ಕಾರಣ

ಮಾರಿಕಾಂಬಾ ದೇವಸ್ಥಾನದತ್ತ ಹೋಗುವ ಕಿರಿದಾದ ರಸ್ತೆಯ ಎರಡೂ ಬದಿಗೆ ಒತ್ತೊತ್ತಾಗಿ ಮನೆಗಳು. ಕೆಲವಂತೂ ವಠಾರದ ಸಾಲುಮನೆಗಳ ಹಾಗೆ ಇಕ್ಕೆಲದ ಗೋಡೆಗಳನ್ನು ನೆರೆಯವರ ಜೊತೆ ಹಂಚಿಕೊಂಡಿದ್ದವು. ತುದಿಯಿಂದ ತುದಿಯವರೆಗೆ ಪೋಣಿಸಿಟ್ಟ ಹಾಗೆ ಇದ್ದ ಮನೆಗಳ ಮಧ್ಯದಲ್ಲಿ ಹೂದಂಡೆಯ ನಡುವಿನ ನಾರಿನ ಹಾಗೆ ರಸ್ತೆ ಹರಿದಿತ್ತು. ಈ ಒತ್ತೊತ್ತು ಮನೆಗಳ ನಡುವಿನ ಒಂದು ಖಾಲಿ ಜಾಗದಿಂದಾಗಿ, ಆ ಬದಿಯ ಮನೆಗಳ ಸಾಲು ಥಟ್ಟನೆ ಅಲ್ಲಿ ತುಂಡಾಗಿತ್ತು. ಈ ಜಾಗದ ನೇರ ಎದುರಿಗೆ, ರಸ್ತೆಯ ಈಚೆ ಕಡೆ, ನನ್ನ ಅಜ್ಜನ ಮನೆ.

ನಾವು ಶಾಲೆಗೆ ರಜೆ ಬಂದಾಗಲೆಲ್ಲ ಅಜ್ಜನ ಮನೆಗೆ ಹೋಗುತ್ತಿದ್ದೆವು. ಪ್ರತಿ ಸಲ ಹೋದಾಗಲೂ ತವರು ಮನೆಯಲ್ಲಿಯ ತನ್ನ ಸ್ಥಾನಮಾನದ ಕುರಿತು ಅಮ್ಮ ಜಗಳ ತೆಗೆಯುತ್ತಿದ್ದಳು. ಅದೇ ಹೊತ್ತಿಗೆ ಅವಳ ನಾಲ್ಕು ತಂಗಿಯರಲ್ಲಿ ಯಾರಾದರೊಬ್ಬರು ತವರಿನಲ್ಲಿದ್ದರಂತೂ, ಅಕ್ಕತಂಗಿಯರಿಬ್ಬರೂ ಒಂದಾಗಿ ಅಜ್ಜ ಅಜ್ಜಿಯರ ಪಾಪಪ್ರಜ್ಞೆಯನ್ನು ಕೆಣಕುವಂಥ, ಘಟಿಸಿದ ಘಟಿಸದ ಘಟಿಸಬಹುದಾಗಿದ್ದ ಹಳೆಯ ಸಂಗತಿಗಳನ್ನು ಹೆಕ್ಕಿ ಹೆಕ್ಕಿ ಜಗಳಾಡುತ್ತಿದ್ದರು. ಏನನ್ನಾದರೂ ಈ ವಿಷಯಕ್ಕೆ ತಂದು ಜೋಡಿಸುವ ಕಲೆ ಎಲ್ಲ ಅಕ್ಕತಂಗಿಯರಿಗೂ ಕರಗತವಾಗಿತ್ತು. ನಡುವೆ ಮಾತು ಹೆಣ್ಣುಮಕ್ಕಳ ಹಕ್ಕು, ವರದಕ್ಷಿಣೆ, ಆಸ್ತಿಯಲ್ಲಿ ಪಾಲು ಇತ್ಯಾದಿಗಳನ್ನೂ ಹಾದು ಹೋಗುತ್ತಿತ್ತು. ಮಾತಿನಲ್ಲಿ ಸೂಕ್ಷ್ಮವಾಗಿ ಕಾನೂನಿನ ಪಾಶಗಳನ್ನು ಹೆಣೆಯಬಲ್ಲ ನನ್ನ ಅಮ್ಮನೇ ಇಂಥ ಮಾತುಗಳಿಗೆ ಕಾರಣಳೆಂಬುದು ನನ್ನ ಸಂಶಯ. ಯಾವುದೋ ಆಮಂತ್ರಣದಲ್ಲಿದ್ದ ಊನ, ಮರೆತ ಉಡುಗೊರೆ, ಆಡಿದ ಮಾತು, ಮಾಡದ ಪ್ರಶಂಸೆ, ಮುರಿದ ಹಪ್ಪಳ – ಹೀಗೆ ಕದನದ ಕಿಡಿ ಹಚ್ಚಲಿಕ್ಕೆ ಏನಾದರೂ ನೆವ ಸಾಕಿತ್ತು. ಜಗಳ ಎಷ್ಟು ಜೋರಾಗಿದೆ ಅನ್ನುವುದರ ಮೇಲಿನಿಂದ ನಾವು ವಾಪಸು ಹೊರಡುವ ದಿನ ಎಷ್ಟು ದೂರವಿದೆ ಎಂಬುದರ ಅಂದಾಜು ಸಿಗುತ್ತಿತ್ತು.

ಅಜ್ಜನ ಮನೆಯ ಮುಂದಿನ ಖಾಲಿ ಜಾಗ ಇನ್ನೂ ನಾಲ್ಕು ಮನೆಗಳಾದರೂ ಹಿಡಿಸಬಹುದಾದಷ್ಟು ದೊಡ್ಡದಿತ್ತು. ಆ ಜಾಗದ ಬಲಭಾಗದಲ್ಲಿರುವುದು ಪಂಡಿತರ ಮನೆ. ಅಜ್ಜನ ಮನೆಯ ಜಗುಲಿಯಿಂದ ನೋಡಿದರೆ ಖಾಲಿಜಾಗಕ್ಕೆ ತಾಗಿಯೇ ಇದ್ದ ಆ ಮನೆಯ ಎತ್ತರದ ಗೋಡೆ ಕಾಣುತ್ತಿತ್ತು. ಆ ಗೋಡೆಗಿದ್ದ ದೊಡ್ಡ ದೊಡ್ಡ ಕಿಟಕಿಗಳಿಗೆ ನಾಲ್ಕು ಬಾಗಿಲುಗಳು. ಕೆಳಗಿನ ಎರಡು ಸದಾ ಮುಚ್ಚಿರುತ್ತಿದ್ದವು ಮತ್ತು ಮೇಲ್ಬಾಗದ ಬಾಗಿಲುಗಳು ಅರೆಮನಸ್ಸಿನಿಂದ ಓರೆ ಮಾಡಿದಂತಿರುತ್ತಿದ್ದವು. ಕಿಟಕಿಯ ದಪ್ಪ ಸರಳುಗಳ ಬಣ್ಣ ಮಾಸಿ ಜಂಗು ಹಿಡಿದಿತ್ತು. ಗೋಡೆಯ ಮೇಲ್ಗಡೆ ಭಾಗದಲ್ಲಿ ‘ದಮ್ಮಿನ ಮೇಲೆ ಗುಣಕಾರಿ – ಡಾ. ಪುರೋಹಿತರ ಔಷಧಿ ಪರಿಣಾಮಕಾರಿ’ ಎಂದು ಆಳೆತ್ತರದ ಅಕ್ಷರಗಳಲ್ಲಿ ಗುಂಡಾಗಿ ಬರೆದಿದ್ದರು. ಈ ಜಾಹಿರಾತನ್ನು ಬರೆಸಿದ ನಂತರ ಡಾ. ಪುರೋಹಿತ್ ಬಹಳ ಕಾಲ ಬದುಕಲಿಲ್ಲ ಎಂದು ಒಮ್ಮೆ ಅಜ್ಜಿ ಹೇಳುತ್ತ ಈ ಜಾಹಿರಾತು, ಆ ಮನೆ, ಆ ಗೋಡೆಯ ಬಗ್ಗೆ ಮಾತಾಡಿದ್ದು ಪೂರ್ತಿ ಅರ್ಥವಾಗದೇ ನಿಗೂಢವಾಗಿ ತೋರಿತ್ತು. ಡಾ. ಪುರೋಹಿತ್ ಕಾಲವಶರಾದ ಎಷ್ಟೋ ವರ್ಷಗಳ ನಂತರವೂ ಜಾಹಿರಾತು ಮಾತ್ರ ಹಾಗೆಯೇ ಇದೆ. ಇದನ್ನು ಕಣ್ಣ ಮುಂದೆ ತರಿಸಿಕೊಳ್ಳದೇ ಎದುರು ಮನೆಯನ್ನಾಗಲೀ, ಆ ಖಾಲಿ ಜಾಗವನ್ನಾಗಲೀ ನೆನೆಯುವುದೇ ಸಾಧ್ಯವಿಲ್ಲ. ನಾವು ಮಕ್ಕಳು ಪ್ರತಿ ಸಲ ಜಗುಲಿಗೆ ಬಂದಿದ್ದೇ ಕಣ್ಣಿಗೆ ಬೀಳುವ ಈ ಅಕ್ಷರಗಳನ್ನು ದೊಡ್ಡದಾಗಿ ಉಚ್ಛರಿಸುತ್ತಿದ್ದೆವು. ನನ್ನ ಅಜ್ಜನ ಹಲವು ಮೊಮ್ಮಕ್ಕಳಲ್ಲಿ ಹೊಸದಾಗಿ ಶಾಲೆ ಸೇರಿರುವವರು ಒಬ್ಬಿಬ್ಬರಾದರೂ ಇರುತ್ತಿದ್ದರು. ಅಂಥವರಿಗೆ ‘ಇದನ್ನು ಓದು ನೋಡೋಣ’ ಅಂದಾಗ ಅವರು ಒಂದೊಂದೇ ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ‘ದ……ಮ್ಮಿ…….ನ……. ಮೇ…… ಲೆ….’ ಎಂದು ಓದಿದರೆ ಅವರಿಗಿಂತ ತುಸು ದೊಡ್ಡವರಾದ ನನ್ನಂಥ ಮಕ್ಕಳಿಗೆ ಸರಾಗ ಓದಬಲ್ಲ ನಮ್ಮ ಶಕ್ತಿಯ ಬಗ್ಗೆಯೇ ಒಣಜಂಬ ಬಂದುಬಿಡುತ್ತಿತ್ತು. ಆಗ ನಾಗೇಶಮಾಮ ಅಲ್ಲಿದ್ದರೆ ಸುಪರಿಂಟೆಂಡೆಂಟ, ಸ್ವಾತಂತ್ರ್ಯಾಕಾಂಕ್ಷಿ ಮುಂತಾದ ಶಬ್ದಗಳನ್ನು ಬರೆಯಲು ಹೇಳಿ ನಮ್ಮ ಜಂಬ ಮುರಿಯುತ್ತಿದ್ದರು.

ಎದುರು ಇದ್ದುದು ಮನೆಯಲ್ಲ ದೊಡ್ಡ ರಾಜವಾಡೆಯೇ ಆಗಿದ್ದಿರಬೇಕು ಅನಿಸುವಷ್ಟು ದೊಡ್ಡದಾಗಿತ್ತು. ಮನೆಯದೇ ಒಂದು ಭಾಗದಲ್ಲಿ ಅಂಗಡಿಯಿತ್ತು. ಎದುರಿನಿಂದ ನೋಡಿದರೆ ಬಲಭಾಗದಲ್ಲಿ ಇರುವ ಅಂಗಡಿ ಮತ್ತು ಎಡಭಾಗದಲ್ಲಿರುವ ಮನೆಗೆ ಇದ್ದ ಪ್ರತ್ಯೇಕ ಬಾಗಿಲುಗಳು ಕಾಣುತ್ತಿದ್ದವು. ಇಡಿಯ ಕಟ್ಟಡದ ನೆಲಗಟ್ಟು ಸುಮಾರು ಒಂದೂವರೆ ಆಳಿನಷ್ಟು ಎತ್ತರವಿದ್ದು, ಜಗುಲಿ ಏರಬೇಕೆಂದರೆ ಹತ್ತು ಮೆಟ್ಟಿಲು ಹತ್ತಬೇಕಿತ್ತು. ಮುಂಭಾಗದ ಸುಧೃಡ ಕಂಬಗಳು, ರಸ್ತೆಯಿಂದಲೇ ಕಾಣಿಸುವ ದಪ್ಪ ದಪ್ಪ ತೊಲೆಗಳು, ಮನೆಯ ಪ್ರಧಾನಬಾಗಿಲಿನ ಚಿತ್ತಾರಗಳು ಒಂದಾನೊಂದು ಕಾಲದ ತಮ್ಮ ವೈಭವವನ್ನು ಹಿಡಿದಿಡಲು ಹೆಣಗುತ್ತಿರುವಂತೆ ತೋರುತ್ತಿದ್ದವು. ಆರೈಕೆಯ ಸ್ಪರ್ಷವಿಲ್ಲದ ಆ ಕಟ್ಟಡದ ಮೇಲೆ ಕಾಣದ ಕೈಯೊಂದು ಉದಾಸೀನದ ತೆಳ್ಳನೆಯ ಪರದೆಯನ್ನು ಹರಡಿ ವಿಜೃಂಭಣೆಯೊಂದನ್ನು ನಿಧಾನವಾಗಿ ಕುರುಹಾಗಿಸುತ್ತ, ಅದರ ಕಾಂತಿಯನ್ನು ಮಸುಕುಗೊಳಿಸುತ್ತಿರುವಂತೆ ಅನಿಸುತ್ತಿತ್ತು. ಮಂಗಳೂರು ಹೆಂಚಿನ ಆ ಮನೆಯ ಇಳಿಜಾರು ಮಾಡಿನ ಮೇಲೆ ಕಸಕಡ್ಡಿ ತುಂಬಿಕೊಂಡು, ಪಾಚಿಗಟ್ಟಿದ ಹೆಂಚು ಬಿಸಿಲಿಗೆ ಕಪ್ಪಾಗಿತ್ತು.

ಅಗಲವಾದ ಹತ್ತು ಮೆಟ್ಟಲು ಹತ್ತಿ ಹೋದರೆ ಉದ್ದ ಜಗುಲಿ. ಅಂಗಡಿಗೆ ಹೋಗುವವರು ಇತ್ತ ಕಡೆ ಬರಬಾರದು ಎಂದು ಸೂಚಿಸುವ ಹಾಗೆ ನಡುವೆ ಒಂದು ಚಿಕ್ಕ ತೆಣೆಯಿತ್ತು. ಆ ಅಂಗಡಿಗೆ ಬಿಡಿ ಹಲಗೆಗಳ ಬಾಗಿಲು. ಅಂಗಡಿ ಮುಚ್ಚಿದಾಗ ಹಲಗೆಗಳ ಮೇಲೆ ಬಿಳಿಯ ಬಣ್ಣದಿಂದ ಎಂದೋ ಬರೆದು ಮಾಸಿಹೋಗಿರುವ ಒಂದರಿಂದ ಇಪ್ಪತ್ತೆಂಟು ಅಂಕಿಗಳು ಕಾಣುತ್ತಿದ್ದವು. ನಾವು ಬೇಗ ಎದ್ದ ದಿವಸ, ಮಧುಕರ ಹಲಗೆಗಳನ್ನು ಒಂದೊಂದಾಗಿ ಬದಿಗೆ ಎತ್ತಿಟ್ಟು ಅಂಗಡಿ ತೆರೆಯುವುದು ಕಣ್ಣಿಗೆ ಬಿದ್ದರೆ, ಯಾವ ಕ್ರಮದಲ್ಲಿ ಅವುಗಳನ್ನು ತೆಗೆಯುತ್ತಾನೆ ಎಂದು ಪಂಥ ಕಟ್ಟುತ್ತಿದ್ದೆವು.

ಅಂಗಡಿಯ ಒಳಗೆ ಎರಡೂ ಕಡೆ ಸಾಲು ಸಾಲಾಗಿ ಕರಿಮರದ ಕಪಾಟುಗಳಿದ್ದವು. ಅವುಗಳಲ್ಲಿ ಮಾತ್ರ ಏನೂ ಇರಲಿಲ್ಲ. ಇಡೀ ಅಂಗಡಿಯೇ ಖಾಲಿಯಾಗಿತ್ತು. ಒಳಗಿನ ಕತ್ತಲೆಯಿಂದಾಗಿ ಮತ್ತು ಹಿಂಭಾಗದ ಗೋಡೆಯ ಮಂಕು ಬಣ್ಣದಿಂದಾಗಿ ಫಕ್ಕನೆ ರಸ್ತೆಯಿಂದ ನೋಡಿದರೆ ಅದೊಂದು ಕೊನೆಯೇ ಇಲ್ಲದ ಗುಹೆಯ ಹಾಗೆ, ಒಂದು ಸುರಂಗದ ಹಾಗೆ ಕಾಣಿಸುತ್ತಿತ್ತು. ಅಂಗಡಿಯ ಮುಂಗಟ್ಟಿನ ಮೇಲೆ ಬಾಯಿತೆರೆದ ಗೋಣಿಚೀಲದಲ್ಲಿ ತೆಂಗಿನಕಾಯಿಗಳು, ಒಂದು ಹಿತ್ತಾಳೆಯ ತಟ್ಟೆಯಲ್ಲಿ ಕುಂಕುಮದ ಗುಡ್ಡ, ಒಂದು ಮೊರದಲ್ಲಿ ಊದುಕಡ್ಡಿಗಳು, ಇನ್ನೊಂದು ಬುಟ್ಟಿಯಲ್ಲಿ ಹೂವಿನ ಚಿಕ್ಕ ಚಿಕ್ಕ ಮಾಲೆಗಳು – ಇಷ್ಟು ಬಿಟ್ಟರೆ ಅಲ್ಲಿ ಇದ್ದುದು ಆರೆಂಟು ಪೆಪ್ಪರಮಿಂಟಿನ ಭರಣಿಗಳು ಮಾತ್ರ. ಜಗುಲಿಯ ತುದಿಯಲ್ಲಿ, ರಸ್ತೆಯಿಂದಲೇ ಕಣ್ಣಿಗೆ ಬೀಳುವ ಹಾಗೆ, ಹಿಡಿಕೆಯಿರುವ ಎರಡು ಚಿಕ್ಕ ಬೆತ್ತದ ಬುಟ್ಟಿಗಳಲ್ಲಿ ಒಂದು ತೆಂಗಿನಕಾಯಿ, ಒಂದು ಊದಿನಕಡ್ಡಿಯ ಕಟ್ಟು, ಹೂವಿನ ಮಾಲೆ, ಒಂದು ಕುಂಕುಮ ಪೊಟ್ಟಣ ಮತ್ತು ಒಂದು ಹಸಿರು ಬಟ್ಟೆಯ ಖಣ ಇಟ್ಟು, ಪಕ್ಕದಲ್ಲಿ ಒಂದು ತಗಡಿನ ಬೋರ್ಡಿನ ಮೇಲೆ ‘ಇಲ್ಲಿ ಮಾರಿಕಾಂಬಾ ದೇವಿಯ ಉಡಿ ತುಂಬುವ ಬುಟ್ಟಿಗಳು ದೊರೆಯುತ್ತವೆ’ ಎಂದು ಬಿಳಿಯ ಬಣ್ಣದಲ್ಲಿ ಸೊಟ್ಟ ಅಕ್ಷರಗಳಲ್ಲಿ ಬರೆದಿತ್ತು.

ಈ ಅಂಗಡಿಗೆ ಊರಿನ ಯಾರೂ ಬರುತ್ತಿರಲಿಲ್ಲ. ಅವರು ನಿತ್ಯ ಕೊಳ್ಳುವ ಯಾವ ವಸ್ತುವೂ ಅಲ್ಲಿರಲಿಲ್ಲ. ಪರವೂರಿನಿಂದ ದೇವಸ್ಥಾನಕ್ಕೆ ಬಂದ ಜನ ಈ ರಸ್ತೆಯ ಮೂಲಕ ನಡೆದು ಹೋದರೆ, ಈಗಲೇ ಒಯ್ದು ದೇವರಿಗೆ ಅರ್ಪಿಸಬಹುದು ಅನ್ನುವಂತೆ ಸಿದ್ಧವಾಗಿರುವ ಬುಟ್ಟಿಗಳನ್ನು ನೋಡಿ ಒಂದು ಬುಟ್ಟಿ ಕೊಳ್ಳುವರು. ಯಾವಾಗಲಾದರೊಮ್ಮೆ ಅವರ ಜೊತೆ ಬಂದ ಮಕ್ಕಳು ಪೆಪ್ಪರಮಿಂಟಿಗಾಗಿ ಹಟ ಮಾಡುವರು. ಮರಳಿ ಹೋಗುವಾಗ ಖಾಲಿ ಬುಟ್ಟಿ ಹಿಂತಿರುಗಿಸಬೇಕೆಂದು ಎಷ್ಟು ಒತ್ತಿ ಹೇಳಿದರೂ ಕೆಲವರು ಮರೆಯುತ್ತಿದ್ದುದರಿಂದ ಅವರು ಹಿಂತಿರುಗಿ ಬರುವುದು ತುಸು ತಡವಾದರೂ ಮಧುಕರ ಆತಂಕಗೊಳ್ಳುತ್ತಿದ್ದ. ಅವನು ಪದೇ ಪದೇ ಜಗುಲಿಯ ತುದಿಗೆ ಬಂದು, ದೇವಸ್ಥಾನದತ್ತ ನೋಟ ಬೀರಿ, ಹಿಂತಿರುಗಿ ಗಲ್ಲೆಯ ಮೇಲೆ ಕೂತಿದ್ದು ಅಜ್ಜನ ಮನೆಯವರ ಕಣ್ಣಿಗೆ ಬಿದ್ದರೆ ‘ಇವನ ಬುಟ್ಟಿ ಬರಲಿಲ್ಲ ಅಂತ ಕಾಣ್ತದೆ. ಕುಂಡೆ ಸುಟ್ಟ ಬೆಕ್ಕಿನ ಹಾಗೆ ಓಡಾಡುತ್ತಿದ್ದಾನೆ’ ಎಂದು ಹೇಳುತ್ತಿದ್ದರು. ಒಂದು ಬೆತ್ತದ ಬುಟ್ಟಿಯ ಸಲುವಾಗಿ ಇಷ್ಟು ಕಳವಳಪಡಬೇಕಾದ ಅವನ ಪರಿಸ್ಥಿತಿಯ ಬಗ್ಗೆ ಕರುಣೆ, ಅಸಹನೆ, ಅವಹೇಳನ ಎಲ್ಲವೂ ಈ ಮಾತುಗಳಲ್ಲಿ ಇದ್ದ ಹಾಗೆ ಅನಿಸುತ್ತಿತ್ತು. ಅದನ್ನು ತಡವಾಗಿ ಮರಳಿ ತಂದವರು ‘ರಾಯರೇ ತಗೊಳ್ಳಿ’ ಎಂದು ಹೇಳಿ ಕೊಟ್ಟು ಹೋಗುವಾಗ ತನ್ನೊಳಗೆ ಹುಟ್ಟಿದ ನಿರಾಳತೆಯಿಂದ ಅವಮಾನಿತನಾದವನ ಹಾಗೆ ‘ಇರಲಿ ಇರಲಿ ಅಲ್ಲಿಯೇ ಇಟ್ಟು ಹೋಗಿ’ ಎಂದು ಮಧುಕರ ಅಲಕ್ಷ್ಯ ನಟಿಸುತ್ತಿದ್ದುದು ಎಲ್ಲರಿಗೂ ಗೊತ್ತಾಗಿ ಅದೊಂದು ಅಪಹಾಸ್ಯದ ವಿಷಯವಾಗಿತ್ತು. ನಾಗೇಶಮಾಮ ಅಲ್ಲಿ ಇದ್ದರಂತೂ ‘ಈಗ ನೋಡು, ಅವರು ಅತ್ತ ಕಡೆ ಹೋದದ್ದೇ ಬುಟ್ಟಿಯನ್ನು ಹೇಗೆ ತಿರುಗಿಸಿ ತಿರುಗಿಸಿ ಪರೀಕ್ಷೆ ಮಾಡುತ್ತಾನೆ’ ಅನ್ನುತ್ತಿದ್ದನು. ಅಜ್ಜ ಮಾತ್ರ ಇಂಥ ಹಗುರ ಮಾತು ಕಿವಿಗೆ ಬಿದ್ದರೆ ‘ಕಳಕೊಂಡ ಶ್ರೀಮಂತಿಕೆಯ ನೋವು ಏನೆಂದು ನಿಮಗೆ ಗೊತ್ತಿಲ್ಲ’ ಎಂದು ಗಂಭೀರವಾಗಿ ಹೇಳುತ್ತಿದ್ದರು.

ಅಂಗಡಿಯ ಒಳಗೆ, ಬಲತುದಿಯಲ್ಲಿ ಭವ್ಯವಾದ ಗಲ್ಲಾ ಪೆಟ್ಟಿಗೆ. ಅದರ ಹಿಂದೆ ಇರುವ ಕಟ್ಟಿಗೆಯ ಕುರ್ಚಿಯ ಮೇಲೆ ಮಧುಕರ ಕೂರುವುದು. ಮಾಸಿದ ಬಿಳಿಯ ಪೈಜಾಮ ಮತ್ತು ಬಿಳಿಯ ಅಂಗಿ ಹಾಕಿಕೊಂಡು, ಮುಂಭಾಗದಲ್ಲಿ ಬೋಳಾಗಿ ಹೋದ ತನ್ನ ತಲೆಯನ್ನು ಎಡಗೈಯಿಂದ ಆಗಾಗ ಸವರಿಕೊಳ್ಳುತ್ತ ಪೇಲವ ಕಣ್ಣುಗಳಿಂದ ಸುಮ್ಮನೇ ರಸ್ತೆಯನ್ನು ನೋಡುತ್ತ ಯಾವುದೋ ಭಾರೀ ವ್ಯಾಪಾರದ ನಿರೀಕ್ಷೆಯಲ್ಲಿರುವಂತೆ ದಿನವಿಡೀ ಗಲ್ಲಾದ ಮೇಲೆ ಕೂತೇ ಇರುವನು.
ಮಧುಕರ ತಾನಾಗಿಯೇ ಯಾರನ್ನೂ ಮಾತಾಡಿಸಲು ಹೋಗುತ್ತಿರಲಿಲ್ಲ. ಅಜ್ಜ ಪ್ರತಿದಿನ ಬೆಳಿಗ್ಗೆ ತಮ್ಮ ಅಂಗಡಿಗೆ ಹೋಗುವಾಗ ಅವನನ್ನು ಕರೆದು ಮಾತಾಡಿಸುತ್ತಿದ್ದರು. ಅಜ್ಜ ಮನೆಯಿಂದ ಹೊರಬೀಳುತ್ತಲೇ ಅವನು ಕೂತಲ್ಲೇ ಮಿಸುಕಾಡಿ ಗಲ್ಲೆಯಿಂದ ಏಳುವ ತಯಾರಿ ಮಾಡುತ್ತಿದ್ದ. ಅವರು ಅವನ ಅಂಗಡಿಯ ಎದುರು ಬಂದು ‘ಮಧುಕರಾ…’ ಎಂದದ್ದೇ ಎದ್ದು ಬಂದು ಮೆಟ್ಟಲಿಳಿದು ವಿಧೇಯನಾಗಿ ನಿಲ್ಲುತ್ತಿದ್ದ. ಒಂದು ನಿಮಿಷದ ಈ ನಿತ್ಯ ಕುಶಲೋಪರಿ ಮುಗಿಸಿ ಅಜ್ಜ ತಮ್ಮ ಅಂಗಡಿಗೆ ಹೊರಡುತ್ತಿದ್ದರು.
*
*
*
ಅಜ್ಜನ ಮನೆಯೆದುರು ಖಾಲಿ ಜಾಗ ಇದ್ದರೂ ಮಕ್ಕಳನ್ನು ಅಲ್ಲಿ ಆಡಲು ಬಿಡುತ್ತಿರಲಿಲ್ಲ. ಪಂಡಿತರ ಮನೆಗೇ ಸೇರಿದ ಅದನ್ನು ಯಾರೂ ಯಾವುದಕ್ಕೂ ಉಪಯೋಗಿಸುತ್ತಿದ್ದ ಹಾಗೆ ಕಾಣಿಸುತ್ತಿರಲಿಲ್ಲ.

‘ಇಂಥ ಒಂದು ಬೀದಿಯಲ್ಲಿ ಈ ಜಾಗಕ್ಕೆ ಬಂಗಾರದ ಬೆಲೆ ಬರಬಹುದು’ ಎಂದು ನನ್ನ ಚಿಕ್ಕಮ್ಮನ ಗಂಡ, ಮಧ್ಯಾಹ್ನದ ಊಟದ ನಂತರ ಅಜ್ಜನ ಮನೆಯ ಜಗುಲಿಯಲ್ಲಿ ಕೂತು, ಎದುರಿನ ಜಾಗವನ್ನೇ ನಿಟ್ಟಿಸುತ್ತ ನಾಗೇಶಮಾಮನಿಗೆ ಹೇಳಿದ್ದರು.
ವೀಳ್ಯದೆಲೆಯನ್ನು ಅಂಗೈಯಲ್ಲಿ ಹಿಡಿದು ಪರೀಕ್ಷಿಸುತ್ತ, ತಕ್ಕ ಅಡಿಕೆಗಾಗಿ ಸಂಚಿಯಲ್ಲಿ ಬೆರಳುಗಳನ್ನು ಇಳಿಬಿಟ್ಟು ನಾಗೇಶಮಾಮಾ ‘ಆ ಹೆಂಗಸು ಇರುವವರೆಗೆ ಇದರ ಸುದ್ದಿಗೆ ಯಾರೂ ಬರುವುದಿಲ್ಲ ಭಾವಾ’ ಅಂದ.

‘ಈ ಕಾಲದಲ್ಲಿ ಇದನ್ನೆಲ್ಲ ನಂಬುವುದು ಕಷ್ಟವೋ ಮಾರಾಯ’ ಎಂದು ಅವರೆಂದರು. ಹೊನ್ನಾವರದಲ್ಲಿ ಅವರದು ನಾನಾ ವ್ಯಾಪಾರಗಳಿದ್ದವು. ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆಂದು, ಶುಕ್ರದೆಸೆ ನಡೆಯುತ್ತಿದೆಯೆಂದು, ಏನನ್ನಾದರೂ ಕೈಹಿಡಿದು ದಕ್ಕಿಸಿಕೊಳ್ಳಬಲ್ಲರೆಂದು ಅವರ ಖ್ಯಾತಿ. ಮಚವೆಯಿಂದ ಹಿಡಿದು ಐಸ್‌ಫಾಕ್ಟರಿಯವರೆಗೆ ಅನೇಕ ವ್ಯವಹಾರಗಳಲ್ಲಿ ನುರಿತವರಾಗಿದ್ದರು. ಎದುರು ಜಾಗದ ಮೂಲಕ ಮಾಡಬಹುದಾದ ಲಾಭವನ್ನು ಮನಸ್ಸಲ್ಲೇ ಅಳೆಯುತ್ತ ಮಾತಾಡಿದರು.

ಅವರ ಇಂಗಿತ ಅರಿತವನಂತೆ ನಾಗೇಶಮಾಮಾ ಆ ಜಾಗದ ಬಗ್ಗೆ ಇನ್ನಷ್ಟು ಹೇಳತೊಡಗಿದ.
‘ಮೊನ್ನೆ ಮೊನ್ನೆ ಕಿಮಾನಿಯಿಂದ ಹಮ್ಮಣ್ಣನ ಮಗ ಎತ್ತಿನ ಗಾಡಿ ಹೊಡಕೊಂಡು ಬಂದಿದ್ದ. ಅವನು ಇದೇ ಮೊದಲನೇ ಸಲ ಇಲ್ಲಿಗೆ ಬಂದಿದ್ದು. ಮಧ್ಯಾಹ್ನದ ಹೊತ್ತು. ನಾವೆಲ್ಲ ಒಳಗಡೆ ಇದ್ದೆವು. ಮುಂದೆ ಖಾಲಿ ಜಾಗ ಕಾಣಿಸಿತು. ಎತ್ತು ಮತ್ತು ಗಾಡಿಯನ್ನು ಇಲ್ಲೇ ಕಟ್ಟಿ, ಹುಲ್ಲು ಹಾಕಿ ಮನೆಯ ಹಿಂದೆ ಬಂದು ಮಾತಾಡಿಸಿದ. ಆಸರಿಗೆ ಕೊಟ್ಟು ಕೂರಿಸಿದೆವು. ‘ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟು’ ಎಂದು ಅಮ್ಮ ಹೇಳಿದಾಗಲೇ ಅವನು ಅವುಗಳನ್ನು ಮುಂದಿನ ಜಾಗದಲ್ಲಿ ಕಟ್ಟಿ ಬಂದ ವಿಷಯ ನಮಗೆ ಗೊತ್ತಾಯಿತು. ‘ಅಯ್ಯಯ್ಯೋ ಬೇಡವೋ ಮಾರಾಯ. ಹಿಂದೆ ಕಟ್ಟು, ಹಿಂದೆ ಕಟ್ಟು’ ಎಂದು ಅಮ್ಮ ಅವಸರ ಮಾಡಿ ಅವನಿಗೆ ನೀರು ಕುಡಿಯಲಿಕ್ಕೂ ಬಿಡದೇ ಹಿಂದೆ ತರಿಸಿ ಕಟ್ಟಿದರು. ಗಟ್ಟಿಮುಟ್ಟಾಗಿ ಒಳ್ಳೇ ಆನೆಯ ಮರಿಯ ಹಾಗೆ ಇದ್ದ ಎತ್ತುಗಳು. ವಾಪಸು ಕಿಮಾನಿಗೆ ಹೋಗುವಾಗ ಬಂಡಲ ಘಟ್ಟದ ಮೇಲೆ ಮೋಟರು ಹೊಡೆದು ಒಂದು ಎತ್ತಿನ ಕಾಲು ಮುರಿದು ಹೋಗಿದೆಯಂತೆ. ಇದಕ್ಕೆ ಏನು ಹೇಳುವುದು?’
‘ನಾನು ಅವಳನ್ನು ನೋಡೇ ಇಲ್ಲ. ಅವಳು ಕಿಟಕಿಯಲ್ಲೇ ಕೂತಿರುತ್ತಾಳಂತೆ ಹೌದೇನೋ?’
‘ಈ ಕಡೆಯಿಂದ ಕಾಣುವುದಿಲ್ಲ. ಆ ಗೋಡೆ ಇದೆಯಲ್ಲ, ಅದರ ಕೊನೆಯಲ್ಲಿರುವ ಕಿಟಕಿಯಲ್ಲಿ ಆಗಾಗ ಮೋರೆ ಕಾಣಿಸುತ್ತದೆ ಅನ್ನುತ್ತಾರೆ. ನನಗಂತೂ ಅಲ್ಲಿ ಕತ್ತಲು ಬಿಟ್ಟರೆ ಬೇರೇನೂ ಕಾಣುವುದಿಲ್ಲ’
‘ನಿನ್ನ ಅಪ್ಪ ಇದನ್ನೆಲ್ಲ ಒಪ್ಪುವುದಿಲ್ಲ ಅಲ್ಲವೇನೋ?’
‘ಅವರನ್ನು ಬದಲಾಯಿಸುವುದು ದೇವರಿಗೂ ಶಕ್ಯವಿಲ್ಲ. ಕಣ್ಣೆದುರು ಇರುವುದನ್ನು ನೋಡಲಿಕ್ಕೆ ತಯಾರಿಲ್ಲದವರಿಗೆ ಏನು ಹೇಳುವುದು. ಅಷ್ಟೆಲ್ಲ ಯಾಕೆ – ಹೋದ ವರ್ಷ ಗೋವೆಯಿಂದ ನರಸಿಂಹ ಬಾರಕೂರನ ಮಗಳು ಶಕ್ಕು ಬಂದಿದ್ದಳು. ಅವಳ ಮಗ ಹದಿನಾರು ವರ್ಷದವನು. ಯಾರ ಕಣ್ಣೂ ಬೀಳುವ ಹಾಗೆ ಕಟ್ಟುಮಸ್ತಾಗಿದ್ದ ಹುಡುಗ. ಇದು ಸಂಬಂಧದ ಮನೆಯಲ್ಲವೇ? ಎಲ್ಲರೂ ಇಲ್ಲಿಗೂ ಬಂದಿದ್ದರಂತೆ. ಮಾರನೇ ದಿನವೇ ಹುಡುಗ ಜ್ವರ ಹಿಡಿದು ಮಲಗಿದವನು ಅದು ಟೈಫಾಯ್ಡಿಗೆ ತಿರುಗಿ ಅವನನ್ನು ಉಳಿಸಿಕೊಳ್ಳಲು ಸಾಕುಸಾಕಾಯಿತು. ಮತ್ತೆ ಅವಳ ಕಣ್ಣಿಗೆ ಬೀಳುವುದಿಲ್ಲ, ಆ ಮನೆಗೆ ಕಾಲು ಹಾಕುವುದಿಲ್ಲ ಎಂದು ಶಕ್ಕು ಶಪಥ ಮಾಡಿ ಹೋದಳು. ಇದಕ್ಕೆ ಏನು ಹೇಳುವುದು?’
‘ಈಗ ಈ ಜಾಗ ಕಡಿಮೆಗೆ ಸಿಗಬಹುದು. ಈಗ ಕೊಂಡು ಇಟ್ಟರೆ ಮುಂದೆ ಏನಾದರೂ ಮಾಡಬಹುದು.’
‘ಅವನು ಮಾರಬೇಕಲ್ಲ. ದಿವಸಕ್ಕೆ ಹತ್ತು ರೂಪಾಯಿ ವ್ಯಾಪಾರ ಆಗುವುದಿಲ್ಲ. ಅದೇನು ಗಾಳಿ ತಿಂದು ಬದುಕುತ್ತಾರೋ ಏನೋ. ಮದುವೆ ಮುಂಜಿಗೂ ಹೋಗುವುದಿಲ್ಲ. ಬಾರೋ ಅಂದರೆ ಭಾರೀ ವ್ಯಾಪಾರಸ್ಥನ ಹಾಗೆ ‘ಅಂಗಡಿ ಬಿಟ್ಟು ಹ್ಯಾಗೆ ಬರೋದು? ಇಲ್ಲಿ ಗಲ್ಲೆಯ ಮೇಲೆ ಯಾರು ಕೂರ್ತಾರೆ?’ ಅಂತಾನೆ. ಹಿಂದೆ ಒಂದು ಸಲ ನಾನೇ ಇವನ ಮನಸ್ಸು ನೋಡುವಾ ಎಂದು ಈ ಜಾಗ ಮಾರಿಬಿಡು ಎಂದು ಹೇಳಿದ್ದೆ. ಏನು ಉತ್ತರ ಕೊಟ್ಟ ಗೊತ್ತೇನು? ಅದು ಮಾರಿದರೆ ಗಿರಾಕಿಗಳಿಗೆ ಬಂಡಿ ಕಟ್ಟಲಿಕ್ಕೆ ಜಾಗ ಇರುವುದಿಲ್ಲ ಅಂದ. ಅವನ ಅಪ್ಪನ ಭರಾಟೆಯ ದಿವಸಗಳಲ್ಲಿ ಇಲ್ಲಿ ಖಾಯಂ ಚಪ್ಪರ ಹಾಕಿ, ಗಿರಾಕಿಗಳ ಬಂಡಿ ಕಟ್ಟಲಿಕ್ಕೆ ಉಪಯೋಗಿಸುತ್ತಿದ್ದರಂತೆ. ಅಲ್ಲ, ಮನುಷ್ಯನ ಭ್ರಮೆಗೂ ಒಂದು ಮಿತಿ ಉಂಟು.’
‘ಅವನು ನಿನ್ನ ಅಪ್ಪನ ಮಾತು ಕೇಳಬಹುದೋ ಏನೋ’
‘ಅಪ್ಪನನ್ನು ಒಪ್ಪಿಸುವುದು ಸಾಧ್ಯವಿಲ್ಲ. ಬೇರೆ ಯಾರ ಮೂಲಕ ಹೋದರೂ ಮಧುಕರ ಅಪ್ಪನನ್ನು ಕೇಳದೇ ಒಂದು ಹೆಜ್ಜೆ ಇಡುವುದಿಲ್ಲ. ಈ ವ್ಯವಹಾರ ಮರೆತುಬಿಡಿ’ ಬಾಯಲ್ಲಿ ತುಂಬಿಕೊಂಡ ರಸದಿಂದಾಗಿ ಕೊನೆಕೊನೆಯ ಶಬ್ದಗಳನ್ನು ಮೊದ್ದುಮೊದ್ದಾಗಿ ಉಚ್ಛರಿಸುತ್ತ ನಾಗೇಶಮಾಮ ಮಾತು ಮುಗಿಸಿ ಕವಳ ಪೀಕಲು ಜಗುಲಿಯ ತುದಿಗೆ ಹೋಗಿದ್ದ.
*
*
*
ಯಾರೂ ಆ ಹೆಂಗಸಿನ ಬಗ್ಗೆ ಹೀಗೆ ಹೀಗೆ ಎಂದು ಪೂರ್ತಿಯಾಗಿ ಹೇಳಿರದಿದ್ದರೂ ಕಿವಿಗೆ ಬಿದ್ದ ಮಾತುಕತೆ, ಕದ್ದು ಕೇಳಿದ ಸಂಭಾಷಣೆ, ಹುಡುಗಾಟಿಕೆಯ ಕುತೂಹಲದಲ್ಲಿ ನಡೆಸಿದ ಪತ್ತೇದಾರಿಕೆಯಿಂದ ಅವಳ ಚಿತ್ರವೊಂದು, ಕಾಲಾಂತರದಲ್ಲಿ ನನ್ನಲ್ಲಿ ಮೂಡಿತ್ತು. ನನ್ನ ಅಮ್ಮ ಮತ್ತು ಅಜ್ಜ ಮಾತ್ರ ಅವಳ ಬಗ್ಗೆ ಮೃದುವಾಗಿದ್ದುದು ಅವರ ಮಾತಿನಲ್ಲೇ ಗೊತ್ತಾಗುತ್ತಿತ್ತು. ಉಳಿದ ಯಾರೂ ಅವಳನ್ನು ಕುರಿತು ಒಂದೇ ಒಂದು ಸಹಾನುಭೂತಿಯ ಮಾತು ಹೇಳಿದ್ದು ನನಗಂತೂ ನೆನಪಿಲ್ಲ.

ಎದುರುಗಡೆಯ ಆ ದೊಡ್ಡ ಮನೆ ಘನಶ್ಯಾಮ ಪಂಡಿತರದು. ಅವಳು ಪಂಡಿತರ ಒಬ್ಬಳೇ ತಂಗಿ. ಹೆಸರು ಮುಕ್ತಾ. ಘನಶ್ಯಾಮ ಪಂಡಿತರು ಊರಿನ ಭಾರೀ ವ್ಯಾಪಾರಿಗಳು. ಒಂದು ಕಾಲಕ್ಕೆ ಅವರ ಅಂಗಡಿ ಬಹಳ ದೊಡ್ಡ ಕಿರಾಣಿ ಅಂಗಡಿಯೆಂದು ಪ್ರಸಿದ್ಧವಾಗಿತ್ತು. ಆಸುಪಾಸಿನ ಹಳ್ಳಿಗಳಿಂದಲೂ ಜನ ಮದುವೆಯ ಸಾಮಾನು ಖರೀದಿಗೆ ಅಲ್ಲಿ ಬರುತ್ತಿದ್ದರು. ಅವರ ಮನೆಯಲ್ಲಿದ್ದ ದಮಣಿಯಲ್ಲಿ ಕುಳಿತು ಒಂದು ಮದುವೆಗೆ ಹೋಗಿದ್ದನ್ನು ಮತ್ತು ಅದರಲ್ಲಿ ಹಾಸಿದ್ದ ಮೆದುವಾದ ಜಮಖಾನೆ ಹಾಸಿಗೆಗಳನ್ನು ನನ್ನ ಅಮ್ಮ ವರ್ಣಿಸುತ್ತಿದ್ದುದು ನನಗೆ ಸ್ಪಷ್ಟವಾಗಿ ನೆನಪಿದೆ. ದುಡ್ಡು ರೂಪ ಎಲ್ಲ ಇದ್ದೂ ಮುಕ್ತಾಳ ಮದುವೆ ಆಗಬೇಕಾದ ಕಾಲಕ್ಕೆ ಆಗಲೇ ಇಲ್ಲ. ಜಾತಕದ ದೋಷವೋ ಮತ್ತೇನೋ ಒಂದಲ್ಲ ಒಂದು ಕಾರಣದಿಂದ ಮುಂದೆ ಮುಂದೆ ಹೋಗಿ ಅಂತೂ ತೆರ್ನಮಕ್ಕಿಯ ಮನೆತನವೊಂದಕ್ಕೆ ಎಲ್ಲ ಕೂಡಿ ಬಂದು ಮದುವೆಯಾಯಿತು. ಘನಶ್ಯಾಮ ಪಂಡಿತರು ವರದಕ್ಷಿಣೆ ಧಾರಾಳವಾಗಿ ಕೊಟ್ಟರು. ಅವಳ ಗಂಡ ಅಚಾನಕ ತೀರಿ ಹೋಗುವವರೆಗೂ ಎಲ್ಲವೂ ಸರಿಯಾಗೇ ಇತ್ತು. ನಂತರ ಗಂಡನ ಮನೆಯವರ ಕಾಟ ಶುರುವಾಯಿತು. ಅವಳ ಕಣ್ಣಿಗೆ ಬಿದ್ದುದೆಲ್ಲವೂ ಹಾಳಾಗಿ ಹೋಗುತ್ತದೆ ಎಂಬ ಮಾತು ಚಾಲ್ತಿಗೆ ಬಂತು.
ಅವಳ ಕಣ್ಣಿಗೆ ಬಿದ್ದು ನೂರಾರು ಕಾಯಿ ಕೊಡುವ ತೆಂಗಿನಮರ ಸಿಡಿಲಿಗೆ ಸುಟ್ಟು ಹೋಯಿತಂತೆ. ಆಳು ಮಗನ ದಿಬ್ಬಣ ನೋಡಿ ನಿನ್ನ ಹೆಂಡತಿ ಚೆನ್ನಾಗಿದ್ದಾಳೆ ಅಂದಳಂತೆ – ಎರಡೇ ದಿನಕ್ಕೆ ಅವಳಿಗೆ ಹಾವು ಕಚ್ಚಿತು. ನಮ್ಮ ಮನೆಯ ಬಾವಿಯಲ್ಲಿ ನೀರು ಬತ್ತುವುದಿಲ್ಲ ಅಂದಳಂತೆ, ಅದೇ ಬೇಸಿಗೆಗೆ ಬಾವಿಯ ತಳ ಕಾಣಿಸಿತು. ಮಹಮ್ಮಾಯಿ ದೇವಿಯ ತೇರು ನೋಡಲಿಕ್ಕೆ ಎರಡು ಕಣ್ಣು ಸಾಲದು ಅಂದಳಂತೆ. ರಥದ ಕೀಲು ಮುರಿಯಬೇಕೇ? ಅಲ್ಲ ದೇವರಿಗೂ ತಾಳಿಕೊಳ್ಳಲಿಕ್ಕೆ ಆಗದಷ್ಟು ಅವಳ ಕಣ್ಣು ಉಗ್ರವೇ? ಹೀಗೆ ಅವಳ ಮೇಲೆ ಅಪವಾದಗಳ ಮೇಲೆ ಅಪವಾದಗಳು ಬಂದವು. ಚೌತಿಯ ಚಂದ್ರನನ್ನು ನೋಡಿ ಹೀಗೆ ಆಯಿತೇನೋ ಎಂದು ಭಾವಿಸಿ ಅವಳು ಗಣೇಶನ ವೃತ, ಪೂಜೆ ಕೂಡ ಮಾಡಿದಳು. ಇದಕ್ಕೆಲ್ಲ ಕಲಶವಿಟ್ಟ ಹಾಗೆ ಅವಳ ಮೈದುನನ ಮಗ ಹುಡುಗಾಟಕ್ಕೆ ಅಡಿಕೆ ಮರ ಹತ್ತಲು ಹೋಗಿ ಕಾಲು ಜಾರಿ ಬಿದ್ದು ಪ್ರಾಣ ಬಿಟ್ಟ. ಅದಾಗಿದ್ದೇ ಈ ಘಟನೆ ಜರುಗುವ ಮುಂಚೆ ಮುಕ್ತಾ ಏನೇನು ಹೇಳಿದ್ದಳು ಎಂದೆಲ್ಲ ತನಿಖೆಯಾಗಿ ಮುಂದಿನ ವಿಚಾರ ಮಾಡುವ ಮೊದಲೇ ಅವಳ ಮೈದುನ ಉರಿವ ಕಟ್ಟಿಗೆಯನ್ನು ಹಿರಿದು ಅವಳನ್ನು ಹೊಡೆಯಲು ಬಂದಿದ್ದ. ಯಾರದೋ ಮನೆಯಲ್ಲಿ ಅಡಗಿಕೊಂಡು ಆ ರಾತ್ರಿ ಕಳೆದಳು.

ಮರುದಿನ ಅವಳ ಗಂಡನ ಹಿರಿಯ ಅಣ್ಣ ಅವಳನ್ನು ತವರಿಗೆ ಕರೆತಂದ. ಬಂದವನು ಘನಶ್ಯಾಮ ಪಂಡಿತರ ಸ್ಥಾನಮಾನ ಲೆಕ್ಕಿಸದೇ ಬಾಯಿಗೆ ಬಂದ ಹಾಗೆ ಅಂದ. ಆ ಹೊತ್ತಿಗೆ ಅಲ್ಲಿ ಊರಿನ ನಾಲ್ಕು ಜನ ಇದ್ದರು. ಅವರ ಎದುರಿಗೆ ಮಾನ ಹೋದ ನೋವು ಒಂದು ಕಡೆ, ತಂಗಿಯ ಮೇಲೆ ಬಂದ ಅಪವಾದ ಒಂದು ಕಡೆ ಪಂಡಿತರನ್ನು ಚುಚ್ಚಿ, ಅವರ ಸಿಟ್ಟು ಉಕ್ಕಿ ಬಂದು, ಬೀಗರ ಹಿರಿಯ ಮಗನಿಗೆ ಕಪಾಳಮೋಕ್ಷವಾಯಿತು. ‘ಮದುವೆ ಮಾಡಿ ಕೊಟ್ಟ ಮಾತ್ರಕ್ಕೆ ಅವಳ ಪಾಲಿಗೆ ಈ ಮನೆ ಮತ್ತು ಮನೆಯವರು ಇಲ್ಲ ಅಂತ ತಿಳಕೊಂಡಿದ್ದೀರೇನು? ಅರ್ಧ ಆಸ್ತಿ ಅವಳ ಹೆಸರಿಗೆ ಬರೆಯುತ್ತೇನೆ. ನಿಮ್ಮ ಹಂಗಿನ ಕೂಳು ಅವಳಿಗೆ ಬೇಕಿಲ್ಲ…’ ಎಂದು ನೆರೆದವರ ಎದುರು ಕೂಗಾಡಿದರು. ಅದೇ ಕೊನೆ. ಮತ್ತೆ ಮುಕ್ತಾ ಗಂಡನ ಮನೆಗೆ ಹೋಗಲಿಲ್ಲ.

ಸುದ್ದಿ ಹಬ್ಬಲಿಕ್ಕೆ ಕ್ಷಣಮಾತ್ರವೂ ತಡವಾಗಲಿಲ್ಲ. ಇಷ್ಟು ದಿನ ಇಲ್ಲದ ಅವಳ ಕೆಟ್ಟ ಕಣ್ಣು ಈಗ ಒಮ್ಮೆಲೇ ಹೇಗೆ ಬಂತು ಎಂದು ಯಾರೂ ಪ್ರಶ್ನಿಸಲಿಲ್ಲ. ಈ ಊರಲ್ಲಿ ಜರುಗಿದ ಎಲ್ಲ ಅನಾಹುತಗಳಿಗೆ ಅವಳ ಕಣ್ಣೇ ಯಾವುದೋ ರೀತಿಯಿಂದ ಕಾರಣವೆಂದು ಹೆಸರು ಹಚ್ಚಲು ತಡವಾಗಲಿಲ್ಲ. ಭಾಗವತರ ಮನೆಯ ಹುಲ್ಲುಮೆದೆಗೆ ಬಿದ್ದ ಬೆಂಕಿ, ವಾಡಿಬುಗ್ರಿಯವರ ಮಗಳ ಆತ್ಮಹತ್ಯೆ, ವಿಠಲರಾಯರ ಮಗನಿಗೆ ಉಂಟಾದ ಮನೋವಿಕಾರ, ಹುಟ್ಟಿದ್ದೇ ಸತ್ತುಹೋದ ಲಕ್ಕಪ್ಪನ ಮೊಮ್ಮಗು ಎಲ್ಲದಕ್ಕೂ ಅವಳೇ ಕಾರಣಳಾದಳು. ಅವಳು ಊರಿಗೆ ಬಂದಿದ್ದೇ ಎಲ್ಲ ಅವಘಡಗಳಿಗೆ ಕಾರಣ ಸಿಗತೊಡಗಿತು. ಯಾವಾಗಲೋ ಅವಳು ಆಡಿದ ಮಾತು, ನೋಡಿದ ನೋಟ, ನಕ್ಕ ರೀತಿ, ಮುಟ್ಟಿದ ವಸ್ತು – ಎಲ್ಲವೂ ಅವ್ಯಕ್ತ ವಿಧಿಲೀಲೆಯ ಹಿಂದಿನ ಕಾರಣಗಳಾಗಿ ತೋರತೊಡಗಿದವು. ಕಾಣದ ಕೈಯನ್ನು ಎಲ್ಲರೂ ಮರೆತು ಎದುರು ಕಂಡ ಮುಕ್ತಾಳನ್ನು ಮಾತ್ರ ದೂರತೊಡಗಿದರು. ಕೈಮೀರಿದ ದುರಂತಗಳಿಗೆ, ನಿರುದ್ದಿಶ್ಯ ನೋವುಗಳಿಗೆ ಇಷ್ಟು ಸುಲಭವಾಗಿ ಸಿಕ್ಕ ಕಾರಣವನ್ನು ಬಿಟ್ಟುಕೊಡಲು ಯಾರೂ ತಯಾರಿರಲಿಲ್ಲ.
*
*
*
ಅಮ್ಮನ ಕೊನೆಯ ತಮ್ಮ ಸುಧೀರಮಾಮನ ಮದುವೆಗೆಂದು ಅಜ್ಜನ ಮನೆಗೆ ಹೋಗಿದ್ದೆವು. ಮದುವೆ ಮುಗಿಸಿ ಬೆಳಗಾವಿಯಿಂದ ಹಿಂತಿರುಗಿ ಬಂದ ಮಾರನೇ ದಿವಸ ಮಧ್ಯಾಹ್ನ ನನ್ನನ್ನು ಅಮ್ಮ ಬಲವಂತವಾಗಿ ಮಲಗಿಸಲು ಪ್ರಯತ್ನಿಸುತ್ತಿದ್ದಳು. ಕತ್ತಲು ಕತ್ತಲಾಗಿದ್ದ ಆ ಕೋಣೆಯಲ್ಲಿ ಮಂಚದ ಮೇಲೆ ನಾನು ಮತ್ತು ಅಮ್ಮ ಮಲಗಿದ್ದೆವು. ಅಲ್ಲೇ ಕೆಳಗೆ ಚಾಪೆಯ ಮೇಲೆ ಅಡ್ಡಾದ ಅಜ್ಜಿಯ ಮಾತು ಎದುರು ಮನೆಯ ಮುಕ್ತಾಳತ್ತ ತಿರುಗಿತು. ಮನೆಯ ಹೊಸ ಸೊಸೆ ಸುರೇಖಾಮಾಮಿ ಕೂಡ ಅಲ್ಲೇ ಇದ್ದಳು. ಅಜ್ಜಿ ಸವಿವರವಾಗಿ ಹೇಳುತ್ತಿದ್ದರು. ಅಮ್ಮ ಆ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅಸಹನೆಯಿಂದ ಚಡಪಡಿಸುತ್ತಿರುವುದು ನನಗೆ ಮಲಗಿದಲ್ಲೇ ಗೊತ್ತಾಯಿತು.

‘ಅವರ ಮನೆಯವರಿಗೆ ಅದರಿಂದ ಏನೂ ಆಗುವುದಿಲ್ಲವೇ?’ ಎಂದು ಹೆದರಿಕೆಯನ್ನು ಮೀರಲೆಂಬಂತೆ ಸುರೇಖಾಮಾಮಿ ಕೇಳಿದಳು.
‘ಆಗದೇ ಏನು? ಆಗಿರುವುದು ಸಾಲದೇನು? ಹೇಗಿದ್ದ ಘನಶ್ಯಾಮ ಪಂಡಿತರ ಅಂಗಡಿ ಹೇಗಾಗಿ ಹೋಯಿತು. ನಾನು ಸುಳ್ಳು ಹೇಳುವುದಿಲ್ಲ ಯಾರನ್ನಾದರೂ ಕೇಳಿ ನೋಡು. ಅಂಗಡಿಯ ವ್ಯಾಪಾರ ಹೇಗಿತ್ತು ಅಂದರೆ ಪಕ್ಕದಲ್ಲೇ ಇದ್ದ ಮನೆಗೆ ಊಟಕ್ಕೆ ಹೋಗಲಿಕ್ಕೆ ಅವರಿಗೆ ಪುರಸತ್ತು ಸಿಗುತ್ತಿರಲಿಲ್ಲ. ಮಂಗಳವಾರದ ಸಂತೆಯ ದಿವಸ ಜನ ಸಾಲು ನಿಂತು ಸಾಮಾನು ಕೊಳ್ಳುತ್ತಿದ್ದರು. ಜಗುಲಿಯ ಮೇಲೆ ಈ ಕಡೆಯಿಂದ ಆ ಕಡೆಯವರೆಗೆ ಚೀಲಗಳನ್ನು ಪೇರಿಸಿಡುತ್ತಿದ್ದರು. ಎಲ್ಲವೂ ಮಾಯ ಮಾಡಿದ ಹಾಗೆ ಕರಗಿ ಹೋಯಿತಲ್ಲ. ಈಗ ನೋಡು ಅಂಗಡಿಯ ಗತಿ. ಖಾಲಿಯಾಗಿಹೋಗಿದೆ. ಎಲ್ಲ ನನ್ನ ಕಣ್ಣ ಮುಂದೆಯೇ ಆಯಿತು. ನೋಡನೋಡುತ್ತ ಇಡೀ ಕುಟುಂಬವೇ ಭಿಕಾರಿಯಾಗಿ ಹೋಯಿತು’

ನನ್ನ ಪಕ್ಕ ಮಲಗಿದ್ದ ಅಮ್ಮ ಅಲ್ಲಿಂದಲೇ ಮಾತಾಡಿದಳು. ‘ಸಾಕಮ್ಮ ನಿನ್ನ ಮಾತು. ಅವಳೇನು ಮಾಡಿದ್ದಾಳೆ? ಇದಕ್ಕೆಲ್ಲ ಘನಶ್ಯಾಮ ಪಂಡಿತರ ಪುತ್ರರತ್ನನೇ ಕಾರಣ ಅನ್ನುವುದನ್ನು ಯಾಕೆ ಯಾರೂ ಹೇಳುವುದಿಲ್ಲ?’
‘ಅವನಿಗೆ ಅಂಥ ಬುದ್ಧಿ ಬರಲಿಕ್ಕೂ ಒಂದು ಕಾರಣ ಇರಬೇಕಲ್ಲವೇ? ಇಲ್ಲವಾದರೆ ಎಲ್ಲ ಸರೀ ಇದ್ದ ಹುಡುಗ ಯಾರದೋ ಬಾವಾಜಿಯ ಮಾತು ಕೇಳಿ ಮನೆಯ ಬಂಗಾರವನ್ನೆಲ್ಲ ಅವನಿಗೆ ಮೂಟೆ ಕಟ್ಟಿ ಕೊಡುತ್ತಾನೆಂದರೆ ನಂಬಲಿಕ್ಕೇ ಆಗುವುದಿಲ್ಲ. ವಿನಾಶಕಾಲಕ್ಕೆ ಏನೇನು ಬುದ್ಧಿ ಕೊಡುತ್ತಾನೋ ಆ ದೇವರು…’
‘ಹಾಗೆ ಹೇಳು. ಈ ಎಡಫೊಂಗ ಮಧುಕರನಿಗೆ ದುಡ್ಡಿನ ಆಸೆ ಜಾಸ್ತಿಯಾಯಿತು. ಬಾವಾಜಿ ಬಂಗಾರವನ್ನು ದುಪ್ಪಟ್ಟು ಮಾಡುತ್ತೇನೆ ಅಂದನಂತೆ. ಇವ ಕೊಟ್ಟ. ಯಾರಿಗೂ ಒಂದು ಮಾತು ಕೇಳಲಿಲ್ಲ. ಎಲ್ಲ ಆಗಿ ಹೋದ ಮೇಲೆ ಅತ್ತರೆ ಏನು ಬಂತು…’
‘ಅವನಿಗೆ ಆ ಬುದ್ಧಿ ಬರಲಿಕ್ಕೆ ಕಾರಣ…’
ಅಜ್ಜಿಯ ಮಾತನ್ನು ತುಂಡರಿಸಿ ಅಮ್ಮ ಮಾತಾಡಿದಳು. ‘ಕಾರಣ ನಾನು ಹೇಳುತ್ತೇನೆ. ಪಂಡಿತರು ಅರ್ಧ ಆಸ್ತಿ ಅವರ ತಂಗಿಯ ಹೆಸರಿಗೆ ಮಾಡಿದ್ದೇ ಇವನ ಹೊಟ್ಟೆ ಧಗಧಗಾ ಎಂದು ಉರಿಯಲಿಕ್ಕೆ ಶುರುವಾಯಿತು. ಮದುವೆಯಾಗಿ ಮನೆಯಿಂದ ಹೊರಗೆ ಹೋದವಳ ಹೆಸರಿಗೆ ಅರ್ಧ ಆಸ್ತಿ ಬರೆಯುವುದೆಂದರೆ ಏನು? ಅಪ್ಪನ ಎದುರಿಗೆ ಮಾತು ತೆಗೆಯುವ ಧೈರ್ಯವಿರಲಿಲ್ಲ. ಸಿಟ್ಟಿನಿಂದ ಮಾಡಿದನೋ, ದುರಾಸೆಯಿಂದಲೋ, ತನ್ನ ಗಂಡಸ್ತನ ತೋರಿಸಲಿಕ್ಕೋ ಅಥವಾ ಅದು ಅವನು ಬಂಡೆದ್ದ ರೀತಿಯೋ – ಅಂತೂ ಒಂದೇ ದಿನದಲ್ಲಿ ತಿಜೋರಿ ಖಾಲಿಯಾಯಿತು’
‘ಅದಕ್ಕೂ ಮೊದಲು ಏನಾಯಿತು ಕೇಳು. ಒಂದು ದಿವಸ ಅವಳು ಅಣ್ಣನನ್ನು ಊಟಕ್ಕೆ ಕರೆಯಲು ಅಂಗಡಿಗೇ ಬಂದಳಂತೆ. ಪಂಡಿತರು ಗಲ್ಲೆಯ ಮೇಲೆ ಕೂತು ದುಡ್ಡು ಎಣಿಸಿ ನೋಟಿನ ಕಟ್ಟು ಕಟ್ಟುತ್ತಿದ್ದಾಗ ಅದನ್ನು ಇಷ್ಟು ದೊಡ್ಡ ಕಣ್ಣು ಬಿಟ್ಟು ನೋಡಿದಳಂತೆ. ಅಷ್ಟೇ. ಎಲ್ಲ ತೊಳೆದಿಟ್ಟ ಹಾಗೆ ಸ್ವಚ್ಛವಾಗಿ ಹೋಯಿತು… ಇದಕ್ಕೇನು ಹೇಳುತ್ತೀ…..’
ಅಮ್ಮ ಮತ್ತೆ ಮಾತು ಮುಂದುವರಿಸದೇ ‘ಜನಮರುಳೋ ಜಾತ್ರೆ ಮರುಳೋ’ ಎಂದು ಎಲ್ಲರಿಗೂ ಕೇಳಿಸುವಂತೆ ಗೊಣಗಿ ಎದ್ದು ಹೋದಳು. ಅಜ್ಜಿ ಹೊಸ ಸೊಸೆಯ ಜೊತೆ ತನ್ನ ಮಾತು ಮುಂದುವರಿಸಿದಳು.
‘ಬಂಗಾರ ಹೋದ ಮೇಲೆ ಘನಶ್ಯಾಮ ಪಂಡಿತರ ದೆಸೆಯೇ ಬದಲಾಗಿ ಹೋಯಿತು. ನೋಡನೋಡುತ್ತಿದ್ದ ಹಾಗೆ ಅಂಗಡಿಯ ವ್ಯಾಪಾರ ಇಳಿಯತೊಡಗಿತು. ಅದೇ ಕಾಲಕ್ಕೆ ಪೇಟೆಯಲ್ಲಿ ಶಂಕರ ನಾಯಕರ ಹೊಸ ದುಕಾನು ಶುರುವಾಯಿತು. ಆರೇ ತಿಂಗಳಲ್ಲಿ ಪಂಡಿತರು ತೀರಿಹೋದರು. ಅವರು ಸಾಯುವ ಕಾಲಕ್ಕೆ ತಂಗಿಗೆ ಏನು ಹೇಳಿದರೋ ಏನೋ, ಅಥವಾ ಅವರ ಅವನತಿಗೆ ಅವಳೇ ಕಾರಣವೆಂದು ಜನ ಆಡಿಕೊಂಡುದು ಅವಳ ಕಿವಿಗೂ ಬಿದ್ದಿತ್ತೋ ಏನೋ, ‘ಇನ್ನು ನಾನು ಈ ಮನೆಯಿಂದ ಹೊರಬರುವುದು ಒಂದೇ ಸಲ – ಚಟ್ಟದ ಮೇಲೆ’ ಎಂದು ಶಪಥ ಮಾಡಿದಳು. ಅದರ ನಂತರ ಇಷ್ಟು ವರ್ಷಗಳಾದವು – ಒಂದು ಸಲವೂ ಅವಳು ಹೊರಗೆ ಬಂದಿಲ್ಲ.’
‘ಅದಕ್ಕೂ ಮೊದಲು ಹೊರಗೆಲ್ಲ ಓಡಾಡಿಕೊಂಡು ಇರುತ್ತಿದ್ದಳೇ?’ ಭಯಭೀತ ದನಿಯಲ್ಲಿ ಸುರೇಖಾಮಾಮಿ ಕೇಳಿದಳು.

‘ಹೌದೌದು. ಎಲ್ಲಾ ಕಡೆಗೂ ಹೋಗುತ್ತಿದ್ದಳು. ತನ್ನ ಮೇಲೆ ಬಂದ ಅಪವಾದಗಳೆಲ್ಲ ಸುಳ್ಳು ಅನ್ನುತ್ತಿದ್ದಳು. ಅದನ್ನು ಸಾಧಿಸಿ ತೋರಿಸಲೆಂದೇ ಹೊರಗೆ ಓಡಿಯಾಡುವ ಹಾಗೆ ಅನಿಸುತ್ತಿತ್ತು. ಆದರೆ ಒಂದು ಸಲ ಸಂಶಯದ ಕೀಟ ಮನಸ್ಸನ್ನು ಹೊಕ್ಕಿತೆಂದರೆ ದೇವರಿಗೂ ಅದನ್ನು ಹೊಡೆದೋಡಿಸಲು ಸಾಧ್ಯವಿಲ್ಲ. ಅವಳನ್ನು ಕಂಡರೆ ಏನೋ ಹೆದರಿಕೆ. ಏನು ಅನ್ನುತ್ತಾಳೋ, ಯಾವುದಕ್ಕೆ ಅವಳ ಕಣ್ಣು ಬೀಳುತ್ತದೋ ಎಂದು ಭಯವಾಗುತ್ತಿತ್ತು. ಎಷ್ಟರವರೆಗೆ ಹೋಯಿತೆಂದರೆ ಅವಳ ಕಿವಿಗೆ ಬಿದ್ದೀತು ಎಂದು ಹೆದರಿ ಈ ಕೇರಿಯ ಜನ ತಮ್ಮ ಬಗ್ಗೆ ಒಳ್ಳೆಯದನ್ನು ಹೇಳಿಕೊಳ್ಳುವುದನ್ನು ಕೂಡ ಬಿಟ್ಟುಬಿಟ್ಟರಲ್ಲ. ಸರೀ ಇದ್ದ ಗಂಡ ಹೆಂಡತಿ ಅವಳ ಕಣ್ಣಿಗೆ ಬಿದ್ದ ನಾಲ್ಕು ದಿವಸಗಳಲ್ಲಿ ಬೇರೆಯಾಗಿ ಹೋಗುವುದೆಂದರೆ ಏನು ಹೇಳಬೇಕು? ಬೇರೆ ಯಾರೂ ಅಲ್ಲ – ರಂಗಪ್ಪನ ಮಗ ಮೋಹನ, ಹೊಸ ಹೆಂಡತಿಯ ಜೊತೆ ದೇವಸ್ಥಾನಕ್ಕೆಂದು ಬಂದವ ಮುಕ್ತಾಮಾಯೀ ಅಂತ ಮಾತಾಡಿಸಿಕೊಂಡು ಹೋದ. ಯಾರನ್ನೂ ಸರಿಯಾಗಿ ತಲೆ ಎತ್ತಿ ನೋಡದ ಹುಡುಗ. ನಾಲ್ಕು ದಿನವೂ ಸಂಸಾರ ಮಾಡಲಿಲ್ಲ. ಯಾರೋ ಮೇಲಿನ ಕೇರಿಯವಳ ಹಿಂದೆ ಬಿದ್ದು ಬೊಂಬಾಯಿಗೆ ಓಡಿಹೋಗಿಬಿಡಬೇಕೇ? ಇದಾದ ಮೇಲೆ ಕೆಲವರಂತೂ ಬಾಯಿಬಿಟ್ಟೇ ಅವಳಿಗೆ ಹೇಳತೊಡಗಿದರು – ನೀನು ಇನ್ನು ಇಲ್ಲಿ ಕಾಲಿಡಬೇಡ ಅಂದರು. ಮೊದಲು ಯಾರ ಮಾತನ್ನೂ ಕೇಳದವಳು ಘನಶ್ಯಾಮ ಪಂಡಿತರು ತೀರಿಹೋದ ನಂತರ ಮಾತ್ರ ಬದಲಾದಳು. ಅದಕ್ಕೆ ಕಾರಣ ಅವರವರಿಗೆ ತಿಳಿದಂತೆ ಊಹಿಸಿಕೊಂಡದ್ದೇ ಹೊರತು ಯಾರಿಗೂ ಒಳಗಿನ ನಿಜ ಗೊತ್ತಿಲ್ಲ.’
‘ಅದಾದ ನಂತರ ಅವಳು ಹೊರಗೇ ಬರಲಿಲ್ಲವೇ?’
‘ಇಲ್ಲ. ಮಧುಕರನ ಮದುವೆಗೂ ಬರಲಿಲ್ಲ. ಅವನಿಗೆ ಹೆಣ್ಣು ಹುಡುಕುವುದು ಎಷ್ಟು ಕಷ್ಟವಾಯಿತು ಗೊತ್ತೇನು? ಆಮೇಲೆ ಹಳದೀಪುರದಿಂದ ವಯಸ್ಸು ಮೀರಿದ ಬಡವರ ಮನೆಯ ಹೆಣ್ಣು ತಂದದ್ದಾಯಿತು. ಅವಳು ಇವನಿಗಿಂತಲೂ ಎವಡಾಸ ಹುಡುಗಿ. ಕಾಳಿಕಾದೇವಿಗೆ ಗಂಡಿಲ್ಲ, ಭೇತಾಳನಿಗೆ ಹೆಂಡತಿಯಿಲ್ಲ ಅನ್ನುವ ಮಾತು ಇದೆಯಲ್ಲ – ಇವರಿಗೆ ಸರೀ ಹೊಂದುತ್ತದೆ. ಏನು ಜೋಡಿ – ಆಹಾ ಪರಮಾತ್ಮನೇ ತನ್ನ ಸ್ವಂತ ಕೈಯಿಂದ ಮಾಡಿದ್ದಾನೆ ……’
‘ನಮ್ಮ ಮನೆಯ ಜಗುಲಿಯಲ್ಲಿ ನಿಂತರೆ ಅವಳಿಗೆ ಕಾಣಿಸುತ್ತದೇನು?’
‘ಹಾಗೆಲ್ಲ ಹೆದರಬೇಕಾಗಿಲ್ಲ. ಹಾಗೆ ಏನೂ ಆಗುವುದಿಲ್ಲ. ಅಲ್ಲಿ ಕೊನೆಯ ಕಿಟಕಿಯಿಂದ ಅವಳು ಹೊರಗೆ ನೋಡುತ್ತಾಳೆ ಅಂತ ಜನ ಅನ್ನುತ್ತಾರಪ್ಪ. ನಾನಂತೂ ನೋಡಿಲ್ಲ. ಆ ಕಿಟಕಿಯಲ್ಲಿ ಕತ್ತಲು ಬಿಟ್ಟರೆ ಬೇರೇನೂ ಕಾಣುವುದಿಲ್ಲ. ಅವಳ ದೆಸೆಯಿಂದಾಗಿಯೇ ಈ ಮುಂದಿನ ಜಾಗ ಯಾರೂ ಮುಟ್ಟದ ಹಾಗಾಗಿದೆ.’
ಅಷ್ಟರಲ್ಲಿ ನನ್ನ ಅಮ್ಮ ತಿರುಗಿ ಬಂದಿದ್ದರಿಂದ ಮಾತು ಅಲ್ಲಿಗೆ ನಿಂತಿತು. ಅಜ್ಜಿ ಹೇಳಿದ್ದ ಕಿಟಕಿಯನ್ನು ನಾನು ನೋಡಿದ್ದೆ. ಅದರ ಬಾಗಿಲು ಇಷ್ಟೇ ಇಷ್ಟು ತೆರೆದಿರುತ್ತಿತ್ತು. ಎಷ್ಟು ಪ್ರಯತ್ನಿಸಿದರೂ ಒಳಗೆ ಬರೀ ಕತ್ತಲು ಮಾತ್ರವೇ ಕಾಣುವುದು.

ಮಧ್ಯಾಹ್ನ ಹೆಂಗಸರಾರೂ ಮಲಗಲಿಲ್ಲ. ಏನೇನೋ ಬೇರೆ ಸುದ್ದಿ ಮಾತಾಡಿದರು. ಸ್ವಲ್ಪ ಹೊತ್ತಿನ ನಂತರ ಅಜ್ಜಿ ‘ಈವತ್ತು ಲಡ್ಡು ಪೊಟ್ಟಣಗಳನ್ನು ಹಂಚಿ ಆ ಒಂದು ಆ ಕೆಲಸ ಮುಗಿಸಬಹುದಿತ್ತು’ ಅಂದಳು. ಮದುವೆಯಂಥ ಶುಭಕಾರ್ಯದ ನಂತರ, ಬೀದಿಯ ಮನೆಗಳಿಗೆ, ಆ ಕಾರ್ಯಕ್ಕೆ ಬರಲಾಗದೇ ಹೋದವರಿಗೆ ಲಡ್ಡು ಹಂಚುವುದು ನಮ್ಮಲ್ಲಿ ಪದ್ಧತಿ. ಅವಳ ಮಾತನ್ನು ಅನುಮೋದಿಸಿದ ಎಲ್ಲರೂ ಒಬ್ಬೊಬ್ಬರಾಗಿ ಎದ್ದರು.

ಎದ್ದು ಚಾ ಕುಡಿದು ಮುಗಿಸಿದ ಹೆಂಗಸರೆಲ್ಲ ಐದೈದು ಲಡ್ಡುಗಳಿರುವ ಪೊಟ್ಟಣಗಳನ್ನು ಕಟ್ಟಿದರು. ಅವುಗಳನ್ನು ಮನೆಗಳಿಗೆ ತಲುಪಿಸುವ ಜವಾಬ್ದಾರಿ ಮಕ್ಕಳ ಪಾಲಿಗೆ ಬಂದಿದ್ದರಿಂದ ಮಕ್ಕಳ ಮೇಳದಲ್ಲಿ ಒಮ್ಮೆಲೇ ಉತ್ಸಾಹ, ಬೊಬ್ಬೆ ಶುರುವಾಯಿತು. ಒಂದೊಂದೇ ಪೊಟ್ಟಣ ಹಿಡಿದು ಅಜ್ಜಿ ಅದನ್ನು ಯಾರ ಮನೆಗೆ ಕೊಡಬೇಕೆಂದು ಹೇಳುವರು. ಎಲ್ಲಿ ಎಂದು ಗೊತ್ತಾಗಿದ್ದೇ ಹುಡುಗರಿಗೆ ಅಲ್ಲಿ ಹೋಗುವ ತನಕ ಪುರಸತ್ತಿಲ್ಲ. ದೂರದೂರದ ಮನೆಗಳು ದೊಡ್ಡ ಹುಡುಗರಿಗೆ ಮಾತ್ರ ಮೀಸಲು.

ಹಾಗೆ ನನ್ನ ಕೈಗೆ ಬಂದ ಪೊಟ್ಟಣ ಎದುರು ಮನೆಯದು ಎಂದು ತಿಳಿದಾಗ ನನಗೆ ಬಹಳ ನಿರಾಸೆಯಾಯಿತು. ಅಷ್ಟು ಹತ್ತಿರ ಹೋಗುವುದರಲ್ಲಿ ಏನೂ ಮಜವಿರಲಿಲ್ಲ. ನಾನು ಅಜ್ಜಿಯ ಮುಂದೆ ನಿಂತು ಕುಂಯ್‌ಗುಡತೊಡಗಿದೆ. ‘ಈಗ ಕೊಟ್ಟು ಬಾ. ನಡುವೆ ಗಡಿಬಿಡಿ ಮಾಡಿದರೆ ಯಾರ ಮನೆಗೆ ಕೊಟ್ಟೆ ಅನ್ನುವ ಲೆಕ್ಕ ನನಗೆ ತಪ್ಪಿಹೋಗುತ್ತದೆ. ಅಲ್ಲೇ ಮುಂದುಗಡೆ ಮಧುಕರ ಇರುತ್ತಾನೆ ನೋಡು. ಸಟಕ್ಕನೆ ಕೊಟ್ಟು ಬಾ. ಆಮೇಲೆ ಬಾರಕೂರರ ಮನೆಗೆ ನಿನ್ನನ್ನೇ ಕಳಿಸುತ್ತೇನೆ’ ಅಂದರು.
ನಾನು ಹೋದಾಗ ಮಧುಕರ ಅಂಗಡಿಯಲ್ಲಿ ಇರಲಿಲ್ಲ. ಅಲ್ಲೇ ಎರಡು ನಿಮಿಷ ನಿಂತರೂ ಅವನು ಬರುವ ಸೂಚನೆ ಕಾಣಲಿಲ್ಲ. ಬಾರಕೂರರ ಮನೆಯ ಪೊಟ್ಟಣ ತಯಾರಾಗಿಬಿಡಬಹುದೆಂದು ಅವಸರವಾಯಿತು. ಅಂಗಡಿಯಲ್ಲಿ ಇರದಿದ್ದರೆ ಮನೆಯಲ್ಲಿರುತ್ತಾನೆ ಎಂದು ಭಾವಿಸಿ ಅಲ್ಲಿಯೇ ಕೊಟ್ಟು ಬರೋಣವೆಂದು ಮನೆಗೆ ಹೋದೆ. ನಡುವಿನ ತೆಣೆಯನ್ನು ದಾಟಿ ಮನೆಯ ಬಾಗಿಲ ಎದುರು ನಿಂತಾಗ ಒಳಗೆ ಯಾರೂ ಇದ್ದ ಹಾಗೆ ಕಾಣಲಿಲ್ಲ. ಚಿಲಕ ಬಡಿದೆ. ಉತ್ತರವಿಲ್ಲ. ಒಳಗೆ ಹೆಜ್ಜೆ ಹಾಕಿದೆ. ಒಂದು ದೊಡ್ಡ ಹಜಾರ. ಅಲ್ಲಿ ನಸುಗತ್ತಲು. ಒಂದು ಪಕ್ಕ ಮಾಳಿಗೆಗೆ ಹೋಗಲು ಇರುವ ಕಟ್ಟಿಗೆಯ ಕಡಿದಾದ ಮೆಟ್ಟಿಲುಗಳು. ಮೆಟ್ಟಿಲು ಹತ್ತುವಾಗ ಆಧಾರಕ್ಕೆ ಹಿಡಿಯಲು ಅನುಕೂಲವಾಗುವಂತೆ ಒಂದು ಹಗ್ಗ ಮೇಲಿನ ತೊಲೆಯಿಂದ ಜೋತು ಬಿದ್ದಿತ್ತು. ಯಾರೂ ಕಣ್ಣಿಗೆ ಬೀಳದ ಆ ಮನೆಯಲ್ಲಿ ಯಾರೋ ಇಲ್ಲೇ ಸುಳಿಯುತ್ತಿದ್ದಾರೆ ಎಂದು ಭಾಸವಾಗುವಂತೆ ಆ ಹಗ್ಗ ಮೆಲ್ಲನೆ ತೂಗುತ್ತಿತ್ತು. ಎದ್ದು ತೋರುತ್ತಿದ್ದುದು ಮನೆಯ ಖಾಲೀತನ. ಗೋಡೆಗಳನ್ನು ಬಿಟ್ಟರೆ ಬೇರೆ ಏನೂ ವಸ್ತುಗಳು ಇಲ್ಲವೇ ಇಲ್ಲ ಅನಿಸುವಷ್ಟು ಆ ಮನೆ ಖಾಲಿಯಾಗಿತ್ತು. ಮತ್ತೂ ಒಳಗೆ ಹೋದರೆ ಅಲ್ಲಿ ಒಂದು ಕಡೆ ಹಗೇವಿಗೆ ಇರುವಂಥ ಕಬ್ಬಿಣದ ಬಾಗಿಲು. ಅದನ್ನು ಮುಚ್ಚಿ ಬೀಗ ಹಾಕಿದ್ದರು. ಇನ್ನೂ ಕೋಣೆಗಳನ್ನು ದಾಟಿ ಮುಂದೆ ಹೋದಂತೆ, ಕೊನೆಯಲ್ಲಿ ಒಂದು ಬಾಗಿಲು ಮತ್ತು ಅದರಾಚೆ ಬೆಳಕಾಗಿದ್ದ ಜಾಗ ಕಾಣಿಸಿತು. ಒಲೆಗಳ ಸಾಲು ಕಂಡಿದ್ದರಿಂದ ಆಚೆ ಕಾಣುವುದು ಅಡಿಗೆ ಮನೆ ಎಂದು ಗೊತ್ತಾಯಿತು.
ಅಷ್ಟರಲ್ಲಿ ಎಡಪಕ್ಕದ ಕೋಣೆಯಿಂದ ‘ಯಾರೋ ಅದು? ಹಾಂ… ಬಾ ಇಲ್ಲಿ.. ಬಾ’ ಎಂಬ ದನಿ ಕೇಳಿಸಿ ಬೆಚ್ಚಿಬಿದ್ದೆ.
ಮತ್ತೆ ಆ ದನಿ ‘ಯಾರೋ ಅದು? ಏನು ಬೇಕೋ?’ ಅಂದಿತು. ಒಳಗೆ ಎಷ್ಟು ಕಣ್ಣು ಹಿಗ್ಗಿಸಿ ನೋಡಿದರೂ ಏನೂ ಕಾಣದಷ್ಟು ಕತ್ತಲೆ ಇತ್ತು. ಮೇಲಾಗಿ ನಾನು ಹೊರಗಿನ ಬೆಳಕಿನಿಂದ ಆಗ ತಾನೇ ಒಳ ಬಂದಿದ್ದೆ. ತಡವರಿಸುತ್ತ ಬಂದ ಉದ್ದೇಶ ಹೇಳಿದೆ.
‘ಹಾಂ… ಮತ್ತೆ ಯಾಕೆ ಕಳ್ಳತನ ಮಾಡಲಿಕ್ಕೆ ಬಂದವನ ಹಾಗೆ ಹೆದರುತ್ತಿ? ನೀನು ಅಂತಣ್ಣನ ಮೊಮ್ಮಗನೇನೋ?’
‘ಹೌದು’
‘ಯಾರ ಮಗನೋ?’
ನನ್ನ ಅಮ್ಮನ ಹೆಸರು ಹೇಳಿದೆ.
‘ಯಾಕೆ ಹೀಗೆ ಹೆದರುತ್ತಿ? ಬಾ ಇಲ್ಲಿ, ಬಾ ಒಳಗೆ.’ ಆ ದನಿ ಪುಸಲಾಯಿಸಿದಂತೆ ಕೇಳಿಸಿತು. ನಾನು ನಿಂತಲ್ಲಿಯೇ ನಿಂತು ಆ ಕೋಣೆಯ ಕತ್ತಲೆಯತ್ತ ಕೈ ಚಾಚಿ, ಕೈಯಲ್ಲಿದ್ದ ಲಾಡುವಿನ ಪೊಟ್ಟಣ ಮುಂದೆ ಮಾಡಿದೆ.
‘ಏ ಹೆದರ್ಪುಕ್ಕ… ಬಾರೋ ಇಲ್ಲಿ’ ಎಂದು ಬಂದ ದನಿಯಲ್ಲಿ ಈಗ ಆಜ್ಞೆಯ ಗಡಸುತನವಿತ್ತು. ಮತ್ತು ಏನಾಗುತ್ತಿದೆಯೆಂದು ತಿಳಿಯುವ ಮೊದಲೇ ಒಳಗಿನಿಂದ ಚಾಚಿ ಬಂದ ಕೈಯೊಂದು ಗಬಕ್ಕನೆ ನನ್ನ ಮುಂಗೈ ಹಿಡಿದು ಒಳಕ್ಕೆ ಸೆಳೆದುಕೊಂಡಿತು.
‘ನನಗೆ ಬೆಳಕು ಕಂಡರೆ ಆಗುವುದಿಲ್ಲ. ಕಣ್ಣು ನೋಯುತ್ತದೆ. ಅದಕ್ಕೇ ನಿನಗೆ ಒಳಗೆ ಬಾ ಅಂದೆ. ಹೆದರಬೇಡ. ಎರಡು ಗಳಿಗೆ ಆಗಲಿ. ಆಮೇಲೆ ಕಿಟಕಿ ಬಾಗಿಲು ಸ್ವಲ್ಪ ತೆರೆಯುತ್ತೇನೆ. ಇಡೀ ದಿನ ಈ ಕತ್ತಲ ಕೋಣೆಯಲ್ಲಿ ಇರುತ್ತೀನಲ್ಲ ಅದಕ್ಕೆ’ ಎಂದು ಹೇಳುತ್ತ ನನ್ನ ಕೈಬಿಡದೇ ಕೋಣೆಯ ಒಳಗೆ ಕರೆದೊಯ್ದಳು. ಹಾಗೆ ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ ನನ್ನ ಮೊಣಕಾಲಿಗೆ ಮೆತ್ತಗೆ ತಗುಲಿ ತಡೆದಿದ್ದು ಮಂಚದ ಮೇಲಿನ ಹಾಸಿಗೆಯ ಅಂಚು ಎಂದು ತಿಳಿಯಿತು. ಅವಳು ಮಂಚದ ಮೇಲೆ ಕೂತಿದ್ದು ಕೂಡ ಕಾಣದೆಯೇ ನನಗೆ ಗೊತ್ತಾಯಿತು.
‘ಕೂತುಕೋ’ ಅಂದಳು.
‘ನಾನು ಹೋಗುತ್ತೇನೆ’ ಅಂದೆ.
‘ಕೂತಕೊಳ್ಳೋ. ಜಾಣ ಹುಡುಗ. ಕೂತುಕೋ. ನಿನ್ನ ಅಮ್ಮನನ್ನು ನಾನು ಆಡಿಸಿದ್ದೇನೋ. ಅವಳ ಕುಂಡೆ ಕೂಡ ತೊಳೆದಿದ್ದೇನೆ. ಈಗ ನಿನ್ನನ್ನು ಕೂತುಕೋ ಅಂತ ಪುಸಲಾಯಿಸಬೇಕಾಯ್ತಲ್ಲ. ಯಾರು ಕಳಿಸಿದರು ಲಡ್ಡು?’
‘ಅಜ್ಜಿ’
‘ನೀನೂ ಹೋಗಿದ್ದೆಯೇನೋ ಮದುವೆಗೆ?’
‘ಹೂಂ’
‘ಮದುವೆ ಹುಡುಗಿಯ ಮನೆಯಲ್ಲಿಯೇ ಆಯಿತಾ, ದೇವಸ್ಥಾನದಲ್ಲಿ ಮಾಡಿಕೊಟ್ಟರೋ?’
‘ಮನೆಯಲ್ಲೇ. ಅವರದು ದೊಡ್ಡ ಮನೆ. ಚಪ್ಪರ ಹಾಕಿದ್ದರು.’
‘ನಿನ್ನ ಹೊಸ ಮಾಮಿ ಚೆನ್ನಾಗಿದ್ದಾಳೇನೋ? ಏನು ಹೆಸರು?’
‘ಹೂಂ ಚೆನ್ನಾಗಿದ್ದಾಳೆ. ಸುರೇಖಾಮಾಮಿ ಅಂತ’
‘ಸುಧೀರ ಸುರೇಖಾ – ಸು ಮತ್ತು ಸು…… ಒಳ್ಳೆಯ ಜೋಡಿಯಾಯಿತು ಬಿಡು. ಹುಡುಗಿ ಎತ್ತರ ಇದ್ದಾಳೇನು? ಏನು ಬಂಗಾರ ಹಾಕಿದ್ದರು?’
‘ಸುಧೀರ ಮಾಮನಿಗಿಂತ ಗಿಡ್ಡ. ಬಳೆ ಹಾಕಿದ್ದರು’
‘ಅವನಿಗಿಂತ ಎತ್ತರ ಇರುವ ಹುಡುಗಿ ತರುತ್ತಾರೇನೋ? ನೀನೂ ಒಳ್ಳೇ ಹುಡುಗ. ಬಳೆ ಹಾಕಿಯೇ ಹಾಕಿರುತ್ತಾರೆ. ಬೇರೆ ಏನು ಇತ್ತು? ತೋಳಿಗೆ ಏನಾದರೂ ಇತ್ತಾ?’
ಈಗ ಅವಳ ಪ್ರಶ್ನೆಗೆ ಉತ್ತರಿಸಲು ಮದುಮಗಳಿಗೆ ಏನೇನು ಹಾಕಿದ್ದರು ಎಂದು ನೆನೆಸಿಕೊಳ್ಳಲು ಪ್ರಯತ್ನಿಸಿದೆ. ತೋಳಿಗೆ ಏನೂ ಇದ್ದ ಹಾಗಿರಲಿಲ್ಲ. ಮತ್ತೆ ಅವಳ ಸೊಂಟಕ್ಕೆ ಏನಾದರೂ ಇತ್ತೋ? ಅಲ್ಲ, ಅದು ಬಹುಶಃ ದೊಡ್ಡ ಮಾಮಿಗೆ ಇದ್ದಿದ್ದು. ನನಗೆ ಏನೂ ಗೊತ್ತಾಗದೇ, ಕಂಡದ್ದಕ್ಕೂ ಕಲ್ಪಿಸಿಕೊಂಡಿದ್ದಕ್ಕೂ ವ್ಯತ್ಯಾಸ ಮಾಡದೇ, ತೋಚಿದಂತೆ ಉತ್ತರಿಸತೊಡಗಿದೆ.
‘ಅವಳ ಸೊಂಟಕ್ಕೆ ಇತ್ತು.’
‘ಹೌದೇನೋ? ಮತ್ತೆ ಕತ್ತಿನಲ್ಲಿ ಎಷ್ಟು ಸರ ಇತ್ತು?’
‘ಒಂದು’
‘ನೀವು ಹುಡುಗರು ಏನೂ ನೋಡುವುದೇ ಇಲ್ಲ. ನಾನು ನಿನ್ನ ವಯಸ್ಸಿನಲ್ಲಿ ಮದುವೆಗೆ ಹೋದರೆ ಮನೆಗೆ ಬಂದು ಅಜ್ಜಿಗೆ ಪೂರಾ ವರದಿ ಒಪ್ಪಿಸುತ್ತಿದ್ದೆ. ಒಂದು ಚೂರೂ ತಪ್ಪುತ್ತಿರಲಿಲ್ಲ.’
‘ನಾನು ಹೋಗುತ್ತೇನೆ’
‘ಇರೋ ಇರೋ. ಕಿಟಕಿ ತೆಗೆಯುತ್ತೇನೆ. ಹೊರಗಡೆ ಕುದುರೆ ಕಟ್ಟಿಹಾಕಿ ಬಂದವನ ಹಾಗೆ ಆಡುತ್ತಿದ್ದೀಯಲ್ಲ’
ಅವಳು ಎದ್ದು ನನ್ನ ಕೈಬಿಟ್ಟು ಕಿಟಕಿ ಬಾಗಿಲನ್ನು ತುಸು ಜರುಗಿಸಿದಳು. ಆ ಸಂದಿಯಿಂದ ಇಷ್ಟೇ ಇಷ್ಟೇ ಬೆಳಕು ಬಂತು.
‘ವರಪೂಜೆಗೆ ಯಾರು ಕೂತಿದ್ದರು ಹುಡುಗನ ಜೊತೆ?’
‘ಚಂದ್ರು. ಸೀಮಂತಿನಿ ಮೌಶಿಯ ಮಗ.’
‘ನೀನು ಯಾಕೆ ಕೂರಲಿಲ್ಲ? ದೊಡ್ಡವನಾಗಿಬಿಟ್ಟೆಯೋ? ಊಟಕ್ಕೆ ಏನು ಮಾಡಿಸಿದ್ದರೋ?’
‘ತೊವ್ವೆ ಅನ್ನ’
‘ನಿನ್ನನ್ನು ಕೇಳುತ್ತಿದ್ದೇನಲ್ಲ. ಸಿಹಿ ಏನು ಇತ್ತು? ಎಷ್ಟು ರೀತಿಯ ಸಿಹಿ ಇತ್ತು?’
‘ಜಿಲೇಬಿ, ಪಾಯಸ, ಲಡ್ಡು. ಮತ್ತು ಹಪ್ಪಳದ ಮೇಲೆ ಮಾಮ ಮಾಮಿಯ ಹೆಸರು ಬರೆದಿದ್ದರು’
ಕರಿದ ಹಪ್ಪಳಗಳ ಮೇಲೆ ಅವರಿಬ್ಬರ ಹೆಸರು ಬರೆದಿದ್ದು ನಮಗೆಲ್ಲ ಅತೀವ ಕೌತುಕದ ಸಂಗತಿಯಾಗಿತ್ತು. ಅದೂ ಅರಿಶಿಣ ಬಣ್ಣದಲ್ಲಿ ಬರೆದದ್ದು ಹಪ್ಪಳದ ಒಳಗಿನಿಂದಲೇ ಎದ್ದು ಬಂದಂತೆ ತೋರುತ್ತಿತ್ತು. ಇದನ್ನು ಹೇಳುವ ಅವಕಾಶದಿಂದ ನನ್ನ ಮಾತಿಗೆ ಹೊಸ ಉತ್ಸಾಹ ಬಂತು. ಅವಳು ಇಂಥದ್ದನ್ನು ಕೇಳಿಯೇ ಇರಲಿಲ್ಲ. ಇದನ್ನು ನಾನೇ ಮೊಟ್ಟಮೊದಲ ಬಾರಿ ಅವಳಿಗೆ ಹೇಳುತ್ತಿದ್ದೇನೆಂಬ ಅರಿವು ನನ್ನ ಮಾತಿಗೆ ಆತ್ಮವಿಶ್ವಾಸದ ಸರಾಗತೆಯನ್ನು ಕೊಟ್ಟಿತು.

‘ಚೆನ್ನಾಗಿ ಒಳ್ಳೇ ಭರಾಟೆಯಲ್ಲಿಯೇ ಲಗ್ನವಾಗಿದೆ ಹಾಗಾದರೆ. ಎಷ್ಟು ಜನ ಬಂದಿದ್ದರು?’
‘ಜನವೋ ಜನ. ಮೂರು ಗಂಟೆಯವರೆಗೂ ಊಟ ನಡೆಯಿತು’
‘ದಿಬ್ಬಣ ಎಲ್ಲಿ ಇಳಿಸಿದ್ದರು? ಬೆಳಗಾಂವದಲ್ಲಿ ಈಗ ಚಳಿ ಇರಬೇಕಲ್ಲ?’

ಮದುವೆಯ ಹಿಂದಿನ ರಾತ್ರಿ ಒಂದು ದೊಡ್ಡ ಮನೆಯಲ್ಲಿ ದಿಬ್ಬಣ ಇಳಿಸಿದ್ದು, ಆ ರಾತ್ರಿ ಉಂಡ ಬಿಸಿಬಿಸಿ ಊಟ ನೆನಪಾಯಿತು. ವಿವರವಾಗಿ ಹೇಳಿದಷ್ಟೂ ಅವಳಿಗೆ ಖುಷಿ ಅನ್ನುವುದು ನನಗೆ ಗೊತ್ತಾಗಿತ್ತು. ‘ಅರೆವ್ಹಾ ಮುಂದೆ ಹೇಳು’ ಎಂಬ ಪ್ರೋತ್ಸಾಹದ ಮಾತು ಕಿವಿಗೆ ಬಿದ್ದಂತೆಲ್ಲ, ವಿವರಕ್ಕೆ ವಿವರ ಸೇರಿ ಆ ರಾತ್ರಿಯೇ ನನ್ನ ಕಣ್ಣೆದುರು ಬಂದಂತಾಯಿತು. ದಿಬ್ಬಣ ಇಳಿಸಿದ ಆ ಮನೆಯ ಮಹಡಿಯ ಮೇಲೆ ಸಾಲಾಗಿ ಹಾಸಿಗೆಗಳನ್ನು ಹಾಸಿದ್ದರು. ದೇವಸ್ಥಾನದ ಪ್ರಾಂಗಣದಷ್ಟು ದೊಡ್ಡದಾಗಿದ್ದ ಆ ಕೋಣೆಗೆ ಹಲವಾರು ಬಾಗಿಲುಗಳಿದ್ದವು. ಪ್ರಯಾಣದ ಆಯಾಸದಿಂದ ಎಲ್ಲ ಅಮ್ಮಂದಿರಿಗೂ ತುಸು ತಾಳ್ಮೆ ಕಡಿಮೆಯಾಗಿತ್ತು. ಒಂದೆರಡು ಮಕ್ಕಳು ಸಣ್ಣ ತಪ್ಪಿಗೂ ಪೆಟ್ಟು ತಿಂದವು. ದಿಬ್ಬಣ ಹೋಗಿ ತಲುಪಲು ತಡವಾದ್ದರಿಂದ ವರಪೂಜೆಗೆ ಅವಸರವಾಗಿ ಕೆಲವು ಹೆಂಗಸರಿಗೆ ಅಸಮಾಧಾನವಾಗಿತ್ತು. ಅಂತೂ ಈ ಎಲ್ಲ ಮುಗಿದು, ಆ ಕೋಣೆಯಲ್ಲಿ ಹೆಂಗಸರು ಮಕ್ಕಳು ಒಂದು ಕಡೆಗೆ, ಗಂಡಸರು ಇನ್ನೊಂದು ಕಡೆಗೆ ಮಲಗುವ ವೇಳೆಗೆ ರಾತ್ರಿ ಏರಿತ್ತು. ಕೊನೆಯದಾಗಿ ನಾಗೇಶಮಾಮಾ ‘ಆರಿಸುತ್ತೇನೆ ಆರಿಸುತ್ತೇನೆ’ ಎಂದು ಹತ್ತು ಸಲ ಎಚ್ಚರಿಕೆ ಕೊಟ್ಟು ಕೊನೆಯ ದೀಪವನ್ನೂ ಆರಿಸಿದ್ದಾಯಿತು. ಇನ್ನೇನು ನಿದ್ದೆ ಹತ್ತಬೇಕು ಅನ್ನುವಾಗ ‘ರಮಾರಮಣಾ ಮಧುಸೂಧನಾ ಮನಮೋಹನಾ ಆ ಆ’ ಎಂದು ರಾಗವಾಗಿ ಪಿಯಾನೋ ಪೇಟಿಯ ಹಿಮ್ಮೇಳದೊಂದಿಗೆ ಮರಾಠಿ ಹಾಡೊಂದು ಕೇಳಿಬಂತು. ಇನ್ನೂ ನಿದ್ದೆ ಹತ್ತದ ಮಕ್ಕಳು ಹಾಸಿಗೆಯಲ್ಲೇ ಚುರುಕಾಗಿದ್ದು ಗೊತ್ತಾಗಿ ತಾಯಂದಿರು ಶ್ ಶ್ ಎಂದು ಅವರ ಉತ್ಸಾಹ ಅಡಗಿಸಲು ನೋಡಿದರು. ಒಬ್ಬ ಹುಡುಗ ಎದ್ದು ಕಿಟಕಿಯಲ್ಲಿ ಬಗ್ಗಿ ನೋಡಿದ್ದೇ ಇನ್ನೂ ಹಲವರು ಎದ್ದು ಇಣುಕಿ ನೋಡತೊಡಗಿದರು. ಕೆಳಗೆ, ಮನೆಯ ಹಿಂಭಾಗದಲ್ಲಿ ಮರುದಿನದ ಮದುವೆಯೂಟಕ್ಕೆ ತರಕಾರಿ ಹೆಚ್ಚುವುದು ಶುರುವಾಗಿತ್ತು. ಸುಮಾರು ಏಳೆಂಟು ಜನ ಈಳಿಗೆ ಮಣೆಯೆದುರು ಕೂತು ಕಚಕಚನೇ ಹೆಚ್ಚಿ ಹೆಚ್ಚಿ ಹಾಕುತ್ತಿದ್ದರು. ಇಬ್ಬರು ಗರಗರಾ ಎಂದು ತೆಂಗಿನ ಕಾಯಿ ತುರಿಯುತ್ತಿದ್ದರು. ನಡುರಾತ್ರಿಯಲ್ಲಿ ಕೆಲಸ ಮಾಡುತ್ತಿರುವವರ ಮನರಂಜನೆಗೆಂದು ಮದುಮಗಳ ಅಪ್ಪ ಎದುರಿಗೆ ಪಿಯಾನೋ ಇಟ್ಟುಕೊಂಡು ಬಾರಿಸುತ್ತ, ದೊಡ್ಡ ದನಿಯಲ್ಲಿ ಕಚೇರಿ ಶುರುಮಾಡಿದ್ದರು.

ಮೊದಲ ಹಾಡು ಮುಗಿದು ನಿಮಿಷದ ಮೌನದ ತರುವಾಯ ‘ಘೆಯಿಚಂದ ಮಕರಂದ ಪ್ರಿಯ ಹಾ ಮಿಲಿಂದ’ ಎಂದು ಮತ್ತೊಂದು ನಾಟ್ಯಸಂಗೀತ ಶುರುವಾಯಿತು. ಮಕ್ಕಳೆಲ್ಲ ಕಿಟಕಿಯ ಹತ್ತಿರ ನೆರೆದು ಕೆಳಗೆ ನೋಡತೊಡಗಿದರು. ಜಗಳಗಂಟನೆಂದು ಖ್ಯಾತನಾದ ನನ್ನ ಅಜ್ಜನ ತಮ್ಮ ‘ಥೊತ್.. ರಾತ್ರಿಯಿಡೀ ನಡೀತದೆ ಅಂತ ಕಾಣಿಸ್ತದೆ. ಇಷ್ಟವರೆಗೂ ನಾಟಕದ ಮೇಳದವರ ಮನೆಯಿಂದ ಹೆಣ್ಣು ತಂದಿರಲಿಲ್ಲ.’ ಅಂದರು. ಈ ಮಾತು ಮುಂದೆ ಯಾವ ಯಾವ ಬಾಣ ಬಿರುಸುಗಳನ್ನು ಹುಟ್ಟಿಸುತ್ತದೋ ಎಂದು ಎಲ್ಲರೂ ಕಾಯುತ್ತಿರುವಾಗ ಅವರು ಒಮ್ಮೆಲೇ ಎದ್ದು ಕಿಟಕಿಯ ಹತ್ತಿರ ಬಂದು ತಮ್ಮ ಗಡಸು ದನಿಯಲ್ಲಿ ‘ಯಾರೋ ಅದು?’ ಎಂದು ಕೂಗಿದರು. ಗಪ್ಪನೇ ಹಾಡು ನಿಂತಿತು. ನಂತರದ ಕ್ಷಣಕಾಲದ ಮೌನವನ್ನು ಹಿಂಬಾಲಿಸಿ ಅವರ ಮುಂದಿನ ಮಾತುಗಳು ಮೊಳಗಿದವು. ‘ಹೊತ್ತು ಗೊತ್ತು ಇಲ್ಲದೇ ಈ ರಾತ್ರಿಯಲ್ಲಿ ಕೂಗ್ತಿರುದು? ನಾವ್ಯಾರೂ ಇಲ್ಲಿ ಮಲಗುವುದು ಬೇಡವೇನು? ತಲೆಕೆಟ್ಟವನೆ…’

ಪಿಯಾನೋ ನಿಲ್ಲಿಸಿದ ಅವರು ಕತ್ತೆತ್ತಿ ಮೇಲೆ ನೋಡಿದರು. ಮಹಡಿಯಲ್ಲಿ ದೀಪವಿಲ್ಲದ್ದರಿಂದ ಒಳಗಿನವರಾರೂ ಕಾಣಿಸಿರಲಿಕ್ಕಿಲ್ಲ. ಸರಳಿಗೆ ಮುಖವಿಟ್ಟ ಮಕ್ಕಳನ್ನು ಅವರ ಅಮ್ಮಂದಿರು ದರದರಾ ಹಾಸಿಗೆಗೆ ಎಳೆದರು. ಈ ಅಶರೀರವಾಣಿಯ ಆಜ್ಞೆಯನ್ನು ಪಾಲಿಸುವವರಂತೆ ಅವರು ತಮ್ಮ ಪಿಯಾನೋ ಪೆಟ್ಟಿಗೆಯನ್ನು ಎತ್ತಿಕೊಂಡು ಒಳಗೆ ನಡೆದರು. ಕೆಳಗೆ ನಿಂತು ಹಾಡು ಕೇಳಿಸಿಕೊಳ್ಳುತ್ತಿದ್ದು, ಈಗ ಈ ಕಠೋರ ಕೂಗಿಗೆ ತಬ್ಬಿಬ್ಬಾಗಿ ಮೇಲೆ ಕಿಟಕಿಯತ್ತ ನೋಡಿದ ಶ್ರೋತೃಸಮೂಹದಲ್ಲಿ ಮರುದಿನ ಸುಧೀರಮಾಮಾನನ್ನು ಮದುವೆಯಾಗಲಿರುವ ಸುರೇಖಾಮಾಮಿ ಕೂಡ ಕಂಡಳು. ಅವಳು ಕಣ್ಣುಗಳನ್ನು ಹಿಗ್ಗಿಸಿ ಮಹಡಿಯ ಮೇಲಿನ ಕತ್ತಲು ತುಂಬಿದ ಕಿಟಕಿಯತ್ತ ನೋಡಿದ ರೀತಿಯನ್ನು ನಾನು ಎರಡೆರಡು ಸಲ ವಿವರಿಸಲು ಹೋಗಿ ವಿಫಲನಾದೆ. ‘ಹ್ಯಾಂಗೆ ನಿಲ್ಲಿಸ್ದೆ ನೋಡು’ ಎಂದು ತನ್ನ ಪ್ರತಾಪವನ್ನು ಆ ರಾತ್ರಿ ಮಾತ್ರವಲ್ಲ, ಮರುದಿನವೂ ಚಿಕ್ಕಜ್ಜ ವರ್ಣಿಸಿಯೇ ವರ್ಣಿಸಿದರು. ನನ್ನ ಅಜ್ಜನಾಗಲೀ, ಸುಧೀರಮಾಮನಾಗಲೀ ಅಲ್ಲೇ ಮಹಡಿಯ ಮೇಲೆ ನಮ್ಮ ಜೊತೆಗೇ ಮಲಗಿದ್ದರೂ ಚಿಕ್ಕಜ್ಜನನ್ನು ವಿರೋಧಿಸುವ ಒಂದೇ ಒಂದು ಮಾತನ್ನೂ ಹೇಳಲಿಲ್ಲ.

‘ಹುಡುಗಿಯ ಕಡೆಯವರು ಅಂದ ಮೇಲೆ ಹಾಗೇ. ನುಂಗಿಕೊಂಡು ಇರಬೇಕಾಗುತ್ತದೆ’ ಎಂದು ಹೇಳಿದ ಮಾತಿನಿಂದ ಎಚ್ಚರಾದವನಂತೆ ‘ನಾನು ಹೋಗುತ್ತೇನೆ’ ಎಂದು ಮತ್ತೆ ನನ್ನ ರಾಗ ಶುರುಮಾಡಿದೆ. ಅಷ್ಟು ಹೊತ್ತು ಇದ್ದರೂ ಆ ಕತ್ತಲಿಗೆ ಇನ್ನೂ ನನ್ನ ಕಣ್ಣು ಹೊಂದಿಕೊಂಡಂತೆ ಅನಿಸಲಿಲ್ಲ. ಮೋರೆ ಕೂಡ ನೋಡಿರದ ಎದುರಿಗಿರುವ ಅಸ್ಪಷ್ಟ ಆಕಾರದ ಜೊತೆ ಇಷ್ಟು ಹೊತ್ತು ನನ್ನ ಸಂವಾದ ನಡೆದಿತ್ತು.

ನನ್ನ ಅವಸರವನ್ನು ತಣಿಸುವವಳಂತೆ ಅವಳು ಎದ್ದು ‘ತಗೋ’ ಎಂದು ಒಣಗಿಸಿದ ಮಾವಿನಹಣ್ಣಿನ ಸಾಠೊಂದರ ತುಂಡು ಕೊಟ್ಟಳು. ನಾನು ಅದನ್ನು ಇಡಿಯಾಗಿ ಬಾಯಲ್ಲಿ ಹಾಕಿದ್ದಕ್ಕೆ ‘ಅವಸರ ಮಾಡಬೇಡ’ ಅಂದಳು.

ಅವಳಿಗೆ ಇನ್ನೂ ಮದುವೆಯ ಬಗ್ಗೆ ಕೇಳುವದಿತ್ತು. ಆದರೆ ನಾನೇ ಮಾತುಮಾತಿಗೂ ‘ಹೋಗುತ್ತೇನೆ ಹೋಗುತ್ತೇನೆ’ ಎಂದು ಅನ್ನತೊಡಗಿದ್ದರಿಂದ ಬಿಟ್ಟುಕೊಟ್ಟಳು.
ಮತ್ತೆ ಅದೇ ನಸುಗತ್ತಲ ಖಾಲಿ ಕೋಣೆಗಳನ್ನು ದಾಟಿ ದಾಟಿ ಹೊರ ಜಗಲಿಗೆ ಬಂದೆ. ಎಲ್ಲಿದ್ದನೋ ಇಷ್ಟು ಹೊತ್ತು, ಮಧುಕರ ಗಲ್ಲೆಯ ಮೇಲಿನಿಂದಲೇ ‘ನಿನ್ನನ್ನು ಮನೆಯವರೆಲ್ಲ ಹುಡುಕುತ್ತ ಇದ್ದಾರಲ್ಲೋ. ಎಲ್ಲಿ ಹೋಗಿದ್ದೆ ನೀನು? ಹಾಂ…’ ಅಂದ. ನಾನು ಏನೂ ಹೇಳದೇ ಜಗುಲಿ ಇಳಿದು ಮನೆಯತ್ತ ಧಾವಿಸಿದೆ.
*
*
*
ನಾನು ಕಣ್ಮರೆಯಾದಾಗ ಬಾರಕೂರರ ಮನೆಗೆ ಕಳಿಸುವ ಲಡ್ಡು ಪೊಟ್ಟಣ ಸಿದ್ಧವಾಗಿ, ಅಜ್ಜಿಗೆ ನನ್ನ ನೆನಪಾಗಿತ್ತು. ನಾನು ಹೋಗಿ ಆಗಲೇ ಸುಮಾರು ಹೊತ್ತಾದರೂ ಹಿಂತಿರುಗಿ ಬಾರದ್ದನ್ನು ಗಮನಿಸಿ ಮಧುಕರನನ್ನು ಕೇಳಿದರೆ ಬಂದೇ ಇಲ್ಲವೆಂದು ಹೇಳಿದ. ಎಲ್ಲ ಕಡೆ ಹುಡುಕಿದರು. ಮನೆಯ ಹಿಂದೆ ಹೋಗಿ ಬಾವಿ, ಗೊಬ್ಬರ ಗುಂಡಿ ಎಲ್ಲ ಕಡೆ ನೋಡಿದ್ದಾಯಿತು. ಅಜ್ಜನ ಅಂಗಡಿಗೆ ಜನ ಕಳಿಸಿದರು. ಅಷ್ಟರಲ್ಲಿ ನಾನು ಹಿಂತಿರುಗಿದ್ದೆ.

ಬಂದ ನಂತರ ನಾನು ಇಷ್ಟು ಹೊತ್ತು ಎಲ್ಲಿದ್ದೆ ಎಂದು ಹೇಳಲೇ ಬೇಕಾಯಿತು.
‘ಎದುರು ಮನೆಗೆ ಹೋಗಿದ್ದೆ. ಅಲ್ಲಿ ಆ ಅಜ್ಜಿಯ ಜೊತೆ ಮಾತಾಡುತ್ತಿದ್ದೆ’
‘ಯಾವ ಅಜ್ಜಿ?’
‘ಆ ಹೆಂಗಸು’
‘ಹೋ ಅವಳೇನೋ?… ಈಗ ಅಜ್ಜಿಯ ಹಾಗೆ ಕಾಣುತ್ತಾಳೇನೋ’ ಎಂದು ಒಮ್ಮೆಲೇ ನಾನಾ ಉದ್ಗಾರಗಳು ಹೊರಟವು. ನನ್ನ ಅಮ್ಮನೂ ದಂಗಾಗಿ ಕೂತಿದ್ದಳು. ಸ್ಪಷ್ಟವಾಗಿ ಕಂಡೇ ಇರದ ಅವಳ ಚಹರೆಯ ಕುರಿತು ನೂರಾರು ಪ್ರಶ್ನೆಗಳು ನನ್ನನ್ನು ಮುತ್ತಿದವು. ಯಾರ ವಿಷಯ ಏನೇನು ಹೇಳಿದೆ ಎಂಬುದರ ಬಗ್ಗೆ ಆತಂಕಭರಿತ ದನಿಯಲ್ಲಿ ಸೂಕ್ಷ್ಮವಾಗಿ ವಿಚಾರಣೆ ಶುರುವಾಯಿತು.

ಅವರ ಮಾತುಗಳೆಲ್ಲ ಗಂಭೀರವಾಗುತ್ತಿರುವಾಗ ನಾನು ಕಾಣೆಯಾದ ಸುದ್ದಿ ತಲುಪಿ ನಾಗೇಶಮಾಮ ಅಂಗಡಿಯಿಂದ ಧಾವಿಸಿ ಬಂದ. ವಿಷಯ ತಿಳಿದು ‘ಏನೂ ಆಗುವುದಿಲ್ಲ ಬಿಡು. ಈ ಸೊಣಕಲ ಕಡ್ಡಿಯ ಮೇಲೆ ಕಣ್ಣು ಬಿದ್ದರೆ ಉಲ್ಟಾ ಕಣ್ಣು ಬೀಳಬಹುದು ಅಷ್ಟೇ. ಅದರಿಂದಲಾದರೂ ಇವನ ಕುಂಡೆಯಲ್ಲಿ ಒಂದಿಷ್ಟು ಮಾಂಸ ತುಂಬಿಕೊಂಡೀತು’ ಅಂದ. ಈ ಮಾತು ಕೇಳಿ ಅಮ್ಮನಿಗೆ ಸಿಟ್ಟು ಬಂತು. ತಮ್ಮನಿಗೆ ಏನೋ ಅಂದಳು. ಅವನೇನೋ ತಿರುಗಿ ಅಂದ. ಆದರೂ ಜಗಳದ ದನಿ ತಾರಕಕ್ಕೇರದಿರುವುದನ್ನು ನೋಡಿದರೆ ನಾವು ಬೇಗನೇ ಅಜ್ಜನ ಮನೆ ಬಿಟ್ಟು ಹೊರಡುವ ಹಾಗೆ ಕಾಣಲಿಲ್ಲ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.