ರಥ ಸಪ್ತಮಿ

ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಬೇಗ ಎದ್ದು ಒಂದು ಗಂಟೆ ವಾಕಿಂಗ್ ಹೋಗಿ ಬಂದರೆ ಮೈ, ಕೈ-ಕಾಲು ಸ್ವಲ್ಪವಾದರೂ ಸುಸ್ತಿತಿಯಲ್ಲಿ ಇರುತ್ತದೆ. ಜೊತೆಗೆ ಕಣ್ಣಿನ ರೆಪ್ಪೆಗಳ ಮೇಲೆ ಕ್ಷಣವಷ್ಟೇ ಕುಳಿತು ಒಳಗೆ ಬಾಗಿಲು ತಟ್ಟಿ ಎಲ್ಲ ಕ್ಷೇಮವೇ ಎಂದು ವಿಚಾರಿಸಿ ಮುಂದೆ ಹೋಗುವ ತಣ್ಣನೆಯ ಗಾಳಿಯ ಪದರುಗಳಿಗೆ ಮೈ ಮುಖವನ್ನು ಒಡ್ಡಿ ಬರಬೇಕೆಂದು ಹೋದರೆ ಅಲ್ಲಿ ಪ್ರಭಾಕರನಿಗೆ ಸ್ನೇಹಿತರು ಸಿಗುತ್ತಾರೆ. ಅವರ ಜೊತೆ ಹಾಕುವ ಹೆಜ್ಜೆಗಳಿಗೆ ಒಂದು ಲಯವಾದರೆ ಮಾತಿನ ಲಯ ಬೇರೊಂದು; ದಿಕ್ಕು ಹಲವು ಕಡೆ. ರಾತ್ರಿ ಕೇಳಿದ ನ್ಯೂಸ್ ವಿಷಯ, ಈಗ ರಾಜಕೀಯ ನರಕ, ಬಿಹಾರದ ಯಾವುದೇ ಊರಿಗೂ ಬೆಂಗಳೂರಿಗೂ ಅಂಥ ವ್ಯತ್ಯಾಸವೇನಿಲ್ಲ ಎನ್ನುವ ಠರಾವು. ಇವೆಲ್ಲವನ್ನು ದಾರಿಯಲ್ಲಿ ಸಿಗುತ್ತಿದ್ದ ಮರಗಳ ರೆಂಬೆಯಲ್ಲಿ ತಂಗಲು ಬಿಟ್ಟು ಮನೆ ಸೇರುತ್ತಿದ್ದ ಪ್ರಭಾಕರ. ಅವನು ಪ್ರೆಸ್ಸಿಗೆ ಹೊರಡಲು ಸಿದ್ಧವಾಗುವುದಕ್ಕೆ ಸಾಮಾನ್ಯವಾಗಿ ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿದ್ದ. ಅಷ್ಟರಲ್ಲಿ ಪೇಪರ್ ಓದುವುದು, ಸ್ನಾನ, ತಿಂಡಿ, ಇಷ್ಟೆಲ್ಲ ಆಗಬೇಕು. ಏಕೋ ಧಾವಂತವೇ ಸ್ಥಾಯಿ ಸ್ಥಿತಿಯಾಗುತ್ತ ಬರುತ್ತಿದೆ. ಆದರೆ ಇದನ್ನು ಬಿಟ್ಟು ಬೇರೆ ಏನೂ ತಾನೆ ಸಾಧ್ಯ? ಬೆಂಗಳೂರು ಎಂದರೆ ಹೀಗೆಯೇ, ಬೇಕು – ಬೇಡದ ಉಯ್ಯಾಲೆ ಎಂದುಕೊಳ್ಳುತ್ತಾನೆ.

ಪೇಪರ್ ಮೇಲೆ ಕಣ್ಣಿಟ್ಟಿದ್ದಾಗ, “ರೀ, ನಿಮ್ಗೆ ಫೋನ್ ಎಂದಳು ಅವನ ಹೆಂಡತಿ ಮಾಲಿನಿ. ಯಾರು ಎನ್ನುವಂತೆ ಸನ್ನೆ ಮಾಡಿದ. ಅವಳು ರಿಸೀವರ್ ಬಾಯಿ ಮುಚ್ಚಿ, “ಶಿವರಾಮನ್ ಎಂದು ಹೇಳಿದ್ದಕ್ಕೆ ಕೈ ಆಡಿಸಿದ. ಆ‌ಅಗ ಅವಳು, “ಅವರು ವಾಕಿಂಗ್ ಹೋಗಿದಾರೆ….. ಬಂದ ಮೇಲೆ ಹೇಳ್ತೀನಿ, ಸರೀನಾ ಎಂದು ಫೋನ್ ಕೆಳಗಿಟ್ಟು ಎರಡನೆ ಸ್ಟ್ಯಾಂಡರ್ಡ್ ಓದುತ್ತಿದ್ದ ಮಗ ವಿಶೇಷನಿಗೆ ತಿಂಡಿ ಡಬ್ಬಿ ರೆಡಿ ಮಾಡಲು ಹೋದಳು. ಶಿವರಾಮನ್ ಮತ್ತು ಅಂಥವರು ಕೊಟ್ಟ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಕೊಡಲು ಶ್ರಮಿಸಿದರೂ ಸಾಧ್ಯವಾಗದೆ ಪ್ರಭಾಕರ ಹಾಗೆ ಮಾಡುತ್ತಾನೆ. ಆದರೆ ತನಗೆ ದುಡ್ಡು ಕೊಡಬೇಕಾದವರು, ಬಾಕಿ ಉಳಿಸಿರುವವರು, ಬಿಲ್ ಪಾಸ್ ಮಾಡದೆ, ‘ನಮ್ಮದು ಮುಂಚೆ ಕೊಟ್ಟು ಬಿಡಿ ಎಂದು ಹೇಳುವ ಸರ್ಕಾರಿ ಇಲಾಖೆಯವರೊಂದಿಗೆ ಮತ್ತು ಇತ್ತೀಚೆಗೆ ಖಾಸಗಿ ಕಂಪನಿಯವರ ಜೊತೆ ಮಾತನಾಡುವಾಗ ಮಾತಿಗೆ ರಂಗು ರಂಗಿನ ಮಿರುಗುವ ಚಿಕ್ಕಿಗಳನ್ನು ಸೇರಿಸುತ್ತಿದ್ದ.

ಇನ್ನೇನು ರಿಟೈರ್ ಆಗಲಿದ್ದ ಅವನ ತಂದೆ ಶಂಕರಯ್ಯ ತೊಂದರೆಯಿಲ್ಲದೆ ರಿಟೈರ್ ಆಗಲು ಬೇಕಾದ ಕಾಗದ- ಪತ್ರ ಇತ್ಯಾದಿಗಳನ್ನು ಸಿದ್ಧಪಡಿಸುವುದಕ್ಕೆಂದು ರಜೆಯ ಮೇಲಿದ್ದರು. ಜೊತೆಗೆ ಅನಂತರ ಕಾಲ ತಮ್ಮ ತಲೆಯ ಮೇಲೆ ಕಲ್ಲು ಕೂರದೆ ಇರಲೆಂದು ಔದ್ಯೋಗಿಕ ಉತ್ಪಾದನೆಯಲ್ಲಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಒಂದು ಕನ್ಸಲ್ಟೆನ್ಸಿಯನ್ನು ಪ್ರಾರಂಭಿಸಬೇಕೆಂದು ಯೋಜಿಸಿದ್ದರು.

ಅವರು, “ಈ ಸಲ ಎಲ್. ಐ. ಸಿ. ದು ಕೊನೆ ಇನ್‌ಸ್ಟಾಲ್ಮೆಂಟ್ ಕಟ್ಟಬೇಕು . ಹೇಗಿದ್ದರೂ ನೀನು ಆ ಕಡೆ ಹೋಗ್ತೀಯಲ್ಲ ಕಟ್ಬಿಡು ಎಂದು ಆದರ ಬಗ್ಗೆ ವಿವರವನ್ನು ಕೊಟ್ಟರು. ಅನಂತರ, “ಅದ್ಸರಿ, ನೀನ್ಯಾಕೆ ಇನ್ನೂ ಇನ್‌ಶೂರೆನ್ಸ್ ಮಾಡ್ಸಿಲ್ಲ? . . ಅಂದ ಹಾಗೆ ನಿನ್ನ ಪ್ರೆಸ್ಸ್, ಸ್ಕೂಟರ್, ಮನೇಲಿರೋ ಟೀವಿ ಎಲ್ಲಾನೂ ಇನ್‌ಶೂರ್ ಮಾಡ್ಬಿಡು ಅಂತ ಹೇಳ್ತಾನೇ ಇದೀನಲ್ಲ ಏನ್ಮಾಡ್ದೆ? ಎಂದರು.

“ಸ್ಕೂಟರ್ ಅಂತೂ ಮಾಡ್ಸಿದ್ದಾಯ್ತು . . ಇಲ್ದಿದ್ರೆ ಆ ಪೋಲೀಸ್ನೋರು ಬಿಡ್ಬೇಕಲ್ಲ. ಉಳಿದದ್ದು ನೋಡೋಣ.

ಪ್ರಭಾಕರನ ಪ್ರಿಂಟಿಂಗ್ ಪ್ರೆಸ್ಸ್ ಇದ್ದದ್ದು ಜಯನಗರದ ಒಂದು ಮುಖ್ಯ ರಸ್ತೆಯ ಪಕ್ಕದ ಕ್ರಾಸ್‌ನಲ್ಲಿ. ಒಂದು ಆಫ್ ಸೆಟ್ ಪ್ರಿಂಟಿಂಗ್ ಪ್ರೆಸ್ಸಿಗೆ ಬೇಕಾದ ಯಂತ್ರೋಪಕರಣಗಳನ್ನು ಶಂಕರಯ್ಯ ಬ್ಯಾಂಕಿನಿಂದ ಲೋನ್ ತೆಗೆದುಕೊಂಡು ಅವನಿಗೆ ಹೊಂದಿಸಿ ಕೊಟ್ಟಿದ್ದರು. ಪ್ರಭಾಕರ ಆ ಸಮಯದಲ್ಲಿ ತಾನು ಇಷ್ಟ ಪಡುವ ವೃತ್ತಿಯನ್ನು ಪ್ರಾರಂಭಿಸುತ್ತಿದ್ದೇನೆಂಬ ಸಂತೋಷವಿತ್ತು. ಆದರೆ ಇದಕ್ಕಾಗಿ ತನ್ನ ತಂದೆಯ ಹಣದ ಸಹಾಯ ಪಡೆಯಬೇಕಾಗಿ ಬಂದದ್ದಕ್ಕೆ ಅವನಿಗೆ ಅಸಮಾಧಾನವಿತ್ತು. ತನ್ನ ಸ್ವಂತ ಗಳಿಕೆಯಿಂದ ತನಗಿದನ್ನು ಮಾಡಲು ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಾನೆ. ಅಪೇಕ್ಷೆ ಮತ್ತು ಗಳಿಕೆ ಅಷ್ಟು ಸುಲಭವಾಗಿ ನೆರವೇರುವ ಸಂಗತಿಗಳಲ್ಲ ಎಂದು ತಿಳಿದು ಸಮಾಧಾನಪಟ್ಟುಕೊಂಡಿದ್ದ. ಹಾಗೆಂದು ಅವನು ಅದಕ್ಕೆ ಬೇಕಾದ ಮೂಲ ಹಣವನ್ನು ಒದಗಿಸಿಕೊಳ್ಳಲು ಒಂದಿಬ್ಬರು ಸ್ನೇಹಿತರನ್ನು ಕೇಳಿದ್ದ. ಆದರೆ ಅವನ ಹಾಗೆ ಅವರೂ ಪಡಪೋಶಿಗಳಾದ್ದರಿಂದ ಅನಿವಾರ್ಯವಾಗಿ ತಂದೆಯ ನೆರವನ್ನು ಒಪ್ಪಿಕೊಂಡಿದ್ದ.

ಪ್ರೆಸ್ಸಿನ ಯಂತ್ರೋಪಕರಣಗಳು ಬಂದ ದಿನವಂತೂ ಅವನಿಗೆ ಕಂಡಿದ್ದೆಲ್ಲವೂ ಕಾಮನ ಹಬ್ಬ. ಆ ದಿನ ಮಗಿಯುವುದೇ ಇಲ್ಲ ಎನ್ನುವ ಹಾಗೆ. ಅರೆ! ಮುಗಿದೇ ಹೋಯಿತೇ ಎನ್ನುವ ಹಾಗೆ. ಬೆಳಕಿಗೆ ಇಷ್ಟೊಂದು ಬೆಳಕಿರುತ್ತದೆ ಎಂದು ತಿಳಿದದ್ದು ಆ ದಿನವೇ. ಏಕೋ ಅವನಿಗೆ ತಟ್ಟನೆ ತುಟಿಯಂಚಿನಲ್ಲಿ ನಗು ಸುಳಿದು ಕತ್ತೆತ್ತಿ ಸೂರ್ಯನ ಕಡೆ ಒಮ್ಮೆ ನೋಡಿದ. ಬೆಳಕು ನುಗ್ಗಿ ಕಣ್ಣು ಮುಚ್ಚಿದ. ಮುಚ್ಚಿದ ರೆಪ್ಪೆಯ ಮೇಲೆ ಬಿದ್ದ ಕಿರಣಗಳು ಕಣ್ಣಿನ ಒಳಗೆ ಹಬ್ಬಿಸಿದ್ದು ನೀಲಿ, ಹಸಿರು, ಹಳದಿ, ಬಿಳಿ ಬಣ್ಣಗಳ ಮೇಳ. ಕ್ಷಣದಲ್ಲಿ ಕಂಡ ಬಣ್ಣದವತಾರಕ್ಕೆ ಅವನ ನಗು ಹಾಗೆಯೇ ಉಳಿದಿತ್ತು. ಅನಂತರ ಒಂದೊಂದನ್ನೂ ಪ್ಯಾಕಿಂಗ್ ತೆಗೆದು ಸ್ವಚ್ಛಮಾಡಿ ಅಣಿ ಮಾಡಿದ. ಆಗ ಅವನಿಗೆ ತಾಯಿ ಲಲಿತಮ್ಮ ರಥ ಸಪ್ತಮಿಯ ದಿನ ಮನೆಯ ಮುಂದಿನ ತುಳಸಿ ಕಟ್ಟೆಯ ಎದುರು ರಂಗೋಲಿಯಿಂದ ಮತ್ತು ಬಣ್ಣಬಣ್ಣದ ಚಾಕ್ ಪೀಸ್‌ನಿಂದ ಸೂರ್ಯನ ರಥ ಬರೆದು, ಅದಕ್ಕೊಂದು ಬಾವುಟ, ಎಳೆಯಲು ಹಗ್ಗ ಇತ್ಯಾದಿಯನ್ನು ಮಾಡುತ್ತಿದ್ದದ್ದನ್ನು ಚಿಕ್ಕವನಾಗಿದ್ದಾಗ ತದೇಕ ಮನಸ್ಸಿನಿಂದ ನೋಡುತ್ತಿದ್ದದ್ದು ಅ ವನಿಗೆ ತಟ್ಟನೆ ನೆನಪಾಯಿತು. ಸೂರ್ಯನ ರಥದ ಕುದುರೆಗಳ ಓಟದ ಗತಿಯ ಹಾಗೆ ತನ್ನನ್ನು ಪ್ರಗತಿಯ ದಾರಿಯಲ್ಲಿ ಮುನ್ನುಗ್ಗಿಸಬೇಕು ಎಂದುಕೊಂಡಿದ್ದ. ಅದಕ್ಕೆಂದೇ ಅನಂತರ ಕನ್ನಡ, ಇಂಗ್ಲಿಷ್ ಮತ್ತು ಇತರ ಭಾಷೆಗಳನ್ನು ನಿಭಾಯಿಸುವಂತೆ ಡೆಸ್ಕ್ ಟಾಪ್ ಪಬ್ಲಿಷಿಂಗ್ ವ್ಯವಸ್ಥೆ ಮಾಡಿಕೊಂಡಿದ್ದ.

ಶಂಕರಯ್ಯ ರಿಟೈರ್ ಆದ ಮೇಲೆ ಕ್ವಾಲಿಟಿ ಕಂಟ್ರೋಲ್ ಕನ್‌ಸಲ್ಟೆನ್ಸಿಗೆ ವಿನಿಯೋಗಿಸಬೇಕೆಂದಿದ್ದರು. ಇನ್ನರ್ಧ ದಿನವನ್ನು ಮನೆಯಲ್ಲಿ ಏನೂ ಮಾತಾಡದೆ ಸುಮ್ಮನಿದ್ದು ಬಿಡುವುದು ಎಂದು. ಹಾಗಿದ್ದು ಅದರ ಎಲ್ಲ ಉಪಯೋಗ ಪಡೆಯಬೇಕೆಂದು ಮನಸ್ಸು. ಅವರಿಗೆ ಯಾವುದೇ ರೀತಿಯ ಒಣ ಹರಟೆ, ಭಾಷಣ, ಅದರಲ್ಲೂ ಓತಪ್ರೋತವಾಗಿ ಮಾತಿನ ಮಳೆಗೆರೆವ ರಾಜಕಾರಣಿಗಳ ಮಾತನ್ನಂತೂ ಕಂಡರಾಗುತ್ತಿರಲಿಲ್ಲ. ಆಗಾಗ ಅವರಿವರು ಅವರನ್ನು ಕೇಳಿಕೊಂಡು ಬಂದು, ಅ‌ಔದ್ಯೋಗಿಕ ಉತ್ಪಾದನೆಯಲ್ಲಿ ಗುಣಮಟ್ಟ ಕುರಿತು ಉಪನ್ಯಾಸ ಕೊಡಲು ಕೇಳುತ್ತಿದ್ದರು. ಅವರು ಎಲ್ಲದಕ್ಕೂ ಬೇಡವೆನ್ನುತ್ತಿದ್ದರು. ಒಂದು ಸಲ ಪರಿಚಯದವರೊಬ್ಬರು ಕೊಂಚ ಸಲಿಗೆ ತೆಗೆದು ಕೊಂಡು, “ರಾಜಕೀಯದಲ್ಲಿ ಗುಣಮಟ್ಟ ಎನ್ನುವುದರ ಬಗ್ಗೆ ಮಾತನಾಡಿ ಎಂದು ಹೇಳಿ ಅವರನ್ನು ನಿಜಕ್ಕೂ ರೊಚ್ಚಿಗೆಬ್ಬಿಸಿದ್ದರು.
ಪ್ರಭಾಕರ ಪ್ರೆಸ್ಸ್ ಆರಂಭಿಸಿದ ದಿನಗಳಲ್ಲಿ ತೀರ ಉಮೇದಿನಲ್ಲಿದ್ದ. ತನಗೆ ತಿಳಿದ ನಾಲ್ಕು ಹುಡುಗರನ್ನು ಮತ್ತು ಡಿ.ಟಿ.ಪಿ. ಕೆಲಸ ಕ್ಕೆಂದು ಪಾರ್ಟ್ ಟೈಂ ಕೆಲಸದವನನ್ನು ಇಟ್ಟುಕೊಂಡಿದ್ದ. ಜೊತೆಗೆ ತಾನೂ ಅದರಲ್ಲಿ ಕೈ ಆಡಿಸುವುದನ್ನು ಕಲಿತಿದ್ದ. ಆದರೆ ಅನೇಕ ಸಲ ಅವರಿಂದ ತೊಂದರೆ ಕಂಡು ಬಂದು ಕೆಲಸ ಕುಂಠಿತವಾಗುತ್ತಿತ್ತು. ಪ್ರೆಸ್‌ಗೆ ಸಂಬಂಧಪಟ್ಟ ಖರ್ಚು ನಿಭಾಯಿಸಲು ಜಾಬ್ ವರ್ಕ್‌ಗಳೇ ಆಧಾರವಾಗಿದ್ದವು.
ಆಗೀಗ ಮಾಡುತ್ತಿದ್ದ ಖಾಸಗಿ ವಲಯದವರ ಸಣ್ಣ ಪುಟ್ಟ ಬುಕ್ ವರ್ಕ್‌ಗಳು ಆರ್ಡರ್ ಕೊಟ್ಟವರಿಗಿಂತ ಅವನಿಗೇ ಹೆಚ್ಚು ಖುಷಿ ಕೊಟ್ಟಿದ್ದವು. ತಾನು ನಿಭಾಯಿಸಬೇಕಾದ್ದನ್ನು ಅದರ ವಸ್ತು ಮತ್ತು ಬರಹಕ್ಕೆ ಅನುಗುಣವಾಗಿ ವಿನ್ಯಾಸ ಮಾಡುವುದನ್ನು ರೂಢಿಸಿಕೊಂಡಿದ್ದ. ಅದರಿಂದ ಅವನಿಗೆ ಮನ್ನಣೆ ದೊರಕಿತ್ತು. ಆದರೆ ಪ್ರಭಾಕರನಿಗೆ ಬ್ಯಾಂಕ್‌ಗೆ ಹಣ ತುಂಬುವ ಕೆಲಸ ಸುಲಭವಾಗಿರಲಿಲ್ಲ. ಅದಕ್ಕಾಗಿ ಅವನು ಕೊಂಚ ಹೆಚ್ಚಿನ ಮೊತ್ತದ ಸರ್ಕಾರದ ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಲು ಹಾತೊರೆಯುತ್ತಿದ್ದ. ಆದರೆ ಖಾಸಗಿ ವಲಯದ್ದು ಒಂದು ಬಗೆಯಾದರೆ ಅಲ್ಲಿನದು ನೂರಾರು ಬಗೆ. ಅಲ್ಲಿನ ಟೆಂಡರ್, ಆರ್ಡರ್, ಬಿಲ್ಲು, ಚೆಕ್ಕು ಇವುಗಳ ವರ್ತುಲದಲ್ಲಿ ಏಳಿಗೆ ಹೊಂದುವುದು ಕಷ್ಟದ ಕೆಲಸವೆಂದು ಪ್ರಭಾಕರನಿಗೆ ಅರಿವಾಗುತ್ತ ಬಂತು. ಯಾವ ಬರಿಯ ಸೂಕ್ಷ್ಮತೆಗೆ ಅಲ್ಲಿ ಅವಕಾಶವೇ ಇಲ್ಲದ್ದರಿಂದ ಮೈ ಚರ್ಮ ದಪ್ಪ ಮಾಡಿಕೊಂಡು ರೂಢಿ ಬಿದ್ದ ಆ ಜಾಡು ಹಿಡಿಯಲು ಪ್ರಯತ್ನಿಸಿದರೂ ಅನಿರೀಕ್ಷಿತ ತೊಡಕುಗಳು ಅನೇಕ ಮತ್ತು ಒಟ್ಟಾರೆ ಪ್ರಗತಿ ಅಷ್ಟಕ್ಕಷ್ಟೆ ಎಂದು ತಿಳಿಯಿತು. ಆದರೆ ತನಗೆ ಗೊತ್ತಿರುವ ಪ್ರಿಂಟಿಂಗ್ ದಾರಿ ಬಿಟ್ಟರೆ ಬೇರೆ ಗತಿಯಿಲ್ಲ ಎಂದು ತೀರ್ಮನಿಸಿದ್ದ. ಪ್ರೆಸ್‌ನಲ್ಲಿ ಕೆಲಸದ ವೇಗ ಹೆಚ್ಚಿಸುವ ಡಿ.ಟಿ,[ಪಿ. ಕೆಲಸ ಮಾಡುವ ವೆಂಕು ಕಂಡರೆ ಅವನಿಗೆ ತುಂಬ ಅಕ್ಕರೆ. ಜೊತೆಗೆ ಅವನು ಕೆಲಸ ಮುಗಿದಾದ ಮೇಲೆ ಅವುಗಳನ್ನು ತಲುಪಿಸುವ ಕೆಲಸವನ್ನೂ ಮಾಡುತ್ತಿದ್ದ.

ಆ ದಿನ ಸರ್ಕಾರಿ ಇಲಾಖೆಯೊಂದರಲ್ಲಿ ಬಿಲ್ ಪಾಸ್ ಮಾಡಿಸಿಕೊಳ್ಳಲು ಪ್ರಭಾಕರ ಹೋಗಿದ್ದ. ಬರಿಗೈಲಿ ಹೋದರೆ ಅ ಅವನು ತನ್ನನ್ನು ಮೂಸಿ ಕೂಡ ನೋಡುವುದಿಲ್ಲವಲ್ಲ ಎಂದು ಪರಿತಪಿಸುತ್ತ ಅವನ ರೂಮಿನ ಹೊರಗೆ ಠಳಾಯಿಸುತ್ತಿದ್ದಾಗ ಉದ್ದನೆ ಕಾರಿಡಾರಿನಲ್ಲಿ ಸಹಜ ಬೆಳಕಿನ ಸೋಂಕಿಲ್ಲದೆ ಎಲೆಕ್ಟ್ರಿಕ್ ಬಲ್ಬಿನ ಮಂದ ಬೆಳಕಿನದೇ ಸಾಮ್ರಾಜ್ಯ. ಅಷ್ಟರಲ್ಲಿ ಆ ರೂಮಿನಿಂದ ಹೊರಗೆ ಬಂದವರೊಬ್ಬರು ಪ್ರಭಾಕರನನ್ನು ದಾಟಿ ಹೊಗುವ ಮುಂಚೆ ಹೆಜ್ಜೆ ಹಿಂದೆ ಇಟ್ಟು ನೆಟ್ಟ ದೃಷ್ಟಿಯಿಂದ ನೋಡಿದರು. ಇಬ್ಬರಿಗೂ ಪರಸ್ಪರ ಕಣ್ಣು, ಮುಖ, ಚಹರೆ ಮಟ್ತು ಒಟ್ಟಾರೆ ಆಕಾರದ ಅರಿವಾಗಿರಬೇಕು.
“ನೀವು . . ನೀವು ಪ್ರಭಾಕರ್ ಅಲ್ವಾ? ಎಂದು ತುಂಬುಗೂದಲಿನ ದುಂಡು ಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟಿನ ಐದೂ ಮುಕ್ಕಾಲು ಅಡಿ ಎತ್ತರದ ಪ್ರಭಾಕರನ ಕಡೆ ನೋಡಿ ಕೇಳಿದರು.
“ಹೌದು . ನೀವು . ನಾಗಣ್ಣ?
ಇಬ್ಬರ ಕಣ್ಣಿನ ಹೊಳಪುಗಳು ಮತ್ತೆ ಕೈಕುಲುಕಿದವು. ಅದರ ಪ್ರತಿಕ್ರಿಯೆ ಹಬ್ಬಿ ಇಬ್ಬರಲ್ಲೂ ನಸುನಗು ಮಿನುಗಿತು. ಒಂದು ಕ್ಷಣ ಅಲ್ಲಿರುವುದು ತಾವಿಬ್ಬರೇ ಉಳಿದವರು ಯಾರೂ ಇಲ್ಲ ಎನ್ನಿಸಿದ್ದರ ಜೊತೆ ಮೇಲಕ್ಕೆಲ್ಲೋ ಜಿಗಿದ ಮನಸ್ಸು.
ಸ್ವಲ್ಪ ಹೊತ್ತಿನಲ್ಲಿ ಅ ಅವರಿಬ್ಬರೂ ಹೊಟೆಲ್‌ನಲ್ಲಿ ಕಾಫಿ ಗುಟುಕರಿಸುತ್ತ ಕುಳಿತಿದ್ದರು. ಪ್ರಭಾಕರ ತನ್ನ ಬಗ್ಗೆ ಹೇಳಿದ್ದನ್ನು ನಾಗಣ್ಣ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದ.
“ಈಗ ನೀನು ಬಂದಿರೋ ಕೆಲಸ ಆಯ್ತು ಅಂತ ತಿಳ್ಕೊ.
“ಅಂದರೆ?
“ನಾನೀಗ ಮಿನಿಸ್ಟ್ರು ಜವರಪ್ಪನವರ ಹತ್ತಿರ ಇದೀನಿ ಎಂದ ನಾಗಣ್ಣ
“ಅವರ ಹತ್ರಾನಾ?!
ನಾಗಣ್ಣ ಸಂಕ್ಷಿಪ್ತವಾಗಿ ತನ್ನನ್ನು ಕುರಿತು ತಿಳಿಸಿದ. ಅನಂತರ, “ನಮ್ಮ ಸಾಹೇಬ್ರು ಅವರಿಗೆ ಬೇಕಾದೋರದ್ದು, ಅದು-ಇದು ಕೆಲ್ಸಾನೆಲ್ಲ ನಂಗೆ ವಹಿಸಿಕೊಟ್ಟು ಬಿಡ್ತಾರೆ. ಅವರ ಪರವಾಗಿ ಇಂಥ ಆಫೀಸರ್‌ಗಳಿಗೆ ಹೇಳಿ ಬಿಡ್ತೀನಿ. ಮುಖ್ಯವಾದದ್ದು ಇದ್ದಾಗ ಖುದ್ದಾಗಿ ಮೀಟ್ ಮಾಡ್ತೀನಿ ಎಂದ ನಾಗಣ್ಣ ಮುಗಿಸಿದ ಕಾಫಿ ಕಪ್ಪನ್ನು ಟೇಬಲ್ಲಿನ ಮೇಲಿಟ್ಟ.

ಒಂದು ವಿಚಿತ್ರ ವ್ಯಾವಹಾರಿಕ ಜಗತ್ತು ಹಠಾತ್ ಎದುರಾಗಿ ಮೂರು ಅಡಿ ಟೇಬಲ್ಲಿನ ಆಚೆ ಭಾಗದಲ್ಲಿ ಕುಳಿತ ನಾಗಣ್ಣ ತನಗೆ ತಿಳಿದಿದ್ದ ವ್ಯಕ್ತಿಯೇ ಎಂದುಕೊಂಡ ಪ್ರಭಾಕರ. ನೋಡಿದರೆ ಅದೇ ಚೌಕು ಎಣ್ಣೆಗೆಂಪು ಮುಖ, ಸಣ್ಣ ಹಣೆ, ಕೊಂಚ ಚಪ್ಪಟೆ ಮೂಗು, ಆಗಿನಕ್ಕಿಂತ ತುಂಬಿಕೊಂಡ ಗಲ್ಲ, ಎಲ್ಲಾ ಅದೇ. ಆದರೆ ಕೊಂಚ ಬದಲಾಗಿರುವ ಮಾತಿನ ಲಯ, ಕತ್ತು ಓರೆ ಮಾಡುವ ರೀತಿ ಇವು ಇತ್ತೀಚೆಗೆ ರೂಢಿಯಾಗಿರುವ ಅಭ್ಯಾಸಗಳಿರಬೇಕು ಎನ್ನಿಸಿತು. ಮಾತಿನೆಳೆಗಾಗಿ ತಡಕಾಡುತ್ತಿರುವ ಪ್ರಭಾಕರನನ್ನು ನೋಡಿ ನಾಗಣ್ಣ, “ಏನಮ್ಮ, ಎಷ್ಟೊಂದು ಇಳಿದು ಹೋಗಿದೀಯ. ಯಾವುದಾದ್ರು ಸರಿಯಾದ ತಾಕತ್‌ಕಿ ದವಾ ತೊಗೋ. ನಿಂಗೆ ಗೊತ್ತಿಲ್ಲದಿದ್ದರೆ ಹೇಳು ನಾನು ಅರೇಂಜ್ ಮಾಡ್ತೀನಿ ಎಂದು ತೀರ ಸಲಿಗೆಯ ಮಟ್ಟಕ್ಕೆ ಇಳಿದದ್ದು ಪ್ರಭಾಕರನಲ್ಲಿ ಥಟ್ಟನೆ ಉಂಟಾದ ತೆಳು ಲಹರಿ ಮುಖದಲ್ಲಿ ನಸುನಗು ಮೂಡಿಸಿತು.
“ದಿನ ತಳ್ಳಕ್ಕೆ ಬೇಕಾಗಿರೋ ಸಾಧಾರಣ ಸವಲತ್ತುಗಳನ್ನ ಹೊದಿಸಿಕೊಳ್ಳೋದರಲ್ಲೆ ಅಲ್ಲಾ ಉತ್ಸಾಹ ಉಡುಗಿ ಹೊಗತ್ತಲ್ಲೋ. ಇನ್ನ ಬೇರೇದರ ಮಾತೇ ಇಲ್ಲ..
“ಅದಕ್ಕೇನು ಮಾಡ್ಬೇಕು ತಡಿ ನೋಡೋಣಂತೆ. ನಿನ್ನ ಆಳ ಎಷ್ಟು ಅಂತ ಗೊತ್ತು ನಂಗೆ. ಈಗ ಮತ್ತೆ ನಾವಿಬ್ರೂ ಸೇರಿದ್ದೀವಲ್ಲ ಬಿಡು.

ಪ್ರಭಾಕರ ಮತ್ತು ನಾಗಣ್ಣ ಚಿತ್ರದುರ್ಗದ ಕಾಲೇಜಿನಲ್ಲಿ ಸಹಪಾಠಿಗಳು. ರಂಗಯ್ಯನ ಬಾಗಿಲು ಬಳಿ ಪ್ರಭಾಕರನ ಮನೆಯಾದರೆ ಏಕನಾಥೇಶ್ವರಿ ದೇವಸ್ಥಾನದ ಹತ್ತಿರ ನಾಗಣ್ಣನ ಮನೆ. ಕೊಂಚ ಸಂಕೋಚದ ಸ್ವಭಾವದ ಪ್ರಭಾಕರ ಮತ್ತು ಸ್ವಲ್ಪ ಹೆಚ್ಚೆಂದೇ ಹೇಳಬಹುದಾದ ಎದೆಗಾರಿಕೆಯ ನಾಗಣ್ಣ ಕಂಡವರು ಸೋಜಿಗಪಡುವಷ್ಟು ಹತ್ತಿರವಾದದ್ದು ವಿಶೇಷವೇ. ಒಮ್ಮೆ ಪ್ರಭಾಕರನಿಗೆ ಅಕಸ್ಮಾತಾಗಿ ಸಿಕ್ಕ ತ.ರಾ.ಸು. ಅವರ ‘ಹಂಸ ಗೀತೆ ಅವನನ್ನು ಅಳತೆ ಮೀರಿ‌ಆವರಿಸಿತ್ತು. ನವಾಬನೆದುರು ಹಾಡಬಾರದೆಂದು ನಾಲಗೆಯನ್ನೇ ಕತ್ತರಿಸಿಕೊಂಡ ಭೈರವಿ ವೆಂಕಟಸುಬ್ಬಯ್ಯನವರ ಕಥೆ ಹೇಳಿ ತ.ರಾ.ಸು.ಗೆ ಆ ಕಾದಂಬರಿಯನ್ನು ಬರೆಯಲು ಪ್ರೇರೇಪಿಸಿದ ಹುಲ್ಲೂರು ಶ್ರೀನಿವಾಸ ಜೋಯಿಸರ ಮನಸ್ಸಿನ ಗುಣಮಟ್ಟವನ್ನು ಊಹಿಸುವುದು ಹೇಗೆ? ರಂಗಯ್ಯನ ಬಾಗಿಲು ಕಟ್ಟೆಯ ಮೇಲೆ ಕುಳಿತು ಸರಿರಾತ್ರಿಯಲ್ಲಿ ಹೀಗೆ ಹೇಳುವಾಗ ಎದುರಿಗೆ ಬೆಕ್ಕಸ ಬೆರಗಾಗಿ ಕುಳಿತ ನಾಗಣ್ಣನ ಮುಖವೂ ಅರೆಬರೆದ ಚಿತ್ರದ ಹಾಗಿತ್ತು. “ಅರ್ಧ ರಾಜ್ಯ ಕೊಡ್ತೀನಿ ಅಂದ್ರೂ ವೆಂಟಟಸುಬ್ಬಯ್ಯನೋರು ಹಾಡ್ತಿರ್ಲಿಲ್ಲ ಅಲ್ವಾ ನಾಗಣ್ಣ . . ಸಂಪತ್ತಿಗೆ ಬೆಲೆ ಇದೆ. . ನಿಷ್ಠೆಗೆ ಬೆಲೆ ಕಟ್ಟಲು ಸಾಧ್ಯವೇ ಹೇಳು? ಎಂದಿದ್ದ.

ಕಾಲೇಜಿನ ಸ್ಟೂಡೆಂಟ್ಸ್ ಅಸೋಷಿಯೇಷನ್ನಿನ ಪ್ರೆಸಿಡೆಂಟಾಗಿ ಯಥಾಪ್ರಕಾರ ಕೊನೆಯ ವರ್ಷವೂ ನಾಗಣ್ಣ ಚುನಾಯಿತನಾದದ್ದು ಅವನ ಸಂಘಟನೆಯ ಪ್ರತೀಕವಾಗಿತ್ತು. ಮೇಕಪ್ ಮಾಡಿದಂತೆ ನಾಗಣ್ಣನ ಬಾಯಿಂದ ಹೊರಬರುತ್ತಿದ್ದ ಮಾತುಗಳು ಕೇಳುವರ ಮೆಚ್ಚುಗೆಯನ್ನು ಪಡೆಯುತ್ತಿದ್ದವು. ಆದರೆ ಪಾಪ್ಲೆಟ್ಸ್, ಪೋಸ್ಟರ್ಸ್, ಬ್ಯಾನರ್ಸ್, ಸ್ಲೋಗನ್ಸ್ ಇತ್ಯಾದಿ ಎಲ್ಲದಕ್ಕೂ ಪ್ರಭಾಕರನೇ ಆಖೈರು.
“ಪ್ರಭೂ, ಡೀಟೇಲ್ಸ್ ಬರ್ದು ಕೊಡು . ಅದೇ ಈಗ ಬಂದಿದ್ದೆಯಲ್ಲ ಅದು ಎಂದು ನಾಗಣ್ಣ ಹೇಳುತ್ತಿದ್ದಂತೆ ಅವನ ಜೇಬಿನಲ್ಲಿದ್ದ ಸೆಲ್ ಫೋನ್ ಶಬ್ದ ಮಾಡಿತು. ಅವನು ವಿಧೇಯರಿತಿಯಲ್ಲಿ ಮಾತಾಡುತ್ತಿದ್ದಂತೆ ಪ್ರಭಾಕರ ಚೀಟಿಯಲ್ಲಿ ವಿವರ ಬರೆದ.
“ಅಲ್ಲ ನಾಗಣ್ಣ ಒಂದು ಕಾಲದಲ್ಲಿ ನರಸಿಂಹಮೂರ್ತಿ ಮತ್ತು ಅವರ ಪಾರ್ಟೀನ ಮೆಚ್ಚಿಕೊಂಡಿದ್ದೆ. . ಆದ್ರೆ ಈಗ . . ಎಂದು ಶೋಧಿಸುವನಂತೆ ನೋಡಿದ ಪ್ರಭಾಕರ.
“ಹೌದು. ನೀನು ಹೇಳಿದ್ದು ನಿಜ. ಒಂದಷ್ಟು ವರ್ಷ ಅವರನ್ನು ಬೆಂಬಲಿಸಿದ್ದೆ . . ಆದ್ರೇನು ಮಾಡೋದು? ಬೇರೆ ದಾರೀನೆ ಇಲ್ದೆ ನಾನು ಹೀಗೆ ಮಾಡ್ಬೇಕಾಯ್ತು. ಅವರೊಬ್ಬರನ್ನ ಬಿಟ್ಟರೆ ಈಗ ಎಲ್ಲದಕ್ಕೂ ಅಡ್ಡ ದಾರೀನೆ. ಪಾರ್ಟಿ ವಿಷಯಕ್ಕೆ ಬಂದರೆ ಇದಕ್ಕಿಂತ ಅದು ಒಳ್ಳೇದು ಅಂತ ಈಗ ಹೇಳಕ್ಕಾಗತ್ತ ಹೇಳು ಒಂದೇ ಮಾತಿನಲ್ಲಿ ಹೇಳೋದಾದ್ರೆ ಕಾಂಚಾಣಂ ಕಾರ್ಯ ಸಿದ್ಧಿ. . ಇದೆಲ್ಲ ಸರಿಯಲ್ಲ ಅಂತೀಯ? ಹೇಳು ನಿನ್ನ ಅನುಭವ ಏನನ್ನುತ್ತೆ?
“ಅದ್ಸರಿ ಈಗ ಹೇಗಿದೀಯ?
“ನಿಜ ಹೇಳಬೇಕೂಂದರೆ ಆಗ ಒಂದು ಕಾರಣಕ್ಕೆ ನೆಮ್ಮದಿ ಇರ್ಲಿಲ್ಲ. ಈಗ ಮತ್ತೊಂದು ಕಾರಣಕ್ಕೆ ನೆಮ್ಮದಿ ಇಲ್ಲ.
ಮತ್ತೆ ಸೆಲ್ ಫೋನ್ ಶಬ್ದ ಮಾಡಿದಾಗ ನಾಗಣ್ಣ, “ಎಲೆಕ್ಷನ್ ಟೈಂ ಅಲ್ವಾ ಎಂದು ಎದ್ದ.

ನಾಗಣ್ಣನ ಅಪೇಕ್ಷೆಯಂತೆ ಪ್ರಭಾಕರ ಜವರಪ್ಪನವರನ್ನು ಭೇಟಯಾಗಲು ಅವರ ಮನೆಗೆ ಹೋದ. ಮನೆಯಿಂದ ಅಷ್ಟು ದೂರದ ತನಕ ವಿವಿಧ ಅಪೇಕ್ಷೆಗಳನ್ನು ತುಂಬಿಕೊಂಡ ಕಾರು ಮತ್ತು ಇತರ ವಾಹನಗಳು. ಅಲ್ಲಿ ಕಂಪೌಂಡಿನಲ್ಲಿ ಮತ್ತು ಎಲ್ಲಂದರಲ್ಲಿ ನಿಂತವರಲ್ಲಿ, ಕುಳಿತವರಲ್ಲಿ ಹರಿಯುತ್ತಿದ್ದದ್ದು ತವಕ ತುಂಬಿದ ರಕ್ತ. ಪ್ರಭಾಕರನನ್ನು ಅರೆಕ್ಷಣ ನೋಡಿದ ಜವರಪ್ಪ, “ನಾಗಣ್ಣ ನಂಗೆ ಎಲ್ಲಾ ವಿಷಯಾನೂ ಹೇಳಿದಾರೆ. ನೀವು ಅವರಿಗೆ ಸ್ವಲ್ಪ ಹೆಲ್ಪ್ ಮಾಡಿ . ನಾನು ನಿಮ್ಮನ್ನ ಟ್ರೈ ಮಾಡಿ ನೋಡ್ತೀನಿ . ಉಳಿದದ್ದನ್ನ ನಾಗಣ್ಣ ತಿಳಿಸ್ತಾರೆ . ನೀವು ಯಾವಾಗ ಬೇಕಾದ್ರೂ ನನ್ನನ್ನ ಮೀಟ್ ಮಾಡಬಹುದು ಎಂದರು.

ಪ್ರಭಾಕರ ನಾಗಣ್ಣನ ನಿರೀಕ್ಷೆಗಳನ್ನು ಗ್ರಹಿಸುವುದಕ್ಕೆ ಹೆಚ್ಚು ಕಾಲ ತೆಗೆದುಕೊಳ್ಳಲಿಲ್ಲ. ಒಡನಾಡಿಗಳಗಿದ್ದ ಅವರ ಮಧ್ಯದ ಹದಿನೆಂಟು ವರ್ಷಗಳ ಅಂತರ ದಿಢೀರನೆ ಮಾಯವಾಯಿತು. ಹೆಚ್ಚು ಕಡಿಮೆ ಪ್ರತಿಯೊಂದಕ್ಕೂ ಅಂದಿನದೇ ತೀವ್ರತೆ ಮತ್ತು ತನ್ಮಯತೆ. ಈ ಎಲ್ಲ ಬಗೆಯ ಒತ್ತಡಗಳಿಗೆ ಎಲೆಕ್ಷನ್ ಹತ್ತಿರವಿದ್ದದ್ದೇ ಕಾರಣ.

ಜವರಪ್ಪ ಪ್ರಭಾಕರನಿಗೆ ಪಾರ್ಟಿ ಆಫೀಸಿನಲ್ಲೂ ಒಂದಿಷ್ಟು ಕೆಲಸ ಕೊಟ್ಟಿದ್ದರು. ಅಲ್ಲಿ ಜನರ ಓಡಾಟ, ಕಾರ್ಯಕರ್ತರ ಗಡಿಬಿಡಿ, ಬೇರೆ ಬೇರೆ ಮಟ್ಟದ ನಾಯಕರ ವರ್ತನೆ, ಕರ್ನಾಟಕದ ಹಲವಾರು ಪ್ರದೇಶಗಳು ಬಿಂಬಿಸುವ ಭಾಷೆ ಇವೆಲ್ಲ ಹೊಸತು. ಏಕೋ ಇವರೆಲ್ಲ ಕಾದ ಕಾವಲಿಯ ಮೇಲಿದ್ದಾರೆ ಎನ್ನಿಸುತ್ತಿತ್ತು. ಪ್ರಭಾಕರ ಅಕ್ಷರಗಳ ಗಾತ್ರ, ಆಕಾರ, ಬಣ್ಣ ಇವುಗಳನ್ನು ಆಮೂಲಾಗ್ರ ಬದಲಾಯಿಸಿ ವಿನ್ಯಾಸಗೊಳಿಸಿದ ಪಾಂಪ್ಲೆಟ್ಸ್, ಪೋಸ್ಟರ್ಸ್‌ಗಳಿಂದ ನಾಗಣ್ಣ ಕುಣಿದೆದ್ದರೆ ಸ್ವತಃ ಜವರಪ್ಪ ಪ್ರಭಾಕರನನ್ನು ಕರೆಸಿ, “ನಿಮ್ಗೊಳ್ಳೆ ಫ್ಯೂಚರ್ ಇದೆ ಎಂದು ಕಣ್ಣು ಹೊಳೆಸಿದ್ದರು. ಇದರಿಂದ ಉತ್ಸಾಹಗೊಂಡ ಅವನು ಎರಡು ದಿನಗಳಾದ ಮೇಲೆ ಅವರನ್ನು ಕಂಡು, “ಹೊಸ ರೀತಿಯ ಸ್ಲೋಗನ್ಸ್ ಕೇಳ್ತಿದ್ರಲ್ಲ, ನೋಡಿ ಎಂದು ತಾನು ಬರೆದ ಅರ್ಧ ಡಜ಼ನ್ ಸ್ಲೋಗನ್ನುಗಳನ್ನು ತೋರಿಸಿದ. ಅವರು ಒಂದೊಂದನ್ನೂ ಎರೆಡೆರಡು ಸಲ ಓದಿ ಒಂದಕ್ಕೆ ಗುರುತು ಹಾಕಿ, “ಇದು ಬಹಳ ಇಷ್ಟವಾಯ್ತು. ಹೈಕಮಾಂಡಿಗೆ ಕಳಿಸ್ತೀನಿ ಎಂದು ಅವನ ಭುಜ ತಟ್ಟಿದರು.
ಜವರಪ್ಪ ಇದ್ದದ್ದು ಒಂದು ಬಗೆಯ ಸಂದಿಗ್ಧದಲ್ಲಿ. ಇಟ್ಟ ಹೆಜ್ಜಯ ಜೊತೆ ಇನ್ನೊಂದು ಹೆಜ್ಜೆ ಸೇರಿಸದಿದ್ದರೆ ಹಳ್ಳಕ್ಕೆ ಬೀಳಬೇಕಾಗುತ್ತದೆ. ಅಪರೂಪಕ್ಕೆಲ್ಲೋ ಏಕಾಂತದಲ್ಲಿ ಕುಳಿತಾಗ ತಾವು ಬಂದ ದಾರಿಯನ್ನು ಪುನರಾವಲೋಕನ ಮಾಡುಕೊಳ್ಳುತ್ತ ತಮಗೆ ತಾವೇ, “ನಮ್ಮ ಜನ ಕೊಟ್ಟ ಮುಖ ನನ್ನದು. ಅದು ಅವರ ಕನ್ನಡಿ. ನೋಡಿಕೊಳ್ಳಲಿ ಅವರು. ಹೇಸಿಗೆ ಪಟ್ಟುಕೊಳ್ಳುವುದಕ್ಕೆ ನಾನು ಸ್ವತಂತ್ರನಲ್ಲ ಎಂದು ಹೇಳಿಕೊಳ್ಳುತ್ತಾರೆ.

ನಾಗಣ್ಣ ಪ್ರಭಾಕರನಿಗೆ ಅವನು ಕಲ್ಪಿಸಿಕೊಳ್ಳಲೂ ಸಾಧ್ಯವಿರದಷ್ಟು ಲಾಭವಿರುವ ಕೆಲಸಗಳನ್ನು ಹೊಂದಿಸಿಕೊಟ್ಟ. ಆವುಗಳಲ್ಲಿ ಕೆಲವು ನೇರ ದಾರಿಯವು; ಕೆಲವು ಅಡ್ಡ ದಾರಿಯವು. ಇದಕ್ಕೆ ಪ್ರತಿಯಾಗಿ ಅವರಿಗೆ ನಾಗಣ್ಣನಿಂದ ಬೇರೆ ರೀತಿಯ ಅನುಕೂಲಗಳಿರುತ್ತವೆಂದು ಪ್ರಭಾಕರನಿಗೆ ತಿಳಿದಿತ್ತು. ಒಂದೊಂದು ಕೆಲಸಕ್ಕೂ ಬೇಕಾದ ಅಗತ್ಯಗಳನ್ನು ಯೋಜಿಸುತ್ತಿದ್ದಂತೆ ಮತ್ತಷ್ಟು ಮಗುದಷ್ಟು ಹೆಚ್ಚಾಗುತ್ತಿತ್ತು. ಅವನಿಗೆ ಅಲ್ಲಿ ಇಲ್ಲಿ ಎಲ್ಲ ಕಡೆ ಕಿಟಕಿ, ಬಾಗಿಲು ದಿಢೀರನೆ ಸೃಷ್ಟಿಗೊಂಡು ಒಳನುಗ್ಗಿದ ಹಿತವಾದ ಸೂರ್ಯನ ಬೆಳಕು ಹಬ್ಬಿದಂತಾಯಿತು. ಅದರ ಹಿಂದೆಯೇ ಸೇರಿಕೊಂಡ ಕೆಲಸದ ಒತ್ತಡದ ಗಾಳಿ. ಇವೆಲ್ಲದರಿಂದ ಅವನಲ್ಲಿ ಉಂಟಾದ ತಕ್ಷಣದ ಪರಿಣಾಮವೆಂದರೆ ಅವನ ದಿನಚರಿಯಲ್ಲಿ ಏರುಪೇರು. ಸಮಯದ ಪರಿವೆ ಇಲ್ಲದೆ ಒದಗಿ ಬಂದ ಅವಕಾಶಕ್ಕೆ ಒಪ್ಪಿಸಿಕೊಂಡಿದ್ದ. ಮನೆಗೆ ಬಂದು ಹೋಗುವ ವೇಳೆಗಂತೂ ಒಂದು ಗೊತ್ತಾದ ರೀತಿಯೇ ಇರಲಿಲ್ಲ. ಲಲಿತಮ್ಮ ಅನೇಕ ಸಲ, “ಹೊತ್ತು ಹೊತ್ತಿಗೆ ಊಟ ಇಲ್ದೆ, ನಿದ್ದೆ ಇಲ್ದೆ ನೆಮ್ಮದಿ ಕಳೆದುಕೊಳ್ಳುವಂಥ ಇದೆಂಥ ದುಡಿಮೆ ಬಿಡು ಎಂದರೆ ಪ್ರಭಾಕರ, “ಮೊದಲು ದುಡಿಮೆ; ಗಳಿಕೆ. ಅನಂತರ ನೆಮ್ಮದಿ ಎನ್ನುತ್ತಿದ್ದ.
ಅವನಿಗೆ ತನ್ನ ಸದ್ಯದ ಕಲ್ಪನೆಯ ಎಲ್ಲೆಗಳನ್ನು ಮಿರುತ್ತಿರುವಂತೆ ಭಾಸವಾಗಿ ರಸ್ತೆಗಳು ಹಿಗ್ಗಿದ ಹಾಗೆ, ತೆಳುಗಾಳಿಯಲ್ಲಿ ತೇಲುತ್ತಿರುವಂತೆ ತೋರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವನಲ್ಲಿ ಮಡುಗಟ್ಟಿದ್ದ ಕೊರಗು. ಮನೆಯಲ್ಲಿ ಅಪ್ಪ, ಅಮ್ಮ, ಹೆಂಡತಿ ಯಾರೂ ತನ್ನ ಅಪೇಕ್ಷೆಯ ಮಟ್ಟಕ್ಕೆ ಸಹಕಾರ ಕೊಡುತ್ತಿಲ್ಲ, ಎಂದು. ಈಗ ವಿಶೇಷನನ್ನು ಸ್ಕೂಲಿಗೆ ಬಿಡುವ ಕೆಲಸವನ್ನು ಶಂಕರಯ್ಯ ಮಾಡಬೇಕಾಗಿತ್ತು. ಹಿಂದಿನ ಕೆಲವು ಪ್ರಸಂಗಗಳಂತೆ ಅಂದು ಪ್ರಭಾಕರ ಅವನು ಹೇಳಿದ ಸಮಯಕ್ಕೆ ಬಾರದೆ ಮೊದಲೆ ಗೊತ್ತುಪಡಿಸಿಕೊಂಡಂತೆ ವಿಶೇಷನನ್ನು ಎಕ್ಸಿಬಿಷನ್ನಿಗೆ ಕರೆದುಕೊಂಡು ಹೋಗಲಿಲ್ಲ. ಅದಕ್ಕಾಗಿ ಅವನ ರಂಪಾಟವಂತೂ ಇನ್ನೇನು ಗತಿ ಎಂದು ಎಲ್ಲರೂ ಆತಂಕಗೊಳ್ಳುವ ಮಟ್ಟಕ್ಕೆ ತಲುಪಿತ್ತು. ಅವನನ್ನು ಸಂತೈಸುವಷ್ಟರಲ್ಲಿ ಸೋತು ಹೋಗಿದ್ದ ಮಾಲಿನಿ ಮಾರನೆಯ ದಿನವೆಲ್ಲ ಪ್ರಭಾಕರನ ಜೊತೆ ಮಾತಾಡಿರಲಿಲ್ಲ. ಆದರೆ ಪ್ರಭಾಕರ ಆ ಪ್ರಕರಣವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ಆ ದಿನ ಪ್ರಭಾಕರ ಮಾಡಿದ ಕೆಲಸವನ್ನು ಮೆಚ್ಚಿಕೊಂಡು ಕಂಪನಿಯವರೊಬ್ಬರು ಕೊಂಚ ಅಂದದ ಬೊಂಬೆಯೊಂದನ್ನು ಕೊಟ್ಟರು. ಅದು ವಿಶೇಷನಿಗೆ ತುಂಬ ಇಷ್ಟವಾಗುತ್ತದೆ ಎಂದುಕೊಂಡ ಪ್ರಭಾಕರ. ಅಂದು ಅವನು ಮನೆ ಸೇರಿದಾಗ ಸರಿರಾತ್ರಿಯಾದದ್ದರಿಂದ ಬೆಳಿಗ್ಗೆ ಅವನಿಗೆ ಕೊಡೋಣವೆಂದುಕೊಂಡ. ಇತ್ತೀಚೆಗೆ ಅಭ್ಯಾಸವಾಗಿ ಹೋದಂತೆ ಊಟ ಮುಗಿಸಿ ಮಾಲಿನಿ ಮಲಗಿ ಬಿಟ್ಟಳು. ಅದೇಕೋ ಅವಳ ಒಟ್ಟಾರೆ ಭಂಗಿ ಅವನಿಗೆ ತುಂಬ ಮೋಹಕವೆನಿಸಿತು. ತನ್ನ ಹೆಂಡತಿಯ ಚೆಲುವನ್ನು ಮೊದಲ ಬಾರಿ ಕಂಡವನಂತೆ ಇವಳೇ ಮಾಲಿನಿ ತಾನೇ ಎಂದುಕೊಳ್ಳುತ್ತಿದ್ದಂತೆ ಅವನಲ್ಲಿ ಮೆಲ್ಲನೆ ಭಾವಾವೇಷ ಹಬ್ಬಿತು. ಈಗೇನಾದರೂ ತಾನು ಪ್ರಯತ್ನಿಸಿದರೆ ಉರಿದು ಬೀಳುತ್ತಾಳೆ ಎನ್ನಿಸಿ ಸುಮ್ಮನೆ ಪಕ್ಕದಲ್ಲಿ ಮೈ ಚಾಚಿದ. ಅನಂತರ ಕೆಲವೇ ಕ್ಷಣಗಳಲ್ಲಿ,‘ಇದೇನು ಹೀಗೆ ಸುಮ್ಮನಾದೆ ಎಂಬ ಮೆಲುಮಾತು ಕೇಳಿಸಿತು. ಪ್ರಭಾಕರ ಎದ್ದು ಕುಳಿತು ಧ್ವನಿ ಬಂದ ಕಡೆ ನೋಡಿದ. ಮೂಲೆಯಲ್ಲಿ ಟೇಬಲ್ಲಿನ ಮೇಲೆ ಅವನು ಇಟ್ಟಿದ್ದ ಬೊಂಬೆ ಕಾಣಿಸಿತಷ್ಟೆ. ಕೊಂಚ ಗಲಿಬಿಲಿಗೊಂಡ ಮಾಲಿನಿಯೂ ಎದ್ದಳು. ಅವಳು “ಯಾರ್ರೀ ಮಾತಾಡಿದ್ದು? ಎಂದು ಕೇಳುತ್ತಿದ್ದಂತೆ ಮತ್ತೆ ಅವೇ ಮಾತುಗಳು. ಈಗವರಿಗೆ ಗೊತ್ತಾಯಿತು. ಮಾತಾಡಿದ್ದು ಬೊಂಬೆ. ಅವರಿಬ್ಬರೂ ಒಬ್ಬರನ್ನೊಬ್ಬರು ನೋಡಿದರು. ಅದರ ಹತ್ತಿರಕ್ಕೆ ಹೋಗುತ್ತಿದ್ದಂತೆ ಉಂಟಾದ ಮಿಶ್ರ ಭಾವನೆಗಳಲ್ಲಿ ವಿಚಿತ್ರ ಸಂತೋಷವೇ ಹೆಚ್ಚಾಗಿತ್ತು. ಅದು ಇನ್ನೇನಾದರೂ ಹೇಳುತ್ತದೆಯೇನೋ ಎಂದು ಕೆಲವು ಕ್ಷಣ ಕಾದರು.
“ಅದೇನೋ ಮಾತಾಡ್ದ ಹಾಗಾಯ್ತು?!
“ಮಕ್ಕಳ ಧ್ವನಿ ಇದ್ದ ಹಾಗಿತ್ತಲ್ವ?
“ಇಲ್ಲ ಕಣೆ, ನಂಗೆ ಹಾಗನಿಸಲ್ಲ, ದೊಡ್ಡೋರದ್ದು ಇದ್ದ ಹಾಗಿತ್ತು ಎಂದ ಪ್ರಭಾಕರ. ಆದರೆ ಬೊಂಬೆ ಅವರಿಬ್ಬರ ಆಗಿನ ಮನಸ್ಥಿತಿಯನ್ನು ಬದಲಿಸಿತು.

ಮಾರನೆಯ ದಿನ ಮತಾಡುವ ಆ ಬೊಂಬೆ ಮನೆಯವರಿಗೆಲ್ಲ ಪ್ರಿಯವಾಯಿತು. ಎಲ್ಲಕ್ಕಿಂತ ಆದದ್ದು ಅದಕ್ಕೊಂದು ನಾಮಕರಣ. ಕೊನೆಗೆ ವಿಶೇಷ ಇಷ್ಟಪಟ್ಟಂತೆ ‘ಪುಟ್ಟು ಎಂದು ನಿರ್ಧರಿಸಿದರು. ಆ ಹೆಸರು ಕೂಗಿದ ಕೂಡಲೇ ನಗುತ್ತ ಹೆಜ್ಜೆ ಹಾಕುವ ಅದು ಎಲ್ಲರಲ್ಲಿಯೂ ಸಂತೋಷದ ಲಹರಿಗಳನ್ನು ಉಂಟುಮಾಡಿತು. ಪ್ರಭಾಕರ ಕೆಲಸದ ಒತ್ತಡ ಎಂದು ಅವಸರದಿಂದ ಹೊರಟ. ವಿಶೇಷನಿಗಂತೂ ಮಾತನಾಡುವ ಸಂಗಾತಿ ಸಿಕ್ಕಿದ್ದಕ್ಕೆ ಹಿಡಿಸಲಾರದಷ್ಟು ಖುಷಿಯಾಗಿತ್ತು. ಸ್ಕೂಲಿನಿಂದ ಬಂದ ಕೂಡಲೇ ಉಳಿದ ಸಮಯವೆಲ್ಲ ಅದರ ಜೊತೆಗೇ. ಅದು ಆಡುವ ಮಾತುಗಳಿಂದ ಪುಳಕಿತಗೊಳ್ಳುತ್ತಿದ್ದ. ಸುರ್ಯ ಹುಟ್ಟಿ-ಮುಳುಗುವುದರಲ್ಲಿ ಹೊಸತೇನನ್ನೂ ಕಾಣದೆ ಸುಮ್ಮನೆ ದಿನ ಉರುಳುವುದನ್ನು ದೂರನಿಂತು ನೋಡುತ್ತಿದ್ದ ಶಂಕರಯ್ಯ ಮತ್ತು ಲಲಿತಮ್ಮನವರಿಗೆ ಅದು ಹೊಸ ಬಗೆಯನ್ನು ತೆರೆದಿತ್ತು. ಪ್ರಾರಂಭದಲ್ಲಿ ಎಲ್ಲರಿಗೂ ಹಿತವೆನಿಸುವಂತೆ ನಕ್ಕು ಕುಪ್ಪಳಿಸಿ ಮಾಡುತ್ತಿದ್ದ ಪುಟ್ಟು ಕೆಲವೇ ದಿನಗಳಲ್ಲಿ ಬೇಕು-ಬೇಡಗಳನ್ನು ಕೇಳುವವರಿಗೆ ಇರಿಸುಮುರುಸನ್ನುಂಟು ಮಾಡುವ ರೀತಿಯಲ್ಲಿ ವ್ಯಕ್ತಪಡಿಸುತ್ತಿತ್ತು. ಏನು ಕೊಟ್ಟರೆ ಅದರಲ್ಲಿ ಆಡಿಕೊಂಡಿದ್ದ ಅದು ತನಗೆ ಕುದುರೆ ಬೇಕೆಂದು ಆ ದಿನ ರಂಪ ಹಿಡಿಯಿತು. ಸಾಕಷ್ಟು ಸಮಯ ನೋಡಿದ ಮೇಲೆ ಶಂಕರಯ್ಯ ಪ್ರಭಾಕರನ ಪ್ರೆಸ್ಸಿಗೇ ಫೋನ್ ಮಾಡಿ ವಿಷಯ ತಿಳಿಸಿದರು. ಅವನು ಬರುವಾಗ ಜಯನಗರ ನಾಲ್ಕನೇ ಬಡಾವಣೆಯಲ್ಲಿ ಮಕ್ಕಳಾಡುವ ಮರದ ಕುದುರೆಯನ್ನು ಸ್ಕೂಟರ್‌ನ ಹಿಂಭಾಗಕ್ಕೆ ಕಟ್ಟಿಕೊಂಡು ತಂದ. ಅದನ್ನು ನೋಡುತ್ತಿದ್ದಂತೆ ಪುಟ್ಟುಗೆ ಎಲ್ಲಿಲ್ಲದ ಗೆಲುವು. ತಕ್ಷಣವೇ ಅದರ ಮೇಲೆ ಹತ್ತಿ ಹಿಂದೆ ಮುಂದೆ ಸವಾರಿ ಮಾಡಿದಂತೆ ಜಗ್ಗಿ ಎಳೆದು ಖುಷಿಪಟ್ಟಿತು. ಅನಂತರ ಕೆಳಗೆ ಹಾರಿ ಪ್ರೀತಿಯಿಂದ ಪ್ರಭಾಕರನಿಗೆ ಮುಖದ ತುಂಬ ಮುತ್ತು ಕೊಟ್ಟಿತು. ಇದರಿಂದ ಉಳಿದವರಿಗೆ ಮಾಮೂಲು ಸ್ಥಿತಿಗೆ ಹಿಂತಿರುಗಲು ಅವಕಾಶವಾದರೂ ವಿಶೇಷನಿಗೆ ಅದೆಲ್ಲ ಸುತರಾಂ ಇಷ್ಟವಾಗಲಿಲ್ಲ. ಅವನು ಧುಮುಗುಟ್ಟುತ್ತಲೇ ಇದ್ದ. ಅನಂತರ ಪುಟ್ಟು ದಿನದಲ್ಲಿ ಆದಷ್ಟೂ ಸಮಯ ಕುದುರೆಯ ಮೇಲೆಯೇ ಇರುತ್ತಿತ್ತು. ಆಗಾಗ ಬೆಳಿಗ್ಗೆ ಲಲಿತಮ್ಮ ಮುಂಬಾಗಿಲಿಗೆ ಹಾಕುತ್ತಿದ್ದ ರಂಗೋಲಿಯನ್ನು ತದೇಕವಾಗಿ ನೋಡುತ್ತಿತ್ತು. ಆಗ ಅದು ಹೆಚ್ಚು ತಗಾದೆ ಮಾಡುತ್ತಿರಲಿಲ್ಲ. ಲಲಿತಮ್ಮ ಅದರ ಕಡೆ ನೋಡಿ ನಸು ನಗುತ್ತಿದ್ದರು. ಅವರು,“ನೋಡು ಬಾ ಪುಟ್ಟು ಏನ್ಮಾಡ್ತಿದೆ ಎಂದು ವಿಶೇಷನನ್ನು ಕರೆಯುತ್ತಿದ್ದರು. ಕೆಲವು ದಿನಗಳ ನಂತರ ಆ ರಂಗೋಲಿಯ ಡಬ್ಬದಲ್ಲಿದ್ದ ಬಣ್ಣದ ಚಾಕ್ ಪೀಸ್‌ಗಳನ್ನು ಹೇಗೋ ಪತ್ತೆ ಮಾಡಿತು. ಅದನ್ನು ತೆಗೆದುಕೊಂಡು ತಾನೇರುತ್ತಿದ್ದ ಮರದ ಕುದುರೆಗೆ ಲಗಾಮು ಬರೆಯಿತು. ಅದು ಬರೆದ ಮೇಲೆ ಕುದುರೆಯ ಮೇಲೆ ಹತ್ತಿದಾಗ ಅತೀವ ಹುರುಪಿನಿಂದ, ಧಿಮಾಕಿನಿಂದ ವರ್ತಿಸುತ್ತಿತ್ತು.

ಮೊದಮೊದಲು ಮನೆಯೊಳಗೇ ಓಡಾಡಿಕೊಂಡಿದ್ದ ಅದು ಶಂಕರಯ್ಯನವರ ‘ಗುಣಮಟ್ಟ ಕುರಿತ ಪುಸ್ತಕಗಳ ಹಾಳೆಗಳನ್ನು ಹರಿದು ಉಪಯೋಗವಿಲ್ಲದಂತೆ ಮಾಡಿ, ಉಪಕರಣಗಳನ್ನು ಕೂಡ ಅವರ ಕಣ್ಣೆದುರೇ ಕೆಡಿಸಿಬಿಟ್ಟಿತು. ಏಕೋ ಶಂಕರಯ್ಯನವರಿಗೆ ಕೆಲವು ಕ್ಷಣ ತಮ್ಮ ಕಣ್ಣುಗಳನ್ನೇ ನಂಬದಂತಾಯಿತು. ಆದರೆ ಕ್ರಮೇಣ ತಹಬಂದಿಗೆ ತಂದುಕೊಂಡರು. ಅನಂತರ ಮೂರು ದಿನ ಅವರು ಯಾರ ಜೊತೆಯೂ ಮಾತಾಡಲಿಲ್ಲ. ಆದರೆ ಅದೊಂದು ದಿನ ಪುಟ್ಟ , ಈ ಮೊದಲು ಪ್ರಭಾಕರ ಹಾಲ್‌ನಲ್ಲಿ ಜವರಪ್ಪನ ಪಾರ್ಟಿಯ ಅತ್ಯಂತ ಪ್ರಮುಖ ರಾಷ್ಟ್ರ ನಾಯಕರ ಫೋಟೋಗೆ ಊದಿನ ಕಡ್ಡಿ ಹಚ್ಚಿ ತಾವು ದೇವರ ಪೂಜೆಗೆಂದು ಉಪಯೋಗಿಸುತ್ತಿದ್ದ ಗಂಟೆ ಬಾರಿಸಿ ಮಂಗಳಾರತಿ ಮಾಡುತ್ತಿದ್ದ. ಅದನ್ನು ಕಂಡು ವಿಶೇಷ ಕುಣಿದು ನಕ್ಕು ಚಪ್ಪಾಳೆ ಹೊಡೆದ. ಗಂಟೆಂii ಶಬ್ದ ಕೇಳಿ ಬಂದ ಶಂಕರಯ್ಯ ಕಂಡ ನೋಟದಿಂದ ದಂಗು ಬಡಿದು ಮುಂದೆ ಹೆಜ್ಜೆ ಇಡಲಿಲ್ಲ. ಆದರೆ ಮಾಲಿನಿಗೆ ತಡೆಯಲಾಗಲಿಲ್ಲ. ಅವಳು ಪುಟ್ಟುವಿನ ಕೈಯಿಂದ ಗಂಟೆಯನ್ನು ಕಸಿದುಕೊಳ್ಳಲು ಹೋದರೆ ಅದು ಅವಳ ಕಡೆ ಬಿರುಗಣ್ಣು ಬೀರಿ ತನ್ನ ಕೆಲಸ ಮುಂದುವರಿಸಿತು. ಇದೇನಾಯಿತು ಎಂದು ಲಲಿತಮ್ಮ ನೋಡುತ್ತಿದ್ದಂತೆ ಮಾಲಿನಿಗೆ ರೋಷವುಕ್ಕಿ ಪುಟ್ಟುವನ್ನು ದರ ದರ ಎಳೆದು ಕೊಂಡು ರೂಮಿಗೆ ತಳ್ಳಿ ಬಾಗಿಲು ಹಾಕಿದಳು. ಅವರೆಲ್ಲರೂ ಪರಸ್ಪರ ಮುಖ ನೋಡಿಕೊಂಡು ಅತ್ತ ಸರಿದರೂ ರೂಮೊಳಗಿಂದ ಗಂಟೆ ಶಬ್ದ ಕೇಳಿ ಬರುತ್ತಿತ್ತು. ಅನಂತರ ವಿಷಯ ತಿಳಿದ ಪ್ರಭಾಕರನನ್ನು ಬಿಟ್ಟು ಉಳಿದವರೆಲ್ಲರೂ ಇಡೀ ದಿನ ಸೂತಕದ ಮನೆಯಂತೆ ಕಳೆದರು.

ಪ್ರಾರಂಭದಲ್ಲಿ ಎಳೆಯ ಹುಡುಗನ ಹಾಗೆ ಮಾತಾಡುತ್ತಿದ್ದ ಪುಟ್ಟ ಬೇಗನೆ ಬೆಳೆದವನ ಹಾಗೆ ಮಾತಾಡುತ್ತಿತ್ತು. ಈಗ ಮನೆಯವರ ಗಮನಕ್ಕೆ ಬಂದ ಅತಿಶಯದ ಸಂಗತಿಯೆಂದರೆ ಅದಾಡುವ ಮಾತಿನ ಏರಿಳಿತಗಳಿಗೆ ಹೊಂದಿಕೊಂಡು ಅದರ ಕಣ್ಣು, ಹುಬ್ಬು, ತುಟಿಗಳ ಚಲನೆಯೂ ಮಿಳಿತಗೊಳ್ಳುತ್ತಿದ್ದದ್ದು. ಒಂದೊಂದು ಸಲ ಅದರ ಕಣ್ಣುಗಳು ಕಪ್ಪು ಎನ್ನಿಸಿದರೆ ಮತ್ತೆ ಕೆಲವು ಸಲ ನೀಲಿ ಎನ್ನಿಸುತ್ತಿತ್ತು. ಎಲ್ಲರಿಗೂ ಮುಂಚೆ ಇದೆಲ್ಲ ಸಂತೋಷಗೊಳ್ಳುವ ಸಂಗತಿಗಳೆನಿಸಿದರೂ ಎಲ್ಲ ವಿಷಯಯಗಳಲ್ಲೂ ಮೂಗು ತೂರಿಸುತ್ತಿತ್ತು. ತಮ್ಮ ಸಂಸಾರವಲ್ಲದೆ ಇತರ ಎಲ್ಲ ಆಗುಹೋಗುಗಳನ್ನು ಅದು ಹೇಗೋ ಅರಿತಂತಿದ್ದ ಅದರಿಂದ ಈಗ ಎಲ್ಲರೂ ದೂರವಿರಲು ಪ್ರಯತ್ನಿಸುತ್ತಿದ್ದರು. ಆದರೆ ಪ್ರಭಾಕರ ಅದನ್ನು ದೂರ ಮಾಡುವ ಮಾತೇ ಇರಲಿಲ್ಲ. ಅವನು ತೊಡಗಿಸಿಕೊಂಡ ಮಾರ್ಗದಲ್ಲಿ ಮತ್ತಷ್ಟು ಮುನ್ನುಗ್ಗಲು ಪ್ರೇರೇಪಿಸುತ್ತಿತ್ತು. ಅವನು ತಾನು ಕಾಪಾಡಿಕೊಳ್ಳಬೇಕಾಗಿದ್ದ ನಿಷ್ಠೆಯನ್ನು, ನೆಲೆಯನ್ನು ಸ್ಪಷ್ಟವಾಗಿ ಗುರುತಿಸಿಕೊಂಡಿದ್ದ.

ಪ್ರಭಾಕರ ಮಾಡಿದ ಕೆಲಸದ ಸಾಮಾನುಗಳನ್ನು ತಲುಪಿಸುವ ವ್ಯವಸ್ಥೆ ಮಾಡುವುದೋ, ಕಂಪನಿಗಳಲ್ಲಿ ಆರ್ಡರ್ ಕೊಟ್ಟಿದ್ದಕ್ಕೆ ಅದಕ್ಕೆ ನೇರವಾಗಿ ಸಂಬಂಧಪಟ್ಟ ಕೆಲವರಿಗೆ ಪಾರ್ಟಿ ಕೊಡಿಸುವುದೋ, ನಾಗಣ್ಣನ ಬಳಿಗೆ ಹೋಗುವುದೊ, ಜವರಪ್ಪನವರ ಬಳಿಗೋ, ಅವರ ಪಾರ್ಟಿ ಆಫೀಸಿಗೋ – ಹೀಗೆ ಒಂದಿಲ್ಲೊಂದು ಕೆಲಸದ ಕಾರಣದಿಂದ ವಾಪಸು ಮನೆಗೆ ಹೋಗುತ್ತಿದ್ದದ್ದು ಸಾಮಾನ್ಯವಾಗಿ ಮಧ್ಯರಾತ್ರಿ ಕಳೆದ ಮೇಲೆ. ಇದು ಮನೆಯಲ್ಲಿ ಅಭ್ಯಾಸವಾಗಿ ಹೋಗಿದ್ದರೂ ಇತರರಿಗಿಂತ ಮಾಲಿಗೆ ಅನಾನುಕೂಲ ಹೆಚ್ಚು. ಇತ್ತೀಚೆಗೆ ಅವಳಿಗೂ ರೋಸಿ ಹೋಗಿ ಡೈನಿಂಗ್ ಟೇಬಲ್ಲಿನ ಮೇಲೆ ಅಡಿಗೆ ಅಣಿಮಾಡಿಟ್ಟು, ವಿಶೇಷನ ಹೊಂ ವರ್ಕ್‌ಮತ್ತು ಇತರೆ ಮನೆಗೆಲಸ ಮುಗಿಸುತ್ತಿದ್ದಳು. ಆದರೆ ಪ್ರಭಾಕರ ಬಂದಾಗ ಬಾಗಿಲು ತೆಗೆಯುವ ಕೆಲಸವೊಂದಿತ್ತು. ಈಗೀಗ ಅದಕ್ಕೂ ಒಂದು ಉಪಾಯ ಕಂಡುಕೊಂಡು ಮುಂಬಾಗಿಲು ಹಾಕಿಕೊಂಡು, ಅವನು ಬಂದಾಗ ಬೀಗ ತೆಗೆದು ಮನೆಯೊಳಗೆ ಬರುವ ಏರ್ಪಾಡು ಮಾಡಿಕೊಂಡಿದ್ದರು.

ಎಲ್ಲಂದರಲ್ಲಿ ಇರುತ್ತಿದ್ದ ಪುಟ್ಟ ಇತ್ತೀಚೆಗಂತೂ ರಾತ್ರಿ ಅವರ ಬೆಡ್ ರೂಮಿನಲ್ಲೆ ಮಲಗಬೇಕೆಂದು ಹಠ ಮಾಡುತ್ತಿತ್ತು. ಅದು ಸುಮ್ಮನಾದರೆ ಸಾಕೆಂದು ಮಾಲಿನಿ ಪ್ರಭಾಕರ ಬರುವ ತನಕ ತನ್ನ ಹಾಸಿಗೆಯಲ್ಲೇ ಇರಲು ಬಿಡುತ್ತಿದ್ದಳು. ಅನಂತರ ಪ್ರಭಾಕರ ತನ್ನ ವೇಳೆಗೆ ಬಂದು ಪುಟ್ಟನೊಡನೆ ಒಂದೆರಡು ಮುದ್ದಿನ ಮಾತನಾಡಿ ಅದನ್ನು ಟೇಬಲ್ಲಿನ ಮೇಲೆ ಹೋಗುವಂತೆ ಮಾಡುತ್ತಿದ್ದ. ಮಾಲಿನಿಗೆ ಇದರಿಂದ ರೇಗಿತ್ತು. ತನ್ನ ಜೊತೆ ಮಾತಾಡುವುದಕ್ಕಿಂತ ಪುಟ್ಟನ ಜೊತೆಯೇ ಅವನು ಮಾತಾಡುವುದು ಹೆಚ್ಚೆಂದು ಅವಳ ಅಹವಾಲು. ಆದರೆ ಈಗೀಗ ಅದರ ವರಸೆ ಬದಲಾಗಿತ್ತು. ದೂರ ಹೋಗುವಂತೆ ಹೇಳುವ ಪ್ರಭಾಕರನ ಮಾತನ್ನು ಪುಟ್ಟು ಕೇಳುತ್ತಿರಲಿಲ್ಲ. ತಾನೂ ಅವರ ಜೊತೆಯಲ್ಲಿಯೇ ಮಲಗುತ್ತೇನೆಂದು ಅದರ ಬಿಡದ ಹಠ. ಅದನ್ನು ಓಲೈಸಲು ಇಬ್ಬರೂ ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಯಿತು. ತಮ್ಮ ಹಾಸಿಗೆಯಲ್ಲೆ ಅದಕ್ಕೆ ಮಲಗಲು ಬಿಟ್ಟ ಮಾಲಿನಿ ಇಡೀ ರಾತ್ರಿ ಮಂಚದ ಮೂಲೆ ಹಿಡಿದು ಕೂತಿದ್ದಳು. ತಡೆಯಲಾರದಷ್ಟು ಸುಸ್ತಾಗಿದ್ದ ಪ್ರಭಾಕರ ನಿದ್ದೆ ಹೋಗಿದ್ದ. ಬೆಳಗಾದ ಮೇಲೆ ಎಲ್ಲವೂ ಯಥಾ ರೀತಿ. ಆದರೆ ಈ ಪ್ರಸಂಗ ಅಲ್ಲಿಗೇ ನಿಲ್ಲದೆ ಪುಟ್ಟುವಿನ ಮಾತನ್ನೇ ಕೇಳುವಂತಾಗಿ ಪ್ರತಿನಿತ್ಯ ನಡೆಯುವಂತಾಯಿತು. ಆಗಾಗ ಅರೆನಿದ್ದೆಯಲ್ಲಿ ಮಾಲಿನಿಯಂತೂ ತನಗೊತ್ತಿಕೊಳ್ಳುವ ಮೈ ಪ್ರಭಾಕರನದೋ ಪುಟ್ಟೂದೋ ತಿಳಿಯದೆ ಒಟ್ಟಾರೆ ಹೇಸಿಗೆಪಟ್ಟು ಎದ್ದು ಹೋಗಿ ಕೆಳಗೆ ಮಲಗುತ್ತಿದ್ದಳು. ಅದೇಕೋ ಅವಳಿಗೆ ಪುಟ್ಟು ಒಂದೊಂದು ಸಲ ಅದು ವಿಚಿತ್ರವಾಗಿ ಹಲ್ಕಿರಿದು ನೋಡುವ ರೀತಿಯಿಂದ ಅವಳಿಗೆ ಗಾಬರಿಯಾಗುತ್ತಿತ್ತು. ಅವಳು ಸಾಕಷ್ಟು ಯೋಚಿಸಿ ತನಗೆ ಡೈವರ್ಸ್ ಕೊಟ್ಟು ಪುಟ್ಟೂನೇ ಮದುವೆಯಾಗಿ ಬಿಡಿ, ಇಲ್ಲದಿದ್ದರೆ ತಾನೇ ಅದಕ್ಕೆ ಮುಂದುವರಿಯುತ್ತೇನೆ ಎಂದು ಮಾಲಿನಿ ಪ್ರಭಾಕರನಿಗೆ ಹೇಳಿದಳು. ದಿನಗಳೆದಂತೆ ಅದರ ಅಟಾಟೋಪ ಹೆಚ್ಚುತ್ತ ಹೋಯಿತು.

ಎಲೆಕ್ಷನ್ ಸಂಬಂಧವಾಗಿ ಬೇರೆ ಬೇರೆ ಊರುಗಳಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ತಿಳಿಯುತ್ತಿದ್ದ ಪ್ರಭಾಕರನಿಗೆ ಗಂಟಲು ಒಣಗಿದಂತಾಗುತ್ತಿತ್ತು. ಪಾರ್ಟಿ ಅರೆ ಆಫೀಸಿನಲ್ಲಿ ಮತ್ತು ಹೊರಗೆ ಸಾಕಷ್ಟು ಜನರು ಪರಿಚಯವಾಗಿದ್ದರು. ಅನೇಕ ಸಲ ಜವರಪ್ಪ, “ಪ್ರಭಾಕರ ಅವರನ್ನು ಕೇಳಿ . . ಅವರು ಹೇಳಿದ ಹಾಗೆ ಮಾಡಿ ಎಂದು ಆದೇಶ ಕೊಟ್ಟಿದ್ದುಂಟು. ಇದನ್ನು ಸಹಿಸದ ಜನರಲ್ಲಿ ಅಸೂಯೆಯ ಕಿಡಿ ಹೊತ್ತಿಕೊಂಡಿತ್ತು. ಇದಕ್ಕೆ ನಾಗಣ್ಣನೂ ಹೊರತಾಗಿರಲಿಲ್ಲ. ಅ ಅಂತಹ ಸಮಯದಲ್ಲಿ ಪ್ರಭಾಕರನನ್ನು ಅಳೆಯುವಂತೆ ಮೇಲಿಂದ ಕೆಳಗೆ ನೋಡುತ್ತಿದ್ದ.

ಆ ರಾತ್ರಿ ಪ್ರಭಾಕರ, ವೆಂಕು ಮತ್ತು ಉಳಿದವರಿಗೆಲ್ಲ ವಿಪರೀತ ಕೆಲಸ. ಅಲ್ಲಿಯೇ ಹತ್ತಿರದಲ್ಲಿ ಮಾಡುತ್ತಿದ್ದ ಇಡ್ಲಿ ಕಟ್ಟಿಸಿಕೊಂಡು ಬಂದು, ತಿಂದು ಕಣ್ಣು ತಿಕ್ಕುತ್ತ ಕೆಲಸ ಮುಗಿಸಿ ದಾಗ ಮೂರು ಗಂಟೆ. ಕಟ್ಟು ಕಟ್ಟುತ್ತ ವೆಂಕು, “ನಾಳೆ ಒಂದಿನ ರಜ ಬೇಕು, ಸಾರ್ ಎಂದ. ಅವನು ಇತ್ತೀಚೆಗೆ ಎರಡು ಸಲ ಕೇಳಿದ್ದರೂ ಪ್ರಭಾಕರ ಒಪ್ಪಿರಲಿಲ್ಲ. ಕೇಳುವಾಗಲೇ ಸಪ್ಪಗಿದ್ದ ಅವನನ್ನು ನೋಡಿ, “ಆಯ್ತು . .ಇದನ್ನ ನಾನೇ ಕೊಡ್ತೀನಿ. ನೀನು ಹೋಗು . . ಒಂದೇ ದಿನ ಅಷ್ಟೆ ಎಂದ.

ವಾರದಿಂದ ಸರಿಯಾಗಿ ನಿದ್ದೆ ಮಾಡದ ಪ್ರಭಾಕರ ಎದ್ದಾಗ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ರಾತ್ರಿಯೇ ರಗಳೆ ಮಾಡುತ್ತಿದ್ದ ಪುಟ್ಟ ಅವನನ್ನು ನೋಡಿದ ಕೂಡಲೇ ಅದನ್ನು ಮುಂದುವರಿಸಿತು. ಈಗೆರಡು ದಿನಗಳಿಂದ ಅದರದ್ದು ಒಂದೇ ರಾಗ. ಜವರಪ್ಪನವರ ಮನೆಗೆ ತನ್ನನ್ನೂ ಕರೆದುಕೊಂಡು ಹೋಗು, ಎಂದು. ಅಲ್ಲಿಗೆಲ್ಲ ಯಾತಕ್ಕೆ ಬೇಕು… ಈಗಾಗಿರೋದೇ ಸಾಲ್ದೆ? ಎಂದು ಮಾಲಿನಿ ಮುಖ ಗಂಟು ಹಾಕಿಕೊಂಡರೂ ನಿರಾಕರಿಸಲು ಸಾಧ್ಯವೇ ಇಲ್ಲದೆ ಪ್ರಭಾಕರ ಒಪ್ಪಿಕೊಂಡ. ಶಂಕರಯ್ಯ ಹುಬ್ಬೇರಿಸಿದರು. ವಿಷಯವೇನೆಂದು ಸ್ಪಷ್ಟವಾಗಿ ತಿಳಿಯದ ವಿಶೇಷ ಹಿಂದೆ ಮುಂದೆ ಓಡಾಡಿ ಎಲ್ಲರ ಮುಖವನ್ನು ನೋಡುತ್ತಿದ್ದ.

ಪ್ರಭಾಕರ ಅವಸರದಿಂದ ಸಿದ್ಧನಾಗಿ ಹೊರಟಾಗ ಪುಟ್ಟು ಸ್ಕೂಟರ್‌ನ ಪಿಲಿಯನ್ ಏರಿದ. ಪ್ರೆಸ್ಸ್‌ಗೆ ಬಂದು ಪ್ರಿಂಟ್ ಮಾಡಿದ ಕಟ್ಟುಗಳನ್ನು ತೆಗೆದುಕೊಂಡು ಹೊರಟ. ಎದುರುಗಡೆ ರಸ್ತೆಯಿಂದ ಎಗರಿ ಕಣ್ಣಿಗೆ ರಾಚುತ್ತಿದ್ದ ಉರಿ ಬಿಸಿಲಿನ ಝಳ. ಇನ್ನು ಮುಂದೆ ಹೋದ ಮೇಲೆ ಸಿಕ್ಕ ಸೌತ್ ಎನ್ಡ್ ಸರ್ಕಲ್‌ನಲ್ಲಿ ಕೆಂಪು ದೀಪ ಕಂಡು ಸ್ಕೂಟರ್ ನಿಲ್ಲಿಸಿದ. ಪಕ್ಕದಲ್ಲಿ ಅಗಾಧ ಗಾತ್ರದ ಜವರಪ್ಪನಿದ್ದ ಹೋರ್ಡಿಂಗ್ ಕಾಣಿಸಿತು. ಅದರಲ್ಲಿ ಬರೆದಿದ್ದ ಅಕ್ಷರಗಳ ಆಕಾರದಲ್ಲಿ ಹೊದಾಣಿಕೆ ಇರಲಿಲ್ಲ. ಅದನ್ನು ಪರೀಕ್ಷಿಸಲು ಸ್ಕೂಟರ್ ಅಲ್ಲಿಯೇ ನಿಲ್ಲಿಸಿ ಆ ಹೋರ್ಡಿಂಗ್ ಬಳಿಗೆ ಹೋಗಿ ನಿಂತ. ಪುಟ್ಟ ಹಿಂದೆಯೇ ಬಂದ. ಹೋರ್ಡಿಂಗ್‌ನಲ್ಲಿ ಬರೆದದ್ದು ಭಾಷಣದ ಭಂಗಿಯಲ್ಲಿದ್ದ ಜವರಪ್ಪ, ಎದುರಿಗೆ ದೊಡ್ಡ ಮೈದಾನದಲ್ಲಿ ಜನರೋ, ಜನರು; ಗಂಡಸರು, ಹೆಂಗಸರು ಹಾಗೂ ಮಕ್ಕಳು. ನಿಂತಿದ್ದಂತೆಯೇ ಜನರ ಚಪ್ಪಾಳೆಗಳ ಅಲೆ ಬೀಸಿ ಪ್ರಭಾಕರನನ್ನು ತಲುಪಿತು. ಅವನೂ ಚಪ್ಪಾಳೆ ತಟ್ಟುತ್ತಿದ್ದಂತೆ ಪುಟ್ಟೂ ಅವನ ಜೊತೆಗೂಡಿದ. ಸರ್ಕಲ್‌ನಲ್ಲಿ ಹಸಿರು ದೀಪ ಬಂದು ಹಿಂದಿನಿಂದ ಅನೇಕ ವಾಹನಗಳ ಶಬ್ದ. ಪ್ರಭಾಕರ ಅವಸರದಿಂದ ವಾಪಸು ಬಂದು ಸ್ಕೂಟರ್ ಸ್ಟಾರ್ಟ್ ಮಾಡಿ ಮುಂದೆ ಹೋದ. ಅನುಮಾನವಾಗಿ ಹಿಂದೆ ನೋಡಿದ. ಅದು ಹೇಗೋ ಪುಟ್ಟು ತನ್ನ ಸ್ಥಾನದಲ್ಲಿದ್ದ. ಅವನು ಜೆ.ಸಿ. ರಸ್ತೆಯಲ್ಲಿ ಹೋಗುತ್ತಿದ್ದಂತೆ ಅಷ್ಟು ದೂರ ದಲ್ಲಿ ರಸ್ತೆಯ ಉದ್ದಗಲಕ್ಕೆ ಮತ್ತು ಹಿಂದಕ್ಕೆ ಸಾಕಷ್ಟು ಹರಡಿ ನಿಂತ ಜನ. ಎಲ್ಲ ಕಡೆ ಇದ್ದ ಹಾಗೆ ಉದ್ದಕ್ಕೂ ಜವರಪ್ಪ ಮತ್ತು ಇತರ ಉಮೇದುವಾರರ ಪೋಸ್ಟರ್‌ಗಳು, ಬ್ಯಾನರ್‌ಗಳು, ಬಂಟಿಕ್ಸ್‌ಗಳಿದ್ದವು. ಪ್ರಭಾಕರ ಇನ್ನೂ ಮುಂದೆ ಹೋದಂತೆ ಅಬ್ಬರದ ಅರಚಾಟ, ಕೂಗಾಟ ಕೇಳಿಸಿತು. ಅವನು ಕೂಗು ಬಂದ ಕಡೆ ಹೋಗುತ್ತಿದ್ದ ಹಾಗೆ ಒಂದಿಬ್ಬರು ಜವರಪ್ಪನಿರುವ ಪೋಸ್ಟgಗಳನ್ನು ಕಿತ್ತೆಸೆಯುತ್ತಿದ್ದರು. ಈ ವೇಳೆಗಾಗಲೇ ಅವನು ಅವರ ಹತ್ತಿರ ಬಂದಿದ್ದ. ಹೌದಲ್ಲ! ಇವರಲ್ಲಿ ಹಲವರು ಪಾರ್ಟಿ ಆಫೀಸಿನಲ್ಲಿ ಕಂಡವರಲ್ಲವೇ? ಇದೇನು ಹೀಗೆ ಮಾಡುತ್ತಿದ್ದಾರೆ ಎಂದುಕೊಳ್ಳುತ್ತ ಸ್ಕೂಟರ್ ನಿಲ್ಲಿಸಿ ಸ್ಟ್ಯಾಂಡ್ ಹಾಕಲು ಯತ್ನಿಸಿದ. ಅದಕ್ಕೆ ಕೆಳಗೆಲ್ಲೋ ಏನೋ ತಾಕಿರಬೇಕು. ಸ್ಕೂಟರ್ ಪಕ್ಕಕ್ಕೆ ಬಿತ್ತು; ಸಡಿಲವಾಗಿ ಕಟ್ಟಿದ್ದ ಕಟ್ಟುಗಳ ಜೊತೆಗೆ ಪುಟ್ಟೂ ಕೂಡ ಬಿದ್ದ. ಕಟ್ಟುಗಳಿಂದ ಜವರಪ್ಪನವರ ಚುನಾವಣಾ ಪ್ರಚಾರದ ಪಾಂಪ್ಲೆಟ್ಟುಗಳು ಎಲ್ಲ ಹರಡಿಕೊಂಡವು. ಇವೆಲ್ಲ ಅಲ್ಲೆ ಇದ್ದ ಒಂದಿಬ್ಬರ ಗಮನಕ್ಕೆ ಬಂತು. ಅದನ್ನು ರಭಸದಿಂದ ಎತ್ತಿಕೊಂಡವನೊಬ್ಬ, “ನೋಡ್ರಲೇ ಜವರಪ್ಪನ ಚೇಲಾನಾ . . ಎಂದರೆ ಮತ್ತೊಬ್ಬ, “ಇಷ್ಟಾದ ಮೇಲೂ ತಾಯಿಗ್ಗಂಡಂಗೆ ಬಕೀಟ್ ಹಿಡಿಯಕ್ಕೆ ಓಗ್ತವ್ನೆ ಎಂದು ಕೂಗಿದ. ಜನರು ಮುತ್ತಿಕೊಂಡರು. ಅವರ ವರ್ತನೆಯೇ ವಿಚಿತ್ರವಾಗಿ ಕಂಡಿತು ಪ್ರಭಾಕರನಿಗೆ. ನಿನ್ನೆ ಮೊನ್ನೆಯ ತನಕ ಅವನ ಬಾಲಂಗೋಚಿಗಳಾಗಿದ್ದವರಲ್ಲವೇ ಎಂದು ಅವನು ಯೋಚಿಸುತ್ತಿದ್ದಂತೆ ಯಾರೋ ಪಕ್ಕೆಗೆ ತಿವಿದರು. ತಿರುಗಿ ನೋಡಿದರೆ ನಾಲ್ಕಾರು ಅಷ್ಟಗಲ ತೆರೆದ ಕಣ್ಣುಗಳು. ಹುಚ್ಚು ನಗೆ. ಈ ಗದ್ದಲದಲ್ಲಿ ಪುಟ್ಟು ಎಲ್ಲಿ ಎಂದು ನೋಡಿದ ಪ್ರಭಾಕರ. ಆದರೆ ಕಣ್ಣಿಗೆ ಬೀಳಲಿಲ್ಲ. ಹಿಂದೆಯೇ ಶುರುವಾಯಿತು ಥಯ್ಯ, ಥಕ ಥಯ್ಯ ಶಬ್ದ. “ಆ ಜವರಪ್ಪ ಯಾಪಾರ ಮಾಡ್ಕಂಡು ಪಾರ್ಟಿ ಬದಲಾಯ್ಸಿ ಮುಖ ತೋರಿಸ್ದಂಗೆ ಓಗವ್ನೆ . . ಇಲ್ಲಿ ನೀನು ಅವನ ಕುಂಡಿ ತುರಿಸಾಕೆ ಬಂದಿದಿಯೇನೋ ಲೌಡೀಕೇ ಎನ್ನುತ್ತಿದ್ದಂತೆ ಮತ್ತೊಬ್ಬ ಮುಷ್ಟಿಯಲ್ಲಿ ಪಾಪ್ಲೆಟ್ಟುಗಳನ್ನು ಹಿಡಿದು ಪ್ರಭಾಕರನ ಬಾಯಿ ಅಗಲಿಸಿ ತುರುಕಲು ಪ್ರಯತ್ನಿಸಿದ. ಆಗ ಕತ್ತೆತ್ತಿದ ಪ್ರಭಾಕರನ ಕಣ್ಣಿಗೆ ಸೂರ್ಯನ ಪ್ರಕಾಶದಿಂದ ಕತ್ತಲೆ ಮುತ್ತಿತು. ಅವನಿಗೆ ನೆಟ್ಟಗೆ ನಿಲ್ಲುವುದೇ ಕಷ್ಟವಾಯಿತು. ಈ ಗೊಂದಲದಲ್ಲಿ ಅವರಿವರ ತುಳಿತಕ್ಕೆ ಸಿಕ್ಕ ಪುಟ್ಟನ ಕೈ, ಕಾಲು, ಮುಖಗಳೆಲ್ಲ ಚಿಂದಿಯಾಗಿತ್ತು. ಅಲ್ಲಲ್ಲಿ ಹರಡಿತ್ತು. ಅದನ್ನೆಲ್ಲ ಆರಿಸಿಕೊಂಡವನೊಬ್ಬನಿಗೆ ಅವುಗಳಲ್ಲೇನೋ ನಲುಗಿದಂತಾಗಿ ಒಂದೊಂದನ್ನೂ ಸರಿಯಾಗಿ ಹೊಂದಿಸುವುದಕ್ಕೆ ಸಾಧ್ಯವೇನೋ ಎಂದು ಪ್ರಯತ್ನಿಸಿದ. ಸಹಜವೆನ್ನಿಸುವಂತೆ ಎಲ್ಲವೂ ತಮ್ಮ ತಮ್ಮ ಸ್ಥಾನ ಕಂಡು ಕೊಂಡವು. ಅದರ ಮುಖದಲ್ಲಿ ಕೊಂಚ ಕಳೆ ಕಾಣಿಸಿಕೊಂಡು ತುಟಿಯಂಚಿನಲ್ಲಿ ನಸುನಗೆ ಮೂಡಿತು. ಅನಂತರ ಅದು ಮಾತಾಡಲು ಪ್ರಾರಂಭಿಸಿತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.