ಗಾನಪ್ರಿಯ ಶಂಭುಶಾಸ್ತ್ರಿ

ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹತ್ತು ದಿನಗಳವರೆಗೆ ಮನರಂಜನೆಯ ಬೇರೆ ಬೇರೆ ಕಾರ್ಯಕಲಾಪಗಳಿದ್ದವು. ಮೊದಲನೇ ದಿನ ಶಾಸ್ತ್ರೀಯ ಗಾನಕ್ಷೇತ್ರದಲ್ಲಿ ಹೆಸರು ಗಳಿಸಿದ ಪುಣೆಯ ಶ್ರೀಮತಿ ಸಗುಣಾಬಾಯಿಯವರ ಗಾಯನ ಇಡಲಾಗಿತ್ತು. ನಾಡಹಬ್ಬದ ನಿಮಿತ್ತವಗಿಯೇನಿಮಿತ್ತವಾಗಿಯೇ ಧಾರವಾಡಕ್ಕೆ ಬರಲಿದ್ದ ಸಗುಣಾಬಾಯಿಯವರು ಆ ಒಂದು ದಿನ ಅಲ್ಲಿ ಬರಲು ಒಪ್ಪಿಕೊಂಡಿದ್ದರು. ಇಂತಹ ಹೆಸರುಗೊಂಡ ಕಲಾವಿದಳನ್ನು ಕೇಳುವ ಭಾಗ್ಯ ಸುಲಭವಾಗಿ ದೊರೆತುದಕ್ಕಾಗಿ ಕಾರ್ಯಕ್ರಮವನ್ನು ಏರ್ಪಡಿಸಿದವರಂತೆ ಅಲ್ಲಿಯ ಜನರೂ ಆ ವರುಷದ ನಾಡಹಬ್ಬದಲ್ಲಿ ಹೆಚ್ಚಿನ ಆಸ್ಥೆಯನ್ನು ವಹಿಸಿದ್ದರು.

ನಾನಿನ್ನೂ ಆ ಊರಿಗೆ ಹೊಸಬನಾಗಿದ್ದೆ. ಶಂಭುಶಾಸ್ತ್ರಿಗಳೊಬ್ಬರೇ ನನ್ನ ನಿಕಟ ಪರಿಚಯದವರಾಗಿದ್ದರು. ಆದುದರಿಂದ ಮೊದಲೇ ನಿಶ್ಚಿತವಾದಂತೆ ಕಾರ್ಯಕ್ರಮಕ್ಕೆ ಇನ್ನೂ ಅರ್ಧ ತಾಸು ಇರುವಾಗಲೇ ಅವರು ನನ್ನನ್ನು ಕರೆದೊಯ್ಯಲು ಬಂದರು.

ಕಾರ್ಯಕ್ರಮವು ಊರ ಮಧ್ಯಭಾಗದಲ್ಲಿರುವ ರಾಮದೇವಾಲಯದಲ್ಲಿತ್ತು. ಪ್ರವೇಶಧನವಿರಲಿಲ್ಲವಾದ್ದರಿಂದ ಸಭಾಮಂಟಪವು ಕಿಕ್ಕಿರಿದು ತುಂಬಿತ್ತು. ಊರ ಜನರೆಲ್ಲ ತಮ್ಮ ತಮ್ಮ ಕೆಲಸಗಳನ್ನು ಲಗುಬಗೆಯಿಂದ ಮುಗಿಸಿ ಆದಷ್ಟು ಬೇಗ ಬಂದು ಜಾಗ ಹಿಡಿದು ಕುಳಿತಿದ್ದರು. ಅಲ್ಲಿಯ ಜನರೇ ತುಂಬ ರಸಿಕರು ಎನಿಸಿತು! ಶಂಭುಶಾಸ್ತ್ರಿಗಳು ನನ್ನನ್ನು ಸಭಾಭವನಕ್ಕೆ ಕರೆದೊಯ್ದು ಕೆಲವು ನಿಯಂತ್ರಿತ ದೊಡ್ಡ ವ್ಯಕ್ತಿಗಳಿಗೆ ಸಿದ್ಧಪಡಿಸಿದ ಸ್ಥಳದಲ್ಲಿ ಕೂಡ್ರಿಸಿದರು.

ಸುತ್ತಲೆಲ್ಲ ಅಂದಿನ ಕಾರ್ಯಕ್ರಮ, ಸುಗುಣಾಬಾಯಿಯವರ ಬಗ್ಗೇ ಮಾತು. ನನಗೆ ಗಾಯನದಲ್ಲಿ ಅಷ್ಟೇನೂ ಆಸ್ಥೆಯಿರಲಿಲ್ಲ. ಶಾಸ್ತ್ರೀಯ ಸಂಗೀತದ ಅಭಿರುಚಿಯಂತೂ ಏನೂ ಇರಲಿಲ್ಲ. ಆದರುಆದರೂ ಶಂಭುಶಾಸ್ತ್ರಿಯವರು ಅಂದು ಸುಗುಣಾಭಾಯಿಯವರನ್ನು ಕುರಿತು ನನ್ನ ಮುಂದೆ ಕೊಟ್ಟ ದೊಡ್ಡ ವ್ಯಾಖ್ಯಾನ ನನ್ನಲ್ಲಿ ಅವಳ ಬಗ್ಗೆ ಕುತೂಹಲ ಹುಟ್ಟಿಸಿತ್ತು! ಸುತ್ತಲೂ ನೆರೆದವರಲ್ಲಿ ನನ್ನಂತೆಯೇ ಆ ವ್ಯಕ್ತಿಯನ್ನು ನೋಡಲೆಂದೇ ಬಂದವರು ಅನೇಕರಿದ್ದಿರಬಹುದು.

ಗಂಟೆ ಹತ್ತಾಯಿತು. ಕಾರ್ಯಕ್ರಮವು ಆಗಲೇ ಆರಂಭವಾಗಬೇಕಿತ್ತು. ಆದರೆ ಕಾರ್ಯಕ್ರಮದ ಏರ್ಪಾಟಿಗೆ ಕಾರಣರಾದವರಲ್ಲಿಯ ಒಬ್ಬರ ಮೋರೆಯೂ ಅಲ್ಲಿ ಕಾಣಲಿಲ್ಲ. ಶಂಭುಶಾಸ್ತ್ರಿಗಳೇ ಅಂದು ಸುಗುಣಾಬಾಯಿಯವರ ಪರಿಚಯವನ್ನು ಮಾಡಿಕೊಡುವವರಿದ್ದರು. ಅವರ ಗಾಯನದ ರೀತಿಯನ್ನು ಶಾಸ್ತ್ರಿಯವರಷ್ಟು ಕೂಲಂಕುಷವಾಗಿ ಅರಿತು, ಅದರ ಸವಿ ಸೇವಿಸಿ ಆನಂದಿಸಿದವರು ಅಲ್ಲಿ ಬೇರೆ ಯಾರೂ ಇದ್ದಂತಿರಲಿಲ್ಲ! ಆದ್ದರಿಂದಲೇ ಅವರ ಪ್ರತ್ಯಕ್ಷ ಪರಿಚಯ ತಮಗೆ ಇರಲಿಲ್ಲವಾದರೂ ಅವರ ಗಾಯನ ಕಲೆಯ ಪರಿಚಯ ಮಾತ್ರ ಸ್ವತಃ ಅವಳಿಗಿಂತ ತಮಗೇ ಹೆಚ್ಚು ಗೊತ್ತಿದೆ ಎನ್ನುವಂತಿತ್ತು, ಶಾಸ್ತ್ರಿಯವರ ಮಾತಿನ ರೀತಿ!

ಖುರ್ಚಿಯ ಮೇಲೆ ಕುಳಿತ ಕೂಡಲೇ ಶಾಸ್ತ್ರಿಗಳು ನನ್ನ ಅಸ್ತಿತ್ವವನ್ನೂ, ಸುತ್ತಲಿದ್ದ ಜನರನ್ನೂ ಅಷ್ಟೇಕೆ ಅಂದಿನ ಕಾರ್ಯಕ್ರಮವನ್ನೂ ಮರೆತಿರಬೇಕು. ಅಂದು ಅಷ್ಟೆಲ್ಲ ಜನರ ಮುಂದೆ ನಿಂತು, ಅಷ್ಟೊಂದು ವಿಖ್ಯಾತ ವ್ಯಕ್ತಿಯ ಪರಿಚಯ ಮಾಡಿಕೊಡುವುದೆಂದರೆ ಸಾಮಾನ್ಯ ಕೆಲಸವೇ! ಕಿಸೆಯಲ್ಲಿ ತಂದ ಕಾಗದದ ಪುಟಗಳನ್ನು ಓದುವುದರಲ್ಲಿ ಮಗ್ನರಾಗಿದ್ದರು. ಕಾರ್ಯಕ್ರಮಕ್ಕೆ ಕಾರಣರಾದವರಲ್ಲಿಯ ಒಬ್ಬರೂ ಇನ್ನೂ ಬರುವ ಲಕ್ಷಣ ತೋರದಿದ್ದರಿಂದ ಸಭೆಯಲ್ಲಿ ಗುಲ್ಲು ಸಿಳ್ಳು ಹೆಚ್ಚಾದವು. ಆದರೂ ಶಾಸ್ತ್ರಿಗಳ ಈದು ಭಂಗವಾಗಲಿಲ್ಲ. ಕೊನೆಗೆ ನಾನೇ ಬೇಸತ್ತು ಶಾಸ್ತ್ರಿಗಳಿಗೆ ಎಂದೆ:
“ಕಾರ್ಯಕ್ರಮ ಇಷ್ಟು ಬೇಗ ಆರಂಭ ಆಗುವ ಲಕ್ಷಣವಿಲ್ಲ. ಸ್ಟೇಜಿನ ಮೇಲೆ ಯಾವ ತಯಾರಿಯೂ ಆದಂತೆ ತೋರುವದಿಲ್ಲ.”
“ಛೇ ಛೇ!ಹಾಗೇಕೋ? ನಮ್ಮ ಗೋಪಾಲ ಹಾಗೆಲ್ಲ ಪಡಪೋಸಿಯಲ್ಲ. ಒಂದು ಕೆಲಸ ಕೈಯಲ್ಲಿ ತೆಗೆದುಕೊಳ್ಳುವಾಗಲೇ ಅವನು ಹಿಂದು ಮುಂದು ನೋಡುತ್ತಾನೆ. ಆದರೆ ಒಮ್ಮೆ ಕೈಕೊಂಡ ಬಳಿಕ ಅದನ್ನು ಪಾರುಗಾಣಿಸದೇ ಬಿಡುವುದಿಲ್ಲ. ಏನೋ ಅವಳಿಗೆ ಬರಲಿಕ್ಕೆ ಹೊತ್ತಾಗಿರಬೇಕು. ಧಾರವಾಡದಿಂದ ಬರುವುದು. ಕಾರುಗೀರಿನ ವ್ಯವಸ್ಥೆ ಸರಿಯಾದ ಹೊತ್ತಿನಲ್ಲಿ ಆಗಿರಲಿಕ್ಕಿಲ್ಲ”ಎಂದರು ಶಾಸ್ತ್ರಿಗಳು.
“ನಿಮಗೆ ಇಂದು ಭೆಟ್ಟಿಯಾಗಲಿಲ್ಲವೇ ಗೋಪಾಲನದು?”
“ಬೆಳಿಗ್ಗೆ ಒಮ್ಮೆಯಾಗಿತ್ತು. ಅದರ ನಂತರ ನನಗೆ ಸ್ವಲ್ಪ ಕೆಲಸವಿದ್ದುದರಿಂದ ಅವನ ಹತ್ತಿರ ಹೋಗಲಿಲ್ಲ; ಅವನೂ ಬರಲಿಲ್ಲ. ಬಹುತೇಕ ಕೆಲಸದ ಒತ್ತಡ.”
ರಾತ್ರೆ ಹತ್ತೂವರೆ ಸಮೀಪ ಹತ್ತಿತು. ಜನರೆಲ್ಲ ಬೇಸತ್ತು ಕಾರ್ಯಕ್ರಮವಾಗುವುದೋ ಇಲ್ಲವೋ ಎಂದು ಸಂಶಯಪಡಹತ್ತಿದರು. ಕೆಲವರಿಗೆ ಆಗಲೇ ನಿದ್ದೆ ಆವರಿಸಹತ್ತಿತು. ಶಾಸ್ತ್ರಿಗಳಿಗೂ ಸ್ವಲ್ಪ ದುಗುಡ ಹೆಚ್ಚಿರಬೇಕು. ಓದುತ್ತ ಕುಳಿತಿದ್ದ ಪುಟಗಳನ್ನು ಕಿಸೆಯಲ್ಲಿಡುತ್ತ,
“ಸುಳ್ಳಲ್ಲ, ಹೇಳ್ತಾ ಹೇಳ್ತಾ ಹೊತ್ತು ಬಹಳೇ ಆಗಿಬಿಟ್ತಲ್ಲ. ಇನ್ನೂ ತಬಲೆ, ಪೆಟ್ಟಿಗೆ ಸಹ ಬಂದಿಲ್ಲ” ಎನ್ನುವಷ್ಟರಲ್ಲಿ ಕಾರೊಂದು ದೇಗುಲದ ಬಾಗಿಲಲ್ಲಿ ನಿಂತಿತು. ಹಾಡಿಗಿಂತ ಬರುವವಳ ಮೋರೆ ನೋಡಲೆಂದೇ ಉತ್ಸುಕರಾಗಿದ್ದ ಅನೇಕರು “ಅವಳು ಬಂದಳು” ಎಂದು ಏಕಕಂಠದಲ್ಲಿ ನುಡಿದು ಭರ್ರನೆ ಎದ್ದು ಕಾರಿಗೆ ಮುತ್ತಿಗೆ ಹಾಕಿದರು. ಅವರನ್ನೆಲ್ಲ ಬದಿಗೆ ಸರಿಸಿ ಅವಳು ಸ್ಟೇಜಿಗೆ ಬರುವ ತನಕ ಇನ್ನೂ ಕೆಲ ಹೊತ್ತು ಕಳೆಯಿತು. ಅಂತೂ ರಾತ್ರೆ ಹನ್ನೊಂದು ಹೊಡೆಯುವ ಹೊತ್ತಿಗೆ ಕಾರ್ಯಕ್ರಮ ಆರಂಭವಾಗಿತ್ತು.

ಹೆಂಗಸರನೇಕರಲ್ಲಿ ಆಗಲೇ ಅವಳ ಸೀರೆ, ಮೈಮೇಲಿನ ಆಭರಣ, ಮೋರೆಯ ಬಣ್ಣ ಇವುಗಳ ವರ್ಣನೆಗೆ ಮೊದಲಾಯಿತು. ಕೆಲವರು ಥೇಟ್ ಲಕ್ಷ್ಮಿಯೆಂದರು. ಇನ್ನು ಕೆಲವರು ಬಿನ್ನಾಣಗಿತ್ತಿಯೆಂದರು. ಇಷ್ಟೆಲ್ಲ ಗಂಡಸರ ಮುಂದೆ ಹಾಡುವ ಧೈರ್ಯದ ಹೆಣ್ಣು-ಗಂಡುಬೀರಿ ಎಂದರು, ಇನ್ನು ಹಲವರು.ಆದರೆ ಇಷ್ಟು ಹೊತ್ತಿನವರೆಗೆ ಶಾಸ್ತ್ರಿಗಳ ಬಾಯಿಯಿಂದ ಒಂದು ಚಕಾರ ಶಬ್ಧವೂ ಹೊರಬೀಳಲಿಲ್ಲ ! ಕಿಸೆಯೊಳಗಿನ ಕಾಗದದ ಹಾಳೆಗಳು ತಿರುಗಿ ಬಂದಿದ್ದವು. ಆದರೆ ಅವರನ್ನು ಆದಿನ ಪರಿಚಯ ಮಾಡಿಕೊಡಲು ಯಾರೂ ಕರೆಯಲೇ ಇಲ್ಲ. ಒಮ್ಮೆಲೇ ಕಾರ್ಯಕ್ರಮವು ಆರಂಭವಾಗುವಂತೆ ತೋರಿತು- ತಬಲಾದವನು ತಬಲೆಯನ್ನು ಸರಿಪಡಿಸಿದ. ಆಗ ಆ ಶಾಸ್ತ್ರಿಗಳು ಬಿಟ್ಟ ನೀಳವಾದ ನಿಟ್ಟುಸಿರೊಂದು ಅವರು ಅಡಗಿಸಲು ಯತ್ನಿಸಿದರೂ ನನಗೆ ಕೇಳಿಸಿತು! ಅದಾಗಲೇ ಸಾಕಷ್ಟು ರಾತ್ರಿಯಾದುದರಿಂದ ಉಳಿದ ಸಾಂಪ್ರದಾಯಿಕ ಆಡಂಬರವನ್ನು ರದ್ದುಗೊಳಿಸಿದರೆಂದು ಯಾರಿಗೂ ತಿಳಿಯುವಂತಿತ್ತು. ಎಲ್ಲರೂ ಹಾಡುಗಾರರ ಬಾಯಿಂದ ಹೊರಬೀಳಲಿರುವ ನಾದದ ಕಡೆಗೇ ಕಿವಿ ಕೊಟ್ಟು ಕುಳಿತಿದ್ದರು.

ಇದೀಗ ಶಾಸ್ತ್ರಿಗಳು ಬಾಯಿಬಿಟ್ಟರು:“ ಬಂಗಾರಕ್ಕೆ ಸುಗಂಧ ಕೂಡಿದೆಯಂತಿಲ್ಲವೇ ಅವಳ ಸೌಂದರ್ಯ? ಇಷ್ಟುದಿನ ಬರಿಯೇ ರೇಡಿಯೋದ ಮೇಲೆ ಕೇಳಿಯೇ ಆನಂದಿಸಿದ್ದೆ. ಈ ಹೊತ್ತು ಸ್ವತಃ ನೋಡುವ ಸುಯೋಗ! ಕಲೆ ಮತ್ತು ರೂಪ ಹೀಗೆ ಒಂದೆಡೆ ಸಿಗುವುದು ಅಪರೂಪ. ಅಡ್ಡಿಯಿಲ್ಲ. ಥೇಟ್ ಅಪ್ಸರೆಯಿದ್ದಾಳೆ. ಹುಡುಗಿ. ಇಷ್ಟು ಚಿಕ್ಕಾಯಸ್ಸಿನಲ್ಲಿ ಗಾಯನದಲ್ಲಿ ಇಷ್ಟು ನೈಪುಣ್ಯ ಪಡೆದುದು ಬಹಳ ಆಶ್ಚರ್ಯ.”
ಅವರು ಇನ್ನೂ ಮಾತನಾಡುತ್ತಿರುವಾಗಲೇ ವೀಣೆಯವನು ತನ್ನ ತಂತಿ ಮೀಟಿದ. ಮರುಕ್ಷಣವೇ ಅದರ ನಾದಕ್ಕೆ ಹೊಂದಿಕೊಳ್ಳುವಂತೆ ಅವಳ ಬಾಯಿಯಿಂದ ‘ಆ’ ಎಂಬ ಸ್ವರವು ಹೊರಬಿದ್ದಿತು. ಗವಯಿಗಳ ಸಂಪ್ರದಾಯದಂತೆ ಒಮ್ಮೆ ಕೆಮ್ಮಿ, ಕಂಠ ಸಡಿಲಿಸಿ ತನ್ನ ಸ್ವರವನ್ನು ಇನ್ನೂ ಮೇಲೆ ಒಯ್ದಳು. ಅಷ್ಟೇ: ಶಾಸ್ತ್ರಿಗಳು ಒಮ್ಮೆಲೇ ‘ಭೇಷ್’ ಎಂದರು. “ಅವಳಿನ್ನೂ ಹಾಡಲು ಆರಂಭಿಸಲೇ ಇಲ್ಲ, ಅದಾಗಲೇ ಭೇಷ್ ಎಂದಿರಲ್ಲ” ಎಂದು ಕೇಳಿದೆ. “ಅಯ್ಯೋ ಮರುಳೆ, ಅದೇನೊ ಹೇಳ್ತಾರಲ್ಲ ಬೆಳೆಯ ಸ್ವರೂಪ ಎಳೆಯಲ್ಲೇ ಎಂದು; ನುರಿತ ಕಿವಿಗಳಿದ್ದರೆ ಅವಳು ತುಟಿ ತೆರೆಯುವುದರೊಳಗೇ ಹೇಳಬಹುದು, ಅವಳು ಯಾವ ರಾಗ ಹಾಡಲಿದ್ದಾಳೆಂದು (!) ಹಾಡುಗಾರನ ನಿಜವಾದ ಕಲೆ ಈ ಆಲಾಪದಲ್ಲೇ ಇದೆ. ನಾನು ಈಗಲೇ ಊಹಿಸಬಲ್ಲೆ ಅವಳು ಹಾಡಲಿರುವ ರಾಗ ‘ಮಾಲಕಂಸ್’ ಎಂದು” ಎಂದು ನನ್ನ ಕಿವಿಯಲ್ಲಿ ನುಡಿದರು, ತಮ್ಮ ಮಾತಿನಿಂದ ಉಳಿದವರಿಗೆಲ್ಲ ತೊಂದರೆಯಾದೀತೋ ಎಂದು ಬೆದರಿದರೆನ್ನುವಂತೆ! “ಭೇಷ್ ಭೇಷ್”! ನೋಡಿದೆಯಾ ಅವಳು ಹೇಗೆ ತನ್ನ ಸ್ವರವನ್ನು ಏರಿಸಿ ಒಮ್ಮೆಲೇ ಕೆಳಗಿಳಿಸಿದಳೆಂದು. ಇದೋ ಈಗದು ಇನ್ನೂ ಕೆಳಗಿಳಿಯಹತ್ತಿತು. ಇದು ನೋಡು ಸುಗುಣಬಾಯಿಯ ವೈಶಿಷ್ಟ್ಯ. ಒಂದು ಮೈಲು ದೂರದಿಂದ ಇಂದಿನ ಕಾರ್ಯಕ್ರಮ ಕೇಳುತ್ತಿದ್ದರೂ ನಾನು ಕಣ್ಣು ಮುಚ್ಚಿ ಹೇಳುತ್ತಿದ್ದೆ: ಹಾಡುವವಳು ಸುಗುಣಬಾಯಿಯೇ ಎಂದು. ಅವಳ ಈ ವೈಶಿಷ್ಟ್ಯವನ್ನು ಹಸ್ತಗತ ಮಾಡಿಕೊಂಡವರು ತೀರ ವಿರಳ. ವ್ಹಾ ವ್ಹಾ ! ಏನು ದನಿ ! ಏನು ಸವಿ !! ಇನ್ನೂ ಹಾಡಿಗೆ ಸುರು ಮಾಡಿಲ್ಲ. ಇದು ಬರೇ ಆಲಾಪ. ಸುಂದರವಾದ ಕಟ್ಟಡ ಕಟ್ಟಬೇಕಾದರೆ ಹೇಗೆ ಸರಿಯಾದ ಬುನಾದಿ ಬೇಕೋ ಹಾಗೆ ಅವಳು ಕಟ್ಟಲಿರುವ ಗಾನಮಂದಿರಕ್ಕೆ ಈ ಅಲಾಪವೇ ತಳಹದಿ. ಬಹಳ ಮಂದಿಗೆ ಇದರ ಅರ್ಥವೇ ಆಗುವುದಿಲ್ಲ. ಏನೋ ಎಮ್ಮೆಯಂತೆ ‘ಆ ಅಂತಾರೆ ಎನ್ನುತ್ತಾರೆ” ಎಂದರು. ದುರ್ದೈವದಿಂದ ನನಗೂ ಹಾಗೇ ಅನಿಸಹತ್ತಿತು. “ನನಗೆ ಅವಳ ದನಿ ಅಷ್ಟೇನೂ ಸೇರಲಿಲ್ಲ. ಇದಕ್ಕಿಂತಲೂ ಸವಿಯಾದ ದನಿಯನ್ನು ಕೇಳಿದ್ದೇನೆ ಎಷ್ಟೋ ಸಿನೇಮಾಗಳಲ್ಲಿ” ಎಂದೆ. ಇದನ್ನು ನುಡಿದುದು ಸ್ವಲ್ಪ ದೊಡ್ಡಕ್ಕಾಗಿರಬೇಕು. ನನ್ನ ಎಡಕ್ಕೆ ತುಸು ದೂರ ಕುಳಿತ ವ್ಯಕ್ತಿಯೊಂದು ಕಣ್ಣುಹುಬ್ಬುಗಳಿಂದಲೇ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತು. “ಅದೇ ಅದೇ ! ಶಾಸ್ತ್ರೀಯ ಸಂಗೀತದ ಗಂಧ ಗಾಳಿ ಇಲ್ಲದವರಿಗೆ ಸಿನೇಮಾ ಹಾಡುಗಳಲ್ಲೇ ಇಂಪು. ಅದು ನಿನ್ನ ತಪ್ಪಲ್ಲ. ಅದಕ್ಕೆ ಮೊದಲಿನಿಂದಲೂ ಸಂಗೀತದಲ್ಲಿ ಒಂದು ಬಗೆಯ ಅಭಿರುಚಿ ಇರಬೇಕು. ನನಗೆ ನೋಡು, ಒಂದು ಐದು ವರ್ಷದ ಹುಡುಗನಾಗಿದ್ದಾಗಿನಿಂದ ಈ ಗಾನದ ಹುಚ್ಚು ಬಹಳ” ಎಂದರು ಶಾಸ್ತ್ರಿಗಳು. ಅವರ ಮಾತಿಗೆ ತಮ್ಮ ಸಂಪೂರ್ಣ ಸಮ್ಮತಿಯಿದೆಯೆಂಬಂತೆ ನನ್ನ ಎಡಕ್ಕೆ ಕುಳಿತ ಮುದುಕನೊಬ್ಬ, “ಸಂಗೀತ ಅಂದರೆ ಏನ್ರಿ ಹಾಡಲಿಕ್ಕೆ ಹೇಗೆ ಅದರ ಅಭ್ಯಾಸ ಬೇಕೋ ಹಾಗೆ ಅದನ್ನು ಕೇಳಿ ಸವಿಯಲು ಅದರ ಜ್ಞಾನ ತುಂಬ ಇರಬೇಕು” ಎಂದ. ಆದರೆ ನನ್ನ ಹಿಂದಿನಿಂದ ಬಂದ ಮಾತುಗಳಿಂದ ಮಾತ್ರ ನನಗೆ ಬಹಳ ನಾಚಿಕೆಯಾಯಿತು. “ಏನು ಕಗ್ಗಾ ಇದ್ದಾನೋ ಈ ಪ್ರಾಣಿ. ಈ ದನಿ ಇಂಪಲ್ಲ ಅಂತೆ. ಹಃ ! ಸುಗುಣಬಾಯಿ ಪ್ರಖ್ಯಾತಳಾದುದೇ ಅವಳ ದನಿಗಾಗಿ. ಅದೇನೋ ಹೇಳ್ತಾರಲ್ಲ, ಯಾರ ಮುಂದೆಯೋ ಕಿನ್ನರಿ ಬಾರಿಸಿದಂತೆ…. ಎಂದು.” “ಒಟ್ಟಿನಲ್ಲಿ ಧಾರವಾಡದ ಜನ ನೋಡು ಇಲ್ಲಿಯವರಿಗಿಂತ ಹೆಚ್ಚು ರಸಿಕರು. ಸುಗುಣಬಾಯಿಯೆಂದರೆ ಎಲ್ಲರಿಗೂ ಪ್ರೀತಿ. ನಾ ಹೋದ ಸಲ ಅಲ್ಲಿ ಹೋದಾಗ ರೇಡಿಯೋದ ಮೇಲೆ ಆಕೆಯ ಹಾಡು ಬಂತೆಂದರೆ ಊಟ ಮಾಡುವುದನ್ನು ಬಿಟ್ಟು ಹಾಡು ಕೇಳಲಿಕ್ಕೆ ಕೂಡ್ರುತ್ತಿದ್ದರು” ಎಂದರು ಶಾಸ್ತ್ರಿಗಳು. (ಇಂದು ಬೆಳಗಿನಿಂದ ಈ ಮಾತನ್ನು ಅವರು ಹತ್ತು ಸಲವಾದರೂ ಅಂದಿರಬೇಕು!) ಆಗ ತಬಲೆಯವನು ಒಮ್ಮೆ ‘ಢಣ್’ ಎಂದು ಬಡೆದ. “ಈಗ ಹಾಡು ಸುರು ಆಗುತ್ತದೆ ನೋಡು”- ಶಾಸ್ತಿಗಳು ಭವಿಷ್ಯ ನುಡಿದರು.

ಅವಳು ಒಂದು ಹಿಂದೀ ಹಾಡನ್ನು ಹಾಡಲು ಆರಂಭಿಸಿದಳು. ಸಭೆಯಲ್ಲಿ ಕೂಡಲೇ ಅನೇಕ ತಲೆಗಳು ತೂಗಹತ್ತಿದವು. ನನ್ನ ಎಡಕ್ಕೆ ಕುಳಿತ ಮುದುಕ ತನ್ನ ತೊಡೆಯನ್ನೇ ತಬಲೆಯನ್ನಾಗಿ ಮಾಡಿದ. ನಮ್ಮ ಮುಂದಿನ ಸಾಲಿನಲ್ಲೇ ಕುಳಿತ ಅನ್ನಪೂರ್ಣ ಸ್ಟೋರ್ಸಿನ ಪರಶುರಾಮಭಟ್ಟರು ಕ್ಷಣಕ್ಕೊಮ್ಮೆ ಹಿಂದೆ ನೋಡಿ ತಮ್ಮ ಹುಬ್ಬಿನ ಕುಣಿತದಿಂದಲೇ ನನ್ನ ಬಳಿಯ ಮುದುಕನ ಕೂಡ ಸಂಭಾಷಣೆ ಮಾಡಹತ್ತಿದರು, “ಹೇಗೆ ಭೇಷ್ ಇದೆ” ಎನ್ನುವಂತೆ. ಶಾಸ್ತಿಗಳಂತೂ ಒಮ್ಮೆಲೇ ಕಣ್ಣುಮುಚ್ಚಿ ಸಮಾಧಿ ಹತ್ತಿದವರಂತೆ ತಟಸ್ಥ ಕುಳಿತುಬಿಟ್ಟರು. ಹಾವಾಡಿಗನ ಪುಂಗಿಯ ನಾದಕ್ಕೆ ಮುಗ್ಧವಾಗಿ ಹೆಡೆಯಾಡಿಸುವ ನಾಗರದಂತೆ ಅವರ ತಲೆಯಷ್ಟೇ ತಬಲೆಯ ಬಡಿತಕ್ಕೆ ಸರಿಯಾಗಿ ತೂಗುತ್ತಿತ್ತು. ಅವರ ಆ ಅಲೆದಾಟ ನಿಂತರೆ ಕುರುಕ್ಷೇತ್ರದಲ್ಲಿ ಅಶ್ವತ್ಥಾಮನ ಮರಣದ ಸುದ್ದಿ ಕೇಳಿ ತಮ್ಮ ದೇಹವನ್ನು ರಥದಲ್ಲೇ ಬಿಟುಬಿಟ್ಟು ಸ್ವರ್ಗಲೋಕದಲ್ಲಿ ತಮ್ಮ ಮಗನನ್ನು ಹುಡುಕುವ ದ್ರೋಣಾಚಾರ್ಯರ ನೆನಪಾಗುತ್ತಿತ್ತು, ಅವರನ್ನು ನೋಡಿ ! ನಿಜಕ್ಕೂ ಅವರ ಜೀವ ಬೇರೆ ಯಾವುದೋ ಲೋಕದಲ್ಲಿ ಸಂಚರಿಸುತ್ತಿರಬೇಕು. ಅವರ ಗಾನಪ್ರಿಯತೆಯನ್ನು ಕಂಡು ಬೆರಗಾದೆ. ಆದರೆ ಆ ಕಲೆಯ ಬಗ್ಗೆ ನನಗಿದ್ದ ಅಜ್ಞಾನವನ್ನು ಕುರಿತು ಅಷ್ಟೇ ಬೇಸರಪಟ್ಟೆ. ನಾನು ಅಷ್ಟು ಅರಸಿಕನೇ? ಅಂದಿನ ಹಾಡು ಅಷ್ಟೇನೂ ಕೆಟ್ಟದ್ದಿರಲಿಲ್ಲ. ಅವಳ ದನಿಯೂ ತಕ್ಕಮಟ್ಟಿಗೆ ಇತ್ತು. ಆದರೆ ಅದರಲ್ಲಿ ಹೀಗೆ ಮೈಮರೆಸುವ (ತಲೆದೂಗಿಸುವ) ಶಕ್ತಿ ಇತ್ತು ಎಂದು ಮಾತ್ರ ನನಗೆ ಅನಿಸಲಿಲ್ಲ. ಸುಗುಣಬಾಯಿಯ ವಿಖ್ಯಾತಿಯ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಅನೇಕ ಪತ್ರಿಕೆಗಳಲ್ಲಿ ಅವಲಅವಳ ಬಗ್ಗೆ ಬಂದ ಲೇಖನಗಳನ್ನು ಓದಿದ್ದೇನೆ. ಅವುಗಳಲ್ಲಿ ಬಂದ ಪ್ರಶಂಸೆಯಲ್ಲಿ ಅತಿಶಯೋಕ್ತಿ ಇದೆ ಎನ್ನದಿರಲು ಅದೇ ಗಾನವನ್ನು ಕೇಳಿ ತನ್ಮಯರಾಗಿ ಕುಳಿತ ಶಂಭುಶಾಸ್ತ್ರಿಗಳೊಬ್ಬರೇ ಸಾಕು.

ನನಗೆ ನಿದ್ದೆ ಬರಹತ್ತಿತು. ಇಷ್ಟೊಂದು ಖ್ಯಾತಿಗೊಂಡ ಹಾಡುಗಾರಳ ಕಾರ್ಯಕ್ರಮಕ್ಕೆ ಬಂದು ನಿದ್ದೆ ಮಾಡುವಷ್ಟು ಅರಸಿಕನೆನಿಸಿಕೊಳ್ಳುವುದು ನನಗೆ ಸೇರಲಿಲ್ಲ. ಶಾಸ್ತ್ರಿಗಳನ್ನಾದರೂ ಸ್ವಲ್ಪ ಮಾತನಾಡಿಸೋಣವೆಂದು ಅವರ ಭುಜ ತಟ್ಟಿ “ಶಾಸ್ತ್ರಿಗಳೇ” ಎಂದೆ. ಅವರು ಒಮ್ಮೆಲೇ ಜಿಗಿದುಬಿದ್ದುದನ್ನು ಕಂಡು ನನಗೇ ಕೆಡುಕೆನಿಸಿತು; ಸುಳ್ಳೇ ಅವರ ಗಾನಸಮಾಧಿಯನ್ನು ಕೆಡಿಸಿದೆನಲ್ಲ ಎಂದು. “ಅರೇ! ನಾವಿನ್ನೂ ಇಲ್ಲೇ ಇದ್ದೀವಲ್ಲ! ಆಹ, ಏನು ಕಲೆ! ಏನು ಕಲೆ! ಕಲೆಯೆಂದರೆ ದೇವರು ಮೆಚ್ಚಿ ಕೊಟ್ಟ ಕಾಣಿಕೆಯೆಂದು ಹೇಳುವುದು ಸುಳ್ಳಲ್ಲ. ಛೇ ಛೇ ಛೇ, ಏನು ಚಾತುರ್ಯ! ಏನು ಪ್ರಾವೀಣ್ಯ! ನಾನಂತೂ ಈ ಲೋಕದಲ್ಲೇ ಇರಲಿಲ್ಲ ನೋಡು. ಅವಳ ಇಂಪು ದನಿ ಅಲೆ ಅಲೆಯಾಗಿ ತೇಲಿಸುತ್ತಿತ್ತು ನನ್ನನ್ನು. ಏನೋ ಗರುಡಪಕ್ಷಿಯ ರೆಕ್ಕೆಯ ಮೇಲೆ ಕುಳಿತು ಮೇಲೆ ಮೇಲೆ ಹಾರಿಹೋಗುತ್ತಿದ್ದಂತೆ ಭಾಸವಾಯಿತು. ಚಂದ್ರಲೋಕದಲ್ಲಿ ವಿಹರಿಸುತ್ತಿದ್ದಂತೆ, ನಕ್ಷತ್ರಗಳನ್ನೇ ಕೈಯಿಂದ ಕಿತ್ತು ಸಂಗ್ರಹಿಸುತ್ತಿದ್ದಂತೆ, ಎಂಥ ದಿವ್ಯ ಅನುಭವ! ದೇವರ ಸಾನ್ನಿಧ್ಯದಲ್ಲಿದ್ದಂತೆ ಅನಿಸಿತು. ಕಲೆಯೆಂದರೆ ದೇವರು ತಾನೆ! ಈಗಲಾದರೂ ಮೆಚ್ಚಿದೆಯಾ ಸುಗುಣಾಬಾಯಿಯ ಗಾನವನ್ನು?” ಎಂದು ಕೇಳಿದರು. ಅವರ ಆಗಿನ ದನಿ ಈ ಲೋಕದ್ದೇ ಆಗಿರಲಿಲ್ಲ. ಅವರ ಆ ಅನುಭವವನ್ನು ಕಂಡು ಬೆರಗಾದ ನಾನು “ಮೆಚ್ಚಿದೆ” ಎಂದೆ, ನನ್ನ ಮನಸ್ಸಿನ ವಿರುದ್ಧ.

ಅವಳ ಮೊದಲನೇ ಹಾಡು ಮುಗಿದುದೇ ಚಪ್ಪಾಳೆಯ ಸುರಿಮಳೆಯಾಯಿತು. ಪರಶುರಾಮ ಭಟ್ಟರಂತೂ ತಮ್ಮ ಮೋರೆಯನ್ನು ತಿರುವಿಯೇ ಕುಳಿತು, “ಏನ್ರೀ ಇಷ್ಟು ಚೆನ್ನಾಗಿ ಹಾಡ್ತಾಳೆ ಎಂಬ ಕಲ್ಪನೆ ಕೂಡ ಇರಲಿಲ್ಲ” ಎಂದರು ಶಾಸ್ತ್ರಿಗಳೊಡನೆ. ಶಾಸ್ತ್ರಿಗಳು ಕೂಡಲೇ ಗಂಭೀರವಾಗಿ ಬರಿಯೇ “ಹೂಂ” ಎಂದರು. ತಾವು ಈ ಮೊದಲೇ ಅವಳನ್ನು (ಹಾಗೂ ಅವಳ ಬಗ್ಗೆ) ಬಹಳ ಸಲ ಕೇಳಿದುದರಿಂದ ತಮಗೆ ಏನೂ ಆಶ್ಚರ್ಯವಾಗಲಿಲ್ಲ ಎಂಬ ಭಾವವಿತ್ತು ಅವರ ಹೂಕಾರದಲ್ಲಿ! “ವಯಸ್ಸೂ ತೀರ ಚಿಕ್ಕದು. ಇಷ್ಟು ಚಿಕ್ಕ ವಯಸ್ಸಿನಲ್ಲಿ” ಎಂದು ನನ್ನ ಬಳಿ ಕುಳಿತ ಮುದುಕ ಮಾತು ಪೂರ್ಣಗೊಳಿಸುವ ಮೊದಲೇ “ಕಲೆಗೂ ವಯಸ್ಸಿಗೂ ಏನೂ ಸಂಬಂಧವಿಲ್ಲ. ದೇವರ ದೇಣಿಗೆ ಅದು. ಪೂರ್ವಜನ್ಮದ ಪುಣ್ಯವಿರಬೇಕು,” ಎಂದರು ಶಾಸ್ತ್ರಿಗಳು. ಅವರ ದನಿಯಲ್ಲಿಯ ಗಾಂಭೀರ್ಯ ಇನ್ನೂ ಹೆಚ್ಚಿತ್ತು. ನನ್ನ ಹಿಂದೆ ಎಲ್ಲೋ ಅವಳ ರೂಪದ ವರ್ಣನೆ ನಡೆದಿತ್ತು.

ರಾತ್ರಿ ಬಹಳವಾದುದರಿಂದ ಅವಳ ಎರಡನೇ ಹಾಡೇ ಕೊನೆಯ ಹಾಡಾಗಬೇಕಾಯಿತು. ಎರಡನೇ ಹಾಡು ನಡೆದಾಗಲೂ ಸಭೆಯೆಲ್ಲ ತಲೆದೂಗುತ್ತಿತ್ತು. ಆದರೆ ಆ ತಲೆದೂಗಿನಲ್ಲಿ ಹಾಡಿನ ಮೆಚ್ಚುಗೆಗಿಂತ ನಿದ್ದೆಯ ಭಾರವೇ ಹೆಚ್ಚಿದೆಯೇನೋ ಎಂಬ ಸಂಶಯ ನನ್ನ ಅರಸಿಕ ತಲೆಯಲ್ಲಿ ಮಿಂಚಿತು. ಇಡಿಯ ಸಭೆಗೆ ಸಭೆಯೇ ಗಾಯನದಲ್ಲಿ ಹೆಚ್ಚು ಆಸ್ಥೆ ಇಡುವುದು ಅಸಾಧ್ಯ ತಾನೇ. ಆದರೆ ಶಾಸ್ತ್ರಿಗಳಿಗೂ ತೂಕಡಿಕೆ ಬಂದಂತೆ ಅನಿಸಿದ್ದರಿಂದ, ಕಿವಿಯಲ್ಲಿ ಕೇಳಿದೆ, “ಏನು ಶಾಸ್ತಿಗಳೇಶಾಸ್ತ್ರಿಗಳೇ, ನಿದ್ದೆ ಬಂದಂತಿದೆಯಲ್ಲ.”
“ಇಲ್ಲವೋ, ನಿನ್ನೆ ರಾತ್ರೆ ಸ್ವಲ್ಪ ನಿದ್ದೆಗೆಟ್ಟಿತು, ಇಂದು ಮಧ್ಯಾಹ್ನ ನಿದ್ದೆ ಮಾಡಲು ಹೊತ್ತೇ ದೊರೆಯಲಿಲ್ಲ. ನಾನೇನು ಅವಳ ಹಾಡುಗಳನ್ನು ಎಷ್ಟುಸಲ ಕೇಳಿದ್ದೇನೆ! ಧಾರವಾಡಕ್ಕೆ ಹೋದಾಗ ರೇಡಿಯೋದ ಮೇಲೆ, ಗ್ರಾಮಾಫೋನಿನ ಮೇಲೆ. ಅವಳು ಈಗ ಹಾಡುತ್ತಿದ್ದ ಹಾಡಂತೂ ಅತಿ ಜನಪ್ರಿಯವಾದುದು – ಬಹಳ ಸಲ ಕೇಳಿದ್ದೇನೆ. ಆದರೂ ಸ್ವತಃ ಅವಳನ್ನೇ ಕೇಳಿರಲಿಲ್ಲ. ಇಂದು ಕೇಳಿದೆ. ತುಂಬ ಆನಂದವಾಯಿತು. ಇಂದು ನಿಜವಾಗಿ ಬಂದುದೆಂದರೆ ನಿನ್ನ ಸಲುವಾಗಿ. ತಾನು ಮೆಚ್ಚಿದ್ದನ್ನು ಉಳಿದವರೂ ಮೆಚ್ಚಬೇಕು ಎಂಬ ಇಚ್ಚೆ ಪ್ರತಿಯೊಬ್ಬನಿಗೂ ಇರುತ್ತದೆ ತಾನೇ?” ಎಂದರು, ಶಾಸ್ತ್ರಿಗಳು.

ಎರಡನೇ ಹಾಡು ಮುಗಿದುದೇ ಇನ್ನೊಂದು ಹಾಡುಗಾಗಿ ಕೂಡ್ರುವ ಉತ್ಸಾಹ ಬಹಳ ಜನರಲ್ಲಿ ಇದ್ದಂತಿರಲಿಲ್ಲ. ಮುಂದಿನ ಕೆಲವು ಸಾಲುಗಳಲ್ಲಿ ಕೂತವರಂತೂ ಒಬ್ಬರು ಇನ್ನೊಬ್ಬರ ಮೇಲೆ ನೋಡಹತ್ತಿದರು. ಎಲ್ಲರಿಗೂ ನಿದ್ರಾದೇವಿ ಪೂರ್ಣ ಒಲಿದಿದ್ದಳು. ಆದರೆ ಅರ್ಧಕ್ಕೇ ಹೊರಟುಹೋಗಿ ಅರಸಿಕನೆನಿಸಿಕೊಳ್ಳುವ ಧೈರ್ಯವಾಗದೇ ಎಲ್ಲರೂ ನಿರುಪಾಯರಾಗಿ ಕೂತಂತೆ ಭಾಸವಾಯಿತು. ಅವರನ್ನೆಲ್ಲ ಈ ಕುತ್ತಿನಿಂದ ಬಿಡಿಸಲೆಂದೇ ಎನ್ನುವಂತೆ ಕಾರ್ಯಕ್ರಮದ ಕಾರ್ಯದರ್ಶಿಯಾದ ಗೋಪಾಲನು ಸ್ಟೇಜಿನ ಮೇಲೆ ಕಾಣಿಸಿಕೊಂಡನು. ಸಭಿಕರನ್ನೆಲ್ಲ ಒಮ್ಮೆ ಕೈ ಮುಗಿದು “ಮಾನ್ಯರೇ, ಈಗಾಗಲೇ ತುಂಬ ರಾತ್ರಿಯಾದುದರಿಂದಲೂ, ಹಾಡುಗಾರರೂ ತುಂಬ ದಣಿದಿದ್ದರಿಂದಲೂ ಎರಡನೇ ಹಾಡೇ ಕೊನೆಯದಾಗಬೇಕಾಗಿದೆ. ಆದರಿಂದ ನಿಮಗೆಲ್ಲ ನಿರಾಶೆಯಾಗಬಹುದಾದರೂ ನಮ್ಮ ನಿರುಪಾಯತೆಗಾಗಿ ಕ್ಷಮಿಸುವಿರೆಂದು ನಂಬಿದ್ದೇವೆ. ಎಂದಿಗಿಂತಲೂ ಈ ವರುಷ ನಾಡಹಬ್ಬವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸುವ ನಿಶ್ಚಯದಿಂದ ನಾವೆಲ್ಲ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಿದೆವು. ನಿಮ್ಮೆಲ್ಲರ ಪ್ರೋತ್ಸಾಹವೂ ತುಂಬ ಸಿಕ್ಕಿತು. ಆದರೆ ಮೊದಲನೇ ದಿನವೇ ವಿಧಿಯು ನಮ್ಮೆಲರನಮ್ಮೆಲ್ಲರ ಉತ್ಸಾಹದ ಮೇಲೆ ನೀರೆರೆಚಲು ಕಾದು ಕೂತಂತಿತ್ತು. ಆದರೆ ಇಂದಿನ ಕಾರ್ಯಕ್ರಮ ನಮ್ಮ ಕಲ್ಪನೆಗೂ ಮೀರಿ ಸಫಲವಾದುದರ ಎಲ್ಲ ಶ್ರೇಯ ಇಬ್ಬರಿಗೆ ಸಲ್ಲಬೇಕು. ಒಬ್ಬರು ಕಾರ್ಯದರ್ಶಿಗಳಾದ ಸೀತಾರಾಮಶೆಟ್ಟಿಯವರು (ಚಪ್ಪಾಳೆ), ಇನ್ನೊಬ್ಬರು ಇಂದಿನ ಹಾಡುಗಾರರಾದ (ದೀರ್ಘ ಚಪ್ಪಾಳೆ) ಶ್ರೀಮತಿ ಶೋಭಾದೇವಿ. (ಸಭೆಯಲ್ಲಿ ಏಕಕಂಠವಾದ ‘ಆಂ’ ಎಂದು ಆಶ್ಚರ್ಯದ ಉದ್ಗಾರ!) ಇದನ್ನು ಕೇಳಿ ನಿಮಗೆಲ್ಲ ಆಶ್ಚರ್ಯದ ಧಕ್ಕೆಯಾಗುವುದೆಂದು ನನಗೆ ಗೊತ್ತಿದೆ. ಒಂದು ಆಕಸ್ಮಿಕ ತೊಡಕಿನ ಮೂಲಕ ಸುಗುಣಾಬಾಯಿಯವರಿಗೆ ಇಂದು ಬರಲಾಗುವುದಿಲ್ಲವೆಂದು ಇಂದು ಮಧ್ಯಾಹ್ನವೇ ತಂತಿ ಬಂತು. ಈ ಅಕಲ್ಪಿತ ಪ್ರಸಂಗದಿಂದ ನಮಗೆ ದಿಕ್ಕು ತೋಚದಾಯಿತು. ಮೊದಲನೇ ದಿನವೇ ಹೀಗಾಗುವುದು ನಮಗೆ ಅಶುಭದಾಯಕವೆನಿಸಿತು. ಆದರೆ ಸೀತಾರಾಮರ ಪ್ರಯತ್ನದಿಂದ ಸುಗುಣಬಾಯಿಯವರದೇ ಗಾನಶಾಲೆಯ ವಿದ್ಯಾರ್ಥಿನಿಯಾದ ಶೋಭಾದೇವಿಯವರ ಸಹಾಯ ನಮಗೆ ದೊರೆತುದು ನಮ್ಮ ಭಾಗ್ಯ (ತಿರುಗಿ ಚಪ್ಪಾಳೆ.) ಸುಗುಣಬಾಯಿಯವರ ಗಾನಪದ್ಧತಿಯನ್ನು ಅವರು ಎಷ್ಟು ಚೆನ್ನಾಗಿ ಹಸ್ತಗತ ಮಾಡಿಕೊಂಡಿದ್ದಾರೆ ಎಂಬುದನ್ನು ನಿಮ್ಮಲ್ಲಿಯ ಅನೇಕರು ಈಗಾಗಲೇ ತಿಳಿದಿರಬೇಕು. (ದೀರ್ಘ ಚಪ್ಪಾಳೆ) ಸ್ವತಃ ಸುಗುಣಬಾಯಿಯವರಿಗೇ ಬರಲಾಗದಿದ್ದರೂ ಅವರ ಅಭಾವವೂ ನಮಗೆ ಎಳ್ಳಷ್ಟೂ ಅನಿಸದಂತೆ ಇಂದಿನ ಕಾರ್ಯಕ್ರಮವನ್ನು ಸಾಂಗಗೊಳಿಸಿದ್ದಕ್ಕೆ ಅವರನ್ನು ನಿಮ್ಮೆಲ್ಲರ ವತಿಯಿಂದ, ನಾಡಹಬ್ಬ ಸಂಘದ ವತಿಯಿಂದ ಅಭಿನಂದಿಸುತ್ತೇನೆ.”

ಅವನ ಮಾತು ಮುಗಿದ ಬಳಿಕ ನಾನು ಎಡಕ್ಕೆ ನೋಡಿದಾಗ ಅಲ್ಲಿಯ ಮುದುಕ ಆಗಲೇ ಎದ್ದುನಿಂತು ಸುತ್ತಲೂ ಹಚ್ಚಿದ ಚಿತ್ರಗಳಲ್ಲಿ ದೃಷ್ಟಿನೆಟ್ಟಿದ್ದ, ತಾನು ಇವನ್ನೆಲ್ಲ ಈ ಮೊದಲು ನೋಡಿರದೇ ಇಲ್ಲವಲ್ಲ ಎನ್ನುವಂತೆ! ಪರಶುರಾಮ ಭಟ್ಟರಂತೂ ಈಗ ಮಾತನಾಡಲು ಹೊತ್ತೇ ಇಲ್ಲ ಎಂಬಂತೆ ನಟಿಸುತ್ತ ಅಲ್ಲಿಂದ ಜಾರಿದರು. ಆದರೆ ಶಾಸ್ತ್ರಿಗಳ ಮೋರೆ ನೋಡುವ ಧೈರ್ಯ ಮಾತ್ರ ನನಗಾಗಲಿಲ್ಲ. ನಿದ್ದೆಯಿಂದ ಬಳಲಿದ ಜನರೆಲ್ಲ ಮನೆಗೆ ಹೋಗುವ ಅವಸರದಲ್ಲಿದ್ದುದರಿಂದ ಮಂದಿರವು ಬರಿದಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಆದರೆ ಶಾಸ್ತ್ರಿಗಳು ಮಾತ್ರ ತಮ್ಮ ಕುರ್ಚಿ ಬಿಟ್ಟು ಕದಲಲಿಲ್ಲ. ತಮ್ಮ ಸುತ್ತಲು ಯಾರೂ ಇಲ್ಲದ್ದನ್ನು ಕಂಡು, “ನನಗೆ ಆಗಲೇ ಸಂಶಯ ಬಂದಿತ್ತು. ಯಾಕೆಂದರೆ ಆ ಎರಡನೇ ಹಾಡನ್ನು ನಾನೆಷ್ಟೋ ಸಲ ಕೇಳಿದ್ದೇನೆ. ಆದರೆ ಇಂದೇಕೋ ನನಗೆ ಅಷ್ಟು ಸೇರಲಿಲ್ಲ. ಇಲ್ಲವಾದರೆ ನನಗೆ ಹೀಗೆ ನಿದ್ದೆ ಬರುತ್ತಿತ್ತೆ? ಗಾಯನದ ಹುಚ್ಚು ಇದ್ದವರಿಗೆ ನಿದ್ದೆಯ ಪರಿವೆ ಇದೆಯೇ? ಆದರೂ ಸುಗುಣಬಾಯಿಯ ಗಾನಪದ್ಧತಿಯನ್ನು ಚೆನ್ನಾಗಿಯೇ ಅಭ್ಯಾಸ ಮಾಡಿದ್ದಾಳೆ ಹುಡುಗಿ. ಮೊದಲನೇ ಹಾಡಂತೂ ಅವಳೇ ಹಾಡುತ್ತಾಳೆ ಎನ್ನುವಂತಿತ್ತು” ಎಂದರು. ಈ ಹೊತ್ತಿಗೆ ಸೀತಾರಾಮ ಹಾಗೂ ಗೋಪಾಲರು ಶೋಭಾದೇವಿಯನ್ನು ಕಾರಿನವರೆಗೆ ಕಳಿಸಿ ಬೀಳ್ಕೊಟ್ಟು ಬಂದರು. ಗೋಪಾಲ ಬಂದವನೇ, “ಶಾಸ್ತ್ರಿಗಳೇ, ನೀವು ಮಾತ್ರ ಕ್ಷಮಿಸಬೇಕು. ನಿಮಗೆ ಸಂಪೂರ್ಣ ನಿರಾಶೆಯಾಗಿದೆ ಎಂಬುದನ್ನು ಬಲ್ಲೆ. ಮತ್ತೇನು ಮಾಡುವುದು, ಹೀಗೆ ಐನಹೊತ್ತಿಗೆ ಕುತ್ತಿಗೆ ಕೊಯ್ದರೆ! ಸಾಧಾರಣ ಮೂರು ಗಂಟೆಗೆ ತಂತಿ ಬಂತು. ನನಗಂತೂ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಸೀತಾರಾಮ ಉಳಿಸಿದ ನಮ್ಮನ್ನೆಲ್ಲ. ಅವನದೇ ಹಂಚಿಕೆ ಇದೆಲ್ಲ. ಕೂಡಲೇ ಸಿರ್ಸಿಗೆ ಹೋಗಿ ಇವಳನ್ನು ಕರಕೊಂಡು ಬಂದ. ಅವನ ಗುರುತಿನವಳೇ, ಅಲ್ಲಿಯ ದೇವಸ್ಥಾನವೊಂದರ ಕುಣಿತದ ಹುಡುಗಿ. ಶಾಸ್ತ್ರೀಯ ಸಂಗೀತದ ಜ್ಞಾನ ಬಹಳವಿಲ್ಲದಿದ್ದರೂ ತಕ್ಕಮಟ್ಟಿಗೆ ಹಾಡುತ್ತಾಳೆ. ರೂಪ ಮಾತ್ರ ಚೆನ್ನಾಗಿದೆ. ಹೇಗಾದರೂ ಇಂದಿನ ಕಾರ್ಯಕ್ರಮ ರದ್ದುಗೊಳಿಸಬಾರದು ಎಂದು ಉಪಾಯ ತೋರದೆ ಅವಳನ್ನೇ ಕರೆಸಿದೆವು. ಹೇಗಾದರೂ ಪಾರಾದೆವೋ ಇಲ್ಲವೋ! ಅಷ್ಟೇ ಸಾಕು. ಇನ್ನೆಂದಿಗೂ ಬೇಡ ಈ ದೊಡ್ಡವರ ಗೊಡವೆ” ಎನ್ನುತ್ತಿರುವಾಗ ಶಂಭುಶಾಸ್ತ್ರಿಗಳು ತಾವು ತುಂಬ ದಣಿದಿದ್ದೇವೆಂದು ಲಗುಬಗೆಯಿಂದ ಅವರಿಂದ ಬೀಳ್ಕೊಂಡರು.

ಅಂದಿನಿಂದ ಶಾಸ್ತ್ರಿಗಳು ಗಾಯನದ ಬಗ್ಗೆ ಮಾತನಾಡುವುದನ್ನು ನಾನಂತೂ ಕೇಳಿಲ್ಲ !
*****

ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.