ತಮ್ಮಣ್ಣೋಪಾಖ್ಯಾನ

ಇವತ್ತು-ಸರ್ವೋತ್ತಮನನ್ನು ಅವನ ಮನೆಯಲ್ಲಿ ಹಿರಿಯರೆಲ್ಲ ತಮ್ಮನೆಂದು ಕರೆಯುತ್ತಿದ್ದರಾದರೆ ಕಿರಿಯರು ತಮ್ಮಣ್ಣನೆಂದು ಕರೆಯುತ್ತಿದ್ದರು. ಕಿರಿಯರು ಕರೆಯುತ್ತಿದ್ದ ಹೆಸರೇ ಊರ ಜನರ ಬಾಯಲ್ಲೂ ನಿಂತು ಅವನು ಎಲ್ಲರ ಪಾಲಿಗೆ ತಮ್ಮಣ್ಣನೇ ಆದ. ಈ ಹೆಸರು ಮುಂಬಯಿಯಲ್ಲಿ ಮಾತ್ರ ಈವೆರೆಗೆ ಯಾರ ಕಿವಿಗೂ ಬಿದ್ದಿರಲಿಲ್ಲ. ಹಾಗಾಗಿ ಪರಿಚಯದ ಜನ ಅವನನ್ನು ಸರ್ವೋತ್ತಮನೆಂದು ಬಾಯಿ ತುಂಬುವ ಹೆಸರಿನಿಂದಲೇ ಸಂಬೋಧಿಸುತ್ತಿದ್ದರು. ಅವನ ಹಾಗೆಯೇ ಈಗಿನ ಕೋಣೆಯಲ್ಲಿ ‘ಪೀಜೀ’ ಆಗಿದ್ದ ಇತರ ಮೂವರಿಗೆ ಅವನ ಬಗ್ಗೆ ಅಕ್ಕರೆ ಉಕ್ಕಿ ಬಂದಾಗ ಸರ್ವೋ ಎಂದು ಕರೆಯುತ್ತಿದ್ದದ್ದೂ ಉಂಟು. ಆದರೆ ಅದು ಕ್ವಚಿತ್ತಾಗಿ.

ಹೀಗಿರುವಾಗ, ಇವತ್ತು ನಸುಕಿನಲ್ಲೇ ಬಂದು ಕೋಣೆಯ ಕದ ತಟ್ಟಿದ ತಾರ್‍ಮನ್, “ಇಲ್ಲಿ ‘ತಮ್ಮನ್ನಾ’ ಹೆಸರಿನವರು ಯಾರು ?” ಎಂದು ಕೀಳಿದಾಗ ಕೋಣೆಯಲ್ಲಿ ಮೊದಲು ನಗುವಿನ ಸಣ್ಣ ಅಲೆಯೆದ್ದಿತು. ಮರುಕ್ಷಣ, ಕಣ್ಣೆದುರು ನಿಂತವನು ತಾರ್‍ಮನ್‌ನೆಂದು ಅರಿವು ಮೂಡಿದ್ದೇ ಎಲ್ಲರಿಗೂ ಕಳವಳವುಂಟಾಯಿತು. ಸರ್ವೋತ್ತಮ ಇತರ ಮೂವರನ್ನೂ ಬದಿಗೆ ಸರಿಸಿ, “ತಮ್ಮನ್ನಾ ಅಲ್ಲ, ತಮ್ಮಣ್ಣ, ಅದು ನಾನು, ಇತ್ತ ಕೊಡಿ” ಎಂದು ಹೇಳಿ ತಾರನ್ನು, ಅದನ್ನು ಹಿಡಿದು ನಿಂತವನಿಂದ ಹೆಚ್ಚು ಕಡಿಮೆ ಕಸಿದುಕೊಂಡು ನಡುಗುವ ಕೈಯಿಂದ ತೆರೆದಾಗ ತುಂಬಾ ದುಃಖದಾಯಕ ಸುದ್ದಿ ಕಣ್ಣಿಗೆ ಬಡಿಯಿತು. “ಅಪ್ಪ ತೀರಿಕೊಂಡ. ಕೂಡಲೇ ಹೊರಟು ಬಾ.”

ಎರಡು ದಿನಗಳ ಹಿಂದಷ್ಟೇ ಅಪ್ಪನ ಪತ್ರ ಬಂದಿತ್ತು. ಈಗ ಹೀಗೇಕಾಯಿತು ? ಎಂದುಕೊಳ್ಳುತ್ತ ತಮ್ಮಣ್ಣ ಕುರ್ಚಿಯೊಂದರಲ್ಲಿ ಕುಸಿದು ಕುಳಿತ.

ಆವತ್ತು-

ಸರಿಯಾಗಿ ಹನ್ನೆರಡು ವರ್ಷಗಳ ಹಿಂದೆ, ತಮ್ಮಣ್ಣನ ಅಜ್ಜ ಸತ್ತಾಗ, ಅವನ ಅಪ್ಪನಿಗೂ ಇಂಥದ್ದೇ ತಾರು ಬಂದಿತ್ತು. ಕುಮಟೆಯಿಂದ ತಮ್ಮಣ್ಣನ ಸೋದರಮಾವ ಕೊಟ್ಟ ತಾರು ಆಗಿತ್ತದು : “ಅಪ್ಪ ತೀರಿಕೊಂಡ. ಅಕ್ಕನೊಂದಿಗೆ ಕೂಡಲೇ ಹೊರಟು ಬಾ.” ಅವನಿಗಾಗ ಹದಿಮೂರು ವರ್ಷ. ಇಂಗ್ಲಿಷ್ ಮೂರನೇ ಇಯತ್ತೆಯಲ್ಲಿ ಓದುತ್ತಿದ್ದ. ತಾರು ಬಂದಾಗ ಅವನಿನ್ನೂ ಸಾಲೆಯಲ್ಲಿದ್ದ. ಗಂಜೀ ಊಟಕ್ಕೆಂದು ಮನೆಗೆ ಬಂದಿದ್ದಾಗ ಮಗ್ಗುಲ ಹಿತ್ತಲ ಮನೆಯ ಉಪೇಂದ್ರ ಬಾಪ್ಪಾನಿಂದ ಸಮಾಚಾರ ತಿಳಿಯಿತು-ಅಪ್ಪ ತಾನೂ ಹೋಗಲಾರೆ, ಅಮ್ಮನನ್ನೂ ಕಳಿಸಲಾರೆ ಎನ್ನುತ್ತ ಜಮದಗ್ನಿಯ ಅವತಾರ ನಾಗಿ ಅಂಗಳಕ್ಕೆ ಹಾಕಿದ ಚಪ್ಪರ ಅದರುವ ಹಾಗೆ ತುಳಸೀಕಟ್ಟೆಯ ಸುತ್ತ ಬಯಲಾಟದ ಧಿಮಿಕಿಟ ಕುಣಿದನಂತೆ. ಅಪ್ಪನ ಸಿಟ್ಟು ಅವನಿಗೆ ಹೊಸತಾಗಿರಲಿಲ್ಲ. ಜಮದಗ್ನಿ ಎಂದರೆ ಯಾರೆಂದು ಗೊತ್ತಿಲ್ಲದೆಯೂ ಅಪ್ಪನು ಕುಣಿಯುತ್ತಿದ್ದ ವೇಷಕ್ಕೆ ಒಪ್ಪುವ ಹೆಸರೆಂದು ಅವನಿಗೂ ಅನ್ನಿಸಿತ್ತು. ಸಿಟ್ಟು ಬಂದಾಗಲೆಲ್ಲ ಮೈಮೇಲಿನ ಭಾನ ಕಳಕೊಂಡವನ ಹಾಗೆ ಆಡಿಕೊಳ್ಳುತ್ತಿದ್ದುದು ಅಮ್ಮನನ್ನಾದರೂ, ಅವನ ಸಿಟ್ಟುಕೆಂಪಗೆ ಕಣ್ಣು ಕಿಸಿಯುತ್ತಿದ್ದುದು ಅಮ್ಮನ ಅಪ್ಪನ ಮೇಲಾಗಿತ್ತೆನ್ನುವುದು ಅವನಿಗೆ ಗೊತ್ತಿತ್ತು. ಅಪ್ಪನಿಗೆ ಅಜ್ಜನ ಹೆಸರೆಂದರೆ ಆಗುತ್ತಿರಲಿಲ್ಲ. ಆದರೆ ಈ ಬಾರಿ ಪ್ರಕರಣ ವಿಕೋಪಕ್ಕೆ ಹೋದಂತಿತ್ತು. ಉಪೇಂದ್ರ ಬಾಪ್ಪಾನಂಥ ಥಂಡ ಸ್ವಭಾವದವನು ಕೂಡ ಅಪ್ಪನ ತಲೆತಿರುಕತನದಿಂದ ಜಿಗುಪ್ಸೆ ಪಟ್ಟುಕೊಂಡಿದ್ದ. ಸಾಲೆಯಿಂದ ಅದೇ ಹಿಂದಿರುಗಿ ಬರುತ್ತಿದ್ದ ಅವನನ್ನೂ ಹಿತ್ತಲ ದಣಪೆಯಲ್ಲೇ ಸಂಧಿಸಿ ಅವನ ಅಪ್ಪನನ್ನು ಹೀನಾಮಾನ ತರಾಟೆಗೆ ತೆಗೆದುಕೊಂಡ-

“ಎಂಥಾ ಮನುಷ್ಯನಪ್ಪಾ ನಿಮ್ಮಪ್ಪಾ ! ಹಡೆದ ತಂದೆಯನ್ನು ಕಳಕೊಂಡು ಕಂಗೆಟ್ಟವಳನ್ನು ಸಂತೈಸುವುದನ್ನು ಬಿಟ್ಟು ಸತ್ತುಹೋದವನನ್ನು ಅವಳೆದುರೇ ಬೈದುಬಿಟ್ಟನಲ್ಲ ! ದ್ವೇಷಕ್ಕೂ ಒಂದು ಮಿತಿಯಿಲ್ಲವೇ ? ಹೊತ್ತು ಗೊತ್ತು ಇರಬೇಡವೇ ! ಇವನಿಗೆ ಇಲ್ಲಿ ಅದೇನು ಗುಡ್ಡ ಕಡಿಯುವ ಕೆಲಸವೇ ! ತನಗೆ ಪುರುಸೊತ್ತು ಇಲ್ಲದಿದ್ದರೆ ಇಲ್ಲ, ಹೆಂಡತಿಯನ್ನಾದರೂ ಕಳಿಸಬಹುದಿತ್ತು. ನೀನೀಗ ಅಲ್ಲಿಗೆ ಹೋಗಿ ಏನು ಹರ್ದಿನಾ ಮಾಡ್ತೀಯೆ ? ನೀನು ಮುಟ್ಟುವಷ್ಟರಲ್ಲಿ ಅವನು ಸುಟ್ಟು ಬೂದಿಯಾಗಿರುತ್ತಾನೆ ಎಂದು ಹಾರಾಡಿದನಲ್ಲ-ರೀತಿರಿವಾಜು ಗೊತ್ತಿಲ್ಲದ ಈ ಮುಠ್ಠಾಳ ! ನನ್ನಿಂದ ತಡೆದುಕೊಳ್ಳುವುದಾಗಲಿಲ್ಲ ; ಚೆನ್ನಾಗಿ ಬೈದುಬಿಟ್ಟೆ. ಈಗ ಎಲ್ಲಿ ಅದೃಶ್ಯನಾದನೋ, ನೀನೇ ಅಮ್ಮನನ್ನು ಕರಕೊಂಡು ಕೂಡಲೇ ಕುಮಟೆಗೆ ಹೊರಡು. ನಿನ್ನ ಮಾಮಾ ಕಾರು ಕಳಿಸಿದ್ದಾನೆ. ಇಲ್ಲಿಯವರೆಗೆ ಬರಲು ರಸ್ತೆ ಸರಿಯಿಲ್ಲದ್ದರಿಂದ ಡ್ರಾಯ್‌ವರ್ ಕಾರನ್ನು ಮಾದನ ಚಟ್ಟೆಯಲ್ಲೇ ನಿಲ್ಲಿಸಿ ನಿಮ್ಮ ಹಾದಿ ಕಾಯುತ್ತಿದ್ದಾನೆ. ಕೂಡಲೇ ಹೊರಟರೆ ಅಗ್ನಿಸಂಸ್ಕಾರಕ್ಕೆ ಮೊದಲು ಮುಖದರ್ಶನವಾದರೂ ಆದೀತು. ಅಪ್ಪ ಸೋದರತ್ತೆಯರ ಕಾಳಜಿ ಬೇಡ. ನಾನು ಪಾರ್ವತಿ ನೋಡಿಕೊಳ್ಳುತ್ತೇವೆ. ಎರಡು ದಿನಗಳಲ್ಲಿ ಬಂದುಬಿಡಿ. ಅಂತ್ಯಸಂಸ್ಕಾರಕ್ಕೂ ಹೋಗಲು ಬಿಡದವನು ವೈಕುಂಠ ಸಮಾರಾಧನೆಗೆ ಕಳಿಸುತ್ತಾನೋ ಇಲ್ಲವೋ, ಸಂಬಂಧಿಗಳ ಜೊತೆಯಲ್ಲಿ ಅತ್ತರೆ ನಿಮ್ಮಮ್ಮನಿಗೆ ಮನಸ್ಸು ಅಷ್ಟೇ ಹಗುರವಾದೀತು.”

ಉಪೇಂದ್ರ ಬಾಪ್ಪಾ ಅವನೆದುರು ಇಷ್ಟೆಲ್ಲ ಆಡಿರಲಾರ. ಮತ್ತೆ ಯಾರಿಗೆ ಗೊತ್ತು, ಆಡಿರಲೂಬಹುದು….. ಈ ಮನಸ್ಸೆಂಬುದರ ಕಿತಾಪತಿಯ ಬಗ್ಗೆ ಏನೂ ಹೇಳುವುದು ಶಕ್ಯವಿಲ್ಲ. ಯಾರು ಹೇಳಿದ್ದು ? ಯಾವಾಗ ಹೇಳಿದ್ದು ? ಯಾಕೆ ಹೇಳಿದ್ದು ? ಮೊದಮೊದಲಲ್ಲಿ ಎಲ್ಲವೂ ಕಲಸುಮೇಲೋಗರವಾಗಿರುವಾಗಲೂ ಕೊನೆಯಲ್ಲಿ ಮಾತ್ರ ಪ್ರತಿಯೊಂದೂ ಸ್ವಚ್ಛ, ನಿಚ್ಛಳ. ಅಂದಿನ ದುರ್ಧರ ಪ್ರಸಂಗವನ್ನು ನೆನೆಯುವಾಗ ತಮ್ಮಣ್ಣನಿಗೆ ಈಗಲೂ ಗೊಂದಲಕ್ಕೆ ಎಡೆಯಾಗದಂತೆ ನೆನಪಾಗುತ್ತದೆ : ಮಾವ ಕಳುಹಿಸಿದ ಕಾರಿನಲ್ಲಿ ಕುಳಿತು ಕುಮಟೆಯ ಕಡೆಗೆ ಸಾಗುತ್ತಿದ್ದಾಗ ನಡುವೆಯೇ ಒಂದೆಡೆಯಲ್ಲಿ-ಬಹುಶಃ ಸಾಣೀಕಟ್ಟೆಯ ಧಕ್ಕೆಯನ್ನು ದಾಟುತ್ತಿರುವಾಗ ಇರಬೇಕು-ಸರಕ್ಕನೆಂಬಂತೆ ತನ್ನ ಅಪ್ಪನ ಬಗ್ಗೆ ಭಯಾನಕ ತೀರ್ಮಾನಕ್ಕೆ ಬಂದುಬಿಟ್ಟಿದ್ದ-ಮನುಷ್ಯನಲ್ಲ ಈ ದುಷ್ಟ, ರಾಕ್ಷಸ !

ಮನೆಯ ಅಂಗಳ ತಲುಪಿ ಜಗಲಿಯ ಮೆಟ್ಟಿಲು ಹತ್ತುತ್ತಿದ್ದಂತೆ, ಸಂಧಿವಾತದಿಂದ ಕೈಕಾಲುಗಳ ಗಂಟುಗಳೆಲ್ಲ ಊದಿಕೊಂಡು ಹಾಸಿಗೆಯಲ್ಲೇ ಬಿದ್ದಿರುತ್ತಿದ್ದ ಅವನ ಸೋದರತ್ತೆ ಹೊರ ಜಗಲಿಗೆ ಬಂದು ಕಂಚಿನ ಬಟ್ಟಲಲ್ಲಿ ಗಂಜಿ ಬಡಿಸಿ ಇವನ ಹಾದಿ ಕಾಯುತ್ತಿದ್ದದ್ದು ಕಂಡಿತು-

“ಒಳಗೆ ಅಮ್ಮ ಅಳುತ್ತಿದ್ದಾಳೆ. ಅತ್ತುಕೊಳ್ಳಲಿ, ದುಃಖ ಶಮನವಾದೀತು. ಸಾಲೆಯ ಚೀಲ ಜಾಗದಲ್ಲಿಟ್ಟು ಕೈಕಾಲು ತೊಳೆದುಕೊಂಡು ಬಾ. ಇಲ್ಲೇ ಉಣ್ಣುವಿಯಂತೆ. ನಿನ್ನಪ್ಪ ಒಳ್ಳೆಯ ಕೆಲಸ ಮಾಡಲಿಲ್ಲ. ಅವನ ಮನಸ್ಸೇ ಇತ್ತಿತ್ತ ಸರಿಯಿಲ್ಲ. ಎಂಥ ಕಷ್ಟದಲ್ಲಿದ್ದಾನೋ. ಅಮ್ಮನನ್ನು ನೀನೇ ಕುಮಟೆಗೆ ಕರೆದುಕೊಂಡು ಹೋಗು. ಉಪೇಂದ್ರ ಹೇಳಿರಬೇಕು. ದಣಪೆಯಲ್ಲಿ ಮಾತನಾಡಿಸಿದವನು ಅವನೇ ಅಲ್ಲವೆ ? ಅವನು ಹೇಳಿದ ಎಲ್ಲವನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಕೆಂದಿಲ್ಲ.”

ಅರ್ಧ ಗಂಟೆಯ ನಂತರ ಕುಮಟೆಗೆ ಹೋಗುವ ದಾರಿಯಲ್ಲಿ ಅವನು ಅಪ್ಪನ ಬಗ್ಗೆ ತಲುಪಿದ ನಿಷ್ಠುರ ತೀರ್ಮಾನವನ್ನು ತಡೆಯುವ ತಾಕತ್ತು ಈ ಮಾತುಗಳಿಗಿರಲಿಲ್ಲ.

ಸೋದರಮಾವ ಕಳುಹಿಸಿದ ಕಾರು ಅವನದಲ್ಲವಾಗಿತ್ತು. ಮನೆಯಲ್ಲಿ ಕಾರು ಇಟ್ಟುಕೊಳ್ಳುವುದಕ್ಕೆ ಅಜ್ಜನ ಸಕತ್ ಮನಾಯಿಯಿತ್ತು. ಕುಮಟೆಯಲ್ಲಿ ಕಾರು ಇದ್ದವರು ಇಬ್ಬರು ಮಾತ್ರ-ಫಾರೆಸ್ಟ್ ಕಾಂಟ್ರ್ಯಾಕ್ಟರ್ ಮಣ್ಣೌಯಾನೆ ಮಂಜುನಾಥ ಬಾಳ್ಗಿ ಹಾಗೂ ದೊಡ್ಡ ವಖಾರಿಯ ಬೋಂಡ್ಗಾಯಿ ವೆಂಕಟೇಶ. ಈಗ ತಂದದ್ದು ಬಹುಶಃ ಬೋಂಡ್ಗಾಯಿಯದಿರಬೇಕು. ಅದನ್ನು ಚಲಾಯಿಸಿ ತಂದವನು ಉಪೇಂದ್ರ ಬಾಪ್ಪಾ ತಿಳಿದ ಹಾಗೆ ಡ್ರಾಯ್‌ವರ್‍ನಾಗಿರದೇ ಸೋದರಮಾವನ ದಾಯಾದಿ ಸಂಬಂಧಿ ನಾಗೇಶಮಾಮನಾಗಿದ್ದ. ಚಿಕ್ಕ ಪ್ರಾಯದ ನಾಗೇಶಮಾಮ ತೆಳ್ಳಗೆ ಬೆಳ್ಳಗೆ ಉದ್ದನಿದ್ದು ಸಪೂರ ಮೀಸೆ ಇಟ್ಟುಕೊಂಡಿದ್ದ. ಸಾದಾ ಪಾಯಜಾಮ ಅಂಗಿ ತೊಟ್ಟಿದ್ದ ನಾಗೇಶಮಾಮ ನೋಡಿದ ಕೂಡಲೇ ಮೆಚ್ಚುಗೆಯಾದ. ಮುಂದಿನ ಸೀಟಿನ ಮೇಲೆ ಅವನ ಮಗ್ಗುಲಲ್ಲಿ ಕುಳಿತಲ್ಲೇ ಆಗಿನಿಂದಲೂ ಬಿಗಿಗೊಂಡಿದ್ದ ತಮ್ಮಣ್ಣ ಮೆಲ್ಲನೆ ಸಡಿಲಿದ. ಅಮ್ಮ ಒಬ್ಬಳೇ ಹಿಂದಿನ ಸೀಟಿನ ಮೇಲೆ ಕುಳಿತಿದ್ದಳು-

“ಇದೆಲ್ಲ ಹೇಗೆ ಆಯಿತು ? ಯಾವಾಗ ಆಯಿತು ?”

ಆಗಿನಿಂದಲೂ ಅತ್ತು ಅತ್ತು ಜರ್ಝರಿತಳಾಗಿದ್ದ ಅಮ್ಮ ಈಗ ಬಾಯಿ ತೆರೆದಳು. ದನಿಯಲ್ಲಿನ್ನೂ ಅಳುವಿತ್ತು.

ಕುಮಟೆ ಹಾಗೆ ದೊಡ್ಡ ಊರೇನಲ್ಲ. ಅಲ್ಲಿ ಎಲ್ಲವೂ ಬಹುಬೇಗ ಎಲ್ಲರಿಗೂ ಗೊತ್ತಾಗಿಬಿಡುತ್ತದೆ. ಮೇಲಾಗಿ ಅವನ ಅಜ್ಜ ಕುಮಟೆಯಲ್ಲಂತೂ ಆಯಿತೇ. ಇಡೀ ಜಿಲ್ಲೆಯಲ್ಲೂ ಬಹು ದೊಡ್ಡ ವರ್ಚಸ್ಸುಳ್ಳ ಜನವಾಗಿದ್ದರು. ವಖಾರಿಯ ಮರ್ತು ನಾಯಕರೆಂದರೆ ಹೆಸರು ಕೇಳಿಯೇ ಆದರದಿಂದ ತಲೆ ತಗ್ಗಿಸಬೇಕು-ಅಂಥ ವ್ಯಕ್ತಿತ್ವ ಅವರದಾಗಿತ್ತು. ಹಾಗೆ ತಲೆ ತಗ್ಗಿಸಿದ್ದನ್ನು ತಮ್ಮಣ್ಣ ಖುದ್ದು ಕಣ್ಣುಗಳಿಂದ ನೋಡಿದ್ದ !

ಅಜ್ಜನ ಮನೆಯ ಆವರಣ ದೊಡ್ಡ ಕೋಟೆಯ ಹಾಗಿತ್ತು. ಊರಿನ ಪ್ರಖ್ಯಾತ ಮಠದ ಎದುರಿಗಿದ್ದ ಮಾರುತಿ ದೇವಸ್ಥಾನದ ಹಿಂಬದಿಯ ಕಂಪೌಂಡಿನಲ್ಲಿ ಒಂದಕ್ಕೊಂದು ಲಂಬವಾಗಿ ಕಟ್ಟಿಸಿದ ಮೂರು ದೊಡ್ಡ ಮನೆಗಳ ಗುಂಪಿನಲ್ಲಿ ನಡುವಿನ ಮನೆ ಅಜ್ಜನದಾಗಿತ್ತು. ಉಳಿದೆರಡು ಮನೆಗಳು ಅಜ್ಜನ ದಾಯಾದಿಗಳಿಗೆ ಸೇರಿದುವಾಗಿದ್ದವು. ಆ ಮನೆಗಳು ದೊಡ್ಡದೊಂದು ಚಚ್ಚೌಕು ಅಂಗಳದ ಮೂರು ಬದಿಗಳಾಗುವಂತೆ ಒಂದಕ್ಕೊಂದು ಒತ್ತಿ ನಿಂತಿದ್ದವು. ಅಂಗಳದ ನಾಲ್ಕನೇ ಬದಿಯೇ ಈ ಚೌಕಕ್ಕೆ ಕೋಟೆಯ ಆಕಾರ ಕೊಟ್ಟಿದ್ದ-ಬೇರೆ ಕಲ್ಲಿನಲ್ಲಿ ಕಟ್ಟಿಸಿದ ಎರಡು ಆಳು ಎತ್ತರದ-ಗೋಡೆಯಾಗಿತ್ತು. ಗೋಡೆಯಲ್ಲಿ ಅಗಸೆ ಬಾಗಿಲನ್ನು ಹೋಲುವ ಮರದ ಭವ್ಯ ಬಾಗಿಲು, ಬಾಗಿಲ ತಲೆಯ ಮೇಲೆ ದೊಡ್ಡ ಟೋಪಿಯಂಥ ನಾಡುಹೆಂಚು ಹೊದಿಸಿದ ಚಿಕ್ಕ ಮಾಡು. ಬೀದಿ ನಾಯಿಗಳು, ಹಣಬೆ ದನ ಚೌಕಕ್ಕೆ ನುಗ್ಗದ ಹಾಗೆ ತಡೆಯಲು ಬಾಗಿಲಿಗೆ ಜೋಡಿಸಿದ ‘ಉ’ ಆಕಾರದ ಕಬ್ಬಿಣದ ಕಟಕಟೆ, ಚೌಕದ ನಡುನಡುವೆ ಮೂರೂ ಮನೆಗಳಿಗೆ ಸೇರಿದ ತುಳಸೀಕಟ್ಟೆ.

ಈ ಮನೆಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳಲ್ಲಿ ತಮ್ಮಣ್ಣನ ಅಜ್ಜನೇ ಎಲ್ಲರಿಗಿಂತ ಹಿರಿಯರು. ಎಲ್ಲರ ಭಯಭಕ್ತಿಗಳಿಗೆ ಪಾತ್ರರಾಗಿದ್ದವರು. ಆಗಿನ ಕಾಲದಲ್ಲಿ ಈ ಮನೆಗಳಲ್ಲಿ ದೊಡ್ಡವರು ಸಣ್ನವರು ಕೂಡಿ ಹದಿನೈದು ಇಪ್ಪತ್ತು ಮಂದಿಯಾದರೂ ವಾಸಿಸುತ್ತಿದ್ದಿರಬೇಕು. ಹೀಗಿದ್ದೂ ಬೆಳಗಿನ ಹೊತ್ತಿಗೆ, ಅಜ್ಜ ವಖಾರಿಗೆ ಹೊರಟುಹೋಗುವವರೆಗೂ ಮೂರೂ ಮನೆಗಳಲ್ಲಿ ನೀರವ ನಿಶ್ಯಬ್ದ. ಹೊರಜಗಲಿಯ ಮೇಲಾಗಲೀ ಅಂಗಳದಲ್ಲಾಗಲೀ, ಗದ್ದಲ ಮಾಡಬಹುದಾಗಿದ್ದ ಮಕ್ಕಳ ಸುಳುವಿಲ್ಲ. ಅಜ್ಜ ಅಗಸೆ ಬಾಗಿಲನ್ನು ದಾಟಿದ ಕೂಡಲೇ ಬಿಲಗಳಲ್ಲಿ ಅಡಗಿ ಕುಳಿತಿದ್ದ ಇಲಿಗಳ ಹಾಗೆ ಮಕ್ಕಳೆಲ್ಲ ದುಬುದುಬು ಅಂಗಳಕ್ಕೆ ಬರುತ್ತಿದ್ದವು.

ಅಜ್ಜನ ಮನೆಯೆಂದಕೂದಲೇ ಈಗಲೂ ಈ ಮನೆಯ ಆವರಣದ ಭೌತಿಕ ವಿವರಗಳ ಜೊತೆಗೆ-ತಲೆಯಿಂದ ಪಾದದವರೆಗೂ ಶುಭ್ರ ಬಿಳಿಯ ಉಡುಪು ಧರಿಸಿ ವಖಾರಿಗೆ ಹೊರಟ-ಅಜ್ಜನ ಆರು ಫೂಟು ಎತ್ತರದ ಗೌರವರ್ಣದ ಭವ್ಯ ಆಕೃತಿಯೂ ಕಣ್ಣೆದುರು ನಿಲ್ಲುತ್ತಿತ್ತು. ನೋಡುತ್ತಿದ್ದಂತೆ ಎದುರು ನಿಂತದ್ದು ಯಾವ ಲೋಕಕ್ಕೆ ಸೇರಿದ್ದೆನ್ನುವ ಬಗೆಗೇ ದಿಗ್ಭ್ರಮೆಯಾಗುತ್ತಿತ್ತು. ಈ ದೃಶ್ಯಕ್ಕೇ ತೆಕ್ಕೆಹಾಕಿಕೊಂಡಂತಿದ್ದ ಒಂದು ಚಿಕ್ಕ ಘಟನೆಯೂ ಆಗೀಗ ನೆನಪಿಗೆ ಬರುತ್ತಿದ್ದುದುಂಟು-ವಖಾರಿಗೆ ಹೊರಟ ಅಜ್ಜ ಆ ದಿನ ಅಗಸೆ ಬಾಗಿಲವರೆಗೂ ಹೋಗಿ ಏನೋ ನೆನಪಾದವರ ಹಾಗೆ ಮನೆಗೆ ವಾಪಸ್ಸಾಗಿದ್ದರು. ಹೀಗೆ ಎಂದೂ ವಾಪಸ್ಸು ಬಂದವರಲ್ಲವಂತೆ. ಅಜ್ಜಿ ಕೇಳಿದಾಗ, “ಬೆತ್ತ ಮರೆತೆ” ಎಂದರು. ಅಜ್ಜಿ ತುಂಬಾ ಕಳವಳಪಟ್ಟು, “ಇಷ್ಟಕ್ಕೇ ಹಿಂತಿರುಗಿ ಬರಬೇಕಾಗಿತ್ತೇ ? ತುಸು ಹೊತ್ತು ಕುಳಿತುಕೊಂಡು ಇಷ್ಟು ನೀರು ಕುಡಿದು ಹೋಗಿ” ಎಂದು ಪುಸಲಾಯಿಸಿ ಕುಳ್ಳಿರಿಸಿಕೊಂಡು ನೀರು ತರಲು ದುಡುದುಡು ಒಳಗೆ ಹೋಗಿದ್ದಳು. ಇದೀಗ, ಅಮ್ಮ ನಾಗೇಶಮಾಮನಿಗೆ ಹಾಕಿದ ಪ್ರಶ್ನೆ ಕೇಳುತ್ತಿದ್ದಂತೆ ನೆನಪಿನ ಅಂಗಳದಲ್ಲಿ ಚೇತರಿಸಿಕೊಂಡಿದ್ದು ಇದೇ ಘಟನೆಯಾಗಿತ್ತು.

“ದೊಡ್ಡಪ್ಪ ನಿನ್ನೆಯವರೆಗೂ ಆರಾಮವಾಗಿಯೇ ಇದ್ದರು,” ಅಮ್ಮ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಹೊರಟಿದ್ದ ನಾಗೇಶಮಾಮ-

“ವಖಾರಿಯಿಂದ ದಿನಾಲು ಬರುವ ಹೊತ್ತಿಗೇ ವಾಪಸ್ಸಾಗಿದ್ದರು. ಕೈಕಾಲು ತೊಳೆದುಕೊಂಡು ಉಡುಪು ಬದಲಾಯಿಸಿ, ದೇವರ ಕೋಣೆಗೆ ಹೋಗಿ ಕೈಮುಗಿದು ಬಂದು ಮುಂದಿನ ಜಗಲಿಯಲ್ಲಿದ್ದ ದೊಡ್ಡಮ್ಮನ ಎದುರು ಕುಳಿತು, “ಇವತ್ತೇಕೋ ಅನಸೂಯಾಳ ನೆನಪು ಮತ್ತೆಮತ್ತೆ ಬರತೊಡಗಿದೆ, ಮಗು ಹೆದರುವಳೋ, ಹೀಗೇ ‘ನೋಡುವ ಮನಸ್ಸಾಗಿದೆ. ನಾಲ್ಕು ದಿನಗಳ ಮಾತಿಗೆ ಕಳಿಸಿಕೊಡು’ ಎಂದರೆ ಕಳಿಸುತ್ತಾನೋ ಇಲ್ಲವೋ, ನನಗೆ ಮೈಯಲ್ಲಿ ಎಳ್ಳಷ್ಟೂ ಸರಿಯಿಲ್ಲ ಎಂದು ತಾರು ಕೊಟ್ಟರೆ ಹೇಗೆ ?’ ಎಂದು ಕೇಳಿದರಂತೆ. ಅಜ್ಜಿ ಗಾಬರಿಗೊಂಡು, ‘ಬಿಡ್ತು, ಬಿಡ್ತು ! ದೀಪ ಹಚ್ಚುವ ಹೊತ್ತಿಗೆ ಇಂಥ ಅಭದ್ರ ಸಬೂಬು ಯಾತಕ್ಕೆ ? ಒಂದು ಪತ್ರ ಬರೆದು ಹಾಕಿ. ಇಲ್ಲವೇ ವಖಾರಿಯ ಜನದೊಡನೆ ಚೀಟಿ ಬರೆದು ಕಳಿಸಿಕೊಡಿ’ ಎಂದು ಸೂಚಿಸಿದಳು. ‘ರಾತ್ರಿಯ ಊಟಕ್ಕೆ ಪತ್ರೋಡೆ ಮಾಡುವುದು ಸಾಧ್ಯವೋ ?’ ಎಂದು ಕೇಳಿದರಂತೆ. ‘ಈಗ ಹೇಗೆ ಸಾಧ್ಯ ? ನಾಳೆ ಬೆಳಿಗ್ಗೆ ಮಾಡೋಣ. ಇಲ್ಲವಾದರೆ ನಿಮ್ಮ ಮುದ್ದಿನ ಮಗಳು ಬಂದಾಗ ಮಾಡೋಣ. ಅವಳಿಗೂ ಪತ್ರೋಡೆ ಎಂದರೆ ಪ್ರೀತಿಯಲ್ಲವೆ ?’ ಎಂದು ಕೇಳಿ ದೊಡ್ಡಮ್ಮ ನಕ್ಕಾಗ ತಾವೂ ನಕ್ಕರು. ‘ಪತ್ರ ಬರೆದರೆ ಅಳಿಯರಾಯ ಕಳಿಸಬಹುದೆ ? ತುಂಬಾ ಸ್ವಾಭಿಮಾನಿ ಮನುಷ್ಯನಾತ. ಕೊನೆಗೂ ನನ್ನ ಕೈಯಿಂದಾದ ತಪ್ಪನ್ನು ಮಾಫ್ ಮಾಡಲೇ ಇಲ್ಲ’ ಎಂದು ಪರಿತಪಿಸಿದರಂತೆ. ‘ನೀನು ಹೇಳಿದ ಹಾಗೆ ಈಗಲೇ ಸಣ್ಣ ಚೀಟಿ ಬರೆಯುತ್ತೇನೆ. ನಾಳೆ ಗಣಪೂನ ಜೊತೆಗೆ ಕಳಿಸಿದರಾಯಿತು. ಊಟಕ್ಕೆ ಸಿದ್ಧವಾದ ಮೇಲೆ ಕರೆ. ಮೊಮ್ಮಕ್ಕಳ ಜೊತೆಗೇ ಊಟ ಮಾಡುತ್ತೇನೆ’ ಎಂದರು. ಸಾಮಾನ್ಯವಾಗಿ ಮಗ ಅಂಗಡಿಯನ್ನು ಮುಚ್ಚಿ ಬಂದಮೇಲೆ ಮಗನ ಜೊತೆಗೇ ಊಟ ಮಾಡುವುದು ವಾಡಿಕೆ. ಸೊಸೆ ವಿಚಾರಿಸಿದಾಗ ತಾನು ಚೆನ್ನಾಗಿದ್ದೇನೆ, ಮಲಗುವುದಕ್ಕೆ ಮೊದಲು ಒಂದು ಪತ್ರ ಬರೆಯಬೇಕಾಗಿದೆಯೆಂದರಂತೆ. ದನಿ ಸರಿಯಾಗಿತ್ತು. ಊಟವಾದ ಕೂಡಲೇ ಮಲಗುವ ಕೋಣೆಗೆ ನಡೆದರು. ದೊಡ್ಡಮ್ಮ ತನ್ನ ಊಟವೂ ಮುಗಿದ ಮೇಲೆ ಒಳಗಿನ ಕೆಲಸ ತೀರಿಸಿ ಕೋಣೆಗೆ ಬರುವಷ್ಟರಲ್ಲಿ ಎಲ್ಲವೂ ಮುಗಿದಿತ್ತು. ಅಳಿಯನಿಗೆ ಬರೆದ ತೆರೆದ ಚೀಟಿಯೊಂದು ಮಂಚದ ಮೇಲೆ ಇದ್ದಿತಂತೆ.”

ಆಗಿನಿಂದಲೂ ತನ್ನನ್ನು ಸಾವರಿಸಿಕೊಂಡಿದ್ದ ಅಮ್ಮ ಈಗ ಮತ್ತೆ ಬಿಕ್ಕಳಿಸಹತ್ತಿದಳು. ತಮ್ಮಣ್ಣನಿಗೆ ಈ ಸನ್ನಿವೇಶ ಹೊಸತು. ಇಂಥ ಮಾತೂ ಹೊಸತು. ಸಾವಿನ ಬಗ್ಗೆ, ಸತ್ತವರ ಬಗ್ಗೆ ಕೇಳಿ ಗೊತ್ತಿತ್ತು. ಹತ್ತಿರದಿಂದ ನೋಡಿರಲಿಲ್ಲ. ಇನ್ನೆರಡು ತಾಸುಗಳಲ್ಲಿ ನೋಡಲಿದ್ದ. ತನಗೆ ಭಯವಾಗಿದೆಯೆ ? ದುಃಖವಾಗಿದೆಯೆ ? ಸಿಟ್ಟು ಬಂದಿದೆಯೆ ? ಬಹುಶಃ ಎಲ್ಲವೂ ಕೂಡಿಯೇ ಆಗುತ್ತಿದ್ದುದಕ್ಕೋ ಏನೋ ತನ್ನ ಭಾವನೆಯ ಪರಿಚಯ ತನಗೇ ಇರಲಿಲ್ಲ, ತಮ್ಮಣ್ಣನಿಗೆ. ಕಾರು ಮುಂದೆ ಓಡುತ್ತಿದ್ದಂತೆ ಹಿಂದಕ್ಕೆ ಸರಿಯುತ್ತಿದ್ದ ಗಿಡಗಂಟೆಗಳಲ್ಲಿ ಅದನ್ನು ಅರಸುವವನ ಹಾಗೆ ಅವುಗಳ ಮೇಲೆ ದೃಷ್ಟಿಯೂರಿ ಕುಳಿತ. ಮುಂದಿನ ಸೀಟಿಗೆ ಬಡಿಯುತ್ತಿದ್ದ ಕಾದ ಬಿಸಿಲಲ್ಲೂ ಮೈಯಲ್ಲಿ ಚಳಿ ಹೊಕ್ಕಂತಾಗಿ ಕೂತಲ್ಲೇ ಇನ್ನಷ್ಟು ಮುದುಡಿಕೊಂಡ.

ಆಶ್ಚರ್ಯದ ಸಂಗತಿಯೆಂದರೆ ಕುಮಟೆ ತಲುಪಿ ಅಜ್ಜನ ಹೆಣವನ್ನು ನೋಡಿದ್ದೇ ಈ ಭಯ ತಂತಾನೆ ದೂರವಾದದ್ದು ; ಬರಿ ನೆಲಕ್ಕೆ ಹಾಸಿದ ದರ್ಭೆಗಳ ಮೇಲೆ ಅಂಗಾತ ಮಲಗಿಸಿದ ಅಜ್ಜನ ನಿಶ್ಚೇಷ್ಟ ದೇಹವನ್ನು ಬೆರಗು ತುಂಬಿದ ತಟಸ್ಥ ಭಾವನೆಯಿಂದ ನೋಡಲು ಸಾಧ್ಯವಾದದ್ದು.

ಅಗ್ನಿಸಂಸ್ಕಾರ ಮುಗಿದ ಮೂರನೆಯ ದಿನವೇ ಅಮ್ಮನ ಜೊತೆಗೆ ಅವನು ಊರಿಗೆ ವಾಪಸ್ಸು ಹೊರಟಿದ್ದ. ಗೋಕರ್ಣದವರೆಗೆ ಹೋಗುವ ಬಸ್ಸೊಂದು ನೆಲ್ಲಿಕೇರಿಯ ಬಸ್‌ಸ್ಟ್ಯಾಂಡಿನಿಂದ ಬೆಳಗಿಗೇ ಹೊರಡುತ್ತಿತ್ತು. ಅವರನ್ನು ಬಸ್‌ಸ್ಟ್ಯಾಂಡಿನವರೆಗೆ ಮುಟ್ಟಿಸಲು ಅವನ ಸೋದರಮಾವ ತ್ರಿವಿಕ್ರಮ-ಅವನ ತಿರಿಮಾಮ-ಬಂದಿದ್ದ. “ಭಾವನಿಗೆ ನೀನೇ ಇನ್ನೊಮ್ಮೆ ಹೇಳಿನೋಡು. ಕಬೂಲಾದರ ವೈಕುಂಠ ಸಮಾರಾಧನೆಗೆ ನೀವೆಲ್ಲ ಕೂಡಿ ಬನ್ನಿ. ಅಪ್ಪ ಬರೆದಿಟ್ಟ ಚೀಟಿ ಕೊಡಲು ಮರೆಯಬೇಡ. ಲಿಖಿತರೂಪದಲ್ಲಿ ಕ್ಷೇಮ ಕೇಳಿದ್ದಾನೆ. ಇದಕ್ಕಿಂತ ಬೇರೆ ಏನು ಮಾಡಬಹುದಿತ್ತು ?” ಇಲ್ಲಿಗೆ ಬಂದಲಾಗಾಯ್ತು ಕಣ್ಣುಗಳನ್ನು ಕೆಂಪುಮಾಡಿಕೊಂಡೇ ಇರುತ್ತಿದ್ದ ಅಮ್ಮ ಒಮ್ಮೆ ಬಿಕ್ಕಳಿಸಿದಳು ಅಷ್ಟೇ. ಗೋಕರ್ಣ ತಲುಪುವವರೆಗೂ ಮತ್ತೆ ಚಕಾರವೆತ್ತಲಿಲ್ಲ. ಬಸ್ಸಿನ ಕಿಟಕಿಯಲ್ಲಿ ಮೋರೆ ಹಾಕಿ ಹೊರಗೆ ನೋಡುತ್ತಿದ್ದ ತಮ್ಮಣ್ಣನೂ ತಾಯಿಯನ್ನು ಮಾತನಾಡಿಸಲು ಹೋಗಲಿಲ್ಲ. ನಿಜ ಸಂಗತಿಯೆಂದರೆ ಕುಮಟೆಗೆ ಬಂದಲಾಗಾಯ್ತು ತನ್ನ ಸರೀಕರ ಮಧ್ಯದಲ್ಲೇ ಇರುತ್ತಿದ್ದ ಅವನು ಅಮ್ಮನೊಂದಿಗೆ ಮಾತನಾಡಿಯೇ ಇರಲಿಲ್ಲ.

ಬಸ್ಸು ನೆಲ್ಲಿಕೇರಿಯನ್ನುಬಿಟ್ಟು ಒಂದು ತಾಸಿನೊಳಗೆ ರಸ್ತೆಯ ಎಡದ ಕಣಿವೆಯಲ್ಲಿ ರಾರಾಜಿಸುತ್ತಿದ್ದ ಹಸಿರ ಸಮೃದ್ಧಿ ಕಾಣಿಸತೊಡಗಿತು. ದೂರ, ಈ ಹಸಿರನ್ನು ಸೀಳಿ ಹರಿಯುತ್ತಿದ್ದ ಅಘನಾಶಿನಿಯ ಎರಡೂ ದಡಗಳಲ್ಲಿ ಒತ್ತಾಗಿ ಬೆಳೆದ ತೆಂಗು ಅಡಿಕೆ ಮರಗಳು ಬೆಳಗಿನ ಸಂತ ಬೆಳಕಿನಲ್ಲಿ ಓಲಾಡುತ್ತಿದ್ದ ಪರಿಯನ್ನು ನೋಡುತ್ತಿದ್ದಂತೆ ತಮ್ಮಣ್ಣನಿಗೆ ಅದೇನಾಯಿತೋ-ಅಜ್ಜನ ಮನೆಯಲ್ಲಿ ತಾನು ಕಂಡದ್ದು, ಕೇಳಿದ್ದು ಈವರೆಗೂ ಲಕ್ಷ್ಯಕ್ಕೇ ಬಂದಿರದ ವಿವರಗಳಲ್ಲಿ ಜೀವ ಪಡೆಯತೊಡಗಿದಾಗ ದಿಗಿಲುಗೊಂಡ : ತನ್ನ ಅಜ್ಜ ಮನೆಯಲ್ಲಿ ಇದ್ದಾಗ ಶಾಂತವಾಗಿರುತ್ತಿದ್ದ ಮನೆಗಳ ಅಂಗಳ ಎಂದು ಎಷ್ಟೆಲ್ಲ ಬಗೆಯ ಚಟುವಟಿಕೆಗಳ ಗದ್ದಲದಿಂದ ದುಮುಗುಡುತ್ತಿತ್ತು. ಈ ಎಲ್ಲ ಗೊಂದಲದ ನಡುವೆಯೇ ಅಜ್ಜನ ಮೃತದೇಹ ಉಳಿದೆಲ್ಲ ವಿವರಗಳಿಂದ ಬೇರೆಯಾಗಿ ನಿಂತಿತು. ಅಜ್ಜನ ಕಣ್ಣುಗಳು ಗಟ್ಟಿಯಾಗಿ ಮುಚ್ಚಿದ್ದವು. ಎರಡೂ ಹಸ್ತಗಳು ನಮಸ್ಕಾರದ ರೂಪದಲ್ಲಿ ಬರಿ ಎದೆಯ ಮೇಲೆ ಒಂದಾಗಿದ್ದವು. ಅಂಗುಷ್ಠಗಳು ಧರ್ಬೆಯ ಹುಲ್ಲಿನಿಂದ ಒಂದಕ್ಕೊಂದು ಕಟ್ಟಲ್ಪಟ್ಟಿದ್ದುವು. ನೋಡುತ್ತಿದ್ದಂತೆ ತಮ್ಮಣ್ಣನ ಮುಷ್ಠಿ ದೊಡ್ಡ ನಿರ್ಧಾರಕ್ಕೆ ಬರುತ್ತಿದ್ದ ಧರ್ತಿಯಲ್ಲಿ ಬಿಗಿಗೊಂಡಿತು-ಹನೇಹಳ್ಳಿ ತಲುಪಿದಮೇಲೆ ಅಪ್ಪನನ್ನು ಮಾತನಾಡಿಸುತ್ತೇನೆ. ಇದು ನಿಶ್ಚಿತ ! ಅಜ್ಜ ಮಾಡಿದ ಅಪರಾಧ ಎಷ್ಟೇ ದೊಡ್ಡದಿರಲಿ ಅಜ್ಜನಷ್ಟು ‘ದೊಡ್ಡ’ ವ್ಯಕ್ತಿ ಅಪ್ಪನಂಥ ‘ಸಣ್ಣ’ವನಲ್ಲಿ ಕ್ಷಮೆ ಕೇಳುವ ವಿಚಾರವೇ ಅವನಿಗೆ ಬಿಲ್ಕುಲ್ ಸೇರಿ‌ಅಲಿಲ್ಲ. ಅಮ್ಮ ಆ ಚೀಟಿಯನ್ನು ಅಪ್ಪನಿಗೆ ಕೊಡಲೇಕೂಡದು. ಬದಲಾಗಿ ತಾನೇ ಅಪ್ಪನ ಎದುರು ನಿಂತು ಅವನು ತನ್ನ ದಿರ್ನಡತೆಯ ಬಗ್ಗೆ ತಾನೇಖಜೀಲುಗೊಳ್ಳುವ ಹಾಗೆ ಏನಾದರೂ ಹೇಳಬೇಕು ! ತಮ್ಮಣ್ಣನಿಗೆ ತೊಂದರೆ ಅದುರಾದದ್ದೇ ಇಲ್ಲಿ ; ಏನು ಹೇಳಬೇಕು ? ಹೇಗೆ ಹೇಳಬೇಕು ? ಎಂಥ ಮಾತು ಅಪ್ಪನ ದುಷ್ಟತನಕ್ಕೆ ತಕ್ಕ ಶಾಸ್ತಿಯಾದೀತು ? ಅವನು ನಿಶ್ಚಯಿಸದಾದ. ಒಂದು ವಾಕ್ಯ ಸರಣಿ ರೂಪುಗೊಳ್ಳುವಷ್ಟರಲ್ಲಿ ಅದಕ್ಕೆ ಕಾರಣವಾದ ಮನಸ್ಸಿನೊಳಗಿನ ಚಿತ್ರ ಬೇರೆಯಾಗಿ ಬೇರೆಯೇ ಒಂದು ವಾಕ್ಯ ಹುಟ್ಟಿಕೊಳ್ಳುತ್ತಿತ್ತು. ನೂರಾರು ಚಿತ್ರಗಳು, ನೂರಾರು ವಾಕ್ಯಗಳು,ತಮ್ಮಣ್ಣ ಕುಳಿತಲ್ಲೇ ದಣಿದ. ಏನಿಲ್ಲದಿದ್ದರೂ ಅಪ್ಪನೆದುರು ನೀತು ದೊಡ್ಡಕ್ಕೆ ಬೈದುಬಿಡಬೇಕು : ತೆಂಗಿನ ಮರದಷ್ಟು ಎತ್ತರದ ಅಜ್ಜನೆಲ್ಲಿ ? ಬಿಂಬಲಿ ಮರದಷ್ಟು ಕುಳ್ಳ ನೀನೆಲ್ಲಿ ? ಅಪ್ಪನೆದುರು ಇಷ್ಟನ್ನು ಆಡುವ ಛಾತಿ ತನಗಿಲ್ಲ ಎನ್ನುವುದನ್ನು ಅರಿಯದವನಲ್ಲ ತಮ್ಮಣ್ಣ ! ಆಡುವುದಿರಲಿ, ಅಪ್ಪನೆದುರು ನೆಟ್ಟಗೆ ನಿಲ್ಲುವ ನೀರೂ ಅವನಲ್ಲಿರಲಿಲ್ಲ. ಥತ್ ! ಅನ್ನಿಸಿತು.

ಗೋಕರ್ಣ ಹತ್ತಿರವಾಗುತ್ತಿದ್ದಂತೆ ಕಿಟಕಿಗೆ ತಲೆ ಆನಿಸಿದಲ್ಲೇ ತಮ್ಮಣ್ಣನಿಗೆ ಜೊಂಪು ಹತ್ತಿರಬೇಕು. ಗೋಕರ್ಣದ ಬಸ್‌ಸ್ಟ್ಯಾಂಡು ತಲುಪುತ್ತಲೇ ಅಮ್ಮ ಎಬ್ಬಿಸಿದಾಗ ತಾನು ಎಲ್ಲಿದ್ದೇನೆ ಎನ್ನುವುದೇ ಅವನಿಗೆ ಗೊತ್ತಾಗಲಿಲ್ಲ. ಗೋಕರ್ಣದಿಂದ ಹನೇಹಳ್ಳಿ ಕಾಲ್ನಡಿಗೆಯಲ್ಲಿ ಮುಕ್ಕಾಲು ಗಂಟೆಯ ಹಾದಿ. ಸೂರ್ಯ ಆಗಲೇ ನೆತ್ತಿಗೆ ಬಂದಿದ್ದ. ಕಾಲಡಿಯಲ್ಲಿ ಹೆಜ್ಜೆಗೊಮ್ಮೆ ಭುಸ್ ಎಂದು ಸಿಡಿಯುತ್ತಿದ್ದ ಕೆಂಪು ಧೂಳಿ ಬಿಸಿಯಾಗಿತ್ತು. ಹನ್ನಳ್ಳಿ ಘಾಟೆ ಹತ್ತಿ ಇಳಿದು ಇಗರ್ಜಿ ದಾಟಿ, ಮಾಸ್ತಿಕಟ್ಟೆಯ ಬಳಿಯ ಸಂಕಕ್ಕೆ ಬರುತ್ತಲೇ, “ಇಲ್ಲಿ ಕೆಲ ಹೊತ್ತು ಕುಳಿತುಕೊಳ್ಳೋಣ” ಎಂದಳು ಅಮ್ಮ. ಇಬ್ಬರೂ ಸಂಕದ ಮೇಲಿನ ಸಿಮೆಂಟು ಸೀಟಿನ ಮೇಲೆ ಕುಳಿತುಕೊಂಡರು. ಹೀಗೆ ಕುಳಿತದ್ದು ಕೇವಲ ದಣಿವಾರಿಸಿಕೊಳ್ಳಲು ಅಲ್ಲವೆಂದು ಅವನಿಗೆ ಗೊತ್ತಿತ್ತು.

“ಅಪ್ಪನ ಮೇಲೆ ಸಿಟ್ಟಾಗಬೇಡ ಮಗಾ ! ನೀವೆಲ್ಲ ತಿಳಕೊಂಡ ಹಾಗೆ ದುಷ್ಟರಲ್ಲ ಅವರು. ಬಹಳ ವರ್ಷಗಳ ಹಿಂದೆ ನಿನ್ನ ಅಜ್ಜನ ಮನೆಯಲ್ಲಿ ನಿನ್ನ ಅಪ್ಪನ ಮನಸ್ಸನ್ನು ನೋಯಿಸುವಂಥದ್ದೇನೋ ನಡೆಯಿತು. ನಡೆದದ್ದಕ್ಕೆ ನಿನ್ನಜ್ಜ ಸಂಪೂರ್ಣವಾಗಿ ಜವಾಬ್ದಾರನಲ್ಲ, ಬಲ್ಲೆ. ಆದರೆ ಅಪರಾಧ ಎಂದರೆ ಅಪರಾಧವೇ. ಹೊಟ್ಟೆಯ ಮಗಳಾದ ನನ್ನನ್ನು ಕೂಡ ನೋಯಿಸಿತ್ತೆಂದರೆ ನೋಡು. ನಿನ್ನಪ್ಪ ಇದನ್ನು ಹೇಗೆ ತನಗೆ ಉದ್ದೇಶಪೂರ್ವಕವಾಗಿ ಮಾಡಿದ ಅಪಮಾನವೆಂದು ತಿಳಿದರು. ತಳಿದದ್ದು ತಪ್ಪಲ್ಲ. ಆದರೆ ಇಷ್ಟು ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಂಡಾರೆಂದು ಲೆಕ್ಕಿಸಿರಲಿಲ್ಲ.”

ತಮ್ಮಣ್ಣ ಸುಮ್ಮನೆ ಕೇಳಿಸಿಕೊಂಡ. ಅಪ್ಪ ತನಗೆ ಕೊಡುತ್ತಿದ್ದ ಹಿಂಸೆಯನ್ನು ಇಷ್ಟೊಂದು ತಾಳ್ಮೆಯಿಂದ ಸಹಿಸುತ್ತ ಬಂದಿದ್ದ ಅಮ್ಮ ಹೀಗೆ ಸುತ್ತುಬಳಸಾಗಿ ಹೇಳುವ ಬದಲು ನೇರವಾಗಿ ನಡೆದದ್ದನ್ನೇ ಹೇಳಬಹುದಾಗಿತ್ತು. ಹೇಳಬಹುದೆಂದು ಎಣಿಸುತ್ತಿರುವಾಗಲೇ ಇನ್ನಷ್ಟು ಒಗಟಾದಳು-“ಒಂದು ದಿನ ನಿನಗೆ ದಕ್ಷಬ್ರಹ್ಮನ ಯಜ್ಞದ ಕಥೆ ಹೇಳುತ್ತೇನೆ” ಎಂದಳು. ಅಮ್ಮ ಯಾವಾಗಲೂ ಹೀಗೆಯೇ. ಅಪ್ಪನ ಬಗ್ಗೆ ಮಾತುಗಳು ಬಂದಾಗಲೆಲ್ಲ ಪುರಾಣಕಥೆಗಳ ಉಲ್ಲೇಖವನ್ನು ಮಾಡುತ್ತಿದ್ದಳು. ಕಥೆಯನ್ನು ಮಾತ್ರ ಕೊನೆಗೂ ಹೇಳುತ್ತಿರಲಿಲ್ಲ. ಹೇಳೆಂದು ಒತ್ತಾಯ ಮಾಡಿದರೆ ‘ಹುಸ್’ ಎಂದು ನಿಶ್ವಾಸ ಬಿಟ್ಟು, “ಇನ್ನು ಯಾವಾಗಲಾದರೂ” ಎಂದು ತಳ್ಳಿಬಿಡುತ್ತಿದ್ದಳು. ಅಪ್ಪನ ಸಿಟ್ಟಿಗೆ ಜಮದಗ್ನಿಯ ಅವತಾರವೆಂದು ಹೆಸರಿಟ್ಟವರು ಯಾರೂ ಈ ಜನದಗ್ನಿಯು ಯಾರೆಂದು ತಿಳಿಸುವ ಕೃಪೆ ಮಾಡಿರಲಿಲ್ಲ. ಈಗ ಈ ದಕ್ಷಬ್ರಹ್ಮ ! ಈ ಕಿರಾತ ಮತ್ತೆ ಯಾರಿಗೆ ಉದಾಹರಣೆಯೋ ! ಬಹುಶಃ ಅಳಿಯನನ್ನು ಅವಮಾನಗೊಳಿಸಿದ ಮಾವಮಹಾಶಯನೇ ಇರಬೇಕು, ಈತ !

ಈ ಪುರಾಣಪುರುಷರ ಉಲ್ಲೇಖ ಅಪ್ಪನ ಬಗೆಗಿನ ಅವನ ಧೋರಣೆಯನ್ನು ಬದಲಿಸಲಿಲ್ಲ. ಬದಲಾಗಿ ನಾಳೆ ಅಪ್ಪನ ಎದುರು ಆಡಬೇಕು ಎಂದುಕೊಂಡ ಮಾತೂ ಈಗ ನಿಚ್ಚಳವಾಯಿತು. ಆಡುವ ನಿರ್ಧಾರವೂ ಗಟ್ಟಿಯಾಯಿತು. ಅವನು ಅಮ್ಮನಿಗೆ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಯಾವ ಅಶ್ವಾಸನೆಯನ್ನೂ ಕೊಡಲಿಲ್ಲ. “ಹೊರಡೋಣ” ಎಂದದ್ದೇ ಇಬ್ಬರೂ ಕುಳಿತಲ್ಲಿಂದ ಎದ್ದು ಮನೆಯ ಹಾದಿ ಹಿಡಿದರು. ಅವರ ಮನೆ ಅಲ್ಲಿಂದ ಹತ್ತೇ ಮಿನಿಟಿನ ಹಾದಿ, ಮಾದನಚೆಟ್ಟೆ ದಾಟುತ್ತಲೇ ಇಬ್ಬದಿಯ ಬೇಲಿಗಳ ಹರತರೀತ ಜೀವಂತಿಕೆಯ ವಾಸನೆ ಮೂಗಿಗೆ ಬದಿದಾಗ ಸೂತಕದ ಮನೆ ಹಿಂದಿ ಬಿದ್ದಿತ್ತು.

ಮನೆಯಲ್ಲಂದು ಯಾರೂ ಹೆಚ್ಚು ಮಾತನಾಡಲಿಲ್ಲ. ಎಲ್ಲರೂ ಪರಸ್ಪರ ಹೆದರಿಕೊಂಡಂತೆ ಕಂಡರು. ಸ್ವತಃ ತಮ್ಮಣ್ಣನೊಳಗಿನ ಬಂಡುಗಾರನು ಕೂಡ ಕುಂಡೆಯಲ್ಲಿ ಬಾಲ ಹೊಕ್ಕಿಸಿದ್ದ. ಅಪ್ಪನನ್ನು ಮಾತನಾಡಿಸುವುದಿರಲಿ, ಅಪ್ಪನ ಕಡೆಗೆ ಕಣ್ಣು ತಿರುವಿಸುವ ಧೈರ್ಯವೂ ಅವನಿಗಾಗಲಿಲ್ಲ.

ಮರುದಿನ ಬೆಳಿಗ್ಗೆ ಹೊತ್ತಿಗೆ ಸರಿಯಾಗಿ ಅವನು ಸಾಲೆಗೆ ಹೊರಟ. ಮನೆ ಯೆದುರಿನ ಓಣಿಯ ಕೊನೆಯಲ್ಲಿ ಬಂಕೀಕೋಡ್ಲಕ್ಕೆ ಹೋಗುವ ಮುಖ್ಯ ರಸ್ತೆಗೆ ಹೊರಳಿದ್ದೇ ಎಡಕ್ಕೆ ಅಪ್ಪನ ಅಂಗಡಿ ಹತ್ತುತ್ತದೆ. ಅಪ್ಪನು ಅಂಗಡಿಯಲ್ಲಿ ಕೂರಲು ಇನ್ನೂ ಒಂದು ಗಂಟೆಯಾದರೂ ಇದೆ. ಸಾಲೆಗೆ ಹೋಗುವಾಗಲಂತೂ ಅಪ್ಪನ ಕಣ್ಣಿಗೆ ಬೀಳುವುದು ಶಕ್ಯವಿರಲಿಲ್ಲ. ಆದರೆ ಗಂಜೀ ಊಟಕ್ಕೆ ಮನೆಗೆ ಮರಳುವಾಗ ತನ್ನನ್ನು ಮಾತನಾಡಿಸದೇ ಇರಲಾರ. ಇಂದು ಬೆಳಗಿಗೇ ಮನೆಯಲ್ಲಿ ಅಂಥ ಲಕ್ಷಣಗಳು ಕಂಡಿದ್ದವು. ಅಜ್ಜ ಬರೆದ ಚೀಟಿ ಅವನ ಕೈಸೇರಿದೆ. ನಿಸ್ಸಂಶಯ. ತನ್ನ ಈಗಿನ ಸ್ಥಿತಿಯ ಬಗೆಗೆ ತನಗೇ ಕನಿಕರವೆನ್ನಿಸಿತು, ತಮ್ಮಣ್ಣನಿಗೆ. ಯಾಕಾದರೂ ಅಪ್ಪನನ್ನು ಎದುರುಹಾಕಿಕೊಳ್ಳುತ್ತೇನೆಂದು ಜಂಭ ಕೊಚ್ಚಿಕೊಡೆನೋ ಎಂದುಕೊಳ್ಳುವಂತಾಯಿತು.

ತಮ್ಮಣ್ಣನ ಎಣಿಕೆ ಸುಳ್ಳಾಗಲಿಲ್ಲ. ಪುಸ್ತಕಗಳ ಚೀಲವನ್ನು ಹೆಗಲಿಗೆ ತೂಗಿಸಿ, ಗೋಣು ಬಗ್ಗಿಸಿ ನೆಲದ ಮೇಲೇ ದೃಷ್ಟಿಯೂರಿ ನಡೆಯುತ್ತಿದ್ದವನನ್ನು, ಅವನು ಅಂಗಡಿಯನ್ನು ದಾಟುತ್ತಿದ್ದ ಆಯತ ಘಳಿಗೆಯಲ್ಲಿ ಅಪ್ಪ, “ತಮ್ಮಣ್ಣಾ” ಎಂದು ಕರೆದ. ಅಪ್ಪನ ದನಿ ತುಂಬಾ ಮೆತ್ತಗೆ ಆಗಿತ್ತು.ಅಪ್ಪನ ದನಿ ಇಷ್ಟೊಂದು ಮೆತ್ತಗೆ ಆದದ್ದನ್ನು ಅವನು ಈ ಜನ್ಮದಲ್ಲಿ ಕೇಳಿರಲಿಲ್ಲ. ಅಪ್ಪ ತನಗೆ ‘ಮಸ್ಕಾಬಾಜಿ’ ಮಾಡುತ್ತಿರುವ ಅನುಮಾನವಾಯಿತು. ಮೂರು ದಿನಗಳ ಹಿಂದಷ್ಟೇ ಚಪ್ಪರ ಹಾರಿಹೋಗುವ ಹಾಗೆ ಬಯಲಾಟದ ಕುಳಿತ ಕುಣಿದದ್ದೇ ಸುಳ್ಳೆನಿಸಿತು. ಅಂಗಡಿಯಲ್ಲಿ ಆ ಹೊತ್ತಿಗೆ ಗಿರಾಕಿಗಳು ಯಾರೂ ಇರಲಿಲ್ಲ. ತಮ್ಮಣ್ಣ ಅಳುಕುತ್ತ ಅಂಗಡಿಯ ಕೆಳಜಗಲಿಯ ಮೇಲೆ ಹೋಗಿ ನಿಂತ. ಅಪ್ಪ ಗಲ್ಲೆಯನ್ನು ಬಿಟ್ಟು ಮೇಲ್ಜಗಲಿಯ ಅಂಚಿನವರೆಗೆ ಸರಿದು ಕುಳಿತ. ಅವನ ಭುಜ ತಟ್ಟುತ್ತ, “ಅಜ್ಜನ ಮನೆಯಲ್ಲಿ ಎಲ್ಲ ಸರಿಯಾಗಿ ನಡೆಯಿತಲ್ಲವೆ ?” ಎಂದು ಕೇಳಿದ. ಅಪ್ಪ ಕೇಳಲಿಚ್ಛಿಸಿದ್ದು ಇದಾಗಿರಲಿಲ್ಲವೇನೋ. ಒಂದು ಕ್ಷಣ ತಡೆದು, “ನಿಮ್ಮ ಜೊತೆಗೆ ನನಗೆ ಬರಲಾಗದ್ದಕ್ಕೆ ಯಾರದರೂ ಏನಾದರೂ ಅಂದರೆ ?” ಎಂದು ಕೇಳಿದ. ಅಜ್ಜನಂಥ ಮಹಾನುಭಾವ ಮಾವ ಅಳಿಯನಲ್ಲಿ ಕ್ಷಂಎ ಕೇಳಿಯಾದಮೇಲೆ ಆಡಿದ ಇಂಥ ಮಾತುಗಳಿಗೆ ಏನು ಬೆಲೆ ? ತಮ್ಮಣ್ಣ ಈಗಲೂ ಬಾಯಿ ಬಿಡಲಿಲ್ಲ. ಅಪ್ಪನನ್ನು ಕ್ಷಮಿಸಲು ಅವನಿನ್ನೂ ಸಿಧ್ಧನಿರಲಿಲ್ಲ. “ಅಜ್ಜನಿಗೆ ಏನಾಗಿತ್ತಂತೆ ?” ಅಮ್ಮನನ್ನು ಕೇಳಲಿಲ್ಲವೆ ? ಎಂದು ಕೇಳಬೇಕು, ಅನ್ನಿಸಿತ್ತು. ಆದರೆ ಕೇಳಲಿಲ್ಲ. ಕೇಳುವ ಧೈರ್ಯವಾಗಲಿಲ್ಲವೋ, ಅಪ್ಪನ ಬಗ್ಗೆ ಇನ್ನೂ ಸಾಕಷ್ಟು ಸಿಟ್ಟು ಬಂದಿರಲಿಲ್ಲವೋ. ಆದರೆ ಒಮ್ಮೆ ಬಾಯಿ ತೆರೆದ ಮೇಲೆ ಸಿಟ್ಟು ಬಂದಿತಷ್ಟೇ ಅಲ್ಲ. ಬಂದದ್ದು ಹೆಚ್ಚುತ್ತಲೇ ಹೋಯಿತು : “ಅಜ್ಜ ಅಂದು ದಿನಕ್ಕಿಂತ ಬೇಗ ಊಟ ಮ್,ಆಡಿದರಂತೆ. ಅಜ್ಜಿಯ ಎದುರು ಅಮ್ಮನನ್ನು ಕಾಣುವ ಆಸೆ ಪ್ರಕಟಿಸಿದರಂತೆ. ಮಗು ತಮ್ಮಿಂದಾಗಿ ಅದೆಂಥ ಕಷ್ಟದಲ್ಲಿ ಇರುವಳೋ ಏನೋ, ತಮ್ಮ ಕೈಯಿಂದಾದ ಸಣ್ಣ ತಪ್ಪನ್ನು ಅಳಿಯ ಕೊನೆಗೂ ಕ್ಷಮಿಸಲೇ ಇಲ್ಲವೆಂದು ಹಲುಬಿದರಂತೆ. ಎಂದೋ ಮಾಡಬೇಕಾಗಿತ್ತು, ಈಗಲಾದರೂ ಮಾಡುತ್ತೇನೆ-ಅಳಿಯನಲ್ಲಿ ಕ್ಷಮೆ ಕೇಲುತ್ತೇನೆ. ಕ್ಷಮಿಸಿದನೇ ಸರಿ, ಇಲ್ಲವಾದರೆ ನಾನು ಸತ್ತಮೇಲಾದರೂ ಮೇಲಿನಿಂದಲೇ ನನ್ನ ಮಗುವನ್ನು ರಕ್ಷಿಸುತ್ತೇನೆ. ಅವಳನ್ನು ಪೀಡಿಸಿದವರನ್ನು ಸುಮ್ಮನೆ ಬಿಡಲಾರೆನೆಂದು ಆಣೆಮಾಡಿದರಂತೆ. ಆಮೇಲೆ ಏನಾಯಿತು ? ಯಾರಿಗೂ ತಿಳಿಯಲೇ ಇಲ್ಲ. ಸಾಯುವ ಮೊದಲು ನಿಮಗೆ ಬರೆದ ಚೀಟಿ ಮಾತ್ರ ಹಾಸಿಗೆಯ ಮೇಲೆ ಸಿಕ್ಕಿತಂತೆ,”

“ಅಮ್ಮ ಆ ಚೀಟಿಯನ್ನು ತಂದಿರುವಳೆ ?”

ಈಗ ಮಾತ್ರ ತಮ್ಮಣ್ಣನಿಗೆ ತನಗೆ ಬಂದ ಸಿಟ್ಟನ್ನು ತಡೆಯುವುದಾಗಲಿಲ್ಲ. ಅಪ್ಪನಿಂದ ಇಂಥ ನಟನೆಯನ್ನು ನಿರೀಕ್ಷಿಸಿರಲಿಲ್ಲ. ಅಮ್ಮ ಆ ಪತ್ರವನ್ನು ಅಪ್ಪನಿಗಿನ್ನೂ ಕೊಟ್ಟಿಲ್ಲ. ಅಪ್ಪ ಅದನ್ನಿನ್ನೂ ಓದಿಲ್ಲ, ಎಂದರೇನು ?-ನಂಬುವ ಮಾತೆ ?

“ಅಮ್ಮನನ್ನೇ ಕೇಳಿ, ಅಜ್ಜ ನಿಮಗೊಂದು ಚೀಟಿಯನ್ನು ಬರೆದದ್ದಂತೂ ನಿಜ. ಅಷ್ಟು ದೊಡ್ಡ ಹಿರಿಯರು ಸಾಯುವ ಮೊದಲು ಅಳಿಯನ ಕಾಲು ಹಿಡಿಯುವಂತೆ ಆದದ್ದು ಅಲ್ಲಿ ಯಾರಿಗೂ ಸೇರಲಿಲ್ಲ. ಎಲ್ಲರೂ ಅದರ ಬಗ್ಗೆ ಆಡಿಕೊಂಡದ್ದೇ ಆಡಿಕೊಂಡದ್ದು.”

ಧೈರ್ಯ ಕುಸಿಯುವ ಮೊದಲೇ ಓಣಿ ಸೇರಿ ಅಪ್ಪನ ದೃಷ್ಟಿಯಿಂದ ಮರೆಯಾಗುವ ಅವಸರದಲ್ಲಿ ತಮ್ಮಣ್ಣ ಅಲ್ಲಿಂದ ಕಾಲು ಕಿತ್ತ.

ಓಣಿ ಸೇರಿದಮೇಲೇ, ಅಪ್ಪನ ಎದುರು ನಿಂತು ಕೊನೆಗೂ ಮಾತನಾಡುವ ಧೈರ್ಯ ಮಾಡಿದಾಗ ತಾನು ಎಂದಿನ ತಮ್ಮಣ್ಣನಾಗಿ ಇರಲಿಲ್ಲವೆಂದು ಸ್ವತಃ ತಮ್ಮಣ್ಣನಿಗೇ ಅನ್ನಿಸಿತು. ಅಪ್ಪನಿಗೆ ತಕ್ಕ ಶಾಸ್ತಿ ಮಾಡಬೇಕು ಎನ್ನುವ ಆತುರದಲ್ಲಿ ಎರಡು ದೊಡ್ಡ ಸುಳ್ಳುಗಳನ್ನು ಹುಟ್ಟಿಸಿ ಹೇಳಿದ್ದ. ಈ ಸುಳ್ಳುಗಳನ್ನು ಹೇಳುವ ನಿರ್ಧಾರವನ್ನವನು ಹನ್ನಳ್ಳಿ ಸಂಕದ ಮೇಲೆ ವಿರಮಿಸಿದಾಗಲೇ ತೆಗೆದುಕೊಂಡಿದ್ದ-ಸತ್ತಮೇಲೆ ಅಮ್ಮನನ್ನು ಮೇಲಿನಿಂದಲೇ ರಕ್ಷಿಸುತ್ತೇನೆ ಎಂಬಂಥ ಮಾತು ಅಜ್ಜ ಯಾರ ಎದುರೂ ಹೇಳಿರಲಿಲ್ಲ. ಅದು ಸಂಪೂರ್ಣವಾಗಿ ಅವನದೇ ಕಲ್ಪನೆಯಾಗಿತ್ತು. ಹಾಗೇನೇ, ಸಾಯುವ ಮೊದಲು ಅಜ್ಜ ಅಳಿಯನ ಕಾಲು ಹಿಡಿಯುವಂತಾಯಿತು ಎನ್ನುವ ಮಾತೂ ಕೂಡ. ಈ ಮಾತುಗಳು ಅಪ್ಪನ ಮೇಲೆ ಪರಿಣಾಮ ಮಾಡದೇ ಇರಲಾರವು ಎನ್ನುವ ಬಗ್ಗೆ ಅವನಿಗೆ ಎಳ್ಳಷ್ಟೂ ಸಂಶಯವಿರಲಿಲ್ಲ. ಆದರೆ ಮನೆಯ ಜಗಲಿಯ ಮೆಟ್ಟಿಲು ಹತ್ತುತ್ತಿದ್ದಂತೆ ಅಮ್ಮ ಕೇಳಿದ ಪ್ರಶ್ನೆಗೆ ಅವನು ದಂಗಾದ : “ನಿನ್ನ ಮೋರೆ ಹಾಗೇಕಾಗಿದೆ ಮಗು ? ಮೈಯಲ್ಲಿ ಸರಿಯಿಲ್ಲವೆ ? ಎರಡು ದಿನ ಸಾಲೆಗೆ ಹೋಗಲಿಲ್ಲ. ಮಾಸ್ತರರು ಏನಾದರೂ ಅಂದರೆ ?”

ಮುಂದಿನ ಕೆಲವು ದಿನಗಳವರೆಗೆ ಅಪ್ಪ-ಮಗ ಇಬ್ಬರೂ ಪರಸ್ಪರ ಒಂದು ನಮೂನೆಯಾದರು. ಅಜ್ಜನ ಸಾವು ಮೊಮ್ಮಗನ ಮೇಲೆ ವಿಪರೀತ ಪರಿಣಾಮ ಮಾಡಿದೆಯೆಂದು ಅಪ್ಪ-ಅಮ್ಮರಿಗೆ ಆತಂಕವಾಯಿತು. ಅವನನ್ನು ಕುಮಟೆಗೆ ಕಳಿಸಲೇಬಾರದಿತ್ತು. ಅಲ್ಲಿ ಕಂಡಿದ್ದೇನೋ ಮಗುವನ್ನು ಹೆದರಿಸಿದೆಯೆಂದು ಅಪ್ಪ ತಿಳಿದರೆ, ತಾನು ಹುಟ್ಟಿಸಿ ಹೇಳಿದ್ದು ಅಪ್ಪನನ್ನು ಕಾಡದೇ ಇಲ್ಲವೆಂದು ಮಗ ತಿಳಿದ. ಈ ತಪ್ಪು ತಿಳುವಳಿಕೆಗೆ ಕೊನೆ ಬಂದದ್ದು ಯಾವುದೋ ಕೆಲಸಕ್ಕೆಂದು ಅಪ್ಪನ ಕೋಣೆಗೆ ಹೋಗಿದ್ದಾಗ ಅಜ್ಜ ಅಪ್ಪನಿಗೆ ಬರೆದ ಚೀಟಿಯಿದ್ದ ಲಿಫಾಫೆ ಅವನ ಕೈಗೆ ಬಂದಾಗ, ಲಿಫಾಫೆ ಇನ್ನೂ ತೆರೆದೇ ಇರಲಿಲ್ಲ. ಅವನು ತಬ್ಬಿಬ್ಬುಗೊಂಡು ಅರಳಿಸಿದ ಕಣ್ಣುಗಳನ್ನು ಕೂಡಲೇ ಕಿರಿದುಗೊಳಿಸದಾದ. ಅಮ್ಮ ಅಪ್ಪನಿಗೆ ಈ ಚೀಟಿಯನ್ನು ಕೊಟ್ಟಿಯೇ ಇಲ್ಲ ಹಾಗಾದರೆ. ಅಮ್ಮ ಒಳ್ಳೆಯದನ್ನು ಮಾಡಲಿಲ್ಲ. ಅವನು ಅಮ್ಮನನ್ನು ತರಾಟೆಗೆ ತೆಗೆದುಕೊಂಡ-

“ಬಂದ ದಿವಸವೇ ಕೊಡಲಿಲ್ಲ. ಮಾರನೇ ದಿನ ರಾತ್ರಿ ಅವರು ಅಂಗಡಿಯಿಂದ ಬಂದ ಬಳಿಕ ಕೊಡಲು ಮುಂದಾದಾಗ, ‘ಅದರಲ್ಲಿ ಏನು ಇದೆ ಎಂದು ನನಗೆ ಗೊತ್ತಿದೆ. ಅದನ್ನು ಬರೆದವರೇ ಈಗ ಇಲ್ಲವೆಂದ ಮೇಲೆ ಓದಿ ಏನು ಪ್ರಯೋಜನ ?’ ಎಂದವರು ಅದಕ್ಕೆ ಕೈಯೇ ಹಚ್ಚಲಿಲ್ಲ. ಕುಮಟೆಯಿಂದ ಬಂದವರರೋ ಅವರನ್ನು ಅಂಗಡಿಯಲ್ಲೇ ಕಂಡು, ವಯಸ್ಸಾದ ಮಾವ ಅಳಿಯನ ಕಾಲು ಹಿಡಿದು ಅವನಲ್ಲಿ ಕ್ಷಮೆ ಯಾಚಿಸಿ ಬರೆದ ಚೀಟಿಯನ್ನು ನಾನು ತಂದಿರುವ ಸುದ್ದಿ ಕೊಟ್ಟು ಹೋದರಂತೆ. ಇಷ್ಟೇ ಅಲ್ಲ, ತಾನು ಸತ್ತ ಮೇಲೆ ನಿನ್ನ ಅಮ್ಮನನ್ನು ಪೀಡಿಸಿದವರನ್ನು ಭೂತವಾಗಿ ಕಾಡುತ್ತೇನೆಂದು ಧಮಕಿ ಇತ್ತಿದ್ದನ್ನೂ ತಿಳಿಸಿದರಂತೆ. ಪಾಪ ! ಇದನ್ನು ಕೇಳಿದಂದಿನಿಂದ ನಿನ್ನಪ್ಪ ಮೊದಲಿನ ಹಾಗೆ ಇಲ್ಲವೇ ಇಲ್ಲ-ನೀನೂ ನೋಡಿರಬೇಕು.ಈ ಜಗತ್ತಿನಲ್ಲಿ ಎಂಥೆಂಥ ಜನರಿರುತ್ತಾರೆ ನೋಡು !” ಎಂದಳು ಅಮ್ಮ.

ಅಮ್ಮ ಯಾರನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುತ್ತಿದ್ದಾಳೆಂದು ತಿಳಿಯದಷ್ಟು ಸಣ್ಣವನಲ್ಲ ತಮ್ಮಣ್ಣ. ಆದರೂ ತುಂಬಾ ಸಣ್ಣವನ ಹಾಗೆ ತಾಯ ಸೆರಗು ಹಿಡಿದು ಬಿಕ್ಕಳಿಸಹತ್ತಿದ. ತಾಯಿ ಸಂತೈಸಿದಳು-

“ನಾನು ಆ ಚೀಟಿಯನ್ನು ಓದಿಲ್ಲ ಮಗೂ ! ಅದು ಕನ್ನಡದಲ್ಲಿದೆ. ಅದನ್ನು ಓದಿದ ನಿನ್ನ ತಿರಿಮಾಮಾ ಮಜಕೂರು ತಿಳಿಸಿದ್ದ. ಅವನೇ ಅದನ್ನು ಲಕೋಟೆಯಲ್ಲಿಟ್ಟು ಬಾಯಿ ಮುಚ್ಚಿದ್ದು. ಆಮೇಲೆ ನೀನು ತೆರೆದು ಓದುವಿಯಂತೆ. ನಾವು ಕುಮಟೆಯಿಂದ ಹಿಂದಿರುಗಿ ಬಂದ ರಾತ್ರಿ, ಆ ಚೀಟಿ ನನ್ನ ಬಳಿಯಿದೆಯೆಂದು ಗೊತ್ತಾಗುವ ಮೊದಲೇ, ತಮ್ಮ ಆ ದಿನದ ವರ್ತನೆಯ ಬಗ್ಗೆ ಆಡಿಕೊಂಡು ನಿನ್ನಪ್ಪ ಹಳಹಳಿಸಿದ್ದಕ್ಕೆ ಲೆಕ್ಕವಿಲ್ಲ. ಅವರ ಆಗಿನ ಸ್ಥಿತಿ ನೋಡಿ ನನಗೇ ಪಾಪ ಅನ್ನಿಸಿತು. ನಾವು ಕುಮಟೆಗೆ ಹೊರಟುಹೋದ ದಿವಸ ಊಟ ಕೂಡ ಮಾಡಲಿಲ್ಲವಂತೆ. ಅತ್ತೆ ಹೇಳಿದಳು. ಇಷ್ಟಕ್ಕೂ ಇದಾವುದರಲ್ಲಿ ನಿನ್ನಪ್ಪನ ತಪ್ಪು ಇಲ್ಲ. ಹೇಳಲು ಹೋದರೆ ಈಗ ಇಷ್ಟೇನೆ, ಅನ್ನಿಸಬಹುದು. ಆದರೆ ಆಗ ಹಾಗೆ ಅನ್ನಿಸಲಿಲ್ಲ. ನಿನ್ನ ಅಜ್ಜನ ಮನೆಯ ಒಂದು ಮದುವೆಯ ಹೊತ್ತಿಗೆ ಮದುವೇ ಹಂದರದಲ್ಲೇ ನಿನ್ನ ಅಪ್ಪನಿಗೆ ಅವಮಾನವಾಯಿತು. ಯಾವ ಅಳಿಯನೇ ಸಹಿಸಲಾರದ ಅನಾದರವಾಗಿತ್ತದು. ಬಹಳ ಸ್ವಾಭಿಮಾನಿಯಾದ ನಿನ್ನಪ್ಪನೂ ಸಹಿಸಲಿಲ್ಲ. ನಿಜ ಸಂಗತಿ ಇಲ್ಲಿಯ ಯಾರಿಗೂ ಗೊತ್ತಿಲ್ಲ-ನಿನ್ನ ಅತ್ತೆಗೂ, ಮನೆಯಲ್ಲಿ ನಿನ್ನ ಅಜ್ಜನ ಹೆಸರು ಎತ್ತಿದರೇ ಉರಿದು ಬೀಳುತ್ತಿದ್ದ ಅಪ್ಪನನ್ನು ನಿನ್ನ ಅಣ್ಣಂದಿರು ಕೂಡ ತಪ್ಪು ತಿಳಿದಾಗ ನಾನೇ ಒಂದು ದಿನ ನಡೆದದ್ದನ್ನ ತಿಳಿಸಿದೆ. ಕೇಳಿದಮೇಲೆ ಇಬ್ಬರೂ ಅಪ್ಪನಿಗಿಂತ ಒಂದು ಹೆಜ್ಜೆ ಮುಂದೆಯೇ ಹೋಗಿ ಕುಮಟೆಯೊಡನೆಯ ಸಂಬಂಧವನ್ನೂ ಕಡಿದುಕೊಂಡರು. ಕುಮಟೆಯಲ್ಲಿ ಒಳ್ಳೇ ಹೈಸ್ಕೂಲು ಇದ್ದಾಗಲೂ ಇಬ್ಬರೂ ಕಲಿಯಲಿಕ್ಕೆ ಧಾರವಾಡಕ್ಕೆ ಹೋದದ್ದು ಈ ಕಾರಣಕ್ಕೆ. ಇವತ್ತು ನಿನಗೆ ಹೇಳುತ್ತೇನೆ. ನೀನು ಏನು ಮಾಡುತ್ತೀಯೋ ನೋಡು.”

ಅಮ್ಮ ಅಂದು ಮದುವೆಯ ಚಪ್ಪರದಲ್ಲಿ ಅಪ್ಪನಿಗಾದ ಅವಮಾನದ ಹಕೀಕತ್ತನ್ನು ಹೇಳಿದಳು :
ಸೋದರತ್ತೆ ಯಜ್ಞಮಂಟಪದಲ್ಲಿ ದಕ್ಷ-ಬ್ರಹ್ಮನಿಂದ ಅಳಿಯನಾದ ಶಿವನಿಗೆ ಅಪಮಾನವಾದಾಗ ಕನಲಿದ ದಾಕ್ಷಾಯಿಣಿ ಯಜ್ಞಕುಂದದಲ್ಲಿ ಹಾರಿ ಜೀವ ತೆಗೆದುಕೊಂಡ ಪುರಾಣ ಹೇಳಿದಳು. ಎರಡನ್ನೂ ಕೇಳಿಯಾದಮೇಲೆ ಚಿಕ್ಕ ಪ್ರಾಯದ ತಮ್ಮಣ್ಣನಿಗೆ ವಿಚಿತ್ರ ಭ್ರಮೆಯಾಯಿತು. ಅಂದು ಶಿವನಿಗೆ ಅಪಮಾನವಾಗದಿದ್ದರೆ ಇಂದು ತನ್ನ ಅಪ್ಪನಿಗೂ ಅಪಮಾನವಾಗುತ್ತಿರಲಿಲ್ಲವೇನೋ ! ಅಂದು ದಾಕ್ಷಾಯಿಣಿ ಯಜ್ಞಕುಂಡದಲ್ಲಿ ಹಾರಿರದಿದ್ದರೆ ಇಂದು ತನ್ನ ಅಮ್ಮನೂ ಹೀಗೆ ಮತ್ತೆಮತ್ತೆ ಅಪ್ಪನ ಸಿಟ್ಟಿಗೆ ತುತ್ತಾಗುತ್ತಿರಲಿಲ್ಲವೇನೋ ! ಇಷ್ಟಕ್ಕೂ ಅಪ್ಪನಿಗಾದಮಾನಭಂಗಕ್ಕೆ ಅಜ್ಜ ನೇರವಾಗಿ ಕಾರಣನಾಗಿರಲಿಲ್ಲವಂತೆ. ಕಾರಣರಾದವರು ಬೇರೆಯವರೇ ಆಗಿದ್ದರು.

ಅಪ್ಪನಿಗೆ ಹೆಣ್ಣುಗಳು ಹೇಳಿ ಬರತೊಡಗಿದಾಗ ಅಣ್ಣ ಜಾತಕ ಕೊಟ್ಟಿದ್ದು ಅಮ್ಮನದಾಗಿರಲಿಲ್ಲ. ಅಮ್ಮನ ಅಕ್ಕನದಾಗಿತ್ತು. ಈ ಅಕ್ಕ ಈಗ ಬದುಕಿಲ್ಲ, ಅವಳು, ಪಾಪ !-ಅಮ್ಮನಿಗಿಂತ ಸುಂದರಳಂತೆ. ಅಸಾಧ್ಯ ಹಠದವಳಂತೆ. ಹೆಣ್ಣು ನೋಡಲು ಹೋದ ಅಪ್ಪ ಕಾಣಲು ಅಷ್ಟು ಸುಂದರಳಲ್ಲದ ಆದರೆ ಸೌಮ್ಯ ಸ್ವಭಾವದ ಅಮ್ಮನನ್ನು ಪಸಂದು ಮಾಡಿ ಬಂದ. ಅಪ್ಪನ ಮನೆಯವರು ಹಿರಿಯ ಮಗಳ ಮದುವೆಯಾಗುವತನಕ ಕಾಯಲು ಸಿದ್ಧರಿದ್ದರು. ಅವಳೇ ಬೇಡವೆಂದಳಂತೆ. ಅಪ್ಪ ಕಾಣಲು ಚೆಂದ. ಆದರೂ ಅವನಂಥ ‘ಚಿಲ್ಲರೆ ಕಿರಾಣಿ ದುಕಾನ್‌ದಾರ’ ತನ್ನನ್ನು ಪಾಸು ಮಾಡದೇ ಇದ್ದದ್ದು ತನ್ನ ಸುದೈವ ಎಂದಳಂತೆ ! ಹೊರಗೆ ಹಾಗೆ ತೋರಿಸಿಕೊಂಡರೂ ಒಳಗೊಳಗೇ ಅಪ್ಪ ತನ್ನನ್ನು ತಿರಸ್ಕರಿಸಿದ್ದನ್ನು ಅಪಮಾನವೆಂದು ಬಗೆದು ಕ್ರುದ್ಧಳಾದ ಈ ಅಕ್ಕ ತನ್ನ ಮದುವೆ ಹೊತ್ತಿಗೆ ತಂಗಿಯ ಮೇಲೆ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿ ಮನೆಯ ಮೊದಲ ಅಳಿಯನಾದ ಅಪ್ಪನಿಗೆ ಸಲ್ಲಬೇಕಾದ ಸತ್ಕಾರಕ್ಕೆ ಅಡ್ಡಬಂದಳಂತೆ. ಈ ಮನೆಯ ಮೊದಲ ಅಳಿಯನಾಗಬೇಕಾದವನು ತನ್ನ ಗಂಡನು ಹೊರತು ಇವನಲ್ಲವೆಂದು ವಾದಿಸಿ ಅಜ್ಜಿಯ ಎದುರು ಅಮ್ಮನನ್ನು ಅಪ್ಪನನ್ನು ಬಾಯಿಗೆ ಬಂದಂತೆ ಬೈದಳಂತೆ. ಸತ್ಕಾರ ಮಾಡಿದ್ದೇ ಆದಲ್ಲಿ ತಾನು ಮದುವೆಯ ಮಂಟಪದಿಂದ ಓಡಿಹೋಗುವ ಧಮಕಿ ಹಾಕಿದಳಂತೆ. ಅಜ್ಜನಿಗೆ ಇದರ ಸುಳಿವೂ ಹತ್ತಲಿಲ್ಲ. ಅಜ್ಜಿಯೂ ಮಗಳ ಧಮಕಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೂ ಸತ್ಕಾರ ಸಮಾರಂಭದ ಘಳಿಗೆ ಸನ್ನಿಹಿತವಾಗುತ್ತಲೇ ಪುರೋಹಿತ ಭಟ್ಟರು ದೊಡ್ಡ ದನಿಯಲ್ಲಿ, “ಓ ಯಜಮಾನರೂ ! ನಿಮ್ಮ ಹಿರಿಯ ಅಳಿಯನನ್ನು ಕರೆಯಿರಿ. ನೀವು ಅವನ ಕಾಲುಗಳನ್ನು ಮೊದಲು ತೊಳೆದು, ಉಡುಗೊರೆ ಕೊಟ್ಟು ಅವನಿಗೇ ಸನ್ಮಾನ ಮಾಡಬೇಕು” ಎಂದು ಸಾರಿದರು. ಈ ಕ್ಷಣಕ್ಕೆ ಕಾದು ಕುಳಿತಂತಿದ್ದ ಈ ಅಕ್ಕ ಅಷ್ಟೇ ಎತ್ತರದ ದನಿಯಲ್ಲೆ, “ಭಟ್ಟರೇ ! ಪರಿಸ್ಥಿತಿಯ ಜ್ಞಾನ ಇಲ್ಲದವರ ಹಾಗೆ ಮಾತಾಡುತ್ತೀರಲ್ಲ ಈ ಮನೆಯ ಹಿರಿಯ ಅಳಿಯ ನನ್ನ ಗಂಡ; ಹಿರಿಯ ಮಗಳು ನಾನಲ್ಲವೇ ? ಮೊದಲು ಸತ್ಕಾರವಾಗಬೇಕಾಗಿದ್ದು ಇವರಿಗೇ. ಇದು ಸಾಧ್ಯವಿಲ್ಲದಿದ್ದರೆ ಈ ಸತ್ಕಾರ-ಗಿತ್ಕಾರದ ಹಗರಣ ಇಲ್ಲಿಗೇ ನಿಲ್ಲಿಸಿಬಿಡಿ” ಎಂದು ಒದರಿ ಹೇಳಿದಳು. ಸತ್ಕಾರ ಸಮಾರಂಭ ಅಲ್ಲಿಗೇ ನಿಂತೇಹೋಯಿತು. ಚಪ್ಪರಕ್ಕೆ ಚಪ್ಪರವೇ ತಲ್ಲಣಗೊಂಡು ಸ್ತಬ್ಧವಾಯಿತು. ಆಮೇಲೆ ಎಲ್ಲೆಲ್ಲೂ ಗುಜುಗುಜು ತುಂಬಿತು. ಅಪ್ಪ, ಪಾಪ ! ಈ ಮದುವೆಗೆ ತುಂಬಾ ಉಮೇದಿನಲ್ಲಿ ಬಂದಿದ್ದ. ಮದುವೆಗಾಗಿಯೇ ಹುಬ್ಬಳ್ಳಿಗೆ ಹೋಗಿ ಹೊಸ ಕೋಟು, ಹೊಸ ಅಂಗಿ ಹೊಲಿಸಿದ್ದ. ಹೊಸ ಧೋತರ ಕೊಂಡಿದ್ದ. ಕಾಲಲ್ಲಿಯ ಮೆಟ್ಟುಗಳು ಕೂಡಾ ಹೊಸವಾಗಿದ್ದವು. ಈ ಅನಪೇಕ್ಷಿತ ರಂಪದಿಂದ ತುಂಬಾ ನೊಂದುಕೊಂಡಿರಬೇಕು-ಹೊರಗೆ ಹಾಗೆ ತೋರಿಸಿಕೊಳ್ಳದಿದ್ದರೂ. ಅಪ್ಪನಿಗೆ ಅಜ್ಜನ ಬಗ್ಗೆ ಬಹಳ ಗೌರವವಿತ್ತು. ಅವರಾದರೂ ನಾಕು ಸಾಂತ್ವನದ ನುಡಿ ಆಡಬಹುದಿತ್ತು. ಅವರಿಗೂ ಈ ಗೊಂದಲದಲ್ಲಿ ಹೊಳೆಯಲಿಲ್ಲವೇನೋ. ಹೊಳೆಯುವ ಹೊತ್ತಿಗೆ ತೀರಾ ತಡವಾಗಿತ್ತು. ಅಪ್ಪ ಮತ್ತೆ ಅಜ್ಜನ ಅಂಗಳದಲ್ಲಿ ಕಾಲಿರಿಸಲಿಲ್ಲ, ಅಮ್ಮನಿಗೂ ಅಲ್ಲಿಗೆ ಸುಲಭವಾಗಿ ಹೋಗಗೊಡಲಿಲ್ಲ.
*
*
*
ಮುಂದೊಂದು ದಿನ ತಮ್ಮಣ್ಣ, ಅಜ್ಜನೂ ಅಪ್ಪನಿಗೆ ಬರೆದ ಚೀಟಿಯನ್ನು ಗುಟ್ಟಿನಲ್ಲಿ ಓದಿದ.

“ನೀನು ನಮ್ಮ ಮುದ್ದಿನ ಅಳಿಯನಲ್ಲವೆ ? ಮಗನ ಹಾಗೇ ನಿನ್ನನ್ನು ಅಪಮಾನಗೊಳಿಸುವ ಮನಸ್ಸು ನಮಗೆ ಹೇಗಾದರೂ ಆದೀತು; ಆದರೂ ಅಂಥ ಅಚಾತುರ್ಯ ನನ್ನ ಕೈಯಿಂದ ನಡೆದುಹೋದದ್ದು ನಿಜ. ಆದರೂ ಕ್ಷಮಿಸಿಬಿಡು. ಅನಸೂಯಳನ್ನು ನೋಡಲು ಮನಸ್ಸು ತಡಪಡಿಸುತ್ತದೆ. ನಾಕು ದಿನಗಳ ಮಾತಿಗೆ ಕಳಿಸಲಾಗುತ್ತದೆಯೋ ನೋಡು.”

ಈಗ-

ಎರಡು ದಿನಗಳ ಹಿಂದೆ ತಮ್ಮಣ್ಣನಿಗೆ ಅವನ ಅಪ್ಪನಿಂದ ಬಂದ ಪತ್ರದ ಒಕ್ಕಣಿಕೆ ಕೂಡ ಇಂಥದೇ ಆಗಿತ್ತು-

“ನಿನ್ನನ್ನು ಕಾಣಬೇಕು. ನಿನ್ನಲ್ಲಿ ಹಾರ್ದಿಕವಾಗಿ ಕ್ಷಮೆ ಕೋರಬೇಕು ಎಂದು ಮನಸ್ಸು ಹಾತೊರೆಯುತ್ತದೆ. ಯಾತಕ್ಕಾಗಿ ಕ್ಷಮೆ ಕೋರಬೇಕು ? ನನಗೆ ಗೊತ್ತಿಲ್ಲ. ಎರಡು ದಿನಗಳ ಮಾತಿಗೆ ಬಂದುಹೋಗಲು ಆಗುತ್ತದೆಯೋ ನೋಡು.”

ಈಗ ಅಣ್ಣ ಊರಿನಿಂದ ಕೊಟ್ಟ ಈ ತಾರು !

ಅಪ್ಪನ ಪತ್ರ ಬಂದದಿನ ಅದನ್ನು ಓದುತ್ತಿದ್ದ ಘಳಿಗೆಯಲ್ಲೇ ಈ ತಾರನ್ನೂ ಮುಂಗಂಡವನ ಹಾಗೆ ತಮ್ಮಣ್ಣ ಅಧೀರನಾಗಿದ್ದ. ಘಟನೆಗಳ ಆವರ್ತಕ್ಕೆ ಅವನು ದಂಗುಬಡಿದ. ನಮ್ಮ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡಬೇಕಾದ ಹಾಗೆ ಬದುಕುವುದು ಶಕ್ಯವೇ ಇಲ್ಲವೇನೋ, ಅನ್ನಿಸಿತು. ಪಶ್ಚಾತ್ತಾಪ ನಮ್ಮ ಜೀವನ ಕ್ರಮದ ಅನಿವಾರ್ಯ ಪ್ರಾಪ್ತಿಯಾಗಿರಬಹುದೆಂದೂ ತೋರಿತು. ಸಾವು-ಪಶ್ಚಾತ್ತಾಪ ಒಂದೇ ನಾಣ್ಯದ ಎರಡು ಬದಿಗಳಾಗಿರಬಹುದೆ ? ಇಲ್ಲವಾದರೆ ಸಾಯುವ ಘಳಿಗೆ ಹತ್ತಿರವಾದಾಗಲೇ ಕ್ಷಮೆ ಕೋರುವ ಔದಾರ್ಯ ಯಾಕೆ ಹುಟ್ಟಬೇಕು.

ತಮ್ಮಣ್ಣ ಸ್ಥಿತಿ ನೋಡಿ ಅವನ ಸಾಥಿಗಳು ನೋಡಿ ಕಳವಳಪಟ್ಟರು-

“ನೀನು ಅಲ್ಲಿಗೆ ಹೋಗಿ ಮುಟ್ಟುವಷ್ಟರಲ್ಲಿ ಎಲ್ಲವೂ ಮುಗಿದಿರುತ್ತದೆ. ಹೇಗೂ ಸದ್ಯ ನಿನ್ನ ಅಣ್ಣಂದಿರಿದ್ದಾರೆ, ಅಲ್ಲಿಯ ಪರಿಸ್ಥಿತಿಯನ್ನು ಸಂಭಾಳಿಸಲು. ಇನ್ನೆರಡು ದಿನಗಳಲ್ಲಿ ನೀನು ಆತುರದಿಂದ ಕಾದಿದ್ದ ಇಂಟರ್ವ್ಯೂ ಇದೆ. ದೊಡ್ಡ ಕಂಪನಿ, ಒಳ್ಳೆಯ ಹುದ್ದೆ. ಇಂಟರ್ವ್ಯೂ ಮುಗಿಸಿಯೇ ಹೊರಡು. ನಾಳೆ ಪಶ್ಚಾತ್ತಾಪ ಆಗುವುದು ಬೇಡ” ಎಂದು ಪುಸಲಾಯಿಸಿದರು.

“ನಾನು ಕೂಡಲೇ ಹೊರಡದಿದ್ದರೂ ನಾಳೆ ಪಶ್ಚಾತ್ತಾಪ ಆಗಿಯೇ ಆಗುತ್ತದೆ. ಮೊದಲನೆಯದನ್ನು ನಾನು ನಿಭಾಯಿಸಬಲ್ಲೆ. ಎರಡನೆಯದನ್ನಲ್ಲ” ಎಂದವನೇ ತಮ್ಮಣ್ಣ ಊರಿಗೆ ಹೊರಡುವ ಸಿದ್ಧತೆಗೆ ತೊಡಗಿದ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.