ಮೂಕಬಲಿ ಕುರಿತು ಕಿ.ರಂ. ಉವಾಚ

ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಕದಡಿದ ನೀರು, ನಾನೇ ಬಿಜ್ಜಳ, ಸತ್ತವರ ನೆರಳು, ಪರಿವಾರದವರು, ಆ ಊರು ಈ ಊರು, ಮೂಕಬಲಿ ನಾಟಕಗಳ ಮುಖಾಂತರ ಕನ್ನಡ ನಾಟಕ ಲೋಕ ಶ್ರೀಮಂತ ಗೊಳಿಸಿದವರು ಜಿ.ಬಿ.

ಮನೋಹರ ಗ್ರಂಥಮಾಲೆಯ ರೂವಾರಿಗಳಾದ ಜಿಬಿ ನಮ್ಮನ್ನಗಲಿ ಡಿಸೆಂಬರ್‍ ತಿಂಗಳಿಗೆ ಎಂಟುವರ್ಷ ಸಲ್ಲುತ್ತದೆ. ಈ ಸಂದರ್ಭದಲ್ಲಿ (ಈ ಹಿರಿಯ ಲೇಖಕರಿಗೆ ತಮ್ಮ ನಮನ ಸೂಚಿಸಲು ಅಭಿನಯತರಂಗ ೨೦೦೨-೦೩ನೇ ಸಾಲಿನ ವಿದ್ಯಾರ್ಥಿಗಳ ಮೇಜರ್‍ ಪ್ರೊಡಕ್ಷನ್ ಆಗಿ ಮೂಕಬಲಿ ಆ.೨೨-೨೫ ರಂದು ಕಲಾಕ್ಷೇತ್ರದಲ್ಲಿ ಪ್ರಮೋದ ಶಿಗ್ಗಾಂವ್ ನಿರ್ದೇಶನದಲ್ಲಿ ರಂಗಕ್ಕೆ ಬರುತ್ತಿದೆ. ರಂಗಾಯಣದ ‘ಟಿಪ್ಪುವಿನ ಕನಸು’ಗಳಿಗೆ ಕಲಾತ್ಮಕ ಕುಸುರು ಮಿಂಚುವಂತೆ ಮಾಡಿ, ನಾಗಾಭರಣರ ‘ನೀಲ’ ಚಿತ್ರಕ್ಕೆ ಸೊಗಸಾದ ವಸ್ತ್ರವಿನ್ಯಾಸದಿಂದ ಹೆಸರಾದ ಪ್ರಮೋದ್ “ಸೆಜ್ಜುವಾನ್ ನಗರದ ಸಾಧ್ವಿ” ನಿರ್ದೇಶಿಸಿಯೂ ಹೆಸರಾದವರು. ಈಗ ಜಿ.ಬಿ. ಜೋಶಿಯವರ ಮೂಕಬಲಿ ವಿನ್ಯಾಸದ ಹಾಗೂ ನಿರ್ದೇಶನದ ಹೊಣೆ ಹೊತ್ತು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸ ಹೊರಟಿದ್ದಾರೆ. ಇದು ನಾಟಕದ ಸೀನ್…

ಈಗ ಸಿನಿಮಾ ಸೀನಿಗೆ ಬರೋಣ… ಈವರೆಗೆ ರೀಮೇಕ್ ಚಿತ್ರಗಳಿಂದಲೇ ತಮಗೆ ಮೋಕ್ಷ, ಅದೊಂದೇ ತಮ್ಮ ಅದೃಷ್ಟದ ಬಾಗಿಲು ತೆರೆಯುವ ಮಹಾದ್ವಾರ ಎಂದುಕೊಂಡಿದ್ದವರು ಈಗ ಕನ್ನಡ ಕತೆ, ಕಾದಂಬರಿ, ನಾಟಕಗಳತ್ತ ತಮ್ಮ ದೃಷ್ಟಿ ಹರಿಸುತ್ತಿದ್ದಾರೆ ಚಿತ್ರ ನಿರ್ಮಾಪಕ ನಿರ್ದೇಶಕರು ಎಂಬುದು ಶುಭ ಸೂಚನೆ.

ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕುಂ. ವೀರಭದ್ರಪ್ಪನವರ ‘ಬೇಲಿ ಮತ್ತು ಹೊಲ’ ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’, ಶಿವರಾಮ ಕಾರಂತರ ಕಾದಂಬರಿಗಳು ಚಿತ್ರವಾಗಲಿದೆ ಎಂಬ ಸುದ್ದಿ ಅಲೆಅಲೆಯಾಗಿ ತೇಲಿಬರುತ್ತಿದೆ.

ಗಿರೀಶ್ ಕಾಸರವಳ್ಳಿ, ನಾ. ಡಿಸೋಜರವರ ‘ದ್ವೀಪ’ ಚಿತ್ರೀಕರಣ ನಡೆಸಿದ್ದಾರೆ. ಜನಪ್ರಿಯ ನಟೀಮಣಿ ಸೌಂದರ್ಯ ಅದರ ನಿಮಾಪಕಿಯಾಗಿದ್ದಾರೆ.

ಕೆ.ಸಿ.ಎನ್. ಚಂದ್ರು ಅವರಿಗೆ ಬಹುದಿನದಿಂದ ‘ಕಿಂಗ್ ಲಿಯರ್‍’ ಸಿನಿಮಾ ಮಾಡುವ ಕನಸಿತ್ತು. ಆದರೆ, ಸಿನಿರಂಗದ ಏಳುಬೀಳುಗಳನ್ನು, ಬಂದ ಬಹಳಷ್ಟು ನಿರೀಕ್ಷಿತ ಚಿತ್ರಗಳು ಅಡ್ರೆಸ್ಸಿಗಿಲ್ಲದೆ ಹೋದುದನ್ನು ಕಂಡದ್ದರಿಂದಲೋ ಏನೋ ಈ ವ್ಯವಹಾರ ಚತುರ ಅದನ್ನು ಟೀವಿ ಮೆಗಾ ಧಾರಾವಾಹಿ ಮಾಡುವ ಸಿದ್ಧತೆ ನಡೆಸಿದ್ದಾರೆ.

ಇವೆಲ್ಲ ಸದಭಿರುಚಿಗೆ ಕನ್ನಡಿ ಹಿಡಿವ ಪ್ರಯತ್ನಗಳು ಎಂಬ ಕಾರಣಕ್ಕೆ ಸಂತಸವೆ. ಆದರೆ, ದುಃಖವಾಗುವುದು ಎಲ್ಲಿ ಎಂದರೆ ಕತೆ, ಕಾದಂಬರಿ, ನಾಟಕಗಳನ್ನು ಚಿತ್ರ ಮಾಡುವಾಗ ಹಲವು ನಿರ್ಮಾಪಕ-ನಿರ್ದೇಶಕರು ನಾನಾ ಮಸಾಲೆಗಳನ್ನು ಸೇರಿಸಿ ಒಂದು ಡಬ್ಬಾ ಫಿಲಂ ತೆರೆಗರ್ಪಿಸಿ ಬಿಡುತ್ತಾರೆ.

ಅದಕ್ಕೊಂದು ಉದಾಹರಣೆ ಎಂದರೆ ‘ಅಮ್ಮ ರಿಟೈರಾಗ್ತಾಳೆ ನಾಟಕ’ ನೂರಾರು ಬಾರಿ ಬೇರೆ ಬೇರೆ ಭಾಷೆಗಳಲ್ಲಿ ಮಾತ್ರವಲ್ಲ ಕನ್ನಡ ರಂಗಭೂಮಿಯಲ್ಲೂ ಹೆಸರಾದ ನಾಟಕ ‘ಅಮ್ಮ’ ಎಂಬ ಹೆಸರಿನಲ್ಲಿ ತೆರೆಗೆ ಬರುತ್ತದೆ ಎಂದಾಗ ಹಿರಿಹಿರಿ ಹಿಗ್ಗಿದವರು ಬಹುಮಂದಿ. ಲಕ್ಷ್ಮಿ ಮತ್ತು ಅನಂತನಾಗ್ ಮತ್ತೆ ಈ ಚಿತ್ರದಲ್ಲಿ ಬಹಳ ವರ್ಷಗಳ ನಂತರ ಅಭಿನಯಿಸುತ್ತಿರುವರೆಂಬ ಅಂಶ ಭಾರೀ ಸುದ್ದಿಯಾಗದಾಗ ನಿರ್ದೇಶಕ ಡಿ.ರಾಜೇಂದ್ರಬಾಬು ಇದರಿಂದ ಮತ್ತಷ್ಟು ಹೆಸರಾದಾರೆಂದು ಆಶಿಸಿದರು ಚಿತ್ರರಸಿಕರು ಹಾಗೂ ರಂಗಾಭಿಮಾನಿಗಳು. ಆದರೆ, ಡಿ. ರಾಜೇಂದ್ರಬಾಬು ಆ ನಾಟಕದ ಹೊಳಹೂ ಸಿಗದಂತೆ ಮಾಡಿ, ಹಾಸ್ಯಕ್ಕೆ ತಿಲಾಂಜಲಿಯಿತ್ತು ನಾಟಕದಲ್ಲಿ ಇಲ್ಲದ ‘ಕಿಡ್ನಿ ದಾನ’ ದಿಂದ ಸೆಂಟಿಮೆಂಟನ್ನು ಪ್ಲೇಮಾಡಲು ಹೋಗಿ ಮುಗ್ಗರಿಸಿದರು.

ಈ ಮಾತನ್ನು ಮತ್ತೆ ಇಲ್ಲಿ ಹೇಳಲು ಕಾರಣವೂ ಉಂಟು. ಕಳೆದ ವಾರ ಬಾಬುಗೆ ಫೋನ್ ಮಾಡಿ ಈ ಬಾರಿ ಪ್ರಮೋದ್ ಶಿಗ್ಗಾಂವ್ ಜಿ.ಬಿ. ಜೋಶಿವರ ಆ ಊರು ಈ ಊರು ಅರ್ಥಾತ್ ಮೂಕಬಲಿ ನಿರ್ದೇಶನ ಮಾಡುತ್ತಿದ್ದಾರೆ ಎಂದ ಕೂಡಲೇ “ಅರೆರೇ ಅದನ್ನು ನಾನು ಫಿಲಂ ಮಾಡಬೇಕು ಅಂತ ಬಹಳ ಹಿಂದೆಯೇ ರೈಟ್ಸ್ ತೆಗೆದುಕೊಂಡಿರುವೆ. ಚಿತ್ರ ಮಾಡೇ ಮಾಡ್ತೀನಿ-ಖಂಡಿತಾ ನಾಟಕಕ್ಕೆ ಬರ್ತೇನೆ” ಎಂದರು.

ಆ ಕ್ಷಣಕ್ಕೆ ನನಗೂ ಸಂತೋಷವಾಯಿತು. ಆದರೆ, ನಾನಾಗ ಅಮ್ಮ ನೋಡಿರಲಿಲ್ಲ ‘ಅಮ್ಮ’ ನೋಡಿದ ನಂತರ ಮೂಕಬಲಿಯೂ ಹಾಗೆಲ್ಲಾದೀತೋ ಎಂದು ಗಾಬರಿಯಾಯಿತು.

ಇಂಥ ಕೃತಿ ಚಿತ್ರಮಾಡುವಾಗ ತುಂಬ ಎಚ್ಚರವಹಿಸಿ ಎಂಬ ಮಾತು ಹೇಳುತ್ತಾ, ಲೇಖಕ-ವಿಮರ್ಶಕ, ಪ್ರೊಫೆಸರ್‍ ಕಿ.ರಂ.ನಾಗರಾಜ್ ಆ ಊರು-ಈ ಊರು ಯಾವ್ಯಾವ ರೀತಿ ವ್ಯಾಖ್ಯಾನಿಸಬಹುದು ಎಂದು ಹೇಳಿದ ಅಂಶ ಟಿಪ್ಪಣಿಸುತ್ತಿರುವೆ.

ಒಳ್ಳೆಯವರು ಕೆಟ್ಟವರ ನಡುವಿನ ಆದಾನ-ಪ್ರದಾನ ಆ ಊರು-ಈ ಊರು ಒಂದು ಗ್ರಾಮದ ಕತೆಯೂ ಹೌದು. ಸಾಂಪ್ರದಾಯಿಕ ಕಥಾನಕವಾದರೂ ಹೇಳಿರುವ ಕ್ರಮದಿಂದ ನಾಟಕಕ್ಕೆ ಮಹತ್ವ ಬಂದಿದೆ. ನಾಟಕದಲ್ಲಿ ಗಾಂಭೀರ್ಯ ಮಾತ್ರವಲ್ಲ ಟ್ರಾಜಿಕ್ ಟೋನ್ ಸಹಾ ಇದೆ ಎಂಬುದು ಬಹು ಮುಖ್ಯ.

ಮಾನವೀಯತೆ ನಾಡವಾಗಿದೆ ಎಂಬುದನ್ನು ಕತೆ ಹೇಳುತ್ತದೆ. ಇಲ್ಲಿ ಸ್ತ್ರೀಪಾತ್ರಗಳ ಬಲಿ ಮೌನವಾಗಿ ನಡೆಯುತ್ತದೆ. ಇಲ್ಲಿರುವುದು ಒಂದು ಮುಗ್ದ ಜಗತ್ತು ಇನ್ನೊಂದು ಕಿಲಾಡಿ ಜಗತ್ತು. ದರ್ಪ ತೋರಲು ಮುಗ್ದ ಜನರ ಮೇಲೆ ಆಕ್ರಮಣ. ಹಾಗೆ ನೋಡಿದರೆ ಇದೊಂದು ರೀತಿ ಗಾಂಧಿಯನ್ ಪ್ಲೇ. ಪವರ್‍ ಪಾಲಿಟಿಕ್ಸ್‌ನಿಂದ ಏನೇನು ಅನಾಹುತವಾಗಬಹುದು ಎಂಬುದನ್ನು ನಾವಿಂದು ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಒಂದೇ ದಿನದ ಒಂದು ರಾತ್ರಿಯ ಕಥೆಯಲ್ಲಿ ಸಮುದಾಯದ ಬದುಕಿನ ಚಿತ್ರವಣವಿದೆ. ಈ ನಾಟಕದಲ್ಲಿ ‘ಆ ಊರು-ಈ ಊರು’ಗೆ ಕೊಂಡಿಯಾಗಿರುವುದು ನದಿ. ಒಂದೆಡೆ ಹಾಲು-ಇನ್ನೊಂದೆಡೆ ವಿಷ. ಮಾತನಾಡದಿರುವ ಹೆಣ್ಣು ಇದರಲ್ಲಿ ಮೂಕಬಲಿಯಾಗುತ್ತಾಳೆ. ಪೀಳಿಗೆ ಕಮರಿ ಹೋಗುವುದನ್ನು ನಾಟಕ ಹೇಳುತ್ತೆ ಆದರಿಂದ ಇಂಥ ಕೃತಿಯನ್ನು ರಂಗಕ್ಕೆ ತರುವಾಗ ತುಂಬ ಸೂಕ್ಷ್ಮಗಳನ್ನು ಗಮನಿಸಬೇಕಾಗುತ್ತೆ. ನಿರ್ದೇಶಕ ನಾಟಕದ ಸಾಲುಗಳಲ್ಲಿ ಅಂತರ್ಗತವಾಗಿ ಹುದುಗಿರುವ ಅಂಶಗಳನ್ನು ಪ್ರಖರವಾಗಿ ತೋರುವುದಕ್ಕೆ ಚಿಂತನೆ ಮಾಡಬೇಕು. ಸಾಹಿತ್ಯದ ಸಾಲುಗಳಲ್ಲಿ ಗ್ರಾಮೀಣ ಸೊಗಡು ಇರುವಂತೆ ನೋಡಿಕೊಂಡು ತುಂಬ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಗ ಮಾತ್ರ ಕೃತಿಗೆ ನ್ಯಾಯ ಸಂದೀತು ಎಂದರು.

ಈ ಎಲ್ಲ ಅಂಶ ಗಮನದಲ್ಲಿಟ್ಟೇ ಪ್ರಮೋದ್ ಶಿಗ್ಗಾಂವ್ ರಂಗ ವ್ಯಾಖ್ಯಾನಕ್ಕೆ ಅಣಿಯಾಗುತ್ತಿದ್ದಾರೆ. ಇದನ್ನೊಂದು ಚಿತ್ರ ಮಾಡುವ ಕನಸು ಹೊತ್ತಿರುವ ಡಿ.ರಾಜೇಂದ್ರ ಬಾಬು ನಾಟಕ ಬಂದು ನೋಡುವುದು ಮಾತ್ರವಲ್ಲ ತೆರೆಗೆ ಅಳವಡಿಸುವಾಗ ಸೂಕ್ಷ್ಮತೆಗಳನ್ನು ಗಮನಿಸದಿದ್ದಲ್ಲಿ ಇದು ಇನ್ನೊಂದು ‘ಅಮ್ಮ’ ಆದೀತು.

ಡಿ. ರಾಜೇಂದ್ರಬಾಬು ಈ ಬಾರಿ ಹೆಚ್ಚು ಆಸ್ಥೆ ವಹಿಸುತ್ತಾರೆ ಎಂದು ಆಶಿಸೋಣ.
*****
(೧೨-೧೦-೨೦೦೧)