ಏನಾಗ್ತಿದೆ?

“ಏನಾಗ್ತಿದೆ?”

ಕನ್ನಡಸಾಹಿತ್ಯ.ಕಾಂ ಬಲ್ಲವರು, ಬೆಂಬಲಿಗರು, ನನ್ನ ಪರಿಚಿತ ಸ್ನೇಹಿತರು ಎಲ್ಲರದು ಒಂದೇ ಪ್ರಶ್ನೆ. ಎಲ್ಲರಿಗು ಹೇಳಿದ್ದಾಯಿತು. ಇಲ್ಲಿ ಅದನ್ನು ಪುನರುಚ್ಚರಿಸುತ್ತಿರುವುದು-ಅಗೋಚರವಾಗಿರುವ ನಮ್ಮ ಓದುಗರಿಗಾಗಿ.
ಈ ಹಿಂದೆ ನಮ್ಮ “ಹೋಸ್ಟಿಂಗ್ ಸಂಸ್ಥೆ” ತಾನು ಎದುರಿಸುತ್ತಿದ್ದ ಪೈಪೋಟಿಗೆ ತಕ್ಕಂತೆ ತನ್ನನ್ನು ಸಜ್ಜುಗೊಳಿಸಿಕೊಳ್ಳುವತ್ತ ಗಮನ ಹರಿಸಿದಾಗ ಅನೇಕ ರೀತಿಯ ತೊಡಕುಗಳು. ಅವರು ‘ಹೋಸ್ಟ್’ ಮಾಡಿದ್ದ ಸುಮಾರು ವೆಬ್‌ಸೈಟ್‌ಗಳನ್ನು ಹೊಸ ಸರ್ವರ್‌ಗಳಿಗೆ ಸ್ಥಳಾಂತಿರುಸುವಾಗ ಅನಿರೀಕ್ಷಿತ ತಾಂತ್ರಿಕ ತೊಂದರೆಗಳನ್ನು ಆ ಸಂಸ್ಥೆ ಎದುರಿಸಬೇಕಾಯಿತು. ಪರಿಣಾಮ: ಅದು ನಮ್ಮನ್ನು ಪೇಚಿಗೆ ಸಿಲುಕಿಸಿತು. ಅನೇಕ ಸೈಟ್‌ಗಳು ಕಾರ್ಯವೆಸಗದಾದವು. ನಮ್ಮದು ಹಾಗೆಯೇ ಆಗುತ್ತಿತ್ತು. ಅವರು “ನಿಮ್ಮ ಸೈಟನ್ನು ಹೊಸ ಸರ್ವರ್‌ಗೆ ಇಂದು ಸ್ಥಳಾಂತಿರುಸುತ್ತಿದ್ದೇವೆ”, “ಇಲ್ಲ ಮುಂದೂಡಬೇಕಾಗಿದೆ” ಎಂದೆಲ್ಲ ಬರೆಯುತ್ತಾ ಹೋದಂತೆ ನಾವು ಅಪ್‌ಡೇಟ್ ಮಾಡುವುದು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿಹೋಯಿತು. ಇದರ ಕುರಿತಂತೆ ಪತ್ರವ್ಯವಹಾರಗಳು ಫಲಕಾರಿಯಾಗಲಿಲ್ಲ. ಕೊನೆಗೆ ಆ ಹೋಸ್ಟಿಂಗ್ ಕಂಪನಿಯನ್ನು ಬಿಟ್ಟು ಬೇರೆಯದೇ ಕಡೆ ಜಾಗ ಪಡೆದು ಮತ್ತೆ ಹೊಸದಾಗಿ ಎಲ್ಲವನ್ನು ಕೂಡಿಸಿ ಸೇರಿಸಿ ಈ ಸಂಚಿಕೆ ರೂಪಿಸಿದ್ದೇವೆ.

ನವೆಂಬರ್ ಒಂದರಂದು ಅಪ್‌ಡೇಟ್ ಎಂದಂದುಕೊಂಡೆವು. ಸಾಧ್ಯವಾಗಲಿಲ್ಲ. ಕೊನೆಗೆ ಆರರಂದು ಅಪ್‌ಡೇಟ್ ಸಾಧ್ಯವಾಗಿದೆ. ಆಗಿರಬಹುದಾದದ್ದಕ್ಕೆ ವಿಷಾದ ವ್ಯಕ್ತ ಪಡಿಸುತ್ತಾ- ನಮ್ಮ ಕೈ ಮೀರಿಹೋಗಿದ್ದ ಸಂದರ್ಭದಲ್ಲಿ ಏನೊಂದನ್ನು ಮಾಡಲಿಕ್ಕೆ ಸಾಧ್ಯವಿರಲಿಲ್ಲ ಎಂಬುದನ್ನು ಸಹೃದಯರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆಯನ್ನು ವ್ಯಕ್ತ ಪಡಿಸುತ್ತಿದ್ದೇನೆ. ಈ ಸಂಚಿಕೆ ಕರ್ನಾಟಕದಲ್ಲಿ ೧೯೮೦ ಗಳಲ್ಲಿ ಪ್ರಬಲವಾಗಿದ್ದ ಚಳವಳಿಯ ಬಗೆಗೆ ಒಂದು ಸೂಕ್ಷ್ಮವನ್ನು ಕೊಡುತ್ತದೆ ಎಂದಂದುಕೊಂಡಿದ್ದೇನೆ. ಗೋಕಾಕ ವರದಿ ಹಾಗು ಅದಕ್ಕೆ ಬಂದ ಪ್ರತಿಕ್ರಿಯಾತ್ಮಕ ಲೇಖನಗಳನ್ನು ಇಲ್ಲಿ ಸೇರಿಸಲಾಗಿದೆ.

-ನಿಮಗೆ ಆಶ್ಚರ್ಯವಾಗಬಹುದು. ಗೋಕಾಕ್ ವರದಿಯ ಪ್ರತಿ ಇಂದು ಕನ್ನಡ ಸಾಹಿತ್ಯ ಪರಿಷತ್. ಕನ್ನಡ ಅಭಿವೃಧ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಸಿಗುವುದಿಲ್ಲ. ನಮ್ಮ “ಬರಹ” ಗುಂಪಿನ ಸಂಚಾಲಕರಲ್ಲೊಬ್ಬರಾದ ರೋಹಿತ್ ಆರ್ ರವರು ಒಂದು ವಾರಕ್ಕಿಂತಲೂ ಇದಕ್ಕಾಗಿ ಹೆಚ್ಚು ಓಡಾಡಿ ಕೊನೆಗೂ ಒಂದು ಪ್ರತಿಯನ್ನು ದಕ್ಕಿಸಿಕೊಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಚಿಕೆಯ ಸಾರ್ಥಕ್ಯಕ್ಕೆ ನನಗಿಂತಲೂ ಅವರದೇ ಹೆಚ್ಚಿನ ಕೆಲಸ ಎಂದೂ ಹೇಳಿದರೆ ಅತಿಶಯೋಕ್ತಿಯಲ್ಲ.

– ಗೋಕಾಕ್ ವರದಿ-ಚಳವಳಿಯನಂತರದ ಯುವ ಜನಾಂಗಕ್ಕೆ ಇರಬಹುದಾದ ಕನಿಷ್ಟ ಕುತೂಹಲವನ್ನು ಈ ಸಂಚಿಕೆ ಸಮಯೋಚಿತವಾಗಿ ಬಗೆಹರಿಸಬಲ್ಲದು ಎಂದಂದುಕೊಂಡಿದ್ದೇನೆ.
*
*
*
ಕೆ ಎನ್ ಹರಿಕುಮಾರ್ ನನ್ನ ಪರಿಚಯಸ್ಥರು. ಈ ಪರಿಚಯ ವೈಚಾರಿಕ ನಿಷ್ಟುರತೆ-ಸಲಿಗೆಗೆಳಿಗೆ ಒಮ್ಮೊಮ್ಮೆ ತಿರುಗಿದ್ದೂ ಇದೆ. ಅವರ ನೇತೃತ್ವದಲ್ಲಿ-ಸಂಪಾದಕತ್ವದಲ್ಲಿ ಪ್ರಜಾವಾಣಿ ತೆಗೆದುಕೊಂಡ ನಿಲುವುಗಳು ಅವರು ಬರೆದಿರುವ ಲೇಖನಗಳನ್ನು ಓದಿದರೆ ಅರ್ಥವಾಗುತ್ತದೆ. ವೈಯಕ್ತಿಕವಾಗಿ ಆ ಲೇಖನಗಳು ನನ್ನ ವೈಚಾರಿಕ ದಿಕ್ಕುಗಳನ್ನು ಬದಲಾಯಿಸಿದಂತಹವು ಎಂಬುದನ್ನು ಇಲ್ಲಿ ಯಾವುದೇ ಸಂಕೋಚವಿಲ್ಲದೆ ಒಪ್ಪಿಕೊಳ್ಳುತ್ತೇನೆ. ಹರಿಕುಮಾರ್ ಹಾಗು ಯು ಆರ್ ಅನಂತಮೂರ್ತಿಯವರನ್ನು ಹೊರತು ಪಡಿಸಿದರೆ ಬಹುಶಃ ಗೋಕಾಕ್ ಚಳವಳಿಯ ಸಾಮೂಹಿಕ ಸನ್ನಿಗೆ ಒಳಗಾಗದವರು ಯಾರೊಬ್ಬರೂ ಇರಲಿಲ್ಲ. ಇಂದಿಗೂ ಆ ಚಳವಳಿಯ ಸಮೂಲಾಗ್ರ ಅಧ್ಯಯನ ಅಗತ್ಯವೆಂದೇ ನನಗನ್ನಿಸುತ್ತದೆ. ಆಶ್ಚರ್ಯವೆಂದರೆ ಸಂಸ್ಕೃತ ಭಾಷೆಯ ನೆರವಿನೊಂದಿಗೆ ಫಸ್ಟ್‌ಕ್ಲಾಸ್ ದಕ್ಕಿಸಿಕೊಂಡು ಬಿಡುತ್ತಿದ್ದವರು ಯಾರೊಬ್ಬರೂ ಗೋಕಾಕ್ ಚಳವಳಿಯನ್ನು ವಿರೋಧಿಸಲಿಲ್ಲ. ಇದು ನಿಜವಾಗಿ ಅಶ್ಚರ್ಯ ತರುವ ವಿಷಯ. ಸಂಸ್ಕೃತ ಅಧ್ಯಯನ ಆ ಮಟ್ಟದಲ್ಲಿ ಎಷ್ಟು ಹುಸಿಯಾದದ್ದೆಂದು ಬಲ್ಲದಿರುವವರು ಯಾರೂ ಇಲ್ಲ. ಈ ವಿಷಯದಲ್ಲಿ ಇಂದಿಗೂ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ಸರಾಸರಿಯಲ್ಲಿ ಈ ಸಂಸ್ಕೃತ ಸೇರಿಕೊಂಡೇ ಮುಂದು ಮುಂದಕ್ಕೆ ಸಾಗುತ್ತಿದೆ. ಅಂತರ ಅಗಾಧವಾಗುತ್ತ ಹೋಗುತ್ತಲೇ ಇದೆ. ಈ ಕುರಿತಂತೆ ಹೆಚ್ಚು ಬಲ್ಲವರು ಅಧ್ಯಯನಪೂರ್ವಕವಾಗಿ ಅಲೋಚಿಸಿದರೆ ಸರಿಯಾದ ರೀತಿಯ ವ್ಯವಸ್ಥೆಗೆ ಒಂದು ಸಂವಾದವಾದರೂ ಹುಟ್ಟಿಕೊಂಡಾತು ಎಂಬ ಆಶಯವೇ ಈ ಸಂಚಿಕೆಯನ್ನು ರೂಪಿಸಿದೆ.
*
*
*
ಉಳಿದಂತೆ ಈ ಬಾರಿ ನಮ್ಮ ಲೇಖಕ ಬಳಗಕ್ಕೆ ಶಾಂತಿನಾಥ ದೇಸಾಯಿಯವರ ಕೃತಿಗಳ ಸೇರ್ಪಡೆಯಾಗಿದೆ. ಶ್ರೀಮತಿ ದೇಸಾಯಿಯವರ ಬಳಿ ಮಾತನಾಡಿ ಅನುಮತಿ ದೊರಕಿಸಿಕೊಟ್ಟವರು ವಿವೇಕ್ಷಾನಭಾಗರವರು. ಅವರಿಗೆ ಧನ್ಯವಾದಗಳು. ಇದೇ ರೀತಿ ಎಸ್ ದಿವಾಕರ್‌ರವರು ಅವರ ಬರವಣಿಗೆಯನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ಮುಂದಿನ ತಿಂಗಳು ಅವರ ಒಂದೆರಡಾದರು ಸಣ್ಣಕತೆಗಳನ್ನು ಪ್ರಕಟಿಸಲಾಗುವುದು. ಜೊತೆಗೆ ಪ್ರಸ್ತುತ ಘಟನಾವಳಿಗಳು, ವರದಿಗಳು (ರಾಜಕೀಯ ಸಿನಿಮಾ, ಕ್ರೀಡೆ ಎಲ್ಲವನ್ನು ಒಳಗೊಂಡಂತಹ) ಅಂದಂದೇ ಕೊಡುವ ದಿಕ್ಕಿನತ್ತಲೂ ಅಲೋಚನೆ ನಡೆಯುತ್ತಿದೆ. ಕನ್ನಡಸಾಹಿತ್ಯ.ಕಾಂ ಹೊಸ ಹೊಸ ದಿಕ್ಕಿಗೆ ತೆರೆದುಕೊಳ್ಳುತ್ತದೆ, ವ್ಯಾಪಿಸಿಕೊಳ್ಳುತ್ತದೆ ಎನ್ನುವ ಅಲೋಚನೆಯೇ ಖುಷಿ ತರುವಂತದ್ದು..

ಶೇಖರ್‌ಪೂರ್ಣ
೦೭-೧೧-೨೦೦೩
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.