು. ಯಾರು ಏನೇ ಅಂದರು, ಇತ್ತೀಚೆಗೆ ಈ ಹನ್ನೆರಡು ರೂಪಾಯಿಗಳ ವ್ಯತ್ಯಾಸ ಬರುವವರೆಗೆ ನಂಬಿಯಾರ್ ಮನೆತನದಲ್ಲಿ ಲೆಕ್ಕ ತಾಳೆಯಾಗುತ್ತ ಬಂದಿತ್ತು. ನಂಬಿ ಆಧುನಿಕನಾದ್ದರಿಂದ ಪ್ರತಿನಿತ್ಯ ಲೆಕ್ಕ ಬರೆದರೂ ವಾರಕ್ಕೊಮ್ಮೆ ಮಾತ್ರ ಜಮಾ ಖರ್ಚನ್ನು ತಾಳೆ ಹಚ್ಚುತ್ತಿದ್ದ. ತಾನು ಈ ತಪ್ಪು ಮಾಡಿದ್ದರಿಂದಲೇ ಈಗ ಈ ಲೆಕ್ಕೆ ತಾಳೆಯಾಗುತ್ತಿಲ್ಲವೆಂದು ಅವನಿಗೆ ಕೆಲವೊಮ್ಮೆ ಅನಿಸುತ್ತಿತ್ತು. ಅವನ ಹೆಂಡತಿ ವಾರಿಣಿ ಅವನ ಸೋದರಮಾವನ ಮಗಳೇ ಆಗಿದ್ದರಿಂದ ಅವಳಿಗೆ ಈ ಪದ್ಧತಿಯ ಪರಿಚಯವಿತ್ತು. ಅವಳ ಮನೆಯಲ್ಲಿ ಕೆಲಕಾಲ ಲೆಕ್ಕ ಆರಂಭಿಸಿ ನಿಲ್ಲಿಸಿದ್ದರು. ಅದರಿಂದಾಗಿ ಅವಳಿಗೆ ಈ ಲೆಕ್ಕದ ಆಚಾರ ಅಸಹಜ ಅನ್ನಿಸಿರಲಿಲ್ಲ. ಮದುವೆ ನಿಶ್ಚಯವಾದಾಗಿನಿಂದ ಅವಳೂ ಚಾಚೂ ತಪ್ಪದೆ ಲೆಕ್ಕ ಲೆಕ್ಕ ಬರೆಯಲಾರಂಭಿಸಿ ಮನೆತನಕ್ಕೆ ತಕ್ಕ ಸೊಸೆಯೆನಿಸಿಕೊಂಡಿದ್ದಳು. ಈಗ ತಾಳೆ ಹತ್ತದೇ ಹೋದ ಲೆಕ್ಕ ಅವಳನ್ನೂ ಕಂಗೆಡಿಸಿತ್ತು. ತಮ್ಮ ಯಾವುದೋ ನಿರ್ಲಕ್ಷ್ಯದಿಂದಾಗಿ ವರ್ಷಾನುಗಟ್ಟಲೆ ನಡೆದುಕೊಂಡು ಬಂದ ಒಂದು ನಿಯಮ ಮುರಿಯಿತೆಂದು ಖಿನ್ನಳಾಗಿದ್ದಳು. ಬಾಲ್ಯದಲ್ಲಿ ಯಾವಗಲೋ ಚಂದಮಾಮದಲ್ಲಿ ಓದಿದ ರುಣಾನುಬಂಧ ಎಂಬ ಕತೆಯೊಂದು ನಂಬಿಯನ್ನೂ ಆಗೀಗ ಕಾಡುತ್ತಿತ್ತು. ಆ ಕತೆ ಒಂದು ದಂಪತಿಗಳದ್ದು. ಅವರಿಗೆ ಅನೇಕ ಮಕ್ಕಳು ಹುಟ್ಟಿ ಯಾರೂ ಹೆಚ್ಚುಕಾಲ ಉಳಿಯದೇ ಹೋದಾಗ ಒಂದು ಬಾರಿ ಅವರು ಆಗತಾನೆ ಹುಟ್ಟಿದ ಮಗುವನ್ನೆತ್ತಿಕೊಂಡು ರುಷಿಯೊಬ್ಬರ ಬಳಿ ಹೋಗುತ್ತಾರೆ. ಪ್ರತಿ ಜೀವಿಯೂ ಯವುಯಾವುದೋ ರುಣ ತೀರಿಸುವ ಸಲುವಾಗಿ ಜನ್ಮವೆತ್ತಿ, ಆ ರುಣ ತೀರಿದ್ದೇ ಕಾಲವಾಗುತ್ತಾನೆ ; ನಿಮಗೆ ಹುಟ್ಟಿದ ಮಕ್ಕಳು ನಿಮಗೆ ತೀರಿಸಬೇಕಾದ ರುಣ ತೀರಾ ಕಡಿಮೆಯಾದ್ದರಿಂದ ಅವರು ಬೇಗನೆ ಕಾಲವಶವಾಗುತ್ತಿದ್ದಾರೆ. ಈ ಹುಡುಗ ನಿಮಗೆ ಒಂದು ತಂಬಿಗೆ ಎಣ್ಣೆ ಕೊಡಬೇಕು.ಅದನ್ನು ತೆಗೆದುಕೊಳ್ಳದೆ ಇರುವವರೆಗೂ ಇವನ ಆಯಸ್ಸು ಗಟ್ಟಿಯಾಗಿರುತ್ತದೆ ಎಂದು ಆ ರುಷಿ ಹೇಳುತ್ತಾರೆ. ಆ ದಂಪತಿಗಳು ಬಹಳ ಜಾಗರೂಕತೆಯಿಂದ ಮಗನನ್ನು ಬೆಳೆಸುತ್ತಾರೆ. ಆತ ಹದಿನೆಂಟು ವರ್ಷದವನಾಗಿರುವಾಗ ಒಮ್ಮೆ ಮಧ್ಯಾಹ್ನ ತಾಯಿ ಕೆಲಸದಲ್ಲಿರುವ ಸಮಯದಲ್ಲಿ “ಅಮ್ಮಾ ಇದನ್ನು ತೊಗೋ “ಎಂದು ಹೇಳಿ ಒಂದು ಬಿಂದಿಗೆ ಎಣ್ಣೆ ಇಡುತ್ತಾನೆ. ಕೆಲಸದಲ್ಲಿ ಮಗ್ನಳಾಗಿದ್ದ ಅವನ ಅಮ್ಮ ಏನು ಎತ್ತ ಕೇಳದೇ “ತಗೊಳ್ತೀನಪ್ಪ ಅಲ್ಲಿಡು “ಅನ್ನುತ್ತಾಳೆ. ಆಮೇಲೆ ಅವಳು ಈ ಬಿಂದಿಗೆ ಇಲ್ಲಿ ಹೇಗೆ ಬಂತು ಎಂದು ಆಶ್ಚರ್ಯಪಡುತ್ತ ಅದನ್ನು ಎತ್ತಿಕೊಂಡದ್ದೇ ಮಗ ಅಸು ನೀಗುತ್ತಾನೆ. ಈ ಕತೆ ನೆನಪಾದಾಗಲೆಲ್ಲ ನಂಬಿಗೆ ಲೆಕ್ಕದ ಪುಸ್ತಕವೊಂದರಲ್ಲಿ ಯಾರೋ ಎಲ್ಲೋ ಇಡೀ ಜಗತ್ತಿನ ರುಣಾನುಬಂಧದ ಲೆಕ್ಕ ಇಟ್ಟುಕೊಡಿರುವ ಕಲ್ಪನೆಯಾಗುತ್ತಿತ್ತು – ಈ ಕತೆಗೆ ಅಂಥ ವಿಶೇಷವಾದ ಅರ್ಥವಿಲ್ಲದಾಗ್ಯೂ . ತನ್ನ ಮನೆತನದವರ ಲೆಕ್ಕ ಬರೆಯುವ ಅಭ್ಯಾಸದ ಕಾರಣದಿಂದಾಗಿಯೇ ಅದು ತನ್ನ ನೆನಪಿನಲ್ಲಿದೆಯೆಂದು ನಂಬಿಗೆ ತಿಳಿದಿದ್ದರೂ, ತನ್ನ ಈಗಿನ ತಳಮಳವನ್ನು ಪ್ರವೀಣ್‌ಗೆ ಹೇಳುವ ಭರದಲ್ಲಿ ಈ ಕತೆಯನ್ನೂ ಹೇಳಿದ.

-೩-

ನಂಬಿಯ ಸಮಸ್ಯೆಯನ್ನು ಅವನು ಹೇಳಿದ ಕತೆಯನ್ನು ಕೇಳಿದ ಪ್ರವೀಣ್‌ಶುಕ್ಲಾಗೆ ಏನು ಪರಿಹಾರ ಹೇಳಬೇಕೊ ಗೊತ್ತಾಗಲಿಲ್ಲ. ಅವನಿಗೆ ಇದೆಲ್ಲ ಮೂರ್ಖತನದ ಪರಮಾವಧಿ ಅನಿಸಿತು. “ನಾನೆ ನಿನಗೆ ಹನ್ನೆರಡು ರೂಪಾಯಿ ಕೊಡುತ್ತೇನೆ…ಲೆಕ್ಕ ಸರಿಮಾಡಿಬಿಡು…“ಅಂದ. “ಅದು ಹೇಗೆ ಸರಿಹೋಗತ್ತೆ? ಹನ್ನೆರಡು ರೂಪಾಯಿ ನೀನು ಕೊಟ್ಟಿದ್ದು ಅಂತ ಜಮಾ ಆಗತ್ತೆ….ಲೆಕ್ಕ ತಾಳೆ ಆಗೋದೆ ಇಲ್ಲ. “ಎಂದ. ಪ್ರವೀಣ್‌ಗೆ ನಂಬಿಯ ಹಟದಿಂದ ತಾಳ್ಮೆ ತಪ್ಪಿದರೂ ಸೈರಿಸಿಕೊಂಡು “ನಾಳೆ ಸಂಜೆ ನಿನ್ನ ಮನೆಗೆ ಬರುತ್ತೇನೆ.. ಆಗ ನಿನ್ನ ಸಮಸ್ಯೆಗೆ ಪರಿಹಾರ ಹೇಳುತ್ತೇನೆ…“ಅಂದ. ಈ ಹುಚ್ಚುತನಕ್ಕೆ ಹೇಗೆ ಚಿಕಿತ್ಸೆ ಮಾಡಬೇಕೆಂದು ಯೋಚಿಸಿ ಪ್ರವೀಣ್ ಮರುದಿನ ಸಂಜೆ ನಂಬಿಯ ಮನೆಗೆ ಬಂದ. ಬಂದದ್ದೇ ಗಂಡ ಹೆಂಡತಿಯನ್ನೂ ಕೂರಿಸಿಕೊಂಡು ಅವರಿಗೆ ಬಾಯಿ ತೆರೆಯುವ ಅವಕಾಶವನ್ನೂ ಕೊಡದೆ ಸರೀ ಬೈದ. ಈ ಲೆಕ್ಕ ಬರೆಯುವುದನ್ನು ಮೊದಲು ನಿಲ್ಲಿಸು ; ಇದಕ್ಕೂ ಮೂಢನಂಬಿಕೆಗೂ ವ್ಯತ್ಯಾಸವಿಲ್ಲ ; ಹನ್ನೆರಡು ರೂಪಾಯಿ ತಾಳೆಯಾಗುತ್ತಿಲ್ಲವೆಂದು ಎರಡು ತಿಂಗಳಿಂದ ದುಖಿಃಸುತ್ತಿರುವ ನಿನಗೆ ತಾರತಮ್ಯ ಜ್ಞಾನ ಇದೆಯಾ; ಯಾವುದೋ ಕಾರಣಕ್ಕೆ ನಿನ್ನ ಅಜ್ಜ ಶುರುಮಾಡಿದ್ದನ್ನು ಈಗ ಸ್ಥಿತಿ ಸಂದರ್ಭ ನೋಡದೆ ಪಾಲಿಸಲು ಹೋಗುತ್ತೀಯಲ್ಲ; ಬಾಲ್ಯದಲ್ಲಿ ಓದಿದ ಯಾವುದೋ ದರಿದ್ರ ಕತೆಯಿಂದ ಮಹಾಜ್ಞಾನ ಪಡೆದವರ ಥರ ಸಮರ್ಥಿಸಿಕೊಳ್ಳಲು ನೋಡುತ್ತೀಯಲ್ಲ; ನಿನಗೆ ಸ್ವಂತ ಯೋಚಿಸುವ ಶಕ್ತಿಯಿಲ್ಲವ ಎಂದೆಲ್ಲ ಕಟುವಾಗಿ ಬೈದ. ಈ ಮಧ್ಯಮ ವರ್ಗದ ಚಿಪ್ಪನ್ನು ಒಡೆದು ಹೊರಬರಬೇಕು ಅಂದ. ನೀನು ಇಂಥ ಸಣ್ಣ ಸಂಗತಿಗಳನ್ನು ಮೀರಿ ಬೆಳೆಯಬೇಕು; ನಿನ್ನ ಕರಿಯರ್ ಎಷ್ಟೊಂದು ಒಳ್ಳೆಯ ಸಾಧನೆಯ ಹಾದಿಯಲ್ಲಿರುವಾಗ ನೀನು ಇಂಥದಕ್ಕೆಲ್ಲ ಬಲಿಯಾದರೆ ನಿನ್ನ ಕತೆ ಮುಗಿಯಿತು ಅಂತಿಟ್ಟುಕೋ; ಇನ್ನು ನೀನು ಮೇಲೇರಿದಂತೆಲ್ಲ ನಿನ್ನ ಮನೆಯಲ್ಲಿ ಬೇರೆ ವ್ಯಕ್ತಿತ್ವನ್ನೆ ಇಟ್ಟುಕೊಳ್ಳುತ್ತೀ ಅಂದರೆ ಸಾಧ್ಯವಿಲ್ಲ ಎಂಬುದನ್ನು ಮೊದಲು ಅರಿತುಕೊ; ಈಗ ನೀನು ಮೇಲೇರುತ್ತಿರುವ ವೇಗ ನೋಡಿದರೆ ನಮ್ಮ ಕಂಪನಿಯ ನಿರ್ದೇಶಕನಾಗುವ ಸಾಮರ್ಥ್ಯ ಮತ್ತು ಅವಕಾಶ ನಿನಗಿದ್ದ ಹಾಗೆ ಅನಿಸುತ್ತೆ; ಹಾಗೆ ಆಗಬೇಕಾದರೆ ಇಂತದೆಲ್ಲ ಕಾಲಿಗೆ ತೊಡರದ ಹಾಗೆ ಏಕಾಗ್ರತೆಯನ್ನು ಕಾಪಾಡಿಕೊಳ್ಲಬೇಕು…..“ಅಂತೆಲ್ಲ ಪ್ರವೀಣ್‌ಗೆ ಬೋಧನೆ ಮಾಡಿದ. ಆಸೆ ತೋರಿಸಿದ, ಹೆದರಿಸಿದ.ದಂಪತಿಗಳಿಬ್ಬರೂ ಮಾತಾಡದೆ ಕುಳಿತಿದ್ದರು. ಈ ರೀತಿಯ ಆಕ್ರಮಣಕ್ಕೆ ಅವರು ಸಿದ್ಧರಾದಂತಿರಲಿಲ್ಲ. ತಾನು ಅವನ ಮೆಲಧಿಕಾರಿಯಾಗಿದ್ದರಿಂದ ನಂಬಿ ಬಾಯಿ ಮುಚ್ಚಿ ಕೂತಿದ್ದಾನೋ ಅಥವ ತಾನು ಹೇಳುತ್ತಿರುವುದು ಅವನನ್ನು ತಟ್ಟುತ್ತಿದೆಯೋ ಎಂಬುದು ಪ್ರವೀಣ್‌ಗೆ ಗೊತ್ತಾಗಲಿಲ್ಲ. ತನ್ನ ಮಾತುಗಳನ್ನು ಕೇಳುತ್ತಿದ್ದಂತೆ ಅವರ ಮುಖಗಳಲ್ಲಾಗುತ್ತಿದ್ದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪ್ರವೀಣ್‌ಗೆ ವಾರಿಣಿ ತನ್ನ ಮಾತಿನ ಪ್ರಭಾವಕ್ಕೊಳಗಾಗುತ್ತಿದ್ದಾಳೆ ಎಂದು ಅನಿಸಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಎಲ್ಲ ಮುಗಿದನಂತರ ಪ್ರವೀಣ್ “ಇನ್ನು ಮುಂದೆ ಲೆಕ್ಕ ಬರೆಯುವುದಿಲ್ಲ ಎಂದು ನನಗೆ ಪ್ರಮಾಣ ಮಾಡಿ ಹೇಳು “ಎಂದ. ಇದೆಲ್ಲ ಇಂಥ ವಿಪರೀತಕ್ಕೆ ಹೋಗುತ್ತದೆಂದು ಭಾವಿಸಿರದ ನಂಬಿ ಗಾಬರಿಯಾದ. ಇನ್ನು ಇವರನ್ನು ಕಾಡಬಾರದೆಂದೆನಿಸಿ ಪ್ರವೀಣ್ “ಮತ್ತೆರಡು ದಿನ ಬಿಟ್ಟು ಬರುತ್ತೇನೆ…ಆಗ ನಿನ್ನ ನಿರ್ಧಾರ ಹೇಳು…“ಅಂತಂದು ಹೊರಟ. ತಾನು ನಂಬಿ ಮೇಲೇರುವ ಮಾತಾಡಿದಾಗಲೆಲ್ಲ ಅರಳುತ್ತಿದ್ದ ವಾರಿಣಿಯ ಕಣ್ಣುಗಳನ್ನು ನೆನೆಸಿಕೊಂಡಂತೆ ಪ್ರವೀಣ್‌ಗೆ ಇವಳು ನಂಬಿಯನ್ನು ಬದಲಾಯಿಸುತ್ತಾಳೆ ಅನಿಸತೊಡಗಿತು. ಪ್ರವೀಣ್, ಆ ನಂತರ ನಂಬಿಯನ್ನು ಆಫೀಸಿನಲ್ಲಿ ಭೇಟಿಯಾದಾಗ ಈ ಕುರಿತು ಏನನ್ನೂ ಕೇಳಲಿಲ್ಲ. ಹೇಳಿದ ಮಾತಿನಂತೆ ಎರಡು ದಿನಗಳ ನಂತರ ಸಂಜೆ ನಂಬಿಯ ಮನೆಗೆ ಬಂದ. ಅವನು ಬಂದಾಕ್ಷಣ ಅವತ್ತಿನಿಂದ ಲೆಕ್ಕದ ಪುಸ್ತಕಕ್ಕೆ ಸಮಾಪ್ತಿ ಹಾಡುವ ನಂಬಿಯಾರ್ ದಂಪತಿಗಳ ನಿರ್ಧಾರ ಘೋಷಣೆಯಾಯಿತು. ಅದನ್ನು ಕೇಳಿ, ಇಷ್ಟು ಬೇಗ ಇವರು ಬದಲಾಗುತ್ತಾರೆಂದು ಅಂದುಕೊಂಡಿರದ ಪ್ರವೀಣ್‌ಗೆ ಆಶ್ಚರ್ಯವಾಯಿತು. ಎರಡನೆ ಸುತ್ತಿನ ಆಕ್ರಮಣಕ್ಕಾಗಿ ಅವನು ತಂದ ಅಸ್ತಗಳೆಲ್ಲ ನಿರುಪಯುಕ್ತವಾದವು. “ಹನ್ನೆರಡು ರೂಪಾಯಿ ಏನಾಯಿತು?“ಎಂಬ ಅವನ ಪ್ರಶ್ನೆಗೆ “ಯಾವ ಹನ್ನೆರಡು ರೂಪಾಯಿ ನನಗೆ ನೆನಪಿಲ್ಲವಲ್ಲ….“ಎಂದು ನಂಬಿ ಮರುಪ್ರಶ್ನೆ ಕೇಳಿ ನಕ್ಕ. ತಾನು ಕುಟುಂಬವೊಂದಕ್ಕೆ ಸರಿಯಾದ ಮಾರ್ಗದರ್ಶನ ಮಾಡಿ ಪರಿವರ್ತಿಸಿದೆನೆಂದು ಪ್ರವೀಣ್‌ಗೆ ಹೆಮ್ಮೆಯಾಯಿತು. ಪ್ರವೀಣ್ ಹೋದನಂತರ ನಂಬಿ ಮತ್ತು ವಾರಿಣಿ ಎಂದಿನಂತೆ ಲೆಕ್ಕ ಬರೆಯದೆ ಮಲಗಲು ಹೋದರು. ಇಬ್ಬರಿಗೂ ಏನೋ ಆತಂಕ, ಉದ್ವೇಗ. ಮಲಗಿದಲ್ಲೇ ನಂಬಿ ವಾರಿಣಿಯ ಕೈ ಹಿಡಿದುಕೊಂಡ. ವಾರಣಿ “ನಾಳೆ ದೇವರಿಗೆ ತಪ್ಪು ಕಾಣಿಕೆ ಇಡೋಣ.“ಅಂದಳು. ನಂಬಿ ಹೂಂ ಅಂದ.

  • ೪ –

ನಂಬಿ ಮರುದಿನ ಸಂಜೆ ಆಫೀಸಿನಿಂದ ಬಂದವನೆ, ತನ್ನ ಹಳೆಯ ಲೆಕ್ಕದ ಪುಸ್ತಕಗಳನ್ನು ತಿರುವಿ ಹಾಕುತ್ತ ಕೂತ. ಅವನು ಮಾಡುತ್ತಿರುವುದನ್ನು ದಿಟ್ಟಿಸುತ್ತ ನಿಂತ ವಾರಿಣಿಗೆ “ಎಲ್ಲವನ್ನು ಕಟ್ಟಿ ಪೆಠಾರಿಯಲ್ಲಿ ಸೇರಿಸುತ್ತೇನೆ.“ಅಂದ. ಹಾಗೆಯೇ ನೋಡುತ್ತ ಕೂತವನಿಗೆ ಮದುವೆಯಾದ ಹೊಸತರಲ್ಲಿ ಮಾಡಿದ ಖರ್ಚುಗಳು ಕಣ್ಣಿಗೆ ಬಿದ್ದವು. ಇಬ್ಬರೂ ಲಾಲ್‌ಬಾಗ್‌ಗೆ ರಿಕ್ಷಾದಲ್ಲಿ ಹೋಗಿದ್ದು, ತಿಂಡಿ ತಂದದ್ದು, ಪಾಸ್‌ಪೋರ್ಟ್ ಕೊಂಡದ್ದು ಎಲ್ಲ ಇತ್ತು. ಹಿಂತಿರುಗುವ ಖರ್ಚಿನ ವಿವರ ಇರಲಿಲ್ಲ. ಅದನ್ನು ಅವಳೇ ಕೊಟ್ಟಿರಬೇಕು. ಅವಳ ಲೆಕ್ಕದ ಪುಸ್ತಕದಲ್ಲದು ಖಂಡಿತವಾಗಿ ಇರುತ್ತದೆ ಅಂದುಕೊಂಡ . ಪುಟ ತಿರುವುತ್ತಿದ್ದ ಹಾಗೆ ಶರ್ಟು, ಚಡ್ಡಿ, ಬ್ರಾ ಖರ್ಚುಗಳೂ ಕಂಡವು. ನೋಟ್‌ಬುಕ್ ಎಂಬ ಖರ್ಚು ನೋಡಿ ತಾವು ಗರ್ಭನಿರೋದಕಕ್ಕೆ ನೋಟ್‌ಬುಕ್ ಅಂಬ ಗುಟ್ಟಿನ ಹೆಸರಿಟ್ಟ ಸಂದರ್ಭ ನೆನಪಾಯಿತು. ಪುಸ್ತಕ ನೋಡುತ್ತ ನಂಬಿ ಖಿನ್ನನಾಗಿ ಕೂತುಬಿಟ್ಟ. ಸಿಗರೇಟು ತಂಬಾಕುಗಳ ಹಾಗೆ ಈ ಲೆಕ್ಕವೂ ಅಂಟಿಕೊಂಡ ಚಟವಾಗಿ ಕಂಡಿತು. ಪ್ರತಿವಾರ ಲೆಕ್ಕ ಮಾಡಿ ತಾಳೆ ಹಚ್ಚುವ ಕ್ಷಣ ಬಂದಾಗ ಏನೋ ಉದ್ವೇಗವಾಗುತ್ತಿತ್ತು.ಪ್ರತಿಬಾರಿ ತಾಳೆ ಹಚ್ಚಿದನಂತರ ಏನೋ ಸಮಾಧಾನವಾಗುತ್ತಿತ್ತು. ಅದನ್ನೇ ಯೋಚಿಸುತ್ತ ಕೂತವನಿಗೆ ತನ್ನ ಈವರೆಗಿನ ಯಶಸ್ಸಿನಲ್ಲಿ ಈ ಲೆಕ್ಕದ ಪುಸ್ತಕದ ಪಾತ್ರವೂ ಇದೆ ಅನಿಸತೊಡಗಿತು. ವಿದ್ಯಾರ್ಥಿ ದಿನಗಳಲ್ಲಂತೂ ತಾನು ಹೆಚ್ಚು ಚಹ ಕುಡಿಯುತ್ತಿದ್ದೇನೆಂಬುದೋ, ಪರೀಕ್ಷೆ ಹತ್ತಿರ ಬಂದರೂ ಹೆಚ್ಚು ಸಿನಿಮಾ ನೋಡುತ್ತಿದ್ದೆನೆಂಬುದೋ ಲೆಕ್ಕ ಬರಿಯುವಾಗ ಅರಿವಿಗೆ ಬಂದು . ಅದು ನೈತಿಕತೆಯ ಕಾವಲುಗಾರನ ಥರ ಅವನನ್ನು ಅಂಕೆಯಲ್ಲಿಡುತ್ತಿತ್ತು. ಪ್ರತಿಬಾರಿ ಊರಿಗೆ ಪತ್ರ ಬರೆದಾಗಲೂ ಕೊನೆಯಲ್ಲಿ “ಲೆಕ್ಕ ತಾಳೆಯಾಗಿದೆ .“ಎಂದು ಬರೆದು ಎಲ್ಲವೂ ಸರಿಯಾಗಿದೆ ಎಂದು ಸೂಚಿಸುತ್ತಿದ್ದ. ತಾನು ಪರೀಕ್ಷೆಗಳನ್ನು ಯಶಸ್ವಿಯಾಗಿ ದಾಟುತ್ತ, ತನ್ನ ತಂದೆ ತಾಯಿಯರ ಅಪೇಕ್ಷೆಯ ಮಟ್ಟ ಮುಟ್ಟುತ್ತ, ಕೆಲಸದಲ್ಲಿ ಕಷ್ಟಕರವಾದ ಸನ್ನಿವೇಶಗಳನ್ನು ಎದುರಿಸಿಯೂ ಅವುಗಳನ್ನು ದಾಟಿ ಮುಂದೆ ಹೋಗುತ್ತ ಈಗಿನ ಈ ಸ್ಥಿತಿಗೆ ಬರುವಲ್ಲಿ ಲೆಕ್ಕದ ಪುಸ್ತಕ ತನ್ನ ದೇಣಿಗೆಯನ್ನು ಕೊಟ್ಟಿದೆ ಎಂದು ಅನಿಸುತ್ತಿದ್ದಂತೆ ಭಾವುಕನಾದ. ಆದರೆ ತಾನು ಇನ್ನೂ ಮುಂದಕ್ಕೆ ನೆಗೆಯಬೇಕಾದರೆ ಈ ಎಲ್ಲವನ್ನೂ ಬಿಟ್ಟೇ ನೆಗೆಯಬೇಕು ಅಂತ ಪ್ರವೀಣ್ ಹೇಳಿದ ಮಾತು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಲಿತ್ತು. ಅದನ್ನೆ ಎಂದುಕೊಳ್ಳುತ್ತ ಕುಳಿತವನಿಗೆ ತಾನಿನ್ನು ಲೆಕ್ಕ ಬರೆಯಬೇಕಾಗಿಲ್ಲವೆಂಬುದು ಭರಿಸಲಾಗದ ಸ್ವಾತಂತ್ರ್ಯದ ಹಾಗನಿಸಿತು. ಈವತ್ತೆ ತಾನು ತಂದ ಬಿಯರ್ ಬಾಟಲುಗಳು, ಗೇರುಬೀಜ, ಹವಾಯಿಚಪ್ಪಲಿಗಳನ್ನು ನೆನಪಿಸಿಕೊಳ್ಳುತ್ತ, ಇನ್ನು ಮುಂದೆ ತಾನು ಈ ಸಂಖ್ಯೆಗಳನ್ನು ದಾಖಲಿಸುವ ಪ್ರಮೇಯವಿಲ್ಲ, ಪಾಪ ಪುಣ್ಯಗಳ ಎಗ್ಗಿಲ್ಲ . ದಿನದ ಕೊನೆಗೆ ಪ್ರತಿ ಖರ್ಚನ್ನೂ ತನಗೆ ತಾನೆ ಹೇಳಿಕೊಳ್ಳುವ ಅಗತ್ಯವಿಲ್ಲ ಅನಿಸಿ ಏನೋ ನಿರಾಳತೆಯನ್ನು, ನೋವು ತುಂಬಿದ ನಿರಾಳತೆಯನ್ನು ಅನುಭವಿಸಿದ. ಪ್ರತಿಬಾರಿಯಂತೆ ಈ ಸಲವೂ ಹೊಸ ವರ್ಷದ ಆರಂಭವನ್ನು ಆಚರಿಸಲು ಇನ್ನೊಂದು ತಿಂಗಳಲ್ಲಿ ತಮ್ಮ ಮನೆಗೆ ಬರಲಿರುವ ತಂದೆ ತಾಯಿಯರಿಗೆ ತಾನು ಲೆಕ್ಕ ನಿಲ್ಲಿಸಿದ್ದನ್ನು ಹೇಗೆ ಹೇಳುವುದು ಎಂದು ಯೋಚಿಸತೊಡಗಿದ. ಅವರಿಗೆ ಬಹಳ ಸಿಟ್ಟು ಬರಬಹುದೆನ್ನಿಸಿತು, ನೋವಾಗುವುದೆನಿಸಿತು. ಈ ಪಾಪಪ್ರಜ್ಞೆಯನ್ನು ತಾನು ಅರಗಿಸಿಕೊಂಡಲ್ಲಿ ಬೇರೆ ಯಾವುದನ್ನಾದರೂ ದಕ್ಕಿಸಿಕೊಂಡೇನು ಅನಿಸಿತು. ಈ ವಿಷಯವನ್ನು ಅವರು ಬಂದಾಗ ಹೇಳುವುದೋ ಅಥವ ಪತ್ರ ಬರೆಯಲೋ ಎಂದು ಯೋಚಿಸಿ, ಈಗಲೆ ಪತ್ರದ ಮೂಲಕವೇ ತಿಳಿಸುವುದು ಒಳ್ಳೆಯದೆನ್ನಿಸಿ ಬರೆಯಲು ಕೂತ.


ಏಪ್ರಿಲ್ ೧೯೯೫

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.