ನನ್ನ ಹಿಮಾಲಯ – ೮

ಮತ್ತೆ ಬರವಣಿಗೆಯ ಮೊದಲನೆಯ ದಿನ

ಹೃಷೀಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ದಿನಕ್ಕೆ ಎರಡು ಸಾರಿ ರಾಮ ಝೂಲಾದ ಮೇಲೆ ನಡೆದು ಗಂಗಾನದಿಯ ಆ ದಂಡೆಗೆ ಹೋಗಿಬರುತ್ತಿದ್ದೆ.

ಕ್ರಿಕೆಟ್ ಕಾಮೆಂಟರಿ ಕೇಳುತ್ತಿರುವಾಗ, ಈಗ, ಹೃಷಿಕೇಶದ ನೆನಪು ಆಗುತ್ತಿದೆ. ಬಹಳ ಕಾಲದ ನಂತರ ನಾಲ್ಕು ದಿನ ತಿಮ್ಮೇಗೌಡರ ಗೊತೆ ಕಳೆದದ್ದು. ಅವರೆದುರು ರಾಘು ನನ್ನ ಹಿಮಾಲಯ ಬರಹ ಮೆಚ್ಚಿದ್ದು. ನನಗೇ ಈ ಬರೆದದ್ದನ್ನೆಲ್ಲ ರಹಮತ್‌ಗೆ ಕೊಡಬೇಕು ಅನ್ನಿಸಿದ್ದು, ಅಥವ ತಿಂಗಳಿಗೆ ಎರಡು ಬಾರಿಯಾದರೂ ಹೃಷಿಕೇಶ, ಈಗಲೂ, ಕನಸಿನಲ್ಲಿ ಬರುವುದು ಹೀಗೆ ಏನೇನೋ ಕಾರಣ ಇರಬಹುದು.

ದಿನಕ್ಕೆ ಎರಡು ಬಾರಿ ತೂಗುಸೇತುವೆ ದಾಟಿ ಹೋಗುತ್ತಿದ್ದೆ. ಮಲೆನಾಡಿನ ಅಡಿಕೆ ಸಾರದ ಮೇಲೆ ನಡೆದದ್ದು, ಹಿಂದೆ ಚಂದ್ರಾ ಜೊತೆ ಟ್ರೆಕಿಂಗ್ ಹೋದಾಗ ನೋಡಿದ, ದಾಟಿದ, ಕೆಲವು ಬಾರಿ ಖುಷಿಗೆ ಎಂದು ಹಗ್ಗಕ್ಕೆ ಜೋತು ಬಿದ್ದು ತಲೆಕೆಳಗಾಗಿ ನದಿ ದಾಟುವ ಸಾಹಸ ಅಭ್ಯಾಸ ಮಾಡಿದ್ದು ಇವಲ್ಲ ಆ ಸೇತುವೆ ಮೇಲೆ ಹೋಗುತ್ತಾ ಇರುವಾಗ ಬಿಳೀ ಪಂಚೆ ಉಟ್ಟು ಖಾದಿ ಜುಬ್ಬದ ಜೇಬಿನಲ್ಲಿ ಕೈ ಇಟ್ಟು ನಡೆಯುತ್ತಿದ್ದೆ. ಹರಿದ್ವಾರದಲ್ಲಿ ಇಪ್ಪತ್ತು ರೂಪಾಯಿಗೆ ಒಂದರಂತೆ ಎರಡು ಜುಬ್ಬ ತೆಗೆದುಕೊಂಡಿದ್ದೆ. ಇಲ್ಲಿ ಕೃಷ್ಣಾನಂದರು ನನಗೆ ಪಂಚೆ ಕೊಡುವ ಹೊತ್ತಿಗೆ ಹದಿನೈದು ದಿನ ಕಳೆದಿತ್ತು. ಹೃಷಿಕೇಶ ನನ್ನನ್ನು ನಿಧಾನವಾಗಿ ಒಪ್ಪಿಕೊಳ್ಳುತ್ತಿತ್ತು.

ಡಿಸೆಂಬರಿನ ಕೊನೆಯ ಭಾಗದಲ್ಲಿ, ನುಣ್ಣಗೆ ಕ್ಷೌರ ಮಾಡಿದ ಮುಖದ ಮೆಲೆ ಮತ್ತು ಸ್ವಲ್ಪ ಉದ್ದವಾಗಿ ಬೆಳೆದ ತಲೆಕೂದಲ ಒಳಗೆ ನದಿಯ ಮೇಲಿನ ಡಿಸೆಂಬರ್ ಗಾಳಿ ಜೋರಾಗಿ ಬೀಸುತ್ತಿತು. ಸೇತುವೆಯ ತೀರ ಕೆಳಗೆ ತೆಳುವಾಗಿ ಹರಿಯುವ ಗಂಗೆಯ ಮೀನುಗಳಿಗೆ ಆಹಾರ ಹಾಕಿ ಪುಣ್ಯ ಕಟ್ಟಿಕೊಳ್ಳಿ ಎಂದು ಯಾತ್ರಿಗಳಿಗೆ ದುಂಬಾಲು ಬೀಳುವ ಬಾಲಕಿಯರು ನನ್ನತ್ತ ಗಮನಕೊಡುವುದು ಬಿಟ್ಟಿದ್ದರು. ಹಳತಾದ ಕೊಳಕು ಲಂಗ, ಹರಿದ ಸ್ವೆಟರು ಹಾಕಿಕೊಂಡ ಇಂಥ ಹುಡುಗಿಯರು ನಾನು ಕಂಡಾಗ ನಕ್ಕೂ ನಗದಂತೆ ನಕ್ಕು, ಬೇರೆ ಯಾತ್ರಿಗಳ ಅಂಗಿ ಹಿಡಿದು, ಕೈ ಹಿಡಿದು, ಹಿಟ್ಟಿನ ಗೋಲಿಗಳ ಪ್ಯಾಕೆಟ್ಟು ತೆಗೆದುಕೊಳ್ಳಿ ಎಂದು ಕಾಡುತ್ತಿದ್ದರು. ರೂಪಾಯಿಗೆ ಒಂದು ಪ್ಯಾಕೆಟ್ಟು. ಅವರು ಈಗ ನನ್ನ ಗಮನಿಸುತ್ತಿರಲಿಲ್ಲ. ಹೃಷಿಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ಮೊದಮೊದಲು ಫೋಟೋಗಳನ್ನು ಮಾರಲು ನನ್ನ ಬಳಿ ಬರುತ್ತಿದ್ದವರು, ಸೇತುವೆ ನಡುವೆ ನಿಲ್ಲಿಸಿ ನದಿ ಮತ್ತು ಹಿಮಾಲಯದ ಹಿನ್ನೆಲೆಯ ಫೋಟೋ ತೆಗೆಸಿಕೊಳ್ಳಲು ಒತ್ತಾಯಿಸುತ್ತಿದ್ದವರು ನಾನೊಬ್ಬ ಗಿರಾಕಿಯೇ ಅಲ್ಲ ಅಂತ ಈಗ ತೀರ್ಮಾನಿಸಿಬಿಟ್ಟಿದ್ದರು. ಹೃಷಿಕೇಶ ನನ್ನನ್ನು…..ಸೇತುವೆಯ ಮೊದಲಿಗೇ ಒಂದು ಇದ್ದಿಲು ಒಲೆ ಇಟ್ಟುಕೊಂಡು ದಿನದ ಅಲ್ಲ ಹೊತ್ತಿನಲ್ಲೂ ಒಂದೇ ಸಮ “ಪಾಪಡ್ ಲೇಲೋ, ದುನಿಯಾ ಕಾ ಪಾಪಡ್”ಎಂದು ಬಿಡುವು ಕೊಡದೆ, ಜನ ಅವನತ್ತ ನೋಡಿದಾಗೆಲ್ಲ ಕೂಗುವ ಮುದುಕ ನನ್ನ ಕಂಡಾಗ ಸುಮ್ಮನೆ ಇರುತ್ತಿದ್ದ. ಹೃಷಿಕೇಶ ನನ್ನನ್ನು…. ಗಂಗೆಯ ಆ ಕಡೆಯ ದಡದಲ್ಲಿ ಒಂದು ಟೀ ಅಂಗಡಿ. ಅದರ ಯಜಮಾನನಿಗೆ ಕುರುಚುಲು ಗಡ್ದ. ಕ್ರಾಪು ಮತ್ತು ಅದರೊಳಗೆ ಬಚ್ಚಿಟ್ಟುಕೊಂಡಿದ್ದ. ಸ್ವಲ್ಪ ಉಬ್ಬು ಹಲ್ಲು. ಸದಾ ನಗುಮುಖ. ಕೆಲಸದ ಹುಡುಗನನ್ನು ಮಾತ್ರ ಬೈಯುತ್ತಿದ್ದ. ನಾನು ಅವನ ಅಂಗಡಿಗೆ ಕಾಲಿಟ್ಟ ಕೂಡಲೆ ಸ್ಪೆಶಲ್ ಚಾ ಮಾಡಿ ಉದ್ದ ಲೋಟಕ್ಕೆ ತುಂಬಿ, ಲೋಟವನ್ನು ಒಮ್ಮೆ ಹೆಗಲಮೇಲಿದ್ದ ಟವಲಿನಲ್ಲಿ ಒರೆಸಿ ನನ್ನ ಮುಂದೆ ಇಡುತ್ತಿದ್ದ. ನಾನು ಆರಾಮಾಗಿ ಒಂದು ಸಿಗರೇಟು ಸೇದುತ್ತಿದ್ದೆ. ಸಂಜೆ ಹೊತ್ತು ರಸ್ತೆ ಪಕ್ಕದಲ್ಲಿ ಒಂದು ಒಲೆ ಇಟ್ಟು ಜಿಲೇಬಿ ಕರೆಯುತ್ತಿದ್ದ. ಹಳ್ಳಿ ಹಿಂದಿಯಲ್ಲಿ ಮಾತಾಡುತ್ತಿದ್ದ. ಚಿಲ್ಲರೆ ಇಲ್ಲದಿದ್ದರೆ ನಾಳೆ ಬಂದಾಗ ಕೊಡಿ ಅನ್ನುತ್ತಿದ್ದ. ಒಂದು ದಿನ ಹೋಗದಿದ್ದರೆ ನಿನ್ನೆ ಯಾಕೆ ಬರಲಿಲ್ಲ ಅಂತ ಕೇಳುತ್ತಿದ್ದ. ತನ್ನ ಮಗ, ಸೊಸೆ, ರಸ್ತೆ ಎದುರು ಇರುವ ತನ್ನ ಬಳೆ ಅಂಗಡಿ ಎಲ್ಲದರ ಬಗ್ಗೆ ಏನೇನಾದರೂ ಹೇಳುತ್ತಿದ್ದ. ನನಗೆ ಹಿಂದಿ ತಿಳಿಯುತ್ತದೆ, ಮಾತಾಡಲು ಬರುವುದಿಲ್ಲ ಅಂತ ಅವನಿಗೆ ಗೊತ್ತಿತ್ತು. ಹೃಷಿಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ನೆಲೆ ಇಲ್ಲದೆ ಅಲ್ಲಿ ನೆಲೆಸಿದ್ದ ಹಲವು ನೂರು ಜನರಲ್ಲಿ ನಾನು ಒಬ್ಬನಾಗಿಬಿಟ್ಟಿದ್ದೆ.

ಹೃಷಿಕೇಶಕ್ಕೆ ಬಂದಾಗ ಬಹುಶಃ ನಾನು ಎದ್ದುಕಾಣುವ ಅಪರಿಚಿತ ಆಗಿದ್ದೆ! ಹರಿದ್ವಾರದ ಪ್ರೊಫೆಶನಲ್ ಸನ್ಯಾಸಿಗಳು ನನಗೆ ಒಗ್ಗಿರಲಿಲ್ಲ. ಅವರ ಬದುಕು ಬೇರೆ ಥರದ್ದು. ಅವರು ನನಗೆ ಪರಿಚಯ ಆಗಿ ಅವರೊಡನೆ ಹದಿನೈದು ಇಪ್ಪತ್ತು ದಿನ ಕಳೆಯಲು ವಾರಣಾಸಿಯಲ್ಲಿ ನನಗೆ ಸಿಕ್ಕ ಇಂಗ್ಲಿಷ್ ಮಹಿಳೆ ಕಾರಣ.

ಡಿಸೆಂಬರ್ ತಿಂಗಳ ಮೊದಲ ವಾರದ ಕೊನೆಗೆ ನಾನು ವಾರಣಾಸಿಗೆ ಬಂದೆ. ರಾತ್ರಿಯ ಕೊರೆಯುವ ಚಳಿ. ಸುರಿಯುವ ಮಂಜಿನಲ್ಲಿ ಸ್ಟೇಶನ್ನಿನ ಪ್ರಖರ ದೀಪಗಳು ಮಂಕಾಗಿ, ನೆಲದ ಆಧಾರ ಇಲ್ಲದೆ, ಅಂತರದಲ್ಲಿ ಇದ್ದೂ ಇಲ್ಲದಂತೆ ಉರಿಯುತ್ತಿದ್ದವು. ರೈಲಿನಲ್ಲಿ ನನ್ನ ಜೊತೆ ಬಂದ ಕಾನ್ವೆಂಟಿನ ಮಹಿಳೆಯರು ಹೊರಟುಹೋಗಿದ್ದರು. ಅವರಿಗೆ ಹೋಗಲು ಗೊತ್ತಾದ ಒಂದು ಜಾಗ ಇತ್ತು. ವ್ಯಾಪಾರಿಯ ಮಗ ಗುಡ್‌ಬೈ ಅಂತ ಹೇಳಿ ನಗುತ್ತ ಹೊರಟುಹೋದ. ಅವನಿಗೆ ಹೋಗಲು ಮನೆ ಇತ್ತು. ನಾನು ಕೆಲಸ ಬಿಟ್ಟು ಹೊರಟಿದ್ದೇನೆ ಅಂತ ಅವನಿಗೆ ಹೇಳಿದ್ದೆ. ಪೆನ್‌ಶನ್ ಬರುತ್ತೆ ಅಂತ ಹೇಳಿದ್ದೆ. ಒಳ್ಳೆ ಕೆಲಸ ಮಾಡಿದಿರಿ, ಸರ್ಕಾರಿ ಕೆಲಸದಿಂದ ಏನೂ ಲಾಭ ಇಲ್ಲ ಅಂದ. ಬಿಸಿನೆಸ್ ಮಾಡುವ ಆಸೆ ಇದೆಯಾ ಅಂದ. ಹ್ಞೂ ಅಂದೆ. ಊರು ಬಂದಾಗ ಸುಮ್ಮನೆ ಹೊರಟು ಹೋದ. ರೈಲು ಇಳಿದಾಗ ರಾತ್ರಿ ಹನ್ನೆರಡು. ನಾಲ್ಕು ಗಂಟೆ ತಡ. ಚಳಿ ಎಷ್ಟಿತ್ತು ಅಂದರೆ ಚಳಿಯ ಅನುಭವ ಆಗುವ ಮಿತಿಯನ್ನೂ ಮೀರಿತ್ತು. ನನ್ನ ಜರ್ಕಿನ್ ನೆಟ್ ಬನೀನಿನಷ್ಟು ನಿರುಪಯುಕ್ತವಾಗಿತ್ತು. ಜೊತೆಗೆ ಇದ್ದ ಹೆಗಲು ಚೀಲದಲ್ಲಿ ಒಂದು ಷರಟು ಮಾತ್ರ ಇತ್ತು. ಇನ್ನೊಂದು ಪ್ಯಾಂಟು ಮಂಗಳೂರಲ್ಲೆ ಕಳೆದು ಹೋಗಿತ್ತು. ಬೆಳಗಾದರೆ ಎಲ್ಲಾದರೂ ಹೋಗಬಹುದಾಗಿತ್ತು. ಈಗ ಚಳಿ ಇರದ ಮಲಗುವ ಜಾಗಮಾತ್ರ ಬೇಕಿತ್ತು. ಕೆಲವರು ಮುದುರಿ ಮಲಗಿದ್ದರು. ಒಬ್ಬಿಬ್ಬರು ಕೂಲಿಯವರು ಇದ್ದರೂ ಬರಿಗೈಯ ನನ್ನನ್ನು ತಿರುಗಿಯೂ ನೋಡಲಿಲ್ಲ.

ಸ್ಟೇಷನ್ನಿನ ಹೊರಗೆ ಸೈಕಲ್ ರಿಕ್ಷಾಗಳಲ್ಲಿ ರಿಕ್ಷಾವಾಲಾಗಳು ಮಲಗಿದ್ದರು. ಅವರು ಯಾರನ್ನಾದರೂ ಹೋಟೆಲ್ ಎಲ್ಲಿದೆ ಕೇಳಬೇಕು ಅಂದುಕೊಂಡರೂ ಮೋಸ ಮಾಡಿದರೆ ಅನ್ನುವ ಅಳುಕು ಇತ್ತು. ಆಗ ಬಿಳೀ ಪ್ಯಾಂಟು, ಶರಟು, ಸ್ವೆಟರು, ತಲೆಗೆ ಉಣ್ಣೆ ಟೋಪಿ ಹಾಕಿಕೊಂಡಿದ್ದ ಹುಡುಗ ಸಿಕ್ಕಿದ. ಉಳಿಯಲು ಜಾಗ ಬೇಕೆ? ಬೇಕು. ಎಂಥಾ ಹೋಟೆಲ್? ತುಂಬಾ ಬೆಲೆಯದ್ದು ಬೇಡ. ಎಲ್ಲಿಂದ ಬರ್ತಿದೀರಿ? ಕರ್ನಾಟಕ. ಪ್ರವಾಸಿಯೇ? ಹೌದು. ಹೀಗೆ ಕೇಳುತ್ತ ಕೇಳುತ್ತ ಹೋಟೆಲಿಗೆ ಒಯ್ದ. ದಿನಕ್ಕೆ ನೂರ ಐವತ್ತು. ಅಷ್ಟು ಕೊಡುವುದು ಕಷ್ಟ. ಇರುವ ಎರಡು ಸಾವಿರ ಇನ್ನೂ ಕೆಲವು ತಿಂಗಳಾದರೂ ನನಗೆ ಆಧಾರವಾಗಿ ಉಳಿಯಬೇಕು. ನನಗೆ ನೆಲೆ ಸಿಗುವವರೆಗೆ. ಆದರೆ ಇಲ್ಲಿ, ಈಗ, ನಾನು ಪ್ರವಾಸಿ ಅಂತ ನಟಿಸಬೇಕಿತ್ತು. ಚಳಿಯಿಂದ ತಪ್ಪಿಸಿಕೊಳ್ಳಬೇಕಿತ್ತು. ಒಪ್ಪಿದೆ. ಆ ಹುಡುಗ ತನ್ನ ಹೆಸರು ಪಾಂಡೆ ಅಂತ ಹೇಳಿ, ಹೋಟೆಲ್ಲಿನವನ ಬಳಿ ಕಮೀಷನ್ ಪಡೆದು ಬೆಳಿಗ್ಗೆ ಬೇಗ ಬರುತ್ತೇನೆಂದು ಹೋಗಿಬಿತ್ತ. ಎರಡು ದಪ್ಪ ರಗ್ಗುಗಳನ್ನು ಹೊದ್ದು ನಿದ್ದೆ ಮಾಡಿದೆ.

ಬೆಳಗಾಗುವ ಹೊತ್ತಿಗೆ ಪಾಂಡೆ ಬಂದ. ಬನಾರಸ್ ತೋರಿಸ್ತೇನೆ. ಅಂದ. ಎಷ್ಟು ದಿನ ಇರುತ್ತೀರಿ? ಮೂರು ದಿನ ಅಂದೆ. ಸುಮ್ಮನೆ. ಇಲ್ಲೇ ಇರಲು, ಸಾಧ್ಯವಾದರೆ, ಬಂದವನು ಅಂತ ಹೇಳಲಿಲ್ಲ. ರಿಕ್ಷಾನೋ ಟ್ಯಾಕ್ಸೀನೋ ಅಂದ. ನಡೆಯೋಣ ಅಂದೆ. ನನ್ನತ್ತ ವಿಚಿತ್ರವಾಗಿ ನೋಡಿದ. ಸರಿ ಅಂದ. ಬೆಳಗಿನ ಚಳಿ ಬಿಸಿಲಲ್ಲಿ ಬನಾರಸ್ ಎದ್ದೇಳುತ್ತಿತ್ತು. ಶಾಲೆಗೆ ಹೋಗುವ ಉಣ್ಣೆ ಉಡುಪಿನ ಮಕ್ಕಳು. ತರಕಾರಿ ಮಾರಲು ಬಂದ ಹಳ್ಳಿ ಜನ. ಕಾಂಪೌಂಡಿನ ಬಾಗಿಲಲ್ಲಿ ನಿಂತು ವ್ಯಾಪಾರ ಮಾಡುವ ಸ್ವೆಟರು ತೊಟ್ಟ ಹೆಂಗಸರು ಅಲ್ಲೊಂದು ಇಲ್ಲೊಂದು ಬಾಗಿಲು ತೆರೆದ ಅಂಗಡಿಗಳು…. ಅದು ಯಾವುದೇ ಊರು ಇರಬಹುದು.

ಈ ಊರಲ್ಲಿ ತಿಥಿ ಮಾಡಿಸಿದರೆ ಹಿರಿಯರಿಗೆ ಶಾಶ್ವತವಾದ ಮುಕ್ತಿ ಸಿಗುತ್ತೆ, ತಾನು ಅದನ್ನು ಕಡಿಮೆ ಖರ್ಚಿನಲ್ಲಿ, ಕೇವಲ ಐನೂರು ರೂಪಾಯಲ್ಲಿ ಮಾಡಿಸಲು ಏರ್ಪಾಡು ಮಾಡಿಕೊಡುವೆ, ಬೇರೆಯವರ ಹತ್ತಿರ ಹೋಗಿ ಮೋಸ ಬೀಳಬೇಡಿ ಅಂತ ಪಾಂಡೆ ಬಲೆ ನೇಯತೊಡಗಿದ. ನಮ್ಮಲ್ಲಿ ತಿಥಿ ಮಾಡಿಸುವ ಸಂಪ್ರದಾಯ ಇಲ್ಲ ಅಂದೆ. ನೀವು ಮುಸ್ಲಿಮರಾ ಅಂದ. ಅಲ್ಲ ಅಂದೆ. ಮತ್ತೆ? ತನ್ನ ಎದೆಯ ಮೇಲೆ ಕೈಯಿಂದ ಶಿಲುಬೆಯ ಆಕಾರ ಮೂಡಿಸುತ್ತಾ ಕ್ರಿಶ್ಚಿಯನ್ನರೆ ಅನ್ನುವ ಹಾಗೆ ನೋಡಿದ. ಅಲ್ಲ ಅಂದೆ. ಮತ್ತೆ ಹಿಂದೂ ಆದರೆ ತಿಥಿ ಯಾಕೆ ಮಾಡಲ್ಲ? ಅವನ ಹತ್ತಿರ ವಾದ ಮಾಡುವಷ್ಟು ಹಿಂದಿ ನನಗೆ ಗೊತ್ತಿರಲಿಲ್ಲ.

ತುಂಬ ದಿನ ಉಳಿಯೋದಕ್ಕೆ ಇಲ್ಲಿ ಚತ್ರಗಳು ಇಲ್ಲವಾ ಎಂದೆ. ಇವೆ, ನೀವು ಉಳಿಯುವಂಥವು ಇಲ್ಲ ಅಂದ. ಸರ್ಕಾರವೇ ಗಾಂಜಾ ಮಾರುವ ಲೈಸೆನ್ಸ್ ಅಂಗಡಿ ಹತ್ತಿರ ಉದ್ದ ಗಡ್ಡದವರು, ಬೋಳು ತಲೆಯವರು, ಬೂದಿಬಡುಕರು ಗುಂಪುಗೂಡಿದ್ದರು. ಯಾಕೆ ಇವರೆಲ್ಲ ಹೀಗಿದ್ದಾರೆ? ವಿಶ್ವನಾಥಮಂದಿರದ ಕಿರು ಓಣಿ ಬೆಂಗಳೂರಿನ ಚಿಕ್ಕಪೇಟೆಯ ಅಜ್ಞಾತ ಗಲ್ಲಿಯಂತಿತ್ತು. ಚಪ್ಪಡಿ ಹಾಕಿದ ರಸ್ತೆಯ ಮೇಲೆ ದನಗಳು ಓಡಾಡುತ್ತಿದ್ದವು. ಅಪರಾಜಿತೋ ಸಿನಿಮಾ ಜ್ಞಾಪಕ ಬಂತು. ದೇವಾಲಯದಲ್ಲಿ ನೆಲದೊಳಗೆ ಅಡಗಿದ ನುಣುಪು ಕಲ್ಲು ಮುಟ್ಟಿ ಹೂವಿಟ್ಟಾಗ ಕಾಲಿಗೆ ನೀರಲ್ಲಿ ನೆನೆದ ಚಪ್ಪಡಿ ಕಲ್ಲು ತಣ್ಣಗೆ ತಗಲುತ್ತಿತ್ತು. ಮಂಕು ದೀಪ, ಸಣ್ಣಗೆ ಉರಿಯುವ ಎಣ್ಣೆದೀಪ, ಸುತ್ತ ಜನರ ಮೈ ಒತ್ತಡ. ಹೆಜ್ಜೆ ಹೆಜ್ಜೆಗೆ ಕಾಡುವ ಪಂಡರಿಗೆ ನೂರೈವತ್ತು ರೂಪಾಯಿ ಕೊಡದೆ ತಪ್ಪಿಸಿಕೊಳ್ಳಲಾಗಲಿಲ್ಲ.

ಪಾಂಡೆ ಮತ್ತೆ ತಿಥಿ ಮಾಡಿಸುವುದಕ್ಕೆ, ಮನೆಯವರಿಗೆ ಸೀರೆ ಕೊಡಿಸುವುದಕ್ಕೆ ಗಂಟುಬಿದ್ದ. ದೋಣಿಯಲ್ಲಿ ಕೂತು ಗಂಗೆಯ ಆಕಡೆ ದಡಕ್ಕೆ ಹೋಗುತ್ತೀರಾ, ಬರೀ ಇನ್ನೂರು ರೂಪಾಯಿ ಅಂದ. ಬೇಡವೇ ಬೇಡ ಅಂತಂದಾಗ ಸಂಕಟಮೋಚನ ಮಂದಿರ ತೋರಿಸುತ್ತೇನೆ ಅಂತ ಊನಿವರ್ಸಿಟಿ ಹತ್ತಿರ ಕರಕೊಂಡು ಹೋಗಿ ದೇವಸ್ಥಾನಗಳನ್ನು ತೋರಿಸಿದ. ಸಂಜೆ ಹೊತ್ತಿಗೆ ಖುಶಿ ಆಯಿತಾ ಬಕ್ಷೀಸು ಕೊಡಿ ಅಂತ – ಐವತ್ತು, ಸಾಲದು. ಎಪ್ಪತ್ತೈದು, ಸಾಲದು. ನೂರು, ನೂರೈವತ್ತು ಪಡೆದು ನಾಳೆ ಬೆಳಿಗ್ಗೆ ಬರುತ್ತೇನೆ ಅಂತ ಮಾಯವಾದ.
ನಾನು ಮಾಡಿದ ಮೊದಲನೆಯ ಕೆಲಸ ಅಂದರೆ ಅವನು ಗೊತ್ತುಮಾಡಿದ ಹೋಟೆಲು ಖಾಲಿ ಮಾಡಿದ್ದು. ಇನ್ನೊಂದು ಚಿಕ್ಕ ಮನೆಯಂಥ ಹೋಟೆಲು. ಹೆಸರು ಸುಂದರವಾಗಿತ್ತು. ನೀಲಗಂಗಾ. ಬಾಡಿಗೆ ತೀರಾ ಕಡಿಮೆ. ವಾಚಾಳಿ ಮಾಲಕನಿಂದ ತಪ್ಪಿಸಿಕೊಳ್ಳಲು ಮಾರನೆಯ ಇಡೀ ದಿನ ಊರು ಅಲೆದೆ.

ವಿಷಕನ್ಯಾ ಸಿನಿಮಾದ ಪೋಸ್ಟರು ತುಂಬಿದ ಗೋಡೆಗಳು. ಟಿವಿ, ಬಟ್ಟೇ ಜಾಹಿರಾತು ನೇತುಹಾಕಿಕೊಂಡ ಕಂಬಗಳು. ಎಲ್ಲೆಲ್ಲೋ ತಿರುಗುವ ಗಲ್ಲಿಗಳು. ನಿರ್ದಿಷ್ಟ ಕೆಲಸ ಮತ್ತು ಗುರಿ ಇರುವಂತೆ ಓಡಾಡುವ ಜನಗಳು. ನೀನೇ ಅಂತ ಕೇಳುವವರಿಲ್ಲದೆ ನಾನೂ ಯಾರೊಡನೆಯೂ ಮಾತಾಡದೆ ನನ್ನ ಯಾರೂ ಮಾತಾಡಿಸದೆ ಇಡೀ ದಿನ ವಾರಣಾಸಿ ಸುತ್ತಿದೆ. ಆ ಬೀದಿ ತುಂಬ ಕಡಿತದ ಬೆಲೆಯ ರಜಾಯಿ ಮಾರಾಟದ ಬೋರ್ಡುಗಳು. ತೀರ ಕಡಮೆ ಬೆಲೆಯ ಒಂದು ರಜಾಯಿ ಕಂಡೆ. ನೀಲಗಂಗಾದಲ್ಲಿ ರಗ್ಗು ಇರಲಿಲ್ಲ.

ಬೆಳಗ್ಗೆ ಮತ್ತೆ ಹೊರಟೆ. ವಿಶ್ವನಾಥ ದೇವಸ್ಥಾನದ ದಾರಿ ಸಿಗಲಿಲ್ಲ. ಕೇಳುತ್ತ ಹೊರಟೆ. ದೇವಸ್ಥಾನದ ಪಕ್ಕದಲ್ಲೆ ಇದ್ದ ಗಂಗಾ ನದಿಯ ಉದ್ದಕ್ಕೂ ನದಿಯ ಜೊತೆ ಮತ್ತು ನದಿಯ ವಿರುದ್ಧ ದಿಕ್ಕಿನಲ್ಲಿ ಸುಮ್ಮನೆ ಅಲೆದಾಡಿದೆ. ಈಜುವವರು, ಬಟ್ಟೆ ಒಗೆಯುವವರು, ಹಾರುವವರು, ನಾಯಿಗಳು, ಪೂಜೆಮಾಡುವವರು, ಮೆಟ್ಟಿಲುಗಳು, ಕಟ್ಟಯಮೇಲೆ ದುಂಡಾದ ಹಾಳೆ ಛತ್ರಿಗಳು, ದಪ್ಪ ದಪ್ಪ ಅಕ್ಷರಗಳಲ್ಲಿ ಘಾಟಿಯ ಹೆಸರು ಬರೆದುಕೊಂಡ ಬೋರ್ಡುಗಳು. ನದಿಯ ಮೇಲೆ ಓಡಾಡುವ ದೋಣಿಗಳು. ನನ್ನ ನಿರುದ್ಧಿಶ್ಯ ನಡೆ…. ಇನ್ನೂ ಹತ್ತು ಗಂಟೆ. ನಡೆದಿದ್ದೆ. ಯಾರನ್ನೋ ಕಾಣಬೇಕು. ಏನೋ ಆಗಬೇಕು. ಇಡೀ ದಿನ ಕಳೆಯುವುದು? ಅಥವಾ ಇಡೀ ಬದುಕು ಹೀಗೇ? ಗೊತ್ತಿಲ್ಲ. ನಡೆದಿದ್ದೆ.

ಅಲ್ಲೊಂದು ಕಡೆ ಜಗತ್ತೆಲ್ಲ ಮರೆತಂತೆ ಪುಸ್ತಕ ಓದುತ್ತ ಕುಳಿತ ಒಬ ವಿದೇಶೀ ಮಹಿಳೆ ಇದ್ದಳು. ಸ್ವಲ್ಪ ಹೊತ್ತು ನೋಡುತ್ತ ನಿಂತೆ. ಬಿಳೀ ಪಂಚೆ, ಬನೀನು ತೊಟ್ಟ, ಸ್ವಲ್ಪ ಗಡ್ಡ ಇದ್ದ, ಜುಟ್ಟು ಗಂಟು ಹಾಕಿಕೊಂಡ ಒಬ್ಬ ಯುವಕ ನದಿಯಿಂದ ಸ್ನಾನ ಮಾಡಿ ಎದ್ದು ಬರುತ್ತಿದ್ದ. ಅವಳನ್ನು ಗುರುತು ಹಿಡಿದು ಮಾತನಾಡಿಸಿದ. ಇಬ್ಬರೂ ಒಬ್ಬನೇ ಗುರುವಿನ ಶಿಷ್ಯರಂತೆ. ಅವನು ನಿಂತು, ಅವಳು ಓದುತ್ತಿದ್ದ ಪುಟದ ಗುರುತಿಗೆಂದು ಬೆರಳಿಟ್ಟು ಪುಸ್ತಕ ಮಡಚಿ ಮೊದಲ ಮೆಟ್ಟಿಲ ಕಟ್ಟೆಯ ಮೇಲೆ ಕುಳಿತು, ಹಳೆಯ ಕತೆಗಳನ್ನು ಮನುಷ್ಯರನ್ನು ಜ್ಞಾಪಿಸಿಕೊಳ್ಳುತ್ತ ಇದ್ದರು. ಅವನು ಹೋಗುವವರೆಗೆ ಕಾದೆ. ನಾನು ನೋಡಬೇಕಾದವಳು ಇವಳೇನೇ? ಅವಳು ನನ್ನ ಕಣ್ಣ ಅಳತೆಯಿಂದ ತಪ್ಪಿಹೋಗದಂತೆ ಅಲ್ಲೆ ಹದಿನೈದು ನಿಮಿಷ ಸುತ್ತಾಡಿದೆ. ಧೈರ್ಯ ಕೂಡುತ್ತ ಚದರುತ್ತ ಇತ್ತು. ಆಕೆ ಬಿಸಿಲಿಗೆ ಬೆನ್ನು ಕೊಟ್ಟು ಪುಸ್ತಕ ಓದುತ್ತ ತನ್ಮಯಳಾಗಿದ್ದಳು. exಛಿuse me ಅಂದೆ. ಅವಳು ಕ್ಷಮಿಸದೆ, ಶಾಪ ಕೊಡುವವಳಂತೆ ತಲೆ ಎತ್ತಿ ನೋಡಿ, ಹುಬ್ಬು ಗಂಟಿಕ್ಕಿ, ಟಪ್ಪನೆ ಪುಸ್ತಕ ಮುಚ್ಚಿ ‘ಏನು’ ಎಂಬಂತೆ ನೋಡಿದಳು. “ನೀವು ಓದುತ್ತಿರುವುದು ಏನು?” ಅಂದೆ. ಎಂಥ ಮೂರ್ಖ ಪ್ರಶ್ನೆ! “ಪ್ರಾರ್ಥನೆಗಳ ಪುಸ್ತಕ.” so ತಿhಚಿಣ ಎಂಬಂತೆ ಅವಳ ಮುಖ ಭಾವ. ಅದನ್ನು ದೂರ ಮಾಡಲೆಂಬಂತೆ ತಡವರಿಸುತ್ತ ನನ್ನ ಬಗ್ಗೆ ಹೇಳಿಕೊಂಡೆ. ನಾನು ಇಂಗ್ಲಿಷ್ ಮೇಷ್ಟರು ಇತ್ಯಾದಿ. ನಾನು ಭಿಕ್ಷುಕನೋ ಮೋಸಗಾರನೋ ಅಲ್ಲ ಎಂದು ಖಚಿತವಾಯಿತೇನೋ ಎಂಬಂತೆ ತಾನೂ ಇಂಗ್ಲಿಷ್ ಲಿಟರೇಚರ್ ಕಲಿಸುವವಳು ಇತ್ಯಾದಿ ಹೇಳಿದಳು. ಹೀಗೆ ಮಾತಾಡುತ್ತ ನನ್ನ ಬಗ್ಗೆ ಅಂಥ ಕುತೂಹಲ ಏನೂ ಇಲ್ಲದೆ ಕೇಳುತ್ತ “ನಿನಗೆ ಒಬ್ಬ ಗುರು ಅಗತ್ಯ” ಅಂದಳು.
“ಇರಬಹುದು. ಆದರೆ ಗುರು ಯಾರು, ಎಲ್ಲಿ ಅಂತ ಹುಡುಕುವುದು.”
“ಹುಡುಕುತ್ತ ಹೋಗಬೇಕು. ಒಮ್ಮೆಯಲ್ಲ ಒಮ್ಮೆ ಸಿಗುತ್ತಾನೆ.”
“ನಿಮಗೆ ಸಿಕ್ಕಿದ್ದಾನಾ?”
“ಹೌದು”
“ಯಾರು”
“ಗಣೇಶಪುರಿ”
“ಎಲ್ಲಿದ್ದಾರೆ?”
“ಇಂಥ ಕಡೆ ಅಂತ ಇಲ್ಲ. ಇಂಡಿಯಾದಲ್ಲಿ ಎಲ್ಲ ಕಡೆ ಓಡಾಡುತ್ತಿರುತ್ತಾರೆ. ಹರಿದ್ವಾರದಲ್ಲಿ ಅವರ ಒಂದು ಮಠ ಇದೆ. ವಿಚಾರಿಸಿದರೆ ತಿಳಿಯಬಹುದು. ಆತ ತುಂಬ ಅದ್ಭುತ ಮನುಷ್ಯ. ಮನಸ್ಸನ್ನ ತುಂಬ ಚೆನ್ನಾಗಿ ತಿಳೀತಾರೆ. ನಮಗೆ ಏನು ಬೇಕು ಅಂತ ಅವರಿಗೆ ಗೊತ್ತಾಗತ್ತೆ. ನನ್ನ ಮನಸ್ಸಿಗೆ ಅವರಿಂದ ತುಂಬ ಸಮಾಧಾನ ಸಿಕ್ಕಿತು”

ಆಮೇಲೆ ಸ್ವಲ್ಪ ಹೊತ್ತು ಸುಮ್ಮನಿದ್ದು ಹೇಳಿದಳು. “ಅವರು ನಿನ್ನ ಗುರು ಆಗಬಹುದೋ, ಗೊತ್ತಿಲ್ಲ. ನಮಗೆ ತಕ್ಕ ಗುರುವನ್ನು ನಾವೇ ಹುಡುಕಿಕೊಳ್ಳಬೇಕು. ಸಿಕ್ಕರೆ ನೋಡು. ನಿನ್ನ ಪುಣ್ಯ”

ಬನಾರಸಿನಿಂದ ಹರಿದ್ವಾರಕ್ಕೆ ಒಂದು ಇಡೀ ದಿನ ಪ್ರಯಾಣ. ನಾನಿದ್ದ ರೈಲು ಬೋಗಿಯ ಬಾಗಿಲಿಗೆ ಒಂದೆರಡು ಗುಂ ಶುದಾ ನೋಟೀಸುಗಳನ್ನು ಹಚ್ಚಿದ್ದರು. ಕಳೆದು ಹೋದ ಇಂಥವರನ್ನು ಹುಡುಕಿಕೊಟ್ಟರೆ ಸಾವಿರ, ಐದು ಸಾವಿರ ಬಹುಮಾನ ಇತ್ಯಾದಿ. ಎಷ್ಟೊಂದು ಜನ ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ನಿಜವಾಗಿ ಹುಡುಕಲು ಸಾಧ್ಯವೆ, ಸಿಗಲು ಸಾಧ್ಯವೆ? ಈಗ ನನ್ನ ಹುಡುಕಲು ಚಂದ್ರಾ ಏನು ಮಾಡುತ್ತಿರಬಹುದು? ಅಮ್ಮ? ನಾನು ಇಂಥಲ್ಲಿ ಇದ್ದೇನೆ, ಇಂಥಲ್ಲಿ ಹೋಗುತ್ತಿದ್ದೇನೆ ಅಂತ ನನಗೇ ಗೊತ್ತಿಲ್ಲದಿರುವಾಗ. ಇನ್ನು ಯಾರು ತಾನೇ ನನ್ನ ಹುಡುಕಲು ಸಾಧ್ಯ?

ಹರಿದ್ವಾರದ ಗುರಿ ಹಿಡಿದು ಹೋಗುತ್ತಿದ್ದ ರೈಲಿಗೆ ಸಿಕ್ಕಿ ಅವತ್ತು ಮಧ್ಯಾಹ್ನ ಯಾರೋ ಹುಡುಗ ಸತ್ತು ಹೋದ. ರೈಲು ಬಹಳ ಹೊತ್ತು ನಿಂತಿತು. ಆದರೂ ಇಳಿದು ಹೋಗಿ ನೋಡಬೇಕು ಅನ್ನಿಸಲಿಲ್ಲ. ನನ್ನ ಬೋಗಿಯ ಪಕ್ಕದಲ್ಲೇ ಕೆಲವು ಹೆಂಗಸರು ಅಳುತ್ತ ಓಡಿ ಬಂದರು. ಅವರು ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು. ಅಳುತ್ತಿದ್ದರು. ರೈಲು ದಾರಿಯ ಪಕ್ಕದಲ್ಲೆ ಇದ್ದ ರಸ್ತೆಯ ಮೇಲೆ ಲಾರಿ ಬಸ್ಸುಗಳು ನಿಂತಿದ್ದವು. ಮಧ್ಯಾಹ್ನದ ಬಿಸಿಲಿನಲ್ಲಿ, ದೂರದಲ್ಲಿ ಇಂಜಿನ್ನಿನ ಕೆಳಗೆ ಹುಡುಗ ಸತ್ತುಬಿದ್ದಿದ್ದ. ಯಾರೋ? ನನ್ನ ಬೋಗಿಯ ಒಳಗೆ ನಾನು ಒಬ್ಬನೇ.

ಹಾಗೆ ಬಹಳ ಹೊತ್ತು ಒಬ್ಬನೇ ಇರಲಿಲ್ಲ. ಸಂಜೆ ಹೊತ್ತಿಗೆ ಒಂದು ಸ್ಟೇಶನ್ನಿನಲ್ಲಿ ಕೆಲಸಗಾರರ ಒಂದು ಗುಂಪು ನನ್ನ ಬೋಗಿಗೆ ಹತ್ತಿತು. ಹರಿದ್ವಾರಕ್ಕೆ ಹೊರಟಿದ್ದ ಇನ್ನೊಬ್ಬ ಸ್ಮಾರ್ಟ್ ಯುವಕ ಹತ್ತಿದವನೇ ಹಾಸಿಗೆ ದಿಂಬು ಎಲ್ಲ ಆಣಿಮಾಡಿಕೊಂಡು ಅಚ್ಚುಕಟ್ಟಾಗಿ ಹೊದ್ದು ಮಲಗಿಬಿಟ್ಟ. ನಾನು ಓದಿ ಸುಮ್ಮನೆ ಎಸೆದಿದ್ದ ಇಂಗ್ಲಿಷ್ ಪೇಪರನ್ನು ಒಬ್ಬ ಕೆಲಸಗಾರ ಎತ್ತಿಕೊಂಡ. ಇದು ಯಾರದು ಅಂದ. ಸುಮ್ಮನೆ ಇದ್ದೆ. ಓದಿ ಮುಗಿಸಿದ ಹಳೇ ಪೇಪರು. ಏಲಾ-ವಾರಿಸ್ ಹೈ ಕ್ಯಾ ಅಂದ. ಯಾರೂ ಮಾತಾಡಲಿಲ್ಲ. ಹಾಗಾದರೆ ನನಗಿರಲಿ ಅಂತ ಚೀಲದೊಳಕ್ಕೆ ಇಟ್ಟುಕೊಂಡ. ಅವನ ಗೆಳೆಯರು ರೇಗಿಸಿದರು. “ಇಂಗ್ಲೀಷು ಪೇಪರು ತಗೊಂಡು ಏನು ಮಾಡುತ್ತೀ?” “ಇದು ಹೇಗೂ ಲಾವಾರಿಸ್. ಯಾತಕ್ಕಾದರೂ ಬರುತ್ತೆ.” ಬಿಟ್ಟಿ ಸಿಕ್ಕಿದರೆ ಖುಷಿ. ಯಾರದರೂ ಕೇಳಿಯಾರೆಂಬ ಅಳುಕು. ಗೆಳೆಯರೆಲ್ಲರನ್ನೂ ಬಿಟ್ಟು ತಾನೇ ಹೀಗೆ ತಗೊಂಡದ್ದು ಸರಿಯೇ ಎಂಬ ಅನುಮಾನ ಎಲ್ಲ ಸೇರಿ ಸ್ವಲ್ಪ ಪೆಕರನ ಹಾಗೆ ನಕ್ಕ. ಪೇಪರು ಇಟ್ಟುಕೊಂಡ ಚೀಲವನ್ನು ತಟ್ಟಿ ನೇವರಿಸಿದ. ನನ್ನ ಕಡೆಗೆ ನೋಡಿದ. ಬಹುಶಃ ಈ ಪೇಪರು ಇವನದ್ದು ಇರಬಹುದು. ಕೇಳಿಯಾನೋ ಎನೊ ಎಂಬ ಗುಮಾನಿಯಿಂದೆಂಬಂತೆ. ಕುರುಚುಲು ಗಡ್ಡ. ಗುಳಿ ಬಿದ್ದ ಕಣ್ಣು. ಬಹುಶಃ ರೋಗದ ಮೈ. ತೆಳ್ಳಗಿದ್ದ. ಆತ ಯಾಕೋ ಬಹಳ ನೆನಪಿನಲ್ಲಿ ಉಳಿದಿದ್ದಾನೆ – ಬ್ರಿಂಗ್ಟಾ ಟಾಪಿನಲ್ಲಿ ಕಾಲು ಚಾಚಿ ಟೀ ಕಾಯಿಸುತ್ತಿದ್ದವನ ಹಾಗೆ.
ಹರಿದ್ವಾರದ ರೈಲ್ವೆ ಡಾರ್ಮಿಟರಿಯಲ್ಲಿ ಜಾಗ ಕೇಳಿದ್ದಕ್ಕೆ ಎಲ್ಲರಿಗೂ ಆಶ್ಚರ್ಯ ಆಯಿತು. ಹೆಜ್ಜೆಗೆ ಹತ್ತು ಛತ್ರ ಇರುವ ಊರು ಅದು. ಆಗ ನನಗೆ ಗೊತ್ತಿರಲಿಲ್ಲ. ಅಚ್ಚುಕಟ್ಟಾದ ಕೋಣೆಗಳಿರುವ ಡಾರ್ಮಿಟರಿಯನ್ನು ನೋಡಿಕೊಳ್ಳುವ ಹೆಂಗಸು ನನ್ನನ್ನು ಒಬ್ಬ ಪೀಡೆ ಎಂಬಂತೆ ಕಂಡಳು. ಎಷ್ಟು ದಿನ ಇರುತ್ತೀ ಅಂತ ಕೇಳಿದಳು.
ಇದು ನಾನು ಹಿಂದೆ ಎಲ್ಲರೊಡನೆ ಬಂದ ಹರಿದ್ವಾರ ಅಲ್ಲ. ಅಥವ ಹರಿದ್ವಾರವೋ? ಸರ್ಕಲ್ಲಿನಲ್ಲಿ ಒಂದು ಬಿಳೀ ಕಲ್ಲಿನ ಶಿವನ ಬೊಂಬೆ. ಆಗ ಒಮ್ಮೆ ನಾನು ಮತ್ತು ಚಂದ್ರ ಅದನ್ನು ನೋಡಿ ಮೆಚ್ಚಿದ್ದು ಜ್ಞಾಪಕ ಬಂತು. ಹತ್ತಿರದಲ್ಲೆ ಓಣಿಯಲ್ಲಿ. ಹಿಂದೆ ಒಮ್ಮೆ ರಾಜು ಹುಡುಕಿಕೊಂಡು ಬಂದು ನಮ್ಮನ್ನೆಲ್ಲ ಕರಕೊಂಡು ಹೋಗಿದ್ದ ಮದರಾಸು ರೆಸ್ಟಾರೆಂಟ್. ಮಾಲಿಕ ಬಹುಶಃ ಅವನೇ ಇದ್ದ. ನಾಲ್ಕೈದು ವರ್ಷದ ಹಿಂದೆ ನಮಗೆ ಊಟ ಬಡಿಸಿದ್ದ. ಸಿನಿಮಾ ಹುಚ್ಚಿನ, ಬಹುಶಃ ಗಣೇಶ ಎಂಬ ಹೆಸರಿನ ಮಾಣಿ ಕಾಣಲಿಲ್ಲ. ಹೋಟೆಲಿನಲ್ಲಿ ಜನವೇ ಇರಲಿಲ್ಲ. ಆಗ ಟ್ರಕಿಂಗ್ ಮುಗಿಸಿ ಸುಸ್ತಾಗಿ ಬಂದ ನಮಗೆ ಅಷ್ಟು ಸುಂದರ ಅನ್ನಿಸಿದ್ದ ಮದರಾಸೀ ಊಟದ ರುಚಿ ಈಗ ಕಾಣಲಿಲ್ಲ.

ಹಿಂದೆ, ಆಗ, ಎಲ್ಲರೊಡನೆ ಬಂದಾಗ ಹೂಗಳ ಕಣಿವೆಗೆ ಹೋಗುವ ದಾರಿಯಲ್ಲಿ ಒಂದು ದಿನ ತಂಗುವ ಊರು ಮಾತ್ರವಾಗಿ ಕಂಡಿದ್ದ ಊರನ್ನು ಈಗ ಇಲ್ಲೆ ಇರಲು ಬಂದ ಒಬ್ಬಂಟಿಯಂತೆ ಹೊಸದಾಗಿ ನೋಡುತ್ತ, ನೆನಪುಗಳನ್ನು ಮಾಡಿಕೊಳ್ಳುತ್ತ ಹೋದೆ.

ಎಲ್ಲ ಬೋರ್ಡುಗಳನ್ನು ಗಮನಕೊಟ್ಟು ನೋಡುತ್ತ ಹೋದೆ. ಹಿಂದೆ ಒಮ್ಮೆ ಚಂದ್ರಾ ಆಸೆಪಟ್ಟು ಕೇಜಿಗಟ್ಟಲೆ ಸ್ವೆಟರು ಕೊಂಡ ಅಂಗಡಿ ಸಿಕ್ಕಿತು. ಸೌಂಯಮರಿಗೆ ಕೊಡುವುದಕ್ಕೆ ಬೇಕು ಅಂತ ನಾನೇ ಚಂದ್ರಳಿಗೆ ಹೇಳಿ ಸ್ವೆಟರು ಒಂದು ಕೊಂಡಿದ್ದೆ. ಈಗ ಅವಳು ಅವಳ ಅಮ್ಮ ಏನು ಮಾಡುತ್ತಿರಬಹುದೋ. ಚಂದ್ರಾ ಹಿತ್ತಾಳೆ ಕಂಚು ದೀಪಗಳನ್ನುಕೊಂಡಿದ್ದ ಅಂಗಡಿ ಸಿಕ್ಕಿತು. ನಾನು ವಾಲ್ಮೀಕಿ ರಾಮಾಯಣ ಕೊಂಡ ಅಂಗಡಿಯೂ ಇದೆ. ಆದರೆ ಈ ಅಂಗಡಿಗಳಿಗೆ ನಾನು ಖಂಡಿತ ನೆನಪಿಲ್ಲ. ಊರಿನ ನೆನಪು ನನಗೇ ಹೊರತು, ನನ್ನ ನೆನಪು ಊರಿಗೆ ಯಾಕಿರಬೇಕು? ನಾನೇನು ಅಲ್ಲಿ ಊರಿಕೊಂಡವನಲ್ಲ.

ಎಲ್ಲಿದೆ ಗಣೇಶಪುರಿಯ ಆಶ್ರಮ. ಯಾರನ್ನು ಕೇಳುವುದು ಇಲ್ಲಿ. ಎಡಗಡೆಗೆ ಹೋದರೆ ನದಿ. ವಿಶಾಲ. ವಿಶಾಲ, ಎಕರೆಗಟ್ಟಲೆ ವಿಶಾಲವಾಗಿ ಹರಿಯುವ ಗಂಗೆಗೆ ಒಡ್ಡು ಕಟ್ಟಿ ವೇಗ ತಡೆದು ಎರಡು ಮೂರು ಸೀಳು ಮಾಡಿ ನಿಯಂತ್ರಿಸುವ ಹರ ಕೀ ಪಾವಡಿ. ಇಲ್ಲಿ ಈಗಲೂ ಅಂದಿನಂತೆಯೇ ಸಹಸ್ರ ಸಹಸ್ರ ಜನ. ಎಲ್ಲ ಥರದ ಬಟ್ಟೆ, ಎಲ್ಲ ಥರದ ಮಾತು, ಎಲ್ಲ ಥರದ ಮುಖ, ಇಡೀ ಇಂಡಿಯ ಈ ನದಿಯ ದಡದಲ್ಲಿ ಸೇರಿದ ಹಾಗೆ ಇರುತ್ತದೆ. ಇಲ್ಲ, ಇಲ್ಲಿ ಸಿಖ್ಖರ ಲಂಗರ್ ಇದೆ. ಮಾನಸಾ ದೇವಿಗೆ ಹೋಗುವ ರಸ್ತೆ ಇದೆ. ಹೋಟೆಲುಗಳು ಇವೆ. ನನಗೆ ಬೇಕಾದ ಆಶ್ರಮ ಇಲ್ಲ. ಹಿಂದಿರುಗಿ ಮತ್ತೆ ಸ್ಟೇಶನ್ನಿನವರೆಗೆ ಬಂದು ಬಲದ ರಸ್ತೆ ಹಿಡಿದೆ. ಆಫೀಸುಗಳ ದಾರಿ. ಗಂಗೆಯ ಕಾಲುವೆಗೆ ಒಂದು ಕಬ್ಬಿಣದ ಸೇತುವೆ. ಅದರ ಮೇಲಿಂದ ಧುಮುಕಿ ಈಜುವ ಹುಡುಗರು. ಸೇತುವೆ ಮೇಲೆ ನಿಂತರೆ ಆಗಾಧ ವೇಗದ ಗಂಗಾ ನೀರು. ಸೇತುವೆಯ ಆಚೆ ನಿಶ್ಚಲವಾಗಿ ನಿಂತ ಮನೆಗಳ ಗುಂಪು. ಸೇತುವೆಯನ್ನು ದಾಟಿ ಬಲಕ್ಕೆ ತಿರುಗಿ ಮತ್ತೆ ಎಡಕ್ಕೆ ತಿರುಗುವಂತೆ ಇರುವ ವಕ್ರವಾದ ಟಾರು ರಸ್ತೆ. ಅದರ ಬದಿಗೆ ಚಾ ದುಕಾನು. ಕಾದು ನಿಂತ ಸೈಕಲ್ ರಿಕ್ಷಾಗಳು. ಆಫೀಸಿನ ಕಾಂಪೌಂಡುಗಳು. ಇನ್ನೂ ಮುಂದೆ. ಅಲ್ಲಿ ಹೋಗಿ ನೋಡೋಣ.

ಊರು ಮುಗಿಯುವಂತಿರುವ ಲಕ್ಷಣ. ಅಲ್ಲಿ ಒಂದು ಗೋಡೆಯ ಮೇಲೆ ಈಶ್ವರನ ಚಿತ್ರ ಇರುವ ಬೋರ್ಡು. ಪಕ್ಕದಲ್ಲಿ ಛಿoಟಟಚಿಠಿsibಟe ಗೇಟು. ಅದು ಮುಚ್ಚಿದ ದೇವಸ್ಥಾನ. ಸಾಧನಾ ಮಂದಿರ ಅಂತ ಬರೆದು ಪಕ್ಕದ ಗಲ್ಲಿಗೆ ಬಾಣ ತೋರಿಸಿದ್ದರು. ಕೆಳಗೆ ಶ್ರೀ ಗಣೇಶಾನಂದ ಪುರಿ ಮಹಾರಾಜ್ ಅಂತ ಬರೆದಿತ್ತು. ಮೊನ್ನೆ ಬನಾರಸಿನಲ್ಲಿ ಇಂಗ್ಲೆಂಡಿನ ಹೆಣ್ಣುಮಗಳು ಹೇಳಿದ ಗಣೇಶ ಪುರಿ ಇವರೇ ಇರಬಹುದು. ಬಾಣದ ಗುರಿ ಹಿಡಿದು ತಿರುಗಿದೆ. ಗಲ್ಲಿಗೆ ಮಣ್ಣು ರಸ್ತೆ. ಬಲತುದಿಯಲ್ಲಿ ನಾಲ್ಕಂತಸ್ತಿನ ಕಟ್ಟಡ. ಏನೋ ರಿಪೇರಿ ಮಾಡುತ್ತಿದ್ದರು. ಎಡಗಡೆ ಇನ್ನೊಂದು.

ಒಳಗೆ ಹೋದೆ. ಗಾಳಿಗೆ ತೆರೆದುಕೊಂಡ ವಿಶಾಲವಾದ ಹಜಾರ. ಅದರ ಸುತ್ತಲೂ ಜಗಲಿ.
ಜಗಲಿಯಲ್ಲಿ ಕೋಣೆಗಳು. ಎಲ್ಲ ಮುಚ್ಚಿದ ಬಾಗಿಲುಗಳು. ಗೋಡೆ ತುಂಬ ಬೋರ್ಡುಗಳು, ಫೋಟೋಗಳು. ಉಜ್ಜಿ ಉಜ್ಜಿ ತೊಳೆದ ಹೊಳೆಯುವ ನೆಲ. ವಿಶಾಲವಾದ ಜಮಖಾನ. ಗಾಢ ಬಣ್ಣದ ಅಂಚಿರುವ ಗೋಡೆಗಳು. ಪ್ಯಾಂಟು ಜರ್ಕಿನು ತೊಟ್ಟ ನಾನು ಅಲ್ಲಿನ ನಿಶ್ಯಬ್ದಕ್ಕೆ ಅಸಂಗತ ಅಂತ ನನಗೆ ಅನ್ನಿಸತೊಡಗಿತು. ಹಜಾರದ ಪಕ್ಕದಲ್ಲೆ ಒಂದು ಮಂದಿರ. ರಾಮ ಸೀತೆ ಲಕ್ಷ್ಮಣರ ವಿಗ್ರಹಗಳು. ಇನ್ನೊಂದು ಮಂದಿರದಲ್ಲಿ ಕೊಳಲು ಊದುತ್ತಿರುವಕೃಷ್ಣ. ಆಮೇಲೆ ಇನ್ನೊಂದು ಕೋಣೆಯಲ್ಲಿ ತಪಸ್ಸಿಗೆ ಕುಳಿತ ಈಶ್ವರ. ಮುಂದೆ ಹೋಗಲೋ ಬೇಡವೋ ಯಾರಾದರೂ ಇದ್ದಾರೋ ಇಲ್ಲವೋ ಅಂತ ನಾನು ಅಳುಕುತ್ತ ಅನುಮಾನ ಪಡುತ್ತ ಇದ್ದಾಗ ಒಬ್ಬ ಮುದುಕ.

ಮುದುಕನ ಮುಖದ ತುಂಬ ಬಿಳೀ ಗಡ್ಡ. ಅಲ್ಲಲ್ಲಿ ಸ್ವಲ್ಪ ಕಡಮೆ ಬಿಳಿ ಬಣ್ಣದ ಕೂದಲುಗಳು. ತುಂಬ ಎತ್ತರ ಏನಿರಲಿಲ್ಲ. ನನಗಿಂತಲೂ ಕುಳ್ಳು. ಸ್ಥೂಲ ಅನ್ನುವಂಥ ಮೈ. ಸೊಂಟಕ್ಕೆ ಸುತ್ತಿಕೊಂಡ, ಮೊಳಕಾಲು ಮುಟ್ಟುತ್ತಿದ್ದ ಕಾವಿ ಪಂಚೆ. ಹೊದ್ದದ್ದು ಇನ್ನೊಂದು ಕಾವಿ ಟವಲು. ತಲೆ ತುಂಬ ಉದ್ದ ಬಿಳೀ ಕೂದಲು. ದಪ್ಪ ದಪ್ಪ ಮೀನ ಖಂಡಗಳು. ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ ಕೇಳಬೇಕು. ಹೇಗೆ?

ಹೀಗೆ ಇದ್ದದ್ದನೆಲ್ಲ ಇದ್ದ ಹಾಗೆ ಬಿಟ್ಟು ಬರಲಿ ‘ಇದ್ದ’ ಕಾರಣ ಇನ್ನೊಬ್ಬರಿಗೆ ಹೇಳಿದರೆ ಕ್ಷುಲ್ಲಕವಾಗಿ ಕಾಣುತ್ತದೆ. ಬಂದದ್ದು ನಿಜ. ಯಾಕೆ ಅಂತ ವಿವರಿಸತೊಡಗಿದರೆ ನನಗೇ ಸುಳ್ಳಾಗಿ ಕಾಣತೊಡಗುತ್ತದೆ. ಈ ಮುದುಕ ಒಪ್ಪುವಂಥ ಮಾತು ಏನು ಹೇಳಲಿ?

ಜಗಲಿಯ ಮೇಲೆ ಕೂತು ನನ್ನನ್ನೂ ಪಕ್ಕದಲ್ಲಿ ಕೂಡಿಸಿಕೊಂಡ.
“ಬೆಂಗಳೂರಿನಿಂದ ಬಂದಿದ್ದೇನೆ.”
ಬಹುಶಃ ಅರ್ಥ ಆಗಲಿಲ್ಲ.
“ನನಗೆ ಹಿಂದಿ ಬರಲ್ಲ.”
ಅದು ಅವನಿಗೆ ತಿಳಿಯಿತು.
“ಬಂದದ್ದು ಯಾಕೆ?”
“ಗಣೇಶಪುರಿಯನ್ನು ನೋಡಲು ಬಂದೆ.”
ತಕ್ಷಣ ಆತ ನನ್ನನ್ನು ತಡೆದು ಗಣೇಶ ಪುರಿ ಅನ್ನಬಾರದು. ಗಣೇಶಾನಂದ ಪುರಿ ಮಾಹಾರಾಜ್ ಅನ್ನಬೇಕು, ತಿಳಿಯಿತೆ.” ಅಂದ.
ತಪ್ಪಾಯಿತು ಅಂತ ಕ್ಷಮೆ ಕೇಳಿದೆ.
“ಯಾರು ಅವರನ್ನು ನಿಮಗೆ ತಿಳಿಸಿದ್ದು? ಯಾಕೆ ಬಂದಿರಿ?”
ಯಾರು ಅನ್ನುವುದಕ್ಕೆ ಉತ್ತರ ಸುಲಭ.
“ಉಬ್ಬ ಅಂಗ್ರೇಜಿ ಮಹಿಳೆ. ಬನಾರಸ್ಸಿನಲ್ಲಿ ಹೇಳಿದರು.”
ಯಾಕೆ ಅನ್ನುವ ಪ್ರಶ್ನೆಗೆ ಉತ್ತರ ಹೇಳಲಿ ಕಷ್ಟ ಆಯಿತು.
“ಮನಸ್ಸಿಗೆ ನೆಮ್ಮದಿ ಇಲ್ಲ. ಮನೆ ಬಿಟ್ಟಿದ್ದೇನೆ. ಇಲ್ಲಿ ಗುರುವನ್ನು ನೋಡಬಹುದೆ? ಇಲ್ಲಿ ನಾನು ಇರಬಹುದೆ?”
“ಇರುವುದಕ್ಕೆ ಮಾಹಾರಾಜ್ ಹೇಳಬೇಕು. ಅವರು ಸಂಚಾರ ಹೋಗಿದ್ದಾರೆ. ಇನ್ನೂ ಹದಿನೈದು ದಿನ ಆಗುತ್ತೆ ಬರೋದು. ಅಲ್ಲಿಯವರೆಗೆ ಬೇಕಾದರೆ ಇಲ್ಲಿ ಇರಿ. ಮುಂದೆ ಅವರು ಹೇಳಿದ ಹಾಗೆ ಮಾಡಿ.”
ಆ ಮುದುಕ “ನಿಮ್ಮ ಸಾಮಗ್ರಿಗಳು ಎಲ್ಲಿವೆ” ಅಂತ ಕೇಳಿದ.
“ಸ್ಟೇಶನ್ನಿನಲ್ಲಿ” ಅಂದೆ.
“ಅಲ್ಲಿ ಯಾಕೆ ಇಲ್ಲೆ ತಂದುಬಿಡಿ.”
ಬಹಳ ನಿಧಾನವಾಗಿ ಮಾತನಾಡುತ್ತಿದ್ದ. ಆತನ ನಿಧಾನ ನನಗೆ ಇಷ್ಟ ಆಯಿತು. ಸ್ಟೇಶನ್ನಿನಿಂದ ಚೀಲ ತರುತ್ತೇನೆ ಅಂತ ಹೇಳಿ ಹೊರ ಬಂದೆ.

ಸ್ಟೇಶನ್ನಿನ ಕೆಲಸದಾಕೆಗೆ ತುಂಬ ಸಂತೋಷ ಆಯಿತು. ನನಗೂ. ಇನ್ನು ಹದಿನೈದು ದಿನ ಇರಲು ಒಂದು ಜಾಗ ಸಿಕ್ಕಿತು. ದಿನ ದೂಡಲು ಒಂದು ನೆಪ ಸಿಕ್ಕಿತು. ನಡೆದು ಹೋಗಿ ನಡೆದು ಬಂದೆ. ಹರಿದ್ವಾರ ನನ್ನ ಊರು ಅನ್ನಿಸತೊಡಗಿತ್ತು. ವಾಪಸ್ಸು ಬಂದಾಗ ಸಂಜೆ ಆಗುತ್ತಿತ್ತು. ಇನ್ನೊಬ್ಬ, ಎತ್ತರ ನಿಲವಿನ, ಕಠಿಣ ಎಂಬಂತಿದ್ದ ದೃಷ್ಟಿಯ, ಖಚಿತವಾಗಿ ಗೆರೆಕೊರೆದಂತಿದ್ದ ಮುಖದ ಕಾವಿ ಧಾರಿ ಎದುರಾದ. ಆತ ಅಲ್ಲಿ ಮಹಾ ಪ್ರಧಾನ ಎಂದು ತಿಳಿಯಿತು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಪೂಜೆಗೆ ಬರಬೇಕು; ಪ್ರವಚನ ತಪ್ಪಿಸಿಕೊಳ್ಳಬಾರದು; ಇಲ್ಲಿನ ನಿಯಮಗಳನ್ನು ಪಾಲಿಸಬೇಕು ಅಂತ ಹೇಳಿದ. ಒಬ್ಬ ಹುಡುಗನನ್ನು ಕೂಗಿ “ಯಾರೋ ಭಗತ್ ಬಂದಿದ್ದಾನೆ. ಸಾಧಕನಿವಾಸದಲ್ಲಿ ಜಾಗ ಕೊಡು” ಅಂತ ಶುದ್ಧ ಹಿಂದಿಯಲ್ಲಿ ಹೇಳಿದ. ನಾನೆಂಥ ಭಗತ! ಆಮೇಲೆ ಹೊಳೆಯಿತು. ಅದು ಹಿಂದಿಯಲ್ಲಿ ‘ಭಕ್ತ’ತಾಳುವ ರೂಪ. ಆದರೆ, ಆ ಮಹಾ ಪ್ರಧಾನನಿಗೆ ನನ್ನ ಬಗ್ಗೆ ಅಂಥ ಒಳ್ಳೆಯ ಅಭಿಪ್ರಾಯ ಬಂದಿಲ್ಲ ಅನ್ನಿಸಿತು.

ನಾಲ್ಕು ಅಂತಸ್ತುಗಳು. ಒಂದೊಂದರಲ್ಲೂ ಹತ್ತು ಹದಿನೈದು ಕೋಣೆಗಳು. ಒಬ್ಬ ಹುಡುಗ ನನ್ನನ್ನು ಚಾವಣಿಯ ಮೇಲೆ ಕರೆದುಕೊಂಡು ಹೋದ. ಚಾವಣಿಯ ಮೇಲೆ, ಮೆಟ್ಟಿಲಿನಿಂದ ದೂರ, ಎಡತುದಿಗೆ ಒಂದು ಬಲತುದಿಗೆ ಇನ್ನೊಂದು, ಚಿಕ್ಕ ಎರಡು ಕೋಣೆಗಳು. ಕೋಣೆಯೊಳಗೆ ಒಂದು ಮಂಚ. ಎರಡು ಕಿಟಕಿ. ಕಿಟಕಿಯ ತುಂಬ, ನೆಲದ ತುಂಬ ಧೂಳು. ಒಂದು ಬಾಗಿಲು. ಅದರಾಚೆಗೆ ಒಳಗೆ ಬಚ್ಚಲು ಮನೆ, ನಲ್ಲಿ.
ನನ್ನ ಕೋಣೆಯ ಆಚೆ ಬಂದರೆ ಹಿತ್ತಿಲು ಕಾಣುತ್ತಿತ್ತು. ಅಲ್ಲೆ, ನಾಲ್ಕು ಅಂತಸ್ತು ಕೆಳಗೆ, ಕಾಂಪೌಂಡಿನ ಆಚೆ, ಗಂಗಾ ನದಿ. ನದಿಯ ದಡದಲ್ಲಿ ಉರುಟುರುಟು ಕಲ್ಲುಗಳ ರಾಶಿ ಹರಡಿ ಬಿದ್ದಿತ್ತು. ಸಂಜೆಯ ತಣ್ಣನೆ ಬಿಸಿಲು ಕತ್ತಲ ಬಣ್ಣಕ್ಕೆ ಬದಲಾಗುತ್ತಿತ್ತು. ಗಂಟೆಯ ಶಬ್ದ ಕೇಳಿಸಿತು. ಹಿತ್ತಿಲಲ್ಲಿ ಪುಟ್ಟ ಪುಟ್ಟ ಗುಡಿಗಳು ಕಂಡವು. ಆರೆಂಟು ಹದಿನೈದು ವಯಸಿನೊಳಗಿನ ಹುಡುಗರು ಬಿಳೀ ಪಂಚೆ ಉಟ್ಟು, ಬಿಳೀ ಬಟ್ಟೆ ಹೊದ್ದು ಒಂದು ಗುಡಿಯ ಮುಂದೆ ನಿಂತಿದ್ದರು. ನೋಡಲು ಹೋದೆ.

ಸ್ತೋತ್ರಗಳನ್ನು ಹೇಳುತ್ತಿದ್ದರು. ಮಂಗಳಾರತಿ ಮಾಡಿದರು. ಇನ್ನೊಂದು ಗುಡಿಗೆ ಹೋದರು. ಅಲ್ಲೂ ಅದೇ. ಅಮೇಲೆ ಇನ್ನೊ೦ದು ಗುಡಿಗೆ. ಅಲ್ಲೂ ಅದೆ. ಬಿಳಿ ಉಡುಗೆಯ ಆ ಮಕ್ಕಳ ನಡುವೆ ಪ್ಯಾಂಟು ಜರ್ಕಿನ್ನು ಹಾಕಿಕೊಂಡ ನಾನು ವಿಚಿತ್ರವಾಗಿದ್ದೆ. ಅಲ್ಲೆ ಒಂದು ಮೆಟ್ಟಿಲ ಮೇಲೆ ಬಿಳೀ ಬಿಳೀ ಸೀರೆ ಕುಪ್ಪಸ ತೊಟ್ಟ ಮಧ್ಯವಯಸ್ಸಿನ ಹೆಂಗಸು ಕುಳಿತಿದ್ದಳು. ಸುಮ್ಮನೆ ನಮ್ಮನ್ನೆಲ್ಲ ನೋಡುತ್ತಿದಳು. ನಾನು ಮೊದಲು ನೋಡಿದ್ದ ಅಂಗಳದಲ್ಲಿ ಗಂಟೆ ಸದ್ದು ಕೇಳಿಸಿತು. ಎಲ್ಲರೂ ಅಲ್ಲಿಗೆ ಹೋದರು. ನಾನೂ. ಅಲ್ಲಿ ಆರೆಂಟು ಜನ ಸನ್ಯಾಸಿಗಳಿದ್ದರು.


ಮುಂದುವರೆಯುವುದು

ಕೀಲಿಕರಣ: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.