ಸಂಸ್ಕಾರ – ಸಿನಿಮಾ ಕುರಿತು

ನಾನು ಸಂಸ್ಕಾರ ಬರೆದದ್ದು ಬರ್ಮಿಂಗ್‌ಹ್ಯಾಮ್‌ನಲ್ಲಿ. ಸುಮಾರು ಮೂರು ವರ್ಷ ಪರದೇಶದಲ್ಲಿದ್ದ ನನಗೆ ಪರಕೀಯ ವಾತಾವರಣದಲ್ಲಿ ನನ್ನ ಬಾಲ್ಯದ ನೆನಪುಗಳೆಲ್ಲ ಅತ್ಯಂತ ಸ್ಪಷ್ಟವಾಗಿ ಕಾದಂಬರಿ ಬರೆಯುವಾಗ ಒದಗಿ ಬಂದವು. ನಾನು ವಾಸ್ತವಿಕ ಶೈಲಿಯ ಕಾದಂಬರಿ ಬರೆಯಲಿಲ್ಲ. ಇದರಿಂದಾಗಿ ನಾನು ಇನ್ನಷ್ಟು ನನ್ನ ನೆನಪುಗಳನ್ನು ದುಡಿಸಿಕೊಳ್ಳಲು ಸಾಧ್ಯವಾಯಿತೆಂದು ನನಗೆ ಅನ್ನಿಸುತ್ತದೆ. ಊರಿನಿಂದ ದೂರವಿದ್ದದ್ದು, ಬಾಲ್ಯದಿಂದ ದೂರವಿದ್ದದ್ದು ಮತ್ತು ವಾಸ್ತವಿಕ ಶೈಲಿಯ ಅಗತ್ಯಗಳಿಂದ ಬಿಡುಗಡೆ ಪಡೆದದ್ದು – ಈ ಮೂರು ಒಟ್ಟಾಗಿ ಸಂಸ್ಕಾರ ಕಾದಂಬರಿಯ ಒಟ್ಟು ಸ್ವರೂಪಕ್ಕೆ ಕಾರಣವಾಗಿರಬೇಕೆಂದು ನನಗೆ ಅನ್ನಿಸುತ್ತದೆ.

ಈ ಲೇಖನಕ್ಕೆ ಮುಖ್ಯವಾದ ಸಂಗತಿ ಎಂದರೆ ನಾನು ಸಂಸ್ಕಾರ ಬರೆಯುವಾಗ ಅದು ಚಲನಚಿತ್ರವಾದೀತೆಂಬ ಭ್ರಮೆಗೂ ಅವಕಾಶವಿರಲಿಲ್ಲ. ಕನ್ನಡ ಚಿತ್ರಗಳ ಸ್ಥಿತಿ ಹಾಗಿತ್ತು. ನಾನು ಚಲನಚಿತ್ರಕ್ಕಾಗಿಯೇ ಆ ಕಾದಂಬರಿ ಬರೆದಿದ್ದ ಪಕ್ಷದಲ್ಲಿ ಕಾದಂಬರಿ ಚಲನಚಿತ್ರ ಮಾಧ್ಯಮಕ್ಕೆ ಸ್ವಾಲಾಗುತ್ತಿರಲಿಲ್ಲವೇನೋ ! ಇದು ಮುಖ್ಯ ಮಾತು : ಕಾದಂಬರಿಗಳಿಂದ ನಮ್ಮ ಚಲನಚಿತ್ರಕ್ಕೆ ಹೊಸ ಪ್ರೇರಣೆ ಬರುವುದು ಸಾಧ್ಯವಾಗುವುದು – ಕಾದಂಬರಿಕಾರ ತನ್ನ ಮಾಧ್ಯಮಕ್ಕೆ ಪ್ರಾಮಾಣಿಕವಾಗಿದ್ದಾಗ ಮಾತ್ರ ಎನ್ನುವುದು ನನಗೆ ದೃಢವಾಗಿದೆ. ಚಲನಚಿತ್ರವನ್ನು ಗುರಿಯಾಗಿಟ್ಟುಕೊಂಡು ಬರೆಯುವ ಹಲವು ಲೇಖಕರು ಈಚೆಗೆ ಒಳ್ಳೆಯ ಸಿನಿಮಾವೂ ಆಗದ , ಆಚೆಗೆ ಒಳ್ಳೆಯ ಸಾಹಿತ್ಯವೂ ಆಗದ ಕಥೆಗಳನ್ನು ಬರೆಯತೊಡಗಿರುವುದು ಇದಕ್ಕೆ ನಿದರ್ಶನ. ಸಿನಿಮಾ ಮಾಧ್ಯಮದ ಸಾಧ್ಯತೆಗಳನ್ನು ತಿಳಿದಿರುವ ಕಲಾವಿದ ಅದಕ್ಕಾಗಿಯೇ ಕಥೆ ರಚಿಸಿದಾಗ ಒಳ್ಳೆಯ ಸಿನಿಮಾ ಆಗಲಾರದೆಂದು ನನ್ನ ಅಭಿಪ್ರಾಯವಲ್ಲ. ಆದರೆ ಎರಡರ ಕಲಬೆರಕೆಯಿಂದ ಏನೂ ಸಾಧ್ಯವಾಗದೆಂದು ನನ್ನ ವಾದ , ಅಷ್ಟೆ.

ಸಂಸ್ಕಾರ ಚಿತ್ರ ನಿರ್ಮಾಣವಾದ ಬಗೆಯೂ ಕುತೂಹಲದ ಸಂಗತಿಯಾಗಿದೆ. ನಾನು ಕಾದಂಬರಿಯನ್ನು ಮೂರು ಮಿತ್ರರಿಗೆ ಅರ್ಪಿಸಿದ್ದೇನೆ. ಅದರಲ್ಲಿ ಒಬ್ಬರಾದ ಶಾಂತವೇರಿ ಗೋಪಾಲಗೌಡರು – ಈಗ ಅವರು ಇಲ್ಲ- ನನ್ನ ಸ್ನೇಹಿತರು ಮಾತ್ರವಲ್ಲದೆ, ನನ್ನಲ್ಲಿ ಕ್ರಾಂತಿಕಾರಕ ರಾಜಕೀಯ ಮತ್ತು ಸಾಹಿತ್ಯ ಪ್ರಜ್ಞೆಗಳನ್ನು ಒಂದಕ್ಕೊಂದು ಹೊರತಾಗದಂತೆ ಬೆಳೆಸಿಕೊಳ್ಳಲು ನೆರವಾದವರು. ಗೋಪಾಲಗೌಡರು ಈ ಕಾದಂಬರಿಯ ಕಥೆಯನ್ನು ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿಯಿದ್ದ ತಮ್ಮ ನಾಯಕರಾದ ಡಾ. ರಾಮಮನೋಹರ ಲೋಹಿಯಾರಿಗೆ ಹೇಳಿದ್ದರಂತೆ. ಲೋಹಿಯಾ ಈ ಕಥೆಯನ್ನು ತಮ್ಮ ಸ್ನೇಹಿತರಾದ ಸ್ನೇಹಲತಾ ರೆಡ್ಡಿ ಮತ್ತು ಪಟ್ಟಾಭಿರಾಮ ರೆಡ್ಡಿಯವರಿಗೆ ಹೇಳಿ ಸಿನಿಮಾ ಮಾಡುವಂತೆ ಪ್ರೇರೇಪ್ಸಿದರಂತೆ. ಜೊತೆಗೇ, ಆಗ ಮದ್ರಾಸಿನಲ್ಲಿದ್ದ ಗಿರೀಶ್‌ಕಾರ್ನಾಡರು ಕೂಡ ಸಂಸ್ಕಾರವನ್ನು ಸಿನಿಮಾ ಮಾಡುವ ಯೋಜನೆಯಲ್ಲಿದ್ದರು. ನಾನು ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಷಿಗೆ ಕಳಿಸಿದ್ದ ಹಸ್ತಪ್ರತಿಯನ್ನು ಓದಿದ ಕಾರ್ನಾಡರು ಈ ಕಥೆ ಸಿನಿಮಾಕೆ ಉತ್ತಮ ವಸ್ತುವಾದೀತೆಂದು ಗ್ರಹಿಸಿದ್ದಲ್ಲದೆ ಆ ದಿಕ್ಕಿನಲ್ಲಿ ತಮ್ಮ ಅನೇಕ ಮಿತ್ರರೊಡನೆಯೂ ಮಾತಾಡಿದ್ದರು. ಚೋಳಮಂಡಲದ ಕಲಾವಿದ ವಾಸುದೇವ ಇತ್ಯಾದಿ ಮಿತ್ರರು, ಮದ್ರಾಸಿನ ನಾಟಕ ಚಳುವಳಿಯಲ್ಲಿ ಪ್ರಮುಖರಾಗಿದ್ದ ಸ್ನೇಹಲತಾ ರೆಡ್ಡಿ ಮತ್ತು ಅವರ ಸಹೋದ್ಯೋಗಿಗಳು ( ಕಾರ್ನಾಡರೂ ಅವರಲ್ಲಿ ಒಬ್ಬರು ) , ಪಟ್ಟಾಭಿರಾಮರೆಡ್ಡಿಯವರ ಸಿನಿಮಾರಂಗದ ಬಳಗ – ಹೀಗೆ ಹಲವರು ಕಾದಂಬರಿಯನ್ನು ಸುಮಾರು ವರ್ಷಕ್ಕೂ ಹೆಚ್ಚು ಕಾಲ ಸಿನಿಮಾ ಮಾಡಲೆಂದು ಕಥೆಯ ಪ್ರತಿ‌ಅಂಗವನ್ನೂ ಚರ್ಚಿಸಿ, ವಿಶ್ಲೇಷಿಸಿ , ಒಂದು ಕಾಲ್ಪನಿಕ ಸಿನಿಮಾದ ಪ್ರತಿ ‘ ಷಾಟ್ ’ ನ್ನೂ ತಮ್ಮ ಮನಸ್ಸಿನಲ್ಲಿ ಯೋಚಿಸಿಕೊಂಡಿದ್ದರು.ಇಷ್ಟೆಲ್ಲ ಅಣಿಯಾದ ಮೇಲೆ ನಾನು ಪಟ್ಟಾಭಿರಾಮ ರೆಡ್ಡಿಯವರನ್ನು ಅವರ ಆಗಿನ ಮದ್ರಾಸಿನ ಮನೆಯಲ್ಲಿ ಕಾರ್ನಾಡರ ಜೊತೆ ಭೇಟಿಯಾದೆ.ಅವರೆಲ್ಲ ಕಾದಂಬರಿಯ ಒಳಹೊಕ್ಕು ಅದರ ಪ್ರತಿ ವಿವರವನ್ನೂ ಅರ್ಥಮಾಡಿಕೊಂಡ ಕ್ರಮ ನೋಡಿ ನನು , ಅವರಿಗೆ ಸಿನಿಮಾ ಮಾಡುವುದಕ್ಕೆ ಸಮ್ಮತಿಸಿದೆ. ಈ ಮಧ್ಯೆ ಚೋಳಮಂಡಲಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಕ್ಯಾಮರಮನ್- ಟಾಂ ಕೋವನ್ , ವಾಸುದೇವರ ಮುಖೇನ ಕಥೆಯ ಬಗ್ಗೆ ತಿಳಿದು ತಮ್ಮ ನೆರವನ್ನು ಕೊಡಲು ಮುಂದಾದರು. ಪಟ್ಟಾಭಿ ಉಳಿದ ವ್ಯವಸ್ಥೆಗಳನ್ನು ಮಾಡಲು- ಅಂದರೆ ಹಣ , ತಾಂತ್ರಿಕ ಸಹಾಯ ಇತ್ಯಾದಿಗಳನ್ನು ಪಡೆಯಲು – ತಮ್ಮ ತೆಲುಗು ಸಿನಿಮಾ ನಿರ್ಮಾಣ ಅನುಭವ ಉಪಯೋಗಿಸಿಕೊಂಡು ಪ್ರಯತ್ನಿಸಿದರು. ಹೊಸ ರೀತಿಯ ಸಿನಿಮಾ ಎಂದರೆ ಅನುಮಾನದಿಂದ ನೋಡುವ , ಕೊಲ್ಲಲೂ ಪ್ರಯತ್ನಿಸುವ ಇಂಡಸ್ಟ್ರಿಯನ್ನು ಸಂಸ್ಕಾರ ಸಿನಿಮಾ ಸೃಷ್ಟಿಗೆ ಬಳಸಿಕೊಳ್ಳುವ ಶೂರ ಉಪಾಯಗಾರರಾಗಿ ಪಟ್ಟಾಭಿ ಎಷ್ಟೆಲ್ಲ ಶ್ರಮಿಸಬೇಕಾಯಿತೆಂಬುದು ಇನ್ನೊಂದು ಕಥೆಯೇ ಆಗುತ್ತದೆ. ಅತ್ಯಂತ ಚೊಕ್ಕ ಕಲಾತ್ಮಕ ಸಿನಿಮಾ ಮಾಡಬೇಕೆನ್ನುವ ಗಿರೀಶ್ , ವಾಸುದೇವ್ , ವೈ‌ಎನ್‌ಕೆ , ಟಾಮ್‌ಕೋವನ್, ಸ್ನೇಹಲತಾ, ಮದ್ರಾಸಿನ ನಾಟಕ ಬಳಗ ಒಂದು ಕಡೆ; ಕಥೆಯ ಭಾವಪೂರ್ಣ ಸನ್ನಿವೇಶಗಳನ್ನು ಉಲ್ಬಣಗೊಳಿಸಿ ತಮಿಳು ಮಾದರಿಯಲ್ಲಿ ನಾರಾಣಪ್ಪನನ್ನು ರೆಬೆಲ್ ಮಾಡಿ ಗಲ್ಲಾಪೆಟ್ಟಿಗೆಯನ್ನೂ ಸರ್ಕಾರದ ಸಹಾನುಭೂತಿಯನ್ನೂ ಒಟ್ಟಾಗಿ ಗಳಿಸಲು ಹೊಂಚುತ್ತಿದ್ದ ಡಿಸ್ಟ್ರಿಬ್ಯೂಟರುಗಳು ಇನ್ನೊಂದು ಕಡೆ; ನನ್ನ ಕಾದಂಬರಿಯ ತಾತ್ವಿಕ ಬಿಕ್ಕಟ್ಟುಗಳನ್ನು ಎಲ್ಲಿ ಸಡಿಲಿಸಿಬಿಡುತ್ತಾರೋ ಎಂದು ಗಾಬರಿಯಿಂದ ಸದಾ ಎಚ್ಚರದಿಂದ ಕಾಯುತ್ತಿದ್ದ ನಾನು ಮತ್ತೊಂದು ಕಡೆ. ಈ ಆವರಣದಲ್ಲಿ , ಕೈಯಲ್ಲಿ ಸಾಕಷ್ಟು ಹಣವಿಲ್ಲದೆ ಎಲ್ಲರನ್ನೂ ಒಟ್ಟಿಗೆ ಕೆಲಸ ಮಾಡುವಂತೆ ಶ್ರಮಿಸಿದ ಪಟ್ಟಾಭಿ ರಾಮರೆಡ್ಡಿಯವರ ಸಹನೆ ಮೆಚ್ಚಬೇಕಾದ್ದು. ಯಾವ ಸಮಯದಲ್ಲಾದರೂ , ಎಲ್ಲಂದರಲ್ಲಿ ನಿದ್ದೆ ಹೋಗಬಲ್ಲ ಪಟ್ಟಾಭಿಯವರ ಚಿತ್ತಸ್ವಾಸ್ಥ್ಯವಿಲ್ಲದೆ ಸಂಸ್ಕಾರ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ. ಸಂಸ್ಕಾರ ನಿಜವಾಗಿಯೂ ಸಹಕಾರದಿಂದ ಹುಟ್ಟಿದ ಚಿತ್ರ.

ಸಿನಿಮಾ ತಯಾರಾಗುತ್ತಿದ್ದಂತೆ ಅದರ ಬಗ್ಗೆ ವಿವಾದ ಪ್ರಾರಂಭವಾಯಿತು. ಕಾದಂಬರಿ ಪ್ರಕಟವಾದಾಗ ಕೆಲವು ಪತ್ರಿಕೆಗಳು ನನ್ನನ್ನು ಹೀಯಾಳಿಸಿ ಬರೆದಿದಿದ್ದವು. ನನ್ನ ಸಾಹಿತ್ಯ ಕೃತಿಗಳನ್ನು ಯಾವತ್ತೂ ನಾನು ಬೆಂಬಲಿಸಿ ವಾದಿಸುವುದಿಲ್ಲ. ಲೇಖನಗಳಲ್ಲಿ ನಾನು ಪ್ರಕಟಿಸುವ ವಿಚಾರಗಳ ಬಗ್ಗೆ ಮಾತ್ರ ನಾನು ಚರ್ಚಿಸುತ್ತೇನೆ. ಸಾಹಿತ್ಯ ಕೃತಿಗಳನ್ನು ರಚಿಸಲು ತೊಡಗಿದ ಕಾಲದಿಂದ ನಾನು ಈ ನಿರ್ಧಾರ ಮಾಡಿದ್ದೇನೆ. ಇದನ್ನು ನಾನು ಬದಲ್ಲಯಿಸುವುದಿಲ್ಲವೆಂದೇನೂ ಹೇಳುತ್ತಿಲ್ಲ. ಅಲ್ಲದೆ ನಾನು ಬರೆಯುವ ವಿಮರ್ಶೆ ಕೂಡ ಸೂಕ್ಷ್ಮವಾಗಿ ನನಗೆ ಕೂಡ ಪ್ರತ್ಯಕ್ಷವಾಗದಂತೆ , ನನ್ನ ಇತರ ಕೃತಿಗಳಿಗೆ ಬೆಂಬಲವಾಗುವ ವಾದಗಳಾಗಬಹುದೆಂಬ ಅನುಮಾನ ನನಗೆ ಇಲ್ಲದಿಲ್ಲ. ಕಾದಂಬರಿಯ ಬಗ್ಗೆ ಎದ್ದ ವಿವಾದದಿಂದಾಗಿ ಅದು ಸಿನಿಮಾ ಆದಾಗ ಬಹಿಷ್ಕೃತವಾಯಿತು. ರೀಜನಲ್ ಸೆನ್ಸಾರ್ ಬೋರ್ಡ್ , ಸೆಂಟ್ರಲ್ ಸೆನ್ಸಾರ್ ಬೋರ್ಡ್ ಎರಡೂ ಕಡೆ ಪಟ್ಟಾಭಿ ಸೋತರು. ದೆಹಲಿಯ ಪ್ರಮುಖ ಬರಹಗಾರರು ಕಲಾವಿದರು ಸಿನಿಮಾದ ನೆರವಿಗೆ ಬಂದರು. ಪಾರ್ಲಿಮೆಂಟ್ ಎದುರು ಪ್ರಶ್ನೆ ಬಂತು. ಪಾರ್ಲಿಮೆಂಟ್ ಸಮಿತಿ ಸಿನಿಮಾವನ್ನು ನೋಡಿ ಬಿಡುಗಡೆ ಮಾಡಿತು. ಸ್ಟೇ ಆರ್ಡರ್ , ಸಾರ್ವಜನಿಕ ಪ್ರತಿಭಟನೆ – ಈ ಮೂಲಕ ಸಿನಿಮಾವನ್ನು ತೋರಿಸದಂತೆ ತಡೆಯುವ ಸನ್ನಾಹ ಬೆಂಗಳೂರಿನಲ್ಲಿ ನಡೆದಿದೆ ಎಂಬುದು ತಿಳಿದ ಸಂಸ್ಕಾರದ ಬಳಗ ಪತ್ರಿಕೆಯಲ್ಲಿ ಪ್ರಕಟಿಸದೆ ಸಂಸ್ಕಾರವನ್ನು ಬೆಳಗಿನ ಷೋ ಆಗಿ ಬಿಡುಗಡೆ ಮಾಡಿತ್ತು. ಕಿವಿಯಿಂದ ಕಿವಿಗೆ ಸುದ್ದಿ ಹೋಗಿ ಥಿಯೇಟರ್ ತುಂಬಿತು. ಇದಾದ ಮೇಲೆ ಸ್ಟೇ ಅರ್ಡರ್ ತರುವುದಾದರೆ ವಿರೋಧಿಗಳು ತುಂಬಾ ಹಣ ಕಟ್ಟಬೇಕಾಗಿ ಬಂದದ್ದರಿಂದ ಧರ್ಮನಿಷ್ಠೆಗಿಂತಲೂ ಧನನಿಷ್ಠೆ ಅವರಿಗೆ ಹೆಚ್ಚು ಸಮರ್ಪಕವೆನ್ನಿಸಿ ಅವರು ಸುಮ್ಮನಾಗಿರಬೇಕು.

ಕಾದಂಬರಿ ಬಗ್ಗೆ ಎದ್ದ ವಿವದ ಈಗ ತಮಾಷೆಯೆನ್ನಿಸುತ್ತದೆ. ರಾಮಾನುಜನ್‌ರಿಂದ ಇಂಗ್ಲಿಷ್‌ಗೆ ಭಾಷಾಂತರಗೊಂಡ ಸಂಸ್ಕಾರವನ್ನು ಈಗ ನಾಡಿನ ಹೊರಗೆ ಹಲವರು ಓದಿದ್ದಾರೆ. ನ್ಯೂಯಾರ್ಕ್ ರಿವ್ಯೂನಲ್ಲಿ ಕಾದಂಬರಿಕಾರ ನೆಯ್‌ಪಾಲ್ ಸಂಸ್ಕಾರದ ಬಗ್ಗೆ ಬರೆದ ಲೇಖನದಲ್ಲಿ ಕಾದಂಬರಿಯನ್ನು ಭಾರತೀಯ ಮನಸ್ಸಿನ ಸಾಂಕೇತಿಕ ನಿರೂಪಣೆಯೆಂದು ವಿಶ್ಲೇಷಿಸಿದ್ದಾರೆ. ಇನ್ನೂ ಕೆಲವರಿಗೆ ಈ ಕೃತಿ ಒಂದು ಮಾನವೀಯ ಕಲಾತ್ಮಕ ದಾಖಲೆಯಾಗಿ ಮಾತ್ರ ಕಂಡಿದೆ. ಅಮೆರಿಕಾದ ಪ್ರಸಿದ್ಧಚಿಂತಕ , ಮನಶಾಸ್ತಜ್ಞ , ಎರಿಕ್‌ಸನ್ ( ಗಾಂಧೀಸ್ ಟ್ರೂತ್ – ಪುಸ್ತಕದ ಲೇಖಕ ) ಸಂಸ್ಕಾರವನ್ನು ಬರ್ಗ್‌ಮನ್ನಿನ “ ವೈಲ್ಡ್ ಸ್ಟ್ರಾಬೆರಿಸ್ ” ಗೆ ಹೋಲಿಸಿ , ಮನುಷ್ಯನ ಬೆಳವಣಿಗೆಯಲ್ಲಿ ಅವಸ್ಥಾಂತರವಾಗುವ ಸಂದಿಗ್ಧ ಕಾಲದ ನಿರೂಪಣೆಯಾಗಿ ಕಾದಂಬರಿಯನ್ನು ವಿಶ್ಲೇಷಿಸಿದ್ದಾರೆ. ಒಂದು ಕೃತಿಯನ್ನು ಬರೆದ ಮೇಲೆ ಅದರ ಬಗ್ಗೆ ಲೇಖಕ ಸುಮ್ಮನಿರುವುದು, ಓದುಗ ಆ ಕೃತಿಯನ್ನು ಸ್ವತಂತ್ರವಾಗಿ ತನ್ನ ಅನುಭವವಾಗಿ ಮಡಿಕೊಳ್ಳಲು ನೆರವಾಗುತ್ತದೆ. ಎರಿಕ್‌ಎರಿಕ್‌ಸನ್ ತಮ್ಮ ವಿಶ್ಲೇಷಣೆ ಹೇಳಿ ನನ್ನ ಅಭಿಪ್ರಾಯ ಕೇಳಿದರು. ಕಾದಂಬರಿ ಬರೆಯುವಾಗ ಅವರ ವಿಚಾರಗಳಿಗೆ ಹೊಸಬನಾಗಿದ್ದ ನಾನು ನನ್ನ ಆಶ್ಚರ್ಯವನ್ನು ವ್ಯಕ್ತ ಪಡಿಸಿದೆ. ಎರಿಕ್‌ಸನ್‌ಗೆ ಸಂತೋಷವಾಯಿತು. “ ನೀನು ಸೈಕಾಲಜಿ ಪುಸ್ತಕಗಳನ್ನು ಓದಿ ತೀರಾ ತಲೆಗೆ ಹಚ್ಚಿಕೊಳ್ಳದ್ದರಿಂದಲೇ ಸಂಸ್ಕಾರ ಬರೆಯುವುದು ಸಾಧ್ಯವಾಯಿತು ” ಎಂದು ನನಗೆ ಹೇಳಿದರು.
ಸಂಸ್ಕಾರ ಚಿತ್ರ ನೋಡಿದಾಗ ನನಗೆ ಏನನ್ನಿಸುತ್ತದೆ ಎಂದು ಹಲವರು ಕೇಳುತ್ತಾರೆ. ನಾನು ಬರೆದ ಕಾದಂಬರಿಯನ್ನು ಮತ್ತೆ ಓದುವುದೆಂದರೆ ನನಗೆ ಬೇಸರ. ಚಿತ್ರವನ್ನು ನೋಡಿ ನನಗೆ ಈಗ ಬೋರ್ ಆಗಿದೆ. ರಾಜೀವ ತಾರಾನಾಥರು ಅದಕ್ಕೆ ಕೊಟ್ಟ ಸಂಗೀತವನ್ನು ಮಾತ್ರ ಕಣ್ಣು ಮುಚ್ಚಿ ನಾನು ಅಸ್ವಾದಿಸುತ್ತೇನೆ. ಆದ್ದರಿಂದ ಚಿತ್ರದ ನೇರ ವಿಮರ್ಶೆ ಮಾಡದೆ ಸಾಹಿತ್ಯ ಕೃತಿಗೂ ಸಿನಿಮಾಕ್ಕೂ ಇರುವ ಸಂಬಂಧಗಳ ಬಗ್ಗೆ ಕೆಲವು ವಿಚಾರಗಳನ್ನು ಸಂಸ್ಕಾರಕ್ಕೆ ಸೇರಿದಂತೆ ಹೇಳಲು ಬಯಸುತ್ತೇನೆ.
ಕನ್ನಡದಲ್ಲಿ ನವ್ಯತೆ ಮೊದಲು ಕಂಡದ್ದು ಕಾವ್ಯದಲ್ಲಿ- ಅಡಿಗರ ಕಾವ್ಯದಲ್ಲಿ; ನಂತರ ಸಣ್ಣಕಥೆಗಳಲ್ಲಿ; ಆ ಮೇಲೆ ಕಾದಂಬರಿಯಲ್ಲಿ; ಈಚೆಗೆ ನಾಟಕ ಮತ್ತು ಸಿನಿಮಾದಲ್ಲಿ. ಇದು ಗಮನಾರ್ಹ. ವಸ್ತು ಪ್ರಪಂಚದ ವಿವರ ಈ ಮಾಧ್ಯಮದಲ್ಲಿ ಪ್ರಕಟವಾಗುವ ಕ್ರಮಕ್ಕೂ ನಾನು ಈ ಮುಂದೆ ಹೇಳಬೇಕೆಂದಿರುವುದಕ್ಕೂ ಸಂಬಂಧವಿರಬಹುದೆನ್ನುವುದು ನನ್ನ ಊಹೆ. ವಸ್ತುಪ್ರಪಂಚದ ವ್ಯಕ್ತ ವಿವರಗಳ ಮೂಲಕವೇ ಅವ್ಯಕ್ತವನ್ನು ಹೊಳೆಯಿಸಬೇಕೆನ್ನುವ ಕಲಾವಿದನಿಗೆ ಈ ಮಾಧ್ಯಮಗಳು ಅವಕಾಶಗಳ ಜೊತೆಗೇ ತೊಡಕುಗಳನ್ನು ಒಡ್ಡುತ್ತವೆ. ಸಂಗೀತಕ್ಕೆ ಮಾತ್ರ ವಸ್ತುಪ್ರಪಂಚದ ಶರೀರಧಾರಣೆ ಮಾಡುವ ಹಂಗಿಲ್ಲ. ಕಾವ್ಯದಲ್ಲಿ ಒಂದು ಮನೆಯೋ , ಮರವೋ, ದೀಪವೋ ವಿವರವಾಗಿ ಬಂದರೆ, ಆ ವಿವರ ವಸ್ತುಪ್ರಪಂಚದ ಜೊತೆ ತನ್ನ ಸಾಕೇತಿಕತೆಯನ್ನು ಹುರಿ ಮಾಡಲಷ್ಟು ಮಾತ್ರ ಸಂಬಂಧ ಪಡೆದಿರುತ್ತದೆ. ಕಾವ್ಯದಲ್ಲಿ ಕಾಣುವ ಮರ ಒಂದು ವಿಶಿಷ್ಟ ಅನುಭವವನ್ನು ಮನಸ್ಸಲ್ಲಿ ಕೆತ್ತಲು ಉಪಯೋಗಿಸಿದ ದಟ್ಟವಾದ ಶಬ್ದ ಪದಾರ್ಥವೆನ್ನಬಹುದು. ಮನಸ್ಸನ್ನು ಒಂದು ವಿಶಿಷ್ಟ ಭಾವನೆಗೆ ಸಿದ್ಧ ಪಡಿಸಲು ದುಡಿಯುವ ಈ ವಿವರಗಳು ವಾಸ್ತವಿಕತೆಯ ಜೊತೆ ಅಗತ್ಯಕಿಂತ ಹೆಚ್ಚಿನ ಸಂಬಂಧ ಪಡೆಯುವುದಿಲ್ಲ. ಈ ದೃಷ್ಟಿಯಿಂದ ಸಣ್ಣಕಥೆಯಲ್ಲಿ ಬರುವ ಒಂದು ಮರವೋ, ಪಕ್ಷಿಯೋ, ಬೀದಿಯೋ, ಕಾವ್ಯದಲ್ಲಿ ಬರುವುದಕ್ಕಿಂತ ಹೆಚ್ಚಾಗಿ ಮರ, ಪಕ್ಷಿ, ಬೀದಿಯಾಗಿರುತ್ತದೆ. ಕಾದಂಬರಿಯಲ್ಲಿ ಇನ್ನಷ್ಟು ಹೆಚ್ಚು ಸಾಮಾನ್ಯ ; ಸಿನಿಮಾದಲ್ಲಂತೂ ನಾವು ಪ್ರತ್ಯಕ್ಷ ಕಂಡಷ್ಟೇ. ಸಂಸ್ಕಾರ ಕಾದಂಬರಿಯಲ್ಲಿ ನೀವು ಊಹಿಸುವ ಪ್ರಾಣೇಶಾಚಾರ್ಯ , ನಾರಾಣಪ್ಪರು ಸಿನಿಮಾದಲ್ಲಿ ಗಿರೀಶ್ ಕಾರ್ನಾಡ್ , ಲಂಕೇಶರಾಗಿ ಮಾತ್ರ ಕಂಡುಬಿಡಬಹುದು. ವಸ್ತುಪ್ರಪಂಚ ಹೀಗೆ ಈ ಮಾಧ್ಯಮಗಳಲ್ಲಿ ಎಷ್ಟು ಗಟ್ಟಿಯಾಗಿ ದಿಟವಾಗುತ್ತ ಹೋಗುತ್ತದೆಯೋ , ಅಷ್ಟೇ ಅದನ್ನು ಅವ್ಯಕ್ತವೂ , ಅಮೂರ್ತವೂ ಆದ ಭಾವನೆಗಳಿಗೆ , ವಿಚಾರಗಳಿಗೆ ಶರೀರವಾಗಿ ಮಾಡುವುದು ಕಲಾವಿದನಿಗೆ ಸವಾಲಾಗುತ್ತದೆ, ವಸ್ತುಪ್ರಪಂಚದ ಜೊತೆ ತೊಡಗಿಕೊಂಡೇ , ಅದರ ಮೂಲಕವೇ , ಅದನ್ನು ಮೀರುವ ಕಲಾವಿದನ ಈ ಪ್ರಯತ್ನ ಅತ್ಯಂತ ಮುಖ್ಯವಾದ್ದು.

ಪುತಿನರವರು ‘ ಭವನಿಮಜ್ಜನಾ ಚಾತುರ್ಯ ಲಘಮಾ ಕೌಶಲ ’ ಗಳು ಕೂಡಿರುವವನು ಕವಿಯಗುತ್ತಾನೆಂದು ಹೇಳಿರುವ ಮಾತು , ವಸ್ತುಪ್ರಪಂಚದ ಮೂಲಕವೇ ಅದನ್ನು ಮೀರುವ ಕಲಾವಿದನ ಪ್ರಯತ್ನದ ಬಗ್ಗೆ ನನ್ನ ವಾದವನ್ನು ಸೂಕ್ಷ್ಮವಾಗಿ ಸಮರ್ಥಿಸುತ್ತಃಡೆ ಎಂದು ನಾನು ತಿಳಿದಿದ್ದೇನೆ.

ಈ ಹಿನ್ನೆಲೆಯಲ್ಲಿ ಸಂಸ್ಕಾರದ ಸ್ಕ್ರಿಪ್ಟ್ ಬರೆದ ಗಿರೀಶರ ಜೊತೆ ಅಪಾರ ಮೆಚ್ಚಿಗೆಯ ಜೊತೆಗೇ ನನ್ನ ಕೆಲವು ಜಗಳಗಳೂ ಇವೆ. ಉದಾಹರಣೆಗೆ ಕಾದಂಬರಿಯಲ್ಲೂ , ಚಿತ್ರದಲ್ಲೂ ನಾರಾಣಪ್ಪನ ಶವದ ವೃತ್ತಾಂತದ ನಿರ್ವಹಣೆಯನ್ನು ಹೋಲಿಸಬಹುದು. ಕಾದಂಬರಿ ಮಧ್ಯದಲ್ಲಿ ಮುಸ್ಲಿಂ ಒಬ್ಬ ನಾರಾಣಪ್ಪನ ಶವವನ್ನು ಗುಪ್ತವಾಗಿ ಸುಟ್ಟು ಬಿಡುತ್ತಾನೆ. ಆದರೆ ಅಗ್ರಹಾರದ ಬ್ರಾಹ್ಮಣರು ಮತ್ತು ಪ್ರಾಣೇಶಾಚಾರ್ಯರು ಇನ್ನೂ ಶವ ಕೊಳೆಯುತ್ತಿದೆಯೆಂದು ಭಾವಿಸಿಕೊಂಡಿರುತ್ತಾರೆ. ಆದ್ದರಿಂದ ಕಾದಂಬರಿಯಲ್ಲಿ ನಾರಾಣಪ್ಪನ ನಿಜವಾದ ಶವ ಪ್ರಾಣೇಶಾಚಾರ್ಯನ ಮನಸ್ಸಿನ ಶವವಾಗುತ್ತದೆ. ಜಾತ್ರೆಯಲ್ಲಿ ಅವರು ಸತ್ತವನ ಜೊತೆ ಪಡೆಯುವ ತಾದಾತ್ಮ್ಯ ನಾರಾಣಪ್ಪನ ನಿಜವಾದ ಸಂಸ್ಕಾರ ಮಾಡಿದಂತೆಯೇ ಅಗುತ್ತದೆ. ಆದರೆ ಸಿನಿಮಾದಲ್ಲಿ ಕೊನೆಯ ತನಕ ಉಳಿಸಿಕೊಂಡ ಶವ – ಸಸ್‌ಪೆನ್ಸ್ ದೃಷ್ಟಿಯಿಂದ ಉಳಿಸಿಕೊಂಡದ್ದು – ಕಾದಂಬರಿ ತಾತ್ವಿಕ ಗೂಢಗಳನ್ನು ವ್ಯಕ್ತಪಡಿಸಲು ಅಡ್ಡಿಯಾಗುತ್ತದೆ. ಆದರೆ ಶವವನ್ನು ಕೊನೆಯ ತನಕ ಉಳಿಸಿಕೊಂಡದ್ದು ಬರೀ ಸಸ್‌ಪೆನ್ಸ್‌ಗಾಗಿ ಮಾತ್ರವಲ್ಲವೆನ್ನುವುದನ್ನೂ ಇಲ್ಲಿ ನಾನು ಹೇಳಬೇಕು. ಪ್ರಾಯಶಃ ಮುಸ್ಲಿಮನೊಬ್ಬ ನಾರಾಣಪ್ಪನ ಶವವನ್ನು ಸುಡುವುದು ತೋರಿಸಿದ್ದ ಪಕ್ಷದಲ್ಲಿ ಸಿನಿಮಾ ಇವತ್ತಿಗೂ ಬಿಡುಗಡೆಯಾಗದೇ ಉಳಿದಿರುತ್ತಿತ್ತು.

ಚಲಿಸುವ ಚಿತ್ರಗಳ ಮೂಲಕ ಕಿವಿಯ ಮೂಲಕ ಸಿನಿಮಾ ನಮಗೆ ಅನುಭವವನ್ನು ಸೃಷ್ಟಿಸಿ ಕೊಡುತ್ತದೆ. ಕಣ್ಣಿನ ಮೂಲಕ ನಮಗೆ ಸ್ಪಷ್ಟವಾಗಿ ಕಂಡದ್ದೂ ಕೂಡ ವಸ್ತುಪ್ರಪಂಚದ ವಸ್ತು ಮಾತ್ರವಾಗಿ ಉಳಿಯದೆ ಒಂದು ಕಲಾಕೃತಿಯ ದ್ರವ್ಯವಾಗುವುದೇ , ಅಮೂರ್ತವಾದದ್ದನ್ನು ಹೊಳೆಯಿಸುವುದೇ ಸಿನಿಮಾ ನಮಗೆ ಕೊಡುವ ಮಹತ್ವದ ಅನುಭವ. ಕಾವ್ಯದಲ್ಲಿ ಬರುವ ಶಬ್ದ ಪದಾರ್ಥಗಳಂತೆ ಸಿನಿಮಾದ ದೃಶ್ಯ ಪದಾರ್ಥಗಳು ಹೊರಗಿನ ಪ್ರಪಂಚದ ಜೊತೆ ಸಬಂಧವಿಟ್ಟುಕೊಂಡು ನಮ್ಮ ಮನೋಪ್ರಪಂಚದ ದ್ರವ್ಯಗಳಾಗುತ್ತವೆ. ಬರ್ಗ್‌ಮನ್‌ನ ‘ ಸೈಲೆನ್ಸ್ ’ ಎನ್ನುವ ಸಿನಿಮಾದಲ್ಲಿ ಒಂದು ಟ್ಯಾಂಕ್ ಕ್ರೂರವಾಗಿ ಸದ್ದು ಮಾಡುತ್ತ ನಿಧಾನವಾಗಿ ಚಲಿಸುವುದನ್ನು ನಾವು ನೋಡುತ್ತೇವೆ. ಯುದ್ಧದಲ್ಲಿ ಬಳಸುವ ಈ ಟ್ಯಾಂಕ್ ಸಿನಿಮಾದ ವಾತಾವರಣವನ್ನು ಸೃಷ್ಟಿಸುವುದು ಮಾತ್ರವಲ್ಲ, ಸಿನಿಮಾ ಮುಗಿದ ಮೇಲೂ ನಮ್ಮನ್ನು ಕವನದ ಸಾಲಿನಂತೆ ಅನೇಕ ಅರ್ಥಗಳನ್ನು ಮಿಂಚುತ್ತಾ ಕಾಡುವ ದೃಶ್ಯ ಪದಾರ್ಥವಾಗಿ ಉಳಿಯುತ್ತದೆ. ಕಾವ್ಯದ ಶಬ್ದ – ಪದಾರ್ಥದ ದಟ್ಟತೆಯಂತೆಯೇ ಸಿನಿಮಾ ದೃಶ್ಯ – ಪದಾರ್ಥದ ಈ ಬಗೆಯ ದಟ್ಟತೆಯೂ ಸಿನಿಮಾದ ತೀವ್ರವಾದ ಅರ್ಥವ್ಯಂಜಕತೆಗೆ ಅಗತ್ಯವೆನ್ನಬಹುದು.

ಸಿನಿಮಾದಲ್ಲಿ ಘಟನೆಗಳು , ದೃಶ್ಯ ವಸ್ತುಗಳು ಬರಿ ವಿವರಣೆಯಾಗಿ ಬಂದಾಗ ಹೀಗೆ ಅವು ನಮ್ಮನ್ನು ಕಾಡುವ ಶಕ್ತಿ ಪಡೆಯುವುದಿಲ್ಲ. “ ಪಲ್ಲವಿ ” ಯಲ್ಲಿ ನಾಯಕ ಓಡುವುದು , ನಾಯಕಿ ಮೆಟ್ಟಿಲನ್ನು ಹತ್ತಿ ಇಳಿಯುವುದು , ಮಕ್ಕಳ ಷಾಟ್ – ಸಿನಿಮಾ ಮಾಧ್ಯಮದ ವಿಶಿಷ್ಟತೆಯನ್ನು ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದರೂ ಸಂಪೂರ್ಣ ಯಶಸ್ವಿಯಾಗಿಲ್ಲವೆಂದು ನನಗೆ ಅನುಮಾನ. ಇದಕ್ಕೆ ಕಾರಣವನ್ನು ಆಳವಾಗಿ ವಿಶ್ಲೇಷಿಸ ಬೇಕು.ಇಡೀ ಸಿನಿಮಾದ ಶೈಲಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾಡಿನಲ್ಲಿ ಬಿದ್ದ ಪ್ರತಿಮೆಗಳು , ವಿವರಣಾತ್ಮಕ ಪ್ರತಿಮೆಗಳು ನಮ್ಮಲ್ಲಿ ವಿಸ್ಮಯವನ್ನು ಉಂಟುಮಾಡಲಾರವಾದ್ದರಿಂದ ಸಿನಿಮಾದಲ್ಲಿ ಅಂಥವು ಬಂದಾಗ ನಾವು ಅವನ್ನು ಚುರುಕಾಗಿ ಸ್ವೀಕರಿಸುವುದಿಲ್ಲ.

ಸಿನಿಮಾದಲ್ಲಿ ಮಾಧ್ಯಮ ತನ್ನದೇ ಸಾಧ್ಯತೆಗಳನ್ನು ಪಡೆದಿದೆ. ಕಥೆಯೊಂದನ್ನೇ ಹೇಳುವ , ಆ ಕುತೂಹಲ ಕೆರಳಿಸುವುದರ ಮೂಲಕವೇ ಪುಟದಿಂದ ಪುಟಕ್ಕೆ ಓದುಗನನ್ನು ಗೆಲ್ಲುತ್ತ ಹೋಗುವ ಕಾದಂಬರಿ ಹೇಗೆ ಕಲೆಯಾಗುವುದಿಲ್ಲವೋ ಹಾಗೆಯೇ ಚೆಂದಾಗಿ ಕಾಣುವ ಚಿತ್ರಗಳನ್ನು ಅಳವಡಿಸುವ ಮೂಲಕ ವ್ಯಕ್ತವಾಗುವ ಕಾವ್ಯ , ಕಥೆ , ನಾಟಕಗಳ ಜೊತೆ ಸಂಬಂಧವಿಟ್ಟುಕೊಂಡೂ ಸಿನಿಮಾ ಸ್ವಯಂಪೂರ್ಣ ಮಾಧ್ಯಮವಾಗಿರುತ್ತದೆ ಎಂಬುದನ್ನು ಮರೆಯಕೂಡದು . ಸಿನಿಮಾಕ್ಕೆ ಕಥೆ ಕಾದಂಬರಿಗಳು ವಸ್ತುವಾಗಬಲ್ಲವು – ಅವು ಒಳ್ಳೆಯ ಕಥೆ ಕಾದಂಬರಿಗಳಾಗಿದ್ದಾಗ. ಸಿನಿಮಾಕ್ಕೆಂದೇ ಅವನ್ನು ಲೇಖಕ ಬರೆದಾಗ , ಅವು ತೀರಾ ‘ ಸಿನೀಮಿಯ ’ ವಾಗಿ ಬಿಡುವ ಅಪಾಯವಿದೆ.

ಕನ್ನಡದಲ್ಲಿ ಇನ್ನೂ ಅಪ್ಪಟ ಸಿನಿಮಾ – ಅಂದರೆ ಬರ್ಗ್‌ಮನ್‌ನ ‘ ಸೈಲೆನ್ಸ್ ’ ತರಹದ ಚಿತ್ರ – ಬಂದಿಲ್ಲ. ಆ ದಿಕ್ಕಿನಲ್ಲಿ ನಿಮ್ಮನ್ನು ಚಿಂತಿಸಲು ಈ ಲೇಖನ ಪ್ರಚೋದಿಸೀಯಾತು ಎಂದು ಆಶಿಸಿದ್ದೇನೆ.
*****
Black & White 100 min, Kannada, 1970
Production and direction: Pattabhi Rama Reddy/ Story: U.R. Ananthamurthy/ Screenplay and dialogue: Girish Karnad/ Camera: Tom Cowan/ Music: Rajeev Taranath/ Art Direction: S.G. Vasudev/ Editing: Steven Cartaw, Vasu Cast: Girish Karnad, Snehlata Reddy, P. Lankesh, Dashrathi Dixit, Lakshmi Krishnamurthy.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.