ಎಡವಬಹುದಾದ ಎಚ್ಚರದ ನಡುವಿನ ಕನಸು, ಉತ್ಸಾಹ ಮತ್ತು ಅಗತ್ಯಗಳು

ಎಲ್ಲರಿಗೂ ನಮಸ್ಕಾರ,

ಎರಡು ತಿಂಗಳಿಗೆ ಸರಿಯಾಗಿ ಅಪ್‌ಡೇಟ್ ಆಗುತ್ತಿದೆ. ಈ ಬಾರಿಯ ಸಂಚಿಕೆ ಕಳೆದವಾರವೇ ತರಬೇಕೆಂದುಕೊಂಡಿದ್ದೆ. ಅಕಸ್ಮಾತ್ ಆದ ಖುಷಿಯಾದ ಬೆಳವಣಿಗೆಯಿಂದಾಗಿ ಸ್ವಲ್ಪ ತಡವಾಯಿತು. ಖುಷಿಯಾದ ಬೆಳವಣಿಗೆಯೆಂದರೆ, ಸಚ್ಚಿದಾನಂದ ಹೆಗಡೆಯವರ ನೆರವಿನಿಂದ ಕನ್ನಡದ ಯಕ್ಷಗಾನದಲ್ಲಿ ಅನುಪಮವಾಗಿ ಕ್ರಿಯಾಶೀಲರಾಗಿರುವ ಶಂಭು ಹೆಗಡೆಯವರ ಸಂಪರ್ಕ ದೊರೆತು, ನನ್ನನ್ನು ಅತಿಯಾಗಿ ಆವರಿಸಿಕೊಂಡಿದ್ದ ಕೆರೆಮನೆ ಶಿವರಾಮ ಹೆಗಡೆಯವರ ಕೃತಿಗಳನ್ನು ಪ್ರಕಟಿಸಲು ಅನುಮತಿ ದೊರೆತದ್ದು.

ಕನ್ನಡದಲ್ಲಿ ಬಂದಿರುವ ಅಪರೂಪದ ಆತ್ಮಕತೆಯಾದ ‘ನೆನಪಿನ ರಂಗಸ್ಥಳ’ ಈ ಬಾರಿ ಒಂದೇ ಕಂತಿನಲ್ಲಿ ಪ್ರಕಟಿಸಿದ್ದೇವೆ. ಪ್ರತಿಷ್ಠೆಯ ಯಾವುದೇ ಪ್ರಲೋಭನೆಗೊಳಗಾಗದೆ ತಮ್ಮ ಜೀವನ ಹಾಗು ಪರಿಸರವನ್ನು ಜಿ ಎಸ್ ಭಟ್‌ರ ಮೂಲಕ ಶಿವರಾಮ ಹೆಗಡೆಯವರು ನಿರುಮ್ಮಳವಾಗಿ ಪ್ರಕಟಿಸಿದ್ದಾರೆ. ಇದು ಕನ್ನಡದ ಅತ್ಯಂತ ಶ್ರೇಷ್ಠ ಕೃತಿ ಎನ್ನುವುದು ಓದಿದರೆ ನಿಮಗೆ ತಿಳಿಯುತ್ತದೆಯಾದ್ದರಿಂದ ಹೆಚ್ಚಿಗೆ ಏನನ್ನೂ ನಾನು ಹೇಳುವುದಿಲ್ಲ.

ಈ ಬಾರಿಯ ನಮ್ಮ ಲೇಖಕರ ಬಳಗಕ್ಕೆ ಸೇರಿಕೊಂಡಿರುವವರು ಅಮೆರಿಕೆಯ ವಿಶ್ವವಿದ್ಯಾನಿಲಯವೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಸುಕನ್ಯ ಕನಾರಳ್ಳಿ ಹಾಗು ಸುಪ್ತದೀಪ್ತಿ ಎನ್ನುವ ಕಾವ್ಯ ನಾಮದಿಂದ ಬರೆಯುತ್ತಿರುವ ಜ್ಯೋತಿ ಮಹಾದೇವ್‌ರವರು. ಅವರಿಗೆ ಸ್ವಾಗತ.
*
*
*
ಮುಂಬೈ-ಪುಣೆ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಉದ್ಘಾಟನೆ ಹಾಗು ವಿಚಾರ ಸಂಕಿರಣ
ಇದು ಸುದೀರ್ಘವಾಗಿದೆ. ಯಥಾ ಪ್ರಕಾರ. ಆದುದರಿಂದ ನಿಮ್ಮ ತಾಳ್ಮೆಯ ಓದನ್ನು ಇದು ಬೇಡುತ್ತದೆ. ನಿಮ್ಮ ಕಚೇರಿಯ ಅವಸರದಲ್ಲೋ, ಗೃಹಕೃತ್ಯಗಳ ಬಿರುಸಿನಲ್ಲೋ ಈ ಬರವಣಿಗೆಯ ತುಣುಕನ್ನು, ನಿಮ್ಮ ಈ ಲೇಖನದ/ಬರವಣಿಗೆಯ ಓದನ್ನು ಕಳೆದು ಹೋಗದಂತೆ ನಿಮ್ಮ ಸಮಯವನ್ನು, ಚಿತ್ತವನ್ನು ಸಜ್ಜುಗೊಳಿಸಿರೆಂದು ಮನವಿ ಮಾಡಿಕೊಳ್ಳುತ್ತಾ:

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದಲ್ಲಿ ಹೊಸ ಉತ್ಸಾಹ, ಅನೇಕಾನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬ ಉತ್ಸಾಹದ ನಡುವೆ ನಡೆದ ಎರಡು ಸಭೆಗಳಲ್ಲಿ ಸೃಷ್ಟಿಯಾದ ಭರವಸೆಗಳು-ಅದಕ್ಕೆ ತಕ್ಕಂತಹ ಸಂಕಲ್ಪ ಗಟ್ಟಿಯಾದರೆ, ಯೋಜನಾಬದ್ಧವಾದ ಚಟುವಟಿಕೆಗಳನ್ನು ಕಾರ್ಯಾಚರಣೆಗೆ ತಂದರೆ ಕನ್ನಡಸಾಹಿತ್ಯ.ಕಾಂ ಭಾರತ ದೇಶದಲ್ಲೇ ಅತ್ಯುತ್ತಮವಾದ ಒಂದು ಸಮುದಾಯದ ಚಟುವಟಿಕೆಯಾಗಿ ನಿಲ್ಲಬಲ್ಲದು ಎನ್ನುವ ಪರಿಕಲ್ಪನೆ, ಭರವಸೆ ಒಳಗೊಳಗೆ ಖುಷಿಕೊಡುತ್ತಿದೆ. ಈ ಖುಷಿಯ ನಡುವೆ ಒಂದು ಎಚ್ಚರಿಕೆಯೂ ಇದೆ. ಅದು: ನಾವು ಎಡವುತ್ತೇವೆ ಮತ್ತು ಎಡವುತ್ತಿದ್ದೇವೆ. ಈ ಎಚ್ಚರಿಕೆಯ ನಡುವೆಯೇ: ನಡೆಯ ಬೇಕೆಂದರೆ ಎಡವಲೇ ಬೇಕು, ನೂಕು ಗಾಲಿಯ ನೆರವು, ಅಪ್ಪ ಅಮ್ಮನ ಕೈಗಳನ್ನು ಹೀಡಿದೋ ತಪ್ಪು ಹೆಜ್ಜೆಗಳನ್ನು ಹಾಕುಹಾಕುತ್ತಲೇ ಮುಂದಿನ ಹಾದಿಯಲ್ಲಿನ ಹೆಜ್ಜೆಗಳು ಸದೃಢವಾಗುತ್ತದೆ. ಅಂತದೊಂದು ಪ್ರಯಾಣದ ಅಗತ್ಯ, ಆ ಅಗತ್ಯಕ್ಕೆ ಬೇಕಾದ ತಾಲೀಮು ನಡೆಯಲಾರಂಭಿಸಿದೆ.

ಮುಂಬೈ ನಿವಾಸಿ ರೋಹಿತ್ ಕನ್ನಡಸಾಹಿತ್ಯ.ಕಾಂ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಉತ್ಸಾಹಿ. ಇವರ ಜೊತೆಗೆ ಚಿದಾನಂದ, ನರಸಿಂಹ ದತ್ತ ಹಾಗು ಅನೇಕ ಮಿತ್ರರು ಮುಂಬೈ ಕರ್ನಾಟಕ ಸಂಘದ ಸಹಕಾರದ ಸಂಯುಕ್ತಾಶ್ರಯದಲ್ಲಿ ಮುಂಬೈ-ಪುಣೆ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ವಿದ್ಯುಕ್ತ ಉದ್ಘಾಟನೆ, ಒಂದು ದಿನದ ವಿಚಾರಸಂಕಿರಣದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಕಾರ್ಯಕ್ರಮದ ವಿವರಗಳು:
ಉದ್ಘಾಟನೆಯ ದಿನಾಂಕ: ೧೫-೧೦-೨೦೦೬ ಬೆಳಿಗ್ಗೆ: ೧೦.೩೦, ಸ್ಥಳ: ಮಾಟುಂಗಾದಲ್ಲಿರುವ ಕರ್ನಾಟಕ ಸಂಘದ ಸಭಾಂಗಣ.

ಉದ್ಘಾಟನೆ: ಜಯದೇವ ಹಟ್ಟಂಗಡಿ – ರಂಗ ತಜ್ಞರು
ಅಧ್ಯಕ್ಷತೆ: ಮನೋಹರ ಎಂ ಕೋರಿ – ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷರು
ಮುಖ್ಯ ಅತಿಥಿ: ಸದಾನಂದ ಸುವರ್ಣ – ಚಲನಚಿತ್ರ ನಿರ್ದೇಶಕರು, ರಂಗ ತಜ್ಞರು
ಆಶಯ ಭಾಷಣ: ಶೇಖರ್‌ಪೂರ್ಣ

ಮಧ್ಯಾಹ್ನ ೧೨-೩೦ ರಿಂದ ೧-೩೦ ಗೋಷ್ಠಿ
“ಭಾಷೇ, ಸಂಸ್ಕೃತಿ ಹಾಗು ಸಂವಹನ ಮಾಧ್ಯಮಗಳು”
– ಕಮಲಾಕರ ದೀಕ್ಷಿತ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥರು, ಡಿ‌ಆರ್‌ಕೆ ಕಾಲೇಜು, ಕೊಲ್ಹಾಪುರ
“ಸೃಜನಶೀಲ ಅಭಿವ್ಯಕ್ತಿಗೆ ಮಾಹಿತಿ ತಂತ್ರಜ್ಞಾನದ ಸಲಕರಣೆಗಳ ಬಳಕೆ”
ಮಿತ್ರಾ ವೆಂಕಟರಾಜ್- ಲೇಖಕಿ
೧-೩೦ ರಿಂದ ೨-೩೦ ರವರೆಗೆ ಭೋಜನ ವಿರಾಮ
೨-೩೦ರಿಂದ ೩-೦೦
“ಡಿಜಿಟಲ್ ಮೀಡಿಯ ಮೂಲಕ ಪ್ರಾದೇಶಿಕ ಅಭಿವ್ಯಕ್ತಿ”
-ಪಿ ಎನ್ ರಾಮಚಂದ್ರ, ‘ಸುದ್ಧ’ ಪ್ರಶಸ್ತಿ ವಿಜೇತ ಚಲನಚಿತ್ರದ ನಿರ್ದೇಶಕರು
೩-೦೦ ರಿಂದ ೪-೦೦
ಪ್ರಾತ್ಯಕ್ಷಿಕೆ ಮತ್ತು ಪ್ರಶ್ನೋತ್ತರ
೪-೦೦ ರಿಂದ ೪-೩೦ ಸಮಾರೋಪ
ಮುಖ್ಯ ಅತಿಥಿ: ಹೇಮಂತ ಹೆಗಡೆ
ಚಲನಚಿತ್ರ ನಿರ್ದೇಶಕರು
*
*
*
ಇತ್ತೀಚೆಗೆ ನನ್ನನ್ನು ಅಪಾರವಾಗಿ ಕಾಡುತ್ತಿರುವ ವಿಷಯವನ್ನು ಕೆಳಗೆ ಪ್ರಸ್ತಾಪಿಸಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಿದ್ದೇನೆ. ಎಲ್ಲರೂ ಸಂಕೋಚ ಬಿಟ್ಟು ಮಾತನಾಡಬೇಕಾದ ಸಂದರ್ಭಕ್ಕೆ ಇದು ಆಹ್ವಾನ ಮತ್ತು ಚರ್ಚೆಯಾದಷ್ಟೂ ನಮ್ಮ ಮುಂದಿನ ಗುರಿಗಳು, ಹಾದಿ ಎಲ್ಲವೂ ಸ್ಪಷ್ಟವಾಗುತ್ತಾ ಹೋಗುತ್ತದೆ ಎನ್ನ್ವುದರಲ್ಲಿ ಸಂಶಯವಿಲ್ಲ.
*
*
*
ಎಡವಬಹುದಾದ ಎಚ್ಚರದ ನಡುವಿನ ಕನಸು, ಉತ್ಸಾಹ ಮತ್ತು ಅಗತ್ಯಗಳು
ಪ್ರಸ್ತಾವನೆಯ ವಿಸ್ತಾರ
ಸುದೀರ್ಘವಾದ ಬರವಣಿಗೆಯ ಈ ತುಣುಕಿನ ಹಿನ್ನೆಲೆ ಒಂದು ಸಂವಾದವನ್ನು ಬಯಸುತ್ತಿದೆಯಾದ್ದರಿಂದ ಸುದೀರ್ಘವಾಗಿದೆ ಮತ್ತು ಕನ್ನಡಸಾಹಿತ್ಯ.ಕಾಂ ನನಗೆ ಒದಗಿಸಿರುವ ಅನುಭವ ತರಬಹುದಾದ ಮಾಹಿತಿ-ವಿಚಾರ-ವಿವರಗಳನ್ನು ಮಾತ್ರ ಆಧರಿಸಿರುವ ಸೀಮಿತ ನೋಟವಿದೆ. ಸಮಗ್ರವೆಂದೆನ್ನುವ ಭ್ರಮೆಯಂತೂ ಇಲ್ಲ ಎನ್ನುವುದನ್ನು ಮೊದಲೇ ಸ್ಪಷ್ಟ ಪಡಿಸಿಬಿಡುತ್ತೇನೆ.

ಜಗತ್ತಿನಾದ್ಯಂತ ಇರುವ “ಕಂಪ್ಯೂಟರ್ ಬಳಕೆದಾರರು’ (ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗನಿರತರಾಗಿರುವವರು, ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರು ಅಲ್ಲದೇ ಯಾವುದೇ ಮಟ್ಟದಲ್ಲಿಯೇ ಆದರೂ ಸರಿ ಕಂಪ್ಯೂಟರ್ ಬಗೆಗೆ ಆಸಕ್ತಿ ಉಳ್ಳವರು) ದಯವಿಟ್ಟು ಪ್ರತಿಕ್ರಿಯಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಸುದೀರ್ಘವಾದ ಲೇಖನ ಒಂದು ಪ್ರಸ್ತಾವನೆಯನ್ನು ನಿಮ್ಮ ಮುಂದಿಡುತ್ತಿದೆ. ಜೊತೆಗೆ, ಪ್ರಸ್ತಾವನೆ, ಮನವಿ, ಕರೆ ಏನಾದರೂ ಸರಿ, ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ತಿಳಿದು ನಂತರ ಕಾರ್ಯಯೋಜನೆಗೆ ಸಜ್ಜಾಗಬಹುದು. ಹೀಗೆ ಸಜ್ಜಾಗುವ ಮುನ್ನ ಪ್ರಸ್ತಾವನೆಯನ್ನು ವ್ಯಾಪಕವಾಗಿಸಿ, ಬರಬಹುದಾದ ಪ್ರತಿಕ್ರಿಯೆಯನ್ನು ಆಧರಿಸಿ ಕಾರ್ಯ ಯೋಜನೆ ಮಾಡಬಹುದು ಎನ್ನುವ ಉದ್ದೇಶವೂ ಈ ಲೇಖನದ ಹಿನ್ನೆಲೆಯಲ್ಲಿದೆ. ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ಆಧರಿಸಿ, ಮುಂದಿನ ಕಾರ್ಯ ಯೋಜನೆಗಳನ್ನು ಅಂತಿಮಗೊಳಿಸಬಹುದು. ‘ಗೊತ್ತಿಲ್ಲದಿರುವುದೇನನ್ನೂ ಇವನು ಹೇಳುತ್ತಿಲ್ಲ’ ಎಂದೋ, ‘ಬಾಲಬೋಧೆಯಂತಿದೆ’ ಎಂದೆನ್ನುವ ಭಾವನೆ ನಿಮ್ಮ ಮನಸ್ಸಿನಲ್ಲಿ ಹಾದು ಹೋಗಲೂ ಬಹುದು. ಕೆಲವೆಡೆ ವಾದದ/ವಿಷಯದ ಸ್ಪಷ್ಟತೆಗಾಗಿ, ಹರಿವಿಗೆ ತಕ್ಕಂತಿನ ವಿವರಗಳ ಜೋಡಣೆ ಮಾಡಿದ್ದೇನೆ ಎಂದೆನ್ನುವುದನ್ನು ಇಲ್ಲಿ ಸ್ಪಷ್ಟ ಪಡಿಸುತ್ತಿದ್ದೇನೆ. ನಿಮ್ಮನ್ನೂ ಈ ಸಂವಾದದ ಸ್ವರೂಪದಲ್ಲಿ ತೊಡಗಿಸಿಕೊಳ್ಳುವುದರಿಂದ, ನಾನು ಹಾಗು ನೀವು ಒಟ್ಟೊಟ್ಟಿಗೆ ಒಂದೇ ನೆಲೆಯಲ್ಲಿ ನಿಂತು ನೋಡುವ ಧಾಟಿಯ ಶೈಲಿಯನ್ನು ಬೇಕೆಂದೇ ಇಲ್ಲಿ ಅಳವಡಿಸಿದ್ದೇನೆ.
*
*
*
ನಮ್ಮ ಹಂಬಲ, ನಿರೀಕ್ಷೆ, ಆಶೋತ್ತರ, ಕೀಳರಿಮೆ ಎಲ್ಲವನ್ನೂ ರಾಜಕೀಯ ಅಧಿಕಾರಗಳು, ಅಧಿಕಾರಶಾಹಿ ಹಾಗು ಸಮಾಜಾಶೋತ್ತರಗಳು ನೇರವಾಗಿ ಹಾಗು ಪರೋಕ್ಷವಾಗಿ “ನೀತಿ-ನಿಯಮಾವಳಿಗಳನ್ನು’ ರೂಪಿಸುವ ಮೂಲಕ ನಿರ್ದೇಶಿಸುತ್ತಿರುತ್ತವೆ ಎನ್ನುವ ಕಟು ಸತ್ಯ. ಇದರ ನೆಲೆಯಲ್ಲಿ ’ಮಾಹಿತಿ-ತಂತ್ರಜ್ಞಾನ’ವನ್ನು ಇಟ್ಟು ನೋಡುತ್ತಾ ಹೋದಾಗ ನಮ್ಮ ರಾಜ್ಯ ಸರ್ಕಾರದ ನೀತಿ-ನಿಯಮಾವಳಿಗಳು, ಆದೇಶಗಳು, ಬೆಂಬಲ ಎಲ್ಲವೂ ವಾಣಿಜ್ಯಮಯ ಪರಿಸರಕ್ಕೆ ಮಾತ್ರ ಸೀಮಿತಗೊಳ್ಳುತ್ತದೆ. ಅಲ್ಲೊಂದು ಇಲ್ಲೊಂದು ‘ಭೂಮಿ’, ‘ನುಡಿ’ ಎನ್ನುವ ತುಣುಕುಗಳು ಕಾಣ ಸಿಗುತ್ತವೆ. ವಾಣಿಜ್ಯ ಪರಿಸರದಲ್ಲಿ ನಮ್ಮ ಶೈಕ್ಷಣಿಕ-ಸಾಂಸ್ಕೃತಿಕ ಮೌಲ್ಯಗಳು ಈ ನೀತಿ-ನಿಯಮಾವಳಿಗಳಿಗೆ ತಕ್ಕಂತೆ ರೂಪುಗೊಂಡು ಬಿಡುತ್ತವೆ. ಇಂಜಿನಿಯರಿಂಗ್ ಕಾಲೇಜುಗಳು ಹೆಚ್ಚುತ್ತಾ ಹೋಗುತ್ತವೆ, ನ್ಯಾಯಾಲಯಗಳಲ್ಲಿ ವಾದ-ವಿವಾದ, ಆತ್ಮಹತ್ಯೆಗಳಂತಹ ಕ್ಷೋಬೆ ಒಂದೆಡೆಯಾದರೆ, ಪಿಜ್ಜಾ ಹಟ್‌ಗಳು ತೊಂಬತ್ತು ರೂಪಾಯಿಯ ಕಾಫಿ ಸರ್ವ್ ಮಾಡಿ, ನೀನು ಈ ಅದ್ಭುತವಾದ ಕಾಫಿ ಕುಡಿಯಬಲ್ಲೆ ಎಂದು ಓಲೈಸಬಹುದಾದ ಮಾಧ್ಯಮದ ಜಾಹಿರಾತುಗಳು, ತಂತ್ರಜ್ಞಾನವನ್ನು ಪರಿಚಯಿಸುವ ಲೇಖನಗಳುಳ್ಳ ಪತ್ರಿಕೆಗಳು (ಚಿಪ್, ಡಿಜಿಟ್, ಪಿಸಿ ವರ್ಲ್ಡ್-ಮುಂತಾದವು). ಇವೆಲ್ಲ ಇಲ್ಲದೆ ಇದ್ದರೆ, ದಕ್ಕಿಸಿಕೊಳ್ಳದೆ ಹೋದರೆ ಎಂದೆನ್ನುವ ಭೀತಿ ಹಾಗು ಕೀಳರಿಮೆ. ‘ನಿನಗೆ ಕಂಪ್ಯೂಟರ್ ಎಂದರೇನು ಗೊತ್ತೇ…?’ ಎಂದೆನ್ನುವ ಆತ್ಮಸ್ಥೈರ್ಯ, ಇದೇ ಆತ್ಮಸ್ಥೈರ್ಯ ತನ್ನ ವಲಯವನ್ನು ದಾಟಿದೊಡನೆ ಅಹಂಕಾರ, ದುರಹಂಕಾರ. ಇವೆಲ್ಲವೂ ವ್ಯಕ್ತಿ-ವ್ಯಕ್ತಿ ಮಧ್ಯೆ, ಸಮೂಹ-ವ್ಯಕ್ತಿ ಮಧ್ಯೆ ದೊಡ್ಡ ಕಂದರವಾಗಿ ಎಲ್ಲವೂ “ಮಡುಗಟ್ಟಿದ ದ್ವೀಪದ ಸಮೂಹಗಳೆ’ ಆಗಿ ‘ಗ್ಲೋಬಲ್ ವಿಲೇಜ್’ ಎಂದೆನ್ನುವ ಸಾಂದರ್ಭಿಕ ವ್ಯಾಖ್ಯಾನವೂ ಸಹ ಒಂದು ಮಿಥ್ಯೆಯೇ. ಕಟು ಸತ್ಯ ಹಾಗು ಮಿಥ್ಯೆಯ ನಡುವೆ ಇಂದು ನಾವೆಲ್ಲ ಸಿಲುಕಿಕೊಂಡಿದ್ದೇವೆ. ಇದು ನನ್ನ ಪರಿಸರದ ಸತ್ಯ. ಹಾಗು ನಿಮ್ಮದೂ ಸಹ. ಈ ಪರಿಸರ ನಿರ್ಮಾಣಕ್ಕೆ ನಾನು ಹೇಗೆ ಕಾರಣವೋ ಹಾಗೆಯೇ ನೀವೂ ಸಹ. ಅಲ್ಲಲ್ಲಿ ಈ ಪರಿಸರದ ಪ್ರಭಾವವನ್ನು ಮೀರುವ ಪ್ರಯತ್ನಗಳನ್ನು ನಾನೂ ಮಾಡುತ್ತಿರುತ್ತೇನೆ-ಹಾಗೆಯೇ ನೀವು ಮಾಡುತ್ತಿರುತ್ತೀರ ಎಂದೆನ್ನುವ ಪರಸ್ಪರ ಭರವಸೆಯೇ ಸದ್ಯಕ್ಕೆ ನಮಗಿರುವ ಪ್ರಾಣವಾಯು. ಆದರೆ, ಇಷ್ಟೇ ಸಾಲದು ಎಂದೆನ್ನುವ ಎಚ್ಚರಿಕೆಯೇ ಈಗಿನ ಅಗತ್ಯ ಹಾಗು ಹೆಚ್ಚಿನ ಮಟ್ಟದಲ್ಲಿ ಕ್ರಿಯಾಶೀಲರಾಗಬಹುದಾದ ಅಗತ್ಯವೂ ಸಹ.
*
*
*
ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್
ಈಗ ನೇರ ಉದಾಹರಣೆಗೆ ಬರೋಣ.
ಒಂದನೆ ತರಗತಿಯಿಂದಲೇ ‘ಕಂಪ್ಯೂಟರ್ ಜಗತ್ತನ್ನು’ ಪರಿಚಯಿಸುವ ಉತ್ಸಾಹ ಮೇಲ್ವರ್ಗದ ಶಾಲೆಗಳಲ್ಲಿ ಕಾಣ ಸಿಗುತ್ತದೆ. ಈ ‘ಕಂಪ್ಯೂಟರ್ ಜಗತ್ತಿಗೆ’ ಮಕ್ಕಳನ್ನು ಸಜ್ಜುಗೊಳಿಸುತ್ತಾ ಹೋಗುವಾಗ ಅದು ಕೇವಲ ಇಂಗ್ಲಿಷ್ ಸಾಧ್ಯತೆಯನ್ನಷ್ಟೇ ತೆರೆದಿಡುತ್ತಾ ಕಂಪ್ಯೂಟರ್ ಎಂದರೆ ಇಂಗ್ಲಿಷ್ ಎಂದೆನ್ನುವಂತಹ ಸಮೀಕರಣ ನಿರ್ಮಾಣವಾಗುತ್ತಿರುತ್ತದೆ. ಹೀಗಾಗಿ ಮಗು ಸಹ ಕಂಪ್ಯೂಟರ್ ಎಂದರೆ ಇಂಗ್ಲೀಷ್ ಎಂದೆನ್ನುವುದನ್ನು ಮಾತ್ರ ಅಂಗೀಕರಿಸುತ್ತಾ ಹೋಗಿ ಬಿಡುವ ಅಪಾಯದ ಕುರಿತು, ಹಾಗೆ ‘ಕಂಪ್ಯೂಟರ್-ಇಂಗ್ಲಿಷ್’ಮಯ ಲೋಕ ಮಾತ್ರ ನಿರ್ಮಾಣವಾಗುತ್ತ ಹೋಗುತ್ತಿರುತ್ತದೆ. ಹೆತ್ತವರಿಗೂ ಇದು ಅಪ್ಯಾಯಮಾನವಾಗಿ ಮಗನ ‘ಉದ್ಯೋಗ-ಗಳಿಕೆ-ದೇಶಾಂತರ’ದ ಸವಲತ್ತುಗಳ ಖಾತ್ರಿ ಹೆಚ್ಚುತ್ತಾ ಹೋಗುತ್ತದೆ. ಹೆತ್ತವರು ಹಾಗು ಮಕ್ಕಳು ಪರಸ್ಪರ ನಂಬಿಕೆಗಳ ಮೇಲೆ ಪರಿಸರವೊಂದನ್ನು ಕಟ್ಟುತ್ತಾ ಹೋಗುವಾಗಲೇ, ದೇಸಗತಿ ಎನ್ನುವುದಕ್ಕೆ ಧಕ್ಕೆಯೊದಗಿದಾಗಲೇ ಪ್ರೌಢರ ಮಧ್ಯೆಯ ಸಂಬಂಧಗಳು ಬಿರುಕೂ ಸಹ ಬಿಡ ತೊಡಗಿವೆ ಎನ್ನುವ ವಿಷಮವೃತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ಇದು ಮೇಲ್ವರ್ಗದ ಸತ್ಯವಾದರೆ, ಹಳ್ಳಿಗಳಲ್ಲಿ, ನಗರಸಭೆ ಶಾಲೆಗಳಲ್ಲಿ ‘ಅಜೀಂ ಪ್ರೇಂಜಿ ಫೌಂಡೇಶನ್, ಮೈಕ್ರೋಸಾಫ್ಟ್ ಕೃಪೆಯಿಂದ ನಡೆಯುವ ಕಂಪ್ಯೂಟರ್ ಜ್ಞಾನ ಯಜ್ಞ ಅತಿ ಬೇಗನೆ ಕಿಲುಬು, ಗೆದ್ದಲು ಹಿಡಿದು ನಿಲ್ಲುತ್ತವೆ. ( ಈ ಮಧ್ಯೆ, ಪಂಚಾಯಿತಿ ಕಚೇರಿಗಳಲ್ಲಿ ಕಂಪ್ಯೂಟರ್ ಇದ್ದರೂ ಅದನ್ನು ಬಳಸುವವರಿಲ್ಲದೆ ಅದಕ್ಕೂ ಇದೇ ಗತಿ. ನಮ್ಮ ಮೇಲ್‌ಸಂಪಾದನೆ ನಿಂತು ಹೋದಾತು ಎಂದು ಅಧಿಕಾರ ಶಾಹಿಗಳೇ ವಿರೋಧ ಒಡ್ಡುವ, ಕೆಡಿಸಿರುವ ಕುಹಕವೂ ನಮ್ಮ ಮುಂದಿದೆ)

-ಇಂತಹ ವಾತಾವರಣಕ್ಕೆ ತಕ್ಕಂತೆ ಪ್ರತಿಕ್ರಿಯಿಸಬಹುದಾದ ಕರ್ತವ್ಯ ಎಲ್ಲರದೂ ಎಂದು ಭಾವಿಸಿದ್ದೇನೆ.

ಜೊತೆಗೆ, ಕಂಪ್ಯೂಟರ್ ಮಾರಾಟವೆನ್ನುವುದು ಸಂಖ್ಯಾತ್ಮಕವಾಗಿ ಹೆಚ್ಚಾಗುತ್ತಿರುವಾಗ, ಅದರಲ್ಲಿ ‘ಸ್ಥಳೀಯ ಪರಿಸರಕ್ಕೆ ಭಾಷಾಲೋಕವನ್ನು ತೆಗೆದಿಡಬಹುದಾದ ತಂತ್ರಾಶಗಳು’ ಕಡ್ಡಾಯವಾಗಿ ಸೇರಿಕೊಳ್ಳುವಂತೆ ಮಾಡಿದರೆ, ಕನಿಷ್ಟ ಸ್ಥಳೀಯ ಅಗತ್ಯಗಳ, ಸಾಧ್ಯತೆಗಳ ಪರಿಸರವನ್ನಾದರೂ ನಿರ್ಮಾಣ ಮಾಡಿದಂತಾಗುತ್ತದೆ. ವ್ಯಾಪಕವೂ ಆಗುತ್ತದೆ. ಇದು ನನ್ನ ಹಾಗು ನಿಮ್ಮ ಆದ್ಯತೆ, ಕರ್ತವ್ಯ, ಚಟುವಟಿಕೆಯೂ ಆಗಬೇಕು. ಅದು ತಕ್ಷಣದ ಅಗತ್ಯವೂ ಆಗಬೇಕು ಎಂದೆನ್ನುವುದು ನನ್ನ ಪ್ರಸ್ತಾವನೆ. ಜೊತೆಗೆ ಸೈಬರ್ ಕೆಫೆಗಳಲ್ಲಿ ಆಯಾ ಸ್ಥಳದ ತಂತ್ರಾಂಶಗಳು ಅನುಸ್ಥಾಪನೆಯಾಗಿರುವಂತೆ ನೋಡಿಕೊಳ್ಳಬೇಕು. ಇದರ ಕಾರ್ಯಸಾಧನೆ ಒಬ್ಬಿಬ್ಬರಿಂದ ಆಗುವಂತಹ ಕೆಲಸವಲ್ಲ. ಸಣ್ಣ ಮಟ್ಟದಲ್ಲಾದರೆ ಸರ್ಕಾರದ ಉಪೇಕ್ಷೆಗೆ ಒಳಗಾಗಬಹುದು, ಐಬಿ‌ಎಂ, ಎಚ್‌ಪಿಯಂತಹ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು ನಮ್ಮ ಈ ಅಗತ್ಯದ ಧ್ವನಿಗೆ ಸೊಪ್ಪು ಹಾಕದೇ ಹೋಗಬಹುದು.

ಈ ಕುರಿತು ಅರ್ಥಪೂರ್ಣವಾದ ಸಂವಾದವೊಂದರ ಅಗತ್ಯ ನಮಗಿದೆ. ಸರ್ಕಾರ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದವರ ಎದುರು ನಮ್ಮ ಸ್ಥಳೀಯ ಅಗತ್ಯಗಳನ್ನು ಕುರಿತಂತೆ ಗಮನಸೆಳೆಯಬೇಕಾದ ಚಟುವಟಿಕೆಗಳೇ ಈಗಿನ ಜರೂರು. ಇದಕ್ಕೆ ತಕ್ಕಂತೆ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ, ಹಾಗು ಇನ್ನಿತರ ಸಂಘಟನೆಗಳ ಕಾರ್ಯಚಟುವಟಿಕೆಗಳು ರೂಪುಗೊಳ್ಳ ಬೇಕಾದ ಅಗತ್ಯವೂ ಇದೆ. ಸಂಸ್ಕೃತಿ-ದೇಸಗತಿ ಹಾಗು ತಾಂತ್ರಿಕತೆ ನಡುವಿನ ಕಂದರ ಕಡಿಮೆಗೊಳಿಸುವ ಹೆಜ್ಜೆಗಳನ್ನು ಕ್ರಮೇಣ ಇಡಲಾರಂಭಿಸಬೇಕು. ಕಂಪ್ಯೂಟಿಂಗ್ ಪರಿಸರದಲ್ಲಿ ದೇಸಗತಿಯ ಅಗತ್ಯಗಳನ್ನು ವ್ಯಾಖ್ಯಾನಿಸುತ್ತ ಹೋಗ ಬೇಕಾಗಿದೆ.

ಈ ಕುರಿತಂತೆ ನನ್ನ ಸಲಹೆಗಳನ್ನು ಹೀಗೆ ಇಡುತ್ತಿದ್ದೇನೆ- ಈ ಸಲಹೆಗಳ ಕುರಿತಂತೆ ನಿಮ್ಮೆಲ್ಲರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೆನೆ. ಪ್ರತಿಕ್ರಿಯಿಸಲು ಒಂದು ವಾರದ ಗಡುವು ಇಟ್ಟುಕೊಳ್ಳುವುದು ಮೊದಲ ಹೆಜ್ಜೆ:

ಸಲಹೆಗಳು:

ಕನ್ನಡಸಾಹಿತ್ಯ,ಕಾಂ ಬೆಂಬಲಿಗರ ಬಳಗ, ಇತರ ಸಂಘಟನೆಗಳು, ಚಿಂತಕರು, ವಿಜ್ಞಾನಿಗಳು ಸಂಯುಕ್ತವಾಗಿ ”ಕಂಪ್ಯೂಟಿಂಗ್ ವಾತಾವರಣದಲ್ಲಿ ದೇಸಗತಿಯ ವಾತಾವರಣ ಕುರಿತಂತೆ ಗಮನ ಸೆಳೆಯಲು” – ಒಂದು ದಿನದ ಸಾಂಕೇತಿಕ ಉಪವಾಸ ಧರಣಿ.

ಇದರಿಂದಾಗಿ ನಾನಾ ಆಯಾಮಗಳು ಹುಟ್ಟಿಕೊಳ್ಳುತ್ತದೆ:
– ಐಟಿ ಪರಿಸರದ ವ್ಯಸನಕ್ಕೊಳಗಾಗಿರುವ ಯುವ ಜನಾಂಗದ ಆತ್ಮ ವಿಮರ್ಶೆ, ಆತ್ಮಶೋಧ, ಆತ್ಮಶುದ್ಧಿ.
– ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ಚಿಂತಕರು ಇದಕ್ಕೆ ಬೆಂಬಲ ಸೂಚಿಸುವ ಮೂಲಕ ಚಿಂತನೆಗೆ ಬೇಕಾದ ಕಾರ್ಯ ಹಾಗು ವಿಷಯ ಸೂಚಿ ಸಿದ್ಧವಾಗುತ್ತದೆ.

ಕಾರ್ಯಕ್ರಮದ ರೂಪುರೇಶೆಗಳು:
– ಕಾನೂನಿನ ಅನುಮತಿಯ ನಿಯಮಾವಳಿಗಳಿಗೆ ತಕ್ಕಂತೆ: (ಆಂದರೆ ಪೋಲೀಸ್ ಅನುಮತಿ ಬೇಕಾಗುತ್ತದೆ) ಮಹಾತ್ಮ ಗಾಂಧಿ ರಸ್ತೆ ಅಥವ ವಿಧಾನಸೌಧದ ಪರಿಸರದಲ್ಲಿ ( ಸಂದರ್ಭಕ್ಕೆ ತಕ್ಕಂತೆ ಸ್ಥಳ ಬದಲಾವಣೆಯೂ ಬೇಕಾಗಬಹುದು) ಶಾಮಿಯಾನ ಹಾಕಿ ಸುಮಾರು ನೂರು ಮಂದಿ ಅಥವ ಹೆಚ್ಚು ಮಂದಿ ಐಟಿ ಕ್ಷೇತ್ರದಲ್ಲಿರುವ ಯುವ ಕೆಲಸಗಾರರು ಸೇರುವುದು. ಇದು ನವೆಂಬರ್ ತಿಂಗಳ ರಾಜ್ಯೋತ್ಸವದ ಸಂದರ್ಭದಲ್ಲಿ ಆಗಬೇಕು. ಒಂದೇ ಉಡುಪಿನ ಶಿಸ್ತು. ಬಂದ ಸಂಖ್ಯೆಗೆ ತಕ್ಕಂತ ಸಣ್ಣಪುಟ್ಟ ಗುಂಪುಗಳಾಗಿ ವಿಂಗಡಿಸಿ, ಮಾತುಕತೆ, ಚರ್ಚೆ ಮತ್ತು ಅದರ ದಾಖಲೀಕರಣ.

ಈ ಉಪವಾಸ ಧರಣಿಗೆ ಬೆಂಬಲ ಸೂಚಿಸುವ ವಿವಿಧ ಕ್ಷೇತ್ರದ ಗಣ್ಯರು(ಲೇಖಕರು, ಸಿನಿಮಾ, ನಾಟಕ, ವಿಜ್ಞಾನಿಗಳು..ಹೀಗೆ) ಧರಣಿಯಂದು ಧರಣಿ ಪ್ರದೇಶದಲ್ಲಿ ಇರುವ ಮನವಿ ಪತ್ರದಲ್ಲಿ ಸಹಿ ಹಾಕಬೇಕು. ಈ ಮನವಿ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗು ಇನ್ನಿತರ ಅಧಿಕಾರಿಗಳಿಗೆ, ಐ.ಟಿ.ಮಾರುಕಟ್ಟೆ ಹೊಣೆ ಹೊತ್ತಿರುವ ಖಾಸಗಿಯವರಿಗೆ ಸಲ್ಲಿಸಲಾಗುವುದು.

ಅಗತ್ಯಗಳು:
ಬೆಂಬಲಿಗರ ಬಳಗದ ಒಪ್ಪಿಗೆ ನಂತರ :

೧. ಕನ್ನಡಸಾಹಿತ್ಯ.ಕಾಂ ಲೋಗೊವುಳ್ಳ ಟಿ-ಶರ್ಟ್ (ಭಾಗವಹಿಸುವ ಬೆಂಬಲಿಗರೆಲ್ಲ ಈ ಟಿ-ಶರ್ಟನ್ನು ಉಪಯೋಗಿಸಬಹುದು)
೨. ಧರಣಿ ನಡೆಸಲು ಅನುಮತಿ- ಆಯಾ ನಗರದ ಕಮೀಷನರ್ (ಅಥವಾ ಸಂಬಂಧಪಟ್ಟ ಅಧಿಕಾರಿ) ಅವರಿಂದ
೩. ಬೆಂಬಲ ಕೋರಲು ವಿವಿಧ ಕ್ಷೇತ್ರಗಳ ಸಾಂಸ್ಕೃತಿಕ ಗಣ್ಯರು ಮತ್ತು ಪತ್ರಕರ್ತರೊಡನೆ ಸಂಪರ್ಕ.
೪. ಕರಪತ್ರಗಳ ಹಂಚಿಕೆ ಮತ್ತು ಓಡಾಟ.

ನಿಮ್ಮೆಲ್ಲರ ಅಭಿಪ್ರಾಯ ಅನಿಸಿಕೆಗಳನ್ನು ಒಂದು ವಾರದೊಳಗೆ ಕಳಿಸಿ.

ಜೊತೆಗೆ ಕನ್ನಡಸಾಹಿತ್ಯ.ಕಾಂ ಬಗೆಗೂ ಗಮನವನ್ನು ಸೆಳೆಯುವುದೂ ಈ ಪ್ರಸ್ತಾವನೆಯ ಭಾಗವಾಗಿದ್ದರೆ ಅದೂ ಸಹ ಒಂದು ಅಗತ್ಯ ಹಾಗು ಸಣ್ಣ ಸ್ವಾರ್ಥ .

ಪ್ರತಿಕ್ರಿಯಿಸಲು ಬೇಕಾದ ವಿವರಗಳು:
ವಿ-ಅಂಚೆ ವಿಳಾಸ: ksctanda(AT)gmail.com
ದೂರವಾಣಿ : ೦೮೦-೨೬೪೮ ೪೬೧೭
ಮೊಬೈಲ್ :೯೩೪೧೨ ೩೦೦೧೫

ಬರಬಹುದಾದ ಪ್ರತಿಕ್ರಿಯೆಗಳನ್ನು ಪರಿಶೀಲಿಸಿ ಕಾರ್ಯಯೋಜನೆಯನ್ನು ಜಾರಿಗೊಳಿಸಲು ಅನುಕೂಲಕರವಾಗಿದೆ ಎಂದೆನ್ನಿಸಿದರೆ ಮುಂದಿನ ವಿವರಗಳನ್ನು ಇದೇ ಪುಟದಲ್ಲಿ ಪ್ರಕಟಿಸಲಾಗುವುದು.

ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿರುವ

ಶೇಖರ್‌ಪೂರ್ಣ
ಕನ್ನಡಸಾಹಿತ್ಯ.ಕಾಂ

ಅಡಿ ಟಿಪ್ಪಣಿ:
ಧರಣಿ, ಉಪವಾಸ ಮುಷ್ಕರ, ಮನವಿ ಸಲ್ಲಿಕೆ ಇತ್ಯಾದಿ ಚಟುವಟಿಕೆಗಳ ಬಗೆಗೆ ಭ್ರಮನಿರಸನವಾಗಿರುವವರಿಗೆ ಒಂದು ಮಾತು-ಈ ನಮ್ಮ ಚಟುವಟಿಕೆಯಿಂದಾಗಿ ಅದ್ಭುತವಾದದ್ದೇನನ್ನೋ ಸಾಧಿಸಲಾಗದೆ ಹೋದರೂ ಕಂಪ್ಯೂಟಿಂಗ್ ಪರಿಸರದಲ್ಲಿ ಸ್ಥಳೀಯ ಅಗತ್ಯಗಳ ಬಗೆಗೆ ಒಕ್ಕೊರಲಿನ ಧ್ವನಿಯೊಂದಕ್ಕೆ ಅಭಿವ್ಯಕ್ತಿ ಹಾಗು ವೇದಿಕೆ ಒದಗಿಸಿದಂತಾಗುತ್ತದೆ. ಇದು ಒಂದು ಸಣ್ಣ ಆರಂಭ.

ಈ ವಿಚಾರದಲ್ಲಿ ಬರಬಹುದಾದ ಟೆಲಿಫೋನ್ ಸಂಭಾಷಣೆ, ಲೇಖನ, ಈ ಮೈಲ್ ಅಭಿಪ್ರಾಯ ಇತ್ಯಾದಿಗಳ ಸ್ವರೂಪದಲ್ಲಿ ಬರಬಹುದಾದವುಗಳನ್ನೆಲ್ಲ ‘ಕನ್ನಡಸಾಹಿತ್ಯ.ಕಾಂ’ ಹಾಗು ‘ಬರಹ’ದ ಪುಟಗಳಲ್ಲಿ ಸಂಗ್ರಹಿಸಿಡಲಾಗುವುದು.

ಶೇಕರ್ ಅವರೇ ,
ನಿಮ್ಮ ಪ್ರಯತ್ನಕ್ಕೆ ಬೆಂಬಲ ಹೆಚ್ಚುತಿರುವ ಬಗೆಗೆ ಹರ್ಷಿತನಾಗಿದ್ದೇನೆ. ನಾನು ಇದುವರೆಗೆ ನೋಡಿದ ಎಕ್ಸ್‌ಪಿ ವಿಂಡೋನ ಒಂದರಲ್ಲಿಯೂ “complex script including Thai” ಚೆಕ್ ಮಾಡಿರಲಿಲ್ಲ. ಅದಿಲ್ಲದೆ ಕನ್ನಡವಿರಲಿ ಯಾವ ಭಾರತೀಯ ಭಾಷೆಯನ್ನೂ ಬಳಸಲು XP MS ವಿಂಡೋನಲ್ಲಿ ಅವಕಾಶವಿದ್ದೂ ಸಾಧ್ಯವಾಗುವುದಿಲ್ಲ. ಇಂತಹ ಪ್ರವೃತ್ತಿಗೆ ಏನೆನ್ನಬೇಕೆಂದು ನನಗೆ ತಿಳಿಯುತ್ತಿಲ್ಲ.
ಈ ಸಮಸ್ಯೆ ಹೊರಗೆ ತುಸು ಹಣಿಕಿ ಹಾಕಿದರೆ ಹೇಗೆ? ಈಗ ಕೇಂದ್ರ ಸರಕಾರೀ ಕಚೇರಿಗಳಲ್ಲಿ ಬಳಸುತ್ತಿರುವುದು ಹೆಚ್ಚಾಗಿ ಇಂಗ್ಲೀಷ್ ಮತ್ತು official language ಆಗಿ ಹಿಂದಿಯನ್ನು. ಈಗ ಅಧಿಕಾರದಲ್ಲಿರುವ ಯುಪಿ‌ಎ ಕೊಟ್ಟ ಒಂದು ಭರವಸೆ ಎಲ್ಲಾ ಎಂಟನೆಯ ಶೆಡ್ಯೂಲ್‌ನ ಎಲ್ಲ ಭಾಷೆಗಳಿಗೂ ರಾಷ್ಟ್ರೀಯ ಸ್ಥಾನಮಾನ ಕೊಡುವ ಸಾಧ್ಯತೆಯ ಬಗೆಗೆ ಪರಿಶೀಲಿಸಲು ಸಮತಿಯೊಂದನ್ನು ನೇಮಿಸುವುದು. (ಇದೇ ಭರವಸೆಯನ್ನು ಹಿಂದೆ ಎನ್‌ಡಿ‌ಎ ಕೊಟ್ಟತ್ತಾದರೂ ಅದು ಆ ಭರವಸೆ ಈಡೇರಿಸುವತ್ತ ಗಮನ ಕೊಡಲಿಲ್ಲ) ಈಗ ನಾವು ಕೇಳಬೇಕಾಗಿರುವುದು ಎಲ್ಲಾ ಎಂಟನೆಯ ಶೆಡ್ಯೂಲ್ ಭಾಷೆಯಗಳಿಗೂ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಕೊಡುವ ಬಗೆಗೆ (ಕೇವಲ ಪರಿಶೀಲನೆಯ ಬಗೆಗೆ ಸಮತಿ ನೇಮಿಸುವುದನ್ನು ಅಲ್ಲ). ಇದು ಕನ್ನಡವನ್ನೂ ಒಳಗೊಂಡು ಹಿಂದಿ, ತೆಲುಗು, ತಮಿಳು, ಬೆಂಗಾಲಿ ಹೀಗೆ ಎಲ್ಲ ಭಾರತೀಯ ಭಾಷೆಗಳ ಬಳಕೆ ಸಂಬಂಧಿತ ರಾಜ್ಯಗಳಲ್ಲಿ ಹೆಚ್ಚಿಸುವ ಅವಕಾಶವೊಂದು ಒದಗಿ ಬರುತ್ತದೆ (ಆದರೆ ಇಂಗ್ಲೀಷ್ ಬಲ್ಲ ಮಧ್ಯಮ ವರ್ಗಕ್ಕೆ ವಿಶಾಲ ಉದ್ಯೋಗ ಮಾರುಕಟ್ಟೆಯೂ ಮಾಯವಾಗ ಬಹುದು). ಕನ್ನಡವನ್ನೂ ಒಳಗೊಂಡು ಭಾರತೀಯ ಭಾಷೆಗಳ ಬಳಕೆ ಹೆಚ್ಚಿಸುವ ಇಂತಹ ಸಾಧ್ಯತೆಗಳ ಬಗೆಗೆ ಗಂಭೀರವಾಗಿ ಚರ್ಚಿಸುವ ಅಗತ್ಯ ಇಂದು ಒದಗಿ ಬಂದಿದೆ ಎಂದೇ ಭಾಸವಾಗುತ್ತದೆ. ಈ ಬಗೆಗೆ ಯೋಚಿಸ ಬಹುದಲ್ಲವೇ?

ಬೆಳಗಲ್ ಪ್ರದೀಪ್
೨೨-೧೧-೨೦೦೬, ೧೧:೦೦
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.