ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೧

ಆರಂಭ….

ಪಾದರಿಗಳ ವೃದ್ಧಾಶ್ರಮ ಊರ ಹೊರಗೆ ಅನ್ನುವ ಹಾಗಿತ್ತು. ವಿಸ್ತಾರವಾದ ಪ್ರದೇಶ. ಅಂಚಿನಲ್ಲಿ ವೃದ್ಧಾಶ್ರಮ ಕಟ್ಟಡ ಅದರ ಮಗ್ಗಲಲ್ಲಿ ಒಂದು ಚರ್ಚ. ಮುಂದೆ ವಿಶಾಲವಾದ ಹೂದೋಟ. ಅದರ ನಡುವೆ ಕಾಲುದಾರಿಗಳು, ಮರಗಳು, ಕಲ್ಲಿನ ಆಸನಗಳು. ಬೆಳಗಿನ ಹೊತ್ತು ಸಂಜೆಯ ಹೊತ್ತು ಕೆಲ ಪಾದರಿಗಳು ಇಲ್ಲಿ ತಿರುಗಾಡುತ್ತ ಗಿಡ ಬಳ್ಳಿಗಳ ಆರೈಕೆ ಮಾಡುತ್ತ, ಕೆಲವರು ಅಲ್ಲಲ್ಲಿ ಕುಳಿತು ಮಾತನಾಡುತ್ತ ಇರುವುದು ಕಾಣಿಸುತ್ತಿತ್ತು. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಇಗರ್ಜಿಯ ಗಂಟೆ ಸಣ್ಣಗೆ ಸದ್ದು ಮಾಡುತ್ತಿತ್ತು. ಈ ಇಗರ್ಜಿಗೆ ಹೊರಗಿನವರು ಯಾರೂ ಹೋಗುತ್ತಿರಲಿಲ್ಲ. ಇದು ಅಲ್ಲಿರುವ ಪಾದರಿಗಳಿಗಾಗಿ, ಅಲ್ಲಿಯ ಕೆಲಸಗಾರರಿಗಾಗಿ ಕಟ್ಟಲ್ಪಟ್ಟ ಇಗರ್ಜಿ. ಇಲ್ಲಿ ಪೂಜೆ ಮಾಡುವವರು ಕೂಡ ಆಶ್ರಮದಲ್ಲಿರುವ ಪಾದರಿಗಳೆ.

ಇಲ್ಲಿ ತಾರುಣ್ಯದಿಂದ ತುಂಬಿದಂತಹ ಯಾವುದೇ ಚಟುವಟಿಕೆ, ಉತ್ಸಾಹ, ಹುಮ್ಮಸ್ಸು, ಕೇಕೆ, ನಗೆ ಕೇಳಿ ಬರುತ್ತಿರಲಿಲ್ಲ. ಇಲ್ಲಿ ಎಲ್ಲವೂ ನಿಧಾನವಾಗಿ ಸಾಗುತ್ತಿತ್ತು. ಮಾತು, ನಡಿಗೆ, ಪೂಜೆ ಕೊನೆಗೆ ಊಟ ಕೂಡ. ಮುದಿ ಹಾವೊಂದು ಮೈ ಎಳೆದುಕೊಂಡು ನಿಧಾನವಾಗಿ ತೆವಳುವಂತೆ ಇಲ್ಲಿ ಕಾಲವೇ, ತನ್ನ ಜೀವಂತಿಕೆಯನ್ನು ಕಳೆದುಕೊಂಡಂತೆ ಕಾಣುತ್ತಿತ್ತು.

ನಾನು ದಿನನಿತ್ಯ ಬೆಳಿಗ್ಗೆ ಸುಮಾರು ಎರಡು ಗಂಟೆಗಳನ್ನು ಇಲ್ಲಿ ಕಳೆಯುತ್ತಿರುವುದರಿಂದ ಈ ವೃದ್ಧಾಶ್ರಮದ ಬಗ್ಗೆ ಇಷ್ಟೆಲ್ಲ ಹೇಳುತ್ತಿದ್ದೇನೆ. ನನಗೆ ಇಲ್ಲಿ ಪಾದರಿಗಳಿಗೆ ಪತ್ರಿಕೆ ಓದಿ ಹೇಳುವ ಕೆಲಸ. ಮೊದಲ ಕಾಲಂ ನಿಂದ ಹಿಡಿದು ಪತ್ರಿಕೆಯ ಕೊನೆಯ ಕಾಲಂನ ಕೊನೆಯ ಸಾಲಿನವರೆಗೆ ನಾನು ಓದಬೇಕು. ಹೀಗೆ ಓದಿ ಓದಿ ಪಾದರಿಗಳ ಅಭಿರುಚಿ ನನಗೆ ತಿಳಿದು ಹೋಗಿದೆ. ಅವರಿಗೆ ರಾಜಕೀಯ, ಅಪಘಾತಗಳು, ಭೂಕಂಪ, ಅಗ್ನಿ ಅನಾಹುತ, ಅನಾವೃಷ್ಟಿ, ಅತಿವೃಷ್ಟಿಗಳು ಬೇಕು. ಕೌಟುಂಬಿಕ ಕಲಹಗಳು, ಹೆಣ್ಣು ಗಂಡಿನ ಸಂಬಂಧಗಳು, ಅಪಹರಣ, ಅತ್ಯಾಚಾರ ಇತ್ಯಾದಿಗಳ ಬಗ್ಗೆ ಅವರಿಗೆ ಆಸಕ್ತಿಯಿಲ್ಲ. ಮೊದಲ ಸಾಲು ಓದುತ್ತಿರುವಂತೆಯೇ ಅವರಲ್ಲಿ ಕೆಲವರು ’ಶ್ಯಿ’ ಎಂದೋ, ’ನೋನೊನೊ’ ಎಂದೋ, ಮುಂದೆ ಓದು ಮರಿ ಎಂದೋ ತಮ್ಮ ಅಸಮ್ಮತಿಯನ್ನು ಸೂಚಿಸುವುದರಿಂದ ಅವರಿಗೆ ಬೇಡದ ಕಾಲಂ ಗಳನ್ನು ನಾನು ಓದಲು ಕೂಡ ಹೋಗುವುದಿಲ್ಲ.

ಈ ಪಾದರಿಗಳಲ್ಲಿ ಎಂಬತ್ತೈದರ ಪಾದರಿ ಗೋನಸಾಲ್ವಿಸ್ ಇದ್ದಾರೆ. ಅರವತೈದರ ಪಾದರಿ ಡಿಯಾಗೋ ಇದ್ದಾರೆ. ಗೋನಸಾಲ್ವಿಸ ಹಣ್ಣು ಹಣ್ಣಾಗಿದ್ದಾರೆ. ಮೊದಲೇ ಪೋರ್ಚುಗಲ್ ನವರು. ಎತ್ತರದ ಆಳು, ಕೆಂಪಗೆ, ಕೆನ್ನೆಗಳೆಲ್ಲಾ ಜೋತು ಬಿದ್ದು, ಅದೂ ಒಂದು ಲಕ್ಷಣವೆಂಬಂತೆ ನೋಡಲು ಸ್ಫುರದ್ರೂಪಿಗಳಾಗಿ ಇದ್ದಾರೆ.ಇವರ ಹಾಗೆಯೆ ಕಣ್ಣು ಕಾಣಿಸದ ಪಾದರಿ ಫ಼್ರಾನ್ಸಿಸ್. ಕಾಲು ಇಲ್ಲದ ಪಾದರಿ ಡಿಸೋಝಾ, ಕಿವಿ ಕೇಳಿಸದ ಪಾದರಿ ಮ್ಯಾನುಯೆಲ, ಪಾದರಿ ಸಂತಿಯಾಗೋ, ಪಾದರಿ ಲೋಪಿಸ್, ಪಾದರಿ ಡಿಕುವ ಹೀಗೆ ಹಲವಾರು ಪಾದರಿಗಳು ಇಲ್ಲಿದ್ದಾರೆ.

ಎಪ್ಪತ್ತು ವರ್ಷಗಳವರೆಗೆ ವಿವಿಧ ಇಗರ್ಜಿಗಳಲ್ಲಿ ಸೇವೆ ಮಾಡಿ ಇನ್ನು ಪೂಜೆ ಇತ್ಯಾದಿ ಮಾಡಲು ಆಗುವುದಿಲ್ಲ ಎಂದಾಗ ಪಾದರಿಗಳನ್ನು ತಂದು ಇಲ್ಲಿ ಇರಿಸಲಾಗುತ್ತದೆ. ತಾರುಣ್ಯದಲ್ಲಿ ಸದಾ ಚಟುವಟಿಕೆಯ ಕೇಂದ್ರ ಬಿಂದುಗಳಾಗಿದ್ದವರು.

ಪೂಜೆ, ಪ್ರಾರ್ಥನೆ ಎಂದು ಸದಾ ಚುರುಕಾಗಿ ಕೆಲಸ ಮಾಡುತ್ತಿದ್ದವರು. ಒಂದೊಂದು ಊರಿನ ಒಂದೊಂದು ಇಗರ್ಜಿಯ ಆಡಳಿತವನ್ನು ನಡೆಸುತ್ತ ಅಲ್ಲಿಯ ಜನ ದೇವರು, ಧರ್ಮವನ್ನು ಬಿಟ್ಟು ಹೋಗದಂತೆ ನೋಡಿಕೋಳ್ಳುತ್ತ ಮರಣ, ನಾಮಕರಣ, ಪಾಪ ನಿವೇದನೆ, ದಿವ್ಯ ಪ್ರಸಾದ ಹಂಚಿಕೆ, ಪೂಜೆ ಎಂದೆಲ್ಲ ಜನರ ಧಾರ್ಮಿಕ ಬೇಡಿಕೆಗಳನ್ನು ಸಲ್ಲಿಸುತ್ತ ಇದ್ದವರು, ಇಲ್ಲಿ ತುಸು ಅಸಹಾಯಕರಾಗಿ, ದುರ್ಬಲರಾಗಿ ಕಾಲ ಕಳೆಯುತ್ತಿದ್ದರು.

ಇವರ ಊಟ, ವಸತಿಯ ವ್ಯವಸ್ಥೆಯನ್ನು ಬಿಷಪ್ ಗುರುಗಳು ಮಾಡುತ್ತಾರೆ. ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಓರ್ವ ವೈದ್ಯರು ಗಮನ ಹರಿಸುತ್ತಾರೆ. ಕಣ್ಣು ಕಾಣದವರಿಗೆ, ಕುಳಿತು ಓದಲಾಗದವರಿಗೆ ನಾನು ನಿತ್ಯ ಬಂದು ಪತ್ರಿಕೆ ಓದಿ ಹೇಳುತ್ತೇನೆ. ತೀರಾ ಕೈಲಾಗದವರನ್ನು ನೋಡಿಕೊಳ್ಳಲು ಜನ ಇದ್ದಾರೆ. ಏನೆಂದರೂ ವೃದ್ಧಾಪ್ಯ ವೃದ್ದಾಪ್ಯವೇ. ನೆನಪು ಸರಿ ಇರುವುದಿಲ್ಲ. ಕೈಕಾಲುಗಳಲ್ಲಿ ನಡುಕ, ದಿನಕ್ಕೊಂದು ಕಾಯಿಲೆ. ಎದ್ದರೆ ಕೂತರೆ ಸೊಂಟ ಹಿಡಿದುಕೊಳ್ಳುವ ಹಿಂಸೆ. ಹಾಗೆಯೇ ತಮಗೆ ಯಾರೂ ಇಲ್ಲ ಎಂಬ ವೇದನೆ. ತೀರಾ ಹತ್ತಿರದವರು ಇರುವ ವಯಸ್ಸು ಇದಲ್ಲ. ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಎಂದೋ ಮಾಯವಾಗಿದ್ದಾರೆ. ಇದ್ದರೂ ಅವರವರ ತಾಪತ್ರಯ ಅವರಿಗೆ. ಅಣ್ಣ ತಮ್ಮ ಅಕ್ಕ ತಂಗಿಯರ ಮಕ್ಕಳಿದ್ದಾರೆ. ಅವರು ಅಷ್ಟಾಗಿ ಇವರ ಬಗ್ಗೆ ಗಮನ ಹರಿಸುವುದಿಲ್ಲ. ಯಾವಾಗಲೋ ಒಮ್ಮೆ ಬಂದು ಹಲೋ ಹಾಯ್ ಎಂದು ಹೇಳಿ ಹೋಗುತ್ತಾರೆ. ಆದರೂ ಇವರು ಬದುಕಿದ್ದಾರೆ. ಕೆಲವರ ಮನಸ್ಸಿನಲ್ಲಿ ಕೆಲ ನೆನಪುಗಳು ಹಸಿರಾಗಿವೆ. ಕೆಲವರು ಈ ನೆನಪುಗಳನ್ನು ಕೂಡ ಮರೆತಿದ್ದಾರೆ.

ಇವರಿಗೆ ಪತ್ರಿಕೆ ಓದಿ ಹೇಳಲು ಹೋಗುವ ನಾನು ಈ ವೃದ್ಧ ಪಾದರಿಗಳ ನೋವು ಸಂಕಟಗಳನ್ನು ಅರ್ಥಮಾಡಿಕೊಳ್ಳುತ್ತೇನೆ. ಒಂದಿಬ್ಬರಲ್ಲಿ ಇನ್ನೂ ಹುರುಪಿದೆ. ಉತ್ಸಾಹವಿದೆ. ತಾವು ಹಿಂದೆ ಕೆಲಸ ಮಾಡಿದ ಊರುಗಳ ಪರಿಚಯವಿದೆ. ಅಲ್ಲಿ ತಾವು ಮಾಡಿದ ಕೆಲಸಗಳ ಬಗ್ಗೆ ಹೇಳುತ್ತಾರೆ.
ಹೀಗೆ ತಾವು ಮಾಡಿದ ಕೆಲಸದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವವರು ಪಾದರಿ ಗೋನಸಾಲ್ವಿಸ್. ಶಿವಸಾಗರ ಎಂಬ ಊರಿನಲ್ಲಿ ತಾನು ಇಗರ್ಜಿ ಕಟ್ಟಿದ್ದು, ಕ್ರೀಸುವರನ್ನು ದೇವರ ಹತ್ತಿರ ತಂದದ್ದು, ಹೀಗೆ ಅವರು ಹಲವಾರು ವಿಷಯಗಳನ್ನು ಹೇಳುತ್ತಾರೆ. ಪತ್ರಿಕೆ ಓದಿ ಮುಗಿಸಿ ಒಂದು ಅರ್ಧ ಗಂಟೆ ನಾನಲ್ಲಿ ಕುಳಿತು ಈ ಪಾದರಿಗಳ ಜತೆ ಮಾತನಾಡುವುದು ಒಂದು ರೂಢಿ. ಈ ಸಮಯದಲ್ಲಿ ಹಲವು ವಿಷಯಗಳು ಹೊರ ಬೀಳುತ್ತವೆ. ಪಾದರಿ ಗೋನಸ್ವಾಲಿಸ್ ಶಿವಸಾಗರದ ವಿಷಯವನ್ನೂ ಮತ್ತೂ ವಿಸ್ತಾರವಾಗಿ ಹೇಳಲು ಒಂದು ಕಾರಣವಿತ್ತು. ಅಂದು ಪತ್ರಿಕೆ ಓದುತ್ತಿರುವಾಗ ಶಿವಸಾಗರದ ಸಂತ ಜೋಸೆಫ಼ರ ಇಗರ್ಜಿಗೆ ಐವತ್ತು ವರ್ಷಗಳ ಸಂಭ್ರಮ ಎಂಬ ಸುದ್ದಿ ಓದಿದೆ. ಇಂತಹ ಸುದ್ದಿಗಳನ್ನು ಎಲ್ಲ ಪಾದರಿಗಳೂ ಕುತೂಹಲ ಆಸಕ್ತಿಯಿಂದ ಕೇಳುತ್ತಾರೆ.
’ಏನು? ಏನು? ಮತ್ತೊಮ್ಮೆ ಓದು’.
ಎಂದರು ಪಾದರಿ ಡಿ.ಯಾಗೋ. ನಾನು ಓದಿದೆ, ಶಿವಸಾಗರದ ಇಗರ್ಜಿಗೆ ಐವತ್ತು ವರ್ಷಗಳಾಗಲಿದ್ದು ಊರ ಜನ ದೊಡ್ಡ ಪ್ರಮಾಣದ ಒಂದು ಜುಬಿಲಿಯನ್ನು ಏರ್ಪಡಿಸುವ ಬಗ್ಗೆ ಸಭೆ ನಡೆಸಿದ್ದರು. ಈ ಸುದ್ದಿಯನ್ನು ನಾನು ಓದಿ ಮುಗಿಸುವ ಮೊದಲೇ ಪಾದರಿ ಗೋನಸಾಲ್ವಿಸ್ ಕುಳಿತ ಕುರ್ಚಿಯಲ್ಲಿಯೇ ಪುಟಿದರು.
’ಓ! ನಾನು ಕಟ್ಟಿಸಿದ ಇಗರ್ಜಿಗೆ ಐವತ್ತು ವರುಷ ಆಯಿತಲ್ಲವೇ?’
ಎಂದು ಸಂಭ್ರಮಿಸಿದರು. ಅವರ ಕೆನ್ನೆಗಳು ಮತ್ತೂ ಕೆಂಪಾದವು. ಕಣ್ಣುಗಳು ಪ್ರಜ್ವಲಿಸಿದವು. ಮರಳಿ ತಾರುಣ್ಯವೇ ಬಂತೇನೋ ಅನ್ನುವ ಹಾಗೆ ನನ್ನ ಕೈಯಿಂದ ಪತ್ರಿಕೆ ಕಿತ್ತುಕೊಂಡರು. ಮೂಗಿನ ಮೇಲಿನ ದಪ್ಪ ಕನ್ನಡಕದ ಗಾಜುಗಳ ಮೂಲಕ ಪತ್ರಿಕೆಯ ಮೇಲೆ ಕಣ್ಣಾಡಿಸಿದರು. ಪತ್ರಿಕೆ ಹಿಡಿದ ಅವರ ಕೈ ಕಂಪಿಸುತ್ತಿತ್ತು. ತುಟಿಗಳು ಅದರುತಿದ್ದವು. ಆದರೂ ಪತ್ರಿಕೆಯಲ್ಲಿಯ ತಲೆಬರಹ ಅವರ ಉತ್ಸಾಹವನ್ನು ಇಮ್ಮಡಿ ಗೊಳಿಸಿತು.
’…ಓ! ನನಗೆ ರೋಮಾಂಚನ ಉಂಟಾಗುತ್ತಿದೆ’ ಎಂದರವರು.
ಉಳಿದ ಪಾದರಿಗಳು ಅದೆನ್ನೊಂದು ಸುದ್ದಿಯೆಂದಷ್ಟೇ ತೆಗೆದುಕೊಂಡಾಗ ಪಾದರಿ ಗೋನಸಾಲ್ವಿಸ್ ಮಾತ್ರ ಈ ಸುದ್ದಿಯಿಂದ ಪುಳಕಿತರಾದರು.
ಮತ್ತೊಮ್ಮೆ ಶಿವಸಾಗರದಲ್ಲಿ ತಾವು ಇಗರ್ಜಿಯನ್ನು ಕಟ್ಟಲು ಮಾಡಿದ ಪ್ರಯತ್ನಗಳ ಬಗ್ಗೆ ಹೇಳತೊಡಗಿದಾಗ ಉಳಿದ ಪಾದರಿಗಳು ಅಷ್ಟಾಗಿ ಅವರ ಮಾತಿನ ಬಗ್ಗೆ ಆಸಕ್ತಿ ತೋರಲಿಲ್ಲ. ಈ ವಿಷಯ ಕೂಡ ಪಾದರಿ ಗೋನಸ್ವಾಲಿಸರ ಗಮನಕ್ಕೆ ಬಂದಂತೆ ಅವರು ಮಾತು ನಿಲ್ಲಿಸಿದರು.
ನಾನು ಪತ್ರಿಕೆ ಓದುವ ನನ್ನ ಕೆಲಸ ಮುಂದುವರಿಸಿದೆ.
*
*
*
ಮಾರನೆ ದಿನ ನಾನು ಮತ್ತೆ ಆಶ್ರಮಕ್ಕೆ ಹೋದಾಗ ಗೋನಸಾಲ್ವಿಸರು ಮತ್ತೂ ಹುರುಪಿನಲ್ಲಿದ್ದರು.
’ಏನು ಫ಼ಾದರ್ ಸಮಾಚಾರ ? ’ ಎಂದು ಕೇಳಿದೆ.
“ಈವತ್ತು ನಿನ್ನ ನ್ಯೂಸ್ ಕೇಳುವ ಸ್ಥಿತೀಲಿ ನಾನಿಲ್ಲ…ನೀನು ನ್ಯೂಸ್ ಓದಿಯಾದ ಮೇಲೆ ನನ್ನ ರೂಮಿಗೆ ಬಾ“ಎಂದರು.
ಹೇಳಿದಂತೆಯೇ ಆವತ್ತು ಅವರು ಪತ್ರಿಕೆ ಕೇಳಲು ಬರಲಿಲ್ಲ. ನಾನು ನನ್ನ ಕೆಲಸ ಮುಗಿಸಿ ಅವರ ಕೊಠಡಿಗೆ ಹೋದಾಗ ಪಾದರಿ ಗೋನಸಾಲ್ವಿಸ್ ಕುರ್ಚಿಯ ಮೇಲೆ ವಿಶ್ರಾಂತಿ ಪಡೆಯುತಿದ್ದರು.
’ಸನ್…ನೀನು ನಾಲ್ಕು ದಿನ ಬಿಡುವು ಮಾಡಿಕೋಬೇಕು..’ಎಂದು ಮಾತಿಗೆ ತೊಡಗಿದರು.
’ಬಿಡುವು! ಯಾಕೆ ಫ಼ಾದರ್?”
“ನೀನು ನನ್ನ ಜತೆ ಶಿವಸಾಗರಕ್ಕೆ ಬರಬೇಕು. ಅಲ್ಲಿಂದ ನನಗೆ ವಿಶೇಷ ಆಹ್ವಾನ ಬಂದಿದೆ…ನಾನು ಕಾರಿನ ವ್ಯವಸ್ಥೆ ಮಾಡಿದ್ಡೇನೆ. ಜೊತೇಲಿ ಯಾರಾದರೂ ಬೇಕಲ್ಲ. ಮೊದಲ ಸಾರಿ ನಾನು ಅಲ್ಲಿಗೆ ಹೋದದ್ದು ಎತ್ತಿನ ಗಾಡೀಲಿ..ಆಗ ನನ್ನ ಜತೆ ಬೋನಾ ಅಂತ ನನ್ನ ಅಡಿಗೆಯಾಳು ಇದ್ದ…ಈಗ ಕಾರು..ಜೋತೇಲಿ ನೀನು..”
“ಆದರೆ ನಾನು ಅಡಿಗೆ ಆಳಲ್ಲ..”
“…ಹಾಗಂತ ನಾನು ಹೇಳಲಿಲ್ಲ..ನೀನು ಬಂದರೆ ನನಗೆ ಅನುಕೂಲ..ಮುದುಕ ನೋಡು..”
“ಇಲ್ಲಿ ಪೇಪರ ಓದುವವನು ಯಾರು ಫ಼ಾದರ್?”
“ನಿನ್ನ ಸ್ನೇಹಿತ ಇದಾನಲ್ಲ ಜಾನ್..ಅವನಿಗೆ ಹೇಳು“ನಾನು ಏನಾದರೂ ಅನಾನುಕೂಲವಾದಾಗ ಜಾನ್ ಗೆ ಹೇಳುವುದಿತ್ತು. ಅವನು ಬಂದು ನನ್ನ ಕೆಲಸ ಮಾಡುತ್ತಿದ್ದ ಈ ವಿಷಯ ಎಲ್ಲರಿಗೂ ಗೊತ್ತಿತ್ತು.
“ನಾನು ಕೇಳತೀನಿ ಫ಼ಾದರ್“ಎಂದೆ.
“ಹೇಳೋದು ಕೇಳೋದು ಬೇಡ..ಸೋಮವಾರ ನೀನು ಸಿದ್ಧನಾಗಿ ಬಾ…ಬುಧುವಾರ ಸಂತ ಜೋಸೆಫ಼ರ ಹಬ್ಬ….ಅಂದೇ ನನಗೂ ಸನ್ಮಾನವಂತೆ…ಒಂದೆರಡು ದಿನ ಇದ್ದು ಬರೋಣ..“ಎಂದರವರು ಎಲ್ಲ ನಿರ್ಧರಿಸಿದಂತೆ.
ನಾನು ಕೂಡ ಅವರ ಮಾತನ್ನು ಒಪ್ಪಿಕೊಂಡವನಂತೆ ತಲೆದೂಗಿದೆ. ಅಲ್ಲಿದ್ದ ಎಲ್ಲ ಪಾದರಿಗಳ ಜತೆ ನಾನು ಆತ್ಮೀಯತೆ ಬೆಳೆಸಿಕೊಂಡಿದ್ದೆ. ಹೀಗೆ ಕೆಲ ಪಾದರಿಗಳು ವೈದ್ಯ ಪರೀಕ್ಷೆಗೆ, ಶಸ್ತ್ರ ಚಿಕಿತ್ಸೆಗೆ ಬೇರೆ ಕಾರಣಗಳಿಗೆ ಹೊರಹೋಗುವಾಗ ನಾನೂ ಅವರ ಜೊತೆ ಹೋಗುವುದಿತ್ತು. ಈಗ ನಾಲ್ಕು ದಿನ ಪಾದರಿ ಗೋನಸಾಲ್ವಿಸರ ಸಂಗಡ ಹೋಗಿ ಬರುವುದು ಅಂದುಕೊಂಡೆ. ’ಏನು ಬರುತಿಯ ತಾನೆ?’
ಆಗಲಿ ಫ಼ಾದರ್ ಎಂದೆ.
ಆ ದಿನ ಕೂಡ ಬಂದಿತು. ಹತ್ತು ಹನ್ನೆರಡು ಗಂಟೆಗಳ ಪ್ರಯಾಣ. ಬೆಳಿಗ್ಗೆ ಆರು ಗಂಟೆಗೆ ಶಿವಸಾಗರ. ಪಾದರಿ ಗೋನಸಾಲ್ವಿಸ್ ತವರಿಗೆ ಹೊರಟ ಹೆಣ್ಣು ಮಗಳಂತೆ ಸಂಭ್ರಮಿಸುತ್ತಿದ್ದರು.
“ಹಿಂದಿನವರು ಎಷ್ಟು ಜನ ಇದ್ದಾರೋ..ಆದರೂ ನನ್ನ ನೆನಪು ಮಾಡಿಕೊಂಡಿದ್ದಾರೆ…ಊರು ಆವತ್ತು ಸಣ್ಣದಿತ್ತು “ಮೂವತ್ತು ನಲವತ್ತು ಕುಟುಂಬಗಳಿದ್ದವು..ಈಗ ಊರು ಬೆಳೆದಿರಬಹುದು..”
ಅವರು ಮಾತನಾಡುತ್ತಲೇ ಇದ್ದರು.
ನಾನು ಕಾರಿನ ಹಿಂಬದಿಯ ಸೀಟಿಗೆ ದಿಂಬು ಇರಿಸಿದೆ. ನೀರು, ಆಹಾರ, ಹಣ್ಣು ಎಂದು ಬೇಕಾದುದನ್ನು ತೆಗೆದುಕೊಂಡೆ. ಕಾರು ಸುಸ್ಥಿತಿಯಲ್ಲಿ ಇದೆ ಅಲ್ಲವೆ? ಶಿವಸಾಗರದ ದಾರಿ ಗೊತ್ತಲ್ಲವೆ ಎಂದೆಲ್ಲ ಚಾಲಕನಿಗೆ ಕೇಳಿದೆ.
ಪಾದರಿ ಗೋನಸಾಲ್ವಿಸ್ ಕೈಯಲ್ಲಿ ಕೋಲು ಹಿಡಿದು ಕೊಂಡು ಬಂದವರು-
“ನಾನು ರೆಡಿ“ಎಂದರು.
ಉಳಿದ ಪಾದರಿಗಳು ಬಂದು ಅವರಿಗೆ ಶುಭ ಹಾರೈಸಿದರು.
’ಜೋಪಾನ ಜೋಪಾನ’ ಎಂದರು.
“ನನಗೆ ಅಂದಿನ ಯೌವನ ತಿರುಗಿ ಬಂದಿದೆ ನೋಡಿ“ಎಂದು ನಕ್ಕರು ಪಾದರಿ ಗೋನಸಾಲ್ವಿಸ್.
ಕಾರು ಹೊರಟಾಗ ನಾನು ಮುಂದಿನ ಸೀಟಿನಲ್ಲಿ ಡ್ರೈವರನ ಮಗ್ಗುಲಲ್ಲಿ ಕುಳಿತಿದ್ದೆ. ಪಾದರಿ ಗೋನಸ್ವಾಲಿಸ್ ಹಿಂದೆ. ಕಾರು ಊರಿನಿಂದ ಹೊರಬಿದ್ದ ತಕ್ಷಣ ಪಾದರಿ ಗೋನಸಾಲ್ವಿಸ್-
’ಸನ್’ ಎಂದರು.
“ಫ಼ಾದರ್..”
“ನನಗೆ ಹಿಂದಿನದೆಲ್ಲ ನೆನಪಿಗೆ ಬರತಾ ಇದೆ“ಎಂದು ನೆನಪಿನ ಆಳಕ್ಕೆ ಇಳಿಯತೊಡಗಿದರು.

ಈ ಬಾರಿ ಫ಼ಾದರ್ ಗೋನಸ್ವಾಲಿಸ್ ಕೊಂಚ ಧೀರ್ಘ ಪ್ರಯಾಣವನ್ನೇ ಕೈಕೊಳ್ಳಬೇಕಾಯಿತು. ಪ್ರಾರಂಭದಲ್ಲಿ ಅವರು ಪಣಜಿಯ ಬಾಲ ಏಸುವಿನ ಇಗರ್ಜಿಯಲ್ಲಿ ಹತ್ತು ವರ್ಷಗಳ ಸೇವೆಯನ್ನು ಸಲ್ಲಿಸಿದ್ದರು. ಅವು ಅವರ ಪಾದರಿಯಾದ ನಂತರದ ಮೊದಲ ವರ್ಷಗಳು. ಮೊದಲ ಐದು, ಆರು ವರ್ಷ ಪಾದರಿ ಫ಼ಿಕಾಟ್ ಅವರಿಗೆ ಸಹಾಯಕರಾಗಿ ಇವರು ದುಡಿದರು. ಅವರ ಮರಣಾನಂತರ ಇಗರ್ಜಿಯ ಏಕೈಕ ಪಾದರಿಯಾದರು ಗೋನಸ್ವಾಲಿಸ್. ಇಗರ್ಜಿಯ ಕ್ರೀಸುವರು ಅವರ ಧರ್ಮ ಸಂಪ್ರದಾಯವನ್ನು ತೊರೆದು ಸೂಜಿ ಮೊನೆಯಷ್ಟು ಕೂಡ ದೂರ ಸರಿಯದಂತೆ ನೋಡಿ ಕೊಂಡರು. ಅಲ್ಲಿಂದ ಅವರನ್ನು ಕಾರವಾರಕ್ಕೆ ವರ್ಗ ಮಾಡಲಾಯಿತು. ನಂತರ ಹೊನ್ನಾವರದ ಸಂತ ಸಲ್ವಾದೋರ ಇಗರ್ಜಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ ಅವರೀಗ ಶಿವಸಾಗರದ ಸಂತ ಜೋಸೆಫ಼ರ ಇಗರ್ಜಿಗೆ ಹೊರಟಿದ್ದಾರೆ.

ಹೊನ್ನವರದಿಂದ ಗೇರುಸೊಪ್ಪೆಯವರೆಗೆ ದೋಣಿ ಪ್ರಯಾಣ. ಶರಾವತಿ ನದಿಯಲ್ಲಿ ಪ್ರಯಾಣ ಮಾಡುವುದೆಂದರೆ ತುಂಬಾ ರೋಚಕವಾದ ವಿಷಯ. ಹಿಂದೆ ತುಂಬಾ ಜನ ವಿದೇಶಿ ಪ್ರಯಾಣಿಕರು ಈ ದಾರಿಯಲ್ಲಿ ಪ್ರಯಾಣ ಮಾಡಿದ್ದುಂಟು. ನದಿಯ ಎರಡೂ ದಂಡೆಯ ಹಸಿರು ಕಾಡು. ತೋಟ, ಹಲಸು, ಮಾವು, ಗೇರು ಮರಗಳು. ಎದುರಾಗುವ ದೋಣಿಗಳು ಮನಸ್ಸಿಗೆ ಮುದ ನೀಡುತ್ತವೆ. ಕೈಯಲ್ಲಿರುವ ಜಪಸರದ ಮಣಿಗಳನ್ನು ಉರುಳಿಸುತ್ತ ಅವರು ಜಪ ಮಾಡಿದರು. ಆಗಾಗ್ಗೆ ಹೊರಗೆ ದೃಷ್ಟಿ ಹಾಯಿಸಿದರು. ಹಿಂದೆಯೇ ಮುಂದೆ ತಾವು ಕೈಗೆತ್ತಿಕೊಳ್ಳಲಿರುವ ಕೆಲಸದ ಬಗ್ಗೆ ವಿಚಾರ ಮಾಡಿದರು.

ಈವರೆಗೆ ದೊಡ್ಡ ಪ್ರಮಾಣದ ಇಗರ್ಜಿಗಳಲ್ಲಿ ಕೆಲಸ ಮಾಡಿದೆ. ಅಧಿಕ ಸಂಖ್ಯೆಯ ಜನ ದೇವರು, ಧರ್ಮ, ಸಂಪ್ರದಾಯಗಳ ಅರಿವಿದ್ದವರೇ ಆಗಿದ್ದರು. ಈ ಅರಿವು ಅವರ ಮನಸ್ಸಿನಿಂದ ಅಳಿಸಿಹೋಗದ ಹಾಗೆ ನೋಡಿಕೊಂಡೆ. ಆದರೆ ಈಗ ತಾವು ಹೋಗುತ್ತಿರುವುದು ಮಾತ್ರ ತೀರ ಭಿನ್ನವಾದ ಒಂದು ಸ್ಥಳಕ್ಕೆ ಎಂದು ಕೇಳಿದೆ. ಕ್ರೀಸುವರ ಸುಮಾರು ಇಪ್ಪತ್ತು ಮನೆಗಳು ಅಲ್ಲಿವೆಯಂತೆ. ಅವರೇ ಕಟ್ಟಿಸಿದ ಸಣ್ಣದಾದ ಒಂದು ಕೊಪೆಲ ಕೂಡ ಅಲ್ಲಿದೆ ಎಂದು ಕೇಳಿದೆ. ಐದಾರು ವರ್ಷಗಳಿಂದ ಇಗರ್ಜಿ, ಪೂಜೆಯಿಂದ ದೂರವಿರುವ ಈ ಜನರಿಗಾಗಿ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಈ ಜನರು ತಮ್ಮ ಧರ್ಮಕ್ಕೆ ಎಷ್ಟು ಅಂಟಿಕೊಂಡಿದ್ದಾರೆ ಎಂಬುದನ್ನು ಅಲ್ಲಿ ಹೋಗಿಯೇ ನೋಡಬೇಕು. ಈ ಕಾರ್ಯ ಮಾಡಲೆಂದೇ ತನ್ನನ್ನು ಅಲ್ಲಿಗೆ ವರ್ಗ ಮಾಡಿದ್ದಾರೆ. ಹೊನ್ನಾವರದಿಂದ ದೂರ. ಗೋವಾದಿಂದ ಮತ್ತೂ ದೂರ, ಘಟ್ಟದ ಮೇಲೆ ಈ ಊರಿದೆ. ಕ್ರೀಸನ ಸೇವೆ ಮಾಡಲು ಪೋರ್ತುಗಾಲಿನಿಂದ ಬಂದವ ತಾನು. ಹುಟ್ಟಿದ ಊರು ದೇಶವನ್ನೇ ಬಿಟ್ಟು ಬಂದ ತನಗೆ ಈ ಊರೇನು ಆ ಊರೇನು? ಒಪ್ಪಿಸಿರುವ ಕೆಲಸವನ್ನಂತೂ ಚೆನ್ನಾಗಿಯೇ ಮಾಡಬೇಕು. ಎಂದೆಲ್ಲ ವಿಚಾರ ಮಾಡುತ್ತ ಅವರು ಕುಳಿತರು. ದೋಣಿ ಮುಂದೆ ಸಾಗಿತ್ತು. ಅಲ್ಲಲ್ಲಿ ನಿಂತು ಅದು ಗುರಿಯತ್ತ ಧಾವಿಸುತ್ತಿತ್ತು.

ಅವರ ಜತೆ ಅವರ ಕುಜ್ನೇರ ಬೋನಾ ಕೂಡ ಇದ್ದ. ಗೋವಾದಲ್ಲಿರುವಾಗಲೇ ತನ್ನಲ್ಲಿ ಬಂದು ಸೇರಿಕೊಂಡ ಹುಡುಗ. ತೆಂಗಿನ ಮರದಿಂದ ಹೆಂಡ ಇಳಿಸುತ್ತಿದ್ದ ಸಂಬೇಲ ಮರದ ಮೇಲಿನಿಂದ ಬಿದ್ದು ಸತ್ತಾಗ ಅವನ ಹೆಂಡತಿ, ಮಗ ಅನಾಥರಾದರು. ಕೆಲವು ದಿನಗಳಲ್ಲಿ ಆ ಹೆಂಗಸು ಹೊಟ್ಟೆಯಲ್ಲಿ ಹುಟ್ಟಿದ ಮಗನನ್ನು ಬಿಟ್ಟು ಒಂದು ಹಡಗು ಖಲಾಸಿಯ ಜೊತೆ ಓಡಿ ಹೋದಳು. ಸಂಬೇಲನ ಮಗನನ್ನು ತಂದ ಯಾರೋ ಪಾದರಿ ಗೋನಸ್ವಾಲಿಸ್ ರ ಬಳಿ ಬಿಟ್ಟರು. ಹತ್ತು ವರ್ಷದ ಈ ಹುಡುಗ ಸೊಂಟಕ್ಕೊಂದು ಕಷ್ಟಿ ಕಟ್ಟಿಕೊಂಡು ತಿರುಗಾಡುತ್ತಿದ್ದ. ಕೂದಲು ಜಡೆಗಟ್ಟಿತ್ತು. ಅಲ್ಲಿ ಇಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದರಿಂದ ಈ ಗಾಯದ ಕಲೆಗಳು ಮೈಮೇಲೆ ಉಳಿದಿದ್ದವು. ನಿತ್ಯ ಸ್ನಾನ ಮಾಡುವ ಅಭ್ಯಾಸವಿಲ್ಲದ್ದರಿಂದ ನಿಂತಲ್ಲಿ ತಲೆಯನ್ನು, ತೊಡೆ, ಹೊಟ್ಟೆಯನ್ನು ಕೆರೆದುಕೊಳ್ಳುತ್ತಿದ್ದ.
ನೇಂದರ ಜಾತಿಯ ಈ ಹುಡುಗನನ್ನು ದೇವರೇ ತನ್ನ ಬಳಿ ಕಳುಹಿಸಿದ್ದಾನೆ ಅಂದು ಕೊಂಡರು ಪಾದರಿ ಗೋನಸ್ವಾಲಿಸ್. ತಮ್ಮ ಬಂಗಲೆಯಲ್ಲಿ ಈತನನ್ನು ಇರಿಸಿಕೊಳ್ಳಬೇಕೆಂದರೆ ಇವನನ್ನು ಸುಧಾರಿಸಬೇಕು. ನಂತರ ಇವನಿಗೆ ಕ್ರೈಸ್ತ ದೀಕ್ಷೆ ಕೊಡುವ ಬಗ್ಗೆ ವಿಚಾರ ಮಾಡಬೇಕು ಎಂದವರು ನೀರ್ಧರಿಸಿದರು. ಪೇಟೆಯಿಂದ ಇವನಿಗೆ ಹೊಂದುವ ಉಡುಗೆ ತಂದರು. ತಾವೇ ನಿಂತು ಅವನಿಗೆ ಸ್ನಾನ ಮಾಡಿಸಿದರು. ತಾವು ಊಟ ಮಾಡುವುದನ್ನೇ ಅವನಿಗೂ ನೀಡಿದರು. ಅವನ ಭಾಷೆ ಕೊಂಕಣಿಯೇ, ಆದರೆ ಆ ಭಾಷೆಯನ್ನು ತೀರಾ ಗ್ರಾಮೀಣ ರೀತಿಯಲ್ಲಿ ಆತ ಮಾತನಾಡುತ್ತಿದ್ದ. ಅವನ ರೀತಿ ನೀತಿ ನಡಾವಳಿಕೆಗಳಲ್ಲಿ ಕೂಡ ಗ್ರಾಮೀಣ ಒರಟುತನ ತುಂಬಿಕೊಂಡಿತ್ತು. ಪಾದರಿ ಗೋನಸ್ವಾಲಿಸ್ ಅವನನ್ನು ತಿದ್ದುವ ಕಾರ್ಯ ಕೈಕೊಂಡರು.

ಪ್ರಾರ್ಥನೆ ಮಾಡುವಾಗ ಇವರ ಬಳಿ ಮೊಣಕಾಲೂರ ತೊಡಗಿದ. ನಿತ್ಯ ಇಗರ್ಜಿಗೆ ಬಂದು ದೇವರ ಪೀಠದ ಮುಂದೆ ಮೊಣಕಾಲೂರುತ್ತಿದ್ದ. ಊರ ಜನ ಇವನನ್ನು ಪಾದರಿ ಸಾಕಿಕೊಂಡ ಹುಡುಗ ಎಂದು ಪ್ರೀತಿಯಿಂದ ನೋಡ ತೊಡಗಿದರು.
ಈತ ಶಿಲುಬೆಯ ವಂದನೆ ಕಲಿತ. ಹಣೆ, ಎದೆಯ ಮೇಲೆ ಶಿಲುಬೆಯ ಗುರುತು ಬರೆದುಕೊಂಡು-
“ಪವಿತ್ರ ಶಿಲುಬೆಯ ಗುರುತಿನಿಂದ, ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಿ, ನಮ್ಮ ತಂದೆಯೇ. ತಂದೆಯ ಮಗನ ಸ್ವಿರಿತು ಸಾಂತುವಿನ ಹೆಸರಿನಲ್ಲಿ ಆಮೇನ”.
ಎಂದು ಹೇಳಲು ಅವನಿಗೆ ತುಸು ಕಷ್ಟವಾಯಿತು. ಶಿಲುಬೆಯ ಗುರುತನ್ನು ತೆಗೆಯುವ ಈ ವಿಧಾನವನ್ನು ಆತ ಮರೆಯುತ್ತಲೂ ಇದ್ದ. ಹಣೆಯ ಮೇಲೆ, ತುಟಿ, ಎದೆಯ ಮೇಲೆ ಶಿಲುಬೆಯ ಗುರುತು ಬರೆದುಕೊಂಡು ನಂತರ ಬೆರಳುಗಳನ್ನು ಹಣೆ ಭುಜಗಳಿಗೆ ಮುಟ್ಟಿಸಿಕೊಳ್ಳುವಲ್ಲಿ ಗೊಂದಲಕ್ಕೆ ಬೀಳುತ್ತಿದ್ದ. ಪಾದರಿ ಗೋನಸ್ವಾಲಿಸ್ ತಾಳ್ಮೆ ಕಳೆದುಕೊಳ್ಳುತ್ತಿದ್ದರು. ಹುಡುಗನಿಗೆ ಮತ್ತೆ ಮತ್ತೆ ಶಿಲುಬೆಯ ಗುರುತು ತೆಗೆಯುವುದನ್ನು ಕಲಿಸುತ್ತಿದ್ದರು.
ಗೋನಸ್ವಾಲಿಸರಿಗೊಂದು ಆಸೆಯಿತ್ತು. ಕ್ರೀಸನಿಗಾಗಿ ಕೆಲವೊಂದು ಆತ್ಮಗಳನ್ನು ಸಂಪಾದಿಸಬೇಕು ಎಂಬುದೇ ಈ ಆಸೆ. ಪಾದರಿಯಾಗಿ ತಮಗೆ ಸಾಕಷ್ಟು ಕೆಲಸ ಕಾರ್ಯಗಳು ಇರುತ್ತಿದ್ದವು. ಒಂದು ಇಗರ್ಜಿ ಅಲ್ಲಿಯ ಜನರ ಆತ್ಮದ ಪೂರೈಕೆಗಳನ್ನು ನೆರವೇರಿಸುವುದು ಎಂದೆಲ್ಲ ಅವರು ಕೆಲಸ ಮಡಬೇಕಾಗುತ್ತಿತ್ತು. ಹೊರಗಿನಿಂದ ಯಾರನ್ನೇ ಆಗಲಿ ಕ್ರಿಸ್ತನ ಅನುಯಾಯಿಯನ್ನಾಗಿ ಮಾಡಲು ಅವಕಾಶ ಸಿಗುತ್ತಿರಲಿಲ್ಲ ತಾವು ಪಾದರಿಯಾದ ಐದು ವರ್ಷಗಳ ನಂತರ ಈ ಹುಡುಗ ದೊರಕಿದ್ದ. ಅಕ್ರೈಸ್ತನಾದ ಅವನನ್ನು ಕ್ರೈಸ್ತನನ್ನಾಗಿ ಮಾಡಬೇಕು. ಅವನ ನಂಬಿಕೆ ಸಂಸ್ಕಾರಗಳನ್ನು ತಿದ್ದಬೇಕು. ಅವನ ಬದುಕಿಗೊಂದು ಮೆರಗು ತಂದು ಕೊಡಬೇಕೆಂದು ಅವರು ನಿರ್ಧರಿಸಿದರು.

ಮೊದಲು ಅವನಿಗೆ ಜ್ಞಾನ ಸ್ನಾನ ನೀಡಬೇಕು. ಇದು ಕೆಲ ನಿಮಿಷಗಳ ಕೆಲಸ. ನಲವತ್ತು ದಿನಗಳ ಮಗುವಿಗೆ ಸಾಮಾನ್ಯವಾಗಿ ಜ್ಞಾನ ಸ್ನಾನ ಮಾಡಿಸಿ ಹೆಸರನ್ನು ಇಡುವುದು ಪದ್ಧತಿ. ಮಗು ಬೆಳೆದ ನಂತರ ಅದರ ತಂದೆ ತಾಯಿಗಳು ದೇವ ಪಿತ ದೇವ ಮಾತೆಯರು ಆ ಮಗುವಿಗೆ ಬೇಕಾದ ಎಲ್ಲ ಕ್ರೈಸ್ತ ಸಂಸ್ಕಾರವನ್ನೂ ನೀಡುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಈ ಹುಡುಗ ಬೆಳೆದು ದೊಡ್ಡವನಾಗಿದ್ದಾನೆ. ಇವನಿಗೆ ಎಲ್ಲವನ್ನು ಕಲಿಸಿಯೇ ಜ್ಞಾನಸ್ನಾನ ಮಾಡಿಸಬೇಕು. ಏಕೆಂದರೆ ಜ್ಞಾನಸ್ನಾನ ಪಡೆಯುವುದರ ಮೂಲಕ ಆತ ಕ್ರಿಸ್ತನ ಪವಿತ್ರ ಸಭೆಯನ್ನು ಪ್ರವೇಶಿಸಲಿದ್ದಾನೆ. ಜನ್ಮ ಪಾಪವನ್ನು, ಕರ್ಮಪಾಪ ವನ್ನು ಪರಿಹರಿಸಿ, ವ್ಯಕ್ತಿಗೆ ದೈವ ಜೀವನವನ್ನು ಕೊಟ್ಟು, ಅವನನ್ನು ಸರ್ವೇಶ್ವರನಿಗೂ ಕ್ರಿಸ್ತ ಸಭೆಗೂ ಮಗನನ್ನಾಗಿ ಮಾಡುವ ಈ ದಿವ್ಯ ಸಂಸ್ಕಾರವನ್ನು ಈ ನೇಂದರ ಹುಡುಗನಿಗೆ ನೀಡಲು ಪಾದರಿ ಗೋನಸಾಲ್ವಿಸ್ ಶ್ರಮಿಸಿದರು.

ಶಿಲುಬೆಯ ವಂದನೆಯ ಜತೆ ಪರಲೋಕ ಮಂತ್ರ, ನಮೋರಾಣಿ ಮಂತ್ರ, ಸಾಯಂಕಾಲದ ಜಪ ಇತ್ಯಾದಿಗಳನ್ನು ಕಲಿಸಿದರು. ಒಂದು ಶುಭ ದಿನ ಅವನ ನೆತ್ತಿಯನ್ನು ನೀರಿನಿಂದ ತೊಳೆದು ಅವನಿಗೆ ಬರ್ನಾಡೆಟ್ ಎಂದು ಹೆಸರಿಟ್ಟರು. ಈ ಹುಡುಗ ತಮಗೆ ಸಿಕ್ಕಿದ ದಿನ ಆ ಸಂತ ಹುಟ್ಟಿದ ದಿನವಾಗಿದ್ದರಿಂದ ಆ ಹೆಸರೇ ಸೂಕ್ತವೆನಿಸಿತು.

ಬರ್ನಾಡೆಟ್ ಬಹಳ ಬೇಗನೆ ಬದಲಾದ. ಜ್ಞಾನ ಸ್ನಾನದ ಹಿಂದೆಯೇ ಉಳಿದ ಜಪ ಮಂತ್ರಗಳನ್ನು ಅವನಿಗೆ ಕಲಿಸಿ ಉಳಿದ ಸಂಸ್ಕಾರಗಳನ್ನು ನೀಡಲಾಯಿತು. ಬರ್ನಾಡೆಟ್ ಜನರ ಬಾಯಲ್ಲಿ ಬೋನಾ ಆದ. ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಮೊದಲಾದವುಗಳನ್ನು ಪಡೆಯಲು ಅರ್ಹನಾದ.
ಅವನ ನೇಂದರ ಕೊಂಕಣಿ ಕೂಡ ಕ್ರಮೇಣ ಸುಧಾರಿಸತೊಡಗಿತು.
ಬೋನಾ ಪಾದರಿಯ ಎಲ್ಲ ಕೆಲಸಗಳನ್ನು, ಇಗರ್ಜಿಯ ಕೆಲಸಗಳನ್ನು ಮಾಡಿಕೊಂಡು ಹೋಗ ತೊಡಗಿದ. ಅವನಲ್ಲಿ ಅಪರಿಮಿತವಾದ ದೈವ ಭಕ್ತಿ ಇತ್ತು. ನಿತ್ಯ ಮೂರು ಬಾರಿ ಜಪ ಮಾಡುತ್ತಿದ್ದ. ಊಟಕ್ಕೆ ಕುಳಿತಾಗ, ಮಲಗಿಕೊಳ್ಳುವಾಗ ದೇವರನ್ನು ಸ್ತುತಿಸುತ್ತಿದ್ದ. ಸಂಜೆ ತಪ್ಪದೆ ಜಪಸರ ಪ್ರಾರ್ಥನೆ ಮಾಡುತ್ತಿದ್ದ. ಪಾದರಿಗಳಿಗೆ ವಿಧೇಯನಾಗಿದ್ದ. ಅಡಿಗೆ ಮಾಡುವುದರಿಂದ ಹಿಡಿದು ಉಳಿದೆಲ್ಲ ಕೆಲಸಗಳೂ ಇವನಿಗೆ ಬರುತ್ತಿದ್ದವು.
ಗೋವಾ ಬಿಟ್ಟು ಹೊರಟಾಗ ಗೋನಸಾಲ್ವಿಸ್-
“ಬೋನಾ…ನೀನು ಬೇಕಾದರೆ ಇಲ್ಲೇ ಇರು..“ಎಂದಿದ್ದರು. ಈ ಮಾತಿಗೆ ಬೋನಾ-
“ಇಲ್ಲ ಫ಼ಾದರ್-ನಾನು ನಿಮ್ಮ ಜೊತೆ ಬರತೇನೆ“ಎಂದಿದ್ದ.
ಆತ ಕಾರವಾರಕ್ಕೆ ಬಂದ. ಅಲ್ಲಿಂದ ಹೊನ್ನಾವರಕ್ಕೆ. ಈಗ ಘಟ್ಟ ಹತ್ತಿ ಶಿವಸಾಗರಕ್ಕೂ ಹೊರಟಿದ್ದಾನೆ.
ಹೆಂಡ ಇಳಿಸುತ್ತಲೋ, ಮತ್ತೇನು ಮಾಡುತ್ತಲೋ ಅಂಧಕಾರದಲ್ಲಿ ಉಳಿದು ಬಿಡುತ್ತಿದ್ದ. ಬೋನಾ ಕ್ರಿಸ್ತನ ಕೃಪೆಗೆ ಒಳಗಾಗಿ ಮನುಷ್ಯನಾಗಿದ್ದ. ಇದಕ್ಕೆ ತಾನು ಕಾರಣನಾದೆ ಎಂದು ಪಾದರಿ ಸಂತಸಪಟ್ಟರು. ಹೆಮ್ಮೆ ಪಟ್ಟರು. ಈಗ ಆತ ತಮ್ಮ ಜತೆ ಬರುತ್ತಿರುವುದು ಕೂಡ ಒಂದು ಧೈರ್ಯದ, ಸಮಾಧಾನದ ವಿಷಯವಾಗಿತ್ತು. ತಾವು ಸದಾ ದೇವರ ಕೆಲಸ ಮಾಡಿಕೊಂಡು ಇದ್ದರೆ ಸಾಕು ಬೋನ ಉಳಿದೆಲ್ಲವನ್ನೂ ನೋಡಿಕೊಳ್ಳುತ್ತಾನೆ. ಅಷ್ಟು ತರಬೇತಿ ಅವನಿಗೆ ಆಗಿದೆ.
*
*
*
ಗೋನ್ಸಾಲ್ವಿಸ್ ಕುಳಿತ ದೋಣಿ ಗೇರುಸೊಪ್ಪೆ ಎಂಬಲ್ಲಿ ನಿಂತು ಜನ ಇಳಿದರು. ಇವರೂ ಜನದ ಜತೆ ಇಳಿದು ದಂಡೆಗೆ ಬಂದರು. ಬೋನಾ ಒಂದಿಬ್ಬರು ಆಳುಗಳನ್ನು ಕರೆದುಕೊಂಡು ಇವರ ಸಾಮಾನು, ಕುರ್ಚಿ, ಮಂಚಗಳನ್ನು ಇಳಿಸಿಕೊಂಡ.

ಅವನೇ ಹಳ್ಳಿಗೆ ಹೋಗಿ ಒಂದು ಎತ್ತಿನ ಗಾಡಿಯನ್ನು ಗೊತ್ತು ಮಾಡಿಕೊಂಡು ಬಂದ. ಘಟ್ಟದ ಮೇಲಿನ ಗಾಡಿಯಂತೆ. ಬೆಲ್ಲವನ್ನೋ ಮತ್ತೇನನ್ನೋ ತುಂಬಿಕೊಂಡು ಬಂದದ್ದು ಹಿಂದಿರುಗಿ ಹೋಗುವ ಸಿದ್ಧತೆಯಲ್ಲಿತ್ತು. ಬೋನ ಅದರಲ್ಲಿ ಮೊದಲು ಪಾದರಿಗಳಿಗೆ ಕುಳಿತುಕೊಳ್ಳಲು ಒಂದು ಜಾಗ ಮಾಡಿದ. ನಂತರ ಅವರ ಸಾಮಾನು ಏರಿಸಿದ. ತನಗಾಗಿ ಕುಳಿತುಕೊಳ್ಳಲು ತುದಿಯಲ್ಲಿ ಗೇಣಗಲ ಜಾಗ ಇರಿಸಿಕೊಂಡ. ಗಾಡಿ ಅಲ್ಲಿಂದ ಹೊರಟಿತು.
ಇನ್ನೇನು ಘಟ್ಟ ಆರಂಭವಾಯಿತು ಅನ್ನುವಾಗ ಗಾಡಿ ಒಂದೆಡೆಯಲ್ಲಿ ನಿಂತು ಕೊಂಡಿತು. ರಸ್ತೆ ಬದಿಯಲ್ಲಿ ಒಂದು ಸೋಗೆ ಹೊದಿಸಿದ ಗುಡಿ. ಒಳಗೆ ಕುಂಕುಮ ಬಳಿದ ಆಳೆತ್ತರದ ಕಲ್ಲು.

“ಮಾಸ್ತಿಗೆ ಕೈ ಮುಗಿದು ಬತ್ತೆ“ಎಂದು ಗಾಡಿಯವ ಇಳಿದು ಹೋದ. ಅಲ್ಲಿಯೇ ಮೂಕಿ ಊರಿನಿಂತ ಬೇರೆ ಕೆಲ ಗಾಡಿಗಳು ಕೂಡ ಹೊರಡುವ ಏರ್ಪಾಟಿನಲ್ಲಿದ್ದವು.
ಅದು ಕಾಡಿನ ದಾರಿ. ಕಾಡು ಕೋಣ, ಹುಲಿ, ಆನೆಗಳು ಎದುರಾಗುತ್ತವಂತೆ, ದರೋಡೆಕೋರರೂ ಇರಬಹುದು. ಮಾಸ್ತಿಗೆ ಕೈ ಮುಗಿದು ಒಂದು ಕಾಯಿ ಒಡೆದು ಪ್ರಯಾಣ ಮಾಡಿದರೆ ಯಾವುದೇ ಕಂಟಕವಿಲ್ಲ ಎಂದ ತಿರುಗಿ ಬಂದು ಗಾಡಿ ಏರಿದವ. ಉಳಿದ ಗಾಡಿಗಳ ಜತೆ ಅವನೂ ಸೇರಿಕೊಂಡ. ಏಳೆಂಟು ಗಾಡಿಗಳು ಸದ್ದು ಮಾಡುತ್ತ, ಎತ್ತುಗಳ ಕತ್ತಿನ ಗಂಟೆ ಗೆಜ್ಜೆಗಳು ನಾದ ಹೊರಡಿಸುತ್ತಿರಲು, ಸಾಲಿನ ಮುಂದಿನ ಗಾಡಿಯವನ ಕೂಗಿಗೆ ಸಾಲಿನ ಕೊನೆಯಲ್ಲಿರುವಾತ ಉತ್ತರ ನೀಡುತ್ತಿರಲು ಗಾಡಿಗಳ ಪ್ರಯಾಣ ಸಾಗಿತು.

ಗಾಡಿಗಳ ಓಡಾಟದಿಂದಾಗಿ ಕೊರಕಲಾದ ರಸ್ತೆ. ಮೇಲೆ ಆಕಾಶ ಕಾಣದ ಹಾಗೆ ಬಾಗಿ ನಿಂತ ಮರಗಳು. ನಡು ನಡುವೆ ಎದುರಾಗುವ ಹಳ್ಳಗಳು. ದಟ್ಟವಾದ ಕಾಡು, ಯಾವಾಗಲೋ ಒಂದು ಬರಿ ಕಣ್ಣಿಗೆ ಬಿದ್ದ ಹಳ್ಳಿ ಗುಡಿಸಲುಗಳು. ಇವುಗಳ ನಡುವೆ ತಾವು ಅನಾಥರಾದಂತೆ ಭಾಸವಾಯಿತು ಗೋನಸ್ವಾಲಿಸರಿಗೆ. ಅವರಿಗೆ ಪೋರ್ತುಗೀಸ್ ಬಿಟ್ಟರೆ ಬರುತಿದ್ದ ಮತ್ತೊಂದು ಭಾಷೆ ಕೊಂಕಣಿ. ಅವರ ಉದ್ದ ನಿಲುವಂಗಿ, ಕುತ್ತಿಗೆಯಲ್ಲಿಯ ಶಿಲುಬೆ, ಸೊಂಟದಲ್ಲಿಯ ಜಪಸರ, ಗಡ್ಡ ಅವರನ್ನು ಇತರ ಜನರಿಂದ ದೂರ ಮಾಡಿತ್ತು. ಜನ ತಮ್ಮನ್ನು ಬೆರಗಾಗಿ ನೋಡುವುದು ಕೂಡ ಅವರಿಗೆ ಕಸಿವಿಸಿಯನ್ನುಂಟು ಮಾಡಿತು. ಆದರೂ ಅವರು ಜಪಸರ ಹಿಡಿದು ಜಪ ಮಾಡಿದರು. ಬೈಬಲ್ ಓದಿದರು.

ತೀರ ಬೇಸರವಾದಾಗ ಗಾಡಿಯಿಂದ ಇಳಿದು ಕಾಲು ಬೀಸಿಕೊಂಡು ಅಷ್ಟು ದೂರ ನಡೆದರು.
ಆದರೂ ನಿಧಾನವಾಗಿ ಸಾಗಿತು ಅವರ ಪ್ರಯಾಣ. ಬೇರೆ ಗಾಡಿಗಳಲ್ಲಿ ಇರುವವರು, ಎದುರಾದ ಹಳ್ಳಿ ಜನ ತಮ್ಮನ್ನು ವಿಚಿತ್ರವಾಗಿ ಕಂಡಾಗ, ಪಾದರಿಯನ್ನೇ ಈ ಜನ ನೋಡಿರಲಿಕ್ಕಿಲ್ಲವೆ ಎಂದು ಅಚ್ಚರಿಪಟ್ಟರು.
ಈ ಕೆಲ ಮೈಲಿಗಳ ಅಂತರದಲ್ಲಿ ಅವರು ಯಾವುದೆ ಒಂದು ಇಗರ್ಜಿಯನ್ನು ಕಾಣಲಿಲ್ಲ. ರಸ್ತೆ ಪಕ್ಕದಲ್ಲಿ ಯಾವುದೇ ಶಿಲುಬೆ ಅವರಿಗೆ ಎದುರಾಗಲಿಲ್ಲ. ಯಾವನೇ ಓರ್ವ ಕ್ರೈಸ್ತ ಅವರ ಬಳಿ ಬಂದು ದೇವರ ಆಶಿರ್ವಾದಕ್ಕಾಗಿ ಕೈ ಜೋಡಿಸಿರಲಿಲ್ಲ. ಏನು ತಾನು ಕ್ರೈಸ್ತರೇ ಇಲ್ಲದ , ಕ್ರಿಸ್ತನ ಕೃಪೆಗೆ ಒಳಗಾಗದ ಪ್ರದೇಶಕ್ಕೆ ಬಂದಿದ್ದೇನೆಯೇ ಎಂದವರು ಬೆರಗಾದರು.
ಗೋವಾ ಹೊನ್ನಾವರ ಕಾರವಾರಗಳಲ್ಲಿ ಈ ಪರಿಸ್ಥಿತಿ ಇರಲಿಲ್ಲ. ಅಲ್ಲಿಯ ಜನ ಬಹಳ ವರ್ಷಗಳಿಂದ ಪಾದರಿಯನ್ನು ಬಲ್ಲವರಾಗಿದ್ದರು. ಪಾದರಿಗಳನ್ನು ಕಂಡರೆ ಭಯಭಕ್ತಿ ಅವರಲ್ಲಿ ಉಕ್ಕುತ್ತಿತ್ತು. ಅಲ್ಲಿ ಹೆಜ್ಜೆಗೊಂದು ಶಿಲುಬೆ. ದಾರಿಗೊಂದು ಇಗರ್ಜಿ ಎದುರಾಗುತ್ತದೆ. ಆದರೆ ಇಲ್ಲಿ? ಕ್ರಿಸ್ತ ಇಲ್ಲಿಯವರೆಗೆ ಬಂದೇ ಇಲ್ಲ! ಅವನ ಪರಿಚಯ ಇಲ್ಲಿಯ ಜನರಿಗೆ ಇಲ್ಲ.
ಇಂತಹ ಅಕ್ರೈಸ್ತ ಪ್ರದೇಶದಲ್ಲಿ ಇರುವ ಕೆಲವೇ ಕೆಲ ಜನ ಕೂಡ ಕ್ರೈಸ್ತನನ್ನು ಕ್ರಮೇಣ ಮರೆಯಬಹುದಲ್ಲವೇ? ಕ್ರೈಸ್ತ ನಂಬಿಕೆ ಪದ್ಧತಿಗಳನ್ನು ರೂಢಿಸಿಕೊಂಡವರು, ತಕ್ಕ ವಾತಾವರಣವಿಲ್ಲವೆಂದರೇ ಇವುಗಳಿಂದ ನುಣುಚಿಕೊಂಡು ಹೊರ ಬರಬಹುದಲ್ಲವೇ?
ತಾನೀಗ ಹೋಗುತ್ತಿರುವುದು ಕೂಡ ಈ ಉದ್ದೇಶಕ್ಕಾಗಿಯೇ. ಶಿವಸಾಗರದ ಕ್ರೀಸುವರು ಕ್ರಿಸ್ತನ ಕೃಪಾಶಿರ್ವಾದಗಳಿಂದ ಹೊರ ಹೋಗದಂತೆ ನೋಡಿಕೊಳ್ಳಲು ತಾನು ಈ ಕಷ್ಟಕರ ಪ್ರಯಾಣವನ್ನು ಕೈಗೆತ್ತಿಕೊಂಡಿದ್ದೇನೆ. ತನ್ನ ಬದುಕನ್ನೇ ಕ್ರಿಸ್ತನ ಸೇವೆಗೆ ಮೀಸಲಾಗಿಟ್ಟ ತಾನು ಈ ಬಗೆಯ ಕೆಲಸಗಳನ್ನು ಮಾಡಬೇಕೆಂದೇ ಅಲ್ಲವೇ ಪಾದರಿಯಾಗಿದ್ದು ?
ತಟ್ಟನೆ ಅವರಿಗೆ ತಮ್ಮ ಯೌವ್ವನದ ದಿನಗಳ ನೆನಪಾಗುತ್ತದೆ.
ಶ್ರೀಮಂತ ಕುಟುಂಬದಿಂದ ಬಂದ ಗೋನಸ್ವಾಲಿಸ್ ಪಾದರಿಯಾಗುತ್ತಾರೆಂದು ಅವರ ಕುಟುಂಬದ ಯಾರೂ ನಿರೀಕ್ಷಿಸಿರಲಿಲ್ಲ. ಹತ್ತು ಹನ್ನೆರಡನೇ ವಯಸ್ಸಿಗೇ ಏಸು ಕ್ರಿಸ್ತನ ಭೋದನೆ ಬದುಕಿನಿಂದ ಪ್ರಭಾವಿತರಾದ ಇವರು ಜನರನ್ನು ಕ್ರಿಸ್ತನತ್ತ ಸೆಳೆಯುವ ಉದ್ದೇಶ ಮಾತ್ರವಲ್ಲದೆ, ತನ್ನ ಬದುಕನ್ನು ಕ್ರಿಸ್ತನಿಗಾಗಿ ಮೀಸಲಿಡುವ ಉದ್ದೇಶದಿಂದಲೂ ಪಾದರಿಯಾಗಲು ಪಣ ತೊಟ್ಟಿದ್ದರು.
ಆರೇಳು ವರ್ಷಗಳ ಕಠಿಣ ಶಿಕ್ಷಣ ದೊರೆಯಿತು. ಪಾದರಿ ಪಟ್ಟ ಕೂಡ ಆಯಿತು. ಹೊರ ದೇಶಗಳಿಗೆ ಹೋಗಿ ಯಾರು ಕ್ರಿಸ್ತನ ಸೇವೆ ಮಾಡುತ್ತೀರಿ ಎಂದಾಗ ಗೋನಸಾಲ್ವಿಸ್ ಕೈ ಎತ್ತಿದರು. ಇವರ ತಂದೆ ತಾಯಿ ದೇವ ಪಿತ ದೇವ ಮಾತೆಯರು ಇತರೆ ಬಂಧುಗಳು ಅವರ ತೀರ್ಮಾನವನ್ನು ಬೆಂಬಲಿಸಲಿಲ್ಲ. ಹೊರ ದೇಶವೆಂದರೆ, ಅಲ್ಲಿಯ ವಾತಾವರಣ, ಆಹಾರ, ಪದ್ಧತಿ ಬೇರೆಯಾಗಿರುತ್ತದೆ, ಬೇಡ, ನಿನ್ನ ಸೇವೆ ಏನಿದೆ ಅದನ್ನು ಇಲ್ಲಿಯೇ ಮಾಡು ಎಂದರು.
ಆದರೆ ಗೋನಸಾಲ್ವಿಸ್ ಅದನ್ನು ಒಪ್ಪಲಿಲ್ಲ.

ಕ್ರಿಸ್ತ ಶಿಲುಬೆ ಹೊತ್ತು ಮಾನವ ಕೋಟಿಯ ಪಾಪ ಪರಿಹಾರಕ್ಕಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ. ಅವನು ಪಟ್ಟ ಹಿಂಸೆ ಅವಮಾನಗಳ ಮುಂದೆ ಬೇರೆಲ್ಲವೂ ಗೌಣ. ತಾನು ಹೊರದೇಶಕ್ಕೆ ಅವನ ಕೆಲಸ ಮಾಡಲು ಹೋಗುವುದೇ ಸೈ ಎಂದರು ಗೋನಸಾಲ್ವಿಸ್.
ಈ ಉದ್ದೇಶದಿಂದಲೇ ಒಂದು ತಂಡ ಸಿಲೋನ, ಥೈಲ್ಯಾಂಡ್, ಆಫ಼್ರಿಕಾ, ಭಾರತಗಳಿಗೆ ಹೊರಟಿತ್ತು. ಭಾರತಕ್ಕೆ ಬಂದವರಲ್ಲಿ ಪಾದರಿ ಗೋನಸಾಲ್ವಿಸ್ ಓರ್ವರಾದರು.
ಸಾಂದಿಯಾಗೋ ಸೆಮಿನರಿಯಲ್ಲಿ ಹೊರದೇಶಗಳಿಗೆ ಹೊರಟ ಪಾದರಿಗಳನ್ನು ಬೀಳ್ಕೊಡುತ್ತ ವಿಕಾರ್ ಜನರಲ್ ಹೇಳಿದ ಮಾತುಗಳನ್ನು ಮರೆಯುವುದು ಅವರಿಂದ ಸಾಧ್ಯವಿರಲಿಲ್ಲ.
“ನಾನೇ ಲೋಕದ ಬೆಳಕು. ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ, ಜೀವ ಕೊಡುವ ಬೆಳಕನ್ನು ಹೊಂದಿದವನಾಗುತ್ತಾನೆ ಎಂದು ನಮ್ಮ ಪ್ರಭುವು ಹೇಳಿರುವ ಮಾತುಗಳು ನಿಮ್ಮ ನೆನಪಿನಲ್ಲಿರಲಿ. ನೀವು ಪ್ರಭುವನ್ನು ನಿಮ್ಮ ರಕ್ಷಕನೆಂದು ಒಪ್ಪಿಕೊಂಡಿರುವಿರಿ. ಅವನ ಸೇವೆ ಮಾಡುವುದಾಗಿ ಪ್ರಮಾಣ ಮಾಡಿರುತ್ತೀರಿ. ಯಾವುದೇ ಪರಿಸ್ಥಿತಿ ಯಲ್ಲಿ ನಿಮ್ಮಲ್ಲಿ ಈಗ ಪ್ರಜ್ವಲಿಸುತ್ತಿರುವ ಬೆಳಕು ಆರದಿರಲಿ. ಪ್ರಭುವಿನ ಸೇವೆ ಮಾಡುವ ಸೂಜಿ ಮೊನೆಯಷ್ಟು ಅವಕಾಶವನ್ನು ನೀವು ಕಳೆದುಕೊಳ್ಳಬೇಡಿ. ಕಷ್ಟ ನಷ್ಟ, ಬಿರುನುಡಿ, ಹಿಂಸೆ ನೋವು ಎಲ್ಲವನ್ನೂ ಪ್ರಭುವಿಗೆ ಅರ್ಪಿಸಿ ನೀವು ಕೆಲಸ ಮಾಡಿ. ಪ್ರಭು ಹೇಳಿದ ಹಾಗೆ ಭೂಲೋಕದಲ್ಲಿ ಏನನ್ನು ಕಟ್ಟುವಿರೋ ಅದು ನಿಮಗಾಗಿ ಪರಲೋಕದಲ್ಲಿ ಕಟ್ಟಲ್ಪಡುವುದು..”
ಈ ಕಟ್ಟುವ ಕೆಲಸವನ್ನು ಅವರು ಗೋವಾದಲ್ಲಿ, ಕಾರವಾರ, ಹೊನ್ನಾವರಗಳಲ್ಲಿ ಮಾಡಿದರು.

ಇಲ್ಲಿ ಎಲ್ಲಿಯೂ ಅವರಿಗೆ ಬೇಕಾದ ಸಕಲ ಸೌಲಭ್ಯಗಳು ಇರಲಿಲ್ಲ. ಇಲ್ಲಿಯ ಹವಾಮಾನ ಬೇರೆಯಾಗಿತ್ತು. ಊಟ, ಉಪಹಾರ ಬೇರೆಯಾಗಿತ್ತು. ಭಾಷೆ ಬೇರೆಯಾಗಿತ್ತು. ಹಾವು, ಚೇಳುಗಳು ಮನೆಯ ಒಳಗೇನೆ ತಿರುಗಾಡುತ್ತಿದ್ದವು. ಹುಲಿಗಳು ಮನೆಯ ಹಿಂದೆ ಮುಂದೆ ಸುಳಿದಾಡುತ್ತಿದ್ದವು. ಜನರನ್ನು ಕ್ರಿಸ್ತನತ್ತ ತಿರುಗಿಸುವುದು ಸುಲಭವಾದ ಮಾತಾಗಿರಲಿಲ್ಲ. ಆದರೂ ಅವರು ಕೆಲಸ ಮಾಡಿಕೊಂಡು ಬಂದರು. ಕಕ್ಕಸುಗಳಲ್ಲಿ ಕಮೋಡುಗಳು ಇರುತ್ತಿರಲಿಲ್ಲ. ಊಟಕ್ಕೆ ಕೈಬೆರಳುಗಳನ್ನು ಉಪಯೊಗಿಸಬೇಕಾಗುತ್ತಿತ್ತು. ಈ ಎಲ್ಲದಕ್ಕೂ ಅವರು ಹೊಂದಿಕೊಂಡರು.

ಗೋವಾದಲ್ಲಿ ಪಾದರಿಗಳಿಗಾಗಿ ಬಂಗಲೆಗಳಿದ್ದವು. ಕುರ್ಚಿ, ಮೇಜು, ಮಂಚಗಳಿದ್ದವು. ಆದರೆ ಕಾರವಾರ, ಹೊನ್ನಾವರಗಳಲ್ಲಿ ಈ ಸೌಲಭ್ಯವಿರಲಿಲ್ಲ. ಅಲ್ಲೆಲ್ಲ ಕೆಲ ಸೌಕರ್ಯಗಳನ್ನು ಇವರು ಮಾಡಿಕೊಂಡರು. ಇನ್ನು ಮುಂದಿನ ಊರು ಹ್ಯಾಗಿದೆಯೋ! ಅಲ್ಲಿ ಏನೇನು ಸೌಲಭ್ಯಗಳಿವೆಯೋ ನೋಡಬೇಕು. ಅವರು ಶಿವಸಾಗರವನ್ನು ಎದುರು ನೋಡುತ್ತ ಕುಳಿತರು.

ಗಾಡಿ ಧಡಧಡಕ್ಕನೆ ಕೊರಕಲು ರಸ್ತೆಯಲ್ಲಿ ಕುಲುಕಾಡುತ್ತ ಶಿವಸಾಗರವನ್ನು ಪ್ರವೇಶಿಸಿತು. ಊರ ಹೊರಗೆ ಹೊಸದಾಗಿ ಕಟ್ಟುತ್ತಿರುವ ಸೇತುವೆಯೊಂದರ ಮೇಲಿನಿಂದ ಗಾಡಿ ಊರೊಳಗೆ ಪ್ರವೇಶಿಸಿತು. ಆದರೆ ಊರಿನಲ್ಲಿ ಇಗರ್ಜಿ ಹುಡುಕುವುದೇ ಒಂದು ಕೆಲಸವಾಯಿತು. ಬೋನಾ ಕಾರವಾರ, ಹೊನ್ನಾವರಗಳಲ್ಲಿ ತಾನು ಕಲಿತ ಕನ್ನಡದ ಸಹಾಯದಿಂದ ಕೊನೆಗೂ ಇಗರ್ಜಿ ಎಲ್ಲಿದೆ ಎಂಬುದನ್ನು ಅವರಿವರ ಮೂಲಕ ಕೇಳಿ ತಿಳಿದುಕೊಂಡ.

ಗಾಡಿ ಎಲ್ಲೆಲ್ಲಿಯೋ ತಿರುಗಿ ಕೊನೆಗೆ ಬಂದು ನಿಂತದ್ದು,ಕೊಪೆಲ ಎದುರು. ನಾಲ್ಕು ಮಣ್ಣಿನ ಗೋಡೆಗಳ ಸಣ್ಣ ಕಟ್ಟಡ. ಮೇಲೆ ಎರಡೂ ಕಡೆ ಇಳಿದ ಮಾಡಿಗೆ ಹುಲ್ಲು ಹೊದೆಸಲಾಗಿತ್ತು. ಮಾಡಿನ ತುದಿಯಲ್ಲಿ ಓರೆಯಾಗಿ ನಿಂತ ಒಂದು ಶಿಲುಬೆಯ ಆಕೃತಿ. ಬಾಗಿಲ ಬಳಿ ತೂಗು ಬಿದ್ದ ಒಂದು ಗಂಟೆ. ಈ ಕೊಪೆಲನ ಸುತ್ತ ಮರಗಳು. ಬಿದಿರ ಮೆಳೆಗಳು, ಕಾಡು ಬಳ್ಳಿಗಳು, ಪೊದೆಗಳು ಇವುಗಳ ಆಚೆಗೆ ಅಲ್ಲಲ್ಲಿ ಗುಡಿಸಲುಗಳು.

ಬೋನಾ ಗಾಡಿಯಿಂದ ಇಳಿದವನೇ ಕೊಪೆಲದ ಮುಂದಿನ ತೂಗು ಗಂಟೆಯ ದಾರ ಎಳೆದು ಗಂಟೆ ಬಾರಿಸಿದ. ಗೋವೆಯ ದೊಡ್ಡ ಇಗರ್ಜಿ ಗೋಪುರಗಳಿಂದ ಹೊರ ಬೀಳುವ ಆ ಘಂಟಾನಾದ ಕೇಳಿದ್ದ ಇವರಿಗೆ ಈ ಗಂಟೆ ಸಪ್ಪೆಯೆನಿಸಿತು. ಇದಕ್ಕೆ ಧ್ವನಿಯೇ ಇಲ್ಲ ಅಂದು ಕೊಂಡರು. ಈ ಗಂಟೆ, ಈ ಕೊಪೆಲ, ಈ ಕಾಡು ನೋಡಿದಾಕ್ಷಣ ಇಲ್ಲಿ ತಮಗೆ ಮಾಡಲು ತುಂಬಾ ಕೆಲಸವಿದೆ ಅನ್ನುವುದು ಖಚಿತವಾಯಿತು. ಜಪಸರವನ್ನು ನಿಲುವಂಗಿಯ ಕಿಸೆಗೆ ರವಾನಿಸಿ ಬೈಬಲ್ ಹಿಡಿದು ಶಿವಸಾಗರದ ಮಣ್ಣಿನಲ್ಲಿ ಕಾಲಿರಿಸಿದರು ಪಾದರಿ ಗೋನಸಾಲ್ವಿಸ್.

ಬೋನ ಮೂರನೆಯ ಬಾರಿ ಗಂಟೆ ಹೊಡೆದಾಗ ಕೊಪೆಲನ ಬಲಗಡೆಯ ಮರಗಳ ಮರೆಯಲ್ಲಿ ಯಾರೋ ಕಂಡರು. ಅಂಜುತ್ತ ಅಳಕುತ್ತ ಅಲ್ಲಿ ನಿಂತೇ ಬಗ್ಗಿ ನೋಡುತ್ತ ಮೇಸ್ತ್ರಿ ಸಿಮೋನ ಮರಗಳ ಕಪ್ಪು ನೆರಳಿನಿಂದ ಈಚೆ ಬಂದ. ಸೊಂಟದ ಉಡುದಾರಕ್ಕೆ ತೂಗು ಬಿದ್ದಿದ್ದ ಕಷ್ಠಿ ಮೇಲೊಂದು ಹೊದ್ದ ವಸ್ತ್ರ. ಏನೋ ಕೆಲಸ ಮಾಡುತ್ತಿದ್ದವ ಹಾಗೆಯೇ ಬಂದಂತಿತ್ತು.

ಆತ ಮೊದಲು ಅನುಮಾನದಿಂದ ನೋಡುತ್ತ ನಿಂತ. ಪಾದರಿ ಗೋನಸಾಲ್ವಿಸ್ ರನ್ನು ಅಚ್ಚರಿಯಿಂದೆಂಬಂತೆ ನೋಡಿದ. ಅವರ ಚೂಪು ಗಡ್ಡ ಹೊಳಪುಗಣ್ಣು ಕುತ್ತಿಗೆಯಲ್ಲಿಯ ಕರಿ ಶಿಲುಬೆ ಇತ್ಯಾದಿಗಳನ್ನು ಇದೇ ಪ್ರಥಮ ಬಾರಿ ನೋಡುವವನಂತೆ ಕಣ್ಣರಳಿಸಿ ನೋಡಿದ. ಶಿವಸಾಗರದಲ್ಲಿ ತಾನು ಕಟ್ಟಿಸಿದ ಕೊಪೆಲಿನ ಎದುರು ಓರ್ವ ಪಾದರಿಗಳು ಬಂದು ನಿಂತಿರುವುದು ದೇವರು ಮಾಡಿದ ಒಂದು ಪವಾಡವೇ ಆಗಿರಬಹುದೇ ಎಂದು ಬೆರಗಾದ. ತಟ್ಟನೆ ಅವನಿಗೆ ಆರು ತಿಂಗಳ ಹಿಂದೆ ಊರಿಗೆ ಹೋದಾಗ ನಡೆದೊಂದು ಘಟನೆ ನೆನಪಿಗೆ ಬಂತು.
ಜನವರಿ ತಿಂಗಳಿನಲ್ಲಿ ಮುರುಡೇಶ್ವರದ ಇಗರ್ಜಿ ಹಬ್ಬಕ್ಕೆಂದು ಊರಿಗೆ ಹೋಗಿದ್ದ. ಈ ಬಾರಿ ಇಗರ್ಜಿ ಹಬ್ಬಕ್ಕೆ ಇನ್ನೂ ಹೆಚ್ಚಿನ ಮಹತ್ವವಿತ್ತು. ಗೋವೆಯ ಪ್ರಾವಿನ್ಶಿಯಲ್ ಅವರು ಕಾರವಾರಕ್ಕೆ ಬಂದವರು ಹಡಗು ಹತ್ತಿ ಭಟ್ಕಳಕ್ಕೆ ಬಂದಿದ್ದರು. ಭಟ್ಕಳದಲ್ಲಿ ನಾಲ್ಕು ದಿನ ಇದ್ದ ಅವರು ಮುರುಡೇಶ್ವರಕ್ಕೂ ಬಂದಿದ್ದರು.
ಹಿಂದಿನ ದಿನವೇ ಬ್ರೇಸ್ಪುರ ಮಾಡಿ ನೆಟ್ಟು ಧ್ವಜ ಹಾರಿಸಿ ಸಂಜೆ ಊರ ಜನ ಸೇರಿ ಇಗರ್ಜಿಯನ್ನು ಅಲಂಕರಿಸಿದ್ದರು. ಮುಂದೆ ಚಪ್ಪರ ಹಸಿರು ತೋರಣ, ಬಣ್ಣದ ಬಟ್ಟೆಯ ತೋರಣಗಳು. ಇಗರ್ಜಿಯಿಂದ ಪ್ರವಾಸಿ ಬಂಗಲೆಯವರೆಗೂ ರಸ್ತೆಯ ಎರಡೂ ಬದಿ ಬಾಳೆ ಕಂಬ ನೆಡಲಾಯಿತು. ತೋರಣ ಕಟ್ಟಲಾಯಿತು.

ಹಬ್ಬದ ದಿನ ಬೆಳಿಗ್ಗೆ ಹೆಂಗಸರು ಗಂಡಸರು ಮಕ್ಕಳಾದಿಯಾಗಿ ಎಲ್ಲರೂ ಬಂಗಲೆಗೆ ಹೋಗಿ ಅಲ್ಲಿಂದ ಪ್ರಾವಿನ್ಶಿಯಲ್ ಅವರನ್ನು ಮೆರವಣಿಗೆಯಲ್ಲಿ ಕರೆತಂದರು. ಈ ಪ್ರದೇಶದ ಇಗರ್ಜಿಗಳ ಆಡಳಿತವನ್ನು ನೋಡಿಕೊಳ್ಳುವ ಇವರು ಪೊರ್ತುಗಿಸರಾಗಿದ್ದರು. ಮುಟ್ಟಿದರೆ ಚಿಮ್ಮುತ್ತದೆಯೇನೋ ಅನ್ನುವ ಹಾಗೆ ರಕ್ತ ತುಂಬಿಕೊಂಡ ಕೆಂಪು ಮೈ. ಗಾಜುಗಣ್ಣು. ಕಲ್ಲನ್ನೂ ಕರಗಿಸುವ ಮುಗುಳನಗೆ. ಎಲ್ಲರನ್ನು ಬಾಚಿ ತಬ್ಬಿಕೊಂಡು ಮೈದಡವಿ ಮಾತನಾಡಿಸುವ ಹಿರಿಮೆ. ಅವರ ಸುತ್ತ ಏನೋ ದಿವ್ಯ ಪ್ರಭೆ ಆವರಿಸಿಕೊಂಡಂತಹ ಅನುಭವ.
ಹಬ್ಬದ ಪೂಜೆಯನ್ನು ಅವರೇ ಮಾಡಿದರು.
ಜನರಿಗೆ ಅವರೇ ದಿವ್ಯ ಪ್ರಸಾದ ನೀಡಿದರು.
ಜನರನ್ನು ಸುತನ ಪಿತನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ ಆಶೀರ್ವದಿಸಿದರು.
ಅವರಿಗೆ ಕೊಂಕಣಿ ಅಷ್ಟು ಚೆನ್ನಾಗಿ ಬಾರದ್ದರಿಂದ ಅಂಕೋಲೆಯ ಪಾದರಿಗಳು ಫುಲ್ ಪತ್ರಿಯನ್ನೇರಿ ಅಂದಿನ ಶೆರಮಾಂವಂ ಮಾಡಿ ಮುಗಿಸಿದರು. ಮಾತಿನ ಅಂತ್ಯದಲ್ಲಿ ಅವರು-
’ಪ್ರೀತಿಯ ಕ್ರೀಸುವರೆ..ನಮ್ಮೆಲ್ಲರಿಗೂ ಹಿರಿಯರೂ ಮಾರ್ಗದರ್ಶಕರೂ ಇಗರ್ಜಿ ಮಾತೆಯ ರಕ್ಷಕರು ಆದ ಪ್ರಾವಿನ್ಶಿಯಲ್ ಅವರು ನಿಮ್ಮೂರಿಗೆ ಬಂದಿರುವುದು ನಿಮ್ಮ ಪುಣ್ಯ. ನಿಮ್ಮಲ್ಲಿ ಯಾರಿಗಾದರೂ ಅವರನ್ನು ಮಾತನಾಡಿಸ ಬೇಕು ಎಂಬ ಆಸೆಯಿದ್ದರೆ ನೀವು ಬಂದು ಮಾತನಾಡಿಸಬಹುದು. ಅವರು ಮೂರು ಗಂಟೆಯ ತನಕ ಪಾದರಿಗಳ ಬಂಗಲೆಯಲ್ಲಿ ಇರುತ್ತಾರೆ..’ ಎಂದರು.
ಪೂಜೆ ಮುಗಿಯಿತು. ಜನ ಚದುರಿ ಹೋದರು. ಎಲ್ಲೋ ಕೆಲವರು ಪಾದರಿಗಳ ಬಂಗಲೆಯ ಬಳಿ ಹೋಗಿ ಹೊರಗೆ ಕುಳಿತ ಪ್ರಾವಿನ್ಶಿಯಲ್ ಅವರಿಗೆ ಕೈ ಮುಗಿದು ಬಂದರು. ಅವರನ್ನು ಮಾತನಾಡಿಸುವ ಯತ್ನಕ್ಕೆ ಯಾರೂ ಹೋಗಲಿಲ್ಲ. ದೂರದಿಂದ ಅವರನ್ನು ನೋಡಿ, ಗೌರವ ಸಲ್ಲಿಸಿ, ಅವರು ಕೈ ಎತ್ತಿ ಗಾಳಿಯಲ್ಲಿ ಶಿಲುಬೆ ಬರೆದು ಆಶೀರ್ವದಿಸಿದಾಗ ಇದೇ ತಮ್ಮ ಪುಣ್ಯ ಎಂದು ನಂಬಿ ಮೈ ಉಬ್ಬಿದಂತಾಗಿ ತಿರುಗಿ ಬಂದರು.
ಆದರೆ ಶಿಮೋನ, ಪಾಸ್ಕೋಲ, ಕೈತಾನರನ್ನು ಕರೆದುಕೊಂಡು ಅಲ್ಲಿಗೆ ಹೋದ.
“ಪಾಸ್ಕೋಲ್..ಘಟ್ಟದ ಮೇಲೂ ಒಬ್ಬರು ಪಾದರಿ ಬಂದಿದ್ದರೆ ನಮಗೆ ಅನುಕೂಲ ಆಗುತ್ತಿತ್ತು..ನಾವು ಕೇಳೋಣ“ಎಂದು ಶಿವಸಾಗರದಲ್ಲಿ ಮನೆ ಮಾಡಿ ಕೊಂಡಿದ್ದ ಒಂದಿಬ್ಬರ ಬಳಿ ಸಿಮೋನ ವಿಷಯ ಪ್ರಸ್ತಾಪ ಮಾಡಿದ್ದ. ಅವರು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ.
“ಅಯ್ಯೋ ಅಷ್ಟು ದೂರಕ್ಕೆ ಯಾವ ಪಾದರಿ ಬರತಾರೆ“ಎಂದು ರಾಗ ಎಳೆದಿದ್ದರು.
’ದೇವರ ಮೇಲೆ ಭಾರ ಹಾಕಿ ಕೇಳೋಣ..ಬಾ’ ಎಂದು ಕೆಲವರನ್ನು ಸಂಗಡ ಕರೆದುಕೊಂಡು ಹೋಗಿದ್ದ ಸಿಮೋನ.
’ಬನ್ನಿ..’ ಎಂದರು ಪ್ರಾವಿನ್ಶಿಯಲ್ ಅವರದೇ ಆದ ಪೋರ್ತುಗೀಸ ಕೊಂಕಣಿಯಲ್ಲಿ.
ಎಲ್ಲರೂ ಮೊಣಕಾಲೂರಿ ಭಕ್ತಿಯಿಂದ ಕೈ ಮುಗಿದರು. ಆಶೀರ್ವಾದವೂ ಲಭಿಸಿತು. ಇವರು ಮೊಣಕಾಲೂರಿದವರು ಏಳಲಿಲ್ಲ. ಜೋಡಿಸಿದ ಕೈ ತೆಗೆಯಲಿಲ್ಲ.
’ಏನು?’
ಪ್ರಾವಿನ್ಶಿಯಲ್ ಇಗರ್ಜಿ ಪಾದರಿಯ ಮುಖ ನೋಡಿದರು. ಅವರು ಇವರ ಸಹಾಯಕ್ಕೆ ಬಂದರು. ಸಿಮೋನ ಶಿವಸಾಗರದ ಕತೆ ನಿವೇದಿಸಿಕೊಂಡ.
ಮೊದಲು ತಾವು ಏಳೆಂಟು ಜನ ಇದ್ದೆವು. ಈಗ ಹತ್ತು ಹದಿನೈದು ಕುಟುಂಬಗಳಿವೆ. ಮತ್ತೂ ಕೆಲವರು ಅಲ್ಲಿಗೆ ಬರುವ ಯೋಚನೆಯಲ್ಲಿದ್ದಾರೆ. ಯಾರಿಗೂ ಪೂಜೆ ಕೇಳುವ ಅದೃಷ್ಟವಿಲ್ಲ. ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ, ಮಕ್ಕಳಿಗೆ ಜ್ಞಾನೋಪದೇಶವಿಲ್ಲ. ಸಣ್ಣ ಮಕ್ಕಳಿಗೆ ಜ್ಞಾನ ಸ್ನಾನ ಮಾಡಿಸಬೇಕೆಂದರೆ ಇಲ್ಲಿಗೆ ತರಬೇಕು. ಹತ್ತಿರದಲ್ಲಿ ಎಲ್ಲಿಯೂ ಇಗರ್ಜಿಯಿಲ್ಲ. ಪಾದರಿ ಇಲ್ಲ. ನಾವು ಕ್ರೈಸ್ತರು ಅಕ್ರೈಸ್ತರಾಗಿ ಬದುಕುತ್ತಿದ್ದೇವೆ. ಇತ್ತೀಚೆಗೆ ಒಂದು ಕೊಪೆಲ ಕಟ್ಟಿಕೊಂಡಿದ್ದೇವೆ. ಆದರೆ ಪಾದರಿಗಳಿಲ್ಲದೆ ಈ ಕೊಪೆಲಕ್ಕೂ ಜನ ಬರುವುದಿಲ್ಲ. ದಯವಿಟ್ಟು ಓರ್ವ ಪಾದರಿಗಳನ್ನು ನಮ್ಮಲ್ಲಿಗೆ ಕಳುಹಿಸಬೇಕು. ಸದಾ ಕ್ರಿಸ್ತನ ವಾಕ್ಯ ಕೇಳುವ, ಪೂಜೆ ಆಲಿಸುವ, ಪ್ರಸಾದ ಸ್ವೀಕರಿಸುವ ಅವಕಾಶ ನಮಗೆ ಒದಗಿಸಿ ಕೊಡಬೇಕು.
ಪಾದರಿ ಇವರ ಮಾತನ್ನು ಪ್ರಾವಿನ್ಶಿಯಲ್ ಗೆ ತಿಳಿಸಿದರು. ಪ್ರಾವಿನ್ಶಿಯಲ್ ಊರು ಯಾವುದು? ಎಲ್ಲಿದೆ? ಎಷ್ಟು ದೂರ? ಪಾದರಿಗಳಿಗೆ ಅನುಕೂಲ ಮಾಡಿ ಕೊಡುವಿರ? ಎಂದೆಲ್ಲ ಕೇಳಿದರು. ಸಿಮೋನ ಸೂಕ್ತ ಉತ್ತರವನ್ನೂ ನೀಡಿದ.
“ಆಯಿತು….ನಾನು ನೋಡುತ್ತೇನೆ. ನೀವು ನಿತ್ಯ ದೇವರಲ್ಲಿ ಬೇಡಿಕೊಳ್ಳಿ..ನಿಮ್ಮ ಧಾರ್ಮಿಕ ಮನೋಭಾವ ಕಂಡು ನನಗಂತೂ ಸಂತೋಷವಾಗಿದೆ..“ಎಂದರು ಪ್ರಾವಿನ್ಶಿಯಲ್.
ಸಿಮೋನ ಮತ್ತಿತರರು ಮೊಣಕಾಲೂರಿದವರು ಎದ್ದು ಕೈ ಮುಗಿದು ಬಂದರು.
ಪ್ರಾವಿನ್ಶಿಯಲ್ ಭರವಸೆ ಕೊಟ್ಟ ರೀತಿ ಕಂಡು ಸಿಮೋನನಿಗಂತೂ ಸಂತಸವಾಗಿತ್ತು. ಬೇಡಿಕೆಯನ್ನು ದೇವರ ಮುಂದಿಟ್ಟು ಒಂದು ಪರಲೋಕ ಮಂತ್ರ ಮೂರು ನಮೋರಾಣೆ ಮಂತ್ರಗಳನ್ನು ಹೇಳುತ್ತ ಬಂದಿದ್ದ.
ಈಗ ಪಾದರಿಗಳನ್ನು ನೋಡಿದ್ದೇ ಇದೆಲ್ಲವೂ ಅವನ ನೆನಪಿಗೆ ಬಂದಿತು. ನಿಧಾನವಾಗಿ ಬರುತ್ತಿದ್ದವ ಧಡಬಡಿಸಿ ಬಂದು ನೆಲದ ಮೇಲೆಯೇ ಮೊಣಕಾಲೂರಿ.
“ಬೆಸಾಂವ ದೀಯ ಪದ್ರಾಬಾ“ಎಂದು ಆಶೀರ್ವಾದಕ್ಕಾಗಿ ಕೈ ಮುಗಿದ. ಪಾದರಿ ಗೋನಸಾಲ್ವಿಸರಿಗೆ ಸಂತಸ ವಾಯಿತು.
ಹೊನ್ನಾವರ ಬಿಟ್ಟ ನಂತರ ತಾವು ಯಾರು ಎಂಬುದನ್ನು ಅರಿತ ಓರ್ವನ ಭೇಟಿಯಾಯಿತಲ್ಲ.

ಸಿಮೋನ ಕೊಪೆಲದ ಬಾಗಿಲು ತೆರೆದ. ಅದು ಒಂದು ಸಣ್ಣ ಕೊಠಡಿ. ಮೂವತ್ತು ನಲವತ್ತು ಜನ ಕುಳಿತುಕೊಳ್ಳಬಹುದಾದ ಸ್ಥಳ. ಬಾಗಿಲಿಗೆ ಮುಖ ಮಾಡಿನಿಂತ ಗೋಡೆಯೇ ಅಲ್ತಾರ್. ನಾಲ್ಕು ಅಡಿ ಎತ್ತರದ ಪೂಜಾ ವೇದಿಕೆ. ಮೇಲೊಂದು ಗೂಡು. ಅದರಲ್ಲಿ ಏಸುವನ್ನು ತೋಳುಗಳಲ್ಲಿ ಹಿಡಿದು ನಿಂತ ಜೋಸೆಫ಼ರ ಒಂದೂವರೆ ಅಡಿ ಎತ್ತರದ ಪೈನಲ್ ಗಳು. ವೇದಿಕೆಯ ಮೇಲೆ ಯಾವಾಗಲೋ ಉರಿದು ಬಂದು ಅಲ್ಲಿಯೇ ಗಟ್ಟಿಯಾದ ಮೇಣದ ಬತ್ತಿಯ ಅವಶೇಷ. ವೇದಿಕೆ ದೇವರ ಗೂಡನ್ನು ಒಳಮಾಡಿಕೊಂಡಂತೆ ಗೋಡೆಯ ಮೇಲೆ ಮಾಡಿದ್ದ ಒಂದು ಕಮಾನು. ಒಳಗೆಲ್ಲ ಕಸ, ಧೂಳು, ಜೇಡರ ಬಲೆ.
ಕೊಪೆಲದ ಬಾಗಿಲು ತೆರೆದು ದೂರನಿಂತ ಸಿಮೋನನಿಗೆ ತುಸು ಅವಮಾನವಾಯಿತು. ಕೊಪೆಲ ಇರಬೇಕಾದ ರೀತಿಯಲ್ಲಿ ಇರಲಿಲ್ಲ. ಜನ ಕೊಪೆಲಕ್ಕೆ ಬರುವುದನ್ನು ನಿಲ್ಲಿಸಿದ್ಧರು. ತಾನು ತನ್ನ ಮನೆಯವರು ಕೂಡ ಜಪ, ಪ್ರಾರ್ಥನೆಯನ್ನು ಮನೆಯಲ್ಲಿಯೇ ಮಾಡುತ್ತಿದ್ದುದರಿಂದ ಕೊಪೆಲ ಇದೆ ಅನ್ನುವುದೇ ಮರೆತು ಹೋಗಿತ್ತು. ಆದರೆ ಪ್ರಾವಿನ್ಶಿಯಲ್ ಓರ್ವ ಪಾದರಿಗಳನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅವರು ಗಾಡಿಯಲ್ಲಿ ತಮ್ಮ ಸಾಮಾನು ಸರಂಜಾಮು ಹೇರಿಕೊಂಡು ಈಗ ಬಂದಿದ್ದಾರೆ.
ಸಿಮೋನ ಎರಡು ಹೆಜ್ಜೆ ಮುಂದಿಟ್ಟ.
’ಪದ್ರಾಬ..ನಾನು ಸಿಮೋನ’ ತನ್ನ ಪರಿಚಯ ಹೇಳಿಕೊಂಡ.
’ ನಾನು ಕೊಪೆಲ್ ನ ಶುಚಿ ಮಾಡಸ್ತೀನಿ..ನೀವು ನನ್ನ ಮನೆಗೆ ಬನ್ನಿ..ನಿಮಗೆ ನಾನು ಎಲ್ಲ ಅನುಕೂಲ ಮಾಡಿಕೊಡತೀನಿ’. ಎಂದು ಅಂಗಲಾಚಿದ.
’ ಇರಲಿ..ಮೊದಲು ಕೊಪೆಲ್ ನ ಶುಚಿ ಮಾಡಿಸು..ಅನುಕೂಲ ಅನಾನುಕೂಲತೆ ಬಗ್ಗೆ ಯೋಚಿಸಬೇಡ. ನನಗೆ ಎಲ್ಲ ಅಭ್ಯಾಸವಾಗಿದೆ.’ ಎಂದರು ಪಾದರಿ ಗೋನಸ್ವಾಲಿಸ್.

-೨-

ಶಿವಸಾಗರ ಪಟ್ಟಣವಾಗಿ ರೂಪುಗೊಂಡಿದ್ದೇ ಇತ್ತೀಚೆಗೆ. ಹಿಂದೆ ಕೆಳದಿ ಅರಸರು ಈ ಪ್ರದೇಶವನ್ನು ಆಳುತ್ತಿದ್ದಾಗ ಅರಸರ ರಾಜಧಾನಿ ಉಪರಾಜಧಾನಿಗಳಾಗಿದ್ದ ಕೆಳದಿ, ಇಕ್ಕೇರಿಗಳು ದೊಡ್ಡ ಪಟ್ಟಣ ಎನಿಸಿಕೊಂಡಿದ್ದವು. ಅಲ್ಲಿ ಅರಮನೆ, ಕೋಟೆ, ಕಾವಲು ಕಟ್ಟೆ, ಬುರುಜು, ಮದ್ದಿನ ಮನೆ, ಟಂಕಸಾಲೆಗಳ ಜೊತೆ ವಿವಿಧ ಸರಕುಗಳನ್ನು ಮಾರುವ ಪೇಟೆಗಳು, ವಿವಿಧ ಕಸುಬು ಮಾಡುತ್ತಿದ್ದ ಜನರ ಕೇರಿಗಳು ಇಲ್ಲಿದ್ದವು. ಆದರೆ ಈ ದೊರೆಗಳು ದುರ್ಬಲಗೊಂಡು, ಹೈದರಾಲಿ ಇಲ್ಲಿಗೆ ಬಂದು ನುಗ್ಗಿದ ನಂತರ ಈ ಪಟ್ಟಣಗಳು ನಾಶವಾಗಿ, ಇಲ್ಲಿಯ ಜನ, ಶ್ರೀಮಂತರು ಬೇರೆಡೆ ಹೋಗಿ ನೆಲೆಸಿದರು. ಹೀಗಾಗಿ ಹಿಂದಿನ ರಾಜಧಾನಿಗಳು ಹಾಳು ಕೊಂಪೆಗಳಾಗಿ ಶಿವಸಾಗರದಂತಹ ಊರು ದೊಡ್ಡ ಪಟ್ಟಣವಾಯಿತು. ಇಕ್ಕೇರಿ ಕೆಳದಿಗಳು ಹಳ್ಳಿಗಳಾದವು.

ಕೆಳದಿ ಅರಸರು ಕಟ್ಟಿಸಿದ ಒಂದು ಕೆರೆ. ಕೆರೆಯ ಈ ದಂಡೆಯ ಮೇಲೆ ಅನ್ನುವ ಹಾಗೆ ಹಬ್ಬಿಕೊಂಡ ಊರು ಶಿವಸಾಗರ. ಕೇರಿಗಳು, ಗುಡಿಗಳು, ಬೀದಿಗಳು. ಊರ ನಾಲ್ಕು ದಿಕ್ಕಿನಲ್ಲಿ ನಾಲ್ಕು ಸುಂಕದ ಕಟ್ಟೆಗಳು, ಒಂದು ಪೇಟೆ ಬೀದಿ, ಅಲ್ಲಿ ಎರಡೂ ಕಡೆಗಳಲ್ಲಿ ಸಾಲು ಸಾಲಾಗಿರುವ ಅಂಗಡಿಗಳು, ಬ್ರಾಹ್ಮಣರ, ಲಿಂಗಾಯತರ, ಮುಸಲ್ಮಾನರ, ಮಡಿವಾಳ, ಕುಂಬಾರ, ಚಮ್ಮಾರ ಹೀಗೆ ಒಂದೊಂದು ವೃತ್ತಿಯವರು ಒಂದೊಂದು ಕಡೆ ನೆಲೆಸಿದ್ದರಿಂದ ಉಂಟಾದ ಕೇರಿಗಳು. ಊರು ಪಂಚಾಯತಿ ಪ್ರಮಾಣವನ್ನು ಮೀರಿ ಬೆಳೆದದ್ದರಿಂದ ನಗರ ಸಭೆ ಬಂದಿತು. ಊರಲ್ಲಿದ್ದ ಅಯ್ಯಗಳ ಮಠಗಳ ಕಾಲ ಮುಗಿದು ಸರಕಾರಿ ಶಾಲೆಗಳು ಅದೇ ಆರಂಭವಾಗಿದ್ದವು. ಇಂಗ್ಲೀಷ ಔಷಧಿಗಳು ಅಷ್ಟೇನೂ ಜನಪ್ರಿಯವಾಗಿರಲಿಲ್ಲವಾದರೂ ಪಂಡಿತರ ಮಾತ್ರೆ, ಕಷಾಯಗಳ ಬಗ್ಗೆ ಜನ ಏನೋ ಅಪನಂಬಿಕೆ ಅನುಮಾನವನ್ನು ವ್ಯಕ್ತಪಡಿಸತೊಡಗಿದ್ದರು. ಬಹಳ ಮುಖ್ಯವಾಗಿ ಊರಿನಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಆರಂಭವಾಗಿತ್ತು. ಆಸ್ಪತ್ರೆ, ಅಂಚೆ ಕಚೇರಿ, ಪೋಲಿಸ್ ಠಾಣೆ, ಮನೆಗಳು ಅಲ್ಲಲ್ಲಿ ಎದ್ದು ನಿಲ್ಲತೊಡಗಿದ್ದವು. ಜನ ಮಣ್ಣಿನ ಕಟ್ಟಡಗಳ ಬದಲು ಜಂಬಿಟ್ಟಿಗೆ ಕಲ್ಲುಗಳನ್ನು ಕಟ್ಟಡ ನಿರ್ಮಾಣಕ್ಕೆ ಬಳಸ ತೊಡಗಿದರು.

ಹೊಸದಾಗಿ ಆರಂಭವಾದ ಈ ನಿರ್ಮಾಣಗಳಿಂದಾಗಿ ಘಟ್ಟದ ಕೆಳಗಿನಿಂದ ಈ ಊರಿಗೆ ಬಂದವನು ಸಿಮೋನ ಮೇಸ್ತ, ಜೂಜೆ ಮೇಸ್ತ, ಪಾಸ್ಕೋಲ ಮೇಸ್ತ ಮೊದಲಾದವರು. ಮೇಸ್ತ ಅನ್ನುವ ಶಬ್ದವೇ ಮೇಸ್ತ್ರಿ ಆಗಿ ಇವರೆಲ್ಲರ ಹೆಸರಿನ ಜತೆ ಸೇರಿಕೊಂಡದ್ದಕ್ಕೂ ಒಂದು ಕಾರಣವಿದೆ. ಇವರೆಲ್ಲ ತಮ್ಮ ಸಂಗಡವೇ ಕಲ್ಲು ಕೆತ್ತುವವರನ್ನು, ಕಲ್ಲು ತೆಗೆಯುವವರನ್ನು, ಕಟ್ಟುವವರನ್ನು ಕರೆತಂದಿದ್ದರು. ಇವರು ತಮ್ಮ ಬಾಚಿ, ಅಳತೆಕಡ್ಡಿ, ನೆಲಮಟ್ಟ, ತೂಗು ಗುಂಡು, ಕರಣೆ ಬಾಂಡಲಿ ಇತ್ಯಾದಿ ಸರಕುಗಳನ್ನು ಹಿಡಿದುಕೊಂಡು ಬಂದರು.
ಮನೆ ಕೆಲಸ ಕಟ್ಟಡದ ಕೆಲಸ ಎಂದರೆ ಬಡಗಿಗಳೂ ಬೇಕು. ಹೀಗೆಂದೇ ಇವರ ಜತೆ ಸುತಾರಿ ಲಾದ್ರು, ಪೆದ್ರು, ಫರಾಸ್ಕ ಮೊದಲಾದವರೂ ಬಂದರು. ಇವರ ಕೈಗಳಲ್ಲಿ ಉಜ್ಜುಗೊರಡು, ಉಳಿ, ಗರಗಸ ಇತ್ಯಾದಿಗಳಿದ್ದವು.
ಇವರೆಲ್ಲ ಬಂದದ್ದು ಮುರುಡೇಶ್ವರದಿಂದ, ಕಾಯ್ಕಿಣಿ, ಗುಂಡುಬಾಳೆ, ಮೂಡುಕಣಿ, ಭಟ್ಕಳ, ಶಿರಾಲಿಯಿಂದ, ಉತ್ತರ ಕನ್ನಡದಿಂದ. ಅಲ್ಲಿ ಕೆಲವರಿಗೆ ತೆಂಗಿನ ತೋಟ ಗಳಿವೆ. ಕೆಲವರು ಅವರಿವರ ತೆಂಗಿನ ತೋಟಗಳನ್ನು ನೋಡಿಕೊಳ್ಳುತ್ತಾರೆ. ಈ ಕಲ್ಲು ತೆಗೆಯುವ, ಕಟ್ಟುವ, ಕೆತ್ತುವ ಕೆಲಸವನ್ನು ಅವರು ಅಲ್ಲಿಯೂ ಮಾಡುತ್ತಿದ್ದವರೆ. ಆದರೆ ನಾಲ್ಕು ಕಾಸು ಹೆಚ್ಚು ಸಿಗುತ್ತದೆಂದರೆ ಯಾರಿಗೆ ಬೇಡ. ವರ್ಷದಲ್ಲಿ ನಾಲ್ಕು ತಿಂಗಳು ಮಾಡುವ ಕೆಲಸವಿದು. ಇಲ್ಲಿ ಮಳೆಗಾಲ ಮುಗಿಯಿತೆಂದರೆ ಮತ್ತೆ ಘಟ್ಟ ಹತ್ತಿ ಬರುತ್ತಾರೆ. ಹೀಗಾಗಿ ಇವರಿಗೆಲ್ಲ ಒಂದು ಹೆಸರೂ ಇದೆ. ಘಟ್ಟದ ಕೆಳಗಿನವರು ಎಂದು. ಕಲ್ಲು ಕೆಲಸದವರು ಎಂಬುದೂ ಮತ್ತೊಂದು ಹೆಸರು.
ಆದರೆ ಇಲ್ಲಿ ಕೆಲಸ ಹೆಚ್ಚು ಹೆಚ್ಚಾಗಿ ಹುಟ್ಟಿಕೊಂಡಂತೆ, ಇಲ್ಲಿಯ ಜನರ ಪರಿಚಯವಾದಂತೆ ಇಲ್ಲಿಯೇ ಮನೆ ಮತ್ತೊಂದು ಮಾಡಿಕೊಂಡು ಉಳಿಯಬೇಕಾದ ಪರಿಸ್ಥಿತಿ ಬಂದಿತು. ಒಂದೆಡೆಯಲ್ಲಿ ಮನೆ ಕಟ್ಟಿಕೊಂಡರು. ಪರಸ್ಪರ ನೆರವಿಗಾಗಿ ನೆರೆಹೊರೆಯಾಗಿ ಉಳಿದರು. ತಮ್ಮ ಪ್ರಾರ್ಥನೆಗೆಂದು ಹತ್ತಿರವೇ ಒಂದು ಕೊಪೆಲನ್ನು ಕಟ್ಟಿಕೊಂಡರು. ಈ ಹಿಂದೆ ಬಂದ ಕೆಲವರು ತಮ್ಮ ಊರುಗಳಿಗೆ ತಿರುಗಿ ಹೋದರು. ಮತ್ತೆ ಕೆಲವರು ಹೊಸದಾಗಿ ಬಂದರು. ಹೀಗೆ ಬಂದವರು ಕೂಡ ಈ ಕೊಪೆಲದ ಸುತ್ತ ಮನೆಗಳನ್ನು ಮಾಡಿದರು. ಕ್ರಮೇಣ ಊರಿನಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚುತ್ತ ಹೋಯಿತು. ಅವರ ದಿನ ನಿತ್ಯದ ಬೇಡಿಕೆಗಳು ಹೆಚ್ಚತೊಡಗಿದ್ದವು. ಊರಿನಲ್ಲಿದ್ದಾಗ ರೂಢಿಸಿಕೊಂಡು ಬಂದ ಆಚರಣೆಗಳು ಇಲ್ಲಿ ಅಪರೂಪವಾದವು. ಪೂಜೆ, ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಇವೆಲ್ಲ ಅಪರೂಪವಾದವು. ನಿತ್ಯ ಪ್ರಾರ್ಥನೆ, ತೇರ್ಸಗಳನ್ನು ಮೊದ ಮೊದಲು ಮುಂದುವರೆಸಿಕೊಂಡು ಬಂದರಾದರೂ ಕ್ರಮೇಣ ಇವು ಕೂಡ ಮರೆಯಾದವು. ದಿನ ದಿನದ ಆಧ್ಯಾತ್ಮಿಕ ಬೇಡಿಕೆಗಳನ್ನು ಪೂರೈಸುವವರು ಹತ್ತಿರವಿಲ್ಲದೇ ಹೋದಾಗ ಇವರು ಸಹಜವಾಗಿ ಬೇರೆ ಜನರನ್ನು ಅನುಕರಿಸತೊಡಗಿದರು. ಗೋನ್ಸಾಲ್ವಿಸ್ ರು ಇಂತಹ ಸಮಯದಲ್ಲಿಯೇ ಪಾದರಿಯಾಗಿ ಶಿವಸಾಗರಕ್ಕೆ ಬಂದರು.
*
*
*
ಬೋನಾ ಗಾಡಿಯವನ ಸಹಾಯ ತೆಗೆದುಕೊಂಡು ಗಾಡಿಯಲ್ಲಿದ್ದ ಪಾತ್ರೆ ತುಂಬಿದ ಪೆಟ್ಟಿಗೆಯನ್ನು, ಮಂಚ ಕುರ್ಚಿಗಳನ್ನು ಕೆಳಗೆ ಇಳಿಸಿದ. ಪಾದರಿ ಅವನ ಬಾಡಿಗೆ ಕೊಟ್ಟ ನಂತರ ಗಾಡಿಯವ ಹೊರಟು ಹೋದ.
ಅಷ್ಟು ಹೊತ್ತಿಗೆ ಕೊಪೆಲ್ ಸುತ್ತಲಿನ ಮನೆಗಳಿಗೂ ಗಂಟೆಯ ಸದ್ದು ಕೇಳಿಸಿತೇನೋ, ಅಲ್ಲಿಂದಲೂ ಒಂದಿಬ್ಬರು ಬಂದರು. ದೂರದಿಂದ ಇಲ್ಲಿ ನಡೆಯುತ್ತಿರುವುದನ್ನು ನೋಡುತ್ತಿರುವ ಕಣ್ಣುಗಳೂ ಕಂಡವು. ಬಂದವರು ಪಾದರಿಗೆ ಕೈ ಮುಗಿದರು. ನೆಲದ ಮೇಲೆಯೇ ಮೊಣಕಾಲೂರಿ ತಮ್ಮ ಭಕ್ತಿಗೌರವವನ್ನು ತೋರಿದರು.
ಗೋನ್ಸಾಲ್ವಿಸರಿಗೆ ಸಂತಸವಾಗದಿರಲಿಲ್ಲ.
“ಕೋಣ್ ರೇ ತುಂ”
(ಯಾರಪ್ಪಾ ನೀನು) ಎಂದು ಕೇಳಿದರು ಪಾದರಿ ಒಬ್ಬೊಬ್ಬರ ಮುಖ ನೋಡಿ.
“ನಾನು ಬಾಲ್ತಿದಾರ ಪದ್ರಾ ಬಾ..”
“ನಾನು ಪಾಸ್ಕೋಲ ಪದ್ರಾಬಾ..”
“ನಾನು ಕೈತಾನ..”
ಅವರು ತಮ್ಮ ತಮ್ಮ ಪರಿಚಯ ಹೇಳಿಕೊಂಡರು.
“ದೇವ ಬೊರೆಂಕರುಂ“
(ದೇವರು ಒಳಿತನ್ನು ಮಾಡಲಿ) ಎಂದು ಹರಿಸಿ ಪಾದರಿ ಸಿಮೋನನ ಮುಖ ನೋಡಿದರು.
“…..ಮನೆಗೆ ಹೋಗೋಣ ಪದ್ರಾಬಾ”
ಎಂದ ಮತ್ತೊಮ್ಮೆ.
*
*
*
ಪಾದರಿ ಗೋನಸಾಲ್ವಿಸ್ ಆ ನಾಲ್ವರನ್ನೂ ಹಿಂದಿರಿಸಿಕೊಂಡು ಕೊಪೆಲನ ಆಚೆಗಿನ ಕಾಲುದಾರಿಯತ್ತ ತಿರುಗಿದರು. ಊರಿನ ಹಾಗೆಯೇ ಆ ಕೇರಿ ಕೂಡ ಮರ ಪೊದೆಗಳ ನಡುವೆ ಅಡಗಿತ್ತು. ಸಿಮೋನನ ಮನೆಯೊಂದೇ ಅಲ್ಲಿ ದೊಡ್ಡದಾಗಿತ್ತು. ಹಂಚು ಹೊದೆಸಲಾಗಿತ್ತು. ಉಳಿದೆಲ್ಲ ಮನೆಗಳೂ ಹುಲ್ಲು ಹೊದೆಸಿದ. ಮಣ್ಣಿನ ಗೋಡೆಯ ಗುಡಿಸಲುಗಳು. ಶಗಣೆ ಹಾಕಿ ಸಾರಿಸಿದ ಅಂಗಳ. ಮನೆಗೊಂದು ಜಗಲಿ. ಜಗಲಿ ಅಂಚಿನಲ್ಲಿ ಕೋಳಿಗೂಡು, ಗೂಡಿನ ಮೇಲೆ ಕುಳಿತುಕೊಳ್ಳಲು ಮಲಗಲು ಮಾಡಿದ ವೇದಿಕೆ. ಅಂಗಳದಲ್ಲಿ ಮರಿಗಳನ್ನು ಕರೆದುಕೊಂಡು ತಿರುಗಾಡುತ್ತಿದ್ದ ತಾಯಿ ಕೋಳಿ.
ತನ್ನನ್ನು ನೋಡಿದ್ದೇ ಅಂಗಳದಲ್ಲಿ ನಿಂತ ತಲೆಗೂದಲು ಕೆದರಿದ ಹೆಂಗಸರು ಒಳಗೆ ಓಡಿದ್ದು, ಮಕ್ಕಳು ಬೆದರಿ ಬಾಗಿಲ ಮರೆಗೆ ಸರಿದಿದ್ದು ಇವರ ಗಮನಕ್ಕೆ ಬಂದಿತು. ಸಿಮೋನನ ಮನೆ ಜಗಲಿಯನ್ನೇರಿ ಇವರು ಅಲ್ಲಿ ಇರಿಸಿದ ಅಡ್ದ ಅದರ ಬೆಂಚಿನ ಮೇಲೆ ಕುಳಿತರು.
ಅವರಿಗೆ ಆಯಾಸವಾಗಿತ್ತು. ಮೈ ಗಾಡಿ ಪ್ರಯಾಣದಿಂದಾಗಿ ನುಜ್ಜು ಗುಜ್ಜಾಗಿ ನೋಯುತ್ತಿತ್ತು. ಇಲ್ಲಿಯ ಕೊಪೆಲ, ಕ್ರೀಸುವರ ಮನೆಗಳನ್ನು ಕಣ್ಣಾರೆ ಕಂಡ ನಂತರ ತುಸು ನಿರುತ್ಸಾಹ ಮನಸ್ಸಿನಲ್ಲಿ ಮೂಡಿ ಕಿರಿಕಿರಿಯನ್ನು ಉಂಟು ಮಾಡುತ್ತಲಿತ್ತು. ಕೊಪೆಲ ಹಾಗೂ ಕ್ರೀಸುವರ ಮನೆಗಳ ಸುತ್ತ ಬೆಳೆದು ನಿಂತ ಮರಗಳು, ಪೊದೆಗಳು, ಬಿದಿರು ಮೆಳೆಗಳು, ಅಲ್ಲಲ್ಲಿ ಹಬ್ಬಿಕೊಂಡ ಬಳ್ಳಿಗಳು, ಅಲ್ಲೆಲ್ಲ ಸುತ್ತಿಕೊಂಡ ಹೊಗೆ ಅವರನ್ನು ಗಾಬರಿಗೊಳಿಸಿತು..
ಹೊನ್ನಾವರದಲ್ಲಿ ಅವರು ಸುಖವಾಗಿದ್ದರು. ಇಗರ್ಜಿ ಮಗ್ಗುಲಲ್ಲಿಯೆ ಬಂಗಲೆ ಹಿಂಬದಿಯಲ್ಲಿ ಸದಾ ತುಂಬಿ ಹರಿಯುವ ನದಿ. ಆಗಾಗ್ಗೆ ಬಂದು ಹೋಗುವ ಜನ. ಜನರಲ್ಲಿ ಕೂಡ ದೈವ ಭಕ್ತಿ ಇತ್ತು. ತಮ್ಮ ಬಗ್ಗೆ ಗೌರವವಿತ್ತು.
ಇಲ್ಲಿ ಇನ್ನು ಅದೆಲ್ಲವನ್ನೂ ಜನರಲ್ಲಿ ತಂದು ತುಂಬಬೇಕು. ಎಲ್ಲದಕ್ಕು ಮೊದಲು ಕೊಪೆಲವನ್ನು ಕಟ್ಟಬೇಕು. ಕೊಪೆಲಿನ ಸುತ್ತಲಿನ ಇ ಕಾಡು ಕಡೆಯಬೇಕು. ಸಿಮೋನ, ಕೈತಾನ, ಬಾಲ್ತಿದಾರ, ಪಾಸ್ಕೋಲ ಇವರೆಲ್ಲರ ನೆರವು ಸಹಕಾರದಿಂದ ತಾವು ಇಲ್ಲಿ ಈ ಕೆಲಸ ಮಾಡಬೇಕು.
ಒಳಗಿನಿಂದ ಸಿಮೋನನ ಹೆಂಡತಿ ಮಕ್ಕಳು, ಅವನ ತಾಯಿ ಬಂದರು.
’ಬೆಸಾಂವದಿಯಾ ಪದ್ರಬಾ’
ಎಂದು ದೇವರ ಆಶೀರ್ವಾದಕ್ಕಾಗಿ ಕೈ ಮುಗಿದು ನಿಂತರು.
ಪಾದರಿ ಅವರನ್ನು ಆಶೀರ್ವದಿಸುತ್ತಿರಲು ಸಿಮೋನ ಹೊರಬಂದ.
’ ಪದ್ರಾಬಾ…ಬಿಸಿ ನೀರಿದೆ. ಸ್ನಾನ ಮಾಡಿ ಬಿಡಿ..’ ಎಂದು ಹೇಳಿದ. ಪಾದರಿ ಗೋನಸಾಲ್ವಿಸ್ ಅದೇ ಅಂಗಳಕ್ಕೆ ಬಂದ ಬೋನನನ್ನು ಕರೆಯುತ್ತ ಎದ್ದು ನಿಂತರು.
*
*
*
ಗಾಡಿಯಿಂದ ಇಳಿಸಿದ ಸಾಮಾನಿನ ನಡುವೆ ಇದ್ದ ಒಂದು ಕುರ್ಚಿಯನ್ನು ತಂದು ಬೋನಾ ಸಿಮೋನನ ಮನೆ ಜಗಲಿಯ ಮೇಲಿರಿಸಿದ. ಸ್ನಾನ ಮುಗಿಸಿ ಬಂದ ಪಾದರಿ ಗೋನಸ್ವಾಲಿಸ್ ಅಲ್ಲಿ ಕುಳಿತರು. ಸಂಜೆಯಾಗಿತ್ತು. ಮನೆಯ ಮುಂದೆ ಮರಗಳು ಒತ್ತೊತ್ತಾಗಿ ಬೆಳೆದದ್ದರಿಂದ ಕತ್ತಲು ಮತ್ತೂ ಗಾಢವಾಗಿ ಕವಿದಿತ್ತು. ಸಿಮೋನನ ಮನೆಗೆ ಅಷ್ಟು ದೂರದಲ್ಲಿ ರಸ್ತೆ ಬದಿಯ ದೀಪದ ಕಂಬವನ್ನೇರಿ ಓರ್ವ ದೀಪದ ಗಾಜು ಒರೆಸಿ ಬೆಳಕು ಮುಟ್ಟಿಸಿ ಹೋದುದನ್ನು ಗೋನಸ್ವಾಲಿಸ್ ಗಮನಿಸಿದರು. ಸಿಮೋನನ ಹೆಂಡತಿ ಮೇಣದ ಬತ್ತಿಯೊಂದನ್ನು ಹೊತ್ತಿಸಿತಂದು ಪಾದರಿಗಳ ಮುಂದೆ ಇರಿಸಿದಳು.
ಗೋನಸ್ವಾಲಿಸ್ ಸಾಯಂಕಾಲದ ಪ್ರಾರ್ಥನೆ ಮುಗಿಸಿದರು. ಇಲ್ಲಿಯವರೆಗೆ ತನ್ನನ್ನು ಕರೆತಂದು ದೇವರ ಸೇವೆಗೆ ಅನುವು ಮಾಡಿಕೊಟ್ಟಿದಕ್ಕಾಗಿದೇವರಿಗೆ ಕೃತಜ್ಞತೆಸಲ್ಲಿಸಿದರು. ಬೋನಾ ಸಿಮೋನನ ಅಡಿಗೆ ಮನೆ ಹೊಕ್ಕು ಎರಡುಮೊಟ್ಟೆ ಹುರಿದು, ಬರುವಾಗ ತಂದ ಬ್ರೆಡ್ಡನ್ನು ತಟ್ಟೆಯಲ್ಲಿರಿಸಿ ತಂದು ಪಾದರಿಗಳ ಮುಂದಿರಿಸಿದ.
“ಬೋನಾ..ನನಗೆ ಇಷ್ಟೇ ಸಾಕು.“ಎಂದರು ಗೋನಸ್ವಾಲಿಸ್.
“ನಿನ್ನ ಗಾಡಿಯಲ್ಲಿ ಕೂತು ಬಂದು ಮೈ ಕೈ ಎಲ್ಲ ನೋವು..“ಎಂದು ಮೈ ಮುರಿದರು.
ಅವರು ಊಟದ ಶಾಸ್ತ್ರ ಮುಗಿಸುತ್ತಿರಲು ಸಿಮೋನ ಹೋಗಿ ಕೊಪೆಲಿನ ಗಂಟೆ ಹೊಡೆದ. ಸಾಯಂಕಾಲದ ಪ್ರಾರ್ಥನೆಯ ಗಂಟೆ. ಗೋವಾ, ಕಾರವಾರ, ಹೊನ್ನಾವರಗಲ ಇಗರ್ಜಿಯಂತೆ ಸದ್ದು ಪ್ರಬಲವಾಗಿರಲಿಲ್ಲ. ಢಣಾ ಢಣಾ ಅನ್ನುವುದರ ಬದಲು ಯವುದೋ ದನದ ಕುತ್ತಿಗೆಯ ಗಂಟಿನಂತೆ ಟಣ ಟಣ ಎಂದಿತು. ಆದರೆ ಈ ಸದ್ದು ಕೂಡ ಅಲ್ಲಿ ಕವಿದ ಮೌನ, ಕತ್ತಲೆಯ ನಡುವೆ ಇಂಪಾಗಿ ಕೇಳಿಸಿತು.
ಸಿಮೋನನ ಮನೆಯೊಳಗೆ ದೇವರ ಪೀಠದ ಮುಂದೆ ಮೇಣದ ಬತ್ತಿ ಹಚ್ಚಲಾಯಿತು. ಅವನ ತಾಯಿ, ಹೆಂಡತಿ, ಮಕ್ಕಳು ಅಲ್ಲಿ ಮೊಣಕಾಲೂರಿದರು. ಸಿಮೋನ ಬಾಗಿಲಲ್ಲಿ ನಿಂತ. ಪಾದರಿ ಗೋನಸ್ವಾಲಿಸ್ ಕುರ್ಚಿಯಲ್ಲಿಯೇ ಗಂಭೀರವಾಗಿ ಕುಳಿತರು.
ಮೊದಲು ಹಣೆ, ತುಟಿ, ಎದೆಯ ಮೇಲೆ ಶಿಲುಬೆಯ ಗುರುತು ಬರೆದುಕೊಂಡು ಎಲ್ಲರೂ ಶಿಲುಬೆಯ ವಂದನೆ ಮಾಡಿದರು. ನಂತರ ಜಪಸರ ಪ್ರಾರ್ಥನೆ. ಕೊನೆಯಲ್ಲಿ ’ಜೂಜೆ ಬಾಪ ಪಾವತೂ ಆಮೈಂ (ತಂದೆ ಜೋಸೇಫರೇ ನಮ್ಮನ್ನು ಕಾಪಾಡಿ) ಎಂಬ ಕೀರ್ತನೆ. ಮನೆಯ ಹಿರಿಯರುಮಕ್ಕಳು ಒಕ್ಕೊರಲಿನಿಂದ ಅದನ್ನು ಹೇಳುವಾಗ ಗೋನಸ್ವಾಲಿಸರಿಗೆ ರೋಮಾಂಚನವಾಯಿತು. ಎಲ್ಲಿ ಕ್ರೈಸ್ತ ಧರ್ಮ ಸಾಸಿವೆ ಕಾಳಿನಷ್ಟೂ ಇಲ್ಲ ಎಂದುಕೊಂಡು ತಾನು ಗಾಬರಿಯಾಗಿದ್ದೆನೋ ಅಲ್ಲಿ ಸಾಯಂಕಾಲದ ಪ್ರಾರ್ಥನೆ, ಕೀರ್ತನೆ ಕೇಳಿ ಬಂದು ಅವರು ಸಂತಸ ಪಟ್ಟರು. ಸಿಮೋನನ ಕುಟುಂಬ ಕ್ರಿಸ್ತನಲ್ಲಿ ಮೇರಿ ಮಾತೆಯಲ್ಲಿ ಅಪಾರ ಭಕ್ತಿಯನ್ನು ಇರಿಸಿಕೊಂಡು ದೈವಭೀತಿಯೊಡನೆ ಬದುಕುತ್ತಿರುವುದನ್ನು ಅವರು ಕಂಡರು. ಶಿವಸಾಗರದ ಉಳಿದ ಕ್ರೈಸ್ತ ಕುಟುಂಬಗಳಲ್ಲಿ ಕೂಡ ಇದೇ ಪರಿಸ್ಥಿತಿ ಇರಬಹುದು ಎನಿಸಿತು ಅವರಿಗೆ.
ಪ್ರಾರ್ಥನೆ ಮುಗಿಸಿದ ಎಲ್ಲರೂ ಅವರ ಮುಂದೆ ಬಂದು ನಿಂತು-
“ಬೆಸಾಂವ ದಿಯಾ ಪದ್ರಬಾ“ಎಂದು ದೇವರ ಆಶೀರ್ವಾದಕ್ಕಾಗಿ ಕೈ ಜೋಡಿಸಿ ನಿಂತರು. ಅವರೆಲ್ಲರಿಗೂ ಆಶೀರ್ವದಿಸಿ-
“ದೇವಾಚೆಂ ಬೆಸಾಂವ“ಎಂದರು. ನಂತರ ಮಕ್ಕಳು, ಅಜ್ಜಿ, ತಾಯಿ, ತಂದೆಯ ಹತ್ತಿರ ಆಶೀರ್ವಾದ ಕೇಳುವ ಸಂಭ್ರಮ.
*
*
*
ಬೋನ ಜಗಲಿಯ ಮೇಲೆಯೇ ಗೋನಸ್ವಾಲಿಸ್ ರ ಹಾಸಿಗೆ ಹಾಸಿದ. ಹೊರ ಹೋಗಿ ಬಂದ ಪಾದರಿ ಹಾಸಿಗೆಯ ಮೇಲೆ ಹೋಗಿ ಕುಳಿತುಕೊಳ್ಳುತ್ತ-
’ಸಿಮೋನ’ ಎಂದರು-
“ಪದ್ರಬಾ..“ಅವ ಓಡಿ ಬಂದ.
“ನಾಳೆ ಮೊದಲು ಕೊಪೆಲ ಶುಚಿ ಮಾಡೋಣ..ನಂತರ ಒಂದು ಪೂಜೆ..ಎಲ್ಲರಿಗೂ ಹೇಳಿ ಬಿಡು..“ಎಂದರು.
“ಆಯ್ತು ಪದ್ರಬಾ..”
ಅವರು ಕುತ್ತಿಗೆಯಲ್ಲಿಯ ಶಿಲುಬೆ ತೆಗೆದು, ಅದಕ್ಕೆ ಮುತ್ತಿಟ್ಟು, ಮಲಗುವ ಮುನ್ನ ಪ್ರಾರ್ಥನೆ ಮಾಡಿ, ತಲೆದಿಂಬಿನ ಮೇಲೆ ಶಿಲುಬೆಯ ಗುರುತು ಎಳೆದು ಮಲಗಿ, ತುಸು ಛಳಿ ಇದ್ದುದರಿಂದ ಹೊದಿಕೆ ಎಳೆದುಕೊಂಡರು. ಬೋನ ಕೂಡ ಬೇರೊಂದು ತುದಿಯಲ್ಲಿ ಮಲಗುವ ಸಿದ್ಧತೆಗೆ ತೊಡಗಿದ. ಅವನಿಗೂ ದಣಿವಾಗಿತ್ತು.
ಆಗಲೇ ಸಿಮೋನ ಅಂಗಳಕ್ಕೆ ಇಳಿದು ಚಪ್ಪಲಿ ಸಿಕ್ಕಿಸಿಕೊಂಡ. ಈ ಕತ್ತಲೆಯಲ್ಲಿ ಗಂಡ ಎಲ್ಲಿಗೋ ಹೊರಟಿರುವುದನ್ನು ಗಮನಿಸಿದ ಹೆಂಡತಿ-
“ಅಲ್ಲ ಈಗ ಎಲ್ಲಿಗೆ?“ಎಂದು ಮೆದು ದನಿಯಲ್ಲಿ ಕೇಳಿದಳು. ಜಗಲಿಯ ಮೇಲೆ ಮಲಗಿಕೊಂಡ ಪಾದರಿಗಳಿಗೆ ತನ್ನ ಮಾತಿನಿಂದ ತೊಂದರೆಯಾಗದಿರಲೆಂದು.
“…………ಕೇರಿಯೊಳಗೆ ಹೋಗಿ ಬರತೀನಿ…ಇಷ್ಟು ದಿನ ಹ್ಯಾಗೋ ಆಯ್ತು-ಇನ್ನಾದರೂ ನಮ್ಮವರು ಇಗರ್ಜಿಗೆ ಬರಬೇಕಲ್ಲ..”
ಎನ್ನುತ್ತ ಆತ ದಣಪೆ ಕಣಿವೆ ದಾಟಿದ. ಪಾಸ್ಕೋಲ, ಕೈತಾನರ ಜತೆ ಹೊಗಿ ತಾನು ಪಟ್ಟ ಪ್ರಯತ್ನ ಫಲಕಾರಿಯಾದ ಬಗ್ಗೆ ಅವನಿಗೆ ಸಂತಸವಾಗಿತ್ತು. ಪಾದರಿಗಳು ಊರಿಗೆ ಬಂದರು ನಿಜ. ಆದರೆ ಇದರ ಪ್ರಯೋಜನವನ್ನು ಜನ ಪಡೆಯಬೇಕಲ್ಲ. ಪ್ರತಿ ಭಾನುವಾರಗಳಂದು ಜನ ಒಂದೆಡೆ ಸೇರಿ ಪ್ರಾರ್ಥನೆ ಮಾಡಲು ಅನುಕೂಲವಾಗಲಿ ಎಂದು ನಾನೇ ಮುಂದೆ ನಿಂತು ಕೊಪೆಲ ಕಟ್ಟಿದೆ. ಮೊದ ಮೊದಲು ಜನ ಬಂದರು. ನಂತರ ಜನ ಅತ್ತ ಸುಳಿಯುವುದು ನಿಂತು ಹೋಯಿತು. ತಾನು ತನ್ನ ಮನೆಯವರಷ್ಟೇ ಕೆಲ ವಾರ ಹೋದೆವು. ನಂತರ ಅದೂ ಕೂಡ ತನಗೆ ಬೇಡ ಎನಿಸಿ ಈಗ ಕೊಪೆಲ ಹಾಳು ಸುರಿಯುತ್ತಿದೆ. ಹೋಗಲಿ ಮನೆಗಳಲ್ಲಾದರೂ ಪ್ರಾರ್ಥನೆ ಮಾಡುತ್ತೇರೆಯೇ? ದೇವರ ಮುಂದೆ ಮೇಣದ ಬತ್ತಿ ಹಚ್ಚುತ್ತಾರೆಯೇ? ಅದೂ ಇಲ್ಲ. ಎಷ್ಟೋ ಜನ ಪರಲೋಕ ಮಂತ್ರ, ನಮೋ ರಾಣಿ ಮಂತ್ರಗಳನ್ನು ಮರೆತಿದ್ದಾರೆ. ಇವರನ್ನೆಲ್ಲ ಮೊದಲು ಕೊಪೆಲಗೆ ಕರೆ ತರಬೆಕು. ನಂತರ ಮರೆತುಹೋದುದನ್ನು ನೆನಪಿಗೆ ತರಬೇಕು. ದೇವರು, ಸಂಪ್ರದಾಯ ಪದ್ಧತಿಗಳಿಂದ ಈ ಜನ ದೂರವೇ ಉಳಿದರೆ ಪಾದರಿಗಳು ಬಂದು ಏನು ಪ್ರಯೋಜನ? ಸಿಮೋನ ಕತ್ತಲಲ್ಲಿಯೇ ಮುನ್ನಡೆದ.
ರಸ್ತೆ ಮಗ್ಗುಲ ಎಮ್ಮೆ ಮರಿಯಳ ಮನೆಯತ್ತ ತಿರುಗಬೇಕಾದರೇನೆ ಎಮ್ಮೆ ಶಗಣಿ ಗಂಜಳದ ವಾಸನೆ ಮೂಗಿಗೆ ಬಡಿಯಿತು. ಗೊಡೆ ಮಗ್ಗಲ ಗೂಡಿನಲ್ಲಿ ಚಿಮಣಿ ದೀಪ ಮಂಕಾಗಿ ಉರಿಯುತ್ತಿತ್ತು.
’ಮರಿಯಾ..?’
ಎಂದು ಅಂಗಳದಲ್ಲಿಯೇ ನಿಂತು ಕೂಗಿದ ಸಿಮೋನ.
“ಯಾರು?”
ಮರಿಯಾ ಹೊರಬಂದಳು.
“ಯಾರು? ಸಿಮೋನಣ್ಣ..ಅಲ್ಲ ಊರಿಗೆ ಪಾದರಿಗಳು ಬಂದಿದ್ದಾರಂತೆ..ಹೌದಾ?“ಎಂದು ಅವಳೇ ಕೇಳಿದಳು.
“ಅದಕ್ಕೇ ಬಂದೆ ನಾನು..ನಾಳೆ ಕೊಪೆಲನಲ್ಲಿ ಪೂಜೆ ಇದೆ..ಮೊದಲ ಬಾರಿ ಪಾಪ ನಿವೇದನೆ. ದಿವ್ಯಪ್ರಸಾದ ನೀಡೋದು..ಮಕ್ಕಳಿಗೆಲ್ಲ ಜಪ ಮಂತ್ರಗಳು ಬರುತ್ವೆ ಅಲ್ವೆ..”
“ಬರುತ್ತೆ..”
“ಎಲ್ಲ ಬನ್ನಿ ನಾಳೆ ಮಧ್ಯಾಹ್ನ..”
ಸಿಮೋನ ಮೂರನೇ ಮನೆಯತ್ತ ತಿರುಗಿದ. ಸುತಾರಿ ಇನಾಸನ ಮನೆಯ ಅಂಗಳಕ್ಕೆ ಕಾಲಿಡುವುದಕ್ಕೂ ಮೊದಲು ಅವನ ಮೂಗಿಗೆ ಊದಿನ ಕಡ್ದಿಯ ವಾಸನೆ ಅಡರಿತು. ಅಂಗಳದ ನಡುವಣ ಕುಟಿಗ ದೈವದ ಸುತ್ತ ಹೊಗೆ ಸುತ್ತಿಕೊಂಡಿತ್ತು, ಆ ಕತ್ತಲಲ್ಲೂ ಕುಟಿಗನ ಸುತ್ತ ಬಿದ್ದ ಹೂವು, ಕುಂಕುಮ ಅವನಿಗೆ ಕಂಡಿತು. ಈ ಕುಟಿಗನ ಮಗ್ಗುಲಲ್ಲಿ ನಿಂತು-
“ಇನಾಸ“ಎಂದು ಕರೆದ.
ಇನಾಸ ಅವನ ಜಗಲಿಯ ಮೇಲೆ ಕುಳಿತಿದ್ದ.
“ಯಾರು?..ಸಿಮೋನನ?”
“ಹೌದು..ಅಲ್ಲ ಪಾದರಿಗಳು ಬಂದಿರೋದು ಗೊತ್ತಲ್ಲ”.
“ಗೊತ್ತು ಇವಳು ಹೇಳತಿದ್ಲು..”
“ನಾಳೆ ಕೊಪೆಲದ ಹತ್ರ ಬಂದು ಬಿಡಿ..ಕೊಪೆಲನ ಶುಚಿ ಮಾಡಬೇಕು..ಹಾಗೇನೆ ಪೂಜೆ ಇದೆ..”
“ಹಾಂ ಹುಂ..”
ಎಂದೆನೂ ಹೇಳಲಿಲ್ಲ ಇನಾಸ. ಸಿಮೋನ ಮುಂದೆ ಹೊರಟ. ನಾಲ್ಕು ಹೆಜ್ಜೆ ಇಟ್ಟಾಗ ಕೊಪೆಲದ ಹಿಂಬದಿಯ ಮರಗಳ ನಡುವಿನಿಂದ ಯಾರೋ ಹೆಂಗಸು ಹೊರಬಂದಂತೆನಿಸಿ ಸಿಮೋನ-
“ಯಾರು? “ಎಂದು ಕೇಳಿದ.
“ನಾನು..”
ಅವಳ ದನಿಯಿಂದಲೇ ಅವಳು ಕೈತಾನನ ಹೆಂಡತಿ ಎಂಬುದು ತಿಳಿದು ಹೋಯಿತು. ಇವನು ಕೇಳುವ ಮುನ್ನವೇ ಅವಳು ಇವನ ಮನಸ್ಸಿನಲ್ಲಿರುವುದನ್ನು ಗ್ರಹಿಸಿದವಳಂತೆ-
“ಮಗು ಮೂರು ದಿನದಿಂದ ಅಳತಾ ಇದೆ..ಅದಕ್ಕೆ ಅಮ್ಮನ ಬಂಡಾರ ತಂದೆ ಹಚ್ಚೋಣ ಅಂತ..“ಎಂದಳು. ಇವನು ಮಾತನಾಡಲಿಲ್ಲ. ತಾನು ಮಾಡ ಹೊರಟ ಕೆಲಸ ನೆನಸಿಕೊಂಡಂತೆ.
“..ಪಾದರಿಗಳು ಬಂದಿದ್ದಾರೆ..ನಾಳೆ ಕೊಪೆಲಗೆ ಬನ್ನಿ“ಎಂದವನೇ ಮುಂದೆ ನಡೆದ.
ಕೆಲವರು ರಸ್ತೆಯಲ್ಲಿಯೇ ಸಿಕ್ಕರು. ಕೆಲವರು ಮನೆಯಲ್ಲಿ. ಎಲ್ಲರಿಗೂ ಹೇಳಿ ತಿರುಗಿದ.
ಹೊರಟಾಗಿನ ಉತ್ಸಾಹ ಹಿಂತಿರುಗುವಾಗ ಉಳಿದಿರಲಿಲ್ಲ. ಇಲ್ಲಿಯ ಕ್ರೀಸುವರೆಲ್ಲ ನಿಜ ದೇವನ ಆರಾಧನೆಯನ್ನು ಬಿಟ್ಟುಬಿಟ್ಟು ಸುಳ್ಳು ದೇವನ, ಭೂತಗಳ ಆರಾಧನೆಗೆ ಹೊರಟಿರುವುದು ಈಗ ಮತ್ತೂ ಸ್ಪಷ್ಟವಾಯಿತು. ಈ ಹಿಂದೆ ಇದೇ ಕಾರಣಕ್ಕಾಗಿ ಹಲವು ಬಾರಿ ಆತ ಕೊರಗಿದ್ದ. ಈಗ ಪಾದರಿ ಊರಿಗೆ ಬಂದಾಗ ಈ ಕೊರಗು ಮತ್ತೂ ಗಾಢವಾಯಿತು. ಆದರೂ ಮನಸ್ಸಿಗೊಂದು ಸಮಾಧಾನ ತಂದುಕೊಂಡ. ಕ್ರೀಸುವರ ಆತ್ಮದ ಗುರುವು, ಮಾರ್ಗದರ್ಶಕರು, ಆಧ್ಯಾತ್ಮಿಕ ಬದುಕಿನ ಹೊಣೆಗಾರರು ಆದ ಪಾದರಿಗಳು ಊರಿನಲ್ಲಿಯೇ ನೆಲೆಸಿ ಜನರನ್ನು ಕಾಪಾಡಲೂ ನೋಡಿಕೊಳ್ಳಲು ಬಂದಿರುವಾಗ ಇನ್ನು ಚಿಂತೆ ಇಲ್ಲ ಎನಿಸಿತು.
ರಸ್ತೆ ಮಗ್ಗುಲ ದೀಪ ಮಂಕಾಗಿ ಉರಿಯುತ್ತಿತ್ತು. ಕೆಲ ನಾಯಿಗಳು ಅಲ್ಲಿ ಸೇರಿ ಗದ್ದಲ ಮಾಡುತ್ತಿದ್ದವು. ಅವುಗಳನ್ನು ಓಡಿಸಿ, ದಣಪೆಯ ಅಡ್ಡಗಳು ಎಳೆದು ಏನೇ ಎಂದು ಹೆಂಡತಿಯನ್ನು ಕರೆಯುತ್ತ ಅಂಗಳ ದಾಟಿದ. ಈ ಬದಿಯಲ್ಲಿ ಪಾದರಿಗಳು, ಆ ಬದಿಯಲ್ಲಿ ಅವರ ಕುಜ್ನೇರ ಬೋನ ಮಲಗಿದ್ದರು.
ಪಾದರಿಗಳು ಈ ದೇಶದವರಲ್ಲ. ಎಲ್ಲಿಯವರೊ, ಈ ಹಿಂದೆ ಗೋವೆಯಲ್ಲಿ ಇದ್ದಿದ್ದರೇನೋ. ಅಲ್ಲಿ ಬಂಗಲೆ, ಮಂಚ ಎಂದು ಸುಖದಲ್ಲಿದ್ದವರು. ಅವರು ಜಗುಲಿಯ ಮೇಲೆ ಮಲಗಿದ್ದಾರೆ. ಮನೆಯೊಳಗೆ ಮಲಗಿಕೊಳ್ಳಿ ಎಂದೆ.
“ಬೇಡ..ನನಗೆ ಇಲ್ಲೇ ಆದೀತು.“ಎಂದರು.
ಸರಳತೆ ಎಂದರೆ ಇದು. ಮುರುಡೇಶ್ವರದ ಪಾದ್ರಿಗಳನ್ನು ತಾನು ಬಲ್ಲೆ. ಅವರು ಕೂಡ ಹೀಗೆಯೇ. ಶಿರಾಲಿ, ಸಾನಬಾವಿಗೆ ಹೋದಾಗ ಯಾರದೋ ಹಿತ್ತಿಲಲ್ಲಿ ಮಲಗಿ ಬರುತ್ತಾರೆ. ಮೇಲೊಂದು ಮಾವಿನ ಮರ, ಹಲಸಿನ ಮರ ಕೆಳಗೆ ಶಗಣೆ ಸಾರಿಸಿದ ನೆಲ ಇದ್ದರೆ ಸಾಕು ಅವರಿಗೆ.
ಇವರು ಗಾಡಿಯಲ್ಲಿ ಮಂಚ ಕುರ್ಚಿ ಮೇಜು ತಂದಿದ್ದಾರೆ ನಿಜ. ಆದರೆ ಅವೆಲ್ಲ ಬೇಕೇ ಬೇಕು ಎಂದು ಬಯಸುವುದಿಲ್ಲವೇನೋ.
ಸಿಮೋನ ಒಳ ಬಂದ.
ಮಕ್ಕಳೆಲ್ಲ ಮಲಗಿದ್ದರು. ಈಚಲ ಚಾಪೆಯ ಮೇಲೆ ಅವನ ಕಾಲ ಬಳಿ ಇವನ ತಲೆ. ಇವನ ತಲೆಯ ಬಳಿ ಮತ್ತೊಬ್ಬನ ಕೈ. ಮೂಲೆಯಲ್ಲಿ ಹೆಂಡತಿ ಮುದುಡಿ ಕೊಂಡಿದ್ದಳು. ಮತ್ತೂ ದೂರ ತಾಯಿ.
ಈತ ಬಂದ ಸದ್ದಿಗೆ ಹೆಂಡತಿ ಎದ್ದು ಕುಳಿತಳು.
“ಬಂದ್ರಾ…ಹೇಳಿದ್ರ ಎಲ್ಲರಿಗೂ”
“..ಹೇಳಿದೆ..ಆದರೆ ಯಾರಿಗೂ ನಮ್ಮ ದೇವರು, ಪೂಜೆ, ಪ್ರಾರ್ಥನೆ ಬೇಕಾಗಿರೋ ಹಾಗೆ ಕಾಣೆ”
“ಯಾಕೆ ಹಾಗೆ ಹೇಳ್ತೀರ..?”
“..ಇವರಿಗೆ ಕುಟಿಗ ಇದೆ..ಚೌಡಿ ಇದಾಳೆ…ಈವರೆಗೆ ಅವರನ್ನು ನಂಬಿದವರು ಅಲ್ವಾ ಇವರು…ಮುಂದೂ ಅವರೇ ಗತಿ ಅಂದರೆ ಪಾದರಿಗಳು ತಿರುಗಿ ಹೋಗೋದೇ..”.
ಅವಳು ಕತ್ತಲಲ್ಲಿ ಪಿಳ ಪಿಳನೆ ಇವನ ಮುಖ ನೋಡಿದಳು.
“ಊಟ ಮಾಡಿ”
ಕಂಚಿನ ತಟ್ಟೆ ಇಟ್ಟಳು. ತುಸು ತಣ್ಣಗಾದ ಗಂಜಿಯನ್ನು ಅದಕ್ಕೆ ಸುರಿದಳು. ಒಲೆಯಿಂದ ಸುಟ್ಟ ಬಂಗಡೆ ಮೀನನ್ನು ಹೊರತೆಗೆದಳು. ಬಿಸಿ ಬೂದಿಯ ಅಡಿಯಲ್ಲಿದ್ದ ಮೀನು ಹೊರಬಂದ ತಕ್ಷಣ ಅದರ ವಾಸನೆ ಬಂದಿತು.
ಕಾಲ ಮೇಲೆ ಚೊಂಬು ನೀರು ಸುರಿದುಕೊಂಡು ಈತ ಒಳಬಂದು ಊಟಕ್ಕೆ ಕುಳಿತ.
“ಬೆಳಿಗ್ಗೆ ಬೇಗ ಎದ್ದು ಕೊಪೆಲ ಹತ್ರ ಬನ್ನಿ..ಅದಕ್ಕೊಂದು ಆಕಾರ ತಂದು ಕೊಡಬೇಕಲ್ಲ..“ಎಂದ ಹೆಂಡತಿ ಅಪ್ಪಿಬಾಯಿಯ ಮುಖ ನೋಡುತ್ತ.
*
*
*
ಸಿಮೋನ ಕೋಳಿಯ ಹಿಂದೆಯೇ ಏಳುವ ಮನುಷ್ಯ. ಊರಿನಲ್ಲಿ ಇದ್ದಾಗ ಬೆಳಿಗ್ಗೆ ಇಗರ್ಜಿ ಗಂಟೆ ಪ್ರಾರ್ಥನೆ ಸೂಚನೆ ಕೊಟ್ಟಾಗ ಮನೆಮಂದಿ ಎಲ್ಲ ಎದ್ದು ದೇವರ ಪೀಠದ ಮುಂದೆ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುವುದು ಅಭ್ಯಾಸ. ಇಲ್ಲಿಗೆ ಬಂದ ನಂತರವೂ ಈ ಅಭ್ಯಾಸ ಮುಂದುವರೆದಿತ್ತು. ಇಲ್ಲಿ‌ಇಗರ್ಜಿ ಗಂಟೆಯ ಸದ್ದು ಕೇಳಿ ಬರುತ್ತಿರಲಿಲ್ಲವಾದರೂ ಅದೊಂದು ಅಭ್ಯಾಸವೆಂಬಂತೆ ತಟ್ಟನೆ ಎಚ್ಚರಗುತ್ತಿತ್ತು. ಹೀಗೆ ಎಚ್ಚರಾದ ನಂತರ ಮುಂಜಾನೆಯ ಪ್ರಾರ್ಥನೆಯೂ ಕೆಲ ಕಾಲ ಮುಂದುವರೆದಿತ್ತು. ಅದೇನು ಕಾರಣವೋ ಮಕ್ಕಳು ಬೆಳಿಗ್ಗೆ ಏಳುವುದನ್ನು ಬಿಟ್ಟರು. ಹೆಂಡತಿ ಕೂಡ. ತಾಯಿ ಹಾಸಿಗೆಯ ಮೇಲೆ ಕುಳಿತೇ ಪ್ರಾರ್ಥನೆ ಮಾಡತೊಡಗಿದಳು. ಇವನು ಮಾತ್ರ ಇದನ್ನು ಬಿಡಲಿಲ್ಲ.
ಎದ್ದು ತಂಬಿಗೆ ತೆಗೆದುಕೊಂಡು ಅಷ್ಟು ದೂರ ಗುಡ್ಡಕ್ಕೆ ಹೋಗಿ ಬರುವಷ್ಟರಲ್ಲಿ ಬಿಸಿಲು ಬಲಿತಿರುತ್ತಿತ್ತು. ಗಂಜಿ ಊಟ ಮುಗಿಸಿ ಇವ ಹೊರಡುತ್ತಿದ್ದ. ಇಂದು ಹಾಗೇಯೆ ಎದ್ದ. ಎದ್ದ ಎಷ್ಟೋ ಹೊತ್ತಿನ ನಂತರ ನಿನ್ನೆ ಪಾದರಿಗಳು ಬಂದದ್ದು ನೆನಪಾಯಿತು.
’ಅಯ್ಯೋ ನನ್ನ ಮರೆವಿಗೆ ಬೆಂಕಿ ಹಾಕ’
ಎಂದು ಗಡಬಡಿಸಿ ಹೊರಗೆ ಬಂದು ನೋಡಿದ. ಪಾದರಿಗಳ ಹಾಸಿಗೆ ಸುತ್ತಿ ಗೋಡೆಗೆ ಒರೆಗಿಸಲಾಗಿತ್ತು. ಬೋನ ಹಾಸಿಕೊಂಡ ಚಾಪೆ ಮೂಲೆಯಲ್ಲಿ ನಿಂತಿತ್ತು.
ಎಲ್ಲಿಗೆ ಹೋದರು ಇವರು ಎಂದು ಅಂಗಳಕ್ಕೆ ಬಂದ. ದೂರದಲ್ಲಿ ಕೊಪೆಲಿನ ಬಳಿ ಏನೋ ಚಟುವಟಿಕೆ ನಡೆದಿರುವುದು ಮರಗಳ ಮರೆಯಲ್ಲಿ ಕಂಡಿತು. ಅತ್ತ ಓಡಿದ.
ಪಾದರಿ ಗೋನಸ್ವಾಲಿಸ್ ಹಾಗೂ ಅವರ ಕುಜ್ನೆರ್ ಬೋನ ಕೊಪೆಲಿನ ಸುತ್ತ ಬೆಳೆದ ಗಿಡ ಪೊದೆಗಳನ್ನು ಬರಿಗೈಯಿಂದ ಕಿತ್ತು ಹಾಕಿದ್ದರು. ಕೊಪೆಲಿನ ಒಳಗೆ ತುಂಬಿಕೊಂಡ ಕಸವನ್ನು ಶುಚಿ ಮಾಡಿದ್ದರು. ಗೋನಸ್ವಾಲಿಸ್ ತೊಟ್ಟ ಉದ್ದ ನಿಲುವಂಗಿಯನ್ನು ಸೊಂಟದವರೆಗೆ ಎತ್ತಿ ಕಟ್ಟಿಕೊಂಡಿದ್ದರು. ಅವರ ಕೆಂಪು ಮುಖದ ಮೇಲೆ ಬೆವರು ಇಳಿಯುತ್ತಿತ್ತು.
ಸಿಮೋನ ಪೇಚಾಡಿಕೊಂಡ.
“ಇದನ್ನೆಲ್ಲ ನಾವು ಮಾಡತೀವಿ ಪದ್ರಬಾ..”
ಎಂದ. ಅವರು ಕಿತ್ತ ಗಿಡ ಗಂಟೆಯನ್ನು ದೂರ ಕೊಂಡೊಯ್ದು ಹಾಕುತ್ತ-
“ದೇವರ ಆಲಯ ಶುದ್ಧಿ ಮಾಡುವುದರಲ್ಲಿ ನಾನೇನು ನೀನೇನು..ಮುಖ್ಯ ಇದು ನನ್ನ ಕೆಲಸ.“ಎಂದರು.
ಈ ಕೆಲಸ ಮಾಡಲು ಇನ್ನೂ ಒಂದಿಬ್ಬರು ಬಂದರು.
ಸಿಮೋನನ ತಾಯಿ, ಹೆಂಡತಿ ಕೂಡ ಬಂದು ಕೈಗೂಡಿಸಿದರು.
ಕೊಪೆಲನ ಒಳಗೋಡೆಗಳಿಗೆ ಸುಣ್ಣ ಬಳಿಯಲಾಯಿತು. ನೆಲಕ್ಕೆ ಶಗಣಿ ಸಾರಿಸಲಾಯಿತು.
ದೇವರ ಪೀಠವನ್ನು ಶುದ್ಧ ಮಾಡುತ್ತಿದ್ದ ಗೋನಸ್ವಾಲಿಸ್
’ಸಿಮೋನ..’ ಎಂದು ಕರೆದರು. ಆತ ಅವರ ಮುಖ ನೋಡಿದಾಗ ಅವರು-
“ಸಿಮೋನ ನಾನು ಈವತ್ತಿನಿಂದ ಇಲ್ಲೇ ಇರತೇನೆ.“ಎಂದರು.
“ಕಟ್ಟೆಯ ಕಲ್ಲು ಕಟ್ಟೆಗೆ ಅಂತ ಕೇಳಿದ್ದಿಯೆಲ್ಲ…ನಾನು ಇಲ್ಲಿದ್ದೇ ಮಾಡುವ ಕೆಲಸ ಬಹಳ ಇದೆ..”
“ಅಲ್ಲ ಪದ್ರಬಾ…ಈ ಕಟ್ಟಡ ಮಜಬೂತಾಗಿಲ್ಲ..ನೆಲ ಸರಿ ಇಲ್ಲ..ಮಾಡಿಗೆ ಹುಲ್ಲು ಹೊದೆಸಿದೆ.”.
ನಕ್ಕರು ಪಾದರಿ.
“ದೇವರಿಗೆ ಅಂತ ನೀವು ಕಟ್ಟಿದ ಕಟ್ಟಡ ಅಲ್ಲವೇ ಇದು ? ನಾನು ಇಲ್ಲೇ ಇರತೇನೆ..ನೀನು ಯೋಚನೆ ಮಾಡಬೇಡ..”
ಅವರು ಸ್ನಾನ ಮಾಡಿಬರಲೆಂದು ಸಿಮೋನನ ಮನೆಗೆ ಹೋದರು. ಪಾದರಿ ಕೊಪೆಲಿನಲ್ಲಿ ಉಳಿಯುವುದೇ ಸರಿ ಎಂದಾಯಿತು. ಬೋನನಿಗಾಗಿ ಒಂದು ಮನೆಯನ್ನು ಸಿಮೋನ ಮೇಸ್ತ್ರಿಯ ಮನೆ ಪಕ್ಕದಲ್ಲಿ ಸಜ್ಜುಗೊಳಿಸಲಾಯಿತು. ಬೋನ ತನ್ನ ಪಾತ್ರೆ ಪಡಗಗಳನ್ನು ಅಲ್ಲಿಗೆ ಸಾಗಿಸಿ ಒಲೆ ಹೂಡಿದ್ದೂ ಆಯಿತು.

ಪಾದರಿ ಕೊಪೆಲ್ ಗೆ ಬರುತ್ತಿದ್ದಂತೆಯೇ ಬೋನ ದೇವರ ಪೀಠದ ಮುಂದೆ ಸಾಲುಸಾಲಾಗಿ ಮೇಣದ ಬತ್ತಿ ಹಚ್ಚಿ ಇರಿಸಿದ್ದ. ಸಿಮೋನನ ಹೆಂಡತಿ, ಮಕ್ಕಳು ದೇವರ ಪೈನೆಲಗಳಿಗೆ ಅಬ್ಬಲಿಗೆ ಹೂವಿನ ಹಾರಗಳನ್ನು ಹಾಕಿದ್ದರು. ಕೇರಿಯ ಇನ್ನೂ ಕೆಲವರು ಅಲ್ಲಿ ಸೇರಿದ್ದರು. ಸುಣ್ಣ ಬಳಿದ ಗೋಡೆ. ಶಗಣಿ ಸಾರಿಸಿದ ನೆಲದಿಂದ ಅಲ್ಲಿ ಕೊಪೆಲ ಕಂಗೊಳಿಸುತ್ತಿತ್ತು.

ಪಾದರಿ ಪವಿತ್ರ ಜಲವನ್ನು ಕೊಪೆಲನ ಒಳ ಹೊರಗೆ ಚಿಮುಕಿಸಿ ಅದನ್ನು ಮಂತ್ರಿಸಿದರು. ಪವಿತ್ರ ತೀರ್ಥದ ತುಂತುರು ಹನಿ ತಮ್ಮ ಮೇಲೆ ಬೀಳಲು ಸುತ್ತ ನೆರೆದವರು ಪುಳಕಿತರಾಗಿ ಹಣೆ, ಎದೆ, ಭುಜಗಳನ್ನು ಮುಟ್ಟಿಕೊಂಡು ’ಪಿತನಿಗೂ ಸುತನಿಗೂ, ಸ್ಪಿರಿತು ಸಾಂತುವಿಗೂ ಮಹಿಮೆಯಾಗಲಿ’ ಎಂದು ಪರಮ ತ್ರಿತ್ವಕ್ಕೆ ಸ್ತುತಿ ಮಾಡಿದರು. ಪವಿತ್ರ ಜಲದ ಬಟ್ಟಲನ್ನು ಬೋನನ ಕೈಗಿತ್ತು ಪಾದರಿ ಗೋನಸ್ವಾಲಿಸ್ ಪೀಠದ ಮುಂದೆ ಬಂದು ನಿಂತರು. ದೇವರತ್ತ ತಿರುಗಿ ಎರಡೂ ಕೈಗಳನ್ನು ಆಕಾಶದತ್ತ ಹಿಡಿದು ದೊಡ್ಡ ದನಿಯಲ್ಲಿ ಅವರೆಂದರು-

“ಓ! ನನ್ನ ಪ್ರಭುವೆ. ಈ ಊರಿನ ಕ್ರೀಸುವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಅವರ ಆಧ್ಯಾತ್ಮಿಕ ಬೇಡಿಕೆಗಳನ್ನು ಪೂರೈಸಲು. ಅವರನ್ನು ದೈವ ಭೀತಿ, ಪ್ರೀತಿ, ವಿಶ್ವಾಸದಲ್ಲಿ ನಡೆಸಲು, ಪಾಲಕರಾಗಿ ಯಾರೂ ಇರಲಿಲ್ಲವಾಗಿ..ಇಲ್ಲಿಯ ಕ್ರೀಸುವರು ಈ ಕೊರತೆಯಿಂದಾಗಿ ಅಪಾರವಾಗಿ ಬಳಲುತ್ತಿದ್ದರು. ನಾನು ಈ ಕೊರತೆ ಯನ್ನು ನೀಗಿಸಲು ನಿನ್ನ ಆಸೆಯನ್ನು ನೆರವೇರಿಸಲು ಇಲ್ಲಿಗೆ ಬಂದಿದ್ದೇನೆ. ನನ್ನಿಂದ ಈ ಕೆಲಸವನ್ನು ಸಂಪೂರ್ಣವಾಗಿಯೂ ಯಶಸ್ವಿಯಾಗಿಯೂ ಮಾಡಿಸಿಕೊಳ್ಳುವ ಹೊಣೆ ನಿನ್ನದು. ನನಗೆ ಆ ಶಕ್ತಿ ಬರುವಂತೆ ಅನುಗ್ರಹಿಸು ಹಾಗೂ ಈ ಊರಿನ ಕ್ರೀಸುವರಲ್ಲಿ ಅಂತಹ ಮನಸ್ಸು ಬುದ್ಧಿಯೂ ಜಾಗ್ರತವಾಗುವಂತೆ ಮಾಡು..”
ಪಾದರಿ ಒಂದೆರಡು ನಿಮಿಷ ಮೌನ ತಾಳಿದರು. ಅವರ ಗಂಭೀರವಾದ, ಎತ್ತರದ ದನಿ, ತಟ್ಟನೆ ನಿಂತು ಹೊರಗಿನ ಹಕ್ಕಿಗಳ ಗದ್ದಲ ಕೇಳಿ ಬಂದಿತು. ಹೊರಗಿನಿಂದ ಸುಳಿದು ಬಂದ ಗಾಳಿಗೆ ಬತ್ತಿಯ ಕುಡಿಗಳು ಬಳುಕಾಡಿದವು. ಪೈನಲ ಮೇಲಿನ ಹೂ ಹಾರಗಳು ತೂಗಾಡಿದವು. ಸಣ್ಣ ಕೊಠಡಿಯಲ್ಲಿ ಪಾದರಿಯ ತುಂಬು ದನಿ ಬಹಳ ಹೊತ್ತಿನವರೆಗೆ ಗುಂಗುಟ್ಟಿತು. ತಟ್ಟನೆ ಅವರು-
“ಪರಲೋಕದಲ್ಲಿರುವ ನಮ್ಮ ತಂದೆಯೇ, ನಿಮ್ಮ ಹೆಸರಿಗೆ ಪೂಜೆಯಾಗಲಿ, ನಿಮ್ಮ ರಾಜ್ಯ ಬರಲಿ ನಿಮ್ಮ ಚಿತ್ತ ಪರಲೋಕದಲ್ಲಿ ಆಗುವ ಹಾಗೆ ಭೂಲೋಕದಲ್ಲಿಯೂ ಆಗಲಿ..”
ಎಂದು ಪದ್ಧತಿಯಂತೆ ಪರಲೋಕ ಮಂತ್ರವನ್ನು ಅರ್ಧಕ್ಕೇನೆ ನಿಲ್ಲಿಸಿದರು. ನಿಯಮದಂತೆ ಉಳಿದವರು ಅದನ್ನು ಮುಂದುವರೆಸಬೇಕಿತ್ತು. ಆದರೆ ಅಲ್ಲಿ ನೆರೆದವರಲ್ಲಿ ಬಹಳಷ್ಟು ಜನ ಪರಲೋಕ ಮಂತ್ರದ ಮುಂದಿನ ಭಾಗವನ್ನು ಹೇಳಲು ಅಸಮರ್ಥರಾಗಿದ್ದರು.
ಬೋನ ತಟ್ಟನೆ ಮುಂದಿನ ಸಾಲುಗಳನ್ನು ಹೇಳ ತೊಡಗಿದ. ಸಿಮೋನನ ದನಿಯೂ ಕೇಳಿಸಿತು.
“….ದಿನಂಪ್ರತಿಯಾದ ನಮ್ಮ ಅನ್ನವನ್ನು ನಮಗೆ ನೀಡು. ನಮಗೆ ತಪ್ಪು ಮಾಡಿದವರಿಗೆ ನಾವು ಕ್ಷಮಿಸುವ ಹಾಗೆ ನಮ್ಮ ತಪ್ಪುಗಳನ್ನೂ ಕ್ಷಮಿಸು. ನಮ್ಮನ್ನು ಶೋಧನೆಯಲ್ಲಿ ಬೀಳಿಸದೆ ಕೇಡಿನೊಳಗಿನಿಂದ ನಮ್ಮನ್ನು ರಕ್ಷಿಸು..ಆಮೆನ..”
ಈ ಪರಲೋಕ ಮಂತ್ರದ ನಂತರ ಮೂರು ನಮೋ ರಾಣೆ ಮಂತ್ರಗಳನ್ನು ಅವರು ನುಡಿದರು. ಇದನ್ನು ಕೂಡ ಮೊದಲ ಅರ್ಧವನ್ನು ಗೋನಸ್ವಾಲಿಸ್ ರು ಹೇಳಿ ನಿಲ್ಲಿಸಿದ ನಂತರ ಉಳಿದ ಅರ್ಧವನ್ನು ಬೋನ ಮತ್ತಿತರರು ಮುಗಿಸಿದರು.
ಇದರ ನಂತರ ಜನರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಲು ಅವರು ಮರೆಯಲಿಲ್ಲ.
ದೇವರ ಪೀಠಕ್ಕೆ ಬೆನ್ನು ಮಾಡಿ ನಿಂತು, ತಮ್ಮ ದಪ್ಪನೆಯ ಉದ್ದ ಗಡ್ಡವನ್ನು ನೇವರಿಸಿಕೊಂಡು, ಕಣ್ಣುಗಳಲ್ಲಿ ಪ್ರೀತಿಯನ್ನು ಗಾಂಭೀರ್ಯವನ್ನು ಸೂಸುತ್ತ ಎದೆ ತುಂಬು ಉಸಿರು ಎಳೆದುಕೊಂಡು ಅವರು-
“ಮೊಗಾಚ ಕ್ರಿಸ್ತವಾಂನೂಂ“(ಪ್ರೀತಿಯ ಕ್ರಿಸ್ತುವರೇ) ಎಂದಾಗ ಎದಿರು ನಿಂತ ಕೆಲವೇ ಜನ ರೋಮಾಂಚನಗೊಂಡರು.
“ಈವರೆಗೆ ನೀವು ಕುರುಬನಿಲ್ಲದ ಕುರಿ ಮಂದೆಯಾಗಿದ್ದೀರಿ. ಅವಿಶ್ವಾಸಿಗಳ ನಡುವೆ ನೀವು ಬದುಕುತಿದ್ದೀರಿ. ಪೂಜೆ, ಪ್ರಾರ್ಥನೆ, ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಮೊದಲಾದ ಯಾವುದೇ ಸಂಸ್ಕಾರ ನಿಮಗೆ ಕಾಲ ಕಾಲಕ್ಕೆ ದೊರಕ್ಕುತ್ತಿರಲಿಲ್ಲ. ಆದರೆ ಇನ್ನು ಮುಂದೆ ಹೀಗೆ ಆಗಲಿಕ್ಕಿಲ್ಲ. ನಾನು ನಿಮ್ಮ ಆತ್ಮದ ರಕ್ಷಕನಾಗಿ ನಿಮ್ಮ ವಿಶ್ವಾಸದ ಬಲವಾಗಿ ನಿಮ್ಮ ಪಾಲಕನಾಗಿ ಬಂದಿದ್ದೇನೆ..ನೀವು ನಿಮ್ಮ ಪರಿವಾರದವರು ಸ್ನೆಹಿತರು ಇಂದಿನಿಂದ ಏಸು ಪ್ರಭುವಿನ ಪ್ರಭಾವಕ್ಕೆ ಒಳಗಾಗಲಿದ್ದೀರಿ..ಇನ್ನು ನಿಮ್ಮ ಆಧ್ಯಾತ್ಮಿಕ ಬದುಕು ಪ್ರಾರಂಭವಾಯಿತೆಂದು ತಿಳಿಯಿರಿ..ದೇವರಿಗೆ ಹೆದರಿಕೊಳ್ಳಿರಿ..ಸೈತಾನನ್ನು ದೂರ ಮಾಡಿರಿ..”
ಅವರ ಮಾತುಗಳು ದೂರದಲ್ಲಿ ಮೊಳಗುತ್ತಿದ್ದ ಗುಡುಗು ಹತ್ತಿರ ಹತ್ತಿರ ಬರುತ್ತಿರುವಂತೆ ಅಲ್ಲಿರುವವರಿಗೆ ಭಾಸವಾಯಿತು. ಅವರು ಕೆಂಪು ಮುಖದ, ಗಾಜುಗಣ್ಣಿನ ಪಾದರಿ ಗೋನಸಾಲ್ವಿಸರ ಮಾತುಗಳನ್ನು ಕೇಳುತ್ತಾ ನಿಂತರು.
ಶಿವಸಾಗರಕ್ಕೆ ಬಂದು ತಲುಪಿದ ಮಾರನೇ ದಿನವೇ ಪಾದರಿ ಗೋನಸ್ವಾಲಿಸ್ ತಮ್ಮ ಕಾರ್ಯವನ್ನು ಆರಂಭಿಸಿದರು. ಕೂಡಲೇ ಈ ಕೆಲಸವನ್ನು ಆರಂಭಿಸುವಂತೆ ಅವರಿಗೆ ಒಳಗಿನ ಒತ್ತಡವೂ ಇತ್ತು.
ಈಗ ಕೆಲವು ತಿಂಗಳುಗಳ ಹಿಂದೆ ಅವರು ಗೋವೆಗೆ ಹೋಗಿ ಅಲ್ಲಿಯ ಪ್ರಾವಿನ್ಶಿಯಲ್ ಅವರನ್ನು ಕಂಡಿದ್ದರು. ಈ ಪ್ರದೇಶ ಗೋವೆಯ ಪ್ರಾವಿನ್ಶಿಯಲ್ ಅವರ ವಶದಲ್ಲಿತ್ತು. ಪಾದರಿಗಳ ವರ್ಗಾವರ್ಗಿ, ಆದಳಿತ, ಸಮಸ್ಯೆಗಳ ನಿವಾರಣೆ, ಪ್ರತಿಯೊಂದನ್ನು ಅವರು ನೋಡಿಕೊಳ್ಳುತ್ತಿದ್ದರು. ಪಾದರಿ ಗೋನಸ್ವಾಲಿಸ್ ರ ಕಾರ್ಯಕ್ಷಮತೆಯ ಬಗ್ಗೆಯೂ ಅವರಿಗೆ ತಿಳಿದಿತ್ತು.
ಭಾರತೀಯ ಪಾದರಿಗಳು ಇನ್ನೂ ಸೇವೆಗೆ ಇಳಿಯದ ಕಾಲವದು. ಇಲ್ಲಿಯ ತರುಣರು ಅದೇ ಸೆಮಿನರಿಗಳಿಗೆ ಸೇರಿಕೊಂಡಿದ್ದರು. ವಿದೇಶಿ ಪಾದರಿಗಳಿಗೆ ಇಲ್ಲಿಯ ಹವಾಮಾನ‌ಆಹಾರ ಉಡಿಗೆ ತೊಡಿಗೆ ಹಿಡಿಸದಿದ್ದರೂ ಕ್ರಿಸ್ತನ ಮೇಲಿನ ಅಪಾರ ಭಕ್ತಿಯಿಂದ ಅವರು ಇಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದರು. ಇಲ್ಲಿಯವರನ್ನೆಲ್ಲ ’ಅವಿಶ್ವಾಸಿಗಳು’ ಎಂದೇ ತಿಳಿದ ಇವರು, ಈ ಜನರನ್ನು ಕ್ರಿಸ್ತನ ಕೃಪಾಕಟಾಕ್ಷಕ್ಕೆ ತಂದು ಇವರನ್ನು ಉದ್ಧರಿಸಬೇಕೆಂದು ಪಣ ತೊಟ್ಟರು. ಹಲವಾರು ಕಷ್ಟ ತಾಪತ್ರಯಗಳನ್ನು ಸಹಿಸಿಕೊಂಡು ಕ್ರಿಸ್ತನ ವಾಣಿಯನ್ನು ಇವರೆಲ್ಲರಿಗೂ ತಿಳಿಸಿಕೊಡಲು ಇವರು ಪಣತೊಟ್ಟು ನಿಂತರು. ಇವರ ಈ ನಿರ್ಧಾರ, ಹಟದಿಂದಾಗಿ ಇಲ್ಲಿಯ ಊರು ಪಟ್ಟಣಗಳಲ್ಲಿ ಕ್ರೀಸುವರ ಸಂಖ್ಯೆ ಹೆಚ್ಚತೊಡಗಿತು. ಅಲ್ಲಲ್ಲಿ ಆಕಾಶವನ್ನೇ ತಿವಿಯುವ ತ್ರಿಕೋಣಾಕಾರದ ಇಗರ್ಜಿಗಳೂ ನೆತ್ತಿಯ ಮೆಲೆ ಶಿಲುಬೆಯೊಂದನ್ನು ಸಿಕ್ಕಿಸಿಕೊಂಡು ಎದ್ದು ನಿಂತವು.
ಪೋರ್ತುಗಾಲರಿಂದ ಬಂದ ಪಾದರಿ ಗೋನಸ್ವಾಲಿಸ್ ಕೂಡ ಕ್ರಿಸ್ತನ ತತ್ವಗಳನ್ನು ಎಲ್ಲೆಲ್ಲೂ ಹರಡಬೇಕೆಂದು ಶಪಥ ತೊಟ್ಟಿದ್ದರಿಂದ ಅವರು ಹಿಂದೆ ಕೆಲಸ ಮಾಡಿದಲ್ಲೆಲ್ಲ ಉತ್ತಮ ಹೆಸರನ್ನು ಗಳಿಸಿದ್ದರು. ಪಣಜಿಯ ಪ್ರಾವಿನ್ಶಿಯಲ್ ಅವರಿಗೆ ಪಾದರಿ ಗೋನಸ್ವಾಲಿಸ್ ರ ಸೇವೆ ತ್ಯಾಗದ ಬಗ್ಗೆ ಸಾಕಷ್ಟು ಗೊತ್ತಿತ್ತು.
ತಮ್ಮ ಬಳಿ ಬಂದ ಗೋನಸ್ವಾಲಿಸ್ ರನ್ನು ಪ್ರೀತಿಯಿಂದ ಮಾತನಾಡಿಸುತ್ತ ಅವರು-
“..ನೀವು ಹೊನ್ನಾವರಕ್ಕೆ ಹೋಗಿ ಎರಡು ವರ್ಷಗಳಾದವು ಅಲ್ಲವೇ, ವಿಗಾರ್?“ಎಂದು ಕೇಳಿದರು.
“..ಹೌದು ಮಾನಸೇನ್ಯರ್..”
ಎಂದು ವಿನಯದಿಂದ ಉತ್ತರಿಸಿದರು ಪಾದರಿ ಗೋನಸ್ವಾಲಿಸ್.
“ನೋಡಿ ವಿಗಾರ..ಕರಾವಳಿ ತೀರದಲ್ಲಿ ನಾವು ಕ್ರಿಸ್ತಪ್ರಭುವಿನ ನುಡಿಗಳನ್ನು ಸಾಕಷ್ಟು ಬಿತ್ತಿದ್ದೇವೆ. ಇಲ್ಲಿ ಬೆಳೆಯೂ ಚೆನ್ನಾಗಿದೆ. ಆದರೆ ನಾಡಿನ ಒಳಭಾಗದಲ್ಲಿ ಈ ಕೆಲಸ ಆಗಬೇಕಿದೆ. ಜೊತೆ ಜೊತೆಗೆ ಕ್ರೀಸುವರಾಗಿದ್ದೂ ಕ್ರೈಸ್ತ ಸಂಪ್ರದಾಯ ಆಚರಣೆಗಳಿಂದ ದೂರವಿರುವವರ ಬಗ್ಗೆಯೂ ನಾವು ಯೋಚಿಸಬೇಕಾಗಿದೆ“ಎಂದು ಪೀಠಿಕೆ ಹಾಕಿದ್ದರು.
ನಾಡಿನ ತೀರ ಒಳ ಪ್ರದೇಶದಲ್ಲಿ ಯಾವು ಯಾವುದೋ ಕಾರಣಗಳಿಂದಾಗಿ ಹೋಗಿ ಸೇರಿಕೊಂಡಿರುವ ಕ್ರೈಸ್ತರು ಇದ್ದಾರೆ. ಇವರು ಅತ್ಯಲ್ಪ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೋ ಇಲ್ಲವೆ ಗೋವಾದ ಪ್ರಾವಿನ್ಶಿಯಲ್ ಆಡಳಿತದಿಂದ ದೂರವಿದ್ದಾರೆ ಎಂಬ ಕಾರಣಕ್ಕೋ ಇವರು ಯಾರ ಕಣ್ಣಿಗೂ ಬಿದ್ದಿಲ್ಲ. ಜಪ ಪ್ರಾರ್ಥನೆ, ಪೂಜೆ, ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಮೊದಲಾದ ಕ್ರಿಸ್ತ ಸಂಸ್ಕಾರ ಇವರಿಗೆ ಲಭ್ಯವಾಗುತ್ತಿಲ್ಲ. ಇವರ ನಡುವೆ ಓರ್ವ ಪಾದರಿ ಇಲ್ಲದಿರುವುದರಿಂದ ಇವರು ತಮ್ಮ ಸುತ್ತ ಇರುವ ಬಹು ಸಂಖ್ಯಾತ ಹಿಂದುಗಳ ದೇವರನ್ನು ನಂಬುತ್ತ, ಅವರ ಸಂಸ್ಕಾರಗಳನ್ನು ಆಚರಿಸುತ್ತ ಬೆಳೆಯುತ್ತಾರೆ. ಇವರು ಮಕ್ಕಳಂತೂ ಸಂಪೂರ್ಣ ಅಕ್ರೈಸ್ತರಾಗಿ ಪರಿವರ್ತನೆ ಹೊಂದುತ್ತಿದ್ದಾರೆ. ಇಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಕೆಚ್ಚು ಧೈರ್ಯ ಭಕ್ತಿ ಇರುವ ಪಾದರಿಗಳು ಹೋಗಬೇಕು ಎಂಬ ಮಾತುಗಳನ್ನು ಪ್ರಾವಿನ್ಶಿಯಲ್ ಹೇಳಿದ್ದರು.
’…ಹೌದು ಮಾನಸೇವ್ಯರ…ತಮ್ಮ ಮಾತು ನಿಜ..ನಮ್ಮ ಸಮೋಡ್ತ ಬಲಿಷ್ಠವಾಗಿ ಬೆಳೆಯಬೇಕೆಂದರೆ ಈ ಕೆಲಸ ಆಗಬೇಕು’ ಎಂದು ಉತ್ತರಿಸಿದ್ದರು ಪಾದರಿ ಗೋನಸ್ವಾಲಿಸ್.
ಒಂದು ದಿನ ಪಣಜಿಯಲ್ಲಿದ್ದು, ಹಾಗೆಯೇ ಹಿಂದೆ ತಾವು ಕೆಲಸ ಮಾಡುತ್ತಿದ್ದ ಬಾಲ ಏಸುವಿನ ಇಗರ್ಜಿಗೂ ಹೋಗಿ ಪೋಂಡಾ, ಮಾಪುಸಾಗಳಲ್ಲಿದ್ದ ಸ್ನೇಹಿತರನ್ನು ಮಾತನಾಡಿಸಿಕೊಂಡು ಅವರು ಹೊನ್ನಾವರಕ್ಕೆ ತಿರುಗಿ ಬಂದರು.
ಅವರು ಹೊನ್ನಾವರಕ್ಕೆ ಬಂದು ಒಂದು ತಿಂಗಳೂ ಆಗಿರಲಿಲ್ಲ. ಪಣಜಿಯಿಂದ ಪ್ರಾವಿನ್ಶಿಯಲ್ ಒಂದು ಪತ್ರ ಕಳುಹಿಸಿದರು.
“ಘಟ್ಟದ ಮೇಲಿನ ಶಿವಸಾಗರ ಎಂಬ ಊರಿಗೆ ನಿಮ್ಮ ಅವಶ್ಯಕತೆ ಬಹಳ ಇದೆ. ನೀವು ಅಲ್ಲಿ ಹೋಗಿ ಅಲ್ಲಿ ಇರುವ ಕ್ರೀಸುವರನ್ನು ರಕ್ಷಣೆ ಮಾಡಿ. ಅವರೆಲ್ಲ ಕ್ರಿಸ್ತುವಿನ ಕೋಮಲ ಹಸ್ತದಿಂದ ನುಣುಚಿಕೊಂಡು ಸೈತಾನನ ಬಲೆಗೆ ಬೀಳುತ್ತಿದ್ದಾರೆ ಎಂಬ ವರದಿ ನಮಗೆ ಬಂದಿದೆ. ನೀವು ಕೂಡಲೆ ಹೊರಡಿ. ತಾತ್ಕಾಲಿಕವಾಗಿ ಸುಂಕೇರಿಯ ವಿಗಾರ್ ಮಚಾದೋ ಅವರನ್ನು ಹೊನ್ನಾವರಕ್ಕೆ ಹಾಕಲಾಗಿದೆ. ಅವರಿಗೆ ಪರಮ ಪ್ರಸಾದದ ಪೆಟ್ಟಿಗೆಯ ಬೀಗದ ಕೈ ನೀಡಿ ನೀವು ಮುಂದಿನ ಊರಿಗೆ ಹೊರಡಿ..“ಎಂದು ಪ್ರಾವಿನ್ಶಿಯಲ್ ಅವರ ಪತ್ರದಲ್ಲಿ ಬರೆದಿದ್ದರು. ಆ ಪ್ರಕಾರವೇ ಪಾದರಿ ಗೋನಸ್ವಾಲಿಸ್ ಘಟ್ಟವೇರಿ ಶಿವಸಾಗರಕ್ಕೆ ಬಂದು ತಲುಪಿದ್ದರು.
ಶಿವಸಾಗರದ ಕೊಪೆಲಿನಲ್ಲಿ ಒಂದು ಪೂಜೆಯನ್ನು ಕೂಡ ಅವರು ಮಾಡಿ ಮುಗಿಸಿದ್ದರು. ಆದರೆ ಈ ಪೂಜೆಗೆ ಬಂದವರು ಕೇವಲ ಹತ್ತು ಹದಿನೈದು ಜನ. ಸಿಮೋನ, ಸಿಮೋನನ ತಾಯಿ, ಹೆಂಡತಿ, ಮಕ್ಕಳು, ಹಿಂದಿನ ದಿನ ತನಗೆ ಭೇಟಿಯಾದ ಬಾಲ್ತಿದಾರ, ಪಾಸ್ಕೋಲ ಇನ್ನು ಕೆಲವರು. ಶಿವಸಾಗರದಲ್ಲಿ ಇರುವ ಕ್ರೀಸುವರು ಇಷ್ಟೇ ಅಲ್ಲ ಎನ್ನುವುದು ಸ್ಪಷ್ಟವಾಯಿತು. ಹಿಂದಿನದಿನ ಮಾತನಾಡುವಾಗ ಸಿಮೋನ ಹತ್ತು ಹದಿನೈದು ಕುಟುಂಬಗಳು ಇಲ್ಲಿವೆ ಎಂದು ಹೇಳಿದ್ದ. ಸಾಂತಾಮೇರಿ ಎಂಬಾಕೆಯ ಮನೆಯಲ್ಲಿ ಊಟ ಮಾಡಿಕೊಂಡು ಹತ್ತು ಜನ ಇದ್ದಾರೆ ಅಂದಿದ್ದ. ಎಲ್ಲರಿಗೂ ತಾನು ಹೋಗಿ ಹೇಳಿ ಬರುವುದಾಗಿ ತಿಳಿಸಿದವ, ಹೋಗಿ ಹೇಳಿ ಬಂದುದನ್ನು ಕೊಪೆಲ ಮುಂದಿನ ಗಿಡ ಕಿತ್ತು ಅವುಗಳಿಗೆ ಬೆಂಕಿ ಇಡುವಾಗ-ಎಲ್ಲರಿಗೂ ಹೇಳಿ ಬಂದಿದ್ದೀನಿ ಪದ್ರಬಾ ಎಂದಿದ್ದ.
ಆದರೆ ಬಂದವರು ಕಡಿಮೆ. ಪಾಪ ನಿವೇದನೆಗೆ ಬಂದವರು ಸಿಮೋನ, ಅವನ ತಾಯಿ, ಹೆಂಡತಿ, ಬಾಲ್ತಿದಾರ, ಮತ್ತೋರ್ವ ಹೆಂಗಸು. ದಿವ್ಯ ಪ್ರಸಾದ ಪಡೆದವರು ಇವರು ಮಾತ್ರ. ಪೂಜೆಯಲ್ಲಿ ಪಾಲುಗೊಂಡವರು ಕಡಿಮೆ. ಕೆಲವೇ ಕೆಲವರು ನಮೋ ರಾಣೆ ಮಂತ್ರ, ಪರಲೋಕ ಮಂತ್ರ ಹೇಳಿದ್ದು ತನ್ನ ಗಮನಕ್ಕೆ ಬಂದಿತು. ಉಳಿದವರು ಕಂಬಗಳ ಹಾಗೆ ನಿಂತಿದ್ದರು.
ಈ ಪೂಜೆ, ಪ್ರಾರ್ಥನೆ, ಜಪ, ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಎಲ್ಲವೂ ಕ್ರಿಸ್ತ ಕ್ರೀಸುವರಿಗಾಗಿ ಸ್ಥಾಪಿಸಿದ ಸಂಸ್ಕಾರಗಳು. ಇವುಗಳನ್ನು ಮನಃ ಪೂರ್ವಕವಾಗಿ ಕೇಳಲಿಲ್ಲ ಹೇಳಲಿಲ್ಲ ಅಂದರೆ ಕ್ರಿಸ್ತನ ಕೃಪೆ ಆ ಮೂಲಕ ದೇವರ ಅನುಗ್ರಹ ಲಭ್ಯವಾಗುವುದಿಲ್ಲ.
ಕ್ರಿಸ್ತ ತನ್ನ ಅಂತಿಮ ಭೋಜನದ ಸಮಯದಲ್ಲಿ ಸುತ್ತ ಕುಳಿತ ಶಿಷ್ಯರಿಗೆರೊಟ್ಟಿ ಹಾಗೂ ದ್ರಾಕ್ಷಾರಸವನ್ನು ನೀಡಿ ತೆಗೆದುಕೊಳ್ಳಿ, ಇದು ನನ್ನ ದೇಹ, ಇದು ನನ್ನ ರಕ್ತ. ಅನೇಕ ಪಾಪ ಪರಿಹಾರಕ್ಕಾಗಿ ನಾನಿದನ್ನು ನುಡಿಸಿದ್ದೇನೆ. ನನ್ನ ಜ್ಞಾಪಕಾರ್ಥವಾಗಿ ನೀವೂ ಇದನ್ನು ಮಾಡಿರಿ ಎಂದು ಹೇಳಿದ್ದೇ ಬಲಿಪೂಜೆಗೆ ಒಂದು ಮಾರ್ಗದರ್ಶನ ವಾಯಿತು. ಈ ಬಲಿಪೂಜೆಯನ್ನು ಆಲಿಸಲು ಇದರಲ್ಲಿ ಭಾಗಿಗಳಾಗಿ, ದಿವ್ಯಪ್ರಸಾದವನ್ನು ಸ್ವೀಕರಿಸಲು ಕ್ರೀಸುವರು ಸದಾ ಉತ್ಸುಕರಾಗಬೇಕು. ಇದು ಕ್ರೀಸುವರಿಗೆ ಕಡ್ಡಾಯ ಕೂಡ. ಇಗರ್ಜಿ ಮಾತೆ ಇದನ್ನೊಂದು ಧಾರ್ಮಿಕ ವಿಧಿ ಎಂದೂ ಇದರಲ್ಲಿ ಎಲ್ಲರೂಭಾಗವಹಿಸಲೇಬೇಕೆಂದು ಆಜ್ಞೆ ವಿಧಿಸಿದೆ. ಆದರೇ ಇಲ್ಲಿಯ ಜನ ಇಂದು ಬರಲಿಲ್ಲ. ಈವರೆಗೆ ಪಾದ್ರಿ ಇರಲಿಲ್ಲ. ಪೂಜೆ ಇರಲಿಲ್ಲ. ಜನ ಬರುತ್ತಿರಲಿಲ್ಲ. ಆದರೇ ಇಂದು? ಈ ಜನ ಅಧಿಕ ಸಂಖ್ಯೆಯಲ್ಲಿ ಬರಬೇಕಿತ್ತು. ಬರಲಿಲ್ಲ.
ಬಲಿಪೂಜೆಯ ಈ ದಿವ್ಯ ಭೋಜನದಿಂದ ಏಸು ಪ್ರಭುವು ಜನರ ಆತ್ಮದೊಂದಿಗೆ ತಮ್ಮ ಆತ್ಮವನ್ನು ಐಕ್ಯಗೊಳಿಸುತ್ತಾರೆ. ಅವರ ಆತ್ಮವನ್ನು ದೈವೀ ಜನರಿಂದ ತುಂಬುತ್ತಾರೆ. ಪಾಪಗಳಿಂದ ದೂರ ಮಾಡುತ್ತಾರೆ. ಒಳ್ಳೆಯ ಕ್ರೀಸುವರಾಗಿ ಬದುಕಲು ಜನರಿಗೆ ಆತ್ಮಿಕ ಶಕ್ತಿ ನೀಡುತ್ತಾರೆ. ಈ ಎಲ್ಲ ವರ ಪ್ರಸಾದಗಳಿಂದ ಶಿವಸಾಗರದ ಜನ ವಂಚಿತರಾದರೆ?
ಜನ ಪೂಜೆಗೆ ಬರಲಿಲ್ಲ ಎಂದರೆ ಅವರು ಕ್ರಿಸ್ತನ ಕೃಪೆಯಿಂದ ದೂರ ಉಳಿದರಲ್ಲವೇ.? ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಮುಂತಾದ ಕ್ರಿಸ್ತ ಸಂಸ್ಕಾರಗಳು ಅವರಿಗೆ ಲಭ್ಯವಾಗಲಿಲ್ಲ ಅಲ್ಲವೇ? ಯಾವಾಗ ಕ್ರಿಸ್ತನಿಂದ ಜನ ದೂರವಾದರೋ ಆಗ ಅವರು ಅವಿಶ್ವಾಸಿಗಳಾಗಿ, ಸುಳ್ಳು ದೇವರುಗಳ ಆರಾಧಕರಾಗಿ ತಪ್ಪು ಮಾರ್ಗದಲ್ಲಿ ಬಾಳುತ್ತಾರೆ. ಇಲ್ಲಿರುವ ಜನರನ್ನು ತಾನು ಕಳೆದುಹೋದ ಕುರಿಗಳನ್ನು ಕುರುಬ ತನ್ನ ಮಂದೆಗೆ ಸೇರಿಸಿಕೊಳ್ಳುವಂತೆ ಸೇರಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ತಾಳ್ಮೆಯಿಂದ ಕೆಲಸ ಮಾಡಬೇಕಾಗಿದೆ. ಪ್ರಾರ್ಥನೆಯ ಮೂಲಕ ಬೇಕಾದ ಬಲವನ್ನು ಪಡೆಯಬೇಕಿದೆ.
ಪಾದರಿ ಗೋನಸ್ವಾಲಿಸ್ ಗಾಡಿಯಲ್ಲಿ ಹೇರಿಕೊಂಡು ಬಂದ ಮಂಚ್ ಮೇಜು ಕುರ್ಚಿಗಳನ್ನೆಲ್ಲ ಸಿಮೋನನ ಮನೆಗೆ ಸಾಗಿಸಿದರು.
“ಕೊಪೆಲಿನಲ್ಲಿ ಅವೆಲ್ಲ ಬೇಡ ಮುಂದೆ ನೋಡೋಣ..ಕುಳಿತುಕೊಳ್ಳಲು ಒಂದು ಕುರ್ಚಿ ಇರಲಿ ಸಾಕು”. ಎಂದು ಕೊಪೆಲಿನ ಒಂದು ಮೂಲೆಯಲ್ಲಿ ತಮಗಾಗಿ ಇರಿಸಿಕೊಂಡರು. ಬೋನ ಅವರಿಗಾಗಿ ಬ್ರೆಡ್ಡು, ಮೊಟ್ಟೆಯ ಆಮ್ಲೆಟ್ ಮಾಡಿ ತಂದು ಕೊಟ್ಟ. ಮನೆಗೆ ಹೋದ ಸಿಮೋನ ಮತ್ತೆ ಬಂದು ಅವರ ಜತೆ ಸೇರಿಕೊಂಡ.
ಸಿಮೋನನಿಗೆ ಒಂದು ಬಗೆಯ ಅಳುಕು ಕಾಡತೊಡಗಿತ್ತು. ಅವನು ಹೆದರಿಕೊಂಡಂತೆಯೇ ಎಲ್ಲ ಕ್ರೀಸುವರೂ ಕೊಪೆಲಕ್ಕೆ ಬಂದಿರಲಿಲ್ಲ.
ತನ್ನ ತಾಯಿ ಕೊಪೆಲನ ಪೂಜೆಯ ಮೊದಲ ಗಂಟೆ ಆಗುವ ಮುನ್ನವೇ ಸಿದ್ಧವಾಗಿ ಕುಳಿತಿದ್ದಳು.
“ದೇವರ ದಯೆ ಸಿಮು..ಸಾಯೋ ಕಾಲಕ್ಕೆ ಪೂಜೆ, ಪಾಪ ನಿವೇದನೆಗೊಂದು ಅವಕಾಶ ಆಯ್ತು..”
ಅವಳು ಡಾಂಬರು ಗುಳಿಗೆ ಹಾಕಿ ಬಿಳಿ ವಸ್ತ್ರದಲ್ಲಿ ಸುತ್ತಿ ಇರಿಸಿದ ತನ್ನ ಮದುವೆ ಸೀರೆಯುಟ್ಟು ಜಪಸರ ಹಿಡಿದು ಆಕೆ ಸಂಭ್ರಮದಿಂದ ಹೊರಟಳು. ಮುರುಡೇಶ್ವರ ಇಗರ್ಜಿಗೆ ವಾರಕ್ಕೊಮ್ಮೆ ಹೋಗುವುದು ಅವಳ ನೆನಪಿಗೆ ಬಂದಿರಬೇಕು. ಇಲ್ಲಿ ಪಾದರಿ ಇಲ್ಲ, ಪೂಜೆ ಇಲ್ಲ ಎಂದು ಅವಳು ಕೊರಗಿದ್ದು ಅದೇಷ್ಟು ಸಾರಿಯೋ. ಮಗ ಮುರುಡೇಶ್ವರದ ಹಬ್ಬಕ್ಕೆ ಹೋದವ ಗೋವಾದ ಹಿರಿಯ ಗುರುಗಳನ್ನು ಕಂಡು ಶಿವಸಾಗರಕ್ಕೆ ಓರ್ವ ಪಾದರಿಗಳನ್ನು ಕಳುಹಿಸುವಂತೆ ವಿನಂತಿಸಿಕೊಂಡ ವಿಷಯ ತಿಳಿದು ಸಂತಸಪಟ್ಟವಳು ಅವಳು ಮಾತ್ರವಲ್ಲ ನಿತ್ಯ ಹಾಸಿಗೆಯ ಮೇಲೆ ಕುಳಿತು ಜಪ ಮಾಡುವಾಗ, ಸಂಜೆ ಆಮೋರಿ ಹೇಳುವಾಗ ಒಂದು ನಮೋರಾಣಿ ಮಂತ್ರ ಒಂದು ಪರಲೋಕ ಮಂತ್ರವನ್ನು ಅವಳು ಈ ಕಾರಣಕ್ಕಾಗಿ ಸಲ್ಲಿಸುವುದಿತ್ತು. ದೇವಮಾತೇಯೇ ಈ ಊರಿಗೆ ಬೇಗನೇ ಓರ್ವ ಪಾದರಿಗಳು ಬರುವಂತಾಗಲಿ ಎಂಬುದು ಅವಳ ನಿತ್ಯದ ಬೇಡಿಕೆಯಾಗಿತ್ತು. ಅವಳ ಬೇಡಿಕೆ ದೇವಮಾತೆಯ ಕಿವಿಗೆ ಬಿದ್ದು ಅವಳು ಪಾದರಿಗಳೋರ್ವರನ್ನು ಇಲ್ಲಿಗೆ ಕಳುಹಿಸಿ ಮೊದಲ ಬಾರಿಗೆ ಕೊಪೆಲಿನ ಗಂಟೆ ಪೂಜೆಗೆ ಬನ್ನಿ ಎಂದು ಕ್ರಿಸ್ತುವರನ್ನು ಕರೆದಿತ್ತು.
“ಇವಳೇ..ಮಕ್ಕಳನ್ನು ಕರಕೊಂಡು ಬಾ..ನಾನು ಬೇಗ ಹೋಗತೀನಿ”.
ಎಂದು ಈ ಮುದುಕಿ ಹೊರಟಳು. ಇವಳ ಹಿಂದೆ ಸಿಮೋನನ ಹೆಂಡತಿ, ತುಸು ತಡವಾಗಿ ಅವನ ಮಕ್ಕಳು.
ಎಮ್ಮೆ ಮರಿಯ ಪೂಜೆ ಪ್ರಾರಂಭವಾದ ಎಷ್ಟೋ ಹೊತ್ತಿನ ನಂತರ ಬಂದಳು. ಸಿಮೋನ ಬಾಗಿಲಲ್ಲಿಯೇ ನಿಂತಿದ್ದ.
“ಹಾಲು ತೆಗೆದು ಎಮ್ಮೆಗಳಿಗೆ ಹುಲ್ಲು ಹಾಕಿ ಗೊಲ್ಲೆಗೆ ಕಳುಹಿಸಿ ಬರೋದು ತಡವಾಯಿತು“ಎಂದು ಗೋಗರೆದಳು.
“..ಮಕ್ಕಳು..”
“ಬರತಾರೆ..ಬರತಾರೆ..”
ಎಂದವಳೆ ಒಳಹೋಗಿ ಮೊಣಕಾಲೂರಿ ಶಿಲುಬೆಯ ವಂದನೆ ಮಾಡಿದಳು. ಅವಳ ಮಕ್ಕಳು ಕೊನೆಗೂ ಬರಲಿಲ್ಲ.
ಇನಾಸ ಬರಲಿಲ್ಲ. ಅವನ ಹೆಂಡತಿ ಬಂದಳು.
ಕೈತಾನ ಅವನ ಹೆಂಡತಿ ಬಂದರು.
ಆದರೆ ಕೊಪೆಲಗೆ ಬಂದವರಿಗಿಂತ ಬಾರದವರೇ ಹೆಚ್ಚು. ಏಕೆ ಹೀಗೆ ಎಂದು ಪಾದರಿ ಕೇಳಿದರೆ?
ಸಿಮೋನ ಪಾದರಿಗಳು ತಂದ ದೊಡ್ಡ ದೊಡ್ಡ ಪೈನೆಲಗಳನ್ನು ಅವರು ತೋರಿಸಿದ ಕಡೆ ಗೋಡೆಗೆ ಏರಿಸುತ್ತಿದ್ದಾಗ ಗೋನಸ್ವಾಲಿಸ್-
“ಸಿಮೋನ..ತುಂಬಾ ಜನ ಪೂಜೆ ಆಲಿಸಲಿಕ್ಕೆ ಬರಲಿಲ್ಲ ಅಲ್ವೇ?”
“ಹೌದು ಪದ್ರಬಾ..ಎಲ್ಲರಿಗೂ ನಾನು ಹೇಳಿ ಬಂದಿದ್ದೆ..ಆದರೆ ಇದು ಭಾನುವಾರ ಅಲ್ಲ..ಎಲ್ಲರಿಗೂ ಕೆಲಸ..ಬೆಳಿಗ್ಗೆ ಎಂಟುಗಂಟೆಗೆಲ್ಲ ಅವರು ಕೆಲಸದ ಮೇಲಿರಬೇಕು..ಹೋದರೆ ತಿರುಗಿ ಬರೋದಕ್ಕೆ ಆಗೋದಿಲ್ಲ..“ತಟ್ಟನೆ ಮನಸ್ಸಿಗೆ ಹೊಳೆದ ಒಂದು ವಿಷಯವನ್ನು ಆತ ಪಾದರಿಗಳ ಮುಂದಿಟ್ಟ.”
“ಅದು..ಸರಿ. ಆದರೆ ಬಂದವರಿಗೂ ಜಪಮಂತ್ರಗಳು ಬರತಿರಲಿಲ್ಲ. ಯಾರ ಕುತ್ತಿಗೇಲೂ ಅರ್ಲೂಕ ಇರಲಿಲ್ಲ..ಎಲ್ಲರೂ ಅಕ್ರೈಸ್ತರ ಹಾಗೆ ಕಾಣತಿದ್ರು..”
“ಹೌದು ಪದ್ರಬಾ..ಇವರೆಲ್ಲ ತಮ್ಮ ತಮ್ಮ ಊರುಗಳನ್ನು ಬಿಟ್ಟು ಇಲ್ಲಿಗೆ ಬಂದವರು. ಅಲ್ಲಿ ಹಬ್ಬ, ಮದುವೆ ಅಂದಾಗ, ಯಾರಾದ್ರು ಸತ್ತಾಗ ಹೋಗತಾರೆ. ಹೀಗೆ ಹೋದಾಗಷ್ಟೆ ಇವರು ಇಗರ್ಜಿಗೆ ಹೋಗಿ ಪಾಪ ನಿವೇದನೆ ಇತ್ಯಾದಿ ಮಾಡೊದು..ಉಳಿದೆಲ್ಲ ಕಾಲದಲ್ಲಿ ಅವರು ಇಲ್ಲಿರತಾರೆ..ಇಗರ್ಜಿಗೆ ಬನ್ನಿ , ಜಪ ಮಾಡಿ ಅಂತ ಪದೇ ಪದೇ ಇವರಿಗೆ ಹೇಳೋರು ಇಲ್ಲಿ ಇಲ್ಲ..”
“ಅಲ್ಲ ಸಿಮೋನ..ಇದೆಲ್ಲ ಹೇಳಬೇಕೆ? ನಿಜವಾದ ಕ್ರೀಸುವರಿಗೆ ಹೀಗೆ ಹೇಳುವ ಅವಶ್ಯಕತೆ ಇಲ್ಲ..”
“…ಆದರೂ ಪದ್ರಬಾ..”
“ಸರಿ ನಾನಿನ್ನು ಬಂದಿದೀನಲ್ಲ..ಈ ಊರಿನ ಕ್ರೀಸುವರೆಲ್ಲ ಒಂದೇ ಕಡೆ ಇದಾರೇನು?”
ಪಾದರಿ ಗೋನಸ್ವಾಲಿಸ್ ಸಿಮೋನನ ಸಂಗಡ ಮಾತನ್ನು ಮುಂದುವರೆಸಿದರು-
“ಹೌದು ಪದ್ರಬಾ..ಎಲ್ಲ ಕೊಪೆಲಿನ ಸುತ್ತ ಇದಾರೆ.”
“ಒಳ್ಳೆದಾಯ್ತು..”
“ಇಲ್ಲಿರೋ ನಾವೆಲ್ಲ ಘಟ್ಟದ ಕೆಳಗಿನವರು. ಶಿರಾಲಿ, ಮುರುಡೇಶ್ವರ, ಭಟ್ಕಳ, ಅಂಕೋಲ ಮೊದಲಾದ ಊರುಗಳಿಂದ ಬಂದು ಇಲ್ಲಿ ಒಂದೇ ಕಡೆ ಮನೆ ಕಟ್ಟಿಕೊಂಡು ಇದ್ದೇವೆ..”
“ಸರಿ ನಾನು ಇನ್ನೊಂದೆರಡು ದಿನಗಳಲ್ಲಿ ಇಲ್ಲಿರುವ ಎಲ್ಲ ಕ್ರೈಸ್ತ ಕುಟುಂಬಗಳನ್ನೂ ಕಂಡು ಬರಬೇಕು..ಅಂದ ಹಾಗೆ ಕ್ರೈಸ್ತರು ವಾಸಿಸುತ್ತಿರುವ ಮನೆಗಳನ್ನು ಮಂತ್ರಿಸಲಾಗಿದೇಯೇ?”
“..ಎಲ್ಲಿಯ ಮನೆ ಮಂತ್ರಿಸುವ ಕೆಲಸ ಪದ್ರಬಾ..ಇಲ್ಲಿಗೆ ಪಾದರಿಗಳು ಅಂತ ಬರತಿರೋದು ನೀವೇ ಮೊದಲು. ನಾವು ವರ್ಷಕ್ಕೊಮ್ಮೆ ಊರಿಗೆ ಹೋದಾಗ ನಾವೇ ಪವಿತ್ರ ಜಲ ತಂದು ಮನೆ ತುಂಬ ಸಿಂಪಡಿಸೋದುಂಟು..ಇದನ್ನು ಭಾಳ ಜನ ಮಾಡುದಿಲ್ಲ..”
ಕ್ರೀಸ್ತುವರು ಅವರ ಧಾರ್ಮಿಕ ನಂಬಿಕೆ ನಡಾವಳಿಕೆಗಳಿಂದ ದೂರವಿರಲು ಇದೂ ಒಂದು ಕಾರಣ. ಯಾವ ಮನೆಯನ್ನು ಪವಿತ್ರ ಜಲದಿಂದ ಪಾದರಿ ಹೋಗಿ ಮಂತ್ರಿಸಿರುವುದಿಲ್ಲವೋ ಅಲ್ಲಿ ಭೂತ ಪಿಶಾಚಿಗಳು ನೆಲಸುವುದರಲ್ಲಿ ಅನುಮಾನವಿಲ್ಲ ಅಂದುಕೊಂಡರು ಪಾದರಿ ಗೋನಸಾಲ್ವಿಸ್.
“ಸಿಮೋನ ನೀನು ಒಂದು ಸಾರಿ ಎಲ್ಲರಿಗೂ ತಿಳಿಸಿಬಿಡು..”
“ಆಯಿತು ಪದ್ರಬಾ“ಎಂದ ಸಿಮೋನ.
ಈ ಹತ್ತು ಹದಿನೈದು ವರ್ಷಗಳ ಅವಧಿಯಲ್ಲಿ ಬೋನ ಎಲ್ಲವನ್ನು ಕಲಿತಿದ್ದ. ಗೋನಸ್ವಾಲಿಸರಿಗೆ ಅಡಿಗೆ ಮಾಡಿ ಹಾಕುವುದು., ಸ್ನಾನಕ್ಕೆ ನೀರು ಕಾಯಿಸುವುದು, ಅವರ ಉಡುಪು ಮಡಿ ಮಾಡಿ ಇಡುವುದು. ಹೀಗೆ ಅವರ ಸಮಸ್ತ ಕೆಲಸಗಳನ್ನು ಮಾಡಿಕೊಂಡು ಬಂದಿದ್ದ.
ಇಗರ್ಜಿಗೆ ಸಂಬಂಧಪಟ್ಟ ಕೆಲಸಗಳನ್ನೂ ಆತ ಮಾಡುತ್ತಿದ್ದ. ಬೆಳಿಗ್ಗೆ ಮಧ್ಯಾಹ್ನ, ಸಾಯಂಕಾಲ ಪ್ರಾರ್ಥನೆಯ ಗಂಟೆ ಹೊಡೆಯುವುದು, ಬೆಳಿಗ್ಗೆ ಪೂಜ ಗಂಟೆ, ಭಾನುವಾರಗಳೆಂದು ವಿಶೇಷ ಪೂಜೆಯ ಗಂಟೆ, ನಾಮಕರಣ ಗಂಟೆ, ಮರಣದ ಗಂಟೆ ಹೀಗೆ ಗಂಟೆ ಹೊಡೆಯುವುದು ಇವನ ಕೆಲಸವೇ ಆಗಿತ್ತು. ಗೋವಾ, ಕಾರವಾರ, ಹೊನ್ನಾವರಗಳಲ್ಲಿ ಗುರ್ಕಾರ, ಮಿರೊಣ್ ಗಳು ಇಗರ್ಜಿಯ ಕೆಲಸ ಮಾಡುತ್ತಿದ್ದರು. ಪೂಜಾ ಸಮಯದಲ್ಲಿ ಪೀಠ ಬಾಲಕರು ಯಾರೂ ಇರದಿದ್ದರೇ ಬೋನಾ ಹೋಗುತ್ತಿದ್ದ. ಮಕ್ಕಳಿಗೆ ನಾಮಕರಣ ಮಾಡುವಾಗ ಈತ ಎಣ್ಣೆ, ಉಪ್ಪಿನ ಭರಣಿ, ನೀರಿನ ಬಾಟಲಿ, ವಸ್ತ್ರ ಹಿಡಿದು ನಿಲ್ಲುತ್ತಿದ್ದ. ದಿವ್ಯ ಪ್ರಸಾದವೆಂದು ಹಂಚಲಾಗುವ ಗೋಧಿ ಹಿಟ್ಟಿನ ವಸ್ತ್ರವನ್ನು ಇವನೇ ತಯಾರಿಸಿ ಇಡುತ್ತಿದ್ದ.
ಹಬ್ಬ, ಸಂತರ ದಿನ, ತಪಸ್ಸಿನ ಕಾಲ ಇತ್ಯಾದಿಗಳ ಬಗ್ಗೆ ತಿಳಿದುಕೊಂಡಿದ್ದ. ಮರಣದ ಪೂಜೆ, ನವೇನ, ಮದುವೆಯ ನಿಯಮಾವಳಿಗಳು ಇವನಿಗೆ ಗೊತ್ತಿದ್ದವು.
ಹೀಗೆಂದು ಬೋನ ಎಲ್ಲಿಯೂ ಪಾದರಿಗಳ ಅಧಿಕಾರದ ಗೆರೆ ದಾಟಿ ಹೋಗುತ್ತಿರಲಿಲ್ಲ. ಅವರಿಗೆ ವಿಧೇಯನಾಗೆ, ವಿನಮ್ರತೆಯಿಂದ ಸದಾ ನಡೆದುಕೊಳ್ಳುತ್ತಿದ್ದ. ತಾನು ಪಾದರಿಗಳ ಅಡಿಗೆಯಾಳು, ಎಂಬುದನ್ನು ಎಂದೂ ಮರೆಯುತ್ತಿರಲಿಲ್ಲ. ಅವರನ್ನು ನೋಡಿಕೊಳ್ಳುವುದರಲ್ಲಿ ಎಂದೂ ಸೋಮಾರಿತನ ತೋರಿದವನಲ್ಲ.
ಪಾದರಿ ಗೋನಸಾಲ್ವಿಸ್ ಅವನಿಗೆ ಕೀರ್ತನೆಗಳನ್ನು ಹೇಳಿಕೊಟ್ಟಿದ್ದರು. ಪೂಜಾ ಸಮಯದಲ್ಲಿ ಹೇಳಬೇಕಾದ ಶ್ಲೋಕ ಮಂತ್ರಗಳನ್ನು ಹೇಳಿಕೊಟ್ಟಿದ್ದರು. ಬೇರೆ ಪಾದರಿಗಳು ಅವರ ಕುಜ್ನೇರನನ್ನು ಬಹಳ ಕೀಳಾಗಿ ಕಾಣುವುದಿತ್ತು. ಅವರಿಗೆ ಸರಿಯಾದ ಉಡುಪು, ಊಟ ಕೊಡದೆ ಹೊಡೆದು ಬಡಿದು ಮಾಡುವುದಿತ್ತು. ಇಗರ್ಜಿಗೆ ಸಂಬಂಧಪಟ್ಟ ಯಾವುದೇ ಕೆಲಸವನ್ನು ಕುಜ್ನೇರಗೆ ಅವರು ಹೇಳುತ್ತಿರಲಿಲ್ಲ. ಸದಾ ಆತ ಅಡಿಗೆ ಮನೆ, ಬಚ್ಚಲು ಮನೆ, ಮಾಂಸ ತೆಗೆದುಕೊಂಡು ಬಾ, ಮೀನು ಶುಚಿ ಮಡು ಎಂದು ಕೆಲಸದಲ್ಲಿ ತೊಡಗಿರಬೇಕಾಗಿತ್ತು. ಆದರೇ ಬೋನ ಗೋನಸಾಲ್ವಿಸರ ಪಾಲಿಗೆ ಕುಜ್ನೇರಗೂ ಅಧಿಕನಾಗಿದ್ದ. ಚಿಕ್ಕಂದಿನಿಂದ ಅವನನ್ನು ಸಾಕಿ, ಅವನ ಮಾತು, ವರ್ತನೆ ಎಲ್ಲಕ್ಕೂ ಒಂದು ಆಕಾರವನ್ನು ಅವರು ಕೊಟ್ಟಿದ್ದರಿಂದ ಅವರು ಅವನನ್ನು ತುಂಬಾ ಪ್ರೀತಿಸುತ್ತಿದ್ದರು.
ಹೀಗೆಂದು ಅವನನ್ನು ದಂಡಿಸುವುದಿಲ್ಲ ಎಂದಿಲ್ಲ. ಕಾರವಾರದಲ್ಲಿ ಬೋನ ಒಂದು ಯಕ್ಷಗಾನ ನೋಡಲು ಹೋಗಿದ್ದ. ಇಗರ್ಜಿ ಹತ್ತಿರದಲ್ಲಿಯೇ ಬಯಲಾಟ, ರಾತ್ರಿ ಒಂಭತ್ತಕ್ಕೆ ’ಕೇಳಿ’ಯ ಸದ್ದು ಇವನನ್ನು ಕರೆಯಿತು. ಪಾದರಿಗಳು ಊಟ ಮಾಡಿ ಮಲಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ. ತಲೆಗೊಂದು ಬಟ್ಟೆ ಸುತ್ತಿಕೊಂಡು, ಹಾಸಿಗೆ ಮೇಲಿನ ಹೊದಿಕೆಯಲ್ಲಿ ಮೈ ಮುಚ್ಚಿಕೊಂಡು ಇಗರ್ಜಿ ಗೇಟಿನಿಂದ ಹೊರಬಿದ್ದ. ಅಲ್ಲಿ ಗುರುತಿನವರು ಯಾರೂ ಇವನಿಗೆ ಕಾಣಲಿಲ್ಲ. ಕ್ರೀಸುವರು ಯಕ್ಷಗಾನ ನೋಡುವುದು ಪಾಪ ಎಂಬ ನಂಬಿಕೆ ಇತ್ತು. ಈ ವಿಷಯ ಇವನಿಗೆ ಗೊತ್ತಿದ್ದರೂ ಚಂಡೆನಾದ ಇವನನ್ನು ಅಲ್ಲಿಗೆ ಕರೆಯಿತು. ಮೂಲೆಯೊಂದರಲ್ಲಿ ಕೂತು ಸುತ್ತಿಕೊಂಡ ಹೊದಿಕೆಗೊಂದು ಕಿಂಡಿ ಮಾಡಿಕೊಂಡು ಆಟ ನೋಡಿದ. ದೊಡ್ಡ ದೊಡ್ಡ ಪಗಡಿ, ಕೀರೀಟಗಳು, ವರ್ಣರಂಜಿತ ಉಡುಪು ಆಕರ್ಷಕ ನೃತ್ಯ, ಕುಣಿತ, ಮಾತು ಅರ್ಥವಾಗಲಿಲ್ಲ. ಆದರೆ ಆ ಕೇಕೆ ಅಬ್ಬರ ಮನಸ್ಸನ್ನು ಗೆದ್ದಿತು. ಜೊತೆಗೆ ಕೃಷ್ಣ, ಭೀಮ, ದುರ್ಯೋಧನ, ದ್ರೌಪದಿ ಎಂಬ ಹೆಸರುಗಳು. ಈ ಹೆಸರಿನ ವ್ಯಕ್ತಿಗಳು ಆಕರ್ಷಕವಾಗಿ ಕಂಡರು. ಬೆಳಕು ಹರಿಯುವ ತನಕ ನಿದ್ದೆಗೆಟ್ಟು ನೋಡಿದ. ಮೂಡಲಲ್ಲಿ ಕೆಂಪೇರಿದಾಗ ಎದ್ದು ಇಗರ್ಜಿಯತ್ತ‌ಓಡಿದ.
ಇಗರ್ಜಿ ಹಿಂಬದಿಯ ತನ್ನ ಅಡಿಗೆ ಮನೆಗೆ ಬಂದು ಇನ್ನೇನು ಒಳಗೆ ಸೇರಿಕೊಳ್ಳಬೇಕು ಅನ್ನುವಾಗ ಪಾದರಿಗಳ ದನಿ ಕೇಳಿಸಿತು.
“ಬೋನಾ.. ಪ್ರಾರ್ಥನೆ ಗಂಟೆ ಹೊಡೆದು ಬಂಗಲೆಗೆ ಬಾ..”
ನೀರಾಗಿ ಹೋದ ಬೋನ.
ಪಾದರಿಗಳ ಕೈಲಿದ್ದ ಬೈನಾಕ್ಯುಲರ ಎಲ್ಲ ಹೇಳಿತು. ಪಾದರಿಗಳಿಗೆ ಅನುಮಾನವಿತ್ತು. ಯಾರಾದರೂ ಕ್ರೈಸ್ತರು ಯಕ್ಷಗಾನ ನೋಡಲು ಹೋದರೆ? ಹೀಗೇಂದೇ ಅವರು ಬಂಗಲೆ ಜಗಲಿಯ ಮೇಲೆ ನಿಂತು ಬೈನಾಕುಲರಿನಲ್ಲಿ ಬರುವವರನ್ನೇ ಗಮನಿಸುತ್ತಿದ್ದರು. ಅವರ ಕಣ್ಣಿಗೆ ಬೋನಾ ಬೀಳಬೇಕೇ?
ಪಾದರಿ ಗೋನಸಾಲ್ವಿಸ್ ಒಂದು ನಾಗರ ಬೆತ್ತವನ್ನು ಪುಡಿ ಮಾಡಿದರು. ಅದರ ಸಪೂರ ತುದಿ ಸಿಬಿರು ಸಿಬಿರಾಗಿ ಛಿದ್ರವಯಿತು. ಎಂಟು ದಿನ ಬೋನ ಮೇಲೆ ಎಳಲಿಲ್ಲ. ಕಾಲಿನ ಮಾಂಸ ಖಂಡಗಳೆಲ್ಲ ಹರಿದು ರಕ್ಥ ಚಿಮ್ಮಿತು.

ಅಂದಿನಿಂದ ಮತ್ತೆ ಆಟ ನೋಡಲು ಹೋಗಲಿಲ್ಲ ಬೋನ. ಕೃಷ್ಣ, ಧರ್ಮರಾಯ, ಭೀಮರ ಬಗೆಗಿದ್ದ ಅವನ ಆಕರ್ಷಣೆಯೂ ಅಡಗಿ ಹೋಯಿತು. ಈ ಘಟನೆ ಬೋನಾಗೆ ಮಾತ್ರ ಒಂದು ಎಚ್ಚರಿಕೆಯಾಗಿ ಉಳಿಯಲಿಲ್ಲ. ಈ ಸುದ್ದಿ ಕೇರಿಯ ಎಲ್ಲರಿಗೂ ತಿಳಿಯಿತು. ಅವರು ಬೋನನ ನೋವನ್ನು ಅರ್ಥ ಮಾಡಿಕೊಂಡರು. ಪಾದರಿಗಳ ಸಿಟ್ಟಿಗೆ ಗೌರವ ನೀಡಿದರು. ತಾವು ಇಂತಹ ತಪ್ಪು ಮಾಡಬಾರದು ಎಂಬ ಬಗ್ಗೆ ಎಚ್ಚರವಹಿಸಿದರು.
ಪಾದರಿ ಗೋನಸಾಲ್ವಿಸ್ ಬೋನನನ್ನು ದಂಡಿಸಿದ ಮತ್ತೂ ಒಂದೆರಡು ಘಟನೆಗಳೆಂದರೇ-
ಕಾರವಾರದಲ್ಲಿಯೇ ಬೋನಾ ದೇವರ ಪೀಠದ ಮುಂದಿನ ದೀಪಕ್ಕೆ ಎಣ್ಣೆ ಹಾಕದೆ ಅದು ಒಂದು ದಿನವೆಲ್ಲ ಉರಿಯದೇ ಹೋದಾಗ ಗೋನಸಾಲ್ವಿಸ್ ಬೋನನನ್ನು ದಂಡಿಸಿದ್ದರು.
ಹೊನ್ನಾವರದಲ್ಲಿ ಕ್ರಿಸ್ ಮಸ್ ಸಂದರ್ಭದಲ್ಲಿ ಇಗರ್ಜಿಯಲ್ಲಿ ನಿರ್ಮಿಸಿದ ಗ್ರೊಟ್ಟೋ(ಗೋದಲಿ) ಮೇಣದ ಬತ್ತಿಯ ಬೆಂಕಿ ತಾಗಿ ಸುಟ್ಟು ಬೂದಿಯಾದಾಗ ನಾಗರಬೆತ್ತ ಕೈಗೆತ್ತಿಕೊಂಡಿದ್ದರು.
“ಇಗರ್ಜಿ ಬಾಗಿಲು ಹಾಕುವ ಮುನ್ನ ಯಾವ ಮೇಣದ ಬತ್ತಿ ಉರಿಯುತ್ತಿದೆ ಎಂಬುದನ್ನು ನೋಡಲಿಕ್ಕೆ ಆಗಲಿಲ್ಲವೇ?“ಎಂದು ಅವರು ಕೂಗಾಡಿದ್ದರು.
ನಂತರ ಬೋನಾ ಬೆಳೆದು ಅವರಷ್ಟೇ ಎತ್ತರಕ್ಕೆ ಸೆಟೆದು ನಿಂತಿದ್ದ. ಅಲ್ಲಿಂದ ಅವರು ಬೋನನನ್ನು ದಂಡಿಸಲು ಹೋಗಲಿಲ್ಲ. ಆದರೆ ಕೋಪದಿಂದ ಏನಾದರೂ ಹೇಳುವುದಿತ್ತು.
ಪಾದರಿ ಗೋನಸಾಲ್ವಿಸ್ ಬೋನನನ್ನು ಹೊಡೆಯಲಿ ಬೈಯಲಿ ಅವನ ಮೇಲೆ ಅವರಿಗೆ ಪ್ರೀತಿಯಿತ್ತು. ಅವನೂ ಕೂಡ ಅವರನ್ನು ಗೌರವದಿಂದ ಕಾಣುತ್ತಿದ್ದ.
ಮುಖ್ಯವಾಗಿ ಪಾದರಿ ಗೋನಸಾಲ್ವಿಸ್ ರ ಧಾರ್ಮಿಕ ಶ್ರದ್ದೆಯ ಬಗ್ಗೆ ಅಪಾರ ಗೌರವ ಇವನಲ್ಲಿ ಬೆಳೆದಿತ್ತು. ಯಕ್ಷಗಾನ ಬಯಲಾಟ ನೋಡ ಹೋಗಿ ತಾನು ತಿಂದ ಏಟುಗಳನ್ನು ಈತ ಮರೆತಿರಲಿಲ್ಲ. ಹಾಗೆಯೇ ತಾನು ಮಾಡಿದ ತಪ್ಪು ಎಂತಹದು ಎಂಬುದೂ ಇವನಿಗೆ ಮನವರಿಕೆ ಆಗಿತ್ತು. ಅಂದು ಬಿದ್ದ ಏಟುಗಳ ಅಸ್ಪಷ್ಟ ಕಲೆಗಳು ಕಾಲು ತೊಡೆಗಳ ಮೇಲೆ ಉಳಿದಿದ್ದವು. ಅಂತೆಯೇ ಬೋನ ತನ್ನ ಧರ್ಮ, ದೇವರನ್ನು ಗಾಡವಾಗಿ ನಂಬುತ್ತ ಬಂದಿದ್ದ.
ಆನಂತರ ಕೂಡ ಸುಳ್ಳು ದೇವರುಗಳನ್ನು ಆರಾಧಿಸುವ, ಸುಳ್ಳು ಸಂಪ್ರದಾಯಗಳನ್ನು ಆಚರಿಸುವ ಕ್ರೈಸ್ತರ ವಿರುದ್ಧ ಗೋನಸಾಲ್ವಿಸ್ ಕಠಿಣ ಕ್ರಮ ಕೈಕೊಂಡಿದ್ದು ಇವನಿಗೆ ಗೊತ್ತಿತ್ತು. ಆಗೆಲ್ಲ ಈತ ಪಾದರಿಗಳ ಪರ ನಿಂತಿದ್ದ. ಎಲ್ಲಿ ಯಾರೇ ಬೇರೊಂದು ಧರ್ಮ ದೇವರಿಗೆ ನಡೆದುಕೊಂಡಾಗ ಅಂತಹ ವಿಷಯಗಳನ್ನು ಮೊದಲು ಬೋನ ಪಾದರಿಗಳಿಗೆ ಮುಟ್ಟಿಸುತ್ತಿದ್ದ.
ಶಿವಸಾಗರಕ್ಕೆ ಬಂದ ನಂತರ ಎಲ್ಲ ಕ್ರೀಸುವರು ಕೊಪೆಲಗೆ ಬಾರದಿದ್ದುದು, ಅವರು ಅಕ್ರೈಸ್ತರ ಹಾಗೆ ಬದುಕುತ್ತಿರುವುದು ಬೋನನ ಗಮನಕ್ಕೂ ಬಂದಿತು. ಈ ಕಾರಣಕ್ಕಾಗಿ ಎಲ್ಲ ಕ್ರೀಸುವರ ಮನೆಗಳಿಗೂ ಭೇಟಿ ಕೊಡಬೇಕು ಎಂದು ಪಾದರಿಗಳು ಹೇಳಿದಾಗ ಹುರುಪುಗೊಂಡವನು ಬೋನ.
ಅವನು ಕೊಪೆಲಿನ ಗಂಟೆ ಹೊಡೆಯುವ ಕೆಲಸವನ್ನು ಪ್ರಾರಂಭಿಸಿದ. ಮೂರೂ ಹೊತ್ತು ಪ್ರಾರ್ಥನಾ ಗಂಟೆ ಹೊಡೆದ. ಬೆಳಿಗ್ಗೆ ಪೂಜಾ ಗಂಟೆ. ಕೊಪೆಲಿನ ಮುಂದೆ ತೂಗುಬಿದ್ದ ಗಂಟೆ ಸದಾ ಕಾಲ ಮೌನವಾಗಿರುತ್ತಿತ್ತು. ಈಗ ಅದರ ನಾದ ಸುತ್ತಲಿನ ಹಲವಾರು ಮನೆಗಳಿಗೆ ನಿರಂತರವಾಗಿ ಕೇಳಿಸತೊಡಗಿತು. ಬೆಳಿಗ್ಗೆ ಪೂಜೆಗೆ ಸಿಮೋನ ಅವನ ಹೆಂಡತಿ, ತಾಯಿ ಬರತೊಡಗಿದರು.
ಅಂತೆಯೇ ಭಾನುವಾರದ ವಿಶೇಷ ಪೂಜೆಯ ಗಂಟೆಗಳನ್ನು ಬೋನ ಶ್ರದ್ಧೆಯಿಂದ ಹೊಡೆದ. ಸಿಮೋನ ಎಲ್ಲ ಮನೆಗಳಿಗೂ ಹೇಳಿ ಬಂದ. ಬಲಿ ಪೂಜೆ ಆರಂಭಿಸುವ ಮುನ್ನ ಪಾದರಿ ಕೊಪೆಲಿನ ಜನರತ್ತ ಕಣ್ಣು ಹಾಯಿಸಿದರು. ಅವೇ ಪರಿಚಿತ ಮುಖಗಳು. ಅವರಿಗೆ ನಿರಾಶೆಯಾಯಿತು. ಸಿಟ್ಟೂ ಬಂದಿತು. ತಾನು ಹೊನ್ನಾವರದಿಂದ ಇಲ್ಲಿಗೆ ಬಂದದ್ದೇ ವ್ಯರ್ಥವಾಯಿತೇನೋ ಅಂದುಕೊಂಡರು.
ಆದರೆ ನಿರಾಶೆ ಸಿಟ್ಟನ್ನು ಮರೆತು ಅವರು ಪೂಜೆಗೆ ತೊಡಗಿದರು.
“ಪ್ರಭುವೇ ನಿನ್ನನ್ನು ಮರೆತಿರುವ ಇಲ್ಲಿಯ ಜನರನ್ನು ಮತ್ತೆ ನಿನ್ನತ್ತ ಕರೆತರಲು ಬೇಕಾದ ಶಕ್ತಿಯನ್ನು ನನಗೆ ಕೊಡು“ಎಂದು ಪೂಜೆಯ ನಡುವೆ ಬೇಡಿ ಕೊಂಡರು.
*
*
*
ಭಾನುವಾರದ ಈ ಘಟನೆಯ ನಂತರ ಪಾದರಿ ಗೋನಸಾಲ್ವಿಸ್ ಮತ್ತೂ ಚುರುಕುಗೊಂಡರು.
ಇನ್ನು ಸಮಯ ಹಾಳು ಮಾಡಬಾರದು. ಊರಿನ ಕ್ರೀಸುವರು ತಾವಾಗಿ ಕೊಪೆಲಗೆ ಬರಲಿಲ್ಲ ಎಂದರೆ ತಾನೇ ಅವರ ಬಳಿ ಹೋಗಬೇಕು. ದೈವ ಭೀತಿಯನ್ನು ಅವರ ಮನಸ್ಸಿನಲ್ಲಿ ಬಿತ್ತಬೇಕು. ದೇವರಿಂದ ದೂರವಿರಬೇಡಿ ಎಂಬ ಎಚ್ಚರಿಕೆಯನ್ನು ಅವರಿಗೆ ನೀಡಬೇಕು. ಇದಕ್ಕೆ ಇರುವ ಒಂದು ದಾರಿ ಎಂದರೇ ಕ್ರೀಸುವರ ಮನೆಗಳಿಗೆ ಹೋಗುವುದು, ಮನೆಗಳನ್ನು ಮಂತ್ರಿಸುವುದು, ಒಂದು ಗಂಟೆ ಅಲ್ಲಿ ಕೂತು ಆ ಮನೆಯ ಸ್ಥಿತಿಗತಿ ಗಮನಿಸುವುದು. ಅಲ್ಲಿಯ ಹೆಂಗಸರು, ಗಂಡಸರ ಜತೆ ಮಾತನಾಡುವುದು. ಮಕ್ಕಳ ಸಂಸ್ಕಾರ ಹೇಗಿದೆ ಎಂಬುದನ್ನು ಪರಿಶೀಲಿಸುವುದು. ಹಿಂದೆ ಕೂಡ ಕಾರವಾರ, ಹೊನ್ನಾವರ ಗಳಲ್ಲಿ ತಾನು ಹೀಗೆಯೇ ಜನರನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿದ್ದೆ. ಇಲ್ಲಿಯೂ ಹಾಗೆಯೇ ಮಾಡುವುದು.
ಸೋಮವಾರ ಬೋನ ಬೆಳಗಿನ ಉಪಹಾರವನ್ನು ಮಾಡಿ ತಂದಾಗ ಗೋನಸಾಲ್ವಿಸ್-
“ಬೋನಾ..“ಎಂದರು.
ಪಿಂಗಾಣಿ ತಟ್ಟೆ ಲೋಟಗಳನ್ನು ಅವರ ಮುಂದೆ ಇರಿಸಿದ ಆತ-
“ಪದ್ರಬಾ“ಎಂದ.
“ಮಧ್ಯಾಹ್ನದ ಊಟ ಕೊಂಚ ತಡವಾಗಲಿ. ಈವತ್ತು ಮನೆಗಳನ್ನು ಮಂತ್ರಿಸಿ ಬರೋಣ..ಪವಿತ್ರ ಜಲದ ಬಟ್ಟಲನ್ನ ತಗೆದುಕೋ..”
ಪಾದರಿ ಕ್ರೀಸುವರ ಮನೆಗಳಿಗೆ ಹೋಗಲು ಸಜ್ಜಾದರು. ಅದು ಸಾಮಾನ್ಯ ಭೇಟಿಯಾಗಿದ್ದಿದ್ದರೇ ಅವರು ಉದ್ದ ನಿಲುವಂಗಿ ಧರಿಸಿ ಹೋಗಬಹುದಿತ್ತು. ಆದರೇ ಇದೊಂದು ಧಾರ್ಮಿಕ ಭೇಟಿ. ವಿಶೇಷ ಉಡುಪು ಧರಿಸಿಯೇ ಹೋಗಬೇಕಲ್ಲ.
ಬೋನ ಅವರ ಉಡುಪಿನ ಪೆಟ್ಟಿಗೆ ತೆರೆದ.
ಗೋನಸಾಲ್ವಿಸ್ ಅವನ ನೆರವಿನಿಂದ ಮೊದಲು ಆಲ್ಬ (ಬಿಳಿ ನಿಲುವಂಗಿ) ಧರಿಸಿದರು. ಚಾಸು ಬಲ (ಮೇಲಂಗಿ) ಸ್ತೋಲ್ (ಕೊರಳ ಪಟ್ಟಿ) ಗರ್ದಲ್ (ನಡು ಪಟ್ಟಿ) ಬಿರೆಟ್ಟಾ (ಟೋಪಿ) ಎಲ್ಲ ಧರಿಸಿ ಸಜ್ಜಾದರು. ಕೈಯಲ್ಲಿ ಪ್ರಾರ್ಥನಾ ಪುಸ್ತಕದ ಜೊತೆಯಲ್ಲಿ ಕ್ರೀಸುವರ ಮನೆಯ ವಿವರಗಳನ್ನು ಬರೆದುಕೊಳ್ಳಲು ಒಂದು ನೋಟ ಪುಸ್ತಕ. ಬೋನ ಪವಿತ್ರ ಜಲದ ಬಟ್ಟಲು ಹಿಡಿದ.
“ಹೋಗೋಣ“ಎಂದರು ಅವರು.
ಬೋನ ಕೊಪೆಲನ ಬಾಗಿಲು ಸರಿಸಿ ಅವರ ಹಿಂದೆ ಹೊರಟ.
ಯಾವುದೇ ದೈವಿಕ ಕಾರ್ಯಕ್ಕೆ ಹೋಗುವಾಗ ತುಂಬಾ ಗಂಭೀರವಾಗಿ ಅತ್ತ ಇತ್ತ ನೋಡದೆ, ಪ್ರಾರ್ಥನಾ ಪುಸ್ತಕವನ್ನು ಎದೆಗೊತ್ತಿಕೊಂಡು ಎಡಗೈಯನ್ನು ಬೀಸುತ್ತ ಹೋಗುವುದು ರೂಢಿ. ಮುಖದ ಮೇಲೆ ಪ್ರಸನ್ನತೆ, ಕಣ್ಣುಗಳಲ್ಲಿ ಭಕ್ತಿ, ನಡಿಗೆಯಲ್ಲಿ ದೃಢತೆ ಎದ್ದು ಕಾಣುತ್ತಿತ್ತು. ಬೋನ ಕೂಡ ಅವರ ಜೊತೆಯಲ್ಲಿ ಹೀಗೆಯೇ ಹೋಗುತ್ತಿದ್ದ.
ಇಂದು ಈರ್ವರೂ ಕೊಪೆಲನ ಮಗ್ಗುಲ ದಾರಿ ಹಿಡಿದು ಕ್ರೀಸುವರ ಮನೆಗಳತ್ತ ಹೊರಳಿದರು.
ಸಿಮೋನನ ಮನೆಯಲ್ಲಿ ದೇವರ ಪೀಠದ ಮುಂದೆ ಸಾಲುಸಾಲಾಗಿ ಮೇಣದ ಬತ್ತಿಗಳನ್ನು ಹಚ್ಚಲಾಯಿತು. ಮನೆ ಮಂದಿಯೆಲ್ಲ ಬಂದು ದೇವರ ಮುಂದೆ ಮೊಣಕಾಲೂರಿದರು. ಪಾದರಿ, ಬೋನ ನೀಡಿದ ತೀರ್ಥದ ಬಟ್ಟಲನ್ನು ತೆಗೆದುಕೊಂಡು ಕೀರ್ತನೆಯೊಂದನ್ನು ದೊಡ್ಡ ದನಿಯಲ್ಲಿ ಹೇಳುತ್ತ ಮನೆಯ ಕೋಣೆ, ಅಡಿಗೆ ಮನೆ, ತೊಟ್ಟಿಲು, ಹಿತ್ತಿಲು ಅಂಗಳಕ್ಕೆ ತೀರ್ಥ ಪ್ರೋಕ್ಷಣೆ ಮಾಡಿದರು.
ನಂತರ ಪೀಠದ ಮುಂದೆ ನಿಂತು ಆ ಮನೆಗೆ ಒಳಿತನ್ನು ಕೋರಿದರು. ದೈವ ಭೀತಿ, ಪ್ರೀತಿ, ಪರಸ್ಪರ ಪ್ರೇಮ ವಿಶ್ವಾಸ ಮನೆಯ ಜನರಲ್ಲಿ ಸದಾ ನೆಲಸಲಿ, ಯಾವುದೇ ಕಷ್ಟಕಾಲದಲ್ಲಿ ತಂದೆ ಮಗ ಸ್ಪಿರಿತು ಸಾಂತುವರು ಮನೆಯ ಜನರನ್ನು ರಕ್ಷಣೆ ಮಾಡಲಿ ಎಂದು ಕೋರಿದರು. ಪರಲೋಕ ನಮೋರಾಣೆ ಮಂತ್ರಗಳನ್ನು ಜಪಿಸಲು ಹೇಳಿ ಕೊನೆಯಲ್ಲಿ ಒಂದು ಕೀರ್ತನೆ ಹಾಡಿದರು.
ಸಿಮೋನನ ಮನೆಯ ಬಗ್ಗೆ ಅವರಿಗೆ ಹಿಂದೆಯೇ ಸಂತೋಷವಾಗಿತ್ತು. ಸಿಮೋನನ ತಾಯಿ, ಹೆಂಡತಿ ಆ ಮನೆಯಲ್ಲಿ ದೈವ ಭೀತಿ ಜೀವಂತವಾಗಿರಲು ಕಾರಣರಾಗಿದ್ದರು. ಇಗರ್ಜಿಯ ಗಂಟೆ ಕೇಳಲಿ, ಕೇಳದೇ ಇರಲಿ ನಿತ್ಯ ಪ್ರಾರ್ಥನೆ ಆ ಮನೆಯಲ್ಲಿ ನಡೆದುಕೊಂಡು ಬಂದಿತ್ತು. ಈ ಸಂತಸದಲ್ಲಿಯೆ ಮನೆ ಮಂತ್ರಿಸಿ, ಅಲ್ಲಿರುವವರ ಜತೆ ಮಾತನಾಡಿ ಅವರು ಮುಂದಿನ ಮನೆಗೆ ತೆರಳಿದರು.
ಒಂದು ವಾರದಲ್ಲಿ ಶಿವಸಾಗರದ ಕ್ರೈಸ್ತ ಮನೆಗಳನ್ನು ಮಂತ್ರಿಸಿ ಅವರು ಮುಗಿಸಿದರು. ಅವರಿಗೆ ನಿರಾಶೆಯಾಯಿತು, ಸಂಕಟವಾಯಿತು, ಸಿಟ್ಟೂ ಬಂದಿತು. ಕೋಪದಿಂದ ಮೈಮುಖ ಕೆಂಪಗಾಗಿ ಅವರು ಹಲ್ಲು ಕಟಕಟಿಸಿದರು.
ಅವರು ನಿರೀಕ್ಷಿಸಿದ ಹಾಗೆ ಸಿಮೋನನ ಒಂದು ಮನೆ ಬಿಟ್ಟರೆ ಬೇರೆ ಯಾವ ಮನೆಯಲ್ಲೂ ಕ್ರೈಸ್ತ ವಾತಾವರಣವಿರಲಿಲ್ಲ. ಮನೆ ಯಜಮಾನ ಇವರು ಹೋದಾಗ ಮನೆಯಲ್ಲಿರಲಿಲ್ಲ. ಮನೆಗಳಲ್ಲಿ ದೇವರ ಪೀಠದಲ್ಲಿ ದೇವರ ಇಮಾಜ ಇರಲಿಲ್ಲ.ಗೂಡಿನಲ್ಲಿ ಕಸ ಕೊಳೆ ತುಂಬಿತ್ತು. ದೇವರ ಪ್ರತಿಮೆ ಇಡಬೇಕಾದ ಕಡೆ ಎಲೆ ಅಡಿಕೆ ಚೀಲ, ಸುಣ್ಣದ ಕಾಯಿ, ತೆಂಗಿನ ಕಾಯಿ, ಕುಂಕುಮದ ಪುಡಿ, ಹಿತ್ತಾಳೆಯ ತಾಯಿತ ಇರಿಸಿದ್ದರು. ಯಾರಿಗೂ ಶಿಲುಬೆಯ ಗುರುತು ತೆಗೆಯಲು, ಪರಲೋಕ ಮಂತ್ರ ಪೂರ್ತಿ ಮಾಡಲು ಬರುತ್ತಿರಲಿಲ್ಲ.
ಎಲ್ಲ ಮನೆಗಳನ್ನೂ ಶ್ರದ್ಧೆ ಆಸಕ್ತಿಯಿಂದ ಮಂತ್ರಿಸಿ, ಬೋನನ ನೆರವಿನೊಂದಿಗೆ ಇವರು ಪ್ರಾರ್ಥನೆ ಸಲ್ಲಿಸಿ ತಿರುಗಿ ಬಂದರು. ಕೊತಕೊತನೆ ಕುದಿದು ಹಬೆಯಾಡುತ್ತಿರುವಂತೆ ಕಂಡು ಬಂದ ಪಾದರಿ ಗೋನಸಾಲ್ವಿಸ್, ಕೊಪೆಲಗೆ ಬಂದವರೇ ಮೊದಲು ಮಾಡಿದ ಕೆಲಸವೆಂದರೆ ಮಂಚದ ಅಡಿಗೆ ತಳ್ಳಿದ ತಮ್ಮ ಹೋಲ್ಡಾಲನ್ನು ಹೊರಗೆ ತೆಗೆದದ್ದು. ಈ ಹೋಲ್ಡಾಲಿನಿಂದ ಬರುವಾಗ ತಂದ ಕೆಲ ಇಮಾಜುಗಳನ್ನು ಅರ್‍ಲೂಕಗಳನ್ನು ಪೈನೆಲ್, ಪಿಂತೂರಗಳನ್ನು ಈಚೆಗೆ ತೆಗೆದು ಅವುಗಳನ್ನು ಮುಂದೆ ಇರಿಸಿಕೊಂಡು ಯೋಚಿಸುತ್ತ ಕುಳಿತರು.
*
*
*
ಕೆಲವೇ ದಿನಗಳಲ್ಲಿ ಕೊಪೆಲನ ಸುತ್ತ ಇರುವ ಅಷ್ಟೂ ಕ್ರೀಸುವರ ಪರಿಚಯ ಅವರಿಗಾಯಿತು. ಸಿಮೋನ ಕೂಡ ಇವರೆಲ್ಲರ ಪರಿಚಯ ಮಾಡಿಕೊಳ್ಳಲು ನೆರವಾದ.
ತಾವು ಊರಿಗೆ ಬಂದ ತಕ್ಷಣ ಕೊಪೆಲನ ಗಂಟೆ ಸದ್ದು ಕೇಳಿ, ಬಂದು ತಮ್ಮನ್ನು ಭೇಟಿಯಾದವ ಸಿಮೋನ. ಗಾಡಿ ಸಿಮೋನ ಎಂಬ ಹೆಸರು ಕೂಡ ಇವನಿಗಿದೆ. ಊರಿನ ಕ್ರೀಸುವರಲ್ಲಿ ಸಾಕಷ್ಟು ಶ್ರೀಮಂತ ಸಿಮೋನ. ಸಿಮೋನ ಮೇಸ್ತ್ರಿ ಅನ್ನುವುದು ಊರಿನ ಜನ ಇವನಿಗೆ ಇಟ್ಟಿರುವ ಮತ್ತೊಂದು ಗೌರವಸೂಚಕ ಹೆಸರು. ಮನೆಯನ್ನು ದೊಡ್ಡದಾಗಿ ಕಟ್ಟಿಕೊಂಡಿದ್ದಾನೆ. ಒಂದು ಗಾಡಿ ಇದೆ. ಒಂದು ಜೊತೆ ಎತ್ತುಗಳಿವೆ. ಮನೆಯಲ್ಲಿ ಹೆಂಡತಿ, ತಾಯಿ. ಈಗಾಗಲೇ ಅವನ ಜತೆ ಕೆಲಸಕ್ಕೆ ಹೋಗುವ ಆರು ಜನ ಗಂಡು ಮಕ್ಕಳಿದ್ದಾರೆ. ಊರಿನ ಕ್ರೀಸುವರಲ್ಲಿ ದೈವ ಭಕ್ತಿ ಇರಿಸಿಕೊಂಡು ಕಾಲಕಾಲಕ್ಕೆ ಪ್ರಾರ್ಥನೆ, ಜಪ ಮಾಡುವ ಕುಟುಂಬವಿದು. ಊರಿನಲ್ಲಿ ಕೊಪೆಲ ಆಗಲು ಈ ಕೊಪೆಲಗೆ ಪಾದರಿ ಬರಲು ಇವನೇ ಕಾರಣ.
ಸಿಮೋನ, ಇವನ ಅಣ್ಣ ಮರಿಯಾಣ ಮುರುಡೇಶ್ವರದಲ್ಲಿ ಒಡೆಯರೊಬ್ಬರ ತೆಂಗಿನ ತೋಟ ನೋಡಿಕೊಂಡು ಕಲ್ಲಿನ ಕೆಲಸ ಮಾಡಿಕೊಂಡು ಇದ್ದವರು. ಇಲ್ಲಿ ಘಟ್ಟದ ಮೇಲೆ ಕೆಲಸವಿದೆ ಎಂಬುದು ಅದು ಹೇಗೋ ತಿಳಿದುಕೊಂಡ ಸಿಮೋನ ಬಾಚಿ ಹೆಗಲೇರಿಸಿಕೊಂಡು ತಾನು ಘಟ್ಟದ ಮೇಲೆ ಹೋಗುತ್ತೇನೆ ಎಂದಾಗ ಮರಿಯಾಣ-
“ನಕ್ರೆ ಭಾವಾ (ಬೇಡ ತಮ್ಮ) ಇಲ್ಲಿಯೇ ನಮಗೆ ಗಂಜಿ ಮೀನು ಸಿಗುತ್ತಿದೆ..ಅಷ್ಟು ದೂರಬೇಡ.“ಎಂದು ನುಡಿದಿದ್ದ.
ಆದರೂ ಸಿಮೋನ ಹೊರಟ. ಇಲ್ಲಿ ಬಂದು ಕಲ್ಲು ಕುಟ್ಟುವ ಕೆಲಸ ಆರಂಭಿಸಿದ. ಅವನಿಗೆ ಇಲ್ಲಿ ತುಂಬಾ ಗೌರವವೂ ಸಿಕ್ಕಿತು. ಈಗ ಹಾಲಿ ಇರುವ ಎಷ್ಟೋ ಮನೆಗಳನ್ನು ಕಟ್ಟಿಸಿದಾತ ಸಿಮೋನ. ಘಟ್ಟದ ಕೆಳಗಿನಿಂದ ಏಳೆಂಟು ಆಳುಗಳನ್ನು ಕರೆಸಿಕೊಂಡು ಈತ ಕೆಲಸ ಮಾಡತೊಡಗಿದ. ಈಗಲೂ ಒಂದು ಕೆಲಸ ಆಗಬೇಕು ಎಂದರೆ ಜನ ಇವನ ಬಳಿ ಬರುತ್ತಾರೆ.
“ಮೇಸ್ತ್ರಿ ಮನೆ ಕಡೆ ಒಂದಿಷ್ಟು ಕೆಲಸ ಇತ್ತು ಮಾರಾಯಾ..ಬಂದು ಹೋಗು“ಅನ್ನುತ್ತಾರೆ.
ಸಿಮೋನ ಮನೆಯಲ್ಲಿರುವಾಗ ಕಷ್ಟಿಯೊಂದನ್ನು ಬಿಟ್ಟು ಬೇರೆ ಏನೂ ತೊಡುವುದಿಲ್ಲ. ಹೊರ ಹೋಗಬೇಕಾದರೆ ಅಡ್ಡ ಪಂಚೆ ಮೇಲೊಂದು ಪೈರಾಣ. ಊರಿನಲ್ಲೂ ಅವನ ವೇಷ ಇದೇ ಆಗಿತ್ತು. ಇಲ್ಲಿ ಕೂಡ ಅದೇನೆ. ಸದಾ ಎಲೆ ಅಡಿಕೆ ತಿನ್ನುವ ಚಪಲ. ಎಲೆ ಅಡಿಕೆ ಸುಣ್ಣ ತಂಬಾಕು ಇರುವ ಒಂದು ಪೊತ್ತಿ ಇವನ ಸೊಂಟಕ್ಕೆ ತೂಗು ಬಿದ್ದಿರುತ್ತದೆ. ಇವನಿಗೆ ಊರಿನ ಸಿಂಪಿ ಸುಣ್ಣವೇ ಬೇಕು. ಇಲ್ಲಿನ ಕಲ್ಲು ಸುಣ್ಣ ಇವನು ಬಳಸುವುದಿಲ್ಲ. ಊರಿನಿಂದ ಬರುವವರ ಮೂಲಕ ಈತ ಸಿಂಪಿ ಸುಣ್ಣ ತರಿಸುತ್ತಾನೆ. ವಿಶೇಷ ಸಂದರ್ಭಗಳಲ್ಲಿ ಸಿಮೋನ ಪಂಚೆ, ಉದ್ದ ಅಂಗಿ ಮೇಲೊಂದು ಸರ್ಜಕೋಟ ತಲೆಗೆ ಕೆಂಪು ರುಮಾಲು ಸುತ್ತುತ್ತಾನೆ. ಈ ಸರ್ಜುಕೋಟ ಅವನ ಮದುವೆಯಲ್ಲಿ ಹೊಲಿಸಿದ್ದು. ಅಲ್ಲದೆ ಕೈಗೆ ಬಂಗಾರದ ಕಡಗ ಇರುತ್ತದೆ. ಆದರೇ ಈ ವಿಶೇಷ ಸಂದರ್ಭ ಯಾವಾಗದರೊಮ್ಮೆ ಬರುತ್ತದೆ. ಕೊಪೆಲಿನಲ್ಲಿ ಸಂತ ಜೋಸೆಫ಼ರ ಹಬ್ಬ ಮಾಡಿದಾಗ. ಊರಿಗೆ ಜಿಲ್ಲಾ ಕಲೆಕ್ಟರ್ ಬಂದು, ಸಿಮೋನ ಕಟ್ಟಿದ ಸೊರಬ ರಸ್ತೆ ಸೇತುವೆಯ ಉದ್ಘಾಟನೆ ಮಾಡಿ, ಸಿಮೋನನ ಕೆಲಸ ಮೆಚ್ಚಿ ಅವನಿಗೆ ಹಾರ ಹಾಕಿದಾಗ ಸಿಮೋನ ಈ ವಿಶೇಷ ದಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾನೆ.

ಸಿಮೋನನ ಮನೆ ಪಕ್ಕದಲ್ಲಿಯೇ ಎಮ್ಮೆ ಮರಿಯಾಳ ಮನೆ. ಮರಿಯ ಗಂಡ ಸತ್ತವಳು. ಇವಳ ಗಂಡ ಕೂಡ ದೂರದ ಕಾಯ್ಕಿಣಿಯಿಂದ ಬಂದವನೆ. ಈತ ಈ ಊರಿಗೆ ಬರಲು ಸಿಮೋನ ಕಾರಣ. ಮರಿಯಾಳ ಗಂಡ ಸಂತಿಯಾಗ ಕಲ್ಲು ಕಟ್ಟುವುದರಲ್ಲಿ ನಿಸ್ಸೀಮ. ಭಟ್ಕಳದ ಕೊಲಂಬೋ ಸಾಹೇಬರ ಬಂಗಲೆಯನ್ನು ಈ ಸಂತಿಯಾಗ ಕಟ್ಟಿದ್ದಕ್ಕೆ ಸಾಹೇಬರು ಅವನ ಕೈ ಬೆರಳಿಗೆ ಬಂಗಾರದ ಉಂಗುರ ತೊಡಿಸಿದ್ದರು.
“ನೀನು ನನ್ನ ಜೊತೆ ಬಂದು ಬಿಡು..ಇಂತಹ ಹತ್ತು ಉಂಗುರ ಕೊಡಿಸ್ತೀನಿ”
ಎಂದಿದ್ದ ಸಿಮೋನ ಭಟ್ಕಳ ಪೇಟೆಯಲ್ಲಿ ಸಂತ್ಯಾಗನನ್ನು ಕಂಡು.
“ಎಂಟು ತಿಂಗಳ ಕೆಲಸ..ಅಕ್ಟೋಬರಿಗೆ ಹೋದ ಜೂನಿಗೆ ತಿರುಗಿ ಬಂದ”
ಎಂದು ತನ್ನ ಕೆಲಸದ ವಿವರ ನೀಡಿದ್ದ.

ಈಗಾಗಲೇ ಹಲವಾರು ಸಿಮೋನನ ಜತೆ ಶಿವಸಾಗರಕ್ಕೆ ಹೋಗುತ್ತಿದ್ದರು. ಅವರೆಲ್ಲ ಸಾಕಷ್ಟು ಹಣ ಮಾಡಿಕೊಂಡಿದ್ದರು. ಹೀಗೆಂದೇ ಸಂತಿಯಾಗ ಕೂಡ ಹೊರಟ. ಸಿಮೋನನ ಹಾಗೆಯೇ ಕೆಲ ವರುಷಗಳಲ್ಲಿ ತನ್ನ ಹೆಂಡತಿಯನ್ನು ಕರೆಸಿಕೊಂಡ. ಆದರೆ ಸಂತಿಯಾಗ ಬಹಳ ದಿನ ಉಳಿಯಲಿಲ್ಲ. ಅವನ ಹೆಂಡತಿ ಮರಿಯ ಎಮ್ಮೆ ಸಾಕಿಕೊಂಡು ಹಾಲು ಮಾರಿಕೊಂಡು ಬದುಕುತ್ತಿದ್ದಾಳೆ.
ಸಾಲಿನಲ್ಲಿದ್ದ ಮೂರನೇ ಮನೆ ಸುತಾರಿ ಇನಾಸನದು. ಇವನೂ ಕೂಡ ಘಟ್ಟದ ಕೆಳಗಿನ ಮೂಡ್ಕಣಿಯವ. ಇತರರು ಬಾಚಿ ಅಳತೆ, ಕಡ್ಡಿ ಹಿಡಿದು ಬಂದರೆ ಈತ ಉಳಿ ಗರಗಸ ಹಿಡಿದುಕೊಂಡು ಬಂದವ. ಮರ ಕೆಲಸದಲ್ಲಿ ಈತನದು ಎತ್ತಿದ ಕೈ. ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಹೆಂಡತಿ ಎಂದು ದೊಡ್ಡ ಸಂಸಾರ. ಇವನ ಹೆಂಡತಿ ಮಾತ್ರ ಮೂಕಿ. ಮೊನ್ನೆ ಎಂದೇ ಜನ ಅವಳನ್ನು ಸಂಭೋದಿಸುತ್ತಾರೆ.

ನಾಲ್ಕನೆಯ ಮನೆ ಸಾನಬಾವಿ ಪೆದ್ರುವಿನದು. ಸಾನಬಾವಿ ಶಿರಾಲಿ ಹತ್ತಿರದ ಒಂದು ಹಳ್ಳಿ. ಅಲ್ಲಿಂದ ಬಂದು ಶಿವಸಾಗರ ಸೇರಿಕೊಂಡಾತ ಪೆದ್ರು. ಇವನ ಮನೆಯಲ್ಲಿ ಓರ್ವ ಹೆಂಗಸಿದ್ದಾಳೆ. ಅವಳು ಅವನ ಹೆಂಡತಿಯಲ್ಲ. ಅವನು ಇರಿಸಿಕೊಂಡಾಕೆ. ಓರ್ವ ಹಿಂದು ಹೆಂಗಸು.
ಅಲ್ಲಿಯೇ ಮುಂದೆ ಅಂಟುವಾಳದ ಮರದ ಕೆಳಗೆ ಸಾಂತಾ ಮೋರಿ ಮನೆ. ನಲವತ್ತರ ಗಡಿ ದಾಟಿರುವ ಹೆಂಗಸು. ಊರಿನಿಂದ ಇಲ್ಲಿಗೆ ಬರುವಾಗಲೇ ಇವಳ ಗಂಡ ಸತ್ತಿದ್ದ. ಇವಳನ್ನು ಇಲ್ಲಿಗೆ ಕರೆತಂದಾತ ಸಿಮೋನ ಮೇಸ್ತ್ರಿ. ತಾನು ಕರೆತರುವ ಆಳುಗಳಿಗೆ ಅಡಿಗೆ ಮಾಡಿ ಹಾಕಲೆಂದು ಇವಳನ್ನು ಆತ ಕರೆತಂದ. ಮೊದಲು ಅವನೂ ಇವಳ ಮನೆಯಲ್ಲಿಯೇ ಇದ್ದ. ಹೆಂಡತಿ ಬಂದ ಮೇಲೆ ಅವಳ ಮನೆ ಬಿಟ್ಟ. ಈಗಲೂ ಸುಮಾರು ಹತ್ತು ಹನ್ನೆರಡು ಜನ ಇವಳ ಮನೆಯಲ್ಲಿ ಊತ ಮಾಡಿಕೊಂಡು ಇದ್ದಾರೆ. ಮುರುಡೇಶ್ವರದ ದುಮಿಂಗ, ಪರಾಸ್ಕ, ಅರ್ಥರ್, ಶಿರಾಲಿಯ ಜೂಜೆ, ಗೋಮ್ಸ್, ಎಡ್ದಿ ಇನ್ನೂ ಹಲವರು ಇವಳ ಗಿರಾಕಿಗಳು. ಇವರೆಲ್ಲ ಹೆಂಡಿರನ್ನು ಮಕ್ಕಳನ್ನು ಅವರವರ ಊರುಗಳಲ್ಲಿ ಬಿಟ್ಟಿದ್ದಾರೆ. ವರ್ಷದ ಎಂಟು ತಿಂಗಳು ಇಲ್ಲಿರುತ್ತಾರೆ. ಬೆಳಿಗ್ಗೆ ಗಂಜಿ, ಮಧ್ಯಾಹ್ನ ರಾತ್ರಿ ಊಟ ಅವರಿಗಿಲ್ಲಿ ಸಿಗುತ್ತದೆ. ಸಂಜೆ ಸ್ನಾನಕ್ಕೆ ಬಿಸಿ ಬಿಸಿ ನೀರು. ಸಾಂತಾ ಮೋರಿ ಸಹಾಯಕರಾಗಿ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬಳು ಮಗಳು.

ಆರನೆ ಮನೆ ಪಾಸ್ಕೋಲ ಮೇಸ್ತ್ರಿಯದು. ಸಿಮೋನ ಮೇಸ್ತ್ರಿಗೂ, ಪಾಸ್ಕೋನ ಮೇಸ್ತ್ರಿಗೂ ಒಂದು ಬಗೆಯ ಪೈಪೋಟಿ. ಪಾಸ್ಕೋಲನನ್ನು ಇಲ್ಲಿಗೆ ಕರೆತಂದವ ಸಿಮೋನ. ಎರಡು ವರ್ಷ ಸಿಮೋನನ ಕೈ ಕೆಳಗೆ ಕಲ್ಲು ಕುಟ್ಟುವ ಕೆಲಸ ಮಾಡಿಕೊಂಡಿದ್ದ ಪಾಸ್ಕೋನ ಮೂರನೇ ವರ್ಷ ಮಳೆಗಾಲ ಮುಗಿಯಿತು. ಇನ್ನೇನು ಘಟ್ಟದ ಮೇಲೆ ಹತ್ತಬೇಕು ಅನ್ನುವಾಗ ಸಿಮೋನ ಊರಿನಲ್ಲಿ ಕಾಯಿಲೆ ಮಲಗಿದ. ಇಲ್ಲಿ ಅರೆ ಬರೆ ಕೆಲಸವಾಗಿತ್ತು. ಕಟ್ಟಡಗಳನ್ನು ಮುಗಿಸಬೇಕಿತ್ತು. ನೀನು ಅದನ್ನು ನೋಡಿಕೋ ನಾನು ಕೊಂಚ ಆರಾಮಾದ ಕೂಡಲೆ ಬರತೇನೆ ಎಂದ ಸಿಮೋನ. ಹುಂ ಎಂದ ಪಾಸ್ಕೋಲ.

ಎರಡು ತಿಂಗಳ ನಂತರ ಸಿಮೋನ ಘಟ್ಟ ಹತ್ತಿ ಮೇಲೆ ಬಂದಾಗ ಇಲ್ಲಿ ಪಾಸ್ಕೋಲ ಮೇಸ್ತ್ರಿ ಆಗಿದ್ದ. ಸಿಮೋನ ಬರಲಿಕ್ಕಿಲ್ಲ. ಎಲ್ಲ ಕೆಲಸ ನಾನೇ ಮಾಡಿಸುತ್ತೇನೆ ಎಂದು ಸುಳ್ಳು ಹೇಳಿ ಕೆಲಸ ಹಿಡಿದಿದ್ದ. ಸಿಮೋನನಿಗೆ ಹೊಸ ಕೆಲಸಗಳು ಸಿಕ್ಕವು. ಆದರೆ ಅವನು ಪಾಸ್ಕೋಲ ಮಾಡಿದ ಮೋಸಗಳನ್ನು ಮರೆಯದಾದ.

ಪಾಸ್ಕೋಲ ಹೆಂಡತಿ ಮಕ್ಕಳ ಜತೆ ಇದ್ದಾನೆ. ಇವನ ಜೊತೆಗೆ ಇವನ ತಮ್ಮ ಇದ್ದಾನೆ. ಹೆಂಡತಿ ತಮ್ಮ ಲಾದ್ರು ಇದ್ದಾನೆ.
ಪಾಸ್ಕೋಲನ ಮನೆಯ ಬಳಿ ರಸ್ತೆ ಬಲಕ್ಕೆ ಹೋರಳುತ್ತದೆ. ಅಲ್ಲಿಂದ ಮತ್ತೆ ಕೆಲ ಮನೆಗಳ ಸಾಲು ಪ್ರಾರಂಭವಾಗುತ್ತದೆ. ಈ ಮನೆಗಳ ಸಾಲಿನ ಮೊದಲ ಮನೆ ಬಾಲ್ತಿದಾರನದು. ಇವನ ಬಲಗಾಲು ಉದ್ದ. ನಡೆಯುವಾಗ ಕಾಲನ್ನು ಎಳೆದುಕೊಂಡು ನಡೆಯುವುದು ಸ್ಪಷ್ಟವಾಗಿ ಕಾಣುತ್ತದೆ. ಕಾರಣ ಇವನು ಜನರ ಬಾಯಲ್ಲಿ ಬಲಗಾಲುದ್ದ ಬಾಲ್ತಿದಾರ. ಈ ಹೆಸರು ಮೊಟಕಾಗಿ ಬಲಗಾಲುದ್ದ ಎಂದಾಗಿದೆ. ಅವನ ಮನೆಗೂ ಅದೇ ಹೆಸರು. ಹೆಂಡತಿಗೂ ಅದೇ ಹೆಸರು. ಅವನ ಏಕೈಕ ಮಗಳಿಗೂ ಅದೇ ಹೆಸರು. ಬಲಗಾಲುದ್ದ ಹೆಂಡತಿ ಅನರೀತಾ, ಮಗಳು ರೇಮೇಂದಿ. ಈತ ಶಿರಾಲಿಯವ. ಸಿಮೋನ ಇವನನ್ನೂ ಶಿವಸಾಗರಕ್ಕೆ ಕರೆತಂದದ್ದು ಹೌದು. ಆದರೆ ಕಾಲೆಳೆದುಕೊಂಡು ಈತ ಎನೂ ಕೆಲಸ ಮಾಡಲಾರ ಎನಿಸಿತು. ಕೆತ್ತಿದ ಕಲ್ಲನ್ನು ತಂದುಕೊಡಲು, ಮಣ್ಣು ಗಾರೆ ಕಲಿಸಲು ಕೂಡ ಕಷ್ಟಪಡುತ್ತಿದ್ದ. ಹೀಗೆಂದೇ ಸಿಮೋನ-
“ಇವನನ್ನು ಏನು ಮಾಡೋದು ಮಾರಾಯ..”
ಎಂದು ತಲೆ ಕೆಡಿಸಿಕೊಳ್ಳುವಾಗ ಜವಳಿ ಅಂಗಡಿ ಭುಜಂಗ-
“ಅಂಗಡಿ ಬಾಗ್ಲಾಗೆ ಕೂಡ್ಸು. ನಾನು ಕಾಜ ಹೊಲಿಯೊದನ್ನ ಹೇಳಿ ಕೊಡತೀನಿ“ಎಂದ.
ಭುಜಂಗನ ಅಂಗಡಿಯಲ್ಲಿ ಕುಳಿತು ಬಟ್ಟೆ ಹೊಲಿಯುವುದನ್ನ ಕಲಿತ ಕಾಲುದ್ದ. ಈಗ ಊರಿನಲ್ಲಿ ಒಂದು ಅಂಗಡಿ ಇರಿಸಿದ್ದಾನೆ. ಇವನ ಹೆಂಡತಿ ಕುಮುಟದವಳು. ಮಾವನ ಮನೆಗೆ ಹೋದಾಗ ಈತ ಇಗರ್ಜಿಗೆ ಹೋಗುತ್ತಾನೆ. ಇಲ್ಲಿ ಇಗರ್ಜಿಯಿಂದ ದೂರವಿದ್ದವ.
ಎಂಟನೇ ಮನೆ ಕಲ್ಲು ಕೆತ್ತುವ ಕೈತಾನನದು. ಈತ ಕೂಡ ಘಟ್ಟದ ಕೆಳಗಿನವ. ಶರಾವತಿ ದಂಡೆಯಲ್ಲಿರುವ ಬಳ್ಕೂರು ಇವನ ಊರು. ಇವನ ಮನೆ ಮಗ್ಗುಲಲ್ಲಿರುವಾತನೂ ಕೈತಾನನೇ. ಆದ್ದರಿಂದ ಇವನಿಗೆ ಬಳ್ಕೂರಕಾರ್ ಎಂದು ಜನ ಕರೆಯುತ್ತಾರೆ. ಬಹಳ ಜನರಿಗೆ ಇವನ ನಿಜವಾದ ಹೆಸರು ಗೊತ್ತಿಲ್ಲ.. ಹೀಗಾಗಿ ಇವನ ಮನೆ, ಹೆಂಡತಿ, ಮಕ್ಕಳಿಗೆಲ್ಲ ಇವನ ಹೆಸರ ಮೂಲಕವೇ ಗುರುತಿಸುವುದು. ಬಳ್ಕೂರಕಾರರ ಹೆಂಡತಿ, ಬಳ್ಕೂರಕಾರರ ಮಗ, ಬಳ್ಕೂರಕಾರರ ಮಗಳು ಎಂದರೆ ಎಲ್ಲರಿಗೂ ತಿಳಿದು ಹೋಗುತ್ತದೆ.
ಬಳ್ಕೂರರ ನೆರೆಮನೆಯ ಕೈತಾನ ಅಂಕೋಲದವ. ಅಲ್ಲಿ ತುಂಬಾ ಆಸ್ತಿ ಇತ್ತು ಅವನಿಗೆ. ಇನ್ನೂರು ಮುನ್ನೂರು ತೆಂಗಿನ ಮರಗಳಿದ್ದ ತೋಟವಿತ್ತು. ಇವನ ತಂದೆ ಯಾವುದೋ ಮುಸ್ಲಿಂ ಹೆಂಗಸಿನ ಸಹವಾಸಕ್ಕೆ ಬಿದ್ದು ಅದನ್ನು ಕಳೆದುಕೊಂಡ. ಕೈತಾನ ಬಾಚಿ ಹಿಡಿದು ಕಲ್ಲು ಕೆತ್ತಲು ಹೋದ. ಅದೆ ಕೆಲಸ ಖಾಯಂ ಆಯಿತು. ಅಂಕೋಲದಲ್ಲಿಯೇ ಮದುವೆಯಾದ. ಘಟ್ಟದ ಮೇಲೆ ಒಳ್ಳೆಯ ಕೆಲಸವಿದೆ ಅಂದರು ಯಾರೋ. ಇಲ್ಲಿಗೆ ಬಂದು ಪಾಸ್ಕೋಲ ಮೇಸ್ತ್ರಿಯ ಬಳಿ ಸೇರಿಕೊಂಡ. ಇಲ್ಲಿ ಕೊಂಚ ಅನುಕೂಲವಾಯಿತು. ಹೆಂಡತಿಯನ್ನು ಕರೆಸಿಕೊಂಡ. ಅಂಕೋಲೆಯಲ್ಲಿ ಇರುವ ತನಕ ಇವರಿಗೆ ಮಕ್ಕಳಾಗಿರಲಿಲ್ಲ. ಇಲ್ಲಿ ಬಂದದ್ದೇ ಐದು ಜನ ಮಕ್ಕಳು ಹುಟ್ಟಿದವು. ಎಲ್ಲವೂ ಹೆಣ್ಣು, ಒಂದಾದರೂ ಗಂಡಾಗಲಿ ಎಂದು ಚಂದಾವರದ ಅಂತೋನಿಗೆ, ಮಲ್ಕೋಡಿನ ಫ಼ಾತಿಮಾ ಮಾತೆಗೆ ಹರಕೆ ಹೇಳಿಕೊಳ್ಳುತ್ತಿದ್ದಾರೆ.

ಹತ್ತನೆಯ ಮನೆ ವೈಜೀಣ್ ಕತ್ರೀನಳದು. ಶಿವಸಾಗರದಲ್ಲಿ ಯಾರ ಮನೆಯಲ್ಲಿಯೇ ಆಗಲಿ ಹೆರಿಗೆ ಆಗಬೇಕೆಂದರೆ ಇವಳು ಬೇಕು. ಇವಳ ತಾಯಿ ಹೊನ್ನಾವರದ ಅನ್ನಾಬಾಯಿ ಕೂಡ ಹೆರಿಗೆ, ಬಾಣಂತನ ಮಾಡಿಸುತ್ತಿದ್ದವಳೇ. ತಾಯಿಯಿಂದ ಮಗಳಿಗೆ ಈ ಕಲೆ ಬಂದಿತ್ತು. ಕತ್ರೀನಳ ಮನೆಯಿಂದ ಮೂರು ಮನೆ ಆಚೆಗೆ ಇರುವ ಸಂತು ಮೇಸ್ತ್ರಿಯ ಹೆಂಡತಿ ಹೊನ್ನಾವರದವಳು. ಅವಳು ಮೂರನೇ ಹೇರಿಗೆ ಮುಗಿಸಿಕೊಂಡು ಶಿವಸಾಗರಕ್ಕೆ ಬರುವಾಗ ಮಗು ಬಾಣಂತಿಯನ್ನು ನೋಡಿಕೊಳ್ಳಲೆಂದು ಅವಳ ತಾಯಿ ಕತ್ರೀನಳನ್ನು ಅವಳ ಜತೆ ಕಳುಹಿಸಿದಳು. ಕತ್ರೀನ ಸಂತುವಿನ ಮನೆಯಲ್ಲಿ ಎರಡು ವರ್ಷ ಇದ್ದಳು. ನಂತರ ಅದೇನು ಗಡಿಬಿಡಿಯಾಯಿತೋ ಊರಿಗೂ ಹೋಗದೇ ಇಲ್ಲೇ ಮನೆ ಮಾಡಿದಳು. ಅಷ್ಟು ಹೊತ್ತಿಗೆ ಅಲ್ಲಿ ಇಲ್ಲಿ ಒಂದೆರಡು ಹೆರಿಗೆ ಮಾಡಿಸಿದ ಈಕೆ ಊರಿನ ಜನಪ್ರಿಯ ಸೂಲಗಿತ್ತಿಯಾದಳು. ಜನ ಇವಳನ್ನು ಕತ್ರೀನಾ ಬಾಯಿ, ಕತ್ರೀನವ್ವ ಎಂದೆಲ್ಲ ಕರೆಯುತ್ತಾರೆ. ಇವಳ ಊರು ಜಾತಿಯ ಬಗ್ಗೆ ಯಾರಿಗೂ ಗೊತ್ತಿಲ್ಲ. ಮನೆಯಲ್ಲಿ ಯಾರಿಗಾದರೂ ಹೇರಿಗೆ ನೋವು ಕಾಣಿಸಿಕೊಂಡರೆ ಜನ ನೇರವಾಗಿ ಇಲ್ಲಿಗೆ ಓಡಿ ಬರುತ್ತಾರೆ.
“ಕತ್ರೀನವ್ವ..ನಡೀ ತಾಯಿ..“ಎಂದು ಹೇಳುತ್ತಾರೆ.
ಇವಳು ತಗಡಿನ ಪೆಟ್ಟಿಗೆಯನ್ನು ಹೊರಿಸಿಕೊಂಡು ಹೊರಡುತ್ತಾಳೆ.
ಆ ಮನೆಗೆ ಹೋಗಿ ಬಂದು ಬರಿ ನೋವು ತಿನ್ನುತ್ತ ಮಲಗಿರುವ ಹೆಂಗಸನ್ನು ನೋಡಿ-
“ಗಾಬರಿ ಏನಿಲ್ಲ, ಮೊದಲು ನೀವು ಎಲೆ ಅಡಿಕೆ ತರ್‍ಸಿ“ಎಂದು ಹೇಳಿ ಜಗಲಿಯ ಮೇಲೆ ಕೂಡುತ್ತಾಳೆ. ಮನೆಯವರು ತಂದ ಎಲೆ ಅಡಿಕೆ ತಿನ್ನುತ್ತ ನೀರು ಕಾಯಿಸಲು, ಹಳೆ ಬಟ್ಟೆ ಸಿದ್ಧ ಪಡಿಸಲು ಹೇಳುತ್ತಾಳೆ. ಅವಳು ಅಲ್ಲಿರುವುದೇ ಒಂದು ಬಗೆಯ ಬಿಡುಗಡೆಯೆನಿಸಿ ಜನ ನಿರಾತಂಕವಾಗಿ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.
ಹಾಗೆಯೇ ಕೊಪೆಲನ ಮತ್ತೊಂದು ಬದಿಯಲ್ಲಿ ಮಿಂಗೇಲಿ, ಗಾಬ್ರಿಯೆಲ್, ಇಂತ್ರು, ಸಾಲಾದೋರ, ಸಿಂಜಾಂವಂ ಮೊದಲಾದವರ ಮನೆಗಳಿವೆ. ಇವರು ಕೂಡ ಘಟ್ಟದ ಕೆಳಗಿನಿಂದ ಬಂದವರೇ. ಹಿಂದೆ ಬೇಸಿಗೆ ಪ್ರಾರಂಭವಾದಾಗ ಬಂದು ಮಳೆಗಾಲ ಪ್ರಾರಂಭವಾಗುತ್ತಿದೆ ಅನ್ನುವಾಗ ತಿರುಗಿ ಹೋಗುತ್ತಿದ್ದವರು. ಈಗ ಕೆಲ ವರುಷಗಳಿಂದ ಇಲ್ಲಿಯೇ ಮನೆ ಮಾಡಿದ್ದಾರೆ.
ಇವರೆಲ್ಲ ಕ್ರೀಸುವರು ಅನ್ನುವುದು ಊರ ಜನರಿಗೆ ಯಾವಾಗಲೋ ಒಮ್ಮೆ ನೆನಪಿಗೆ ಬರುತ್ತದೆ. ಈ ಬಗ್ಗೆ ಊರ ಜನ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಕೂಡ. ಏಕೆಂದರೆ ಇವರು ಊರ ಜನರ ಕೆಲಸಗಳನ್ನು ಎಲ್ಲರಂತೆ ಮಾಡಿಕೊಡುತ್ತಾರೆ. ಇವರ ಹೆಸರುಗಳು ಪ್ರಾರಂಭದಲ್ಲಿ ಹೇಳಲು ಕೊಂಚ ತೊಂದರೆಯಾಗುತ್ತದೆ. ನಾಲಿಗೆ ತಟ್ಟನೆ ಹೊರಳುವುದಿಲ್ಲ. ಏಕೆ ಹೀಗೆ ಎಂದು ಗೊಂದಲವೂ ಆಗುತ್ತದೆ. ಅವರೂ ಇವರ ಹೆಸರುಗಳನ್ನು ಮೊಟಕು ಮಾಡಿ, ಕತ್ತರಿಸಿ ಅವರು ಉಪಯೋಗಿಸುತ್ತಾರೆ. ಗಾಬ್ರಿಯೆಲ್ ಗಾಬ್ರಣ್ಣ ಆಗುತ್ತಾನೆ. ಇಂತ್ರು ಇಂತ್ರಣ್ಣ ಆಗುತ್ತಾನೆ. ಸಿಂಜಾಂವಂ ಸಿಂಜಪ್ಪ ಆಗುತ್ತಾನೆ. ಇನ್ನು ಉಡಿಗೆ ತೊಡಿಗೆ ಮಾತು ರೀತಿಯಲ್ಲಿ ಇವರು ಊರವರಿಂದ ತೀರಾ ಭಿನ್ನವಾಗಿಲ್ಲ. ಇತ್ತೀಚೆಗೆ ಇವರು ಸಣ್ಣದೊಂದು ಗುಡಿ ಕಟ್ಟಿದ್ದಾರೆ. ಆ ಗುಡಿಗೂ ಇವರು ವಿಶೇಷವಾಗಿ ಹೋಗುವುದು ಕಾಣುತ್ತಿಲ್ಲ.

ಇವರು ಇಗರ್ಜಿ ಮಾತೆಯ ಪದ್ಧತಿ ಆಚರಣೆಗಳಿಂದ ದೂರವಿದ್ದಾರೆ. ಊರಿನಲ್ಲಿ ಬೇರೆಲ್ಲ ಜಾತಿ ಧರ್ಮಗಳವರು ತಮ್ಮ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಯುತ್ತಿರುವಾಗ ಕ್ರೀಸುವರು ಮಾತ್ರ ಎಲ್ಲೂ ಕೂಡ ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳದೆ, ಕ್ರೈಸ್ತ ಧರ್ಮಾಚರಣೆಯನ್ನು ಪ್ರಕಟಿಸದೆ ಕ್ರೀಸನ ಹೆಸರನ್ನು ಪ್ರಚುರ ಪಡಿಸದೆ ಗುಂಪಿನಲ್ಲಿ ಕಣ್ಮರೆಯಾಗಿ ಬಿಟ್ಟಿದ್ದಾರೆ. ಹಿಂದುಗಳು, ಮುಸಲ್ಮಾನರು ಊರಿನಲ್ಲಿ ದೊಡ್ಡದೊಡ್ಡ ದೇವಾಲಯ ಮಸೀದಿಗಳನ್ನು ಕಟ್ಟಿರುವಾಗ ಕ್ರೀಸುವರು ಗುಡಿಸಲ ಆಕಾರದ ಒಂದು ಕೊಪೆಲ ಕಟ್ಟಿದ್ದಾರೆ. ಇದಕ್ಕೂ ಕೂಡ ಅವರು ಈವರೆಗೂ ಬರುತ್ತಿರಲಿಲ್ಲವೇನೋ! ಇದು ಊರಿನಲ್ಲಿ ಯಾರಿಗೂ ಗೊತ್ತಿಲ್ಲ.

ಅಂದು ಹೊನ್ನಾವರದಿಂದ ಬಂದ ತಮಗೆ ಕೊಪೆಲನ್ನು ಹುಡುಕುವುದು ತುಂಬಾ ಕಷ್ಟವಾಯಿತು. ಗಾಡಿಯನ್ನು ಊರಿನ ಹಲವಾರು ಬೀದಿಗಳಲ್ಲಿ ಮೆರವಣಿಗೆಯಂತೆ ತೆಗೆದುಕೊಂಡು ಹೋಗಿ, ಕಡೆಗೆ ಒಂದೆಡೆ ನಿಲ್ಲಿಸಿ ಹಲವರಿಗೆ ಕೇಳಿದ ನಂತರ ಓರ್ವ,
“ಓ ಅಲ್ಲಿ..ಮಸೀದಿಯಿಂದ ಮುಂದೆ ಕಿರಸ್ತಾನರ ಸಾಲು ಮನೆಗಳತ್ತ ನೋಡಿ”-
ಎಂದು ಹೇಳಿದ. ನಂತರವೇ ಕೊಪೆಲಿಗೆ ದಾರಿ ಸಿಕ್ಕಿತು. ಸುಮಾರು ಇಪ್ಪತ್ತು ಕ್ರೀಸುವರ ಕುಟುಂಬಗಳಿರುವ ಊರಿನಲ್ಲಿ ಈ ಜನರ ದೇವರು ಧರ್ಮದ ಬಗ್ಗೆಯೇ ಗೊತ್ತಿಲ್ಲದಿರಲು ಮುಖ್ಯ ಕಾರಣ ಈ ಜನ ತಮ್ಮ ಧರ್ಮ ಸಂಪ್ರದಾಯಗಳಿಂದ ದೂರವಿರುವುದೇ ಅಲ್ಲವೇ?
ತಾವು ಈ ಊರಿಗೆ ಬಾರದೇ ಇದ್ದಿದ್ದರೆ ಈ ಜನ ಇನ್ನು ಕೆಲವು ದಿನಗಳಲ್ಲಿ ತಮ್ಮ ಹಿಂದಿನ ಊರಿನ ಜತೆ ಸಂಪರ್ಕ ಕಳೆದುಕೊಂಡಂತೆ ತಮ್ಮ ದೈವ ದೇವರು ಧರ್ಮಗಳ ಜತೆಯೂ ಸಂಬಂಧವನ್ನು ಕಳೆದುಕೊಂಡು ಬಿಡುತ್ತಿದ್ದರೇನೋ. ಸದ್ಯ ತಾನು ಬಂದೆ. ಈಗ ಕಳೆದು ಹೋಗುತ್ತಿರುವ ಈ ಜನರನ್ನು ಇವರ ಆತ್ಮಗಳನ್ನು ಕ್ರಿಸ್ತನಿಗಾಗಿ ರಕ್ಷಿಸಿಕೊಂಡು ಬರಬೇಕಾಗಿದೆ.
ಹೀಗೊಂದು ತೀರ್ಮಾನಕ್ಕೆ ಬರುತ್ತಾರೆ ಪಾದರಿ ಗೋನಸಾಲ್ವಿಸ್.

-೩-

ಮುಂದಿನ ಕೆಲವೇ ದಿನಗಳಲ್ಲಿ ಶಿವಸಾಗರದ ಕ್ರೈಸ್ತ ಸಮೂಹದ ಸ್ಪಷ್ಟ ಪರಿಚಯ ಪಾದರಿ ಗೋನಸಾಲ್ವಿಸರಿಗೆ ಆಯಿತು. ಇಲ್ಲಿಯ ಬಹುತೇಕ ಕ್ರೀಸುವರು ಕೊಪೆಲಗೆ ಅನತಿ ದೂರದಲ್ಲಿ ಒಂದು ಧೂಪದ ಮರ ಹಾಗೂ ಒಂದು ಔಡಲ ಮರದ ನಡುವಿನ ಚೌಡಿಯನ್ನು ಪೂಜಿಸುತ್ತಿದ್ದರು. ಆ ಕಲ್ಲಿಗೆ ಇವರೇ ತೆಂಗಿನಕಾಯಿ ಒಡೆಯುವುದು, ಊದಿನ ಕಡ್ಡಿ ಹಚ್ಚುವುದು. ಅಲ್ಲಿಯ ಕುಂಕುಮವನ್ನು ತಾವು ಬಳಿದುಕೊಳ್ಳುವುದು ನಡೆಸುತ್ತಿದ್ದರು. ಈ ದೇವರು ಕ್ರೈಸ್ತರಿಗೇನೆ ಮೀಸಲಾದ ದೇವರೇನೂ ಆಗಿರಲಿಲ್ಲ. ಇಲ್ಲವೇ ಕ್ರೈಸ್ತರು ತಮಗಾಗಿ ಸೃಷ್ಟಿಸಿಕೊಂಡ ದೇವರೂ ಆಗಿರಲಿಲ್ಲ. ಕೊಪೆಲಿನ ಆಸು ಪಾಸಿನಲ್ಲಿಯ ಇತರೇ ಮತಸ್ತರು ಕೂಡ ಈ ದೇವರಿಗೆ ನಂಬಿಕೊಂಡು ಬಂದಿದ್ದರು. ಅವರ ಜತೆಗೆ ಕ್ರೀಸುವರೂ ಸೇರಿಕೊಂಡರು. ಹಾಗೆ ಮಾಡಬೇಡಿ ಅದು ನಿಮ್ಮ ದೇವರಲ್ಲ ಎಂದು ಹೇಳಲು ಅವರ ನಡುವೆ ಯಾರೂ ಇರಲಿಲ್ಲ. ಅವಿಶ್ವಾಸದ ಕಂದಕದಿಂದ ಅವರನ್ನು ತಪ್ಪಿಸುವವರು ಬಳಿ ಇರಲಿಲ್ಲ. ಅವರು ಸುಲಭವಾಗಿ ಈ ದೇವರಿಗೆ ಬಲಿಯಾದರು.

ಅಲ್ಲದೇ ಭೂತ ಪ್ರೇತಗಳು, ನಿಮಿತ್ತ ನೋಡುವುದು, ಭವಿಷ್ಯ ಕೇಳುವುದು, ಕವಡ ಹಾಕಿ ನೋಡುವುದು. ಮಾಟ ಮಂತ್ರ ಮೊದಲಾದ ಅನಿಷ್ಠ ಪದ್ದತಿಗಳೂ ಕ್ರೀಸುವರಲ್ಲಿ ನೆಲೆ ನಿಂತಿದ್ದವು. ಮಕ್ಕಳಿಗೆ ತಾಯಿತ ಕಟ್ಟಿಸುವುದು, ದೊಡ್ಡವರು ತೋಳಿಗೆ ಚೀಟಿ ಕಟ್ಟಿಕೊಳ್ಳುವುದು, ಕಾಯಿಲೆ ಬಂದರೆ, ಮನೆಯಲ್ಲಿ ಏನೋ ಕೆಡುಕಾದರೆ ಭೂತ ಪ್ರೇತಗಳಿಗೆ ಹರಕೆ ಕಾಣಿಕೆ ನೀಡುವುದು ಮೊದಲಾದ ಅಭ್ಯಾಸಗಳು ಬಲವಾಗಿ ನೆಲೆಯೂರಿದ್ದವು.
’ಕ್ರಿಸ್ತಪ್ರಭುವೆ ನಮ್ಮ ಜನರನ್ನು ಈ ಎಲ್ಲ ಮೌಢ್ಯಗಳಿಂದ ದೂರ ಮಾಡು…ಅವರನ್ನು ನಿಜ ದೇವರತ್ತ ಕರೆದುಕೊಂಡು ಹೋಗು..ಅವರಿಗೆ ಸನ್ಮಾರ್ಗ ತೋರಿಸುವಂತಹ ಶಕ್ತಿಯನ್ನು ನನಗೆ ನೀಡು.’ ಎಂದು ಅವರು ಪ್ರಭುವಿನಲ್ಲಿ ಬೇಡಿಕೊಂಡರು.

ಶಿವಸಾಗರದ ಕ್ರೀಸುವರ ಈ ಸ್ವಭಾವದ ಬಗ್ಗೆ ಯೋಚಿಸಿದಾಗ ಅವರಿಗೆ ತಟ್ಟನೆ ಗೋವಾದಲ್ಲಿ ತಾವು ಕೇಳಿದ ಒಂದು ವಿಷಯ ನೆನಪಿಗೆ ಬಂದಿತು.
ಅವರು ಹತ್ತು ವರ್ಷ ಪಾದರಿಯಾಗಿದ್ದ ಬಾಲ ಏಸುವಿನ ಇಗರ್ಜಿಯ ಹಿಂಬದಿಯಲ್ಲಿ ಅನ್ನುವ ಹಾಗೆ ಒಂದು ಬರಿದಾದ ನಿವೇಶನವಿತ್ತು. ಒಂದಿಷ್ಟು ಮರಗಳು, ಪೊದೆಗಳು ಅಲ್ಲಿ ಬೆಳೆದಿದ್ದವು. ಮೂರು ನಾಲ್ಕು ಮೋಟು ಗೋಡೆಗಳು, ಕಮಾನುಗಳು ಒಂದನ್ನೊಂದು ಕತ್ತರಿಸಿಕೊಂಡು ನಿಂತಿದ್ದವು. ಈ ಸ್ಥಳವನ್ನು ಅಲ್ಲಿಯ ಜನ ಇಂಕ್ವಿಜಿಷನ್ ಜಾಗ ಎಂದೇ ಜನ ಕರೆಯುತ್ತಿದ್ದರು. ಅಲ್ಲಿಗೆ ಯಾರೂ ಹೋಗುತ್ತಿರಲಿಲ್ಲ. ಮಕ್ಕಳು ಕೂಡ ಅಲ್ಲಿ ಹೋಗಲು ಹೆದರುತ್ತಿದ್ದವು. ಅವರ ಮಾತಿನ ಹಿಂದೆ ಎನೋ ಭೀತಿ, ವಿಷಾದ ಇರುತ್ತಿತ್ತು. ಅತ್ತ ತಿರುಗಿದರೂ ಸಾಕು ಮುಖದ ಮೇಲೆ ಕರಿ ನೆರಳು ಸರಿದುಹೋದ ಹಾಗೆ ಜನ ವರ್ತಿ ಸುತ್ತಿದ್ದರು. ಅಲ್ಲೊಂದು ನಿಗೂಢತೆ ಕಪ್ಪು ಮುಸುಕು ಧರಿಸಿ ಸುಳಿದಾಡುತ್ತಿತ್ತು.

ತಾನು ಪಾದರಿಯಾಗಿ ಅಲ್ಲಿಗೆ ಹೋದನಂತರ ಈ ಎಲ್ಲ ಮಾತುಗಳೂ ತನ್ನ ಗಮನಕ್ಕೆ ಬಂದವು. ತಾನು ಈ ಬಗ್ಗೆ ಕುತೂಹಲ ಗೊಂಡೆ. ಈ ಸ್ಥಳದಲ್ಲಿ ನಡೆದಿರಬಹುದಾದ ಇಂಕ್ವಿಜಿಷನ್ ಬಗ್ಗೆ ತಿಳಿಯುವ ಯತ್ನ ಮಾಡಿದೆ.

ಇನ್ನೂರು ಮುನ್ನೂರು ವರ್ಷಗಳ ಹಿಂದೆ ಕ್ರೈಸ್ತ ಮತವನ್ನು ಸ್ವೀಕರಿಸಿದ ನವಕ್ರೈಸ್ತರು ತಮ್ಮ ಮೂಲ ಮತದ ಆಚಾರ ಪದ್ದತಿಗಳನ್ನು ತ್ಯಜಿಸದೇ ಹೋದಾಗ ಅಂತವರನ್ನು ಕಂಡು ಹಿಡಿದು ಶಿಕ್ಷಿಸಲು ಪೋರ್ಚುಗಿಸರು ನಡೆಸಿದ ಈ ಧಾರ್ಮಿಕ ವಿಚಾರಣೆ ಇಂಕ್ವಿಜಿಷನ್ ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿತ್ತು. ಸ್ಪೇನ್, ಇಟಲಿ, ಪೋರ್ಚುಗಲ್ಲಿನಲ್ಲಿ ನಡೆಸಿದ ಈ ಧಾರ್ಮಿಕ ವಿಚಾರಣೆಯಲ್ಲಿ ಇಂಕ್ವಿಜಿಷನ್ ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿತ್ತು. ಸ್ಪೇನ್, ಇಟಲಿ, ಪೋರ್ಚುಗಲ್ಲಿನಲ್ಲಿ ನಡೆಸಿದ ಈ ಧಾರ್ಮಿಕ ವಿಚಾರಣೆಯನ್ನು ಪೋರ್ಚುಗೀಸರು ಗೋವಾದಲ್ಲಿ ಕೂಡ ನಡೆಸಿ ಸುಮಾರಷ್ಟು ಜನರನ್ನು ಶಿಕ್ಷೆಗೆ ಒಳಪಡಿಸಿದ್ದರು.
ನವಕ್ರೈಸ್ತರು ಎಂದು ಕರೆಸಿಕೊಂಡವರು ಬಹಿರಂಗದಲ್ಲಿ ಕ್ರೈಸ್ತರ ಆಚಾರ ವಿಚಾರಗಳನ್ನು ಅನುಸರಿಸುತ್ತ, ಅಂತರಂಗದಲ್ಲಿ ಬೇರೆ ಧರ್ಮ ದೇವರುಗಳಿಗೆ ನಿಷ್ಠರಾಗಿರುತ್ತಿದ್ದರೆಂದು ಹೇಳಲಾಗಿದೆ. ಇಂತಹ ವ್ಯಕ್ತಿಗಳನ್ನು ಹುಡುಕಿ ಅವರ ಬಗ್ಗೆ ವಿಚಾರಣೆ ನಡೆಸಿ ಮೂರು ನಾಲ್ಕು ವರ್ಷ ಇವರನ್ನು ಸೆರೆಮನೆಗಳಲ್ಲಿ ಇರಿಸಿ ಕೊನೆಗೊಂದು ಸಾರಿ ಬೆಂಕಿ ಇಟ್ಟು ಸುಡಲಾಗುತ್ತಿತ್ತು. ಹೀಗೆ ಸುಡುವ ಮುನ್ನ ಇವರು ಎಸಗಿದ ಅಪರಾಧ ಎಂತಹದು ಎಂಬುದನ್ನು ಬರೆದು ಇವರ ಕುತ್ತಿಗೆಗೆ ತೂಗುಹಾಕಲಾಗುತ್ತಿತ್ತು.
ಕ್ರೈಸ್ತರಾಗಿ ಮತಾಂತರ ಹೊಂದಿದ ಹಿಂದುಗಳು ತಮ್ಮ ಹಿಂದಿನ ಹೆಸರುಗಳನ್ನು ಮುಂದುವರೆಸಿದ್ದರು. ಮನೆಯಲ್ಲಿ ಹಿಂದು ದೇವರುಗಳನ್ನು ಗುಪ್ತವಾಗಿ ಆರಾಧಿಸುತ್ತಿದ್ದರು. ಮದುವೆ ಮುಂತಾದ ಸಂದರ್ಭಗಳಲ್ಲಿ ಹಿಂದು ಪದ್ದತಿಗಳಿಗೆ ಜೋತು ಬಿದ್ದಿದ್ದರು. ಇದು ಕ್ರೈಸ್ತ ಜಿಣಿಗೆಗೆ ವಿರುದ್ಧವೆಂದು ಪಾದರಿಗಳು ಸಾರಿದರು. ಇಂತಹ ಜನರನ್ನು ಹುಡುಕಿ ಇವರಿಗೆ ಶಿಕ್ಷೆ ನೀಡಿದರು. ನೂರು ಇನ್ನೂರು ವರ್ಷಗಳವರೆಗೆ ಈ ವಿಚಾರಣೆ ನಿರಂತರವಾಗಿ ನಡೆದು ಶಿಸ್ತಿಗೆ ಒಳಗಾಗಿ ಸತ್ತವರನ್ನು ಅಲ್ಲಲ್ಲಿ ಹೂಳಲಾಯಿತು. ಕೆಲ ಕಟ್ಟಡಗಳು ಈ ವಿಚಾರಣೆಗೆಂದೇ ಕಟ್ಟಲ್ಪಟ್ಟವು.
ನವಕ್ರೈಸ್ತರಲ್ಲಿ ಬಹಳ ಜನ ವಿಚಾರಣೆಗೆ ಹೆದರಿ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡರು. ತಮ್ಮ ಹಿಂದಿನ ದೇವರುಗಳನ್ನು ತೊರೆದರು. ಎಲ್ಲ ಸಂದರ್ಭಗಳಲ್ಲಿಯೂ ಕ್ರಿಶ್ಚಿಯನ್ ವಿಧಿವಿಧಾನಗಳನ್ನೇ ಅನುಸರಿಸಿ ಇವರೆಲ್ಲ ಪಕ್ಕಾ ಕ್ರೈಸ್ತರಾದರು. ಕೆಲವರು ಮಾತ್ರ ಗೋವಾದಿಂದ ನೆರೆ ರಾಜ್ಯಗಳಿಗೆ ಓಡಿ ಹೋದರು.
ಪಾದರಿ ಗೋನಸಾಲ್ವಿಸರಿಗೆ ಈ ವಿಷಯ ಸವಿಸ್ತಾರವಾಗಿ ತಿಳಿಯಿತು. ಈ ವಿಚಾರಣೆ ನಡೆಯುತ್ತಿದ್ದ ಒಂದು ಕಟ್ಟಡ ತಮ್ಮ ಇಗರ್ಜಿಯ ಹತ್ತಿರವೇ ಇರುವುದನ್ನು ಇವರು ಖಚಿತಪಡಿಸಿಕೊಂಡರು. ಆ ಕಟ್ಟಡದ ಬಗ್ಗೆ ಅಲ್ಲಿ ನಡೆದ ವಿಚಾರಣೆಯ ಬಗ್ಗೆ ಜನಭೀತಿಯನ್ನೋ ವಿಷಾದವನ್ನೋ ವ್ಯಕ್ತಪಡಿಸುವುದು ಕೂಡ ಇವರ ಗಮನಕ್ಕೆ ಬಂದಿತು.
ಆದರೆ ಈ ವಿಚಾರಣೆಯಲ್ಲಿ ಯಾವುದೇ ತಪ್ಪು ಇಲ್ಲ ಎಂದವರು ನಂಬಿದರು.
ಕ್ರಿಸ್ತನನ್ನು ರಕ್ಷಕ ಎಂದು ನಂಬಿದವ ಬೇರೆ ಯಾರನ್ನೂ ನಂಬಬೇಕಾಗಿಲ್ಲ. ಕ್ರೀಸುವರು ಬೇರೊಂದು ಧರ್ಮದ ಆಚಾರ ವಿಚಾರಗಳಿಗೆ ಜೋತು ಬೀಳುವ ಅವಶ್ಯಕತೆಯೂ ಇಲ್ಲ. ಏಕೆಂದರೆ ಕ್ರೈಸ್ತ ಧರ್ಮ ಪರಿಪೂರ್ಣವಾದದ್ದು. ಅದನ್ನು ಒಪ್ಪಿ ಸ್ವೀಕರಿಸಿದ ಮೇಲೆ ಅದನ್ನಷ್ಟೇ ಅನುಸರಿಸಬೇಕು. ಯಾರು ಕೂಡ ಈರ್ವರು ಯಜಮಾನರ ಸೇವೆ ಮಾಡಲಾರರು ಎಂದು ಕ್ರಿಸ್ತನೇ ಹೇಳಲಿಲ್ಲವೇ?
ನವಕ್ರೈಸ್ತರು ಕ್ರೈಸ್ತರಾಗಿ ಪರಿವರ್ತನೆ ಹೊಂದಿದ ಕೂಡಲೇ ಅವರ ಹಿಂದಿನ ಧರ್ಮ ದೇವರನ್ನು ತ್ಯಜಿಸಬೇಕಿತ್ತು. ಅವರು ಅದನ್ನು ತ್ಯಜಿಸಲಿಲ್ಲವಾದ್ದರಿಂದ ಈ ವಿಚಾರಣೆ, ಶಿಕ್ಷೆ ಅನಿವಾರ್ಯವಾಯಿತು. ಇದರಿಂದ ಉಪಯೋಗವೂ ಆಯಿತು. ಕ್ರೀಸುವರು ಶುದ್ಧರಾದರು. ಅವರ ಮೂಲ ಧರ್ಮ ದೇವರನ್ನು ಅವರು ಸಂಪೂರ್ಣವಾಗಿ ತ್ಯಜಿಸಿದರು.

ಇಂಕ್ವಿಜಿಷನ್ ಬಗ್ಗೆ ವಿವರ ತಿಳಿದ ನಂತರ ಪಾದರಿ ಗೋನಸಾಲ್ವಿಸರ ಭಕ್ತಿ ನಿಷ್ಠೆ ಮತ್ತೂ ಅಧಿಕವಾಯಿತು. ಧರ್ಮವನ್ನು ಜನರ ಮನಸ್ಸಿನಲ್ಲಿ ಬಿತ್ತಬೇಕೆಂದರೆ ಹೀಗೊಂದು ಕಠಿಣ ದಾರಿಯನ್ನು ಕಂಡುಕೊಳ್ಳುವುದು ಅನಿವಾರ್ಯ ಎನಿಸಿತು. ಹೀಗಾಗಿ ಅವರು ಕೂಡ ತಮ್ಮ ಧಾರ್ಮಿಕ ಧೋರಣೆಯ ಬಗ್ಗೆ ಬಿಗಿಯಾಗಿ ವರ್ತಿಸತೊಡಗಿದರು.

ಪಾದರಿಯಾದ ಮೊದಲ ಐದು ವರ್ಷಗಳವರೆಗೆ ಅವರು ಪಾದರಿ ಫ಼ಿಯಟ್ಟರ ಸಹಾಯಕರಾಗಿದ್ದರು. ಆಗ ಇವರಿಗೆ ಅಷ್ಟೇನೂ ಜವಾಬ್ದಾರಿ ಇರಲಿಲ್ಲ. ಅವರ ಮರಣದ ನಂತರ ಇವರು ಸ್ವತಂತ್ರರಾದರು. ಇಗರ್ಜಿಯ ಏಕೈಕ ಧರ್ಮಾಧಿಕಾರಿಯಾದರು. ಆಡಳಿತ ತಮ್ಮ ವಶಕ್ಕೆ ಬರುತ್ತಿದ್ದಂತೆಯೇ ಜನರ ಆಧ್ಯಾತ್ಮಿಕ ಬದುಕನ್ನು ರೂಪಿಸಲು ಮುಂದಾದರು. ಇಂಕ್ವಿಜಿಷನ್ ಮೂಲಕ ನವಕ್ರೈಸ್ತರನ್ನು ಶುದ್ಧ ಕ್ರೈಸ್ತರನ್ನಾಗಿಸುವ ಕೆಲಸ ನಡೆದ ಹಾಗೆಯೇ ಕ್ರೈಸ್ತರು ಅವರ ಧರ್ಮದೇವರು ಸಂಪ್ರದಾಯಗಳನ್ನು ಬಿಡದಂತೆ ನೋಡಿಕೊಳ್ಳಲು ಕೂಡ ಕೆಲ ಬಿಗಿ ನಿಯಮಗಳನ್ನು ಅನುಷ್ಠಾನಕ್ಕೆ ತರಬೇಕು ಅಂದುಕೊಂಡರು. ಎಲ್ಲರೂ ಪೂಜೆಗೆ ಬರಬೇಕು. ಪಾಪ ನಿವೇದನೆ ಮಾಡಬೇಕು. ದಿವ್ಯ ಪ್ರಸಾದ ಸ್ವೀಕರಿಸಬೇಕು. ಇಗರ್ಜಿಗೆ ಸಲ್ಲಿಸಬೇಕಾದ ಅನ್ವಾಲ ಕಾಯಿದೆ ಕೊಡಬೇಕು. ಮಕ್ಕಳನ್ನು ಜ್ಞಾನೋಪದೇಷಕ್ಕೆ ಕಳುಹಿಸಬೇಕು. ಪಾದರಿಗಳಿಗೆ ವಿಧೇಯರಾಗಿರಬೇಕು ಎಂಬಿತ್ಯಾದಿ ನಿಯಮಗಳನ್ನು ಜನ ಮುರಿಯದಂತೆ ನೋಡಿಕೊಂಡರು. ಕೇವಲ ಮಾತಿಗೆ ಜನ ಬಗ್ಗದಿದ್ದಾಗ ಬೆದರಿಕೆ ಹಾಕಿದರು. ಕೋಪದಿಂದ ಕೂಗಾಡಿದರು. ಕೈಯಲ್ಲಿ ಬೆತ್ತ ಹಿಡಿದು ನಿಂತರು.ಇಗರ್ಜಿಯ ಯಾವುದೇ ಸೌಲಭ್ಯ ದೊರೆಯದಂತೆ ನೋಡಿಕೊಂಡರು. ಅವರ ಈ ವರ್ತನೆ ಅವರಿಗೆ ’ರಾಗಿಷ್ಟ ಪಾದರಿ’ ಎಂಬ ಹೆಸರನ್ನು ತಂದು ಕೊಟ್ಟಿತು. ಆದರೂ ಅವರು ಹಿಂದೆ ಸರಿಯಲಿಲ್ಲ. ದೇವರಿಗಾಗಿ ಅವರು ಯಾವುದೇ ಕಳಂಕ ಹೊರಲು ಸಿದ್ಧರಾಗಿದ್ದರು.

ಗೋವಾದಿಂದ ಕಾರವಾರಕ್ಕೆ ಅಲ್ಲಿಂದ ಹೊನ್ನಾವರಕ್ಕೆ ಬಂದ ಅವರಿಗೆ ಬೇರೊಂದು ಕ್ರೈಸ್ತ ಸಮೂಹ ಎದುರಾಯಿತು. ಗೋವಾದಿಂದ ಹೊರಗಿರುವ ಕ್ರೈಸ್ತರಲ್ಲಿ ಬಹುಪಾಲು ಜನ ಗೋವಾದಿಂದ ಓಡಿ ಬಂದವರು. ಗೋವಾದಲ್ಲಿ ಪೋರ್ಚುಗಿಸರು ನಡೆಸಿದ ಇಂಕ್ವಿಜಿಷನ್ನಿಂದ ತಪ್ಪಿಸಿಕೊಂಡು ಬಂದವರು. ಇವರೆಲ್ಲ ಕ್ರೈಸ್ತ ಧರ್ಮವನ್ನು, ಹಿಂದಿನ ಮತಾಚಾರಗಳನ್ನು ಉಳಿಸಿಕೊಂಡು ಬರಬೇಕೆಂಬ ಉದ್ದೇಶದಿಂದಲೇ ಓಡಿ ಬಂದವರಲ್ಲವೇ? ಈಗಲೂ ಅವರು ಹಿಂದಿನ ರೀತಿ ರಿವಾಜುಗಳನ್ನು ಇರಿಸಿಕೊಂಡಿದ್ದಾರೆ. ಅಂದರೆ ಇವರು ಈಗಲೂ ನಿಜ ಕ್ರೈಸ್ತರಾಗಿಲ್ಲ. ಅಂದ ಮೇಲೆ ಈಗ ಇವರಿಗೆ ಕ್ರೈಸ್ತ ಮತದ ದೀಕ್ಷೆ ನೀಡಬೇಕು ಎಂದು ನಿರ್ಧರಿಸಿದರು ಪಾದರಿ ಗೋನಸಾಲ್ವಿಸ್. ಈ ಕ್ರೈಸ್ತರ ಬಗ್ಗೆ ಏನೋ ಸಿಟ್ಟು, ತಾವು ಮಾಡಬಹುದಾದ ಕೆಲಸದ ಬಗ್ಗೆ ನಿಷ್ಠೆ ಕಾಣಿಸಿಕೊಂಡು ಅವರು ಹುರುಪುಗೊಂಡರು.
ಕ್ರೈಸ್ತರು ಜಾತ್ರೆಗಳಲ್ಲಿ ಭಾಗವಹಿಸಬಾರದು ಎಂದರು. ಗಾಡಿ ಹಬ್ಬ, ಹೋಳಿ ಹುಣ್ಣಿಮೆಗಳಲ್ಲಿ ಸೇರಿಕೊಳ್ಳಬಾರದು. ಯಕ್ಷಗಾನ ಮೊದಲಾದ ಆಟಗಳನ್ನು ನೋಡಬಾರದು. ಕ್ರೀಸುವರ ಮದುವೆಗಳಿಗೆ ಸ್ಥಳಿಯವಾದ ವಾಲಗವನ್ನು ಬಳಸಬಾರದು.
ಮಕ್ಕಳಿಗೆ ಕಾಯಿಲೆಯಾದಾಗ ಹಿಂದು ದೇವರುಗಳಿಗೆ ಹರಕೆ ಹೇಳಿಕೊಳ್ಳುವುದು, ಭೂತಗಳಿಗೆ ಕೋಳಿ ಕೊಡುವುದು. ಯಂತ್ರ ಮಂತ್ರ ಜಾತಕ ನೋಡಿಸುವುದು ಸಲ್ಲದು.
ಮದುವೆ ಮತ್ತೊಂದಕ್ಕೆ ವಾರ, ಅಮವಾಸ್ಯೆ, ಹುಣ್ಣಿಮೆ, ಎಂದೆಲ್ಲ ಲೆಕ್ಕ ಹಾಕಬಾರದು.
ಸತ್ತವರಿಗೆ ಎಡೆ ಇಡುವುದು. ಇತ್ಯಾದಿ ಮಾಡಬಾರದು. ಈ ಬಗೆಯ ನೂರಾರು ಪದ್ಧತಿಗಳನ್ನು ಕಂಡು ಗಮನಿಸಿ ಅವುಗಳನ್ನು ಖಂಡಿಸಿದರು.
ಇಗರ್ಜಿಯಲ್ಲಿ ಇಂತಹ ಕಾರ್ಯಗಳಲ್ಲಿ ನಿರತರಾದವರ ಹೆಸರುಗಳನ್ನು ಹೇಳಿದರು.
“ಸೈತಾನ ನಿಮ್ಮ ಕಿವಿಗಳಲ್ಲಿ ಬಾಲ ತುರುಕಿದ್ದಾನೆ. ನಿಮಗೆ ದೇವರ ಶಾಪವಿದೆ. ಇಗರ್ಜಿ ಮಾತೆಯ ಶಾಪ ನಿಮ್ಮ ಮೇಲೆ ಬೀಳುತ್ತದೆ. ನೀವೆಲ್ಲ ಶಾಶ್ವತ ಅಗ್ನಿಗೆ ಭಾಜನರಾಗುತ್ತೀರಾ’.
ಇಗರ್ಜಿಯ ಫ಼ುಲಪತ್ರಿಯ ಮೇಲೆ ನಿಂತು ಉರಿಯುವ ಬೆಂಕಿಯಾಗಿ ಫಟ ಫಟಿಸಿದರು.
ತಮ್ಮ ಮಾತು ಮೀರಿ ಹೋದವರನ್ನು ಹೊಡೆದು ದಂಡಿಸಲು ಕೂಡ ಅವರು ಹಿಂದೆ ಮುಂದೆ ನೋಡಲಿಲ್ಲ.
ಕಾರವಾರ ಹೊನ್ನಾವರಗಳ ಜನ ದಾರಿಗೆ ಬಂದರು. ಪಾದರಿ ಗೋನಸಾಲ್ವಿಸ್ ಅಂದರೇನೆ ಅಲ್ಲಿಯ ಜನರಿಗೆ ದುಃಸ್ವಪ್ನವಾಗಿ ಪರಿಣಮಿಸಿದರು.
ಗೋವಾ, ಕಾರವಾರ, ಹೊನ್ನಾವರಗಳ ನಂತರ ಇದೀಗ ಶಿವಸಾಗರ ಅವರ ಮುಂದೆ ಒಂದು ಸವಾಲಾಗಿ ನಿಂತಿದೆ.
ಸೊಂಟಕ್ಕೆ ಗರ್ದಲ(ಸೊಂಟದ ಪಟ್ಟಿ) ಬಿಗಿದುಕೊಂಡು ಅವರು ಒಂದು ಕೆಲಸ ಮಾಡಲು ಸನ್ನದ್ಧರಾದರು.
ಹೊಲ್ಡಾಲಿನಿಂದ ಹೊರತೆಗೆದು ಇರಿಸಿದ ದೇವರ ಪ್ರತಿಮೆ. ಪೈನೆಲ, ಅರ್ಲೂಕ, ಬೆಂತಿಣಿಗಳ ನೆನಪು ಅವರಿಗೆ ಆಯಿತು. ಹೊನ್ನಾವರ ಬಿಡುವಾಗ ದೇವರ ಪ್ರೇರಣೆಯಿಂದಲೋ ಏನೋ ಅವುಗಳನ್ನೆಲ್ಲ ಅವರು ಹೋಲ್ಡಾಲಿಗೆ ಹಾಕಿಕೊಂಡಿದ್ದರು.ಈಗ ಅವುಗಳೆಲ್ಲ ಪ್ರಯೋಜನಕ್ಕೆ ಬಂದವಲ್ಲ ಎಂದು ಮನಸ್ಸಿಗೆ ಸಮಾಧಾನ ಎನಿಸಿತು.
’ಬೋನಾ ಇವುಗಳನ್ನು ತೆಗೆದುಕೋ’ ಎಂದು ಬಟ್ಲರ್ ಬೋನಾಗೆ ಹೇಳಿ ಕೊಪೆಲನ ಬಾಗಿಲು ಎಳೆದುಕೊಂಡು ಅವರು ಹೊರಟರು.
ಗೋವಾ, ಕಾರವಾರ, ಹೊನ್ನಾವರಗಳಲ್ಲಿ ಜನರನ್ನು ನೋಡಿದಾಕ್ಷಣ ಅವರು ಕ್ರೀಸುವರು ಹೌದೋ ಅಲ್ಲವೋ ತಿಳಿಯುತ್ತದೆ. ಕುತ್ತಿಗೆಯಲ್ಲಿಯ ಅರ್ಲೂಕಿನ ಮೇಲಿರುವ ಉಬ್ಬು ಚಿತ್ರ ಅವರು ಕ್ರೀಸುವರು ಎಂಬುದನ್ನು ತಿಳಿಸುತ್ತದೆ. ಲೋಹದ ಈ ಪದಕದ ಮೇಲೆ ಕ್ರಿಸ್ತನ, ಮೇರಿ ಮಾತೆಯ, ಜೋಸೆಫರ ಚಿತ್ರವಿರುತ್ತದೆ. ಇಲ್ಲವೆ ಕ್ರೀಸುವರು ಕೈಗೆ ಮಿಂಜಿತ ಕಟ್ಟಿಕೊಂಡಿರುತ್ತಾರೆ. ಹಳದಿ ಕೆಂಪು ಬಣ್ಣದ ಈ ದಾರ ಅವರ ಧರ್ಮವನ್ನು ಸಾರುತ್ತದೆ. ಕೆಲವರ ಕುತ್ತಿಗೆಯಲ್ಲಿ ಸಂತರ ಚಿತ್ರವಿರುವ ಬೆಂತಿಣ್ ಗಳು ಇರುತ್ತವೆ.
ಕ್ರೀಸುವರ ಮನೆ ಬಾಗಿಲಲ್ಲಿ ಶಿಲುಬೆ ಇರುತ್ತದೆ. ಕ್ರಿಸ್ತ ಪ್ರಭುವಿನ, ಅವನ ತಂದೆ ಜೋಸೆಫರ, ತಾಯಿ ಮೇರಿಯ ಭಾವ ಚಿತ್ರಗಳಿರುತ್ತವೆ.
ಇಲ್ಲಿ ಇದಾವುದೂ ಇಲ್ಲ. ಅಂದರೆ ಇದೆಲ್ಲವನ್ನೂ ತಾನು ಈಗ ಆರಂಭಿಸಬೇಕಾಗಿದೆ. ಹೀಗೆಂದೇ ಸಿಮೋನನ ಮನೆಬಿಟ್ಟು ಉಳಿದ ಮನೆಗಳತ್ತ ಅವರು ನಡೆದರು.
ಮರಿಯಮ್ಮ ಕೊಟ್ಟಿಗೆಯಲ್ಲಿಯ ಶಗಣೆ ಬಾಚಿ ತಿಪ್ಪೆ ಗುಂಡಿಗೆ ಒಯ್ದು ಹಾಕುವಾಗ ಮನೆಬಾಗಿಲಲ್ಲಿ ಬಿಳಿ ನಿಲುವಂಗಿ ಕಂಡು ಗಾಬರಿಯಾದಳು. ದೇವರೆ, ಇವರು ಈಗಲೇ ಬರಬೇಕಿತ್ತೆ ಎಂದು ಜಗಲಿಗೆ ಓಡಿಬಂದು ಆಶೀರ್ವಾದಕ್ಕಾಗಿ ಕೈ ಜೋಡಿಸಿದಳು.
ಎಮ್ಮೆಗಳನ್ನು ಹೊಡೆದುಕೊಂಡು ಹೊರಟ ಅವಳ ಓರ್ವ ಮಗ ಪಾದರಿಯನ್ನು ಕಂಡದ್ದೇ, ಹಿತ್ತಲಿಗೆ ನುಗ್ಗಿ ಎಲ್ಲೋ ಮಾಯವಾದ. ಇನ್ನೋರ್ವ ಮನೆಯೊಳಗೆ ಅಡಗಿ ಕೊಂಡ.
ಎದಿರು ನಿಂತ ಮರಿಯಳನ್ನು ಅಪಾದ ಮಸ್ತಕ ದಿಟ್ಟಿಸಿ ನೋಡಿದರು ಪಾದರಿ. ಅವಳ ಕುತ್ತಿಗೆಯಲ್ಲಿ ಕಪ್ಪಗಾದ ಬಂಗಾರದ ತೆಳು ಸರಪಳಿಗೆ ಸಣ್ಣದೊಂದು ಶಿಲುಬೆ ತೂಗು ಬಿದ್ದೀತು. ಈ ಶಿಲುಬೆಯ ನಡುವೆ ಕೆಂಪು ಹರಳು. ಸ್ವಲ್ಪ ಸಮಾಧಾನವಾಯಿತು ಅವರಿಗೆ. ಕ್ರಿಸ್ತನ ಒಂದು ಲಾಂಛನ ಇವಳ ಕುತ್ತಿಗೆಯಲ್ಲಿದೆ. ಆದರೆ ಇವಳ ಮಕ್ಕಳ ಕುತ್ತಿಗೆ?
’ಎಲ್ಲಿ ಹುಡುಗರು?’ಪಾದರಿ ಗಡುಸಾಗಿಯೇ ಕೇಳಿದರು.
ಮರಿಯ ಒಳಬಾಗಿಲತ್ತ ತಿರುಗಿ, ಜಗಲಿಯ ತುದಿಗೆ ಬಂದು ಹಿತ್ತಲಿಗೆ ಮುಖ ಮಾಡಿ-
“..ಯೇಯ……..ಬಾಳಾ……ಗುಸ್ತೀನಾ….”
ಎಂದು ದೊಡ್ಡ ದನಿಯಲ್ಲಿ ಕೂಗು ಹಾಕಿದಳು. ಎರಡು ಮೂರು ಬಾರಿ ಕೂಗಿ-
“ಇಲ್ಲೇ ಇದ್ದರು..ಎಲ್ಲಿ ಹೋದರೋ..”
ಎಂದು ಪಾದರಿಯ ಮುಖ ನೋಡಿದಳು.
“ಇರಲಿ..ನೀವು ಯಾರೂ ಕ್ರಿಸ್ತನ ಜಿಣಿಯನ್ನು ಜೀವಿಸುತ್ತಿಲ್ಲ..ನೀವೆಲ್ಲ ಅನಭವಾಡ್ತಿಗಳಾಗಿ..ಅಪನಂಬಿಕೆಯುಳ್ಳವರಾಗಿ ನಾಶವಾಗಿದ್ದೀರ, ನಿಮಗೆ ನಿಜ ದೇವರಾದ ಏಸುವಿನಲ್ಲಿ ನಂಬಿಕೆಯಿಲ್ಲ ಶೃದ್ಧೆಯಿಲ್ಲ…ಆದರೆ ನಿಮ್ಮನ್ನು ಹೀಗೆಯೇ ಇರಗೊಡಬಾರದು ಅಂತ ನಾನು ಬಂದಿದ್ದೇನೆ..”
ಅವರು ಬೋನನತ್ತ ತಿರುಗಿದರು. ಆತ ಕೊಟ್ಟ ಅರ್ಲೂಕ ಹಾಗೂ ಮಿಂಜಿತಗಳನ್ನು ಮರಿಯಳ ಕೈಗೆ ಕೊಡುತ್ತ ಅವರೆಂದರು-
“..ಇವುಗಳನ್ನು ಮನೇಲಿ ಇರೋ ಎಲ್ಲರೂ ಕಟ್ಟಿಕೊಳ್ಳಬೇಕು..ಅಂದರೆ ನೀವು ಕ್ರೀಸುವರನ್ನೋದು ನೋಡಿದ ಕೂಡಲೆ ಗೊತ್ತಾಗುತ್ತೆ..ಕ್ರಿಸ್ತನಿಂದ ನಿಮಗೆ ರಕ್ಷಣೆ ಇರುತ್ತೆ..ಏನೇ ಕಂಟಕ ಬಂದರೂ ಏಸು ನಿಮ್ಮನ್ನು ಕಾಪಾಡತಾನೆ…”
ಇಷ್ಟು ಹೇಳಿ ಅವರು ಕೊಂಚ ತಡೆದು ನಿಂತರು. ಇಂತಹಾ ವಿಷಯಗಳ ಬಗ್ಗೆ ಮಾತನಾಡುತ್ತ ಅವರು ಭಾವಪರವಶರಾಗುತ್ತಿದ್ದರು. ಧರ್ಮ, ದೇವರು ಸಂಪ್ರದಾಯಗಳಿಗೆ ತಪ್ಪಿ ನಡೆಯುವವರನ್ನು ಕಂಡಾಗ ಅವರಿಗೆ ಸಿಟ್ಟು ಬರುತ್ತಿತ್ತು. ಕೋಪವೆಂದರೆ ಕಣ್ಣು ಕೆಂಪೇರುವ, ಮುಖ ಬಿಗಿದುಕೊಳ್ಳುವ ಕೋಪವಲ್ಲ, ಎದಿರು ನಿಂತಿರುವವರ ಕೆನ್ನೆಗೆಹೊಡೆದು , ಅವರ ಬೆನ್ನಿಗೆ ಮುಷ್ಠಿ ಕಟ್ಟಿ ಬಿಗಿದು, ಕೈಲಿರುವ ನಾಗರ ಬೆತ್ತ ಅವರತ್ತ ಬೀಸಿ ಅವರು ತಮ್ಮ ಕೋಪ, ಸಿಟ್ಟನ್ನು ಕಾರಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಗೋವಾ, ಕಾರವಾರ, ಹೊನ್ನಾವರಗಳಲ್ಲಿ ಅವರಿಗೆ ರಾಗಿಷ್ಟ(ಕೋಪಿಷ್ಟ) ಪಾದರಿ ಎಂಬ ಹೆಸರು ಬಿದ್ದಿತು. ಇವರೆಂದರೆ ಜನ ಹೆದರುತ್ತಿದ್ದರು. ಮಕ್ಕಳು ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದರು. ಇಲ್ಲಿ ಬಂದ ನಂತರ ಅವರ ಈ ಕೋಪ ಪ್ರದರ್ಶನ ಆಗಿರಲಿಲ್ಲ. ಇಲ್ಲಿಯ ಅವ್ಯವಸ್ಥೆ, ಕ್ರೀಸುವರ ದುರಂತ ಬದುಕು ನೋಡಿ ಅವರು ವ್ಯಗ್ರರಾಗಿದ್ದರು. ಅವರಿಗೆ ವಿಪರೀತ ಸಿಟ್ಟೂ ಬಂದಿತ್ತು. ಆದರೆ ಅದನ್ನು ತೋರಿಸಿಕೊಳ್ಳದೆ, ಆದಷ್ಟು ಒಳ್ಳೆಯ ರೀತಿಯಲ್ಲಿ ಜನರನ್ನು ಒಲಿಸಿಕೊಳ್ಳಬೇಕೆಂದು ಅವರು ನಿರ್ಧರಿಸಿದರು.
ಇಲ್ಲಿಯ ಕ್ರೈಸ್ತರು ಕ್ರೈಸ್ತರಾಗಿ ಉಳಿಯದೆ ಇರಲು ಕಾರಣ ಇಲ್ಲಿ ಪಾದರಿಗಳು ಇಲ್ಲದಿದ್ದುದು. ಕ್ರೈಸ್ತರಲ್ಲಿ ಗಾಢವಾದ
ಭಕ್ತಿ, ಶೃದ್ಧೆ ಇಲ್ಲದೇ ಹೋದದ್ದು. ಜನ ಸುತ್ತು ಮುತ್ತಲಿನವರು ಆರಾಧಿಸುವ ಮಾರಿ, ಚೌಡಿ, ಕಲ್ಲು ಕುಟಿಗನನ್ನು ಪೂಜಿಸತೊಡಗಿದ್ದುದು ಸರಿಯಲ್ಲವಾದರೂ ಈ ಕಾರ್ಯ ಇಲ್ಲಿ ನಡೆದಿದೆ. ಹೀಗಿರುವಾಗ ಈ ಜನರನ್ನು ಬೈಯ್ದು ಉಪಯೋಗವಿಲ್ಲ. ಬೇರೆ ದಾರಿ ಕಂಡುಕೊಳ್ಳಬೇಕು. ಅವರು ತಮ್ಮ ಕೋಪ ತಾಪಗಳನ್ನು ಪ್ರದರ್ಶಿಸಲು ಮುಂದಾಗಲಿಲ್ಲ. ಉಕ್ಕಿ ಬರುತ್ತಿರುವ ಸಿಟ್ಟನ್ನು ತಡೆದುಕೊಂಡು ಅವರು ಮರಿಯಳಿಗೆ ಕೇಳಿದರು.
“ನಿತ್ಯ ಮೂರು ಸಾರಿ ಮನೇಲಿ ಅಮೋರಿ ಮಾಡತೀರ?”
ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಇಗರ್ಜಿಯ ಗಂಟೆ ಹೊಡೆದಾಕ್ಷಣ ಪ್ರಾರ್ಥನೆ ಮಾಡಬೇಕೆಂಬುದು ಒಂದು ಕಡ್ಡಾಯ. ಈ ಪ್ರಾರ್ಥನೆ ಮಾಡದಿರುವುದು ಪಾಪ ಕೂಡ. ಮರಿಯ ಉತ್ತರ ನೀಡದೆ ನಿಂತಾಗ ಪಾದರಿ ಮುಂದಿನ ಪ್ರಶ್ನೆ ಕೇಳಿದರು.
’ಹೋಗಲಿ ಸಾಯಂಕಾಲ ಜಪಸರದ ಪ್ರಾರ್ಥನೆ?’ಆಗಲೂ ಅವಳು ಉತ್ತರಿಸಲಿಲ್ಲ.
’ ಬೇಡ ಮಕ್ಕಳಿಗೆಲ್ಲ ಶಿಲುಬೆಯ ವಂದನೆ ಮಾಡಲಿಕ್ಕೆ ಬರುತ್ತೆ ಅಲ್ಲವೇ?’
ಹಣೆ, ತುಟಿ, ಎದೆಯ ಮೇಲೆ ಶಿಲುಬೆಯ ಗುರುತು ಬರೆದುಕೊಂಡು, ಪವಿತ್ರ ಶಿಲುಬೆಯ ಕೃಪೆಯಿಂದ ನಮ್ಮನ್ನು ಕಷ್ಟಕಾಲದಲ್ಲಿ ರಕ್ಷಿಸು ಎಂದು ಹೇಳಿ ತಂದೆಯ ಪಿತನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ ಶಿಲುಬೆಯ ವಂದನೆ ಮಾಡುವುದು ಪ್ರತಿ ಕ್ರೀಸುವರ ಕರ್ತವ್ಯ. ಇದೂ ಬರುವುದಿಲ್ಲ ಎಂದರೇ ಆತ ಕ್ರಿಸ್ತನೇ ಅಲ್ಲ. ಮರಿಯಳ ಮಕ್ಕಳಿಗೆ ಇದಾದರೂ ಬರುತ್ತದೆಯೇ? ಯಾರಾದರೂ ಕಲಿಸಿದ್ದಾರೆಯೇ?
’ಹೇಳಿಕೊಡತೀನಿ ಪದ್ರಬಾ’ ಎಂದು ವಿನಯದಿಂದ ನುಡಿದಳು ಮರಿಯ.
’ ಆಯ್ತು…ಈ ಭಾನುವಾರದಿಂದ ಪ್ರತಿ ಭಾನುವಾರ ನೀವೆಲ್ಲ ಇಗರ್ಜಿಗೆ ಬರಬೇಕು..’ ಎಂದು ಆದೇಶ ನೀಡಿ ಅಲ್ಲಿಂದ ಹೊರಬಿದ್ದರು.
ಮರಿಯಳ ಮನೆ ಅಂಗಳ ದಾಟುವಾಗ-
“..ಏನಿದು..ಈ ಊರಿನಲ್ಲಿ ನಮ್ಮ ಧರ್ಮದ ಮೂಲ ಲಕ್ಷಣಗಳು ಯಾವುವು ಉಳಿದಂತಿಲ್ಲ…ನಾನಿಲ್ಲಿ ತುಂಬಾ ಕೆಲಸ ಆರಂಭಮಾಡಬೇಕಾಗಿದೆ.”
ಮುಂದೆ ಒಂದೊಂದೇ ಮನೆಯ ಒಳಹೋಗಿ ಬರುತ್ತಿದ್ದಂತೆಯೇ ಅವರು ತೀವ್ರವಾಗಿ ಅಸ್ವಸ್ಥಗೊಂಡರು. ಸೈತಾನ ತನ್ನ ಬಲೆಯನ್ನು ಚೆನ್ನಾಗಿ ಬೀಸಿದ್ದ. ಮೂರನೇ ಬಾರಿ ಕ್ರೀಸುವರ ಮನೆಗಳನ್ನು ಕಂಡಾಗಲಂತೂ ಅವರು ಬೆಂಕಿ ಸ್ಪರ್ಶವಾದ ಮದ್ದಿನಂತೆ ಸಿಡಿಮಿಡಿಗೊಂಡರು.
ಮೂರನೇ ಮನೆ ಸುತಾರಿ ಇನಾಸನ ಮನೆ. ಅಂಗಳದಲ್ಲಿ ಕಲಕುಟಿಗ ಬಂದು ಕುಳಿತಿದ್ದ. ಸಾನಬಾವಿ ಪೆದ್ರು ಮನೆಯಲ್ಲಿ ಹಿಂದು ಹೆಂಗಸೊಬ್ಬಳ ದರ್ಬಾರು ನಡೆದಿತ್ತು. ಸಾಂತಾಮೋರಿ ಊಟದ ಮನೆಯಲ್ಲಿ ದೇವರ ಪ್ರಾರ್ಥನೆ ಅಮೋರಿಗೆ ಜಾಗವಿರಲಿಲ್ಲ. ಪಾಸ್ಕೋಲನ ಮೇಸ್ತನ ಮನೆಯಲ್ಲಿ ಅಲ್ಪಸ್ವಲ್ಪ ದೈವ ಭಕ್ತಿ ಉಳಿದಿತ್ತು. ಬಲಗಾಲುದ್ಧ ಬಾಲ್ತಿದಾರ, ಬಳ್ಕೂರಕಾರ, ಕೈತಾನ, ಮಿಂಗೇಲಿ, ಇಂತ್ರು ಮೊದಲಾದವರಿಗೆ ದೇವರ ಸ್ಮರಣೆಯೆ ಆಗುತ್ತಿರಲಿಲ್ಲ. ವೈಜೀಣ್ ಕತ್ರೀನ ಒಬ್ಬಳಲ್ಲಿ ದೈವಭಕ್ತಿ ಇತ್ತು.
ದೇವರು, ಪ್ರಾರ್ಥನೆ, ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಇವುಗಳೆಲ್ಲ ನಿತ್ಯದ ಬದುಕಿಗೆ ಅವಶ್ಯಕ ಎಂಬ ವಿಷಯವನ್ನೇ ಇವರು ಮರೆತಂತಿತ್ತು. ಇವರನ್ನು ಮತ್ತೆ ಹಿಂದಿನ ದಾರಿಗೆ ತರುವ ಕೆಲಸವನ್ನು ಅವರು ಆರಂಭಿಸಿದರು.
ಉಳಿದ ಮನೆಗಳಿಗೆ ಹೋಗಿ ಪಾದರಿ ಅರ್ಲೂಕ ನೀಡಿದರು. ಮಿಂಜಿತಗಳನ್ನು ಕಟ್ಟಿಕೊಳ್ಳಲು ಹೇಳಿದರು. ಏಕಮಾತ್ರ ನಿಜದೇವನ ಮಹಿಮೆಯ ಕುರಿತು ಹೇಳಿದರು. ಅವನಿಂದ ಮಾತ್ರ ನಮಗೆ ರಕ್ಷಣೆ ಇದೆ. ಮೋಕ್ಷವಿದೆ ಎಂದರು. ನಾವು ಕ್ರೀಸುವರಾಗಿ ಹುಟ್ಟಿದ್ದೇವೆ. ಕ್ರೀಸುವರಾಗಿಯೇ ಬದುಕಬೇಕು. ಬೇರೆ ಯಾವುದೇ ದೇವರನ್ನು ನಂಬುವ ಪೂಜಿಸುವ ಕೆಲಸವನ್ನು ನಾವು ಮಾಡಬಾರದು.
ನಮ್ಮ ಮನೆಗಳಲ್ಲಿ ನಮ್ಮ ದೇವರ ಪ್ರತಿಮೆಗಳನ್ನು ಇಡೋಣ. ಮೇರಿ ಜೋಸೆಫ಼್ ರ, ಇತರೆ ಸಂತರ ಪೈನೆಲಗಳನ್ನು ಇಡೋಣ. ದಿನನಿತ್ಯ ಮೂರು ಬಾರಿ ಅಮೋರಿ, ಸಂಜೆ, ಜಪಸರ ಪ್ರಾರ್ಥನೆ. ಊಟಕ್ಕೆ ಮುನ್ನ, ಮಲಗುವ ಮುನ್ನ, ಎದ್ದ ತಕ್ಷಣ ದೇವರನ್ನು ಸ್ತುತಿಸಿ ಬಹಳ ಮುಖ್ಯವಾಗಿ ಭಾನುವಾರಗಳಂದು ತಪ್ಪದೆ ಪೂಜೆಯನ್ನು ಆಲಿಸಿ, ಪಾಪನಿವೇದನೆ ಮಾಡಿ, ಪಾಪಗಳಿಗೆ ಪ್ರಾಯಶ್ಚಿತ್ತ ಪಟ್ಟು ದಿವ್ಯ ಪ್ರಸಾದ ಸ್ವೀಕರಿಸಿ ಇಗರ್ಜಿಗೆ ಬನ್ನಿ. ಪಾದರಿ ದೇವರ ಪ್ರತ್ತಿನಿಧಿ. ಅವರಿಗೆ ವಿಧೇಯರಾಗಿರಿ. ಅವರ ಮಾತು ಕೇಳಿ. ದೇವರ ಹತ್ತು ಉಪದೇಶಗಳನ್ನು, ಇಗರ್ಜಿ ಮಾತೆಯ ನಿಯಮಗಳನ್ನು ಪಾಲಿಸಿ.
ಪ್ರತಿಯೊಂದು ಮನೆಯಲ್ಲೂ ಅವರು ಈ ಮಾತುಗಳನ್ನು ಹೇಳಿದರು. ಪ್ರತಿಯೊಬ್ಬರ ಮನಸ್ಸಿಗೆ ತಟ್ಟುವಂತೆ ಹೇಳಿದರು.
ಈ ಮಾತುಗಳನ್ನು ಹೇಳುವಾಗ ಅವರ ಎಡಗೈ ಹಸ್ತ ಎದೆಯ ಮೇಲಿರುತ್ತಿತ್ತು. ಬಲಗೈ ಯನ್ನು ಎತ್ತಿ ಹಿಡಿದಿರುತ್ತಿದ್ದರು. ಕೆಲ ಬಾರಿ ಬೈಬಲ್ ಈ ಕೈಲಿರುತ್ತಿತ್ತು. ಕಣ್ಣುಗಳನ್ನು ಅರೆ ಮುಚ್ಚಿಕೊಂಡಿರುತ್ತಿದ್ದರು. ಎತ್ತರದ ಅವರ ದನಿ ಗುಹೆಯಲ್ಲಿ ಮಾರ್ದನಿಗೊಳ್ಳುತ್ತಿರುವಂತೆ ಕೇಳಿಸುತ್ತಿತ್ತು. ಏಸುವಿನ ಮತವನ್ನು ಪ್ರಚುರ ಪಡಿಸಿದ ಹಿಂದಿನ ಸಂತರ ವ್ಯಕ್ತಿತ್ವ, ಧಾಟಿ ಶೈಲಿಯನ್ನು ಮನಸ್ಸಿಗೆ ತಂದುಕೊಂಡು ಅವರು ಈ ಮಾತುಗಳನ್ನು ಹೇಳುತ್ತಿದ್ದರು.
ದೇವರ ವಾಕ್ಯಗಳನ್ನು ಹೊಸದಾಗಿ ಜನರ ನಡುವೆ ಬಿತ್ತುವುದು ಎಷ್ಟು ಮುಖ್ಯವೋ ಈ ವಾಕ್ಯಗಳನ್ನು ಕ್ರೀಸುವರಾದವರ ನಡುವೆ ಜೀವಂತವಾಗಿ ಇರುವಂತೆ ನೋಡಿಕೊಳ್ಳುವುದೂ ಕೂಡ ಮುಖ್ಯವೇ. ಇಂತಹಾ ಒಂದು ಕೆಲಸವನ್ನು ತಾನು ಮಾಡುತ್ತಿರುವ ಬಗ್ಗೆ ಅವರಿಗೆ ಹೆಮ್ಮೆ ಎನಿಸಿತು. ತಾನು ಪಾದರಿಯಾದದ್ದು ಈಗ ಸಾರ್ಥಕವಾಯಿತು. ಫಲಕಾರಿಯಾಯಿತು. ಅಲ್ಲಿ ಆಗಿದ್ದರೆ ನಿತ್ಯ ಇಗರ್ಜಿಗೆ ಬರುವ ಜನರಿಗೆ ದಿವ್ಯ ಪ್ರಸಾದ ಕೊಡುತ್ತ ಪೂಜೆ ಮಾಡುತ್ತ ತಾನು ಯಾಂತ್ರಿಕವಾಗಿ ಬದುಕುತ್ತಿದ್ದೆ. ಆದರೆ ಇಲ್ಲಿ ಕ್ರಿಸ್ತನನ್ನು ಮರೆತಿರುವ ಬೇರೆ ದೇವರುಗಳ ಪ್ರಭಾವಕ್ಕೆ ಒಳಗಾಗಿರುವ ಜನರನ್ನು ಉಳಿಸಿಕೊಳ್ಳುತ್ತಿದ್ದೇನೆ.
ಆ ವಾರವೆಲ್ಲ ಅವರು ಇದೇ ಕೆಲಸ ಮಾಡಿದರು. ಮತ್ತೆ ಮತ್ತೆ ಕ್ರೀಸುವರ ಮನೆಗಳಿಗೆ ಹೋದರು. ಬೆಳಕು ಹರಿಯುತ್ತಿರುವಾಗಲೆ, ಹೋಗಿ ಕಲ್ಲು ಕೆತ್ತಲು, ಕಲ್ಲು ಕಟ್ಟಲು ಹೊರಟವರನ್ನು ತಡೆದು ನಿಲ್ಲಿಸಿದರು. ಲಾದ್ರು, ಪೆದ್ರು, ಕೈತಾನ, ಪಾಸ್ಕೋಲ, ಇಂತ್ರು, ಸಾವೇರ, ಜ್ಯೂರ್ನಿ ಇವರನ್ನು ನಿಲ್ಲಿಸಿಕೊಂಡು ಇವರ ಕುತ್ತಿಗೆಗೆ ಅರ್ಲೂಕಗಳನ್ನು ಕಟ್ಟಿದ್ದರು.
ನಿಮಗೆಲ್ಲ ಅಮೋರಿ ಬರುತ್ತದೆಯೇ? ಶಿಲುಬೆ ವಂದನೆ ಬರುತ್ತದೆಯೇ? ಎಂದು ಕೇಳಿದರು.
ಭಾನುವಾರ ಪೂಜೆಗೆ ಬನ್ನಿ, ಪಾಪ ನಿವೇದನೆ ಮಾಡಿ ದಿವ್ಯ ಪ್ರಸಾದ ಸ್ವೀಕರಿಸಿ, ಕ್ರೀಸರಾಗಿ ಹುಟ್ಟಿದ್ದೀರಿ ಕ್ರೀಸರಾಗಿ ಬದುಕಿ. ಕ್ರಿಸ್ತನನ್ನು ನಂಬಿದವರಿಗೆ ಮಾತ್ರ ಬದುಕು, ಇಲ್ಲವೆಂದರೆ ನರಕ ಎಂದರು.
ಕಟ್ಟಿಗೆ ತರಲು, ಕೂಲಿ ಮಾಡಲು, ಮೀನು ಮಾರಲು ಹೊರಟ ಕ್ರೈಸ್ತ ಮಹಿಳೆಯರನ್ನೂ ನಿಲ್ಲಿಸಿಕೊಂಡರು. ಇವೇ ಮಾತುಗಳನ್ನು ಮತ್ತೆ ಮತ್ತೆ ಹೇಳಿದರು. ದೇವರ ಅನುಗ್ರಹ ಶಾಪಗಳ ವ್ಯತ್ಯಾಸ ತಿಳಿಸಿದರು. ಮಕ್ಕಳನ್ನು ಜ್ಞಾನೋಪದೇಶಕ್ಕೆ ಕಳುಹಿಸಿ ಎಂದರು.
ಮನೆಗೆಲಸ ಮಾಡುತ್ತಲೋ, ಆಡುತ್ತಲೋ, ಶಗಣಿ ಆಯುತ್ತಲೋ ಇದ್ದ ಹುಡುಗರನ್ನು ಕರೆದು-
“..ಹಾಂ ನೀವೆಲ್ಲ ದಿನಾ ಸಾಯಂಕಾಲ ಕೊಪೆಲಗೆ ಬರಬೇಕು ತಿಳಿತಾ..“ಎಂದು ಕಣ್ಣು ಕೆಂಪೇರಿಸಿಕೊಂಡು ನುಡಿದರು.
ವಾರವೆಲ್ಲ ಈ ಕೆಲಸ ಮಾಡಿ ಅವರಿಗೆ ದಣಿವಾಗಿತ್ತು. ಆದರೆ ಈ ದಣಿವಿನಲ್ಲೂ ಒಂದು ತೃಪ್ತಿಯನ್ನು ನೆಮ್ಮದಿಯನ್ನು ಅವರು ಕಂಡರು. ತಾನು ಮಾಡುವುದೆಲ್ಲ ದೇವರಿಗಾಗಿ, ಕ್ರಿಸ್ತನಿಗಾಗಿ ಎಂಬ ಭಾವನೆ ಅವರ ಮನಸ್ಸಿನಲ್ಲಿ ಮೂಡಿ ಈ ಕೆಲಸವನ್ನು ಮತ್ತೂ ಮಾಡಲು ಅವರನ್ನು ಹುರಿದುಂಬಿಸಿತು.
ಆದರೆ ಮತ್ತೊಂದು ಭಾನುವಾರ ಬಂದಾಗ ಅವರಿಗೆ ನಿರಾಶೆಯಾಯಿತು. ಅಲ್ತಾರನ್ನು ವಿಶೇಷವಾಗಿ ಸಜ್ಜುಗೊಳಿಸಿದ್ದ ಬೋನ. ಅವನ ಜೊತೆಗೆ ಸಿಮೋನನ ಗಂಡು ಹೆಣ್ಣುಮಕ್ಕಳು ಸಹಕರಿಸಿದ್ದರು. ಹೂವಿನ ವಾಸುಗಳನ್ನು ತಂದು ಪ್ರತಿಮೆಯ ಮಗ್ಗುಲಲ್ಲಿ ಇರಿಸಲಾಗಿತ್ತು. ಮೇಣದ ಬತ್ತಿ ಹಚ್ಚುವ ಮರದ ಸ್ಟ್ಯಾಂಡುಗಳನ್ನು ನಡು ನಡುವೆ ಇಟ್ಟು ಮೇಣದ ಬತ್ತಿಗಳನ್ನು ಹಚ್ಚಲಾಗಿತ್ತು. ಹಿಂಬದಿಯ ಗೋಡೆಯ ಮೇಲೆ ಒಂದು ಕಡೆ ಮಾತೆ ಮೇರಿಯ ಮತ್ತೊಂದು ಕಡೆ ಮುಳ್ಳಿನ ಮುಕುಟ ಧರಿಸಿದ ಏಸುವಿನ ಪೈನೆಲಗಳನ್ನು ತೂಗು ಹಾಕಲಾಗಿತ್ತು. ಶಿಲುಬೆಯ ಮೇಲೆ ಏಸು ತೂಗು ಬಿದ್ದಿರುವ ಸುಮಾರು ಒಂದೂವರೆ ಅಡಿ ಎತ್ತರದ ಒಂದು ಹೊಸ ಪ್ರತಿಮೆ, ಕೊಪೆಲ ನಡು ಭಾಗದಲ್ಲಿ ಗೋಡೆಯ ಮಗ್ಗುಲಲ್ಲಿ ಪಾದರಿಗಳ ಮೇಜಿನ ಮೇಲೆ ಇರಿಸಲಾಗಿತ್ತು. ಗೋವಾದಲ್ಲಿ ಇರಬೇಕಾದರೆ ಪಾದರಿ ಗೋನಸಾಲ್ವಿಸ್ ಕೊಂಡ ಈ ಪಿಂಗಾಣಿಯ ಪ್ರತಿಮೆ ಅದ್ಭುತವಾಗಿತ್ತು. ಕೊಪೆಲನ ಬಾಗಿಲ ಬಳಿಯೇ ಒಂದು ಬಟ್ಟಲಲ್ಲಿ ಪವಿತ್ರ ತೀರ್ಥವನ್ನು ಇರಿಸಲಾಗಿತ್ತು. ಒಳ ಬರುವಾಗ, ಹೊರ ಹೋಗುವಾಗ ಈ ಪವಿತ್ರ ತೀರ್ಥವನ್ನು ಜನ ಹಣೆಗಳಿಗೆ ಹಚ್ಚಿಕೊಳ್ಳುವುದು ಒಂದು ಸಂಪ್ರದಾಯವಾಗಿದ್ದರಿಂದ ಈ ಊರಿನ ಜನರಿಗೆ ಈ ಬಗ್ಗೆಯೂ ನೆನಪು ಮಾಡಿಕೊಡಬೇಕಿತ್ತು.
ಹಿಂದಿನ ದಿನ ಸಂಜೆ ಐದು ಗಂಟೆಗೆ ಬೋನ ಇಗರ್ಜಿ ಗಂಟೆ ಹೊಡೆದಿದ್ದ. ಸಾಲದ್ದಕ್ಕೆ ಮನೆ ಮನೆಗೆ ಹೋಗಿ ಪಾಪ ನಿವೇದನೆ ಮಾಡಿಕೊಳ್ಳುವವರು ಕೊಪೆಲಗೆ ಸೆರಮಾಂವಗಳಿಗೆ ಬರಬಹುದೆಂದೂ, ಪಾದರಿಯವರು ಪಾಪ ನಿವೇದನೆ ಕೇಳುತ್ತಾರೆಂದೂ ಹೇಳಿ ಬಂದಿದ್ದ.
ಪಾದರಿ ಆರು ಗಂಟೆಯವರೆಗೂ ಕುರ್ಚಿಯಲ್ಲಿ ಕುಳಿತಿದ್ದರು. ಬಂದವರು ಸಿಮೋನ, ಅವನ ಹೆಂಡತಿ, ತಾಯಿ, ಒಂದಿಬ್ಬರು ಮಕ್ಕಳು ಕೇರಿಯ ಕೊನೆಯ ಮನೆಯ ಸಿಂಜಾಂವ ಅವನ ಹೆಂಡತಿ, ಇನ್ನೂ ಒಂದು ಮನೆಯ ಅಗ್ನೇಲ ಅವನ ತಾಯಿ, ಹೆಂಡತಿ, ಮಗಳು ಇವರೆಲ್ಲ ಪಾಪ ನಿವೇದನೆ ಮಾಡಿ ವರ್ಷಗಳಾಗಿದ್ದವಂತೆ. ಪಾದರಿ ವಿನಯದಿಂದಲೆ ಇವರ ಪಾಪ ನಿವೇದನೆಗೆ ಕಿವಿ ಕೊಟ್ಟರು. ಪಾಪ ಕ್ಷಮೆಗಾಗಿ ಪರಲೋಕ ಮಂತ್ರ, ನಮೋ ರಾಣಿಮಂತ್ರ ಹೇಳುವಂತೆ ತಿಳಿಸಿದರು. “ಮಾರನೇ ದಿನ ಪೂಜೆಗೆ ಬಂದು ದಿವ್ಯ ಪ್ರಸಾದ ಸ್ವೀಕರಿಸಿ. ದೇವರು ನಿಮ್ಮೊಡನೆ ಇರಲಿ ಹೋಗಿ ಬನ್ನಿ“ಎಂದು ಆಶೀರ್ವದಿಸಿದರು.
ಭಾನುವಾರ ಬೆಳಗಾಯಿತು.
ಮುಂಜಾನೆಯೇ ಬೋನ ಪ್ರಾರ್ಥನೆಯ ಗಂಟೆ ಹೊಡೆದ. ಈಗ ಈ ಘಂಟಾನಾದ ಕೂಡ ಶಿವಸಾಗರದ ಜೀವನದೊಡನೆ ಸೇರಿ ಹೋಗಿತ್ತು.
“ಢಣ್..ಢಣ್..ಢಣ್..”
“ಢಣ್..ಢಣ್..ಢಣ್..”
“ಢಣ್..ಢಣ್..ಢಣ್..”
ಹೀಗೆ ಮೂರು ಬಾರಿ ಮೂರು ಗಂಟೆಗಳು ನಂತರ ನಿಲ್ಲದೇನೆ ಸಾಲು ಗಂಟೆಗಳನ್ನು ಹೊಡೆದರೆ ಅದು ಅಮೋರಿ ಗಂಟೆ. ಹೀಗೆ ಬೆಳಗಿನ ಜಾವ ಐದು ಗಂಟೆಗೆ, ಮಧ್ಯಾಹ್ನ ಹನ್ನೆರಡು ಗಂಟೆಗೆ, ಸಂಜೆ ಆರು ಗಂಟೆಗೆ ಮೂರು ಬಾರಿ ಈ ಗಂಟೆ ಕೇಳಿ ಬರುತ್ತದೆ.
ಜೊತೆಗೆ ಪ್ರತಿನಿತ್ಯ ಬೆಳಗಿನ ಪೂಜೆಯ ಸಮಯದಲ್ಲಿ ಗಂಟೆ.
ಶನಿವಾರ ಪಾಪ ನಿವೇದನೆಗಾಗಿ ಬನ್ನಿ ಎಂದು ಗಂಟೆ.
ಭಾನುವಾರ ಪೂಜೆಗೆ ಎಲ್ಲರೂ ಬನ್ನಿ ಎಂದು ಎಂಟು ಗಂಟೆಗೆ ಮೂರು ಗಂಟೆಗಳು.
ಭಾನುವಾರ ಏಳು ಗಂಟೆಗೆ ಒಂದು ಬಾರಿ ಘಂಟಾನಾದ ಕೇಳಿ ಬರುತ್ತದೆ. ಅದು ಮೊದಲ ಗಂಟೆ. ಏಳೂವರೆಗೆ ಎರಡನೆಯದು. ಎಂಟು ಗಂಟೆಗೆ ಮೂರನೆಯದು. ಹಿಂದೆಯೇ ಪಾದರಿ ಪೂಜಾ ಸಾಮಾಗ್ರಿಗಳ ಜತೆ ವೇದಿಕೆಯನ್ನೇರುತ್ತಾರೆ.
ಕೊಪೆಲನ ಸುತ್ತ ಮುತ್ತ ಮಾತ್ರವಲ್ಲ ಶಿವಸಾಗರದ ಸಾಕಷ್ಟು ಜನರಿಗೆ ಈ ಗಂಟೆ ಈಗ ಕೇಳಿ ಬರತೊಡಗಿತು. ಹಿಂದೆ ಯಾವಾಗಲೋ ಒಂದು ಬಾರಿ ಸದ್ದು ಮಾಡುತ್ತಿದ್ದ ಇದು ಈಗ ನಿಶ್ಚಿತ ಸಮಯದಲ್ಲಿ ಕೇಳಿ ಬರತೊಡಗಿತು. ಕ್ರೀಸುವರಲ್ಲದವರೂ ಗಂಟೆಯ ಈ ನಾದವನ್ನು ಆಲಿಸತೊಡಗಿದರು.
ಆದರೆ ಈ ಭಾನುವಾರವೂ ಬಹಳ ಜನ ಕ್ರೀಸುವರನ್ನು ಈ ಗಂಟೆ ಕೊಪೆಲಗೆ ಕರೆತರಲಿಲ್ಲ. ಪೂಜಾ ವಿಧಿಯನ್ನು ಪ್ರಾರಂಭಿಸುವ ಮುನ್ನವೇ ಬಂದ ಕೆಲವೆ ಕೆಲವರನ್ನು ಕಂಡು ಪಾದರಿ ಗೋನಸಾಲ್ವಿಸರಿಗೆ ನಿರಾಶೆಯಾಯಿತು. ಕೊಪೆಲ ಸಾಲದೆ ಇರಬಹುದು ಅಂದುಕೊಂಡಿದ್ದ ಅವರು ಬಂದವರು ಕೇವಲ ಹತ್ತು ಜನ ಎಂಬುದನ್ನು ಗಮನಿಸಿ ಹಲ್ಲು ಕಟ ಕಟಿಸಿದರು. ಪೂಜೆಯ ನಡುವೆ ಸೆರಮಾವಂಗೆ ನಿಂತ ಅವರು ಊರಿನ ಕ್ರೀಸುವರ ನಿರಾಸಕ್ತಿಯ ಬಗ್ಗೆ ತುಂಬಾ ಮಾತನಾಡಿದರು. ಮಾತಿನ ನಡುವೆ ಒಂದು ಹಂತದಲ್ಲಿ ಅವರಿಗೆ ಇದು ಮಾತಿನಿಂದ ಸರಿಪಡಿಸಬಹುದಾದ ವಿಷಯವಲ್ಲ ಅನಿಸಿತು. ಇದಕ್ಕಾಗಿ ಬೇರೊಂದು ದಾರಿ ಕಂಡುಕೊಳ್ಳಬೇಕು ಎಂದವರು ಆಗಲೇ ನಿರ್ಧರಿಸಿದರು.
*
*
*
ಪೂಜೆ ಮುಗಿಸಿ, ಜನರೆಲ್ಲ ಹೋದ ನಂತರ, ಬೋನ ಮಾಂಸ ತರಲು ಕಟುಕರ ಕೇರಿಗೆ ಹೋದ. ಪಾದರಿ ಗೋನಸಾಲ್ವಿಸ್ ಕೊಪೆಲನ ಮುಂದಿನ ಚಪ್ಪರದ ಕೆಳಗೆ ಶತಪಥ ತುಳಿಯುತ್ತಿದ್ದವರಿಗೆ ತಟ್ಟನೆ ತಾವು, ಹೊರತೆಗೆಯುವುದು ಬೇಡವೆಂದು ಇರಿಸಿದ ನಾಗರಬೆತ್ತ ಹಾಗೂ ಪಾಮಿಸ್ತ್ರಿಯ ನೆನಪಾಯಿತು.
ಪಾದರಿ ಫ಼ಿಯೆಟ್ಟ ಸದಾ ಅವರ ಕೈಯಲ್ಲಿ ಒಂದು ನಾಗರ ಬೆತ್ತವನ್ನು ಹಿಡಿದುಕೊಂಡು ತಿರುಗಾಡುತ್ತಿದ್ದರು. ಒಂದು ತುದಿಯಲ್ಲಿ ನಾಗರ ಹೆಡೆಯಂತೆ ಒಂದು ಗಂಟು. ಇನ್ನೊಂದು ತುದಿ ಸಪೂರವಾಗಿ ಬಳುಕಿ ಬಾಗುತ್ತಿತ್ತು. ಈ ಬೆತ್ತದಿಂದ ಹಲವರನ್ನು ಹೊಡೆದುದನ್ನು ಇವರು ನೋಡಿದ್ದರು.
“ಜನರನ್ನು ದೈವ ಭಕ್ತರನ್ನಾಗಿ ಮಾಡಬೇಕೆಂದರೆ ಈ ದಾರಿಯನ್ನು ಹಿಡಿಯಬೇಕಾಗುತ್ತದೆ“ಎಂದು ಹೇಳುತ್ತಿದ್ದವರು ಅವರು.
ಫ಼ಿಯೆಟ್ಟರು ಇರಿಸಿಕೊಂಡ ಮತ್ತೂ ಒಂದು ಅಸ್ತ್ರವೆಂದರೆ ಪಾಮಸ್ತ್ರಿ. ಗೇಣುದ್ದದ ಮರದ ಕಡ್ಡಿ. ಅದರ ತುದಿಗೆ ಅಂಗೈ ಅಗಲದ ದುಂಡನೆಯ ಬಿಲ್ಲೆ. ಇದನ್ನೂ ಕೈಯಲ್ಲಿ ಹಿಡಿದು, ಹುಡುಗರಿಗೆ ಅಂಗೈ ಒಡ್ಡಲು ಹೇಳಿ ಚಪ್ಪನೆ ಅಂಗೈ ಮೇಲೆ ಹೊಡೆದರೆ ಅಂಗೈ ಕೆಂಪೇರಿ ಇಡೀ ದಿನ ನೋವು ಉರಿಯಿಂದ ಹುಡುಗರು ನರಳುತ್ತಿದ್ದರು. ದೊಡ್ಡವರನ್ನು ಹೆದರಿಸಲು ನಾಗರ ಬೆತ್ತವಾದರೆ ಸಣ್ಣವರನ್ನು ದಾರಿಗೆ ತರಲು ಪಾಮಿಸ್ತ್ರಿ.
ಪಾದರಿ ಫ಼ಿಯೆಟ್ಟರ ಮರಣದ ನಂತರ ಪಾದರಿ ಗೋನಸಾಲ್ವಿಸರಿಗೆ‌ಈ ಎರಡೂ ಅಸ್ತ್ರಗಳ ಪ್ರಯೋಜನ ಏನು ಎನ್ನುವುದು ಮನದಟ್ಟಾಯಿತು. ಕಾರವಾರ, ಹೊನ್ನಾವರ ಗಳಲ್ಲಿ ಇದು ಇನ್ನೂ ಖಚಿತವಾಯಿತು. ಜನ ಅವರನ್ನು ’ರಾಗಿಷ್ಟ ಫ಼ಾದರ್’ ಎಂದು ಕರೆದರೂ ಕೂಡ ಇಗರ್ಜಿಗಳಿಗೆ ಬರುವುದನ್ನು ನಿಲ್ಲಿಸಲಿಲ್ಲ. ಇಲ್ಲೆಲ್ಲ ನಾಗರಬೆತ್ತ, ಪಾಮಿಸ್ತ್ರಿಗಳನ್ನು ಹಿಡಿದು ಕೋಪ, ತಾಪ ಪ್ರದರ್ಶಿಸುತ್ತ ತಾನು ಜನರ ಮನದಲ್ಲಿ ಭಕ್ತಿ ದೈವಭೀತಿಯನ್ನು ಬಿತ್ತುವಲ್ಲಿ ಯಶಸ್ವಿಯಾದೆ. ಅದೇ ಕೆಲಸವನ್ನು ಇಲ್ಲಿಯೂ ಮಾಡಬೇಕು. ಬೇರೆ ದಾರಿ ಇಲ್ಲ.
ಪಾದರಿ ಗೋನಸಾಲ್ವಿಸರು ಮಂಚದ ಅಡಿಯಿಂದ ಹೋಲ್ಡಾಲನ್ನು ಹೊರಗೆಳೆದರು. ಅದರಲ್ಲಿ ಇರಿಸಿದ ನಾಗರಬೆತ್ತ ಹಾಗೂ ಪಾಮಿಸ್ತ್ರಿಯನ್ನು ತೆಗೆದುಕೊಂಡರು.
ಹೊನ್ನಾವರದಿಂದ ಬರುವಾಗ ಅವರು ಇದೇ ಹೊಲ್ಡಾಲಿನಲ್ಲಿ ದೇವರ ಇಮಾಜುಗಳನ್ನು, ಪೈನೆಲಗಳನ್ನು ಅರ್ಲೂಕ, ಬೆಂತೆಣಿಗಳನ್ನು ಒಂದು ಒಂದೂವರೆ ಅಡಿ ಎತ್ತರದ ಶಿಲುಬೆ, ಸಂತ ಸಬಸ್ತಿಯಾನ, ಸಂತ ಆಂತೋನಿ ಮತ್ತಿತರ ಸಂತರ ಇಮಾಜುಗಳನ್ನು ಕಟ್ಟಿ ತಂದಿದ್ದರು. ತಾವು ಉಪಯೋಗಿಸುತ್ತಿದ್ದ ನಾಗರಬೆತ್ತ, ಪಾಮಿಸ್ತ್ರಿಗಳಿಗೂ ಹೋಲ್ಡಾಲಿನಲ್ಲಿಯೇ ಜಾಗ ಮಾಡಿಕೊಟ್ಟಿದ್ದರು. ಇಮಾಜು ಇತ್ಯಾದಿಗಳನ್ನು ಈ ಹಿಂದೆಯೇ ಅವರು ಹೊರಗೆ ತೆಗೆದಿದ್ದರು. ಈಗ ಉಳಿದುದನ್ನು ಹೊರ ತೆಗೆದರು.
*****
ಮುಂದುವರೆಯುವುದು

ಕೀಲಿಕರಣ ದೋಷ ತಿದ್ದುಪಡಿ: ಮೀರಾ ಗಣಪತಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.