ಓ! ಜಗತ್ತೇ!

ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ ಎಂದು. ಇನ್ನೇನು ಅರ್ಧ ಗಂಟೆಯೊಳಗೆ ಅವಳು ಬರಬಹುದು. ಯಾಕೋ ಯಾರೂ ಬರುವುದು ಬೇಡ ಎನಿಸಿತ್ತು. ಮನಸ್ಸು ಏಕಾಂತ ಬಯಸುತ್ತಿತು. ಸುತ್ತ ಯೋಚನೆಯ ಬಲೆ ಹರಡಿ ಕುಳಿತ ನನಗೆ ಪುನಃ ಪುನಃ ಮಾಧುವಿನದೇ ನೆನಪು.

ಪಾಪ ಮಾಧು! ಬೆಳಗಿನಿಂದ ಕೆಲಸಕ್ಕೆ ಬಂದಿರಲಿಲ್ಲ. ಮಗನಿಗೆ ಹೇಗಿದೆಯೋ ಏನೋ. ನಿನ್ನೆಯಷ್ಟೆ ಕಣ್ಣೀರುಗರೆದು ಹೋಗಿದ್ದಳು.

“ಏನು ಮಾಡಲಿ ತಾಯಿ. ಪೂರ್ತಿಯಾಗಿ ಗುಣವಾದ ಎಂದು ಉಸಿರು ಬಿಡುವಾಗಲೇ ಮತ್ತೆ ಹೀಗಾಗಬೇಕೆ? ಎಲ್ಲ ನನ್ನ ಹಣೆಯ ಬರಹ. ಇಲ್ಲವಾದರೆ ಕೈಗೆ ಬಂದ ಮಗ ಹೀಗಾಗಿ ಮಲಗಿಬಿಡುವುದೆಂದರೆ!”

“ಹೆದರಬೇಡ ಮಾಧು. ಬೇಗ ಹುಷಾರಾಗುತ್ತಾನೆ. ನೋಡುತ್ತಿರು” ಎಂದು ನಿರಾಧಾರದ ಸಮಾಧಾನ ಹೇಳಿದೆ.

“ಏನು ಹುಷಾರಾಗುತ್ತಾನೋ ಕಾಣೆ. ಸಾಯಂಕಾಲದಿಂದ ಜ್ವರ ಏರಿ ಹುಚ್ಚರಂತೆ ಆಡುತ್ತಾನೆ. ಏನಾದರೂ ಹೆಚ್ಚು ಕಡಿಮೆ ಆದಲ್ಲಿ ನನ್ನ ಗತಿಯೇನು? ನನ್ನ ಮಕ್ಕಳ ಗತಿಯೇನು?”

“ಡಾಕ್ಟರು ಬಂದು ನೋಡುತ್ತಿದ್ದಾರಲ್ಲ, ಏನೆಂದರು?”

“ಅನ್ನುವುದೇನು ಮಣ್ಣು? ದಿನಾ ಬಂದು ನೋಡುತ್ತಾರೆ. ಚುಚ್ಚುತ್ತಾರೆ. ಹೋಗುತ್ತಾರೆ. ಇವತ್ತು ಬಿಲ್ಲೂ ಬಂದಿದೆ. ನಾವು ಬಡವರು. ಇವೆಲ್ಲ ದೊಡ್ಡವರಿಗೆ ಬರಬೇಕಾದ ಕಾಹಿಲೆ. ನಮ್ಮಂತಹವರಿಗಲ್ಲ. ಈ ಖರ್ಚಿಗೆಲ್ಲ ನಾನು ಎಲ್ಲಿಗೆ ಹೋಗಲಿ ಹೇಳಿ.”

ನಲ್ವತ್ತರ ಮಾಧು ಚಿಕ್ಕ ಮಗುವಿನಂತೆ ಅಳುತ್ತಿದ್ದಳು. ಮಗನಿಗೆ ಟೈಫಾಯ್ಡ್ ಆದಾಗಿನಿಂದ ಸೋತು ಕಂದಿಹೋಗಿದ್ದಳು.

ಅವಳ ಒಬ್ಬನೇ ಒಬ್ಬ ಮಗ-ಗೋವಿಂದ. ಆಮೇಲೆ ಸಾಲಾಗಿ ಹುಟ್ಟಿದ ಐದು ಹೆಣ್ಣುಮಕ್ಕಳು. ಅವಳಿಗಿದ್ದ ಒಂದೇ ಒಂದು ಆಸರೆ. ಅವನೂ ತಂದೆಯ ದಾರಿಯನ್ನೇ ಹಿಡಿದುಬಿಟ್ಟರೆ! ಮಕ್ಕಳನ್ನು ನೋಡುವುದು ಯಾರು? ಗಂಡು ಹುಡುಕಿ ಮದುವೆ ಮಾಡುವವರು ಯಾರು?

ಅವಳಿಗೆ ಸಿಗುವ ಉತ್ತರ ದೊಡ್ಡ ಶೂನ್ಯ ಮಾತ್ರ.

ದಿನದ ದುಡಿತ. ಅಂದಿಗೆ ಸಾಕು. ಹೊಸ ದಿನಕ್ಕೆ ಹೊಸ ದುಡಿಮೆಯೇ ಹೊಟ್ಟೆ ತುಂಬಿಸಬೇಕು. ಉಳಿತಾಯವಿಲ್ಲ. ಈ ಕಾಲದಲ್ಲಿ ಆ ದುಡಿಮೆಯಲ್ಲಿ ಉಳಿತಾಯ ಸಾಧ್ಯವೂ ಇಲ್ಲ. ಆದರೂ ಮಾಧು ಉಳಿಸಿದ್ದಾಳೆ. ಮಗನಿಗೇ ತಿಳಿಯದಂತೆ ತನ್ನವರಾರಿಗೂ ತಿಳಿಯದಂತೆ, ಗುಟ್ಟಾಗಿ. ಸಂಬಳದ ಇಪ್ಪತ್ತೈದು ರೂಪಾಯಿಯಲ್ಲಿ ಅವಳು ಒಯ್ಯುತ್ತಿದ್ದುದು ಇಪ್ಪತ್ತು ಮಾತ್ರ. ಉಳಿದ ಐದು ರೂಪಾಯಿ ಇರುವುದು ನನ್ನ ಬಳಿಯೇ. ಅದು ಅವಳ ಉಳಿತಾಯ ಯೋಜನೆ. ಈಗ ಮಗನ ದುಡಿಮೆಯನ್ನೂ ಸೇರಿಸಿ ಅಷ್ಟರಲ್ಲೇ ಹೇಗೋ ಆಚೀಚೆ ಮಗುಚಾಡಬಹುದು. ಪೂರ್ತಿ ತೆಗೆದುಕೊಂಡು ಹೋದರೆ ಅದರಲ್ಲಿ ಬಿಡಿ ಕಾಸೂ ಉಳಿಯುವುದಿಲ್ಲ ಎಂಬುದು ಅವಳ ತರ್ಕ.

ಹಾಗೆ ಉಳಿಸಿ ಅವಳು ತನ್ನ ಹಿರಿಯ ಹುಡುಗಿ-ವೆಂಕನಿಗೆ ಒಂದು ಮೂಗ ಬಟ್ಟು, ಕಿವಿಗೆ ಓಲೆಗಳನ್ನು ಮಾಡಿಸಿದ್ದಾಳೆ. ಮಗ ‘ಎಲ್ಲಿಂದ?’ ಎಂದು ಕೇಳಿದಾಗ ‘ಚಿಲ್ಲರೆ ಪಲ್ಲರೆ ಕೆಲಸಗಳಿಗೆ ಅಮ್ಮ ಕೊಟ್ಟ ದುಡ್ಡಿನಿಂದ ಮಾಡಿಸಿದೆ’ ಎಂದು ಮಾತು ಹಾರಿಸಿದಳಂತೆ.

‘ಈ ಗಂಡು ಮಕ್ಕಳಿಗೆ ಪೂರಾ ಗುಟ್ಟು ಬಿಟ್ಟುಕೊಟ್ಟರೆ ನಾವು ಉಳಿಸಿದಂತೆ. ನಮ್ಮ ಹೆಣ್ಣು ಮಕ್ಕಳು ಚಿನ್ನ-ಬಣ್ಣ ಕಂಡಂತೆ. ನಾಳೆ ಮದುವೆಯಾಗುವ ಮಕ್ಕಳು ಅವು. ಈಗಲೇ ಜಾಗ್ರತೆ ಮಾಡದಿದ್ದರೆ ಹೇಗೆ ಅಮ್ಮ?’ ಎಂದು ತನ್ನ ಜಾಣತನಕ್ಕೆ ತಾನೇ ತಲೆದೂಗುತ್ತಾಳೆ.

ಸಾಲ ಸೋಲವಿಲ್ಲದೆ ಆಯವ್ಯಯಗಳನ್ನು ಅಲ್ಲಿಂದಿಲ್ಲಿಗೆ ಮುಟ್ಟಿಸಿ ಅಚ್ಚು ಕಟ್ಟಾಗಿ ತನ್ನ ಬದುಕನ್ನು ನಡೆಸುತ್ತಿದ್ದ ಮಾಧುವಿನ ಆದರ್ಶ ಎಷ್ಟು ಸುಧಾರಿತ ಜನರಿಗಿದೆ? ಎಂದು ಯೋಚಿಸುತ್ತಿದ್ದೆ. ಪ್ರತಿ ತಿಂಗಳೂ ಅವಳು ಉಳಿಸಿದ ಹಣವನ್ನು ಬ್ಯಾಂಕಿಗೆ ಹಾಕಿ ಲೆಕ್ಕವನ್ನು ಅವಳಿಗೆ ತಿಳಿಹೇಳುತ್ತಿದ್ದೆ. ಗಮನವಿಟ್ಟು ಕೇಳಿ ಬೇಕಾದಾಗೆಲ್ಲ ಪ್ರಶ್ನೆ ಹಾಕಿ ತಿಳಿದಿಕೊಳ್ಳುತ್ತಿದ್ದಳು. ತನ್ನ ದುಡ್ಡಿನ ಲೆಕ್ಕವೆಲ್ಲವೂ ಅವಳ ನಾಲಗೆಯಲ್ಲೇ ಇತ್ತು. ‘ನಾನು ವಿದ್ಯೆ ಇಲ್ಲದೆ ಕೆಟ್ಟೆ ಅಮ್ಮ. ವಿದ್ಯೆ ಇದ್ದುಬಿಟ್ಟಿದ್ದರೆ ನನ್ನನ್ನು ಹಿಡಿಯುವವರಿರಲಿಲ್ಲ’ ಎಂದು ಹಲವು ಬಾರಿ ಅವಳು ಅಂದದ್ದುಂಟು.

ಅಂತಹ ಮಾಧು ಈಗ ಬಂದ ಕಷ್ಟದಿಂದ ತತ್ತರಿಸಿ ನೆಲೆ ಕಾಣದೆ ದುಃಖಿಸುತ್ತಿದ್ದಾಳೆ.

‘ದುಡ್ಡಿಗೆ ಏನು ಮಾಡುತ್ತೀಯಾ-’ ಎಂದಿದ್ದೆ.

‘ಏನು ಮಾಡುವುದೆಂದೇ ತಿಳಿಯುವುದಿಲ್ಲ ನನಗೆ. ಡಾಕ್ಟರ ಬಿಲ್ಲು ಮುನ್ನೂರಕ್ಕೆ ಬಂದಿದೆ. ನಾನೇನು ಮಾಡಲಿ? ಎಲ್ಲಿಗೆ ಹೋಗಲಿ? ಇದ್ದದ್ದೆಲ್ಲಾ ಬರಿ ಗುಡಿಮಾಡಿ ಕುಳಿತರೆ ಮತ್ತೆ ಮುಂದೇನು? ಅಷ್ಟು ಖರ್ಚು ಮಾಡಿದರೂ ನನಗೆ ಅವನು ಕೈಗೆ ಸಿಗುತ್ತಾನೆಂದು ಯಾವ ಭರವಸೆ? ಅದರ ಬದಲು ದೇವರು ನನ್ನನ್ನಾದರೂ ಒಯ್ಯಬಾರದೇಕೆ?’-

ಸ್ವಲ್ಪ ಸುಧಾರಿಸಿಕೊಂಡು ಅವಳೆಂದಳು.

‘ನನ್ನ ಹಣ ಇದ್ದಷ್ಟು ಕೊಡಿ. ಹೋಗಲಿ. ಎಲ್ಲಾ ಖರ್ಚು ಮಾಡಿಬಿಡುತ್ತೇನೆ. ನನ್ನಿಂದಾದಷ್ಟು ಮಾಡುತ್ತೇನೆ. ನನ್ನ ಅದೃಷ್ಟ. ಅವನು ಬದುಕಿ ಉಳಿದರೆ ಮುಂದೆ ಏನನ್ನೂ ಮಾಡಿಯಾನು.’

ಹೊಟ್ಟೆ, ಬಾಯಿ ಕಟ್ಟಿ ಉಳಿಸಿದ ಅವಳ ಹಣ ಒಂದೇ ಸಲಕ್ಕೆ ಕರಗಿ ಹೋಗುವುದನ್ನು ನೆನೆದು ಅವಳಿಗೆ ಏಕೆ ನನಗೇ ಕರುಳು ಚುರ್‍ರೆಂದಿತು. ಪಾಪ ಎಷ್ಟು ಆಸೆಪಟ್ಟಿದ್ದಳು. ‘ಇನ್ನೊಬ್ಬರ ಕೈಗೆ ತನ್ನ ಮಕ್ಕಳು ಬೀಳಬಾರದು. ತಾನು ಯಾರ ಹಂಗಿನಲ್ಲೂ ಇರಬಾರದು’ ಎಂದು. ದೇವರಿಗೆ ಅದು ಸಹನೆಯಾಗಲಿಲ್ಲವೇನೋ!

ಆ ಡಾಕ್ಟರರ ಜೇಬಿಗೆ ಸೇರಿ ಹೋಗುವುದಲ್ಲ ಅವಳ ಹಣ! ಮಾಧು ಹನಿಹನಿಯಾಗಿ ಶೇಖರಿಸಿ ಇಟ್ಟಿದ್ದು ದೊಡ್ಡ ಮೊತ್ತವಾಗಿ ಅವರಿಗೆ ಹೋಗುವುದಾದರೆ ಅವಳ ಉಳಿತಾಯಕ್ಕೆ ಏನು ಬೆಲೆ ಬಂತು? ಮಗ ಉಳಿದರೆ ಸರಿ, ಉಳಿಯದಿದ್ದರೆ?…. ತನ್ನಿಂದ ಆದಷ್ಟು ಖರ್ಚು ಮಾಡಿದೆನೆಂಬ ನೆಮ್ಮದಿ ಒಂದೇ ಅವಳಿಗೆ ದೊರಕುವುದು.

ಡಾ|| ದೇಶಪಾಂಡೆ ಅವರೆಗೆ ನಿಜಕ್ಕೂ ಮಾಧುವಿನ ಹಣದ ಅಗತ್ಯವಿತ್ತೆ?

ಅವರಿಗೆ ಏನಿಲ್ಲವೆಂದು ಮಾಧು ಅವರ ಬಿಲ್ಲನ್ನು ತೆರಬೇಕು? ಏನಿಲ್ಲ ಅವರ ಬಳಿ? ಆದರೂ ಅವರು ಮಾಧುವಿನ ಹಣವನ್ನು ಬಿಡುವುದಿಲ್ಲವಲ್ಲ. ಅವಳೊಡನೆಯೂ ಬಿಡದೆ ಫೀಸು ಕೇಳಿಯೇ ಬಿಟ್ಟರು. ವಿಚಿತ್ರ ಪ್ರಪಂಚ!

ಶ್ರೀಮತಿ ಉಮಾ ದೇಶಪಾಂಡೆ! ಅತ್ಯಾಧುನಿಕ ಮಹಿಳೆ. ನಾವಿಬ್ಬರೂ ಈ ಊರಿಗೆ ಕಾಲಿಟ್ಟಿದು ಒಂದೇ ವರ್ಷ. ಆಗಿನಿಂದಲೇ ನಮ್ಮಿಬ್ಬರಿಗೆ ಪರಿಚಯದ ನಂಟು. ಅವಳು ನಮ್ಮ ಮನೆಗೆ ಬಂದು ಹೋಗುತ್ತಾಳೆ. ನಾನೂ ಅಷ್ಟೆ. ಬಂದಾಗೆಲ್ಲ ಅವಳು ತನ್ನ ಹೊಸ ಯೋಜನೆಯ ಬಗ್ಗೆ ಹೇಳುತ್ತಾಳೆ. ನಾನು ಅವಳ ಮನೆಗೆ ಹೋದಾಗೆಲ್ಲ ಏನಾದರೊಂದು ಹೊಸ ವಸ್ತುವನ್ನು ತೋರಿಸುತ್ತಾಳೆ.

‘ಇದನ್ನು ನೋಡಿದಿರಾ ಮಿಸೆಸ್ ರಾವ್. ಮೊನ್ನೆ ಡಾಕ್ಟರು ಮದ್ರಾಸಿಗೆ ಹೋದಾಗ ತಂದದ್ದು. ಇದಕ್ಕೆಷ್ಟು ಕೊಡಬಹುದು ಹೇಳಿ?’

‘ನೋಡಿ ಮಿಸೆಸ್ ರಾವ್. ಈ ಮುತ್ತುಗಳಿಗಾಗಿ ನಾನು ಎಲ್ಲೆಲ್ಲಿ ಹುಡುಕಿದೆ ಗೊತ್ತೆ? ಕೊನೆಗೆ ನಮ್ಮ ಚಿಕ್ಕಪ್ಪ ಮೊನ್ನೆ ಕಳಿಸಿದರು. ಇಷ್ಟು ಮುತ್ತುಗಳಿಗೆ ಎಷ್ಟಾಗುತ್ತದೆ ಹೇಳಿ? ಕೇಳಿದರೆ ಆಶ್ಚರ್ಯ ಪಡುತ್ತೀರಾ, ಸಾವಿರದ ಐನೂರು ರೂಪಾಯಿ!! ಇನ್ನು ಇದಕ್ಕೆ ಚಿನ್ನ ಕಟ್ಟಿಸಿ ನಮ್ಮ ರಾಜಿಗೆ ಸರ ಮಾಡಿಸುವುದರೊಳಗೆ ಎಷ್ಟಾಗುವುದೋ. ಆದರೂ ನನಗೊಂದು ಹುಚ್ಚು ನೋಡಿ. ನಮ್ಮ ರಾಜಿಗೆ ಇದನ್ನು ಮಾಡಿಸಬೇಕು ಅಂತ…’

ಮಾಧುವಿನ ಹುಚ್ಚಿನ ದೊಡ್ಡ ರೂಪ ಈ ಹುಚ್ಚು ಅಷ್ಟೆ. ಮಗಳನ್ನು ನೆಲೆ ಮುಟ್ಟಿಸಲು ದಿನ ರಾತ್ರಿ ದುಡಿದು ಅವಳು ಮಾಡಿಸಿದ ಮೂಗುಬಟ್ಟು, ಬೆಂಡೋಲೆ ಅವಳಿಗಿತ್ತ ಆನಂದವನ್ನೇ ರಾಜಿಗೆಂದು ಮಾಡಿಸಿದ ಸಾವಿರಾರು ರೂ.ಗಳ ಮುತ್ತಿನ ಹಾರ ಶ್ರೀಮತಿ ದೇಶಪಾಂಡೆಗೆ ತರುತ್ತದೆ.

ಎಲ್ಲಿ ವ್ಯತ್ಯಾಸ? ಆದರೆ ಎಂತಹ ವಿಪರ್ಯಾಸ?

‘ಮಿಸೆಸ್ ರಾವ್, ನಾನೊಂದು ಹವಳದ ಸೆಟ್ ಮಾಡಿಸುತ್ತೇನೆಂದು ನಿಮಗೆ ಹೇಳಿದ್ದೆನಲ್ಲ. ಸರಿಯಾದ ಹವಳಕ್ಕಾಗಿ ಕಾಯುತ್ತಿದ್ದೆ. ಮೊನ್ನೆ ಆರ್ಡರು ಕೊಟ್ಟು ಬಂದೆ. ಇನ್ನೇನು ಒಂದೆರಡು ತಿಂಗಳೊಳಗೆ ಬರಬಹುದು. ಅದಕ್ಕೆ ಸರಿಯಾಗಿ ಸೀರೆಯೊಂದನ್ನು ಕೊಂಡುಬಿಟ್ಟರೆ ಮತ್ತೆ ಸಧ್ಯಕ್ಕೆ ಹವಳದ ಗೋಜಿಗೇ ಹೋಗುವುದಿಲ್ಲ ನಾನು.

ಹವಳದ ಸೆಟ್ ಬಂದಿದೆಯೆಂದೂ, ಅದಕ್ಕೊಪ್ಪುವ ಸೀರೆ ತರಲು ಇಂದು ಸಂಜೆ ಹೋಗುವಳೆಂದೂ ಬೆಳಿಗ್ಗೆ ಫೋನಿನಲ್ಲಿ ಹೇಳುವಾಗಲೇ ಅವಳ ದನಿ ಸಂತಸದಿಂದ ಎಷ್ಟು ಪುಳಕಗೊಂಡಿತ್ತೊ!

ಸುಂದರವಾದ ಉಡುಗೆಯೆಂದರೂ ಅವಳಿಗೆ ತುಂಬ ಪ್ರೀತಿ. ಇನ್ನು ಅವಳ ಮಗಳೋ! ಈಗಲೇ ತಾಯಿಯ ಎರಡರಷ್ಟು ಸೊಗಸುಗಾತಿ! ಉಮಾ ದೇಶಪಾಂಡೆ ಹಲವು ಬಾರಿ ನನ್ನೊಡನೆ ಹೇಳಿದ್ದಾಳೆ.

‘ಈಗಿನ ಮಕ್ಕಳು ಎಷ್ಟು ಬೇಗ ಶಿಸ್ತು ಕಲಿಯುತ್ತಾರೋ ನಮ್ಮ ರಾಜಿಗೆ ನೋಡಿ ಉಡುಗೆಯ ಮಟ್ಟಿಗೆ ನನ್ನದೇ ಬುದ್ಧಿ. ಯಾವಾಗಲೂ ಬಟ್ಟೆಗಳನ್ನೆಲ್ಲಾ ಕ್ಲೀನಾಗಿ ಇಸ್ತ್ರಿ ಮಾಡಿಸಿಟ್ಟರೇ ಅವಳು ಒಪ್ಪುವುದು. ಇಲ್ಲವಾದರೆ ರಂಪ ಮಾಡಿಬಿಡುತ್ತಾಳೆ. ಒಂದು ಫ್ರಾಕನ್ನು ನಾಲ್ಕು ಸಲ ಹಾಕಿದಳೆಂದರೆ ಆಮೇಲೆ ಅದು ಮೂಲೆಗೆ. ಅವಳಿಗೆ ಶೃಂಗಾರ ಮಾಡಿ ಕ್ಲಾಸಿಗೆ ಕಳಿಸುವುದರೊಳಗೆ ನನಗೆ ಸಾಕಾಗಿ ಹೋಗುತ್ತದೆ’-

ಮಾಧುವಿನ ಎರಡನೆಯ ಹುಡುಗಿ ಪುಟ್ಟಿಯದೇ ವಯಸ್ಸಿರಬಹುದು ರಾಜಿಗೆ. ಅವಳು ಒಂದು ಫ್ರಾಕನ್ನು ನಾಲ್ಕು ಸಲ ಹಾಕುವುದು ಹೆಚ್ಚಾದರೆ, ಪುಟ್ಟಿ ಯಾರಾದರೂ ಕೊಟ್ಟ ಹಳೆಯ ಚೀಟಿ ಫ್ರಾಕನ್ನು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಹಾಕುತ್ತಾಳೆ. ರಾಜಿಯದು ಅವಶ್ಯಕ್ಕಿಂತ ಹೆಚ್ಚು ಉದ್ದಗಲವಿರುವ ಮೆತ್ತನೆಯ ಹಾಸಿಗೆ. ಅದರಲ್ಲಿ ಅವಳು ಸುತ್ತೆಲ್ಲ ಉರುಳಬಹುದು. ಎತ್ತ ಬೇಕಾದರೂ ಕಾಲು ಚಾಚಬಹುದು. ಪುಟ್ಟಿಗೆ ಹಾಗಾದೀತೇ? ಮುರುಟಿ ಹೋದ ಹರಕು ಚಾಪೆಯಲ್ಲಿ ಇನ್ನೂ ಮುದುರಿ ಅವಳು ಮಲಗಬೇಕು. ರಾಜಿಯಂತೆ ಕಾಲು ಚಾಚಿದರೆ ಅವಳಿಗೆ ಸಿಗುವುದು ಮಣ್ಣಿನ ತಣ್ಣನೆಯ ನೆಲವೇ.

ಮಾಧು ಅತ್ತು ದುಡ್ಡು ತೆಗೆದುಕೊಂಡು ಹೋದ ರಾತ್ರಿ ನಾನು ಇವರೊಡನೆ ಬೇಸರವನ್ನೆಲ್ಲ ತೋಡಿಕೊಂಡು ಜಿಗುಪ್ಸೆಯಿಂದ “ಏನು ಪ್ರಪಂಚವೋ!” ಎಂದೆ.

ಗಹಗಹಿಸಿ ನಗುತ್ತಾ ಅವರೆಂದರು:

“ಪ್ರಪಂಚಕ್ಕೇನಾಗಿದೆ? ಆಗಿರುವುದೆಲ್ಲ ನಿನಗೆ? ನೀನು ತಾರ್ಕಿಕವಾಗಿ ಯೋಚಿಸುತ್ತಿಲ್ಲ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ದೃಷ್ಟಾಂತ ಬೇಕೆ?”

“ಯಾಕೆ? ನನ್ನ ಮಾತಿನಲ್ಲಿ ಏನು ತಪ್ಪು?”

“ಮಾತಿನಲ್ಲಿ ತಪ್ಪಿಲ್ಲ. ಯೋಚಿಸುವುದರಲ್ಲೇ ತಪ್ಪು ಮಾಡುತ್ತೀಯ. ಪ್ರತಿ ಒಬ್ಬರೂ ಹೀಗೇ ಎಣಿಸುತ್ತ ಹೋದರೆ ಅವರಿಗೆಲ್ಲ ಉತ್ಪತ್ತಿ ಎಲ್ಲಿಂದ? ಡಾಕ್ಟರು ಮಾಡಿದ್ದಾದರೂ ಏನು? ತನ್ನ ಶ್ರಮಕ್ಕೆ ಫಲ ಕೇಳಿದರು ಅಷ್ಟೆ. ಮಾಧು ತನ್ನ ದುಡಿಮೆಗೆ ನಿನ್ನೊಡನೆ ಸಂಬಳ ಕೇಳುವುದಿಲ್ಲವೆ? ಹಾಗೆ ಎಂದು ತಿಳಿದುಕೋ. ಇಬ್ಬರ ದುಡಿಮೆಯ ಮಟ್ಟ ಸಮಾಜದಲ್ಲಿ ಬೇರೆ ಇರಬಹುದು. ಆದರೆ ಇಬ್ಬರೂ ಒಂದೇ ನಿಯಮಕ್ಕೆ ಬದ್ಧರಾದವರು ಎಂದೇಕೆ ನೀನು ತಿಳಿಯುವುದಿಲ್ಲ?”

“ಮಾಧು ನನ್ನೊಡನೆ ಸಂಬಳ ಕೇಳಿದರೆ ಅವಳು ಕೇಳುವಷ್ಟು ಕೊಡುವ ಸಾಮರ್ಥ್ಯ ನನಗಿದೆ. ಆದರೆ ಅವಳಿಗೆ ಕೊಡುವ ಶಕ್ತಿ ಇದೆಯೇನು?”

“ವಿಜೀ, ನಿನಗೆ ಏನು ಹೇಳಲಿ? ಶ್ರಮಕ್ಕೆ ಫಲ ಕೇಳದೆ ಇರಲು ಅವರೇನು ಮಹಾತ್ಮರೆ? ಅವರಿಗೂ ಮನೆಯಿದೆ. ಹೆಂಡತಿ ಮಕ್ಕಳಿದ್ದಾರೆ. ತಾನು ಬಯಸಿದ ಮಟ್ಟದಲ್ಲಿ ಅವರೂ ಜೀವನ ಸಾಗಿಸಬೇಕಲ್ಲ. ಅವರಿಗೂ ಅದು ಸಮಸ್ಯೆಯೇ. ಅಷ್ಟು ಮೃದು ಮನಸ್ಸು ಅವರಿಗೂ ಇರಬಾರದು.”

“ಹೋಗಿ, ನೀವೊಬ್ಬರು. ಅಷ್ಟು ಆಸ್ತಿ-ಪಾಸ್ತಿ ಮನೆ-ಒಡವೆ ಇದ್ದರೂ…”

“ಅದೆಲ್ಲ ಹೆಂಗಸರಿಗೆ ತಿಳಿಯುವುದಿಲ್ಲ. ಹಾಗೆಲ್ಲ ನಾವು ನೋಡಿದರೆ ಆದೀತೇ ವಿಜೀ? ನೀನು ಬರೀ ಅನುಕಂಪದ ದೃಷ್ಟಿಯಿಂದಲೇ ನೋಡುತ್ತೀ ಹೊರತು ತರ್ಕ ಬದ್ಧವಾಗಿ ಯಾಕೆ ಯೋಚಿಸುವುದಿಲ್ಲ! ಅಷ್ಟು ಅನುಕಂಪ ಇರುವವಳು ಕೋಪಿಸಿಕೊಳ್ಳಬೇಡ-ನೀನೇ ಒಂದು ಐನೂರು ರೂಪಾಯಿ ಅವಳಿಗೆ ಕೊಟ್ಟು ಬಿಡು ನೋಡೋಣ”.

ನಾನು ನಗುತ್ತಾ ಅಂದೆ-

“ಖಂಡಿತ ಕೊಡುತ್ತೇನೆ. ಜೋಬು ಕತ್ತರಿಸುವ ವಿದ್ಯೆ ನನಗೆ ತಿಳಿದಿಲ್ಲವೆಂದುಕೊಂಡಿರಾ?”

ಹಾಗೆ ನಕ್ಕು ನುಡಿದರೂ ನನ್ನಷ್ಟಕ್ಕೆ ಮಿಡುಕಿದೆ. ಅವಳ ಬಗ್ಗೆ ಅಷ್ಟೆಲ್ಲ ದೊಡ್ಡ ಮಾತಾಡುತ್ತೇನಲ್ಲ. ಅವರೆಂದಂತೆ ‘ಐನೂರು ರೂಪಾಯಿ ತೆಗೆದುಕೋ ಮಾಧು ಮಗನ ಔಷಧಕ್ಕೆ’ ಎಂದು ಕೊಟ್ಟುಬಿಡಲು ನನಗೇನಡ್ಡಿ? ಆದರೂ ಏನೋ ಒಂದು ಅವ್ಯಕ್ತವಾದದ್ದು ಅಡ್ಡ ಬರುವುದಲ್ಲ! ಯೋಚಿಸಿದಂತೆಲ್ಲ ನನಗೆ. ನನ್ನೊಳಗೇ ಸುಪ್ತವಾಗಿ ಬೆಳೆಯುತ್ತದ್ದ ಸ್ವಾರ್ಥಗೋಚರಿಸಿ ನಗು ಬಂತು. ಎಷ್ಟೆಂದರೂ ನಾನೂ ಮನುಷ್ಯಳಲ್ಲವೇ? ಹುಟ್ಟು ಬುದ್ಧಿ ಫಟ್ಟ ಹತ್ತಿದರೂ ಹೋದೀತೇ? ಅಂದ ಮೇಲೆ ದೇಶಪಾಂಡೆ ದಂಪತಿಗಳನ್ನು ಟೀಕಿಸುವ ಹಕ್ಕು ನನಗೆಲ್ಲಿ? ನಾನೂ ಅವರ ಸಾಲಿನವಳಲ್ಲವೇ? ‘ಪಾಪ’ – ಎಂದು ಒಣ ಕನಿಕರ ತೋರಿಸುವುದರಲ್ಲಿ ಅರ್ಥವೇನೂ ಇಲ್ಲ.

* * *

ತಲೆಯನ್ನೂ ಬಾಚದೆ ಕುಳಿತುಬಿಟ್ಟಿದ್ದೆ. ಶ್ರೀಮತಿ ದೇಶಪಾಂಡೆ ಬರುವಳೆಂಬ ನೆನಪಾಗಿ ಮುಖ ತೊಳೆದು ಬರುವಷ್ಟರಲ್ಲಿ ಹಾರ್ನ್ ಕೇಳಿಸಿತು. ಎಂದಿನ ಚುರುಕು ನಡೆಗೆಯಿಂದ ತಾಯಿ ಮಗಳು ಒಳಗೆ ಬರುತ್ತಿದ್ದರು.

“ಬನ್ನಿ ಮಿಸೆಸ್ ದೇಶಪಾಂಡೆ. ಶಾಪಿಂಗ್ ಮುಗಿಸಿದಿರಾ?” – ಎನ್ನುತ್ತಾ ಸ್ವಾಗತಿಸಿದೆ.

“ಹೂ. ಇನ್ನೂ ಸ್ವಲ್ಪ ಬೇಗ ಮುಗಿಯುತ್ತಿತ್ತು. ಈ ರಾಜಿ ದೆಸೆಯಿಂದ ಇಷ್ಟು ತಡವಾಯಿತು.”

“ನೋಡಿ ಆಂಟಿ. ಹೇಗಿದೆ ನನ್ನ ಹೊಸ ಡಾಲ್?” ಅಂದದ ಅಂಗಿ ತೊಟ್ಟು ನಸು ನಗು ಬೀರುವ, ಹೊಂಗೂದಲಿನ ಕಣ್ಣರಳಿಸಿಕೊಂಡಿದ್ದ ದೊಡ್ಡದಾದ ಗೊಂಬೆಯೊಂದನ್ನು ಅವುಚಿಕೊಂಡು ಕೇಳುತ್ತಿದ್ದ ರಾಜಿಯನ್ನು ಎಂದಿನಂತಾಗಿದ್ದರೆ ನಾನು ಹರ್ಷದಿಂದ ಮುದ್ದಿಡುತ್ತಿದ್ದೆ. ಆದರೆ ಇಂದು ತೋರಿಕೆಗೆ ಅವಳ ಗೊಂಬೆಯ ಕೆನ್ನೆ ಚಿವುಟಿ ಚೆನ್ನಾಗಿದೆ ರಾಜಿ, ತುಂಬಾ ಚೆನ್ನಾಗಿದೆ” ಎಂದೆ ಶುಷ್ಕವಾಗಿ.

“ನಲವತ್ತೈದು ರೂಪಾಯಿ ತೆತ್ತಮೇಲೆ ಚೆನ್ನಾಗಿರದಿದ್ದರೆ ಹೇಗೆ? ಈ ರಾಜಿಯನ್ನು ಕರೆದುಕೊಂಡು ಹೋದಾಗೆಲ್ಲ ಅವಳಿಗೆ ಡಾಲ್ ತೆಗೆಸಿಕೊಡಲೇಬೇಕು ನೋಡಿ”- ಎಂದು ಏನೋ ಒಂದು ಬಗೆಯ ಹೆಮ್ಮೆಯಿಂದ ಮಗಳನ್ನು ನೋಡಿದಳು ಶ್ರೀಮತಿ ದೇಶಪಾಂಡೆ.

ಆ ಮಾತು ಈ ಮಾತು ಆಡುತ್ತಾ ನಾನು ಕೇಳಿದೆ.

“ನಮ್ಮ ಮಾಧುವಿನ ಮಗನಿಗೆ ಟೈಫಾಯ್ಡ್ ಮರುಕಳಿಸಿದೆಯಂತೆ. ನಿಮ್ಮವರದೇ ಔಷಧವೆಂದು ಕಾಣುತ್ತೆ. ನಿನ್ನೆ ತುಂಬ ಸೀರಿಯಸ್ ಎಂತ ಅಳುತ್ತಿದ್ದಳು. ಡಾಕ್ಟರು ಏನಾದರೂ ಹೇಳಿದರೆ?”

“ಅಯ್ಯೋ ಬಿಡಿ. ಅಂತಹ ಎಷ್ಟು ಕೇಸುಗಳು ಅವರಿಗೆ ಬಂದು ಹೋಗುತ್ತವೆಯೋ ಅದನ್ನೆಲ್ಲ ತಲೆಗೆ ಹಚ್ಚಿಕೊಂಡರೆ ಆದೀತೇ?” ಎನ್ನುತ್ತ ಗೆಲುಮುಖದಿಂದ ಕೈಲಿದ್ದ ಪೊಟ್ಟಣ ಬಿಚ್ಚಿದಳು.

“ಅಂತೂ ನನ್ನ ಮನಸ್ಸಿಗೊಪ್ಪುವ ಸೀರೆ ಸಿಕ್ಕಿತು ನೋಡಿ. ಇದು ನನ್ನ ಹವಳದ ಸೆಟ್ಟಿಗೆ ಸರಿಯಾಗಿ ಹೊಂದುತ್ತೆ. ಇದರಲ್ಲೇ ತುಸು ನಸು ಬಣ್ಣದ್ದೂ ಇತ್ತು. ಕೊಂಚ ಕಡು ಬಣ್ಣದ್ದೂ ಇತ್ತು. ನನ್ನ ಅಹವಳ ಇದೇ ಬಣ್ಣದ್ದು ಎಂದೆನಿಸಿ ಕೊಂಡು ಬಿಟ್ಟೆ. ಮುನ್ನೂರು ರೂಪಾಯಿ ಕೊಟ್ಟೆ ಕೊಡಬಹುದಲ್ಲ?”

ಸೀರೆಯನ್ನು ಸವರುತ್ತ ನಾನು ಅನ್ಯಮನಸ್ಕಳಾಗಿ ಅಂದೆ “ಪಾಪ ಮಾಧು ನನ್ನ ಹತ್ತಿರ ಮುನ್ನೂರು ರೂಪಾಯಿ ಇಡಲು ಕೊಟ್ಟಿದ್ದಳು ನಿನ್ನೆ ಕೊಟ್ಟೆ. ಅಷ್ಟು ಇಲ್ಲಿಯವರೆಗಿನ ಫೀಸಿಗಾಯಿತು. ಇನ್ನು ಎಲ್ಲಿಂದ ತರುತ್ತಾಳೋ?”

ಅವಳೆಂದಳು-

“ನಿಮಗೆ ಗೊತ್ತಿಲ್ಲ ಮಿಸೆಸ್ ರಾವ್. ಈ ಕೆಲಸದವರಿಗೆ ಹೇಳಿದರೆ ಅರ್ಥವಾಗುವುದಿಲ್ಲ. ಟೈಫಾಯ್ಡ್ ಗುಣವಾದರೂ ಒಂದೆರಡು ತಿಂಗಳಾದರೂ ಸಂಪೂರ್ಣ ವಿಶ್ರಾಂತಿಯಲ್ಲಿರಬೇಕು. ಇವರಿಗೆಲ್ಲ ಹೇಳುವವರು ಯಾರು? ಸ್ವಲ್ಪ ಗುಣವೆಂದು ತೋರಿದೊಡನೆ ಎದ್ದು ಕೆಲಸಕ್ಕೆ ಹೊರಟುಬಿಡುತ್ತಾರೆ. ಅದು ಮರುಕಳಿಸದೇ ಇದ್ದೀತೇ? ದೂರು ಬರುವುದು ಮಾತ್ರ ಡಾಕ್ಟರುಗಳಿಗೆ. ಈ ಡಾಕ್ಟರಾದವರಿಗೆ ಏನೂ ಸುಖವಿಲ್ಲ ನನ್ನ ಕೇಳಿದರೆ…ಸೀರೆ ನೋಡಿದಿರಾ? ಹೇಗಿದೆ?” ಎನ್ನುತ್ತಾ ತಾನೇ ಎದ್ದು ಬಿಡಿಸಿ ಸೀರೆಯ ಒಡಲು, ಸೆರಗನ್ನು ತೋರಿಸಿದಳು.

ನಾನು ಅದರ ಅಂದಚೆಂದದಲ್ಲಿ ಮುಳುಗಿ ಹೋದೆ. ಒಡಲ ತುಂಬ ರೆಕ್ಕೆ ಬಿಚ್ಚಿ ನರ್ತಿಸುತ್ತಿರುವ ಪುಟ್ಟ ಮಯೂರಗಳು. ಸೆರಗಿನ ಮಧ್ಯೆ ಗೋಪುರವಿರುವ ಸುಂದರವಾದ ದೇವಾಲಯ. ಅದರ ಇಕ್ಕೆಲದಿಂದ ಹರಿವಾಣವನ್ನು ಹಿಡಿದು ಸಿಂಗಾರದಿಂದ ಬರುತ್ತಿದ್ದ ತರುಣಿಯರು, ಬಹಳ ನಾಜೂಕಾಗಿ ಅದನ್ನು ಹೆಣೆದ ವೈಖರಿಯನ್ನೇ ನೋಡುತ್ತ ನಾನು ಮೈಮರೆತೆ.

ಮಿಸೆಸ್ ದೇಶಪಾಂಡೆ ಸೀರೆಯ ಬಗ್ಗೆ ವಿವರಣೆ ಕೊಡುತ್ತಲೇ ಇದ್ದಳು. ಮಧ್ಯೆ ಮಧ್ಯೆ “ಹೇಗಿದೆ? ಹೇಗಿದೆ?” ಎಂದು ಕೇಳುತ್ತಿದ್ದಳು.

“ನಾಡದು ದೀಪಾವಳಿಗೆ ಉಡುತ್ತೇನೆ. ನೀವು ಈ ಬಾರಿ ಯಾವ ಸೀರೆ ತೆಗೆದಿರಿ?”

ನಾನು “ಹಾಂ ಹೂಂ” ಎನ್ನುತ್ತಲೇ ಇದ್ದೆ.

ಹಿಂಬಾಗಿಲಿನಿಂದ ಯಾರೋ ಅಳುವ ದನಿಯಿಂದ “ಅಮ್ಮಾ” ಎಂದು ಕರೆದಂತೆ ಆಯಿತು.

“ಯಾರು?” – ಎಂದು ಹೋಗಿ ಬಾಗಿಲು ತೆರೆದೆ. ವೆಂಕ ಗಟ್ಟಿಯಾಗಿ ಅಳುತ್ತಾ ಎಂದಳು.

“…ಅಣ್ಣ… ಹೋಗಿಬಿಟ್ಟ … ಅಮ್ಮ ಹೇಳಿದ್ಲು…ಒಂದು ಇಪ್ಪತ್ತು ರೂಪಾಯಿ ಬೇಕಂತೆ…ಕೇಳಿ ಬಾ…” ಎಂದಳು.

ನಿಂತ ಕಾಲಿನ ಬಲವೇ ಉಡುಗಿದಂತಾಗಿ ಬೆಚ್ಚಿ ಕೇಳಿದೆ. “ಹೌದಾ?”

ಅಸ್ತವ್ಯಸ್ತ ಮನಸ್ಸಿನಿಂದ ಒಳಬಂದು ನಡುಗುವ ದನಿಯಲ್ಲಿ ಅಂದೆ “ಅವನು… ಮಾಧೂ ಮಗ, ಹೋಗಿಯೇ ಬಿಟ್ಟನಂತೆ. ರೂಪಾಯಿಗೆ ಹೇಳಿ ಕಳಿಸಿದ್ದಾಳೆ.”

ನಿರ್ವಿಕಾರ ಮುಖದಿಂದ ಶ್ರೀಮತಿ ದೇಶಪಾಂಡೆ,

“ಹೋದನೆ, ಪಾಪ. ಏನು ಮಾಡಲಾಗುತ್ತದೆ ಹೇಳಿ. ನಿಮಗೆ ಕೆಲಸವಿದೆಯೋ ಏನೋ, ನಾನು ಹೋಗುತ್ತೇನೆ” – ಎಂದು ಹೊರಟುಬಿಟ್ಟಳು. ಬಾಗಿಲವರೆಗೆ ಹೋದವಳು ಪುನಃ ನಿಂತು.

’ಮಿಸೆಸ್ ರಾವ್, ಇಂತಹದೇ ಸೀರೆ ಇನ್ನು ಒಂದೇ ಇದೆ ಅಲ್ಲಿ. ಒಂದೇ ಒಂದು. ದೀಪಾವಳಿ ಸಮಯವಾದ್ದರಿಂದ ಉಳಿಯುವುದೆಂಬ ಭರವಸೆ ನನಗಿಲ್ಲ… ಬಿಡಬೇಡಿ, ಬರೀ ಮುನ್ನೂರೇ ರೂಪಾಯಿ” ಎಂದು ಕೂಗಿ ನುಡಿದಳು.

ಬರೀ ಮುನ್ನೂರೇ ರೂಪಾಯಿ!!

ಕಾರು ಚಲಿಸಿತು. ಶ್ರೀಮತಿ ದೇಶಪಾಂಡೆಯ ಮಡಿಲಲ್ಲಿ ಮಾಧುವಿನ ಮುನ್ನೂರು ರೂಪಾಯಿ ಸೀರೆಯ ರೂಪದಲ್ಲಿ ಕುಳಿತಿತ್ತು. ಹವಳದ ಸೆಟ್ಟಿನೊಡನೆ ಸೇರಲು ಹೋಗುತ್ತಿತ್ತು.

ಬಹುಶಃ ಅಲ್ಲಿ ಗೋವಿಂದನೂ ಬಿದಿರಿನ ವಾಹನವೇರಿ ತನ್ನ ಕೊನೆಯ ಯಾತ್ರೆಗೆ ಸಿದ್ಧನಾಗುತ್ತರಬಹುದು.
*****

ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.