ಕೇಳುತ್ತಾ ಕೇಳುತ್ತಾ ಕಣ್ಣು ಮುಚ್ಚಿದೆ ನೋಡವ್ವ

ಎಲ್ಲವೂ ಸತ್ಯವನ್ನು ಮೀರಿದಂತೆ ಇತ್ತು. ನಾನು ಟ್ರೈನ್‌ನಲ್ಲಿ ಕುಳಿತಿದ್ದುದು…ಕುಳಿತಿದ್ದ ಅನುಭವವಂತೂ ಸತ್ಯ. ಟ್ರೈನ್ ಕೂಡ ತೂಗುತ್ತಿತ್ತು. ಕಿಟಕಿ ಒಂದು ಕ್ಯಾಮರಾದ ಕಿಂಡಿಯಂತೆ ಹೊರಗಿನ ಜಗತ್ತನ್ನು ತೋರಿಸುತಿತ್ತು. ಒಮ್ಮೊಮ್ಮೆ ರಭಸವಾಗಿ, ಒಮ್ಮೊಮ್ಮೆ ಮೆಲ್ಲಗೆ…ಸಾಗುತ್ತಾ ಕಂಡದ್ದಾದರೂ ಏನು?

ಮರಗಳು, ಗಿಡಗಳು, ಆಕಾಶ, ನಕ್ಷತ್ರ ಎಲ್ಲವೂ…ಸತ್ಯದ ಆಚೆ ಇನ್ನೆಲ್ಲೋ ಇದ್ದಂತೆ, ಎಲ್ಲವೂ ಹಿಂದೆ ಹಿಂದೆ ಹೋಗುತ್ತಿದ್ದಂತೆ.
ಆಗಷ್ಟೆ ಆಗಿದ್ದ ಅನುಭವದಿಂದ ಹೀಗನ್ನಿಸುತ್ತಿತ್ತೋ ಏನೋ, ಗೊತ್ತಿಲ್ಲ. ಮಧ್ಯಾಹ್ನದ ಬಿಸಿಲೇನು ರಣ ಬಿಸಿಲಾಗಿರಲಿಲ್ಲ. ಅದೇ ಹೇಳಿದೆನಲ್ಲ, ಸತ್ಯ ತನ್ನನ್ನು ತಾನೇ ಮೀರಿ ಒಂದು “ಪರ್‌ಫ಼ಾರ್‌ಮೆನ್ಸ್” ನಂತೆ ಇತ್ತು. ಅದರ ಹಿಂದೆ ಇದ್ದುದು ರಾಗ್ ಮಾರ್ವ, ಮಲ್ಲಿಕಾರ್ಜುನ್ ಮನ್ಸೂರ್ ಅವರದ್ದು. ಆ ಸಂಜೆ ಬೆಳಕು, ತೆಳುವಾಗಿ ಕತ್ತಲಾಗೋದು, ಆಗುತ್ತಾ ಆಗುತ್ತಾ ಒಪ್ಪಿಕೊಳ್ಳಲೇಬೇಕು ಅನ್ನುವ ಅದರ ಹಟವನ್ನು ಸಂಜೆ ಇಳಿಯುತ್ತಾ ತಿಳಿಸುತ್ತಿತ್ತು. “ಲಚ್ಛಾ ಸಾಕ್”ನಲ್ಲಿ ರಾಜಶೇಖರ್ ಅವರೂ ಅಷ್ಟೆ.

ಯಾರು ಹೇಳಿದ್ದು ಸಂಗೀತ ಅಮೂರ್ತ, ಅದು ಸ್ಪರ್ಶಕ್ಕೆ ಸಿಗುವುದಿಲ್ಲ ಎಂದು? ಮಲ್ಲಿಕಾರ್ಜುನರ ಆ ಮಾರ್ವದ “ರಿ” ಅಂದು ನನಗೆ ಮಾಡಿದ್ದಾದರೂ ಏನು? ನಿಂತ ನೀರನ್ನು ಕಲಕಿ ಉಂಗುರ ಏಳಿಸಿದ ಹಾಗೆ ಕಲಕಲ ಮಾಡಿ, ಮೇಲೆ ಅದರ ವಿಜೃಂಭಣೆ.

ಒಂದು ರೀತಿಯ ದಿಗ್ಭ್ರಾಂತಿಗೆ ಒಳಗಾದವಳಂತೆ ನಾನು. ಮುಂಬೈ ತಲುಪುತ್ತಾ, ತಲುಪುತ್ತಾ, ಈ ಎಲ್ಲ ಸತ್ಯಗಳೂ ಮತ್ತಷ್ಟು ವಿಸ್ತರಿಸುತ್ತಿರುವಂತೆ…ಗೊಂದಲ, ಕಸಿವಿಸಿ…

ಹಾಡುತ್ತಿದ್ದವರು ಮಲ್ಲಿಕಾರ್ಜುನ ಮನ್ಸೂರ ಮತ್ತು ಅವರ ಮಗ ರಾಜಶೇಖರರು. ನನ್ನ ಸತ್ಯಗಳಿಗೇನಾಗುತ್ತಿದೆ ಅದರಿಂದ? ನನ್ನ ಮೇಷ್ಟ್ರು ಕಲಿಸಿಕೊಡುವಾಗ ಹೇಳಿದ್ದು ತಟ್ಟನೆ ನೆನಪಾಯಿತು. ಸಂಗೀತ ಯಾವಾಗ ಏನು ರೂಪ ತಾಳುತ್ತದೋ ಗೊತ್ತಿಲ್ಲ ಎಂದು.

ಹೌದು, ಇದನ್ನೆಲ್ಲ ಅರ್ಥ ಮಾಡಿಕೊಳ್ಳಲು ಇಷ್ಟು ವರ್ಷ ಬೇಕಾಯಿತು. ಹಾ! ಹತ್ತು ವರ್ಷಗಳ ಹಿಂದೆ ಹೀಗೆ ಸಂಗೀತದಿಂದ ಸತ್ಯವನ್ನು ಮೀರಿದ ಅನುಭವ ಆಗಲು ಸಾಧ್ಯವೇ ಇರಲಿಲ್ಲ. ಯಾಕೆ ಅಂತೀರ? ಸಂಗೀತ ಕೇಳೋದು ಬಿಟ್ಟು ಅದರ “ವ್ಯಾಕರಣ” ಎಂಬ ಗೋಣೀಚೀಲದಲ್ಲಿ ಹುದುಗಿ ನನ್ನನ್ನು ನಾನೇ ಹೊಲಿದುಕೊಂಡುಬಿಡುತ್ತಿದ್ದೆ.

ಟ್ರೈನ್ ಹೋಗುವ ಸದ್ದು. ಮನುಷ್ಯರು ಮಾತಾಡುವ ಸದ್ದು, ಆದೂ ಇದೂ ಮಾರಿಕೊಂಡು ಬರುವವರ ಸದ್ದು ಬಿಟ್ಟರೆ, ಬರೇ ಮೌನ. ಆ ಸದ್ದುಗಳು ತಾವಾಗಿಯೇ ಮುಳುಗಿ ಹೋದವು ಅನಿಸಿತು. ಮನ್ಸೂರರು ಮಾರ್ವದಲ್ಲಿ ತಾರಸ್ಥಾಯಿಗೆ ಹೋಗಿ “ರಿ” ಹಿಡಿದದ್ದು ಮೌನಕ್ಕೆ ಒಂದು ವಿಚಿತ್ರ ಅಭಿವ್ಯಕ್ತಿ ಕೊಟ್ಟಂತೆ ಇತ್ತು. ಆ ಮೌನ ಬಿರುಗಾಳಿ, ಭೂಕಂಪದ ಮುಂಚಿನ ತಣ್ಣನೆಯ ತಲ್ಲಣದಂತೆ.

ಮತ್ತೆ ಮೇಲೆ ರಣ ಬಿಸಿಲಲ್ಲ. ಸೂರ್ಯ ಯಾಕೋ ಎಲ್ಲ ಕಳೆದುಕೊಂಡು ನಿರಾಸೆಯ ಸೊಂಪಿನಲ್ಲಿ ಹಾಗೆ ತೂಗಾಡುತ್ತಾ ಇದ್ದಾನೆ ಎನ್ನಿಸಿತು. ನನಗೋ ಗೊತ್ತುಗುರಿ ಇಲ್ಲದ ಹುಡುಕಾಟ. ಇದರ ಮಧ್ಯೆ ಈ ಮನುಷ್ಯ ತನ್ನ ಲೋಕವನ್ನು ಭಸ್ಮ ಮಾಡಿ, ಮೈಗೆ ಬಳಿದುಕೊಂಡು “ನಾ ಜಾನೊ ಕಬ ಘರ ಆಯೆ…” ಅಂತ ಹಾಡಿದಾಗ ಈ ಮೂರು ಸತ್ಯಗಳ ಅರಿವಾದಂತೆ ಅನಿಸಿತು.

ಒಂದಡೆ ಸೂರ್ಯ, ಮತ್ತೊಂದಡೆ ಮನ್ಸೂರರ ಮಾರ್ವ, ಮತ್ತು ನಾನು. ಜನ್ಮಜನ್ಮಕ್ಕೂ ನನ್ನ ಮೇಷ್ಟ್ರ ಋಣವನ್ನು ತೀರಿಸುವುದು ಸಾಧ್ಯವೇ ಇಲ್ಲ. ಅವರು ನನ್ನನ್ನು ಬೆಳೆಸಿದ ರೀತಿ, ಇಂದು ನಾನು ಈ ಸತ್ಯಗಳನ್ನು ಒರೆಗೆ ಹಚ್ಚಿ ನೋಡುವಂತೆ ಮಾಡಿದೆ. ಮೊದಲು ನನ್ನ ಬಾಯಲ್ಲಿ ಬರುತ್ತಿದ್ದ ಮಾತೆಂದರೆ “ಅವರು ಚೆನ್ನಾಗಿ ಹಾಡ್ತಾರೆ…ಇವರಿಗೆ ಹಾಡಲಿಕ್ಕೆ ಬರಲ್ಲ…ಅವರ ಕಾನ್ ಸ್ವಲ್ಪ ವೀಕ್ ಆಗಿದೆ, ಅವರ ಸುರ್ ಅಷ್ಟೇನೂ ಸುರೇಲ್ ಆಗಿಲ್ಲ…” ಕಲಿಯುತ್ತಾ, ಕಲಿಯುತ್ತಾ, ಏಟು ತಿನ್ನುತ್ತಾ, ಪ್ರೀತಿಸುತ್ತಾ, ಅನುಭವಿಸುತ್ತಾ ಬಂದ ನನಗೆ ಇಂದು ಅರ್ಥವಾಗೋದು ಇಷ್ಟೆ. ಅದು ಒಂದು “ಘಳಿಗೆ” (ಮೊಮೆಂಟ್) ಆ ಘಳಿಗೆಯಲ್ಲಿ ಏನು “ಝಗ್” ಎಂದು ತೂರಿಕೊಂಡು ಬರುತ್ತದೋ ಎಂಬುದು ಹಾಡುವವರಿಗೆ ಮಾತ್ರ ಗೊತ್ತಿದ್ದಿರಬಹುದು. ಅದು ಒಂದು ಅನುಭವ, ಆ ಘಳಿಗೆಗೆ ತಕ್ಕ ಹಾಗೆ ನಾವು ತಿರುಗಬೇಕು, “ವೈಬ್ರೇಟ್” ಆದರೆ ಸರಿ, ಇಲ್ಲದಿದ್ದರೆ ಬಿಟ್ಟು ಬಿಡಬೇಕು.

ಅರೇ! ನಾನು ಕೇಳ್ತಿರೋದು ವಾಕ್‌ಮ್ಯಾನ್‌ನಲ್ಲಿ. ಅವರು ಉಸಿರುಕಟ್ಟಿ ಜಡಿದ “ತಾನು” ಬಂದು ಕಿಟಕಿಯಂದಾಚೆ ಇರುವ ಆ ಎಲೆಗಳನ್ನು ಗಾಬರಿ ಪಡಿಸಿದರೇ? ಸೂರ್ಯನೂ ಕೂಡ ಏನೋ ನೋಡುತ್ತಾ ನೋಡುತ್ತಾ ಈ “ತಾನ್” ಗೆ ನಿಟ್ಟುಸಿರು ಬಿಟ್ಟ ಎನ್ನಿಸಿತು. ನನ್ನ, ಸೂರ್ಯನ ಮತ್ತು ಮನ್ಸೂರರ ಅಕ್ಕಪಕ್ಕ ಜಗತ್ತು ತನ್ನದೇ ಆದ ಲಯದಲ್ಲಿ ನಡೀತಾನೇ ಇದೆ. ಇದ್ದಕ್ಕಿದ್ದಂತೆ ತನ್ನನ್ನು ತಾನು ಭಸ್ಮ ಮಾಡಿಕೊಂಡರೂ ಪ್ರತ್ಯಕ್ಷವಾಗದ ಶಿವನ ಮೇಲೆ ಸಿಟ್ಟು, ನಿರಾಸೆಯಾದಂತೆ ಮನ್ಸೂರರು ಆ ತಾನ್‌ಗಳ ಉಸಿರಾಟವನ್ನು ನಿಲ್ಲಿಸಿ ಆ ಶಡ್ಜ ಹಿಡಿದದ್ದು ಶಿವನನ್ನು ದುರುಗುಟ್ಟಿ ನೋಡಿದಂತೆ ಅನ್ನಿಸಿತು. ನನ್ನ ಕಲ್ಪನೆಗೆ ನಗು ಬಂತು. ಹೌದಲ್ಲ! ಅದು ಸತ್ಯ, ಕಲ್ಪನೆ ಅಲ್ಲ.

ನನ್ನ ಶಿವ, ನನ್ನ ಖುಸ್ರೋ, ನನ್ನ ಪ್ರೀತಿ…ಇಷ್ಟಾದರೂ ಇವರನ್ನೇ ನಾನು ಅರಸುತ್ತಿರುವುದು…ಶಿವನೂ ಇಲ್ಲ, ಹುಚ್ಚುತನ ಬರಲು ಒಳಗೆ ಸರಕೀ ಇಲ್ಲ…ಹ! ಇನ್ನು ಪ್ರೀತಿ ಎಲ್ಲಿ? ಈಗ ನನಗೆ ನಿಟ್ಟುಸಿರು. ಆ ಸೂರ್ಯನಿಗಾದರೂ ಎಂತಹ ಕಸಿವಿಸಿ? “ಈ ಮನ್ಸೂರ ಏನು? ನನ್ನ ಕೆಲಸ ಮಾಡುತ್ತಿರುವಂತೆ ಇದೆ!” ಎಂದುಕೊಂಡಾನೇನೋ.

ಯಾರು ಹೇಳಿದ್ದು ಸಂಗೀತ ಬರೀ ಕಿವಿಗೆ ಕೇಳಿಸೋದು ಅಂತ? ಸ್ಪರ್ಶಕ್ಕೆ ಸಿಗುತ್ತದೆ…ಕಣ್ಣಿಗೆ ಕಾಣುತ್ತದೆ…ವಿಚಿತ್ರವಾದ ಪರಿಮಳವನ್ನು ಹೊಂದಿಸುತ್ತಾ ಹೋಗುತ್ತದೆ.

ನಿಜ ಹೇಳಲಾ? ನಿಮಗೆ ಹುಚ್ಚು ಎನಿಸಬಹುದು. ವಿಲಾಯತ್ ಹುಸೇನ್ ಖಾನ್ ಸಾಹೇಬರ ಟೇಪ್ ಕೊಂಡಾಗ ಮೊದಲು “ಬಾಗೇಶ್ರೀ ಬಹಾರ್” ಎಂದು ಬರೆದಲ್ಲಿ ಮೂಸಿನೋಡಿದೆ. ಅದನ್ನು ಕೇಳುತ್ತಿದ್ದಾಗ ಒಳ್ಳೆ ಅಡಿಗೆಯ ಘಮವನ್ನು ಮೂಗಿಗೆ ತುಂಬಿಕೊಂಡಂತೆ ಬಾರಿ ಬಾರಿಗೂ ಉಸಿರೆಳೆದುಕೊಳ್ಳುತ್ತಿದ್ದೆ. ಬಾಯಿಗೆ ಸಿಕ್ಕ ರುಚಿಯಷ್ಟೇ ರುಚಿಯಲ್ಲ. ಹಾಡಿನ, ಸಂಗೀತದ ರುಚಿ ಕೂಡ ಹತ್ತುತ್ತದೆ… “ಟೇಸ್ಟ್ ಆಫ಼್ ಸಿಂಗಿಂಗ್” ಯಾರಾದರೂ ಹಾಡಬಹುದು…ಮತ್ತೆ ಈ “ಸೆರಿನಿಟಿ” ರಾಜಶೇಖರ್ ಅವರ “ಲಚ್ಛಾ ಸಾಕ್”…ಈಗಂತೂ ಬಣ್ಣಗಳೂ ತಮ್ಮ ಪಾತ್ರವಹಿಸಲು ಶುರು ಮಾಡಿದ್ದವು. ಕತ್ತಲು ಆಗುತ್ತಾ, ಆಗುತ್ತಾ ಹಸಿರೆಲೆಗಳ ಹಸಿರು ಕತ್ತಲ ಬಣ್ಣದಲ್ಲಿ ಸೇರಿಕೊಂಡು…ಮೋಡಗಳು ಲಚ್ಛಾ ಸಾಕ್‌ನ ಕೋಮಲ್ ನಿಷಾದ್‌ನ ಬಣ್ಣ ತಳೆದಂತೆ ಇತ್ತು. ಎಲ್ಲಿಯೋ ಸರಿದು ಹೋದಂತ ಒಂದು ಬೆಳಕಿನ ತುಂಡು ಆ ಅಂತರದಲ್ಲಿ ಬರುವ ಶುದ್ಧ ನಿಷಾದದಂತೆ…ಬೆಚ್ಚಿ ಬಿದ್ದು ಎದ್ದೆ. ನಿದ್ದೆಯಲ್ಲ ಅದು. ಹುಚ್ಚು. ಹೆದರಿಕೆ. ಗೊಂದಲ. ಅನಾಥಪ್ರಜ್ಝ್ನೆ ಬೆಳೆಯುತ್ತಾ ಇದೆ. ಪ್ರತಿಯೊಬ್ಬರ ಸಂಗೀತ ಕೇಳಿ, ಅರ್ಥವಾಗದ, ಅರ್ಥವಾಗುವ ಸತ್ಯಗಳನ್ನು ಅರಗಿಸಿಕೊಂಡಾಗಲೆಲ್ಲ, ನನ್ನ ಮೇಷ್ಟ್ರು ಇಲ್ಲದೆ ನನಗೆ ಜಗತ್ತೇ ಇಲ್ಲ ಎನಿಸಿ…ಮತ್ತೆ ರಾಜಶೇಖರರು ಆ ಶುದ್ಧ ನಿಷಾದ ಹಚ್ಚಿದರು..ಅಯ್ಯೋ ಹಳದಿ ಬಣ್ಣ…ಆ ಹಳದಿಯಲ್ಲಿ ಕೆಂಪೂ ಇದೆ ಸ್ವಲ್ಪ, ಸ್ವಲ್ಪ ನೇರಳೆ, ಸ್ವಲ್ಪ ಎಳೆ ನೇರಳೆ, ಆ ಹಳದಿ…ರಾಜಶೇಖರ ಅವರ ಆವಾಜು ಎರಡನ್ನೂ ಕಲಸಿ ಮೈಗೆಲ್ಲ ಹಚ್ಚುತ್ತಾ ಹಚ್ಚುತ್ತಾ, ಮತ್ತೆ ಎಚ್ಚರ… ಕನಸಲ್ಲ..ಸತ್ಯಗಳು, ತಮ್ಮನ್ನ ತಾವೇ ಮೀರಿ ನಿಂತಂತ ಸತ್ಯಗಳು.
ಇಡೀ ಜೈಪುರ ಘರಾಣಾದವರು…ಒಬ್ಬರಿಗಿಂತ ಒಬ್ಬರು…ಒಂದೇ “ಸ್ಕೂಲ್ ಆಫ಼್ ಥಾಟ್”…ಘರಾಣಾದ ಎಲ್ಲಾ ಅಂಶಗಳನ್ನು ಒಬ್ಬೊಬ್ಬರೂ ಬಳಸುವ ಅವರ ಪೂಜೆ…ಒಬ್ಬರು ಆಕಾಶದಂತೆ ಕಂಡರೆ ಇನ್ನೊಬ್ಬರು ತಮ್ಮನ್ನು ತಾವೇ ಸುಟ್ಟುಕೊಂಡು ಜಗತ್ತೇ ಇಲ್ಲ, ಇರುವುದು ಶಿವನೊಬ್ಬನೇ ಎಂಬಂತೆ, ಇನ್ನೊಬ್ಬರು ರಾಣಿಯಂತೆ, ಮತ್ತೊಬ್ಬರು ಗಾಂಭೀರ್ಯದಲ್ಲೆ ತಮ್ಮನ್ನು ತಾವು ಕಂಡುಕೊಳ್ಳುವಂತೆ…

ಹೌದು, ನನ್ನ ಈ ಜಗತ್ತಿನಲ್ಲಿ ಇವರ ಸಂಗೀತ ಯಾರ್‍ಯಾರನ್ನೆಲ್ಲ ಬದುಕಿಸಿಬಿಟ್ಟಿದೆ ಅಲ್ಲ? ನನಗೆ ಆ ಜೀವಗಳ ಬಗೆಗಿಗ ಸತ್ಯವನ್ನು ಪರಿಚಯಿಸಿದೆ..ಮತ್ತೆ ಟ್ರೈನ್ ನಲ್ಲಿ ಜಾತ್ರೆ ಸಾಗುತ್ತಲೇ ಇದೆ…ಯಾವುದೋ ಎರಡು ದೊಡ್ಡ ಕೈಗಳು ಚಾಚಿ ಕರೆದಂತಾಯಿತು. ಕೇಳುತ್ತಾ, ಕೇಳುತ್ತಾ ಕಣ್ಣಲ್ಲೆಲ್ಲಾ ನೀರು…ನನಗಿಂತಹ ಗುರುಗಳು ಸಿಗದೇ ಇದ್ದರೆ ಈ ಹುಚ್ಚೇ ಹಿಡಿಯುತ್ತಿರಲಿಲ್ಲ…ಇಲ್ಲ, ಈ ಹುಚ್ಚು ಬೇಕು…ಇದರಲ್ಲಿ ಮಿಂದು ಬೆಳಗಬೇಕು…ಭಸ್ಮವಾಗಿಬಿಡಬೇಕು…

ಮತ್ತೆ ರಾಜಶೇಖರರ ಗೋಧನ್ ಗೌರಿ…ಯಾವುದಕ್ಕೋ ಸಜ್ಜಾದಂತೆ…

ಒಂದು ನಗೆ ಬಂತು…

“ಕೇಳುತ್ತಾ ಕೇಳುತ್ತಾ ಕಣ್ಣು ಮುಚ್ಚಿದೆ ನೋಡವ್ವ
ಕೇಳುತ್ತಾ ಕೇಳುತ್ತಾ ಜಗವೇ ತೆರೆದುಕೊಂಡಿದೆ ನೋಡು…”
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.