ಓಡಿ ಹೋದವನನ್ನು ಹುಡುಕ ಹೊರಟವರು

ಆಶ್ರಮ ಶಾಲೆಯಲ್ಲಿದ್ದ ಕಾನ್‌ತೋಟದ ಹಸಲರ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂಬುದು ತಿಳಿದಾಗ ಸೋಮಣ್ಣ ಬೇಲಿಯ ಮೇಲೆ ಬಟ್ಟೆ ಒಣಹಾಕುತ್ತಿದ್ದ. ನಿನ್ನೆ ರಾತ್ರಿ ಇದ್ದನಂತೆ, ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತಿದ್ದನಂತೆ………. ಆದರೆ ಮುಂಜಾನೆಯ ಪ್ರಾರ್ಥನೆಗೆಂದು ಎಲ್ಲ ಹುಡುಗರನ್ನು ಎಬ್ಬಿಸಲು ಬಂದ ಉಪಾಧ್ಯಾಯರು ಅ ಹುಡುಗನಿಲ್ಲದಿರುವುದನ್ನು ಕಂಡರಂತೆ…….ಅವನನ್ನು ಹುಡುಕಲು ಈಗಾಗಲೇ ಹಲವರು ಹೋಗಿದ್ದಾರಂತೆ…..

ಸೋಮಣ್ಣ ಒಳ ಹೋದ. ಒಲೆಯ ಮೇಲಿನ ತಪ್ಪಲೆಯಲ್ಲಿ ನೀರು ಮರಳುತ್ತಿತ್ತು. ಆರಿಸಿಟ್ಟ ಅಕ್ಕಿ ಮೊರದಲ್ಲಿತ್ತು. ನೀರಿನ ತಪ್ಪಲೆಯನ್ನು ಕೆಳಗೆ ಇಳಿಸಿದ. ಒಲೆಯೊಳಗಿನ ಕಟ್ಟಿಗೆಯನ್ನು ಹೊರಗೆ ಎಳೆದು ನೀರು ಹಾಕಿ ಚುಮುಕಿಸಿದ. ಮೇಲೆದ್ದ ಹೊಗೆಯಿಂದಾಗಿ ಉಸಿರು ಕಟ್ಟಿಕೊಂಡಾಯಿತು. ಕೆಮ್ಮೂ ಬಂತು. ಜೊತೆಗೆ ಹೇಳದೇ ಕೇಳದೇ ಮನೆ ಬಿಟ್ಟು ಹೋದ ಹೆಂಡತಿಯ ನೆನಪಾಗಿ ಸಿಟ್ಟೂ ಬಂದಿತು. ನಾನು ಯಾವುದಕ್ಕೆ ಕಡಿಮೆ ಮಾಡಿದ್ದೆ ಇಲ್ಲಿ? ಹಾಲು ತುಪ್ಪದಿಂದ ಹಿಡಿದು ಉಪ್ಪು ಮೆಣಸಿನಕಾಯಿಯವರೆಗೆ ಎಲ್ಲವನ್ನೂ ತಂದುಹಾಕುತ್ತಿದ್ದೆ. ಸೀರೆ ರವಕೆ ಎಂದು ಸಾಕಷ್ಟು ತಂದುಕೊಡುತ್ತಿದ್ದೆ. ಆದರೂ ಹಾಳಾದವಳು ಜಗಳ ತೆಗೆದು ಹೋದಳು. ಹೋಗಲಿ, ಹಾಳಾಗಿ ಹೋಗಲಿ. ನಾನಂತೂ ಕರೆಯಲು ಹೋಗುವವನಲ್ಲ. ಬಂದರೂ ಮನೆಯೊಳಗೆ ಸೇರಿಸುವುದಿಲ್ಲ.

ಕಿಟಿಕಿಯ ಬಾಗಿಲು ಮುಚ್ಚಿದ. ಪಂಚೆ ಸುತ್ತಿಕೊಂಡ. ಶರಟು ಧರಿಸಿದ. ಬೀಗ ಬೀಗದಕೈ ಎತ್ತಿಕೊಂಡು ಹೊರಬಂದು, ಬಾಗಿಲು ಜಡಿದು, ಬೀಗ ಹಾಕಿದ. ರಸ್ತೆಯ ಅಂಚಿನಲ್ಲಿ ನಿಂತಿದ್ದ ಹುಡುಗನನ್ನು ಕೂಗಿ ಕರೆದ.

“ತಮ್ಮಾ, ಶಾಲೆಗೆ ಹೋಗಿ ಮೇಷ್ಟ್ರಿಗೆ ಹೇಳು…..ಸೋಮಣ್ಣಾವ್ರು ಕಾನ್ ತೋಟದ ಹುಡುಗನ್ನ ಹುಡುಕಾಕೆ ಕಲ್‌ಮನೆಗೆ ಹೋದ್ರು ಅಂತ…..” ಎಂದು ಹೇಳಿ
“ಹೇಳ್ತೀಯಾ?…..”
ಎಂದು ಹುಡುಗನ ಬಾಯಿಂದ ಅಷ್ಟನ್ನೂ ಮತ್ತೊಮ್ಮೆ ಹೇಳಿಸಿ, ಹುಡುಗ ಶಾಲೆಯತ್ತ ಹೋಗುತ್ತಿರಲು, ಇವನು ಕಲ್‌ಮನೆಯ ದಾರಿ ಹಿಡಿದ. ಕಾನ್‌ತೋಟದ ಹುಡುಗನ ಅಕ್ಕನ ಮನೆ ಕಲ್‌ಮನೆಯಲ್ಲಿತ್ತು. ಹುಡುಗ ಅಲ್ಲಿಗೆ ಹೋಗಿರಬಹುದೆಂದು ಮೇಷ್ಟ್ರು ಹೇಳಿದ್ದರು. ಶಾಲೆಯ ಆಳು, ಅಡಿಗೆಯಾತ, ಗ್ರಾಮಸೇವಕ ಇಮಾಮ ಹುಡುಗನನ್ನು ಹುಡುಕಿಕೊಂಡು ಇತರ ಹಳ್ಳಿಗಳಿಗೆ ಹೋಗಿದ್ದರು. ಇವನು ಕಲ್‌ಮನೆಗೆ ಹೊರಟ.
*
*
*
ಆಶ್ರಮಶಾಲೆಯ ಕಾನ್‌ತೋಟದ ಹಸಲರ ಹುಡುಗ ಮತ್ತೊಮ್ಮೆ ಕಾಣೆಯಾಗಿದ್ದಾನೆ ಎಂದು ಮೇಷ್ಟ್ರು ಹೇಳಿದಾಗ ರಂಗಣ್ಣ ಹಂಡೆಗೆ ನೀರು ತುಂಬುತ್ತಿದ್ದ. ಆಶ್ರಮದ ಹುಡುಗರು ಇನ್ನೇನು ಸ್ನಾನಕ್ಕೆ ಬರುತ್ತಾರೆ. ಹಂಡೆಯಲ್ಲಿ ನೀರು ಕಾದಿದೆ. ಪಕ್ಕದ ಬಾನಿನಲ್ಲಿ ನೀರು ತುಂಬಿದರೆ ಒಂದು ಕೆಲಸವಾದ ಹಾಗೆ. ಹೀಗೆಂದು ಬಾವಿಗೆ ಹಗ್ಗ ಬಿಟ್ಟು ನೀರು ಸೇದುತ್ತಿರಬೇಕಾದರೇನೇ ಮೇಷ್ಟ್ರು ತನ್ನನ್ನು ಹುಡುಕಿಕೊಂಡು ಬಂದರು.
“ರಂಗಣ್ಣ” ಎಂದರು ಬಾವಿಕಟ್ಟೆಯ ಬಳಿ ಬಂದು.
“ಏನ್ಸಾರ್?”
“ಆ ಹುಡುಗ ಮತ್ತೆ ಓಡಿಹೋಗಿದ್ದಾನೆ ಕಣ್ಣಯ್ಯ.”
“ಯಾರು ಸಾರ್….ಕಾನ್‌ತೋಟದವನೆ?”
“ಹೌದು. ಮೊನ್ನೆ ಓಡಿಹೋದವನನ್ನು ಹ್ಯಾಗೋ ಹುಡುಕಿಕೊಂಡು ಬಂದಿದ್ವಲ್ಲ…..ಮತ್ತೆ ಓಡಿಹೋಗದಿರಲಿ ಅಂತ ಕಾಲಿಗೊಂದು ಕಬ್ಬಿಣದ ಹಾರೇನೂ ಕಟ್ಟಿದ್ವಿ…..ಸರಪಳಿ ಹಾಕಿ. ಆದ್ರೆ ಈಗ್ಲೂ ಆ ಹಾರೆ ಸಮೇತ ಓಡಿಹೋಗಿದ್ದಾನೆ……”
ಮೇಷ್ಟ್ರು ಪೇಚಾಡಿಕೊಂಡರು. ಅವರ ಮುಖ ನೋಡಲಾಗಲಿಲ್ಲ.
“ನೋಡೋಣ ಬಿಡಿ ಸಾರ್. ನಾನು ಕಾನ್‌ತೋಟಕ್ಕೇನೆ ಹೋಗಿ ಬರ್ತೀನಿ” ಎಂದ ರಂಗಣ್ಣ.
“ಹೋಗಿ ಬಾ ಹಾಗಾದ್ರೆ” ಎಂದು ಹೇಳಿ ಅವರು ಅಡಿಗೆ ಮನೆಯತ್ತ ನಡೆದರು.
ಸರಸರನೆ ಇಪ್ಪತ್ತು ಕೊಡ ನೀರು ಎಳೆದು ಹಂಡೆ ಬಾನಿ ತುಂಬಿಸಿದ್ದಾಯ್ತು.
ನಾಲ್ಕನೇ ತರಗತಿಯ ನಾಲ್ವರು ಹುಡುಗರನ್ನು ಕರೆದು, ಚಿಕ್ಕ ಹುಡುಗರಿಗೆಲ್ಲ ಸ್ನಾನ ಮಾಡಿಸುವಂತೆ ಹೇಳಿ ರಂಗಣ್ಣ ಹೊರಟ.
ಮನೆಗೆ ಹೋಗಿ ಹೆಂಡತಿಗೆ ಒಂದು ಮಾತು ಹೇಳಿ ಹೋದರಾಗುತ್ತಿತ್ತೆಂದು ಮನೆಯತ್ತ ಇಳಿದ.

ನೆಲಕ್ಕೆ ತಾಗುವಂತೆ ಇಳಿದ ಮನೆ ಮಾಡು ತಲೆಗೆ ತಾಗದಿರಲೆಂಬಂತೆ ತಲೆ ತಗ್ಗಿಸಿಕೊಂಡು ಒಳಹೋದಾಗ ಜಗಲಿಯ ಮೇಲೆ ಮಲಗಿದ್ದ ತಾಯಿ ಹಾಂ ಎಂದು ನರಳಿ ಪಕ್ಕಕ್ಕೆ ಹೊರಳಿದಳು. ಮೂರು ತಿಂಗಳ ಬಾಣಂತಿ ಹೆಂಡತಿ ಒಲೆ ಎದುರು ಕುಳಿತಿದ್ದಳು. ನಾಲ್ಕನೆಯ ಹುಡುಗ ಅಷ್ಟು ದೂರದಲ್ಲಿ ಮೈ ಕೆರೆದುಕೊಳ್ಳುತ್ತಾ ಮಲಗಿದ್ದ. ಅಲ್ಲಿ ಮತ್ತೂ ಸ್ವಲ್ಪ ಹೊತ್ತು ನಿಂತರೆ ತಲೆ ಕೆಡುತ್ತದೆಂಬುದು ಖಚಿತವಾಗಿ, ತಾನು ಕಾನ್ ತೋಟಕ್ಕೆ ಹೋಗುವುದಾಗಿಯೂ, ಬರುವುದು ಸಂಜೆಯಾಗುತ್ತದೆಂದೂ ಹೇಳಿ, ಉತ್ತರಕ್ಕಾಗಿ ಕಾಯದೆ ರಂಗಣ್ಣ ಮನೆಯಿಂದ ಹೊರಬಿದ್ದ. ಹೆಗ್ಗಡೆಯವರ ತೋಟಕ್ಕೆ ಇಳಿದು ಕಾನ್‌ತೋಟದ ದಾರಿ ಹಿಡಿದು ಸಾಗಿದ.
*
*
*
ಕಾನ್ ತೋಟದ ಹುಡುಗ ಕಾಣೆಯಾಗಿದ್ದಾನೆ ಚೌಡಪ್ಪ ಎಂದು ಮೇಷ್ಟ್ರು ಅಡಿಗೆಮನೆ ಬಾಗಿಲಲ್ಲಿ ನಿಂತು ಹೇಳಿದಾಗ ಕೇರ್ ಸಂಸ್ಥೆಯವರು ಕೊಟ್ಟ ಹಳದಿ ರವೆಯ ಉಪ್ಪಿಟ್ಟು ಮಾಡುತ್ತಿದ್ದ ಚೌಡಪ್ಪ ಬಾಗಿಲತ್ತ ತಿರುಗಿ ನಿಂತ. ಕಾನ್‌ತೋಟದ ಹುಡುಗ ಕಾನ್ ತೋಟದಲ್ಲಿ, ಬೂರಲುಕೆರೆಯ ದಂಡೆಯ ಮೇಲೆ ಓಡಿಯಾಡಿಕೊಂಡಿದ್ದ. ಶಾಲೆಯಲ್ಲಿ ಕಲಿಯಲೆಂದು ಅವನನ್ನು ಮೇಷ್ಟ್ರು ಕರೆತಂದು ಶಾಲೆಗೆ ಸೇರಿಸಿದರು. ಆಶ್ರಮಶಾಲೆಯಲ್ಲಿ ನಾಲ್ಕು ದಿನ ಅವನು ಉಳಿದ. ಐದನೇ ದಿನ ಓಡಿಹೋದ. ಆರನೇ ದಿನ ಅವನ ತಂದೆ ಕಾನ್‌ತೋಟದಿಂದ ಹುಡುಗನನ್ನು ಕರೆತಂದ. ಹುಡುಗ ನಂತರ ಮತ್ತೆ ನಾಲ್ಕು ದಿನ ಆಶ್ರಮದಲ್ಲಿದ್ದ. ಐದನೆ ದಿನ ಕಾಣೆಯಾದ. ಈ ಬಾರಿ ಚೌಡಪ್ಪ ಅವನನ್ನು ಬೆಳ್ಳಾಣೆಯ ಅವನ ಚಿಕ್ಕಪ್ಪನ ಮನೆಯಲ್ಲಿ ಹುಡುಕಿ ಕರೆತಂದ. ಈಗ ಮತ್ತೆ ಓಡಿಹೋಗಿದ್ದಾನೆ.
“ಮತ್ತೆ ಬೆಳ್ಳಾಣೆಗೆ ಹೋದ್ನೋ ಏನೋ?”
“ಏನೋಪ್ಪ, ನಿನ್ನೆ ರಾತ್ರಿ ಎಲ್ಲ ಹುಡಗ್ರ ಜೊತೇಲಿ ಅವನೂ ಮಲಕ್ಕೊಂಡ್ದ್ನಂತೆ. ಬೆಳಗಾದಾಗ ಇಲ್ಲ, ಅಂದ್ರೆ….ರಾತ್ರೀನೇ ಇಲ್ಲಿಂದ ಹೋದ್ನೋ ಏನೋ. ಕಾಡ್ನಲ್ಲಿ ಒಬ್ನೇ ಹ್ಯಾಗೇ ಹೋದ್ನೋ…..ಏನು ಅಪಾಯ ಆಯ್ತೋ…..”

ಈ ಮೇಷ್ಟ್ರುದು ಮೊದಲೇ ಮೃದು ಹೃದಯ. ಹುಡುಗ ತಪ್ಪಿಸಿಕೊಂಡು ಹೋಗಿರೋದನ್ನು ಅವರು ತೀವ್ರವಾಗಿಯೇ ತೆಗೆದುಕೊಂಡಿರೋ ಹಾಗಿದೆ. ಚೌಡಪ್ಪ ಬಾಂಡಲಿ ಕೆಳಗಿಳಿಸಿದ.
“ನಾನು ಹೋಗಿ ಬರಲಾ ಸಾರ್ ಬೆಳ್ಳಾಣೆಗೆ?”
“ಹೋಗ್ ಬಾ ಚೌಡಪ್ಪ. ಹುಡುಗ ಇಂಥ ಕಡೆ ಇದಾನೆ ಅನ್ನೋ ವಿಷಯ ನನ್ನ ಕಿವಿಗೆ ಬೀಳೋತನಕ ನನಗೆ ಸಮಾಧಾನ ಇಲ್ಲ…..”
ಮೇಷ್ಟ್ರು ಅಲ್ಲಿಂದ ಹೊರಟರು.
ಚೌಡಪ್ಪ ಹೆಣ್ಣಾಳು ಗೌರಮ್ಮನನ್ನು ಕರೆದ. ಅಡಿಗೆ ಜವಾಬ್ದಾರಿ ಈವತ್ತು ನಿಂದು ಎಂದ. ಅವಳ ಕೈಗೆ ಸೌಟು ಕೊಟ್ಟು ಬಚ್ಚಲಿಗೆ ಹೋದ. ಕೈ ಕಾಲು ಮುಖ ತೊಳೆದುಕೊಂಡ. ತನ್ನ ಕೋಣೆಗೆ ಹೋಗಿ ಬೇರೆ ಉಡುಪು ಧರಿಸಿ ಹೊರಟ.
ಶಾಲೆಯ ಎದುರಿನ ಗುಡ್ಡದ ಮೇಲೆ ಬೈತಲೆ ತೆಗೆದಂತೆ ಹರಿದ ಕಾಲು ದಾರಿಯಲ್ಲಿ ಅಷ್ಟು ದುರ ನಡೆದು ಪುನ್ನೇರಲೇ ಪೊದೆಗಳ ನಡುವೆ ಮಾಯವಾಗುವ ಮುನ್ನ ಅದೇಕೋ ಶಾಲೆಯತ್ತ ಹೋಗುವ ಕಾಲುದಾರಿಯತ್ತ ತಿರುಗಿ ನೋಡಿದವ ಗಕ್ಕನೆ ನಿಂತ. ಶಾಲೆಯತ್ತ ಹೋಗುತ್ತಿರುವ ಆ ವ್ಯಕ್ತಿ ಯಾರು? ನನ್ನ ಅಣ್ಣನಲ್ಲವೆ? ಹೌದು. ತನ್ನನ್ನೇ ಹುಡಿಕಿಕೊಂಡು ಹೋಗುತ್ತಿರಬಹುದು. ಸಟ್ಟನೆ ತಿರುಗಿ ವೇಗವಾಗಿ ಬೆಳ್ಳಾಣೆಯತ್ತ ಹೊರಟ.
*
*
*
ಆಶ್ರಮಶಾಲೆಯಲ್ಲಿದ್ದ ಕಾನ್‌ತೋಟದ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂದು ಅಂಗಳದಲ್ಲಿರಿಸಿದ್ದ ಸೈಕಲ್ಲನ್ನು ಒರೆಸುತ್ತಿದ್ದಾಗ, ಆಶ್ರಮದ ಕಡೆಯಿಂದ ಬಂದ ಹಾಲಿನ ಮುದುಕ ಹೇಳಿಹೋದ. ಈ ಹುಡುಗನಿಗೆ ಇದೇ ಅಭ್ಯಾಸವಾಗಿ ಹೋಗಿದೆಯಲ್ಲ ಎಂದು ಅಚ್ಚರಿಯಾಯಿತು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಲ ಹುಡುಗರು, ತಂದೆತಾಯಿ ಮನೆಗಳನ್ನು ಬಿಟ್ಟು ಆಶ್ರಮಶಾಲೆಯಲ್ಲಿ ಆರಾಮವಾಗಿದ್ದಾರೆ. ಹೊತ್ತುಹೊತ್ತಿಗೆ ಊಟ, ತಿಂಡಿ ದೊರೆಯುತ್ತದೆ. ಸ್ನಾನ ಮಾಡಿಸುತ್ತಾರೆ. ಪಾಠ ಹೇಳಿಕೊಡುತ್ತಾರೆ. ಹಬ್ಬಕ್ಕೂ ಆಸ್ಪದವಿದೆ. ಸರಕಾರವೇ ಬಟ್ಟೆ ಪುಸ್ತಕಗಳನ್ನು ಒದಗಿಸುತ್ತದೆ. ಎಲ್ಲ ಹುಡುಗರೂ ನಿಶ್ಚಿಂತೆಯಿಂದಿದ್ದಾರೆ. ಈ ಹುಡುಗನೇ ಅದೇಕೋ ಇದೆಲ್ಲವನ್ನೂ ಧಿಕ್ಕರಿಸಿ ಓಡಿಹೋಗುತ್ತಾನೆ.

ಇಮಾಮ ಸೈಕಲ್ ತಳ್ಳಿಕೊಂಡು ಶಾಲೆಗೆ ಅಂದ. ಹೂ ತೋಟದಲ್ಲಿ ನಿಂತಿದ್ದ ಮೇಷ್ಟ್ರಿಗೆ-
“ಹೌದೆ ಮೇಷ್ಟೇ…ಹುಡುಗ ಮತ್ತೆ ಓಡಿ ಹೋದ್ನಂತಲ್ಲ”-ಎಂದು ಕೇಳಿದ.
ಅವರು “ಹೌದು ನೋಡಿ” ಎಂದಾಗ-
“ಎಲ್ಲಿ ಹೋಗಿರಬಹುದು ಅಂತೀರಾ” ಎಂದು ಕೇಳಿದ.
“ಎಲ್ಲಿಗೆ ಅಂತ ಹೇಳೋದು. ಕಲ್‌ಮನೆ, ಕಾನ್‌ತೋಟ, ಬೆಳ್ಳಾಣೆ, ಮಂಜಿನಕಾನು. ತಾಳಗುಪ್ಪದಲ್ಲಿ ಅವನ ನೆಂಟ್ರು ಸಂಬಂಧಿಕರು ಇದ್ದಾರೆ. ಅವನು ಹೋದ್ರೆ ಇಷಟರಲ್ಲಿ ಎಲ್ಲೋ ಒಂದು ಕಡೆ ಹೋಗಿರಬೇಕು. ರಂಗಣ್ಣ ಚೌಡಪ್ಪ. ಕಾನ್‌ತೋತ, ಬೆಳ್ಳಾಣೆಗೆ ಹೋದ್ರು, ಹುಡುಗ ಅಲ್ಲಿದ್ದಾನೋ ನೋಡಿಕೊಂಡು ಬರ್ತೀವಿ ಅಂತ…… ”
“ಹಾಗಾದ್ರೆ ಮೇಸ್ಟ್ರೆ, ನಾನು ಮಂಜಿನ ಕಾನಿಗೆ ಹೋಗಿ ಬರ್ತೀನಿ, ಯಕ್ಷಿಕಟ್ಟೆ ಹತ್ರ ಇದೆಯಲ್ಲ ಅದೇ ತಾನೆ ಈ ಹುಡುಗನ ಸೊದರತ್ತೆ ಮನೆ?”
`ಹೌದು, ನಿಮಗೆ ಬೇರೆ ಏನೂ ಕೆಲ್ಸ ಇಲ್ಲದಿದ್ರೆ ಹೋಗಿಬನ್ನಿ…..”
“ಕೆಲ್ಸದ ಮನೆ ಹಾಳಾಯ್ತು, ನಾನು ಹೋಗ್ತೀನಿ ಬಿಡಿ”-ಇಮಾಮ ಸೈಕಲ್ಲನೇರಿದ.
ಮನೆ ಎದುರಿನಿಂದ ಹಾದು ಹೋಗುವಾಗ ಅಂಗಳದಲ್ಲಿದ್ದ ತಾಯಿ ಕೇಳಿದಳು-
“ಅಲ್ಲೋ ಇಮಾಮ, ಬೆಳಗಾದ ಕೂಡ್ಲೆ ಮನೇಲಿ ಏನಿದೆ ಏನಿಲ್ಲ ಅಂತಾನೂ ಕೇಳ್ದೆ ಹೊರಟುಬಿಟ್ಯಲ್ಲ. ಮನೇಲಿರೋರು ಬದುಕಬೇಕೋ ಸಾಯಬೇಕೋ?…..”
ಗೇಟಿಗೆ ಕಾಲುಕೊಟ್ಟು ಸೈಕಲ್ ನಿಲ್ಲಿಸಿಕೊಂಡಿದ್ದವ ಮುಂದೆ ಚಲಿಸಿ-
“ಎಲ್ಲ ಹೋಗಿ ಹಿರೇಭಾಸ್ಕರ ಡ್ಯಾಮಿಗೆ ಮಗುಚಿಕೊಳ್ಳಿ-”
ಎಂದು ನುಡಿದವನೆ ಪೆಡಲ್ ತುಳಿಯಲಾರಂಭಿಸಿದ.
*
*
*
ಬೆಳಗಿನ ಜಾವದ ಮೊದಲ ಕೋಳಿ ಕೂಗುತ್ತಿರುವಾಗಲೇ ಎದ್ದೆ. ಶಾಲೆಯ ಜಗುಲಿಯ ಮೇಲೆ ಇಳಿಬಿಟ್ಟ ಜಾಗಟೆಯನ್ನು ಹೊಡೆದೆ. ಮುಖ ತೊಳೆದು ಬರುವಷ್ಟರಲ್ಲಿ ಹುಡುಗರಲ್ಲಿ ಕೆಲವರು ಎದ್ದು ಶಾಲೆಗೆ ಬಂದಿದ್ದರು. ಇನ್ನೂ ಕೆಲವರು ಬಂದಿರಲಿಲ್ಲ. ಹುಡುಗರ ವಸತಿಗೃಹಕ್ಕೆ ಹೋಗಿ ಮಲಗಿದ್ದವರನ್ನೆಲ್ಲ ಎಚ್ಚರಿಸಿದೆ. ಎಲ್ಲರೂ ಎದ್ದು ಅವರವರ ಹಾಸಿಗೆ ಸುತ್ತಿಟ್ಟು ಹೊರಗೆ ನಡೆದರು. ಆದರೆ ಮೂಲೆಯಲ್ಲಿ ಒಂದು ಹಾಸಿಗೆ ಹಾಸಿದಂತೆಯೇ ಇತ್ತು.
“ಮಾದಪ್ಪ ಅದು ಯಾರ್ದು ಹಾಸಿಗೆ?”
“ಕನ್ನಂದು ಸಾರ್.”
“ಎಲ್ಲಿ ಕನ್ನ? ಕರಿ ಅವನ್ನ. ಎದ್ದ ಕೂಡ್ಲೆ ಹಾಸಿಗೆ ತೆಗೀಲಿಕ್ಕೂ ಬರಲ್ಲೇನು ಅವನಿಗೆ?”
ಹುಡುಗರು ಕನ್ನನನ್ನು ಹುಡುಕಲು ಹೋದರು.
ಶಾಲೆಯ ಹೊರ ಅಂಗಳದಲ್ಲಿ ಪ್ರಾತಃಕಾಲದ ಪ್ರಾರ್ಥನೆ..

“ಈಶಾವಾಸ್ಯಮಿದಂ
ಸಕಲಕೆಲ್ಲಕು ನೀನೇ
ಶರಣು ಶರಣುವಯ್ಯ ಗಣನಾಯ್ಕ
ವಂದೇ ಮಾತರಂ”

`ಪ್ರಾರ್ಥನೆ ಮುಗಿದಾಗ ಕನ್ನ ಇಲ್ಲ ಎಂಬ ಸುದ್ದಿ ಬಂತು. ಎದುರು ಕುಳಿತ ಹುಡುಗರ ನಡುವೆಯೂ ಕನ್ನ ಇರಲಿಲ್ಲ. ಎಲ್ಲಿಗೆ ಹೋದ? ಓಡಿ ಹೋಗದಿರಲೆಂದು ಕಾಲಿಗೊಂದು ಹಾರೆ ಕಟ್ಟಿದ್ದೆ. ಹಾಗೆ ಮಾಡಬಾರದಿತ್ತು. ನಿಜ. ಅದೊಂದು ಹಿಂಸೆಯೂ ಹೌದು. ಆದರೂ ಬೇರೆ ದಾರಿ ಇರಲಿಲ್ಲ. ಹುಡುಗ ಆಶ್ರಮದಲ್ಲಿರಲಿ, ಓದು ಕಲಿತು ವಿದ್ಯಾವಂತನಾಗಲಿ ಎಂದು ಇಷ್ಟು ಮಾಡಿದ್ದು. ಆದರೂ ಓಡಿಹೋದನೆಂದರೆ! ರಾತ್ರಿಯೇ ಖಾನ್‌ತೋಟಕ್ಕೆ ಹೋದನೋ ಏನೋ. ದಾರಿಯಲ್ಲಿ ಹಳ್ಳಕೊಳ್ಳಕ್ಕೆ ಬಿದ್ದಿದ್ದರೆ? ಯಾವುದೋ ಕಾಡುಪ್ರಾಣಿ ಅವನನ್ನು ಹಿಡಿದು ಕಿತ್ತು ತಿಂದಿದ್ದರೆ?
ಆಳು ರಂಗಣ್ಣನನ್ನು ಕಾನ್‌ತೋಟಕ್ಕೆ ಕಳುಹಿಸಿದ್ದಾಯ್ತು, ಅಡಿಗೆಯಾಳು ಚೌಡಪ್ಪ ಬೆಳ್ಳಾಣೆಗೆ ಹೋದ.

ಶಾನುಭೋಗ-ವಿಲೇಜ್ ಅಕೌಂಟೆಂಟ್ ಸೋಮಣ್ಣ ಕಲ್‌ಮನೆಗೆ ಹೋಗಿ ಬರುವುದಾಗಿ ಹೇಳಿಕಳುಹಿಸಿದ್ದಾನೆ.
ಗ್ರಾಮಸೇವಕ ಇಮಾಮ ಮಂಜಿನ ಕಾನಿಗೆ ಹೋದ. ಇಲ್ಲಿ ಎಲ್ಲಿದ್ದರೂ ಕನ್ನ ಸಾಯಂಕಾಲದೊಳಗೆ ಆಶ್ರಮಕ್ಕೆ ತಿರುಗಿ ಬರುತ್ತಾನೆ.
ತಾಳಗುಪ್ಪದಲ್ಲೂ ಕನ್ನನ ಅಕ್ಕನ ಮನೆಯೊಂದಿದೆ. ಅಲ್ಲಿಗೂ ಹೋಗಿ ನೋಡಿ ಬಂದರಾಗುತ್ತಿತ್ತು. ಹಾಗೆಯೇ ರಂಗೋಜಿಯ ಅಂಗಡಿಗೆ ಹೋಗಿ ಮನೆಯ ವಿಷಯ ತಿಳಿದು ಬರುವುದು.
ಆಶ್ರಮಶಾಲೆಯ ಮೇಷ್ಟ್ರು ಏರುತ್ತಿರುವ ಬಿಸಿಲಿನಲ್ಲಿ ತಾಳಗುಪ್ಪೆಯ ದಾರಿ ಹಿಡಿದರು.
*
*
*
ಸೋಮಣ್ಣ ಗಿಳಿಗಾರು, ಗಾಲೀಮನೆಗಳನ್ನು ದಾಟಿ ಕಲ್‌ಮನೆಗೆ ಬಂದು ತಲುಪಿದಾಗ ಹೊತ್ತು ನೆತ್ತಿಗೇರಿತ್ತು, ಬ್ರಾಹ್ಮಣ ಮನೆಗಳೆದುರು ಹಾದು ಹೋಗುವಾಗ ಜಗಲಿಯ ಮೇಲೆ ಕುಳಿತು ಹರಟೆ ಕೊಚ್ಚುತ್ತಿದ್ದ ಹಲವರು-“ಬನ್ನಿ ಶ್ಯಾನುಭೋಗ್ರೆ”ಎಂದು ಕರೆದರೂ ನಿಲ್ಲದೆ ಮುಂದೆ ನಡೆದ ಸೋಮಣ್ಣ. ಆ ಹುಡುಗನ ಅಕ್ಕನ ಮನೆ ಇದ್ದುದು ಅಲ್ಲಿಂದ ಮತ್ತೂ ಸ್ವಲ್ಪ ದೂರ. ಕಾಲಕೆಳಗಿನ ಮಣ್ಣು ಹುಡಿಯಾಗಿ ಸುಡುತ್ತಿತ್ತು. ಅಲ್ಲೊಂದು ಇಲ್ಲೊಂದು ಮರ ಕಾಲುಹಾದಿಯ ಮೇಲೆ ನೆರಳು ಚೆಲ್ಲುತ್ತ ನಿಂತಿತ್ತು. ಸೋಮಣ್ಣನ ಹೊಟ್ಟೆ ಚುರುಗುಟ್ಟುತ್ತಿತ್ತು.

ಮೊದಲನೆಯ ಕೆಲಸ ಆ ಹುಡುಗನ ಶೋಧ. ನಂತರ ಊಟದ ಪ್ರಶ್ನೆ ಎಂದುಕೊಂಡು ಮಾರುಗಾಲು ಹಾಕಿದ.

ದೀವರ ಬಂಕನ ಮನೆಯ ಹಿಂದೆಯೇ ಆ ಮನೆ; ಎದುರು ಕುಳಿತ ನಾಯಿ ಹೋ ಎಂದು ಕೂಗಲಾರಂಭಿಸಿತು. ಆ ಕೂಗಿಗೆ ಹುಡುಗನ ಅಕ್ಕ ಹೊರಗೋಡಿ ಬಂದಳು. ರವಕೆ ತೊಡದ ಮೇಲು ಭಾಗವನ್ನು ಕುಲುಕಾಡಿಸಿಕೊಂಡು ಬಂದ ಅವಳು ಅಂಗಳದಲ್ಲಿ ಸೆರಗು ಹೊದ್ದು ಏನು ಎಂಬಂತೆ ಇವನ ಮುಖ ನೋಡಿದಾಗ ಈತ-
“ಅಲ್ಲ, ನಿನ್ನ ತಮ್ಮ ಬಂದಾನೇನು ಇಲ್ಲಿಗೆ?”
“ಯಾರು? ಬರಾ ಹುಡುಗ್ನೇ?”
ನಗು ಬಂತು ಸೋಮಣ್ಣನಿಗೆ. ಓದು ಬರಹ ಕಲಿಯಲೆಂದು ಆಶ್ರಮದಲ್ಲಿ ಹುಡುಗನನ್ನು ಬಿಟ್ಟು ಇನ್ನೂ ಒಂದು ವರ್ಷವಾಗಿಲ್ಲ. ಆಗಲೇ ಅವನು ಬರಾ ಹುಡುಗ!

“ಹೌದು . ಅವನು ಆಶ್ರಮದಲ್ಲಿಲ್ಲ…..ಹಿಂದಿನ ಹಾಗೇ ಓದಿ ಹೋಗಿದ್ದಾನೆ. ಇಲ್ಲಿಗೆ ಬಂದಿರಬಹುದೇನೋ ಅಂತ ಬಂದೆ.”
ಅವಳು ಗಾಬರಿಯೂ ಆಗಲಿಲ್ಲ. ಅವಳಿಗೆ ದುಃಖವೂ ಆಗಲಿಲ್ಲ, ಅವಳು ಸಹಜವಾಗಿಯೇ ನುಡಿದಳು.
“ಕಾನ್‌ತೋಟಕ್ಕೆ ಹೋಗಿರಬೈದು ಬಿಡಿ.”
“ಸರಿ.”
ಹಿಂತಿರುಗಿದ ಸೋಮಣ್ಣ ಅಲ್ಲಿಂದ.

ಒಂದು ವಿಷಯ ಖಚಿತವಾಯಿತು. ಕನ್ನ ಇಲ್ಲಿಗಂತೂ ಬಂದಿಲ್ಲ. ತಾನು ಬಂದ ಕೆಲಸವಾಯಿತಲ್ಲ. ಸೋಮಣ್ಣ ಅಲ್ಲಿಂದ ಹಿಂತಿರುಗಿ ಮತ್ತೆ ಬ್ರಾಹ್ಮಣ ಮನೆಗಳೆದುರು ಹಾದು, ಶಾಲೆ, ಗ್ರಾಮ, ಚಾವಡಿಗಳನ್ನು ಹಿಂದೆ ಹಾಕಿ, ಮಾರೀಗುಡಿಯ ಬಳಿ ಬಂದು ಎಡಕ್ಕೆ ಹೊರಳಿದ. ಹಳ್ಳಿಯ ಸರಕಾರೀ ಸೂಲಗಿತ್ತಿ ಕ್ರಿಸ್ತೀನಾಬಾಯಿ ಕಾಲು ಉದ್ದಕ್ಕೆ ನೀಡಿಕೊಂಡು ತನ್ನ ಮನೆಯ ಜಗುಲಿಯ ಮೇಲೆ ಕುಳಿತವಳು ಸಂಭ್ರಮದಿಂದ ಎದ್ದು ನಿಂತಳು.
“ಓ ಬನ್ನಿ”-ಎಂದಳು.
*
*
*
ಕನ್ನನ ತಂದೆ ಕಾನ್‌ತೋಟದ ಬಸಪ್ಪ ರಂಗಣ್ಣನ ಮುಖ ನೋಡಿದವನೆ,
“ಏನು ಬಂದೆ ರಂಗಣ್ಣ?”-ಎಂದು ಕೇಳಿದ.
ಮಗ ಓಡಿ ಹೋಗಿದ್ದಾನೆ ಅನ್ನುವ ಸುದ್ದಿ ಕೇಳಿ-
“ಅಲ್ಲ. ಏನೋ ಓದಿ ಇದ್ಯಾ ಕಲೀಲಿ ಅಂತ ಅಲ್ಲಿ ತಂದು ಹಾಕಿದ್ರೆ ಆ ಬೇವಾರ್ಸಿ ಹಿಂಗ ಮಾಡೋದು . ಹೋಗ್ಲಿ ಬಿಡು ಎತ್ತಾಗಾದ್ರು”
-ಎಂದು ನುಡಿದು ರಂಗಣ್ಣನಿಗಾಗಿ ಜಗುಲಿಯ ಮೇಲೆ ಕಂಬಳಿ ಹಾಸಿದ. ರಂಗಣ್ಣ ಕುಳಿತು ಎಲೆ ಅಡಿಕೆ ತಾಬಾಣವನ್ನು ಹತ್ತಿರ ಎಳೆದುಕೊಂಡು ಅಡಕೆಯನ್ನು ಬಾಯಿಗೆಸೆದುಕೊಂಡು ಎಲೆಯ ಬೆನ್ನಿಗೆ ಸುಣ್ಣ ಸವರುತ್ತ “ಎಲ್ಲಿಗೆ ಹೋಗಿರಬೋದು ಬಸಪ್ಪ?” ಎಂದು ಕೇಳಿದ.

“ಅಂವ ಇಲ್ಲಂತೂ ಬಂದಿಲ್ಲ. ಬಂದ್ರೆ ನಾನು ಮತ್ತೆ ಅವನ್ನ ಶಾಲೆಗೆ ಕರಕೊಂಡು ಹೋಗ್ತೀನಿ ಅಂತ ಗೊತ್ತು ಅವನಿಗೆ. ಅವನು ಇಲ್ಯಾಕೆ ಬಂದಾನು. ಆದರೆ, ನನಗೊಂದು ಅನುಮಾನ…ಮುಂಚಿನ ಕಾನಾಗೆ ಅವನ ಅಜ್ಜಿ ಮನೆ ಐತೆ. ಅಲ್ಲಿಗೆ ಹೋಗಿದ್ರು ಹೋಗಿರಬೈದು……”
“ಸರಿ…ಹೋಗ್ತಾ ಹಂಗೇ ಹೋಗ್ತೀನಿ ಬಿಡು.”

ಎದ್ದ ರಂಗಣ್ಣ. ಬಸಪ್ಪನ ಮಗಳು ಒಳಗಿನಿಂದ ಎಲೆಯಲ್ಲಿ ಅದೇನೋ ತಂದಳು. ರಂಗಣ್ಣ ಬಾಯಲ್ಲಿದ್ದ ತಾಂಬೂಲ ಉಗಿದುಬಂದ. ಅವನಿಗೂ ಹಸಿವಾಗಿತ್ತು. ಎಲೆಯನ್ನು ಹತ್ತಿರ ಎಳೆದುಕೊಂಡ.
“ಮನೆಯಾಗೆ ಎಲ್ರೂ ಆರಾಮಾಗಿದಾರ-”
ಬಸಪ್ಪ ಕೇಳಿದ, ಹಸಿ ಅಡಕೆಯೊಂದನ್ನು ಕುಡಗೋಲಿನಿಂದ ಸುಲಿಯುತ್ತ.

“ಎಲ್ಲಿ ಆರಾಮ ತೆಗಿ ಬಸಪ್ಪ, ನನ್ನ ಮನೆಯಾಗೆ ಎಲ್ರಿಗು ಕಾಯ್ಲೆ. ಮುದುಕಿ ಅತ್ಲಾಗೆ ಸಾಯೋದೂ ಇಲ್ಲ. ಇತ್ಲಾಗೆ ಬದುಕೋದೂ ಇಲ್ಲ. ಊರಾಗಿರೋ ನಾಲ್ಕು ಎಕ್ರೆ ಇವಳ ಕಾಯ್ಲೆಗೆ ಮಾರಿ ತಿಂದಿದ್ದಾಯ್ತು. ನನ್ನ ಹೆಂಡ್ರಿಗೂ ಕಾಯ್ಲೆ. ಮಗನಿಗೂ ಕಾಯ್ಲೆ. ಸರಕಾರ ಕೊಡೋದು ನೂರಿಪ್ಪತ್ತು, ಮನೆಯಾಗಿರೋ ಜನ ಹನ್ನೆರಡು ನಾನೇನು ಮಾಡ್ಲಿ?”
ರಂಗಣ್ಣ ಎದ್ದ ಬುಸುಗುಡುತ್ತ.
“ಬರ್ತೀನಿ ಬಸಪ್ಪ” ಎಂದು ನುಡಿದು ಹೊರಟೇಬಿಟ್ಟ ಮಂಜಿನ ಕಾನಿನತ್ತ. ಅಡಿಕೆ ಸುಲಿಯುತ್ತಿದ್ದ ಬಸಪ್ಪ ರಂಗಣ್ಣ ಹೋಗುವುದನ್ನೇ ನೋಡುತ್ತಿದ್ದ.
*
*
*
ಬೆಳ್ಳಾಣೆಯ ದೇವಸ್ಥಾನದೆದುರು ನಿಂತು ದೇವರಿಗೆ ಕೈಮುಗಿದು ನಾಲ್ಕು ಹೆಜ್ಜೆ ಹೋದಾಗ ಕನ್ನನ ಚಿಕ್ಕಪ್ಪ ಮರಿಯಣ್ಣನೇ ಎದುರಾದ.
“ಅರೆ ಎಲ್ಲಿಗೆ?”-ಎಂದು ಕೇಳಿದ ಮರಿಯಣ್ಣ ಚೌಡಪ್ಪನಿಗೆ,
“ನಿಮ್ಮಲ್ಲಿಗೇ ಹೊರಟಿದ್ದು, ನಮ್ಮ ಕಾನ್‌ತೋಟದ ಬಸಪ್ಪನ ಮಗ ನಿಮ್ಮನೆಗೇನಾರ ಬಂದಿದಾನ?”
“ಇಲ್ಲ, ಯಾಕೆ?”
“ನಿನ್ನೆ ರಾತ್ರಿ ಆಶ್ರಮದಲ್ಲಿದ್ದ, ಈವತ್ತು ಬೆಳಗಾದಾಗ ಕಾಣೆಯಾಗಿದಾನೆ. ಅಲ್ಲೆಲ್ಲ ಹುಡುಕಿದ್ದಾಯ್ತು. ಇಲ್ಲಿಗೆ ಬಂದಿರಬಹುದು ಅಂತ ಬಂದೆ. ಹಾಗಾದ್ರೆ ಇಲ್ಲಿಗೆ ಬಂದಿಲ್ಲ ಅವನು?”
“ಇಲ್ಲಪ್ಪ?”
“ಎಲ್ಲಿಗೆ ಹೋಗಿರಬಹುದು ಅಂತೀಯ ಮರಿಯಣ್ಣ?”
“ಮಂಜಿನಕಾನಾಗೆ ಅವನ ಅಜ್ಜಿ ಮನೆ ಐತೆ. ಅಲ್ಲಿ ನೋಡಬೇಕಿತ್ತು….” ಚೌಡಪ್ಪ ಮರಿಯಣ್ಣನ ಜೊತೆಗೇನೇ ಹಿಂತಿರುಗಿ ಹೊರಟ. ಮರಿಯಣ್ಣ ದೇವಾಲಯದವರೆಗೂ ಚೌಡಪ್ಪನ ಹಿಂದೆ ಬಂದ. ಅಲ್ಲಿ ಬೇರೊಂದು ದಾರಿಗೆ ಹೊರಳಿ-
“ನಾನು ಹೆಗ್ಡೇರ ಮನೆಗೆ ಹೋಗ್ಬೇಕು”
-ಎಂದು ಹೇಳಿ ಹತ್ತಿರದ ತೋಟದಲ್ಲಿ ಮಾಯವಾದ.

ಬಿಸಿಲಲ್ಲೇ ನಡೆದ ಚೌಡಣ್ಣ. ಹಾಗೆ ಬಂದಿದ್ದರೆ ಇಷ್ಟು ಹೊತ್ತಿಗಾಗಲೇ ತನ್ನನ್ನು ಸೇರಬೇಕಿತ್ತು. ಆಶ್ರಮಶಾಲೆಯ ಹತ್ತಿರವೇ ತನಗಾಗಿ ಕಾದು ಕುಳಿತನೋ, ಇಲ್ಲ ತಾನು ಅಲ್ಲಿ ಇಲ್ಲವೆಂದು ತಿಳಿದು ಹಿಂತಿರುಗಿದನೋ. ಅಂತೂ ಅವನು ಬಂದುದು ಒಂದೇ ಉದ್ದೇಶಕ್ಕಾಗಿ. “ಚೌಡಣ್ಣ, ನಿನ್ನ ಅತ್ತಿಗೆ ಊಟ ನಿದ್ದೆ ಬಿಟ್ಟು ಕೂತಿದಾಳೆ. ಬಾ, ಮನೆಗೆ ಹೋಗೋಣ ಬಾ”-ಇದು ಕಳೆದ ನಾಲ್ಕು ತಿಂಗಳುಗಳಿಂದ ಅಣ್ಣ ಬಂದಾಗಲೆಲ್ಲ ಹೇಳುವ ಮಾತು. ಅಣ್ಣನ ಮನೆ ಬಿಟ್ಟು ಬಂದು ಇಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದೇನೆ ತಾನು. ಮನೆಯಲ್ಲಿ ಎಲ್ಲವೂ ಇದೆ ತನಗೆ. ಆಸ್ತಿ ಇದೆ. ಮನೆ ಹೊಲಗಳಿವೆ. ಆದರೂ ಎಲ್ಲವನ್ನೂ ಬಿಟ್ಟು ಬಂದಿದ್ದೇನೆ ಎಲ್ಲರಿಗೂ ಇದೊಂದು ಒಗಟು. ಅಣ್ಣ ಕೂಡ-” ಹೀಗೆ ಯಾಕೆ ಮಾಡ್ತಿದೀಯಾ ಚೌಡಣ್ಣ. ಮನೆಗೆ ಬಾ” ಎನ್ನುತ್ತಾನೆ. ಹೋಗಲೇ? ಅತ್ತಿಗೆ ಬಂದು ಎದುರು ನಿಲ್ಲುತ್ತಾಳೆ.

`ಚೌಡಣ್ಣ, ನಾನು ಹೇಳಿದ ಹಾಗೆ ಕೇಳಿಕೊಂಡು ಇರು. ನಿಮ್ಮಣ್ಣನಿಗೆ ಯಾವ ಅನುಮಾನವೂ ಆಗದೇ ಇರೋ ಹಾಗೆ ನೋಡಿಕೊಂಡರಾಯ್ತು. ನನ್ನ ಮಾತು ಕೇಳು” ಎನ್ನುತ್ತಾಳೆ ಅವಳು ನಾಚಿಕೆ ಬಿಟ್ಟು.

ಅವಳು ಮೈ ಮರೆಯುತ್ತಾಳೆ, ತನ್ನ ಬಳಿ ಬರುತ್ತಾಳೆ. ತನ್ನ ಕೈ ಹಿಡಿಯುತ್ತಾಳೆ. ಅವಳ ಮೈ ಕಪಿಸುತ್ತಿರುತ್ತದೆ. ಆದರೆ ಅಣ್ಣನಿಗೆ ತಾನು ದ್ರೋಹ ಬಗೆಯಲಾರೆ. ಅತ್ತಿಗೆಯ ಕೈಯ ಸುತ್ರದ ಗೊಂಬೆಯಾಗಲಾರೆ. ಈ ಕಾರಣದಿಂದಾಗಿಯೇ ಆಶ್ರಮಶಾಲೆಯ ಅಡಿಗೆ ಭಟ್ಟನಾಗಿ ಉಳಿದಿದ್ದೇನೆ. ಮುಂದೂ ಇಲ್ಲಿಯೇ ಉಳಿಯುತ್ತೇನೆ. ಚೌಡಣ್ಣ ನಡೆದ. ಕೊರಕಲು ಬಿದ್ದ ಗಾಡಿ ರಸ್ತೆಯನ್ನು ಹಿಡಿದು ಸಾಗಿದ.
*
*
*
ಮಂಜಿನಕಾನಿನ ಯಕ್ಷಿಕಟ್ಟೆಯ ಹತ್ತಿರದ ಕನ್ನನ ಸೋದರತ್ತೆಯ ಮನೆಯಲ್ಲಿ ವಿಚಾರಿಸಿ ಅವನು ಅಲ್ಲಿ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು-ಅವನ ಅಜ್ಜಿ ಮನೆ ಹಳ್ಳಿಯ ಆ ತುದಿಯಲ್ಲಿದೆ, ಅಲ್ಲಿ ವಿಚಾರಿಸಿ, ಎಂದು ಕನ್ನನ ಸೋದರತ್ತೆ ಹೇಳಿದ ಮೇಲೆ, ಅತ್ತ ಹೊರಟ ಇಮಾಮನಿಗೆ ನಡುದಾರಿಯಲ್ಲಿ ಮಂಜಿನಕಾನಿನ ಶಾಲಾ ಉಪಾಧ್ಯಾಯ ರಾಮರೆಡ್ಡಿಯ ಭೇಟಿಯಾಯಿತು. ರೆಡ್ಡಿ ಇಮಾಮನನ್ನು ಮನೆಗೆ ಕರೆದೊಯ್ದ.
“ಅಡಿಗೆ ನಂದೇ ಕಣಯ್ಯ, ಬಾ ಊಟ ಮಾಡೋಣ” ಎಂದ ರೆಡ್ಡಿ.
ಇಮಾಮನ ಹೊಟ್ಟೆಯೂ ಹಸಿದಿತ್ತು. ಇಬ್ಬರೂ ಊಟಕ್ಕೆ ಕುಳಿತರು. ರೆಡ್ಡಿ ಬೇಯಿಸಿದ ನಾಲ್ಕು ಮೊಟ್ಟೆಗಳನ್ನು ಮುಂದೆ ಇಡುತ್ತ- “ಇಮಾಮ, ಡ್ರಿಂಕ್ಸ್ ತೊಕ್ಕೊಳ್ಳೋ ಅಭ್ಯಾಸ ಇದೆಯೇನಯ್ಯ” ಎಂದು ಕೇಳಿದ.
“ತಂದಿದ್ದು ಇದೆಯಾ?”
“ಅದಕ್ಕೇನಂತೆ!”

ರೆಡ್ಡಿ ಎದ್ದು ಹೋಗಿ ಟ್ರಂಕಿನ ಹಿಂಬದಿಯಿಂದ ಬಾಟ್ಲಿಯೊಂದನ್ನು ತಂದ. ಇಮಾಮ ನಿಧಾನವಾಗಿ ಊಟ ಮಾಡಲಾರಂಭಿಸಿದ. ಅಷ್ಟೇ ನಿಧಾನವಾಗಿ ಮೈಮನಸ್ಸಿನ ಮೇಲಿನ ಹತೋಟಿ ತಪ್ಪಿದಂತಾಗಿ ಆತ ತೊದಲ ತೊಡಗಿದ.

“ರೆಡ್ಡಿ ದೋಸ್ತ್…ಇಷ್ಟು ದಿನಕ್ಕೆ ಒಂದು ಒಳ್ಳೆಯ ಊಟ ಅಂದ್ರೆ ಇದು ನೋಡು. ನನ್‌ಮ್ನೇಲಿ ದಿನಾ ಜಗಳ ಕಣಯ್ಯ, ನನ್ನ ಹೆಂಡ್ತಿ…ನನ್ನ ತಾಯಿ ನನ್‌ತಂಗಿ….ಮೂರು ನಾಯಿಗಳು. ನಾನು ಮನೇಲಿ ಸರಿಯಾಗಿ ಊಟ ಮಾಡೋಲ್ಲ ದೋಸ್ತ್. ಸರಿಯಾಗಿ ನಿದ್ದೆ ಮಾಡೋಲ್ಲ. ಆ ನಾಯಿಗಳ ಜಗಳದಲ್ಲಿ ನನ್ನ ಮನಸ್ಸಿನ ಶಾಂತಿ ಸಂತೋಷ ಎಲ್ಲ ಹಾಳಾಗಿ ಹೋಗಿದೆ ದೋಸ್ತ್…”

ತೊದಲುತ್ತಿದ್ದ ಇಮಾಮನ ಲೋಟಕ್ಕೆ ಬಾಟಲಿಯಲ್ಲಿರುವುದನ್ನೆಲ್ಲ ಬಗ್ಗಿಸಿ ಉಳಿದ ಮತ್ತೂ ಒಂದು ಮೊಟ್ಟೆಯನ್ನು ಇಮಾಮನಿಗೆ ಕೊಟ್ಟು ರೆಡ್ಡಿ-
“ನಿಧಾನವಾಗಿ ಊಟ ಮಾಡು” ಎಂದ.
ಇಮಾಮನ ಮೇಲೆ ರೆಡ್ಡಿಗೆ ಕನಿಕರ ಉಕ್ಕಿ ಬಂದಿತು.
*
*
*
ರಂಗಣ್ನ ಕನ್ನನ ಅಜ್ಜಿಯ ಮನೆಯಿಂದ ಅವನು ಅಲ್ಲಿ ಇಲ್ಲ ಎಂಬುದನ್ನು ತಿಳಿದುಕೊಂಡು ಹೊರಬಂದಾಗ, ಚೌಡಣ್ಣ ಅಂಗಳಕ್ಕೆ ಕಾಲಿಟ್ಟ.
“ನಡಿ ಚೌಡಣ್ಣ, ಕನ್ನ ಇಲ್ಲೂ ಇಲ್ಲ” ಎಂದ ರಂಗಣ್ಣ.

ಈರ್ವರೂ ಆಶ್ರಮಶಾಲೆಯ ಹಳ್ಳಿಯ ದಾರಿ ಹಿಡಿದರು. ಹಳ್ಳಿಯ ಹತ್ತಿರಹತ್ತಿರ ಬಂದ ಹಾಗೆ ಸಂಜೆಯಾಯಿತು. ಹಳ್ಳಿಯ ಸೆರೆ ಅಂಗಡಿಗೆ ತಾಜಾ ಕಳ್ಳನ್ನು ಇಳಿಸಿ ಹಿಂತಿರುಗುತ್ತಿದ್ದ ಲಾರಿಯ ಸದ್ದು ಕೇಳಿಸಿತು. ಮನೆಗಳತ್ತ ಹೋಗಲು ಇಬ್ಬರಿಗೂ ಮನಸ್ಸಿರಲಿಲ್ಲ. ರಂಗಣ್ನ ಚೌಡಣ್ಣನ ಮುಖ ನೋಡಿದ.
ಇಬ್ಬರೂ ಸೆರೆ ಅಂಗಡಿಯತ್ತ ತಿರುಗಿದರು.
*
*
*
ಕನ್ನ ತಾಳಗುಪ್ಪೆಗೆ ಬಂದಿರಲಿಲ್ಲ. ಕಾನ್‌ತೋತದಿಂದ ತಾಳಗುಪ್ಪೆಗೆ ಬಂದಿದ್ದ ಕನ್ನನ ತಂದೆ ಬಸಪ್ಪ-

“ಮೇಷ್ಟ್ರೇ, ಕನ್ನ ಎಲ್ಲಿಗೋ ಹೋದ ಅಂತ ನೀವೇನೂ ಬೇಜಾರು ಮಾಡೋದು ಬೇಡ. ಎಲ್ಲಿ ಅವನು ಹೋದ್ರೂ ಬರ್ತಾನೆ. ಸುಮ್ನಿರಿ….” ಎಂದಿದ್ದ ಹೀಗಾಗಿ ಮನಸ್ಸಿಗೆ ತುಸು ನೆಮ್ಮದಿ ಎನಿಸಿತು.

ರಂಗೋಜಿಯ ಅಂಗಡಿ ಮೆಟ್ಟಿಲುಗಳನ್ನೇರುವಾಗ ರಂಗೋಜಿ ಹೊಲಿಗೆ ಯಂತ್ರವನ್ನು ತುಳಿಯುತ್ತ-
“ಬನ್ನಿ ಮೇಷ್ಟ್ರೆ”ಎಂದು ಸ್ವಾಗತಿಸಿದ.
ಮೇಷ್ಟ್ರು ಒಳಗೆ ಹೋಗಿ ದಿಂಬಿಗೆ ಒರಗಿ ಕುಳಿತರು.
“ಊರ ಕಡೆ ಹೋಗಿದ್ರಾ?” ರಂಗೋಜಿಯೇ ಮಾತಿಗಾರಂಭಿಸಿದ.
“ಇಲ್ಲ, ನೀವು ಹೋಗಿದ್ರಂತಲ್ಲ.”
“ಹೌದು.”
“ನಮ್ಮ ಮನೆ ಕಡೆ ಹೋಗಿದ್ರಾ?”

ರಂಗೋಜಿ ಬಹಳ ಹೊತ್ತು ಉತ್ತರಿಸಲಿಲ್ಲ. ಡರರ್ ಎಂದು ಅವನ ಯಂತ್ರ ಸದ್ದು ಮಾಡುತ್ತಲಿತ್ತು. ಮಧ್ಯೆ ಯಾವಾಗಲೋ ಹೊಲಿಯುವುದನ್ನು ನಿಲ್ಲಿಸಿ ರಂಗೋಜಿ ಕೇಳಿದ-
“ಅಂತೂ, ನಿಮಗೆ ಮನೆ ನೆನಪಿದೆ ಅಂತ ಆಯ್ತು.”
ಈ ಮಾತಿಗೆ ಮೇಷ್ಟ್ರು ಏನನ್ನೂ ಉತ್ತರಿಸಲಿಲ್ಲ.
ರಂಗೋಜಿಯೇ ಮಾತಿಗೆ ತೊಡಗಿದ. ಆದರೆ ಅದೇಕೋ ಅವನ ದನಿ ಗಡುಸಾಗಿತ್ತು.

“ನಿಮ್ಮ ಮನೆಗೆ ಹೋಗಿದ್ದೆ. ನಿಮ್ಮ ತಾಯಿ ಒಬ್ರೆ ಪರದಾಡೋದನ್ನ ನೋಡಿ ಕಣ್ಣಲ್ಲಿ ರಕ್ತ ಬಂತು. ಒಂಟಿ ಹೆಣ್ಣು ಅದೇನು ಅಂತ ಮಾಡಬೇಕು? ಮನೆ ತುಂಬ ಇರೋ ನಿಮ್ಮ ತಮ್ಮ ತಂಗಿಯರನ್ನು ಸಾಕಬೇಕು. ಅವರ ವಿದ್ಯಾಭ್ಯಾಸ ಅನ್ನ ವಸ್ತ್ರದ ಬಗ್ಗೆ ಯೋಚನೆ ಮಾಡಬೇಕು. ಹಾಸಿಗೆ ಹಿಡಿದಿರೋ ನಿಮ್ಮ ತಂದೇನೂ ಸಾಕಬೇಕು. ನೀವು ಏನೇ ಹೇಳಿ ಮೇಷ್ಟ್ರೆ, ಇಲ್ಲಿ ಆಶ್ರಮ ಪ್ರಾರ್ಥನೆ ಅಂತ ನೀವು ಏನು ನಡೆಸ್ತಿದೀರಾ, ಇದು ದಂಡಕ್ಕೆ, ಆ ದೊಡ್ಡ ಕುಟುಂಬದ ಜವಾಬ್ದಾರೀನ ಹೊರಬೇಕಾಗಿರೋ ನೀವು ಇಲ್ಲಿ ಇನ್ನೇನೋ ಮಾಡ್ತಿರೋದು ನನಗಂತೂ ಚೆನ್ನಾಗಿ ಕಾಣೊಲ್ಲ……”

ಮೇಷ್ಟ್ರು ಎದ್ದರು, ಬರ್ತೀನಿ ನಾನು ಎಂದು ಹೇಳಿ ಅಂಗಡಿಯಿಂದ ಹೊರಬಂದಿದ್ದರು. ಮನಸ್ಸಿಗೆ ಬೇಸರವೆನಿಸಿತು. ಕನ್ನ ಕಳೆದುಹೋದ ವ್ಯಥೆ. ರಂಗೋಜಿಯ ಮಾತು ತಂದ ನೋವು. ಹಿಂದುಳಿದ ಜನಾಂಗದವರ ಮಕ್ಕಳಿಗಾಗಿ ಸರಕಾರ ಹಳ್ಳಿಯಲ್ಲಿ ತೆರೆದ ಆಶ್ರಮಶಾಲೆಯ ಉಪಾಧ್ಯಾಯನಾಗಿ ಕೆಲಸ ಮಾಡಲೆಂದು ತಾನು ಊರು ಬಿಟ್ಟು ಬಂದುದು ತಪ್ಪೆ?

ಮೇಷ್ಟ್ರು ಬಂಗಲೆ ಗುಡ್ಡವನ್ನೇರಿದರು. ಬಂಗಲೆಯ ಎದುರು, ಕೆರೆಯತ್ತ ತಿರುಗಿ ಹಸಿರು ಹುಲಿನ ಮೇಲೆ ಪದ್ಮಾಸನ ಹಾಕಿ ಕುಳಿತರು. ಮನಸ್ಸಿನ ಗಲಿಬಿಲಿ ಗೊಂದಲಗಳಿಂದ ಮುಕ್ತರಾಗಬೇಕು ಎನಿಸಿತು. ಧ್ಯಾನಾಸಕ್ತರಾಗುವ ಸನ್ನಾಹ ನಡೆಸಿದರು. ಹೃದಯದ ಒಳಗಿನಿಂದ ಪ್ರಾರ್ಥನೆ ಉಕ್ಕಿ ಬಂದಿತು- ಸಹನಾವವತು…ಸಹನೌಭುನಕ್ತು…ಸಹವೀರ್ಯಂ ಕರವಾವಹೈ…ಓಂ ಶಾಂತಿ ಶಾಂತಿ ಶಾಂತಿಃ.ಅವರು ಅಲ್ಲೇ ಧ್ಯಾನಾಸಕ್ತರಾದರು.
*
*
*
“ಕ್ರಿಸ್ತಿನಾ-”
ಎಂದು ತೊದಲಿ ಸೋಮಣ್ಣ ಅವಳನ್ನು ತಬ್ಬಿಕೊಂಡ.
“ಅದು ಮನೆಯಲ್ಲ ಕ್ರಿಸ್ತಿ, ಜೈಲು. ಅವಳು ನನ್ನ ಬಿಟ್ಟು ಹೋದ್ಲು. ಯಾಕೆ? ಅಲ್ಲಿ ಅವಳ ಊರಲ್ಲಿ ಅವಳಿಗೊಬ್ಬ ಗೆಣೆಯಾ ಇದಾನೆ. ಅದಕ್ಕೇ ಹೋದ್ಲು. ಅವಳು ನನಗೆ ಮೋಸ ಮಾಡಿದ್ಲು…”

ಕ್ರಿಸ್ತೀನಾ ಸೋಮಣ್ಣನ ಕಣ್ಣೀರನ್ನು ಒರೆಸಿದಳು. ಸೋಮಣ್ಣ ಅವಳನ್ನು ಅಪ್ಪಿ ಹಿಡಿದುಕೊಂಡ. ಕ್ರಿಸ್ತೀನಾ ಬಿಸಿಬಿಸಿಯಾಗಿ ಸೋಮಣ್ಣನ ತುಟಿಗಳನ್ನು ಚುಂಬಿಸಿದಳು. ಸೋಮಣ್ಣ ಕ್ರಿಸ್ತೀ ಎಂದು ಕೂಗಿ ಇನ್ನೂ ಬಿಗಿಯಾಗಿ ಅವಳನ್ನು ತನ್ನೆಡೆಗೆ ಎಳೆದುಕೊಂಡ..
*
*
*

ಕನ್ನ ಮೂರು ದಿನಗಳ ನಂತರ ಅದೆಲ್ಲಿಂದಲೋ ತಿರುಗಿ ಬಂದ. ಹಾರ, ಸರಪಳಿಯ ಸಮೇತ.
*****
(೧೯೭೭)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.