ಮನೆ-ಕಿಟಕಿ

(೧)
ಮಗುವನಾಡಿಸುತ ಹೂವಿಗೆ ಹೂವ ಪೋಣಿಸುತ
ಜಾವ ಜಾವಕೆ ಹಾಡಿನೆಳೆಯ ಜಗ್ಗಿ
ದುಂಡುಮಾಲೆಯ ಕನಸ ಕಟ್ಟಿ ಮುಡಿಯುತ್ತಿಹಳು
ಇರುಳಬಾನಿಗೆ ಚಂದ್ರ ತಾರೆಯಾಗಿ !

ನೀರು ತುಂಬಿದ ಕೆರೆಯ ಹೃದಯಾಂತರಾಳದಲಿ
ಆ ನೀಲಿ ಆ ಮೋಡವೆಲ್ಲ ಮೂಡಿ
ಹೇಳಬಾರದ ಹಿಗ್ಗು-ಬಾಯಿ ಬಿಟ್ಟಿತು ಮೊಗ್ಗು
ಯಾವುದೋ ಮಾಯೆಯಲಿ ಗಾಳಿ ತೀಡಿ !

ಈ ಮನೆಯ ಮನದ ಅನುನಯ ನಿತ್ಯನೂತನವು
ಅದರ ಕಲ್ಪನೆ ಕುಡಿಯೆ ರಂಗವಲ್ಲಿ
ಊದು ಬತ್ತಿಯು ಬರೆವ ಊಹೆ ಚಿತ್ರವಿಲಾಸ-
ಮಗುವಿನೆಳನಗೆಯದರ ಧವಳಕೀರ್ತಿ !

ಮುಂಜಾನದಂಗಳದಿ ಹೊನ್ನ ಬೆಳಕಿನ ಹುಂಜ
ಕೂಗಿ ಕುಣಿಸುವುದದರ ಹೂತುರಾಯಿ
ಸಂಜೆ ಮೇಲುಪ್ಪರಿಗೆ ಚಿಕ್ಕೆ ಸಮ್ಮೇಳನಕೆ
ಕತ್ತಲೆಯ ಬೀಡಿನಲಿ ಸರಬರಾಯಿ !

ಹಂಚುಮಾಳಿಗೆ ಮೇಲೆ ಓಡೋಡಿ ಬರುವ ಮಳೆ
ಕಿಟಕಿ ಕಣ್ಣನು ತೆರೆವ ಮಿಂಚು ಸೆಳೆತ
ಎಲ್ಲ ಗುಡುಗಿನ ಧ್ವನಿಯನೆದೆಗೆ ತುಂಬಿಸಿಕೊಳ್ಳುವ
ಇದರ ಮಡಿಲಲ್ಲಿಹವು ನೂರುಗೀತ !

(೨)
ಜಾಜಿ ಮಲ್ಲಿಗೆ ಬಕುಲ ಸಂಪಿಗೆಯ ಹೂಗಾಳಿ
ಬಾನಬೆಳುದಿಂಗಳಿನ ಗಂಧಲೇಪ
ನೂರು ಸ್ನೇಹದ ಒಲುಮೆ ಚಿಲುಮೆ ಪುಟಿಯುವ ರಂಗ
ಏಕಾಂತಕಿದು ಮತ್ತೆ ನಿಸ್ತರಂಗ !

ದೂರ ದೂರದ ಹಡಗು ಬಂದು ತಂಗುವವಿದರ
ಒಡಲ ನಡುಗಡ್ಡೆಯಲಿ ಸರಕು ಇಳಿಸಿ,
ತೆರೆ ತೆರೆಯ ಭಾವದುನ್ಮಾದಕ್ಕೆ ಏರಿಳಿದು
ಸಾಗುವವು ದಿಗಂತಕ್ಕೆ ಎಳಸಿ !

ದಾರಿ ತಪ್ಪುತ ಅಲೆದು ಮುಗಿಲ ಶೂನ್ಯವನಳೆದು
ಕನಸೊಡೆದು ಗರಿಯುದುರಿ ಸೋತಪಕ್ಷಿ
ರೆಂಬೆ ರೆಂಬೆಯ ಕುಕ್ಕಿ ಕನವರಿಸಿ ಹಾರುವವು
ಮರದ ಹರಣವೆ ಹಾರಿ ಹೋದ ತೆರದಿ !

ಚಣಕೊಂದು ತೋಟ, ಮನವೆಳಸಿದಾಕಡೆ ನೋಟ
ಹರಿಸಿ ಹಾರುತ ಗಾಳಿಯೊಡನೆ ತೇಲಿ
ಅಂತು ಇಂತೂ ಹೊತ್ತುಗಳೆವ ಪಾತರಗಿತ್ತಿ
ಒಮ್ಮೆಯಾದರು ಭೆಟ್ಟಿ ಕೊಡುವವಿಲ್ಲಿ !

ಮಾವು ಹೂವಿನ ತೇರು, ಹೊಂಗೆ ತುಂಬಿದ ಬಸುರಿ
ಉರಿವ ದೀಪಸ್ತಂಭನಗೊ ಬೂರಲ !
ಬೆಳೆದು ಬಾಗಿದ ತೆಂಗು ಹುಲ್ಲು ಹೂವಿನ ರಂಗು
ಎಲ್ಲೊ ಮರೆಯಾಗಿಹುದು ಮರಿಕೋಗಿಲ !

(೩)
ನಿಮಿಷ ನಿಮಿಷಕೆ ಬೀದಿಮೈಯ ಕೆರೆಯುವ ಕಾರು
ಬಸ್ಸು ತುಂಬಿದ ಲಾರಿ ತರಗಬರಗ
ಆಡು ಕುರಿಮರಿ ಎಮ್ಮ ಹೋರಿ ಆಕಳ ಮುಂದೆ
ನಡುಬೀದಿಯಲಿ ನಾಯಿ ಗೋಪ್ಯಭಂಗ !

ಹೊಗೆಗೋಡೆ ಹಳಸಿರುವ ನೆಳಲು ಬಚ್ಚಲರೊಜ್ಜು
ಇಲ್ಲಣವು ಜೇಡಬಲೆ ಧೂಳಿ ಮುಸುಕು
ಒಲೆಯ ಮೇಲೊಗ್ಗರಣೆ ಘಾಟ ಛಟ ಛಟ ಸೀನು-
ಡಬ್ಬಿ ಬಾಯಿಗೆ ಸೊಂಡಿ ಚಾಚುವಿಲಿಯು

ಊರಿನಾಚೆಗೆ ದೂರ ಗಿರಿಕಿರೀಟದ ತುದಿಗೆ
ಮೋಡ-ಬೆಳಕಿನ ಪುಂಜ-ಅದ್ವಿತೀಯ !
ಹಗಲು ಇರುಳಿನ ಕೈಗೆ ಕೊಟ್ಟ ಪ್ರತಿಭೆಯ ಪಂಜು-
ಬಾನಿನಾಶೀರ್ವಾದ ಶಾಂತಿ ಅಭಯ !

ದಿನಬಳಕೆಯನು ಮೀರಿ ಸೆಳೆವತೀಂದ್ರಿಯ ಸ್ಪರ್ಶ
ಹೊರಜಗವನೊಳಗಿಟ್ಟವುಂಕಿ ತಣಿಸಿ
ಬಾನ ಕನ್ನಡಿಗೆ ಚೌಕಟ್ಟು ಹಾಕಿದೆ ಕಿಟಕಿ
ಇಲ್ಲಿ ಕುಳ್ಳಿರು, ಆಗು ಅಂತರ್ಮುಖಿ.


ಕೀಲಿಕರಣ: ಎಂ ಎನ್ ಎಸ್ ರಾವ್
ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್‍ ಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.