ಕ್ಷಮಿಸುತ್ತೀಯ ಒಂದಿಷ್ಟು

ಇದ್ದಕ್ಕಿದ್ದಂತೆ ಯಾಕೆ ಹೀಗಾಯಿತು? ದುಃಖ ಒತ್ತರಿಸಿ ಬಂತು ನನಗೆ. ನಿನ್ನೆ ರಾತ್ರಿ ಫೋನ್ ಮಾಡಿದ್ದೆ ಆಸ್ಪತ್ರೆಗೆ. ಲಲಿತಾನ ಅಮ್ಮನೇ ಫೋನ್ ತೆಗೆದುಕೊಂಡಿದ್ದರು. ಸುಭಾಷಿಣಿ, ನಾಳೆ ಖಂಡಿತಾ ಬಾ. ಲಲಿತಾ ಹೇಳಿದ್ದಾಳೆ ನಾಳೆ ಮಾತಾಡೊ ದಿನ ಅಂತ. ಸುಭಾಷಿಣಿ ಮಾತಾಡ್ತಾಳೆ, ನಾವು ಕೇಳೋಣ ಅಂತ. ಬೆಳಿಗ್ಗೆ ಡಾಕ್ಟ್ರು ಬಂದು ಹೋದ ಮೇಲೆ ವಾರ್ಡಲ್ಲಿ ಯಾರೂ ಇರೋದಿಲ್ಲ. ನೀನು ಬಾ ಎಂದು ಹೇಳಿದ್ದರು. ನಾನು ಫೋನ್ ಮಾಡಿದಾಗ ರಾತ್ರಿ ಎಂಟೂವರೆ ಆಗಿತ್ತು. ಬೆಳಗಾಗುವುದರೊಳಗೆ ಏನೆಲ್ಲಾ ಆಗಿಹೋಯಿತು!

ನಾನು ಬೆಳಿಗ್ಗೆ ಆಸ್ಪತ್ರೆಗೆ ಬಂದಾಗ ಲಲಿತಾ ಇದ್ದ ವಾರ್ಡ್ ಖಾಲಿಯಾಗಿತ್ತು. ಆತಂಕದಿಂದ ನರ್ಸ್ ಇದ್ದಲ್ಲಿಗೆ ಓಡಿದೆ. ಲಲಿತಾನಿಗೆ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ನೋವು ಜೋರಾಯಿತಂತೆ. ನೋವಿನಿಂದ ಚೀರುತ್ತಾ ಎರಡೂ ಕೈಗಳಿಂದ ತಲೆಕೂದಲು ಕಿತ್ತುಕೊಳ್ಳುತ್ತಿದ್ದಳಂತೆ. ಅವಳ ಅಮ್ಮ ಗಾಬರಿಯಿಂದ ನರ್ಸ್ ಅನ್ನು ಕರೆದಿದ್ದಾಳೆ. ಡ್ಯೂಟಿ ಡಾಕ್ಟರ್ ಬಂದು ಇಂಜಕ್ಷನ್ ಕೊಟ್ಟಿದ್ದಾರೆ. ತಲೆಕೂದಲು ಕಿತ್ತುಕೊಳ್ಳದಂತೆ ಎರಡೂ ಮುಂಗೈಗಳಿಗೆ ಬ್ಯಾಂಡೇಜ್ ಕಟ್ಟಿದರು. ತುಂಬಾ ನೋವು…. ಅಂತ ಒಂದು ಸಲ ಹೇಳಿದ ಲಲಿತಾ ಮತ್ತೆ ಮಾತಾಡಲಿಲ್ಲವಂತೆ. ಬೆಳಗಾಗುವಾಗ ಅವಳಿಗೆ ಮಾತೇ ನಿಂತುಹೋಗಿತ್ತು.

ನರ್ಸ್ ಕೊಟ್ಟ ವಿವರದಿಂದ ನಾನು ಕುಸಿದು ಕುಳಿತೆ. ಕ್ಯಾನ್ಸರ್ ರೋಗವೇ ಹಾಗಮ್ಮ. ಕೊನೇ ಸ್ಟೇಜ್‌ನಲ್ಲಿರುವಾಗ ನೋವು ತಡಿಯೋಕೆ ಆಗೋಲ್ಲ ನರ್ಸ್ ಹೇಳುತ್ತಿದ್ದರು.

ಲಲಿತಾನ್ನ ಇಂಟೆನ್ಸಿವ್ ಕೇರ್ ಯೂನಿಟ್‌ಗೆ ಹಾಕಿದ್ದಾರೆ. ಇನ್ನು ಮಾತಾಡೋದಿರಲಿ; ನೋಡಲೂ ನಮ್ಮನ್ನು ಬಿಡೋದಿಲ್ಲ. ನಾನು ಸ್ವಲ್ಪ ಸುಧಾರಿಸಿಕೊಂಡು ಅಲ್ಲೆ ಹಾಕಿದ್ದ ದೊಡ್ಡ ಸೋಫಾದ ತುದಿಯಲ್ಲಿ ಕುಳಿತೆ. ಮೊನ್ನೆ ನಾನು ಲಲಿತಾನ್ನ ನೋಡಲು ಬಂದಿದ್ದಾಗ, ನನಿಗೆ ನಿನ್ಹತ್ರ ಬಾಳ ಮಾತಾಡೋದಿದೆ. ನಿಂಗೇನಾದ್ರು ತೊಂದರೆಯಾಗುತ್ತಾ? ಕೇಳಿದ್ದೆ.

ಎಲ್ಲಾದ್ರು ಉಂಟಾ! ನಿನ್ನ ಮಾತು ಕೇಳೋದೇ ಒಂದು ಚೆಂದ. ನಾನಂತು ಯಾರು ಮಾತಾಡಿದ್ರು ಕೇಳೋಕೆ ಹಂಬಲಿಸ್ತೀನಿ. ಮಾತಿಲ್ಲದಾಗ ಮೌನ. ಆಳದ ಮೌನ ಅಂದ್ರೆ ನಂಗೆ ಶೂನ್ಯ. ಈ ಶೂನ್ಯ ಸಾವಿದ್ದಂತೆ. ಮಾತು ಕೇಳ್ತಾ ಇದ್ರೆ ನಾನಿನ್ನೂ ಬದುಕಿದ್ದೀನಿ ಅನಿಸುತ್ತೆ… ಬಿಕ್ಕಳಿಕೆ ಬಂದು ಮಾತು ನಿಲ್ಲಿಸಿದಳು ಲಲಿತಾ. ದೇಹದ ಶಕ್ತಿಯೆಲ್ಲಾ ಹಾಕಿ ಕಣ್ಣು ಮುಚ್ಚಿಕೊಂಡಳು. ಮುಖ ಕಿವುಚುತ್ತಾ ನೋವು ತಿನ್ನುತ್ತಿದ್ದಳು. ಮತ್ತೆ ಅರೆ ಕ್ಷಣದಲ್ಲಿ ಕಣ್ಣು ಬಿಟ್ಟುಬಿಟ್ಟು ಬಿಟ್ಟು ಬರುತ್ತೆ. ಆಗ ಸ್ವಲ್ಪ ಕಷ್ಟ ಅಷ್ಟೆ ಅಂತ ಸಣ್ಣಗೆ ನಕ್ಕಳು.

ನಾಡಿದ್ದು ಬೆಳಿಗ್ಗೇನೆ ಬಾ. ಅವತ್ತು ಮಾತಾಡೋ ದಿನ ನಿನಗೆ. ಮಾತು ಕೇಳೋ ದಿನ ನನಗೂ ಅಮ್ಮನಿಗೂ ಲಲಿತಾ ಹೇಳಿ ತಾಯಿಯ ಮುಖ ನೋಡಿದಳು. ಅವರು ಕೂಡಬಾಮ್ಮ ಸುಭಾಷಿಣಿ. ನಾಡಿದ್ದು ನಾವು ಮೂರು ಮಂದಿ ಸೇರಿಕೊಂಡು ಮಾತಾಡೋ ದಿನ ಆಚರಿಸೋಣ ಅಂತ ನನ್ನ ಬೆನ್ನು ತಟ್ಟಿದರು. ಲಲಿತಾಗೆ ನಿಶ್ಶಕ್ತಿ ಬಹಳವೇ ಇತ್ತು. ಕಿಮೋಥೆರಪಿಯಿಂದಾಗಿ ವಾಂತಿ ನಿಂತಿರಲಿಲ್ಲ. ನಾನು ಹೊರಟು ನಿಂತಾಗ ಕೈ ಮೇಲೆತ್ತಲೂ ಆಗುತ್ತಿರಲಿಲ್ಲ. ಕಣ್ಣುಗಳಲ್ಲು ಕಳೆಯಿರಲಿಲ್ಲ. ಮಂಕಾಗಿಯೇ ನಾಡಿದ್ದು ಮರೀಬೇಡ ಅಂತ ಹೇಳಿದ್ದಳು.

ನನ್ನ ಆಸೆಯೆಲ್ಲ ನುಚ್ಚುನೂರಾಗಿತ್ತು. ಲಲಿತಾ ಎದುರು ಕುಳಿತು ಮಾತಾಡಬೇಕು. ಮನಸ್ಸನ್ನೆಲ್ಲಾ ಖಾಲಿ ಮಾಡಿ ಹಕ್ಕಿಯಂತೆ ಹಾರಬೇಕು ಅಂದುಕೊಂಡಿದ್ದೆ. ಒಂದೇ ಒಂದು ಸಲ ಕ್ಷಮಿಸಮ್ಮಾ ಸಾಕು ಅಂತ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಅವಳು ಕೊಡುವ ಉತ್ತರವೂ ಗೊತ್ತಿತ್ತು- ತಲೆ ಕೆಟ್ಟಂತೆ ಮಾತಾಡ್ಬೇಡ ಸುಮ್ಮನಿರು. ನಾವೆಲ್ಲ ಮನುಷ್ಯರೇ ಅಲ್ವ. ತಪ್ಪುಗಳನ್ನ ಮಾಡ್ತಾನೇ ಇರ್‍ತೀವಿ, ತಿದ್ದಿಕೊಳ್ತಾನೂ ಇರ್‍ತೀವಿ ಅಂತ ನನ್ನ ಬಾಯಿ ಮುಚ್ಚಿಸುತ್ತಿದ್ದಳು.

ಲಲಿತಾ ಆ ದಿನ ಸಂಪಾದಕರ ಕ್ಯಾಬಿನ್‌ನಿಂದ ಹೊರಬಂದವಳು ನನ್ನ ಆಚೆ ಕರ್‍ಕೊಂಡು ಹೋಗಿ ಹೊಟ್ಟೆ ಹಿಡಿದು ನಕ್ಕಳು.ನೋಡೇ ಸುಭಾ, ಆತ್ಮಸಾಕ್ಷಿ ಇರೋದು ನಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳೋಕೆ. ತಪ್ಪು ತಿದ್ದಿಕೊಳ್ತಾ ಬೆಳೀತೀವಿ. ಅದೇ ಇಲ್ದಿದ್ರೆ ವ್ಯಕ್ತಿ ದೊಡ್ಡ ಸ್ಥಾನದಲ್ಲಿದ್ರೂ ಸಣ್ಣ ವ್ಯಕ್ತಿಯೇ ಆಗಿರ್‍ತಾನೆ. ಅವನ ವ್ಯಕ್ತಿತ್ವ ಬೆಳೆಯೋದಿಲ್ಲ. ಬದಲು ಮತ್ತಷ್ತು ಸಣ್ಣತನ ಬೆಳೆಸಿಕೊಳ್ತಾನೆ ನಗುತ್ತಲೇ ಹೇಳಿದಳು. ಅವರು ಅವಳನ್ನ ಎದುರು ಕೂರಿಸಿಕೊಂಡು ಅವಳ ನಡತೆ ಬಗ್ಗೆ ದ್ವಂದ್ವಾರ್ಥದ ಮಾತನಾಡಿದರಂತೆ ಸಂಪಾದಕರು.

ಹೆಂಗಸು ತನಗೆ ಅನ್ಯಾಯ ಮಾಡ್ತಾಯಿದ್ದೀರಿ ಅಂತ ಪಟ್ಟು ಹಿಡಿದು ಕೇಳಿದಾಗ ಅನ್ಯಾಯ ಮಾಡೋ ವ್ಯಕ್ತಿಗೆ ಉತ್ತರ ಕೊಡೋಕೆ ಆಗೋಲ್ಲ. ಅನ್ಯಾಯವಾದಾಕೆ ಎಪ್ಪತ್ತು ವರ್ಷದ ಅಜ್ಜಿಯೇ ಇರಬಹುದು. ಹಾಗಿದ್ರೂ ಅವಳ ಕ್ಯಾರೆಕ್ಟರ್ ಬಗ್ಗೆ ಮಾತಾಡ್ತಾರೆ ನೋಡು. ಅದೇ ಅವರ ಕೊನೆ ಅಸ್ತ್ರ. ನಾವೋ ಕೆಟ್ಟದ್ದನ್ನ ಬೇರೆ ಬೇಗ ನಂಬುತ್ತೇವೆ. ಸತ್ಯವನ್ನ ಸಂಶಯದಿಂದ ನೋಡುತ್ತೇವೆ. ಈ ಸಂಪಾದಕ ಮಹಾಶಯ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡ್ತಾನೆ. ಅದೂ ಅರವತ್ತು ಸಮೀಪಿಸಿರೋ ಈ ವ್ಯಕ್ತಿ ದೊಡ್ಡ ಸ್ಥಾನದಲ್ಲಿ ಕುಳಿತು! ಲಲಿತಾ ನಗುತ್ತಲೇ ಹೇಳಿದಳು.

ಅವಳ ನಗುವಲ್ಲಿ ನೋವಿತ್ತು ಅಂತ ನನಗೆ ಗೊತ್ತಿದ್ದರೂ ನಾನು ಮಾತಾಡಲಿಲ್ಲ. ಕಾಯಿಲೆಯಿಂದ ಚೇತರಿಸಿಕೊಳ್ಳಬೇಕಿದ್ದವಳಿಗೆ ನನ್ನಿಂದ ಒಂದೆರಡು ಸಾಂತ್ವನದ ಮಾತು ಬೇಕಿತ್ತು. ಕ್ಯಾಬಿನ್‌ನಿಂದ ಹೊರಬಂದ ಸಂಪಾದಕರು ಲಲಿತಾ ನನ್ನೊಂದಿಗೆ ಮಾತಾಡುತ್ತಿರುವುದನ್ನು ನೋಡಿದರು. ನಾನು ಸಣ್ಣಗೆ ನಡುಗಿದೆ. ಅವಳಿಂದ ತಪ್ಪಿಸಿಕೊಳ್ಳೋಕೆ ನೋಡಿದೆ. ಲಲಿತಾ, ಇನ್ನೊಂದು ದಿನ ಇದನ್ನೆಲ್ಲ ಮಾತಾಡೋಣ. ಇವತ್ತು ನಂಗೆ ನಾಟಕ ರಿಹರ್ಸಲ್ ಇದೆ ಅಂದೆ.
ಯಾವ ನಾಟಕ? ಕೇಳಿದಳು.
ಅದೇ ಡೌರಿಡೆತ್ ಕುರಿತು
ಸರಿ. ನಿನ್ನ ನಿಲ್ಲಿಸಿಕೊಂಡುಬಿಟ್ಟೆ ಸಾರಿ ಸುಭಾಷಿಣಿ ಅಂತ ನನ್ನ ಕಳುಹಿಸಿಕೊಟ್ಟಳು.
ನಾಳೆ ದಿನ ಸಂಪಾದಕರು ಲಲಿತಾ ಏನು ಮಾತಾಡುತ್ತಿದ್ದಳು ಎಂದು ಕೇಳಿಬಿಟ್ಟರೆ ಏನು ಹೇಳಲಿ. ನನ್ನನ್ನೂ ಅವರು ಕಪ್ಪು ಪಟ್ಟಿಗೆ ಸೇರಿಸಿಬಿಟ್ಟರೆ… ಒಂದು ಸುಳ್ಳು ಹೇಳಿ ಸುಭಾಷಿಣಿಯಿಂದ ತಪ್ಪಿಸಿಕೊಂಡಿದ್ದೆ, ನಾನು ಅಲ್ಲಿಂದ ಹೋಗುವಾಗ ನನ್ನನ್ನು ನೋಡುತ್ತಲೇ ನಿಂತಿದ್ದಳು.

ಆಗ ಲಲಿತಾ ಕ್ಯಾನ್ಸರ್ ಗುಣವಾಗಿ ಬಂದಾಗ ನಾವೆಲ್ಲ ಸ್ವಾಗತಿಸಿದ್ದೇ ಸ್ವಾಗತಿಸಿದ್ದು. ಅವಳಿಗೂ ಕೆಲಸಕ್ಕೆ ಹಿಂದಿರುಗಿಬಂದ ಸಂತೋಷ. ಆದರೆ ಈ ಸಂತೋಷ ಬಹಳ ಹೊತ್ತು ಇರಲಿಲ್ಲ. ಸಂಪಾದಕರ ಕ್ಯಾಬಿನ್‌ಗೆ ಹೋಗಿಬಂದವಳ ಮುಖ ಮತ್ತೆ ಕ್ಯಾನ್ಸರ್ ತಗುಲಿದಂತೆ ಜರ್ಜರಿತವಾಗಿತ್ತು.
ನೋಡೆ, ನಾನು ಹಿಂದೆ ಕೆಲಸ ಮಾಡುತ್ತಿದ್ದಲ್ಲಿಂದ ಬದಲಿಸಿದ್ದಾರೆ. ಮಧ್ಯಾಹ್ನದ ಮೇಲೆ ಬಂದು ರಾತ್ರಿ ಹೋಗಬೇಕಂತೆ. ಬಿಸಿಲಲ್ಲಿ ಬಸ್ಸಲ್ಲಿ ಬರೋದು, ರಾತ್ರಿ ಎರಡು ಬಸ್ ಹಿಡಿದು ಹೋಗೋದು.. ಔಷಧಿ, ಊಟ.. ಇದೆಲ್ಲ ಹೇಗೆ ಸುಧಾರಿಸಲಿ? ನಂಗೇನೂ ಗೊತ್ತಾಗ್ತಿಲ್ಲ ಅಸಹಾಯಕಳಾಗಿ ಹೇಳಿದಳು ಲಲಿತಾ.
ಸಡನ್ ಹೀಗ್ಯಾಕೆ? ಆತಂಕದಿಂದಲೇ ಕೇಳಿದೆ.
ನಂಗೂ ತಿಳೀತಿಲ್ಲ. ಇಪ್ಪತ್ತು ವರ್ಷ ದುಡಿದಿದ್ದೀನಿ. ಈಗ ಈ ಸ್ಥಿತೀಲಿ ಹೀಗ್ಯಾಕೆ ಮಾಡ್ತಾರೋ… ಖಿನ್ನಳಾಗಿ ಹೇಳಿದಳು.

ನಾವು ನಾಲ್ಕು ಮಂದಿ ಪತ್ರಕರ್ತೆಯರು ಅವಳನ್ನ ಸುತ್ತುವರೆದಿದ್ದವು. ನನ್ನಿಂದ ಏನು ತಪ್ಪಾಗಿದೆ ಅಂತ ಕೇಳೋಣ ಅಂದುಕೊಂಡೆ. ಮಾತಾಡೋ ಅವಕಾಶನೇ ಕೊಡಲಿಲ್ಲ. ಇದು ನೀನು ಮಾಡಿದ ತಪ್ಪು ಅಂತ ಅವರು ಹೇಳಿದ್ದರೆ ನಿಜವಾಗಿಯೂ ನಾನು ತಪ್ಪೆ ಮಾಡಿದ್ದರೆ ಕ್ಷಮೆ ಕೇಳುತ್ತಿದ್ದೆ. ಅದಕ್ಕೇ ಹೇಳೋದು ಪಾರದರ್ಶಕತೆ ಇರಬೇಕೂಂತ. ವಾಸ್ತವಾನ್ನ ಪುಸ್ತಕ ತೆರೆದಿಟ್ಟ ಹಾಗೆ ತೆರೆದಿಡುತ್ತೆ. ಸತ್ಯ ಹೇಳೋಕೆ ಧೈರ್ಯಬೇಕು. ಸುಳ್ಳು ಹೇಳೋವಷ್ಟು ಸುಲಭವಲ್ಲ. ಹೋಗಲಿ ಬಿಡು. ಏನು ಮಾತಾಡಿದ್ರು ಪ್ರಯೋಜನವಿಲ್ಲ. ನಾನು ಮುಂದೇನು ಮಾಡಬಹುದು? ನಿಮಗೇನಾದ್ರು ಹೊಳೆಯುತ್ತಾ? ಲಲಿತಾ ಕೇಳಿದಳು.

ನಾವು ಒಬ್ಬರೂ ಬಾಯಿಬಿಡಲಿಲ್ಲ. ನಮ್ಮ ಅನಿಸಿಕೆ ಹೇಳಿದರೆ ಮುಂದ್ಹೇಗೊ? ನಮಗ್ಯಾಕೆ ಈ ವಿಷಯದಲ್ಲಿ ಬಾಯಿ ಹಾಕೊ ಕೆಲಸ ಅಂತ ನಾವು ಒಬ್ಬೊಬ್ಬರೆ ಜಾಗ ಖಾಲಿ ಮಾಡಿದೆವು. ಲಲಿತಾ ಶೂನ್ಯಳಾಗಿ ನಮ್ಮನ್ನೇ ನೋಡುತ್ತಿದ್ದಳು. ಖಾಯಿಲೆಗೇ ಬಹಳ ಖರ್ಚಾಯಿತು. ಕೆಲಸ ಬಿಡೋ ಸ್ಥಿತೀಲಿ ಇಲ್ಲ. ಹಾಗಂತ ಬಿಸಿಲಲ್ಲಿ ಬಂದು ರಾತ್ರಿ ಹೋಗೋ ಶಕ್ತೀನೂ ಇಲ್ಲ. ಉಳಿದಿರೋದು ಒಂದೇ ಕೆಲಸ ಎಂಡಿಯವರನ್ನ ನೋಡೋದು…ತನ್ನಷ್ಟಕ್ಕೆ ಗೊಣಗಿಕೊಂಡಳು.

ಲಲಿತಾ ಪರ ವಹಿಸಿ ಮಾತಾಡೋದು ಕಷ್ಟ. ನಾವು ಸುಮ್ಮನೆ ನಿಷ್ಟುರವಾಗಬೇಕು. ಇಲ್ಲಿ ನಮಗೆ ಅವಕಾಶಗಳ ಬಾಗಿಲು ತೆಗೆದುಕೊಳ್ಳೋದೇ ಕಷ್ಟ. ಅದು ಲಲಿತಾಗೂ ಗೊತ್ತು. ತೀರಾ ಪ್ರತಿಭಾವಂತರಾದರೆ ಸಂಪಾದಕರಿಗೂ ಅವರಿಗೆ ಬರೋ ಅವಕಾಶಗಳನ್ನ ತಡೆಯೋಕೆ ಸಾಧ್ಯವಿಲ್ಲ. ಪತ್ರಿಕೆ ಚೆನ್ನಾಗಿ ಬರಬೇಕಲ್ಲ. ಹಾಗಿಲ್ಲದಿದ್ದರೆ ಅದೃಷ್ಟ ಚೆನ್ನಾಗಿರಬೇಕು. ಅವಕಾಶಗಳು ಸಿಗುತ್ತವೆ. ಇಲ್ಲದಿದ್ದರೆ ಜಾಣ್ಮೆಯಿಂದ ಸಂಪಾದಕರ ಬೇಕು-ಬೇಡಗಳನ್ನ ತಿಳಿದುಕೊಂಡು ಅವರನ್ನ ಖುಶಿಪಡಿಸಿಕೊಂಡು ಅವಕಾಶ ಪಡೀಬೇಕು. ಒಂದು ಸಲ ಅವಕಾಶ ಒಲಿದರೆ ಯಾರುತಾನೆ ಕಾಲಿಂದ ಒದೆಯುತ್ತಾರೆ? ಲಲಿತಾನ ನೋವಿಗೆ ನಾವು ಧ್ವನಿ ಸೇರಿಸಬೇಕಾದರೆ ನಮ್ಮ ಅನಿಸಿಕೆಗಳನ್ನ ಹೇಳಲೇಬೇಕು. ಅದು ಸಂಪಾದಕರ ಇಚ್ಛೆಗೆ ವಿರುದ್ಧವಾದರೆ.. ಅವಳ ಮಾತು ಕೇಳಿಕೊಂಡು ಸುಮ್ಮನಿದ್ದುಬಿಡಬೇಕು. ಏನೊಂದೂ ಪ್ರತಿಕ್ರಿಯಿಸಬಾರದು. ಆಗ ಅಪಾಯವಿಲ್ಲ. ಹೀಗಿದ್ದರೆ ಸಂಪಾದಕರ ಕಣ್ಣಲ್ಲೂ ಒಳ್ಳೆಯ ಹಾರ್ಡ್‌ವರ್ಕ್ ಜರ್ನಲಿಸ್ಟ್ ಆಗಿರ್‍ತೇವೆ.

ಸುಭಾಷಿಣಿ, ಕೊನೆಗೂ ಗೆದ್ದೆ. ನನ್ನಿಂದ ತಪ್ಪಾಗಿದ್ದರೆ ಸಂಪಾದಕರು ಹೇಳಬಹುದಿತ್ತು. ನಾನು ಎಂಡಿಯವರನ್ನನೋಡಿದೆ. ಹಿಂದಿನಂತೆ ಬೆಳಿಗ್ಗೆ ಬಂದುಹೋಗಲು ತಿಳಿಸಿದ್ದಾರೆ. ನನ್ನ ನಿಶ್ಶಕ್ತಿ, ಥೆರಪಿಗಳ ಸೈಡ್ ಎಫೆಕ್ಟ್ ಎಲ್ಲಾ ಅವರ ಕಿವಿಗೆ ಮುಟ್ಟಿಸಿದೆ. ಈ ವರೆಗೂ ಪತ್ರಿಕೆಗೆ ಕಷ್ಟಪಟ್ಟೇ ಕೆಲಸ ಮಾಡಿದೆ. ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನ್ನಲ್ಲಿ ಸತ್ಯವಿದೆ. ಅದಕ್ಕೇ ಸಂಪಾದಕರು ಮಾನಸಿಕವಾಗಿ ಕಿರುಕುಳ ನೀಡಲು ನೋಡಿದರೂ ನಾನು ಗೆದ್ದುಬಂದೆ. ಆದರೆ ಈ ಒಂದು ಗೆಲುವಿಗೆ ಎಷ್ಟು ಅವಮಾನ, ನೋವು ತಿನ್ನಬೇಕಾಯಿತು.. ಲಲಿತಾ ನಕ್ಕಳು.

ಇದು ಲಲಿತಾನ ಮೊದಲ ಗೆಲುವು. ನಾವು ಪತ್ರಕರ್ತೆಯರು ಒಂದಿಷ್ಟು ನೈತಿಕ ಬಲ ನೀಡದಿದ್ದರೂ ಅವಳಾಗಿಯೇ ಈ ಗೆಲುವು ಸಾಧಿಸಿದಳು. ಅವಳ ಮಾತಿಗೆ ನಾವು ಯಾರೂ ಮಾತಾಡಲಿಲ್ಲ. ಯಾಕೆ ಅಂದರೆ ನಾವೆಲ್ಲ ವೈರುಧ್ಯಗಳನ್ನು ಸೃಷ್ಟಿಸಿಕೊಳ್ಳುವವರಲ್ಲ. ಸಂಪಾದಕರು ನಮ್ಮನ್ನು ಒಳ್ಳೆಯವರು ಎಂದು ಗುರುತಿಸಿದ ಮೇಲೆ ನಮ್ಮದೆಲ್ಲ ವ್ಯಕ್ತಿತ್ವ ಗಟ್ಟಿಯೇ. ಪ್ರಮೋಷನ್‌ಗೆ ಅವಕಾಶಗಳು ಹೆಚ್ಚು. ಹೀಗಿದ್ದಾಗ ಈ ಕ್ಯಾನ್ಸರ್ ರೋಗಿಗಾಗಿ ನಾವೆಲ್ಲ ಸೇರಿಕೊಂಡು ಯಾಕೆ ಹೋರಾಟ ನಡೆಸಬೇಕು?

ಲಲಿತಾ ಮೂಲೇಲಿ ಕುಳಿತು ಕೆಲಸ ಮಾಡತೊಡಗಿದಳು. ಅದೂ ಬಹಳ ದಿನ ನಡೆಯಲಿಲ್ಲ. ಅಂದು ಭಾನುವಾರ. ಲಲಿತಾಗೆ ವಾರದ ರಜೆ. ಆದರೆ ಮಧ್ಯಾಹ್ನ ಅವಳಿಗೆ ಫೋನ್ ಕಾಲ್ ಹೋಗಿತ್ತು. ಸಹ ಸಂಪಾದಕರು ರಜೆ ಹೋಗುವುದರಿಂದ ಅವರ ಕೆಲಸ ಬಂದು ಮಾಡಬೇಕು ಎಂದು ಅವರು ತಿಳಿಸಿದ್ದರು. ಆ ಕೆಲಸ ಗೊತ್ತಿಲ್ಲವೆಂದು ಲಲಿತಾ ಹಲುಬಿಕೊಳ್ಳುತ್ತಿರುವಾಗ ಸಹ ಸಂಪಾದಕರು ಫೋನ್ ಕೆಳಗಿಟ್ಟರು. ಗಾಬರಿಯಿಂದ ಕೆಲಸಕ್ಕೆ ಓಡಿಬಂದಿದ್ದಳು. ಎಂದೂ ಆ ವಿಭಾಗದಲ್ಲಿ ಕೆಲಸ ಮಾಡದ ಅವಳು ಸ್ವಲ್ಪ ದಿಗಿಲುಗೊಂಡಿದ್ದಳು. ಲೇಖನ, ಫೊಟೊ ಸ್ಕೇನಿಂಗ್ ಅಂತ ಓಡಾಡಿದಳು. ಸ್ವಲ್ಪವೇ ಹೊತ್ತಲ್ಲಿ ಕಾಲು, ಪಾದ ಊದಿಕೊಂಡವು. ಒಂದೆರಡು ಸಲ ವಾಂತಿ ಮಾಡಿಕೊಂಡಳು, ಸುಭಾ, ಕ್ಯಾನ್ಸರ್ ಆದವರು ಟೆನ್ಷನ್ ಮಾಡಿಕೊಳ್ಳಬಾರದು. ಇಷ್ಟು ದೊಡ್ಡ ಕೆಲಸ ಕೊಟ್ಟಿದ್ದಾರೆ. ರಾತ್ರಿ ಹನ್ನೆರಡಾದರು ಮುಗಿಯೋದಿಲ್ಲ. ಕಾಲು ಊದಿ ಭಾರ ಆಗ್ತಿದೆ ಎಂದು ಕಾಲು ತೋರಿಸಿದಳು. ನಾವು ಮಾತಾಡಲಿಲ್ಲ.

ಸಾರ್, ನಂಗೆ ಮಾಡೋಕೆ ಸಾಧ್ಯವಿಲ್ಲ. ನಾನು ಚೇತರಿಸಿಕೊಂಡ ಮೇಲೆ ಏನೂ ಕೆಲಸ ಹೇಳಿ ಮಾಡ್ತೀನಿ. ಈ ಸ್ಥಿತೀಲಿ ಹೀಗೆ ಮಾಡಬೇಡಿ ಸುದ್ದಿ ಸಂಪಾದಕರಲ್ಲಿ ಬಡಬಡಿಸುತ್ತಿದ್ದಳು. ಮತ್ತವಳು ಬಂದು ಇದನ್ನೆಲ್ಲ ನಮಗೆಲ್ಲಿ ವರದಿ ಒಪ್ಪಿಸುತ್ತಾಳೋ ಎಂದು ಹೆದರಿಕೆ ಆಗುತ್ತಿತ್ತು. ನಾವೆಲ್ಲ ಮೌನದ ರಕ್ಷಣೆಯ ಕವಚ ತೊಟ್ಟುಬಿಟ್ಟೆವು. ಲಲಿತಾ ನಮ್ಮೆದುರು ನೋವು ತೋಡಿಕೊಳ್ಳುತ್ತಿದ್ದಳು. ನಮ್ಮ ಪ್ರತಿಕ್ರಿಯೆಗೆ ಆಸೆಯಿಂದ ನೋಡುತ್ತಿದ್ದಳು. ನಾವು ಯಾರೂ ಮಾತಾಡಲಿಲ್ಲ. ಮತ್ತೆ ಲಲಿತಾ ಕೆಲವು ದಿನ ಕೆಲಸಕ್ಕೆ ಬರಲಿಲ್ಲ.

ಸಣ್ಣತನಗಳಿಂದ ಕಿರಿ ಕಿರಿ ಅನುಭವಿಸೋದು ಬೇಡ ಅಂತ ಕೆಲಸಕ್ಕೆ ರಾಜೀನಾಮೆ ಕೊಟ್ಟೆ ಅಂತ ಆಫೀಸಿಗೆ ಬಂದಿದ್ದ ಲಲಿತಾ ಹೇಳಿದಳು. ಅಂದು ಮಹಿಳೆಯರ ಶೋಷಣೆಗೆ ಸಂಬಂಧಿಸಿದಂತೆ ನಾನು ಬರೆದ ಕವನಗಳ ಸಂಕಲನ ನಿನ್ನ ನೋವಿಗೆ ಧ್ವನಿ ನಾನು ಬಿಡುಗಡೆ ಸಮಾರಂಭದ ಬಿಜಿಯಲ್ಲಿದ್ದೆ. ಲಲಿತ ನನ್ನೊಡನೆ ಮಾತಾಡುವ ಆಸೆಯಲ್ಲಿದ್ದಳು. ನಿನ್ನಲ್ಲಿಗೆ ನಾನೇ ಬಂದು ಮಾತಾಡುತ್ತೇನೆ. ಇವತ್ತು ಸಮಾರಂಭದ ಗಡಿಬಿಡಿ ಎಂದು ಅವಳನ್ನು ಸಾಗಹಾಕಿದೆ.

ಮತ್ತೆರೆಡು ದಿನಗಳಲ್ಲಿ ಲಲಿತಾ ಮತ್ತೆ ಕೆಲಸಕ್ಕೆ ಬಂದಳು. ಸುಭಾ, ಎಂಡಿಯವರು ನನ್ನ ರಾಜೀನಾಮೆ ತಿರಸ್ಕರಿಸಿದ್ದಾರೆ. ನನ್ನ ನೋವಿಗೆ ನ್ಯಾಯ ಸಿಕ್ಕಿದೆ. ಮತ್ತೆ ಕೆಲಸಕ್ಕೆ ಬಂದಿದ್ದೇನೆ ಎಂದಳು. ಇದು ಅವಳ ಎರಡನೇ ಗೆಲವು. ಆದರೆ ಈ ಬಾರಿ ನಾವು ಅವಳಿಗೆ ಹೆದರಿದ್ದೇವೆ. ಅವಳಿಂದ ದೂರ ಇದ್ದಷ್ಟು ಅನುಕೂಲ. ನಾವು ಯಾವತ್ತಿನಂತೆ ಮೌನವಾಗಿ ಅವಳಿಂದ ದೂರ ಸರಿದೆವು.

ಮತ್ತೊಂದು ದಿನ ಕ್ಯಾಂಟೀನ್‌ನಲ್ಲಿ ಸಿಕ್ಕಿದ ಲಲಿತಾ ಹೇಳಿದಳು ಸಂಪಾದಕರೊಡನೆ ತಾನೂ ಕಟುವಾಗಿ ಮಾತನಾಡಿದೆ ಎಂದು. ನಾನು ಈ ವರೆಗೆ ವೃತ್ತಿಯಲ್ಲಿ ಉನ್ನತ ಸ್ಥಾನದಲ್ಲಿದ್ದವರನ್ನ ಖುಷಿಪಡಿಸಿಲ್ಲ. ಇನ್ನು ಖುಷಿ ಪಡಿಸೋದೂ ಇಲ್ಲ. ಕ್ಯಾನ್ಸರ್ ಆಗಿದ್ದುದರಿಂದ ರಾತ್ರಿ ವರೆಗೆ ಕೆಲಸ ಮಾಡಲು ಸಾಧ್ಯವಿಲ್ಲ. ಎಂಡಿಯವರು ಹೇಳಿದ್ದಾರೆ. ಈ ಸಲ ಅವರ ಮಾತನ್ನ ನೀವು ತೆಗೆದುಹಾಕಬೇಡಿ ಎಂದು ಹೇಳಿದೆ ಎಂದು ವಿವರಿಸಿದಳು. ನಾನು ಏನೂ ಪ್ರತಿಕ್ರ್ರಿಯೆ ವ್ಯಕ್ತಪಡಿಸಲಿಲ್ಲ. ಸಂಪಾದಕರಿಗೆ ನನ್ನಲ್ಲಿ ವಿಶ್ವಾಸ ಜಾಸ್ತಿ. ಅದೂ ಬೇರೆ ಪ್ರಮೋಷನ್‌ಗಳಲ್ಲೂ ಅನ್ಯಾಯವಾಗದೆ ದೊಡ್ಡ ಪೊಸಿಷನ್ ತಲುಪುತ್ತಿದ್ದೇನೆ. ಇವಳ ಬಡಬಡ ಮಾತುಗಳನ್ನ ಕೇಳಿ ಪ್ರತಿಕ್ರಿಯೆ ತೋರಿಸಿ ನನ್ನ ಕ್ಯರಿಯರ್ ಹಾಳುಮಾಡಿಕೊಳ್ಳೋದು ಎಷ್ಟು ಸರಿ?

ಮತ್ತೆರಡು ತಿಂಗಳು ಲಲಿತಾ ಕೆಲಸಕ್ಕೆ ಬಂದಳು. ಮತ್ತೆ ಪುನಃ ಕ್ಯಾನ್ಸರ್ ಜೋರಾಗಿ ಆಸ್ಪತ್ರೆ ಸೇರಿದಳು. ನಾನು ಹೆಣ್ಣಿಗೆ ಅನ್ಯಾಯವಾದಾಗಲೆಲ್ಲಾ ಪದ್ಯ, ಕಥೆ ಅಥವಾ ನಾಟಕಗಳನ್ನಾದರು ಬರೀತೇನೆ. ಮಹಿಳಾ ದಿನಾಚರಣೆಯಲ್ಲಿ ಭಾಷಣಗಳನ್ನು ಕೊಡುತ್ತೇನೆ. ಮಹೀಳಾವಾದಿ ಎಂದೇ ಹೊರಗಡೆ ನನ್ನ ಗುರುತಿಸುತ್ತಾರೆ. ಸಮಾಜದಲ್ಲಿ ಇಂಥವನ್ನೆಲ್ಲ ಮಾಡುವುದು ಸುಲಭ. ಸಮಾಜಕ್ಕೆ ಗೋಡೆಗಳಿಲ್ಲವಲ್ಲ. ಆದ್ರೆ ಕಚೇರಿಯೊಳಗೆ ಹಾಗಲ್ಲ. ಇಲ್ಲಿ ಗೋಡೆಗಳಿವೆ. ಹಾಗಾಗಿ ನಾವು ಇಲ್ಲಿ ಮಹಿಳೆಗೆ ಅನ್ಯಾಯವಾದರೆ ಮಾತಾಡೋದಿಲ್ಲ. ಪ್ರತಿಭಟನೆ ವ್ಯಕ್ತಪಡಿಸೋದಿಲ್ಲ. ಗೋಡೆಯೊಳಗಿನ ಈ ಬದುಕಲ್ಲಿ ಮೌನದಿಂದಲೇ ಪ್ರಗತಿ. ಮೌನವೇ ರಕ್ಷಣೆ. ಮೌನವಾಗಿರೋದರಿಂದಲೇ ನನ್ನ ಗಟ್ಟಿ ವ್ಯಕ್ತಿ ಎಂದು ಗುರುತಿಸಿರುವುದು. ಆದರೆ ಲಲಿತಾಗೆ ಮೌನ ಸಾವಾಗಿ ಕಾಣುತ್ತೆ.

ಲಲಿತಾ, ನಾವೆಲ್ಲ ಕಚೇರಿಯೊಳಗೆ ಸುರಕ್ಷಿತವಾಗಿದ್ದೇವೆ. ನಮ್ಮ ಹೆಸರಲ್ಲಿ ಲೇಖನಗಳು ಪ್ರಕಟವಾಗುತ್ತವೆ. ಮಹಿಳಾವಾದವನ್ನ ಎತ್ತಿ ಹಿಡಿದು ಪ್ರಗತಿಪರ ಚಿಂತಕರಾಗಿದ್ದೇವೆ. ಆದರೆ ನಿನಾಗಿ ಸಣ್ಣ… ಧ್ವನಿಯನ್ನೂ ನಾವು ಎತ್ತಲಿಲ್ಲ. ಸಂಪಾದಕರು ನೀನು ನಮ್ಮೊಡನೆ ಏನು ಮಾತಾಡುತ್ತೀಯ ಎಂದು ಕೇಳಿದಾಗ ಅವರನ್ನ ಸಂತೋಷಪಡಿಸಲಿಕ್ಕೆ ಅಂತ ನೀನು ಅವರ ಬಗ್ಗೆ ಆಡಿದ ಮಾತುಗಳನ್ನ ಚಾಚೂ ತಪ್ಪದೆ ವರದಿ ಮಾಡಿಬಿಟ್ಟೆ! ಅವರ ಕಣ್ಣಲ್ಲಿ ನನಗೆ ಕೆಟ್ಟವಳಾಗೋದು ಬೇಡವಿತ್ತು. ಆದರೆ ಈಗ ನನಗನಿಸುತ್ತದೆ ನಾನು ತಪ್ಪು ಮಾಡಿದ್ದೇನೆ ಅಂತ. ನಾನು ಇದನ್ನೆಲ್ಲಾ ನಿನ್ನಲ್ಲಿ ಹೇಳಿಕೊಂಡು ಕ್ಷಮೆ ಕೇಳಬೇಕೆಂದುಕೊಂಡೆ. ನೀನಾಗಲೇ ಮೌನದ ಲೋಕ ಸೇರಿದ್ದೀಯ. ನನ್ನ ಮೌನದಲ್ಲಿ ಮಾತು ಹುಟ್ಟಿಕೊಳ್ಳುತ್ತಿದೆ. ಮೋಡಗಳು ಢಿಕ್ಕಿ ಹೊಡೆದಾಗ ಮಳೆಯಾಗುತ್ತೆ. ಹಾಗೆ ನಿನ್ನನ್ನು ಆವರಿಸಿದ ಮೌನಕ್ಕೆ ನನ್ನ ಮೌನ ಢಿಕ್ಕಿ ಹೊಡೆದರೆ ನನ್ನ ಮೌನದಿಂದ ಮಾತುಗಳು ನಿನ್ನ ಕಿವಿಯಲ್ಲಿ ಧ್ವನಿಯಾಗಿ ಸುರಿದರೆ ನಿನಗೆ ಕೇಳೀತೇ ನನ್ನ ಕೂಗು.. ಆಗ ನನ್ನ ಒಂದಿಷ್ಟು ಕ್ಷಮಿಸುತ್ತೀಯಾ?
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.