ಕಲಾತ್ಮಕ ಚಿತ್ರಗಳು ಮತ್ತು ಮಿನಿಥಿಯೇಟರ್‍

ನಮ್ಮಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಗೋಡೌನ್‌ನಂಥ ಚಿತ್ರಮಂದಿರಗಳು, ಇಲಿ-ಹೆಗ್ಗಣಗಳು ಧಾರಾಳವಾಗಿ ಓಡಾಡುವ ಥಿಯೇಟರ್‌ಗಳು, ಚಿತ್ರ ನೋಡಲು ಬಿಡುವೇ ಕೊಡದೆ ಸೊಳ್ಳೆಕಾಟದಿಂದ ಕಾಲುಕೆರೆದುಕೊಳ್ಳುವಂತೆ ಮಾಡುವ ವಿಚಿತ್ರ ಚಿತ್ರಮಂದಿರಗಳು, ಚಿತ್ರದ ಓಟಕ್ಕೆ ಏನೇನೂ ಸಂಬಂಧವಿಲ್ಲದ ಬ್ಲೂ ಫಿಲಂಸ್ ದಿಢೀರನೆ ತೋರುವ ಸೆಕ್ಸೀ ಥೇಟರುಗಳು, ಚಿತ್ರ ಗಬ್ಬಾಗಿದ್ದರೂ ಡೋಟ್‌ವರಿ, ನಾನಿದ್ದೇನೆ ನಿಮಗೆ ‘ಮಜಾ ಕೊಡಲು’ ಎಂದು ಪರದೆ ಮೇಲಿನ ಚಿತ್ರ ಮರೆಸಲು ಕಾಮ ಕೇಳಿಯ ‘ಲೈವ್ ಷೋ’ಗೆ ಅಣಿಯಾಗಿ ಬರುವ ಕಾಲ್‌ಗರ್ಲ್‌ಗಳ ಹಾವಳಿ ಇರುವಂಥ ಚಿತ್ರಮಂದಿರಗಳೂ ಕೆಂಪೇಗೌಡ ರೋಡಿನಲ್ಲಿವೆ.

ಕೋಟಿ ಕೋಟಿ ಹಣವನ್ನು ‘ಧಾಂ-ಧೂಂ’ ಎಂದು ವೆಚ್ಚಿಸಲು ಅಣಿಯಾಗಿರುವ ಚಿತ್ರ ನಿರ್ಮಾಪಕ-ನಿರ್ದೇಶಕರು ಒನ್ ಸೈಡ್ ಆದರೆ, ಇನ್ನೊಂದು ಸೈಡಿನಲ್ಲಿ ರೋಡ್‌ಸೈಡಿನ ತಿಂಡಿ ಕಾಫಿಗಳಲ್ಲೇ ತೃಪ್ತರಾಗಿ ಏನಾದರೂ ಹೊಸದನ್ನು ಮಾಡಿ ತೋರುವ ಲೋ ಬಜೆಟ್ ಚಿತ್ರ ನಿರ್ಮಾಪಕ-ನಿರ್ದೇಶಕರೂ ಇನ್ನೊಂದೆಡೆ ಇದ್ದಾರೆ.

ಒಬ್ಬೊಬ್ಬರಿಗೆ ಒಂದೊಂದು ಹುಚ್ಚು, ಕೆಲವರಿಗೆ ಹಣ ಮಾಡುವುದೇ ಜೀವನದ ಮುಖ್ಯ ಗುರಿ. ಇನ್ನು ಕೆಲವರಿಗೆ ಸದಭಿರುಚಿ ಚಿತ್ರ ಮಾಡುವುದು ಅವರ ಕಿರೀಟಕ್ಕೊಂದು ಗರಿ. ಇನ್ನೂ ಹಲವರು “ಏನು ಕೊಟ್ಟರೂ ನೋಡುತ್ತಾರೆ. ನಮ್ಮ ವೀರ ಕನ್ನಡಿಗರು. ಅವರು ನಿಜವಾದ “ಕುರಿ” ಅಂತ್ಲೂ ಅಂತಿರ್‍ತಾರೆ.

ಯಾರು ಏನೇ ಅನ್ನಲಿ-ಎಲ್ಲರಿಗೂ ಒಳ್ಳೆ ಚಿತ್ರಮಂದಿರಗಳು ಬೇಕು. ಈಗ ಒಳ್ಳೇ ಥಿಯೇಟರ್‌ಗಳ ಬಾಡಿಗೆ ಕೇಳಿದರೆ ‘ಹಾರ್‍ಟ್ ಫೈಲ್ಯೂರ್‍’ ಆಗುವಂಥ ದಿನ ಬಂದು ಹೋಗಿದೆ. ಎಷ್ಟೋ ನಿರ್ಮಾಪಕರು ಬಾಡಿಗೆ ಕಟ್ಟಲಾಗದೆ ಚಿತ್ರದ ಡಬ್ಬಗಳನ್ನು ಚಿತ್ರಮಂದಿರಗಳಲ್ಲೇ ತಿಂಗಳಾನುಗಟ್ಟಲೆ ಬಿಟ್ಟು ಬಂದಿರುವುದೂ ಉಂಟು.

ಹೊಟ್ಟೆ-ಬಟ್ಟೆ ಕಟ್ಟಿ ಲೋಬಜೆಟ್ ಚಿತ್ರ ತೆಗೆದವ – ಅಬ್ಬಬ್ಬ ಅಂದರೆ ಒಂದೋ-ಎರಡೋ ಪ್ರಿಂಟ್ ಹಾಕಿಸಬಲ್ಲ. ಭಾರಿಸ್ಟಾರ್‍ಸ್ ಇಲ್ಲ ಎಂದಾಗ ಗಾಂಧೀನಗರ ಅಂತ ನಿರ್ಮಾಪಕರಿಗೆ ಕಾಫಿಯೂ ಕೊಡಿಸುವುದಿಲ್ಲ-ಕ್ಯಾರೆ ಎಂದೂ ಅನ್ನುವುದಿಲ್ಲ.

ಹಾಗೆ ನೋಡಿದರೆ ಇಂಥ ಮಂದಿ ಮಾತ್ರ ಏನಾದರೂ ಕ್ರಿಯೇಟೀವ್ ಆಗಿ ಥಿಂಕ್ ಮಾಡಬಲ್ಲರು-ಸೃಜನಶೀಲವಾದುದನ್ನು ಏನಾದರೂ ಹೇಳಬಲ್ಲರು-ಸ್ಟಾರ್‍ಸ್ ಅಲ್ಲದವರನ್ನೂ ಮಿರುಮಿರುಗುವ ನಕ್ಷತ್ರವಾಗಿ ಮಿಂಚಿಸಬಲ್ಲರು.

ಸಬ್ಸಿಡಿಗಳು-ಪ್ರಶಸ್ತಿಗಳು ಇಂಥ ಮಂದಿಗೆ ನಿಜವಾದ ಆಶಾಕಿರಣಗಳು.

ಕೋಟಿ ಕೋಟಿ ಖರ್ಚು ಮಾಡಬಲ್ಲವರಿಗೆ ಈ ಹಣ ಮಹಾಜುಜಬಿ. ಒಂದು ದಿನದ ಕಾಕ್‌ಟೇಲ್ ಪಾರ್ಟಿ ಖರ್ಚು.

ಕನ್ನಡದ ಜನಪ್ರಿಯ ಹೀರೋ ಹೀರೋಯಿನ್‌ಗೆ ಕೊಡುವ ಸಂಭಾವನೆಯಲ್ಲಿ ಒಂದು ಲೋಬಜೆಟ್ ಚಿತ್ರ ತೆಗೆಯಬಲ್ಲ ಉತ್ಸಾಹೀ ಯುವ ನಿರ್ದೇಶಕರೂ ಇಂದು ಬಂದಿದ್ದಾರೆ. ಇಂಥ ಪ್ರಯತ್ನಗಳು ಹೆಚ್ಚಿದಾಗ ಮಾತ್ರ ಹೊಸ ಹೊಸ ಮುಖಗಳು ಚಿತ್ರರಂಗಕ್ಕೆ ಬರುವುದು ಸಾಧ್ಯ.

ಸರ್ಕಾರದ ಸದಾಶಯಗಳು ಕಾರ್ಯರೂಪಕ್ಕೆ ಬರಲೇಬೇಕೆಂದರೆ ಇಂಥ ಚಿತ್ರಗಳಿಗೇ ಮೀಸಲಾದ ಸುಸಜ್ಜಿತ ಮಿನಿ ಚಿತ್ರಮಂದಿರಗಳು ಬೇಕು. ಅವಿಲ್ಲದಿರುವುದರಿಂದಾಗಿಯೇ ಲೋಬಜೆಟ್ ಚಿತ್ರಗಳು-ವ್ಯಾಪಾರಿ ಚಿತ್ರಗಳ ಅಬ್ಬರದ ಅಲೆಯ ಮಾರುತಕ್ಕೆ ಸಿಲುಕಿ ಚಿಂದಿ ಎದ್ದು ಹೋಗಿದೆ. ಅರಮನೆ ಪಕ್ಕದಲ್ಲಿರುವ ಗುಡಿಸಲುಗಳು ಭೀಕರ ಬಿರುಗಾಳಿಗೆ ತತ್ತರಿಸಿ ಅಡ್ರೆಸ್ಸಿಗಿಲ್ಲದಂತಾಗುತ್ತದೆ.

ಕಣಗಾಲ್ ಪುಟ್ಟಣ್ಣ ಚಿತ್ರಮಂದಿರವಾದರೂ ಇಂಥ ಲೋಬಜೆಟ್ ಚಿತ್ರದವರಿಗೆ ಪರ್ಸಂಟೇಜ್ ಮೇಲೆ ಸಿಕ್ಕಲ್ಲಿ-ಅದೊಂದು ‘ಆಕ್ಸಿಜನ್ ಸಿಲಿಂಡರ್‍’ ಎನಿಸೀತು.

ಕಣಗಾಲರು ಚಿತ್ರರಂಗಕ್ಕೆ ಕೊಡುಗೆಯಾಗಿತ್ತ ಅಂಬರೀಷ್ ಹಾಗೂ ವಿಷ್ಣು-ತಮ್ಮ ಗುರುಗಳ ಹೆಸರಿನ ಚಿತ್ರಮಂದಿರಕ್ಕೆ ಹೊಸತನದ ಮೆರುಗು ನೀಡುವೆವು ಎಂದರು.

ಅದು ಈವರೆಗೆ ಮಂತ್ರಿಗಳ ಆಶ್ವಾಸನೆಯಂತೆ ಆಗಿದೆ. ಹೀಗಾಗಿ ಹೊಸ ಹೊಸ ಚಿಂತನೆಗಳು ಚಿತ್ರರಂಗದಲ್ಲಿ ಅರಳುವುದಾದರೂ ಎಂತು? ಸದಭಿರುಚಿ, ಸೂಕ್ಷ್ಮಭಾವನೆಗಳು, ಅರ್ಥಪೂರ್ಣ ಅನಿಸಿಕೆಗಳು, ಹೊಸ ಹೊಸ ಪ್ರಯೋಗಗಳು ಚಲನಚಿತ್ರರಂಗದಿಂದ ಗಾವುದ ದೂರವೇ ಇರಬೇಕೆ?

ಮಿನಿ ಚಿತ್ರಮಂದಿರಗಳಿಲ್ಲದಿರುವುದರಿಂದಾಗಿ ಲೋಬಜೆಟ್ ನಿರ್ಮಾಪಕ-ನಿರ್ದೇಶಕರು ಗಾಂಧೀನಗರದಿಂದ ‘ಔಟ್ ಆಫ್ ಬೌಂಡ್ಸ್’ ಎನ್ನುವಂತಾಗಿದೆ.

ಸದಭಿರುಚಿ ಚಿತ್ರಗಳ ಬಗ್ಗೆ ತುಂಬ ಒಲವು ತೋರುವ ವಾರ್ತಾ ಸಚಿವ ಪ್ರೊ. ಬಿ.ಕೆ.ಸಿ. ಇಂಥ ಕಡೆ ಮುಖ್ಯಮಂತ್ರಿಗಳ ಗಮನವನ್ನು ಎಳೆವಂತಾದರೆ ಚೆನ್ನ.

ಇಲ್ಲವಾದಲ್ಲಿ ಜನಪ್ರಿಯ ನಟ-ನಟಿಯರೂ ಕ್ರೌಡ್ ಪುಲ್ಲಿಂಗ್‌ಗೆ ಬೇಕಾದವರು ಎಂಬ ಹಿಂದೆ ಕಾರಣಕ್ಕೆ ನೋಡಿದ ಅದೇ ನಾಲ್ಕಾರು ಮುಖಗಳನ್ನು ಅವರಿಗೆ ಎಷ್ಟೇ ವಯಸ್ಸಾಗಲಿ ಕಾಲೇಜು ಹುಡುಗರೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತದೆ.

ಚಿತ್ರದ ನಿಜವಾದ ಹೀರೋ ಕಥೆ ಎಂದು ಜನ ಒಪ್ಪಿದ ಮರುಘಳಿಗೆ ಹೊಸ ಮುಖಕ್ಕೂ ಆರತಿ ಎತ್ತತೊಡಗುತ್ತಾರೆ. ಇಲ್ಲವಾದಲ್ಲಿ ಜನ ಕೇಳಿದ್ದನ್ನು ಕೊಡುತ್ತಿದ್ದೇವೆ ಎಂಬ ಕಾರಣಮಾಡಿ ಡಬ್ಬಲ್ ಮೀನಿಂಗ್, ಟ್ರಿಬ್ಬಲ್ ಮೀನಿಂಗ್ ಡೈಲಾಗ್‌ಗಳನ್ನು ತುರುಕಿ, ಸೆಕ್ಸೀ ದೃಶ್ಯಗಳ ಸರಮಾಲೆ ಪೋಣಿಸಿ ನಾನಾ ಷೇಪಿನವರನ್ನು ಕರೆತಂದು ಬೆತ್ತಲಾಗಿಸಿ ‘ರೇಪ್’ ಮಾಡಿಸಿ, ಆಕ್ಷನ್ ಫಿಲಂಗಳ ಹೆಸರಿನಲ್ಲಿ ಎಲ್ಲ ಚಿತ್ರಮಂದಿರಗಳನ್ನೂ ಕಾಮಪ್ರಚೋದನಾ ಕೇಂದ್ರಗಳಾಗಿ ಮಾಡಬಲ್ಲ ಮಹಾ ಚಾಣಾಕ್ಷರೂ ಗಾಂಧೀನಗರದಲ್ಲಿದ್ದಾರೆ.

ಇದಕ್ಕೆ ಪರ್‍ಯಾಯ ತಂತ್ರವೆಂದರೆ ನಾಲ್ಕಾರು ಮಿನಿಚಿತ್ರಮಂದಿರಗಳನ್ನು ಆರಂಭಿಸುವುದು ತುಂಬ ಮುಖ್ಯ. ಇಲ್ಲವಾದಲ್ಲಿ ನಾಳೆ ಆಹ್ವಾನ ಪತ್ರಿಕೆಗಳು ಹೀಗೆ ಬಂದೀತು.

ಆತ್ಮೀಯ ಪತ್ರಕರ್ತರೆ,

“ಈಗ ತುಂಬ ಕಡಿಮೆ ವೆಚ್ಚದಲ್ಲಿ ಒಂದು ಚಿತ್ರ ಅಣಿ ಮಾಡಿರುವೆ. ಗಾಂಧೀನಗರದ ವಿತರಕರು ನಮ್ಮನ್ನು ಕ್ಯಾರೇ ಎನ್ನುತ್ತಿಲ್ಲ. ಚಿತ್ರ ಮಾಡಿದ ಮೇಲೆ ಅದು ಡಬ್ಬದಲ್ಲೇ ಕೊಳೆಯುವುದು ನಮಗಿಷ್ಟವಿಲ್ಲ. ಕನಿಷ್ಠ ನೀವಾದರೂ ಬಂದು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದಲ್ಲಿ ಉಪಕಾರ. ಇದೆ ಚಿತ್ರ ೪ ದಿನ ಕಾರ್ಪೊರೇಷನ್ ಎದುರಿಗಿರುವ ಬಾದಾಮಿ ಹೌಸ್‌ನಲ್ಲಿ ಏರ್ಪಡಿಸಿದ್ದೇವೆ.

-ಮಲ-ಮೂತ್ರಗಳನ್ನು ದಯಮಾಡಿ ಮನೆಯಲ್ಲೇ ಮುಗಿಸಿಕೊಂಡು ಬನ್ನಿ. ಏಕೆಂದರೆ ಅಲ್ಲಿರುವುದು ಒಂದೆ ಟಾಯ್ಲೆಟ್.

ಇಂಟ್ರವೆಲ್‌ನಲ್ಲಿ ನೀವು ‘ಕ್ಯೂ’ನಲ್ಲಿ ನಿಂತು ವಾಪಸ್ಸು ಬರುವ ಹೊತ್ತಿಗೆ ಒಂದು ರೀಲ್ ಮುಗಿದು ಕಥೆಯೇ ಅರ್ಥವಾಗದೆ ಹೋದೀತು. ಹಾಗಾದಲ್ಲಿ ನಮ್ಮ ಪ್ರಯತ್ನ ವ್ಯರ್ಥ ಎಂಬ ಕಾರಣಕ್ಕೆ ಈ ವಿವರಣೆ ನೀಡಿದ್ದೇವೆ. ಖಂಡಿತಾ ಬನ್ನಿ-

-ನಿರ್ಮಾಪಕರು”

– ಇಂಥ ಪರಿಸ್ಥಿತಿ
ಬರದಿರಬೇಕಾದರೆ ಮಿನಿಚಿತ್ರಮಂದಿರಗಳು ಅಗತ್ಯ ಬೇಕಲ್ಲವೆ?
*****
(೨೦-೧೦-೨೦೦೦)