ಸಂಭ್ರಮಕ್ಕೆ ನೂರಾರು ಕಾರಣಗಳು..

ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು-
ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆ
ಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಅನಂತಮೂರ್ತಿಯವರಿಗೆ ‘ಅತ್ಯುತ್ತಮ ಚಿಂತಕ’ ಎಂದೆನ್ನುವ ಕೇರಳ ರಾಜ್ಯದ ಪ್ರಶಸ್ತಿ
‘ದೇಶಕಾಲ’ ಹಾಗು ‘ಅಷ್ಟದಿಕ್ಕು’ ಸಂಯುಕ್ತವಾಗಿ ಆಯೋಜಿಸಿದ್ದ ದ ರಾ ಬೇಂದ್ರೆಯವರ ಕಾವ್ಯವಾಚನ ‘ನಾದಲೀಲೆ’ ಗೆ ಸೇರಿದ್ದ ಜನಜಂಗುಳಿ,
ಚಂದ್ರಶೇಖರ ಕಂಬಾರರ ‘ಸೂರ್ಯ ಶಿಖಾರಿ’ ಕೃತಿ ಬಿಡುಗಡೆ,
ಕುಂ ವೀರಭದ್ರಪ್ಪನವರ ‘ಅರಮನೆ’ ಕಾದಂಬರಿಯ ಬಿಡುಗಡೆ
ರಘುನಾಥ್ ಚ ಹ ರವರ ‘ಹೊರಗೂ ಮಳೆ ಒಳಗೂ ಮಳೆ’ ಸಣ್ಣ ಕತೆಗಳ ಸಂಕಲನದ ಬಿಡುಗಡೆ…
ಹೀಗೆ ನೂರಾರು ಸಂಗತಿಗಳು. ಇದೆಲ್ಲದಕ್ಕೂ ಕಾರಣರಾದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿ, ಸಂಭ್ರಮಿಸುತ್ತಾ ಈ ಕೆಳಗಿನ ಸಾಲುಗಳು:

ಕನ್ನಡಸಾಹಿತ್ಯ.ಕಾಂ ಸಂದರ್ಭದಲ್ಲಿ ಮಾತನಾಡುವುದಾದರೆ ಎಲ್ಲವೂ ಸಂತೋಷದ, ಸಕಾರಾತ್ಮಕ ಘಟನೆಗಳೆ. ಮುಂಬೈ-ಪುಣೆಯಲ್ಲಿ, ತುಮಕೂರಿನಲ್ಲಿ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ವಿಧ್ಯುಕ್ತವಾಗಿ ಉದ್ಘಾಟನೆಯಾದದ್ದು, ಹಾಗೆಯೆ ಹಾಸನ ಜಿಲ್ಲಾ ಕೇಂದ್ರದಲ್ಲಿಯೂ ‘ಬೆಂಬಲಿಗರ ಬಳಗ’ ಉದ್ಘಾಟನೆಯಾದದ್ದು, ಪುಣೆಯ ಶಾಲೆಯಲ್ಲಿ ‘ಬರಹ’ ಅನುಸ್ಥಾಪನೆಗೊಂಡು ಕಂಪ್ಯೂಟರ್‌ನಲ್ಲಿ ಕನ್ನಡದ ಸಾಧ್ಯತೆ ಮಕ್ಕಳ ಮನಸ್ಸಿನ ಮುಂದೆ ತೆರೆದುಕೊಂಡದ್ದು, ಶೇಷಾದ್ರಿವಾಸುರವರೊಂದಿಗೆ ಮಾತುಕತೆ, ಹಿರಿಯರಾದ ವೆಂಕಟಸುಬ್ಬಯ್ಯನವರ ನಿಘಂಟು ‘ಬರಹ.ಕಾಂ’ ನ ಭಾಗವಾಗಿರುವುದು, ಸರ್ಕಾರಕ್ಕೆ ಕನ್ನಡಸಾಹಿತ್ಯ.ಕಾಂ ಸಲ್ಲಿಸಲಿರುವ ಮನವಿ, ಅದಕ್ಕೆ ಬಂದ ಸಕಾರಾತ್ಮಕ ಪ್ರತಿಕ್ರಿಯೆ…ಹೀಗೆ ಹತ್ತು ಹಲವು ಸಂಗತಿಗಳು.

ಮತ್ತೊಂದು ಖುಷಿಯಾದ ಸಂಗತಿಯೆಂದರೆ, ಕನ್ನಡಸಾಹಿತ್ಯ.ಕಾಂ ಲೇಖಕರ ಬಳಗಕ್ಕೆ ಲೇಖಕರು ಸೇರ್ಪಡೆಯಾಗುತ್ತಲೇ ಹೋಗುತ್ತಿದ್ದಾರೆ. ಈ ಬಾರಿ, ಕೊಲ್ಹಾಪುರದಿಂದ ಕೆ ಸತ್ಯನಾರಾಯಣರವರು ಗೆಳೆಯ ರಕ್ಷಿತ್ ಮೂಲಕ ಸಂಪರ್ಕಿಸಿ ಸ್ವಯಂಪ್ರೇರಣೆಯಿಂದ ತಮ್ಮ ಕೃತಿಗಳನ್ನು ಪ್ರಕಟಿಸಲು ಅನುಮತಿ ನೀಡಿದ್ದು: ಈ ಬಾರಿ ಅವರ “ಕಾಲ ಜಿಂಕೆ” -ಕಾದಂಬರಿಯನ್ನು ಸಂಪೂರ್ಣವಾಗಿ ಪ್ರಕಟಿಸಲಾಗಿದೆ. ಅದೇ ರೀತಿ, ಮುಂಬೈ ನಿವಾಸಿಯಾಗಿರುವ ಮಿತ್ರಾ ವೆಂಕಟರಾಜುರವರ ಸಣ್ಣ ಕಥೆ, ಎಚ್ ಎಸ್ ವೆಂಕಟೇಶಮೂರ್ತಿಯವರ ಕವನಗಳು….೭೩ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾಗಿರುವ ನಿಸಾರ್ ಅಹಮದ್‌ರ ಅಧ್ಯಕ್ಷೀಯ ಭಾಷಣ ಹಾಗು ಉದ್ಘಾಟಕರಾದ ಜಿ ಎಸ್ ಶಿವರುದ್ರಪ್ಪನವರ ಭಾಷಣದ ಸಂಪೂರ್ಣ ಪಠ್ಯ ನೀಡಲಾಗಿದೆ. ಈ ಬಾರಿಯ ‘ಅಪ್‌ಡೇಟ್’ ಮೂರು ವಾರ ಮುಂದೂಡಿದ್ದಕ್ಕೆ ಇದೂ ಒಂದು ಕಾರಣ.

ಚಂದ್ರಶೇಖರ ಪಾಟಿಲರಿಗೆ ಒಂದು ಸ್ಪಷ್ಟನೆ: ತುಮಕೂರಿನಲ್ಲಿ ಬೆಂಬಲಿಗರ ಬಳಗದ ಉದ್ಘಾಟನೆಗೆ ಮುನ್ನ ಪೂರ್ವಭಾವಿ ಸಭೆ ನಡೆದಾಗ ಅಲ್ಲಿ ಬಂದ ಪ್ರಶ್ನೋತ್ತರಗಳಿಗೆ ಉತ್ತರಿಸುತ್ತಿದ್ದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಸಾಹಿತ್ಯ.ಕಾಂ ತೆಗೆದುಕೊಳ್ಳುತ್ತಿರುವ ವಿಷಯ ಸೂಚಿ ಹಾಗು ನಡೆಸುತ್ತಿರುವ ಸಂವಾದ ಕುರಿತಂತೆ ಹೇಗೆ ಪ್ರತಿಕ್ರಿಯಿಸುತ್ತಿದೆ..? -ಎನ್ನುವ ಅರ್ಥದಲ್ಲಿ ಪ್ರಶ್ನೆಯೊಂದು ಬಂದು ’ಪರಿಷತ್ತಿನೊಂದಿಗೆ ಚರ್ಚಿಸಿದ್ದೀರ? ಎಂದು ಕೇಳಿದ್ದರು. ನಾನು ಸ್ವಲ್ಪ ನಿರಾಶೆಯಿಂದಲೇ ಮಾಹಿತಿ ತಂತ್ರಜ್ಞಾನದ ಸಂದರ್ಭವನ್ನು: ‘ಅವರೊಡನೆ ಚರ್ಚಿಸಿ ಯಾವುದೇ ಪ್ರಯೋಜನವಿಲ್ಲ…’ ಎನ್ನುವ ಅರ್ಥದಲ್ಲಿ ಉತ್ತರಿಸಿದ್ದು ನಿಜ. ಆದರೆ, ಅದು ಪತ್ರಿಕೆಯಲ್ಲಿ ‘ಚಂದ್ರಶೇಖರ ಪಾಟೀಲರೊಡನೆ ಚರ್ಚಿಸಿದರೂ ಯಾವುದೇ ಪ್ರಯೋಜನವಿಲ್ಲ’ ಎಂದೆನ್ನುವ ಅರ್ಥದಲ್ಲಿ ಪ್ರಕಟವಾಗಿತ್ತು. ಚಂದ್ರಶೇಖರ ಪಾಟೀಲರನ್ನು ನಾನು ಯಾವುದೇ ಸಂದರ್ಭದಲ್ಲೂ ಭೇಟಿಯಾಗಿರಲೇ ಇಲ್ಲ. ಚರ್ಚಿಸಿಯೂ ಇರಲಿಲ್ಲ. ನಾನು ಹೇಳಿದ್ದನ್ನು ತಪ್ಪು ಅರ್ಥದಲ್ಲಿ ಗ್ರಹಿಸಿ-ಪ್ರಕಟವಾದ್ದಂತೂ ನಿಜ.

ಮನವಿಗೆ ಸಹಿ ಹಾಕಿಸಲು ಅವರನ್ನು ಭೇಟಿಯಾದ ಸಂದರ್ಭದಲ್ಲಿ “ಮನಸ್ಸಿಗೆ ಬಹಳ ಬೇಸರಾತು’ ಎಂದು ಸ್ವಲ್ಪ ಖಿನ್ನರಾಗೆ ಪಾಟಿಲರು ಹೇಳಿದರು. ನಾನು ಅವರಿಗೆ ವಿವರಿಸಿದೆ. ಅತ್ಯಂತ ಸೌಜನ್ಯದಿಂದ ನಡೆದುಕೊಂಡ ಪಾಟಿಲರು ಮನವಿಗೆ ಬೆಂಬಲ ಸೂಚಿಸಿ, ಅಲ್ಲೇ ಇದ್ದ ಧಾರವಾಡದ ಚಂದ್ರಕಾಂತ ಬೆಲ್ಲದರಿಗೂ ಮನವಿಗೆ ಸಹಿ ಹಾಕುವಂತೆ ಕೇಳಿಕೊಂಡರು. ಅದರಂತೆಯೇ, ಬೆಲ್ಲದ್‌ರವರೂ ಸಹಿ ಹಾಕಿದರು. ನಂತರ, ತಮೆಲ್ಲ ಕೃತಿಗಳನ್ನು ಕನ್ನಡಸಾಹಿತ್ಯ.ಕಾಂ ವಿಶೇಷವಾಗಿ ಬಳಸಬಹುದು ಎಂದು ಪಾಟಿಲರು ಅನುಮತಿ ಪತ್ರವನ್ನು ಕೊಟ್ಟು ತಮ್ಮ ಸೌಜನ್ಯವನ್ನು ಮತ್ತಷ್ಟು ವಿಸ್ತರಿಸಿದಾಗ ನನಗೆ ನಿಜವಾಗಿಯೂ ಅವರ ಬಗೆಗೆ ಹೆಮ್ಮೆ ಎಂದನ್ನಿಸಿತು. ಅವರ ಕೃತಿಗಳನ್ನೆಲ್ಲ ಅವರಿಂದಲೇ ಖರೀದಿಸಿ ಪರಿಷತ್ತಿನಿಂದಾಚೆಗೆ ಬಂದಾಗ ಒಮ್ಮೊಮ್ಮೆ ಮನುಷ್ಯರು ತಮ್ಮ ಖಿನ್ನತೆಯನ್ನು ಹೇಗೆಲ್ಲ ಮೀರಬಲ್ಲರು ಎನ್ನುವುದಕ್ಕೆ ಪಾಟಿಲರು ಸಾಕ್ಷಿಯಲ್ಲವೆ ಎಂದೂ ಅನ್ನಿಸಿತು. ಪಾಟಿಲರಿಗೆ, ನೋವಾಗಿದ್ದರೆ, ಕ್ಷಮಿಸಿ ಪಾಟಿಲರೆ ಎಂದು ಕೇಳುವುದು ನನ್ನ ಸೌಜನ್ಯವನ್ನು ನಾನು ಉಳಿಸಿಕೊಳ್ಳಬೇಕಾದದ್ದು ನನ್ನ ಬಗೆಯಾಗಬೇಕು. ಆದ್ದರಿಂದಲೇ ಮೇಲಿನ ಸಾಲುಗಳು. ಪಾಟಿಲರು, ಇದನ್ನು ಓದುತ್ತಾರೆ ಅಥವ ಈ ಸಾಲುಗಳು ಅವರ ಗಮನಕ್ಕೆ ಹೋದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಬಗೆಗೆ ನನಗಿರುವ ಅಭಿಪ್ರಾಗಳೂ ಸಹ ಬದಲಾಗುತ್ತವೆ. ಅಂದರೆ, ಸಾಹಿತ್ಯ ಪರಿಷತ್ತು ಅಂತರ್ಜಾಲದಲ್ಲಿ ದಾಖಲಿಸಿರುವ ಈ ಸಾಲುಗಳನ್ನು ಓದಿ ಪ್ರತಿಕ್ರಿಯಿಸುವಂತಾದರೆ, ಸಾಲುಗಳಿಗೆ ಬೇರೆಯದೆ ಸಾರ್ಥಕ ಬರುತ್ತದೆ ಎಂದೆನ್ನುವುದನ್ನು ಇಲ್ಲಿ ಸೂಕ್ಷ್ಮವಾಗಿ ಸೂಚಿಸಿದ್ದೇನೆ. ಬೇಕೆಂದೇ, ನಾನು ಈ ಸಾಲುಗಳನ್ನು ಬೇರೆ ಇನ್ಯಾವ ರೀತಿಯಲ್ಲೂ ಗಮನಕ್ಕೆ ತರಬಾರದೆಂದೂ ನಿರ್ಧರಿಸಿದ್ದೇನೆ. ಈ ನಿರ್ಧಾರದ ಹಿನ್ನೆಲೆಯಲ್ಲಿರುವ ಸೂಕ್ಷ್ಮವನ್ನು ಪ್ರಜ್ಞಾವಂತರೂ ಗ್ರಹಿಸಬಲ್ಲರು ಎನ್ನುವ ಭರವಸೆಯೂ ಇದೆ.
*
*
*
ಗ್ರಾಮೀಣ ಹಾಗು ಅರೆನಗರಗಳಲ್ಲಿ ಮಾಹಿತಿ ತಂತ್ರಜ್ಞಾನ
“ಮಾಹಿತಿ ತಂತ್ರಜ್ಞಾನ ಹಾಗು ದೇಸಗತಿ” -ಎಂದೆನ್ನುವ ಮಂತ್ರವನ್ನು ಹಿಡಿದು, ಕನ್ನಡಸಾಹಿತ್ಯ.ಕಾಂ ಹೊಸ ದಿಕ್ಕಿನ ಪ್ರಜ್ಞೆಯನ್ನು, ಅದಕ್ಕಾಗಿ ಹುಟ್ಟಿ ಹಾಕಿದ ಅಗತ್ಯವಾದ ಸಂವಾದಕ್ಕೆ ಉತ್ತಮ ಪ್ರತಿಕ್ರಿಯೆಗಳು ಕಾಣಬರತೊಡಗಿವೆ. ಮಾಹಿತಿ ತಂತ್ರಜ್ಞಾನದ ಅನೇಕಾನೇಕ ಸವಲತ್ತುಗಳಿಗೆ ನಮ್ಮ ಸಮಾಜ ಕುರುಡಾಗಿದೆಯೋ ಅಥವ ಮಾಹಿತಿ ತಂತ್ರಜ್ಞಾನದ ಎಲ್ಲ ಸವಲತ್ತುಗಳು ಕೇವಲ “ಉಳ್ಳವರ” ಸ್ವತ್ತಾಗಿಯೇ ಇರಲಿ, ಅದನ್ನು ಬದಲಿಸ ಹೊರಟು “ಮೇಲುಗೈ” ಮೊಟಕಾದೀತು ಎಂದೆನ್ನುವ ಅಂಜಿಕೆಯೋ, ಅಂತೂ ಪ್ರಜ್ಞೆಗೆ ಬೇಕಾದ ವಿಚಾರವಾಗಿ ಉಳಿದಿಲ್ಲ. ಕನ್ನಡಸಾಹಿತ್ಯ.ಕಾಂ ತನ್ನ ಬೆಂಬಲಿಗರ ಬಳಗಗಳಿಂದ ಕ್ರಮೇಣ ಇಂತಹ ತಟಸ್ಥ ಭಾವವನ್ನು “ಯಥಾಸ್ಥಿತಿವಾದದ” ನೀಚತನಗಳನ್ನು ದೂರವಾಗಿಸಿ, ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಹೆಚ್ಚು ಹೆಚ್ಚು ಪ್ರಜಾಸತ್ತಾತ್ಮವಾಗಬೇಕಾದರೆ ಹೊಸದೇ ಆದ ವಿಚಾರಗತಿ ಪಡೆಯಬೇಕಾಗುತ್ತದೆ- ಜೊತೆಗೆ ಚಟುವಟಿಕೆಗಳು ಹೆಚ್ಚಬೇಕಾಗುತ್ತದೆ ಎಂದು ಭಾವಿಸಿ, ಕ್ರಮೇಣವಾಗಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳತೊಡಗಿದೆ.

ಈ ಬಗೆಗೆ, ಗ್ರಾಮೀಣ, ಅರೆನಗರಗಳಲ್ಲಿ ಒಂದು ರೀತಿಯ ಎಚ್ಚರಿಕೆ ಮೂಡಿಸುವತ್ತ ತನ್ನ ಗಮನವನ್ನು ಈಗ ಕೇಂದ್ರೀಕರಿಸಲಾರಂಭಿಸಿದೆ. ಹೀಗಾಗಿ, ತುಮಕೂರು ಮತ್ತು ಹಾಸನ ಜಿಲ್ಲಾ ಕೆಂದ್ರಗಳಲ್ಲಿ ಬೆಂಬಲಿಗರ ಬಳಗಗಳು ಉದ್ಘಾಟನೆಯಾಗಿವೆ. ಅದೇ ರೀತಿ ಮೈಸೂರು ನಗರದಲ್ಲೂ ಬೆಂಬಲಿಗರ ಬಳಗದ ಉದ್ಘಾಟನೆಗೆ ಉತ್ಸಾಹಿಗಳು ಸಜ್ಜಾಗುತ್ತಿದ್ದಾರೆ- ಹೀಗೆ ಪ್ರತಿ ಜಿಲ್ಲೆಗಳಲ್ಲೂ ಬೆಂಬಲಿಗರ ಬಳಗದ ಉದ್ಘಾಟನೆಯಾದೊಡನೆ ಕ್ರಾಂತಿಯೊಂದು ಆಗಿ ಹೋಯಿತು ಎಂದು ನಾವು ಬೀಗಬೇಕಾಗಿಲ್ಲ- ಬೀಜ ಬಿತ್ತಿದ ಮೇಲೆ ಅದಕ್ಕೆ ತಕ್ಕ ಪೋಷಕಾಂಶಗಳು ದೊರೆಯಬೇಕು. ಹಾಗೆ ದೊರೆತಲ್ಲಿ, ಸಮಯಾವಕಾಶಕ್ಕೆ ತಕ್ಕಂತೆ ಚಟುವಟಿಕೆಗಳು ಬಿರುಸು ಪಡೆಯಬಹುದು. ನಿಧಾನಕ್ಕೆ ಆಗಲಿ ಎಂದೆನ್ನುವ ತಾಳ್ಮೆ, ನಿಧಾನವೆನ್ನುವುದು ಜೋಭದ್ರತನವಾಗದಿರುವವರೆಗೆ ಸರಿ ಎಂದೆನ್ನುವ ಪ್ರಜ್ಞೆಯೂ ಸೇರಿಕೊಂಡೇ ಚಟುವಟಿಕೆಗಳು ಮುಂದುವರೆಯಲಿ.
*
*
*
ದೊಡ್ಡ ಕನಸು…?
ಜೂನ್ ತಿಂಗಳ ೨೩ ಹಾಗು ೨೪ ರಂದು “ರಾಷ್ಟ್ರ ಮಟ್ಟದ ವಿಚಾರಸಂಕಿರಣ”ವೊಂದನ್ನು ಆಯೋಜಿಸಲು ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಈ ವಿಚಾರ ಸಂಕಿರಣಕ್ಕೆ ‘ಕ್ರೈಸ್ಟ್ ಕಾಲೇಜ್ ಆಪ್ ಲಾ’, ಸಹ-ಪ್ರಾಯೋಜಕರಾಗಿರುತ್ತಾರೆ. ರ್‍ಯಾನ್ ಬ್ಯಾಕ್ಸಿಯಂತಹ ಸಂಸ್ಥೆಗಳು, ನಮ್ಮ ಪ್ರಸ್ತಾವನೆಗೆ ಆಸಕ್ತಿ ಹಾಗು ಸಕಾರಾತ್ಮಕ ಪ್ರತಿಕ್ರಿಯೆ ತೋರಿಸಿವೆ. ಹೀಗೆ ಬರುವ ಸಕಾರಾತ್ಮಕ ಪ್ರತಿಕ್ರಿಯೆಗಳು ನಮ್ಮ ಮುಂದೆ ದೊಡ್ಡ ಕನಸನ್ನು ಬಿತ್ತರಿಸುತ್ತಿದೆ.

ಮತ್ತೂ ಒಂದು ಪ್ರಮುಖವಾದ ಉದ್ದೇಶ: ಕನ್ನಡಸಾಹಿತ್ಯ.ಕಾಂ ನಿರ್ವಹಣೆಯ ವೆಚ್ಚಕ್ಕೆ ಸ್ವತಂತ್ರವಾದ ಒಂದು ಆದಾಯದ ಅಗತ್ಯವಿದೆ- ಜೊತೆಗೆ ಸರ್ವರ್‌ಗಳ ಅಧಿಕ ಒತ್ತಡಗಳಿಂದಾಗಿ ನಮಗೆ ದಕ್ಕುತ್ತಿರುವ ಹೋಸ್ಟಿಂಗ್ ಕಂಪನಿಗಳ ಸೇವೆ ಸಮರ್ಪಕವಾಗಿಲ್ಲದೆ ಅನೇಕ ಅಡಚಣೆಗಳು, ಹೀಗಾಗಿ ನಮ್ಮದೇ ಒಂದು ಸರ್ವರ್ ಖರೀದಿಸಿ, ಅದನ್ನು ‘ಕೋ ಲೊಕೇಟ್’ ಮಾಡಿ, ಕನ್ನಡಸಾಹಿತ್ಯ.ಕಾಂ ನಿರ್ವಹಣೆಯಾಗಿ ಉಳಿದ ಸ್ಥಳಾವಕಾಶವನ್ನು “ಬಾಡಿಗೆಗೆ” ಬಿಡುವುದರ ಮೂಲಕ ಬರುವ ಆದಾಯದಿಂದ ಕನ್ನಡಸಾಹಿತ್ಯ.ಕಾಂ ನಿರ್ವಹಣೆಯ ವೆಚ್ಚವನ್ನು ಭರಿಸಬಹುದು. ಇದಕ್ಕಾಗಿ ವಿಚಾರ ಸಂಕಿರಣದ ಸಂದರ್ಭದಲ್ಲಿ ತರಬಹುದಾದ ಸ್ಮರಣ ಸಂಚಿಕೆಯ ಮೂಲಕ ಎಂಟು ಲಕ್ಷ ರೂಗಳನ್ನು ಜಾಹಿರಾತು ಮೂಲಕ ಸಂಗ್ರಹಿಸಿ, ಅದರಲ್ಲಿ ಎರಡು ಲಕ್ಷ ರೂಗಳು ಜಾಹಿರಾತು ತರಬಲ್ಲವರಿಗೆ ಕೊಡಬೇಕಾದ ’ಕಮೀಷನ್’ ಹೊರತು ಪಡಿಸಿ ಉಳಿಯಬಹುದಾದ ಆರು ಲಕ್ಷದಲ್ಲಿ ಸರ್ವರ್ ಖರೀದಿ, ಇತರರಿಗೆ ಸ್ಥಳಾವಕಾಶ ಮಾಡಿಕೊಡಲು ಬೇಕಾಗುವ ತಂತ್ರಾಶ, ಸ್ಥಳಾವಕಾಶದ ಲಭ್ಯತೆ ಕುರಿತಂತೆ ಮಾರಾಟ ವ್ಯವಸ್ಥೆ ಇತ್ಯಾದಿಗಳನ್ನು ರೂಪಿಸಬಹುದು. ಸಮುದಾಯ-ಬಳಗದಿಂದ ಕ್ರೋಢಿಕರಣವಾಗುವ ಸಂಪನ್ಮೂಲವನ್ನು ಕನ್ನಡಸಾಹಿತ್ಯ.ಕಾಂನ “ಸೋಷಿಯಲ್ ಕಂಪ್ಯೂಟಿಂಗ್’ ಪರಿಸರ ನಿರ್ಮಾಣದ ಚಟುವಟಿಕೆಗಳಿಗೆ ಮೀಸಲಿಡಬಹುದಲ್ಲವೆ?

ವಿಚಾರಸಂಕಿರಣದ ಚಟುವಟಿಕೆಗಳ ಕುರಿತಂತೆ ವಿವರವುಳ್ಳ ಮತ್ತೊಂದು ತಾಣವನ್ನು ಹೆಚ್ಚಿನ ವಿವರಗಳೊಂದಿಗೆ ಪ್ರತ್ಯೇಕವಾಗಿ ನಿರ್ಮಿಸಲಾಗುವುದು.

ಈ ವಿಚಾರಸಂಕಿರಣದ ಚಟುವಟಿಕೆಗಳ ಯಶಸ್ಸಿಗೆ ಅನೇಕ ಕಾರ್ಯಕರ್ತರು, ಸ್ವಯಂಸೇವಕರು ಬೇಕಾಗಿದ್ದಾರೆ. ಆಸಕ್ತಿಯುಳ್ಳವರು ಬೆಂಬಲಿಗರ ಬಳಗವನ್ನಾಗಲಿ, ವೈಯಕ್ತಿಕವಾಗಿ ನನ್ನನ್ನಾಗಲಿ ಸಂಪರ್ಕಿಸಬಹುದು: ದೂರವಾಣಿ: ೦೮೦-೨೬೪೮೪೬೧೭ (ಮನೆ)

ಈ ವಿಚಾರಸಂಕಿರಣ, ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ಗಣ್ಯರನ್ನು, ಅದೇ ರೀತಿ ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಗಣ್ಯರನ್ನು ಒಂದೆಡೆ ಸೇರಿಸಿ ಸಂವಾದಕ್ಕೆ ವೇದಿಕೆಯಾಗಲಿ ಎನ್ನುವ ಸದಾಶಯ ಹೊಂದಿದೆ. ಅದೇ ರೀತಿ, ಕನ್ನಡಸಾಹಿತ್ಯ.ಕಾಂ ಸ್ಥಾಪನೆಗೆ, ಬೆಳವಣಿಗೆಗೆ ಕಾರಣವಾಗಿರುವ ಎಲ್ಲ ಲೇಖಕರನ್ನು ಒಂದೇ ವೇದಿಕೆಗೆ ಕರೆದು ತಂದು ಕೃತಜ್ಞತೆಗಳನ್ನು ಸೂಚಿಸುವ ಉದ್ದೇಶವೂ ಇದೆ. ಈ ಉದ್ದೇಶಗಳನ್ನು ಕಾರ್ಯ ರೂಪಕ್ಕೆ ತರಲು ಅನೇಕ ಸಮಿತಿಗಳನ್ನು ರಚಿಸಲಾಗಿದೆ. ನಿಧಾನಕ್ಕೆ ಆ ಸಮಿತಿಗಳು ಕಾರ್ಯೋನ್ಮುಖವಾಗಿವೆ.
*
*
*
ಮನವಿ ಪತ್ರ
ಕಂಪ್ಯೂಟರ್ – ಮಾಹಿತಿ ತಂತ್ರಜ್ಞಾನವಲಯದಲ್ಲಿ ಕನ್ನಡ ಪರವಾದ ಪರಿಸರ ನಿರ್ಮಾಣಕ್ಕೆ ಬೇಕಾಗಿರುವುದು ನಮ್ಮ ಸಂದರ್ಭದಲ್ಲಿ ‘ಕನ್ನಡ ಪರವಾದಂತಹ ತಂತ್ರಾಂಶಗಳು’. ಈ ತಂತ್ರಾಂಶಗಳು ಫ್ರೀ ವೇರ್ ಇರಬಹುದು, ಶೇರ್ ವೇರ್ ಇರಬಹುದು ಅಥವ ಪ್ರೊಪ್ರೈಟರಿ ಮೂಲದವಾಗಿರಬಹುದು. ಕಂಪ್ಯೂಟರ್‌ನಲ್ಲಿ ಕನ್ನಡವೆಂದರೆ ‘ಬರಿಯ ಅಕ್ಷರಗಳ’ ಡಿಸ್‌ಪ್ಲೇ ಅಥವ ಮಾನಿಟರ್ ಮೇಲೆ ಅಕ್ಷರಗಳು ಮೂಡಿಬಿಟ್ಟರಷ್ಟೆ ಸಾಕು ಎಂದೆನ್ನುವ ಸೀಮಿತ ದೃಷ್ಟಿಯಿಂದ ಆಚೆಗೆ ಹೋಗಿ ನಿಲ್ಲಬೇಕಾಗುತ್ತದೆ.

ಜನಪರವಾದ, ಗ್ರಾಮೀಣ, ಅರೆನಗರ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಜನಪರವಾಗಿ ಮೂಡುವುದಿಲ್ಲ. ಹೀಗಾಗಿ, ಜನರನ್ನು, ಸಾಮಾನ್ಯ ಜನರನ್ನು ಅಂದರೆ ಕೃಷಿಕರ, ದಲಿತರ, ಜನಸಾಮಾನ್ಯರ ನಡುವೆ ಈ ಸವಲತ್ತುಗಳ ಕುರಿತಂತೆ ಎಚ್ಚರಿಕೆಯನ್ನು, ಪ್ರಜ್ಞೆಯನ್ನು ಮೂಡಿಸಿದಾಗ ಮಾತ್ರವೆ ತಾಂತ್ರಿಕತೆ “ಜನಪರವಾಗಿರುವುದು”. ಮಾಹಿತಿ ತಂತ್ರಜ್ಞಾನ “ಯೂಸರ್ ಫ್ರೆಂಡ್ಲಿ”ಯಾಗಿದ್ದರೆ ಮಾತ್ರ ಸಾಲದು, ‘ಪೀಪಲ್ ಫ್ರೆಂಡ್ಲಿ’ಯಾಗಿಯೂ ಅಂದರೆ ‘ಜನಪರ’ವಾಗಿಯೂ ಇರಬೇಕಾಗುತ್ತದೆ ಎನ್ನುವ ಅರಿವು ಬಹಳ ಮುಖ್ಯ.

ಹೀಗೆ ಜನಪರವಾಗಬೇಕಾದರೆ ಕಂಪ್ಯೂಟರ್ ಸಾಕ್ಷರತೆ ಹೆಚ್ಚಬೇಕು. ಹೆಚ್ಚಬೇಕಲ್ಲದೆ ಅದು ಕೇವಲ ‘ಇಂಗ್ಲಿಷ್‌ಮಯ’ವಾಗಿದ್ದರಷ್ಟೆ ಸಾಲದು. ಹೀಗೆಂದು ಹೇಳಿದೊಡನೆಯೆ ಇದು ಇಂಗ್ಲಿಷ್ ವಿರೋಧಿಯಾಗಬೇಕಿಲ್ಲ. ಅಲ್ಲವೂ ಅಲ್ಲ. ‘ದೇಸಗತಿ’ ಭಾಷೆಯೊಂದಿಗೆ ಮಾಹಿತಿ ತಂತ್ರಜ್ಞಾನ ಹಾಗು ತಂತ್ರಾಂಶಗಳು ತಳಕು ಹಾಕಿಕೊಳ್ಳಬೇಕು. ಈಗಿನ ಯುವಕರಿಗೆ ಅದು ಬೇಕಿಲ್ಲವೆಂದೆನ್ನುವುದು ಸ್ಪಷ್ಟವಾಗಿಯೇ ಇದೆ. ಇಲ್ಲದಿದ್ದರೆ, ಬರಿಯ ‘ಬರಹ’ ಹಾಗು ‘ನುಡಿ’ಗೆ ಕನ್ನಡದ ಮಾಹಿತಿ ತಂತ್ರಜ್ಞಾನ ಸೀಮಿತವಾಗುಳಿಯಬೇಕಾಗಿರಲಿಲ್ಲ. ಮಾಹಿತಿ ತಂತ್ರಜ್ಞಾನ ಮನೆಬಾಗಿಲಿಗೆ ತಂದೊಡ್ಡಿ ನಿಲ್ಲಿಸಿರುವ ವೃತ್ತಿಪರವಾದ ನವ ಶ್ರೀಮಂತಿಕೆಯ ಸ್ಥಾನಕ್ಕಷ್ಟೇ, ಅದರಿಂದೊದಗುವ ಮೋಜುಗಾರಿಕೆಗಷ್ಟೇ ಅವರುಗಳ ಚಟುವಟಿಕೆ ಸೀಮಿತವಾಗುಳಿಯಬೇಕಾಗಿರಲಿಲ್ಲ. ದೇಸಗತಿ ಭಾಷೆಯ ಸ್ಥಿತಿಗತಿಗಳನ್ನು ನೋಡಿದರೆ ಇದು ಸ್ಪಷ್ಟವಾಗಿಯೇ ಇದೆ. ಈಗಿರುವ ವಾತಾವರಣದಲ್ಲಿ ಒತ್ತಾಯ ಪೂರ್ವಕವಾಗಿ ‘ಸಂವಾದ’ವೊಂದನ್ನು ಹುಟ್ಟಿ ಹಾಕುವುದರ ಮೂಲಕವಷ್ಟೇ ಅಲ್ಪ ಸ್ವಲ್ಪ ಬದಲಾವಣೆಗಳು ಬರಬಲ್ಲದು. ಈ ಬದಲಾವಣೆ ತರುವುದರಲ್ಲಿ ಸರ್ಕಾರದ, ಶಿಕ್ಷಣ ಕ್ಷೇತ್ರದ ಬಹು ದೊಡ್ಡ ಹೊಣೆಗಾರಿಕೆ ಇದೆ.

ಆದುದರಿಂದ ಸರ್ಕಾರಕ್ಕೆ ಮನವಿ ಪತ್ರವೊಂದನ್ನು ಸಲ್ಲಿಸಲು ಉದ್ದೇಶಿಸಲಾಗಿದೆ. ಆ ಬೇಡಿಕೆಗಳು ಹೀಗಿವೆ:

ಕಂಪ್ಯೂಟರ್ ಕಲಿಸುವ ಎಲ್ಲ (ಇಂಗ್ಲಿಷ್ ಮಾಧ್ಯಮವೂ ಸೇರಿದಂತೆ) ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ ಕನ್ನಡ/ಪ್ರಾಂತೀಯ/ರಾಜ್ಯ ಭಾಷೆಗಳ ತಂತ್ರಾಂಶಗಳನ್ನು ಅನುಸ್ಥಾಪಿಸುವುದನ್ನು ಖಡ್ಡಾಯ ಮಾಡಿ ಆದೇಶಿಸಬೇಕು.
ತಿಂಗಳಿಗೆ ಒಂದು ಗಂಟೆ ಕಾಲವನ್ನು ವಿದ್ಯಾರ್ಥಿಗಳಿಗೆ – ಅನುಸ್ಥಾಪಿಸಿದ ಕನ್ನಡ ತಂತ್ರಾಂಶದ ಸಾಧ್ಯತೆಗಳನ್ನು ತೋರಿಸಿಕೊಡುವಂತೆ ಪಾಠ ಮಾಡಬೇಕು.
ಇದು ಮುಂದಿನ ವರ್ಷವೇ ಜಾರಿಗೊಳಿಸುವಂತೆ ಆದೇಶವಿರಬೇಕು.
ಪಠ್ಯಕ್ರಮವನ್ನು ರಚಿಸಲು ತಜ್ಞರ ಸಮಿತಿಯೊಂದನ್ನು ಕೂಡಲೆ ರಚಿಸಬೇಕು.
ಕರ್ನಾಟಕದ ಎಲ್ಲ ಸೈಬರ್ ಕೆಫೆಗಳಲ್ಲಿ ‘ಬರಹ’ ಹಾಗು ’ನುಡಿ’ ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸುವುದು ಖಡ್ಡಾಯವಾಗಬೇಕು.
ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ಕಂಪ್ಯೂಟರ್‌ನಲ್ಲಾಗಲಿ ಅದು ಬಳಕೆದಾರನಿಗೆ ತಲುಪುವ ಮುನ್ನ ‘ಬರಹ’, ‘ನುಡಿ’ ಅಥವ ಉಚಿತವಾಗಿ ಲಭ್ಯವಿರುವ ಸ್ಥಳೀಯ ಭಾಷೆಗಳ ಯಾವುದೇ ತಂತ್ರಾಶಗಳಿದ್ದರೂ ಅವುಗಳನ್ನು ಸ್ಥಾಪಿಸಿರಬೇಕು.

-ಈ ಮನವಿಗೆ ಕರ್ನಾಟಕದ ವಿವಿಧ ಕ್ಷೇತ್ರದ ಗಣ್ಯರೆಲ್ಲ ಬೆಂಬಲ ಸೂಚಿಸಿ ಸಹಿ ಹಾಕಿಕೊಟ್ಟಿರುವುದು ಕನ್ನಡಸಾಹಿತ್ಯ.ಕಾಂ ನಿಲುವುಗಳಿಗೆ ಹೆಚ್ಚಿನ ಶಕ್ತಿ ಒದಗಿಸಿದಂತಾಗಿ, ಕನ್ನಡಸಾಹಿತ್ಯ.ಕಾಂ ಒಂದು ಸಾಮುದಾಯಿಕವಾದ ಚಟುವಟಿಕೆಯಾಗಲಾರದೆ ಎಂದೆನ್ನುವ ಬಹಳ ಕಾಲದ ಹಂಬಲ ನಿಜವಾಗುತ್ತಿದೆ.

ಬೆಂಬಲ ಸೂಚಿಸಿರುವ ಗಣ್ಯರ ಪಟ್ಟಿ ಹೀಗಿದೆ:

(ಅಕ್ಷಾರಾನುಕ್ರಮಣಿಕೆಯಲ್ಲಿದೆ):

ಅಕ್ಷರ ಕೆ ವಿ, ನೀನಾಸಂ, ಹೆಗ್ಗೋಡು, ’ಅಕ್ಷರ’ ಪ್ರಕಾಶನ

ಅನಂತ ಮೂರ್ತಿ ಯು ಆರ್, ಚಿಂತಕರು, ಜ್ಞಾನಪೀಠ ಪ್ರಶಸ್ತಿ ವಿಜೇತರು

ಅಶ್ವಿನಿ, ಕಾದಂಬರಿಗಾರ್ತಿ ,

ಕುಲಶೇಖರಿ, ಬರಹಗಾ(ರ)ರ್ತಿ

ಕೃಷ್ಣ ಪ್ರಸಾದ್ – ಸಂಪಾದಕರು, ವಿಜಯ ಟೈಮ್ಸ್

ಕೃಷ್ಣಮೂರ್ತಿ-ಜನರಲ್ ಮೇನೇಜರ್, ಮ್ಯಾಕ್‌ಮಿಲನ್(ಇಂಡಿಯ)ಲಿಮಿಟೆಡ್

ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು ’ಪ್ರಜಾನುಡಿ’ ದಿನಪತ್ರಿಕೆ, ಮೈಸೂರು

ಗಂಗಾಧರ ಮೊದಲಿಯಾರ್, ಸುದ್ಧಿ ಸಂಪಾದಕರು, ಪ್ರಜಾವಾಣಿ

ಗಣೇಶ್, ರಂಗತಜ್ಞರು

ಗಿರೀಶ್ ಕಾಸರವಳ್ಳಿ – ಚಲನಚಿತ್ರ ನಿರ್ದೇಶಕರು

ಗೀತಾ ನಾಗಭೂಷಣ್-ಲೇಖಕಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ

ಚಂದ್ರಕಾಂತ ಬೆಲ್ಲದ್, ಮಾಜಿ ಶಾಸಕರು, ಧಾರವಾಡ,

ಚಂದ್ರಶೇಖರ್ ಕೆ ಆರ್-ಲೇಖಕರು

ಚಂದ್ರಶೇಖರ್ ಬಿ ಕೆ,ಮಾಜಿ ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು

ಚಂದ್ರಶೇಖರ ಪಾಟೀಲ, ಅಧ್ಯಕ್ಷರು, ಕನ್ನಡಸಾಹಿತ್ಯ ಪರಿಷತ್

ಚಿ ವಿ ಶ್ರೀನಾಥಶಾಸ್ತ್ರಿ-ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್

ಚಿರಂಜೀವಿ ಸಿಂಗ್ ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ

ಜಗದೀಶ್ ಆರ್ ಪಿ, ಸಹ ಸಂಪಾದಕರು, ಪ್ರಜಾವಾಣಿ,

ಜಯಂತ್ ಕಾಯ್ಕಿಣಿ, ಕಥೆಗಾರರು

ದಿವಾಕರ್ ಎಸ್, ಲೇಖಕರು-ಪತ್ರಕರ್ತರು

ದೊಡ್ಡರಂಗೇ ಗೌಡ- ಕವಿ ಮತ್ತು ಗೀತ ರಚನೆಕಾರರು,

ನಂಬೂದಿರಿ ಎ ವಿ ಎಸ್, ಸಹ ಸಂಪಾದಕರು, ಡೆಕ್ಕನ್ ಹೆರಾಲ್ಡ್,

ನರಸಿಂಹಮೂರ್ತಿ ಜಿ ಎನ್-ಕಾರ್ಯದರ್ಶಿಗಳು-ಕನ್ನಡ ಗಣಕ ಪರಿಷತ್

ನಾ ಡಿಸೋಜ, ಪ್ರಸಿದ್ಧ ಸಾಹಿತಿಗಳು

ನಾಗಣ್ಣ ಎಸ್-ಸಂಪಾದಕರು, ಪ್ರಜಾಪ್ರಗತಿ ದಿನಪತ್ರಿಕೆ

ನಾಗರಾಜ ವಸ್ತಾರೆ, ಬರಹಗಾರರು

ನಾಗಾಭರಣ ಟಿ ಎಸ್, ಪ್ರಸಿದ್ಧ ಚಿತ್ರ ನಿರ್ದೇಶಕರು

ಪ ಸ ಕುಮಾರ್, ಕಲಾವಿದರು, ಕನ್ನಡ ಪ್ರಭ,

ಪದ್ಮರಾಜ ದಂಡಾವತೆ, ಸಹ ಸಂಪಾದಕರು, ಪ್ರಜಾವಾಣಿ

ಪವಿತ್ರ ಲೋಕೇಶ್, ಹಿರಿ-ಕಿರು ತೆರೆ ಕಲಾವಿದೆ

ಪೂರ್ಣಿಮ ಆರ್ – ಸಂಪಾದಕರು , ಉದಯವಾಣಿ

ಪೊನ್ನಪ್ಪ ಎಂ ಎ-ಅಧ್ಯಕ್ಷರು, ಬೆಂಗಳೂರು ಪ್ರೆಸ್ ಕ್ಲಬ್

ಪ್ರಸನ್ನ ಕೆ ವಿ, ರಂಗಕರ್ಮಿಗಳು

ಪ್ರೇಮಾ ಕಾರಾಂತ್ – ಚಲನಚಿತ್ರ ನಿರ್ದೇಶಕರು, ರಂಗ ನಿರ್ದೆಶಕರು

ಬಸವರಾಜು ಜಿ ಪಿ, ಮುಖ್ಯ ಉಪ ಸಂಪಾದಕರು, ಮಯೂರ ಮಾಸಿಕ,

ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ

ಬಾಗೇಶ್ರಿ – ಮುಖ್ಯ ವರದಿಗಾರರು, ದಿ ಹಿಂದೂ

ಭಾಸ್ಕರ ರಾವ್ ಎಂ ಕೆ, ಮುಖ್ಯ ಉಪಸಂಪಾದಕರು, ಪ್ರಜಾವಾಣಿ,

ಭೂಮಿಕ, ಉಪ ಸಂಪಾದಕರು, ದಿ ಹಿಂದೂ,

ಮಂಜುಳ ಸಿ ಜಿ, ಸಹಾಯಕ ಸಂಪಾದಕರು, ಸುಧಾ ವಾರಪತ್ರಿಕೆ,

ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು, ಎನ್‌ಎಂಕೆ‌ಆರ್‌ವಿ ಕಾಲೇಜು

ಮಲ್ಲಿಕಾರ್ಜುನಯ್ಯ, ಸುದ್ಧಿ ಸಂಪಾದಕರು, ಕನ್ನಡ ಪ್ರಭ,

ಮಹಾಬಲಮೂರ್ತಿ ಕೊಡ್ಲೆಕೆರೆ-ಲೇಖಕರು

ಮಾನಸ ನಯನ, ಸಂಗೀತಗಾರರು

ಯಶವಂತ ಚಿತ್ತಾಲ, ಹಿರಿಯ ಲೇಖಕರು,

ರಂಗನಾಥ್ – ಸಂಪಾದಕರು, ಕನ್ನಡಪ್ರಭ

ರಘುನಂದನ,ರಂಗ ನಿರ್ದೇಶಕರು

ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!

ರವಿ ಭಟ್-ಕಿರುತೆರೆ ಕಲಾವಿದರು

ರಾಘವೇಂದ್ರ ಪಾಟೀಲ್, ಲೇಖಕರು-ಕೇಂದ್ರ ಅಸಾಹಿತ್ಯ ಅಕಾದೆಮಿ ಪುರಸ್ಕೃತರು,

ರಾಜಶೇಖರ ಕೋಟಿ, ಸಂಪಾದಕರು, ’ಆಂದೋಲನ’ ದಿನಪತ್ರಿಕೆ, ಮೈಸೂರು

ರಾಮಕೃಷ್ಣ ಉಪಾಧ್ಯ ಪಿ- ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್

ರಾಮಕೃಷ್ಣ ಉಪಾಧ್ಯ-ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್ ದೈನಿಕ

ರಾಮಕೃಷ್ಣ ಎಸ್ ಅರ್, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ,

ರೇಖಾ ರಾವ್, ಹಿರಿ-ಕಿರು ತೆರೆ ಕಲಾವಿದೆ

ಲಕ್ಷ್ಮಿ ಚಂದ್ರಶೇಖರ್-ರಂಗಭೂಮಿ, ಕಿರುತೆರೆ ಕಲಾವಿದೆ ಹಾಗು ಅನುವಾದಕಿ

ಲಿಂಗದೇವರು ಹಳೆಮನೆ, ಪ್ರಾಧ್ಯಾಪಕರು, ಸಿ ಐ ಐ ಎಲ್, ಮೈಸೂರು

ಲಿಂಗದೇವರು – ಚಲನಚಿತ್ರ ನಿರ್ದೇಶಕರು (ಮೌನಿ)

ವಸುಧೇಂದ್ರ, ಬರಹಗಾರರು, ’ಛಂದ’ ಪುಸ್ತಕ ಪ್ರಕಾಶನ

ವಿಜಯ್ ಭಾರಧ್ವಾಜ್, ಕ್ರಿಕೆಟ್ ತಾರೆ

ವಿಜಯಾ, ಹಿರಿಯ ಪತ್ರಕರ್ತರು,

ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-’ದೇಶಕಾಲ’ಸಾಹಿತ್ಯಿಕ ಪತ್ರಿಕೆ

ವಿಶ್ವೇಶ ತೀರ್ಥ ಸ್ವಾಮೀಜಿ – ಪೇಜಾವರ ಮಠ, ಉಡುಪಿ,

ವಿಶ್ವೇಶರ ಭಟ್ – ಸಂಪಾದಕರು, ವಿಜಯ ಕರ್ನಾಟಕ

ವೆಂಕಟೇಶ್ ವಿ, ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,

ಶಂಕರ್ ಎನ್ ಎಸ್, ಚಲನಚಿತ್ರ ನಿರ್ದೇಶಕ, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಪ್ರೆಸ್ ಕ್ಲಬ್,

ಶರಧಿಚಂದ್ರ ಬಾಬು-ಪಾಲುದಾರರು, ‘ಅದಮ್ಯ’ ಟೆಕ್ನಾಲಜೀಸ್

ಶಿಲ್ಪ, ಹಿರಿಯ ಉಪ ಸಂಪಾದಕರು, ದಿ ಹಿಂದೂ,

ಶಿವರುದ್ರಪ್ಪ ಜಿ ಎಸ್ – ರಾಷ್ಟ್ರ ಕವಿ,

ಶೆಟ್ಟರ್ ಎಸ್, ಇತಿಹಾಸಕಾರರು

ಶೇಷಾದ್ರಿ ಪಿ – ಚಲನ ಚಿತ್ರ ನಿರ್ದೇಶಕರು

ಶ್ಯಾಮಸುಂದರ್ ಎಸ್ ಕೆ, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ, ಅಂತರ್ಜಾಲ ಪತ್ರಿಕೆ

ಸಚ್ಛಿದಾನಂದ ಹೆಗ್ಗಡೆ, ಬರಹಗಾರರು

ಸದಾಶಿವ ಶೆಣೈ, ಗೌರಿ ಲಂಕೇಶ್ ಪತ್ರಿಕೆ ಹಾಗು ಕಿರುತೆರೆ ಪತ್ರಕರ್ತರು,

ಸರ್ವಮಂಗಳ, ಅನುವಾದಕಿ

ಸಿಂಹ ಸಿ ಆರ್, ನಟ, ಚಲನಚಿತ್ರ-ರಂಗ ನಿರ್ದೇಶಕರು

ಸೀತಾರಾಂ ಟಿ ಎನ್, ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು

ಸುಗಂಧಿ- ಸಹಾಯಕ ಸಂಪದಕರು, ದಿ ಹಿಂದೂ

ಸುಚೇಂದ್ರ ಪ್ರಸಾದ್ ಕೆ, ಕಿರು-ಹಿರಿ ತೆರೆ ಕಲಾವಿದರು

ಸ್ವಾಮಿ ಕೆ ಎಸ್ ಎಲ್(ರವೀ), ಚಲನಚಿತ್ರ ನಿರ್ದೇಶಕರು

  • ಇವರೆಲ್ಲರೊಂದಿಗೆ ನೂರಾರು ಮಾಹಿತಿ ತಂತ್ರಜ್ಞಾನ ವಲಯದ ಉದ್ಯೋಗಿಗಳು, ಕೇಂದ್ರ ಸರ್ಕಾರದ ಉದ್ಯೋಗಿಗಳು, ಅಧ್ಯಾಪಕರು ಮತ್ತೂ ಇನ್ನಿತರ ಕ್ಷೇತ್ರಗಳಲ್ಲಿರುವವರು ಸಹಿ ಮಾಡಿ ಬೆಂಬಲ ಸೂಚಿಸಿದ್ದಾರೆ. ಇದಲ್ಲದೆ, ಅಮೆರಿಕದಲ್ಲಿ ನೆಲೆಸಿರುವ ೩೦೦ ಕನ್ನಡಿಗರು, ಸಿಂಗಪುರದಲ್ಲಿ ನೆಲೆಸಿರುವ ೨೩ ಕನ್ನದಿಗರು ಸಹಿ ಸಂಗ್ರಹಿಸಿ ಕಳುಹಿಸಿದ್ದಾರೆ. ಜೊತೆಗೆ ನಮ್ಮಬೆಳಗಾವಿ, ಕಲಬುರ್ಗಿ, ಹಾಸನ, ತುಮಕೂರು, ಮೈಸೂರು ಹೀಗೆ ಅನೆಕಾನೇಕ ಜಿಲ್ಲೆಗಳಿಂದ ಮನವಿ ಪತ್ರಗಳು ತಲುಪಿವೆ. ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಿದನಂತರವೂ, ಮನವಿ – ಕಾರ್ಯಾಚರಣೆಗೆ ಬರುವವರೆಗೆ ಸಹಿ ಸಂಗ್ರಹ ಮುಂದುವರೆಯುತ್ತಲೇ ಇರುತ್ತದೆ.

ಜನವರಿ ಮೊದಲ ಅಥವ ಎರಡನೆ ವಾರ ಸರ್ಕಾರಕ್ಕೆ ಮನವಿ ಪತ್ರವನ್ನು ಅಧಿಕೃತವಾಗಿ ಸಲ್ಲಿಸಲಾಗುವುದು. ಮನವಿ ಕಾರ್ಯಗತವಾಗುವ ತಾರ್ಕಿಕ ಹಂತ ತಲುಪುವವರೆಗೆ, ಸಹಿಗಳನ್ನು ಸಂಗ್ರಹಿಸುವುದು ಮುಂದುವರೆಯುತ್ತದೆ. ವಿಧಾನ ಸಭೆಯಲ್ಲಿ, ಮನವಿ ಕರಡು ಮಸೂದೆಯಾಗುವ ಸಂಭವವೂ ನಿಚ್ಚಳವಾಗಿದೆ. ಎಲ್ಲ ಕ್ಷೇತ್ರದ ವಿವಿಧ ಗಣ್ಯರು, ಭಾಷಾತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಎಲ್ಲರ ಬೆಂಬಲವನ್ನು ಈ ಮೂಲಕ ಕೋರುತ್ತಿದ್ದೇನೆ.

*
*
*
ಜನಪರವಾದ ಕಾಳಜಿಯುಳ್ಳ ಗೆಳೆಯ ರವಿಕೃಷ್ಣಾ ರೆಡ್ಡಿ ಪ್ರಾರಂಭಿಸಿದ ‘ವಿಕ್ರಾಂತ ಕರ್ನಾಟಕ’ ಪತ್ರಿಕೆ ವಾರಪತ್ರಿಕೆಯ ಪರಿಸರದಲ್ಲಿ ನುಣುಪು ಕಾಗದ, ಅತ್ಯಾಕರ್ಷಕ ಮುದ್ರಣದ ಶ್ರೀಮಂತಿಕೆಯನ್ನು ಪರಿಚಯಿಸಿದ್ದು ಎಲ್ಲ ರೀತಿಯಲ್ಲೂ ಸ್ವಾಗತಾರ್ಹವಾಗಿತ್ತಲ್ಲದೆ ಉತ್ತಮ ಬೆಳವಣಿಗೆಯೂ ಆಗಿತ್ತು.
ಆದರೆ,
-ನೂತನ ಪತ್ರಿಕೆಗೆ ಕನ್ನಡಿಗರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎನ್ನುವ ಸಂಗತಿ ಕನ್ನಡಿಗರ ಅನಾಸಕ್ತ ಮತ್ತು ಜಡತ್ವ ಮನೋಭಾವಕ್ಕೆ ಮತ್ತೊಂದು ದೃಷ್ಟಾಂತವಾಗದಿರಲಿ.

ರವಿ ಕೃಷ್ಣಾರೆಡ್ಡಿಯವರು ತಮ್ಮ ಪ್ರಸರಣ ವಿಭಾಗದ ಚಟುವಟಿಕೆಗಳತ್ತ ಸ್ವಲ್ಪ ವಿಶೇಷ ಗಮನ ಕೊಡಬೇಕಾಗಿರುವುದನ್ನು ಈ ಸನ್ನಿವೇಶ ಬಯಸುತ್ತಿದೆ ಎನ್ನುವುದಷ್ಟನ್ನೇ ಇಲ್ಲಿ ದಾಖಲಿಸಬಹುದು.

*
*
*
ಚಿತ್ರದುರ್ಗದಲ್ಲಿ, ಮೈಸೂರಿನಲ್ಲಿ ಕನ್ನಡಸಾಹಿತ್ಯ.ಕಾಂನ ಬೆಂಬಲಿಗರ ಬಳಗ ಕ್ರಮವಾಗಿ ಇದೇ ತಿಂಗಳ ಮೂರನೆ ವಾರಾಂತ್ಯ ಹಾಗು ನಾಲ್ಕನೆ ವಾರಾಂತ್ಯ ವಿಧ್ಯುಕ್ತವಾಗಿ ಉದ್ಘಾಟನೆಯಾಗಲಿದೆ. ವಿವರಗಳು. ನಾನಾ ವೇದಿಕೆಗಳ ಮೂಲಕ ಸಹೃದಯರಿಗೆ, ಬಳಗದ ಸದಸ್ಯರಿಗೆ ಶೀಘ್ರವಾಗಿ ತಲುಪುತ್ತದೆ.

*
*
*
ಮುಂದಿನ ಸಂಚಿಕೆ-ಮನವಿ ಹಾಗು ವಿಚಾರಸಂಕಿರಣದ ಚಟುವಟಿಕೆಗಳತ್ತ ಹೆಚ್ಚಿನ ಗಮನ ಕೊಡಬೇಕಾಗಿರುವುದರಿಂದ ಜೂನ್ ಕೊನೆಯ ವಾರದವರೆಗೂ ಕನ್ನಡಸಾಹಿತ್ಯ.ಕಾಂ ಅನಿಯತಕಾಲಿಕವಾಗಿರುತ್ತದೆ.

ಶೇಖರ್‌ಪೂರ್ಣ


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.