ಸಿನಿ ಅವಾರ್ಡ್ಸ್ ಜಗಳದಲ್ಲಿ ಜೀತಗಳು ಮತ್ತು ಭಿಕ್ಷಾಪಾತ್ರೆ

ಈ ಬಾರಿಯ ಸರಕಾರಿ ಕನ್ನಡ ಚಲನಚಿತ್ರ ಪ್ರಶಸ್ತಿಯ ಹಗರಣ ಒಂದು ರೀತಿ ಹಾದಿರಂಪ ಬೀದಿರಂಪವಾಗಿ ಚಾನೆಲ್ ವಾರ್‌ಗೂ ದಾರಿಮಾಡಿರುವುದು ಪತ್ರಿಕೆಗಳಲ್ಲಿ ಜಾಹೀರಾತುಗಳಲ್ಲಿಯೂ ಕಾಣುವ ದಿನ ಬಂದು ಪ್ರಶಸ್ತಿಗಳೇ ತನ್ನ ಮೌಲ್ಯ ಕಳೆದು ಕೊಳ್ಳುವಂತಾಗಿದೆ.

ಈಗ ಎಲ್ಲೇ ನೋಡಿ, ಪೈಪೋಟಿಯ ಮೇಲೆ ಪ್ರಶಸ್ತಿಗಳನ್ನು ಖಾಸಗಿ ಸಂಸ್ಥೆಗಳವರೂ ಒಟ್ಟೊಟ್ಟಿಗೆ ನಲವತ್ತು ಐವತ್ತು ಜನಕ್ಕೆ ನೀಡುತ್ತಾ ಪ್ರಶಸ್ತಿಗಳನ್ನು ನೀಡಲು ಪಾರ್ಟಿಗಳನ್ನು ದುರ್ಬೀನು ಹಾಕಿ ಹುಡುಕಬೇಕಾಗಿ ಬಂದಿದೆ.

ಫೋನ್ ಮಾಡಿ ಬಿಡುವಿದ್ದವರಿಗೆ ಪ್ರಶಸ್ತಿ ನೀಡುವುದು, ಪ್ರಶಸ್ತಿ ಬಾರದಿದ್ದಲ್ಲಿ ತಾವೇ ಒಂದು ಸಂಸ್ಥೆ ಕಟ್ಟಿ ಪ್ರಶಸ್ತಿಗಳನ್ನು ತಮ್ಮ ಖರ್ಚಿನಲ್ಲೇ ಕೊಡಿಸಿಕೊಳ್ಳುವ ಘನಂದಾರಿ ವ್ಯಕ್ತಿಗಳನ್ನು ಈಗ ಕಾಣಬಹುದು.

ಪ್ರಶಸ್ತಿ ತುಂಬಾ ಸಾಮಾನ್ಯ. ಅದರಿಂದ ಬೆಳ್ಳಿ ಕಿರೀಟ, ಚಿನ್ನದ ಕಿರೀಟ, ವಜ್ರದ ಕಿರೀಟಗಳು ಈಗಿನ ಫ್ಯಾಶನ್ ಆಗಿದೆ.

ಬಿರುದುಗಳನ್ನು ಬಿದರಿನಂತೆ ಧಾರಾಳವಾಗಿ ಹಂಚಿದ್ದರಿಂದಾಗಿ ಸಿನಿರಂಗದಲ್ಲಿ ಬಿರುದಾವಳಿಗಳು ಬಾವಲಿಯಂತೆ ಕಂಗೊಳಿಸುತ್ತಿವೆ.

ವಾರ್ತಾ ಇಲಾಖೆ ಟಿ.ವಿ. ಧಾರಾವಾಹಿಗಳಿಗೂ ಪ್ರಶಸ್ತಿ ನೀಡುವ ಪರಿಪಾಠವನ್ನು ದಿಢೀರ್‍ ಆರಂಭಿಸಿ ನೀತಿ ನಿಯಮಾವಳಿಗೆ ಎಳ್ಳುನೀರು ಬಿಟ್ಟದ್ದು ಭಾರೀ ಸುದ್ದಿಯಾಗಿ ಕಾಂಟ್ರವರ್ಸಿ ಭುಗಿಲೆದ್ದು ‘ಮಾಯಾಮೃಗದ ಟಿ.ಎನ್. ಸೀತಾರಾಮ್ ಸರಕಾರಿ ಪ್ರಶಸ್ತಿ ವಾಪಸು ಮಾಡುವೆ ಎಂದು ಹೇಳಿದ್ದೇ ‘ಒಂದು ಈವೆಂಟ್ – ಕಲಿಯುಗದ ಮಹಾ ಪವಾಡ’ ಎಂದು ಭಾವಿಸಿದ ರಂಗಭೂಮಿ ನಾಯಕರು ವಾಪಸ್ಸು ಮಾಡಿದ್ದಕ್ಕೆ ಸೀತಾರಾಮ್‌ಗೊಂದು ಪ್ರಶಸ್ತಿ ನೀಡಿ ಬಂದರೆ ಸರಕಾರಿ ಅವಾರ್ಡ್ ವಾಪಸ್ಸು ಮಾಡಿದರೆ ಜನಮನ್ನಣೆ ಪ್ರಶಸ್ತಿ ಎಂದು ಅದಕ್ಕೂ ಒಂದು ಭಾರೀ ಮೊತ್ತದ ಚೆಕ್ ನೀಡಿ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ಈ ಮಹಾನ್ ತಲ್ಲಣದ ಬಿಸಿಗೆ ಬೆಚ್ಚಿದ ಸರಕಾರ ಟೀವಿ ಅವಾರ್ಡ್ ನೀಡಬಾರದೆಂಬ ಸುದ್ದಿಯೂ ಹೊರಬಿತ್ತು. ‘ಕೊಟ್ಟೋನು ಕೋಡಂಗಿ ಇಸ್ಕೊಂಡೋನು ಈರಭದ್ರ’ನೆಂದಾಗಲಿ ಎಂದು ಪ್ರಶಸ್ತಿಗೆ ಕೈಚಾಚಿ ಕುಳಿತಿದ್ದ ‘ಸಾಧನೆ’ಯ ಬಿ.ಸುರೇಶ್ ಆಗಲೂ ಮೌನಿ-ಈಗಲೂ ಮೌನಿ.

ಅನಂತರ ಸಿನಿ ಪ್ರಶಸ್ತಿಗಳತ್ತ ನಿಧಾನವಾಗಿ ಅಪಸ್ವರವೆದ್ದುವು.

ಪ್ರಶಸ್ತಿ ಸಮಿತಿ ಅಧ್ಯಕ್ಷರಾದ ಎಂ.ಎಸ್. ಸತ್ಯು ತಮ್ಮ ಸಮಿತಿ ತೀರ್ಮಾನ ಪ್ರಕಟಿಸಿದ ನಂತರ ಕಾಂಟ್ರವರ್ಸಿಗೆ ಸಿಲುಕಿ ನಲುಗಿದರು. ಹಾಗೆ ನೋಡಿದರೆ ಸತ್ಯು ಒಂದು ರೀತಿ ಕಾಂಟ್ರವರ್ಸಿ ಪ್ರಿಯ. ತುಂಬ ಸರಳವಾದ ಮಾಸ್ತಿ ಕತೆಗಳನ್ನೂ ಕಾಂಟ್ರವರ್ಸಿ ಮಾಡಿರುವ ಕಲೆ ಅವರಿಗೆ ಕರಗತ.

ಅದರಿಂದಲೇ ಅವರು ಬೇಕೆಂದೇ ಹಲವು ‘ಬೋಲ್ಡ್ ಸ್ಟೆಪ್’ ಮುಂದಿಟ್ಟು ಇಕ್ಕಟ್ಟಿಗೆ ಸಿಲುಕಿದರು. ಕಲಾತ್ಮಕ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಏಕೆ? ಎಂದು ಮೇನ್ ಸ್ಟ್ರೀಂ ಫಿಲಂಗಳಿಗೂ ತಕ್ಕೋ ರಾಜ ಎಂದು ಪ್ರಶಸ್ತಿ ನೀಡಿದಾಗ ಬಂಡಾಯದ ಬಾವುಟವೆತ್ತಿದವರು ಬಹುಮಂದಿ. ಅದರಲ್ಲಿ ಅಗ್ರಗಣ್ಯರೆಂದು ಮಂಚೂಣಿಗೆ ನಿಂತವರು ನಾಗತಿಹಳ್ಳಿ ಚಂದ್ರಶೇಖರ್‍. ಈ ಬಾರಿ ಅವರ ‘ನನ್ನ ಪ್ರೀತಿಯ ಹುಡುಗಿ’ ಚಿತ್ರವೂ ಪ್ರಶಸ್ತಿಗೆ ಹೋಗಿತ್ತು. ಅವರ ‘ಕಾರ್‍ ಕಾರ್‍ ಕಾರ್‍ ಎಲ್ನೋಡಿ ಕಾರ್‍’ ಹಾಡಿಗೂ ಪ್ರಶಸ್ತಿ ಬರದಿದ್ದಾಗ ಕೆಂಡಮಂಡಲರಾದ ನಾಗತಿಹಳ್ಳಿ ಬುಸುಗುಡುವುದನ್ನು ಬದಿಗಿಟ್ಟು ತಮ್ಮ ಖಾರವನ್ನು ಜಾಹೀರಾತಿನ ಮೂಲಕ ಕಕ್ಕಿಯೆ ಬಿಟ್ಟರು. ಹಾಗೆ ಪ್ರತಿಭಟಿಸಲು ಸತ್ಯು ‘ನನ್ನ ಪ್ರೀತಿಯ ಹುಡುಗಿ’ ಕೆಟ್ಟ ಚಿತ್ರವೆಂದು ಎಲ್ಲೋ ಹೇಳಿದ ಮಾತು ಅವರ ಕಿವಿಗೆ ಬಿದ್ದಿದ್ದದ್ದು ಕಾರಣ ಎಂದು ಉದಯ ಟೀವಿಯ ‘ನಾಗತಿಹಳ್ಳಿ ಸತ್ಯು’ ಮುಖಾಮುಖಿ ಚರ್ಚೆ ಸ್ಪಷ್ಟಪಡಿಸಿತು.

ಅಂದು ಆ ಕಾರ್ಯಕ್ರಮದಲ್ಲಿ ಹಾಜರಿದ್ದ ಫಿಲಂ ಚೇಂಬರ್‍ ಅಧ್ಯಕ್ಷ ಕೆ.ಸಿ.ಎನ್. ಚಂದ್ರು ನಿಷ್ಪಕ್ಷಪಾತವಾಗಿ ಒಂದು ಗಟ್ಟಿ ನಿಲುವು ತೆಗೆದುಕೊಳ್ಳಲು ಅಸಮರ್ಥರೆನಿಸಿದ್ದು ಅವರ ಮಾತುಗಳಲ್ಲೇ ಸ್ಪಷ್ಟವಾಗಿತ್ತು.

‘ಅಂದರಿಕಿ ಮಂಚಿವಾಡು ಅನಂತಯ್ಯ’ ಎಂಬಂತೆ ಅಡ್ಡಗೋಡೆಯ ಮೇಲೆ ದೀಪವಿಡುವ ಅವರ ಆನೆ ಪಟಾಕಿ ‘ಠುಸ್’ ಎಂದಿತ್ತು.

ಅಂದಿನ ಆ ಚರ್ಚೆ ಘನತೆ ಗಾಂಭೀರ್ಯ ಕಳೆದುಕೊಂಡು ಶಾಲಾ ಮಕ್ಕಳ ಜಗಳದಂತೆ ಕಂಡಿತು. ಮಹಾಲಕ್ಷ್ಮಿ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ ನೀಡಿದ್ದು, ಮಕ್ಕಳ ಚಿತ್ರಕ್ಕೆ ಪ್ರಶಸ್ತಿ ನೀಡದೆ ಹೋದದ್ದು, ‘ಡಗಾರ್‍’ ಎಂದು ಹೆಣ್ಣನ್ನು ಕೀಳಾಗಿ ಕಂಡು ಅಸಂಬದ್ಧ ಕತೆ ನೇಯ್ದ ರಾಜೇಂದ್ರಸಿಂಗ್ ಬಾಬು ಅವರ ‘ಕುರಿಗಳು ಸಾರ್‍ ಕುರಿಗಳು’ಗೆ ಪ್ರಶಸ್ತಿ ನೀಡಿದ್ದು ಮತದಾನದ ತಾರಾನ ಕೈಬಿಟ್ಟು ಅನೂಗೆ ಪ್ರಶಸ್ತಿ ನೀಡಿದ್ದು ನಾಗತಿಹಳ್ಳಿ ಕಣ್ಣು ಮತ್ತಷ್ಟು ಕೆಂಪಾಗಲು ಕಾರಣವಾಗಿ ಈ ವರ್ಷದ ಸತ್ಯು ನಿರ್ಮಿತ, ಸರಕಾರಿ ಪ್ರಶಸ್ತಿ ವಂಚಿತ ಎಂಬ ಹೆಗ್ಗಳಿಕೆಗೆ ಪಾತ್ರರಾದ, ಆದರೆ ಜನತೆಯಿಂದ ಪ್ರಶಸ್ತಿಗಳಿಸಿದ ಚಿತ್ರ ‘ನನ್ನ ಪ್ರೀತಿಯ ಹುಡುಗಿ’ ಎಂದು ತಾವೇ ಹೇಳಿಕೊಂಡು ಅತ್ಯುತ್ತಮ ಮನರಂಜನಾತ್ಮಕ ಸದಭಿರುಚಿಯ-ಜನಾದರಣೀಯ ಚಿತ್ರ ಇದು. ‘ಪ್ರಜ್ಞಾವಂತ ಪ್ರೇಕ್ಷಕರು ಮ್ಯಾಚ್ ಫಿಕ್ಸಿಂಗ್ ಇಲ್ಲದೆ ನೀಡಿದ ಪ್ರಾಮಾಣಿಕ ತೀರ್ಪು’ ಎಂದು ನಾಗತಿಹಳ್ಳಿ ತಾವೇ ಹೇಳಿಕೊಂಡದ್ದು ಬುದ್ಧಿಜೀವಿಗಳ ವಲಯದಲ್ಲೂ ಬಿಸಿಬಿಸಿ ಚರ್ಚೆಗೆ ವಸ್ತುವಾಗಿತ್ತು. ಈ ಕಾರಣಕ್ಕೆ ‘ಗರಂ ಹವಾ’ ಸತ್ಯು ಗರಂ ಆಗಿದ್ದರು ಎಂದು ಕಾಣುತ್ತದೆ. ಭುಗಿಲೆದ್ದ ಈ ಪ್ರಸಂಗದ ಚರ್ಚೆಗೆ ದಾರಿಮಾಡಿದ್ದು ಉದಯ ಟೀವಿ.

ಅದು ಹಿಂದಿದ್ದ ಎಸ್.ಎಲ್.ಎನ್. ಶಾಲೆಯ ಕುಸ್ತಿಯ ಅಖಾಡವಾಗಿರಲಿಲ್ಲ.

ಟಫ್ ಫೈಟಿನ ರಣಾಂಗಣವಾಗಿತ್ತು.

ನಾಗತಿಹಳ್ಳಿ ಸತ್ಯು ಕಡೆ ತಿರುಗಿಯೂ ನೋಡದೆ ಬುಸುಗುಡುತ್ತಿದ್ದರು. ಪುಣ್ಯಕ್ಕೆ ಅಂದು ಅವರ ಕೈಲಿ ಕತ್ತಿ ಕಠಾರಿಗಳಿರಲಿಲ್ಲ. ಇದ್ದಿದ್ದಲ್ಲಿ ಯಾರು ಯಾರನ್ನು ಮರ್ಡರ್‍ ಮಾಡುತ್ತಿದ್ದರೋ ನಮ್ಮಪ್ಪನಾಣೆಗೂ ಹೇಳುವುದು ಕಷ್ಟ.

“ನಾವು ಪ್ರಶಸ್ತಿ ನೀಡಿದ್ದು ಸಾಧನೆಗೆ ಹೊರತು-ಪ್ರಯತ್ನಕ್ಕಲ್ಲ. ಅತ್ಯುತ್ತಮ ನಟ ಪ್ರಶಸ್ತಿ ಬೆಸ್ಟ್ ಫರ್‌ಫಾರ್ಮರ್‌ಗೆ ನೀಡಿ ಟ್ರೆಡೀಷನ್ ಬ್ರೇಕ್ ಮಾಡಿದೆವು. ಮಕ್ಕಳ ಚಿತ್ರ ಯಾರಿಗಾಗಿ ಮಾಡಿದ್ದಾರೆ ಎಂಬುದೂ ಸ್ಪಷ್ಟವಿಲ್ಲ. ಆದ್ದರಿಂದ ಮಕ್ಕಳ ಚಿತ್ರಕ್ಕೆ ನೀಡಲಿಲ್ಲ. ಮತದಾನ ರಾಜಕೀಯ ಚಿತ್ರಕ್ಕೆ ನೀಡಲಿಲ್ಲ. ಮತದಾನ ರಾಜಕೀಯ ಚಿತ್ರವಾಗೇ ಇಲ್ಲ. ಸಿಲ್ಲಿ ಕಾಮೆಡಿ ಮೇನ್‌ಸ್ಟ್ರೀಮ್‌ನಲ್ಲೂ ಯತ್ನಿಸಿದ್ದಾರೆ ಅದಕ್ಕೆ ೩ನೇ ಪ್ರಶಸ್ತಿ ನೀಡಿದೆವು. ಅದು ಪ್ರಜಾಪ್ರಭುತ್ವದ ರೀತಿ ಎಲ್ಲ ನಿರ್ಧರಿಸಿದ ತೀರ್ಮಾನ ಎಂದಿದ್ದಲ್ಲದೆ ಚಿತ್ರ ನೋಡುವುದೇ ಒಂದು ಹಿಂಸೆಯಾಯಿತು ತೀರ್ಪುಗಾರರಿಗೆ ಎಂದು ಖಾರ ಕಕ್ಕಿದ ಸತ್ಯು-ನಾಗತಿಹಳ್ಳಿ ಮಾತಿನ ಧಾಟಿಗೆ ರೋಸಿ “ನಾವೇನು ನಿಮ್ಮ ಜೀತದ ಆಳಲ್ಲ” ಎಂದರು.

“ನಾವು ಭಿಕ್ಷಾಟನೆಗೆ ಕೈ ಚಾಚಿದ ಭಿಕ್ಷುಕರಲ್ಲ” ಎಂದರು ನಾಗತಿಹಳ್ಳಿ.

ಚರ್ಚೆಯಲ್ಲಿ ಜೀತದಾಳುಗಳು ಭಿಕ್ಷುಕರು ಹಾಜರಾದದ್ದು ವ್ಯಕ್ತಿಗಳ ಘನತೆ ಕುಗ್ಗಿಸಿ ಬೀದಿ ಜಗಳಕ್ಕೆ ಕತ್ತಿನ ಪಟ್ಟಿ ಹಿಡಿದು ನಿಂತಂತಿತ್ತು.

ನಲ್ಲಿ ನೀರಿನ ಜಗಳದಂತೆ ನನ್ನ ‘ಗಳಿಗೆ’ ನೋಡಿದೀರಾ ಅದು ನೋಡಿದೀರಾ ಇದು ನೋಡಿದಿರಾ ಎಂದು ಮಾತುಗಳು ಏಕವಚನ ತಲುಪುವ ಮುನ್ಸೂಚನೆಗಳು ಕಂಡವು.

ಸದ್ಯ ಮುಗಿದರೆ ಸಾಕೆ ಎಂಬ ಘಟ್ಟ ತಲುಪಿತು ಜಗಳ. ಒಂದು ಉತ್ತರ ಧ್ರುವ-ಇನ್ನೊಂದು ದಕ್ಷಿಣ ಧ್ರುವ.

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಎಣ್ಣೆ ಸೀಗೆಕಾಯಿ ಕಾರ್ಯಕ್ರಮ ಮುಗಿಯಿತು.

ಈ ಅವಾರ್ಡ್ ಕಿತ್ತಾಟ ಚುನಾವಣೆ ಸಮಯದ ವಾರ್ಡ್‌ಗಳ ಕಿತ್ತಾಟ ನೆನಪಿಸಿತು.

ಟ.ವಿ. ಆಫ್ ಮಾಡಿದಾಗ ಭಾರೀ ಮಳೆ ಬಂದು ನಿಂತಂತಾಗಿತ್ತು.

ನಿನ್ನೆ ಏಕೋ ರಿಮೋಟ್ ಒತ್ತುತ್ತಿದ್ದಾಗ ‘ಸುಪ್ರಭಾತ’ದಲ್ಲಿ ಗರಂ ಆಗಿದ್ದ ನಾಗತಿಹಳ್ಳಿ ಚಹರೆ ಕಾಣಿಸಿತು.

ಆ ಕೋಪಕ್ಕೆ ಕಾರಣ ಅವರೆದುರು ಕುಳಿತಿದ್ದು ‘ಯಜಮಾನ’ ನಿರ್ಮಾಪಕ ರೆಹಮಾನ್, ಕತ್ತಿನಪಟ್ಟಿ ಹಿಡಿದು ಕಿತ್ತಾಡದಿರಲೆಂದು ಮಧ್ಯೆ ಕುಳಿತಿದ್ದವರು ನಂಜುಂಡೇಗೌಡ.

ರೀಮೇಕ್-ಸ್ವಮೇಕ್ ಇಲ್ಲಿನ ಜಗಳದ ಕಾರಣವಾಗಿತ್ತು.

ಈಗ ರೆಹಮಾನ್ ಭರ್ಜರಿ ಮಾತಾಡುವುದು ಕಲಿತಿದ್ದಾರೆ ಎಂದು ‘ಹುಚ್ಚ’ ಕ್ಯಾಸೆಟ್ ರಿಲೀಸ್‌ನಂದೇ ನಾನು ಮಾತಾಡುತ್ತಾ ಹೇಳಿದ್ದೆ.

ಮಾತು ಎತ್ತೆತ್ತಲೋ ಜಾರುತ್ತೆ. ಸರಕಾರಿ ಪ್ರಶಸ್ತಿಗಳು ಅಲ್ಲಾಗುವ ಅನ್ಯಾಯ, ಸಾ.ರಾ.ಗೋವಿಂದುವಿನಂತಹ ಕನ್ನಡ ಹೋರಾಟಗಾರ ಹಣ ದೋಚುವ ಹಂಬಲದಿಂದ ರೀಮೇಕ್ ಮಾಡುತ್ತಿರುವ ವಿಷಯ ಗುಟುರು ಹಾಕಿದರು ನಾಗತಿಹಳ್ಳಿ.

ಕನ್ನಡ ಕತೆಗಾರರನ್ನು ನಂಬಿ ತಾವು ಅಡ್ರೆಸ್ಸಿಗಿಲ್ಲದೆ ಕೇರ್‍ ಆಫ್ ಫುಟ್‌ಪಾತ್ ಸ್ಥಿತಿ ಬಂದುದನ್ನು ನೆನಪಿಸಿದರು ರೆಹಮಾನ್.

ಜನ ಯಾವ ಚಿತ್ರ ನೋಡ್ತಾರೋ ಅಂಥ ಚಿತ್ರ ತೆಗೀತೀವಿ. ಅವರು ನೋಡಲಿಲ್ಲ ಅಂದ್ರೆ ಸ್ವಮೇಕೇ ತೆಗೀತಾರೆ ಎಲ್ಲ. ನಂಗೆ ರೀಮೇಕೇ ಆಗಬೇಕು ಅಂತೇನಿಲ್ಲ. ಯಾವ ಯಾವ ಡೈರಕ್ಟರ್‍ ಹತ್ರ ಒಳ್ಳೆ ಕತೆ ಇದೇ ಹೇಳಿ. ನಮ್ಮ ಸರಕಾರ ಇನ್‌ಫ್ರಾಸ್ಟ್ರಕ್ಚರ್‍ ಬಗ್ಗೆ ಯೋಚನೆ ಮಾಡಿಲ್ಲ. ಕಂಠೀರವ ಸ್ಟುಡಿಯೋದಲ್ಲಿ ಒಳ್ಳೆ ಫೆಸಿಲಿಟೀಸ್ ಕೊಡಲ್ಲ ಎಂದು ಅಬ್ಬರಿಸಿದರು ರೆಹಮಾನ್.

ಇದೂ ಒಂದು ರೀತಿ ‘ಭಾರೀ ಟಗ್ ಆಫ್ ವಾರ್‍’ನ ಹಗ್ಗದ ಜಗ್ಗಾಟವಾಗಿತ್ತು.

‘ವಾರ್ಡ್ ಅವಾರ್ಡ್ ಜಗಳ’ ಹೀಗೆ ಬೃಹದಾಕಾರವಾಗುತ್ತ ಹೋದರೆ ಅವಾರ್ಡ್ ಬಂತು ಎಂದರೆ ತಲೆ ತಗ್ಗಿಸಬೇಕಾದ ದಿನ ಬಂದೀತು.

ಇದನ್ನು ನೋಡಿಯೇ ನನ್ನ ಗೆಳೆಯ ಅಂದದ್ದು ‘ಅವಾರ್ಡ್‌ನಲ್ಲಿ ಮೂರು ವರ್ಗ ಮಾಡಿ ಬೆಸ್ಟ್ ಫಿಲಂಸ್, ವರ್ಸ್ಟ್ ಫಿಲಂಸ್, ಆರ್ಟ್ ಫಿಲಂಸ್, ೩ ವಿಭಾಗ ಮಾಡಿ ಪೆಪ್ಪರ್‌ಮೆಂಟಿನಂತೆ ಅವಾರ್ಡ್‌ಗಳನ್ನು ಹಂಚಿಬಿಡುವುದು ವಾಸಿ ಎಂದು.

ಏನೋ! ಹಾಗೆ ಮಾಡುವುದೇ ವಾಸಿಯೇನೋ ಎನಿಸುತ್ತದೆ ಹಲವೊಮ್ಮೆ.
*****
(೧೫-೬-೨೦೦೧)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.