ಆರತಿ ತಟ್ಟೆ

ಸರಸ ಚಿಕ್ಕಿಯೊಡನೆ ಆ ಹೆಬ್ಬಾಗಿಲು ಹೊಗ್ಗುವಾಗ ‘ಓ ಅಲ್ಲಿ ಹೊಡಿ ಮಣಿ’ ಎಂಬ ಸ್ವರ ಕೇಳಿಸಿತು. ಪಕ್ಕ ಹಿಂದಿರುಗಿ ನನ್ನನ್ನು ನೋಡಿದಳು ಚಿಕ್ಕಿ. “ಅಗ! ಮೀನಾಶ್ಚತ್ತೆ ಕತಿ! ಈಗೆಲ್ಲ ಇಷ್ಟೇ”-ಎಂಬಂತೆ. ಮುಖದಲ್ಲಿ ದುಃಖವೇನೂ ಇರಲಿಲ್ಲ. ಸಣ್ಣದೊಂದು ನಗೆ ಇತ್ತು. ‘ಆಚೆ ಹೋದ’ ಜೀವದ ‘ಈಚೆ ಸ್ವರ’ವನ್ನು ಹೆದರುತ್ತ ಹಿಲುಗಾರಿಕೆ ಮಾಡಿದಂತೆ.

ದೊಡ್ಡ ಅಂಗಳ ದಾಟಿ ಚಾವಡಿಗೆ ಬಂದೆವು.

ಒಂದು ಮೂಲೆಯಲ್ಲಿ ಹಾಸಿಗೆ ತುದಿಯಲ್ಲಿ ಕುಳಿತಿದ್ದರು ಮೀನಾಕ್ಷತ್ತೆ. ಎಂಥ ಚಾವಡಿ-ಕಳೆದ ಜೀವಗಳ ದೊಡ್ಡ ದೊಡ್ಡ ಪೋಟೋ, ಗೋಡೆಗೆ ಅಂಟಿಕೊಂಡು ಮುಂದೆ ನೀಡಿಕೊಂಡ ಕೊಂಬುಗಳು. ಜಿಂಕೆಯದು ಕಾಡುಕೋಣದ್ದು – ಹುಲಿ ಚರ್ಮ, ಮತ್ತೆ ಯಾವ ಕಾಲದ್ದೋ ಫ್ರೇಂ ಹಾಕಿ ಇಟ್ಟ ಒಂದು ಕ್ಯಾಲೆಂಡರ್‍ ಸುಂದರಿ. ಕೆಳಗೆ ಮೀನಾಕ್ಷತ್ತೆ ಕೂಗುತ್ತಿದ್ದರು.

“ಓ ಅಲ್ಲಿ – ಪಡು ಹೆಬ್ಬಾಗಿಲ ಅಜ್ಜಯ್ಯ ಬಂದಿದ್ರ್‍ ಕಾಣ್. ಈಗ ಯಾಕೆ ಬಂದ್ರಿ? ಬಂದ್ ದಾರಿಗೆ ಸುಂಕ ಇಲ್ಲೆ, ನಡೀನಿ ಅನ್”

ಮಾಣಿ ಪಕ ಪಕ ನಕ್ಕಿತು. “ಅಲ್ಲಿ ಅಜ್ಜಯ್ಯ ಇಲ್ಲೆ ಅಜ್ಜಿ-ಬೇರೆ ಯಾರೋ ಬಯಿಂದೋ-” ಅಂತು.

ಒಳಗಿಂದ ಸ್ವರ ಕೇಳಿತು. “ಮಾಣಿ ಪ್ರಕಾಶ, ಅಜ್ಜಿ ಹತ್ರ ಯಂತ ತರ್ಕ ಮಾಡ್ತೆ? ಅವರು ಹೇಳಿದ ಹಾಂಗೆ ಕೋಲು ಬೀಸುಕಾತ್ತಿಲ್ಯ?”

ತಲೆ ಎತ್ತಿ ನೋಡಿದರೆ ಮುಚ್ಚಿಗೆಯಲ್ಲಿ ಚಾಪೆ ಇಡುವ ಅಡ್ಡ. ಆ ಚಾಪೆಗಳ ಮೇಲೆ ಯಾರೆಲ್ಲ ಕೂತೆದ್ದು ಹೋದರೋ. ಈಗಂತೂ ಗಿಲಿಗಿಲಿ ಅವಸ್ಥೆ. ಎದುರು ಒಂದು ಕಂಡಿ ಇದೆ. ಅದರೊಳಗೆ ಇಣುಕಿದರೆ ದೇವರ ಕೋಣೆ. “ದೇವರ ಪೂಜೆ ಆಪತಿಗೆ ನಾವೆಲ್ಲ ಇಲ್ಲಿಂದ್ಲೇ ನೀಕುತ್ತಿದ್ದದ್ದು. ನೀನೂ ಇಣುಕು. ‘ಮನೆ ದೇವರು’, ಅಡ್ಡಬೀಳು.” ಎಂದಳು ಸರಸ ಚಿಕ್ಕಿ.

ನಾ ಇಣುಕಿದೆ. ಒಳಗೆ ಮರದ ಗೂಡಲ್ಲಿ ದೇವರು ತುಂಬಿಹೋಗಿತ್ತು. ಬೆಳಿಗ್ಗೆ ಪೂಜೆ ಮಾಡಿ ಹೋದದ್ದು ಹೋದ ಹಾಗೆಯೇ ಇತ್ತು. ನಿತ್ಯದ ಹಿತ್ತಾಲೆ ಆರತಿ ತಟ್ಟೆಯೂ. “ಶ್ಶೀ, ನೀ ಏನೇ ಹೇಳು. ಮುಂಚಿನ ಗಂಡಸ್ರ್‍ ಗಮ್ಮತಿಗೆ ಗಮ್ಮತೂ ಹೊಡೀತಿದ್ದೊ. ಪೂಜೆಗೆ ಪೂಜೆಯೂ ಮಾಡ್‌ತಿದ್ದೊ. ಈಗಿನವು ಯಂತಕ್ಕೂ ಆಗ. ಇದು ಅಪ್ಪಣ್ಣಯ್ಯನ ಕಾಲದ ದೇವರ ಕೋಣೆಯಾ?” ಎನ್ನುತ್ತಾ ಹಿಂಗಾಲು ಕತ್ರಿಯಿರಿಸಿ ಈಚೆಯಿಂದಲೇ ಅಡ್ಡಬಿದ್ದಳು ಚಿಕ್ಕಿ. ನಾನೂ.

“ಮಣಿ, ನಿಂಗ್ ಕಾಂತಿಲ್ಯ ಹಂಗರೆ? ಎಲ್ಲ ಬಂದ್ ಪಾಗಾರದ ಮೇಲೆ ಕೂತಿದ್ದೋ. ವಿಶಾಲು, ಗಿರಿಜಾಮಣಿ, ಕಾಶಿ, ಗುಲಾಬಿ… ಹೇಳು ಅವ್ರಿಗೆಲ್ಲ. ಅಜ್ಜಿಯನ್ನು ವಾಪಸು ಕಳ್ಸಿ ಆಯ್ತು ಅಂತೆಳಿ. ಕಾಶಿ ಊರು ಬಿಟ್ಟವಳು ಎಲ್ಲಿಗೆ ಹೋದ್ಲ್? ಸೀದಾ ಲಂಕಾ ಪಟ್ಣಕ್ಕೇ ಹಾರಿಳಾ-ಕೇಣ್ ಮಣೀ-”

“ಅತ್ಯಾ ಅದು ಯಾವ್ ಕಾಲದ್ ಕತಿ ತೆಕ್ಕಂತ್ರಿ? ಸುಮ್ನೆ ಮನ್ಕಣಿ ಕಾಂಬೋ. ದಿವ್ಸ ಹೋದ ಹಾಂಗೆ ಮರ್‍ಳ್ ಹರ್‍ಕಂಡ್ ಬೀಳತ್ತಾ ಕಾಂತ್-” – ಸೊಸೆಯ ಸ್ವರ ಮತ್ತೆ.

ಪ್ರಕಾಶಮಾಣಿ ಬಾಯಿ ತೆರೆದು ನಿಂತೇ ಇದ್ದದ್ದು ಮತ್ತೆ ಹೇಳಿತು. “ಅಜ್ಜೀ, ಯಾರೋ ಬಯಿಂದೋ-”

ಯಾರ್‍? ಯಾರ್‍ ಕೇಣ್. ನೀನ್ಯೆಂಥ ಗಂಡ್ಸ್ ಮತ್ತೆ!”

ಸರಸ ಚಿಕ್ಕಿ ಹೋಗಿ ಮೀನಾಕ್ಷತ್ತೆಯ ಎದುರು ಕುಳಿತು “ನಾನಲ್ದ ಮೀನಾಶ್ಚತ್ತೆ? ಸರಸ” ಎಂದಳು.

ಮೀನಾಕ್ಷತ್ತೆಯ ಕಣ್ಣು ಮಂದ ದೀಪದಂತೆ ಬೆಳಗಿತು. ಸರಸ ಚಿಕ್ಕಿಯ ತಲೆ ಬೆನ್ನು ಎಲ್ಲ ಸವರಿ “ಹೌದಲೆ! ಸರಸ! ಇಷ್ಟು ದಿವ್ಸದ್ ಮೇಲೆ ಬಪ್ಪ ಅಂತೆಳಿ ಕಾಂತಾ ಹೆಣೆ ನಿಂಗೆ? – ಅದ್ಯಾರ್‍ ನಿನ್ನೊಟ್ಟಿಗೆ?”

“ಕೊಕ್ಕರ್ಣೆ ಮಾವಯ್ಯನ್ ಮಗಳು. ನಿಮ್ಮನ್ನೆಲ್ಲ ಕಾಣ್ಕ್ ಅಂದ್ಲ್. ಕರ್‍ಕಂಡ್ ಬಂದೆ”

“ಬಾಳ ಸಾಪಾಯ್ತ್. ಕೂಕೋ ಮಗ. ನಿನ್ ಹೊಸರು ಯಂತ? ಅಬ್ಬೆ ಅಪ್ಪ ಎಲ್ಲ ಹುಶಾರಾ?-” ಮಾತಾಡುತ್ತ ಆಡುತ್ತ ಮೀನಾಶ್ಚತ್ತೆ ಥಟೆಂತ ಕಂಬಕ್ಕೊರಗಿ ಕಿವಿಗೆ ಕಡ್ಡಿ ಹಾಕಿ ರೊಂಯ್ಯ ತಿರುಗಿಸುತ್ತ ಹಾಯೆಂಬಂತೆ ಬಾಯಿ ವಾರೆ ಮಾಡಿಕೊಂಡು ನಮ್ಮನ್ನೇ ಆಶ್ಚರ್ಯದಿಂದ ನೋಡುತ್ತ ನಿಂತಿದ್ದ ಪ್ರಕಾಶ ಮಾಣಿಯತ್ತ ತಿರುಗಿ.

“ಆಗ ಮಣಿ-ಅಲ್ಲಿ ಅ ಮೂಲೆಯೊಳ್ಗೆ! ಶೂ-ಓಡ್ಸು” ಪ್ರಕಾಶ ಮಾಣಿ ಹಿಡಿ ಕಡ್ಡಿ ಬಿಸುಟು ಹತ್ತಿರದಲ್ಲಿಟ್ಟುಕೊಂಡ ಕೋಲನ್ನೆತ್ತಿಕೊಂಡು ಬಾಲ ಎತ್ತಿಕೊಂಡು ಓಡುವ ಕರುವಿನಂತೆ ಓಡಿತು. ಗಾಳಿಯಲ್ಲಿ ಕೋಲು ಬೀಸಿತು. ಓಡಿ ಬಂತು. ಅತ್ತ ನೋಡಿದರೆ ಯಾರೂ ಇರಲಿಲ್ಲ. ಅಷ್ಟೊತ್ತಿಗೆ ಸೊಸೆ ಹೊರಗೆ ಬಂದಳು.

ಕೈಯಲ್ಲಿದ್ದ ಮಗು ಎಂತದೋ ಕಚ್ಚಿಸಿಕೊಂಡು ಬೊಬ್ಬೆ ಹೊಡೆಯುತ್ತಿತ್ತು. ಅದನ್ನು ನೀವುತ್ತ “ಕಟ್ಟೆ ಕಚ್ಚಿತಾ ಕಾಂತ್-ನೀವು ಈಗ ಬಪ್ಪ ಭರವ? ಇದ್ ಯಾರು?” ಅಂದೆಲ್ಲ ಸ್ನೇಹದ ನಗೆ ಬೀರಿದಳು. “ಬರೀ ನೆಲದ ಮೇಲೆ ಕೂಕಂಡಿದ್ರ್‍ಯಲೆ!” ಎನ್ನುತ್ತಾ ಚಾಪೆ ಅಡ್ಡದಿಂದ ಒಂದು ಚಾಪೆ ಎಳೆಯಹೋದಳು. ನಾವು ಬೇಡ ಅಂದದ್ದೇ ಕೈ ಬಿಟ್ಟಳು. ಸರಸ ಚಿಕ್ಕಿ ಬರಲಿಕ್ಕೆ ಮುಂಚೆ ಹೇಳಿದ್ದು ಸಮನೆ. ಗಂಟೆ ಹನ್ನೊಂದಾದರೂ ಮೈ ಮುಖ ಚೊಕ್ಕ ಮಾಡಿಕೊಂಡಂತೆ ಕಾಣುತ್ತಿರಲಿಲ್ಲ. ಮನೆ ಕೆಲಸದ ಮೇಲೆಯೇ ಬಿದ್ದುಕೊಂಡಂತೆ ಇದ್ದಳು. “ಹೈತ್, ನಮ್ ಮೇಲೆ ಕೆಲ್ಸ ಇತ್ತ, ಕೆಲ್ಸದ ಮೇಲೆ ನಾವಾ?” ಎಂದು ನನ್ನನ್ನು ಗುಟ್ಟಲ್ಲಿ ಚಿವುಟಿದ ಸರಸ ಚಿಕ್ಕಿಯ ಗುಣುಗಿಗೆ ಸರಿಯಾಗಿ ಸೊಸೆ ತಾರಾಮತಿಯೂ ನುಡಿದಳು.

“ಯಲ್ಲರಿಗೂ ಮನೆ ಕೆಲ್ಸ ಮುಗೀತ್ತಂಬ್ರಪ್ಪ. ನಂಗೊಬ್ಳಿಗೆ ಮುಗಿಯುವುದಂತೆಳಿ ಇಲ್ಲೆ. ಮಾಡತ್ ಯಂತ ಕೇಂತ್ರಿಯಾ? ಯಂತದೂ ಇಲ್ಲೆ. ಈಗ ಇದೊಂದ್ ಮಾಣಿ ಹಟ ತೆಕ್ಕಂತಲೆ!”- ಎನ್ನುತ್ತಾ ಅದನ್ನು ತಿವಿದಳು. ಅದು ಇನ್ನಷ್ಟು ಜೋರು ಹಟ ಹರಡಿಕೊಂಡಿತು. “ಏ ನಾಗೂ ಬಾ ಇಲ್ಲಿ, ಇದನ್ನ ಆಚೆ ಕರ್‍ಕಂಡ್ ಹೋಗ್”-ಎನ್ನಲು ನಾಗ ಎಂಬವಳು ಬಂದು ಮಗುವನ್ನು ಆಚೆಗೆ ಕರೆದುಕೊಂಡು ಹೋದಳು. “ಕೂಕಣಿ….ಕಾಫಿ ಮಾಡುದಾ ಬೊಂಡ ತೆಗ್ಸುದಾ? ಊಟಕ್ಕೆ ಮನೆಗೇ ಹೋಯ್ಕೋ ಏನೋ ಅಲ್ದಾ?”

-ಅಡ್ಡಿಲ್ಲ, ಹೆಣ್ಣು ಒಳ್ಳೆಯ ಉಪಚಾರವನ್ನೇ ಮಾಡುತ್ತಿದೆ ಎಂಬಂತೆ ನಕ್ಕಳು ಸರಸ ಚಿಕ್ಕಿ. ಒಳಗೆ ಸರಿಯುವ ತಾರಾಮತಿಯ ಹೆಜ್ಜೆಗಳಲ್ಲಿ ಉಮೇದಿನ ಕೆತ್ತೆ ಸಹ ನನಗೆ ಕಾಣಲಿಲ್ಲವಾಗಿ ಸರಸ ಚಿಕ್ಕಿಯಷ್ಟು ಸಲೀಸಾಗಿ ನನಗೆ ನಗಲಾಗಲಿಲ್ಲ.

* * * *

ಅಪ್ಪಣ್ಣಜ್ಜಯ್ಯನ ಮನೆ ಉಪಚಾರ ಈ ಮಟ್ಟಕ್ಕೆ ಬಂದು ನಿಂತಿತೇ? ದೊಡ್ಡಮ್ಮ ಹೇಳಿದ ಚಿತ್ರ ಆಗಲೇ ಮಸುಕಾಗಿತ್ತು….

ಅಪ್ಪಣ್ಣಜ್ಜಯ್ಯನ ಮನೆಯೆಂದರೆ ಯಾರು ಬಂದರೂ ಹೆಚ್ಚಲ್ಲ, ಹೋದರೆ ಕಡಿಮೆಯಲ್ಲ, ಬಂದು ಚಾವಡಿಯಲ್ಲಿ ಹಾಸಿದ ಚಾಪೆಯಲ್ಲಿ ಕುಳಿತರೆಂದರೆ ಕಾಟು ಮಾವಿನಹಣ್ಣಿನ ಪಾನಕವೋ, ಕಸೆ ಹಣ್ಣಿನ ಹೋಳೋ, ಬೆರೆಸಿದ ಮಜ್ಜಿಗೆಯೋ, ನೀರು ಮತ್ತು ಬೆಲ್ಲವೋ, ಕಾಫಿ ಮತ್ತು ಹುರುಳಿ ಹಪ್ಪಳವೋ…. ಆಯಾಯ ಕಾಲಕ್ಕೆ ತಕ್ಕಂತೆ ಬಂದವರೆದುರು ಬರುತ್ತವೆ. ಊಟಕ್ಕೇಳಿ ಎಂಬ ಉಪಚಾರ ಬೇರೆ. ಮೀನಾಕ್ಷತ್ತೆ ಮನೆಯ ಈ ಸಂಪ್ರದಾಯವನ್ನು ಪಾಲಿಸಿಕೊಂಡೇ ಬಂದವಳು. ಪಾಲಿಸಿಕೊಂಡು ಬಂದದ್ದು ಇದು ಮಾತ್ರವೇ? ಅಲ್ಲ, ಮನೆಯಲ್ಲಿ ಎಷ್ಟು ದೊಡ್ಡ ವಿಶೇಷಗಟ್ಟಲೆಗೂ ಸಾಕಾಗುವಷ್ಟು ಪಾತ್ರೆಗಳಿವೆ. ಅಲ್ಲದೆ….ಓಬೀರಾಯನ ಕಾಲದ ಒಂದು ಆರತಿ ತಟ್ಟೆಯೂ, ದಿನನಿತ್ಯದ ಬಳಕೆಗೆ ಯಾವುದು ಬೇಡವೋ ಅದೆಲ್ಲವೂ ಊರ ಉಪಕಾರಕ್ಕೆ ಎಂಬುದನ್ನೂ ಪಾಲಿಸಿಕೊಂಡು ಬಂದಾಕೆ. ಯಾರು ಯಾವ ಹೊತ್ತಿಗೆ ಬಂದು ಕೇಳಿದರೂ ಕೊಡುವುದೇ ಹೆಗ್ಗಳಿಗೆ ಎಂದು ತಿಳಿದವಳು.

ಒಂದು ಬೆಳ್ಳಿ ಆರತಿ ತಟ್ಟೆಯಂದರೆ….! ಅದರ ಕುಸುರಿ ಗೋಪುರಗಳು, ತಲೆಯ ಮೇಲೊಂದು ನಕ್ಷತ್ರ ಹರಳು, ನುಣುಪಾಗಿ ಒಪ್ಪವಾಗಿರುವ ಸುಳಿಯುಂಡೆಗಳು… ನೋಡಲು ಎರಡು ಕಣ್ಣು ಎತ್ತ ಸಾಕು? ಊರಿನ ಸೊಸೆಯಂದಿರೆಲ್ಲ ಅಂತಹದೊಂದು ತಟ್ಟೆ ತಮ್ಮ ಮನೆಯಲ್ಲಿದ್ದಿದ್ದರೆ ಎಂದು ಆಸೆಪಟ್ಟವರು. ಅಗ್ಗ ಸುಗ್ಗಿಯ ಕಾಲದಲ್ಲಿ ಅಷ್ಟನ್ನು ಮಾಡಿಸಿಡದ ತಮ್ಮ ಅತ್ತೆ ಮಾವ ಬರೀ ಬೂಸು ಎನ್ನುತ್ತ ಮಾಡಿಸಿಟ್ಟುಕೊಳ್ಳಬೇಕೆಂಬ ಬಯಕೆಯನ್ನು ಗಂಡಂದಿರ ಹತ್ತಿರ ಕೊಡವಿದವರು…. ಆದರೆ…

“ನಮ್ಮ ಕಾಲದ ಗಂಡಸರು ಈ ಕಾಲದ ಗಂಡಸರ ಹಾಂಗ? ಈಗಿನವು ಯಂತ ಕ್ಕಾಪೊ? ಹೆಂಡ್ರ್‍ ಹಲ್ಲು ಚಿರಿದ್ರೆ ತಾವೂ ಚಿರಿತೋ. ಸಾಲ ಸೋಲ ಮಾಡಿಯಾರೂ ಹೆಂಡ್ರ್‍ ಕೇಂಡದ್ ತಂದ್ ಹಾಕ್ತೊ….ಆಗಿನ ಗಂಡಸ್ರ್‍ ಸತ್ಯಕ್ಕೂ ಗಂಡಸ್ರೇ….” ದೊಡ್ಡಮ್ಮ ಹೇಳಿದ್ದಳು. ಯಾಕೆಂದರೆ ಹೆಂಡಂದಿರ ಮಾತಿಗೆ “ನಿಮಗೆಲ್ಲ ಯಂತ ಗೊತ್ತಿತ್ತಂತೆಳಿ ಬೇಕಲೆ. ಅದ್ಯೇನ್ ಸ್ವಲ್ಪದುಡ್ಡಿಂದ?” ….ಎಂದು ಕೆಲವರೂ “ಕಾಂಬ, ಕಾಂಬ, ಮನಿ ಉಸಾಬರಿ ನಿಮ್ಮ ಕೈಯಾಗ್ ಕೊಟ್ಟದ್ ಯಾರ್‍? ನಾನಿದ್ದೆ, ಕಂಡ್ಕಂತೆ” ಎಂದು ಮತ್ತೆ ಕೆಲವರೂ “ನಿನ್ ಅಪ್ಪ್‌ನ ಮನಿಯಿಂದ ತಂದ ಬೆಳ್ಳಿ ಇದ್ದಿದ್ರೆ ಈ ಕ್ಷಣ ಮಾಡಿಸ್ತಿದ್ದೆ”-ಎಂದು ಇನ್ನೂ ಕೆಲ ಗಂಡಸರೂ ಬರೆ ಕೊಟ್ಟದ್ದುಂಟು.

ಸಂಪಾದನೆಯೆನ್ನುವುದು ಕೇವಲ ಗಂಡಸೊಬ್ಬನಿಂದಲೇ ನಡೆದು ಮನೆ ವಾರ್ತೆಯ ರಥ ತಾನಿಲ್ಲದಿದ್ದರೆ ನಿಂತಲ್ಲೇ ನಿಲ್ಲುತ್ತದೆ ಎಂಬುದನ್ನು ಕಂಡುಕೊಂಡ ಯಾವ ಗಂಡಸೂ ಹುಲುಮೀಸೆಗೂ ಹುರಿ ಕೊಟ್ಟಾನು. ಸ್ಥಿತಿ ಹೀಗೇ ಇದ್ದದ್ದೇ ಹೌದಾದರೆ ಯಾವ ಕಾಲಕ್ಕೂ ಪ್ರಪಂಚದ ಯಾವ ಮುಲ್ಲೆಗೆ ನಡೆದರೂ ಗಂಡಸು ಹಾಂಗೇ ಹೆಂಗಸು ಹೀಂಗೇ ಅಂತೆಲ್ಲ ದೊಡ್ಡಮ್ಮನ ಹತ್ತಿರ ಹೇಳಿದರೆ ಅವಳು ಕೇಳುವವಳಲ್ಲ. ಅವಳ ಮಟ್ಟಿಗೆ ಹೆಂಗಸೆಂದರೆ ಆರತಿ ತಟ್ಟೆಯಂತೆಯೆ. ಎತ್ತಿದವರು ಹೇಳಿದಂತೆ ಸುತ್ತು ಹೊಡೆಯುವುದು ಮಾತ್ರ. ಸ್ವಂತ ಬುದ್ಧಿ ಸಲ್ಲ. “ಮಗೂ ಮೀನಾಶ್ಚತ್ತೆ- ಹಾಂಗಿದ್ದದ್ದಕ್ಕೆ ಗಂಡನ ಹತ್ತಿರ ಒಂದ್ ಜಗಳ ಮಾಡ್ಲಿಲ್ಲೆ, ಮಿಣ್ಣಗೆ ಅವಳಿಗಂತವೇ ಇದ್ ಕೆಲ್ಸ ಮಾಡಿಳ್, ಸುಮ್ನೆ ಕೂಕಂಡ್ಲ್”… ಮತ್ತೆ ತಟ್ಟಯನ್ನು ಒರೆಸಿಡುತ್ತಿದ್ದ ಕಾಶಿ-?

ಆರತಿ ತಟ್ಟೆಯನ್ನು ಕೇಳಲು ಯಾರು ಬಂದರೂ ಕಾಶಿಗೆ ಹೊರಗಿಣುಕದೆ ತಡೆಯದು. ಮೀನಾಕ್ಷತ್ತೆ ಜಾಗ್ರತೆಯಿಂದ ಖಾಕಿ ಚೀಲದೊಳಗೆ ಬಿಳಿ ಮಲ್ಲಿನಲ್ಲಿ ಮುಚ್ಚಿಟ್ಟ ಗಂಟನ್ನು ಅವರಿಗೆ ಹಸ್ತಾಂತರಿಸುವಾಗ ಹಿಂದು ಮುಂದಿಲ್ಲದ ಒಂದು ನಗೆಯಾಡುವವಳು ಕಾಶಿ. ಎಷ್ಟೋ ಸಲ ಮೀನಾಕ್ಷತ್ತೆ “ಅದ್ಯೆಂತ ಹಸೀ ಹಾದರಗಿತ್ತಿ ನಗಿ!” ಅಂತ ಹೇಳಿ ಗದರಿಸಿದ್ದುಂಟು, ಮೀನಾಕ್ಷತ್ತೆ ಗಂಟು ಸಮೇತ ಕೊಟ್ಟರೆಂದರೆ ಬಂದವರು ಅದನ್ನು ಬಿಚ್ಚಿ ಎಲ್ಲ ಸರಿಯುಂಟೇ ಕಾಂಬವರಲ್ಲ. ಮತ್ತೆ ವಾಪಾಸು ಬಂದ ಮೇಲೆ ಮೀನಾಕ್ಷತ್ತೆಯೂ ಕಾಂಬವರಲ್ಲ, ಪಡಸಾಲೆಯಲ್ಲಿ ಸದ್ಯಕ್ಕೆ ಒಂದು ಮರದ ಕಪಾಟಿನೊಳಗೆ ಸ್ವಲ್ಪ ದಿನ ಇದ್ದು ಕೈ ಬಿಡುವಾದಾಗ ಒರೆಸಿ ಚಿನ್ನ ಬೆಳ್ಳಿಯ ಟ್ರೆಜರಿಯಲ್ಲಿಡುವುದು ರೂಢಿ. ಹಾಗೆ ಒರೆಸಿಡುವ ಕೆಲಸವನ್ನು ಎಷ್ಟೋ ಸಲ ಕಾಶಿಯೇ ಮಾಡಿದ್ದುಂಟು. ಆಗ ಆಕೆ ಅದರೊಡನೆಯೇ ಮಾತಾಡಿದಂತೆ ಕಟ್ಟಿದ ಹಾಡುಗಳು ಎಷ್ಟೋ. ಆದರೆ ಕಾಶಿಯ ಹಾಡುಗಳನ್ನು ಯಾರೂ ಮದುವೆ ಮನೆಗಳಲ್ಲಿ ಹಾಡುವುದಿಲ್ಲ. “ಯಾಕೆಂದ್ರೆ ಅವೆಲ್ಲ ಬರೀ ಭಂಡು ಹಾಡುಗಳು…. ‘ಗಂಡನ ಕೊಳ್ಳಲು ಬೇಕು ಆರತೀ…ನೀನು ಮಿಂಡಽಗೆಂದೂ ಬೇಡ ಆರತೀ’…ಹೀಂಗಿಂದೇ”

-ಎಲ್ಲ ದೊಡ್ಡಮ್ಮನ ಪುರಾಣ.

* * * *

ಮೀನಾಕ್ಷತ್ತೆ ನಮ್ಮನ್ನೇ ಬಿಳೀಗಣ್ಣುಗಳಿಂದ ನೋಡುತ್ತಿದ್ದರು. ತುಟಿ ಆಗ ನೋಡಿ ನಕ್ಕದ್ದು ಈಗಲೂ ಉದ್ದವಾಗಿ ಹಾಗೆಯೇ ಇತ್ತು. ನಗೆ ಮುಗಿದುದರ ಅರಿವೇ ಇಲ್ಲದಂತೆ. ಈಗ ಅರಿವು-ಮರೆವಿನ ಸಮ್ಮಿಶ್ರವಾಗಿರುವ ಈ ಮೀನಾಕ್ಷತ್ತೆಯನ್ನು ಬಿಟ್ಟಗಣ್ಣಿಂದ ನೋಡುತ್ತಿದ್ದ ಹಾಗೆ ಸರಸ ಚಿಕ್ಕಿ ನುಡಿದಳು. “ಈ ಮೀನಾಶ್ಚತ್ತೆಯ ಅಣ್ಣ ಬಹಳ ದೊಡ್ಡಜನ. ಮಿಲ್ಟ್ರಿಯಲ್ಲಿ ಡಾಕ್ಟ್ರ್‍ ಆಯಿದ್ರ್‍… ಅವಾಗೆಲ್ಲ ಹಾಂಗೇಯಲೆ. ಹೆಣ್ಮಕ್ಳನ್ನ ಎಲ್ಲಿ ಶಾಲೆಗೆ ಕಳಿಸ್ತಿದ್ದೋ? ಹಾಂಗಂದ್ ಮೀನಾಶ್ಚತ್ತೆಯ ಯೋಗ್ಯತೆಯೇನು ಕಡೆಮೆಯ? ಎಲ್ಲಿ ಹೋದ್ರೂ ಆರ್ತಿ ಎತ್ತುಕೆ ಮೀನಾಶ್ಚತ್ತೆಯೇ ಆಯ್ಕ್. ಅಂಥಾ ಸಿರಿ ಮುತ್ತೈದೆ. ತಟ್ಟೆಯೂ ಹ್ಯಾಂಗೂ ಅವಳ ಮನೇದೇ ಅಲೆ! ನಾ ಕಂಡದ್ದೆ ಅದನ್ನ. ಒಂದು ತಟ್ಟೆ ಅಂದ್ರೆ! ಈ ಭಾರ!” ಹೇಳುತ್ತಿದ್ದಂತೆ ಭಾರವಾಗಿ ಅಂಗೈಯನ್ನು ಗಾಳಿಯಲ್ಲಿ ಎತ್ತಿ ಇಳಿಸಿದಳು.

ಹೋದಲ್ಲಿವರೆಗೂ ಆರತಿ ಮಾಡುವವಳೂ ಇವಳೇ. ಆರತಿ ತಟ್ಟೆಯೂ ಇವಳದೇ ಎಂದರೆ? ಹಾಗೆ ಒಮ್ಮೆ ತಿಮ್ಮಪ್ಪಣ್ಣಯ್ಯನ ಮಗಳ ಮದುವೆಯಲ್ಲಿ ಗಲಾಟೆ ಎದ್ದದ್ದಲ್ಲವೇ? (ಸರಸ ಚಿಕ್ಕಿಯ ಹತ್ತಿರ ಕೂತರೆ ಹೀಗೇ. ಕಿವಿ ಬಾಡಿಗೆಗೆ ಕೊಡಬೇಕು.)

“ನೀನೇ ಹೇಳು ಇವಳೇ. ತಿಮ್ಮಪ್ಪಣ್ಣಯ್ಯನ ಮನಿಗೂ ಈ ಮನಿಗೂ ಏನು ಸಂಬಂಧ? ಆರ್ತಿ ಮಾಡುವ ಹಕ್ಕು ಮೀನಾಶ್ಚತ್ತೆಗೆ ಹ್ಯಾಂಗೆ ಬಪ್ಪು? ಅದು ತಿಮ್ಮಪ್ಪಣ್ಣಯ್ಯನ ತಂಗಿಯಂದಿರದು. ಹಾಂಗಾಯ್ಲಿಲ್ಲೆ. ತಿಮ್ಮಪ್ಪಣ್ಣಯ್ಯನ ಹೆಂಡ್ತಿ ಮೀನಾಕ್ಷತ್ತೆಯನ್ನ ಎಬ್ಬಿಸಿದ್ಲು.”

…ಇವಳಾದರೂ ಎಂಥವಳು? ಕರೆದೊಡನೆ ಎರಡು ಸಲ ಒಲ್ಲೆ ಎಂಬಳು. ಮೂರನೆಯ ಸಲ ಎದ್ದೇ ಬಿಡುವಳು. ಮೀನಾಶ್ಚತ್ತೆ ಎದ್ದು ಮಂಟಪಕ್ಕೆ ತೆರಳಿದ್ದಾಳೆ…ಈಚೆ ಗುಸುಗುಸು ಮರಕುವ ಶಬ್ಧ. ಯಾರದೆಂತ ಮಾಡಿದೆ. ತಿಮ್ಮಪ್ಪಣ್ಣಯ್ಯನ ತಂಗಿ ವಿಶಾಲು! ಇಡೀ ದಿನ ಮೀನಾಶ್ಚತ್ತೆಯನ್ನು ಕರುಬುತ್ತಿದ್ದಳಲ್ಲ. ಮೀನಾಶ್ಚತ್ತೆ ಮನೆಯಲ್ಲಿ ಅದ ಹಾಂಗೇ ತನ್ನ ಮನೆಯಲ್ಲೂ ಆಗಬೇಕು ಅಂತ ಹಟ ಹಿಡಿಯುತ್ತಿದ್ದಳಲ್ಲ, ಅದೇ ನಮೂನೆ ಬಟಾಣಿ ಗೋಧಿಮಣಿ ಸರ, ಚಕ್ರ ಸರ, ಮಾವಿನಮಿಡಿ ನೆಕ್‌ಲೇಸ್….ಎಲ್ಲ ಎಲ್ಲ… ಅದೇ ನಮೂನೆ. ಗಂಡ ಮಾತ್ರ ಬೇರೆ, ಹುಟ್ಟುವಳಿ ಬೇರೆ. ಅಷ್ಟೇ ಹುಟ್ಟುವಳಿಯೊಳ್ಗೆ ಅಷ್ಟೆಲ್ಲ ಹ್ಯಾಂಗ್ ಮಾಡ್ಕಂಡ್ಲೋ… ಆ ವಿಶಾಲು, ಎಂತವಳೇ ಇರಲಿ. ಅಣ್ಣನ ಮನೆ ಮದುವೆಯಲ್ಲಿ ಮಾತ್ರ ಹಕ್ಕಿನ ವಿಶಾಲು ಅಲ್ಲವೇ? ಅಯ್ಯೋ ಒಂದು ಮರಕಿದ್ದಂದ್ರೆ “ನಾವು ಸತ್ ಲೆಕ್ಕ ಮಾಡಿಯ ಅಣ್ಣಯ್ಯ…” ಎಂಬ ಒಂದೇ ರಾಗ.

“ಪಾಪ ಮಾರಾಯ್ತಿ. ಆ ತಿಮ್ಮಪ್ಪಣ್ಣಯ್ಯಂಗೆ ಇದೆಲ್ಲಯಂತ ತೆಳಿತ್ತ? ಗಂಡಸಪ್ಪ. ಆರತಿ ವಿಚಾರಕ್ಕೂ ಮಂಡೆ ಹಾಕ್ಕಂಡ್ ಬಪ್ನಾ? …. ಎಲ್ಲ ಕಿತಾಪತಿ ಅವ್ನ ಹೆಂಡ್ತಿದು”…

ವಿಶಾಲುಗೂ ಅವಳಿಗೂ ಮುಂಚಿನಿಂದಲೂ ಅಷ್ಟಕಷ್ಟೇ. ವಿಶಾಲು ತನ್ನ ಮಗನ ಉಪನಯನಕ್ಕೆ ಹೇಳಿಕೆ ಮಾಡಲಿಕ್ಕೆ ಬಂದವಳು ತಿಮ್ಮಪ್ಪಣ್ಣಯ್ಯನ ಕಾಲಿಗೆ ಮಾತ್ರ ನಮಸ್ಕಾರ ಮಾಡದಳಂತೆ. ಇವಳ ಕಾಲಿಗೆ ಮಾಡಲಿಲ್ಲವಂತೆ. ಸುಮ್ನೆ ಯಾರದರೂ ಹೋದಳೇ? ನೀನ್ ನಂಗಿಂತ್ಲೂ ಸಣ್ಣವ್ಳು. ನಮಸ್ಕಾರ ಮಾಡ್ಕಂತೆಳಿ ಇಲ್ಲೆ” ಎಂದಳಂತೆ. ಎಷ್ಟೆಂದರೂ ಅತ್ತಿಗೆ ಅಲ್ಲವೇ? ಅತ್ತಿಗೆ ಸ್ಥಾನಕ್ಕೆ ಇವಳು ನಮಸ್ಕಾರ ಮಾಡಲೇಬೇಕಿತ್ತು…. ಗಂಟೇನು ಹೋಗುತ್ತಿರಲಿಲ್ಲ…

ಹೀಗೆ ಸರಸ ಚಿಕ್ಕಿ ಮಾತಾಡುತ್ತಿದ್ದಂತೆ ಒಮ್ಮಿಂದೊಮ್ಮೆ ನ್ಯಾಯಾಧೀಶರಂತೆ ಮಾತಾಡುವವಳು. ಅಲ್ಲಲ್ಲೇ ತೀರ್ಪು ಕೊಡುತ್ತ ಸಾಗುವವಳು…. “ತಕೋ, ತಿಮ್ಮಪ್ಪಣ್ಣಯ್ಯನ್ ಹೆಂಡ್ತಿ ಸಿಟ್ ತೀರ್‍ಸ್‌ಕಂಡದ್ ಹೀಂಗೆ.”

ವಿಶಾಲು ತನ್ನ ಗಂಡ ಮಕ್ಕಳನ್ನು ಕರೆದುಕೊಂಡು ಊಟಕ್ಕೆ ನಿಲ್ಲದೆ ಹರಟುಹೋದಳಲ್ಲ…. ಅಲ್ಲ, ಈ ಮೀನಾಶ್ಚತ್ತೆಗಾದರೂ ಬುದ್ಧಿ ಬೇಕಿತ್ತು ಹೌದನ? ಕರೆದರು ಅಂತ ಹೇಳಿ ಮಂಟಪಕ್ಕೆ ನುಗ್ಗುದೆಯ? ಅದು ತನ್ನ ಜಾಗ ಹೌದಾ ಅಲ್ದ ಕಾಂಬ ಪಂಚಾತಿಕೆ ಬೇಡವ?

“ಆರತಿಗೊಬ್ಬಳು ಮೀನಾಶ್ಚತ್ತೆ ಅಂತೆಳಿ ನಾವು ಒಂದಿಷ್ಟ್ ಮಂದಿ ಎದುರೆದುರೇ ತಮಾಷೆ ಮಾಡಿರೂ ಗೆರೆ ಮುಟ್ಕಂಬ ಜನ ಅಲ್ಲ ಕಾಣ್ ಈ ಹೆಂಗ್ಸ್…”

“ಆಂ… ಏನಾಂದೇ?….ಈಗೀಗ ಕೆಮಿ ಸಮ ಕ್ಯೇಂತಿಲ್ಲೆ ಮಾರಾಯ್ತಿ”…ಪಾಪ ಸರಸ ಚಿಕ್ಕಿಯ ಪಿಸುಮಾತು ಕೇಳಿಸದರೆ ಮೀನಾಶ್ಚತ್ತೆ ಕುಳಿತಲ್ಲೇ ಮುಂದೆ ಬಾಗಿದರು. ಮಾತು ಕೇಳುವ ಆಡುವ ಆಸೆಯೊಂದು ನಡುಗುತ್ತ ಮುಂದೆ ಬಾಗಿದಂತೆ. ದೊಡ್ಡ ಸ್ವರದಲ್ಲಿ ಕೇಳಿದರು.

“ಅಲ್ದನ ಸರಸಾ. ಆ ಕಾಶಿ ಯಂತ ಆದ್ಲಾ? ಊರ್‍ ಬಿಟ್ಟ ಮೇಲೆ ಕಂಡದ್ದೇ ಇಲ್ಲೆ ಕಾಣ್. ಸತ್ ಹೋಯಿಪ್ಳ?”

ಸರಸ ಚಿಕ್ಕಿ ಕೂಗಿ ಹೇಳಿದಳು… ಕಾಶಿ ಸತ್ತಿಲ್ಲ. ದೂರದ ಯಾವುದೋ ಊರಲ್ಲಿ ಇದ್ದಾಳೆ. ಈಗ ಯಾವುದಕ್ಕೂ ಕಡಿಮೆಯಿಲ್ಲವಂತೆ. ಮಗ ಮಸ್ತು ದುಡ್ಡು ಮಾಡಿದ್ದಾನಂತೆ…

“ಯಂತ ಮಾಡ್ರ್‍ ಏನ್? ಗಂಡ ಪೋಂಕಲೆ!” ಈ ಕ್ಷಣ ಸಾಯಬಹುದಾದ ಮೀನಾಕ್ಷತ್ತೆ ನಕ್ಕ ರೀತಿಯೆಂದರೆ! ಖಾಲಿ ಆರತಿ ತಟ್ಟೆ ಹೀಗೆ ನಗಲಾರದು.

ಸರಸ ಚಿಕ್ಕಿ ಎಂದಳು….

“ತಮಾಷೆ ಮಾಡಿರೂ ಈ ಮೀನಾಶ್ಚತ್ತೆ ಗೆರೆ ಮುಟ್ಕಣ್ಲಿಲ್ಲೆ ಅಂದ್ನಲೆ. ಒಂದ್ನಮೂನೆ ಪಾಪದವಳು ಮಾರಾಯ್ತಿ” ಎನ್ನುತ್ತಾ “ಮೀನಾಶ್ಚತ್ತೇ… ಈಗ ಬತ್ತೊ. ಇವ್ಳಿಗೆ ಮನಿ ಕಾಣ್ಕಂಬ್ರ್‍” – ಸರಸ ಚಿಕ್ಕಿ ಪಡು ಹೆಬ್ಬಗಿಲತ್ತ ನಡೆದಳು. ಅವಳ ಹಿಂದೆ ನಾನು. “ಹೋಯಿಬನ್ನಿ… ಅಲ್ಲಿ ಮಂಡೆಕಾಕೆಗಳಿದ್ದೋ. ಕಾಂತ ಇದ್ಹಂಗೆ ತಲೀಗೇ ಬಂದ್ ಕುಕ್ತೋ. ಜಾಗ್ರತೆ” – ಎಂದಳು ಮೀನಾಕ್ಷತ್ತೆ.

ಹೆಬ್ಬಾಗಿಲ ಕೋಣೆ ಹೊರಗಿಂದ ಚಿಲಕ ಹಾಕಿತ್ತು. ಸರಸ ಚಿಕ್ಕಿ ಮೆಲ್ಲ ತೆಗೆದಳು. ಒಳಗೆ ಗಾಳಿ ಮರಕಟ್ಟಿದಂತಿತ್ತು. ಧೂಳು ಹಾಸಿ ಅಪ್ಪಳಿಸಿತ್ತು. ಹೀಂಗೂ ಇರಸ್ತಿಕೆಯ? ಏನೇ ಹೇಳು ಮೀನಾಕ್ಷತ್ತೆಯ ಮಾಣಿ ನರಸಿಂಹನ ವಹಿವಾಟು ಏನೂ ಸಾಲದು. ಎಂದು ಅವಳೆಂದಾಗ ತಾರಾಮತಿಯ ಉಮೇದಿಲ್ಲದ ಹೆಜ್ಜೆಗಳು ಕಣ್ಣೆದುರು ಬಂದವು.

“ಇಗ-ಇದೇ ಕೋಣಿ. ರಾತ್ರಿಯಾಯಿತಾ? ಗುಲಾಬಿ ಬಂದಳೆಂದೇ. ಹ್ಯಂಗೆ? ಒಳ್ಳೇ ವೀಳ್ಯದೆಲೆ ಹಾಕ್ಕಂಡ್, ತಲಿ ಬಾಚ್ಕಂಡ್, ಪೌಡರ್‍ ಹಾಕ್ಕಂಡ್, ಎದೆ ಕಣ್ಣು ಕಾಂಬ ಹಾಂಗಿನ ಒಂದು ರವಿಕೆ. ಮೇಲೊಂದ್ ತೆಳೂ ಸೀರಿ ಉಟ್ಕಂಡ್ ಅದ್ಕೇ ಅಲ್ದ ಇವತ್ತಿಗೂ ರಾತ್ರಿ ಕನ್ನಡಿ ಕಂಡ್ರೆ ‘ನೀನೇನ್ ಸೂಳಿಯಾ?’ ಅಂತೆಳಿ ದೊಡ್ಡವ್ರ್‍ ಬೈಯುದ್?…”

“ಹ್ಹಂ, ಮುಂದೆ ಹೇಳು”

“ನಮ್ ಊಟದ ಪಂಕ್ತಿ ಎಲ್ಲ ಮುಗಿದು ಹಾಸಿಗೆ ಹಾಕಂಬ ಗಲಾಟೆ. ಒಂದೆರಡ್ ಜನರಾ ಒಂದೆರಡ್ ಹಾಸಿಗಿಯಾ? ಈ ಗಲಾಟೆಯೊಳ್ಗೆ ಗುಲಾಬಿ ಬಂದದ್ ಗೊತ್ತಾಪುದು ಮೀನಾಶ್ಚತ್ತೆಗೆ ಮಾತ್ರ. ಅಡುಗೆ ಕೋಣೆ ಕಿಟಕಿಯಿಂದ್ಲೇ ಅವಳನ್ನು ಕಂಡಾಯ್ತ್. ತಕ್ಕಷಣ ಒಂದ್ ಲೋಟೆ ಹಾಲ್ ಬಗ್ಸಿ ಆಯ್ತ್, ನಮ್ಮನ್ ಯಾರನ್ನಾದ್ರೂ ಕರ್‍ದ್ ‘ಕೊಟ್ ಬಾ’ ಅಂತೆಳಿ ಕಳ್ಸಿಯಾಯ್ತ್… ಅಂಥಾ ಪಾಪದ್ ಹೆಂಗ್ಸ್ ಈ ಮೀನಾಶ್ಚತ್ತೆ…ಪ್ರಪಂಚದಗೆ ಇಂಥ ಹೆಂಗ್ಸ್ ಸಿಕ್ಕುವನ?”

-ಸರಸ ಚಿಕ್ಕಿ ಮುಂದುವರಿಸಿದಳು. ಪಾಪ ಎಷ್ಟು ಮಾಡಿದರೆ ಏನು? ಹೆಬ್ಬಾಗಿಲ ಕೋಣೆಯಲ್ಲಿ ಇರುವೆ. ಎಲ್ಲ್‌ಕಂಡ್ರೂ ಇರುವೆ. ಒಂದು ದಿನ ರಾತ್ರಿಯಂತೂ ಅಪ್ಪಣ್ಣಯ್ಯ ಮತ್ತು ಗುಲಾಬಿ ಅರ್ಧ ರಾತ್ರಿಯಲ್ಲಿ ಹಾಸಿಗೆ ಹೊತ್ತುಕೊಂಡು ಉಪ್ಪರಿಗೆ ಕೋಣೆಗೆ ಓಡಿದರು. ಸ್ವಲ್ಪ ಹೊತ್ತಾಗಲಿಕ್ಕೂ ಅಲ್ಲಿಯೂ ಇರುವೆ. ರಾತ್ರಿಯಿಡೀ ಗುಲಾಬಿಗೆ ಹಾಸಿಗೆ ಕೊಡಕುವ ಕೆಲಸ ಬಿಟ್ಟು ಬೇರೆ ಇಲ್ಲ. ಪ್ರತಿದಿನ ಇರುವೆ ಕಚ್ಚಿಸಿಕೊಳ್ಳುವುದಕ್ಕೆ ಅವಳಿಗೇನು ಗ್ರಾಚಾರವಾ?

“ಗಣಪತಿ ಶಾಪ ಇದ್ರೆ ಯರು ಬತ್ ಅಂಬ್ರಲೆ. ನಾನ್ ಇಲ್ಲಿಗ್ ಬಪ್ಪುದ್ ಗಣಪತಿ ದೇವ್ರಿಗೆ ಸಮಾಧಾನ ಇಲ್ಲೆ ಕಾಂತ್” ಅಂತೆಳಿ ಗುಲಾಬಿ ಮನೆಗೆ ಬರುವುದನ್ನೇ ಬಿಟ್ಟಳು.

-ಚಾವಡಿಯಲ್ಲಿ ಕುಳಿತಿದ್ದ ಮೀನಾಕ್ಷತ್ತೆ ಕಣ್ಣು ಹೊರಳಿಸುತ್ತ ಶೂನ್ಯದಲ್ಲಿದ್ದಂತೆ ಕಾಣುತ್ತಿದ್ದಳು…. ಅಥವಾ ಶೂನ್ಯದಲ್ಲಿ ನಮ್ಮನ್ನು ಹುಡುಕುತ್ತಿರಬಹುದೆ? ದೊಡ್ಡಮ್ಮ ಹೇಳುತ್ತಿದ್ದರು…. ಮೀನಾಕ್ಷತ್ತೆಯೆಂದ್ರೆ ಒಬ್ಬರಿಗೆ ಒಂದು ನೋವು ಮಾಡದವಳು. ಮಾತೆಂದರೆ ಇರುವೆಗೂ ನೋವಾಗ. ಅಂಥ ನಯ… ರಾಗ… ಮಿಣ್ಣಗೆ ತಾನಾಯ್ತ್ ತನ್ನ ಕೆಲಸ ಆಯ್ತ್…

ನೆನಪಾದಂತೆ ನಗೆ ಬಂತು. ಎಲಾ ಮೀನಾಕ್ಷತ್ತೇ, ನೀನೆಷ್ಟು ಮಿಣ್ಣಗೆ! ಬಣ್ಣವೇ ತಿಳಿಯದಂತೆ! ಅತ್ತ ಹಾಲೂ ಕೊಟ್ಟು ಇತ್ತ ಇರುವೆಯನ್ನೂ ಬಿಟ್ಟು!

-ಸರಸ ಚಿಕ್ಕಿ ಕೋಣೆ ಬಾಗಿಲು ಚಿಲಕ ಹಾಕಿ ಹತ್ತಿರದ ಜಗಲಿಗೆ ಬಂದು ಬದಿಯ ಕಂಬಕ್ಕೊರಗಿ ಕುಳಿತಳು…. ಈ ಸಾಲು ಕಂಬದಗೆ ನಾವು ಎಷ್ಟು ಸಲ ಕಂಬದಾಟ ಆಡಿದ್ದೆವೋ ಈಗಿನ ಮಕ್ಕಳಿಗೆ ಇಂತಹ ಆಟವೆಲ್ಲ ತಾಗುತ್ತದೆಯೇ? ಕಳೆದದ್ದು ಕಳೆಯಿತು… ಇನ್ನು ಬರುವುದಿಲ್ಲ. ಎನ್ನುತ್ತಾ ಒಂದು ಕಾಲು ಜಗಲಿ ಮೇಲಿಟ್ಟು ನೆನವರಿಕೆಯಲ್ಲಿ ಕುಳಿತಳು.

“ಇಂಥ ಕಂಬಕ್ಕೆಲ್ಲ ಗೇಣಿಕೊಡದ ಒಕ್ಕಲನ್ನು ಕಟ್ಟಿಹಾಕಿ ಹೊಡೀತಿದ್ದೋ ಅಂಬ್ರಲೇ….” ಅವಳ ಮೌನವನ್ನು ಮುರಿಯಲು ಕೇಳಿದೆ ನಾನು.

“ಅದೆಲ್ಲ ನಾನು ಕಂಡದ್ದಿಲ್ಲೆ. ಅರೆ ಈ ಕಂಬಕ್ಕೆ ಆರತಿ ತಟ್ಟೆ ನೆಪ ಮಾಡ್ಕಂಡ್ ಕಾಶಿಯನ್ನು ಕಟ್ಟಿಹಾಕಿ ಹೊಡ್ದದ್ ಗೊತ್. ನಾನೇ ಸ್ವತಃ ಕಂಡಿದ್ನಲೆ. ಅದೊಂದು ಮಾರಾಶಿಮಾತು…ಅಲ್ಲ. ‘ಗಂಡ ಪೋಂಕಲೆ’ ಅಂತೆಳಿ ರಾಗ ಎಳೆದ್ಲ್ ಮೀನಾಕ್ಷತ್ತೆ ಈಗ! ಪೋಂಕಿನೊಟ್ಟಿಗೆ ಮದುವೆ ಮಾಡ್ಸು ಸಮಿಗೆ ‘ಆಯ್ಲಿ ಒಳ್ಳೇ ಸಂಬಂಧ’ ಅಂದವ್ಳೂ ಅವ್ಳೇ. ಆರತಿ ಎತ್ತಿದವ್ಳೂ ಅವ್ಳೇ. ಆರತಿಗೇನೋ ಬುದ್ಧಿ ಇಲ್ಲೆ ಹೌದು. ಯಾರಿಗೆ ಬೇಕಾರೂ ಎತ್ತತ್-ಮಂಗಳಾರತಿಯನ್ನೂ ಮಾಡತ್. ಮಾಡುವವರಿಗೆ ಬುದ್ಧಿ ಬೇಕಾ ಬೇಡ್ದ….?” ಮಾತಿಗೊಂದು ನಗೆಯ ಬುರುಗು ಕೊಟ್ಟು ನಿಧಾನವಾಗಿ ಕಂಬ ಸವರಿದಳು ಸರಸ ಚಿಕ್ಕಿ. ಮುಂದುವರಿಸಿದಳು.

-ಗೊತ್ತುಂಟಲ್ಲ, ಆರತಿ ತಟ್ಟೆ ಬೇಕು ಅಂತ ಬಂದವರಿಗೆ ಇಲ್ಲ ಅನ್ನಲಾರದವಳು ಮೀನಾಕ್ಷತ್ತೆ. ಮದುಮಕ್ಕಳು ಅಂದರೆ ಏನು? ಸಾಕ್ಷಾತ್ ಲಕ್ಷ್ಮೀನಾರಾಯಣ ಸ್ವರೂಪರು. ವಟು ಅಂದರೆ ಭಗವಂತನ ಬಾಲಸ್ವರೂಪ ಬ್ರಹ್ಮಚಾರಿ. ಮತ್ತೆ ಬಸುರಿಗಾದರೆ….ಮತ್ತೂ ಒಂದು ಕೈ ಹೆಚ್ಚು ವಿಶೇಷ. ಈ ಯಾರಿಗೆ ಆರತಿ ಎತ್ತಿದರೂ ತನ್ನ ಮನೆ ಲಕ್ಷಣ ಉಕ್ಕಿ ಬರುತ್ತದೆ ಎಂದೇ ತಿಳಿದಾಕೆ. ಕೇಳಲು ಬಂದವರನ್ನು ಕೆಲ ಕಾಲ ಕೂಡಿಸಿಯಾಳು. ಕುಡಿಯಲು ಕೊಟ್ಟು ಮದುವೆಯೋ ಮುಂಜಿಯೋ ಸೀಮಂತವೋ ವಿಚಾರಿಸಿಯಾಳು.

“ಮಧ್ಯೆ ಆಯ್ಲಿಯಪ್ಪಾ ಆಯ್ಲಿ. (ಆಗಲಪ್ಪಾ ಆಗಲಿ) ಅಂಬ್‌ದು ಇದೇ ಅತ್ತೆಯಲ್ಲವೇ?”

“ಹ್ಞೂಂ-ಇದೇ ಅತ್ತೆ. ಅಡ್ಡಿಲ್ಲೆ, ನಿನ್ನ ದೊಡ್ಡಮ್ಮ ಸುಮಾರು ಹೇಳಿಟ್ಟಿದ್ಲ್! ಅದ್ಯೆಂಥಾ ‘ಆಯ್ಲಿಯಪ್ಪಾ ಆಯ್ಲಿ! ಎಂಬ ಭರವೋ ಮಾರಾಯ್ತಿ…”

“ಹುಡುಗ ಕಪ್ಪು, ಕಣ್ಣು ವಾರೆ… ಹುಟ್ಟುವಳಿ ಸಾಕೂ ಸಾಲದು. ಆದರೇನು? ಹೆಣ್ಣೂಕೊಡುವುದೆಂದೇ ತೀರ್ಮಾನಿಸಿದೆ-ನಾಳೆ ಒಳ್ಳೆಯದಾಗಲಿಕ್ಕಿಲ್ಲ ಅಂತ ಏನು ಗ್ಯಾರಂಟಿ?” ಎಂದರೂ “ಆಯ್ಲಿಯಪ್ಪಾ ಆಯ್ಲಿ. ರೂಪ ಏನು ಅನ್ನಹಾಕತ್ತಾ?” ಎಂದಾಳು. “ಹುಡುಗಿ ಮತ್ತೆ ಹುಡುಗಿಯ ತಾಯಿ ಕೊಂಯ ಕೊಂಯ ಅಂದರು. ನಾನು ಬಾಯಿ ಬಡಿದು ಕೂಡಿಸಿದೆ”-ಎಂದರೂ ‘ಆಯ್ಲಿಯಪ್ಪಾ ಆಯ್ಲಿ ಹೆಂಗಸ್ರ ಹತ್ರ ಕೇಂಡ್ ಕೆಲಸ ಆಯ್ತ್ ಅಂತೆಳಿ ಇತ್ತಾ? ಅವಕ್ಕೆಯಂತ ತೆಳಿತ್? ಮದ್ವೆಯಾದಂವ ಹೆಂಡ್ತೀನ ಚಂದವಾಯಿ ಕಂಡ ಅಂದ್ರೆ ಅವನೇ ಚಂದಗೋಪ…’ ಎಂದಾಳು. ಈ ಮಾತು ಹೆಕ್ಕಿಕೊಂಡು ತಂದೆಯಾದಂವ ಯಜಮಾನಿಕೆಯ ಬೀಗಿನಿಂದ ಮನೆಗೆ ಮರಳಿ ಆರತಿ ತಟ್ಟೆಯನ್ನು ಒಳಗಿಡುತ್ತ “ನೀವೆಲ್ಲ ಯಂತಕ್ಕಾಪ್ರಿ? ಆ ಮೀನಾಶ್ಚತ್ತೆ ಹೇಳುವ ಮಾತ್ ಕೇಣಿ. ಲೋಕ ಅನುಭವ ಇದ್ದವಳು. ಅವಳ ಕಾಲು ಕೆಳ್ಗೆ ನುಸುಳಿ ಬಂದ್ರೆ ನಿಮ್‌ಗೆಲ್ಲ ಬುದ್ಧಿಬಕ್” ಎಂದು ಹೇಳದೆ ಬಿಡ.

ಹೇಳುತ್ತಿದ್ದಂತೆ ಸರಸ ಚಿಕ್ಕಿಯ ದನಿ ಕಾದಿತು. ಕಂಬಕ್ಕೊರಗಿ ಕುಳಿತೇ ಬಿಟ್ಟಳು. “ಸರಸ ಚಿಕ್ಕೀ, ಯಂತದ?” “ಯಂತ ಇಲ್ಲೆ…ಸುಮ್ನೆ ಏನೋ ನೆನಪಾದ ಹಂಗೆ ಆಯ್ತ್…” -ಸರಸ ಚಿಕ್ಕಿಯ ಕಣ್ಣು ಮನೆಯ ಮಾಡು ಮೀರಿ ಕಾಣುವ ದೂರದ ಗೋಳಿಮರದ ತಲೆ ಕಾಣುತ್ತಿತು. ಮೆಲ್ಲ ನುಡಿದಳು.

-ಅಲ್ಲ, ಹೆಂಡತಿಯನ್ನು ಚಂದವಾಗಿ ಕಮಡವ ಚಂದಗೋಪ ಅಂದಳು ಮೀನಾಕ್ಷತ್ತೆ. ಚಂದವಾಗಿ ಕಾಣುವುದೆಂದರೆ? ಒಂದು ದೊಡ್ಡ ಪ್ರಶ್ನೆಯಲ್ಲವೇ?

-ಈ ಸರಸ ಚಿಕ್ಕಿ ಕನ್ನಡ ಪಂಡಿತರ ಮಗಳು. ಒಮ್ಮೊಮ್ಮೆ ಸ್ಪಷ್ಟ ಕನ್ನಡದಲ್ಲಿ ದೊಡ್ಡ ಪ್ರಶ್ನೆಯನ್ನೇ ಹರಡಿ ವೇದಾಂತಿಯಂತೆ ಕುಳಿತುಬಿಡವವಳು.

“ಈ ಪ್ರಶ್ನೆ ಯಾಕೆ ಬಂತು ಈಗ?”

“ಯಂತಕ್ಕಿಲ್ಲೆ….ನಂಗೇನು ಕಡಿಮೆ ಆಯಿತ್ ಅಂತೆಳಿ ತಿಳ್ಕಂಬೇಡ. ಮಾತಿನಂಶ ಅಂದೆ…ನನ್ ವಿಷ್ಯಕ್ಕಲ್ಲ…” – ಥಟ್ಟನೆ ಸರಸ ಚಿಕ್ಕಿ ನುಡಿದು ಗುಟ್ಟು ನುಂಗಿದವಳಂತೆ ಉಗುಳು ನುಂಗಿದಳು. ಕಡಿಮೆ ಇಲ್ಲ ಎನ್ನಲು ಜಗತ್ತಿನಲ್ಲಿ ಎಲ್ಲರ ಮನಸ್ಸು ಎಷ್ಟು ತವಕಿಸುತ್ತಿರುತ್ತದೆ!….ದೊಡ್ಡಮ್ಮ ಹೇಳಿದ್ದರು ಒಮ್ಮೆ. ಈ ಸರಸ ಚಿಕ್ಕಿ ಮದುವೆ ನಿಶ್ಚಯ ಆಗಿದ್ದೇ ಆಗಿದ್ದು ಪೂರ್ತಿ ಇಳಿದುಹೋದಳಂತೆ. ಮತ್ತೆ ಅವಳಿಗೆ ಮುಂಚಿನ ಮೈ ಬರಲೇ ಇಲ್ಲವಂತೆ…

ಸರಸಿ ಚಿಕ್ಕಿ ಅತ್ತ ತಿರುಗಿ ಕಣ್ಣಿಗೆ ಕಸ ಬಿದ್ದಂತೆ ಒರೆಸಿಕೊಂಡು ಇತ್ತ ತಿರುಗಿದಳು.

“ಮೀನಾಶ್ಚತ್ತೆ ಮಟ್ಟಿಗೆ ಚಂದವಾಗಿ ಕಾಂಬುದೆಂದರೆ ಯಂತಂತ ಮಾಡಿಯೆ? ಉಂಡಿಯ? ತಿಂದಿಯ? ಅಂತೆಳಿ ಗಂಡ ಕೇಂತಿದ್ರೆ ಸೈ. ಅವ ಚಂದಗೋಪ. ರಾತ್ರಿ ಗುಲಾಬಿ ಬಂದ್ ಹೆಬ್ಬಾಗಿಲು ಕೋಣೆಯಾಗೆ ಪ್ರತಿಷ್ಠಾಪನೆ ಆಪ್ಸಮಿಗೆ ಮೀನಾಶ್ಚತ್ತೆ ಕೆಲ್ಸ ಮುಗ್ಸಿ ಒಲೆಗೆ ಸೆಗಣಿ ಬಳಿಯೂ ಹೊತ್ತು. ಅಪ್ಪಣ್ಣಯ್ಯ ಒಳಗೆ ಬಂದ್ ‘ಇದ್ಕೆಲ್ಲ ಜನ ಇಟ್ಕಂಬುಕಾಗ್ದಾ? ಇನ್ನೂ ಇನ್ನೂ ನೀನೇ ಯಾಕೆ ಮಾಡುದು?’ ಅಂಬರು. ‘ಈಗ ಬೆನ್ ನೋವ್ ಹ್ಯಾಂಗಿತ್? ಅಡ್ಡಿಲ್ಯ? ಬೇಕಾರೆ ನಾಳೆ ಡಾಕ್ಟ್ರನ್ ಕರ್‍ಸುವ’ ಅಂಬರು. ಆಗ ಮೀನಾಶ್ಚತ್ತೆಯ ಮುಖ ಕಾಣ್ಕ್. ಅಗಲ ಆರತಿ ತಟ್ಟೆಯೇ…ಅದು ಯಂಥಾ ಖುಶಿಯೋ. ಮುಚ್ಚಿಟ್ಟಿದ್ ಒಂದ್ ಗಿಂಡಿ ಹಾಲು ಕೊಟ್ ‘ಕುಡ್ಕಂಡೇ ಹೋಪಿರಲೆ. ಅವ್ಳು ಬಂದ್ ಎಷ್ಟ್ ಹೋತ್ತಾಯ್ತ್!’ ಅಂಬಳು. ‘ಅವ್ಳಿಗೂ ಕಳ್ಸಿ ಕೊಟ್ಟೆ….’ ಅಂತೆಳಿ ನಾಚಿ ನಿಂತ್ಕಬ್ಳ್. ಅಪ್ಪಣ್ಣಯ್ಯ ಬೊರ್‍ರ ಹಾಲು ಕುಡ್ದ್ ಅಲ್ಲಿಂದ ಹೊರಡ್ತಿದ್ರ್‍. (ಅಲ್ಲಿದ್ ಇರುವೆ ಕತೆ ಅಲ್ಯಾದ) ಒಟ್ಟಾರೆ ಮೀನಾಶ್ಚತ್ತೆ ಮಟ್ಟಿಗ್ ಅವ್ನೇ ಚಂದಗೋಪ…ಸುಳ್ಳ?”

ಸರಸ ಚಿಕ್ಕೀ ಎಲ್ಲಿಂದ ಎಲ್ಲಿಗೆ ಹೋಗುತ್ತೀ!

ಪ್ರಕಾಶ ಮಾಣಿ ದೂರದಿಂದ ಕೋಲು ಬೀಸುವುದು ಕಾಣಿಸುತ್ತಿತ್ತು ‘ಅಲ್ಲ ಮಾರಾಯ್ತ್ಯ, ಆ ಸೊಸಿ ಇನ್ನೂ ಕಾಪಿ ಮಾಡಿಯೇ ಮುಗಿಸ್‌ಲಿಲ್ಯ? ಯಂಥಾ ಸುಟ್ ಕೆಲಸ ಹೇಳ್ ಹಂಗರೆ…’ ನಕ್ಕಳು ಸರಸ ಚಿಕ್ಕಿ. ಕಣ್ಣೊರಸಿಕೊಂಡು.

“ಯಂತದೋ. ಅವ್ಳ್ ಸುಮ್ನೆ ನಿಧಾನ ಅಂತೆಳಿ ಕಾಣತ್ತಾ ನಿಂಗೆ?” ನಾನಂದೆ.

“ಅದೂ ಸಮನೇ ಅನ್. ಅವ್ಳ್ ಹೊಟ್ಯೊಳ್ಗೆ ಯಾವ ಕೆಂಡ ಇತ್ತೋ. ಕೈ ಹಾಕಿ ಕಾಂಬುಕಾತ್ತಾ ನಮ್ಗೆ?… ನಾ ಯಂತ ಅಂತಿದ್ದೆ? ಈ ಕಂಬಕ್ಕೆ ಕಾಶಿನ್ನ ಕಟ್ಟಿ ಹಾಕಿ ಹೊಡ್‌ದ್ರ್‍ ಅಂತೆಳಿ ಅಲ್ದ? ಹ್ಞಾಂ…ಕೇಣ್. ಕಾಶಿ ಗಂಡ ಪೋಂಕು ಮಾರಾಯ್ತಿ. ಪೋಂಕಂದ್ರೆ ಬರೀ ಪಾಪದ್. ಇಲ್ಲಿ ಕೂಕೋ ಅಂದ್ರೆ ಅಲ್ಲೇ. ಮತ್ತೆ ಏಳ್ ಅಂಬಲ್ಲಿವರೆಗೂ. ಹಾಂಗಂಥ ಹ್ಯೆಂಡ್ತೆ ಮಾತ್ರ ಹತ್ರವೇ ಇರ್ಕ್! ಎಲ್ಲಿ ಹೋಪ್ದಾದ್ರೂ ಕಾಶಿ ಹಿಂದೇ ಬಪ್ಪ. ಅವ್ಳ್ ಹೇಳಿದ್ ಕೆಲ್ಸ ಮಾಡ್ವ. ಜಯದ್ರಥನಂಥವ. ನಾಲ್ಕು ಸೌದೆ ಜಪ್ಕಂಡ್ ಬಾ ಅಂದ್ರೂ ಭಾರೀ ಖುಶಿ. ಒಟ್ಟಾರೆ ಜಪ್ಪುದಂದ್ರೆ ಖುಶಿ ಕಾಣ್…ಒಂದಿನ ಏನಾಯ್ತಂತೆ?…”ಸರಸ ಚಿಕ್ಕಿ ಸರ್ತ ಕುಳಿತುಕೊಂಡು ಮುಂದುವರಿಸಿದಳು.

ಸೂರಪ್ಪ ಗೊತ್ತಲ್ಲ ನಿಂಗೆ? ನಾಚಿಕೆ ಮುದ್ದೆ. ಅಂಥಾ ಗಂಡಸನ್ನ ಯಾರೂ ಕಂಡಿರಲಿಕ್ಕಿಲ್ಲ. ಹೆಣ್ಣು ಮಕ್ಕಳು ಎದುರು ಬಂದರೆಂದರೆ ತಲೆ ಅಡಿ ಹಾಕಿಕೊಂಡು ಹೋಪಂಥವ. ಅವನಿಗೊಂದು ಹೆಂಡತಿ ಸಿಕ್ಕಿದ್ದೋ! ಹೆಸರು ಗಿರಿಜಾಮಣಿ. ತಲೆ ತಗ್ಗಿಸಿ ನಡೆಯುವವರನ್ನ ಹೆಚ್ಚಿಗೆ ನಂಬಲಿಕ್ಕಾಗುವುದಿಲ್ಲ-ಎಂಬ ಒಂದೇ ಮಂತ್ರ ಅವಳದ್ದು. ಗಂಡನ್ನ ಕಾಯುವುದೆಂದರೆ! ಅಂವ ಪಾಪ ಎಳೆದು ಸೂಳೆಮನೆಗೆ ತಂದು ಬಿಟ್ಟರೂ ಹೆದರಿ ಓಡಿ ಬಪ್ಪಂಥ ಪುಕ್ಕ…

(ಪುಕ್ಕ ಅಂದೇಕೆ ಹೇಳಿದಳು ಈ ಸರಸ ಚಿಕ್ಕಿ? ಹಾಗಾದರೆ ಓಡಿ ಬಾರದವ ಅಲ್ಲೇ ನಿಲ್ಲುವವ ಧೈರ್ಯಸ್ಥ ಅಂತವೇ? ಚಂದಗೋಪ ಯಾರು? ಪುಕ್ಕ ಯಾರು? ಈ ಸರಸ ಚಿಕ್ಕಿ ಅನೇಕ ಸಲ ಅರ್ಥವೇ ಆಗುವುದಿಲ್ಲ….)

ಈ ಸೂರಪ್ಪನ ಮಗಳ ಮದುವೆ. ಆರತಿ ತಟ್ಟೆ ಒಯ್ದ. ವಾಪಸು ತಂದು ಕೊಡುವಾಗ ಅದರಲ್ಲಿನ ಸುಳಿಯುಂಡೆ ಕಣ್ಣು ಮಾಯಕ! ಅದಾದರೂ ಅವ ತಂದು ಕೊಟ್ಟ ಕೂಡಲೆ ತಿಳಿಯಿತೇ? ಇಲ್ಲ. ಯಾವಾಗಲೂ ಅಷ್ಟೆ. ಮೀನಾಕ್ಷತ್ತೆ ತಕ್ಷಣ ನೋಡುವವರಲ್ಲವಲ್ಲ. ಎಷ್ಟೋ ದಿನದ ಮೇಲೆ ಹಳೆಯ ಮರದ ಕಪಾಟಿನಿಂದ ಗಂಟು ಹೊರತೆಗೆದು ಒರೆಸಿ ಒಳಗಿಡುವ ಅಂತ ಬಿಚ್ಚಿದಳು. ಅದರಲ್ಲಿ ಸುಳಿಯುಂಡೆಗಳೇ ಇರಲಿಲ್ಲ. ಹ್ಞಾಂ ಎಂದು ಎದೆ ನಿಂತುಹೋದ ಹಾಗೆ ಕ್ಷಣಕಾಲ ಕುಳಿತೇ ಬಿಟ್ಟಳು. ಸೂರಪ್ಪನಿಗಿಂತ ಹಿಂದೆ ಶಿವರಾಮನ ಮನೆಗಲ್ಲವೇ ಕೊಟ್ಟದ್ದು? ಅವನ ಮನೆಯಿಂದ ಬಂದ ಮೇಲೆ ವರೆಸಿ ಇಡುವಾಗ ಎಲ್ಲ ಸರಿಯಾಗಿಯೇ ಇತ್ತಲ್ಲವೇ? ಕಾಶಿ ಇದ್ದಳು. ಹೌದು ವರೆಸಿ ಇಟ್ಟದ್ದು ಅವಳೇ…ಹಾಗಾದರೆ ಈಗ ಯಾರು ಕದ್ದರು?

ಸುದ್ದಿ ಕೇಳಿ ಅಪ್ಪಣ್ಣಯ್ಯ ಹೊಟ್ಟೆ ಕುಲುಕಿ ಜರ್ಬಿನಿಂದ ಗಟ್ಟಿಯಾಗಿ ಒಂದು ಹೂಂಗುಟ್ಟಿದರು. ಒಂದು ದಿನ ಹೀಗಾಗುತ್ತದೆಂತ ತನಗೆ ತಿಳಿದಿದೆ ಅಂಬ ಹಾಗೆ. ಒಕ್ಕಲನ್ನು ಕರೆದು “ಕೂಡಲೇ ಸೂರಪ್ಪ ಬರಲಿ” ಎಂದರು.

ಸೂರಪ್ಪ ಬಂದ. ಸುದ್ದಿ ತಿಳಿದು ಕಂಗಾಲಾಗಿ ಒಂದು ಕ್ಷಣ ಬಾಯಿಕಳೆದು ನಿಂತೇಬಿಟ್ಟ. ಒಳಗಿನಿಂದ ತನ್ನ ಕೈಗೆ ಬಂದ ಗಂಟನ್ನ ಹಾಗೆಯೇ ತಂದು ಕೊಟ್ಟೆನಲ್ಲ. ಬಿಚ್ಚಿನೋಡಲಿಲ್ಲ ನಿಜ. ಆದರೆ ಅದು ಮತ್ತೆ ಯಾರ ಕೈ ದಾಟಲೂ ಇಲ್ಲ. ಹೆಂಡತಿ ಕೈಯಿಂದ ಬೀಗದ ಕಪಾಟಿಗೆ, ಬೀಗದ ಕಪಾಟಿನಿಂದ ಮಂಟಪಕ್ಕೆ, ಮಂಟಪದಿಂದ ದೇವರ ಕೋಣೆಗೆ, ಮತ್ತೆ ಸೀದಾ ಹೆಂಡತಿಯ ಕೈಗೆ-ತನಗೆ. ಹಾಗಾದರೆ ಕದ್ದದ್ದು ಯಾರು, ಭೂತವೇ?-ಎಂದು ತಾನೇ ಆಕ್ಷೇಪದ ಪ್ರಶ್ನೆ ಕೇಳಿಕೊಂಡ.

ಸೂರಪ್ಪನನ್ನು ಕೇಳಿದ್ದೆಂದರೆ ಗಿರಿಜಾಮಣಿ ಬಾಯಿಗೆ ಕೋಲು ಹಾಕಿದಂತೆಯೇ ಅಲ್ಲವೇ? ಅವ ಹೋದ ಸ್ವಲ್ಪ ಹೊತ್ತಿಗೆಲ್ಲ ಅವಳು ಓಡೋಡಿ ಬಂದಳು. ಸುದ್ದಿ ತಿಳಿದು ತನಗೆ ಇಂಥದ್ದಾಯಿತೆಂತ ತಿಳಿಯಲಿಲ್ಲ ಎಂದು ಹಲುಬುತ್ತಲೇ ಮೆಟ್ಟಲು ಏರಿದಳು. ತನ್ನ ಮನೆಯಲ್ಲಿಯೇ ಕಳವು ಆಗಬೇಕೆ? ಏಳೂವರೆ ಶನಿ ಬಿಡುವ ಕಾಲವಂತೆ- ತೋರಿಸಿಯೇ ಬಿಟ್ಟಿತು ಕಾಣಿ ಎಂಬೆಲ್ಲ ಮಾತಿನ ಮೇಲೆ ಜವಾಬ್ದಾರಿಯನ್ನು ಜಾರಿ ಬಿಡಲು ಪ್ರಯತ್ನಿಸಿದಳು.

ಮೀನಾಕ್ಷತ್ತೆಗೂ ಅವಳ ಅವಸ್ಥೆ ಕಂಡು ಬೇಸರವೇ. ಆದರೇನು? ಕಳೆದು ಹೋದವು ಬೆಳ್ಳಿಯವು. ಆದಿಕಾಲದವು. “ಇರಲಿ ಬಿಡು” ಎನ್ನುವಂತಿಲ್ಲ.

ಮದುವೆಗೆ ಹೊರಡುವ ಮೊದಲು ಮನೆದೇವರಿಗೆ ಕಾಯಿ ಇಡಲು ನೆನಪು ಹೋಯಿತು. ಅದಕ್ಕೇ ಹೀಗಾಗಿರಬಹುದೇ?-ಎಂಬಿತ್ಯಾದಿ ತನಗೇ ಕೇಳಿಕೊಳ್ಳುತ್ತಾ ಕುಳಿತಲ್ಲೇ ಪುಕು ಪುಕು ಎಂದು ವಿಲಿಗುಟ್ಟುತ್ತಾ ಕುಳಿತಿದ್ದ ಗಿರಿಜಾಮಣಿಗೆ ಕಂಡದ್ದು ಹುಣಿಸೆಕೋಡು ಒಡೆಯುತ್ತ ಒಂದು ಮೂಲೆಯಲ್ಲಿ ಕುಳಿತಿದ್ದ ಕಾಶಿ!

ಕೈಯೂರಿ ಕುಳಿತೇಬಿಟ್ಟಳು ಗಿರಿಜಾಮಣಿ. ತನ್ನ ಮಗ ರವಿಯ ಉಪನಯನದಲ್ಲಿ ಇದೇ ಕಾಶಿ ಮಾಡಿದ್ದು ಮರೆಯುವ ಮಾತೇ…? ಎಂದು ವರ್ಣಿಸಲು ಶಬ್ದ ಹುಡುಕುತ್ತ. ಆಗಿನ್ನೂ ತನ್ನ ಕೊನೆಯ ಮಗಳು ರತ್ನ ಮೂರು ವರ್ಷದ್ದು. ವರ್ಷ ಮೂರಾದರೂ ಮಾತು ಬಂದದ್ದು ತಡ. ಚಂದ ಕಾಣಲಿ ಎಂದು ಚಕ್ರದ ಸರ ಹಾಕಿಬಿಟ್ಟಿದ್ದೆ, ದೃಷ್ಟಿ ತಾಗುವ ಹಾಗೆ ಚಪ್ಪರದಲ್ಲಿ ಓಡಾಡುತ್ತಿತ್ತು ಹೆಣ್ಣು. ಒಂದು ಗಂಟೆಯೂ ಆಗಿರಲಿಕ್ಕಿಲ್ಲ, ಮರಕುತ್ತ ಬಂತು. ಎಂತ ಹೆಣೆ? ಎಂದರೆ ಕುತ್ತಿಗೆ ತೋರಿಸುತ್ತದೆ. ಕೈ ತಿರುಗಿಸಿ ತಾರಮ್ಮಯ್ಯ ಮಾಡುತ್ತದೆ. ತನಗೆ ಧಾತು ತಪ್ಪುವುದೊಂದು ಬಾಕಿ.

ಎದ್ದು ಹುಡುಕುವ ಎಂದರೆ ಮಂಟಪದಲ್ಲಿ ಬ್ರಹ್ಮೋಪದೇಶ ಮುಹೂರ್ತ. ವಟುವನ್ನು ಅಪ್ಪನ ತೊಡೆಯ ಮೇಲೆ ಕೂಡಿಸಿ ಮುಸುಕು ಹಾಕಿಬಿಟ್ಟರು! ಆ ಮುಸುಕಿನೊಳಗೆ ನನಗೆ ಉಸಿರು ಕಟ್ಟಿದ್ದಲ್ಲವೆ? ಅಂತೂ ಎಲ್ಲ ಮುಗಿದು ಬಂದು ನೋಡಿದರೆ ನೋಡುವುದೆಲ್ಲಿ? ಕೇಳುವುದು ಯಾರನ್ನು? ಎಲ್ಲರೂ ಅಪ್ಪಂಥವರೇ.

ಸಾಯಂಕಾಲ ಹೋದವರೆಲ್ಲ ಹೋಗಿ ಉಳಿದವರು ಪಟ್ಟಾಂಗ ಹೊಡಿಯುತ್ತಾ ಕುಳಿತಿದ್ದಾಗ ತಾನು ಕೇಳಿಯೇಬಿಟ್ಟೆ-ಹಾಗಾದರೆ ಆ ಹೆಣ್ಣಿನ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತವರು ಯಾರು? ಯಾರೇ ಆಗಲಿ, ಅವರು ಊರಲಿಲ್ಲದ ಕಾಯಿಲೆ ಹಿಡಿದು ಕರಗಿ ಹೋಯಿಯಾರು. ಹೊಟ್ಟೆಬಾಯಿ ಕಟ್ಟಿ ಮಾಡಿಸಿದ ಸರ ಅದು. ಪುಗಸಟ್ಟೆ ಅಲ್ಲ. ಗಿರಿಜಾಮಣಿ ಸೆರಗಿನಲ್ಲಿ ಮುಖಮುಚ್ಚಿಕೊಂಡಳು.

“ನಾನು ಹೇಳಿದ್ ಇಷ್ಟೇ. ಒಂದಕ್ಷರ ಹೆಚ್ಚಿಗೆ ಹೇಳ್ಲಿಲ್ಲೆ ಮೀನಾಶ್ಚಮ್ಮ. ಇಂಥವರಿಗೇ ಅಂತೆಳಿ ಬೊಟ್ಟುಮಾಡಿ ಹೇಳ್ಲೂ ಇಲ್ಲೆ. ಅದಕ್ಕೆ ಈ ಶೂರ್ಪನಖಿ ಕಾಶಿ, ಕವುಂಚಿ ಮಲಗಿ ತಲೆ ಎತ್ತಿ ಎಲ್ಲ ಸಂಗ್ತಿ ಕೇಂಡವಳು, ಧಡಕ್ಕನೆ ಕೂತ್ಕಂಡ್ ‘ಏನೇ ಹೇಳಿ ನೀವು ಮಗುವಿಗ್ ಅಂಥಾ ದೊಡ್ ನಗ ಹಾಕಿಬಿಟ್ಟಿದ್ದೇ ತಪ್’-ಅಂದ್ಲ್ ಯಾಕೆ? ಯಾಕೆ ಬೇಕಿತ್ತ್ ಇವ್ಳಿಗೆ? ಇದ್ದವರ ಮನಿಕೂಳು ಹೆಕ್ಕಿ ತಿಂಬ ಪ್ರಾಣಿಗೆ?-ಮಾತಿಗೊಂದ್ ಮಾತಯ್ತ್. ಒಂದಾ, ಎರಡಾ? ಅವ್ಳೂ ಬಿಡಲಿಲ್ಲೆ. ನಾನೂ ಹೇಳಿಯೇಬಿಟ್ಟೆ. “ನೀನೇ ಕಳ್ಳೆ. ಮತ್ಯಾರೂ ಅಲ್ಲ-” ಅದಕ್ಕವ್ಳು ಹೇಳಿದ್ ಮಾತ್-ಅಯ್ಯೋ ಮೀನಾಶ್ಚಮ್ಮ-ಈಗ ನೆನಸಿಕಂಡ್ರೂ ಕೆರಿ ಬಾಮಿ ಕಾಣ್ಕ್ ನಾನ್-“ಬಿಕ್ಕಿದಳು.

“ಯೇ ಅಳೇ. ಅದ್ನೆಲ್ಲ ಈಗ ಯಾಕೆ ನೆನ್ಸ್‌ಕಂತೆ? ಹಾಂಗ್ ನೆನ್ಸುಕೆ ಹೋದ್ರೆ ನಾನೀಗ ಆ ಗುಲಾಬಿ, ಸೂರು, ನಾಗು ಎಲ್ಲರನ್ನೂ ನೆನೀತ ಮರ್‍ಕ್‌ತ ಕೂತ್ಕಂಕ್. ಅದೆಲ್ಲ ಒಂದು ಕಾಲ, ಒಂದು ಚಟ, ಕಡೀಗೆ ಗಂಡಸ್ರ್‍ ಅದ್ನೆಲ್ಲ ಬಿಡ್ತೊ-ಅದನ್ ದೊಡ್ದ್ ಮಾಡುಕಾಗ” ಎಂದು ಧೈರ್ಯ ಹೇಳಿದರು ಮೀನಾಕ್ಷತ್ತೆ. ಆದರೂ ಗಿರಿಜಾಮಣಿಯ ಕಣ್ಣುಗಳಿಂದ ಹರಿಯುವ ನೀರು ನಿಲ್ಲುವುದಿಲ್ಲ.

ಹೌದು, ಮರೆತುಬಿಡು ಅನ್ನುತ್ತೀರಿ. ಆದರೆ ಆಗ ಹೋದ ನಗ ಮರಳಿ ಬಂತೇ? ಬರಲಿಲ್ಲ. ಹೇಳಿ ನೀವೇ. ನಮ್ಮದು ಅನ್ನುವ ವಸ್ತು ಕಳೆದುಹೋದ ಮೇಲೆ ಮತ್ತೆ ಸಿಕ್ಕುವುದೆಂದು ಉಂಟೇ?-ಇತ್ಯಾದಿ ಎರಡು ಬದಿಯ ಮಾತಾಡಿ ದುಃಖದ ಕಡಲಾದಳು.

-ಸುಳಿಯುಂಡೆ ಕದ್ದದ್ದು ಮತ್ತೆ ಯಾರಲ್ಲ ಕಾಶಿಯೆ. ನಾ ಅವಳಿಗೆ ಮದುವೆಗೆ ಹೇಳಿರಲಿಲ್ಲ, ಆದರೂ ಬಂದಳು ಹೇಗೆ? ನನ್ನ ಗಂಡ ಹೇಳಿರಬಹುದೇ?-ಹಾಗೆ ಹೇಳದೆ ಅವಳು ಬರುವಳೇ? ಛಿ! ಮದುವೆಗೆ ಬಂದಳು-ಸುಳಿಯುಂಡೆ ಕದ್ದಳು-ನಾನು ಒಬ್ಬಳು ಸತ್ಯಂಭಟ್ಟೆ. ಎಲ್ಲ ಕವುಂಚಿ ಹೋದ ಮೇಲೆಯೇ ಗೊತ್ತಾಪವಳು-ಹಾಗಾದರೆ ನಾನು ಹೇಳದಿದ್ದರೂ ಖುಶಿ ಬಂದವರು ನಮ್ಮ ಮನೆಗೆ ಬರಬಹುದು ಅಂತಾಯಿತಲ್ಲ….

-ಹೀಗೆ ಆಕೆ ನುಡಿಯುತ್ತಿದ್ದಂತೆಯೇ ಗಂಡನ ಜೊತೆಗೂಡಿ ತಗ್ಗಿಸಿದ ತಲೆ ಎತ್ತದೆ ಹುಣಿಸೆಕೋಡು ಗುದ್ದಿ ಹಣ್ಣು ತೆಗೆಯುತ್ತಿದ್ದ ಕಾಶಿ ಸಟಕ್ಕನೇ ಎದ್ದು ಬಂದಳು. ಹೊಡೆಯಲು ಬಂದಂತೆ. ಸುಡು ಜ್ವಾಲೆಯಂತೆ.

“ಹೌದ್, ನೀ ಹೇಳಿದ್ ಸಮನೇ ಗಿರಿಜಾಮಣಿ. ನಿನ್ ಗಂಡ ನನ್ನ ಮಿಂಡ ಕಾಣ್. ನಂಗೆ ಆ ಸುಳಿಯುಂಡೆ ಮುಚ್ಚಿ ಕೊಟ್ಟ. ನಾ ತಕಂಡ್ ಬಂದೆ. ಇನ್ ನನ್ನ ಎರಡು ಪೀಳಿಗೆವರೆಗೆ ಚಿಂತೆ ಇಲ್ಲೆ…” – ಎಂದವಳೇ ಚಾಡಿಯಂತೆ ಕೈ ಬೀಸುತ್ತ ಮತ್ತೆ ನಡೆದು ಇತ್ತಕಾಣದೆ ಕೆಲಸ ಸಾಗಿಸುತ್ತಿದ್ದ ಗಂಡನ ಪಕ್ಕ ಹೋಗಿ ಕುಳಿತು ಒಂದು ಕೋಡನ್ನು ಅಪ್ಪಚ್ಚಿಯಾಗುವಂತೆ ಗುದ್ದಿದಳು.

ಸಾಕೇ ? ಚಾಡಿಯೇಟು ಬೇರೆ ಬೇಕೆ?

ಈ ಉತ್ತರವನ್ನೇ ಕಾಯುವಂತಿದ್ದ ಗಿರಿಜಾಮಣಿ ಬೋರಲು ಬಿದ್ದಳು.

ಯಾವ ಜನ್ಮದಲ್ಲಿ ಯಾರನ್ನ ಒಳಗೆ ಹಾಕಿಕೊಂಡಿದ್ದೀಯೋ, ಅದಕ್ಕೇ ಈ ಜನ್ಮದಲ್ಲಿ ನಿಂಗೆ ಪೋಂಕು ಗಂಡ. ಇನ್ನು ಏಳೇಳು ಜನ್ಮಕ್ಕೂ ನಿಂಗೆ ಅವನೇ ಸಿಗಲಿ-ಎನ್ನುತ್ತ ಬಿಕ್ಕತೊಡಗಿದ ಗಿರಿಜಾಮಣಿ ಮಾತಾಡುತ್ತ ಆಡುತ್ತ ಗಂಡ ಪೋಂಕು ಅಂತ ಕಾಶಿ ಸೂರಪ್ಪನ ಹತ್ತಿರ ಬಂದಳೋ, ಇಲ್ಲ ಸೂರಪ್ಪನ ಹತ್ತಿರ ಅವಳು ಬಂದಳೆಂತ ಅವ ಸೋಕಾದನೋ ಎಂದು ಸಸೆಯತೊಡಗಿದಳು. ಆರತಿ ತಟ್ಟೆಗೆ ಕಿಚ್ಚೊಟ್ಟಿತು. ಸುಳಿಯುಂಡೆ ಸಿಕ್ಕದಿದರೆ ಅಷ್ಟೇ ಹೋಯಿತು. ನನ್ನ ಗಂಡನ್ನ ರಿಪೇರಿ ಮಾಡಿಕೊಳ್ಳಲು ಸಾಧ್ಯವಾಗದೇ ಹೋದೆನಲ್ಲ-ಎಂದು ಬಾಯಿ ಬಾಯಿ ಬಡಿದುಕೊಂಡಳು.

ಸುಳಿಯುಂಡೆ ಸಿಕ್ಕದಿದ್ದರೆ ಅಷ್ಟೇ ಹೋಯಿತು ಎಂದರೆ ಎಷ್ಟು ಹೋಯಿತು? ಮೇನಾಕ್ಷತ್ತೆ ಬಿಡವವಳೇ!

ಹಿರಿಯರಿಂದ ಬಂದದ್ದು ನಮ್ಮ ಕಾಲದಲ್ಲಿ ಕಳೆದುಹೋದ ಹಾಗಾಯತ್ತಲ್ಲ ಎಂಬ ವಾಂಛೆಯಿಂದ ಕೂಡಿದ ವೇದನೆಯನ್ನು ತಿರುಗಿಸಿ ತಿರುಗಿಸಿ ನೋವಾಗದಂತೆಯೂ ವಿಷಯ ತಿಳಿಯುವಂತೆಯೂ ಹೇಳುವಾಗ ಗಿರಿಜಾಮಣಿಯ ಹಲುಬುವಿಕೆ ಹೆಚ್ಚುತ್ತಾ ಹೋಗಿ ಕಡಿಮೆಯಾಗಿ ಇಳಿದು ಮುಗಿದು ಹಾಗಾದರೆ ಮುಂದಿನ ತಿಂಗಳೊಳಗೆ ಮಾಲಿಂಗಾಚಾರಿಯ ಹತ್ತಿರ ಹೇಳಿ ಮಾಡಿಸಿಕೊಡುತ್ತೇವೆ: ಮಾಡಿಸಿಕೊಟ್ಟೇ ಶುದ್ಧ – ಎಂದು ಕಡ್ಡಿ ಮುರಿದಂತೆ ಹೇಳಿ ಮೇಲಕ್ಕೆದ್ದಳು.

“ಗಿರಿಜಾಮಣೀ, ಇನ್ ಮನಿಗ್ ಹೋಯಿ ಗಂಡ್‌ನೆದ್ರು ರಾಮಾಯ್ಣ ತೆಗೀ ಬೇಡ. ನಮ್ ಆರತಿ ತಟ್ಟೆ ಕಂಡ್ ಕರುಬಿದವ್ರಿಗೇನ್ ಈ ಊರಗೆ ಕಮ್ಮಿಯಿಲ್ಲೆ. ಹಾಂಗೆ ಕರುಬಿದವ್ರೆ ಸುಳಿಯುಂಡೆ ಕದ್ದ್, ತಟ್ಟೆ ಮುಕ್ ಮಾಡಿಪ್ರ್‍. ಹ್ಯಾಂಗ್ ಹೇಳುದ್ ಅಲ್ಲ ಅಂತೆಳಿ?” – ಎಂದು ಮೀನಾಕ್ಷತ್ತೆ ಕೊನೆಯ ಮಾತು ಹೇಳಿದಾಗ ಇದು ವಿಶಾಲುವಿಗೇ ಇಟ್ಟ ಬತ್ತಿ ಎಂದು ಗಿರಿಜಾಮಣಿಗೆ ತಿಳಿದುಹೋಯಿತು.

ಅಲ್ಲಿಂದ ಹೊರಟವಳು ಅವಳು ಹೋದದ್ದು ತನ್ನ ಮನೆಗಲ್ಲ. ವಿಶಾಲು ಮನೆಗೆ. ಬಂದದ್ದು ಮಾಲಿಂಗಾಚಾರಿಯ ಹತ್ತಿರ ಹೊಸದಾಗಿ ಹೇಳಿ ಮಾಡಿಸಿದ ಸುಳಿಯುಂಡೆಗಳಲ್ಲ. ಬದಲು-ಅಷ್ಟೈಶ್ವರ್ಯದ ಐರಾವತದ ಮೇಲೆ ಕೂತರೂ ಆಸೆ ಪಿನಾರಿತನ ಬಿಡಲಿಲ್ಲ. ನಾನು ಅವರಷ್ಟಿದಿದ್ದರೆ ಕಳೆದುಹೋದದ್ದನನ್ನು ನನ್ನ ಹುರುಕಿಗೆ ಸಮ ಮಾಡುತ್ತಿದ್ದೆ… ಮನೆಯೊಳಗೆ ಕಾಶಿಯಂಥವರನ್ನು ಇಟ್ಟುಕೊಂಡು….-ಇತ್ಯಾದಿ ಮಾತುಗಳು.

ಅಷ್ಟಕ್ಕೆ ಮುಗಿಯಿತೇ? “ನಮಗೆ ಬೇಕಾ ಇವಳ ಮನೆ ಸುಳಿಯುಂಡೆ? ಅದು ಯಾವ ಭೂತ ನುಂಗ್ತೋ ಅದರಿಂದ ಕಾರಿಸ್ತೆ”-ಎಂದು ಕೂಗುತ್ತಾ ಬಂತ್ತಯ್ಯ ವಿಶಾಲು ಸವಾರಿ. ಹಿಂದೆಯೇ ಗಿರಿಜಾಮಣಿ, ಅಕ್ಷರಶಃ ಸೂರಪ್ಪನ ಕೈಹಿಡಿದು ಎಳೆದುಕೊಂಡೇ. ಮತ್ತೂ ಹಿಂದ ಬೇಕಾದವರು ಬೇಡದವರು. ಅಂತೂ ಒಂದು ದಿಬ್ಬಣವೇ ಹೆಬ್ಬಾಗಿಲು ಹೊಕ್ಕಿತು.

ನಾಲ್ಕು ದಿನದಿಂದ ಒಂದೇಸಮ ಗುದ್ದಿದರೂ ಕರಗದ ಹುಣಿಸೆ ಕೋಡುಗಳ ರಾಶಿಯೆದುರು ಕುಳಿತು ಕೆಲಸದಲ್ಲಿ ಮಗ್ನನಾಗಿದ್ದ ಕಾಶಿಯ ಗಂಡನ ಬಳಿಯೇ ಬಂದಳು ವಿಶಾಲು-ಜಮಧೈರ್ಯದವಳು. ಅವನ ಬೆನ್ನ ಮೇಲೆ ಒಂದು ಗಟ್ಟಿ ತಟ್ಟಿದಳು. ಕಾಶಿ ಕಣ್ಣು ಬಿಟ್ಟು ನೋಡುತ್ತಿರುವಂತೆಯೇ “ಹ್ಹೆ! ನೀನೊಂದು ಗಂಡ್ಸನ? ಕಳ್ಳೆ ಹೆಂಡ್ತಿಗೆ ನಾಲ್ಕು ಸಮಾ ಹಾಕುದು ಬಿಟ್ಟು. ಇದ್ದವರ ಮನೆ ಗಂಡಸ್ರಗೆ ಸೆರಗು ಹಾಸುದು. ಚಿನ್ನ ಬೆಳ್ಳಿ ಹಾರ್‍ಸುದು-ನಿಂಗ್ಯೆಂತ ಗೊತ್ತಾತ್ತಿಲ್ಲೆ ಕಾಣ್. ಅದ್ಕೇ ಲಾಯ್ಕಾಯ್ತ್ ಅವ್ಳಿಗೆ”-ಎಂದಳು.

ಪೋಂಕು ತೋಳಿನಿಂದ ಮುಖ ವರೆಸಿಕೊಂಡಿತು. ಕಿವಿಯೆಲ್ಲ ಟಪಟಪೆಂದು ಕುಣಿಯುವಂತೆ ತಲೆ ಕೊಡವಿಕೊಂಡಿತು. ಎದ್ದು ನಿಂತಿತು. ಹೇಳಿದೆನಲ್ಲ. ಮೊದಲೇ ನೋಡಲು ಜಯದ್ರಥನಂತೆ. ಸಿಟ್ಟು ಬಂದರಂತೂ ದುಶ್ಯಾಸನನೇ. ಕಾಶಿ ಬೊಬ್ಬೆ ಹೊಡೆಯುತ್ತಿದ್ದಂತೆಯೇ ಅವಳ ಜುಟ್ಟಿಗೆ ಕೈ ಹಾಕಿ ದರದರ ಎಳೆದುಕೊಂಡು ಬಂತು. ಇದೇ ಕಂಬಕ್ಕೆ ಕಟ್ಟಿ ಹಾಕಿತು-ಆಕೆ ದೊಡ್ಡ ಕಳ್ಳೆ ಎಂಬಂತೆಯೇ ಸಮಾ ಬೀಸಿತು. “ಹೇಳು-ಬಾಯಿ ಬಿಡು” – ಎಂಬುದು ಬಿಟ್ಟರೆ ಬೇರೆ ಇಲ್ಲ. ‘ನಾನಲ್ಲ’-ಅಂದರೆ ಮತ್ತೆ ನಾಲ್ಕು ಬಿಗಿತ. ಬೆಪ್ಪುಗಟ್ಟಿದ ಸೂರಪ್ಪನನ್ನು ದೂಡಿ ದೂಡಿ ನಗುತ್ತಿದ್ದ ಗಿರಿಜಾಮಣಿಯನ್ನು ಕಂಡು ಮತ್ತಷ್ಟು ಒದೆಯಿತು. ಎಲೆ ಜಗಿಯುತ್ತ ಬಂದ ಸೂರಪ್ಪ ಅದನ್ನು ಉಗಿಯಹೋದರೂ ಗಿರಿಜಾಮಣಿ ಜೊತೆಯಲ್ಲಿಯೇ ಹೋದಳು; ಅವನ ಹಿಂದೆಯೇ ವಾಪಸು ಬಂದಳು-ಅಯ್ಯಬ್ಬ ಎಷ್ಟು ಹೊಡೆಯಿತು ಅಂತಿಲ್ಲ. ಈಗ ನೆನೆಸಿದರೂ ಮೈ ಭಿಂಗರಿಸುತ್ತದೆ. ಕಡೆಗೆ ವಿಶಾಲುವೇ “ಸಾಕ್ ಮಾರಾಯ. ಕಡೆಗೆ ಸತ್‌ಗಿತ್ ಹೋದ್ರೆ ನಾವೆಲ್ಲ ಜೈಲಿಗ್ ಹೋಯ್ಕಾಯಿ ಬಕ್.” ಎಂದು ಹೊಸಿಲ ಮೇಲೆ ಹೆಬ್ಬರಸಿಯಂತೆ ಕುಳಿತು ಹೇಳಿದ ಗತ್ತು ಕಾಣಬೇಕಿತ್ತು.

“-ಅದ್ಯೇನ್ ಸರಸಚಿಕ್ಕೀ – ಮೀನಾಕ್ಷತ್ತೆ ಮನೆಯಗೆ ಇವರದ್ದೆಲ್ಲ ಯಂತ ಕಾರುಭಾರು? ವಿಶಾಲು ಹೊಸಿಲ ಮೇಲೆ ಹಾಂಗ್ ಕೂಕಂಡ್ ಅಧಿಕಾರ ನಡೆಸುವಷ್ಟ್ ಸಲಿಗೆ ಕೊಟ್ಟವ್ರ್‍ ಯಾರ್‍?-ಆದರೂ ಕಾಂತ್. ಕಾಶಿಗೆ ಅಷ್ಟ್ ಹೊಡ್ದ್ರೂ ಮೀನಾಕ್ಷತ್ತೆ ಏನೂ ಮಾತಾಡ್ಲಿಲ್ಲೆ-?”

“ಇಲ್ಲಪ್ಪಾ-ಪಾಪ. ಹೆದ್ರಿ ಒಳ್ಗೇ ಇದ್ಲ್-ಇದೇ ದೇವರ ಕೋಣೆಯೊಳ್ಗೆ ನಿಂತ್ಕಂಡ್ ಕಿಟಕಿಯೊಳಗಿಂದ ಕಾಽಂತ ನಿಂತಿದ್ಲ್ – ಕಾಶಿ ಗಂಡ ಹೊಡೆಯೂ ರೀತಿ ಕಂಡ್ ನಡು ನಡು ಮಿಣ್ಣಗೆ ನಗೆ-ಏನೇ ಹೇಳ್. ಯಾರನ್ನಾದ್ರೂ ಹೊಡಿಯುವುದು ಕಾಂಬೂಕೆ ಒಂಥರಾ ಲಾಯ್ಕ್ ಅಲ್ದ?”

ಅಪ್ಪಣ್ಣಯ್ಯ ಮಾತ್ರ ಅಷ್ಟು ರಾಷ್ಟ್ರದೊಳ್ಗೇ ಇರ್‍ಲಿಲ್ಲೇ ಕಾಣ್. ಕಡೆಗೂ ತನ್ನ ಅಂಗ್ಳದೊಳ್ಗೆ ಇಷೆಲ್ಲ ಗಲಾಟೆ ಯಾಕೆ ಮಡಿದ್ ಅಂತೇಳಿ ಸಾ! ಇರ್‍ಲಿ. ತಂಗಿ ಹೀಂಗೆಲ್ಲ ಮಾಡಿಳ್ ಅಂತೆಳಿ ತಿಮ್ಮಪ್ಪಣ್ಣಯ್ಯ ನಾಚ್ಕಂಡ ಅಂಬ್ರ್‍-ತಿಮ್ಮಪ್ಪಣ್ಣಯ್ಯನ ಹೆಂಡತಿಯಾ? ಮೊದಲೇ ಬಾಯಿ ಹೋದ ಕೊಡಲಿ. ’ಅಲ್ಲ ವಿಶಾಲತ್ತಿಗೆಗೆ ಅಂಥಾ ಸಿಟ್ ಯಾಕ್ ಬಂತ್? ಅಪ್ಪಣ್ಣಯ್ಯ ಆರತಿ ತಟ್ಟೆ ತನಗೆ ಕೊಡೂದು ಬಿಟ್ಟು ಕಾಶಿಗೆ ಕೊಡ್ತ ಅಂತೇಳಿ ಹೆದರಿಕೆಯ್ತ, ಹೊಟ್ಟೆಕಿಚ್ಚಾಯ್ತ? ಅಡ್ಡಿಲ್ಲೆ, ಮೀನಾಕ್ಷತ್ತೆ ಒಳ್ಳೇ ಜನನ್ನ ಎತ್ತಿಕಟ್ಟಿರು. ಇಲ್ದಿದ್ರೆ ಗಿರಿಜಾಮಣಿಗೋಸ್ಕರ ವಿಶಾಲತ್ತೆಗೆ ಏಳುವವಳಾ? ಅಂದ್‌ಬಿಟ್ಲ್-ತಕೋ-ಮತ್ ಅವ್ರವ್ರೊಳ್ಗೆ ಹಿಡ್ಕಂತ್-ನೀನೇ ಹೇಳ್. ಈ ಮೀನಾಕ್ಷತ್ತೆ ಪಾಪ ಅದ್ದಕ್ಕಲ್ದ ಇಷೆಲ್ಲ ಆದ್?-”

“ಆದರೂ ಸರಸ ಚಿಕ್ಕಿ ನಂಗೆ ನೀ ಹೇಳುವಷ್ಟು ಸುಲಭ ಕಾಂತಿಲ್ಲೆ. ಕದಿಯುವುದೇ ಹೌದಾದ್ರೆ ಬರೀ ಎರಡು ಸುಳಿಯುಂಡೆ ಕದೀತ್ರಾ? ಇಡೀ ತಟ್ಟೆಯೇ ಇಪ್ಸಮಿಗೆ? ಅಷ್ಟ್ ಸುಳಿಯುಂಡೆಯಾಗೆ ಯಂತ ಸಿಕ್ಕು? ಇಲ್ಲೆಂತದೋ ಹಿಕ್ಮತ್ ಇತ್ತ್” –

ಎಷ್ಟು ಕೇಳಿದರೂ ಸರಸ ಚಿಕ್ಕಿಯದು ಒಂದೇ ಉತ್ತರ “ಹೆಂಗಸರ ಪಂಚಾತಿಕೆ ಎಷ್ಟು ಬುಡ ಹರಡಿದರೂ ಎಂದಿಗೂ ಅರ್ಥ ಆಪಂಥದಲ್ಲಿ – ಅವು ಗಂಡಸ್ರ ಹಂಗಲ್ಲ. ಗಂಡಸರು ಸೀದ” – ತಾನೂ ಒಬ್ಬ ಗಂಡಸೇ ಎಂಬಷ್ಟು ದೃಢವಾಗಿ ಈ ಮಾತು ನುಡಿದಳು ಸರಸ ಚಿಕ್ಕಿ.

“ಕಾಪಿಗೆ ಬಪ್ಪಿರಲೆ” ಕರೆದಳು ತಾರಾಮತಿ. ಆಗ ಮೀನಾಕ್ಷತ್ತೆಯ ಮಗ ನರಸಿಂಹನೂ ಬಂದ. “ಓ ಹೋ ಹೋ ಏನಂಬ್ರ್‍” ಎನ್ನುತ್ತ ನಮ್ಮ ಜೊತೆಗೇ ತಾನೂ ಜಗಲಿ ಏರಿದ. “ನಮಗೂ ಲೋಟ ಕಾಪಿ ಬರಲೀ” ಎಂದ. ಅವನಿಗೂ ಒಂದು ಲೋಟ ಕಾಪಿ ಬಂತು.

ಒಣಗಿ ಸುರುಟಿಹೋಗಿದ್ದ ನರಸಿಂಹ. “ಏನು ಮಣಿ, ಹ್ಯಾಂಗಿದ್ದೆ?” – ಎಂದ ಸರಸ ಚಿಕ್ಕಿಯ ಪ್ರಶ್ನೆಗೆ “ಹೀಂಗಿದ್ನಲೆ!” – ಎಂದ. ನಾ ತಟ್ಟನೆ ತಾರಾಮತಿಯ ಮುಖ ನೋಡಿದೆ. ಅವಳು ಕಂತಿದ ಮುಖದಲ್ಲಿ ಮುಚ್ಚಿಗೆ ನೋಡುತ್ತಿದ್ದಳು.

“ನರಸಿಂಹನಾ? ಗಡ್ಡ ಬಿಟ್ಕಂಡ್ ಹಡೆ ತಿರ್‍ಗತ್. ಇದ್ದವರ ಮನೆ ಜಗಲಿ ಹತ್ತತ್ ಅಳೀತ್ ಇಳೀತ್. ತನ್ನ ಮನೆಯಗೆ ಚಿನ್ನ ಬೆಳ್ಳಿ ಅಷ್ಟಿದ್ದಿತ್ ಇಷ್ಟಿದ್ದಿತ್ ಆರತಿ ತಟ್ಟೆಯೂ ಇದ್ದಿತ್ ಅಂತೇಳಿ ಕೊಚ್ಚಿ ಇಳ್ಸತ್-” ಎಂದಿದ್ದರು ದೊಡ್ಡಮ್ಮ. ಮಾತಾಡುತ್ತ ಸರಸ ಚಿಕ್ಕಿ ಮೆಲು ದನಿಯಲ್ಲಿ “ಮಣಿ, ಆರತಿ ತಟ್ಟಿನ್ನೂ ಮಾರಿಯೆ ಅಂಬ್ರಲೇ. ಎಂಥಾ ಆದಿಕಾಲದ ತಟ್ಟಿ ಅದ್-” ಎಂದರೆ “ನಿಂಗೆ ಭ್ರಾಂತು ಅಲ್ದ ಸರಸ ಚಿಕ್ಕಿ? ಆದಿಕಾಲದ ತಟ್ಟಿ ದೊಡ್ಡಜ್ಜಯ್ಯನ ಕಾಲ್ದಾಗೇ ಹೊಸಲು ದಾಟಿ ಸೂಳಿಮನೆಗೆ ಹೋಯಾಯ್ತ್. ಅದೇ ತರದ್ದೇ ದೊಡ್ಡಜ್ಜಯ್ಯ ಹೊಸ್ತ್ ಮಾಡಿಸಿದ್ ಅಂಬ್ರ್‍ – ಕೇಣ್ – ಮುದ್ಕ ಮಾಲಿಂಗಾಚಾರಿ ಹತ್ರ. ಎಲ್ಲ ಕತಿ ಹೇಳ್ತ. ಆದಿಕಾಲದ್ ಯಾವುದ್ ಉಳೀತ್ ಹೇಳ್. ನಾನೂ ಇಲ್ಲೇ ನೀನೂ ಇಲ್ಲೆ. ಪ್ರಪಂಚವೇ ಹೊಸ್ತ್ ಆತಾ ಇರತ್. ಈ ಅಮ್ಮನಂಥವ್ರಿಗೊಂದು ಭ್ರಮೆ. ಮುಂಚಿಂದೆ ಉಳ್‌ಸ್ತೋ ಅಂತೆಳಿ. ಆರ್ತಿ ತಟ್ಟಿ ಮಾರಿ ವಿಷ್ಯ ಅಮ್ಮಂಗ್ ನಾನಿನ್ನೂ ಹೇಳ್ಲಿಲ್ಲೆ. ಹೇಳಿರೆ ಹಾಟ್ ಫೇಲ್ ಆಪು” – ಎಂದು ಉದ್ದ ವೇದಾಂತ ಬಿಡುತ್ತ “ಸಾಗುವಳಿಯೆಲ್ಲ ಒಕ್ಕಲಿಗಾದ ಮೇಲೆ ಇನ್ಯಂತ ಉಳೀತ ಸರಸ ಚಿಕ್ಕಿ?” – ಎಂದು ಬೀಡಿ ಹಚ್ಚಿ ಹೊಗೆಯ ಅಡ್ಡ ಸರಿದುಕೊಂಡ – ಅಬ್ಬೆಗೆ ಹಾರ್ಟ್‌ಫೇಲ್ ಆಗದಂತೆ ತಡೆದು ನಿಲ್ಲಿಸಿದ ಘನವಂತ ಮಗ!

“ತಕಣಿ, ಕಾಪಿ ತಕಣಿ ಎಲ್ಲ. ಬಪ್ಪುದೇ ಅಪರೂಪ. ಬಂದ್‌ಕೂಡ್ಲೆ ತಿರುಗುಕೆ. ಎದ್ದದ್ದಾ? ಹೆಣೇ ಸರಸಾ, ಇವತ್ತು ಉಂಡ್ಕಂಡೇ ಹೋಯ್ಕ್ ನೀವಿಬ್ರೂ-ಇವಳ ಹೊಸರು ಯಂತ ಅಂದೇ? – ಅಲ್ಲ ಕಾಶಿ ಮೇಲಿನೂರಿಗೆ ಹೋದ್ಲ್ ಅಂದ್ಯ? ಹೋಗ್ದೆ ಮತ್ತೆ? ಇನ್ಯಾರ್‍ ಈ ಊರಗೆ ಅವಳ್ನ ಸಾಂಕ್ತೊ? ಪೋಂಕು ಇತ್ತಾ, ಗಾಡಿ ಕಟ್ತಾ? ಪಾಪ. ಸಮಾ ಹೊಡೀತ್ ಹ್ಯೆಂಡ್ತೆಗೆ-ಹೊಡ್ದದ್ದಂದ್ರೆ! ಹಾಂಗನ! ಆ ನಮೂನಿ! ಒಂದ್ ಜನ ಸೇರಿದ್ದಂದ್ರೆ-ಗದ್ದೆ ಕೆಲ್ಸ ಬಿಟ್ ಎಲ್ಲ ಇಲ್ಲೇ- ಆವಾಗ ನೀನಿದ್ದೆ. ಸುಳ್ಳ? – ನಿಂಗಿನ್ನೂ ಮದಿ ಆಯಿರ್‍ಲಿಲ್ಲೆ.” ಚಪ್ಪರಿಸಿ ಚಪ್ಪರಿಸಿ ನುಡಿಯುತ್ತಿದ್ದಂತೆ ಮೀನಾಕ್ಷತ್ತೆ ಮತ್ತೆ ಚಡಪಡಿಸಿದರು.

“ಆ ಪ್ರಕಾಶ ಮಾಣಿ ಎಲ್ಲಿ ಸತ್ತ್‌ತ? ಜಗಲಿ ಮೇಲೆಲ್ಲ ಕಾಕಿಯಪ್ಪ. ಎಷ್ಟ್ ಓಡಿಸಿರೂ ಬತ್ತೋ. ಕರಾ ಕರಾ ಕರಾ ಅಂತೋ”-

ಪ್ರಕಾಶ ಮಾಣಿ ಅಲ್ಲೆಲ್ಲೂ ಕಾಣಿಸಲಿಲ್ಲವಾಗಿ ನರಸಿಂಹನೇ ನಮ್ಮತ್ತ ತಿರುಗಿ ಇದೊಂದು ಪ್ರಾರಬ್ಧ ಎಂಬಂತೆ ಹಣೆ ಏರಿಳಿಸಿ, ಜೋರಾಗಿ ಕೈ ಬೀಸಿದ.

ಚಿಟಿ ಚಿಟಿ ನಕ್ಕರು ಮೀನಾಕ್ಷತ್ತೆ…. “ಒಂದು ಬೀಸಿದ್ದೇ, ಎಲ್ಲ ಎಲ್ಲಿದ್ದೋ? ಪುಡ್ಚೋ!”

ಮಾಣಿ ಎಲ್ಲಿ ಎಂದು ಅರಸಿದೆ. ಪಡು ಹೆಬ್ಬಾಗಿಲಲ್ಲಿ ಹಿಡಿಕಡ್ಡಿಯ ಬಿಲ್ಲಿನಲ್ಲಿ ಹಿಡಿಕಡ್ಡಿಯ ಬಾಣ ಬಿಡುತ್ತ ನಿಂತಿತ್ತು. ಈಚೆ ಪೂರ ಮರೆತೇಬಿಟ್ಟಿತ್ತು.
****
ಕೀಲಿಕರಣ : ಕಿಶೋರ ಚಂದ್ರ
ಕೀಲಿಕರಣ ದೋಷ ತಿದ್ದುಪಡಿ : ರಾಮಚಂದ್ರ ಎಮ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.