ಮೊದಲ ಪುಟಗಳು

ಒ೦ದು ಪುಸ್ತಕವನ್ನು ಎತ್ತಿಕೊಂಡಾಗ, ಬೆನ್ನುಡಿಯ ನಂತರ ಓದುವುದು ಪುಸ್ತಕದ ಮೊದಲ ಪುಟಗಳನ್ನು, ಅದರಲ್ಲೂ ಲೇಖಕರ ಮಾತುಗಳನ್ನು, ಇವುಗಳನ್ನು ಎರಡು ಮಾತು, ಮೊದಲ ಮಾತು, ಅರಿಕೆ, ಓದುವ ಮುಂಚೆ ಹೀಗೆಲ್ಲ ನಾನಾ ರೀತಿಯಿಂದ ಕರೆದಿದ್ದಾರೆ. ಇವೆಲ್ಲವೂ ಆ ಲೇಖಕರ ಒಳಗನ್ನು ಒಂದಿಷ್ಟು ತೋರಿಸುವ ಚಿಕ್ಕ ಕಿಂಡಿಗಳು. ಲೇಖಕನ ಸಾಹಿತ್ಯಕ ನಂಬಿಕೆಗಳು, ಸ್ನೇಹಿತರು, ತುಂಟತನ, ಅಸಮಾಧಾನ, ಸರೀಕರ ಜೊತೆಯ ಜಗಳಗಳು ಇತ್ಯಾದಿಗಳೆಲ್ಲ ಇಲ್ಲಿ ಸ್ವಂತ ಮಾತುಗಳ ಲೇಪದೊಡನೆ ಕಾಣಿಸಿಕೊಳ್ಳುತ್ತವೆ. ಇವೆಲ್ಲ, ಬರಹಗಾರನ ಬಗ್ಗೆ ಅವನ ಕೃತಿಗಳಿಂದ ಹೊರತಾದ, ಮಿಂಚಿನಂಥ ಒಂದು ನೋಟ ಒದಗಿಸುವ ಸಾಲುಗಳು, ಯಾವ ಪುಸ್ತಕ ಎತ್ತಿಕೊಂಡರೂ, ಅದನ್ನು ಓದುವ ಇರಾದೆ ಇಲ್ಲದಾಗ್ಯೂ ಈ ಮೊದಲ ಮಾತುಗಳತ್ತ ಒಮ್ಮೆ ಕುತೂಹಲದ ಕಣ್ಣು ಹಾಯುತ್ತದೆ.

ಕಾಲ ಕಳೆದಂತೆ ಈ ಮುನ್ನುಡಿಗಳೆಲ್ಲ ಹೆಚ್ಚು ಹೆಚ್ಚು ಆಸಕ್ತಿಪೂರ್ಣವಾಗಿ ತೋರುತ್ತವೆ. ಹಳೆಯ ಪುಸ್ತಕಗಳನ್ನು ತಿರುವಿ ಹಾಕುತ್ತ ಆ ಮೊದಲ ಮಾತುಗಳನ್ನು ಬರೆದ ಸಂದರ್ಭವನ್ನು ಊಹಿಸುವುದು, ಅವುಗಳ ಮಹತ್ವವನ್ನು ಈಗ, ಕಾಲದ ಈ ತುದಿಗೆ ನಿಂತು ನೋಡುವುದು ಒಂದು ವಿಶೇಷವಾದ ಅನುಭವ. ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಸಂಕಲನಕ್ಕೆ ಅವರೇ ಬರೆದ ಮಾತುಗಳು, ತಿರುಮಲೇಶ್ ತಮ್ಮ ‘ಮಹಾಪ್ರಸ್ಥಾನ’ ಸಂಕಲನಕ್ಕೆ ಬರೆದ ಮುನ್ನುಡಿಗಳನ್ನು ಈಗ ಗಮನಿಸುವ ಮಹತ್ವದ ಬಗ್ಗೆ ಮತ್ತೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸದ್ಯ ಚಾಲ್ತಿಯಲ್ಲಿರುವ ಪಂಥವನ್ನೋ, ಕಥನಕ್ರಮವನ್ನೋ ಪರೀಕ್ಷಿಸುವ, ಅವುಗಳಿಗೆ ಸವಾಲೊಡ್ಡುವ ಇಂಥ ಮುನ್ನುಡಿಗಳಿಗೆ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನವಿದೆ. ಇಂಥ ಮುನ್ನುಡಿಗಳನ್ನೂ, ಮೊದಲ ಮಾತುಗಳನ್ನೂ ನೋಡುತ್ತ ಹೋಗುವುದರಿಂದಲೇ, ಕೇವಲ ಈ ದಾಖಲೆಗಳ ಮೇಲಿನಿಂದಲೇ, ಪ್ರಚಲಿತವಾದುದಕ್ಕಿಂತ ಭಿನ್ನವಾದ ಇನ್ನೊಂದು ಸಾಹಿತ್ಯ ಚರಿತ್ರೆಯನ್ನು ಕಾಣಿಸುವುದು ಸಾಧ್ಯವಿದೆ. ಇಂಥದ್ದಕ್ಕೆ ವೈಯಕ್ತಿಕವಾದ ತುರ್ತು ಮತ್ತು ಸಹಾನುಭೂತಿಯ ಸ್ಪರ್ಶ ಇರುವುದು ಸಾಧ್ಯವಿದೆ. ಸಾಹಿತ್ಯಪ್ರಿಯರೆಲ್ಲರ ಮನಸ್ಸಿನಲ್ಲಿ ಇಂಥದೊಂದು ಚರಿತ್ರೆ ಇದ್ದೇ ಇರುತ್ತದೆ ಎಂದು ನನ್ನ ನಂಬಿಕೆ.

‘ನಾನಲ್ಲ’ ಎಂಬ ತಮ್ಮ ಕಥಾ ಸಂಕಲನವನ್ನು ಕಿ.ರಂ. ನಾಗರಾಜ ಮತ್ತು ಟಿ.ಎನ್. ಸೀತಾರಾಮರಿಗೆ ಅರ್ಪಿಸಿ ಅದಕ್ಕೆ ಲಂಕೇಶ್ ಬರೆದ ಕೆಲವು ಸಾಲುಗಳನ್ನು ಗಮನಿಸಿ:
ಎಲ್ಲವೋ ಹುಡುಗರೆ, ನೀವು ನನ್ನ ಜೊತೆ
ಹಾಳಾಗುವುದು ಖರೆ,
ನೀವಲ್ಲದೇ ಉಂಡು ತೇಗುವ ಜಾಣರು
ನನಗೆ ಗುರಿಯಾಗುವರೆ?

ಈ ಇಷ್ಟೇ ಮಾತುಗಳಲ್ಲಿ ಲಂಕೇಶ್, ಆ ಹೊತ್ತಿನಲ್ಲಿ ಜೀವನದ ಬಗೆಗಿನ ಅವರ ನಿಲುವು, ತಮಗೆ ಮತ್ತು ತಮ್ಮ ಸ್ನೇಹಿತರಿಗೆ ಯಾವುದು ಪ್ರಿಯ, ಆ ಸ್ನೇಹಿತರು ಯಾವ ರೀತಿಯವರು, ತಾವು ಯಾವುದನ್ನು ಜೀವನದಲ್ಲಿ ಮಹತ್ವದ್ದೆಂದು ಭಾವಿಸುತ್ತಾರೆ-ಮುಂತಾದ ಎಲ್ಲವನ್ನೂ ಹೇಳಿದಂತಿದೆ. ಅಂತೆಯೇ ಅವರು ಪುಸ್ತಕವೊಂದನ್ನು ಅರ್ಪಿಸುತ್ತ ಬರೆದ, ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಗೋಪಾಲಕೃಷ್ಣ ಅಡಿಗರಿಗೆ’ ಎಂಬ ಮಾತು ಮುಂದೆ ಹಲವು ಹತ್ತು ರೀತಿಯಲ್ಲಿ ಅಡಿಗರನ್ನು ಹೊಗಳುವುದಕ್ಕೂ, ತೆಗಳುವುದಕ್ಕೂ ಬಳಕೆಯಾಯಿತು.

‘ಕಾನೂರು ಹೆಗ್ಗಡಿತಿ’ಗೆ ಕುವೆಂಪು ಬರೆದ ಅರಿಕೆ ಆ ಇಡೀ ಕಾದಂಬರಿ ಹೇಗಿರಬಹುದು ಅನ್ನುವುದರ ಕಲ್ಪನೆ ಕೊಡುವಂತಿದೆ. ‘ಕಾದಂಬರಿಯೆಂದರೆ ಕರತಲ ರಂಗಭೂಮಿ; ಅಂಗೈ ಮೇಲಣ ನಾಟಕಶಾಲೆ’ ಎಂದು ಶುರುವಾಗುವ ಈ ಒಂದೂವರೆ ಪುಟದ ಮಾತುಗಳನ್ನು ಓದುತ್ತಿದ್ದಂತೆ ಥಟ್ಟನೆ ಹಲವು ಚಿತ್ರಗಳು ಕಣ್ಣಮುಂದೆ ನಿಲ್ಲುತ್ತವೆ. ರಸಾಸ್ವಾದನೆಯ ಬಗ್ಗೆ ಹೇಳುತ್ತ, ಈ ಕೃತಿಯ ಓದಿಗೆ ಅನುವಾಗುವುದಕ್ಕೆ ಬೇಕಾದ ತಯಾರಿಯತ್ತ ಗಮನ ಸೆಳೆಯುವಂತೆ ಕುವೆಂಪು ಈ ಮಾತುಗಳನ್ನು ಹೇಳುತ್ತಾರೆ: ‘ಇಲ್ಲಿ ಚಿತ್ರಿತವಾಗಿರುವುದು ಮಲೆನಾಡಿನ ಬಾಳಿನ ಕಡಲಿನಲ್ಲಿ ಒಂದು ಹನಿ… ಹೊಸ ಊರಿಗೆ ಹೋಗುವವರು ಅಲ್ಲಿಯ ಜನ ಮತ್ತು ಜೀವನದ ವಿಚಾರವಾಗಿ ತಟಕ್ಕನೆ ಯಾವ ನಿರ್ಣಯಗಳನ್ನೂ ಮಾಡಿಕೊಳ್ಳದೇ, ಸ್ವಲ್ಪಕಾಲ ತಾಳ್ಮೆಯಿಂದಿದ್ದು, ಕ್ರಮೇಣ ಬಳಕೆಯಿಂದ ಜನರನ್ನೂ, ಜೀವನವನ್ನೂ ಪರಿಚಯ ಮಾಡಿಕೊಳ್ಳುವಂತೆ ಈ ಕಾದಂಬರಿಯ ಅರಣ್ಯ ಜಗತ್ತನ್ನು ಪ್ರವೇಶಿಸುವ ವಾಚಕರು ವರ್ತಿಸಬೇಕಾಗುತ್ತದೆ. ಎಂದರೆ ಮೊದಲನೇ ಸಾರಿ ಓದಿದೊಡನೆ ಎಲ್ಲವನ್ನೂ ಪೂರೈಸಿದೆವು ಎಂದುಕೊಳ್ಳುವವರು, ಮೋಟಾರಿನಲ್ಲಿ ಕುಳಿತು ಒಂದೂರಿನ ಪೂರ್ವದ್ವಾರದಿಂದ ಒಳನುಗ್ಗಿ, ಅದರ ಬೀದಿಗಳನ್ನು ಸರ್ರನೇ ಸಂಚರಿಸಿ, ಪಶ್ಚಿಮ ದ್ವಾರದಿಂದ ಹೊರಹೊರಟು ಆ ಊರಿನ ಪೂರ್ಣ ಪರಿಚಯ ಮಾಡಿಕೊಂಡಿದ್ದೇವೆ ಎನ್ನುವವರಂತೆ ಹಾಸ್ಯಾಸದರಾಗುತ್ತಾರೆ.’

ಮೊದಲ ನುಡಿಗಳು, ಕೆಲವೇ ಸಾಲುಗಳಲ್ಲಿ, ಲೇಖಕನ ವ್ಯಕ್ತಿತ್ವದ ಒಂದು ಅಂಶವನ್ನು ಹೊಳೆಯಿಸುತ್ತವೆ ಎಂದು ನನ್ನ ಭಾವನೆ. ಮಾಸ್ತಿಯವರ ಮುನ್ನುಡಿಗಳನ್ನು ಗಮನಿಸಿದರೆ, ಅವರ ನಿರ್ಭಾವ, ಸಮಚಿತ್ತ ವ್ಯಕ್ತಿತ್ವದ ಒಂದು ಎಳೆಯ ದರ್ಶನವಾಗುತ್ತದೆ. ಓದುಗರ ಜೊತೆ ಅವರು ಕೈಗೊಳ್ಳುವ ಸಂವಾದದ ರೀತಿಯ ಪರಿಚಯವಾಗುತ್ತದೆ. ಬೇಂದ್ರೆಯವರ ಪುಸ್ತಕಗಳಲ್ಲಿ, ಅವರು ಓದುಗರ ಸಹೃದಯತೆಯ ಬಗ್ಗೆ ಕೊಟ್ಟ ಮಹತ್ವದ ಅರಿವಾಗುತ್ತದೆ.

ಶಂಕರ ಮೊಕಾಶಿಯವರ ಪ್ರತಿಯೊಂದೂ ಪುಸ್ತಕದ `ಲೇಖಕರ ನುಡಿ’ಗಳು ಅತ್ಯಂತ ವಿಶಿಷ್ಟವಾಗಿವೆ. ‘ಗಂಗವ್ವ ಗಂಗಾಮಾಯಿ’ಯಲ್ಲಿ, ‘ಕನ್ನಡದಲ್ಲಿ ಮೊದಲು ಪರಂಪರೆ ನಿರ್ಮಾಣವಾಗಲಿ, ಆಮೇಲೆ ಅದನ್ನು ಮುರಿಯುವ ಸೊಗಸೇ ಬೇರೆ’ ಎಂದು ಬರೆದ ಅವರು, ‘ನಟನಾರಾಯಣಿ’ ಕಾದಂಬರಿಯ ಮೊದಲ ಮಾತುಗಳನ್ನು ‘ಉಪೋದ್ಘಾತ’ ಎಂದು ಕರೆದು, ‘ಅಗತ್ಯವಿಲ್ಲ. ಗ್ರಂಥವೇ ಅದರ ಉಪೋದ್ದಾತ’ ಅನ್ನುತ್ತಾರೆ. ಮುಂದೆ ಅಂಧ ಪಾಶ್ಚಾತ್ಯ ಪ್ರೇಮವನ್ನು ಉದಾಹರಣೆಗಳ ಸಹಿತ ಖಂಡಿಸುತ್ತಾರೆ. ಮೊಕಾಶಿಯವರ ಹಾಗೆ ನೇರವಾಗಿ, ದಿಟ್ಟವಾಗಿ, ತತ್‌ಕ್ಷಣದ ಸನ್ನಿವೇಶಕ್ಕೆ ಪ್ರತಿಕ್ರಿಯೆಯೆಂಬಂತೆ ಬರೆದ ಮುನ್ನುಡಿಗಳು ಬಹಳ ಕಡಿಮೆ.

ಹೀಗೆ ಇಂಥ ನೂರಾರು ಆಸಕ್ತಿಕರ ಉದಾಹರಣೆಗಳು ಕನ್ನಡದಲ್ಲಿ ದೊರೆಯುತ್ತವೆ. ಮೊದಲ ಮಾತುಗಳನ್ನು ಬರೆಯುವುದರ ಮೂಲಕ ಹೇಗೋ, ಹಾಗೆಯೇ ಬರೆಯದೇ ಇರುವುದರ ಮೂಲಕವೂ ಲೇಖಕ ಏನನ್ನೋ ಹೇಳಲು ಬಯಸುತ್ತಿರುತ್ತಾನೆ.
*****
ಭಾವನಾ ಮೇ ೨೦೦೧

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.