ನೀಡು ಪಾಥೇಯವನು

ಚಿಮ್ಮಿ ನೆಗೆಯುವ ಸಮುದ್ರದ ತೆರೆಗಳನ್ನು ಲೆಕ್ಕ ಮಾಡಲು ಪ್ರಯತ್ನಿಸಿದಳು. ಲೆಕ್ಕ ತಪ್ಪಿಹೋಯಿತು. ತೆರೆಗಳು ಮಾತ್ರ ಹಾರುತ್ತಲೇ ಇವೆ. ದುಂಡಗಿನ ಸೂರ್ಯ ಕೆಂಪು ಪಿಂಡದ ಹಾಗೆ ಕಾಣಿಸಿದ. ಅದೇ ಸೂರ್ಯ ಮಧ್ಯಾಹ್ನ ನೆತ್ತಿಯ ಮೇಲೆ ಸುಡುತ್ತಿದ್ದಾಗ – ಮಗ ದಿವಾಕರ ಬೋಗುಣಿಯೊಳಗಿರಿಸಿ ತಂದ ಪಿಂಡಗಳನ್ನೆಲ್ಲ ಬೊಗಸೆಯೊಳಗೆ ಮೆಲ್ಲಗೆ ಹಿಡಿದು ತೆರೆಗಳ ಮಡಿಲಲ್ಲಿ ಕರಗಿಸುತ್ತಿದ್ದಾಗ – ಕಾದ ಮಳಲ ರಾಶಿಯ ಮೇಲೆ ಕೈಮುಗಿದು ನಿಂತಿದ್ದ ವಿಶಾಲು ತನ್ನಲ್ಲಿ ಇನ್ನೂ ಉಳಿದಿರಬಹುದಾದ ಕೋಮಲ ಭಾವನೆಗಳೆಲ್ಲ ಬಿಸಿಲ ಬೆಂಕಿಯಲ್ಲಿ ಸುಟ್ಟು ಹೋಗಲಿ ಎಂದು ಆಶಿಸಿದ್ದಳು. ಉಪ್ಪು ನೀರಿನೊಂದಿಗೆ ಬೆರೆಯುತ್ತಿದ್ದ ಪಿಂಡಗಳೊಂದಿಗೆ ಸೇರಿ ಕಹಿಯಾಗಿ ಹೋಗಲಿ ಎಂದು ಮನಸ್ಸಿನೊಳಗೇ ಚೀರಿದ್ದಳು. ಪಾದಗಳಡಿಯ ಮಳಲರಾಶಿ ದಹಿಸುವ ಚಿತೆಯಾಗಲಿ ಎಂದು ಯಾರಿಗೂ ಗಂಟುದ್ದ ನೀರಿನಲ್ಲಿ ಜನಿವಾರವನ್ನು ಎಡಕ್ಕೆ ಮಾಡಿಕೊಂಡು ಪುರೋಹಿತರ ಮಂತ್ರಕ್ಕನುಗುಣವಾಗಿ ಸರ್ವ ಪಿತೃಗಳಿಗೆ ತರ್ಪಣ ನೀಡುತ್ತಿದ್ದ ಮಗ ದಿವಾಕರನಿಗೂ ತಿಳಿಯದ ಹಾಗೆ ಚಿಂತೆಯ ನೇಣುಬಿಗಿದುಕೊಂಡಿದ್ದಳು. . . ಆದರೆ ಸಾವು ಅಷ್ಟು ಸುಲಭವಾಗದೆ ಇರುವ ಸ್ಥಿತಿ ಅವಳದು. ಮನೋಸ್ಥಿತಿ ಕೂಡಾ.

ಹಾಗೆ ಸಾಯಬಹುದಾದ ಸಂದರ್ಭಗಳಿಗೇನು ಅವಳ ಜೀವನದಲ್ಲಿ ಕೊರತೆ ಇರಲಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಎದುರಿಸುವ ಎದೆಗಾರಿಕೆ ತನ್ನಲ್ಲಿದೆ ಎಂಬ ವಿಶ್ವಾಸವೇ ಅವಳ ಜೀವನದ ಸರ್ವಸ್ವ. ಈಗ ಈ ಕ್ಷೇತ್ರದ ಸಮುದ್ರದ ದಂಡೆಯ ಮೇಲೆ ನಿಂತು – ಬೆಳಗಿನಿಂದ ಮಧ್ಯಾಹ್ನದ ತನಕ ಪಾಣಿಪಂಚೆ ಉಟ್ಟು ತಲೆ ಬೋಳಿಸಿಕೊಂಡ ಮಗ ಮಾಡಿದ ಅಪರ ಸಂಸ್ಕಾರದ, ಸಪಿಂಡೀಕರಣದ ಕ್ಷೇತ್ರವಿಧಿಗಳ ದೃಶ್ಯಾವಳಿಯನ್ನು ಕಣ್ಮುಂದೆ ತಂದುಕೊಂಡಾಗ – ಸಾವನ್ನು ಒಂದು ಪ್ರಬಲ ಸ್ಫೂರ್ತಿಯಾಗಿ ಕಾಣಬೇಕೆಂಬ ಹಟಮಾರಿತನ ಅವಳಲ್ಲಿ ಬಲವಾಗತೊಡಗಿದೆ. ಅವಳು ಹುಟ್ಟಿ ಬೆಳೆದ ಜಾತಿ ವರ್ತುಲದ ಸಂಪ್ರದಾಯಸ್ಥರು ನಡೆಸುವ ಸಾವಿನ ವಿಧಿಗಳನ್ನೆ ಜೀವನ ಕ್ರಿಯೆಯಾಗಿ, ಸಂದೇಶವಾಗಿ ಕಾಣಬೇಕು ಎಂಬ ಹಂಬಲ ಬಲಿಯತೊಡಗಿದೆ.

ವಿಶಾಲು ಯಾವ ತಾಯಿಯ ಗರ್ಭದಿಂದ ಹೊರಬಂದಿದ್ದಳೋ ಆ ಅವಳಮ್ಮನನ್ನು ಜೀವಂತವಾಗಿ ಕಾಣಲಾಗದ ಭಾಗ್ಯ ಅವಳದು. ಗಿಡ್ಡ ಲಂಗದಿಂದ ತುಂಡು ಸೀರೆಯ ಸುತ್ತಿನೊಳಗೆ ದೇಹ ಬದಲಾಗುವ ಸ್ಥಿತಿ ಬರುವವರೆಗೂ ಮಲತಾಯಿಯನ್ನೇ ತಾಯಿ ಎಂದು ತಿಳಿದಿದ್ದಳು ಅವಳು. ಮೈನೆರೆದು ಮನೆಯ ಮೂಲೆ ಸೇರಿದ ಆ ದಿನ – ಇವಳಿಗೆ ಕೇಳಿಸದು ಎಂಬ ಭಾವನೆಯಿಂದ ಆ ಮಲತಾಯಿ ಪಂಚಾಂಗ ಹಿಡಿದು ಕುಳಿತಿದ್ದ ಅಪ್ಪನ ಬಳಿ ಹೇಳಿದ ಮಾತು ಅವಳಿಗೆ ನಿಜ ಜೀವನದ ಒಸಗೆ ನೀಡಿತ್ತು. “ನಿಮ್ಮ ಪಂಚಾಂಗ ಏನು ಹೇಳುತ್ತದೋ ನನಗೆ ತಿಳಿಯದು. ಆದಷ್ಟು ಬೇಗ ಒಂದು ಗಂಡು ಹುಡುಕಿ ತಾಳಿಕಟ್ಟಿಸಿ, ಅಮ್ಮನ ದಾರಿ ಇವಳು ಹಿಡಿಯುವುದು ಬೇಡ.” ತಮ್ಮ ತಂಗಿಯಂದಿರು ಎಂದು ತಿಳಿದವರೆಲ್ಲ ಆಗ ಅಪರಿಚಿತರಾದರು. ಅಮ್ಮ ಎಂದು ತಿಳಿದವಳು ಅಸ್ಪಷ್ಟವಾಗತೊಡಗಿದಳು. ಮತ್ತೆ ಮತ್ತೆ ಕದ್ದು ಕೇಳಿದ ಮಾತುಗಳೆಲ್ಲ ನಿಜ ಅಮ್ಮನನ್ನು ಸ್ಪಷ್ಟಗೊಳಿಸತೊಡಗಿದವು. “ನಿಮ್ಮ ಮುದ್ದು ಮಗಳ ಮುಖವನ್ನು ಇತ್ತಿತ್ತಲಾಗಿ ನೀವು ನೋಡಲೇ ಇಲ್ಲ. ಇಷ್ಟು ಸಣ್ಣ ಪ್ರಾಯಕ್ಕೆ ಹೀಗೆ ತುಂಬಿಕೊಂಡಿದ್ದಾಳೆ. ಅಮ್ಮನ ಹಾಗೆ ಆದಾಳು ಮತ್ತೆ. ನನ್ನನ್ನು ದೂರಬೇಡಿ.” ಕದ್ದು ಕೇಳಿದ ಮಾತುಗಳೆಲ್ಲ ರೇಖೆಯಾದವು. ಕಾಣದ ಅಮ್ಮನನ್ನು ಚಿತ್ರಿಸತೊಡಗಿದವು. ಕಣ್ತುಂಬಿ, ಎದೆತುಂಬಿ, ನಡುನಲಿವ ದೇವಲೋಕದ ರಂಭೆಯನ್ನು ಸೃಷ್ಟಿಸಿದವು. ಅಮ್ಮ ದಿಟ್ಟೆಯಾಗಿ ಕಾಣಿಸಿದಳು. ಅಹಲ್ಯೆಯಾಗಿ ಕಾಣಿಸಿದಳು. ಅಪ್ಪ ಗೌತಮನಾಗಿ ಕಾಣಿಸಿದರು.

ಈಗ ಕಟ್ಟಿಕೊಂಡವನ ಉತ್ತರಕ್ರಿಯೆಗಾಗಿ ಈ ಕ್ಷೇತ್ರಕ್ಕೆ ಬಂದು ವಿಶಾಲವಾದ ಸಮುದ್ರದ ಎದುರು ನಿಂತು ತೆರೆಗಳೆಣಿಕೆಯ ಕಾಯಕದಲ್ಲಿ ತೊಡಗಿದ ವಿಶಾಲುವಿಗೆ ನೆನಪಿರುವುದು ಆ ಅಮ್ಮನ ಮುಖ ಒಂದನ್ನು ಬಿಟ್ಟು ಬಟ್ಟೆ ಸುತ್ತಿದ ಹೆಣ ಮಾತ್ರ. ಅಪ್ಪನನ್ನು ಮತ್ತು ಮಲತಾಯಿಯನ್ನು ಬೇಡಿದ್ದಳು, ಕಾಡಿದ್ದಳು, ಹಟಮಾಡಿದ್ದಳು. ಅಗ್ನಿಹೋತ್ರಿಗಳ ಮನೆಯಿಂದ ಹೆತ್ತ ಮಗುವನ್ನು ಬಿಟ್ಟು ದೂರದೂರಿನ ಸೂಳೆಗೇರಿಗೆ ಓಡಿಹೋಗಿದ್ದರೇನಂತೆ. ಅಮ್ಮ ಅಮ್ಮನೆ. ಒಮ್ಮೆ ಕಾಣಬೇಕು ಅವಳನ್ನು. ಆಗ ಎಲ್ಲ ಅಪ್ಪ ಹೇಳುತ್ತಿದ್ದ ಮಾತು ಒಂದೆ, “ಕುಟುಂಬದ ಸೂತಕ ಕಳೆಯಲು ಆ ಪಿಶಾಚಿ ಸತ್ತ ಸುದ್ದಿ ತಿಳಿದರೆ ಯಾರನ್ನಾದರೂ ಕಳುಹಿಸಿ ಸಂಸ್ಕಾರ ಮಾಡಿಸುತ್ತೇನೆ. ಆಗ ನೀನೀ ಮನೆಯಲ್ಲೇ ಇದ್ದರೆ ಹೋಗಿ ಮುಳುಗು ಹಾಕಿ ಆ ಪ್ರೇತಕ್ಕೆ ಮೋಕ್ಷ ನೀಡಿ ಬಾ.” ಆದದ್ದು ಹಾಗೆ. ಮದುವೆಯ ಮೊದಲೇ ಅಮ್ಮ ಸತ್ತ ಸುದ್ದಿ ಬಂತು. ಒಂದೊಪ್ಪತ್ತು ಪ್ರಯಾಣ ಮಾಡಿ ಅಪರಿಚಿತ ವಾತಾವರಣದಲ್ಲಿ ಬುದ್ಧಿ ತಿಳಿದ ಮೇಲೆ ಮೊದಲ ಬಾರಿಗೆ ಮತ್ತು ಅದೇ ಕೊನೆಯ ಬಾರಿಗೆ ಹೆತ್ತವಳ ಮುಖ ನೋಡಿ ಬಂದಿದ್ದಳು. ಬಿಳಿ ಬಟ್ಟೆಯ ಏರು ತಗ್ಗುಗಳನ್ನು ಕಣ್ಣರಳಿಸಿ ಕಂಡಿದ್ದಳು. ಬಟ್ಟೆಯೊಳಗಿನ ಕಾಲುಗಳನ್ನು ಹಿಡಿದು ತಲೆ ಬಗ್ಗಿಸಿ ಎಷ್ಟೋ ಹೊತ್ತು ಅಮ್ಮನ ಮಡಿಲ ಮಗುವಾಗಲು ಪ್ರಯತ್ನಿಸಿದ್ದಳು. ಕಣ್ಣೀರನ್ನು ಮೀರಿದ ಸಂಕಟ ಅವಳನ್ನು ಕಾಡಿತ್ತು. ಅಪ್ಪನ ದೇಹದಿಂದ ಸುಖ ಕಾಣದೆ ಹೋದ ದೇಹ ಎಂಬುದಕ್ಕಿಂತ ಹೆಚ್ಚು ಮನಸ್ಸಿನ ಇಷ್ಟಕ್ಕೆ ವಿರುದ್ಧವಾಗಿ ಕೊಳೆಯದ ಒಂದು ಪವಿತ್ರ ದೇಹವಾಗಿ ಅಮ್ಮನನ್ನು ಕಾಣುವ ಪ್ರಯತ್ನ ಅವಳದಾಗಿತ್ತು. . .

ವಿಶಾಲುವಿಗೆ ಆ ದಿನಗಳ ಸ್ಪಷ್ಟ ನೆನಪಿದೆ. ಆ ಅಮ್ಮನ ಕಾರಣದಿಂದಾಗಿಯೇ ಯೋಗ್ಯ ನೆಂಟಸ್ತಿಕೆ ತನಗೆ ದೊರಕದ ದಿನದಿನವೂ ಅಪ್ಪ ಮತ್ತು ಮಲತಾಯಿ ಸತ್ತ ಆ ಪಿಶಾಚಿಗೆ ಮತ್ತಷ್ಟು ಶಾಪಹಾಕುತ್ತಿದ್ದ ಕಾಲ. ಅಮ್ಮನ ನಡವಳಿಕೆ ಬಹಿರಂಗಗೊಂಡ ಕಾಲ. ಅಪ್ಪ ಹೇಳುತ್ತಿದ್ದ ಮಾತುಗಳೆಲ್ಲ ಆ ಅಮ್ಮನನ್ನು ಮತ್ತಷ್ಟು ಪ್ರೇತಸ್ವರೂಪಿಯಾಗಿಸುತ್ತಿದ್ದ ಕಾಲ. “ಅವಳಿಗೆಲ್ಲಿ ಮೋಕ್ಷ? ಖಂಡಿತ ವೈತರಣಿಯಲ್ಲಿ ಕೊಳೆಯುತ್ತಿದ್ದಾಳೆ. ಪ್ರಾರಬ್ಧ – ಪ್ರಾರಬ್ಧ” ಎಂದು ಅಪ್ಪ ನೋವಿನಿಂದ, ಅನುಕಂಪದಿಂದ, ಒಂದಷ್ಟು ದಿನಗಳಾದರೂ ಸಂಸಾರ ಮಾಡಿದ ಕಾವಿನಿಂದ ಕನವರಿಸುತ್ತಿದ್ದ ಕಾಲ. ಮತ್ತು ಇವಳ ಮದುವೆಯ ಮೊದಲೇ ಅಪ್ಪ ಸತ್ತು ಅಪ್ಪನ ಸಂಸ್ಕಾರದ ದಿನಗಳಲ್ಲಿ ಹಗಲೂ ರಾತ್ರಿ ಅಪ್ಪ ಅಮ್ಮ ಇಬ್ಬರ ಪ್ರೇತಗಳು ಈಗ ಒಟ್ಟು ಸೇರಿವೆ ಎಂಬ ಭ್ರಮೆಯ ಕಾಲ. ತನ್ನ ಬೆಳೆಯುತ್ತಿದ್ದ ದೇಹದ ಕಣಕಣದಲ್ಲಿ ತುಂಬು ಬಾಳ್ವೆಗೆ ಬೇಕಾದ ಅಮೃತ ಅಡಗಿದೆ ಎಂದು ತಿಳಿದ ಕಾಲ. ಅಪ್ಪ, ಮಲತಾಯಿ ಅಡ್ಡಿ ಮಾಡದಿದ್ದರೂ ಅವಳಿಂದಲೇ ವ್ಯವಸ್ಥಿತ ಶಿಕ್ಷಣ ಹೊಂದಲಾಗದೆ – ಮನೆಗೆಲಸದ ನಡುವೆ, ಹೋಮಹವನಗಳ ನಡುವೆ, ಕೇರಿಯಲ್ಲಿ ಊರಿನಲ್ಲಿ ಮಾತಿನಲ್ಲಿ ಮಾಟದಲ್ಲಿ ಬದುಕಿನ ಪಾಠ ಕಲಿಯುತ್ತಿದ್ದ ಕಾಲ. ಹೈಸ್ಕೂಲು ಮೆಟ್ಟಿಲನ್ನೇರುವಷ್ಟರಲ್ಲಿ ಅವಳ ಶಿಖ್ಷಣ ಮುಗಿದಿತ್ತು. ಆದರೆ ಅಷ್ಟೇ ಸಾಕಾಗಿತ್ತು. ಆಕರ್ಷಣೆಯ ಮುಖಗಳನ್ನು ತಿಳಿಯಲು. ದಾರಿಯಲ್ಲಿ ಸಾಗತೊಡಗಿದರೆ ಯಾರೋ ಬೇಕೆಂದೇ ಹಿಂಬಾಲಿಸಿದ ಅನುಭವ, ನಿಂತವರೆಲ್ಲ ದುರುಗುಟ್ಟಿ ನೋಡುತ್ತಿದ್ದ ಆ ನೋಟದ ಅನುಭವ. ಇಂದಿಗೂ ಅವಳಿಗೆ ಸರಿಯಾಗಿ ನೆನಪಿದೆ. ಮನೆಯ ಹಬ್ಬ ಹರಿದಿನಗಳಿಗೆಲ್ಲ ತಪ್ಪದೆ ಹಾಜರಾಗುತ್ತಿದ್ದ ಒಬ್ಬ ಸಂಬಂಧಿಕ ಇವಳು ಒಬ್ಬಂಟಿಯಾಗಿ ಎಲ್ಲಿ ಸಿಗುತ್ತಾಳೆ ಎಂದು ಸುಳಿಯುತ್ತ ಮಡಿವಸ್ತ್ರ ಒಣಗಿಸಲು ಅಟ್ಟ ಹತ್ತಿದಾಗ ಯಾವ ಮಾಯಕದಿಂದಲೋ ಬಂದು “ಕೂಗ್ಬೇಡಾ, ಒಂದು ಗಮ್ಮತ್ ತೋರ್‌ಸ್‌ತೆ” ಎಂದು ಏನೇನೋ ಹೇಳುತ್ತ ಲಂಗದಂಚಿಗೆ ಕೈಹಾಕಿದ್ದು. . .

ಆ ’ಗಮ್ಮತ್ತಿನ’ನ ನಿಜ ತಿಳಿಯಲು ಒಂದರ್ಥದಲ್ಲಿ ಒಂದು ಜನ್ಮವನ್ನೆ ಕಳೆಯಬೇಕಾಯಿತಲ್ಲ ಅವಳು. ಬೆಡಗಿನ ಮಂಟಪದೊಳಗಿನ ಉರಿಯುವ ಬೆಂಕಿಯ ಎದುರು ಏಳು ಹೆಜ್ಜೆ ಮೆಟ್ಟಿ ಕರಿಮಣಿ ಕಟ್ಟಿಸಿಕೊಂಡವನಿಂದ ವಿಚ್ಛೇದನ ಪಡೆದ ಮೇಲೆ ಹೊಸ ಜನ್ಮ ತಾಳಿದೆ ಎಂದೇ ನಂಬಿದವಳು ವಿಶಾಲು. ಅದೊಂದು ಸುದೀರ್ಘ ಹೋರಾಟ. . . ಬುದ್ಧಿ ತಿಳಿದ ಮೇಲೆ ಜೀವಂತ ಕಾಣದೆ ಚಿತೆಗೆ ಸಾಗಿಸಲು ಸಿದ್ಧವಾಗಿದ್ದ ಸಂದರ್ಭದಲ್ಲಿ ಕಂಡ ಆ ಅಮ್ಮನ ಸ್ಫೂರ್ತಿಯಿಂದಲೋ ಎಂಬಂತೆ ಅವಳು ನಡೆಸಿದ ಹೋರಾಟ.

ಆ ಸ್ಫೂರ್ತಿಯ ಹಿಂದೆ ಒಂದು ನಂಬಿಕೆ ಇದೆ. ಪಾಣಿಪಂಚೆಯಲ್ಲೆ ಬದುಕನ್ನು ಹವನವಾಗಿಸಿದ ಅಪ್ಪನ ಒಣಕಲು ಸಮಿಧೆಯಂತಿದ್ದ ದೇಹದ ಕಾವಿನಿಂದಲೇ ತನ್ನನ್ನು ಗರ್ಭದಲ್ಲಿ ಉಯ್ಯಾಲೆಯಾಡಿಸಿ ಮತ್ತೆ ಭೂಮಿಗಿಳಿಸಿ ಅವನ ವ್ರತಕ್ಕೆ ಕಲಶವಾಗಲಾರೆ ಎಂದೆಣಿಸಿ ಸೂಳೆಗೇರಿ ಸೇರಿದ ಆ ಅಮ್ಮ ಪರಿಶುದ್ಧಳು ಎಂಬುದೇ ವಿಶಾಲುವಿನ ಆ ನಂಬಿಕೆ. ಮಲತಾಯಿ ತವರಿಗೆ ಹೋದ ಸಂದರ್ಭವನ್ನೇ ಕಾದು ಅಮ್ಮನ ಹೆಣಕಂಡು ಬಂದು ಒಳಗಿಂದೊಳಗೇ ಅಳುತ್ತಿದ್ದ ಬೇಯುತ್ತಿದ್ದ ಈ ಹುಡುಗಿ ವಿಶಾಲುವನ್ನು ಸಂತೈಸಲೆಂದೇ ಬರುತ್ತಿದ್ದ “ಬಚ್ಚಿ” ಎಂಬ ಅಮ್ಮನ ಪರಿಚಯದ ಮುದುಕಿ ಚಾವಡಿಯಲ್ಲಿ ಕುಳಿತು ಕವಡೆ ಕುಣಿಸುತ್ತಿದ್ದ ಅಪ್ಪನಿಗೆ ತಿಳಿಯದಂತೆ ಗುನುಗುನಿಸುತ್ತಿದ್ದಳು ಆ ಅಮ್ಮನ ಒಳ್ಳೆಯ ಗುಣಗಳನ್ನು. ಬಚ್ಚಲಿಗೆ ಕರೆದುಕೊಂಡು ಹೋಗಿ ಇದ್ದೂ ಇಲ್ಲದ ಅಮ್ಮನನ್ನು ಕಳೆದುಕೊಂಡ ತಬ್ಬಲಿ ಎಂಬ ಪ್ರೀತಿಯಿಂದ ಕರುಣೆಯಿಂದ ಎಣ್ಣೆ ಹಾಕಿ ತಿಕ್ಕಿ ತೀಡಿ ಬಿಸಿನೀರು ಹೊಯ್ದು ಸ್ನಾನ ಮಾಡಿಸುತ್ತಿದ್ದಳು ಆ ಬೋಡು ಬಾಯಿಯ ಮುದುಕಿ. ತುಂಡು ಬೈರಾಸವನ್ನು ಸುತ್ತಿಕೊಳ್ಳಲು ಪ್ರಯತ್ನಿಸುವಾಗ “ನಿನಗೆಂಥ ನಾಚುಗೆ ಮಗ. ನಿನ್ನಮ್ಮನ ತುಂಬು ದೇಹಕ್ಕೆ ಅಭಿಷೇಕ ಮಾಡಿದವಳು ನಾನು. ರಾಣಿ ಅವಳು ರಾಣಿ. ಎಂಥ ಮೈ. ಎಂಥ ಬಣ್ಣ. ರಸ ತುಂಬಿದ ದೇಹ ಮಗ ನಿನ್ನಮ್ಮಂದು. ಭಾಗ್ಯದ ಗೆರೆ ಇಲ್ಲದೆ ಹೋಯಿತು. ನಾನು ಅಲ್ಲಿಗೆ ಹೋದಾಗಲೆಲ್ಲ ನಿನ್ನ ಬಗ್ಗೆ ಕೇಳುತ್ತಿದ್ದಳು. ನಾನು ಹೇಳುತ್ತಿದ್ದೆ. ಇಷ್ಟು ಮಾತ್ರ ತಿಳಿದುಕೋ ಮಗಾ. ಕೈ ಹಿಡಿದವನನ್ನು ಬಿಟ್ಟು ಓಡಿಹೋದರೂ ಮೆಚ್ಚಿದವನಿಗೆ ಅನ್ಯಾಯ ಮಾಡದೆ ಕೊನೆಯತನಕ ಬದುಕಿದ್ದಳು. . . ” ನೆತ್ತಿಗೆ ಬೆನ್ನಿಗೆ ಹೊಕ್ಕುಳ ಸಂಧಿಗೆ ಎಲ್ಲೆಲ್ಲಿ ಎಣ್ಣೆ ಇಳಿಯಬೇಕೋ ಅಲ್ಲಿಗೆ ಮಿಳ್ಳೆ ತುಂಬ ತಂದ ಎಣ್ಣೆಯನ್ನು ಸುರಿದು ಹುಬ್ಬು ತೀಡಿ ನೆಟ್ಟಗೆ ಮುರಿದು ಭಗೀರಥನಿಗಾಗಿ ಗಂಗೆ ಧುಮುಕಿದಂತೆ ತಲೆಯ ಮೇಲೆ ರಭಸದಿಂದ ನೀರನ್ನೆರಚಿ ಆ ಅಮ್ಮನ ಪ್ರೀತಿಯ ಒಸಗೆಯನ್ನು ಧಾರೆಯಾಗಿಸುತ್ತಿದ್ದ ಆ ಮುದುಕಿ ಆಗೆಲ್ಲ ಹೇಳುತ್ತಿದ್ದ ಮಾತು ಒಂದೆ ” ಆ ಅಮ್ಮನ ಮೈಕಟ್ಟನ್ನೇ ಸೆಳೆದು ತಂದಿದ್ದಿ. ಕೈ ಹಿಡಿದವ ಕೊನೆಯತನಕ ನಿನಗಂಟಿಕೊಂಡಿರಲಿ.”
ಆದರೆ ಹಾಗಾಗದೆ ಹೋಯಿತು.
ಈಗ ಈ ಕ್ಷೇತ್ರದಲ್ಲಿ ಮಳಲನ್ನು ಚುಂಬಿಸುತ್ತಿದ್ದ ತೆರೆಗಳನ್ನೆಣಿಸುವುದು ಸಾಧ್ಯವಾಗದೆ ಹೋದರೂ ವಿಶಾಲುವಿಗೆ ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ ಮೊದಲ ದಾಂಪತ್ಯದ ಲೆಕ್ಕಾಚಾರ. . . ಲೆಕ್ಕ ಮಾಡಿ ಹತ್ತು ವರ್ಷಗಳ ತನಕ ಹರಕಲು ಚಪ್ಪಲಿಯನ್ನು ಜಗಿಯಲು ನಾಯಿ ಮಾಡುವ ವ್ಯರ್ಥ ಪ್ರಯತ್ನದಂತೆ ಸಾಗಿದ ಮೊದಲ ದಾಂಪತ್ಯದ ಲೆಕ್ಕಾಚಾರ. ಅಮ್ಮನ ಇತಿಹಾಸ ಊರುಕೇರಿಯಲ್ಲಿ ಮನೆಮಾತಾಗಿದ್ದರೂ ಸಿಕ್ಕಿದ ನೆಂಟಸ್ತಿಕೆ ಅವಳಿಂದ ತನಗೆ ಬೇಕಾದುದನ್ನು ದಕ್ಕಿಸಿಕೊಂಡ ಲೆಕ್ಕಾಚಾರ.
ಮೊದ ಮೊದಲು ಸಂಭ್ರಮದ ದಿನಗಳವು. . .

ಲೆಕ್ಕಾಚಾರದಲ್ಲಿ ಯಾವುದಕ್ಕೂ ಕಡಿಮೆ ಇರಲಿಲ್ಲ. ಕೈಹಿಡಿದವನ ಅಳತೆಯಲ್ಲಿ ಮಿತಿಮೀರಿದ್ದಳು ವಿಶಾಲು. ಸೊಕ್ಕಿನ ಹೆಣ್ಣಿನ ಮಗಳು ಎಂದು ಅವರಿವರಿಂದ ಹೇಳಿಸಿ ಕೊಂಡವಳು ಕೈ ಹಿಡಿದವನ ತೆಕ್ಕೆಯೊಳಗೆ ಮಗುವಾಗಲು ಪ್ರಯತ್ನಿಸಿದ್ದಳು. ಬೆಳೆಯಲು ಪ್ರಯತ್ನಿಸಿದ್ದಳು. ಬೆಳಗಲು ಪ್ರಯತ್ನಿಸಿದ್ದಳು. ದಿನವೂ ತಲೆತುಂಬ ಹೂವು. ಮೈತುಂಬ ಮಿರುಗುವ ಬಟ್ಟೆ. ಅಮ್ಮನಂತೆ ಚಿಟ್ಟೆಯಾಗದೆ ಕೈಹಿಡಿದವನ ಉಣಿಸಿಗೆ ಸದಾ ಬೆಳ್ಳಿಯ ತಟ್ಟೆಯಾಗಬೇಕು ಎಂದು ಪ್ರಯತ್ನಿಸಿದ್ದಳು. ದಿವಾಕರ ಹುಟ್ಟುವ ತನಕ ಈ ತಟ್ಟೆ ತುಂಬಿಕೊಂಡಿತ್ತು. ಉಕ್ಕುವ ಹಾಲಿನ ಬಟ್ಟಲಾಗಿತ್ತು.
ಮತ್ತಿನ ಕಥೆ ಬೇರೆ. . .

ಈ ಕ್ಷೇತ್ರದಲ್ಲಿ ಮುಂಜಾನೆ ನಡೆದ ಕಟ್ಟಿಕೊಂಡವನ ಉತ್ತರಕ್ರಿಯೆಯ ಪುಣ್ಯ ಕ್ಷಣದ ತನಕ ವಿಶಾಲು ಈಗ ಕಾಣುತ್ತಿರುವ ಕಡಲಿನ ತೆರೆಗಳಂತೆ ನೆಗೆತ ಮೊರೆತಗಳ ಕತೆ. . .
ಮುಂಜಾನೆಯ ಆ ಕ್ಷಣಗಳನ್ನು ನೆನಪಿಸಿಕೊಳ್ಳುವುದಕ್ಕಿಂತ ತನ್ನ ಬಾಳಿನಂತೆ ನಿರಂತರ ಹೋರಾಟದ ಪ್ರತೀಕವಾದ ಈ ತೆರೆಗಳ ಏಳು ಬೀಳಿನ ಲೆಕ್ಕಾಚಾರದ ವ್ಯರ್ಥ ಪ್ರಯತ್ನವೇ ಹಿತವಾಗಿ ಕಾಣಿಸತೊಡಗಿದೆ ವಿಶಾಲುವಿಗೆ.
ಎಂಥ ಕ್ಷಣಗಳು ಅವು. ಭಾವನೆಯನ್ನು, ವಿವೇಚನೆಯನ್ನು ಮತ್ತು ಅವಳ ಅಂತಃಸತ್ವವಾದ ಸಹನೆಯನ್ನು ದಹಿಸಿದ ಕ್ಷಣಗಳವು. . .
ಅಮ್ಮನ ರಮ್ಯ ಇತಿಹಾಸ ಕಿವಿಗಳನ್ನಪ್ಪಳಿಸಿದಾಗ ಅವಳು ಹೀಗೆ ಬೆಂದಿರಲಿಲ್ಲ. ದಿನದಿನವೂ ಅಪ್ಪ, ಮಲತಾಯಿ, ಅವರಿವರೆಲ್ಲ ಅಮ್ಮನ ನಗ್ನ ಚರಿತ್ರೆಯನ್ನು ದಾಖಲಿಸುತ್ತಿದ್ದಾಗಲೂ ಅವಳನ್ನು ನೋವು ಕಾಡಿರಲಿಲ್ಲ. ಕಾಣದ ಅಮ್ಮನನ್ನೆ ನಂಬಿ ನಡೆಯುವ ಪ್ರಯತ್ನ ಅವಳದಾಗಿತ್ತು. ಹೆಜ್ಜೆ ಹೆಜ್ಜೆಗೆ ದಿವಾಕರ ಹುಟ್ಟಿದ ಸಂಭ್ರಮವನ್ನು ಮೀರಿ ಕೈಹಿಡಿದವನ ಬೇಕು ಬೇಡಗಳಿಗೆ ದಣಿದಾಗಲೂ ಅವಳು ಮುದುಡಿರಲಿಲ್ಲ. ಲವಲವಿಕೆಯ ಸಂಕೇತ ತಾನಾಗಬೇಕು ಎಂಬುದು ಅವಳ ಹೋರಾಟವಾಗಿತ್ತು. ಕೈಹಿಡಿದವನ ಉದ್ಯೋಗ ಚಿನ್ನದ ತತ್ತಿಯ ಕೋಳಿಯಲ್ಲ ಎಂಬುದದರ ರಹಸ್ಯ ಬಯಲಾದಾಗಲೂ ಅವಳು ಸೋತಿರಲಿಲ್ಲ. “ಮುಡಿದ ಹೂ ಬಾಡಬಹುದು. ಮುಖ ಬಾಡದಂತೆ ನಗುತ್ತ ನಾವಿರೋಣ” ಎಂದು ಕೈಹಿಡಿದವನ ಕಪೋಲ ಸವರಿ ಲಲ್ಲೆಗೆರೆದವಳು ಅವಳು. ಮುಂದೊಂದು ದಿನ ಅಶಿಸ್ತಿನ ನೆಲೆಯಲ್ಲಿ ಆ ಉದ್ಯೋಗವೂ ಕಳಚಿಹೋದಾಗ ಕೈಹಿಡಿದವ ಮೌನಿಯಾಗತೊಡಗಿದ. ವಿಶಾಲು ವಾಚಾಳಿಯಾಗಲು ಪ್ರಯತ್ನಿಸಿದಳು. “ತಪ್ಪು ನಮ್ಮದಲ್ಲ ಎಂದು ನಿಮಗನ್ನಿಸಿದರೆ ಸರಿ. ಚಿಂತೆ ಬಿಡಿ” ಎಂದು ಮುಂಗುರುಳು ತೀಡಿದಳು. “ನಿಮಗೇನು ಕಡಿಮೆ. ಎಂಥ ದುಡಿಮೆಗೂ ನಿಮ್ಮ ಮೈ ಒಗ್ಗೀತು” ಎಂದು ಅವನೆದೆಯ ಮೇಲೆ ಒರಗಿ ಕಣಿ ಹೇಳಿದಳು. “ಬೇಸರವಾದರೆ ಈ ಊರು ಬೇಡ. ಎಲ್ಲಿಗಾದರೂ ಹೋಗೋಣ. ಹೇಗೂ ಬದುಕಬಹುದು” ಎಂದು ತಾನೆ ಸೆರಗು ಕಟ್ಟಿ ಪೊರಕೆಯಿಂದ ಹಿಡಿದು ಎಲ್ಲವನ್ನೂ ಜೋಡಿಸಿ ದೊಡ್ಡನಗರಕ್ಕೆ ಕೈಹಿಡಿದವನೊಂದಿಗೆ ಮತ್ತು ಮಗು ದಿವಾಕರನೊಂದಿಗೆ ಬಂದಳು. ಊರು ವ್ಯತ್ಯಾಸವಾದರೂ ಕೈಹಿಡಿದವನ ಮಂಕು ಕರಗಲಿಲ್ಲ. ಮೌನ ಅರಳಲಿಲ್ಲ. ಆಗಲೂ ವಿಶಾಲು ಬಾಡಿಹೋಗಲಿಲ್ಲ. ಎಂದೋ ಕಲಿತ ಹೊಲಿಗೆಯನ್ನು ನೆನಪಿಸಿಕೊಂಡಳು. ಮಗು ದಿವಾಕರನನ್ನು ಗಂಡನ ಮಡಿಲಲ್ಲಿರಿಸಿ ದುಡಿಮೆಯ ದಾರಿ ಹುಡುಕತೊಡಗಿದಳು. ಪುಟ್ಟ ನಗರದಿಂದ ಆ ಮಹಾ ನಗರಕ್ಕೆ ಬಂದ ವಿಶಾಲುವಿಗೆ ಕಂಡದ್ದು ಒಂದೆ. ಇದು ನಗರವಲ್ಲ. ಒಂದು ಆಹ್ವಾನ.

ಏನೇನೋ ಆಹ್ವಾನಗಳು ಅವಳಿಗೆ ಬಂದವು. ವಿಶಾಲು ಕರಗಲಿಲ್ಲ. ಸಂಗಾತಿಯಾಗು ಎಂದವರು ಕೆಲವರು. ಆಗೊಮ್ಮೆ ಈಗೊಮ್ಮೆ ಬಂದರೆ ಸಾಕು, ಜೀವನಕ್ಕೇನೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು ಇನ್ನೂ ಕೆಲವರು. ಅಂಥ ಆಹ್ವಾನಗಳಿಗೆಲ್ಲ ಅಮ್ಮನ ಅನುಗ್ರಹದಿಂದ ಅವಳು ಪಡೆದ ದೇಹ ಆಧಾರವಾಗಿತ್ತು. “ಬಚ್ಚಿ”ಯ ವರ್ಣನೆಯ ಸೆಳೆತ ಆಧಾರವಾಗಿತ್ತು. ಎಲ್ಲವನ್ನೂ ಎದುರಿಸಲು ಪ್ರಯತ್ನಿಸಿದ ವಿಶಾಲು ಕೈಹಿಡಿದವನ ನಿಷ್ಕ್ರಿಯತೆಯನ್ನು ಮಾತ್ರ ಎದುರಿಸಲಾಗದೆ ಹೋದಳು.

ಅದೊಂದು ದಿವ್ಯ ನಿಷ್ಕ್ರಿಯತೆ. ದಿನಪತ್ರಿಕೆಯ ಜಾಹೀರಾತುಗಳ ಮೇಲೂ ಕಣ್ಣಾಡಿಸಲಾರದಂಥ ನಿಷ್ಕ್ರಿಯತೆ. ಮಗು ದಿವಾಕರನನ್ನೂ ಮಡಿಲಿಗೇರಿಸಿಕೊಳ್ಳದಂಥ ನಿಷ್ಕ್ರಿಯತೆ. ಹೊತ್ತು ಹೊತ್ತಿಗೆ ಊಟ, ಸುಖವಾದ ನಿದ್ರೆ ಮತ್ತೆ ಹಾಸುಗೆಯ ಯಾಂತ್ರಿಕ ಬೆಸುಗೆಯ ಕ್ರಮಬದ್ಧತೆ – ಇಷ್ಟು ಮಾತ್ರ ಚಟುವಟಿಕೆಗಳು. ಇಟ್ಟ ಬಟ್ಟಲಿನ ಎದುರು ಸ್ಥಿರವಾಗಿ ಕುಳಿತು ಉಣ್ಣುವ ಚಟುವಟಿಕೆ. ಅವರಿವರ ಪರಿಚಯ ಬೆಳಸಿ ಏನೇನೋ ಕಸುಬು ನಡೆಸಿ ಅಕ್ಕಿ ಬೇಳೆ ತಂದು ಬೇಯಿಸಿ ವಿಶಾಲು ಅನ್ನವಿಕ್ಕುವ ಹೊತ್ತು ಮಾತ್ರ ನಿಷ್ಕ್ರಿಯತೆಯಿಂದ ದೂರ. ಈಗ ಈ ಕ್ಷೇತ್ರದಲ್ಲಿ ಕಡಲಿನ ಮುಂದೆ ನಿಂತ ಅದೇ ವಿಶಾಲುವಿಗೆ ತೆರೆಗಳ ಕ್ರಿಯಾಶೀಲತೆಯ ಬಗೆಗೆ ಮಾತ್ಸರ್ಯ ಬೆಳೆಯತೊಡಗಿದೆ. ಯಾರಿಂದಲೂ ಏನನ್ನೂ ಕೇಳದೆ ಉಬ್ಬಿ ನೆಗೆಯುವ ಈ ತೆರೆಗಳು. ಎಂಥ ಉತ್ಸಾಹ. ಎಂಥ ಬಿರುಸು. ಹತ್ತು ವರ್ಷಗಳ ಕಾಲ ಈ ಕ್ರಿಯಾಶೀಲತೆಯ ವಿರುದ್ಧ ನೆಲೆಯಲ್ಲಿ ನಿಂತು “ತಾತಾ” ಎಂದು ಕೈ ಮಾತ್ರ ನೀಡುತ್ತಿದ್ದ ಕೈಹಿಡಿದವನ ಸಾಮಿಪ್ಯ ವಿಶಾಲುವಿನ ಪಾಲಿಗೆ ಕಡಲಿನಾಚೆಯ ಮೌನವಾಗಿತ್ತು. ನಿಗೂಢವಾಗಿತ್ತು. ಆಗ ಅವಳಿಗೆ ನೆನಪಿಗೆ ಬಂದವಳು ಅಮ್ಮ. ಶವದ ಬಟ್ಟೆಯೊಳಗಿನ ಏರುತಗ್ಗುಗಳ ದಂತಕಥೆ. ಅದನ್ನೇ ನಂಬಿದಳು. ವಿಚ್ಛೇದನ ಪಡೆದಳು. ಆ ಕಷ್ಟದ ದಿನಗಳಲ್ಲಿ ತಾನು ಬೇಯಿಸಿ ಹಾಕುತ್ತಿದ್ದ ಅನ್ನ ಉಣ್ಣುತ್ತಿದ್ದವನಿಂದ ಬೇರಾದಳು. ಅನ್ನ ನೀಡುತ್ತಿದ್ದ ಒಬ್ಬರನ್ನು ಕಟ್ಟಿಕೊಂಡಳು. ಒಂದು ಪುಣ್ಯಸ್ಥಳಕ್ಕೆ ಹೋಗಿ ಇನ್ನೊಮ್ಮೆ ಮದುವೆಯಾಗಿ ಬಂದಳು. ಬಂಧುಬಳಗ ಯಾರೂ ಇಲ್ಲದ ಮಹಾನಗರವಾದುದರಿಂದ ಅಮ್ಮನ ದಾರಿ ಈ ಮಗಳು ಹಿಡಿದಳು ಎಂದು ಯಾರೂ ಹೇಳಲಿಲ್ಲ. ಅಮ್ಮ ದಾರಿ ತೋರಿಸಿದಳು ಎಂದು ಅವಳೇ ತೃಪ್ತಿಪಟ್ಟಳು. ಅರಳು ಸಿಡಿಯುವಂತೆ ಸದಾ ಮಾತನಾಡುವ, ಬುಗುರಿ ತಿರುಗುವಂತೆ ಸದಾ ಚುರುಕಾಗಿರುವ, ಮೈ ಇರುವುದು ಸಿಂಗಾರಕ್ಕೆ, ಮನವಿರುವುದು ಒಯ್ಯಾರಕ್ಕೆ. ಒಲವಿಗೆ, ಸ್ವೀಕಾರಕ್ಕೆ ಎಂದು ತಿಳಿದ ವಿಶಾಲು ಕಟ್ಟಿಕೊಂಡವನ ಮನೆ ಮನಸ್ಸು ತುಂಬಿದಳು. ಒಂದು ತೆರೆ ಇನ್ನೊಂದು ತೆರೆಯನ್ನು ಅಪ್ಪಿಕೊಳ್ಳುವಂತೆ ಅವನೆದೆಯಲ್ಲಿ ತನ್ನ ಹಣೆಯನ್ನು ಹುದುಗಿಸಿದಳು. ಅಲ್ಲಿ ಗೂಡುಕಟ್ಟಿ ನೆಮ್ಮದಿಯ ಮೊಟ್ಟೆ ಇಟ್ಟಳು. ಕಾವುಕೊಟ್ಟು ದಿವಾಕರನನ್ನು ಬೆಳೆಸಿದಳು. ಕೈಹಿಡಿದವನನ್ನು ತೆರೆಯ ನಡುವೆ ತೆರೆ ಕರಗುವಂತೆ ತಾನು ಮರೆಯಲು ಪ್ರಯತ್ನಿಸಿದ್ದೆ, ಮಗ ದಿವಾಕರನಿಗೆ ನೆನಪು ಕಾಡದಂತೆ ಕಟ್ಟಿಕೊಂಡವನಿಂದ ಮಮತೆಯ ಹೊಳೆ ಹರಿಸಿದ್ದೆ ಎಂಬುದು – ಈಗ ಆ ಕಟ್ಟಿಕೊಂಡವನನ್ನು ಕಳೆದುಕೊಂಡು ಅವನಿಷ್ಟದಂತೆ ಈ ಪವಿತ್ರ ಕ್ಷೇತ್ರಕ್ಕೆ ಬಂದು ಅವನ ಆತ್ಮಕ್ಕೆ ಸದ್ಗತಿ ತೋರಿಸಲು ನಿಂತಾಗ – ವಿಶಾಲುವಿಗೆ ಕಡಲಿನಂತೆ ಒಂದು ಸತ್ಯವಾಗಿ ಕಾಣುತ್ತಿದೆ. ಆದರೂ ತೆರೆಗಳ ಲೆಕ್ಕಾಚಾರ ಎಂಥ ನೋವಿನ ಕಾಯಕ. . .
ಒಳಗಿನ ಹುಣ್ಣಿಗೆ ಹೊರಗೆ ಕೀವು ತುಂಬಿದಂತೆ. . .ಕೈ ಹಿಡಿದವನ ನೆನಪು. ಗುಪ್ತ ನಿಧಿ ಕೈಗೆ ಸಿಕ್ಕಿದಂತೆ. . . ಕಟ್ಟಿಕೊಂಡವನ ಆತ್ಮ ಸದ್ಗತಿಗಾಗಿ ಶ್ರದ್ಧೆಯಿಂದ ನಡೆಸಿದ ಶ್ರಾದ್ಧ.
ಕಟ್ಟಿಕೊಂಡವ ಕೇವಲ ಇಟ್ಟುಕೊಂಡವನಲ್ಲ. . .

ಹೊಟ್ಟೆಗೆ ಹಿಟ್ಟಿಲ್ಲದ ದಿನಗಳಲ್ಲಿ ಅವಳಿಗೆ ಮತ್ತು ಕೈಹಿಡಿದವನಿಗೆ ಹಿಟ್ಟು ನೀಡಿ ಅವಳ ಮುಡಿಗೆ ಹೂ ಮುಡಿಸಿದ ಚೇತನ ಅದು. . . ಮೊದಲು ಅವಳ ದಾಂಪತ್ಯವನ್ನು ಸರಿದೂಗಿಸಲು ಪ್ರಯತ್ನಿಸಿ ಅದು ಈ ಜೀವಮಾನಕ್ಕೆ ಆಗದು ಎಂದು ಖಾತ್ರಿಯಾದ ಮೇಲೆ ವಿಚ್ಛೇದನಕ್ಕಾಗಿ ಎಲ್ಲ ಸಹಕಾರ ನೀಡಿದ ಚೇತನ ಅದು. ಆ ಬಿಡುಗಡೆಯ ನಂತರದ ಇಪ್ಪತ್ತು ವರ್ಷಗಳ ಅವಧಿಯಲ್ಲಿ “ನೀಡಿ, ಕಾಡುತ್ತ ಬೇಡಿ” ಬದುಕನ್ನು ತುಂಬಿಸಿದ ಚೇತನ ಅದು. ಇವಳ ಮೈಯ ಅಂಚು ಅಂಚಿಗೆ ಹೂಮುತ್ತನ್ನಿರಿಸಿ ವಿಶಾಲುವನ್ನು ಹೂವಿನ ಕೋಲನ್ನಾಗಿಸಿದ ಚೇತನ ಅದು. ಸಾಯುವ ಮೊದಲು ಹೇಳಿದ ಮಾತು “ವಿಶೂ ಜೀವನಕ್ಕೆ ತೊಂದರೆ ಇಲ್ಲ. ಸಾಕಷ್ಟಿದೆ. ದಿವ್ಯ ಇನ್ನಷ್ಟು ಓದಲಿ. ನನ್ನ ಕರುಳಿನಲ್ಲಿ ಬೇರೆ ಚೂರು ಚಿಗುರದಿದ್ದರೂ ದಿವ್ಯ ನನ್ನ ಹೂಬಳ್ಳಿಯ ಮಿಡಿ. ಅವನಿಗೇ ಎಲ್ಲ. ವಿಶೂ ನನ್ನಾಸೆ ಇಷ್ಟೆ. ಗಂಡ ಬಿಟ್ಟವಳನ್ನು ಮದುವೆಯಾದೆ ಎಂದು ಬಂಧುಗಳು ದೂರ ನಿಂತಿದ್ದಾರಲ್ಲ. ಬೇಸರವಿಲ್ಲ, ಕ್ಷೇತ್ರಕ್ಕೆ ಹೋಗಿ ವಿಧಿವತ್ತಾಗಿ ದಿವ್ಯ ನನ್ನ ಸಂಸ್ಕಾರ ನಡೆಸಲಿ”. . .

ಕಟ್ಟಿಕೊಂಡವನ, ಬಾಳನ್ನು ತುಂಬಿಸಿದವನ, ಆಧಾರವಾಗಿದ್ದವನ ಉತ್ತರಕ್ರಿಯೆ ಎಷ್ಟು ಶಾಸ್ತ್ರೋಕ್ತವಾಗಿ ನಡೆದಿತ್ತು. ಸತ್ತ ಹತ್ತನೆಯ ದಿವಸ ಆ ಕಟ್ಟಿಕೊಂಡವನ ಅಸ್ಥಿ ಸಹಿತ ವಿಶಾಲು ದಿವಾಕರ ಈ ಕ್ಷೇತ್ರಕ್ಕೆ ಬಂದಿದ್ದರು. ಆ ಚೇತನದ ಅಂತಸ್ತಿಗೆ ಸರಿಯಾಗಿ ಪ್ರೇತಮೋಕ್ಷದ ವಿಧಿಗಳನ್ನು ನಡೆಸಿದ್ದರು, ದಾನ ದಕ್ಷಿಣೆ ನೀಡಿದ್ದರು. . . ಕ್ಷೇತ್ರದ ಹಿರಿಯ ಪುರೋಹಿತರು ಆಕಾರವಿಲ್ಲದ ಸ್ಥಿತಿಯಲ್ಲಿರುವ ಮೃತನ ಪ್ರೇತಕ್ಕೆ ಪಿತೃಲೋಕ ಕಾಣಿಸಿ ಸದ್ಗತಿ ನೀಡಲು ಶ್ರಾದ್ಧ ವಿಧಿಗಳನ್ನು ನಡೆಸಿದ್ದರು. “ತಾಯೀ, ಇಲ್ಲಿಯ ಕ್ರಮ ಪ್ರೇತಸ್ಥಾನಕ್ಕೆ ಒಬ್ಬರನ್ನು ಕುಳ್ಳಿರಿಸಿ ಅವರಲ್ಲಿ ತಮ್ಮ ಯಜಮಾನರ ಪ್ರೇತವನ್ನು ಆವಾಹಿಸಿ ನಿಮ್ಮ ಮಗ ಆ ಪ್ರೇತದ ಕಾಲು ತೊಳೆದು ಅಲಂಕರಿಸಿ ಉಣಬಡಿಸಿ ಭಕ್ಷ್ಯ ನೀಡಿ ದಾನ ನೀಡಿ ದಕ್ಷಿಣೆ ನೀಡಿ ನಿಮ್ಮ ಯಜಮಾನರು ಸದ್ಗತಿಗಾಗಿ ದೇವಲೋಕಕ್ಕೆ ಪ್ರಯಾಣ ಮಾಡಲು ಸಾಕಷ್ಟು ಪಾಥೇಯ ಅಂದರೆ ದಾರಿ ಖರ್ಚಿಗೆ ದಕ್ಷಿಣೆ ನೀಡಿ ಶ್ರಾದ್ಧ ಮಾಡಬೇಕು. ಸ್ವಲ್ಪ ಖರ್ಚಿನ ಬಾಬತ್ತು. ನೀವು ಹೇಗೆ ಹೇಳುತ್ತಿರೋ ಹಾಗೆ” ಎಂದಿದ್ದರು. ವಿಶಾಲು ಕೈಮುಗಿದು ಹೇಳಿದ್ದಳು. “ಹೆತ್ತಬ್ಬೆಯನ್ನು ಕಂಡವಳಲ್ಲ ನಾನು. ಇವರೇ ನನಗೆ ಎಲ್ಲ ಆಗಿದ್ದರು. ಅವರಿಗೆ ಪುಣ್ಯ ಲೋಕ ಸಿಗಬೇಕು.” ಅದಕ್ಕಾಗಿ ಸರೋವರದಲ್ಲಿ ಮಿಂದು ಒದ್ದೆ ಬಟ್ಟೆಯಲ್ಲಿ ಕ್ಷೇತ್ರದ ಹಿರಿಯ ಪುರೋಹಿತರ ಮನೆಯ ಪಡಸಾಲೆಯ ಮೂಲೆಯಲ್ಲಿ ಮುದುಡಿ ಕುಳಿತಿದ್ದಳು. . .

ಹಂತಹಂತವಾಗಿ ಪುಣ್ಯ ಕಾರ್ಯ ಸಾಗಿತು. ಪಾಥೇಯದ ಸಿದ್ಧತೆ ನಡೆಯಿತು. ವಿಶಾಲುವನ್ನು ಕಟ್ಟಿಕೊಂಡವನ ಪ್ರೇತಸ್ಥಾನಕ್ಕಾಗಿ ಒಂದು ಮಣೆ. ಮಣೆಯ ಮೇಲೆ ನಾಮ ಧರಿಸಿದ “ಪ್ರೇತ”. ದಿವಾಕರ ಕಾಲು ತೊಳೆದು ಆ ನೀರನ್ನು ಪ್ರೋಕ್ಷಣೆ ಮಾಡಿಕೊಂಡ. ವಸ್ತ್ರ ನೀಡಿದ. ಗೋಪಿ ಚಂದನ ನೀಡಿದ. ಎಳನೀರು ನೀಡಿದ. ಜನಿವಾರ ನೀಡಿದ. ತಂಬಿಗೆ, ಪಾತ್ರೆ ದವಸ ಧಾನ್ಯಗಳ ಗಂಟು ನೀಡಿದ. ಮುಂದೆ ಬಡಿಸಿದ ಮೃಷ್ಟಾನ್ನ ಭೋಜನಕ್ಕಾಗಿ ಹಸ್ತೋದಕ ನೀಡಿದ. ಕೈ ಮುಗಿದು ನಿಂತ. ಮಂತ್ರ ಸಾಗುತ್ತಿದ್ದಂತೆ ಪ್ರೇತ ಭೋಜನ ನಡೆಯಿತು. ’ಪ್ರೇತ ಶಬ್ದ ನಾಸ್ತಿ’ ಎಂಬ ವಾಗ್ದಾನ ಪ್ರೇತಸ್ಥಾನದ ವ್ಯಕ್ತಿಯಿಂದ ದೊರಕಿತು. ದಿವಾಕರ ಪಾಥೇಯವಾಗಿ ನೀಡಿದ ದಾನ ದಕ್ಷಿಣೆಗಳ ಗಂಟನ್ನೆಲ್ಲ ಹೆಗಲಮೇಲಿರಿಸಿ ಆಶೀರ್ವದಿಸುತ್ತ ಪ್ರೇತ ಸಾಗತೊಡಗಿದಾಗ ಬಾಗಿಲಿನ ಬೆಳಕು ಆ ವ್ಯಕ್ತಿಯ ಮುಖಕ್ಕೆ ರಾಚಿತು. ಕಣ್ಮುಚ್ಚಿ ಒದ್ದೆ ಬಟ್ಟೆಯಲ್ಲಿ ಕೈಮುಗಿದು ಕುಳಿತ ವಿಶಾಲು ಕಟ್ಟಿಕೊಂಡವನ ನೆನಪಿನ ಭಾರದಿಂದ ಬಾಗಿ ಒಸರುತ್ತಿದ್ದ ಕಣ್ಣಿರನ್ನೊರಸುತ್ತ ತಲೆ ಎತ್ತಿ ನೋಡಿದಾಗ “ನೀಡು ಪಾಥೇಯ” ಎಂದು ಪಡೆದ ದಾನ ದಕ್ಷಿಣೆಯನ್ನು ಗಂಟುಕಟ್ಟಿ ಹೆಗಲಿಗೇರಿಸಿ ನಡೆಯುತ್ತಿದ್ದ ಆ ಮುಖ ಸ್ಪಷ್ಟವಾಗಿ ತುಂಬ ಬಳಲಿತ್ತು. . .ನೀಡು ನೀಡು ಎಂದು ಕೂಗುವಂತಿತ್ತು. . ’ದಿವ್ಯ, ಹುಟ್ಟಿಸಿದ ಅಪ್ಪನಿಗೇ ಪಾಥೇಯ ನೀಡಿದೆ’ ಎಂಬ ಅವಳ ಗರ್ಭದೊಳಗಿನ ಕೂಗು ಮಾತ್ರ ಯಾರಿಗೂ ಕೇಳಿಸಲಿಲ್ಲ. . .ಆ ಕ್ಷೇತ್ರವನ್ನು ಬಿಡುವವರೆಗೂ ವಿಶಾಲು ತೆರೆಗಳನ್ನು ಲೆಕ್ಕ ಹಾಕುತ್ತಲೇ ಇದ್ದಳು. . .

ಕಟ್ಟಿಕೊಂಡವನ ಪ್ರೇತ ಮೋಕ್ಷಗೊಂಡು ಕೈಹಿಡಿದವನ ಪ್ರೇತ ಅವಳನ್ನು ಹಿಂಬಾಲಿಸತೊಡಗಿತು. . .
*****