ತೇರು – ೨

ಆಹಾ…
ಸ್ವಾಮೀಯ ಸೇವಾಕ್ಕ ಮಗನನ್ನ ಕೊಟ್ಟ ಅಪ್ಪ ಅಂಬುವ ಆ ದ್ಯಾವಪ್ಪನಿಗೆ
ದೇಸಾಯರು ಏನು ಕೊಟ್ಟಾರೊ
ಸ್ವಾಮೀಯ ಸೇವಾಕ್ಕ ಮಗನನ್ನ ನೀಡಿದ್ದಕ್ಕ ಹೇಳಿಧಂಗ ಕೊಟ್ಟಾರೆ –
ಆಹಾಣಿ…
ಎಂಟೆಕರೆ ಹೊಲವಾ ಕೊಟ್ಟಾರೇ
ಧರಮನಟ್ಟೀಯ ತೆಂಕಣದ ಹಳ್ಳಿ …ಕಳ್ಳೀಗುದ್ದಿ ಅಂಬೋ ಊರೂ…ಅಲ್ಲಿ ಎಂಟೆಕರೆ ಮಡ್ಡೀಯ ಭೂಮೀಯ ಬರದು ಕೊಟ್ಟಾರು
ಹರ ನನ್ನ ಮಾದೇವೈ ||
*
*
*
ನಾನು ಮರದಿವಸದ ನಾನು ರಥೋತ್ಸವ ಮುಗಿಸಿಕೊಂಡು ಅಲ್ಲಿಂದ ಕಳ್ಳೀಗುದ್ದಿಗೆ ಹೋದೆ.ಕಳ್ಳೀಗುದ್ದಿಗೆ ಹೋಗಿ ಅಲ್ಲಿ ಗೊಂಬೀರಾಮರ-ಸೂತರದ ಗೊಂಬಿಯ ಆಡಿಸುವ -ರಗತ ತಿಲಕದವರ ಮನಿ ಹುಡಿಕಿಕೊಂಡು ಹೋಗಿ-
ಅಲ್ಲಿ ದೇವರ ಜಗಲಿಯ ಮ್ಯಾಲ ಇಟ್ಟಿದ್ದ ಧರಮನಟ್ಟಿಯ ದೇಸಗತಿಯವರು ಬರದಕೊಟ್ಟ ಸನದನ್ನು ನೋಡಿದೆ.ಆ ಸನದನ್ನು ನೋಡಿ ನನ್ನ ಕುತೂಹಲವನ್ನು ತಣಿಸಿಕೊಂಡ ಮೇಲೆಯೇ ಅಲ್ಲಿಂದ ಬೆಂಗಳೂರಿಗೆ ಬಂದೆ…ಸನದಿನಲ್ಲಿ ಇದ್ದ ಮುಖ್ಯ ಮಾತು ಅಂದರೆ –
…ಈ ಜಗತ್ತಿನ್ಯಾಗ ಸೂರ್ಯಾ ಚಂದ್ರಾಮರು ಇರುವ ತನಕಾ ಮುಗಿಲಿನ್ಯಾಗ ನಕ್ಷತ್ರಗೋಳು ಇರೋತನಕಾ ಭೂಮಿಯ ಮ್ಯಾಲೆ ಧರಮನಟ್ಟಿಯ ದೇಸಗತೀ ಇರತದೆ…
ಧರಮನಟ್ಟಿಯ ದೇಸಾಯರ ನೆಳ್ಳಿನ್ಯಾಗ ವಿಟ್ಠಲ ಸ್ವಾಮಿಯ ತೇರು ನಿರಂತರ ಎಳೀತದೆ…
ಸ್ವಾಮಿಯ ಈ ರಥಕ್ಕೆ ಪ್ರಪಂಚದೊಳಗೆ ಗೊಂಬೀರಾಮರ ದ್ಯಾವಪ್ಪನ ವಂಶಸ್ತರು ಎಲ್ಲೇ ಇರಲಿ ಅವ್ರು ಧರಮನಟ್ಟಿಯ ವಿಟ್ಠಲ ಸ್ವಾಮಿಯ ತೇರಿಗೆ ಬಂದು ಒದಗಬೇಕು… ಗೊಂಬೀರಾಮರ ದ್ಯಾವಪ್ಪನ ವಂಶಸ್ತರು ಧರಮನಟ್ಟಿಯಲ್ಲಿ ಚೈತ್ರ ಶುಕ್ಲ ನವಮೀ ಮೂರ್ತದಾಗೆ ಎಳೆಯುವಂಥಾ ವಿಠ್ಠಲ ಸ್ವಾಮಿಯ ತೇರಿಗೆ ಬಂದು –
ಆ ತೇರಿನ ಗಾಲಿಗೆ ತಮ್ಮ ತೆಲಿಯನ್ನ ಹೊಡದು –
ನೊಸಲಿನಿಂದ ಬಸಿಯುವಂಥಾ ಹಸೀ ರಕ್ತವನ್ನ ಬಲಗೈ ಹೆಬ್ಬಟ್ಟಿನ ಮ್ಯಾಲೆ ಧರಿಸಿ ಅದರಲೇ ಸ್ವಾಮಿಯ ರಥದ ಮೂಡಣ ದಿಕ್ಕಿನ ಮುಖಕ್ಕೆ ತಿಲಕವನ್ನು ಇಡಬೇಕು
ಈ ರಗತ ತಿಲಕದ ಸೇವಾ ಅನ್ನುದು ಜಗತ್ತು ಅನ್ನುದು ಪ್ರಳೆ ಆಗಿ ನಾಶ ಆಗೂತನಕಾ – ಸೂರ್ಯಾ ಚಂದ್ರಾಮ ಚಿಕ್ಕಿ ಇರೂತನಕಾ ಅನೂಚಾನವಾಗಿ ನಡಿಯತಕ್ಕದ್ದೆಂದು
ರವಿಕುಲ ಸಂಭೂತ ಪೇಶವೇ ಸಾಮ್ರಾಜ್ಯ ಬಂಧು ರಾಜಮಾನ ರಾಜಶ್ರಿ ರಂಗೋ ಪಟವರ್ಧನ ದೇಸಾಯರು ಬರಸಿದ ಆe ಪತ್ರ ಎಂಬುವ ಈ ಸನದನ್ನ ಲಿಪಿಕಾರ ಶಾಸ್ತ್ರದ ಹಂಪಯ್ಯನವರು ಬರದಾರೆ ಮತ್ತು ದೇಸಾಯರ ಕಾರಭಾರಿ ಆದಂಥ ತ್ರ್ಯಂಬಕ ಭಟ್ಟರು ಇದಕ್ಕೆ ಒಪ್ಪವ ಹಾಕಿದಾರೆ
|| ಇತಿ ಶ್ರಿ ||

ಭಾಗ : ಎರಡು
ಸೂತರದ ಗೊಂಬೀ ಆಡಿಸುವ ಗೊಂಬೀರಾಮರ ದ್ಯಾವಪ್ಪ ಹಿಂಗ ಧರಮನಟ್ಟಿಯ ದೇಸಾಯರು ಹಾಕಿಕೊಟ್ಟ ಉಂಬಳಿಯ ಸನದನ್ನ ಹಿಡಕೊಂಡು ಕಳ್ಳೀಗುದ್ದಿಯೆಂಬ ಹಳ್ಳಿಗೆ ಬಂದು ನೆಲೆ ನಿಂದರತಾನೆ….ಜಾತಿ ಕುಲಾ ಗೊತ್ತಿಲ್ಲದ ಯಾವದೋ ಊರಿನ ಪರದೇಶಿಯು ತನ್ನ ಹೇಂತಿ ಮಕ್ಕಳನ್ನು ಕಟಿಗೊಂಡು ಬಂದು, ಚಾವಡಿಯಲ್ಲಿ ಕುಂತ ಗೌಡನಿಗೆ ಕೈಮುಗದು ‘ಯಪ್ಪಾಣಿ…’ ಹಿಂಗಿಂಗರೀ…ಅಂತ ತೇರಿನ ಕಥೀ ಹೇಳಿ, ದೇಸಗತಿಯ ದೈವಕ್ಕ ಮಗನನ್ನ ಬಲಿಕೊಟ್ಟ ಕಥಿಯನ್ನ ಕಣ್ಣು – ಮನಸು ತುಂಬುವ ಹಂಗ ವರ್ಣಸತಾನೆ…ಸೂತರದ ಗೊಂಬೀ ಆಡಿಸಿ ಕಥೀ ಹೇಳುವ ಕಿಳ್ಳೇ ಕ್ಯಾತ ಅಂವ…ಕಾಣದ ಕಥಿಯನ್ನಣಿಕಂಡಂಗೆ ಹೇಳುವವ ಅಂವ…ಇನ್ನು ತನ್ನ ತೊಗಲಿಗೇ ಅಂಟಿದ ಅನುಭವಕ್ಕೆ ಬಣ್ಣಾ ತುಂಬುವುದನ್ನ ಯಾರಾದರೂ ಹೇಳಿಕೊಡಬೇಕೇನು !… ತನ್ನ ಮಗನ ಎದಿಯ ಮ್ಯಾಲೆ ಸ್ವಾಮಿಯ ತೇರು ಹಾಯತಿದ್ದಂಗೇ ತೇರಿನ್ಯಾಗಿನ ಇಟ್ಠಲ ಸ್ವಾಮಿಯ ಮೀಸಿಗಳು ಕುಣದವೂ… ಸ್ವಾಮಿಯ ಕಣ್ಣಿನ್ಯಾಗಿಂದ ಬೆಂಕಿಯ ಕೆಂಡದಂಥಾ ಬೆಳಕು ಚಿಮ್ಮಿ…ಆ ಬೆಳಕಿಗೆ ತನ್ನ ಹೇಂತಿಯ ಕಣ್ಣು ಕುಕ್ಕಿ -ಆಕಿ ಕಕ್ಕಾವಿಕ್ಕಿಯಾಗಿ ಬೇಹೋಶ್ ಆಗಿ ಹೆಂಗೆ ಬಿದ್ದಳೆಂಬುವದನ್ನ – ಸ್ವತಾ ದೇಸಾಯರ ರಾಣೀಸಾಹೇಬರಣಿ ಮುಂದ ನಿಂತು ತನ್ನ ಹೇಂತಿನ್ನ ಹೆಂಗ ಮೇಣೇದಾಗ ಹಾಕಿಸಿಕೊಂಡು ಅವಸರದಿಂದ ವಾಡೇಕ್ಕಣಿ ಕರಕೊಂಡು ಹೋಗಿ -ಹೆಂಗ ಸ್ವತಾ ತಾನಣಿ ಉಪಚಾರ ಮಾಡಿದಳೂ ಅಂಬುವುದನ್ನ….ಎಲ್ಲಾ ಕಥೀ ಮಾಡಿ ಹೇಳಿ …ದೇಸಾಯರು ಬರಸಿಕೊಟ್ಟ ಉಂಬಳಿಯ ಸಂಗತೀ ಹೇಳಿ …‘ಈಗ ನಿಮ್ಮ ಆಶ್ರೇಕ್ಕ ಬಂದದೀವು ತಂದೇ…ನೀವಣಿ ತಂದಿ …ನೀವಣಿ ತಾಯಿ…ದೇಸಾಯರು ಹೇಳಿದ ಪರಕಾರ ನನಗ ಹೊಲಾ ತೋರಸರೀ…’ ಅಂತ ಪ್ರಾರ್ಥನಾ ಮಾಡಿಕೊಂಡ. ಆದರೆ ಗೌಡನಿಗೆ… ಇವನದು ಯಾವ ಜಾತಿಯೋ-ಏನು ಕಥೆಯೊ…ಯಾರಿಗೆ ಗೊತ್ತು?…ಇಂವಗ ಹೊಲಾ ಕೊಡಬೇಕೋ ಏನ ಬಿಡಬೇಕೋ ಅಂತ ಅವನ ಮನಸಿನ್ಯಾಗ ಸಂಶೇ ಮೂಡಿತು…ಆಗ ಗೌಡ –
‘ನಿಂದು ಯಾವ ಜಾತಿ?…’ ಅಂತ ಕೇಳಿದ.
‘ನಾವು ಗೊಂಬೀರಾಮರ ಜಾತ್ಯಾವರರೀ…’.
ಗೌಡಗ ತಿಳೀಲಿಲ್ಲ.ಹಿಂತಾ ಜಾತ್ಯಾವರು ಕಳ್ಳೀಗುದ್ಯಾಗ ಯಾರೂ ಇದ್ದಿರಲಿಲ್ಲ.ಅಂವ
‘…ಅಂದರಣಿ…?’ ಅಂದ.
‘ಅದಣಿರೀ….ಹಾಂ…ಕಿಳ್ಳೀಕ್ಯಾತರರಿ’.
ಗೌಡಗ ಬಗೀಹರೀಲಿಲ್ಲ.
…ಬರಾಬ್ಬರೀ ಅದಣಿ ಹೊತ್ತಿಗಂದರಣಿ ದುಸ್ಯಪ್ಪಗೋಳ ಸಂತ ರಾಮಜೀ ಅಗಸಿಯೊಳಗ ಹಾದು ಚಾವಡೀ ಮುಂದ ಹೊಂಟಿದ್ದ.ಗೌಡರು ಅಂವನ್ನ ‘ರಾಮಜೀ…ಒಂದೀಟಣಿ ಇಲ್ಲಿ ಬಾ…’ಅಂತ ಕರದು ಇವನ ಸುದ್ದೀ ಹೇಳಿದರು… ರಾಮಜೀ ಪಂಢರಾಪುರದ ವಿಠ್ಠಲನ ಭಕ್ತ. ಪ್ರತೀ ವರ್ಷ ಸತ್ತಿಗೇರಿಯ ದಿಂಡೀ ಜೋಡಿ ಪಂಢರಾಪುರಕ್ಕ ಹೋಗಿ ದರಶನಾ ಮಾಡಿಕೊಂಡು ಬರುವಂಥಾ ಮನಶಾ…ಈಗ ಧರಮನಟ್ಟಿಯ ವಿಠ್ಠಲನ ತೇರಿನ ಕಥಿಯನ್ನ ಕೇಳತಿದ್ದಂಗಣಿ ಅಂವ ಹಂಗಣಿ ನಿಂತ ನಿಂತಲ್ಲೇ ಉದ್ದಕಣಿ ಬಿದ್ದು ದ್ಯಾವಪ್ಪಗ ನಮಸ್ಕಾರ ಮಾಡಿದ…ಹಂಗ ನಮಸ್ಕಾರ ಮಾಡಿ ‘ನೀನಣಿ ಪುಣ್ಣೇವಂತ ಬಿಡಪಾ…ಸ್ವಾಮಿಯ ರಥಕ್ಕ ಮಗನ್ನ ಕೊಟ್ಟು ನೂರ ಜಲಮಕ್ಕ ಸಾಕಾಗುವಷ್ಟು ಪುಣ್ಣೇ ಪಡಕೊಂಡಿ…ದೇಸಾಯರು ನಿನಗ ನಮ್ಮ ಊರಾಗ ಹೊಲಾ ಕೊಟ್ಟು ನಮ್ಮ ಊರಿಗೇ ದೊಡ್ಡ ಉಪಕಾರಾ ಮಾಡಿದಂಗಾತು…ದಿನಾ ಹರ್‍ಯಾಗ ನಿನ್ನ ಮಕಾ ನೋಡಿ ನಮ್ಮ ಪಾಪಾ ಕಳಕೊಳ್ಳೂದಕ್ಕ ಅನೂ ಆತು…ಏ…ದೇಸಾಯರು ನಿನಗ ಇಲ್ಲಿ ಹೊಲಾ ಕೊಟ್ಟದ್ದು ಅಗದೀ ಬೇಶಾತು ನೋಡು…’ ಅಂತಂದು ಮತ್ತೊಮ್ಮೆ ಕೈಮುಗದ….
…ಕಳ್ಳೀಗುದ್ದಿಗೆ ಧರಮನಟ್ಟಿಂದ ಎಂಟು ಹತ್ತು ಹರದಾರಿಯ ಹಾದಿ… ಹಿಂಗಾಗಿ ಕಳ್ಳೀಗುದ್ದಿಯ ಗೌಡನಿಗೆ ಧರಮನಟ್ಟಿಯ ದೇಸಾಯಿಯ ಅಂಜಿಕಿಯದೇನೂ ಹಂತಾ ಜೋರ ಇರಲಿಲ್ಲ. ಆದರ ಈಗ ಸಂತ ರಾಮಜೀ ಆಡಿದ ಮಾತು ಕೇಳಿದ ಮ್ಯಾಲ ಗೌಡಗೂ ದ್ಯಾವಪ್ಪನ ಬಗ್ಗೆ ಒಂದ ನಮೂನಿಯ ಭಕ್ತಿ ಅಂಬುವದು ಮೂಡಿಧಂಗಾತು… ತನ್ನ ತೇರಿಗೆ ಮಗನ ಜೀವಾ ಕೊಟ್ಟ ಮನಶಾನ ಹಿಂದ ವಿಠ್ಠಲ ದೇವರಣಿ ನಿಂತಿರತಾನು ಅಂತ ಅನಿಸಿ ಸನದಿನೊಳಗ ಎಂಟು ಎಕರೆ ಮಡ್ಡಿಯ ಜಮೀನು ಬರದಿದ್ದರೂ ಛಲೂಹಂತಾ ಮಸಾರೀ ಭೂಮೀನಣಿ ಕೊಟ್ಟ…ಇಷ್ಟರ ಮ್ಯಾಲೆ ದ್ಯಾವಪ್ಪನ ಒಕ್ಕಲುತನಕ್ಕ ತನ್ನ ಒಂದ ಜೋಡೀ ಹಳೇ ಕ್ವಾಣಗೋಳನ ಹೊಡದು ಕಳಿಸಿದ.

…ಕಳ್ಳೀಗುದ್ದಿಯ ಗೌಡ ದ್ಯಾವಪ್ಪನಿಗೆ, ಊರು ಮತ್ತ ಹೊಲಗೇರಿಯ ನಡಕಿನ ಒಂದು ಜಾಗಾ ತೋರಿಸಿ ಗುಡಸಲಾ ಹಾಕ್ಕೋಲಿಕ್ಕೆ ಹೇಳಿದ…ದ್ಯಾವಪ್ಪ ಒಂದ ತಾತ್ಪೂರ್ತಿಕ ಗುಡಸಲಾ ಕಟಿಗೊಂಡ…ಮುಂದ ಇರ ಇರತಣಿ ಕಾಡುಗಲ್ಲು ಎಬ್ಬಿಕೊಂಡು ತಂದು -ಮಣ್ಣಿನ ಮಾಳಿಗಿಯ ಮನೀ ಕಟಿಗೊಂಡ…ಮನಿಯ ಮುಂದ ಸಣ್ಣದೊಂದು ಕಟ್ಟಿ…ತಲಬಾಗಲಾ ದಾಟಿ ಒಳಗ ಹೋಗತಿದ್ದಂಗಣಿ ಎಡಕ್ಕ ನೆಲಮಟ್ಟಕ್ಕಿಂತಾ ಒಂದ ಮಳಾ ಎತ್ತರ ಇದ್ದ ಸಣ್ಣದೊಂದು ಪಡಸಾಲಿ…ಪಡಸಾಲಿಯನ್ನ ದಾಟಿದ ಮ್ಯಾಲೆ ದನದ ಹಕ್ಕಿ.ಅದನ್ನ ದಾಟಿದ ಮ್ಯಾಲೆ ನಡಮನಿ…ನಡಮನಿಯ ಎಡಮೂಲಿಯೊಳಗ-ಅಂದರ ದೇವಮೂಲಿಗೆ-ದೇವರ ಜಗಲಿ.ನಡಮನಿಯನ್ನ ದಾಟಿದ ಮ್ಯಾಲೆ ಬರುವ ಅಡಿಗೀ ಮನಿ…ಅಲ್ಲೇ ಮೂಲ್ಯಾಗ ಸಣ್ಣದೊಂದು ಬಚ್ಚಲು… ಹಿಂಗ ದ್ಯಾವಪ್ಪ ತಮ್ಮ ಕುಲಾಚಾರದ ಪ್ರಕಾರನಣಿ ಮನೀ ಕಟಿಗೊಂಡು,ದೇಸಾಯರು ಬರೆಸಿಕೊಟ್ಟ ಸನದಿಗೆ ಕಾಜಿನ ಕಟ್ಟು ಹಾಕಿಸಿ ದೇವರ ಜಗಲಿಯ ಮ್ಯಾಲೆ ಇಟ್ಟ…ದ್ಯಾವಪ್ಪನ ಹೇಂತಿ ಲಗಮವ್ವಗ ಆ ಸನದು ಕಂಡರೆ ತೇರಿನ ಗಾಲಿ ಹಾದು -ರಗತ ರಾಣಾ ರಂಪ ಆಗಿ-ಪ್ರಾಣಾ ಬಿಟ್ಟು …ಮುದ್ದಿಯಾಗಿ ಬಿದ್ದ ಮಗನ ನೆನಪು ಬಂದು – ಆಕಿಯ ಹೊಟ್ಯಾಗ ಬೆಂಕಿ ಬಿದ್ದಂಗ ಆಗತಿತ್ತು .ಹಂತಾದ್ದರಾಗ ತನ್ನ ಗಂಡ ಆ ಸನದಿಗೆ ಸಿಂಗಾರ ಮಾಡಿ – ಕನಡೀ ಹಳ್ಳು ಹಾಕಿಸಿ ದೇವರ ಜಗಲೀ ಮ್ಯಾಲೆ ಇಟ್ಟು ಪೂಜೀ ಮಾಡಿದರ ಆಕಿಗೆ ಏನಾಗಬ್ಯಾಡ !?…ಆಕಿ ‘ನನ್ನ ಮಗನ ರಗತಾ ಕುಡದ ಕಾಗಜ ಅದು…ಅದ ರಾಗಸಸ ಐತಿ…ಮದಲ ಅದನ್ನ ದೇವರ ಜಗಲೀ ಮ್ಯಾಲಿಂದ ತಗೀ…ನೀ ತಗೀದಿದ್ದರ ನಾನಣಿ ಅದನ್ನ ತಗದ ಹೊರಗ ಒಗೀತನ ನೋಡು…’ಅಂತ ರಂದೀ ಮಾಡಿದಳು.ದ್ಯಾವಪ್ಪ ಒಂದ ಸ್ವಲ್ಪನೂ ದನೀ ಜೋರ ಮಾಡದಣಿ ಒಂದಣಿ ಒಂದು ಮಾತು ಹೇಳಿದಾ -‘ಅದಕ್ಕ ಏನಾರ ಕೈ ಹಚ್ಚು…ನಿನ್ನ ಣಿ ಮತ್ತ ನಿನ್ನ ಹೊಟ್ಯಾಗಿನ ಕೂಸು -ಇಬ್ಬರನೂ ಬಲೀ ಕೊಡತನು…ಹುಸಾರ್ !’…ಹಿಂಗ ಅಂಜಿಸಿದ್ದೇನೋ ಆತು.ಆದರ ಲಗಮವ್ವ ಯಾವಾಗರೇ ಈ ಅಂಜಿಕಿಯ ಹದ್ದು ಮೀರಿ ಅದಕ್ಕ ಧಕ್ಕೀ ತಂದಗಿಂದಾಳು ಅಂತ ಅನಿಸಿ ದ್ಯಾವಪ್ಪ ದೇವರ ಜಗಲಿಯ ಪೂರ್ತೇ ಗ್ವಾಡೀ ಎಬ್ಬಿಸಿ ಒಂದ ಸಣ್ಣ ಗೂಡು ಕಟ್ಟಿ ಅದಕ್ಕ ಬಾಗಲಾ ಹಚ್ಚಿಸಿ ಕೀಲೀ ಹಾಕಲಿಕ್ಕೆ ಬರೂಹಂಗ ವ್ಯವಸ್ತಾ ಮಾಡಿಕೊಂಡ… ದೇವರಗೋಳನ ಮತ್ತ ಅವುಗಳ ನಡಬರಕ ಕುಂತಿದ್ದ ಕನಡೀ ಕಟ್ಟು ಹಾಕಿಸಿದ ಸನದನ್ನ ಗೂಡಿನ್ಯಾಗ ಇಟ್ಟು ಕೀಲೀ ಹಾಕಲಿಕ್ಕೆ ಸುರುಮಾಡಿದ…
…ಮುಂದ ಲಗಮವ್ವಗ ಗಂಡ ಕೂಸು ಹುಟ್ಟಿ ಅದು ಹುಟ್ಟಿದ ಎರಡು ದಿವಸಕ್ಕಣಿ ಸತ್ತು ಸುಡುಗಾಡು ಸೇರಿತು…ಲಗಮವ್ವ ತನ್ನ ಈ ಕೂಸನ್ನೂ ದೇವರಂಬುವ ಆ ರಾಗಸಸನಣಿ ಬಲೀ ತಗೊಂಡ ಅಂತ ‘….ಇನಣಿ ನಿನ ಹೊಟ್ಟಿ ತುಂಬಲಿಲ್ಲೇನೋ… ನಿಂದೇನ ಅದು ಹೊಟ್ಯೋ ಇಲ್ಲಾ ಹತ್ತೀ ತುಂಬೂ ಭಟಾರೋ…?ಚಂದಾಳ ಗೊಂಬೀಹಂತಾ ನನ್ನ ಮಗನ ರಗತಾ ಕುಡದು ನಿನ ಒಡ್ಲು ತಣೀಲಿಲ್ಲ ಏನೋ…ನನ್ನ ಎಳೀ ಕಂದನ್ನೂ ತಿಂದೆಲ್ಲೊ…’ ಅಂತ ಹಾಡ್ಯಾಡಿಕೊಂಡು ಅತ್ತಳು…ಕೂಸು ಸತ್ತು ಎಂಟ್ಹತ್ತು ದಿನಾ ಆಗಿರಬೇಕು…ಒಂದ ದಿನಾ ದ್ಯಾವಪ್ಪ ಮರಮಾತಿಗೆ ಬಿದ್ದು ದೇವರ ಗೂಡಿನ ಕೀಲೀ ತಗದು ಹೊಳ್ಳಿ ಅದನ್ನ ಹಾಕದಣಿ ಹಂಗಣಿ ಬಿಟ್ಟಿದ್ದ…ಲಗಮವ್ವ ಕನಡೀಹಳ್ಳು ಹಾಕಿಸಿದ ಸನದನ್ನ ತಗೊಂಡು …ಇನ್ನೇನು ಅದನ್ನ ಒಡದು ನಾಶ ಮಾಡೇ ಬಿಡಬೇಕು…ಅಷ್ಟರಾಗಣಿ ದ್ಯಾವಪ್ಪ ಅದನ್ನ ನೋಡಿ ಓಡಿಬಂದು,ಆಕೀ ಕೈಯಾಗಿಂದ ಅದನ್ನ ಕಸಗೊಂಡು…ಆಕಿನ್ನ ಎಳದ ಒಗದ…ಲಗಮವ್ವನ ತೆಲೀ ಗ್ವಾಡಿಗೆ ಬಡದು … ಒಡದು…ಆಕಿ ಬೇಹೋಶ್ ಆಗಿ ಬಿದ್ದಳು… ಉಳ್ಳಾಗಡ್ಡೀ ಜಜ್ಜಿ ಮೂಗಿಗೆ ಹಿಡದೂ… ಮಕಕ್ಕ ನೀರು ಗೊಜ್ಜೀ…ಗೋಟಾಳೀ ಮಾಡಿದಮ್ಯಾಲಣಿ ಆಕಿಗೆ ಖಬರು ಬಂತು.ಆದರ ಈ ಘಟನಾ ಆದ ಮ್ಯಾಲ ಲಗಮವ್ವಗ ಅಬರ ಖಬರ ಆತು… ಆಕಿ ಒಂದ ನಮೂನೀ ಹುಚ್ಚೀ ಹಂಗ ಆದಳು…ಏನಕೇನರೇ ಮಾತಾಡೂದೂ-ಇದ್ದಕಿದ್ದಂಗೇ ಒಮ್ಮಿಂದೊಮ್ಮಿಗೇ ಗೋಳೋ ಅಂತ ಅಳೂದೂ-ವಿನಾಕಾರಣ ಖೊಕ್ಕ ಖೊಕ್ಕಂತ ನಗೂದೂ…ಹಿಂಗ ಮಾಡಾಕಿ…ಲಗಮವ್ವನ ಮ್ಯಾಲ ಸ್ವಾಮಿ ಸಿಟ್ಟ ಆಗ್ಯಾನ ಅಂತ ತಿಳದು ‘ಯಪ್ಪಾ ಸ್ವಾಮೀ…ನಿನ್ನಣಿ ನಂಬೀದನು ! ನನ್ನ ಸಂಸಾರದ ದೀಪಾ ಕಳೀಬ್ಯಾಡ. ಬುದ್ಧಿಯಿಲ್ಲದ ಹೆಂಗಸು…ತೆಪ್ಪ ಮಾಡೇತಿ.ಹೊಟ್ಯಾಗ ಹಾಕ್ಕೋ ತಂದೇ!…ನಿನ್ನ ಮಡಲಿಗೆ ಬಿದ್ದದೀವು.ಕೊಲ್ಲೂದೂ ಕಾಯೂದೂ ಎಲ್ಲಾ ನಿನ್ನಣಿ ಕೂಡೇತಿ… ಒಟ್ಟಣಿ ತೆಪ್ಪಸಧಂಗ ವರ್ಷಾ ವರ್ಷಾ ನಿಷ್ಠಾದಿಂದ ನಿಂದು ರಗತ ತಿಲಕದ ಸೇವಾ ಮಾಡತೀವು…’ ಅಂತ ದ್ಯಾವಪ್ಪ ಹರಕೀ ಹೊತ್ತ….ಮುಂದ ಎರಡ ತಿಂಗಳ ತನಕಾ…ಸಾವಕಾಶೆ ಸಾವಕಾಶೇ ಲಗಮವ್ವಗ ಸತ್ತ ಕೂಸಿನ ನೆನಪು ಮಸಕ ಮಸಕು ಆಗಿ-ಆಕಿಯ ದುಕ್ಕದ ಕಾವು ಆರಿತು…ಆಕಿ ಸಾವಕಾಶೆ ಸಾವಕಾಶೇ ಉಜ್ಜಳ ಆದಳು…ತಾ ಹರಕೀ ಹೊತ್ತದ್ದಕ್ಕಣಿ ಹೇಂತಿಗೆ ಆರಾಮ ಆತು ಅಂತ ದ್ಯಾವಪ್ಪಗ ಪಟಾಯಿಸಿ ಸ್ವಾಮಿಯ ಮ್ಯಾಲಿನ ಅವನ ನಂಬಿಕಿ ಇನಷ್ಟು ಹೆಚ್ಚ ಆತು…ಹೇಂತಿಗೂ ಹೇಳಿದ.ಆಕಿ ಒಪಿಗೊಂಡಳೋ ಬಿಟ್ಟಳೋ…ಅಂತೂ ದೇವರ ಗೂಡಿನ ಮುಂದ ಹೆಂಗಸರು ಬಂದರೆ ಮಡೀ ಕೆಟ್ಟು – ಮುಡಚಟ್ಟು ಆಗಿ ಸ್ವಾಮಿ ಕಾಡತಾನೆ… ಅದಕ್ಕಣಿ ದೇವರ ಗೂಡಿನ ಮುಂದ ಯಾರೂ ಹೆಂಗಸರು ಬರಬಾರದು-ಅವರ ನೆಳ್ಳು ದೇವರ ಗೂಡಿನ ಮ್ಯಾಗ ಬೀಳಬಾರದು – ಅಂತನ್ನುವ ವಿಧಿ ನಿಷೇಧಗಳು ದ್ಯಾವಪ್ಪನ ಮನಿಯೊಳಗ ಹುಟ್ಟಿಕೊಂಡವು…
ಕಳ್ಳೀಗುದ್ದಿಗೆ ಬಂದಮ್ಯಾಲೆ ದ್ಯಾವಪ್ಪ ರಗತ ತಿಲಕದ ಸೇವಾ ನಡಸಲಿಕ್ಕೆ ರಾಮನವಮಿಯ ದಿವಸದ ತೇರಿಗೆ ಇನ್ನೂ ಎರಡ ದಿನಾ ಐತಿ ಅನ್ನುವಾಗನಣಿ ಧರಮನಟ್ಟಿಗೆ ಹೋಗಿ ಠಿಕಾಣೀ ಹೂಡಿದ…ತೇರಿಗೆ ಬಂದ ಮಂದಿ ದ್ಯಾವಪ್ಪನ ಕಡೆ ಕೈಮಾಡಿ ತೋರಿಸಿ-ಅಂವನಣಿ ನೋಡದಣಿ…ಅಪಸಕುನ ಆಗಿ ದೇವರ ತೇರು ಮುಂದಕ ಸಾಗಂಗಿಲ್ಲ ಅಂತ ನಿಂತಬಿಟ್ಟಾಗ ತನ್ನ ಮಗನ್ನ ತೇರಿಗೆ ಅರಪಣಾ ಮಾಡಿ ಸ್ವಾಮಿಯ ತೇರು ಮುಂದಕ ನಡಿಯೂ ಹಂಗ ಮಾಡಿದಾಂವ… ಇನ್ನ ಮುಂದ ದಣಿರ ವರಸಾ

ಸ್ವಾಮಿಯ ತೇರಿಗೆ ತನ್ನ ತೆಲೀ ಒಡಕೊಂಡು ರಗತ ತಿಲಕಾ ಇಟ್ಟು ಸೇವಾ ಮಾಡತಾನು… ಅದಕ್ಕಣಿ ಎಡ್ಡ ದಿವಸ ಅಗಾವಣಿ ಬಂದಾನು…ಅಂತ ಹೇಳತಿದ್ದರೆ -ವಿಠ್ಠಲ ದೇವರ ಅಗದೀ ಮನಸಾ ಮತ್ತ ಖಾಸಾ ಭಕ್ತರಂಬುವವರು ಇವನ ಸನೇಕ ಬಂದು -‘ನಮಸ್ಕಾರ ಎಪ್ಪಾಣಿ…’ ಅಂತ ಕೈಮುಗದು ಹೋದರು…ಯಾರೋ ಭಕ್ತರು ಎಡೀ ಬಡಿಸಿ ತಂದು ಉಂಬಲಿಕ್ಕೆ ನೀಡಿದರು…ಮತ್ತ ಯಾರೋ ಭಕ್ತರು ಆಕಳಾ ಹಿಂಡಿದಗಳಸೇ ಒಂದು ಚರಿಗೀ ತುಂಬ ಹಾಲು ತಂದು ಕೊಟ್ಟರು…ದ್ಯಾವಪ್ಪನಿಗೆ ತನ್ನ ಬಗ್ಗೆ ಏನೋ ಒಂದು ತಿಳಧಂಗಾತು…ಖರೇ ಕೇಳಿದರ ಅಂವ ಕಳ್ಳೀಗುದ್ದಿಗೆ ಬಂದ ದಿವಸ -ಚಾವಡೀ ಹಂತೇಕ ದುಶಪ್ಪಗೋಳ ಸಂತ ತನಗ ಸಾಷ್ಟಾಂಗ ನಮಸ್ಕಾರ ಮಾಡಿದಾಗಲೇ ಹಿಂತಾದ್ದರ ಸೂಚನಾ ಸಿಕ್ಕಂಗ ಆಗಿತ್ತು…ಈಗ ರಗತ ಸೇವಾಕ್ಕಂತ ಧರಮನಟ್ಟಿಗೆ ಬಂದಾಗ ಅದರ ಹೊಳಹು ಪೂರಾ ಕಂಡಂಗಾತು…ರಾಮನವಮಿಯ ತೇರು ಮುಗಿಸಿಕೊಂಡು ಹೊಳ್ಳಿ ಕಳ್ಳೀಗುದ್ದಿಗೆ ಬರುವಷ್ಟರೊಳಗೆ ದ್ಯಾವಪ್ಪನ ಮುಖದ ಮ್ಯಾಲಿನ ಕಳೇನಣಿ ಬದಲಾಗಿ ಬಿಟ್ಟಿತ್ತು…
…ಸೇವಾ ಮುಗಿಸಿಕೊಂಡು ಕಳ್ಳೀಗುದ್ದಿಗೆ ಬಂದಮ್ಯಾಲೆ ದ್ಯಾವಪ್ಪನ ಮಾತಗೋಳು ಕಡಿಮಿ ಆಗಿ ವಿಠ್ಠಲನ ಜಪಾ ಜಾಸ್ತ ಆತು…ಯಾವಾಗ ನೋಡಿದರೂ ತುಟಿ ಪಿಟಿ ಪಿಟಿ ಅಂತ ಅಳಿಗ್ಯಾಡಿ…ಉಸರಿನ ಸಪ್ಪಳದಷ್ಟಣಿ ದನಿಯೊಳಗ ‘ವಿಠ್ಠಲ…ವಿಠ್ಠಲ ’ ಅನ್ನಾವ…ಅಂವ ನಡಕ ಒಮ್ಮೆ ಗೂಗೀಕೊಳ್ಳಕ್ಕ ಹೋಗಿ ನಾಕದಿನಾ ಅಲ್ಲೇ ಇದ್ದು ಬಂದ…ಮನ್ಯಾಗ ಹೇಳದಣಿ ಕೇಳದಣಿ ಹೋಗಿದ್ದ… ಲಗಮವ್ವ ಹೌಹಾರಿ ಕುಂತಳು…‘ನನ್ನ ಬಂಗಾರದಂಥಾ ಮಗನ್ನ ನುಂಗಿ ನೀರ ಕುಡದಾ…ಈಗ ನನ್ನ ಪರಪಂಚನಣಿ ಮುಣಗಸಬೇಕಂತ ಬೇತಾ ಮಾಡ್ಯಾನು…ಇನಣಿ ಏನೇನ ಮಾಡ ಬೇಕಂತ ಮಾಡ್ಯಾನೋ ಯಾಂವ ಬಲ್ಲ…’ ಅಂತ ದೇವರನ ಬೈದು ಸೊರ್ ಭರ್ ಅಂತ ಮೂಗು ಏರಿಸಿ ಸೆರಗಿನಿಂದ ಒರಸಿಕೊಂಡಳು…ದ್ಯಾವಪ್ಪ ಹೊಳ್ಳಿಬಂದ ಮ್ಯಾಲೆ – ‘ಮನ್ಯಾಗ ಹೇಳಿ ಹೋಗಿದ್ದರ ನಿನ ನಾಲಿಗ್ಗೆ ಮುಳ್ಳ ಮುರೀತಿದ್ದೂ ಏನು…? ಹೇಂತೀ ಮಕ್ಕಳೂ ಬ್ಯಾಡ ಅನ್ನೂ ಹಂಗಿದ್ದರ ಮದಿವೀ ಯಾಕ ಆದಿ…ಸನ್ನೇಸಿ ಆಗಬೇಕಾಗಿತ್ತೂ…’ ಅಂತ ಒದರ್‍ಯಾಡಿದಳು…ದ್ಯಾವಪ್ಪಗ ಆಕಿನ್ನ ಸಮಾಧಾನ ಮಾಡಬೇಕಾದರ ಸಾಕು ಸಾಕಾತು…
…ದ್ಯಾವಪ್ಪಗ ಗೂಗೀಕೊಳ್ಳದಾಗ ಲಂಗಟದ ಸ್ವಾಮಿಗೋಳ ದರಶನ ಆತಂತ…ಇಂವ ಅವರ ಕಾಲ ಹಿಡಕೊಂಡು-ನಾನು ಹಿಂಗಿಂಗ ದೇವರ ಸೇವಾ ಮಾಡಾಕತ್ತದನು…ನೀವು ನನಗ ಸಾಧನಾದ ಹಾದೀ ತೋರಸರೀ…ಅಂತ ದುಂಬಾಲು ಬಿದ್ದನಂತ.ಅವರು-ಹುಚ್ಚಪ್ಪಾ …ಏಳು. ನೀನು ನಡದದ್ದಣಿ ಹಾದಿ ಐತಿ…ಅದಣಿ ನಿನ್ನ ಸಾಧನಾ…ವರ್ಷಾ ವರ್ಷಾ ಎಂಟ್ಹತ್ತ ಹನೀ ರಗತ ಅಂದರ ಅದೇನ ಕಡಿಮಿ ಅಲ್ಲ…ನೂರ ದೀಡನೂರ ವರ್ಷಕ್ಕಂದರ ಒಬ್ಬ ಮನಶಾನ ರಗತದಷ್ಟಣಿ ಆದೀತು…!
ಹಾಂ…ಇರಲಿ ತಗೋ…ಇರಬಿ ಆದಿಯಾಗಿ ಎಂಭತ್ತ ಕೋಟಿ ಯೋನಿಯೊಳಗ ದಾಟಿ ಬಂದ ಜೀವ ಇದಾ…ಒಂದೊಂದ ಯೋನಿಯೊಳಗ ಈ ಜೀವನ್ನುದು ಎಷ್ಟ ಸರತೇ ಜನಮಾ ಎತ್ತಿರತೈತ್ಯೋ ಯಾಂವ ಬಲ್ಲ? ಅಂದಮ್ಯಾಗ ಆ ಎಲ್ಲಾ ಜನಮಗೋಳದೂ ರಗತದಾಗ ಕಸರ ಉಳದಿರಬೇಕಲಾ…ಆ ಕಸರ ನೋಡಿಕೋರಿ…ಮದಲ ರಗತದಾಗಿನ ಈ ಕಸರ ಬಗೀಹರಿಸಿಕೋರಿ…’ ಅಂತ ಆಶೀರ್ವಾದ ಮಾಡಿ ಗಿಡಗೋಳ ನಡಕ ಗಪ್ಪ ಗಡದ್ದ ಆದರಂತ…ದ್ಯಾವಪ್ಪ ಅದನ್ನಣಿ ಮನಸಿನ್ಯಾಗ ಇಟಗೊಂಡು ಹೊಳ್ಳಿ ಊರಿಗೆ ಬಂದಿದ್ದ…
ಊರಿಗೆ ಬಂದಮ್ಯಾಲೆ ಹೊಲಾ ಮನೀ-ಆ ಈ ಕೆಲಸ ಬಿದ್ದು ಅಂವ ತನ್ನ ಹ್ವಾರೇದಾಗ ತಾನು ಮುಣಗಿದ.ಆಮ್ಯಾಲ ಬಿಳಿಜ್ವಾಳದ ಸುಗ್ಗಿ ಮುಗದು,ಇನ್ನ ದೀಡು- ಎರಡು ತಿಂಗಳಿಗೆ ಧರಮನಟ್ಟಿಯ ತೇರು ಐತಿ ಅನ್ನುವಾಗ ಅಂವಗ ಲಂಗಟದ ಸ್ವಾಮಿಗಳ ಮಾತು ನೆನಪಿಗೆ ಬಂತು…ಅಂವ ಅವರಿವರಿಗೆ-ರಗತದಾಗ ಕೂಡಿದ ಕಸರ ಬಗಿಹರಿಸಿಕೋರಿ ಅಂತ ಲಂಗಟದ ಸ್ವಾಮಿಗೋಳು ಅಪ್ಪಣೀ ಕೊಟ್ಟ ಮಾತು ಹೇಳಿ -‘ಈ ರಗತದಾಗ ಕೂಡಿರೂ ಕಸರ ಹೆಂಗ ಕಳಕೊಳ್ಳೂದೋಪಾಣಿ…?’ ಅಂತ ಅವರಿವರನ್ನ ಕೇಳಿದ…ಯಾರನ ಕೇಳಿದರೂ ‘ಏ ನಮಗೇನ ಇದ ಗೊಂತ ಇಲ್ಲ ಬಿಡಪಾ…’ ಅಂತ ದನೀ ಎಳದರು…ಕಡಿಕ ಗೌಡರನಣಿ ಒಂದ ಮಾತ ಕೇಳಿ ಬಿಡೂದು ಅಂತ ದ್ಯಾವಪ್ಪ ಧೈರ್ಯಾ ಮಾಡಿ ಅವರನಣಿ ಕೇಳಿದ…ದ್ಯಾವಪ್ಪನ ಮಾತು ಕೇಳಿ ಗೌಡರಿಗೆ ನಗೀ ಬಂತು…ಅವರು -ನಿನ್ನ ರಗತಾ ಎಲ್ಲಾ ಬಸದು ತಗದು…ಸೋಸೂ ಅರಿಬೀ ಇರತೈತೆಲಾ…ಅದರಲೇ ಸೋಸು…ಹಂಗ ಸೋಸಿಕ್ಯಾರಿಂದ ಕಸರ ಎಲ್ಲಾ ತಗದು… ಹೊಳ್ಳಿ ಕುಡದ ಬಿಡು…ಅಂತ ಹೇಳಿ ಖೊಕ್ಕ ಖೊಕ್ಕಂತ ನಕ್ಕಬಿಟ್ಟರು…ದ್ಯಾವಪ್ಪ – ‘ಹಂಗಂತೀರಿ…ಹಂಗರ ಕೈಯಾ ಇಲ್ಲಾ ಕಾಲಾ ಕುಡಗೋಲಲೇ ಹೆಂಚಿಗೊಂಡು ರಗತಾ ಎಲ್ಲಾ ಬಸದ ತಗ್ಯಾಕ ಬಂದೀತಲ್ಲರಿ?’ ಅಂತ ಕೇಳಿದಾಗ ಗೌಡರು ಒಮ್ಮಿಗೆಲೇ ಗಾಬರ್‍ಯಾಗಿ ‘ಏ..ಏಣಿ..ಹಂಗ ಎಲ್ಲೆರಣಿ ಮಾಡಿಗೀಡೀ…ಹಕನಾಕ ಜೀವಾ ಕಳಕೊಂಡೀ’ ಅಂತ ನುಡದಾಗ ದ್ಯಾವಪ್ಪ ಅಚ್ಚರಿಗೊಂಡು ‘ಯಾಕರೀ…?’ ಅಂದ. ‘ನೋಡೂ… ನಿನ್ನದ ಅದೇನ ರಗತದಾಗಿನ ಕಸರು ತಗಿಯೂ ಮಾತ ಹೇಳತೀಲಾ …ಅದನ್ನ ಹಳಿಮನಿ ಶಂಕರಜ್ಜನ ಹಂತೇಕ ಹೇಳು. ಅಂವ ಯಾವದರೇ ಹಾದೀ ತೋರಸತಾನು…ಕೈಕಾಲು ಹೆಂಚಿಕೋ ಹಂತಾ ದಗದಕ್ಕ ಮಾತ್ರ ಹೋಗಬ್ಯಾಡ…’ ಅಂತ ಗೌಡರು ಇನೊಮ್ಮೆ ತಾಕೀತು ಮಾಡಿ ಹೇಳಿದರು.ದ್ಯಾವಪ್ಪ ಗೋಣು ಹಾಕಿ ನೆಟ್ಟಗಣಿ ಹಳಿಮನಿ ಶಂಕರಜ್ಜನ ಮನಿಗೆ ನಡದ…
…ಶಂಕರಜ್ಜ ಮನ್ಯಾಗ ಇರಲಿಲ್ಲ.ಅವನ ಸೊಸೀ ‘ಬಾ ಯಣ್ಣಾಣಿ…’ ಅಂತ ಇವನ್ನ ಒಳಗ ಕರದು – ‘ಯಣ್ಣಾಣಿ…ಮಾವ ಕಳಸಪ್ಪಗೋಳ ರಾಮಣ್ಣ ಕಾಕಾನ ಮನಿಗೆ ಹೋಗ್ಯಾನು…ಅವರ ಗಬ್ಬದ ಯಮ್ಮೀದು ಹೊಟ್ಟಿ ಉಬ್ಬರಿಸಿಕೊಂಡೈತಿ ಅಂತ ಕರ್‍ಯಾಕ ಬಂದಿದ್ದ…ಇದೇ ಈಗ ಅವನಗೂಡೇ ಹೋಗ್ಯಾನು…ಒಳಗ ಬಾಲಾ ಯಣ್ಣಾ’ ಅಂತ ಕರದಳು.ದ್ಯಾವಪ್ಪ ‘ಇರ್‍ಲಿ ಬಿಡ ತಂಗೀ…ಒಂದೀಟಣಿ ದಗದ ಐತಿ…ನಾ ರಾಮಣ್ಣನ ಮನೀ ಕಡೆನಣಿ ಹೊಕ್ಕನೇಳವಾ’ ಅಂತ ಹೇಳಿ ಅಲ್ಲಿಂದ ನೆಟ್ಟಗಣಿ ಕಳಸಪ್ಪಗೋಳ ರಾಮಣ್ಣನ ಮನಿಗೆ ಬಂದ…ಅಲ್ಲಿ ರಾಮಣ್ಣ ಮತ್ತ ಶಂಕರಜ್ಜ ಇಬ್ಬರೂ ಕೂಡಿ ಯಮ್ಮಿಗೆ ಗೊಟ್ಟದಲೇ ಅಗಸುದ್ದೇ ಕುಡಸಾಕ ಗುದ್ಯಾಡಲಿಕ್ಕತ್ತಿದ್ದರು…ಶಂಕರಜ್ಜ ಗೊಟ್ಟದಾಗ ಅಗಸುದ್ದೇ ತುಂಬಿಕೊಂಡು ಹಿಡಕೊಂಡಿದ್ದರೆ ರಾಮಣ್ಣ ಯಮ್ಮಿಯ ಮಕವನ್ನ ಅವಚಿ ಮ್ಯಾಲಕೆತ್ತಿ ಹಿಡದು,ಅದರ ಸ್ವಾಟ್ಯಾಗ ಬೆಳ್ಳುಹಾಕಿ ಬಾಯಿತೆರಸಲಿಕ್ಕೆ ಗುದ್ಯಾಡಲಿಕ್ಕೆ ಹತ್ತಿದ್ದ… ಶಂಕರಜ್ಜನು ಎಮ್ಮಿಯು ಬಾಯಿ ತೆರೆಯಲಿಕ್ಕೆ -ಅದು ಬಾಯಿ ತೆರೆಯತಿದ್ದಂಗೇ ತಾನು ಅದರ ಬಾಯೊಳಗೆ ಗೊಟ್ಟವನ್ನ ತುರುಕಿ ಅಗಸುದ್ದೇ ಸುರುವಲಿಕ್ಕೆಂದು ಕಾಯುತ್ತಿದ್ದ…ದ್ಯಾವಪ್ಪ ನೆಟ್ಟಗಣಿ ಇವರು ಗುದ್ಯಾಡತಿದ್ದ ದನದ ಹಕ್ಕಿಗೇ ಬಂದ…ಇಂವ ಅಲ್ಲಿಗೆ ಬಂದದ್ದು ಕಂಡು ರಾಮಣ್ಣ ಮತ್ತ ಶಂಕರಜ್ಜಗ ಸಂತೋಷ ಆತು.
‘ಯಾಣಿ…ಅಗದೀ ಹೇಳಿಕಳಿಸಿದಂಗ ಚಲೂ ಯಾಳೇದಾಗ ಬಂದದೀ ಬಾ…’ ಅಂತ ಶಂಕರಜ್ಜ ಅಂದರೆ ಕಳಸಪ್ಪಗೋಳ ರಾಮಣ -‘ಬಾ ಕಾಕಾ…ಆಗದೀ ಐನ ಯಾಳೇದಾಗ ಬಂದದೀ…ಈ ಪಿಸರ ಎಮ್ಮಿ ಅಗಸುದ್ದೇ ಕುಡ್ಯಾಕ ನಾಯಾಕ ಅನ್ನಾಕತ್ತೇತಿ.ನಾ ಇದರ ಮಕಾ ಗಟ್ಯಾಗಿ ಹಿಡಕೋತನು…ನೀ ಇದರ ಸ್ವಾಟ್ಯಾಗ ಬಳ್ಳ ಹಾಕಿ ಬಾಯಿ ತಗಸು…ಬಾಯಿ ತಗಸಿದಗಳಸೇ ಶಂಕರಜ್ಜ ಗೊಟ್ಟಾ ಹೆಟ್ಟಿ ಅಗಸುದ್ದೇ ಕುಡಸತಾನು…ಅಗಸುದ್ದೇ ಹಾಕಿದ ಕೂಡಲೇ ನೀ ಅದರ ಬಾಯಿ ಒತ್ತಿಹಿಡದು ಉಗಳಧಂಗ ಗಟ್ಯಾಗಿ ಹಿಡೀ…’ ಅಂತ ದ್ಯಾವಪ್ಪನಿಗೆ ಸೂಚನಾ ಕೊಟ್ಟು -ಅವರು ಮೂರೂಮಂದಿ ಆ ಕಾಯಕದೊಳಗ ಗರ್ಕಾದರು…
…ನೀ ಮಕಾ ಗಟ್ಯಾಗಿ ಹಿಡಕೊ…
ಹಾಂ ಯಜ್ಜಾ… ಲಗೂಟಣಿ…
ಹೂಂ..ಏ..ಏ…ರಾಮಣ್ಣಾ ಮಕಾ ಜಾಡಸಧಂಗ ಗಟ್ಯಾಗಿ ಹಿಡಕೊ…
ಹಾಂ ..ನೀ ಬಾಯಿ ಅಗಲಸು…
ಹಾಂ ಯಜ್ಜಾಣಿ..
ಅಂತ ಅವರು ಒಬ್ಬರು ಇನೊಬ್ಬರಿಗೆ ಹೇಳಿಕೋತ ಅಂತೂ ಆ ಎಮ್ಮಿಗೆ ಗೊಟ್ಟದಾಗಿನ ಔಷದ ಕುಡಿಸಿ ಉಸರು ಬಿಟ್ಟರು…ಆಮ್ಯಾಲ ಶಂಕರಜ್ಜ ರಾಮಣ್ಣನಿಗೆ ‘ಇನ್ನೇನ ಆರಾಮ ಆಗತೈತಿ ತಗೊ…ಇಷ್ಟಕ ಬರಾಬ್ಬರೀ ಆಗದಿರಕ ಮದ್ದಿನ ಮ್ಯಾಲ ನನ್ನ ಹಂತೇಕ ಬಾ…ಆಗ ಒಂದ ತೊಪ್ಪಲಾ ಕೊಡತನು.ಅದನ್ನ ಬೆಲ್ಲಾ -ರೊಟ್ಟೀ ಜೋಡಿ ತಿನಸು…ಎಲ್ಲಾ ಕಸರ ಬಿಟ್ಟ ಹೋಗತೈತಿ ಅಂತ ಹೇಳಿದ.
ಶಂಕರಜ್ಜ ಹೇಳೂದೆಲ್ಲಾ ಕೇಳಿಯಾದಮ್ಯಾಲೆ ಕಳಸಪ್ಪಗೋಳ ರಾಮಣ್ಣ – ‘ಹಾಂ… ಅಂದಂಗ ದ್ಯಾವಪ್ಪ ಕಾಕಾ ಇಕಾಡಿ ಬಂದಲಾ?’ ಅಂದದ್ದಕ್ಕೆ ಇಂವ ‘ಏನಿಲ್ಲ ತಮಾ…ಒಂದೀಟಣಿ ಶಂಕರಜ್ಜನ ಹಂತೇಕ ದಗದ ಇತ್ತು…ಅವರ ಮನಿಗೆ ಹೋಗಿನ್ನಿ…ಹಿಂಗಿಂಗಣಿ…ಕಳಸಪ್ಪಗೋಳ ರಾಮಣ್ಣ ಕಾಕಾನ ಮನಿಗೆ ಹೋಗ್ಯಾನು ಅಂತ ಯಜ್ಜನ ಸೊಸೀ ಹೇಳಿದಳು…ಹುಡಿಕ್ಕೊಂಡ ಇಲ್ಲಿಗೇ ಬನ್ನಿ’ ಅಂತ ಹೇಳಿದ.
ಶಂಕರಜ್ಜ ‘ಯಾವದರೇ ದನಕ್ಕ ಏನರೇ ಆಗೇತೇನೋ ತಮ್ಮಾಣಿ’ ಅಂತ ಕೇಳಿದ.
ದ್ಯಾವಪ್ಪ ‘ಏ…ದನಾ ಕರದ್ದ ಅಲ್ಲೇಳ ಯಜ್ಜಾ… ಒಂದೀಟ ಬ್ಯಾರೇ ದಗದ ಐತಿ..ನಡೀ ಹಂಗಣಿ ಮನಿಗೆ ಹೋಕ್ಕೊಂತ ಹಾದ್ಯಾಗಣಿ ಹೇಳತನು…’ ಅಂತ ಹೇಳಿ, ಇಬ್ಬರೂ ಹೊಂಟರು…ದ್ಯಾವಪ್ಪ ಎಲ್ಲಾ ಹಕೀಕತ್ತು ಹೇಳಿದ…ಗೂಗೀಕೊಳ್ಳಕ ಹೋದದ್ದು…ಲಂಗಟದ ಸ್ವಾಮಿಗೋಳ ದರಶನ ಆದದ್ದು…ಅವರು ರಗತದಾಗಿನ ಕಸರು ಕಳಕೊಳ್ಳರೀ ಅಂತ ಅಪ್ಪಣೀ ಕೊಟ್ಟದ್ದು -ಎಲ್ಲಾ ಹೇಳಿ ಗೌಡರ ಸಲ್ಲಾದ ಪ್ರಕಾರ ತಾನು ಅವನ ಹಂತೇಕ ಬಂದದ್ದು ಹೇಳಿದ…ಅಷ್ಟೊತ್ತಿಗಂದರ ಶಂಕರಜ್ಜನ ಮನೀ ಬಂತು…ಕಟ್ಟಿಯ ಮ್ಯಾಲ ಶಂಕರಜ್ಜ ಗೊಂಗಡೀ ಹಾಸಿದ.ಇಬ್ಬರೂ ಕಾಲ ಇಳಿಬಿಟಗೊಂಡು ಕುಂತರು…ಶಂಕರಜ್ಜ ತನ್ನ ಸೊಸಿಗೆ –
‘ಯವ್ವಾಣಿ ಶಾರವ್ವ…ಸಂತರ ಬಂದಾರು…ಒಂದ ವಾಟೇ ಹಾಲ ಕಾಸಿಗೊಂಡ ಬಾ ತಂಗೀ’ ಅಂತ ಒದರಿ ಹೇಳಿದ.
ದ್ಯಾವಪ್ಪ ‘ಏ ಯಜ್ಜಾ…ಈಗ ಹಾಲ ಗೀಲ ಏನ ಬ್ಯಾಡ…’ಅಂತ ಅಂತಿದ್ದರೆ ಶಂಕರಜ್ಜ- ‘ಯಾ…ಇರಲೇಳೋಪಾ..’ ಅಂತಂದು ‘ಹೂಂ…ಆಮ್ಯಾಲಣಿ…?’ ಅಂತ ಕೇಳಿದ. ‘ಹೂಂ…ಅದಣಿ…ಲಂಗಟದ ಸ್ವಾಮಿಗೋಳು ರಗತದಾಗಿನ ಕಸರ ತೊಳಕೋಬೇಕ ಅಂತ ಹೇಳಿದರಲಾ…ಅದ ಹೆಂಗಣಿ ಅಂತ? ಗೌಡರು -ಇದ ಏನ ಇದ್ದರೂ ಹಳಿಮನಿ ಶಂಕರಜ್ಜಗಣಿ ಗೊಂತು…ಬಾಕೀ ಮಂದಿಗೆ ಬಗೀಹರಿಯೂ ಹ್ವಾರೇ ಅಲ್ಲ ಅಂತ ಉಗಡಾ ಉಗಡಾ ಹೇಳಿಬಿಟ್ಟರು…’ ಅಂತ ಹೇಳುವಷ್ಟೊತ್ತಿಗೆ ಎರಡು ವಾಟೇದಾಗ ಬಿಸೀ ಹಾಲು ಬಂದು, ಶಂಕರಜ್ಜ ‘ಹೂಂ…’ ಅಂತ ಉಸರು ಬಿಟ್ಟು ಒಂದು ವಾಟೇ ಎತಿಗೊಂಡ…ದ್ಯಾವಪ್ಪನೂ ಇನೊಂದು ವಾಟೇ ಎತಿಗೊಂಡು ಶಂಕರಜ್ಜನ ಮೋತೀ ನೋಡಿಕೋತ ಕುಡಿಯಲಿಕ್ಕತ್ತಿದ….
ಹಾಲು ಕುಡದಾದ ಮ್ಯಾಲೆ ಶಂಕರಜ್ಜ ‘ಹೂಂ…ಲಂಗಟದ ಸ್ವಾಮಿಗೋಳು ಏನ ಹೇಳಿದರಂದೀ…?’ ಅಂತ ಇನೊಮೆ ಕೇಳಿದ್ದಕ್ಕ ದ್ಯಾವಪ್ಪ ಇನೊಮ್ಮೆ ಎಲ್ಲಾ ಉಜಳಣೀ ಮಾಡಿದ…ಶಂಕರಜ್ಜ ಒಂದ ಮಿನಿಟು ಸುಮ್ಮನಣಿ ಕುಂತು ಆಮ್ಯಾಲ ‘ಹ್ಹೂಂ…’ ಅಂತ ಉಸಲು ಬಿಟ್ಟು –
‘ನಮ್ಮ ಅಜ್ಜ ಹೇಳತಿದ್ದ…ಇಸಾ ತಗೊಂಡು ಅದು ರಗತದಾಗ ಪೂರಾ ಮಿಸ್ರ ಆಗಿ …ರಗತ ಎಲ್ಲಾ ಪೂರಾ ಇಸಾ ಆಗಿದ್ದರೂ ಅದರಾಗಿನ ಇಸಾ ಎಲ್ಲಾ ತಗದು ರಗತಾ ಸುದ್ದ ಮಾಡಾಕ ಬರತೈತೆಂತ…ಇದಣಿ ಕಳಸಪ್ಪಗೋಳ ರಾಮ್ಯಾನ ಅಜ್ಜಾ …ಅವನ ಹೆಸರೂ ರಾಮಣ್ಣ ಅಂತನಣಿ…ರಾಮಣ್ಣನ ಕತೀ ನಿನಗ ಗೊಂತ ಇದ್ದಿರಬೇಕಲಾ?’ ಅಂತ ಕೇಳಿದ್ದಕ್ಕೆ ದ್ಯಾವಪ್ಪ ‘ಏ…ನನಗೆಂಗ ಗೊಂತ ಇದ್ದೀತೋಪಾ…ನಾ ಕಳ್ಳೀಗುದ್ದಿಗೆ ಬಂದ ಇನೂ ಮೂರ ವರಸ ಸೈತ ಪೂರಾ ಆಗಿಲ್ಲ ’ ಅಂದ.
‘ಹಾಂ…ಹೌದೌದು…ಅದ ಏನ ಆತಪಾ ಅಂದರ…ಈ ರಾಮ್ಯಾನ ಅಜ್ಜ – ರಾಮಣ್ಣ -ಹರೇದಾಂವ ಇದ್ದಾಗ ಅವರ ಓಣ್ಯಾಗ ಒಂದ ಮದಿವಿ ಆದ ಅಡ್ಡನಾಡ ಹೆಂಗಸ ಇತ್ತು …ಅದು ಇವನ ಮ್ಯಾಗ ಮನಸ ಮಾಡಿತು.ಆಗ ಇಂವಂದೂ ಇನೂ ಲಗ್ಗನ ಆಗಿದ್ದಿಲ್ಲ….ಭಣಿರ ವಯಸ್ಸು…ಇಬ್ಬರದೂ ಹೊಂದಾಣಿಕಿ ಆಗಿ ಹಂಗಣಿ ನಡೀತು…ಆಮ್ಯಾಲ ಮುಂದ ಎರಡ ವರಸದ ಮ್ಯಾಗ ರಾಮಣ್ಣನ ಮದಿವಿ ಆತು. ಇಂವನ ಮದಿವಿ ಆದಗಳಸೇ ಇಂವ ಆಕೀ ಮಕಾ ತಪ್ಪಿಸಿ ತಪ್ಪಿಸಿ ಅಡ್ಯಾಡಾಕತ್ತಿದ…ಆ ಹೆಂಗಸು ಹೊಟ್ಟೀಕಿಚ್ಚಿಲೆ ಕುದ್ಯಾಕತ್ತಿದಳು… ಹೆಂಗರಣಿಮಾಡಿ ಇವನ್ನ ಒಬ್ಬನ್ನಣಿ ಹಿಡದು ಭೆಟ್ಟಿ ಆಗೂಣೂ ಅಂತ ರಗಡ ಹವಣಿಸ್ಯಾಡಿದಳು.ಆದರ ಇಂವ ಹೆಂಗರೇ ನುಣಿಚಿಕೊಂಡ ತಪ್ಪಿಸಿಕೊಂಡ ಬಿಡಾಂವಾ…ಆಕಿ ನೋಡೂವಷ್ಟು ನೋಡಿದಮ್ಯಾಗ ಒಂದ ದಿನಾ ಏನ ಮಾಡಿದಳಂದರ -ಕರಚೀಕಾಯಿ ಮಾಡಿಕೊಂಡು ಒಂದ ತೂರೂಬುಟ್ಟೀ ತುಂಬ ತುಂಬಿಕೊಂಡು-ಹರ್‍ಯಾಗ ಅಷ್ಟೊತ್ತಿನ್ಯಾಗಣಿ…ಅಂವ ಮಟ್ಟೀ ಹೊಡೀತಿರಬೇಕಾದರ ಯಾಳೇ ಸಾಧಿಸಿ ಅಂವನ್ನ ಹಿಡದು ಕರಚೀಕಾಯಿ ತಿನಿಸೇ ಬಿಟ್ಟಳು…ಮುಂದ ರಾಮಣ್ಣನ ಮೈಯಾಗಿನ ರಗತ ಎಲ್ಲಾ ಕೆಟ್ಟು ಇಸಾ ಆಗಿ – ಮೈತುಂಬ ಹುಣ್ಣಾ -ಕುರಾ ಆಗಿ…ಮೈತುಂಬಣಿ ಎಲ್ಲಿ ನೋಡಿದಲ್ಲಿ ಕೀಂವ ತುಂಬಿಕೊಂಡಕ್ಯಾಸ ಕುಂಡರಾಕ ಆಗದಣಿ ಮನಗಾಕ ಆಗದಣಿ…‘ಓಣಿ..’ ಅಂತ ಒದರಾಕ ಸುರುಮಾಡಿದನಂತ. ನೋಡಿದ ಮಂದಿ ಎಲ್ಲಾ -ಏ…ಇನ್ನೇನ ರಾಮಣ್ಣನ ಕತೀ ಮುಗದಂಗಣಿ ಅಂತ ಅನ್ನಾಕತ್ತಿದರು…
ಆಗ ರಾಮಣ್ಣನ ಅವ್ವ -ಯಮನವ್ವ ಅಂತ ಮುದಿಕಿ ಇತ್ತು…ಮನ್ನಿ ಮನ್ನೇ ಸತ್ತ್ಯು ನೋಡು…ಆಕಿ ನಮ್ಮ ಅಜ್ಜನ ಹಂತೇಕಬಂದು ಕಾಲ ಹಿಡಕೊಂಡಳಂತ…ಕಾಲ ಹಿಡಕೊಂಡು-ಮಾವಾ ನನ್ನ ಬಾಳೇ ಎಲ್ಲಾ ನಿನ್ನಣಿ ಕೂಡೇತಿ ಹೆಂಗಾರಣಿ ಮಾಡಿ ನನ್ನ ಮಗನ್ನ ಉಳಸಿ ಕೊಡಬೇಕಪಾ-ಅಂತ ಗೋಳ್ಯಾಡಿ ಕಣ್ಣೀರ ಹಾಕಿದಳಂತ.ನಡೀವಾ ಹಂಗರಣಿ…ಅಂತ ನಮ್ಮ ಅಜ್ಜ ಅವರ ಮನಿಗೆ ಹೋದರಣಿ…ಅಲ್ಲಿ ಇಡೀ ಮನಿ ತುಂಬ ಗಬ್ಬ ನಾತ ತುಂಬಿ ಓಣಿಗೂ ಹಬ್ಬಿತ್ತಂತ! ಅವರ ಮನೀಮುಂದ ಹಾದು ಹೋಗೂ ಮಂದಿ ಎಲ್ಲಾರೂ ಮೂಗು ಮುಚಿಗೊಂಡು ಅಡ್ಯಾಡಾವರಂತ ! …ನಮ್ಮ ಅಜ್ಜಗ ಆ ದುರ್‌ವಾಸನಿಂದ ವೈಂಯ್‌ಕ್…ಅಂತ ಉಲ್ಟೀನಣಿ ಬಂದಂಗ ಆತಂತ…ಮನಸ ಗಟ್ಟಿಮಾಡಿಕೊಂಡು ರಾಮಣ್ಣನ ಹಂತೇಕ ಹೋಗಿ ನಾಡೀ ಹಿಡದ ನೋಡಿದ…ನಾಡೀ ನೋಡತಿದ್ದಂಗಣಿ ನಮ್ಮಜ್ಜಗ ಪೂರಾ ಮಜಕೂರು ತಿಳೀತು…ಹಂಗಣಿ ನಾಡೀ ಮ್ಯಾಗ ಮೂರ ಬೆಳ್ಳು ಇಟಗೊಂಡು ಕಣ್ಣಮುಚ್ಚಿ …ಮನಸಿನ್ಯಾಗಣಿ ಲೆಕ್ಕಾ ಹಾಕಿ ಗೆರೀ ಕೊರಧಂಗ ಲಗೂಟಣಿ ನೆಪ್ಪ ಮಾಡಿಕೊ…ಧರಮನಟ್ಟೀ ತೇರಿಗೆ ಇನ್ನ ಬರೇ ಎರಡಣಿ ತಿಂಗಳ ಉಳದೈತಿ…’ ಅಂತ ವಿನಂತೀ ಮಾಡಿಕೊಂಡು ಮನಿಗೆ ಬಂದ…
ಮರದಿವಸ ನಸಕಿನ್ಯಾಗಣಿ ಮತ್ತ ಶಂಕರಜ್ಜನ ಮನಿಗೆ ಬಂದ…ಶಂಕರಜ್ಜ – ‘ಬಾ ತಮ್ಮಾಣಿ…’ ಅಂತ ಕರದು ‘ಕುಂಡ್ರು…’ ಅಂದು ‘ಇನೂ ನೆಪ್ಪ ಆಗಿಲ್ಲೋ…’ ಅಂತ ಹೇಳಿದ.ಇಂವ ‘ಲಗೂಟಣಿ ನೆಪ್ಪ ಮಾಡಿಕೊ ಯಜ್ಜಾ…’ ಅಂತ ಹೇಳಿ ಹಂಗಿಂದ ಹಂಗಣಿ ಹೊಳ್ಳಿದ…ಎರಡು ದಿವಸದ ಮ್ಯಾಲೆ, ಹರ್‍ಯಾಗ ಏಳತಿದ್ದಂಗಣಿ, ಶಂಕರಜ್ಜ ದ್ಯಾವಪ್ಪನ ಮನಿಗೆ ಬಂದ.ದ್ಯಾವಪ್ಪ ಸಂಭ್ರಮದಿಂದ ‘ಬಾ ಯಜ್ಜಾ…’ ಅಂತ ಒಳಗ ಕರದು ಪಡಸಾಲಿಯ ಕಟ್ಟಿಯ ಮ್ಯಾಲೆ ಕಂಬಳೀ ಹಾಸಿ ಕುಂಡರಿಸಿ,ಅನುಮಾನಿಸಿಕೋತ ಅನುಮಾನಿಸಿಕೋತಣಿ-‘ಯಜ್ಜಾಣಿ…ಹಾಲಾ…?’ ಅಂತ ಕೇಳಿದ. ಶಂಕರಜ್ಜ ‘ಹಾಂ…ಕಾಸಿ ಮುಸರೀ ಮಾಡೂದು ಬ್ಯಾಡ…ಹಂಗಣಿ ಹಸೀ ಹಾಲ ಇದ್ದರ ಕೊಡು…ಇಲ್ಲದಿರಕ ಏನ ಬ್ಯಾಡ’ ಅಂದ.ದ್ಯಾವಪ್ಪ ತಾನಣಿ ಹೋಗಿ ಭರಾ ಭರಾ ಅಂತ ಒಂದು ಚರಿಗೀ ತುಂಬ ಆಡಿನ ಹಾಲು ಹಿಂಡಿಕೊಂಡು ತಂದು ಶಂಕರಜ್ಜನ ಮುಂದ ಇಟ್ಟ…ಶಂಕರಜ್ಜ ಚರಿಗೀ ಎತ್ತಿ ಗಟಾ ಗಟಾ ಅಂತ ಕುಡದು ‘ಬಾ ಕುಂಡರು …’ ಅಂತ ದ್ಯಾವಪ್ಪನ್ನ ತನ್ನ ಮಗ್ಗಲಿಗೆ ಕುಂಡ್ರಿಸಿಕೊಂಡು -‘ನೀ ಹೇಳಿದ ದಗದಾ ಮಾಡೀನ ನೋಡ ತಮ್ಮಾ…ನಿನ್ನೆ ರಾತರೀ ಮಲಕೊಂಡಾಗ ನಮ್ಮ ಅಜ್ಜ ಕನಸಿನ್ಯಾಗ ಬಂದ ಹೇಳಿಧಂಗ ಆಗಿ ನೆನಪ ನಿಚ್ಚಳ ಆದಂಗ ಆತು !…ಒಟ್ಟಣಿ ಇಪ್ಪತ್ತ ದಿನದ ಅಗಸುದ್ದೇ ಮತ್ತ ಪತ್ತೇದ ಯವಹಾರ ಐತಿ…’ ಅಂತ ಹೇಳಿದ.ದ್ಯಾವಪ್ಪ ಒಂದ ಗಳಿಗಿ ಸುಮ್ಮನಣಿ ಕುಂತು ಏನೋ ವಿಚಾರ ಮಾಡತಿದ್ದರ ಶಂಕರಜ್ಜ ‘ಯಾಕೋ ತಮ್ಮಾಣಿ…ಯಾಕೋ ಸುಮ್ಮನಣಿ ಕುಂತೆಲಾ?…ನಿನಗ ಬ್ಯಾಡ ಅನಿಸಿದರ ಬಿಡು…ಇಪ್ಪತ್ತ ದಿನದ ಅಗಸುದ್ದೇ ಮತ್ತ ಪತ್ತೇ ಅಂದರ ಬಾಳ ಖರ್ಚ ಬರತೈತೆಂತ ಅಂಜಿದಿ ಏನಾ?… ಖರ್ಚಿನ ಚಿಂತೀ ಬಿಡು . ನೀ ಸಂತ ಅದೀ…ನಿಂದು ದೇವರ ಕೆಲಸಾ…ಅಗಸುದ್ದೇ ಎಲ್ಲಾ ನಾ ತಯಾರ ಮಾಡಿಕೊಡತನು…ನೀ ಕೇವಲ ಒಂದ ಕಿವಡ ಕಾಸನೂ ಕೊಡಬ್ಯಾಡ…ಪತ್ತೇನೂ ಹಂತಾ ಏನ ಖರ್ಚಿಂದ ಅಲ್ಲ…ಸೇರ-ದೀಡ ಸೇರ ಆಕಳ ತುಪ್ಪ ಒಂದ ಬೇಕಾಗತೈತಿ ನೋಡು…ಮನ್ಯಾಗ ಆಕಳ ತುಪ್ಪ ಇದ್ದಿರಬೇಕಲಾ? ಅದನ ಬಿಟ್ಟರ ಮತ್ತೇನ ಖರ್ಚಿನ ಹ್ವಾರೇ ಇಲ್ಲ…’ ಅಂತ ಹೇಳಿದ.‘ಏ…ಖರ್ಚಿಂದ ಸುದ್ದಿ ಅಲ್ಲ…ದೇವರ ಕೊಟ್ಟಾನು…ನಿನ್ನ ಹಂತೇಕ ಅಗಸುದ್ದೇ ತಗೊಂಡು ರೊಕ್ಕಾ ಕೊಡದಿರಕ ನನಗ ಪುಣ್ಯೇ ಹೆಂಗ ಸಿಗಬೇಕು?…ಅದರ ಇಚಾರ ಅಲ್ಲ…ನಾನು ಒಂದ ಹದನ ಇಪ್ಪತ್ತು ದಿವಸ ಸಿದ್ಧರ ಕೊಳ್ಳಕ್ಕಣಿ-ದೇವರಗೋಳಿಗೇ ಹೋಗಿ ಅತ್ತಲಾಗಿಂದ ಹಂಗಿಂದ ಹಂಗಣಿ ದರಮನಟ್ಟಿಯ ತೇರಿಗೆ ಹೋಗಬೇಕಂತ ಮಾಡೀನು…ದೇವರ ಸೇವಾ ಮಾಡೂಕಿಂತಾ ಮದಲು ಭಕತೀ – ಮನಸು ಸ್ವಚ್ಛ ಇಟಗೊಂಡು ಹೋಗಿ ಇಟ್ಠಲನ ಸೇವಾ ಮಾಡಿದರ ಹೆಂಗಣಿ …ಅಂತ. ಅದನ್ನ ವಿಚಾರ ಮಾಡಾಕತ್ತಿನ್ನಿ ’ ಅಂತ ಹೇಳಿದ. ‘ಹೂಂ…ಬೇಶತಿ ಹೇಳಿದ -ರಾಮಣ್ಣಾಣಿ…ಈಗ ಮೂರ ತಿಂಗಳ ಮ್ಯಾಗ ಮೂರ ದಿನಾ ಆಗೇತಿ…ನೆಪ್ಪ ಮಾಡಿಕೋ…ಅವತ್ತ ಏನಾರ ಸೀ ಪದಾರ್ತಾ ತಿಂದದೀ? -ಅಂತ ನಮ್ಮ ಅಜ್ಜ ಕೇಳಿದ್ದಕ ರಾಮಣ್ಣನ ಅವ್ವ -ಏ …ಎಲ್ಲೀದು ? ಇಲ್ಲ ಬಿಡ ಮಾವಾಣಿ! ಅದ ಏನಾತ ಅಂದರಣಿ…ಇಂವನ ಹೇಂತಿನ್ನ ಕರಕೊಂಡ ಬಂದಮ್ಯಾಗ ಒಂದ ವಾರ ಎಲ್ಲಾ ದಣಿರ ದಿನಾ ಸೀ ಅಡಿಗೀ ಮಾಡಿದ್ದಿವಿ…ವಾರಗಟ್ಟಲೇ ಸೀ ಅಡಿಗೀ ತಿಂದಕ್ಯಾಸ ಇಂವ ಸೀ ಪದಾರ್ತ ಅಂದರ ಹೇಸಿಗೊಂಡು – ಇನ್ನ ಮನ್ಯಾಗ ಒಂದ ಎಡ್ಡ ತಿಂಗಳರೇ ಸೀ ಅಡಿಗೀ ಮಾಡಬ್ಯಾಡರಿ ನೋಡವಾಣಿ -ಅಂತ ತಾಕೀತು ಮಾಡಿದ…ನಾ ಇಂವಗ ಗೊಂತ ಇಲ್ಲಧಂಗ ನನ್ನ ಸೊಸೀಗೆ ಸೀ ಅಡಿಗೀ ಮಾಡಿ ಹಾಕಿದೀನ ಖರೇ,ಆದರ ಇಂವ ಅಂತೀ ಮನ್ಯಾಗ ಸೀ ಅಂಬೂದು ಬಾಯಿಗೆ ಹಾಕದಣಿ ನಾಕ ತಿಂಗಳರೇ ಆಗಿರಬೇಕು ನೋಡ ಮಾವಾ ಅಂತ ಹೇಳಿದಳಂತ…ನಮ್ಮ ಅಜ್ಜ -ಇಲ್ಲ ತಡೀ ತಂಗೀ…ಮನ್ಯಾಗ ಸೀ ಉಂಡದ್ದಲ್ಲ ಇದಾ…ಹೊರಗ ಉಂಡ ಸೀ ಪದಾರ್ತದ ಖ್ಯಾಂತಿ ಐತಿ ಇದಾ…ನೆಪ್ಪ ಆತೂ ತಮ್ಮಾ?…ನೀ ನೆಪ್ಪ ಮಾಡಿಕೊಂಡು ಖರೇ ಹಕೀಕತ್ತು ಹೇಳದಿರಕ ನಾ ಏನಂತ ಅಗಸುದ್ದೇ ಕೊಡಲಿ?…ಅಗಸುದ್ದೇ ಕೊಡಾಕ ಬರಾಣಿಲ್ಲ ಅಂತ ಖಡಾಮುಡಿ ಹೇಳಿದ್ದಕ್ಕ ಅಂವ ನಾಚಿಗೊಂಡು ಬಾಯಿಬಿಟ್ಟು ಹೇಳಲಾರದಣಿ ಹೇಳಲಾರದಣಿ…ಕಡೀಕ ಖರೇ ಹಕೀಕತ್ತು ಹೇಳಿದನಂತ…ರಾಮಣ್ಣನ ಅವ್ವ -ಆಣಿ…ಅಂತ ಬಾಯಿ ತೆರಕೊಂಡು ಕುಂತಳಂತ…ನಮ್ಮಜ್ಜ-ಆ ಕರ್ಚೀಕಾಯೀದಣಿ ಈಗ ಭಾನಗಡೀ ಆಗಿ ಕುಂತೈತಿ…ಹೂರಣದಾಗ ಮದ್ದ ಹಾಕಿದಾಳು…ರಗತ ಎಲ್ಲಾ ಇಸಾ ಆಗಿ ಕುಂತೈತಿ ! ಇನ್ನ ಹದನ ದಿನಾ ಆಗಿತ್ತಂದರ ಇವನ ಆಸೇ ಬಿಡಬೇಕಾಗತಿತ್ತು …ಇನ್ನೇನ ಕಾಳಜೀ ಮಾಡಬ್ಯಾಡರಿ.ನಾ ಅಗಸುದ್ದೇ ಕೊಡತನು…ಕಮ್ಮ ಆಗತೈತಿ…ಪೂರಾ ಸುದ್ದ ಆಗಾಕ ಏನಿಲ್ಲಂದರೂ ಮೂರ ತಿಂಗಳಾರಣಿ ಬೇಕು ಅಂತ ಹೇಳಿ ನಮ್ಮ ಅಜ್ಜ ಅಗಸುದ್ದೇ ಕೊಟ್ಟನಂತ…ನಮ್ಮಜ್ಜ ಅಗಸುದ್ದೇ ಕೊಟ್ಟಮ್ಯಾಗ ಮೂರ ತಿಂಗಳದಾಗಂದರ ರಾಮಣ್ಣ ಮತ್ತ ಮದಲಿನ ಹಂಗಣಿ ಆದನಂತ…ನಮ್ಮ ಅಜ್ಜ ಅವನ ರಗತದಾಗ ಮಿಸ್ರ ಆದ ಕಸರನ ಎಲ್ಲಾ ಕಿತ್ತ ತಗದಿದ್ದ !
‘ಹಂಗರಣಿ…ನಿಮ್ಮ ಅಜ್ಜ ಏನ ಅಗಸುದ್ದೇ ಕೊಟ್ಟ ಅನ್ನೂದು ನಿನಗ ಗೊಂತ ಇದ್ದಿರಬೇಕಲಾಣಿ…ಹೆಂಗರ ಮಾಡೋಪಾ…ಲಂಗಟದ ಸ್ವಾಮಿಗೋಳು ಹೇಳಿಧಂಗ ವರಸಾ ವರಸಾ ಧರಮನಟ್ಟೀ ತೇರಿಗೆ ಹೊಂಡೂಕಿಂತಾ ಮದಲು ರಗತದಾಗಿನ ಕಸರು ಎಲ್ಲಾ ತೊಳಕೊಂಡಣಿ ಹೊಂಡತನು…’ ಅಂತ ದ್ಯಾವಪ್ಪ ದೈನಾಸಪಡತಿದ್ದರೆ ಶಂಕರಜ್ಜ ‘ನನಗೂ ವಯಸ್ಸ ಆತೋ ತಮ್ಮಾ… ಅರವ ಮರವ ಆಗೇತಿ…ಮತ್ತಣಿ ಈ ನಡಕ ಯಾರಿಗೂ ಈ ಅಗಸುದ್ದೇ ಕೊಡೂ ಪರಸಂಗನಣಿ ಬರಲಿಲ್ಲ…ಹಿಂಗಾಗಿ ನೆಪ್ಪ ಮಸಕ ಮಸಕ ಆಗೇತಿ…ಒಂದ ಎಡ್ಡ ದಿನಾ ದಮ್ಮ ಹಿಡೀ…ಗಟ್ಯಾಗಿ ಕುಂತು ನೆಪ್ಪ ಮಾಡಿಕೋತನು…’ ಅಂತ ಹೇಳಿದ.ದ್ಯಾವಪ್ಪ ‘ಹಂಗಣಿ ಮಾಡ ಯಜ್ಜಾ…ಆದಷ್ಟ
ನಿನ್ನ ಇಚಾರ…ಹಂಗಣಿ ಮಾಡು…ಅಗಸುದ್ದೇ ಮತ್ತ ಪತ್ತೇ ಮುಗಿಸಿಕೊಂಡು ನಿನ್ನ ಯಾತ್ರಾಕ್ಕ ಹೊಂಡು…ನೀ ಯಾತ್ರಾಕ್ಕ ಎಂದ ಹೊಂಡಬೇಕಂತೀ ಹೇಳು…ಅದರ ಪರಕಾರನಣಿ ಅಗಸುದ್ದೇ ಸುರೂ ಮಾಡೂಣೂ…’ ಅಂತ ಶಂಕರಜ್ಜ ಹೇಳಿದ. ದ್ಯಾವಪ್ಪ ‘ನಾ ಹೋಳೀ ಹುಣ್ಣಿವಿ ನಾಳೆ ಐತಿ ಅನ್ನುವಾಗ ಇಂದ ಹೊಂಡಬೇಕಂತ ಮಾಡೀನ ನೋಡು’ ಅಂತ ಹೇಳಿದ…ಆ ಪ್ರಕಾರ ಶಂಕರಜ್ಜ ಲೆಕ್ಕಾ ಹಾಕಿ,ಅದಕ್ಕ ಹೊಂದುವ ಹಂಗ ತನ್ನ ಅಗಸುದ್ದೇ ಮತ್ತ ಪತ್ತೇದ ಪೂರಾ ಹಕೀಕತ್ತು ಹೇಳಿದ…
‘…ನೀ ಶಿವರಾತ್ರಿ ಇನಣಿ ಐದ ದಿವಸ ಇರತೈತೆಂದರ…ಅಂದರ ನೋಡಪಾ ಹಾಂ…ಅಷ್ಟಮೀ ದಿವಸದಿಂದ ಈ ಅಗಸುದ್ದೇ ಮತ್ತ ಪತ್ತೇ ಸುರುಮಾಡು…ಶಿವರಾತ್ರಿ ಇನ್ನ ಐದ ದಿನಾ ಐತಿ ಅನ್ನುವಾಗ ಹರ್‍ಯಾಗ ಎದ್ದಗಳಸೇ ಬರೀ ಹೊಟ್ಟೀಲೆ ಒಂದ ವಾಟೇ ಆಕಳ ತುಪ್ಪಾ ಕುಡೀಬೇಕು…ಅಂದ ಸುರು ಮಾಡಿದಾಂವ ಮೂರು ದಿವಸ ಬಿಡಧಂಗ ದಿನಾ ಹರ್‍ಯಾಗ ಎದ್ದಗಳಸೇ ಒಂದೊಂದ ವಾಟೇ ಆಕಳ ತುಪ್ಪಾ ಕುಡ್ಯೂದು…ಮೂರ ದಿವಸ ಹಿಂಗ ತುಪ್ಪಾ ಕುಡದ ಮ್ಯಾಗ ನಾಕನೇ ದಿವಸ ಮೈಗೆಲ್ಲಾ ಎಣ್ಣೀ ಹಚಿಗೊಂಡು ಸುಡೂ ಸುಡೂ ನೀರು ಹಣಿಸಿಕೊಂಡು ಜಳಕಾ ಮಾಡಬೇಕು…ಅದರ ಮರದಿವಸ ಹರ್‍ಯಾಗ ಎದ್ದಗಳಸೇ…ನಾನು ಅಗಸುದ್ದೇದ ಎರಡ ಪುಡೀ ಕೊಟ್ಟಿರತನು…’ ಅಂತ ಹೇಳತಿದ್ದಂಗಣಿ ದ್ಯಾವಪ್ಪ ಅಡ್ಡ ಬಾಯಿಹಾಕಿ ದೈನಾಸಪಟ್ಟು ಕೇಳಿದ -‘ಯಜ್ಜಾ…ಇದನ್ನ ನಾನು ವರಸಾ ವರಸಾ ತಪ್ಪದಂಗ ನಡಸೂ ಇಚಾರ ಐತಿ…ಯಾರ ಜಲಮ ಏನ ಸಾಸ್ವತ ಅಲ್ಲ ನೋಡ ಯಜ್ಜಾಣಿ…ಅದಕಣಿ ಅಗಸುದ್ದೇದ ಪುಡೀ ಹೆಂಗ ತಯಾರ ಮಾಡತೀ ಅಂತ ಹೇಳಿದರ ಪಾಡ ಆಗತೈತಿ…’. ಶಂಕರಜ್ಜ ‘ಯಾ…ಅದಕೇನೋ ಮಾರಾಯಾ. ಅಲಬತ್ತ ಹೇಳತನ ತಗೋ…’ ಅಂತಂದು ‘ ಈ ಪುಡಿಗೋಳು ಮತ್ತೇನೂ ಅಲ್ಲ … ಒಂದೂ ಮುಂಗಾರಿಕಾಯಿಯ ಬೀಜದ ಪುಡೀ…ಹಣ್ಣ ಆದ ಮುಂಗಾರಿಕಾಯಿ ತಗೊಂಡು ಅದರ ಬೀಜಾ ಎಲ್ಲಾ ಒಂದ ದಿನಾ ಮಜ್ಜಿಗ್ಯಾಗ ನೆನೀ ಇಡಬೇಕು… ಮಜ್ಜಿಗ್ಯಾಗ ನೆನಿಸಿ ಅವನ್ನ ನೆಳ್ಳಿನ್ಯಾಗ ಒಣಗಿಸಿ ಪುಡೀ ಮಾಡಿ ಇಟಗೊಳ್ಳೂದು…. ಇನೊಂದ ಪುಡೀ ಐತೆಲಾ…ಅದು…ಈ ಬಜೀ ಬೇರ ಇರತೈತಿ ನೋಡು…ಅದನ್ನ ಚಲೂತಂಗೆ ಒಣಗಿಸಿ ಪುಡೀ ಮಾಡಿ ಇಟಗೋದು… ಹಾಂ…ಎಣ್ಣೀ ಹಚ್ಚಿ ಎರಕೋತೀಲಾ ಅದರ ಮರದಿವಸ ಹರ್‍ಯಾಗ ಎದ್ದಗಳಸೇ ಹೊಟ್ಟೀ ತುಂಬ ಹಾಲು ಕುಡೀಬೇಕು…’
‘ಕಾಸಿದ್ದೂವೊ ಇಲ್ಲಾ ಹಸೀವೊ…?’
‘ಕಾಸಿದ್ದೂವ ತಗೋ ಅದಕೇನು…ಹಾಲ ಕುಡದಮ್ಯಾಲ ಈ ಎರಡೂ ಪುಡಿಗೋಳನ ಒಂದೊಂದ ಚಿಮಟಿ ಚಿಮಟಿ ತಗೊಂಡು -ಅವದರ ಜೋಡೀ ಒಂದ ಚಿಮಟಿ ಹೂಂಸುಪ್ಪು ಸೇರಸಬೇಕು…ಇವನ್ನೆಲ್ಲಾ ಕೂಡಿಸಿ ಜೇನ ತುಪ್ಪ ಇರತೈತೆಲಾಣಿ… ಜೇನ ತುಪ್ಪದಾಗ ಕಲಿಸಿಗೊಂಡು ಒಂದ ಗೋಲೀ ಗುಂಡಿನಷ್ಟು ಆಗತೈತಿ… ಅದನ್ನ

ತಿನಬೇಕು…ಆಮ್ಯಾಗ ಮುಂದ ಮದ್ದಿನದ ತನಕಾ ಜೇಷ್ಟಮಧೂದ ಕಾಡೇ ಕುಡೀಬೇಕು…ಜೇಷ್ಟಮಧೂ ಅಂದರಣಿ ಗೊಂತಲಾ?’
‘ಹಾಂ…ಕಟಿಗೀ ಚೂರಗತೇ ಇರತಾವೇಳು…ಸೀಂ ಸೀಂ ಇರತಾವು…’
‘ಹಾಂ…ನಾಕ ಖಂಡಿಕೀಯಷ್ಟು ಜೇಷ್ಟಮಧೂ ತಗೊಂಡು ಅದನ್ನ ನಾಕ ವಾಟೇ ನೀರ ಇಟ್ಟು ಎರಡ ವಾಟೇ ಆಗೂಹಂಗ ಕುದಿಸಿ ಇಟಗೋದು…ಈ ಕಾಡೇ ಕುಡಧಂಗ ಕುಡಧಂಗ ಉಲ್ಟೀ ಆಕ್ಕೋತ ಹೋಗತೈತಿ…ಆ ಉಲ್ಟೀ ಜೋಡಿ ರಗತದಾಗಿನ ಕಸರ ಎಲ್ಲಾ ಕಿತ್ತಿ ಬರತೈತಿ….ಮದ್ದಿನತನಕಾ ಹಿಂಗ ಉಲ್ಟೀ ಮಾಡಿಕೊಂಡು… ಮದ್ದಿನದ ಮ್ಯಾಲ ಕಾದು ಆರಿದ ನೀರೂ ಮತ್ತ ಒಂದ ವಾಟೇದಷ್ಟು ಗಂಜೀ ತಗೋಬೇಕು…’.
‘ಅಂದರಣಿ ಅಂದಿಗೆ ಐದ ದಿನಾ ಆದಂಗಾತು…ಇದ ಆದಮ್ಯಾಲೆ?’
‘ಹಾಂ…ಇದ ಆದಮ್ಯಾಲೆ ಯೋಳದಿವಸ ಏನೂ ಅಗಸುದ್ದೇ ಮತ್ತ ಪತ್ತೇ ಇಲ್ಲ… ಎಂಟನೇ ದಿವಸಕ್ಕ ಮತ್ತ ಸುರು ಆಕ್ಕೈತಿ…ಎಂಟನೇ ದಿವಸದಿಂದ ಹರ್‍ಯಾಗ ಎದ್ದಗಳಸೇ ಖಾಲೀ ಹೊಟ್ಟಿಂದ ಮತ್ತ ಆಕಳ ತುಪ್ಪಾ…ಒಂದೊಂದ ವಾಟೇ ಕುಡಿಯೂದು…ಮೂರು ದಿನಾ ಹಿಂಗ ಕುಡದ ಮ್ಯಾಲ ಮುಂದ ಮೂರು ದಿನಾ ಏನೂ ಪತ್ತೇ ಇಲ್ಲ…ಹಿಂಗ ಮೂರದಿನಾ ಆದಮ್ಯಾಗ ನಾಕನೇ ದಿನಾ ಮೈಗೆಲ್ಲಾ ಎಣ್ಣೀ ಹಚಿಗೊಂಡು ಸುಡು ಸುಡೂ ನೀರ ಹಣಿಸಿಕೊಂಡು ಜಳಕಾ ಮಾಡೂದು… ಅದರ ಮರದಿವಸ…ಹಾಂ…ತಿಗಡೀ ಬೇರಂತ ಸಿಗತೈತಿ.ಅದನ್ನ ತಂದಕ್ಯಾಸ ಪುಡೀ ಮಾಡಿಕೊಂಡ ಇಟಗೋದು…ಮರದಿವಸ ಹರ್‍ಯಾಗ ಎದ್ದಗಳಸೇ ಬಿಸಿನೀರಿನ್ಯಾಗ ತಿಗಡೀ ಬೇರಿನ ಪುಡೀ ಹಾಕೊಂಡು ಹೊಟ್ಯಾಗ ತಗೋದು…ಮುಂದ ಮದ್ದಿನಮಟಾ ಬಿಸಿನೀರನ ಕುಡೀಬೇಕು… ಬಿಸಿನೀರು ಕುಡಧಂಗ ಕುಡಧಂಗ ಹೊಟ್ಟಿ ಎಲ್ಲಾ ಜಾಡಸಾಕ ಸುರೂ ಆಗಿ ಪೂರಾ ಸ್ವಚ್ಛ ಆಗತೈತಿ… ಮತ್ತ ಮದ್ದಿನಮ್ಯಾಗ ಯಥಾಪರಕಾರ ಕಾದ ಆರಿದ ನೀರಾ ಮತ್ತ ಒಂದ ವಾಟೇದಷ್ಟು ಗಂಜೀ ತಗೋದು…ಇಲ್ಲಿಗೆ ಅಗಸುದ್ದೇ ಮತ್ತ ಪತ್ತೇದ್ದು ಎಲ್ಲಾ ಮುಗಧಂಗ ಆಗತೈತಿ…ಇಷ್ಟ ಮುಗಿಸಿಗೊಂಡಕ್ಯಾರ ಹೋಳೀಹುಣ್ಣಿವಿ ಇನ್ನ ನಾಳಿ ಐತೆಪಾ ಅನ್ನೂವಾಗ ನೀ ನಿನ್ನ ಯಾತರೀ ಸುರು ಮಾಡು…’

*
*
*

…ಶಂಕರಜ್ಜನ ಸುಪರ್ದಿನೊಳಗ ದ್ಯಾವಪ್ಪ ತನ್ನ ರಗತದಾಗಿನ ಕಸರು ತೊಳಕೊಳ್ಳೂ ಆಚಾರಾ ಮುಗಿಸಿಕೊಂಡು ಇನ್ನು ನಾಳೆ ತನ್ನ ಯಾತ್ರಾ ಸುರುಮಾಡಾಂವ ಇದ್ದಾನ ಅನ್ನುವಾಗ ಅಂದ ರಾತ್ರೀ… ಲಗಮವ್ವನ್ನ ತನ್ನ ಮುಂದ ಕುಂಡರಿಸಿಕೊಂಡು ಅಗದೀ ತಿಳಿಸಿ ಹೇಳುವ ಹಂಗ ಹೇಳಿದ…
‘ನೋಡೂ…ಸ್ವಾಮಿಯ ರಥದ ರಗತ ತಿಲಕದ ಸೇವಾ ಅಂದರ ಅಸನರೀ ಅಲ್ಲ…ದೈವ ಹಿಂತಾ ಸೇವಾ ಮಾಡೂದನ್ನ ನಮ್ಮ ಮನಿತನಕ್ಕ ಕೊಟ್ಟೈತಿ…ಫುಕ್ಕಟಣಿ ಯಾವದೂ ಸಿಗಾಣಿಲ್ಲ…ಏನರೆ ಸಿಗಬೇಕಂದರ ಏನಾರ ಕಳಕೊಳ್ಳಾಕಣಿ ಬೇಕು… ಚಂದ್ರ್ಯಾ ತನ್ನ ಜೀವಾ ಕೊಟ್ಟು ನಮ್ಮ ಮನಿತನಕ್ಕ ದೇವರ ಈ ಸೇವಾ ಅಂಬುವ ಒತನು ಗಳಿಸಿಕೊಟ್ಟ ಹೋಗಿದಾನು…ಈ ಸೇವಾ ಅಂಬೂದನ್ನ ನಿಷ್ಟಾದಿಂದ ಮಾಡಿದರ ಅಂವ ಜೀವಾ ಕೊಟ್ಟಿದ್ದಕ್ಕೂ ಸಾರ್ಥೇಕ ಆಗತೇತಿ…ಅವನ ಆತಮಕ್ಕೂ ಸಮಾದಾನ ಸಿಗತೇತಿ… ದೇವರ ಸೇವಾ ಮಾಡಾಕ ಹೊಂಡೂಕಿಂತಾ ಮದಲ ನಮ್ಮ ರಗತಾ ಸುದ್ದ ಮಾಡಿಕೋಬೇಕಂತ ಲಂಗಟದ ಸ್ವಾಮಿಗೋಳು ಅಪ್ಪಣೀ ಕೊಟ್ಟದಾರು….ಈಗ ಇಪ್ಪತ್ತ ದಿನಾ ಏನ ನನ್ನ ಆರೈಕಿ ಆತಲಾ ಅದು ಈ ರಗತಾ ಸುದ್ದ ಮಾಡುವಂತಾ ಆಚಾರಾ… ಇದೇನ ಈ ಆಚಾರ ಐತೆಲಾ ಇದನ್ನ ಪೂರಾ ನೆಪ್ಪ ಇಟಗೋ…ಅಗಸುದ್ದೇದ ಪುಡಿಗೋಳನ ಹೆಂಗ ತಯಾರ ಮಾಡೂದು ಅನ್ನೂದನ್ನ ನೆಪ್ಪ ಇಟಗೊ…ಮುಂದ ಅದನ್ನ ಮುಂದ ನೀನು ನಿನ್ನ ಸೊಸ್ತ್ಯಾರಿಗೆ ಹೇಳಬೇಕು…ನನ್ನ ತೆಲೀ ಬಿದ್ದ ಮ್ಯಾಗ ಮುಂದಕನೂ ನಮ್ಮ ಮಕ್ಕಳೂ -ಮಮ್ಮಕ್ಕಳೂ ಈ ಸೇವಾ ಅನ್ನೂದನ್ನ ನಡಿಸಿಕೊಂಡ ಹೋಗಬೇಕು…ಅವರೂ ಶಿವರಾತ್ರಿ ಇನ್ನ ಐದ ದಿನಾ ಐತಿ ಅನ್ನುವಾಗ ಈ ಅಗಸುದ್ದೇದ ಆಚಾರ ಸುರುಮಾಡಿ… ಹೋಳೀಹುಣ್ಣಿವಿ ಇನೂ ಎರಡ ದಿನಾ ಐತಿ ಅನ್ನುವಷ್ಟೊತ್ತಿಗೆ ಇದನ ಮುಗಿಸಿ -ಹೋಳೀಹುಣ್ಣಿವಿ ನಾಳಿ ಐತಿ ಅನ್ನುವಾಗ ಯಾತರಾಕ್ಕ ಹೊಂಟು – ಯಾತ್ರಾ ಮುಗಿಸಿಕೊಂಡು ಹಂಗಿಂದ ಹಂಗಣಿ ಧರಮನಟ್ಟೀ ಸ್ವಾಮಿಯ ರಥದ ಸೇವಾಕ್ಕ ಹೊಂಡಬೇಕು…ನಾಳೆ ಎರಡ ದಿನದ ಬುತ್ತೀ ಕಟ್ಟಿಕೊಡು… ನಾಳಿಂದ ಗೂಗೀ ಕೊಳ್ಳಾ- ಸೊಗಲದ ಸೋಮೇಸೂರ-ತವಗದ ಬಾಳಯ್ಯ-ಗುಡ್ಡದ ಎಲ್ಲವ್ವ-ಗೊಡಚಿಯ ಈರಭದ್ರ-ಶಿರಸಂಗೀ ಕಾಳವ್ವ-ಉದಗಟ್ಟೀ ಉದ್ದವ್ವ -ಕಲ್ಲೊಳ್ಳೀ ಹಣಮಪ್ಪ ಇವರದೆಲ್ಲಾ ದರಶನಾ ಮಾಡಿಕೊಂಡು …ಸ್ವಾಮಿಯ ರಥಾ ಇನಣಿ ನಾಕ ದಿನಾ ಐತಿ ಅನ್ನುವಷ್ಟೊತ್ತಿಗೆ ಧರಮನಟ್ಟಿಗೆ ಬರತನು…ನೀನೂ ಮಕ್ಕಳನ ಎಲ್ಲಾ ಕಟಿಗೊಂಡು ಅಲ್ಲಿಗೆ ಬಂದಬಿಡು… ನಾಕ ದಿನಾ ಅಲ್ಲೇ ಇದ್ದು ಸ್ವಾಮಿಯ ಸೇವಾ ಮಾಡಿ ಬರೂಣೂ…’.
…ದ್ಯಾವಪ್ಪ ಇಷ್ಟೆಲ್ಲಾ ದೀರ್ಘ ಹೇಳಿದ್ದು ಕೇಳಿ ಲಗಮವ್ವಗ ಏನ ಹೇಳಬೇಕಂತ ಏನೂ ತಿಳೀಲಿಲ್ಲ….‘ಆಣಿ..’ ಅಂತ ಬಾಯಿ ತಕ್ಕೊಂಡು ಕೇಳತಿದ್ದಾಕಿ ಅಂವ ಹೇಳುವುದನ್ನ ನಿಂದರಿಸಿದ ಮ್ಯಾಲೂ ಹಂಗಣಿ ಕೂತುಬಿಟ್ಟಳು…ದ್ಯಾವಪ್ಪ ‘ಯಲಾ ಇಕಿನಣಿ… ಹಂಗ್ಯಾಕ ಕುಂತಿ…? ನಾ ಹೇಳಿದ್ದು ತಿಳೀತಿಲ್ಲೊ ?…ನಾ ಸುದ್ದ ಆಗಿ ದೇವರ ಸೇವಾ ಮಾಡಿದರ ಸ್ವಾಮಿ ನನಗಣಿ ನನ್ನ ಮಕ್ಕಳಿಗೇ ಎಲ್ಲಾ ಸುಕಾ ಸೌಬಾಗ್ಯಾ ಕೊಡತಾನು…ನಮ್ಮ ಮನಿತನಕ್ಕಣಿ ಪಾಡ ಆಗತೈತಿ… ’ ಅಂದಾಗ ಲಗಮವ್ವ ಸಟಕ್ಕನಣಿ ‘ಹೂಂ’ ಅಂದಳು…

*
*
*

ಮರದಿವಸದಿಂದ ಸುರು ಆತು ದ್ಯಾವಪ್ಪನ ಪಾದ ಯಾತ್ರಿ…ಸಂಜೀ ಹೊತ್ತಿಗಂದರ ಗೂಗೀಕೊಳ್ಳಕ್ಕ ಬಂದು ಮುಟ್ಟಿದ…ಗವಿಯ ಹಂತೇಕಿನ ಕಲ್ಲು ಮಂಟಪಕ್ಕ ಬಂದು ಹೆಗಲ ಮ್ಯಾಲ ಹಾಕೊಂಡಿದ್ದ ಕಂಬಳೀ ಕೆಳಗ ಇಟ್ಟು …ಕಂಬಳಿಯ ಮಡಿಕಿಯೊಳಗ ಇಟಗೊಂಡಿದ್ದ ಚರಿಗಿಯನ್ನ ತಗೊಂಡು ಗವಿಯೊಳಗ ಇಳದ…ಆ ಗವಿಯೊಳಗ ಎಲ್ಲಿಯೋ ಕಾಣದ ತುದಿಯೊಳಗಿನ ಸೆಲಿಗಳಿಂದ ಚಿಮ್ಮಿ ಬರತಿದ್ದ ತೆಂಗಿನ ತಿಳಿನೀರಿನಂಥಾ ನೀರನ್ನ ಚರಿಗಿಯೊಳಗ ತುಂಬಿಕೊಂಡು ಹೊರಗ ಬಂದು ಕಾಲೂ – ಮುಖಾ ತೊಳಕೊಂಡು ಧೋತರದ ನಿರಿಗಿಯಿಂದ ಒರಿಸಿಕೊಂಡ…ಆಯಾಸ ಕಳದು ನಿರಾಳ ಆದಂಗಾತು…ಮತ್ತ ಗವ್ಯಾಗ ಇಳದು ಬಗಸೀ ತುಂಬಿಕೊಂಡು ತುಂಬಿಕೊಂಡು…ನೀರು ಕುಡದ…ಆಹಾಹಾಣಿ…ಗಂಗವ್ವನ ಮಹಿಮಾ ಏನ ಹೇಳೂದೂ…ಕಲ್ಲ ಗವಿಯೊಳಗಿಂದ ಉಕ್ಕಿ ಬಂದಾಳು…ನಿಂದರದಣಿ ಹರೀತಿದ್ದರೂ ನಿಚ್ಚಳಣಿ ನಿಂತಂಗ ಕಾಣತಾಳು…ಆ ಗವಿಯ ಮೂಲ್ಯಾಗಿನ ಒಂದು ಖಿಂಡಿಯಿಂದ ಜುಳು ಜುಳೂ…ಅಂತ ಹೌರಗಣಿ ಹೊರಗ ಹರದು ಕಲ್ಲು ಮಂಟಪದ ಎಡಗಡೆಯಿಂದ ಮುಂದಕ ಬಂದು ಕೊಳ್ಳದಾಗ ಝರೀ ಆಗಿ ನಡದಾಳು…ಗವಿಯೊಳಗಿನ ಕತ್ತಲಿನೊಳಗೂ ನಡಮಟಾ ಇದ್ದ ಆ ನೀರಿನ ತಳಾ ಅನ್ನುವದು ಸ್ವಚ್ಛ ಕಾಣಸತಿತ್ತು… ತೆರೀ -ತುಳುಕಾಟಾ-ಕಲಕು ಇಲ್ಲದ ಗಂಗಾಮಾಯಿ…ದ್ಯಾವಪ್ಪ ನೀರು ಕುಡದು ಚರಿಗೀ ತುಂಬಿಕೊಂಡು ಮೆಟ್ಟಲಾ ಹತ್ತಿ ಹೊರಗ ಬಂದು ಕಲ್ಲು ಮಂಟಪದಾಗ ಕುಂತ…ಅತ್ತ ಗುಡ್ಡದ ಪೂರಾ ತುದೀನೂ ಅಲ್ಲ – ಇತ್ತ ಪೂರಾ ಬುಡಕ್ಕೂ ಅಲ್ಲ…ನಟ್ಟ ನಡವ ಗುಡ್ಡದ ವಾರಿಯೊಳಗ ಹತ್ತು ಅಂಕಣದಷ್ಟು ಹಾಸಿ ಬಿದ್ದ ಹಾಸುಗಲ್ಲು…ಅದರ ಮ್ಯಾಲ ಕಲ್ಲು ಕಂಭಾ ನಿಂದರಿಸಿ,ಅವಗಳ ಮ್ಯಾಗ ಕಲ್ಲು ಪಾಳೀ ಹೊದಿಸಿ…ಮೂಡಣಕ್ಕ ಮುಖಾ ಮಾಡಿ ನಿಂತ ಕಲ್ಲು ಮಂಟಪ…ಆ ಮಂಟಪದ ಹಿಂದಿನ ಗ್ವಾಡಿಯ ಹಂಗ ಇದ್ದ ಗವಿಯ ಮುಂಭಾಗದ ಬಂಡೆಗಲ್ಲು…ದ್ಯಾವಪ್ಪ ಆ ಬಂಡೆಗಲ್ಲಿಗೆ ಆತು ಕೂತುಕೊಂಡ… ಸೂರ್ಯಾ ಮುಳಿಗಿ ನಿಧಾನ ನಿಧಾನವಾಗಿ ಮಕತ್ತಲು ಕವದು ಆಮ್ಯಾಲ ಮೂಡಣದ ಆಕಾಶದಾಗ ಚಂದ್ರಾಮ ಬಂದ…ಹುಣ್ಣಿವಿಯ ಮದಲನೇ ದಿವಸ…ಪೂರಾ ತುಂಬಿಕೊಂಡು ದುಂಡಗಿದ್ದ ಚಂದ್ರಾಮ ಒಂದು ಮೂಲಿಯೊಳಗ ಮಾತ್ರ ಹೌದೋ ಅಲ್ಲೋ ಅನ್ನುವಹಂಗ ಒಂದೀಟಣಿ ಸಪಾಟಾಗಿದ್ದ…ಚಂದ್ರಾಮನ್ನ ನೋಡಿಕೊಂತ ಕುಂತ…ಮಾಡ ಇಲ್ಲದ ಮುಗಲದಾಜ ಬೆಳ್ಳಿಯ ತಾಟಿನಂಥಾ ಚಂದ್ರಾಮ ! ಆ ಚಂದ್ರಾಮನ್ನ ನಟ್ಟ ನಡಕ ಮಾಡಿಕೊಂಡು ಸುತ್ತಲೂ ಎರಡು ಮಾರು ಅಗಲವಾಗಿ ಕಣಾ ಕಟ್ಟಿತ್ತು…ಗುಡ್ಡದ ವಾರಿಯಗುಂಟ ಕೆಳಬರಕ ನೋಡಿದರ ಬೆಳದಿಂಗಳಿನ್ಯಾಗ ಆಕಾರ ಕಳಕೊಂಡು ನಿಚ್ಚಳವಾಗಿ ಕಾಣಿಸದ ಗಿಡಾ-ಕಂಟಿಗೋಳು… ಮಂಜಿನ ತಿಳವಾದ
ಅರವೀ ಹೊದ್ದು ನಿಂತಂಗ ನಿಂತಿದ್ದವು…ಲಂಗಟದ ಸ್ವಾಮಿಗೋಳ ದರಶನ ಆಗಿದ್ದರ ಪಾಡ ಆಗತಿತ್ತು …ಆದರ ಅವರು ಅಲಕ್ ನಿರಂಜನರು…ಈ ಕೊಳ್ಳದಾಗ ಕರಗಿಧಂಗ ಎಲ್ಯೋ ಇರತಾರು…ಅವರನ ಎಲ್ಲೆಂತ ಹುಡಕೂದೂ…ಅಂತ ದ್ಯಾವಪ್ಪ ಮನಸಿನ್ಯಾಗ ಧೇನಸತಿದ್ದಂಗಣಿ ಕೊಳ್ಳದೊಳಗಿಂದ ಹತ್ತಿ ಬಂದ ಲಂಗಟದ ಸ್ವಾಮಿಗಳು ಕಲ್ಲುಮಂಟಪದೊಳಗ ಪ್ರತ್ಯಕ್ಷರಾಗಿ ದ್ಯಾವಪ್ಪನ ಮುಂದ ನಿಂತರು… ದ್ಯಾವಪ್ಪ ಸಟಕ್ಕನೇ ಮೊಣಕಾಲೂರಿ ಅವರ ಪಾದಾ ಮುಟ್ಟಿ ಸ್ವಾಮಿ ಮಾಡಿದ…ಸ್ವಾಮಿಗೋಳು-‘ನನ್ನ ತಗೊಂಡ ಏನ ಮಾಡಾಂವ ಅದೀ…? ಗುಡ್ಯಾಗಿನ ದೇವರಗೋಳ ಬೆನ್ನ ಹತ್ತಿ ನಿನ್ನ ಹಾದೀ ನೀ ಅಗದೀ ಬರಾಬ್ಬರೀ ಹುಡಿಕ್ಕೊಂಡದೀ…ಮದಲ ಈ ಗೂಗೀಕೊಳ್ಳಾ – ಸೊಗಲಾ-ಶಬರೆವ್ವನ ಕೊಳ್ಳಾ ಮುಗಿಸಿಕೊಂಡು-ಆಮ್ಯಾಲ…ಅಲ್ಲಿಂದ ಅತ್ತಲಾಕಡೆ ಹೊಂಟದೀ…ಅತ್ತಲಾಕಡೆ ಏನದಾವಲಾ ಅವುಬರೇ ಗಚ್ಚಿನ ಗುಡಿಗೋಳು…!’ ಅಂತ ನುಡದವರೇ -ಗಚ್ಚೀನ ಗುಡಿಯ ನೋಡಣ್ಣಾಣಿ…ಅಂತ ಪದಾ ಹೇಳಿಕೋತ ಅವರು ಆ ಗೂಗೀಕೊಳ್ಳದ ಅರ್‍ಯಾಣದೊಳಗ ಮರೀಯಾಗಿ ಹೋಗಿ ಬಿಟ್ಟರು…
ಸಂಶೇ ಮತ್ತ ಸಮಾಧಾನ ಎರಡೂ ಕೂಡೇ ದ್ಯಾವಪ್ಪನ್ನ ಕಾಡಿದವು… ಮನಸಿನ್ಯಾಗ ಧೇನಸತಿದ್ದಂಗಣಿ ಬಂದು ದರಶನಾ ಕೊಟ್ಟರು ಅನ್ನುವ ಸಮಾಧಾನ… ಆದರ ಒಂದು ಗಳಿಗಿ ನಿಂತು ಹೋಗಲಿಲ್ಲ…ಮತ್ತ ಅವರು ನುಡದ ಆಶೀರ್ವಾದದ ನುಡೀ…? ಗುಡ್ಯಾಗಿನ ದೇವರಗೋಳ ಬೆನ್ನ ಹತ್ತೀದೀ ಅಂಬುವ ಮಾತು ಅವನ ಎದಿಯೊಳಗ ಅನುಮಾನದ ಮಂಜು ಕವಿಯುವ ಹಂಗ ಮಾಡಿತು…‘ಹೂಂ…ಹೆಂಗೂ ಮನ್ನಿನ ಸರತೆ ಬಂದಾಗನಣಿ ಆಸೀರ್ವಾದಾ ಮಾಡ್ಯಾರಲಾ…ನೀ ನಡದದ್ದಣಿ ನಿನ್ನ ಸಾಧನಾ ಅಂತ ನುಡದ್ದಾರು…ಆತು ’ ಅಂತ ಅಂವ ತನಗ ತಾನಣಿ ಹೇಳಿಕೊಂಡು ಸಮಾಧಾನ ಹಚಿಗೊಂಡ…
…ಮರದಿವಸ ಹೋಳೀಹುಣ್ಣಿವಿ…ಕಾಮನನ್ನ ಸುಡುವ ದಿವಸ…ಹರ್‍ಯಾಗ ಎದ್ದಕೂಡಲೇ…ಗವಿಯೊಳಗಿಂದ ಹೊರಗೆಬಂದು ಕೊಳ್ಳದಗುಂಟ ಹರಿಯತಿದ್ದ ಝರಿಯ ಮಡುವಿನಲ್ಲಿ ಜಳಕಾ ಮಾಡಿ ಮತ್ತ ಕಲ್ಲು ಮಂಟಪಕ್ಕ ಬಂದು ಕುಂತು ವಿಠ್ಠಲ -ವಿಠ್ಠಲ ಅಂತ ಇಡೀ ದಿವಸ ದೇವರ ಧ್ಯಾನಾ ಮಾಡಿದ…ಯಾವ ಗುರುವಿನದೂ ಉಪದೇಶ ಇಲ್ಲಾ ಏನಿಲ್ಲಾ…ತನಗ ತಿಳಧಂಗ ಜಪಾ ಮಾಡಿದ…ಹೋಳೀ ಹುಣ್ಣಿವಿಯ ಮರದಿವಸ ತವಗಕ್ಕ…ತವಗ ಸಿದ್ಧರ ಜಾಗಾ… ಬಾಳಯ್ಯಸ್ವಾಮಿಗೋಳು ಸುಳದಾಡುವ ತವಗದ ಗುಡ್ಡದೊಳಗ ಸುಳದಾಡುವ ಗಾಳಿಗೆ ಮೈ ಒಡ್ಡಿ ಕೂತ…ಜಪಾ ಮಾಡಿದ. ಸಂಜೀಮುಂದ ಮಠಕ್ಕ ಹೋಗಿ ಬಾಳಯ್ಯನವರ ಪಾದಾ ಹಿಡದು ನಮಸ್ಕಾರ ಮಾಡಿದ.ಅವರು ದ್ಯಾವಪ್ಪನ್ನ ನೋಡಿ ಮುಗುಳು ನಗಿ ನಕ್ಕು -‘ಪ್ರಸಾದಾ ತಗೋ ಹೋಗು…’ ಅಂತನ್ನುವ ಒಂದು ನುಡಿಯನ್ನ ಮಾತ್ರ ನುಡದರು…ಮಠದಾಗ ಅಂಬಲೀ ರೊಟ್ಟಿಯ ಪ್ರಸಾದಾ ಮುಗಿಸಿ ಅಂದ ರಾತ್ರೀ ಅಲ್ಲೇ ಮಠದಾಗ ಉಳದು ಮರದಿವಸ ಅಲ್ಲಿಂದ ಸೊಗಲಕ್ಕ ಹೊಂಟ…ಸಂಜೀ ಹೊತ್ತಿಗಂದರ ಮುರಗೋಡು ಮುಟ್ಟಿದ ದ್ಯಾವಪ್ಪ ಅಲ್ಲಿ ಚಿದಂಬರ ದೀಕ್ಷಿತರ ಮನಿಯ ಕಟ್ಟಿಯ ಮ್ಯಾಲ ಕುಂತು ದಣವು ಆರಿಸಿಕೊಂಡ…ಸಂಜಿಯ ಧ್ಯಾನಾ-ಪೂಜೀ-ಮಂಗಳಾರತೀ ಎಲ್ಲಾ ಮುಗಿಸಿಕೊಂಡು ಚಿದಂಬರ ದೀಕ್ಷಿತರು ಹೊರಗ ಬಂದು , ಕಟ್ಟಿಯ ಮ್ಯಾಲ ಕೂತಿದ್ದ ದ್ಯಾವಪ್ಪನ್ನ – ‘ಏನಪಾಣಿ…ಯಾತ್ರಾ ಎಲ್ಲ ಬೇಶೆಂಗ ನಡದದಣಿ…?’ ಅಂತ ಕೇಳಿದರು.ದ್ಯಾವಪ್ಪಗ ಅಜಬ ಅನಿಸಿತು…ನಾ ಯಾತ್ರಾಕ್ಕ ಹೊಂಟದ್ದು ಈ ಅಜ್ಜಾರಿಗೆ ಹೆಂಗ ಗೊಂತ ಆತೂ ಅಂತ ಆಶ್ಚರ್ಯಗೊಂಡು,ಅಂವ ಎದ್ದು ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ-ತನ್ನ ಧರಮನಟ್ಟಿಯ ತೇರಿನ ರಗತ ತಿಲಕದ ಸೇವಾದ ಹಕೀಕತ್ತು ಎಲ್ಲಾ ನೂ ಹೇಳಿ – ‘…ಎಪ್ಪಾಣಿ ಸಾಧನಾದ ಹಾದೀ ಹೇಳರೀ…’ ಅಂತ ಬೇಡಿಕೊಂಡ.ದೀಕ್ಷಿತ ಮಹಾರಾಜರು ‘ಹೂಂ… ಗೂಗೀಕೊಳ್ಳದ ಯೋಗಿಗೋಳು ಹೇಳ್ಯಾರಲಾ…ನೀ ನಡದದ್ದನಣಿ ಸಾಧನಾ ಅಂತ…ಹೂಂ ! …ಕರ್ಮಾ ಕಳಕೋಲಿಕ್ಕೂ ಸಾಧನಾ -ಕರ್ಮಾ ಹೆಚ್ಚ ಮಾಡಿಕೋಲಿಕ್ಕನೂ ಸಾಧನಾ…ಒಟ್ಟಣಿ ಕರ್ಮದ ಕೊಡಾ ತುಂಬಬೇಕ ನೋಡು…ಕರ್ಮದ ಕೊಡಾ ಪೂರಾ ತುಂಬಿದ ಮ್ಯಾಲಣಿ ಅದನ್ನ ಸುರುವಿ ಖಾಲೀ ಮಾಡೂದು…’ ಅಂತ ಹೇಳಿ ‘ಹೂಂ…ಅದೆಲ್ಲಾ ಇರವಲ್ಲದ್ಯಾಕ…ಈಗ ಮದಲ ಖಾಲೀ ಹೊಟ್ಟೀ ತುಂಬಸಬೇಕು…ಹಸವಿನ ಅಗ್ನೀಗೆ ಆಜ್ಯ ಹಾಕೂವಂತೆ ನಡೀ ’ ಅಂತ ಒಳಗ ಕರಕೊಂಡು ಹೋಗಿ ಊಟಕ್ಕ ಹಾಕಿಸಿದರು…ಊಟ ಆದಮ್ಯಾಲೆ -‘ಹೂಂ…ನಾಳೇನ ಸೋಮೇಶ್ವರನ್ನ ಭೆಟ್ಟಿ ಆಗಾಂವ ಏನು…ಆಗಲಿ ಆಗಲಿ ’ ಅಂತ ನುಡದು ‘…ಅಲ್ಲಿ ಹೊರಗ ಕಟ್ಟೀಮ್ಯಾಲ ಥಂಡಿ ಹತ್ತಿದರ ಒಳಗ ಬಂದ ಮಲಕೋ…ಹಾಸಿಗೀ -ಹೊದಿಕೀ ಏನಾರ ಬೇಕ ಏನು?’ ಅಂತ ಕೇಳಿದರು. ‘ಯಾ…ಈಗೆಲ್ಲೀ ಥಂಡಿರೀ…ಶಕೀನಣಿ ಜೋರ ಐತಿ.ಏನೂ ಬ್ಯಾಡರಿ’ ಅಂತ ಹೇಳಿದ ದ್ಯಾವಪ್ಪ ಹೊರಗ ಬಂದು, ಕಟ್ಟಿಯಮ್ಯಾಲ ಮಲಕೊಂಡ.
…ಮರದಿವಸ ಹರ್‍ಯಾಗ ನಸಕಿನ್ಯಾಗಣಿ ಎದ್ದು ಸೊಗಲದ ಸೋಮೇಶ್ವರನ ಕ್ಷೇತ್ರಕ್ಕ ಬಂದ. ಆಹಾ…! ಗಂಗವ್ವ ಕುಣಕೊಂತ ಕುಣಕೊಂತ ಕೆಳಗ ಜಿಗೀಲಿಕ್ಕತ್ಯಾಳೆ ! ಮಂಜು ಕವದು ಮಸಕು ಮಸಕು ಆಗಿ…ಕೆಳಗೆ ಜಿಗಿಯುವ ನೀರಿನ ಧಾರೆಯ ಹಿಂದಿನ ಆ ಗುಡ್ಡ , ಮಾದೇವನ ಜಡಿಯ ಹಂಗೆ ಕಾಣಿಸಿತು…ಕಣ್ಣು ಮುಚ್ಚಿ ಕೈ ಮುಗದ…ಜಳಕಾ ಮಾಡಿ ಹೊಟ್ಟಿ ತುಂಬ ನೀರು ಕುಡದು…ಮ್ಯಾಗ ಹತ್ತಿ ಸೋಮೇಶ್ವರನ ಗುಡಿಗೆ ಹೋಗಿ ದೇವರಿಗೆ ಕೈಮುಗದು…ಅಲ್ಲಿಂದ ಮಠಕ್ಕ ಬಂದು ಅಂಬಲೀ ಕುಡದ…ಮಠದ ಹಿಂದಿನ ಗುಡ್ಡದಾಗ ಒಂದು ಸೂಜಿಗಲ್ಲಿನ ಫಡೀ ಐತಿ…ಕಬ್ಬಿಣದ ಮಳೀ ಹೊಡದ ಕಾಲಮರೀ ಮೆಟಿಗೊಂಡು ಆ ಫಡೀ ಹತ್ತಿದರೆ ಕಾಲಮರಿಯೊಳಗಿನ ಮಳಿಗೋಳೆಲ್ಲಾ ಕಿತ್ತಿ -ಹೊರಗ ಬಂದು ಆ ಫಡೀಗೆ ಹತಿಗೋತಾವೆ…ದ್ಯಾವಪ್ಪ ಸಂಜೀತನಕಾ ಆ ಫಡಿಯ ಮ್ಯಾಲ ಕುಂತು ಧ್ಯಾನಾ ಮಾಡಿ,ಸಂಜಿ ಆದಮ್ಯಾಲ ಮಠಕ್ಕ ಬಂದು ರೊಟ್ಟೀ ತಿಂದು – ಅಂಬಲೀ ಕುಡದು ಕಂಬಳೀ ಹಾಸಿಗೊಂಡು ಮಲಗಿದ…
…ಮರದಿವಸ ಮದ್ದಿನದಷ್ಟೊತ್ತಿಗೆ ನವಲು ತೀರ್ಥಕ್ಕೆ ಬಂದ…ಗುಡ್ಡ ಅಂಬುವುದನ್ನ ಸೀಳಿ ಸೆಳವಿನಿಂದ ಹರಿಯಲಿಕ್ಕತ್ಯಾಳೆ ಗಂಗವ್ವ !ಅದನ್ನಣಿ ನೋಡಿಕೊಂತ ಕುಂತ…ಈ ಭೂಮೀ ಮ್ಯಾಗ ಪಾರೋತಿ ದೇವಿ – ಗಂಗವ್ವ ಇವರದಣಿ ಹೆಚ್ಚಿನ ಲೀಲಾ ಅಂತ ಕಾಣಸತೈತಿ…ಅಲ್ಲಿ ಗೂಗೀ ಕೊಳ್ಳದಾಗ ಗಂಗವ್ವ ಗುಪತವಾಗಿ ಗವಿಯೊಳಗಿಂದ ಮೂಡಿ ಬಂದರಣಿ ಸೊಗಲದಾಗ ಸೋಮೇಸ್ವರನ ಮುಂದ ಕುಣಕೊಂತ ಸಾಗತಾಳೂ…ಇಲ್ಲಿ ನೋಡದರೆ ಗುಡ್ಡಾ ಸೀಳಿ ಸೆಳವಲೇ ನಡದ್ದಾಳು ಅಂತ ದ್ಯಾವಪ್ಪನ ಮನಸಿಗೆ ತೋರಿ-ಇನ್ನು ಈ ಪ್ರಥುವೀ ಅಂಬುವುದರ ಮ್ಯಾಲೆ ಶಿವಾ ಹೆಂಗ ಕಾಣಸತಿದ್ದಾನೂ ಅಂತ ಸೋಜಿಗಪಟ್ಟನು… ಸಂಜೀತನಕಾ ಅಲ್ಲಿಯೇ ಕುಂತು ಗಂಗವ್ವನ ರಭಸಾ ನೋಡಿ ಸಂಜಿ ಆದಮ್ಯಾಗ ಮುನವಳ್ಳಿಗೆ ಬಂದು,ಪಂಚಲಿಂಗೇಶ್ವರನ ದರಶನಾ ತಗೊಂಡು ಅಲ್ಲೇ ಗುಡಿಯ ಆವರಣದಾಗೆ ಮಲಕೊಂಡ…
…ಮರದಿವಸ ಹೊತ್ತು ಮೂಡೂದಕಿಂತಾ ಮದಲಣಿ ಸುರೇಬಾನದ ಶಬರೆವ್ವನ ಕೊಳ್ಳಕ್ಕ ನಡದ…ಅಂದ ಸಂಜೀಮುಂದ ರಾಮದುರ್ಗ ಮುಟ್ಟಿ ಅಲ್ಲಿ ವೆಂಕಟೇಶ್ವರನ ದರಶನಾ ತಗೊಂಡು ಗುಡಿಯ ಆವರಣದಾಗಣಿ ಮಲಕೊಂಡ. ಬೆಳಿಗ್ಗೆ ಎದ್ದು ಶಬರೆವ್ವನ ಕೊಳ್ಳಕ್ಕ ನಡದ…ಅಲ್ಲಿ ಮುಟ್ಟುವಷ್ಟೊತ್ತಿಗೆ ಮೂರತಾಸು ಹೊತ್ತು ಏರಿತ್ತು…ಚೈತ್ರ ಇನೂ ಬಂದಿರಲಿಲ್ಲವಾದರೂ ಅದರ ಪರಿವಾರ ಮದಲಣಿ ಬಂದಿದ್ದವು…ಬನದಾಗಿನ ಗಿಡಗೋಳು ಹೊಸಾ ಚಿಗರು ಹೊತಗೊಂಡು ನಿಂತಿದ್ದವು… ಎಲ್ಲಿ ನೋಡಿದಲ್ಲಿ ಕಾಡುನೆಲ್ಲಿ ಮತ್ತು ಬಾರಿಯ ಹಣ್ಣಿನ ಗಿಡಗೋಳು…ಶಬರೆವ್ವ ಇದಣಿ ಬನದಾಗಣಿ ರಾಮ ಲಕ್ಷ್ಮಣರಿಗೆ ಆದರ ಸತ್ಕಾರ ಮಾಡಿದ್ದಳಂತ…ಬಾರಿಯ ಹಣ್ಣು ಹರದು ಅದನ್ನ ಕಡದ ನೋಡಿ-ಸವೀ ಇದ್ದರ ಉಡ್ಯಾಗ ಇಟಗೊಳ್ಳಾಕಿ -ಹುಳೀ ಇದ್ದರ ಒಗದ ಬಿಡಾಕಿ…ಕಡದು ರುಚಿ ನೋಡಿದ ಸವಿ ಸವಿ ಹಣ್ಣುಗಳನ್ನ ರಾಮಗ ತಿನಲಿಕ್ಕೆ ಕೊಟ್ಟು ಸತ್ಕಾರ ಮಾಡಿದ್ದಳು…ದಟ್ಟನೆಯ ಆ ವನದೊಳಗೆ ಒಂದು ತಿಳಿನೀರಿನ ಝರೀ…ಕೈಕಾಲು ತೊಳಕೊಂಡು ನೀರು ಕುಡಿದು ಅಲ್ಲೇ ಒಂದು ಗಿಡದ ಬಡ್ಡಿಗೆ ಕುಂತ…ಬೆಳಗಿನಿಂದ ಊಟ ಇಲ್ಲದಿರಕೂ ನೀರು ಕುಡಿದ ಮ್ಯಾಲೆ ಹೊಟ್ಟಿ ತುಂಬಿದಂಗಾಗಿ ಏನೂ ಬ್ಯಾಡ ಅನಿಸಿತು…ಕತ್ತಲಾದಮ್ಯಾಲೂ ಸುರೇಬಾನಕ್ಕೆ ಹೋಗುವ ವಿಚಾರ ಮಾಡಲಿಲ್ಲ…‘ಜೀಂ…’ ಅಂತ ಚೀರುವ ಜೀರುಂಡಿಯ ಸಂಗೀತ ಇಡೀ ಬನದಾಗ ತುಂಬಿಕೊಂಡಿತ್ತು…ಕಣಕಪ್ಪಡಿಗಳು ಹೀಂ..ಗ ಹಾರ್‍ಯಾಡತಿದ್ದರ ಆಗೊಂದು ಈಗೊಂದು ಗೂಗಿಗಳ ಘೂ..ಕ್ ಅನ್ನುವ ದನೀ…ಹಗಲೆಲ್ಲಾ ಆಡಿದ ಮಂಗ್ಯಾಗೋಳೂ-ಹಕ್ಕಿಗೋಳೂ ಗಿಡದ ಟೊಂಗೀಮ್ಯಾಲ ಸ್ತಬ್ದ ಕುಂತು…ನಿದ್ದೀ ಮಾಡಲಿಕ್ಕತ್ತಿದ್ದವು…ಇವು ಎಲ್ಲಾದರ ನಡಬರಕ ದ್ಯಾವಪ್ಪ ಭಾಳೊತ್ತನಕಾ ಎಚ್ಚರ ಇದ್ದು… ರಾತರಿಯ ಬೆಳದಿಂಗಳಿನ್ಯಾಗ ಆ ಬನಾ ಹೆಂಗ ಕಾಣಸತೈತಿ ಅಂತ…ಅದನ್ನಣಿ ನೋಡಿಕೋತಣಿ…ಅದನ್ನಣಿ ಮನಸ ತುಂಬ ತುಂಬಿಕೋತ ಕುಂತು…ಆಮ್ಯಾಲ

ಕಂಬಳೀ ಹೊತಗೊಂಡು ಮಲಗಿದ…
…ಮರದಿವಸ ಅಲ್ಲಿಂದ ಸಿರಸಂಗಿಯ ಕಾಳಮ್ಮನ ದರಶನಕ್ಕ ನಡದ…ಹೊತ್ತು ಮೂಡುವುದಕ್ಕಿಂತ ಮದಲೇ ಹೊಂಟು ತಾಸು ದೀಡ ತಾಸು ಹೊತ್ತು ಏರುವಷ್ಟೊತ್ತಿಗೆ ಶಿರಸಂಗಿಯನ್ನು ಮುಟ್ಟಿದ…ಕಾಲು ತೊಳಕೊಂಡು ಸೀದಾ ಕಾಳಮ್ಮನ ದರಶನಕ್ಕ ಹೋದ…ಆಹಾಣಿ…ಥೇಟ್ ಎದ್ದು ಬರುವ ಹಂಗ ಕುಂತಂಗ ಕಾಣಿಸಿದಳು ತಾಯಿ…! ಬೆಳ್ಳಿಯ ಕಣಬಟ್ಟುಗಳೊಳಗಿಂದ ಇಷ್ಟಗಲ ಕಣ್ಣು ತಗದು ತನ್ನನ್ನಣಿ ನೋಡಲಿಕ್ಕತ್ಯಾಳೆ ಅಂತ ಅನಿಸಿ , ದ್ಯಾವಪ್ಪನೊಳಗ ಭಕ್ತಿ ತುಂಬಿದಂಗಾಗಿ…ಕಣ್ಣು ಮುಚಿಗೊಂಡು ಅಲ್ಲೇ ಗುಡಿಯ ಒಂದು ಮೂಲ್ಯಾಗ ಕುಂತು ಬಿಟ್ಟ….ಅಲ್ಲಿ ಹಂಗಣಿ ಕೂತಿರಬೇಕಾದರೆ ಮದ್ದಿನದ ವ್ಯಾಳ್ಯಾಕ್ಕ ಯಾರೋ ಭುಜಾ ಹಿಡದು ಅಳಿಗ್ಯಾಡಿಸಿಧಂಗ ಆತು…ಕಣ್ಣು ತಗದು ನೋಡಿದರೆ ಒಬ್ಬ ಮುದುಕ ಮನಶಾ ನಿಂತಿದ್ದ…ಅಂವ -‘ನಾವು ಹೆಬ್ಬಳ್ಳೀ ಪತ್ತಾರರು… ದೇವರಿಗೆ ಮಾಡಸಾಕ ಬಂದದೀವು…ನೀ ಯಾವಾಗ ಹರ್‍ಯಾಗಿಂದ ಇಲ್ಲೇ ಧ್ಯಾನಾ ಮಾಡಿಕೊಂತ ಕುಂತದೀ…ಬಾ…ನಮ್ಮ ಗೂಡೇ ಉಂಡ ಬರೂವಂತೆ’ ಅಂತ ಹೇಳಿ ಎಬಿಸಿಗೊಂಡು ಕರಕೊಂಡು ಹೋದ…ಮುದಕನ ಮಗಾ ಮತ್ತ ಇಬ್ಬರು ಮಮ್ಮಕ್ಕಳು ಇವರದಣಿ ಹಾದೀ ನೋಡಿಕೋತ ಕೂತಿದ್ದರು…ಇವರು ಹೋಗಿ ಅವರ ಜೋಡೀ ಕುಂತರು…ಮುದಕನ ಸೊಸಿ ಎಲ್ಲಾರಿಗೂ ಪತ್ರೋಳೀ ಕೊಟ್ಟಳು… ಚರಿಗ್ಯಾಗಿಂದ ನೀರು ಹಣಿಸಿಗೊಂಡು ಎಲೀ ತೊಳಕೊಂಡರು…ಹೋಳಿಗೀ ಊಟ ! ‘ಭಿಡೇ ಮಾಡಿಕೋಬ್ಯಾಡ ತಮ್ಮಾ ಣಿ’
‘ಇನೊಂದ ಹೋಳಿಗೀ ಹಾಕಲೀ ಯಣ್ಣಾಣಿ…?’
‘ಏ ಶಾರವ್ವಾ ತಮ್ಮಗ ಒಂದೀಟಣಿ ತುಪ್ಪಾ ನೀಡು…’
‘ಹಾಲ ಹಾಕಲೀ ಯಣ್ಣಾ …’-ಅಂತ ಹಿಂಗ ಅತ್ತೀ -ಸೊಸೀ ಇಬ್ಬರೂ ಅಗದೀ ವಾಜಮೀ ಮಾಡಿ ಉಣ್ಣಾಕ ನೀಡಿದರು…ಊಟ ಆದಮ್ಯಾಲ ಒಂದ ಅರ್ಧಾ ತಾಸು ಗುಡ್ಯಾಗ ಕುಂತು ಆಮ್ಯಾಲ ಗೊಡಚಿಯ ಹಾದೀ ಹಿಡದ…
…ಹೊತ್ತು ಮುಣಗಿ ಕತ್ತಲಾದ ಮ್ಯಾಲ ಕಡಕೋಳ ಮುಟ್ಟಿ, ಅಲ್ಲಿ ಬಸವಣ್ಣ ದೇವರ ಗುಡಿಯ ಕಟ್ಟಿಯ ಮ್ಯಾಲ ಮಲಗಿ…ಬೆಳಿಗ್ಗೆ ಎದ್ದವನೇ ಗೊಡಚಿಯ ಕಡೆ ನಡದ…ಗೊಡಚಿಯ ಸನೇಕ ಹಾದ್ಯಾಗಿನ ಒಂದ ತ್ವಾಟದ ಭಾಂವ್ಯಾಗ ಜಳಕಾ ಮುಗಿಸಿಕೊಂಡು…ಗುಡೀ ಮುಟ್ಟುವಷ್ಟೊತ್ತಿಗೆ ಎರಡ ಎರಡೂವರಿ ತಾಸು ಹೊತ್ತು ಏರಿತ್ತು…ಅಂದು ಯಾರೋ ಈರಭದ್ರನ ಗುಗ್ಗಳದ ಸೇವಾ ಎಬಿಸದ್ದರು…ಜಳಕಾ ಮಾಡಿ-ಮಡೀ ಧೋತರಾ ಉಟಗೊಂಡು -ಮಡೀ ಅಂಗೀ ತೊಟಗೊಂಡು- ತೆಲೀಗೆ ಬಿಳೀ ಪಟಕಾ ಸುತಿಗೊಂಡು ಹಣೀಗೆ ವಿಭೂತೀ ಧರಿಸಿಕೊಂಡ ಪರವಂತರು ದ್ಯಾವಪ್ಪನಿಗೆ ಥೇಟ್ ಅಲ್ಲಮ ಪ್ರಭುವಿನಹಂಗೆ ಕಂಡರು…‘ಹಿಂಗಣಿ ಇದ್ದಿರಬೇಕ ಅಂವನೂ…’ ಅಂತ ಅನಕೊಂಡ…! ಗುಗ್ಗಳಾ ಹೊತ್ತ ಹುಡುಗ ವದ್ದಿಯ ವಲ್ಲಿಯನ್ನು ಉಟ್ಟು ಬರಿಮೈಯಿಂದ ಇದ್ದಿತು…ದ್ಯಾವಪ್ಪ ಈರಭದ್ರನ ದರಶನಾ ಪಡಕೊಂಡು ಗುಗ್ಗಳದ ಮೆರವಣಿಗಿಯ ಜೋಡೀ ನಡದ…ವೀರಭದ್ರನ ಮಹಿಮಾ ಹೇಳುವ ಒಡಪುಗಳನ್ನು ಹೇಳಿಕೋತ-ಖಡೇ ಖಡೇ ನಮ್ಮ ವೀರಭದ್ರ ಅಂತ ಘೋಷ ಹಾಕಿಕೋತ -ಸಂಬಾಳ ನುಡಿಸಿಕೊಂತ ನಡದ ಗುಗ್ಗಳದ ಮೆರವಣಿಗಿ ಮದ್ದಿನದ ತನಕಾ ನಡೀತು…ಮೆರವಣಿಗೆ ಗುಡಿಗೆ ಬಂದು -ಅಲ್ಲೇ ಪೌಳ್ಯಾಗ ಅಡಿಗೀ ಮಾಡಿಸಿದ್ದರು… ಎಲ್ಲಾರದೂ ಪ್ರಸಾದ ಆತು.
…ಅಲ್ಲಿಂದ ನಡದದ್ದು ಎಲ್ಲಮ್ಮನ ಗುಡ್ಡಕ್ಕ…ಮುನವಳ್ಳಿಗೆ ಬಂದು ಮತ್ತ ಪಂಚಲಿಂಗೇಶ್ವರನ ಗುಡಿಯ ಆವರಣದಾಗ ಮಲಗಿ ಬೆಳಿಗ್ಗೆ ಎದ್ದು ಮೂರು ತಾಸು ಹೊತ್ತು ಏರುವಷ್ಟೊತ್ತಿಗೆ ಜೋಗುಳ ಭಾವಿಗೆ ಬಂದ…ಎಕ್ಕಯ್ಯ -ಜೋಗಯ್ಯ ಉಧೋ ಅಂದು – ಜೋಗಳ ಭಾಂವೀ ಸತ್ತೆವ್ವಾ ಉಧೊ ಉಧೋ ಅಂದು – ಜೋಗಳಭಾಂವಿಯೊಳಗ ಮುಣಗಿ ಎದ್ದು-ಸತ್ತೆವ್ವನ ದರಶನಾ ಮಾಡಿದ…ಆಕಿಗೆ ಸ್ವಾಮಿ ಮಾಡಿ ಹಣಿಗೆ ಭಂಡಾರ ಧರಿಸಿ…ಆಮ್ಯಾಲೆ ಸತ್ಯುಳ್ಳ ರೇಣುಕಾ ಮಾಯಿ-ಯಲ್ಲವ್ವ ನೆಲಿಸಿದ ಯೋಳುಕೊಳ್ಳದ ಗುಡ್ಡಾ ಹತ್ತಿದ…ಮರ ದಿವಸನಣಿ ಉಗಾದೀ ಅಮಾಸಿ… ಯಲ್ಲಮ್ಮ ತಾಯಿ -ಜಮದಗ್ಗನಿ ಮತ್ತ ಪರಶು ರಾಮನ ದರಶನಾ ಮಾಡಿಕೊಂಡು ಅಂದ ಅಲ್ಲೇ ಗುಡ್ಡದಾಗ ವಸ್ತೀ ಮಾಡಿದ…ಮರದಿವಸ ಉಗಾದಿಯ ಸೂರ್ಯೇ ಪರಮಾತಮನ ದರಶನವನ್ನ ಯಲ್ಲಮ್ಮನ ಕ್ಷೇತ್ರದಾಗೇ ಮಾಡಿ ಗುಡ್ಡಾ ಇಳದ… ಮುಂದ ಉಳದ ನಾಕು ದಿವಸದಾಗ ಬೆಟಗೇರಿಯ ಸತ್ಯೇದ ಲಕ್ಕವ್ವನ್ನ ಮತ್ತ ಜಾಗ್ರುತ ದೇವರು ಹಣಮಪ್ಪನ ದರಶನಾ ಮಾಡಿಕೊಂಡು ಅಲ್ಲಿಂದ ಉದಗಟ್ಟಿಯ ಉದ್ದವ್ವಗ ಹೋದ…ಅಲ್ಲಿಂದ ಮುಂದ ಸಾವಳಗಿಯ ಶಿವನಿಂಗ ಸ್ವಾಮಿಯ ಮಠಕ್ಕ ಮತ್ತ ಕಲ್ಲೊಳ್ಳಿಯ ಹಣಮಂತ ದೇವರಿಗೆ ಹೋಗಿ …ರಾಮನವಮಿ ಇನೂ ಮೂರು ದಿನಾ ಐತಿ ಅನ್ನುವಾಗ ಚೈತ್ರದ ಷಷ್ಟಿಯ ದಿವಸ ಹೊತ್ತು ಮುಣಗುವ ಹೊತ್ತಿಗಂದರೆ ಧರಮನಟ್ಟಿಯನ್ನ ಮುಟ್ಟಿದ…

*
*
*

…ಅಂವ ಬರೂಕಿಂತಾ ಮದಲನೇ ದಿವಸನಣಿ ಲಗಮವ್ವ ಮಕ್ಕಳನೆಲ್ಲಾ ಕಟಿಗೊಂಡು ಧರಮನಟ್ಟಿಗೆ ಬಂದಿದ್ದಳು…ಆಕಿ ಅಲ್ಲಿ ಬಂದಾಕಿ ವಿಠ್ಠಲ ದೇವರ ಗುಡಿಯ ಪೂಜಾರಿಗೆ ತನ್ನ ಗಂಡ ಮಡಿಯಿಂದ ಯಾತ್ರೀ ಮಾಡಿ – ಎಲ್ಲಾ ದೇವರಗೋಳ ದರಶನಾ ಮಾಡಿಕೊಂಡು ಬಂದು ರಗತ ತಿಲಕದ ಸೇವಾ ಮಾಡಲಿಕ್ಕೆಂತ -ಹೋಳೀಹುಣ್ಣಿವಿ ಇನೂ ಎರಡ ದಿವಸ ಐತಿ ಅನ್ನೂವಾಗನಣಿ ಕಳ್ಳೀಗುದ್ದೀ ಬಿಟ್ಟು ಹೋಗ್ಯಾನೆ…ಅಂವ ನಾಳೆ ಷಷ್ಟಿಯ ದಿವಸ, ಹೊತ್ತು ಮುಣಗೂ ಯಾಳೇಕ್ಕಂದರ ಧರಮನಟ್ಟಿಗೆ ಬರತಾನೆ ಅನ್ನುವದನ್ನ …ದ್ಯಾವಪ್ಪ ಲಂಗಟದ ಸ್ವಾಮಿಗೋಳ ಅಪ್ಪಣೀ ಪರಕಾರ ರಗತಾ ಸುದ್ದ ಮಾಡಿಕೊಂಡದ್ದನ್ನ -ಅದರ ಅಗಸುದ್ದೇ ಮತ್ತ ಪತ್ಯೇದ ಎಲ್ಲಾ ಆಚಾರಗಳ ಸುದ್ದಿಯನ್ನ ಮೊದಲು ಮಾಡಿಕೊಂಡು…ಎಲ್ಲಾ ಸಂಗತಿಗಳನ್ನೂ -ಆಕಿ ಅಗದೀ ರೋಚಕ ಮಾಡಿ ಹೇಳಿದ್ದಳು… ಈ ಎಲ್ಲಾ ಸಂಗತಿ ಕೇಳಿ ಪೂಜಾರಿಗೆ ಭಾಳ ಸಂತೋಷ ಆತು…ಅಂವ ಹೋಗಿ ಕಾರಭಾರಿಗಳಿಗೆ ತಿಳಿಸಿದ.ಕಾರಭಾರಿಗಳು -ಹಾಂ ಹಾಂ ! ಯೋಗ್ಯ ಅದಣಿ – ಯೋಗ್ಯ ಅದಣಿ ಅಂತ ಎರಡೆರಡು ಸರತೇ ಉದ್ಗರಿಸಿ – ಡಂಣಾಯಕರನ್ನ ಕರೆಸಿ -ರಕ್ತ ತಿಲಕದ ಸೇವಾ ನಡಸೂ ದ್ಯಾವ್ಯಾನ ಹೇಂತೀ – ಮಕ್ಕಳೂ ಬಂದಾರಂತ…ಅವರಿಗೆ ಧರ್ಮಸಾಲ್ಯಾಗ ಇಳಕೊಳ್ಳಲಿಕ್ಕೆ ವ್ಯವಸ್ಥಾ ಮಾಡಬೇಕು…ಉಗ್ರಾಣದಿಂದ ಅವರಿಗೆ ಅಕ್ಕೀ-ಗೋದೀ-ಬ್ಯಾಳೀ ಬೆಲ್ಲಾ ಅಡಗೀ ಸಾಮಾನು ಎಲ್ಲಾ ಸಾಂಗವಾಗಿ ಸರಬರಾಜು ಮಾಡಲಿಕ್ಕೆ ನಾ ಹೇಳೀನಂತ ತಿಳಸಿ ವ್ಯವಸ್ಥಾ ಮಾಡಬೇಕು -ಅಂತ ಹೇಳಿಕಳಿಸಿದರಂತ… ಲಗಮವ್ವನಿಗೆ ಗಂಡನ ಯಾತ್ರಾದ ಮಹತ್ವ ತಿಳಧಂಗ ಆತು…ತೇರಿಗೆ ಬಂದ ಮಂದಿಗೂ ದ್ಯಾವಪ್ಪ ಕಟ್ಟುನಿಟ್ಟಿನ ಮಡಿಯಿಂದ ಯಾತ್ರಾ ಮಾಡಿಕೊಂಡು ತೇರಿನ ಸೇವಾಕ್ಕ ಬಂದಾನನ್ನುವ ಮಾಹಿತಿ ತಿಳದು ಅವನ ಬಗ್ಗೆ ಭಕ್ತಿ ಅಂಬುವದು ಹುಟ್ಟಿತು…ಉತ್ತುಮ ಕುಲದವರು ‘ನಮಸ್ಕಾರ ದ್ಯಾವಪ್ಪಾ…’ ಅಂತ ಕೈಜೋಡಿಸಿದರೆ ಕಾಟುಕ ಜಾತಿಯವರು ದ್ಯಾವಪ್ಪನ ಕಾಲು ಮುಟ್ಟಿ ನಮಸ್ಕಾರ ಮಾಡಲಿಕ್ಕೆ ಸುರುಮಾಡಿದರು…
…ದ್ಯಾವಪ್ಪ ವರ್ಷಾ ವರ್ಷಾ ರಗತ ತಿಲಕದ ಸೇವಾಕ್ಕ ಬರೂದಕಿಂತಾ ಮೊದಲು-ಯಾವ ದಿನದಿಂದ ರಗತಾ ಸುದ್ದ ಮಾಡಿಕೋಲಿಕ್ಕೆ ಅಗಸುದ್ದೇ ಸುರೂ ಮಾಡಬೇಕು-ಯಾವ ಯಾವ ದಿನಾ ಯಾವ ಅಗಸುದ್ದೇ ತಗೋಬೇಕು….ಮತ್ತ ಯಾವ ದಿನಾ ಯಾತ್ರಿಗೆ ಹೊಂಟು ಯಾವ್ಯಾವ ದಿನಾ ಎಲ್ಲೆಲ್ಲಿಗೆ ಹೋಗಬೇಕು-ಎಲ್ಲೆಲ್ಲಿ ವಸ್ತೀ ಮಾಡಬೇಕು ಅನ್ನುವುದನ್ನ-ಧರಮನಟ್ಟಿಗೆ ಯಾವ ಹಾದೀಲೇ ಎಂದು ಬಂದು ಸೇರಬೇಕನ್ನೂದನ್ನ -ಎಲ್ಲವನ್ನೂ ಲಗಮವ್ವನಿಗೆ ಸವಿಸ್ತಾರವಾಗಿ ಹೇಳಿ ‘ಇದನ್ನ ನೀ ಒಟ್ಟಣಿ ಮರೀಬ್ಯಾಡ…ಮುಂದ ನಿನ್ನ ಮಕ್ಕಳೂ -ಮಮ್ಮಕ್ಕಳೂ ಸ್ವಾಮಿಯ ಸೇವಾದ ಪಟ್ಟಕ್ಕ ಬಂದಾಗ ಅವರು ಇದಣಿ ಪರಕಾರನಣಿ ನಡಕೊಂಡ ಹೋಗಬೇಕು…’ ಅಂತ ತಿಳಿಸಿದ…ಲಗಮವ್ವ ‘ಹೂಂ…’ ಅಂತ ಗೋಣು ಹಾಕಿದಳು…

*
*
*

…ದ್ಯಾವಪ್ಪ ತನಗ ಇನ್ನು ನಡೀಲಿಕ್ಕೆ ಸಾಧ್ಯನಣಿ ಇಲ್ಲ ಅನ್ನುವಷ್ಟು ವಯಸ್ಸು ಆಗಿ ಮುಪ್ಪು ಆವರಿಸುವ ತನಕಾ …ಇದೇ ಕ್ರಮದೊಳಗ ವರ್ಷಾ ವರ್ಷಾ ಔಷಧ – ಪಥ್ಯೇ ಮತ್ತ ಯಾತ್ರಿಯ ಆಚಾರವನ್ನ ಚಾಚೂ ತಪ್ಪದೇ ನಡಿಸಿಕೊಂಡು ಬಂದನು… ಯಾತ್ರಿಯನ್ನ ಮುಗಿಸಿಕೊಂಡು ಚೈತ್ರದ ಶುಕ್ಲ ಷಷ್ಟಿಯ ದಿವಸ ಹೊತ್ತು ಮುಣಗುವ ಹೊತ್ತಿಗಂದರೆ-ಒಂದು ಗಳಿಗಿ ತಡಾ ಆಗಧಂಗ ಧರಮನಟ್ಟಿಯನ್ನ ಮುಟ್ಟತಿದ್ದನು… ಇದರ ಜೋಡೀನಣಿ ಇನೊಂದು ಪದ್ಧತೀ ಬೆಳದ ಬಂತು…ಏನಪಾ ಅಂದರ – ಚೈತ್ರ ಶುದ್ಧ ಸಪ್ತಮಿಯ ಸಂಜಿಯ ಹೊತ್ತಿಗಂದರೆ ನಣದಿಯ ಗೊಂದಲಿಗ್ಯಾರ ಮ್ಯಾಳ ಧರಮನಟ್ಟಿಗೆ ಬಂದು -ಅವರು ಅಷ್ಟಮಿಯ ರಾತ್ರೀ-ವಿಠ್ಠಲದೇವರ ಗುಡಿಯ ಮುಂದ ಧರಮನಟ್ಟಿಯ ತೇರಿನ ಮಹಾತ್ಮೆ ಮತ್ತು ರಕ್ತ ತಿಲಕದ ಕಥಿಯನ್ನ ಹೇಳುವುದು… ಗೊಂದಲಿಗ್ಯಾರ ಕಥೀ ಮತ್ತ ರಕ್ತ ತಿಲಕದ ಸೇವಾ ಇವೆರಡೂ ಇರದಿದ್ದರ ಧರಮನಟ್ಟಿಯ ತೇರು ಎಳಿಯುವುದೇ ಇಲ್ಲ ಅನ್ನುವಷ್ಟು ಇವು ತೇರಿನ ಉತ್ಸವದ ಭಾಗಗಳಾಗಿಬಿಟ್ಟವು…
…ದ್ಯಾವಪ್ಪ ತನ್ನ ಕಡಿಯ ನಾಲ್ಕು ವರ್ಷದ ಯಾತ್ರಿಗೆ ಹಿರಿಯ ಮಗ ಕುಬೇರನನ್ನ ತನ್ನ ಜೋಡೀ ಕರಕೊಂಡು ಹೋಗಿ-ಎಲ್ಲಾ ಪದ್ಧತಿಯನ್ನ ಸಾರಾಸಾರವಾಗಿ ತೋರಿಸಿಕೊಟ್ಟ…ಐದನೇ ವರ್ಷ ಕುಬೇರಗ ದೀಕ್ಷಾ ಕೊಟ್ಟು -ಅವನ್ನ ಒಬ್ಬನ್ನಣಿ ಯಾತ್ರಾಕ್ಕ ಕಳಿಸಿದ…ಸ್ವಾಮಿಯ ಸೇವಾದ ಪಟ್ಟಕ್ಕ ಬಂದ ಕುಬೇರ ತನ್ನ ಮೈಮ್ಯಾಗ ಕಾವೀ ಬಣ್ಣದ ಶಲ್ಲೇ ಹೊತಗೋಲಿಕ್ಕೆ ಸುರುಮಾಡಿದನಂತ…ಅಂವ ತನ್ನ ಮದಲನೇ ಸೇವಾ ಮುಗಿಸಿಕೊಂಡು ಭಕ್ತರು ಕೊಟ್ಟ ಕಾಯೀ-ಧೋತರಾ-ಅಕ್ಕೀ- ಬ್ಯಾಳೀ -ಬೆಲ್ಲಾ ಮತ್ತ ದವಸ ಧಾನ್ಯಗಳ ಗಂಟಗಳನ ಒಂದು ಚಕಡ್ಯಾಗ ಹಾಕಿಸಿಕೊಂಡು ಕಳ್ಳೀಗುದ್ದಿಗೆ ಬಂದನಂತ…ಕುಬೇರ ತನ್ನ ಮದಲನೇ ರಕ್ತ ತಿಲಕದ ಸೇವಾ ಮುಗಿಸಿಕೊಂಡು ಹೊಳ್ಳಿ ಕಳ್ಳೀಗುದ್ದಿಗೆ ಬಂದ ದಿನಾನಣಿ ದ್ಯಾವಪ್ಪಗ ದಮ್ಮು ಜೋರಾಗಿ ಅಂವ ಅಂದ ರಾತ್ರೀನಣಿ ತೀರಿಕೊಂಡ…
ದೇಸಾಯರು ಕೊಟ್ಟ ಉಂಬಳಿಯ ಹೊಲದಾಗಣಿ ಅವನ್ನ ದಫನ ಮಾಡಿದರು…ಅಲ್ಲಿ ಒಂದು ಗದ್ದಿಗೀ ಕಟ್ಟಿಸಿ ಆ ಗದ್ದಿಗಿಯ ಮ್ಯಾಲ ಲಿಂಗವನ್ನ ಮತ್ತು ಬಸವಣ್ಣನ್ನ ಸ್ಥಾಪನಾ ಮಾಡಿದರು…ದ್ಯಾವಪ್ಪನ ಮಣ್ಣಿಗೆ ಧರಮನಟ್ಟಿ ಮತ್ತ ಸುತ್ತಮುತ್ತಲಿನ ಹಳ್ಳಿಗೋಳಿಂದ ಭಾರೀ ಮಂದಿ ಬಂದಿತ್ತು…ಧರಮನಟ್ಟಿಯ ದೇಸಾಯರು ಸ್ವತಃ ಡಂಣಾಯಕನನ್ನ ತಮ್ಮ ಪ್ರತಿನಿಧಿಯಾಗಿ ದ್ಯಾವಪ್ಪನ ಮಣ್ಣಿಗೆ ಕಳಿಸಿದ್ದರಂತ…ಅದಲ್ಲದಣಿ ಧರಮನಟ್ಟಿಂದ ದೇಸಗತಿಯ ಕಹಳಿಯವನನ್ನೂ ಕಳಿಸಿದ್ದರು…ದೇಸಾಯರ ಸ್ವಂತ ಕಹಳಿಯವನೇ ಈ ದ್ಯಾವಪ್ಪನ ಅಂತ್ಯ ಸಂಸ್ಕಾರದ ವ್ಯಾಳೇದೊಳಗೆ ಕಹಳಿಯ ಸೇವಾ ಮಾಡಿದನಂತ…

ಭಾಗ : ಮೂರು
ಅಂದು ಗುರುವಾರವೋ ಶುಕ್ರವಾರವೋ…ಮಧ್ಯಾಹ್ನದ ಮೂರು ಗಂಟೆ…. ಕಳೆದ ಒಂದು ತಿಂಗಳಿನಿಂದ ಇಲೆಕ್ಶನ್ನಿನ ಪರಿಸ್ಥಿತಿಯನ್ನು ವರದಿ ಮಾಡಲಿಕ್ಕೆ ಕರ್ನಾಟಕದ ಉದ್ದಗಲಕ್ಕೂ ಅಡ್ಡಾಡಿ …ಮೈಯೆಲ್ಲಾ ನುಗ್ಗು ಮಾಡಿಕೊಂಡು ಬಂದು ಎರಡು ದಿನ ರಜೆ ಹಾಕಿ ಮನೆಯಲ್ಲಿ ಯೇ ಉಳಿದಿದ್ದೆ…ಅಬ್ಬಾ ! ಏನು ರಸ್ತೆಗಳವು ! ನಮ್ಮ ಬೆಳಗಾವಿ ಜಿಲ್ಲೆ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಭಾಗಗಳಲ್ಲಿನ ರಸ್ತೆಗಳದಂತೂ ಹೇಳಲಾಸಲ್ಲ…ಒಂದು ಉದಾಹರಣೆಯನ್ನ ಕೊಡುವುದಾದರೆ…ಧಾರವಾಡ- ಗೋಕಾಂವಿಯ ಮುಖ್ಯ ರಸ್ತಾದೊಳಗಣಿ-ಗೋಕಾಕದ ಸಮೀಪದಾಗಣಿ-ಗೋಕಾಕ ಇನ್ನೇನು ಮೂರು-ನಾಲ್ಕು ಕಿಲೋಮೀಟರಿನಷ್ಟು ದೂರ ಅದ ಅನ್ನುವಲ್ಲಿ -ಒಂದು ಕಲ್ವರ್ಟ್ ಬಂತು…ಆ ಕಲ್ವರ್ಟಿನ ನಟ್ಟ ನಡುವೆ ಕನಿಷ್ಟ ಎರಡು ಮೂರು ಫೂಟಿನಷ್ಟು ಅಗಲವಾದ ಒಂದು ಡೊಗಾರಿ ಇತ್ತು…ನಾವು ಕಾರು ನಿಲ್ಲಿಸಿ ,ಅದು ಒಂದು ಪ್ರೇಕ್ಷಣೀಯ ಸ್ಥಳವೇನೋ ಅನ್ನುವಹಂಗೆ -ಕಾರಿನಿಂದ ಕೆಳಗೆ ಇಳಿದು ನೋಡಿದೆವು…ಕೆಳಗೆ ಹರಿಯುತ್ತಿದ್ದ ನೀರು ಕಾಣುವ ಹಾಗೆ ಆರು ಪಾರಾಗಿದ್ದ ಡೊಗಾರಿ ಅದು ! ಅದನ್ನು ನೋಡಿ ದಂಗಾದೆವು…ಆ ಡೊಗಾರಿಯ ಆಕಾರ ಗೊತ್ತಿಲ್ಲದ ಮೋಟರ್ ಸೈಕಲ್ಲಿನ ಸವಾರರು ಎಷ್ಟು ಮಂದಿ ಅಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡು ಹೋಗಿದ್ದಾರೋ ಯಾರಿಗೆ ಗೊತ್ತು ! ಜೀವವನ್ನು ಕಳಕೊಂಡವರು ಎಷ್ಟು ಜನರೆನ್ನುವುದು ಆ ಯಮಧರ್ಮನಿಗೇ ಗೊತ್ತು ! ಕಾರಿನಲ್ಲಿದ್ದ ನಾವು ಆ ಕಲ್ವರ್ಟಿಗೆ ‘ಶಕ್ತಿ ಸ್ಥಾನ’ ಅಂತ ಹೆಸರು ಕೊಟ್ಟು …ಚಾಷ್ಟೀ ಮಾಡಿ ನಕ್ಕಿದ್ದೆವು.ಅಂಥಾ ರಸ್ತಾದಾಗ ಅಡ್ಯಾಡಿ ಆ ಭಾಗದ ಇಲೆಕ್ಶನ್ನಿನ ಸುದ್ದೀ ರಿಪೋರ್ಟ್ ಮಾಡಿ ಮುಗಿಸಿ -ಬೆಂಗಳೂರಿಗೆ ವಾಪಸ್ಸು ಬಂದು… ಇಂದಿರಾ ಗಾಂಧೀನ್ನ ಮತ್ತ ಆಕಿ ತಂದಿದ್ದ ಎಮರ್ಜೆನ್ಸಿಯನ್ನ ಮನಿಗೆ ಅಟ್ಟುವಂಥಾ ಇಲೆಕ್ಶನ್ನಿನ ರಿಜಲ್ಟು ಬಂದು ಆದ ಮೇಲೆಯೇ ನಾನು ಲೀವ್ ಹಾಕಿ ಮನೆಯಲ್ಲಿ ಮಲಗಿದ್ದೆ….
ಊಟಾ ಮುಗಿಸಿ ಮಲಗಿ ನಿದ್ದೀ ಹೊಡೀತಿದ್ದೆ…ಕಾಲಿಂಗ್ ಬೆಲ್ಲು ಕರ್ನಾಟಕ ಸಂಗೀತದ ಮಟ್ಟು ನುಡದು ಅರ್ಧಾಮರ್ಧಾ ಎಚ್ಚರಿಸಿತು…ಚ್ಚು..ಚ್ಚು.. ಅಂತಂದು ಅಂಗಾತ ಇದ್ದಾಂವ ಮಗ್ಗಲಾಗಿ ಮಲಗಿದೆ.ಮತ್ತೆ ಕಾಲಿಂಗ್ ಬೆಲ್ಲು …ಈ ಸಲ ಕಮ್ ಸಪ್ಟಂಬರ್‌ನ ಮ್ಯೂಜಿಕ್ಕು…ಇನ್ನು ಮುಂದಿನ ನಾಗಸ್ವರದ ಸಂಗೀತ ಕೇಳಿ ಏಳುವುದೋ ಅಥವಾ ಈಗಲೇ ಏಳುವುದೋ ಎಂದು ಬಗೆಹರಿಯದೇ-ಒಂದರೆಕ್ಷಣ ಅನುಮಾನಿಸಿ- ಇದು ಬಿಡದ ಕರ್ಮ ಎಂದು ನಿರ್ಧರಿಸಿ -ಎದ್ದು ಕಣ್ಣುಗಳನ್ನು ತಿಕ್ಕಿಕೋತ…ಹೋಗಿ ಬಾಗಲಾ ತಗದೆ…ಯಾರಪಾ ಇಂವಾ !ಮಿಕಿ ಮಿಕಿ ಅಂತ ನನ್ನಣಿ ನೋಡಿಕೋತ ಬಾಗಲದಾಗ ನಿಂತಾನ !…ಇಪ್ಪತ್ತು -ಇಪ್ಪತ್ತೈದರ ನಡುವಿನ ಹುಡುಗ…ಉದ್ದ ಕೂದಲು- ಮುಖದ ಮ್ಯಾಲ ಕುರುಚಲು ಗಡ್ಡ…ಮಾಸಿದ ಪ್ಯಾಂಟೂ ಶರ್ಟುಗಳು… ಕೈಯೊಳಗೊಂದು ಬರೇ ಒಂದೆರಡು ಅರಿವಿಗಳು ಇದ್ದಿರಬಹುದಾದ ಕೈಚೀಲ. ದಿಟ್ಟಿಸಿ ನೋಡಿದರೆ ಥಟ್ಟನೇ-ಈ ಹುಡುಗನ್ನ ನಾನು ಎಲ್ಲಿಯೋ ನೋಡಿದ್ದೇನಲ್ಲ ಅಂತ ಮನಸಿಗೆ ಅನಿಸಿದರೂ ಎಲ್ಲಿ -ಯಾವಾಗ ಅಂತನ್ನುವದು ಹೊಳೆಯಲಿಲ್ಲ…ಅವನೂ ನನ್ನನ್ನು ಮಿಕಿ ಮಿಕಿ ಎಂದು ನೋಡುತ್ತ ಬಾಯಿ ತೆರಕೊಂಡು ಬಾಗಿಲಲ್ಲಿ ನಿಂತು ಬಿಟ್ಟಿದ್ದ…
‘ಯಾರು ಬೇಕಾಗಿತ್ತು…?’
ಅಂವ ಒಮ್ಮಿಗೆಲೇ ಎಚ್ಚರಾದವನಂಗೆ -‘ಪತ್ರಕರ್ತರು..ಬೆಟಗೇರ್‍ಯಾವರರೀ… ಪಾಟೀಲ ಸಾಹೇಬರಂತ…’ ಅಂತ ಸಣ್ಣ ಸಣ್ಣ ತುಂಡು ಮಾಡಿ-ನುಂಗಿಕೋತ ನುಂಗಿಕೋತ ಮಾತಾಡಿದ.ಪಾಟೀಲ ಸಾಹೇಬರು – ಅಂತ ಆ ಹುಡುಗ ಅನತಿದ್ದಂಗೇ ನಾನು ಇದು ಯಾವದೋ ನಮ್ಮ ಕಡೇದ್ದಣಿ ಪಾರ್ಟೀ ಅಂತ ಅನಕೊಂಡೆ…ಆ ಕಡೆ ಉತ್ತರ ಕರ್ನಾಟಕದ ಭಾಗದವರಿಗೆ ಬೆಂಗಳೂರಲ್ಲಿ ಇರುವವರೆಲ್ಲಾ -ಅವರು ಯಾವ ಧಂದೆಯನ್ನಾದರೂ ಮಾಡುತ್ತಿರಲಿ – ಅವರು ದೊಡ್ಡ ಸಾಹೇಬರೇ ! ನಾನು – ‘ಹಾಂ ಹೌದು ಹೌದು…ನಾನಣಿ.ಒಳಗ ಬರ್ರಿ’ ಅಂತ ಹೇಳಿ ಬಾಗಲದಾಗಿಂದ ಒಳಗ ಸರದು, ಅಂವನ್ನ ಒಳಗ ಬಿಟಗೊಂಡು ಬಾಗಲಾ ಹಾಕಿ ಸೋಫಾದಾಗ ಕೂತೆ…ಆ ಹುಡುಗ ಇನ್ನೂ ಅನುಮಾನಿಸಿಕೋತ ನಿಂತಿದ್ದ… ಕುರ್ಚೀ ತೋರಿಸಿ –
‘ಕೂಡರೀ…’ ಅಂದಾಗ ಕೂತು –
‘ನನಗ -ರೀ… ಹಚ್ಚಬ್ಯಾಡರೀ ಸಾಹೇಬರಣಿ’ ಅಂದ.

‘ನೀವೂ…?’
‘ನಾ ದ್ಯಾವಪ್ಪರೀ…ಕಳ್ಳೀಗುದ್ಯಾಂವ…’
‘……..!’
‘ಅದಣಿರೀ…ನೀವು ಯೋಳೆಂಟ ವರ್ಷದ ಹಿಂದ ನಮ್ಮ ಮನಿಗೆ ಬಂದಿದ್ದಿರಿ…ನೋಡರಿ.ಧರಮನಟ್ಟೀ ತೇರಿನ ಸನದು ನೋಡಲಿಕ್ಕೆ…’ಅಂತ ಹೇಳತಿದ್ದಂಗಣಿ ನನಗ ಒಮ್ಮಿಗೆಲೇ ನೆನಪು ಬಂದು ‘ಹಾಂ ಹಾಂ…’ ಅಂತ ಉದ್ಗಾರ ತಗದೆ…ಈಗ ಗೊತ್ತಾತು ಈ ಹುಡುಗನ್ನ ಎಲ್ಲಿ ನೋಡೀನನ್ನುವುದು…! ಸ್ವಾಂವಜ್ಜ ನನ್ನನ್ನ ಧರಮನಟ್ಟಿಯ ತೇರಿಗೆ ಎಳಕೊಂಡು ಹೋಗಿ-ನಾನು ಅದರ ಕಥೀ ಕೇಳಿದ ಮ್ಯಾಲೆ ಆ ಇಡೀ ಸಂಗತೀ ಬಗ್ಗೆ ಕುತೂಹಲ ಹುಟ್ಟಿ ಧರಮನಟ್ಟಿಂದ ಹಂಗಣಿ ಕಳ್ಳೀಗುದ್ದಿಯ ತನಕಾ ಹೋಗಿ,ಅಲ್ಲಿ ರಕ್ತ ತಿಲಕದವರ ಮನೀ ಹುಡಿಕ್ಕೊಂಡು ಹೋಗಿ, ಅವರು ಐದಾರು ತಲಿಮಾರುಗಳಿಂದ ಅಗದೀ ಜತನದಿಂದ ಕಾಪಾಡಿಕೊಂಡು ದೇವರ ಜಗಲೀ ಮ್ಯಾಲ ಇಟ್ಟು ಪೂಜೀ ಮಾಡತಿದ್ದ -ಕಟ್ಟು ಹಾಕಿಸಿದ ಸನದನ್ನ ನೋಡಿಕೊಂಡು ಬೆಂಗಳೂರಿಗೆ ಬಂದಿದ್ದೆ…ಈ ಹುಡುಗ ಆಗ ಇನ್ನೂ ಹನ್ನೆರಡು-ಹದಿನಾರು ವರ್ಷದ್ದು ಇದ್ದಿರಬೇಕು…
‘ಹೌದೂ !…ನಿಮ್ಮ ಅಪ್ಪನ ಹೆಸರೂ…?’
‘ಕುಬೇರಪ್ಪರೀ…ತೀರಿಕೊಂಡು ಎರಡ ವರ್ಷ ಆತರೀ’
‘ಹೌದೂ…ಛೇ..ಛೇ!’ ಅಂತ ಸಣ್ಣ ಸಂತಾಪ ತೋರಿಸಿ-ಕುತೂಹಲ ತಾಳಲಾರದೇ ‘ಮತ್ತಣಿ…ಈಗ ರಕ್ತ ತಿಲಕದ ಸೇವಾ ನಿಂದಣಿ ಇರಬೇಕಲಾ?…ಇಲ್ಲಾ ನಿನಗಿಂತಾ ದೊಡ್ಡ ಮಗಾ ಏನರ ಕುಬೇರಪ್ಪಗ ಅದಾನೋ?’ ಅಂತ ಕೇಳಿದೆ.
‘ನಾ ಒಬ್ಬಣಿ ಗಂಡ ಮಗಾರೀ…’ ಅಂತ ಹೇಳಿದ ದ್ಯಾವಪ್ಪನ ದನಿಯೊಳಗ ನಿರುತ್ಸಾಹ ತುಂಬಿ ತುಳಕತಿತ್ತು.
‘ಯಾಕೋ ಗಡ್ಡಾ ಬಿಟ್ಟದೀಲಾಣಿ? …ನಿಮ್ಮ ನಾಕೈದ ತಲಿಮಾರಿನ ಹಿಂದಿನ ಅಜ್ಜಗೋಳೊಳಗ ಯಾರೋ ಒಬ್ಬಾಂವ-ಅಂವನ ಹೆಸರೂ ಕುಬೇರಪ್ಪ ಅಂತನಣಿ ಏನೋ…ಅಂವ ತನ್ನ ಮೈಮ್ಯಾಗ ಕಾವೀ ಶಲ್ಲೇ ಹೊತಗೋತಿದ್ದನಂತ…ಹಂಗಣಿ ನೀನೂ ಏನರೇ ಸಾಧೂಗೋಳಗತೆ ಗಡ್ಡಾ ಗಿಡ್ಡಾ ಬಿಡಬೇಕಂತ ಮಾಡೀದೀ ಏನು ?’
‘ಏ…ಹಂಗೇನಿಲ್ಲರೀ…ಜೇಲಿನ್ಯಾಗ ಇದ್ದಾಗ ದಾಡೀ ಮಾಡಿಕೋಲಿಲ್ಲರಿ. ಹಿಂಗಾಗಿ…’
‘ಹಾಂ…! ಜೇಲಿನ್ಯಾಗ ಇದ್ದಿ !?’ ನನಗ ಶಾಕ್ ಆದಂಗ ಆತು…
‘ಹೂಂನ್ರೀ…ನವನಿರ್ಮಾಣ ಚಳವಳೀ ಸೇರಿ ಪ್ರೊಟೆಸ್ಟ್ ಮಾಡಿದ್ದಕ್ಕ ಸುಳ್ಳ ಸುಳ್ಳಣಿ ಆರೋಪ ಹೊರಿಸಿ ನಮ್ಮ ಅರಸು ಸಾಹೇಬರ ಪೋಲೀಸರು ಅರೆಸ್ಟ್ ಮಾಡಿ ತಂದು ಇಲ್ಲಿನ ತುರಂಗಿನ್ಯಾಗ ಇಟ್ಟಿದ್ದರರಿ…’ ಅಂತ ಅಂವ ತಣ್ಣಗೇ ಹೇಳಿದ.
ನನಗ ಆ ಹುಡುಗನ ಬಗ್ಗೆ ಒಮ್ಮಿಗೆಲೇ ಉತ್ಸಾಹ ಬಂತು…ಅಂವ ನನಗ ವಿಚತ್ರವಾಗಿ ಕಾಣಸಲಿಕ್ಕತ್ತಿದ…ಧಾರ್ಮಿಕ ದೃಷ್ಟಿಯ ಬೆಳಕಿನ್ಯಾಗಿಂದ ಅಂವ ಒಮ್ಮಿಗೆಲೇ ರಾಜಕೀಯದ ಬೆಳಕಿನ್ಯಾಗ ಹೋಗಿ ನಿಂತಿದ್ದ…ಅಂವ ತಣ್ಣಗಣಿ ಹೇಳಲಿಕ್ಕತ್ತಿದ್ದ –
‘…ಆಚೀ ಮನ್ನೆ ಮಧ್ಯಾನ್ನ ಎರಡ ಗಂಟೇಕ್ಕ ಜೇಲಿನಿಂದ ಬಿಟ್ಟರರೀ… ಬಿಡುಗಡೇ ಆಗತಿದ್ದಂಗಣಿ ನನ್ನ ಣಿ ಮತ್ತ ನನ್ನ ಜೋಡೀ ಬಿಡುಗಡೇ ಆದ ಬ್ಯಾರೇ ಹುಡಗೋರನ ಯಾರೋ ಬಂದು ಒಂದು ವ್ಯಾನಿನಾಗ ಕುಂಡರಿಸಿಕೊಂಡು ಕರಕೊಂಡ ಹೋಗಿ ಒಂದು ದೊಡ್ಡ ಬಂಗಲೇದಾಗ ಇಳಿಸಿದರು…ಜಳಕಾ ಊಟದ ವ್ಯವಸ್ಥಾ ಇತ್ತು… ಛಲೋತಂಗೆ ಜಳಕಾ ಮಾಡಿ -ಬಿಸಿ ಬಿಸೀ ಅನ್ನಾ-ಸಾಂಬಾರಾ ಹೊಡದು ಆರಾಮ ಮಲಗಿ ನಿದ್ದೀ ಮಾಡಿದಿನರೀ…ಮೂರ ತಿಂಗಳು ಆ ತಗಣೀ -ಚಿಕ್ಕಾಡಗೋಳ ನಡಕ ನಿದ್ದೀ ಮಾಡಾಕಣಿ ಆಗಿದ್ದಿಲ್ಲ…’.
‘ಯಾಕಣಿ…ನೀವು ಏ ಅಥವಾ ಬಿ ಗ್ರೇಡಿನ ಕೈದಿಗಳು…ಪಾಲಿಟಿಕಲ್ ಕೈದಿಗಳೂ ಅಂದರ ನಿಮಗ ಛಲೋ ವ್ಯವಸ್ಥಾನಣಿ ಇದ್ದಿರಬೇಕಲಾ…?’
‘ಎಲ್ಲೀದರೀ… ಇಂಪಾರ್‍ಟಂಟ್ ರಾಜಕೀಯ ಪಕ್ಷಗಳ ಮಂದಿನ್ನ ಏ ಗ್ರೇಡಿಗೆ ಹಾಕಿದರು…ನಮ್ಮಂಥಾ ಹುಡಗರನ ಒಯ್ದು ಖಟ್ಟಾ ಕ್ರಿಮಿನಲ್ಲಗೋಳ ಸೆಲ್ಲಿಗೆ ಒಗದರು…ನಾವು ಪ್ರೋಟೆಸ್ಟ್ ಮಾಡಿದಿವಿ ಖರೇ ಏನೂ ಉಪಯೋಗ ಆಗಲಿಲ್ಲ…ನಮ್ಮ ಕಡ್ಯಾಂವ ಒಬ್ಬ ಪೋಲೀಸ ಇದ್ದ…ಜೇಲಿಗೆ ಹೋಗಿ ಒಂದ ತಿಂಗಳ ಮ್ಯಾಲ ಅಂವ ನನಗ ಸಿಕ್ಕಾಗ ಹೇಳಿದ -ಕೈ ಬೆಚ್ಚಗೇ ಮಾಡಿದ್ದರೆ ನನ್ನನೂ ಏ ಗ್ರೇಡಿಗೆ ಹಾಕತಿದ್ದರಂತ…’
ನನಗ ನಗೀ ಬಂತು !…ನಮ್ಮ ದೇಶದಾಗಿನ ಒಂದೊಂದ ಸಂಸ್ಥಾನೂ ತಮ ತಮಗ ಹೊಂದೂ ಹಂಗ ಕರಪ್ಶನ್ನದ ಹಾದೀ ಹುಡಿಕಿಕೊಂಡಾವ ಅಂತ ಅನಿಸಿತು…ಹೂಂ…ಅಂತ ಉಸರು ಬಿಟ್ಟು ದ್ಯಾವಪ್ಪನ ಮುಂದಿನ ಮಾತಿಗೆ ಕಾದೆ.
‘….ಆ ಬಂಗಲೇಕ್ಕ ಕರಕೊಂಡ ಹೋಗಿದ್ದರಲ್ಲರೀ ಅವರು ನಮಗ ಒಂದ ದಿನಾ ಆರಾಮ ಇರಾಕ ಬಿಟ್ಟು ಮರದಿವಸದಿಂದ ತೆಲೀ ಕೊರ್‍ಯಾಕ ಸುರೂ ಮಾಡಿದರು… ಎಲ್ಲಾ ಹಳೇ ಮಾಲು ! ನಮ್ಮದು ಪುಣ್ಯ ಭೂಮೀ…ನಮ್ಮ ಪೂರ್ವಜರೆಲ್ಲಾ ಅವತಾರೀ ಪುರುಷರೂ…ಹಂಗಣಿ…ಹಿಂಗಣಿ ಅಂತ…ತೆಲೀ ಚಿಟ್ಟ ಹಿಡದ ಹೋತರಿ…ಹಿಂದಿಂದ ತಗೊಂಡು ಹಿತ್ತಲದಾಗ ಅತ್ತರಂತ !…ಅಲ್ಲರೀ ನಮ್ಮ ವ್ಯವಸ್ಥಾದಾಗ ಬಡವರು ಮರ್ಯಾದಿಂದ ಬದಕೂ ಹಾದೀ ಹೇಳರಿ…ಹಳ್ಯಾಗಿನ ಗೌಡರೂ-ಕುಲಕರ್ಣ್ಯಾರು- ಜಮೀನದಾರರು ಮತ್ತು ಜಾತ್ಯಸ್ಥರೂ ಮಾಡತಿರೂ ಹಂತಾ ದಂಡಾವರ್ತೀ ಬಗ್ಗೆ ವಿಚಾರ ಮಾಡರಿ…ನಮ್ಮಂಥಾ ಹುಡಗೋರಿಗೆ ಕೆಲಸ ಇಲ್ಲದ್ದರ ಬಗ್ಗೆ ಹೇಳರೀ… ಅಂತ ನಾನು ಉಗಡಾ ಉಗಡೀ ಹೇಳಿಬಿಟ್ಟಿನರೀ…ನಾ ಹಿಂಗ ಕೇಳಿದ ಕೂಡಲೆ ಅವರು ಕಣ್ಣು ಸಣ್ಣ ಮಾಡಿ ನನ್ನ ದುರು ದುರು ಅಂತ ನೋಡಿ -ನೀವು ಯಾರೂ ? ಅಂದರರಿ…ನನಗ ಗೂಢ ಆತು ….

‘ಅಂದರರೀ…?’ ಅಂತ ಕೇಳಿದ್ದಕ್ಕ -ನಿಮ್ಮದು ಯಾವ ತರದ ರಾಜಕೀಯ ವಿಚಾರಗಳೂ? ಅಂದರು…ನನಗ ಹಂತಾವೆಲ್ಲಾ ಗೊತ್ತ ಇಲ್ಲರೀ…ನಾನು ಹಳ್ಯಾಗಿನ ನಮ್ಮ ಬದಕಿನ ತ್ರಾಸಗೋಳ ಬಗ್ಗೆ ಹೇಳಾಕತ್ತೀನರೀ ಅಂತ ಅಂದದ್ದಕ್ಕೆ -ನೀವು ಯಾರ ಮಾತು ಕೇಳಿ ಈ ಚಳುವಳಿಗೆ ಬಂದಿರಿ? ಅಂದರು…ನಾನು-ಅದ್ಯಾರೋ ಮುಂಬೈದಿಂದ ಬಂದಿದ್ದರು ಅಂದದ್ದಕ್ಕೆ -ಜಾರ್ಜ್ ಏನು ? ಅಂತ ಕೇಳಿದರು…ಅವರಣಿ ಇದ್ದಿರಬೇಕಂತ ಅನಿಸಿತು…ಹೂಂ ಅವರಣಿ ಇದ್ದಿರಬೇಕರೀ ಅಂದೆ…ನನ್ನಕೂಟೇ ಒಮ್ಮಿಗೆಲೇ ಅವರ ರೀತೆನಣಿ ಬ್ಯಾರೇ ಆತರೀ…ನಿನ್ನೆ ಮಧ್ಯಾನ್ನಕ್ಕಂದರ ಆ ಬಂಗಲೇದಿಂದ ನನ್ನ ಹೊರಗ ಹಾಕಿದರು…’.
‘ಆಮ್ಯಾಲಣಿ…?’
‘ಆಮ್ಯಾಲ ಏನರೀ…ಇನ್ನ ಊರಿಗೆ ಹೊಂಡಬೇಕು…ಜೇಲಿನ್ಯಾಗ ಇದ್ದಾಗಣಿ ನಿಮ್ಮ ನೆನಪ ಬಂದಿತ್ತು…ನೀವು ನಮ್ಮ ಊರಿಗೆ -ನಮ್ಮ ಮನೀಗೆ ಬಂದದ್ದು ನೆನಪ ಆತು…ನೀವು ಬಂದು ಹೋದಮ್ಯಾಲೆ ನಮ್ಮ ಹಾಯಸ್ಕೂಲ ಮಾಸ್ತರರು ನಿಮ್ಮ ಬಗ್ಗೆ ತಮ್ಮ ತಮ್ಮೊಳಗಣಿ ಮಾತಾಡೂದನ್ನ ಕೇಳಿಸಿಕೊಂಡಿದ್ದಿನಿ…ನೀವು ಬೆಂಗಳೂರಿನ್ಯಾಗ ಪೇಪರಿನ ಕಚೇರ್‍ಯಾಗ ಇರತೀರಿ-ಇಲ್ಲೇ ಸನೇದಾಗಿನ ಬೆಟಗೇರ್‍ಯಾವರೂ-ಹಂಗಣಿ ಹಿಂಗಣಿ ಅಂತ…ಅವರು ಮಾತಾಡೂದನ್ನ ಕೇಳಿದ್ದಿನಿ.ಹೆಂಗೂ ಇಲ್ಲೀ ಮಟಾ ಬಂದೀನು…ನಿಮ್ಮನ್ನ ಭೆಟ್ಟಿಯಾಗೇ ಊರಿಗೆ ಹೊಂಡಬೇಕಂತ ಅನಿಸಿತು…’.
‘ನನ್ನ ಅಡ್ರೆಸ್ ಎಲ್ಲಿ ಸಿಕ್ಕಿತು…?ಮನೀ ಹುಡಕಲಿಕ್ಕೆ ತ್ರಾಸ ಆಗಲಿಲ್ಲಾ?’
‘ಏ …ಅದೊಂದ ದೊಡ್ಡ ಕಥೀನಣಿ ಬಿಡ್ರಿ…ನೀವು ಯಾವ ಪೇಪರಿನ್ಯಾಗ ಕೆಲಸಾ ಮಾಡತೀರಿ ಅನ್ನೂದು ಗೊತ್ತ ಇದ್ದಿರಲಿಲ್ಲ…ಹೆಂಗೂ ಆಗಲಿ ಅಂತ ಸಂಯುಕ್ತ ಕರ್ನಾಟಕದ ಕಚೇರೀ ಹುಡಿಕ್ಕೊಂಡು ಹೋಗಿ ಅಲ್ಲಿ ಕೇಳಿದಿನಿರೀ.ಅವರು -ಇಲ್ಲಿ ಅಲ್ಲಾ…ಇಂಥಾ ಪತ್ರಿಕಾದ ಕಚೇರಿಗೆ ಹೋಗೂ ಅಂತ ಪತ್ತಾ ಕೊಟ್ಟು ಕಳಿಸಿದರು…. ಅಲ್ಲಿಗೆ ಹೋಗಿ ಕೇಳಿದರ ನೀವು ರಜಾದ ಮ್ಯಾಲ ಅದೀರಿ ಅಂತ ಹೇಳಿದರು…ನಿಮ್ಮ ಗುರತಿನವರು ಒಬ್ಬರು-ಅವರು ರಜಾ ಹಾಕಿ ಮನ್ಯಾಗಣಿ ಇದ್ದಾರ.ಮನೀಗೆ ಹೋಗತೀನಂದರ ಅವರ ಅಡ್ರೆಸ್ ಕೊಡತನು ಅಂದರು…ನಿನ್ನೆ ಸಂಜಿಕ ನಿಮ್ಮ ಪತ್ತಾ ಸಿಕ್ಕಿತು.ಇಂದ ಬೆಳಿಗ್ಗೆ ಹತ್ತ ಗಂಟೇದಿಂದ ನಿಮ್ಮ ಮನೀ ಹುಡಕಾಕತ್ತೀನರಿ…ಮದಲ ಪತ್ತಾ ತೋರಿಸಿ ಒಬ್ಬರನ ಕೇಳಿದಿನಿ .ಅವರು-ಇಲ್ಲಿಂದ ಬಾಳ ದೂರ ಆಗತೈತಿ , ಅಟೋಕ್ಕ ಹೋಗರಿ ಅಂತ ಹೇಳಿ ಒಬ್ಬ ರಿಕ್ಷಾದಂವಗ ಎಲ್ಲಿಗೆ ಕರಕೊಂಡ ಹೋಗಬೇಕನ್ನೂದನ ಹೇಳಿ ಹತ್ತಿಸಿ ಕಳಿಸಿದರು.ಆ ರಿಕ್ಷಾದಾಂವ ಇಡೀ ಒಂದ ತಾಸು ಅಡ್ಯಾಡಿಸಿ -ಇಲ್ಲೇ ಸನೇದಾಗ ಐತಿ -ಯಾರನರೇ ಕೇಳಿ ನೋಡರಿ ಅಂತ ಹೇಳಿ ಇಳಿಸಿ ಹೋದ…ಆಮ್ಯಾಲ ಒಬ್ಬ ಯಜಮಾನರು ಸಿಕ್ಕರು.ಅವರಗ ಪತ್ತಾ ತೋರಿಸಿದರ- ನೀವು ಎಕ್ಸಾಕ್ಟ್‌ಲೀ ಅಪೊಜಿಟ್ ಡೈರೆಕ್ಶನ್ನಿಗೆ ಬಂದೀರಿ…ನಾರ್ಥ್‌ಗೆ ಹೋಗಬೇಕು –
ನೀವು ಸೌಥ್‌ಗೆ ಬಂದಿದೀರಾ…ಅಂತ ಹೇಳಿ ಮುನ್ನೂರಾ ಮೂವತ್ತೋ -ಯಾವದೋ ಒಂದು ಸಂಖ್ಯಾ ಹೇಳಿ ಅದನ್ನ ಹತ್ತಿ ಹೋಗು ಅಂತ ನುಡದು ಅವಸರಲೇ ಹೋದರು… ನನಗ ಏನ ಹತ್ತೂದು ಅಂತ ತಿಳೀಲಿಲ್ಲ…ಮತ್ತೊಬ್ಬರನ್ನ ಕೇಳದ್ದಕ್ಕ ಅವರು ಒಂದು ಬಸ್ಸು ಹತ್ತಿಸಿ ಕಳಿಸಿದರು.ಅದು ನನ್ನನ್ನ ಬೆಂಗಳೂರಿನ ಇನ್ನೊಂದು ದಿಕ್ಕಿನ್ಯಾಗ ಇಳಿಸಿತು… ಏನೂ ಎತ್ತಣಿ ಅಂತ ತಿಳೀಲಿಲ್ಲ…ಇನ್ನ ಮನಶಾರನ ಕೇಳೂದಣಿ ಬ್ಯಾಡ ಅಂತ ಒಬ್ಬ ಪೋಲೀಸನ್ನ ಹಿಡದು- ಅವನ್ನ ಮಾತಾಡಸೂಕಿಂತ ಮದಲಣಿ ಅವನ ಕೈಯಾಗ ಐದ ರುಪಾಯಿಯ ಒಂದ ನೋಟು ತುರುಕಿ – ಆಮ್ಯಾಲ ನಿಮ್ಮ ಪತ್ತಾ ತೋರಿಸಿ ಕೇಳಿದಿನರೀ. ನಿಮ್ಮ ಪತ್ತಾ ನೋಡಿದ ಆ ಪೋಲೀಸ ಮಿಕಿ ಮಿಕಿ ಅಂತ ನನ್ನ ಮೋತೀ ನೋಡಿ -ನಾ ಕೊಟ್ಟ ಐದ ರುಪಾಯಿಯ ನೋಟನ್ನ ನನ್ನ ಕಿಸೇಕ್ಕ ತುರುಕಿ -ಇಲ್ಲಿಂದ ದೂರ ಐತಿ…ಬಾ ಈ ಅಟೋ ಹತ್ತು-ಅಂತ ಒಂದು ಅಟೋದಾಗ ಹತ್ತಿಸಿ ತಾನೂ ಅದರೊಳಗ ಕುಂತ… ಒಂದು ಹತ್ತು ಮಿನಿಟು ಹೋದ ಮ್ಯಾಲೆ ಆ ಪೋಲೀಸ ಅಟೋದಿಂದ ಇಳದು-ಆ ಅಟೋದವನಿಗೆ ನನ್ನನ್ನ ಎಲ್ಲಿ ಬಿಡಬೇಕು ಅಂತ ಹೇಳಿ-ನಿನ್ನನ್ನ್ನ ನಿನಗ ಬೇಕಾಗಿರೂ ಅಡ್ರೆಸ್‌ಗೆ ಬಿಡತಾನ ಹೋಗು ಅಂತ ನನಗ ಹೇಳಿ ಹೋದ…ಅಟೋ ಹೊಳ್ಳಿ ನಾವು ಮದಲು ಅದನ್ನ ಹತ್ತಿದ ಜಾಗಾಕ್ಕಣಿ ಬಂದು-ಅಲ್ಲಿಂದ ನಾಕಾರು ಮಿನಿಟಿನೊಳಗೇ ನಿಮ್ಮ ಈ ಬಿಲ್ಡಿಂಗಿನ ಮುಂದೆ ತಂದು ನಿಂದರಿಸಿ-ಆ ರಿಕ್ಷಾದಾಂವ ಇಪ್ಪತ್ತು ರುಪಾಯಿ ಇಸಗೊಂಡು ಹೋದ…’ ಅಂತ ಹೇಳಿದವನೇ ‘ಹಾಂ… ಅಂದಂಗ ಈ ಬಿಲ್ಡಿಂಗಿನ್ಯಾಗ ಮೂವತ್ತಾರು ಮನಿಗೋಳು ಅದಾವಂತಲ್ಲರೀ…ಕೆಳಗ ಕುಂತ ವಾಚಮನ್ನ ಹೇಳಿದ… ನಾ ರಿಕ್ಷಾ ಇಳದಗಳಸೇ ಇಡೀ ಬಿಲ್ಡಿಂಗು ನಿಮ್ಮದಣಿ ಅಂತ ತಿಳದು ಗಾಬಣಿ ಆಗಿದ್ದಿನಿರೀ…’ ಅಂದಾಗ ನಾನು ಮನಸೋಕ್ತ ನಕ್ಕೆ.ಅವನೂ ದನಿಗೂಡಿಸಿದ…
‘ಹಂಗಾರ ಮನಿ ಹುಡಕೂದು ಒಂದು ಸಾಹಸನಣಿ ಆತು ಬಿಡು…ಕೂತಿರು. ನಾ ಚಹಾ ಮಾಡಿಕೊಂಡ ಬರತನು…’ಅಂತ ಏಳತಿದ್ದರೆ ಅಂವ –
‘ಯಾಕರೀ…ಅಕ್ಕಾ ಅವರು ಇಲ್ಲ ಏನರಿ?’ ಅಂದ.
‘ಇಲ್ಲ…ಹಬ್ಬಕ್ಕ ಊರಿಗೆ ಹೋಗ್ಯಾಳ…ಬರೂದು ಇನೂ ನಾಕಾರು ದಿನಾ ಆಗತದ…’ ಅಂತ ಹೇಳಿಕೋತ ಕಿಚನ್ನಿಗೆ ಹೋಗಿ ಚಹಾಕ್ಕ ಇಟ್ಟು ಅಲ್ಲೇ ಸಿಂಕಿನ್ಯಾಗ ಮುಖಕ್ಕಷ್ಟು ನೀರು ಹಾಕ್ಕೊಂಡೆ…ಒಂದು ಪ್ಲೇಟಿನ್ಯಾಗ ಬಿಸ್ಕೀಟು ಹಾಕಿಕೊಂಡು ಚಹಾದ ಜೋಡೀ ತಂದು ಕೊಟ್ಟೆ . ಅಂವ ಅನುಮಾನಿಸಿಕೋತ ಅನುಮಾನಿಸಿಕೋತ ‘…ಒಂದೀಟಣಿ ಕುಡ್ಯಾಕ ನೀರು ಬೇಕರಿ…’ ಅಂದ. ನಾನು ‘ಓ ಸಾರೀ…ತರತನ ತಡೀ’ ಅಂತ ಒಳಗ ಹೋಗಿ ನೀರಿನ ಜಗ್ಗೂ -ಗ್ಲಾಸೂ ತಂದು ಅವನ ಮುಂದಿನ ಟೀಪಾಯಿಯ ಮ್ಯಾಲಿಟ್ಟೆ . ಒಂದು ಕ್ಷಣ ಹಿಂದೆ ಮುಂದೆ ನೋಡಿದಂಗೆ ಮಾಡಿ,ಜಗ್ಗು ಎತ್ತಿ ಗಟ ಗಟಾ ಅಂತ ನೀರು ಕುಡಿದ…ಚಹಾದಾಗ ಬಿಸ್ಕೀಟು ಎದ್ದಿ ತಿನಕೋತ,ಟೀಪಾಯಿಯ ಮ್ಯಾಲಿನ ಪೇಪರಿನ್ಯಾಗಿ ಏನೋ ಓದಿ ಅವ ಮುಖದಲ್ಲಿ ಸಂತೋಷ ತಾಳಲಿಕ್ಕತ್ತಿದ್ದ…

‘ಏನೋ ಓದಲಿಕ್ಕತ್ತೀಲಾಣಿ…ಯಾವ ಸುದ್ದಿ ?’ ಅಂತ ಕೇಳಿದ್ದಕ್ಕೆ ಅಂವ ಒಮ್ಮೆಲೇ ಗಡಬಡಿಸಿ -‘ಏ…ಸುದ್ದಿ ಅಲ್ಲರೀ…ಮಹಾತ್ಮಾ ಗಾಂಧೀ ಅವರ ಸಮಾಧೀ ಹಂತೇಕ ಜೇಪಿ ಅವರು ಮುರಾರ್‍ಜೀ ಮತ್ತ ಜನ್ತಾ ಪಕ್ಷದ ಮಂದಿಗೆ ಶುದ್ಧ ರಾಜಕೀಯದ ಶಪಥಾ ಮಾಡಸಾಕ ಹತ್ಯಾರರೀ…’ ಅಂತ ಹೇಳಿದ.ನಾನು ಚಾಷ್ಟೀ ಮಾಡುವ ದನಿಯಿಂದ ‘ಅಲ್ಲಪಾಣಿ…ಅವರೊಳಗ ನಿನ್ನ ಆ ಬಿಲ್ಡಿಂಗಿನಿಂದ ಹೊರಗ ಹಾಕಿದ ಮಂದೆನೂ ಇದ್ದಾರಲಾ!’ ಅಂದೆ…ಅಂವ ಒಂದು ಕ್ಷಣ ಗೊಂದಲಕ್ಕ ಸಿಕ್ಕು – ‘ಏ…ಅವರು ಇದ್ದರ ಏನಾತರೀ.ಜೇಪಿ ಅದಾರಲ್ಲರೀ… ಇವರು ತಪ್ಪ ಮಾಡಿದರ ಜೇಪಿ ಅವರು ಸುಮ್ಮನಣಿ ಬಿಟ್ಟಾರ ಏನರಿ?…ಕಿಂವಿಗೆ ಹಳ್ಳ ಹಚ್ಚಿ ಬುದ್ಧೀ ಹೇಳ್ಯಾರಲ್ಲರೀ…’ ಅಂತ ಅನುಮಾನ ಮತ್ತ ಸಮಾಧಾನ ಎರಡೂ ತುಂಬಿಕೊಂಡವನಂಗ ಮಾತಾಡಿದ… ನಾನು ಅವನ ಮಾತಿಗೆ ಜೋರಾಗಿ ನಕ್ಕು ಬಿಟ್ಟೆ .ನನ್ನ ನಗಿಯಿಂದ ಅಂವ ಬೆಪ್ಪ ಆಗಿ ಕೂತಾಗ-ನಾನು ಮಾತು ಬದಲಾಯಿಸುವಂತೆ -‘ಹೂಂ…ಇದೆಲ್ಲಾ ಇರವಲ್ಲದ್ಯಾಕ ಬಿಡು…ಈಗ ಹೇಳು …ನಿನ್ನ ಸೇವಾ ಹೆಂಗ ನಡದದ…?’
ದ್ಯಾವಪ್ಪ ಇನೂ ಗೊಂದಲದಿಂದ ಪೂರಾ ಹೊರಗ ಬರದೇ -‘ಹಾಂ…? ಸೇವಾ! ಯಾವ ಸೇವಾರೀ…’ ಅಂತ ಕಣ್ಣು ಕಣ್ಣು ಬಿಟ್ಟ.
‘ಯಾಕಣಿ…ಮತ್ಯಾವ ಸೇವಾ…ಅದಣಿ ರಕ್ತ ತಿಲಕದ ಸೇವಾ! ಧರಮನಟ್ಟೀದು…’
‘ಅದಣಿ…! ನಡದೈತಿ ಬಿಡ್ರಿ…’ ಅಂತ ದ್ಯಾವಪ್ಪ ಅತ್ಯಂತ ನಿರುತ್ಸಾಹದಿಂದ ಹೇಳಿದ. ಈ ಹುಡುಗನ ಮನಸಿನ್ಯಾಗ ಏನೋ ಇದೆ – ಪ್ರೆಸ್ ಕ್ಲಬ್ಬಿಗೆ ಕರಕೊಂಡು ಹೋಗಿ ಬಾಯಿ ಬಿಡಸೂಣೂ ಅಂತ ಅನಕೊಂಡು -‘ದ್ಯಾವಪ್ಪಾ ಮುಖಾ ತೊಳಕೋ…ಹಾಣಿಂಗ ಪ್ರೆಸ್ ಕ್ಲಬ್ಬ ಕಡೆ ಹೋಗಿ ಬರೂಣೂ’ ಅಂತ ಹೇಳಿದಾಗ ಅಂವ ತನ್ನ ಚೀಲದಾಗಿನ ಟಾವೆಲ್ಲು ತಕ್ಕೊಂಡು ನಾನು ತೋರಿಸಿದ ಬಚ್ಚಲುಮನಿಗೆ ಹೋದ…ಅವ ಮುಖ ತೊಳೆದುಕೊಂಡು ಬಂದ ಮೇಲೆ ನಾನು ಮುಖ ತೊಳೆಯಲು ಹೋದರೆ ಅಲ್ಲಿನ ಸಾಬಾಣು ಒಣದಾಗಿಯೇ ಇತ್ತು…ಈ ಹುಡುಗನಿಗೆ ಬಹಳ ಸಂಕೋಚ ಅಂದುಕೊಂಡೆ…ಬಟ್ಟೆ ಬದಲಿಸಿ -ಬಾಗಿಲಿಗೆ ಕೀಲೀ ಹಾಕಿ-ಕೆಳಗೆ ಇಳಿದು ಬಂದು ಸ್ಕೂಟರ್ ಸ್ಟಾರ್ಟ್ ಮಾಡಿದೆ…ಗಡ್ಡದ ಹುಡುಗ ಅನುಮಾನಿಸಿಕೋತ-ಮೈ ಬಿಗಿ ಹಿಡಿದುಕೊಂಡು ಹಿಂದಿನ ಸೀಟಿನಲ್ಲಿ ಕೂತಿತು…
…ಪ್ರೆಸ್ ಕ್ಲಬ್ಬಿಗೆ ಹೋದಾಗ ಇನೂ ಐದು ಗಂಟೆಯ ಹೊತ್ತು .ಹೆಚ್ಚಿನ ಜನ ಇರಲಿಲ್ಲ…ಅಲ್ಲೊಂದು ಇಲ್ಲೊಂದು ಇಬ್ಬರು ಮೂವರ ಗುಂಪುಗಳು ದ್ವೀಪಗಳಂತೆ – ಅಲ್ಲಿ -ಇಲ್ಲಿ ಕೂತಿದ್ದವು.ನನ್ನನ್ನು ಕಂಡು…ಕೂತಲ್ಲಿಂದಲೇ ಕೈ ಎತ್ತಿ ವಿಶ್ ಮಾಡಿ, ಕುತೂಹಲದಿಂದ ಜೊತೆಗಿದ್ದ ದ್ಯಾವಪ್ಪನನ್ನ ದಿಟ್ಟಿಸಿದರು.‘…ನವನಿರ್ಮಾಣ ಚಳುವಳಿಯ ಹುಡುಗ…ನಮ್ಮ ಊರ ಕಡೆಯಂವ…ಮೊನ್ನೆಯೇ ಜೇಲಿನಿಂದ ಹೊರಗೆ ಬಂದಾನೆ…’ ಅಂತ ಹೆಮ್ಮೆ ತುಂಬಿದ ದನಿಯಲ್ಲಿ ಹೇಳಿಕೋತ, ಒಂದು ಮೂಲಿಯ ಜಾಗವದತ್ತ ನಡೆದು ‘ಕೂಡು…’ ಅಂತ ಹೇಳಿಕೋತ ನಾನೂ ಕೂತೆ…ದ್ಯಾವಪ್ಪ ಸುತ್ತಲೂ ನೋಡಿಕೋತ ನನ್ನ ಎದುರಿನ ಕುರ್ಚಿಯೊಳಗ ಮುದ್ದಿಯಾಗಿ ಕೂತ…
ನಾನು ‘ಬಿ ಕಂಫರ್ಟೇಬಲ್…’ ಅಂತ ಹೇಳಿದ್ದಕ್ಕೆ , ಅಂವ ‘ಹಾಂ…ಏನರೀ?’ ಅಂತ ಗಡಬಡಿಸಿ ಕೇಳಿದ…‘ಏನಿಲ್ಲ …ಆರಾಮಾಗಿ ಕೂಡು…’ ಅಂದದ್ದಕ್ಕೆ ಅಂವ ಇನಷ್ಟು ಮುದ್ದಿಯಾಗಿ ಕೂತ…
‘ಹೂಂ…ದ್ಯಾವಪ್ಪಾ …ನಿನ್ನ ಭೆಟ್ಟೀ ಸೆಲೆಬ್ರೇಟ್ ಮಾಡೂಣೂ…ಹೇಳು.ಏನ ತಗೋತೀ…? ಬೀರೋ ವ್ಹಿಸ್ಕೀನೋ…?’
ದ್ಯಾವಪ್ಪ ಧಡ್ ಅಂತ ಎದ್ದಣಿ ನಿಂತಬಿಟ್ಟ…ಅವನ ಮುಖದ ಮ್ಯಾಲಿನ ಗೊಂದಲ ಇಮ್ಮಡಿ ಮುಮ್ಮಡಿ ಆಗಿತ್ತು…‘ಏ…ಇಲ್ಲರೀ…ನಾಣಿ ಕುಡಿಯೂದುಲ್ಲರೀ…’ ಅಂತ ತೊದಲಿದ.ನಾನು ‘ಅರೇ…ಅದಕ್ಯಾಕ ಅಷ್ಟ ಘಾಬರಿ ಆಗತೀ? ಕೂಡು… ಕೊಕೋಕೋಲಾ ಕುಡಿಯೂವಂತೆ…’ ಅಂದಾಗ ಕೂತ…ಎರಡು ಕೊಕೋಕೋಲಾ ತರಿಸಿದೆ…ಸ್ಟ್ರಾ ತಗದ ಒಗದು ಬಾಟಲೀಲೆನಣಿ ಗಟಗಟಾ ಅಂತ ಕುಡದು-ನಾನು ನನ್ನದನ್ನ ಮುಗಸಲಿಕ್ಕೆ ಕಾದವನಂತೆ ನನ್ನ ಮುಖಾ ನೋಡಿಕೋತ ಕೂತ…ನಾನು ಸಾವಕಾಶವಾಗಿ ಹೀರಿ ಬಾಟಲೀ ಕೆಳಗ ಇಡತಿದ್ದಂಗಣಿ -ಅಂವ ಇದಕ್ಕೇ ಕಾದಿದ್ದವನಗತೆ ಮತ್ತೆ ಎದ್ದು ನಿಂತು – ‘ ಸಾಹೇಬರಣಿ…ಮನೀಗೇ ಹೋಗೂಣೂ ನಡೀರಿ…ನನ್ನ ಚೀಲ ಅಲ್ಲೇ ಮನ್ಯಾಗ ಉಳದೈತಿ…ನಾನು ಇಂದ ರಾತ್ರೀನಣಿ ಊರಿಗೆ ಹೊಂಡತನರೀ…’ ಅಂತ ಹೇಳಿದ…ಯಾಕೋ ಈ ಹುಡುಗನಿಗೆ ಪ್ರೆಸ್ ಕ್ಲಬ್ಬಿನ ವಾತಾವರಣ ಒಗ್ಗತಿಲ್ಲ ಅಂತ ಅನಿಸಿ -‘ಹೂಂ…ನಡೀ ಹಂಗರಣಿ ಹೋಗೂಣೂ ನಡೀ…ನೀನು ನಾಳೆ ಹೋಗೂವಂತೇ ತಗೋ…ಈಗ ಎಲ್ಲೆರಣಿ ಊಟಾ ಮುಗಿಸಿಕೊಂಡಣಿ ಮನೀಗೆ ಹೋಗೂಣೂ…ಈಗ ಬರೇ ಆರೂ ಇಪ್ಪತ್ತು ಆಗೇದ…ಒಂದ ತಾಸು ಎಲ್ಲೆರಣಿ ಕೂಡಬೇಕು…ಹಾಂ… ವಿಧಾನ ಸೌಧಾ ನೋಡತೀಯೇನು…? ಈಗ ಹೊರಗಿಂದನಣಿ ನೋಡೂದು…’ ಅಂತ ಹೇಳತಿದ್ದಂಗಣಿ ಅಂವ ಹೆಂಗರಣಿ ಮಾಡಿ ಅಲ್ಲಿಂದ ಲಗೂನಣಿ ಹೊಂಡಬೇಕನ್ನುವ ಆತುರದೊಳಗ ಇದ್ದವನಂಗ ‘ಹಾಂ…ವಿಧಾನಸೌಧಕ್ಕ ಹೋಗೂಣೂ ನಡೀರಿ…’ ಅಂತ ಹೊರಗ ನಡದಣಿ ಬಿಟ್ಟ.

*
*
*
ವಿಧಾನಸೌಧದ ಮುಂದೆ ನಿಂತು ‘ಇದಣಿ ನೋಡಪಾ ನಮ್ಮನ್ನ ಆಳುವವರು ಇರುವ ಕಿಲ್ಲಾ…! ಮಧ್ಯಾಹ್ನ ಲಗೂನಣಿ ಬಂದಿದ್ದರ ಒಳಗ ಕರಕೊಂಡ ಹೋಗತಿದ್ದೆ…’ ಅಂತ ಹೇಳತಿದ್ದರೆ ದ್ಯಾವಪ್ಪ ಅಗದೀ ತನ್ಮಯನಾಗಿ ಆ ಬಿಲ್ಡಿಂಗು ನೋಡಿಕೋತ ನಿಂತ…ಒಂದೆರಡು ಮಿನಿಟು ಹಂಗಣಿ ತದೇಕ ನೋಡಿ…ಉಸ್…ಅಂತ ಉಸರುಗರೆದು ನನ್ನ ಕಡೆ ತಿರಿಗಿದ…ನನಗೆ ಗೊತ್ತಿಲ್ಲದಂತೆಯೇ ನನ್ನ ಎದಿಯ ಒಳಗಿಂದ ಒಂದು ಪ್ರಶ್ನೆ ನುಗ್ಗಿ ಬಂದು ದನಿ ಪಡಕೊಂಡಿತು…
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.