ನವೋದಯ

ಮೂಡಣದ ಕೋಡಿಯೊಡೆಯಿತು, ಬೆಳಕು ಹರಿಯಿತಿಗೊ
ದೈವ ತೆರೆಯಿತು ಜಗದ ಜನದ ಮನದ!
ಉಷೆಯು ತಲೆಬಾಚಿ ನಸುನಾಚಿ ಕಂಪೇರಿಹಳು
ಬಣ್ಣನೆಗೆ ಬಾರದಿದೆ ಮೊಗದ ಬಿನದ
ವಿಶ್ವವೀಣಾವಾಣಿ ಹಕ್ಕಿ ನಿನದ!

ಅದುದಾಯಿತು ಹಿಂದು, ಶುಭ ನವೋದಯವಿಂದು
ಕಾರಿರುಳ ಕುರುಡಿಂಗೆ ಕಣ್ಣು ಬಂತು!
ಅರುಣನುದಯಕೆ ಕರುಣೆ ಕೊನರಿ ದಾಂಗುಡಿಯಿಟ್ಟು
ಹೂವಿನಲಿ ದೈವಿಕತೆ ಕರುವಿಟ್ಟಿತು!
ಜೀವದೇವರ ಮಿಲನ ಝೇಂಕರಿಸಿತು!

ಎದೆಯ ಮೆಲ್ವಾಸಿನಲಿ ಕಲ್ಪನೆಯ ತಲ್ಪದಲಿ
ನಿದ್ರೆಗೈದಿಹ ನನ್ನ ಮುದ್ದು ಹಕ್ಕಿ!
ಅಗಲಿ ಕೂಡುವ ಸುಖವ ನೆಚ್ಚಿ ಹಾರಿಸಿದೆನಿದೊ
ನೀಲದಲಿ ತೇಲಾಡು ಪ್ರಾಣಪಕ್ಷಿ!
ಪ್ರೇಮದೌದಾರ್ಯವಿದು, ಆತ್ಮಸಾಕ್ಷಿ.
*****