ಇಂದು ವಿಶ್ವ ಕನ್ನಡ ಸಮ್ಮೇಳನ

ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು:

“ಕರ್ನಾಟಕ ಇಂದು ಬರದ ದವಡೆಗೆ ಸಿಲುಕಿದೆ. ಮಳೆಯಿಲ್ಲ. ಬಡ ರೈತನ ಹಾಹಾಕಾರದ ಸದ್ದು ಅಮೆರಿಕೆಯವರೆಗೆ ಕೇಳಿಸದೇನೋ. ಬಡತನದಲ್ಲೇ ಅರಳುತ್ತಾ ಹೋಗುವ ಸಂಸ್ಕೃತಿಯ ಪ್ರಸ್ತುತಿ ಬೇಕಾಗಿಲ್ಲವೇನೋ ಎಂಬಂತಹ ಸಂಶಯಗಳು ಬಂದರೂ ಸಹ- ‘ಚೆನ್ನಾಗಿರುವವರು ಚೆನ್ನಾಗಿರಲಿ’ ಎಂದು ಹರಸುವ ವೈಶಾಲ್ಯ ಇಲ್ಲದೆ ಹೋದರೆ ಸಿಕ್ಕುವ ಅಲ್ಪಸ್ವಲ್ಪ ಸಂಭ್ರಮವೂ ದಕ್ಕದೆ ಹೋದಾತು ಎನ್ನುವ ಅರಿವೂ ಮುಖ್ಯ. ಕನ್ನಡಸಾಹಿತ್ಯ.ಕಾಂ ಹರಸುತ್ತಲೇ ವಿಶ್ವಕನ್ನಡ ಸಮ್ಮೇಳನದಲ್ಲಿ ಏನಾದರೂ ಅರ್ಥವತ್ತಾದ ಚರ್ಚೆಯಾಗಲಿ, ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸುತ್ತದೆ..ಸಂಭ್ರಮಿಸುವವರನ್ನು ಅವರ ಪಾಡಿಗೆ ಅವರನ್ನು ಬಿಟ್ಟು ಉಳಿದವರು ಕಾರ್ಯೋನ್ಮುಖಿಗಳಾಗುತ್ತಾರೆಯೋ ಎಂಬುದು ಕಾದು ನೋಡಬೇಕಾದ ತಾಳ್ಮೆ ಹಾಗು ವಿವೇಕ ನಮ್ಮಲ್ಲಿ ಎಲ್ಲರಿಗೂ ಇದೆ ಎಂದು ಭಾವಿಸುತ್ತೇನೆ. ಇರಬಹುದಾದ ಶಕ್ತಿಯನ್ನೆಲ್ಲ ಕಿರಿಕಿರಿಗಳನ್ನು ದೊಡ್ಡದು ಮಾಡುವಲ್ಲಿ ವ್ಯಯಿಸುತ್ತಾ ಹೋಗುವ ಅವಿವೇಕವೂ ಸಹ ನಿಲ್ಲಬೇಕು ಎನ್ನುವುದು ಸಹ ನಮ್ಮ ಅರಿವಿನಲ್ಲಿರಬೇಕು. ಅದು ಎಲ್ಲರಲ್ಲಿ ಇರುತ್ತದೆ ಎಂದು ನಿರೀಕ್ಷಿಸುವುದು ಅತ್ಯಾಶಯವಾಗಿಬಿಡುತ್ತದೆ..ಹೀಗಾಗಿ ಕಿರಿಕಿರಿಗಳನ್ನು ಬದಿಗೊತ್ತಿ, ಸಣ್ಣಪುಟ್ಟ ಸಂಭ್ರಮಗಳಿಗಷ್ಟೆ ಮೂರು ದಿನಗಳ ಸಮ್ಮೇಳನವನ್ನು ಸೀಮಿತಗೊಳಿಸದೆ ಹಮ್ಮಿಕೊಳ್ಳಬಹುದಾದ ಎಲ್ಲ ಒಳ್ಳೆಯ ಕೆಲಸಗಳನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಸುತ್ತದೆ ಎಂದಷ್ಟೆ ಈಗ ಹೇಳುವುದು ಉಚಿತವಾದೀತೇನೊ. ಸಮ್ಮೇಳನ ಈ ದಿಸೆಯಲ್ಲಿ ಯಶಸ್ವಿಯಾಗಲಿ ಎಂದು ಕನ್ನಡಸಾಹಿತ್ಯ.ಕಾಂ ಹಾರೈಸುತ್ತದೆ.”

ಕನ್ನಡಸಾಹಿತ್ಯ.ಕಾಂ ಈ ಬಾರಿ ಇಬ್ಬರು ಪ್ರಮುಖ ಕನ್ನಡ ಲೇಖಕರನ್ನು ಒಳಗೊಳ್ಳುತ್ತಿದೆ. ಕೆ ಎಸ್ ನಿಸಾರ್ ಅಹಮದ್ ಹಾಗು ಯಶವಂತ ಚಿತ್ತಾಲರು. ಕೇಳಿದೊಡನೆಯೇ ಅನುಮತಿ ನೀಡಿದ ಈ ಹಿರಿಯ ಲೇಖಕರಿಗೆ ಕನ್ನಡಸಾಹಿತ್ಯ.ಕಾಂ ಆಭಾರಿಯಾಗಿರುತ್ತದೆ. ನಿಸಾರರ ಹದಿನೈದು ಕವನಗಳನ್ನು ಒಂದು ಲೇಖನದ ಇಂಗ್ಲಿಷ್ ಅನುವಾದವನ್ನು ಪ್ರಕಟಿಸಲಾಗಿದೆ. ಉಳಿದ ಅನುವಾದಗಳನ್ನು ಮೂಲ ಅನುವಾದಕರ ಅನುಮತಿ ದೊರೆತೊಡನೆ ಪ್ರಕಟಿಸಾಗುವುದು. ಈ ಬಾರಿ ಯಶವಂತ ಚಿತ್ತಾಲರ ಮೊದಲ ಸಣ್ಣ ಕತೆಯೊಂದಿಗೆ ಆರಂಭಿಸಲಾಗಿದೆ. ಚಿತ್ತಾಲರ ಸಣ್ಣಕತೆಗಳ ಅಧ್ಯಯನ ಮಾಡುತ್ತಿರುವವರ ಅನುಕೂಲಕ್ಕಾಗಿ ಅವರು ಬರೆದ ಅನುಕ್ರಮಣದಲ್ಲಿಯೇ ಪ್ರಕಟಿಸಲು ಯತ್ನಿಸಲಾಗುವುದು. ಇದೇ ರೀತಿ ಪ್ರತಿ ಲೇಖಕರ ಕೃತಿಗಳನ್ನು ಕಾಲಾನುಕ್ರಮಣಿಕೆಯಲ್ಲಿಯೇ ಪ್ರಕಟಿಸುವುದು ಸೂಕ್ತವೆಂದನ್ನಿಸುತ್ತದೆ. ಆಗ ಒಂದು ರೀತಿಯ ತೌಲನಿಕ ಅಧ್ಯಯನಕ್ಕೂ ಅನುವು ಮಾಡಿಕೊಟ್ಟಂತಿರುತ್ತದೆ.

ಒಮ್ಮೊಮ್ಮೆ ಅನ್ನಿಸಿಬಿಡುತ್ತದೆ- ಕನ್ನಡಸಾಹಿತ್ಯ.ಕಾಂ ಆರಂಭಿಸಿದ್ದು ಸರಿಯಾದುದೆ- ಯಾರಿಗಾಗಿ ಮಾಡುತ್ತಿದ್ದೇನೆ ಎಂದೆಲ್ಲ. ಮತ್ತೊಮ್ಮೆ ಯಾರಿಗಾಗೂ ಅಲ್ಲ, ನನಗಾಗಿ ಹಾಗು ನನ್ನಂತಹವರಿಗಾಗಿ ಎಂದನ್ನಿಸುತ್ತದೆ. ಬೃಹತ್ ಆಗಿರುವ ಅಂತರ್ಜಾಲದಲ್ಲಿ, ಇಂಗ್ಲಿಷ್ ನಡುವೆ ಕನ್ನಡಕ್ಕೂ ಸ್ಥಾನವಿದೆ ಎಂಬುದು ನನ್ನ ವಾದ, ಆ ಸ್ಥಾನ ದಕ್ಕಿಸಿಕೊಳ್ಳಲು ಏನನ್ನಾದರೂ ಮಾಡಬೇಕು: ಹೀಗಾಗಿ ಕನ್ನಡಸಾಹಿತ್ಯ.ಕಾಂ ಅನಿವಾರ್ಯ. ಎಲ್ಲೋ ನನ್ನಂಥವರೂ ಇರುತ್ತಾರೆ ಎಂದು ಹುಡುಕಿಕೊಂಡು ಅಲೆಯುತ್ತೇನೆ..ಹೀಗೆ ಸಿನಿಮಾ ಕ್ಷೇತ್ರದಲ್ಲಿ ಬಹುಶಃ ಇವೇ ಪ್ರಶ್ನೆಗಳು ಗಿರೀಶ್ ಕಾಸರವಳ್ಳಿಯವರನ್ನೂ ಕಾಡುತ್ತಿರುತ್ತವೆಯೆ ಎಂದು ಸಹ ಆಲೋಚಿಸುತ್ತೇನೆ. ಬಹುಶಃ ನಾವಿಬ್ಬರೂ ತಪ್ಪುಗಳನ್ನು ಮಾಡುತ್ತಿರಬೇಕು. ಅಥವಾ ಅನಿವಾರ್ಯವಾದದ್ದನ್ನ ಮಾಡುತ್ತಿದ್ದಿರಬೇಕು. ಕನ್ನಡಸಾಹಿತ್ಯ.ಕಾಂ ಗೆ ಇರಲಿ, ಕಾಸರವಳ್ಳಿಯವರ ಸಿನಿಮಾಗಳಿಗಾಗಲಿ ಓದುಗರು- ವೀಕ್ಷಕರು ಒಂದೇ ವರ್ಗದ ಜನ. ಈ ವರ್ಗದ ಜನರ ಬಗೆಗೆ ನನ್ನದೇ ಆದ ಹೋರಾಟವಿದೆ/ಆಕ್ಷೇಪಗಳಿವೆ, ಜೊತೆಗೆ ನಮ್ಮ ಸುತ್ತಮುತ್ತಲಿನ ಎಲ್ಲ ರೀತಿಯ ಕ್ಷೋಬೆಗಳನ್ನು ನಿವಾರಿಸುವ ಎಲ್ಲ ರೀತಿಯ ಶಕ್ತಿಗಳನ್ನು ಕೊಡುವವವರೂ ಸಹ ಇವರೆ ಎಂಬ ವಿಪರ್ಯಾಸದ ಅರಿವೂ ಇದೆ. ಬಹುಶಃ ಕಾಸರವಳ್ಳಿಯವರ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಇದ್ದೇ ಇದೆ- ಮುಂದೆಯೂ ಇರುತ್ತೆ. ಹೀಗೆಯೇ ಕನ್ನಡಸಾಹಿತ್ಯ.ಕಾಂ ನಂತಹ ಪ್ರಯತ್ನ ಸಹ ಕೇವಲ ಕೆಲವರಿಗೆ ಬೇಕಾಗಿರುವುದು ಎಂಬುದು ಸಹ ನಿಜ. ಆದರೆ ಕಾಸರವಳ್ಳಿಯವರೂ ಎಂದೂ ಸಿನಿಮಾ ಕ್ಷೇತ್ರದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ತಾವು ಆತಿeeಠಿಚಿ- ಜಿiಟm sಣiಟಟನಂಬಿದ್ದನ್ನಷ್ಟೆ ಮಾಡಿದರೂ- ಹಾಗು ಮಾಡುತ್ತಾರೆ. ಅವರ ಪ್ರಯತ್ನವಾದ ದ್ವೀಪ ಚಿತ್ರಕ್ಕೆ ಮತ್ತೊಂದು ಸ್ವರ್ಣ ಕಮಲದ ಪ್ರಶಸ್ತಿ ದೊರಕಿರುವ ಸಂದರ್ಭದಲ್ಲಿ ಅವರನ್ನು ಕನ್ನಡಸಹಿತ್ಯ.ಕಾಂ ಅಭಿನಂದಿಸುತ್ತ ಪರಸ್ಪರ ಗುರಿಗಳನ್ನು ಮತ್ತಷ್ಟು ನಿಚ್ಚಳಗೊಳಿಸಿಕೊಳ್ಳುತ್ತಾ ಹೋಗೋಣ ಎಂದು ನಾವು ಹಾಗು ನಮ್ಮಂತಹವರು ಆಶಿಸುವುದು ಸರಿ ಎಂದೇ ತೋಚುತ್ತದೆ. ಆದುದರಿಂದ ಒಂದು ಸಾಲಿನ ಅಬಿನಂದನೆಗಳು ಗಿರೀಶ್. ನಿಮ್ಮ ಪ್ರಯತ್ನ ಹೀಗೆಯೇ ಮುಂದುವರೆಯಲಿ ಎಂದು ಹೇಳಿ ‘ಯಾರಿಗಾಗಿ ಮತ್ತು ಯಾವುದಕ್ಕಾಗಿ ಸಿನಿಮಾ ಮಾಡುತ್ತಿದ್ದೀರ..’ ಸಿನಿಮಾ ಇಲ್ಲದಿದ್ದರೂ ನಿಮ್ಮ ವೈಯಕ್ತಿಕ ಬದುಕು ಯಾವುದೇ ರೀತಿಯಲ್ಲಿ ಪಲ್ಲಟಕ್ಕೊಳಗಾಗುವುದಿಲ್ಲ, ನಿಮ್ಮಂತೆ ಪ್ರಯತ್ನ ಪಡುತ್ತಿರುವ ಎಲ್ಲರ ಬದುಕೂ ಹೀಗೆ ಇರುವುದಿಲ್ಲ, ಇಂತಹ ಸಂದರ್ಭದಲ್ಲಿ ಅತಿಯಾಗಿ ‘ಎಲೈಟ್’ ಆಗಿ ಉಳಿದುಕೊಳ್ಳುವ ನಮ್ಮಂತಹವರ ಮಿತಿಗಳನ್ನು ನಾವು ಕಂಡುಕೊಳ್ಳದೆ ಹೋಗುವ ದುರಂತದ ಅರಿವು ನಿಮಗಿದೆಯೇ? ನಾವೆಲ್ಲ ಎಂತಹ ‘ಪ್ಯಾರಾಮೀಟರ್’ ಸೃಷ್ಟಿಸಿಬಿಡುತ್ತಿದ್ದೇವೆ?’ ಎಂಬ ನನ್ನ ಪ್ರಶ್ನೆಯೊಂದನ್ನು ಇಟ್ಟುಕೊಂಡು ಅವರು ಸಿಕ್ಕಾಗ ಈ ಬಗೆಗೆ ಮಾತನಾಡುವ ಎಂದಂದುಕೊಂಡಿದ್ದೇನೆ. ಗಿರೀಶ್‌ರವರ ಸಂದರ್ಶನ ಈ ಸಂಚಿಕೆಯಲ್ಲಿ ಪ್ರಕಟವಾಗಬೇಕಿತ್ತು. ಅನಿವಾರ್ಯ ಕಾರಣಗಳಿಗೆ ಆಗುತ್ತಿಲ್ಲ. ಮುಂದಿನ ಸಂಚಿಕೆಯಲ್ಲಿ ಖಂಡಿತ ಪ್ರಕಟಿಸುವ ಭರವಸೆ ನನಗಿದೆ. ಆಷ್ಟರೊಳಗೆ ಅವರ ದ್ವೀಪ ಬಿಡುಗಡೆಯಾಗಿರುತ್ತದೆ ಎಂದು ಆಶಿಸುತ್ತೇನೆ.

ಅಮೆರಿಕ ಪ್ರವಾಸ ಹೋಗಿದ್ದಿರಲ್ಲ ಏನಾಯ್ತು?- ಅನೇಕಾನೇಕ ಆಪ್ತರಿಂದ ಕನ್ನಡಸಾಹಿತ್ಯ.ಕಾಂ ಹಿತೈಶಿಗಳಿಂದ ಈ ಪ್ರಶ್ನೆ. ಸಹಜವಾದುದೆ. ಬಂದೊಡನೆಯೇ ಈ ಇಪ್ಪತ್ತು ದಿನಗಳು ಸಾಕಷ್ಟು ಕೆಲಸಗಳ ನಡುವೆ ಯಾರಿಗೂ ನಾನು ಸರಿಯಾಗಿ ಸಿಕ್ಕಿಲ್ಲ, ಭೇಟಿಯಾಗಿಲ್ಲ. ಬರೆಯಬೇಕೆಂದು ಕೊಂಡೆ. ಸಮಯಾಭಾವದಿಂದ ಆಗಲಿಲ್ಲ. ಮುಂದಿನ ಸಂಚಿಕೆಯಿಂದ ಇದರ ಬಗೆಗೆ ನಿಗದಿತವಾಗಿ ಈ ಪ್ರವಾಸ ಕುರಿತಂತೆ, ಅಮೆರಿಕ ನನ್ನ ಮೇಲೆ ಉಂಟು ಮಾಡಿದ ಘಾಸಿ, ಸೃಷ್ಟಿಸಿದ ಬೆರಗು ಎಲ್ಲದರ ಕುರಿತಂತೆ ಒಂದು ಅಂಕಣವನ್ನು ಪ್ರಾರಂಭಿಸೋಣವೆಂದುಕೊಂಡಿದ್ದೇನೆ. ಈ ಅಂಕಣದಲ್ಲಿ ಅನೇಕರು ಬರಬಹುದು- ಅನೇಕ ಸಂಗತಿಗಳು, ವಿವರಗಳು ಚೆಲ್ಲಿಕೊಂಡು ಹೊರಬರಲಿದೆ ಎಂದಷ್ಟೆ ಹೇಳಬಲ್ಲೆ. ಸದ್ಯಕ್ಕೆ ಗೊರೂರರ ಅಮೆರಿಕ ಪ್ರವಾಸ ಕಥನದ ಮುನ್ನುಡಿಯ ಕೊನೆ ಪ್ಯಾರವನ್ನು ಓದಿರುವವರು ನೆನಪಿಸಿಕೊಂದರೆ ಸಾಕು” ಅದರಲ್ಲಿ ವರು ಗಂಗೆಯಲ್ಲಿ ಮುಳುಗಿ ಈ ಬರ್ಬರ ಸಂಸ್ಕೃತಿಯಲ್ಲಿ ಮುಳುಗಿದೆ ಎಂದು ಅಂತ್ಯ ಮಾಡುತ್ತಾರೆ. ನನಗಂತೂ ಇದು ಬರ್ಬರ ಎಂದನ್ನಿಸಲಿಲ್ಲ. ಬಹುಶಃ ಇಲ್ಲಿರುವ ಕೋಮು ಗಲಭೆಗಳು, ಬಡತನ, ಭ್ರಷ್ತಾಚಾರ ಇತ್ಯಾದಿಗಳು ಅವರ ಮನಸ್ಸಿನಲ್ಲಿದ್ದುವೆಂದು ಕಾಣುತ್ತದೆ. ಅದನ್ನು ಹೊರತು ಪಡಿಸಿದರೆ ‘ನಿಜವಾಗಿಯೂ ಇದು ಸ್ವರ್ಗ’ ಎಂದೂ ಹೇಳಬಹುದೇನೊ..ಹೇಳಬಹುದೇನೊ. ಇರಲಿ ಬರೆಯುತ್ತಾ ಹೋದಾಗ ಗೋಚರವಾಗುತ್ತಾ ಹೋಗುತ್ತದೆ. ಒಂದಂತೂ ನಿಜ: ಮುಂದಿನ ಸಂಚಿಕೆ ವೇಳೆ ಕನ್ನಡಸಾಹಿತ್ಯ.ಕಾಂ ಗಾಗಿ ಒಂದು ಸಂಪಾದಕೀಯ ವರ್ಗ, ಆಡಳಿತ ವರ್ಗ, ಬೆಂಬಲ ಕೂಟ ಎಂದು ಅಧಿಕೃತವಾಗಿ ಘೋಷಿಸಬಹುದು ಎಂಬಷ್ಟು ಬೆಳವಣಿಗೆಯಂತೂ ಆಗಿದೆ. ಇಷ್ಟರಲ್ಲೇ ಈ ಕುರಿತಂತೆ ಕನ್ನಡಸಾಹಿತ್ಯ.ಕಾಂ ನ ಯಾಹೂ ಗ್ರೂಪ್‌ನಲ್ಲಿ ವಿವರಗಳನ್ನು ಕಾಣಿಸಲು ಯತ್ನಿಸುತ್ತೇನೆ. ಆರ್ಥಿಕವಾಗಿ ಸಿಕ್ಕಿರುವ ಬೆಂಬಲವನ್ನು ಯಥಾಪ್ರಕಾರ ‘ಮನವಿ’ ಪುಟದಲ್ಲಿ ಪ್ರಕಟಿಸಲಾಗಿದೆ. ಸಾಂಪಾದಕೀಯ ವರ್ಗದಲ್ಲಿರುವವರು ಪರಸ್ಪರ ಅಪರಿಚತರು. ಅವರ ನಡುವೆ ಒಂದು ರಿತಿಯ ಔಪಚಾರಿಕವಾದ ಪರಿಚಯವಾಗಿ-ಅವರು ಕನ್ನಡಸಾಹಿತ್ಯ.ಕಾಂ ನ ಮುಂದಿನ ರೂಪುರೇಷೆಯನ್ನು ತಿದ್ದಲು ಬೇಕಾಗಿರುವ ನಕ್ಷೆ ತಯಾರಾಗುತ್ತದೆ ಎಂದು ನಂಬಿಕೊಂಡಿದ್ದೇನೆ. ಈ ಕುರಿತಂತೆ ಎಲ್ಲರಿಗೂ ಇನ್ನೊಂದೆರಡುದಿನಗಳಲ್ಲೇ ಪತ್ರ ಬರೆಯಲಿದ್ದೇನೆ. ಇದೆಲ್ಲ ಆದಾಗ ಈಗಿರುವ ಸ್ವರೂಪವನ್ನು ತಿದ್ದ ಬೇಕಾಗಬಹುದು. ಆಗ ಈಗಾಗಲೇ ಇರುವ ೨೫ ಎಂ ಬಿ ಪಠ್ಯವನ್ನು ಪುನರ್‌ರೂಪಿಸಿ ಹೊಂದಿಸಬೇಕಾಗುತ್ತದೆ. ಹೀಗಾಗಿ ಮುಂದಿನ ಸಂಚಿಕೆ ತಡವಾದರೆ ನಮ್ಮವರೆಲ್ಲ ತಾಳ್ಮೆ ವಹಿಸುತ್ತಾರೆ ಎಂಬಭರವಸೆ ನನ್ನದು.

ಃ ಗಿ ಏಂಡಿಚಿಟಿಣhಮೊನ್ನೆ ನಮ್ಮ ಶಿವು ಫೋನ್ ಮಾಡಿದಾಗ ಮಾತು ಜಿ ವಿ ಅಯ್ಯರ್‌ರವರ ಬಗೆಗೆ ಹೊರಳಿತು. ಆಗ ಆಗಿನ ಒಂದು ತಲೆಮಾರಿನ ಜೀವನಕ್ರಮ, ವೃತ್ತಿ ನಾಟಕ ಮುಂತಾದ ವಿಷಯವೂ ಬಂದು ಹೋಯಿತು. ಶಿವುಗೆ ಜಿ ವಿ ಅಯ್ಯರ್‌ರ ಭೇಟಿ ಮಾಡಿ ಸಂದರ್ಶನ ಮಾಡಲು ಸಾಧ್ಯವಾ ನೋಡಿ ಎಂದು ತಿಳಿಸಿದ್ದೆ. ಮಾತಿನ ಮಧ್ಯೆ ಜಿ ವಿ ಅಯ್ಯರ್‌ರವರ ಜೊತೆಯಲೇ ವೃತ್ತಿಯಲ್ಲಿ ಬೆಳೆದ ಬಿ ವಿ ಕಾರಂತರ ಬಗೆಗೂ ಮಾತಿನ ತುಣುಕು ಸೇರಿಕೊಂಡಿತು.

ರವೀಂದ್ರ ಕಲಾಕ್ಷೇತ್ರ-ನಾಟಕಗಳ ಎಲೈಟ್ ಪ್ರೇಕ್ಷಕ- ಒಂದು ರೀತಿಯ ಹಿಪಾಕ್ರಸಿ, ವಿರಾಮಾಸನದಲ್ಲಿ ವ್ಯಕ್ತವಾಗುತ್ತಾ ಹೋಗಿ ಬಿಡುವ ಕಾಳಜಿಗಳೆಲ್ಲ ಬರೀ ಹರಟೆ, ನಾಲಿಗೆಯ ತೆವಲಾಗಿಬಿಡುವ ಮತ್ತು ಆ ಮೂಲಕವೇ ರೋಮಾಂಚಿತರಾಗಿಬಿಡುವ ಒಂದು ದೊಡ್ಡ ಗುಂಪಿನ ಮಧ್ಯೆ ಬಿ ವಿ ಕಾರಂತರು ಒಂದು ರೀತಿಯಲ್ಲಿ ಭಿನ್ನ ವ್ಯಕ್ತಿ. ನಾನು ಅವರನ್ನು ಎರಡು ಬಾರಿ ಮಾತ್ರ ನೋಡಿದ್ದು. ಎರಡು ಬಾರಿಯೂ ಸಂದರ್ಶನಕ್ಕೆಂದು. ಅಂತಾರಾಷ್ಟ್ರೀಯ ಸಿನಿಮಾಕ್ಕೆ ನಾನು ತೆರೆದುಕೊಂಡು ಅದರ ಪ್ರಭಾವಕ್ಕೊಳಗಾಗಿದ್ದ ದಿನಗಳು. ಎಲ್ಲದರಲ್ಲೂ ಲೋಪ ಕಂಡುಹಿಡಿದು ಬಿಡುವ ಆತುರಗಾರಿಕೆ-ಅಹಂಕಾರ. ಜೊತೆಗೆ ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ ಕಲಿಸಿಬಿಡುವ ಎಲ್ಲ ರೀತಿಯ ತಲೆತಿರುಕತನಗಳೂ ಗಟ್ಟಿಯಾಗಿದ್ದ ಕಾಲವದು. ವಂಶ ವೃಕ್ಷ ಹಾಗು ಕಾಡು ತಬ್ಬಲಿಯು ನೀನಾದೆ ಮಗನೆ ಬಿಡುಗಡೆಯಾದನಂತರದ ಅಂಚಿನ ದಿನಗಳು. ಮಿನರ್ವ ಸರ್ಕಲ್ಲಿನ ಕೊಠಡಿಯಲ್ಲಿ ಬಿ ವಿ ಕಾರಂತ ಹಾಗು ಗಿರೀಶ್ ಕಾರ್ನಾಡರಿಬ್ಬರೂ ಇದ್ದರು. ಅದೇ ಹೋಟೆಲ್ಲಿನಲ್ಲಿ ನಾನು ಎಂಜಲು ತಟ್ಟೆ ತೊಳದದ್ದು ನನ್ನ ನೆನಪಿನಲ್ಲಿದ್ದರೂ ‘ಬ್ರಿಗೇಡ್ ರಸ್ತೆಯ ತಲೆತಿರುಕತನದಿಂದಾಗಿ’ ಕಾರ್ನಾಡರ ನಿರರ್ಗಳ ಇಂಗ್ಲಿಷ್ ಧಾಟಿ ಕನ್ನಡವನ್ನು ಮಂಕಾಗಿಸಿತ್ತು. ಕಾರಂತರಿಗೆ ಆಗ ಇಂಗ್ಲಿಷ್ ಚೆನ್ನಾಗಿ ಬರುತ್ತಿರಲಿಲ್ಲ. ಕಾರಂತರ ಬಗೆಗೆ ಏನೋ ಅಸಮಾಧಾನ. ಹಾಗೆಯೇ ಕಾರ್ನಾಡರ ಬಗೆಗೂ. ಸಂದರ್ಶನ ಬರೆಯಲಿಲ್ಲ. ಬಹಳ ಕಾಲ ಕಾರಂತರು ಯಾಕೆ ಹೀಗೆ ಎಂದು ಬ್ರಿಗೇಡ್ ರಸ್ತೆಯ ಬೆಳಕಿನಲ್ಲಿ ಯೋಚಿಸಲಾರಂಭಿಸಿದಾಗ ‘ಏನೋ ಇದೆ ಈ ವ್ಯಕ್ತಿಯಲ್ಲಿ’ ಎಂದನ್ನಿಸತೊಡಗಿ ಮತ್ತೊಮ್ಮೆ ಕಾರಂತರಿಗೆ ಫೋನ್ ಮಾಡಿದ್ದೆ. ಅವರ ಮನೆಗೆ. ‘ಅಶಿಕ್ಷಿತನೊಬ್ಬನಂತೆ ಉಡುಪು ಧರಿಸಿದ್ದ’ ನನ್ನನ್ನು ಆ ಮನೆಯೊಡತಿ ಒಳಗೂ ಕರೆಯಲಿಲ್ಲ. ಮುದುಡಿದ ಮನಸ್ಸಿನಿಂದ ನಾನು ಹಿಂತಿರುಗಿದ್ದೆ. ಈ ಬಾರಿ ನೇರವಾಗಿ ಬಿ ವಿ ಕಾರಂತರೊಂದಿಗೆ ನೇರ ಸಂಪರ್ಕ: ‘ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ, ಮಾತನಾಡುವ’ ಎಂದು ಹೇಳಿದ್ದರು ಹೋದೆ. ಕಾರಂತರೂ ಹಾರ್ಮೋನಿಯಂ ಬಾರಿಸುತ್ತಾ ರಂಗದ ಮೇಲೆ ತನ್ಮಯರಾಗಿದ್ದರು. ನಾನು ಹೋದ ಐದು ನಿಮಿಷದವರೆಗೂ ತಲೆ ಎತ್ತಿ ನೋಡಲಿಲ್ಲ. ನಂತರ ತಲೆ ಎತ್ತಿ ನೋಡಿ ‘ಬನ್ನಿ’ ಎಂದು ಆಹ್ವಾನಿಸಿದರು. ನಾನು ಅವರು ಕುಳಿತಿದ್ದ ರಂಗದ/ವೇದಿಕೆಯ ಭಾಗಕ್ಕೆ ಹೋದಾಗ ಏನನ್ನೂ ಮಾತನಾಡದೆ ‘ನಾನು ನಿಮ್ಮ ಹತ್ರ ಏನೂ ಮಾತಾಡೋಲ್ಲ..ನೀವಿನ್ನು ಹೋಗಬಹುದು ಎಂದಂದರು. ನನಗೆ ದಿಗ್ಬ್ರಮೆಯಾಗಿ ಏಕೆ ಎಂದು ಪ್ರಶ್ನಿಸಿದಾಗ ಅರ್ಥವಿಲ್ಲದೆ ಕೂಗಾಡತೊಡಗಿದರು. ನಾನು ಖಿನ್ನಮನಸ್ಕನಾಗಿ ಹಿಂದಿರುಗಿದ್ದೆ.

ಅವರ ವರ್ತನೆ ನನಗೆ ಬಹಳ ಕಾಲದನಂತರವೆ ಅರ್ಥವಾದದ್ದು: ನಾನು ಬ್ರಿಗೇಡ್ ರಸ್ತೆಯ ತಲೆತಿರುಕುಕತನದಿಂದ ಚಪ್ಪಲಿ ಮೆಟ್ಟಿ ರಂಗದ ಮೇಲೆ ಹೋಗಿದ್ದೆ..ಇದು ಹೊಳೆದದ್ದು ಹಳ್ಳಿಯೊಂದರ ಶಾಲೆಯಲ್ಲಿ ‘ಡ್ರಾಮಾ ಪ್ರಾಕ್ಟೀಸ್ ಮಾಡುತ್ತಿದ್ದವರು’ ಬೀಡಿ, ಸಿಗರೇಟು ಹೊಗೆಯ ಮಧ್ಯ ನಾಟಕದ ಮೇಷ್ಟ್ರು ತಮ್ಮ ಪಾತ್ರವನ್ನು ಕೂಗಿ ಕರೆದಾಗ ಅಭ್ಯಾಸಕ್ಕಾಗಿ ಅವರ ಮುಂದೆ ಹೋಗುವ ಮುನ್ನ ವರ್ತುಲದಾಚೆ ಚಪ್ಪಲಿ ಬಿಟ್ಟು ಹೋಗುತ್ತಿದ್ದುದನ್ನು ನೋಡಿದಾಗ…

ಇಂದು ೭೨ ವಯಸ್ಸಿನ ಬಿ ವಿ ಕಾರಂತರು ನಮ್ಮ ಮಧ್ಯೆ ಇಲ್ಲ. ನಿನ್ನೆ ಸಂಜೆ ೭.೨೦ ಕ್ಕೆ ಕ್ಯಾನ್ಸರ್‌ನಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕನ್ನಡಸಾಹಿತ್ಯ.ಕಾಂ ಗೊಂದು ಪ್ರೇರಣೆ, ಅದರ ಗುಣ ನಿರ್ಧರಿಸುವಲ್ಲಿ ಅವರೊಂದಿಗಾದ ಆ ಘಟನೆ ಪ್ರೇರಣೆ ಎಂದು ಹೇಳುತ್ತಾ ಅವರಿಗೆ ಶ್ರದ್ಧಾಂಜಲಿಯನ್ನರ್ಪಿಸುತ್ತದೆ.

ಮುಂದಿನ ಸಂಚಿಕೆಗೆ ಯಾರಾದರೂ ಒಂದು ಒಳ್ಳೆಯ ಲೇಖನ ಬರೆದರೆ. ..ಎಂಬ ನಿರೀಕ್ಷೆ ನನ್ನದು…
ಶೇಖರ್‌ಪೂರ್ಣ
*****
ಈ ಕೊನೆಯ ತುಣುಕನ್ನು ಬರೆದದ್ದು ಇಲ್ಲಿ ಸೇರಿಸಿರುವುದು: ೦೨-೦೯-೨೦೦೨

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.