ಪುಸ್ತಕ ವಿ/ಎಸ್ ಕ್ಯಾಸೆಟ್ ಸಂಸ್ಕೃತಿ

ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು.

ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ ಚಿತ್ರಗಳು ಬಿಸಿಬಿಸಿ ಒಗ್ಗರಣೆಯೊಡನೆ ಜೆರಾಕ್ಸ್ ಕಾಪಿಯಾಗಿ ರಾರಾಜಿಸಿದುವು.

ಆ ಭಾಷೆಯ ಸಂಸ್ಕೃತಿ, ಆಚಾರ, ವಿಚಾರ, ಹಾಸ್ಯ ಅಪಹಾಸ್ಯ ಇಲ್ಲಿಯ ನೆಲಕ್ಕೆ ಒಗ್ಗುತ್ತದೆಯೋ, ಇಲ್ಲವೋ ಎಂಬುದನ್ನೂ ತರ್ಕಿಸದೆ ಮಕ್ಕಿಕಾಮಕ್ಕಿ ಭಟ್ಟಿ ಇಳಿಸಹೊರಟರು.

ಹೀಗೆ ಕನ್ನಡೀಕರಿಸುವ ಸಂದರ್ಭದಲ್ಲಿ ಹಲವು ಒಳ್ಳೆ ಪ್ರಯತ್ನಗಳೂ ನಡದಿವೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಹೆಚ್ಚುಪಾಲು ಗಾಂಧೀನಗರಿಗರು ಕೈ ಎತ್ತಿದ್ದು ರೀಮೇಕಿಗೆ.
ಆದರೆ ಇತ್ತೀಚೆಗೆ ಎಲ್ಲರ ಗಮನ ಕನ್ನಡ ಕೃತಿಗಳತ್ತ ಹೊರಳುವ ಸೂಚನೆಗಳು ಕಂಡಿವೆ ಎಂಬುದು ಸಂತಸದ ಅಂಶ.

ಕವಿತಾ ಲಂಕೇಶ್ ‘ದೇವೀರಿ’ ತೆಗೆದು ಗೆದ್ದರು. ಎಸ್.ಎಲ್. ಭೈರಪ್ಪನವರ ‘ಮತದಾನ’ ಕಾದಂಬರಿ ಟಿ.ಎನ್. ಸೀತಾರಂ ಅವರಿಂದ ತೆರೆಗೆ ಬಂತು. ಬೋಳುವಾರು ಅವರ ‘ಮತ್ತಚ್ಚೇರಾ’ ಕಥೆ ಶೇಷಾದ್ರಿ ನಿರ್ದೇಶನದಲ್ಲಿ ‘ಮುನ್ನುಡಿ’ ಚಲನಚಿತ್ರವಾಯಿತು.

ವ್ಯಾಪಾರೀ ಚಿತ್ರ ತಯಾರಿಕೆಯಲ್ಲೇ ಖುಶಿ ಕಂಡುಕೊಂಡಿದ್ದ ಯೋಗೀಶ್ವರ್‍ ‘ದ್ಯಾವನೂರ’ರ ಕಥೆ – ಆಧಾರದಿಂದ ‘ದ್ಯಾವನೂರ’ ಆರಂಭಿಸಲು ಶಿವರುದ್ರಯ್ಯನವರನ್ನು ನಿರ್ದೇಶನಕ್ಕೆ ಕರೆತಂದರು. ಇದೀಗ ಟಿ.ಎಸ್. ನಾಗಾಭರಣ ಅವರ ನಿರ್ದೇಶನದಲ್ಲಿ ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ತಯಾರಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ.

ಈ ಸುದ್ದಿ ಹೊರಗೆಡಹುವ ಮೊದಲ ಪ್ರಸ್‌ಮೀಟ್ನಲ್ಲಿ ನಿರ್ಮಾಪಕ ಕುಮಾರಸ್ವಾಮಿ ೪೮೮ ಪುಟದ ೧೪೦ ರೂ. ಬೆಲೆಬಳುವ ಕೃತಿಯನ್ನು ಎಲ್ಲ ಪತ್ರಕರ್ತರಿಗೂ ನೀಡಿ ‘ಚಿತ್ರ ಆರಂಭಿಸುವ ಮುನ್ನ ನಿಮ್ಮ ಸಲಹೆ ಸೂಚನೆಗಳೂ ಬರಲಿ’ ಎಂಬ ಮಾತು ಕೇಳಿ ಇತರೆ ನಿರ್ಮಾಪಕ, ನಿರ್ದೇಶಕರಿಗೂ ಮಾದರಿ ಆದರು. ಕನ್ನಡ ಚಿತ್ರರಂಗದಲ್ಲಿ ಪುಸ್ತಕ ಸಂಸ್ಕೃತಿ ಮತ್ತೆ ತಲೆ ಎತ್ತುವುದು ಈ ಮೂಲಕ ಸಾಧ್ಯವಾದಲ್ಲಿ ಅದೊಂದು ದೊಡ್ಡ ಸಾಧನೆಯೇ.

ಆಗ ನನಗನ್ನಿಸಿತು – ಕತೆ, ಕಾದಂಬರಿ ಆಧಾರಿತ ಚಿತ್ರ ಮಾಡುವವರು ಪುಸ್ತಕ ನೀಡುವಂತೆ ‘ರಿಮೇಕ್’ ಚಿತ್ರ ಮಾಡುವವರು ಮುಹೂರ್ತದಂದು – ಏನೂ ಕಥೇ ಹೇಳದೆ ಮೂಲ ಚಿತ್ರದ ಒಂದೊಂದು ಕ್ಯಾಸೆಟ್ ನಿಡಿದಲ್ಲಿ ಅದು ಇನ್ನೊಂದು ರೀತಿ ಬೆಳವಣಿಗೆಯಾದೀತು. ಹಾಗೆಂದುಕೊಂಡಾಗ ಪ್ರಶ್ನೋತ್ತರದ ಬಾಲ ಹೀಗೆ ಬೆಳೆಯಿತು.

‘ಸರಿ, ತೆಲುಗು-ತಮಿಳು ಮಲೆಯಾಳಂ ಭಾಷೆಯ ರೀಮೇಕ್ ಆದರೆ ಕ್ಯಾಸೆಟ್ ಕೊಡಬಹುದು. ಆದರೆ ಎರಡು-ಮೂರು ಚಿತ್ರಗಳ ಹಲವಾರು ದೃಶ್ಯಗಳ ಜೋಡಣೆಯ ರೀಮೇಕ್ ಚಿತ್ರವಾದರೆ?”

‘ಆಗ ಎರಡು ಮೂರು ಚಿತ್ರಗಳ ಕ್ಯಾಸೆಟ್ ಕೊಡಬೇಕಾಗುತ್ತದಲ್ಲ. ಅದು ತಾಪತ್ರಯ’.

‘ಒರಿಜಿನಲ್ ಕಥೆ ಎಂದು ತುತ್ತೂರಿ ಊದಿ ರಿಮೇಕ್ ಮಾಡುವವರಾದರೆ’

‘ಅದಕ್ಕೆ ಕಥೆ ಹೇಳಿದರೆ ಸುಳುವು ಹಿಡಿದಾರೆಂದೇ ಅನೇಕರ ಕಥೆಯನ್ನು ‘ಸಸ್ಪೆನ್ಸ್’ ಎಂದು ತೇಲಿಸಿ ಬಿಡುತ್ತಾರೆ’

‘ಇದು ಇಂಥವರ ಕಾದಂಬರಿ ಆಧಾರಿತ ಕೃತಿ ಎಂದು ಚಿತ್ರ ತೆಗೆಯಲಿಲ್ಲವೆ ಹಿಂದೆ. ಅದಕ್ಕೇನನ್ನೋಣ’

‘ಅದು ಇನ್ನೊಂದು ರೀತಿ ಜಾಣತನ. ಇಂಗ್ಲೀಷ್ ಚಿತ್ರದ ಕಥೆ ಲೇಖಕಿಗೆ ಹೇಳಿ ಬರೆಸಿ ಅಚ್ಚುಹಾಕಿಸಿದ ನಂತರ ಅನೌನ್ಸ್ ಮಾಡುವವರಿಗೇನು ಮಾಡುವುದು’

‘ವಾಕಿಂಗ್ ಇನ್ನ್ ದಿ ಕ್ಲೌಡ್ಸ್ ಮುಂಗಾರಿನ ಮಿಂಚು ಕುರಿತು ಹೇಳುತ್ತಿದ್ದೀರಾ?’

‘ಹಾಗೂ ಎಷ್ಟೋ ಆಗಿದೆ. ಹಿಂದೆ ಕಾನಕಾನಹಳ್ಳಿ ಗೋಪಿ ಕಥೆಯೊಂದನ್ನು ಹೇಳಿ ಲೇಖಕಿ ಎಂ.ಕೆ.ಇಂದಿರಾ ಕೈಲಿ ಬರೆಸಲಿಲ್ಲವೆ?’

‘ಅಷ್ಟು ದೂರ ಏಕೆ ಹೋಗುತ್ತೀರಿ’.

‘ನಮ್ಮ ಕಣ್ಣೆದುರಿಗೇ ‘ಹಾಲು-ಸಕ್ಕರೆ’ ಒರಿಜಿನಲ್ ಕಥೆ ಎಂದು ಹೇಳಿರುವ ಉದಾಹರಣೆ ಇಲ್ಲವೆ’

‘ಹೌದ್ಹೌದು… ಧನರಾಜ್ ‘ಕಾದಲಕ್ಕು ಮರ್‍ಯಾದೆ’ ತಮಿಳು ಚಿತ್ರದ ರೈಟ್ಸ್ ಕೊಂಡಿಟ್ಟಿದ್ದರು. ಆ ಹಕ್ಕು ಬಿಟ್ಟಿಕೊಡುವಂತೆ ಯೋಗೀಶ್ ಹುಣಸೂರು ಕೇಳಿದಂತೆ. ಧನರಾಜ್ ಒಪ್ಪಲಿಲ್ಲ. ಫಾಜಿಲ್ ಮೊರೆ ಹೊಕ್ಕರಂತೆ. ಅವರೂ ತಾರಮ್ಮಯ್ಯ ಎಂದುಬಿಟ್ಟರಂತೆ. ಆಗ ಧಿಡೀರ್‍ ಜಾಗೃತಗೊಂಡ ಮನಸ್ಸು ಅದೇ ಕಥೆಯ ಎಳೆಯ ಮೇಲೆ ಹೊಸ ಕತೆ ನೇಯ್ದು ಕ್ಲೈಮಾಕ್ಸ್‌ಗೆ ಮತ್ತೊಂದು ಚಿತ್ರದ ದೃಶ್ಯ ಕೂಡಿಸಿ ತೆರೆಗೆ ಬಿಟ್ಟಾಗ ವಾದ, ವಿವಾದ, ಕೋರ್ಟು ಕೇಸು ಹೀಗೆ ಗಲಿಬಿಲಿಗಳು ಗಾಂಧೀನಗರದಲ್ಲಿ ಆರಂಭವಾಯಿತು.

ಚರ್ಚೆ, ರಾಜಿ ಕಾರ್ಯಕ್ರಮ, ಪಂಚಾಯಿತಿ ಕಟ್ಟೆಯ ದೃಶ್ಯಗಳು ಮರುಕಳಿಸಿದುವು. ಈಗ ಯಾರ್‍ಯಾರು ಯಾವ ಯಾವ ಭಾಷೆಯ ಚಿತ್ರಗಳನ್ನು ರೀಮೇಕಿಗೆ ಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅವರಿಗೆಲ್ಲ ಈಗ ‘ಗಾಬರಿ’ ಆರಂಭವಾಗಿದೆ. ಎಲ್ಲ ಆ ಕಥೆಯ ಎಳೆ ಹಿಡಿದು ಸರಸರ ಸುತ್ತವವರು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಾರೋ ಎಂದು. ಅದರಿಂದಾಗಿಯೆ ಹಲವರು ಈಗಾಗಲೇ ತಾವು ರಿಮೆಕಿಗಾಗಿ ಕೊಂಡ ಚಿತ್ರಗಳ ರೈಟ್ಸನ್ನು ಮಾರುತ್ತಿದ್ದಾರೆ ಎಂಬ ಬಿಸಿಬಿಸಿ ಸುದ್ದಿಯೂ ಬಂದಿದೆ.

ರೀಮೇಕ್ ಚಿತ್ರಗಳಿಗೆ ಈಗ ‘ಟ್ಯಾಕ್ಸ್’ ವಸೂಲು ಮಾಡಬೇಕೆಂಬ ಹೊಸ ತಕರಾರೊಂದು ಆರಂಭವಾಗಿ ಎಡವಟ್ಟಾಗಿ ಕುಳಿತಿದೆ ‘ಯಜಮಾನ’ ಚಿತ್ರದ ಯಶಸ್ಸಿನಿಂದ ಕಣ್ಣು ಕೆಂಪಾದವರ ಹುನ್ನಾರವಿದು ಎಂಬುದು ಹಲವರ ಅಂಬೋಣ.

ಅದರಿಂದಲೇ ಈಗ ಬಹುಮಂದಿ ಕತೆ, ಕಾದಂಬರಿಗಳತ್ತ ವಾಲುತ್ತಿದ್ದಾರೆ ಎಂಬ ಮಾತಿದೆ. ಶಿವರಾಮ ಕಾರಂತರ, ಎಸ್.ಎಲ್. ಭೈರಪ್ಪನವರ ಕಾದಂಬರಿಗಳು ಚಿತ್ರವಾಗುವ ಮಾತು ಜೋರಿದೆ. ತೇಜಸ್ವಿಯವರ ಜುಗಾರಿ ಕ್ರಾಸ್ ಚಿತ್ರವಾಗಲಿದೆ. ಇಂಥವೆಲ್ಲ ಆದಾಗ ಅವರಿಗೆ ಪ್ರಶಸ್ತಿಯತ್ತ ಕಣ್ಣಿರುವುದೂ ಸಹಜ.

ಕ್ಯಾಸೆಟ್ ಸಂಸ್ಕೃತಿಯ ಮೇಲೆ ಪುಸ್ತಕ ಸಂಸ್ಕೃತಿ ಸವಾರಿ ಮಾಡುವ ದಿನ ಬಂದರೆ ಸಂತೋಷವೇ?

ಬಂದೀತೆ ಅಂಥ ದಿನ.
*****
(೨೭-೦೪-೨೦೦೧)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.