ಗೃಹಭಂಗ – ೯

ಅಧ್ಯಾಯ ೧೫
– ೧ –

ಈಗ ಎಂಟು ವರ್ಷದಲ್ಲಿ ಊರ ಹೊರಗಡೆ ಸರ್ಕಾರದವರು ಹೊಸ ಪ್ರೈಮರಿಸ್ಕೂಲಿನ ಕಟ್ಟಡ ಕಟ್ಟಿಸಿದ್ದರು. ಶಿವೇಗೌಡನಿಗೆ ಸ್ಕೂಲು ಕಟ್ತಡದ ಬಾಡಿಗೆ ಬರುವುದು ನಿಂತು ಹೋಗಿತ್ತು. ಹೊಸ ಸ್ಕೂಲಿಗೆ ಹೊಂದಿಕೊಂಡು ದೊಡ್ಡ ಆಟದ ಬಯಲು, ಸುತ್ತ ಮೂರು ಕಡೆಯೂ ಹೊಲಗಳು.

ಒಂದು ದಿನ ನಂಜಮ್ಮ ಮುಂದಿನ ವರ್ಶದ ಖಿರ್ದಿ ಪುಸ್ತಕ ಹೊಲಿಯುತ್ತಾ ಕೂತಿದ್ದಳು. ಮೇಷ್ಟರು ಮನೆಗೆ ಬಂದು ಹೇಳಿದರು: ‘ನಂಜಮ್ನೋರೇ, ನಿಮ್ಮ ವಿಶ್ವ ಎಂಥಾ ಕೆಲ್ಸ ಮಾಡಿದಾನೆ ಅಂತೀರಾ?’

ಮೇಷ್ಟರೇ ಬಂದು ಹೇಳಬೇಕಾದರೆ ಅವನು ತುಂಬ ದೊಡ್ಡ ತುಂಟತನ ಮಾಡಿರಬೇಕು. ಅವಳು ಆತಂಕದಿಂದ ಕೇಳಿದಳು: ‘ಸ್ಕೂಲಿನ ಹಿಂದುಗಡೆ ಆಟದ ಬಯಲಿದೆಯಲ, ಅದರ ಆಚೆ ಕಡೆಯೇ ಒಂದು ಹುತ್ತ ಇದೆ ನೋದಿದೀರಾ? ಅದರ ಪಕ್ಕದ ಬೇಲೀಲಿ ಒಂದು ಹಾವು ಇತ್ತು ಅಂತ ಕಾಣುತ್ತೆ. ಪೊರೆ ಬಿಡೂಕೆ ಮೊದ್ಲು ಹಾವು ಚಟುವಳಿಕೆಯಾಗಿರುಲ್ಲ ನೋಡಿ. ಅದೇನು ಬಿಸಿಲು ಕಾಯಿಸ್ಕತ್ತಾ ಇತ್ತೋ ಏನೋ. ಇವ್ನು ಒಂದು ಸೋಗೆದಿಂಡಿ ತಗಂಡು ಹಿಂದುಗಡಿಂದ ಹೋಗಿ ಅದಕ್ಕೆ ಹೊಡೆದುಬಿಟ್ಟಿದ್ದಾನೆ.’

‘ಆಮೇಲೆ?’-ನಂಜಮ್ಮ ಹೆದರಿಕೆಯಿಂದ ಕೇಳಿದಳು.
‘ಅದೃಷ್ಟಕ್ಕೆ ಅದು ಮೇಲೆ ಬೀಳಲಿಲ್ಲ. ಸರ್ ಅಂತ ಹರಿದು ಹುತ್ತದೊಳಗೆ ನುಗ್ಗಿ ಬಿಡ್ತು. ಅದು ನುಗ್ಗಿ ಹೋದದ್ದು ನಾನೂ ನೋಡಿದೆ. ಇವ್ನು ಹಿಂದಿನಿಂದ ಓಡಿಸ್ಕಂಡು ಹೋಗ್ತಿದ್ದ. ನಾನು ಹಿಡ್‌ಕಂಡು ಎರ್ಡು ಕೊಟ್ಟೆ.’
‘ಕೈ ಮುರಿಯೂ ಹಾಗೆ ಹಾಕಬೇಕಾಗಿತ್ತು.’
‘ಈಗ ಅವ್ನುನ್ನ ಹೊಡೆದು ಪ್ರಯೋಜನವಿಲ್ಲ. ಹಾವು ಹನ್ನೆರಡು ವರ್ಷ ಸೇಡು ಹಾಯುತ್ತೆ. ಇವ್ನು ಅದೇ ಸ್ಕೂಲಿಗೆ ಬರ್ತಾನೆ. ಯಾವತ್ತಾದ್ರೂ ಕಾದು ಮುಗಿಸಿಬಿಟ್ರೆ ಏನು ಗತಿ?’
ಅವಳ ಎದೆ ಹೊಡೆದುಕೊಳ್ಳಲು ಶುರುವಾಯಿತು. ಈ ಹುಡುಗನ ಸ್ವಭಾವವೇ ಹಾಗೆ. ಧೈರ್ಯ ಅಂದರೆ ಪ್ರಚಂಡ ಧೈರ್ಯ. ಅದು ನನ್ನ ಜೀವಕ್ಕೆ ಬರುತ್ತೆ. ‘ಈಗ ಏನು ಮಾಡೂದು ಮೇಷ್ಟ್ರೆ?’
‘ಹಾವು ಹುತ್ತದಲ್ಲೇ ಇರ್‌ಭೌದು. ನಾಕು ಜನ ಆಳುಗಳನ್ನ ಬಿಡಿಸಿ ಹುತ್ತ ಅಗೆದು ಹಾಕ್ಸಿ ಅದುನ್ನ ಸಾಯಿಸಿಬಿಡಬೇಕು. ನಿಧಾನ ಮಾಡ್‌ಬ್ಯಾಡಿ.’

ನಂಜಮ್ಮ ತಕ್ಷಣ ಎದ್ದು ಮನೆಗೆ ಬೀಗ ಹಾಕಿಕೊಂಡು ಹೋಗಿ ಕುಳುವಾಡಿಗೆ ಹೇಳಿಕಳಿಸಿದಳು. ಜೊತೆಗೆ ನೀರುಗಂಟಿ ಬಂದ. ಹಾವು ಹೊಡೆಯುವುದರಲ್ಲಿ ಊರಿಗೇ ಗಟ್ಟಿಗನೆನಿಸಿದ ವಾಲ್ಮೀಕಿ ಸಂಜೀವನಾಯಕನಿಗೆ ಒಂದು ರೂಪಾಯಿ ಕೊಡುವುದಾಗಿ ಹೇಳಿ ಅವನನ್ನು ಅವರ ಜೊತೆಗೆ ಬಿಟ್ತಳು. ಅವರೊಡನೆ ತಾನೂ ಹೋದಾಗ ವಿಶ್ವ ಹತ್ತಿರ ಇದ್ದ ಆಟದ ಬಯಲಿನಲ್ಲಿ ಒಬ್ಬನೇ ಪಲ್ಟಿ ಹೊಡೆಯುತ್ತಿದ್ದ.

‘ಹಾವಿಗೆ ಯಾಕೋ ಹೊಡೆಯುಕ್ಕೆ ಹೋಗಿದ್ದೆ?’-ಎಂದು ಅಮ್ಮ ಕೇಳಿದುದಕ್ಕೆ, ‘ಸಂಜೀವನಾಯ್ಕ ಅವತ್ತು ತಿರುಮಲಯ್ಯನ ಮನೆ ಹಿತ್ಲಲ್ಲಿ ಹೊಡೆದಿದ್ನಲ್ಲ, ಹಾಗೆ ನಾನೂ ಹ್ವಡೆದೆ’ ಎಂದ.

ಸಂಜೀವನಾಯಕನ ಕೈಲಿ ಬಿದಿರುಕೋಲು ಭರ್ಜಿ ಹಿಡಿದು ಎದುರಿಗೆ ನಿಂತುಕೊಂಡ. ಕುಳುವಾಡಿ ನೀರುಗಂಟಿಗಳು ಹುತ್ತ ಅಗೆಯಲು ಶುರುಮಾಡಿದರು. ಅದರ ಬಿಲ ಎತ್ತೆತ್ತಲೋ ಇಳಿದು ಹರಡಿತ್ತು. ಇವರು ಎಲ್ಲವನ್ನೂ ಬಿಡದೆ ಸಂಜೆಯ ತನಕ ಶೋಧಿಸಿ ಮುಗಿಸಿದರೂ ಹಾವು ಸಿಕ್ಕಲಿಲ್ಲ.

‘ಈಗ ಉತ್ತ ಸೋದ್ಸಾಕೆ ಬರ್ತಾರೆ ಅಂತ ತಿಳ್ಕಂಡು ಅಣ್ಣಯ್ಯ ಜಾಗ ಬುಟ್ಟಿ ಹ್ವಂಟವ್ನೆ’-ಎಂದು ಸಂಜೀವನಾಯಕ ಹೇಳಿದ. ಇನ್ನು ಅದನ್ನು ಹುಡುಕುವುದು ಸಾಧ್ಯವಿಲ್ಲ. ‘ಅವ್ನು ಯಾವತ್ತಾದರೂ ಕಾಯ್ಕಂಡಿದ್ದು ಉಡುಗುಂಗೆ ಹಲ್ ಆಕ್ತಾನೆ’- ನಾಯಕನೂ ಹೇಳಿದ.

ನಂಜಮ್ಮನಿಗೆ ತಡೆಯಲಾರದಷ್ಟು ಸಿಟ್ಟು ಬಂತು. ನಾಯಕನ ಕೈಲಿದ್ದ ಬಿದಿರುಕೋಲು ತೆಗೆದುಕೊಂಡು ವಿಶ್ವನ ಬೆನ್ನಿನ ಮೇಲೆ ನಾಲ್ಕು ಬಾರಿಸಿದಳು. ಅವನು ಅಳುತ್ತಾ ನಿಂತ. ‘ಇನ್ನು ಆಗೂದಾಗಿದೆ. ಹೊಡದ್ರೆ ಏನಾಗುತ್ತೆ?’-ಮೇಷ್ಟರು ಸಮಾಧಾನ ಹೇಳಿದರು. ನಂಜಮ್ಮ ಹುಡುಗನ ಕೈ ಹಿಡಿದು ಮನೆಗೆ ಬಂದಳು. ಇಬ್ಬರು ಮಕ್ಕಳೂ ಹೋದಮೇಲೆ ಅವಳಿಗೆ ಇರುವವನು ಇವನೊಬ್ಬ. ಈಜುತ್ತಾ ನಡುಗೆರೆಗೆ ಹೋಗುವುದು, ನದಿಯಲ್ಲೇ ಈಜುಬೀಳುವುದು, ಮಾದೇವಯ್ಯನವರ ಗುಡಿಯ ಮಾಳಿಗೆಯ ಮೇಲೆ ಹತ್ತಿ ಕೆಳಕ್ಕೆ ಧುಮುಕುವುದು, ಕದ್ದು ಬೇರೆಯವರ ಮರಿಕುದುರೆ ಹತ್ತಿ ಸವಾರಿ ಮಾಡುವುದು, ಹೆಜ್ಜೇನಿನ ಗೂಡನ್ನು ಒಬ್ಬನೇ ಬಿಚ್ಚಲು ಹೋಗುವುದು, ಒಬ್ಬನೇ ಹಾವು ಹೊಡೆಯುವುದು, ಇಂತಹ ಸಾಹಸ ಕೆಲಸವೇ ಅವನದು. ಅವಳಿಗೆ ತನ್ನ ತಂದೆಯ ನೆನಪಾಯಿತು. ಅಜ್ಜನ ಹಾಗೆಯೇ ಹುಟ್ಟಿದಾನೆ ಇವನು. ಮುಂದೆ ಅದೇ ಬುದ್ಧಿ ಬರದಿದ್ದರೆ ಸಾಕು. ಈಗ ಇವನು ಮಾಡಿ ಬಂದಿರುವ ಗಂಡಾಂತರಕ್ಕೆ ಏನು ಮಾಡುವುದು? ಹಾವು ಹನ್ನೆರಡು ವರ್ಷ ಹಗೆ ತೀರಿಸುತ್ತೆ. ಇವನು ಬೆಳಗ್ಗೆದ್ದರೆ ಅಲ್ಲಿಗೇ ಸ್ಕೂಲಿಗೆ ಹೋಗಬೇಕು. ಆ ದಿನ ಬೆಳಿಗ್ಗೆ ಅವಳು ‘ಸ್ಕೂಲಿಗೆ ಕಳುಸ್ದೆ ಇರೂದೇನೋ ಸರಿ. ಆದರೆ ಎಷ್ಟು ದಿನ ಅಂತ ಹುಡುಗನನ್ನ ಹಿಂಗೇ ಮನೇಲಿ ಕೂರಿಸ್ಕಂಡಿರ್ತೀರಿ?’

ಅದು ಒಂದು ಪ್ರಶ್ನೆಯೇ. ಪ್ರೈಮರಿ ಮುಗಿದು ಅವನು ಕಂಬನಕೆರೆಯ ಮಿಡ್ಳ್ ಸ್ಕೂಲಿಗೆ ಹೋಗಬೇಕು. ತಿಪಟೂರಿಗೂ ಹೋಗಿ ಹೈಸ್ಕೂಲು ಓದಬೇಕು. ಅಷ್ಟಾದರೆ ಮುಂದೆ ಶೇಕ್‌ದಾರಿ ಆದೀತು. ಇಲ್ಲದಿದ್ದರೆ ಮಿಡ್ಳ್‌ಸ್ಕೂಲು ಮೇಷ್ಟರಾಗಬಹುದು. ವಿದ್ಯೆ ಇಲ್ಲದಿದ್ದರೆ ಅವನ ಅಪ್ಪ ಅಥವಾ ಚಿಕ್ಕಪ್ಪ ಆದಾನು. ಏನು ಮಾಡಬೇಕೆಂದು ಅವಳಿಗೆ ತಿಳಿಯಲಿಲ್ಲ. ಹೋಗಿ ಮಾದೇವಯ್ಯನವರನ್ನು ಕೇಳಿದಳು. ಒಂದು ದಿನವೆಲ್ಲ ಯೋಚನೆ ಮಾಡಿ ಅವರೇ ಮನೆಗೆ ಬಂದು ಹೇಳಿದರು: ‘ ಈಗ ಇವ್ನು ಹ್ಯಂಗೂ ಮೂರನೇ ಕಲಾಸು. ಕರ್ಕಂಡ್ ಹೋಗಿ ನಿಮ್ಮ ಅಣ್ಣಯಾರ ಮನ್ಲಿ ಬಿಟ್‌ಬಿಡಿ. ನಾಕನೇ ಕಲಾಸು ಅಲ್ಲಿ ಮುಗುಸ್ಲಿ, ಆಮ್ಯಾಲೆ ಅವ್ನು ಈ ಸ್ಕೂಲಿಗೆ ಬರಾಕಿಲ್ಲ. ಕಂಬನಕೆರೇಲಿ ಏನಾದ್ರೂ ಅನ್ನದ ದಾರಿ ಮಾಡಿ ಇಂಗ್ಲೀಷ್ ಇಸ್ಕೂಲಿಗೆ ಸೇರಿಸ್‌ಬುಡಿ. ರಜದಾಗೆ ಊರಿಗೆ ಬಂದ್ರೂ ಈ ಊರ ಇಸ್ಕೂಲ್ ಕಡೆ ಹೋಗದೇ ಇದ್ರೆ ಆಯ್ತು. ಅಷ್ ಹೊತ್ಗೆ ಹುಡ್ಗ ಬೆಳ್ದಿರ್ತಾನೆ. ಮನುಷ್ರುಗೇ ಗುರ್ತು ಸಿಕ್ಕಾಕುಲ್ಲ. ಇನ್ನು ಹಾವಿಗೆ ಹ್ಯಂಗೆ ತಿಳೀತೈತಿ?’
‘ಅಲ್ಲಿ ನಮ್ಮ ಅತ್ತಿಗೆ ಎಂಥೋಳು ಅಂತ ನಿಮಗೇ ಗೊತ್ತಿದೆಯಲ ಅಯ್ನೋರೇ?’
‘ಅವ್ಳು ಹ್ಯಂಗಿದ್ರೇನು? ಮನ್ಲಿ ಅಜ್ಜಿ ಐತಿ. ಯಾವ್ದೂ ಮಕ್ಳಿಲ್ಲ. ನಿಮ್ಮಣ್ಣಯ್ಯನೂ ವೈನಾಗಿ ನೋಡ್ಕಂತೈತಿ.’

ಇದೇ ಉತ್ತಮ ಉಪಾಯವೆಂದು ಅವಳಿಗೂ ಎನ್ನಿಸಿತು. ಆದರೆ ಇರುವ ಒಬ್ಬ ಮಗನನ್ನು ಅಲ್ಲಿ ಬಿಟ್ಟು ಬಿಟ್ಟು ತಾನೊಬ್ಬಳೇ ಇಲ್ಲಿ ಹೇಗೆ ಇರಬೇಕು?-ಎಂಬ ಕೊರಗು ಬಾಧಿಸುತ್ತಿತ್ತು. ಊರಿನಲ್ಲಿಟ್ಟುಕೊಂಡರೆ ಅವನಿಗೂ ಸಾವು ತಪ್ಪಿದ್ದಲ್ಲ ಎಂಬ ಭಯದ ಮುಂದೆ ಆ ಕೊರಗು ದೊಡ್ಡದಲ್ಲ. ರಜ ಬಂದಾಗ ಊರಿಗೆ ಕರ್‌ಕೊಂಡು ಬರಬಹುದು. ನಾನೇ ಮಧ್ಯೆ ಮಧ್ಯೆ ಹೋಗಿ ನೋಡಿಕೊಂಡು ಬರೂದು. ಅಂತೂ ಇನ್ನು ಒಂದೂವರೆ ವರ್ಷ ಅವನು ಅಲ್ಲಿರುವುದೇ ಸರಿ ಎಂದು ತೀರ್ಮಾನಿಸಿದಳು.

ಮರುದಿನ ಅವನಿಗೆ ನೀರು ಹಾಕಿದಳು. ದರ್ಜಿಗೆ ಹೇಳಿ ಹೊಸ ಶರಟು ಚಡ್ಡಿಗಳನ್ನು ಹೊಲಿಸಿದಳು. ಕೋಡುಬಳೆ ಚಕ್ಕುಲಿ ಬೇಯಿಸಿದಳು. ‘ಅಮ್ಮ, ನಾನು ಇನ್ನೇನೂ ಮಾಡುಲ್ಲ. ನನ್ನ ಎಲ್ಲೂ ಕಳಿಸ್‌ಬ್ಯಾಡ’-ಎಂದು ವಿಶ್ವ ಅಂಗಲಾಚಲು ಶುರುಮಾಡಿದ. ‘ಇನ್ನು ಒಂದು ವರ್ಷ ಮರಿ. ಆಮ್ಯಾಲೆ ಕಂಬನಕೆರೆಗೆ ಬರೂವಂತೆ. ನಾನೇ ಬೇಕಾದ್ರೆ ಅಲ್ಲಿಗೆ ಬಂದು ನಿಂಗೆ ಅಡಿಗೆ ಮಾಡ್ಕಂಡು ಇರ್ತೀನಿ. ನೀನು ಸುಮ್ನಿರ್ಲಾರ್ದೆ ಆ ಹಾವು ಯಾಕೆ ಹ್ವಡಿಯುಕ್ಕೆ ಹೋಗಿದ್ದೆ?’-ಎಂದು ಕಣ್ಣಿರು ಹಾಕುತ್ತಾ ಅವನ ಕಣ್ಣೀರನ್ನು ಒರಸಿ ಸಮಾಧಾನ ಮಾಡಿದಳು. ಎರಡು ಮೂಟೆ ರಾಗಿ ಇಪ್ಪತ್ತು ಸೇರು ಅವರೇಕಾಳು ಒಂದು ಮೊಗೆ ಹರಳೆಣ್ಣೆ, ಒಂದು ಧಡಿಯ ಸೀಗೆಪುಡಿಗಳನ್ನು ಗಾಡಿಗೆ ಹಾಕಿಸಿದಳು. ಸರ್ಟಿಫಿಕೇಟನ್ನು ಜೋಪಾನವಾಗಿ ಇಟ್ಟುಕೊಂಡು ವಿಶ್ವನೊಡನೆ ಹೊರಟಳು. ಚೆನ್ನಿಗರಾಯರು ಸಂಗಡ ಬರಲಿಲ್ಲ.

ತಂಗಿಯ ಮಗನನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಲ್ಲೇಶನಿಗೂ ಸಂತೋಷವೇ. ಅಕ್ಕಮ್ಮನಿಗಂತೂ ಎಷ್ಟೋ ಉತ್ಸಾಹ. ನೀರು ಗೀರು ಸೇದಲು ಅವಳ ಕೈಲಿ ಆಗುವುದಿಲ್ಲ. ಆದರೂ ಸರಿ, ತಾನು ಮರಿಮಗನಿಗೆ ವಾರಕ್ಕೊಂದು ಸಲ ಎಣ್ಣೆ ನೀರು ಹಾಕುವುದಾಗಿ ಹೇಳಿದಳು. ಹೆಡಸು ತೋರಿಸಿದವಳು ಕಲ್ಲೇಶನ ಹೆಂಡತಿ‌ಒಬ್ಬಳೇ. ಆದರೆ ಅವಳ ವರ್ತನೆ ಯಾರಿಗೂ ಅನಿರೀಕ್ಷಿತವಾದದ್ದಲ್ಲ.

ಸಂಗಡ ತಂದಿದ್ದ ದಿನಸಿ ಧಾನ್ಯಗಳನ್ನು ಕಂಡ ಕಲ್ಲೇಶ-‘ಇವನ್ನೆಲ್ಲ ಯಾಕೆ ತಂದೆ? ನನ್ನಮನೇಲಿ ಇಷ್ಟು ಅನ್ನವಿಲ್ಲವೆ? ವಾಪಸ್ ಹೇರ್ಕಂಡು ಹೋಗು’ ಎಂದ.
‘ಮಗನ ಊಟದ ಖರ್ಚು ಅಂತ ನಾನು ತರಲಿಲ್ಲ. ಅವನಿಗೆ ಅನ್ನ ಹಾಕೂಕೆ ನೀನು ಬಾಧ್ಯಸ್ಥನೇ. ಏನೋ ಮನೇಲಿತ್ತು ಅಂತ ತಂದೆ. ನಿನ್ನ ಮನೇಲೂ ತುಂಬ ಕರಾವಾಗುತ್ತೆ. ಅವನಿಗೆ ಹಾಲು ತುಪ್ಪಕ್ಕೇನೂ ಯೋಚನೆ ಇಲ್ಲ. ನೀನು ಇನ್ನೇನೂ ಮಾಡಬ್ಯಾಡ. ಅವನ ತುಂಟತನ ವಿಪರೀತ. ನಮ್ಮೂರಿನಲ್ಲಿ ಅವನಿಗೆ ಗಂಡಸರ ಭಯವಿರಲಿಲ್ಲ. ಎಷ್ಟೇ ಹೊಡೆದರೂ ಗಂಡುಮಕ್ಕಳು ಹೆಂಗಸರಿಗೆ ಗೆದರೂದಿಲ್ಲ. ನಾನೇನಂತಾಳೋ ಅಂತ ಪಟ್ಟುಕೋಬ್ಯಾಡ. ನಾಲ್ಕು ಕೊಟ್ಟು ಭಯದಲ್ಲಿಟ್ಟು ಬುದ್ಧಿ ಕಲಿಸು. ಓದಿ ಬರಿಯೋದ್ರಲ್ಲಿ ಅವನು ಜಾಣ. ಊರಿನಲ್ಲಿರೂತನಕ ನಾನು ಮನೇಲಿ ಪಾಠ ಹೇಳಿಕೊಡ್ತಿದ್ದೆ. ಇಲ್ಲಿ ನಿಂಗೆ ಆದ್ರೆ ಹೇಳಿಕೊಡು. ಇಲ್ದೆ ಇದ್ರೆ ಮೇಷ್ಟ್ರುನ್ನ ಗೊತ್ತುಮಾಡು. ನಾನು ತಿಂಗ್ಳಿಗೆ ಒಂದು ರೂಪಾಯಿ ಕೊಟ್ಟುಕಳುಸ್ತೀನಿ.’
ಇನ್ನು ಕಲ್ಲೆಶ ಮತ್ತೆ ಮಾತನಾಡುವಂತಿರಲಿಲ್ಲ. ‘ನಾಲ್ಕು ದಿನ ಇದ್ದು ಹೋಗು’-ಎಂದು ಅವನೂ ಅಕ್ಕಮ್ಮನೂ ಹೇಳಿದರೂ, ಅವಳಿಗೆ ಊರಿನಲ್ಲಿ ಲೆಕ್ಕದ ಕೆಲಸವಿತ್ತು. ಮರುದಿನ ಅದೇ ಗಾಡಿಯಲ್ಲಿ ಹೊರಟಳು.

‘ಅಮ್ಮ, ನಾನೂ ಊರಿಗ್ ಬತ್ತೀನಿ’-ಎಂದು ವಿಶ್ವ ಅಳುತ್ತಿದ್ದ. ಅಮ್ಮನಿಗೂ ಅಳು ಬರುತ್ತಿತ್ತು. ಕಣ್ಣೀರು ಒರೆಸಿಕೊಳ್ಳುತ್ತಾ ಅವಳು ಗಾಡಿಯ ಮೇಲೆ ಕೂತಳು.
ಅಪ್ಪ ಕಂಠೀಜೋಯಿಸರನ್ನು ಕಾಣಲಾಗಲಿಲ್ಲ. ಅವರು ಊರಿಗೆ ಬಂದು ಮೂರು ತಿಂಗಳಾಯಿತಂತೆ.

– ೨ –

ವಿಶ್ವನನ್ನು ಬಿಟ್ಟು ಬಂದಮೇಲೆ ನಂಜಮ್ಮನಿಗೆ ಹೊತ್ತು ಹೋಗುವುದೇ ಕಷ್ಟವಾಯಿತು. ಮಾಡುವುದಕ್ಕೆ ಕೆಲಸವೇನೋ ಇರುತ್ತಿತ್ತು. ಆದರೆ ಸದಾ ಬಿಕೋ ಎನ್ನುತ್ತಿತ್ತು. ಪಾರ್ವತಿ ರಾಮಣ್ಣರ ನೆನಪು ಮತ್ತೆ ಕಾಡಲು ಶುರುವಾಯಿತು. ಅವಳು ಕೂತು ಶ್ಯಾನುಭೋಗಿಕೆ ಲೆಕ್ಕ ಬರೆಯುವ, ರಾಗಿ ಮಾಡುವ, ಬೀಸುವ, ಬಂದವರೊಡನೆ ಮಾತನಾಡುವ ನಡುಮನೆಯಲ್ಲೇ ಇಬ್ಬರು ಮಕ್ಕಳೂ ಕಾಯಿಲೆ ಮಲಗಿ ಒಬ್ಬರ ಹಿಂದೆ ಒಬ್ಬರಂತೆ ಸತ್ತುಹೋದುದು. ಈ ಮನೆಯಲ್ಲಿರುವುದೇ ಬೇಡವೆನಿಸುತ್ತಿತ್ತು. ಆದರೆ ಬೇರೆ ಎಲ್ಲಿಗೆ ಹೋಗುವುದು? ಇದೇ ಸಮಯದಲ್ಲಿ ಅವಳಿಗೆ ನೆನಪಾಯಿತು: ಈ ಮನೆಗೆ ಬಂದು ಹೆಚ್ಚು ಕಡಿಮೆ ಹದಿಮೂರು ವರ್ಷವಾಯಿತು. ಗುಂಡೇಗೌಡರ ಮನೆ ತನ್ನ ಸ್ವಂತ ಮನೆಯೇ ಎನ್ನುವಂತೆ ಆಗಿಹೋಗಿದೆ. ಅವರಿಗೇನೂ ಇದರ ಅಗತ್ಯವಿಲ್ಲ. ಆದರೆ ತಾನು ಊರಿನಲ್ಲಿ ಒಂದು ಸ್ವಂತ ಮನೆಯನ್ನಾದರೂ ಮಾಡಬೇಕು- ಎಂಬ ಆಶೆಯೊಂದು ಹುಟ್ಟಿತು.

ಹೊಸ ಮನೆಯಾದರೂ ಯಾಕೆ ಬೇಕು? ಮುಂದೆ ವಿಶ್ವ ಈ ಊರಿನಲ್ಲಿರುವುದು ಅವಳಿಗೆ ಬೇಡ. ಅವನು ಶೇಕ್‌ದಾರನಾಗಬೇಕು. ಇಲ್ಲದಿದ್ದರೆ ಮಿಡ್ಳ್ ಸ್ಕೂಲು ಮೇಷ್ಟರಾದರೂ ಆಗಬೇಕು. ಅವನೇನೂ ಇಲ್ಲಿ ಇರುವವನಲ್ಲ. ಮಗ ಇದ್ದಲ್ಲಿ ಹೋಗುವವಳು ತಾನು ಆದರೆ ತನ್ನ ಊರು ಅಂತ ಒಂದು ಗೂಡು ಇರಬೇಕು. ರಜ ಬಂದಾಗ ಬಂದು ನಾಲ್ಕು ದಿನ ಇರುವುದಕ್ಕೆ ಒಂದು ಜಾಗ ಬೇಕು. ಇದೇ ಸಂದರ್ಭದಲ್ಲಿ ಒಂದು ನಿವೇಶನ ಖರೀದಿಗೆ ಬಂತು. ಗಾಣಿಗರ ಚೆಲುವಶೆಟ್ಟಿ ಎಂಬುವವನಿಗೆ ಹೆಂಡತಿಯ ಊರಿನಲ್ಲಿ ಒಳ್ಳೆಯ ಆಸ್ತಿ ಸಿಕ್ಕಿತು. ಇಲ್ಲಿಯದನ್ನೆಲ್ಲ ಮಾರಿಹಾಕಿ ಅಲ್ಲಿಗೆ ಹೋಗಬೇಕೆಂದು ಅವನು ನಿರ್ಧರಿಸಿದ. ಅವನ ಮಾರಾಟದ ಕಾಗದ ಪತ್ರಗಳನ್ನೆಲ್ಲ ತಾನೇ ಬರೆಸಿಕೊಡುವುದಾಗಿ ಒಪ್ಪಿಕೊಂಡಳು. ಎಂದರೆ ಲೇಖನ ಅವಳದು. ಅಕ್ಷರ ಚೆನ್ನಿಗರಾಯರದು. ಜಮೀನು ಕೊಳ್ಳುವವರು ಬರವಣಿಗೆಗೆ ಇವರಿಗೆ ಏನೂ ಕೊಡುವಂತಿಲ್ಲ. ಒಟ್ತಿನಲ್ಲಿ ಅದ ಖರೀದಿಯ ಒಳಗೆ ಈ ನಿವೇಶನವೂ ಸೇರಬೇಕು. ಇದೊಂದನ್ನು ಚೆಲುವಶೆಟ್ತಿ ಇವರಿಗೆ ಬರೆದುಕೊಡಬೇಕು. ಇವರು ಐವತ್ತು ರೂಪಾಯಿ ಖರೀದಿ ಕೊಟ್ಟರೆ ಸಾಕು. ಹಾಗೆಯೇ ಎಲ್ಲವೂ ಆಯಿತು. ಸರ್ಕಾರಿ ಕಾನೂನನ್ನು ಬಲ್ಲ ನಂಜಮ್ಮ ನಿವೇಶನವನ್ನು ತನ್ನ ಹೆಸರಿಗೇ ಬರೆಸಿಕೊಂಡಳು. ಕಂದಾಯದ ರಶೀತಿಯ ಮೆಲೆ ಇತರ ಜಮೀನು ಕೊಂಡವರಿಂದ ಐವತ್ತು ರೂಪಾಯಿಯನ್ನು ಕೊಡಿಸಿದಳು. ಎರಡು ಅಂಕಣ ಜಗುಲಿ, ಒಳಗೆ ಮೂರು ಅಂಕಣದ ತೊಟ್ಟಿ, ಒಂದು ಅಂಕಣದ ಅಡಿಗೆ ಮನೆ, ಇನ್ನೊಂದು ರಾಗಿ ಪಾಗಿ ತುಂಬಲು ಅಥವಾ ಮುಂದೆ ಮಗನಿಗೆ ಮದುವೆಯಾದಮೇಲೆ ಅವರು ಮಲಗಲು; ಇಷ್ಟು ಅಂದಾಜು ಹಾಕಿ ಹಿಂಭಾಗದಲ್ಲಿ ಎರಡು ಹಸುಗಳನ್ನು ಕಟ್ಟುವಂತೆ ಗುಡಿಸಲು, ಉಳಿದ ಜಾಗದಲ್ಲಿ ಒಂದಿಷ್ಟು ತರಕಾರಿ ಬೆಳೆದುಕೊಳ್ಳುವುದು. ಒಟ್ಟು ಈ ಅಂದಾಜಿಗೆ ನಾಡಹೆಂಚು ಹೊದಿಸಿದರೆ ಏನಿಲ್ಲವೆಂದರೂ ಒಂದೂವರೆ ಸಾವಿರ ರೂಪಾಯಿ ಬೇಕು.

ಈಗಲೂ ದಿನಸಿ ಲೆಕ್ಕವಿದೆ. ಮೊದಲಿನಷ್ಟೇ ಆದಾಯವೂ ಇದೆ. ಕುರುಬರಹಳ್ಳಿಯವರೇ ಅಲ್ಲದೆ ರಾಮಸಂದ್ರ ಲಿಂಗಾಪುರದವರೂ ದಿನಸಿ ಲೆಕ್ಕ ಬಂದಮೇಲೆ ಮನೆಗೆ ಇಷ್ಟು ರಾಗಿ ಎಂದು ಕೊಡಲು ಪ್ರಾರಂಭಿಸಿದ್ದಾರೆ. ಮನೆಯಲ್ಲಿ ಮೊದಲಿನಷ್ಟು ಖರ್ಚಿಲ್ಲ. ಒಪ್ಪತ್ತು ಅಡಿಗೆ ಮಾಡಿದರೆ ಎರಡು ಹೊತ್ತಿಗೂ ಸಾಕು. ಒಟ್ಟು ಜಮಾವಣೆಯಾದ ರಾಗಿಯನ್ನು ಮಾರಬಹುದು. ಈಗ ರಾಗಿ ಖಂಡುಗಕ್ಕೆ ತೊಂಬತ್ತು ರೂಪಾಯಿಯಾಗಿದೆ. ಜೊತೆಗೆ ಎರಡು ವರ್ಷದ ಪೋಟಿಕೆ ಹಣವೆಂದರೆ ಐನೂರು ರೂಪಾಯಿಯಾಗುತ್ತೆ. ಮುಂದಿನ ವರ್ಷದ ಕಂದಾಯವನ್ನೂ ಈಗಲೇ ಕೊಟ್ಟಿರಿ ಅಂದರೆ ಕುರುಬರಹಳ್ಳಿಯವರು ಕೊಡುತ್ತಾರೆ.

ಇದೇ ಸಂದರ್ಭದಲ್ಲಿ ಒಂದು ದಿನ ಮೇಷ್ಟರು ಬಂದು ಹೇಳಿದರು: ‘ನೋಡಿ, ಈಗ ಸರ್ಕಾರದೋರು ವಯಸ್ಕರ ಶಿಕ್ಷಣ ಸಮಿತಿ ಅಂತ ಮಾಡಿದಾರೆ. ಗಂಡಸರು ಹೆಂಗಸರೆಲ್ಲ ಓದಿ ಬರೆಯೂದು ಕಲಿಯಬೇಕು ಅಂತ ಸರ್ಕಾರದ ಹುಕುಂ ಆಗಿದೆ. ಹದಿನೆಂಟು ವರ್ಷಕ್ಕೆ ಮೇಲ್ಪಟ್ಟವರಿಗೆ ರಾತ್ರಿ ಏಳು ಗಂಟೆಯಿಂದ ಒಂಬತ್ತು ಗಂಟೆ ತನಕ ಓದಿ ಬರೆಯೂದು ಹೇಳಿಕೊಡೂದು. ಅದಕ್ಕೆ ನೈಟ್ ಸ್ಕೂಲ್ ಅಂತಾರೆ. ಈ ಊರಲ್ಲಿ ಗಂಡಸರ ನೈಟ್ ಸ್ಕೂಲಿಗೆ ನನ್ನನ್ನ ನೇಮಕಮಾಡಿದಾರೆ. ಸಂಬಳವಲ್ಲದೆ ತಿಂಗಳಿಗೆ ಇಪ್ಪತ್ತೈದು ರೂಪಾಯಿ ಕೊಡ್ತಾರೆ. ಈ ಊರಲ್ಲಿ ವಿದ್ಯಾವಂತೆಯಾದ ಹೆಂಗಸರು ಯಾರಿದಾರೆ ಅಂತ ನಮ್ಮ ಇನ್‌ಸ್ಪೆಕ್ಟರು ಕೇಳಿದರು. ನಾನು ನಿಮ್ಮ ಹೆಸರು ಹೇಳಿದೆ.’
‘ನನ್ನ ಕೈಲಿ ಆ ಕೆಲಸ ಆಗುತ್ತದೆಯೇ ಮೇಷ್ಟರೆ?’
ಇದೇನು ಹೀಗಂತೀರಾ? ಒಟ್ಟು ಎಂಟು ತಿಂಗಳ ಕೆಲಸ ಅದು. ಒಂದು ಗುಂಪು ಆದಮೇಲೆ ಇನ್ನೊಂದು ಗುಂಪಿಗೆ ಶುರು ಮಾಡೂದು. ಅ ಆ ಇ ಈ ಕಲಿಸಿ ಎರಡನೇ ಪುಸ್ತಕ ಓದುವಷ್ಟಾದರೆ ಸಾಕು. ಆಮೇಲೆ ಅವರೇ ಮನೇಲಿ ಪೇಪರು ಗೀಪರು ಓದ್ಕಂಡು ಚಾಲ್ತಿ ಮಾಡ್ಕಬೇಕು. ತಿಂಗಳಿಗೆ ಇಪ್ಪತ್ತೈದು ರೂಪಾಯಿ ಬರುತ್ತೆ. ಬರೀ ಹೆಂಗಸರೇ ಸೇರಬೇಕು.’
‘ಅಕ್ಷರ ಕಲಿಯುಕ್ಕೆ ಯಾರಿಗೆ ಆಶೆ ಇದೆ , ಅದೂ ಈ ಊರ ಹೆಂಗಸರಿಗೆ?’
‘ಸರ್ಕಾರ್‌ದೋರೇ ಸ್ಲೇಟು ಪುಸ್ತಕ, ಬಳಪ, ಸೀಸದ ಕಡ್ಡಿ, ಎಲ್ಲಾ ಕೊಡ್ತಾರೆ. ನಿಮ್ಮ ಉರಿಸೋ ದೀಪದ ದುಡ್ಡೂ ಕೊಡ್ತಾರೆ. ಬೋರ್ಡು, ಸೀಮೇಸುಣ್ಣ, ಎಲ್ಲಾ ಕೊಡ್ತಾರೆ. ನಿಮ್ಮ ಮನೇಲಿ ಸ್ಕೂಲು ಮಾಡಿ. ಮೊದಲು ಒಂದೇಳೆಂಟು ಜನ ಹೆಂಗಸರನ್ನ ಗುಡ್ಡೆ ಹಾಕಿದ್ರೆ ಆಮ್ಯಾಲೆ ಬಾಕಿಯೋರು ಬರ್‌ಭೌದು. ಬೇಕಾದ್ರೆ ನಮ್ಮನೆಯೋಳುನ್ನೂ ಕಳುಸ್ತೀನಿ.’

ನಂಜಮ್ಮ ಇದಕ್ಕೆ ಒಪ್ಪಲಿಲ್ಲ. ಒಂದು ದಿನ ಇವರ ಮನೆಗೆ ಬಂದ ಶೇಕ್‌ದಾರರೂ ಇದೇ ಮಾತು ಹೇಳಿದಮೇಲೆ ಒಪ್ಪಿಕೊಂಡಳು. ಕಂಬನಕೆರೆಯ ಮಿಡ್ಳ್‌ಸ್ಕೂಲ್ ಹೆಡ್ಮಾಸ್ಟರು ಇದರ ಮೇಲ್ವಿಚಾರಕರಾಗಿದ್ದರು. ಅವರೇ ಒಂದು ದಿನ ಗಾಡಿ ಹೊಡೆಸಿಕೊಂಡು ಬಂದು ಸ್ಲೇಟು ಪುಸ್ತಕ ಬೋರ್ಡು, ಲಾಟೀನು ಮೊದಲಾದ ಎಲ್ಲವನ್ನೂ ಕೊಟ್ಟು ಹೋದರು. ಮೇಸ್ಟರ ಹೆಂಡತಿಗೆ ಅ ಆ ಇ ಈ ಬರುತ್ತಿತ್ತು. ಆದರೂ ಮೇಸ್ಟರು ಅವರನ್ನು ಸೇರಿಸಿಕೊಂಡರು. ನಂಜಮ್ಮನಿಗೆ ಆಶ್ಚರ್ಯವಾದುದೆಂದರೆ ಸರ್ವಕ್ಕ ತಾನಾಗಿಯೇ ಬಂದು ಸೇರಿಕೊಂಡಳು. ಗಂಡ ಮನೆಯಲ್ಲಿ ಅಡ್ಡಿ ಮಾಡಿದರೂ ಅವಳು ಕೇಳಲಿಲ್ಲ. ಲಿಂಗಾಯಿತರ ಪೈಕಿ ನಾಲ್ಕು ಜನ, ಮಗ್ಗದ ಇಬ್ಬರು, ಕುರುಬರಕೇರಿಯ ಎರಡು ಹೆಣ್ಣು ಹುಡುಗಿಯರು ಮೊದಲಾಗಿ ಒಟ್ಟು ಹದಿನಾಲ್ಕು ಜನರಾಯಿತು. ಅ ಆ ಇ ಈ ಎಂದು ಬೋರ್ಡಿನ ಮೇಲೆ ಬರೆದು ಎಲ್ಲರಿಗೂ ಕ್ಲಾಸು ಮಾಡುವುದು ನಂಜಮ್ಮನಿಗೆ ಹೊಸ ಅನುಭವ.

ಕಲಿತವರು ಕಲಿತರು; ಇಲ್ಲದವರು ಇಲ್ಲ. ಆದರೆ ಸರ್ವಕ್ಕನಿಗೆ ಇಷ್ಟು ಬುದ್ಧಿ ಇದೆ ಎಂಬುದು ನಂಜಮ್ಮನಿಗೆ ಗೊತ್ತಿರಲಿಲ್ಲ. ಒಂದೇ ದಿನಕ್ಕೆ ಅವಳು ಎಂಟು ಅಕ್ಷರ ಕಲಿತಳು. ಎಂಟು ದಿನದಲ್ಲಿ ಐವತ್ತೆರಡನ್ನೂ ಕಲಿತು ಸರಳ ಅಕ್ಷರಗಳನ್ನು ಸೇರಿಸಿ ಓದತೊಡಗಿದಳು.
‘ನಂಜಮ್ಮಾರೇ, ಮೊದ್ಲು ನೀವು ನಂಗೆ ಇದಾರ ಏಳ್ಕೊಟ್ಟಿದ್ರೆ ಕಲ್ತ್ಕತ್ತಿದ್ದೆ ಕಣ್ರಿ. ನಾನು ನಿಮ್ಹಾಗೆ ಲೆಕ್ಕ ಗಿಕ್ಕ ಬರೀಭೌದಾಗಿತ್ತು’- ಎಂದಳು.
‘ಲೆಕ್ಕ ಬರಿಯುಕ್ಕೆ ಎಲ್ಲರಿಗೂ ಶ್ಯಾನುಭೋಗಿಕೆ ಎಲ್ಲಿರುತ್ತೆ ಸರ್ವಕ್ಕ?’
‘ಅದೂ ನಿಜ ಅನ್ನಿ.’

ದಿನವೂ ಬೆಳಗಿನಿಂದ ಸಂಜೆಯತನಕ ಮನೆಗೆಲಸ ಶ್ಯಾನುಭೋಗಿಕೆಯ ಲೆಕ್ಕಗಳಾಗುತ್ತಿದ್ದವು. ಒಂದೊಂದು ದಿನ ಇಳಿಮಧ್ಯಾಹ್ನದ ಹೊತ್ತು ಮಾದೇವಯ್ಯನವರು ಬಂದು ಕೂತು ಏನಾದರೂ ಮಾತನಾಡುತ್ತಿದ್ದರು. ರಾತ್ರಿಯ ಎಂಟೂವರೆ ಒಂಬತ್ತರ ತನಕ ಕ್ಲಾಸು ನಡೆಯುತ್ತಿತ್ತು. ಆಮೇಲೆ ಊಟಮಾಡಿ ಮಲಗಿದರೆ ಬೇಗ ನಿದ್ದೆ ಬರುತ್ತಿತ್ತು. ಅದೊಂದು ಉಪಯೋಗ. ಪಾಠ ಹೇಳುವಾಗ ಅವಳಿಗೆ ವಿಶ್ವನ ನೆನಪು ಬರುವುದು. ಈಗ ಅವನು ಹೇಗಿದ್ದಾನೋ! ಅಮ್ಮನನ್ನು ನೆನೆಸಿಕೊಂಡು ಅಳಬಹುದು. ಅಕ್ಕಮ್ಮ ಇರುವ ತನಕ ಯೋಚನೆ ಇಲ್ಲ. ಅವಳು ಮನಸ್ಸು ನೋಯಿಸುವುದಿಲ್ಲ.

ಕ್ಲಾಸು ಎರಡು ಮೂರು ತಿಂಗಳು ನಡೆಯಿತು. ಸೇರಿದವರಲ್ಲಿ ಆರು ಜನ ಬಿಟ್ಟು ಈಗ ಎಂಟು ಜನ ಮಾತ್ರ ಬರುತ್ತಿದ್ದಾರೆ. ‘ಅವರು ಬಿಟ್ಟರೂ ನೀವು ಅಟೆಂಡನ್ಸ್ ರಿಜಿಸ್ಟರಿನಲ್ಲಿ ಮಾತ್ರ ಎಲ್ಲರಿಗೂ ಪ್ರಸಂಟ್ ಹಾಕ್ಕೊಂಡು ಬನ್ನಿ’-ಎಂದು ಮೇಷ್ಟರು ಹೇಳಿದ್ದರು. ಮೇಷ್ಟರ ಗಂಡಸರ ರಾತ್ರಿ ಸ್ಕೂಲೇ ಉತ್ತಮವಾಗಿತ್ತು. ಒಟ್ಟು ಸೇರಿದ್ದ ಇಪ್ಪತ್ತೆರಡು ಜನ ದಲ್ಲಿ ಇಪ್ಪತ್ತು ಜನ ತಪ್ಪದೆ ಹೋಗುತ್ತಿದ್ದರು.
ಒಂದು ದಿನ ಮನೆಯಲ್ಲಿ ಚೆನ್ನಿಗರಾಯರು ಇರಲಿಲ್ಲ. ಮೇಷ್ಟರು ಬಂದರು. ಅವರ ರಾತ್ರಿ ಸ್ಕೂಲಿನ ವಿಷಯ ಹೇಳುತ್ತಿದ್ದರು: ‘ಇಷ್ಟು ವಯಸ್ಸಾದ್ರೂ ನಾಲ್ಕು ದಿನ ಹೇಳಿಕೊಟ್ರೂ ಅಕ್ಷರಾನೇ ಜ್ಞಾಪಕದಲ್ಲಿ ಇಟ್ಕಳುಲ್ಲ. ಅವರ ಜ್ಞಾನ ಎತ್ತಲೋ ಇರುತ್ತೆ. ಸ್ಕೂಲಿನೊಳಗೆ ಬೀಡಿ ಸೇದ್‌ಕೂಡ್ದು ಅಂದ್ರೂ ಬಿಡುಲ್ಲ. ಈ ಜನ ಹ್ಯಾಗೆ ಅಕ್ಷರಸ್ಥರಾಗ್ತಾರೆಯೋ ದೇವರಿಗೇ ಗೊತ್ತು.’
‘ಮೇಷ್ಟರೇ, ನಮ್ಮ ಅಪ್ಪಣ್ಣಯ್ಯ ನಾಳೆ ಸಾರು ತಗಂಡುಹೋಗೂಕೆ ಬಂದಾಗ ಹೇಳ್ತೀನಿ. ಅವ್ನುನ್ನೂ ನಿಮ್ಮ ರಾತ್ರಿ ಸ್ಕೂಲಿಗೆ ಸೇರಿಸ್ಕಳಿ. ಹಗಲು ಹೊತ್ತೂ ಅವರು ಊರಲ್ಲಿದ್ದ ದಿನ ನೀವು ಒಂದಿಷ್ಟು ಹೇಳಿಕೊಡಿ. ಸ್ವಲ್ಪನಾದ್ರೂ ವಿದ್ಯವಿದ್ರೆ ಅವರ ಪಾಡು ಹೀಗಾಗ್ತಾ ಇರ್‌ಲಿಲ್ಲ.’
‘ಓ, ಅಪ್ಪಣ್ಣಯ್ಯನೋರು ಬೇರೆ ರಾತ್ರಿ ಸ್ಕೂಲಿಗೆ ಹೋಗ್ತಿದಾರೆ’- ಎಂದು ಅವರು ನಕ್ಕರು.
‘ಏನು ಸಮಾಚಾರ?’
‘ಈಗ ಅವರಿಗೂ ನರಸಿಗೂ ಸ್ನೇಹವಂತೆ.’
ನಂಜಮ್ಮ ಇದನ್ನು ನಂಬದಾದಳು. ಅಪ್ಪಣ್ಣಯ್ಯನ ಹತ್ತಿರ ದುಡ್ಡು ದುಗ್ಗಾಣಿ ಇದೆ? ಶೋಕೀದಾರನೆ? ದೇಶಾವರಿಯಲ್ಲಿ ರಾಗಿ ಕಾಳು ತಂದು ಮುದ್ದೆ ತೊಳಸಿ ತಿನ್ನುವ ಬ್ರಾಹ್ಮಣ. ಬೇರೆ ಹೆಂಗಸರನ್ನು ಹಾಗೆಲ್ಲ ಕತ್ತೆತ್ತಿ ನೋಡುವ ಸ್ವಭಾವವೂ ಅಲ್ಲ.
‘ಇದೆಲ್ಲೋ ಸುಳ್ಳು ಸಮಾಚಾರ ಇರ್‌ಭೌದು ಮೇಷ್ಟ್ರೆ’-ನಂಜಮ್ಮ ತನಗೆ ಎನ್ನಿಸಿದುದನ್ನು ಹೇಳಿದಳು.
‘ಇಲ್ಲ ನಿಜವಂತೆ. ಈಗ ಅವಳನ್ನೂ ಮೂಸೋರು ಯಾರೂ ಇಲ್ಲ. ಅವಳಿಗೇನು ದುಡ್ಡಿಗೆ ತಾಪತ್ರಯವಿಲ್ಲ. ಅಪ್ಪಣ್ಣಯ್ನೋರಿಗೂ ಯಾರು ಜೊತೆ? ಹೆಂಡತಿಯೇ, ಮಕ್ಕಳೇ, ತಾಯಿಯೇ? ಅಲ್ಲಿ ತಿರುಪೆ ಮಾಡಿ ಇಲ್ಲಿ ತಂದು ಬೇಯಿಸ್ಕಂಡ್ ತಿಂತಾರೆ. ಹ್ಯಾಗೆ ಬೆಳೀತೋ ಸಂಬಂಧ, ದೇವರಿಗೇ ಗೊತ್ತು.’

ನಂಜಮ್ಮನಿಗೆ ಯಾಕೋ ನಾಚಿಕೆಯಾದಂತೆ ಆಯಿತು. ಎಷ್ಟಾದರೂ ಅವರು ತನ್ನ ಮನೆಯವರೇ. ತನಗೆ ಮೈದುನನಾಗಬೇಕು. ತಿರುಪೆ ಮಾಡಿ ಜೀವಿಸುವುದು ಅವರ ಹಣೇಲಿ ಬರೆದಿರಬಹುದು. ಆದರೆ ಇಷ್ಟು ದಿನವಾದಮೇಲೆ ಈ ಪ್ರಾರಬ್ಧ ಯಾಕೆ ಅಂಟಬೇಕು? ಅವರೊಬ್ಬರು ದೇಶಾವರಿಗೆ ಹೋಗದೆ ತನ್ನ ಮನೆಯಲ್ಲೇ ಊಟ ಮಾಡಿಕೊಂಡಿರಲಿ. ಇರುವ ಎರಡು ಹಸುಗಳ ನಿಗ ನೋಡಿಕೊಂಡಿದ್ದರೆ ಸಾಕು-ಎಂಬ ಯೋಚನೆ ಅವಳಿಗೆ ಕೆಲವು ದಿನದಿಂದ ಬಂದಿತ್ತು. ಆದರೆ ಹಾಗೆ ಹೇಳಿದರೆ ಅತ್ತೆ ಗಂಗಮ್ಮ ಜಗಳ ತೆಗೆಯುತ್ತಾರೆ. ಸಲ್ಲದ ಅಪಪ್ರಚಾರವನ್ನೂ ಮಾಡಬಹುದು. ಅಲ್ಲದೆ ಅಪ್ಪಣ್ಣಯ್ಯವ ಸ್ವಭಾವವೂ ಒಂದು ತೆರನಾಗಿರುವುದಿಲ್ಲ. ದೇಶಾವರಿ ಸಂಚಾರ ಮಾಡದಿದ್ದರೆ ಅವರ ಕಾಲು ಕಡಿಯುತ್ತಿರುತ್ತೆ. ಅವರವರ ಹಣೆಯಲ್ಲಿ ಬರೆದದ್ದು ಅವರವರಿಗೆ-ಎಂದು ಸುಮ್ಮನಾಗಿದ್ದಳು. ಆದರೆ ಮೇಷ್ಟರು ಈಗ ಹೇಳುವುದನ್ನು ಕೇಳಿದ ಮೇಲೆ ಮನಸ್ಸು ತಡೆಯಲಿಲ್ಲ.

ಅಪ್ಪಣ್ಣಯ್ಯನಿಗೆ ಈ ವಿಷಯದಲ್ಲಿ ಬುದ್ಧಿ ಮಾತು ಹೇಳಲೇ ಎಂದು ಅವಳು ನಾಲ್ಕು ದಿನ ಅಳೆದು ಸುರಿದು ನೋಡಿದಳು. ಕೊನೆಗೆ ಮನಸ್ಸು ತಡೆಯಲಿಲ್ಲ. ಒಂದು ಮಧ್ಯಾಹ್ನ ಅವನು ಸಾರಿನ ಪಾತ್ರೆ ಹಿಡಿದು ಬಂದಾಗ ಚೆನ್ನಿಗರಾಯರು ಮನೆಯಲ್ಲಿರಲಿಲ್ಲ. ಅವಳೇ-‘ಅಪ್ಪಣ್ಣಯ್ಯ, ಒಂದು ಮಾತು ಕೇಳ್ತೀನಿ. ನೀವು ಏನೂ ತಿಳ್ಕಕೂಡ್ದು’ ಎಂದಳು.
‘ಏನ್ಹೇಳಿ.’
‘ಜನದ ನಾಲಿಗೆಗೆ ಯಾವತ್ತೂ ಹಿಡಿತವಿಲ್ಲ. ನೀವು ನರಸಮ್ಮನ ಅಂಗ್‌ಡೀಲಿ ಹೊಗೆಸೊಪ್ಪು ಕೊಂಡ್ಕಳುಕ್ಕೆ ಹೋಗೋದುನ್ನೇ ನೆವ ಮಾಡ್ಕಂಡು ಏನೇನೋ ಅಂತಾರೆ. ನೀವು ಬೇರೆ ಅಂಗಡೀಲಿ ಹೊಗೆಸೊಪ್ಪು ಕೊಂಡ್ಕೊಂಡ್ರೆ ಆಗುಲ್ವೆ? ಸುಮ್‌ಸುಮ್ನೆ ಯಾಕೆ ಜನದ ನಾಲಿಗೆಗೆ ಸಿಕ್ಕಾಬೇಕು?
‘ಅವುರವ್ವನಾ, ಅದ್ಯಾವ್‌ನು ಹಾಗಂದೋನು?’
‘ಯಾರಾದ್‌ರೂ ಆಕ್ಕಳ್ಲಿ. ನಮ್ಮ ಎಚ್ಚರ ನಮಗಿದ್ರೆ ಒಳ್ಳೇದಲ್ವೆ?’

ಅಪ್ಪಣ್ಣಯ್ಯ ಮತ್ತೆ ಮಾತನಾಡಲಿಲ್ಲ. ಹುಳಿ ಇಸಿದುಕೊಂಡು ಹೋದ. ಆದರೆ ಮರುದಿನ ಸಾರಿಗೆ ಬರಲಿಲ್ಲ. ದಿನವೂ ಹೆಚ್ಚಾಗಿ ಮಾಡಿಟ್ಟು ಒಟ್ಟು ಎಂಟು ದಿನ ದಂಡವಾದಮೇಲೆ ನಂಜಮ್ಮ ಕಡಿಮೆ ಮಾಡಲು ಶುರುಮಾಡಿದಳು. ತಾನು ಯಾಕಾದರೂ ಹಾಗೆ ಕೇಳಿದೆನೋ, ತನ್ನ ಮೇಲಿನ ಸಿಟ್ಟಿಗೋ ಅಥವಾ ನಾಚಿಕೆಗೋ ಅವನು ಬಂದಿಲ್ಲ. ಗಂಡಸು ಒಬ್ಬನೇ ಹಿಟ್ಟು ತೊಳೆಸಿಕೊಳ್ಳುವುದರ ಜೊತೆಗೆ ಬೇಳೆಯನ್ನೂ ಬೇಯಿಸುವುದೆಂದರೆ ಎಷ್ಟು ತಾಪತ್ರಯ! ಅವರವರ ಕರ್ಮ. ಏನಾದರೂ ಮಾಡಿಕೊಂಡಿರಲಿ ಎಂದು ಯೋಚಿಸುತ್ತಿದ್ದಾಗ ತಿಳಿಯಿತು: ಅಪ್ಪಣ್ಣಯ್ಯ ಊರಿನಲ್ಲೇ ಇರಲಿಲ್ಲ. ಆ ಸಲ ಅವನು ಊರು ಬಿಟ್ಟು ಹೋದವನು ಮತ್ತೆ ಮೂರು ತಿಂಗಳು ಹಿಂತಿರುಗಲಿಲ್ಲ.
ಅವನು ನಾಲೆಬಯಲು ಸೀಮೆಗೆ ಒಬ್ಬನೇ ಹೋಗಿದ್ದನಂತೆ. ಹಿಂತಿರುಗಿ ಬಂದವನು ಅತ್ತಿಗೆಗೆ ಒಂದು ಪಲ್ಲ ಬತ್ತ ತಂದುಕೊಟ್ಟ. ಆಮೇಲೆ ದಿನವೂ ಸಾರು ತೆಗೆದುಕೊಂಡು ಹೋಗುತ್ತಿದ್ದ.
ಇನ್ನೊಂದು ದಿನ ಮೇಷ್ಟರೇ ಹೇಳಿದರು: ‘ಈಗ ಅಪ್ಪಣ್ಣಯ್ಯನೋರು ಆ ಕಡೆ ಹೋಗೂದಿಲ್ವಂತೆ. ನಾಲೆಬಯಲಿಗೆ ಹೋಗಿ ಬಂದಮೇಲೆ ಅವಳ ಅಂಗಡಿ ಮುಂದೆ ತಿರುಗಾಡೂದೂ ಇಲ್ವಂತೆ.’

– ೩ –

ಸೋದರ ಮಾವನೆಂದರೆ ವಿಶ್ವನಿಗೆ ಒಳಗೇ ಭಯ. ಕಲ್ಲೇಶನೇನೋ ಅವನ ಬಗೆಗೆ ಅಸಡ್ಡೆ ಮಾಡುತ್ತಿರಲಿಲ್ಲ. ಸಂತೆಯ ದಿನ ಕಡಲೆಪುರಿ, ಖಾರಶೇವು, ಬತ್ತಾಸು, ತಂದುಕೊಡುತ್ತಿದ್ದ. ತನ್ನ ಜೊತೆ ಹೊಲಗದ್ದೆಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಆದರೆ ತುಂಟಾಟ ಮಾಡಿದಾಗ ಅವನು ಗದ್ದರಿಸಿಕೊಂಡು ಕಣ್ಣು ತಿರುಗಿಸುತ್ತಿದ್ದ ರೀತಿಗೇ ಹುಡುಗ ಬೆವರುತ್ತಿದ್ದ. ಒಂದು ದಿನ, ಸ್ಕೂಲಿನಲ್ಲಿ ಇನ್ನೊಬ್ಬ ಹುಡುಗನ ಕೂಡ ಜಗಳಕಾಯ್ದನೆಂದು ಕಲ್ಲೇಶ ಅವನ ಕಪಾಳಕ್ಕೆ ಹೊಡೆದುಬಿಟ್ಟ. ಏಟಿನ ಜೋರಿಗೆ ಅವನು ಕಳಲಿ ಬಿದ್ದುದೇ ಅಲ್ಲ, ಚಡ್ಡಿಯ ಒಳಗೇ ಉಚ್ಚೆ ಹುಯ್ದುಕೊಂಡ. ಅಕ್ಕಮ್ಮ ಕಲ್ಲೇಶನನ್ನು ಬೈದು ಮಗುವನ್ನು ಎತ್ತಿ ಹತ್ತಿರ ಕೂರಿಸಿಕೊಂಡು ಸಮಾಧಾನ ಮಾಡಿದಳು.

ಕಮಲುವಿಗೆ ವಿಶ್ವನ ಬಗೆಗೆ ಸ್ವಲ್ಪವೂ ಸಹಾನುಭೂತಿ ಇಲ್ಲ. ಅವನು ಕೂತರೆ, ನಿಂತರೆ, ಮಾತನಾಡಿದರೆ ಅವಳಿಗೆ ತಪ್ಪು ಕಾಣುತ್ತಿತ್ತು. ಆದರೆ ಅಕ್ಕಮ್ಮ ಮತ್ತು ಗಂಡನ ಭಯಕ್ಕೆ ಅವಳು ಅವನನ್ನು ಬೈದು ಹೊಡೆದು ಮಾಡದೆ ಸುಮ್ಮನಿರುತ್ತಿದ್ದಳು. ‘ಈ ಮುಂಡೇದು ಬ್ಯಾರೆ ಒಂದು ಬಂತು ನಮ್ಮನೆ ಕೂಳು ತಿನ್ನೂಕೆ’-ಎಂದು ಪಿಟ ಪಿಟ ಬೈದುಕೊಳ್ಳುತ್ತಿದ್ದಳು.

ಈಗ ಹುಡುಗ ಮೊದಲಿನಷ್ಟು ಸುಟಿಯಾಗಿಲ್ಲ. ಸ್ಕೂಲಿನಲ್ಲಿ ಓದುವುದರಲ್ಲೂ ತನ್ನ ಊರಿನಲ್ಲಿದ್ದಾಗಿನಷ್ಟು ಜಾಣನೆನಿಸಲಿಲ್ಲ. ‘ಸರಿಯಾದ ಭಯವಿಲ್ಲದೆ ಇವನು ದಡ್ಡನಾಗಿದಾನೆ’ -ಎಂದು ಕಲ್ಲೇಶ ಶಿಸ್ತನ್ನು ಮಾಡಿದ. ಆದರೂ ಅವನು ದಿನೇ ದಿನೇ ದಡ್ಡನೇ ಎನಿಸಿಕೊಳ್ಳುತ್ತಿದ್ದ. ಕಲ್ಲೇಶ ಪಾಠ ಹೇಳಿಕೊಡಲು ಕೂತರೆ, ಸಾಯುವ ಆಡಿನಂತೆ ಕಣ್ಣು ಬಿಟ್ಟುಕೊಂಡು, ಅವನ ಕೈ ಯಾವಾಗ ತನ್ನ ಮೇಲೆ ಬೀಳುವುದೋ ಎಂದು ಕಿರುಗಣ್ಣಿನಿಂದ ನೋಡಿಕೊಳ್ಳುವುದರಲ್ಲೇ ಅವನ ಗಮನವೆಲ್ಲ ಹೋಗುತ್ತಿತ್ತು. ಅಕ್ಕಮ್ಮ ಅಕ್ಷರವನ್ನರಿಯಳು. ತಂಗಿಯ ಮಗನನ್ನು ಹಿಡಿತದಲ್ಲಿಟ್ಟಿದ್ದೇನೆಂಬ ತೃಪ್ತಿ ಮಾತ್ರ ಕಲ್ಲೇಶನಿಗಿತ್ತು.

ನಾಗಲಾಪುರದ ಕೆರೆ ರಾಮಸಂದ್ರದ್ದಕ್ಕಿಂತ ದೊಡ್ಡದು. ಊರ ಕಡೆಯ ಭಾಗದಲ್ಲಿ ನೀರಿನ ಮಧ್ಯ ಮಧ್ಯ ಬೇಕಾದಷ್ಟು ಬಂಡೆಗಲ್ಲುಗಳು. ಈಜಿ ಹೋಗಿ ಆ ಬಂಡೆಗಳ ಮೇಲೆಲ್ಲ ಕೂತು ಮೈನೀರು ಒಣಗುವ ತನಕ ಬಿಸಿಲು ಕಾಯಿಸಿ ಮತ್ತೆ ನೀರಿಗೆ ಬೀಳಬೇಕೆಂದು ವಿಶ್ವನಿಗೆ ಇನ್ನಿಲದ ಆಶೆ. ಆದರೆ ನೀರಿಗೆ ಇಳಿಯಕೂಡದೆಂದು ಮಾವನ ಕಟ್ಟಾಜ್ಞೆಯಾಗಿದೆ. ಅದನ್ನು ನೆನೆಸಿಕೊಂಡಾಗಲೆಲ್ಲ ಅವನು ಅತ್ತು ಕಣ್ಣೀರು ಹಾಕುತ್ತಿದ್ದ. ಈ ಊರಿನಲ್ಲಿ ಜೇನು ಬಿಚ್ಚುವಂತಿಲ್ಲ. ಮರ ಹತ್ತುವಂತಿಲ್ಲ. ತನ್ನ ಊರಿಗೆ ಓಡಿಹೋಗಿಬಿಡಲೇ ಎಂಬ ಯೋಚನೆ ಬರುತ್ತಿತ್ತು. ಆದರೆ ಅಮ್ಮ ತನ್ನನ್ನು ಹಿಡಿದು ತಂದು ಮತ್ತೆ ಇಲ್ಲಿಗೇ ಒಪ್ಪಿಸುತ್ತಾಳೆಂಬ ಭಯವೂ ಆಗುತ್ತಿತ್ತು. ಅಮ್ಮನನ್ನು ಮನಸ್ಸಿನಲ್ಲೇ ಬೈದುಕೊಳ್ಳುತ್ತಿದ್ದ.

ಒಂದು ದಿನ ಬೆಳಿಗ್ಗೆ ಅವನು ಎದ್ದು ಸ್ಲೇಟು ಪುಸ್ತಕ ಹಿಡಿದು ಸ್ಕೂಲಿಗೆ ಹೋಗುತ್ತಿದ್ದ. ಎಷ್ಟೋ ಜನ ಹುಡುಗರು ದೊಡ್ಡವರೆಲ್ಲ ಗುಂಪು ಕಟ್ಟಿಕೊಂಡು ಇವನ ಸ್ಕೂಲಿನ ಕಡೇಗೆ ಹೋಗುತ್ತಿದ್ದಾರೆ. ಗುಂಪಿನ ಮುಂಭಾಗದಲ್ಲಿರುವವರು ಬಿಳಿಯ ಅಂಗಿ, ಬಿಳಿಯ ಟೋಪಿ ಹಾಕಿದ್ದಾರೆ. ಅವರ ಕೈಲಿ ಒಂದು ಬಾವುಟ. ಮುಂಭಾಗದಲ್ಲಿ ಬಾವುಟ ಹಿಡಿದು ಹೋಗುತ್ತಿದ್ದವರು ಬಾಯಿಗೆ ಅದೆಂಥದೋ ಇಟ್ಟುಕೊಂಡು- ‘ಬೋಲೋ ಭಾರತ ಮಾತಾಕೀ’ ಎಂದು ಕೂಗುತ್ತಾರೆ. ಅದು ಗಟ್ಟಿಯಾಗಿ ಕೇಳುತ್ತದೆ. ಹಿಂದಿದ್ದ ಜನವೆಲ್ಲ-‘ಜೈ’ ಎನ್ನುತ್ತಾರೆ. ‘ಮಹಾತ್ಮಾ ಗಾಂಧೀಕೀ’-ಎಂದು ಅವರು ಕೂಗುತ್ತಾರೆ. ಇವರು-‘ಜೈ’ ಎನ್ನುತ್ತಾರೆ. ಅವರು ಇನ್ನೂ ಏನೇನೋ ‘ಕೀ’ ಎಂದರೆ ಇವರೆಲ್ಲ ಎಂದು ಒಟ್ಟಿಗೆ, ಜಾತ್ರೆಯ ದಿನ ತೇರು ಎಳೆಯುವಾಗ ಹರಹರ ಮಹಾದೇವ ಎನ್ನುವಂತೆ ಕೂಗುತ್ತಾರೆ. ವಿಶ್ವನಿಗೆ ಒಳ್ಳೆಯ ಮಜವೆನಿಸಿತು. ನಾಲ್ಕು ಸಲ ಕೇಳಿದ್ದಕ್ಕೆ ಮುಂದಿನವರು ಕೂಗುವುದೆಲ್ಲ ಅವನಿಗೂ ಬಂದಿತು. ಅವರು ನಿಲ್ಲಿಸಿದ ತಕ್ಷಣ ಇವನೇ-‘ಬೋಲೋ ಭಾರತ ಮಾತಾಕೀ’ ಎಂದ. ಎಲ್ಲರೂ ‘ಜೈ’ ಎಂದರು. ಇವನು ಮುಂದಿನ ಏಳೆಂಟು ‘ಕೀ’ಗಳನ್ನೂ ಕೂಗಿದ. ಎಲ್ಲದಕ್ಕೂ ಜೈ ಎಂದರು. ಮುಂದಿದ್ದವರು ಇವನ ಬೆನ್ನು ತಟ್ಟಿ, ‘ಜಾಣ ಮರಿ, ನೀನೇ ಕೂಗು ಬಾ. ಈ ಬಾವುಟ ಹಿಡ್‌ಕೊ’ ಎಂದು ಇವನ ಕೈಲೇ ಕೊಟ್ಟರು. ಇವನ ಬಾಯಿಯ ಮುಂದೆ ಅವರೇ ಅದನ್ನು ಹಿಡಿದರು. ಎಲ್ಲರ ಮುಂದಾಳೂ ಇವನೇ. ಬಲು ಮಜವೆನಿಸಿತು.

ಗುಂಪು ಇವನ ಸ್ಕೂಲಿನ ಹತ್ತಿರಕ್ಕೆ ಹೋಯಿತು. ಎದುರಿನ ಮೈದಾನದಲ್ಲಿ ಎಲ್ಲರೂ ಕೂತರು. ಇವನಿಗೆ ಬಾವುಟ ಕೊಟ್ಟವರು ನಿಂತುಕೊಂಡರು. ಇನ್ನೊಬ್ಬರು ಅವರ ಬಾಯಿಯ ಮುಂದೆ ಅದನ್ನು ಹಿಡಿದು ನಿಂತರು. ಅದರಿಂದ ಒಂದು ತಂತಿ ಹಾಕಿ ಹತ್ತಿರದಲ್ಲೇ ಒಂದು ಮೇಜಿನ ಮೇಲೆ ಅಗಲವಾದ ಕಹಳೆಯಂತಹ ಒಂದು ಏನನ್ನೋ ಇಟ್ಟರು. ಅವರು ಮಾತನಾಡಲು ಶುರುಮಾಡಿದರು: ‘ಸೋದರರೇ ಸೋದರಿಯರೇ, ಈಗ ನಮ್ಮ ದೇಶ ಕೆಂಪು ಕೋತಿಗಳ ಕೈಗೆ ಸಿಕ್ಕಿದೆ. ಅವರು ನಮ್ಮ ಚಿನ್ನ ಬೆಳ್ಳಿಯನ್ನೆಲ್ಲ ಲೂಟಿಹೊಡೆಯುತ್ತಿದ್ದಾರೆ. ನಮ್ಮ ತಾಯಿಯನ್ನು ಸ್ವತಂತ್ರಮಾಡಲು ನಾವೆಲ್ಲ ಸಿದ್ಧರಾಗಬೇಕು. ಈಗ ನಾವೆಲ್ಲ ಯುದ್ಧಕ್ಕೆ ನಿಂತ ಸಿಪಾಯಿಗಳು…..’

ಅವರು ಮಾತನಾಡುವುದು ತುಂಬ ಗಟ್ಟಿಯಾಗಿ ಕೇಳುತ್ತಿದೆ. ಅದಕ್ಕೆ ಲೌಡ್ ಸ್ಪೀಕರ್ ಎನ್ನುತ್ತಾರಂತೆ. ಇನ್ನೂ ಎರಡು ಮೂರು ಜನ ಮಾತನಾಡಿದರು. ಕೊನೆಗೆ ಹೇಳಿದವರು- ‘ಇವತ್ತು ಶನಿವಾರ. ಮಧ್ಯಾಹ್ನ ಚನ್ನರಾಯಪಟ್ಟಣದಲ್ಲಿ ಸಂತೆ ಸೇರುತ್ತೆ. ಅಲ್ಲಿ ಭಾರೀ ಸಭೆಯಾಗುತ್ತೆ. ನೀವೆಲ್ಲ ಅಲ್ಲಿಗೆ ಬರಬೇಕು. ದೇಶಭಕ್ತಿ ತೋರಿಸಬೇಕು’ ಎಂದರು. ಎಷ್ಟೋ ಜನ ಅವರೊಡನೆ ಹೊರಟರು. ವಿಶ್ವನಿಗೂ ಹೋಗಬೇಕೆಂಬ ಆಶೆಯಾಯಿತು. ತನಗೆ ಬಾವುಟ ಕೊಟ್ಟವರ ಹತ್ತಿರ ಹೋಗಿ, ‘ನಾನೂ ಬತ್ತೀನಿ ಕಣ್ರೀ’ ಅಂದ.
‘ಎಂಟು ಮೈಲಿ ನಡೀತೀಯಾ ಮರಿ?’ ಅವರು ಕೇಳಿದರು.
‘ಓ, ನಾನು ಶೃಂಗೇರಿಗೆ ನಡೆದಿದೀನಿ.’

ಸರಿ. ಗುಂಪು ಹೊರಟಿತು. ಇವನೂ ಹೊರಟ. ದಾರಿಯಲ್ಲಿ ಮರಳಹಳ್ಳ, ಈಚಲವನ, ಆಲದತೋಪು, ಕಾರೆಗುಚ್ಚಿ, ಇನ್ನೂ ಏನೇನೋ. ಶೃಂಗೇರಿಯ ದಾರಿಯ ಹಾಗೆ ಇಲ್ಲಿ ಕಾಡಿಲ್ಲ. ಆದರೂ ಮಜವಾಗಿದೆ. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಎಲ್ಲರೂ ಚೆನ್ನರಾಯಪಟ್ಟಣ ಸೇರಿದರು. ಅಷ್ಟು ಹೊತ್ತಿಗೆ ಅವನಿಗೆಹೊಟ್ಟೆ ಹಸಿದು ಸುಸ್ತಾಗಿತ್ತು. ‘ನಂಗೆ ಹ್ವಟ್ಟೆ ಹಸಿಯುತ್ತೆ ಕಣ್ರೀ’-ಎಂದು ಅವರನ್ನು ಕೇಳಿದ. ‘ಎಲ್ರಿಗೂ ಊಟಕ್ಕೆ ಇಕ್ತಾರೆ ಬಾ’-ಎಂದು ಅವರು ಕೈಹಿಡಿದು ಕರೆದೊಯ್ದರು. ಒಂದು ಕಡೆ ದೊಡ್ಡ ದೊಡ್ಡ ತಪ್ಪಲೆ ಕೊಳದಪ್ಪಲೆ ಇಟ್ಟು ಅಡಿಗೆ ಮಾಡಿದ್ದರು. ಶೃಂಗೇರಿಯಲ್ಲಿ ಬಡಿಸಿದ ಹಾಗೆಯೇ ಸಮಾರಾಧನೆಯಾಯಿತು. ಆಮೇಲೆ ಎಲ್ಲರೂ ಸಂತೆಯ ಮೈದಾನಕ್ಕೆ ಹೋದರೆ ಜನವೋ ಜನ. ಅವನು ಅಷ್ಟು ಜನವನ್ನು ಶೃಂಗೇರಿಯಲ್ಲೂ ನೋಡಿರಲಿಲ್ಲ. ರಾಮಸಂದ್ರದ ಅಮ್ಮನ ಜಾತ್ರೆಯಲ್ಲೂ ನೋಡಿರಲಿಲ್ಲ. ನಾಗಲಾಪುರದ ಸಂತೆಯಲ್ಲೂ ಇಲ್ಲ. ಮೈದಾನದ ಮಧ್ಯೆ ಎರಡಾಳೆತ್ತರದ ಅಟ್ಟಣೆ ಕಟ್ಟಿ ಅದರ ಮೇಲೆ ಲೌಡ್‌ಸ್ಪೀಕರ್ ಇಟ್ಟಿದ್ದಾರೆ.
ವಿಶ್ವನಿಗೆ ಬಾವುಟ ಕೊಟ್ತು ಕರೆದುಕೊಂಡು ಬಂದವರು ಹೊಳೇನರಸಿಪುರದವರಂತೆ. ಅವರು ಇವನನ್ನು ಕೇಳಿದರು: ‘ಮರಿ, ನೀನೂ ಭಾಷಣ ಮಾಡ್ತೀಯಾ?’
‘ಹಾಗಂದ್ರೇನ್ರೀ?’
‘ನಾಗಲಾಪುರದಲ್ಲಿ ನಾನು ನಿಂತ್ಕಂಡು ಮಾತಾಡಿದ್ನಲಾ, ಹಾಗೆ.’
‘ಓ, ಮಾಡ್ತೀನಿ.’
‘ಏನೇನ್ ಮಾತಾಡಬೇಕು ಅಂತ ನಾನು ಹೇಳ್‌ಕೊಡ್ತೀನಿ.’
‘ನೀವು ಮಾತಾಡಿದ್ದೆಲ್ಲ ನಂಗೆ ಗ್ಯಾಪಕವಿದೆ. ಅದುನ್ನೇ ಹೇಳ್ತೀನಿ: ಕೆಂಪು ಕೋತಿಗಳು ನಮ್ಮ ತಾಯೀನ ಜೈಲಿನಲ್ಲಿಟ್ಟಿದ್ದಾರೆ ಅಂತ.’
‘ರೈಟ್. ನಾನು ಇನ್ನೂ ಹೇಳ್ಕೊಡ್ತೀನಿ ತಡಿ’- ಎಂದು ಅವರು ಏನೇನೋ ಹೇಳಿಕೊಟ್ಟರು.

ಸಭೆ ಶುರುವಾಗುವ ಮೊದಲು ಒಬ್ಬರು ಅಟ್ತಣೆಗೆ ಹತ್ತಿ ಲೌಡ್‌ಸ್ಪೀಕರ್ ಮುಂದೆ ನಿಂತು ‘ವಂದೇ ಮಾತರಂ’ ಅಂತ ಚನ್ನಾಗಿ ಹಾಡು ಹೇಳಿದರು. ಆಮೆಲೆ- ‘ಈಗ ಮೊದಲು ಭಾರತ ಮಾತೆಯ ಒಬ್ಬ ಕಿಶೋರ ಭಾಷಣಮಾಡ್ತಾನೆ. ಅವನ ಮಾತಿನಿಂದ ನಾವೆಲ್ಲ ಸ್ಪೂರ್ತಿ ಪಡೆಯಬೇಕು’ ಎಂದು ಹೇಳಿ ಪಕ್ಕಕ್ಕೆ ನಿಂತುಕೊಂಡರು. ಹೊಳೆನರಸೀಪುರದವರು ವಿಶ್ವನನ್ನು ಮೇಲೆ ಹತ್ತಿಸಿದರು. ತಾವೂ ಹತ್ತಿ ಅವನನ್ನು ಮೈಕಿನ ಮುಂದೆ ನಿಲ್ಲಿಸಿದರು. ಅವನು ಎದುರಿಗಿದ್ದ ಜನಗಳನ್ನು ನೋಡುತ್ತಾನೆ: ಕೋಡಿ ಹರಿಯುವಂತೆ ಕೆರೆಯಲ್ಲಿ ನೀರು ತುಂಬಿರುವ ಹಾಗೆ ಸೇರಿಬಿಟ್ಟಿದ್ದಾರೆ. ಅವನಿಗೆ ಹೆದರಿಕೆಯಾಯಿತು. ಮುಖ ಕೆಂಪಗಾಯಿತು. ಅವನ ಜೊತೆ ಬಂದವರು-‘ಬೋಲೋ ಭಾರತ ಮಾತಾಕೀ ಅನ್ನು’ ಎಂದು ಮೆಲ್ಲನೆ ಹೇಳಿಕೊಟ್ಟರು. ವಿಶ್ವ ಅದನ್ನು ಕೂಗಿದ. ಎಲ, ಅವನು ಕೂಗಿದರೂ ಎಷ್ಟು ಗಟ್ಟಿಯಾಗಿ ಕೇಳುತ್ತೆ! ಲೌಡಿಸ್ಪೀಕರ್ ಅಂದ್ರೆ ಹ್ಯಾಗೆ ಮಾಡಿರ್ತಾರೆ? ಅದರೊಳ್ಗೆ ಎಂಥದಿಟ್ಟಿರ್ತಾರೆ? ಅಂಥದು ತಾನೂ ಒಂದು ಇಟ್ಕಾಬೇಕು. ಅಷ್ಟರಲ್ಲಿ ಜನರೆಲ್ಲ ‘ಜೈ’ ಎಂದದ್ದು , ಲೌಡ್‌ಸ್ಪೀಕರ್‌ನಲ್ಲಿ ಇವನ ಕೂಗಿಗಿಂತ ಗಟ್ಟಿಯಾಗಿ ಮೊಳಗಿತು. ಇವನು ತನಗೆ ಗೊತ್ತಿದ್ದ ಎಂಟು ಹತ್ತು ‘ಕೀ’ ಗಳನ್ನೂ ಕೂಗಿದ. ಎಲ್ಲಕ್ಕೂ ಜನರು ಜೈ ಎನ್ನುತ್ತಾರೆ. ‘ಈಗ ಮಾತು ಶುರು ಮಾಡು’-ಎಂದು ಅವರು ಹೇಳಿದರು. ತುಂಬಿದ ಕೆರೆಯಲ್ಲಿ ಈಜು ಬೀಳುವಂತೆ ಅವನು ಮಾತನಾಡಲು ಶುರುಮಾಡಿಯೇ ಬಿಟ್ಟ: ‘ಸೋದರರೇ, ಸೋದರಿಯರೇ, ನಿಮಗೆ ಗೊತ್ತಿದೆಯಲ, ನಮ್ಮ ಭಾರತ ಮಾತೆಯ ಕೈ ಕಾಲಿಗೆಲ್ಲ ಸರಪಣಿ ಹಾಕಿದಾರೆ. ನಾವೆಲ್ಲ ಗುಲಾಮರಾಗಿದೀವಿ. ಈ ಕೆಂಪು ಕೋತಿ ಸೂಳೇಮಕ್ಳು ನಮ್ಮ ಕಂದಾಯಾನೆಲ್ಲ ಬಾಚ್ಕಂಡು ಹೋಗ್ತಿದಾರೆ. ನೀವ್ಯಾರೂ ಕಂದಾಯ ಕೊಡಬ್ಯಾಡಿ. ನಮಗೆಲ್ಲ ಅವರು ಹೆಂಡ ಕುಡುಸ್ತಾರೆ.’ ಒಂದೇಸಮನೆ ಮಾತಾಡಿದ ಅವನು, ಅವರು ಹೇಳಿಕೊಟ್ಟದ್ದನ್ನೆಲ್ಲ ಆಡಿದುದೇ ಅಲ್ಲದೆ ಕೆಂಪುಕೋತಿಗಳ ಬಗೆಗೆ ಬೋಳೀಮಕ್ಕಳು, ಸೂಳೇಮಕ್ಕಳು ಎಂದು ಆ ಕ್ಷಣದಲ್ಲಿ ಬಾಯಿಗೆ ಬಂದದ್ದನ್ನೆಲ್ಲ ಸೇರಿಸಿದ. ಅವ್ವ, ಅಪ್ಪ ಎಂಬ ಬೈಗುಳಗಳನ್ನು ಆಡಬಾರದೆಂದು ಅವನು ಅದು ಹೇಗೋ ಅರ್ಥ ಮಾಡಿಕೊಂಡಿದ್ದ. ಭಾಷಣ ಮುಗಿದ ತಕ್ಷಣ, ಪಕ್ಕದಲ್ಲಿ ನಿಂತಿದ್ದವರು ಇವನ ಕೊರಳಿಗೆ ಸೇವಂತಿಗೆ ಹೂವಿನ ಒಂದು ಹಾರ ಹಾಕಿ- ‘ಭಾರತ ಮಾತಾಕೀ’ ಎಂದರು. ‘ಜೈ’ ಎಂದದ್ದೇ ಅಲ್ಲದೆ ಕೆರೆಯ ಕೋಡಿ ಮೊರೆಯುವಂತೆ ಒಂದೇ ಸಮನೆ ಚಪ್ಪಾಳೆ ತಟ್ಟಿದರು. ಇವನನ್ನು ಕೆಳಗೆ ಇಳಿಸಿದ ಮೇಲೆ ಇನ್ನೊಬ್ಬ ಹೊಸಬರು ಅಟ್ಟಣೆ ಹತ್ತಿ ಮಾತನಾಡಲು ಶುರುಮಾಡಿದರು. ಅವರ ಭಾಷಣವೆಂದರೇನು, ವಿಶ್ವನನ್ನು ಹೊಗಳಿದ್ದೂ ಹೊಗಳಿದ್ದೇ. ‘ಇಂಥಾ ಧೈರ್ಯಶಾಲಿಯಾದ ಹುಡುಗನಿಂದ ನಮಗೆಲ್ಲ ಸ್ಪೂರ್ತಿ ಬರಬೇಕು. ಈ ಹುಡುಗ ಹೇಗೆ ಸಿಂಹದ ಮರಿಯಂತೆ ನಿಂತು ಪರಕೀಯರನ್ನು ವಿರೋಧಿಸಿದಾನೆಯೋ ಹಾಗೆ ನೀವೆಲ್ಲ ವಿರೋಧಿಸಬೇಕು. ಈ ವರ್ಷ ನಿಮ್ಮಲ್ಲಿ ಯಾರೂ ಕಂದಾಯ ಕೊಡಕೂಡದು. ಪೋಲೀಸಿನವರು ಬಂದರೆ ಈ ಹುಡುಗನನ್ನು ಜ್ಞಾಪಿಸಿಕೊಳ್ಳಿ. ನಿಮಗೆ ಧೈರ್ಯ ಬರುತ್ತೆ’- ಎಂದು ಮುಂತಾಗಿ ಅವನಿಗೆ ಅರ್ಥವೇ ಆಗದಷ್ಟು ಏನೇನೋ ಮಾತನಾಡಿದರು.

ಅಷ್ಟರಲ್ಲಿ ಜನರು ಇದ್ದಕ್ಕಿದ್ದಹಾಗೆಯೇ ಎದ್ದು ಚದುರಲು ಮೊದಲಾಯಿತು. ಖಾಕಿ ಬಟ್ಟೆ ಹಾಕಿದ್ದ ಎಷ್ಟೋ ಜನ ಪೋಲೀಸಿನವರು, ಕೈಲಿ ಉದ್ದುದ್ದನೆಯ ಬಿದಿರುದಡಿಯಂತಹ ಕೋಲು ಹಿಡಿದು ಬಂದರು. ಬೆಳ್ಳನೆಯ ಟೋಪಿ ಹಾಕಿದ್ದವರನ್ನೆಲ್ಲ ಸುತ್ತುಗಟ್ಟಿ ಲೌಡ್‌ಸ್ಪೀಕರನ್ನು ತೆಗೆದಿಟ್ಟುಕೊಂಡರು. ಅವರಿಗೂ ಇವರಿಗೂ ಏನೇನೋ ಮಾತುಕತೆಯಾಯಿತು. ಕೊನೆಗೆ ಎಲ್ಲರನ್ನೂ ಕೂಡಿಸಿ ಪೋಲೀಸ್ ಸ್ಟೇಷನ್ನಿಗೆ ಎಳೆದೊಯ್ದರು. ಅವರಲ್ಲಿ ವಿಶ್ವನೂ ಇದ್ದ. ಎಲ್ಲರನ್ನೂ ಒಂದು ದೊಡ್ಡ ಕೋಣೆಯಲ್ಲಿ ತುಂಬಿ ಕಬ್ಬಿಣದ ಸಲಾಕಿಯ ಬಾಗಿಲು ಬೀಗ ಹಾಕಿ ಜಡಿದರು. ಒಳಗಿದ್ದವರು- ‘ಭಾರತ ಮಾತಾಕೀ ಜೈ’ ಎಂದು ಕೂಗುತ್ತಿದ್ದರು. ಕೆಲವರು ಏನೇನೋ ಮಾತನಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು ಇಂಗ್ಲಿಷ್‌ನಲ್ಲಿ ಆಡಿಕೊಳ್ಳುತ್ತಿದ್ದರು. ವಿಶ್ವನಿಗೆ ಯಾರ ಗುರುತೂ ಇಲ್ಲ. ಅವನನ್ನು ಕರೆದುಕೊಂಡುಬಂದು ಭಾಷಣ ಹೇಳಿಕೊಟ್ಟವರು ಅಲ್ಲಿಲ್ಲ. ಅವನಿಗೆ ಅಳು ಬಂದುಬಿಟ್ಟಿತು. ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ. ‘ಹೆದರಿಕೋಬ್ಯಾಡ ಕಣೋ ಮರಿ. ನಾವೆಲ್ಲ ಇಲ್ಲವೆ? ನೀನು ಜಾಣ’-ಎಂದು ಅವನ ಹತ್ತಿರ ಇದ್ದವರು ಸಮಾಧಾನ ಹೇಳಿ
ಬೆನ್ನಿನ ಮೆಲೆ ಕೈ ಆಡಿಸಿದರು. ಅವನು ಅಳುವನ್ನು ನಿಲ್ಲಿಸಿದ. ಆದರೂ ಭಯ. ಬೆಳಿಗ್ಗೆಯಿಂದ ನಡೆದುದೆಲ್ಲಾವನಿಗೆ ತುಂಬ ಮಜವೆನಿಸುತ್ತಿತ್ತು. ಆದರೆ ಈಗ ಊಟವು ಇಲ್ಲದೆ ಇಲ್ಲಿ ಯಾಕೆ ಕೂಡಿಹಾಕಿದಾರೆ” ಜೈಲು ಅಂದರೆ ಇದೆಯಾ?
‘ಜೈಲು ಅಂದ್ರೆ ಇದೆ ಏನ್ರೀ?’-ಅವನು ಕೇಳಿದ.
‘ಅಲ್ಲ ಮಗು. ಇದು ಅರಮನೆ’- ಒಬ್ಬರು ಹೇಳಿದರು.
‘ಹಾಗಾದರೆ ಸಿಂಹಾಸನ ಎಲ್ಲಿದೆ?’
‘ಪ್ರಚಂಡ ಹುಡುಗ!’-ಎಲ್ಲರೂ ಮಾತನಾಡಿಕೊಂಡರು. ಯಾರೂ ಅವನ ಪ್ರಶ್ನೆಗೆ ಉತ್ತರ ಹೇಳಲಿಲ್ಲ.
ಅಷ್ಟರಲ್ಲಿ ಬಾಗಿಲು ತೆಗೆದುಕೊಂಡು ಒಳಗೆ ಬಂದ ಪೋಲೀಸಿನವರು ಅವನ ಕೈ ಹಿಡಿದು ‘ಹೊರಗೆ ಬಾ’ ಎಂದರು.
‘ನಾವು ಈ ಹುಡುಗನ್ನ ಬಿಡೂದಿಲ್ಲ. ನೀವು ಅವನನ್ನ ಹೊಡೀತೀರಿ’-ಎಂದು ಉಳಿದವರು ಎದ್ದು ನಿಂತರು.
‘ಇಂಥಾ ಚಿಕ್ಕೋನನ್ನ ನಾವ್ಯಾಕೆ ಹೊಡೀತೀವಿ? ಅವರ ಪೋಷಕರು ಬಂದಿದಾರೆ’- ಎಂದು ಹೇಳಿ ಅವರು ಅವನ ಕೈಹಿಡಿದು ಕರೆದುಕೊಂಡು ಹೋಗಿ, ಉಳಿದವರನ್ನು ಒಳಗೇ ಕೂಡಿ, ಬಾಗಿಲು ಹಾಕಿ ಬೀಗ ಮೆಟ್ಟಿದರು. ಆಫೀಸಿಗೆ ಕರೆದೊಯ್ದು ನಿಲ್ಲಿಸಿದ ಮೇಲೆ ಕುರ್ಚಿಯ ಮೇಲೆ ಕೂತಿದ್ದ ಒಬ್ಬ ದಪ್ಪನೆಯ ಪೋಲೀಸಿನವರು ಅವನನ್ನು ಕೇಳಿದರು: ‘ನಿಂದು ಯಾವೂರೋ ಹುಡುಗ>’
‘ರಾಮಸಂದ್ರ.’
‘ರಾಮಸಂದ್ರ?’ ಎಲ್ಲಿದ್ರೀ ಅದು?’-ಎಂದು ಅವರು, ನಿಂತಿದ್ದ ಪೋಲೀಸರನ್ನು ಕೇಳಿದರು.
ವಿಶ್ವನೇ ಹೇಳಿದ: ‘ತುಮಕೂರು ಡಿಸ್ಟ್ರಿಕಟ್ಟು ತಿಪಟೂರು ತಾಲ್ಲೋಕ್ ಕಂಬನಕೆರೆ ಹೋಬಳಿ ರಾಮಸಂದ್ರ.’
‘ಪರವಾಗಿಲ್ಲ. ನಿಂಗೆ ಎಲ್ಲ ಗೊತ್ತಿದೆ. ಏನ್ ಓದ್‌ತಾ ಇದೀಯಾ?’
‘ಮೂರನೇ ಕ್ಲಾಸು.’
‘ನೀನು ಯಾರ ಮಗ?’
‘ಶ್ಯಾನುಭೋಗ ಚೆನ್ನಿಗರಾಯರ ಮಗ.’
‘ಶ್ಯಾನುಭೋಗರ ಮಗನಾಗಿ ಇಂಥದುದ್ದೆಲ್ಲ ಬತ್ತಾರೇನೋ? ಯಾರೋ ನಿನ್ನ ಕರ್ಕಂಡ್ ಬಂದದ್ದು?’-ಎಂದು ಅವರು ಕೇಳುತ್ತಿರುವಾಗ, ನಿಂತಿದ್ದ ಪೋಲೀಸಿನವರು, ‘ರಾಮಸಂದ್ರ ಬೇರೆ ಡಿಸ್ಟ್ರಿಕ್ಕಿಂದು ಸಾರ್. ಇವನು ಅಲ್ಲಿಂದ ಬಂದಿಲ್ಲ’ ಎಂದು ಹೇಳಿ ಇವನನ್ನು ಕೇಳಿದರು: ‘ನೀನ್ಯಾವೂರಿಂದ ಬಂದೆ?’
‘ನಾಗಲಾಪುರದಿಂದ.’
‘ಅಲ್ಲಿಗೆ ಯಾಕೆ ಬಂದಿದ್ದೆ?’
‘ಸ್ಕುಲಿಗೆ ಹೋಗ್ತಾ ಇದೀನಿ.’
‘ಯಾರ ಮನೇಲಿದೀಯಾ?’
‘ಕಲ್ಲೇಶ ಜೋಯಿಸ್ರ ಮನ್ಲಿ.’
‘ಅವ್ರು ನಿಂಗೇನಾಗ್ಬೇಕು?’
‘ನಮ್ಮಮ್ಮನ ಅಣ್ಣ.’

ನಿಂತಿದ್ದ ಪೋಲೀಸಿನವರು ಕೂತಿದ್ದ ದೊಡ್ಡವರಿಗೆ ಹೇಳಿದರು: ‘ಓ, ಈಗ ಗೊತ್ತಾಯ್ತಾ ಸಾರ್. ಆ ಕಲ್ಲೇಶ ನನ್ನ ಜೊತೆ ಪಿ.ಸಿ. ಆಗಿದ್ದ. ಈ ಊರ ಮಸೀದಿ ಹಿಂದುಗಡೆ ದೆವ್ವದ ಮನೆ ಅಂತ ಇದೆಯಲಾ. ಅಲ್ಲಿ ಒಬ್ಬರೇ ಇಲ್ವೇ ಕಂಠೀಜೋಯಿಸರು ಅಂತ, ಮಾಟ ಮಂತ್ರ ಮಾಡ್ತಾರೆ ನೋಡಿ, ಅವರ ಮಗ ಕಲ್ಲೇಶ. ಲೋ, ಮಗು, ನೀನಿಲ್ಲಿಗೆ ಹ್ಯಾಗೆ ಬಂದೆಯೋ?’

ವಿಶ್ವ ತಾನು ಬೆಳಿಗ್ಗೆ ಮನೆಯಿಂದ ಹೊರಟಿದ್ದರಿಂದ ಚೆನ್ನರಾಯಪಟ್ಟಣ ಮುಟ್ಟುವವರೆಗೆ ನಡೆದ ಎಲ್ಲವನ್ನೂ ಹೇಳಿದ. ‘ಆ ಕಂಠೀಜೊಯಿಸ್ರ ಹತ್ರುಕ್ ಕಳಿಸ್ಬಿಡು. ವೈ ಬಾದರೇಶನ್?’-ಎಂದ ದೊಡ್ಡವರು ಅವನ ಕಡೆ ತಿರುಗಿ ಹೆದರಿಕೆಯಾಗುವಂತೆ ಕಣ್ಣುಬಿಟ್ಟು, ‘ಲೋ, ಇನ್ನೊಂದ್‌ಸಲ ಇವ್ರ ಜೊತೆ ಸೇರ್ಕಂಡ್ ಜೈಗೀಯ್ ಅಂತ ಕೂಗಿದ್ರೆ ನಿಂಗೆ ಬೆಲ್ಟು ತಗಂಡ್ ಬಾರಿಸ್‌ಬಿಡ್ತೀವಿ. ಹೂಂ’ ಎಂದು ಹಲ್ಲು ಕಡಿದು ಬೂಟಿನ ಕಾಲನ್ನು ನೆಲಕ್ಕೆ ಗಟ್ಟಿಸಿದರು. ‘ಇಲ್ಲ, ಇಲ್ಲ’ -ಎಂದು ಅವನು ಹೆದರಿಕೊಂಡು ಹೇಳಿದ. ನಿಂತಿದ್ದ ಪೋಲೀಸಿನವರು ಅವನ ಕೈಹಿಡಿದು ಆ ರಾತ್ರಿಯಲ್ಲೇ ಕರೆದುಕೊಂಡು ಹೊರಟರು. ಪೇಟೆ ಬೀದಿ ದಾಟಿ ಸಾಬರ ಮಸೀದಿಯ ಹಿಂಭಾಗದ ಒಂದು ದೊಡ್ಡ ಮನೆಯ ಮುಂದೆ ನಿಂತು ಬಾಗಿಲು ಬಡಿದರು. ‘ಯಾರು?’-ಎಂದು ಒಳಗಿನಿಂದ ಕೂಗಿದುದಕ್ಕೆ, ‘ಬಾಗಿಲು ತೆಗೀರಿ. ನಿಮ್ಮ ಮೊಮ್ಮಗ’ ಎಂದರು. ಒಳಗೆ ದೀಪ ಹಚ್ಚಿ ಬಾಗಿಲು ತೆರೆದವರು ಅಗಲವಾದ ಮುಖದ ಎತ್ತರವಾದ ಆಳು. ‘ನಿಮ್ಮ ಮಗಳ ಮಗ ಕಾಂಗ್ರೆಸ್ಸಿನೋರ ಜೊತೆ ಸೇರ್ಕಂಡ್ ತಿಳಿವಳಿಕೆ ಇಲ್ದೆ ಬಂದುಬಿಟ್ಟಿದ್ದಾನೆ, ಕರ್ಕಳಿ. ಇನ್ನು ಮ್ಯಾಲೆ ಹ್ವರಗೆ ಬಿಡ್‌ಬ್ಯಾಡಿ’-ಎಂದು ಹೇಳಿ ಅವರು ಹೊರಟುಹೋದರು.

ಈ ಅಜ್ಜಯ್ಯನನ್ನು ನೋಡಿದ್ದ ನೆನಪು ವಿಶ್ವನಿಗೆ. ಅಕ್ಕಯ್ಯನ ಮದುವೆಗೆ ತುಂಬ ಮುಂಚೆ ಇವರು ಅಕ್ಕಮ್ಮನ ಜೊತೆ ಊರಿಗೆ ಬಂದಿದ್ದರಲ್ಲವೆ? ಆದರೆ ಸರಿಯಾದ ಜ್ಞಾಪಕವಿಲ್ಲ. ಅವರ ಜೊತೆ ಒಳಗೆ ಹೋಗಿ ನೋಡುತ್ತಾನೆ: ಅವನಿಗೆ ಹೆದರಿಕೆಯಾಯಿತು. ಒಳಗೆ ಹುಲಿ ಚರ್ಮ ಹಾಸಿದೆ. ಮನುಷ್ಯರ ತಲೆಬುರುಡೆ, ಮೂಳೆಗಳನ್ನೆಲ್ಲ ಇಟ್ಟಿದೆ. ಕವಡೆಮಣಿ, ತಾಮ್ರದ ತಗಡು, ಹಸಿನೂಲು, ಎಷ್ಟೋ ಜೊತೆ ಎಕ್ಕಡಗಳು..
‘ನಂಗಿಲ್ಲಿ ಹೆದರಿಕೆಯಾಗುತ್ತೆ’-ಅವನೆಂದ.
‘ಇವತ್ತು ಅಷ್ಟು ಧೈರ್ಯವಾಗಿ ಭಾಷಣ ಮಾಡಿದೆ. ಹೆದರಿಕೆ ಯಾಕೋ? ನೀನೇ ನನ್ನ ಮಗಳ ಮಗ ಅಂತ ನಂಗೆ ಗೊತ್ತಾಗಲಿಲ್ಲ. ವಾರೆವಾ, ರುಸ್ತುಂ ಗಂಡು. ನನ್ನ ಮಗಳ ಹ್ವಟ್ಟೇಲಿ ಹುಟ್ಟಿದ್ದುಕ್ಕೂ ಸಾರ್ಥಕ’- ಎಂದು ಕೈಹಿಡಿದು ಕೂರಿಸಿಕೊಂಡರು.

ಕಂಠೀಜೋಯಿಸರಿಗೆ ಮಗಳಮೇಲೆ ಬಂದಿದ್ದ ಸಿಟ್ಟು ಅವಳ ಮಕ್ಕಳು ಸತ್ತ ವರ್ತಮಾನ ತಿಳಿದಾಗಲೂ ಇಳಿದಿರಲಿಲ್ಲ. ತಮ್ಮ ಮಾತು ಮೀರಿ ಅವಳು, ಮಗನಿಗೆ ಹೆಣ್ಣು ಕೊಡುವುದಿಲ್ಲವೆಂದ ಅವಿಧೇಯತೆಯನ್ನು ಅವರು ಮರೆಯಲಾರರು. ಅವರಿಗೂ ಮೊಮ್ಮಕ್ಕಳಿಗೂ ಯಾವ ಸಂಪರ್ಕವೂ ಇರಲಿಲ್ಲ. ಅವರ ಮರಣದಿಂದ ಮಗಳಿಗೆ ದುಃಖವಾಗಿರುವುದು ಸಹಜವೆಂದು ಒಂದೊಂದು ಸಲ ಎನ್ನಿಸುತ್ತಿದ್ದರೂ, ಆ ಮೊಮ್ಮಕ್ಕಳಮೇಲೆ ಅವರಿಗೆ ಹುಟ್ಟುತ್ತಿದ್ದ ಅಸ್ಪಸ್ಟ ವಾಂಛಲ್ಯವೇನಿದ್ದರೂ ಮಗಳ ಮೂಲಕ ಒಸರುತ್ತಿದ್ದ ಮೂಕಭಾವ ಮಾತ್ರ. ಜೊತೆಗೆ ಕೋಪವೂ ಸೇರಿಕೊಂಡಿತ್ತು. ಆದರೆ ಈಗ ಈ ಮೊಮ್ಮಗ ರುಸ್ತುಂ ಕೆಲಸ ಮಾಡಿದ್ದಾನೆ. ಹದಿನೈದು ಇಪ್ಪತ್ತು ಸಾವಿರ ಜನದ ಎದುರಿಗೆ ನಿಂತು ಪೋಲೀಸಿನವರಿಗೂ ಹೆದರದೆ ಭಾಷಣ ಮಾಡಿ ಹಾರ ಹಾಕಿಸಿಕೊಂಡಿದ್ದಾನೆ. ಜನಗಳು ‘ಸಿಂಹದ ಮರಿ’ ಎಂದು ಮೆಚ್ಚಿ ಮಾತನಾಡಿಕೊಂಡದ್ದನ್ನು ತಾವೇ ನೋಡಿದ್ದಾರೆ. ಅವನು ಭಾಷಣ ಮಾಡುವಾಗ ಅವರೂ ಕೇಳುತ್ತಿದ್ದರು. ಅವರಿಗೆ ಈಗ ಅವನ ಮೇಲೆ ಅಭಿಮಾನ ಉಕ್ಕಿತು. ‘ಯಾವೂರಿಂದ ಬಂದೆ?’-ಎಂದು ಕೇಳಿದರು.
ತಾನು ಈಗ ನಾಗಲಾಪುರದಲ್ಲಿರುವ ವಿಷಯ ಹೇಳಿದ. ಇತ್ತೀಚೆಗೆ ಅವರು ಊರಿಗೆ ಹೋಗಿಯೇ ಇಲ್ಲ. ಚೆನ್ನರಾಯಪಟ್ಟಣದಲ್ಲೂ ಸರಿಯಾಗಿ ಇಲ್ಲ. ಹಾಸನ, ಕೌಶಿಕ, ಮಗ್ಗೆ, ರಾಮನಾಥಪುರಗಳ ಕಡೆ ಇದ್ದುಬಿಟ್ಟಿದ್ದರು.
‘ಹೊಟ್ಟೆ ಹಸೀತಿದೆಯೆ?’-ಅವರು ಕೇಳಿದರು.
‘ಹೂಂ.’
‘ನೋಡು ಈಗ ಬಾಳೆಹಣ್ಣು ಸಕ್‌ರೆ ಇದೆ. ತಿಂದು ಮಲಕ್ಕೊ. ಬೆಳಕು ಹರಿದಮೇಲೆ ಹೋಟ್‌ಲಲ್ಲಿ ತಿಂಡಿ ತಿನ್ನೂವಂತೆ.’
‘ದೊಸೆಯಾ?’
‘ಹೂಂ, ನೀನು ಕೇಳಿದ್ದು.’

ಅವರೇ ಸುಲಿದು ಸಕ್ಕರೆಯಲ್ಲಿ ಅದ್ದಿ ಅದ್ದಿ ಕೊಟ್ಟ ಬಾಳೆಯ ಹಣ್ಣನ್ನು ಅವನು ಹೊಟ್ಟೆ ತುಂಬ ತಿಂದ. ತಮ್ಮ ಹಾಸಿಗೆಯಮೇಲೆ ಮಲಗಿಸಿಕೊಂಡು ಅವರು ತಮ್ಮ ಶಾಲನ್ನೇ ಅರ್ಧ ಹೊದೆಸಿ ದೀಪ ಆರಿಸಿದರು. ಅವನಿಗೆ ನಿದ್ದೆ ಬಂತು; ಅವರಿಗೆ ಬರಲಿಲ್ಲ. ಹೋಗಿ ಮಗಳನ್ನು ನೋಡಿಕೊಂಡು ಬರಬೇಕೆಂದು ಮನಸ್ಸಾಯಿತು. ಅವಳ ಮಕ್ಕಳು ಸತ್ತು ಹೆಚ್ಚು ಕಡಿಮೆ ವರ್ಷವಾಗ್ತಾ ಬಂತು. ಎಷ್ಟು ಕೊರಗಿದಾಳೋ! ನಾನು ಆ ಹುಡುಗೀ ಮದುವೆಗೂ ಹೋಗಲಿಲ್ಲ. ಒಳ್ಳೇ ಹುಡುಗನಿಗೆ ಕೊಟ್ಟು ಮಾಡಿದಳು ಅಂತ ಅಕ್ಕಮ್ಮ ಹೇಳಿದ್ದಳು. ನಂಜನ ಗಂಡ ನಫರತ್ ಬಾನ್‌ಚೋತ್. ನನ್ನಂಥೋನ ಮಗಳ ಕೈಹಿಡಿಯೋ ಯೋಗ್ಯತೆ ಆ ನಾಯಿಮರಿಗೆ ಎಲ್ಲಿದೆ? ಆದ್ರೂ ಪರವಾಗಿಲ್ಲ. ಇದೊಂದು ಗಂಡುಮರಿ ಅವಳ ಹೊಟ್ಟೇಲಿ ಹುಟ್ಟಿದೆಯಲ, ಅಷ್ಟೇ ಸಾಕು-ಎಂಬ ಯೋಚನೆಯಲ್ಲಿ ಅವರು ಹೊರಳಾಡುತ್ತಾ ಇದ್ದರು.

ಅಷ್ಟರಲ್ಲಿ ಯಾರೋ ಹದ ಬಡಿದು-‘ಬಾಗಿಲು’ ಎಂದ ಹಾಗಾಯಿತು. ಇನ್ನೊಂದು ಸಲ ಕೂಗಿದಾಗ ಕಲ್ಲೇಶನ ಧ್ವನಿ ಎಂದು ಗೊತ್ತಾಯಿತು. ಎದ್ದು ದೀಪ ಹೊತ್ತಿಸಿ ಬಾಗಿಲು ತೆಗೆದರು. ವಿಶ್ವ ಇಲ್ಲಿ ಮಲಗಿದ್ದುದನ್ನು ನೋಡಿದ ಕಲ್ಲೇಶನಿಗೆ ಆತಂಕ ನಿವೃತ್ತಿಯಾಯಿತು. ಮಧ್ಯಾಹ್ನದ ತನಕ ಹುಡುಗನ ಹಾದಿ ಕಾಯ್ದು ಅವನು ಊರಿನ ಕೆರೆ ಬಾವಿಗಳನ್ನೆಲ್ಲ ಹುಡುಕಿದ್ದ. ಚೆನ್ನರಾಯಪಟ್ಟಣಕ್ಕೆ ಹೋದ ಗುಂಪಿನಲ್ಲಿ ಅವನೂ ಇದ್ದ ಹಾಗಿತ್ತು ಎಂದು ಯಾರೋ ರಾತ್ರಿಯ ಹೊತ್ತಿಗೆ ಹೇಳಿದರು. ಆಗಲೇ ಇಲ್ಲಿಗೆ ಹೊರಟುಬಂದೆ. ಅರ್ಧರಾತ್ರಿಯಾಗಿ ಎಲ್ಲರೂ ಮಲಗಿದ್ದರು. ಅನುಮಾನ ಬಂದು ಪೋಲೀಸು ಸ್ಟೇಷನ್ನಿಗೆ ಹೋಗಿ ವಿಚಾರಿಸಿದ. ಇವನ ಹಳೇ ಸಹೋದ್ಯೋಗಿಯಾಗಿದ್ದು ಈಗ ದಫೇದಾರನಾಗಿದ್ದ ಯಲ್ಲಪ್ಪನೇ ಇವನ ವಿಷಯ ಹೇಳಿ-‘ನಿಮ್ಮ ಅಯ್ಯ ಅವರು ದೆವ್ವದ ಮನ್ಲಿ ಅವ್ರೆ. ನಾನೇ ಹೋಗಿ ಬಿಟ್ಟುಬಂದೆ’ ಎಂದು ಹುಡುಗನ ಧೈರ್ಯವನ್ನು ವರ್ಣಿಸಿದ.

ಮೊಮ್ಮಗನ ಪ್ರತಾಪವನ್ನು ಕಂಠೀಜೋಯಿಸರೂ ಹೇಳಿದರು. ಮಕ್ಕಳು ಸತ್ತಮೇಲೆ ನಂಜ ಶೃಂಗೇರಿಗೆ ಹೋದದ್ದು, ಅಲ್ಲಿ ಇವನು ಹೊಳೆಯಲ್ಲಿ ಈಜಿದ ಸಾಹಸ, ಊರಿನಲ್ಲಿ ಹಾವು ಹೊಡೆದು ಅದು ತಪ್ಪಿಸಿಕೊಂಡಿರುವುದು, ಈಗ ಓದಲು ನಾಗಲಾಪುರಕ್ಕೆ ಕಳಿಸಿರುವುದು, ಎಲ್ಲವನ್ನೂ ಕಲ್ಲೇಶ ವಿವರಿಸಿದ.

ಬೆಳಿಗ್ಗೆ ಎಲ್ಲರೂ ಹೊತ್ತಾಗಿ ಎದ್ದರು. ಎಚ್ಚರವಾಗಿ ವಿಶ್ವ ಹೊರಳಿ ನೋಡಿದರೆ ಮಾವ ಕೂತಿದ್ದಾನೆ. ಅವನು ಹೆದರಿಕೆಯಿಂದ ಮಂಕಾಗಿಹೋದ. ಎದ್ದು ಮುಖ ತೊಳೆದು ಕೆರೆಯ ಕಡೆಗೆ ಹೋಗಿ ಬಂದಮೇಲೆ ಮೂವರೂ ಹೋಟೆಲಿಗೆ ಹೋದರು. ‘ಮಸಾಲೆದೋಸೆ ತಿಂತೀಯಾ ಪಾಪ?’-ಎಂದು ಅಜ್ಜ ಕೇಳಿದರೆ ಅವನ ಉತ್ತರವೇ ಇಲ್ಲ. ಇನ್ನೊಂದು ಸಲ ಕೇಳಿದುದಕ್ಕೆ, ‘ನಂಗೆ ಎಂಥದೂ ಬ್ಯಾಡ’ ಎಂದ. ಕಲ್ಲೇಶನನ್ನು ಕಂಡರೆ ಹುಡುಗನಿಗೆ ಇಷ್ಟು ಹೆದರಿಕೆ ಇದೆ ಅನ್ನುವುದು ಅವರಿಗೆ ತಿಳಿಯಲಿಲ್ಲ. ಅವರೇ ಹೇಳಿ ಅವನಿಗೆ ಎರಡು ಮಸಾಲೆದೋಸೆ, ಮೈಸೂರುಪಾಕು ಮೊದಲಾಗಿ, ರುಚಿರುಚಿಯಾದ ತಿಂಡಿಗಳನ್ನೆಲ್ಲ ಕೊಡಿಸಿದರು. ಕಲ್ಲೇಶ ಹೊರಡುವಾಗ ಹೇಳಿದರು: ‘ಹುಡುಗನ್ನ ನಡಸ್ಕಂಡು ಹೋಗ್‌ಬ್ಯಾಡ. ನಾನು ಹೊಸ ಕುದುರೆ ತಗಂಡಿದೀನಿ. ಹಿಂದ್‌ಗಡೆ ಕಟ್ಟಿಹಾಕಿದೀನಿ. ಜೀನುಹಾಕ್ಕಂಡು ಕೂರುಸ್ಕಂಡು ಹೋಗು.’

ಅವರೇ ಕುದುರೆಯನ್ನು ಬಿಚ್ಚಿ ತಂದು ಜೀನು ಹಾಕಿ ಅದರ ಮೇಲೆ ವಿಶ್ವನನ್ನು ಹತ್ತಿಸಿ ಕೂರಿಸಿದಾಗ ಅವನು ಹಿಗ್ಗಿದ. ಊರಿನಲ್ಲಿದ್ದಾಗ ಪಟೇಲನ ಮನೆಯ ಕುದುರೆಮರಿಯನ್ನು ಆಗಾಗ್ಗೆ ಕದ್ದು ಏರಿ ಓಡಿಸುವ ಅಭ್ಯಾಸವೇನೋ ಇತ್ತು. ಆದರೆ ಇಂತಹ ಹೊಳೆಯುವ ಜೀನಿನ ಇಷ್ಟು ದೊಡ್ಡ ಕೆಂಪು ಕುದುರೆಯ ಮೆಲೆ ಅವನು ಕೂತಿರಲಿಲ್ಲ. ಒಂದು ನಿಮಿಷ ಹೆದರಿಕೆಯಾದರೂ ಕೆಳಗೆ ಇಳಿಯುತ್ತೇನೆಂದು ಮಾತ್ರ ಹೇಳಲಿಲ್ಲ. ಕಲ್ಲೇಶನೂ ಹತ್ತಿ ಅವನ ಹಿಂದೆ ಕೂತಮೇಲೆ ಅಜ್ಜಯ್ಯ ಹೇಳಿದರು: ‘ಇಲ್ನೋಡು, ಕುದುರೆ ಬೇಕಾದ್ರೆ ಒಂದು ಹದಿನೈದು ದಿನ ಅಲ್ಲೇ ಇರ್ಲಿ. ಅಷ್ಟರಲ್ಲಿ ಇವನಿಗೆ ಸವಾರಿ ಅಭ್ಯಾಸ ಮಾಡ್ಸು. ಗಂಡು ಹುಡುಗ ಅಂದಮೇಲೆ ಕುದುರೆ ಸವಾರಿ ಬರ್‌ಬೇಕು.’

ಸವಾರಿ ಬಲು ಮಜವಾಗಿತ್ತು. ದಾರಿಯಲ್ಲಿ ಮಾವ ಬೈಯಲಿಲ್ಲ; ಒಂದು ಮಾತೂ ಆಡಲಿಲ್ಲ. ಕುದುರೆಯನ್ನು ಇನ್ನೂ ಜೋರಾಗಿ ಓಡಿಸಬೇಕೆಂದು ಅವನ ಆಶೆ. ಆದರೆ ಬಾಯಿ ಬಿಟ್ಟು ಮಾವನ ಕೈಲಿ ಹೇಳಲು ಭಯ. ಸುಮ್ಮನೆ ಕೂತು ಸವಾರಿಯ ಸುಖ ಅನುಭವಿಸುತ್ತಿದ್ದ. ನೆನ್ನೆ ತಾನೆ ಮಾಡಿದ ಭಾಷಣದ ಮಾತುಗಳು ನೆನಪಿಗೆ ಬರುತ್ತಿದ್ದವು. “ಈ ಕುದುರೆ ನಂದೇ ಆದ್ರೆ ಎಷ್ಟು ಚೆನ್ನ! ನಂಗೇ ಕೊಡು ಅಂತ ಅಜ್ಜಯ್ಯನ್ನ ಕೇಳಬೇಕು. ಇದರ ಮೇಲೆ ಹತ್ಕಂಡು ರಾತ್ರಿ ಹೊತ್ನಲ್ಲಿ ಒಬ್ಬನೇ ನಮ್ಮೂರಿಗೆ ಹೋಗಿ ಅಮ್ಮುನ್ನ ಎಬ್ಬಿಸಬೇಕು. ಇನ್ನುಮ್ಯಾಲೆ ನಮ್ಮೂರಲ್ಲೇ ಇದ್ದುಬಿಡಬೇಕು. ಅಮ್ಮ ಇಲ್ದೆ ಒಬ್ಬನೇ ಇರ್‌ಕೂಡದು. ಯಾವಾಗ್ಲೂ ಕುದುರೆ ಮೇಲೆ ಕೂತ್ಕಂಡು ತಿರುಗ್ತಾ ಇದ್ರೆ ಹಾವು ಅದ್‌ಹ್ಯಾಗೆ ಕಡಿಯುತ್ತೆ? ಮತ್ತೆ ನಮ್ಮೂರ ಸ್ಕೂಲ್ಗೇ ಸೇರ್ಕಬೇಕು. ಸ್ಕೂಲಿನಲ್ಲೂ, ‘ನಾನು ಕುದುರೆ ಮ್ಯಾಲೆ ಕೂತ್ಕಂಡಿರ್ತೀನಿ, ನೀವು ಹಾಗೇ ಪಾಠ ಹೇಳ್ಕೊಡಿ’ ಅಂತ ಮೇಷ್ಟರಿಗೆ ಹೇಳಬೇಕು. ಪ್ರೈಮರಿ ಸ್ಕೂಲು ಆದಮ್ಯಾಲೆ ಈ ಕುದುರೆಮ್ಯಾಲೆ ಕೂತು ನಮ್ಮೂರಿನಿಂದ ದಿನಾ ಕಂಬನಕೆರೆ ಮಿಡ್ಳ್‌ಸ್ಕೂಲಿಗೆ ಹೋಗೂದು. ಈ ಮಾವ ಈಗ ಜೊತೇಲಿ ಇಲ್ದೆ ಇದ್ದಿದ್ರೆ ಇದ ಓಡಿಸ್ಕಂಡು ಹೀಗಿಂದ ಹೀಗೇ ನಮ್ಮೂರಿಗೆ ಹೋಗ್‌ಭೌದಾಗಿತ್ತು. ನನ್ನ ಹೊಡೀತಾನಲ, ಈ ಮಾವನ ಕೈ ಸೇದಿಹೋಗ”- ಎಂದು ಅವನು ತನ್ನಲ್ಲಿಯೇ ಯೋಚಿಸುತ್ತಿದ್ದ.

ಊರು ಸೇರಿದ ಮೇಲೆ ಮನೆಯ ಮುಂದೆ ಕುದುರೆ ನಿಲ್ಲಿಸಿ ಇವನನ್ನು ಇಳಿಸಿದಾಗ ಬಾಗಿಲಲ್ಲೆ ಅಕ್ಕಮ್ಮ ಬಂದು-‘ಎಲ್ಲಿಗೆ ಹೋಗಿದ್ಯೋ ನನ್ ಕಂದಾ?’ ಎನ್ನುತ್ತಾ ಬಂದು ತಬ್ಬಿಕೊಂಡಳು. ಕಲ್ಲೇಶ ಎಕ್ಕಡವನ್ನು ಹೊರಗೆ ಬಿಟ್ಟು ನೇರವಾಗಿ ಅಡಿಗೆ ಮನೆಗೆ ಹೋದ. ಅಷ್ಟರಲ್ಲಿ ಅಕ್ಕಮ್ಮ ವಿಶ್ವರು ಒಳಗೆ ಬಂದಿದ್ದರು. ಕೈಗೆ ಸಿಕ್ಕಿದ ಒಂದು ಹೊಳಕೆ ಸೌದೆ ತಂದ ಮಾವ ಅವನ ಎಡ ರೆಟ್ಟೆ ಹಿಡಿದು ಬೆನ್ನಿನಮೇಲೆ ಎತ್ತಿ ಎತ್ತಿ ಬಾರಿಸಲು ಶುರುಮಾಡಿದ. ‘ಅಯ್ಯೋ, ಮಗು ಸತ್ಹೋಗುತ್ತೆ ಕಣೋ ದೈತ್ಯಸೂಳೇಮಗನೆ. ಹಾಗೆ ಹೊಡೀಬಾರ್ದು ಕಣೋ’-ಎಂದು ಬಿಡಿಸಿಕೊಳ್ಳಲು ಹೋದ ಅಕ್ಕಮ್ಮನ ಕೈಮೇಲೆ ಏಟು ಬಿದ್ದು ಅವಳು ಅಯ್ಯಯ್ಯೋ ಎಂದು ಗೋಳಿಡುತ್ತಾ, ‘ಯಮಮುಂಡೇಗಂದ, ಮಗೂನ ಹಾಗೆ ಹೊಡೀತಾರೇನೋ’ ಎನ್ನುತ್ತಿರುವಂತೆಯೇ ಅವನು ಮತ್ತೆ ಎಂಟು ಹತ್ತು ಏಟು ಬಾರಿಸಿಬಿಟ್ಟಿದ್ದ.
‘ಕಟ್ಟಿಲ್ಲದ ಪಂಜಿನ ಹಾಗೆ ಬೆಳೆದಿದಾನೆ ಭಡವ. ಸಿಕ್ಕಿದೋರ್ ಜೊತೆ ಹೋಗಿದ್ನಲಾ, ಏನಾದ್ರೂ ಆಗಿದ್ರೆ ಕೆಟ್ಟ ಹೆಸರು ಯಾರಿಗೆ ಬತ್ತಿತ್ತು?’-ಎನ್ನುವಾಗ ಅವನ ಕಣ್ಣು ಹುಡುಗನ ಮೇಲೆ ಹೋಯಿತು. ಬೆನ್ನಿನಿಂದ ರಕ್ತ ಸೋರುತ್ತಿತ್ತು. ಅವನು ಕೆಳಗೆ ಬಿದ್ದು ಜ್ಞಾನ ತಪ್ಪಿತ್ತು. ತೊಟ್ಟ ಚಡ್ಡಿಯ ಒಳಗೇ ಉಚ್ಚೆ ಹುಯ್ದುಕೊಂಡು ನೆಲದ ಮೇಲೆಲ್ಲ ಹರಿದಿತ್ತು. ‘ಅಲ್ಲಿ ಹಾವು ಕಡಿಯುತ್ತೆ ಅಂತ ಹೆದರ್ಕಂಡು ಅವಳು ಇದ್ದ ಒಂದು ಕಂದನ್ನ ಇಲ್ಲಿಗೆ ಕಳ್ಸಿದ್ರೆ ನೀನು ಹೊಡೆದು ಸಾಯಿಸ್ದೆ ಏನೋ!’-ಎಂದು ಅಕ್ಕಮ್ಮ ಬಾಯಿಬಡಿದುಕೊಂಡಳು. ಅಕ್ಕಪಕ್ಕದವರು ಓಡಿಬಂದರು. ಕಲ್ಲೇಶ ವಿಶ್ವನನ್ನು ಮುಟ್ಟಿ ಪರೀಕ್ಷಿಸಿದ. ಪ್ರಾಣ ಹೋಗಿರಲಿಲ್ಲ. ಓಡಿಹೋಗಿ ಒಂದು ಚೊಂಬು ತಣ್ಣೀರು ತಂದು ಚೆನ್ನಾಗಿ ತಲೆಗೆ ತಟ್ಟಿದಮೇಲೆ ಜ್ಞಾನ ಬಂತು. ಅಂಗಿ ಬಿಚ್ಚಿ ನೋಡಿದರೆ ಬೆನ್ನಮೇಲೆಲ್ಲ ಛಿದ್ರ ವಿಚ್ಛಿದ್ರ ಗಾಯಗಳಾಗಿ ಒಸರುತ್ತಿದ್ದ ರಕ್ತ ಹಾಗೆಯೇ ಹೆಪ್ಪುಗಟ್ಟಿ ಕಪ್ಪು ತಿರುಗುತ್ತಿತ್ತು. ಕಲ್ಲೇಶ ಗಾಯಗಳನ್ನು ತೊಳೆದು, ಮನೆಯಲ್ಲಿ ಇಟ್ಟಿದ್ದ ನಾಟಿಗಂಧದ ಎಣ್ಣೆ ಹಚ್ಚುವಾಗ ಹುಡುಗ, ‘ಅಯ್ಯಯ್ಯೋ ಉರಿಯುತ್ತೆ’ ಎಂದು ಗೋಳಿಡುತ್ತಿದ್ದ.

– ೪ –

ಈ ನಡುವೆ ಮೇಷ್ಟರಿಗೆ ರಾಮಸಂದ್ರದಿಂದ ವರ್ಗವಾಯಿತು. ಈ ಊರಿಗೆ ಅವರು ಬಂದು ಐದು ವರ್ಷವಾಗಿತ್ತು. ಸ್ವಂತ ಊರಾದ ಹುಳಿಯಾರಿಗೆ ವರ್ಗ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅದೃಷ್ಟಕ್ಕೆ ಅದೇ ಊರಿಗೆ ಸಿಕ್ಕಿತು. ಅವರು ಹೊರಟುಹೋದುದು ನಂಜಮ್ಮನಿಗೆ ಬಹಳ ಬೇಸರವೆನಿಸಿತು. ಸ್ವಂತ ಅಣ್ಣನಂತೆ ಅವಳ ಕಷ್ಟ ಸುಖಗಳನ್ನೆಲ್ಲ ಅರಿತು ಆಗುತ್ತಿದ್ದರು. ಅವರ ಹೆಂಡತಿಗೂ ಅವಳಿಗೂ ತುಂಬ ಹೊದಿತ್ತು. ಆರು ತಿಂಗಳು ನಡೆದ ಅವಳ ನೈಟ್ ಸ್ಕೂಲು ಸಹ ಮುಗಿದಿತ್ತು. ಕಂಬನಕೆರೆಯ ಹೆಡ್ಮಾಸ್ಟರು ಬಂದು ಮೊದಲ ನೈಟ್ ಸ್ಕೂಲು ಸರಿಯಾಗಿ ನಡೆಯಿತೆಂದು ರಿಪೋರ್ಟ್ ಬರೆದು, ಎರಡನೇ ಸಲ ಪ್ರಾರಂಭಿಸಲು ಶಿಫಾರಸು ಮಾಡಿದ್ದರು. ಸದ್ಯದಲ್ಲೆ ಮೊದಲ ಸಲದ ಸಂಭಾವನೆ ನೂರ ಇಪ್ಪತ್ತು ರೂಪಾಯಿಯನ್ನು ಸರ್ಕಾರ ಕಳಿಸುವುದಾಗಿ ಹೇಳಿ ಅವಳಿಂದ ರಶೀತಿ ತೆಗೆದುಕೊಂಡು ಹೋಗಿದ್ದರು. ಆ ಮೇಷ್ಟರ ಜಾಗಕ್ಕೆ ಬೇರೆಯವರು ಬಂದರು. ಆದರೆ ಅವರಿಗೂ ನಂಜಮ್ಮನಿಗೂ ಪರಿಚಯವಿಲ್ಲ. ವೆಂಕಟೇಶಯ್ಯ ಮೇಷ್ಟರು ಹೋದದ್ದರಿಂದ ಮಾದೇವಯ್ಯನವರಿಗೂ ಬೇಸರ.

ಇದೇ ಸಮಯದಲ್ಲಿ ನಂಜಮ್ಮ ಹೊಸ ಮನೆ ಶುರು ಮಾಡಿದಳು. ತಕ್ಷಣದಲ್ಲಿ ಹೇಗೂ ಬೇರೆ ಕೆಲಸವಿರಲಿಲ್ಲ. ಈ ಬಾರಿಯ ಮಳೆಗಾಲಕ್ಕೆ ಮೊದಲು, ಹೆಂಚು ಹೊದಿಸಿಯೇಬಿಡಬೇಕೆಂದು ಒಂದೇಸಮನೆ ಕೆಲಸ ಮಾಡಿಸುತ್ತಿದ್ದಳು. ಮನೆ ಕಟ್ಟಿಸಿ ಅವಳಿಗೆ ಅಭ್ಯಾಸವಿಲ್ಲ. ಎಲ್ಲ ಕೆಲಸವನ್ನೂ ಸ್ವಂತ ಜವಾಬ್ದಾರಿ, ಸ್ವಂತ ನಿರ್ದೇಶದಿಂದ ಮಾಡಬೇಕು. ಇಲ್ಲದಿದ್ದರೆ ದುಬಾರಿ ಖರ್ಚು ಬರುತ್ತದೆ. ಅವಳು ಈಗ ಹೊಂದಿಸಿಕೊಂಡಿರುವ ದುಡ್ಡು ಗೋಡೆ, ಮರಮುಟ್ಟು, ಬಿದಿರುಗಳಿಗೆ ಸಾಕು. ಅಟ್ಟದ ಹಲಗೆಯನ್ನು ಯಾವಾಗ ಬೇಕಾದರೂ ಹಾಕಿಕೊಳ್ಳಬಹುದು. ಹೆಂಚಿಗೆ ದುಡ್ಡು ಹೊಂದಿಸಬೇಕು. ಉಳಿದ ಗೋಡೆಯ ಸಾರಣೆ ಕಾರಣೆಗಳು ನಿಧಾನವಾಗಿ ಆದರೂ ತೊಂದರೆಯಿಲ್ಲ. ಪ್ರತಿಯೊಂದು ಸಾಮಾನು ಕೊಳ್ಳುವಾಗಲೂ, ಗೋಡೆ ಮರಗೆಲಸಗಳಲ್ಲಿಯೂ, ಮಾದೇವಯ್ಯನವರು ತಮಗೆ ತಿಳಿದಂತೆ ಕೆಲಸದವರಿಗೆ ತಿಳಿವಳಿಕೆ ಕೊಡುತ್ತಿದ್ದರು. ತನಗೆ ಮನೆಯಲ್ಲಿ ಬೇರೆ ಕೆಲಸವಿರಲಿಲ್ಲ. ಸುಮ್ಮನೆ ಕುಳಿತಿರದೆ ತಾನೂ ಕೆಲಸಕ್ಕೆ ಕೈಹಾಕಿದಳು. ಗಂಡಾಳುಗಳು ಕಲಸಿದ ಮಣ್ಣಿನ ಮುದ್ದೆಯನ್ನು ತಾನೇ ಕೈಲಿ ತೆಗೆದು ಮಾಡಿನ ಗೋಡೆಯ ಮೇಲಕ್ಕೆ ಎಸೆಯುವಳು. ಮಣ್ಣು ಕಲಸಲು ಗಡಿಗೆಯಲ್ಲಿ ನೀರು ಸೇದಿ ತರುವಳು. ಶ್ಯಾನುಬಾಕಿ ಲೆಕ್ಕ ಬರೆಯುವ ಈ ಅಮ್ಮ ಕೆಲಸ ಮಾಡುವುದು ಆಳುಗಳಿಗೇ ಸಂಕೋಚ. ಆದರೆ ತನ್ನ ಮನೆ, ತಾನು ದುಡಿದು ಕಟ್ಟಬೇಕು; ಸುಮ್ಮನೆ ಕೂತು ಮಾಡುವುದೇನು ಎಂಬುದು ಅವಳ ದೃಷ್ಟಿ.

ಆಗಲೆ ಒಂದೂವರೆ ಆಳುದ್ದದ ಗೋಡೆ ಏರಿತ್ತು. ಹೆಂಚಿಗೆ ದುಡ್ಡು ಹೊಂದಿಸುವುದೊಂದೇ ಬಾಕಿ. ಒಂದು ದಿನ ಸಂಜೆ, ಕಲಸಿದ ಜಾಗದಲ್ಲಿ ನೆಲಕ್ಕೆ ಅಂಟಿದ್ದ ಮಣ್ಣನ್ನು ಗುದ್ದಲಿಯಿಂದ ಕೆರೆದು ಉಂಡೆ ಮಾಡಿ, ಮೇಲೆ ಕೂತು ಗೋಡೆ ಹಾಕುವವನಿಗೆ ಕೊಡುತ್ತಿದ್ದಳು. ಅವಳ ತಂದೆ ಅಲ್ಲಿಗೆ ಬಂದರು. ಹೆಗಲಿಗೆ ಒಂದು ಹಸಿಬೇಚೀಲ ಹಾಕಿ ಪಂಚೆ ಉಟ್ಟು ಶಾಲು ಹೊದೆದಿದ್ದ ಅವರು, ಹಿಂದಿನ ಬೂಟು, ಹ್ಯಾಟು, ಬಿಳೀಕುದುರೆಯ ಕಂಠೀಜೋಯಿಸರಾಗಿರಲಿಲ್ಲ. ಕುದುರೆಯೂ ಇಲ್ಲದೆ ನಡೆದು ಬಂದಿದ್ದಾರೆ. ‘ನಂಜಾ, ಮನೆ ಕಟ್ಟುಸ್ತಿದೀಯಾ? ವಳ್ಳೇದಾಯ್ತು’-ಎಂದರು.

ಗುದ್ದಲಿಯನ್ನು ಅಲ್ಲಿ ಬಿಟ್ಟು, ನಾಳೆ ಮಾಡಬೇಕಾದ ಕೆಲಸದ ಬಗೆಗೆ ಗೋಡೆಯ ಆಳಿಗೆ ಹೇಳಿ ಅವಳು ತಂದೆಯೊಡನೆ ಮನೆಗೆ ಬಂದಳು. ಕೈ ಕಾಲು ಮುಖ ತೊಳೆದು ಅಡಿಗೆಯ ಮನೆ ಹೊಕ್ಕು, ಒಲೆ ಹಚ್ಚಿದಳು. ‘ನಂಜಾ, ನಂಗೆ ಅಂತ ವಿಶೇಷ ಏನೂ ಮಾಡ್ಬ್ಯಾಡ. ಅನ್ನ ಹುಣಿಸೆನೀರು ಮಾಡಿಬಿಡು ಸಾಕು’-ಎನ್ನುತ್ತಾ ತಾವೂ ಅಡಿಗೆಮನೆಗೆ ಬಂದು, ಒಲೆಯ ಹತ್ತಿರ ಗೋಡೆಗೆ ಒರಗಿಸಿದ್ದ ಮಣೆ ಹಾಕಿಕೊಂಡು ಕುಳಿತು, ‘ನಿನ್ನ ಮಗ ರುಸ್ತುಂ ಗಂಡು ನೋಡು. ಹುಟ್ಟಿದ್ರೆ ಹಾಗೆ ಹುಟ್ಟಬೇಕು. ಇಪ್ಪತ್ತು ಸಾವಿರ ಜನ ಸಿಂಹದ ಮರಿ ಅಂದ್ರು’ ಎಂದು ತಾವು ಕಂಡದ್ದನ್ನೆಲ್ಲ ವಿವರಿಸಿದರು. ಮಗನ ಹೊಗಳಿಕೆಯನ್ನು ಕೇಳಿದ ಅವಳಿಗೂ ಹಿಗ್ಗು. ಆದರೆ ಈ ಹುಡುಗ ಹೀಗೆ ಮುಂದೆ ನುಗ್ಗಿ ಪೋಲೀಸಿನವರಿಂದ ಬುರುಡೆ ಹೊಡೆಸಿಕೊಂಡರೆ ಏನು ಗತಿ ಎಂಬ ಯೋಚನೆ. ‘ನಾನು ಈ ಕಡೆ ಬಂದೇ ಇರ್ಲಿಲ್ಲ. ನೆನ್ನೆ ನಿನ್ನ ಮಗನ್ನ ನೋಡ್ದೆ. ಹೇಳಿದ್ನಲ್ಲ, ರಾತ್ರಿ ಪೋಲೀಸ್ನೋರು ಬಂದು ನನ್ನ ಹತ್ರುಕ್ಕೆ ಬಿಟ್ಟುಹೋದ್ರು. ಇವತ್ತು ಬೆಳಿಗ್ಗೆ ಕುದುರೇ ಮೇಲೆ ಕೂರಿಸಿ ಅವ್ನುನ್ನೂ ಕಲ್ಲೇಶನ್ನೂ ಊರಿಗೆ ಕಳುಸ್ದೆ. ಯಾಕೋ ನಿನ್ನ ನೋಡಬೇಕು ಅನ್ನುಸ್ತು. ಯಾಕೆ ನಿಧಾನ ಮಾಡಬೇಕು ಅಂತ ಹಸಿಬೇಚೀಲ ಹೆಗಲಿಗೆ ಹಾಕ್ಕಂಡು ಹೊರಟೇಬಿಟ್ಟೆ ನೋಡು’-ಕಂಠೀಜೋಯಿಸರು ಎಂದರು.

ಮಕ್ಕಳು ಸತ್ತ ವಿಷಯವಾಗಿ ಅವರೂ ಮಾತಾಡಲಿಲ್ಲ; ಅವಳೂ ಹೇಳಲಿಲ್ಲ. ಅವರು ಕೇಳಿದರು: ‘ಮನೆ ಕಟ್ಟುಸ್ತಿದೀಯಾ ವಳ್ಳೇದಾಯ್ತು. ಮೊದ್ಲೇ ಗೊತ್ತಿದ್ರೆ ನಾನು ಒಂದಿಷ್ಟು ದುಡ್ಡು ಕೊಡ್ತಿದ್ದೆ. ಮಂಗಳೂರು ಹಂಚೇ ಹಾಕುಸ್‌ಭೌದಾಗಿತ್ತು. ಈಗ ಒಂದು ತಿಂಗ್ಳಲ್ಲಿ ಎಂಟು ನೂರು ರೂಪಾಯಿ ಕೊಟ್ಟು ಒಂದು ಕುದುರೆ ತಗಂಡುಬಿಟ್ಟೆ. ಕ್ವಾ ಇಲ್ಲಿ, ಇನ್ನೂರು ರೂಪಾಯಿ ಇದೆ’-ಅವರು ತಮ್ಮ ಒಳ ಅಂಗಿಯ ಜೇಬಿಗೆ ಕೈಹಾಕಿ ಒಂದು ಬಟ್ಟೇಯಲ್ಲಿ ಸುತ್ತಿದ್ದ ನೋಟಿನ ಕಂತೆಯನ್ನು ತೆಗೆದು, ‘ತಗೋ, ಮನೆ ಕಟ್ಟಿಸುಕ್ಕೆ ಖರ್ಚು ಮಾಡ್ಕ’ ಎಂದು ಅವಳ ಹತ್ತಿರ ಇಟ್ಟರು.
‘ನಿಂಗೆ ಯಾತಕ್ಕಾದರೂ ಬೇಕಾಗುತ್ತೆ. ಇಟ್ಕ. ಮನೆಗೆ ನಾನು ಏರ್ಪಾಡು ಮಾಡ್ಕಂಡಿದೀನಿ.’
‘ನಂಗೇನು ದುಡ್ಡಿಗೆ ತಾಪತ್ರಯ ಇಲ್ಲ. ನೀನ್ ಇಟ್ಕ.’

ಆ ದಿನ ರಾತ್ರಿ ಮಲಗಿದಮೇಲೂ ತಂದೆ ಮಗಳು ತುಂಬಹೊತ್ತು ಮಾತನಾಡುತ್ತಿದ್ದರು. ನಂಜು ಕೇಳಿದಳು: ‘ಅಪ್ಪ, ನಿಂಗೆ ಇಷ್ಟು ವಯಸ್ಸಾಯ್ತು. ದೇವರು ಕೈಕಾಲೇನೋ ಇನ್ನೂ ಗಟ್ಟಿಯಾಗಿಟ್ಟಿದ್ದಾನೆ. ನೀನ್ಯಾಕೆ ಊರೂರು ತಿರುಗ್ತಿರ್ತಿ? ಮೂರು ತಿಂಗಳು ಆರು ತಿಂಗಳು ಊರಲ್ಲೇ ಇರುಲ್ಲ, ನೀನೆಲ್ಲಿರ್ತೀಯೋ ಗಿತ್ತಿಲ್ಲ ಅಂತ ಅಕ್ಕಮ್ಮ ಹೇಳಿದ್ಲು. ಇನ್ನು ಮೇಲಾದ್ರೂ ಹಾಯಾಗಿ ಮನೇಲಿರ್‌ಬಾರ್‌ದೇ?’
‘ಊರಲ್ಲಿದ್ದು ಏನು ಮಾಡ್‌ಲಿ?’
‘ಸುಮ್ನಿರು.’
‘ಸುಮ್ನೆ ಹ್ಯಾಗಿರೂದು? ಏನಾದ್‌ರೂ ಕೆಲ್ಸ ಮಾಡಬೇಕಲ?’-ಈ ಪ್ರಶ್ನೆಗೆ ನಂಜಮ್ಮನಿಗೆ ಉತ್ತರ ತಿಳಿಯಲಿಲ್ಲ. ಸ್ವಲ್ಪ ಹೊತ್ತಾದಮೇಲೆ ಅವರೇ ಅಂದರು: ‘ಕಲ್ಲೇಶನ ಹೆಂಡ್ತಿ ಯೋಗ್ತಿ ನಿಂಗೇ ಗೊತ್ತಿದೆ. ಆ ಮುಂಡೇನ ಒದ್ದು ಓಡ್ಸೂತಂಕ ಯಾರಿಗೂ ಸುಖವಿಲ್ಲ. ಅವ್ನೂ ಅವ್ಳುನ್ನ ಹೊಡೀತಾನೆ, ಬಡೀತಾನೆ, ಓಡ್ಸುಲ್ಲ. ಅವ್ಳುನ್ನ ಖೂನಿಮಾಡಿ ಯಾವ್ದಾದ್ರೂ ಹೊಲದಲ್ಲಿ ಹೂತುಬಿಡೂದೇನೂ ಕಷ್ಟವಲ್ಲ. ಅವಳ ಜೊತೆ ಹೆಣಗಬೇಕು ಅಂತ ಅವನ ಹಣೇಲಿ ಬರೆದಿದ್ರೆ ನಾನ್ಯಾಕೆ ಮಧ್ಯೆ ಏನಾರಮಾಡ್ಳಿ ಅಂತ ಸುಮ್ಮನಾಗಿಬಿಟ್ಟೆ. ನಂದೇನು ಯಾವೂರಲ್ಲಿದ್ರೂ ಆಗುತ್ತೆ ಬಿಡು.’

ನಂಜಮ್ಮ ಮಾತಾಡಲಿಲ್ಲ. ‘ಇಲ್ಲಿಯೇ ಬಂದು ಇರು’-ಎಂದು ಅವಳು ಹೇಳುವ ಮನಸ್ಸು ಅವಳದು. ಆದರೆ ಅವರು ಮಗಳ ಮನೆಯಲ್ಲಿ ಎಂದಿಗೂ ಬಂದು ಇರುವವರಲ್ಲ. ಅಲ್ಲದೆ ಅವರು ಇಲ್ಲಿದ್ದರೆ ತನ್ನ ಗಂಡ ಮನೆ ಬಿಟ್ಟು ಹೋಗುತ್ತಾರೆ. ಗಂಡನ ನಡವಳಿಕೆ ಕಂಡರೆ ಸಿಟ್ಟು ಬಂದು ಅವರು ಹಿಡಿದು ಎರಡು ಹೊಡೆದರೂ ಸರಿಯೇ. ಅವಳು ಯಾವ ಮಾತೂ ಆಡಲಿಲ್ಲ. ಇಪ್ಪತ್ತು ಮೈಲಿ ನಡೆದು ಬಂದಿದ್ದ ಅವರಿಗೆ ಬೇಗ ನಿದ್ರೆ ಬಂದುಬಿಟ್ಟಿತು.

ನಂಜಮ್ಮ ಸ್ವಲ್ಪ ಹೊತ್ತು ಹೊರಳಾಡುತ್ತಲೇ ಇದ್ದಳು. ವಿಶ್ವನನ್ನು ಪೋಲೀಸ್ ಸ್ಟೇಷನ್ನಿಗೆ ಹಿಡಿದುಕೊಂಡು ಹೋಗಿದ್ದುದೇ ಯೋಚನೆ. ನಿದ್ರೆ ಬಂದಮೇಲೆ ಅದೇ ಕನಸು. ಅವನನ್ನು ಪೋಲೀಸಿನವರು ಬಿಟ್ಟುಬಿಟ್ಟಿದ್ದಾರೆ. ಆದರೆ ತನ್ನನ್ನು ಹಿಡಿದುಕೊಳ್ಳಲು ಬಂದಿದ್ದಾರೆ. ಓಡಿ ಓಡಿ ಹೋಗುತ್ತಿರುವ ಅವಳನ್ನು ಇಬ್ಬರು ಕರಿಯ ಬಣ್ಣದ ಕಾನಿಸ್ಟೇಬಲುಗಳು ಹಿಂಬಾಲಿಸುತ್ತಿದ್ದಾರೆ. ಎದುರಿಗೆ ಒಂದು ಹಳ್ಳ ಸಿಕ್ಕುತ್ತದೆ. ಅದನ್ನು ದಾಟಿ ದೂರ ಓಡಿ ಬಂದಮೇಲೆ ಅವರು- ‘ನಮ್ಮ ಕೈಯಿಂದ ತಪ್ಪಿಸಿಕೊಂಡು ಎಲ್ಲಿ ಹೋಗ್ತಿಯಾ ಬಿಡು’ ಎಂದು ಗಹಗಹಿಸಿ ನಗುತ್ತಾ ಅಲ್ಲಿಯೇ ನಿಂತುಕೊಳ್ಳುತ್ತಾರೆ. ಅವಳಿಗೆ ತಕ್ಷಣ ಎಚ್ಚರವಾಯಿತು. ಏನೋ ಕೆಟ್ಟ ಕನಸು. ತಾನೇನು ಅಂಥ ತಪ್ಪು ಕೆಲಸ ಮಾಡಿದೆ, ಪೋಲೀಸಿನವರು ಹೀಗೆ ಓಡಿಸಿಕೊಂಡು ಬರುಕ್ಕೆ?-ಎಂದು ಯೋಚಿಸುತ್ತಾ ಮಲಗಿದಳು. ಎಷ್ಟೋ ಹೊತ್ತು ನಿದ್ದೆ ಬರಲಿಲ್ಲ.
ಕಂಠೀಜೋಯಿಸರು ಮಗಳ ಮನೆಯಲ್ಲಿ ಮೂರು ದಿನ ಇದ್ದರು. ಮನೆಯ ಕಟ್ಟಡ ನೋಡಿ ತಮಗೆ ತಿಳಿದ ಸಲಹೆಗಳನ್ನು ಕೊಟ್ಟರು. ಹಾಸನದ ತಾಲ್ಲೂಕು ಕಟ್ಟಾಯದಲ್ಲಿ ಒಂದು ಮನೆಗೆ ಕಟ್ಟು ಮಾಡಬೆಕಾಗಿದ್ದುದರಿಂದ ಹೆಚ್ಚು ದಿನ ಇರದೆ ಹೊರಟುಬಿಟ್ಟರು.

ಹೆಂಚಿನ ದುಡ್ಡಿಗೆ ಏನು ಮಾಡುವುದೆಂದು ಯೋಚಿಸುತ್ತಿರುವಾಗಲೇ ಅವಳ ತಂದೆ ಇನ್ನೂರು ರೂಪಾಯಿ ಕೊಟ್ಟು ಹೋಗಿದ್ದರು. ಅವರು ಹೊರಟ ದಿನವೇ ಅವಳು ಸಣ್ಣೇನ ಹಳ್ಳಿಗೆ ಹೋಗಿ, ದುಡ್ಡು ದುಡ್ಡು ಹೊಂದಿಸಿರುವುದಾಗಿಯೂ ಇನ್ನು ಎರಡು ದಿನಕ್ಕೆ ಹೆಂಚು ತಂದು ಹಾಕಿ ಹಣ ಎಣಿಸಿಕೊಂಡು ಹೋಗಬೇಕಾಗಿಯೂ ಹೇಳಿ ಬಂದಳು. ಮೇಲೆ ಎದ್ದ ಗೋಡೆ ಸ್ವಲ್ಪ ಒಣಗುವುದೇ ತಡ. ಕಂಬ ಇಟ್ಟು ತೊಲೆ, ಕವೆಗಂಬ, ತೀರು ಏರಿಸಿ ದಬ್ಬೆ ಕಟ್ಟಬೇಕು. ಎಲ್ಲವೂ ಸಿದ್ಧವಾಗಿವೆ. ಹೆಂಚಿಗೆ ಕೊಟ್ಟಮೇಲೂ ಐವತ್ತು ರೂಪಾಯಿ ಕೈಲಿ ಉಳಿಯುತ್ತೆ. ಹಿಡಿದ ಕೈಲೇ ಕೆಮ್ಮಣ್ಣುಗಾಜು, ಸುಣ್ಣ ಮಾಡಿಬಿಡಬೇಕು. ಮನೆಯೊಂದಾದರೆ ಸರಿ. ಗೃಹಪ್ರವೇಶದ ಖರ್ಚಿಗೆ ಹೇಗಾದರೂ ಹೊಂದಿಸಬಹುದು. ಅಷ್ಟರಲ್ಲಿ ನೈಟ್ ಸ್ಕೂಲಿನ ದುಡ್ಡು ಬಂದರೆ ಅದರಲ್ಲಿ ಐವತ್ತು ರೂಪಾಯಿ ಖರ್ಚಿನಲ್ಲಿ ಹೇಗೋ ಹೊಸಮನೆ ಶಾಸ್ತ್ರ ಮಾಡಬೇಕು. ತನ್ನ ಅಪ್ಪನಿಗೇ ಹೇಳಿಕಳಿಸಬೇಕು. ಈ ಊರ ಜೋಯಿಸರನ್ನು ಕರೆಯುವುದು ಬೇಡ. ಗೃಹಪ್ರವೇಶಕ್ಕೆ ವಿಶ್ವನನ್ನು ಕರೆಸಿಕೊಳ್ಳುವುದಂತೂ ಸರಿ. ಅಕ್ಕಮ್ಮ ಬತ್ತಾಳೆ. ಕಲ್ಲೇಶನೂ ಬಂದೇಬತ್ತಾನೆ. ಅವನ ಹೆಂಡ್‌ತೀದು ನೆಚ್ಚಿಗೆ ಇಲ್ಲ.

ಈ ಸಲ ಇನ್ನೂ ಬೇಸಿಗೆ ಶುರುವಾಗುವ ಮೊದಲೇ ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡವು. ಹೆಂಚು ಹೊದೆಸುವ ಮೊದಲು ಮಳೆ ಬಂದರೆ ಗೋಡೆ ಕಲಸಿಕೊಳ್ಳುತ್ತದೆ. ಆದುದರಿಂದ ಮೇಲಿನ ಕೆಲಸ ಬೇಗ ಮುಗಿಯಬೇಕು. ಮರಗೆಲಸದವರಿಗೆ ವರಾತ ಮಾಡಿ ಅವಳು ಮತ್ತೆ ಒಂದು ದಿನ ಸಣ್ಣೇನಹಳ್ಳಿಗೆ ಹೋದಳು. ಕುಂಬಾರಶೆಟ್ಟಿ ಮನೆಯಲ್ಲಿರಲಿಲ್ಲ. ಅವನು ಬರುವತನಕ ಅವನ ಮನೆಯಲ್ಲೆ ಕೂತಿದ್ದು, ನಿಧಾನ ಮಾಡುತ್ತಿರುವುದಕ್ಕೆ ಅವನಿಗೆ ಎಚ್ಚರ ಹೇಳಿ ಊರಿಗೆ ಬಂದಳು. ಮರುದಿನವೇ ಹೆಂಚು ಬಂತು. ಬಿಸಿಲು ಒಂದೇಸಮನೆ ಸುಡುತ್ತಿತ್ತು. ಆಕಾಶದಲ್ಲಿ ಮೋಡಗಳು ಹೆದರಿಕೆ ಹುಟ್ಟಿಸುತ್ತಿದ್ದವು. ಬೇಗ ಬೇಗ ಹೆಂಚು ಮೇಲೆ ಏರಬೇಕು. ಹೆಂಚು ಹೊದಿಸುವ ಕೆಲಸವೂ ಪ್ರಾರಂಭವಾಯಿತು. ಮನೆಯ ಎರಡು ಕಡೆಯೂ, ಕೆಲಸ ಬಲ್ಲವರು ಸೂರಿನ ಮೇಲಿನಿಂದ ಹತ್ತಿ ಕೂತರು. ಹೆಣ್ಣಾಳುಗಳು ಏಣಿಯಮೇಲೆ ಹತ್ತಿ ಹೆಂಚಿನ ಉಂಡೆಗಳನ್ನು ಮೇಲೆ ಏರಿಸುತ್ತಿದ್ದರು. ಆ ಸಂಜೆಗೆ ಮಳೆ ಬರಬಹುದು. ನಂಜಮ್ಮ ಬೆಳಗಿನಿಂದ ಒಂದೇಸಮನೆ ತಾನೂ ಹೆಂಚು ಎತ್ತಿ ಮೇಲೆ ಕೊಡುವ ಕೆಲಸ ಮಾಡುತ್ತಿದ್ದಳು. ಆಳುಗಳಲ್ಲಿ ಯಾರೂ ಸುಧಾರಿಸಿಕೊಳ್ಳಲಿಲ್ಲ. ಸಂಜೆ ನಾಲ್ಕು ಗಂಟೆಯ ವೇಳೆಗೆ ಎಲ್ಲವೂ ಮುಗಿದು, ನಡುವಿನ ದಬ್ಬಹೆಂಚನ್ನು ಹೊದೆಸಿ ಆಯಿತು. ‘ಅವ್ವಾ, ನಿಮ್ಮ ಕೆಲ್ಸ ಆಯ್ತು. ನೀವು ಗೆದ್ರಿ’-ಎಂದು ಹೇಳಿ ಕೆಲಸದವರು ಕೆಳಗೆ ಇಳಿದರು.

ಅಲ್ಲಿಯೇ ಇದ್ದ ಮಾದೇವಯ್ಯನವರು ಎಂದರು: ‘ನಂಜಮ್ಮ, ಅಪ್ಪಣ್ಣಯ್ಯ ಕಬ್ಬಿನ ಗದ್ದೆಗೆ ಬೆಂಕಿ ತಗುಲ್‌ಸಿದ್‌ನಲಾ, ಅದಕ್ಕೆ ತಾನೇ ನಿಮ್ಮ ಜಮೀನೆಲ್ಲ ಹ್ವಾದದ್ದು? ಅವತ್ತು ಅವನೂ ಚಿನ್ನಯ್ಯ, ಇಬ್ಬರೂ ಸೇರಿ ಮನೆಮ್ಯಾಲೆ ಹತ್ತಿ, ಒನಕೆ ತಗಂಡಿ ಹೆಂಚು ಒಡೆದು ಹಾಕಿದ್ರು. ನಾನು ಹೇಳ್ತಿದ್ನಲ-ಮನೆ ವಡೆಯಾದು ಸುಲಭ, ಕಟ್ಟಾದು ಕಷ್ಟ ಅಂತ. ಅಂತೂ ನೀನು ಸ್ವಂತ ಕಟ್ಟಿ ಮುಗಿಸ್ದೆ.’
ಅವರು ಹಾಗೆ ಹೇಳುವಾಗ ಅಲ್ಲಿಯೆ ಇದ್ದ ಚೆನ್ನಿಗರಾಯರು ಸಿಟ್ಟು ಬಂದು ಅಲ್ಲಿಂದ ಹೊರಟುಹೋದರು.

ಮೋಡ ಅಬ್ಬರ ಮಾಡಿದುದೆಷ್ಟೋ ಅಷ್ಟೇ. ಸಂಜೆ ಮಳೆ ಬರಲಿಲ್ಲ. ರಾತ್ರಿಯ ವೇಳೆಗೆ ಆಕಾಶದಲ್ಲಿ ಏನೂ ಇರಲಿಲ್ಲ. ಬೆಳಗಿನಿಂದ ಹೆಂಚು ಎತ್ತಿ ಎತ್ತಿ ನಂಜಮ್ಮನಿಗೆ ಸಾಕಾಗಿ ಹೋಗಿತ್ತು. ಆದರೂ ಹೊಟ್ಟೆಗೆ ಏನಾದರೂ ಮಾಡಬೇಕು. ರಾತ್ರಿ ಒಲೆ ಹಚ್ಚಿ ಒಂದಿಷ್ಟು ಅನ್ನ ಬೇಯಿಸಿದಳು. ಮಜ್ಜಿಗೆಯಲ್ಲಿ ಗಂಡನಿಗೂ ಹಾಕಿ ತಾನೂ ತಿಂದು ಮಲಗಿದರೆ, ಸತ್ತ ಮಕ್ಕಳ ಯೋಚನೆ ಮನಸ್ಸನ್ನು ಮುತ್ತಿತ್ತು. ನಮ್ಮ ಸ್ವಂತ ಮನೆಯಲ್ಲಿ ಅವು ಒಂದು ದಿನವೂ ಇರಲಿಲ್ಲ-ಎಂಬ ಕೊರಗು ಬಾಧಿಸಿತು. ಹಾಗೆಯೇ ವಿಶ್ವನ ಯೋಚನೆ ಬಂತು. ಅವನು ನಾಗಲಾಪುರಕ್ಕೆ ಹೋಗಿ ಆರು ತಿಂಗಳ ಮೇಲೆ ಆಯಿತು. ಇನ್ನು ಹದಿನೈದು ದಿನದಲ್ಲಿ ಬೇಸಿಗೆ ರಜ ಬರುತ್ತೆ. ಊರಿಗೆ ಕರಕೊಂಡು ಬರಬೇಕು. ಈ ಊರ ಸ್ಕೂಲಿನ ಹತ್ತಿರ ಹೋಗದ ಹಾಗೆ ನೋಡಿಕೊಂಡರೆ ಸಾಕು. ನಾನೇ ಗಾಡಿ ಹೂಡಿಸ್ಕಂಡು ಹೋಗಬೇಕು. ಅಮ್ಮ ಅಮ್ಮ ಅಂತ ಎಷ್ಟು ಹಲುಬುತ್ತಿರುತ್ತೋ ಅದು! ಅವನ ಜೊತೇಲೇ ಅಕ್ಕಮ್ಮನನ್ನೂ ಕರಕೊಂಡು ಬರಬೇಕು. ಇನ್ನೊಂದು ವರ್ಷ ಅವನು ಅಲ್ಲಿರೂದು. ಆಮೇಲೆ ಕಂಬನಕೆರೆ. ರಾಮಣ್ಣ ಕಷ್ಟಪಟ್ಟ ಹಾಗೆ ಅವನು ದಿನಾ ಹೋಗ್ತಾ ಐದು ಮೈಲಿ ಬರ್ತಾ ಐದು ಮೈಲಿ ತಿರುಗೂದು ಬ್ಯಾಡ. ಒಂದು ಸಣ್ಣ ಮನೆ ಬಾಡಿಗೆಗೆ ಮಾಡಿಕೊಂಡು ನಾವೂ ಅಲ್ಲೇ ಇರಬೇಕು. ಅಲ್ಲಿಂದಲೇ ಇಲ್ಲಿಗೆ ಬಂದು ಶ್ಯಾನುಭೋಗಿಕೆ ಲೆಕ್ಕ ಬರೆದರೂ ಆಗುತ್ತೆ-ಹೀಗೆಯೇ ಯೋಚಿಸುತ್ತಿದ್ದ ಅವಳಿಗೆ ಎಷ್ಟೋ ಹೊತ್ತಿನ ಮೇಲೆ ನಿದ್ರೆ ಬಂತು.

ಬೆಳಿಗ್ಗೆ ಎಚ್ಚರವಾಗುವ ಹೊತ್ತಿಗೆ ಮೈ ಕೈ ಭಾರವಾಗಿ ಜ್ವರ ತುಂಬಕೊಂಡಿತ್ತು. ಎರಡು ಕಂಕುಳಲ್ಲೂ ನೋವು. ನೆನ್ನೆಯ ದಿನವೆಲ್ಲ ಬಿಸಿಲಿನಲ್ಲಿ ನಿಂತು ಅಷ್ಟೊಂದು ಹೆಂಚುಗಳನ್ನು ಎತ್ತಿಕೊಟ್ಟಿದ್ದಳು. ಬಿಸಿಲು ಅವಳಿಗೆ ಹೊಸತೇನಲ್ಲ. ಆದರೆ ನೆನ್ನೆ ಕಾದುದು ಮಳೆ ಬರುವಂತಹ ತೀಕ್ಷ್ಣವಾದ ಬಿಸಿಲು. ಮನುಷ್ಯರ ಶರೀರ ಒಂದೇಸಮ ಇರುಲ್ಲ. ಅಷ್ಟೊಂದು ಹೆಂಚುಗಳನ್ನು ಎತ್ತಿದ್ದಕ್ಕೆ ಎರಡು ಕಂಕುಳುಗಳಲ್ಲೂ ಅದಗಳಲೆ ಕಟ್ಟಿದ ಹಾಗೆ ಆಗಿದೆ-ಎಂದುಕೊಂಡು ಎದ್ದು ಮುಖ ತೊಳೆದು ಕರು ಬಿಟ್ಟು ಹಾಲು ಕರೆದಳು. ವಿಶ್ವನನ್ನು ಕಳಿಸಿದಮೇಲೆ ಹಾಲು ಮೊಸರು ಖರ್ಚೇ ಆಗುತ್ತಿಲ್ಲ. ಈಗ ಒಂದು ತಿಂಗಳಿನಿಂದ ಅಪ್ಪಣ್ಣಯ್ಯನೂ ಊರಿನಲ್ಲಿಲ್ಲ. ಹೀಗಾಗಿ ತುಂಬಾ ಮಜ್ಜಿಗೆ ಉಳಿದುಬಿಡುತ್ತಿದೆ. ಜ್ವರ ಬಂದಿದ್ದರೂ ಅವಳೇ ಆರು ರೊಟ್ಟಿ ಹಾಕಿದಳು. ತಾನು ಒಂದರ್ಧ ತಿಂದು, ಉಳಿದ ಐದೂವರೆಯನ್ನು ಗಂಡನಿಗೆ ಇಟ್ಟು ಹಾಸಿಗೆ ಹಾಕಿಕೊಂಡು ಮಲಗಿಬಿಟ್ಟಳು. ಅರ್ಧ ನಿದ್ದೆ ಅರ್ಧ ಎಚ್ಚರ. ಸಂಜೆಯ ತನಕ ಹೀಗೆಯೇ ಕಳೆಯಿತು. ಮನೆಗೆ ಯಾರೂ ಬರಲಿಲ್ಲ. ಗಂಡನಂತೂ ಸರಿಯೇ ಸರಿ. ಸಂಜೆ ತಾನೇ ಎದ್ದು ಶುಂಠಿ ಮೆಣಸಿನ ಕಷಾಯ ಮಾಡಿಕೊಂಡು ಕುಡಿದು ಮತ್ತೆ ಮಲಗಿದಳು. ಅರೆನಿದ್ದೆಯ ಸ್ಥಿತಿ. ಯಾವಾಗ ರಾತ್ರಿಯಾಯಿತೋ, ಗಂಡ ಯಾವಾಗ ಬಂದು ಮಲಗಿದರೋ ಗೊತ್ತಿಲ್ಲ.

ಅರ್ಧ ರಾತ್ರಿ ಹೊತ್ತಿನಲ್ಲಿ ಅವರ ಗೊರಕೆಯ ಸದ್ದಿಗೆ ಎಚ್ಚರವಾಯಿತು. ಜಲಬಾಧೆ ತೀರಿಸಲು ಹೋಗುವಂತಾಗಿ ಮೇಲೆ ಏಳುತ್ತಾಳೆ: ಎರಡು ತೊಡೆಯ ಸಂದುಗಳಲ್ಲೂ ನೋಯುತ್ತಿದೆ. ಮತ್ತೆ ಬಂದು ಮಲಗಿದಾಗ ಅವಳಿಗೆ ಅನುಮಾನ ಬಂತು. ಹೆಂಚು ಎತ್ತಿದ್ದಕ್ಕೆ ಕಂಕುಳುನೋವು ಬಂದಿರಬಹುದು. ಏಣಿ ಹತ್ತಿ ಇಳಿದು ಮಾಡಿದ್ದಕ್ಕೆ ತೊಡೆಯ ಸಂದಿನಲ್ಲಿ ನೋವು ಆಗುವುದಿದ್ದರೆ ಇವತ್ತು ಬೆಳಿಗ್ಗೆಯೇ ಯಾಕೆ ಕಾಣಿಸಿಕೊಳ್ಳಲಿಲ್ಲ? ಇದೇನು ಪ್ಲೇಗೇ? ಹಾಗಾದರೆ ಊರಿನಲ್ಲಿ ಎಲ್ಲಿಯೂ ಇಲಿ ಗಿಲಿ ಬಿದ್ದ ಸುದ್ದಿಯೇ ಕೇಳಿಲ್ಲ. ಹೋದ ಸಲ ಪಾರ್ವತಿ ರಾಮಣ್ಣರಿಗೆ ಬಂದಾಗಲೂ ಸದ್ದಿಲ್ಲದೆ, ಯಾವ ಸೂಚನೆಯೂ ಕೊಡದೆ ಬಂತು. ಈಗಲೂ ಹಾಗೆಯೇ ಕಳ್ಳತನದಿಂದ ಬಂದಿದೆಯೆ? ಅವಳಿಗೆ ಹೆದರಿಕೆಯಾಯಿತು. ಹೇಗಾದರಾಗಲಿ, ಮಾದೇವಯ್ಯನವರನ್ನಾದರೂ ಕೇಳಬೇಕು.
‘ನೋಡಿ, ಎಚ್ಚರವಾಯ್ತೆ?’-ಎಂದು ಗಂಡನನ್ನು ಕೂಗಿದಳು. ಅವರ ಗೊರಕೆ ಮುರಿಯಲಿಲ್ಲ. ಮತ್ತೆ ಒಂದು ಸಲ ಕೂಗಿ ಕೈ ನೀಡಿ ಅವರ ಭುಜ ಅಲುಗಿಸಿದಳು.
‘ಸುಮ್ಮುನ್ ಬಿದ್ಗಳೇ, ರಾತ್ರಿ ಅಡಿಗೇನೂ ಮಾಡ್ಳಿಲ್ಲ. ಈಗ ನಿದ್ದೆ ಬ್ಯಾರೆ ಕೆಡುಸ್ತಾಳೆ’-ಅವರು ನಿದ್ದೆಗಣ್ಣಿನಲ್ಲೇ ಗದ್ದರಿಸಿಕೊಂಡರು.
ಅವಳಿಗೆ ಸಿಟ್ಟು ಬಂತು. ‘ನೀವೇನು ಮನುಷ್ಯರೋ ದನವೋ?’-ಎಂದು ಕೇಳಿಬಿಡಬೇಕೆನ್ನಿಸಿತು. ಆದರೆ ಅದರಿಂದ ಅವರು ಇನ್ನೂ ಬಾಯಿಗೆ ಬಂದಂತೆ ಬಯ್ದು ತನ್ನ ಮನಸ್ಸಿಗೆ ಕರಕರೆಯಾಗುತ್ತದೆ ಎಂದು, ನಾಲಿಗೆಗೆ ಬಂದಿದ್ದ ಮಾತನ್ನು ಒಳಗೇ ನುಂಗಿಕೊಂಡು ಹೇಳಿದಳು: ‘ನಂಗೆ ಪ್ಲೇಗು ಆಗಿದೆ ಅಂತ ಕಾಣುತ್ತೆ. ಹೋಗಿ ಮಾದೇವಯ್‌ನೋರುನ್ನ ಕರ್ಕಂಡ್ ಬನ್ನಿ.’

ಅವರು ಮಾತನಾಡಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಗೊರಕೆ ಹೊಡೆಯುತ್ತಿದ್ದರು. ಬೆಳಗಿನ ತನಕ ಕಾದರೂ ಆದೀತು. ಆದರೆ ಸಾಧ್ಯವಾದಷ್ಟು ಬೇಗ ಔಷಧ ತೆಗೆದುಕೊಳ್ಳಬೇಕು. ಅವಳೇ ಮೇಲೆ ಎದ್ದು ಕಂಬಳಿ ಹೊದೆದು ಬಾಗಿಲು ತೆಗೆದುಕೊಂಡು ಹೊರಗೆ ಹೊರಟಳು. ಮೈ ತೂರಾಡುವಂತೆ ಆಗುತ್ತಿತ್ತು. ನಡೆಯುವಾಗ ತೊಡೆಯ ಸಂದಿನಲ್ಲಿ ನೋವು ಕಾಣುತ್ತಿದ್ದರೂ ಕಂಕುಳಿನಷ್ಟು ಆಗುತ್ತಿರಲಿಲ್ಲ. ಹೇಗೋ ದೇವಸ್ಥಾನದ ಬಾಗಿಲಿಗೆ ಹೋಗಿ-‘ಅಯ್ನೋರೇ ಎಂದಳು. ಬೇಸಿಗೆಯಾಗಿದ್ದುದರಿಂದ ಜಗುಲಿಯ ಮೇಲೆ ಮಲಗಿದ್ದ ಅವರು ‘ಆ’ ಎಂದ ತಕ್ಷಣ, ‘ನಂಗೆ ಪ್ಲೇಗ್ ಆಗಿದೆ ಅಂತ ಕಾಣುತ್ತೆ. ನಮ್ಮನೆಗೆ ಬನ್ನಿ’ ಎಂದು ಹೇಳಿ ಹಿಂತಿರುಗಿ ಹೊರಟಳು. ತೂರಾಡಿಕೊಂಡು ಮತ್ತೆ ಮನೆಯ ಬಾಗಿಲಿಗೆ ಬರುವ ಹೊತ್ತಿಗೆ, ಹಿಂದಿನಿಂದ ಬಂದ ಅಯ್ಯನವರೇ ಬಾಗಿಲು ತೆಗೆದರು. ಒಳಗೆ ಹೋಗಿ ತಲೆಯ ದಿಂಬಿನ ಹತ್ತಿರ ಇಟ್ಟುಕೊಂಡಿದ್ದ ಬೆಂಕಿಯಪೊಟ್ಟಣ ತೆಗೆದು ಕಡ್ಡಿ ಗೀರಿ ಲ್ಯಾಂಪು ಹಚ್ಚಿಸಿ ಹಾಸಿಗೆಯ ಮೇಲೆ ಮಲಗಿಬಿಟ್ಟಳು. ಬೆಳಕಿನಲ್ಲಿ ಅಯ್ಯನವರು ನೋಡುತ್ತಾರೆ: ಅವಳ ಮುಖವೆಲ್ಲ ಕೆದರಿಹೋಗಿ ಕಣ್ಣು ಕೆಂಡದ ಉಂಡೆಯಂತೆ ಕಾಣುತ್ತಿವೆ. ಮೈಯಲ್ಲಿ ಜ್ವರವಿರುವುದು ಮುಖ ನೋಡಿದರೇ ತಿಳಿಯುತ್ತಿತ್ತು.
‘ಜ್ವರ ಯಾವಾಗ ಬಂತವ್ವ?’
‘ನೆನ್ನೆ ರಾತ್ರಿಯೇ ಬಂತು. ನೆನ್ನೆ ಎಲ್ಲ ಕಂಕುಳು ನೋಯುತ್ತಿತ್ತು. ಹೆಂಚು ಎತ್ತಿ ಎತ್ತಿ ಅಡಗಳಲೆ ಅಂತಿದ್ದೆ. ಈಗ ಎಚ್ಚರವಾದ ತಕ್ಷಣ ತೊಡೆ ಸಂದಿನಲ್ಲಿ ನೋಯ್ತಿದೆ.’
ಒಂದು ನಿಮಿಷ ಯೋಚಿಸಿದಮೇಲೆ ಅಯ್ಯನವರು ಕೇಳಿದರು: ‘ಸಣ್ಣೇನಹಳ್ಳಿಗೆ ಹಂಚಿಗೆ ಹೇಳಾಕೆ ಅಂತ ಹ್ವಾಗಿದ್ಯಲಾ, ಊರ ವಳಗೆ ಹ್ವಾಗಿದ್ಯಾ, ಹ್ವರಗೇ ಇದ್ಯೋ?’
‘ಲಕ್ಕಯ್ಯಶೆಟ್ಟಿ ಮನೆ ಊರ ಮಧ್ಯದಲ್ಲಲ್ವೆ ಇರೂದು? ಯಾಕೆ?’
‘ಅವನ ಮನ್ಲಿ ಕುಂತ್ಕಂಡಿದ್ಯಾ?’
‘ಹೂಂ, ನಾನು ಹೋದಾಗ ಅವ್ನು ಮನ್ಲಿರ್ಲಿಲ್ಲ. ಬರೂತಂಕ ಎರಡು ಗಂಟೆ ಕಾಯ್ಕಂಡು ಕೂತಿದ್ದೆ ಯಾಕೆ?’
‘ಆ ಊರಲ್ಲಿ ಹತ್ತು ಹನ್ನೆಲ್ಡು ದಿನದಿಂದ ಇಲಿ ಬೀಳ್ತಾವಂತೆ. ಹಳ್ಳೀಮುಂಡೇವು ತಿಳಿಯಾಕುಲ್ಲ. ಊರು ಗೀರು ಬಿಡದೆ ಅಲ್ಲೇ ಅವೆ. ಇವತ್ತು ಬೆಳಿಗ್ಗೆ ನಾನು ಕೋರುಣ್ಯದ ಭಿಕ್ಷಕ್ಕೆ ಆ ಕಡೆ ಹ್ವಾಗಿದ್ದೆ. ಹಿಂಗೆ ಅಂತ ತಿಳೀತು. ನಾನು ಊರೊಳಿಕ್ಕೆ ಹ್ವಾಗ್‌ಲೇ ಇಲ್ಲ.’
‘ಹಾಗಾದ್ರೆ ನಂಗೆ ಆಗಿರೂದು ಪ್ಲೇಗೇ ಅಂತೀರಾ?’
‘ಹೇಳಾಕಾಗಾಕುಲ್ಲ. ಹ್ಯಂಗಾದ್ರೆ ಹಂಗಾಗ್ಲಿ. ಬ್ಯಾಗ ಔಸ್ತಿ ಮಾಡುಸ್ಬೇಕು.’

ಇಷ್ಟು ಮಾತಾಡುವ ಹೊತ್ತಿಗೆ ಅವಳಿಗೆ ಆಯಾಸವಾಗಿತ್ತು. ಸ್ವಲ್ಪ ಹೊತ್ತು ಹಾಗೆಯೇ ಕಣ್ಣು ಮುಚ್ಚಿಕೊಂಡಿದ್ದಮೇಲೆ-‘ಮನ್ಲಿ ಐವತ್ತು ರೂಪಾಯಿ ಇದೆ. ಏನು ಔಸ್ತಿಯಾದ್ರೂ ತರ್ಸಿ. ನೀವೇ ದಿಕ್ಕು’ ಎಂದು ಹೇಳಿ ಕಣ್ಣು ಮುಚ್ಚಿದಳು. ಈಗ ಅವಳಿಗೆ ಯಾವ ಔಷಧಿ ಮಾಡಿಸಬೇಕು-ಎಂದು ಅಯ್ಯನವರು ಯೋಚಿಸಿದರು. ಹೋದ ಸಲ ವಿಶ್ವನನ್ನು ಗಾಡಿಯ ಮೇಲೆ ಹೇರಿಕೊಂಡು ಕಂಬನಕೆರೆ ಆಸ್ಪತ್ರೆಗೆ ಹೋಗಿದ್ದ ನೆನಪಾಯಿತು. ‘ಈ ಡಾಕ್ಟ್ರು ಏನೂ ಮಾಡಾಕಿಲ್ಲ. ಹೇಮಾದಿ ಪಾನಕವೇ ಸರಿ’-ಎಂದು ನಿರ್ಧರಿಸಿದರು. ದುಡ್ಡು ಇದ್ದ ಜಾಗವನ್ನು ನಂಜಮ್ಮ ಹೇಳಿದಳು. ಈಗ ಇನ್ನೂ ಅರ್ಧ ರಾತ್ರಿಯಾಗಿರಬಹುದು. ಅವರು ಹೊರಗೆ ಬಂದು ಆಕಾಶ ನೋಡಿದರು. ಮಂಚದ ಕಾಲು ಕಾಣಿಸುತ್ತಿತ್ತು. ಈಗ ಅರ್ಜೆಂಟ್ ತಿಪಟೂರಿಗೆ ನಡೆದು ಹೋಗಿ ಹೇಮಾದಿ ಪಾನಕ ತಗಂಡು ತಕ್ಷಣ ಸಿಕ್ಕುವ ಮೋಟಾರಿನಲ್ಲಿ ತಿಂತಿರುಗಿ ಬರಬಲ್ಲವರು ಯಾರು? ಚೆನ್ನಿಗರಾಯರಿಗೆ ರಾತ್ರಿಯ ಕತ್ತಲಲ್ಲಿ ನಡೆಯುವ ಧೈರ್ಯವಿಲ್ಲ. ಅವರ ಮೈಗಳ್ಳತನ ಎಲ್ಲರಿಗೂ ಗೊತ್ತಿರುವುದೇ. ಕೈಗೆ ಸಿಕ್ಕಿದ ಔಷಧಿಯ ದುಡ್ಡಿನಲ್ಲಿ ಮಸಾಲೆ ದೋಸೆ ಮೈಸೂರುಪಾಕು ತಿನ್ನುತ್ತಾ ಅಲ್ಲಿಯೇ ಉಳಿದುಬಿಟ್ಟರೂ ಕಷ್ಟ. ಅಪ್ಪಣ್ಣಯ್ಯ ಊರಿನಲ್ಲಿಲ್ಲ. ತಾವೇ ಹೋಗಬಹುದು. ಆದರೆ ಒಂದೇ ಉಸಿರಿಗೆ ತಿಪಟೂರು ತನಕ ನಡೆಯುವ ಶಕ್ತಿ ತಮಗಿಲ್ಲ. ತಾವು ಅಲ್ಲಿಗೆ ಹೋದರೆ ಇಲ್ಲಿ ಈ ರೋಗಿಯ ಹತ್ತಿರ ಯಾರೂ ದಿಕ್ಕಿಲ್ಲ. ಕಷ್ಟಕಾಲದಲ್ಲಿ ನರಸಿ ಯಾರಿಗಾದರೂ ಆಗುತ್ತಾಳೆ. ತಿಪಟೂರಿನಿಂದ ತನ್ನ ಅಂಗಡಿಗೆ ಸಾಮಾನು ತಂದು ಸಹ ಅವಳಿಗೆ ಅಭ್ಯಾಸವಿದೆ. ಆದರೆ ಹೆಣ್ಣು ಹೆಂಗಸು ರಾತ್ರಿಯ ಹೊತ್ತು ನಡೆಯಲಾರಳು. ಹೇಗಾದರೂ ಸರಿ, ಅವಳನ್ನು ಕೇಳುವುದು. ಅವಳು ಇನ್ಯಾರನ್ನಾದರೂ ಕಳಿಸಬಹುದು-ಎಂದು ಯೋಚಿಸಿದ ಅವರು, ಊರ ಹೊರಗೆ ಹೋಗಿ ಅವಳ ಅಂಗಡಿ ಬಾಗಿಲು ತಟ್ಟಿದರು. ತಕ್ಷಣ ಎದ್ದು ದೀಪ ಹಚ್ಚಿ ಹೊರಗೆ ಬಂದ ಅವಳು ಇವರು ಹೇಳಿದುದನ್ನು ಕೇಳಿ, ‘ಅಯ್ಯಾರೇ ನೀವೇನ್ ಹ್ಯದರ್ಕಾಬ್ಯಾಡಿ. ಲಿಂಗಾಪುರದ ಸಂಬಣ್ಣಾರು ಅವ್ರೆ. ನಾನು ಏಳಿದ್ರೆ ಖಂಡ್‌ತ ಅವ್ರು ಕೆಲ್ಸ ಮಾಡ್ಕಂಡ್ ಬತ್ತಾರೆ’ ಎಂದಳು. ಅವಳೇ ಒಳಗೆ ಹೋಗಿ ಅವನನ್ನು ಎಬ್ಬಿಸಿದಳು. ಲಿಂಗಾಪುರದ ಸಂಬೇಗೌಡ ಅಯ್ಯನವರಿಗೇ ಗೊತ್ತಿರುವ ಮನುಷ್ಯನೇ. ನೊಣಬಗೌಡನಾದ ಅವನ ಮನೆಯಲ್ಲಿ ಅಯ್ಯನವರು ಬಿನ್ನ ಸಹ ತೀರಿಸಿದ್ದಾರೆ. ತಾನು ಇಲ್ಲಿರುವುದು ಅಯ್ಯನವರಿಗೆ ಗೊತ್ತಾಗಿ ಎದುರಿಗೆ ನಿಲ್ಲುವ ಪ್ರಸಂಗ ಬಂದುದಕ್ಕೆ ನಾಚಿ ಅವನು ತಲೆ ತಗ್ಗಿಸಿ ನಿಂತುಕೊಂಡ, ಒಂದು ಕಾಗದದ ಮೇಲೆ ಅಯ್ಯನವರು-‘ತಿಪಟೂರು ಪೇಟೇಬೀದಿ ವೆಂಕಟಾಚಲಶೆಟ್ಟರ ಅಂಗಡಿ. ಹೇಮಾದಿ ಪಾನಕ. ಪಿಳೇಗಿನ ಔಸ್ತಿ’ ಎಂದು ಬರೆದು ಇಪ್ಪತ್ತು ರೂಪಾಯಿ ಕೊಟ್ಟರು. ‘ಈಗ್ಲೇ ವಾಟ ಹ್ವಡ್‌ಕಂಡ್‌ಹ್ವಾಗಿ ಮೋಟಾರ್ನಾಗೆ ಬಂದ್‌ಬಿಡಬೇಕು’-ಎಂದು ನರಸಿ ಹುಕುಂ ಮಾಡಿದಳು. ಕಾಲಿಗೆ ಎಕ್ಕಡ ಮೆಟ್ಟಿಕೊಂಡ ಅವನು ತಲೆಗೆ ಲಪ್ಪಟಿ ಸುತ್ತಿ ದಾಪುಹೆಜ್ಜೆ ಹಾಕುತ್ತಾ ಕತ್ತಲೆಯಲ್ಲಿ ಹೊರಟುಹೋದ.
ನರಸಿ ಅಯ್ಯನವರನ್ನು ಕೇಳಿದಳು: ‘ಅಯ್ಯಾರೇ, ಈ ಊರಾಗೆ ನಂಜವ್ವನಂತಾ ಒಳ್ಳೇ ಗರತಿಯಿಲ್ಲ. ಆ ಯಮ್ಮನಿಗೆ ಬಂದಂತಾ ಕಷ್ಟ ಯಾರಿಗೂ ಬರ್ನಿಲ್ಲ. ಈಗ ಮತ್ತೆ ಅವ್ರಿಗೆ ಪಿಳೇಗ್ ಆಗೈತೆ. ದರ್ಮವಾಗಿ ಯಾಕಿರಬೇಕು ನೀವೇ ಏಳಿ.’
ಅಯ್ಯನವರಿಗೆ ಉತ್ತರ ತಿಳಿಯಲಿಲ್ಲ. ಈ ಸಂದರ್ಭದಲ್ಲಿ ಅದರ ಬಗೆಗೆ ಯೋಚಿಸಲು ಬುದ್ಧಿ ಮಂಕಾಗಿತ್ತು. ‘ಇನ್ನೊಂದ್ ದಿನ ಏಳ್ತೀನಿ. ಈಗ ಆ ಯಮ್ಮನ ನೋಡೂರು ಯಾರೂ ಇಲ್ಲ’-ಎಂದು ಅವರು ಹೊರಟರು.
‘ನಾನೂ ಬರ್ಲಾ?’
‘ಏನೂ ಬ್ಯಾಡ’-ಎಂದು ಮುಂದೆ ಹೊರಟರು.
‘ವಸಿ ನಿಂತ್ಕಳಿ’-ಎಂದು ಕೂಗಿದ ನರಸಿ ಹತ್ತಿರ ಬಂದು ಹೇಳಿದಳು: ‘ನಾನು ಬರಾಕಿಲ್ಲ. ನೋಡಿ, ನಂಜವ್ವ ರಾತ್ರಿ ಹೊತ್ತು ಎಂಗ್‌ಸ್ರಿಗೆ ಇಸ್ಕೂಲು ಮಾಡ್ತಿತ್ತಲಾ, ಅದ್ಕೆ ನಾನು ಶೇರ್ಕಂತೀನಿ ಅಂತ ಏಳಿಕಳ್ಸಿದ್ದೆ. ಬ್ಯಾಡ ಅಂತ ಅಂದ್‌ಬಿಡ್ತಂತೆ. ಈಗ ನಾನು ಬಂದ್ರೂ ಆ ಯಮ್ಮನಿಗೆ ವಲ್ಲೆ ಅನ್ನುಸ್‌ಭೈದು.’
‘ನಿನ್ನ ಸೇರಿಸ್ಕಳ್ಲಿಲ್ಲ ಅಂತ ಕ್ವಾಪವೇನು?’
‘ಇಲ್ಲ ಬುಡಿ. ಶೇರಿಸ್ಕಂಡಿದ್ರೆ ಬಾಕಿ ಎಂಗುಸ್ರು ಬತ್ತಿರ್ಲಿಲ್ಲ’-ಎಂದು ಅವಳೇ ಹೇಳಿದಳು.

ಔಷಧಿ ಬಂದ ತಕ್ಷಣ ಕಳಿಸಿಕೊಡಬೇಕೆಂದು ಹೇಳಿ ಅಯ್ಯನವರು ಮನೆಗೆ ಬರುವ ಹೊತ್ತಿಗೆ ನಂಜಮ್ಮ ನಿದ್ರೆ ಮಾಡುತ್ತಿದ್ದಳು. ಸೀಮೆ ಎಣ್ಣೆಯ ಲ್ಯಾಂಪು ಉರಿಯುತ್ತಿತ್ತು. ಈಗ ರೋಗಿಯನ್ನು ಎಬ್ಬಿಸುವುದು ಬೇಡವೆಂದು ಅವರು ಸುಮ್ಮನೆ ಅವಳ ಮುಖವನ್ನೇ ನೋಡುತ್ತಾ ಕಂಬವನ್ನೊರಗಿ ಕುಳಿತರು. ಚೆನ್ನಿಗರಾಯರನ್ನು ಎಬ್ಬಿಸಲೇ ಎಂಬ ಯೋಚನೆ ಬಂತು. ಅವರು ಎದ್ದಿದ್ದರೆ ಈ ಯಮ್ಮನೇ ಯಾಕೆ ಗುಡಿಗೆ ಬರ್ತಿತ್ತು?- ಎಂದು ಯೋಚಿಸಿ ಸುಮ್ಮನಾದರು. ಅವಳ ಮುಖವನ್ನು ನೋಡುತ್ತಾ ನೋಡುತ್ತಾ, ಮದುವೆಯಾಗಿ ಊರಿಗೆ ಬಂದಾಗಿನಿಂದ ಇಲ್ಲಿಯ ತನಕ ಅವಳ ಜೀವನ ನಡೆದ ರೀತಿ ಎಲ್ಲವೂ ಅವರ ನೆನಪಿಗೆ ಬರುತ್ತಿತ್ತು. ಸೊಸೆಯಾಗಿ ಈ ಊರಿಗೆ ಬಂದ ಹೊಸತರಲ್ಲಿ ಅವಳು ಹೊರಗಿನ ಯಾರ ಕೈಲೂ ಮಾತನಾಡಿದವಳಲ್ಲ. ಅತ್ತೆಮನೆಯ ಸೊಸೆಯಂತೆಯೇ ಇದ್ದಳು. ಸೊಸೆಯನ್ನು ಬಾಳಿಸದ ಅತ್ತೆ. ಯಾರ ಬಗೆಗೂ ಪ್ರೀತಿ ವಿಶ್ವಾಸಗಳಿಲ್ಲದ ಗಂಡ. ಜಮೀನು ಹೋದದ್ದು. ಅದನ್ನು ಉಳಿಸಿಕೊಳ್ಳಲು ಈ ಸೊಸೆ ಮಾಡಿದ ವಿವೇಕಪೂರ್ಣ ಪ್ರಯತ್ನ. ಏಕಾಕಿಯಾಗಿ ಮಕ್ಕಳೊಡನೆ ಬೇರೆ ಬಂದು ಸಂಸಾರವನ್ನು ಕಟ್ಟಿ ನಿಲ್ಲಿಸಿದುದು. ಮಗನ ವಿದ್ಯಾಭ್ಯಾಸ. ಮಗಳ ಮದುವೆ. ಮಕ್ಕಳಿಬ್ಬರ ಸಾವು. ಈಗ ಸಾವು ಈ ಯಮ್ಮನನ್ನೂ ನುಂಗಲು ಬಂದಂತಿದೆ. ನರಸಿ ತಮ್ಮನ್ನು ಕೇಳಿದ ಪ್ರಶ್ನೆ ಅವರಿಗೆ ನೆನಪಾಯಿತು. ನಂಜವ್ವನಂತಾ ವಳ್ಳೇ ಗರತಿ ಇಲ್ಲ. ಈ ಯಮ್ಮನಿಗೆ ಬಂದಂತಾ ಕಷ್ಟ ಯಾರಿಗೂ ಬರಲಿಲ್ಲ. ಈಗ ಮತ್ತೆ ಇವರಿಗೇ ಪಿಳೇಹು ಆಗೈತೆ. ದರ್ಮವಾಗಿ ಯಾಕಿರಬೇಕು? ಶಿವ ಸಜ್ಜನರ ಕಾಯ್ತಾನೆ; ದುರ್ಜನರ ದಂಡಿಸ್ತಾನೆ. ಆದರೆ ನಂಜವ್ವ ಏನು ಕೆಟ್ಟದ್ದು ಮಾಡಿದ್ದಳು? ಅತ್ತೆಯ ಅವಿವೇಕ, ಗಂಡನ ಹೀನತನಕ್ಕೆ ಇವಳು ಕಷ್ಟಪಟ್ಟಳು. ಆದರೆ ಪ್ಲೇಗುಮಾರಿ ಇವಳ ಮನೆಗೇ, ಇವಳ ಮಕ್ಕಳಿಗೇ, ಕೊನೆಗೆ ಇವಳಿಗೇ ಹೊಡೆಯಬೇಕೆ? ಪ್ರಪಂಚದಲ್ಲಿ ಧರ್ಮ ಕರ್ಮಕ್ಕೆ ಶಿಕ್ಷೆ ಕೊಡುವುದಕ್ಕೆ ದೇವರು ರೋಗ ರುಜಿನಗಳನ್ನು ಮಾಡಿದ್ದಾನೆಂದು ಅವರು ತತ್ವ ಮತ್ತು ಲಾವಣಿಯ ಪದಗಳಲ್ಲಿ ಓದಿದ್ದರು. ಆದರೆ ಇದುವರೆಗೂ ಅರ್ಥಮಾಡಿಕೊಂಡಿದ್ದುದೇ ಈಗ ಅವರಿಗೆ ಅರ್ಥವಾಗದಂತೆ ಆಗುತ್ತಿತ್ತು.
ಅದೇ ಸಮಯಕ್ಕೆ ಸರಿಯಾಗಿ ನಂಜಮ್ಮ ಬೆಚ್ಚಿಬಿದ್ದು, ‘ಅಯ್ಯಯ್ಯೋ’ ಎನ್ನುತ್ತಾ ಎಚ್ಚರವಾದಳು. ‘ಯಾಕವ್ವ?’-ಅವರು ಕೇಳಿದರು. ಐದು ನಿಮಿಷ ಏನೂ ತಿಳಿಯದಂತೆ ಕಣ್ಣು ಬಿಟ್ಟು ನೋಡಿ ಅವಳು ಕೇಳಿದಳು: ‘ನೀವಾ?’
‘ಹೂಂ, ಏನಾಯ್ತು?’
‘ಕನಸು. ಹಿಂದೆ ಒಂದು ಸಲ ಬಿದ್ದಿತ್ತು. ಇಬ್ಬರು ಕರೀ ಪೀಲೀಸಿನೋರು ಓಡಿಸ್ಕಂಡು ಬಂದಿದ್ರು. ನಾನು ಹಳ್ಳ ದಾಟಿಬಿಟ್ಟೆ. ನಮ್ಮ ಕೈಯಿಂದ ತಪ್ಪಿಸ್ಕಂಡು ಎಲ್ಲಿಗೆ ಹೋಗ್ತೀಯಾ ಬಿಡು ಅಂದಿದ್ರು. ಈಗ ಮತ್ತೆ ಅದೇ ಕನಸು. ನಾನು ಹಳ್ಳ ದಾಟೂ ಮೊದಲೇ ಇಬ್ಬರೂ ಬಂದು ನನ್ನ ಹಿಡ್‌ಕಂಡು ಕರೀ ಹಗ್ಗದಲ್ಲಿ ಕಟ್ತಾ ಇದ್ರು. ಅಷ್ಟರಲ್ಲಿ ಎಚ್ಚರವಾಯ್ತು.’
‘ಜ್ವರದ ತಾಪಕ್ಕೆ ಹ್ಯಂಗೆ ಹ್ಯಂಗೋ ಕನಸು ಬೀಳ್ತೈತಿ. ಸುಮ್‌ನೆ ಮನಿಕ್ಕಳವ್ವಾ.’
‘ಜ್ವರಕ್ಕಲ್ಲ ಅಯ್ನೋರೇ, ನಾನು ಈಗ ಸಾಯೂದು ಖಂಡಿತ. ನಂಗೆ ಒಂದು ಬಟ್ಲು ಗಂಜಿ ಮಾಡಿಕೊಡ್ತೀರಾ? ಬ್ರಾಹ್ಮಣರ ಕೋಣೆ ಅಂತ ಏನೂ ಸಂಕೋಚಮಾಡ್ಕಾಬ್ಯಾಡಿ. ನಮ್ಮಯ್ಯ ಬಂದಾಗ ಉಪ್ಪಿಟ್ಟಿಗೆ ಅಂತ ಅಕ್ಕಿತರಿ ಒಡೆದಿದ್ದೆ. ಬಡೂನಮ್ಯಾಲೆ ಕರೀ ಡಬ್ಬದಲ್ಲಿದೆ. ಕಡುಬಿನ ಕೊಳದಪ್‌ಲೇಲಿ ಬೆಲ್ಲ ಇದೆ. ಬೆಲ್ಲ ಸಿಕ್ದೇ ಇದ್ರೆ ಸಪ್ಪೆಗಂಜಿಯಾದ್ರೂ ಸರಿ, ಮಾಡಿ ತನ್ನಿ.’
ಅವರು ಎದ್ದು ಲ್ಯಾಂಪು ಹಿಡಿದು ಒಳಗೆ ಹೋದರು. ನೆನ್ನೆ ರಾತ್ರಿ ಚೆನ್ನಿಗರಾಯರು ತಿಂದು ಕೆಳಗೆ ಉದುರಿದ್ದ ರೊಟ್ಟಿಯ ಚೂರುಗಳ ಮೇಲೆ, ಕತ್ತಲೆಯಲ್ಲೂ ನೊಣ ಹಾರುತ್ತಿದ್ದುವು. ಅಕ್ಕಿಯ ತರಿ, ಬೆಲ್ಲ ಅವರಿಗೆ ತಕ್ಷಣ ಅವರಿಗೆ ಸಿಕ್ಕಿತು. ಸೋಗೆಗರಿ ಹಚ್ಚಿ ಒಂದು ಚರುಕಿನಲ್ಲಿ ಗಂಜಿಮಾಡಿ ಒಂದು ಲೋಟದೊಡನೆ ತಂದುಕೊಟ್ಟರು. ಅವರೇ ಭುಜ ಹಿಡಿದು ಎಬ್ಬಿಸಿ ಕೂರಿಸಿದಮೇಲೆ ಅಷ್ಟನ್ನೂ ಕುಡಿದು ಅವಳು ಮತ್ತೆ ಮಲಗಿಕೊಂಡಳು.
ಐದು ನಿಮಿಷವಾದಮೇಲೆ ಮಾತನಾಡಿದಳು: ‘ಈಗ ಗಂಜಿ ಕುಡಿದು ಶಕ್ತಿ ಬಂದಿದೆ. ಆಮ್ಯಾಲೆ ಜ್ಞಾನ ತಪ್‌ಭೌದು. ಈಗಲೇ ನಿಮ್ಮ ಕೈಲಿ ಮಾತಾಡಿಬಿಡ್ತೀನಿ.’
‘ಜ್ವರದ ಪಿರುಚಿನಾಗೆ ಜಾಸ್ತಿ ಮಾತಾಡಬಾರ್‌ದವ್ವ ಸುಮ್ಕೆ ಮನಿಕ್ಕ.’
“ಈಗ್ಲೆ ಆಡ್ತೀನಿ ಕೇಳಿ. ನಾನು ಹುಟ್ಟಿದಾಗಲೇ ನನ್ನ ಅಮ್ಮ ಸತ್ಹೋದಳಂತೆ. ನಾನು ಒಂದು ವರ್ಷದ ಮಗುವಂತೆ. ಒಂದು ದಿನ ತೊಟ್ಟಿಲಲ್ಲಿ ಮಲಿಕ್ಕಂಡು ಒಂದೇಸಮನೆ ಕಿರುಚ್ಕಂಡು ಅಳ್ತಾ ಇದ್ನಂತೆ. ಹೊರಗೆ ಮರ್ರೋ ಅಂತ ಮಳೆ ಬೀಳ್ತಿತ್ತು. ದನದ ಕೊಟ್ಟಿಗೇಲಿದ್ದ ಅಕ್ಕಮ್ಮನಿಗೆ ನಾನು ಅಳ್ತಿರೂದು ಕೇಳುಸ್ಲಿಲ್ಲ. ನಮ್ಮಪ್ಪ ಯಾವುದೋ ಸಂಸ್ಕೃತದ ಮಂತ್ರ ಬಾಯಿಪಾಠ ಮಾಡ್ಕತ್ತಿದ್ರಂತೆ. ನಾನು ಅತ್ತುದ್ರಿಂದ ಅವರ ಬಾಯಿಪಾಠಕ್ಕೆ ಅಡ್ದವಾಯ್ತು. ಇದೊಂದು ಋಣಮುಂಡೇದು ಬಡ್ಕಳುತ್ತೆ ಅಂತ ಸಿಟ್ಟಿನಲ್ಲಿ ತೊಟ್ಲನ್ನೇ ತಗಂಡು ಹೋಗಿ, ದಢ ದಢ ಅಂತ ಮಳೆನೀರು ಸುರಿಯೋ ಸೂರುಕಟ್ಟಿನ ಕೆಳಗೆ ಇಟ್ಟು ಒಳಗೆ ಹೋಗಿ ಮಂತ್ರ ಹೇಳ್ಕಳುಕ್ಕೆ ಶುರು ಮಾಡಿದ್ರಂತೆ. ಸ್ವಲ್ಪ ಹೊತ್ತಾದಮೇಲೆ ಅಕ್ಕಮ್ಮ ಒಳಗೆ ಬಂದು ನೋಡ್ತಾಳೆ: ತೊಟ್ಲೇ ಇಲ್ಲ. ‘ಎಲ್ಲೋ ಮಗು?’-ಅಂತ ಕೇಳಿದ್ದುಕ್ಕೆ, ‘ಸೂರುಕಟ್ಟಿನ ಕೆಳಗೆ’ ಅಂದ್ರಂತೆ. ನನ್ನ ಮುಖ, ಬೀಳೂ ನೀರಿನ ಕೆಳಗೆ ಇರದೆ ಕಾಲು ಮಾತ್ರ ಇತ್ತಂತೆ. ಮುಖ ಬೀದೀ ಕಡೆಗೆ ಇತ್ತಂತೆ. ಇಲ್ದೆ ಇದ್ರೆ ನಾನು ಆಗ್ಲೇ ಸಾಯ್ತಿದ್ದೆ. ಅಕ್ಕಮ್ಮ ಕರ್ಕಂಡು ಬಂದು ಬ್ರಾಂದಿ ಗೀಂದಿ ಕುಡಿಸಿ ಶೀತ ಹೊಡೆಸಿಹಾಕಿ ನನ್ನ ಬದುಕಿಸ್ಕಂಡ್ಳಂತೆ.”

ಕಂಠೀಜೋಯಿಸರು ಹಾಗೆ ಮಾಡಿರುವುದು ಅಸಹಜವೇನಲ್ಲ ಎಂದು, ಅವರನ್ನು ಬಲ್ಲ ಅಯ್ಯನವರು ಯೋಚಿಸುತ್ತಿದ್ದರು. ನಂಜಮ್ಮ ಎಂದಳು: ‘ನಾನು ಆಗಲೇ ಸಾಯಬೇಕಾಗಿತ್ತು. ಆದರೆ ಯಾಕೆ ಸಾಯಲಿಲ್ಲ? ಇಷ್ಟು ವರ್ಷ ಬೆಳೆದು ಇಂಥಾ ಗಂಡನ ಕೈಹಿಡಿದು, ಇಷ್ಟು ಒಳ್ಳೇ ಮಕ್‌ಳನ್ನು ಹೆತ್ತು, ಅವನ್ನ ಕಳ್ಕಂಡು, ಈಗ ಸಾಯಬೇಕೆ? ಇದ್ಯಾಕೆ ಹೀಗೆಲ್ಲ ಆಗುತ್ತೆ ಅಯ್ನೋರೇ?’

ಅಯ್ಯನವರು ಇದೇ ಪ್ರಶ್ನೆಯನ್ನು ಕಳೆದ ಒಂದು ಗಂಟೆಯಿಂದಲೂ ಯೋಚಿಸುತ್ತಿದ್ದರು. ನರಸಿ ಕೇಳಿದ್ದುದೂ, ಈಗ ನಂಜವ್ವ ಕೇಳುತ್ತಿರುವುದೂ ಒಂದೇ ಪ್ರಶ್ನೆ. ಯಾಕೆ ಹೀಗಾಗುತ್ತೆ? ಶಿವನ ಇಚ್ಛೆ ಏನಿರ್‌ಭೌದು? ಅವರು ವೇದಾಂತ ಓದಿದ ಅಯ್ಯನವರಲ್ಲ. ತತ್ವ, ಲಾವಣಿ, ಪದಗಳಷ್ಟೇ ಅವರು ಅರ್ಜಿಸಿದ ಜ್ಞಾನ. ಕಾಶಿಗೆ ಹೋಗಿದ್ದಾಗ ಇಂಥದೇ ಪ್ರಶ್ನೆಗಳ ಮೇಲೆ ಮಠದಲ್ಲಿ ಹೊರಗಡೆ, ತರ್ಕಮಾಡುವುದನ್ನು ಕುತೂಹಲದಿಂದ ಕೇಳುತ್ತಿದ್ದರು. ಆದರೆ ಈಗ ನಂಜವ್ವ, ಒಂದು ಗಂಟೆಯ ಹಿಂದೆ ನರಸಿ, ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಅವರಲ್ಲಿರಲಿಲ್ಲ. ನಂಜವ್ವ ತಮಗಿಂತ ಹೆಚ್ಚು ಬುದ್ಧಿಶಾಲಿ, ಅಕ್ಷರಸ್ಥೆ. ತಮಗೆ ಸರಿಯಾಗಿ ಅರ್ಥವಾಗದಿದ್ದ ಭಾರತದ ಪದ್ಯಗಳನ್ನು ಸರಾಗವಾಗಿ ಹೇಳಿ ಅರ್ಥ ಬಿಡಿಸುತ್ತಿದ್ದಳು. ಆದರೆ ಅವಳು ಈಗ ಕೇಳುತ್ತಿರುವುದಕ್ಕೆ ಉತ್ತರವೇನು? ಅವಳು ಮಗುವಾಗಿದ್ದಾಗಲೇ ಸಾಯಬಾರದಾಗಿತ್ತು? ತಮಗಿಂತ ಹೆಚ್ಚು ಬುದ್ಧಿವಂತೆಯಾದ ಅವಳಿಗೇ ತಿಳಿಯದೆ ತಮ್ಮನ್ನು ಕೇಳಿದ್ದಾಳೆ.

ಅಷ್ಟರಲ್ಲಿ ಅವಳಿಗೆ ಮಂಪರು ಬಂದಿತ್ತು. ಅಯ್ಯನವರು ಅವಳ ಮುಖವನ್ನೇ ನೋಡುತ್ತಾ ಕುಳಿತಿದ್ದರು. ಜ್ವರಕ್ಕೆ ಕಾದು ಕೆದರಿದ್ದ ಮುಖದಮೇಲೆ ಏನೇನೋ ಗೆರೆಗಳು ಹುಟ್ಟಿ ತಿರುಗಿ ಮಾಯವಾಗುವಂತೆ ಕಾಣುತ್ತಿದ್ದುವು. ಸ್ವಲ್ಪ ಹೊತ್ತಿಗೆ ಕಣ್ಣು ಬಿಟ್ಟು ಅವಳು ಮಾತನಾಡಲು ಪ್ರಯತ್ನಪಟ್ಟಳು. ಆದರೆ ಆಯಾಸದಿಂದ ಸರಿಯಾಗಿ ಮಾತು ಹೊರಡುತ್ತಿರಲಿಲ್ಲ. ಪ್ರಯತ್ನಪಟ್ಟು ತನ್ನ ಶಕ್ತಿಯನ್ನೆಲ್ಲ ಕೂಡಿಸಿಕೊಂಡು ಆಡಿದಳು: ‘ಪಾರ್ವತಿ ರಾಮಣ್ಣ ಸತ್ತಾಗ ಗೀಪಿಯ ಕಥೆ ನೀವು ಹೇಳಿದಿರಿ. ಮಗು ಸತ್ತಾಗ ಜೀವ ಕೊಡುಕ್ಕೆ ಹೆದರಿ ಗೋಪಿ ದಡದಲ್ಲೇ ನಿಂತಳು. ಅದೇ ದಿನ ರಾತ್ರಿ ನಾನು ಸ್ಮಶಾನದ ಬಾವಿ ಬೀಳೂಕೆ ಹೋಗಿದ್ದೆ. ಧೈರ್ಯವಾಗಿ ನೀರಿಗೆ ಧುಮುಕ್ತಿದ್ದೆ. ವಿಶ್ವನ ಗತಿ ಏನು ಅಂತ ಯೋಚನೆಮಾಡಿ ವಾಪಸು ಬಂದೆ. ಈಗ ನಾನೇ ಸಾಯ್ತೀನಿ. ವಿಶ್ವನಿಗೆ ಯಾರು ಗತಿ? ಅಕ್ಕಮ್ಮ ಒಂದಿಷ್ಟು ಬೇಯ್ಸಿ ಹಾಕ್ತಾಳೆ. ನಮ್ಮಣ್ಣಯ್ಯನಮೇಲೆ ನನಗೆ ನಂಬಿಕೆ ಇಲ್ಲ. ಹುಡುಗನ ಹಿಟ್ಟು ಮುಖ್ಯವಲ್ಲ. ಅವ್ನು ಬುದ್ಧಿವಂತನಾಗಬ್ಯಾಡ್ವೆ?’ ಇಷ್ಟು ಮಾತನಾಡುವ ಹೊತ್ತಿಗೆ ಸಂಕಟವಾಗಿ ಹಾಗೆಯೇ ಕಣ್ಣು ಮುಚ್ಚಿ ಮಲಗಿದಳು. ಮತ್ತೆ ಅಡಲಿಲ್ಲ. ಮಂಪರು ಹೊತ್ತಿದ ಸ್ವಲ್ಪ ಹೊತ್ತಿನಲ್ಲೇ ನಿದ್ದೆ ಬಂದಂತೆ ಆಯಿತು. ಅಯ್ಯನವರು ಸುಮ್ಮನೆ ಕುಳಿತಿದ್ದರು. ಬೆಸ್ತರ ಕೇರಿಯಲ್ಲಿ ಕೋಳಿ ಕೂಗಿದ ಶಬ್ದವಾಯಿತು. ಅದು ಅವರು ದಿನವೂ ಏಳುವ ಹೊತ್ತು. ಕೆರೆ ಏರಿಯ ಕಡೆಗೆ ಹೋಗಿ ಬರಬೇಕೆನಿಸಿತು. ಚೆನ್ನಿಗರಾಯರನ್ನು ಎಬ್ಬಿಸಿ ಹೇಳಿ ಹೋಗಬೇಕೆಂಬ ಯೋಚನೆ ಬಂದರೂ, ಅವರು ಎದ್ದು ರೋಗಿಗೆ ಆಗುವ ಪ್ರಯೋಜನವಾದರೂ ಏನು ಎಂಬ ವಿಚಾರ ಬಂದು, ಉರಿಯುವ ಲ್ಯಾಂಪನ್ನು ಹಾಗೆಯೇ ಬಿಟ್ಟು ಬಾಗಿಲು ಮುಂದಕ್ಕೆ ಮಾಡಿಕೊಂಡು ಹೊರಗೆ ಹೋದರು. ಏರಿಯ ಕಡೆಯಿಂದ ವಾಪಸು ಬರುವ ಹೊತ್ತಿಗೆ ಕಾಗೆ ಕೂಗುತ್ತಿತ್ತು. ಅಷ್ಟರಲ್ಲಿ ಎದ್ದು ಏರಿಯ ಕಡೆಗೆ ಬರುತ್ತಿದ್ದ ಜನರು ಮಾತನಾಡಿಕೊಳ್ಳುತ್ತಿದ್ದರು: ಸುತ್ತಣ ಊರುಗಳಲ್ಲಿ ಇಲಿ ಬೀಳುತ್ತಿವೆ. ಈ ಊರಿನಲ್ಲಿ ಬೀಳುವ ಮೊದಲೆ ನೆನ್ನೆ ರಾತ್ರಿ ಊರ ಮುಖ್ಯರು ಸೇರಿ, ಎಲ್ಲರೂ ತಕ್ಷಣ ಊರು ಬಿಡಬೇಕೆಂದು ತೀರ್ಮಾನಮಾಡಿದ್ದಾರೆ. ಈ ದಿನ ಬೆಳಿಗ್ಗೆ ಬೇಲೂರು ಊರಲ್ಲೆಲ್ಲ ತಮ್ಮಟೆ ಬಡಿದು ಸಾರುತ್ತಾನೆ. ನೆನ್ನೆ ಸಂಜೆ ಕಂಬನಕೆರೆಯ ಸರ್ಕಾರೀ ಇಲಾಖೆಯವರು ಹೇಳಿಕಳಿಸಿದ್ದಾರಂತೆ. ಇವತ್ತು ಬೆಳಿಗ್ಗೆ ಈ ಊರಿಗೆ ಅವರು ಬರುತ್ತಾರೆ. ಅಮ್ಮನ ಗುಡಿಯ ಹತ್ತಿರ ಊರ ಹೆಂಗಸರು ಮಕ್ಕಳಾದಿಯಾಗಿ ಎಲ್ಲರೂ ಬಂದು ಇನಾಕ್ಯುಲೇಶನ್ ಸೂಜಿ ಚುಚ್ಚಿಸಿಕೊಳ್ಳಬೇಕಂತೆ. ರೋಗ ಹಬ್ಬುವ ಮೊದಲೇ ಹಳ್ಳಿಹಳ್ಳಿಯಲ್ಲೂ ಸೂಜಿ ಚುಚ್ಚಬೇಕು ಅಂತ ಸರ್ಕಾರದ ಹುಕುಂ ಆಗಿದೆಯಂತೆ.

– ೫ –

ಎಲ್ಲರೂ ಎರಡೇ ದಿನದಲ್ಲಿ ಊರು ಬಿಟ್ಟರು. ನಂಜಮ್ಮನ ಮನೆ ಕಟ್ಟಿಸಿ ಉಳಿದಿದ್ದ ಗಳು, ದಬ್ಬೆಗಳನ್ನು ಅಯ್ಯನವರೇ ಸಾಗಿಸಿಸಿ ಒಂದು ಶೆಡ್ಡು ಹಾಕಿಸಿದರು. ಅವರ ಸ್ವಂತಕ್ಕಂತೂ ಏರಿಯ ಮೇಲಿನ ಗುಡಿ ಇದ್ದೇ ಇದೆ. ಎಲ್ಲರಿಗೂ ಆಶ್ಚರ್ಯವಾದ ಸಂಗತಿ ಎಂದರೆ ಗಂಗಮ್ಮ ಅದೇ ಶೆಡ್ಡಿಗೆ ಬಂದು ಸೊಸೆಯ ಸೇವೆಗೆ ನಿಂತದ್ದು. ‘ಹಾಳು ಮನೆ ಕಟ್ಟುಸ್ದೆ ಇದ್ರೆ ಏನಾಗ್ತಿತ್ತು? ಆ ಸಣ್ಣೇನಹಳ್ಳಿಗೆ ಹೋಗಿ ಮಾರಿ ಬಡುಸ್ಕಂಡ್ ಬಂದ್ಲು. ಹಿರಿಯೋರ ಮಾತು ಕೇಳಿದ್ರೆ ಈ ಮುಂಡೇದುಕ್ಕೆ ಏನೂ ಆಗ್ತಿರ್ಲಿಲ್ಲ’-ಎಂದು ಸದಾ ಗೊಣಗಿಕೊಳ್ಳುತ್ತಿದ್ದರೂ, ಅಯ್ಯನವರು ಹೇಳಿದಂತೆ ಹೇಮಾದಿ ಪಾನಕ ಗಂಜಿಗಳನ್ನು ಅವಳಿಗೆ ಬೇಡವೆಂದರೂ ಕ್ರಮವಾಗಿ ಬಾಯಿ ಮೆಟ್ಟಿ ಕುಡಿಸುತ್ತಿದ್ದಳು.

ಚೆನ್ನಿಗರಾಯರು ಇನಾಕ್ಯುಲೇಶನ್ ಮಾಡಿಸಿಕೊಂಡು ಎಡ ರಟ್ಟೆ ನೋವು ಬಂದದ್ದರಿಂದ ಅಯ್ಯನವರ ಏರಿಯ ಮೇಲಿನ ಗುಡಿಯಲ್ಲೋ, ಅಥವಾ ಹೊರಗಿನ ಗುಡಿಯ ಜಗುಲಿಯ ಮೇಲೋ ಮಲಗಿರುತ್ತಿದ್ದರು. ‘ಸನ್ಯಾಸಿ, ನಂಗ್ಯಾಕೆ ಈ ಸೂಜಿ, ನಾನು ಸತ್‌ರೆ ಅಳೋರ್ಯಾರು?’-ಎಂದರೂ ‘ನೀವು ಸಾಯೂದು ಮುಖ್ಯವಲ್ಲ. ನಿಮ್ಮಿಂದ ಖಾಯ್‌ಲೆ ಉಳಿದೋರಿಗೆ ಹರಡುತ್ತೆ’ ಎಂದು ವೈದ್ಯಖಾತೆಯವರು ಅಯ್ಯನವರಿಗೂ ಚುಚ್ಚಿದರು. ಒಂದು ದಿನ ತೋಳು ಸ್ವಲ್ಪ ನೋಯುತ್ತಿತ್ತು. ಆದರೆ ಊರಿನವರೆಲ್ಲ ಅದರಲ್ಲಿಯೇ ಶೆಡ್ಡು ಹಾಕಿ, ಸಾಮಾನು ಸಾಗಿಸುತ್ತಿದ್ದರು. ಗಂಗಮ್ಮ ಮಾತ್ರ ಬಿಲ್‌ಕುಲ್ ಸೂಜಿ ಚುಚ್ಚಿಸಿಕೊಳ್ಳಲಿಲ್ಲ.
ನಂಜಮ್ಮ ಮಲಗಿದ್ದ ಹಾಸಿಗೆಯನ್ನೆ ನಾಲ್ಕು ಜನರು ನಾಲ್ಕು ಕಡೆಗಳಲ್ಲೂ ಹಿಡಿದು ತಂದು ಶೆಡ್ಡಿನಲ್ಲಿ ಮಲಗಿಸಿದರು. ಅಷ್ಟರಲ್ಲಿ ಅವಳಿಗೆ ತಪ್ಪಿದ ಪ್ರಜ್ಞೆ ಮತ್ತೆ ಒಂದು ದಿನ ಬರಲಿಲ್ಲ. ಆದರೆ ಬಲವಂತವಾಗಿ ಅತ್ತೆ ಗಂಗಮ್ಮ ಹುಯ್ಯುತ್ತಿದ್ದ ಔಷಧಿ ಮತ್ತು ತಿಳಿಗಂಜಿಯನ್ನು ಮಾತ್ರ ಗುಟುಕಿಸುತ್ತಿದ್ದಳು. ಶೆಡ್ಡಿಗೆ ಸಾಗಿಸಿದ ಎರಡನೆಯ ಬೆಳಿಗ್ಗೆ ಅವಳಿಗೆ ಸ್ವಲ್ಪ ಜ್ಞಾನ ಬಂದಂತಾಗಿ ಮಾತನಾಡಲು ಪ್ರಯತ್ನಿಸಿದಳು. ಹತ್ತಿರವೇ ಕೂತಿದ್ದ ಅಯ್ಯನವರು ಅವಳ ಮುಖದ ಹತ್ತಿರ ತಮ್ಮ ಕಿವಿಯನ್ನು ತಂದು -‘ಏನು?’ ಎಂದರು.
‘ವಿ…..ಶ್ವಾ…..’
‘ನೋಡಬೇಕೆ?’
ಹೂಂ, ಎಂಬಂತಹ ಅವಳ ಮುಖಭಾವವನ್ನು ಗುರುತಿಸಿದ ಅವರೇ-‘ಆಳು ಕಳುಸ್ತೀನಿ ಕರ್ಕಂಡ್ ಬರಾಕೆ’ ಎಂದು ಹೇಳಿ ಹೊರಗೆ ಹೋದರು. ಊರೆಲ್ಲ ತಮ್ಮ ತಮ್ಮ ಶೆಡ್ಡುಗಳನ್ನು ಸರಿಮಾಡಿಕೊಳ್ಳುವುದರಲ್ಲಿ ವ್ಯಸ್ತವಾಗಿದೆ. ಈಗ ಆಳು ಎಲ್ಲಿ ಸಿಕ್ಕಬಹುದು?-ಎಂದು ಯೋಚಿಸುತ್ತಾ ಕುಳುವಾಡಿಯ ಶೆಡ್ಡಿಗೆ ಹೋಗಿ ಹೇಳಿದರು: ‘ನಂಜವ್ವ ಇನ್ನೇನು ಸಾಯುತ್ತೆ. ಮಗಾ ನೋಡ್ಬೇಕು ಅನ್ನುತ್ತೆ. ಯಾರಾರ ನಾಗಲಾಪುರಕ್ಕೆ ಹ್ವಾಗಿ, ಉಡುಗನ್ನ ಕರ್ಕಂಡ್ ಬರಬೇಕಲಪ್ಪಾ?’
‘ಅಯ್ಯಾವ್‌ರೇ, ನೀವೇ ನೋಡಿ, ನನ್ನ ಶೆಡ್ಡಿಗೆ ಒಂದೇ ಜೋಡಿ ಸ್ವಾಗೆ ಬುಟ್ಟುದೀನಿ. ಇವತ್ತು ಗೌಡ್ರ ತ್ವಾಟಕ್ಕೆ ಹ್ವಾಗಿ ಸ್ವಾಗೆ ತರಬೇಕು’ ಎಂದ ಕುಳುವಾಡಿ.
‘ಅದು ನಾಳೆ ಮಾಡ್ಕಂಡ್ರೆ ಆಯ್ತದೆ. ಸಾಯೂ ಅವ್ವನ ಬಾಯಿಗೆ ಮಗ ನೀರು ಬಿಡಬ್ಯಾಡ್‌ದಾ? ಹೋಗಪ್ಪ.’
‘ಆಗ್ಲಿ’-ಎಂದು ಅವನು ಒಪ್ಪಿಕೊಂಡ. ತಕ್ಷಣ ಹೊರಡುವಂತೆ ಹೇಳಿ ಅವರು ಶೆಡ್ಡಿಗೆ ಬಂದರು. ಅಷ್ಟರಲ್ಲಿ ಗಂಗಮ್ಮ ಎಂದಳು: ‘ಅದೇನೋ ಅಂದ್ಲು. ನಂಗೆ ತಿಳೀಲಿಲ್ಲ. ನೀವೇ ಕೇಳಿ ಅಯ್ನೋರೇ.’
ಮತ್ತೆ ಅವಳ ಮುಖದ ಹತ್ತಿರಕ್ಕೆ ತಮ್ಮ ಕಿವಿಯನ್ನು ತಂದು-‘ಏನವ್ವಾ’ ಎಂದು ಅವರು ಕೇಳಿದರು. ಐದು ನಿಮಿಷದ ಮೇಲೆ, ಅದು ಕೇಳಿಸಿದಂತೆ ಅವಳು ಏನೋ ಪಿಸುಗಿಟ್ಟಿದಳು. ‘ಕೇಳಲಿಲ್ಲ, ವಸಿ ಗಟ್ಟಿಯಾಗಿ ಅನ್ನು’-ಎಂದಮೇಲೆ ಮತ್ತೆ ಪಿಸುಗುಟ್ಟಿದಳು. ಸ್ಪಷ್ಟವಾಗಿ ಕೇಳದಿದ್ದರೂ- ಊರಿನಲ್ಲಿ ಪ್ಲೇಗು ರೋಗ ಇದೆ. ಹುಡುಗನನ್ನ ಕರೆಸಬೇಡಿ’ ಎಂಬ ಒಟ್ಟು ಅರ್ಥ ಆಯಿತು. ‘ನೀನು ಹ್ವಾಗ್‌ಬ್ಯಾಡ ಅಂತ ಕುಳುವಾಡಿಗೆ ಏಳಿಬತ್ತೀನಿ’-ಎಂದು ಅವರು ಶೆಡ್ಡಿನ ಹೊರಗೆ ಬಂದರು. ರೋಗ ಬಡಿದ ಊರಿಗೆ ವಿಶ್ವ ಬರುವುದು ಬೇಡವೆಂದು ಅವರೂ ನಿರ್ಧರಿಸಿದರು. ನಂಜವ್ವ ಸಾಯುವುದು ಖಂಡಿತ. ಮಗು ಬಂದು ಬಾಯಿಗೆ ನೀರು ಬಿಡದಿದ್ದರೂ ಬೇಡ, ಅವನು ಆಯಸ್ಸು ಗಟ್ಟಿಯಾಗಿ ಉಳಿದಿದ್ದರೆ ಸಾಕು ಎನ್ನುವುದು ಅವಳ ಇಚ್ಛೆ. ಆದರೆ ಅವಳನ್ನು ಸಾಕಿದ ಅಜ್ಜಿ ಮತ್ತು ಅಣ್ಣನಿಗಾದರೂ ಸಮಾಚಾರ ತಿಳಿಸಬೇಕು ಎಂದು ಯೋಚಿಸಿದ ಅವರು ಕುಳುವಾಡಿಯ ಶೆಡ್ಡಿಗೆ ಓಡಿದರು. ಅವನು ಆಗತಾನೇ ಮುದ್ದೆ ಮುರಿದು ಮುಗಿಸಿ ಹೊರಡಲು ಸಿದ್ಧನಾಗುತ್ತಿದ್ದ. ಮಗುವನ್ನು ಖಂಡಿತ ಕರತರಕೂಡದೆಂದೂ, ಅಜ್ಜಿ ಅಣ್ಣಯ್ಯರನ್ನು ಕರೆದುಕೊಂಡು ಬರಬೇಕೆಂದು ಅಯ್ಯನವರು ಹೇಳಿದರು.

ಕುಳುವಾಡಿ ನಾಗಾಲೋಟ ಹೊಡೆದ. ಅವನು ಎಷ್ಟೇ ಉಸಿರು ಹಿಡಿದು ಓಡಿದರೂ ಚೋಳನಗುಡ್ದ, ಮರಳಹಳ್ಳ, ಕೆಮ್ಮಣ್ಣುಹಳ್ಳ, ಕತ್ತಾಳೆ ಓಣಿಗಳನ್ನು ಹಾಯ್ದು ಅಷ್ಟು ದೂರದ ನಾಗಲಾಪುರವನ್ನು ಮುಟ್ಟುವ ಹೊತ್ತಿಗೆ ಮದ್ಯಾಹ್ನ ಎರಡು ಗಂಟೆಯಾಯಿತು. ಅಲ್ಲಿ ನೋಡಿದರೆ ಆ ಊರಿನವರೂ ಊರು ಬಿಟ್ಟಿದ್ದಾರೆ. ಕಲ್ಲೇಶಜೋಯಿಸರ ಶೆಡ್ಡನ್ನು ವಿಚಾರಿಸಿಕೊಂಡು ಇವನು ಹೋದಾಗ ವಿಶ್ವ ಸ್ಕೂಲಿಗೆ ಹೋಗಿದ್ದ. ಕಲ್ಲೇಶಜೋಯಿಸರು ಊರಿನಲ್ಲಿರಲಿಲ್ಲ; ಹಾಸನಕ್ಕೆ ಹೋಗಿದ್ದರು. ಮಾರನೆಯ ದಿನ ಬರುತ್ತಾರಂತೆ. ಇವನು ಹೇಳಿದ ವಿಷಯ ಕೇಳಿ ಅಕ್ಕಮ್ಮ ಹೌಹಾರಿದಳು. ಕಲ್ಲೇಶನಿಗೆ ಕಾಯುವಂತಿಲ್ಲ. ಅವನು ನಾಳೆ ಬಂದ ತಕ್ಷಣ ಕಳಿಸುವಂತೆ ಕಮಲುವಿಗೆ ಹೇಳಿ, ಅವಳನ್ನು ನಂಬದೆ ಪಕ್ಕದ ಎರಡು ಶೆಡ್ಡಿನವರಿಗೂ ಹೇಳಿ, ಅವರ ಜಮೀನು ಹೊಡೆಯುವ ಹೊನ್ನನ ಗಾಡಿ ಹೂಡಿಸಿಕೊಂಡು ಅಕ್ಕಮ್ಮ ತಕ್ಷಣ ಹೊರಟುಬಿಟ್ಟಳು.
ಹಾಳು ಪ್ಲೇಗು ಅವಳ ಇಬ್ಬರು ಮರಿಮಕ್ಕಳನ್ನು ಹೋದ ವರ್ಷ ತಾನೆ ಬಲಿ ತೆಗೆದುಕೊಂಡಿದೆ. ಈ ವರ್ಷ ಮೊಮ್ಮಗಳಿಗೇ ಬಂದಿದೆ. ವಿಶ್ವನಿಗೆ ಬಂದಿದ್ದಾಗ ಶೃಂಗೇರಿಯ ಶಾರದಮ್ಮನವರಿಗೆ ಹರಕೆ ಕಟ್ಟಿದ್ದುದರಿಂದ ವಾಸಿಯಾಯಿತಂತೆ. ಈಗ ಅವರು ಯಾರಾದರೂ ಅದೇ ದೇವರಿಗೆ ಹರಕೆ ಕಟ್ಟಿದ್ದಾರೆಯೋ ಇಲ್ಲವೋ. ದಾರಿಯಲ್ಲಿ ಒಂದು ಸಣ್ಣ ಕಟ್ಟೆ ಸಿಕ್ಕಿತು. ಎರಡು ನಿಮಿಷ ಗಾಡಿ ನಿಲ್ಲಿಸಿ ಕೆಳಗೆ ಇಳಿದು ಕಟ್ಟೆಯಲ್ಲಿ ಕೈ ಕಾಲು ತೊಳೆದು ತನ್ನ ಸೊಂಟಕ್ಕೆ ಸಿಕ್ಕಿಸಿಕೊಂಡು ತಂದಿದ್ದ ದುಡ್ಡಿನಲ್ಲಿ ಒಂದು ಬೆಳ್ಳಿ ರೂಪಾಯಿ ಕೈಲಿ ಹಿಡಿದು, ಮೊಮ್ಮಗಳಿಗೆ ಹುಶಾರಾದರೆ ಅವಳನ್ನು ಮತ್ತೆ ಶೃಂಗೇರಿಗೆ ಕಳಿಸಿ ಕುಂಕುಮಾರ್ಚನೆ ಮಾಡಿಸುವುದಾಗಿ ಹರಕೆ ಹೇಳಿ, ಬಂದು ಗಾಡಿಯ ಮೇಲೆ ಕೂತಳು.
ಈ ಸಲ ಎಲ್ಲೆಲ್ಲಿಯೂ ಊರು ಬಿಟ್ಟಿದ್ದಾರೆ. ಆದರೆ ಎಲ್ಲ ಊರಿನಲ್ಲೂ ಸರ್ಕಾರದವರು ಸೂಜಿ ಚುಚ್ಚಿದ್ದಾರೆ. ನಾಗಲಾಪುರದಲ್ಲಿ ವಿಶ್ವ, ಕಲ್ಲೇಶ, ಕಮಲು, ಎಲ್ಲರೂ ಚುಚ್ಚಿಸಿಕೊಂಡಿದ್ದಾರೆ. ಆದರೆ ಮುದುಕಿಯಾದ ತಾನು ಮಾತ್ರ ಬೇಡವೆಂದುಬಿಟ್ಟಳು. ಇಷ್ಟು ದಿನದಲ್ಲಿ ಒಂದು ದಿನವೂ ಆಸ್ಪತ್ರೆಯ ನೀರು ಕುಡಿಯದಿರುವ ತಾನು ಆ ಸೂಜಿಯ ನೀರನ್ನು ಮೈಯೊಳಗೆ ಚುಚ್ಚಿಸಿಕೊಳ್ಳುವುದು ಯಾಕೆ?
ಮೊಮ್ಮಗಳ ಸ್ಥಿತಿಯ ಬಗೆಗೆ ಅವಳು ಕುಳುವಾಡಿಯನ್ನು ಬಾರಿ ಬಾರಿಗೂ ಕೇಳುತ್ತಿದ್ದಳು. ಪ್ರತ್ಯಕ್ಷವಾಗಿ ಹೆಚ್ಚು ತಿಳಿಯದಿದ್ದ ಅವನು, ತಾನು ಕೇಳಿದುದನ್ನೆಲ್ಲ ಹೇಳುತ್ತಿದ್ದ. ಜೀವಕ್ಕೆ ಯಾವ ಅಪಾಯವೂ ಇಲ್ಲವೆಂದು ತನಗೆ ತಾನೆ ಮನಸ್ಸಿನಲ್ಲಿ ಮಾಡಿಕೊಳ್ಳುತ್ತಾ ಅಕ್ಕಮ್ಮ, ಎತ್ತುಗಳನ್ನು ಚಬುಕು ಮಾಡುವಂತೆ ಹೊನ್ನನಿಗೆ ಹೇಳುತ್ತಿದ್ದಳು. ಎಷ್ಟೇ ಜೋರು ಮಾಡಿದರೂ ಅವರ ಗಾಡಿ ರಾಮಸಂದ್ರ ಮುಟ್ಟುವ ಹೊತ್ತಿಗೆ ರಾತ್ರಿ ಕತ್ತಲಾಗಿಹೋಗಿತ್ತು.

– ೬ –

ಶೆಡ್ಡಿಗೆ ಬಂದು ನೋಡಿದರೆ ಮೊಮ್ಮಗಳು ಇರಲಿಲ್ಲ. ಬೀಗಿತ್ತಿ ಗಂಗಮ್ಮ ಬಾಯಿ ಬಡಿದುಕೊಂಡು ಅಳುತ್ತಿದ್ದಳು. ಮಾದೇವಯ್ಯನವರು ಹೇಳಿದರು: ಮದ್ಯಾಹ್ನದ ಹೊತ್ತಿಗೇ ನಂಜಮ್ಮನ ಜೀವ ಹೋಯಿತು. ಪ್ಲೇಗಾದ ಊರಿಗೆ ಮಗನನ್ನು ಕರೆಸಬೇಡಿ ಅಂದದ್ದೇ ಕೊನೆಯ ಮಾತು. ಮತ್ತೆ ಮಾತನಾಡಲಿಲ್ಲ. ಸಾಯುವ ಮೊದಲು ಯಾವ ಗೆಡ್ಡೆಯೂ ಒಡೆಯಲಿಲ್ಲ. ಐದೇ ನಿಮಿಷ ಉಸಿರು ಹತ್ತಿಬಂದು ಪ್ರಾಣವಾಯು ಹೊರಟುಹೋಯಿತು. ಹತ್ತಿರವೇ ಇದ್ದ ಅತ್ತೆ ಗಂಗಮ್ಮ ಬಾಯಿಗೆ ನೀರು ಬಿಟ್ಟಳು. ಇವರು ಬರುತ್ತಾರೆಂದು ಸಂಜೆಯತನಕ ಹೆಣ ಇಟ್ಟುಕೊಂಡು ಕಾಯುತ್ತಿದ್ದ ಅವರು, ಇನ್ನು ರಾತ್ರಿಯಾದರೆ ನಾಳೆಯ ತನಕ ಕಾಯಬೇಕು, ಪ್ಲೇಗಿನ ಹೆಣ ನಾರಲು ಶುರುವಾಗಬಹುದು ಎಂದು ದಹನಕ್ಕೆ ಕಳಿಸಿಕೊಟ್ಟು ಇನ್ನೂ ಅರ್ಧ ಗಂಟೆಯಾಯಿತು.

ಅಕ್ಕಮ್ಮ ಒಂದು ಸಲ ಎದೆ ಬಡಿದುಕೊಂದು ಅತ್ತಳು. ‘ನನಗೆ ಮುಖಾನೂ ಸಿಕ್ಕಿಲ್ಲ. ಅಲ್ಲೇ ಹೋಗಿ ನೋಡ್ತೀನಿ’-ಎಂದು ಕತ್ತಲೆಯಲ್ಲೇ ಶ್ಮಶಾನದ ಕಡೆಗೆ ಹೊರಟಳು. ಹೆಂಗಸರು ಅಲ್ಲಿಗೆ ಹೋಗಬಾರದೆಂದು ಅಯ್ಯನವರು ಹೇಳಿದರೂ ಕೇಳಲಿಲ್ಲ. ಹಣ್ಣು ಮುದುಕಿ ಕತ್ತಲೆಯಲ್ಲಿ ಎಲ್ಲಾದರೂ ಬಿದ್ದಾಳೆಂದು ಅವಳ ಕೈ ಹಿಡಿದುಕೊಂಡು ಅವರೂ ಜೊತೆಗೆ ಹೊರಟರು. ಇವರು ಏರಿ ಇಳಿಯುವ ಜಾಗದಲ್ಲಿ ಅಯ್ಯಾಶಾಸ್ತ್ರಿಗಳು ಒಬ್ಬರೇ ಸೊಂಟ ಬಗ್ಗಿಸಿಕೊಂಡು ನಿಂತಿದ್ದರು. ಇವರಿಬ್ಬರನ್ನು ಕಂಡ ಅವರೇ-‘ಯಾರು? ಎಂದರು. ‘ನಂಜವ್ವನ ಅಜ್ಜಮ್ಮ’-ಎಂದು ಹೇಳಿದ ಅಯ್ಯನವರು ಅಕ್ಕಮ್ಮನ ಸಂಗಡ ತೋಟದ ಕಡೆಗೆ ಇಳಿದರು. ಏರಿ ಇಳಿದು ತೋಟದ ಸಂದಿಯಲ್ಲಿ ನಡೆದು ಇವರು ಹೋಗುವ ಹೊತ್ತಿಗೆ ಶಾಸ್ತ್ರದ ಭಾಗವೆಲ್ಲ ಮುಗಿದು ಹೆಣವನ್ನು ಚಿತೆಯ ಮೇಲೆ ಇಟ್ಟು, ಅದೀಗ ತಾನೇ ಅದರ ಬಟ್ಟೆ ಬರೆಗಳನ್ನೆಲ್ಲ ತೆಗೆದುಹಾಕಿದ್ದರು. ತನ್ನ ಮೊಮ್ಮಗಳು ಹುಟ್ಟಿದಾಗ ಇದ್ದ ಸ್ಥಿತಿಯಲ್ಲೇ ಈಗಲೂ ಅಕ್ಕಮ್ಮ ಅವಳನ್ನು ಕಂಡಳು. ಆಗ ಎಷ್ಟು ಬೆಳ್ಳಗಿದ್ದ ಮಗು, ಈಗ ಮೈ ಎಲ್ಲ ಕಪ್ಪು ಬಣ್ಣಕ್ಕೆ ತಿರುಗಿದೆ. ಅವಳು ಓಡಿ ಬಂದು, ಚಿತೆಯ ಮೇಲೆ ಇದ್ದ ಹೆಣವನ್ನೇ ತಬ್ಬಿಕೊಂಡಳು. ಅಕ್ಕಮ್ಮನನ್ನು ಸಮಾಧಾನಪಡಿಸಿ ಮೇಲೆ ಎತ್ತುವುದಕ್ಕೆ ಉಳಿದವರಿಗೆ ಸಾಕುಸಾಕಾಯಿತು. ಅವಳ ಎದುರಿಗೇ ಹೆಣದ ಮೇಲೆ ಸೌದೆ ಒಟ್ಟಿ ಬೆಂಕಿ ತೋರಿಸಿದರು. ಬೆಂಕಿ ನಿಧಾನವಾಗಿ ಹರಡಿ ಹೊತ್ತಿಕೊಂಡು ದಗ ದಗ ಉರಿಯುವತನಕ ಒಂದೇಸಮನೆ ಅದನ್ನು ನೋದುತ್ತಿದ್ದ ಅಕ್ಕಮ್ಮ ಇದ್ದಕ್ಕಿದ್ದಹಾಗೆಯೇ ಕೂಗಿಕೊಂಡಳು: ‘ಕಳ್ಳಮುಂಡೇ, ಕೊನೆಗೂ ಹೀಗ್ ಮಾಡಿದೆಯಾ? ನಿಂಗೆ ಮಾಡ್ತೀನಿ ತಾಳು.’

ಅವಳು ಏನು ಹೇಳುತ್ತಿದ್ದಾಳೆಂದು ಯಾರಿಗೂ ಅರ್ಥವಾಗಲಿಲ್ಲ. ಅಕ್ಕಮ್ಮ ಅಲ್ಲಿಂದ ಹಿಂತಿರುಗಿ ಹೆಜ್ಜೆ ಹಾಕಿ ದುಡುದುಡುನೆ ಹೊರಟಳು. ಕತ್ತಲೆಯಲ್ಲಿ ಬಿದ್ದಾಳೆಂದು ಅಯ್ಯನವರು ಹಿಂದೆಯೇ ಬಂದು ಕೈ ಹಿಡಿದುಕೊಂಡರೆ, ಬೇಡವೆಂದು ಕೊಸರಿಕೊಂಡು ಮುಂದೆ ನಡೆದಳು. ಏರಿ ಹತ್ತುವ ಜಾಗದಲ್ಲಿ ನಿಂತಿದ್ದ ಅಯ್ಯಾಶಾಸ್ತ್ರಿಗಳು-‘ಇದ್ಯಾಕಮ್ಮ ಹೀಗೆ ಓಡಿ ಹೋಗ್ತಿದೀರಾ?’ ಎಂದುದು ಅವಳಿಗೆ ಕೇಳಲಿಲ್ಲ. ನೇರವಾಗಿ ಶೆಡ್ಡಿಗೆ ಬಂದಳು. ಒಳಗೆ ಹೋದ ತಕ್ಷಣ ಬಾಗಿಲ ಹತ್ತಿರ ಇದ್ದ ಈಚಲುಪೊರಕೆಯನ್ನು ಕೈಗೆ ತೆಗೆದುಕೊಂಡು ಗಾಡಿಯ ಹತ್ತಿರಬಂದು, ಹೊನ್ನ ಕೆಳಗೆ ಬಿಟ್ಟಿದ್ದ ಒಂದು ಎಕ್ಕಡವನ್ನು ಇನ್ನೊಂದು ಕೈಲಿ ಹಿಡಿದು ಊರ ಕಡೆಗೆ ನುಗ್ಗಿದಳು. ಸ್ವಲ್ಪ ಹೊತ್ತು ಗಂಗಮ್ಮನಿಗೂ ದಿಗ್ಭ್ರಮೆ. ಹೊನ್ನನಿಗೂ ಏನೂ ತಿಳಿಯಲಿಲ್ಲ. ಅಮಾವಾಸ್ಯೆಯ ಮುಂದಿನ ದಿನಗಳಾದ್ದರಿಂದ ಕತ್ತಲು ಹೆಪ್ಪುಗಟ್ಟಿದಂತೆ ನಿಂತಿತ್ತು. ಕತ್ತಲಲ್ಲೆ ಬೀದಿಯ ಗುರುತು ಹಿಡಿದುಕೊಂಡು ಅಕ್ಕಮ್ಮ ಊರ ಒಳಕ್ಕೆ ನುಗ್ಗಿದಳು. ನೇರವಾಗಿ ತನ್ನ ಮೊಮ್ಮಗಳು ವಾಸಮಾಡುತ್ತಿದ್ದ ಮನೆಯ ಮುಂದೆ ಬಂದು ನಿಂತು ಬಾಗಿಲನ್ನು ಪೊರಕೆ ಮತ್ತು ಎಕ್ಕಡಗಳಿಂದ ಹೊಡೆಯುತ್ತಾ ಗಟ್ಟಿಯಾಗಿ ಕಿರುಚಿಕೊಂಡಳು. ‘ಎಲೇ ಮಾರಿಮುಂಡೇ, ಯಲ್ಲಾರನ್ನೂ ಬಿಟ್ಟು ಈ ಮನೆಗೇ ಯಾಕೆ ಮತ್ತೆ ಮತ್ತೆ ಬತ್ತಿಯೇ? ನಿನ್ನ ಕಣ್ಣು ಅವಳ ಇಬ್ಬರು ಮಕ್ಕಳಮ್ಯಾಲೆ ಬಿತ್ತು. ಈಗ ಶಾರದಾಮ್‌ನೋರಿಗೆ ಹರಕೆ ಮಾಡ್ಕಳೋ ಮೊದ್ಲೇ ಅವ್ಳುನ್ನ ನುಂಗ್‌ಕಂಡೆ ಏನೇ? ನಿಂಗೆ ಹೆದರಿಕಂಡ್ರೆ ಮ್ಯಾಲೆ ಅಮರಿಕತ್ತೀಯಾ? ಪಾಪಿಲೌಡಿ, ಲೇ ನಿಂಗೆ ಯಕ್ಕಡದ ಏಟೇ ಸರಿ. ಕದ್ದು ಒಳಗಡೆ ಕೂತಿದೀ ಏನೇ? ಬಾ ಹೊರಗಡೆಗೆ, ನಿನ್ನ ನೆತ್ತಿ ಕೂದ್ಲು ಉದುರೂತಂಕ ಕೆರ ತಗಂಡು ಹೊಡೀತೀನಿ.’

ಅಕ್ಕಮ್ಮ ಎಕ್ಕಡದಿಂದ ಬಾಗಿಲಿಗೆ ಮತ್ತೆ ಮತ್ತೆ ಹೊಡೆದಳು; ಮತ್ತೆ ಮನಸ್ಸಿಗೆ ಬಂದಂತೆ ಪ್ಲೇಗುಮಾರಿಯನ್ನು ಬೈದಳು. ಅಷ್ಟು ಹೊತ್ತಿಗೆ ಅವಳಿಗೆ ಆಯಾಸವಾಗಿತ್ತು. ಹಾಗೆಯೇ ಜಗುಲಿಯ ಮೇಲೆ ಕೂತುಕೊಂಡಳು. ಕಸಪೊರಕೆ ಎಕ್ಕಡಗಳು ಕೈಲೇ ಇದ್ದವು. ಅರ್ಧ ಗಂಟೆಯಲ್ಲಿ ಅವಳ ಸಿಟ್ಟು ಇಳಿಯಿತು. ಹೋದ ವರ್ಷ ಇಬ್ಬರು ಮರಿಮಕ್ಕಳು ಸತ್ತಾಗಲೂ ಅವಳು ಇದೇ ಮನೆಗೆ ಬಂದು ಮೊಮ್ಮಗಳಿಗೆ ಸಮಾಧಾನ ಹೇಳಿದ್ದಳು. ಇದೇ ಮನೆಯಲ್ಲಿ ಪಾರ್ವತಿಯ ಮದುವೆಯಾಗಿತ್ತು. ಈ ಮನೆಯನ್ನೇ ಯಾಕೆ ಹುಡುಕಿಕೊಂಡು ಬರಬೇಕು ಹಾಳು ಪ್ಲೇಗುಮಾರಿ? ಅಕ್ಕಮ್ಮನಿಗೆ ಈಗ ಅಳು ಬಂದಿತು. ಬಿಕ್ಕಿ ಬಿಕ್ಕಿ ಪ್ರಾರಂಭವಾದ ಅಳು, ಕೊನೆಗೆ ಪ್ರವಾಹದಂತೆ ಹರಿಯಿತು. ಸ್ವಲ್ಪ ಹೊತ್ತಿನಮೇಲೆ ಅವಳು ಮೇಲೆ ಎದ್ದಳು. ಕಸಪೊರಕೆಯಲ್ಲಿ ಬಾಗಿಲು ಹೊಡೆಯುವುದಕ್ಕಾಗಲಿ, ಪ್ಲೇಗುಮಾರಿಯನ್ನು ಬೈಯುವುದಕ್ಕಾಗಲಿ ಮನಸ್ಸು ಬರಲಿಲ್ಲ. ಕತ್ತಲೆಯಲ್ಲಿ ನಡೆದು ಊರ ಹೊರಗೆ ಬಂದಳು.
ಅಷ್ಟರಲ್ಲಿ ಎದುರಿಗೆ ಬರುತ್ತಿದ್ದ ಅಯ್ಯನವರು ಇವಳನ್ನು ಗುರುತಿಸಿ ಎಂದರು: ‘ನಿಮ್ನೇ ಹುಡಿಕ್ಕಂಡ್ ನಾವು ಎಲ್ಲೆಲ್ಲೋ ನೋಡಿದ್ವು. ಬಿಟ್ಟ ಊರವಳಿಕ್ಕೆ ಯಾಕೆ ಹ್ವಾಗಿದ್ರಿ?’
‘ಪ್ಲೇಗುಮುಂಡೆಗೆ ಯಕ್ಕಡದಲ್ಲಿ ಹ್ವಡಿಯುಕ್ಕೆ ಹೋಗಿದ್ದೆ.’
ಶವ ಸುಟ್ಟವರು ಹಿಂತಿರುಗಿದ್ದರು. ಚೆನ್ನಿಗರಾಯರು ಕಣ್ಣೀರು ಒರೆಸಿಕೊಂಡು ಅಳುತ್ತಾ ಕೂತಿದ್ದರು: ‘ಹಾಳು ಮನೆ ಕಟ್ದೇ ಇದ್ದಿದ್ರೆ ಇವಳಿಗೆ ಏನಾಗ್ತಿತ್ತು? ಹೊಸ ಮನೆ ಕಟ್ಟಿಯೇ ಅಮ್ಮ ಹಿಡಕಂಡ್ಳು.’
ಅಕ್ಕಮ್ಮ ರಾತ್ರಿ ಎಲ್ಲ ಅಳುತ್ತಿದ್ದಳು. ಇನ್ನು ಬೆಳಿಗ್ಗೆ ಎದ್ದು ಗಾಡಿಯ ಮೇಲೆ ಹಿಂತಿರುಗುವುದೋ, ಅಥವಾ ಕಲ್ಲೇಶ ಬರುವತನಕ ಇಲ್ಲೇ ಉಳಿಯುವುದೋ ಎಂಬ ಬಗೆಗೆ ಮಾತು ನಡೆಯಿತು. ‘ಅವರು ಬರಾತಂಕ ಇರಿ’- ಅಯ್ಯನವರೆಂದರು. ಎತ್ತು ಗಾಡಿಯೊಡನೆ ಹೊನ್ನನೂ ಉಳಿದ.
ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಗುಡಿಸಿಲ ಒಳಗೆ ಅಕ್ಕಮ್ಮ ಮಲಗಿದ್ದಳು. ಗಂಗಮ್ಮ ತಲೆಯ ಮೇಲೆ ಕೈಹೊತ್ತು ಕೂತಿದ್ದಳು. ಚೆನ್ನಿಗರಾಯರು ಗ್ರಾಮದೇವತೆಯ ಗುಡಿಯ ಜಗುಲಿಯ ಮೇಲೆ ಮಲಗಿ, ತಮ್ಮ ದುಃಖ ಮರೆಯಲು ನಿದ್ದೆ ಮಾಡುತ್ತಿದ್ದರು. ವಿಶ್ವ ಬೇಗ ಬೇಗ ಹೆಜ್ಜೆ ಇಡುತ್ತ ಊರ ಕಡೆಗೆ ಹೋಗುತ್ತಿದ್ದ. ಊರ ಹೊರಗೆ ತನ್ನ ಅಂಗಡಿಯಲ್ಲಿ ಕೂತಿದ್ದ ನರಸಿ ಇದನ್ನು ಕಂಡು ಓಡಿಬಂದು-‘ಎಲ್ಲಿಗ್ ಹೋಗ್ತೀಯಾ ಮಗಾ?’ ಎಂದರೆ ‘ನಮ್ಮಮ್ಮ ಸತ್ಹೋದ್ಲಂತೆ ನಿಜವಾ?’ ಎಂದು ಕೇಳಿದ.
ನರಸಿ ಅವನನ್ನು ತಬ್ಬಿ ಹಿಡಿದುಕೊಂಡಳು. ‘ನನ್ನ ಯಾಕೆ ಹಿಡ್‌ಕತ್ತೀಯಾ? ನಮ್ಮನೆಗೆ ಹೋಗ್ತೀನಿ ಬಿಡು ನರಸಮ್ಮ’-ಅವನು ಕೊಸರಿಕೊಂಡ.
‘ಹೋಗಿ ಏನು ಮಾಡ್ತೀಯಾ ಮಗಾ?’
‘ನಮ್ಮಮ್ಮ ಇದಾಳೆ. ಅವ್ಳು ಸತ್ಹೋಗಿಲ್ಲ.’
‘ಇಲ್ಲಿ ಬಾ, ನಾನ್ ಏಳ್ತೀನಿ’-ಎಂದು ಅವನ ಎರಡು ಕೈಯನ್ನೂ ಹಿಡಿದು ತನ್ನ ಅಂಗಡಿಗೆ ಎಳೆದೊಯ್ದು ಕೂರಿಸಿಕೊಂಡು ಕೇಳಿದಳು: ‘ಒಬ್ನೇ ಬಂದ್ಯಾ?’
‘ಹೂಂ.’
‘ಅಮ್ಮ ಸತ್ತೈತೆ ಅಂತ ಯಾರು ಏಳಿದ್ರು?’
‘ನಮ್ಮ ಪಕ್ಕದ ಶೆಡ್ಡಿನ ನಾಗಮ್ಮತ್ತೆ.’
‘ಅವರು ಅಂದ ಸಟೀಗೇ ಓಡಿಬಂದ್ಯಾ?’
‘ಹೂಂ.’
‘ನಿಂಗೆ ದಾರಿ ಗೊತ್ತಿತ್ತಾ?’
‘ಗಾಡಿಮ್ಯಾಲೆ ಕೂತ್ಕಂಡು ಹೋಗೂವಾಗ ನೋಡ್ಕಂಡಿದ್ನಲಾ, ಕೆರೆ ಏರಿ ಮೇಲ್ಹಾಸಿ, ಕತ್ತಾಳೆ ಓಣಿ ಕಣಗಲಹಳ್ಳ ದಾಟಿ ಹೂವಿನಹಳ್ಳ ಹಾದು, ಚೋಳನಗುಡ್ಡದ ಮುತ್ತುಗದಹಳ್ಳ ದಾಟಿ ಬಂದೆ.’
ನರಸಿಗೆ ಅಳು ಬಂತು. ಅವಳು ಇನ್ನೊಂದು ಸಲ ಅವನನ್ನು ತಬ್ಬಿಕೊಂಡಳು.
‘ಅದ್ಯಾಕ್ ನರಸಮ್ಮ ಅಳೀಯಾ? ನಮ್ಮನಿಗೆ ಹೋಗ್ತೀನಿ ಬಿಡು’-ಎಂದು ಅವನು ಬಿಡಿಸಿಕೊಳ್ಳಲು ಎದ್ದ. ‘ನಾ ಕರ್ಕಂಡ್ ಹೋಯ್ತೀನಿ ಬಾ’- ಎಂದು ಕೈಹಿಡಿದು ಅವರ ಶೆಡ್ಡಿಗೆ ಕರೆದೊಯ್ದಳು. ಮರಿಮಗನನ್ನು ಕಂಡ ಅಕ್ಕಮ್ಮ ಎದ್ದು ಅವನನ್ನು ಬಾಚಿ ಹಿಡಿದುಕೊಂಡು-‘ತಬ್ಬಲಿಯಾದ್ಯಲೋ ನನ್ನ ಕಂದಾ’ ಎಂದು ಗಟ್ಟಿಯಾಗಿ ಅತ್ತಳು. ವಿಃವನಿಗೂ ಅಳು ಬಂತು. ‘ಅಮ್ಮ ಸತ್ಹೋಗಿದಾಳಾ?’-ಎಂದು ಕೇಳಿದವನೇ ಗೋಳೋ ಎನ್ನುತ್ತಾ ಕಳಲಿ ಬಿದ್ದುಬಿಟ್ಟ.

– ೭ –

ಸಾಯಂಕಾಲದ ಹೊತ್ತಿಗೆ ಅಕ್ಕಮ್ಮನಿಗೆ ಜ್ವರ ಬಂತು. ಮೈ ಕೈ ಕತ್ತರಿಸಿದಂತೆ ಆಗುವುದು, ಕಣ್ಣು ವಿಕಾರವಾಗಿ ಕೆಂಪಗಾಗಿದ್ದುದು, ಮತ್ತು ಮುಖ ಕೆದರಿದ ಲಕ್ಷಣಗಳಿಂದ ಅದು ಪ್ಲೇಗು ಎಂದು ಅಯ್ಯನವರು ತಕ್ಷಣ ಹೇಳಿದರು. ಈ ಅಜ್ಜಿ ಉಳಿಯುವುದಿಲ್ಲವೆಂದು ಅವರ ಮನಸ್ಸಿಗೆ ಎನ್ನಿಸಿತು. ವಿಶ್ವನನ್ನು ರೋಗಿಯ ಹತ್ತಿರ ಬಿಡಕೂಡದು ಎಂದು ಯೋಚಿಸಿದ ಅವರು, ಅವನನ್ನು ಕರೆತಂದು ನರಸಿಯ ಹತ್ತಿರ ಬಿಟ್ಟು ಹೇಳಿದರು: ‘ನೋಡವ್ವ, ಇವನನ್ನ ನಿನ್ನ ಮನೆಯಿಂದ ಹೊರಗೆ ಬಿಡ್‌ಬ್ಯಾಡ. ಊಟ ತಿಂಡಿ ಏನಿದ್ರೂ ನೀನೇ ತಿನ್ಸು. ಜಾತಿ ಏನೂ ಹೋಗಾಕಿಲ್ಲ. ಶೆಡ್ಡಿನಲ್ಲಿ ಅಜ್ಜಿಗೆ ಪ್ಲೇಗು ಬಡಿದೈತಿ. ಇವನಿಗೆ ಮುಟ್ಟು ಬ್ಯಾಡ್‌ದು.’
ವಿಶ್ವ ಏನೂ ತಿನ್ನಲಿಲ್ಲ. ತನ್ನ ಅಮ್ಮನನ್ನು ನೆನೆಸಿಕೊಂಡು ಅಳುತ್ತಲೇ ಇದ್ದ. ಅವನನ್ನು ಎಲ್ಲಿಯೂ ಬಿಡದೆ ನರಸಿ ಹತ್ತಿರವೇ ಕೂರಿಸಿಕೊಂಡಳು.
ನಂಜಮ್ಮನಿಗೆಂದು ತರಿಸಿದ್ದ ಹೇಮಾದಿ ಪಾನಕ ಇನ್ನು ಉಳಿದಿತ್ತು. ಶೆಡ್ಡಿಗೆ ಬಂದ ಅಯ್ಯನವರು ಕುಡಿಸಲು ಹೋದರೆ ಅಕ್ಕಮ್ಮ ಬ್ಯಾಡವೆಂದಳು. ಏನು ಮಾಡಿದರೂ ಬಾಯಿ ತೆಗೆಯಲಿಲ್ಲ. ತಾನು ಸಾಯಬೇಕೆಂದೇ ಅವಳು ನಿಶ್ಚಯಿಸಿದಂತಿತ್ತು.

ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಕಲ್ಲೇಶ ಬಂದ. ನಡೆದುದೆಲ್ಲವನ್ನೂ ಅಯ್ಯನವರು ಹೇಳಿದರು. ಎರಡು ನಿಮಿಷ ಅವನೂ ಕಣ್ಣೀರು ಹಾಕಿದ. ಇನ್ನು ಮುಂದಿನ ಕೆಲಸ ಯೋಚಿಸಬೇಕು. ಅವನೇ ಹೇಳಿದ: ‘ವಿಶ್ವನಿಗೆ ಇನಾಕ್ಯುಲೇಶನ್ ಆಗಿದೆ. ನಾಗಲಾಪುರಾನೂ ಬಿಟ್ತಿದೆ. ಈ ಊರು ಬಿಟ್ಟಿದೆ. ಅವನು ಇಲ್ಲಿದ್ದರೂ ಭಯವಿಲ್ಲ. ಅವನು ಅಮ್ಮನ ತಿಥಿ ಆಗೂತಂಕ ಇಲ್ಲಿಯೇ ಇರ್ಲಿ. ಆಮೇಲೆ ನಾನು ಬಂದು ಕರ್ಕಂಡು ಹೋಗ್ತೀನಿ. ಬಿಟ್ಟ ಊರೊಳಕ್ಕೆ ಹೋಗಿ ಅಷ್ಟು ಹೊತ್ತು ಕೂತಿದ್ದರಿಂದ ಅಕ್ಕಮ್ಮನಿಗೆ ರೋಗ ಬಡಿದಿದೆ. ಇನಾಕ್ಯುಲೇಶನ್ ಬ್ಯಾಡ ಅಂತ ಹಟಮಾಡಿದ್ಳು. ಈಗ ಗಾಡಿಮ್ಯಾಲೆ ಅವಳನ್ನ ಕರ್ಕಂಡ್ ಹೋಗ್ತೀನಿ.’
ಅದಕ್ಕೆ ಬದಲು ಹೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ‘ಹಂಗೇ ಮಾಡಿ’-ಎಂದು ಅಯ್ಯನವರೆಂದರು. ‘ನಾನಲ್ಲಿಗೆ ಬರುಲ್ಲ. ನನ್ನ ಮಮ್ಮಗಳುನ್ನ ಸುಟ್ತ ಜಾಗದಲ್ಲೆ ನನ್ನೂ ಸುಡ್‌ಬೇಕು’-ಅಕ್ಕಮ್ಮ ಹೋರಿದಳು. ಕಲ್ಲೇಶ ಕೇಳಲಿಲ್ಲ. ಮೆತ್ತಗಾಗುವಂತೆ ಗಾಡಿಗೆ ಹುಲ್ಲು ಹಾಕಿಸಿ, ಮೇಲೆ ಒಂದು ಗೋಣೀಚೀಲ ಒಂದು ಸೀರೆ ಹಾಸಿ, ಅಕ್ಕಮ್ಮನನ್ನು ಎತ್ತಿ ಮಲಗಿಸಿ, ಮೇಲೆ ಬೆಚ್ಚಗೆ ನಂಜಮ್ಮನ ಒಂದು ಕಂಬಳಿ ಹೊದೆಸಿ ಆ ರಾತ್ರಿಯೇ ಗಾಡಿ ಕಟ್ಟಿಸಿಕೊಂಡು ಹೊರಟುಹೋದ.

ಮರುದಿನ ಅಪ್ಪಣ್ಣಯ್ಯ ಊರಿಗೆ ಬಂದ. ಪ್ಲೇಗು ಬಂದು ಊರು ಬಿಟ್ಟಿರುವುದಾಗಲಿ ಅತ್ತಿಗೆ ಸತ್ತುಹೋದುದಾಗಲಿ ಅವನಿಗೆ ಗೊತ್ತಿಲ್ಲ. ಶೆಡ್ಡಿಗೆ ಬಂದು ಕುತ ಅವನು ಕಣ್ಣುತುಂಬ ನೀರು ಸುರಿಸಿದ. ಪಾರ್ವತಿಯ ಮದುವೆಯಾದಮೇಲೆ ಅವನಿಗೆ ಅತ್ತಿಗೆಯ ಬಗೆಗೆ ಸ್ವಲ್ಪ ಅಂತಃಕರಣ ಬೆಳೆದಿತ್ತು. ಇಬ್ಬರು ಮಕ್ಕಳು ಸತ್ತು, ಅವಳೊಡನೆ ಶೃಂಗೇರಿಗೆ ಹೋಗಿ ಬಂದಮೇಲಂತೂ ತುಂಬ ಗೌರವವೇ ಹುಟ್ಟಿಬಿಟ್ಟಿತ್ತು. ತನ್ನ ಅಮ್ಮನಿಂದ ಬೇರೆಯಾದಮೇಲೆ, ದಿನವೂ ಅವಳು ಮಾಡಿದ ಸಾರು ಹುಳಿಗಳನ್ನೆ ತಿನ್ನುತ್ತಿದ್ದ. ಈಗ ಈ ಊರಿನಲ್ಲಿ ಅವನಿಗೆ ತನ್ನವರೆಂಬ ಯಾರೂ ಇಲ್ಲವೆನ್ನಿಸುತ್ತಿತ್ತು. ನರಸಿಯ ಮನೆಗೆ ಹೋಗಿ ಅವನೇ ವಿಶ್ವನನ್ನು ಕರೆದುಕೊಂಡು ಬಂದ. ಈಗ ಅಯ್ಯನವರನ್ನು ಬಿಟ್ಟರೆ ಈ ಊರಿನಲ್ಲಿ ವಿಶ್ವನಿಗೆ ನಿಕಟವಾಗಿ ಉಳಿದಿರುವವರು ಚಿಕ್ಕಪ್ಪ ಒಬ್ಬರೇ. ರೇವಣ್ಣಶೆಟ್ಟರ ಹೆಂಡತಿ ಸರ್ವಕ್ಕ ಮೊದಲಾಗಿ ಎಷ್ಟೋ ಜನ ಹೆಂಗಸರು ಶೆಡ್ಡಿಗೆ ಬಂದು ಅವನ ಕೆನ್ನೆಯನ್ನು ಮುಟ್ಟಿ ಮುತ್ತಿಟ್ಟು ಕಣ್ಣೀರು ಹಾಕಿ ಹೋದರು. ಆದರೆ ಯಾರೂ ಅವನ ಅಮ್ಮನನ್ನು ಕರೆದುಕೊಂಡು ಬರುವುದಿಲ್ಲ. ಅವಳನ್ನು ಶ್ಮಶಾನದಲ್ಲಿ ಸುಟ್ಟುಹಾಕಿದರಂತೆ. ಸತ್ತು ಬೂದಿಯಾದವರು ಇನ್ನು ಬರುವುದಿಲ್ಲವಂತೆ. ಇವರು ಯಾಕೆ ಸುಡಬೇಕಾಗಿತ್ತು? ಹಾಗೆಯೇ ಇಟ್ಟಿದ್ದರೆ ಅವಳಿಗೆ ಪ್ರಾಣ ಬರುತ್ತಿರಲಿಲ್ಲವೆ?-ಎಂದು ಅವನು ಯೋಚಿಸುತ್ತಿದ್ದ.
ಇನ್ನು ಅತ್ತಿಗೆಯ ತಿಥಿಯಾಗಬೇಕು. ಅಪ್ಪಣ್ಣಯ್ಯ ಅಣ್ಣನಿಗೆ ಹೇಳಿದ: ‘ನನ್ನ ಹತ್ರ ಅರವತ್ತು ರೂಪಾಯಿ ಇದೆ. ನಿನ್ನ ಹತ್ರ ಏನಿದೆ ಕೊಡು. ಕ್ರಮವಾಗಿ ಮಾಡಾಣ. ಅವರು ಪುಣ್ಯಾತ್ಗಿತ್ತಿ. ಶ್ರದ್ಧೆ ಭಕ್ತಿಯಿಂದ ಕೆಲಸವಾಗಬೇಕು.’
‘ಕತ್ತೆಮುಂಡೆ ಇದ್ದ ಬದ್ದ ದುಡ್ಡಲೆಲ್ಲ ಮನೆ ಕಟ್ಟಿಸಿದಳು. ನಂಗೆ ಯಾವ ಯಜಮಾನಿಕೆ ಬಿಟ್ಟಿದ್ದಳು ದುಡ್ಡು ಇರೂಕ್ಕೆ?’
ಅಯ್ಯನವರೆಂದರು: ‘ಔಸ್ತಿ ತರಿಸಿದಮೇಲೆ ಮೂವತ್ತೆಲ್ಡು ರೂಪಾಯಿ ಉಳಿದೈತಿ.
ರೂಪಾಯಿ ನನ್ನ ತಾವ ಅವೆ. ಅದ್ನೂ ತಗಾಳಿ. ಹ್ಯಂಗೋ ಬಡತನದಾಗೇ ಮಾಡಿ. ಈ ಜೋಯಿಸರಿಗೆ ನೀವು ಏನು ದಾನ ಕೊಟ್ರೂ ಸತ್ತ ಅಮ್ಮನಿಗೆ ಏನೂ ಸಿಕ್ಕಾಕುಲ್ಲ.’

ಆದರೆ ಅದೇ ದಿನವೇ ಕಂಬನಕೆರೆಯ ಹೆಡ್ಮಾಸ್ಟರು ಬಂದರು. ರಾತ್ರಿ ಸ್ಕೂಲಿನ ನೂರಾ ಇಪ್ಪತ್ತು ರೂಪಾಯಿಯನ್ನು ಚೆನ್ನಿಗರಾಯರಿಗೆ ಕೊಟ್ತು, ಹಣ ಪಡೆಯಬೇಕಾದವರು ಸತ್ತುಹೋಗಿರುವುದರಿಂದ ಅವರ ಗಂಡನಾದ ತಾವು ಸ್ವೀಕರಿಸಿರುವುದಾಗಿ ಬರಸಿ ರುಜುಮಾಡಿಸಿಕೊಂಡು ಹೋದರು. ಆ ಹಣವನ್ನು ತಿಥಿಗೆ ಕೊಡುವಂತೆ ಅಪ್ಪಣ್ಣಯ್ಯ ಕೇಳಿದ.
‘ಅದ ಖರ್ಚು ಮಾಡ್‌ಬ್ಯಾಡಿ. ಓದಾ ಹುಡುಗನಿಗೆ ಅಂಗಿ ಪಂಗಿ ಹೊಲಿಸಾಕೆ, ಪುಸ್ತಕ ಗಿಸ್ತಕ ತಗಾಳಾಕೆ ಆಯ್ತದೆ’-ಎಂದು ಮಾದೇವಯ್ಯನವರು ಹೇಳಿದರು. ‘ಹಾಗಾದ್ರೆ ಅಯ್ನೋರ ಕೈಲಿ ಕೊಡು’- ಅಪ್ಪಣ್ಣಯ್ಯನೇ ಹೇಳಿದ. ಚೆನ್ನಿಗರಾಯರು ಯಾರಿಗೂ ಕೊಡಲಿಲ್ಲ. ಒಂದು ಅರಿವೆ ಬಳಲಿನಲ್ಲಿ ಸುತ್ತಿ ಸೊಂಟಕ್ಕೆ ಬಿಗಿದುಕೊಂಡೇ ತಿರುಗಾಡಲು ಪ್ರಾರಂಭಿಸಿದರು.

ವಿಶ್ವ ಮುಂಜಿಯಾಗದ ಹುಡುಗ. ಅವನ ಪರವಾಗಿ ಪುತ್ರಸ್ಥಾನದಲ್ಲಿ ನಿಂತು ಎದಬಲಕ್ಕೆ ಹಾಕಿಕೊಂಡು ಅಪ್ಪಣ್ಣಯ್ಯ ಎಲ್ಲ ಕೆಲಸವನ್ನೂ ಮಾಡುತ್ತಿದ್ದ. ತೋಟದ ಬಾವಿಯ ಹತ್ತಿರಕ್ಕೆ ಕರೆದುಕೊಂಡು ಹೋಗಿ ವಿಶ್ವನಿಗೆ ತಲೆ ಬೋಳಿಸಿಸಿ, ಕರ್ಮಗಳು ನಡೆಯುವಾಗ ಸುಮ್ಮನೆ ಒಂದು ಕಡೆ ಕೂರಿಸುತ್ತಿದ್ದರು. ಅಣ್ಣಾಜೋಯಿಸರ ಮಂತ್ರ ತಂತ್ರಗಳು. ನಂಜಮ್ಮನ ಸಂಸಾರದ್ದೇ ಪಾತ್ರೆ ಪರಟೆಗಳಿದ್ದವು. ಅವನ್ನು ವೈಕುಂಠಸಮಾರಾಧನೆಯ ದಿನ ಧಾರಾಳವಾಗಿ ಬ್ರಾಹ್ಮಣರಿಗೆ ದಾನಮಾಡಿದರು.

– ೮ –

ವೈಕುಂಠಸಮಾರಾಧನೆಯಾದ ಹತ್ತು ದಿನಕ್ಕೆ ಕಲ್ಲೇಶ ಬಂದ. ಅಕ್ಕಮ್ಮ, ಊರು ಸೇರಿದ ಎರಡನೆಯ ದಿನವೇ ಸತ್ತುಹೋದಳಂತೆ. ಅವನು ಹಾಸನ, ಕೌಶಿಕ, ಮಾವಿನಕೆರೆ, ಗೊರೂರು, ಹೆಬ್ಬಾಲೆ ಮೊದಲಾಗಿ ಎಲ್ಲೆಲ್ಲಿಯೋ ತಿರುಗಿ ಅವನ ತಂದೆ ಕಂಠೀಜೋಯಿಸರನ್ನು ಪತ್ತೆಮಾಡಿ ಅವಳ ಶ್ರಾದ್ಧವನ್ನು ಮುಗಿಸಿದ. ಈಗ ವಿಶ್ವನನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ.

ಅಮ್ಮನ ತಿಥಿಯಾದ ಮೇಲೆ ವಿಶ್ವ ಅಳುವುದನ್ನು ಬಿಟ್ಟಿದ್ದ. ಏರಿಯ ಮೇಲಿನ ಗುಡಿಗೆ ಹೋಗಿ ಅಯ್ಯನವರ ಮುಂದೆ ಸುಮ್ಮನೆ ಕೂರುತ್ತಿದ್ದ. ಅವನಿಗೆ ಊಟವೇ ಸೇರದು. ಅವರು ಬಲವಂತಮಾಡಿ, ಕಂತೆಭಿಕ್ಷದ ಮುದ್ದೆ ಎಸರುಗಳನ್ನು ಸ್ವಲ್ಪ ತಿನ್ನಿಸುತ್ತಿದ್ದರು. ಗುಡಿಗೆ ಹೋದದಿದ್ದರೆ ಅವನು ನರಸಮ್ಮನ ಅಂಗಡಿಗೆ ಹೋಗುತ್ತಿದ್ದ. ‘ನರಸಮ್ಮ, ಊರೊಳಕ್ಕೆ ಹೋಗಿ ನೋಡಿದರೆ ನಮ್ಮಮ್ಮ ಇರುಲ್ಲವೆ? ಅವಳು ಸತ್ತಿದ್ದಾಳೆ ಅಂತ ಇವರೆಲ್ಲ ಸುಳ್ಳು ಸುಳ್ಳು ಹೇಳ್ತಿಲ್ಲವೆ?’-ಎಂದು ಕೇಳುತ್ತಿದ್ದ. ಉತ್ತರ ಹೇಳಲು ತಿಳಿಯದೆ ಅವಳು-‘ನಂಗೊತ್ತಿಲ್ಲ ಮಗ, ಕ್ವಾ. ಬಿಸ್ಕತ್ತು ತಿನ್ನು’ಎಂದು ತನ್ನ ಅಂಗಡಿಯ ಬಿಸ್ಕತ್ತು ಕೊಡಲು ಬರುವಳು.
‘ನಂಗೆ ಬಿಸ್ಕತ್ತು ಬ್ಯಾಡ. ನಮ್ಮಮ್ಮ ಮನೇಲಿಲ್ವೆ ಹೇಳು’-ಅವನು ಕೇಳುತ್ತಿದ್ದ. ಒಂದು ದಿನ ಯಾರಿಗೂ ಕಾಣದಂತೆ ಒಬ್ಬನೇ ಊರೊಳಕ್ಕೆ ಹೋಗಿ, ಬೀಗ ಹಾಕಿದ್ದ ತನ್ನ ಮನೆ ಯನ್ನು ನೋಡಿಕೊಂಡು ಸುಮ್ಮನೆ ಹಿಂತಿರುಗಿ ಬಂದಿದ್ದ.
ಈಗ ಮಾವ ತನ್ನನ್ನು ಕರೆಯಲು ಬಂದಾಗ ಧೈರ್ಯವಾಗಿ ಹೇಳಿಬಿಟ್ಟ: ‘ನಾನು ಬರುಲ್ಲ.’
‘ಯಾಕೋ?’
‘ನೀನು ಹೊಡೀತಿಯಾ, ನಾನು ಈ ಊರಲ್ಲೇ ಇಸ್ಕೂಲಿಗೆ ಹೋಗ್ತೀನಿ.’
ಈ ಊರಿನಲ್ಲಿ ಅವನನ್ನು ಸಾಕುವವರ್ಯಾರು? ಗಂಗಮ್ಮ ತಾನು ಇಟ್ಟುಕೊಳ್ಳುವುದಾಗಿ ಹೇಳಿದಳು. ಆದರೆ ಅವಳದು ಯಾವ ನೆಚ್ಚಿಕೆ? ‘ಇಲ್ಲ ಮರಿ. ಮಾವನ ಊರಿಗೇ ಹ್ವಾಗು’-ಅಯ್ಯನವರೆಂದರು.
‘ಇಲ್ಲ ಕಣ್ರೀ, ಅವನು ದನ ಸದೆಯೂ ಹಾಗೆ ಸದೀತಾನೆ?’ ಅವನು ಮಾವನ ಎದುರಿಗೇ ಹೇಳಿದ.
‘ಖಂಡಿತ ಹ್ವಡೆಯುಲ್ಲ’-ಎಂದು ಕಲ್ಲೇಶನೂ ಭರವಸೆ ಕೊಟ್ಟ. ಉಳಿದವರೂ ಬಲವಂತ ಮಾಡಿದರು. ನಿರುಪಾಯನಾಗಿ ಅವನು ಹೊರಟ. ಕಳಿಸಲು ಅಯ್ಯನವರು ಚಿಕ್ಕಪ್ಪ, ಇಬ್ಬರೂ ಒಂದು ಮೈಲಿಯ ತನಕ ಹೋದರು. ಇವರಿಬ್ಬರೂ ಹಿಂತಿರುಗುವಾಗ ವಿಶ್ವ ಅಯ್ಯನವರನ್ನು ಕೂಗಿ ನಿಲ್ಲಿಸಿದ. ಅವರ ಹತ್ತಿರ ಓಡಿಬಂದು, ‘ನಮ್ಮಮ್ಮ ಸತ್ತಿದಾಳೆ ಅಂತ ನೀವೆಲ್ಲ ಅಂತೀರಲ. ಅದು ಸುಳ್ಳಿದ್ರೂ ಇರ್‌ಭೌದು. ಊರೋರೆಲ್ಲ ಶೆಡ್ಡು ಬಿಟ್ಟು ಊರಿಗೆ ಹೋದಮೇಲೆ ಅವ್ಳು ಬತ್ತಾಳೆ. ನಾಗಲಾಪುರಕ್ಕೆ ಬಂದು ನನ್ನ ಕರ್ಕಂಡು ಬಾ ಅಂತ ಹೇಳಿ’ ಎಂದ. ‘ಆಗಲಿ ಮರಿ’-ಎಂದು ಅವರು ಅಲ್ಲಿಯೇ ನಿಂತರು. ಕಲ್ಲೇಶ ಅವನ ಕೈಹಿಡಿದುಕೊಂಡು ಮುಂದೆ ನಡೆದ. ಹಿಂತಿರುಗಿ ನೋಡುತ್ತಾ ನೋಡುತ್ತಾ ವಿಶ್ವ ಅವನ ಹಿಂದೆ ಹಿಂದೆ ಕಾಲು ಎಳೆದು ಹಾಕುತ್ತಿದ್ದ. ಅವರು ಎದುರಿನ ಬೋರೆ ಏರಿ ಮರೆಯಾಗುವ ತನಕ ಈ ಇಬ್ಬರೂ ಹಾಗೆಯೇ ನಿಂತಿದ್ದರು. ‘ನಾಗಲಾಪುರಕ್ಕೆ ಕಳಿಸುವ ಮೊದಲು ವಿಶ್ವ ಎಷ್ಟು ಕಳಕಳಿಯಾಗಿದ್ದ. ಈಗ ಮುಖದಮೇಲೆ ಮಂಕು ಬಡಿದಿದೆ. ಕೈ ಕಾಲುಗಳು ಶೆಣೆತುಕೊಂಡಿವೆ. ಅವನು ಹೇಳುವ ಹಾಗೆ ಈ ಮಾವ ದನ ಸದೆಯುವಂತೆ ಸದೆಯಬಹುದು. ಇಲ್ಲಿಯ ತನಕ ಅಜ್ಜಿ ಇತ್ತು. ಇನ್ನು ಆ ಅತ್ತೆ ಇವನನ್ನು ಹೇಗೆ ನೋಡಿಕೊಳ್ಳುತ್ತಾಳೆಯೋ? ತಂಗಿ ಸತ್ತಮೇಲೆ ಕಲ್ಲೇಶಜೋಯಿಸರು ಹೊಡೆಯುವುದನ್ನು ಬಿಟ್ಟು ಹುಡುಗನನ್ನು ಚೆನ್ನಾಗಿ ನೋಡಿಕೊಳ್ಳಬಹುದು. ತಾಯಿ ಸತ್ತ ಇಂಥಾ ಹುಡುಗರಿಗೆ ಶಿವನೇ ಗತಿ’-ಎಂದು ಯೋಚಿಸುತ್ತಾ ಅಯ್ಯನವರು ಊರ ಕಡೆ ಹೆಜ್ಜೆ ಹಾಕಿದರು.

ಅಪ್ಪಣ್ಣಯ್ಯ ಶೆಡ್ಡಿಗೆ ಬಂದ. ಅದುವರೆಗೂ ಅವನು ಒಂದು ವಿಷಯವನ್ನೂ ಯೋಚಿಸಿರಲಿಲ್ಲ. ಈಗ ನೆನಪಿಗೆ ಬಂತು: ಅಡಿಗೆಯ ಪಾತ್ರೆ ಸಾಮಾನೆಲ್ಲ ಊರೊಳಗೆ ಬೀರೇಗೌಡನ ದನದ ಮನೆಯ ಜಗುಲಿಯ ಕೋಣೆಯಲ್ಲಿತ್ತು. ಈಗ ಊರು ಬಿಟ್ಟಿದೆ. ತನ್ನೊಬ್ಬನಿಗಾಗಿ ಬೇರೆ ಗುಡಿಸಲು ಹಾಕಿಕೊಳ್ಳಬೇಕು ಅದು ಅವನಿಗೆ ಬೇಸರವೆನಿಸಿತು. ಮಳೆ ಬರುವ ತನಕ ಎಲ್ಲ ಶೆಡ್ಡಿನಲ್ಲಿರುತ್ತಾರೆ. ಆಮೇಲೆ ಊರೊಳಕ್ಕೆ ಹೋಗುತ್ತಾರೆ. ಅಲ್ಲಿಯ ತನಕ ತಾನು ಯಾವುದಾದರೂ ಪ್ರಾಂತ್ಯದಲ್ಲಿ ಸುತ್ತಾಡಿಕೊಂಡು ಬಂದರೆ ಸರಿ. ನಾಳೆ ಬೆಳಿಗ್ಗೆ ಹೊರಡಬೇಕು- ಎಂದು ನಿಶ್ಚಯಿಸಿದ.
ಆ ದಿನ ರಾತ್ರಿ ಊಟಕ್ಕಿದ ಮೆಲೆ ಗಂಗಮ್ಮ ಎಂದಳು: ‘ಅವ್ಳಿದ್ದಾಗ ನಿಂಗೆ ಹೇಳ್ಕೊಟ್ಟು ನನ್ನ ಕೈಲಿ ಜಗಳ ಆಡಿಸಿದ್ಲು. ಈಗ ನೀನ್ಯಾಕೆ ಬ್ಯಾರೆ ಇರ್‌ಬೇಕು, ಜೊತೇಲೇ ಇರೋ.’
ಅಪ್ಪಣ್ಣಯ್ಯನಿಗೆ ಇದ್ದಕ್ಕಿದ್ದಹಾಗೆಯೇ ಸಿಟ್ಟು ಬಂತು. ‘ಅವರೇನು ನಂಗೆ ಹೇಳ್ಕೊಟ್ಟಿರ್‌ಲಿಲ್ಲ. ನೀನೇ ಬೋಸುಡಿಮುಂಡೆ.’
‘ಹೆತ್ತ ತಾಯೀನ ಮತ್ತೆ ಹೀಗಂತೀ ಏನೋ ಚಾಂಡಾಲ ಸೂಳೇಮಗನೇ?’
‘ಹೂಂ ಕಣೆ ಮುಂಡೆ, ನಿನ್ನ ಜೊತೆ ನಾನಿರುಲ್ಲ. ನೀನು ಸತ್ರೆ ತಿಥೀನೂ ಮಾಡುಲ್ಲ-ಎಂದು ಹೇಳಿದ ಅವನು ತನ್ನ ಪಂಚೆ, ಅಂಗಿ, ದುಪಟಿ, ಗೋಣೀಚೀಲಗಳನ್ನು ತೆಗೆದುಕೊಂಡು ಶೆಡ್ಡು ಬಿಟ್ಟು ಹೊರಟುಹೋದ. ಹೊರಗೆ ಬೆಳದಿಂಗಳಿತ್ತು. ಯಾವ ಕಡೆಗೆ ಹೋಗುವುದೆಂದು ಇನ್ನೂ ನಿಶ್ಚಯಿಸಿರಲಿಲ್ಲ. ಐದು ನಿಮಿಷ ನಿಂತು ಯೋಚಿಸಿದ. ಈ ರಾಗೀಸೀಮೇಲೆಲ್ಲ ಹೆಚ್ಚು ಕಮ್ಮಿ ಊರು ಬಿಟ್ಟಿದ್ದಾರೆ. ನಾಲೆಬೈಲಿಗೆ ಹೋಗೂದೇ ಸರಿ. ಈಗ ಹ್ಯಾಗೂ ಬೆಳದಿಂಗಳಿದೆ. ಬೆಂಡೇಕೆರೆ ಎಂಟು ಮೈಲಿಯಾಗುತ್ತೆ. ನಡಕಂಡು ಹೋಗಿ ಊರ ಹೊರಗಿನ ದೇವಸ್ಥಾನದ ಜಗುಲಿ ಮೇಲೆ ಮಲಗಿರೂದು. ಬೆಳಿಗ್ಗೆ ಎದ್ದು ಮುಂದಕ್ಕೆ ಹೋಗೂದು-ಎಂದು ತೀರ್ಮಾನಿಸಿ ಹೆಜ್ಜೆ ಹಾಕಿದ.

ಸಂಸಾರವಿಲ್ಲದ ಅಪ್ಪಣ್ಣಯ್ಯ ಹೀಗೆ ಮತ್ತೆ ದೇಶಾವರಿಗೆ ಹೊರಟಾಗ ಚೆನ್ನಿಗರಾಯರು ಅಣ್ಣಾಜೋಯಿಸರ ಶೆಡ್ಡಿನಲ್ಲಿ ಕೂತು ತಮ್ಮ ಮುಂದಿನ ಸಂಸಾರದ ಬಗೆಗೆ ಮಾತನಾಡುತ್ತಿದ್ದರು. ನಂಜಮ್ಮನ ವೈಕುಂಠಸಮಾರಾಧನೆಯಾದ ದಿನವೇ ಜೋಯಿಸರು ಇವರ ಮದುವೆಗೆ ಪ್ರಸ್ತಾಪ ಹಾಕಿದ್ದರು. ತಿಪಟುರಿಗೆ ಮೂರು ಮೈಲಿ ದೂರದ ಬೇವಿನಹಳ್ಳಿಯಲ್ಲಿ ಒಂದು ಕನ್ಯೆ ಇದೆಯಂತೆ. ಹುಡುಗಿಗೆ ತಂದೆಯಿಲ್ಲ. ತಾಯಿ ತುಂಬ ಕಷ್ಟದ ಸ್ಥಿತಿಯಲ್ಲಿದ್ದಾಳೆ. ಒಬ್ಬ ಬ್ರಾಹ್ಮಣನ ಕೈಲಿ ಇಟ್ಟು ಕೃತಾರ್ಥಳಾಗಬೇಕೆಂದು ತಾಯಿಯ ಆಶೆ. ‘ನಿನಗೇನು, ಇನ್ನೂ ಯಾವ ವಯಸ್ಸು? ಮದುವೆ ಮಾಡ್ಕ. ಹೊಸದಾಗಿ ಕಟ್ಟಿರೂ ಮನೆ, ವಂಶಾನುಗತವಾಗಿ ಬಂದ ಶ್ಯಾನುಭೋಗಿಕೆ. ಇದಕ್ಕಿಂತ ಏನು ಬೇಕು? ಹುಡುಗಿ ಲಕ್ಷಣವಾಗಿದೆ. ಒಬ್ಬನೇ ಹೀಗೆ ಎಷ್ಟು ದಿನ ಇರ್ತೀಯಾ?’-ಜೋಯಿಸರು ಕೇಳಿದರು.

ಚೆನ್ನಿಗರಾಯರಿಗೆ ಹುಮ್ಮಸ್ಸು ಬಂತು: ‘ಹೆಣ್ನು ಕೊಡುಸ್ರೀ. ಮಾಡ್ಕಂಡೇಬಿಡ್ತೀನಿ.’
ತಾವು ಹೋಗಿ ಹುಡುಗಿಯ ತಾಯಿಯ ಕೈಲಿ ಮಾತಾಡಿಕೊಂಡು ಬರಬೇಕು, ಮಾತಿಗೆ ಹೋಗುವಾಗ ಹುಡುಗಿಗೆ ಹೊಸಸೀರೆ ತೆಗೆದುಕೊಂಡು ಹೋಗಬೇಕು, ದೊಡ್ದ ಶ್ಯಾನುಭೋಗರು ಅಂತ ಅವರಿಗೆ ತೋರಿಸಬೇಕಾದರೆ ತಾವು ಸಹ ಚನ್ನಾದ ಒಂದು ಶಾಲು ಹೊದೆದುಕೊಂಡು ಹೋಗಬೇಕು. ‘ಒಟ್ಟಿನಲ್ಲಿ ಎಪ್ಪತ್ತೈದು ರೂಪಾಯಿಯಾದರೂ ಬೇಕು. ಕೊಡು’-ಎಂದರು. ಹೆಣ್ಣು ಬೇಕಾದರೆ ದುಡ್ಡು ಬಿಚ್ಚಬೇಕು. ನಂಜಮ್ಮ ರಾತ್ರಿ ಸ್ಕೂಲು ನಡೆಸಿದ ನೂರ ಇಪ್ಪತ್ತು ಇವರ ಸೊಂಟದಲ್ಲೇ ಇತ್ತು. ಅದು ಗೊತ್ತಿಲ್ಲದಿದ್ದರೆ ಜೋಯಿಸರು ಈ ಪ್ರಸ್ತಾಪ ಮಾಡುತ್ತಿರಲಿಲ್ಲ. ಚೆನ್ನಿಗರಾಯರು ಅವರ ಎದುರಿಗೇ ಸೊಂಟದ ಅರಿವೆ ಬಿಚ್ಚಿ ಎಪ್ಪತ್ತೈದು ರೂಪಾಯಿ ಎಣಿಸಿ ಕೊಟ್ಟರು. ಇನ್ನು ಉಳಿದದ್ದೆಷ್ಟು ಎಂಬ ಲೆಕ್ಕ ಜೋಯಿಸರಿಗೂ ತಿಳಿಯಿತು.

ಮರುದಿನವೆ ಜೋಯಿಸರು ಮೋಟಾರಿನಲ್ಲಿ ತಿಪಟೂರಿಗೆ ಹೋದರು. ಅವರು ಇಪ್ಪತ್ತು ರೂಪಾಯಿಯ ಒಂದು ಹಸುರು ಶಾಲನ್ನು ಕೊಂಡು ಹೊದೆದು ಹಿಂತಿರುಗಿದ್ದನ್ನು ಚೆನ್ನಿಗರಾಯರೇ ನೋಡಿದರು. ಹುಡುಗಿಗೆ ಅರವತ್ತು ರೂಪಾಯಿಯ ಸೀರೆ ಕೊಟ್ತು ಬಂದಿದ್ದರೆನ್ನುವುದಕ್ಕೆ ಇದೇ ಸಾಕ್ಷಿಯಲ್ಲವೆ? ಎರಡು ದಿನದ ನಂತರ ಒಂದು ಶುಭ ಲಗ್ನ ನೋಡಿ ಇವರಿಬ್ಬರೂ ಮೋಟಾರಿನಲ್ಲಿ ತಿಪಟುರಿಗೆ ಹೋದರು. ರಾತ್ರಿ ಹೋಟೆಲಿನಲ್ಲಿ ಭೋಜನವಾದಮೆಲೆ ಇಬ್ಬರೂ ಛತ್ರದ ಜಗುಲಿಮೇಲೆ ಮಲಗಿದರು. ಜೋಯಿಸರು ಹೇಳಿದ್ದಂತೆ ಚೆನ್ನಿಗರಾಯರು ತಮ್ಮ ಪಂಚೆ, ಜಮಾಬಂದಿಯ ಕೋಟು ಪೇಟಗಳನ್ನು ಚೌಳು ಹಾಕಿ ಒಗೆಸಿ ತಂದಿದ್ದರು. ಬೆಳಿಗ್ಗೆ ಎದ್ದು ಅವೆಲ್ಲಕ್ಕೂ ಇಸ್ತ್ರಿ ತಿಕ್ಕಿಸಿದ ಮೇಲೆ ಜೋಯಿಸರು ಕೆರೆಯ ದಡಕ್ಕೆ ಒಬ್ಬ ಹಜಾಮನನ್ನು ಕರೆದುಕೊಂಡು ಬಂದರು. ವೈದಿಕ ಜೋಯಿಸರಾದ ಅವರು ಹಜಾಮನ ಸೆಲೂನಿಗೆ ಹೋಗುವಂತಿರಲಿಲ್ಲ. ಕೆರೆಯ ದಡದಲ್ಲಿ ಕೂರಿಸಿ ಚೆನ್ನಿಗರಾಯರ ಬಿಳಿ ಗಡ್ಡ ಮತ್ತು ತಲೆಯ ಬಿಳಿಯ ಕೂದಲಿನ ಸಣ್ಣ ಕೂಳೆಯೂ ಕಣ್ಣಿಗೆ ಬೀಳದಂತೆ ಉಲ್ಟಾ ಹೊಡೆಸಿಸಿ, ಅವರಿಗೆ ಸ್ನಾನ ಮಾಡಲು ಹೇಳಿದರು. ಸ್ನಾನ ಮಾಡಿ ಇಸ್ತ್ರಿ ಮಾಡಿದ ಪಂಚೆಯುಟ್ಟು, ಅಂಗಿ ಕೋಟು ತೊಟ್ಟು, ಜಮಾಬಂದಿಗೆ ಹೋಗುವಾಗ ಕಟ್ಟುವಂತೆ ಪೇಟ ಕಟ್ಟಿ ನಿಂತಮೇಲೆ ಜೋಯಿಸರೇ ಅಂದರು: ‘ಈಗ ಹೋಟೆಲಿಗೆ ಹೋಗಾಣ ಬಾ. ಅಲ್ಲಿ ದೊಡ್ಡ ಕನ್ನಡಿ ಇದೆಯಲ. ಅದರಲ್ಲಿ ನೋಡ್ಕ-ಹ್ಯಾಗೆ ಕಾಣ್ತೀಯಾ.’

ಹೋಟೆಲಿನಲ್ಲಿ ಕೂತು ಇವರು ಹೇಳಿದ ಮಸಾಲೆದೋಸೆ ಬೆಂದು ಬರುವ ತನಕ ಚೆನ್ನಿಗರಾಯರು ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಳ್ಳುತ್ತಾರೆ: ಅವರಿಗೇ ಆಶ್ಚರ್ಯವಾಗುತ್ತಿದೆ. ತಾವು ಇಷ್ಟು ಚೆನ್ನಾಗಿ ಈ ಹಿಂದೆ ಯಾವತ್ತೂ ಕೋಟು ಪೇಟ ಹಾಕಿಕೊಂಡೇ ಇರಲಿಲ್ಲ. ಅವರ ಹೆಂಡತಿಯಾಗಿದ್ದ ಆ ‘ಮುಂಡೆ’ ಒಂದು ದಿನವೂ ಇವರಿಗೆ ಇಸ್ತ್ರಿಯಾದ ಪಂಚೆ, ಅಂಗಿ, ಕೋಟು, ಪೇಟಗಳನ್ನು ಹಾಕಿಸಿ ಜಮಾಬಂದಿಗೆ ಕಳಿಸಿರಲಿಲ್ಲ. ಮಸಾಲೆದೊಸೆ, ಇಡ್ಳಿಸಾಂಬಾರ್, ಮೈಸೂರ್ ಪಾಕು, ಮೇಲೆ ಕಾಫಿ ಕುಡಿದು, ಸಂಜೆಯ ತನಕ ಜೊತೆಯಲ್ಲೇ ಇದ್ದು ವಾಪಸು ಕರಕೊಂಡು ಬರಬೇಕೆಂದು ಹೇಳಿ ಜೋಯಿಸರು ಎಂಟು ರೂಪಾಯಿಗೆ ಒಂದು ಕುದುರೆಗಾಡಿ ಗೊತ್ತುಮಾಡಿದರು.
ಬೇವಿನಹಳ್ಳಿ ಹದಿನೈದು ಮನೆಗಳ ಕಗ್ಗಾಡುಹಳ್ಳಿ. ಈ ಹೆಣ್ಣಿನದೊಂದೇ ಬ್ರಾಹ್ಮಣರ ಮನೆ. ಅಲ್ಪ ಸ್ವಲ್ಪ ಜಮೀನಿದ್ದರೂ ವಿಧವೆಯಾದ ಆಕೆ ಅದನ್ನು ಮಾಡಿಸಲಾರದೆ, ವಾರ ಪಾಲಿನವನು ಕೊಟ್ಟಷ್ಟನ್ನು ತಿಂದು, ಸಾಲದುದಕ್ಕೆ ತಿರುಪೆ ಮಾಡಿ ಜೀವನ ಸಾಗಿಸುತ್ತಿದ್ದರು. ಮನೆಯ ಮುಂದೆ ಕುದುರೆಯ ಗಾಡಿ ಬಂದು ನಿಂತಾಗ ಆಕೆಗೆ ಕೈ ಕಾಲೇ ಆಡದಷ್ಟು ಸಂಭ್ರಮವಾಯಿತು. ಹುಡುಗಿಗೆ ಹದಿನಾಲ್ಕು ವರ್ಷ. ಇನ್ನೂ ಮೈನೆರೆದಿಲ್ಲವೆಂದು ತಾಯಿ ಹೇಳುತ್ತಾರೆ. ಹುಡುಗಿಯನ್ನು ನೋಡದೆ ಇದ್ದರೂ ಚೆನ್ನಿಗರಾಯರು ಸಮ್ಮತಿ ಕೊಡುತ್ತಿದ್ದರು. ಈಗ ನೋಡಿದ ಮೇಲೆ ಪ್ರಶ್ನೆಯೇ ಇಲ್ಲ.

‘ಸದಾ ಶ್ಯಾನುಭೋಗಿಕೆ ಲೆಕ್ಕ ಬರೆದು ನಮ್ಮ ಚೆನ್ನಿಗರಾಯರು ಹೀಗೆ ಕಾಣ್ತಾರೆ. ಮೂವತ್ತೆರಡು ವರ್ಷದ ಮೇಲೆ ಆಗಿಲ್ಲ. ಸ್ವಂತ ಮನೆ, ಶ್ಯಾನುಭೋಗಿಕೆ, ನಾಲ್ಕೆಕರೆ ಹೊಲ ಇದೆ. ಈ ಕಾಲದಲ್ಲಿ ಒಂದು ಶ್ಯಾನುಭೋಗಿಕೆ ಇದ್ರೆ ಸಾಕು ಸಂಸಾರ ಸಾಕ್‌ಭೌದು. ನಿಮ್ಮ ಹುಡುಗಿ ದಿನಾ ಊಟವಾದ ಮೇಲೆ ಹಾಲಿನಲ್ಲಿ ಕೈ ತೊಳೆಯುತ್ತೆ, ನೀರಿನಲ್ಲಲ್ಲ’-ಜೋಯಿಸರು ಇವರ ಪರವಾಗಿ ಹೇಳಿದರು.
ಮದುವೆ ನಿಶ್ಚಯವಾಯಿತು. ತಡ ಯಾಕೆ ಮಾದಬೇಕು. ಎಂದು ಜೋಯಿಸರು, ತಮ್ಮ ಸಂಗಡವೇ ತಂದಿದ್ದ ಬಿಳಿಯ ಕಾಗದದ ಮೇಲೆ ಲಗ್ನಪತ್ರಿಕೆಯನ್ನೂ ಬರೆದುಬಿಟ್ಟರು. ‘ಜಾತಕಗಳು ಕೂಡುತ್ತವೆ. ವೈಶಾಖದಲ್ಲಿ ಹ್ಯಾಗೂ ಒಳ್ಳೆಯ ಲಗ್ನವಿದೆ. ಹುಣಿಸೆನೀರು ಅನ್ನ ಮಾಡಿ ಬೇಕಾದರೂ ಮದುವೆ ಮುಗಿಸಿಬಿಡಿ’- ಎಂದಾಗ ಹುಡುಗಿಯ ತಾಯಿಗೆ ಮೈಮೇಲಿನ ಹೊರೆ ಇಳಿಸಿದಷ್ಟು ಸಂತೋಷವಾಯಿತು. ಆಕೆ ಇದ್ದದ್ದರಲ್ಲಿ ಹೊಂದಿಸಿ ತುಪ್ಪನ್ನ ಪಾಯಸ ಮಾಡಿ ಬಡಿಸಿದರು. ತಾಂಬೂಲ ತೆಗೆದುಕೊಂಡ ಇವರು ಕ್ಯುದುರೆ ಗಾಡಿ ಹತ್ತಿ ತಿಪಟೂರಿಗೆ ಬರುವ ಹೊತ್ತಿಗೆ ಊರಿನ ಕಡೆಯ ಮೋಟಾರು ಸಿಕ್ಕಿದರೂ ಇಬ್ಬರಲ್ಲಿ ಯಾರೂ ಊರಿಗೆ ಹೊರಡಲು ಆತುರರಾಗಿರಲಿಲ್ಲ. ಹೋಟೆಲಿನವರು ಆಲುಗಡ್ಡೆ ನೀರುಳ್ಳಿ ಹಾಕಿ ಚೆನ್ನಾಗಿ ಹುಳಿಮಾಡುತ್ತಾರೆ. ನಾಳೆ ಬೆಳಿಗ್ಗೆ ಹೋದರಾಯಿತು. ಜೋಯಿಸರು ಜವಳಿ ಅಂಗಡಿಗೆ ಹೋಗಿ ಒಂದು ಜೊತೆ ಪಂಚೆ ಒಂದು ಸೀರೆ ತೆಗೆದುಕೊಂಡರು. ಅವರು ದುಡ್ಡು ತಂದಿರಲಿಲ್ಲ. ಚೆನ್ನಿಗರಾಯರೇ ಇಪ್ಪತ್ತೆರಡು ರೂಪಾಯಿಯನ್ನು ಅಂಗಡಿಯವನಿಗೆ ಕೊಟ್ಟರು.

ಚೆನ್ನಿಗರಾಯರ ಮದುವೆ ಸುದ್ಧಿ ಊರಲ್ಲಿ ಎಲ್ಲರಿಗೂ ತಿಳಿಯಿತು.‘ಆ ವಯ್ಯಂಗೆ ಹತ್ತಿರಾ ಚಟಾ ನೋಡು-ಅದು ನಿಜವಾಗ್ಲೂ ಎಂಡ್ತಿ ಆಳ್ತೈತಾ?’ ಎಂದು ನರಸಿ ಆಡಿಕೊಂಡರೆ ಸರ್ವಕ್ಕ, ‘ಆ ಯಮ್ಮ ಒಂದು ನೀಯುಸ್ತು ಅಂದ್ರೆ ಇನ್ನು ಈ ವಯ್ಯನ್ನ ಕಟ್ಕಂಡ ಹುಡುಗಿ ನೀಯುಸ್ತೈತಾ!’ ಎಂದು ಉದ್ಗಾರ ತೆಗೆದಳು. ರೇವಣಶೆಟ್ಟಿ ಒಂದು ದಿನ ಇವರಿಗೆ ಸಿಕ್ಕಿ, ‘ಶ್ಯಾನುಭೋಗ್ರೇ, ನೀವು ರಾಜಾ ಕೆಲ್ಸ ಮಾಡಿದ್ರಿ. ಮದುವೆ ಮಾಡ್ಕಳಿ. ಇಲ್ದೆ ಇದ್ರೆ ಬೇಸಿ ಹಾಕಾರು ಯಾರು?-ಎಂದು ಹುರಿದುಂಬಿಸಿದ. ತಾಯಿ ಗಂಗಮ್ಮ ಮಾತ್ರ ಈ ವಿಷಯದಲ್ಲಿ ನಿರಾಸಕ್ತಿ ತೋರಿಸಿದಳು. ‘ಯಾವ ಮುಂಡೆ ಬಂದ್ರೆ ನಂಗೆ ಮಾಡೂದೇನು? ಯಾವಳೂ ನನ್ನ ಸೇವೆ ಮಾಡುಲ್ಲ’-ಎಂದುಬಿಟ್ಟಳು.
ಒಂದು ವಾರದಲ್ಲಿ ಚೈತ್ರ ಕಳೆದು ವೈಶಾಖ ಬಂತು. ಈ ತಿಂಗಳೇ ಮದುವೆಯಾಗಬೇಕು. ಮೊದಲ ಹೆಂಡತಿಯದೇ ಓಲೆ ಮೂಗುಬೊಟ್ಟುಗಳಿವೆ. ಬೂದಿಯಲ್ಲಿ ಹುಡುಕಿ ತೆಗೆದ ಮಾಂಗಲ್ಯದ ಚಿನ್ನ ಸಹ ಇದೆ. ಮೇಲೆ ನೂರು ರೂಪಾಯಿ ಹೊಂದಿಸಿಕೊಂಡರೆ ಸಾಕು. ಒಂದು ಹಸುವನ್ನು ನೂರು ರೂಪಾಯಿಗೆ ಮಾರಿ ಅದನ್ನೂ ಹೊಂದಿಸಿಕೊಂಡರು. ಆದರೆ ಮುಂದಿನ ಮಾತಾಡಲು ಹೆಣ್ಣಿನ ಕಡೆಯ ಯಾರೂ ಬರಲಿಲ್ಲ. ಇನ್ನು ಹತ್ತು ಹನ್ನೆರಡು ದಿನದಲ್ಲಿ ತಮ್ಮ ತೌರಿನ ಕಡೆಯ ಸಂಬಂಧಿ ಸಿದ್ಧವಳ್ಳಿ ವೆಂಕಟರಾಮಯ್ಯ ಅನ್ನುವವರನ್ನು ಕಲಿಸುವುದಾಗಿ ಹುಡುಗಿಯ ತಾಯಿ ಹೇಳಿದ್ದರು. ಆದರೆ ಯಾರೂ ಬರಲಿಲ್ಲ. ಮದುವೆ ಇನ್ನು ಆರೇ ದಿನ ಉಳಿಯಿತು. ಚೆನ್ನಿಗರಾಯರಿಗೆ ಆತಂಕ ತಡೆಯಲಾಗಲಿಲ್ಲ. ಜೋಯಿಸರನ್ನು ಕೇಳಿದರೆ-‘ಏನು ಸಮಾಚಾರವೋ ಏನೋ? ನಂಗೆ ಪುರುಸೊತ್ತಿಲ್ಲ. ನೀನೇ ಹೋಗಿ ಬಾ’ ಎಂದರು. ಇವರೇ ಒಂದು ದಿನ ತಿಪಟೂರಿಗೆ ಹೋಗಿ, ಹಿಂದಿನ ದಿನದಂತೆಯೇ ಕ್ಷೌರ ಮಾಡಿಸಿಕೊಂಡು ಇಸ್ತ್ರಿ ಬಟ್ಟೆ ಧರಿಸಿ ಬೇವಿನಹಳ್ಳಿಗೆ ಹೋದರೆ ಮನೆಯಲ್ಲಿ ವೃದ್ಧ ವಯಸ್ಸಿನ ಒಬ್ಬ ಗಂಡಸರಿದ್ದರು. ತಮ್ಮ ಪರಿಚಯವನ್ನು ತಾವೇ ಹೇಳಿಕೊಂಡ ಚೆನ್ನಿಗರಾಯರು ಅವರೊಡನೆ ಮಾತು ಪ್ರಾರಂಭಿಸುವಷ್ಟರಲ್ಲಿ ಒಳಗಿನಿಂದ ಬಂದ ಹುಡುಗಿಯ ತಾಯಿ ಪಟಪಟನೆ ಅಂದುಬಿಟ್ಟಳು: ‘ಯಾವ ಗಂಡೂ ಸಿಕ್ಕದೇ ಇದ್ರೆ ನಮ್ಮ ಹುಡುಗೀನ ಬಾವಿಗೆ ನೀಕ್ತೀನಿ. ನಿಮ್ಮಂಥೋರಿಗೆ ಕೊಡುಲ್ಲ.’

ಶ್ಯಾನುಭೊಗ್ ಚೆನ್ನಿಗರಾಯರು ಏನೂ ಅರ್ಥವಾಗದೆ ಆಕೆಯನ್ನು ಪಿಳಪಿಳನೆ ನೋಡುತ್ತಾ ಕೂತುಬಿಟ್ತರು. ಆಕೆಯೇ ಮಾತನಾಡಿದರು: ‘ಆ ಜೋಯಿಸ ಮುಂಡೇಗಂಡ ದೂರದ ಗುರುತಿನೋನು ಅಂತ ನಂಬಿದ್ರೆ ಗಂಡು ಗೊತ್ತು ಮಾಡಿ ಕೊಡ್ತೀನಿ ಅಂತ ನನ್ನ ಹತ್ರ ಇಪ್ಪತ್ತು ರೂಪಾಯಿ ಕಿತ್ತು ನಿಮ್ಮಂತ ನಾಮರ್ದ್ ಮುದುಕನ್ನ ತೋರಿಸಿ ಮೋಸ ಮಾಡಿಬಿಟ್ಟ. ನಂಗೆ ಸದ್ಯಕ್ಕೆ ಒಬ್ಬ ಪುಣ್ಯಾತ್ಮರು ಎಲ್ಲಾ ಮೊದ್ಲೇ ಹೇಳಿದ್ರು.’
‘ನನನನನ್ನ ತತಪ್ಪೇನು ಹ್ಯೇ ಹ್ಯೇ ಹ್ಯೇಳಿ ಅಮ್ಮ’- ಇವರಿ ಧೈರ್ಯ ತಂದುಕೊಂಡು ಕೇಳಿದರು.
‘ಏನು ತಪ್ಪೆ? ಮೊದಲ ಹೆಂಡ್ತೀನ ಹ್ಯಾಗೆ ಬಾಳಿಸಿದ್ರಿ ನೀವು? ಎಲೆ ಹಚ್ಚಿ ಜೀವನ ಮಾಡ್ಳಿಲ್ವೆ ಅವಳು? ಶ್ಯಾನುಭೋಗಿಕೆ ಲೆಕ್ಕ ಅವ್ಳು ಬರಿಯೂಹೊತ್ತಿಗೆ ನಡೀತಂತೆ. ನಮ್ಮ ಹುಡುಗಿಗೆ ಅದೆಲ್ಲ ಬರುಲ್ಲ. ನಿಮಗೆ ಊರಲ್ಲಿ ಹೊಲ ಎಲ್ಲಿದೆ? ಮನೆಯೂ ಮೊದಲನೆ ಹೆಂಡ್ತಿ ಕಟ್ಸಿರೂದಂತೆ. ಅವಳ ಹೆಸರಲ್ಲಿರೂ ಮನೆ ಅವಳ ಮಗುಂಗೆ ಹೋಗುತ್ತೆ. ನಿಮಗಿರೋನು ಒಬ್ಬನೇ ಮಗ ಅಂತ ಹೇಳಿದ್ರಲಾ, ಹೋದ ವರ್ಷ ಮುಂಜಿಯಾದ ಮಗ ಮದುವೆಯಾದ ಮಗಳು ಸತ್ತಿದ್ದು ಸುಳ್ಳೆ?’
‘ಯ್ಯಾ ಯ್ಯಾ ಯ್ಯಾರೇಳಿದ್ರಮ್ಮ ನಿಮಗೆ ಇ ಇದೆಲ್ಲಾ?’
‘ಯಾರು ಹೇಳಿದ್ರು? ನಿಮ್ಮೂರೋರೇ ಒಬ್ರು ಜಂಗಮಯ್ಯ್ನೋರು ಮುದುಕ್ರು ಹೇಳಿದ್ರು. ನಮ್ಮನೆಗೇ ಬಂದಿದ್ರು. ಅದೆಲ್ಲ ಸುಳ್ಳೋ ನಿಜವೋ ಹೇಳಿ. ನಿಮ್ಮ ವಯಸ್ಸು ಮೂವತ್ತೆರಡೇ? ನಿಜ ಹೇಳಿ.
‘ಎಲಾ, ಅವನವ್ವನ’-ಎನ್ನುವಾಗ ಶ್ಯಾನುಭೋಗರಿಗೆ ತಕ್ಷಣ ಮಾದೇವಯ್ಯನವರ ನೆನಪಾಗಿ ಪ್ರಚಂಡ ಕೋಪ ಬಂತು.
‘ನಿಮ್ಮ ಬಾಯ್ಲಿ ಹೊರಡೂ ಮಾತು ನೋಡಿ. ಮೊದಲ ಹೆಂಡ್ತಿ ಹತ್ರ ನೀವು ಹೀಗೇ ಮಾತಾಡ್ತಾ ಇದ್ರಂತೆ. ನಿಮ್ಮಂಥೋರಿಗೆ ಒಂದು ಲೋಟ ಗಂಗೋದಕನೂ ಕೊಡಬಾರ್‌ದು. ಎದ್ಹೋಗಿ ಇಲ್ಲಿಂದ.’

ಚೆನ್ನಿಗರಾಯರು ಎದ್ದು ಹೊರಗೆ ಬಂದರು. ಆ ಊರಿನಲ್ಲಿ ಇನ್ನೆಲ್ಲಿಯೂ ಕುಳಿತುಕೊಳ್ಳಲು ಭಯವಾಗಿ ಸೀದಾ ತಿಪಟೂರಿಗೆ ಬಂದರು. ‘ಈ ಮಾದೇವಯ್ಯ, ಅವನವ್ವನ ಅವನಿಗೇನು ಬಂದಿತ್ತು ಹೀಗೆ ಈ ಊರಿಗೆ ಬಂದು ಚಾಡಿ ಹೇಳುಕ್ಕೆ? ಸಾವಿರ ಸುಳ್ಳು ಹೇಳಿ ಒಂದು ಕಲ್ಯಾಣ ಮಾಡ್ಸ್ಬೇಕು. ಈ ಮುದುಕ, ಆಗೂ ಮದ್ವಿಗೆ ವಿಗ್ನ ಮಾಡಿದ್ನಲ, ಇವನ ವಂಶ ಹಾಳಾಗ’ ಎಂದು ಬೈದುಕೊಳ್ಳುತ್ತಾ ಹೋಟೆಲಿಗೆ ಹೋಗಿ ಊಟಕ್ಕೆ ಕೂತರು. ತಕ್ಷಣ ಊರಿಗೆ ಹೋಗಬೇಕೆನಿಸಲಿಲ್ಲ. ಹಸು ಮಾರಿ ಮದುವೆಗೆಂದು ಇಟ್ಟುಕೊಂಡಿದ್ದ ದುಡ್ಡಿನಲ್ಲಿ ತೊಂಬತ್ತು ರೂಪಾಯಿ ಉಳಿದಿತ್ತು. ಸುಖವಾಗಿ ಇಪ್ಪತ್ತು ದಿನಗಳು ತಿಪಟೂರಿನಲ್ಲಿಯೇ ಇದ್ದರು. ದಿವಾನ್ ಛತ್ರದ ಜಗುಲಿಯಿತ್ತು. ಊರು ತುಂಬ ಹೋಟೆಲುಗಳಿದ್ದವು.

ಕೈಲಿ ಕಾಸು ಮುಗಿದಮೇಲೆ ಊರಿಗೆ ಹೋಗುತ್ತಾರೆ: ಅಷ್ಟರಲ್ಲಿ ಮುಂಗಾರು ಮಳೆ ಬಿದ್ದಿದೆ. ಜನಗಳೆಲ್ಲ ಶೆಡ್ಡು ಬಿಟ್ಟು ಊರಿಗೆ ಹೋಗಿದ್ದಾರೆ. ತಾವು ಯಾವ ಮನೆಗೆ ಹೋಗಬೇಕೆಂಬುದು ಗೊತ್ತಿಲ್ಲ ನೇರವಾಗಿ ಅಮ್ಮನ ಮನೆಯಾದ ಹನುಮಂತರಾಯನ ಗುಡಿಗೆ ಹೋದರು. ಗಂಗಮ್ಮ ಎಂದಳು: ‘ನಿನ್ನ ಶ್ಯಾನುಬಾಕಿ ಹೋಯ್ತಲ್ಲೋ ಮುಠಾಳ ಸೂಳೇಮಗನೆ?’
‘ಎಲ್ಲಿಗೆ ಹೋಯ್ತಮ್ಮ?’
‘ನಿನ್ನ ಹೆಂಡ್ತಿ ಸತ್ತಾಗ್ನಿಂದ ಲೆಕ್ಕ ಬರ್ದಿರ್ಲಿಲ್ಲ. ಈಗ ಎರಡು ಕಂತಾದ್ರೂ ಪಟೇಲನಿಗೆ ವಸೂಲಿಪಟ್ಟಿ ಕೊಟ್ಟಿಲ್ಲ. ಹಾಗಂತ ಶೇಕ್‌ದಾರ್ರು ಬಂದ್ರೆ ನೀನು ಊರಲ್ಲೇ ಇಲ್ಲ. ಪಟೇಲ ಶಿವೇಗೌಡ, ಶಿವಲಿಂಗ, ಇಬ್ರೂ ಹೋಗಿ ಅಮಲ್‌ದಾರ್ ಧಣಿಗಳನ್ನ ಕಂಡ್ರಂತೆ. ಶೇಕ್‌ದಾರ್ರು ಪೀಲೀಸ್ನೋರುನ್ನ ಕರ್ಕಂಡ್ ಬಂದು ಗುಂಡೆಗೌಡನ ಮನೆ ಬಾಗಿಲು ಬೀಗ ಒಡೆಸಿ ಪುಸ್ತಕ ಎಲ್ಲ ಶಿವಲಿಂಗುಂಗೆ ಕೊಡಿಸಿದ್ರು. ಈಗ ಅವ್ನೇ ಶ್ಯಾನ್‌ಬಾಗ.’
ಚೆನ್ನಿಗರಾಯರು ಸತ್ತ ಹೆಣದಂತೆ ಕಣ್ಣು ಅಗಲಿಸಿ ಕೂತುಬಿಟ್ಟರು.
‘ನಾನೀಗ ಬಂದಿದೀನಿ. ನನ್ನ ಶ್ಯಾನುಬಾಕಿ ನಂಗೆ ಕೊಡ್ಸಿ ಮಾಸ್ವಾಮಿ ಅಂತ ಕೇಳ್ಕ ಹೋಗೋ.’
ಯಾರನ್ನ ಕೇಳುವುದು? ಎಷ್ಟು ದಿನ ಎಲ್ಲಿಗೆ ಹೋಗಿದ್ದೆ ಅಂದ್ರೇನು ಹೇಳೂದು? ಅಲ್ಲದೆ ಲೆಕ್ಕ ಬರೆಯೂರು ಯಾರು? ಈ ದಿನಸಿ ಲೆಕ್ಕ, ಇದರವ್ವನಾ, ಬಲು ತರಲೆ. ಅವರಿಗೆ ಒಂದು ಉಪಾಯ ಹೊಳೆಯಿತು. ಅವರೇ ಎದ್ದು ಶಿವಲಿಂಗನ ಮನೆಗೆ ಹೋದರು. ಶ್ಯಾನುಭೋಗ ಶಿವಲಿಂಗ ಹಳೇ ಲೆಕ್ಕ ಬಲ್ಲ. ಹೊಸ ದಿನಸಿ ಲೆಕ್ಕ ಅವನಿಗೂ ಕಷ್ಟವೇ. ಕಂಬನಕೆರೆಯ ಶ್ಯಾನುಭೋಗರಿಂದ ಹೇಳಿಸಿಕೊಂಡು ಬಂದು ಅದರಂತೆ ಬರೆಯುತ್ತಾ ಕುಳಿತಿದ್ದ.
‘ಏನಯ್ಯಾ ಬಂದೆ?’-ಶ್ಯಾನುಭೋಗಿಕೆಯ ಗತ್ತಿನಲ್ಲಿ ಅವನು ಕೇಳಿದ.
‘ಸಿವಲಿಂಗೇಗೌಡ್ರೇ, ನನ್ನ ಶ್ಯಾನುಭೋಗಿಕೆ ಮೊದ್ಲು ನೀವು ನೋಡ್ತಿದ್ರಿ. ಈಗಲೂ ನೋಡ್ಕಳಿ. ವರ್ಷಕ್ಕೊಂದು ಸಲ ಪೋಟಿಗೇಲಿ ಏನು ಕೊಡ್ತೀರಿ ಅಂತ ಒಂದು ಮಾತು ಗಟ್ಟಿಮಾಡಿ.’
‘ಶ್ಯಾನುಬಾಕಿ ನೀನೇನು ನಂಗೆ ಕೊಟ್ಟಿಲ್ಲ ಹ್ವಾಗಯ್ಯಾ. ಸರ್ಕಾರಿ ತರಫ್ ಬಂದೈತೆ.’
‘ಹಾಗಾದ್ರೆ ಏನೂ ಕೊಡುಲ್ವೆ?’
‘ಒಂದು ಕೂದ್ಲೂ ಕೊಡಾಕುಲ್ಲ. ಎದ್ಹೋಯ್ತೀಯೋ ಕುಳವಾಡಿ ಕರಸಿ ನಿನ್ನ ಕುತ್ತಿಗೆ ಹಿಡಿದು ಆಚಿಗ್ ನೂಕುಸ್ಲೋ?’
ಅವರಿಗೆ ಅಪಮಾನವೆನಿಸಿತು. ‘ನಿನ್ನವ್ವನ’-ಎನ್ನಬೇಕೆಂದು ಬಾಯಿಗೆ ಬಂತು. ಆದರೆ ಸಿವಲಿಂಗ ಕುಳುವಾಡಿ ಕರೆಸಿ ಏನಾದರೂ ಮಾಡಿಸಿಯಾನೆಂಬ ಹೆದರಿಕೆಯಾಗಿ ಸುಮ್ಮನೆ ಬಂದುಬಿಟ್ಟರು. ಸಿಟ್ಟಿನಿಂದ ಮೈ ಎಲ್ಲ ಉರಿಯುತ್ತಿತ್ತು.

ದಾರಿಯಲ್ಲೇ ಮಾದೇವಯ್ಯನವರ ಗುಡಿ. ಅಯ್ಯನವರು ಜಗುಲಿಯ ಮೇಲೆ ಕೂತು ಹೊಗೆಸೊಪ್ಪು ತಿಕ್ಕುತ್ತಿದ್ದರು. ಅವರನ್ನು ಕಂಡ ತಕ್ಷಣ ಚೆನ್ನಿಗರಾಯರ ಸಿಟ್ಟೆಲ್ಲ ಎದ್ದು ನಿಂತಿತು. ತಾವೂ ಜಗುಲಿಯ ಮೇಲೆ ಬಂದು ಕೂರು ಕೇಳಿದರು: ‘ಅಯ್ನೋರೇ. ನೀವು ನ್ಯಾಯಸ್ಥರು ಅಂತ ಮಾಡಿದ್ದೆ. ಹಿಂದುಗಡೇಲೇ ಚಾಡಿ ಹೇಳೂದು ಎಷ್ಟು ದಿನದಿಂದ ಕಲ್ತ್‌ಕಂಡ್ರಿ?’
‘ನಿಮ್ಮ ಮದುವೆಗೆ ಏಟು ಬಿತ್ತು ಅಂತ ಹೀಗಂತೀರಾ?’
ಅವರು ಸ್ವಲ್ಪವೂ ತಾಳ್ಮೆಗೆಡದೆ ಶಾಂತವಾಗಿ ಕೇಳಿದ ರೀತಿಗೆ ಇನ್ನಷ್ಟು ಸಿಟ್ಟು ಬಂತು. ‘ಹೂಂ’- ಎಂದರು.
ಸ್ವಂತ ಲೆಕ್ಕ ಬರ್ದು ಶ್ಯಾನುಬಾಕಿ ಮಾಡ್ತೀರಾ? ಜಮೀನಿನಲ್ಲಿ ಬತ್ತೈತಿ ಅನ್ನಾಕೆ ಹ್ವಲ ಪಲ ಐತಾ? ಮನೆ ನಂಜವ್ವನ ಹೆಸರಲ್ಲೈತಿ. ಅದು ಏನಿದ್ರೂ ವಿಶ್ವಣ್ಣಂಗೆ ಸೇರ್ತೈತೆ. ನಿಮಗಾಗಿರೋ ವಯಸ್ಸೇಟು? ಆ ಚಿಕ್ಕ ಹುಡುಗೀನ ಹ್ಯಂಗೆ ಬಾಳುಸ್ತಿದ್ರಿ?’
‘ನಾಕು ಮನ್ಲಿ ತಿರಕಂಡು ತಂದು ಸಾಕ್ತಿದ್ದೆ ಕಣ್ರೀ.’
‘ನಂಜವ್ವ ಇದ್ದಾಗ ಸಾಕಿದ್ದು ನಾವೆಲ್ಲ ನೋಡ್ಳಿಲ್ವಾ? ಯಲಾರು ನಂಜವ್ವನ ಹಂಗೇ ಇರಾಕಿಲ್ಲ. ನಿಮ್ಮ ಹೊಸ ಹೆಂಡ್ತಿ ಊರಾಚೆ ಅಂಗ್ಡಿ ನರಸವ್ವನ ಹಂಗೆ ಆದ್ರೆ ಏನು ಮಾಡ್ತೀರಾ?’
ಚೆನ್ನಿಗರಾಯರಿಗೆ ಉತ್ತರ ತಿಳಿಯಲಿಲ್ಲ. ಆದರೆ ಸಿಟ್ಟು ಮಾತ್ರ ಸ್ವಲ್ಪವೂ ಇಳಿದಿರಲಿಲ್ಲ. ಅಯ್ಯನವರೇ ಎಂದರು: ‘ನಿಮ್ಮ ಸ್ವಭಾವ ನೀವು ತಿಳ್ಕಳಿ. ನಿಮ್ಮ ಕೈಲಾಗುದ್ದು ಯಾಕೆ ಬೇಕು? ಸುಮ್ಕೆ ಸನ್ಯಾಸಿ ಹಂಗೆ ಇದ್ಬುಡಿ. ಇನ್ನೇನಾರಾ ಮಾಡಬೇಕಾಗಿದ್ರೆ ವಿಶ್ವಣ್ಣಂಗೆ ಮಾಡಿ. ಈಗ ಎಲ್ಲಿ, ಸಿವೇಗೌಡ್ರ ಮನೆಗೆ ಹ್ವಾಗಿದ್ರಾ? ಏನಂದ್ರು ಅವ್ರು?’
‘ಅವನವ್ವನಾ, ಪೋಟಿಕೆ ದುಡ್ಡು ಏನೂ ಕೊಡುಲ್ಲ ಅಂದ.’
ಅಯ್ಯನವರು ಮತ್ತೆ ಏನೂ ಕೇಳಲಿಲ್ಲ. ಪಟೇಲ ಶಿವೇಗೌಡನಿಗೆ ಈಗ ಹೆಚ್ಚು ಕಮ್ಮಿ ತಮ್ಮಷ್ಟೇ ವಯಸ್ಸು. ಸಿವಲಿಂಗೇಗೌಡ ಅವನಿಗಿಂತ ಹತ್ತು ವರ್ಷಕ್ಕೆ ಚಿಕ್ಕವನಿರಬಹುದು. ಅವರಿಬ್ಬರಿಗೂ ಆಯಸ್ಸು ಕಡಿಮೆಯಾಗುವುದೇ ಇಲ್ಲ. ಪ್ರಪಂಚ ಹೀಗೆಯೇ ಇರ್ತೈತೇನೋ-ಎಂದು ಅವರು ಯೋಚಿಸತೊಡಗಿದರು. ಚೆನ್ನಿಗರಾಯರು ಅಯ್ಯನವರ ಚೀಲದಿಂದ ತೆಗೆದುಕೊಂಡು ಎಲೆ ಅಡಿಕೆ ಹೊಗೆಸೊಪ್ಪು ಅಗಿದು ತಾಯಿಯ ಮನೆಗೆ ಹೋದರು.

ಚೆನ್ನಿಗರಾಯರು ಮತ್ತೆ ಎಂಟು ದಿನ ಊರಿನಲ್ಲಿದ್ದರು. ಅಷ್ಟರಲ್ಲಿ ಉಳಿದಿದ್ದ ಒನ್ನೊಂದು ಹಸು, ಮನೆಯಲ್ಲಿದ್ದ ಪಾತ್ರೆ ಪಡಗಗಳನ್ನೆಲ್ಲ ಮಾರಿಹಾಕಿದರು. ನಂಜಮ್ಮನ ಓಲೆ ಮೂಗುಬಟ್ಟುಗಳನ್ನು ಕಾಶಿಂಬಡ್ಡಿಗೆ ಸೀಯ್ದರು. ಆಮೇಲೆ ಎರಡು ತಿಂಗಳು ಊರಿನಲ್ಲೇ ಇರಲಿಲ್ಲ.

ಜೀವನದಲ್ಲಿ ಏನುಂಟು? ಮಾದೇವಯ್ಯನವರಂತೆ ತಾವೂ ಸನ್ಯಾಸಿಯಾಗಿ ಇರಬೇಕೆಂದು ನಿಶ್ಚಯಿಸಿದ ಅವರು ಊರೂರು ಸುತ್ತಿಕೊಂಡು ಮಾಲೆಕಲ್ಲು ತಿರುಪತಿಗೆ ಹೋದರು. ಅರಸೀಕೆರೆಯಿಂದ ಕೊಂಡು ತಂದಿದ್ದ ಕಾವಿಬಣ್ಣದ ಪಂಚೆ ಶರಟುಗಳನ್ನು ಹಾಕಿಕೊಂಡು ತಿಮ್ಮಪ್ಪನ ಮುಂದೆ ಅಡ್ದಬಿದ್ದು, ಮನಸ್ಸಿನಲ್ಲೆ ಸನ್ಯಾಸ ಸ್ವೀಕಾರ ಮಾಡಿದರು. ಸಂಜೆಯ ವೇಳೆಗೆ ಹಸಿವಾಯಿತು. ಬೆಟ್ಟದಮೇಲೆ ಸನ್ಯಾಸಿಗೆ ಭಿಕ್ಷೆ ನೀಡುವ ಸಂಸಾರಿಗಳಿಲ್ಲ. ಬೆಟ್ಟವನ್ನಿಳಿದು ಹತ್ತಿರದ ಒಂದು ಹಲ್ಳಿಗೆ ಹೋಗಿ ಭಿಕ್ಷೆಮಾಡಿ ಅನ್ನ ಎಸರು ಮುದ್ದೆಗಳನ್ನು ಉಂಡರು. ಮಲಗಲು ಇವರು ಜಗುಲಿಯ ಮೇಲೆ ಜಾಗ ಕೇಳಿದ ಮನೆಯ ಗೌಡ ವೀಳ್ಯದೆಲೆ, ಅಡೆಕೆ, ಹೊಗೆಸೊಪ್ಪು ಕೊಟ್ಟ. ಸನ್ಯಾಸ ಕೆಟ್ಟದ್ದೇನೂ ಅಲ್ಲವೆನಿಸಿತು.

ಆದರೆ ಎರಡು ತಿಂಗಳಿನಲ್ಲಿ ಆ ಜೀವನ ಬೇಸರ ಬಂದುಬಿಟ್ಟಿತು. ಮೇಟಿಕುರಿಕೆ, ಕಣಕಟ್ಟೆ, ಹುಳಿಯಾರು, ಬೂದಾಳು ಸುತ್ತುಗಳಲ್ಲಿ ಎರಡು ತಿಂಗಳು ಸಂಚರಿಸಿ ಊರೂರಿನಲ್ಲಿ ಮಾಡಿದ ಅಡಿಗೆಯ ಭಿಕ್ಷೆ ಎತ್ತಿ ಉಣ್ಣುವುದರಲ್ಲಿ ಅವರಿಗೆ ಸಾಕಾಗಿಹೋಯಿತು. ದಿನಾ ಒಂದೊಂದು ಊರು ಸುತ್ತಬೇಕು. ಸನ್ಯಾಸಸ್ವೀಕಾರ ಮಾಡಿದಮೇಲೆ ಅವರು, ತಾವು ಬ್ರಾಹ್ಮಣರೆಂಬ ಮಡಿಯನ್ನು ಬಿಟ್ಟು ಎಲ್ಲ ಜಾತಿಯ ಮನೆಗಳಲ್ಲೂ ಉಣ್ಣುತ್ತಿದ್ದರು. ಕೆಲವು ಮನೆಗಳವರು-‘ಗೇಯ್ಕಂಡ್ ತಿನ್ನಕ್ ಆಗಾಕುಲ್ವೇನಯ್ಯ?’ ಎಂದು ಮುಖಕ್ಕೆ ಹೊಡೆದಂತೆ ಎಂದುಬಿಡುತ್ತಿದ್ದರು.
ಬೇಸತ್ತ ಅವರು ಒಂದು ದಿನ ಊರಿಗೆ ಹೋಗಬೇಕೆಂದು ನಿಶ್ಚಯಿಸಿದರು. ಆದರೆ ಊರಿನಲ್ಲಾದರೂ ಯಾರುಂಟು? ಏನುಂಟು? ಹೆಂದತಿ ಎನ್ನಿಸಿಕೊಂಡಿದ್ದ ‘ಆ ಮುಂಡೆ’ ಬದುಕಿದ್ದರೆ ಚನ್ನಾಗಿತ್ತು. ಯಾರಿಲ್ಲದಿದ್ರೂ ಬ್ಯಾಡ, ನಮ್ಮಮ್ಮ ನನ್ನ ಕೈಬಿಡುಲ್ಲ ಎಂದು ಯೋಚಿಸಿದ ಅವರು, ದಾರಿ ಕೇಖಿಕೊಂಡು ಹಾಲುಕುರಿಕೆಯ ಮಾರ್ಗವಾಗಿ ತಿಪಟೂರಿಗೆ ಬಂದು ಅಲ್ಲಿಂದ ಊರು ಮುಟ್ಟಿದರು.

ಗಂಗಮ್ಮ ಹನುಮಂತರಾಯನ ಗುಡಿಯಲ್ಲೆ ಇದ್ದಳು. ಈಗ ಅವಳೂ ಒಬ್ಬಳೇ ಹಳ್ಳಿಗಳಿಗೆ ಹೋಗಬೇಕು. ಅವಳು ತಿರಿಯಬಲ್ಲಳೇ ಹೊರತು ತಿರಿದುದನ್ನು ಹೊರಲಾರಳು. ತಾನು ಮೆಚ್ಚಿದ ಕಂದ ಅಪ್ಪಣ್ಣಯ್ಯ ಇನ್ನು ಹತ್ತಿರ ಬರುವಂತೆ ಕಾಣಿಸುವುದಿಲ್ಲ. ನನ್ನ ಅದೃಷ್ಟ ಕೆಟ್ಟದ್ದು, ಶನಿಮಾರಾಯ ಹೆಗಲೇರಿದಾನೆ-ಎಂದು ಕೊರಗುತ್ತಿದ್ದ ಅವಳ ಗುಡಿಯ ಮುಂದೆ ಒಂದು ದಿನ ಹಿರಿಯ ಮಗ ಶ್ಯಾಭೊಗ ಚೆನ್ನಿಗರಾಯ ಸನ್ಯಾಸಿ ವೇಷದಲ್ಲಿ ಬಂದುನಿಂತ. ಕೊಳೆಯಾದ ಕಾವಿ ಪಂಚೆ, ಇನ್ನೂ ಕೊಳೆಟ್ಟಿದ ಅಂಗಿ, ಮಾದೇವಯ್ಯನವರಂಥದೇ ವೇಷ. ಮಾದೇವಯ್ಯನವರು ತಲೆ ಗಡ್ಡಗಳನ್ನು ಶುಭ್ರವಾಗಿ ಬೋಳಿಸಿಕೊಳ್ಳುತ್ತಿದ್ದರು. ಆದರೆ ಅವಳ ಈ ಮಗನ ತಲೆ ಬೆಳೆದು ಇಳಿದಿದೆ. ಗಡ್ದ ಬಿಳಿಕಪ್ಪುಗಳ ನೊದೆಯಾಗಿದೆ. ಒಂದು ನಿಮಿಷ ಅವಳಿಗೆ ಗುರುತು ಸಿಕ್ಕಲಿಲ್ಲ. ಆಮೇಲೆ ಅವಳೇ-‘ಇದೇನೋ ಸೂಳೇಮಗನೆ ಹೀಗಾಗಿದೀಯಾ?’ ಎಂದು ಅಂತಃಕರಣ ತುಂಬಿಬಂದು ಕಣ್ಣೀರುಹಾಕಿದಳು.
ಇನ್ನೇನಿದೆಯಮ್ಮ ಜೀವನದಾಗೆ? ಯಾರಿದಾರೆ ನಂಗೆ? ಅದ್ಕೇ ಯಾವ್ದೂ ಬ್ಯಾಡ ಅಂತ ಸನ್ಯಾಸಿಯಾಗ್ಬಿಟ್ಟೆ.’
‘ಥೂಮುಂಡೇಮಗನೆ, ಬಿಡ್ತು ಅನ್ನೋ. ನಾನೇನ್ ಸತ್ಹೋಗಿದೀನೇನೋ? ಯಾರಾದ್ರೂ ನೋಡಿಯಾರು. ಒಳಕ್ಕೆ ಬಾ. ಆ ಕಾವಿಶಾಟಿ ಕಿತ್‌ಹಾಕಿ ಬ್ಯಾರೆಪಂಚೆ ಸುತ್ಕ. ನಾಳೆ ದಿನ ರುದ್ರಣ್ಣನ ಕರೆಸಿ ಚೌರ ಮಾಡಿಸ್ಕಳೂವಂತೆ.’
ಚೆನ್ನಿಗರಾಯರು ಸನ್ಯಾಸವನ್ನು ತ್ಯಜಿಸಿದರು.

ತಾಯಿ ಮಗ ಒಂದಾದರು. ಇವರಿಗೆ ಅಪ್ಪಣ್ಣಯ್ಯನಂತೆ ದೊಡ್ದ ಹೊರೆ ಹೊರುವ ಅಭ್ಯಾಸವಿಲ್ಲ. ಆದರೂ ತಾಯಿಗೆ ಒಂದು ಆಸರೆ ಸಿಕ್ಕಿತು. ಅವಳು ಹಳ್ಳಿಗಳಿಗೆ ಮನೆಮನೆಗೆ ಹೋಗಿ ದೇಶಾವರಿ ಮಾಡುವಾಗ ಇವರು ಯಾರ ಮನೆಯ ಜಗುಲಿಯ ಮೇಲಾದರೂ ವೀಳ್ಯದೆಲೆ ಹೊಗೆಸೊಪ್ಪು ಹಾಕಿ ಬಾಯಿತುಂಬ ತಂಬುಲದ ರಸವನ್ನು ಆನಂದಿಸುತ್ತಿದ್ದರು.

ಹೇಗೂ ನಂಜಮ್ಮ ಕಟ್ಟಿದ್ದ ಮನೆಯಿತ್ತು. ಗುಡಿಯಲ್ಲಿದ್ದರೆ ದಿನಾ ಪೂಜೆ ಮಾಡಬೆಕು. ಪೌಳಿಯನ್ನೂ ಸೇರಿಸಿ ಗುಡಿಸಿ ತೊಳೆದು ಶುಭ್ರವಾಗಿಡಬೇಕು. ಆದುದರಿಂದ ತಾಯಿ ಮಗ ಇಬ್ಬರೂ ಸೇರಿ ಹೊಸ ಮನೆಗೆ ಕೆಮ್ಮಣ್ಣು ಗಾಜು ಮಾಡಿಸಿ ಬಾಗಿಲಿಗೆ ಕದ, ಚಿಲಕ, ಹಾಕಿಸಿದರು. ಒಂದು ದಿನ ಗಂಗಮ್ಮನೇ ಹೊಸಮನೆಯ ಒಳಗಡೆ ಹಾಲು ಉಕ್ಕಿಸಿದಳು. ಜೋಯಿಸದ್ವಯರನ್ನು ಕರೆಸಿ. ‘ಸ್ವಸೆ ಸತ್ತು ವರ್ಷ ತುಂಬಿಲ್ಲ. ಹ್ವಸಮನೆಗೆ ಹೋಗೂ ಸಾಸ್ತ್ರ ಮಾಡೂಹಾಗಿಲ್ಲ. ಇದ ಒಪ್ಕಾಬೇಕು. ನಾನು ಬಡಮುಂಡೆ’-ಎಂದು ಪಾಯಸದ ಅಡಿಗೆ ಮಾಡಿ ಹಾಕಿ, ತಲಾ ಎರಡೆರಡು ರೂಪಾಯಿ ದಕ್ಷಿಣೆ ಕೊಟ್ಟು ಅಡ್ಡಬಿದ್ದಳು.

ಇದುವರೆಗೂ ನಂಜಮ್ಮ ವಾಸವಾಗಿದ್ದ ಗುಂಡೇಗೌಡರ ಮನೆಯಲ್ಲಿ ಯಾರೂ ಇಲ್ಲ. ರಾಮಸಂದ್ರದ ಕುರುಬರಹಟ್ಟಿ ಮುದ್ದಯ್ಯ ಗುಂಡೇಗೌಡರ ನೆಂಟ. ತಾನು ಉಪಯೋಗಿಸುವುದಾಗಿ ಗುಂಡೇಗೌಡರ ಮಗನಿಗೆ ಹೇಳಿ ಮನೆಯ ಬೀಗದ ಕೈ ತಂದ. ಆದರೆ ಸಾಲಾಗಿ ಮೂರು ಜನರನ್ನು ಮಾರಿ ಆಹುತಿ ತೆಗೆದುಕೊಂಡ ಆ ಮನೆಗೆ ಬರಲು ಶಂಕೆಯಾಗಿ, ಸರಿಯಾದ ಜೋಯಿಸರಿಂದ ಕಾವು ಕಟ್ಟಳೆ ಮಾಡಿಸುವ ತನಕ ತನ್ನ ಹಳೇ ಮುರುಕಲು ಮನೆಯಲ್ಲೇ ಇರಲು ನಿಶ್ಚಯಿಸಿ, ಆ ಮನೆಗೆ ಬೀಗ ಹಾಕಿಕೊಂಡ.

ಅಧ್ಯಾಯ ೧೬
– ೧ –

ಮಾದೇವಯ್ಯನವರು ಈ ಊರಿಗೆ ಬಂದು ನಲವತ್ತೈದು ವರ್ಷದಮೇಲೆ ಆಗಿದೆ. ಯಾರ ಪರಿಚಯವೂ ಬೇಡ., ಯಾರ ಸ್ನೇಹವೂ ಬೇಡ ಎಂಬ ರೀತಿಯಲ್ಲಿ ಅವರು ಇಲ್ಲಿ ತಮ್ಮ ಜೀವನವನ್ನು ಪ್ರಾರಂಭಿಸಿದ್ದರು. ಆದರೆ ದಿನ ಕಳೆದಂತೆ ಹತ್ತು ಜನರ ಪರಿಚಯವಾಯಿತು; ಸುತ್ತ ಎಷ್ಟೋ ಹಲ್ಳಿಗಳ ಹುರುತಾಯಿತು. ಯಾರ ತಂಟೆಗೂ ಹೋಗದೆ, ಯಾರೊಡನೆಯೂ ಅಂಟದೆ ಇರುತ್ತಿದ್ದ ಅವರಿಗೆ ಇಲ್ಲಿ ಬೇಸರವಾಗುವ ಕಾರಣವಿರಲಿಲ್ಲ. ಯಾವ ಊರಿನಲ್ಲಿದ್ದರೂ ಕಹಿ ಅನುಭವವಾಗುವ ಪ್ರಸಂಗ ಹುಟ್ಟಬೇಲಿರಲಿಲ್ಲ. ಅಂದರೂ ಒಂದು ಸಲ ಬೇಸರವಾಗಿ ಈ ಊರು ಬಿಟ್ಟು ಕಾಶಿಗೆ ಹೊರಟುಹೋಗಿದ್ದರು. ಎಷ್ಟೇ ಪುಣ್ಯನಗರಿಯಾದರೂ ಅದು ಹೊಂದದೆ ಮತ್ತೆ ಈ ಊರಿಗೆ ಬಂದರು. ಮತ್ತೆ ಯಾಕೆ ಹಿಂತಿರುಗಿದೆ, ಅಲ್ಲಿ ಇಲ್ಲದ್ದು ಈ ಊರಿನಲ್ಲಿ ಏನಿತ್ತು ಎಂದು ಅವರು ಎಷ್ಟೋ ಸಲ ತಮ್ಮಲ್ಲಿಯೇ ಯೋಚಿಸಿದ್ದುಂಟು. ಹವ ಹಿಡಿಯಲಿಲ್ಲವೆಂಬುದು ನಿಜವಾದರೂ ಅದೊಂದೇ ಕಾರಣದಿಂದ ಅವರು ಕಾಶಿಯನ್ನು ಬಿಡಲಿಲ್ಲ. ಅಲ್ಲಿಯ ಭಾಷೆ ಹಿಂದಿ ಅವರಿಗೆ ಗೊತ್ತಿದ್ದುದೇ. ಜಂಗಮವಾಡಿ ಮಠದಲ್ಲಿ ಊಟ ವಸತಿ ಎಲ್ಲದಕ್ಕೂ ಅನುಕೂಲವಾಗಿತ್ತು. ಇಪ್ಪತ್ತನಾಲ್ಕು ಗಂಟೆ ಬೇಕಾದರೂ ಭಜನೆ ಮಾಡಲು, ಭಜನೆ ಕೇಳಲು ಕಾಶಿಗಿಂತ ಅನುಕೂಲವಾದ ಬೇರೆ ಯಾವ ಊರೂ ಇಲ್ಲ. ಆದರೂ ಮತ್ತೆ ರಾಮಸಂದ್ರಕ್ಕೆ ಹೋಗಬೇಕೆಂಬ ಆಶೆ ಹುಟ್ಟಿತು. ಹಲವು ವರ್ಷಗಳಿಂದ ಕಳೆದ ಆ ಊರಿನ ಗುಡಿ, ಬೀದಿ, ಕೆರೆ, ಏರಿ, ಸುತ್ತಣ ಹಳ್ಳಿಗಳು ಅವರ ಚಿತ್ತವನ್ನು ಎಳೆದುವೋ, ಅಥವಾ ಆ ಊರಿನ ಜನರು ಅವರ ನೆನಪನ್ನು ಆಕ್ರಮಿಸಿದರೋ ಅವರಿಗೇ ತಿಳಿಯಲಿಲ್ಲ. ಅಂತೂ ಹಿಂತಿರುಗಿ ಬಂದರು.

ಬಂದಮೆಲೆ ಇಲ್ಲಿಗೇ ಒಗ್ಗಿಹೋಗಿದ್ದರು. ಸುತ್ತ ಊರಿನಲ್ಲಿ ಭಿಕ್ಷೆ ಮಾಡುವುದು, ಹಲ ಕೆಲವರಿಗೆ ತಮ್ಮ ಕೈಲಾದ ಸಹಾಯ ಮಾಡುವುದು, ಭಜನೆ ಇಷ್ಟರಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ಇತ್ತೀಚೆಗೆ ಹೊತ್ತು ಹೋಗುವುದೇ ಕಷ್ಟವಾಗಿದೆ. ಇಲ್ಲಿ ತನಗೆ ಯಾರೂ ಇಲ್ಲವೆಂಬ ಭಾವನೆ ಆಕ್ರಮಿಸಿಬಿಟ್ಟಿದೆ. ಹೇಳಿ ಕೇಳಿ ನಾನೊಬ್ಬ ಸನ್ಯಾಸಿ. ಮೊದಲುತಾನೆ ಯಾರಿದ್ದರು? ಈಗ ಯಾರು ಇರಬೇಕು?-ಎಂದು ತಮ್ಮನ್ನು ತಾವೇ ಕೇಳಿಕೊಂಡರೂ ಮನಸ್ಸಿನ ಒಂಟಿತನ ಮಾತ್ರ ಹೋಗಲಿಲ್ಲ. ಯಾವ ಅಂಟೂ ಇಲ್ಲದ ಮೆಲೆ ಈ ಊರಿನಾಗೇ ಇರಬೇಕು ಅಂತ ಏನು?-ಎಂಬ ಯೋಚನೆ ಬಂತು. ಕೆಲವು ದಿನದಿಂದ ಅದೇ ಬಲವಾಗಿಬಿಟ್ಟಿದೆ. ಈ ಊರು ಬ್ಯಾಡ, ತಿಪಟೂರಿಗೋ, ತುಮಕೂರಿಗೋ ಮತ್ತೆ ಎಲ್ಲಿಗೋ ಹ್ವಾಗಿಬಿಡಾದು-ಎಂಬ ತೀರ್ಮಾನ ಹೆಚ್ಚು ಕಡಿಮೆ ಮನಸ್ಸಿನಲ್ಲಿ ನಿಂತಿದೆ.
ಹೀಗೆ ಯೋಚಿಸುತ್ತಿರುವಾಗ ಒಂದು ದಿನ ಅಪ್ಪಣ್ಣಯ್ಯ ಬಂದ. ಅವನಿಗೂ ಈ ಊರಿನಲ್ಲಿ ಯಾರೂ ಇರಲಿಲ್ಲ. ಅತ್ತಿಗೆ ಸತ್ತಮೇಲೆ ಈ

ಊರೇ ಬಿಕೋ ಎನಿಸುತ್ತಿತ್ತು. ಆದುದರಿಂದ ಇಷ್ಟು ದಿನ ಒಬ್ಬನೇ ನಾಲೆಬಯಲಿನಲ್ಲಿ ಯಾಚನೆ ಮಾಡುತ್ತಿದ್ದ. ಈಗ ಬರುವಾಗ ಒಂದೂವರೆ ಪಲ್ಲ ಅಕ್ಕಿ, ಇಪ್ಪತ್ತು ಸೇರು ತೊಗರೀಬೇಳೆ, ಒಂದುಧಡಿಯದಷ್ಟು ಮೆಣಸಿನಕಾಯಿ, ಮಸಾಲೆಪುಡಿಗಳನ್ನು ತಂದಿದ್ದಾನೆ. ಎಲ್ಲವನ್ನೂ ಬೀರೇಗೌಡನ ದೊಡ್ಡಿಯ ಜಗುಲಿಯ ಕೋಣೆಯಲ್ಲಿ ಇಟ್ಟುಕೊಂಡು ದಿನಾ ತಾನೊಬ್ಬನೇ ಅಡಿಗೆ ಮಾಡಿಕೊಳ್ಳುತ್ತಾನೆ. ಊರಿನಲ್ಲಿ ಅವನಿಗೆ ಅಯ್ಯನವರನ್ನು ಬಿಟ್ತರೆ ಮತ್ತೆ ಯಾರೂ ಆಪ್ತರಿಲ್ಲ. ಅಟ್ಟು ಉಂಡಮೇಲೆ ಹೊತ್ತುಕಳೆಯಲು ಅವರ ಗುಡುಗೆ ಬಂದು ಕೂರುತ್ತಾನೆ. ಯಾವುದಾದರೂ ಮಾತು ಶುರುಮಾಡಿದರೆ ಅದು ಅತ್ತಿಗೆಯ ವಿಷಯಕ್ಕೆ ತಿರುಗುತ್ತದೆ. ‘ಈ ನನ್‌ಮಗ ಅವ್ರುನ್ನ ಗೋಳುಹುಯ್ಕಂಡು ತಿಂದ್‌ಬಿಟ್ಟ ಕಣ್ರಿ’-ಎಂಬ ಮಾತನ್ನೇ ಅವನು ಮತ್ತೆ ಮತ್ತೆ ಆಡುತ್ತಾನೆ.
ಒಂದು ದಿನ ಅಯ್ಯನವರು ಎಂದರು: ‘ಹಿಂದೆ ಆದದ್ದು ಆಯ್ತು. ಈಗ್ಲೂ ನೀವು ಅಣ್ನ ತಮ್ಮ ತಾಯಿ ಒಟ್ಟಿಗಿರ್ರಪ್ಪ.’
‘ಥೂ ಅವ್ಳ ಮನೆತನ ಹಾಳಾಗ. ಆ ಮುಂಡೆ ಜೊತೆ ಇರ್ತೀನೇನ್ರೀ ನಾನು? ನಾನು ಗಂಡಸು ಕಣ್ರೀ. ನಾಲೇಬಯಲಾಗೆ ಒಂದೂವರೆ ಪಲ್ಲ ಬಿಳಿ ಅಕ್ಕಿ ಸಂಪಾದನೆ ಮಾಡ್ಕಂಡ್ ಬಂದಿದೀನಿ. ನೋಡ್ ಬನ್ರಿ ಬೇಕಾದ್ರೆ.’

ಅಯ್ಯನವರು ಸುಮ್ಮನಾದರು. ಅಪ್ಪಣ್ಣಯ್ಯ ಒಟ್ಟು ಇಪ್ಪತ್ತು ದಿನ ಊರಿನಲ್ಲಿದ್ದ. ಒಂದು ದಿನವೂ ಅವ್ವ ಅಣ್ಣನ ಹತ್ತಿರ ಹೋಗಲಿಲ್ಲ. ಅವರ ಮಾತೆತ್ತಿದರೆ ಕಿಡಿಕಿಡಿಯಾಗುತ್ತಿದ್ದ. ಅವನಿಗೆ ಈ ಊರೇ ಬೇಸರವಾಗುತ್ತಿತ್ತು. ಸುಮ್ಮನೆ ಕೂತು ಏನು ಮಾಡುವುದು? ಸುತ್ತಣ ಹಳ್ಳಿಗಳಲ್ಲೆಲ್ಲ ಅವ್ವ ಅಣ್ಣ ಯಾಚನೆ ಮಾಡಿರುತ್ತಾರೆ. ಮತ್ತೆ ತಾನೂ ಹೋದರೆ ಜನರು ಎರಡೆರಡು ಸಲ ಕೊಡುವುದಿಲ್ಲ. ಒಂದು ದಿನ ಬೀರೇಗೌಡನ ಜಚುಲಿಯ ತನ್ನ ಕೋಣೆಗೆ ಬೀಗ ಹಾಕಿ ನಾಲೆಬತಲಿನ ಕಡೆಗೆ ಮತ್ತೆ ಹೋದ.

ಅಪ್ಪಣ್ಣಯ್ಯ ಹೋದ ರಾತ್ರಿ ಅಯ್ಯನವರಿಗೆ ನಂಜಮ್ಮನ ಸಂಸಾರದ ನೆನಪೇ ಆಗುತ್ತಿತ್ತು. ಚಿಕ್ಕ ವಯಸ್ಸಿನ ಅವಳು ಸೊಸೆಯಾಗಿ ಇ ಊರಿಗೆ ಬಂದದ್ದು, ಅತ್ತೆ ಮನೆಯ ಗೋಳು, ಅವಳ ಮಕ್ಕಳು, ಬೇರೆ ಸಂಸಾರ ಹೂಡಿದ್ದು, ಮಕ್ಕಳನ್ನು ಸಾಕಿ ಬೆಳೆಸಿ, ಮಗನಿಗೆ ಮುಂಜಿ ಮಗಳಿಗೆ ಮದುವೆ ಮಾಡಿದ್ದು, ಮಕ್ಕಳಿಬ್ಬರ ಸಾವು, ಕೊನೆಗೆ ನಂಜಮ್ಮನ ಸಾವು, ಇವೆಲ್ಲ ಒಂದೇ ಬಾರಿಗೆ ನಾಟಕದಲ್ಲಿ ನಡೆದಂತೆ ನೆನಪಿನಲ್ಲಿ ಬಂದುಹೋದುವು. ತಾವು ಆ ಸಂಸಾರದೊಡನೆ ಎಷ್ಟು ಮಟ್ಟಿಗೆ ಅಂಟಿಕೊಂಡಿದ್ದರೆಂಬ ಅರಿವು ಈಗ ಅವರಿಗೆ ಉಂಟಾಯಿತು. ಆ ಯಮ್ಮನ ಸಂಸಾರ ಹೀಗಾಯ್ತು!- ಎಂದು ನಿಟ್ಟುಸಿರಿಡುತ್ತಿರುವಾಗ ಮನಸ್ಸು, ಆ ಸಂಸಾರದ ಒಂದು ಬಳ್ಳಿಯಾಗಿ ಉಳಿದಿರುವ ವಿಶ್ವನನ್ನು ನೆನಸಿಕೊಂಡಿತು. ಅವನು ಅವರ ತೊಡೆಯಮೇಲೆ ಕೂತು ಅವರ ಕಂತೆಭಿಕ್ಷೆಯ ಮುದ್ದೆ ತಿಂದು ಅವರಿಗೆ ಅಂಟಿಕೊಂಡಿದ್ದ. ಬಲೇ ಚುರುಕು ಹುಡುಗ. ಹುಲಿಯಂಥಾ ಗುಂಡಿಗೆ, ಮುಂದೆ ಓದಿದರೆ ಜಾಣನಾಗುತ್ತಾನೆ. ಅವನನ್ನು ಓದಿಸಬೇಕು ಅಂತ ನಂಜವ್ವ ಹಲುಬುತ್ತಿತ್ತು. ಮಾವನ ಮನೆಯಾಗೆ ಹೆಂಗೆ ಓದ್‌ತೈತೋ ಏನೋ! ತುಂಟತನ ಕಮ್ಮಿಯಾಗಿರ್‌ಬೈದು. ಅತ್ತೆ ಮಾವುಂಗೆ ಮಕ್ಳಿಲ್ಲ. ಆದ್ರೂ ಅವ್ರು ಹ್ಯಂಗೆ ನೋಡ್ಕತ್ತವ್ರೋ?
ತಾವು ಈ ಊರು ಬಿಡುವ ಮೊದಲು ಒಂದು ಸಲ ನಾಗಲಾಪುರಕ್ಕೆ ಹೋಗಿ ಹುಡುಗನನ್ನು ನೋಡಿಕೊಂಡು ಬರಬೇಕೆಂದು ಅವರು ನಿಶ್ಚಯಿಸಿದರು.

– ೨-

ಅದಾದ ಎರಡನೆಯ ದಿನ ಮಧ್ಯಾಹ್ನ ಉಂಡಮೇಲೆ ಅವರು ಗುಡಿಯ ಜಗುಲಿಯ ಮೇಲೆ ಕೂತು ಹೊಗೆಸೊಪ್ಪು ತೀಡುತ್ತಿದ್ದರು. ನರಸಿ ಅವರನ್ನೇ ಹುಡುಕಿಕೊಂಡಂತೆ ಬಂದು ಜಗಿಲಿಯಮೇಲೆ ಕೂತಳು. ಅವಳ ಮುಖದಲ್ಲಿ ವ್ಯಸನ ಕಾಣುತ್ತಿತ್ತು.
‘ಏನವ್ವಾ, ಏಳೆಂಟು ದಿನದಿಂದ ಊರಾಗಿರ್ನಿಲ್ಲ. ಎಲ್ಲಿಗ್ಹೋಗಿದ್ದೆ?’
‘ನಮ್ಮ ನಂಟ್ರ ಮನ್ಗೆ ಸಾಂತಿಗ್ರಾಮಕ್ಕೆ ಹ್ವಾಗಿದ್ದೆ ಕಣ್ರಯ್ಯಾ.’
‘ಇದ್ಯಾಕ್ ಮಂಕಾಗಿದೀಯಾ?’
‘ಏನ್ ಏಳಾನ್ರೀ. ನ್ಯೆನ್ನೆ ಗಾಡೀಲಿ ನಾಗಲಾಪುರದ ಕೆರೆ ಏರಿ ಮ್ಯಾಲೆ ಬತ್ತಿದ್ದೆ. ವಿಸ್ವಪ್ಪ ಸಿಕ್ತು. ಅದ ಕಂಡು ಅಳಾ ಬಂದ್‌ಬುಡ್ತು.’
ಅಯ್ಯನವರಿಗೂ ತಕ್ಷಣ ಆ ಸ್ಥೆ ಹುಟ್ಟಿತು: ‘ಹೆಂಗೈತಿ ಮಗಾ?’
‘ಹೆಂಗೈತಾ? ಬಾಲೆಕಂಬದ ಹಂಗಿದ್ದ ಉಡ್ಗ ಈಗ ಒಣಕಲ ಹರಳಕಡ್ಡಿಯಾಗೈತೆ ಕಣ್ರೀ. ಕ್ರೇಲಿ ನೀರು ಕುಂಡೊಯ್ಯಕ್ಕೆ ಅಂತ ಒಂದು ಬಿಂದ್ಗೆ ತಗಂಡು ಬಂದಿತ್ತು. ಗಾಡೀಮ್ಯಾಲೆ ನನ್ನ ನೋಡಿ ಅದೇ ಗುರುತು ಇಡೀತು. ನಂಗೆ ಅದರ ಗುರ್ತೇ ಸಿಕ್‌ನಿಲ್ಲ, ಹಂಗಾಗೈತೆ. ನಾನು ಗಾಡಿ ನಿಲ್ಸಿ ಕ್ಯಳಿಕ್ಕೆ ಇಳ್ದೆ. ಹ್ಯಂಗಿದೀಯಾ ಮಗಾ ಅಂದೆ. ಸುಮ್ನೆ ಅಳಾಕೆ ಶುರುಮಾಡಿಬಿಡ್ತು. ಏನ್ಮಾಡಿದ್ರೂ ಸುಮ್ಕಾಗ್ನಿಲ್ಲ. ನನ್ನೂ ಊರಿಗೆ ಕರ್ಕಂಡ್ ಹೋಯ್ತೀಯಾ?- ಅಂತ ಕೇಳ್ತು. ನಾನು ಹ್ಯಂಗೆ ಕರ್ಕಂಡ್ ಬರ್ಲಿ ನೀವೇ ಏಳ್ರಿ. ಇನ್ನೂ ತುಂಬ ಏಳ್ತು. ತಡವಾಗಿ ಓದ್ರೆ ಮನ್ಲಿ ಅತ್ತೆ ಹ್ವಡೀತಾಳೆ ಅಂತ ನೀರು ತುಂಬ್ಕಂಡಿ ಹ್ವಂಟೋಯ್ತು. ಓಟು ಚಿಕ್ಕ ಉಡುಗನ ಕುಟ್ಟಿ ಬಿಂದಿಗೇ ಕೊಟ್ಟು ಕಳಿದ್ಲಲಾ ಆ ಕಟುಕಮುಂಡೆ, ಏನಂತೀರ್ರೀ?’
‘ನೀನು ಊರೊಳಿಕ್ ಹ್ವಾಗಿ ಕಲ್ಲೇಶದೋಸ್ರುನ್ನ ಕೇಳ್ನಿಲ್ವಾ? ನಿಂಗ್ ಅವ್ರ ಗುರುತಿಲ್ವಾ?’
“ಉಡುಗ ಹ್ವಂಟೋಯ್ತು. ನಾನು ಗಾಡಿ ಅಲ್ಲೇ ಕೊಳ್ಳು ಇಳಿಕ್ಸು ಅಂತ ಏಳಿದೆ. ಅಲ್ಲೇ ಒಬ್ಬ ಎಂಗ್ಸು ಶಾಲೆ ವಗೀತಿದ್ರು. ಅವ್ರ್ ತಾವುಕ್ ಹ್ವಾಗಿ-‘ಅವ್ವಾ, ನಂದು ರಾಮಸಂದ್ರ. ಈ ಉಡ್ಗ ನಮ್ಮೂರಿಂದು. ಇದುನ್ನ ಕಲ್ಲೇಸಪ್ಪಾರು ಹ್ಯಂಗೆ ಮಡೀಕಂಡವ್ರೇ?’ ಅಂತ ಕೇಳ್ದೆ. ಆ ಯಮ್ಮ ಯಲ್ಲಾನೂ ಏಳ್ತು. ಕಲ್ಲೇಸಪ್ಪಾರು ಮನೇ ತಾವ್ಳೇಯಂತೆ ಆ ಯಮ್ಮನ ಮನೆಯೂ. ಮನೆ ಚಾಕರಿ ಎಲ್ಲ ಆ ಉಡುಗುಂದೇಯಂತೆ. ಅವ್ಳು ಅಕ್ಕಿರೊಟ್ಟಿ ತಿಂತಾಳಂತೆ. ಉಡುಗುಂಗೆ ರಾಗಿರೊಟ್ಟಿಯಂತೆ. ಅದ್ನೂ ಕ್ವಟ್ರೆ ಕ್ವಟ್ಳು, ಇಲ್ದೆ ಇದ್ರೆ ಬಿಟ್ಳು. ಅವಳ ಶಾಲೇನೂ ಅದೇ ವಗೀಬೇಕಂತೆ. ಸೌಟು ತಗಂಡಿ ನೆತ್ತಿಮ್ಯಾಲೆ ಹ್ವಡೀತಾಳಂತೆ.”
‘ಕಲ್ಲೆಶದೋಸ್ರು ಸುಮ್ನೆ ಇರ್ತಾರಂತಾ?’
‘ಆ ವಯ್ಯ ತಿಕ್‌ಲಪ್ಪ ಕಣ್ರೀ. ಕುಶಿ ಅತ್ತಿದ್ರೆ ಉಡುಗನ್ನ ಸಂತಿಗೆ ಕರ್ಕಂಡ್ ಹ್ವಾಗಿ ಮಿಟಾಯಿ ಗಿಟಾಯಿ ಕೊಡುಸ್ತಾರಂತೆ. ಸಿಟ್ಟು ಬಂದ್ರೆ ಹ್ವಳಕೆ ತಗಂಡ್ ಬಡೀತಾರಂತೆ. ವಳಗಡೆ ಅವ್ಳು ಎಂಗ್ಸು ಏನೇನು ಮಾಡ್ತಾಳೆ ಅಂತ ಗಂಡ್ಸಿಗೆ ಯಲ್ಲಾ ಹ್ಯಂಗೆ ಗೊತ್ತಾಗ್ಬೇಕು?’
ಅಯ್ಯನವರು ಮತ್ತೆ ಏನೂ ಕೇಳಲಿಲ್ಲ. ತಾಯಿ ಸತ್ತ ತಬ್ಬಲಿ ಹುಡುಗ ವಿಶ್ವ ಪೂರ್ತಿ ಸುಖವಾಗಿದೆ ಎಂದು ಅವರೇನೂ ಭ್ರಮಿಸಿರಲಿಲ್ಲ. ಆದರೆ ಅದು ಈ ಮಟ್ಟಿಗೆ ಗೋಳುಗುಟ್ತುತಿದೆ ಎಂಬ ಕಲ್ಪನೆಯೂ ಅವರಿಗೆ ಇರಲಿಲ್ಲ. ಕಲ್ಲೇಶಜೋಯಿಸರ ಹೆಂಡತಿ ಕೆಟ್ಟ ಹೆಂಗಸೆಂಬುದನ್ನು ಅವರು ಸಾಕಷ್ಟು ಕೇಳಿದ್ದರು. ಆದರೆ ತಂಗಿಯ ಮಗನ ವಿಷಯದಲ್ಲಿ ಸೋದರಮಾವನಾದವನು ಹೆಚ್ಚು ನಿಗಾ ತೆಗೆದುಕೊಳ್ಳಬೇಕಾಗಿತ್ತು. ಬುದ್ಧಿ ಸಮವಾಗಿದ್ದರೆ ತಾನೇ ನಿಗಾ ಸಮವಾಗಿರ್ತೈತಿ?-ಎಂದು ಯೋಚಿಸುತ್ತಿದ್ದರು. ನರಸಿಯೂ ಏನೋ ತನ್ನಲ್ಲಿಯೇ ಯೋಚಿಸುತ್ತಿದ್ದು ಕೇಳಿದಳು: ‘ಅಯ್ನೋರೇ, ನಾನೊಂದ್ ಮಾತು ಏಳ್ತೀನಿ ಕೇಳ್ತೀರಾ?’
‘ಏನ್ ಏಳು.’
“ದೇವ್ರು ನನ್ನ ಹ್ವಟ್ಟೇಲಿ ಮಕ್ಳು ಕೊಡ್ನಿಲ್ಲ. ಆ ಉಡುಗುನ್ನ ಕರ್ಕಂಡ್ ಬಂದು ನಂಗ್ ಕೊಟ್‌ಬುಡಿ. ಮಗ ಅಂತ ತಿಳ್ಕಂಡ್ ಸಾಕ್ಯತ್ತೀನಿ. ನನ್ನ ಅಂಗ್ಡಿ, ನನ್ನ ದುಡ್ದು, ಯಲ್ಲ ಅದುಕ್ಕೇ ಆಯ್ತದೆ. ಜೀವ ಹ್ವಾಗ್ತಾ ಇದ್ದ ಉಡ್‌ಗ. ನನ್ನ ತ್ವಡೆ ಮ್ಯಾಲೆ ನನಿಕ್ಕಂಡು ಬದುಕಂಡ್ತು. ಅದರ ಅವ್ವನೇ, ‘ನರಸಮ್ಮ, ಇದು ನನ್ನ ಮಗುವಲ್ಲ, ನಿಂದು. ನೀನೇ ಸಾಕ್ಕ’ ಅಂತ ಏಳಿದ್ರು. ನೀವು ನಾಗಲಾಪುರಕ್ಕೆ ಓಗಿ ಕರ್ಕಂಡ್ ಬಲ್ಲಿ. ಅದ್ರ ಒಂದು ಕೂದ್ಲು ನಲುಗದ್ಹಂಗೆ ಸಾಕ್ತೀನಿ.”
ಇದೇ ಮಾತನ್ನು ಮತ್ತೆ ಹೇಳಿ-‘ಯೇಚ್ನೆ ಮಾಡಿ’ ಎಂದು ಪುನಃ ಜ್ಞಾಪಿಸಿ ನರಸಿ ಎದ್ದುಹೋದಳು.

ಅಯ್ಯನವರ ಮನಸ್ಸು ಯೋಚಿಸಲು ಪ್ರಾರಂಭಿಸಿತು. ಆ ರಾತ್ರಿ ಎಲ್ಲ ಅವರಿಗೆ ನಿದ್ರೆ ಬರಲಿಲ್ಲ. ನಂಜಮ್ಮನದೇ ನೆನಪು. ಅವಳಿಗೆ ಗೆಡ್ಡೆ ಕಾಣಿಸಿಕೊಂಡ ನಡುರಾತ್ರಿ, ಇವರು ಬೇಡವೆಂದರೂ, ಮನಸ್ಸಿನಲ್ಲಿ ಇದ್ದುದನ್ನೆಲ್ಲ ಮಾತನಾಡಿದ್ದಳು: ‘ಪಾರ್ವತಿ ರಾಮಣ್ಣ ಸತ್ತಾಗ ಗೋಪಿಯ ಕಥೆ ನೀವು ಹೇಳಿದಿರಿ. ಮಗು ಸತ್ತಾಗ ಜೀವಕೊಡುಕ್ಕೆ ಹೆದರಿ ಗೋಪಿ ದಡದಲ್ಲೇ ನಿಂತಳು. ಅದೇ ರಾತ್ರಿ ನಾನು ಸ್ಮಶಾನದ ಭಾವಿ ಬೀಳೂಕೆ ಹೋಗಿದ್ದೆ. ಧೈರ್ಯವಾಗಿ ನೀರಿಗೆ ಧುಮುಕ್ತಿದ್ದೆ. ವಿಶ್ವನ ಗತಿ ಏನು ಅಂತ ಯೋಚನೆ ಮಾಡಿ ವಾಪಸ್ ಬಂದೆ. ಈಗ ನಾನೇ ಸಾಯ್ತೀನಿ. ವಿಶ್ವನಿಗೆ ಯಾರು ಗತಿ? ಅಕ್ಕಮ್ಮ ಒಂದಿಷ್ಟು ಹಿಟ್ಟು ಬೇಯ್ಸಿ ಹಾಕ್ತಾಳೆ. ನಮ್ಮಣ್ಣಯ್ಯನ ಮೇಲೆ ನನಗೆ ನಂಬಿಕೆ ಇಲ್ಲ. ಹುಡುಗನ ಹಿಟ್ಟು ಮುಖ್ಯವಲ್ಲ. ಅವ್ನು ಬುದ್ಧಿವಂತನಾಗಬ್ಯಾಡ್‌ವೆ?’

ಅವಳ ಎಲ್ಲ ಮಾತುಗಳೂ ಅವರ ನೆನಪಿಗೆ ಬಂದುವು. ಅಕ್ಕಮ್ಮ ಬದುಕಿದ್ದರೆ ಹುಡುಗನ ಹಿಟ್ಟಿಗೆ ಕಷ್ಟವಾಗುತ್ತಿರಲಿಲ್ಲ. ಮನೆಯಲ್ಲಿ ಅತ್ತೆ, ಹಾಗೆ ಗೋಳುಹುಯ್ದುಕೊಳ್ಳುತ್ತಲೂ ಇರಲಿಲ್ಲ. ಆದರೆ ಮೊಮ್ಮಗಳ ಜೊತೆಗೆ ಅದೇ ತೀರಿಕೊಂಡಿತು. ‘ಹುಡುಗನ್ನ ಮಾವನ ಕೂಡ ಕಳ್ಸೂವಾಗ ನಂಗೆ ಇದರ ಯೇಚ್ನೆಯೇ ಬರ್ಲಿಲ್ವಲ? ನನ್ನ ತಲೇಲಿ ಬಿದ್ಧಿಯೇ ಇಲ್ಲ’-ಎಂದು ಅವರು ತಮ್ಮನ್ನು ತಾವೇ ಹಳಿದುಕೊಂಡರು. ಈಗ ಮಾಡುವುದೇನು? ನರಸಿ ಕೇಳಿದ ಹಾಗೆ ಅವನನ್ನು ಇಲ್ಲಿಗೆ ಕರೆದುಕೊಂಡು ಬಂದು ಅವಳಿಗೆ ಕೊಟ್ಟು ಬಿಡೂದೆ? ನರಸಿಯ ಹತ್ತಿರ ಹತ್ತು ಹದಿನೈದು ಸಾವಿರ ರೂಪಾಯಿ ಅವೆಯಂತೆ. ಅಂಗ್ಡಿ ನಡೀತೈತಿ. ಪ್ರೀತಿಯಾಗಿ ಸಾಕ್ಕಂಡೂ ಸಾಕ್ಯತ್ತಾಳೆ. ಆ ಸೋದರಮಾವನ ಮನೆಗಿಂತ ಇದೇ ಚಂದ-ಎಂದು ಅವರ ಮನಸ್ಸು ಹೇಳಿತು.

ಆದರೆ ನಂಜವ್ವ ಬದಿಕಿದ್ರೆ ಹುಡುಗನ್ನ ನರಸೀತಾವ ಬಿಡ್ತಿದ್ಲೆ? ಅವ್ಳು ರಾತ್ರಿಗೊಬ್ಬುನ್ನ ಕರ್ಕತ್ತಾಳೆ. ‘ಹುಡುಗನ ಹಿಟ್ಟು ಮುಖ್ಯವಲ್ಲ, ಅವ್ನು ಬುದ್ಧಿವಂತನಾಗಬೇಡವೆ?’-ಎಂಬ ನಂಜವ್ವನ ಮಾತು ಅವರಿಗೆ ನೆನಪಾಯಿತು. ಅವನನ್ನು ಬುದ್ಧಿವಂತನನ್ನಾಗಿ ಮಾಡೂರು ಯಾರು? ಹೆತ್ತ ಅಪ್ಪನ ಯೋಗ್ತಿ ಗೊತ್ತೈತೆ? ಚಿಕ್ಕಪ್ಪನಿಗೆ ಬುದ್ಧಿ ಎಲ್ಲೈತೆ? ಅಜ್ಜಿ ಗಂಗವ್ವ. ಅವ್ಳು ವಿವೇಕಸ್ತೆಯಾಗಿದ್ರೆ ಮನೆ ಹಿಂಗ್ಯಾಕೆ ಆಗೂದು? ಇನ್ನು ಆ ಉಡುಗನ ಗತಿ ಏನು?

ಏಳೆಂಟು ದಿನ ಅವರನ್ನು ಇದೇ ಯೋಚನೆ ಕಾಡುತ್ತಿತ್ತು. ಒಂದು ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಹಾಗೆಯೇ ಒಂದು ಉಪಾಯ ಹೊಳೆದುಬಿಟ್ಟಿತು. ನಾನು ಹ್ಯಂಗೋ ಊರು ಬಿಡ್ತೀನಿ. ವಿಶ್ವಣ್ಣನ್ನ ನನ್ನ ಜೋಡಿ ಕರ್ಕಂಡ್ ಓಗಾದು. ನಾನು ತಂದ ಕಂತೆಭಿಕ್ಷದಾಗೆ ಎಲ್ಡು ಒತ್ತು ಮುದ್ದೆ ತಿನ್ಲಿ. ನಾನೇ ಇಸ್ಕೂಲಿಗೆ ಕಳುಸ್ತೀನಿ. ಉಡುಗ ಜಾಣಮರಿ. ಇಂಗ್ಲೀಷ್ ಇಸ್ಕೂಲೇ ಓದ್ಲಿ. ಯೋಗ ಇದ್ರೆ ಇನ್ನೂ ಮೇಲಕ್ಕೆ ಓದ್ಕಳಿ. ಅದೇ ವೈನ-ಎಂದು ತೀರ್ಮಾನಿಸಿದಾಗ ಅವರಿಗೇ ತಿಳಿಯದಷ್ಟು ಸಂತೋಷದಿಂದ ಮೈ ಜುಂ ಎಂದಿತು.

ಆದರೆ ಇನ್ನೂ ಒಂದು ಯೋಚನೆ ಮನಸ್ಸಿಗೆ ಬಂತು. ನಂಗಾಗಲೇ ಇಷ್ಟು ಮುಪ್ಪಾಗೈತಿ. ಕರ್ಕಂಡ್‌ಹ್ವಾಗಿ, ಮಧ್ಯೆ ನಾನೇ ಸತ್ ಗಿತ್ ಹ್ವಾದ್ರೆ ಅವ್ನ ಗತಿ ಏನು? ಒಂದೆರಡು ಗಂಟೆ ಈ ಯೋಚನೆ ಮನಸ್ಸನ್ನು ಕಾಡಿತು. ಆದರೆ ಅದಕ್ಕೆ ಸಮಾಧಾನ ಸಿಕ್ಕುವುದು ಕಷ್ಟವಾಗಲಿಲ್ಲ. ಗಂಡು ಉಡ್ಗ ಸುಟಿಯಾಗೈತೆ. ನಾನು ಒಂದ್ ಸಮಯ ಸತ್ತೆ. ಎಲ್ಲಾರಾ ಕೂಲಿ ಮಾಡ್ಕಂಡ್ ತಿನ್ಲಿ.ಆ ಅತ್ತೆ ಮಾವನ ಮನ್ಲಿ ಹ್ಯದರಿ ನಡುಕ್ಕಂಡ್ ಇರಾದು ಬ್ಯಾಡ. ನಾನೀಗ್ಲೇ ಸಾಯ್ತೀನಿ ಅಂತ ಏನು ಗೊತ್ತು? ನಂಜವ್ವನಂಥಾ ಮೊಮ್ಮಗಳ ವಯಸ್ನೋರೆಲ್ಲ ಸತ್ರೂ ನಾನು ಲಿಂಗದ ಗುಂಡು ಇದ್ಹಂಗೆ ಇದೀನಿ. ವಿಶ್ವಣ್ಣ ದೊಡ್ಡೋನಾಗಾತಂಕ ನಾನು ಸಾಯಾದಿಲ್ಲ.

ಕಲ್ಲೇಶದೋಸರು ಉಡುಗುನ್ನ ಕಳಿಸಾದಿಲ್ಲ ಅಂದ್ರೆ ಏನು ಮಾಡಾದು?-ಎಂಬ ಯೋಚನೆಯೂ ಬಂತು. ಹ್ಯಂಗೂ ನನ್ನ ಮುಖ ಕಂಡ್‌ರೆ ಉಡುಗ ಅಂಟಿಕತ್ತಾನೆ. ಕದ್ದು ಕರ್ಕಂಡ್ ಬತ್ತೀನಿ. ನನ್ ತಾವ ಏನು ಕಿತ್ಕತ್ತಾರೆ?-ಎಂಬ ನಿಶ್ಚಯದಿಂದ ಅವರು ಒಂದು ದಿನ ನಾಗಲಾಪುರಕ್ಕೆ ಹೊರಟರು.

– ೩ –

ದಾರಿಯ ಕಟಿಗೆಹಳ್ಳಿಯಲ್ಲಿ ರಾತ್ರಿ ತಂಗಿ ಮರುದಿನ ಅವರು ನಾಗಲಾಪುರ ಸೇರುವ ಹೊತ್ತಿಗೆ ಬೆಳಗಿನ ಹತ್ತುಗಂಟೆಯಾಗಿತ್ತು. ದಾರಿಯ ಕೆರೆಯಲ್ಲಿ ಸ್ನಾನಮಾಡಿ, ಅದೆ ಕಾವಿಯ ಪಂಚೆ ಉಟ್ಟು ಅಂಗಿ ಧರಿಸಿ ತಲೆಗೆ ಕೆಂಪು ಲಪ್ಪಟಿ ಸುತ್ತಿ ಹಣೆಗೆ ವಿಭೂತಿ ಇಕ್ಕಿಕೊಂಡು ಶಿವಧ್ಯಾನ ಮಾಡುತ್ತಾ ನೇರವಾಗಿ ಸ್ಕೂಲಿಗೆ ಹೋದರು. ಆಗ ಸ್ಕೂಲು ಬಿಡುವ ಸಮಯ. ಗಂಟೆ ಹೊಡೆದ ತಕ್ಷಣ ವಿಶ್ವ ಹೊರಗೆ ಬಂದ. ಗುರುತು ಹಿಡಿದ ಅವನೇ-‘ಅಯ್ನೋರೇ’ ಎಂದು ಹತ್ತಿರ ಬಂದು, ನಿಂತಿದ್ದ ಇವರ ತೊಡೆಗಳನ್ನು ತಬ್ಬಿಕೊಂಡ.
‘ಇಲ್ಲಿ ಬಾ ಮರಿ’-ಎಂದು ಕೈ ಹಿಡಿದು ಸ್ಕೂಲಿನ ಹಿಂದಿನ ಆಲದಮರದ ಹತ್ತಿರಕ್ಕೆ ಕರೆದುಕೊಂಡುಹೋಗಿ ಕೂರಿಸಿಕೊಂಡರು. ನರಸಿ ಹೇಳಿದಂತೆ ಅವನು ಒಣಗಿದ ಹರಳ ಕಡ್ಡಿಯೇ ಆಗಿದ್ದ. ಅವರು ಕೇಳಿದರು: ‘ನನ್ನ ಜೊತೆ ಬತ್ತೀಯಾ?’
‘ನಮ್ಮೂರುಗಾ?’
‘ನಮ್ಮೂರ್ಗೋ, ಯಾವೂರ್ಗಾದ್ರೂ ಸರಿ. ನನ್ನ ಜೊತೆ ಬಾ. ಅಲ್ಲೆ ಯಾವ್ದಾದ್ರೂ ದೊಡ್ದ ಊರಿಗೆ ಹ್ವಾಗಾನ. ನಾನು ಕಂತೆಭಿಕ್ಷೆ ತಂದು ಇಕ್ತೀನಿ. ನೀನು ಸ್ಕೂಲಿಗೆ ಹ್ವಾಗಿ ಚಂದಾಗಿ ಓದೂವಂತೆ. ಬತ್ತೀಯಾ?’
‘ಹೋಗ್ರೀ ಅಯ್ನೋರೇ, ನೀವು ಸುಳ್‌ಸುಳ್ಳೇ ಅಂತೀರಾ?’
‘ಇಲ್ಲ ಮರಿ, ನಿಜವಾಗಿಯೂ.’
‘ಹಾಗಾದ್ರೆ ಆಣೆ ಇಟ್ಟು ಹೇಳಿ ನೋಡಾಣ.’
‘ನಿನ್ನಾಣೆಗೂ ಮರಿ’-ಎಂದು ಅವನ ತಲೆಯ ಮೇಲೆ ಕೈ ಇಟ್ಟು ಎಂದರು.
‘ಹಾಗಾದ್ರೆ ಹೀಗೇ ವಾಟಹ್ವಡಿಯಾಣಾ ನಡೀರಿ.’
‘ಬ್ಯಾಡ. ಮನೆಗೆ ಹೋಗಿ ನಿಮ್ಮ ಮಾವನ್ನ ಕೇಳಾನ.’
‘ಅವನಿಗೆ ಈ ಮಾತು ಕೇಳಿದ ತಕ್ಷಣ ಅಳು ಬಂದುಬಿಟ್ಟಿತು: ‘ಅವ್ನು ಕಳ್ಸುಲ್ಲ ಕಣ್ರೀ.’
‘ಮದ್ಲು ಕೇಳಾಣ. ಅವ್ರು ಕಳ್ಸುಲ್ಲ ಅಂದ್ರೆ ನಾಳೆ ನಾನು ಇಲ್ಲಿಗೆ ಬತ್ತೀನಿ. ಹಿಂಗಿಂದ ಹಿಂಗೇ ನಿನ್ನ ಕರ್ಕಂಡುಹೋಯ್ತೀನಿ’-ಎಂದು ಹೇಳಿ ಅವನನ್ನು ಒಪ್ಪಿಸಬೇಕಾದರೆ ಅವರು ಮೂರು ಸಲ ತಮ್ಮ ಕರಡಿಗೆಯನ್ನು ಕೈಲಿ ಹಿಡಿದು ಆಣೆ ಮಾಡಬೇಕಾಯಿತು.
ಅವನನ್ನು ಮೊದಲು ಕಳಿಸಿ, ಹತ್ತು ನಿಮಿಷದಮೇಲೆ ಮನೆ ಕೇಳಿಕೊಂಡು ಇವರು ಹೋಗುವ ಹೊತ್ತಿಗೆ-‘ತಡವಾಗಿ ಯಾಕೆ ಬಂದೆಯೋ ಭಡವಾ?’ ಎಂದು ಕಲ್ಲೇಶಜೋಯಿಸರು ಅಳಿಯನನ್ನು ಬೈಯುತ್ತಿದ್ದರು. ಇವರನ್ನು ಕಂಡ ತಕ್ಷಣ ಸುಮ್ಮನಾದರು.

ಅವರು ಲೋಕಾರೂಢಿಯ ಮಾತುಗಳನ್ನಾಡುತ್ತಿರುವಷ್ಟರಲ್ಲಿ ಮನೆಯ ಮುಂದೆ ಒಂದು ದೊಡ್ದ ಕೆಂಪು ಕುದುರೆ ಬಂದು ನಿಂತಿತು. ಅದರಿಂದ ಇಳಿದವರು ಕಂಠೀಜೋಯಿಸರು. ತಾಯಿಯ ತಿಥಿ ಮಾಡಿಕೊಂಡು ಹೋದ ಅವರು ಇಲ್ಲಿಗೆ ಬರುತ್ತಿರುವುದು ಇದೇ ಮೊದಲು. ವಿಶ್ವನನ್ನು ಕರೆತಂದು ಕಲ್ಲೇಶ ಇಟ್ಟುಕೊಳ್ಳುತ್ತಾನೆಂಬುದು ಅವರು ಹೋಗುವ ಮೊದಲೇ ಗೊತ್ತಿತ್ತು. ಕಲ್ಲೇಶನೇ ಹಾಗೆ ಹೇಳಿದ್ದ. ಈಗ ಏನೋ ಮನಸ್ಸಿನ ಲಹರಿ ತಿರುಗಿದಂತೆ ಊರಿಗೆ ಬಂದಿದ್ದಾರೆ. ಮೊಮ್ಮಗನನ್ನು ನೋಡುವ ಒಂದು ಆಶೆಯೂ ಆ ಲಹರಿಯಲ್ಲಿತ್ತು. ಒಳಗೆ ಬಂದ ಅವರು ಅವನನ್ನು ಕರೆದು ಮೈಸೂರು ಪಾಕು ಒಡೆಗಳನ್ನು ಪೊಟ್ಟಣ ಕೊಟ್ಟರು. ರಾಮಸಂದ್ರದ ವಿಷಯ ಮತ್ತು ಮಗಳು ಕಟ್ಟಿದ ಮನೆಯ ಬಗೆಗೆ ಅಯ್ಯನವರನ್ನು ಕೇಳಿದರು.

ಸ್ವಲ್ಪ ಹೊತ್ತಾದಮೇಲೆ ಕಲ್ಲೇಶ ಅಯ್ಯನವರನ್ನು ಕೇಳಿದ: ‘ಊಟ ಮಾಡ್ತೀರೋ,ಅಡಿಗೆ ಮಾಡ್ಕತ್ತಿರೋ? ಇಲ್ಲ, ನಿಮ್ಮ ಜನದ ಯಾರ ಮನೇಲಾದ್ರೂ ಹೇಳಾಣೋ?’
‘ನಮ್ಮ ಜನದೋರ ಮನ್ಲೇ ಹೇಳಿ.’
ಕಲ್ಲೇಶ ವಿಶ್ವನ ಕೈಲಿ ಆ ಊರಿನ ಮಲ್ಲಶೆಟ್ಟಿಯ ಮನೆಗೆ ಹೇಳಿಕಳಿಸಿದ. ಮಲ್ಲಶೆಟ್ಟಿ ಮನೆಗೆ ಬಂದು ಈ ಜಂಗಮರನ್ನು ಬಿನ್ನಕ್ಕೆ ಕರೆದುಕೊಂಡು ಹೋದ. ಅವನ ಹೆಂಡತಿ ಅಡುಗೆ ಮಾಡುತ್ತಿರುವಾಗ, ಅಯ್ಯನವರು ಮಲ್ಲಶೆಟ್ಟಿಯಿಂದ ಕಲ್ಲೇಶಜೋಯಿಸರ ಮನೆಯಲ್ಲಿ ವಿಶ್ವ ಇರುವ ಸ್ಥಿತಿಯನ್ನು ವಿಚಾರಿಸಿದರು. ‘ಇಂಥಾ ಮಕ್ಳು ಇರ್‌ಬ್ಯಾಡ್‌ದು, ಸತ್‌ರೆ ವೈನ ಶಿವನೇ’-ಮಲ್ಲಶೆಟ್ಟಿ ಹೇಳಿದ. ಅವನ ಹೆಂಡತಿಯೂ ಅದೇ ಮಾತನ್ನಾಡಿದಳು.
‘ಶೆಟ್ರೇ, ಹ್ವಾಗಿ ವಸೀ ಕಂಟೀದೋಸ್ರುನ ಕರ್ಕಂಡ್‌ಬತ್ತೀರಾ?’

ಮಲ್ಲಶೆಟ್ಟಿ ಹೋದ ಹತ್ತುನಿಮಿಷದಲ್ಲಿ ಅವನೊಡನೆ ಕಂಠೀಜೋಯಿಸರೊಬ್ಬರೇ ಬಂದರು. ಅಯ್ಯನವರು ಕೂತಿದ್ದ ಎದುರು ಗೋಡೆ ಒರಗಿ, ಮಲ್ಲಶೆಟ್ಟಿ ಹಾಕಿಕೊಟ್ಟ ಮಣೆಯಮೇಲೆ ಕುಳಿತರು. ತಾವು ಇಲ್ಲಿಗೆ ಬಂದ ಕಾರಣವನ್ನು ವಿವರಿಸಿದ ಅಯ್ಯನವರು ಎಂದರು: ‘ಬೇಕಾದ್ರೆ ಈ ಶೆಟ್ರುನ್ನೂ ಒಳಗಿರೂ ಅಕ್ಕನನ್ನೂ ಕೇಳಿ. ಈ ಊರಲ್ಲಿ ಯಾರುನ್ನಾದ್ರೂ ಇಚಾರಿಸಿ. ಆ ಉಡುಗ ಹ್ಯಂಗೆ ಆಗೈತಿ ಕಣ್ಣಿಂದ ನೋಡಿ. ನಿಮ್ಮ ಸ್ವಸೆ ಗುಣ ಚಂದವಲ್ಲ. ಉಡುಗನ್ನ ನನ್ನ ಕುಟ್ಟೆ ಕಳಿಸ್ಬಿಡಿ. ನಾನು ಸಾಕಿ ನ್ಯಟ್ಟಗೆ ಮಾಡ್ತೀನಿ.’
ಜೋಯಿಸರಿಗೆ ಸೊಂಟದ ಮೂಳೆ ಮುರಿಯಬೇಕೆನಿಸುವಷ್ಟು ಸಿಟ್ಟು ಬಂತು. ಆದರೆ ಅಯ್ಯನವರೇ ಎಂದರು: ‘ಹೀನಸುಳಿ ಬೋಳಿಸಿದ್ರೆ ಓಗಾಕಿಲ್ಲ. ಆ ಯಮ್ಮನ ಸರಿ ಮಾಡಾಕೆ ಗಂಡಂಗೂ ಆಗ್ನಿಲ್ಲ. ಕಲ್ಲೇಶದೋಸರಿಗೂ ಮಕ್ಳುನ್ನ ಹ್ಯಂಗೆ ಸಾಕಬೇಕು ಅಂತ ಗೊತ್ತಿಲ್ಲ. ಸುಮ್ನೆ ನನ್ನ ಜೋಡಿ ಕಳುಸ್ಬುಡಿ.’
ಜೋಯಿಸರು ಸ್ವಲ್ಪ ಹೊತ್ತು ತಮ್ಮಲ್ಲಿಯೇ ಯೋಚಿಸಿದರು. ನಂತರ, ‘ನೀವು ಕರ್ಕಂದ್ ಹೋಗಿ ಏನು ಮಾಡ್ತೀರಾ?’ ಎಂದು ಕೇಳಿದರು.
‘ಏನು ಮಾಡ್ತೀನೋ ಎಲ್ಲಿರ್ತೀನೋ ಕಾಣೆ. ನನ್ನಮ್ಯಾಲೆ ನಂಬಿಕೆ ಇದ್ರೆ ಸುಮ್ನೆ ಕಲಿಸ್ಕೊಡಿ.’

ಅವರು ತಕ್ಷಣ ಉತ್ತರ ಹೇಳಲಿಲ್ಲ. ಮನಸ್ಸಿನಲ್ಲಿ ಸಿಟ್ಟು ಕವರುತ್ತಿತ್ತು. ಹುಡುಗನ ಅಜ್ಜ ನಾನು ಬದುಕಿದೀನಿ. ಸೋದರಮಾವ ಕಲ್ಲೆಶ ಇದಾನೆ. ನಾವು ಸರಿಯಾಗಿ ಸಾಕೂದಿಲ್ಲ ಅಂತ ಇವನನ್ನ ಕಳ್ಸಿ ಅಂತ ಕೇಳುಕ್ಕೆ ಈ ಜಂಗಮಯ್ಯ ಬಂದಿದಾನಲ್ಲ. ಇವನಿಗೆಷ್ಟು ಹಿಮ್ಮತ್ತು? ಅಯ್ಯನವರನ್ನು ಬೈಯ್ಯಲು ಬಾಯಿ ತೆರೆದಿದ್ದ ಅವರು ಬೇರೊಂದು ಯೋಚನೆ ಬಂದು, ತಕ್ಷಣ ನಾಲಿಗೆಯನ್ನು ಹಾಗೆಯೇ ತಡೆದುಕೊಂಡರು. ಹತ್ತು ನಿಮಿಷ ಮೂಕರಂತೆ ಕುಳಿತಿದ್ದ ಅವರ ಮನಸ್ಸು ಕಲ್ಲೇಶನ ಸಂಸಾರವನ್ನು ಕುರಿತು ಯೋಚಿಸುತ್ತಿತ್ತು. ಆ ಮುಂಡೆ ಒಳ್ಳೆಯೋಳಲ್ಲ. ಹೊಟ್ತೆಗೆ ಹಾಕದೆ ಹುಡುಗನನ್ನ ಸಾಯಲು ಮಾಡಿದಾಳೆ. ಕಲ್ಲೆಶನೂ ಹೊಡೀತಾನಂತೆ. ನಾನೇ ಕರ್ಕಂಡ್ ಇಟ್‌ಕೊಂಡ್ರೆ ಹ್ಯಾಗೆ?-ಎಂಬ ಯೋಚನೆ ಬಂತು. ತಾವು ಹರೆದೊಯ್ದು ಏನು ಮಾಡುವುದು? ಹೋಟೆಲಿನಲ್ಲಿ ಬೇಷಕ್ ಊಟ, ಕುದುರೆ ಸವಾರಿ, ಮಾಟ ಮದ್ದು…..ಛೆ ಇದೆಲ್ಲ ಬ್ಯಾಡ-ಎಂದು ಅವರ ಮನಸ್ಸೇ ಹೇಳಿತು. ಈ ಪರಿಸ್ಥಿತಿಯಲ್ಲಿ ಅವನನ್ನು ಸಾಕುವಂಥೋರು ಯಾರೂ ಇಲ್ಲ. ಈ ಅಯ್‌ನೋರೇ ನಂಬಿಕಸ್ಥರು. ಈತ ದೆವರಸಮ ಮನುಷ್ಯ ಅಂತ ನಂಜುವೇ ಹೇಳ್ತಿದ್ದಳಲ್ಲ-ಎಂದು ಯೋಚಿಸಿದ ಅವರು ಬಾಯಿಬಿಟ್ಟು ಕೇಳಿದರು: ‘ನೋಡಿ, ನಾನು ಇವತ್ತು ಇಲ್ಲಿಗೆ ಬಂದದ್ದು ಯೋಗಾಯೋಗ. ನಾನಿಲ್ಲದೆ ಇದ್ದಿದ್ರೆ ನೀವು ಕಲ್ಲೇಶುನ್ನೇ ಕೇಳಬೇಕಾಗಿತ್ತು. ಅವನು ಕಳುಸ್ತಿರ್‌ಲಿಲ್ಲ. ಆಗ ಏನು ಮಾಡ್ತಿದ್ರಿ?’
‘ಈಗ ನೀವೇ ಬಂದಿದೀರಲಾ. ಆ ಮಾತ್ಯಾಕೆ?’
‘ಮಸಲಾ ಮಾತು. ಬರದೇ ಇದ್ದಿದ್ರೆ ಏನು ಮಾಡ್ತಿದ್ರಿ, ನಿಜ ಹೇಳಿ.’
‘ನಿಜ ಹೇಳಲೇನು? ನಾಳೆ ದಿನ ನಮ್ಮ ಉಡುಗ ಇಸ್ಕೂಲಿಗೆ ಓಗಿದ್ದಾಗ ಅಲ್ಲಿಂದ್ಲೇ ಅವನ ಕೈ ಇಡಕಂಡು ಕರ್ಕಂಡ್‌ಹೋಯ್ತಿದ್ದೆ. ನನ್ನ ಯಾವಾನಾದ್ರೂ ತಡಿಯುಕ್ ಬಂದಿದ್ರೆ ಜವಾಬ್ ಏಳಿತಿದ್ದೆ.’
ಜೋಯಿಸರು ಅರ್ಧ ನಿಮಿಷ ಅವರನ್ನೇ ಎವೆ ಇಕ್ಕದೆ ನೋಡುತ್ತಿದ್ದು, ನಂತರ ತಾವು ಕುಳಿತಲ್ಲಿಂದ ಎದ್ದು ಹೋಗಿ ಅವರ ಭುಜ ತಟ್ಟಿ-‘ವಾರೆ ವಾ. ಅಯ್ನೋರೇ, ನೀವು ಗಂಡು. ಶಾಬಾಸ್, ಕರ್ಕಂಡು ಹೋಗಿ. ಕಲ್ಲೇಶುಂಗೆ ನಾನ್ ಹೇಳ್ತೀನಿ’-ಎಂದವರೇ ಎದ್ದು ಮನೆಗೆ ಹೋದರು.

ಅಯ್ಯನವರು ಬಿನ್ನ ತೀರಿಸಿ ಸಣ್ಣದಾಗಿ ಒಂದು ನಿದ್ದೆ ಮುಗಿಸಿ ಬೇಕೆಂದೇ ಸ್ವಲ್ಪ ತಡಮಾಡಿ ಮನೆಗೆ ಬರುವುದರೊಳಗೆ ಕಂಠೀಜೋಯಿಸರು ಮಗನನ್ನು ಒಪ್ಪಿಸಿದ್ದರು. ಅದೆ ದಿನ ತಾವೇ ಸ್ಕೂಲಿಗೆ ಹೋಗಿ ಹುಡುಗನ ಸರ್ಟಿಫಿಕೇಟ್ ತೆಗೆಸಿಕೊಟ್ತರು. ಮರುದಿನ ಬೆಳಿಗ್ಗೆ ಅವನ ಬಟ್ಟೆಬರೆಗಳನ್ನೆಲ್ಲ ಕಟ್ಟಿ ಅಯ್ಯನವರು ಹೆಗಲಿಗೆ ಹಾಕಿಕೊಂಡರು. ‘ಮಗಾ, ಅಜ್ಜಯ್ಯ, ಮಾವ, ಅತ್ತೆಮ್ಮ, ಎಲ್ರಿಗೂ ಕಾಲು ಮುಟ್ಟಿ ಶರಣು ಮಾಡ್ಕಳಪ್ಪಾ’- ಎಂದು ಹೇಳಿದರು. ನಮಸ್ಕಾರ ಮಾಡಿಸಿಕೊಳ್ಳುವಾಗ ಕಮಲು ಕಲ್ಲಿನಂತೆ ನಿಂತಿದ್ದಳು. ಕಲ್ಲೇಶ ಮಾವನ ಕಣ್ಣು ಹನಿಗೂಡುತ್ತಿತ್ತು.

ನೆನ್ನೆ ಸಂಜೆಯಿಂದ ಕಂಠೀಜೋಯಿಸರು ತುಂಬ ಮಂಕಾಗಿದ್ದರು. ರಾತ್ರಿ ಊಟವನ್ನೂ ಮಾಡಲಿಲ್ಲ. ರಾತ್ರಿ ಇಬ್ಬರೂ ಜೊತೆಯಲ್ಲಿ ಜಗುಲಿಯಮೇಲೆ ಮಲಗಿದ್ದರೂ ಅವರು ಅಯ್ಯನವರ ಕೈಲಿ ಸಹ ಮಾತನಾಡಿರಲಿಲ್ಲ. ಕಲ್ಲೇಶನೊಡನೆ ಅವರೂ, ಇವರಿಬ್ಬರನ್ನು ಕಲಿಸಲು ಜೀನು ಹಾಕಿದ ಕುದುರೆಯ ಕಡಿವಾಣವನ್ನು ಹಿಡಿದು, ಅದನ್ನೂ ನಡೆಸಿಕೊಂಡು ಕೆರೆಯ ಈಚೆ ಕೋದಿಯತನಕ ಬಂದರು. ಕೋಡಿ ದಾಟಿದಮೇಲೆ ಅವರೇ ಮಗನಿಗೆ ಹೇಳಿದರು: ‘ಕಲ್ಲೇಶ ನೀನು ವಾಪಸ್ ನಡಿ. ನಾನು ಒಂದರ್ಧ ಮೈಲೀತಂಕ ಇವರ ಜೊತೆ ಹೋಗಿಬತ್ತೀನಿ.’
ಹಿಂದಕ್ಕೆ ಹೊರಡುವ ಮುನ್ನ ಕಲ್ಲೇಶ ಅಯ್ಯನವರಿಗೆ ಹೇಳಿದ: ‘ನಾನೇನೋ ಸ್ವಲ್ಪ ಶಿಕ್ಷೇಲೇ ಇಟ್ಟಿದ್ದೆ. ಇವನ ತುಂಟತನ ಜಾಸ್ತಿ. ಹತೋಟೀಲಿ ಇಡು ಅಂತ ನಂಜುವೇ ಹೇಳಿದ್ಲು. ಇಲ್ದೆ ಇದ್ರೆ ಇವನು ಕೆಟ್ಟುಹೋಗ್ತಾನೆ. ಅಲ್ಲಿ ನೀವು ಭಯ ಇಟ್ಟಿರಿ.’
‘ನ್ಯಾಯ, ನ್ಯಾಯ. ಸಾವಿರ ಉಳಿ ಪೆಟ್ಟು ಬಿದ್ರೆತಾನೆ ಕಲ್ಲು ಸಿವಲಿಂಗವಾಗೂದು? ಆದ್ರೆ ಜಾಗ ನೋದಿ ಹದ ಇಡಿದು ಹ್ವಡೀಬೇಕು. ನೀವು ಮಾಡಿದ್ದು ವಳ್ಳೇದುಕ್ಕೆ ಆಯ್ತು ಬುಡಿ’-ಅಯ್ಯನವರು ಉತ್ತರ ಹೇಳಿದಾಗ ಕಲ್ಲೇಶನ ಮುಖ ಕೆಳಗೆ ಬಾಗಿತು. ಮತ್ತೆ ಮಾತನಾಡದೆ ಅವನು ಹೊರಟುಹೋದ.
ಕುದುರೆ ಮತ್ತು ಮೂವರೂ ನೂರು ಹೆಜ್ಜೆಗೂ ಮೀರಿ ನಡೆದಮೇಲೆ ಅಯ್ಯನವರೇ ಕಂಠೀಜೋಯಿಸರಿಗೆ -‘ನೀವು ನಡೀರಿ. ನಾವು ಬ್ಯಾಗ ಬ್ಯಾಗ ಕಾಲು ಹಾಕ್ತೀವಿ’ ಎಂದರು.

ಜೋಯಿಸರು ಅದೇನೋ ಮಾತನಾಡಲು ಪ್ರಯತ್ನಿಸುತ್ತಿದ್ದರಾದರೂ ಮಾತು ಬಾಯಿಂದ ಹೊರಡುತ್ತಿರಲಿಲ್ಲ. ಅವರು ಕುದುರೆಯೊಡನೆ ನಿಂತುಕೊಂದರು. ಹತ್ತಿರವೇ ಅಯ್ಯನವರೂ ನಿಂತರು. ನಡುವೆ, ಅವರಿಬ್ಬರ ಸೊಂಟದ ತನಕ ಬೆಳೆದ ವಿಶ್ವ. ಐದು ನಿಮಿಷ ಯಾರೂ ಮಾತನಾಡಲಿಲ್ಲ. ಅಯ್ಯನವರೇ-‘ನಾವು ಹೊರಡಾಣವೇ?’ ಎಂದಾಗ ಅವರೆಂದರು: ‘ಇಲ್ಲಿ ಕೇಳಿ. ಅಯ್ನೋರೇ ನೀವು ಗಂಡು.’
ಅಯ್ಯನವರಿಗೆ ಏನೂ ತಿಳಿಯಲಿಲ್ಲ: ‘ಇದೇನು ನೀವನ್ನೂದು?’
‘ಏನೂ ಇಲ್ಲ. ಇದ ತಗಾಳಿ’-ಎಂದು ತಮ್ಮ ಒಳ ಅಂಗಿಯ ಜೇಬಿಗೆ ಕೈಹಾಕಿ ಒಂದು ನೋಟಿನ ಪುಡುಕೆಯನ್ನು ತೆಗೆದು ಅವರ ಕಾವಿ ಅಂಗಿಯ ಜೇಬಿಗೆ ಹಾಕಿ. “ನೂರೈವತ್ತು ರೂಪಾಯಿ ಇದೆ. ನೀವು ಯಾವ ಊರಿಗಾದ್ರೂ ಇವನನ್ನ ಕರ್ಕಂಡ್‌ಹೋಗಿ. ಆಮ್ಯಾಲೆ ನಂಗೆ ಒಂದು ಕಾಗದ ಹಾಕಿ. ‘ಚೆನ್ನರಾಯಪಟ್ಣ, ಮಸೀತಿ ಹಿಂದಿನ ದೆವ್ವದ ಮನೆ ವಾಸ, ನಾಗಲಾಪುರದ ಕಂಠೀಜೋಯಿಸರು’ ಅಂತ ಬರುದ್ರೆ ಸಾಕು” ಎಂದು ಹೇಳಿ, ತಮ್ಮ ದೊಡ್ದ ಶರೀರವನ್ನು ಬಾಗಿಸಿ ಮೊಮ್ಮಗನ ಎರಡು ಕೆನ್ನೆಗಳಿಗೂ ಮುತ್ತಿಟ್ಟು, ಅವನ ಮೈ, ಮುಖ, ಬೆನ್ನುಗಳನ್ನು ತಮ್ಮ ದಪ್ಪನಾದ ಅಂಗೈಯಿಂದ ತಡವಿ ಹಿಂತಿರುಗಿ ಕುದುರೆಯನ್ನೇರಿದರು. ಅವರ ಕಣ್ಣಂಚಿನಲ್ಲಿ ನೀರು ಕೂಡಿದ್ದುದು ಅಯ್ಯನವರಿಗೆ ಕಾಣಿಸಿತು. ಕುದುರೆಯ ಕೆಲಹೊಟ್ಟೆಗೆ ಕಾಲಿನಿಂದ ಸನ್ನೆಮಾಡಿ, ಮತ್ತೆ ಇವರ ಕಡೆ ನೋದದೆ ಬೇಗ ಬೇಗ ಊರಿನ ಕಡೆಗೆ ಓಡಿಸಿಕೊಂಡುಹೋದರು. ವಿಶ್ವ ಹಿಂತಿರುಗಿ ಅವರ ವೇಗವನ್ನೇ ನೋಡುತ್ತಾ ನಿಂತುಬಿಟ್ಟ. ಸ್ವಲ್ಪ ಹೊತ್ತಾದಮೆಲೆ ಅವನ ಕೈ ಹಿಡಿದು ಅಯ್ಯನವರು ಮುಂದೆ ಮುಂದೆ ನಡೆದರು.
ಅವರು ಅರ್ಧ ಮೈಲಿ ನಡೆದಿದ್ದರು. ವಿಶ್ವ ಏನೋ ಯೋಚಿಸುತ್ತಿದ್ದ. ಅವನಿಗೇ ಅರಿವಿಲ್ಲದಂತೆ ಅವನ ತುಟಿಗಳು ಅದೇನೋ ಮಾತನಾಡುತ್ತಿದ್ದವು. ‘ಅದೇನು ಯೇಚ್ನೆ ಮಾಡ್ತಿದೀ ಮರಿ?’-ಅಯ್ಯನವರು ಕೇಳಿದರು.
‘ಅಜ್ಜಯ್ಯನ ಹತ್ರ ಇದೆಯಲ, ಅಂಥದು ನಂಗೂ ಒಂದು ಕುದುರೆ ತಂದ್ ಕೊಡ್ತೀರಾ?’
‘ಅದ್ಯಾಕಪ್ಪ ನಮಗೆ?’
‘ನಂಗೆ ಅಂಥ ಕುದ್ರೆ ನೋಡಿದ್ರೆ, ಹತ್ತಿ ಈಗ ಅಜ್ಜಯ್ಯ ಹೋದ್ನಲಾ, ಅದುಕ್ಕಿಂತ ಜೋರಾಗಿ ಗಡಗಡಗಡ ಅನ್ನೂ ಹಾಗೆ ಓಡುಸ್ಬೇಕು ಅಂತ ಆಸೆಯಾಗುತ್ತೆ.’
‘ಇನ್ನೇನ್ ಆಶೆಯಾಗ್‌ತೈತಿ?’
‘ತುಂಬ ದೂರ ಈಜಬೇಕು ಅನ್ಸುತ್ತೆ.’
‘ಓದಬೇಕು ಅನ್ಸಾಕಿಲ್ವಾ?’
‘ಅನ್ಸುತ್ತೆ ಕಣ್ರೀ. ನಮ್ಮ ಕ್ಲಾಸಿನಲ್ಲಿ ಲೆಕ್ಕದಲ್ಲಿ ನಾನೆ ಫಸ್ಟು.’
‘ಇನ್ಯಾತ್‌ರಲ್ಲಿ ಪಸ್ಟು?’
‘ಮಾವನ ಮನ್ಲಿ ಓದಿಕಳುಕ್ಕೇ ಆಗ್ತಿರ್ಲಿಲ್ವಲ. ಇಲ್ದೆ ಇದ್ರೆ ಯಲ್ಲಾತ್ರಲ್ಲೂ ಪಸ್ಟು ಬತ್ತಿದ್ದೆ ಅಂತ ನಮ್ಮ ಮೇಷ್ಟ್ರೇ ಹೇಳಿದ್ರು.’
‘ಇನ್ನುಮ್ಯಾಲೆ ನೀನು ಬೇಕಾದೋಟು ಓದಿಕಣೂವಂತೆ. ಚೀಲದ ಬರ್ತಿ ಸಿಲೇಟು ಬುಕ್ಕು ತಂದುಕೊಡ್ತೀನಿ. ನಡೀ ಮಗಾ.’
‘ನಾವು ನಮ್ಮೂರಿಂದ ಯಾವೂರಿಗೆ ಹೋಗಾಣಾ?’
‘ನಾನಿನ್ನೂ ಯೇಚ್ನೆ ಮಾಡಿಲ್ಲ. ಗುಬ್ಬಿಗೋ ತುಮಕೂರಿಗೋ ಓಗಾನ.’
‘ಅಯ್ನೋರೇ, ಯಾವೂರಿಗೆ ಹೋದ್ರೂ ನಂಗೆ ಈಜಾಡುಕ್ಕೆ ಒಂದು ಕೆರೆ ಇರ್‌ಬೇಕು. ಒಂದೊಂದು ದಿನ ಯಾರುದ್ದಾದ್ರೂ ಕುದ್ರೆ ಕೊಡುಸ್ರಿ. ಕೂತ್ಕಬೇಕು ಅನ್ಸುತ್ತೆ.’

‘ಆಗ್ಲಿ ನೋಡಾಣ, ಬಾ ಮರಿ’-ಎಂದು ಅವರು ಕತ್ತು ತಿರುಗಿಸಿ ಅವನ ಮುಖ ನೋಡಿದರು. ತಕ್ಷಣ ಕಂಠೀಜೋಯಿಸರ ನೆನಪಾಯಿತು.

– ೪ –

ಅವರು ಅದೇ ದಿನ ರಾಮಸಂದ್ರ ಮುಟ್ತಿದರು. ಗಂಗಮ್ಮ ಊರಿನಲ್ಲಿರಲಿಲ್ಲ. ಸಂಜೆಗೇ ನಮ್ಮ ಹತ್ತಿರ ಇದ್ದ ರಾಗಿ, ಕಾಳು, ಮೆಣಸಿನಕಾಯಿಗಳನ್ನು ಅಯ್ಯನವರು ಮಾರಿಬಿಟ್ಟರು. ನೂರ ಇಪ್ಪತ್ತು ರೂಪಾಯಿ ಬಂತು. ಅದಲ್ಲದೆ ಅವರ ಹತ್ತಿರ ಒಟ್ಟು ನಲವತ್ತು ಬೆಳ್ಳಿಯ ರೂಪಾಯಿ ಇತ್ತು. ಕಂಠೀಜೋಯಿಸರು ಕೊಟ್ಟಿದ್ದ ನೂರ ಐವತ್ತು ಒಳ ಅಂಗಿಯಲ್ಲಿತ್ತು. ಹಣವನ್ನು ಅವರು ಸೊಂಟಕ್ಕೆ ಕಟ್ಟಿಕೊಂಡರು. ಅಲ್ಯೂಮಿನಿಯಂ ಪಾತ್ರೆಗಳು ಮತ್ತು ಕಂಬಳಿ ಬಟ್ಟೆಗಳನ್ನು ಹೊರಲು ಒಬ್ಬ ಆಳನ್ನು ಗೊತ್ತುಮಾಡಿಕೊಂಡರು. ಬೆಳಿಗ್ಗೆ ಹೊರಡುವ ಮುನ್ನ ವಿಶ್ವ ಕೇಳಿದ: ‘ಅಯ್ನೋರೇ, ನಮ್ಮಮ್ಮ ಖಂಡಿತ ಸತ್ಹೋಗಿದಾಳಾ?
‘ಹೌದು ಮರಿ.’
‘ನಾನು ನಮ್ಮನೆ ಒಳಗೆ ನೋಡಬೇಕು.’
‘ಅಲ್ಲೇನೈತಿ ಅಂತ ನೋಡ್ತೀಯಾ?’
‘ಊಂ, ನಾನು ನೋಡ್‌ಬೇಕು’-ಎಂದು ಅವನು ಹಟ ಮಾಡಿದ.

ಆ ಮನೆ ಖಾಲಿಯಾದಮೇಲೆ ಅದರ ಬೀಗದ ಕೈ ಗುಂಡೇಗೌಡರ ಸಂಬಂಧಿಯಾದ ಕುರುಬರಹಟ್ಟಿಯ ಮುದ್ದಯ್ಯನ ಹತ್ತಿರ ಇರುವುದು ಅಯ್ಯನವರಿಗೆ ಗೊತ್ತಿತ್ತು. ಮುದ್ದಯ್ಯನನ್ನು ಕರೆಸಿ ಬಾಗಿಲು ತೆಗೆಸಿದರು. ಜನವಸತಿ ಇಲ್ಲದೆ ಒಳಗೆಲ್ಲ ಧೂಳು ಮತ್ತು ಮಲೆತ ಗಾಳಿಯ ವಾಸನೆ ಬರುತ್ತಿತ್ತು. ಒಳಗೆ ಬಂದ ವಿಶ್ವ ಅಡಿಗೆಮನೆಗೆ ಹೋದ. ಅಲ್ಲಿಂದ ವಾಡೆಯ ಕೋಣೆಗೆ ಹೋಗಿ ಕತ್ತಲೆಯಲ್ಲೇ ತಡಕಾಡಿದ. ಕಂಬದ ಮೆಲಿಂದ ಅಟ್ತ ಹತ್ತಿ ನೋದಿದ. ಕೊನೆಗೆ ಗಟ್ಟಿಯಾಗಿ- ‘ಅಮ್ಮ ಲೇ, ನೀನ್ ಇಲ್ವೇನೇ/’ ಎಂದು ಕೂಗಿದ. ಉತ್ತರ ಬರಲಿಲ್ಲ. ಕೆಳಗೆ ಇಳಿದು ಬಂದು-ಅಯ್ನೋರೇ, ಹಾಗಾದ್ರೆ ಅಮ್ಮ ನಿಜವಾಗ್ಲೂ ಸತ್ಹೋದ್ಲಾ?’ ಎಂದು ಕೇಳಿದ.

ಬಾಗಿಲು ತೆಗೆಯಲು ಬಂದಿದ್ದ ಮುದ್ದಯ್ಯ ಕಲ್ಲಿನಂತೆ ನಿಂತಿದ್ದ. ‘ಹೌದು ಮರಿ, ಅಮ್ಮ ಖಂಡಿತ ಸತ್ಹೋಗೈತೆ’-ಅಯ್ಯನವರೆಂದರು.
ವಿಶ್ವ ಗಟ್ಟಿಯಾಗಿ ಅಳಲು ಶುರುಮಾಡಿದ. ಅವನನ್ನು ತಬ್ಬಿ ಸಮಾಧಾನ ಮಾದಿದ ಮೇಲೆ ಹೇಳಿದರು: ‘ನಡಿ ಹ್ವಾಗಾನ.’
ಅವನು ಸುಮ್ಮನೆ ಅವರ ಹಿಂದೆ ಬಂದ. ಆಳು ಅವರ ಪಾತ್ರೆಗಳ, ಕಂಬಳಿ ಬಟ್ಟೆಗಳ ಚೀಲವನ್ನು ತಲೆಯಮೇಲೆ ಹೊತ್ತು ಮುಂದೆ ನಡೆದ. ತಮ್ಮ ಏಕತಾರಿ ಚಿಟಿಕೆಗಳನ್ನು ಹಿಡಿದು ಅಯ್ಯನವರು ನಡೆದರು. ತುಂಬ ಬಡವಾಗಿದ್ದುದರಿಂದ ಅವರ ಹಿಂದೆ ಹೋಗುತ್ತಿದ್ದ ವಿಶ್ವನ ಗುರುತು ಊರಿನಲ್ಲಿ ಯಾರಿಗೂ ಸಿಕ್ಕಲಿಲ್ಲ. ತಾವು ಈ ಊರು ಬಿಟ್ಟು ಹೋಗುತ್ತಿರುವುದನ್ನು ಅಯ್ಯನವರು ಯಾರಿಗೂ ಹೇಳಲಿಲ್ಲ. ಯಾಕೆ, ಏನು, ಎಂದು ಎಲ್ಲರೂ ಕೇಳುತ್ತಾರೆ. ಅವರಿಗೆ ಎಲ್ಲವನ್ನೂ ಹೇಗೆ ಬಿಡಿಸಿ ಹೇಳುವುದು?

ಕಂಬನಕೆರೆಯ ಕಡೆ ದಾರಿಯಲ್ಲಿ ನಡೆದು ಮೋಟಾರು ರಸ್ತೆ ತಲುಪಬೇಕು. ಆಳು ಸಾಮಾನು ಹೊತ್ತು ತುಂಬ ಮುಂದೆ ಹೋಗುತ್ತಿದ್ದ. ಅವನ ವೇಗದಲ್ಲಿ ನಡೆಯಲಾರದೆ ಅಯ್ಯನವರು ಹಿಂದೆ ಉಳಿದರು. ಅವರು ಕೈ ಹಿಡಿದುಕೊಂಡಿದ್ದರೂ ವಿಶ್ವ ಅಯ್ಯನವರಿಗಿಂತ ಹೆಚ್ಚು ಅಂತರ್ಮುಖಿಯಾಗಿ ಕತ್ತು ತಗ್ಗಿಸಿಕೊಂಡು ಹೆಜ್ಜೆ ಹಾಕುತ್ತಿದ್ದ. ಇವರು ಊರು ಬಿಟ್ಟು ಒಂದು ಮೈಲಿ ಬಂದಿದ್ದರು. ದಾರಿಯ ಒಂದು ಮರದ ಕೆಳಗೆ ಒಂದು ಸಣ್ನ ರಾಗಿಯ ಗಂಟಿಗೆ ತಲೆ ಇಟ್ಟುಕೊಂಡು ಚೆನ್ನಿಗರಾಯರು ಮಲಗಿದ್ದರು. ಬಾಯಿ ತುಂಬ ಹೊಗೆಸೊಪ್ಪಿನ ರಸ ತುಂಬಿದ್ದ ಅವರು ಅಂಗಾತ ಮಲಗಿಯೇ, ಅದು ಕೆಳಗೆ ಸೋರದಂತೆ ತುಟಿಗಳನ್ನು ಸವಣಿಸಿಕೊಳ್ಳುತ್ತಿದ್ದರು. ಅವರನ್ನು ಅಯ್ಯನವರೂ ನೋದಿದರು. ಈ ಇಬ್ಬರ ಹೆಜ್ಜೆ ಸಪ್ಪಳದಿಂದ ತಿರುಗಿ ನೋದಿದ ಅವರು ಎದ್ದು ಕುಳಿತರು. ಅಯ್ಯನವರು ತಾವಾಗಿಯೇ ಅವರನ್ನು ಮಾತನಾಡಿಸಲಿಲ್ಲ. ಹತ್ತಿರವೇ ಇದ್ದ ಕಟ್ಟೆಯ ಹಿಂಭಾಗದಲ್ಲಿ ಗಂಗಮ್ಮ ನೀರಕಡೆಗೆ ಹೋಗಿರಬಹುದು. ಇನ್ನು ಅವಳು ಕಂಡರೆ-‘ನನ್ನ ಮಮ್ಮಗುನ್ನ ಎಲ್ಲಿಗೆ ಕರ್ಕಂಡ್‌ಹೋಗ್ತೀರಾ?’ ಅಂತ ಕೇಳಬಹುದು, ಎಂದು ಯೋಚಿಸಿದ ಅಯ್ಯನವರು ಬೇಗ ಬೇಗ ಹೆಜ್ಜೆ ಹಾಕಿದರು. ತಾವೇ ಮಾತನಾದಲು ಚೆನ್ನಿಗರಾಯರು ಬಾಯಿ ತುಂಬ ತಂಬುಲ ತುಂಬಿಕೊಂಡಿತ್ತು.
‘ನಮ್ಮಣ್ಣಲ್ವೇ?’- ವಿಶ್ವ ತಕ್ಷಣ ಕೇಳಿಬಿಟ್ಟ. ಚೆನ್ನಿಗರಾಯರಿಗೆ ಗುರುತು ಸಿಕ್ಕಿತು. ಏನೋ ಮಾತನಾದಬೇಕೆಂದು ಅವರ ಬಾಯಿ ಹವಣಿಸಿತು. ಆದರೆ, ಈಗ ತಾನೇ ರಸವನ್ನು ಒಸರಿಸುತ್ತಿದ್ದ ಹೊಗೆಸೊಪ್ಪನ್ನು ಉಗುಳಿಬಿಟ್ಟರೆ ಹತ್ತಿರ ಬೇರೆ ಒಂದು ಚೂರೂ ಇರಲಿಲ್ಲ. ಏನು ಮಾಡಬೇಕೆಂದು ಅವರು ನಿಶ್ಚಯಿಸುವಷ್ಟರಲ್ಲೇ ಅವರಿಬ್ಬರೂ ಮೂವತ್ತು ನಲವತ್ತು ಹೆಜ್ಜೆ ಮುಂದೆ ಹೋಗಿದ್ದರು. ವಿಶ್ವ ಹಿಂದೆ ಹಿಂದೆ ತಿರುಗಿ ನೋಡುತ್ತಿದ್ದ.
‘ಆ ಕಡೆ ನೋಡ್‌ಬ್ಯಾಡ, ಸುಮ್ನೆ ನಡಿ ಮರಿ’- ಅಯ್ಯನವರೆಂದರು.

ಬಾಯ ತಂಬುಲದ ರಸವನ್ನು ಉಗುಳುವುದು ಚೆನ್ನಿಗರಾಯರಿಗೆ ಆಗಲೇ ಇಲ್ಲ. ಆದುದರಿಂದ ಮಾತನಾಡುವುದು ಸಾಧ್ಯವಾಗಲಿಲ್ಲ. ಈ ಜಂಗಮಯ್ಯ ನನ್ನ ಕಂಡ್ರೂ ಮಾತಾಡುಸ್ದೆ ಹೋದ್ನಲಾ, ಅವ್ನು ಇನ್ನೊಂದ್ ಸಲಿ ಸಿಕ್ಲಿ, ಸರಿಯಾಗಿ ಕೇಳ್ತೀನಿ- ಎಂದು ಅವರ ಮನಸ್ಸು ಯೋಚಿಸುತ್ತಿತ್ತು. ಮುಂದೆ ಸಿಕ್ಕಿದ ದಿಬ್ಬವನ್ನು ಇಳಿದು ನದೆದಿದ್ದುದರಿಂದ ಅವರಿಬ್ಬರೂ ಅಷ್ಟರಲ್ಲಿ ಕಣ್ಮರೆಯಾಗಿ ಹೋಗಿದ್ದರು.
*****
ಮುಗಿಯಿತು

ಕೀಲಿಕರಣ: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.