ಇಲ್ಲಿ ಒಂದು ರಾತ್ರಿ

ರಣಸೆಖೆಗೆ ಬೆಂದು
ಕೆಂಪಾಗಿ ಸೂರ್‍ಯ ಓ ಅಲ್ಲೆಲ್ಲೋ
ಮುಳುಗಿದಾಗ-ಇಲ್ಲಿ
ರಾತ್ರಿಯಾಗುವದಂತೆ
ಹಗಲಿಡೀ ಕಿಲ ಕಿಲ ನಕ್ಕ ಹೂಗಳು
ಪಕಳೆಯೊಡ್ಡಿ ಬೆಳದಿಂಗಳಲ್ಲಿ ತೊಯ್ದು
ನಕ್ಷತ್ರಗಳಾಗುವವಂತೆ
ಮತ್ತು……. ಕನವರಿಸುವ ಕಟ್ಟಡಗಳ ಸಿಮೆಂಟು
ಬ್ಯಾಂಡೇಜೊಳಗಿನ ಮಣ್ಣ ಹಸಿ ಗಾಯ
ಮಾಯಲಿದೆಯಂತೆ-ಕತೆಯಲ್ಲ; ದೃಶ್ಯ

ಕಾಣುತ್ತೇನೆ…..

ದೂರ ಶಹರದ ಮಿಣಿ ಮಿಣಿ ಲಕ್ಷದೀಪೋತ್ಸವ
ಚಂದ ಮಿನುಗುವ ಮಂದ
ಕಾಲ ಢಣಗುಡುವ ಕ್ಲಾಕಿನ ರೇಡಿಯಂ
ಆರಿದ ಬಲ್ಬುಗಳಡಿಗೆ
ಹೊದ್ದ ಬಿಗಿ ಚದ್ದರಿನಲ್ಲಿ ಬೇಯುವ ಕನಸು-ಗಳನ್ನು.
ಅಲ್ಲ,
ಮುಂಜಾನೆ ಮೈತುಂಬ ಕತ್ತರಿಯಾಡಿ
ಸೆಲ್ಲುಗಳು ಕತ್ತರಿಸಲ್ಪಟ್ಟ
ಗಾರ್ಡನ್ ಗಿಡಗಳು ಕೂಗುವುದಿಲವೆ
ಚಳಿಗೆ ಬಿರುಸು ಹಳಿಗುಂಟ ಅಂಟಿ ಓಡುವ ಕೂ
ರೈಲು ಬಂಡಿಯಲ್ಲಿ ಸುಡುವ ಕಲ್ಲಿದ್ದಲಿಗೆ
ಸಂತೆಯ ಹಸಿ ಕಡ್ಲೆಯ ನೆನಪು
ಆಗುವದೇ ಇಲ್ಲವೆ-ಇರಬಹುದು

ಮೂಕವಾಗಿ
ಖಾಲಿ ಬಸ್ಸುಗಳು ಈಗ ಡಿಪೋಕ್ಕೆ ಮರಳಿರಬಹುದು
ಸವೆದ ಟಾಯರು ಸ್ತಬ್ದ ಗ್ಯಾರೇಜು ಉಪಕರಣ
ನಿಷ್ಕ್ರಿಯ ಕಪ್ಪಗೆ ಮಲಗಿರಬಹುದು
ಅಹುದಂತೆ-ಎಲ್ಲೋ ಈಗ ತಮ್ಮ ದಂಡೆಗುಂಟ
ಗೋಳು ಸೋ ಹೊಯ್ದುಕೊಳ್ಳುವ ಸಮುದ್ರಗಳಿರುವಂತೆ
ಈ ಕತ್ತಲೆ ಸೀಳಿ ಸ್ವಿಚ್ಚಾಗುವ ಚೋದ್ಯಗಳಿದ್ದಾವಂತೆ
ಗೊಬ್ಬರ ಗುಲಾಬಿಯಾಗಿಸುತ್ತ
ಮಣ್ಣ ಸೇಬುವಾಗಿಸುತ್ತ ಅವು
ಈಗ ಗೂಡಲ್ಲಿ ಬೆಚ್ಚಗೆ ಹಕ್ಕಿ
ಮಡಚಿ ಕೂತ ರೆಕ್ಕೆಗಳೊಳಗೆ
ಆಹಾರ ರಕ್ತವಾಗುವುದನ್ನು-ಬಿಸಿರಕ್ತ
ಬೀಜವಾಗುವುದನ್ನು ಕಾಯುತ್ತಿದ್ದಾವಂತೆ

ನಂಬುವುದಿಲ್ಲ ನಾನು
ಅಲ್ಲ, ಇದೆಲ್ಲ ಎಲ್ಲಿಯ ತನಕ
ಪರಸ್ಪರ ಸರಿದಾಡಿ ಸವೆಯುವ ನೋಟುಗಳು
ಅನಾಥ ಖಾಲಿಬಾಟಲಿಗಳು
ಗೊತ್ತಿಲ್ಲದೇ ಒಳಗೊಳಗೇ ತುಡಿಯುವ ಜಠರ
ಹೃದಯ ಪುಪ್ಪುಸ ಬಳ್ಳಿ ದಪ್ಪ ಮಿದುಳು
ಇದೆಲ್ಲ ಎಲ್ಲಿಯ ತನಕ?
ಗುರುತಿಸಿಕೊಳ್ಳದ ಗುರಿಗೆ ಯಾರ ತವಕ?

ಈ ರಾತ್ರಿ ಮುಗಿಯುತ್ತದೆಯಂತೆ
ಆ ಸೂರ್‍ಯ ಮತ್ತೆ ಮುಖ ಕಾಯಿಸಿಕೊಳ್ಳಲು
ಬರುವದಿದೆಯಂತೆ
ಕಪಾಟುಗಳಲ್ಲೀಗ ಹ್ಯಾಂಗರಿಗೆ ತೂಗಿ
ಬಿದ್ದಿರುವ ವಸ್ತ್ರಗಳಿಗೆ ನಾಳೆ ಮತ್ತೆ ತಲಾ
ತಲೆ ಮತ್ತು ಬೆಲೆ ಬರುವದಿದೆಯಂತೆ

ಅಂದೆನಲ್ಲ, ನಾನು ನಂಬುವುದಿಲ್ಲ
ಈ ಸ್ಥಿತಿ ಹೀಗೆಯೇ ಖಾಯಂ
ಮುಂದುವರಿಯಲೂ ಬಹುದು
ಈ ಮುಳ್ಳುಗಳು ಹಿಂದೆ
ಸರಿಯಲೂ ಬಹುದು.
ನಾನು ನಂಬುವದಿಲ್ಲ
*****