ಸೂತ್ರದ ಬೊಂಬೆಗಳು ಮತ್ತು ಚಲನಚಿತ್ರ ನಟರು

ಮಿ. ವೆಂಕಣ್ಣ ‘ಚಲನಚಿತ್ರ ನಟರೂ ಒಂದು ರೀತಿ ಸೂತ್ರದ ಬೊಂಬೆಗಳೆ?’ ಎಂಬ ಹೇಳಿಕೆಯಿಂದ ತನ್ನ ಸಿನಿಲೇಖನ ಆರಂಭಿಸಿದ್ದ.

ತೆರೆಯ ಹಿಂದೆ ನಿಂತ ಸೂತ್ರಧಾರ-ಸೂತ್ರ ಹಿಡಿದು ತನಗೆ ಬೇಕಾದಂತೆ ಬೊಂಬೆ ಕುಣಿಸುತ್ತಾ ಹೋಗುತ್ತಾನೆ.

“ಆದರೆ ನಟರನ್ನು ಸೂತ್ರದ ಬೊಂಬೆಗಳು ಎನ್ನುವುದು ಹೇಗೆ? ಅವರ ಕೈ ಕಾಲಿಗೆ ಯಾರೂ ದಾರ ಕಟ್ಟಿರುವುದಿಲ್ಲವಲ್ಲ” ಎಂಬ ಪ್ರಶ್ನೆಯೊಂದು ಛಂಗನೆ ಜಿಂಕೆಯಂತೆ ಎಗರಿತು.

“ಸಿನಿಮಾ ಆದಾಗ ನಿರ್ದೇಶಕ ಸೂತ್ರಧಾರನ ಸ್ಥಾನದಲ್ಲಿ ನಿಂತು ತನಗೆ ಬೇಕಾದಂತೆ ಕಲಾವಿದರನ್ನು ರೂಪಿಸುತ್ತಾನೆ. ಬೊಂಬೆ ಆಟದಲ್ಲಿ ಸೂತ್ರಗಳು ಕಾಣುತ್ತವೆ-ಆದರೆ ಕಾಣದ ಸೂತ್ರಗಳನ್ನು ಹಿಡಿದು ನಿರ್ದೇಶಕ ನಾನಾ ಸರ್ಕಸ್ ಮಾಡಿ ಭಾವ-ಭಂಗಿ, ಚಲನ-ವಲನ ಹೀಗೆ ಇರಬೇಕೆಂದು ನಿರ್ದೇಶಿಸುವ ಸಿನಿಮಾದಲ್ಲಿ” ವೆಂಕಣ್ಣನ ಮನಸಿನಂಗಳದಲ್ಲಿ ಹೀಗೆ ಪ್ರಶ್ನೋತ್ತರದ ಬಾಕ್ಸಿಂಗ್ ನಡೆಯುತ್ತಲೆ ಇತ್ತು. ಆಗ ನೇರವಾಗಿ ನಟರಿದ್ದಲ್ಲಿಗೇ ಹಾರಿ ಕಾಲ್ಪನಿಕ ಸಂದರ್ಶನ ಮಾಡುನ ಮನ ಮಾಡಿದ. ಯಾವುದೇ ಸಂಸ್ಥೆ ಆರಂಭಿಸಲಿ ಕಾರ್ಯಕ್ರಮವಾಗಲಿ ಮೊದಲು ಗಣೇಶನ ಪೂಜೆ ಮಾಡುವುದು ಸಂಪ್ರದಾಯ. ಹಾಗೆ ಹೊಸ ಪತ್ರಿಕೆಯಾಗಲಿ ಹೊಸ ಛಾನೆಲ್ ಆಗಲಿ ಮೊದಲು ಸಂದರ್ಶನಕ್ಕಾಗಿ ಮೊದಲಿಗೆ ಓಡುವುದು ಡಾ.ರಾಜ್‌ಕುಮಾರ್ ಬಳಿ. ಅದಕ್ಕೆ ವೆಂಕಣ್ಣನೂ ಹಾರಿದ ಅಲ್ಲಿಗೆ.

ಒಂದೂ ಕಪ್ಪು ಚುಕ್ಕಿ ಇಲ್ಲದ ಫ್ಯೂರ್ ವೈಟ್ ಡ್ರೆಸ್‌ನಲ್ಲಿದ್ದರು ಡಾ. ರಾಜ್.

ಡಾ. ರಾಜ್: “ಏನೇ ಮಾಡಿದ್ರೂ ಅದು ನಾವು ಮಾಡಿದ್ದು ಅಂತ ಹೇಳೋ ಹಾಗಿಲ್ಲ. ಕಾಣದ ಕೈಯೊಂದು ನಮ್ಮನ್ನು ನಿಯಂತ್ರಿಸ್ತಿರತ್ತೆ. ಇಂತಿಂಥ ವೇಳೆ ಇಂತಿಂತಹದೇ ಆಗ್ಲೇಬೇಕೂಂತಿರುತ್ತೆ. ಹಾಗೆ ನಡಿಯೋದು ಎಲ್ಲ. ‘ಶಬ್ದವೇಧಿ’ ಆಯಿತು ಈಗ ಅಂಬರೀಶ ಮಾಡಕ್ಕೆ ಹೊರಟಿದೀವಿ. ಸೆಟ್‌ಮೇಲೆ ಹೋದಾಗ ಹೀಗೆ ಹೀಗೆ ಅಭಿನಯಿಸಿ ಅಂತ ನಮ್ಮನ್ನು ನಿಯಂತ್ರಿಸೋರು ನಿರ್ದೇಶಕರು. ಅದಕ್ಕೆ ‘ನಿನ್ನ ಕೈಲಾಡೋ ಬೊಂಬೆ ನಾನಯ್ಯ’ ಅಂದಿರೋದು ಅಲ್ಲವೆ? ಈ ಸಾರಿ ನಮ್ಮ ಹುಟ್ಟುಹಬ್ಬ ಅಭಿಮಾನಿಗಳು ಭರ್ಜರಿಯಾಗಿ ನಡೆಸಿಕೊಟ್ರು. ಪ್ರೀತಿಯ ಹೊಳೆಹರಿಸಿದರಲ್ಲ ನಮ್ಮ ಮೇಲೆ ಅದಕ್ಕೆ ಕಾರಣವೇನು? ಯಾರ ಕೃಪೆಯಿಂದ ಇವೆಲ್ಲ ಆಯಿತು. ಹಿಂದೆ ನಾವು ರಾಘವೇಂದ್ರಸ್ವಾಮಿ ಪಾತ್ರ ಚಿತ್ರದಲ್ಲಿ ಮಾಡೋ ಸುದ್ದಿ ಬಂದಾಗ ಆ ಪಾತ್ರವನ್ನು ಡಾ. ರಾಜ್ ಮಾಡೋಕೆ ಸಾಧ್ಯವೆ? ಅನ್ನೋ ಅಪಸ್ವರ ಬಂತು. ಅವಾಗ ನಾವು ಮಾಡಲ್ಲ ಅಂದೆವು. ಅದಕ್ಕೆ ಜಿ.ವಿ. ಅಯ್ಯರ್ ‘ನಾಲ್ಕೈದು ಜನರ ಕೈಲಿ ಚೀಟಿ ಎತ್ತಿಸಿದೆವು. ನಿಮ್ಮ ಹೆಸರೇ ಬಂತು’ ಅಂದ್ರು. ಹಾಗಾರೆ ಸರಿ ಅಂತ ಮಾಡೇಬಿಟ್ಟೆವು. ಆ ಚೀಟಿಲೀ ನನ್ನ ಹೆಸರು ಬರೋ ಹಾಗೆ ಮಾಡಿದೋರು ಯಾರು? ಅದೊಂದು ಕಾಣದ ಶಕ್ತಿ. ಆ ಸೂತ್ರಧಾರ ಕಾಣಲ್ಲ. ಆದರೆ ತನಗೆ ಬೇಕಾದ ಹಾಗೆ ನಮ್ಮನ್ನು ಬೊಂಬೆಯಂತೆ ಕುಣಿಸ್ತಾನೆ’ ಅಂದರು ಡಾ.ರಾಜ್. ನಂತರ ವೆಂಕಣ್ಣ ಹಾರಿದ್ದು ವಿಷ್ಣು ಬಳಿ.

ವಿಷ್ಣು: ವಿಷ್ಣು ವೀರಪ್ಪನಾಯಕನ ವೇಷಭೂಷಣದಲ್ಲಿ ಮಿಂಚುತ್ತಿದ್ದರು. ಅವರನ್ನು ಮಾತನಾಡಿಸುವ ಮುನ್ನವೇ ಹೇಳಿದರು.

“ನಟ ನಿರ್ದೇಶಕನ ಕೈಗೊಂಬೆ ಅಂತ ನಾನು ಬಹಿರಂಗವಾಗಿ ಹೇಳಿ ಆಗಿದೆ. ನಿರ್ದೇಶಕ ಕಣಗಾಲ್ ಪುಟ್ಟಣ್ಣ ಇಲ್ಲಾ ಅಂದ್ರೆ ನಾನೆಲ್ಲಿರ್‍ತಿದ್ದೆ. ಕುಮಾರನ್ನ ಒಬ್ಬರು ವಿಷ್ಣುವರ್ಧನ ಮಾಡಿದ್ರು. ಮತ್ತೊಬ್ಬರು ಸಾಹಸ ಸಿಂಹ ಮಾಡಿದರು. ಮಗದೊಬ್ಬರು ವೀರಪ್ಪನಾಯಕ ಮಾಡಿದರು. ಹೀಗಾಗಿಯೇ ಅಲ್ಲವೆ ನಾನು ಸುದ್ದಿ ‘ಸೂರಪ್ಪ’ನಾದ್ದು. ನಿರ್ದೇಶಕನೇ ಶಿಲ್ಪಿ. ನಾವು ಅವನಿಂದ ಕೆತ್ತಲ್ಪಡೋ ಸುಂದರ ಶಿಲ್ಪಗಳು.”

ನಂತರ ವೆಂಕಣ್ಣ ಹಾರಿದ್ದು ಅಂಬರೀಶ್ ಬಳಿ, ಅಂಬಿ ರಾಜಕಾರಣಿಗಳ ಸಭೆಯಲ್ಲಿದ್ದರು.

ಅಂಬರೀಶ್: “ನಿರ್ದೇಶಕ ನಿಜವಾದ ಪಪೆಟಿಯರ್, ಸಿನಿಮಾ ಮಾತ್ರ ಅಂತಲ್ಲ ಈಗ ನಾನು ರಾಜಕೀಯದಲ್ಲಿ ಇರುವುದರಿಂದ ಅದರ ಬಗ್ಗೆಯೂ ಹೇಳಬಲ್ಲೆ. ಡೆಲ್ಲೀಲಿ ಕೂತು ನಮ್ಮನ್ನು ಬೊಂಬೆಗಳಂತೆ ಕುಣಿಸೋದು ಹೈಕಮಾಂಡ್, ಸೂತ್ರ ಇಲ್ಲಿ-ಸೂತ್ರಧಾರ ಅಲ್ಲಿ. ಸೆಟ್‌ಮೇಲೆ ಬಂದಾಗ ನಿರ್ದೇಶಕ ತನಗೆ ಬೇಕಾದ ರೀತಿ ನಮ್ಮನ್ನು ಕುಣಿಸ್ತಾರೆ. ನಾವು ಅವನು ಹೇಳಿದ ಹಾಗೆ ಕುಣೀತೀವಿ. ಚುನಾವಣೇಲಿ ಫಲಿತಾಂಶ ಹೇಳೋರು ಮತದಾರರು. ಚಿತ್ರ ರಿಲೀಸ್ ಆದಾಗ ನಮ್ಮ ಹಣೆಬರಹ ಬರೆಯೋದು ಚಿತ್ರ ರಸಿಕರು” ಎಂದು “ಕುಡಿಯೋಕೆ ಏನಾರು ತನ್ನಿ ಎಂಕಣ್ಣನಿಗೆ” ಎಂದು ಆರ್ಡ್‌ರ್ ಮಾಡಿದರು.
ನಂತರದ ಸರದಿ ಉಪೇಂದ್ರ ಅವರದು.

ಉಪೇಂದ್ರ: “ಫುಲ್ ಕಂಟ್ರೋಲ್ ಇರೋದು ನಿರ್ದೇಶಕನಿಗೆ. ನಟ-ನಟಿಯರು ಬೊಂಬೆಗಳು ಇದ್ದ ಹಾಗೆ. ಸ್ಟಾಂಡ್ ಅಂದ್ರೆ ನಿಂತ್ಕೋಬೇಕು-ಸಿಟ್ ಅಂದ್ರೆ ಕೂರಬೇಕು. ಡ್ಯಾನ್ಸ್ ಅಂದಾಗ ಕುಣೀಬೇಕು. ನನ್ನ ಲೆಕ್ಕದಲ್ಲಿ ಪಪೆಟಿಯರ್‌ನೂ ಮೀರಿಸಿದ ಡೈರೆಕ್ಟರ್ ಒಂದು ರೀತಿ ಡಿಕ್ಟೇಟರೂ ಹೌದು.

ಚಿತ್ರ ಹಣ ಮಾಡೋದು ಮುಖ್ಯ ಮಿಕ್ಕಿದ್ದೆಲ್ಲ ‘ಓಳು ಬರಿ ಓಳು’ ಎಂದು ಡಾನ್ಸೇ ಮಾಡಿಬಿಟ್ಟರು ಉಪೇಂದ್ರ.

ದೀಪಾವಳಿಯಲ್ಲಿ ವಿಷ್ಣು ಜತೆ ಅಭಿನಯಿಸಿದ ಖುಶಿಯಲ್ಲಿದ್ದ ರಮೇಶ್ ಬಳಿಗೆ ಹಾರಿದ ವೆಂಕಣ್ಣ. ‘ಹೂಂ ಅಂತೀಯಾ ಉಹುಂ ಅಂತೀಯಾ?’ ಎಂದು ಮೂವರು ನಾಯಕಿಯರನ್ನು ಪ್ರಶ್ನಿಸುತ್ತಿದ್ದ ರಮೇಶ್ ಸಡನ್ ಆಗಿ ವೆಂಕಣ್ಣನತ್ತ ತಿರುಗಿ.

ರಮೇಶ್: “ಚಿತ್ರಕ್ಕೆ ಡೈರಕ್ಟ್ರೇ ಕ್ಯಾಪ್ಟನ್ ಆಫ್ ದಿ ಷಿಪ್. ಅವರನ್ನು ನಂಬಿ ಗುಡ್‌ಫೇತ್ ಮೇಲೆ ಪಾರ್ಟು ಮಾಡಿ ಕೆಲವು ಸಲ ಏಟು ತಿಂದಿದೀನಿ ಅಂತ ಈಗ ಅರ್ಥವಾಗ್ತಿದೆ. ಡೈರಕ್ಟರ್ ಮನಸ್ಸು ಮಾಡಿದರೆ ನಮ್ಮನ್ನು ಅದ್ಭುತವಾಗಿ ಚಿತ್ರಿಸಬಲ್ಲ-ಬೇಡಾಂದ್ರೆ ಇವತ್ತು ಬಂದ ಹೊಸಬರನ್ನು ಆಕಾಶಕ್ಕೆ ಎತ್ತಿಹಿಡಿಬಲ್ಲ. ಇನ್ನು ಮುಂದೆ ನಂಗೆ ಪಪೆಟ್ ಆಗಕ್ಕೆ ಇಷ್ಟವಿಲ್ಲ. ಸೂತ್ರಧಾರ ಯಾವಾಗ್ಯಾವಾಗ ಯಾವ್ಯಾವ ಸೂತ್ರ ಎಳೀತಾನೆ ಗಮನಿಸಲೇಬೇಕು ಅನ್ನಿಸಿದೆ. ಇಲ್ಲಾ ಅಂದ್ರೆ ನಾವು ಕಲಾವಿದರಾಗಲ್ಲ ಕಲಾವಿದರ ನೆರಳಾಗ್ತೀವಿ”

ಎಂದು ನೊಂದು ನುಡಿದ ನಂತರ ರವಿಚಂದ್ರನ್ ಡಿಟಿ‌ಎಸ್ ಸ್ಟುಡಿಯೋಗೆ ಹಾರಿದ ವೆಂಕಣ್ಣ.

ಸಾಂಗ್ ಕಂಪೋಸಿಂಗ್‌ನಲ್ಲಿದ್ದ ರವಿಚಂದ್ರನ್ ಅಲ್ಲಿಗೆ ಬ್ರೇಕ್ ಕೊಟ್ಟು ಮಾತಿಗೆ ನಿಂತರು.

ರವಿಚಂದ್ರನ್: “ನಟನಿಗಿಂತ ನಿರ್ದೇಶಕನೇ ಗ್ರೇಟ್ ಅನ್ನೋನು ನಾನು. ರೀಮೇಕಾದ್ರೇನು – ಸ್ವಮೇಕ್ ಆದ್ರೇನು ಚಿತ್ರ ಚೆನ್ನಾಗಿದ್ದರೆ ಜನ ಬಂದೇ ಬರ್‍ತಾರೆ. ಎಲ್ಲ ನಟರೂ ನಾನು ಹೇಳಿದ ಹಾಗೆ ಅಭಿನಯಿಸಬೇಕು ಅನ್ನೋನು ನಾನು. ಎಲ್ಲ ಪಾತ್ರಗಳ ಸೂತ್ರವೂ ನನ್ನ ಕೈಲಿರುತ್ತೆ. ಓ.ಕೆ. ಎಂದು ಸ್ಟೈಲಿಷ್ ಆಗಿ ಸ್ಟುಡಿಯೋಗೆ ನಡೆದರು.

ಆನಂತರ ಹಾರಿದ್ದು ಅನಂತ್‌ನಾಗ್ ಬಳಿ. ಸಂಕೇತ್ ಬಗೆಗಿನ ಚಿತ್ರ ವಿಚಿತ್ರ ಹೇಳಿಕೆಗಳಿಂದ ನೊಂದಿದ್ದ ಅವರು ಹೇಳಿದರು.

ಅನಂತ್‌ನಾಗ್: “ಅಲ್ಲಿ ಸಲ್ತೀನಿ ಅಂತ ರಾಜಕೀಯಕ್ಕೆ ಹೋದೆ. ಅಲ್ಲಿ ಅವರು ನಮ್ಮನ್ನು ತನಗೆ ಬೇಕಾದ ಹಾಗೆ ಕುಣಿಸ್ತಾನೆ ನಾಯಕ. ಜನರ ಕೈಲಿ ಒಂದು ಸೂತ್ರ ನಾಯಕನ ಕೈಲಿ ಒಂದು ಸೂತ್ರ. ಅಲ್ಲಿನ ಜಗ್ಗಾಟ ವಿಚಿತ್ರ. ಹಾಗೆ ನೋಡಿದರೆ ಸಿನಿಮಾನೇ ವಾಸಿ. ಇಲ್ಲಿ ಡೈರೆಕ್ಟರ್ ಒಬ್ಬನೇ ಸೂತ್ರಧಾರ. ಅವನು ಹೇಳಿದ ಹಾಗೆ ನಾವು ಬೊಂಬೆಗಳಂತೆ ಕುಣಿದರೆ ಆಯಿತು. ಮಿಕ್ಕ ಹಣೆಬರಹ ಅವರದು” ಎಂದು ನಕ್ಕರು.

ಶಿವರಾಜ್‌ಕುಮಾರ್: ಮಾರಿಷಸ್‌ನಿಂದ ಬಂದಿದ್ದಾರೆ ಅಂತ ತಿಳಿದಿದ್ರಿಂದ ವೆಂಕಣ್ಣ ಹಾರಿದ ಅಲ್ಲಿಗೆ. “ಅರೆರೆ? ನಾವು ಪ್ಲೇನಲ್ಲಿ ಹಾರಿ ಬಂದೆವು. ನೀವು ಹ್ಯಾಗೆ ಹಾರಿ ಬಂದಿದೀರಿ ವೆಂಕಣ್ಣ” ಎಂದು ನಗೆಮೊಗದಿಂದ ಸ್ವಾಗತಿಸಿದರು ಶಿವು.

“ನಾನಂತೂ ಒಂದೊಂದು ಚಿತ್ರದಲ್ಲಿ ಮಾಡೋವಾಗ್ಲೂ ನಿರ್ದೇಶಕ ಯಾವ ರೀತಿ ಹೇಳ್ತಾನೋ ಹಾಗೆ ಅಭಿನಯಿಸ್ತಾ ಬಂದಿದೀನಿ ಅದರಿಂದಾನೆ ವೆರೈಟಿ ಕೊಡೋದು ಸಾಧ್ಯವಾಗಿದೆ. ನಾವು ಏನೋ ಅನ್ಕೋತೀವಿ ಆದ್ರೆ ಅದೇನೋ ಆಗುತ್ತೆ. ಮ್ಯಾನ್ ಪ್ರೊಪೋಸಸ್ ಗಾಡ್ ಡಿಸ್‌ಪೋಸಸ್ ಅನ್ನೋ ಹಾಗೆ. ‘ಪ್ರೀತ್ಸೆ’ ಹಾಗೆ ‘ಇಂದ್ರ ಧನುಷ್’ ಹೋಗತ್ತೆ ಅಂದ್ಕೊಂಡೆ. ‘ಹಗಲು ವೇಷ’ ತುಂಬ ಡಿಫರೆಂಟ್ ಆಗಿ ಕ್ಲಿಕ್ ಆಗುತ್ತೆ ಅನ್ಕೊಂಡೆ.

‘ಕೃಷ್ಣಲೀಲೆ’ ಜನಕ್ಕೆ ಒಂದು ರೀತಿ ಮಜಾ ಕೊಟ್ಟು ಹಿಟ್ ಆಗಬಹುದು ಅಂತ ಭಾವಿಸಿದೆ. ಈಗ ದೇವರ ಮಗ, ಗಲಾಟೆ ಅಳಿಯಂದಿರು-

ರಾಮಾನಾಯಿಡು ಚಿತ್ರ ಕ್ಲಿಕ್ ಆಗ್ಲಿ ಅಂತ ಅಶಿಸಬೇಕಷ್ಟೆ. ಯಾರು ಏನೇ ಹೇಳಲಿ ಡೈರಕ್ಟರ್ ಸುಪ್ರೀಂ. ನಾವು ಆತನ ಮುಂದೆ ‘ಪಪೆಟ್ಸ್’ ಎಂಬುದರಲ್ಲಿ ಅನುಮಾನವಿಲ್ಲ. ಎಷ್ಟೇ ಫಸ್ಟ್‌ಕ್ಲಾಸ್ ಫಿಲಂ ಮಾಡಿದ್ರೂ ವಿಧಿ-ಅದೃಷ್ಟದ ಕೈವಾಡದ ಮೇಲೆ ಎಲ್ಲಾ ನಿಂತಿರೋದು” ಎಂದು ಫಿಲಾಸಫಿ ಮಾತನಾಡತೊಡಗಿದರು ಶಿವು.

-ಇದಿಷ್ಟನ್ನೂ ದಾಖಲಿಸಿಕೊಂಡ ವೆಂಕಣ್ಣ ಅದನ್ನೇ ಒಂದು ಲೇಖನ ಮಾಡಿ ಪೋಸ್ಟ್ ಮಾಡಿದ.

ಈ ಬಗ್ಗೆ ನೀವೇನಂತೀರಿ ಅಂತ ಈಗ ಕೇಳಬಹುದಲ್ಲ.
*****
೧೨-೫-೨೦೦೦

ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ