ಏಕರೂಪತೆಯಿಲ್ಲದ ‘ಕನ್ನಡ’ ಸಾಧನಗಳು – ೨

ಕಳೆದ ತಿಂಗಳು ಇದೇ ಪುಟದಲ್ಲಿ ಕಾಣಿಸಿಕೊಂಡ ಬರವಣಿಗೆಯ ತುಣುಕಿಗೆ ಪ್ರತಿಕ್ರಿಯಿಸಿ ಎಂದು ಸೂಚಿಸಿದಾಗ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಅವುಗಳನ್ನೆಲ್ಲ ಪ್ರಕಟಿಸಲಾಗಿದೆ. ಪ್ರತಿಕ್ರಿಯೆಗಳು ಒಂದಷ್ಟು ಗಣಕ ಉತ್ಸಾಹದ ಅಗತ್ಯ ಪ್ರಥಮಿಕ ಮಾಹಿತಿಗಳನ್ನು ನೀಡುವುದಕ್ಕಷ್ಟೆ ಸೀಮಿತಗೊಂಡಿರುದರಿಂದ ನನ್ನ ಹಿಂದಿನ ಬರವಣಿಗೆಯನ್ನು ಇಲ್ಲಿ ವಿಸ್ತರಿಸಿದ್ದೇನೆ. ನನ್ನ ಹಿಂದಿನ ತುಣುಕಿನ ಪ್ರಧಾನಾಂಶದ ಸಾರವನ್ನು ಇಲ್ಲಿ ಪಟ್ಟಿ ಮಾಡಿ ಮುಂದುವರೆಯುವುದು ಸೂಕ್ತ ಎಂದನ್ನಿಸುತ್ತಿದೆಯಾದ್ದರಿಂದ, ಇಗೋ ಅವುಗಳ ಪಟ್ಟಿ:

೧. ಕನ್ನಡದ ಕುರಿತಂತೆ ಯುನಿಕೋಡ್ ಹಿನ್ನೆಲೆಯಲ್ಲಿ ಸ್ಟಾಂಡರ್ಡೈಸೇಶನ್ ಕುರಿತ ಅಗತ್ಯಕ್ಕೆ ಒತ್ತು. ಅದೇ ನಿಟ್ಟಿನಲ್ಲಿ ಭಾರತೀಯ ಎಲ್ಲ ಭಾಷೆಗಳಿಗೆ ಒಂದೇ ಶಿಷ್ಟೀಕರಣ ಇರಬೇಕೆನ್ನುವ ಸೂಚನೆ. (ಕೀಬೋರ್ಡ್ ಪ್ರಾಸಂಗಿಕ – ಈ ಶಿಷ್ಟೀಕರಣದ ಸಾಧನೆ ಯಾರ ಕೈಯಲ್ಲಿದೆ ಎಂಬುದು ಬೇರೆ ಮಾತು.)
೨. ಅನಿವಾಸಿ ಕನ್ನಡಿಗರು ಹಾಗು ಸ್ಥಳೀಯ ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಯುವಕ ಯುವತಿಯರು ಒಂದು ರೀತಿಯಲ್ಲಿ ಸಾಂಸ್ಕೃತಿಕ ವಿಸ್ಮರಣೆಗೊಳಗಾಗುತ್ತಿರುವುದು. (ಇದರಲ್ಲಿ ಲಿನಕ್ಸ್ ಉತ್ಸಾಹಿಗಳು ಸಹ ಹೊರತಲ್ಲ)
೩. ಮೇಲಿನೆರಡು ಕಾರಣಗಳಿಂದ ಮೈಕ್ರೋಸಾಫ್ಟ್‌ನಂತಹ ದೊಡ್ಡ ದೊಡ್ಡ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಗಳಿಸುವ ನಿಟ್ಟಿನಲ್ಲಿ ಪರಿಸರ ನಿರ್ಮಾಣವಾಗುತ್ತದೆ- ಡಿಜಿಟೇಲ್ ಡಿವೈಡ್, ಸಾಮಾಜಿಕ/ಆರ್ಥಿಕ/ರಾಜಕೀಯ ಅಸಮತೋಲನ- ಪ್ರಕ್ಷುಬ್ದತೆ.

*
*
*
ಸೋರ್ಸ್ ಕೋಡ್ ಗಟ್ಟಿಯಾಗಿ ಹಿಡಿದು ಕುಳಿತ ಮೈಕ್ರೊಸಾಫ್ಟ್ ಒಂದು ಕಡೆ. ಅದರ ಏಕಸ್ವಾಂಯವನ್ನು ಮುರಿದು ಎಲ್ಲ ಪ್ರಗತಿ ಪ್ರಿಯರಿಗೆ ಸಮಾನ ಅವಕಾಶವಿರಬೇಕು ಎಂದಂದುಕೊಂಡು ಸೋರ್ಸ್ ಕೋಡನ್ನು ಸಾರ್ವಜನಿಕರಿಗೆ ಬಿಟ್ಟುಕೊಟ್ಟ ಲಿನಕ್ಸ್, ಯುನಿಕ್ಸ್ ಒಂದುಕಡೆ. ಈ ಎರಡು ವಿಭಜನೆಯಲ್ಲಿ ಯಾವುದು ಶ್ರೇಷ್ಟ ಎಂಬ ವಾದಕ್ಕೆ ನಾನು ಇಳಿಯುತ್ತಿಲ್ಲ. ಇದರಿಂದ ಏನಾಗುತ್ತದೆ ಎಂಬುದನ್ನು ನಮ್ಮ ಮುಂದಿರುವ ಒಂದು ಸಾಮಾಜಿಕ ಹಾಗು ಭಾಷಾ ಸನ್ನಿವೇಶವನ್ನು ಗಮನಿಸೋಣ. ಈ ಸನಿವೇಶದ ಉದಾಹರಣೆ ನೀಡುತ್ತಿರುವುದು ಕೇವಲ ತುಲನಾತ್ಮಕ ಸ್ಪಷ್ಟತೆಗಾಗಿ ಮಾತ್ರ.

ರೇಡಿಯೋ ಕೇಳುವ ಅಭ್ಯಾಸವಿದ್ದರೆ ಅದರಲ್ಲೂ ವಾರ್ತೆಗಳು ಕೇಳುವ ಅಭ್ಯಾಸವಿದ್ದರೆ ಒಂದನು ಗಮನಿಸಬಹುದು: ಸಂಸ್ಕೃತದಲ್ಲಿ ವಾರ್ತೆಗಳು. ಹಾಗೆಯೇ ದೂರದರ್ಶನದಲ್ಲಿ ಈ ಸಂಸ್ಕೃತ ವಾರ್ತೆಗಳು ಈಗಲೂ ಇದೆಯೋ ಇಲ್ಲವೋ ನನಗಂತೂ ತಿಳಿಯದು. ಅದು ಬಿಟ್ಟರೆ ಒಂದಷ್ಟು ಮಂದಿಗೆ ಶಾಲೆ, ಕಾಲೇಜು ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸಲು ಒಂಡು ಸಾಧನವಾಗಷ್ಟೆ ಸಂಸ್ಕೃತ ಉಳಿದುಕೊಂಡಿದೆ. ಇಂದು ಅದು ಬಳಕೆಯಲ್ಲಿಲ್ಲದ ಸತ್ತ ಭಾಷೆ (ಸತ್ವವಿದೆ – ಇಲ್ಲ ಇದು ಬೇರೆ ವಿಷಯ) ‘ಇದು ಸಾಮಾನ್ಯನ ಭಾಷೆಯಾಗಲಿಲ್ಲ, ಆದುದರಿಂದಲೇ ಇಂದು ಸತ್ತ ಭಾಷೆಯಾಗಿದೆ’ – ಎಂಬ ವಾದವೊಂದು ಇದೆ. ಈ ವಾದದ ಹಿನ್ನೆಲೆಯಲ್ಲಿರಬಹುದಾದ ರಾಜಕೀಯಗಳನ್ನು ಬದಿಗಿಟ್ಟು ನೋಡಿದರು ಈ ವಾದದಲ್ಲಿ ಹುರುಳೇ ಇಲ್ಲ ಎಂದು ಖಚಿತವಾಗಿ ಹೇಳಲಾರೆವು. ಸಂಸ್ಕೃತದ ದಬ್ಬಾಳಿಕೆಯ ವಿರುದ್ಧ ಬಂಡೆದ್ದ ಪಾಲಿ ಭಾಷೆ, ಕನ್ನಡದ ವಚನಗಳು ಇಂದು ಮಠ ಹಾಗು ಸರ್ಕಾರದ ಕೃಪೆಯ ಶೈಥ್ಯಾಗರದಲ್ಲಿದೆ. ಅದೇ ರೀತಿಯಲ್ಲಿ ಈ ವಿಂಡೋಸ್ ಹಾಗು ಲಿನಕ್ಸ್. ವಿಂಡೋಸ್ ಮಾರುಕಟ್ಟೆಯ ಏಕಸ್ವಮ್ಯಕ್ಕದ ದೃಷ್ಟಿಯಿಂದ ಏಕಸ್ವಾಮ್ಯವಿಟ್ಟುಕೊಂಡಿದ್ದರೆ ಲಿನಕ್ಸ್ ವ್ಯವಸ್ಥೆಯನ್ನು ಸರಳವಾಗಿಡುವುದರ ಬದಲು ಸಂಸ್ಕೃತೀಕರಣಗೊಳಿಸಿಬಿಟ್ಟಿದ್ದಾರೆ. ಪ್ರಾದೇಶಿಕ ಮಟ್ಟದ ಭಾಷೆಗೆ ಲಿನಕ್ಸ್ ಇಳಿಯದೆ ಹೋದರೆ ಅದು ಸಹ ಶೈಥ್ಯಾಗಾರದ ಕೃಪೆಗೊಳಗಾಗುವುದರಲ್ಲಿ ಸಂಶಯವಿಲ್ಲ. ಮೈಕ್ರೋಸಾಫ್ಟ್ ತನ್ನ ಮಾರುಕಟ್ಟೆ ವಿಸ್ತರಣೆಗೆ ಪ್ರಾದೇಶಿಕ ಭಾಷೆಗಳನ್ನು ಬಳಸಿಕೊಳ್ಳುವಲ್ಲಿ ಹಿಂಜರಿಯುವುದಿಲ್ಲ. ‘ಆರ್ಥಿಕ ಸಂಪನ್ಮೂಲಗಳಿಲ್ಲ’- ಅರ್ಧ ನಿಜ ಅರ್ಧ ನೆಪ. ಅದರ್ಶಕ್ಕೂ ಬೆಲೆಯಿಲ್ಲ- ಹಣಕ್ಕೂ ಬೆಲೆಯಿಲ್ಲ ಎಂಬ ಪರಿಸರ ನಿರ್ಮಾಣವಾದರೆ ಅಶ್ಚರ್ಯವಿಲ್ಲ. ಜೊತೆಗೆ ಮಹಾ ದುರಂತವೆಂದರೆ ಯಾರ ಶ್ರಮಕ್ಕೂ ಬೆಲೆ ಇರುವುದಿಲ್ಲ.

ಸರಿ – ಇನ್ನೂ ಒಂದು ಸಂಗತಿಯನ್ನು ಗಮನಿಸುವ. ಸಾಮಾನ್ಯ ಕೆಲಸ ಕಾರ್ಯಗಳಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಪೂರೈಸುವ ಸಾಧನಗಳನ್ನು ಈಗಾಗಲೆ ನೀಡಲಾಗಿದೆ, ನಿಮ್ಮ ಕಂಪ್ಯೂಟರ್‍ನಲ್ಲಿ ‘ಕನ್ನಡ’ ಬರುತ್ತದೆಯಲ್ಲವೆ ಎನ್ನುವ ವಾದವನ್ನೂ ಮಾಡುವ ಮಂದಿ ಇದ್ದೇ ಇದ್ದಾರೆ. ಜೊತೆಗೆ ಎಷ್ಟು ಮಂದಿ ಕಂಪ್ಯೂಟರ್ ಬಳಸುತ್ತಾರೆ? ಸಾಮಾನ್ಯನಿಗೇಕೆ ಸಂಸ್ಕೃತ ಭಾಷೆ? ಅವನು ಅಕ್ಷರಸ್ಥನಾದರೆ ಸಾಕು. ಭಾಷೆಯನ್ನು ಬರಿ ‘ಫಂಕ್ಷನಲ್’ ಆಗಿ ಬಳಸುವ ಅವನು ಕೇವಲ ಬಳಾಕೆದಾರ- ಪಂಡಿತನಲ್ಲ. ಆಗಬೇಕಾದ್ದೂ ಇಲ್ಲ..ಹೀಗೆ ಈ ವಾದ ಮುಂದುವರೆಯುತ್ತದೆ.

ಈ ನನ್ನ ಮಾತುಗಳ ಹಿನ್ನೆಲೆಯಲ್ಲಿ ಡಿಜಿಟಲ್ ಡಿವೈಡ್ ಮುಚ್ಚುವ ಹಂಬಲವನ್ನು ಗಮನಿಸ್ ಎಂದಷ್ಟೆ ಕೋರಿಕೊಳ್ಳುತ್ತ:

ಯುನಿಕೋಡ್ ವ್ಯಾಪಕವಾಗಿ ಬಳಕೆಗೆ ಬರುವ ಕಾಲ ಇನ್ನೂ ದೂರವಿದೆ ಎಂದು ಕಣ್ಮುಚ್ಚಿ ಕುಳಿತುಕೊಳ್ಳುವುದಿಲ್ಲ- ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದ್ದೇವೆ , ಲಿನಕ್ಸ್೬ನಲ್ಲೂ ‘ನುಡಿ’ ಬಿಡುಗಡೆ ಮಾಡುತ್ತೇವೆ ಎನ್ನುವ ಗಣಕ ಪರಿಷತ್ ಕಾರ್ಯದರ್ಶಿ ನರಸಿಂಹ ಮೂರ್ತಿಯವರ ಭರವಸೆಗಳನ್ನು ನಂಬುತ್ತಲೇ ಆ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಆದರೆ ‘ಯೂನಿಕೋಡ್‌ಗೆ ಸಂಬಂಧಿಸಿದಂತೆ ಕನ್ನಡಕ್ಕೆ ಅಗತ್ಯವಾದ ಬದಲಾವಣೆಗಳನ್ನು ಸೂಚಿಸಿರುವ ಪತ್ರವನ್ನು ಕನ್ನಡ ಗಣಕ ಪರಿಷತ್ತು ಕೇಂದ್ರ ಸರ್ಕಾರದ ಟಿ. ಡಿ. ಐ. ಎಲ್. ಗೆ ಕರ್ನಾಟಕ ಸರ್ಕಾರದ ಮೂಲಕ ಈಗಾಗಲೇ ಕಳಿಸಿದೆ. ಈ ಬದಲಾವಣೆಯನ್ನು ಯೂನಿಕೋಡ್ ಒಪ್ಪಿ ಅನುಷ್ಠಾನಗೊಳಿಸದ ಹೊರತು ಯೂನಿಕೋಡ್ ಕನ್ನಡದ ಬಳಕೆಗೆ ಒಗ್ಗುವುದಿಲ್ಲ. ಹೀಗಾಗಿ ಯೂನಿಕೋಡ್ ಬಳಕೆ ಕನ್ನಡದ ಮಟ್ಟಿಗೆ ಸದ್ಯಕ್ಕೆ ದೂರದ ಮಾತು.’ ಎನ್ನುವ ಅವರ ಮಾತುಗಳು ಸಹ ಏಕೋ ಆತಂಕ ಹುಟ್ಟಿಸುತ್ತವೆ. ನಮ್ಮ ಕೆಲಸವನ್ನು ಬೇರೆಯವರ ಸುಪರ್ದಿಗೆ ಒಪ್ಪಿಸುವುದು ಬೇಡ, ಅದು ಆಗಲೇ ಬೇಕು ಎನ್ನುವ ಕಡೆ ಒತ್ತಡ ಹೇರಲು ಬೇಕಾದ ಕ್ರಮಗಳನ್ನು, ಕಾರ್ಯಕ್ರಮಗಳನ್ನು ಗಣಕ ಪರಿಷತ್ ರೂಪಿಸಿದರೆ ಅವರ ಜೊತೆ ಕೈ ಜೋಡಿಸಲು ಕನ್ನಡಸಾಹಿತ್ಯ.ಕಾಂ ತಯಾರಾಗಿದೆ ಎನ್ನುವ ಭರವಸೆಯನ್ನು ನೀಡುತ್ತಿದ್ದೇನೆ. ಆದಷ್ಟು ಬೇಗ ‘ನುಡಿ’ಯ ಲಿನಕ್ಸ್ ಆವೃತ್ತಿ ಬಿಡುಗಡೆ ಮಾಡುತ್ತಾರೆ ಎಂದು ಆಶಿಸುತ್ತೇನೆ.

ಹೀಗೆಯೇ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿತ್ಯೂಟ್ ಆಫ್ ಟೆಕ್ನಾಲಜಿಯ ‘ಇಂಡ್ ಲಿನಕ್ಸ್’ ಯೋಜನೆ ಶೀಘ್ರ ಕಾರ್ಯಗತಗೊಂದು ಕಾರ್ಯಾಚರಣೆಗೆ ಬರಲಿ ಎಂದು ಸಹ ಆಶಿಸಬಹುದು.

ಜೊತೆಗೆ ಇನ್ನೂ ಒಂದು ಒತ್ತಾಯವಿದೆ. ಅದು ಕನ್ನಡದ ಮೂರ್ನಾಲ್ಕು ಬೇಸ್ ಫಾಂಟ್‌ಗಳನ್ನು ಗುರುತಿಸಿ (೮ ಬಿಟ್ ಕೋಡ್ ಹಾಗು ೧೬ ನಿಟ್ ಕೋಡ್ ಯುನಿಕೋಡ್) ಅವುಗಳನ್ನು ಎಲ್ಲ ತಂತ್ರಾಂಶಗಳಲ್ಲಿ ಅದಕವಾಗಿರುವಂತೆ ಮಾಡಬೇಕು. ಆಗ ಕಂಪಾಟಬಲಿಟಿಯ ಜಿಗುಟುತನ ಇರುವುದಿಲ್ಲ.

*
*
*
‘ನೋಡಯ್ಯ ಅವನ ಕೆಪಾಸಿಟೀನ, ಹಡಗ್ನಲ್ಲಿ ಪ್ಲೇನುಗಳನ್ನ ಎತ್ಕೊಂದು ಬಂದು ನಿಲ್ಲಿಸಿ ಬಾಂಬ್‌ಗಳನ್ನ ಹಾಕ್ತಾ ಅವ್ನೆ..’ – ಅಮೆರಿಕದ ಅಭಿಮಾನಿ ಮಿತ್ರನೊಬ್ಬ ಹೇಳಿದ್ದು ದಂಗು ಬಡಿಸಲಿಲ್ಲ. ಅವನ ಮಾತುಗಳಲ್ಲಿನ ಕ್ರೌರ್ಯದಲ್ಲಿ ಒಂದು ರೀತ್ಯ ಮೌಡ್ಯವೂ ಬೆರೆತಿತ್ತು. ತಮ್ಮಗಳ ಹುಚ್ಚು ಅಭಿಮಾನವನು ಮೆರೆಸಲು ಅವರು ಎಂತಹ ಉದಾಹರಣೆಯನ್ನಾದರೂ ವಿಜೃಂಭಿಸಿ ಹೇಳಬಲ್ಲರು. ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಡಾರ್ವಿನ್ ಸಿದ್ಧಾಂತವನ್ನೇ ಆಧರಿಸಿದ ಎಡ್ವರ್ಡ್ ಓ ವಿಲ್ಸನ್‌ನ ಸೋಶಿಯೋ ಬಾಯಾಲಜಿಯನ್ನು ಎಡಪಂಥೀಯ ವಿಮರ್ಶಕರು ಛಿದ್ರಗೊಳಿಸಿದ್ದು ಇದಕ್ಕಾಗಿಯೇ. ಹಾಗಾದರೆ ಸರ್ವಸಮಾನ ಸಮಾಜವಾದ ಕನಸಿಗೆ ಬೆಲೆಯೇ ಇಲ್ಲವ ಎಂದು ಅವರೆಲ್ಲ ಪ್ರಶ್ನಿಸಿದ್ದರು. ‘ಶೇಖರ್, ಸರ್ವೈವಲ್ ಆಫ್ ದ ಫಿಟ್ಟೆಸ್ಟ್- ಶಕ್ತಿ ಇರೋನು ಹೊಡೆಯುತ್ತಾನಪ್ಪ’ ಎಂದು ಮತ್ತೊಬ್ಬ ಮಿತ್ರರು ಹೇಳಿದಾಗ ನಾನು ನಿಜವಾಗಿಯೂ ದಂಗು ಬಡಿದು ಹೋಗಿದ್ದೆ. ಅವರು ಓದದವರೇನಲ್ಲ. ಆಲೋಚಸಲಾಗದವರೇನಲ್ಲ. ಅವರ ಬಾಯಲ್ಲಿ ಇಂತಹ ಮಾತುಗಳೆ- ಇದು ಬುಷ್ ಮಹಾಶಯನ ಕ್ರೌರ್ಯಕ್ಕಿಂತಲೂ ಹೆಚ್ಚಿನದು- ಅದಕ್ಕಿಂತಲೂ ಹೀನಾಯದ್ದು..ಎಂದನ್ನಿಸಿದ್ದರಿಂದ ಅವರೊಂದಿಗೆ ನನ್ನ ಮಾತುಗಳೆಲ್ಲ ಹಳಿ ತಪ್ಪಿದ್ದವು. ಇರಲಿ, ಸಂಯುಕ್ತ ರಾಷ್ಟ್ರ ತನ್ನ ಮಾತುಗಳನ್ನು ಒಪ್ಪದಿದ್ದರೂ ‘ನಾನು ಮಾಡುವುದನ್ನೇ ಮಾಡುತ್ತೇನೆ’ ಎಂದು ಹೊರಟಿರುವ ಬುಷ್ ಸರ್ವಾಧಿಕಾರದ ಯುದ್ಧವನ್ನು ಖಂದಿಸುವ ನೋಮ್ ಚಾಮ್ಸ್‌ಕಿಯ ಲೇಖನದ ಅನುವಾದವನ್ನು ಪ್ರಕಟಿಸುವ ಮೂಲಕ ಎಲ್ಲೂ ಮುಟ್ಟದ ನಮ್ಮ ಖಂಡನೆಯನ್ನು ವ್ಯಕ್ತ ಪಡಿಸುತ್ತಿದ್ದೇವೆ. ಎಲ್ಲೂ ಮುಟ್ಟದ್ದರಿಂದ ನಾವೆಲ್ಲ ಖಂದಿಸುತ್ತೇವೆಯೋ ಎಂಬ ಸೋಜಿಗವೂ ನನ್ನನ್ನು ಆಗಾಗ್ಯೆ ಕಾಡಿದ್ದಿದೆ..

*
*
*
ಈ ಬಾರಿ ಕನ್ನಡಸಾಹಿತ್ಯ.ಕಾಂ ಲೇಖಕ ಬಳಗಕ್ಕೆ ಐವರು ಸೇರಿದ್ದಾರೆ. ದೇವನೂರ ಮಹಾದೇವ, ಜಯಂತ ಕಾಯ್ಕಿಣಿ, ಕುಸುಮಾ ಶಾನಾಭಾಗ, ಶಾಂತಾದೇವಿ ಕಣವಿ ಹಾಗು ಕೆ ಎಂ ವಿಜಯಲಕ್ಷ್ಮಿ. ಒಡಲಾಳದ ಬಗೆಗೆ ಯು ಆರ್ ಅನಂತಮೂರ್ತಿಯವರು ಬರೆದಿರುವ ಲೇಖನವೂ ಇದೆಯಾದ್ದರಿಂದ ನಾನು ಹೇಳಬೇಕಾದ್ದೇನೂ ಇಲ್ಲವೆಂದೆನ್ನಿಸುತ್ತದೆ. ಇರಾಕ್-ಅಮೆರಿಕ ಯುದ್ಧದ ಆತಂಕದ ನಡುವೆ ಅಳುಕಿನಿಂದಲೇ ಒಮ್ದನ್ನು ಹೇಳಬಹುದೇನೋ: ಸ್ವಭಾನು ಸಂವತ್ಸರ ಎಲ್ಲರಿಗೂ ಒಳ್ಳೆಯದನ್ನು ತರಲಿ- ಯುಗಾದಿ ಶುಭಾಶಯಗಳು..

-ಶೇಖರ್‍ಪೂರ್ಣ
*****
೨-೦೪.೨೦೦೩

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.