ಮಾತಿನ ಮುಸುಕು

ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು
ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು

ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು
ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು

ಕಣ್ಣ ದೃಷ್ಟಿಯ ಸಿಂಹ ಕಾವಲ ನಾಯಿಗೆ ಹೆದರದೆ ಮತ್ತೆ ರಕ್ತ ಹೀರಿತು
ನದಿಯ ನೀರು ಹರಿದು ದಡದ ಹುಲ್ಲು ಮತ್ತೆ ಚಿಗುರಿತು

ನಂದನದಲ್ಲಿ ಬೆಳಗಿನ ತಂಗಾಳಿ ಎಲ್ಲ ಕಡೆಗೆ
ಗುಲಾಬಿ ಮಲ್ಲಿಗೆ ಮಂದಾರಗಳ ಮೇಲೆ ಮತ್ತೆ ಬೀಸಿತು

ಚಿಕ್ಕ ತಪ್ಪಿಗಾಗಿ ಪ್ರೇಮ ನನ್ನನ್ನು ಹರಾಜು ಹಾಕಿತು
ಪ್ರೇಮದ ಹೃದಯ ಹೊತ್ತಿ ಉರಿದು ಮತ್ತೆ ನನ್ನನ್ನ ಕೊಂಡಿತು

ಮೊದಲು ನನ್ನ ಹೊರದಬ್ಬಿಯಾಗಿತ್ತು, ಉಕ್ಕಿ ಕರುಣೆ
ಮತ್ತೆ ಕರೆದೂ ಆಯ್ತು, ಪ್ರೀತಿಗೀಗ ದಯಾರ್ದ್ರ ನೋಟ

ಪ್ರೇಮಿಯ ಜತೆ ಮತ್ತೆ ನನ್ನ ಮಿಲನ, ಆಗದವರಿಗೆ ಅಸೂಯೆ
ಮತ್ತೆ ಕತ್ತಿ ಮಸೆತ, ಶತ್ರುತ್ವದ ಛಾಯೆ

ಅದೃಷ್ಟದ ಮೋಸದಾಟದಿಂದ ನನ್ನ ಹೃದಯ ಪರಾರಿ
ನನ್ನ ಹೃದಯಕ್ಕೀಗ ಮತ್ತೆ ಸಿಕ್ಕಿತು ಪ್ರೀತಿಯ ದಾರಿ

ಕಥೆ ಕಟ್ಟುವ ಮಂದಿಯ ಕಣ್ಣ ಹುಬ್ಬು ಮತ್ತೆ ಕೊಂಕು
ಮತ್ತೆ ನನಗೆ ಪ್ರಣಯದಾಹ್ವಾನ, ಹೃದಯವೀಗ ಸೃಷ್ಟಿಯಿಂದಲೆ ಪಲಾಯನ

ಜೀವಿಗಳು ಊರುಗೋಲಂತೆ, ದೃಷ್ಟಿ ಬಂದರೆ ಮತ್ತೇಕೆ ಕೋಲು?
ಜೀವಿಗಳು ಹಾಲಂತೆ, ಅನ್ನ ಅರಗಿದ ಮೇಲೆ ಮತ್ತೇಕೆ ಹಾಲು?

ನನ್ನ ಚೈತನ್ಯವೀಗ ಗರಿಗೆದರಿದ ಹದ್ದು, ದೊರೆಯ ದಮಡೀನಾದ ಕೇಳು
ಶ್, ಸಾಕು, ಶಬ್ದ ನಿನ್ನ ಸುತ್ತ ಮಾತಿನ ಮುಸುಕು ನೇಯುತ್ತಿದೆ
*****