ಒಂದು ಟೋಪಿಯ ಕಥೆ ಮತ್ತು ಸಿನಿಮಾ

ಈ ಬಾರಿ ವಿಜಯದಶಮಿಯಂದು ೧೫-೧೬ ಸಿನಿಮಾಗಳ ಮುಹೂರ್ತ ನಡೆಯಲಿದೆ. ಎಂದರೆ ನೂರಾರು ಕಲಾವಿದರ ಬದುಕಿಗದು ಹೆದ್ದಾರಿ ಎಂಬುದು ಸಂತೋಷ. ಈ ಬಾರಿಯ ಮತ್ತೊಂದು ವಿಶೇಷವೆಂದರೆ ಅನೇಕ ಹೊಸ ಕತೆಗಳು, ಕಲಾವಿದರು ತೆರೆಗೆ ಬರುತ್ತಿದ್ದಾರೆ ಎಂಬುದು. ಅದರಲ್ಲಿ ಬಹಳಷ್ಟು ಕಾಮಿಡಿ ಕಥಾನಕಗಳೂ ಇವೆ ಎಂದು ಕೇಳಿದ್ದೇನೆ. ಅದೂ ಹಿಗ್ಗಿನ ಸುದ್ದಿಯೇ.

ಆದರೆ, ‘ಕುರಿಗಳು ಸಾರ್‍ ಕುರಿಗಳು’ ಚಿತ್ರವನ್ನು ರಾಜೇಂದ್ರಸಿಂಗ್ ಬಾಬು ‘ಸಿಲ್ಲಿ ಕಾಮೆಡಿ’ ಎಂದು ಕರೆದುಕೊಂಡ ನಂತರ ‘ಸಿಲ್ಲಿಯಸ್ಟ್’ ಕಾಮೆಡಿಗಳು ಕನ್ನಡದಲ್ಲಿ ಬರತೊಡಗಿವೆ. ಹೀಗಾಗಿ ಇಟ್ಟಿದ್ದೇ ಹೆಸರು, ಆಡಿದ್ದೇ ನಾಟಕ ಎಂಬಂತಹ ಪ್ರಸಂಗಗಳನ್ನು ಈಗ ಕಣ್ಣಾರೆ ಕಂಡು ಅನುಭವಿಸುತ್ತಿದ್ದೇವೆ. ತಿಳಿಹಾಸ್ಯ, ನವಿರುಹಾಸ್ಯ, ವ್ಯಂಗ್ಯ, ವಿಡಂಬನೆ, ಮೊನಚುಹಾಸ್ಯ, ಸಿಚುಯೇಷನ್ ಕಾಮೆಡಿ ಎಂಬ ನಾನಾ ಪ್ರಕಾರಗಳಿವೆ ಕನ್ನಡದಲ್ಲಿ ಎಂಬುದನ್ನೂ ಮರೆತು ನಗಿಸಲು ನಾನಾ ಸರ್ಕಸ್ ಮಾಡಹೋಗಿ ಹಾಸ್ಯ ಪ್ರಸಂಗಗಳು ಅಪಹಾಸ್ಯದ ಅಪರಾವತಾರವಾಗುತ್ತಿವೆ.

ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಬಿ.ಸಿ.ಪಾಟೀಲ್ ಅವರ ಶಿವಪ್ಪನಾಯಕ. ಆ ಪಾತ್ರಕ್ಕೆ ಅಭಿನಯಿಸಲು ಹೆಚ್ಚು ಅವಕಾಶವಿದೆ. ಆ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡು ಹಲವು ದೃಶ್ಯಗಳಲ್ಲಿ ತುಂಬ ಮಾರ್ಮಿಕವಾಗಿ ಅಭಿನಯಿಸಿ ಸೂಕ್ಷ್ಮಗಳನ್ನು ಬಿಂಬಿಸಬಲ್ಲ ಒಳ್ಳೆ ನಟನೂ ಆಗಬಲ್ಲೆ ಎಂಬುದನ್ನು ತೋರಿದ್ದಾರೆ.

ಆದರೆ ಕತೆಗೆ ಸಂಬಂಧವಿಲ್ಲದ ಒಂದು ಅಸಂಬದ್ಧ ಸನ್ನಿವೇಶ ಸೃಷ್ಟಿಸಿ ಹಾಸ್ಯದ ಸಲುವಾಗಿ ಬ್ಯಾಂಕ್ ಜನಾರ್ಧನ್ ಅವರಿಗೆ ಡಬ್ಬಲ್‌ರೋಲ್ ಕೊಟ್ಟು, ರೇಖಾದಾಸ್ ಹಾಗು ಮತ್ತೊಬ್ಬಳನ್ನು ಜೋಡಿ ಮಾಡಿ ಅದನ್ನೊಂದು ಅಭಾಸದ ಕಂತೆ ಮಾಡಿಬಿಟ್ಟಿದ್ದಾರೆ. ಹೇಗಾದರೂ ಮಾಡಿ ಒಂದೇ ರೀತಿ ಇರುವವರು ಎಂಬ ಭ್ರಮೆ ಮೂಡಿಸಿ ಕಂಡವರ ಹೆಂಡತಿಯೊಂದಿಗೆ ಮಲಗುವ ದೃಶ್ಯಗಳನ್ನು ಚಿತ್ರಿಸಿ ನಗಿಸುವ ಹುಚ್ಚು ಪ್ರಯತ್ನ ಏಕೆ ಎಂಬುದು ಅರ್ಥವಾಗುವುದಿಲ್ಲ. ಅಂಥ ಸಂದರ್ಭದಲ್ಲಿನ ಸಂಭಾಷಣೆಗಳು ಎಷ್ಟು ಕೀಳಾಗಿರಬಹುದು ಎಂದು ಹೇಳಬೇಕಿಲ್ಲ.

ಎನ್.ಎಸ್. ರಾವ್ ಹಾಗೂ ಉಮಾಶ್ರೀ ಜೋಡಿಯಾಗಿದ್ದ ಅನೇಕ ಚಿತ್ರಗಳಲ್ಲಿ ಡಬ್ಬಲ್ ಮೀನಿಂಗ್ ಟ್ರಿಬ್ಬಲ್ ಮೀನಿಂಗ್‌ಗಳು ಅತಿಯಾಗಿ ಸೋರೆಕಾಯಿ ಬದನೆಕಾಯಿಗಳನ್ನು ತಿನ್ನುವುದೂ ಅಸಹ್ಯವೆನ್ನುಂಥ ಪ್ರಸಂಗಗಳು ಬಂದಿದ್ದನ್ನು ಕನ್ನಡಿಗರಿನ್ನೂ ಮರೆತಿಲ್ಲ.

ಈಗ ಮತ್ತೆ ಅಂಥ ರೋಗ ಉಲ್ಬಣಿಸೀತೋ ಏನೋ ಎಂಬಂಥ ದಿನ ಬರತೊಡಗಿದೆ. ಚಿತ್ರವೊಂದು ಎಬಿಸಿ ಸೆಂಟರ್‌ನಲ್ಲಿ ಭರ್ಜರಿಯಾಗಿ ಓಡಬೇಕೆಂದರೆ ಇಂಥ ದೃಶ್ಯಗಳು ಅನಿವಾರ್ಯ ಎನ್ನುತ್ತಾರೆ ಗಾಂಧೀನಗರದ ಪಂಡಿತರು.

ಎಂದರೆ ಗ್ರಾಮೀಣ ಪ್ರದೇಶದ ಮಂದಿ ಅಷ್ಟು ಕೀಳು ಅಭಿರುಚಿಯವರು ಎಂದು ಹೇಳಿದಂತಾಗುತ್ತದೆ. ನೂರು ದಿನ ಓಡಬಹುದು ಎಂದು ನಿರ್ಮಾಪಕ ಕನಸಿದ ಚಿತ್ರ ಮೂರು ದಿನ ಓಡಿಸುವವರು ಅವರೇ, ನೂರು ದಿನ ಓಡಿಸುವವರೂ ಅವರೇ. ಕನ್ನಡ ಚಿತ್ರಗಳ ಅಂತಿಮ ತೀರ್ಪುಗಾರರು ನೋಡುಗರೇ.

ಅಂಥ ಮಂದಿಯನ್ನು ಅಂಡರ್‌ಎಸ್ಟಿಮೇಟ್ ಮಾಡುತ್ತಾ ಕೀಳು ಅಭಿರುಚಿ ಪ್ರಮೋಟ್ ಮಾಡುತ್ತಾ ಹೋಗುವುದು ಯಾರ ತಪ್ಪು ಎಂಬುದನ್ನು ತಾವೇ ಹೇಳಬೇಕು.

ಬೀಚಿ, ಕೊರವಂಜಿ ಶಿವರಾಂ, ಟಿ.ಪಿ.ಕೈಲಾಸಂ, ನಾ ಕಸ್ತೂರಿ, ಪರ್ವತವಾಣಿ, ಅ.ರಾ ಮಿತ್ರ, ಛೂಬಾಣದ ಟಿಎಸ್ಸಾರ್‍ ಹಾಗೂ ಕನ್ನಡದ ಅನೇಕ ಕನ್ನಡ ನಾಟಕಗಳನ್ನು ಒಮ್ಮೆ ತಿರುವಿ ಹಾಕಿದರೂ ಸಾಕು ಹಾಸ್ಯದ ಕಾರಂಜಿ ಬತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ರೀಮೇಕ್ ವೀರರಿಗೆ ಅಂಥ ಕೃತಿಗಳನ್ನು ಓದಲು ಬಿಡುವೆಲ್ಲಿದೆ ಪಾಪ. ಓದಲು ಬಿಡುವಿದಲ್ಲದಿದ್ದರೆ, ಹಾಳಾಗಿ ಹೋಗಲಿ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಕಣ್ತೆರೆದು ನೋಡಿದರೂ ಸಾಕು, ತಮಾಷೆ ಪ್ರಸಂಗಗಳನ್ನು ಹೇರಳವಾಗಿ ಕಣ್ಣಿಗೆ ಬೀಳುತ್ತದೆ. ಅಂಥ ಪ್ರಸಂಗಗಳನ್ನು ಅಳವಡಿಸಿದಾಗ ಪ್ರಸ್ತುತವೆನಿಸೀತು. ಇಲ್ಲವಾದಲ್ಲಿ ಕಾಮೆಡಿ ಎಂಬುದು ಕಪಿಚೇಷ್ಟೆಯಾದೀತು.

ಈ ಮಾತು ಹೇಳುವಾಗ ಮೊನ್ನೆ ತಾನೇ ನಡೆದ ಘಟನೆಯೊಂದು ನೆನಪಾಗುತ್ತಿದೆ. ನಾನೂ ಆರ್‍.ಜಿ.ಹಳ್ಳಿ ದಾವಣಗೆರೆಗೆಂದು ಹೊರಟಾಗ ‘ಬನ್ನಿ ಸಾರ್‍, ಎಕ್ಸ್‌ಪ್ರೆಸ್ ಗಾಡಿ’ ಎಂದು ಬಸ್ ಹತ್ತಿಸಿದ ೧ ಗಂಟೆಯಾದರೂ ಬಸ್ ಹೊರಡಲಿಲ್ಲ. ಹೊರಟ ನಂತರ ಜನ ತುಂಬಿಕೊಳ್ಳಲು ಕೈ ತೋರಿಸಿದವರಿಗೆಲ್ಲ ಬಸ್ ನಿಲ್ಲಿಸತೊಡಗಿದ. ಆಗ, ಆರ್‍.ಜಿ.ಹಳ್ಳಿಗೆ ಕೋಪ ನೆತ್ತಿಗೇರಿ ಸಂವಾದ ಬಿರುಸಾಗಿ ವಾಗ್ಯುದ್ಧವೇ ಆರಂಭವಾಯಿತು. ಉರಿಯುವ ಬೆಂಕಿಗೆ ತುಪ್ಪ ಹಾಕದೆ ಪೂರ್ತಿ ಬಿಸಿ ತಣ್ಣಗಾಗುವಂತೆ ಮಾಡಿ ತೂಕಡಿಸಲುನುವಾದೆ. ಕಿಟಕಿಯ ಬಳಿ ಕುಳಿತಿದ್ದರಿಂದ ನನ್ನ ಕ್ರಿಕೆಟ್ ಕ್ಯಾಪ್ ಗಾಳಿಗೆ ಹಾರಿತ್ತು. ಆದರೆ, ಬಸ್ ನಿಲ್ಲಿಸು ಮಹಾರಾಯ ಎಂದು ನಾನು ಹೇಳಲಿಲ್ಲ. ಹೇಳಿದ್ರೂ ಅವನು ನಿಲ್ಲಿಸುತ್ತಿರಲಿಲ್ಲ. ಹೋದರೆ ಹೋಯಿತು ಟೋಪಿ ಎಂದು ನಾನು ಸುಮ್ಮನಾದೆ. ಪುಣ್ಯಕ್ಕೆ ಆರ್‍.ಜಿ. ಆಗ ನಿದ್ರಿಸುತ್ತಿದ್ದ. ಇಲ್ಲವಾದಲ್ಲಿ ಇನ್ನೊಂದು ಕುರುಕ್ಷೇತ್ರ ಅಲ್ಲಿ ಆರಂಭವಾಗುತ್ತಿತ್ತು.

ಆಗಲೇ ನನಗೆ ಹಲವಾರು ಟೋಪಿ ಪ್ರಸಂಗಗಳು ನೆನಪಾದದ್ದು. ಅಪ್ಪ ಮಗನಿಗೊಂದು ‘ಜೋಕರ್‍ ಕ್ಯಾಪ್’ ತಂದುಕೊಟ್ಟಿದ್ದರು. ಮಗುವಿಗೆ ಆ ಟೋಪಿ ಮಹಾಪ್ರಾಣ ‘ಟ್ರಿಪ್’ ಹೋಗಿದ್ದಾಗ ಟೋಪಿ ಮಿಸ್ ಆಯಿತು. ಎಲ್ಲೆಲ್ಲೋ ಹುಡುಕಿತು ಟೋಪಿಯನ್ನು ಮಗು. ಸಿಗಲಿಲ್ಲ ಟೋಪಿ. ಪಾರ್ಕಿನ ಬೆಂಚಿನ ಮೇಲೆ ಹದಿಹರೆಯದ ಹುಡುಗ-ಹುಡುಗಿ ಕುಳಿತಿದ್ದರು. ಅತ್ತ ನೆಡಯಿತು ಮಗು. ಆಗ ಯುವಕ ಹೇಳುತ್ತಿದ್ದ ‘ಆಹಾ! ನನ್ನ ಬಿಂಕದ ಸಿಂಗಾರಿ, ಅದೆಷ್ಟು ಮೋಹಕವಾಗಿ ಕಾಣುತ್ತಿದ್ದೀ ಗೊತ್ತ? ನಿನ್ನ ಎರಡು ಕಣ್ಣುಗಳು ನಕ್ಷತ್ರದಂತೆ ಹೊಳೆಯುತ್ತಿದೆ. ಅಲ್ಲಿ ನನಗೀಗ ಇಡೀ ಜಗತ್ತು ಕಾಣುತ್ತಿದೆ. ಅಲ್ಲಿ ಏನುಂಟು-ಏನಿಲ್ಲ?” ಎಂದ ಕೂಡಲೇ ಮಗು ಕಾತರದಿಂದ ಕೇಳಿತು ‘ರೀ ನನ್ನ ಟೋಪಿ ಕಾಣ್ತಿದೆಯಾ ಅಲ್ಲಿ’ ಎಂದು.

ಎಲ್ಲಾ ಅಷ್ಟೆ. ಅವರವರ ಚಿಂತೆ ಅವರವರಿಗೆ, ಮಗುವಿಗೆ ಟೋಪಿ ಚಿಂತೆ. ಪ್ರೇಮಿಗೆ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳುವ ಚಿಂತೆ, ರಾಜಕಾರಣಿಗೆ ಕುರ್ಚಿಯ ಚಿಂತೆ, ಚಿತ್ರ ನಿರ್ಮಾಪಕ-ನಿರ್ದೇಶಕರಿಗೆ ರಾಶಿರಾಶಿ ಹಣ ಬಾಚಿಕೊಳ್ಳುವ ಚಿಂತೆ, ಸಹನಟನಟಿಯರಿಗೆ ಹೀರೋ -ಹೀರೋಯಿನ್‌ಗಳಾಗುವ ಚಿಂತೆ, ಪತ್ರಕರ್ತರಿಗೆ ಸ್ಕೂಪ್ ದಕ್ಕಿಸಿಕೊಳ್ಳುವ ಚಿಂತೆ, ಟೋಪಿಯನ್ನು ಮಾರುವವರಿಗೆ ಟೋಪಿ ಮಾರುವ ಚಿಂತೆ.

ಟೋಪಿ ಮಾರುವವ ಒಮ್ಮೆ ನಿದ್ರೆ ಮಾಡುತ್ತಿದ್ದಾಗ ಕೋತಿ ಟೋಪಿಯೊಂದನ್ನು ಕದ್ದು ಮರ ಹತ್ತುತ್ತದೆ. ಇವ ಎದ್ದು ಪರಿಪರಿಯಾಗಿ ಬೇಡಿದ ಕೋತಿಯನ್ನು ‘ಟೋಪಿ ಎಸಿ’ ಎಂದು ಅದು ಎಸೆಯುವುದಿಲ್ಲ. ಆಗ ಕಂಪನಿ ಶೈಲಿಯ ರಾಗರಾಗವಾಗಿ ಹಾಡುವ, ವಿನಂತಿಸುವ ‘ಟೋಪಿಯಾಟವಯ್ಯಾ’ ಎಂಬ ನನ್ನ ನಾಟಕದಲ್ಲಿ ಕಡೆಗೆ ತಾನೊಂದು ಕಲ್ಲು ಎಸೆದು ಕ್ಯಾಚ್ ಹಿಡಿವ. ಅದೂ ಟೋಪಿ ಎಸೆದು ಕ್ಯಾಚ್ ಹಿಡಿಯುವುದು ನಂತರ ಕೊಂಬೆಯೊಂದನ್ನು ಗಿರಿಗಿರಿ ತಿರುಗಿಸುವ ಅದೂ ತಿರುಗಿಸುವುದು ನಂತರ ಕೊಂಬೆ ಎಸೆದ ಅದು ಟೋಪಿ ಎಸೆಯುವುದು. ಆಗ ಅವನಿಗೆ ಟೋಪಿ ದಕ್ಕಿದ ಸಂಭ್ರಮ.

ಹೀಗೆ ಎಲ್ಲ ಸಂಭ್ರಮದ ಘಳಿಗೆಗಳನ್ನು ನಿರೀಕ್ಷಿಸುತ್ತಲೇ ಇರುತ್ತಾರೆ. ಹಣ ಮಾಡುವುದೇ ಈಗ ಎಲ್ಲರ ಗುರಿ. ಅದರಿಂದ ಟೋಪಿ ಹಾಕುವುದೇ ಹಲವರ ಕಸುಬೂ ಆಗಿದೆ. ಗಿಮಿಕ್‌ಗಳಿಂದ ಟೋಪಿ, ಗ್ರಾಫಿಕ್‌ನಿಂದ ಟೋಪಿ, ಪ್ರಚಾರ ತಂತ್ರದಿಂದ ಟೋಪಿ, ಸುಳ್ಳು ಸುದ್ದಿಯಿಂದ ಟೋಪಿ, ನಾಲ್ಕಾರು ಚಿತ್ರಗಳಿಂದ ಹತ್ತಾರು ದೃಶ್ಯ ಕದ್ದು, ಒರಿಜಿನಲ್ ಕಥೆ ಯಂದು ಬಂಡಲ್ ಬಿಟ್ಟು ಟೋಪಿ, ಹೀಗಾಗಿ ಇಡೀ ಜಗತ್ತು ಒಂದು ರೀತಿ ‘ಟೋಪಿಮಯ’ವಾಗಿದೆ.

ಯಾರು? ಯಾರಿಗೆ? ಯಾವಾಗ? ಹೇಗೆ? ಟೋಪಿ ಹಾಕುತ್ತಾರೆ ಎನ್ನುವುದೂ ಒಂದು ಇಂಟರೆಸ್ಟಿಂಗ್ ‘ಟೋಪಿ ಕಥೆ’ ಆಗಬಹುದಲ್ಲವೆ?
*****
(೧೯-೧೦-೨೦೦೧)