ದ್ವೀಪ – ೪

“ಇಲ್ಲ ನಾಗು…ಇದರಲ್ಲಿ ವಿಪರೀತ ಏನಿಲ್ಲ…ನಾವು ಇಷ್ಟೊಂದು ಹಚ್ಕೋಬಾರದು. ನೀನು ಈಗ ಏನಂದ್ರೂ ಆತನ ಹೆಂಡತಿ…ನೀನು ಆತನನ್ನು ನಿರ್ಲಕ್ಷಿಸಿ ನನ್ನ ಹತ್ತಿರ ಮಾತಾಡಿದ್ರೆ; ನಕ್ಕು ಓಡಾಡಿದ್ರೆ ಅವರಿಗೆ ಕೋಪ ಬಂದೇ ಬರುತ್ತೆ. ನಾಗೂ ನಾನು ನಿಮ್ಮ ಬಾಳನ್ನ ಒಡೀಲಿಕ್ಕೆ ಅಂತ ಬಂದೋನಲ್ಲ, ನೀನು ಬಾವ ಇರು ಅಂದ್ರೆ ಇರ್ತೀನಿ. ಆದರೆ ನನ್ನ ಬಗ್ಗೆ ಹೆಚ್ಚಿನ ಆಸಕ್ತೀನ ನೀನು ದಯವಿಟ್ಟು ತೋರಿಸಬೇಡ”

ಕೃಷ್ಣಯ್ಯ ನೆರೆಬಂದ ನದಿಯಂತೆ ನುಡಿದು ಹೊರಟ. ನಾಗವೇಣಿ ತನ್ನ ಮನಸ್ಸಿನಲ್ಲಿರುವ ವಸ್ತು ಸ್ಥಿತಿಯನ್ನೇ ಕಂಡವಳಂತೆ ಸ್ತಬ್ದಳಾಗಿ ನಿಂತಳು. ಕೃಷ್ಣಯ್ಯ ಚಪ್ಪಲಿ ಸಿಕ್ಕಿಸಿಕೊಂಡು ಕೆಳಗಿಳಿದ.
ಗಣಪಯ್ಯ ಬಾಳೆ ಎಲೆ ಕತ್ತರಿಸಿ ಸಣ್ಣ ಪಿಂಡಿಯಾಕಾರದಲ್ಲಿ ಸುತ್ತಿ ಮನೆಯತ್ತ ತಿರುಗಿದಾಗ ಕೃಷ್ಣಯ್ಯ ಎದುರಾದ. ಕೃಷ್ಣಯ್ಯನ ಗಂಭೀರ ಮುಖ, ಬಿಗಿದುಕೊಂಡ ಅವನ ಮೈನೋಡಿ ಗಣಪಯ್ಯನಿಗೆ ಅಂಜಿಕೆ ಎನಿಸಿತು. ಕೃಷ್ಣಯ್ಯ ಸೈಂಧವ, ಮುಷ್ಠಿಕಟ್ಟಿ ಗುದ್ದಿದರೆ ತಾನು ಚಟ್ನಿಯಾಗಿ ಹೋಗುತ್ತೇನೆ. ತನ್ನದೋ ನರಪೇತಲಕಾಯ. ಗಾಳಿ ಮರದಂತೆ ಬೆಳೆದಿದ್ದೇನೆ ನಾನು. ಮೈಯಲ್ಲಿ ಬಲವಿಲ್ಲ. ಕೃಷ್ಣಯ್ಯನೊಡನೆ ಮಾತಿಗೆ ನಿಲ್ಲುವುದೂ ಅಪಾಯವೆ. ಹೀಗೆಂದು ತನ್ನ ಹೆಂಡತಿಯನ್ನು ಇವನಿಗೊಪ್ಪಿಸಿ ಕುಳಿತಿರುವುದೂ ಸಾಧ್ಯವಿಲ್ಲ. ನಾಗವೇಣಿಯನ್ನು ಸರಿದಾರಿಗೆ ತರಲಾರೆನಾದರೆ ತಾನು ಎಂತಹಾ ಗಂಡಸು!
ಕೃಷ್ಣಯ್ಯ ಬದುವಿನ ಮೇಲೆ ನಿಂತೇ-
“ಬಾವಯ್ಯಾ” ಎಂದ.
ಏಟು ತಿಂದ ನಾಗರಹಾವು ಬುಸುಗುಟ್ಟಿದಂತಾಯ್ತು. ಕೃಷ್ಣಯ್ಯನ ಕಣ್ಣುಗಳು ಕೆಂಪೇರಿದವು,
“ಬಾವಯ್ಯ, ನಾಗು ನನ್ನ ಹತ್ರ ಮಾತಾಡಿದ್ಲು ಅಂತ ನೀವು ಅವಳ ಮೇಲೆ ಅನುಮಾನ ಪಡೋದು ನ್ಯಾಯವಲ್ಲ, ನಾಗು ನಾನು ಜೊತೇಲಿ ಬೆಳೆದೋರು… ಅವಳು ನನ್ನ ತಂಗಿ ಇದ್ದ ಹಾಗೆ… ಅವಳ ಮೇಲೆ ನೀವು ಸಂಶಯ ಪಡೋದು ಅಂದರೆ ಕುಡಿಯೋ ನೀರಿಗೆ ಎಂಜಲು ಹಾಕಿದ ಹಾಗೆ ಅಷ್ಟೆ. ನಿಮಗೆ ಸಹಾಯವಾಗ್ಲಿ ಅಂತ ನಾನು ಬಂದ್ನೇ ಹೊರತು ಬೇರಾವ ಕಾರಣಕ್ಕೂ ಅಲ್ಲ. ನನ್ನ ಮನಸ್ಸಿನಲ್ಲಿ ಹಾಗೇನಾದ್ರೂ ಇದ್ದಿದ್ರೆ ನನಗೆ ಕೆಲಸ ಕಷ್ಟದ್ದಾಗಿರಲಿಲ್ಲ. ನಾನಿಲ್ಲಿ ಇರೋದು ನಿಮಗೆ ಬೇದವಾಗಿದ್ರೆ ನಾನು ಹೋಗ್ತೀನಿ…ಹಾಗಂತ ಹೇಳಿಬಿಡಿ. ಯಜಮಾನರಿಗೆ ಉತ್ತರ ಕೊಡಬೇಕಲ್ಲ ಅಂತ ನಾನಿಲ್ಲಿ ಇದೀನಿಯೇ ಹೊರತು…ಈ ಹತ್ತಾಳು ನೀರು ನನಗೆ ಹೆಚ್ಚಲ್ಲ. ನೀವು ನಾಗೂಗೆ ಮತ್ತೆ ಹಿಂಸೆ ಕೊಟ್ಟರೆ ನಾನೂ ನಿಮಗೆ ಹೇಲದೆ ಕೇಳದೆ ಹೋಗೋವ್ನೆ”

ಕತ್ತಿಯನ್ನು ಒಡ್ಯಾಣಕ್ಕೆ ಸೇರಿಸಿ ಗಣಪಯ್ಯ ಎಡಗೈಲಿದ್ದ ಎಲೆಯ ಪಿಂಡಿಯನ್ನು ಬಲಗೈಗೆ ದಾಟಿಸಿದ. ಕೃಷ್ಣಯ್ಯನ ಆಕಾರದ ಹಾಗೆಯೇ ಮಾತೂ ಗಡುಸು ಎನ್ನುವುದರ ಅರಿವಾದುದು ಈಗಲೇ. ಈ ಗಡುಸು ಮಾತಿನಲ್ಲೂ ಕೇಳುವವರ ಎದೆ ನಡುಗಿಸುವ ಶಕ್ತಿ ಇದೆ ಎಂಬ ಅನುಭವವೂ ಆಯಿತು. ಮಳೆಗಾಲದ ತಿಳಿಬಿಸಿಲಿಗೆ ಮೈಯಲ್ಲಿ ಸಣ್ಣಗೆ ಬೆವರು ಕಾಣಿಸಿಕೊಂಡಿತು. ಕೃಷ್ಣಯ್ಯ ಹೇಳಿದ್ದರಲ್ಲಿ ತಪ್ಪಿಲ್ಲ ಎನಿಸಿ ಗಣಪಯ್ಯನೆಂದ,
“ಏನೋ ಆಗಿಹೋಯ್ತಲ್ಲ ಕೃಷ್ಣಯ್ಯ, ಅವಳಿಗೆ ನಾನು ಕೇಳಿದ್ದೇ ಒಂದು, ಅವಳು ಹೇಳಿದ್ದೇ ಒಂದು. ನಾನೂ ತಾಳ್ಮೆ ಕಳೆದುಕೊಂಡೆ. ಹೋಗ್ಲಿ ನಡಿ…ಮನೆಗೆ ಹೋಗೋಣ”
ಇಬ್ಬರೂ ಮತ್ತೆ ತೋಟದ ಸಂಕ ದಾಟಿದರು.

ಆ ಬೇವಾರ್ಸಿ ನಿನಗೆ ಯಾರೆ ಎಂದು ಗಂಡ ಜೇನು ಹುಳುಗಳ ಕೈಯಲ್ಲಿ ಕಡಿಸಿಕೊಂಡಂತೆ ಕುಣಿಯುತ್ತ ಕೇಳಿದಾಗ, ತಾನು ಅವನು ತನ್ನ ಒಡಹುಟ್ಟಿದವನು ಎಂದೇನೋ ಹೇಳಿದ್ದೆ, ಅವನು ತನಗೆ ಅಣ್ಣನಾಗಬೇಕು ಎನ್ನುವ ಭಾವ ಮನಸ್ಸಿನಲ್ಲಿ ಆಗಾಗ್ಗೆ ಬಂದುಹೋಗುತ್ತಿತ್ತು. ಗಂಡನ ಕಲ್ಪನೆ ಸುಳ್ಳೆಂದು ಸಾರಲು ತಾನೊಂದು ಮಾತನ್ನು ಹೇಳಿದೆನಾದರೂ ಇದು ಹೃದಯ ಒಪ್ಪದ ಮಾತು. ಕೃಷ್ಣಯ್ಯ ತನ್ನ ಒಡನಾಡಿ ಎಂಬುದೇ ಸತ್ಯ. ಮನಸ್ಸಿನ ಆಲದಲ್ಲಿ ಅವನ ಬಗ್ಗೆ ಇರುವ ಭಾವನೆಯೇ ಬೇರೆ. ಕೃಷ್ಣಯ್ಯ ಅಂದಾಕ್ಷಣ, ಅವನ ಮುಖ ಕಂಡಾಕ್ಷಣ ಬಣ್ಣದ ಮತಾಪು ಹೊತ್ತಿಕೊಂಡು, ನಕ್ಷತ್ರದ ಕುಡಿಕೆ ಚಿಮ್ಮಿ, ಕಾಮನಬಿಲ್ಲು ಆಕಾಶಕ್ಕೂ ಭೂಮಿಗೂ ಒಂದಾಗಿ ನಿಂತು, ತಾನು ಮೈಮರೆಯಲು ಕಾರಣವಾಗುವ ಕಲ್ಪನೆಯೇ ಬೇರೆ.

ಕೃಷ್ಣಯ್ಯನೂ ಇದೀಗ ಏನೋ ಹೇಳಿಹೋದ. ಅದೆಲ್ಲ ಅವನ ನಾಲಿಗೆ ತುದಿಯ ಮಾತು. ತನಗೆ ನೋವಾಗದಿರಲಿ, ತನ್ನನ್ನು ಹೊಡೆದು-ಬಡಿದು ಕಾಡದಿರಲಿ ಎಂದಾತ ಹೇಳಿದ ಮಾತಿದು. ಅವನ ಹೃದಯದಲ್ಲಿರುವುದನ್ನು ತಾನು ಬಲ್ಲೆ. ಅವನು ತನ್ನನ್ನು ನೋಡಲು, ಮಾತಾಡಲು ಹಾತೊರೆಯುತ್ತಾನೆಂಬುದನ್ನೂ ತಾನು ಬಲ್ಲೆ.
ಈಗೀಗ ಕೃಷ್ನಯ್ಯನೇ ಎಲ್ಲೆಲ್ಲೂ ತುಂಬಿಕೊಂಡಿದ್ದಾನೆ. ಗಂಡನ ಬಗ್ಗೆ ಈಗ ಮತ್ತೂ ಜಿಗುಪ್ಸೆ, ಹೇಸಿಗೆ, ತಿರಸ್ಕಾರ. ಗಂಡನೊಡನೆ ಬದುಕುವುದೇಬೇಕಿಲ್ಲ ಅನ್ನುವಲ್ಲಿಗೂ ತಾನು ಬಂದು ಮುಟ್ಟಿದ್ದೇನೆ. ತನಗೆ ಕೃಷ್ಣಯ್ಯನೇ ಬೇಕು. ಧರ್ಮವೋ-ಅಧರ್ಮವೋ, ಸರಿಯೋ-ತಪ್ಪೋ ಕೃಷ್ಣಯ್ಯನಿಗಾಗಿ ಜೀವ ಹಂಬಲಿಸುತ್ತದೆ. ಅವನನ್ನು ಸಂಪೂರ್ಣವಾಗಿ ಪಡೆಯುವತನಕ ಈ ಹಂಬಲ ನಿಲ್ಲುವುದಿಲ್ಲ…
ಆದರೆ ಹೇಗೆ…
ಗಂಡ ಸುಮ್ಮನಿದ್ದಾನೆಯೇ? ಕೃಷ್ಣಯ್ಯ ಒಪ್ಪಬಹುದೇ? ಅಮ್ಮ ಏನೆಂದಾಳು? ಅಪ್ಪ ಏನು ಹೇಳಬಹುದು? ತಮ್ಮ-ತಂಗಿಯರು, ಊರುಜನ, ಅರಲಗೋಡಿನವರು, ಗುರುತು-ಪರಿಚಯದವರು ಏನೆಂದಾರು? ಈ ಮಧ್ಯೆ ಮನಸ್ಸೂ ಹಿಂದೇಟು ಹಾಕುತ್ತಿದೆ. ಇಷ್ಟೊಂದು ನಿರ್ಲಜ್ಜಳಾಗಿ ವರ್ತಿಸುವುದರ ಬದಲು ಶರಾವತಿಗೆ ಹಾರಿ ಸಾಯಬಾರದೇಕೆ ತಾನು?

ನಾಗವೇಣಿ ಒಲೆಗೆ ಸೌದೆ ಸೀಳು ಹಾಕಿ ಬೆಂಕಿ ಸರಿಪಡಿಸಿದಳು. ಗಲ್ಲಕ್ಕೆ ಕೈಕೊಟ್ಟು ಕುಳಿತು ಬೆಂಕಿಯನ್ನೇ ದಿಟ್ಟಿಸಿದಳು. ನಗ್ನಳಾಗಿ ನಿಂತ ಹೆಣ್ಣೊಂದು ಕೈಕಾಲುಗಳನ್ನು ಬೀಸುತ್ತಿರುವಂತೆ ಬೆಂಕಿಯ ಕೆನ್ನಾಲಿಗೆ ಕಂಡಾಗ ತಾನು ಅಡ್ಡ ಹಾದಿ ಹಿಡಿದಿದ್ದೇನೆಯೇ ಎಂದು ಯೋಚಿಸಿದಳು. ಕೃಷ್ಣಯ್ಯ ಹೇಳಿದುದನ್ನು ಮತ್ತೊಮ್ಮೆ ನೆನಪಿಗೆ ತಂದುಕೊಂಡಳು. ಗಣಪಯ್ಯ ಅಗ್ನಿಸಾಕ್ಷಿಯಾಗಿ ತನ್ನ ಕೈಹಿಡಿದಾತ. ಅವನಿಗೆ ಮೋಸ ಮಾಡುವುದೆ ಎಂದು ಎದ್ದಳು. ಕೃಷ್ಣಯ್ಯ, ಗಣಪಯ್ಯ ಮನೆಗೆ ಬಂದಾಗ ನಾಗವೇಣಿ ಮುಖ ತೊಳೆದುಕೊಂಡು ಬಂದಳು.

ಪುಷ್ಯ

ಎಂಟು ಹತ್ತು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಪ್ರಾರಂಭವಾಯಿತು. ಆಕಾಶದಲ್ಲಿ ಮೋಡಗಳು ಜಮೆಯಾಗಿ ಕತ್ತಲು ಕವಿಯಿತು. ಗಾಳಿ ಅದೆಲ್ಲಿತ್ತೋ ಮೈಯಲ್ಲಿ ದೆವ್ವಹೊಕ್ಕಂತೆ ಬೀಸತೊಡಗಿತು. ಹೊರಗೆ ಓಡಿಯಾಡಿಕೊಂಡಿದ್ದ ಜಾನುವಾರುಗಳೆಲ್ಲ ಕೊಟ್ಟಿಗೆಗೆ ಹಿಂದಿರುಗಿದವು. ಕೃಷ್ಣಯ್ಯ ಎಂಟುದಿನಕ್ಕಾಗುವಷ್ಟು ಊಟದೆಲೆ, ವೀಳೆದೆಲೆ ಕೊಯ್ದು ತಂದ.

ಮಳೆ ಸುರಿಯಿತು. ಭರ್ ಎಂದು ಹನಿಗಳುದುರಿದವು. ಕೃಷ್ಣಯ್ಯ ಜಗುಲಿಯ ಮೇಲೆ ಕುಳಿತು ತಾಂಬೂಲ ಧ್ವಂಸಮಾಡಲಾರಂಭಿಸಿದ. ಬೇಸರವಾದರೆ ಇಲ್ಲಿ ಇದೊಂದು ಕೆಲಸ ಮಾಡಲು ಅವಕಾಶವಿತ್ತು. ಮಳೆಗಾಲದಲ್ಲಿ ಹಳ್ಳಿಯಲ್ಲಿ ಯಶಸ್ವಿಯಾಗಿ ನಡೆಯುವುದೆಂದರೆ ಇಸ್ಪೀಟಿನಾಟ. ಆದರೆ ತಾನು ಈ ಆಟ ಕಲಿಯಲಿಲ್ಲ. ಯಜಮಾನರ ಹೆದರಿಕೆ ಇಲ್ಲದಿದ್ದರೆ ಕಲಿಯಿತ್ತಿದ್ದೆನೇನೋ. ಆದರೆ ಅವರು ಈ ಆಟದ ಪರಮ ವಿರೋಧಿ. ಹೀಗಾಗಿ ತಾನು ಆಟ ಆಡುವಲ್ಲಿ ಹೋಗದಾದೆ. ಇನ್ನು ಮನೆಯಲ್ಲಿ ಪಗಡೆ ಆಡುವುದಿತ್ತು. ಚನ್ನಮನೆಯಿತ್ತು, ಆಡಲು ಜನರೂ ಇರುತ್ತಿದ್ದರು. ಇಲ್ಲಿ ಯಾರಿದ್ದಾರೆ? ಪಗಡೆಯ ಹಾಸು ನಾಗವೇಣಿಯ ಹತ್ತಿರ ಇದ್ದೀತು. ಆದರೆ ಅವಳೊಡನೆ ಆಡುವ ಅವಕಾಶ ಕಲ್ಪಿಸಿಕೊಳ್ಳುವ ಮನಸ್ಸು ತನಗಿಲ್ಲ.
ಹಿಂದಾಗಿದ್ದರೆ ಅವಳಾಗಿಯೇ ಕರೆಯುತ್ತಿದ್ದಳು.
“ಕೃಷ್ಣಯ್ಯ ಪಗಡೆ ಆಡೋಣ ಬರ್ತೀಯಾ?”
ಇದು ಹಿಂದೆ, ಬಹಳ ಹಿಂದೆ. ಈಗ ಹೀಗೆ ಅವಳು ಕೇಳಿದರೂ ಆಡುವ ಧೈರ್ಯ ತನಗಿಲ್ಲ.
ಮನೆಯ ಮಾಡಿನಿಂದ ಧಾರೆಧಾರೆಯಾಗಿ ಸುರಿದ ನೀರು ಹರಿದು ಹೋಗುತ್ತಲಿತ್ತು. ಗುಡ್ಡದ ಮೇಲಿನಿಂದ, ಮನೆಯ ಹಿಂಬದಿಯಿಂದ ಹರಿದು ಬಂದ ನೀರೆಲ್ಲ ಸಣ್ನ ಹಳ್ಲವಾಗಿ ತೋತದತ್ತ ಧುಮುಕುತ್ತಿತ್ತು. ಆ ಸದ್ದು ಮಳೆಗಾಳಿಯ ಸದ್ದಿನೊಡನೆ ಒಂದಾಗಿ ಕಿವಿಗೆ ಬಂದು ಅಪ್ಪಳಿಸುತ್ತಿತ್ತು.

ಗಣಪಯ್ಯ ಒಳಗಿದ್ದ, ಮಲಗಿರಬಹುದು. ಮದ್ಯಾಹ್ನದ ಊಟ ಮುಗಿಸಿದ ಮೇಲೆ ಒಂದು ನುದ್ದೆ ತೆಗೆಯುವ ಅಭ್ಯಾಸ ಆತನದು. ನಾಗವೇಣಿಯೂ ಮಲಗಿರಬೇಕು. ತಾನೂ ಮಲಗಿದ್ದರಾಗುತ್ತಿತ್ತು. ಆದರೆ ಅದೇಕೋ ಹಗಲು ಹೊತ್ತು ನಿದ್ದೆ ಬರುವುದಿಲ್ಲ ತನಗೆ. ಹಗಲು ಹೊತ್ತು ಮಲಗುವ ಅಭ್ಯಾಸ ಮಾಡಿಕೊಳ್ಲಬಾರದು ಎನಿಸುತ್ತದೆ. ಉಂಡು ಮಲಗಲು ತಾನೇನು ಯಜಮಾನನೆ, ಜಮೀನುದಾರನೆ, ಒಡೆಯನೆ? ಹೊತ್ತು ಹೊತ್ತಿಗೆ ಹಾಕುವ ಕೂಳಿಗೆ ಕೆಲಸ ಮಾಡುವಾತ ತಾನು ಈ ಶ್ರೀಮಂತಿಕೆ ತನಗೇಕೆ?

ಎದ್ದ, ಒಡ್ಯಾಣದ ಹಗ್ಗ ಹರಿದಿತ್ತು. ಸೆಣಬು ತಂದಿರಿಸಿದ್ದು, ಸೆಣಬಿನ ಉಂಡೆಯನ್ನು ಎದುರಿರಿಸಿಕೊಂಡು ಜಗುಲಿಯ ಅಂಚಿನಲ್ಲಿ ಕುಳಿತು ದಾರಹೊಸೆಯತೊಡಗಿದ, ಎಳೀಳೆಯಾಗಿ ದಾರ ಬಿಡಿಸಿಕೊಂಡು, ಮೂರು ಎಳೆಗಳನ್ನು ಒಂದಾಗಿ ಹಿಡಿದು, ತೊಡೆಯ ಮೇಲೆ ಮಲಗಿದ್ದ ಮೂರೂ ಎಲೆಗಳನ್ನು ಅಂಗೈಯಿಂದ ತೀಡಿ ಹಗ್ಗ ಹುರಿ ಮಾಡಿ ಹೊಸೆಯತೊಡಗಿದ.

ಕೈಬಳೆಗಳ ಸದ್ದಾಗಲು ತಿರುಗಿ ನೋಡಿದ. ನಾಗವೇಣಿ ಮಾತಾಡಲಿಲ್ಲ. ಅವಳನ್ನು ಗಮನಿಸಿಯೂ ಗಮನಿಸದಂತೆ ತನ್ನ ಕೆಲಸದಲ್ಲಿ ತೊಡಗಿದ. ನಾಗವೇಣಿ ಎಷ್ಟು ಹೊತ್ತು ಬಾಗಿಲಲ್ಲಿ ನಿಂತಿದ್ದಳೋ, ಕೃಷ್ನಯ್ಯ ಮತ್ತೊಮ್ಮೆ ತಲೆ ಎತ್ತಿ ನೋಡಿದಾಗ ನಾಗವೇಣಿ ಅಲ್ಲಿರಲಿಲ್ಲ.

ನಾಗೂ ಎಂದು ಹೃದಯ ಚೀರಾಡಿತು. ನಿನ್ನ ಮದುವೆಯಾಯಿತು, ಗಂಡನ ಮನೆ ಸಿಕ್ಕಿತು. ನೀನಿನ್ನು ಸುಖಿ ಅಂದುಕೊಂಡೆ, ಆದರೆ ಇದೇನು ನಿನ್ನ ಬಾಳು ಹೀಗಾಯಿತು ಎಂದು ಅಂಗೈಯಿಂದ ಬಲವಾಗಿ ಹುರಿಯನ್ನು ಹೊಸಕಿಹಾಕಿದ. ತೊಡೆ ಕೆಂಪೇರಿ ಚುರುಗುಟ್ಟಿತು. ನಾಗವೇಣಿ ತನ್ನ ಹತ್ತಿರ ಮಾತನಾಡುವುದನ್ನೇ ಬಿಟ್ಟಿದ್ದಾಳೆ. ಗಂಡನೊಡನೆಯೂ ಮಾತಿಲ್ಲ. ನಾಲಿಗೆ ಬಿದ್ದು ಹೋದಂತೆ ಮೌನವಾಗಿರುತ್ತಾಳೆ. ಮಾತಿಲ್ಲ, ನಗೆಯಿಲ್ಲ-ದಿನದಿನಕ್ಕೂ ಸವೆದುಹೋಗುತ್ತಿದ್ದಾಳೆ.
“ನಾಗೂ ಇದೆಲ್ಲ ಏನು?”
ಎಂದು ಕೇಳಲೆ? ಮಾತು ನಾಲಿಗೆಯ ತುದಿಗೆ ಬರುತ್ತದೆ. ಕೇಳಿಯೇ ಬಿಡೋಣ ಎಂದು ತಲೆ ಎತ್ತುತ್ತೇನೆ. ಬೇಡ, ನಾನು ಯಾರು ಇದನ್ನೆಲ್ಲ ಕೇಳಲು ಎಂದು ತಲೆ ತಗ್ಗಿಸುತ್ತೇನೆ. ನಾಲಿಗೆ ಕಚ್ಚಿಕೊಳ್ಳುತ್ತೇನೆ.

ನಾಗವೇಣಿಯೊಡನೆ ಮಾತನಾಡಬೇಕೆಂದು ಮನಸ್ಸು ಹಪಹಪಿಸುತ್ತದೆ. ಬೇರೇನೋ ಆಸೆಗಳು ನುಗ್ಗಿ ಬರುತ್ತವೆ. ಆದರೂ ತಡೆದುಕೊಳ್ಳುತ್ತೇನೆ. ಅವಳ ಮುಂದಿನ ಜೀವನ ಹಾಳಾಗಬಾರದು. ಸುಖ-ನೆಮ್ಮದಿಗೆ ಅವಳು ಎರವಾಗಬಾರದು ಎಂದು ಬಯಸುತ್ತೇನೆ. ಈಗ ಅವಳೆಲ್ಲಿ ಸುಖವಾಗಿದ್ದಾಳೋ ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ. ಅವಳನ್ನು ಹೀಗೆ ಕೊಲ್ಲುವುದರ ಬದಲು ಮನಸ್ಸು ಬಯಸುವಂತೆ ವರ್ತಿಸಿ ಅವಳನ್ನು ಸುಖವಾಗಿಡುವುದೇ ಲೇಸು ಎಂದುಕೊಳ್ಳುತ್ತೇನೆ. ಆದರೆ ಅದಕ್ಕೂ ಹಿಂಜರಿಯುತ್ತೇನೆ. ಯಾವುದು ಸರಿ ಎಂದು ಕೈ ಹಿಸುಕಿಕೊಳ್ಳುತ್ತೇನೆ.

ಹಗ್ಗ ಹೊಸೆಯುವುದು ಬೇದವೆನ್ನಿಸಿ ಆ ಕೆಲಸವನ್ನು ಅಲ್ಲಿಗೇನೆ ನಿಲ್ಲಿಸಿ ಕೆಳಗಿಳಿದ. ಚಪ್ಪರ ಅಲ್ಲಲ್ಲಿ ಸೋರುತ್ತಿತ್ತು. ಮೇಲೆ ಹೊದಿಸಿದ ಅಡಕೆ ಸೋಗೆ ಗಾಳಿಗೆ ಹಾರಿ ಹೋಗಿತ್ತು. ನೀರು ಒಳಗೆ ಜಿನುಗುತ್ತಿತ್ತು. ಮಳೆಗಾಲ ಮುಗಿದ ಮೇಲೆಯೇ ಅದನ್ನು ರಿಪೇರಿ ಮಾಡುವುದು. ಅಲ್ಲಿಯವರೆಗೂ ಈ ಜಿನುಗಾಟ ಇದ್ದುದೇ…ತೋತ ಮಳೆಗೆ ಮೈಯೊಡ್ಡಿ ಬಿದ್ದುಕೊಂಡಿದೆ. ಅಡಿಕೆ ಮರಗಳು ಗಾಳಿಗೆ ಭ್ರ್ ಎಂದು ಓಲಾಡುತ್ತಿವೆ. ಗರಿಗಳು ಕೆದರಿಕೊಂಡಿವೆ. ಹಾಳೆಕಟ್ಟದ ಅಡಕೆಗೊನೆ ತೂಗಾಡುತ್ತಿದೆ. ಅಡಕೆ ಕೊಯ್ಯಲು ತಾನು ಇರುವುದಿಲ್ಲ, ಇರಬಾರದು. ಮಳೆಗಾಲ ಮುಗಿದಾಕ್ಷಣ ಶರಾವತಿಯ ನೀರು ಇಳಿದು ಇಲ್ಲಿಗೆ ಜನ ಬಂದು ಹೋಗಲು ಆರಂಭಿಸಿದ ಕೂಡಲೇ ತಾನಿಲ್ಲಿಂದ ಹೊರಟುಬಿಡಬೇಕು. ಅಲ್ಲಿಗೆ ತಾನಿಲ್ಲಿಗೆ ಬಂದ ಕಾರ್ಯ ಮುಗಿದ ಹಾಗೆ.

ಮಳೆಯ ಅಬ್ಬರ ಕಡಿಮೆಯಾಯಿತು. ಇದು ಒಂದು ಕ್ಷಣ, ಮತ್ತೆ ಕಣಿವೆಯತ್ತಣಿಂದ ಮಳೆ ನುಗ್ಗಿ ಬಂದೇಬಂದಿತು. ಆಕಾಶಕ್ಕೂ ಭೂಮಿಗೂ ಒಂದೇ ಒಂದಾಗಿ ಇಳಿಬಿದ್ದ ಪರದೆ ಈ ಮಳೆ. ಧೋ ಎಂದು ಸುರಿಯುವುದೊಂದಲ್ಲದೆ ಬೇರೇನೂ ಅರಿಯದು ಮಳೆಗೆ. ಹೆಣ್ಣಿನ ಕಣ್ಣೀರಿನ ಹಾಗೆ.
ನಾಗವೇಣಿ ಏಳೆಂಟು ದಿನಗಳಿಂದ ಅಳುತ್ತಿದ್ದಾಳೆ. ಹೆಪ್ಪುಗಟ್ಟಿದ ಮೋದ ಮುಕದ ಮೆಲೆ, ಕಣ್ಣಲ್ಲಿ ಹನಿ. ಸೀತಾಪರ್ವತದ ಮೇಲಿನಿಂದ ಬೀಸಿಬರುವ ಗಾಳಿಯ ನಿಟ್ಟುಸಿರು. ಈ ಮೋಡ, ಹನಿ, ಗಾಳಿಗೆ ಎದೆಗೊಟ್ಟು ತಳಮಳಿಸುವವನು ತಾನು, ತಾನೊಬ್ಬನೆ. ಗಣಪಯ್ಯನಿಗೆ ಇದರ ಅರಿವೇ ಇಲ್ಲ. ಗಣಪಯ್ಯ ತನ್ನೊಡನೆ ಎಂದಿನಂತೆಯೇ ಇದ್ದಾನೆ, ಆದರೆ ತನ್ನ ವ್ಯಥೆ ಬೇರೆ. ನಾಗವೇಣಿ ಹೀಗೆಯೇ ಇರಬೇಕೆ? ಹೆಪ್ಪುಗಟ್ತಿದ ಕಪ್ಪುಮೋದವಾಗಿ? ಗಾಳಿಗೆ ತೂರಿಹೋಗುವ ಹನಿಯಾಗಿ? ಬಂಡೆಗಳನ್ನು ಸವರಿಕೊಂಡು ಬರುವ ಗಾಳಿಯಾಗಿ? ಹೀಗೆಯೇ ಇರಬೇಕೆ?

ಚಪ್ಪರದ ಒಳಗೆ ಇರಚಲು ಹೊಡೆದಾಗ ಮತ್ತೆ ಜಗಲಿಯನ್ನೇರಿದ. ಏನಾದರೂ ಮಾದಬೇಕೆನಿಸುತ್ತದೆ. ಏನು ಮಾಡುವುದು ಎಂದು ಸುತ್ತಲೂ ನೋಡಿದ. ಹಂಚಿನ ಮಾಡು, ತೊಲೆ-ಪಕಾಶಿಗಳು, ಸುಣ್ಣದ ಗೋಡೆ, ಗೋಡೆಯ ಮೇಲಿನ ನಾಲ್ಕು ಗಿಳಿಗೂಟಗಳು, ಉದ್ದಕ್ಕೂ ಕಟ್ಟಿದ ಬಳ್ಳಿಯೊಂದು, ಈ ತುದಿಯಲ್ಲಿ ಕಡುಕಿನ ಮಣೆ, ದೋಟಿ, ಒಡ್ಯಾಣ, ಕತ್ತಿ, ಗಣಪಯ್ಯನ ತುಂಡು ಪಂಚೆ, ಆ ತುದಿಯಲ್ಲಿ ಮಳೆಗೆ ನೆನೆದು ಗಾಲಿಗೆ ಫಡಫಡಿಸುತ್ತಿದ್ದ ನಾಗವೇಣಿಯ ರವಕೆ, ಏನು ಮಾಡುವುದು?

ಗಣಪಯ್ಯ ಒಳಗಿನಿಂದ ನಿದ್ದೆಗಣ್ಣಿನಲ್ಲೇ ಹೊರಬಂದ. ಸೊಂಟದ ಪಂಚೆಯನ್ನು ಬಿಗಿಯಾಗಿ ಸುತ್ತಿಕೊಳ್ಳುತ್ತ ಆಕಳಿಸಿ ಮೈಮುರಿದ. ಹೊರಗಿನ ಛಳಿಗೆ ಮೈ ಮುದುರಿಕೊಂಡ, ಹಾಹಾಹಾ ಎಂದು ವಿಕಾರವಾಗಿ ಸದ್ದು ಮಾಡಿ-
“ಅಣ್ಣನ ಬದಲಿಗೆ ತಮ್ಮ ಹೊಡೀತಿದಾನ?”
ಎಂದ, ಮಳೆಯನ್ನು ನೋಡಿ. ಕೃಷ್ಣಯ್ಯನತ್ತ ತಿರುಗಿ-ನೀನು ಏನ್ ಮಾಡ್ತಿದೀಯ ಎಂದು ಕೇಳಿದ. ಹೊಸೆದ ಹಗ್ಗವನ್ನು ನೋಡಿ-ಹುಂ, ಇದೂ ಸರಿಯೆ ಎಂದ. ಕೃಷ್ಣಾ ನಿನಗೆ ನಿದ್ದೆ ಬರೋದಿಲ್ವ ಎಂದು ವಿಚಾರಿಸಿ ತಾನೇ ಉತ್ತರ ಕಂಡುಕೊಂಡವನಂತೆ-ಹಗಲು ನಿದ್ದೆ ಒಳ್ಳೇದಲ್ಲ ಮಾರಾಯ ಎಂದು ತೀರ್ಪು ನೀಡಿದ.
ಕೃಷ್ಣಯ್ಯ ಹಾಂಹೂಂ ಎಂದು ಹೇಳಲಿಲ್ಲ. ಕಣ್ಣು ಅರೆಮುಚ್ಚಿಕೊಂಡು, ಅದೇನನ್ನೋ ಹೇಳುತ್ತ ಕಂಕುಳಲ್ಲಿ ಕೈ ಹಾಕಿ ಕೆರೆದುಕೊಳ್ಳುತ್ತಿದ್ದ ಗನಪಯ್ಯನನ್ನು ನೋಡಿ ಆತ ನಕ್ಕನಷ್ಟೆ.
ಗಣಪಯ್ಯ ಜಗುಲಿಯ ಅಂಚಿಗೆ ಹೋಗಿ, ಅಲ್ಲಿ ಮಾಡಿನ ನೀರು ಬಿದ್ದು ತುಂಬಿಕೊಂಡ ನೀರ ಬಾನಿಯಿಂದ ಬಾಯಿ ಮುಕ್ಕಳಿಸಿ, ಮುಖ ತೊಳೆದುಕೊಂಡು ಬಳ್ಳಿಯ ಮೇಲೆ ಒಣ ಹಾಕಿದ್ದ ವಸ್ತ್ರದಿಂದ ಮುಖವರೆಸಿಕೊಂಡು ಬಾಗಿಲಬಳಿಬಂದು ಒಳಗೆ ತಲೆ ಹಾಕಿ-
“ನಾಗೂ….ಬಿಸಿಬಿಸಿ ಕಾಫಿ ಮಾಡು ಎರಡು ಲೋಟ” ಎಂದು ಹೇಳಿ, ಚಾಪೆ ಎಳೆದುಕೊಂಡು ಕುಳಿತ. ಕೃಷ್ನಯ್ಯ ಅಷ್ಟು ದೂರದಲ್ಲಿ ಕುಳಿತು ಹೊಸೆದ ಹಗ್ಗವನ್ನು ಕೈಗೆತ್ತಿಕೊಂಡ.

ಗಣಪಯ್ಯ ಮಾತನಾಡುತ್ತಲಿದ್ದ. ಮಳೆಗಾಲದ ಮಾತು. ಈ ವರುಷವೇ ಮಳೆ ಕಡಿಮೆ ಎಂಬ ಮಾತು. ಇಲ್ಲೆಲ್ಲ ಕಾಡು ಕಡಿದಮೇಲೆ ಮಳೆ ಕಡಿಮೆಯಾದಿದ್ದೀತೆ ಎಂಬ ಮಾತು. ಮಲೆನಾಡು ಈಗೀಗ ಬಯಲುಸೀಮೆಯಾಗುತ್ತಿದೆ. ರೈಲು ರಸ್ತೆ, ಬಸ್ಸು ರಸ್ತೆ, ತಂತಿ ಮಾರ್ಗ, ಡ್ಯಾಮು, ಮನೆಗಳು ಎಂದೆಲ್ಲ ಕಾಡು ಕಡಿಯುತ್ತಿದ್ದಾರೆ. ಹೀಗೆಯೇ ಕಡಿಯುತ್ತ ಹೋದರೆ ಮಳೆ ಬಂದ ಹಾಗೆಯೆ. ಡ್ಯಾಮಿನಲ್ಲಿ ನೀರು ನಿಂತ ಹಾಗೆಯೆ ಎಂದ. ಸರಕಾರಕ್ಕೆ ಶಾಪ ಹಾಕಿದ. ತನಗೆ ಜಮೀನು ಪರಿಹಾರ ಸಿಗದಿದ್ದುದರಿಂದ ಒಳ್ಳೆಯದೇ ಆಯಿತು ಎಂದ. ತನ್ನ ಹೊಲ-ತೋಟಗಳಲ್ಲೂ ಈ ವರ್ಷ ಒಳ್ಳೆಯ ಫಸಲಾಗಿದೆ. ಹೇರಂಬನ ಹೊಲ-ತೋಟಗಳಲ್ಲೂ ಒಳ್ಳೆಯ ಬೆಳೆಯಾಗಿದೆ ಎಂದು ಸಂತಸಪಟ್ಟ.
“ಕೃಷ್ಣಯ್ಯ… ನೀನು ಸ್ವಂತ ಜಮೀನು ಮಾಡಿಕೊಂಡಿದಿಯೋ ಹೇಗೆ?”
ಕೃಷ್ಣಯ್ಯನನ್ನು ಮಾತಿಗೆ ಎಳೆದ.
“ನಾನಂತೂ ಮಾಡಿಕೊಂಡಿಲ್ಲ…ಯಜಮಾನರು ನನಗೆ ಅಂತ ಒಂದಿಷ್ಟು ಮಾಡಿ ಕೊಟ್ಟಿದ್ದಾರೆ”
“ಹೌದಾ…ಬೇಗ ಮದುವೆಯಾಗಿ ಒಂದು ಸಂಸಾರ ಹೂದಯ್ಯ…ಎಷ್ಟು ದಿನ ಅಂತ ಪರರ ಮನೇಲಿ ಇರ್ತೀಯ”
“ಯೋಚನೆ ಇದೆ…ಮುಂದಿನ ವರ್ಷ ಆದೀತು…”
ನಾಗವೇಣಿ ಕಾಫಿ ತೆಗೆದುಕೊಂಡು ಬಂದಳು. ಗಂಡನ ಕೈಗೆ ಒಂದು ಲೋಟವಿರಿಸಿ, ಕೃಷ್ಣಯ್ಯನ ಎದುರು ಒಂದು ಲೋಟವಿರಿಸಿ ಅವಳು ಹೊರಟಾಗ ಗಣಪಯ್ಯ ಕೂಗಿದ-
“ಕೇಳಿದ್ಯೇನೆ”
ನಾಗವೇಣಿ ನಿಂತು-ಏನು-ಎಂಬಂತೆ ಗಂಡನತ್ತ ನೋಡಿದಳು. ಕಾಫಿ ಗುಟುಕರಿಸಿ ಗಣಪಯ್ಯನೆಂದ-
“ಮುಂದಿನ ಬೇಸಿಗೇಲಿ ಕೃಷ್ಣಯ್ಯನ ಮದುವೆ…ನಿನಗೊಬ್ಳು ಅತ್ತಿಗೆ ಬರ್ತಾಳೆ…ಅತ್ತಿಗೆ…”
ನಾಗವೇಣಿಯ ಕಾಲ ಹೆಬ್ಬೆರಳು ಹೊಸಿಲಿಗೆ ಬಡಿಯಿತು. ಕೃಷ್ಣಯ್ಯ ಕೈಗೆತ್ತಿಕೊಂಡಿದ್ದ ಲೋಟವನ್ನು ಕೆಳಗಿರಿಸಿದ.
ಮಳೆ ನಿಂತಿದೆ ಎಂದು ಕೊಟ್ಟಿಗೆ ಬಾಗಿಲು ತೆರೆದು, ಕಣ್ಣಿ ಬಿಚ್ಚಿ ದನಗಳನ್ನು ಬಿಟ್ಟಿದ್ದೇ ತಪ್ಪಾಯಿತು. ಎರಡು ಗಂಟೆಯಷ್ಟೊತ್ತಿಗೆ ಹೋದ ದನಕರುಗಳೆಲ್ಲ ತಿರುಗಿ ಬಂದವು. ಬೆಳ್ಲಿ ಪತ್ತೆಯಿಲ್ಲ, ಮೋಡ ಮತ್ತೆ ಕವಿಯುತ್ತಿತ್ತು. ಮಳೆ ಹಿಡಿದರೆ ಇನ್ನೆಂಟು ದಿನ ಬರುವುದಿಲ್ಲ, ಬೆಳ್ಳಿ ಎತ್ತ ಹೋಯಿತು?
ದನಗಳನ್ನು ಕಟ್ಟಿ ಹುಲ್ಲು ಹಾಕಿ ಬಂದ ಕೃಷ್ಣಯ್ಯ.
“ಬಾವಯ್ಯ ಬೆಳ್ಳಿ ಬಮ್ಮ್ದಿಲ್ವಲ್ಲ”
ಎಂದಾಗ, ಜಗುಲಿಯ ಅಂಚಿನ ಕಂಬಕ್ಕೆ ಬೆನ್ನುಕೊಟ್ಟು ಕುಳಿತು ಹಸಿ ಅಡಕೆಯ ಸಿಪ್ಪೆ ಸುಲಿಯುತ್ತಿದ್ದ ಗಣಪಯ್ಯ-
“ಆ ಹಡಬೆ ದನಕೆ ಇದೊಂದು ಚಾಳಿ ಮಾರಾಯ…ಈಗ ಅಂತ ಅಲ್ಲ…ಹಿಂದಿನಿಂದಾನೂ ಅಷ್ಟೆ. ಗುಡ್ಡದ ಮೇಲಿನ ಗುಹೆ ಹತ್ರ ಹೋಗಿ ಸಾಯುತ್ತೆ…ಅಲ್ಲೇನಿದೆಯೋ ಅದರಮ್ಮನ ಪಿಂಡ.”
ಎಂದ ವ್ಯಗ್ರನಾಗಿ.
“ಹುಡುಕಿಕೊಂಡು ಬರ್ತೇನೆ”
ಎಂದು ಕೃಷ್ಣಯ್ಯ ನುಡಿದಾಗ-
“ದಾರಿ ಗೊತ್ತುಂಟ?”
ಎಂದು ಕೇಳಿ, ಎಚ್ಚರದಿಂದ ಹೋಗಿ ಬಾ…ಇಂಬಳಗಳ ಕಾಟ ಎಂದ.
ಕಾಡಿನಲ್ಲಿ ಕಾಲಿಟ್ಟಲೆಲ್ಲ ಮಿಚಗುಡುವ ಇಂಬಳಗಳಿಗೆ ಅಂಜಿ ಕೃಷ್ಣಯ್ಯ ಎಣ್ಣೆಯನ್ನು ಕಾಲುಗಳಿಗೆ ಬಳಿದುಕೊಂಡು ಕಂಬಳಿಕೊಪ್ಪೆ ಹೆಗಲಮೇಲೆ ಹಾಕಿಕೊಂಡು ಹೊರಟ.

ಸೀತಾಪರ್ವತವನ್ನೇರುವ ಕಾಲು ಹಾದಿಯ ಮೇಲೆಲ್ಲ ಹುಲ್ಲು ಬೆಳೆದು ದಾರಿ ಮಾಯವಾಗಿತ್ತು. ಹಿಂದೆ ಒಂದು ಬಾರಿ ಹತ್ತಿದ ನೆನಪಿನ ಮೇಲೆ, ಅಂದಾಜಿನಿಂದ ದಾರಿ ಕಂಡುಹಿಡಿಯುತ್ತ ಮುಂದೆ ನಡೆದ ಕೃಷ್ಣಯ್ಯ. ಕಾಡು, ಪೊದೆ, ಬಳ್ಳಿಗಳು ಬೇಕಾಬಿಟ್ಟಿಯಾಗಿ ಬೆಳೆದಿದ್ದವು. ಮಳೆಗಾಲದಲ್ಲಿ ಜನಸಂಚಾರ ಕಡಿಮೆ. ಹುಲ್ಲು ಮೇಯಲು ದನಗಳೂ ಬರುವುದಿಲ್ಲ. ಈಗೀಗ ಕೊಟ್ಟಿಗೆಗೆ ಸೊಪ್ಪು ಕಡಿಯುವವನೆಂದರೆ ಗಣಪಯ್ಯ ಒಬ್ಬನೇ. ಕಾಡು ಯಥೇಚ್ಛವಾಗಿ ಬೆಳೆದಿತ್ತು. ದಟ್ಟವಾಗಿ ಒಂದನ್ನೊಂದು ತಬ್ಬಿಕೊಂಡ ಮರಗಳ ಕೆಳಗೆ ರಾಶಿ ಕತ್ತಲು, ಕತ್ತಲಲ್ಲಿ ಪೊದೆಗಳ ಮರೆಯಲ್ಲಿ ಅದೇನೋ ಓಡಾಡಿದ ಹಾಗೆ. ಅಲ್ಲೊಂದು ಮೊಲ ಕುಪ್ಪಳಿಸಿತು, ಇಲ್ಲೊಂದು ಕೋಳಿ ಚಿಮ್ಮಿತು, ಮರದ ಮೇಲೆ ನವಿಲಕ್ಕಿ ಕೂಗಿತು. ಮಳೆ-ಗಾಳಿಗೆ ಈ ಜೀವ ಜಂತುಗಳು ಇಲ್ಲಿ ಹೇಗಿರುತ್ತವೆ ಎಂದು ಯೋಚಿಸುತ್ತ ನಡೆದ.

ಗುಡ್ಡದ ನೆತ್ತಿಯವರೆಗೂ ಕಾಡಿಲ್ಲ; ಅರ್ಧವರೆಗಷ್ಟೇ ಕಾಡು. ಅನಂತರ ಬೋಳು ಬೋಳು ಹಸಿರು ನೆಲ. ಅಲ್ಲಲ್ಲಿ ಬಿದ್ದಿರುವ ಹೆಬ್ಬಂಡೆಗಳು; ದೂರದ ನೋಟ ಸಿಗುವುದು ಇಲ್ಲಿಂದ. ತಲೆಯ ಮೇಲೆ ಕವಚಿಕೊಂಡ ಮರಗಳ ಕತ್ತಲು ಹಿಂದಾಯಿತು. ಕಾಲಿಗೆ ತೊಡರುತ್ತಿದ್ದ ಬಳ್ಳಿ ಪೊದೆಗಳು ಹಿಂದುಳಿದವು. ಬಟ್ಟಬಯಲಲ್ಲಿ ನಿಂತು ನೋಡಿದ. ಎದುರಿಗೆ ಸಮುದ್ರ. ಮಣ್ಣಿನ ಬಣ್ಣಕ್ಕೆ ತಿರುಗಿ ನಿಂತ ನೀರು. ಕಣ್ಣ ದೃಷ್ಟಿ ಹಾಯುವವರೆಗೂ ನೀರೇ ನೀರು. ದೂರದಲ್ಲಿ ಲಿಂಗನಮಕ್ಕಿ ಅಣೆಕಟ್ಟು. ಈ ಅಣೆಕಟ್ಟಿನ ಬಳಿಯಲ್ಲಿ ಧುಮುಕಿ ಮಂಜಾಗಿ ಮೋಡವಾಗಿ ಮೇಲೇರುತ್ತಿದ್ದ ಬಿಳಿಮುಗಿಲು. ನಿಂತ ನೀರಿನ ಮಧ್ಯೆ ಅಲ್ಲಲ್ಲಿ ತೇಲುತ್ತಿದ್ದ ಹಸಿರು ಗುಡ್ದಗಳು. ಒಂದು ಕಾಲದಲ್ಲಿ ದೊಡ್ಡ ದೊಡ್ಡ ಗುಡ್ಡಗಳಾಗಿದ್ದು ಈಗ ನೀರಿನಲ್ಲಿ ಪೂರ್ಣ ಮುಳುಗಿ ಗುಡ್ಡಗಳ ನೆತ್ತಿಯಷ್ಟೇ ಕಾಣುತ್ತಿತ್ತು.

ನಾಳೆ ಡ್ಯಾಮು ಮುಗಿದ ಮೇಲೆ ಈ ಗುಡ್ಡದ ಗತಿಯೂ ಇದೆ. ಇಲ್ಲೂ ನೀರು ನಿಲ್ಲುತ್ತದೆ. ಗುಡ್ಡ ಪೂರ್ಣ ಮುಳುಗುತ್ತದೆ. ಹೊಸಮನೆಹಳ್ಳಿ, ನಾಗವೇಣಿಯ ಮನೆ, ಈ ಗುಹೆ ಎಲ್ಲವೂ ಶರಾವತಿಯ ಜಲೋಧರದಲ್ಲಿ ಮಾಯವಾಗಿಬಿಡುತ್ತದೆ. ಡ್ಯಾಮು ಪೂರ್ಣ ಮುಗಿದಿಲ್ಲವೆಂದೇ ನೀರು ಹರಿದು ಹೋಗುತ್ತಿದೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ನೀರು ಎಲ್ಲಿಯವರೆಗೂ ಏರುತ್ತಿತ್ತೋ…..
‘ಬೆಳ್ಳೀ…ಬಾ ಬಾ ಬಾ…
ಕೃಷ್ಣಯ್ಯ ಅತ್ತಿತ್ತ ದೃಷ್ಟಿ ಹಾಯಿಸುತ್ತ ಸಾಗಿದ. ಬಂಡೆಗಳು ಎದುರಾದವು. ಮೊದಲಬಾರಿಗೆ ನಾಗವೇಣಿಯೊಂದಿಗೆ ಬಂದಾಗ ಕುಳಿತ ಬಂಡೆ ಗೋಚರಿಸಿಸಿತು. ಮಧುರ ನೆನಪು: ಹಸಿರು ಸೀರೆ, ಕೆಂಪು ರವಿಕೆ ತೊಟ್ತ ನಾಗವೇಣಿ ಕಪ್ಪು ಬಂಡೆಗೆ ಒರಗಿ ಕುಳಿತಿದ್ದಳು. ಅಬ್ಬ ಸಾಕಾಗಿಹೋಯ್ತು ಎಂದಾಕೆ ಕತ್ತು, ಕಿವಿ, ಕೆನ್ನೆಗಳ ಮೇಲಿಳಿಯುತ್ತಿದ್ದ ಬೆವರುಗಳನ್ನು ತೊಡೆದುಕೊಳ್ಳುತ್ತಿದ್ದಳು. ನಾಗು ಎಷ್ಟು ಚೆನ್ನಾಗಿ ಕಾಣುತ್ತಾಳಲ್ಲ ಎಂದು ಆಸೆಯಿಂದ, ಹಸಿವಿನಿಂದ, ಕಾಮದಿಂದ, ಉದ್ರೇಕದಿಂದ ನೋಡಿದ್ದೆ. ಮೈ ಬಿಸಿ ಏರಿತ್ತು. ಇದೊಂದು ಕ್ಷಣ, ಎದುರು ನಿಂತ ಗಣಪಯ್ಯನಿಂದಾಗಿ ಈ ಎಲ್ಲ ಬಿಸಿ ಆರಿತು. ನಾಗು ಈಗ ಗಣಪಯ್ಯನ ಸ್ವತ್ತು ಎಂದು ತುಟಿ ಕಚ್ಚಿ, ಕೈಬೊಗಸೆಯಲ್ಲಿಯ ನೀರು ಮತ್ತೆ ನದಿಗೇ ಬಿಟ್ಟವನಂತೆ ಹಿಂದೆಸರಿದ…ಈಗಲೂ ನಾಗವೇಣಿ ತನ್ನ ಪಾಲಿಗೆ ಪರಕೀಯಳು, ತಾನು ಬಯಸಬಾರದ ತಂಪು ಜಲ ಆಕೆ…
ಆ ಬಂಡೆಯ ಬಳಿ ಒಂದುಕ್ಷಣ ನಿಂತು, ಆ ಬಂಡೆಯನ್ನು ಹತ್ತಿ ಅತ್ತ ಇಳಿದ. ಗುಹೆ ಕಂಡಿತು. ಗುಹೆಯ ಎದುರು ಬೆಳ್ಳಿ ಮಲಗಿದ್ದಾಳೆ.
“ಬೆಳ್ಳೀ…ಬಾ ಬಾ ಬಾ…”
ನಾಲ್ಕು ಹೆಜ್ಜೆ ಇಟ್ಟವ ಹಿಮ್ಮೆಟ್ಟಿನಿಂತ. ಬೆಳ್ಳೀ ಮಲಗಿಲ್ಲ. ಬಿದ್ದುಕೊಂಡಿದೆ. ಕತ್ತು ಮುರಿದು ಪಕ್ಕಕ್ಕೆ ಹೊರಳಿದೆ. ರಕ್ತ-ಕೆಂಪುರಕ್ತ-ದಪ್ಪಗೆ ಹಸಿಹಸಿಯಾಗಿ ಅಷ್ಟಗಲ ಹಸಿರು ಹುಲ್ಲಿನಮೇಲೆ ನಿಂತಿದೆ…
“ಬೆಳ್ಳೀ…
ಅಚ್ಚಬಿಳಿಯ, ಮೂರೋ ನಾಲ್ಕೋ ಕಡೆ ಅಂಗೈ‌ಅಗಲದ ಕಪ್ಪು ಮಚ್ಚೆಗಳುಳ್ಳ ಬೆಳ್ಳಿ ಕಿವಿಬಡಿದು, ತಲೆತಿರುಗಿಸಿ ನೋಡಲಿಲ್ಲ. ಬದಲಿಗೆ, ಗುಹೆಯ ಒಳಗಿನಿಂದ ಗುರುಗುಡುವ ಸದ್ದ ಕೇಳಿಸಿತು. ಮೈಮೇಲೆ ನೀರು ಉಗ್ಗಿದಂತಾಗಿ ಬೆಳ್ಳಿಯತ್ತ ಬಾಗಿ ಅದರ ಮೈನೇವರಿಸುತ್ತಿದ್ದ ಕೃಷ್ಣಯ್ಯ ಬೆದರಿ ನಿಂತ. ಗುರುಗುಡುವ ಸದ್ದು ಇನ್ನೂ ಜೋರಾಗಲು ನಾಲ್ಕು ಹೆಜ್ಜೆ ಹಿಂದೆಬಂದು, ಹತ್ತಿಬಂದ ಬಂಡೆಯತ್ತ ಸರಿದು, ಬಂಡೆಯ ಹಿಂಬದಿಯಲ್ಲಿ ರಕ್ಷಣೆಪಡೆದ.
ಗುಹೆಯ ಒಳಗಿನಿಂದ ಹುಲಿ ಹೊರಬರಲಿಲ್ಲ. ಕೃಷ್ನಯ್ಯ ಬರಿಗೈಯಲ್ಲಿ ಮುಂದೆ ಹೋಗುವುದೂ ಅಪಾಯ ಎಂದರಿತು ವೇಗವಾಗಿಯೇ ಅತ್ತ ಬೆನ್ನು ಹಾಕಿ ಇಳಿಯತೊಡಗಿದ.

ಗಣಪಯ್ಯ ವಿಷಯ ಕೇಳಿಯೇ ಕುಸಿದುಬಿದ್ದ. ಬೆಳ್ಳಿ ಹೋದರೆ ಹೋಗಲಿ. ಹುಲಿ ಮನೆಯ ಹಿಂಬದಿಯಲ್ಲೇ ಇದೆ ಎಂದರೆ ಇಲ್ಲಿ ಬದುಕುವುದು ಹೇಗೆ, ಓಡಿಯಾಡುವುದು ಹೇಗೆ? ಈ ಹುಲಿ ಇನ್ನು ಎಷ್ಟು ದಿನ ಇಲ್ಲಿ ಇರುತ್ತದಂತೆ? ಇಂದು ಬೆಳ್ಳಿಯನ್ನು ಹಿಡಿದ ಹುಲಿ ನಾಳೆ ಕೊಟ್ಟಿಗೆಗೆ, ನಾಡಿದ್ದು ಮನೆಯೊಳಗೇ ನುಗ್ಗಲಾರದೆ? ಹುಲು ತಾನಿಲ್ಲಿಗೆ ಬಂದಿದ್ದೇನೆಂಬುದನ್ನು ಈ ಹಿಂದೆಯೇ ಮುನ್ಸೂಚನೆ ಕೊಟ್ಟಿತ್ತು. ಆದರೂ ಹುಲಿಹಿಡಿದ ಬೆಳ್ಳಿಯನ್ನು ತಾನು ಕಣ್ಣಾರೆ ಕಂಡುಬಂದೆನೆಂದು, ಹುಲಿಯ ಕೂಗನ್ನು ತಾನು ಕಿವಿಯಾರೆ ಕೇಳಿದೆನೆಂದು ಕೃಷ್ಣಯ್ಯ ಹೇಳಿದ ಮೇಲೆ ಗಣಪಯ್ಯ ಮತ್ತೂ ಇಳಿದು ಹೋದ. ಒಳಹೋಗಿ ಹೆಂಡತಿಗೆ-
“ಕೇಳಿದ್ಯೇನೆ, ಬೆಳ್ಳೀನ ಹುಲಿ ಹಿಡೀತಂತೆ”
ಎಂದು ಹೇಳಿದ. ಅವಳು ತಲೆ ಎತ್ತಿ ಸಪ್ಪೆ ನೋಟ ಬೀರಿದಾಗ-
“ಆ ಹುಲಿಯೊಂದು ನಿನ್ನ ಹಿಡಕೊಂಡು ಹೋಗಿದಿದ್ರೆ ಒಂದು ಪೀಡೆ ಕಳೀತಿತ್ತು”
ಎಂದು ಕೂಗಾಡಿದ.
“ಸುತ್ಲೂ ನೀರು ನಿಂತಿರೋದಕ್ಕೂ, ಕಾಡುಪ್ರಾಣಿಗಳು ಬಂದು ಮನೇ ಹತ್ರ ಸೇರಿಕೊಂಡಿರೋದಕ್ಕೂ, ನಿನ್ ಸುಡುಗಾಡು ಮುಖದ ಮೇಲೆ ಕತ್ತಲು ಕವಿದಿರೋದಿಕ್ಕೂ ಸರಿಯಾಗಿದೆ…”
ಎಂದು ಬೊಬ್ಬೆ ಹೊಡೆದ.
ಮುಂಜಾನೆಯಿಂದ ನಿಂತಿದ್ದ ಮಳೆ ಅದೇ ಆರಂಭವಾಗಿತ್ತು. ಕೃಷ್ಣಯ್ಯ ಜಗುಲಿಯ ಮೇಲೆ ನಿಂತಿದ್ದು ಗಣಪಯ್ಯನ ಮಾತನ್ನು ಆಲಿಸುತ್ತಿದ್ದ. ನಾಗವೇಣಿಯ ಸದ್ದೇ ಇರಲಿಲ್ಲ. ನಿಧಾನವಾಗಿ ಪ್ರಾರಂಭವಾದ ಮಳೆ ಕ್ರಮೇಣ ಹೆಚ್ಚಾಗುತ್ತಾಹೋಯಿತು. ಈ ಬದಿಯಿಂದ ಕತ್ತಲೆಯೂ ಕವಿಯಿತು.

ಆಸ್ಲೇಷ

ಹೊಸಮನೆಯ ಸುತ್ತ ಆವರಿಸಿಕೊಂಡ ಮಲಿನಜಲ. ಉಕ್ಕಿ ಬಂದ ನೀರಿಗೆ ಅಂಜಿ ಪೊಟರೆ, ಹೊದರು, ಗುಹೆ ಹುತ್ತಗಳಿಂದ ಹೊರಬಂದ ಕ್ರಿಮಿಕೀಟ ಮೃಗಜಂತುಗಳ ಧಾಲಿ. ಹೊರಗಿನ ಜನರ ದರ್ಶನವಿಲ್ಲದೆ, ಹೊರಗಿನ ಜನರ ಮಾತು ಕಿವಿಗೆ ಬೀಲದೆ, ಮೂರನೆಯವರಲ್ಲದೆ ನಾಲ್ಕನೆಯವರಾಗಿ ಇನ್ನೊಬ್ಬರನ್ನು ಕಾಣದಂತಾಗಿ ಸಿಡಿದು ಹೋಗಿರುವ ತಲೆ. ಈ ಮಧ್ಯೆ, ಇದಿಷ್ಟೇ ಸಾಲದೆಂಬಂತೆ ಮೂರು ತಿಂಗಳಿಂದ ನಾಲ್ಕು ಎಂಟುದಿನ ಹೊಳವು ಕೊಟ್ಟರೂ, ಕಷ್ಟದ ಮೇಲೆ ಕಷ್ಟಗಳನ್ನು ಎದುರಿಸಬೇಕಾಗಿ ಬಂದ ನಿರ್ಭಾಗ್ಯ ಹೆಣ್ಣಿನ ಕಣ್ಣೀರಿನಂತೆ ಸುರಿಯುತ್ತಿರುವ ಮಳೆ, ಗಾಳಿ, ಜೊತೆಗೆ…

ಮನ ಪೂರ್ತಿಯಾಗಿ ನಗುವಂತಿಲ್ಲ, ಊಟ ಮಾಡುವಂತಿಲ್ಲ, ನಿದ್ದೆ ಮಾಡುವಂತಿಲ್ಲ, ಹೃದಯ ಬಿಚ್ಚಿ ಮಾತನಾಡುವಂತಿಲ್ಲ, ತನ್ನವರು ಎಂದು ಯಾರನ್ನೂ ನಂಬುವಂತಿಲ್ಲ. ಅಪ್ಪಿ ಮುದ್ದಿಡುವಂತಿಲ್ಲ.

ಮನೆ ಯಜಮಾನ ಗಣಪಯ್ಯನದೂ ಇದೇ ಪಾಡು. ನಾಗವೇಣಿಯದೂ ಇದೇ ಪಾಡು. ಕಾಲಿಗೆ ಸರಲ್ಪಳಿ ಹಾಕಿ, ಆ ಸರಪಳಿಯ ಇನ್ನೊಂದು ತುದಿಗೆ ಮರದ ದೊಡ್ದ ಕೊರಡು ಕಟ್ಟಿ ಅದನ್ನು ತಲೆಯ ಮೇಲೆ ಹೊರಿಸಿದಂತೆ. ಕಾಲಿಗೆ ಚುಚ್ಚಿಕೊಂಡ ಮುಳ್ಳಿನ ತುದಿ ಒಳಗೇನೇ ಉಳಿದು ಆಗಾಗ್ಗೆ ಅನಿರೀಕ್ಶಿತವಾಗಿ ಚುಚ್ಚುವಂತೆ…ಬದುಕು ಅಸಹನೀಯ…

ಗಣಪಯ್ಯನಿಗೆ ಹೆಂಡತಿಯ ಮೇಲೆ ನಂಬಿಕೆ ಬರುವುದೇ ಇಲ್ಲ. ಅವಳು ಕೃಷ್ನಯ್ಯನನ್ನು ತನ್ನ ಒಡಹುಟ್ಟಿದವನೆಂದು ಕರೆದಿರಬಹುದು. ಕೃಷ್ಣಯ್ಯ ಅವಳನ್ನು ತನ್ಗಿ ಎಂದು ಒಪ್ಪಿರಬಹುದು, ಆದರೂ ಅವರಿಬ್ಬರ ಮನಸ್ಸಿನಲ್ಲಿ ಬೇರೇನೋ ಇದೆ ಎಂಬ ಅನುಮಾನ. ನಾಗವೇಣಿ ಹಾವು ಬಂದರೆ ಹೊಡೆಯಲು ಕೃಷ್ಣಯ್ಯನನ್ನು ಕರೆಯುತ್ತಾಳೆ. ಅವಕಾಶ ಸಿಕ್ಕಾಗಲೆಲ್ಲ ಕೃಷ್ಣಯ್ಯನನ್ನು ತಿನ್ನುವಂತೆ, ಬಯಸುವಂತೆ, ಕೆಟ್ಟದಾಗಿ ನೋಡುತ್ತಾಳೆ. ಅವನೊಡನೆ ಮಾತನಾಡುವುದು, ನಗುವುದು ಈಗ ಕಡಿಮೆಯಾಗಿದೆಯಾದರೂ, ತಾನು ಒಂದೆರಡು ಬಾರಿ ಈ ಬಗ್ಗೆ ಕೇಳಿದ್ದೇ ಅಪರಾಧವಾಗಿ, ನಾಗವೇಣಿ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದಾಳೆ.

ಇನ್ನೇನು ತಾನೆ ಮಾಡುವುದು ಸಾಧ್ಯ? ಇಲ್ಲ, ಯಾವುದನ್ನೂ ವಿಚಾರಿಸದೆ ನಿನ್ನ ಮನಸ್ಸಿಗೆ ಬಂದ ಹಾಗೆ ಕೃಷ್ಣಯ್ಯನೊಡನೆ ಇದ್ದುಬಿಡು ಎಂದು ಹೇಳುವುದು ಸಾಧ್ಯವೇ? ಹೀಗೇ ಹೇಳಿದರೆ ನಾಗವೇಣಿ ಇದ್ದಾಳು. ಆದರೆ ತಾನು ಬದುಕಿರುವುದು ಹೇಗೆ ಅನಂತರ? ಕೃಷ್ಣಯ್ಯ ಅವಳ ಮನೆಯಲ್ಲೇ ಇದ್ದವ ಮದುವೆ ಮುನ್ನ ಇವರ ಸಂಬಂಧ ಹೇಗಿತ್ತೋ ಯಾರು ಬಲ್ಲರು? ಇವಳು ಕೃಷ್ಣಯ್ಯ ಕೃಷ್ಣಯ್ಯ ಎಂದು ಸಂಭ್ರಮಿಸುವಾಗ, ಕೃಷ್ಣಯ್ಯನನ್ನು ಇಲ್ಲಿಗೆ ಕರೆಸೋಣ ಎಂದಾಗ ತನಗೆ ಇದಾವುದೂ ಅರ್ಥವಾಗಲಿಲ್ಲ. ಈಗ ಆಗುತ್ತಿದೆ. ಎಲ್ಲವೂ ಅರ್ಥವಾಗುತ್ತಿದೆ. ಮುಂದೆ ಇದು ಎಲ್ಲಿಗೆ ಹೋಗಿ ನಿಂತೀತು ಎಂಬುದರ ಅರಿವು ಮಾತ್ರ ಆಗುತ್ತಿಲ್ಲ. ಒಳ್ಳೆಯವಳೆಂದು ತಾನು ನಂಬಿದ, ಪ್ರೀತಿಸಿದ, ಕಾಮಿಸಿದ ನಾಗವೇಣಿ ತನಗೇನೇ ಮೋಸಮಾಡಬಹುದೇ?

ಗಣಪಯ್ಯ ಮೈಯಲ್ಲಿ ನಂಜು ಏರಿದಂತಾಗಿ ಹೆಂದತಿಯ ಮೇಲೆ ರೇಗಿಬೀಳತೊಡಗಿದ. ಕೃಷ್ನಯ್ಯನೊಡನೆ ಅದೊಂದು ರೀತಿಯಲ್ಲಿ ಮುಖ ಬಿಗಿದುಕೊಂಡು ಇರತೊಡಗಿದ.

ನಾಗವೇಣಿಯ ನಿರ್ಧಾರ ಬೇರೆಯಾಗಿತ್ತು. ಗಂದ ಎನ್ನುವ ಪ್ರಾಣಿಯ ಮೇಲೆ ಅವಳಿಗಿದ್ದ ಪ್ರೀತಿ, ವಿಶ್ವಾಸ ಊರಿಗೆ ಹೋಗುವುದು ಬೇಡ, ಇಲ್ಲೇ ಇರೋಣ ಎಂದಾಗಲೇ ಕಡಿಮೆಯಾಗಿತ್ತು. ಶರಾವತಿಯಲ್ಲಿ ನೀರು ಏರುತ್ತ, ಹಾವು, ಹುಲಿ ಹೊಸಮನೆಯ ಸೀತಾಪರ್ವತದಲ್ಲಿ ಬಂದು ಸೇರಿಕೊಳ್ಳತೊಡಗಿದಾಗ ಅವಳು ಗಂಡನನ್ನು ದೂರ ಮಾಡಿದಳು. ಕೃಷ್ಣಯ್ಯ ಯಾವಾಗಲೂ ಕಣ್ಣೆದುರು ಓಡಿಯಾಡುತ್ತಿರಲು ಗಣಪಯ್ಯ ಮನಸ್ಸಿನಿಂದ ಪೂರ್ಣವಾಗಿ ಹೊರಟಿದ್ದ. ಕೃಷ್ಣಯ್ಯನಿಗಾಗಿ ಮೈಮನಸ್ಸು ತುಡಿಯತೊಡಗಿತು, ಜೀವ ಹಂಬಲಿಸತೊಡಗಿತು.

ಕೃಷ್ಣಯ್ಯ ಶರಾವತಿ ಹೊಸಮನೆಯ ಸುತ್ತ ಮಡುವಾಗಿ ನಿಲ್ಲದೇ ಇದ್ದಿದ್ದರೆ, ಕಾಡುಪ್ರಾಣಿಗಳೆಲ್ಲ ಮನೆಯ ಸುತ್ತ ಓಡಾಡದೇ ಇದ್ದಿದ್ದರೆ ಇಷ್ಟು ಹೊತ್ತಿಗೆ ಹೊಸಮನೆಹಳ್ಳಿಯಿಂದ ಹೊರಟುಹೋಗಿರುತ್ತಿದ್ದ. ಕೃಷ್ಣಯ್ಯ ಮುಖ್ಯವಾಗಿ ನಾಗವೇಣಿಗಾಗಿ ಉಳಿದ. ಅವಳ ಸುಕ-ಸಂತೋಷಕ್ಕಾಗಿ ಉಳಿದ. ತನ್ನ ಅವಳ ಸ್ನೇಹದಿಂದಾಗಿ ಅವಳ ದಾಂಪತ್ಯ ಜೀವನ ಹಾಳಾಗಬಹುದು ಎನಿಸಿತಾದರೂ ಉಳಿದ. ಅವರಿಬ್ಬರ ಬಾಳಿನಲ್ಲಿ ತಾನು ಹುಳಿಹಿಂಡಬಾರದೆಂದು ನಿರ್ಧರಿಸಿದ.
ಆದರೂ ಹೊಸಮನೆಹಳ್ಳಿಯ ಸುತ್ತ ಆವೃತಗೊಂಡ ನೀರು ಇಳಿದಿರಲಿಲ್ಲ, ಗಾಳಿಯ ಹೊಡೆತ ಕಡಿಮೆಯಾಗಿರಲಿಲ್ಲ, ಆಸ್ಲೇಷ ಹಗಲು ರಾತ್ರಿಯೆನ್ನದೆ ಬೀಳುತ್ತಲೇ ಇತ್ತು.

ಯಾರೋ ಮೈ ಮುಟ್ಟಿ ಅಲುಗಾಡಿಸಿದಂತಾದಾಗ ಕಣ್ ತೆರೆದು ನೋಡಿದ, ಕಗ್ಗತ್ತಲು. ಸೂಜಿಮೊನೆಯಷ್ಟೂ ಬೆಳಕಿಲ್ಲ. ಸನಿಹದಲ್ಲಿ ಮೈಗೊರಗಿ ಅದಾರೋ ಕುಳಿತ ಅನುಭವ. ಭುಜ, ಮುಖದ ಮೇಲೆ ಓಡಿಯಾಡುತ್ತಿದ್ದ ಕೋಮಲ ಹಸ್ತ.
“ನಾಗೂ…”
“ಕೃಷ್ಣಾ…”
ನಾಗೂ ತನ್ನೆದೆಯ ಮೇಲೊರಗಿ, ತನ್ನ ಮುಖದ ಮೇಲೆ ಮುಖವಿರಿಸಿ-
“ಕೃಷ್ಣಯ್ಯ, ನನ್ನ ಹೀಗೆ ಯಾಕೆ ಕೊಲ್ತಿದೀಯಾ?” ಎಂದು ಹೇಳಿ ಬಲವಾಗಿ ಬಿರುಸಗಿ ಅವಚಿಕೊಂಡಾಗ, ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಗಣಪಯ್ಯ ಎದ್ದುಬಂದರೇನು ಗತಿ ಎಂದು ಹೆದರಿ, ಇದು ಎಂತಹ ಹೇಸಿಗೆಯ ಕೆಲಸ ಎಂದು ಅಸಹ್ಯಪಟ್ಟುಕೊಂಡು, ನಾಗವೇಣಿಯ ಕೈ ಕಿತ್ತೆಸೆದು ಅವಳನ್ನು ದೂರ ತಳ್ಳಿ ಕೆನ್ನೆಗೆ ಎರಡೇಟು ಬಿಗಿದು, ಏಕೆ ಅವಳ ಉದ್ರೇಕಕ್ಕೆ ತಕ್ಕ ಶಿಕ್ಷೆ ಕೊಡಬಾರದು ಎಂದು ಪ್ರಶ್ನಿಸಿಕೊಂಡು, ನಾಗವೇಣಿಯ ಕೋಮಲವಾದ, ಮೃದುವಾದ, ಬಿಸಿಯಾದ, ಕಾಯ ತನ್ನ ಮೈಯನ್ನು ಒತ್ತುತ್ತಿರಲು, ಬೇರೆಲ್ಲ ವಿಷಯಗಳ ಮೇಲೂ ಬುಟ್ಟಿ ಕವಚಿಹಾಕಿ, ಬೀಸುವ ಕಲ್ಲು ಹೇರಿ, ನಾಗವೇಣಿ ತನ್ನ ತೋಳುಗಳಲ್ಲಿರುವ ವಿಷಯ ಒಂದೇ ಪ್ರಮುಖವೆಂದು ನಿರ್ಧರಿಸಿ, ನಾಗೂ ಎಂದವಳ ಕಿವಿಯಲ್ಲಿ ಉಸುರಿದಾಗ ಅವಳು ಬಿಕ್ಕುತ್ತ, ಮೇಲುಸಿರು ಬಿಡುತ್ತ, ತೇಕುತ್ತ-
“ಕೃಷ್ಣಯ್ಯಾ”
ಎಂದು ತೇಲಿ ಹೋಗುತ್ತಿರುವಂತೆ ಚೀರಿದಳು.
ಉಕ್ಕಿ ಬಂದ ಪ್ರವಾಹದಲ್ಲಿ ಅವಳನ್ನು ತೆಕ್ಕೆ ಹಿಡಿದು ಕೃಷ್ಣಯ್ಯನೂ ತೇಲಿದ. ನಾಗವೇಣಿಯನ್ನು ಭರಸೆಳೆದು ಹಾಸಿಗೆಯತ್ತ ಎಳೆದುಕೊಂಡಾಗ ಹೊರಗೆ ಮಳೆ ಅಬ್ಬರಿಸಿತು. ಸೀತಾಪರ್ವತದ ಮೇಲಿನಿಂದ ನುಗ್ಗಿಬಂದ ಗಾಳಿ ಭರ್ ಎಂದು ಬೀಸಿತು. ಪಣತದ ಸುತ್ತ ಸುತ್ತುತ್ತಿದ್ದ ಇಲಿಗಳು ಕಿಚ್…ಕಿಚ್ ಎಂದು ಕಚ್ಚಾಡಿಕೊಂಡವು. ಗಣಪಯ್ಯನ ಗೊರಕೆ ಸದ್ದು ನಡುಮನೆಯವರೆಗೂ ಉರುಳಿಬಂದು ಇವರಿಬ್ಬರ ಬೆನ್ನು ತಟ್ಟಿತು.
ನಾಗವೇಣಿಯನ್ನು ದೂರಸರಿಸಿ ಕೃಷ್ಣಯ್ಯ ಎದ್ದು ಕುಳಿತ. ಹೋಗು ಹೋಗು ಎನ್ನಿವಂತೆ ಅವಳ ತಣ್ಣಗಿನ ತೋಳನ್ನು ನೂಕಿದ. ಎದ್ದ ನಾಗವೇಣಿ ಕೃಷ್ಣಯ್ಯನ ಹೆಗಲಿಗೇನೆ ಜೋತು ಬಿದ್ದಾಗ ಕೃಷ್ಣಯ್ಯ-
“ನಾಗೂ…ಇದೇನು ಆಯ್ತು?”
ಎಂದು ಬಿಕ್ಕಿದ. ಅವನೊಡನೆ ನಾಗವೇಣಿಯೂ ಬಿಕ್ಕಿದಳು.
“ಕೃಷ್ಣಯ್ಯ ನಾನು ನಿನ್ನ ಬಿಟ್ಟು ಇರಲಾರೆ…ಈ ಮನೇಲಿ ಬಾಳಲಾರೆ…”
“ನಾಗೂ, ಇದು ನೀನು ಹೇಳೋ ಮಾತಲ್ಲ….ಇದು ನಿನ್ನ ಮನೆ…ಗಣಪಯ್ಯ ನಿನ್ನ ಗಂಡ. ನೀನು ಇಲ್ಲಿ ಬದುಕಲೇಬೇಕು…ನನ್ನಿಂದ ನಿನ್ನ ಜೀವನ ಹಾಳಾಗಬಾರದು. ನಾನು ಕಾಲು ಜಾರಿದೆ ನಿಜ, ಆದರೆ ಇದೇ ಮೊದಲು…ಇದೇ ಕೊನೆ…ನಾನು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಟೆ…ಇಲ್ಲಿಂದ ಹೊರಟೆ…”

ಯಾವ ವಿಷಯಗಳ ಮೇಲೆ ಮುಸುಕೆಳೆದು ನಾಗವೇಣಿಯನ್ನು ಹತ್ತಿರ ಎಳೆದುಕೊಂಡಿದ್ದನೋ ಆ ಎಲ್ಲಾ ವಿಷಯಗಳೂ ಮುಸುಕು ಸರಿಸಿ ಬಂದು ಎದುರು ನಿಂತವು. ಕೃಷ್ಣಯ್ಯ ಹುಲಿಯನ್ನು ಕಂಡಂತೆ ಕಂಗಾಲಾಗಿಹೋದ. ಇದೇನು ನಡೆಯಿತು ದೇವರೆ ಎಂದು ಮೈಪರಚಿಕೊಂಡ. ಕೊನೆಗೂ ಈ ಕೆಲಸವಾಯಿತೆ ಎಂದು ತಲೆಯನ್ನು ಗೋಡೆಗೆ ಗಟ್ಟಿಸಿಕೊಂಡ. ಶರಾವತಿ ಏರಿಬಂದಳೇ? ನೀರು ಮನೆಯವರೆಗೂ ಮಡುಗಟ್ಟಿ ನಿಂತಿತೆ? ಸೀತಾಪರ್ವತ ನೀರಿನಲ್ಲಿ ಮುಳುಗಿಹೋಯಿತೇ ಎಂದು ಹಲುಬಿದ. ಮುಂದೇನು ಮಾಡುವುದೆಂದು ಕೈಹಿಸುಕಿಕೊಂಡ. ನಾಗವೇಣಿಯನ್ನು ಹತ್ತಿರ ಎಳೆದುಕೊಂಡು ಕ್ರೋಧದಿಂದ ನುಡಿದ-
“ನಾಗೂ, ನೀನು ಇಷ್ಟು ಮುಂದುವರಿಯಬಾರದಿತ್ತು. ಗಂಡನಿಗೆ ವಂಚಿಸಿ ಇಲ್ಲಿಗೆ ಬರಬಾರದಿತ್ತು. ನನ್ನನ್ನು ಅಡ್ಡಹಾದಿಗೆ ಎಳೆಯಬಾರದಿತ್ತು. ಆಯ್ತು, ಏನೋ ಆಗಿಹೋಯ್ತು, ಇನ್ನು ನಡಿ…ಹುಂ…
ಅವಳನ್ನು ಬಿರುಸಾಗಿ ನೂಕಿದ, ನಾಗವೇಣಿ ಸಾವರಿಸಿಕೊಂಡಳು. ಕೃಷ್ಣಯ್ಯನ ತೋಳನ್ನು ಚಪಲತೆಯಿಂದ ಸವರುತ್ತ ಅವಳೆಂದಳು-
“ಕೃಷ್ಣಯ್ಯ, ನಾನಿವತ್ತು ಸುಖಿ, ನಾಳೆ ಬೇಕಾದ್ರೆ ನದೀಗೆ ಹಾರಿ ಸಾಯಲಿಕ್ಕೂ ನಾನು ಸಿದ್ಧ. ನನ್ನ ಆಸೆ ಈವತ್ತಿಗೆ ಈಡೇರಿತು…”
ನಾಗವೇಣಿ ಎದ್ದು ಹೋದ ಅನುಭವವಾಯಿತು. ಕೃಷ್ಣಯ್ಯ ಯೋಚಿಸುತ್ತ ಕುಳಿತೇ ಇದ್ದ.
ನಾನಿವತ್ತು ಸುಖಿ…ನನ್ನ ಆಸೆ ಈವತ್ತಿಗೆ ಈಡೇರಿತು…
ಇದು ಯಾರು ಹೇಳಿದ ಮಾತು? ನಾಗವೇಣಿಯೇ ಇಲ್ಲ, ತನ್ನ ಹೃದಯದ ಮಾತನ್ನೇ ನಾಗವೇಣಿ ತನಗೆ ಹೇಳಿಹೋದಳೆ ಹೇಗೆ? ಈಗ ಆದುದು ಸರಿಯೋ, ತಪ್ಪೋ ಎಂಬ ಪ್ರಶ್ನೆ ಬೇರೆ. ಆದರೆ ಕಳೆದುಹೋದ ಈ ಹಲವಾರು ನಿಮಿಷಗಳಿಂದ ಜೀವಕ್ಕೆ ಹಾ ಎನಿಸಿತಲ್ಲವೆ? ದೇಹಕ್ಕೆ ತಂಪಾಯಿತಲ್ಲವೆ?

ಕೃಷ್ಣಯ್ಯ ತಲೆಕೊಡವಿ ಕಂಬಳಿ ಎಳೆದುಕೊಂಡು ಮಲಗಿದ. ಮಳೆ ಜೋಗುಳ ಹಾಡುತ್ತಿತ್ತು.
ಬೆಲಕು ಹರಿಯುತ್ತಿರುವಂತೆಯೇ ಕೃಷ್ಣಯ್ಯ ಎದ್ದ. ಇಲ್ಲೇ ಉಳಿದರೆ ಮುಂದಿನ ಅನಾಹುತಗಳಿಗೆಲ್ಲ ತಾನೇ ಕಾರಣನಾಗಬೇಕು. ಇನ್ನು ಇಲ್ಲಿಂದ ಹೊರಟುಬಿಡಬೇಕು. ಸೀತಾಪರ್ವತದ ಆ ಬದಿಯಿಂದ ಸಂಪದ ಗುಡ್ಡದ ಬೆನ್ನಿಗೆ ಹೆಚ್ಚು ದೂರವೇನಿಲ್ಲ, ನಿಂತ ನೀರಿನಲ್ಲಿ ಈಜು ಹೊಡೆದುಕೊಂಡು ಹೋಗಬಹುದು. ಮರಬಳ್ಳಿ ಕಾಲಿಗೆ ತೊಡರದಂತೆ ನೋಡಿಕೊಂಡರಾಯಿತು. ಹೇಗೂ ನಾಗವೇಣಿಗೆ ಹೇಳಿದ್ದೇನೆ. ಗಣಪಯ್ಯನಿಗೆ ಅರ್ಥವಾದೀತು, ಯಜಮಾನರಿಗೆ ಏನಾದರೂ ಕುಂಟು ಹೆಳೆ ಹೇಳಿದರಾಯಿತು. ಇನ್ನು ಇಲ್ಲಿರಬಾರದು.
ಎದ್ದ. ನಿಧಾನವಾಗಿ ಬಾಗಿಲು ತೆರೆದುಕೊಂಡು ಹೊರಬಂದ. ಮಳೆ ತುಂತುರಾಗಿ ಬೀಳುತ್ತಿತ್ತು. ಕಂಬಳಿ ಮರೆತು ನೆನೆಯುತ್ತಲೇ ನಡೆದ, ನಾಗವೇಣಿಯ ನೆನಪಾಯಿತು. ಇದ್ದು ಬಿಡಲೇ? ಗಣಪಯ್ಯನಿಗೆ ತಿಳಿಯದ ಹಾಗೆ ಇಲ್ಲಿಯೇ ನಾಗವೇಣಿಯ ಅಣ್ಣನಾಗಿ ಉಳಿಯಲೇ? ಇದು ಹೇಸಿಗೆಯ ಕೆಲಸ. ತನಗೆ ಹೇಳಿದ್ದಲ್ಲ. ಹಿಂದಿನ ರಾತ್ರಿ ನಡೆದುದೇ ಹೆಚ್ಚಾಯಿತು. ಮತ್ತೂ ಮುಂದುವರೆಯುವುದು ಬೇಡ.

ಸೀತಾಪರ್ವತದ ಬೆನ್ನಮೇಲಿಂದ ಅರಲಗೋಡಿನತ್ತ ತಿರುಗಿ, ಇಳಿದ, ನೀರು ತಣ್ಣಗೆ ನಿಂತಿತ್ತು. ಸಂಪ ಕಾಣುತ್ತಿತ್ತು. ಅಲ್ಲಿಯವರೆಗೂ ಈಜಬಲ್ಲೆನೆಂಬ ಭರವಸೆ ಇತ್ತು. ಅಂಗಿ-ಪಂಚೆ ಬಿಚ್ಚಿ ತಲೆಗೆ ಕಟ್ಟಿಕೊಂಡು ನೀರಿಗೆ ಹಾರಿದ. ಹೆಚ್ಚು ಯೋಚನೆ ಮಾಡುವಂತಿರಲಿಲ್ಲ.
ನೀರಿನಲ್ಲಿ ಪ್ರವಾಹ ಸೆಳೆತವಿರಲಿಲ್ಲ. ನೀರು ಶಾಂತವಾಗಿಯೇ ಇತ್ತು. ಕೈ ಬೀಸುತ್ತ, ನೀರನ್ನು ಹಿಂದಕ್ಕೆ ತಳ್ಳಿಕೊಂಡು ಅಷ್ಟು ದೂರ ಬಂದವನು, ಬೇಕೆಂದೇ ತಿರುಗಿ ನೋಡಿದ. ನಾಗವೇಣಿ ದಂಡೆಯ ಮೇಲೆ ನಿಂತು ಕೈ ಬೀಸುತ್ತಿದ್ದಾಳೆ. ಅವಳನ್ನು ಗಮನಿಸದೆ ಎದೆಯನ್ನು ಕಲ್ಲುಮಾಡಿಕೊಂಡು ಕೈ ಬಡಿದ. ಇನ್ನೂ ಸ್ವಲ್ಪ ಮುಂದೆ ಬಂದು ನೋಡಿದ. ದಂಡೆಯ ಮೇಲೆ ನಾಗವೇಣಿ ಇರಲಿಲ್ಲ. ಅವಳ ತಲೆಯಷ್ಟೆ ನೀರಿನಲ್ಲಿ ಮೇಲೆದ್ದು ಕಾಣದಾಯಿತು. ‘ನಾಗೂ’ ಎಂದು ಕೂಗಿ ತಿರುಗಿದ. ವೇಗವಾಗಿ ನೀರನ್ನು ಸೀಳಿಕೊಂಡು ಅತ್ತ ನುಗ್ಗಿದ.

ನಾಗವೇಣಿ ‘ಕೃಷ್ಣಯ್ಯಾ’ ಎಂದು ಕೂಗಿಕೊಂಡು ಮನೆಯಿಂದ ಹೊರಬಿದ್ದಾಗ ಗಣಪಯ್ಯನಿಗೆ ಎಚ್ಚರ. ಇವಳೇಕೆ ಕೂಗಿಕೊಂಡಳು ಎಂದು ಎದ್ದು ಹೊರಬಂದ. ನಾಗವೇಣಿ ಅರಲಗೋಡಿನ ದಾರಿ ಹಿಡಿದು ಓಡುತ್ತಿದ್ದಾಳೆ.

ಗಣಪಯ್ಯ ಬಾಗಿಲೆಳೆದುಕೊಂಡು ನಾಗವೇಣಿಯ ಬೆನ್ನು ಹತ್ತಿದ. ಇದು ಇಲ್ಲಿಗೆ ಬಂದು ಮುಟ್ಟುತ್ತದೆಂಬುದು ಎಂದೋ ಖಚಿತವಾಗಿತ್ತು. ಇಂದು ಮಾತ್ರ ಯಾವುದಾದರೊಂದು ತೀರ್ಮಾನವಾಗಿಬಿಡಬೇಕು ಎಂದು ನಿರ್ಧರಿಸಿದ. ಯಾವುದೋ ಕ್ರೀಡೆಯನ್ನು ದೂರ ನಿಂತು ನೋಡುವವನಂತೆ ನಿರಾಸಕ್ತಿಯಿಂದ ಸೀತಾಪರ್ವತ ಹತ್ತಿ ಇಳಿದು, ನೀರಿನತ್ತ ಬಂದ. ಕೃಷ್ಣಯ್ಯ ಈಜಿಕೊಂಡು ಹೋಗುತ್ತಿದ್ದ. ದಂಡೆಯ ಮೇಲೆ ನಿಂತ ನಾಗವೇಣಿ ಅಳುತ್ತ-ಕರೆಯುತ್ತ ಪರದಾಡುತ್ತಿದ್ದಳು. ಗಣಪಯ್ಯ ಮರಗಲ ಮರೆಯಲ್ಲಿ ನಿಂತು ನೋಡಿದ. ನೋಡಿಯೇ ನೋಡಿದ…
ನಾಗವೇಣಿ ಧ್ವನಿ ಎತ್ತರಿಸಿ ಕೂಗಿದಳು. ಕೃಷ್ಣಯ್ಯ ತಿರುಗಿಬಾರದಿರಲು ಅವಳು ದಂಡೆಯ ಮೇಲಿಂದ ನೀರಿಗೆ ಹಾರಿಕೊಂಡಳು.

ಗಣಪಯ್ಯ ಮುನ್ನುಗ್ಗಿದ. ಕೃಷ್ಣಯ್ಯ ವೇಗವಾಗಿಯೇ ಬಂದ-ನಾಗವೇಣಿ ನೀರಿಗೆ ಬಿದ್ದಲ್ಲಿಗೆ. ಎರಡು ಮೂರು ನಿಮಿಷಗಳವರೆಗೆ ಅದೇನೋ ಹೋರಾಟ-ನೀರ ಚೆಲ್ಲಾಟ ಕಾಣಿಸಿತು. ಆ ನಂತರ ಏನೂ ಕಾಣಿಸಲಿಲ್ಲ. ಎಲ್ಲವೂ ಸ್ತಬ್ದವಾಗಿ, ಶಾಂತವಾಗಿ ನೀರು ಎಂದಿನಂತೆಯೇ ತಣ್ಣಗೆ ಹೆಪ್ಪುಗಟ್ಟಿ ನಿಂತುಬಿಟ್ಟಿತು.

ಏನು ಮಾಡಬೇಕೆಂದೇ ತಿಳಿಯದಾಯಿತು, ಅಳಬೇಕೆ? ನಗಬೇಕೆ? ನೀರಿಗೆ ಹಾರಿ ಅವರನ್ನು ಹುಡುಕಬೇಕೆ? ಇಲ್ಲ ತಾನೂ ಅವರ ದಾರಿ ಹಿಡಿಯಬೇಕೆ?

ನಿಧಾನವಾಗಿ ನಡೆದುಕೊಂಡು ಮನೆಯತ್ತ ಬಂದ. ಚಪ್ಪರದ ಒಳಗೆ ಕಾಲಿಡುತ್ತಿರುವಾಗ ಅದೇನೋ ಗುರುಗುಡುವ ಸದ್ದು ಕೇಳಿಸಿತು. ತಲೆ ಎತ್ತಿ ನೋಡಿದ-ಹುಲಿ!

ಮುಂದಿನ ಪಂಜಗಳನ್ನು ನೆಲದ ಮೇಲೆ ಊರಿಕೊಂಡು, ಜಗುಲಿಯ ಸೆಗಣಿ ಸಾರಿಸಿದ ನೆಲಕ್ಕೆ ಬಾಲ ಬಡಿಯುತ್ತ, ಒಮ್ಮೆ ಆ ಎಂದು ಆಕಳಿಸಿ, ನಾಲಿಗೆಯಿಂದ ಗಾಳಿ ನೆಕ್ಕಿ, ಗಣಪಯ್ಯನನ್ನು ಹಸಿವಿನಿಂದ, ಆಸೆಯಿಂದ, ಕಾಮದಿಂದ ನೋಡಿ ಗುರ್ರ್ ಎಂದಿತು ಹುಲಿ.

ಗಣಪಯ್ಯ ಮುಂದಿಟ್ತ ಹೆಜ್ಜೆಯನ್ನು ಪ್ರಯಾಸದಿಂದ ಕಿತ್ತು ಹಿಂದೆ ಸರಿಯಲಾರಂಭಿಸಿದ. ಹುಲುಯ ಕಣ್ಣು ಮಿಂಚಿತು. ಮೈ ಅರಳಿತು. ಹುಲಿ ನೆಲವನ್ನು ಕಾಲುಗಳಿಂದ ಅಮುಕಿ ಮೇಲೆ ನೆಗೆಯಿತು. ಗಣಪಯ್ಯ ಅರಚಿಕೊಳ್ಳಲೆಂದು ಬಾಯಿ ತೆರೆದ ಅಷ್ಟೆ…

ಹೊಸಮನೆ ಹಳ್ಳಿಯ ಸುತ್ತ ಶರಾವತಿಯ ನೀರು ನಿಂತೇ ಇತ್ತು. ಸೀತಾಪರ್ವತದ ಮೇಲಿಂದ ಗಾಳಿ ಬೀಸುತ್ತಲೇ ಇತ್ತು. ಮಳೆ ಬೀಳುತ್ತಲೇ ಇತ್ತು-ಮೊಗ್ಗೆ….ಉಬ್ಬೆ…ಉತ್ತರೆ…ಹಸ್ತ…ಚಿತ್ತ…….
*****
ಮುಗಿಯಿತು

ಕೀಲಿಕರಣ: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.