ಉನ್ನಿಕೃಷ್ಣನ್ ಬಂದುಹೋದ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಊರಿನಿಂದ ತುಸುವೇ ದೂರ ಕಡಲ ತೀರದ ಗುಡ್ಡದಂಚಿನಲ್ಲಿ ತೆಂಗಿನ ಮರಗಳ ನಡುವೆ ರಾಮತೀರ್ಥ ಇದೆ. ಸದಾ ಹರಿಯುವ ಸಿಹಿ ಝರಿಗೆ ಈಗಿತ್ತಲಾಗಿ ಸಿಮೆಂಟು ಕಟ್ಟೆ ಮೆಟ್ಟಿಲು ಕಟ್ಟಿ ಆಯತಾಕಾರದ ಸ್ನಾನದ ಕೊಳ ಮಾಡಲಾಗಿದೆ. ಅಲ್ಲೇ ಮೇಲೆ ಗುಡಿಯಲ್ಲಿ ಪುಷ್ಕಳವಾದ ಕಿನಾರೆ ಗಾಳಿಯ ಜತೆ ರಾಮಲಕ್ಷ್ಮಣ ಸೀತೆಯ ವಿಗ್ರಹಗಳು. ಗರ್ಭಗುಡಿ, ಅದಕ್ಕೆ ಬೀಗ, ಕಾಣಿಕೆಯ ಡಬ್ಬ, ಅದಕ್ಕೆ ಬೀಗ – ಹೀಗೆ ದೇವಸ್ಥಾನ ಸ್ಥಾಪಿತವಾಗಿದೆ. ಅದರ, ಪ್ರದಕ್ಷಿಣಾ ಪ್ರಾಕಾರದಲ್ಲಿ ಒಂದೆರಡು ಬೀಸುಕಲ್ಲುಗಳೂ ಇವೆ. ಎಲ್ಲಿಂದಲೋ ಬಂದು ಗೋಕರ್ಣದಲ್ಲಿ ಜೀವ ಹಿಡಿದಿರುವ ಬೈರಾಗಿಗಳು ರಾಮತೀರ್ಥದಲ್ಲೇ ಇರುವದು. ಊರಿಡೀ ತಿರುಗಿ ಭಿಕ್ಷಾನ್ನ ತಂದುಂಡು ಸ್ನಾನ ಮಾಡಿ ಪ್ರಾಕಾರದ ತಂಪು ನೆಲದಲ್ಲಿ ಒರಗಿ ದೇವರ ಸನ್ನಿಧಿಯಲ್ಲಿ ಇದ್ದೇವೆಂದು ತಿಳಿಯುವುದು. ಹೊರಗೆ ಒಣಹಾಕಿರುವ ಅವರ ಕಾವಿ ಬಟ್ಟೆಗಳು ಗಾಳಿಗೆ ಬಲುದೂರದ ತನಕ ಆಗಾಗ ಹಾರಿ ಹೋಗುತ್ತವೆ.

ಯಾವುದೋ ಒಂದು ದಿನ ಉನ್ನಿಕೃಷ್ಣನ್ ಸಹ ಒಂದು ಬಸ್ಸಿನಿಂದಿಳಿದು ತನ್ನ ಪುಟ್ಟ ಸರಂಜಾಮುಗಳೊಡನೆ ಇಲ್ಲಿ ಬಂದ. ಅವನು ಭಾರತವನ್ನೆಲ್ಲ ಸುತ್ತಾಡಿ ವಜ್ರೇಶ್ವರಿಯಲ್ಲಿ ವರುಷವೆರಡು ಇದ್ದು ಇಲ್ಲಿ ಬಂದಿದ್ದ. ಅರವತ್ತರ ಸಮೀಪದ ಉನ್ನಿಕೃಷ್ಣನ್ ಇಲ್ಲಿ ಬಂದಾಗ ಸಂಜೆಯಾಗಲು ಬಂದಿತ್ತು. ತೆಂಗಿನ ಮರಗಳ ದಿವ್ಯ ಚಾಮರಗಳ ನಡುವೆ ಸೂರ್ಯ ಕಂಗೊಳಿಸುತ್ತ ಇಳಿಯುವುದನ್ನು ಗುಡಿಯ ಬಲ ಬದಿಯ ತೆರೆದ ಬಾಗಿಲಿನಿಂದ ನೋಡಿ ಅವನು ಪುಳಕಗೊಂಡಿದ್ದ. ಆ ಬಾಗಿಲು ಹೊಸದೊಂದೇ ಲೋಕವನ್ನು ಅವನಿಗೆ ತೆರೆದಂತಿತ್ತು. ಎದುರಿನ ಮೂರ್ತಿಗಳಿಗಿಂತ ಮಿಗಿಲಾದ ದೇವತ್ವ ಆ ಸಂಜೆಯಲ್ಲೇ ಮೂಡಿದಂತೆ ಅನಿಸಿ ಎದೆಯುಬ್ಬಿಸಿ ಕಡಲ ಗಾಳಿಯನ್ನು ಹೀರಿದ. ಕೆಂಪಗಿನ ದಿಗಂತ. ಬಲಬದಿಗೆ ಕಣ್ಣು ಸೋಲುವ ತನಕ ನಡೆದ ಮಳಲದಂತೆ. ಗಾಳಿಮರಗಳ ನಡುವೆ ಕ್ಷೀಣವಾಗಿ ಗೋಚರಿಸುವ ಊರಿನ ಗೋಪುರ. ಎಲ್ಲಿಂದಲೋ ತನ್ನೊಡನೆಯೇ ನಡೆದು ಬಂದ ಕಡಲು ಕೊನೆಗೂ ಇಲ್ಲಿ ತನ್ನೊಡನೆ ಒಂದಾಗಿ ಹೋದಂತೆ ಅವನಿಗೆ ಅನಿಸಿತು. ಮತ್ತು ಇದೆಲ್ಲ ಹೀಗೆ ಆಗುವುದೇ ಇತ್ತು ಎಂಬಂಥ ಸಹಜತೆಯಿಮ್ದ ಅವನು ಪಾವಟಿಗೆಗಳನ್ನಿಳಿದು ತೀರ್ಥದ ಧಬಧಬೆಯಲ್ಲಿ ತಲೆ ಮುಖ ಕೈಕಾಲು ತೊಳೆದು ಸಿಹಿನೀರು ಕುಡಿದು ಮತ್ತೆ ಮೇಲೇರಿ ಜರ್ಝರಿತವಾದ ಕಲ್ಲುಹಾಸಿನ ಮೇಲೆ ಕೂತು ಸೂರ್ಯಾಸ್ತವನ್ನು ಗಮನಿಸಿದ. ನಂತರ ಸ್ನಾನ ಮಾಡಿ ತನ್ನ ಸರಂಜಾಮುಗಳನ್ನು ಪ್ರದಕ್ಷಿಣೆಯ ಪ್ರಾಕಾದಲ್ಲಿಟ್ಟು ಅಲ್ಲಿಯೇ ಗೋಡೆಯ ಗಿಳಿಗೂಟದ ಮೇಲಿದ್ದ ಚಾಪೆಯೊಂದನ್ನು ಹಾಸಿ ಕೂತುಕೊಂಡ. ಕ್ರಮೇಣ ಕತ್ತಲೆಯಾಯಿತು. ವಾಯು ವಿಹಾರಕ್ಕೆ ಬಂದವರೆಲ್ಲ ಮರಳಿದರು. ಒಂದಿಬ್ಬರು ಬೈರಾಗಿಗಳು ಗಾಳಿಗೆ ಅಡ್ಡ ನಿಂತು ಬೆಂಕಿ ಉರಿಸಿ ಒಲೆ ಹೂಡಲು ಪ್ರಯತ್ನಿಸುತ್ತಿದ್ದರು. ಉನ್ನಿಕೃಷ್ಣನ್ ಮೈಮರೆತು ನಿದ್ದೆ ಹೋದ.

ಮರುದಿನದಿಂದ ಅವನ ದಿನಚರಿ ನಿರುದ್ವಿಗ್ನವಾಗಿ ಎಂದಿನಿಂದಲೋ ನಡೆದು ಬಂದಂತೆ ನಡೆಯಿತು. ಉಳಿದಿಬ್ಬರು ಬೈರಾಗಿಗಳು – ಒಬ್ಬ ಉತ್ತರ ಭಾರತದವ ಮತ್ತೊಬ್ಬ ಕೇರಳದವ – ಊರಿನ ಕುರಿತಾದ ಮಾಹಿತಿ ಅವನಿಗೆ ಕೊಟ್ಟರು. ಮನಿ‌ಆರ್ಡರು ಬರುವದಿದ್ದರೆ ದೇವಸ್ಥಾನದ ವಿಳಾಸ ಕೊಟ್ಟರೆ ಸಾಕು ಎಮ್ದು ಹೇಳಿ – ಕ್ಷೇತ್ರವಾಗಿದ್ದ ಈ ಊರಲ್ಲಿ ಯಾವ್ಯಾವ ಮನೆಯಲ್ಲಿ ಎಂದೆಂದು ಸಂತರ್ಪಣೆ ಇರುತ್ತದೆ ಎಂದು ಹೇಳಿದರು. ಹಿಂದಿನ ಕುರಿತು ಇವರೇನೂ ಮಾತಾಡುತ್ತಿರಲಿಲ್ಲ. ಹೆಚ್ಚು ಪ್ರಶ್ನೆಗಳನ್ನೂ ಹಾಕುತ್ತಿರಲಿಲ್ಲ. ಕೆಲವೇ ದಿನಗಳ ಹಿಂದೆಯಷ್ಟೇ ಇದೇ ಗುಡ್ಡದ ಬದಿಯಲ್ಲಿ ವಾಸವಾಗಿದ್ದ ಹಿಪ್ಪಿಗಳಲ್ಲಿ ಒಬ್ಬ ಇನ್ನೊಬ್ಬನ ಪಾಸ್‌ಪೋರ್ಟು ಹಣ ಇತ್ಯಾದಿ ದೋಚಿಕೊಂಡು ಓಡಿಹೋದ ಸುದ್ದಿ ಹೇಳಿ ಆ ಸಂದರ್ಭದಲ್ಲಿ ತಮ್ಮನ್ನು ಪೋಲೀಸರು ಠಾಣೆಗೆ ಎಳೆದು ಸತಾಯಿಸಿದ್ದ ಸುದ್ದಿಯನ್ನು ವಿವರವಾಗಿ ಹೇಳಿದರು. ಉನ್ನಿಕೃಷ್ಣನ್ ಹೀಗೆ ಎಷ್ಟೋ ವಿವರಗಳನ್ನು ಮಾಹಿತಿಗಳನ್ನು ದಾಟಿಕೊಂಡು ಬಂದಿದ್ದು. ಯಾವ ಸುದ್ದಿಯೂ ಅವನನ್ನು ಕಲಕುವಂತಿರಲಿಲ್ಲ. ಹಾಗಮ್ತ ಉನ್ನಿಕೃಷ್ಣನ್ ತನ್ನ ಹಿಂದೆ ನಿಗೂಢವಾದದ್ದೇನೂ ಬಿಟ್ಟು ಬಂದಂತಿರಲಿಲ್ಲ.

ಕೇರಳದ ಕೋಳಿಕೋಡಿನ ಸಮೀಪದ ತನ್ನ ಊರು, ಅವಸರದಿಂದೆಂಬಂತೆ ಬೆಳೆದು ಕೋಪಿಷ್ಟನಾಗಿದ್ದ ಮಗ, ಸೊಸೆ ಜೀವ ತೆಗೆದುಕೊಂಡ ಮೇಲೆ ಮೂಕಿಯಂತಾಗಿ ಹೋಗಿದ್ದ ಹೆಂಡತಿ, ಮದುವೆಯ ನಂತರವೂ ಪದೇ ಪದೇ ಮನೆಗೆ ಬರುವ ಮಗಳು – ಇವ್ಯಾವುವೂ ಅವನಿಗೆ ತನ್ನಿಂದ ಬಲುದೂರ ಇದ್ದಂತೆ ಅನಿಸುತ್ತಿಲ್ಲ. ಮನೆ ಬಿಟ್ಟು ಏಳೆಂಟು ವರುಷಗಳೇ ಆಗಿದ್ದರೂ ನಿನ್ನೆ ಮೊನ್ನೆಯೇ ಮನೆಯಿಂದ ಹೊರಬಿದ್ದಂತೆ ಅನಿಸುತ್ತಿತ್ತು. ಅವನ ಕಣ್ಣಿಗೆ ಕಟ್ಟುವ ಚಿತ್ರವೆಂದರೆ ತಾನು ಹೊರಬಿದ್ದ ದಿನ ಓಣಿಯ ಕೊನೆಗೆ ತಾನು ಮರೆಯಾಗುವವರೆಗೂ ಭ್ರಮಿತಳಂತೆ ತೆಂಗಿನ ಮರಕ್ಕೆ ಆತುಕೊಂಡು ನಿಶ್ಚಲ ಕಣ್ಣುಗಳಲ್ಲಿ ನೋಡುತ್ತ ನಿಂತಿದ್ದ ಹೆಂಡತಿಯದು. ಅವಳಿಗೆ ತಾನೇನೂ ಹೇಳದಿದ್ದರೂ ಅವಳಿಗೆಲ್ಲ ಗೊತ್ತಿದ್ದಂತಿತ್ತು. ಒಂದಿಷ್ಟು ತೀರ್ಥ ಕ್ಷೇತ್ರಗಳನ್ನು ತಿರುಗಿ ಬರುತ್ತೇನೆ ಎಂದು ಹೊರಟಿದ್ದ ಉನ್ನಿಕೃಷ್ಣನ್‌ನ ಯಾತ್ರೆ ಯಾವ ಗಳಿಗೆಯಲ್ಲಿ ಮರಳದ ಯಾತ್ರೆಯಾಯಿತು ಅಂತ ಅವನಿಗೂ ಗೊತ್ತಾಗಲಿಲ್ಲ. ಮದ್ರಾಸು, ತಿರುಪತಿ, ಗಾಣಗಾಪುರ, ಆಳಂದಿ – ಹೋಗೆಲ್ಲ ತಿರುಗಿ, ನಂತರ ಉತ್ತರಕ್ಕೆ ಹೋದವ ನಡುವೆಲ್ಲೋ ಲೆಕ್ಕಾಚಾರ ಕಳೆದುಕೊಂಡ. ಪಗಾರು, ಬೆಳಗಿನೂಟ, ಸಂಜೆಯೂಟ, ನಿದ್ರೆ, ಪಾಪ, ಪುಣ್ಯ ಕೃತಜ್ಞತೆಗಳ ಅವನ ಪ್ರಪಂಚ ಒಂದರೊಂದರ ಸಮತೋಲ ತಪ್ಪಿ ಹದಗೆಟ್ಟಾಗಲೇ ಅವನಿಗೊಂದು ಹೊಸ ನೆಲೆ ನಿಲುಕುತ್ತಿರುವಂತೆ ತೋರಿತು. ಬನಾರಸಿನ ಸಮೀಪದ ಹಳ್ಳಿಯೊಂದರಲ್ಲಿ ಉಳಿದವ ಶೀತಕ್ಕೆ ಹೆದರಿ ಹಿಮಾಲಯದ ಕಡೆಗೆ ಹೋಗಲಿಲ್ಲ. ಎಲ್ಲೂ ರೇಗಲಿಲ್ಲ. ಕಚ್ಚಾಡಲಿಲ್ಲ. ಉಳಿದವರನ್ನು ಮುಂದಕ್ಕೆ ಸಾಗಿಸಿ ಹಿಂದೆ ನಿಧಾನಕ್ಕೆ ಚಲಿಸುವವನಂತೆ ಉನ್ನಿಕೃಷ್ಣನ್ ನಡೆದ. ಮೊದಮೊದಲು ದೇವಸ್ಥಾನಗಳನ್ನೇ ಅರಸುತ್ತಿದ್ದವ ಕ್ರಮೇಣ ಯಾವುದೇ ಪ್ರಶಾಂತ ಸ್ಥಳಗಳನ್ನು ತಲುಪಲಾರಂಭಿಸಿದ. ಊರು ಮನೆ ಬಿಟ್ಟ ನಂತರದ ಒಂದು ರೀತಿಯ ತಪ್ಪಿತಸ್ಥ ಭಾವ ಅವನ ಕೈಲಿದ್ದ ಹಣದೊಡನೆಯೇ ಕಮ್ಮಿಯಾಗುತ್ತ ಹೋಗಿ ಹಣ ಇಲ್ಲವಾದ ಕ್ಷಣಕ್ಕೆ ಮಾಯವಾಗಿತ್ತು. ಆ ಅಚ್ಚರಿಯೇ ಅವನಿಗಿಂದು ಹಗುರನ್ನು ತಂದಂತಿತ್ತು. ಆ ನಂತರ ಹಾಗೆ ಹೀಗೆ ದೈನಿಕ ನಿಭಾಯಿಸುತ್ತಿದ್ದ ಉನ್ನಿಕೃಷ್ಣನ್ ಹಣದ ಕುರಿತು ಆಮಿಷವಿಲ್ಲದ ಗೌರವ ಇಟ್ಟುಕೊಂಡ. ಸಿಕ್ಕ ಹಣಕ್ಕೆ ನ್ಯಾಯ ಕೊಡುವವನಂತೆ ಖರ್ಚು ಮಾಡಿದ. ಗಂಗಾಸಾಗರದಲ್ಲಿ ಅಚಾನಕ ಇವನ ಕೈಗೆ ಅಂಗಿ, ಗಡಿಯಾರ ಮತ್ತು ಹಣ ಕೊಟ್ಟು ನೀರಿಗಿಳಿದ ವ್ಯಕ್ತಿಯೊಬ್ಬ ಮರಳಲೇ ಇಲ್ಲ. ಆ ಗರ್ದಿಯಲ್ಲಿ ಎರಡು ದಿನ ಉನ್ನಿಕೃಷ್ಣನ್ ಹಂದಾಡದೆ ಅಲ್ಲೇ ಕಾದ. ನಂತರ ಅಂಗಿಯನ್ನು ನೀರಿಗೆಸೆದು ಆ ಗಡಿಯಾರ ಮತ್ತು ಹಣವನ್ನು ಬಳಸತೊಡಗಿದ. ದಕ್ಷಿಣಭಾರತದಿಂದ ಬಂದಿದ್ದ ಪ್ರವಾಸಿ ರೈಲೊಂದರಲ್ಲಿ ಇವನಿಗೆ ಜಾಗ ಸಿಕ್ಕಿರದಿದ್ದರೆ ಮರಳಿ ಈ ಕಡೆ ಆತ ಬರುತ್ತಿದ್ದನೋ ಇಲ್ಲವೋ. ವಜ್ರೇಷ್ವರಿಯಲ್ಲಿ ಅವನಿಗೆ ಖಾಯಿಲೆ ಆಗಿ ಅಲ್ಲೇ ಉಳಿದುಬಿಟ್ಟ. ದಿನಗಳನ್ನು ಅಂಕೆಗಳನ್ನು ಲೆಕ್ಕವಿಡುವ ಪರಿಪಾಠ ಅವನಿಗೊಂದೂ ಇದ್ದಿಲ್ಲವಾದ್ದರಿಂದ ಅವನ ನೆನಪುಗಳೂ ವೇಳೆಯ ಕರಾರುಗಳನ್ನು ಇಟ್ಟುಕೊಂಡಿರುತ್ತಿರಲಿಲ್ಲ. ಹೀಗಾಗಿ ಒಮ್ಮೊಮ್ಮೆ ನಿನ್ನೆಯೇ ಬಾಲ್ಯದಲ್ಲಿದ್ದಂತೆಯೂ ಅವನಿಗೆ ಅನಿಸುತ್ತಿತ್ತು. ಹೊರ ಜಗತ್ತಿನ ವಿದ್ಯಮಾನಗಳು ಬೇಕಿದ್ದೋ ಇಲ್ಲದೆಯೋ ಸೋಕದೆಯೇ ಬಂದಂತಿದ್ದ ಅವನಿಗೆ ಯಾಕೋ ಗೋಕರ್ಣದ ಈ ರಾಮತೀರ್ಥದ ಗುಡ್ಡದ ನೆಲೆ ಎಂದೂ ಸಿಗದ ಹಗುರತೆಯೊಂದನ್ನು ಕೊಡಲಾರಂಭಿಸಿದಂತೆ ಅನಿಸಿತು. ಕಡಲಿನಿಂದ ಬಂಡ ಪ್ರತೀ ಗಾಳಿಯೂ ತನ್ನ ಉಸಿರೋ ಎಂಬಂತೆ ಹೊಸ ಚೈತನ್ಯದಿಂದ ಉನ್ನಿಕೃಷ್ಣನ್ ಓಡಾಡಿದ. ಅಡ್ಡಾಡಲು ಬಂದ ಪ್ರವಾಸಿಗರೊಡನೆ ಹಿಂದಿಯಲ್ಲಿ ಮಾತಾಡಿದ. ಮೆಟ್ಟಿಲುಗಳನ್ನು ಸ್ವಚ್ಛ ಮಾಡಿದ. ಏಣಿ ಹಾಕಿ ನಿಂತು ಗುಡಿಯ ಮುರಿದ ಹೆಂಚುಗಳನ್ನು ಸರಿಪಡಿಸಿದ. ರುಚಿ ರುಚಿಯಾಗಿ ಅಡಿಗೆ ಮಾಡುವದರಲ್ಲೇ ಪೈಪೋಟಿ ನಡೆಸುತ್ತಿದ್ದ ಉಳಿದಿಬ್ಬರು ಬೈರಾಗಿಗಳನ್ನು ನಸುನಗುತ್ತ ಗಮನಿಸಿದ.

ಒಂದು ರಾತ್ರಿ ಎಂದಿನಂತೆ ಕತ್ತಲಿನಲ್ಲಿ ಸಮುದ್ರವನ್ನು ಕೇಳುತ್ತ ಆತ ಗುಡ್ಡದಂಚಿನಲ್ಲಿ ಕೂತುಕೊಂಡಿದ್ದ. ಆಗ ಒಂದು ಘಟನೆ ನಡೆಯಿತು. ಉನ್ನಿಕೃಷ್ಣನ್ ಹ್ಹಗೆ ಕೂತಿದ್ದಾಗಲೇ ಅವನ ಕಣ್ಣೆದುರೇ ಕಳ್ಳನೊಬ್ಬ ಸರ ಸರ ಪಕ್ಕದ ತೆಂಗಿನ ಮರ ಏರಿದ ಮತ್ತು ನಾಲ್ಕೈದು ಸೀಯಾಳ ಸೊಂಟಕ್ಕೆ ಕಟ್ಟಿಕೊಂಡು ಇಳಿದ. ತಾನೇ ನಂಬದ ಹಾಗೆ ಉನ್ನಿಕೃಷ್ಣನ್ ಸರಕ್ಕನೆ ಎದ್ದು ಅವನೆಡೆ ನುಗ್ಗಿ ಅವನನ್ನು ಹಿಡಿದು ನಿಲ್ಲಿಸಿದ. ಕತ್ತಲಲ್ಲಿ ಸರಿಯಾಗಿ ಗೋಚರಿಸದ ಆ ಕಳ್ಳ ಕಿಂಚಿತ್ತೂ ವಿಚಲಿತನಾಗದೆ ‘ಅರೇ’ ಎಂದು ಉನ್ನಿಕೃಷ್ಣನನ್ನು ತುಸು ನೂಕಿ ಒಂದು ಸೀಯಾಳವನ್ನು ಅವನ ಕೈಗಿಟ್ಟು ಒಂದು ಕೈಯಿಂದ ಉನ್ನಿಕೃಷ್ಣನ್‌ನ ಗಡ್ಡವನ್ನು ಕೀಟಲೆ ಮಾಡುವವನಂತೆ ಜಗ್ಗಿ ಹಾಡೊಂದನ್ನು ಗುಣಗುಣಿಸುತ್ತ ಮಾಯವಾದ. ಇದರಿಂದ ಚೇತರಿಸಿಕೊಳ್ಳಲು ಉನ್ನಿಕೃಷ್ಣನ್‌ಗೆ ಬಹಳ ಕಷ್ಟವಾಯಿತು. ತನ್ನನ್ನು ಗಮನಿಸಿಯೂ ಏರಿದ್ದ ಆ ವ್ಯಕ್ತಿಯೆಡೆ ತಾನು ನುಗ್ಗಿದ ದೃಶ್ಯದ ವಿಚಿತ್ರ ಕ್ಷುಲ್ಲಕತನದಂಥದೇನೋ ಅವನನ್ನು ಕಾಡಿತು. ಅದೂ ಈ ಸಮುದ್ರದ ಎದುರು! ಆತ ಕೈಲಿ ಹಿಡಿಸಿಟ್ಟು ಹೋದ ಸೀಯಾಳ ಆ ಕ್ಷಣ ಬದುಕಿನ ಒಗಟೊಂದನ್ನು ಒಡೆಯಲು ಯತ್ನಿಸುತ್ತಿರುವಂತೆ ತೋರಿ ಎತ್ತಿ ಅದನ್ನು ಸಮುದ್ರಕ್ಕೆಸೆದು ಬಿಟ್ಟಿದ್ದ. ಈ ಕೃತ್ಯ ಸಹ ಅವನಿಗೆ ವಿಚಿತ್ರ ನಾಚಿಕೆ ತರಿಸತೊಡಗಿತು. ಆದರೆ ಕಳ್ಳ ಗುಣಗುಣಿಸಿದ್ದು ಮಾತ್ರ ಕಡಲಿನ ಗಾಳಿಯಲ್ಲಿ ಎಷ್ಟೋ ಹೊತ್ತಿನ ತನಕ ಇದ್ದಂತೆ ಭಾಸ ಉಳಿಯಿತು. ಮರುದಿನವೂ ವಿಚಿತ್ರ ಅನ್ಯಮನಸ್ಕತೆಯಲ್ಲಿ ಉನ್ನಿಕೃಷ್ಣನ್ ಊರಲ್ಲಿ ಅಡ್ಡಾಡಿದ. ಊರಲ್ಲೆಲ್ಲ ಕಾರ್ತಿಕದ ತಯಾರಿ. ಪ್ರತಿ ಮನೆಯೆದುರು ರಂಗೋಲಿ, ತೇರಿಗೆಲ್ಲ ತೋರಣ. ಮುಸ್ಸಂಜೆಗೇ ಮರಳಿ ಬಂದು ಪಾವಟಿಗೆಗಳ ಮೇಲೆ ಕೂತ. ರಾಮದೇವರಿಗೂ ಕಾರ್ತಿಕದ ಪೂಜೆಯ ತಯಾರಿ ನಡೆದಿತ್ತು. ಒಂದಿಷ್ಟು ಮಂದಿ ಅತ್ತಿತ್ತ ಓಡಾಡುತ್ತಿದ್ದರು.

ಅಷ್ಟರಲ್ಲಿ, ಮುಳುಗುತ್ತಿರುವ ಬೆಳಕಿನಲ್ಲೂ ಎದ್ದು ಕಾಣುವಂತಿದ್ದ ಹೆಂಗಸೊಬ್ಬಳು ದೂರದಿಂದ ಅವಸರದಿಂದ ಬರುವುದನ್ನು ಉನ್ನಿಕೃಷ್ಣನ್ ನೋಡಿದ. ಆ ಹೆಂಗಸು ಅವನು ಈ ಊರಿನಲ್ಲಿ ಯಾವುದೇ ಹಿತ್ತಲಲ್ಲಿ ಯಾವುದೇ ಮನೆಯ ಹಿಂದೆ ಬಟ್ಟೆ ಒಗೆಯುತ್ತಲೋ, ನೀರು ಸೇದುತ್ತಲೋ ಬಿಕ್ಕುತ್ತಲೋ ನೋಡಿದ್ದ ಯಾವುದೇ ಹೆಂಗಸಿನಂತಿದ್ದಳು. ಅವಳು ಬಂದವಳೇ ನೇರ ತೀರ್ಥದಲ್ಲಿ ಕೈಕಾಲು ತೊಳೆದು ಬೊಗಸೆ ತುಂಬ ನೀರು ಕುಡಿದಳು. ನಂತರ ಮೆಟ್ಟಲೇರಿ ಬಂದವಳು ಮಡಿಲಿನಿಂದ ಬಾಳೆಯ ಸಣ್ಣ ಗೊನೆಯನ್ನು ತೆಗೆದು ಅಲ್ಲೇ ಇದ್ದ ಉನ್ನಿಕೃಷ್ಣನ್‌ನಿಗೂ ಉಳಿದ ಬೈರಾಗಿಗಳಿಗೂ ಹಂಚಿದಳು. ಮತ್ತು ದೇವಸ್ಥಾನದ ಒಳಗೂ ಹೋಗದೆ ಸರಸರನೆ ದೇವಸ್ಥಾನದ ಹಿಂಭಾಗದ ಗುಡ್ಡದಂಚಿನ ಸಮುದ್ರದ ಬದಿಯ ಇಕ್ಕಟ್ಟಾದ ದಾರಿಯಲ್ಲಿ ನಡೆದು ಬಿಟ್ಟಳು. ಉನ್ನಿಕೃಷ್ಣನ್‌ಗೆ ಏನೋ ಸುಳಿವು ಹತ್ತಿದಂತಾಗಿ ಎದ್ದು ಅವಳ ಹಿಂದೆಯೇ ಓಡಿದ. ತುಸು ಓಡುತ್ತಲೇ ಏನೋ ವಿಚಿತ್ರ ಅನಿಸಿದಂತಾಗಿ ನಿಂತುಬಿಟ್ಟ. ಮತ್ತು ಹಿಂಬಾಲಿಸುವುದನ್ನು ಬಿಟ್ಟು ಮರಳಿ ಬಂದ. ಅವಳು ಜೀವ ತೆಗೆದುಕೊಳ್ಳಲೆಂದೇ ಓಡುತ್ತಿದ್ದಳೆಂದು ತಾನ್ಯಾಕೆ ಭ್ರಮಿಸಲಿ ಎಂದು ಏದುಸಿರು ಬಿಡುತ್ತ ತನ್ನ ವಿಹ್ವಲತೆಯನ್ನು ಅರಗಿಸಿಕೊಳ್ಳಲು ಅವನು ಎಷ್ಟು ಯತ್ನಿಸಿದರೂ ಅವಳು ಜೀವ ತೆಗೆದುಕೊಳ್ಳುವದೇ ಖಚಿತವಿದ್ದರೂ ನಾನ್ಯಾಕೆ ಅವಳನ್ನು ನಿಲ್ಲಿಸಲಿ ಎಂಬ ಶಂಕೆಯೇ ತನ್ನನ್ನು ಹಿಮ್ಮೆಟ್ಟಿಸಿರಬಹುದೇ ಎಂದು ಬಾಧೆಗೊಳಪಟ್ಟ. ನೀರಿಗಿಳಿದು ಝರಿಯನ್ನು ರಪರಪ ಎರಚಿಕೊಂಡ. ಧಾರೆಗೆ ತಲೆ ಒಡ್ಡಿದ. ಸಮುದ್ರವನ್ನು ನೇರ ಎದುರಿಸಲಾಗದೆ ಗೊಂದಲಗೊಂಡ.

ಕತ್ತಲಲ್ಲಿ ಕಾರ್ತಿಕ ಬೆಳಗತೊಡಗಿತು. ದೇವಸ್ಥಾನದಲ್ಲಿ ಪಣತಿಗಳನ್ನು ಹಚ್ಚಿ ಆರತಿ ಆಯಿತು. ಕಿಕ್ಕಿರಿದ ಬೆಳಕಿನಲ್ಲಿ ಜನ ಮೈಮರೆತರು. ಉನ್ನಿಕೃಷ್ಣನ್ ಶತಪಥ ಅಡ್ಡಾಡತೊಡಗಿದ. ಪೇಟೆಯ ಕಡೆ ಬಂದ. ರಥಬೀದಿಯುದ್ದಕ್ಕೂ ದೀಪಗಳು ಒಂದು ಮೂಲೆಯಲ್ಲಿ ಹಾಲಕ್ಕಿ ತರುಣರ ಗುಮಟೆ ಪಾಂಗಿನ ಲೋಕನೃತ್ಯ. ಕೆಂಪನೆ ಕೆಂಡದ ಮೇಲೆ ಗುಮಟೆ ವಾದ್ಯದ ಚರ್ಮವನ್ನು ಹದಗೊಳಿಸುತ್ತ ಕೈಗಳ ತಾಳಕ್ಕೆ ತಲೆಗೆ ಕೆಂಪು ರುಮಾಲು ಸುತ್ತಿಕೊಂಡು ‘ಶಬೋಶ್’ ಎಂದು ಕೇಕೆ ಹಾಕುತ್ತ ಕುಣಿಯುತ್ತಿದ್ದ ಹದಿಹರೆಯದ ಪೋರನೊಬ್ಬನನ್ನು ನೋಡುತ್ತ ಉನ್ನಿಕೃಷ್ಣನ್ ನಿಂತ. ಖುಷಿಯನ್ನು ಕಡಕ್ಕೆ ಕೊಳ್ಳಲು ಬಂದವರಂತೆ ಮಂದಿ ಜರುಗಿ ಸರಿಯುತ್ತಿದ್ದರು. ಮಧ್ಯರಾತ್ರಿಯವರೆಗೂ ಉನ್ನಿಕೃಷ್ಣನ್ ಭಾಷೆ ಅರಿಯದ ಈ ಲೋಕನಾಟ್ಯವನ್ನು ನೋಡುತ್ತ ನಿಂತ. ನಡು ನಡುವೇ ಅವನಿಗೆ ಆ ಕಳ್ಳನೇ ಅಲ್ಲಿ ಕುಣಿಯುತ್ತಿರುವಂತೆ ಅನಿಸುತ್ತಿತ್ತು. ರಾತ್ರಿ ಎರಡು ಗಂಟೆಯ ಹೊತ್ತಿಗೆ ಕೋಟಿತೀರ್ಥದಲ್ಲಿ ದೇವರ ದೋಣಿ ಉತ್ಸವಕ್ಕೆ ಮಂದಿ ಧಾವಿಸಿದರು. ಕುಣಿಯುವ ಪೋರನನ್ನು ನೋಡುತ್ತ ಒಂದು ಥರ ಕನಸಿನಲ್ಲಿ ನಿಂತಿದ್ದ ಉನ್ನಿಕೃಷ್ಣನ್‌ನೂ ಕೋಟಿತೀರ್ಥದ ಕಡೆಗೆ ಹೋದ. ಅಲ್ಲಿ ನಿದ್ದೆಯಿಂದ ಎಬ್ಬಿಸಲ್ಪಟ್ಟ ಮಕ್ಕಳು ನೀರಿನಲಿ ಪಣತಿಯನ್ನು ತೇಲಿ ಬಿಡಲು ಪ್ರಯತ್ನಿಸುತ್ತಿದ್ದರು. ಒಂದಿಷ್ಟು ಹೊತ್ತು ಉನ್ನಿಕೃಷ್ಣನ್ ಮೆಟ್ಟಿಲು ಮೇಲೆ ಕೂತುಕೊಂಡ. ತನ್ನ ಈ ಎಲ್ಲ ವೈವಾಟು ಯಾವ ರೀತಿಯಿಂದ ಸನ್ಯಾಸ? ಅಥವಾ ಎಂಥ ಮಾನಸಿಕ ಸ್ಥಿತಿಯನ್ನು ಅರಸಿಕೊಂಡು ತಾನು ನಡೆದಿದ್ದೇನೆ? ಊಟ ನಿದ್ರೆ ಇಲ್ಲೂ ನಡೆದಿದೆ. ಕನಸುಗಳು ಅಲ್ಲೂ ಬೀಳುತ್ತವೆ. ಹೊಣೆಗಾರಿಕೆ ಬೇಡ ಎಂದ ಮಾತ್ರಕ್ಕೆ ತಾನು ಹೇಗೆ ಗೆದ್ದಂತಾಯಿತು? ಅವನ ಎಂದಿನ ಪ್ರಷ್ನೆಗಳನ್ನು ಎದುರಿಗಿಟ್ಟುಕೊಂಡು ಸಂಜೆಗತ್ತಲಿನಲ್ಲಿ ಹೆಂಗಸು ಮರೆಯಾದ ದೃಶ್ಯವನ್ನು ಮರೆಯಲು ಯತ್ನಿಸಿದ. ಅವಳನ್ನು ಹಿಂಬಾಲಿಸಿ ಅವಳನ್ನು ಉಳಿಸಬಹುದಾಗಿದ್ದ ಪರಮಸಾಧ್ಯತೆಯನ್ನೂ ಕಡೆಗಣಿಸುವಂಥದ್ದೇನಿದೆ ತನ್ನ ಯಾತ್ರೆಯಲ್ಲಿ. ನಿನ್ನೆ ಆ ಕಳ್ಳ ಎದುರಾಗಿರದಿದ್ದರೆ ಇಂದು ತಾನು ಅವಳನ್ನು ಉಳಿಸಹೋಗಬಹುದಿತ್ತೆ? ಹಾಗೆಯೇ ಎದ್ದು ತೆರೆದಿದ್ದ ಅಂಗಡಿಯಲ್ಲಿ ಚಾ ಕುಡಿದು ರಾಮತೀರ್ಥಕ್ಕೆ ಮರಳಿದ. ಮೂರೋ ನಾಲ್ಕೋ ಗಂಟೆಯ ಜಾವ. ತಿಳಿಗಾಳಿಯಲ್ಲಿ ಪ್ರಕೃತಿ ತಲೆ ನೇವರಿಸುತ್ತಿತ್ತು. ಒಂದಿಷ್ಟು ಜನ ಬ್ಯಾಟರಿ ಗ್ಯಾಸುದೀಪಗಳೊಂದಿಗೆ ಗುಸು ಗುಸು ಮಾಡುತ್ತ ಗುಡ್ಡವನ್ನೆಲ್ಲ ಹುಡುಕಿ ಬಂದು ತೀರ್ಥದಲ್ಲಿ ಕೈಕಾಲು ತೊಳೆದುಕೊಂಡರು. ಅವರು ಹೆಂಗಸನ್ನು ಹುಡುಕಿ ಬಂದಿರುವುದು ಸ್ಪಷ್ಟವಿತ್ತು. ಹೆಣ ದಡಕ್ಕೆ ಬಂದು ಬೀಳಲು ಎಂಟು ತಾಸುಗಳಾದರೂ ಬೇಕು. ಅದು ಇದೇ ದಡದಲ್ಲಿ ಬರಬೇಕೆಂಬ ನೇಮವೂ ಇಲ್ಲ. ಯಾವ ದೂರದ ತೀರದಲ್ಲೂ ಹೋಗಬಹುದು ಎಂದೆಲ್ಲಾ ಆಡಿಕೊಂಡು ಅವರೆಲ್ಲ ಪೇಟೆಯ ಕಡೆ ಹೋದರು. ಉನ್ನಿಕೃಷ್ಣನ್ ಹೊರಗೇ ಮಲಗಿದ. ಸಮುದ್ರದ ತೆರೆಗಳು ಅವನ ಕಿವಿಯಲ್ಲೇ ಬಂದು ಅಪ್ಪಳಿಸುತ್ತಿದ್ದವು. ದೂರದಲ್ಲಿ ಕಾಣುತ್ತಿದ್ದ ಊರಿನ ಗುಡಿಯ ಗೋಪುರದಲ್ಲಿ ಆರದೆ ಉಳಿದ ಪಣತಿಗಳು ಮಿಣುಕುತ್ತಿದ್ದವು. ಉನ್ನಿಕೃಷ್ಣನ್ ಎದ್ದು ದೇವಸ್ಥಾನದ ಹಿಂದಿನ ಆ ಕಾಲು ದಾರಿಯಲ್ಲಿ ನಡೆದ. ಆ ದಾರಿ ಒಂದು ಕೊರಕಲಿನಲ್ಲಿ ಮುಗಿಯಿತು. ಅಲ್ಲಿ ಸಮುದ್ರ ವಿಚಿತ್ರ ರೌದ್ರತೆಯಿಂದ ಅಪ್ಪಳಿಸುತ್ತಿತ್ತು. ಆ ಹೆಂಗಸು ಇಲ್ಲೇ ಹಾರಿರಬೇಕು. ತನ್ನ ರೌದ್ರತೆಯಲ್ಲೂ ಕಾದಿಟ್ಟುಕೊಮ್ಡ ಸಮುದ್ರದ ಶಾಂತತೆ ಅವನನ್ನು ಆವರಿಸಿತು. ನಕ್ಷತ್ರದ ತಿಳಿ ಬೆಳಕಿನ ಈ ವಿಲಕ್ಷಣ ಏಕಾಂತದಲ್ಲಿ ಆ ಹೆಂಗಸಿನ ಅತಿ ಸಮೀಪ ಪ್ರಕೃತಿ ತನ್ನನ್ನು ತಂದು ನಿಲ್ಲಿಸಿದಂತೆ ಅವನಿಗೆ ಅನಿಸಿತು. ಬದುಕಿದ್ದರಷ್ಟೆ ತಾನೆ ಈ ಸಮುದ್ರ. ಬದುಕಿದ್ದರಷ್ಟೆ ತಾನೆ ತನ್ನ ಸನ್ಯಾಸ ಕೂಡ. ಅವಳ ಕುರಿತು ಎದೆ ಅತ್ಯಂತ ಭಾರವಾಗಿ ಬಿಕ್ಕಳಿಸಿದಂತಾಯಿತು. ಆ ಒಂದು ಕ್ಷಣ ಅವಳನ್ನು ತಡೆಯದೆ ಹೋದ ಆ ಒಂದು ಕ್ಷಣ ಸಹ ಇಲ್ಲೇ ಜರುಗಿದ್ದಲ್ಲವೆ. ಉನ್ನಿಕೃಷ್ಣನ್ ನೀಳವಾಗಿ ಉಸಿರು ಎಳೆದುಕೊಳ್ಳುತ್ತ ಪ್ರಾಕಾರಕ್ಕೆ ಮರಳಿದ.

ಮರುದಿನ ಮುಂಜಾನೆ ಅವನು ಎದ್ದಾಗ ಏದುಸಿರು ಬಿಡುತ್ತ ಹತ್ತು ಹನ್ನೊಂದು ವರುಷದ ಹುಡುಗಿಯೊಬ್ಬಳು ಸೋತು ಹೋದ ದನಿಯಲ್ಲಿ ರೋದಿಸುತ್ತಿದ್ದಳು. “ಅಮ್ಮನನ್ನು ನೋಡಿದ್ದೀರಾ?” ಎಂದು ಬತ್ತಿ ಹೋದ ಅಳುವಿನಲ್ಲಿ ಎಲ್ಲರನ್ನೂ ಕೇಳುತ್ತಿದ್ದಳು. ಉನ್ನಿಕೃಷ್ಣನ್ ಅವಳಿಗೆ ನೀರು ಕುಡಿಸಿ ಅವಳ ಕೈ ಹಿಡಿದುಕೊಂಡು ಆ ಗುಡ್ಡದ ಸಮುದ್ರದಂಚಿನ ಎಲ್ಲ ಕೊರಕಲುಗಳಲ್ಲಿ ಗುಡ್ಡದ ಹಿಂಭಾಗದ ದೊಡ್ಡ ಮಳಲುದಂಡೆಯಲ್ಲಿ ಅಲೆದ. ಹುಟ್ಟಾ ಗೊತ್ತಿರದ ಅವರಿಬ್ಬರು ತಾಸುಗಟ್ಟಲೆ ಮಾತಿಲ್ಲದೆ ಹುಡುಕಿದರು. ಸಮುದ್ರ ಘೋಷದ ಹೊರತು ಅವಳ ಬಿಕ್ಕಳಿಕೆಯ ಹೊರತು ಅವರ ನಡುವೆ ಯಾವ ಮಾತುಕತೆಯೂ ಇರಲಿಲ್ಲ. ತಾನೀಗ ಬನಾರಸಿನಲ್ಲೋ, ಆಳಂದಿಯಲ್ಲೋ ಇದ್ದರೂ ಈ ಪೋರಿ ಈಗ ಇಲ್ಲಿ ಹೀಗೇ ಹುಡುಕುತ್ತಿದ್ದಳು. ಈ ದಂಡೆ ಇಲ್ಲೇ ಹೀಗೇ ಬಿದ್ದಿರುತ್ತಿತ್ತು ಎಂದನಿಸಿತು ಅವನಿಗೆ. ಮಟ ಮಟ ಮಧ್ಯಾಹ್ನ ಅವರು ದೇವಸ್ಥಾನಕ್ಕೆ ಮರಳಿದರು. ತಾನು ಮನೆಗೆ ಹೋಗುವುದಿಲ್ಲ ಎಂದು ಹಟ ಹಿಡಿದಿದ್ದ ಅವಳನ್ನು ಗದರಿಸಿ ಅವಳ ಮನೆ ತಲುಪಿಸಿ ಹತ್ತಿಪ್ಪತ್ತು ಜನ ಇದ್ದ ಆ ಮನೆಯಲ್ಲಿ ಒತ್ತಾಯಿಸಿದರೂ ಉನ್ನಿಕೃಷ್ಣನ್ ಊಟ ಮಾಡದೇ ಮರಳಿದ.

ಆ ಹುಡುಗಿಯೊಡನೆ ಅವಳ ತಾಯಿಯ ಮೃತದೇಹವನ್ನು ಅವ್ಯಾಹತವಾಗಿ ಅರಸುತ್ತಿದ್ದ ಕ್ಷಣಗಳು ಅವನನ್ನು ಬಲವಾಗಿ ಹಿಡಿದಿದ್ದವು. ಆ ಎಳೆ ಹುಡುಗಿ ಅಪರಿಚಿತನಾದ ನನ್ನ ಕೈ ಹಿಡಿದು ಅಳುತ್ತ ಅರಸಿದ್ದು ಕೊನೆಗೂ ಏನು? ಉನ್ನಿಕೃಷ್ಣನ್ ಸ್ನಾನ ಮಾಡಲಿಲ್ಲ. ರುಚಿಯಾಗಿ ಏನನ್ನೋ ಬೇಯಿಸಿದ್ದ ಬೈರಾಗಿಗಳೊಂದಿಗೆ ಊಟಕ್ಕೂ ಸೇರಲಿಲ್ಲ. ಹೊರಗೇ ಇದ್ದು ಗೆದ್ದೆನೆನ್ನುವ ನನ್ನ ಭ್ರಮೆ ಆ ತಾಯಿಯನ್ನು ಉಳಿಸದೇ ಹೋಯಿತಲ್ಲ. ಕಳ್ಳ ಕೊಟ್ಟ ಎಳನೀರು ಕುಡಿಯದ ನಾನು ಎಲ್ಲಿ ತಲುಪಿದಂತಾಯಿತು. ಸೂರ್ಯಾಸ್ತಕ್ಕೆ ಮುನ್ನ ಉನ್ನಿಕೃಷ್ಣನ್ ಸಾಮಾನು ಕಟ್ಟಿದ. ಸ್ನಾನ ಮಾಡಿ, ಉಳಿದವರಿಗೆ ಬರುತ್ತೇನೆಂದು ಹೇಳಿದ. ಅವರು ಕೇಳದಿದ್ದರೂ “ನನ್ನ ಊರಿಗೆ ಹೋಗುತ್ತಿದ್ದೇನೆ” ಎಂದು ಹೇಳಿದ. ಒಳಗಿದ್ದ ಹೊರತು ನನ್ನ ಯಾವ ಯತ್ನಗಳಿಗೂ ಅರ್ಥವಿಲ್ಲ ಎಂದು ತನಗೆ ತಾನೇ ಹೇಳಿಕೊಂಡು ಸಾಮಾನಿನೊಡನೆ ಆ ಹುಡುಗಿಯ ಮನೆಗೆ ಹೋಗಿ ಅವಳನ್ನು ಹೊರ ಕರೆದು ಮುದ್ದಿಸಿ ‘ತಾಯಿ ದೇಹಕ್ಕಲ್ಲಮ್ಮ. ತಾಯಿಗಾಗಿ ಕಾಯು. ಅವಳು ಇದ್ದಾಳೆ. ಖಂಡಿತ ಬರುತ್ತಾಳೆ” ಎಂದ. ತೆಂಗಿನ ಮರಕ್ಕಾತು ತುಂಬಿದ ಕಣ್ಣುಗಳಲ್ಲಿ ನಿಂತ ಅವಳೆದುರು ಸಂಜೆಯ ಜೇನಿನ ಬೆಳಕಲ್ಲಿ ಹೊಳೆಯುತ್ತ ನಡೆದು ಓಣಿಯ ಕೊನೆಯ ತಿರುವಿನಲ್ಲಿ ಇಲ್ಲವಾದ.
*****
ಕೀಲಿಕರಣ: ಪಚ್ಚಿ (ಗುರುಪ್ರಸಾದ್) ಮತ್ತು ಚೀನಿ (ಶ್ರೀನಿವಾಸ್)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.