ಗೃಹಭಂಗ – ೪

ಅಧ್ಯಾಯ – ೮
– ೧ –

ಅಕ್ಕಮ್ಮ ನಾಲ್ಕು ತಿಂಗಳ ಕಾಲ ಬಾಣಂತಿತನ ಮಾಡಿದಳು. ಮೊಮ್ಮಗಳನ್ನು ಯಾವ ಕೆಲಸ ಮಾಡಲೂ ಬಿಡದೆ ಮುಚ್ಚಟೆಯಿಂದ ನೋಡಿಕೊಂಡರೂ ಎರಡನೇ ತಿಂಗಳಿನಲ್ಲಿಯೇ ಅವಳು ಎದ್ದು ಕೂತು ಖಾನೀಷುಮಾರಿ ಲೆಕ್ಕಕ್ಕೆ ರೂಲು ಹಾಕಿ, ಗಂಡ ಖುಷ್ಕಿ ತರಿ ಬಾಗಾಯ್ತುಗಳ ಮೇಲೆ ಹೋಗಿ ಬರೆದು ತಂದ ಪಹಣಿಯ ಗೋಶ್ವರೆ ತಯಾರಿಸುವುದನ್ನು ಮಾತ್ರ ನಿಲ್ಲಿಸಲಾಗಲಿಲ್ಲ.
ಅಕ್ಕಮ್ಮನನ್ನು ಊರಿಗೆ ಕರಕೊಂಡು ಹೋಗಲು ಕಲ್ಲೇಶ ಬಂದಿದ್ದ. ಅವರು ಇಬ್ಬರೂ ನಾಳೆ ಬೆಳಗ್ಗೆ ಊರಿಗೆ ಪ್ರಯಾಣ ಮಾಡಬೇಕು ಎನ್ನುವಾಗ ಈ ದಿನ ಸಂಜೆ ಕುಳವಾಡಿ ಬಂದು ಶ್ಯಾನುಭೋಗರನ್ನು ಕರೆದ: ‘ಅಂಗ್ಡಿ ಚನ್ನಸೆಟ್ಟಿ ಮನ್ಲಿ ಪಂಚಾತಿಗೆ ಮಡಗ್ಯವ್ರೆ. ಬರ್ಬೇಕಂತೆ.’
‘ಅದೇನೋ ಪಂಚಾಯ್ತಿ?’ – ನಂಜಮ್ಮ ಕೇಳಿದಳು.
‘ಚನ್ನಸೆಟ್ಟಿ ಅವ್ನ ಸ್ವಸೆ ನರಸೀನ ಮಡಿಕ್ಕಂಡವ್ನಂತೆ. ಅವ್ಳ ಗಂಡ ಪಂಚಾತಿ ಕುಂಡ್ರುಸವ್ನೆ.’
‘ಅದೇನಿದ್ರೂ ಮುಖ್ಯ ಮುಖ್ಯವಾದೋರೇ ಮಾಡ್ಕುಳುಕ್ ಹೇಳಪ್ಪ. ನಮ್ಮನಿಗೆ ನ್ಯಂಟ್ರು ಬಂದವ್ರೆ, ಅವ್ರು ಬರಾಕುಲ್ಲ ಅಂತ ಹೇಳು.’
‘ಶ್ಯಾನುಬಾಗ್ರು ಬರ್ಲೇಬೇಕಂತೆ. ಯಲ್ಲಾ ಕರ್ಕಂಬರಾಕೆ ಏಳವ್ರೆ.’
ಗ್ರಾಮದ ನ್ಯಾಯ ಪಂಚಾಯಿತಿಗಳಲ್ಲಿ ಶ್ಯಾನುಭೋಗರು ಇರಬೇಕೆಂಬುದೇನೋ ಪದ್ಧತಿ.

ಚೆನ್ನಿಗರಾಯರನ್ನು ನ್ಯಾಯಸ್ಥಾನದಲ್ಲಿ ಕೂರಿಸಿದರೆ ಹಿಟ್ಟು, ತರಿ, ಯಾವುದೂ ತಿಳಿಯುವುದಿಲ್ಲವೆಂಬುದು ಎಲ್ಲರಿಗೂ ಗೊತ್ತು. ಎಂಥವರೇ ಆದರೂ ಕರಣಿಕರೆಂಬುವವರು ಇರಲೇಬೇಕಲ್ಲ. ಚೆನ್ನಿಗರಾಯರು ಹೊರಟರು. ಭಾವನ ಹಿಂದೆ ಕಲ್ಲೇಶನೂ ಹೋದ.

ಚನ್ನಸೆಟ್ಟಿಯ ಮನೆಯ ಒಳ ಅಂಗಳದಲ್ಲಿ ಗ್ರಾಮದ ಮುಖ್ಯರೆಲ್ಲ ಸೇರಿದ್ದರು. ಪಟೇಲ ಶಿವೇಗೌಡ, ಅವನ ಭಾಮೈದ ಮಾಜೀ ಶ್ಯಾನುಭೋಗ ಸಿವಲಿಂಗ, ರೇವಣ್ಣಸೆಟ್ಟಿ, ನಾಲ್ಕು ಜನ ಪಂಚಾಯ್ತಿ ಮೆಂಬರುಗಳು, ಇಬ್ಬರು ಜೋಯಿಸರೇ ಅಲ್ಲದೆ ಇತರ ಹತ್ತು ಹದಿನೈದು ಜನ ಸೇರಿದ್ದರು. ಎಲ್ಲರಿಗೂ ಎಲೆ, ಅಡಿಕೆ, ಹೊಗೆಸೊಪ್ಪು ಬೀಡಿಗಳನ್ನು ತಂದು ಮುಂದೆ ಇಟ್ಟಿದ್ದರು. ಪಂಚಾಯ್ತಿಯನ್ನು ಶುರುಮಾಡುವ ಮೊದಲು ನ್ಯಾಯಪೀಠದಲ್ಲಿ ಯಾರು ಕೂರಬೇಕೆಂಬ ಪ್ರಶ್ನೆ ಎದ್ದಿತು. ಶ್ಯಾನುಭೋಗರು ಎಂದು ಯಾರೋ ಎಂದುದಕ್ಕೆ ಪಟೇಲ ಶಿವೇಗೌಡ, ‘ಆ ಮಂಕಪ್ಪುಂಗೇನ್ ತಿಳೀತೈತೆ?’ ಎಂದ. ಪಟೇಲರು ಎಂದು ಮತ್ತೊಬ್ಬರು ಸೂಚಿಸಿದುದಕ್ಕೆ ರೇವಣ್ಣಶೆಟ್ಟಿ ವಿರೋಧಿಸಿದ. ‘ಸ್ಥಳದೋರು ಯಾರೂ ಬ್ಯಾಡ. ಪೋಲೀಸ್ನಲ್ಲಿದ್ದೋರು, ಶ್ಯಾನುಭೋಗರ ಭಾಮೈದ ಕಲ್ಲೇಶದೋಸರು ಆಗ್ಲಿ’ – ಎಂದು ಫಿರ್ಯಾದಿ ಗಿರಿಯನೇ ಸೂಚಿಸಿದುದಕ್ಕೆ ಎಲ್ಲರೂ ಒಪ್ಪಿದರು. ಎಲ್ಲರ ಅಭಿಮತದ ಮೇರೆಗೆ ಕಲ್ಲೇಶ ಮಧ್ಯದ ಜಾಗದಲ್ಲಿ ಕುಳಿತು ಹೊಗೆಸೊಪ್ಪು ಹಾಕಿಕೊಂಡು ಕೇಳಿದ: ‘ಈಗ ನ್ಯಾಯ ಏನು? ಯಾರಿಗೆ ಅನ್ಯಾಯ ಆಗಿದೆ, ಸಭೆ ಮುಂದೆ ಹೇಳಿ.’
ಗಿರಿಯಶೆಟ್ಟಿ ಹೇಳಿದ: ‘ನಮ್ಮಪ್ಪ ನನ್ನ ಹೆಂಡ್ತೀನ ಮಡೀಕಂಡವ್ನೆ. ಇಬ್ರಿಗೂ ದಂಡ ಆಕುಸ್ಬೇಕು.’
‘ನಿಮ್ಮಪ್ಪ ಯಾರು?’
‘ಅವ್ನೇಯ, ಅಲ್ಲಿ ಕುಂತಿರೋ ಅಲಾಲ್‌ಕೋರ ನನ್ಮಗ’ – ಎಂದು ಗಿರಿಯ, ಕಂಬದ ಹತ್ತಿರ ತಲೆ ತಗ್ಗಿಸಿ ಕುಳಿತಿದ್ದ ಚನ್ನಶೆಟ್ಟಿಯ ಕಡೆಗೆ ಕೈತೋರಿಸಿದ.

ಕಲ್ಲೇಶ ವಿವರವಾಗಿ ವಿಚಾರಿಸಿದಾಗ ತಿಳಿಯಿತು; ಗಿರಿಯಶೆಟ್ಟಿ ಹೊಲಕ್ಕೆ ಗೇಯಲು ಹೋಗುತ್ತಾನೆ. ಚನ್ನಶೆಟ್ಟಿ ಯಾವಾಗಲೂ ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡುತ್ತಾನೆ. ಮನೆಯ ಜಗುಲಿಯ ಮೇಲೆ ಅಂಗಡಿ ಇದೆ ಗಿರಿಯನ ಹೆಂಡತಿ ನರಸಿ ಮನೆಯಲ್ಲೇ ಇರುತ್ತಾಳೆ.ಅವಳ ಮದುವೆಯಾಗಿ ಎಂಟು ವರ್ಷವಾಯಿತಂತೆ.
ಇಂತಹ ನ್ಯಾಯಗಳಲ್ಲಿ ಪ್ರತಿಯೊಬ್ಬರ ವಿವರವನ್ನೂ, ಹೇಳಿಕೆಯನ್ನು ಕೇಳಿ ತಿಳಿದು ಕೊಳ್ಳಬೇಕೆಂದು ಕಲ್ಲೇಶ ಹೇಳಿದ.

ಚನ್ನಸೆಟ್ಟಿಯ ಹೆಂಡತಿ ಸತ್ತು ಇಪ್ಪತ್ತು ವರ್ಷವಾಯಿತು. ಅವನು ಮತ್ತೆ ಮದುವೆ ಮಾಡಿಕೊಳ್ಳಲಿಲ್ಲ. ತಾಯಿ ಇಲ್ಲದೆ ಬೆಳೆದ ಗಿರಿಯಶೆಟ್ಟಿ ಸ್ವಲ್ಪ ಪೀಚು ಅಂತಲೇ ಅನ್ನಬೇಕು.

ಕಲ್ಲೇಶ ಚನ್ನಶೆಟ್ಟಿಯ ಹೇಳಿಕೆ ಕೇಳಿದ. ತಲೆ ತಗ್ಗಿಸಿಕೊಂಡೇ ಅವನು ಹೇಳಿದ: ‘ಸ್ವಾಮಿ, ನಾನು ಸನಿ ಸೂಳೆ ಮಗುನ್ನ ಎತ್ತ ಹಂಗಾತು. ನನ್ನ ಮರ್ವಾದಿ ಕಳೀಬೇಕು ಅಂತ, ಏಳ್ಕೊಟ್ಟೋರ ಮಾತು ಕೇಳ್ಕಂಡು ಈ ನನ್ಮಗ ಹಿಂಗ್ ನ್ಯಾಯ ಕುಂಡ್ರಸವ್ನೆ. ನನ್ನ ಅಂಗ್ಡಿ ಸಂಪಾದ್ನೇಲಿ ಈ ಪಾಪರ್ ನನ್ ಮಗುಂಗೆ ಒಂದು ದಮ್ಡಿ ಕೊಡಾಕುಲ್ಲ. ನನ್ ಜಮೀನು ಕೊಡಾಕುಲ್ಲ. ’
‘ನಮ್ಮವ್ವಾಣೆ ನಾ ಸುಳ್ ಏಳಾಕುಲ್ಲ. ನಾನೇ ಕಂಡಿದ್ದೀನಿ’ – ಎಂದು ಗಿರಿಯ ಶೆಟ್ಟಿ ಪ್ರಮಾಣ ಮಾಡಿದ.
‘ಆಯ್ತು, ನಿನ್ನ ಹೆಂಡ್ತೀ ಹೇಳಿಕೇನೂ ಕೇಳ್ಬೇಕು, ಕರಿ ಇಲ್ಲಿ’ – ನ್ಯಾಯಪೀಠದ ಕಲ್ಲೇಶ ಕೇಳಿದ.
‘ಬಾರಮ್ಮಾ ಇಲ್ಲಿಗೆ’ – ಎಂದು ಅಯ್ಯಾಶಾಸ್ತಿಗಳು ಕೂಗಿದರು. ನರಸಿ ಬರಲಿಲ್ಲ. ‘ನ್ಯಾಯ ಕರೀತೈತೆ. ಬರ್ಬೇಕು’ – ಎಂದು ಅವರು ಒತ್ತಾಯ ಮಾಡಿದರು. ಶಾನುಭೋಗ ಚೆನ್ನಿಗರಾಯರ ಬಾಯಿಯಲ್ಲಿ ಹೊಗೆಸೊಪ್ಪಿನ ರಸವಿಲ್ಲವಾದುದರಿಂದ ಅವರು, ‘ಹೂಂ’ ಎಂದರು. ನರಸಿ ಅಡಿಗೆಮನೆಯ ಬಾಗಿಲಿನ ಹತ್ತಿರ ಬಂದು ನಿಂತುಕೊಂಡಳು. ಈ ಊರಿನಲ್ಲಿ ಅವಳನ್ನು ನೋಡದವರು ಯಾರೂ ಇಲ್ಲ. ಕಲ್ಲೇಶ ಅವಳನ್ನು ನೋಡಿದ ತಕ್ಷಣ ಬೆರಗಾಗಿಬಿಟ್ಟ. ಕೆಂಪಗೆ, ಗುಂಡು ಮುಖದ, ಗತ್ತುಗಾರಿಕೆ ಎದೆಯ, ಎತ್ತರವಾದ ಅವಳು ನಿಂತ ರೀತಿಯಲ್ಲಿಯೇ ಏನೆಂದು ನ್ಯಾಯ ಹೇಳಬೇಕೆಂಬುದು ಅವನಿಗೆ ತಿಳಿಯದಂತೆ ಆಯಿತು. ಅವಳು ಬಂದು ನಿಂತಮೇಲೆ ಅಯ್ಯಶಾಸ್ತ್ರಿಗಳು ಹೇಳಿದರು: ‘ಅಮ್ಮಾ, ಗಂಡನ ತಂದೆ ಮಾವ ಅಂದ್ರೆ ತಂದೆ ಸಮಾನ, ಸೊಸೆ ಅಂದ್ರೆ ಮಗಳ ಸಮಾನ. ಇದೆಲ್ಲಾದ್ರೂ ಉಂಟೆ? ಹೀಗಾದ್ರೆ ಮಳೆ ಬೆಳೆ ಆಗುತ್ತೆಯೆ? ನಾನ್ಹೇಳೋದು ಗೊತ್ತಾಗ್ಹೋಯ್ತ? ಆಂ, ಏನಯ್ಯಾ ಚೆನ್ನಶೆಟ್ಟಿ?’

ಅಣ್ಣಾಜೋಯಿಸರು ಮಂತ್ರಗಳನ್ನೇ ಹೇಳಿ ಧರ್ಮಾಧರ್ಮ ವಿವೇಚನೆಯ ಬಗೆಗೆ ವ್ಯಾಖ್ಯಾನ ಶುರುಮಾಡಿದರು. ಈ ಇಬ್ಬರು ಪುರೋಹಿತರ ಧರ್ಮಸೂಕ್ಷ್ಮ ಜ್ಞಾನಕ್ಕೆ ಉಳಿದವರೆಲ್ಲ ತಲೆಹಾಕುತ್ತಿದ್ದರು. ಶಾನುಭೋಗ ಚೆನ್ನಿಗರಾಯರು ಅದೇ ತಾನೇ ಬಾಯಿಗೆ ತುಂಬಿಕೊಂಡ ಹೊಗೆಸೊಪ್ಪಿನ ಸ್ವಾದವನ್ನು ತಮ್ಮಲ್ಲಿಯೇ ಸವಿಯುತ್ತಿದ್ದರು. ಆದರೆ ರೇವಣ್ಣಶೆಟ್ಟಿ ಹೇಳಿದ: ‘ಉಳಿದೋರ ಮಾತು ಬ್ಯಾಡಿ, ಆ ವಮ್ಮ ಏನಂತಾಳೆ ಕೇಳಿ,’
‘ಹೂಂ, ಹೂಂ. ನೀನೇನಂತೀಯಾ ಹೇಳಮ್ಮ’ – ಕಲ್ಲೇಶ ಹೇಳಿದ.
‘ಸ್ವಾಮಿಯೋರೇ, ನೀವು ಈಟೊಂದೆಲ್ಲ ಏಳ್ತೀರಲಾ, ನಾನೊಂದ್ ಕೇಳ್ತೀನಿ ಜವಾಬ್ ಕೊಡ್ತೀರಾ?’ – ನರಸಿ ಪುರೋಹಿತದ್ವಯರನ್ನು ಕೇಳಿದಳು.
‘ಕೇಳು, ಕೇಳು. ಅಗತ್ಯವಾಗಿ ಕೇಳು’ – ಇಬ್ಬರೂ ಕೂಡಿ ಎಂದರು.
‘ಅನ್ನೆಲ್ಡಾಳುದ್ದ ಬಾವಿಗೆ ಆರಾಳುದ್ದ ಅಗ್ಗ ಬುಟ್ರೆ ಎಟುಕ್ತೈತಾ?’
‘ಆಂ’ – ಉತ್ತರ ಹೊಳೆಯದೆ ಅಯ್ಯಾಶಾಸ್ತ್ರಿಗಳು ಕಕ್ಕಾವಿಕ್ಕಿಯಾದರು. ಉಳಿದ ಪಂಚಾಯಿತರೆಲ್ಲ ಸ್ತಬ್ಧರಾಗಿಬಿಟ್ಟರು. ರೇವಣ್ಣಶೆಟ್ಟಿ ಕಲ್ಲೇಶನಿಗೆ ಹೇಳಿದ: ‘ಸ್ವಾಮಿ, ಇನ್ನು ತೀರ್ಮಾನ ಏಳ್ಬುಡಿ.’
‘ಈ ಮುಂಡೆಕುಟ್ಟೆ ನಾನು ಇನ್ ಇರಾಕುಲ್ಲ’ – ಎಂದು ಗಿರಿಯಶೆಟ್ಟಿ ತನ್ನ ಷರತ್ತು ಹಾಕಿದ.

ಕಲ್ಲೇಶ ಐದು ನಿಮಿಷ ಯೋಚಿಸಿ ತೀರ್ಮಾನ ಹೇಳಿದ: ‘ಹೆಂಡ್ತಿ ಜೊತೆ ಇನ್ನು ಇರುಲ್ಲ ಅಂತ ಗಂಡ ಹೇಳ್ತಾನೆ. ಅವ್ನ ಇಚ್ಛೆಗೆ ವಿರೋಧವಾಗಿ ಇರು ಅಂತ ಹೇಳುವುದೂ ನ್ಯಾಯವಲ್ಲ. ಆದ್ರೆ ಮಾವ ಸ್ವಸೆ ಇಬ್ರಿಗೂ ಸಂಬಂಧ ಇದೆ ಅಂತ ಅವನಂತಾನೆ. ಅದು ಸುಳ್ಳು ಅಂತ ಚನ್ನಶೆಟ್ಟಿ ಪ್ರಮಾಣ ಮಾಡಿದಾನೆ. ಇಲ್ಲದ್ದನ್ನ ಒಬ್ಬ ಮನುಷ್ಯನ ಮ್ಯಾಲೆ ಹೇಳ್‌ಬಾರ್ದು. ಆದ್ರೂ ಆ ಮಗುಂಗೆ ಸಮಾಧಾನವಾಗ್ಲಿ ಅಂತ ಸ್ವಸೆ ಮಾವ ಬ್ಯಾರೆ ಬ್ಯಾರೆ ಇರೂಹಾಗೆ ಮಾಡಬೇಕು. ಆದ್ರೆ ಗಂಡ ಅವ್ಳಕುಟ್ಟೆ ಇರುಲ್ಲ ಅಂತ ಆಗ್ಲೇ ಹೇಳಿಬಿಟ್ಟಿದ್ದಾನೆ. ಆದ್ರಿಂದ ಅವ್ಳು ಒಬ್ಳೇ ಬ್ಯಾರೆ ಒಂದು ಮನ್ಲಿ ಇರ್ಲಿ. ತನ್ನ ಸ್ವಸೆಯೇ ಆದದ್ದರಿಂದ ಚನ್ನಶೆಟ್ಟಿ ಅವಳಿಗೆ ಒಂದು ಸಣ್ಣ ಮನೆ ಕಟ್ಟಿಸಿ ಕೊಡಲಿ. ಇನ್ನು ಅಪ್ಪ ಮಗ ತಮಗೆ ತಿಳಿದ ಹಾಗೆ ಇರಭೌದು.’
ಈ ತೀರ್ಮಾನದ ಧರ್ಮಸೂಕ್ಷ್ಮ ಉಳಿದವರಿಗೆ ತಿಳಿಯಲಿಲ್ಲ. ಅವರು ಕಕ್ಕಾವಿಕ್ಕಿಯಾದರು.
‘ಇದೇನು ನ್ಯಾಯ?’ – ಎಂದು ಶಿವೇಗೌಡ ಪ್ರಶ್ನಿಸಿದ.
‘ಕಲ್ಲೇಶಪ್ನೋರುನ್ನ ನ್ಯಾಯಪೀಠದಾಗೆ ಕುಂಡ್ರುಸಿದೀವಿ. ಅವ್ರು ಏಳಿದ್ದ ಕೇಳ್ಬಿಡ್ಬೇಕು. ಯಾರೂ ದೂಸ್ರಾ ಮಾತಾಡ್ಬ್ಯಾಡ್ದು. ನೀನು ಸುಮ್ಕೆ ಒಪ್ಕಳಮ್ಮಾ, ನಾನ್ಹೇಳ್ತೀನಿ’ – ಎಂದು ರೇವಣ್ಣಶೆಟ್ಟಿ ನರಸಿಯ ಕಡೆಗೆ ತಿರುಗಿ ಹೇಳಿದ.
‘ನಾಕು ಜನ ಯಜಮಾನ್ರು ಏಳಿದ್ದುಕ್ಕೆ ನಾನ್ ಹ್ಯಂಗೆ ವಲ್ಲೆ ಅನ್ಲಿ?’ – ಎಂದು ನರಸಿ ನ್ಯಾಯನಿರ್ಣಯವನ್ನು ಧರಿಸಿದಳು.
ಇನ್ನು ಮತ್ತೆ ಏನಾದರೂ ಮಾತುಕತೆ ಆಗುವ ಮೊದಲೇ ರೇವಣ್ಣಶೆಟ್ಟಿ ಮೇಲೆ ಎದ್ದ. ಕಲ್ಲೇಶನೂ ನ್ಯಾಯಪೀಠದಿಂದ ಎದ್ದುನಿಂತ. ಇನ್ನು ಎಲ್ಲರೂ ಜಾಗ ಬಿಟ್ಟರು.
ಮನೆಗೆ ಬಂದಮೇಲೆ ಚನ್ನಿಗರಾಯರು ಕಲ್ಲೇಶನನ್ನು ಕೇಳಿದರು: ‘ಅವ್ಳು ಅದೇನೋ ಅಂದ್ಲಲಾ, ಏನು?’
‘ತಿಳೀಲಿಲ್ವೆ?’
‘ಇಲ್ಲ’
‘ಅದ್ಕೇ ನಿನ್ನ ನ್ಯಾಯತೀರ್ಮಾನಕ್ಕೆ ಕೂರುಸ್ಲಿಲ್ಲ, ತಿಳೀದೇ ಇದ್ರೆ ಏನೂ ಪರವಾಗಿಲ್ಲ. ನಿಂಗ್ಯಾಕೆ ಬಿಡು.’
ಚೆನ್ನಿಗರಾಯರು ಇನ್ನೊಮ್ಮೆ ಹೊಗೆಸೊಪ್ಪು ತಿಕ್ಕಿ ಬಾಯಿಗೆ ಹಾಕಿಕೊಂಡರು.

– ೨ –

ರೇವಣ್ಣಶೆಟ್ಟಿ ಇಸ್ಪೀಟಿಗೆ ಹೋಗುತ್ತಿದ್ದುದು ಕೋಡೀಹಳ್ಳಿಗೆ. ಗ್ರಾಮದ ಪಟೇಲ ಚಿಕ್ಕೇಗೌಡನ ಮನೆಯ ಮುಂಭಾಗದ ದನ ಕಟ್ಟುವ ಸಾಲೆಯ ಅಟ್ಟದ ಮೇಲೆ ಇಸ್ಪೀಟಿಗೆ ಅನುಕೂಲವಾದ ಜಾಗವಿದೆ. ಚಿಕ್ಕೇಗೌಡ ರೇವಣ್ಣಶೆಟ್ಟಿಯರೇ ಅಲ್ಲದೆ ಕಂಬನಕೆರೆಯ ಚೇರ್‌ಮನ್ ಲಿಂಗದೇವರು, ಶೆಂದಿ ಕಂಟ್ರಾಕ್ಟರ್ ಚಿನ್ನಸ್ವಾಮಿ, ಚರ್ಮದ ವ್ಯಾಪಾರಿ ಹಯಾತ್‌ಸಾಬಿ ಮೊದಲಾದವರು ಅಲ್ಲಿ ಸೇರುವುದುಂಟು.
ಒಂದು ದಿನ ಮಧ್ಯಾಹ್ನ ರೇವಣ್ಣಶೆಟ್ಟಿ ಚಿಕ್ಕೇಗೌಡನನ್ನು ಕೇಳಿದ; ‘ಒಂದ್ ಐವತ್ ರೂಪಾಯಿ ಇದ್ರೆ ಕೊಟ್ಟಿರಣ್ಣಾ, ಕೊಪ್ರಿ ಹಾಕ್ ಕೋಡ್ತೀನಿ.’
‘ನೀನ್ ಇಲ್ಲೀಗಂಟ ಇಸ್ಕಂಡುದ್ ಏಟಾಗೋಗೈತೆ. ಇನ್ ನನ್ ತವ್ವ ದುಡ್ಡಿಲ್ಲ.’
‘ಏ, ಹಂಗನ್ಬ್ಯಾಡಿ ಕೊಡ್ರಣ್ಣ.’

ಇವನಿಗೆ ಸಾಲ ಕೊಡುವುದರಿಂದ ಚಿಕ್ಕೇಗೌಡನಿಗೆ ನಷ್ಟವಾಗುತ್ತಿರಲ್ಲಿಲ್ಲ. ಆ ಹಣದ ಒಂದು ಪಾಲು ಆಟದಲ್ಲಿ ಅವನಿಗೇ ಬರುತ್ತಿತ್ತು. ಪ್ರೋನೋಟಿನ ಫಾರಂ ಮತ್ತು ರೆವಿನ್ಯೂಸ್ಟಾಂಪುಗಳು ಲೇವಾದೇವಿಯ ಚಿಕ್ಕೇಗೌಡನ ಹತ್ತಿರವೇ ಇರುತ್ತಿದ್ದುವು. ಅದರ ಮೇಲೆ ಐವತ್ತು ರೂಪಾಯಿ ಮೊಬಲಗು, ತಾರೀಖು ಮತ್ತು ರೇವಣ್ಣಶೆಟ್ಟಿಯ ರುಜು ಹಾಕಿಸಿಕೊಂಡು ಒಂದು ವರ್ಷದ ಬಡ್ಡಿ ಆರು ರೂಪಾಯಿ ಕಟಾಯಿಸಿ ನಲವತ್ತನಾಲ್ಕು ರೂಪಾಯಿಯನ್ನು ಕೊಟ್ಟಾಗ ಅದು ಒಂದು ಸಲ ರೇವಣ್ಣಶೆಟ್ಟಿಯ ಜೇಬಿನ ಒಳಗೂ ಹೋಗಿ ಬರಲಿಲ್ಲ. ನೇರವಾಗಿ ಆಟದ ಚಾಪೆಯ ಮೇಲೆ ಕುಳಿತಿತು. ನಲವತ್ತನಾಲ್ಕು ರೂಪಾಯಿ ತೀರ ಸಣ್ಣ ಗಂಟಾದುದರಿಂದ ಅವನು ಮೂರೆಲೆ ಹಾಕಲು ಒಪ್ಪಲಿಲ್ಲ. ಒಂದು ರೂಪಾಯಿ ಮೇಜು ಹಾಕಿ ಇಪ್ಪತ್ತೆಂಟು ಶುರು ಮಾಡಿದರು. ಆ ದಿನ ಇನ್ನು ಯಾರೂ ಆಟಕ್ಕೆ ಬರಲಿಲ್ಲವಾದುದರಿಂದ ರೇವಣ್ಣಶೆಟ್ಟಿ, ಚಿಕ್ಕೇಗೌಡ, ಇಬ್ಬರೇ ಆಡಿದರು. ಸಂಜೆ ಆರು ಗಂಟೆಯ ಹೊತ್ತಿಗೆ ನಲವತ್ತನಾಲ್ಕು ರೂಪಾಯಿಯೂ ಚಿಕ್ಕೇಗೌಡನ ಕಡೆಗೆ ಹೋಯಿತು. ಆದರೆ ಮತ್ತೆ ಆಡಿ ಅದನ್ನು ಗೆಲ್ಲುವ ಹಟ ರೇವಣ್ಣಶೆಟ್ಟಿಯದು. ಹಾಗೆಯೇ ಸಾಲ ಕೊಡುವುದಿಲ್ಲವೆಂದು ಗೌಡ ಹೇಳಿಬಿಟ್ಟ. ‘ಭಾಂಚೋತ್ ನನ್ಮಗುಂದು. ಆದುದ್ ಆಯ್ತಳೆ. ಇನ್ನೊಂದೈವತ್ತು ಕೊಡಿ. ಕಾಗದ ಬರಕೊಡ್ತೀನಿ’ – ಎಂದು ಪ್ರೋನೋಟಿಗೆ ರುಜು ಹಾಕಿ ಮತ್ತೆ ನಲವತ್ತನಾಲ್ಕು ರೂಪಾಯಿ ಇಸಕೊಂಡು ರಾತ್ರಿ ಹನ್ನೊಂದು ಗಂಟೆಯ ಹೊತ್ತಿಗೆ ಅದನ್ನೂ ಗೌಡನಿಗೆ ಒಪ್ಪಿಸಿ, ಪಕ್ಕದಲ್ಲಿದ್ದ ತನ್ನ ಚೌಕವನ್ನು ಕೊಡವಿ ಹೆಗಲಮೇಲೆ ಹಾಕಿಕೊಂಡು ಊರಿಗೆ ನಡೆದ.

ಮನೆಯಲ್ಲಿ ಸರ್ವಕ್ಕ ತನ್ನ ಐದು ಮಕ್ಕಳೊಡನೆ ಮಲಗಿ ನಿದ್ರಿಸುತ್ತಿದ್ದಳು. ಕದ ಬಡಿದು ಹೆಂಡತಿಯನ್ನು ಎಬ್ಬಿಸಿ, ಉಣ್ಣುವುದಕ್ಕೆ ನೀಡುವಂತೆ ಹೇಳಿದ. ಕಂಚಿನ ಗಂಗಾಳದಲ್ಲಿ ಆರಿದ ಮುದ್ದೆ ಕೊಮ್ಮೆಸೊಪ್ಪಿನ ಮಶಪ್ಪು ಸಾರುಗಳನ್ನು ಇಕ್ಕಿದ ಹೆಂಡತಿಯನ್ನು ಗದ್ದರಿಸಿದ; ‘ಬಿಶಿಯಾಗಿ ಮಾಡಾಕ್ ಏನಾಗಿತ್ತೇ?’
‘ಬಿಶಿಯಾಗಿ ಮಾಡಿ ಮಡಗಿದ್ದೆ. ನೀವೇಟೊತ್ತಿಗ್ ಬತ್ತಿರೋ ಆರಿ ಹೋಗೈತೆ.’
‘ಅಯ್ಯೋ ನಿನ್ ಹೆತ್ತೋಳ್ನಾ, ನಾನೆಟೊತ್ತಿಗ್ ಬತ್ತೀನಿ ಅಂತ ಕೇಳಾಕ್ ನೀನ್ಯಾವಳೆ ಬೋಸುಡಿ ಭಾಂಚೋತ್? ಎದಿಗ್ ಒದ್ದು ಕೊಂದ್ಹಾಕ್‌ಬುಡ್ತೀನಿ ನೋಡು’ – ಎಂದು ಮುದ್ದೆಯನ್ನು ಸಾರಿನಲ್ಲಿ ಹೊರಳಿಸಿ ಬಾಯಿಗಿಟ್ಟುಕೊಂಡು ನುಂಗಿ, ಅದು ಗಟ್ಟಿಯಾಗಿ ಗಂಟಲಿನಿಂದ ಸುಲಭವಾಗಿ ಇಳಿಯದೆ ಕಷ್ಟವಾಗಲು, ಮೇಲೆ ಎದ್ದು ಅವಳನ್ನು ಒಂದು ಸಲ ಒದೆದು, ‘ಬಿಶಿಯಾಗ್ ಅನ್ನ ಮಾಡು’ ಎಂದ.
‘ಅಕ್ಕಿ ಇಲ್ವಲ್ಲ’ – ನೋವಿನಿಂದ ಬರುತ್ತಿದ್ದ ಅಳುವಿನ ಮಧ್ಯೆ ಅವಳು ಬಿಕ್ಕಿದಳು.’
‘ಯಾವಾಗ ಕೇಳಿದ್ರೂ ಇಲ್ಲ ಇಲ್ಲ ಅಂತೀಯ ದರಿದ್ರದ ಮುಂಡೆ’ – ಎಂದು ಇನ್ನೊಂದು ಸಲ ಅವಳನ್ನು ಒದೆದು, ಗಂಗಾಳದಲ್ಲಿದ್ದ ಒಣಗಿದ ಮುದ್ದೆಯನ್ನೇ ಮುರಿದು ನುಂಗಿ ಹೋಗಿ ಮಂಚದ ಮೇಲೆ ಪವಡಿಸಿದ. ಸರ್ವಕ್ಕ ಗಂಗಾಳ ತೊಳೆದಿಟ್ಟು ಕೆಳಗೆ ನೆಲದ ಮೇಲೆ ಕೊನೆಯ ಮಗು ರುದ್ರೇಶನ ಜೊತೆ ಮಲಗಿಕೊಂಡಳು.

– ೩ –

ತನಗೆ ತಿಳಿಯದಿದ್ದಾಗ ನಂಜಮ್ಮನೇ ಪುಸ್ತಕಗಳನ್ನು ಕುಳವಾಡಿ ನಿಂಗನ ಕೈಲಿ ಹೊರಿಸಿ ಕೊಂಡು ತಿಮ್ಲಾಪುರಕ್ಕೆ ಹೋಗುತ್ತಿದ್ದಳು. ದ್ಯಾವರಸಯ್ಯನವರು ಹೇಳಿಕೊಟ್ಟು, ಲೆಕ್ಕದಲ್ಲಿ ಒಂದಕ್ಕೂ ಮತ್ತೊಂದಕ್ಕೂ ಇರುವ ತಾಳೆಯನ್ನೂ ತೋರಿಸಿ ಮನದಟ್ಟು ಮಾಡಿಸುತ್ತಿದ್ದರು. ವಸೂಲಿ ಮಾಡುವಾಗ ಸಾಮಾನ್ಯವಾಗಿ ಗ್ರಾಮದ ಪಟೇಲರು ಎದುರಿಗಿರುತ್ತಿದ್ದರು. ರಾಮಸಂದ್ರದ ವಸೂಲಿಯನ್ನಂತೂ ಶಿವೇಗೌಡ ತನ್ನದೆಂದೇ ಹೇಳಿದ. ‘ಕಂದಾಯದ ವಸೂಲಿ ಏನಿದ್ರೂ ಪಟೇಲ್ರುದ್ದು. ಶಾನುಬಾಗ ಪಟೇಲ ಏಳ್ದಂಗೆ ಲ್ಯಕ್ಕ ಬರ್ಕಂಡ್ ಬಿದ್ದಿರ್‍ಬೇಕು’ – ಎಂಬುದು ಅವನ ಧೋರಣೆಯಾಗಿತ್ತು. ಅವನನ್ನು ವಿರೋಧಿಸುವ ಶಕ್ತಿ ಇಲ್ಲದುದರಿಂದ ಆ ಊರಿನಲ್ಲಿ ಹಾಗೆಯೇ ನಡೆಯುತ್ತಿತ್ತು. ಮಿರಾಶೆ ಹಣ ಪಟೇಲನಿಗೆ ಹೋಗಿ ಇವರಿಗೆ ಒಂದು ಆಣೆಯೂ ಸಿಕ್ಕುತ್ತಿರಲಿಲ್ಲ. ಈ ಗ್ರಾಮದಲ್ಲಿ ಯಾವುದಾದರೂ ಖರೀದಿ, ಆಧಾರ, ಮೊದಲಾದ ರಿಜಿಸ್ಟ್ರಿಗಳಾಗಬೇಕಾದರೆ ಜನಗಳು ಮಾಜಿ ಹಂಗಾಮಿ ಶಾನುಭೋಗ ಸಿವಲಿಂಗನ ತಾವ ಹೋಗುತ್ತಿದ್ದರೇ ವಿನಾ ಚನ್ನಿಗರಾಯರನ್ನು ಮೂಸುತ್ತಿರಲಿಲ್ಲ. ಚನ್ನಿಗರಾಯರಿಗೆ ಸರಿಯಾಗಿ ದಸ್ತಾವೇಜು ಬರವಣಿಗೆ ಬರುವುದಿಲ್ಲವೆಂಬುದು ಒಂದು ಕಾರಣವಾದರೆ, ‘ಆ ವಯ್ಯನ ತಾವ ಬರುಸ್ಕಂಡು ಅದ್ಯಾವ್ನು ರಿಕಾಲ್ಡು ದಕ್ಕುಸ್ಕತ್ತಾನ್ಲಾ?’ – ಎಂದು ಪಟೇಲ ಹೆದರಿಸುದ್ದುದು ಇನ್ನೊಂದು ಕಾರಣವಾಗಿತ್ತು. ಸಿವಲಿಂಗನಿಗಿಂತ ನಂಜಮ್ಮ ರಿಜಿಸ್ಟ್ರಿ ಕಾಗದ ಪತ್ರಗಳನ್ನು ಚೆನ್ನಾಗಿ ಬರೆಯಬಲ್ಲಳಾದರೂ, ಸರ್ಕಾರೀ ಪತ್ರವನ್ನು ಹೆಂಗಸಿನ ಕೈಲಿ ಬರೆಸಿದರೆ ಊರ್ಜಿತವಾಗುವುದಿಲ್ಲವೆಂಬ ನಂಬಿಕೆ ಬೇರೆ, ಹೀಗಾಗಿ ರಾಮಸಂದ್ರದಿಂದ ಮೂರು ಕಾಸಿನ ಸಂಪಾದನೆಯೂ ಆಗುತ್ತಿರಲಿಲ್ಲ.

ಕುರುಬರಹಳ್ಳಿಯದೇ ಒಂದು ನೆಚ್ಚಿಗೆ. ಪಟೇಲ ಗುಂಡೇಗೌಡರು ವಸೂಲಿಯ ದಿನ ಕೂಡುತ್ತಿದ್ದರೂ ಅದನ್ನು ಮಾಡುತ್ತಿದ್ದವರು ಚನ್ನಿಗರಾಯರೇ. ಕುಳುವಾರು ಅವರವರ ಕಂದಾಯಕ್ಕೆ ತಕ್ಕಂತೆ ಗುಂಡೇಗೌಡರೇ ಶ್ಯಾನುಭೋಗರ ಮಸಿಕಾಣಿಕೆ ಕೊಡಿಸುಬಿಡುತ್ತಿದ್ದುದೇ ಅಲ್ಲದೆ ತಾವೇ ಎರಡು ರೂಪಾಯಿ ಕೊಡುತ್ತಿದ್ದರು. ಆ ಊರಿನಲ್ಲಿ ಒಟ್ಟು ನಲವತ್ತು ರೂಪಾಯಿ ವರಮಾನವಿತ್ತು. ಅಲ್ಲದೆ ಇವರು ಬೇರೆಯಾದ ಮೇಲೆ ತಮ್ಮ ಗ್ರಾಮದಲ್ಲಿ ಸುಗ್ಗಿಯಲ್ಲಿ ಒಟ್ಟು ಖಂಡುಗ ರಾಗಿ ಐವತ್ತು ಸೇರು ಅವರೇಕಾಳು ಎತ್ತಿಕೊಡುವುದಾಗಿ ಗುಂಡೇಗೌಡರು ಹೇಳಿದ್ದರು. ಅದರಂತೆ ನಡೆಸುತ್ತಲೂ ಇದ್ದರು. ಕುರುಬರಹಳ್ಳಿಯಲ್ಲಿ ಖರೀದಿ, ಅಧಾರಪತ್ರಗಳು ಆಗುತ್ತಿದ್ದುದೇ ಅಪರೂಪ. ಆದುದರಿಂದ ಆ ಬಾಬ್ತು ಏನೂ ವರಮಾನವಿರಲಿಲ್ಲ.

ಇವರ ಫಿರ್ಕಾದ ಇನ್ನೊಂದು ಊರಾದ ಲಿಂಗಾಪುರ ಮೂವತ್ತು ಹಳ್ಳಿಯ ಗ್ರಾಮ ಎಲ್ಲರೂ ತಕ್ಕಮಟ್ಟಿಗೆ ಅನುಕೂಲವಿದ್ದ ಜನರೇ. ಆದರೆ ಆ ಊರಿನವರಿಗೆ ರಾಮಸಂದ್ರದ ಶಿವೇಗೌಡನೊಡನೆ ದೂರದ ನಂಟು. ಶ್ಯಾನುಭೋಗನಿಗೆ ಯಾಕೆ ಮಸಿಕಾಣಿಕೆ ಕೊಡಬೇಕು ಎಂಬುದು ಶಿವೇಗೌಡನ ವಾದ ಅಲ್ಲಿಯವರಿಗೂ ಹಬ್ಬಿತು. ಪಟೇಲ ಪುರದಪ್ಪ ಅದು ತನಗೇ ಸೇರಬೇಕೆಂದು ಹಟಮಾಡಿದ. ಚನ್ನಿಗರಾಯರ ತಂದೆ ರಾಮಣ್ಣನವರು ಶ್ಯಾನುಭೋಗರಾಗಿದ್ದಾಗ ಈ ಊರಿನವರೆಲ್ಲ ಮನೆಗೆ ಒಂದು ರೂಪಾಯಿಯಂತೆ ಕೊಡುತ್ತಿದ್ದ ರಿವಾಜು ಇತ್ತು. ಅದಕ್ಕೆ ಗ್ರಾಮದ ಕೆಲವು ಹಿರಿಯರು ಇವತ್ತಿಗೂ ಸಾಕ್ಷಿ ಹೇಳುತ್ತಾರೆ. ಆದರೆ ಈಗ ಕಾಲ ಬದಲಾಯಿಸಿದೆ. ಹೀಗಾಗಿ ಆ ಊರಿನಲ್ಲಿಯೂ ಏನೂ ಮೇಲು ಸಂಪಾದನೆ ಆಗುತ್ತಿರಲಿಲ್ಲ.

ನಂಜಮ್ಮ ಕುರುಬರಹಳ್ಳಿಯ ವಸೂಲಿಗೆ ಹೋಗುತ್ತಿದ್ದಳು. ಉಳಿದ ಎರಡು ಗ್ರಾಮಗಳದನ್ನು ಪಟೇಲರೇ ನೋಡಿಕೊಳ್ಳುತ್ತಿದ್ದರು. ಲೆಕ್ಕವನ್ನು ಮಾತ್ರ ಅವಳು ಮನೆಯಲ್ಲಿ ಕೂತು ಬರೆಯುತ್ತಿದ್ದಳು. ಜಮೀನಿನ ಮೇಲೆ ಹೋಗಿ ಪಹಣಿಯನ್ನೂ, ಕುಳಗಳನ್ನೇ ಕರೆಸಿ ಖಾನೀಷುಮಾರಿಯನ್ನೂ ಚೆನ್ನಿಗರಾಯರು ಗುರುತು ಹಾಕುತ್ತಿದ್ದರು. ಅದರ ಗೋಶ್ವಾರೆಯಿಂದ ಹಿಡಿದು ಜಮಾಬಂದಿಯ ಲೆಕ್ಕದವರೆಗೆ ಎಲ್ಲವನ್ನೂ ನಂಜಮ್ಮ ನಿಭಾಯಿಸುತ್ತಿದ್ದಳು. ತಿಳಿಯದುದಕ್ಕೆ ತಿಮ್ಲಾಪುರಕ್ಕೆ ಹೋಗಿಬರುತ್ತಿದ್ದಳು. ಚೆನ್ನಿಗರಾಯರು ಕೋಟು ಹಾಕಿ, ತಲೆಗೆ ರುಮಾಲು ಸುತ್ತಿ ಕೊರಳ ಸುತ್ತ ಮಡಿಸಿದ ಉತ್ತರೀಯ ಹೊದೆದು ಜಮಾಬಂದಿಗೆ ಹೋಗಿ ಕೈ ಕಾಲು ನಡುಗಿಸಿಕೊಂಡು ಹೆಡ್‌ಕ್ಲಾರ್ಕಿನ ಸಂಭಾವನೆ ಸಲ್ಲಿಸಿ ಸಾಹೇಬರ ರುಜು ಪಡೆದು ಗಂಡಸಿನಂತೆ ಊರಿಗೆ ಹಿಂತಿರುಗುತ್ತಿದ್ದರು. ಗ್ರಾಮಕ್ಕೆ ಶೇಕ್‌ದಾರರೋ ಅಮಲ್ದಾರರೋ ದಯಮಾಡಿಸಿದಾಗ, ನಂಜಮ್ಮ ಮಕ್ಕಳ ಬಾಯಿಕಟ್ಟಿ ಇಟ್ಟಿದ್ದ ತುಪ್ಪ ಹಾಕಿ, ಅನ್ನ ಸಾರು ಪಲ್ಯ ಹಪ್ಪಳಗಳನ್ನು ರುಚಿ ರುಚಿಯಾಗಿ ಮಾಡಿ ಬಡಿಸಿ – ‘ನಾವು ಬಡವರು. ಲೆಕ್ಕದಲ್ಲಿ ತಪ್ಪಿದ್ದರೆ ಸ್ವಾಮಿಯೋರು ಸರಿ ಮಾಡಿಕೊಂಡು ಹೋಗಬೇಕು’ ಎನ್ನುತ್ತಿದ್ದಳು. ಆದರೆ ಅದನ್ನು ಬರೆಯುತ್ತಿದ್ದವಳು ತಾನು ಎಂಬ ಗುಟ್ಟನ್ನು ಬಿಡುತ್ತಿರಲಿಲ್ಲ.
ಇದರ ಜೊತೆಗೆ ಈ ಗಂಡನನ್ನು ನಿಭಾಯಿಸುವುದೂ ಒಂದು ಕೆಲಸವಾಗಿತ್ತು. ವರ್ಷವೆಲ್ಲ ಕಷ್ಟಪಟ್ಟು ಇವಳು ಲೆಕ್ಕ ಬರೆದುಕೊಟ್ಟರೆ ಸಾಲಾಖೈರಿನಲ್ಲಿ ಪೋಟಿಗೆಗೆ ಹೋದ ಚೆನ್ನಿಗರಾಯರು ಹದಿನೈದು ದಿನ ಊರಿಗೆ ಬರಲೇ ಇಲ್ಲ. ಅನಂತರ ಬಂದವರು ಒಟ್ಟು ಐದು ರೂಪಾಯಿ ಇರುವುದಾಗಿ ಹೇಳಿದರು. ಅದನ್ನೂ ಹೆಂಗಸಾದ ಅವಳ ಕೈಗೆ ಕೊಡದೆ, ಗಂಡಸಾದ ತಾವು ತಿಪಟೊರಿನಿಂದ ತಂದಿದ್ದ ತಗಡಿನ ಪೆಟ್ಟಿಗೆಯಲ್ಲಿ ಇಟ್ಟು ಬೀಗ ಹಾಕಿ. ಬೀಗದ ಕೈಯನ್ನು ಉಡಿದಾರಕ್ಕೆ ನೇತುಹಾಕಿಕೊಂಡರು. ಅಮಲ್ದಾರರು, ಶಿರಸ್ತಾರರು, ಹೆಡ್ ಗುಮಾಸ್ತೆ, ಹೋಬಳಿ ಗುಮಾಸ್ತೆ, ಮತ್ತು ಜವಾನರಿಗೆಲ್ಲ ಕೊಡುವುದು ಕೊಟ್ಟ ಮೇಲಾದರೂ ಒಂದು ನೂರು ರೂಪಾಯಿಯಾದರೂ ಉಳಿಯಬೇಕು. ಅದರಲ್ಲಿ ಪಟೇಲ ಗುಂಡೇಗೌಡರ ಮುಂಗಡ ಕಂದಾಯ ಕಳೆದರೆ ಇನ್ನು ಐವತ್ತು ರೂಪಾಯಿ ಮನೆಗೆ ಬರಬೇಕು. ದುಡ್ಡೆಲ್ಲ ಏನಾಯಿತು? ಚೆನ್ನಿಗರಾಯರೇ ಹೇಳಿದರು; ‘ನೀನು ಹಾಕೂ ಹಿಟ್ಟು ಅವರೇಬ್ಯಾಳೆ ಸಾರು ತಿಂದು ನಂಗೆ ಬಾಯಿ ಕೆಟ್ಟಿತ್ತು ಕಣೆ ಮುಂಡೆ. ಒಂದ್ ಹದಿನೈದು ದಿನ ಓಟ್ಳಾಗೆ ಆಲೂಗೆಡ್ಡೆ ನೀರುಳ್ಳಿ ಹುಳಿ, ವಡೆ, ದ್ವಾಸೆ, ಮೈಸೂರುಪಾಕ್ ತಿಂದ್ಕಂಡ್ ಹಾಯಾಗಿದ್ದೆ.’
‘ನೀವೇನೋ ತಿಂದ್ಕಂಡಿದ್ರಿ. ಮನೇಲಿ ಮಕ್ಳು ಒಂದಿನವೂ ಮೈಸೂರುಪಾಕು ಕಣ್ಣಲ್ಲೂ ನೋಡಿಲ್ಲ. ನಿಮ್ಗೆ ಅದ್ ಹ್ಯಾಗೆ ನಾಲಿಗೆ ಬಂತು ತಿನ್ನೋಕೆ?’

ಚೆನ್ನಿಗರಾಯರಿಗೆ ಉತ್ತರ ತಿಳಿಯಲಿಲ್ಲ. ‘ಮುಂಡೆ, ಥೂ ಮುಂಡೆ, ಮುಂಡೆ, ಮಾದರ್‍ಚೋದ್ ಮುಂಡೆ, ಮಾತಾಡ್ಬ್ಯಾಡ ಸುಮ್ನಿರೇ ಪೋಲಿ ಮುಂಡೆ’ – ಎಂದು ಕೊಂಡು ಮಾದೇವಯ್ಯನವರ ಗುಡಿಗೆ ಹೊರಟುಹೋದರು. ಇನ್ನು ಇಡೀ ವರ್ಷ ಜೀವನ ಸಾಗಿಸುವುದು ಹೇಗೆ? ಮೂರನೇ ಮಗು ವಿಶ್ವನಿಗೆ ಈಗ ಎಂಟು ತಿಂಗಳು. ಅವಳ ಹೊಟ್ಟೆಯಲ್ಲಿ ಆಗಲೇ ಎರಡು ಮೂರು ತಿಂಗಳಿನ ಇನ್ನೊಂದು ಮಗುವಿದೆ. ಪೋಟಿಗೆ ಎಂದು ಕಾಣುವುದು ವರ್ಷಕ್ಕೊಂದು ಸಲ. ಅದೂ ಹೀಗೆ ಆಗಿಹೋದರೆ ಇನ್ನು ಮಕ್ಕಳು ಉಪವಾಸ ಸಾಯಬೇಕು. ದೊಡ್ಡವರಿಗಾದರೂ ದಿನಕ್ಕೆ ಎರಡು ಮುದ್ದೆ ಇಲ್ಲದಿದ್ದರೆ ಜೀವ ಶರೀರಕ್ಕೆ ಅಂಟಿಕೊಳ್ಳುವುದು ಹೇಗೆ? ಪೋಟಿಗೆ ನನಗೆ ಕೊಡಿ ಅಂತ ಸರ್ಕಾರ್‍ದೋರನ್ನ ಕೇಳಿದ್ರೆ ಏನಂತಾರೋ! ಇನ್ನೇನು ದಿಕ್ಕು? – ಎಂದು ಅವಳು ಎರಡು ದಿನ ಯೋಚನೆ ಮಾಡಿದಳು. ಕೊನೆಗೆ ಒಂದು ಉಪಾಯ ಹೊಳೆಯಿತು.

ಮರುದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಮಕ್ಕಳಿಗೂ ಮಡಿ ಉಡಿಸಿ ರೊಟ್ಟಿ ಚಟ್ನಿ ಕೊಟ್ಟು, ಎರಡನೆಯ ರಾಮಣ್ಣ ಮತ್ತು ಹಿರಿಯ ಪಾರ್ವತಿಯನ್ನು ಮಗ್ಗದ ಬೀದಿಯ ಪುಟ್ಟವ್ವನ ಮನೆಯಲ್ಲಿ ಬಿಟ್ಟು ಕೈಯಿಯಲ್ಲಿ ವಿಶ್ವನನ್ನು ಎತ್ತಿಕೊಂಡು ಕುರುಬರಹಳ್ಳಿಗೆ ಹೋದಳು. ಗುಂಡೇಗೌಡರ ಮನೆಗೆ ಹೋದರೆ ಒಳಗಿನ ಅಂಗಳದಲ್ಲಿ ಗಂಗಮ್ಮ ಒಂದು ಮಣೆಯ ಮೇಲೆ ಕುಳಿತಿದ್ದಾಳೆ. ಅವಳ ಮುಂದೆ ಹಾಸಿದ ಕೆಂಪಿನ ಸೀರೆಯ ಮೇಲೆ ಗೌಡರ ಹೆಂಡತಿ ಲಕ್ಕಮ್ಮ ಮೊರದಲ್ಲಿ ರಾಗಿ ಸುರಿಯುತ್ತಿದ್ದಾಳೆ. ಗೌಡರು ಗೋಡೆಯೊರಗಿ ಕೂತು ತಮ್ಮ ಎಲೆ ಅಡಿಕೆ ಚೀಲದೊಳಗೆ ಕೈ ಹಾಕಿ ಏನೋ ತಡಕುತ್ತಿದ್ದಾರೆ. ಸೊಸೆ ಅಲ್ಲಿಗೆ ಬಂದುದನ್ನು ನೋಡಿದ ಗಂಗಮ್ಮನಿಗೆ ಕೋಪ ಬಂತು. ‘ನಾನು ತಿರುಪೆ ಮಾಡ್ಕಂಡ್ ಹ್ವಟ್ಟಿ ಹ್ವರಿತಿದೀನಿ. ಅದಕ್ಕೂ ಕಲ್ ಹಾಕುಕ್ಕೆ ಬಂದೆ ಏನೇ ತಾಟಗಿತ್ತಿ?’ – ಎಂದು ಸಿಡಾರನೆ ಕೇಳಿದಳು. ನಂಜಮ್ಮ ಮಾತನಾಡದೆ ಸುಮ್ಮನೆ ನಿಂತುಬಿಟ್ಟಳು.
ಗೌಡರೇ – ‘ಬಾರವ್ವಾ, ಈಚಿಕಡೀಕ್ ಬಾ. ಕುಂತ್ಕ’ ಎಂದಮೇಲೆ ಹೋಗಿ ಚಾಪೆಯ ಮೇಲೆ ಕುಳಿತಳು. ಗಂಗಮ್ಮ ಸೀರೆಯಲ್ಲಿ ರಾಗಿ ಕಟ್ಟಿಕೊಂಡು ಎದ್ದು ಹೊರಟುಹೋದಳು. ಲಕ್ಕವ್ವ ಕೇಳಿದಳು: ‘ನಿಮ್ಮತ್ತೆ ನಿಮ್ಮುನ್ನ ಎಲ್ಡು ಮಂಕ್ರಿ ದೂರಿದ್ಲಲ್ಲವ್ವಾ. ನೀನು ಅವ್ಳ ಕಂಡ್ರೆ ಉರೀತೀಯಂತೆ, ಗಂಡುನ್ನ ಕೈಯಾಗೆ ಹಾಕ್ಯಂಡ್ ಕುಣಿಸ್ತೀಯಂತೆ. ನೀನೇ ಗಂಡ್ಸು ಅಂತ ಬೀದೀಲೆಲ್ಲ ತಿರುಗ್ತೀಯಂತೆ. ಇನ್ನು ಏನೇನೋ ಏಳಿದ್ಲು. ಸ್ಯಾನುಬಾಕೀಲಿ ಏನೂ ಪಾಲು ಕೊಡಾಕಿಲ್ವಂತೆ.’
‘ಆ ಯಮ್ಮ ಅಂದ್ರೆ ಅಂದ್ಕತೈತೆ. ನೀನ್ ಸುಮ್ಕುರು’ – ಎಂದು ಹೆಂಡತಿಗೆ ಹೇಳಿದ ಗೌಡರು ಕೇಳಿದರು: ‘ಏನವ್ವ ಬಂದ್ಬುಟ್ಟೆ, ಪೋಟಿಕೆ ಆಯ್ತಾ?’
‘ಗೌಡ್ರೇ, ಅದುನ್ನೇ ನಿಮ್ ಕೈಲಿ ಹೇಳಾಣ ಅಂತ ಬಂದೆ’ – ಎಂದು ನಂಜಮ್ಮ ಗಂಡ ಮಾಡಿದುದನ್ನೆಲ್ಲ ಹೇಳಿದಳು. ‘ಆ ವಯ್ಯಂಗೆ ಇಡಕಂಡಿ, ಕುತ್ಕೆ ಚಂಡ್ ಬಗ್ಗಿಸ್ಕಂಡಿ, ಎಲ್ಡು ಇಡಬೇಕು’ – ಲಕ್ಕವ್ವ ಎಂದಳು.
‘ಇಡುದ್ರೆ ಅದುಕ್ ಬುದ್ದಿ ಬರಾಕಿಲ್ಲ. ಈಗ ಏನ್ ಮಾಡ್‌ಬೇಕು ನೀನೇ ಏಳವ್ವ, ನಿಂಗಿಂತಾ ನಂಗ್ ತಿಳೀತೈತಾ?’
‘ಪೋಟಿಗೆ ಹಣ ಅವರ ಕೈಗೆ ಸಿಕ್ಕದ ಹಾಗೆ ಮಾಡಿದ್ರೆ ಸರಿಯಾಗುತ್ತೆ.’
‘ಇನ್ನೇನು, ನಿನ್ ಕೈಲಿ ಕೊಡ್ತಾರಾ ಗೌರ್‌ಮೇಟ್‌ನೋರು?’
‘ಅದು ಬ್ಯಾಡ. ಒಟ್ಟು ಪೋಟಿಗೆ ನೂರ ಇಪ್ಪತ್ತು ರೂಪಾಯಿ. ಅದರಲ್ಲಿ ಪೋಟಿಗೆ ಖರ್ಚು ಹಾಕುವಾಗ ಅಮಲ್ದಾರರು, ಸಿರಸ್ತಾರರು, ಇವರುದ್ದೆಲ್ಲ ಒಟ್ಟು ಹದಿನೈದು ರೂಪಾಯಿ ಹೋಗುತ್ತೆ. ಅದ ಬಿಟ್ಬಿಡಿ. ಉಳಿದ ನೂರು ರೂಪಾಯಿಗೆ ನೀವು ಈಗಲೇ ಇವರಿಂದ ಕಂದಾಯ ಮುಂಗಡ ತಗಂಡಿದೀನಿ ಅಂತ ಹೋದ ವರ್ಷ ಮಾಡಿದ ಹಾಗೆ ರಶೀತಿ ಬರುಸ್ಕಂಡ್ಬಿಡಿ. ನಿಮ್ಮದೇ ಹ್ಯಾಗೂ ಎಂಬತ್ತು ರೂಪಾಯಿ ಕಂದಾಯ ಇದೆ. ಇನ್ನು ಯಾರುದ್ದಾರೂ ಇಪ್ಪತ್ತಕ್ಕೆ ಬರುಸ್ಕಳಿ. ಅದುನ್ನ ಪೋಟ್ಕಿ ಕೊಡೋವಾಗ್ಲೇ ಕಟಾಯಿಸ್ಕತ್ತಾರೆ. ಇನ್ನು ಇವರ ಕೈಗೆ ದುಡ್ಡು ಸಿಕ್ಕುಲ್ಲ. ಆ ದುಡ್ನಲ್ಲಿ ನೀವು ನಾನು ಕೇಳ್ದಾಗ ರಾಗಿ, ಕಾಳು, ಮೆಣಸಿನಕಾಯಿ, ಮೇಲೆ ಐದು ಹತ್ತು ರುಪಾಯಿನ ಹಾಗೆ ಕೊಡ್ತಾ ಬನ್ನಿ.’
‘ವೈನ, ವೈನ. ನಿಂಗೆ ದಿವಾನಿಕೆ ಮಾಡಾ ತಲೆಯೈತೆ. ಈ ಬಶಣ್ಣಯ್ಯನ ಆಳಾದ್ ಕಲುತ್ರೆ ಮೈಸೂರು ಶೀಮೇನೇ ಆಳ್ಬೈದು. ನಾಳೆ ನಾಡಿದ್ರಲ್ಲಿ ನಾನು ಬತ್ತೀನಿ. ಆಗ ಬರುಸ್ಕಳಾನ ಬುಡು.’

ಬಸವಣ್ಣನ ಗುಡಿಯಲ್ಲಿ ಅಡಿಗೆ ಮಾಡಿಕೊಂಡು ಉಂಡು ಹೋಗುವಂತೆ ಗೌಡಮ್ಮ ಬಲವಂತ ಮಾಡಿದಳು. ಆದರೆ ಊರಿನಲ್ಲಿ ಮಕ್ಕಳನ್ನು ಬಿಟ್ಟು ಬಂದಿರುವುದರಿಂದ ತಾನು ನಿಲ್ಲುವುದಿಲ್ಲವೆಂದು ಹೇಳಿ ನಂಜಮ್ಮ ಹೊರಟುಬಿಟ್ಟಳು. ಮಕ್ಕಳಿಗೆಂದು ಗೌಡಮ್ಮ ಕೊಟ್ಟ ಎರಡು ಗಿಟುಕು ಕೊಬ್ಬರಿ ಎರಡು ಉಂಡೆ ಬೆಲ್ಲವನ್ನು ಸೆರಗಿಗೆ ಕಟ್ಟಿಕೊಂಡಳು. ನಂತರ ತುಪ್ಪ ಬೆಲ್ಲ ಹಾಕಿ ಮುಂದಿಟ್ಟ ಹಾಲನ್ನು ಮಗುವಿಗೂ ಕುಡಿಸಿ ತಾನೂ ಕುಡಿದು ಊರಿಗೆ ಬಂದಳು.

ಮನೆಯಲ್ಲಿ ಚನ್ನಿಗರಾಯರು ಹೆಂಡತಿಯನ್ನು ಎಲ್ಲಿಗೆ ಹೋಗಿದ್ದೆ ಎಂದು ಕೇಳಲಿಲ್ಲ. ಇನ್ನೂ ಅಡಿಗೆಯಾಗಿಲ್ಲವೆಂದು ರೇಗಿದರು. ಅವಳ ಸೆರಗಿನಲ್ಲಿದ್ದ ಕೊಬ್ಬರಿ ಬೆಲ್ಲ ಕಣ್ಣಿಗೆ ಬಿದ್ದಾಗ ತೆಗೆದುಕೊಂಡು ಮುರಿದು ತಿನ್ನಲು ಶುರುಮಾಡಿದರು. ಪುಟ್ಟವ್ವನ ಮನೆಯಲ್ಲಿದ್ದ ಮಕ್ಕಳು ಮನೆಗೆ ಬರುವ ವೇಳೆಗೆ ಎರಡು ಗಿಟುಕು ಎರಡು ಉಂಡೆಗಳೂ ಮುಗಿದುಹೋಗಿ ಅವರು ಅಂಟು ಕೈಯನ್ನು ತೊಳೆದುಕೊಂಡಿದ್ದರು.
ಗುಂಡೇಗೌಡರು ಮರು ದಿನವೇ ಇಲ್ಲಿಗೆ ಬಂದರು. ಅವರು ಹೇಳಿದಂತೆ ನಂಜಮ್ಮ ಗಂಡನ ಮುಂದೆ ರಶೀತಿ ಕಾಗದ ಮತ್ತು ದೌತಿ ಸ್ಟೀಲುಗಳನ್ನು ಇಟ್ಟಳು. ‘ಆ ಯಮ್ಮ ಏಳ್ದಂಗೆ ಬರೆಯಯ್ಯಾ’ -ಗೌಡರು ಆದೇಶವಿಟ್ಟರು. ‘ಕುರುಬರ ಹಳ್ಳಿಯ ಪಟೇಲ ಗುಂಡೇಗೌಡರ ರೆವೆನ್ಯೂ ಕಂದಾಯದ ಬಾಬ್ತು ಎಂಬತ್ತು ರೂಪಾಯಿಗಳು ಮಾತ್ರ ಸಂದಾಯವಾಗಿದೆ’ -ಎಂದು ನಂಜಮ್ಮ ಹೇಳುತ್ತಿರುವಂತೆಯೇ ಶ್ಯಾನುಭೋಗರು ಸ್ಟೀಲನ್ನು ಕೆಳಗಿಟ್ಟು. ‘ಅದ್ಯಾಕ್ ಬರೀಬೇಕೋ ಕಾಣೆ. ಪೋಟಿಗೇಲಿ ನನ್ನ ಕೈಗೆ ಏನೂ ಸಿಕ್ಕುಲ್ಲ’ ಎಂದು ಕುಳಿತುಬಿಟ್ಟರು.
ಗೌಡರಿಗೆ ರೇಗಿತು: ‘ಸಿಕ್ಕಾಕುಲ್ವಂತೆ. ತಿಗಾ ಮುಚ್ಕಂಡ್ ಬರೀತೀಯೋ ಇಲ್ವಯ್ಯೋ’ -ಎಂದು ಅವರು ಕೇಳಿದರೂ ಶ್ಯಾನುಭೋಗರು ಸ್ಟೀಲನ್ನು ಮುಟ್ಟಲಿಲ್ಲ. ‘ಬರೆಯಾದಿಲ್ವೇನಯ್ಯಾ? ನಮ್ಮೂರಿಗ್ ಬಂದ್ರೆ ನಿನ್ನ ಕಾಲು ಮುರಿದ್ಬುಡ್ತೀನಿ. ಏನಂತ ತಿಳ್ಕಂಡಿದೀಯಾ?’
‘ನನ್ ಖರ್ಚಿಗೆ ಏನ್ ಮಾಡ್ಲಿ?’
‘ಅದುಕ್ಕೆ ನಾನ್ ಕೊಡ್ತೀನಿ ಬರಿ.?
ಅಂತೂ ಒಟ್ಟಿನಲ್ಲಿ ನೂರು ರೂಪಾಯಿ ಕಂದಾಯದ ರಶೀತಿ ಬರೆದು ಅವರು ರುಜು ಮಾಡಿಕೊಟ್ಟರು. ‘ನಂಗೇನಾರಾ ಕೊಡ್ರಿ ಮತ್ತೆ?’ -ಎಂದು ಕೇಳಿದುದಕ್ಕೆ ಗೌಡರೇ ತಮ್ಮ ಸೊಂಟದ ದಟ್ಟಿಯ ಮಡಿಕೆಗೆ ಕೈ ಹಾಕಿ ಎರಡು ರೂಪಾಯಿಗಳನ್ನು ತೆಗೆದು ಅವರ ಮುಂದೆ ಉರುಳಿಸಿ -‘ತಗ ನಿನ್ ಮಿರಾಶೆ ಹಣ ಈಗ್ಲೇ ಕೊಟ್ಟಿದೀನಿ’ ಎಂದರು.

ಶ್ಯಾನುಭೋಗರು ಆತುರದಿಂದ ಕೈಲಿ ಹಿಡಿದು ಜೇಬಿಗೆ ಹಾಕಿಕೊಂಡರು. ಗೌಡರು ಊರಿಗೆ ಹೋದರು. ಮರುದಿನ ಶುಕ್ರವಾರವಾಗಿತ್ತು. ಚೆನ್ನಿಗರಾಯರು ಬೆಳಗ್ಗೆ ಮನೆಯಲ್ಲಿ ರೊಟ್ಟಿ ತಿಂದವರೇ ಕಂಬನಕೆರೆಯ ಸಂತೆಗೆ ಹೊರಟುಹೋದರು. ಸಂತೆಗೆ ತಿಪಟೂರಿನವರು ಬಂದು ಡೇರೆ ಹೊಡೆದು ಹೋಟಲು ಹಾಕುತ್ತಾರೆ. ತಿಪಟೂರು ಪೇಟೆಯಲ್ಲಿ ಮಾಡುವ ಮಸಾಲೆ ದೋಸೆ, ಆಲೂಗೆಡ್ಡೆಪಲ್ಯ, ಮೈಸೂರುಪಾಕು, ಬಾಳೇಕಾಯಿ ಬೋಂಡಗಳನ್ನೆಲ್ಲ ಮಾಡಿರುತ್ತಾರೆ.

– ೪ –

ಬರೀ ಶ್ಯಾನುಭೋಗಿಕೆಯಲ್ಲಿ ಜೀವನವಾಗುವುದಿಲ್ಲವೆಂಬುದನ್ನು ನಂಜಮ್ಮ ಬಹು ಬೇಗ ಅರ್ಥ ಮಾಡಿಕೊಂಡಳು. ಭೂಮಿ ಕಾಣಿಗಳೇನೂ ಇಲ್ಲದವರಿಗೆ ಈ ಕಸುಬಿನಿಂದ ಸಂಸಾರ ನೀಯುವುದಿಲ್ಲ. ತಾನು ಬೇರೆ ಏನು ಮಾಡಬಹುದು? ತಿಮ್ಲಾಪುರಕ್ಕೆ ಹೋಗಿದ್ದಾಗ ದ್ಯಾವರಸಯ್ಯನವರ ಪಕ್ಕದ ಒಂದು ಮನೆಯವರು ಮುತ್ತುಗದ ಎಲೆ ಹಚ್ಚಿಸಿ ಪಿಂಡಿ ಕಟ್ಟಿಟ್ಟದ್ದನ್ನು ನೋಡಿದ್ದಳು. ಅವೆಲ್ಲವನ್ನೂ ತಿಪಟೂರಿಗೆ ಕಳಿಸುತ್ತಾರಂತೆ. ನೂರಕ್ಕೆ ಆರಾಣೆಯಂತೆ ಅಂಗಡಿಯವರು ಉಂಡೆಯಾಗಿ ತೆಗೆದುಕೊಂಡು ದುಡ್ಡು ಕೊಡುತ್ತಾರಂತೆ. ಮನೆಗೆಲಸ, ಶ್ಯಾನುಭೋಗಿಕೆಯ ಲೆಕ್ಕದ ಜೊತೆಗೆ ತಾನೂ ದಿನವೂ ಒಂದು ಐವತ್ತೋ ನೂರೋ ಎಲೆ ಹಚ್ಚಿದರೆ ಆದೀತು-ಎಂದು ಯೋಚಿಸಿದಳು.

ರಾಮಸಂದ್ರದ ಬ್ರಾಹ್ಮಣರು ಮುತ್ತುಗದ ಎಲೆಯನ್ನು ಚೋಳೇಶ್ವರನಗುಡ್ಡದ ಹತ್ತಿರದ ಮರಳಹಳ್ಳದಿಂದ ತರುತ್ತಾರೆ. ಎಂದರೆ ಮೂರು ಮೈಲಿಯಾಗುತ್ತೆ. ಚೋಳೇಶ್ವರನ ಗುಡ್ಡವಿರುವುದು ಅವಳ ತೌರೂರು ನಾಗಲಾಪುರದ ದಾರಿಯಲ್ಲಿಯೇ. ಈ ಸಲ ಮುತ್ತುಗದ ಎಲೆಯ ಕಾಲವಾದ ಫಾಲ್ಗುಣ ಮಾಸ ಬಂದಾಗ ಅವಳು ಎಲೆ ತರಲು ಹೊರಟಳು. ಅಷ್ಟು ದೂರ ಒಂಟಿಯಾಗಿ ಹೆಂಗಸಾದ ತಾನೊಬ್ಬಳೇ ಹೋಗುವುದು ಸಮನಲ್ಲ. ಆದರೆ ಜೊತೆಗೆ ಯಾರನ್ನು ಕರೆಯುವುದು? ಗಂಡನನ್ನು ಕರೆದು ನೋಡಿದಳು. ಅವರ್‍ಯಾಕೆ ಬಂದಾರು? ‘ತೀಟೆ ಇದ್ದವಳು ಇದನ್ನೆಲ್ಲ ಮಾಡ್ಲಿ ನನಗೇನು ತೆವ್ಲು ? -ಎಂದುಹೇಳಿದರು. ಮಗ್ಗದಕೇರಿಯ ಪುಟ್ಟವ್ವನನ್ನು ಜೊತೆಗೆ ಕರೆದುಕೊಂಡು ಚಿಕ್ಕ ಮಕ್ಕಳನ್ನು ಪಕ್ಕದ ಚನ್ನಶೆಟ್ಟಿಯ ಮನೆಯಲ್ಲಿ ಬಿಟ್ಟು ಬೆಳಿಗ್ಗೆ ಕಾಗೆ ಕರ್‌ಯೆನ್ನುವ ಮುಂಚೆಯೇ ಗೋಣಿಚೀಲ ರೊಟ್ಟಿ ಚಟ್ಣಿಗಳನ್ನು ತೆಗೆದು ಕೊಂಡು ಹೊರಟಳು. ಪುಟ್ಟವ್ವನಿಗೆ ದಿನಕ್ಕೆ ಮೂರಾಣೆ ಕೂಲಿ. ಇಬ್ಬರೂ ಸರಸರನೆ ನಡೆದು ಹೊತ್ತು ಹುಟ್ಟುವ ಮೊದಲೇ ಪಟಪಟನೆ ಮುತ್ತುಗದ ಎಲೆಗಳನ್ನು ಮುರಿದು ಎದೆಗೆ ಕೊಟ್ಟುಕೊಂಡು ಜೋಡಿಸಿ ಹಿಡಿಯುವುದು. ಎಂಟು ಗಂಟೆಯ ತನಕ ಮುರಿದ ಮೇಲೆ ಇಬ್ಬರೂ ರೊಟ್ಟಿ ತಿಂದು ಮರದ ಹಳ್ಳದ ನೀರು ಕುಡಿದು ಮತ್ತೆ ಎಲೆ ಮುರಿಯುವುದು. ಗೋಣಿಚೀಲಕ್ಕೆ ಬಿಗಿಯಾಗಿ ಅದುಮಿ ತುಂಬಿ ಬಾಯಿ ಕಟ್ಟಿ ಹೊರಕ್ಕೆ ಕೊಡವಿದ ಮೇಲೆ ದಬ್ಬಳಕ್ಕೆ ಹುರಿ ಹಾಕಿ ಕೊಟ್ಟರೆ ಪಾರ್ವತಿ ಎಲೆಯನ್ನು ತೊಟ್ಟಿನ ಹತ್ತಿರ ಚುಚ್ಚಿ ಪೋಣಿಸುತ್ತಿತ್ತು. ರಾಮಣ್ಣ ಸಹ ನಿಧಾನವಾಗಿ ಇನ್ನೊಂದು ಸರ ಪೋಣಿಸುತ್ತದೆ. ಅಷ್ಟರಲ್ಲಿ ಅವಳು ಅಡಿಗೆ ಮಾಡುತ್ತಾಳೆ. ಊಟದ ಹೊತ್ತಿಗೆ ಯಜಮಾನರು ಮನೆಗೆ ಬರುತ್ತಾರೆ. ಅವರಿಗೆ ಹಸಿ ಮುತ್ತುಗದ ಎಲೆಯ ಮೇಲೆ ಭೋಜನ ಮಾಡುವುದೆಂದರೆ ಇಷ್ಟ. ಒಂದು ದೊಡ್ದ ಎಲೆಯನ್ನು ಜೊಪ್ಪೆಯಂತೆ ಮಾಡಿಕೊಂಡು ಚಕ್ಕಲಮಕ್ಕಲ ಹಾಕಿ ಕುಳಿತು ಕವಳ ಕತ್ತರಿಸುತ್ತಾರೆ. ನಂತರ ಅವರು ವಿಶ್ರಾಂತಿಗೆಂದು ಪವಡಿಸಿದಾಗ ಅವಳು ಪಾತ್ರೆ ತೊಳೆದಿಟ್ಟು, ಉಳಿದ ಎಲೆಗಳನ್ನು ಪೋಣಿಸಿ ಸರ ಮಾಡಿ, ಇನ್ನೂ ಉಳಿದಿರುತ್ತಿದ್ದುದನ್ನು ಸಂಜೆಯ ಬಿಸಿಲಿಗೆ ಒಣಗಹಾಕುತ್ತಾಳೆ. ಅಷ್ಟರಲ್ಲಿ ಆ ದಿನವೇ ಕಳೆಯುತ್ತದೆ. ನಾಳೆ ಬೆಳಗ್ಗೆ ತನಕವೂ ಪುಟ್ಟವ್ವನಿಗೂ ತೆಗೆದುಕೊಂಡು ಹೋಗಲು, ಮತ್ತು ಗಂಡನಿಗೆ ಮಕ್ಕಳಿಗೆ ಮನೆಯಲ್ಲಿ ತಿನ್ನಲು ರೊಟ್ಟಿ ಮಾಡಿ ಚಟ್ನಿ ತಿರುವಿ ಇಡಬೇಕು. ಹೊತ್ತಿಗೆ ಮುಂಚೆ ಏಳಬೇಕಾದುದರಿಂದ ರಾತ್ರಿ ಬೇಗ ಮಲಗಬೇಕು.

ಒಟ್ಟಿನಲ್ಲಿ ಮುಂಗಾರು ಮಳೆ ಬಂದು ಎಲೆಗಳು ಒಡೆದು ತೂತು ಬೀಳುವುದರೊಳಗೆ ನೂರ ಐವತ್ತು ಸರವಾಯಿತು. ಎಲ್ಲವನ್ನೂ ಹಚ್ಚಿದರೆ ಕೊನೆಯ ಪಕ್ಷ ಒಂದು ನೂರರ ಇನ್ನೂರು ಪಿಂಡಿಯಾದರೂ ಆಗುತ್ತೆ. ಒಂದು ಪಿಂಡಿಗೆ ಆರಾಣೆಯಾದರೆ ಎಪ್ಪತ್ತೈದು ರೂಪಾಯಿ ಸಿಕ್ಕುತ್ತೆ. ಇನ್ನು ಇದಕ್ಕೆ ವರ್ಷವಿಡೀ ಹಂಚೀಕಡ್ಡಿ ಸೀಳಿ ಅಂಗೈಯ ಚರ್ಮ ಒಡೆದುಕೊಂಡು ಚುಚ್ಚಬೇಕು. ಕಷ್ಟಪಡದೆ ಜೀವನವಾಗುವುದಾದರೆ ಹ್ಯಾಗೆ? ಇವಳು ಎಲೆ ತಂದು ಮುಗಿಸುವ ಹೊತ್ತಿಗೆ ಕಂದಾಯ ವಸೂಲಿಯ ಕಾಲ ಬಂತು. ನಾಲ್ಕನೆಯ ಕಿಸ್ತಿನಲ್ಲಿ ಕುರುಬರಹಳ್ಳಿಯವರು ಮಸಿಕಾಣಿಕೆ ಕೊಡುತ್ತಾರೆ. ಅಷ್ಟು ಹೊತ್ತಿಗೆ ಅವಳಿಗೆ ಆರು ತಿಂಗಳು ನಡೆಯುತ್ತಿತ್ತು. ‘ನೀನ್ಯಾಕ್ ಬರ್ಬೇಕೋ ಕಾಣೆ’ ಎಂದು ಗಂಡ ಜಬರಿಕೊಂಡರೂ ಬಿಡದೆ ಅವಳು ವಸೂಲಿಯ ದಿನ ಹೋದಳು. ಗುಂಡೇಗೌಡರು ಮಸಿಕಾಣಿಕೆ ಹಣವನ್ನು ವಸೂಲು ಮಾಡಿ ತಾವೇ ಇಟ್ಟುಕೊಂಡರು. ಶ್ಯಾನುಭೋಗರ ಕೈಗೆ ಐದು ರೂಪಾಯಿ ಕೊಟ್ಟು, ‘ನಿಂಗ್ ಬೇಕಾದಾಗ ಕೊಡ್ತೀನಿ. ಈಗ ಯಾಕ್ ದುಡ್ಡು?’ ಎಂದರು. ಅವರನ್ನು ನುಂಗಿಹಾಕುವಂತೆ ಚೆನ್ನಿಗರಾಯರು ಒಂದು ಸಲ ನೋಡಿದರೇ ವಿನಾ, ಬಾಯಿ ಬಿಟ್ಟು ಬೈಯಲು ಧೈರ್ಯವಿರಲಿಲ್ಲ. ಆದರೆ ಮನೆಗೆ ಬಂದ ಮೇಲೆ ಗುಂಡೇಗೌಡ ಮತ್ತು ಅವರ ಹೆಂಡತಿ ಇಬ್ಬರನ್ನೂ ಜೋಡಿಸಿ ಊರಿನ ಇತರ ಹೆಂಗಸರು ಗಂಡಸರೊಡನೆ ಹಾದರ ಮಾಡಿಸಿ ಬೈದು ತಮ್ಮ ಕೋಪ ಶಮನ ಮಾಡಿಕೊಂಡರು. ಹೇಗೂ ಐದು ರೂಪಾಯಿ ಸಿಕ್ಕಿತು. ಇರ್ಸಾಲಿಗೆ ತಿಪಟೂರಿಗೆ ಹೋದಾಗ ಸುಖಪಡುವ ಕಲ್ಪನೆಯಿಂದ ಮನಸ್ಸಿನಲ್ಲೇ ಹಿಗ್ಗುತ್ತಿದ್ದರು. ಈಗ ತಿಪಟೂರಿಗೆ ಗುಬ್ಬಿ ಈರಣ್ಣನ ನಾಟಕ ಬಂದಿದೆಯಂತೆ. ಅರಮನೆಯೇ ಕಾಣುವ ಹಾಗೆ ಸೀನರಿ ಹಾಕುತ್ತಾರಂತೆ. ನಾಕಾಣೆ ಬಿಸಾಕಿ ನೋಡಿ ಬರಬೇಕು. ಅವತ್ತು ರಾತ್ರಿ ಊಟದ ಬದಲು ಬರೀ ಬೊಂಬಾಯಿ ಬೋಂಡಾನೇ ತಿನ್ನಬೇಕು. ಸೂಳೇಮಗ ಗುಂಡೇಗೌಡ ನೂರು ರೂಪಾಯಿಗೆ ರಸೀತಿ ಬರುಸ್ಕಂಡ. ಪೋಟಿಗೆ ಹಣದಲ್ಲಿ ತಾಲ್ಲೂಕು ಆಫೀಸಿನೋರಿಗೆ ಕೊಡೂದು ಕೊಟ್ಟ ಮೇಲೆ ಕೈಗೆ ನಾಕು ರೂಪಾಯಿ ಉಳಿಯುತ್ತೋ ಐದು ಉಳಿಯುತ್ತೋ. ಅದರ ಜೊತೆಗೆ ಈ ಐದು. ಒಟ್ಟು ಹತ್ತು ರುಪಾಯಿನಲ್ಲಿ ಎಷ್ಟು ದಿನ ತಿನ್ನೋದು! ಒಂದು ಮೈಸೂರುಪಾಕಿಗೆ ಒಂಬತ್ತು ಕಾಸು. ನಾಕಾಣೆ ಒಟ್ಟಿಗೆ ಕೊಟ್‌ರೆ ಆರು ಕೊಡ್ತಾರೆ ಸೂಳೇಮಕ್ಳು. ಇನ್ನೊಂದೆರಡು ಕೊಟ್ರೆ ಇವರಪ್ಪನ ಗಂಟು ಏನು ಓಗುತ್ತೆ? ಇವರವ್ವನ…..

ಅಷ್ಟರಲ್ಲಿ ರಾಮಸಂದ್ರಕ್ಕೆ ಸರ್ಕಾರೀ ಪ್ರೈಮರಿ ಸ್ಕೂಲು ಬಂತು. ಸ್ಕೂಲಿಗೆ ತಕ್ಷಣ ಕಟ್ಟಡವಿಲ್ಲುದುದರಿಂದ ಇದನ್ನು ಎಲ್ಲಿ ನಡೆಸಬೇಕೆಂದು ಸರ್ಕಾರದವರು ಗ್ರಾಮಸ್ಥರನ್ನು ಕೇಳಿದರು. ಹನುಮಂತರಾಯನ ಗುಡಿಯಾಗಬಹುದೆಂದು ಶಿವೇಗೌಡ ಹೇಳಿದ. ಎಂದರೆ ಗಂಗಮ್ಮ ಅಪ್ಪಣ್ಣಯ್ಯರು ಅದನ್ನು ಖಾಲಿ ಮಾಡಬೇಕು. ಗಂಗಮ್ಮ ಹೋಗಿ ಶಿವೇಗೌಡನ ಮನೆಯ ಮುಂದೆ ಬೊಗಸೆಯಲ್ಲಿ ಮಣ್ಣು ಹಿಡಿದು ನಿಂತಳು. ಗುಡಿಯ ಪೂಜಾರಿ ಅಣ್ಣಾಜೋಯಿಸ ಸಹ ದೇವಸ್ಥಾನದಲ್ಲಿ ಇಸ್ಕೂಲು ಆಗಕೂಡದೆಂದ ಮೇಲೆ ಗಂಗಮ್ಮನ ವಸತಿಗೆ ಭಯವಿಲ್ಲದಂತೆ ಆಯಿತು. ಶಿವೇಗೌಡನದೇ ಒಂದು ಮನೆ ಖಾಲಿ ಇತ್ತು. ಅದನ್ನು ಸರ್ಕಾರದವರು ವರ್ಷಕ್ಕೆ ಮೂವತ್ತಾರು ರೂಪಾಯಿಗೆ ಬಾಡಿಗೆಗೆ ತೆಗೆದುಕೊಳ್ಳುವಂತೆ ಅವನೇ ಮಾಡಿಸಿದ. ಕಿಕ್ಕೇರಿ ಕಡೆಯ ಸೂರಪ್ಪನವರು ಎಂಬ ಮೇಷ್ಟರೂ ಬಂದರು. ಕೆಲವು ಹುಡುಗರನ್ನು ಸ್ಕೂಲಿಗೆ ಸೇರಿಸಿದರು. ಹೆಣ್ಣು ಹುಡುಗಿಯರನ್ನು ಅಕ್ಷರ ಕಲಿಯಲು ಕಳಿಸಬೇಕೋ ಬೇಡವೋ ಎಂಬ ಚರ್ಚೆ ಇನ್ನೂ ನಡೆಯುತ್ತಲೇ ಇತ್ತು. ಹೆಣ್ಣು ಹುಡುಗರನ್ನು ಸೇರಿಸಿ; ಪರವಾಗಿಲ್ಲ. ‘ಈಗ ದೊಡ್ಡ ಊರಿನಲ್ಲೆಲ್ಲ ಹೆಣ್ಣು ಮಕ್ಳು ಹೈಸ್ಕೂಲಿಗೂ ಹೋಗ್ತಾರೆ’ – ಎಂದು ಮೇಷ್ಟರೇ ಹೇಳಿದರೂ ಉಳಿದವರು ಯಾರೂ ಒಪ್ಪಲಿಲ್ಲ. ‘ಅಮ್ಮ, ಎರಡಕ್ಷರ ಕಲ್ತಿದ್ರೆ ಕಷ್ಟಕಾಲದಲ್ಲಿ ಹೆಣ್ಣು ಹುಡುಗಿಯಾದ್ರೂ ಒಂದು ಇಪ್ಪತ್ತು ರೂಪಾಯಿ ಸಂಬಳ ತರುತ್ತೆ. ವಿದ್ಯಾವಂತೆಯಾದ ನಿಮಗೆ ಇದ ನಾನು ಹೇಳ್ಬೇಕೇ?’ – ಎಂದಾಗ ನಂಜಮ್ಮ ಯಾರ ಚರ್ಚೆಗೂ ಕೇಳದೆ ತಾನೇ ಹೋಗಿ ಪಾರ್ವತಿಯನ್ನು ದಾಖಲು ಮಾಡಿ ಬಂದಳು. ‘ನೋಡ್ದ್ಯಾ ಆ ವಮ್ಮನ ಗಟ್ಟಿಗಿತ್ತಿತನಾವ?’ – ಎಂದು ಊರಿನವರೆಲ್ಲ ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರು. ಪಾರ್ವತಿಯ ಜೊತೆಗೆ ರಾಮಣ್ಣನನ್ನೂ ಸ್ಕೂಲಿಗೆ ಕಳಿಸಿದಳು. ಈ ಸ್ಕೂಲಿನಲ್ಲಿ ಮೇಷ್ಟರು ಹೊಡೆಯುವುದಿಲ್ಲ. ಮರಳ ಮೇಲೆ ತಿದ್ದಿಸುವುದಿಲ್ಲ. ಸ್ಲೇಟಿನ ಮೇಲೆ ಬರೆಸುತ್ತಾರೆ.

ಈ ಸಲವೂ ಬಾಣಂತಿತನಕ್ಕೆ ಅಕ್ಕಮ್ಮ ಬಂದಳು. ಆದರೆ ನಂಜಮ್ಮ ಹೆತ್ತ ಮಗು, ಹೊರಗೆ ಬಂದ ಅರ್ಧ ಗಂಟೆಗೆ ತೀರಿಹೋಯಿತು. ‘ನಂಜಾ, ಬಸುರಿ ಹೆಂಗಸು ಇಷ್ಟೊಂದು ಮುತ್ತುಗದೆಲೆ ಹೊತ್ತು ಹಚ್ಚಿದರೆ ಆಗುತ್ತೆಯೇ? ಉಷ್ಣಕ್ಕೇ ಮಗೂಗೆ ಏನಾಗಿತ್ತೋ ಏನೋ! ಹುಟ್ಟಿದ ಕೂಡ್ಲೇ ಸತ್ತುಹೋಯಿತು’ – ಅಕ್ಕಮ್ಮ ಎಂದಳು.

ನಂಜು ಮಾತನಾಡಲಿಲ್ಲ. ಸುಮ್ಮನೆ ತನ್ನಲ್ಲಿಯೇ ಅಳುತ್ತಿದ್ದಳು. ‘ಅಳ್ಬ್ಯಾಡ ಮಗು, ನಂಜಾಗುತ್ತೆ. ನಿಂಗೆ ಏನಾದ್ರು ಹೆಚ್ಚುಕಮ್ಮಿಯಾದ್ರೆ ಈ ಮಕ್ಕಳ ಗತಿ ಏನೂ?’ – ಎಂದು ಅಕ್ಕಮ್ಮ ಎರಡು ದಿನ ಹೇಳಿದಮೇಲೆ ಅವಳು ಸಮಾಧಾನ ತಂದುಕೊಂಡಳು. ಗಂಗಮ್ಮ ದೇವಸ್ಥಾನದಲ್ಲಿಯೇ ಹತ್ತು ದಿನ ಪುರುಡು ಮತ್ತು ಅದರೊಳಗೇ ಮೂರು ದಿನ ಸೂತಕ ಇದ್ದಳೇ ಹೊರತು ಸೊಸೆಯ ಮನೆಗೆ ಬಂದು ಒಂದು ಮಾತೂ ಆಡಲಿಲ್ಲ. ಮಗು ಸತ್ತರೂ ಅಕ್ಕಮ್ಮ ಮೂರು ತಿಂಗಳು ಬಾಣಂತಿತನ ಮಾಡಿದಳು. ಅವಳು ಊರಿಗೆ ಹೊರಡುವ ಹಿಂದಿನ ದಿನ ಮೊಮ್ಮಗಳಿಗೆ ಹೇಳಿದಳು: ‘ನಂಜಾ, ನಿನ್ನ ಗಂಡನ ಯೋಗ್ತಿ ಇಂತದು. ತಾನು ಹುಟ್ಟಿಸಿದ ಮಕ್ಳಮೇಲೆ ಪ್ರೀತಿ ಇಲ್ಲ. ತಾನಾಯ್ತು ತನ್ನ ಹೊಟ್ಟೆಯಾಯ್ತು. ಮಕ್ಳ ಸಾಕೂದು ನಿಂಗೂ ಕಷ್ಟ. ಇನ್ನು ಅವನನ್ನ ಹಾಸಿಗೆ ಹತ್ರುಕ್ ಸೇರುಸ್ಬ್ಯಾಡ.’

ನಂಜು ಏನೂ ಮಾತನಾಡಲಿಲ್ಲ. ಅಕಮ್ಮನೇ, ‘ಅವ್ನು ಸಿಟ್ಕಂಡ್ರೂ ಸಿಟ್ಕಳ್ಳಿ. ದೂರ ಇಡು’ ಎಂದಾಗ ಹೇಳಿದಳು: ‘ಅಕ್ಕಮ್ಮಾ, ಇವೆಲ್ಲ ಪ್ರಾರಬ್ಧ ಕರ್ಮ. ಹಾಗೆ ಮಾಡಿದ್ರೆ ಇವರಿಗೆ ಮಾನ ಮರ್ಯಾದೆ ಇರುಲ್ಲ. ಬೀದೀಲಿ ನಿಂತು ಕೆಟ್ಕೆಟ್ದಾಗಿ ಕಿರುಚಿಕಳುಕ್ಕೆ ಶುರುಮಾಡ್ತಾರೆ. ನಾನಾಗ್ಲೇ ಹಾಗೆ ಮಾಡಿ ನೋಡಿದೀನಿ.’
‘ಹಣೆಬರ’ – ಎಂದು ಅಕ್ಕಮ್ಮ ಸುಮ್ಮನಾದಳು.
ಆಗಲೇ ಎಪ್ಪತ್ತೆಂಟು ನಡೆಯುತ್ತಿದ್ದ ಅಕ್ಕಮ್ಮ, ತಾನು ನಡೆದೇ ಹೋಗುವುದಾಗಿ ಜೊತೆಗೆ ಒಬ್ಬ ಆಳನ್ನು ಕಳಿಸುವಂತೆ ಕೇಳಿದಳು. ಆದರೆ ಮೊಮ್ಮಗಳು ಹೇಗೆ ಕಳಿಸಿಯಾಳು? ಮೂರು ರೂಪಾಯಿ ಕೊಟ್ಟು ಒಂದು ಕೆಂಪಿನ ಸೀರೆ ಉಡಿಸಿ, ಒಂದೂವರೆ ರೂಪಾಯಿಗೆ ಬಾಡಿಗೆ ಗಾಡಿ ಗೊತ್ತುಮಾಡಿ ಕಳಿಸಿಕೊಟ್ಟಳು.

– ೫ –

ಒಂದು ದಿನ ಮಧ್ಯಾಹ್ನ ಒಂದು ಗಂಟೆಯ ಹೊತ್ತಿನಲ್ಲಿ ರೇವಣ್ಣಶೆಟ್ಟಿಯ ಹೆಂಡತಿ ಸರ್ವಕ್ಕ ಬಂದು ಕೇಳಿದಳು: ‘ನಂಜಮ್ಮಾರೇ, ಸದ್ಯ ಸುತರಾಮಾಗಿಬಿಟ್ಟಿದೆ. ಎಲ್ಡು ಸೇರು ಹಸಿಟ್ಟು ಕೊಡ್ತೀರಾ?’
‘ಬೀಸಿದ ಹಿಟ್ಟು ಇಲ್ವಲ್ಲ ಸರ್ವಕ್ಕ, ಬನ್ನಿ ಕೂತ್ಕಳಿ.’
‘ಹಂಗಾರೆ ಎಲ್ಡು ಸೇರು ರಾಗೀನೇ ಕೊಡಿ.’
ಸರ್ವಕ್ಕ ತಂದಿದ್ದ ಡಬ್ಬದ ಕುಕ್ಕೆಗೆ ನಂಜಮ್ಮ ಎರಡು ಸೇರು ರಾಗಿಯನ್ನು ಅಳೆದು ಕೊಟ್ಟಳು. ಹೆಚ್ಚು ಮಾತನಾಡದೆ ಸರ್ವಕ್ಕ ಹೊರಟುಹೋದಳು. ಆದಿನ ಸಂಜೆಗೆ ಅವಳೇ ಮತ್ತೆ ಬಂದಾಗ ನಂಜಮ್ಮ ಮುತ್ತುಗದೆಲೆ ಹಚ್ಚಿಸುತ್ತಿದ್ದಳು. ಹತ್ತಿರವೇ ಕೂತುಕೊಂಡು ಸರ್ವಕ್ಕ ಎಂದಳು: ‘ಯಾರುನ್ನ ಕೇಳಾದು ಅಂತಿದ್ದೆ. ಇವತ್ತು ಉಡುಗ್ರೆಲ್ಲ ಅಸ್ಕಂಡಿದ್ದು. ನಂಗೂ ಉಪಾಸ ಮಾಡಿ ಸುಸ್ತಾಗಿತ್ತು. ನೀವು ರಾಗಿ ಕೊಟ್ಟಿ ಉಣ್ಣಾಕ್ ಇಕ್ಕಿದ್ರಿ.’
‘ಇದೇನ್ ಸರ್ವಕ್ಕ ಹಿಂಗಂತೀರೀ? ಜಮೀನು ಗಿಮೀನು ಇರೋ ನೀವು ಹೀಗಂದ್ರೆ ಹ್ಯಾಗೆ ನಂಬೋದು?’
‘ನಿಜ ಹೇಳಿ. ನಿಮ್ಗೆ ಏನೂ ಗೊತ್ತಿಲ್ವರಾ?’
‘ಸ್ವಲ್ಪ ಸ್ವಲ್ಪ ಕೇಳಿದೀನಿ. ಆದ್ರೆ ಮನೇಲಿ ಊಟಕ್ಕೆ ರಾಗಿ ಇಲ್ಲದ ಹಾಗಾಗಿದೆ ಅಂತ ಗೊತ್ತಿರ್ಲಿಲ್ಲ.’
‘ನಾನ್ ಪಡುದ್ಬಂದುದ್ದು. ಹಿಂದಿನ ಜನ್ಮದಾಗೆ ನ್ಯಟ್ಟಗೆ ಸಿವಪೂಜೆ ಮಾಡಿರ್ನಿಲ್ಲ’ – ಎಂದು ಸರ್ವಕ್ಕ ಕಣ್ಣೀರು ಹಾಕಿಕೊಂಡು, ತಾನೇ ಎಲ್ಲವನ್ನೂ ಹೇಳಿದಳು.

ರೇವಣ್ಣಶೆಟ್ಟಿ ಕೋಡಿಹಳ್ಳಿಗೆ ಹೋಗಿ ಇಸ್ಪೀಟಿಗೆ ಬರೆದುಕೊಟ್ಟ ಪ್ರೋನೋಟುಗಳ ಒಟ್ಟು ಮೂರು ಸಾವಿರ ರೂಪಾಯಿ ತನಕ ಆಗಿತ್ತು. ಅದೆಲ್ಲಕ್ಕೂ ಬದಲಾಗಿ ಶೆಟ್ಟಿಯ ಊರ ಮುಂದಿನ ಹೊಲ ಬರೆದುಕೊಡಬೇಕು, ಇಲ್ಲದಿದ್ದರೆ ದಡಿ ತಗಂಡು ಹೇರುವುದಾಗಿ ಚಿಕ್ಕೇಗೌಡ ಒಂದು ದಿನ ಹಿಡಿದು ನಿಲ್ಲಿಸಿದನಂತೆ. ಹಾಗಿಂದಹಾಗೇ ತಿಪಟೂರಿಗೆ ಹೋಗಿ ರಿಜಿಸ್ಟ್ರೀ ಮಾಡಿ, ಕಾಗದದಲ್ಲಿ ಪ್ರೋನೋಟುಗಳನ್ನು ಹೊಗಳಿ ಮುಗಿಸಿ ಬಂದನಂತೆ. ಇನ್ನು ಅವರಿಗಿದ್ದುದು ಮೂರು ಆರಿನ ಉಕ್ಕೆಗದ್ದೆ. ಮಳೆ ನಡೆದು ಕೆರೆ ತುಂಬಿ ನೆಲಗೇಯ್ದು ಬೆಳೆ ಬಂದರೆ ಹನ್ನೆರಡು ಕಂಡುಗವಾದರೂ ಬತ್ತ ಬರುತ್ತಿತ್ತು. ಆದರೆ ಬಿಳೀ ಪಂಚೆಯುಟ್ಟು ಹೊಳೆಯುವ ಬಾರಿನ ಚಪ್ಪಲಿ ಮೆಟ್ಟುವ ಪೋಟು – ಲಾಯರು ರೇವಣ್ಣಶೆಟ್ಟ ಅಟ್ಟಲುಗದ್ದೆ ಹೇಗೆ ಗೇಯ್ದಾನು? ಹೀಗಾಗಿ ವಾರಪಾಲಿಗೆ ಕೊಟ್ಟಿದ್ದರಲ್ಲಿ ನಾಲ್ಕು ಖಂಡುಗ ಬರುತ್ತಿತ್ತು. ಆ ಗದ್ದೆಯನ್ನೂ ಕಾಶಿಂಬಡ್ಡಿ ಸಾಹುಕಾರರಿಗೆ ಆಧಾರ ಮಾಡಿ ಎಂಟು ನೂರು ರೂಪಾಯಿ ತೆಗೆದುಕೊಂಡಿದ್ದನಂತೆ.
‘ಆಧಾರ ಮಾಡಿ ಸಾಲ ಮಾಡುಕ್ಕೆ ಏನು ಬಂದಿದ್ದುದು ಖರ್ಚು? ರುದ್ರಾಣೀ ಮದ್ವೆ ಗಿದ್ವೆ ಏನಾರ ಗೊತ್ತು ಮಾಡಿದಾರಾ?’
‘ನಂಜಮ್ಮಾರೇ, ಮನ್ಲಿ ಋತುವಾದ ಮಗಳವ್ಳೆ. ಅನ್ನಾ ಗ್ಯಾನವಿದ್ರೆ ಅದ್ಯಾಕ್ ಮಾತು? ಗಂಡನ್ನ ಬುಟ್ಟ ಆ ಹಾದರಗಿತ್ತಿ ಅವ್ಳಲ್ಲ, ಮಾವನ್ನ ಮಡೀಕಂಡಿದ್ದ ಸ್ವಸೆ? – ಅವ್ಳು ಈಗ ಊರ ಮುಂದೆ ತೋಪಿನ್ತಾವ ಸಣ್ಣ ಹೆಂಚಿನ ಮನೆ ಕಟ್ಕಂಡಿ ಅಂಗ್ಡಿ ಮಡೀಕಂಡವ್ಳಲಾ, ಅದ್ಕೆ ದುಡ್ಡೆಲ್ಲಿ ಬಂತು ಅಂತೀರಾ? ಈ ಎಂಟು ನೂರು ರೂಪಾಯಿ ಆ ಮುಂಡೆ ಬಾಯಿಗೆ ಆಕಿದ್ರಂತೆ.’

ಇನ್ನು ಅವರಿಗೆ ಇದ್ದುದು ಐವತ್ತು ಮರದ ತೋಟ. ತೆಂಗಿನಕಾಯಿ ಬಲಿಯುವ ಮೊದಲೇ ಸಿಕ್ಕಿದಷ್ಟನ್ನು ಕೆಡವಿಸಿ ಮಾರಿಬಿಡುತ್ತಾರೆ. ಇಲ್ಲದಿದ್ದರೆ ರೇವಣ್ಣಶೆಟ್ಟಿಯ ಬಿಳಿ ಪಂಚೆ, ಕಾಲರಿನ ಶರಟುಗಳನ್ನು ಒಗೆಯಲು ಸಾಬೂನು, ಮುಖಕ್ಷೌರದ ಬ್ಲೇಡು, ಸೇದಲು ಎಲಿಫಂಟ್ ಸಿಗರೇಟುಗಳಿಗೆ ದುಡ್ಡೇ ಇಲ್ಲ.

ನರಸಿ ಈಗ ಊರ ಮುಂದೆ ಅಮ್ಮನ ತೋಪಿನ ಹತ್ತಿರ ತನ್ನದೇ ಮೂರು ಅಂಕಣದ ಮನೆ ಕಟ್ಟಿಸಿ ಅಂಗಡಿ ಇಟ್ಟುಕೊಂಡಿದ್ದಾಳೆ. ಅವಳ ಸುದ್ದಿ ಗೊತ್ತಿಲ್ಲದವರೇ ಇಲ್ಲ. ಅವಳ ಮಾವ ಚನ್ನಶೆಟ್ಟಿ ಅವಮಾನಿತನಾಗಿ ರಾಮಸಂದ್ರವನ್ನೇ ಬಿಟ್ಟು ತಿಪಟೂರಿನ ಆಚೆಯ ಚನ್ನಾಪುರದಲ್ಲಿ ಅಂಗಡಿ ಹಾಕಿಕೊಂಡಿದ್ದಾನೆ. ಅವಳ ಗಂಡ ಗಿರಿಯಶೆಟ್ಟಿಯೂ ಊರು ಬಿಟ್ಟು ಎಲ್ಲಿಗೋ ಹೋದ. ಅರಸೀಕೆರೆಯ ಹತ್ತಿರದ ಯಾವುದೋ ಊರಿನಲ್ಲಿ ಅವನು ಈಗ ಮನೆವಾಳತನಕ್ಕೆ ಇದ್ದಾನೆಂದು ಕೆಲವರು ಹೇಳುತ್ತಾರೆ.

ರೇವಣ್ಣಶೆಟ್ಟಿಗೆ ಬುದ್ಧಿಹೇಳಲು ಯಾರೂ ಇರಲಿಲ್ಲ. ಅವನ ನಾಲಿಗೆಯ ಮುಂದೆ ನಿಲ್ಲಲು ಯಾರೂ ಇಷ್ಟಪಡುವುದಿಲ್ಲ. ಸರ್ವಕ್ಕನ ತೌರಿನಲ್ಲಿ ಅಣ್ಣ ತಮ್ಮಂದಿರಿದ್ದಾರೆ. ಇವಳಿಗೆ ಇವಳ ಮಕ್ಕಳಿಗೆ, ಮಾಡುವಷ್ಟು ಮಾಡಿದ್ದಾರೆ. ಆದರೆ ಅವರಿಗೂ ತಮ್ಮದೇ ಸಂಸಾರವಿದೆ. ಇವಳು ಎಷ್ಟೆಂದು ತನ್ನ ಗೋಳನ್ನು ಅವರಿಗೆ ಹೇಳಿಯಾಳು? ಒಂದು ಸಲ ಭಾವನಿಗೆ ಬುದ್ಧಿ ಹೇಳಲು ಅವಳ ಹಿರಿಯಣ್ಣ ಬಂದಿದ್ದಾಗ, ಅವ್ವ ಅಜ್ಜಿ ಎಂದೆಲ್ಲ ಬೈಸಿಕೊಂಡು, ಇನ್ನು ಮುಂದೆ ಇವನ ಕೈಲಿ ಮಾತನಾಡುವುದಿಲ್ಲವೆಂದು ಹೇಳಿ ಹೋಗಿದ್ದ.
ಸರ್ವಕ್ಕ ಹೇಳಿದಳು: ‘ನಂಜಮ್ಮಾರೇ, ಎತ್ತ ತ್ಯಪ್ಪಿಗೆ ಮಕ್ಳುನ್ನ ಹ್ಯಂಗಾದ್ರೂ ಸಾಕ್ಬೇಕು. ನಿಮ್ಮ ಜನ್ರ ಹಂಗೆ ಎಲೆ ಹಚ್ಚಾಕೆ ನಮ್ಗೆ ಬರಾಕಿಲ್ಲ. ನೀವು ನನ್ನ ಕುಂಡ್ರುಸ್ಕಂಡ್ ಏಳ್ಕೊಡಿ. ಕಲ್ತ್ಕತೀನಿ. ಈ ವರ್ಸದಿಂದ ನೀವು ಎಲೆ ತರಾಕೆ ಚ್ವಾಳನಗುಡ್ಡದ ಅಳ್ಳುಕ್ ಓಗೂವಾಗ ನನ್ನೂ ಕರ್ಕಂಡ್ ಓಗಿ.’
‘ನೀವು ಎಲೆ ಹೊರುಕ್ಕೆ ಬಂದ್ರೆ ಶೆಟ್ರು ಸುಮ್ನಿರ್ತಾರಾ?’
‘ಸುಮ್ನಿದ್ರೆ ಏನ್ ಮಾಡ್ತಾರೆ? ಇವತ್ ಮದ್ಯಾನ ನಿಮ್ಮನ್ಲಿ ಕೊಂಡೋದ ರಾಗಿ ಬೀಸಿ ಮುದ್ದೆ ಮಾಡ್ದಾಗ ನಾಯಿ ತಿಂದ್ಹಂಗೆ ನುಂಗ್ಲಿಲ್ವಾ?’

ಮರುದಿನದಿಂದ ಸರ್ವಕ್ಕ ದಿನವೂ ಸ್ವಲ್ಪ ಸ್ವಲ್ಪ ಹೊತ್ತು ಬಂದು ಎಲೆ ಹಚ್ಚುವುದು ಹೇಳಿಸಿಕೊಳ್ಳುತ್ತಿದ್ದಳು. ಹಂಚೀಕಡ್ಡಿ ಹೇಗೆ ಸೀಳಬೇಕು, ಎಲೆಯ ತೊಟ್ಟು ಮುರಿದು ಹೇಗೆ ನೀರು ಚಿಮುಕಿಸಿ ಜೋಡಿಸಿ ಮಣೆ ಹೇರಿ, ಮೇಲೆ ಭಾರವಾದ ಒಂದು ಗುಂಡುಕಲ್ಲು ಏರಿಸಬೇಕು, ಮಧ್ಯಕ್ಕೆ ಎಂತಹ ದುಂಡಗಿರುವ ಎಲೆಯನ್ನೇ ಹಾಕಿ ಅದಕ್ಕೆ ಒಂದು ತಳ ಎಲೆಯ ತೇಪೆ ಕೊಟ್ಟು ಕಡ್ಡಿ ಮುರಿಯಬೇಕು ಎಂಬುದನ್ನು ವಿವರವಾಗಿ ಹೇಳಿಸಿಕೊಂಡು ತಕ್ಕಮಟ್ಟಿಗೆ ಹಚ್ಚುವುದನ್ನೂ ಕಲಿತಳು. ‘ಹೀಗೆ ಹಚ್ಚಿ ಕೈ ಕುದುರಿದ ಮ್ಯಾಲೆ ಬ್ಯಾಗ ಬ್ಯಾಗ ಆಗುತ್ತೆ’ – ಎಂದು ನಂಜಮ್ಮ ಭರವಸೆ ಕೊಟ್ಟಮೇಲೆ ಅವಳಿಗೆ ಸ್ವಲ್ಪ ಧೈರ್ಯ ಬಂತು.

– ೬ –

ಒಂದು ಮಧ್ಯಾಹ್ನ ನಂಜಮ್ಮ ಊರಿನ ಸರ್ಕಾರೀ ಬಾವಿಯಲ್ಲಿ ಕುಡಿಯುವ ನೀರು ಸೇದಲು ಹೋಗಿದ್ದಾಗ ಕುಣಿಕೆ ಹರಿದು ಬಿಂದಿಗೆ ಬಾವಿಯೊಳಕ್ಕೆ ಬಿದ್ದುಬಿಟ್ಟಿತು. ಮನೆಯಲ್ಲಿ ಇದ್ದುದು ಒಂದೇ ಬಿಂದಿಗೆ. ಇನ್ನು ಬಾವಿ ಮುಳುಗಲು ಕಂಬನಕೆರೆಯ ಕಾಸಿಂಸಾಬಿ ಬಂದಾಗಲೇ ಬಿಂದಿಗೆ ಸಿಕ್ಕುವುದು. ಮನೆಗೆ ಹೋಗಿ ಗಡಿಗೆಯನ್ನಾದರೂ ತರಬೇಕು. ಸರ್ಕಾರೀ ಬಾವಿಯಿಂದ ಗಡಿಗೆಯಲ್ಲಿ ನೀರು ಹೊತ್ತುಕೊಂಡು ಹೋಗಲು ಅವಳಿಗೆ ಸಂಕೋಚವೆನಿಸಿತು. ಆದರೆ ಮಾಡುವುದೇನು – ಎಂದುಕೊಂಡು ಮನೆಗೆ ಬಂದಾಗ ಕಲ್ಲೇಶ ಬಂದು ಕುಳಿತಿದ್ದ. ಹುಡುಗರೆಲ್ಲ ಅವನು ತಂದಿದ್ದ ಪೆಪ್ಪರುಮೆಂಟನ್ನು ದವಡೆಗೆ ಕೊಟ್ಟುಕೊಂಡು ಚಪ್ಪರಿಸುತ್ತಿದ್ದರು.

‘ನೀರಿಗೆ ಹೋಗಿದ್ಯಂತೆ. ಇದೇನು ಬರೀ ಕೈಲಿ ಬಂದೆ?’ – ಅವನು ಕೇಳಿದ.
‘ಬಿಂದಿಗೆ ಕಣ್ಣಿ ಹರ್‌ಕಂಡು ಬಿದ್‌ಬಿಡ್ತು.’
‘ನಡಿ, ನಾನು ತೆಗೀತೀನಿ’- ಎಂದು ಅವನು ಎದ್ದು ಹೊರಟ. ಅವನ ಹಿಂದೆಯೇ ನಂಜು ಹೋದಳು. ಮಾವ ಬಾವಿ ಮುಳುಗುವುದನ್ನು ನೋಡಲು ಹುಡುಗರೂ ಉತ್ಸುಕರಾಗಿ ಬಂದರು. ನಂಜು ಮನೆಯ ಬಾಗಿಲಿಗೆ ಬೀಗ ಮೆಟ್ಟಿಕೊಂಡಳು.

ಊರಿನ ಇತರ ಎಲ್ಲ ಬಾವಿಗಳಲ್ಲಿಯೂ ಇದ್ದ ನೀರು ಸ್ವಲ್ಪ ಸಪ್ಪೆ. ಆದರೆ ಸರ್ಕಾರದವರು ಈಗ ಎರಡು ವರ್ಷದಲ್ಲಿ ತೆಗೆಸಿ ಕಲ್ಲಿನ ಕಟ್ಟಡ ಕಟ್ಟಿಸಿರುವ ಈ ಬಾವಿಯ ನೀರು ರುಚಿಯಾಗಿತ್ತು: ಶುಚಿಯಾಗಿಯೂ ಇತ್ತು. ಎಡಗೈ ಬಲಗೈಯವರು ವಿನಾ ಉಳಿದ ಎಲ್ಲ ಮತಸ್ತರೂ ಅಲ್ಲಿಯೇ ಕುಡಿಯುವ ಮತ್ತು ಅಡಿಗೆಯ ನೀರು ತರುತ್ತಿದ್ದರು. ಬ್ರಾಹ್ಮಣ, ಲಿಂಗಾಯತ, ಅಕ್ಕಸಾಲಿ, ಚಾತಾಳಿ, ಮೊದಲಾದ ಮೇಲುಜಾತಿಯ ಹೆಂಗಸರು ಮಾತ್ರ, ಸೇದಲು ತಮ್ಮ ಹಗ್ಗ ಬಿಡುವ ಮೊದಲು, ಮನೆಯಿಂದ ತಂದ ನೀರಿನಲ್ಲಿ ಒಂದು ಶಾರೆಯನ್ನು ರಾಟಿಗೆ ಎರಚಿ ಮಡಿ ಮಾಡಿಕೊಳ್ಳುತ್ತಿದ್ದರು.

ಕಲ್ಲೇಶ ಸೇದುವ ಹಗ್ಗವನ್ನು ಬಾವಿಯೊಳಕ್ಕೆ ಇಳಿಬಿಟ್ಟು ಮೇಲ್ಭಾಗವನ್ನು ರಾಟೆಯ ಕಬ್ಬಿಣದ ಗಡಾರಿಗೆ ಬಂದೋಬಸ್ತಾಗಿ ಕಟ್ಟಿದ. ಉಟ್ಟಿದ್ದ ಪಂಚೆ ಮತ್ತು ತೊಟ್ಟಿದ್ದ ಶರಟು ಕೋಟುಗಳನ್ನು ಬಿಚ್ಚಿ ಕೆಳಗೆ ಇಟ್ಟು, ನೋಡಿಕೊಳ್ಳುವಂತೆ ತಂಗಿಗೆ ಹೇಳಿ ಹಗ್ಗ ಹಿಡಿದು ಬಾವಿಗೆ ಇಳಿದ. ಪಾತಾಳದಷ್ಟು ಆಳದಲ್ಲಿ ನೀರಿದ್ದ ಆ ಬಾವಿ, ಎರಡು ಮೂರು ಉದ್ದ ಎರಡು ಮಾರು ಅಗಲವಾಗಿತ್ತು. ಆದರೆ ಹತ್ತಿ ಇಳಿಯಲು ಮೂಲೆಯಲ್ಲಿ ಸಣ್ಣ ಸಣ್ಣ ನಾಲಗೆ ಕಲ್ಲುಗಳಿದ್ದವು. ನೀರನ್ನು ಮುಟ್ಟಿ ಒಂದು ಸಲ ಮುಳುಗಿ ಅವನು ಮೇಲೆ ಬಂದಾಗ ಒಂದು ಬಿಂದಿಗೆ ಎತ್ತಿ ತಂದಿದ್ದ. ಹಗ್ಗದ ಕುಣಿಕೆಗೆ ಕಟ್ಟಿ – ‘ಮೇಲೆ ಎಳಕೋ’ ಎಂದು ಕೂಗಿ ಸನ್ನೆ ಮಾಡಿದಮೇಲೆ ನಂಜು ಎಳೆದುಕೊಂಡಳು. ಆದರೆ ಅದು ಅವಳ ಬಿಂದಿಗೆಯಲ್ಲ. ‘ಅದ ಅಲ್ಲೇ ಮೇಲೆ ಇಟ್ಟುಕೊ, ಯಾರ್ ಬಂದ್ರೂ ಕೊಡ್‌ಬ್ಯಾಡ. ಮತ್ತೆ ಹಗ್ಗ ಬಿಡು’ – ಎಂದು ಕೂಗಿ ಹೇಳಿ ಮತ್ತೊಮ್ಮೆ ಮುಳುಗಿದ. ಇನ್ನೊಂದು ಬಿಂದಿಗೆ ಸಿಕ್ಕಿತು. ಕೆಳಗೆ ಇನ್ನೂ ಹತ್ತು ಹನ್ನೆರಡು ಬಿಂದಿಗೆಗಳಿದ್ದುದು ನೀರಿನೊಳಗೆ ತಡಕುವಾಗ ತಿಳಿಯಿತು. ಎಲ್ಲವನ್ನೂ ತೆಗೆದು ಮೇಲೆ ಕಳುಹಿಸಿದ.

ಹಗ್ಗ ಹಿಡಿದು ನಾಲಗೆ – ಕಲ್ಲುಗಳ ಮೇಲೆ ಕಾಲುಗಳನ್ನಿಟ್ಟು ಅವನು ಮೇಲೆ ಏರಿ ಬರುವ ಹೊತ್ತಿಗೆ ಬಾವಿಯ ದಡದಲ್ಲಿ ಇಪ್ಪತ್ತಕ್ಕೂ ಮೇಲ್ಪಟ್ಟು ಗಂಡಸರು ಹೆಂಗಸರು ಸೇರಿದ್ದರು.
‘ನಂಜಾ, ನಿನ್ನ ಬಿಂದಿಗೆ ತಗಂಡು ಬ್ಯಾರೆ ಇಟ್ಕ’ – ಎಂದು ತಂಗಿಗೆ ಹೇಳಿದ ಕಲ್ಲೇಶ ಜನಗಳಿಗೆ ಹೇಳಿದ: ‘ಬಿಂದಿಗೆ ವಾರಸ್ದಾರು ಒಂದೊಂದುಕ್ಕೆ ಎಂಟೆಂಟಾಣೆ ತಂದು ಕೊಟ್ಟು ಬಿಡಿ. ಇಲ್ದೆ ಇದ್ರೆ ನಾನು ಇವನ್ನೆಲ್ಲ ನಮ್ಮೂರಿಗೆ ತಗಂಡು ಹೋಕ್ತೀನಿ.’
ಕೆಲವರು ದುಡ್ಡು ತರಲು ಮನೆಗೆ ಹೋದರು. ಅಲ್ಲಿಗೆ ಬಂದಿದ್ದ ಮಾಜೀ ಹಂಗಾಮಿ ಶ್ಯಾನುಭೋಗ ಸಿವಲಿಂಗ ಪ್ರಶ್ನಿಸಿದ: ‘ನಮ್ಮೂರ ಬಾವಿ ಮುಳುಗಿ ಕೊಡಪಾನ ತೆಗ್ದು ಕುಂಡೊಯ್ಯಕ್ಕೆ ನಿಮ್ಗೆ ಯಾರ್ರೀ ಅತಾಲ್ಟಿ ಕೊಟ್ಟೋರು?’
‘ಹಾಗಾದ್ರೆ ನಾನು ಇವುನ್ನೆಲ್ಲ ನೀರು ತುಂಬಿ ಮತ್ತೆ ಬಾವಿ ಒಳಿಕ್ಕೆ ಮುಳುಗುಸ್ತೀನಿ. ಉಸುರು ಹಿಡಿದು ಮುಳುಗಿದ್ದು ಬಿಟ್ಟಿಯಾ?’
ಸಿವಲಿಂಗನಿಗೆ ಇನ್ನು ಉತ್ತರ ಹೊಳೆಯಲಿಲ್ಲ. ಎಲ್ಲರೂ ಎಂಟೆಂಟಾಣೆ ಕೊಟ್ಟರು. ಕಲ್ಲೇಶನಿಗೆ ಒಟ್ಟೂ ಆರೂವರೆ ರೂಪಾಯಿ ಗಿಟ್ಟಿತು. ಹಣವನ್ನು ಕೋಟಿನ ಜೇಬಿಗೆ ಹಾಕಿಕೊಂಡು ಪಂಚೆ, ಶರಟು, ಕೋಟುಗಳನ್ನು ಕೈಲಿ ಹಿಡಿದು ಒದ್ದೆ ನಿಕ್ಕರಿನಲ್ಲಿ ಅವನು ಮನೆಗೆ ಬಂದ.
ಅಪರೂಪಕ್ಕೆ ಬಂದಿರುವ ಅಣ್ಣ ಎರಡು ದಿನವಾದರೂ ಇರುತ್ತಾನೆಂದು ಭಾವಿಸಿದ ನಂಜು ನಾಳೆ ಏನಾದರೂ ವಿಶೇಷ ಮಾಡಬೇಕೆಂದು ಯೋಚಿಸಿ, ಹೋಗಿ ಶ್ಯಾವಿಗೆ ಮಾಡುವುದಕ್ಕೆ ಸಾಮಾನು ತಂದಳು. ಮಧ್ಯಾಹ್ನ ಊಟವಾದ ಮೇಲೆ ಒಂದು ಗಳಿಗೆ ಮಲಗಿ ಎದ್ದ ಕಲ್ಲೇಶ ಕೇಳಿದ: ‘ಇದೇನು ತಂದೆ?’
‘ಶ್ಯಾವಿಗೆ ಮಾಡಾಣಾ ಅಂತ. ನಿಂಗೆ ಇಷ್ಟವಲ್ವೇ?’
‘ನಾನಿರುಲ್ಲ. ಈಗ ಹೊತ್ತು ಮುಳುಗೂ ಹೊತ್ತಿಗೆ ಹೋಗ್ತೀನಿ.’
‘ಇದೇನು ಹಾಗೆ ಬಂದೆ, ಹೀಗೆ ಹೊರಟೆ. ಇರು ಇರು.’
‘ಇಲ್ಲ, ಅರ್ಜೆಂಟ್ ಕೆಲ್ಸವಿದೆ. ನಿನ್ನ ನೋಡ್ಕಂಡ್ ಹೋಗಾಣಾ ಅಂತ ಬಂದೆ. ನಂಗೆ ಒಂದು ಲೋಟ ಕಾಫಿ ಮಾಡ್ಕೊಡು ಸಾಕು.’

ರಾಮಣ್ಣನನ್ನು ಅಂಗಡಿಗೆ ಕಳಿಸಿ ಆರು ಕಾಸಿನ ಪುಡಿ ತರಿಸಿ ಬೆಲ್ಲ ಹಾಕಿ ಅವಳು ಒಂದು ಕಂಚಿನ ಗಳಾಸು ಮಾಡಿಕೊಟ್ಟಳು. ಅದನ್ನು ಕುಡಿದ ಕಲ್ಲೇಶ ಹೊರಟೇಬಿಟ್ಟ. ಆಗಲೇ ಹೊತ್ತು ಮುಳುಗಿ ಕತ್ತಲೆಯಾಗುತ್ತಿತ್ತು. ಅವನಿಗೂ ಅಷ್ಟೆ – ಅವನ ಅಪ್ಪನಂತೆಯೇ ಕತ್ತಲೆಂದರೆ ಸ್ವಲ್ಪವೂ ಭಯವಿಲ್ಲ.
ಅವನು ಹೋದ ಸ್ವಲ್ಪ ಹೊತ್ತಿಗೆ ಸರ್ವಕ್ಕ ಬಂದು ಹೇಳಿದಳು: ‘ನಂಜಮ್ಮಾರೇ, ಚ್ವಾಳನಗುಡ್ಡದ್‌ತಾವ ಮುತ್ತುಗದೆಲೆ ಬಂಗಾರದ ಎಲೆ ಹಂಗವಂತೆ. ಗುಡಿ ಮಾದೇವಯ್ನೋರು ಹೂವಿನಹಳ್ಳಿಗೆ ಬಿಕ್ಸುಕ್ ಓದೋರು ಕಣ್ಣಲ್ಲಿ ನೋಡಿ ಮನ್ಸು ತಡೀದೆ ಕಿತ್ಕಂಡ್ ಬಂದಿದ್ರು. ನಾನೇ ನೋಡ್ದೆ.’
‘ಇನ್ನೂ ಮಾಘಮಾಸ ಕಳೆದಿಲ್ವಲಾ ಸರ್ವಕ್ಕ?’
‘ಮಾರ್ಗಶೀರದಾಗೆ ಈ ವರ್ಸ ಮಳೆಯಾಯ್ತಲ್ರ, ಅದ್ಕೆ ಬ್ಯಾಗ ಬಂದೈತೆ. ನಾಳೀಕ್ ಹ್ವಾಗಾನ ನಡೀರಿ.’

ಎಲೆಯ ಕಾಲದಲ್ಲಿ ಬೇಗ ಬೇಗ ಮಾಡಿಕೊಳ್ಳದೆ ಇದ್ದು ಬೇಗ ಮುಂಗಾರು ಹನಿತರೆ ಅದಕ್ಕೂ ಎಪ್ಪೆಯಾಗುತ್ತದೆಂದು ಯೋಚಿಸಿದ ನಂಜಮ್ಮ, ಆಗಲಿ ಎಂದಳು. ಕಾಗೆ ಕರ್ ಎನ್ನುವ ಮೊದಲೇ ಸಿದ್ಧವಾಗಿ ಬರುವುದಾಗಿ ಹೇಳಿ ಸರ್ವಕ್ಕ ಮನೆಗೆ ಹೋದಳು. ಅವಳಿಗೆ ಅದು ಮೊದಲನೆಯ ದಿನದ ಅನುಭವ. ಆದುದರಿಂದ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಅಂತೂ ಇಂತೂ ರಾತ್ರಿಯನ್ನು ಕಳೆದು ಕಾಗೆಯ ಶಬ್ದ ಕೇಳಿದವಳೇ ಎದ್ದು, ಗೋಣಿಚೀಲ ಮತ್ತು ರೊಟ್ಟಿಯ ಗಂಟನ್ನು ಕೈಲಿ ಹಿಡಿದು, ತಲೆಗೆ ಮುಸುಗು ಹಾಕಿಕೊಂಡು ಬಂದು ನಂಜಮ್ಮನ ಮನೆಯ ಕದ ತಟ್ಟಿದಳು. ನಂಜಮ್ಮನೂ ಸಿದ್ಧವಾಗಿ ಬಂದಳು. ಇನ್ನೂ ಬೆಳದಿಂಗಳಿತ್ತು. ಬೆಳದಿಂಗಳ ಬೆಳಕಿಗೆ ಕಾಗೆ ಕೂಗಿರಬಹುದೆಂಬ ಅನುಮಾನ ನಂಜಮ್ಮನಿಗೆ ಆದರೂ, ‘ಇಲ್ಲ ಕಣ್ರಿ, ಬಿಸಿಲೇರಿದ್ರೆ ಕಷ್ಟ. ನಡೀರಿ’ ಎಂದು ಸರ್ವಕ್ಕ ಮುಂದೆ ನಡೆದಳು. ಇಬ್ಬರೂ ಊರನ್ನು ದಾಟುವಾಗ ಊರ ಮುಂದಿನ ತೋಪಿನ ಹತ್ತಿರ ನರಸಿ ಹೊಸದಾಗಿ ಕಟ್ಟಿಕೊಂಡಿದ್ದ ಚಿಲ್ಲರೆ ಅಂಗಡಿಯ ಮನೆಯ ಬಾಗಿಲನ್ನು ತೆರೆದಂತಾಯಿತು. ಯಾರೋ ಗಂಡಸರು ’ಖಂಡಿತ’ ಎಂದು ಮೆಲ್ಲಗೆ ಹೇಳುತ್ತಾ ಹೊರಗೆ ಬಂದು, ಇವರು ಹೋಗುವ ದಾರಿಯಲ್ಲಿಯೇ ಸರಸರನೇ ನಡೆದು ಹೋದರು. ನರಸಿ ಬಾಗಿಲು ಹಾಕಿಕೊಂಡಳು.

ಆ ಗಂಡಸು ಕಲ್ಲೇಶನೇ ಎಂಬುದು ನಂಜಮ್ಮನಿಗೆ ತಕ್ಷಣ ತಿಳಿಯಿತು. ತಲೆಗೆ ಸೆರಗಿನ ಮುಸುಕು ಹಾಕಿ, ಗೋಣಿಯ ಚೀಲವನ್ನು ಹೆಗಲಿಗೆ ಹಾಕಿಕೊಂಡು ನೆಡೆಯುತ್ತಿದ್ದುದರಿಂದ ಇವರಿಬ್ಬರ ಪೈಕಿ ಒಬ್ಬಳು ತನ್ನ ತಂಗಿ ಎಂಬುದು ಅವನಿಗೆ ತಿಳಿಯಲಿಲ್ಲ. ಇವರಾರೆಂಬ ಗೊಡವೆಯೂ ಇಲ್ಲದೆ ಅವನು ಬೇಗ ಬೇಗ ನಡೆದ. ನಂಜುವೇ ನಡಿಗೆಯನ್ನು ನಿಧಾನ ಮಾಡಿ ಸ್ವಲ್ಪ ಹಿಂದೆ ಉಳಿದಳು. ಕಾರಣವನ್ನು ಸರ್ವಕ್ಕನಿಗೆ ಹೇಳಬಾರದೆಂದು ಅವಳು ಸುಮ್ಮನೆ ಇದ್ದಳು. ಮುಂದೆ ನಡೆದು ಹೋಗುತ್ತಿದ್ದ ಗಂಡಸು ಇವರ ಕಣ್ಣಿಗೆ ಕಾಣಿಸದಷ್ಟು ಮುಂದೆ ಹೋಗಿ ಮರೆಯಾದ ಮೇಲೆ ಸರ್ವಕ್ಕನೇ ಕೇಳಿದಳು: ‘ಅವ್ರು ನಿಮ್ಮಣ್ಣಯ್ಯ ಅಲ್ವರಾ?’
‘ಅದ್ಯಾರೋ ಕಾಣವ್ವ.’
‘ಊ ಕಣ್ರೀ ಅವ್ರೆಯಾ. ಅತ್ ಅದ್ನೈದು ದಿನಕ್ಕೆ ಒಂದ್ಸಲಿ ಬತ್ತಾರಂತೆ. ರಾತ್ರಿನಾಗ ಕತ್ಲಾದ ಮ್ಯಾಲೆ ಬಂದು ಬ್ಯಳಿಗ್ಗೆ ಕೋಳಿ ಕೂಗೂಕ್ ಮದ್ಲೇ ಹ್ವಂಟೋಯ್ತರಂತೆ. ಆ ನರಸಿಯೇ ಯಾರ್ಯಾರ ಕೈಲೋ ಹಂಗಂದ್ಲಂತೆ.’
ನಂಜಮ್ಮ ಮಾತನಾಡಲಿಲ್ಲ. ತನಗೆ ಈ ಮಾತು ಕೇಳಲೇ ಇಲ್ಲವೇನೋ ಎಂಬಂತೆ ಮೌನವಾಗಿ ಹೆಜ್ಜೆ ಹಾಕಿದಳು.

ಅಧ್ಯಾಯ ೯
– ೧ –

ಅದು ಅನುಭವಕ್ಕೆ ಬಂದು ಇದ್ದವರದೇ ಆಗುವಂತೆ, ಹನುಮಂತರಾಯನ ಗುಡಿಯು ಗಂಗಮ್ಮ ಅಪ್ಪಣ್ಣಯ್ಯರದಾಯಿತು. ಗುಡಿಯ ಪೂಜೆಯ ಹಕ್ಕಿನ ಮೇಲೆ ಅಣ್ಣಾಜೋಯಿಸನ ಅಧಿಕಾರವೇನೂ ಕಡಿಮೆಯಾಗಲಿಲ್ಲ. ಆದರೆ ಈಗ ಅದನ್ನು ಹನುಮಂತರಾಯನ ಗುಡಿ ಎನ್ನುವ ಬದಲಿ ಎಷ್ಟೋ ಜನರು ಗಂಗಮ್ನೋರ ಮನೆ ಎಂದು ಕರೆಯುತ್ತಾರೆ.

ಗಂಗಮ್ಮ ಅಪ್ಪಣ್ಣಯ್ಯರು ಆಗಾಗ್ಗೆ ಹಳ್ಳಿಯ ಮೇಲೆ ಹೋಗುವುದೂ ಉಂಟು. ರಾಮಸಂದ್ರದ ಶಿವೇಗೌಡನ ಹೆಸರು ಸುತ್ತ ಮೂರು ಮೈಲಿಯ ಆಚೆ ಮೊದಲು ತಿಳಿದಿರಲಿಲ್ಲ. ಈಗ ಅದು ಇಪ್ಪತ್ತು ಮೈಲಿ ಸುತ್ತಿಗೂ ತಿಳಿದಿದೆ. ತಾಯಿ ಮಗ, ಇಬ್ಬರೂ ಹಳ್ಳಿಹಳ್ಳಿಗೆ ಹೋಗುತ್ತಾರೆ. ‘ನಮ್ಮ ಆಸ್ತೀನೆಲ್ಲ ಒಬ್ಬ ಪಾಪಿ ಸೂಳೇಮಗ ಮೋಸ ಮಾಡಿ ತಿಂದ್‌ಹಾಕಿಬಿಟ್ಟ. ನಮಗೆ ಜೀವನಕ್ಕಿಲ್ಲ. ಏನಾದ್ರೂ ಕೊಡಿ’ – ಎಂದು ಮನೆ ಮನೆಗಳಲ್ಲಿಯೂ ಕೇಳುತ್ತಾರೆ. ಹಾಗೆಂದು ಕೇಳಿ ತನ್ನ ಹಳೆಯ ಕೆಂಪಿನ ಸೀರೆಯನ್ನು ನೆಲದ ಮೇಲೆ ಹಾಸುವವಳು ಗಂಗಮ್ಮ. ಅದರ ಮೇಲೆ ಮೊರದಲ್ಲಿ ತಂದು ಸುರಿದ ರಾಗಿ, ಅವರೇಕಾಳು, ಮೆಣಸಿನ ಕಾಯಿಗಳನ್ನು ಕಟ್ಟಿ ತಂದುಕೊಟ್ಟರೆ ಎಲ್ಲವನ್ನೂ ಒಟ್ಟು ಗೋಣಿಯ ಚೀಲದಲ್ಲಿ ತುಂಬಿ ತಲೆಯಮೇಲೆ ಹೊತ್ತು ಊರಿಗೆ ತರುವವನು ಅಪ್ಪಣ್ಣಯ್ಯ. ಮಾದೇವಯ್ಯನವರೂ ಹೀಗೆಯೇ ಮಾಡುತ್ತಾರೆ. ಆದರೆ ಅವರಿಗೆ ಭಿಕ್ಷೆ ಬೇಡಲು ಯಾವ ಕಾರಣವೂ ಇಲ್ಲ. ಹೇಳಿ ಕೇಳಿ ಜಂಗಮರು. ಕೆಂಪು ಅಂಗಿ ಕೆಂಪು ಅರಿವೆ ತೊಟ್ಟು ಕೆಂಪು ಮುಂಡಾಸು ಧರಿಸಿ ವಿಭೂತಿ ಬಳಿದ ಸಂನ್ಯಾಸಿ ಅವರು. ಹೊಸಿಲ ಒಳಗೆ ನಿಂತು – ‘ಭಿಕ್ಷಾ, ಗುರು ರೇವಣ್ಣರ ಭಿಕ್ಷಾ’ ಎನ್ನುವುದಷ್ಟೇ ಅವರ ಕೆಲಸ. ಒಂದು ಬೊಗಸೆ ರಾಗಿ ಬಂದು ಬೀಳುತ್ತದೆ. ಆದರೆ ಗಂಗಮ್ಮ ಪ್ರತಿ ಮನೆಯಲ್ಲೂ ತನ್ನ ಪ್ರವರ ಹೇಳಿ ಶಿವೇಗೌಡನ ಸುಳಿಯನ್ನು ಶಪಿಸುತ್ತಾಳೆ. ಕೊಡುವವರು ಅರ್ಧ ಮೊರದಷ್ಟಾದರೂ ಕೊಡುತ್ತಾರೆ. ಕೊಡದವರು ಶಾಪ ಪಡೆಯುತ್ತಾರೆ.

ಗಂಗಮ್ಮನ ಮನೆಯಲ್ಲಿಯೂ ಪೆಟ್ಟಿಯಿದೆ. ಪೆಟ್ಟಿಯ ಭರ್ತಿ ರಾಗಿ. ಎರಡು ಮೊಡೆ ಅವರೇಕಾಳು. ಒಂದು ಗುಡಾಣದ ಭರ್ತಿ ಮೆಣಸಿನಕಾಯಿ ಇದೆ. ಶಿವೇಗೌಡ ಬದುಕಿದ್ದೇನು, ನಾನು ಕೆಟ್ಟಿದ್ದೇನು ಎಂದು ಗಂಗಮ್ಮ ಧರ್ಮ ಕರ್ಮದ ಸಮಗುಣವನ್ನು ಹೇಳುತ್ತಾಳೆ.

ಒಂದು ಮಧ್ಯಾಹ್ನ ಎರಡು ಎರಡೂವರೆ ಗಂಟೆಯ ಹೊತ್ತಿಗೆ ಹನುಮಂತರಾಯನ ಗುಡಿಯ ಮುಂದೆ ಎರಡು ಗಾಡಿಗಳು ಬಂದು ನಿಂತುವು. ಗಾಣಿಗರ ಶಿಂಗಶೆಟ್ಟಿಯದೊಂದು, ಉಪ್ಪಾರರ ಮುಕ್ಕಣ್ಣನದು ಇನ್ನೊಂದು. ಎರಡು ಗಾಡಿಗಳ ಭರ್ತಿ ಪಾತ್ರೆ ಪರಟಿ ಸಾಮಾನುಗಳೂ ಇದ್ದುವು. ಅವುಗಳ ಹಿಂದೆಯೇ ಐವತ್ತು ವರ್ಷದ ಒಬ್ಬ ವಿಧವೆ, ಇಪ್ಪತ್ತೈದರ ಸುಮಾರಿನ ಒಬ್ಬ ಹೆಂಗಸು, ಏಳು ವರ್ಷದ ಒಂದು ಹುಡುಗಿ, ಮತ್ತು ನಾಲ್ಕು ವರ್ಷದ ಒಬ್ಬ ಹುಡುಗ, ಇಷ್ಟು ಜನ ಬಂದರು. ಬಂದ ಇವರನ್ನು ಮೊದಲು ಕಂಡ ಅಪ್ಪಣ್ಣಯ್ಯ ಕಳ್ಳ ತಪ್ಪಿಸಿಕೊಳ್ಳುವವನಂತೆ ಗುಡಿಯ ಹಿಂಭಾಗಕ್ಕೆ ಹೋಗಿ ಅಲ್ಲಿಂದ ಹುಲ್ಲುಕೊಪ್ಪಲುಗಳ ಸಂಧಿಯಲ್ಲಿ ನುಸಿದು ಎಲ್ಲಿಗೋ ಹೋಗಿಬಿಟ್ಟ. ಗಾಡಿಯ ಕೊರಳು ಇಳಿಸಿದ ಮುಕ್ಕಣ್ಣ – ‘ಇದೇ ಕಣ್ರವ್ವಾ, ಗಂಗವ್ವಾರ ಮನೆ’ ಎಂದು ಹೇಳಿ ಗಾಡಿಯ ಸಾಮಾನುಗಳನ್ನು ಇಳಿಸಲು ಪ್ರಾರಂಭಿಸಿದ. ಬಂದವರ ಪೈಕಿ ಹಿರಿಯಳು ಅನುಮಾನಿಸಿಕೊಂಡು ಬಾಗಿಲನ್ನು ಪ್ರವೇಶಿಸಿದಳು. ಗಂಗಮ್ಮನಿಗೆ ಗುರುತು ಸಿಕ್ಕಲಿಲ್ಲ. ಅವಳೇ – ‘ನುಗ್ಗೀಕೆರೆ ನಮ್ಮದು. ಯಜಮಾನ್ರು ತೀರಿಹೋದರು. ಎರಡು ವರ್ಷವಾಯಿತು. ಸಾತೂನು, ಮಕ್ಳೂನು, ಬಂದು ನಿಮ್ಮ ಸೇವೆ ಮಾಡ್ಕಂಡಿರ್‌ಬೇಕು ಅಂತಿದ್ರು. ಕರ್ಕಂಡ್ ಬಂದೆ’ ಎಂದಳು.

ಅವರ ಮಾತಿನ ಭಾವವು ಪೂರ್ತಿಯಾಗಿ ತಿಳಿಯಬೇಕಾದರೆ ಗಂಗಮ್ಮನಿಗೆ ಎರಡು ನಿಮಿಷ ಆಯಿತು. ಅಷ್ಟರಲ್ಲಿ ಸಾತು ಎರಡು ಮಕ್ಕಳ ಕೈಯ್ಯನ್ನೂ ಹಿಡಿದುಕೊಂಡು ಬಂದಳು. ಗಂಗಮ್ಮನ ಕಲ್ಪನೆ ಮಿಂಚಿನಂತೆ ಹಾಯಿತು. ‘ಏನೇ ಮುಂಡೆ, ಈ ಹಿರಿ ಹುಡುಗಿಯಂತೂ ನಮ್ಮಪ್ಪಣ್ಣಯ್ಯಂಗೇ ಹುಟ್ಟಿದ್ದು. ನೀನಿಲ್ಲಿದ್ದಾಗ್ಲೇ ಅದುಕ್ ಬಸುರಿಯಾಗಿದ್ದೆ. ಈ ಎರಡನೇ ಹುಡುಗನನ್ನು ಅದ್ಯಾವನಿಗೆ ಹೆತ್ತೆ ಬೊಗುಳೇ ಹಾದರಗಿತ್ತಿ? ಶ್ಯಾನುಭೋಗ ರಾಮಣ್ಣೋರ ವಂಶ ಕೆಡುಸ್ಬೇಕು ಅಂತ ಇಲ್ಲಿಗ್ ಬಂದ್ಯೇನೇ? ನಿಂಗೇನ್ ಮಾಡ್ತೀನಿ ನೋಡೂವಂತೆ ತಾಳು’ – ಎಂದು ಮೇಲೆ ಎದ್ದು, ಮೂಲೆಯಲ್ಲಿದ್ದ ಕಸ ಪೊರಕೆ ತೆಗೆದುಕೊಂಡು ನಿಂತಳು.
‘ಅದ್ಯಾಕ್ ಹೀಗೆ ಕೆಟ್ಟ ಮಾತಾಡ್ತೀರಾ? ನಿಮ್ಮ ಮಗನೇ ನಮ್ಮೂರಿಗೆ ಬಂದಿದ್ದ. ನನ್ನ ಮಗಳು ಅಂಥಾ ನಡತೆಯೋಳಲ್ಲ. ಬೇಕಾದ್ರೆ ನಿಮ್ಮಗನ್ನೇ ಕರ್ದು ಕೇಳಿ. ನಾಮಕರಣಕ್ಕೆ ಬನ್ನಿ ಅಂತ ಕಾಗದ ಬರೆದರೂ ಯಾಕೆ ಬರಲಿಲ್ಲ?’ – ಎಂದು ಬೀಗಿತ್ತಿ ಕೇಳಿದರೆ ಅದು ಗಂಗಮ್ಮನ ಕಿವಿಗೆ ಹೋಗಲಿಲ್ಲ.

ಸಾತು ತಾನು ಗುಡಿಯಿಂದ ಹೊರಗೆ ಬಂದುಬಿಟ್ಟಳು. ಹುಡುಗರಿಬ್ಬರೂ ಹೆದರಿ ತಾಯಿಯ ಹಿಂದೆ ಸೆರಗು ಹಿಡಿದು ನಿಂತುಕೊಂಡುವು. ಸಾತುವಿನ ತಾಯಿ – ‘ಇಂಥಾ ಹೆಂಗ್ಸುನ್ನ ನಾನೆಲ್ಲೂ ನೋಡಿಲ್ಲ. ಒಳ್ಳೇದಾಯ್ತು’ ಎಂದುಕೊಂಡು ಹೊರಗೆ ಬಂದಿದ್ದರು. ಅವರು ಗಾಡಿಯನ್ನು ಹಿಂತಿರುಗಿ ಹೊಡೆಸುತ್ತಿದ್ದರೋ ಎನೋ, ಸಾತುವೇ, ‘ಅಮ್ಮಾ, ಅವರ ಕೈಲಿ ಮಾತಾಡದೇ ಹೋಗೋದು ಬ್ಯಾಡ. ನನ್ನ ಓರಗಿತ್ತಿ ಬ್ಯಾರೆ ಇದಾರಂತಲ್ಲ, ಸಧ್ಯಕ್ಕೆ ಅವರ ಮನೆಗೆ ಹೋಗಾಣ’ ಎಂದಾಗ ತಾಯಿ ಒಪ್ಪಿದಳು. ಮುಕ್ಕಣ್ಣ, ಶಿಗಶೆಟ್ಟಿ, ಎರಡು ಗಾಡಿಗಳನ್ನು ಕೊರಳೆತ್ತಿ ತಂದು ನಂಜಮ್ಮನ ಮನೆಯ ಮುಂದೆ ಬಿಟ್ಟು ಸಾಮಾನುಗಳನ್ನು ಒಂದೊಂದಾಗಿ ಇಳುಕಿದರು. ನಂಜಮ್ಮ ಇವರು ಬಂದ ಕಾರಣ ಕೇಳಲಿಲ್ಲ. ಸಾತುವಿನ ತಾಯಿಯ ಮಡಿವೇಷ ನೋಡಿದರೆ ಯಜಮಾನರು ಸತ್ತಿರುವುದು ತಿಳಿಯುತ್ತಿತ್ತು. ಯಾವ ಕಷ್ಟದಲ್ಲಿದ್ದಾರೋ ಏನೋ! ಮೊದಲು ಒಳಗೆ ಕರೆದು ಊಟ ಗೀಟ ಆದಮೇಲೆ ತಾನೆ ಮುಂದಿನ ಏನಿದ್ದರೂ ವಿಚಾರಿಸಬೇಕಾದುದು? ಎಲ್ಲರನ್ನೂ ಒಳಗೆ ಕರೆದು ಕೂರಿಸಿದಳು. ಈ ಗಂಡು ಹುಡುಗನನ್ನು ನೋಡಿ ಅವಳಿಗೂ ಆಶ್ಚರ್ಯ. ಆದರೆ ಗಂಡನಿಗೆ ಹುಟ್ಟಿರದ ಮಗುವನ್ನು ಯಾವ ಹೆಂಗಸು ತಾನೆ ಇಷ್ಟು ಧೈರ್ಯವಾಗಿ ಕರೆದುಕೊಂಡು ಬರುತ್ತಾಳೆ? – ಎಂಬ ಒಂದು ವಿಶ್ವಾಸ ಮಾತ್ರ ಅವಳಿಗೆ ಹೋಗಲಿಲ್ಲ. ಸಾತು ಕಣ್ಣೀರು ಹಾಕುತ್ತಲೇ ಇದ್ದಳು. ಅವಳ ತಾಯಿ ತಂಗಮ್ಮನೇ ಹೇಳಿದಳು: ‘ಆಗ ಅಪ್ಪಣ್ಣಯ್ಯ ಎರಡು ಸಲ ಬಂದು ಹದಿನೈದು ಹದಿನೈದು ದಿನ ಇದ್ದ. ಆಗಲೇ ರಾಮಕ್ರಿಷ್ಣ ಹುಟ್ಟಿದ್ದು. ಸಾತು ಕೆಟ್ಟ ಕೆಲಸ ಮಾಡಿದಾಳೆ ಅಂತ ಬೀದಿಗೆಲ್ಲ ಕೇಳೂಹಾಗೆ ಅವಳ ಅತ್ತೆ ಕಿರುಚಿಕಂಡ್ಲು ಚಾಂಡಾಳಿ.’
‘ಆಯ್ತು, ಮದ್ಲು ಎದ್ದು ಮಡಿ ಉಟ್ಕಳಿ. ಯಜಮಾನ್ರು ಹೋಗಿ ಎಷ್ಟು ದಿನ ಆಯ್ತು?’
‘ಎರಡು ವರ್ಷವಾಯ್ತು. ಅವರಿರೂತಂಕ ಪೌರೋಹಿತ್ಯದಲ್ಲಿ ಸುಖವಾಗಿ ಜೀವನ ಆಗ್ತಾ ಇತ್ತು. ಆಮ್ಯಾಲೆ ಗಂಡು ದಿಕ್ಕಿಲ್ಲದ ನಮ್ಮನ್ನ ಯಾರು ಕರೀತಾರೆ? ಏನೋ ಗಂಡನ ಜೊತೆ ಹೆಂಡ್ತಿಯಾದೋಳು ಬಾಳ್ವೆ ಮಾಡ್‌ಬೇಕು. ಆಗ ಬಂದಿದ್ದಾಗ ಅಪ್ಪಣ್ಣಯ್ಯ, ಅವ್ನೇ ಬಂದು ಕರ್ಕಂಡ್ ಹೋಗ್ತೀನಿ ಅಂತ ಹೇಳಿದ್ದ. ಈಚೆಗೆ ಅವ್ನೂ ಬರ್ಲಿಲ್ಲ. ಅದುಕ್ಕೆ ನಾವೇ ಬಂದುಬಿಟ್ವು. ತಿಪಟೂರಿಂದ ಮೋಟರಿನಲ್ಲಿ ಬಂದು ಇಳಿದುವು. ಈ ಎರಡು ಗಾಡಿಯೋರು ಗೊಬ್ಬರ ತುಂಬಿಕೊಂಡು ಅಲ್ಲೇ ಹ್ವಲದ ಕಡೆಗೆ ಬಂದಿದ್ರು. ನಾಕು ನಾಕಾಣಿ ತಗಂಡು ಸಾಮಾನು ಹೇರ್ಕಂಡ್ ಬಂದ್ರು.’
‘ಸಾತು, ಹುಡುಗ್ರಿಗೆ ಮದ್ಲು ಮಡಿ ಉಡ್ಸು. ಅವುಕ್ಕೆ ಹ್ವಟ್ಟಿ ಹಸಿದಿದೆ’ – ಎಂದು ನಂಜಮ್ಮ ಹೇಳುತ್ತಿದ್ದಳು. ಅಷ್ಟರಲ್ಲಿ – ‘ಈ ಹಾದರಗಿತ್ತಿ ಮುಂಡೇರ ತಲೆ ಕೂದ್ಲು ಉದುರೂ ಹಾಗೆ ಮೆಟ್ನಲ್ಲಿ ಹ್ವಡಿಸಿ ಊರು ಬಿಟ್ಟು ಓಡುಸ್ದೆ ಇದ್ರೆ ನನ್ನ ಹೆಸರು ಗಂಗಮ್ಮ ಅಲ್ಲ’ ಎಂದು ಗುಡುಗುತ್ತ ಗಂಗಮ್ಮ ಅಲ್ಲಿಗೆ ಬಂದದ್ದು ಕೇಳಿಸಿತು. ಹಿಂದೆಯೇ ಬಂದ ಅವಳು – ‘ಏನೇ ಹಾದರಗಿತ್ತಿ, ಇವ್ಳ ಜೊತೆಗೆ ನೀನೂ ಶುರು ಮಾಡಬೇಕು ಅಂತ ಇವ್ಳುನ್ನ ಮನಿಗ್ ಸೇರ್ಸಿದೀ ಏನೇ? ನಿಂಗೂ ತಕ್ಕುದ್ ಮಾಡುಸ್ದೆ ಇದ್ರೆ ನನ್ ಮೂಗ್ ಕುಯ್ಯುಸ್ಕತ್ತೀನಿ ನೋಡೇ ಮುಂಡೆ’ ಎನ್ನುತ್ತಿದ್ದಂತೆಯೇ ಹಿಂದಿನಿಂದ ಅಯ್ಯಾಶಾಸ್ತ್ರಿಗಳು ಅಣ್ಣಾಜೋಯಿಸರು ಕಾಣಿಸಿಕೊಂಡರು. ಒಂದೇ ನಿಮಿಷದಲ್ಲಿ ಶಿವೇಗೌಡ, ಸಿವಲಿಂಗ ಒಳಗೆ ಬಂದರು. ಇನ್ನು ಹತ್ತು ಎಣಿಸುವುದರಲ್ಲಿ ರೇವಣ್ಣಶೆಟ್ಟಿ ಬಂದ. ಮತ್ತೆ ಐದು ಆರು ಜನರು ಒಳಗೆ ಯಾವುದೋ ಕರಡಿ ಕುಣಿಯುತ್ತಿದೆ ಎಂಬುದನ್ನು ನೋಡುವಷ್ಟು ಉತ್ಸಾಹದಿಂದ ಗುಡ್ಡೆ ಹಾಕಿಕೊಂಡರು. ಇವರನ್ನೆಲ್ಲ ಹೋಗಿ ಗಂಗಮ್ಮನೇ ಕರೆದುಕೊಂಡು ಬಂದಿದ್ದಾಳೆ ಎಂಬ ವಿಷಯದಲ್ಲಿ ಅಲ್ಲಿ ಯಾರಿಗೂ ಸಂದೇಹ ಉಳಿಯಲಿಲ್ಲ.
‘ನನ್ನ ಮನೆಗೆ ನೀವ್ಯಾಕೆ ಬಂದ್ರಿ, ನಿಮ್ಮುನ್ನ ಯಾರು ಕರೆದೋರು?’ – ಎಂದು ಕೇಳಿಬಿಡುವಷ್ಟು ಕೋಪ ನಂಜಮ್ಮನಿಗೆ. ಆದರೆ ಗ್ರಾಮದ ಈ ಮುಖ್ಯರನ್ನು ಎದುರುಹಾಕಿಕೊಳ್ಳಬಾರದೆಂಬ ತಾಳ್ಮೆ ಬೇರೆ. ಯಾರನ್ನೂ ಒಳಗೆ ಬನ್ನಿ ಎನ್ನಲೂ ಇಲ್ಲ: ಕೂರಲು ಒಂದು ಚಾಪೆಯನ್ನೂ ಹಾಕಿಕೊಡಲಿಲ್ಲ. ಅದುವರೆಗೂ ಮಲಗಿ ನಿದ್ರಿಸುತ್ತಿದ್ದು ಈಗ ಪೂರ್ತಿ ನಿದ್ರೆ ಹರಿದ ಚೆನ್ನಿಗರಾಯರು ಎದ್ದು ಎರಡು ಚಾಪೆ ಹಾಸಿದರು. ಜೋಯಿಸರಿಬ್ಬರಿಗೂ ಬೇರೆ ಮಂದಲಿಗೆ ಹಾಕಿಕೊಟ್ಟರು. ಸಾತು, ಇಬ್ಬರು ಮಕ್ಕಳು, ಮತ್ತು ತಂಗಮ್ಮ, ಎಲ್ಲರೂ ಅಡಿಗೆಯ ಮನೆಗೆ ಹೋಗಿಬಿಟ್ಟರು.
‘ಅದ್ಯಾಕ್ ಒಳಿಕ್ ಹೋಗ್ತೀಯಾ ಬಾರೇ, ಸೂಳೆಗಾರಮುಂಡೆ, ಊರ ಒಟ್ನಲ್ಲಿ ನ್ಯಾಯ ಕೊಡು’ – ಗಂಗಮ್ಮ ಕೂಗಿದಳು.
‘ನ್ಯಾಯ, ನ್ಯಾಯ. ಇಲ್ಲಿಗೇ ಬನ್ರಮ್ಮ’ – ರೇವಣ್ಣಶೆಟ್ಟಿ ಧರ್ಮಪ್ರತಿನಿಧಿಯ ಪಾತ್ರ ವಹಿಸಿಕೊಂಡು ಆದೇಶವಿತ್ತ.
‘ರೇವಣ್ಣಶೆಟ್ರೇ ಕರೀತಾರೆ, ಬಾರೇ’ – ಗಂಗಮ್ಮ ಮತ್ತೆ ಕೂಗಿದಳು.

ರೇವಣ್ಣಶೆಟ್ಟಿ ಇಲ್ಲಿಗೆ ಬಂದದ್ದಾಗಲಿ, ಅವನು ದೊಡ್ಡ ಧರ್ಮಿಷ್ಠನಂತೆ ನ್ಯಾಯದ ಮಾತನ್ನಾಡಿದುದಾಗಲಿ ನಂಜಮ್ಮನಿಗೆ ಸಹಿಸಲಿಲ್ಲ. ಇವರ ಬಾಯಿಮುಚ್ಚಿಸಿ ಮೇಲೆ ಏಳಿಸುವ ಉಪಾಯವೂ ಹೊಳೆಯಲಿಲ್ಲ. ಒಂದು ದಾರಿ ಮಾತ್ರ ಕಂಡಿತು. ಅದೇ ಹೊತ್ತಿಗೆ ಸ್ಲೇಟು ಪುಸ್ತಕ ಹಿಡಿದುಕೊಂಡು ಪಾರ್ವತಿ, ರಾಮಣ್ಣ, ಇಬ್ಬರೂ ಸ್ಕೂಲಿನಿಂದ ಮನೆಗೆ ಬಂದರು. ‘ಲೇ ಪಾರ್ವತಿ, ಗುಡಿ ಮಾದೇವಯ್ನೋರುನೂವೆ, ನಿಮ್ಮ ಮೇಷ್ಟ್ರನ್ನೂವೇ ನಾನ್ ಹೇಳ್ದೆ ಅಂತ ಕರ್ಕಂಡ್ ಬಾ. ಈಗ್ಲೇ ಬರಬೇಕಂತೆ ಅನ್ನು. ಓಡಿ ಹೋಗು’ – ಎಂದಳು. ಇಬ್ಬರು ಮಕ್ಕಳೂ ಹಾಗೆಯೇ ಓಡಿದುವು.
‘ಯಾಕ್ರಮ್ಮ, ನಾವು ನ್ಯಾಯ ಹೇಳಿದ್ರೆ ಆಗಾಕುಲ್ವ?’ – ನಂಜಮ್ಮನ ಮುಖ ನೋಡುತ್ತಾ ರೇವಣ್ಣಶೆಟ್ಟಿ ಕೇಳಿದ. ಅವಳು ಒಳಗೆ ಹೊರಟುಹೋದಳು.
‘ಯಾಕೆ ಒಳೀಕ್ ಹೋದ್ಯೇ ಲಾಯ್ರೀ?’ – ಎಂದು ಗಂಗಮ್ಮ ಕೂಗಿದರೂ ಹೊರಗೆ ಬರಲಿಲ್ಲ.
ಈಗ ಅಣ್ಣಾಜೋಯಿಸ, ಅಯ್ಯಾಶಾಸ್ತಿಗಳು ತಮ್ಮ ಧರ್ಮಶಾಸ್ತ್ರದ ಜ್ಞಾನವನ್ನು ಪ್ರಕಟಿಸಲು ನಿಂತರು. ಅಣ್ಣಾಜೋಯಿಸ ಯಾವುದೋ ಮಂತ್ರ ಹೇಳಿದ.
‘ವ್ಯಭಿಚಾರ ಮಾಡಿದ ಹೆಂಗಸಿನ ಶಿರಚ್ಛೇದ ಮಾಡಬೇಕು ಅಂತ ಮನು ಧರ್ಮಶಾಸ್ತ್ರದಲ್ಲಿದೆ. ಇಲ್ಲದಿದ್ದರೆ ಸಹಸ್ರ ನಾಣ್ಯ ಖರ್ಚುಮಾಡಿ ಪ್ರಾಯಶ್ಚಿತ್ತ ಮಾಡಬೇಕು ಅಂತ ವೇದದಲ್ಲಿದೆ. ಅವರು ಪ್ರಾಯಶ್ಚಿತ್ತ ಮಾಡಿಸಿಕೊಳ್ಳೂತನಕ ಒಳೀಕ್ಕೆ ಸೇರಿಸಿದ್ದು ನಂಜಮ್ಮನ ತಪ್ಪು’ – ಎಂದು ಅಯ್ಯಾಶಾಸ್ತಿಗಳು ವ್ಯಾಖ್ಯಾನ ಹೇಳಿದರು.

ಅಷ್ಟರಲ್ಲಿ ಮಾದೇವಯ್ಯನವರು ಬಂದರು. ಗಂಗಮ್ಮ ಬೀದಿಯಲ್ಲೆಲ್ಲ ಕಿರುಚಿಕೊಂಡು ತಿರುಗಿದ್ದುದರಿಂದ ವಿಷಯ ಊರಿನವರಿಗೆಲ್ಲ ಗೊತ್ತಾಗಿ ಮನೆಯ ಮುಂಭಾಗದಲ್ಲಿ ಒಂದು ಜಾತ್ರೆಯ ಜನವೇ ಸೇರಿತ್ತು. ಸಂದಿನಿಂದ ಜಾಗ ಬಿಡಿಸಿಕೊಂಡು ಬಂದ ಮಾದೇವಯ್ಯನವರಿಗೆ ವಿಷಯವನ್ನು ಹೊಸದಾಗಿ ಹೇಳುವ ಅಗತ್ಯವಿರಲಿಲ್ಲ. ಅವರು ಬಂದದ್ದನ್ನು ಬಾಗಿಲು ಸಂದಿನಿಂದ ಕಂಡ ನಂಜಮ್ಮ ಹೊರಗೆ ಬಂದು ಹೇಳಿದಳು: ‘ಅಯ್ನೋರೇ, ಧರ್ಮ ಕರ್ಮ ಎಲ್ಲಾ ತಿಳ್ಕಂಡಿರೋರು ನೀವು. ನ್ಯಾಯವಿಚಾರಣೆ ನೀವು ಮಾಡಬೇಕು. ಉಳಿದೋರೆಲ್ಲ ತಲಾತಟ್ಟಿ ಮಾತಾಡಕೂಡದು. ಅಪ್ಪಣ್ಣಯ್ಯನೇ ಬಂದಿದ್ದ, ಅವನಿಗೆ ಈ ಗಂಡುಮಗೂನ ಬಸುರಿಯಾದುದ್ದು ಅಂತ ಅವರು ಒಳಗೆ ಕೂತ್ಕಂಡು ಈಗಲೂ ದೇವರ ಆಣೆ ಇಟ್ಟು ಹೇಳ್ತಿದಾರೆ.’
ಇಲ್ಲಿ ಇಷ್ಟರಲ್ಲಿ ಏನು ನಡೆದಿರಬಹುದೆಂಬುದು ಅಯ್ಯನವರಿಗೆ ಅರ್ಥವಾಯಿತು. ಅವರು ಎಂದರು: ‘ಮದ್ಲು ಅಪ್ಪಣ್ಣಯ್ಯನ ಕರ್ಸಿ. ಆಮ್ಯಾಲೆ ನ್ಯಾಯ ಕೇಳ್‌ಬೌದು.’
‘ನನ್ನ ಕಂದುಂದೇನೂ ತಪ್ಪಿಲ್ಲ. ಅದು ಅಂಥಾ ಕೆಟ್ಟ ಮುಂಡೇದಲ್ಲ’ – ಗಂಗಮ್ಮ ಬಾಯಿ ಹಾಕಿದಳು.
‘ ತಪ್ಪೈತೋ ಇಲ್ವೋ ಇಚಾರ ಮಾಡಾನಾ. ಗಂಡ ಅನ್ನಿಸ್ಕಂಡೋನು ಎಂಡ್ತಿ ಮನ್ಗೆ ಓಗಿದ್ರೆ ಅದೇನೂ ತಪ್ಪಿಲ್ವಲಾ’ -ಎಂದು ಅವಳಿಗೆ ಸಮಾಧಾನ ಹೇಳಿದ ಅಯ್ಯನವರು ಬಾಗಿಲ ಹತ್ತಿರ ನಿಂತಿದ್ದವರಿಗೆ, ಅಪ್ಪಣ್ಣೈನೋರು ಎಲ್ಲಿದ್ರೂ ಬಿಡ್ದೆ ಕರ್ಕಂಡ್ ಬಾ ಹೋಗ್ರಿ’ ಎಂದರು. ಹತ್ತು ಹನ್ನೆರಡು ಜನರು ಅನ್ವೇಷಣೋತ್ಸುಕತೆಯಿಂದ ಓಡಿದರು. ಈ ನಡುವೆ ಮತ್ತೆ ಮಾತು ಶುರು ಮಾಡಿದ ಪುರೋಹಿತದ್ವಯರಿಗೆ, ‘ಅಪ್ಪಣ್ಣಯ್ಯ ಬರಾಗಂಟ ಯಾರೂ ಮಾತಾಡ್ ಬ್ಯಾಡ್ದು’ ಎಂದು ಹೇಳಿ ಬಾಯಿ ಮುಚ್ಚಿಸಿದರು.

ಹದಿನೈದು ನಿಮಿಷದಲ್ಲಿ ಅಪ್ಪಣ್ಣಯ್ಯ ಬಂದ. ಅವನು ಬಸಪ್ಪಶೆಟ್ಟರ ಕೊಪ್ಪಲಿನ ಹುಲ್ಲು ಮೆದೆ ಸಂದಿಯಲ್ಲಿ ಕೂತಿದ್ದನಂತೆ. ತಪ್ಪಿಸಿಕೊಂಡು ಹೋಗಲು ಪ್ರಯತ್ನ ಪಟ್ಟನಾದರೂ ಹುಡುಕಲು ಹೋದ ಇಬ್ಬರು ನೆಗೆದು ಕೈ ಹಿಡಿದು ಕರೆದುಕೊಂಡು ಬಂದರು. ಸಭೆಯ ಮಧ್ಯದ ಕಂಬದ ಹತ್ತಿರ, ಗಂಟು ಬಿಚ್ಚಿಹೋಗಿ ಕೂದಲು ಮುಖ ಮುಚ್ಚುವಂತೆ ತಲೆ ಬಗ್ಗಿಸಿಕೊಂಡು ನಿಂತ. ಮಾದೇವಯ್ಯನವರು ಅವನನ್ನು ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಒಳಗಿನಿಂದ ದೀಪ ಹೊತ್ತಿಸಿಕೊಂಡು ಬಂದು ಒಂದು ದೇವರ ಪಟ ತರುವಂತೆ ನಂಜಮ್ಮನಿಗೆ ಹೇಳಿದರು. ನಂಜಮ್ಮ ಒಂದು ಮಣೆ ತಂದುಹಾಕಿ, ಜೋಡಿ ಸೊಡಲು ಹೊತ್ತಿಸಿ, ರಾಮದೇವರ ಪಟದೊಡನೆ ಮಣೆಯ ಮೇಲೆ ಇಟ್ಟಳು. ಅಯ್ಯನವರು ಕುಂಕುಮದ ಭರಣಿ ಕೇಳಿದರು. ಅದೂ ಬಂದ ಮೇಲೆ, ಅವರೇ ಭರಣಿಯಿಂದ ಕುಂಕುಮ ತೆಗೆದು ಅಪ್ಪಣ್ಣಯ್ಯನ ಹಣೆಗೆ ಇಟ್ಟು ದೇವರ ಪಟವನ್ನು ಅವನ ಕೈಲಿ ಹಿಡಿಸಿ ಕೇಳಿದರು; ‘ನೋಡಣ್ಣಾ, ಸುಳ್ಳು ಏಳಿದ್ರೆ ದೇವ್ರು ನಿನ್ನ ಕೈಕಾಲು ಕತ್ರಿಸ್ಬಿಡ್ತಾನೆ. ಸುಂಕ್ಲಮ್ಮಮಾರಿ ಬಂದು ನಿನ್ನ ಬಡಕಂಡ್ ಓಯ್ತದೆ. ನಿಜ ಏಳ್ಬುಡು. ನೀನು ನಿಮ್ಮಮ್ಮಾರಿಗೆ ಕಾಣದ ಹಂಗೆ ಎಂಡ್ತಿ ಊರಿಗೆ ಓಗಿದ್ಯೋ ಇಲ್ವೋ?.

ಅಪ್ಪಣ್ಣಯ್ಯ ಮಾತನಾಡಲಿಲ್ಲ. ‘ನನ್ನ ಕಂದನ ಕೈಲಿ ಸುಳ್ಳು ಸುಳ್ಳೇ ಯಾಕೆ ಪ್ರಮಾಣ ಮಾಡುಸ್ತೀಯೋ ಜಂಗಮಯ್ಯ?’ -ಎಂದು ಗಂಗಮ್ಮ ಕೂಗಿದಳು. ಆದರೆ ಅದು ಕೇಳಿಸದವರಂತೆ ಅಯ್ಯನವರು, ‘ಮಾತಾಡ್ಬೇಕು. ನಿಜ ಏಳ್ದೆ ಇದ್ರೆ ನಿನ್ನ ಕೈ ಕಾಲಿಗೆ ಲಕ್ವಾ ಹ್ವಡೀತೈತೆ. ಅಲ್ಲಿ ಉರೀತಿರಾ ದೀಪ ಬುಗ್ ಅಂತ ಹತ್ಕಂಡು ಸುಟ್ಟುಬುಡ್ತೈತೆ. ಶನಿಮಹಾತ್ಮೆ ನೋಡಿಲ್ವ? ವಿಕ್ರಮಾರ್ಕರಾಯನ ಕೈ ಕಾಲು ಹ್ಯಂಗೆ ಕತ್ರಿಸ್ ಓಯ್ತದೆ. ಊಂ, ಮಾತಾಡ್ ಬುಡು’
ಅಪ್ಪಣ್ಣಯ್ಯನ ಮನಸ್ಸಿನಲ್ಲಿ ಭಯ ಹುಟ್ಟಿಬಿಟ್ಟಿತು. ನಾಯಿಸಿಂಗೇನಹಳ್ಳಿಯ ದೊಂಬೀ ದಾಸರು ಆಡಿದ ಶನಿಮಹಾತ್ಮೆ ಯಕ್ಷಗಾನದಲ್ಲಿ ವಿಕ್ರಮಾರ್ಕ ತೊಡೆ ಕತ್ತರಿಸಿಕೊಂಡು ಅಳುತ್ತಿದ್ದ ಚಿತ್ರ ಕಣ್ಣುಮುಂದೆ ಬಂತು. ಮಾದೇವಯ್ಯನವರು ಇನ್ನೊಂದು ಸಲ -‘ಸುಳ್ಳು ಏಳಿದ್ರೆ ಸನಿದೇವರು…..’ ಎನ್ನುವ ಮೊದಲೇ ಅವನು ‘ನಾ ಸುಳ್ಹೇಳಲ್ಲ ಕಣ್ರಿ. ನಾನೆಲ್ಡು ಸಲ ನುಗ್ಗೀಕೆರೆಗೆ ಹೋಗಿದ್ದೆ’ ಎಂದುಬಿಟ್ಟ.

‘ಎಷ್ಟೆಷ್ಟು ದಿನ ಇದ್ದೆ?’
ಹದಿನೈದು ದಿನ ಒಂದ್ ಸಲ, ಇನ್ನೊಂದ್ ಸಲ ನಂಗೆ ಗ್ಯಾಪಕವಿಲ್ಲ.’ ‘ಈಗ ಎಷ್ಟು ದಿನದಲ್ಲಿ ಹೋಗಿದ್ದೆ?’
ಈಗ ಎರಡನೇ ಸಲಿ ಪ್ಲೇಗು ಬಂದಿತ್ತಲ್ಲಾ ಆಗ.’
ಎಂದರೆ ಹೆಚ್ಚು ಕಡಿಮೆ ಆರು ವರ್ಷವಾಗಿತ್ತು. ನಂಜಮ್ಮ ಒಳಗೆ ಹೋಗಿ ಸಾತುವಿನ ಹುಡುಗನ ಕೈ ಹಿಡಿದು ತಂದು ನಿಲ್ಲಿಸಿದಳು. ಸುಮಾರು ಐದು ವರ್ಷದ ಅವನ ಮುಖ ಅಪ್ಪಣ್ಣಯ್ಯನನ್ನೇ ಹೋಲುತ್ತಿತ್ತು.
‘ಮುಂಡೇಗಂಡ ಜಾವಗಲ್ಲಿಗೆ ಹೋಗ್ತೀನಿ ಅಂತ ಹೇಳಿ ಹೀಗ್ ಮಾಡ್ದೇನೋ? ನಾಳೆ ದಿನದಿಂದ ನೀನು ಅಲ್ಲಿಗೇ ಹೋಗು. ನಿಂಗೆ ನಾನು ಹಿಟ್ ಹಾಕುಲ್ಲ. ಹಾದರಕ್ ಹುಟ್ಟಿದ ಸೂಳೇಮಗನೆ’ -ಎಂದು, ಮೇಲಿದ್ದ ಗಂಗಮ್ಮ ಅಲ್ಲಿಂದ ಹೋಗಿಬಿಟ್ಟಳು. ಇನ್ನು ಯಾವ ಸ್ವಾರಸ್ಯವೂ ಉಳಿಯುವುದಿಲ್ಲವೆಂದು ತಿಳಿದ ಗ್ರಾಮಪ್ರಮುಖರೂ ಪುರೋಹಿತರುಗಳೂ ಒಬ್ಬೊಬ್ಬರಾಗಿ ಎದ್ದು ಹೊರಟುಹೋದರು.

– ೨ –

ಅದೇದಿನ ಗಂಗಮ್ಮ ಮಗನನ್ನು ಕರೆದುಕೊಂಡು ಹಳ್ಳಿಯ ಕಡೆ ಹೊರಟುಹೋದಳು. ಅವಳು ಹೀಗೆ ಹೋಗುವುದು ಇದು ಮೊದಲ ಸಲವೇನಲ್ಲ. ಅಣ್ಣಾಜೊಯಿಸನ ಹತ್ತಿರ ಗುಡಿಯ ಬಾಗಿಲಿನ ಬೇರೊಂದು ಬೀಗದಕೈ ಇದ್ದುದರಿಂದ ತಾನು ಆಗ ಬಾಗಿಲು ತೆಗೆದು ದೇವರ ಪೂಜೆ ಮಾಡುತ್ತೇನೆಂದು ಹೇಳಲು ಅನುಕೂಲವಾಗಿತ್ತು.

ಸಾತು, ಇಬ್ಬರು ಮಕ್ಕಳು, ಮತ್ತು ತಂಗಮ್ಮ, ನಂಜಮ್ಮನ ಮನೆಯಲ್ಲಿಯೇ ಉಳಿದರು. ಈ ಜನರಿಗೂ ಆಗುವಷ್ಟು ರಾಗಿ ಅವರೇಕಾಳೇನೋ ನಂಜಮ್ಮನ ಮನೆಯಲ್ಲಿತ್ತು. ಆದರೆ ಅವರಿಗೆ ರಾಗಿಹಿಟ್ಟು ತಿಂದರೆ ಹೊಟ್ಟೆ ಅಳ್ವಕವಾಗುತ್ತಿತ್ತು. ಅವರೇಬೇಳೆಯ ಸಾರಿನಿಂದ ವಾಯುವಾಗುತ್ತಿತ್ತು. ಅಕ್ಕಿ ತೊಗರಿಬೇಳೆಗಳನ್ನು ಹೊಂದಿಸಿ ದಿನವೂ ಮಾಡುವುದು ನಂಜಮ್ಮನ ಶಕ್ತಿಗೆ ಸಾಧ್ಯವಿರಲಿಲ್ಲ. ಯಾವುದಾದರೂ ಹಬ್ಬ ಬಂದರೆ ದಪ್ಪ ಕೆಂಪು ಅಕ್ಕಿಯ ಅನ್ನ, ತೊಗರಿಬೇಳೆ ಸಾರು ಮಾಡುವುದು ಅವಳ ಶಕ್ತಿಯಾಗಿತ್ತು. ಆದರೆ ವಿಧಿಯಿಲ್ಲ, ಅಸಮಾಧಾನ ತೋರಿಸದೆ ನಂಜು ಅವರಿಗೆ ದಿನವೂ ಅನ್ನ ತೊಗರಿಬೇಳೆಗಳನ್ನೇ ಮಾಡಿ ಬಡಿಸುತ್ತಿದ್ದಳು. ಅನ್ನ ಕಂಡರೆ ಅವಳ ಮಕ್ಕಳು ಬಿಡುವುದಿಲ್ಲ. ಇನ್ನು ಚನ್ನಿಗರಾಯರು ಯಾಕೆ ಬಿಟ್ಟಾರು? ಎಲ್ಲರಿಗೂ ಅನ್ನವೇ ಆದರೆ ತಾನೊಬ್ಬಳು ಹಿಟ್ಟು ತಿಂದು ಆಗುವ ಉಳಿತಾಯವೇನು? ಒಟ್ಟಿನಲ್ಲಿ ಖರ್ಚನ್ನು ನಿಭಾಯಿಸುವುದು ಕಷ್ಟವಾಯಿತು.

ಹದಿನೈದು ದಿನದ ನಂತರ ತಾಯಿ ಮಗ ಊರಿಗೆ ಬಂದರು. ವಿಷಯ ತಿಳಿದ ನಂಜಮ್ಮ ಆ ದಿನ ರಾತ್ರಿ ದೀಪ ಹಚ್ಚಿದ ಮೇಲೆ, ‘ನಿಮ್ಮ ಚಿಕ್ಕಪ್ಪುನ್ನ ಕರ್ಕಂಡ್ ಬಾ. ಅಜ್ಜಿ ಎದುರಿಗೆ ಕರೀಬ್ಯಾಡ’ ಎಂದು ಹೇಳಿ ಪಾರ್ವತಿಯನ್ನು ಕಳಿಸಿದಳು. ಸೂಕ್ಷ್ಮ ತಿಳಿದಿದ್ದ ಹುಡುಗಿ ಹೋಗಿ ಅಪ್ಪಣ್ಣಯ್ಯನನ್ನು ಕರೆದುಕೊಂಡೇ ಬಂದಳು. ಇಲ್ಲಿ ಹೆಂಡತಿಯನ್ನು ನೋಡಿದ ಅಪ್ಪಣ್ಣಯ್ಯನಿಗೆ ಒಂದು ಕಡೆ ಆಶೆ, ಇನ್ನೊಂದುಕಡೆ ಭಯ, ಮತ್ತೊಂದು ರೀತಿಯಲ್ಲಿ ನಾಚಿಕೆ ಮೊದಲಾಗಿ, ಬಂದವನು ಸುಮ್ಮನೆ ಕಂಬದ ಹತ್ತಿರ ನಿಂತು ಕೊಂಡ. ನಂಜಮ್ಮನೇ ಅವನನ್ನು ಮಾತನಾಡಿಸಿ ಕೂರಿಸಿದಳು. ಒಳಗೆ ಸಾತು ಅಡಿಗೆ ಮಾಡುತ್ತಿದ್ದಳು.
ಅಪ್ಪಣ್ಣಯ್ಯ ಇಲ್ಲೇ ಊಟ ಮಾಡಿ. -ನಂಜಮ್ಮ ಎಂದಳು.
‘ಅಮ್ಮ….’
‘ಅವರೇನೂ ಅನ್ನುಲ್ಲ. ರಾತ್ರಿ ಹೊತ್ತು ಅವರು ಹ್ಯಾಗೂ ಫಲಾರಕ್ಕೆ ರೊಟ್ಟಿ ಹಾಕ್ಕಂಡು ತಿಂತಾರೆ. ಏಳಿ ಕೈ ಕಾಲು ತೊಳ್ಕಳಿ.’

ಅಪ್ಪಣ್ಣಯ್ಯ ಕೈ ಕಾಲು ತೊಳೆದುಕೊಂಡ. ಚೆನ್ನಿಗರಾಯರೂ ಎದ್ದರು. ಹುಡುಗರನ್ನೂ ಕೂರಿಸಿ ಬಡಿಸುವಂತೆ ನಂಜಮ್ಮ ಸಾತುವಿಗೆ ಹೇಳಿದಳು. ಸಾಕು ಬೇಕು ಎನ್ನಲೂ ಅಪ್ಪಣ್ಣಯ್ಯನಿಗೆ ಸಂಕೋಚ. ಬೇಕೆ ಬೇಡವೆ ಎಂದು ಕೇಳಲು ಅವಳಿಗೂ ನಾಚಿಕೆ, ಅವಮಾನ, ತಿರಸ್ಕಾರ. ಊಟ ಮಾಡುವಾಗ ನಂಜಮ್ಮ ತಂಗಮ್ಮರು ಅಂಗಳದಲ್ಲಿ ಇದ್ದರು. ಆಮೇಲೆ ಅಣ್ಣ ತಮ್ಮ ಎಲೆ ಅಡಿಕೆ ಹೊಗೆಸೂಪ್ಪು ಹಾಕಿಕೊಂಡರು. ನಂಜಮ್ಮ ಒಳಗೆ ಹೋಗಿ ಸಾತುವಿನ ಕೈಲಿ ಸ್ವಲ್ಪ ಹೊತ್ತು ಏನೋ ಪಿಸುಮಾತು ಆಡಿದಳು. ಆ ಮಾತಿಗೆ ವಿಧವೆ ತಂಗಮ್ಮನೂ ಸೇರಿಕೊಂಡರು.

ಆ ಮನೆಯಲ್ಲಿ ದಿನಸಿ ತುಂಬುವ ವಾಡೆಗಳ ಒಂದು ಕತ್ತಲೆ ಕೋಣೆ ಇತ್ತು. ಬಾಗಿಲಿದ್ದ ಅದರ ಕಸ ಗುಡಿಸಿ ನಂಜಮ್ಮ ಚಾಪೆ ಹಾಕಿ, ಸಾತು ತನ್ನ ಸಂಗಡ ತಂದಿದ್ದುವುಗಳಲ್ಲಿ ಎರಡು ಹಾಸಿಗೆಗಳನ್ನು ಜೊತೆಯಲ್ಲಿ ಹಾಕಿದಳು. ಅಪ್ಪಣ್ಣಯ್ಯ ಮೇಲೆ ಎದ್ದಾಗ, ‘ಇವತ್ತು ಇಲ್ಲೇ ಮಲಕ್ಕಳಿ’ ಎಂದಳು.

ಅವನಿಗೆ ಈ ಅನಿರೀಕ್ಷಿತದಿಂದ ಆದ ಸಂತೋಷದ ಜೊತೆಗೆ ಗಾಬರಿಯೂ ಹುಟ್ಟಿತು. ಅವನ ಅರಿವಿಗೇ ತಿಳಿಯದಂತೆ ‘ಅಮ್ಮ….’ ಎಂದ. ನಂಜುವೇ ‘ಅಮ್ಮನ ಜೊತೆಗೆ ಬೇಕಾದ್ರೆ ಪಾರ್ವತೀನೂ ರಾಮಣ್ಣನನ್ನೂ ಕಳಿಸ್ತೀನಿ. ಅವರಿಗೇನು ಒಬ್ಬರೇ ಇರುಕ್ಕೆ ಭಯವಿಲ್ಲ. ನೀವು ವಾಡೆಮನೇಲಿ ಮಲೀಕ ನಡೀರಿ’ ಎಂದಳು. ಚನ್ನಿಗರಾಯರು ಮಾತ್ರ, ‘ನಿನಗ್ಯಾಕೆ ಇಲ್ಲದ ಪುಲಾರ?’ ಎಂದು ಕಣ್ಣು ಕೆಕ್ಕರಿಸಿ ಹೆಂಡತಿಯನ್ನು ನೋಡಿದರು. ಶಿವಪೂಜೆ ಮಧ್ಯೆ ಕರಡಿ ಬಿಟ್ಟಂತೆ ಮಾತನಾಡಿದ ಗಂಡನನ್ನು ದುರುಗುಟ್ಟಿಕೊಂಡು ನೋಡುತ್ತ ನಂಜು ಎಂದಳು; ‘ನೀವೊಂದಿಷ್ಟು ಬಾಯಿ ಮುಚ್ಕಂಡು ಕೂತ್ಕಳಿ. ತಿರುಮಲೇಗೌಡರ ಮನ್ಲಿ ಗಿಣ್ಣು ಹಾಲು ತಂದ್ ಕೊಟ್ಟಿದ್ದಾರೆ. ಒಳಗೆ ಕಾಯ್ಸಿ ಪಾಯ್ಸ ಮಾಡ್ತಿದೆ. ನಿಮಗೆ ಬೇಕೋ ಬ್ಯಾಡ್ವೋ ಹೇಳಿ.’

ಗಿಣ್ಣು ಹಾಲಿನ ಪಾಯಸದ ಹೆಸರು ಕೇಳಿದ ತಕ್ಷಣ ಚೆನ್ನಿಗರಾಯರು ಎದ್ದು ಅಡಿಗೆ ಮನೆಗೆ ಹೋದರು. ಅಪ್ಪಣ್ಣಯ್ಯ ವಾಡೆ ಮನೆ ಹೊಕ್ಕ. ಅಡಿಗೆ ಮನೆಗೆ ಬಂದ ನಂಜು- ‘ನಾವು ಮಾಡಿ ಕೂಗ್ತೀವಿ. ನೀವು ಅಲ್ಲೀತಂಕ ಇನ್ನೊಂದ್ಸಲ ಹೊಗೆಸೊಪ್ಪು ಹಾಕ್ಕತ್ತಿರಿ’ ಎಂದು ಹೊರಗೆ ಕಳಿಸಿದಳು, ಸಾತುವಿಗೆ ಹೇಳಿ ಅವಳನ್ನು ಅಪ್ಪಣ್ಣಯ್ಯನ ಜೊತೆಗೆ ಕಳಿಸಿ ತಾನೇ ಹೊರಗಿನಿಂದ ಬಾಗಿಲು ಎಳೆದುಕೊಂಡಳು.

ಸಮಯಸ್ಪೂರ್ತಿಯಿಂದ ಗಿಣ್ಣಿನ ಮಾತನಾಡಿ ಅವಳು ಸಂದರ್ಭವನ್ನು ನಿಭಾಯಿಸಿದ್ದಳು. ಆದರೆ ಈಗ ಯಾವ ಹಸು ಅಥವಾ ಎಮ್ಮೆಯನ್ನು ಈಯಿಸಿ ಗಿಣ್ಣು ಕರೆದು ಪಾಯಸ ಕಾಯಿಸುವುದು? ಆದರೂ ಅವಳು ಬುದ್ದಿ ಕಳೆದುಕೊಳ್ಳಲಿಲ್ಲ. ಹುಡುಗರಿಗೆಲ್ಲ ಹಾಸಿಗೆ ಹಾಕಿಕೊಟ್ಟು ಅಂಗಳದಲ್ಲಿ ಮಲಗಿಸಿದಳು. ಒಂದು ತೆಂಗಿನಕಾಯಿ ತುರಿದು ಬರ -ಅಕ್ಕಿಯ ಜೊತೆಗೆ ತಿರುವಿ ಎರಡು ಉಂಡೆ ಬೆಲ್ಲ ಮುಳುಗಿಸಿ ಪಾಯಸ ಕಾಯಿಸಿದ ಮೇಲೆ ಒಂದಿಷ್ಟು ಸಾದಾ ಹಾಲು ಹಾಕಿದಳು. ತಂಗಮ್ಮನನ್ನು ಹೊರಗೆ ಕಳಿಸಿ ಗಂಡನನ್ನು ಒಳಗೆ ಕೂಗಿದಳು. ಎಚ್ಚರವಾಗಿ ಕಾಯುತ್ತಾ ಕುಳಿತಿದ್ದ ಶ್ಯಾನುಭೋಗರು, ಕರೆದತಕ್ಷಣ ಎದ್ದು ಬಂದು ಕುಕ್ಕುರುಗಾಲಿನಲ್ಲಿ ಕೂತಮೇಲೆ ಪಾಯಸದ ಡಬರಿಯನ್ನೇ ಮುಂದೆ ಇಟ್ಟು ಒಂದು ಅಲ್ಲ್ಯೂಮಿನಿಯಂ ತಟ್ಟೆ ಹಾಕಿ ಹೇಳಿದಳು; ‘ನೀವೇ ಬಡುಸ್ಕಂಡು ತಿನ್ನಿ. ಅವರ ಮನೆ ಎಮ್ಮೆ ಕರು ಹಾಕಿ ಆಗಲೇ ಹದಿನೈದು ದಿನ ಆಗಿತ್ತಂತೆ. ಆ ಗಿಣ್ಣು ಹಾಲು ಒಡೀಲೇ ಇಲ್ಲ. ಆದ್ರೂ ಪಾಯ್ಸ ಚನ್ನಾಗಿದೆ,’
ಚೆನ್ನಿಗರಾಯರು ಒಂದು ಸೌಟನ್ನು ತಟ್ಟೆಗೆ ಹಾಕಿಕೊಂಡು ನೆಕ್ಕಿದರು. ಸಿಹಿ ಸಿಹಿಯಾದ ಗಿಣ್ಣಿನ ಪಾಯಸ ಚಪ್ಪರಿಸುವ ಹಾಗಿತ್ತು. ‘ನಾನು ಹೋಗ್ಲೇ, ನೀವು ತಿಂತೀರಾ?’ -ಎಂದು ಅವಳು ಕೇಳಿದುದಕ್ಕೆ, ‘ಊ’ ಎನ್ನಲೂ ಅವರಿಗೆ ವ್ಯವಧಾನವಿರಲಿಲ್ಲ.
ಬೆಳಗ್ಗೆ ಎದ್ದವನೇ ಅಪ್ಪಣ್ಣಯ್ಯ ಕೆರೆ ಏರಿಯ ಕಡೆಗೆ ಹೋದಮೇಲೆ ಗುಡಿಗೆ ಬಂದು ಅಮ್ಮನಿಗೆ ಹೇಳಿದ; ‘ಅವ್ರುನ್ನ ಇಲ್ಲಿಗೇ ಕರ್ಕಂಡ್ ಬರಾಣೇನಮ್ಮ?’
‘ಯಾರನ್ನೋ?’
‘ಆ, ನುಗ್ಗಿಕೆರೆಯೋರುನ್ನ’

ಗಂಗಮ್ಮ ಅವಾಕ್ಕಾದರು. ಒಂದು ನಿಮಿಷದಲ್ಲಿ ಅವಳಿಗೆ ಎಲ್ಲವೂ ಹೊಳೆದುಹೋಯಿತು. ‘ಅಯ್ಯೋ ಸೂಳೇಮಗನೇ, ನೀನೆಲ್ಲೋ ರಾತ್ರಿ ದ್ಯಾವಲಾಪುರದಾಗೆ ಮ್ಯಾಳ ನೋಡುಕ್ಕೆ ಹೋಗಿದ್ದೆ ಅಂತ ನಾನು ತಿಳ್ಕಂಡಿದ್ದೆ. ಹೋಗಿ ಆ ಹಾದರಗಿತ್ತಿ ಜೊತೆ ಮಲಕ್ಕಂಡಿದ್ದೇನೋ?
ಅಪ್ಪಣ್ಣಯ್ಯ ತಲೆ ತಗ್ಗಿಸಿಕೊಂಡು ನಿಂತಿದ್ದ. ಒಂದು ಹತ್ತು ನಿಮಿಷ ತನಗೆ ತಿಳಿದಂತೆ ಆಶೀರ್ವಚನ ನುಡಿದಮೇಲೆ ಗಂಗಮ್ಮ ಕೇಳಿದಳು: ‘ನಮ್ಮನ್ನೂ ಅಲ್ಲಿಗೇ ಕರ್ಕಂಡ್ ಹೋಗು ಅಂತ ಆ ಹಾದರಗಿತ್ತಿಯೇ ಅಂದ್ಲೇನೋ?’
ಅಪ್ಪಣ್ಣಯ್ಯ ಸ್ವಲ್ಪ ಧೈರ್ಯ ಮಾಡಿದ: ‘ಅವ್ಳೇನು ಹೇಳಾದು? ನಾನೇ ಹಾಗಂದೆ. ಕರ್ಕಂಡ್ ಬರಾಣ. ಅವ್ರುನ್ನ ಅಲ್ಲಿ ಯಾಕ್ ಬಿಟ್ಟಿರಬೇಕು?’
‘ಕರ್ಕಂಡ್ ಹೋಗ್ತೀನಿ ಅಂತ ಅವ್ಳಿಗೆ ಹೇಳಿ ಬಂದಿದೀ ಏನೋ ಮಿಂಡ್ರಿಗ್ ಹುಟ್ಟಿದ ಸೂಳೇಮಗನೆ? ತಡೀ, ಅಣ್ಣಾಜೋಯಿಸರಿಗೆ ಹೇಳಿ ನಿಂಗ್ ಮಾಡುಸ್ತೀನಿ’ – ಎಂದು ಮೇಲೆ ಎದ್ದವಳೇ ನೇರವಾಗಿ ಹೋಗಿ ಜೋಯಿಸನ ಮನೆಯ ಸೂರಿನ ಕೆಳಗೆ ನಿಂತು ಕೂಗಿದಳು: ‘ಜೋಯಿಸ್ರೇ, ಇಲ್ಲಿ ಬನ್ನಿ ಸ್ವಲ್ಪ.’

ಇವಳು ಕೂಗಿದ ಜೋರಿಗೆ ಸುತ್ತಮುತ್ತಲಿನ ಏಳೆಂಟು ಜನ ಸೇರಿದರು. ಹೊರಗೆ ಬಂದ ಜೋಯಿಸನಿಗೆ ಇವಳು ಹೇಳಿದಳು: ‘ನ್ಯನ್ನೆ ರಾತ್ರಿನಾಗೆ ಇವ್ನು ಹೋಗಿ ಆ ಹಾದರಗಿತ್ತಿ ತಾವ ಮಲೀಕ್ಕಂಡು ಬಂದಿದಾನೆ. ಇವತ್ತಿನಿಂದ ನಮ್ಮನೆಗೇ ಕರ್ಕಂಡ್ ಬತ್ತೀನಿ ಅಂತಾನೆ. ದೇವರ ಗುಡೀಲಿ ಗಂಡ ಹೆಂಡ್ತಿ ಇರಬೌದೆ ನೀವೇ ಹೇಳಿ.’
ಹನುಮಂತರಾಯ ಮೊದಲೇ ಬ್ರಹ್ಮಾಚಾರಿ ದೇವರು. ಅವನ ಗುಡಿಯಲ್ಲಿ ಗಂಡ ಹೆಂಡತಿ ಜೊತೆಯಲ್ಲಿರುವುದರಿಂದ ಧರ್ಮನಿಷಿದ್ಧವೇ. ‘ಅವ್ನಿಗೆಲ್ಲೋ ಬುದ್ಧಿ ಕೆಟ್ಟದೆ. ಹಾಗೆ ಮಾಡಿದ್ರೆ ಎಲ್ರುನ್ನೂ ದೇವಸ್ಥಾನದಿಂದ ಹೊರಕ್ಕೆ ಕಳುಸ್ತೀನಿ. ಗ್ರಾಮದಲ್ಲಿ ಮಳೆ ಬೆಳೆ ಆಗ್ಬೇಕೋ ಬ್ಯಾಡ್ವೋ ಇಂಥ ಕೆಲ್ಸ ಮಾಡಿದ್ರೆ?’ – ಎಂದ ಅಣ್ಣಾಜೋಯಿಸ, ತಾನೇ ಗುಡಿಗೆ ಬಂದು ಎಚ್ಚರಿಕೆ ಹೇಳಿ ಹೋದ. ಅಪ್ಪಣ್ಣಯ್ಯನ ಮುಖ ಸಪ್ಪಗಾಯಿತು. ಆದರೆ ರಾತ್ರಿ ಪಟ್ಟ ಸುಖದ ನೆನಪಾಗಿ ಹೆಂಡತಿಯನ್ನು ಬಿಟ್ಟಿರುವುದೂ ಅಸಾಧ್ಯವೆನಿಸಿತು. ಎಲ್ಲಿಲ್ಲದ ಧೈರ್ಯ ತಂದುಕೊಂಡ ಅವನು ಅತ್ತಿಗೆಯ ಮನೆಗೆ ಹೋಗಿ, ನಡೆದ ಸಂಗತಿ ಹೇಳಿದ. ಅಷ್ಟರಲ್ಲಿ ಹಿಂದಿನಿಂದ ಬಂದ ಗಂಗಮ್ಮ ಬಾಗಿಲಿನ ಹೊರಗೇ ನಿಂತು ನಂಜಮ್ಮ, ಚೆನ್ನಿಗರಾಯ, ಇಬ್ಬರಿಗೂ ಸಹಸ್ರನಾಮ ಮಾಡಿದಳು. ಇನ್ನೂ ಮಲಗಿ ನಿದ್ರಿಸುತ್ತಾ ರಾತ್ರಿಯ ಪಾಯಸವನ್ನು ಅರಗಿಸಿಕೊಳ್ಳುತ್ತಿದ್ದ ಚೆನ್ನಿಗರಾಯರು ಎದ್ದು ಕುಳಿತರು. ಅವರು ಹೆಂಡತಿಯನ್ನು ಬಯ್ಯುತ್ತಿದ್ದರೋ ಏನೋ, ಆದರೆ ತಕ್ಷಣ ಕೆರೆಯ ಏರಿಯ ಹಿಂದಕ್ಕೆ ಹೋಗುವ ಅವಸರವಾಗಿದ್ದುದರಿಂದ ಒಂದು ಮಾತೂ ಆಡದೆ ಎದ್ದು ಬೇಗಬೇಗ ಅರೆ ಓಟದಿಂದ ಹೊರಟುಹೋದರು. ಈ ಮಗನೂ ತನಗೆ ವಿರೋಧವಾಗಿದ್ದಾನೆಂದು ಭಾವಿಸಿದ ಗಂಗಮ್ಮ ಅಲ್ಲಿ ನಿಲ್ಲದೆ ತನ್ನ ಮನೆಗೆ ಹಿಂದಿರುಗಿದಳು.

– ೩ –

ಅಪ್ಪಣ್ಣಯ್ಯ ಆ ದಿನವೂ ಅತ್ತಿಗೆಯ ಮನೆಯಲ್ಲಿ ಉಳಿದ. ಎರಡು ಮೂರು ದಿನದಲ್ಲಿ ಒಂದು ತೀರ್ಮಾನವಾಯಿತು: ಅಪ್ಪಣ್ಣಯ್ಯ ಹೆಂಡತಿ ಮಕ್ಕಳ ಜೊತೆಯಲ್ಲಿ ಬೇರೆಯಾಗಿ ಇರುವುದು. ಅವನ ಅತ್ತೆ ಅವರೊಂದಿಗೆ ಇರುವುದನ್ನಂತೂ ಪ್ರತ್ಯೇಕವಾಗಿ ನಿಶ್ಚಯಿಸಬೇಕಾಗಿರಲಿಲ್ಲ. ಇನ್ನು ಜೀವನೋಪಾಯಕ್ಕೆ ದಾರಿ: ಇಷ್ಟು ವರ್ಷಗಳು ತಾಯಿಯ ಜೊತೆಯಲ್ಲಿ ಹಳ್ಳಿ ಹಳ್ಳಿ ತಿರುಗಿ ದೇಶಾವರಿ ಮಾಡಿ ಅನುಭವವಿದ್ದ ಅವನು, ‘ತಿರುಪೇನಾದ್ರೂ ಮಾಡಿ ಹೆಂಡ್ತಿ ಮಕ್ಳನ್ನ ಸಾಕ್ತೀನಿ. ಗಂಡ್ಸಲ್ವೇನು?’ ಎಂಬ ತಾಕತ್ತಿನ ಮಾತನಾಡಿದ. ಇನ್ನು, ವಾಸಿಸುವ ಜಾಗಕ್ಕೆ ಒಂದು ಏರ್ಪಾಟಾಗಬೇಕು.

ಕುರುಬರಹಳ್ಳಿಯ ಗುಂಡೇಗೌಡರದೇ ಈ ಊರಿನಲ್ಲಿ ಒಂದು ಹಿತ್ತಿಲಿದೆ. ಬೇಲಿಯೂ ಇಲ್ಲದ, ಸೊಪ್ಪುಸೆದೆ ಒಟ್ಟಲು ಯಾರೂ ಉಪಯೋಗಿಸುತ್ತಲೂ ಇಲ್ಲದ ಅದು ಹನುಮಂತರಾಯನ ಗುಡಿಗೆ ಮೂವತ್ತು ಮಾರು ದೂರದಲ್ಲಿದೆ. ನಂಜಮ್ಮ ಅಪ್ಪಣ್ಣಯ್ಯನನ್ನು ಕರೆದುಕೊಂಡು ಕುರುಬರಹಳ್ಳಿಗೆ ಹೋಗಿ ಗುಂಡೇಗೌಡರನ್ನು ಕೇಳಿದಳು. ಅದರಲ್ಲಿ ಅಪ್ಪಣ್ಣಯ್ಯ ಸ್ವಂತ ಖರ್ಚಿನಿಂದ ಒಂದು ಗುಡಿಸಲು ಕಟ್ಟಿಕೊಂಡು ಇರಲು ತಮ್ಮದೇನು ಅಡ್ಡಿ ಇಲ್ಲವೆಂದು ಗೌಡರೇ ಒಪ್ಪಿಗೆ ಕೊಟ್ಟರು. ಅಪ್ಪಣ್ಣಯ್ಯ ಚೆನ್ನಿಗರಾಯರಂತೆ ಮೈಗಳ್ಳನಲ್ಲ. ಹುಮ್ಮಸ್ಸು ಬಂದು ಯಾರಾದರೂ ಹೊಗಳಿ ದಾರಿ ತೋರಿಸಿದರೆ ದುಡಿಯುವ ಶಾರೀರಿಕ ಶಕ್ತಿ ಮತ್ತು ಉತ್ಸಾಹ, ಎರಡೂ ಇದ್ದುವು. ಬಹಳ ದಿನದಿಂದ ಕಾಣದ ಹೆಂಡತಿಯ ಸಹವಾಸ ಹುಮ್ಮಸ್ಸು ಕೊಟ್ಟಿತು. ನಂಜಮ್ಮನ ಮಾರ್ಗದರ್ಶನ ಲಭಿಸಿತು. ಸಾತು ತನ್ನೊಡನೆ ತಂದಿದ್ದ ಒಂದು ಸೇರಿನ ಬೆಳ್ಳಿಯ ಪಂಚಪಾತ್ರೆಯನ್ನು ಇಪ್ಪತ್ತೈದು ರೂಪಾಯಿಗೆ ಮಾರಿ ಹಣ ಕೊಟ್ಟಳು. ಹತ್ತು ಬಿದಿರು, ಹತ್ತು ಗಾಡಿಮಣ್ಣು, ಎರಡು ಕಲ್ಲುಕಂಬಗಳನ್ನು ದುಡ್ಡುಕೊಟ್ಟು ಹೇರಿಸುದುದಷ್ಟೇ. ಅಪ್ಪಣ್ಣಯ್ಯನೇ ಹದಿ ತೆಗ್ದು ಸೊಂಟದುದ್ದ ತಡಿಕೆ ಗೋಡೆ ಎಬ್ಬಿಸಿ ಕಲ್ಲುಕಂಬ ನೆಟ್ಟು ಬಿದಿರು, ಗಳು, ದಬ್ಬೆಕಟ್ಟಿದ. ಅವರಿವರ ತೋಟದಲ್ಲಿ ಕೇಳಿತಂದ ಆರು ಏಳು ನೂರು ಗರಿ ಸೋಗೆ ಹೊದಿಸಿಯಾಯಿತು. ಬಡಗಿಯ ಆಚಾರಿ ಮೂರು ರೂಪಾಯಿಗೆ ನಾಲ್ಕು ಅಡಿ ಎತ್ತರದ ಒಂದು ಬಾಗಿಲು ಕದ ಚಿಲಕವನ್ನೂ ಮಾಡಿ ಜೋಡಿಸಿಕೊಟ್ಟ. ಒಂದು ಶುಭ ದಿವಸ ಮಡಿಕೆಯಲ್ಲಿ ಹಾಲು ಉಕ್ಕಿಸಿ ಗೃಹಪ್ರವೇಶ ಮಾಡಿ ಆಯಿತು. ಇವರು ಗೃಹಪ್ರವೇಶ ಮಾಡುವ ತನಕ ಎಲ್ಲರ ಊಟವೂ ನಂಜಮ್ಮನ ಮನೆಯಲ್ಲೇ ಆಗುತ್ತಿತ್ತು.

ಇನ್ನು ಜೀವನಕ್ಕೆ ದಾರಿಯಾಗ ಬೇಕು. ಅಪ್ಪಣ್ಣಯ್ಯ ಈಗ ತಾಯಿಯ ಜೊತೆ ಬಿಟ್ಟು ಒಬ್ಬನೇ ಹಳ್ಳಿಯ ಕಡೆ ಹೋಗುತ್ತಾನೆ. ಶಿವೇಗೌಡನೆಂಬ ವ್ಯಕ್ತಿಯನ್ನು ಶಪಿಸಿ ಏನಾದರೂ ಕೊಡುವಂತೆ ಮನೆ ಮನೆಗಳಲ್ಲಿ ಕೇಳುತ್ತಾನೆ. ಅವನೇನು ಬೀದಿಯ ಬಾಗಿಲಿನಲ್ಲಿ ನಿಂತು ಜೋಳಿಗೆ ಹಿಡಿದು ಬೇಡುವ ಭಿಕ್ಷುಕನಲ್ಲ. ಆದುದರಿಂದ ಕೊಡುವವರು ಅಚ್ಚೇರಿಗೆ ಕಡಿಮೆಯಿಲ್ಲದೆ ಮೊರದಲ್ಲಿಯೇ ಕೊಡುತ್ತಾರೆ. ಅಷ್ಟರಲ್ಲಿ ಸುಗ್ಗಿಯ ಕಾಲ ಬಂತು. ಅವನು ಕಣಕ್ಕೇ ಹೋಗುತ್ತಾನೆ. ರಾಗಿ ಬಡಿದು ತೂರಿ ರಾಶಿಪೂಜೆ ಮಾಡಿದಾಗ, ಬಂದವರಿಗೆ ಮೊರದಲ್ಲಿ ದಾನ ಮಾಡಿದರೆ ರಾಶಿ ದೊಡ್ಡದಾಗುತ್ತದೆ ತಾನೇ? ಆದುದರಿಂದ ಅವನಿಗೆ ಮೊರದ ತುಂಬ ಸಿಕ್ಕುತ್ತದೆ. ಎಷ್ಟೋ ಸಲ ಒಂದೇ ಕಣದಲ್ಲಿ ಗಂಗಮ್ಮ. ಅಪ್ಪಣ್ಣಯ್ಯ, ಇಬ್ಬರೂ ಸಂಧಿಸುವುದುಂಟು. ಅವಳು ಮಗನನ್ನು ಮಾತನಾಡಿಸುವುದಿಲ್ಲ. ಇವನೂ ಮುಖವೆತ್ತಿ ನೋಡುವುದಿಲ್ಲ. ‘ಇಬ್ಬಿಬ್ಬರು ಬ್ಯಾರೆ ಅಂತ ವೇಸ ಕಟ್ ಕಂಡು ಬಂದಿದೀರಾ? ಎಲ್ಡೆಲ್ಡು ಸಲಿ ನಾವೆಲ್ಲಿ ತರಾಣ? -ಎಂದು ಮೂದಲಿಸುವ ರೈತರೂ ಉಂಟು. ಸುಮ್ಮನೆ ಇಬ್ಬರಿಗೂ ಕೊಡುವವರೂ ಉಂಟು.

ಇದೇ ಪರಿಸ್ಥಿತಿಯು ಹಳ್ಳಿಗಳ ಕಡೆಯೂ ಆಗುತ್ತಿತ್ತು. ಹಿಂದೆ ತಾಯಿ ಮಗ ಜೊತೆಯಲ್ಲಿ ಹೋಗುತ್ತಿದ್ದ ಮನೆಗಳಿಗೆ ಈಗ ಇವರಲ್ಲಿ ಯಾರಾದರೂ ಒಬ್ಬರು ಮೊದಲು ಹೋಗುತ್ತಿದ್ದರು. ಕೆಲವು ದಿನದ ನಂತರ ಹೋದವರನ್ನು ‘ಅವ್ವ ಮಗ ಬ್ಯಾರೆ ಅಂತ ಆಟ ಕಟ್ಕಂಡ್ ಎಲ್ಡೆಲ್ಡು ಸಲಿ ಬಂದ್ರೆ ನಾವೆಲ್ಲಿಂದ ತರಾಣ್ರಿ?’ ಎಂದು ಕೆಲವರು ಕೇಳುತ್ತಿದ್ದರು. ಇದನ್ನರಿತ ಗಂಗಮ್ಮ ಸುತ್ತಣ ಹಳ್ಳಿಗಳನ್ನೆಲ್ಲ ತಾನೇ ಮೊದಲು ಸುತ್ತುವರಿದು ಬಂದು ಬಿಟ್ಟಳು. ಅವಳದು ಎಷ್ಟಾದರೂ ಒಬ್ಬಳ ಹೊಟ್ಟೆ. ಖರ್ಚು ಕಡಿಮೆ. ಹೀಗಾಗಿ ಮೂರು ವರ್ಷ ತಿಂದು ಮುಗಿಸುವ ರಾಗಿ. ಕಾಳು, ಮೆಣಸಿನಕಾಯಿಗಳು ಅವಳ ಹತ್ತಿರ ದಾಸ್ತಾನಾದುವು. ಅಪ್ಪಣಯ್ಯ ಐದು ಹೊಟ್ಟೆ ಸಾಕಬೇಕು. ಅಲ್ಲದೆ ಗಂಡ ಸತ್ತ ಮುಪ್ಪಿನ ವಯಸ್ಸಿನ ವಿಧವೆ ಮನೆಗೆ ಬಂದು ಕೇಳಿದರೆ ಜನಕ್ಕೆ ಉಂಟಾಗುತ್ತಿದ್ದ ಕರುಣೆ ಗಟ್ಟಿಮುಟ್ಟಾದ ಪ್ರಾಯದ ಗಂಡಸು ಬಂದು ಕೇಳಿದರೆ ಹುಟ್ಟುತ್ತಿರಲಿಲ್ಲ. ‘ಕೂಲಿ ಮಾಡ್ಕಂಡ್ ತಿನ್ನಾಕೇನಾಗೈಯ್ತಯ್ಯಾ? ಕೈ ಕಾಲು ಬಿದ್ಹೋಗೈತಾ?’ ಎಂದು ಕೇಳುವವರೂ ಇದ್ದರು.

ಹೆಂಡತಿ ಬಂದ ಹೊಸತರಲ್ಲಿ ಅಪ್ಪಣಯ್ಯನಿಗೆ ತುಂಬ ಉತ್ಸಾಹವಿತ್ತು. ನಾಲ್ಕು ದಿನ ಕಳೆದಂತೆ ಅದು ಸ್ವಲ್ಪ ಕಡಿಮೆಯಾಯಿತು. ದಿನವೆಲ್ಲ ಊರೂರು ತಿರುಗಿ ಎಲ್ಲರ ಮನೆಯ ಹೊಸಲು ತುಳಿದು ಅವರು ಅಂದಂತೆ ಅನ್ನಿಸಿಕೊಳ್ಳುವ ಬವಣೆಯು ಮನಸ್ಸಿಗೆ ಹಿತಕರವಾಗಿರಲಿಲ್ಲ. ಹಿಂದೆ ತಾಯಿಯ ಸಂಗಡ ಇದ್ದಾಗ ಬೇಡಿ ತರುವ ಕೆಲಸ ಅವಳದಾಗಿತ್ತು. ಕೆಂಪಿನ ಸೀರೆಯಲ್ಲಿ ಕಟ್ಟಿಕೊಂಡು ಒಂದು ಕಡೆ ತಂದು ಸುರಿಯುತ್ತಿದ್ದುದನ್ನು, ಗೋಣಿ ಚೀಲಕ್ಕೆ ತುಂಬಿ ಹೊತ್ತು ತರುವುದಷ್ಟೇ ಅವನ ಹೊರೆಯಾಗಿತ್ತು. ಸ್ವತಃ ಬೇಡುವ ಕಿರಿಕಿರಿಯಿಂದ ಈಗ ಅವನು ಮನಸ್ಸಿನಲ್ಲೇ ವ್ಯಘ್ರನಾಗುತ್ತಿದ್ದ.
ಒಂದು ದಿನ ನಂಜಮ್ಮ ಇವರ ಮನೆಗೆ ಬಂದಳು. ಅಪ್ಪಣ್ಣಯ್ಯ ಹಳ್ಳಿಯ ಮೇಲೆ ಹೋಗಿದ್ದ. ಆ ಮಾತು ಈ ಮಾತು ಆಡುತ್ತಾ ನಂಜಮ್ಮ ಎಂದಳು; ‘ನಿಮ್ಮ ಜಯಲಕ್ಷ್ಮಿಗೆ ಆಗಲೇ ನಮ್ಮ ಪಾರ್ವತಿಯ ವಯಸ್ಸು. ಅವಳನ್ನೂ ಸ್ಕೂಲಿಗೆ ಸೇರಿಸಿ. ರಾಮಕೃಷ್ಣನನ್ನೂ ಸೇರಿಸಿ. ನಾಲ್ಕು ಅಕ್ಷರ ಕಲೀದಿದ್ರೆ ಮಕ್ಕಳ ಪಾಡೇನು?’
‘ಸೇರುಸ್ಬೇಕು.’
‘ಇನ್ನೊಂದು ವಿಷಯ ನಿಮಗೆ ಹೇಳ್ಬೇಕು ಅಂತಿದ್ದೆ. ನೀವು ಮನೆಗೆ ತಂದ ರಾಗೀನ ಮಾರ್‍ತಾ ಇರ್‍ತೀರಂತೆ. ಹಾಗೆ ಮಾರ್‍ಬಾರ್‍ದು. ಸುಗ್ಗೀಕಾಲದಲ್ಲಿ, ಸುಗ್ಗಿ ಕಳೆದ ಎರಡು ಮೂರು ತಿಂಗಳು ಜನ ದಿನಸಿ ಕೊಡ್ತಾರೆ. ಜ್ಯೇಷ್ಠಾ ಆಷಾಢ ಕಳೆದ ಮೇಲೆ ಯಾರೂ ಒಂದು ಕಾಳೂ ಕೊಡುಲ್ಲ. ದಿನಸಿ ಈಗ ಕಳುದ್ರೆ ಮುಂದೆ ತುಂಬ ಕಷ್ಟ. ಸಣ್ಣೇನಹಳ್ಳಿಯಿಂದ ಒಂದೆರಡು ಮಣ್ಣಿನ ವಾಡೆ ತರಿಸಿ ಗುಡ್ಡೆ ಹಾಕಿಡಿ.’
‘ಹಾಳು ರಾಗಿ ಇಟ್ಕಂಡೇನು ಮಾಡೋದು? ಅದನ್ಯಾರು ತಿಂತಾರೆ?’ ವಿಧವೆ ತಂಗಮ್ಮ ಎಂದಳು.

ಇವರಿಗೆ ರಾಗಿ ತಿಂದರೆ ಮೈಗೆ ಆಗುವುದಿಲ್ಲವೆಂಬುದು ನಂಜಮ್ಮನಿಗೆ ಗೊತ್ತು. ಆದರೆ ಹಳ್ಳಿಯ ರಾಗಿಯಲ್ಲದೆ ಅಕ್ಕಿ ತಿನ್ನುವವರು ಎಷ್ಟು ಜನ ಇದ್ದಾರೆ? ಅಭ್ಯಾಸ ಮಾಡಿಕೊಂಡರೆ ತಾನಾಗಿಯೇ ಹೊಂದಿಕೊಳ್ಳುತ್ತದೆ. ಹೊಂದಿಸಿಕೊಳ್ಳದೆ ಜೀವನ ಮಾಡುವುದು ದಢೂತಿ ಜಮೀನ್ದಾರರಿಗೆ ಮಾತ್ರ ಸಾಧ್ಯ. ಇವರು ಹೀಗೆಂದರೆ ಹೇಗೆ? ಅವಳೇನೋ ತನಗೆ ತಿಳಿದ ವಿವೇಕ ಹೇಳಿದಳು. ವಿವೇಕದ ಇನ್ನೂ ಎರಡು ಮಾತನ್ನು ಹೇಳಿಯೇ ಬಿಡಬೇಕೆಂದು ಅವಳ ಮನಸ್ಸಿನಲ್ಲಿತ್ತು. ಅವರೆಲ್ಲರಿಗೂ ಕಾಫಿ ಕುಡಿಯುವ ಪದ್ಧತಿ. ಕಡೂರು ಸೀಮೆಯ ಅವರಿಗೆ ಚಿಕ್ಕ ವಯಸ್ಸಿನಿಂದ ಅಭ್ಯಾಸವಂತೆ. ಸಾತು ಮೊದಲು ಇಲ್ಲಿಗೆ ಬಂದಿದ್ದಾಗ ಅತ್ತೆಯ ಭಯ ಹೇಗೋ ಅದನ್ನು ತಡೆದುಕೊಂಡಿದ್ದಳು. ಈಗ ಕಾಫಿ ಕುಡಿಯುವ ಜನ ರಾಮಸಂದ್ರದಲ್ಲೂ ಹೆಚ್ಚುತ್ತಿದ್ದಾರೆ. ಅನುಕೂಲಸ್ಥರು ಕುಡಿಯಲೂ ಬಹುದು. ಆದರೆ ಅಪ್ಪಣ್ಣಯ್ಯನ ಸಂಸಾರ ಈ ನಾಲ್ವರಿಗೂ ದಿನಕ್ಕೆ ಎರಡು ಹೊತ್ತು ಬೇಕೇ ಆದರೆ ಎಲ್ಲಿಂದ ತರಬೇಕು?
‘ನೀವು ಅದನ್ನು ಬಿಟ್ಟುಬಿಟ್ಟರೆ ಎಷ್ಟೋ ಉಳಿತಾಯವಾಗುತ್ತೆ ಅಲ್ಲವೆ?’
‘ನಮಗಂತೂ ಆಗುಲ್ಲಪ್ಪ. ಬೆಳಗ್ಗೆ ಎದ್ದು ಅದು ಹ್ಯಾಗೆ ಬರೀ ಹೊಟ್ಟೇಲಿರೋದು? ನೀವಂತೂ ಬರಿ ರೊಟ್ಟಿ ತಿಂದ್ಕಂಡ್ ಇರ್ತೀರಿ. ನಾವು ಹಾಗೆ ಇದ್ದೋರಲ್ಲ’ ತಂಗಮ್ಮ ಎಂದಳು. ನಂಜಮ್ಮ ಆ ಮಾತನ್ನು ಅಲ್ಲಿಗೇ ನಿಲ್ಲಿಸಿದಳು.
ಒಂದು ದಿನ ಸಾತು ಓರಗಿತ್ತಿಯ ಮನೆಗೆ ಬಂದು ಕುಳಿತು ಮಾತನಾಡುತ್ತಿದ್ದಳು. ನಂಜಮ್ಮ ಚಟಚಟನೆ ಕಡ್ಡಿ ಮುರಿಯುತ್ತಾ ಎರಡು ನಿಮಿಷಕ್ಕೆ ಒಂದರಂತೆ ಮುತ್ತುಗದೆಲೆ ಹಚ್ಚಿಸಿ ಹಾಕುತ್ತಿದ್ದಳು. ‘ಅಕ್ಕಾ, ನೀವು ಇಷ್ಟೊಂದು ಕೆಲಸ ಮಾಡ್ತೀರ ಮನೆ ಕೆಲಸದ ಜೊತೆಗೆ, ಶ್ಯಾನುಭೋಗಿಕೆ ಲೆಕ್ಕ ಬರೀತೀರಾ. ಎಲೆ ಹೊತ್ಕಂಡು ಬಂದು ಎಲೇನೂ ಹಚ್ತೀರ. ನಮ್ಮ ಕೈಲಿ ಆಗುಲ್ಲಮ್ಮ.’
ನಂಜಮ್ಮ ಹೇಳಿದಳು; ‘ನೋಡು, ನಿನ್ನ ಕೈಲಿ ಹೇಳ್ಬೇಕು ಅಂತ ನಂಗೆ ಆಗಲೇ ಎರಡು ಮೂರು ತಿಂಗಳು ಅನ್ನುಸ್ತಿದೆ. ನೀವೇನು ತಿಳ್ಕತ್ತೀರೋ ಅಂತ ಸುಮ್ಮನಿದ್ದೆ.’
‘ಏನ್ ಹೇಳಿ.’
‘ನಿಮ್ಮನೇಲಿ ಒಟ್ಟು ಊಟ ಮಾಡೋರು ಐದು ಜನ. ಸಂಪಾದನೆ ಮಾಡೋನು ಒಬ್ಬ. ಅದೂ ಭಿಕ್ಷೆ ಬೇಡಿ ಯಾರೂ ಬದುಕಿಲ್ಲ. ಏನಾದ್ರೂ ಸ್ವಂತ ಮಾಡ್ಬೇಕು. ಸ್ವಂತ ಮಾಡು ತಿಳಿವಳಿಕೆ ಇದ್ರೆ ಈ ಸಂಸಾರ ಯಾಕೆ ಈ ಸ್ಥಿತಿಗೆ ಬರ್ತಾ ಇತ್ತು? ನೀವಾರೂ ಏನಾದ್ರೂ ಮಾಡಿ. ಮನ್ಲಿ ನೀವು ಇಬ್ರು ಹೆಂಗಸ್ರಿದ್ದೀರಿ. ಮನೆ ಕೆಲ್ಸ ಮಾಡ್ಕೊಂಡು ಆಡಾಡ್ಕಂಡು ಹಚ್ಚಿಸಿದ್ರೂ ದಿನುಕ್ಕೆ ಮುನ್ನೂರು ಎಲೆ ಹಚ್ಚಿಸ್ಬೌದು. ಈಗ ಎಲೆ ಧಾರಣೆ ಮೂರಕ್ಕೆ ಏಳಾಣೆಯಾಗಿದೆ. ತಿಪಟೂರಿನಿಂದ ಎಷ್ಟಾದ್ರೂ ಲಾರೀಲಿ ಬೆಂಗಳೂರಿಗೆ ಕಳುಸ್ತಾರಂತೆ. ತಿಂಗ್ಳಿಗೆ ಮೂವತ್ತು ರೂಪಾಯಿ ಸಂಪಾದನೆ ಆದ್ರೆ ಎಷ್ಟೋ ಆಯ್ತಲ್ಲ.’
‘ಒಂದೇ ಸಮ ಮುತ್ತುಗದೆಲೆ ದಳದ್ರೆ ಉಷ್ಣವಾಗುಲ್ವೆ?’
‘ಅಭ್ಯಾಸ ಮಾಡ್ಕಂಡ್ರೆ ಏನೂ ಆಗುಲ್ಲ. ಉಷ್ಣವಾದ್ರೂ ರಾತ್ರಿ ಮಲೀಕ್ಕಳೂವಾಗ ಅಂಗಾಲಿಗೆ ಹರಳೆಣ್ಣೆ ತಿಕ್ಕಂಡ್ರೆ ಸರಿಯಾಗುತ್ತೆ.’

ತಾನೂ ಎಲೆ ಹಚ್ಚಿಸಬೇಕೆಂದು ಸಾತು ನಿಶ್ಚಯಿಸಿದಳು. ಮರುದಿನ ಓರಗಿತ್ತಿಯ ಮನೆಗೆ ಬಂದು ಅವಳ ಸಮಕ್ಕೂ ಕಡ್ಡಿ ಮುರಿದಳು. ನಂಜಮ್ಮ ನೂರ ಇಪ್ಪತ್ತು ಎಲೆ ಹಚ್ಚುವ ಹೊತ್ತಿಗೆ ಇವಳು ಹದಿನೆಂಟು ಮುಗಿಸಿದಳು. ಅಭ್ಯಾಸವಾದಂತೆ ಬೇಗಬೇಗ ಬರುತ್ತೆ ಎಂದು ನಂಜಮ್ಮ ಪ್ರೋತ್ಸಾಹದ ಮಾತನಾಡಿದಳು. ಆದರೆ ಮರುದಿನ ಹೊತ್ತಿಗೆ ಅವಳ ಕೈಕಾಲು ಉರಿಯಲು ಮೊದಲಾಯಿತು. ‘ಕಟ್ಕಂಡ್ ಗಂಡ್ಸು ಹೆಂಡ್ತಿ ಮಕ್ಳುನ್ ಸಾಕ್ಬೇಕು. ನೀನು ಎಲೆ ಪಲೆ ಹಚ್ಚಬ್ಯಾಡಮ್ಮ ಮಗು’ – ಎಂದು ತಂಗಮ್ಮ ಮಗಳಿಗೆ ಆರೈಕೆಯ ಮಾತು ಹೇಳಿದಳು. ಅಲ್ಲಿಗೆ ಅವಳ ಎಲೆ ಹಚ್ಚುವುದು ನಿಂತುಹೋಯಿತು. ಈ ನಡುವೆ ಅವಳು ಮುಟ್ಟು ಸಹ ಆಗಿರಲಿಲ್ಲ. ವಾಂತಿಯೂ ಪ್ರಾರಂಭವಾಯಿತು.

ಸಾತುವಿನ ತಂದೆ ಶ್ಯಾಮಭಟ್ಟರು ಪುರೋಹಿತರಾಗಿದ್ದವರು, ಪುರೋಹಿತರ ಮನೆತನಕ್ಕೆ ಸೇರಿದವರು. ಆದುದರಿಂದ ಮಡಿ ಮೈಲಿಗೆ, ಆಚಾರ ಕರ್ಮಗಳ ವಿಚಾರದಲ್ಲಿ ತಂಗಮ್ಮನಿಗೆ ಹೆಚ್ಚು ತಿಳಿವಳಿಕೆ ಇತ್ತು. ಗಂಗಮ್ಮನ ಮನೆಯಲ್ಲಿ ಮೊದಲಿಂದಲೂ ಮಡಿ ಸ್ವಲ್ಪ ಕಡಿಮೆಯೇ. ಅಲ್ಲದೆ ನಂಜಮ್ಮ ಹೊರಗೆ ಕಾಣಿಸುವಂತೆ ಅಲ್ಪಸ್ವಲ್ಪ ಮಾಡುತ್ತಿದ್ದಳೇ ಹೊರತು ಒಳಗಡೆಯಲ್ಲಿ ಏನೂ ಇಟ್ಟುಕೊಂಡಿರಲಿಲ್ಲ. ಮಡಿಕೆಯಲ್ಲಿ ಸಾರು ಮಾಡುತ್ತಾಳೆ. ಅನ್ನ ಮಾಡಿದ ದಿನ, ತಪ್ಪಲೆಗಿಂತ ತಂಪು ಎಂದು ಮಡಿಕೆಯಲ್ಲೇ ಮಾಡುತ್ತಾಳೆ. ಒಕ್ಕಲಿಗರಿಗೆ ಅದು ಸರಿ. ಬ್ರಾಹ್ಮಣರು ಹೀಗೆ ಮಾಡುವುದುಂಟೆ? ನಂಜಮ್ಮನ ಮಕ್ಕಳು ಎಷ್ಟೋ ದಿನ, ಮಾದೇವಯ್ಯನವರು ಕೊಟ್ಟುದನ್ನು ತಿಂದುಬಿಡುತ್ತಿದ್ದುವು. ಮೂರನೇ ಹುಡುಗ ನಾಲ್ಕು ವರ್ಷದ ವಿಶ್ವ ಮಾದೇವಯ್ಯನವರು ಅವರ ಜಾತಿಯವರ ಮನೆಯಲ್ಲಿ ಕಂತೆಭಿಕ್ಷೆ ಮಾಡಿಕೊಂಡು ಬಂದುದನ್ನು ಅವರ ತೊಡೆಯ ಮೇಲೆ ಕೂತುಕೊಂಡೇ ಎಷ್ಟೋ ದಿನ ಊಟ ಮಾಡಿ ಬಿಡುತ್ತಿತ್ತು. ಅದು ಗೊತ್ತಿದ್ದರೂ ನಂಜಮ್ಮ ಮಕ್ಕಳನ್ನು ಹೊಡೆದು ಬುದ್ಧಿ ಕಲಿಸುತ್ತಿರಲಿಲ್ಲ. ಇದೆಲ್ಲ ತಂಗಮ್ಮನಿಗಂತೂ ಸರಿಬೀಳುತ್ತಿರಲಿಲ್ಲ, ಸಾತುವಿಗೂ ಹಿಡಿಸುತ್ತಿರಲಿಲ್ಲ.
ಗ್ರಾಮದ ಪುರೋಹಿತರಾದ ಅಯ್ಯಾಶಾಸ್ತ್ರಿಗಳ, ಅಣ್ಣಾಜೋಯಿಸರ ಹೆಂಡತಿಯರಾದರೆ ಆಚಾರ ವ್ಯವಹಾರ ಮಡಿ ಮೈಲಿಗೆ ಇಟ್ಟುಕೊಂಡಿರುವ ಹೆಂಗಸರು. ಅಣ್ಣಾಜೋಯಿಸರ ಹೆಂಡತಿ ಮುಟ್ಟಾದಾಗ ಗಂಡನ ಕಣ್ಣಿಗೆ ಸಹ ಬೀಳುವುದಿಲ್ಲ. ಮುಟ್ಟಾದಾಗಲೂ ನಂಜಮ್ಮ ಕದ್ದು ಅಡಿಗೆ ಮಾಡುತ್ತಾಳೆ. ‘ನಮ್ಮ ಪಾರ್ವತಿ ಮಾಡ್ತು ಅಂತ ಸುಳ್ಳು ಸುಳ್ಳೇ ಹೇಳ್ತಾಳೆ ಕಣ್ರೀ’ – ಎಂದು ಅಣ್ಣಾಜೋಯಿಸನ ಹೆಂಡತಿ ವೆಂಕಟಲಕ್ಷ್ಮಿ ಹೇಳಿದಾಗ, ಇನ್ನೊಂದು ದಿನ ಅವಳ ಮನೆಗೆ ಹೋಗಬಾರದೆಂದು ತಂಗಮ್ಮ ನಿಶ್ಚಯಿಸಿಕೊಂಡಳು; ‘ಇತರ ಜಾತಿ ಹೆಂಗಸರು ಮುಟ್ಟಾದ ದಿನವೇ ನೀರು ಹಾಕ್ಕಂಡು ಒಳಗೆ ಹೋಗಿ ಅಡಿಗೆ ಮಾಡ್ತಾರೆ. ಬ್ರಾಹ್ಮಣರಾಗಿ ಹುಟ್ಟಿ ಹೀಗೆ ಮಾಡೋದು ಅಂದ್ರೆ ಕೀಳು ಜಾತಿ ಕೆಟ್ಹೋಯ್ತೆ? ಥೂ.’
ಒಂದು ದಿನ ತಂಗಮ್ಮ, ಸಾತು, ಇಬ್ಬರೂ ಅಣ್ಣಾಜೋಯಿಸರ ಮನೆಗೆ ಹೋಗಿದ್ದಾಗ ಜೋಯಿಸರೇ ಒಂದು ಮಾತು ತೆಗೆದರು; ಪಿತ್ರಾರ್ಜಿತ ಆಸ್ತಿ ಅಂದಮೇಲೆ ಅಣ್ಣ ತಮ್ಮಂದಿರು ಇಬ್ಬರಿಗೂ ಸಮಪಾಲು ಬರಬೇಕು ಅಲ್ವೆ? ಉಳಿದ ಆಸ್ತಿಯಂತೂ ಹೋಯ್ತು. ಶ್ಯಾನುಭೋಗಿಕೇನ ಚೆನ್ನಿಗರಾಯ ಒಬ್ಬನೇ ಅನುಭವಿಸೋಸು, ಅಪ್ಪಣ್ಣಯ್ಯಂಗೆ ಅದರಲ್ಲಿ ಏನೂ ಇಲ್ಲ ಅಂದ್ರೆ ಏನೂ ನ್ಯಾಯ? ಅಣ್ಣ ತಮ್ಮ ಇಬ್ಬರಿಗೂ ಅದರ ಪೋಟಿಕೆ ಹಂಚಬೇಕು ಅಂತ ಸರ್ಕಾರದ ಕಾನೂನೇ ಇದೆ. ಹೀಗೆ ಎಷ್ಟು ದಿನ ಅಂತ ನಿಮಗೆ ಮೋಸ ಮಾಡ್ತಾರೆ ಅವ್ರು?’

ತಂಗಮ್ಮನ ಕಿವಿ ನೆಟ್ಟಗಾಯಿತು. ತಮಗೆ ಸೇರಬೇಕಾದುದರ ಬಗೆಗೆ ಬಾಯಿಯೇ ಬಿಡದೆ ಬುದ್ಧಿವಂತಿಕೆ ಮಾಡುತ್ತಿರುವ ಓರಗಿತ್ತಿ ನಂಜಮ್ಮನ ವಿಷಯದಲ್ಲಿ ಸಾತುವಿಗೆ ಒಳಗೇ ಕಿಚ್ಚು ಕವರಿತು. ‘ಯಲ್ಲಾ ಬೂಟಾಟಿಕೆ ಇವಳದ್ದು’ – ಮನಸ್ಸಿನಲ್ಲಿ ಅಂದುಕೊಂಡಳು.
‘ನೀವೂ ಅಪ್ಪಣ್ಣಯ್ಯನೂ ಕೇಳಿ. ಅವ್ರು ಕೊಡುಲ್ಲ ಅಂದ್ರೆ ತಿಪಟೂರಿಗೆ ಹೋಗಿ ಅಮಲ್ದಾರ್ ಸಾಹೇಬರಿಗೆ ಅಡ್ಡಬಿದ್ದು ಕೇಳ್ಕಂಡ್ರೆ ಕೊಡುಸ್ತಾರೆ’ ಜೋಯಿಸರು ಸಲಹೆ ಕೊಟ್ಟರು. ಆ ದಿನ ಸಂಜೆಗೆ ಅಪ್ಪಣ್ಣಯ್ಯ ಹಳ್ಳಿಯಿಂದ ಮನೆಗೆ ಬಂದಾಗ ಸಾತುವೇ ಎಲ್ಲವನ್ನೂ ಹೇಳಿದಳು; ‘ನಮಗೂ ಮಕ್ಳು ಮರಿ ಇಲ್ವೆ? ಮುಂದೆ ಪಿತ್ರಾರ್ಜಿತವಾದುದ್ದು ಅಂತ ಅವುಕ್ಕೆ ಏನೂ ಸೇರಬ್ಯಾಡ್ವೆ? ನೂರ ಇಪ್ಪತ್ತು ರೂಪಾಯಿ ಪೋಟಿಗೇಲಿ ಅರ್ಧ, ಅಂದ್ರೆ ಅರವತ್ತು ಬರಬೇಕು. ಮೇಲೆ ಮಸಿ ಕಾಣಿಕೆ ಬರುವುದು ಬಿಟ್ಟಿಯೇನೋ?’
ಅಪ್ಪಣ್ಣಯ್ಯನಿಗೆ ಹಿಂದು ಮುಂದು ತಿಳಿಯದು. ಶ್ಯಾನುಭೋಗಿಕೆ ಪಟೇಲಿಕೆಗಳು ಯಾವಾಗಲೂ ಹಿರಿಯ ಮಗನಿಗೆ ಸೇರುತ್ತವೆ ಎಂಬುದನ್ನು ಅವನು ಕೇಳಿದ್ದ, ಕಂಡಿದ್ದ. ಆದರೆ ಸರ್ಕಾರದ ಕಾನೂನೇ ಬೇರೆ ಥರ ಇದೆಯೇನೋ! ಅಣ್ಣಾಜೋಯಿಸರಿಗಿಂತ ನನಗೇನು ಗೊತ್ತು ಎಂದವನು, ರಾತ್ರಿಯಾಗಿದ್ದರೂ ಜೋಯಿಸರ ಮನೆಗೆ ಹೋಗಿ ಕೇಳಿದ. ಅಣ್ಣ ತಮ್ಮಂದಿರಿಗೆಲ್ಲ ಅದರಲ್ಲಿ ಸಮಪಾಲು ಬರಬೇಕೆಂದು ಹೇಳಿ, ‘ಇಷ್ಟು ವರ್ಷ ಅವರೇ ತಿಂದು ನಿನಗೆ ಎಪ್ಪೆ ಹಾಕಿದಾರಲ್ಲೋ ದಡ್ಡ’ ಎಂದು ಅವರು ಹಿತನುಡಿದಾಗ ಅವನಿಗೆ ರೇಗಿಬಿಟ್ಟಿತು. ದುಡುದುಡನೆ ಅಲ್ಲಿಂದ ಓಡಿ ಅಣ್ಣನ ಮನೆಗೆ ಬಂದ. ಚನ್ನಿಗರಾಯರು ಇರಲಿಲ್ಲ. ಸೀಮೆ‌ಎಣ್ಣೆಯ ಲ್ಯಾಂಪಿನಲ್ಲಿ ಪಾರ್ವತಿ ರಾಮಣ್ಣರಿಗೆ ಪಾಠ ಹೇಳಿಕೊಡುತ್ತಾ ಕುಳಿತಿದ್ದ ಅತ್ತಿಗೆಯ ಮುಂದೆ ನಿಂತು ಕೇಳಿದ; ‘ಹೀಗೆಲ್ಲ ಮೋಸ ಮಾಡಿದ್ರೆ ನಾನು ಕೇಳುಲ್ಲ. ಪೋಟಿಗೇಲಿ ಅರ್ಧ ನಂಗೂ ಕೊಟ್ಬಿಡಬೇಕು.’
ಅವನ ಮಾತು ನಂಜಮ್ಮನಿಗೆ ಅರ್ಥವಾಗಲಿಲ್ಲ; ಯಾವ ಪೋಟಿಗೇಲಿ? ಏನು ನೀವು ಹೇಳೂದು?’
‘ಶ್ಯಾನುಬಾಕಿದು. ನಮ್ಮಪ್ಪ ಬರೀ ಚಿನ್ನಯ್ಯ ಒಬ್ಬುನ್ನೇ ಹುಟ್ಸಿರಲಿಲ್ಲ. ನನ್ನೂ ಉಟ್ಸಿದ್ದ. ಸಮಪಾಲು ಕೊಡ್ದೆ ಇದ್ರೆ ನಾನು ಅಮಲ್ದಾರ್ರ ಹತ್ರುಕ್ಕೇ ಹೋಗ್ತೀನಿ. ಹೂ’ – ಎಂದು ಹೇಳಿದ ಅವನು, ಅಣ್ಣನು ಮಾದೇವಯ್ಯನವರ ಗುಡಿಯಲ್ಲಿರಬಹುದೆಂದು ಯೋಚಿಸಿ ಅಲ್ಲಿಗೆ ಹೊರಟ ದಾರಿಯ ಉದ್ದಕ್ಕೂ ಅವನ ಬಾಯಿ – ‘ನಮ್ಮಪ್ಪ ನನ್ನೂ ಉಟ್ಸಿದ್ದ. ನಂಗೂ ಅರ್ಧ ಪೋಟಿಕೆ ಕೊಡ್ಬೇಕು. ನಾನು ಹಳ್ಳಿ ಹಳ್ಳಿ ತಿರುಗಿ ತಿರುಪೆ ಮಾಡೂದೂ, ಈ ಬೋಳೀಮಕ್ಳು ಪೋಟಿಕೆ ತಿಂದ್ಕಂಡು ಸುಖವಾಗಿರೋದೇನು!’ ಎಂದು ಬೀದಿಯವರಿಗೆಲ್ಲ ಹೇಳುವಂತೆ ತನಗೆ ತಾನೇ ಬಡಿದುಕೊಳ್ಳುತ್ತಿತ್ತು.

ಅವನು ಮಾದೇವಯ್ಯನವರ ಗುಡಿಗೆ ಹೋದುದು ನಂಜಮ್ಮನಿಗೆ ತಿಳಿಯಲಿಲ್ಲ. ಅದೇನು ಪೂರ್ತಿಯಾಗಿ ವಿಚಾರಿಸಬೇಕೆಂದು ಅವಳೇ ಎದ್ದು ಅಪ್ಪಣ್ಣಯ್ಯನ ಮನೆಗೆ ಬಂದರೆ ಅವನಿರಲಿಲ್ಲ. ‘ಅಪ್ಪಣ್ಣಯ್ಯ ನಮ್ಮನೆಗೆ ಬಂದು, ನಮ್ಗೂ ಪೋಟಿಕೆ ಅರ್ಧ ಬರ್‍ಬೇಕು ಅಂತ ಏನೇನೋ ಕೂಗಾಡ್ಕಂಡು ಹೋದ್ರು. ಅದೇನು ಸಮಾಚಾರ?’ ಎಂದು ಓರಗಿತ್ತಿಯನ್ನು ಕೇಳಿದಳು.
ಸಾತು – ‘ಅಣ್ಣ ತಮ್ಮ ಅಂತ ಇದ್ಮ್ಯಾಲೆ ಇಬ್ಬರಿಗೂ ಬರ್‍ಬ್ಯಾಡ್ವೆ? ಇವರಿಗೆ ತಿಳಿವಳಿಕೆ ಇಲ್ಲ ಅಂತ ಇಷ್ಟು ದಿನ ನೀವೊಬ್ರೇ ತಿನ್ಬೌದೇನೋ? ಈ ಕಾಲದಲ್ಲಿ ಯಾರನ್ನೂ ನಂಬುಕ್ ಆಗಲ್ಲ’ ಎಂದಳು.
‘ಸರ್ಕಾರದ ಕಾನೂನು ಹಾಗಿಲ್ಲ. ನಿಮಗೆ ಯಾರು ಹೇಳಿದೋರು ಹಾಗಂತ? ಪೋಟಿಕೆ ನೂರಿಪ್ಪತ್ತೇನೋ ಬರುತ್ತೆ. ಅದಕ್ಕೆ ಆಗೋ ಖರ್ಚೆಷ್ಟು? ಲೆಕ್ಕದ ಪುಸ್ತಕದ ಕಾಗದ ಶಾಯಿಯ ಖರ್ಚೆಷ್ಟು? ಕಣ್ಣಿಗೆ ಎಣ್ಣೆ ಬಿಟ್ಕಂಡು ರೂಲು ಹಾಕಿ ಲೆಕ್ಕ ಬರೆಯೋದೆಷ್ಟು? ಯಾವುದೂ ಯೋಚ್ನೆ ಮಾಡ್ದೆ ಅಪ್ಪಣ್ಣಯ್ಯ ಹೀಗೆ ಬೀದೀಲೆಲ್ಲ ಕೂಗಾಡ್ಕಂಡು ಹೋಗ್ಬೌದೆ?’
‘ಲೆಕ್ಕ ಏನು ಬರೆಯೋದು, ಬೇಕಾದ್ರೆ ನಾನೂ ಬರ್‍ಕೊಡ್ತೀನಿ. ಕೈ ಕೆಸರಾದ್ರೆ ತಾನೆ ಬಾಯಿ ಮೊಸರು?’

ಇನ್ನು ಮಾತು ಬೆಳೆಸಬಾರದೆಂದು ನಂಜಮ್ಮ ಮನೆಗೆ ಹೊರಟುಹೋದಳು. ಚೆನ್ನಿಗರಾಯರು ಗುಡಿಯಲ್ಲಿರಲಿಲ್ಲ. ಕೆರೆಯ ಏರಿಯ ಕಡೆಗೆ ಹೋಗಿದ್ದವರು ಅಷ್ಟರಲ್ಲಿ ಮನೆಗೆ ಬಂದು ಸಂಧ್ಯಾವಂದನೆಗೆ ಕೂತಿದ್ದರು. ಹುಡುಗರು ಲ್ಯಾಂಪಿನ ಬೆಳಕಿನಲ್ಲಿ ಪಾಠ ಬರೆಯುತ್ತಿದರು. ಸಂಧ್ಯಾವಂದನೆ ಮಾಡುವವರನ್ನು ಮಧ್ಯದಲ್ಲಿ ಮಾತನಾಡಿಸಬಾರದೆಂದು ನಂಜಮ್ಮ ಒಳಗೆ ಹೋಗಿ, ಅಡಿಗೆ ಮನೆಯ ಕಸ ಗುಡಿಸಿ ತಟ್ಟೆ ಹಾಕಿ ದೇವರಿಗೆ ದೀಪ ಹಚ್ಚಿಸಿ ಪ್ರದಕ್ಷಿಣೆ ನಮಸ್ಕಾರ ಮಾಡಿದಳು. ಅಪ್ಪಣ್ಣಯ್ಯನ ಸ್ವಭಾವ ಅವಳಿಗೆ ತಿಳಿಯದುದಲ್ಲ. ಆದರೆ ಸಾತುವಿನ ವರ್ತನೆಯಿಂದ ಆಶ್ಚರ್ಯವಾಯಿತು. ಗಂಡನಿಗೆ ಅವಳೇ ಹೇಳಿಕೊಟ್ಟಿದ್ದಾಳೆ. ಅವಳಿಗೆ ಯಾರು ಹೇಳಿಕೊಟ್ಟಿದ್ದಾರೆಯೋ? ಯಾರೇ ಆಗಲಿ, ಅವಳು ಹೀಗೆ ಬದಲಾಯಿಸಬಾರದು. ಈ ಕಾಲದಲ್ಲಿ ಯಾರಿಗೂ ಉಪಕಾರ ಮಾಡಬಾರದು. ಜನಕ್ಕೆ ಉಪ್ಪು ತಿಂದ ಜ್ಞಾಪಕ ಉಳಿಯುಲ್ಲ – ಎಂದು ಯೋಚಿಸುತ್ತಾ ಸುಮ್ಮನೆ ಕುಳಿತಳು.

ಅಷ್ಟರಲ್ಲಿ ಅಪ್ಪಣ್ಣಯ್ಯ ಮತ್ತೆ ಬಂದ ಶಬ್ಧವಾಯಿತು. ಅವನ ಜೊತೆಯಲ್ಲಿ ಎಂಟು ಹತ್ತು ಜನ ಬಂದ ಹಾಗೆ ಆಯಿತು. ಹಿಂದೆಯೇ ಅತ್ತೆ ಗಂಗಮ್ಮನ ಗಂಟಲು ಕೇಳಿಸಿತು. ನಂಜಮ್ಮ ಹೊರಗೆ ಬಂದು ನೋಡುತ್ತಾಳೆ. ಅಣ್ಣಾಜೋಯಿಸ, ಅಯ್ಯಾಶಾಸ್ತ್ರಿಗಳು, ರೇವಣ್ಣಶೆಟ್ಟಿ, ಗಾಣಿಗರಶಿಂಗ, ಹಿಂದಿನ ಶ್ಯಾನುಭೋಗ ಸಿವಲಿಂಗ, ಮೊದಲಾಗಿ ಒಂದು ಪಂಚಾಯ್ತಿಯ ಜನವೇ ಸೇರಿದೆ. ಪಟೇಲ ಶಿವೇಗೌಡ ಮಾತ್ರ ಬಂದಿರಲಿಲ್ಲ. ನಡುಮನೆಯಲ್ಲಿ ಕೂತು ಸಂಧ್ಯಾವಂದನೆ ಮಾಡುತ್ತಿದ್ದ ಚನ್ನಿಗರಾಯರು ಎದ್ದು ಪಂಚಪಾತ್ರೆಯನ್ನು ಅಡಿಗೆಮನೆಯ ಒಳಬಾಗಿಲಿಗೆ ಇಟ್ಟು ಪಂಚೆ ಹೊದೆದುಕೊಂಡರು. ನಂಜಮ್ಮ ಹೊರಗೆ ಬರುವುದೇ ತಡ, ಗಂಗಮ್ಮ ಸುರು ಮಾಡಿದಳು: ‘ಬಾಕಿ ಜಮೀನಿನಲ್ಲಾದ್ರೆ ಅಜ್ಜಿ ಪಾಲು ಅಂತ ತೆಗೆಯೋಲ್ವೆ? ಪುಣ್ಯಾತ್ಮರು ಇವರಿಬ್ಬರನ್ನೂ ಹುಟ್ಸಿದ್ದು. ನಿಜ. ನಂಗೆ ತಾಳಿ ಕಟ್ಟಿದ್ದೇ ಸುಳ್ಳೇ? ಪೋಟಿಕೇಲಿ ನಂಗೂ ಒಂದು ಪಾಲು ಬರ್‍ಬೇಕು. ನೀನೇ ಹೇಳು ರೇವಣ್ಣಶೆಟ್ಟಿ.’
ರೇವಣ್ಣಶೆಟ್ಟಿ ಎಂದ: ‘ಹಿಂದೆ ಶ್ಯಾನುಬಾಕಿ ಮಾಡಿದ್ದೋರು ಸಿವಲಿಂಗಣ್ಣಾರಿಗೆ ಎಲ್ಲಾ ಗೊತ್ತೈತೆ. ಅವ್ರೇ ನ್ಯಾಯ ಸ್ಥಾನದಲ್ಲಿ ಕುಂತ್ಕಳ್ಳಿ.’
ಸಿವಲಿಂಗ ತಕ್ಷಣ ಎದ್ದು ಬಂದು ಕಂಬದ ಹತ್ತಿರ ಕೂತು – ‘ಏನಂತೀಯಯ್ಯಾ ಚಿನ್ನಯ್ಯ?’ ಎಂದ. ಚೆನ್ನಿಗರಾಯರಿಗೆ ಅಷ್ಟರಲ್ಲಿ ವಿಷಯ ಅರ್ಥವಾಗಿತ್ತು. ಆದರೆ ಏನು ಹೇಳುವುದಕ್ಕೂ ತೋಚಲಿಲ್ಲ. ‘ಅವ್ಳುನ್ನೇ ಕೇಳಿ’ – ಎಂದು ಹೆಂಡತಿಯ ಕಡೆಗೆ ಕೈ ತೋರಿಸಿ, ತಾವು ಬಚಾವ್ ಆದವರಂತೆ ಕುಳಿತರು. ‘ನೀವೇ ಅದೇನು ಹೇಳ್ರಮ್ಮ’ – ಎಂದು ರೇವಣ್ಣಶೆಟ್ಟಿ ನಂಜಮ್ಮನ ಮುಖವನ್ನೇ ದಿಟ್ಟಿಸಿ ನೋಡುತ್ತಾ ಹೇಳಿ, ಒಂದು ನಿಮಿಷದ ಮೇಲೆ, ‘ಹ್ಯದುರ್ಕಾಬ್ಯಾಡಿ’ ಎಂದ.
ಅಷ್ಟರಲ್ಲಿ ಸಾತು ಮತ್ತು ತಂಗಮ್ಮ, ಇಬ್ಬರೂ ಬಂದು ಹೊರಬಾಗಿಲಿನ ಹತ್ತಿರ ನಿಂತಿದ್ದರು. ನಂಜಮ್ಮನಿಗೆ ಕೋಪ ಏರಿಹೋಗಿತ್ತು. ಎಲ್ಲರಿಗೂ ಒಟ್ಟಿಗೆ ಹೇಳಿದಳು: ‘ನಿಮ್ಮುನ್ನೆಲ್ಲ ಇಲ್ಲಿ ಕರಸ್ದೋರು ಯಾರು? ಕಂಡೋರ ಮನೆ ಲೆಕ್ಕಾಚಾರ ಮಾಡುಕ್ಕೆ ಓಡಿ ಬತ್ತೀರಲ್ಲ, ನಿಮ್ಮ ನಿಮ್ಮ ಮನೆ ವ್ಯವಹಾರ ನೋಡ್ಕಂಡು ಮರ್ಯಾದೆಯಾಗಿರಿ. ನೀವೆಲ್ಲ ಈಗ ಎದ್ದು ಹೊರಿಕ್ ಹೋಗ್ತೀರೋ ಅಥವ ಮರ್ಯಾದೆ ಆಗ್ಬೇಕೋ?’
ಈ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ. ಗಾಣಿಗರ ಶಿಂಗ, ಹೊರಕೇರಿ ಗುರುವಯ್ಯ ಮೊದಲಾದವರಿಗೆ ಹಿಂದುಮುಂದು ಏನೂ ಗೊತ್ತಿರಲಿಲ್ಲ. ‘ಪಂಚಾಯ್ತಿಯಾಗುತ್ತೆ ಬನ್ನಿ’ – ಎಂದು ಅಪ್ಪಣ್ಣಯ್ಯ ಬೀದಿಯಲ್ಲಿ ಕೂಗಿಕೊಂಡು ಹೋಗಿದ್ದ. ಅವರು ಎದ್ದು ಬಂದಿದ್ದರು. ಎಷ್ಟಾದರೂ ಗ್ರಾಮದ ಶ್ಯಾನುಭೋಗಿಕೆ ಲೆಕ್ಕ ಇವರ ಹತ್ತಿರ ಇದೆ. ತಮಗೇಕೆ ಇಲ್ಲದ ನಿಷ್ಠುರ ಎಂದುಕೊಂಡು, ಅವರೆಲ್ಲ ಎದ್ದು ಸುಮ್ಮನೆ ಹೊರಟುಹೋದರು. ಅವರು ಹೋದದ್ದೇ ತಡ ಉಳಿದವರ ಧೈರ್ಯವೂ ಕುಗ್ಗಿತು. ‘ಸುಮ್ನೆ ಎದ್ದು ಗಾಡಿಬಿಡ್ತೀರೋ ಇಲ್ವೋ ನೀವು?’ – ಎಂದು ಅವಳು ಇನ್ನೊಂದು ಸಲ ಎಂದುದಕ್ಕೆ ಸಿವಲಿಂಗ ರೇವಣ್ಣಶೆಟ್ಟಿ ಮೊದಲಾದವರು ಎದ್ದು ಹೋದರು. ‘ಅಪ್ಪಣ್ಣಯ್ಯ, ಅದ್ಯಾವ ಮನೆಹಾಳ ಹೇಳಿಕೊಟ್ಟ ನಿಮಗೆ?’ – ಎಂದು ನಂಜಮ್ಮ ಮತ್ತೆ ಕೇಳಿದಳು. ಅಪ್ಪಣ್ಣಯ್ಯ ಉತ್ತರ ಹೇಳಲಿಲ್ಲ. ಆದರೆ ಈ ಮಾತು ಬಂದ ತಕ್ಷಣ ಅಣ್ಣಾಜೋಯಿಸ ಮೇಲೆ ಎದ್ದು, ‘ಸಂಧ್ಯಾವಂದನೆಗೆ ಹೊತ್ತಾಗುತ್ತೆ. ನಿಮ್ಮ ನಿಮ್ಮ ಮನೆ ವ್ಯಾಜ್ಯ, ಸುಮ್ಮನೆ ಜನ ಕರೀಬ್ಯಾಡ ಅಂದ್ರೂ ಅಪ್ಪಣ್ಣಯ್ಯ ಊರೋರುನ್ನೆಲ್ಲ ಕೂಗಿದ. ಇವ್ನಿಗೆ ಬುದ್ಧಿ ಯಾವಾಗ ಬರುತ್ತೆ?’ ಎಂದು ಹೊರಟುಹೋದ. ಅಯ್ಯಾಶಾಸ್ತ್ರಿಗಳು, ಹೊದೆದಿದ್ದ ಶಾಲು ಸರಿಮಾಡಿಕೊಂಡು ಅವನನ್ನು ಅನುಸರಿಸಿದರು.
‘ಅಪ್ಪಣ್ಣಯ್ಯ, ಶ್ಯಾನುಭೋಗಿಕೆ ಯಾವಾಗ್ಲೂ ಹಿರೀ ಮಗಂದು. ನೀವು ಬೇಕಾದ್ರೆ ಹೋಗಿ ತಿಪಟೂರಲ್ಲೇ ಕೇಳ್ಕಂಡ್ ಬನ್ನಿ’ – ಎಂದು ನಂಜಮ್ಮ ಹೇಳಿದ ತಕ್ಷಣ ಅವನು ಅಲ್ಲಿಂದ ಎದ್ದುಬಿಟ್ಟ. ಪಂಚಾಯಿತರೆಲ್ಲ ತಮ್ಮ ಕೈಬಿಟ್ಟು ನಡೆದಾಗಲೇ ಅವನಿಗೆ ನೀರಿನಲ್ಲಿ ಮುಳುಗಿಸಿದಂತೆ ಆಗಿತ್ತು. ಗಂಗಮ್ಮ ಮಾತ್ರ – ‘ಈ ಮುಂಡೆ ನಾಲಿಗೆ ನೋಡು. ಊರೋರ್‍ನೆಲ್ಲ, ಹೀಗೆ ಅಟ್ಟಿಸ್ಕಂಡ್ ಮಾತಾಡಿದ್ಲಲ್ಲ. ಆಡ್ಲಿ. ನನ್ನ ಪಾಲು ಮಾತ್ರ ಬಿಡುಲ್ಲ’ – ಎಂದು ಕೂಗಾಡುತ್ತಾ ಎದ್ದು ಹೋದಳು.
ಊಟ ಮಾಡುವಾಗ ಚೆನ್ನಿಗರಾಯರು ಆ ವಿಷಯವಾಗಿ ಏನೂ ಮಾತನಾಡಲಿಲ್ಲ. ‘ನೋಡಿದ್ರಾ ಅವರ ಯೋಗ್ತೀನಾ?’ – ಎಂದು ನಂಜಮ್ಮ ಹೇಳಿದುದಕ್ಕೆ, ‘ಅಂದ್ರಂದ್ಕಂಡ್ರು’ ಎಂದು ತಮಗೆ ಈ ವಿಷಯ ಏನೂ ಸಂಬಂಧವೇ ಇಲ್ಲವೇನೋ ಎಂಬಂತೆ, ಮಧ್ಯಾಹ್ನದ ತಂಗಳು ಸೊಪ್ಪಿನ ಹುಳಿಯನ್ನು ಸುರಿದುಕೊಂಡರು. ಆ ದಿನ ರಾತ್ರಿ ನಂಜಮ್ಮನಿಗೆ ಸರಿಯಾಗಿ ನಿದ್ರೆ ಬರಲಿಲ್ಲ. ತನ್ನ ಓರಗಿತ್ತಿಯ ಬದಲಾದ ಬಣ್ಣವನ್ನು ಕಂಡು ಮನಸ್ಸಿಗೆ ವ್ಯಥೆಯಾಗುತ್ತಿದ್ದರೆ, ನಿಜವಾಗಿಯೂ ಅವರಿಗೆ ಪಾಲು ಕೊಡಬೇಕೇನೋ ಎಂಬ ಅನುಮಾನ ಬೇರೆ. ಒಂದು ಹೆಜ್ಜೆ ತಿಮ್ಲಾಪುರಕ್ಕೆ ಹೋಗಿ ದ್ಯಾವರಸಯ್ಯನವರನ್ನೇ ಕೇಳಿಕೊಂಡು ಬರಬೇಕು ಎಂಬ ಯೋಚನೆ ನಡುರಾತ್ರಿಯ ಹೊತ್ತಿಗೆ ಹೊಳೆಯಿತು.
ಬೆಳಗಿನ ಜಾವದಲ್ಲಿ ಗಂಡನನ್ನು ಎಬ್ಬಿಸಿದರೆ – ‘ನನ್ ಕೈಲಾಗುಲ್ಲ. ನೀನೇ ಓಗ್ ಬಾ’ ಎಂದು ಅವರು ಮುಸುಕಿನ ಒಳಗೇ ಗೊಣಗಿದರು. ಪಾರ್ವತಿ, ರಾಮಣ್ಣ, ಇಬ್ಬರನ್ನೂ ಎಬ್ಬಿಸಿ ಮುಖ ತೊಳೆಸಿ, ಒಂದಿಷ್ಟು ಹುರಿಟ್ಟು ಕಲಸಿ ತಿನ್ನಿಸಿ ಕರೆದುಕೊಂಡು ಹೋದಳು.
ಇತ್ತೀಚೆಗೆ ವಯಸ್ಸಾಗಿ ದ್ಯಾವರಸಯ್ಯನವರ ಆರೋಗ್ಯ ಸರಿ ಇರುತ್ತಿರಲಿಲ್ಲ. ಹೀಗಾಗಿ ಅವರು ಚಳಿಯಲ್ಲಿ ಏಳದೆ ಮಲಗಿಯೇ ಇರುತ್ತಿದ್ದರು. ಹೊತ್ತು ಹುಟ್ಟಿದ ಒಂದು ಗಳಿಗೆಯಲ್ಲೇ ಬಂದ ನಂಜಮ್ಮನನ್ನು ಕಂಡು ಅವರಿಗೂ ಆಶ್ಚರ್ಯ. ಎರಡು ವರ್ಷದಿಂದ ಅವಳು ಇಲ್ಲಿಗೆ ಬಂದಿರಲಿಲ್ಲ. ಸ್ವತಂತ್ರವಾಗಿ ಶ್ಯಾನುಭೋಗಿಕೆಯ ಲೆಕ್ಕಪತ್ರಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ ಎಂಬುದನ್ನು ತಿಳಿದ ಅವರು ಅವಳ ಬಗೆಗೆ ತೃಪ್ತಿಯಿಂದಿದ್ದರು. ಈಗ ಬಂದ ಸಮಾಚಾರ ತಿಳಿದು ಹೇಳಿದರು: ‘ಅದರಲ್ಲೇನೂ ಅನುಮಾನವಿಲ್ಲ. ನಂಗೆ ಚನ್ನಾಗಿ ಗೊತ್ತು. ಹಿರೀ ಮಗ ಒಬ್ಬನಿಗೇ ಅದರ ಅಧಿಕಾರ. ಮಹಾರಾಜರ ಪಟ್ಟವೂ ಹಾಗೇ ಅಲ್ಲವೆ? ರಾಜ್ಯಾನಾ ಅಣ್ಣ, ತಮ್ಮ, ಇಬ್ಬರಿಗೆ ಹಂಚ್ತಾರೆಯೇ?’

ನಂಜಮ್ಮ ಮತ್ತು ಮಕ್ಕಳ ಸ್ನಾನ ತಿಂಡಿ ಆದಮೇಲೆ ಹೇಳಿದರು: ‘ನಿಂಗೆ ಮನಸ್ಸಿಗೆ ಸಮಾಧಾನವಾಗಬೇಕು. ಕಂಬನಕೆರೆ ಏನೂ ಐಗಂಚಿ ಇಲ್ವಲ್ಲ. ಇಲ್ಲಿಗೆ ಮೂರು ಮೈಲಿ. ನೀನು ಒಂದು ಹೆಜ್ಜೆ ಅಲ್ಲಿಗೇ ಹೋಗಿ ಶೇಕ್ದಾರರನ್ನೇ ಕೇಳಿಬಿಡು. ಆಮ್ಯಾಲೆ ಮನುಸ್ನಲ್ಲಿ ಮುಳ್ಳು ಇರುಲ್ಲ.’
ದಾರಿ ತೋರಿಸಲು ಅವರು ಒಬ್ಬ ಆಳನ್ನು ಕಳಿಸಿದರು. ಮಕ್ಕಳನ್ನೂ ನಡೆಸಿಕೊಂಡು ನಂಜಮ್ಮ ಹೋಬಳಿಯ ಸ್ಥಳವಾದ ಕಂಬನಕೆರೆಗೆ ಹೆಜ್ಜೆ ಹಾಕಿದಳು. ಶೇಕ್ದಾರರು ಅವಳಿಗೆ ಗೊತ್ತು. ರಾಮಸಂದ್ರಕ್ಕೆ ಬಂದಾಗಲೆಲ್ಲ ಅವಳೇ ಅವರಿಗೆ ಬಿಳಿ ಅನ್ನ, ಸಾರು, ಚಟ್ನಿಗಳನ್ನು ಮಾಡಿ ಬಡಿಸಿದ್ದಾಳೆ. ತುಂಬಾ ನಿಧಾನ ಸ್ವಭಾವದ ಅವರು ‘ಅಮ್ಮಾ’ ಎಂದೇ ಅವಳನ್ನು ಮಾತನಾಡಿಸಿ ಊಟ ಮಾಡಿದ್ದಾರೆ. ಆದುದರಿಂದ ಅವಳು ಹೆಚ್ಚು ಭಯ, ಆತಂಕವಿಲ್ಲದೆ ಅವರ ಮನೆಗೆ ಹೋದಳು. ಇವಳನ್ನು ಕಂಡ ಅವರೇ ಮಾತನಾಡಿದರು: ‘ಏನಮ್ಮಾ, ಶ್ಯಾನುಭೋಗಿಕೆ ಪೋಟಿಕೇಲಿ ತಮ್ಮನಿಗೂ ಪಾಲು ಕೊಡಬೇಕೇ ಬ್ಯಾಡವೇ ಅಂತ ಕೇಳೂಕೆ ಬಂದ್ರಾ?’

ನಂಜಮ್ಮನಿಗೆ ಆಶ್ಚರ್ಯವಾಯಿತು. ಮೂಕಳಾಗಿ ನಿಂತ ಅವಳಿಗೆ ಅವರು ಹೇಳಿದರು: ‘ಈಗ ಒಂದರ್ಧ ಗಂಟೆಯೂ ಆಗಿಲ್ಲ. ನಿಮ್ಮ ಮೈದುನ ಅಪ್ಪಣ್ಣಯ್ಯ, ಅವನ ಹೆಂಡತಿ ಬಂದಿದ್ದರು. ನನ್ನ ಕೈಲಿ ಮಾತಾಡುಕ್ಕೆ ಇಬ್ರಿಗೂ ಭಯ. ಬಾಗಿಲ ಹೊರಗೇ ಕೈಮುಕ್ಕಂಡು ಮರೇಲಿ ನಿಂತಿದ್ರು. ಅಣ್ಣಾಜೋಯಿಸರು, ಸಿವಲಿಂಗೇಗೌಡ ಅಂತ ಇಬ್ರು ಅವರ ಪರವಾಗಿ ಮಾತಾಡಿದ್ರು. ನಾಕು ಜನಕ್ಕೂ ಸೇರಿಸಿ ಮುಖದ ತುಂಬ ಉಗುಳಿ ಕಳುಸ್ದೆ. ನೀವೇನೂ ಯೋಚ್ನೆ ಮಾಡ್ಬ್ಯಾಡಿ. ಇದು ಹಿರಿ ಮಗುಂಗೆ ಮಾತ್ರ ಅನ್ನೋದು ಯಾರಿಗೆ ಗೊತ್ತಿಲ್ಲ? ಇಷ್ಟುನ್ನ ಕೇಳೂಕ್ಕೆ ಇಷ್ಟು ದೂರ ಯಾಕ್ ಬಂದ್ರಿ ನಡ್ಕಂಡು?’

ನಂಜಮ್ಮನಿಗೆ ಧೈರ್ಯವಾಯಿತು. ‘ಬಿಸಿಲಲ್ಲಿ ಬಂದಿದೀರ, ಒಳಗೆ ನಡೀರಿ’ – ಎಂದು ಶೇಕ್ದಾರರು ತಮ್ಮ ಹೆಂಡತಿಗೆ ಹೇಳಿದರು. ಎಲ್ಲರಿಗೂ ಊಟ ಮಾಡಿಸಿ, ಸ್ವಲ್ಪ ಬಿಸಿಲು ಕಂದಿದ ಮೇಲೆ ಅವಳು ಹೊರಡಲು ಶೇಕ್ದಾರರು ಅನುಮತಿ ಕೊಟ್ಟರು. ಅವರ ಹೆಂಡತಿ, ಮನೆಗೆ ಬಂದ ಈ ಮುತ್ತೈದೆಗೆ ಎಲೆ ಅಡಿಕೆ ಜೊತೆಗೆ ಒಂದು ರವಿಕೆಕಣ ಮತ್ತು ತೆಂಗಿನಕಾಯಿಗಳನ್ನು ಇಟ್ಟು ಹುಡುಗರಿಬ್ಬರ ಕೈಗೂ ಬೆಲ್ಲದ ಮುರುಕು ಕೊಟ್ಟರು.
ಕಂಬನಕೆರೆಗೂ ರಾಮಸಂದ್ರಕ್ಕೂ ನೇರವಾಗಿ ಐದು ಮೈಲಿ. ದಾರಿಯಲ್ಲಿ ಹುಡುಗರು ಕಾಲು ನೋವೆಂದು ಹಟ ಮಾಡುತ್ತಿದ್ದರು. ಶೇಕ್ದಾರರ ಮಾತಿನಿಂದ ನಂಜಮ್ಮನ ಮನಸ್ಸು ಸಮಾಧಾನವಾಗಿತ್ತು. ಹುಡುಗರನ್ನು ರಮಿಸುತ್ತಾ, ಎರಡು ಕೈಲೂ ಇಬ್ಬರ ಕೈಯನ್ನೂ ಹಿಡಿದುಕೊಂಡು ನಿಧಾನವಾಗಿ ನಡೆಸಿಕೊಂಡು ಕತ್ತಲಾಗುವ ಮುನ್ನ ಊರು ಮುಟ್ಟಿದಳು.

– ೪ –

ಅಪ್ಪಣ್ಣಯ್ಯ ಹೆಂಡತಿಯ ಜೊತೆ ಬೇರೆ ವಾಸಮಾಡಲು ಪ್ರಾರಂಭಿಸಿದ ಮೇಲೆ ಗಂಗಮ್ಮನಿಗೆ ಒಂಟಿತನ ಸಹಿಸಲಾಗದುದು ಮಾತ್ರವಲ್ಲ, ತನ್ನ ಹೊಟ್ಟೆಯಲ್ಲಿ ಹುಟ್ಟಿದ ಕಂದನೇ ತನ್ನನ್ನು ದೂರ ಮಾಡಿದನೆಂಬ ಭಾವನೆ ಬೆಳೆಯಿತು. ಈ ಸೋಲನ್ನು ಹೇಗೆ ತಡೆದಾಳು? ತನ್ನಿಂದ ಮಗನನ್ನು ಬೇರೆ ಮಾಡಿಸುವುದಕ್ಕಾಗಿಯೇ ಹಿರಿಯ ಸೊಸೆ, ಇವನು ಗುಡಿಸಲು ಕಟ್ಟಿಕೊಳ್ಳಲು ಸಹಾಯ ಮಾಡಿದಳು ಎಂದೂ ಅವಳು ಅರ್ಥ ಮಾಡಿಕೊಂಡಳು.
ಅವನ ಅತ್ತೆ, ಹೆಂಡತಿ ಬಂದು ಒಂದೂವರೆ ವರ್ಷವಾಗಿತ್ತು. ಹಳ್ಳಿ ತಿರುಗಿ ಭಿಕ್ಷೆ ಬೇಡಿ ಜನಗಳು ಆಡಿದ ಮಾತುಗಳನ್ನು ಕೇಳಿ ಅವನಿಗೂ ಸಾಕಾಗಿಹೋಗಿತ್ತು. ಒಂದು ದಿನ ಅವನು ಕೆಂಚೇಗೌಡನ ಕೊಪ್ಪಲಿನಲ್ಲಿ ಕಲ್ಲೇಗೌಡನ ಮನೆಗೆ ಹೋದ. ಗೌಡ ಮನೆಯಲ್ಲಿದ್ದರೂ ಇವನಿಗೆ ಒಂದು ಮಣೆ ಹಾಕಿಕೊಡಲಿಲ್ಲ. ಹೇಳಿಸಿಕೊಳ್ಳದೆ ನೆಲದ ಮೇಲೆಯೇ ಕೂತು, ಒಂದಿಷ್ಟು ರಾಗಿ ಕೊಡಿಸುವಂತೆ ಇವನು ಕೇಳಿದುದೇ ತಡ, ಗೌಡ ಸಿಡಾರನೆ ಅಂದುಬಿಟ್ಟ; ‘ನಿಂಗೇನ್ ಗುರ್ಗುಟ್ತದೇನಯ್ಯ? ಈಗ ನಿಮ್ಮವ್ವ ಬಂದು ಕುಂಡೋದ್ಲು. ಮತ್ತೆ ನೀನು ಬಂದಿದೀಯಾ. ರಾಗಿ ಏನು ಪುಗ್‌ಶೆಟ್ಟೆ ಬತ್ತೈತಾ? ರೊಟ್ಟಿ ಕೊಡ್ತೀವಿ, ಬಾ. ಹ್ವಲದಾಗೆ ಗೇಯಿ. ಎಲ್ಡುಸೇರು ಕೂಲಿತಗಂಡ್ ಓಗೀವಂತೆ.’
ಅಪ್ಪಣ್ಣಯ್ಯ ಕುಳಿತೇ ಇದ್ದ. ಗೌಡ -‘ಸುಮ್ಕೆ ಎದ್ ಓಯ್ತಿಯೋ, ನಿಂಗೆ ಕುತ್ಕೆಮ್ಯಾಲೆ ಇಡುಮಿ ಆಚೀಕ್ ನೂಕ್‌ಬೇಕಯ್ಯಾ?’

ಅಪ್ಪಣ್ಣಯ್ಯನಿಗೆ ದುಃಖ ಒತ್ತರಿಸಿ ಬಂದು ಬಿಟ್ಟಿತು. ಕಳೆದ ಒಂದೂವರೆ ವರ್ಷದಿಂದ ಅವನು ಇಂಥ ನುಡಿಯನ್ನು ಹಲವು ಮನೆಗಳಲ್ಲಿ ಕೇಳಿದ್ದನಾದರೂ, ಕುತ್ತಿಗೆ ಮೇಲೆ ಇಡುಮಿ ಆಚೆಗೆ ನೂಕುವ ಮಾತನ್ನು ಯಾರೂ ಆಡಿರಲಿಲ್ಲ. ಕುಳಿತಿದ್ದವನು ಎದುರಿಗೆ ಇಟ್ಟುಕೊಂಡಿದ್ದ ಪಂಚೆ ಮತ್ತು ಪುಟ್ಟ ಗೋಣಿಯ ಚೀಲಗಳನ್ನು ಕೈಗೆ ತೆಗೆದುಕೊಂಡು, ತಾನೇ ಹೊರಗೆ ಬಂದ. ಅಷ್ಟರಲ್ಲಿ ಅವನಿಗೆ ಅಳು ಬಂದುಬಿಟ್ಟಿತು. ಕಣ್ಣೀರು ಒರೆಸಿಕೊಳ್ಳುತ್ತಾ ಮುಂದೆ ಹತ್ತು ಹೆಜ್ಜೆ ನಡೆದಿದ್ದ. ಮಡಿಲ ತುಂಬ ರಾಗಿ ಕಟ್ಟಿಕೊಂಡು ಎದುರಿಗೆ ಗಂಗಮ್ಮ ಸಿಕ್ಕಿದಳು. ಇಷ್ಟು ವಯಸ್ಸಿನ ಮಗ ಕಣ್ಣಿನಲ್ಲಿ ನೀರು ಸುರಿಸಿಕೊಂಡು ಅಳುವುದನ್ನು ಕಂಡ ಅವಳಿಗೆ ಕರುಳು ಚುರ್ ಎಂದಿತು. ಅವಳೇ -‘ಯಾಕೋ ನನ್ ಕಂದ ಹೀಗ್ ಅಳ್ತೀಯಾ?’ ಎಂದುದಕ್ಕೆ ಅವನ ಅಳು ಇನ್ನೂ ಹೆಚ್ಚಾಯಿತು. ನಡೆದ ಸಂಗತಿ ಹೇಳಿ, ಅವನು ಕೇಳಿದ; ‘ಕಲ್ಲೇಗೌಡ ಹೀಗನ್‌ಭೌದಾ?’ ‘ಅಪ್ಪಣ್ಣಾ, ಬಾ. ಬಸವಣ್ಣನಗುಡೀಲಿ ಕೂತ್ಕಂಡು ಮಾತಾಡಾಣ’ -ಎಂದು ಮಗನನ್ನು ಕರೆದು ಕೊಂಡು ಊರ ಮುಂದಿನ ಗುಡಿಯ ಜಗುಲಿಯ ಮೇಲೆ ಕೂರಿಸಿ ಹೇಳಿದಳು; ‘ತಾಯಿ, ಮಗ, ಇಬ್ಬಿಬ್ರೂ ಕೇಳೂಕ್ಕೆ ಹೋದ್ರೆ ಅವ್ರು ತಾನೇ ಯೇನಂತಾರೆ? ನೀನ್ಯಾಕೆ ಬಂದ್ಯಪ್ಪಾ ಇಲ್ಲಿ ಕೇಳುಕ್ಕೇ?’
‘ಬರ್ದೇ ಇದ್ರೆ ಜೀವನುಕ್ ಏನ್ ಮಾಡ್ಲಿ?’
‘ಅಯ್ಯೋ ನಿನ್ನ ಹಣೇಬರವೇ, ಮುಂಡೇದೇ? ನನ್ನ ಹ್ವಟ್ಟೀಲಿ ಹುಟ್ಟಿ ನೀನು ಜೀವನುಕ್ಕೆ ತಾಪತ್ರಯಪಡಬೇಕೇನೋ? ಇಷ್ಟು ದಿನವೂ ನಿನ್ನ ರಾಜನ್ಹಾಗೆ ಸಾಕ್ತಿರ್ಲಿಲ್ವೇನೋ?’ ಹಳ್ಳಿ ಹಳ್ಳಿ ತಿರುಗಿ ತಿರುಪೆ ಮಾಡಿ ಆ ಮುಂಡೇರುನ್ನೆಲ್ಲ ಸಾಕೂದು ನಿನಗ್ಯಾವ ಹಣೆಬರ? ನೀನು ಓ ಲಕ್ಷ್ಮಣ ಹ್ವಟ್ಟಿಗೆ ಹಿಟ್ಟಿಲ್ವೋ ಅಂತ ಅಸ್ ಅಂದ್ಕಂಡು ರಾಗಿ ಭಿಕ್ಷ ಮಾಡ್ಕಂಡು ಮನಿಗೆ ತಂದ್ ಹಾಕೂದು. ಆ ಮುಂಡೇದು ಅದ ಮಾರಿಹಾಕಿ ಸಣ್ಣಕ್ಕಿ ಅನ್ನ, ತಗರಿಬ್ಯಾಳೆ ಸಾರು ಸುರ್‍ಕಂಡು ಹ್ವಡಿಯೂದು. ಜೊತೆಗೆ ಅವುಕ್ಕೆಲ್ಲ ಕಾಪಿ ಬ್ಯಾರೆ ಬೇಕು ಪೀಪಿ. ಆ ಮುಂಡೇರು ಉಟ್ಕಂಡಿರಾ ಬಣ್ಣ ಬಣ್ಣದ ಸೀರೇನೂ ನೋಡು, ನೀನು ಸುತ್ಕಂಡಿರಾ ಈ ಹರಕಲು ಪಂಚೇನೂ ನೋಡು. ತನ್ನ ಸುಖ ಬಿಟ್ಟು ಮಿಂಡನ ಕಷ್ಟ ಸುಖ ಸೂಳೆಗ್ಯಾಕ್ ಬೇಕು?’
ಅಪ್ಪಣ್ಣಯ್ಯನಿಗೆ ತಾಯಿಯ ಮಾತು ನಿಜವೆನಿಸುತ್ತಿತ್ತು. ಹೆಂಡತಿ ಮಕ್ಕಳು ಬರುವ ಮೊದಲು ಅವನು ಯಾರ ಮನೆಯಲ್ಲಿಯೂ ಭಿಕ್ಷೆ ಕೇಳಿರಲಿಲ್ಲ. ಬೇಡುವುದು ಅಮ್ಮನ ಕೆಲಸ. ಊರ ಹೊರಗೆ ಎಲ್ಲಾದರೂ ಸುತ್ತುತ್ತಾ ಹೊಗೆಸೊಪ್ಪು ಹಾಕಿಕೊಂಡು, ಕೊನೆಗೆ ಅಮ್ಮ ಗುಡ್ಡೆ ಹಾಕಿದುದನ್ನು ಗೋಣಿಚೀಲದಲ್ಲಿ ಹೊತ್ತು ತರುವುದಷ್ಟೇ ಅವನ ಕಾಯಕವಾಗಿತ್ತು. ಜೊತೆಗೆ, ಇಬ್ಬರ ಸಂಸಾರದಲ್ಲಿ ಮೂರು ತಿಂಗಳು ಹಳ್ಳಿ ತಿರುಗಿದ್ದರೆ, ಉಳಿದಂತೆ ಸುಖವಾಗಿ ಕೂತು ತಿನ್ನಬಹುದಾಗಿತ್ತು. ‘ನಿನ್ನ ಹೆಂಡ್ತಿ ಅಂತ ಅವ್ಳುನ್ನ ಸಾಕ್ತಾ ಇದೀಯಾ. ನಾಚಿಕೆ ಇಲ್ದೆ ಬಂದು ಸೇರ್ಕಂಡಿರೋ ಅತ್ತೆ ಅನ್ನೂ ಮುಂಡೆಗೆ ನೀನ್ಯಾಕೆ ತಂದು ಹಾಕ್ಬೇಕೋ?’
ಆ ದಿನ ಮತ್ತೆ ಅಪ್ಪಣ್ಣಯ್ಯ ಯಾರ ಮನೆಗೂ ಕೇಳಲು ಹೋಗಲಿಲ್ಲ. ಅಮ್ಮ ಗುಡ್ಡೆ ಹಾಕಿದುದನ್ನು ತನ್ನ ಗೋಣಿಚೀಲಕ್ಕೆ ಬಾಯಿ ಕಟ್ಟಿ ತಲೆಯಮೇಲೆ ಇಟ್ಟುಕೊಂಡ. ಭಾರ ಹೊರುವುದೇನೂ ಅವನಿಗೆ ಕಷ್ಟದ ಕೆಲಸವಲ್ಲ. ದಾರಿಯಲ್ಲಿ ಗಂಗಮ್ಮ ಅಂದಳು: ‘ಆ ಮಾದೇವಯ್ಯ ಅಂದ್ರೆ ಹೆತ್ತವ್ವುಂಗೇ ಲಾಡಿ ಬಿಚ್ಚುವಂತ ಸೂಳೇಮಗ. ಅವ್ನು ನಿನ್ ಹತ್ರ ಸುಳ್‌ಸುಳ್ಳೇ ಪ್ರಮಾಣ ಮಾಡುಸ್ದ ಅಂತ ನೀನು ನಂಬಭೌದೇ? ನೀನು ಅವರ ಊರಿಗೆ ಒಂದು ಸಲಿ ಹೋಗಿದ್ಯೋ ಬಿಟ್ಟಿದ್ಯೋ. ಆ ಮಗು ನಿಂಗೇ ಹುಟ್ಟಿದ್ದು, ಅವ್ಳು ಆವಾಗ್ಲೇ ಬಸರಿಯಾದ್ಲು ಅಂತ ಹ್ಯಾಗೆ ಗೊತ್ತು?’
ಅಪ್ಪಣ್ಣಯ್ಯ ಯಾವ ಮಾತನ್ನೂ ಆಡದೆ ಸುಮ್ಮನೆ ಭಾರ ಹೊತ್ತು ಬರುತ್ತಿದ್ದ. ಊರು ಹತ್ತಿರ ಬಂದಾಗ ಗಂಗಮ್ಮ ಹೇಳಿದಳು: ‘ನೀನು ಸುಮ್ನೆ ನನ್ ಜೊತೆ ಬಾ. ಮದ್ಲು ಇದ್ಹಾಗೆ ಸುಖವಾಗಿರು.’
ಮಗ ಮತ್ತೆ ತಾಯಿಯ ಗೃಹಪ್ರವೇಶ ಮಾಡಿದ. ಅವನು ಯಾವ ಕೆಲಸವನ್ನೂ ಮಾಡಲಿಲ್ಲ. ಸುಮ್ಮನೆ ಮಲಗಿ ನಿದ್ರೆ ಮಾಡಿದ. ಗಂಗಮ್ಮ ಈರುಳ್ಳಿ, ಒಂದು ಹಿಲುಕು ಬೆಳ್ಳುಳ್ಳಿ ತಿರುವಿಹಾಕಿ ಚಿಲುಕಿಸಿದ ಅವರೇಬೇಳೆ ಮೇಲೋಗರ ಮಾಡಿ ಬಿಸಿಬಿಸಿಯಾಗಿ ರಾಗಿಹಿಟ್ಟು ತೊಳಸಿ ಮುದ್ದೆ ಕಟ್ಟಿ ಮಗನನ್ನು ಎಬ್ಬಿಸಿದಳು. ಊಟಕ್ಕೆ ಕೂತರೆ ಅವನಿಗೆ ಒಂದೂವರೆ ವರ್ಷದ ಹಿಂದಿನ ಸ್ವರ್ಗವೇ ಎದುರಿಗೆ ಬಂದಂತೆ ಆಗಿತ್ತು. ಅವನಿಗೆ ಮೊದಲಿನಿಂದಲೂ ಮುದ್ದೆ ಎಂದರೆ ಆಶೆ. ಚಿಲುಕಿಸಿದ ಅವರೇಬೇಳೆಯ ಮೇಲೋಗರಕ್ಕಿಂತ ಉತ್ತಮವಾದ ಅಡುಗೆ ಈ ಪ್ರಪಂಚದಲ್ಲಿ ಯಾವುದಿದೆ? ಅವನ ಹೆಂಡತಿ, ಅತ್ತೆ, ಒಂದು ದಿನವೂ ಮನೆಯಲ್ಲಿ ಮುದ್ದೆ ತೊಳಸಿಲ್ಲ. ಅವರೇಬೇಳೆ ವಾಯುವಂತೆ, ಇತರೇ ಜನ ತಿನ್ನುವುದಂತೆ. ‘ಬಾನ್‌ಜೋತ್‌ಮುಂಡೇರ ತಂದು’ – ಎಂದು ಮನಸ್ಸಿನಲ್ಲೇ ಬೈದುಕೊಂಡು ಮುದ್ದೆ ಮುರಿಯುತ್ತಾ ಸೌಟುಗಟ್ಟಲೆ ಮೇಲೋಗರ ಹೊಡೆದ.
ಆ ದಿನದಿಂದ ಅವನು ಹೆಂಡತಿಯ ಮನೆಗೆ ಹೋಗಲಿಲ್ಲ. ಮೊದಲ ದಿನ ಹಳ್ಳಿಯಿಂದ ಊರಿಗೆ ಬಂದಿಲ್ಲವೆಂದು ಭಾವಿಸಿದ ಅವರಿಗೆ, ಅವನು ತಾಯಿಯ ಮನೆಯಲ್ಲಿರುವುದು ತಿಳಿಯಿತು. ಆದರೆ ತಾವೇ ಹೋಗಿ ಕರೆಯುವಂತಿಲ್ಲ. ಮೂರನೆಯ ಹುಡುಗ ರಾಮಕೃಷ್ಣನನ್ನು ಕಳಿಸಿದರೆ ಹನುಮಂತರಾಯನ ಗುಡಿಯ ಬಾಗಿಲಿಗೆ ಬೀಗ ಹಾಕಿತ್ತು. ತಾಯಿ ಮಗ ಮತ್ತೆ ಹದಿನೈದು ದಿನ ಊರಿಗೆ ಬರಲಿಲ್ಲ. ಮಾರುವುದಕ್ಕೆ ಮನೆಯಲ್ಲಿ ರಾಗಿ ಇರಲಿಲ್ಲ. ಇದ್ದ ಅಕ್ಕಿ ಮುಗಿದು ಹೋಗಿದೆ. ಕಾಫಿಪುಡಿ ಇಲ್ಲ. ಕೆರೆಯ ಹಿಂದಿನ ಆಲೆಯಲ್ಲಿ ಅಡಿಗೆ ಇಳಿಸುವಾಗ ಜಯಲಕ್ಷ್ಮಿ, ರಾಮಕೃಷ್ಣ ಹೋಗಿ, ಅವರು ಕೊಡುತ್ತಿದ್ದ ಪಿಡಚೆ ಬೆಲ್ಲವೇನೋ ಇತ್ತು. ಆದರೆ ಬರೀ ಬೆಲ್ಲದಿಂದ ಕಾಫಿ ಆಗುವುದಿಲ್ಲ. ಅಪ್ಪಣ್ಣಯ್ಯ ಈಗ ಅಮ್ಮನ ಜೊತೆ ಸೇರಿಕೊಂಡನೆಂಬ ಸುದ್ದಿ ಇವರಿಗಿಂತ ಮೊದಲು ಊರಿನವರಿಗೆ ಗೊತ್ತಾಗಿತ್ತು. ಅಂಗಡಿಯಲ್ಲಿ ಕೇಳಿದರೆ ಸಾಲ ಹುಟ್ಟಲಿಲ್ಲ. ಉಪವಾಸವಂತೂ ಇರುವ ಹಾಗಿಲ್ಲ. ಕಾಫಿ ಕುಡಿಯದಿದ್ದರೆ ತಲೆನೋವು ಇಳಿಯುವುದಿಲ್ಲ. ಮನೆಯಲ್ಲಿದ್ದ ದೊಡ್ಡ ಬೆಳ್ಳಿಯ ಪಂಚೋಳ ತೆಗೆದುಕೊಂಡುಹೋಗಿ ಕಾಶಿಂಬಡ್ಡಿ ಸಾಹುಕಾರರ ಹತ್ತಿರ ಅಡವಿಟ್ಟು ಎರಡು ರೂಪಾಯಿ ತಂದರು. ಒಂದು ರೂಪಾಯಿಗೆ ಎಂಟು ಸೇರು ಅಕ್ಕಿ, ಮೇಲೆ ಎರಡಾಣೆ ಕಾಫಿಪುಡಿ, ಒಂದು ಆಣೆಯ ಹಾಲು ಮನೆಗೆ ಬಂದುವು.
ಅಪ್ಪಣ್ಣಯ್ಯ ತಾಯಿಯೊಡನೆ ಊರಿಗೆ ಬಂದರೂ ಹೆಂಡತಿಯ ಮನೆಗೆ ಬರಲಿಲ್ಲ. ನಾಲ್ಕು ತಿಂಗಳು ನಡೆಯುತ್ತಿದ್ದ ಸಾತು ರಾಮಕೃಷ್ಣನನ್ನು ಕಳಿಸಿದಳು. ಗಂಗಮ್ಮನೇ – ‘ಅವ್ನು ಬರುಲ್ಲವಂತೆ ಅನ್ನು. ಅವ್ಳು ಅದ್ಯಾವನ್ನ ಇಟ್ಕಂಡು ನಿನ್ನ ಹೆತ್ಳೋ ಅವ್ನುನ್ನೇ ಮನೆಗೆ ತಂದ್ಹಾಕು ಅಂತ ಹೇಳು’ ಎಂದು ಕಳಿಸಿದಳು.
ಹುಡುಗ ಮನೆಗೆ ಹೋಗಿ ತಾಯಿಯ ಕೈಲಿ ಅದೇ ಮಾತನ್ನು ಹೇಳಿದ. ಸಾತುವಿಗೆ ಸಿಟ್ಟು ಬಂತು. ಅವಳ ಅಮ್ಮ ತಂಗಮ್ಮನಂತೂ ಕಿಡಿಕಿಡಿಯಾದಳು. ‘ಅಮ್ಮ, ನೀನು ಯಾವ ಮಾತಿಗೂ ಹೋಗ್ಬ್ಯಾಡ’ – ಎಂದು ಮಗಳು ಹೇಳಿದರೂ ಕೇಳದೆ ಅವಳೇ ಹನುಮಂತರಾಯನ ಗುಡಿಯ ಮುಂದೆ ಹೋಗಿ ನಿಂತು, ‘ಇಷ್ಟು ದಿನದಿಂದ ಮನೇಲಿ ತಿನ್ನೂಕಿಲ್ಲ. ಹೆಂಡ್ತಿ ಮಕ್ಳುನ್ನ ಸಾಕೂ ಯೋಗ್ತಿ ಇಲ್ದೋನು ಮದುವೆ ಯಾವ ಸಂಪತ್ತಿಗೆ ಮಾಡ್ಕಬೇಕಾಗಿತ್ತು?’ ಎಂದು ಕೇಳಿಬಿಟ್ಟಳು.
‘ಹಾದರಗಿತ್ತಿ ಹೆಂಡ್ತಿ ನನ್ನ ಮಗ ಸಂಸಾರ ಮಾಡುಲ್ಲ ಕಣೇ ಜೋಯ್ಸಯ್ಯನ ಹೆಂಡ್ತೀ’ – ಗಂಗಮ್ಮ ಜಾಡಿಸಿದಳು.
‘ನನ್ನ ಮಗಳ್ಯಾಕೆ ಹಾದರಗಿತ್ತಿಯಾದಾಳು? ನೀನೇ ನಿನ್ನ ಮಗನ್ನೇ ಹಾದರಕ್ಕೆ ಹೆತ್ತಿದ್ದೆ ಏನೋ. ನಾವೇನೋ ಮರ್ಯಾದೆ ಕೊಟ್ರೆ ನಿನ್ನ ನಾಯಿಬುದ್ಧಿ ಎಲ್ಲಿ ಬಿಡ್ತೀಯ?’ – ಎಂದು ತಂಗಮ್ಮ ಹೇಳುತ್ತಿರುವಷ್ಟರಲ್ಲಿ ಸಾತುವೇ ಅಲ್ಲಿಗೆ ಬಂದಳು. ‘ಅಮ್ಮಾ, ನೀನ್ಯಾಕೆ ಮಾತಿಗೆ ಹೋದೆ? ಅವ್ರೇನಾದ್ರೂ ಅಂದ್ಕಳ್ಳಿ. ಅವ್ರು ಆಡಿದ ಪಾಪ ಅವ್ರುನ್ನೇ ತಿನ್ನುತ್ತೆ’ – ಎಂದು ಅವಳು ತಾಯಿಗೆ ಸಮಾಧಾನ ಹೇಳುತ್ತಿರುವಾಗಲೇ ಗಂಗಮ್ಮ, ‘ಅಪ್ಪಣ್ಣಯ್ಯ, ನೋಡಿದ್ಯೇನೋ ಈ ಉಮ್ಮೆ ಮರಳಿ ಮಾತ. ಹಿಂದಿನಿಂದ ಹೇಳ್ಕೊಟ್ಟು ಕಳ್ಸಿ ಈಗ ನಾನು ಮಾತಾಡಿದ್ದು ಪಾಪ ಅಂತಾಳೆ. ಗಂಡ ಇಲ್ದೆ ಇದ್ದಾಗ ಬಸುರಿಯಾಗಿ ಮಗು ಹೆರೂದು ಪಾಪ ಅಲ್ವೇನೋ!’ – ಎನ್ನುತ್ತಿರುವಷ್ಟರಲ್ಲಿ ಅಪ್ಪಣ್ಣಯ್ಯ ಗಂಡುಗಲಿಯಾಗಿ ಒಳಗಿನಿಂದ ಎದ್ದು ಬಂದು, ‘ಲೇ, ನಿನ್ನ ಮೆಟ್ನಲ್ಲಿ ಹ್ವಡ್ದುಬಿಡ್ತೀನಿ ನೋಡು ಮುಂಡೆ. ನಿನ್ನ ಯೇಕ್ತಿ ಎಲ್ಲ ನಂಗೆ ಗೊತ್ತಿಲ್ಲ ಅಂತ ತಿಳ್ಕಂಡಿದೀ ಏನೇ?’ ಎಂದು ಕೇಳಿದ. ಜಬರಿಗೆ ಹೆದರಿ ತಂಗಮ್ಮ, ಸಾತು, ಇಬ್ಬರೂ ತಮ್ಮ ಮನೆಯ ಕಡೆಗೆ ಓಡಿದರು. ಗಂಗಮ್ಮ – ‘ಅಲ್ಲೇನು ನೋಡ್ತಿಯೊ? ಅವಳ ತಾಳಿ ಕಿತ್ಕಂಡು ಓಡ್ಸೋ ಈ ಊರು ಬಿಟ್ಟು. ನೀನು ಕಟ್ಟಿದ ಮನೆ ಅದು. ಬೆಂಕಿ ಹಾಕ್ಬಿಡೋ ಅದುಕ್ಕೆ’ ಎಂದಳು.
ಅಪ್ಪಣ್ಣಯ್ಯ ಅವರನ್ನು ಓಡಿಸಿಕೊಂಡು ಹೋದ. ಮನೆಯ ಬಾಗಿಲನ್ನು ಬಗ್ಗಿ ಒಳಗೆ ಹೋಗುವುದರಲ್ಲಿದ್ದ ಹೆಂಡತಿಯ ಕುತ್ತಿಗೆಗೆ ಅವನ ಕೈ ಹೋಯಿತು. ಹಿಂಭಾಗದಿಂದ ಸಿಕ್ಕಿದ ಕರೀಮಣಿ ಮಾಂಗಲ್ಯವನ್ನು ಹಿಡಿದು ಒಂದೇ ಏಟಿಗೆ ಜಗ್ಗಿ ಎಳೆದುದಕ್ಕೆ ನೂಲಿನ ಸೂತ್ರ ಕಿತ್ತುಹೋಗಿ ಕರಿಮಣಿಗಳು ನೆಲಕ್ಕೆ ಉದುರಿದುವು. ಮಾಂಗಲ್ಯ ಕೋವಿ ಗುಂಡುಗಳು ದಾರದಲ್ಲಿ ಸಿಕ್ಕಿ ಉಳಿದುವು. ಕುತ್ತಿಗೆಯ ಬಲಪಾರ್ಶ್ವ ಕೊರೆದು ರಕ್ತ ಬರುವಂತಾದ ಸಾತು, ‘ಅಯ್ಯಯ್ಯಮ್ಮಾ’ ಎಂದು ಅರಚಿಕೊಳ್ಳುತ್ತಾ ಕೆಳಗೆ ಬಿದ್ದಳು. ಅಪ್ಪಣ್ಣಯ್ಯ ಒಳಗೆ ನುಗ್ಗಿದ. ಅಡಿಗೆಮನೆಯ ಒಲೆ ಉರಿಯುತ್ತಿತ್ತು. ಒಂದು ಕುರುಂಬಾಳೆಯ ಬೆನ್ನುಸಿಪ್ಪೆಯನ್ನು ಎತ್ತಿ ಸೋಗೆಯ ಮೇಲ್ಛಾವಣಿಗೆ ತಗುಲಿಸಿದ. ಸೋಗೆ ಹೊತ್ತಿಕೊಂಡಿತು. ಹೊಗೆ ಕವರಿಕೊಂಡು ಮೇಲ್ಭಾಗದಲ್ಲಿ ಉರಿ ಕಾಣಿಸಿತು. ಅಷ್ಟರಲ್ಲಿ ಈ ಹೊಯ್ಲಾಟವನ್ನು ಕೇಳಿ ಬೀದಿಗೆ ಬಂದಿದ್ದ ಜನಗಳು ಹತ್ತಿರ ಸೇರಿದರು.
‘ನಮ್ಮನೆ ಸಾಮಾನೆಲ್ಲ ಸುಟ್ಹೋಗುತ್ತೆ ಎಳ್ಕಳ್ರಪ್ಪಾ’ – ಎಂದು ತಂಗಮ್ಮ ಅರಚಿಕೊಂಡಳು. ಒಳಗೆ ನುಗ್ಗಿದ ಜನಗಳು ಕೈಗೆ ಸಿಕ್ಕಿದ ಪಾತ್ರೆ ಪರಟಿ, ಬಟ್ಟೆ, ಮರ, ಕುಕ್ಕೆ, ಮಣೆ, ಬೀಸುವ ಕಲ್ಲು ಮೊದಲಾಗಿ ಬೇಗ ಬೇಗ ಹೊತ್ತುತಂದು ದೂರ ಹಾಕಿದರು. ಸೋಗೆಯ ಮನೆಗೆ ಹೊತ್ತಿದ ಬೆಂಕಿಯನ್ನು ನೀರು ಹುಯ್ದು ಆರಿಸಲು ಸಾಧ್ಯವೂ ಇರಲಿಲ್ಲ. ಹತ್ತಿರದಲ್ಲಿ ನೀರೂ ಇರಲಿಲ್ಲ. ಒಂದೂವರೆ ವರ್ಷದ ಹಿಂದೆ ಅಪ್ಪಣ್ಣಯ್ಯನೇ ಗುದ್ದಲಿ ಹಿಡಿದು ಕಟ್ಟಿದ ಮನೆ ಅರ್ಧ ಗಂಟೆಯಲ್ಲಿ ಉರಿದು ಬೂದಿಯಾಗಿ, ಬಿದ್ದುಹೋಯಿತು. ನಾಲ್ಕು ಸುತ್ತಲೂ ಇದ್ದ ಗೋಡೆಗಳು ಮತ್ತು ಎರಡು ಕಲ್ಲುಕಂಬಗಳು ಮಾತ್ರ ಉರಿಗೆ ಸಿಕ್ಕಿ ಕಪ್ಪು ಬಣ್ಣಕ್ಕೆ ತಿರುಗಿ ನಿಂತಿದ್ದುವು.
‘ನೋಡ್ದೆ ಏನೇ ಮುಂಡೆ ಏನ್ ಮಾಡ್ದೆ ನಾನು?’ – ಎಂದು ಅಪ್ಪಣ್ಣಯ್ಯ ಹುಲಿಯಂತೆ ಕೇಳಿದ.
‘ನಿನ್ನ ಕೈ ಸೇದಿಹೋಗ’ – ತಂಗಮ್ಮ ಹೇಳುತ್ತಿದ್ದಳು. ಎಚ್ಚತ್ತು ದೂರ ನಿಂತಿದ್ದ ಸಾತು – ‘ಅಮ್ಮಾ ನನ್ನಾಣೆ, ನೀನು ಒಂದೂ ಮಾತಾಡಬ್ಯಾಡ’ ಎಂದಳು.
ಕೈಲಿದ್ದ ತಾಳಿಯನ್ನು ಎತ್ತಿ ಹಿಡಿದು, ‘ಆ ಮುಂಡೆ ತಾಳಿ ಕಿತ್ಕಂಡಿದೀನಿ. ಇನ್ನು ಅವ್ಳು ಹೆಂಡ್ತಿಯಲ್ಲ ನಾನು ಗಂಡನಲ್ಲ, ಹಾದರಗಿತ್ತಿ ತಂದು’ ಎಂದು ಕೂಗುತ್ತಾ ಅಪ್ಪಣ್ಣಯ್ಯ ಊರಿನ ಬೀದಿ ಓಣಿಗಳಲ್ಲೆಲ್ಲ ಒಂದು ಸುತ್ತು ತಿರುಗಿದ.

ಮನೆಗೆ ಬೆಂಕಿ ಹೊತ್ತಿದಾಗ ನಂಜಮ್ಮನೂ ಓಡಿಬಂದಿದ್ದಳು. ಉಳಿದವರ ಜೊತೆ ಸೇರಿ ಒಳಗೆ ನುಗ್ಗಿ ಕೈಗೆ ಸಿಕ್ಕಿದ ಸಾಮಾನುಗಳನ್ನು ಎಳೆದು ಹೊರಗೆ ತಂದು ಹಾಕಿದ್ದಳು. ಮುಂದೆ ಏನು ಮಾಡಬೇಕು, ಏನು ಹೇಳಬೇಕು, ಎಂಬುದು ಅವಳಿಗೂ ತಿಳಿಯಲಿಲ್ಲ. ಈ ಸಂದರ್ಭದಲ್ಲಿ ಅಪ್ಪಣ್ಣಯ್ಯನನ್ನು ಮಾತನಾಡಿಸುವುದು ವಿವೇಕವಲ್ಲವೆಂದು ಅವಳಿಗೂ ಗೊತ್ತು. ಇನ್ನು ಅತ್ತೆ ಗಂಗಮ್ಮನೊಡನೆ ಮಾತನಾಡುವುದು ದೂರವೇ ಉಳಿಯಿತು.
‘ನಾನೇನು ಮಾಡ್ಲಿ ನೀನೇ ಹೇಳು’ -ಅವಳು ಕೇಳಿದಳು.
‘ಸದ್ಯಕ್ಕೆ ಒಂದೆರಡು ದಿನ ನಿಮ್ಮನೇಲಿ ಇರ್ತೀವಿ. ಆಮೇಲೆ ಏನಾದ್ರೂ ಮಾಡ್ಬೌದು.’

ಇಲ್ಲವೆನ್ನುವುದು ನಂಜಮ್ಮನಿಗೆ ಸಾಧ್ಯವಾಗದ ಮಾತು. ‘ಈ ಸಾಮಾನು ನಮ್ಮನೆಗೆ ತಂದು ಹಾಕ್ರಪ್ಪ’ ಎಂದು, ಇನ್ನೂ ಅಲ್ಲಿದ್ದ ಕೆಲವು ಗಂಡಸರಿಗೆ ಹೇಳಿದಳು. ಅವರ ಜೊತೆಗೆ ಅವಳೂ ಕೈ ಸೇರಿಸಿದಳು. ಎಲ್ಲವನ್ನೂ ತಂದು ಅವಳ ಮನೆಯ ಒಂದು ಮೂಲೆಯಲ್ಲಿ ಗುಡ್ಡೆಹಾಕಿಯಾಯಿತು. ನಂಜಮ್ಮ ಅಡಿಗೆಮನೆ ಹೊಕ್ಕಳು. ಅವರು ರಾಗಿಹಿಟ್ಟು ತಿನ್ನುವವರಲ್ಲ. ಹಬ್ಬ ಹುಣ್ಣಿಮೆಗೆ ಇರಲಿ ಎಂದು ಇಟ್ಟಿದ್ದ ಅಕ್ಕಿಯನ್ನು ಹೊರಕ್ಕೆ ತೆಗೆದು ನೆನೆಸಿದಳು. ಮನೆಯಲ್ಲಿ ತೊಗರಿಬೇಳೆ ಇರಲಿಲ್ಲ. ಪಾರ್ವತಿಯನ್ನು ಕಳಿಸಿ ನಾಲ್ಕು ಆಣೆ ಕೊಟ್ಟು ಒಂದು ಸೇರು ತರಿಸಿದಳು.

ಇವರೆಲ್ಲ ಮತ್ತೆ ಹಿರಿಸೊಸೆಯ ಮನೆಗೆ ಹೋದುದರಿಂದ ಗಂಗಮ್ಮನಿಗೆ ಕಸಿವಿಸಿಯಾಯಿತು. ‘ಅವಳು ತಂತ್ರಗಾರ ಮುಂಡೆ. ಮತ್ತೆ ಏನಾರ ಮಾಡಿ ನನ್ನ ಕಂದನ್ನ ಬಲೆಗೆ ಕೆಡವುಸ್ತಾಳೆ.’ -ಎಂದು ಅವಳ ಬುದ್ಧಿ ಯೋಚಿಸಿತು. ತಕ್ಷಣ ಅಣ್ಣಾಜೋಯಿಸನ ಮನೆಗೆ ಹೋಗಿ; ಜೋಯಿಸರೇ, ಕೇಳೀದಿರಾ ಸಮಾಚಾರಾನಾ?’
‘ಏನ್, ಗೊತ್ತಿಲ್ವಲ್ಲಾ?’ ಗಂಗಮ್ಮನ ಬಾಯಿಯಿಂದಲೇ ಎಲ್ಲವನ್ನೂ ಚಿತ್ರವತ್ತಾಗಿ ಕೇಳುವ ಆಸೆಯಿಂದ ಜೋಯಿಸ ಎಂದ.
ಮಗನು ಹೆಂಡತಿಯ ತಾಳಿ ಕಿತ್ತುಕೊಂಡ ಪ್ರತಾಪವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ ಗಂಗಮ್ಮ ಕೇಳಿದಳು; ‘ತಾಳಿ ಕೀಳುಸ್ಕಂಡೋಳ್ನ ಅವ್ಳು ಮನೆಗೆ ಸೇರಿಸ್ಕಂಡಿದಾಳಲ್ಲಾ, ನ್ಯಾಯಕ್ಕೆ ಕೂರ್‍ಸಿ ಅವ್ಳಿಗೆ ದಂಡ ಹಾಕುಸ್ ಬ್ಯಾಡವೇ ನೀವೇ ಹೇಳಿ.’

ಧರ್ಮಶಾಸ್ತ್ರದ ಒಂದು ಹೊಸ ಪಾಯಿಂಟನ್ನು ಜೋಯಿಸರಿಗೆ ಹೇಳಿಕೊಟ್ಟಂತೆ ಆಯಿತು. ನಂಜಮ್ಮನನ್ನು ಪಂಚಾಯ್ತಿಗೆ ಕೂರಿಸಿ ಇಪ್ಪತ್ತೈದು ರೂಪಾಯಿಯಾದರೂ ತಪ್ಪು ದಂಡ ಹಾಕಬೇಕೆಂದು ಅವರ ಮನಸ್ಸು ಯೋಚಿಸಿತು. ಆದರೆ ಪೋಟಿಕೆಯಲ್ಲಿ ಪಾಲು ಕೊಡಬೇಕೆಂಬ ಪಂಚಾಯ್ತಿಯಲ್ಲಿ ಅವಳು ಎಲ್ಲರನ್ನೂ ಮುಖಕ್ಕೆ ಹೊಡೆದಹಾಗೆ ಅಂದದ್ದು, ಮರು ದಿನ ಶೇಕ್ದಾರರು ಮಂಗಳಾರತಿ ಮಾಡಿದ್ದು ನೆನಪಾಗಿ ಒಂದು ನಿಮಿಷ ಹಿಂಜರಿದರು. ಆಗ ಅಪಮಾನವಾಗಿತ್ತು; ಈಗ ಅದರ ಮುಯ್ಯಿ ತೀರಿಸಿಕೊಳ್ಳಬೇಕೆಂಬ ಧೈರ್ಯತಂದುಕೊಂಡು ತೀರ್ಮಾನಿಸಿದರು. ಅಲ್ಲಿಯೇ ಕೂತಿರುವಂತೆ ಗಂಗಮ್ಮನಿಗೆ ಹೇಳಿ, ತಮ್ಮ ಚಿಕ್ಕಪ್ಪ ಅಯ್ಯಾಶಾಸ್ರಿಗಳ ಮನೆಗೆ ಹೋದರು. ಇಂಥ ಒಳ್ಳೆಯ ಸಂದರ್ಭದಲ್ಲಿ ಮುದುಕ ಶಾಸ್ರಿಗಳದು ಸುಮ್ಮನಿರುವ ಜೀವವಲ್ಲ. ಇದು ಬ್ರಾಹ್ಮಣಿಕೆಗೆ ಸೇರಿದ ಪ್ರಶ್ನೆ. ಬ್ರಾಹ್ಮಣ ಧರ್ಮ ಉಳಿಯಬೇಕೋ ಸಾಯಬೇಕೋ?
ಈ ಇಬ್ಬರು ಧರ್ಮಪಾಲಕರು ಊರಿನ ಇತರ ನಾಲ್ಕು ಜನ ಬ್ರಾಹ್ಮಣರನ್ನು ಹೊರಡಿಸಿಕೊಂಡು ನಂಜಮ್ಮನ ಮನೆಗೆ ಬಂದರು. ಜೊತೆಯಲ್ಲಿ ಗಂಗಮ್ಮ, ಅಪ್ಪಣ್ಣಯ್ಯ. ಇವರೆಲ್ಲ ನ್ಯಾಯ ಮಾಡುವುದಕ್ಕೆ ಬಂದಿದ್ದಾರೆಂಬುದು ನಂಜಮ್ಮನಿಗೆ ತಕ್ಷಣ ತಿಳಿಯಲಿಲ್ಲ. ಅಣ್ಣಾಜೊಯಿಸರೇ ಮಾತು ತೆಗೆದು ಹೇಳಿದರು; ‘ಮಾಂಗಲ್ಯ ಹೋದ ಹೆಂಗಸು ವಿಧವೆಗೆ ಸಮಾನ. ಅಂಥೋಳ ಮುಖದರ್ಶನ ಸಹ ಮಾಡ್ಬಾರ್‍ದು. ಅಂಥೋಳುನ್ನ ಮನೆಗೆ ಸೇರಿಸಿ ನೀವು ತಪ್ಪು ಮಾಡಿದೀರಿ. ಪ್ರಾಯಶ್ಚಿತ್ತವಾಗಬೇಕು. ತಪ್ಪುದಂಡ ಕೊಡಬೇಕು.’
ಚನ್ನಿಗರಾಯರು ಈ ಮಾತನ್ನು ಕೇಳಿ ಹೆದರಿದರು. ‘ನಂಗೇನೂ ಗೊತ್ತಿಲ್ಲ ಕಣ್ರೀ. ಇವಳೇ ಅವ್ರುನ್ನೆಲ್ಲ ಕರ್ಕಂಡ್ ಬಂದ್ಲು. ನಾನು ಬೇಕಾದ್ರೆ ಈಗ್ಲೂ ಕತ್ ಹಿಡ್ದು ಆಚಿಗ್ ನೂಕ್‌ಬಿಡ್ತೀನಿ.’
‘ಹಾಗಾದ್ರೆ ಸರಿ. ಆದರೆ ಈಗ ಸೇರಿಸಿರೋದಕ್ಕೆ ಮೊದಲು ದಂಡಾನಂತು ಕೊಡಬೇಕು.’
‘ಎಷ್ಟು ಕೊಡಬೇಕು?’
‘ಎಷ್ಟು ಚಿಕ್ಕಪ್ಪ?’ -ಅಣ್ಣಾಜೋಯಿಸರು ಕೇಳಿದುದಕ್ಕೆ ಅಯ್ಯಾಶಾಸ್ತ್ರಿಗಳು, ಪಾಪ ಅವ್ರೂ ಬಡವ್ರು. ಇಪ್ಪತ್ತೈದಾದರೆ ಸಾಕು. ಎಂದರು.
‘ಅಷ್ಟೋಂದು ದುಡ್ಡು ಎಲ್ಲಿಂದ ತರಾಣ್ರೀ ನಾವು? ಒಂದಿಷ್ಟು ಕಮ್ಮಿ ಮಾಡಿ ಶಾಸ್ತ್ರಿಗಳೇ.’
‘ದುಡ್ಡೇನು ನಮ್ಮಪ್ಪನ ಮನೆಗೆ ಬರುತ್ತೆ ಅಂತ ತಿಳ್ಕಂಡೆಯಾ ಚಿನ್ನಯ್ಯಾ? ಶೃಂಗೇರಿ ಮಠಕ್ಕೆ ಸೇರೂ ಹಣ.’
ಇನ್ನು ಮಾತನಾಡುವಂತೆಯೇ ಇಲ್ಲ. ಚೆನ್ನಿಗರಾಯರು ಹೆಂಡತಿಯ ಕಡೆಗೆ ತಿರುಗಿ -‘ನಿಂಗ್ಯಾಕೆ ಮುಂಡೆ ಯಜಮಾನಿಕೆ? ಈ ಅನಿಷ್ಟದೋವುನ್ನ ಯಾಕೆ ಕರ್ಕಂಡ್ ಬಂದೆ? ಈಗ ಇವುನ್ನ ಕುತ್ತಿಗೆ ಹಿಡ್ದು ಅಟ್ತಿಯೋ ಇಲ್ವೋ?’ ಎಂದು ಗದರಿಸಿದರು.
ಅದುವರೆಗೂ ಅಡಿಗೆಮನೆಯ ಒಳಬಾಗಿಲಿನಲ್ಲಿ ನಿಂತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ತಂಗಮ್ಮ ಹೊರಗೆ ಬಂದು ಕೇಳಿದಳು; ‘ಇಷ್ಟು ದಿನ ನಮಗೆ ಆಪ್ತರ ಹಾಗೆ ಇದ್ದೋರು, ಈಗ ಯಾಕೆ ಹೀಗ್ ಮಾಡ್ತೀರಾ ಜೋಯಿಸ್ರೇ? ನಾವೇನು ನಿಮ್ಗೆ ಮಾಡಿದ್ದು?’
‘ನಿಮ್ಮುನ್ನ ಕಂಡ್ರೆ ನಮಗೇನೂ ಆಗದೇ ಇಲ್ಲ ಕಣ್ರಮ್ಮ. ಧರ್ಮಶಾಸ್ತ್ರ ಹಾಗಿದೆ. ಕಂಡೂ ಕಂಡೂ ನಾವು ಸುಮ್ನಿದ್ರೆ ಶೃಂಗೇರಿ ಮಠದೋರು ನಮ್ಮುನ್ನ ಸುಮ್ನೆ ಬಿಡ್ತಾರೆಯೇ?’ -ಅಣ್ಣಾಜೋಯಿಸರು ಹೇಳುತ್ತಿದ್ದರು.
ಇಲ್ಲಿಯ ತನಕ ಸುಮ್ಮನೆ ನಿಂತಿದ್ದ ನಂಜಮ್ಮ ಮಾತನಾಡಿದಳು; ‘ತಾಳಿ ಕಿತ್ಕಂಡೋರು ಅಪ್ಪಣ್ಣಯ್ಯ. ಹೆಂಡ್ತಿ ತಾಳಿ ಕಿತ್ಕಳೂ ಅಧಿಕಾರ ಶಾಸ್ತ್ರದಲ್ಲಿ ಅವರಿಗೆ ಇದೆಯೇ? ದಂಡ ಗಿಂಡ ಹಾಕ್ಬೇಕಾಗಿದ್ರೆ ಅವ್ರಿಗೆ ಹಾಕಿ. ಇನ್ನು ಮನೆ ಸುಟ್ಟುಹೋಗಿ ಹೆಂಗಸರು ಬೀದಿಪಾಲಾಗಿದ್ದಾಗ ಮನೆಗೆ ಸೇರುಸ್ದೇ ನಾವೇನು ಮಾಡಬೇಕಾಗಿತ್ತು? ಈ ಕಷ್ಟಕಾಲದಲ್ಲಿ ಒಪ್ಪತ್ತು ಸಹಾಯ ಮಾಡಕೂಡದು ಅಂತ ಬರೆದಿದೆಯೆ ನಿಮ್ಮ ಧರ್ಮಶಾಸ್ತ್ರದಲ್ಲಿ?’
ಇಬ್ಬರು ಧರ್ಮಪಾಲಕರೂ ತಬ್ಬಿಬ್ಬಾದರು. ಈ ತಾಟಗಿತ್ತಿ ತಂತ್ರಗಾರ ಸೊಸೆ ತನ್ನ ಮಗನ ಮೇಲೆಯೇ ನ್ಯಾಯ ತಿರುಗಿಸಿದುದನ್ನು ನೋಡಿದ ಗಂಗಮ್ಮನಿಗೂ ಏಟು ಬಿದ್ದಂತೆ ಆಯಿತು. ‘ಅವ್ನು ಕಟ್ಟಿದ ತಾಳಿ, ಅವ್ನು….’ -ಎಂದು ಮುದುಕ ಅಯ್ಯಾಶಾಸ್ತ್ರಿಗಳು ಏನೋ ಹೇಳುತ್ತಿದ್ದರು. ಅಷ್ಟರಲ್ಲಿ ಅಣ್ಣಾಜೋಯಿಸರು -‘ಚಿಕ್ಕಪ್ಪ, ನೀವು ಸುಮ್ನಿರಿ. ನೀನು ಕಟ್ಟಿದ ತಾಳಿ ನಂಗೆ ಬ್ಯಾಡ ಅಂತ ಅವ್ಳೇ ಕಿತ್ತು ಕೊಟ್ಳಂತೆ. ಅಲ್ವೇನ್ ಗಂಗಮ್ಮ?’ ಎಂದರು.
‘ಹೂಂ, ಹೂಂ. ಆ ಮುಂಡೆಯೇ ನಂಗೆ ಈ ತಾಳಿ ಬ್ಯಾಡಿ ಅಂತ ಕಿತ್ತು ಎಸದ್ಲು.’
‘ಅನ್ಯಾಯಕಾರ ಮಾತು ಯಾಕೆ ಆಡ್ತೀರಾ? ಹಾಗಂತ ಪ್ರಮಾಣ ಮಾಡ್ತೀರಾ ನೀವೆಲ್ಲಾ? -ಎಂದು ತಂಗಮ್ಮ ಕೇಳಿದುದಕ್ಕೆ ಗಂಗಮ್ಮ, ‘ಊರೆಲ್ಲ ಕಂಡಿರೂದಕ್ಕೆ ಪ್ರಮಾಣ ಯಾಕ್ ಮಾಡಬೇಕೇ ತಾಟಗಿತ್ತಿ?’ ಎಂದು ಉತ್ತರಕೊಟ್ಟಳು.

ಹೀಗೆ ನ್ಯಾಯ ಎಲ್ಲಿಂದೆಲ್ಲಿಗೋ ಹೋಯಿತು. ಇವರ ಪರವಾಗಿ ನಿಂತು ಜೋರಿನಿಂದ ಮಾತನಾಡುವ ಒಬ್ಬ ಗಂಡಸಿದ್ದರೆ ಬೇರೆಯ ರೀತಿಯಾಗುತ್ತಿತ್ತು. ಇದನ್ನು ಬಲ್ಲ ನಂಜಮ್ಮ ಎಂದಳು; ‘ಜೋಯಿಸರೇ, ನಡೆದ ವಿಷಯ ಏನು ಅಂತ ನೀವು ಕಣ್ಣಾರೆ ಕಂಡಿಲ್ಲ. ಸುಮ್ಸುಮ್ನೆ ಕಂಡೋರ ಮನೇಲಿ ಜಗಳ ಮಾಡ್ಸಿ ತಮಾಷೆ ಮಾಡ್ತೀರಾ ನೀವು. ಇದು ಮರ್ಯಾದಸ್ಥರು ಮಾಡೂ ಕೆಲಸವಲ್ಲ. ನಿಮ್ಮುನ್ನ ಯಾರೂ ಕರೆಸಿರಲಿಲ್ಲ. ಸುಮ್ನೆ ಎದ್ದು ಹೊರಟುಹೋಗಿ. ಇನ್ನು ಮ್ಯಾಲೆ ಹೇಳದೆ ಕೇಳದೆ ನಮ್ಮನಿಗೆ ಯಾರೂ ನ್ಯಾಯ ಪಾಯ ಅಂತ ಬರೂಕೂಡ್ದು.’
‘ನೋಡಿದ್ರಾ ಜೋಯಿಸ್ರೇ ಈ ಮುಂಡೆ ಅಹಂಕಾರಾನಾ? -ಎಂದು ಗಂಗಮ್ಮ ಹೇಳುತ್ತಿದಂತೆಯೇ ಇದುವರೆಗೂ ಅಡಿಗೆಮನೆಯ ಒಳಬಾಗಿಲಿನಲ್ಲಿ ನಿಂತಿದ್ದ ಸಾತು, ಹತ್ತಿರದಲ್ಲೇ ಇದ್ದ ಹಂಚೀಕಡ್ಡಿ ಕಸಪೊರಕೆಯನ್ನು ಕೈಲಿ ಹಿಡಿದು ಹೊರಗೆ ಬಂದು, ಈ ಮನೆ ಹಾಳು ಮುಂಡೆಯಿಂದಲೇ ಇಷ್ಟೆಲ್ಲ ಆದದ್ದು’ ಎಂದು ಪೊರಕೆಯನ್ನು ಗಂಗಮ್ಮನ ಮುಖದ ಮೇಲೆ ಬೀಸಿದಳು. ಗಂಗಮ್ಮ ಒಂದು ನಿಮಿಷ ಅವಾಕ್ಕಾದಳು. ಅಪ್ಪಣ್ಣಯ್ಯ ಕಿಡಿಕಿಡಿಯಾಗಿ ಮೇಲೆ ಎದ್ದ. ಪರಿಸ್ಥಿತಿ ಇಷ್ಟಕ್ಕೆ ಹೋದುದನ್ನು ಕಂಡ ನಂಜಮ್ಮ ಗಾಬರಿಯಾಗಿ ಸಾತು ತಂಗಮ್ಮರನ್ನು ಅಡಿಗೆಮನೆಯ ಒಳಗೆ ಕೂಡಿ, ಬಾಗಿಲು ಎಳೆದುಕೊಂಡು ಅಡ್ಡವಾಗಿ ನಿಂತು ಹೇಳಿದಳು; ‘ಈಗ ನೀವೆಲ್ಲ ಎದ್ದು ನಮ್ಮನೆಯಿಂದ ಹೊರಗೆ ಹೋಗ್ತೀರೋ ಇಲ್ವೋ?’

ಜೋಯಿಸರಿಬ್ಬರೂ ಜಾಗ ಬಿಟ್ಟರು. ಈ ಮಾತಿನಲ್ಲಿ ತಮ್ಮ ಜವಾಬ್ದಾರಿ ಇಲ್ಲವೆಂಬಂತೆ ಕುಳಿತಿದ್ದ ಇಬ್ಬರು ಬ್ರಾಹ್ಮಣರು ತಕ್ಷಣ ಮೇಲೆ ಎದ್ದರು. ಅಷ್ಟರಲ್ಲಿ ಗಂಗಮ್ಮನ ನಾಲಗೆಗೆ ಕಾವು ಬಂತು. ಮೂಲೆಯಲ್ಲಿದ್ದ ಒನಕೆಯನ್ನು ಕೈಲಿ ತೆಗೆದುಕೊಂಡು ಅವಳು ಅಡಿಗೆಮನೆಯ ಕಡೆಗೆ ನುಗ್ಗಿದಳು. ನಂಜಮ್ಮ ಬಾಗಿಲಿಗೆ ಅಡ್ಡ ನಿಂತು -‘ನಮ್ಮನೆ ಅಂದ್ರೆ ಶ್ಯಾನುಭೋಗಿಕೆ ಮನೆ. ಏನಾದ್ರೂ ಹೆಚ್ಚು ಕಮ್ಮಿಯಾದ್ರೆ ಶೇಕ್ದಾರ್ರಿಗೆ ಹೇಳಿ ಪೋಲೀಸ್ನೋರುನ್ನ ಕರುಸ್ತೀನಿ’ ಎಂದು ಜಬರಿದಳು. ಗಂಗಮ್ಮನಿಗೆ ಗಾಬರಿಯಾಯಿತು. ಅಪ್ಪಣ್ಣಯ್ಯನಂತೂ ಅರ್ಧ ಬೆವೆತುಬಿಟ್ಟ. ‘ಬಾರಮ್ಮ. ಈ ಮುಂಡೇರ ತಂಟೆ ಬ್ಯಾಡ’ -ಎಂದು ತಾಯಿಯ ಕೈಯ ಒನಕೆಯನ್ನು ಕಿತ್ತು ಇಟ್ಟು ಮನೆಯಿಂದ ಹೊರಗೆ ಹೋಗಿಬಿಟ್ಟ. ತಕ್ಷಣ ಹೊರಟರೆ ತನ್ನ ಗೌರವಕ್ಕೆ ಕಡಿಮೆ ಎಂಬ ಪ್ರಜ್ಞೆಯಿಂದ ಗಂಗಮ್ಮ ಮತ್ತೆ ಹತ್ತು ಮಾತು ಬೈದು, ನಂತರ ಮಗನನ್ನು ಅನುಸರಿಸಿದಳು.

ಅನ್ನ ಸಾರಿನ ಅಡಿಗೆಯಾಗಿದ್ದರೂ ಸಾತು, ತಂಗಮ್ಮ, ಊಟ ಮಾಡಲಿಲ್ಲ. ಆ ದಿನ ಮಧ್ಯಾಹ್ನದಿಂದ ನಡೆದುಹೋದ ಘಟನೆಗಳಿಂದ ಇಬ್ಬರೂ ಮೂಕರಾಗಿ ಹೋಗಿದ್ದರು. ಇನ್ನು ಮುಂದೆ ಜೀವನದ ಗತಿ ಏನು ಎಂಬ ಯೋಚನೆ ತಾಯಿ, ಮಗಳು, ಇಬ್ಬರನ್ನೂ ತಿನ್ನುತ್ತಿತ್ತು.

– ೫ –

ರಾತ್ರಿಯೆಲ್ಲ ತಾಯಿ ಮಗಳು ಮಾತನಾಡಿಕೊಳ್ಳುತ್ತಿದ್ದರು. ಬೆಳಗ್ಗೆ ಎದ್ದ ತಕ್ಷಣ ತಂಗಮ್ಮ ನಂಜಮ್ಮನಿಗೆ ಹೇಳಿದಳು; ‘ಇನ್ನು ಈ ಊರಿನಲ್ಲಿದ್ದು ಏನು ಸುಖ? ಊರಿನಲ್ಲಿ ನಮ್ಮದು ಅಂತ ಒಂದು ಮನೆ ಇತ್ತು. ಇಲ್ಲಿಗೆ ಬರುವ ಆರು ತಿಂಗಳ ಮುಂಚೆ ಅದನ್ನೂ ಮಾರಿದ್ವು. ಈಗ ಪೌರೋಹಿತ್ಯದಲ್ಲಿ ಹಳ್ಳಿಗಳಿವೆ. ರಾಮಕೃಷ್ಣನಿಗೆ ಹ್ಯಾಗೂ ಎಂಟು ವರ್ಷವಾಗಿದೆ. ಅಲ್ಲೇ ಯಾರ ಕೈಲಾದ್ರೂ ಒಂದೆಳೆ ಜನಿವಾರ ಹಾಕಿಸಿ ಒಂದು ಪುಣ್ಯಾವರ್ತನೆ, ಒಂದು ನವಗ್ರಹ ದಾನ, ಇಷ್ಟಾದರೂ ಹೇಳಿಸಿದರೆ ಜೀವನವಾಗುತ್ತೆ. ಯಾರಾದರೂ ಪುಣ್ಯಾತ್ಮರ ಜಾಗದಲ್ಲಿ ಒಂದು ಗುಡಿಸಲು ಹಾಕ್ಕೊಂಡಿರ್ತೀವಿ.’

ನಂಜಮ್ಮ ಅವರಿಗೆ ಮತ್ತೆ ಯಾವ ಸಲಹೆಯನ್ನೂ ಕೊಡುವ ಸ್ಥಿತಿಯಲ್ಲಿರಲಿಲ್ಲ. ಈ ತಾಯಿ, ಮಗಳು, ಇಬ್ಬರಿಗೂ ಕಷ್ಟದ ಕೆಲಸ ಮಾಡಿ, ಬಡತನದ ಹಿಟ್ಟು ರೊಟ್ಟಿ ತಿಂದು ಅಭ್ಯಾಸವಿರಲಿಲ್ಲ. ಅಭ್ಯಾಸ ಮಾಡಿಕೊಳ್ಳಬೇಕೆಂದು ಪ್ರಯತ್ನಿಸಿಯೂ ಇರಲಿಲ್ಲ. ಹಾಗೆ ಪ್ರಯತ್ನಿಸಿದ್ದರೆ ಅಪ್ಪಣ್ಣಯ್ಯ ಹೀಗೆ ಮಾಡುತ್ತಿರಲಿಲ್ಲವೇನೋ! ಇವರು ಮುಂದೆ ತಮ್ಮ ಊರಿಗೆ ಹೋದರೂ ಪರಿಪಾಟಲು ತಪ್ಪುವುದಿಲ್ಲ. ಆದರೆ ತಾನು ಏನೂ ಮಾಡುವಂತಿಲ್ಲ- ಎಂದು ಯೋಚಿಸಿದ ನಂಜಮ್ಮ, ಅವರ ಯೋಚನೆಗೆ ತನ್ನ ಸಮ್ಮತಿ ಕೊಟ್ಟಳು. ಈ ಊರನ್ನು ಯಾವ ನಿಮಿಷದಲ್ಲಿ ಬಿಟ್ಟೇವೆಯೋ ಎಂದು ಅವರ ಮನಸ್ಸು ತಪಗುಟ್ಟುತ್ತಿತ್ತು. ಸಾತು ತನ್ನ ಎರಡು ಓಲೆಗಳನ್ನೂ ತೆಗೆದು ಮಾರಲು ಹೊರಟಳು. ನಂಜಮ್ಮನ ಮನೆಯ ಕೇರಿಯ ಒಬ್ಬ ಹೆಂಗಸು ಇಪ್ಪತ್ತೈದು ರೂಪಾಯಿಗೆ ಕೊಂಡುಕೊಂಡಳು. ದಾರಿಯ ಖರ್ಚಿಗೆ ಆಯಿತು. ಅದೇ ದಿನ ನಂಜಮ್ಮ ಒಂದು ಪಾಯಸ ಮಾಡಿ ಬಡಿಸಿ ಸಾತು, ಜಯಲಕ್ಷ್ಮಿಯ ಹಣೆಗೆ ಕುಂಕುಮವಿಟ್ಟು ಮರುದಿನ ಗಾಡಿ ಹೊಡಿಸಿ ಇವರ ಸಾಮಾನೆಲ್ಲವನ್ನೂ ತುಂಬಿಸಿ ತಾನೂ ಜೊತೆಗೆ ಮೋಟಾರು ರಸ್ತೆಯ ಹತ್ತಿರಕ್ಕೆ ಹೋದಳು. ತಿಪಟೂರಿನ ಕಡೆಗೆ ಹೋಗುವ ಮೊದಲಿಯಾರ್ ಮೋಟಾರು ಬರುವುದಕ್ಕೆ ಸ್ವಲ್ಪ ಮುಂಚೆ ಸಾತು ಕಣ್ಣೀರು ಒರೆಸಿಕೊಳ್ಳುತ್ತಾ ಎಂದಳು; ‘ಅಕ್ಕಾ, ಈ ಮನೆಗೆ ಸ್ವಸೆಯರಾಗಿ ನಾವಿಬ್ಬರೂ ಬಂದೆವು. ನೀವು ಹ್ಯಾಗೂ ಹೆಣಗ್ತಾ ಇದೀರಾ. ನನ್ನ ಹಣೇಬರಹ ಹೀಗಾಯ್ತು.’

ನಂಜಮ್ಮ ಅದಕ್ಕೆ ಏನೂ ಉತ್ತರ ಕೊಡಲಿಲ್ಲ. ಮದುವೆಯಾಗಿ ತಾನೂ ಈ ಊರಿಗೆ ಬಂದಾಗಿನಿಂದ ನಡೆದುದೆಲ್ಲವೂ ಅವಳ ಮನಸ್ಸಿನಲ್ಲಿ ಒಂದೊಂದಾಗಿ ಬರತೊಡಗಿತು. ನಾವು ಯಾಕೆ ಹುಟ್ಟಿದೆವೋ, ಇಂಥಾ ಮನೆಗೆ ಯಾಕೆ ಸೇರಿದೆವೋ- ಎಂಬ ಪ್ರಶ್ನೆಗಳು ಅವಳ ಮನಸ್ಸಿನಲ್ಲಿ ಹುಟ್ಟುತ್ತಿದ್ದವು. ಮೋಟಾರಿನ ಟಾಪಿನ ಮೇಲೆ ಸಾಮಾನುಗಳನ್ನೆಲ್ಲ ಹಾಕಿಸಿದಮೇಲೆ ಅವರು ಒಳಗೆ ಹತ್ತಿ ಕುಳಿತರು. ‘ನಮ್ಮೂರಿಗೆ ನೀವೊಂದು ಸಲ ಬರಬೇಕು’ -ಎಂದು ಹೇಳುವಾಗ, ಮುಂದೆ ತಾವು ಒಬ್ಬರನ್ನೊಬ್ಬರು ನೋಡುವ ಬಗೆಗೆ ಅವರಲ್ಲಿ ಯಾರಿಗೂ ನಂಬಿಕೆ ಇರಲಿಲ್ಲ.
ಖಾಲಿ ಗಾಡಿಯ ಮೇಲೆ ಕೂತು ನಂಜು ಮನೆಗೆ ಬಂದ ಸ್ವಲ್ಪ ಹೊತ್ತಿಗೆ ಸೂರಪ್ಪಮೇಷ್ಟರ ಹೆಂಡತಿ ರುಕ್ಕಮ್ಮ ಬಂದರು. ಆ ಮಾತು ಈ ಮಾತು ಆಡಿದ ಮೇಲೆ ಹೇಳಿದರು; ‘ನಿಮಗೆ ಬಹಿಷ್ಕಾರ ಹಾಕಿಸಬೇಕು ಅಂತ ಅಣ್ಣಾಜೋಯಿಸರು ಶೃಂಗೇರಿಗೆ ಕಾಗದ ಬರೆದಿದಾರಂತೆ.
‘ಬರ್‍ದು ಏನು ಮಾಡ್ತಾರಂತೆ?’
‘ಅಯ್ಯೋ ನಿಮಗೆ ಗೊತ್ತಿಲ್ವೇನ್ರಿ? ಇವರ ಮನೆಗೆ ಯಾರೂ ಹೋಗಕೂಡದು, ಬರೂಕೂಡದು; ನೀರು ಬೆಂಕೀನೂ ಕೊಡೂಕೂಡ್ದು ಅಂತ ಮಠದಿಂದ ಅಪ್ಪಣೆಯಾಗುತ್ತೆ. ಜಾತಿಸ್ಥರು ದೂರ ಮಾಡಿದ್ರೆ ಜೀವನ ಮಾಡೋದು ಹ್ಯಾಗೆ?’
ಈ ಮಾತಿನಿಂದ ನಂಜಮ್ಮನಿಗೆ ಗಾಬರಿ ಏನೋ ಆಯಿತು. ಆದರೆ ಜಾತಿಸ್ಥರಿಂದ ಅವಳಿಗೆ ಆಗಿರುವ ಆಗುತ್ತಿರುವ ಉಪಕಾರವಾದರೂ ಏನು? ಯಾರು ಮನೆಗೆ ಬರದಿದ್ದರೂ ಬ್ಯಾಡ-ಎಂದುಕೊಂಡು ಸುಮ್ಮನಾದಳು.

ಹದಿನೈದು ದಿನವಾದ ಮೇಲೆ ಒಂದು ದಿನ ಅಣ್ಣಾಜೋಯಿಸರು ಅಯ್ಯಾಶಾಸ್ತ್ರಿಗಳು ನಂಜಮ್ಮನ ಮನೆಗೆ ಬಂದು ಅವಳ ಕೈಗೆ ಒಂದು ಕಾಗದ ಕೊಟ್ಟರು. ಶೃಂಗೇರಿ ಸಂಸ್ಥಾನದ ಸರ್ವಾಧಿಕಾರಿಗಳ ರುಜುವಿನಿಂದ ಬಂದಿದ್ದ ಅದರಲ್ಲಿ, ‘ಗಂಡನೇ ಬೇಡವೆಂದು ಮಾಂಗಲ್ಯ ಹರಿದು ಎಸೆದು ಹೋದ ಆ ಹೆಂಗಸನ್ನು ಮನೆಗೆ ಸೇರಿಸಿಕೊಂಡ ಶ್ಯಾನುಭೋಗ ಚೆನ್ನಿಗರಾಯನ ಸಂಸಾರವನ್ನು ಬಹಿಷ್ಕರಿಸಲಾಗಿದೆ. ಶ್ರೀಮಠಕ್ಕೆ ಒಂದು ನೂರ ಒಂದು ರೂಪಾಯಿ ತಪ್ಪುದಂಡ ಕೊಟ್ಟು, ದರ್ಭೆಯಲ್ಲಿ ನಾಲಿಗೆ ಸುಡಿಸಿಕೊಂಡು ಸ್ಥಳಪುರೋಹಿತರಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳುವ ತನಕ ಆ ಸಂಸಾರದ ಜೊತೆಗೆ ಯಾರೂ ಬೆಂಕಿನೀರಿನ ಸಂಬಂಧ ಮಾಡಕೂಡದು. ಹಾಗೆ ಯಾರಾದರೂ ಮಾಡಿದ್ದೇ ಆದರೆ ಅವರನ್ನೂ ಬಹಿಷ್ಕರಿಸಿ ಶ್ರೀಮಠಕ್ಕೆ ನಿವೇದಿಸತಕ್ಕದ್ದು’ ಎಂದು ಬರೆದು ಮಠಮುದ್ರೆಯನ್ನೂ ಹಾಕಿತ್ತು.
ಅವಳು ಓದಿ ಮುಗಿಸಿದ ಮೇಲೆ ಅಯ್ಯಾಶಾಸ್ತ್ರಿಗಳು-‘ಏನು ಮಾಡ್ತಿಯಾ?’ ಎಂದರು.
‘ಇಷ್ಟು ವರ್ಷ ರಾಮನವಮಿ ದಿನ ಹ್ಯಾಗೋ ಪಾನಕ ಕೋಸಂಬರಿ ಮಾಡಿ ನಿಮಗೆಲ್ಲ ಕೊಡ್ತಿದ್ದೆ. ಇನ್ನು ಮಾಡೂ ಹಾಗಿಲ್ಲ’ ನಂಜಮ್ಮ ಎಂದಳು.
‘ಮಾಡಿದ್ರೆ ನಾವು ಬರುಲ್ಲ.’
‘ನಿಮ್ಮ ಸಂತೋಷ.’
‘ಅರಮನೆ ಎದುರಿಸಿ ಬದುಕಬಹುದು. ಗುರುಮನೆ ಬಹಿಷ್ಕಾರ ಹಾಕಿದ್ರೆ ಬದುಕೂಹಾಗಿಲ್ಲ ತಿಳ್ಕೋ’-ಎಂದು ಹೇಳಿ, ಇಬ್ಬರೂ ಹೊರಟು ಹೋದರು. ನಂಜಮ್ಮನಿಗೆ ಇದರಿಂದ ಅಪಮಾನವೆನಿಸಿತು; ಆದರೆ ಭಯವಾಗಿರಲಿಲ್ಲ. ಮರುದಿನ ಕೂತು ಇಲ್ಲಿ ನಡೆದ ವಿದ್ಯಮಾನವನ್ನೆಲ್ಲ ತಾನೇ ವಿವರಿಸಿ, ತಾಯಿಯ ಮಾತು ಕೇಳಿ ಗಂಡನೇ ಹೆಂಡತಿಯ ತಾಳಿ ಹರಿದುಕೊಂಡನೆಂದೂ ಅವಳ ತಪ್ಪೇನೂ ಇಲ್ಲವೆಂದೂ, ದಿಕ್ಕಿಲ್ಲದ ಹೆಂಗಸರನ್ನು ತಾವು ಒಂದು ದಿನ ಮನೆಯಲ್ಲಿ ಇಟ್ಟುಕೊಂಡಿದ್ದು ಊರಿಗೆ ಕಳಿಸಿಕೊಟ್ಟಿದ್ದು ನಿಜವೆಂದೂ, ಇದರಲ್ಲಿ ತಮ್ಮದೇನೂ ತಪ್ಪಿಲ್ಲವೆಂದೂ ಬರೆದು ಅದಕ್ಕೆ ಗಂಡನ ರುಜು ಹಾಕಿಸಿ, ಸೋಮವಾರದ ದಿನ ಪೋಸ್ಟ್‌ಮ್ಯಾನ್ ಬಂದಾಗ ಲಕೋಟೆ ತೆಗೆದು ಅವನಿಂದಲೇ ವಿಳಾಸ ಬರೆಸಿ ಕಳಿಸಿದಳು. ಆದರೆ ಎಷ್ಟು ದಿನವಾದರೂ ಅದಕ್ಕೆ ಮಠದಿಂದ ಉತ್ತರ ಬರಲಿಲ್ಲ.

ಪುಷ್ಯಮಾಸದಲ್ಲಿ ಅವಳ ಮಾವನವರ ಶ್ರಾದ್ಧ. ಇದುವರೆಗೂ ಅದು ಹಿರಿಯ ಮಗನಾದ ಚೆನ್ನಿಗರಾಯರ ಮನೆಯಲ್ಲಿಯೇ ನಡೆಯುತ್ತಿತ್ತು. ಯಾವ ಖರ್ಚನ್ನೂ ಕೊಡದೆ ಅಪ್ಪಣ್ಣಯ್ಯ ಇಲ್ಲಿಗೇ ಬಂದು ಕರ್ಮ ಮುಗಿಸಿಕೊಂಡು ಹೋಗುತ್ತಿದ್ದ. ಎಡಬಲಕ್ಕೆ ಹಾಕಿಕೊಳ್ಳುವುದು ಹಿರಿಯ ಮಗ ಚೆನ್ನಿಗರಾಯರ ಕೆಲಸ. ಪವಿತ್ರ ಇಟ್ಟುಕೊಂಡು ಸುಮ್ಮನೆ ಕೂತಿದ್ದು, ಜೋಯಿಸರು ಹೇಳಿದಾಗ ನಮಸ್ಕಾರ ಮಾಡುವುದಷ್ಟೇ ಕಿರಿಯನ ಕರ್ತವ್ಯವಾಗಿತ್ತು. ಇವರು ಬೇರೆಯಾದ ಕೆಲವು ದಿನ ಗಂಗಮ್ಮ ಗಂಡನ ಪ್ರಸಾದಕ್ಕೂ ಈ ಮನೆಗೆ ಬಂದಿರಲಿಲ್ಲ. ಆಮೇಲೆ, ಆ ಒಂದು ದಿನ ಬಂದು ಹೋಗುತ್ತಿದ್ದಳು. ಈ ವರ್ಷ ಇವರನ್ನು ಬಹಿಷ್ಕರಿಸಿರುವುದರಿಂದ ಶ್ರಾದ್ಧ ಮಾಡಿಸುವುದಕ್ಕಾಗಲಿ ಪೂರ್ವಪಂಕ್ತಿ ಭೋಜನಕ್ಕಾಗಲೀ ತಾವು ಬರುವುದಿಲ್ಲವೆಂದು ಜೋಯಿಸರಿಬ್ಬರೂ ಮೊದಲೇ ಹೇಳಿಬಿಟ್ಟರು. ಚೆನ್ನಿಗರಾಯರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಇದಕ್ಕೆಲ್ಲ ಯಾರು ಕಾರಣ? ಹೆಂಡತಿ ತಾನೆ? ‘ಅವ್ರುನ್ಯಾಕೆ ಮನೆಗೆ ಸೇರುಸ್ದೆಯೇ ಕತ್ತೆಮುಂಡೆ?’ – ಎಂದು ಹೆಂಡತಿಯನ್ನು ಬೈದುದರಿಂದ ಸಮಸ್ಯೆ ಬಗೆಹರಿಯಲಿಲ್ಲ.
ಈ ಬಾರಿ ಶ್ರಾದ್ಧವನ್ನು ಗಂಗಮ್ಮನ ದೇವಸ್ಥಾನದಲ್ಲಿಯೇ ಮಾಡಿಸುವುದು, ಅಪ್ಪಣ್ಣಯ್ಯ ಎಡಬಲಕ್ಕೆ ಹಾಕಿಕೊಳ್ಳುವುದು ಎಂದು ಪುರೋಹಿತರಿಬ್ಬರೂ ತೀರ್ಮಾನಿಸಿದರು. ಎಡಬಲಕ್ಕೆ ಹಾಕಿಕೊಳ್ಳುವುದೆಂದರೆ ಯಜಮಾನಿಕೆ ಬಂದಂತೆ. ತಾನೂ ಒಬ್ಬ ಮುಖ್ಯ ಮನುಷ್ಯನಾಗುತ್ತೇನೆ ಎಂಬ ಭಾವನೆಯಿಂದ ಅಪ್ಪಣ್ಣಯ್ಯನಿಗೆ ಒಂದು ತರದ ಹಿಗ್ಗೇ ಆಯಿತು. ಅಲ್ಲದೆ ತಿಥಿಯನ್ನು ತಮ್ಮ ಮನೆಯಲ್ಲೇ ಮಾಡಿದರೆ, ಉಳಿಯುವ ವಡೆ ಪೂರಿ ರವೆ ಉಂಡೆಗಳನ್ನು ಎಂಟು ದಿನವಾದರೂ ಇಟ್ಟುಕೊಂಡು ತಿನ್ನಬಹುದು. ಆದರೆ ಪೂರ್ತಿ ಖರ್ಚನ್ನು ತಾವೇ ಹಾಕಬೇಕೆಂಬ ಅಂಶ ಅವನ ಯೋಚನೆಗೆ ಬರಲಿಲ್ಲ.

ಗಂಗಮ್ಮನ ಯೋಚನೆ ಅದಲ್ಲ. ಹದಿನೈದು ಹದಿನಾರು ರೂಪಾಯಿಗಳನ್ನು ಅವಳು ಹೇಗಾದರೂ ಹೊಂದಿಸಿಯಾಳು. ಯಜಮಾನರ ತಿಥಿ ಎಂದು ತಾನು ತಿರುಗುವ ಹಳ್ಳಿಗಳಲ್ಲಿ ಕೇಳಿದರೆ ಪುಣ್ಯಾತ್ಮರು ನಾಲ್ಕಾಣೆ ಎರಡಾಣೆ, ಮೇಲೆ ಒಂದೊಂದು ತೆಂಗಿನಕಾಯಿ, ಬೆಳೆದವರು ಒಂದಿಷ್ಟು ಹುಚ್ಚೆಳ್ಳು, ಎಳ್ಳು, ಉದ್ದಿನಕಾಳು, ಅವರೇಕಾಳು ಕೊಟ್ಟರೆ ಮೂರು ತಿಥಿ ಮಾಡುವಷ್ಟು ಬಂದೀತು. ಆದರೆ ಹಿರಿಯ ಮಗ ಜೀವಂತ ಇದ್ದೂ ಪಿಂಡವು ಅವನ ಕೈಲಿ ಬೀಳದೆ ಕಿರಿಯವನು ಹಾಕಿದರೆ, ಅದನ್ನು ಸ್ವರ್ಗದಿಂದ ಕಾಗೆಯ ರೂಪದಲ್ಲಿ ಬರುವ ತನ್ನ ಗಂಡನು ಮುಟ್ಟುತ್ತಾರೆಯೋ ಇಲ್ಲವೋ! ಶ್ಯಾನುಭೋಗಿಕೆಯು ಹೇಗೆ ಹಿರಿಯ ಮಗನಿಗೆ ಸೇರಬೇಕೆಂದು ಸರ್ಕಾರೀ ಕಟ್ಲೆ ಇದೆಯೋ ಹಾಗೆಯೇ ಶ್ರಾದ್ಧಪಿಂಡವೂ ಹಿರಿಯನ ಕೈಯಿಂದಲೇ ಬೀಳಬೇಕಲ್ಲವೆ? ಅವಳು ಆಗಲೇ ಜೋಯಿಸರ ಹತ್ತಿರ ಹೋದಳು. ನೂರೊಂದು ರೂಪಾಯಿ ಕೊಡುವ ಶಕ್ತಿ ಯಾರಿಗೂ ಇಲ್ಲ. ಇವರು ಮಾಡಿರುವ ತಪ್ಪಿಗೆ ಸ್ವರ್ಗದಲ್ಲಿರುವ ಅವಳ ಗಂಡ ಫೌತಿ ರಾಮಣ್ಣನವರು ವರ್ಷಕ್ಕೊಂದು ದಿನದ ಅನ್ನವನ್ನೂ ಕಾಣದೆ ಉಪವಾಸವಿರಬೇಕೆ? ಅಲ್ಲದೆ ತಪ್ಪು ಮಾಡಿರುವವಳು ಸುಖನಾತಿ ಸೊಸೆಯೇ ಹೊರತು ತನ್ನ ಕಂದ ಚಿನ್ನಯ್ಯನಲ್ಲ. ಇದಕ್ಕೆ ಏನಾದರೂ ಮಾಡಲೇಬೇಕು.
ಅವಳ ವಾದವನ್ನು ಜೋಯಿಸರಿಬ್ಬರೂ ಒಪ್ಪಿಕೊಂಡರು. ಅಲ್ಪವೋ ಸ್ವಲ್ಪವೋ ತಪ್ಪುದಂಡ ತೆಗೆದುಕೊಂಡು ಚೆನ್ನಿಗರಾಯನನ್ನು ಜಾತಿಗೆ ಸೇರಿಸಿಕೊಳ್ಳುವುದು, ಅವನ ಹೆಂಡತಿಯನ್ನು ಮಾತ್ರ ಬಹಿಷ್ಕಾರದಲ್ಲಿಯೇ ಇಡುವುದೆಂದು ತೀರ್ಮಾನವಾಯಿತು. ದಂಡ ಕೊಡಲು ಚೆನ್ನಿಗರಾಯರ ಹತ್ತಿರ ಏನಾದರೂ ಇದ್ದರೆ ತಾನೆ! ಜೋಯಿಸರಿಬ್ಬರೂ ಸಮಾಲೋಚಿಸಿ ತೀರ್ಮಾನಿಸಿದರು: ಗ್ರಾಮದಲ್ಲಿ ಅಣ್ಣಾಜೋಯಿಸರದು ಒಟ್ಟು ಒಂಬತ್ತು ರೂಪಾಯಿ ಎಂಟಾಣೆ ರೆವಿನ್ಯೂ ಕಂದಾಯವಿದೆ. ಅಯ್ಯಾಶಾಸ್ತ್ರಿಗಳದ್ದು ಆರು ರೂಪಾಯಿ ಮೂರಾಣೆ ಐದು ಪೈ. ಚೆನ್ನಿಗರಾಯರು ಆ ವರ್ಷ ಇವರಿಬ್ಬರೂ ಸರ್ಕಾರಕ್ಕೆ ಕೊಡಬೇಕಾದ ಕಂದಾಯ ಸಂದಿದೆ ಎಂದು ಇಬ್ಬರಿಗೂ ಬೇರೆ ಬೇರೆಯಾಗಿ ರಶೀತಿ ಬರೆದು, ಪಟ್ಟೆಗೂ ನಮೂದಿಸಿ ಕೊಟ್ಟರು. ಹಣವನ್ನು ತಮ್ಮ ಪೋಟಿಗೆಯಲ್ಲಿ ಖಜಾನೆಯವರು ಕಠಾಯಿಸಿಕೊಳ್ಳುವ ವಿಧಾನ ಹೇಗೋ ಇದೆ. ಅಂತೂ ಶ್ಯಾನುಭೋಗ ಚೆನ್ನಿಗರಾಯರು ಅಪ್ಪನಿಗೆ ಶ್ರಾದ್ಧ ಮಾಡುವ ಧಾರ್ಮಿಕ ಅಧಿಕಾರವನ್ನು ಪುನಃ ಸಂಪಾದಿಸಿದರು. ಅವರೊಬ್ಬರೇ ತಾಯಿ ಮತ್ತು ತಮ್ಮನ ಮನೆಗೆ ಹೋಗಿ ಶ್ರಾದ್ಧ ಮಾಡುವುದು. ಆ ದಿನ ಅವರ ಹೆಂಡತಿಯಾಗಲಿ ಮಕ್ಕಳಾಗಲಿ ಆ ಕಡೆ ಬರಕೂಡದು ಎಂದು ನಿಶ್ಚಯವಾಯಿತು.

ಪೂರ್ವಪಂಕ್ತಿಗೆ ಕುಳಿತುಕೊಳ್ಳಬೇಕಾಗಿದ್ದ ಅಣ್ಣಾಜೋಯಿಸರು ಆ ದಿನ ಬೆಳಗಿನಿಂದ ಉಪವಾಸವಿರಬೇಕಾಗಿತ್ತು. ಇನ್ನು ಮಾಡಲು ಏನೂ ಕೆಲಸವಿರಲಿಲ್ಲ. ಹೆಂಡತಿ ವೆಂಕಟಲಕ್ಷ್ಮಿ ಅಡಿಗೆಮನೆಯಲ್ಲಿ ಸೊಪ್ಪು ಹೆಚ್ಚಿಸುತ್ತಿದ್ದಳು. ಉಪವಾಸವಿದ್ದುದರಿಂದಲೋ ಏನೋ, ಜೋಯಿಸರ ನೆನಪು ಅತ್ತೆಯ ಮನೆಯಲ್ಲಿ ಒಂದು ಸಲ ತುಪ್ಪದಲ್ಲಿ ಕರಿದ ಪೂರಿ ತಿಂದುದನ್ನು ಕುರಿತು ಸಾಗಿತ್ತು. ಅವರು ಹೆಂಡತಿಗೆ ಹೇಳಿದರು: ‘ನಿಮ್ಮಮ್ಮ ಒಂದ್ಸಲ, ತುಪ್ಪದಲ್ಲೇ ಕರಿದ ಪೂರಿ ಕೊಟ್ಟಿದ್ದರು. ಅದರ ರುಚಿಯೇ ರುಚಿ. ನೀನು ಹಾಗೆ ಒಂದೇ ಒಂದು ದಿನವೂ ನಂಗೆ ಮಾಡಿಕೊಟ್ಟಿಲ್ವಲ್ಲೇ?’
‘ನೀವು ಅಷ್ಟೊಂದು ಬೆಣ್ಣೆ ತಂದುಕೊಡಿ. ನೀವು ಕೇಳಿ ಕೇಳಿದ್ದೆಲ್ಲ ತುಪ್ಪದಲ್ಲೇ ಕರಿದು ಕೊಡ್ತೀನಿ.’
‘ಸೇರಿಗೆ ನಾಲ್ಕಾಣೆಯಾಗಿದೆ. ಎಲ್ಲಿಂದ ತರೂದು?’
‘ಹಾಗಾದ್ರೆ ಯಾಕೆ ಬಯಸ್ತೀರಾ, ಸುಮ್ಮನಾದ್ರೂ ಇರೀ ಅಂದ್ರೆ.’
ಜೋಯಿಸರಿಗೆ ಪೆಚ್ಚೆನಿಸಿತು. ಆದರೆ ತಕ್ಷಣ ಒಂದು ಉಪಾಯ ಹೊಳೆಯಿತು. ‘ಇವತ್ತು ಬೆಣ್ಣೆ ಕಾಯಿಸಿದ ತುಪ್ಪದಲ್ಲೇ ಕರಿದ ಭಕ್ಷ್ಯ ತಿಂತೀನಿ ನೋಡು ಬೇಕಾದರೆ’ – ಹೆಂಡತಿಗೆ ಸವಾಲು ಹಾಕಿದುದಕ್ಕೆ ಅವಳು, ‘ನಿಮಗೆ ಮಾಡಿ ಬಡಿಸದೆ ಕೆಟ್ಟಿದಾರೆ ಸುಮ್ನಿರಿ’ ಎಂದು ಅಣಕವಾಡಿದಳು.
‘ನೋಡ್ತಿರು ಬೇಕಾದ್ರೆ’ ಎಂದ ಜೋಯಿಸರು, ‘ಲೋ, ನರಸಿಂಹಾ, ಈಗಲೇ ಓಡಿಹೋಗಿ ಅಪ್ಪಣ್ಣಯ್ಯನ ಕರ್ಕಂಡ್ ಬಾ ಹೋಗು’ ಮಗನಿಗೆ ಆದೇಶವಿತ್ತರು.
ಮಡಿ ಉಟ್ಟು ಒದ್ದೆ ಚೌಕ ಕಟ್ಟಿಕೊಂಡು ಅಡಿಗೆಯಲ್ಲಿ ತಾಯಿಗೆ ಸಹಾಯ ಮಾಡುತ್ತಿದ್ದ ಅಪ್ಪಣ್ಣಯ್ಯ ಅರ್ಧ ಬರೀ ಮೈಯಲ್ಲಿ ಓಡಿಬಂದ. ‘ನೋಡು ಅಪ್ಪಣ್ಣಯ್ಯ, ನಂಗೆ ಹುಶಾರಿಲ್ಲ. ನೆಗಡಿ, ಜ್ವರ ಬಂದುಬಿಟ್ಟಿದೆ. ನಾನು ಬ್ರಾಹ್ಮಣಾರ್ಥ ಕೂತ್ಕಳ್ಳುಕ್ಕೆ ಆಗುಲ್ಲ.’
‘ಈಗ ಹಾಗಂದ್ರೆ ಹ್ಯಾಗೆ ಜೋಯಿಸ್ರೇ, ಆಗಲೇ ಹೊತ್ತು ನಾಕಾಳುದ್ದ ಏರಿದೆ. ಇಷ್ಟು ಹೊತ್ನಲ್ಲಿ ಇನ್ಯಾರುನ್ನ ತರಾಣ?’
‘ನಿಮ್ಮಮ್ಮುನ್ನ ಕರಿ ಹೇಳ್ತೀನಿ.’
ಓಡಿಬಂದ ಗಂಗಮ್ಮ ವಿಷಯವನ್ನು ಕೇಳಿ, ‘ಜೋಯಿಸರೇ, ನನ್ನ ಗಂಡುನ್ನ ಉಪವಾಸ ಬೀಳುಸ್ಬ್ಯಾಡಿ’ – ಎಂದು ದೂರದಲ್ಲಿಯೇ ನೆಲ ಮುಟ್ಟಿ ಅಂಗಲಾಚಿದಳು.
‘ಆಯ್ತು, ನೀನು ಇಷ್ಟು ಹೇಳುವಾಗ ಇಲ್ಲ ಅನ್ನೂಕೆ ಆಗುಲ್ಲ. ಬ್ರಾಹ್ಮಣಾರ್ಥಕ್ಕೆ ಬಂದು ಭಕ್ಷ್ಯ ತಿನ್ನದೇ ಇದ್ರೆ ಶಾಸ್ತ್ರಸಮ್ಮತವಲ್ಲ. ಒಂದು ಕೆಲಸ ಮಾಡು. ಎಲ್ಲಾ ಭಕ್ಷ್ಯಾನೂ ತುಪ್ಪದಲ್ಲಿ ಕರಿದುಬಿಡು. ನಾನು ತಿಂತೀನಿ.’
‘ಈಗ ಅಷ್ಟೊಂದು ತುಪ್ಪ ಎಲ್ಲಿ ಸಿಕ್ಕುತ್ತೆ ಜೋಯಿಸ್ರೆ?’
‘ದುಡ್ಡು ತಗಂಡು ಬಾ. ಗೌಡಗಳ ಹಟ್ಟೀಲಿ ಬೇಕಾದ್ರೆ ನಾನು ಹೋಗಿ ಬೆಣ್ಣೆ ತಂದುಕೊಡ್ತೀನಿ. ನಂದು ಹ್ಯಾಗೂ ಸ್ನಾನವಾಗಿಲ್ಲ.’
ಗಂಗಮ್ಮ ಮನೆಗೆ ಹೋದಳು. ಒಬ್ಬ ಬ್ರಾಹ್ಮಣರಿಗೆ ತುಪ್ಪದಲ್ಲಿ ಕರಿದುದನ್ನು ಬಡಿಸಿ ಇನ್ನೊಬ್ಬರಿಗೆ ಎಣ್ಣೆಯದನ್ನು ಬಡಿಸುವಂತಿಲ್ಲ. ತಮಗೇನೋ ಎಣ್ಣೆಯದೇ ಆಗುತ್ತೆ. ಇವರಿಬ್ಬರಿಗೆ ಆಗುವಷ್ಟು ಪೂರಿ, ವಡೆ, ಆಂಬೊಡೆ, ಚಿಕ್ಕಿನ ಉಂಡೆಗಳನ್ನು ಕರಿಯಬೇಕಾದರೆ ಅಳತೆ ಒಂದೂವರೆ ಸೇರು ತುಪ್ಪ ಬೇಕು. ಅಂದರೆ ಆರು ಏಳು ಸೇರು ಬೆಣ್ಣೆ. ಮನೆಯಲ್ಲಿ ಎರಡು ರೂಪಾಯಿ ಹೆಚ್ಚಾಗಿ ಇರಲಿಲ್ಲ. ಗಂಗಮ್ಮನ ಮದುವೆಯಲ್ಲಿ ಕೊಟ್ಟಿದ್ದ ಒಂದು ಬೆಳ್ಳಿಯ ಪಂಚಪಾತ್ರೆ ಇನ್ನೂ ಮನೆಯಲ್ಲಿತ್ತು. ಅಪ್ಪಣ್ಣಯ್ಯನನ್ನು ಅದರೊಡನೆ ಕಳಿಸಿದಾಗ ಕಾಶಿಂಬಡ್ದಿ ಸಾಹುಕಾರರು ತೂಕ ಮಾಡಿ ನೋಡಿ, ಹನ್ನೆರಡು ತೊಲದ ಬೆಳ್ಳಿಗೆ ಎರಡು ರೂಪಾಯಿ ಕೊಟ್ಟರು. ದಿನಕ್ಕೆ ಎರಡು ಕಾಸು ಬಡ್ಡಿ.
ಬೆಣ್ಣೆ ಕಾಯಿಸಿದ ತುಪ್ಪದ ಭಕ್ಷ್ಯವನ್ನುಂಡು, ತಮ್ಮ ಮನೆಯ ಮಕ್ಕಳಿಗೆ ಎಂದು ಹೇಳಿ, ಉಳಿದುದನ್ನು ಬಾಳೆ ಎಲೆಯಲ್ಲಿ ಕಟ್ಟಿಸಿಕೊಂಡು ಮನೆಗೆ ಬಂದ ಜೋಯಿಸರು ಹೆಂಡತಿಗೆ – ‘ನೀನೂ ತಿನ್ನೇ’ ಎಂದಾಗ ಆಕೆ, ‘ಇನ್ನೊಬ್ರ ಮನೆ ತಿಥಿ ಪ್ರಸಾದ ನಾವು ಹ್ಯಾಗೆ ತಿನ್ನೋದು ಅಂದ್ರೆ?’ ಎಂದಳು.
‘ಏನೂ ಹಿಡ್ಕಳುಲ್ಲ ತಿನ್ನೇ. ಹುಡುಗರಿಗೂ ಕೊಡು.’
‘ನೋಡಿ, ನಾನು ಲೌಕಿಕರ ಮನೇಲಿ ಹುಟ್ಟಿದೋಳು. ಶಾಸ್ತ್ರ ಸಂಬಂಧ ಅಂದ್ರೆ ನಂಗೆ ತುಂಬ ಭಯ. ಜೋಯಿಸರಿಗೆ ಯಾವ ಭಯವೂ ಇಲ್ಲ ಅಲ್ವೆ?’ – ಎಂದು ಅವಳು ನಕ್ಕಾಗ ಜೋಯಿಸರಿಗೆ ತಮ್ಮ ಧೈರ್ಯಕ್ಕೆ ತಮಗೇ ಹೆಮ್ಮೆ ಎನಿಸಿತು.

– ೬ –

ಬ್ರಾಹ್ಮಣರ ಊಟವಾಗಿ ಶ್ರಾದ್ಧಕರ್ಮವೆಲ್ಲ ಮುಗಿದ ಮೇಲೆ ಚೆನ್ನಿಗರಾಯರು ದೇವರ ಎಲೆಯ ಮುಂದೆ ಕುಳಿತು ಪುಷ್ಕಳವಾಗಿ ಪ್ರಸಾದಭೋಜನ ಮಾಡಿದರು. ನಂತರ ಶರಟು ಹಾಕಿಕೊಂಡು ಕೆರೆಯ ಏರಿಯ ಕಡೆಗೆ ಹೋದರು. ಅಷ್ಟರಲ್ಲಿ ಮಧ್ಯಾಹ್ನಾನಂತರ ನಾಲ್ಕೂವರೆಯ ಸುಮಾರು. ಮಧ್ಯಾಹ್ನ ಸ್ನಾನ ಮಾಡಿದಾಗಿನಿಂದ ಅವರು ಹೊಗೆಸೊಪ್ಪು ಹಾಕಿಕೊಂಡಿರಲಿಲ್ಲ. ಹನುಮಂತರಾಯನ ಗುಡಿಯಲ್ಲಿ ಇದ್ದಿತಾದರೂ ಹತ್ತಿರ ಎಲೆ ಅಡಿಕೆಯೂ ಇರಲಿಲ್ಲ. ದುಡ್ದು ಕೊಟ್ಟು ಕೊಳ್ಳಲು ಜೇಬಿನಲ್ಲಿ ಬಿಡಿಗಾಸಿರಲಿಲ್ಲ. ಏರಿಯಿಂದ ಅಮ್ಮನ ತೋಪಿನ ಮೂಲಕ ಊರ ಕಡೆಗೆ ಬರುವಾಗ ನರಸಿಯ ಅಂಗಡಿ ಸಿಕ್ಕುತ್ತದೆ. ತಾನು ಕಟ್ಟಿಸಿಕೊಂಡಿರುವ ಮೂರು ಅಂಕಣದ ಹೆಂಚಿನ ಮನೆಯ ಮುಂಭಾಗದ ಅಂಕಣವೇ ಅವಳ ಅಂಗಡಿ. ಒಳಗಿನದು ಸಾಮಾನು ಇಟ್ಟುಕೊಳ್ಳುವ ಜಾಗ. ಹಿಂದಿನದರಲ್ಲಿ ಅವಳ ಅಡಿಗೆ ಸಾಮಾನು ಇಡುವ ಜಾಗದ ಅಟ್ಟದ ಮೇಲೂ ಅಂಗಡಿಯ ಸರಕು ತುಂಬಿಕೊಂಡಿರುತ್ತಾಳಂತೆ.

ಶ್ಯಾನುಭೋಗರು ಬರುತ್ತಿದ್ದಾಗ ಅವಳು ಅಂಗಡಿಯಲ್ಲಿ ಕೂತಿದ್ದಳು. ಅವಳ ಮುಂಭಾಗದಲ್ಲಿ ತೆರೆದ ವೀಳ್ಯದೆಲೆಯ ಪಿಂಡಿ ಇತ್ತು. ಬಾಯಿ ತಡೆಯದೆ ಇವರು ಬಾಗಿಲಿನ ಹತ್ತಿರ ಹೋಗಿ ಕೇಳಿದರು: ‘ನರಸಮ್ಮ, ಒಂದೆರಡು ಎಲೆ ಅಡಿಕೆ, ಒಂದು ಚೂರು ಹೊಗೆಸೊಪ್ಪು ಕೊಡ್ತಿಯಾ?’

ನರಸಿಯೂ ಎಲೆ ಜಗಿಯುತ್ತಿದ್ದಳು. ಅಗಲವಾದ ಕಣ್ಣುಗಳ, ದೊಡ್ಡ ಮುಖದ ಅವಳ ಬಾಯಿ ಯಾವಾಗಲೂ ಎಲೆಯ ರಂಗಿನಿಂದ ತುಂಬಿ, ತಾಂಬೂಲದ ರಸವು ತುಟಿಗಳಿಂದ ಹರಿದು ಸುರಿಯುತ್ತದೆಂಬಷ್ಟು ಸಮೃದ್ಧವಾಗಿರುತ್ತಿತ್ತು. ಜೀವನದಲ್ಲಿ ಯಾವ ಕಷ್ಟವೂ ಇಲ್ಲವೆಂಬಂತಿದ್ದ ಅವಳು ನಕ್ಕರೆ, ಎದುರು ನಿಂತವರನ್ನು ತೂರಿ ಕೆಡಹುವಂತಹ ಹೊಳಪು ಕಣ್ಣಿನಲ್ಲಿ ಕುಣಿಯುತ್ತಿತ್ತು. ಅವಳು ಕೇಳಿದಳು: ‘ಇದೇನು ಶ್ಯಾನುಭೋಗ್ರೇ, ನನ್ನ ಎಲೆ ಕೇಳ್ತೀರಲ್ಲಾ, ನಿಮ್ಮ ಹೆಂಡ್ತಿ ಕೊಡಾಕುಲ್ಲ ಅಂದ್ರಾ?’
‘ಮನ್ಲಿ ಎಲೆ ಇರ್ಲಿಲ್ಲ ಕಣಮ್ಮ. ನಮ್ಮಯ್ಯನ ವೈದಿಕ ಮಾಡಿಕೊಂಡು ಕೆರೆ ಕಡೆ ಹೋಗಿದ್ದೋನು ಹಾಗೇ ಬಂದೆ.’
‘ಬಲ್ಲಿ ಬಲ್ಲಿ ಕೊಡ್ತೀನಿ. ಊರ ಶ್ಯಾನುಭಾಗ್ರು, ನಿಮ್ಗೆ ಇಲ್ಲ ಅಂದ್ರೆ ಆಯ್ತದಾ?’ – ಎಂದು ಅವಳು ಕಣ್ಣು ಹೊರಳಿಸಿ ನಕ್ಕಳು. ಗ್ರಾಮದ ತಮ್ಮ ಅಧಿಕಾರವನ್ನು ಇವಳಾದರೂ ಒಪ್ಪಿಕೊಂಡದ್ದಕ್ಕೆ ಸಂತೋಷಪಟ್ಟ ಅವರು ಅಂಗಡಿಯ ಒಳಗೆ ಹೋದರು. ‘ಒಳಗೇ ಬಲ್ಲಿ’ ಎಂದು ಮೇಲೆ ಎದ್ದು ಅವಳು ಇವರನ್ನು ಒಳಗಿನ ಅಂಕಣಕ್ಕೆ ಕರೆದೊಯ್ದಳು. ಒಳಗಿನ ಮಬ್ಬುಗತ್ತಲೆಯಲ್ಲಿ ಇವರಿಗೆ ಎಲ್ಲವೂ ಸರಿಯಾಗಿ ಕಾಣಲಿಲ್ಲ. ಅಂಗಡಿ ವ್ಯಾಪಾರದ ಹತ್ತಾರು ಮೂಟೆಗಳಿದ್ದುವು. ಗೋಡೆಯ ಮೂಲೆಗೆ ಹಾಕಿದ್ದ ಮಂಚದ ಮೇಲೆ ಹಾಸಿಗೆ ಹಾಕಿತ್ತು. ‘ಇಲ್ಲಿ ಕುಂತ್ಕಳಿ’ – ಅವಳೆಂದಳು. ‘ಕತ್ಲೆಯಲ್ಲಮ್ಮ’ – ಎಂದು ಅವರು ತಡಕಾಡಿದುದಕ್ಕೆ ‘ಕತ್ಲೆಯಾದ್ರೆ ಏನ್ ಮಾಡ್ತೈತೆ. ಕುಂತ್ಕ ಬಲ್ಲಿ’ – ಎಂದು ಹತ್ತಿರ ಬಂದು, ಅವರ ಎರಡೂ ತೋಳನ್ನೂ ಹಿಡಿದು ಎಳೆದು ಮಂಚದ ಮೇಲೆ ಕೂರಿಸಿ ತಾನೂ ಪಕ್ಕದಲ್ಲಿ ಕೂತಳು. ಹೊರಗಿನಿಂದ ಒಳಗೆ ಬಂದಿದ್ದ ಶ್ಯಾನುಭೋಗರ ಕಣ್ಣಿನ ಮಬ್ಬು ಈಗ ಸ್ವಲ್ಪ ಹರಿಯುತ್ತಿತ್ತು. ಆದರೆ ಅವರಿಗೇ ತಿಳಿಯದಂತೆ ಅವರ ಕೈ ಕಾಲು ಮೈಗಳೆಲ್ಲ ಮೂರರ ಚಳಿ ಬಂದಂತೆ ನಡುಗಲು ಮೊದಲಾಯಿತು. ಒಂದು ನಿಮಿಷದಲ್ಲಿ ನಡುಕವು ಮಿತಿ ಮೀರಿ ಎರಡೂ ದವಡೆಗಳೂ ಒಂದಕ್ಕೊಂದು ಕಟಕಟನೆ ಬಡಿದುಕೊಳ್ಳಲು ಶುರುವಾದುವು.
‘ಅದ್ಯಾಕಯ್ನೋರೇ ಹಿಂಗ್ ನಡುಕ್ತೀರಾ?’
‘ನೀ ನೀ ನೀ ನೀನು ಹೀಗ್ ನನನ್ ಮುಟ್ಕಾ ಭೌ ಭೌದೇನಮ್ಮಾ?’ – ಉಸಿರನ್ನು ಸಂಪಾದಿಸಿಕೊಂಡು ಅವರು ಕೇಳಿದರು.
‘ನನ್ನ ತಾವುಕ್ ಬಂದು ಯಲೆ ಕೇಳಿದ್ರಲ್ರೀ?’
ಅವಳ ಅರ್ಥ ಅವರಿಗೆ ಆಗಲೇ ಇಲ್ಲ: ‘ದು ದು ದುಡ್ಡಿರ್ಲಿಲ್ಲ, ಕೇಳ್ದೆ.’
‘ನಾನೇನು ದುಡ್ಡು ಕೇಳ್ತಿಲ್ವಲ್ಲಾ?’
‘ಮ ಮ ಮತ್ತೆ ನನನ್ ಯಾಕ್ ಮು ಮು ಮುಟ್ದೆ?’
ಅವರ ತೋಳು ಹಿಡಿದು ಎಬ್ಬಿಸಿ ಹೊರಕ್ಕೆ ಕರೆತಂದು ಅವಳು ಹೇಳಿದಳು: ‘ಸುಮ್ಕೆ ಮನ್ಗೆ ನಡೀರಿ.’
ಭಯದಿಂದ ನಡುಗುತ್ತಿದ್ದ ಅವರು ಬೇಗ ಬೇಗ ಹೆಜ್ಜೆಯಿಟ್ಟು ಹೊರಗೆ ನಡೆದರು. ‘ಒಂದು ಸಟಾಗ್ ನಿಂತ್ಕಳಿ’- ಎಂದು ಅವಳು ಕೂಗಿದುದಕ್ಕೆ ಅಷ್ಟೇ ಭಯದಿಂದ ನಿಂತುಕೊಂಡರು.
‘ವಸೀ ಇಲ್ಲಿ ಬಲ್ಲಿ, ನಾನೇನ್ ನಿಮ್ಮುನ್ನ ತಿಂದ್ಕಣಾಕಿಲ್ಲ.’
ಅವರು ಮತ್ತೆ ಅಂಗಡಿಯ ಮುಂದೆ ನಿಂತರು. ಒಂದು ಕವಳಿಗೆ ಎಲೆ, ಒಂದು ಹಿಡಿ ಅಡಿಕೆ, ಎರಡು ದೊಡ್ಡ ಎಸಳು ಹೊಗೆಸೊಪ್ಪುಗಳನ್ನು ತೆಗೆದು ಅವರ ಕೈಗೆ ಹಾಕಿ ಹೇಳಿದಳು: ‘ಇದ ತಗಂಡ್ ಹ್ವಾಗಿ, ಮನ್ಲಿ ನಂಜವ್ವನ ಕುಟ್ಟಿ ಸುಣ್ಣಸವರಿಸ್ಕಂಡ್ ಹಾಕ್ಯಳಿ. ನೋಡಿ, ನಿಮ್ಮಂತೋರೆಲ್ಲ ಮನ್ಲಿ ಎಂಡ್ತಿ ಏಳ್ದಂಗೆ ಕೇಳ್ಕಂಡಿರ್ಬೇಕು. ಗೊತ್ತಾಯ್ತಾ?’
ಶ್ಯಾನುಭೋಗರಿಗೆ ಸ್ವಲ್ಪ ಸಿಟ್ಟೇನೋ ಬಂತು. ಆದರೆ ಅವಳನ್ನು ಹೇಗೆ ಬಯ್ಯಬೇಕೆಂಬುದು ತಕ್ಷಣ ತಿಳಿಯಲಿಲ್ಲ. ಕೈಲಿದ್ದ ಎಲೆ ಅಡಿಕೆ ಹೊಗೆಸೊಪ್ಪನ್ನು ಹಿಡಿದುಕೊಂಡು ಊರೊಳಕ್ಕೆ ಹೊರಟರು. ನೇರವಾಗಿ ಮನೆಗೆ ಹೋದಾಗ, ಲೆಕ್ಕದ ಪುಸ್ತಕ ನೋಡುತ್ತಿದ್ದ ಹೆಂಡತಿ ಇವರನ್ನು ಮಾತನಾಡಿಸಲಿಲ್ಲ. ಇವರೂ ಏನೂ ಆಡಲಿಲ್ಲ. ಕಂಬದ ಹತ್ತಿರ ಹಾಸಿದ್ದ ಮಂದಲಿಗೆಯ ಮೇಲೆ ಉರುಟಿಕೊಂಡು ತಾಂಬೂಲ ಹೊಗೆಸೊಪ್ಪುಗಳನ್ನು ಜಗಿಯಲು ಪ್ರಾರಂಭಿಸಿದರು.
*****
ಮುಂದುವರೆಯುವುದು

ಕೀಲಿಕರಣ: ಸೀತಾಶೇಖರ್
ಕೀಲಿಕರಣ ದೋಷ ತಿದ್ದುಪಡಿ: ರೋಹಿತ್ ಆರ್