ಕನ್ನಡ ಹಾಗು ತಾಂತ್ರಿಕತೆ

ಸಂಸ್ಕೃತದ ನಿಘಂಟಿನ ಪದಪ್ರಯೋಗಕ್ಕಾಗಿ ಬರೆದ ಕಾದಂಬರಿಗಳಂತಿರುವ ದೇವುಡುರವರ ಪೌರಾಣಿಕ ಕಾದಂಬರಿ ಪೌರಾಣಿಕವನ್ನು ಮತ್ತಷ್ಟು ಮಿಥ್ಯೆಗೊಳಪಡಿಸಿ ರಂಜಿಸಿದ ವರ್ಗದ್ದಾದರೆ, ಭೈರಪ್ಪನವರ “ಪರ್ವ” ಹಾಗು ಶಂಕರ ಮೊಕಾಶಿ ಪುಣೆಕರವರ ಅವಧೇಶ್ವರಿ ಕೃತಿಗಳು ಪೌರಾಣಿಕವನ್ನು ನೆಲಕ್ಕೆ ಒಗೆಯಿತು. ಡಿಮಿಥಿಫೈ ಮಾಡಬಾರದು ಎಂದು ವಾದಿಸುವ, ಯಾವುದೇ ಕೃತಿ ಓದುಗನ ಅಂತರಂಗಕ್ಕೆ ಇಳಿಯುವಂತಾಗಬೇಕಾದರೆ ಅದನ್ನು ಪ್ರಸ್ತುತಗೊಳಿಸುವ ಸಂವಾದಿ ಸ್ವರೂಪದ ಶೈಲಿಯನ್ನು ಮೆಚ್ಚುವವರದ್ದೂ ಮತ್ತೊಂದು ಗುಂಪು.

– ವಾದ ವಿವಾದಗಳನ್ನು ಬದಿಗಿಟ್ಟು, ಶಂಕರ ಮೊಕಾಶಿ ಪುಣೆಕರವರ ಅವಧೇಶ್ವರಿ ಕಾದಂಬರಿಯ ಪೂರ್ವಾರ್ಧವನ್ನು ಈ ಬಾರಿ ಪ್ರಕಟಿಸಲಾಗಿದೆ. ಇದರೊಂದಿಗೆ ಕೆ ಟಿ ವೇಣುಗೋಪಾಲ್, ಸಂತೋಷ್ ಮೆಹಂದಳೆ, ವಿಕ್ರಮ್ ಹತ್ವಾರ್, ಸಚ್ಚಿದಾನಂದ ಹೆಗಡೆ, ರವಿಶಂಕರ್ ಆರ್, ಶ್ಯಾಮ ಕಶ್ಯಪ್, ಈ ಬಾರಿ ಕನ್ನಡಸಾಹಿತ್ಯ.ಕಾಂ ಗೆ ಹೊಸಬರು. ಕೆ ಟಿ ವೇಣುಗೋಪಾಲ್ ಅನುಮತಿ ದೊರಕಿಸುವಲ್ಲಿ ಶ್ರಮವಹಿಸಿದ ರೋಹಿತ್‌ರವರಿಗೆ ಕೃತಜ್ಞತೆಗಳು ಹಾಗೆಯೇ ಅನುಮತಿ ನೀಡಿದ ಲೇಖಕರಿಗೆಲ್ಲ. ಕಿರಣ್ ಎಂ, ಕಿಶೋರ್‌ಚಂದ್ರ, ಪ್ರೂಫ್ ರೀಡಿಂಗ್‌ನಲ್ಲಿ ನೆರವಾದ ಶ್ರೀಶ ಕಾರಾಂತ್‌ರವರಿಗೂ ಕೃತಜ್ಞತೆಗಳು.
*
*
*
ಕನ್ನಡದ ಬ್ಲಾಗ್‌ಗಳ ಬಗೆಗೆ ಒಮ್ಮೆ ಬರೆದಿದ್ದೆ. ಹೆಚ್ಚು ಜನರು ಲಹರಿಯಲ್ಲಿ ತೇಲಿದಾಗ ಬರೆದದ್ದೆಲ್ಲವನ್ನು ಯಾವುದೇ ವಿಂಗಡಣೆ ಇಲ್ಲದೆ ಸುಮಾಸುಮ್ಮನೆ ಯಾವುದೇ ಸಂಕೋಚವಿಲ್ಲದಂತೆ, ಪ್ರಕಟಿಸಲು ತಕ್ಕ ವಾತಾವರಣ ನಿರ್ಮಾಣಗೊಂಡು ಮತ್ತಷ್ಟು ವಿಸ್ತರಿಸಿಕೊಳ್ಳುವ ಸೂಚನೆ ಇದೆ. ಈ ವಿಸ್ತರಣೆಯ ಬಗೆಗೆ ಇಂಗ್ಲಿಷ್‌ನಲ್ಲಿ, ಲೇಖನ ಒಂದನ್ನು ಸಂಕೇತ್ ಪಾಟೀಲರು ಇಲ್ಲಿ ಪ್ರಕಟಿಸಿದ್ದಾರೆ. ಪ್ರೋತ್ಸಾಹಿಸುವ ಒಂದೆರಡು ಮಾತುಗಳಲ್ಲಿ, ಹೆಚ್ಚೂ ಕಡಿಮೆ ಎಲ್ಲ ಬ್ಲಾಗುಗಳನ್ನು, ಅವರು ಪರಿಚಯಿಸಿದ್ದಾರೆ. ಏನಿಲ್ಲದಿದ್ದರೂ, ಇರುವುದರ ಬಗೆಗೆಯಾದರೂ ಮೆಚ್ಚುಗೆಯನ್ನು ಸೂಚಿಸಿ ಬರೆಯುವ ಔದಾರ್ಯದ ಧ್ವನಿ ಅವರ ಲೇಖನದ್ದು. ಹೀಗೆ ಪರಸ್ಪರ ಮೆಚ್ಚುಗೆ ಇಂದಿನ ಅತ್ಯಗತ್ಯವೆನ್ನುವುದು ನಿರ್ವಿವಾದ. ಜೊತೆಗೆ, ಟೀಕೆ-ಟಿಪ್ಪಣಿಗಳು ಇಂದಿನ ಪರಿಸ್ಥಿತಿಯಲ್ಲಿ ಅಷ್ಟೇ ಅಗತ್ಯ.

ಕನ್ನಡದಲ್ಲಿ ಬ್ಲಾಗ್ ನಿರತರಾಗಿರುವವರನ್ನು ಈ ರೀತಿ ವರ್ಗೀಕರಿಸಬಹುದು:
೧.ಬರೆಯುವ ಉತ್ಸಾಹದಲ್ಲಿ ಬರೆದದ್ದನ್ನೆಲ್ಲ ಯಾವ ವಿವೇಚನೆಯೂ ಇಲ್ಲದೆ ಪ್ರಕಟಿಸಿ ಸುಮ್ಮನಾಗಿಬಿಡುವವರು
(ಇವರಿಂದ ಅಂತಹ ಅಪಾಯವೇನೂ ಇಲ್ಲ)
೨. ಅನುಭವವನ್ನು ವಾಚ್ಯಗೊಳಿಸಿ ಕೈ ತೊಳೆದುಕೊಂಡು ಬಿಡುವ ಅವಸರದಲ್ಲಿರುವವರು.
೩. ಪ್ರಸ್ತುತ ವಿಷಯಗಳಿಗೆ ಪ್ರತಿಕ್ರಿಯಿಸುವವರು.
೪. ಸುಮ್ಮನೆ ಭಾವ ಕೋಶದ ಬೆಚ್ಚಗಿನ ಕ್ಷಣಗಳನ್ನು ಬಾಂಧವ್ಯದ ಮೂಲಕ ಹಿಡಿದಿಡುವವರು.
(ನಮ್ಮ ಗುನುಗು-ಗೊಣಗಾಟ ಎರಡಕ್ಕೂ ಅರ್ಥ ಕಲ್ಪಿಸಿಕೊಳ್ಳಬೇಕಾದ್ದೇ ಇಂದಿನ ದುರಂತ. ಇರುವುದೆಲ್ಲವ ಬಿಟ್ಟು, ಹರಟೆ ಕಟ್ಟೆ)
೫. ಗತ ಸ್ಮರಣೆಯಲ್ಲಿ ಬದುಕಿನ ಸಾರ್ಥಕ ಕ್ಷಣಗಳನ್ನು ಹಿಡಿದಿಡುವಂತೆ ಬರೆದು, ಪ್ರಕಟಿಸಿ ಬಿಡುವವರು. (ತ ವಿ ಶ್ರೀನಿವಾಸ್‌ರವರ ಆಶ್ರಯ.ನೆಟ್, ಶ್ರೀನಿವಾಸ್‌ರವರಿಗೆ ಇರುವ ಉತ್ಸಾಹದಲ್ಲಿ ಅರ್ಧದಷ್ಟಾದರೂ ನಮ್ಮ ಯುವ ಸ್ನೇಹಿತರಿಗೆ ಇದ್ದಿದ್ದರೆ..ಎಂದು ಒಮ್ಮೊಮ್ಮೆ ನಾನು ಅಂದುಕೊಳ್ಳುವುದೂ ಉಂಟು. ಬರೆದದ್ದೆಲ್ಲ, ಅತ್ಯುತ್ತಮವಾದ ಸಾಹಿತ್ಯ ಎಂದೆನ್ನುವ ಭ್ರಮೆಯಲ್ಲೂ ಶ್ರೀನಿವಾಸ್ ಇಲ್ಲವೆನ್ನುವುದು, ಆನ್‌ಲೈನ್‌ನಲ್ಲಿ ನನಗೆ ಅವರೊಡನೆ ಇರುವ ಅಲ್ಪ ಪರಿಚಯದಲ್ಲಿ ಹೇಳಬಲ್ಲೆ, ಕಲಿಯುತ್ತೇನೆ ಎಂದೆನ್ನುವ ವಿನಯ ಇವರದು.)

ತಳುಕಿನ ಶ್ರೀನಿವಾಸ್, ಓ ಎಲ್ ನಾಗಭೂಷಣಸ್ವಾಮಿ, ಶ್ರೀರಾಂ, ಸುದರ್ಶನ ಪಾಟೀಲ ಕುಲಕರ್ಣಿ ಮುಂತಾದವರ ಬ್ಲಾಗ್‌ಗಳು ಗಮನ ಸೆಳೆದಂತೆಯೇ, ಉಳಿದವರ ಬ್ಲಾಗ್‌ಗಳು: ಅಂತರಂಗ (ಅಂತರಂಗಿ-ಗುಪ್ತನಾಮ), ಜೀವಸಂಶಯ (ಜೀವಿಶಿವು-ಗುಪ್ತನಾಮ) , ಅಗಸೆಯ ಅಂಗಳ (ವಿನಾಯಕ ಪಂಡಿತ್), ಬೊಗಳೆ-ರಗಳೆ (ಅಸತ್ಯಾನ್ವೇಷಿ-ಗುಪ್ತನಾಮ), ಮಜಾವಾಣಿ (ಶೇಷಾದ್ರಿ), ಇರುವುದೆಲ್ಲವ ಬಿಟ್ಟು (ಶ್ರೀ-ಬರೆಯುವ ಸಾಮರ್ಥ್ಯ, ಚಮತ್ಕಾರ, ಶೈಲಿ ಮುಂತಾದ ಗಟ್ಟಿತನವಿದ್ದೂ ಶ್ರೀ ತನ್ನ ದಿನ ನಿತ್ಯದ ಚಟುವಟಿಕೆಗಳ ನಡುವೆ ಬರೆಯುವುದು, ಪ್ರಕಟಿಸುವುದು ತೀರಾ ಕಡಿಮೆ-ಆಪ್ತವಾಗಿ ಬರೆಯುವವರು ಹೆಚ್ಚು ಬರೆದರೆ ಚೆನ್ನ, ಪೊಳ್ಳುತನ, ಜಗಳ, ವಾದ, ಸಂವಾದದ ನಡುವೆ ಒಳ್ಳೆಯದೇನಾದರೂ ದಕ್ಕುತ್ತದೆಯೇನೋ ಎನ್ನುವಂತಹ ಆಶಯವನ್ನು ಹುಟ್ಟಿಸಬಲ್ಲ ಇಂತಹ ಬರವಣಿಗೆಯ ವರ್ಗೀಕರಣ ಸದ್ಯಕ್ಕಂತೂ ಅಸಾಧ್ಯ, ಏನೇ ಆದರೂ ನಗುತ್ತ, ಸಿಟ್ಟಾಗುತ್ತ ಜಗಳವಾದರೂ ಸಾಧ್ಯ)

ಮಜಾವಾಣಿ, ಬೊಗಳೆ-ರಗಳೆಯ ಬಗೆಗೆ ಹೆಚ್ಚು ಹೇಳುವುದೇ ಬೇಡ. ಏಕೋದ್ದೇಶಿತವಾಗಿ, ಒಮ್ಮೊಮ್ಮೆ ನವಿರಾಗಿ ಎಲ್ಲವನ್ನು ಲೇವಡಿ ಮಾಡಿ ಒಂದು ನಗೆಯನ್ನಾದರೂ ಈ ಬ್ಲಾಗುಗಳು ತರುತ್ತವೆ. ಬರಿಯ ಲೇವಡಿಯೇ? – ಎಂದು ಒಮ್ಮೊಮ್ಮೆ ಅನ್ನಿಸುವುದೂ ಸಹ ಸುಳ್ಳಲ್ಲ.

ಅಂತರಂಗ: ನಿತ್ಯ ಏನಾದರೂ ಒಂದನ್ನು ಬರೆಯಲೇಬೇಕು ಎನ್ನುವ ನಿತ್ಯವ್ರತಿಗಳಂತೆ ಅಂತರಂಗಿಗಳು ಬರೆಯುತ್ತಿದ್ದಾರೆ. ಅನಿವಾಸಿ ಕನ್ನಡಿಗ ಹಾಗು ’ಪಾಪಿಷ್ಠ’ ಎಂದು ಕೆವಿಯಟ್ಟನ್ನು ಹಾಕಿಬಿಟ್ಟಿರುವುದರಿಂದ ಆ ಬಗೆಗೆ ಹೆಚ್ಚು ಏನನ್ನೂ ಹೇಳದೆ ಅವರು ತಮ್ಮ ಮೇಷ್ಟ್ರು, ಗೆಳೆಯ ಸುಂದರೇಶ್, ಸೂಪ್ ಇತ್ಯಾದಿ ಬಗೆಗೆ ಬರೆದಿರುವಂತೆ ಉಳಿದಿದ್ದಕ್ಕೂ ಅವರ ಸಹಜ ಶೈಲಿಯಾದರೆ ಚೆನ್ನವೆಂದನ್ನಿಸುತ್ತದೆ. ಗಮನಾರ್ಹವಾದ ಬ್ಲಾಗ್ ಇದು. ಆದರೆ, ಎಲ್ಲವನ್ನು ಬರೆದು ಸುಮ್ಮನೆ ತೊಳೆದುಕೊಂಡು ಬಿಡುವ ದೌರ್ಬಲ್ಯಕ್ಕೆ ಅಂತರಂಗಿಗಳು ಬಲಿಯಾಗದೆ, ಮತ್ತೇನನ್ನಾದರೂ ಸಾಧಿಸಲಿ ಎಂದಷ್ಟೇ ಇಲ್ಲಿಂದ ಕೋರಬಹುದು. ಬ್ಲಾಗುಗಳಿಗೆ ಇರುವ ಕನಿಷ್ಟ ಅರ್ಹತೆಯನ್ನು ಅಂತರಂಗಿಗಳು ತಮ್ಮ ಬರವಣಿಗೆಯಿಂದ ಈಗಾಗಲೇ ಸೃಷ್ಟಿಸಿದ್ದಾರೆ. ಬೇರೆ, ಬ್ಲಾಗುಗಳನ್ನು ಇದರ ಜೊತೆಗೆ ಬೇಕಿರಲಿ, ಬೇಡದಿರಲಿ ತೂಗಿ ನೋಡಬೇಕಾದ ಅನಿವಾರ್ಯವನ್ನು ‘ಏನನ್ನಾದರೂ ಬರೆಯಲೇಬೇಕು’ ಎಂದೆನ್ನುವ ತಮ್ಮ ನಿತ್ಯವ್ರತದಿಂದಲೂ ಸೃಷ್ಟಿಸಿದ್ದಾರೆ.
*
*
*
ಮೇಲಿನ ಅಭಿಪ್ರಾಯದಲ್ಲಿ ಸೌಜನ್ಯ ಹಾಗು ಪ್ರಾಮಾಣಿಕತೆ ಎರಡೂ ಮಿಶ್ರಣಗೊಂಡಿದೆ. ವಿಂಗಡಿಸಿ ನೋಡುವುದನ್ನು ಈ ಪುಟದ ಓದುಗರಿಗೆ ಬಿಟ್ಟು: ಈಗ ಹೊಸದಾಗಿ ತೆರೆದುಕೊಳ್ಳುತ್ತಿರುವ ಈ ಮಾಧ್ಯಮದ ಬಗೆಗೆ ಹೆಚ್ಚಿನ ಹೊಣೆಗಾರಿಕೆ ಇರಬೇಕಾದ್ದು ಅದನ್ನು ಬಳಸುತ್ತಿರುವವರಿಗೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಹೊಣೆಗಾರಿಕೆಗಳೇನೇನು ಎನ್ನುವುದು, ಟೊಳ್ಳು ಗಟ್ಟಿ ಎಂದು ವಿಂಗಡಿಸಿಬಿಡಬಹುದಾದ ಸಂದರ್ಭವನ್ನು ನಾವಿನ್ನೂ ಮುಟ್ಟಿಯೇ ಇಲ್ಲ. ಏಕೆಂದರೆ ಕನ್ನಡದಲ್ಲಿ ಬ್ಲಾಗ್ ಮಾಡುತ್ತಿರುವವರ ಸಂಖ್ಯೆ ಬೆರೆಳೆಣಿಕೆಯಷ್ಟು. (ಉದಾಹರಣೆಗೆ ಬ್ಲಾಗ್ ಸ್ಪಾಟ್: ಎಷ್ಟು ಜನ ಕನ್ನಡದಲ್ಲಿ ಬರೆಯುತ್ತಿದ್ದಾರೆ, ಎಷ್ಟು ಜನ ಮಾಧ್ಯಮವನ್ನು ಇಂದಿನ ತುರ್ತಿಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ ಇತ್ಯಾದಿಗಳ ಬಗೆಗೆ ಆಲೋಚಿಸಿದಾಗ “ನಮ್ಮ ನಡುವೆ” ಈ ಮಾಧ್ಯಮದಲ್ಲಿ ಆಗುತ್ತಿರುವ ಚರ್ಚೆ ಅತ್ಯಂತ ಕೆಳಮಟ್ಟದ್ದು ಎನ್ನುವ ಸತ್ಯವೂ ನಿರ್ವಿವಾದ ಸಂಗತಿಯೇ. ಸಮರ್ಥ ಬಳಕೆ ಎನ್ನುವ ಮಾತನ್ನು ಪಕ್ಕಕ್ಕಿಡಿ, ಮೊದಲು ಬಳಸುವವರು, ಓದುವವರ ಸಂಖ್ಯೆ ಹೆಚ್ಚಾಗಿ ಆಗಲಿ, ನಂತರ ಸಮರ್ಥ ಬಳಕೆಯ ಬಗೆಗೆ ಮಾತನಾಡೋಣ ಎನ್ನುವ ಮಾತೂ ಸಹ ನಿಜ. ಈ ಎರಡೂ ನಿಜಗಳ ಮಧ್ಯೆ ಈ ಮಾಧ್ಯಮದಲ್ಲಿನ ಕೊರತೆಗಳ ಬಗೆಗೆ ಗಮನ ಹರಿಸಿದಾಗ:

ಶ್ರೀರಾಂ, ಇತ್ತೀಚೆಗೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ, ಬ್ಲಾಗ್‌ಗಳ ಬಗೆಗಿನ ಲೇಖನದ ಸಂದರ್ಭದಲ್ಲಿ, ನೀಡಿರುವ ಸಂದರ್ಶನದಲ್ಲಿ ಮುಖ್ಯವಾದ ಅಂಶದ ಬಗೆಗೆ ಮಾತನಾಡಿದ್ದಾರೆ.

ಪ್ರಶ್ನೆ: ದೇಸೀ ಭಾಷೆಯೊಂದನ್ನು ಬೆಚ್ಚಗಿಡುವಲ್ಲಿ ಬ್ಲಾಗ್ ಪಾತ್ರ ಏನು?
ಶ್ರೀರಾಂ ಉತ್ತರ: ನನಗೆ ಬ್ಲಾಗ್ ಈ ಥರದ ಮಹತ್ತರ ಸಾಧನೆ ಮಾಡುತ್ತದೆ ಅನ್ನಿಸುವುದಿಲ್ಲ.. ಆಯಾ ಭಾಷೆಗೆ ಇರುವ ಅನೇಕ ಪರಿಕರಗಳಲ್ಲಿ ಇದೂ ಒಂದು ಅಂತ ಅನ್ನಿಸುತ್ತದೆ. ಆದರೆ ಕನ್ನಡದಲ್ಲಿ ಬ್ಲಾಗ್ ಮಾಡುವಾಗ ನಮಗಿರುವ ಪರಿಕರಗಳು ಕಡಿಮೆ. ಉದಾಹರಣೆಗೆ ವಿನ್ಯಾಸಕ್ಕಿರುವ ಪರಿಕರ “ಟೆಂಪ್ಲೇಟ್” ಇಂಗ್ಲೀಶ್ ಭಾಷೆಗೆ ಅನುಗುಣವಾಗಿ ಇದೆ. ಹೆಚ್‌ಟಿ‌ಎಂಎಲ್ ಜಾವಾ ತಿಳಿಯದ ನನ್ನಂಥವರಿಗೆ ಅದನ್ನು ಕನ್ನಡಿಸುವ ಕೆಲಸ ಕಷ್ಟದ್ದು. ಆದರೂ ನಾನು ಸಾಧ್ಯವಾದಷ್ಟು ಅದರ ವಿನ್ಯಾಸವನ್ನು ಕನ್ನಡಿಸಿದ್ದೇನೆ.. ಆದರೂ ತಾರೀಖು, ತಿಂಗಳುಗಳ ಹೆಸರುಗಳು ಇನ್ನೂ ಇಂಗ್ಲೀಷಿನಲ್ಲೇ ಇವೆ.. ಈ ಮಾಧ್ಯಮದಲ್ಲಿ ಕನ್ನಡದ ಪರಿಕರಗಳನ್ನು ಹುಟ್ಟಿಸುವ ಕೆಲಸ ಆಗಬೇಕಾಗಿದೆ. ಸದ್ಯಕ್ಕೆ ಕೈಬೆರೆಳೆಣಿಕೆಯಷ್ಟು ಜನ ಬ್ಲಾಗ್ ಬರೆಯುತ್ತಿದ್ದಾರೆ.

ಶ್ರೀರಾಂರ ಉತ್ತರದಲ್ಲಿ, “…ಆದರೆ ಕನ್ನಡದಲ್ಲಿ ಬ್ಲಾಗ್ ಮಾಡುವಾಗ ನಮಗಿರುವ ಪರಿಕರಗಳು ಕಡಿಮೆ…ಕನ್ನಡದ ಪರಿಕರಗಳನ್ನು ಹುಟ್ಟಿಸುವ ಕೆಲಸ ಆಗಬೇಕಾಗಿದೆ” ಎನ್ನುವ ಅಂಶವನ್ನು ಹಿಡಿದುಕೊಂಡು ಹೊರಟಾಗ: ಕನ್ನಡದವರ ಕೆಟ್ಟ ಜಡತ್ವ ಕಣ್ಣಿನ ಮುಂದೆ ನಿಲ್ಲುತ್ತದೆಯಲ್ಲದೆ, ಗೂಗಲ್‌ನವರ ಬ್ಲಾಗ್‌ಸ್ಪಾಟ್‌ನಂತಹ ಪ್ರಯತ್ನಗಳಿಗೂ ಕನ್ನಡದವರೇ ಆದ ಹುಡುಗರು ಸೇರಿಕೊಂಡು ಮಾಡಿರುವ ಸಂಪದ.ನೆಟ್‌ಗೂ ಬಹಳ ವ್ಯತ್ಯಾಸಗಳಿವೆ. ದೌರ್ಬಲ್ಯಗಳೇನೇ ಇದ್ದರೂ, ಬ್ಲಾಗ್ ಮಾಡಲಿಚ್ಛಿಸುವ ಕನ್ನಡಿಗರು ಸಂಪದದತ್ತ ವಾಲ ಬೇಕು ಎಂದನ್ನಿಸುತ್ತದೆ. ಏಕೆಂದರೆ, ಸಂಪದ ಸ್ಥಳೀಯರ ಪ್ರಯತ್ನ. ಗೂಗಲ್ ಕೆಟ್ಟ ಜಾಗತೀಕರಣದ/ದೊಡ್ಡ ಕಾರ್ಪೊರೇಟ್ ಲಕ್ಷಣವುಳ್ಳ ಚಿಹ್ನೆ-ಸಂಕೇತ. ನಾವುಗಳು ಅದಕ್ಕೆ ಜೋತು ಬೀಳುವುದರಿಂದ ಸ್ಥಳೀಯವಾಗಿ ಬೆಳೆಯಬೇಕಾದ ಕತೃತ್ವ ಶಕ್ತಿಯನ್ನು ಹೊಸಕಿ ಹಾಕಿ ಬಿಡುತ್ತೇವೆ. ಏನೊಂದೂ ಇಲ್ಲದ ವಾತಾವರಣವಿದ್ದರೆ, ಒಳ್ಳೆಯದು ನಮ್ಮ ಮಧ್ಯದಲ್ಲೇ ಏನಾದರೂ ಒಳ್ಳೆಯದು ಹುಟ್ಟಿಕೊಳ್ಳಬಹುದು. ಅಂತಹ ಒಳ್ಳೆಯ ಒಂದು ಪ್ರಯತ್ನ ಸಂಪದ.ನೆಟ್. ನಿಜ, ಅದರಲ್ಲೂ ಅನೇಕ ದೌರ್ಬಲ್ಯಗಳಿವೆ. ಆದರೆ, ಅದು ನಮ್ಮವರೇ ಮಾಡಿದ್ದು. ಗೂಗಲ್, ಅಥವ ಟೆಕ್ಸ್ಟ್‌ಪ್ಯಾಟರ್ನ್, ವರ್ಡ್‌ಪ್ರೆಸ್‌ನವರಲ್ಲ. ನಿರ್ವಹಣೆಗಾಗಿ ದ್ರುಪಾಲ್ ಬಳಸುತ್ತಿದ್ದಾರೆ ಎನ್ನುವುದನ್ನು ಬಿಟ್ಟರೆ, ಕನ್ನಡದ ಉತ್ಸಾಹಿತರನ್ನು ಒಂದೆಡೆ ಕಲೆ ಹಾಕಿದ್ದಾರೆ. (ವಿಕಿಪೀಡಿಯಾದ ಬಗೆಗೆ ನನಗೆ ನನ್ನದೇ ಆದ ಅಭಿಪ್ರಾಯಗಳಿವೆ-ಅದರ ಬಗೆಗೆ ಮತ್ತೊಮ್ಮೆ ಬರೆಯುತ್ತೇನೆ). ಇದರಲ್ಲಿರುವ ಉತ್ಸಾಹಿ ಯುವಕರೂ ಏನನ್ನಾದರೂ ಮಾಡಬಲ್ಲರು. ಸಾಮರ್ಥ್ಯ-ಶಕ್ತಿ-ಪರಿಣತಿ ಎಲ್ಲವೂ ಇವೆಯಾದರೂ ದೌರ್ಬಲ್ಯಗಳನ್ನು ದಾಟಲಾಗಿಲ್ಲವೆನ್ನುವ ನಿಜದ ನಡುವೆ ಸಂಪದದ ಸಾಧನೆ ಕಡಿಮೆ ಏನಲ್ಲ. ಕನ್ನಡದಲ್ಲಿ ಬ್ಲಾಗ್ ನಡೆಸುತ್ತೇನೆ ಎನ್ನುವವರು, ದಯವಿಟ್ಟು ಸಂಪದವನ್ನು ಬಳಸಿ ಎನ್ನುವುದನ್ನು ಯಾವುದೇ ಸಂಕೋಚವಿಲ್ಲದೆ ಹೇಳಬಲ್ಲೆ. ಸಂಪದದವರು ತಮ್ಮ ಕಾರ್ಯ ಯೋಜನೆಗಳಿಂದ ಲಾಭ ಮಾಡಿಕೊಳ್ಳುವುದಾದರೂ ನಾನು ಇವೇ ಮಾತುಗಳನ್ನು ಹೇಳುತ್ತಿದ್ದೆ.
*
*
*
ಶ್ರೀರಾಂ ಸುಧಾದಲ್ಲಿ ಹಾಗು ನಾನು ಈಗ “ಕನ್ನಡದ ವಾತಾವರಣಕ್ಕೆ ಸೂಕ್ತವಾದ ಪರಿಕರಗಳು” ಕುರಿತಂತೆ ಪ್ರಸ್ತಾಪಿಸಿರುವುದರಿಂದ ಕನ್ನಡಸಾಹಿತ್ಯ.ಕಾಂ ಕೈಗೊಂಡಿರುವ ಯೋಜನೆಗಳ ಬಗೆಗೂ ಇಲ್ಲಿ ದಾಖಲಿಸಿಬಿಡುತ್ತೇನೆ.

ಕನ್ನಡ ಪದ ಪರೀಕ್ಷಕ ಹಾಗು ಶ್ರೀಕಾಂತ ಮಿಶ್ರ್ರಿಕೋಟಿ: ಕನ್ನಡ ಪದ ಪರೀಕ್ಷಕ (ಕೆಪಿಪಿ). ಇದು ಒಂದು ಸ್ಪೆಲ್ ಚೆಕ್ಕರ್. ಅಂದರೆ ಇದೇ ಒಂದು ಸ್ವತಂತ್ರ ತಂತ್ರಾಂಶವಲ್ಲ. ಮೈಕ್ರೋಸಾಫ್ಟ್‌ನವರ ಆಫೀಸ್ ತಂತ್ರಾಶದಲ್ಲಿ ಬರಹ ಡಾಕ್ಯುಮೆಂಟನ್ನು ಸಿದ್ಧಗೊಳಿಸಿದಾಗ ಕೀ ಇನ್ ದೋಷಗಳನ್ನು ತಿದ್ದಲು ಸಹಕಾರಿಯಾಗಬಹುದಾದ ಯಾವುದೇ ಪರಿಕರವಿರಲಿಲ್ಲ. ನುಡಿ ಬಳಸುವವರಿಗೆ ಅದರಲ್ಲೇ ಒಂದು ಸ್ಪೆಲ್ ಚೆಕ್ಕರ್ ಇತ್ತು. ಆದರೆ, ಬರಹ ಹಾಗು ಆಫೀಸ್ ಬಳಕೆದಾರರಿಗೆ ಇಂತಹ ಪರಿಕರವಿರಲಿಲ್ಲ. ಇದರ ಅಗತ್ಯವೂ ಇತ್ತು.

ಕನ್ನಡಸಾಹಿತ್ಯ.ಕಾಂ ಬಗೆಗೆ ಅಭಿಮಾನವಿಟ್ಟಿರುವ ರುದ್ರಮೂರ್ತಿಯವರ ಸಂಪರ್ಕವಾದೊಡನೆ ನಾನು ಈ ಬಗೆಗೆ ಅವರಿಗೆ ತಿಳಿಸಿದಾಗ ಅವರು ನೆರವಿಗೆ ನಿಂತರು. ಬರಹ ಎಸ್‌ಡಿಕೆ ಬಳಸಿ, ಅವರು ಕಳೆದ ಬಾರಿ ಕೆಪಿಪಿಯನ್ನು ನಿರ್ಮಿಸಿಕೊಟ್ಟಿದ್ದರು. ಈಗ ಅದನ್ನು ಮತ್ತಷ್ಟು ಅನುಕೂಲಗಳೊಂದಿಗೆ ವಿಸ್ತರಿಸಿ ಕೊಟ್ಟಿದ್ದಾರೆ. ಇದರಲ್ಲಿ, ನಿಘಂಟಿನ ಕಡತದಲ್ಲಿ ಇರುವ ದೋಷಪೂರಿತ ಪದಗಳನ್ನು ತೆಗೆದು ಹಾಕಲು, ಅಲ್ಲೇ ತಿದ್ದಲು, ಡಿಕ್ಷನರಿ ಫೈಲನ್ನು ಆಮದು ಮಾಡಿಕೊಳ್ಳಲು ಹಾಗು ರಫ್ತು ಮಾಡಲು ಅನುಕೂಲ ಮಾಡಿ ಕೊಟ್ಟಿದ್ದಾರೆ.

ಶ್ರೀಕಾಂತ ಮಿಶ್ರಿಕೋಟಿಯವರು ಮುಂಬಯಿಯ ಬ್ಯಾಂಕೊಂದರಲ್ಲಿ ಉದ್ಯೋಗಿಗಳು. ತಮ್ಮ ಬಿಡುವಿಲ್ಲದ ಚಟುವಟಿಕೆಗಳ ಮಧ್ಯೆ, ಕನ್ನಡಸಾಹಿತ್ಯ.ಕಾಂ ಪ್ರಕಟಿಸಿರುವ ಕೃತಿಗಳಲ್ಲಿನ ಕೀ-ಇನ್ ದೋಷಗಳನ್ನು ನಿವಾರಿಸುವತ್ತ ಹೆಚ್ಚು ಗಮನ ಹರಿಸಿದ್ದಾರೆ. ಹಾಗೆಯೇ ಪದಕೋಶಕ್ಕೆ ಸುಮಾರು ೬೦.೦೦೦ ಪದಗಳನ್ನು ಈಗಾಗಲೇ ಸೇರಿಸಿದ್ದಾರೆ. ಅವರಿಗೂ ಹಾಗು ರುದ್ರಮೂರ್ತಿಯವರಿಗೂ ಕೃತಜ್ಞತೆಗಳು. ಇವರೊಡನೆ ಸ್ಪರ್ಧಿಸಬಹುದಾದವರು: ಕನ್ನಡಸಾಹಿತ್ಯ.ಕಾಂನ “ಬರಹ” ಯಾಹೂ ತಂಡವನ್ನು ಸೇರಬಹುದು.

ಈ ಯಾಹೂ ತಂಡ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕುಮಾರವ್ಯಾಸ ಮಹಾಕವಿಯ ಕರ್ಣಾಟ ಭಾರತ ಕಥಾಮಂಜರಿಯನ್ನು “ಬರಹ”ಕ್ಕೆ ಇಳಿಸುವುದರಲ್ಲಿ ಅಶ್ವಥ್ ಎಂ ಹಾಗು ಅವರ ಮಿತ್ರರಾದ ಕಾರಂತ್ ನಿರತರಾಗಿದ್ದಾರೆ. ಈ ಬೃಹತ್ ಕಾವ್ಯವನ್ನು “ಬರಹ” ಕ್ಕೆ ಇಳಿಸಲು ಆಸಕ್ತಿ ಇರುವವರು ಇವರನ್ನು ಸೇರಿಕೊಳ್ಳಬಹುದು.

ಕೆಪಿಪಿಯನ್ನು ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ನೆನಪಿಡಿ: ಇದು “ಬರಹ” ಕ್ಕೆ ಲಗತ್ತಿಸಬಹುದಾದ ಸ್ಪೆಲ್ ಚೆಕ್ಕರ್ ಅಲ್ಲ. ಮೈಕ್ರೋಸಾಫ್ಟ್‌ನವರ ಆಫೀಸ್ ತಂತ್ರಾಂಶ ಬಳಸುವವರಿಗೆ ಒಂದು ಆಡ್-ಇನ್ ಟೂಲ್.

ಇದನ್ನು ಮತ್ತಷ್ಟು ವಿಸ್ತರಿಸುವ, ಹೆಚ್ಚಿನ ಉಪಯುಕ್ತತೆ ನೀಡುವಲ್ಲಿ ತಮ್ಮ ಶ್ರಮದಾನ ನೀಡಲು ಆಸಕ್ತಿ ಇರುವವರು ಕನ್ನಡಸಾಹಿತ್ಯ.ಕಾಂ ತಾಂತ್ರಿಕ ಬೆಂಬಲದ ಕೂಟವನ್ನು ಸೇರಬಹುದು.

ಮತ್ತೊಂದು ದಿಟ್ಟವಾದ ಪ್ರಮುಖ ಹೆಜ್ಜೆಯೆಂದರೆ “ಸಂಪೂರ್ಣ” ಸಿ‌ಎಂಎಸ್. ಈಗ ಬ್ಲಾಗ್‌ಸ್ಪಾಟ್ ಅಥವ ಸಂಪದದಲ್ಲಿನ ಕನ್ನಡ ಪಠ್ಯ ಕೇವಲ ವಿಂಡೋಸ್ ಎಕ್ಸ್‌ಪಿ ಅಥವ ಯುನಿಕೋಡನ್ನು ಸರಿಯಾಗಿ ತೋರಿಸಬಲ್ಲ ಬೇರೆ ಇನ್ಯಾವುದೇ ಆಪರೇಟಿಂಗ್ ಸಿಸ್ಟಂ ಬಳಸುತ್ತಿರುವವರು ಮಾತ್ರ ಓದಬಹುದು. ವಿಂಡೋಸ್-೯೮ ಬಳಸುತ್ತಿರುವವರು ಓದಲು ಸಾಧ್ಯವಿಲ್ಲ. ಐಬಿ‌ಎಂನವರ ಪ್ಲಗ್ ಇನ್ ಒಂದನ್ನು ಹಾಕಿಕೊಂಡರೂ ಅದಕ್ಕೂ ಅನೇಕ ಮಿತಿಗಳಿವೆ ಎನ್ನುವುದನ್ನು ಕೇಳಿಬಲ್ಲೆ. ಹೀಗಾಗಿ, ಎಲ್ಲರಿಗೂ ಪಠ್ಯ ದೊರೆಯುವಂತಾಗಬೇಕಾದ ವ್ಯವಸ್ಥೆ ಈವರೆಗೆ ಲಭ್ಯವಿರಲಿಲ್ಲ. ‘ಸಂಪೂರ್ಣ’ವನ್ನು ಅಂತಹ ಕೊರತೆ ನೀಗಿಸುವಂತೆ ಸಜ್ಜುಗೊಳಿಸಲಾಗುತ್ತಿದೆ. ಅದರ ಕುರಿತಂತೆ ನಾನು ಹಾಗು ರಾಘವ್ ಕೋಟೇಕಾರ್ ಸಾಕಷ್ಟು ಶ್ರಮ ವಹಿಸಿದ್ದೇವೆ. ಈ ಯೋಜನೆಯ ನಿರ್ಮಾಣ ಹಂತದಲ್ಲಿ ಸೇರಬಯಸಿ ಪ್ರತಿಕ್ರಿಯೆಗಳು ಬರುತ್ತಿವೆ. ಪರೀಕ್ಷಾರ್ಥದ ಆವೃತ್ತಿ ಸಂಪೂರ್ಣಗೊಳಿಸುವತ್ತ ನಮ್ಮ ಗಮನ ಕೇಂದ್ರೀಕೃತವಾಗಿದೆ. ಕುತೂಹಲಕ್ಕೆಂದು ಕೆಲವರು ಕೇಳಿದ್ದರಿಂದ ಈಗ ಆಗಿರುವ ಕೆಲಸದ “ಡೆಮೋ” ಒಂದನ್ನು ನೀಡಿದ್ದೇವೆ, ಈ ಡೆಮೋ ಕಾರ್ಯ ಮುಗಿದೊಡನೆ ಸಂಪೂರ್ಣದಲ್ಲಿ ಆಸಕ್ತಿ ತೋರಿಸಿರುವವರನ್ನು ಸಂಪರ್ಕಿಸುತ್ತೇವೆ. ಬಹುಶಃ ಮುಂದಿನ ವಾರ ಸಂಪೂರ್ಣದ ಡೆಮೋ ಕಾರ್ಯ ಮುಗಿಯಬಹುದು. ಸದ್ಯಕ್ಕೆ ಕುತೂಹಲವಿರುವವರು ಇಲ್ಲಿಗೆ ಭೇಟಿ ಕೋಡಬಹುದು.

ಇತರರೂ ಇಂತಹ ಕ್ರಮಗಳನ್ನು ಕೈಗೊಳ್ಳುವೆಡೆಗೆ ಗಮನ ಹರಿಸಿದರೆ, ತಾಂತ್ರಿಕತೆಯನ್ನು ಕನ್ನಡಕ್ಕೆ ಒಗ್ಗಿಸಬಹುದು- ಇದರಿಂದಾಗಿ ಸಾಕಷ್ಟು ಲಾಭ ಎಲ್ಲರಿಗೂ ಆಗಬಹುದು.

ಕನ್ನಡಸಾಹಿತ್ಯ.ಕಾಂ ಬಗೆಗೆ ಅಭಿಮಾನವಿಟ್ಟುಕೊಂಡು ಬಂದಿರುವ ರವಿಕೃಷ್ಣಾರೆಡ್ಡಿಯವರು ಕನ್ನಡದಲ್ಲಿ ಹೊಸ ವಾರಪತ್ರಿಕೆಯೊಂದನ್ನು ತರುವಲ್ಲಿ ನಿರತರಾಗಿದ್ದಾರೆ. ಇಷ್ಟರಲ್ಲೇ, ಹೊಸ ವಾರಪತ್ರಿಕೆ ಹಾಗು ಅಂತರ್ಜಾಲದಲ್ಲಿ ಅದರ ಪ್ರತಿ ಎಲ್ಲ ಕನ್ನಡಿಗರಿಗೂ ದೊರೆಯಬಹುದು. ರವಿಕೃಷ್ಣಾರೆಡ್ಡಿಯವರಿಗೆ ಒಳ್ಳೆಯದಾಗಲಿ.

ಮುಂದಿನ ಸಂಚಿಕೆ ಆಗಸ್ಟ್, ಮೊದಲವಾರ.
ಶೇಖರ್‌ಪೂರ್ಣ
೪.೦೬.೨೦೦೬
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.