ನೆಟ್‌ನಲ್ಲಿ-ಪುತಿನರವರ ಸಾಹಿತ್ಯ

ಕನ್ನಡಸಾಹಿತ್ಯ.ಕಾಂ ಪ್ರಕಟಣೆಯ ವಲಯದಲ್ಲಿ ಎಷ್ಟೋ ಸಾಹಿತಿಗಳು ಇಲ್ಲ. ಹಾಗೆಯೇ ಪುತಿನರ ಸಾಹಿತ್ಯವೂ ಇಲ್ಲಿಯವರೆಗೆ ನೆಟ್‌ನಲ್ಲಿ ಇರಲಿಲ್ಲ. “ಗೋಕುಲ ನಿರ್ಗಮನ” ವನ್ನು ಪ್ರಸಕ್ತಗೊಳಿಸುವ ಕೆ ವಿ ಸುಬ್ಬಣ್ಣನವರ ಲೇಖನವನ್ನು ಪ್ರಕಟಿಸಿದಾಗ “ಪುತಿನ”ರವರ ಮೂಲ ಕೃತಿಗಳು ಕನ್ನಡಸಾಹಿತ್ಯ.ಕಾಂ ನಲ್ಲಿಲ್ಲವಲ್ಲ ಎಂದೆನ್ನುವ ಕೊರತೆ ಇತ್ತು. ವಿಶ್ವನಾಥ್ ಹುಲಿಕಲ್‌ರವರ ನೆರವಿನಿಂದ ಯು ಎಸ್ ಎ ಯಲ್ಲಿರುವ ಶ್ರೀಮತಿ ಅಲಮೇಲು ಅಯ್ಯಾಂಗಾರ್‌ರ ಸಂಪರ್ಕ ದೊರೆತು ಅವರ ಮೂಲಕ ಐ ಐ ಎಂ ನಲ್ಲಿ ಪ್ರೊಫೆಸರ್ ಅಗಿರುವ ಶ್ರೀ ಪಿ ಎನ್ ತಿರುನಾರಾಯಣರವರ ಸಂಪರ್ಕ ದೊರೆತು ಒಮ್ಮೆ ಹೋಗಿ ಅವರನ್ನು ಭೇಟಿ ಮಾಡಿದೆ. ತಿರುನಾರಾಯಣರವರು ಪುತಿನರವರ ಸಾಹಿತ್ಯದ ೨-೩ ಲೇಖನಗಳನ್ನು, ೩-೪ ಕತೆಗಳನ್ನು ಹಾಗು ೧೦ ಕವನಗಳನ್ನು ಕನ್ನಡಸಾಹಿತ್ಯ.ಕಾಂ ನಲ್ಲಿ “ಎಕ್ಸ್‌ಕ್ಲೂಸಿವ್” ಆಗಿ ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ಈ ಸಂಖ್ಯೆಗೆ ಒಳಪಟ್ಟು ಕನ್ನಡಸಾಹಿತ್ಯ.ಕಾಂ ಪ್ರಕಟಿಸುವ ಪ್ರಕಟಣೆ ಕನ್ನಡಸಾಹಿತ್ಯ.ಕಾಂಗಿರುವ “ಎಕ್ಸ್‌ಕ್ಲೂಸಿವ್” ಆದ ಹಕ್ಕುಗಳು. ಬೇರೆ ಯಾರಾದರೂ, ಇಂಟರ್‌ನೆಟ್‌ನಲ್ಲಿ ಬಳಸಬೇಕಾದರೆ ಅವರು ಕನ್ನಡಸಾಹಿತ್ಯ.ಕಾಂ ಅನುಮತಿ ಪಡೆಯಬೇಕು. ಅದರಲ್ಲಿ “ವಾಣಿಜ್ಯೋದ್ದೇಶವಿದ್ದರೆ” ಅದರ ಸಂದರ್ಭಾನುಸಾರ, ಅಂತಹವರ ಬಳಿ “ಮಾತನಾಡುವ” ಹಕ್ಕನ್ನು ಕನ್ನಡಸಾಹಿತ್ಯ.ಕಾಂ ಪ್ರತಿನಿಧಿಸುವ ನಾನು ಹಾಗು ಮಿತ್ರ ಎಂ ಆರ್ ರಕ್ಷಿತ್ ಉಳಿಸಿಕೊಂಡಿದ್ದೇವೆ. ಕನ್ನಡದ ಸಾಹಿತ್ಯ ಪ್ರಕಟಣೆಯ ಹಿನ್ನೆಲೆಯಲ್ಲಿ ಅನೇಕ ಸಾಹಿತಿಗಳಿಗೆ ಅನ್ಯಾಯವಾಗಿದೆ. ಹಕ್ಕುಗಳನ್ನು ಕೆಲವರು “ಹಿಡಿದಿಟ್ಟುಕೊಂಡು” ಅದನ್ನು ಸಾರ್ವಜನಿಕರಿಗೆ ಬಿಟ್ಟುಕೊಡದ್ದರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ದ್ರೋಹವಾಗಿದೆ, ಅಪಾಯವಾಗಿದೆ ಎನ್ನುವ ಅನೇಕ ದೃಷ್ಟಾಂತಗಳ ಅರಿವಿದ್ದೂ ಇದನ್ನು “ಎಕ್ಸ್‌ಕ್ಲೂಸಿವ್” ಆದ ಹಕ್ಕುಗಳು ಎನ್ನುವುದನ್ನು ಇಲ್ಲಿ ಒತ್ತಿ ಹೇಳುತ್ತಿದ್ದೇನೆ. ಸಾರ್ವಜನಿಕರ ಪಾಲು ಕನ್ನಡಸಾಹಿತ್ಯ.ಕಾಂ ನಲ್ಲಿರುವವರೆಗೆ ಇದರಿಂದ ನಾನು ಯಾವುದೇ ಲಾಭವನ್ನು ಬಯಸುವುದಿಲ್ಲ. ಜೊತೆಗೆ ಹೀಗೆ ಹಕ್ಕುಗಳನ್ನು ನೀಡಿರುವ “ಹಕ್ಕುದಾರರೂ” ಬಯಸುವುದಿಲ್ಲವೆನ್ನುವ ಭರವಸೆ ಇದೆ. ಇಂಟರ್‌ನೆಟ್ ಎಂದೊಡನೆ, ಸಾಹಿತ್ಯವೆಂದೊಡನೆ “ಎಲ್ಲರ” ಹಕ್ಕಾಗುವುದಿಲ್ಲ. ಹಕ್ಕು ಎಂದರೆ “ಉಚಿತ”ವೆಂದೂ ಅರ್ಥವಲ್ಲ. ನಾವು “ಈ ಲೇಖನಗಳಿಂದ “ಲಾಭ”ಗಳಿಸಿದರೆ ಅದರ ಅಂಶವನ್ನು ಪುತಿನ ಕೃತಿಗಳ ಹಕ್ಕುದಾರರಿಗೂ ನೀಡಬೇಕು ಎನ್ನುವ ನಿಯಮಕ್ಕೊಳಪಟ್ಟಿದ್ದೇವೆ. “ಅದಾಯದ ಹಂಚಿಕೆ” ಎನ್ನುವುದು ನಾವು ಬಳಸಿರುವ ಎಲ್ಲ ಸಾಹಿತ್ಯ ಕೃತಿಗಳಿಗೂ ಅನ್ವಯವಾಗುತ್ತದೆ. ಅಲ್ಲಿಯವರೆಗೆ, ಜೊತೆಗೆ ಈಗ ಇರುವ ಅನುಮತಿ ಹಾಗು ಹಕ್ಕುಗಳನ್ನು ಲೇಖಕರು ಪುನರ್‌ಪರಿಶೀಲಿಸುವವರೆಗೆ, ಕನ್ನಡಸಾಹಿತ್ಯ.ಕಾಂ ಈಗ ಇರುವ ರೀತಿಯಲ್ಲೇ ಮುಂದುವರೆಯುತ್ತದೆ. ಆರ್ಥಿಕವಾಗಿ ಲಾಭ ಮಾಡಬಹುದಾದಂತಹ ಸುಭಿಕ್ಷ ಕಾಲ “ಇಂಟರ್‌ನೆಟ್” ಮೂಲಕ ಬರುವಂತಾದರೆ, ಆ ಗಳಿಗೆ ನಿಜಕ್ಕೂ ಸಾರ್ಥಕ. ಇನ್ನೂ ಸ್ಪಷ್ಟ ಮಾತುಗಳಲ್ಲಿ ಹೇಳಬೇಕಾದರೆ ಕನ್ನಡಸಾಹಿತ್ಯ.ಕಾಂ ಎನ್ನುವುದು “ಖಾಸಗಿಯಾದ ಆಸ್ತಿ”- ಇದನ್ನು ವಿರೋಧಿಸುವವರು ಪರ್ಯಾಯಗಳನ್ನು ರಚಿಸುವಲ್ಲಿ, ಹುಡುಕುವಲ್ಲಿ “ಹೊಣೆಗಾರಿಕೆ ಹೊರಬೇಕಾಗುತ್ತದೆ. ಈ ಹೊಣೆಗಾರಿಕೆಯಿಂದ ಕನ್ನಡಸಾಹಿತ್ಯ.ಕಾಂ ಹಿಂಜರಿದಿಲ್ಲ ಎನ್ನುವುದನ್ನು ಇಲ್ಲಿ ಯಾವುದೇ ಸಂಕೋಚವಿಲ್ಲದೆ ಹೇಳಬಲ್ಲೆ.

ಅನುಮತಿ ದೊರಕಿಸುವಲ್ಲಿ ಸಹಕರಿಸಿದ ಶ್ರೀ ವಿಶ್ವನಾಥ ಹುಲಿಕಲ್ ಹಾಗು ಶ್ರೀಮತಿ ಅಲುಮೇಲು ಅಯ್ಯಂಗಾರ್‌ರವರಿಗೆ ಮತ್ತು “ಎಕ್ಸ್‌ಕ್ಲೂಸಿವ್ ” ಆದ ಅನುಮತಿ ನೀಡಿದ ಶ್ರೀ ಪಿ ಎನ್ ತಿರುನಾರಾಯಣರಿಗೆ ಧನ್ಯವಾದಗಳು. ಈ ಬಾರಿ ಪುತಿನರವರ ಎರಡು ಲಲಿತ ಪ್ರಬಂಧಗಳನ್ನು ಪ್ರಕಟಿಸಲಾಗಿದೆ.

೮.೦೨-೨೦೦೬ ಸೇರಿಸಿದ್ದು: “ಖಾಸಗಿಯಾದ ಆಸ್ತಿ” ಎನ್ನುವ ಪದ ತಪ್ಪು ಅರ್ಥಗಳನ್ನು ಕಲ್ಪಿಸಿ ಬಿಡುತ್ತದೆ. ಒಂದು ರೀತಿಯಲ್ಲಿ “ನಿಷೇಧಿತ ಪ್ರದೇಶ” ಎಂದರೆ ಸರಿಯಾಗ ಬಹುದೆ? ಅಥವ “ವಿಶೇಷ ಪ್ರದೇಶ” ಎಂದರೆ ಸರಿಯಾಗ ಬಹುದೆ?

*
*
*
-ಮೇಲಿನ ಸಾಲುಗಳನ್ನು “ಇಂಟರ್‌ನೆಟ್”ನಲ್ಲಿ, ವೆಬ್‌ಟೆಕ್ನಾಲಜಿಯಲ್ಲಿ ಸುಮಾರು ಅನುಭವವಿರುವ ನಾನು ಪ್ರಜ್ಞಾಪೂರ್ವಕವಾಗಿ ಹೇಳಿದ್ದೇನೆ ಎನ್ನುವುದರಲ್ಲಿ ಸಂದಿಗ್ಧತೆಗೆ ಅವಕಾಶವೇ ಇಲ್ಲ. ಮತ್ತು ಇಲ್ಲಿ ಯಾವ ಉದ್ವಿಗ್ನತೆಯೂ ಇಲ್ಲ. ಕನ್ನಡಸಾಹಿತ್ಯ.ಕಾಂ ಆರಂಭವಾದಾಗ ಕನ್ನಡದ ಸಾಂಸ್ಕೃತಿಕ/ಸಾಹಿತ್ಯಿಕವಾದಂತಹ ಮತ್ತು “ಇನ್ನೂ ತೃತೀಯ ಜಗತ್ತಿನ ಗುಂಪಿನಲ್ಲೇ ಇರುವ (ಔಟ್ ಡೇಟಡ್ ಡೆಫಿನಿಶನ್?) ಭಾರತೀಯ ಸಂದರ್ಭಕ್ಕನುಸಾರವಾದ” ಪ್ರಾತಿನಿಧಿಕ ಶಕ್ತಿಯಾಗಿ ಪರಿಣಮಿಸಬಲ್ಲಂತಹ ಪ್ರಯತ್ನಗಳು ಇರಲೇ ಇಲ್ಲ. ಈಗ ತಾನೆ ಒಂದು ಚೂರು “ಬೀಜಾಂಕುರವಾಗಿದೆ”. ನಮ್ಮ ಅಸಾಹಾಯಕ ಸಂದರ್ಭಕ್ಕೆ ವಿರುಧ್ಧವಾಗಿರುವ, ಹಿತಾಸಕ್ತಿಗಳಿಗೆ ವಿರುಧ್ದವಾಗಿರುವ “ಗ್ಲೋಬಲೈಸೇಷನ್” (ಅಂದರೆ ಯಾವುದೇ ತಾರತಮ್ಯಗಳಿಲ್ಲದೆ “ಎಲ್ಲವನ್ನು ಒಂದೇ ಮಾಡಿಬಿಡುವ, ಬರಿಯ ಶ್ರೀಮಂತರ “ಹಕ್ಕುಗಳನ್ನು” ಮತ್ತಷ್ಟು ಹಿಗ್ಗಿಸಿಬಿಡುವ ಹುನ್ನಾರ) ನಾನಂತೂ ಸ್ಪಷ್ಟ ಮಾತುಗಳಲ್ಲಿ ವಿರೋಧಿಸುತ್ತೇನೆ.

ಈ ಮೇಲೆ ವಿವರಿಸಿರುವ ಅಂಶಗಳನ್ನು ಮತ್ತಷ್ಟು ವಿವರವಾದ ವಿಶ್ಲೇಷಣೆಯೊಂದಿಗೆ ಮುಂದಿನ ವಾರ ಇದೇ ಪುಟದಲ್ಲಿ ವಿಸ್ತರಿಸುತ್ತೇನೆ. ಆ ಮುಂಚೆ ಈ ಲೇಖನಕ್ಕೆ ಬರಬಹುದಾದ ಪ್ರತಿಕ್ರಿಯಗಳನ್ನು ಇದೇ ಪುಟದಲ್ಲಿ ಪ್ರಕಟಿಸಲಾಗುವುದು. ಆಸಕ್ತರಿಗೆ ಇದು ಮುಕ್ತವಾದ-ಉಚಿತ ಆಹ್ವಾನ.
*
*
*
ಇದು ಎಂದೋ ಆಗಲೇ ಬೇಕಾಗಿತ್ತು, ತಡವಾಗಿಯಾದರೂ ಆಗಿದೆ. ಕನ್ನಡಸಾಹಿತ್ಯ.ಕಾಂ ಆಯ-ವ್ಯಯವನ್ನು ಅಧಿಕೃತವಾಗಿ, ಕಾನೂನು ಪ್ರಕಾರ ಆಡಿಟ್ ಮಾಡಿಸಿದ “ಬ್ಯಾಲೆನ್ಸ್ ಶೀಟ”ನಲ್ಲಿ ಪ್ರಕಟಿಸಲಾಗಿದೆ. ಆಸಕ್ತರು ಇದನ್ನು ನೋಡಬಹುದಾಗಿದೆ. ಇದಕ್ಕೊಂದು ಸ್ವರೂಪ ಕೊಡುವಲ್ಲಿ ಸಹಕರಿಸಿದ ಎಂ ಕಿರಣ್ (ಕನ್ನಡಸಾಹಿತ್ಯ.ಕಾಂ ಬೆಂಬಲಕ್ಕಿರುವ ಯಾಹೂ ತಂಡದದ ಸದಸ್ಯರು), ಆದರ್ಶ ಬಿ ಎಲ್ (ಕಿರಣ್‌ರವರ ಸ್ನೇಹಿತರು) ಹಾಗು ಸಿ ವೇಣು ವಿಘ್ನೇಶ್ ( ಶೆಣೈ, ಪ್ರಸನ್ನ ಅಂಡ್ ಅಕೌಂಟೆಂಟ್ಸ್‌ನ ಪಾಲುದಾರರು, ಮಲ್ಲೇಶ್ವರಂ)-ಇವರಿಗೆಲ್ಲ ಧನ್ಯವಾದಗಳು. ವಿಘ್ನೇಶ್‌ರವರು ಯಾವುದೇ ರಿತಿಯ ಶುಲ್ಕ ವಿಧಿಸಿಲ್ಲ.
*
*
*

ಮುಕ್ತವಾಗದ ಸೀತಾರಾಂ ಹಾಗು ನಾನು…

ಮುಕ್ತ ಧಾರಾವಾಹಿ ಪ್ರಧಾನ ನಿರ್ದೇಶಕರಾದ ಟಿ ಎನ್ ಸೀತಾರಾಂರವರ ಬಗೆಗೆ ಒಂದು ಕುತೂಹಲವಿತ್ತು. “ನಮ್ಮದೊಂದು ಕಾಲ” ಎನ್ನುವ ಧ್ವನಿಯಲ್ಲಿ ಹೊರಟಾಗ, ಸೀತಾರಾಂರವರನ್ನು ಲಂಕೇಶ್‌ರ ಅನುರೂಪ, ಕ್ರಾಂತಿ ಬಂತು ಕ್ರಾಂತಿ ಇತ್ಯಾದಿಗಳ ನಡುವೆ ನೋಡಿಕೊಂಡು ಬಂದದ್ದರಿಂದ-ಆಗಿನ ಸೀತಾರಾಂರವರಿಗೂ ಈಗಿನ ಸೀತಾರಾಂರವರಿಗೂ ಏನಾದರೂ ವ್ಯತ್ಯಾಸವಿದ್ದರೆ…ಗ್ರಹಿಸಬೇಕು ಎನ್ನುವ ಕುತೂಹಲ: ಬೇಕಾದರೆ ಕೆಟ್ಟದ್ದೆನ್ನಿ.

ಅವರಿಗೆ ಜನವರಿ ಹನ್ನೊಂದರಂದು ಫೋನ್ ಮಾಡಿದ್ದೆ. ಸಿಜಿಕೆಯವರ ನಿಧನದ ವಾರ್ತೆ ನನಗೆ ಅವರಿಂದಲೇ ತಿಳಿದದ್ದು. ಆಪ್ತಮಿತ್ರನ ಅಗಲಿಕೆಯ ಸೂತಕದಲ್ಲಿದ್ದ ಅವರನ್ನು ಮಾತನಾಡಿಸಲು ಸಂಕೋಚವಾಗಿ ಮತ್ತೆ ರಾತ್ರಿ ಫೋನ್ ಮಾಡಿ ಒಂದರ್ಧ ಗಂಟೆ ಮಾತನಾಡಿದೆ. “ಆಗ ನಮಗೆ ಇದ್ದ ಸಂಭ್ರಮ- ಈಗಿನದಕ್ಕಿಂತಲೂ ಬಹಳ ಹತ್ತಿರವಾದದ್ದು. ಈಗಿನದಕ್ಕಿಂತಲೂ ಅತ್ಯಂತ ಮೌಲಿಕವಾದದ್ದು..” ಎನ್ನುವುದು ನಮ್ಮ ಸಂಭಾಷಣೆಯನಡುವೆ ಹಾದು ಹೋದ ತುಣುಕು. “ಹಾಗಾದರೆ ನಿಮಗೆ ನೋವಿದೆಯ?” ಎಂದು ತಟಕ್ಕನೆ ಪ್ರಶ್ನಿಸಿದ್ದೆ. ತರ್ಕಕ್ಕೆ ಸಿಕ್ಕಿಸಿ ಮಾತಿಗೆಳೆಯುವ ಹುನ್ನಾರವಂತೂ ನನ್ನದಾಗಿರಲಿಲ್ಲ. ಆಗ ಸೀತಾರಾಂರವರಿಂದ ಬಂದ ಉತ್ತರ ದಂಗು ಬಡಿಸಿತು (ನಿಜಕ್ಕೂ ದಂಗಾಗಿದ್ದೆನೆ?) “ಈಗಿನ ಸಂಭ್ರಮವೇ ಬೇರೆ. ಹೆಚ್ಚು ಜನರನ್ನು ತಲುಪುತ್ತಿದ್ದೇನೆ…ನನ್ನ ವಿಚಾರಗಳನ್ನೇ ಅವರು ಬಯಸುವ ರೀತಿಯಲ್ಲಿ ಸಂಯೋಜಿಸಿದ್ದೇನೆ..ಆದರೂ ಹಳೆಯ ಸಂಭ್ರಮದಂತೆ ನನ್ನ ಆತ್ಮ ಬಯಸುವ ಸಂಭ್ರಮ ಇದಲ್ಲ ಎನ್ನುವ ಅರಿವೂ ಇದೆ..” ಮುಕ್ತ ನೋಡುವಾಗ ನನ್ನಂತವರಿಗೆ ರಾಚುವ ದೌರ್ಬಲ್ಯಗಳು, ಸೀತಾರಾಂರವರಿಂದ ಇದನ್ನು ಬಯಸಿರಲಿಲ್ಲ ಎಂದು ಮುಕ್ತ ನೋಡುವಾಗಲೆಲ್ಲ ಅಂದುಕೊಂಡಿದ್ದಿದೆ. ಇದನ್ನು ಸಾಧಿಸಿರದಿದ್ದರೂ ಪರವಾಗಿರಲಿಲ್ಲ. ಮಾತನ್ನು ಮುಗಿಸುವ ಮುನ್ನ “ಮುಕ್ತ ಬಹಳ ಚೆನ್ನಾಗಿ ಬರುತ್ತಿದೆ” ಎಂದು ಹೇಳಿ ಮುಗಿಸಿದಾಗ ನನ್ನ ಬಗೆಗೆ ನಾನೇ ದಂಗು ಬಡಿದಿದ್ದಂತೂ ನಿಜ. ಮಾತನಾಡುವಾಗ ಅರೆ ಸುಳ್ಳನ್ನು-ಅರೆ ನಿಜವನ್ನು ಎಷ್ಟು ಚೆನ್ನಾಗಿ ಬೆರೆಸುತ್ತೇವೆ !!!

“ಮುಕ್ತ ಧಾರಾವಾಹಿಯನ್ನು ಯಾವಾಗಲೋ ಮುಗಿಸಬೇಕಿತ್ತು ಸೀತಾರಾಂ..” ಎಂದು ಹೇಳಿದಾಗ, “ನಾನು ಒಂದು ವರ್ಷದಿಂದಲೂ ಇದನ್ನೇ ಹೇಳುತ್ತಿದ್ದೇನೆ. ಆದರೆ, ನನ್ನನ್ನು ನಂಬಿದ ೬೭ ಜನರಿದ್ದಾರೆ. ಧಾರಾವಾಹಿ ಮುಗಿದೊಡನೆ ಎಲ್ಲರ ಬದುಕೂ ಕಷ್ಟವಾಗಿ ಬಿಡುತ್ತದೆ. ಆದುದರಿಂದ ಪರ್ಯಾಯವೊಂದನ್ನು ಆಲೋಚಿಸಿಯೇ ಮುಗಿಸಬೇಕಾಗುತ್ತದೆ..” ಎನ್ನುವಾಗ ಸೀತಾರಾಂರವರ ಧನಿಯಲ್ಲಿ ಡಿಪ್ಲೊಮಸಿಗಿಂತಲೂ ಹೊಣೆಗಾರಿಕೆ ಇದ್ದದ್ದಂತು ನಿಜ. ಕನ್ನಡಸಾಹಿತ್ಯ.ಕಾಂ ನಂತಹ ಹೊಣೆ ಹಾಗು ಭಾರತೀಯ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ ಹೊಣೆ ಹೊತ್ತಿರುವ ನನಗೂ ಅವರ ಕಾಳಜಿ ಅರ್ಥವಾಗುತ್ತದೆ. ಇತರರ ಹೊಣೆ ಹೊತ್ತವರ ಬದುಕು ತೀರಾ ಸರಳವಾಗಿರಲು ಸಾಧ್ಯವೇ ಇಲ್ಲವೇನೋ..ಎಂತೆಂತಹ ರಾಜಿಗಳು. ಆದರೂ ಇದೆಲ್ಲ ಗೌರಯುತವಾದ ರಾಜಿಗಳು ಎಂದಷ್ಟೇ ಇಲ್ಲಿ ಹೇಳಬಲ್ಲೆ…ಕ್ಷುದ್ರವಾದ, ನೀಚವಾದ ರಾಜಿಗಳಲ್ಲ. ರಾಜಿಗಳಿಲ್ಲದೆ ಬದುಕು ಅಸಾಧ್ಯ ಎಂದಾದರೂ, ಎಂತಹ ರಾಜಿಗಳು ಎನ್ನುವ ವಿವೇಚನೆಯನ್ನು ಮರೆತಾಗಲೇ ಭಂಡತನ, ನೀಚತನ ಎರಡೂ ತಲೆದೋರುವುದು.
*
*
*

ಕೊಂಕಣಿಯಿಂದ..

ಕಳೆದ ಬಾರಿಯ ಸಂಪಾದಕೀಯವನ್ನು ಓದಿ ಸಂಪರ್ಕಿಸಿದವರಲ್ಲಿ ಕುವೈತ್‌ನಲ್ಲಿರುವ ವಲ್ಲಿ ಕ್ವಾಡ್ರಸ್ ಕೂಡ ಒಬ್ಬರು. ಪರಿಚಯದ ನಡುವೆ ಅವರು ನಿರ್ವಹಿಸುತ್ತಿರುವ ಡಾಯ್ಜ್.ಕಾಂ ಕಡೆಗೆ ನನ್ನ ಗಮನ ಹೋಯಿತು. ಕೊಂಕಣಿ ಸಾಹಿತ್ಯದ ಬಗೆಗಾಗಲಿ, ಭಾಷೆಯ ಕುರಿತಾಗಲಿ ನಾನು ಮಾತನಾಡಲು ಸಾಧ್ಯವಿಲ. ಏಕೆಂದರೆ ಎರಡೂ ನನಗೆ ಗೊತ್ತಿಲ್ಲ. ಆದರೆ, ಕೊಂಕಣಿ ಸಮೂಹ ನಾನಾ ಲಿಪಿಗಳ ಮಧ್ಯೆ ಹರಿದು ಹಂಚಿ ಹೋಗಿದೆ. ಕನ್ನಡ-ಕನ್ನಡಿಗರಿಗಿಂತಲೂ, ಕೊಂಕಣಿಯಂತಹ ಒಂದು ಸಮೂಹಕ್ಕೆ ವೇದಿಕೆಯೊಂದನ್ನು ನಿರ್ಮಿಸುವುದು ಅತ್ಯಂತ ಕಠಿಣವಾದ ಹಾದಿ. ಅದರಲ್ಲಿ, ವಲ್ಲಿ ಕ್ವಾಡ್ರಸ್ ನಿರತರಾಗಿದ್ದಾರೆ. ಬರಿಯ ವೆಬ್‌ಸೈಟ್ ಮಾತ್ರವಲ್ಲ. ಕೊಂಕಣಿಯ ಸಾಹಿತ್ಯದ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ. ಹಲವು ಬಹುಮಾನಗಳು ಅವರದಾದರೂ, ಆ ಬಹುಮಾನಗಳು ಅವರು ಕೊಂಕಣಿಗಾಗಿ ಮಾಡುತ್ತಿರುವ ಸೇವೆಗೆ ಈ ಬಹುಮಾನಗಳೇ ಮಾನದಂಡಗಳಲ್ಲ. ಅವರ ಪ್ರಯತ್ನಗಳು ನಿಜಕ್ಕೂ ಇದಕ್ಕಿಂತಲೂ ಹೆಚ್ಚಿನ ಮಟ್ಟದ ಮನ್ನಣೆಗೆ ಅರ್ಹವಾದದ್ದು.

ಒಂದನ್ನಂತೂ ಇಲ್ಲಿ ಅವರಿಗೆ ಸಲಹೆ ನೀಡಬಹುದು: ಬಣ್ಣಗಳು ಕಣ್ಣಿಗೆ ರಾಚುತ್ತವೆ (ಈಗ ಇರುವುದು ಶಿವಕಾಶಿಯಲ್ಲಿ ಮುದ್ರಣವಾದ ಪ್ಯಾಂಪ್ಲೆಟ್‌ಗಳಂತೆ). ಹಿತವಾದ ಬಣ್ಣ ಹಾಗು ಪುಟಗಳ ವಿನ್ಯಾಸ ಬಳಸಿದರೆ ಡೈಜ್.ಕಾಂ ಹೆಚ್ಚು ಶೋಭಿಸಬಹುದು. ಇದು ಅವರಿಗೆ ನನ್ನ ಸಲಹೆ.

ಕೊಂಕಣಿ ಭಾಷೆಯ ಧ್ವನಿ ಒಂದು ರೀತಿಯಲ್ಲಿ ಖುಷಿ ಕೊಡುವಂತದ್ದು. ಅದರ ಸಾರ ನಮ್ಮ ಕೆ ಎಸ್ ಸಿ ಓದುಗರಿಗೂ ಸಿಗುವಂತಾಗಲಿ ಎಂದು ವಲ್ಲಿಯವರ ಪದ್ಯವನ್ನು ಮೂಲ ಹಾಗು ಅನುವಾದದೊಂದಿಗೆ ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
*
*
*

ಗಮನಿಸ ಬೇಕಾದ “ಬುಕ್ ಮಾರ್ಕ್‌ಗಳು”

ಖುಶಿಯಾಗುವ, ಕೊಂಚ ಮಟ್ಟಿಗಾದರೂ ಸಂಭ್ರಮಿಸುವ ಸಂಗತಿಯೆಂದರೆ, ಕನ್ನಡಕ್ಕೆ ನಿಜವಾಗಿಯೂ ಒಂದಿಷ್ಟಾದರೂ ಮಾನ ತರಬಹುದಾದಂತಹ ಪ್ರಯತ್ನಗಳು ನಡೆಯುತ್ತಿರುವುದು. ಉದಾಹರಣೆಗೆ: ಶ್ರೀರಾಮ್ ಹಾಗು ನಮ್ಮ ಸುದರ್ಶನ ಪಾಟೀಲ್ ಕುಲಕರ್ಣಿಯವರು ತಮ್ಮದೇ ಪುಟಗಳನ್ನು (ಬ್ಲಾಗ್) ತೆರೆದಿದ್ದಾರೆ. ಅಲ್ಲಿ, ಅವರುಗಳು ಆಗಾಗ್ಯೆ ಏನನ್ನಾದರೂ ಬರೆಯುತ್ತಿರುತ್ತಾರೆ. ಚಿಂತನೆಯೆ, ಅಭಿಪ್ರಾಯಗಳೇ, ಟಿಪ್ಪಣಿಗಳೇ ಅಥವ ಹರಟೆಯೆ (ಹರಟೆಗೆ ಸ್ಥಾನವಿರಬಾರದು ಎಂದೇನಲ್ಲ…ಮನೆಯ ಮುಂದಿನ ಜಗಲಿಯಲ್ಲಿ (ಆ ಜಗಲಿಗಳು ಎಲ್ಲಿಹೋದವು?)-ಹಿತ್ತಲಿನಲ್ಲಿ ದೈನಂದಿನ ಶ್ರಮದನಂತರ ನಡೆಯುವ ಅನೌಪಚಾರಿಕವಾದ ಸಂಭಾಷಣೆಯಲ್ಲೂ ಸತ್ವವಿರುತ್ತದೆ. ಸತ್ವವೇ ಇಲ್ಲದೆ ಕಾಡುಹರಟೆಯ ಮಟ್ಟದಲ್ಲೇ ಇದ್ದರೂ ಮನರಂಜನೆಯನ್ನಂತೂ ಕೊಡುತ್ತಾ ಉಲ್ಲಾಸವನ್ನು ಮೂಡಿಸುತ್ತಿರುತ್ತದೆ ಎನ್ನುವುದಂತೂ ಸುಳ್ಳಲ್ಲ. ಶ್ರೀ ರಾಮ್ ಹಾಗು ಸುದರ್ಶನ್ ರವರ ಬ್ಲಾಗ್‌ಗಳ ವರ್ಗಿಕರಣವನ್ನಾಗಲಿ, ಗುಣಮಟ್ಟದ ನಿರ್ಣಯವನ್ನಾಗಲೀ ಮಾಡುವುದು ಈ ಸಾಲುಗಳ ಉದ್ದೇಶವಲ್ಲ. ಅಂತಹ ನಿಯಮಬದ್ಧಾವಾದ “ಡೆಫಿನಿಶನ್”ಗಳೇ ಇಲ್ಲದಿರುವ ಈ ಸಂದರ್ಭದಲ್ಲಿ ಗಮನಿಸಬಹುದಾದ, ಸ್ವಾಗತಿಸಬಹುದಾದ “ಬ್ಲಾಗ್”ಗಳಿವು ಎಂದು ಸಂಕೋಚವಿಲ್ಲದೆ ಇಲ್ಲಿ ದಾಖಲಿಸಬಹುದು. ಬ್ಲಾಗ್‌ಗಳ ಸ್ವರೂಪದ ಬಗೆಗೆ ಅಲ್ಲಲ್ಲಿ ಆಗಾಗ್ಯೆ ಚರ್ಚೆಯಾಗುತ್ತಿರುತ್ತದೆ. ಆ ಅಲ್ಲಲ್ಲಿ (ಎಲ್ಲಿ ಎನ್ನುವ ನಿಖರತೆಯಿಲ್ಲದಿದ್ದರೂ) ಪ್ರಕಟಣೆಯ ಉದ್ಯಮದ ಬಗೆಗೆ ರೀ ಡೆಫಿನಿಶನ್ ಅನ್ನು ಅದು ಅನಿವಾರ್ಯಗೊಳಿಸುತ್ತದೆ. ಅಭಿಪ್ರಾಯಗಳ ಅಭಿವ್ಯಕ್ತಿಗಿದ್ದ ಅಲ್ಪ ಅವಕಾಶವನ್ನು ಹೆಚ್ಚು ಹಿಗ್ಗಲಿಸಿ, “ಇಂಟರ್‌ನೆಟ್” ಸವಲತ್ತುಗಳಿರುವವರ ನಡುವೆಯಂತೂ, ಹೆಚ್ಚು ಪ್ರಜಾಸತ್ತಾತ್ಮಕಗೊಳಿಸುವತ್ತ ಇದು ಬಿರುಸಿನಿಂದ ಸಾಗಿರುವುದಂತೂ ಗಮನಿಸಲೇ ಬೇಕಾದ ವಿಚಾರ. ದಿನಪತ್ರಿಕೆ, ನಿಯತಕಾಲಿಕೆಗಳು, ಟೆಲಿವಿಷನ್, ಸಿನಿಮಾ, ನಾಟಕ, ರೇಡಿಯೋ ಮುಂತಾದ ಮಾಧ್ಯಮಗಳಿಗಿಂತ ಇಂಟರ್‌ನೆಟ್ ಕಡಿಮೆ ವೆಚ್ಚದ ಹೆಚ್ಚು ಸಾಧ್ಯತೆಗಳುಳ್ಳ ಮಾಧ್ಯಮವಾಗುತ್ತದೆ ಎನ್ನುವುದರಲ್ಲಿ ಅನುಮಾನಗಳಿಲ್ಲ. ಆದರೆ ಈ ಸಾಧ್ಯತೆಗಳ/ಬಳಕೆಯ ಬಗೆಗೆ ಹೆಚ್ಚಿನ ಸ್ಪಷ್ಟತೆಗೆ ಯತ್ನಿಸುವುದು ಕಾಲ ಮಿಂಚುವ ಮುನ್ನವೆ ಚಿಂತಿಸುವುದು ಒಳ್ಳೆಯದು. ಇಲ್ಲದಿದ್ದರೆ, ಭಾರತದ ಯಾವುದೇ ನಗರದ ನಗರಸಭೆಗಳ “ಉದ್ಯಾನವನದಂತಾದೀತು” ಎನ್ನುವ ಭೀತಿಯೂ ಸಹ ಸಕಾರಾಣವಾದದ್ದೇ. ಉದ್ಯಾನವನದಲ್ಲಿ ಅತ್ಯುತ್ತಮ ಹಸಿರು ಸಂಪತ್ತು ಹಾಗು ಕಸ ಎರಡೂ ಒಂದೆಡೆಯೇ ಇರುತ್ತದೆಯಲ್ಲವೆ? ಈ ಭೀತಿಯ ನಡುವೆ, ಓ ಎಲ್ ನಾಗಭೂಷಣ ಸ್ವಾಮಿಯವರ, ಬೇಳೂರು ಸುದರ್ಶನ್‌ರವರ, ಶ್ರೀ ರಾಮ್ ಹಾಗು ಸುದರ್ಶನ್ ಪಾಟೀಲ್ ಕುಲಕರ್ಣಿವರಿಗೆ ಅಭಿನಂದನೆಗಳು. ‘ಬ್ಲಾಗ್’ ಗಳ ಬಗೆಗೆ, ಅವುಗಳ ಅಗತ್ಯ-ಬಳಕೆಯ ಬಗೆಗೆ ಗಂಭೀರವಾದ ಚರ್ಚೆಯಂತೂ ಅಗತ್ಯವೆಂದನ್ನಿಸುತ್ತದೆ. ‘ಇಂಟರ್ನೆಟ್ ಹಾಗು ಕನ್ನಡ’ದ ಸಂದರ್ಭದಲ್ಲಂತೂ ಶೂನ್ಯ ಪ್ರಯತ್ನಗಳ ಈ ಸಂದರ್ಭದಲ್ಲಿ, ಚರ್ಚೆ ಆಗಲೇ ಬೇಕಾದ್ದು.

ನಾಟಕರಂಗ ಕರ್ಮಿ ಸಿಜಿಕೆಯವರ ಬಗೆಗೆ ಶ್ರೀ ರಾಮ್ ಲೇಕನವೊಂದನ್ನು ಈ ಸಂಚಿಕೆಗೆ ವಿಶೇಷವಾಗಿ ಬರೆದಿದ್ದಾರೆ.

ಅಂದ ಹಾಗೆ ಲೇಖನದ ಜೊತೆಗೆ ಶ್ರೀರಾಮ್‌ರವರ ‘ಮಾಯಾ ದರ್ಪಣ’ ದಿಂದ ಕತೆಯೊಂದನ್ನು ಆಯ್ಕೆ ಮಾಡಿ ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ಲೇಖನಗಳ ಸಾಲಿನಲ್ಲಿ : ನರೇಂದ್ರ ಪೈಯವರು ರಾಘವೇಂದ್ರ ಪಾಟಿಲರ ತೇರು ಕಾದಂಬರಿಯ ಬಗೆಗೆ ಬರೆದಿದ್ದಾರೆ.
*
*
*

ಇಂಟರ್‌ನೆಟ್, ಕನ್ನಡಸಾಹಿತ್ಯ.ಕಾಂ ಹಾಗೂ ಸಾಮೂಹಿಕ ಸ್ವರೂಪದ “ಹೆಜ್ಜೆಗಳು”

ಹೀಗೆ, ಇಂಟರ್ನೆಟ್ ಮತ್ತು ಕನ್ನಡದ ಸಂದರ್ಭದಲ್ಲಿನ ವೈಚಾರಿಕ ಲೇಖನವೊಂದರ ಬಗೆಗೆ ಇಲ್ಲಿ ಪ್ರಸ್ತಾಪಿಸಲೇಬೇಕು. ಬಿಲ್‌ಗೇಟ್ಸ್ ಹಾಗು ವಿಕ್ರಮಾರ್ಜುನ ವಿಜಯ ಎನ್ನುವ ಶೀರ್ಷಿಕೆಯ ಲೇಖನ ಇಲ್ಲಿದೆ. ಏ ನಾರಾಯಣ್ ನನ್ನ ಸಹೊದ್ಯೋಗಿಯಾಗಿದ್ದವರು. ಈಗ ಲಂಡನ್‌ನಲ್ಲಿದ್ದಾರೆಂದು ಸುದ್ದಿ. ಬೆಂಗಳೂರಿನಲ್ಲಿ ಆಗಾಗ್ಯೆ ತೇಲುವ ಅವರೊಡನೆ ಮುಗುಳ್ನಕ್ಕು-ಕೈಕುಲುಕಿ ಅವರವರ ಹಾದಿಗಳಲ್ಲಿ ಅವರವರು ಸಾಗುವಷ್ಟು ಬಿರುಸಿನ ಚಟುವಟಿಕೆಗಳಲ್ಲಿ ಮುಳುಗಿ ಹೋಗಿದ್ದೇವೆ. ಸಂಪದ.ನೆಟ್ ಹಾಗು ಕನ್ನಡಸಾಹಿತ್ಯ.ಕಾಂನ ಬಗೆಗೆ ನಾರಾಯಣ್ ಉದಯವಾಣಿಯ ‘ಅರ್ಥಾತ್’ ಅಂಕಣದಲ್ಲಿ ಮೆಚ್ಚುಗೆಯನ್ನು “ನಾಳೆ”ಗಳ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿವೆ ಎಂದು ಪ್ರಾಸಂಗಿಕವಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ ಧನ್ಯವಾದಗಳು. ಉತ್ಸಾಹಿ ಯುವಕ ಎಚ್‌ಪಿ‌ಎನ್ ನಿರ್ವಹಿಸುತ್ತಿರುವ ಸಂಪದ.ನೆಟ್‌ನ ಬಗೆಗೆ ನಾನು ಈ ಪುಟಗಳಲ್ಲಿ, ಈ ಸಂದರ್ಭದಲ್ಲಿ ಮೆಚ್ಚುಗೆ ಹೊರತಾಗಿ ಬೇರೇನನ್ನಾದರೂ ಪ್ರಸ್ತಾಪಿಸುವುದು ಸಮಂಜಸವಾಗಲಾರದು, ಆದುದರಿಂದ, ಇಲ್ಲಿ ಕನ್ನಡಸಾಹಿತ್ಯ.ಕಾಂ ಬಗೆಗೆ ಮಾತ್ರ ಪ್ರಸ್ತಾಪಿಸುತ್ತಿದ್ದೇನೆ.

ಕನ್ನಡಸಾಹಿತ್ಯ.ಕಾಂ ಆಶಯ ಬೆಳೆಯುತ್ತಾ ಹೋದಂತೆ ಸ್ವರೂಪ ಪಡೆದುಕೊಂಡದ್ದು. ಮೂಲಭೂತವಾದ ಆಶಯವಿದ್ದದ್ದು ತಾಂತ್ರಿಕಿಕತೆಯನ್ನು ಕನ್ನಡಕ್ಕೆ ಒಗ್ಗಿಸುವ ನಿಟ್ಟಿನಲ್ಲಿ, ಕನ್ನಡವನ್ನು ತಾಂತ್ರಿಕತೆಯ ಬಳಿಗೆ ತೆಗೆದುಕೊಂದು ಹೋಗುವುದರ ಪ್ರಯತ್ನದಲ್ಲಿ ಎಂದೂ ಹಿಂಜರಿಕೆ ಇರಕೂಡದು ಎನ್ನುವುದಂತೂ ಗಟ್ಟಿಯಾಗಿತ್ತು. ಜೊತೆಗೆ ಟೊಳ್ಳೂ ಟೊಳ್ಳಾಗಿ ಇರುವ ಅವಕಾಶವನ್ನು ಬಳಸಿಕೊಳ್ಳಬಾರದು ಎನ್ನುವ ದೃಢ ನಿಶ್ಚಯವೂ ಇತ್ತು. ಕನ್ನಡಸಾಹಿತ್ಯ.ಕಾಂ “ಸುಮ್ಮನೆ ಬ್ರೌಸರ್ ಮೇಲೆ ಕನ್ನಡ ಕಾಣಿಸಿಕೊಂಡರೆ” ಸಾಕು ಎನ್ನುವ ಮಟ್ಟದಲ್ಲಿ ರೂಪಿಸಿಲ್ಲ. ಇದರ ನಿರ್ವಹಣೆಯ ಹಿಂದೆ “ತಾಂತ್ರಿಕವಾಗಿ ಹೀಗೆ ಇರಬೇಕು” ಎನ್ನುವ ದೃಡ ನಿಶ್ಚಯವಂತೂ ಇದ್ದೇ ಇದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಶಿಫಾರಸಾಗುವ “ನಿಯಮಾವಳಿಗಳನ್ನು” (ಸ್ತಾಂಡರ್ಡೈಸೇಷನ್-ಸರಿಯಾದ ಪದ? ) ಚಾಚೂ ತಪ್ಪದಂತೆ ಪಾಲಿಸುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಪೇಕ್ಷೆಯನ್ನಂತೂ ತೋರಿಸಿಲ್ಲ. ಕಂಟೆಂಟ್ ಅತ್ಯುತ್ತಮವಾದದ್ದು-ಹಾಗೆಯೇ ತಾಂತ್ರಿಕತೆಯೂ ಅತ್ಯುತ್ತಮವಾಗಿಯೇ ಇರುವಂತೆ ನೋಡಿಕೊಳ್ಳಲಾಗಿದೆ. ತಾಂತ್ರಿಕತೆ ಅತ್ಯುತ್ತಮವಾಗಿರುವಂತೆ ಕಂಟೆಂಟ್ ಸಹ ಅತ್ಯುತ್ತಮವಾಗಿಯೇ-ಯಾವುದೇ ರಾಜಿಗಳಿಲ್ಲದಂತೆ ಕಾಯ್ದುಕೊಂಡು ಬರಲಾಗಿದೆ. ಇವೆರಡೂ ಪರಸ್ಪರ ಪೂರಕವಾಗಿರುವಂತೆ ನೋಡಿಕೊಳ್ಳಲಾಗಿದೆ ಎನ್ನುವುದನ್ನಂತೂ ಇಲ್ಲಿ ಒತ್ತು ಕೊಟ್ಟು ಹೇಳಬಲ್ಲೆ. ಅಲ್ಲಲ್ಲಿ, ಸಾಕಷ್ಟು “ಹ್ಯೂಮನ್ ಎರರ್ಸ್” ರಹಿತವಾಗಿ ಪುಟಗಳನ್ನು ನೋಡಿಕೊಳ್ಳುವುದರಲ್ಲಿ ಎಡವಿದ್ದೇವೆ. ಮುಂದೆ ಅದೆಲ್ಲವನ್ನೂ ಸರಿಪಡಿಸುವ ಪ್ರಯತ್ನಗಳು ಸಾಗಿದೆ. ಅವುಗಳನ್ನು ಸರಿಪಡಿಸಿದರೆ “ತಲೆ ಎತ್ತಿಕೊಂಡು ನಡೆಯಬಹುದು”-ಅಲ್ಲಿಯವರೆಗೆ ತಾಳ್ಮೆಯನ್ನು ಕೋರಿ ತಲೆ ತಗ್ಗಿಸುವುದರ ಹೊರತಾಗಿ ಬೇರೇನು ಮಾಡಲು ಸಾಧ್ಯ…

ಇನ್ನು ನಮ್ಮ ನಾರಾಯಣರ ಆಶಾವಾದಕ್ಕೆ, ಕೆ ಎಸ್ ಸಿ ಗೆ ಅವರು ನೀಡಿರುವ ಸ್ಥಾನಕ್ಕೆ ಧನ್ಯವಾದಗಳು. ಆದರೆ, ಇದೇ ಆಶಾವಾದದ ವಿಸ್ತರಣೆಯಾಗಿ ನನಗೆ “ಕನ್ನಡ”ದಲ್ಲಿ ಹೆಚ್ಚೆಚ್ಚು ಪ್ರಯತ್ನಗಳು ಕಂಡು ಬರುತ್ತಿಲ್ಲ. ಮೇಲೆ ಪ್ರಸ್ತಾಪಿಸಿರುವ ಬ್ಲಾಗ್‌ಗಳಲ್ಲಿ ಒಂದಷ್ಟು “ಕನ್ನಡ”ವನ್ನು ಕಾಣಬಹುದಾದ್ದರಿಂದ ಒಂದಷ್ಟು ಸಮಾಧಾನ. ಆದರೆ, ಈಗ ಹೆಚ್ಚಿನ ಅಗತ್ಯವಿರುವುದು “ಒಂದು ಸಾಮೂಹಿಕವಾದ” ಪ್ರಯತ್ನಗಳು ಮತ್ತು ವೇದಿಕೆಗಳು (ಕೊಂಚ ಮಟ್ಟಿಗೆ ತನ್ನದೇ ಮಿತಿಯಲ್ಲಿ ಸಂಪದ.ನೆಟ್ ತನ್ನ ಪ್ರಯತ್ನವನ್ನು ಮಾಡುತ್ತಾ ಬಂದಿದೆ, ಇಂತಹ ಸಾಮೂಹಿಕ ಪ್ರಯತ್ನಗಳು ಇನ್ನೂ ಹೆಚ್ಚಾದರೆ ಮತ್ತಷ್ಟು ಸಂತೋಷ). ಕೆ ಎಸ್ ಸಿ ಯೂ ಸಹ “ಒಂದು ಸಾಮೂಹಿಕ ಪ್ರಯತ್ನವಾಗಲು ಎಲ್ಲ ಯತ್ನವನ್ನು ನಡೆಸುತ್ತದೆ.” ಎಂದಷ್ಟು ಹೇಳಬಹುದೇನೋ. “ಕೆ ಎಸ್ ಸಿ, ನಿಜವಾದ ಸಾಮೂಹಿಕ” ಯತ್ನವೆನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ, ಈ ಪ್ರಯತ್ನಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕ್ರಮಬದ್ಧಗೊಳ್ಳಬೇಕಿದೆ. ಅದರ ಕುರಿತ ಸಂವಾದವನ್ನು ಕಳೆದ ತಿಂಗಳು ಆರಂಭಿಸಲಾಗಿದೆ.

ಅದನ್ನು ಓದಿದನಂತರ, ಕೀ-ಇನ್ ಮಾಡಲು, ಪ್ರೂಫ್-ರೀಡಿಂಗ್ ಮಾಡಲು ಉತ್ಸಾಹಿತರು ಮುಂದೆ ಬಂದಿದ್ದಾರೆ. ಅದರ, ಫಲಿತಾಂಶವೆಂದರೆ: ಈ ತಿಂಗಳು ಪ್ರಕಟಿಸಲಾಗಿರುವ ನಾ.ಡಿಸೋಜರ ಕಾದಂಬರಿ. ಇಡೀ ಕಾದಂಬರಿಯನ್ನು ಬರಹಕ್ಕೆ ಕೀ ಇನ್ ಮಾಡಿರುವವರು ಉತ್ಸಾಹಿ ಯುವಕ: ಕಿರಣ್ ಎಂ. ಇವರು, ಕೀ ಇನ್ ಮಾಡಿದ್ದನ್ನು ಪ್ರೂಫ್ ರೀಡಿಂಗ್ ಮಾಡಿದವರು ಲಂಡನ್‌ನಲ್ಲಿರುವ ಮೀರಾ ಗಣಪತಿ. ನಿಜವಾದ, ಇಂಟರ್‌ಆಕ್ಷನ್ ಅಂದರೆ, ಇದೆ ಅಲ್ಲವೆ…ಇವರಿಬ್ಬರಿಗೂ ವಿಶೇಷವಾದ ಧನ್ಯವಾದಗಳು. ಇದು ಸಮೂಹವೊಂದು ಸ್ವರೂಪ ಪಡೆದುಕೊಳ್ಳುತ್ತಿರುವ ರೀತಿ. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು. ಈ ಸಾಮೂಹಿಕ, ಸಕ್ರಿಯಾತ್ಮಕ ಬೆಳವಣಿಗೆ ಇನ್ನಷ್ಟು ವ್ಯಾಪ್ತಿ ಬೆಳೆಸಿಕೊಂಡರೆ ಕೆ ಎಸ್ ಸಿಯ ಪ್ರಯತ್ನದಲ್ಲಿ ಮಹತ್ವದ ಹೆಜ್ಜೆ. ಮತ್ತಷ್ಟು ಜನ ಸೇರಲಿ-ಇರುವ ಬೆಂಬಲವನ್ನು ಕ್ರಮಬಧ್ಧಗೊಳಿಸುವ ಬಗೆಗೆ ಎಲ್ಲರೂ ಆಲೋಚಿಸುವಂತಾದರೆ-ಯಾವುದೇ ಹಿನ್ನಡೆ ಇರದು.

ನಾ ಡಿಸೋಜಾರವರೊಂದಿಗೆ ಕಿರಣ್ ಎಂ ಹಾಗು ಅವರ ಮಿತ್ರ ಅವಿನಾಶ್ ಜಿ ಹೆಗ್ಗೋಡು ಸೇರಿ ಒಂದು ಸಂದರ್ಶನವನ್ನು ಮಾಡಿದ್ದರೆ. ಕಾದಂಬರಿ ಓದುವ ಮುನ್ನ ಸಂದರ್ಶನವನ್ನು ಒಮ್ಮೆ ಓದಿ.
*
*
*

೭೨ನೆ ಕನ್ನಡ ಸಾಹಿತ್ಯ ಸಮ್ಮೇಳನ-ಬೀದರ್

ಶಾಂತರಸರು ಅಧ್ಯಕ್ಷ ಸ್ಥಾನದಿಂದ ಮಾಡಿದ ಭಾಷಣದ ಮೊದಲ ೩೧ ಪುಟಗಳ ಪಠ್ಯವನ್ನು ಪ್ರಕಟಿಸಲಾಗಿದೆ. ಈ ಪುಟಗಳನ್ನು ಕೀ-ಇನ್ ಮಾಡಿದ ರೋಹಿತ್ ರಾಮಚಂದ್ರರವರು ಸಣ್ಣದೊಂದು ವರದಿಯನ್ನು ಬರೆದಿದ್ದಾರೆ. ದಾಖಲೆಗಾಗಿ ಅದನ್ನೂ ಪ್ರಕಟಿಸಲಾಗಿದೆ. ಅವರಿಗೆ ಧನ್ಯವಾದಗಳು. ಮುಂದಿನ ಸಂಚಿಕೆಯಲ್ಲಿ ಉಳಿದ ಭಾಗವನ್ನು ಪ್ರಕಟಿಸಲಾಗುವುದು. ಜೊತೆಗೆ ಎಸ್ ಆರ್ ವಿಜಯಶಂಕರ್‌ರವರ ಕನ್ನಡ ಸಾಹಿತ್ಯ ಪರಿಷತ್: ಮರುಹುಟ್ಟು ಯಾಕೆ ಬೇಕು? ಎನ್ನುವ ಲೇಖನವನ್ನು ಅವರ ಜಾಗತೀಕರಣ ಎನ್ನುವ ಲೇಖನದೊಂದಿಗೆ ಪ್ರಕಟಿಸಲಾಗಿದೆ.
*
*
*

ಟೆಲಿವಿಷನ್, ಸಿನಿಮಾ, ನಟನೊಬ್ಬನ ಸೃಜನಶೀಲತೆ

-ಈ ಬಾರಿ ಮಾಧ್ಯಮದ ಬಗೆಗೆ ಹೆಚ್ಚು ಮಾತನಾಡುತ್ತಿರುವುದರಿಂದ, ಟೆಲಿವಿಷನ್ ಮಾಧ್ಯಮದ ಬಗೆಗೂ ನನಗನ್ನಿಸಿದ್ದನ್ನ ಇಲ್ಲಿ ದಾಖಲು ಮಾಡಿಬಿಡುವ ಆತುರ ತೋರಿದ್ದೇನೆ. ಸೃಜನಾತ್ಮಕ ಕ್ರಿಯೆ ಎಲ್ಲೇ ಮೂಡಿಬರಲಿ, ಅದಕ್ಕೆ ಪ್ರತಿಕ್ರಿಯಿಸುವುದೂ ಸಹ ಅಗತ್ಯವೆಂದೇ ಈ ಟಿಪ್ಪಣಿ: ಇರಲಿ. ಕನ್ನಡ ಸಿನಿಮಾಗಳ ಅಧೋಗತಿಯನ್ನು ನೋಡುತ್ತಾ ಹೋಗುತ್ತಿರುವಂತೆ, ಅದರ ಹೊಸ ಹೊಸ ಅವತಾರಗಳು, ಅವಸ್ಥೆಗಳನ್ನು ನೋಡುತ್ತಾ ಹೋದಂತೆ, ಕನ್ನಡ ಸಿನಿಮಾಗಳಿಂದ ದೂರ ಉಳಿಯುವಂತಾಗುತ್ತದೆ. ಬದಲಿಗೆ, ಹೆಚ್ಚು ಹೆಚ್ಚು ಟೆಲಿವಿಷನ್ ಕಡೆಗೆ ನೂಕುತ್ತದೆ. ಸಮಯ ಸಿಕ್ಕಾಗ (ಊಟ ಮಾಡುವ ಸಮಯವಂತೂ ಟೆಲಿವಿಷನ್ ವೀಕ್ಷಣೆಗೆ ಮೀಸಲಾಗಿರುತ್ತದೆ.), ಮನೆಯಲ್ಲೂ- ಕೆಲವು ಧಾರಾವಾಹಿಗಳನ್ನು ನೋಡುವ ಪರಿಪಾಠವಿಟ್ಟುಕೊಂಡಿರುವುದರಿಂದ ಈ ಧಾರಾವಾಹಿಗಳ ವೀಕ್ಷಣೆ ನನಗೂ ಲಭ್ಯ. ಒಮ್ಮೊಮ್ಮೆ ಉಪೇಕ್ಷೆಯಿಂದ, ಮತ್ತೊಮ್ಮೆ ಆಸಕ್ತಿಯಿಂದ ನೋಡುತ್ತಾ ಹೋಗುತ್ತೇನೆ. ಇದರಲ್ಲಿ, ವಿಶೇಷವಾಗಿ ಗಮನ ಸೆಳೆದವರು: ಸುಚೀಂದ್ರ ಪ್ರಸಾದ್. ಸಿನಿಮಾಗಳನ್ನು ಕಳೆದ ನಾಲ್ಕು ದಶಕಗಳಿಂದ ನೋಡಿಕೊಂಡು ಬಂದಿರುವ ನನಗೆ ತಟಕ್ಕನೆ ಸುಚೇಂದ್ರಪ್ರಸಾದ್ ಗಮನ ಸೆಳೆದದ್ದಕ್ಕೆ ಕಾರಣಗಳನ್ನು ಕುರಿತಂತೆ ಮನಸ್ಸನ್ನು ಕೇಂದ್ರಿಕರಿಸಿದಾಗ ಅಭಿನಯದ ಬಗೆಗಿನ ಅನೇಕ ಶೈಲಿಗಳು ಹೊಳೆಯುತ್ತಾ ಹೋಯಿತು. ಆ ಕ್ಷಣ ನಾನು ಅತ್ಯಂತವಾಗಿ ಮೆಚ್ಚಿ ಟೀಕಿಸುತ್ತಿದ್ದ ಕೆಟ್ಟ ಹಾಲಿವುಡ್ ನಟರಾದ ಬ್ರಾಂಡೋ, ಅಲ್ ಪಚೀನೊ, ಡಸ್ಟಿನ್ ಆಫ್ಮನ್ (ಆಕ್ಟರ್ಸ್ ಮೆಥಡಾಲಜಿಯಲ್ಲಿ ಪಳಗಿದವರು) ಇವರನ್ನೆಲ್ಲ ಒತ್ತಟ್ಟಿಗೆ ತಳ್ಳಿ ನೋಡಲಾರಂಭಿಸಿದೆ. ಸುಚೇಂದ್ರಪ್ರಸಾದ್ ಎದುರಿಸುವ ಪ್ರತಿಯೊಂದು ಫ್ರೇಮನ್ನು ಗಮನವಿಟ್ಟು ನೋಡತೊಡಗಿದೆ. ನಟನೊಬ್ಬ ತನ್ನ ನಟನ ಸಾಮರ್ಥ್ಯದಿಂದಲೇ ಅಪಾಯಕರಿಯಾಗಬಲ್ಲ ಎನ್ನುವ ಜಿಜ್ಞಾಸೆ ತೋರಿಕೊಳ್ಳಲಾರಂಭಿಸಿತು. ನಟನೆಯಲ್ಲಿ-ತೀರಾ ರಿಯಲಿಸ್ಟಿಕ್ ಆಗಿಬಿಡಬಾರದು-ಪಾತ್ರಕ್ಕೆ ಜೀವ ತುಂಬಿಬಿಡಬಾರದು. ಅದಾದೊಡನೆ ಅವನ ಪಾತ್ರದ ಗುಣಾವಗುಣಗಳೆಲ್ಲ ಒಂದು ರೋಲ್ ಮಾಡೆಲ್ ಆಗಿ “ಮನೆಯೊಳಗೆಲ್ಲಾ” ಓಡಾಡಲಾರಂಭಿಸಿಬಿಡುತ್ತದೆ ಎಂದೂ ಅನ್ನಿಸ ತೊಡಗಿತು. ನಾನು ಇಂದಿಗೂ ಖುಷಿಯಿಂದ ನೋಡುವ, ಮೆಚ್ಚುವ ಎಂ ಜಿ ರಾಮಚಂದ್ರನ್ (ತಮಿಳಿನ ‘ಅನ್ನಾತೆ’), ರಜನಿಕಾಂತ್ ಎಲ್ಲ ಏಕೆ ಅತ್ಯುತ್ತಮ ನಟರು ಎನುವುದಕ್ಕೆ (ಅಲ್ಲಲ್ಲಿ ಈ ನಟರ ವಾರಿಸುಗಳೆಂಬಂತೆ ಸಮಾಜದಲ್ಲಿ-ಫ್ಯಾಷನ್ ಪರೇಡ್ ನಡೆಸುವವರ ಬಗೆಗೆ ನಾನು ಇಲ್ಲಿ ಪ್ರಸ್ತಾಪಿಸುತ್ತಿಲ್ಲ ಎನ್ನುವುದು ಪ್ರಜ್ಞಾವಂತರಿಗೆ ವಿವರಿಸಬೇಕಿಲ್ಲ.) ಒಂದು ಸಣ್ಣ ವಿವರಣೆ: ನಿಜ ಹೇಳಬೇಕೆಂದರೆ ಎಂ ಜಿ ರಾಮಚಂದ್ರನ್ ನಟಿಸುತ್ತಿರಲಿಲ್ಲ-ಸಂಭ್ರಮಿಸುತ್ತಿದ್ದರು. ಅವರ ನಟನೆಯಲ್ಲಿ ಕ್ಲೋಸಪ್‌ಗಳು ವಿರಳ. ತುಲನಾತ್ಮಕವಾಗಿ ನೋಡಿದಾಗ ಶಿವಾಜಿ ಗಣೇಶನ್ ಹೆಚ್ಚು ಕ್ಲೋಸಪ್‌ಗಳನ್ನು ಎದುರಿಸಿದ್ದಾರೆ. ಅಂದರೆ, ಕೆಮೆರಾದ ದೂರ ನಟನೊಬ್ಬನ ಶೈಲಿಯನ್ನು ತಿದ್ದುತ್ತಾ-ಕತೆ-ಚಿತ್ರಕತೆ-ಸಂಭಾಷಣೆ ಎಲ್ಲವನ್ನು ತಿದ್ದಿಬಿಡುತ್ತದೆ. ಅಥವಾ, ಕೆಮೆರಾವನ್ನು ಎದುರಿಸುವ ನಟನ ಸಾಮರ್ಥ್ಯವನ್ನು ಕೆಮೆರಾ ದುಡಿಸಿಕೊಳ್ಳುತ್ತದೆ. ಈ ಎರಡೂ ಶೈಲಿಗಳು ಒಟ್ಟೊಟ್ಟಿಗೆ ಬರುತ್ತದೆ.

ದೂರದರ್ಶನಕ್ಕೂ-ಸಿನಿಮಾಗೂ ಇರುವ ವ್ಯತ್ಯಾಸವೆಂದರೆ: ಪರದೆಯ ಅಳತೆಗಳು ಅಂದರೆ ಕ್ಯಾನವಾಸ್. ನಟನ ಪ್ಲೇಸ್‌ಮೆಂಟ್ ಸ್ವಲ್ಪ ಹೆಚ್ಚೂ ಕಡಿಮೆಯಾದರೂ (ಉದಾಹರಣೆಗೆ ಸಿನಿಮಾದಲ್ಲಿ ಲಾಂಗ್-ಷಾಟ್‌ಗಳನ್ನು ಅಳವಡಿಸಿಕೊಂಡು ಪ್ರೇಕ್ಷಕನಿಗೆ ಹೆಚ್ಚು ವಿವರಗಳನ್ನು ನೀಡಬಹುದು) ಆದರೆ ಇದು ಟೆಲಿವಿಷನ್‌ಗೆ ಸಾಧ್ಯವಿಲ್ಲ. ಟೆಲಿವಿಷನ್ ಪರದೆಯ ಮೇಲೆ ಲಾಂಗ್-ಷಾಟ್ ಅನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದುದರಿಂದ ಎಲ್ಲವೂ ಮಿಡ್ ಲಾಂಗ್ ಅಥವ ಕ್ಲೋಸಪ್‌ಗಳಲ್ಲೇ ನಿರ್ವಹಣೆಯಾಗಿಬಿಡುತ್ತದೆ. ಆದುದರಿಂದ ನಟನೊಬ್ಬ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸ್ವಲ್ಪ “ಗ್ರೇ” ಏರಿಯಾಗಳಿರುವ ಪಾತ್ರಗಳು ತೀರಾ ರಿಯಲಿಸ್ಟಿಕ್ ಮೌಲ್ಡ್‌ನಲ್ಲಿ ನಿರ್ವಹಿಸಿದರೆ ಕೇವಲ “ಐದರಿಂದ ಎಂಟು ಅಡಿ ದೂರವಿರುವ” ಪಾತ್ರಗಳು (ಮನುಷ್ಯರು) ಹೆಚ್ಚು “ನಿಜ”ವಾಗಿ ಬಿಡುತ್ತಾರೆ. ಅದರಲ್ಲೂ ಸ್ವಲ್ಪ “ಗಿಮಿಕ್ಸ್” ಬೆರೆತಿದ್ದರಂತೂ “ಮನೆ ಹಾಗು ಮನಸ್ಸಿನೊಳಗೆ” ಕುಳಿತೇ ಬಿಡುತ್ತಾರೆ. ಅವರು-ಪ್ರತಿಪಾದಿಸುವುದೆಲ್ಲ “ನಿಜ”ಗಳಾಗಿ ಬಿಡುತ್ತದೆ.

ಮೇಲೆ ವಿವರಿಸಿರುವ ಸಂದರ್ಭದಲ್ಲಿ ಸುಚೀಂದ್ರಪ್ರಸಾದ್‌ರವರನ್ನು ಭೇಟಿಯಾದಾಗ ಪ್ರಸ್ತಾಪಿಸಿದೆ. ನಿಜಕ್ಕೂ ಬಹಳ “ಸತ್ವಯುತವಾದ” ಕಲಾವಿದ. ಬೇರೆ ಕಲಾವಿದರೆಲ್ಲ ಒಮ್ಮೊಮ್ಮೆ ಸಪ್ಪೆ ಎಂದೆನ್ನಿಸಿಬಿಡಬಹುದಾದಷ್ಟು ಬಿಗಿ ನಿರ್ವಹಣೆ ಅವರಲ್ಲಿ ಕಾಣುತ್ತದೆ. ಜೊತೆಗೆ ತೀರಾ ಕ್ಯಾಷುವಲ್ ಆಗಿರಬಹುದಾದ ಕಲಾವಿದರ ಬಗೆಗೆ ಅವರ “ಜಿಗುಪ್ಸೆ”ಯೂ ಅವರ ಪಾತ್ರ ನಿರ್ವಹಣೆಯಲ್ಲಿಯೂ ತಳಕು ಹಾಕಿಕೊಂಡು ಬಿಡುತ್ತದೆ. ಅಷ್ಟರ ಮಟ್ಟಿಗಿನ “ಕೃತಕತೆ” ಅವರಲ್ಲಿ ಎದ್ದು ಕಂಡು ಬಿಡುತ್ತದೆ. ತನ್ನ “ಜಿಗುಪ್ಸೆಯನ್ನು” ಪಾತ್ರದೊಟ್ಟಿಗೆ ತಳಕು ಹಾಕದಿರುವಂತೆ ನೋಡಿಕೊಳ್ಳಬೇಕಾದ ಸವಾಲು ಸೂಕ್ಷ್ಮವಾಗಿರುವ ಎಲ್ಲರೂ ಎದುರಿಸಲೇ ಬೇಕಾದ್ದು ಎಂದನ್ನಿಸುತ್ತದೆ. ಸುಚೇಂದ್ರಪ್ರಸಾದ್‌ರವರ ಬಗೆಗೆ ಪ್ರಸ್ತಾಪಿಸುತ್ತ “ಸೃಜನಾತ್ಮಕತೆ” ಎದುರಿಸ ಬೇಕಾದ ಸವಾಲುಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಸುಚೇಂದ್ರರವರಿಗೆ ಒಳ್ಳೆಯದಾಗಲಿ-ಇಂತಹ ಸೂಕ್ಷ್ಮಕ್ಕೆ ಸದಾ ಸಂವಾದಿಯಾಗಿರುವ ಅವರ ಗಟ್ಟಿತನ ಇನ್ನಷ್ಟು ದೃಢವಾಗಲಿ. ಅಂದ ಹಾಗೆ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಕೂಟದಲ್ಲಿ ಅವರೂ ಸದಸ್ಯರಾಗಿದ್ದಾರೆ. ಸ್ವಾಗತ.
*
*
*

ನಾಗರಾಜ್ ವಸ್ತಾರೆಯವರ “ಹೊಸತನ”

ಬಿಡುವಿಲ್ಲದ ಬಿಡುವಿನ ನಡುವೆ ಕಣ್ಣುಗಳನ್ನು ಅಗಲಗೊಳಿಸಿದಾಗ ಧುತ್ತನೆ ಎದುರಾದದ್ದು: ನಾಗರಾಜ ವಸ್ತಾರೆ ಎನ್ನುವ ಹೆಸರು. ಕೇಳಿರಲಿಲ್ಲ-ಓದಿರಲಿಲ್ಲ. ಕಳೆದೆರಡು ವಾರಗಳ ಹಿಂದೆ ಕನ್ನಡಪ್ರಭದಲ್ಲಿ ಬಂದ ಅವರ “ಬಹುಮಾನಿತ” ಸಣ್ಣಕತೆಯನ್ನು ಓದಿದಾಗ, ಸುದರ್ಶನ್ ಪಾಟೀಲ್ ಕುಲಕರ್ಣಿಯವರು “ಸುಲೇಕ.ಕಾಂ” ಪ್ರಕಟಿಸಿದ್ದ ಒಂದು ಸಣ್ಣಕತೆಯತ್ತ ನನ್ನ ಗಮನ ಸೆಳೆದಿದ್ದುದು ತಟಕ್ಕನೆ ನೆನಪಿಗೆ ಬಂದಿತು. ಆ ಕತೆಯ ಹೆಸರು: ದೇಸಿ ಬೊನ್ಸಾಯ್. ಲೇಖಕರು: ಎಜಿ (ಇಷ್ಟು ವಿವರಗಳ ಹೊರತಾಗಿ ಆ ಲೇಖಕರ ಬಗೆಗೆ ಹೆಚ್ಚು ತಿಳಿದಿಲ್ಲ.)

ದೇಸಿ ಬೊನ್ಸಾಯ್ ಓದಿದಾಗಿನಿಂದಲೂ ಕನ್ನಡ ಸಣ್ಣಕತೆಗಳ ವ್ಯಾಪ್ತಿಯಲ್ಲಿ ಇಂತಹವು ಬರಲಾರದೆ-ಬಂದಿದ್ದೆಲ್ಲ ಗಮನಕ್ಕೆ ಬರಲಾರದೆ ಎಂದು ಕೊರಗಿದ್ದೂ ಉಂಟು. ನಾಗಾರಾಜ್ ವಸ್ತಾರೆಯವರನ್ನು ಸಂಪರ್ಕಿಸಿ, ಚರ್ಚಿಸಿ, ಅನುಮತಿ ಪಡೆದುಕೊಂಡನಂತರ ಅವರೆಲ್ಲ ಸಣ್ಣಕತೆಗಳ “ಸಾಫ್ಟ್‌ಕಾಪಿ”” ಕಳುಹಿಸುವಂತೆ ಕೇಳಿಕೊಂಡೆ. ಕಳಿಸಿದ್ದಾರೆ. ಕೆಲವನ್ನು ಆಯ್ದು ಪ್ರಕಟಿಸಲಾಗಿದೆ.

ಆಧುನಿಕತೆ, ನಗರಗಳ ಸ್ವೈರ ಪ್ರವೃತ್ತಿ (ಹೀಗೆನ್ನಬಹುದೆ..ಸ್ವಲ್ಪ ಹಿಂಜರಿಕೆಯಿಂದಲೇ ಹೀಗಂದಿದ್ದೇನೆ), ಆಯ್ಕೆಗಳು ತೆಗೆದಿಟ್ಟುಬಿಡಬಹುದಾದ ಅರಾಜಕತೆ ಈ ಎಲ್ಲಾ ಮುಂಗಟ್ಟಿನ ಸಂಕಟಗಳನ್ನು ನಾಗರಾಜ್ ವಸ್ತಾರೆಯವರ ಕತೆಗಳು ಕಟ್ಟಿಕೊಡುತ್ತವೆ. ಅವರ ಭಾಷೆ, ವಿವರಗಳು ಆ ಸಂವೇದನೆಯನ್ನು ಕಟ್ಟಿಕೊಡುವುದರತ್ತ ದುಡಿಯುತ್ತವೆ-ಯಶಸ್ವಿಯೂ ಆಗುತ್ತವೆ. ಇದಕ್ಕಿಂತಲೂ ಹೆಚ್ಚಿಗೆ ಹೇಳದೆ, ಓದುಗರಿಗೆ ಅವುಗಳನ್ನು ಮುಕ್ತವಾಗಿ ತೆಗೆದಿಟ್ಟುಬಿಡುವುದೇ ಒಳ್ಳೆಯದು. ಅವರ ಕತೆಗಳನ್ನು ಓದುವಾಗ ನನಗೆ ಜೀರ್ಣಿಸಿಕೊಳ್ಳಲಾಗದ್ದೆಂದರೆ: ಸ್ವರತಿಯೇ ಎಂದನ್ನಿಸಿಬಿಡುವಂತಹ ಕ್ರಮ. ಇದನ್ನು ಇಲ್ಲಿ ಒಬ್ಬ ಜವಬ್ದಾರಿಯುತ ಓದುಗನೆನ್ನುವ ನಿಟ್ಟಿನಲ್ಲಿ ಹೇಳಿ, ಅವರ ಕತೆಗಳ ಬಗೆಗೆ ಹೆಚ್ಚಿನ ಚರ್ಚೆಗೆ/ಪ್ರತಿಕ್ರಿಯೆಗೆ ಆಹ್ವಾನ ನೀಡುತ್ತಿದ್ದೇನೆ. ಬರುವ ಪ್ರತಿಕ್ರಿಯೆಗಳು ಬಂದಲ್ಲಿ ಅವರ ಕತೆಗಳ ಕೆಳಗೆ ಅಥವಾ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.

ಮೇಲಿನ ಅಂಶಗಳಿರುವ ಮತ್ತೊಂದು ಸಣ್ಣ ಕತೆ ಬೇಳೂರು ಸುದರ್ಶನ್‌ರವರ ಬೆಸಲ್ ಒಪ್ಪಂದ. ಅದನ್ನೂ ಪ್ರಕಟಿಸಲಾಗಿದೆ.
*
*
*

ದೇಶಕಾಲದ ನಾಲ್ಕನೆ ಸಂಚಿಕೆ

ದೇಶಕಾಲದ (ತ್ರೈ ಮಾಸಿಕ) ನಾಲ್ಕನೆ ಸಂಚಿಕೆ ಬಿಡುಗಡೆಯಾಗಿದೆ. ಬಹಳ ಇಷ್ಟವಾಯಿತು. ಅದರಲ್ಲೂ, ಶ್ರೀನಿವಾಸ ವೈದ್ಯರ ರುದ್ರಪ್ರಯಾಗ ಹಾಗು ಕೊಂಕಣಿ ಲೇಖಕಿ ಮೀನಾ ಕಾಕೋಡಕರ್‌ರವರ ‘ದೇವ ಸೌತೆ’ ಎನ್ನುವ ಕತೆಗಳಂತೂ ಬಹಳ ಚೆನ್ನಾಗಿದೆ. ಅನುವಾದಕರು: ಶಾ. ಮಂ. ಕೃಷ್ಣರಾಯ. ಈ ಸಂಚಿಕೆಯಲ್ಲಿ ಶ್ರೀನಿವಾಸ ವೈದ್ಯರ “ರುದ್ರ ಪ್ರಯಾಗ”ವನ್ನು ಪ್ರಕಟಿಸಲಾಗಿದೆ. ಕೆ ಎಸ್ ಸಿ ಯಲ್ಲಿ ಅದನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀನಿವಾಸ ವೈದ್ಯರಿಗೆ, ಅನುಮತಿ ಪಡೆಯಲು ನೆರವಾದ ವಿವೇಕ ಶಾನಭಾಗರಿಗೆ ಧನ್ಯವಾದಗಳು.

ದೇಶಕಾಲದ ಕುರಿತು ಹೇಳುವುದನ್ನು ಮರೆತಿದ್ದೆ: ಈ ಸಂಚಿಕೆಗೆ ಚಂದಾ ಮುಗಿಯುತ್ತದೆ. ನವೀಕರಿಸಲು ಯಾವುದೇ ಶ್ರಮವನ್ನು ಪಡದಿರಲೆಂದು ಸ್ತಾಂಪ್ ಅಂಟಿಸಿದ ಕವರನ್ನೂ ಸಹ ವಿವೇಕರು ಇಟ್ಟಿದ್ದಾರೆ. ನಾಚಿಕೆಯಾಗುತ್ತದೆ. ಅದನ್ನು ಕಳೆದು ಹಾಕಿಬಿಟ್ಟಿದ್ದೇನೆ. ಈಗತಾನೆ, ಚೆಕ್ ಬರೆದು ಇಟ್ಟಿದ್ದೇನೆ. ಅದನ್ನು ಇಂದೇ ಖಂಡಿತವಾಗಿ ಅಂಚೆಗೂ ಹಾಕುತ್ತೇನೆ.

ದೇಶಕಾಲದ ಓದುಗರು (ಕೆ ಎಸ್ ಸಿ ಬಳಗದಲ್ಲಿ) ಇದ್ದರೆ, ಅವರೆಲ್ಲರಿಗೂ ನವೀಕರಿಸುವಂತೆ ಮನವಿ.
*
*
*

ಸಂಕೋಚಗಳ ನಡುವೆಯೇ-ಸಾಹಿತ್ಯ ಪರಿಚಾರಿಕೆ

ಹೇಳಿದ್ದಂತೆ ವಸುದೇಂದ್ರ ಷ್ರಾಫ್‌ರವರು ಈ ಬಾರಿಯೂ ಮೂರು ಕೃತಿಗಳನ್ನು ತಮ್ಮ ಛಂದ ಪುಸ್ತಕದ ವತಿಯಿಂದ ಪ್ರಕಟಿಸಿದ್ದಾರೆ. ದಟ್ಸ್ ಕನ್ನಡ.ಕಾಂ ನಲ್ಲಿ‌ಅಂಕಣವಾಗಿ ಪ್ರಕಟಗೊಂಡ ದತ್ತಾತ್ರಿಯವರ ಸೀಮೋಲ್ಲಂಘನ, ರವಿ ಬೆಳಗೆರೆಯವರ “ಹಾಯ್ ಬೆಂಗಳೂರ್” ನಲ್ಲಿ ಪ್ರಕಟವಾಗುತ್ತಿರುವ “ಜಾನಕಿ” ಅಂಕಣದಿಂದ ಆಯ್ದ ಬರವಣಿಗೆ , ಅಲಕ ತೀರ್ಥಹಳ್ಳಿಯವರ ಆಯ್ದ ಕತೆಗಳನ್ನು ಪ್ರಕಟಿಸಿದ್ದಾರೆ. ಪ್ರಕಟಣೆಯಲ್ಲಿನ ಅಚ್ಚುಕಟ್ಟುತನದಲ್ಲಿ, ಬೆಲೆ ನಿಗದಿ ಪಡಿಸುವಲ್ಲಿ ವಸು ಬಹಳ ಎಚ್ಚರಿಕೆ ವಹಿಸಿದ್ದಾರೆ. ಬಿಡುಗಡೆ ಸಮಾರಂಭಕ್ಕೆ “ತಪ್ಪಿಸಿಕೊಳ್ಳಲಾಗಲಿಲ್ಲ”. ಸಮಾರಂಭಕ್ಕೆ ಹಾಜಾರಾತಿಯನ್ನು ಹಾಕುವ ಇರಾದೆಯೊಂದಿಗೆ ಸಾಕಷ್ಟು ಸ್ನೇಹಿತರೆಲ್ಲ ನೋಡಲು, ಮಾತನಾಡಲೂ ಸಹ ಸಿಗಬಹುದೆನ್ನುವ ಪ್ರಲೋಭನೆಯೂ ಇತ್ತು.

ಕೃತಿಗಳನ್ನು ಕುರಿತು ಮಾತನಾಡಿದವರು: ವಿಕ್ರಮ ವಿಸಾಚಿ, ಜಿ ಬಿ ಹರೀಶ ಹಾಗು ಅಶೋಕ ಹೆಗಡೆ. ಅವಸರದ ಮಾತುಗಳು, ಕೃತಿಗಳನ್ನು ಕುರಿತು “ಪರಿಚಯ” ಮಾಡಿಕೊಡುವಲ್ಲಿಗೆ ಮಾತುಗಳನ್ನು ಕೇವಲ ವ್ಯಯ ಮಾಡಿದರು. ಇಂತಹ ವೇದಿಕೆಯಲ್ಲಿ ಇನ್ನೂ ಹೆಚ್ಚಿನ ಹೊಣೆಗಾರಿಕೆಯನ್ನು ಇವರು ವಹಿಸಬೇಕಿತ್ತು ಎನ್ನುವ ಮಾತುಗಳು ಕೇಳಿಬಂದಾಗ ನಿಜ ಎಂದೂ ಅನ್ನಿಸಿತು. ಸಮಯದ ಅಭಾವ, ಅವಸರದ “ಆತುರಗಾರಿಕೆಯಿಂದ” ಹೀಗೆ ಆಗುವುದು ಸಹಜವೇ ಆದರೂ…ಜಯಂತ ಕಾಯ್ಕಿಣಿಯೂ ಇದಕ್ಕೆ ಹೊರತಾಗಲಿಲ್ಲ.

ಇದರ ನಡುವೆ, ಈ ವಸು ಮಾತ್ರ ಹೆಚ್ಚು ನಾಚಿಕೊಳ್ಳುತ್ತಿದ್ದರು. ಬಹುಶ ಇದೇ ಅವರ ಜೀವಾಳ. ಅದ್ಭುತವಾದದ್ದನ್ನು ಮಾಡುತ್ತಿದ್ದರು, ಅದರ ಅರಿವಿದ್ದರೂ ವೇದಿಕೆಯ ಮೇಲೆ ಇದ್ದ ಗಣ್ಯರಿಗೆ “ಮಿನರಲ್ ವಾಟರ್” ನೀಡಿ ಸತ್ಕರಿಸುತ್ತಾ ವಿನಯಶೀಲರಾಗಿ ನಿಂತದ್ದು ಇಲ್ಲಿ ಯಾವುದೇ ಕುಹಕವಿಲ್ಲದೆ ದಾಖಲಿಸುತ್ತಿದ್ದೇನೆ (ಇಂತಹ ಕೆವಿಯಟ್ ಅಗತ್ಯವಾಗಿರುವಂತಹ ವಾತಾವರಣ ಸೃಷ್ಟಿಯಾಗಿರುವುದು ದುರಂತವೇ ಸರಿ.) ವಸುರವರಿಗೆ ಶುಭವಾಗಲಿ. ಅವರು ಪ್ರಕಟಿಸಿರುವ ಕೃತಿಗಳಿಂದ, ಲೇಖಕರ ಅನುಮತಿಯೊಂದಿಗೆ ಒಂದೊಂದನ್ನು ಅಯ್ದು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ಕನ್ನ್‌ಡ ವಿಕಿಪೀಡಿಯ:
ದಿನಾಂಕ: ೧೪-೦೩-೨೦೦೬ ರಂದು ಸೇರಿಸಿದ್ದು: ಎಚ್ ಪಿ ನಾಡಿಗ್ ಕನ್ನಡ ವಿಕಿಪೀಡಿಯಾ ಬಗೆಗೆ ಗಂಭೀರವಾಗಿ ತೊಡಗಿಸಿಕೊಂಡಿರುವ ಯುವಕ. ಆಗಾಗ್ಯೆ ಆನ್‌ಲೈನ್‌ನಲ್ಲಿ ಒಂದಷ್ಟು ಚರ್ಚೆ/ಹರಟೆ ಈ ಹುಡುಗನ ಜೊತೆ ನಡೆಸಿದ್ದಿದೆ. ಈಗ ಅವರು ವಿಕಿಪೀಡೀಯದವರೊಡನೆ ಬೆಂಗಳೂರಿನಲ್ಲಿ ಸಮಾವೇಶವನ್ನು ಏರ್ಪಡಿಸಿದ್ದಾರೆ. ಇದರ ಬಗೆಗೆ ಕನ್ನಡಸಾಹಿತ್ಯ.ಕಾಂ ಓದುಗರಿಗೆ ತಿಳಿಸಿಕೊಡಬಲ್ಲಿರ ಎಂದು ಕೇಳಿದರು. ಬೆಂಗಳೂರಿನಲ್ಲಿರುವ ಆಸಕ್ತರು ಅವರ ಈ ಪುಟದಲಿ ನೊಂದಾಯಿಸಿಕೊಳ್ಳಬಹುದು.

ಶೇಖರ್‌ಪೂರ್ಣ
ಫೆಬ್ರವರಿ ೭, ೨೦೦೬
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.